ಇಂದಿನ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು. ಈ ಜಿಲ್ಲೆ ಪ್ರಾಕೃತಿಕ ಸಂಪನ್ಮೂಲಗಳಾದ ಖನಿಜ ನಿಕ್ಷೇಪ, ಗಣಿಗಾರಿಕೆಯಿಂದ ವಿಶ್ವಪ್ರಸಿದ್ದಿ ಪಡೆದಿದೆ. ಈ ಜಿಲ್ಲೆ ರಾಜ್ಯದ ಮಧ್ಯಭಾಗದಿಂದ ಪೂರ್ವಕ್ಕಿದೆ. ದಕ್ಷಿಣಕ್ಕೆ ಮೈಸೂರು ರಾಜ್ಯಕ್ಕೆ (ಕರ್ನಾಟಕ) ಸೇರಿದ ಚಿತ್ರದುರ್ಗ, ಉತ್ತರಕ್ಕೆ ಕೊಪ್ಪಳ ಮತ್ತು (ತುಂಗಭದ್ರಾ ಗಡಿ) ರಾಯಚೂರು, ಪಶ್ಚಿಮಕ್ಕೆ ಧಾರವಾಡ (ಮುಂಬಯಿ ಪ್ರಾಂತ್ಯ) ಮತ್ತು ಪೂರ್ವಕ್ಕೆ ಆಂಧ್ರಪ್ರದೇಶದ ಕರ್ನೂಲು, ಅನಂತಪುರ ಜಿಲ್ಲೆ ಈ ಜಿಲ್ಲೆಯ ಮೇರೆಗಳಾಗಿವೆ. ಪ್ರಸ್ತುತ ಜಿಲ್ಲೆಯ ವಿಸ್ತೀರ್ಣ ಪೂರ್ವ-ಪಶ್ಚಿಮವಾಗಿ ೧೬೧ ಕಿ.ಮೀ. ಉದ್ದವಾಗಿ, ಉತ್ತರ-ದಕ್ಷಿಣವಾಗಿ ೮೩.೭ ಕಿ.ಮೀ. ಅಗಲವನ್ನೂ, ನೈಋತ್ಯ ಮತ್ತು ಈಶಾನ್ಯದಿಂದ ನೋಡಿದಾಗ ಇದರ ಉದ್ದ ೧೮೭ ಕಿ.ಮೀ. ಹೊಂದಿದೆ. ಜಿಲ್ಲೆಯ ಉತ್ತರ ಅಕ್ಷಾಂಶ ೩೦’ ೧೪’-೧೫’ ೫೦’ ಮತ್ತು ರೇಖಾಂಶ ೭೫’ ೪೦’-೭೭’ ೧೧’ರ ನಡುವೆ ಇದ್ದು, ಒಟ್ಟು ಜಿಲ್ಲೆಯ ವಿಸ್ತೀರ್ಣ ೯೮೯೮ ಚದರ ಕಿಲೋಮೀಟರ್‌ಗಳು.

ಈ ಜಿಲ್ಲೆಯನ್ನು ಆಡಳಿತದ ಅನುಕೂಲಕ್ಕಾಗಿ ಸ್ವಾತಂತ್ರ್ಯನಂತರ ಎರಡು ವಿಭಾಗಗಳಾಗಿ ಮತ್ತು ೮ ತಾಲೂಕುಗಳಾಗಿ ವಿಭಾಗಿಸಿದ್ದಾರೆ. ಒಂದು ಬಳ್ಳಾರಿ ವಿಭಾಗ, ಮತ್ತೊಂದು ಹೊಸಪೇಟೆ ಉಪವಿಭಾಗ. ಬಳ್ಳಾರಿ ವಿಭಾಗದಲ್ಲಿ ಸೊಂಡೂರು, ಸಿರುಗುಪ್ಪ, ಸೇರಿದ್ದು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳು ಹೊಸಪೇಟೆ ಉಪವಿಭಾಗಕ್ಕೆ ಬರುತ್ತವೆ. ಹೊಸ ಜಿಲ್ಲೆಗಳಾದಾಗ ಹರಪನಹಳ್ಳಿ ತಾಲ್ಲೂಕು ನೂತನ ದಾವಣಗೆರೆ ಜಿಲ್ಲೆಗೆ ಸೇರಿಹೋಯಿತು. ಜಿಲ್ಲೆಯಲ್ಲಿ ಸುಮಾರು ೭೦೦ ಗ್ರಾಮ, ೩೫ ಫಿರ್ಕಾ(೨೮ ಹೋಬಳಿ)ಗಳಿದ್ದು, ಪ್ರಸ್ತುತ ಸಂದರ್ಭದಲ್ಲಿ ೧೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅತೀ ಹೆಚ್ಚು ಗ್ರಾಮಗಳಿರುವ ಬಳ್ಳಾರಿ ಜಿಲ್ಲೆ ಕೃಷಿಯಲ್ಲಿ ಪ್ರಧಾನಸ್ಥಾನ ಪಡೆದಿದೆ. ಇದು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಹಿಂದುಳಿ ದಿಲ್ಲ. ಈ ಅಂಶಗಳನ್ನು ತಿಳಿಯಲು ಇದರ ಹಿಂದಿನ ಭೌಗೋಳಿಕತೆಯನ್ನು ಅರಿಯುವುದು ಸೂಕ್ತ.

ಕ್ರಿ.ಶ. ೧೭೯೨ರಲ್ಲಿ ಬಳ್ಳಾರಿ ಪ್ರದೇಶ ಹೈದರನ ಆಳ್ವಿಕೆಗೆ ಸೇರ್ಪಡೆಯಾಗಿ, ಮೈಸೂರು ಯುದ್ಧದಲ್ಲಿ ಟಿಪ್ಪು ಸೋತಾಗ ನಿಜಾಮನಿಗೆ ಇದು ಸೇರಿತು. ನಿಜಾಮನು ೧೮೦೦ರಲ್ಲಿ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ, ಒಪ್ಪಂದ ಮಾಡಿಕೊಂಡು ಆಂಗ್ಲರಿಗೆ ಇದನ್ನು ಬಿಟ್ಟುಕೊಟ್ಟನು. ಆಗ ಇದರ ಭೌಗೋಳಿಕತೆ ವಿಸ್ತಾರವಾಯಿತಲ್ಲದೆ, ಈ ಜಿಲ್ಲೆಗೆ ಕರ್ನೂಲು, ಕಡಪ, ಅನಂತಪುರ ಸೇರಿದವು. ಅಂದು ಮದ್ರಾಸ್ ಸಂಸ್ಥಾನದ ವಾಯವ್ಯ ದಿಕ್ಕಿಗಿರುವ ಬಳ್ಳಾರಿ ಜಿಲ್ಲೆಯು ತನ್ನದೇ ಆದ ಭೌಗೋಳಿಕ ಲಕ್ಷಣಗಳನ್ನು ಹೊಂದಿತ್ತು.  ನಾಲ್ಕು ದತ್ತಿ ಜಿಲ್ಲೆಗಳಲ್ಲಿ ಇದೂ ಒಂದು. ಅಕ್ಷಾಂಶವಾಗಿ ೧೪’-೨೦’ ೧೫’ ೫೮’ರಲ್ಲಿ ಮತ್ತು ರೇಖಾಂಶ ೭೫’-೪೩’, ೭೫’-೪೫’ರ ಮಧ್ಯೆ ಇತ್ತು. ಜಿಲ್ಲೆಯ ಆಗಿನ ಭೌಗೋಳಿಕ ವಿಸ್ತೀರ್ಣ ೫೯೦೪ ಚದರ ಮೈಲುಗಳು. ಈ ಜಿಲ್ಲೆಯನ್ನು ಉತ್ತರ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿ ಪಶ್ಚಿಮಕ್ಕೆ ಧಾರವಾಡ, ಉತ್ತರಕ್ಕೆ ರಾಯಚೂರು ಜಿಲ್ಲೆಗಳನ್ನು ಪ್ರತ್ಯೇಕಿಸಿತ್ತು. ದಕ್ಷಿಣಕ್ಕೆ ಮೈಸೂರು ಸಂಸ್ಥಾನವಿದ್ದು, ಚಿತ್ರದುರ್ಗ ಜಿಲ್ಲೆ ಗಡಿ ಪ್ರದೇಶವಾಗಿತ್ತು.

