ಬಳ್ಳಾರಿ ಜಿಲ್ಲೆಯಲ್ಲಿ ವಸಾಹತುಶಾಹಿ ಆಳ್ವಿಕೆಯಲ್ಲಿ ಈ ತನಕ ದಾಖಲಾದ ಚರಿತ್ರೆಯ ಪುಟಗಳಿಂದ ಅವಲೋಕಿಸಿದಾಗ, ಅವರ ಜಾರಿಗೆ ತಂದ ಆಧುನಿಕ ಆಡಳಿತಪದ್ಧತಿ ಬಹುಸ್ಪಷ್ಟವಾಗಿ ತೋರಿಬರುತ್ತದೆ. ಇದರಿಂದಾಗಿ ಜಿಲ್ಲೆಯ ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹತ್ತರ ಬೆಳವಣಿಗೆ, ಬದಲಾವಣೆಗಳಾದುದು ಸಹಜವೇ ಆಗಿದ್ದಿತು. ೧೮೦೦ ರಿಂದ ೧೯೪೭ರವರೆಗೆ ಸುಮಾರು ೧೧೨ ಕಲೆಕ್ಟರುಗಳು ನಡೆಸಿದ ಆಳ್ವಿಕೆಯಲ್ಲಿ ಈ ಜಿಲ್ಲೆಯ ವಿವಿಧ ಕ್ಷೇತ್ರಗಳ ಮೇಲೆ ಮಿಶ್ರ ಪರಿಣಾಮ ಉಂಟಾದುದು ಸ್ಪಷ್ಟ. ಮುಖ್ಯವಾಗಿ ರಾಜಕೀಯ ವಾಗಿ ದೇಶೀಯ ಅರಸರ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಿದುದು ಕಲೆಕ್ಟರುಗಳ ಆಡಳಿತಾವಧಿಯ ಮುಖ್ಯ ಘಟನೆಗಳಲ್ಲಿ ಒಂದಾಗಿದೆ.

ವಸಾಹತುಶಾಹಿ ಆಡಳಿತವು ಶಿಸ್ತು ಮತ್ತು ಪ್ರಾಮಾಣಿಕತೆಗಳಿಂದ ಕೂಡಿದ್ದಿತು. ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆಗಳೂ ಜಾರಿಗೆ ಬಂದವು. ಮನ್ರೋನ ಭೂಮಾಪನ ಪದ್ಧತಿ ಮತ್ತು ರೈತವಾರಿ ಭೂಕಂದಾಯ ವ್ಯವಸ್ಥೆ, ಹ್ಯಾಥವೇಯ ಕೆರೆ ಕಟ್ಟೆಗಳ ನಿರ್ಮಾಣ ಹಾಗೂ ನೀರಗಂಟಿಗಳ ನೇಮಕ ಬ್ರಿಟಿಷರ ಆಳ್ವಿಕೆಯ ಕೆಲಸ ಕಾರ್ಯಗಳಲ್ಲಿ ಪ್ರಮುಖವಾದವು. ರಾಬರ್ಟ್ ಸಿವೆಲ್‌ನು ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸಿದನಲ್ಲದೆ, ಚಾರಿತ್ರಿಕ ನೆಲೆಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತುಕೊಟ್ಟನು. ಮರೆಯಾಗಿದ್ದ ಚರಿತ್ರೆಯ ಪ್ರಮುಖ ಸಂಗತಿಗಳನ್ನು ಮರುಸಂಶೋಧಿಸಿ, ಹಲವಾರು ಚಾರಿತ್ರಿಕ ಘಟನೆ ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದಂತೆ ಪುನರ್ ವ್ಯಾಖ್ಯಾನ ನೀಡಿದನು. ಇವನು ಸ್ಮಾರಕ-ಪ್ರಾಚ್ಯಾವಶೇಷಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವನೆಂದರೆ ತಪ್ಪಿಲ್ಲ. ಅನಂತರ ಬಂದ ಮೆಕಾರ್ಡಿಯು ಕನ್ನಡ ಭಾಷಾಭಿಮಾನಿಯಾಗಿದ್ದುದು ಉಲ್ಲೇಖಾರ್ಹ ಸಂಗತಿ.

ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಟರ್, ಸಬ್ ಕಲೆಕ್ಟರ್, ತಹಶೀಲ್ದಾರ್, ಜಿಲ್ಲೆದಾರ, ಗೌಡ, ಪಟೇಲ, ತಳವಾರರು ಶ್ರೇಣೀಕೃತ ಅಧಿಕಾರದಲ್ಲಿದ್ದು ಜಿಲ್ಲೆಯಿಂದ ಮೇಲಿನ ಆಂಗ್ಲ ಆಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿದ್ದರು. ರಾಜಕೀಯವಾಗಿ ಮಹತ್ತರ ಬದಲಾವಣೆಗಳಾದುದು ಸಹಾ ಬ್ರಟಿಷರ ಅವಧಿಯಲ್ಲಿಯೇ.

ರಾಜಕೀಯವಲ್ಲದೇ, ಸಾಮಾಜಿಕವಾಗಿಯೂ ಹಲವಾರು ಬದಲಾವಣೆಗಳಾದವು. ಜನರ ಉಡುಗೆ ತೊಡುಗೆಗಳ ಬಗೆಗಿನ ಅಭಿರುಚಿ ಬದಲಾಯಿತು. ಮದುವೆ ಸಂಪ್ರದಾಯ ಗಳಲ್ಲಿಯೂ ಪರಿವರ್ತನೆ ಉಂಟಾಗತೊಡಗಿತು. ವಿಧವಾ ವಿವಾಹ ಜಾರಿಗೆ ಬಂದಿತು. ಬಾಲ್ಯವಿವಾಹ, ಸತಿ ಸಹಗಮನಗಳಂಥ ಅಮಾನುಷ ಪದ್ಧತಿಗಳು ರದ್ದಾದವು. ಸಮಾಜದಲ್ಲಿ ದಟ್ಟವಾಗಿ ಬೇರು ಬಿಟ್ಟಿದ್ದ ಮೇಲುಕೀಳೇಂಬ ಭಾವನೆಗಳನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸುವಲ್ಲಿ ಇವು ಕಾರಣವಾದುವೆನ್ನಬಹುದು.

ಆರ್ಥಿಕ ರಂಗದಲ್ಲಾದ ಬದಲಾವಣೆಗಳಿಂದ ಆಧುನಿಕತೆ ಬೆಳೆಯಲು ಅನುಕೂಲ ವಾಯಿತು. ಕೃಷಿ ಕೈಗಾರಿಕೆ, ವ್ಯಾಪಾರಗಳಿಂದ ಜಿಲ್ಲೆ ಅಭಿವೃದ್ದಿ ಪಥದತ್ತ ಸಾಗಿತು. ಸಾರಿಗೆ ಸಂಪರ್ಕದಿಂದ ಸರಕು ಸಾಗಾಣಿಕೆ, ವ್ಯಾಪಾರಗಳು ಹೆಚ್ಚಿ, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಂಬಂಧಗಳು ಬೆಳೆದವು. ರಫ್ತು ಆಮದುಗಳಿಂದ ಸ್ಥಳೀಯ ಬೆಳೆಗಳಿಗೆ ಆಹಾರ ಬೇಡಿಕೆ ಉಂಟಾಯಿತು. ಕಂದಾಯ ತೆರಿಗೆಗಳನ್ನು ಹೆಚ್ಚಿಸಲಾಗಿ ಕೈಗಾರಿಕೆಗಳ ವಿಸ್ತರಣೆ ಮಾಡಲು ಸಹಕಾರಿಯಾಯಿತು. ತರುವಾಯ ವಾಣಿಜ್ಯೋದ್ಯಮಿಗಳು ಹುಟ್ಟಿಕೊಂಡರು. ಹತ್ತಿಯ ನೇಯ್ಗೆ, ರೇಷ್ಮೆ ನೇಯ್ಗೆಗಳೊಡನೆ, ಕಂಬಳಿ ದುಪ್ಪಡಿಗಳ ಉತ್ಪಾದನೆಗೂ ಆದ್ಯತೆ ದೊರೆಯಿತು. ಕಬ್ಬಿನಿಂದ ಬೆಲ್ಲ ಉತ್ಪಾದಿಸಲು ಪ್ರೋತ್ಸಾಹ ದೊರೆಯಿತು. ಹಾಗೂ ಪೆಟ್ಲುಪ್ಪು ತಯಾರಿಕೆಗೆ ಅವಕಾಶವಾಯಿತು.

