ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ವಿವಿಧ ಸ್ವರೂಪದ ನಗರ ಕೇಂದ್ರಗಳು ಕಂಡುಬರುತ್ತವೆ. ಪ್ರತಿಯೊಂದು ನಗರ ಕೇಂದ್ರವೂ ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿದ್ದು, ಆಯಾ ಚಾರಿತ್ರಿಕ ಸಂದರ್ಭದ ರಾಜಕೀಯ ಮತ್ತು ಆರ್ಥಿಕ ಜೀವನದ ಮೇಲೆ ಮಹತ್ತರ ಪ್ರಭಾವವನ್ನು ಬೀರಿದಂತವು. ವಸಾಹತುಪೂರ್ವ ಕರ್ನಾಟಕದಲ್ಲಿ ವಿವಿಧ ಸ್ವರೂಪದ ನಗರ ಕೇಂದ್ರಗಳು ಅಸ್ತಿತ್ವದಲ್ಲಿದ್ದವು. ಪ್ರಮುಖವಾಗಿ ಮೂರು ವಿಧದ ನಗರ ಕೇಂದ್ರಗಳನ್ನು ಗುರುತಿಸಬಹುದಾಗಿದೆ. ಅವುಗಳೆಂದರೆ, ಆಡಳಿತಾತ್ಮಕ ಪಟ್ಟಣಗಳು, ಧಾರ್ಮಿಕ ಪಟ್ಟಣಗಳು ಮತ್ತು ವ್ಯಾಪಾರ-ವಾಣಿಜ್ಯ ಪಟ್ಟಣಗಳು. ಇವುಗಳೆಲ್ಲವೂ ಚರಿತ್ರೆಯುದ್ದಕ್ಕೂ ಹಲವಾರು ರೀತಿಯ ಏರಿಳಿತಗಳನ್ನು ಕಂಡಂತವು. ಹುಟ್ಟು, ಬೆಳವಣಿಗೆ ಮತ್ತು ಅವನತಿ ಹೆಚ್ಚಿನ ನಗರ ಕೇಂದ್ರಗಳ ಸಾಮಾನ್ಯ ಲಕ್ಷಣವಾಗಿ ಕಂಡುಬರುತ್ತದೆ. ಆಯಾ ಚಾರಿತ್ರಿಕ ಸಂದರ್ಭಕ್ಕನುಗುಣವಾಗಿ ನಗರ ಕೇಂದ್ರಗಳು ತಮ್ಮ ಸ್ವರೂಪದಲ್ಲಿ ಬದಲಾವಣೆಗಳನ್ನು ಕಂಡವು. ರಾಜಕೀಯ ಕೇಂದ್ರಗಳು ಕಂಡಷ್ಟು ಏರಿಳಿತಗಳನ್ನು ಇತರ ಸ್ವರೂಪದ ನಗರ ಕೇಂದ್ರಗಳು ಕಂಡಿಲ್ಲ. ಅವು ಆಯಾ ಅರಸು ಮನೆತನಗಳ ಆಳ್ವಿಕೆಯನ್ನು ಅವಲಂಬಿಸಿಕೊಂಡಿದ್ದವು. ಅರಸು ಮನೆತನಗಳ ಅವನತಿಯ ಬಳಿಕ ರಾಜಧಾನಿ ಪಟ್ಟಣಗಳು ತಮ್ಮ ರಾಜಧಾನಿ ಪಟ್ಟವನ್ನು ಕಳೆದುಕೊಂಡು ಧಾರ್ಮಿಕ ಕೇಂದ್ರಗಳಾಗಿ ಇಲ್ಲವೇ ಹಲವಾರು ಸ್ಮಾರಕಗಳಿರುವ ಒಂದು ಪ್ರದೇಶವಾಗಿ ಮಾರ್ಪಟ್ಟವು. ಹೀಗಾಗಿ ಪ್ರಭುತ್ವದ ಅಳಿವು-ಉಳಿವು ರಾಜಧಾನಿ ಪಟ್ಟಣಗಳ ಅಳಿವು-ಉಳಿವೂ ಆಗಿತ್ತು. ಅರಮನೆ ಕೇಂದ್ರಿತ ಪಟ್ಟಣಗಳಿ ಗಿಂತ ವ್ಯಾಪಾರ ಕೇಂದ್ರಿತ ಪಟ್ಟಣಗಳು ಭಿನ್ನವಾಗಿ ಕಂಡು ಬರುತ್ತವೆ. ಬಂದರು ಪಟ್ಟಣಗಳು ವ್ಯಾಪಾರ-ವಾಣಿಜ್ಯವನ್ನು ಪ್ರಧಾನ ಚಟುವಟಿಕೆಯನ್ನಾಗಿ ಹೊಂದಿರುವಂತವು.

ಬಂದರು ಪಟ್ಟಣಗಳಲ್ಲಿ ವರ್ತಕ ಸಮುದಾಯದ ಪಾತ್ರ ಮಹತ್ವದ್ದು. ಕರ್ನಾಟಕ ಕರಾವಳಿಯ ಬಹುತೇಕ ಎಲ್ಲ ಬಂದರು ಪಟ್ಟಣಗಳಲ್ಲಿಯೂ ವಿವಿಧ ಪ್ರದೇಶ-ಜಾತಿ-ಧರ್ಮಗಳಿಗೆ ಸಂಬಂಧಿಸಿದ ವ್ಯಾಪಾರಸ್ಥರು ವಾಸವಾಗಿದ್ದರು. ಉದಾಹರಣೆಗೆ, ಕರ್ನಾಟಕ ಕರಾವಳಿಯ ಪ್ರಮುಖ ಬಂದರು ಪಟ್ಟಣವಾದ ಮಂಗಳೂರಿನಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಕೊಂಕಣಿಗಳು, ಮಲಯಾಳಿಗಳು ಮುಂತಾದವರು ವಾಸವಾಗಿದ್ದರು. ವರ್ತಕ ಸಮುದಾಯಗಳು ಪಟ್ಟಣ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಆ ಮೂಲಕ ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳುವುದಕ್ಕೆ ಕಾರಣವಾದವು. ವರ್ತಕ ಸಮುದಾಯಗಳು ತಮ್ಮದೇ ಆದ ವಾಸಸ್ಥಳಗಳನ್ನು ಹೊಂದಿರುತ್ತಿದ್ದು, ಅಲ್ಲಿ ವಸತಿ ಕಟ್ಟಡಗಳು, ಧಾರ್ಮಿಕ ಕಟ್ಟಡಗಳು ಮತ್ತು ವ್ಯಾಪಾರ ನಡೆಸುವ ಸಂಕೀರ್ಣಗಳನ್ನು ಹೊಂದಿರುತ್ತಿದ್ದವು. ಈ ಪ್ರಕ್ರಿಯೆ ಬಂದರು ಪಟ್ಟಣಗಳ ವ್ಯವಸ್ಥಿತ ಬೆಳವಣಿಗೆಗೆ ಪೂರಕವಾಯಿತು. ಬಂದರು ಪಟ್ಟಣಗಳು ವ್ಯಾಪಾರ-ವಾಣಿಜ್ಯದ ಜೊತೆಗೆ ರಾಜಕೀಯ ಮತ್ತು ಧಾರ್ಮಿಕ ಕೇಂದ್ರಗಳೂ ಆಗಿರುತ್ತಿದ್ದವು. ಉದಾಹರಣೆಗೆ, ವಿಜಯನಗರದ ಆಳ್ವಿಕೆಯ ಸಂದರ್ಭದಲ್ಲಿ ಮಂಗಳೂರು ಮಂಗಳೂರು ರಾಜ್ಯವಾಗಿತ್ತು ಹಾಗೂ ಅಲ್ಲಿ ಆಡಳಿತ ನಡೆಸುವ ಅಧಕಾರಿಗಳಿದ್ದರು. ಅದೇ ರೀತಿ ದಕ್ಷಿಣ ಕನ್ನಡದ ಹಲವಾರು ಸ್ಥಳೀಯ ಅರಸು ಮನೆತನಗಳು ಮಂಗಳೂರನ್ನು ತಮ್ಮ ರಾಜಕೀಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದವು.