೧೮೦೦ರಲ್ಲಿ ಈ ಪ್ರದೇಶವನ್ನು ಬ್ರಿಟಿಷರು ದತ್ತಿಮಂಡಲ (ರಾಯಲಸೀಮಾ) ಎಂದು ಕರೆದರು. ಆಗ ಸ್ಥಳೀಯ ಪಾಳೆಯಗಾರರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಇವರು ಕೋಟೆ, ಕೊತ್ತಲು, ಅರಮನೆಗಳನ್ನು ಕಟ್ಟಿಕೊಂಡಿದ್ದರು. ವಿಜಯನಗರ ರಾಜರು ಈ ಪಾಳೆಯಗಾರರ ಆಡಳಿತ ವ್ಯವಸ್ಥೆಗೆ ನಾಂದಿ ಹಾಡಿದ್ದರು. ಪಾಳೆಯಗಾರರು ವಿಜಯನಗರದ ಸೇವೆ ಮಾಡುತ್ತಿ ದ್ದರು. ಅನಂತರ ಈ ಪ್ರದೇಶದ ಮೇಲೆ ಪ್ರಭುತ್ವ ಹೊಂದಿದ. ಸರ್ವಾಧಿಕಾರಿಗಳಾದ ನಿಜಾಂರು ತೆಲಂಗಾಣ ಜಹಗೀರು ಪಡೆದು ದೇಶಮುಖ್ ಪಾಳೆಯಗಾರರಿಗೆ ಬಿಟ್ಟುಕೊಟ್ಟಿ ದ್ದರು. ರಾಯಲಸೀಮಾದಲ್ಲಿ ೫೦ ವರ್ಷಗಳಿಂದ ಆಳುತ್ತಿದ್ದ ಪಾಳೆಯಗಾರರನ್ನು ಅಧೀನ ಕ್ಕೊಳಪಡಿಸಿಕೊಂಡಾಗ ಹೈದರಾಲಿ ರಾಯಲಸೀಮೆಯಲ್ಲಿ ೮೦ ಮಂದಿ ಪಾಳೆಯಗಾರರಿದ್ದರು. ಕಡಪ ಜಿಲ್ಲೆಯಲ್ಲಿ ಕೆಲವು ಹಳ್ಳಿಗಳು ಇವರಿಗೆ ಸೇರಿದ್ದವು.

[1]

ಮದ್ರಾಸ್ ಅಧಿಪತ್ಯಕ್ಕೆ ಒಳಗಾದಾಗ ಜಿಲ್ಲೆಯಲ್ಲಿ ೧೮ ತಾಲೂಕುಗಳಿದ್ದವು. ಅವು ಗಳೆಂದರೆ, ಆಲೂರು, ಆದೋನಿ, ಗುತ್ತಿ, ಉರವಕೊಂಡ, ತಾಡಪತ್ರಿ, ರಾಯದುರ್ಗ, ಅನಂತಪುರ, ಧರ್ಮಾಂವರಂ, ಕಲ್ಯಾಣದುರ್ಗ, ಪೆನುಕೊಂಡ, ಬುಕ್ಕಪಟ್ಟಣಂ, ಹಿಂದೂಪುರ, ಮಡಕಶಿರಾ ಮತ್ತು ಎಮ್ಮಿಗನೂರು; ಬಳ್ಳಾರಿ ಜಿಲ್ಲೆಯ ತಾಲೂಕುಗಳಾದ ಸಿರುಗುಪ್ಪ, ಕಂಪ್ಲಿ (ಹೊಸಪೇಟೆ), ಕೂಡ್ಲಿಗಿ, ಹೂವಿನ ಹಡಗಲಿ ಮತ್ತು ಹರಪನಹಳ್ಳಿ ಸೇರಿದ್ದವು. ಸಂಡೂರು ಪ್ರತ್ಯೇಕ ಸಂಸ್ಥಾನವಾಗಿತ್ತಲ್ಲದೆ, ಆಂಗ್ಲರ ಅಧೀನದಲ್ಲಿ ಆಳ್ವಿಕೆ ನಡೆಸಿತು. ೧೮೫೧ರಲ್ಲಿ ಕಂಪ್ಲಿಯಲ್ಲಿದ್ದ ತಾಲ್ಲೂಕು ಕೇಂದ್ರವನ್ನು ವರ್ಗಾಯಿಸಿ ಹೊಸಪೇಟೆಯನ್ನು ತಾಲ್ಲೂಕು ಕೇಂದ್ರವಲ್ಲದೆ, ಉಪ-ವಿಭಾಗವಾಗಿ ಕೂಡ ಮಾಡಲಾಯಿತು. ಜಿಲ್ಲೆಯಲ್ಲಿ ತುಂಗಭದ್ರಾ ನದಿಯು ಮುಖ್ಯವಾಗಿದ್ದು, ಇದರ ಉಪನದಿಗಳಾಗಿ ಚಿನ್ನಹಗರಿ, ನಾರಿಹಳ್ಳ, ಚಿಕ್ಕಹಗರಿಗಳಿದ್ದವು. ಈ ಪರಿಸರದಲ್ಲಿ ಹೆಚ್ಚು ಬೆಟ್ಟ-ಗುಡ್ಡಗಳ ಸಾಲುಗಳಿದ್ದು, ಅವುಗಳಲ್ಲಿ ಸೊಂಡೂರು, ಗುಡೇಕೋಟೆ, ಜರಿಮಲೆ, ಹಂಪೆ, ಉಚ್ಚಂಗಿದುರ್ಗ ಮತ್ತು ಬಳ್ಳಾರಿ ಪಟ್ಟಣದ ನಡುವೆ ಇರುವ ಬೆಟ್ಟಗಳು ಮುಖ್ಯವಾಗಿವೆ. ಸೊಂಡೂರು ಮತ್ತಿತರ ಬೆಟ್ಟಗಳಲ್ಲಿ ಉತ್ತಮ ದರ್ಜೆಯ ಮ್ಯಾಂಗನೀಸ್, ಕಬ್ಬಿಣದ ಅದಿರು ದೊರೆಯುತ್ತದೆ. ಜಿಲ್ಲೆಯು ಅಮೂಲ್ಯವಾದ ಖನಿಜ ಸಂಪತ್ತನ್ನು ಹೊಂದಿದೆ. ಅನೇಕ ಗಣಿಗಳಿದ್ದು, ಕಬ್ಬಿಣದ ಅದಿರನ್ನು ವಿದೇಶಗಳಿಗೆ ರಫ್ತು ಮಾಡುವುದರಿಂದ ಅಪಾರ ಆರ್ಥಿಕ ವಹಿವಾಟನ್ನು ನಡೆಸುವ ಜಿಲ್ಲೆ ಇದಾಗಿದೆ. ಗಣಿ ಗಳಿಂದ ಕೆಲವೇ ವ್ಯಕ್ತಿಗಳು ಶ್ರೀಮಂತರಾಗುತ್ತಿದ್ದು, ಇಂಥ ಶ್ರೀಮಂತರೇ ರಾಜಕೀಯದಲ್ಲಿ ಮುಂದುವರೆಯುತ್ತಾರೆ. ಬಂಡವಾಳಶಾಹಿಗಳಿಂದ ಬಡವರು ನಿರ್ಗತಿಕರಾಗಿದ್ದು ಶೋಚನೀಯ ಸ್ಥಿತಿಯಲ್ಲಿದ್ದಾರೆ.

