ತುಂಗಭದ್ರಾ ಅಣೆಕಟ್ಟಿನ ರಾಜಕಾರಣ : ದಕ್ಷಣ ಭಾರತದ ಬೃಹತ್ ಜಲಾಶಯಗಳ ಪೈಕಿ ತುಂಗಭದ್ರಾ ಜಲಾಶಯವೂ ಒಂದು. ಇದನ್ನು ಮದ್ರಾಸ್ ಸರ್ಕಾರ ಕಾರ್ಯಗತ ಗೊಳಿಸಿದ್ದು ಇತಿಹಾಸ. ೧೮೦೦ರಲ್ಲಿ ಬಳ್ಳಾರಿ ಜಿಲ್ಲೆ ಮದ್ರಾಸ್ ಅಧಿಪತ್ಯಕ್ಕೆ ಸೇರ್ಪಡೆ ಗೊಂಡಾಗ ಇದರೊಂದಿಗೆ ಕರ್ನೂಲು, ಕಡಪ ಮತ್ತು ಅನಂತಪುರಗಳೂ ಸೇರಿದ್ದವು. ಇವು ಬರಗಾಲ ಪ್ರದೇಶಗಳು. ಇಲ್ಲಿನ ಜನರು ಸದಾ ಬಡತನವನ್ನು ಎದುರಿಸುತ್ತಿದ್ದರು. ಈ ಬಡತನವನ್ನು ನಿವಾರಿಸಲು ಜಲಾಶಯ ನಿರ್ಮಾಣಕ್ಕೆ ಮುಂದಾಯಿತು ಸರ್ಕಾರ. ಒಂದು ಶತಮಾನಕ್ಕೂ ಹಿಂದೆ ಇಲ್ಲಿನ ಬರಗಾಲದಿಂದ ೩ ಲಕ್ಷಕ್ಕೂ ಅಧಿಕ ಜನ ಹಸಿವು ಮತ್ತು ಬಾಯಾರಿಕೆಯಿಂದ ಸಾವನ್ನಪ್ಪಿದ್ದರು. ಇಂಥ ಪರಿಸ್ಥಿತಿಯಿಂದ ಜನತೆಯನ್ನು ಪಾರುಮಾಡಲು ಸರ್ಕಾರವು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಯಿತು.

[1]

ಬ್ರಿಟಿಷ್ ಸರ್ಕಾರದ ಕರ್ನಲ್ ಸ್ಮಾರ್ಟ್‌ರು ೧೯೦೨ರಲ್ಲಿ ಅಣೆಕಟ್ಟು ನಿರ್ಮಿಸಲು ಸೂಕ್ತ ಸ್ಥಳವನ್ನು ಹುಡುಕುತ್ತಾರೆ. ಹೀಗೆ ಹುಡುಕುವಾಗ ಅವರ ಕಣ್ಣಿಗೆ ಬಿದ್ದಿದ್ದು ಬಳ್ಳಾರಿ ಜಿಲ್ಲೆ ಹೊಸಪೇಟೆ ಸಮೀಪದ ಮಲ್ಲಾಪುರ ಗ್ರಾಮ (ಮುನಿರಾಬಾದ್). ಬ್ರಿಟಿಷ್‌ರ ವಿರುದ್ಧ ನಡೆದ ಸ್ವಾತಂತ್ಯ ಹೋರಾಟ, ೧ನೇ ಹಾಗೂ ೨ನೇ ಮಹಾಯುದ್ಧಗಳಲ್ಲಿ ಬ್ರಿಟಿಷರು ತೊಡಗಿದ್ದರಿಂದ ಅಣೆಕಟ್ಟಿನ ನಿರ್ಮಾಣದ ಬಗ್ಗೆ ವಿಳಂಬ ನೀತಿ ಅನುಸರಿಸಲಾಯಿತು. ಅಷ್ಟು ಹೊತ್ತಿಗೆ ದ್ವಿತೀಯ ಮಹಾಯುದ್ಧ ಕೊನೆಗೊಂಡಿತ್ತು. ಮದ್ರಾಸ್ ಅಧಿಪತ್ಯದ ರಾಜ್ಯಪಾಲ ಸರ್ ಆಸ್ಟಿನ್ ಹೋಪ್ ಅವರು ೧೯೪೭ರಲ್ಲಿ ತಮ್ಮ ಅಧಿಪತ್ಯದ ಮುಖ್ಯ ಇಂಜಿನಿಯರ್ ತಿರುಮಲೈ ಅಯ್ಯಂಗಾರ್ ನೇತೃತ್ವದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಾಂದಿ ಹಾಡಿದರು.

ಅಣೆಕಟ್ಟೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ೫೦ ಸಾವಿರ ಕಾರ್ಮಿಕರು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದರು. ಬರಡು ನೆಲಕ್ಕೆ ನೀರೊದಗಿಸುವಲ್ಲಿ ಸಫಲತೆ ದೊರೆಯಿತು. ೧೯೫೩ರಲ್ಲಿ ಅಣೆಕಟ್ಟು ಪೂರ್ಣಗೊಂಡಿತು. ಅಂದು ಈ ಜಲಾಶಯ ನಿರ್ಮಾಣಕ್ಕೆ ತಗುಲಿದ ವೆಚ್ಚ ೩೮ ಕೋಟಿ ರೂ. ಇದು ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರದ ಅನಂತಪುರ, ಕರ್ನೂಲು ಜಿಲ್ಲೆಗಳಿಗೆ ನೀರೊದಗಿಸುತ್ತದೆ. ಇದಕ್ಕೆ ೩ ಬೃಹತ್ ಕಾಲುವೆಗಳಿವೆ. ಆಂಧ್ರದ ಕಣೆಕಲ್ ಕೆರೆಗೆ ತುಂಗಭದ್ರಾ ನದಿಯ ಒಂದು ಕಾಲುವೆ ನೀರು ಹರಿಸುತ್ತದೆ. ಹೀಗೆ ಎರಡು ರಾಜ್ಯಗಳ ಒಡಂಬಡಿಕೆ ಆಗಿತ್ತು. ಏಕೀಕರಣ ಸಂದರ್ಭದಲ್ಲಿ ಈ ನೀರಿನ ಸಮಸ್ಯೆ ಗಡಿ ಸಮಸ್ಯೆಗೆ ಅಂಟಿಕೊಂಡು ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು.[2]

ಈ ಜಲಾಶಯದಲ್ಲಿ ೩ ಜಲವಿದ್ಯುತ್ ಯೋಜನೆಗಳಿವೆ. ಉದ್ಯಾನವನ, ಬೃಂದಾವನ, ಪ್ರಾಣಿಧಾಮ ಮತ್ತು ಮತ್ಸ್ಯಾಲಯಗಳಿವೆ. ಪ್ರತಿವರ್ಷ ಆಗಸ್ಟ್ ೧೫ರಂದು ಎಲ್ಲ ೩೩ ಗೇಟ್‌ಗಳನ್ನು ತೆರೆಯುತ್ತಾರೆ. ಸಹಸ್ರಾರು ಜನ ಈ ರಮ್ಯ ಮನೋಹರ ದೃಶ್ಯ ವೀಕ್ಷಿಸಲು ಸದಾ ಬರುತ್ತಿರುತ್ತಾರೆ. ಆದರೆ ತುಂಗಭದ್ರಾ ಜಲಾಶಯದಲ್ಲಿ ಈಗ ಹೂಳು ತುಂಬಿದೆ. ಅಕ್ಕಪಕ್ಕದ ಪ್ರದೇಶ ಬಂಜರು ಭೂಮಿಯಾಗಿದೆ. ಕೆಲವು ಹಳ್ಳಿಗಳಿಗೆ ಪಕ್ಕದಲ್ಲಿ ಡ್ಯಾಂ ಇದ್ದರೂ ಕುಡಿಯಲು ನೀರಿಲ್ಲ. ಇದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