ಕಲೆಕ್ಟರುಗಳು ಮೊದಲಿಗೆ ನ್ಯಾಯಾಂಗವನ್ನು ತಾವೇ ನಿರ್ವಹಿಸುತ್ತಿದ್ದರು. ೧೮೧೭ರ ನಂತರ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಿಸಲಾಯಿತು. ಜಿಲ್ಲಾಮಟ್ಟದಿಂದ ಗ್ರಾಮಮಟ್ಟ ದವರೆಗೆ ನ್ಯಾಯ ತೀರ್ಮಾನಗಳನ್ನು ಆಯಾ ಜವಾಬ್ದಾರಿಯುತ ವ್ಯಕ್ತಿಗಳು ನಿರ್ವಹಿಸುತ್ತಿ ದ್ದರು.

ಶೈಕ್ಷಣಿಕ ಸೌಲಭ್ಯ ಕಾಲ ಕ್ರಮೇಣ ಸಾರ್ವತ್ರೀಕರಣಗೊಂಡಿತಲ್ಲದೆ, ಆಧುನಿಕ ಶಿಕ್ಷಣದ ನಿಯಮಗಳು ಜಾರಿಗೆ ಬಂದವು. ಜಿಲ್ಲೆಯಾದ್ಯಂತ ತಳಮಟ್ಟದಿಂದ ಮೇಲ್ವರ್ಗದವರೆಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗಗಳು ಲಭಿಸಲು ಆಸ್ಪದವಾಯಿತು. ಕಲೆಕ್ಟರುಗಳು ಪರಕೀಯ ರಾಗಿದ್ದು, ಜನಸಾಮಾನ್ಯರಿಗೆ ಸ್ಪಂದಿಸದಿದ್ದರೂ, ಆಡಳಿತದಲ್ಲಿ ಯಶಸ್ಸು ಕಂಡರು. ಆದರೆ ಸ್ಥಳೀಯ ಅಥವಾ ವಾಸ್ತವಿಕ ಸಂಗತಿಗಳಿಗೆ ಅವರು ತಕ್ಕಮಟ್ಟಿಗಾದರೂ ಸ್ಪಂದಿಸಿದ್ದುದು ಗಮನಾರ್ಹ. ಆದರೂ ಬ್ರಿಟಿಷರು ತಮ್ಮತನವನ್ನು ಬಿಡದೇ, ತಮ್ಮ ಧೋರಣೆಗಳನ್ನು ಇಲ್ಲಿ ಬಿಟ್ಟುಹೋದರು.

ಈಸ್ಟ್ ಇಂಡಿಯಾ ಕಂಪನಿಯ ನಂತರ ಹೊಸ ವ್ಯವಸ್ಥೆಗೊಳಪಟ್ಟ ಬ್ರಿಟಿಷ್ ಸರ್ಕಾರದ ವ್ಯಾಪ್ತಿಗೆ ಕಲೆಕ್ಟರರನ್ನು ಒಳಪಡಿಸಲಾಯಿತು. ಬ್ರಿಟನ್ ರಾಣಿ, ಗವರ್ನರ್, ಕಲೆಕ್ಟರ್, ಸಬ್ ಕಲೆಕ್ಟರ್, ತಹಶೀಲ್ದಾರ, ಕಂದಾಯ ಪರಿವೀಕ್ಷಕ, ಗೌಡ, ಪಟೇಲ ಹೀಗೆ ವಿವಿಧ ಹಂತಗಳವರೆಗೆ ಆಡಳಿತವು ವಿಸ್ತರಣೆಗೊಂಡಿದ್ದಿತು. ಏನೆಲ್ಲಾ ಅಧಿಕಾರ ಚಲಾವಣೆ ಬ್ರಿಟಿಷರ ಕೈಯಲ್ಲಿತ್ತು. ಸ್ಥಳೀಯರು ಕೇವಲ ಆಳ್ವಿಕೆಗೊಳಪಟ್ಟ ಕೈಗೊಂಬೆಯಾಗಿದ್ದರು.