ಚಾರಿತ್ರಿಕ ಹಿನ್ನೆಲೆ

ಕರ್ನಾಟಕ ಮತ್ತು ಮದ್ರಾಸ್ ಅಧಿಪತ್ಯದ ಜಿಲ್ಲೆಗಳಲ್ಲಿ ಬಳ್ಳಾರಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಇದರ ಪ್ರಾಚೀನತೆಯನ್ನು ನೋಡಿದಾಗ ಶಿಲಾಯುಗ, ಮಧ್ಯ ಶಿಲಾಯುಗ ಮತ್ತು ನವಶಿಲಾಯುಗದ ನೆಲೆಗಳು ಕಂಡುಬರುತ್ತವೆ. ಅವುಗಳಲ್ಲಿ ಹೆಚ್ಚಿನವು ಪ್ರಾಗೈತಿಹಾಸಿಕ ನೆಲೆಗಳಾಗಿವೆ. ಮಾನವನು ಇಲ್ಲಿ ಜೀವನ ನಡೆಸಿದ್ದನ್ನು ಪ್ರಾಕ್ತನಶಾಸ್ತ್ರೀಯ ಆಧಾರಗಳು ಪ್ರಚುರಪಡಿಸುತ್ತವೆ. ಪ್ರಮುಖ ನೆಲೆಗಳಾದ ಗಾದಿಗನೂರು, ದರೋಜಿ, ಕುಮತಿ, ಹಿರೆಕುರು ವತ್ತಿ, ಹಂಪೆ ಮತ್ತು ತುಂಗಭದ್ರಾ ನದಿಯ ಇಕ್ಕೆಲಗಳಲ್ಲಿ ಪ್ರಾಕ್ತನ ಕುರುಹುಗಳು ಹೆಚ್ಚಾಗಿ ಕಂಡುಬರುತ್ತವೆ. ಸೂಕ್ಷ್ಮಶಿಲಾಯುಗದಲ್ಲಿ ಮಾನವನ ಭೌಗೋಳಿಕ ವಿಸ್ತರಣೆ, ನವಶಿಲಾಯುಗದಲ್ಲಿ ಮಾನವನ ಅಲೆಮಾರಿತನವನ್ನು ನಿಲ್ಲಿಸಿ, ಬೇಸಾಯ ಪಶುಪಾಲನೆಯಲ್ಲಿ ತೊಡಗಿದ್ದು ಕಂಡುಬರುತ್ತದೆ. ಇದಕ್ಕೆ ತೆಕ್ಕಲಕೋಟೆ, ಸಂಗನಕಲ್ಲು, ಕಪ್ಪಗಲ್ಲು, ಬೂದಿ ಹಾಳು, ಹಲಸ(ಸಿ)ಗ್ರಾಮ, ಗೊಲ್ಲಪಲ್ಲಿ, ತೋರಣಗಲ್ಲು ಪ್ರಮುಖ ಉದಾಹರಣೆಗಳಾಗಿವೆ.

ಈ ಜಿಲ್ಲೆಯು ಪುರಾತನ ಕಾಲದಿಂದ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಕ್ರಿ.ಪೂ. ೩ನೇ ಶತಮಾನದಿಂದ ಕ್ರಮವಾಗಿ ಮೌರ್ಯರು, ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು, ಚೋಳರು, ಕಲಚೂರ್ಯರು, ಹೊಯ್ಸಳರು, ನೊಳಂಬರು, ವಿಜಯನಗರ ಸಾಮ್ರಾಜ್ಯ, ಬಹಮನಿ ಸಾಮ್ರಾಜ್ಯ, ಪಾಳೆಯ ಗಾರರ ಏಳಿಗೆ, ಮರಾಠರು, ಔರಂಗಜೇಬ್‌ನ ಆಕ್ರಮಣ, ನಿಜಾಮ ಮತ್ತು ಹೈದರ್ ಆಲಿ-ಟಿಪ್ಪುಸುಲ್ತಾನರವರೆಗೆ ಅಕ್ಕಪಕ್ಕದ ಜಿಲ್ಲೆಗಳಾದ ಕೊಪ್ಪಳ, ಚಿತ್ರದುರ್ಗ ಮತ್ತು ರಾಯಚೂರು ಗಳಿಂದಲೂ ಇದು ಪ್ರಾಚೀನತೆ ಪಡೆದಿದೆ. ಆಳ್ವಿಕೆ ನಡೆಸಿದ ರಾಜಕೀಯ ಚರಿತ್ರೆಯುಂಟು. ಐತಿಹಾಸಿಕ ಕಾಲದಲ್ಲಿ ಮೌರ್ಯ ಸಾಮ್ರಾಟನಾದ ಅಶೋಕನ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿದ್ದಿತೆಂದು ಕ್ರಿ.ಪೂ. ೨೫೮ರ ಶಾಸನ ಕೂಡ್ಲಿಗಿ ತಾಲೂಕಿನಲ್ಲಿ ದೊರೆತುದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ.[2] ನಂತರ ಬಂದ ಶಾತವಾಹನರು ದಕ್ಷಿಣ ಪಥದಲ್ಲಿ ರಾಜ್ಯಭಾರ ನಡೆಸಿದ್ದು, ಬಳ್ಳಾರಿ ಹತ್ತಿರ ಮ್ಯಾಕಡೋಣಿಯಲ್ಲಿ (ಆದೋನಿ-ತಾ) ಇವರ ಶಾಸನ ಕಂಡು ಬಂದಿದೆ. ಇವರು ಈ ಪ್ರದೇಶವನ್ನು ‘ಕುಂತಳ’ವೆಂದು ಕರೆದುಕೊಂಡಿದ್ದರು. ‘ತಳವಾರಿಕೆ’ ವ್ಯವಸ್ಥೆಯನ್ನು ಕನ್ನಡ ಪ್ರದೇಶದಲ್ಲಿ ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಗುಪ್ತರ ಕಾಲಕ್ಕೆ ಒಂದು ಚಾರಿತ್ರಿಕ ಘಟನೆ ನಡೆದುದನ್ನು ಅರಿಪುರ ಬೀಡಿನಲ್ಲಿ ಎಂದು ಬಾಣ ಕವಿಯೂ, ‘ಭೋಜಕವಿ’ಯೂ ‘ಅಲಿಪುರಂ ಸ್ಕಂಧವಾರಂ’ ಎಂದಿರುವುದು ಇಂದಿನ ಬಳ್ಳಾರಿ ಹಾಗೂ ಅಲ್ಲೀಪುರ ಪ್ರದೇಶವೇ ಇರಬೇಕು. ನಂತರ ಕದಂಬರು ಪ್ರಾಬಲ್ಯಕ್ಕೆ ಬಂದಾಗ ಉಚ್ಚಂಗಿದುರ್ಗದವರೆಗೆ ಅವರ ರಾಜ್ಯ ವಿಸ್ತಾರವಾಗಿತ್ತು. ಈ ದುರ್ಗವು ಜಿಲ್ಲೆಯ ಪಶ್ಚಿಮಕ್ಕಿದೆ. ಇಂದು ಹರಪನಹಳ್ಳಿ ತಾಲೂಕಿನ ಮೂಲಕ ಇದು ದಾವಣಗೆರೆ ಜಿಲ್ಲೆಗೆ ಸೇರಿದೆ. ಕ್ರಿ.ಶ. ೭೮೭-೮೮ರಲ್ಲಿದ್ದ ಗಂಗ ದೊರೆ ಶ್ರೀ ಪುರುಷ (ಕ್ರಿ.ಶ. ೭೨೫) ಕಾಲದಲ್ಲಿ ಕಂಪಲಿ ಹತ್ತಿರ ಯುದ್ಧವಾಗಿ ಗಂಗರಿಗೆ ಜಯವಾಗಿರುತ್ತದೆ. ಈ ಕಾಳಗದಲ್ಲಿ ಪಾಂಡಪ್ಪ ಎಂಬುವನು ತೀರಿಕೊಳ್ಳುತ್ತಾನೆ.