೩. ರಾಯಲಸೀಮಾ ಪ್ರತ್ಯೇಕ ರಾಜ್ಯಕ್ಕೆ ಬಳ್ಳಾರಿ ಜಿಲ್ಲೆ ಸೇರ್ಪಡೆ ಹೇಳಿಕೆ ವಿರುದ್ಧ ಪ್ರತಿಭಟನೆ

ವಿಜಯನಗರ ಸಾಮ್ರಾಜ್ಯದ ರಾಯರ (ಅರಸರ) ಕಾಲದಲ್ಲಿ ಅವಿಭಾಜ್ಯ ಅಂಗವಾಗಿತ್ತು ರಾಯಲಸೀಮಾ. ಇಂದು ವೈವಿಧ್ಯಮಯ ಲಕ್ಷಣಗಳಿಂದ ಕೂಡಿದೆ. ಪಕ್ಕದ ವಾರಂಗಲ್, ತೆಲಂಗಾಣಗಳಿಂದ ಆಂಧ್ರಕ್ಕೆ ಆಗುವ ಪ್ರಯೋಜನ ಈ ಪ್ರದೇಶದಿಂದಲೂ ಆಗುವುದು ಸ್ಪಷ್ಟ. ವಿಜಯನಗರದ ಅರಸರು ಈ ಭಾಗದಲ್ಲಿ ನಿರ್ಮಿಸಿದ ಸ್ಮಾರಕ, ಕೆರೆ, ಕುಂಟೆ, ಬಾವಿಗಳು ಜನರಲ್ಲಿ ಜೀವಂತಿಕೆ ಮೂಡಿಸಿವೆ. ಅನಂತಪುರ, ಕಡಪಾ, ಕರ್ನೂಲು ಮತ್ತು ಬಳ್ಳಾರಿ ಜಿಲ್ಲೆಗಳು ೧೮೦೦ರಲ್ಲಿ ಮದ್ರಾಸ್ ಅಧಿಪತ್ಯಕ್ಕೆ ಸೇರಿದ್ದವು. ಆಡಳಿತ, ಸಮಾಜ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಈ ಎಲ್ಲಾ ಜಿಲ್ಲೆಗಳ ಜನರು ಸಮಾನತೆ ಕಂಡಿದ್ದರು. ರಾಯಲಸೀಮಾದಲ್ಲಿ ಬಡತನ ಹೆಚ್ಚು. ಇದಕ್ಕೆ ಅನೇಕ ಕಾರಣಗಳಿವೆ. ಸಾಮಾಜಿಕವಾಗಿ ಉಳ್ಳವರು ಮತ್ತು ಇಲ್ಲದವರ ನಡುವೆ ನಡೆಯುವ ಹೋರಾಟವು ನಕ್ಸಲ್ ಚಟುವಟಿಕೆಗೆ ಪ್ರೇರಣೆ ನೀಡಿದಂತಾಗಿದೆ.

೨೦೦೪ ಜುಲೈನಲ್ಲಿ ಕರ್ನೂಲು ಸಂಸದ (ಕಾಂಗ್ರೆಸ್) ಆಂಧ್ರದ ಮಾಜಿ ಮುಖ್ಯಮಂತ್ರಿ ಕೆ. ವಿಜಯಭಾಸ್ಕರರೆಡ್ಡಿಯವರ ಮಗ ಕೋಟ್ಲ ಸೂರ್ಯಪ್ರಕಾಶರೆಡ್ಡಿಯವರು ಬಳ್ಳಾರಿ ಜಿಲ್ಲೆಯನ್ನು ಆಂಧ್ರದ ರಾಯಲಸೀಮಾ ರಾಜ್ಯಕ್ಕೆ ಸೇರಿಸಬೇಕೆಂಬ ಹೇಳಿಕೆಯನ್ನು ಕೊಟ್ಟಿ ದ್ದರು. ಬಳ್ಳಾರಿ ಜಿಲ್ಲೆಯ ವಿವಿಧ ಸಂಘಟನೆಗಳು ಇದನ್ನು ಖಂಡಿಸಿ, ವಿರೋಧಿಸಿ, ಪ್ರತಿಕೃತಿ ದಹನಮಾಡಿ, ಮೆರವಣಿಗೆ ಮೊದಲಾದ ಚಟುವಟಿಕೆಗಳ ಮೂಲಕ ಪ್ರತಿಕ್ರಿಯಿಸಿದ್ದು ಗಮನಾರ್ಹ.

೧. ಕರ್ನಾಟಕ ಪ್ರಗತಿ ಪಡೆ : ಬಳ್ಳಾರಿಯಲ್ಲಿ ಕನ್ನಡಪರ ಸಂಘಟನೆಗಳಲ್ಲಿ ಹುಟ್ಟಿಕೊಂಡ ಹೆಸರೇ ಕರ್ನಾಟಕ ಪ್ರಗತಿ ಪಡೆ. ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡುವ ಉದ್ದೇಶ ಹೊಂದಿದೆ ಇದು. ದಿನಾಂಕ ೪.೭.೨೦೦೪ರಂದು ಇದು ತನ್ನ ಖಂಡನಾ ನಿರ್ಣಯವನ್ನು ಬಿಡುಗಡೆಗೊಳಿಸಿತು. ಆಂಧ್ರಪ್ರದೇಶದಲ್ಲಿ ರಾಯಲಸೀಮೆ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಪಡಿಸುತ್ತಿರುವ ರಾಯಲಸೀಮೆ ಪ್ರದೇಶದ ಕೆಲವು ಕಾಂಗ್ರೆಸ್ ಮುಖಂಡರು ಉದ್ದೇಶಿತ ರಾಯಲಸೀಮೆ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸುವುದನ್ನು ಈ ಪಡೆ ತೀವ್ರವಾಗಿ ಖಂಡಿಸಿತು. ಆಂಧ್ರದವರ ತಮ್ಮ ರಾಜ್ಯದಲ್ಲಿ ಯಾವುದೇ ಪ್ರದೇಶಗಳನ್ನು ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಗಾಗಿ ಒತ್ತಾಯಿಸಿಕೊಳ್ಳಲಿ, ಅದು ಅವರ ರಾಜ್ಯದ ವಿಷಯ. ಆದರೆ ‘ಕನ್ನಡನಾಡಿ’ನ ಹೆಮ್ಮೆಯ ಐತಿಹಾಸಿಕ ಸುಪ್ರಸಿದ್ಧ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕಾಗಲಿ ಇಲ್ಲವೇ ರಾಯಲಸೀಮೆಗಾಗಲಿ ಸೇರಿಸುವಂತೆ ಮಾಡುವ ಒತ್ತಾಯ ಮತ್ತು ಯಾವುದೇ ಪ್ರಯತ್ನಗಳನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿತು.

ಕರ್ನಾಟಕದಲ್ಲಿ ಕೊಡಗು, ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳ ಪ್ರತ್ಯೇಕ ರಾಜ್ಯ ಕೂಗನ್ನೆ ಬಳ್ಳಾರಿ ಜನತೆ ಒಪ್ಪದಿರುವಾಗ, ಇಂಥ ರಾಯಲಸೀಮೆ ಪ್ರತ್ಯೇಕ ರಾಜ್ಯದ ರಚನೆ ಕೂಡ ಗಗನ ಕುಸುಮವೇ ಸರಿ. ಆಂಧ್ರದ ಇಂಥ ಬೇಜವಾಬ್ದಾರಿ, ಕುಚೋದ್ಯದ ಹೇಳಿಕೆಗಳನ್ನು ಕೊಡುವುದನ್ನು ಜನಪ್ರತಿನಿಧಿಗಳು ನಿಲ್ಲಿಸಬೇಕು ಎಂದು ಪ್ರಗತಿಪಡೆ ಎಚ್ಚರಿಸಿದೆ.