ಬ್ರಿಟಿಷರ ಆಡಳಿತ ಸ್ಥಾಪನೆಯಿಂದ ಬಳ್ಳಾರಿ ಜಿಲ್ಲೆಯ ಜನರ ಮೇಲೆ ಮಹತ್ತರ ಪ್ರಭಾವ ಬೀರಿದೆ. ಅವರ ಆಡಳಿತದ ವಿಧಾನ ಇಲ್ಲಿನ ಪರಿಸ್ಥಿತಿಯನ್ನು ಬದಲಿಸಿದ್ದು, ಸಹಜವಾಗಿದೆ. ಅವರು ಅನುಸರಿಸಿದ ಏಕರೂಪದ ಆಡಳಿತ ವ್ಯವಸ್ಥೆಯಿಂದ ಭಾರತೀಯ ಭವಿಷ್ಯ ನಿರ್ಧಾರವಾಯಿತು. ಬ್ರಿಟಿಷರ ಪೂರ್ವದಲ್ಲಿ ಏಕರೂಪದ ಆಡಳಿತಾತ್ಮಕ ವ್ಯವಸ್ಥೆ ಇರಲಿಲ್ಲ. ಶತಮಾನಗಳಷ್ಟು ರಾಜಕೀಯ ಸಂಘರ್ಷದ ನಂತರ ಬ್ರಿಟಿಷ್ ಆಡಳಿತದಲ್ಲಿ ಶಾಂತಿ ಮತ್ತು ಅಶಾಂತಿ ಪರಿಸ್ಥಿತಿ ಕಂಡುಬಂದಿತು. ಇಡೀ ದೇಶಕ್ಕೆ ಅನ್ವಯಿಸುವ ಏಕರೂಪದ ಕಾನೂನು, ಆಡಳಿತ ಪದ್ಧತಿಗಳಿದ್ದು ಭಾರತೀಯರಲ್ಲಿ ಏಕತೆಯ ಜೊತೆಗೆ ರಾಷ್ಟ್ರೀಯ ಭಾವನೆ ಮೂಡಿ ಅವರಲ್ಲಿ ಬಲಸಂವರ್ಧನೆಯಾಯಿತು.

ಬ್ರಿಟಿಷರು ಇಲ್ಲಿಯ ಉತ್ಪನ್ನಗಳನ್ನು ಇಂಗ್ಲೆಂಡಿಗೆ ಕೊಂಡೊಯ್ಯುತ್ತಿದ್ದರು. ಆದರೆ ಅಲ್ಲಿ ಸಂಭವಿಸಿದ ‘ಕೈಗಾರಿಕಾ ಕ್ರಾಂತಿ’ ಈ ನೀತಿಯನ್ನು ಬುಡಮೇಲು ಮಾಡಿತು. ಆಗಿನಿಂದ ಇಲ್ಲಿಯ ಕಚ್ಚಾವಸ್ತುಗಳನ್ನು ಇಂಗ್ಲೆಂಡ್‌ಗೆ ಕಳುಹಿಸಲು ಸನ್ನದ್ಧರಾದರು. ಅಲ್ಲಿಯ ಕಾರ್ಖಾನೆ ಗಳಲ್ಲಿ ತಯಾರಾದ ಅಗ್ಗದ ವಸಾಹತುಶಾಹಿ ನೀತಿಯ ಹೆಗ್ಗರುತೆಂದು ಹೇಳಬಹುದು. ಗ್ರಾಮೀಣ ಮಟ್ಟದಲ್ಲಿ ಸಂಪ್ರದಾಯಿಕ ಗುಡಿ ಕೈಗಾರಿಕೆಗಳು ಅಲ್ಲಲ್ಲಿ ತಲೆ ಎತ್ತಿದವು.

