ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಪರಿಣಾಮಗಳು ನಾನಾ ಬಗೆಯಲ್ಲಿ ಆಗಿರುವುದು ಸ್ಪಷ್ಟ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಭಾಷೆ, ಧರ್ಮ, ಸಂಸ್ಕೃತಿ, ಜನಾಂಗಗಳ ಮೇಲಾದ ದೌರ್ಜನ್ಯ, ಹಿಂಸೆ, ಶೋಷಣೆಗೆ ಮಿತಿಯಿರಲಿಲ್ಲ. ಈ ಹಿನ್ನೆಲೆಯಲ್ಲಿ ಮದ್ರಾಸ್ ಅಧಿಪತ್ಯದ ಬಳ್ಳಾರಿ ಜಿಲ್ಲೆಯಲ್ಲಿ ಬೇಡರನ್ನು ಕುರಿತು ಬ್ರಿಟಿಷರ ದೃಷ್ಟಿಕೋನವನ್ನು ಇಲ್ಲಿ ತಿಳಿಸಲಾಗಿದೆ. ಬೇರೆ ಸಮುದಾಯದವರಿದ್ದರು, ಬೇಡರು ಬ್ರಿಟಿಷರ ಪೂರ್ವದಲ್ಲಿ ಪಾಳೆಯ ಗಾರರಾಗಿದ್ದರು. ಅನಂತರ ಬ್ರಿಟಿಷರು ಅವರನ್ನು ಸ್ಥಾನಪಲ್ಲಟಗೊಳಿಸಿದರು. ಈ ಹಿನ್ನೆಲೆ ಯಲ್ಲಿ ಬೇಡರ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಡಲಾಗಿದೆ. ಮಧ್ಯಕಾಲೀನ ಕರ್ನಾಟಕದ ತುಂಗಭದ್ರಾ ನದಿಯ ದಕ್ಷಿಣಕ್ಕೆ ಮತ್ತು ವೇದಾವತಿ ನದಿಯ ಪಶ್ಚಿಮಕ್ಕೆ ಬೇಡರು ವ್ಯಾಪಕವಾಗಿ ನೆಲೆಸಿದ್ದರಿಂದ ಈ ಪ್ರದೇಶಕ್ಕೆ ‘ಬೇಡರನಾಡು’ ಎಂದು ಕರೆಯಲಾಗಿತ್ತು. ವಿಜಯನಗರದ ಬೇಡರು ರಕ್ಕಸ ತಂಗಡಿಯ ಯುದ್ಧದ ನಂತರ  ತಿಂಗಳವರೆಗೆ ರಾಜ್ಯಾಳ್ವಿಕೆ ನಡೆಸಿದರೆಂದು ವಿರೂಪಾಕ್ಷ ಪಂಡಿತ ಚನ್ನಬಸವ ಪುರಾಣದಲ್ಲಿ ತಿಳಿಸಿದ್ದಾನೆ. ಬಹುಶಃ ಈ ಬೇಡರು ಕ್ರಮೇಣ ಈ ಸ್ಥಳಗಳಿಗೆ ವಲಸೆ ಬಂದಿರಬೇಕು. ಶಬರ ವಚನಚರರಾದ ಬೇಡರು ಚಿತ್ರದುರ್ಗ, ರಾಯದುರ್ಗ, ಹರಪನಹಳ್ಳಿ ಪಾಳೆಯಗಾರರು ಇವರೇ ಆಗಿದ್ದರು. ವಿಜಯನಗರದಲ್ಲಿ ದೊಡ್ಡ ದೊಡ್ಡ ಸೇನಾನಿಗಳು ಬೇಡಕಿ (ಬ್ಯಾಡಕಿ) ಎನ್ನುವ ಸೈನ್ಯವು ಇವರಿಗಿತ್ತು. ಮೊದಲಿ ನಿಂದಲೂ ‘ಬೋಯ’ ಜನಕೀ ಯುದ್ಧದಲ್ಲಿ ಕಣ್ವ ಜನರಾಗಿದ್ದರು. ಟಿಪ್ಪುಸುಲ್ತಾನ ಬೇಡರನ್ನು ಸೈನ್ಯಕ್ಕೆ ತೆಗೆದುಕೊಂಡು ಹನ್ನೇರಡು ತಗೋಡಾ ಸಂಬಳ ಕೊಡುತ್ತಿದ್ದನು. ಟಿಪ್ಪು ಬೇಡ ಪಾಳೆಯಗಾರರನ್ನು ಬೇಡ ಸೈನಿಕರಿಂದ ಸೋಲಿಸುತ್ತಿದ್ದುದು ಇತಿಹಾಸ. ನಮ್ಮ ದೇಶದ ಸೈನ್ಯದಲ್ಲಿ ಮೊನ್ನೆ ಮೊನ್ನೆಯವರೆಗೂ ಬೇಡರೇ ಹೆಚ್ಚಾಗಿದ್ದರು. ಇಂಥಾ ಬೇಡರು ಬೇಡ ಸಂಸ್ಥಾನಿಕರು ಒಂದಾಗಿ ಹೋರಾಟ ಮಾಡಿದ್ದರೆ, ಟಿಪ್ಪು ಸುಲ್ತಾನನ್ನಾಗಲಿ, ಬ್ರಿಟಿಷರನ್ನಾಗಲಿ ಈ ನೆಲದಿಂದ ಹೊರದೂಡಬಹುದಿತ್ತು. ಬ್ರಿಟಿಷ್ ಅಧಿಕಾರಿ ಜಾನ್. ಕೆಲ್‌ಶೆಲ್ ಬೇಡ ಜನಾಂಗ ಕುರಿತು ಬಳ್ಳಾರಿ ಜಿಲ್ಲಾ ಗ್ಯಾಸೆಟಿಯರ್‌ನಲ್ಲಿ : (Boya Vandlu) ‘This caste is called Beder in Canarese and Baindar in Hindustani and Taliaries and other inferior village servants belong to it. Other members live by hunting; many are peons. The old native armies were largely recruited from this caste and some of the Boys rose to power. The poligars of Harapanahalli and Raidurg were Boya’ ಎಂದು ತಿಳಿಸಿದ್ದಾನೆ. ೧೮೦೦ರಲ್ಲಿ ಬ್ರಿಟಿಷರು ಬಳ್ಳಾರಿಯಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಇವರು ಚದುರಿದ್ದರು. ಅಂದಿನ ಸರ್ಕಾರ ಹಿಂದೂ ಜನಾಂಗಕ್ಕೆ ಸೇರಿದ ಬೇಡರನ್ನು ಬೋಯಸ್, ಬೈದಾಸ್, ಬ್ಯಾಡರು, ಬೇಡರು ಎಂದು ಕರೆಯಲಾಗಿದೆ. ಸರ್. ಥಾಮಸ್ ಮನ್ರೋ ಕಲೆಕ್ಟರ್‌ನಾಗಿ ಬಂದಾಗ, ಈ ಜನಾಂಗವನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡು, “ಅಸಂಘಟಿತ ಮತ್ತು ಅಸಂಪ್ರದಾಯದವರೆಂದು” ಅಭಿಪ್ರಾಯಿಸಿದ್ದಾನೆ. ಬ್ರಿಟಿಷ್ ಸರ್ಕಾರ ಬೇಡರಶಕ್ತಿ ಸಾಮರ್ಥ್ಯ ವನ್ನು ರಾಜಕೀಯವಾಗಿ ಸ್ಥಗಿತಗೊಳಿಸಲು ಅಥವಾ ನಿಯಂತ್ರಿಸಲು ಅರಣ್ಯಸಂರಕ್ಷಕ, ಆರಕ್ಷಕ, ಜವಾನ ಮತ್ತು ಹಳ್ಳಿಯ ಕಾವಲುಗಾರರ ಹುದ್ದೆಗಳಿಗೆ ನೇಮಿಸಿಕೊಳ್ಳುತ್ತಿದ್ದರು. ಸೈನಿಕವೃತ್ತಿ ಇವರಿಗೆ ಮೊದಲಿನಿಂದಲೂ ಪ್ರಿಯವಾದ ಉದ್ಯೋಗ. ಬ್ರಿಟಿಷರ ಪೂರ್ವದಲ್ಲಿ ನಂತರ ಬ್ರಿಟಿಷರ ಸೈನ್ಯದಲ್ಲಿಯೂ ಸಹಾ ಇವರು ಸೈನಿಕರಾಗಿ ಸೇವೆಸಲ್ಲಿಸಿದ್ದು ಕಂಡು ಬರುತ್ತದೆ. ನಂತರ ಬಂದ ಕಲೆಕ್ಟರ್ ಫ್ರಾನ್ಸಿಸ್ ಈ ಜನಾಂಗವನ್ನು ಕುರಿತು “ಧೈರ್ಯವಂತರು, ಪರಾಕ್ರಮಿಗಳು, ಬಲಶಾಲಿಗಳು, ದೃಢಕಾಯ ಬಹುಸಂಖ್ಯೆಯುಳ್ಳವರಾಗಿದ್ದರು” ಎಂದು ತಿಳಿಸಿದ್ದಾನೆ. ೧೮೬೫ರ ಸುಮಾರಿಗೆ ಈ ಜನಾಂಗದ ಒಟ್ಟು ಸಂಖ್ಯೆ ೧,೭೭,೦೦೦ ಇತ್ತೆಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಬ್ರಿಟಿಷರ ಆಳ್ವಿಕೆಯ ಪೂರ್ವದಲ್ಲಿ ಬೇಡರು ‘ತಳವಾರಿಕೆ’ ವೃತ್ತಿಯಲ್ಲಿ ತೊಡಗಿದ್ದರು. ತಳವಾರಿಕೆ ಒಂದು ರೀತಿಯಲ್ಲಿ ಆರಕ್ಷಣೆಯ ಹೊಣೆ, ಇವರದೇ ಆಗಿದ್ದಿತೆಂಬ ಸಂಗತಿ ತಿಳಿಯುತ್ತದೆ.