ಬಂದರು ಪಟ್ಟಣಗಳು ಪ್ರಾಚೀನ ಸಂದರ್ಭದಿಂದ ಬ್ರಿಟಿಷರ ಆಳ್ವಿಕೆಯವರೆಗೆ ಹಾಗೂ ಅಲ್ಲಿಂದ ನಂತರವೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ವ್ಯಾಪಾರದ ಹಿನ್ನೆಲೆಯಿಂದ ಮಾತ್ರ. ಬಂದರು ಪಟ್ಟಣಗಳು ಇತರ ಸ್ವರೂಪದ ನಗರ ಕೇಂದ್ರಗಳಂತೆ ಹಲವಾರು ರೀತಿಯ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ನಿಜ. ಆದರೆ ಅವು ಅಂದಿನಿಂದ ಇಂದಿನವರೆಗೂ ವ್ಯಾಪಾರ ಕೇಂದ್ರಗಳಾಗಿಯೇ ಉಳಿದುಕೊಂಡು ಬಂದಿವೆ. ರಾಜಕೀಯ ಕೇಂದ್ರಗಳು ಒಂದು ಆಳ್ವಿಕೆಯಿಂದ ಇನ್ನೊಂದು ಅರಸುಮನೆತನದ ಆಳ್ವಿಕೆಯ ಸಂದರ್ಭಕ್ಕೆ ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗುತ್ತಿದ್ದವು. ಕೆಲವು ರಾಜಧಾನಿ ಪಟ್ಟಣಗಳು ಸಂಪೂರ್ಣವಾಗಿ ಅವನತಿಯನ್ನು ಹೊಂದಿದರೆ, ಇನ್ನು ಕೆಲವು ಸಾಮಂತ ಅರಸರ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ, ಇಲ್ಲವೇ ಧಾರ್ಮಿಕ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿದ್ದವು. ದೇವಾಲಯಗಳು, ಬಸದಿಗಳು, ಚರ್ಚ್‌ಗಳು, ಮಸೀದಿಗಳು ಇರುವ ಪಟ್ಟಣಗಳು ಧಾರ್ಮಿಕ ಹಿನ್ನೆಲೆಯಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದವು. ಹೀಗಾಗಿ ನಗರ ಕೇಂದ್ರಗಳು ಆಯಾ ಸಂದರ್ಭದ ರಾಜಕೀಯ ಬದಲಾವಣೆಗಳು, ಅರ್ಥ ವ್ಯವಸ್ಥೆ ಮತ್ತು ಧಾರ್ಮಿಕ ಪಲ್ಲಟಗಳ ನೇರ ಪ್ರಭಾವಕ್ಕೆ ಒಳಗಾಗುತ್ತಿದ್ದವು. ನಗರ ಕೇಂದ್ರಗಳ ಹುಟ್ಟು, ಬೆಳವಣಿಗೆ ಹಾಗೂ ಅವನತಿ ಈ ಅಂಶಗಳಿಂದಲೇ ನಿರ್ಧರಿಸಲ್ಪಡುತ್ತಿತ್ತು. ಕೆಲವು ನಗರ ಕೇಂದ್ರಗಳು ಮರುಹುಟ್ಟು ಪಡೆದರೆ ಇನ್ನು ಕೆಲವು ಸಂಪೂರ್ಣ ಅವನತಿಯತ್ತ ಸಾಗುತ್ತಿದ್ದವು.

ನಗರ ಕೇಂದ್ರಗಳು ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ಅಸ್ತಿತ್ವಕ್ಕೆ ಬಂದ ಬಗೆ, ಅವುಗಳ ಅವನತಿ, ಮರುಹುಟ್ಟು ಹಾಗೂ ಅವು ಬೀರಿದ ಪ್ರಭಾವಗಳು ನಗರ ಚರಿತ್ರೆ ಅಧ್ಯಯನದಲ್ಲಿ ಬಹುಮುಖ್ಯವಾದ ವಿಚಾರಗಳು. ಭಾರತದ ನಗರ ವ್ಯವಸ್ಥೆಯ ಕುರಿತಂತೆ ನಗರ ಚರಿತ್ರೆಕಾರರು ನಗರೀಕರಣದ ವಿವಿಧ ಹಂತಗಳನ್ನು ಗುರುತಿಸಿದ್ದಾರೆ. ಆದರೆ ಉತ್ತರ ಭಾರತದ ನಗರೀಕರಣದ ಕುರಿತು ನಡೆದಿರುವ ಅಧ್ಯಯನಗಳ ಸಂಖ್ಯೆಯೇ ಹೆಚ್ಚಿನದು. ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕ ಅಡಿಟಿಪ್ಪಣಿಗಳಿಗಷ್ಟೇ ಸೀಮಿತಗೊಂಡಿತು. ಆದರೂ ಇಂಥ ಅಧ್ಯಯನಗಳಿಂದ ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯ. ಕೃಷಿ ಪ್ರಧಾನವಾದ ಭಾರತದಲ್ಲಿ ಪೇಟೆ-ಪಟ್ಟಣಗಳ ಹುಟ್ಟು ಕುತೂಹಲಕರವಾದ ಅಧ್ಯಯನವಾಗಿದೆ. ವಿವಿಧ ಚಾರಿತ್ರಿಕ ಕಾಲಘಟ್ಟಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಗ್ರಾಮ ಪ್ರದೇಶಗಳು ನಗರ ಪ್ರದೇಶಗಳಾಗಿ ಪರಿವರ್ತನೆ ಹೊಂದಿದವು. ಈ ಕುರಿತ ವಿವರಣೆಗಳು ಸಿಂಧೂ ಕಣಿವೆಯ ನಾಗರಿಕತೆಯಿಂದಲೇ ಕಂಡು ಬರುತ್ತವೆ.

ಭಾರತದ ಸಂದರ್ಭದಲ್ಲಿ ಸಿಂಧೂ ನದಿ ನಾಗರಿಕತೆಯ ಅವಧಿಯನ್ನು ಪ್ರಥಮ ನಗರೀಕರಣ ಎಂಬುದಾಗಿ ಕರೆಯಲಾಗಿದೆ. ಸಿಂಧೂ ನದಿ ನಾಗರಿಕತೆ ಕೃಷಿ ಕೇಂದ್ರಿತವೇ ಅಥವಾ ನಗರ ಕೇಂದ್ರಿತವೇ ಎನ್ನುವುದು ಇನ್ನೂ ಚರ್ಚೆಯಲ್ಲಿರುವ ವಿಷಯ. ಸಿಂಧೂ ನದಿ ನಾಗರಿಕತೆಯ ಸಂದರ್ಭದಲ್ಲಿ ನಗರಗಳಿದ್ದವು ಎನ್ನುವ ಅಂಶ ಉತ್ಖನನಗಳಿಂದ ಸಾಬೀತಾಗಿದೆ. ಸಿಂಧೂ ಸಂಸ್ಕೃತಿಯ ಸಂದರ್ಭದ ಪ್ರಮುಖ ಆರು ನಗರಗಳನ್ನು ಗುರುತಿಸ ಲಾಗಿದೆ. ಅವುಗಳೆಂದರೆ, ಹರಪ್ಪಾ, ಮೊಹೆಂಜೊದಾರೋ, ಚನ್ಹುದಾರೋ, ಲೋಥಾಲ್, ಕಾಲಿಬಂಗನ್ ಮತ್ತು ಬನವಾಲಿ. ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ ಪ್ರಥಮ ನಗರೀಕರಣದ ಪ್ರಭಾವ ಭಾರತದ ಇತರ ಪ್ರದೇಶಗಳ ಮೇಲೆ ಯಾವ ರೀತಿ ಆಯಿತು ಮತ್ತು ಅದರ ವ್ಯಾಪ್ತಿ ಎಲ್ಲಿಯವರೆಗೆ ಇತ್ತು ಎನ್ನುವುದು. ಭಾರತ ಕಂಡ ಪ್ರಥಮ ನಗರೀಕರಣದಲ್ಲಿ ಕರ್ನಾಟಕವೂ ಒಳಗೊಂಡಿತ್ತೇ ಎನ್ನುವುದು ಪ್ರಮುಖ ವಿಚಾರ. ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಚರ್ಚಿಸುವಾಗ ಸಿಂಧೂ ಸಂಸ್ಕೃತಿಯ ಯಾವ ರೀತಿಯ ಪ್ರಭಾವವೂ ಕಂಡು ಬರುವುದಿಲ್ಲ. ಹೀಗಾಗಿ ಪ್ರಥಮ ನಗರೀಕರಣವು ಹೆಚ್ಚು ಕಡಿಮೆ ಉತ್ತರ ಭಾರತಕ್ಕಷ್ಟೇ ಸೀಮಿತಗೊಂಡಿದ್ದಾಗಿ ಕಂಡುಬರುತ್ತದೆ.