ಕ್ರಿ.ಶ. ೬ನೇ ಶತಮಾನದಲ್ಲಿ ಕದಂಬರನ್ನು ಸೋಲಿಸಿದಾಗ ಬಾದಾಮಿಯ ಚಾಲುಕ್ಯರ ಅಧೀನಕ್ಕೆ ಈ ಪ್ರದೇಶ ಒಳಪಟ್ಟಿತ್ತು. ೧ನೇ ಕೀರ್ತಿವರ್ಮ, ೨ನೇ ಪುಲಕೇಶಿ, ವಿಕ್ರಮಾದಿತ್ಯರ ಹೆಸರುಗಳು ಅಲ್ಲಲ್ಲಿ ಉಲ್ಲೇಖಿತವಾಗಿವೆ. ಕುರುಗೋಡಿನ ಶಾಸನ ೨ನೇ ಪುಲಕೇಶಿ ಮತ್ತು ಅವನ ಪುತ್ರರನ್ನು ಉಲ್ಲೇಖಿಸುತ್ತದೆ. ೭ನೇ ಶತಮಾನದಲ್ಲಿ ಚಾಲುಕ್ಯ ದೊರೆ ವಿನಯಾದಿತ್ಯ ಪಂಪಾತೀರ್ಥದಲ್ಲಿ ತಂಗಿದ್ದು, ಭೂಮಿಯನ್ನು ದತ್ತಿ ಬಿಟ್ಟಿರುವುದು ತಿಳಿದುಬಂದಿದೆ. ಕ್ರಿ.ಶ. ೮ನೇ ಶತಮಾನದ ಮಧ್ಯಭಾಗದಲ್ಲಿ ಚಾಲುಕ್ಯರಿಂದ ಈ ಪ್ರದೇಶದ ಒಡೆತನವನ್ನು ಮಳ ಖೇಡದ ರಾಷ್ಟ್ರಕೂಟರು ಪಡೆದುಕೊಂಡು, ಹಗರಿನದಿವರೆಗೆ ರಾಜ್ಯದ ಗಡಿಯನ್ನು ವಿಸ್ತರಿಸಿ ಆಳ್ವಿಕೆ ನಡೆಸಿದರು. ಅಲ್ಲಿಂದ ೧೦ನೇ ಶತಮಾನದವರೆಗೆ ಚಾಲುಕ್ಯರು ರಾಷ್ಟ್ರಕೂಟರಿಗೆ ಸಾಮಂತರಾಗಿದ್ದರೆಂದು ಬಾಗಳಿಯ ಶಿಲಾಶಾಸನದಿಂದ ತಿಳಿಯುತ್ತದೆ.[3] ೧೦ನೇ ಶತಮಾನ ದಲ್ಲಿ ತಲಕಾಡಿನ ಗಂಗ ವಂಶದ ಮಾರಸಿಂಹನು ಉಚ್ಚಂಗಿದುರ್ಗದ ಕೋಟೆಯನ್ನು ಪಡೆದು ಕೊಂಡಾಗ, ‘ನೊಳಂಬಕುಲಾಂತಿಕ’ ಎಂಬ ಬಿರುದು ಪ್ರಾಪ್ತವಾಯಿತು.  ನೊಳಂಬ ಪಲ್ಲವ ರಾಜನು ಕಂಪಲಿಯ ಹತ್ತಿರ ರಾಜ್ಯವಾಳುತ್ತಿದ್ದನಂತೆ. ಕ್ರಿ.ಶ. ೨೫.೧೧.೧೩೧೧ರ ಬೈಲೂರು ಶಿಲಾಶಾಸನದಲ್ಲಿ ಇಮ್ಮಡಿ ಭೀಮರಾಜನಿಗೆ ‘ಬಳ್ಳಾರಿಯ ಭೀಮರಸ’ ಎಂದಿದೆ. ಇತರೆ ಶಾಸನಗಳಲ್ಲಿ (೧೧೪೧) ಬಳ್ಳಾರಿಯ ರಾಚಮಲ್ಲ ದೇವರಸ, ಕೋಳೂರು ಶಾಸನದಲ್ಲಿ ‘ಬಳ್ಳಾರಿಯ ದಾರಿ’ ಕುರುಗೋಡು ಕಲ್ಲೇಶ್ವರ ದೇವಾಲಯದಲ್ಲಿ ‘ಬಳ್ಳಾರಿಯ ಅಜ್ಜರಸ’ ಎಂದಿದೆ. ತರುವಾಯ ಪಶ್ಚಿಮ ಚಾಲುಕ್ಯರ ತೈಲಪ ಗಂಗರನ್ನು ಸೋಲಿಸಿದನು. ಈ ಪ್ರದೇಶವು ಸೇರಿರುವಂತೆ ಕುಂತಲ ರಾಜ್ಯವನ್ನು ಅವರು ಆಳುತ್ತಿದ್ದರೆಂದು ಬಾಗಳಿ ಮತ್ತು ಕೋಗಳಿ ದೇವಾಲಯಗಳಲ್ಲಿರುವ ಶಿಲಾಶಾಸನಗಳು ತಿಳಿಸುತ್ತವೆ.