ಪ್ರಾಮಾಣಿಕವಾಗಿ ಊರನ್ನು ಗಸ್ತಿತಿರುಗುವುದು, ಕಾವಲುಕಾಯುವುದು ಇತ್ಯಾದಿ ಬಗೆಗಳಲ್ಲಿ ಬದುಕನ್ನು ಅವಲಂಬಿಸಿದ್ದರು. ಬೇಡರಲ್ಲಿ ಮುಖ್ಯವಾಗಿ ಭಿಕ್ಷಾವೃತ್ತಿ ಮಾತ್ರ ಇಲ್ಲವೆಂದು ಎಂ.ಬಿ. ನೇಗಿನಹಾಳ ಅವರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಇಂದು ಕೂಡ ಅವರು ಭಿಕ್ಷಾಟನೆ ಮಾಡುವ ಕುರುಹುಗಳು ಕಂಡುಬರುವುದಿಲ್ಲ. ಬೆವರು ಸುರಿಸಿ ದುಡಿದು, ತಿನ್ನುವ ಸ್ವಭಾವದವರಾಗಿದ್ದಾರೆ. ಬಳ್ಳಾರಿಯ ದಕ್ಷಿಣಕ್ಕೆ ಇವರು ತಳವಾರಿಕೆ, ಒಕ್ಕಲಿನಿಂದ ಜೀವನ ನಡೆಸುತ್ತಿದ್ದರೆಂದು ಆಂಗ್ಲರ ವರದಿಗಳು ಪ್ರಚುರಪಡಿಸುತ್ತವೆ.

ಬಳ್ಳಾರಿ ಜಿಲ್ಲೆಯ ಗ್ಯಾಸೆಟಿಯರನಲ್ಲಿ ಬೇಡರ ಬಗ್ಗೆ ಈ ರೀತಿ ತಿಳಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಇರುವ ಅನೇಕ ಹಿಂದುಗಳಿಗಿಂತ ಈ ಬೋಯಾ ಜನರ ಸಂಖ್ಯೆಯೇ ಹೆಚ್ಚಾಗಿದೆ. ಈ ಬೋಯ ಜನರಿಗೆ ಕನ್ನಡ ದೇಶದಲ್ಲಿ ಬೇಡರೆಂದು ಕರೆಯಲಾಗುತ್ತದೆ. ಸರ್. ಥಾಮಸ್ ಮನ್ರೋನ ಕಾಲದಲ್ಲಿ ನಾಡೆಲ್ಲ ಈ ಪಾಳೆಯಗಾರರ ಹಿಡಿತದಲ್ಲಿತ್ತು. ಈ ಪಾಳೆಯಗಾರ ರೆಲ್ಲರೂ ಬೇಡರೇ ಆಗಿದ್ದರು. ಅಸಂಖ್ಯವಾದ ಹೈದರಾಲಿಯ ಸೈನ್ಯವು ಇವರದೇ ಆಗಿತ್ತು. ಕ್ರಿ.ಶ. ೧೮ನೇ ಶತಮಾನದಲ್ಲಿ ಹರಪನಹಳ್ಳಿಯು ಒಬ್ಬ ಬೇಡ ಪಾಳೆಯಗಾರನ ಸ್ಥಳವಾಗಿತ್ತು. ಈ ಜಿಲ್ಲೆಯಲ್ಲಿ ಇದೊಂದೇ ಜನಾಂಗವು ಶೌರ್ಯದ ಆಟ-ಪಾಠಗಳಲ್ಲಿ ಭಾಗವಹಿಸುವ ಗುಣವುಳ್ಳದ್ದಾಗಿದೆ. ಆಗ ಅವರು ಒಕ್ಕಲುತನವನ್ನು ಕೈಕೊಂಡಿರುವವರು ಕೆಲವರು ನಾಯ ಕೋಡಿತನ, ಸರ್ಕಾರದಲ್ಲಿ ಪೊಲೀಸ್ ಸಿಪಾಯಿ, ಕಚೇರಿಯಲ್ಲಿಯೂ ಆಳು ಮುಂತಾಗಿ ನೌಕರಿಯಲ್ಲಿದ್ದರು.