ಭಾರತದ ನಗರೀಕರಣದ ಎರಡನೆಯ ಹಂತ ಆರಂಭಗೊಳ್ಳುವುದು ಸುಮಾರು ಕ್ರಿ.ಪೂ. ಆರನೆಯ ಶತಮಾನದ ಹೊತ್ತಿಗೆ. ಅದು ಸುಮಾರು ಕ್ರಿ.ಶ. ಮೂರನೆಯ ಶತಮಾನದವರೆಗೆ ಮುಂದುವರಿಯಿತು. ಶಾತವಾಹನರ ಅವನತಿಯ ವೇಳೆಗೆ ದ್ವಿತೀಯ ನಗರೀಕರಣವೂ ಅವನತಿಯತ್ತ ಸಾಗಿತು. ದ್ವಿತೀಯ ನಗರೀಕರಣವು ಭೌಗೋಳಿಕ ವ್ಯಾಪ್ತಿಯ ದೃಷ್ಟಿಯಿಂದ ಹೆಚ್ಚು ವಿಸ್ತೃತವಾಗಿತ್ತು. ಎರಡನೆಯ ಹಂತದ ನಗರೀಕರಣವು ವೇದ ಕಾಲಾನಂತರದ ಆಕರಗಳಲ್ಲಿ ನಗರೀಕರಣದೆಡೆಗಿನ ಪ್ರವೃತ್ತಿಗಳ ರೂಪದಲ್ಲಿ ಕಂಡುಬಂದು ಬುದ್ಧನ ಕಾಲಕ್ಕೆ ಸಮಕಾಲಿಕವಾಗಿ ಹರಳುಗಟ್ಟಿದ ಪ್ರಕ್ರಿಯೆಯಾಗಿತ್ತು. ಕ್ರಿ.ಪೂ. ಆರನೆಯ ಶತಮಾನದ ಸುಮಾರಿಗೆ ‘ರಾಜ್ಯ’ ವ್ಯವಸ್ಥೆಯ ಕೆಲ ಮೂಲಭೂತ ಅಂಗಗಳು ರೂಪುಗೊಂಡಿದ್ದವು. ಈ ಗಣ ಪ್ರಭುತ್ವಗಳನ್ನು ‘ಮಹಾಜನಪದ’ಗಳೆಂದು ಕರೆಯಲಾಗಿತ್ತು. ಇವುಗಳ ರಾಜ್ಯವ್ಯವಸ್ಥೆಯ ಚಿತ್ರಣ ಪಾಳಿ ಸಾಹಿತ್ಯದಲ್ಲಿ ಸಿಗುತ್ತದೆ. ಆರ್.ಎಸ್. ಶರ್ಮ, ಎ. ಘೋಷ್, ವಿಜಯ ಕುಮಾರ ಟಾಕೂರ್ ಮುಂತಾದ ವಿದ್ವಾಂಸರು ಕ್ರಿ.ಪೂ. ಆರನೆಯ ಶತಮಾನದ ಈ ರಾಜಕೀಯ ಬೆಳವಣಿಗೆಗಳ ಹಾಗೂ ಅವು ನಗರೀಕರಣಕ್ಕೆಡೆ ಮಾಡಿಕೊಟ್ಟಿರುವುದರ ಕುರಿತು ತಮ್ಮ ಕೃತಿಗಳಲ್ಲಿ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ. ಲಿಚ್ಛವಿ, ಯೌಧೇಯ, ಮಾಳವ, ಸಾಕ್ಯ, ಕೋಳಿಯ, ಕೋಸಲ, ಮಗಧ ಮುಂತಾದ ರಾಜ್ಯಗಳು ಅಸ್ತಿತ್ವಕ್ಕೆ ಬರಲಾರಂಭಿಸಿದವು. ಈ ಜನಪದಗಳಲ್ಲೇ ಮಗಧವು ಹೆಚ್ಚು ಬಲಿಷ್ಠವೂ, ಆಕ್ರಮಣಶೀಲವೂ ಆಗಿತ್ತು. ಮಗಧ ರಾಜ್ಯವು ಇನ್ನಿತರ ಜನಪದಗಳನ್ನು ಸೋಲಿಸಿ ತನ್ನ ರಾಜ್ಯದ ಗಡಿಯನ್ನು ವಿಸ್ತರಿಸಿದ್ದೇ ಅಲ್ಲದೆ, ಕೃಷಿ ಮತ್ತು ವ್ಯಾಪಾರ ಚಟುವಟಿಕೆಗಳು ರೂಪುಗೊಳ್ಳುವಂತೆ ಮಾಡಿತು. ಈ ಪ್ರಕ್ರಿಯೆ ಕಾಣಿಸಿಕೊಳ್ಳಲಾರಂಭಿಸಿದ್ದು ಗಂಗಾನದಿ ಬಯಲಿನಲ್ಲಿ. ಹೀಗೆ ಕ್ರಿ.ಪೂ. ಐದನೆಯ ಶತಮಾನದ ವೇಳೆಗೆ ನಗರೀಕರಣ ಪ್ರಕ್ರಿಯೆ ಕಾಣಿಸಿಕೊಂಡು, ಭಾರತದಾದ್ಯಂತ ವಿಸ್ತರಣೆಗೊಳ್ಳಲಾರಂಭಿಸಿತು. ಕೃಷಿಯಲ್ಲಿ ಕಾಣಿಸಿಕೊಂಡ ಹೆಚ್ಚುವರಿ ಉತ್ಪಾದನೆ, ಅವುಗಳ ಮಾರಾಟ, ಮಾರಾಟಕ್ಕಾಗಿ ಮಾರಾಟ ಕೇಂದ್ರಗಳು, ವ್ಯಾಪಾರಸ್ಥರು, ವ್ಯಾಪಾರ ಮಾರ್ಗಗಳು ಇವೆಲ್ಲವೂ ಒಂದೊಂದಾಗಿ ಕಾಣಿಸಿಕೊಂಡು ನಗರೀಕರಣ ಪ್ರಕ್ರಿಯೆ ಗಟ್ಟಿಗೊಳ್ಳಲಾರಂಭಿಸಿತು. ವ್ಯಾಪಾರ-ವಾಣಿಜ್ಯದ ಬೆಳವಣಿಗೆಯೊಂದಿಗೆ ಮಹಾನಗರ, ನಗರ, ಪಟ್ಟಣ, ನಿಗಮ ಮುಂತಾದ ಕೇಂದ್ರಗಳು ಬೆಳೆದವು. ವ್ಯಾಪಾರದಲ್ಲಿ ನಾಣ್ಯವನ್ನು ಬಳಸುವುದಕ್ಕೆ ಆರಂಭವಾಯಿತು. ಪಟ್ಟಣಗಳಲ್ಲಿ ನೂರಾರು ವ್ಯವಸಾಯೇತರ ವೃತ್ತಿಗಳು ಬೆಳೆದವು. ವ್ಯಾಪಾರಸ್ಥರು ಬೇರೆ ಬೇರೆ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಲು ಆರಂಭಿಸಿದ್ದರಿಂದಾಗಿ ವ್ಯಾಪಾರ-ವಾಣಿಜ್ಯದ ಮಾರ್ಗಗಳು ನಿರ್ಮಾಣಗೊಂಡವು. ಮೌರ್ಯರ ಆಳ್ವಿಕೆಯ ಸಂದರ್ಭದಲ್ಲಿ ಇದು ಇನ್ನಷ್ಟು ವಿಸ್ತಾರಗೊಂಡು, ಉತ್ತರಾಪಥ ಮತ್ತು ದಕ್ಷಿಣಾಪಥ ವ್ಯಾಪಾರ ಮಾರ್ಗಗಳು ವ್ಯಾಪಾರ ಮತ್ತು ಧರ್ಮ ಪ್ರಚಾರದ ಉದ್ದೇಶಕ್ಕೆ ವ್ಯಾಪಕವಾಗಿ ಬಳಕೆಗೊಂಡವು. ಕರ್ನಾಟಕವು ಈ ಅವಧಿಯಲ್ಲಿ ಉತ್ತರ ಭಾರತದೊಂದಿಗೆ ಸಂಪರ್ಕ ಸಾಧಿಸಿತು. ಕರ್ನಾಟಕದಲ್ಲಿ ಹಲವಾರು ಪೇಟೆ-ಪಟ್ಟಣಗಳು ಈ ಅವಧಿಯಲ್ಲಿ ಕಂಡು ಬಂದವು. ಹೀಗಾಗಿ ಕರ್ನಾಟಕದ ಸಂದರ್ಭದಕ್ಕೆ ಇದನ್ನು ಪ್ರಥಮ ನಗರೀಕರಣವೆಂದು ಕರೆಯಬಹುದಾಗಿದೆ. ಬ್ರಹ್ಮಗಿರಿ, ಚಂದ್ರವಳ್ಳಿ, ಹೆಮ್ಮಿಗೆ, ವಡಗಾಂವ್-ಮಾಧವಪುರ, ಬನವಾಸಿ ಮೊದಲಾದ ಪ್ರದೇಶಗಳು ನಗರ ಪ್ರದೇಶಗಳಾಗಿ ಬೆಳೆದಿರುವುದು ಈ ಅವಧಿಯಲ್ಲಿ. ಇವುಗಳಲ್ಲಿ ಹೆಚ್ಚಿನವು ಸುಮಾರು ಕ್ರಿ.ಶ. ಮೂರನೆಯ ಶತಮಾನದ ಹೊತ್ತಿಗೆ ಅವನತಿಯನ್ನು ಹೊಂದಿದವು. ಬನವಾಸಿಯು ಕದಂಬರ ರಾಜಧಾನಿಯಾಗುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು.