ಬ್ರಿಟಿಷರ ಕೈಗಾರಿಕಾ ಬೆಳವಣಿಗೆಯಿಂದ ಭಾರತದಲ್ಲಿ ಗೃಹಕೈಗಾರಿಕೆ ವಿನಾಶದ ಅಂಚನ್ನು ತಲುಪಿತು. ಅದರಲ್ಲೂ ಕುಶಲ ಕೆಲಸಗಾರರು ಬಡತನದ ಅಂಚನ್ನು ತಲುಪಿದರಲ್ಲದೆ, ಅವರಲ್ಲಿ ಬಹುಪಾಲು ಮಂದಿ ನಗರಗಳನ್ನು ತೊರೆದು ಪುನಃ ಹಳ್ಳಿಗೆ ಹಿಂದುರುಗಿ ಬಂದರು. ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಭಾಗ ಪಡೆದುದರಿಂದ ಹಿಡುವಳಿ ಚಿಕ್ಕದಾಗಿ ವ್ಯವಸಾಯದ ಉತ್ಪನ್ನ ಕ್ರಮೇಣ ಕ್ಷೀಣಿಸಿತು. ಇವರು ನಗರಗಳನ್ನು ತೊರೆದಿದ್ದರಿಂದ ನಗರಗಳು ವ್ಯಾಪಾರ ಕೇಂದ್ರಗಳಾಗಿ ಬೆಳೆಯದೇ ಹಿಂದೆ ಬಿದ್ದವು.

ಆರ್ಥಿಕ ಕ್ಷೇತ್ರದಲ್ಲಿ ಪರಿಣಾಮ ಬೀರಿದುದೆಂದರೆ ಭೂ ಕಂದಾಯ ವ್ಯವಸ್ಥೆ. ರಾಜನು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಮಾತ್ರ ಹೊಂದಿದ್ದನು. ೧೮ನೇ ಶತಮಾನದಲ್ಲಿ ಈ ವ್ಯವಸ್ಥೆ ಕುಸಿಯಲು ಪ್ರಾರಂಭವಾಯಿತು. ಭೂ ಕಂದಾಯವನ್ನು ವಸೂಲಿ ಮಾಡುವ ಹೊಸ ಮಾದರಿಯನ್ನು ಅನುಸರಿಸಲು ಕಲೆಕ್ಟರುಗಳು ಉತ್ಸುಕರಾಗಿದ್ದರು. ಇಲ್ಲಿ ಮನ್ರೋನ ರೈತವಾರಿ ಪದ್ಧತಿ ಉತ್ತಮ ಉದಾಹರಣೆಯಾಗಿದೆ ಎನ್ನಬಹುದು.

ಈ ಪ್ರದೇಶದಲ್ಲಿ ಜನರು ಮೊದಲು ಜಮೀನನ್ನು ಮಾರುವ, ಕೊಳ್ಳುವ, ಪರಭಾರೆ ಮಾಡುವ ಮತ್ತು ಮಾಲೀಕತ್ವದ ಹಕ್ಕನ್ನು ತಮ್ಮ ಮಕ್ಕಳಿಗೆ ಕೊಡುವ ಅಧಿಕಾರ ಹೊಂದಿ ದ್ದರು. ಸರ್ಕಾರಕ್ಕೆ ಶೇಕಡ ೩ರಷ್ಟು ಕಂದಾಯ ಕೊಡುತ್ತಿದ್ದರು. ಈ ವ್ಯವಸ್ಥೆಯ ಪರಿಣಾಮ ವಾಗಿ ಭೂಮಿಯ ಒಡೆತನವನ್ನು ರೈತರಿಂದ ಕಸಿದುಕೊಂಡು ಕಂದಾಯ ವಸೂಲಿ ಮಾಡುವ ಕಲೆಕ್ಟರ್‌ಗಳಿಗೆ ಕೊಡುವಂತಾಯಿತು.