ಪಶ್ಚಿಮ ಚಾಲುಕ್ಯರ ತರುವಾಯ ಅವರ ಸಾಮಂತರಾಗಿದ್ದ ಕಳಚೂರಿಗಳು ದ್ವಾರ ಸಮುದ್ರದ ಹೊಯ್ಸಳರು ಮತ್ತು ದೇವಗಿರಿಯ ಯಾದವರು ಕಾರಣರಾದರು. ಬಿಜ್ಜಳನು ಕಲ್ಯಾಣದಲ್ಲಿ ರಾಜ್ಯ ಸ್ಥಾಪಿಸಿದ ನಂತರ ಚಾಲುಕ್ಯರು ಅಲ್ಪಕಾಲಾವಧಿಯಲ್ಲಿ ಈ ಪ್ರದೇಶ ದಲ್ಲಿದ್ದರೆಂದು ತಿಳಿದುಬಂದಿದೆ. ಹೊಯ್ಸಳರು ತಮ್ಮ ರಾಜ್ಯಾಳ್ವಿಕೆಯಲ್ಲಿ ವಿಷ್ಣುವರ್ಧನನ ವರೆಗೆ ಕಲ್ಯಾಣಿ ಚಾಲುಕ್ಯರ ಅಧೀನದಲ್ಲಿದ್ದರು. ಇವನ ಕಾಲಕ್ಕೆ (೧೧೬೦) ಬಳ್ಳರೆಯ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ೨ನೇ ಬಲ್ಲಾಳ ನೊಳಂಬವಾಡಿಯನ್ನು ಹಲವು ಬಾರಿ ವಶಪಡಿಸಿಕೊಂಡನಲ್ಲದೆ, ಇವನು ಉಚ್ಚಂಗಿದುರ್ಗವನ್ನು ಉತ್ತರ ಭಾಗದ ರಾಜಧಾನಿ ಮತ್ತು ತುಂಗಭದ್ರಾ ನದಿಯನ್ನು ಉತ್ತರದ ಗಡಿಯಾಗಿ ಮಾಡಿಕೊಂಡ. ಕುಮ್ಮಟದುರ್ಗದ ಕಂಪಿಲರಾಯನು ಸೇವುಣರಪರ, ಹೊಯ್ಸಳರ ವಿರೋಧಿಯಾಗಿದ್ದು, ಕ್ರಿ.ಶ. ೧೩೨೭ರಲ್ಲಿ ಕುಮ್ಮಟದುರ್ಗ ಮಹಮದೀಯರ ದಾಳಿಗೆ ತುತ್ತಾಗಿ ಅಸ್ತಂಗತವಾದುದು ತಿಳಿದುಬರುತ್ತದೆ. ಬಳ್ಳಾರಿ ಜಿಲ್ಲೆ ಸೊಂಡೂರು ಹತ್ತಿರವಿರುವ ಹೊಸಮಲೆದುರ್ಗದಲ್ಲಿ ಮುಮ್ಮಡಿ ಸಿಂಗೇ ನಾಯಕ, ಕಂಪಿಲರಾಯ ಮತ್ತು ಕುಮಾರರಾಮ ಅವರುಗಳು ಆರಂಭದಲ್ಲಿ ಆಳ್ವಿಕೆ ನಡೆಸಿರು ತ್ತಾರೆ. ಅನಂತರ ಇಂದಿನ ಗಂಗಾವತಿ ತಾಲ್ಲೂಕಿನ ಕುಮ್ಮಟದುರ್ಗದಲ್ಲಿ ರಾಜ್ಯಾಳ್ವಿಕೆ ಮಾಡಿದ್ದು ಗಮನಾರ್ಹ.[4]

ಹೊಯ್ಸಳರ ವಿಷ್ಣುವರ್ಧನನ ಕಾಲಕ್ಕೆ ಬಳ್ಳಾರಿ ಕೋಟೆ ಅವರಿಗೆ ಸೇರಿತ್ತು. ಕ್ರಿ.ಶ. ೧೩೩೬ರಲ್ಲಿ (೧೩೪೬?) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ ನಾಲ್ಕು ವಂಶಗಳು ಆಳ್ವಿಕೆ ನಡೆಸಿದವು. ಇವರ ಕಾಲದಲ್ಲಾದ ಎಲ್ಲಾ ಕ್ಷೇತ್ರಗಳ ಬದಲಾವಣೆ, ಅಭಿವೃದ್ದಿ ಮತ್ತು ಸುಧಾರಣೆಗಳು ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ವಿಜಯ ನಗರದ ನಂತರ ಈ ಭಾಗ ಬಿಜಾಪುರದ ೧ನೇ ಆಲಿ ಆದಿಲ್ ಷಾ (೧೫೬೮)ನಿಗೆ ವಶವಾಗು ತ್ತದೆ. ಅನಂತರ ಸ್ಥಳೀಯ ಪಾಳೆಯಗಾರರು ರಾಜಕೀಯ ಪ್ರಾಬಲ್ಯ ಬೆಳೆಸಿಕೊಂಡು ಆದಿಲ್ ಷಾಹಿಗಳಿಗೆ ಅಧೀನರಾಗಿ ಈ ಭಾಗದಲ್ಲಿ ಆಡಳಿತ ನಡೆಸುತ್ತಾರೆ. ಉದಾಹರಣೆಗೆ ಗುಡೇ ಕೋಟೆ, ಹರಪನಹಳ್ಳಿ, ಬಳ್ಳಾರಿ, ಜರಿಮಲೆ, ಸೊಂಡೂರು ಪ್ರಮುಖವಾದವು.[5]

ವಸಾಹತುಪೂರ್ವದಲ್ಲಿ ಬಳ್ಳಾರಿ ಜಿಲ್ಲೆ

ಆಂಗ್ಲರು ಬರುವ ಮುನ್ನ ಇದ್ದಂತಹ ರಾಜಕೀಯ ಚಿತ್ರಣವನ್ನು ಸುಮಾರು ಎರಡುನೂರು ವರ್ಷಗಳ ಕಾಲಮಾನದ ಅವಲೋಕನ ಮಾಡಿ ನೋಡಲಾಗಿದೆ. ವಿಜಯನಗರದ ಕೊನೆ ಅರಸ ಪೆನುಗೊಂಡೆಯಲ್ಲಿದ್ದ ವೆಂಕಟಪತಿದೇವನು (೧೫೮೬-೧೬೧೪), ಈ ಭಾಗವನ್ನು ಹರಪನಹಳ್ಳಿ ಪಾಳೆಯಗಾರರಿಗೆ ಬಿಟ್ಟುಕೊಟ್ಟನು. ಮೂಲತಃ ಇವರು ನಾಡ ತಳವಾರರು. ಈ ಪಾಳೆಯಗಾರ ವಂಶದ ಸ್ಥಾಪಕರು ದಾದಯ್ಯನಾಯಕ ಮತ್ತು ರಂಗನಾಯಕ. ಇವರ ಪೂರ್ವ ಪ್ರದೇಶದ ಉಪರಾಜಧಾನಿ ಹೊಸಪೇಟೆಯಾಗಿತ್ತು.[6] ೧೫೯೨ರಲ್ಲಿ ಅರಸ ಮಡಿದ ತರುವಾಯ ಸುಮಾರು ೧೦ ಮಂದಿ ಅರಸರು ಕಾಲಾನುಕ್ರಮದಲ್ಲಿ ಈ ಪಾಳೆಯಗಾರರ ವಂಶದಲ್ಲಿ ಆಳ್ವಿಕೆ ನಡೆಸಿದ್ದಾರೆ.[7] ಕೊನೆಯದಾಗಿ ಬಸವಂತ (೧೭೧೫-೧೭೨೧)ನಿಗೆ ಪುತ್ರ ಸಂತಾನವಿಲ್ಲದ್ದರಿಂದ ಗೋನಪ್ಪನನ್ನು ದತ್ತು ಪಡೆದನು.[8]