ಶಾತವಾಹನರ ಕಾಲದ ಪಟ್ಟಣಗಳು ನಂತರದ ಅವಧಿಗಳಲ್ಲಿ ಅವನತಿಯನ್ನು ಹೊಂದಲಾ ರಂಭಿಸಿದವು. ಇದಕ್ಕೆ ಮುಖ್ಯ ಕಾರಣ ಉತ್ಪಾದನಾ ವ್ಯವಸ್ಥೆಯಲ್ಲಾದ ಬದಲಾವಣೆ. ಶಾತವಾಹನರ ನಂತರ ಅಧಿಕಾರಕ್ಕೆ ಬಂದ ಕದಂಬರು ಮತ್ತು ಗಂಗರು ಭೂಮಿಯನ್ನು ದಾನ ನೀಡುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಭೂಮಿಯನ್ನು  ದಾನ ನೀಡುವ ಪ್ರಕ್ರಿಯೆ ಭೂಮಾಲೀಕ ವರ್ಗದ ಹುಟ್ಟಿಗೆ ಕಾರಣವಾಯಿತು. ಇದರಿಂದ ವ್ಯಾಪಾರ-ವಾಣಿಜ್ಯಕ್ಕೆ ಧಕ್ಕೆಯೊದಗಿತು. ಊಳಿಗಮಾನ್ಯ ವ್ಯವಸ್ಥೆಯ ಹುಟ್ಟು ನಗರ ವ್ಯವಸ್ಥೆಯ ಅವನತಿಯನ್ನು ಸೂಚಿಸಿತು. ಹೆಚ್ಚೆಚ್ಚು ಭೂಮಿಯನ್ನು ದಾನ ನೀಡುವುದಕ್ಕೂ, ಅದರಿಂದಾಗಿ ಊಳಿಗಮಾನ್ಯ ವ್ಯವಸ್ಥೆ ಹುಟ್ಟಿಕೊಳ್ಳುವುದಕ್ಕೂ ಹಾಗೂ ಅದರ ಪರಿಣಾಮವಾಗಿ ನಗರಗಳು ಅವನತಿ ಹೊಂದುವುದಕ್ಕೂ ಇರುವ ಸಂಬಂಧಗಳ ಕುರಿತು ಆರ್.ಎಸ್. ಶರ್ಮ, ಹರ್ಬನ್ಸ್ ಮುಖ್ಯ, ಹರ್ಮನ್ ಕುಲ್ಕೆ, ಬರ್ಟನ್ ಸ್ಟೈನ್, ಡಿ.ಡಿ. ಕೊಸಾಂಬಿ, ವಿಜಯಕುಮಾರ ಟಾಕೂರ್, ಇರ್ಪಾನ್ ಹಬೀಬ್, ಬಿ.ಎನ್.ಎಸ್. ಯಾದವ, ಡಿ.ಎನ್.ಝೂ ಮೊದಲಾದ ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಆರ್.ಎಸ್. ಶರ್ಮ ಅವರ ಪ್ರಕಾರ, ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆ ಕಾಣಿಸಿಕೊಳ್ಳುವುದಕ್ಕೆ ಮೂಲ ಕಾರಣ ಬ್ರಾಹ್ಮಣರು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅತಿಯಾದ ಭೂದಾನಗಳು; ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಇಳಿಮುಖ ಕಾಣಿಸಲಾರಂಭಿಸಿ, ನಾಣ್ಯದ ಚಲಾವಣೆಯೂ ಪ್ರಾಮುಖ್ಯತೆಯನ್ನು ಕಳೆದು ಕೊಂಡಿತು. ಆರ್.ಎಸ್. ಶರ್ಮ ಮತ್ತು ಬಿ.ಎನ್.ಎಸ್. ಯಾದವ ಭಾರತದ ಊಳಿಗಮಾನ್ಯತೆಯ ಕುರಿತು ಚರ್ಚಿಸುವಾಗ ಯೂರೋಪಿನಲ್ಲಿದ್ದ ಊಳಿಗಮಾನ್ಯ ವ್ಯವಸ್ಥೆಯನ್ನು ಅದರೊಂದಿಗೆ ಹೋಲಿಸಿ, ಆ ಮೂಲಕ ನಿರ್ಧಾರಗಳನ್ನು ತೆಗೆದುಕೊಂಡರು. ಈ ಕ್ರಮವನ್ನು ಹರ್ಬನ್ಸ್ ಮುಖ್ಯ, ಇರ್ಫಾನ್ ಹಬೀಬ್, ಬರ್ಟನ್ ಸ್ಟೈನ್ ಮೊದಲಾದವರು ಟೀಕಿಸಿದರು. ಈ ಎಲ್ಲ ಚರ್ಚೆಗಳು ಊಳಿಗಮಾನ್ಯ ವ್ಯವಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಅವನತಿಗೆ ಸಂಬಂಧಿಸಿದ್ದಾದರೂ, ನಗರೀಕರಣದ ಅಧ್ಯಯನ ಸಂದರ್ಭದಲ್ಲಿ ಬಹುಮುಖ್ಯವಾದ ಆಕರಗಳಾಗಿ ಕಂಡುಬರುತ್ತವೆ. ಕ್ರಿ.ಪೂ. ೨೦೦ ರಿಂದ ಕ್ರಿ.ಶ. ೩೦೦ರ ವರೆಗಿನ ಅವಧಿಯಲ್ಲಿ ನಗರೀಕರಣ ಪ್ರಕ್ರಿಯೆ ಚುರುಕಿನಿಂದ ಕೂಡಿದ್ದರೆ, ಕ್ರಿ.ಶ. ೩೦೦ ರಿಂದ ೯೦೦ರ ವರೆಗಿನ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಪ್ರಧಾನವಾಗಿ ಕಂಡುಬಂದವು. ಆದರೂ ಈ ಎರಡೂ ವ್ಯವಸ್ಥೆಗಳು (ಗ್ರಾಮೀಣ ಮತ್ತು ನಗರ) ಒಂದಕ್ಕೊಂದು ಪೂರಕವಾಗಿಯೇ ಇದ್ದವು. ಕ್ರಿ.ಶ. ಮೂರನೆಯ ಶತಮಾನದ ಬಳಿಕ ರೋಮನ್ ವ್ಯಾಪಾರದಲ್ಲಿ ಇಳಿಮುಖ ಕಂಡುಬಂದು ವ್ಯಾಪಾರ-ವಾಣಿಜ್ಯವು ರಾಜ್ಯಕ್ಕೆ ಬೇಕಾದಷ್ಟು ಆದಾಯವನ್ನು ಪೂರೈಸುವಲ್ಲಿ ವಿಫಲವಾದಾಗ ಭೂಕಂದಾಯವು ರಾಜ್ಯಕ್ಕೆ ಬೇಕಾದಷ್ಟು ಆದಾಯವನ್ನು ಪೂರೈಸುವಲ್ಲಿ ಯಶಸ್ವಿಯಾಯಿತು. ಕ್ರಿ.ಶ. ಒಂಬತ್ತು ಅಥವಾ ಹತ್ತನೆಯ ಶತಮಾನದ ಬಳಿಕ ವ್ಯಾಪಾರ-ವಾಣಿಜ್ಯವು ರಾಜ್ಯದ ಬೊಕ್ಕಸಕ್ಕೆ ಅಪಾರವಾದ ಆದಾಯವನ್ನು ತಂದುಕೊಟ್ಟಿತು. ಈ ರೀತಿಯ ಏರಿಳಿತಗಳು ಚರಿತ್ರೆಯುದ್ದಕ್ಕೂ ಕಂಡುಬರುತ್ತವೆ.