ಬ್ರಿಟಷರು ತಂದ ರೈತವಾರಿ ಪದ್ಧತಿಯಿಂದ ಉತ್ಪನ್ನದಲ್ಲಿ ಶೇಕಡ ೫೦ರಷ್ಟನ್ನು ಸರ್ಕಾರಕ್ಕೆ ಕೊಡಲು ನಿಗದಿ ಮಾಡಲಾಯಿತು. ಸರ್ಕಾರವು ಪ್ರತಿ ರೈತನ ಜೊತೆಯಲ್ಲೂ ಒಡಂಬಡಿಕೆ ಯನ್ನು ಹೊಂದಿತ್ತೆನ್ನಬಹುದು. ರೈತನು ಕಂದಾಯ ಕೊಡದಿದ್ದರೆ ಸರ್ಕಾರವು ಅವನ ಜಮೀನನ್ನು ಹರಾಜು ಮಾಡುತ್ತಿತ್ತು. ೩೦ ವರ್ಷಗಳಿಗೊಮ್ಮೆ ಭೂಮಿಯ ಮೋಜಣಿ ಮಾಡಿ ಕಂದಾಯ ನಿಗದಿಪಡಿಸಲಾಗುತ್ತಿತ್ತು. ಈ ವ್ಯವಸ್ಥೆಯ ಪರಿಣಾಮವೆಂದರೆ, ಭಾರತೀಯ ರೈತರನ್ನು ಬಡವರನ್ನಾಗಿಸಿದುದು. ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿಯಿಂದ ಬ್ರಿಟಷ್ ಜವಳಿ ಉದ್ಯಮವು ಭಾರತದ ನೇಯ್ಗೆ ಕಸುಬನ್ನು ತುಳಿದು ಹಾಕಿತು. ಲಕ್ಷಾಂತರ ಮಂದಿ ನೂಲು ಗಾರರು, ನೇಕಾರರು, ಕಸಬುದಾರರು ನಿರ್ಗತಿಕರಾಗಿ ಕೃಷಿಯತ್ತ ತಿರುಗಿದರು.

ಮಳೆ ಬಾರದಿದ್ದರೂ ಬೆಳೆ ಇರದಿದ್ದರೂ ಜಿಲ್ಲೆಯವರು ಕಂದಾಯವನ್ನು ಕೊಡಲೇ ಬೇಕೆಂಬ ಕಟ್ಟಳೆಗಳಿದ್ದವು. ಭಾರತದ ಕೃಷಿ ಜಮೀನಿನಲ್ಲಿ ವ್ಯಕ್ತಿಯ ಹಕ್ಕು ಎಂಬ ಭಾವನೆಗೆ ಮನ್ನಣೆ ಇರಲಿಲ್ಲ. ‘ರೈತವಾರಿ ಪದ್ಧತಿ’ ಇದ್ದ ಜಾಗಗಳಲ್ಲೆಲ್ಲ ಲೇವಾದೇವಿಗಾರರು ಹುಟ್ಟಿ ಕೊಂಡರು. ಕಂದಾಯದ ಪರಿಣಾಮವಾಗಿ ರೈತರ ಮನೆಗಳಲ್ಲಿ ಧಾನ್ಯವನ್ನು ಸಂಗ್ರಹಿಸುವ ಪದ್ಧತಿ ಸುಧಾರಣೆಗೊಂಡಿತು.