ಕ್ರಿ.ಶ. ೧೬೭೭-೭೮ರಲ್ಲಿ ಈ ಪ್ರದೇಶವನ್ನು ಮರಾಠರ ಶಿವಾಜಿ ವಶಪಡಿಸಿಕೊಂಡನು.[9] ಬಿಜಾಪುರದ ೧ನೇ ಆಲಿ ಆದಿಲ್‌ಷಾ ಮರಾಠರಿಗೆ ಉಳಿದ ಪ್ರದೇಶ ಬಿಟ್ಟುಕೊಟ್ಟಾಗ, ಇಲ್ಲಿನ ಸ್ಥಳೀಯ ಪಾಳೆಯಗಾರರು ಮರಾಠರಿಗೆ ವಿಧೇಯರಾಗಿ ‘ಚೌತ್’ ಎನ್ನುವ ಕಪ್ಪ-ಕಾಣಿಕೆಯನ್ನು (ತೆರಿಗೆ) ಸಲ್ಲಿಸಿ, ನಿಷ್ಠೆ, ಪ್ರಾಮಾಣಿಕತೆ ತೋರಿಸುತ್ತಿದ್ದರು. ೧೬೮೦ರಲ್ಲಿ ಶಿವಾಜಿಯ ಮರಣದ ತರುವಾಯ ಮೊಘಲ್ ಬಾದಷಹ, ಔರಂಗಜೇಬ್ ಮೊದಲಿನಿಂದಲೂ ಈ ಪ್ರದೇಶವನ್ನು ಪಡೆಯಲು ಹವಣಿಸುತ್ತಿದ್ದನು. ಆಗ ಅವನಿಗೆ ಯಾರ ಅಡೆತಡೆ ಮತ್ತು ಕಿರುಕುಳ ಇಲ್ಲದಾಯಿತು. ೧೭೦೭ರಲ್ಲಿ ಔರಂಗಜೇಬ್ ಮರಣದ ನಂತರ ಹೈದರಾಬಾದಿನ ನಿಜಾಮನು ಏಳಿಗೆಯಾದನು. ಆಗ ರಾಯದುರ್ಗ, ಗುತ್ತಿ, ಸೊಂಡೂರು, ಜರಿಮಲೆ, ಗುಡೆ ಕೋಟೆ ಮತ್ತು ಹರಪನಹಳ್ಳಿ ಇತರ ಸಂಸ್ಥಾನಗಳು ಆಳ್ವಿಕೆ ನಡೆಸಲು ತಮ್ಮ ತಮ್ಮಲ್ಲಿಯೇ ಸಂಘರ್ಷ ನಡೆಸುತ್ತಿದ್ದವು.

ಬಳ್ಳಾರಿ ಪ್ರದೇಶದ ಸೊಂಡೂರು ಜರಿಮಲೆಯ ಪಾಳೆಯಗಾರರ ವಶದಲ್ಲಿತ್ತು. ೧೭೧೩ ರಲ್ಲಿ ಸಿದ್ದೊಜಿ ಘೋರ್ಪಡೆ ಮರಾಠರ ಸಾಮಾನ್ಯ ಪ್ರಮುಖನೆಂದು ಘೋಷಿಸಿಕೊಂಡನು. ಹೈದರಾಬಾದಿನಲ್ಲಿ ಮೊಘಲರ ರಾಜ್ಯಪಾಲ ಅಸಫ್ ಜಾನೇ ಸ್ವತಂತ್ರನೆಂದು ಘೋಷಿಸಿ ಕೊಂಡು ೧೬೭೩ರಲ್ಲಿ ಈ ಪ್ರದೇಶದ ಮೇಲೆ ಅಧಿಕಾರ ಹೊಂದಲು ಪ್ರಯತ್ನಿಸಿ ವಿಫಲ ನಾದನು. ಇದು ಸೊಂಡೂರಿನ ರಾಜಕೀಯ ಚಿತ್ರಣದ ಒಂದು ಕುರುಹು. ಹರಪನಹಳ್ಳಿ ಪಾಳೆಯಗಾರ ವೀರಬಸಪ್ಪನಾಯಕನ ಮಗನಾದ ಸೋಮಶೇಖರ ನಾಯಕನು ಸಮರ್ಥ, ದಕ್ಷ, ಆಡಳಿತಗಾರನಾಗಿದ್ದು, ೧೭೪೨ರಲ್ಲಿ ಅಧಿಕಾರ ವಹಿಸಿಕೊಂಡನು. ಒಟ್ಟಾರೆ ಹೇಳುವು ದಾದರೆ “ಹರಪನಹಳ್ಳಿ ಪಾಳೆಯಗಾರರು ಬೇಡ ಸಮುದಾಯಕ್ಕೆ ಸೇರಿದ ಅತ್ಯಂತ ಪ್ರಬಲ ಆಡಳಿತಗಾರರಾಗಿದ್ದರು. ಕ್ರಮೇಣ ಇವನು ಎಷ್ಟೋ ಪ್ರಬಲನಾಗಿದ್ದರೂ, ಇನ್ನೊಬ್ಬರ ಅಧೀನದಲ್ಲಿರುವ ಪರಿಸ್ಥಿತಿ ಉಂಟಾಯಿತು. ೧೭೬೧ರಲ್ಲಿ ಹೈದರಾಲಿಯೂ ಹರಪನಹಳ್ಳಿ ಮತ್ತು ರಾಯದುರ್ಗಕ್ಕೆ ದಂಡೆತ್ತಿ ಬಂದು ಕಪ್ಪ ಕಾಣಿಕೆ ಪಡೆಯುತ್ತಾನೆ. ಅನಂತರ ೧೭೬೨ರಲ್ಲಿ ಈ ಪ್ರದೇಶ ಹೈದರನ ಆಳ್ವಿಕೆಗೆ ಒಳಗಾಯಿತು.

ಸೋಮಶೇಖರ ನಾಯಕನ ಕಾಲದಲ್ಲಿ ಪರಿಸ್ಥಿತಿ ಶಾಂತವಾಗಿರಲಿಲ್ಲ. ನಾಯಕ ಹೊಸಪೇಟೆಯಲ್ಲಿ ತಂಗಿದ್ದಾಗ, ಉಚ್ಚಂಗಿದುರ್ಗದ ಮೇಲೆ ಚಿತ್ರದುರ್ಗದ ನಾಯಕರು ದಾಳಿ ನಡೆಸುತ್ತಿದ್ದರು. ಇದನ್ನು ಹತ್ತಿಕ್ಕಲು ನಾಯಕ ಸಿದ್ಧನಾಗಿ ಮಾಯಕೊಂಡದವರೆಗೂ ಚಿತ್ರದುರ್ಗದ ನಾಯಕರನ್ನು ಬೆನ್ನಟ್ಟಿದನು. ಆನೆಯ ಮೇಲೆ ನಡೆದ ಯುದ್ಧದಲ್ಲಿ ಅವನನ್ನು ಸಂಹರಿಸಲಾಯಿತು. ಮಾಯಕೊಂಡದ ಮಟ್ಟಿಯ ಮೇಲೆ ಮದಕರಿ ಭೂಪ ಮರೆಯಾದದ್ದು ವಿಪರ್ಯಾಸ. ೧೭೬೬ರ ತನ್ನ ಮರಣದವರೆಗೂ ನಾಯಕ ಹೈದರನಿಗೆ ಆಪ್ತನಂತಿದ್ದ. ಆದರೆ, ಕಾಲಕ್ರಮೇಣ ಟಿಪ್ಪುವಿಗೆ ಇಂತಹ ಯಾವ ಪಾಳೆಯಗಾರನ ಮೇಲೂ ವಿಶ್ವಾಸ ವಿರಲಿಲ್ಲ. ಹರಪನಹಳ್ಳಿಯಲ್ಲಿ ಸೋಮಶೇಖರ ನಾಯಕನ ತರುವಾಯ ಅದೇ ವಂಶದವರು ಆಳ್ವಿಕೆಯನ್ನು ಮುಂದುವರೆಸಿದರು.