೨. ಕನ್ನಡ ಕ್ರಾಂತಿದಳ : ಬಳ್ಳಾರಿಯಲ್ಲಿರುವ ಕನ್ನಡ ಕ್ರಾಂತಿದಳವು ರಾಯಲಸೀಮೆ ರಾಜ್ಯಕ್ಕೆ ಬಳ್ಳಾರಿ ಜಿಲ್ಲೆ ಸೇರ್ಪಡೆಯಾಗಬೇಕೆನ್ನುವ ಕರ್ನೂಲು ಸಂಸದ ಕೋಟ್ಲ ಸೂರ್ಯಪ್ರಕಾಶ ರೆಡ್ಡಿಯವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿತು. ದಿ. ೭.೭.೨೦೦೪ರಂದು ಬಳ್ಳಾರಿಯಲ್ಲಿ ಮೆರವಣಿಗೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ಹಿಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಮನವಿಪತ್ರ ಸಲ್ಲಿಸಿತು. ಬಳ್ಳಾರಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಕನ್ನಡ ಭಾಷಿಕರು ಹೆಚ್ಚಾಗಿದ್ದ ಆದೋನಿ, ಆಲೂರು, ರಾಯದುರ್ಗ, ಅನಂತಪುರದ ಮಡಕಶಿರ ತಾಲ್ಲೂಕುಗಳು ಸಹ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾಗಬೇಕಿತ್ತು. ರಾಜಕೀಯ ಒತ್ತಡಗಳ ಕಾರಣದಿಂದ ಈ ಪ್ರದೇಶಗಳು ಆಂಧ್ರದಲ್ಲಿ ಉಳಿದವು. ಅವುಗಳನ್ನು ಮರಳಿ ಕರ್ನಾಟಕ ರಾಜ್ಯಕ್ಕೆ ಸೇರಿಸಬೇಕೆಂದು ಕನ್ನಡ ಕ್ರಾಂತಿದಳವು ತನ್ನ ಮನವಿಯಲ್ಲಿ ಸರ್ಕಾರಕ್ಕೆ ವಿನಂತಿಸಿ ಕೊಂಡಿತು.

೩. ಕೂಡ್ಲಿಗಿ ಬಿಜೆಪಿ ಘಟಕ : ಕೂಡ್ಲಿಗಿ ತಾಲ್ಲೂಕಿನ ಬಿಜೆಪಿ ಘಟಕವು ದಿ. ೨೫.೭. ೨೦೦೪ರಂದು ತೆಲಂಗಾಣ ರಾಜ್ಯ ಮತ್ತು ಬಳ್ಳಾರಿ ಜಿಲ್ಲೆ ಸೇರ್ಪಡೆ ಕುರಿತ ಹೇಳಿಕೆಯನ್ನು ಖಂಡಿಸಿತು. ಬಳ್ಳಾರಿಯನ್ನು ರಾಯಲಸೀಮಾಕ್ಕೆ ಸೇರಿಸುವಂತೆ ಸೂರ್ಯಪ್ರಕಾಶ ರೆಡ್ಡಿ ನೀಡಿರುವ ಹೇಳಿಕೆ ಉದ್ಧಟತನದಿಂದ ಕೂಡಿದೆ ಎಂದು ಬಿ.ಜೆ.ಪಿ. ಮುಖಂಡರು ಹೇಳಿದ್ದಾರೆ. ಬಳ್ಳಾರಿಯು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಅದನ್ನೆಂದೂ ಆಂಧ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಬರುವುದಿಲ್ಲವೆಂದಿದ್ದಾರೆ ಈ ಮುಖಂಡರು. ಬಳ್ಳಾರಿಯ ಪ್ರದೇಶಗಳು ಆಂಧ್ರಕ್ಕೆ ಹೋಗಿವೆ. ಅವು ಕರ್ನಾಟಕಕ್ಕೆ ಸೇರಬೇಕು ಎಂಬ ನಿರ್ಣಯವನ್ನು ಸ್ವೀಕರಿಸಲಾಗಿದೆ.

೪. ಜಿಲ್ಲಾ ಕನ್ನಡ ಜಾಗೃತಿ ಸಮಿತಿ : ಪರರಾಜ್ಯಕ್ಕೆ ಬಳ್ಳಾರಿಯನ್ನು ಸೇರ್ಪಡೆ ಮಾಡುವ ಬಗ್ಗೆ ಬಳ್ಳಾರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಒಮ್ಮತದ ನಿರ್ಣಯ ಕೈಗೊಂಡು, ಈ ಜಿಲ್ಲೆಯನ್ನು ಹಾಗೂ ಜಿಲ್ಲೆಯ ಕೂದಲೆಳೆಯಷ್ಟು ಭಾಗವನ್ನು ಕೂಡ ಯಾವುದೇ ಕಾರಣಕ್ಕೂ ಬೇರೆ ರಾಜ್ಯಕ್ಕೆ ಬಿಟ್ಟುಕೊಡದಿರಲು ತಿಳಿಸಿದೆ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ರಾಯಲಸೀಮಾ ರಾಜ್ಯಕ್ಕೆ ಸೇರಿಸುವ ಆಂಧ್ರಪ್ರದೇಶದ ಸಂಸದರ ಹೇಳಿಕೆಯನ್ನು ದಿ. ೨೭.೭.೨೦೦೪ರಂದು ಖಂಡಿಸಲಾಯಿತು.[3]

೫. ಸಿರಿಗೇರಿ ವಲಯ ಕನ್ನಡ ಸಾಹಿತ್ಯ ಪರಿಷತ್ತು : ರಾಯಲಸೀಮೆಗೆ ಬಳ್ಳಾರಿ ಸೇರಿಸುವ ಬೇಡಿಕೆಗೆ ಸಿರಿಗೇರಿ ಕನ್ನಡ ಸಾಹಿತ್ಯ ಪರಿಷತ್ ವಿರೋಧ ವ್ಯಕ್ತಪಡಿಸಿ ಖಂಡಿಸಿದೆ. ಆಂಧ್ರ ಪ್ರದೇಶದಲ್ಲಿನ ರಾಯಲಸೀಮಾ ಪ್ರತ್ಯೇಕರಾಜ್ಯದ ರಚನೆಯ ಬೇಡಿಕೆಯನ್ನು ಮುಂದಿಟ್ಟಿರುವ ಕರ್ನೂಲು ಸಂಸದ ಕೋಟ್ಲ ಸೂರ್ಯಪ್ರಕಾಶ ರೆಡ್ಡಿಯವರು ಬಳ್ಳಾರಿ ಜಿಲ್ಲೆಯನ್ನು ಕೂಡಾ ಅದರಲ್ಲಿ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಒತ್ತಾಯಿಸಿರುವುದನ್ನು ದುರುದ್ದೇಶದಿಂದ ಕೂಡಿ ಕಾಲ್ಪನಿಕ, ಬಾಲಿಶ ಹೇಳಿಕೆಯಾಗಿದೆ; ಹಾಗೂ ಇದು ಕರ್ನಾಟಕಾಂಧ್ರದ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ, ತಪ್ಪುದಾರಿಗೆಳೆಯುವ ತಂತ್ರವೆಂದು ತಿಳಿಸಿದೆ. ಕಸಾಪ ಸದಸ್ಯರು ಗಳ ನಿಯೋಗವು ೩೦.೭.೨೦೦೪ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ ತನ್ನ ವಿರೋಧ ವ್ಯಕ್ತಪಡಿಸಿದೆ.[4]