ಭಾರತದಲ್ಲಿ ಕುಶಾನರ ಮತ್ತು ಶಾತವಾಹನರ ಆಳ್ವಿಕೆಯ ಅವಧಿಗಳಲ್ಲಿ ನಗರೀಕರಣ ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಕೂಡಿತ್ತು. ಉತ್ತರ ಭಾರತದಲ್ಲಿ ವೈಶಾಲಿ, ಪಾಟಲಿಪುತ್ರ, ಕೌಶಾಂಬಿ, ವಾರಣಾಸಿ, ಹಸ್ತಿನಾಪುರ, ಮಥುರಾ ಮುಂತಾದ ನಗರಗಳು ಕ್ರಿ.ಶ. ಒಂದು ಹಾಗೂ ಎರಡನೆಯ ಶತಮಾನಗಳಲ್ಲಿ ಕುಶಾನರ ಪ್ರಮುಖ ನಗರ ಕೇಂದ್ರಗಳಾಗಿದ್ದವು. ಅದೇ ರೀತಿ ದಕ್ಷಿಣ ಭಾರತದಲ್ಲಿ ಅಮರಾವತಿ, ನಾಗಾರ್ಜುನಕೊಂಡ, ಬ್ರೋಚ್, ಸೋಪಾರ, ಅರಿಕಮೇಡು, ಕಾವೇರಿಪಟ್ಟಣ, ಚಂದ್ರವಳ್ಳಿ, ಸನ್ನತಿ, ಬನವಾಸಿ ಮುಂತಾದ ನಗರಗಳು ಶಾತವಾಹನರ ನಗರ ಕೇಂದ್ರಗಳಾಗಿದ್ದವು. ರೋಮನ್ ಸಾಮ್ರಾಜ್ಯದೊಂದಿಗೆ ನಡೆಯುತ್ತಿದ್ದ ಸಮೃದ್ಧ ವಾಣಿಜ್ಯದಿಂದಾಗಿ, ಕುಶಾನ ಹಾಗೂ ಶಾತವಾಹನ ನಗರಗಳು ಅಭಿವೃದ್ದಿಗೊಂಡವು. ಕ್ರಿ.ಶ. ಮೂರನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದೊಂದಿಗಿನ ವ್ಯಾಪಾರ-ವಾಣಿಜ್ಯದಲ್ಲಿ ಕಂಡು ಬಂದ ಕುಸಿತದಿಂದಾಗಿ ಹಲವಾರು ನಗರ ಕೇಂದ್ರಗಳು ಅವನತಿಯತ್ತ ಸಾಗಿದವು. ವ್ಯಾಪಾರದಲ್ಲಿ ತೊಡಗಿದ್ದ ಹಲವಾರು ಸಮುದಾಯಗಳು ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡವು. ಕೃಷಿ ಆಧಾರಿತ ಅರ್ಥ ವ್ಯವಸ್ಥೆ ರೂಪುಗೊಳ್ಳಲಾರಂಭಿಸಿತು. ಉತ್ತರ ಭಾರತದಲ್ಲಿ ಅಧಿಕಾರಕ್ಕೆ ಬಂದ ಗುಪ್ತರು ಹಾಗೂ ದಕ್ಷಿಣ ಭಾರತದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದ ಕದಂಬರು ಕೃಷಿ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಲಾರಂಭಿಸಿದರು. ಇದು ನಗರ ಕೇಂದ್ರಗಳ ಸ್ಥಿತ್ಯಂತರಕ್ಕೆ ಮೂಲ ಕಾರಣವಾಯಿತು. ಈ ಸಂದರ್ಭದ ನಗರಗಳ ಅವನತಿಗೆ ಇದು ಆಂತರಿಕ ಕಾರಣವಾದರೆ, ಸಾಗರೋತ್ತರ ವ್ಯಾಪಾರದಲ್ಲಿ ಕಂಡುಬಂದ ಇಳಿಮುಖ ಬಾಹ್ಯ ಕಾರಣವಾಗಿ ಕಂಡುಬರುತ್ತದೆ.

ಕರ್ನಾಟಕದಲ್ಲಿ ಕ್ರಿ.ಶ. ಒಂದರಿಂದ ನಾಲ್ಕನೆಯ ಶತಮಾನದವರೆಗೆ ಅನೇಕ ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬಂದವು. ವ್ಯಾಪಾರ ಹಾಗೂ ಆಡಳಿತಾತ್ಮಕ ಉದ್ದೇಶಗಳು ನಗರ ಕೇಂದ್ರಗಳ ಹುಟ್ಟಿಗೆ ಕಾರಣವಾದವು. ಕ್ರಿ.ಶ. ಐದರಿಂದ ಹತ್ತನೆಯ ಶತಮಾನದವರೆಗಿನ ಅವಧಿಯಲ್ಲಿ ಅನೇಕ ಪೇಟೆ-ಪಟ್ಟಣಗಳು ಅವನತಿಯನ್ನು ಕಂಡವು. ಬನವಾಸಿ, ತಲಕಾಡು ಮುಂತಾದ ನಗರಗಳು ರಾಜಕೀಯ ಕಾರಣಗಳಿಂದಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವು. ಆದರೆ ಒಟ್ಟಾರೆಯಾಗಿ ಈ ಅವಧಿಯಲ್ಲಿ ನಗರೀಕರಣ ಪ್ರಕ್ರಿಯೆ ಚುರುಕಿನಿಂದ ಕೂಡಿದ್ದಾಗಿರಲಿಲ್ಲ. ಅರಸುಮನೆತನಗಳ ಕಾರ್ಯ ಚಟುವಟಿಕೆಗಳಿಗಷ್ಟೇ ಸೀಮಿತವಾದ ನಗರಗಳು ಇದ್ದವು. ಆದರೆ ಅವು ದೀರ್ಘಕಾಲ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿ ಕೊಳ್ಳಲಿಲ್ಲ. ಸೈನಿಕ ಮತ್ತು ಆಡಳಿತದ ಉದ್ದೇಶಗಳಿಗಷ್ಟೇ ಸೀಮಿತವಾದ ನಗರ ಕೇಂದ್ರಗಳು ಹಲವಾರು ರೀತಿಯ ಸ್ಥಿತ್ಯಂತರಗಳಿಗೆ ಒಳಗಾಗುತ್ತಲೇ ಇದ್ದವು. ಕ್ರಿ.ಶ. ಹತ್ತನೆಯ ಶತಮಾನದ ನಂತರ ಹಲವಾರು ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬಂದವು. ಹಳೆಯ ಪಟ್ಟಣಗಳ ಪುನರ್‌ನಿರ್ಮಾಣ ಹಾಗೂ ಹೊಸ ಪಟ್ಟಣಗಳ ಹುಟ್ಟು ಕಾಣಿಸಿಕೊಳ್ಳಲಾರಂಭಿಸಿತು. ಈ ಪ್ರಕ್ರಿಯೆ ವಿಜಯನಗರದ ಅರಸರ ಆಳ್ವಿಕೆಯವರೆಗೆ ಮುಂದುವರಿಯಿತು.