ಮಧ್ಯಯುಗದ ಭಾರತದಲ್ಲಿ ಶಿಕ್ಷಣವನ್ನು ಗುರುಕುಲ ಮತ್ತು ‘ಮದರಸ’ಗಳಲ್ಲಿ ನೀಡುತ್ತಿದ್ದರು. ಇಂಗ್ಲಿಷರ ಆಡಳಿತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಆಸಕ್ತಿ ವಹಿಸಲಿಲ್ಲ. ೧೮೧೩ರಲ್ಲಿ ಆ್ಯಕ್ಟ್ ಪ್ರಕಾರ ದೇಶೀಯರಿಗೆ ಶಿಕ್ಷಣ ಕೊಡಲು ಇಲ್ಲಿದ್ದ ಪೌರ್ವಾತ್ಯರು ಇಂಗ್ಲಿಷ್ ಶಿಕ್ಷಣ ವಿಧಾನವನ್ನು ಬಯಸಿದ್ದರು. ೧೮೫೪ ರಲ್ಲಿ ಹಾಬಟ್ ಮತ್ತು ವುಡ್ ಕಮಿಟಿ ಸ್ತ್ರೀ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟಿತು. ೧೮೮೨ರಲ್ಲಿ ಹಂಟರ್ ಕಮಿಷನ್ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಪ್ರೋತ್ಸಾಹಿಸಿತು. ವಾಸ್ತವವಾಗಿ, ಶಿಕ್ಷಣ ಸಂಸ್ಥೆಗಳು ನಮ್ಮ ದೇಶದಲ್ಲಿ ರಾಷ್ಟ್ರೀಯವಾದಿ ಚಟುವಟಿಕೆ ಗಳಿಗೆ ಆಶ್ರಯ ನೀಡುವ ಪ್ರಮುಖ ಕೇಂದ್ರಗಳಾಗಿದ್ದವು.

ಭಾರತದಲ್ಲಿ ಆಂಗ್ಲರು ಜಾರಿಗೆ ತಂದಂತಹ ಶಿಕ್ಷಣ ಕ್ರಮ ಅತೃಪ್ತಿಕರವಾಗಿದ್ದರೂ ಆಧುನಿಕ ಇಂಗ್ಲಿಷ್ ಶಿಕ್ಷಣದಿಂದಾಗಿ ಭಾರತೀಯರಲ್ಲಿ ತಮ್ಮ ಪರಂಪರೆ ಹಾಗೂ ಇತಿಹಾಸ ಗಳನ್ನು ತಿಳಿಯಲು ಆಸಕ್ತಿ ಬೆಳೆಯಿತು. ಆಂಗ್ಲರು ಆಯಾ ಪ್ರಾದೇಶಿಕ ಭಾಷೆಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರು. ಈ ಶಿಕ್ಷಣ ಕ್ರಮದಿಂದ ದೇಶಿಯರು ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸಲು ಅನುಕೂಲವಾಯಿತು. ಸುಶಿಕ್ಷಿತ ಭಾರತೀಯರು ಸಾರ್ವಜನಿಕರಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಈ ಕಾರ್ಯದಲ್ಲಿ ಪತ್ರಿಕೆಗಳು ಸಹಾ ಮಹತ್ವದ ಪಾತ್ರ ವಹಿಸಿದವು.