೬. ಬೆಂಗಳೂರಿನ ಮೈಕೋ ಕನ್ನಡ ಬಳಗ : ಪ್ರತ್ಯೆಕ ರಾಯಲಸೀಮಾ ರಾಜ್ಯ ರಚನೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಸೇರಿಸಬೆಕೆಂದಿರುವ ಹೇಳಿಕೆಯನ್ನು ಬೆಂಗಳೂರು ನಗರದ ನಾಗನಾಥ ಪುರ ಮೈಕೋಕನ್ನಡ ಬಳಗ ತೀವ್ರವಾಗಿ ಖಂಡಿಸಿದೆ. ರಾಯಲಸೀಮಾ ರಾಜ್ಯದ ಬೇಡಿಕೆ ಇಟ್ಟಿರುವ ಇಲ್ಲಿನ ರಾಜಕಾರಣಿಗಳು ಮತ್ತು ವಿವಿಧ ಸಂಘಟನೆಗಳು ಆ ರಾಜ್ಯದಲ್ಲಿ ಬಳ್ಳಾರಿ ಸೇರಿಸಬೇಕೆಂಬ ಹೇಳಿಕೆ ಸಮಂಜಸವಾದುದಲ್ಲ ಎಂದು ಬಳಗ ತಿಳಿಸಿದೆ. ಇಂಥ ಗಡಿ ವಿವಾದವನ್ನು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆಂದು ಬಳಗವು ರಾಜ್ಯಸರ್ಕಾರವನ್ನು ಒತ್ತಾಯಿಸಿದೆ.

೭. ವಿಚಾರವಾದಿಗಳು : ಬಳ್ಳಾರಿ ಜಿಲ್ಲೆಯ ಪತ್ರಕರ್ತರು, ಸಾಹಿತಿ, ಕಲಾವಿದರು, ಬುದ್ದಿಜೀವಿ ಗಳು ಆಂಧ್ರದ ರಾಯಲಸೀಮಾ ಅಥವಾ ತೆಲಂಗಾಣಕ್ಕೆ ಬಳ್ಳಾರಿ ಜಿಲ್ಲೆ ಸೇರುವುದನ್ನು ಪ್ರಬಲವಾಗಿ ಖಂಡಿಸಿದ್ದಾರೆ. ಸ್ಥಳೀಯ ಪತ್ರಿಕೆ, ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಸಹ ಬಳ್ಳಾರಿಯು ಕರ್ನಾಟಕದಲ್ಲಿಯೇ ಉಳಿಯಬೇಕೆಂದು ಆಗ್ರಹಿಸಿ ಲೇಖನಗಳನ್ನು ಪ್ರಕಟಿಸಿ ದ್ದಾರೆ.

೮. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ : ರಾಯಲಸೀಮೆಗೆ ಬಳ್ಳಾರಿ ಭಾಗವನ್ನು ಸೇರಿಸ ಬೇಕೆಂದು ಹೇಳಿಕೆ ನೀಡಿರುವ ಕರ್ನೂಲು ಸಂಸದ ಕೋಟ್ಲ ಸೂರ್ಯಪ್ರಕಾಶ್ ರೆಡ್ಡಿಯವರ ಅಭಿಪ್ರಾಯಕ್ಕೆ ಒಂದು ಕಾಸಿನ ಕಿಮ್ಮತ್ತೂ ಇಲ್ಲ. ಬಳ್ಳಾರಿ ರಾಯಲಸೀಮೆಗೆ ಸೇರುವುದು ಎಂಬುದು ಕನಸಿನ ಮಾತು ಎಂದು ಹಿಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ವಲ್ಲಭಾಪುರದಲ್ಲಿ ಶ್ರೀ ಮುರಾರ್ಜಿ ದೇಸಾಯಿ ವಸತಿಶಾಲೆಯ ನೂತನ ಕಟ್ಟಡ ಸಂಕೀರ್ಣದ ಉದ್ಘಾಟನೆ(೮.೭.೦೪)ಯಲ್ಲಿ ತಿಳಿಸಿದ್ದರು. ಬಳ್ಳಾರಿಯು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಬಳ್ಳಾರಿಯ ಒಂದು ಇಂಚು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ ಎಂದಿದ್ದರು.

೯. ಚೈತನ್ಯ ವೇದಿಕೆ : ರಾಯಲಸೀಮೆ ರಾಜ್ಯಕ್ಕೆ ಬಳ್ಳಾರಿ ಜಿಲ್ಲೆ ಸೇರ್ಪಡೆಯಾಗಬೇಕೆಂದು ಸಂಸದ ಕೋಟ್ಲ ಸೂರ್ಯಪ್ರಕಾಶರೆಡ್ಡಿ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಚೈತನ್ಯ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳು ೭.೭.೨೦೦೪ರಂದು ಬಳ್ಳಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.

೧೦. ಕನ್ನಡನಾಡು ಪಕ್ಷ : ಬಳ್ಳಾರಿಯಲ್ಲಿ ಕನ್ನಡನಾಡು ಪಕ್ಷವು (ವಿಜಯ ಸಂಕೇಶ್ವರ ನೇತೃತ್ವ), ಆಂಧ್ರಪ್ರದೇಶದ ರಾಯಲಸೀಮೆ ಪ್ರಾಂತ್ಯವನ್ನು ಪ್ರತ್ಯೇಕರಾಜ್ಯವನ್ನಾಗಿ ರಚಿಸ ಬೇಕು ಮತ್ತು ಅದರಲ್ಲಿ ಬಳ್ಳಾರಿ ಜಿಲ್ಲೆಯನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕರ್ನೂಲು ಸಂಸದ ಕೋಟ್ಲ ಸೂರ್ಯಪ್ರಕಾಶ ರೆಡ್ಡಿಯವರು ನೀಡಿರುವ ಹೇಳಿಕೆಯನ್ನು ಖಂಡಿಸಿದೆ. ಇದರ ಹಿಂದೆ ರಾಜಕೀಯ ದುರುದ್ದೇಶಗಳಿವೆ. ರಾಜಕೀಯ ಸ್ವಾರ್ಥಕ್ಕಾಗಿ ಲಾಭ ಪಡೆಯಲು ಪ್ರತ್ಯೇಕರಾಜ್ಯ ರಚನೆಯ ಬೇಡಿಕೆಗಳನ್ನು ಇಟ್ಟಿರುವ ಆಂಧ್ರದ ರಾಜಕಾರಣಿ ಗಳದು ಹಾಸ್ಯಾಸ್ಪದ ನಡವಳಿಕೆ ಎಂದಿದೆ. ಕನ್ನಡ-ತೆಲುಗು ಜನತೆಯ ಸುಮಧುರ ಬಾಂಧವ್ಯಕ್ಕೆ ಈ ಹೇಳಿಕೆ ವ್ಯತಿರಿಕ್ತ ಪರಿಣಾಮಗಳನ್ನು ತಂದಿದೆ. ಆಂಧ್ರದ ಜನಪ್ರತಿನಿಧಿಗಳು ಎಚ್ಚರಿಕೆ ಯಿಂದ ಹೇಳಿಕೆ ನೀಡಬೇಕೆಂದು ತಿಳುವಳಿಕೆ ಹೇಳಿದೆ.[5]

೧೧. ದಿವಾಕರಬಾಬು : ಮಾಜಿ ಸಚಿವ ಎಂ. ದಿವಾಕರಬಾಬು ಬಳ್ಳಾರಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ಆಂಧ್ರಪ್ರದೇಶಕ್ಕಾಗಲೀ ರಾಯಲಸೀಮೆ ಪ್ರತ್ಯೇಕ ರಾಜ್ಯಕ್ಕಾಗಲೀ ರಾಯಲಸೀಮೆಯು ಪ್ರತ್ಯೇಕರಾಜ್ಯವಾದಲ್ಲಿ ಅದರಲ್ಲಿ ಸೇರಿಸುವ ಬಗ್ಗೆಯಾಗಲೀ ಯಾರೇ ಆಗಲಿ ಹೇಳಿಕೆ ನೀಡುವುದು ಖಂಡನೀಯ ಎಂದಿದ್ದಾರೆ.