ಕ್ರಿ.ಶ. ೧೭೬೮ರಲ್ಲಿ ಮತ್ತೊಮ್ಮೆ ಹೈದರಾಲಿ ಬಳ್ಳಾರಿ ಪ್ರದೇಶದ ಮೇಲೆ ಧಾಳಿ ಮಾಡಿ ಪಾಳೆಯಗಾರನನ್ನು ಸೋಲಿಸಿದನು (ಬಸಲತ್‌ಜಂಗ್). ಆನಂತರ, ಈ ಪ್ರದೇಶವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡನು. ಪುನಃ ನಡೆದ ಯುದ್ಧದಲ್ಲಿ ಬಳ್ಳಾರಿ, ಆದೋನಿ ಪಾಳೆಯಗಾರರು ಹೈದರನನ್ನು ಸೋಲಿಸಿ ಹಿಮ್ಮೆಟಿಸುತ್ತಾರೆ. ಹೈದರ ಎರಡು ವರ್ಷಗಳ ಕಾಲ ಮರಾಠರ ಮತ್ತು ನಿಜಾಮನ ವಿರೋಧಿಯಾಗಿದ್ದ. ಕ್ರಿ.ಶ. ೧೭೬೭ರಲ್ಲಿ ಮೈಸೂರು ರಾಜ್ಯ ಛಿದ್ರವಾಗಿತ್ತು. ಹೈದರಾಲಿ ವಶದಲ್ಲಿದ್ದ ಪ್ರದೇಶಗಳು ನಿಜಾಮನಿಗೆ ಕಂದಾಯ ಕೊಡಬೇಕಾಯಿತು. ಬಳ್ಳಾರಿ, ಆದೋನಿಗಳು ೧೭೭೪ರಲ್ಲಿ ನಿಜಾಮನಾದ ಬಸಲತ್‌ಜಂಗನಿಗೆ ಕಂದಾಯ ಕೊಡಬೇಕಾಯಿತು. ಈ ಭಾಗದ ಹರಪನಹಳ್ಳಿ ಪಾಳೆಯಗಾರನಾದ ಸೋಮ ಶೇಖರನು ತನ್ನ ಆಳ್ವಿಕೆಯಲ್ಲಿ ೧೨,೦೦೦ ಪಗೋಡಗಳನ್ನು ಹೈದರಾಲಿಗೆ ಕೊಡುತ್ತಿದ್ದನು. ಅವನ ನಂತರ ಈ ಮೊತ್ತವನ್ನು ಹೈದರಾಲಿ ನಿಜಾಮನಿಗೆ ಕೊಡುವಂತೆ ಸೂಚಿಸಿದನು. ಹರಪನಹಳ್ಳಿ ಪಾಳೆಯಗಾರ ವಂಶದ ಅವನತಿಗೆ ಒಪ್ಪದ ಸೋಮಶೇಖರ ನಾಯಕನ ಹೆಂಡತಿ ವಿಧವೆಯಾದುದರಿಂದ ದತ್ತು  ಮಗನಾಗಿ ಚಿನ್ನದ ಗಿರಿಯಪ್ಪನನ್ನು ಪಡೆದಳು. ಆದರೆ, ೧೭೬೮ರಲ್ಲಿ ಅವನು ಮಡಿದನು. ಮತ್ತೊಬ್ಬನನ್ನು ದತ್ತು ಪಡೆದು, ಅವನು ಅಧಿಕಾರಕ್ಕೆ ಬರುವ ಮುನ್ನ ಇವಳು ಕೊನೆ ಉಸಿರೆಳೆದಳು. ಬಳ್ಳಾರಿ ಜಿಲ್ಲೆಯಲ್ಲಿ ಅಷ್ಟ (ಎಂಟು) ಬೇಡ ಪಾಳೆಯಗಾರರು ಆಳ್ವಿಕೆ ನಡೆಸಿದ್ದರು. ಗುಡೇಕೋಟೆ, ಜರಿಮಲೆ, ಹರಪನ ಹಳ್ಳಿ, ವಡ್ಡು-ದರೋಜಿ, ಕುಡತಿನಿ, ಸೊಂಡೂರು, ಬಾಣರಾವಿ, ಉಜ್ಜಿನಿ, ವೀರನದುರ್ಗ ಮುಂತಾದವು.[10]

ಕ್ರಿ.ಶ. ೧೭೭೦ರ ನಂತರ ಅಧೀನರಾದ ಪಾಳೆಯಗಾರರಲ್ಲಿ, ಗುತ್ತಿ, ಬಳ್ಳಾರಿ, ಆದೋನಿ ಗಳಿಂದ ಸೈನ್ಯ, ಕಪ್ಪಕಾಣಿಕೆ ಕೊಡಲು ಹೈದರ್ ಆಜ್ಞಾಪಿಸಿದನು. ೧೭೭೪ರಲ್ಲಿ ಬಳ್ಳಾರಿ ಪಾಳೆಯಗಾರ ನಿಜಾಮನಿಗೆ ಕೊಡಬೇಕಾದ ಹಣವನ್ನು ಕೊಡದೇ, ಸೈನ್ಯವನ್ನು ಯುದ್ಧಕ್ಕೆ ಕಳುಹಿಸಿದನು. ಹೈದರ್ ಆದೋನಿಯ ಅರಸನನ್ನು (ಬಸಲತ್‌ಜಂಗ್) ಬಳ್ಳಾರಿ ಹತ್ತಿರ ಸೋಲಿಸಿದನಲ್ಲದೆ, ಗುತ್ತಿಯನ್ನು ಮೂರನೇ ಬಾರಿಗೆ ಟಿಪ್ಪು ಪಡೆದನು. ಆಗ ಅಲ್ಲಿ ಗವರ್ನರ್ ಮರಾಠರ ವಿರೋಧಿಯಾಗಿ ತನ್ನ ಅಧೀನದಲ್ಲಿದ್ದ ಮಡಕಶಿರಾ, ಕಾಕಿಕೊಂಡ, ಹಿಂದೂಪುರ, ಹರಪನಹಳ್ಳಿ ಮತ್ತು ರಾಯದುರ್ಗವನ್ನು ಟಿಪ್ಪುಸುಲ್ತಾನನಿಗೆ ಬಿಟ್ಟುಕೊಟ್ಟನು.  ಟಿಪ್ಪುವಿನ ನಂತರ ಈ ಪ್ರದೇಶಗಳು ಸ್ವತಂತ್ರವಾಗಿರಲು ಬಯಸಿದವು.