ಇಂಗ್ಲೆಂಡಿನ ಅರಸೊತ್ತಿಗೆ ಅನುವಂಶೀಯವಾಗಿ ಬೆಳೆಸಿಕೊಂಡು ಬಂದಿದ್ದ ಏಕರೂಪದ ಆಡಳಿತ ವ್ಯವಸ್ಥೆಯಾಗಿದ್ದು, ಭಾರತೀಯ ಆಡಳಿತ ಕ್ಷೇತ್ರಕ್ಕೆ ಹೊಸ ತಿರುವು ನೀಡಿತು. ಬ್ರಿಟಿಷರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರದ ಆರಂಭದಲ್ಲಿ ತೀವ್ರ ಪ್ರತಿಕ್ರಿಯೆ ಕಂಡುಬರಲಿಲ್ಲವಾದರೂ ಅನಂತರ ಇಲ್ಲಿಯವರ ಸ್ವಾತಂತ್ರ್ಯಕಾಂಕ್ಷೆ ನಾನಾ ರೂಪದಲ್ಲಿ ವ್ಯಕ್ತವಾಯಿತು. ಸ್ವಾತಂತ್ರ್ಯಾನಂತರ ಬಳ್ಳಾರಿ ಜಿಲ್ಲೆ ಮದ್ರಾಸ್ ಅಧಿಪತ್ಯದಿಂದ ಮೈಸೂರು ರಾಜ್ಯಕ್ಕೆ ಸೇರಿತು. ೧೯೫೨ರ ನಂತರ ಲೋಕಸಭಾ ಕ್ಷೇತ್ರವಾಗಿ, ೮ ತಾಲ್ಲೂಕು ಕೇಂದ್ರಗಳನ್ನು ಹೊಂದಿ, ಗಣಿಗಾರಿಕೆ, ತುಂಗಭದ್ರಾ ಜಲಾಶಯ, ಹಂಪಿಯ ಸ್ಮಾರಕಗಳ ಮೂಲಕ ಎಲ್ಲಾರನ್ನೂ ಕೈಬೀಸಿ ಕರೆಯುತ್ತಿದೆ ಈ ಬಳ್ಳಾರಿ ಜಿಲ್ಲೆ.

ಬಳ್ಳಾರಿ ಜಿಲ್ಲೆ ೧೯೫೩ ಅಕ್ಟೋಬರ್ ೧೦ ರಂದು ಮೈಸೂರು ರಾಜ್ಯಕ್ಕೆ ವಿಲೀನವಾಯಿತು. ೧೯೫೬ರಲ್ಲಿ ಕರ್ನಾಟಕ ಏಕೀಕರಣ ಆಗಲು ಬಳ್ಳಾರಿ ಪ್ರಮುಖ ಕೇಂದ್ರವಾಯಿತು. ಅನೇಕ ಸಮಿತಿ, ಆಯೋಗಗಳು ರಚನೆಯಾಗಿ ಬಳ್ಳಾರಿಯನ್ನು ಮೈಸೂರು (ಕರ್ನಾಟಕದಲ್ಲಿ) ರಾಜ್ಯಕ್ಕೆ ಸೇರಿಸಿಕೊಳ್ಳುವಾಗ ಅನೇಕ ಘಟನೆಗಳು ಸಂಭವಿಸಿದವು. ಈ ಜಿಲ್ಲೆಯ ಗಡಿ, ಜಲ (ತುಂಗ ಭದ್ರಾ) ಸಮಸ್ಯೆಗಳು ವಿವಾದಗಳಾಗಿ ಮಾರ್ಪಟ್ಟು ಅನೇಕ ಹೋರಾಟ, ಸತ್ಯಾಗ್ರಹ, ಚಳವಳಿಗೆ ನಾಂದಿಯಾಯಿತು. ಅಂಥ ಹೋರಾಟದ ಸಂದರ್ಭಗಳನ್ನು ಏಕೀಕರಣದಲ್ಲಿ ಪಾಲ್ಗೊಂಡ ಈ ಜಿಲ್ಲೆಯ ಚಳವಳಿಕಾರರನ್ನು ಇಲ್ಲಿ ಸ್ಮರಿಸಿಕೊಂಡಿರುವುದು ಸಮಯೋಚಿತವಾಗಿದೆ. ಆಧುನಿಕವಾಗಿ ಬಳ್ಳಾರಿ ಜಿಲ್ಲೆ ಎದುರಿಸುವಂಥ ಸವಾಲು-ಸಮಸ್ಯೆಗಳನ್ನು ಇಲ್ಲಿ ದಾಖಲಿಸಿದ್ದು ಗಮನಾರ್ಹ ಸಂಗತಿ. ಹಾಗೆಯೇ ಬಳ್ಳಾರಿ ಜಿಲ್ಲೆಯ ವಿವಿಧ ಮಜಲುಗಳನ್ನು ಇಲ್ಲಿ ಅನಾವರಣ ಗೊಳಿಸಿರುವುದು ನ್ಯಾಯೋಚಿತವಾಗಿದೆ.