೧೨. ಬಳ್ಳಾರಿ ಕನ್ನಡಿಗರು : ರಾಯಲಸೀಮೆ ರಾಜ್ಯದಲ್ಲಿ ಬಳ್ಳಾರಿ ಸೇರಿಸುವ ಬೇಡಿಕೆಗೆ ಬಳ್ಳಾರಿ ಕನ್ನಡಿಗರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ತೆಲಂಗಾಣ ಪ್ರಾಂತ್ಯದ ಪ್ರತ್ಯೇಕರಾಜ್ಯ ರಚನೆಯ ಬೇಡಿಕೆಯ ನಡುವೆ, ಇದನ್ನು ಈಡೇರಿಸಿದ್ದೇ ಆದರೆ ತಾವು ಪ್ರತ್ಯೇಕ ರಾಯಲಸೀಮಾ ರಾಜ್ಯಕ್ಕಾಗಿ ಹೋರಾಟ ನಡೆಸುವುದಾಗಿ ಆಂಧ್ರ ಕಾಂಗ್ರೆಸ್ ಮುಖಂಡರು ತಿಳಿಸಿದ್ದರು. ಈ ಪ್ರಕ್ರಿಯೆ ಇರುವಾಗಲೇ ಬಳ್ಳಾರಿ ಜಿಲ್ಲೆಯನ್ನು ರಾಯಲಸೀಮೆಯಲ್ಲಿ ಸೇರಿಸಬೇಕೆನ್ನುವ ತಲೆಬುಡ ವಲ್ಲದ, ಕುಚೋದ್ಯದ ಬೇಡಿಕೆಯನ್ನು ಕೆಲ ಮುಖಂಡರು ಮಂಡಿಸುವುದು ಬಳ್ಳಾರಿ ಕನ್ನಡಿಗರನ್ನು ಕೆರಳಿಸಿರುವುದು ನಿಜ.

ಇಲ್ಲಿನ ವಿಶೇಷವೆಂದರೆ, ಬಳ್ಳಾರಿ ಜಿಲ್ಲೆಯಲ್ಲಿ ವಾಸಿಸುವ ಆಂಧ್ರದ ತೆಲುಗರು ಸಹಾ ತಮ್ಮ ಮುಖಂಡರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಅವರು ಬಳ್ಳಾರಿಯು ಅಖಂಡ, ವಿಶಾಲ ಕರ್ನಾಟಕದ ಒಂದು ಭಾಗವಾಗಿದೆ ಎಂದಿರುತ್ತಾರೆ. ಈ ಹಿಂದೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿ, ಚಳುವಳಿ ನಡೆಸಿ ತ್ಯಾಗ ಬಲಿದಾನ ನಡೆಸಿದ ವೀರಕನ್ನಡಿಗರು ಬಳ್ಳಾರಿಯನ್ನು ಆಂಧ್ರದಲ್ಲಿಯೇ ಸೇರಿಸಲು ಒಪ್ಪದಿರುವಾಗ, ರಾಯಲಸೀಮೆ ಎನ್ನುವ ಹೊಸದಾದ ರಾಜ್ಯ ರಚನೆಯಾಗಿ ಅದರಲ್ಲಿ ಬಳ್ಳಾರಿಯೂ ಸೇರ್ಪಡೆಗೊಳ್ಳಬೇಕೆನ್ನುವ ಬೇಡಿಕೆ ಹತಾಶೆಯಿಂದ ಕೂಡಿದುದೆಂದು ಖಂಡಿಸಿದ್ದಾರೆ.

ಕನ್ನಡಭಾಷೆ-ನಾಡು-ನುಡಿಗಾಗಿ ಸಮರ್ಪಿಸಿಕೊಂಡ ಸಹಸ್ರಾರು ಮಹಾನುಭಾವರ ಸ್ಮರಣೆ ಯಿಂದ ಬಳ್ಳಾರಿ ಪ್ರದೇಶ ಈ ಮಟ್ಟಿಗೆ ಬೆಳೆದುನಿಂತಿದೆ. ಅವಕಾಶವಾದಿಗಳು, ಸ್ವಾರ್ಥಪರ ರನ್ನು ಮೇಲಿನ ಘಟನೆಯಿಂದ ಗುರುತಿಸಬಹುದಾಗಿದೆ. ಬಳ್ಳಾರಿ ಜಿಲ್ಲೆಯ ಅನೇಕ ಸಂಘಟನೆಗಳು ಮೇಲಿನ ಹೇಳಿಕೆಯನ್ನು ಖಂಡಿಸಿವೆ.

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ತೀವ್ರವಾಗಿ ಖಂಡಿಸಿದೆ. ಹೋರಾಟ ಗಾರರು ಆಂಧ್ರದ ಕೆಲ ರಾಜಕಾರಣಿಗಳು ಇಂತಹ ಕುಚೋದ್ಯದ, ಅರ್ಥಹೀನ ಬೇಡಿಕೆಗಳನ್ನು ಮುಂದಿಡುವ  ಪ್ರವೃತ್ತಿಯನ್ನು ನಿಲ್ಲಿಸಲು ತಿಳಿಸಿದೆ. ಬಳ್ಳಾರಿ ಜಿಲ್ಲೆ ಕನ್ನಡ ನಾಡಿನ ಅವಿ ಭಾಜ್ಯ ಅಂಗ. ಇದನ್ನು ಆಂಧ್ರಕ್ಕೆ ಅಥವಾ ಪ್ರತ್ಯೇಕ ರಾಯಲಸೀಮೆಯ ರಾಜ್ಯಕ್ಕೆ ಸೇರ್ಪಡೆ ಮಾಡುವ ಶಕ್ತಿ, ತಾಕತ್ತು ಯಾರಿಗೂ ಇಲ್ಲ. ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಡೆಸಿದ ಹೋರಾಟ, ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಅರಿವೇ ಇಲ್ಲದವರು ಈ ರೀತಿ ಹೇಳಿಕೆ ನೀಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

ಬಳ್ಳಾರಿಯಲ್ಲೆ ಅನೇಕ ಸಂಘಟನೆಗಳು ಇದನ್ನು ಖಂಡಿಸಿವೆ. ಕನ್ನಡ ಕ್ರಿಯಾಸಮಿತಿ, ಕನ್ನಡ ಕ್ರಾಂತಿದಳ, ಡಾ. ರಾಜಕುಮಾರ್ ಸಂಘ, ವಿಷ್ಣುಸೇನಾ ಸಮಿತಿ, ಕನ್ನಡಾಭಿಮಾನಿಗಳ ಸಂಘ ಇತರೆ ಸಂಘಟನೆಗಳು ಬಳ್ಳಾರಿ ಜಿಲ್ಲೆಯನ್ನು ರಾಯಲಸೀಮೆ ರಾಜ್ಯಕ್ಕೆ ಸೇರಿಸಬೇಕೆ ನ್ನುವ ಆಂಧ್ರದ ಮುಖಂಡರ ಹೇಳಿಕೆಗೆ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತಪಡಿಸಿವೆ.

ಈಗಾಗಲೇ ಬಳ್ಳಾರಿಯಲ್ಲೆ ತೆಲುಗು ಸಿನಿಮಾಗಳ ಹಾವಳಿ ಜಾಸ್ತಿಯಾಗಿದೆ. ಆಂಧ್ರದ ಶ್ರೀಮಂತರೆಲ್ಲಾ ಬಳ್ಳಾರಿ ಪ್ರದೇಶದಲ್ಲಿ ಜಮೀನು ಖರೀದಿಸಿ ಕ್ಯಾಂಪ್‌ಗಳನ್ನು ಕಟ್ಟಿಕೊಂಡಿ ದ್ದಾರೆ. ಇಲ್ಲಿ ಸಹೋದರರಂತಿರುವ ಕನ್ನಡ-ತೆಲುಗು ಮಾತನಾಡುವವರ ನಡುವೆ ಅಸಮಾಧಾನದ, ರೋಷದ ಕಿಚ್ಚುಹಚ್ಚುವ ಹೇಳಿಕೆಗಳನ್ನು ಆಂಧ್ರದ ಮುಖಂಡರು ನಿಲ್ಲಿಸ ಬೇಕೆಂದು ಕನ್ನಡಿಗರ ಪರವಾಗಿ ಬಳ್ಳಾರಿ ಜನತೆಯ ಕೂಗಾಗಿದೆ. ಕನ್ನಡನಾಡಿನಲ್ಲಿರುವ ತೆಲುಗರು ಸಹಾ ಸೌಹಾರ್ದಯುತವಾಗಿದ್ದು, ಆಂಧ್ರಪ್ರದೇಶವನ್ನು ಇಬ್ಭಾಗಿಸುವ ಹುನ್ನಾರ ಗಳಿಗೆ ವಿರೋಧಿಸುತ್ತಾರೆ. ಅಂದಮೇಲೆ, ಇನ್ನು ಪ್ರತ್ಯೇಕ ರಾಯಲಸೀಮಾ, ತೆಲಂಗಾಣ ರಾಜ್ಯಗಳ ನಿರ್ಮಾಣ ಗಗನಕುಸುಮವೇ ಸರಿ ಎನ್ನಬಹುದು.

ಪ್ರಚಲಿತ ಹೋರಾಟಗಳು

ಬಳ್ಳಾರಿಯು ಧರ್ಮಸಂಕಟದಲ್ಲಿರುವುದು ಈಚಿನ ಎರಡು ವರ್ಷಗಳಲ್ಲಿನ ಹೊಸ ಬೆಳವಣಿಗೆಯಾಗಿದೆ. ೨೦೦೪ರ ಮಾರ್ಚ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಬಳ್ಳಾರಿಯಲ್ಲಿ ಕಾಂಗ್ರೆಸೇತರರು ಸಂಸದರಾದರು. ಅಂದರೆ, ಬಿಜೆಪಿ ಪಕ್ಷದಿಂದ ಕರುಣಾಕರ ರೆಡ್ಡಿಯವರು ಎಂ.ಪಿ. ಆದ ಕೂಡಲೇ ರಾಯಲಸೀಮಾ ರಾಜ್ಯ ಅಥವಾ ತೆಲಂಗಾಣ ರಾಜ್ಯಕ್ಕೆ ಬಳ್ಳಾರಿಯನ್ನು ಸೇರಿಸಬೇಕೆಂಬ ಪ್ರಕ್ರಿಯೆಗೆ ಜೀವಕಳೆ ಬಂದಿದೆ. ಇದರ ಹಿಂದಿರುವ ಮುಖವಾಡ, ಷಡ್ಯಂತ್ರಗಳು ಗುಪ್ತವಾಗಿದ್ದು, ನಿಜಕ್ಕೂ ಪ್ರತ್ಯೇಕತೆಯನ್ನು ಬಯಸುವವರು ಯಾರು ಎಂಬುದನ್ನು ಪರಿಶೀಲಿಸಬೇಕಾಗಿದೆ.

ಆಂಧ್ರಪ್ರದೇಶದಲ್ಲಿಯೇ ಐಕ್ಯತೆ ಇಲ್ಲದಿರುವಾಗ ಪ್ರತ್ಯೇಕ ರಾಜ್ಯ ಹೋರಾಟ ಎಂಬುದು ಹಗಲುಗನಸು. ೨೦೦೪ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಟಿ.ಆರ್.ಎಸ್. ಸಂಘಟನೆ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ್ದು ನಿಜ. ಚುನಾವಣೆಯಲ್ಲಿ ಗೆಲ್ಲಲು ಅರ್ಹತೆ ಇಲ್ಲದವರು ನಡೆಸಿದ ಷಡ್ಯಂತ್ರವಿದು. ಪ್ರತ್ಯೇಕ ರಾಜ್ಯದ ಕೂಗು ಓಟಿಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತ, ಅಭಿಪ್ರಾಯ ಇಲ್ಲಿ ನಿರ್ಣಾಯಕ. ಒಬ್ಬ ವ್ಯಕ್ತಿ ತನ್ನ ತೆವಲುಗಳಿಗೆ ರಾಜ್ಯವನ್ನು ಇಬ್ಭಾಗಿಸುವ ಕೃತ್ಯಕ್ಕೆ ಕೈಹಾಕ ಬಾರದು. ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಇಂಥ ಕೂಗು ಇರಲಿಲ್ಲವಾದರೂ ಗಡಿವಿವಾದ ಮಾತ್ರ ಇದ್ದದ್ದು ನಿಜ. ತುಂಗಭದ್ರಾ ನದಿ ನೀರು ವಿವಾದದಿಂದ ಎರಡೂ ರಾಜ್ಯಗಳಲ್ಲಿ ಮನಸ್ತಾಪವಿದ್ದಿತು. ಆದರೂ ಈ ನೆಲದಲ್ಲಿ ತುಂಗೆಯ ನೀರು, ವಿಜಯನಗರದ ಮಣ್ಣಿನ ಮಡಿಲಲ್ಲಿ ಉಪ್ಪು ತಿಂದು ನೀರು ಕುಡಿದು ಈ ಜಿಲ್ಲೆ ಬೇಡ, ಇದು ಆಂಧ್ರಕ್ಕೆ ಸೇರಬೇಕೆನ್ನುವ ಮನೆಗಳ್ಳರನ್ನು ಖಂಡಿಸಬೇಕಿದೆ. ಇದೆಲ್ಲ ಓಟಿನ ಕುತಂತ್ರ. ಪಕ್ಷಗಳ ಅಸ್ತಿತ್ವಕ್ಕಾಗಿಹಿಡಿದ ವಾಮಮಾರ್ಗಗಳಿವು. ಆಂಧ್ರಪ್ರದೇಶದಲ್ಲಿ ಬಡತನ, ನಿರುದ್ಯೋಗ, ಕ್ಷಾಮಗಳು ತಾಂಡವ ವಾಡುತ್ತಿವೆ. ಭೂಮಾಲೀಕರಿಂದ ನಡೆಯುವ ಶೋಷಣೆಯಂತೂ ದುರಂತಮಯ. ಅದರಲ್ಲೂ ತೆಲಂಗಾಣ ಪ್ರತ್ಯೇಕರಾಜ್ಯ, ರಾಯಲಸೀಮಾ ರಾಜ್ಯಗಳಾದರೆ ಆಂಧ್ರಪ್ರದೇಶವೇ ಮೂರು ಹೋಳಾಗುತ್ತದೆ. ಇವರಲ್ಲಿಯೇ ಹೊಂದಾಣಿಕೆ ಇಲ್ಲ. ಅಖಂಡ ಆಂಧ್ರಪ್ರದೇಶ ಇಂದಿಗೂ ಎರಡು ಹೋಳು ಆಗಿಲ್ಲ ಎಂದಮೇಲೆ ಪ್ರತ್ಯೇಕರಾಜ್ಯ ಕೂಗು ಹಾಗೆಯೇ ಇರುತ್ತದೆ. ತೆಲಂಗಾಣ ಆಗಲಿ, ರಾಯಲಸೀಮಾ ಆಗಲಿ ಅದು ಆಂಧ್ರಪ್ರದೇಶದ ಆಂತರಿಕ ವಿಷಯವಾಗಿದೆ. ಕರ್ನಾಟಕದ ಗಡಿಯೊಳಗೆ ಮಾತನಾಡುವ ಮೊದಲು ಅವರ ಗಡಿಯ ಮತ್ತು ರಾಜ್ಯ ಸಮಸ್ಯೆಗಳತ್ತ ತಮ್ಮ ಗಮನ ಹರಿಸುವುದು ಅಗತ್ಯ. ರಾಯಲಸೀಮೆ ಪ್ರತ್ಯೇಕ ರಾಜ್ಯ ರಚನೆಗೆ ಮತ್ತು ಬಳ್ಳಾರಿ ಜಿಲ್ಲೆ ಸೇರ್ಪಡೆಗೆ ಆಂಧ್ರದ ಕಾಂಗ್ರೆಸ್ ಮುಖಂಡರ ಕುಮ್ಮಕ್ಕೂ ಇರುವುದು ಸ್ಪಷ್ಟ. ಇದನ್ನು ಸ್ಥಳೀಯ ಕರ್ನಾಟಕ, ಕನ್ನಡ ಹೆಸರಿನ ಅನೇಕ ಸಂಘಟನೆಗಳು ಖಂಡಿಸಿವೆ. ಆಂಧ್ರದ ಕುಚೋದ್ಯತನವನ್ನು ಬಳ್ಳಾರಿ ವಕೀಲರು, ಇತರ ಹೋರಾಟಗಾರರು ಪ್ರತಿಭಟಿಸಿದ್ದಾರೆ.[6]