ದಕ್ಷಿಣ ಭಾರತದ ಬಹುತೇಕ ಘಟ್ಟಗಳಲ್ಲಿರುವ ಬೇಟೆಗಾರರು ಬೇಡರೇ ಆಗಿದ್ದರು. ಎಷ್ಟೋ ಪಾಳೆಯ ಪಟ್ಟುಗಳು ಇದ್ದವು. ಈ ಬೇಡ ಪಾಳೆಯಗಾರರು ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿಲ್ಲವೆಂದು, ಇವರ ಪಾಳೆಯಗಳನ್ನು ವಶಪಡಿಸಿಕೊಳ್ಳಲಾಯಿತು. ಅಂದಿನಿಂದ ಇವರು ಬೇಸಾಯದಲ್ಲಿ ತೊಡಗಿದ್ದಾರೆ. ಔರಂಗಜೇಬನ ಕಾಲದಲ್ಲಿ ‘ಕರ್ನಾಟಕ ಪಾಯದಳ’ ಎಂದು ಕರೆಯುತ್ತಿದ್ದುದು ಇವರಿಗೇನೆ. ಕರ್ನಾಟಕ ಮತ್ತು ಆಂಧ್ರದಲ್ಲಿ ೧೯ನೇ ಶತಮಾನ ದವರೆಗೆ ಇವರು ಸೈನಿಕರಾಗಿದ್ದರು. ಇವರಿಗೆ ಕರ್ನಾಟಕ ಸೈನ್ಯವೆಂದು, ಬೇಡರ ಪಡೆ ಎಂದೂ, ಫಾರಸಿಯಲ್ಲಿ ‘ಪ್ಯಾದಹಾಯ ಕರ್ನಾಟಕಿಯಾ’ ಎಂದು ಕರೆಯಲಾಗಿದೆ.

ಕ್ರಿ.ಶ. ೧೯ನೇ ಶತಮಾನದಲ್ಲಿ ಇವರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಬಾರದೆಂದು ಸರ್ಕಾರಿ ಹುಕುಂ ಹೊರಡಿಸಿದ್ದರಿಂದ ಇವರು ತಮ್ಮ ಕ್ಷಾತ್ರವೃತ್ತಿಯ ಉಪಜೀವನ ಸಾಧನೆಯಿಂದ ಎರವಾದರು. ಆದಾಗ್ಯೂ ಇಂದಿನವರೆಗೆ ತಮ್ಮ ಗಂಡು ಸ್ವಭಾವವನ್ನು ಕಳೆದುಕೊಂಡಿಲ್ಲ. ಬೇಟೆಗಾರರೆಂದು ಮೊದಲಿನಿಂದಲೂ ಇವರು ಪ್ರಸಿದ್ಧರು. ಬೇಡನೆಂದರೆ ಕಾಲಾಳು. ಗುಂಡಿನ ಗುರಿಹೊಡೆಯುವಲ್ಲಿ ಎತ್ತಿದ ಕೈ ಇವರದು. ಕಾಲ ಮಹಿಮೆಯಿಂದು ಇವರು ಹಿಂದುಳಿದವ ರಾಗಿದ್ದಾರೆ ಈಗ ಎಂದು ಕಪಟರಾಳ ಕೃಷ್ಣರಾವ್ ಸುರಪುರ ಸಂಸ್ಥಾನ ಇತಿಹಾಸ ಪುಸ್ತಕದಲ್ಲಿ ಅಭಿಪ್ರಾಯಪಟ್ಟಿದ್ದಾರೆ.**       ಹೆಚ್ಚಿನ ವಿವರಕ್ಕೆ : ವಿರೂಪಾಕ್ಷಿ ಪೂಜಾರಹಳ್ಳಿ, ಬಳ್ಳಾರಿ ಜಿಲ್ಲೆಯ ಪಾಳೆಯಗಾರರು, ೨೦೦೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

*       ವಿರೂಪಾಕ್ಷಿ ಪೂಜಾರಹಳ್ಳಿ, ಬೇಟೆ ಮತ್ತು ಬೇಡರು, ೨೦೦೭, ಚಿನ್ನಹಗರಿ ಪ್ರಕಾಶನ, ಪೂಜಾರಹಳ್ಳಿ.