ಕ್ರಿ.ಶ. ಹತ್ತನೆಯ ಶತಮಾನದಿಂದ ಆರಂಭಗೊಂಡ ಪ್ರಕ್ರಿಯೆಯನ್ನು ಭಾರತದ ಸಂದರ್ಭ ದಲ್ಲಿ ತೃತೀಯ ನಗರೀಕರಣವೆಂಬುದಾಗಿ ಕರೆಯಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಇದು ದ್ವಿತೀಯ ನಗರೀಕರಣವಾಗಿ ಕಂಡು ಬರುತ್ತದೆ. ಭಾರತ ಮತ್ತು ಕರ್ನಾಟಕ ಎನ್ನುವ ಬೇರೆ ಬೇರೆ ಪದ ಪ್ರಯೋಗದ ಅನಿವಾರ್ಯತೆ ಇರುವುದರಿಂದಾಗಿ ಇಲ್ಲಿ ಅದೇ ರೀತಿ ಬಳಸಲಾಗಿದೆ. ಭಾರತದ ನಗರ ಚರಿತ್ರೆ ಎಂದಾಗ ಅದು ಭಾರತ ಎನ್ನುವ ಭೌಗೋಳಿಕ ಭೂ ಪ್ರದೇಶವನ್ನು ಪ್ರತಿನಿಧಿಸುತ್ತಿರಬೇಕಾಗುತ್ತದೆ. ಆದರೆ ಹೆಚ್ಚಿನ ಅಧ್ಯಯನಗಳಲ್ಲಿ ಆ ರೀತಿ ಕಂಡುಬರುವುದಿಲ್ಲ. ಭಾರತ ಎಂದಾಗ ಅದು ಕೇವಲ ಉತ್ತರ ಭಾರತದ ಚರಿತ್ರೆಗಷ್ಟೇ ಸೀಮಿತಗೊಂಡು, ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕ ಅಡಿಟಿಪ್ಪಣಿಗಳಿಗಷ್ಟೇ ಸೀಮಿತಗೊಂಡಿರುವುದು ಅಧ್ಯಯನಗಳಿಂದ ಕಂಡುಬರುತ್ತದೆ. ಈ ಕಾರಣಗಳಿಂದಾಗಿ ಪ್ರಸ್ತುತ ಅಧ್ಯಯನದಲ್ಲಿ ಕರ್ನಾಟಕದ ನಗರ ಚರಿತ್ರೆಯನ್ನು ಕರ್ನಾಟಕದ ಹಿನ್ನೆಲೆಯಿಂದಲೇ ನೋಡುವ ಪ್ರಯತ್ನವನ್ನು ಮಾಡಲಾಗಿದೆ. ಇದರರ್ಥ ಕರ್ನಾಟಕ ಇತರ ಪ್ರದೇಶಗಳೊಂದಿಗೆ ಹೊಂದಿದ್ದ ಸಂಬಂಧಗಳನ್ನಾಗಲಿ ಅಥವಾ ಪಡೆದ ಅನುಭವಗಳನ್ನಾಗಲಿ ಅಲ್ಲಗಳೆಯು ವುದೆಂದಲ್ಲ.

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿ ನೋಡಿದಾಗ ನಗರ ಪ್ರದೇಶಗಳು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಿದ್ದು ಕಂಡು ಬರುತ್ತದೆ. ಅದರಲ್ಲೂ ನಗರ ಲಕ್ಷಣಗಳನ್ನಷ್ಟೇ ಸೂಚಿಸುತ್ತಿದ್ದ ಪ್ರದೇಶಗಳ ಸಂಖ್ಯೆ ತೀರಾ ಕಡಿಮೆಯಿತ್ತು. ಗ್ರಾಮೀಣ ಮತ್ತು ನಗರಗಳೆರಡರ ಲಕ್ಷಣಗಳು ಸೇರಿಕೊಂಡಿದ್ದ ಪ್ರದೇಶಗಳು ಅನೇಕ ಸಂಖ್ಯೆಯಲ್ಲಿದ್ದವು. ಪ್ರಾಚೀನ ಮತ್ತು ಮಧ್ಯಕಾಲೀನ ಸಂದರ್ಭದ ನಗರ ಹಾಗೂ ಗ್ರಾಮ ಪ್ರದೇಶಗಳ ನಡುವೆ ವ್ಯತ್ಯಾಸ ಖಚಿತವಾಗಿ ಕರಾರು ವಾಕ್ಕಾಗಿ ಇರಲಿಲ್ಲ. ಕ್ರಿ.ಶ. ಹತ್ತನೆಯ ಶತಮಾನದ ನಂತರ ಅನೇಕ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಾಗಿ ಪರಿವರ್ತನೆಗೊಂಡವು. ಶಾಸನಗಳು ಮತ್ತು ಸಾಹಿತ್ಯ ಆಕರಗಳು ಈ ಕುರಿತು ಮಾಹಿತಿಯನ್ನು ನೀಡುತ್ತವೆ. ಕ್ರಿ.ಶ. ೧೦೭೪ರಲ್ಲಿ ಪುಲಿಗೆರೆಯು ನಗರ ಪ್ರದೇಶವಾಗಿ ಪರಿವರ್ತನೆಗೊಂಡಿತು. ಕ್ರಿ.ಶ. ೧೨೫೧ರಲ್ಲಿ ಮಲ್ಲಿಸೆಟ್ಟಿ ಎನ್ನುವ ಬಳೆ ವ್ಯಾಪಾರಿಯು ಗ್ರಾಮವೊಂದನ್ನು ಪಟ್ಟಣವಾಗಿ ಪರಿವರ್ತಿಸಿದ. ಅದಕ್ಕಾಗಿ ಅವನಿಗೆ ಆ ಗ್ರಾಮದ ಮುಖಂಡ ಮಲ್ಲಗಾವುಂಡ ಹಾಗೂ ಅಲ್ಲಿನ ಹಳ್ಳಿಗರು ದಾನವನ್ನು ನೀಡಿದರು. ಕ್ರಿ.ಶ. ೧೨೫೧ರಲ್ಲಿ ಯಮ್ಮದುರಹಳ್ಳಿ ಎಂಬ ಹಳ್ಳಿಯು ಪಟ್ಟಣವಾಗಿ ಪರಿವರ್ತನೆಗೊಂಡಿತು. ಕ್ರಿ.ಶ. ೧೨೭೭ರ ಟಿ. ನರಸೀಪುರದ ಶಾಸನವು ಮೂಗೂರು ಪಟ್ಟಣವಾಗಿ ಬೆಳೆದಿದುದರ ವಿವರಣೆಯನ್ನು ನೀಡುತ್ತದೆ. ಮೂಗೂರು ೧೩ ಮತ್ತು ೧೪ನೆಯ ಶತಮಾನಗಳಲ್ಲಿ ಪ್ರಮುಖ ನಗರ ಕೇಂದ್ರವಾಗಿತ್ತು. ಕ್ರಿ.ಶ. ೧೩೧೯ರಲ್ಲಿ ರಾಮಲಿಂಗಭಟ್ಟ ಎನ್ನುವವನು ಸಂತೆಯನ್ನು ಏರ್ಪಡಿಸಿ ಚಂಡಿಮಾದಿಹಳ್ಳಿ ಗ್ರಾಮವನ್ನು ಪಟ್ಟಣವಾಗಿ ಪರಿವರ್ತಿಸಿದನು. ಕ್ರಿ.ಶ. ೧೩೧೮ರಲ್ಲಿ ಮೂರನೆಯ ವೀರಬಲ್ಲಾಳನ ಮಂತ್ರಿ ಸೋಮರಸ ಎನ್ನುವವನು ಬೆಟ್ಟಾರಿ ಬಾಲಸೆಟ್ಟಿ ಹಾಗೂ ಮಾಸಣ ಸೆಟ್ಟಿ ಎನ್ನುವವರಿಗೆ ಮುಗುಲುನಹಳ್ಳಿಯನ್ನು ನಾನಾದೇಸಿ ಪಟ್ಟಣವಾಗಿ ಪರಿವರ್ತಿಸಿ ಅಲ್ಲೊಂದು ಸಂತೆಯನ್ನು ಸ್ಥಾಪಿಸಿದ್ದಕ್ಕಾಗಿ ಸನ್ನದನ್ನು ನೀಡಿದನು.