ಮೇಲಿನ ಸಮಸ್ಯೆಗಳಿಗೆ ಪ್ರಮುಖ ಕಾರಣ ಕರ್ನೂಲು ಸಂಸದ ಕೋಟ್ಲ ಸೂರ್ಯಪ್ರಕಾಶ ರೆಡ್ಡಿಯವರ ಹೇಳಿಕೆ. ಆಧಾರವಿಲ್ಲದ, ಬುಡವಿಲ್ಲದ ವಿತಂಡವಾದಗಳನ್ನು ಮಂಡಿಸುತ್ತಾ ರಾಯಲಸೀಮೆಗೆ ಬಳ್ಳಾರಿ ಜಿಲ್ಲೆಯನ್ನು ಸೇರಿಸಲು ನಾಂದಿ ಹಾಡಿದ ಮೊದಲಿಗರಿವರು. ಬಳ್ಳಾರಿಯಲ್ಲಿ ಕನ್ನಡ ಕ್ರಾಂತಿದಳ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿ ತಮ್ಮ ಕೆಚ್ಚು ಮತ್ತು ಅಭಿಮಾನಗಳನ್ನು ಪ್ರದರ್ಶಿಸಿವೆ. ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಅವರಿಗೆ ಅನೇಕ ಸಂಘಟನೆಗಳು ಮನವಿಗಳನ್ನು ಕೊಟ್ಟಿದ್ದು ಹೋರಾಟಕ್ಕೆ ಚಾಲನೆ ದೊರೆತಿದೆ.

ಬಳ್ಳಾರಿ ಜಿಲ್ಲೆಗೆ ಅಂಟಿಕೊಂಡು ಇತ್ತೀಚೆಗೆ ಆಂಧ್ರಕ್ಕೆ ಸೇರಿರುವ ಆದೋನಿ, ಆಲೂರು ಮತ್ತು ರಾಯದುರ್ಗಗಳು ಮರಳಿ ಕರ್ನಾಟಕಕ್ಕೆ ಸೇರಬೇಕಾಗಿದೆ. ಇಲ್ಲಿ ನೆಲೆಸಿರುವವರು ಕನ್ನಡಿಗರು. ಆಂಧ್ರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿರುವರು. ಈಗ ಇವರು ಶಿಕ್ಷಣ, ಉದ್ಯೋಗಗಳಿಗೆ ಕರ್ನಾಟಕವನ್ನು ಅವಲಂಬಿಸಿದ್ದಾರೆ. ವಕೀಲರು, ರಾಜಕಾರಣಿಗಳು, ಸಾಹಿತಿ ಗಳು, ಪತ್ರಕರ್ತರು ಬಳ್ಳಾರಿಯು ಕರ್ನಾಟಕದ ಅವಿಭಾಜ್ಯ ಅಂಗ, ಅದು ಇಲ್ಲಿಯೇ ಇರ ಬೇಕೆಂದು ಹೋರಾಟ ಮಾಡುತ್ತಾರೆ. ಚರಿತ್ರೆಯಿಂದ ಆಂಧ್ರನಾಯಕರು ಪಾಠ ಕಲಿತಿಲ್ಲ ಎನ್ನುವುದಕ್ಕೆ ಮೇಲಿನ ಹೇಳಿಕೆಯೇ ಸಾಕ್ಷಿ. ಬಳ್ಳಾರಿ ಜಿಲ್ಲೆಯಲ್ಲಿ ಗಣಿಮಾಲೀಕರ ಕಾರುಬಾರು ಹೆಚ್ಚು. ಸ್ಥಳೀಯರು ಕೂಲಿ ಕಾರ್ಮಿಕರಾಗಿರುವುದರಿಂದ ಹೋರಾಟದ ಕೆಚ್ಚು ಸಹಜವಾಗಿ ಬರುತ್ತದೆ.[7]