ಕ್ರಿ.ಶ. ೧೭೯೨ರಲ್ಲಿ ಟಿಪ್ಪುವಿನ ವಿರುದ್ಧ ಒಪ್ಪಂದವನ್ನು ಗವರ್ನರ್ ಲಾರ್ಡ್ ಕಾರ್ನ ವಾಲೀಸ್, ಮರಾಠರು ಮತ್ತು ನಿಜಾಮನು ಮಾಡಿಕೊಂಡರು. ಇದೇ ವರ್ಷ ಟಿಪ್ಪು  ಪರಾಜಯ ಹೊಂದಿದಾಗ ಸೊಂಡೂರಿಗೆ ಮರಾಠ ಸೇನಾಪತಿಯೇ ಒಡೆಯನಾದನು. ನಂತರ ೧೭೯೯ ಮೇ ೪ರಂದು ಟಿಪ್ಪು ಮಡಿದಾಗ ಅವನ ಸಾಮ್ರಾಜ್ಯದ ಹಂಚಿಕೆಯಲ್ಲಿ ಸಮಸ್ಯೆ ಯುಂಟಾಯಿತು. ಟಿಪ್ಪುವಿನ ರಾಜ್ಯವನ್ನು ಮರಾಠರು, ನಿಜಾಮ ಮತ್ತು ಇಂಗ್ಲಿಷರು ಮೂರು ಭಾಗಗಳಾಗಿ ಹಂಚಿಕೊಂಡರು. ರಾಯದುರ್ಗಕ್ಕೆ ಗೋಪಾಲನಾಯಕ ಮುಖ್ಯಸ್ಥ ನಾದನು. ಹರಪನಹಳ್ಳಿಯನ್ನು ಅದೇ ವಂಶದವರಿಗೆ ಕೊಡಲು ನಿರಾಕರಿಸಿದರಲ್ಲದೆ, ಉಳಿದ ಭಾಗವೆಲ್ಲ ನಿಜಾಮನಿಗೆ ಸೇರಿತು. ಈ ಪ್ರದೇಶದ ಜವಾಬ್ದಾರಿ, ಬೆಳವಣಿಗೆ ರೂಪಿಸಲು ಕರ್ತವ್ಯ ನಿಜಾಮನಿಗೆ ಒದಗಿತು. ಈ ಸಂದರ್ಭದಲ್ಲಿ ಮೈಸೂರು ಪ್ರಾಂತ, ಇತರ ಕೆಲವು ಪ್ರದೇಶಗಳಲ್ಲಿ ಆಂಗ್ಲರ ಆಡಳಿತವಿತ್ತು. ನಿಜಾಮ ಸುತ್ತಲೂ ಆವರಿಸಿಕೊಂಡಿದ್ದ ಬ್ರಿಟಿಷ ಸಂಸ್ಥಾನಗಳ ಕಿರುಕುಳ ಮುಂದೆ ಆಗಬಹುದೆಂದು ಆಲೋಚಿಸಿ ಬ್ರಿಟಿಷರೊಡನೆ ವಿರುದ್ಧ ವಾಗಿದ್ದು ನಷ್ಟ ಅನುಭವಿಸುವುದಕ್ಕಿಂತ, ಸ್ನೇಹದಿಂದ ಲಾಭಗಳಿಸಲು ಹವಣಿಸಿದನು. ಅನಂತರ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ಅವರೊಂದಿಗೆ ಒಪ್ಪಂದ ಮಾಡಿಕೊಂಡನು. ಈ ಮೊದಲು ಕೊಟ್ಟಂತಹ ಬಳ್ಳಾರಿ ಪ್ರದೇಶವನ್ನು ಮರಳಿ ಅವರಿಗೆ ದತ್ತಿಯಾಗಿ ಬಿಟ್ಟುಕೊಟ್ಟನು. ಆಗಿನಿಂದ ಈ ಭಾಗವವನ್ನು ದತ್ತಿಮಂಡಲವೆಂದು (ಬಳ್ಳಾರಿ, ಅನಂತಪುರ, ಕಡಪ ಮತ್ತು ಕರ್ನೂಲು) ಕರೆಯಲಾಯಿತು. ೧೮೦೦ ಡಿಸೆಂಬರ್‌ನಲ್ಲಿ ನಿಜಾಮನು ಬಳ್ಳಾರಿಯನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ದತ್ತಿಮಂಡಲ (ಸೀಡೆಡ್ ಡಿಸ್ಟ್ರಿಕ್ಟ್ಸ್)ದಲ್ಲಿ ಬಳ್ಳಾರಿ ನಾಲ್ಕನೆ ಯದು. ಇದರ ಭೌಗೋಳಿಕ ಪರಿಚಯವನ್ನು ಈ ಮೊದಲೇ ತಿಳಿಸಲಾಗಿದೆ. ಆಂಗ್ಲರು ಇಲ್ಲಿಗೆ ೧೭೯೪ರಲ್ಲಿ ಬಂದರೂ, ಅಧಿಕೃತವಾಗಿ ಆಡಳಿತ ಪ್ರಾರಂಭಿಸಿದ್ದು ೧೮೦೦ರಿಂದ. ಹಾಗಾಗಿ ಅಂದಿನಿಂದ ಬಳ್ಳಾರಿ ಪ್ರದೇಶವನ್ನು ಒಂದು ರೆವೆನ್ಯೂ ಜಿಲ್ಲೆಯಾಗಿ, ತಾಲ್ಲೂಕು, ಫಿರ್ಕಾಗಳನ್ನಾಗಿ ವಿಂಗಡಿಸಿ, ಆಡಳಿತ ಪ್ರಾರಂಭಿಸಿದರು. ಸರ್. ಥಾಮಸ್ ಮನ್ರೋ ಈ ಪ್ರದೇಶಗಳಿಗೆ ಪ್ರಥಮ ಕಲೆಕ್ಟರನಾಗಿ ಬಂದನು. ಈ ಹಿಂದೆ ಬೆಳಗಾವಿ, ಧಾರವಾಡ ಜಿಲ್ಲೆಗಳು ಸಹಾ ಬಳ್ಳಾರಿ ಜಿಲ್ಲೆಗೆ ಸೇರಿದ್ದವೆಂದು ತಿಳಿಯುತ್ತದೆ. ಕ್ರಮೇಣ ಅವು ಮುಂಬಾಯಿ ಪ್ರಾಂತ್ಯಕ್ಕೆ ಸೇರಿಹೋದವು. ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದಾಗ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ಮತ್ತು ಚಾರಿತ್ರಿಕವಾಗಿ ಸಾಕಷ್ಟು ಬದಲಾಗಿತ್ತು.


[1]       ಆಂಧ್ರಲ ಸಂಕ್ಷಿಪ್ತ ಚರಿತ್ರೆ, ಚೆಟುಕೂರ ಬಲರಾಮಮೂರ್ತಿ, ವಿಜಯವಾಡ, ೧೯೫೬, ಪು. ೨೩೮-೩೯.

[2]       ಸವರ್ಣ ಪುಷ್ಪಾಂಜಲಿ, ೧೯೬೪, ಪು. ೫.

[3]       ಅದೇ. ಪು. ೫.

[4]       ಅದೇ ಪು. ೧೭.

[5]       ಸ್ಕಂದ-ಶ್ರೀಗಂಧ (ಸ್ಮರಣ ಸಂಚಿಕೆ), ೧೯೯೧, ಪು. ೬.

[6]       ಕರ್ನಾಟಕದ ಪರಂಪರೆ-೨, ೧೯೯೨, ಪು. ೨೦೫.

[7]       ಡಬ್ಲ್ಯೂ. ಫ್ರಾನ್ಸಿಸ್ : ಬಳ್ಳಾರಿ ಜಿಲ್ಲಾ ಗ್ಯಾಸೆಟಿಯರ್, ೧೯೦೨, ಪು. ೪೫.

[8]       Report of 20 March, 1802, P : 2.

[9]       ೧೬೪೦ರಲ್ಲಿ ಶಿವಾಜಿ ಬಿಜಾಪುರದ ಸುಲ್ತಾನರಿಂದ ಬಳ್ಳಾರಿ ಮತ್ತು ಆದೋನಿ ಪ್ರದೇಶಗಳನ್ನು ಉಂಬಳಿಯಾಗಿ ಪಡೆದನು. ಗೂಟಿ, ಗೋಲ್ಕಂಡ, ರಾಯದುರ್ಗ, ಅನಂತಪುರ, ಹರಪನಹಳ್ಳಿ ಮೊದಲಾದ ಪ್ರದೇಶಗಳು ಮರಾಠರ ವಶವಾದವು. ೧೬೮೦ರಲ್ಲಿ ಶಿವಾಜಿ ಸತ್ತನಂತರ ಔರಂಗಬೇಜ್ ಇದನ್ನು ಪಡೆಯಲು ಮುಂದಾದ.

[10]      ನೋಡಿ : ವಿರೂಪಾಕ್ಷಿ ಪೂಜಾರಹಳ್ಳಿ, ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ೨೦೦೪, ಪು. ೧-೧೦೦.