ಮೂರನೆಯ ವೀರಬಲ್ಲಾಳನ ಅಧಿಕಾರಿ ನಾಗರಸ ಎನ್ನುವವನು ಬೇಹೂರಿನ ದಕ್ಷಿಣಕ್ಕೆ ಬೊಮ್ಮರಸನೆನ್ನುವವನ ಹೆಸರಿನಲ್ಲಿ ಪಟ್ಟಣವನ್ನು ನಿರ್ಮಿಸಿದ್ದಕ್ಕಾಗಿ ನಿರ್ದಿಷ್ಟ ತೆರಿಗೆ ವಿನಾಯಿತಿಯ ಮೂಲಕ ಹರಿಬಸೆಟ್ಟಿ ಎನ್ನುವವನಿಗೆ ಧನಸಹಾಯ ಮಾಡಿದನು. ಕ್ರಿ.ಶ. ೧೩೨೮ರ ಯಳಂದೂರು ಶಾಸನವು ಉಪೇಂದ್ರಪಟ್ಟಣ (ಮದ್ದೂರು)ವು ನಿರ್ಮಾಣ ಗೊಂಡಿದರ ಬಗೆಗೆ ತಿಳಿಸುತ್ತದೆ. ಕೊಳ್ಳೆಗಾಲದ ಶಾಸನವೊಂದು ಬೊಮ್ಮನಹಳ್ಳಿಯಲ್ಲಿ ಹೊಸ ಪಟ್ಟಣವನ್ನು ನಿರ್ಮಿಸಲಾಯಿತೆಂದು ತಿಳಿಸುತ್ತದೆ. ಕ್ರಿ.ಶ. ೧೩೩೭ರ ಶಾಸನವೊಂದು ಬಿರುಗಹಳ್ಳಿಯನ್ನು ಪುರವನ್ನಾಗಿ ಪರಿವರ್ತಿಸಿದುದ್ದಕ್ಕಾಗಿ ತೆರಿಗೆಗಳನ್ನು ಕೊಡುವ ಬಗ್ಗೆ ತಿಳಿಸುತ್ತದೆ. ಕ್ರಿ.ಶ. ೧೩೫೪ರಲ್ಲಿ ಕೆಂಪರಾಯಪಟ್ಟಣವು ಅಸ್ತಿತ್ವಕ್ಕೆ ಬಂತು. ಕ್ರಿ.ಶ. ೧೪೯೦ರ ಗುಬ್ಬಿಯ ಶಾಸನದಿಂದ ಸಂಪಿಕೆಯಪುರವನ್ನು ಮಹಾಸಾಮಂತನು ಕಟ್ಟಿಸಿದನೆಂದು ತಿಳಿದು ಬರುತ್ತದೆ. ಕ್ರಿ.ಶ. ೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡ ಬೆಂಗಳೂರನ್ನು ಸ್ಥಾಪಿಸಿದ. ಹಳೆಯ ಪಟ್ಟಣಗಳ ಪುನರ್‌ನಿರ್ಮಾಣ ಹಾಗೂ ಹೊಸ ಪಟ್ಟಣಗಳ ಹುಟ್ಟು ಕ್ರಿ.ಶ. ಹತ್ತನೆಯ ಶತಮಾನದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ಕಂಡು ಬಂತು. ಇಲ್ಲಿ ಕೆಲವು ಉದಾಹರಣೆಗಳನ್ನಷ್ಟೇ ನೀಡಲಾಗಿದೆ.

ಮೇಲೆ ಹೆಸರಿಸಲಾದ ಅನೇಕ ಹೊಸ ಪಟ್ಟಣಗಳಲ್ಲಿ ಹೊಯ್ಸಳರ ಅವಧಿಗೆ ಸಂಬಂಧಪಟ್ಟವು ಅನೇಕ ಸಂಖ್ಯೆಯಲ್ಲಿವೆ. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ಅನೇಕ ಹಳ್ಳಿಗಳು ಪಟ್ಟಣಗಳಾಗಿ ಪರಿವರ್ತನೆಗೊಂಡವು. ಹೊಯ್ಸಳರ ಆಳ್ವಿಕೆಯ ಸಂದರ್ಭದಲ್ಲಿ ಕಂಡು ಬಂದ ಕೃಷಿಯ ವಿಸ್ತರಣೆ, ಹೆಚ್ಚುವರಿ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಹೊಸ ನಗರ ಕೇಂದ್ರಗಳ ಹುಟ್ಟಿಗೆ ಮೂಲ ಕಾರಣಗಳಾದವು. ಗ್ರಾಮೀಣ ಪ್ರದೇಶವನ್ನು ನಗರ ಪ್ರದೇಶವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಬೇರೆ ಬೇರೆ ವ್ಯವಸ್ಥೆಗಳು, ಹಿತಾಸಕ್ತಿಗಳು ನೇರವಾಗಿ ಭಾಗಿಗಳಾದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಹೊಯ್ಸಳ ಪ್ರಭುತ್ವವನ್ನು ಪ್ರತಿನಿಧಿಸುತ್ತಿದ್ದ ನಾಡಿನ ಅಧಿಕಾರಿಗಳು, ಹಳ್ಳಿಗಳನ್ನು ಪ್ರತಿನಿಧಿಸುತ್ತಿದ್ದ ನಾಡ ಮುಖಂಡರು ಹಾಗೂ ವ್ಯಾಪಾರಸ್ಥರನ್ನು ಪ್ರತಿನಿಧಿಸುತ್ತಿದ್ದ ವರ್ತಕ ಸಂಘಗಳು. ಇವರೆಲ್ಲರೂ ಸಭೆ ಸೇರಿ ಒಮ್ಮತದ ನಿರ್ಣಯಕ್ಕೆ ಬರುತ್ತಿದ್ದರು. ಹೊಯ್ಸಳರ ಅವಧಿಯಲ್ಲಿ ಭೂಮಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾನ ನೀಡಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಇದು ಊಳಿಗಮಾನ್ಯತೆಯ ಲಕ್ಷಣವನ್ನು ಸೂಚಿಸುತ್ತಾದರೂ, ಇದರಿಂದಾಗಿ ಕೃಷಿ ವಿಸ್ತರಣೆ ಗೊಂಡು ಹೆಚ್ಚುವರಿ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿತು. ಹೆಚ್ಚುವರಿ ಉತ್ಪಾದನೆಯೇ ಸಂತೆ ಹಾಗೂ ಮಾರುಕಟ್ಟೆಗಳ ಹುಟ್ಟಿಗೆ ಹಾಗೂ ವ್ಯಾಪಾರ ವಹಿವಾಟು ಚುರುಕು ಗೊಳ್ಳುವುದಕ್ಕೆ ಕಾರಣವಾಯಿತು.

ಕ್ರಿ.ಶ. ೧೪ನೆಯ ಶತಮಾನದಿಂದೀಚೆಗೆ ಕೃಷಿಯೇತರ ಚಟುವಟಿಕೆಗಳಲ್ಲಿ, ಉತ್ಪಾದನೆ ಯಲ್ಲಿ ಮತ್ತು ಕಸುಬುಗಳಲ್ಲಿ ಹೆಚ್ಚಳ ಕಂಡು ಬಂತು. ಇದು ವಿಜಯನಗರದ ಆಳ್ವಿಕೆಯ ಸಂದರ್ಭವಾಗಿದ್ದು, ಆ ಅವಧಿಯ ಆರ್ಥಿಕ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಸೂಚಿ ಸುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯಗಳಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸಲಾಯಿತು. ಬದಲಾದ ಅರ್ಥ ವ್ಯವಸ್ಥೆ ನಗರೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಿತು. ಒಳನಾಡು ಮತ್ತು ಸಾಗರದಾಚೆಯ ವ್ಯಾಪಾರದಲ್ಲಿ ಪ್ರಗತಿ ಕಂಡು ಬಂತು. ಹಿಂದಿದ್ದ ಬಾರ್ಟರ್ ಪದ್ಧತಿಗೆ ಬದಲಾಗಿ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಪದ್ಧತಿ ಜಾರಿಗೆ ಬಂತು. ಈ ಪದ್ಧತಿ ೧೩ನೆಯ ಶತಮಾನದಲ್ಲಿಯೂ ಇತ್ತು. ಕರ್ನಾಟಕದ ಆರ್ಥಿಕ ಪರಿವರ್ತನೆ ಮತ್ತು ನಗರಗಳ ಬೆಳವಣಿಗೆಗೆ ಸಂಬಂಧಿಸಿದಂತೆ ೧೩ನೆಯ ಶತಮಾನ ಬಹುಮಹತ್ವದ್ದಾಗಿ ಕಂಡುಬರುತ್ತದೆ. ಈ ಪರಿವರ್ತನೆ ಸುಮಾರು ೧೬-೧೭ನೆಯ ಶತಮಾನಗಳವರೆಗೂ ಮುಂದು ವರಿಯಿತು. ಯುರೋಪಿಯನ್ನರ ವ್ಯಾಪಾರ ಚುರುಕುಗೊಂಡ ಬಳಿಕ ನಗರೀಕರಣ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು.