ಒಟ್ಟಾರೆ ಹೇಳುವುದಾದರೆ, ಬಳ್ಳಾರಿ ಜಿಲ್ಲೆ ಹಂಪೆಯ ಮೂಲಕ ಜಗತ್ತಿನಲ್ಲಿ ಖ್ಯಾತಿ ಪಡೆದಿರುವುದು ನಿಜ. ಹಾಗೆಯೇ ಇಂದಿನ ಮ್ಯಾಂಗನೀಸ್ ಅದಿರಿನಿಂದ ಜಗತ್ತಿನ ಮಾರುಕಟ್ಟೆ ಯಲ್ಲಿ ಬೇಡಿಕೆಯ ಜಿಲ್ಲೆಯಾಗಿದೆ. ಇಂಥ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ. ಅವು ನದಿನೀರು ವಿವಾದ, ಗಡಿವಿವಾದ ಮತ್ತು ಪ್ರತ್ಯೇಕ ರಾಜ್ಯಕ್ಕೆ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದವು. ಆಂಧ್ರಪ್ರದೇಶದಲ್ಲಿ ನೂತನವಾಗಿ ರಚಿಸಲು ಕನಸು ಕಾಣುತ್ತಿರುವ ತೆಲಂಗಾಣ ಅಥವಾ ರಾಯಲಸೀಮಾ ರಾಜ್ಯಕ್ಕೆ ಬಳ್ಳಾರಿಯನ್ನು ಸೇರಿಸುವ ಹುನ್ನಾರದ ಹಿಂದೆ ಪ್ರಬಲ ರಾಜಕಾರಣಿಗಳ ಮತ್ತು ಜಾತಿವಾದಿಗಳ ಸ್ವಾರ್ಥ ಅಡಗಿದೆ. ಈವರೆಗೆ ಕನ್ನಡ ನಾಡಿನಲ್ಲಿ ತೆಲುಗರು ಸೌಹಾರ್ದಯುತ, ಸಾಮರಸ್ಯದ ಬದುಕು ನಡೆಸಿದ್ದಾರೆ. ವಿಜಯನಗರ ಕಾಲದಲ್ಲಿ ಕೃಷ್ಣದೇವರಾಯ ಆಂಧ್ರಕ್ಕೆ ನೀಡಿದ ಪ್ರೋತ್ಸಾಹ ತಿರುಪತಿ, ಶ್ರೀಶೈಲ, ಕಾಳಹಸ್ತಿಗಳು ಪ್ರಸಿದ್ದಿಯಾಗಲು ಕಾರಣವಾಯಿತು. ಕೃಷ್ಣದೇವರಾಯನ ಕಾಲದಲ್ಲಿ ಗುತ್ತಿ, ಗುಂತಕಲ್ಲುಗಳು ಅಚ್ಚಗನ್ನಡ ಪ್ರದೇಶವಾಗಿದ್ದವು. ಹಾಗೆಯೇ ನದಿಗಳಿಗೆ ಕೆರೆ-ಕಟ್ಟೆಗಳನ್ನು ಕಟ್ಟಿಸಿದ್ದರಿಂದ ಪರಿವರ್ತನೆಗೆ ನಾಂದಿಯಾಯಿತು. ಇಂದಿನವರ ತೆಲುಗು ವ್ಯಾಮೋಹವು ಇಂದಿನ ಪ್ರತ್ಯೇಕ ರಾಜ್ಯಕ್ಕೆ ಬಳ್ಳಾರಿಯನ್ನು ಸೇರಿಸುವ ಹುನ್ನಾರಕ್ಕೆ ಕಾರಣ ವಾಗಿದೆ. ಇಂದಿಗೂ ತೆಲುಗರ ವಲಸೆ ಬಳ್ಳಾರಿ ಜಿಲ್ಲೆಯಲ್ಲಿ ನಿಂತಿಲ್ಲ. ಅವರ ಪ್ರಭಾವವೆ ಹೆಚ್ಚಿದೆ. ಆಧುನಿಕ ರೀತಿಯ ಹಿಂಸಾತ್ಮಕ ಹೋರಾಟದಲ್ಲಿ ಇವರು ನಿಪುಣರು. ಅನೇಕ ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ. ಆದರೆ ಕನ್ನಡಿಗರ ಚಾರಿತ್ರಿಕಪ್ರಜ್ಞೆ ಇಲ್ಲಿ ಜಾಗೃತ ಗೊಳ್ಳಬೇಕು.

ಈಗ ಸುವರ್ಣ ಕರ್ನಾಟಕ ವರ್ಷಾಚರಣೆಯನ್ನು ಆಚರಿಸಿಕೊಂಡರೂ ಪ್ರಯೋಜನ ವಿಲ್ಲ. ಇಂದಿಗೆ ೫೦ ವರ್ಷಗಳ ಹಿಂದೆ ಬಳ್ಳಾರಿ ಸ್ಥಿತಿ-ಗತಿ ಹೇಗಿದ್ದಿತೆಂದು ತಿಳಿಸುವುದು ದುಃಖದ ಸಂಗತಿ. ಅಂದಿನ ಕಾಂಗ್ರೆಸ್ ಹೋರಾಟಗಾರರು ಸ್ವಾಭಿಮಾನದ ಪ್ರತೀಕವಾಗಿ ಬಳ್ಳಾರಿಯನ್ನು ಉಳಿಸಿಕೊಂಡರು. ಇಂದು ಜಾತಿರಾಜಕಾರಣ ಮತ್ತು ಪಕ್ಷರಾಜಕಾರಣಗಳು ಬಲಿತು ಸ್ವಾರ್ಥಕ್ಕಾಗಿ ಬಳ್ಳಾರಿಯನ್ನು ಬಲಿಕೊಡಲಾಗುತ್ತಿದೆ. ೩೧.೩.೨೦೦೬ರಂದು ಬಳ್ಳಾರಿ ನಗರದ ಕಾಲೇಜು ಮೈದಾನದಲ್ಲಿ ಯುಗಾದಿ ಹಬ್ಬದ ನೆನಪಿಗಾಗಿ ಕರ್ನಾಟಕಾಂಧ್ರ ಸಾಂಸ್ಕೃತಿಕ ಸೌರಭ ಯುಗಾದಿ ಉತ್ಸವವನ್ನು ತೆಲುಗು-ಕನ್ನಡಿಗರು ಅದ್ದೂರಿಯಾಗಿ ಆಚರಿಸಿದರು. ಟಿಕೆಟ್‌ಗಳನ್ನು ಸಹಾ ಮಾರಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗಲು ತೆಲುಗು ಮತ್ತು ಕನ್ನಡ ಚಿತ್ರರಂಗಗಳ ನಟರು ಭಾಗವಹಿಸಿದ್ದರು. ೨೦೦೬ರ ಮೇ-ಜೂನ್‌ನಲ್ಲಿ ನಡೆದ ತೆಲುಗು ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ಶ್ರೀ ಬಿ. ಶ್ರೀರಾಮುಲು ತೆಲುಗಿನಲ್ಲಿ ಮಾತನಾಡಿದ ಕಾರಣ ಕನ್ನಡಿಗರು ರಾಜೀನಾಮೆ ಕೊಡಲು ಪಟ್ಟುಹಿಡಿದರು. ಇಂಥ ಅನೇಕ ಘಟನೆಗಳು ಜರುಗಲಿಕ್ಕೆ ಹಲವು ಕಾರಣಗಳಿವೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯು ೨೦ ಆಗಸ್ಟ್ ೨೦೦೬ರಲ್ಲಿ ಸಮ್ಮೇಳನವನ್ನು ಇಲ್ಲಿ ನಡೆಸಿತು. ಹೀಗೆ ಬಳ್ಳಾರಿ ಜಿಲ್ಲೆಯ ಜನರು ಎಲ್ಲಿಯವರೆಗೆ ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಇಂಥ ಘಟನೆಗಳು ಸಂಭವಿಸುತ್ತಲೇ ಇರುತ್ತವೆ.


[1]      ಹೆಚ್ಚಿನ ವಿವರಕ್ಕೆ ನೋಡಿ. ಪೂರ್ವೋಕ್ತ, ಅಡಿಟಿಪ್ಪಣಿ ೩, ಪು. ೩೫.

[2]      ಎಸ್. ನಾರಾಯಣ, ತುಂಗಭದ್ರಾ, ಜಲಾಶಯಕ್ಕೆ ಸುವರ್ಣ ಸಂಭ್ರಮ, ಕನ್ನಡಪ್ರಭ, ದಿ. ೬.೧೧.೨೦೦೩.

[3]       ಸಂಜೆವಾಣಿ, ೩.೭.೨೦೦೪, ೪.೭.೨೦೦೪, ೭.೭.೨೦೦೭.

[4]      ಪ್ರಜಾವಾಣಿ, ೧೭.೭.೨೦೦೪, ೨೯.೪.೨೦೦೭.

[5]      ಸಂಜೆವಾಣಿ, ೩೧.೭.೨೦೦೪.

[6]      ಸಂಜೆವಾಣಿ, ೮.೭.೨೦೦೪, ೯.೭.೨೦೦೪, ೩೧.೭.೨೦೦೪.

[7]      ಸಂಯುಕ್ತ ಕರ್ನಾಟಕ, ೨೬.೭.೨೦೦೪.