ವಿಜಯನಗರದ ಆಳ್ವಿಕೆಯಲ್ಲಿ ಅರಸರು, ಸ್ಥಳೀಯ ವ್ಯವಹಾರಗಳನ್ನು ನೋಡಿ ಕೊಳ್ಳುತ್ತಿದ್ದ ಅಧಿಕಾರಿಗಳು, ವಿವಿಧ ಮಂಡಲಿಗಳು, ವೃತ್ತಿ ಸಂಘಗಳು ಹಾಗೂ ವರ್ತಕ ಸಮುದಾಯಗಳು ಸಂತೆಗಳನ್ನು ಮತ್ತು ಮಾರುಕಟ್ಟೆಗಳನ್ನು ಏರ್ಪಡಿಸುತ್ತಿದ್ದರು. ಇದು ಕೃಷಿಯೇತರ ಉತ್ಪಾದನೆ ಮತ್ತು ಚಟುವಟಿಕೆಗಳ ಬೆಳವಣಿಗೆಗೆ ಕಾರಣವಾಯಿತು. ಇದರಿಂದಾಗಿ ಅನೇಕ ಪ್ರದೇಶಗಳು ವಿಶೇಷ ಪ್ರಾಮುಖ್ಯತೆ ಪಡೆದು ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಕೇಂದ್ರಗಳಾಗಿ ಗುರುತಿಸಿಕೊಂಡವು. ವ್ಯಾಪಾರಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡವು. ವಿಜಯನಗರ ಪಟ್ಟಣ, ದ್ವಾರಸಮುದ್ರ, ಚಂದ್ರಗುತ್ತಿ, ಗುತ್ತಿ, ಆದೋನಿ, ಇಕ್ಕೇರಿ, ಪೆನುಕೊಂಡ, ಅಣ್ಣಿಗೇರಿ, ಶ್ರೀರಂಗಪಟ್ಟಣ, ಮಂಗಳೂರು, ಬಾರಕೂರು, ಹೊನ್ನಾವರ, ಅಂಕೋಲ, ಕಾರವಾರ ಮುಂತಾದವು ವಿಜಯನಗರ ಸಂದರ್ಭದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು. ಅದೇ ರೀತಿ ವಿಜಯನಗರದ ಆಳ್ವಿಕೆಯ ಸಂದರ್ಭದಲ್ಲಿಯೇ ಆಳ್ವಿಕೆ ನಡೆಸುತ್ತಿದ್ದ ಬಹಮನಿ ಮತ್ತು ಆದಿಲ್‌ಶಾಹಿಗಳು ಅನೇಕ ನಗರ ಕೇಂದ್ರಗಳ ಹುಟ್ಟಿಗೆ ಕಾರಣರಾದರು. ಬೀದರ್, ಗುಲ್ಬರ್ಗ, ಬಿಜಾಪುರ, ಗೋಲ್ಕೊಂಡ ರಾಯಚೂರು, ಸೋಲಾಪುರ, ಹುಬ್ಬಳ್ಳಿ ಮೊದಲಾದವು ಪ್ರಮುಖ ನಗರ ಆರ್ಥಿಕ ಕೇಂದ್ರ ಗಳಾಗಿದ್ದವು.

ಕ್ರಿ.ಶ. ೧೪ನೆಯ ಶತಮಾನದ ಬಳಿಕ ವ್ಯಾಪಾರ-ವಾಣಿಜ್ಯ ಪ್ರಧಾನವಾಗಿದ್ದ ನಗರ ಕೇಂದ್ರಗಳು ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸಿದವು. ಒಳನಾಡು ಮತ್ತು ಸಾಗರೋತ್ತರ ವ್ಯಾಪಾರ-ವಾಣಿಜ್ಯದಲ್ಲಿ ಉಂಟಾದ ಅಪಾರ ಹೆಚ್ಚಳ, ಸಂತೆಗಳು ಮತ್ತು ಮಾರುಕಟ್ಟೆಗಳ ವಿಸ್ತರಣೆ, ನಾಣ್ಯಗಳ ವ್ಯಾಪಕ ಚಲಾವಣೆ ಮುಂತಾದವು ಬಂದರು ಪಟ್ಟಣಗಳ ಅಭಿವೃದ್ದಿಗೆ ನೇರವಾಗಿ ಕಾರಣವಾದವು. ಅರೇಬಿಯಾ, ಪರ್ಷಿಯಾ ಮತ್ತು ಯುರೋಪಿನೊಂದಿಗಿನ ವ್ಯಾಪಾರ ಸಂಬಂಧಗಳು ನಗರ ಅರ್ಥ ವ್ಯವಸ್ಥೆಯ ಮೇಲೆ ಮಹತ್ತರ ಪರಿಣಾಮಗಳನ್ನು ಬೀರಿದವು. ಬಿಜಾಪುರ ಮತ್ತು ವಿಜಯನಗರಗಳು ತಮ್ಮ ವಿದೇಶಿ ವಸ್ತುಗಳ ಬೇಡಿಕೆಗಾಗಿ ಪೋರ್ಚುಗೀಸರನ್ನು ಹೆಚ್ಚಾಗಿ ಅವಲಂಬಿಸಿದ್ದವು. ಪೋರ್ಚುಗೀಸರು ಅರೇಬಿಯ ಮತ್ತು ಪರ್ಷಿಯ ದೇಶಗಳ ಕುದುರೆಗಳನ್ನು ಒದಗಿಸುತ್ತಿದ್ದರು. ವಿಜಯನಗರೋತ್ತರ ಯುಗದಲ್ಲಿ ಇದೇ ವಿದೇಶಿ ವ್ಯಾಪಾರ ವ್ಯಾಪಾರ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಯುರೋಪಿನ ದೇಶಗಳ ಹಿತಾಸಕ್ತಿಗಳು ಅನೇಕ ನಗರ ಕೇಂದ್ರಗಳ ಅವನತಿಗೆ ಹಾಗೂ ಏಳಿಗೆಗೆ ಕಾರಣವಾಯಿತು. ಪೋರ್ಚುಗೀಸರು, ಫ್ರೆಂಚರು, ಡಚ್ಚರು ಮತ್ತು ಬ್ರಿಟಿಷರು ವ್ಯಾಪಾರದಲ್ಲಿನ ಏಕಸ್ವಾಮ್ಯಕ್ಕಾಗಿ ಪರಸ್ಪರ ಹೋರಾಟ ನಡೆಸಿದರು. ಬಂದರು ಪಟ್ಟಣಗಳು ಇದರ ಲಾಭವನ್ನು ಸ್ವಲ್ಪಮಟ್ಟಿಗೆ ಪಡೆದುಕೊಂಡರೆ, ರಾಜಧಾನಿ ಪಟ್ಟಣಗಳು ಮೂಲೆ ಗುಂಪಾಗುವ ಅಪಾಯವನ್ನು ಎದುರಿಸಿದವು. ಮೈಸೂರು ಸುಲ್ತಾನರ ಆಳ್ವಿಕೆಯ ಸಂದರ್ಭದಲ್ಲಿ ಬಂದರು ಪಟ್ಟಣಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಬ್ರಿಟಿಷರು ಸಮುದ್ರಮಾರ್ಗದ ಮೇಲೆ ಹಿಡಿತವನ್ನು ಸಾಧಿಸಿರುವುದು ಹಾಗೂ ಬಂದರು ಪಟ್ಟಣಗಳನ್ನು ತಮ್ಮ ವ್ಯಾಪಾರಿ ಹಿತಾಸಕ್ತಿಗಳಿಗೆ ಬಳಸಿಕೊಂಡಿರುವುದು ಮೈಸೂರು ಸುಲ್ತಾನರು ಮಂಗಳೂರು, ಕಾರವಾರ ಮುಂತಾದ ಬಂದರು ಪಟ್ಟಣಗಳ ಮೇಲೆ ಹೆಚ್ಚಿನ ಗಮನವನ್ನು ಕೊಡುವಂತೆ ಮಾಡಿತು. ಹೀಗಾಗಿ ಚರಿತ್ರೆಯುದ್ದಕ್ಕೂ ನಗರ ಕೇಂದ್ರಗಳು ನಾನಾ ಕಾರಣಗಳಿಂದಾಗಿ ಅನೇಕ ರೀತಿಯ ಏರಿಳಿತಗಳಿಗೆ ಒಳಗಾದವು. ಹುಟ್ಟು, ಬೆಳವಣಿಗೆ, ಅವನತಿ ಹಾಗೂ ಮರುಹುಟ್ಟು (ಪುನರ್‌ನಿರ್ಮಾಣ) ನಗರ ಕೇಂದ್ರಗಳ ವಿಕಾಸದ ವಿವಿಧ ಹಂತಗಳಾಗಿ ಕಂಡು ಬರುತ್ತವೆ.