ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದಿಂದಲೇ ಬೆಳೆದು ಬಂದಿದ್ದ ವರ್ತಕ ಸಂಘಗಳು ಮತ್ತಷ್ಟು ಅಭಿವೃದ್ದಿಯನ್ನು ಹೊಂದಿದವು. ವರ್ತಕ ಸಂಘಗಳು ಕಾರ್ಯ ಸಮಿತಿಗಳನ್ನು ಹೊಂದಿರುತ್ತಿದ್ದವು. ಕಲ್ಯಾಣಿ ಚಾಲ್ಯುಕರು, ಕಲಚೂರಿಗಳು ಮತ್ತು  ಹೊಯ್ಸಳರ ಆಳ್ವಿಕೆಯ ಅವಧಿಗಳಲ್ಲಿ ವರ್ತಕ ಸಂಘಗಳು ಹೆಚ್ಚು ಪ್ರಭಾವಶಾಲಿಯಾಗಿ ಹಾಗೂ ವಿಸ್ತಾರವಾಗಿ ಬೆಳೆದವು. ವರ್ತಕ ಸಂಘಗಳು ತಮ್ಮ ಅಗತ್ಯಗಳನ್ನು ಅರಸರಿಗೆ ಒತ್ತಡ ಹೇರುವ ಮೂಲಕ ಹಾಗೂ ಜನಾಭಿಪ್ರಾಯವನ್ನು ಮೂಡಿಸುವ ಮೂಲಕ ಪೂರೈಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿದ್ದವು. ಅಯ್ಯಾವೊಳೆ ೫೦೦, ಸೆಟ್ಟಿ-ಬಣಂಜಿಗ, ಸೆಟ್ಟಿಗುತ್ತ, ನಕರ, ಮುಂಮುರಿದಂಡ, ವಡ್ಡ ವ್ಯವಹಾರಿ, ಗವರೆ, ಗಾತ್ರಿಗ, ನಾನಾದೇಶಿ, ಕೊತ್ತಳಿ ಮುಂತಾದ ಸಂಘಗಳು ಈ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದವು. ಇವುಗಳಲ್ಲಿ ಕೊತ್ತಳಿ ಸಂಘವು ಕುಶಲಕರ್ಮಿಗಳ ವೃತ್ತಿ ಸಂಘವಾಗಿತ್ತು. ಅದೇ ರೀತಿ ಸರ್ವಾರ್ಥಸಿದ್ದಿ ಆಚಾರಿ ಸಂಘ ಮತ್ತು ಸರಸ್ವತಿಗಣ ಸಂಘಗಳೂ ಕುಶಲಕರ್ಮಿ ಗಳದ್ದಾಗಿದ್ದವು. ಹೀಗಾಗಿ ಪ್ರತಿಯೊಂದು ವೃತ್ತಿಯವರೂ ತಮ್ಮದೇ ಆದ ಸಂಘಗಳನ್ನು ರಚಿಸಿಕೊಂಡಿದ್ದರು. ಉದಾಹರಣೆಗೆ, ಗಾಣಿಗರ ಗಾಣಿಗರೊಕ್ಕಲು, ಮಾಲೆಗಾರರ ಮಾಲೆಗಾರ ನಾಲ್ವತ್ತೊಕ್ಕಲು, ತೋಟಿಗರ ತೋಂಟಿಗರೈನೂರ್ವರು, ನೇಕಾರರ ಸಾಲೆ ಸಾಸಿರ್ವರು, ಕಂಚುಗಾರರ ಕಂಚುಗಾರಗೊತ್ತಳಿ, ಶಿಲ್ಪಿಗಳ ಸರಸ್ವತಿಗಣ, ಕಮ್ಮಾರರ ಕಮ್ಮಾರ್ ಕೊಳ್ತಿಲೆ, ಚಿಪ್ಪಿಗರ ಚಿಪ್ಪಿಗಗೊತ್ತಳಿ ಮುಂತಾದವು.

ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ಆಂತರಿಕ ಮತ್ತು ವಿದೇಶಿ ವ್ಯಾಪಾರಗಳೆರಡೂ ಚುರುಕಿನಿಂದ ಕೂಡಿತ್ತು. ಆಂತರಿಕ ವ್ಯಾಪಾರದ ಪ್ರದೇಶಗಳನ್ನು ಸಂತೆ, ಅಂಗಡಿ, ಪೇಟೆ, ಪಟ್ಟಣ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಸಂತೆಯು ಪ್ರಮುಖ ವ್ಯಾಪಾರ ವೇದಿಕೆಯಾಗಿತ್ತು. ವಾರಕ್ಕೊಮ್ಮೆ ಒಂದು ಕಡೆ ಸೇರಿ ವ್ಯಾಪಾರ ನಡೆಸುವ ವ್ಯವಸ್ಥೆ ಯನ್ನು ಸಂತೆ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಅದು ಒಂದು ದಿನಕ್ಕಷ್ಟೇ ಸೀಮಿತವಾದ ವ್ಯಾಪಾರವಾಗಿರುತ್ತಿತ್ತು. ಸಂತೆಗಳಲ್ಲಿ ಸ್ಥಳೀಯ ವ್ಯಾಪಾರಸ್ಥರಷ್ಟೇ ಅಲ್ಲದೆ ಹೊರಗಿನ ವ್ಯಾಪಾರಸ್ಥರೂ ವ್ಯಾಪಾರ ನಡೆಸುತ್ತಿದ್ದರು. ಕೆಲವೊಂದು ಸಂದರ್ಭಗಳಲ್ಲಿ ಸಂತೆಗಳೇ ಪಟ್ಟಣಗಳಾಗಿಯೂ ಪರಿವರ್ತನೆ ಹೊಂದುತ್ತಿದ್ದವು. ಟಿ. ನರಸೀಪುರ ತಾಲೂಕಿನ ಮೂಗೂರು ಎಂಬ ಪಟ್ಟಣವು ಈ ಹಿನ್ನೆಲೆಯಿಂದಲೇ ನಿರ್ಮಾಣಗೊಂಡಿತು. ಅದೇ ರೀತಿ ಮುಗುಳನಹಳ್ಳಿಯು ನಾನಾ ದೇಶಿ ಪಟ್ಟಣವಾಗಿ ಪರಿವರ್ತನೆಗೊಂಡಿತು. ಇಂಥ ಅನೇಕ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ವ್ಯಾಪಾರ ನಡೆಯುತ್ತಿದ್ದ ಇನ್ನೊಂದು ಪ್ರಮುಖ ಕೇಂದ್ರವೆಂದರೆ ಅಂಗಡಿ. ಸಂತೆಯಲ್ಲಿ ಬಯಲು ಅಂಗಡಿ, ಕಟ್ಟಿದ ಅಂಗಡಿಗಳಿದ್ದು ಸಂತೆಯ ದಿನ ಮಾತ್ರ ತೆರೆದಿರುತ್ತಿದ್ದರೆ, ಪೇಟೆ-ಪಟ್ಟಣಗಳಲ್ಲಿಯ ಕಟ್ಟಿದ ಮಳಿಗೆಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿದ್ದವು. ಬಟ್ಟೆ ಅಂಗಡಿ, ಹತ್ತಿ ಅಂಗಡಿ, ಭತ್ತದ ಅಂಗಡಿ, ಅಕ್ಕಸಾಲಿಗರ ಅಂಗಡಿ ಮುಂತಾದ ವಿವಿಧ ಅಂಗಡಿಗಳು ಇರುತ್ತಿದ್ದವು. ಈ ಎಲ್ಲಾ ಮಳಿಗೆಯವರು ಅಂಗಡಿದೆರೆ ಎನ್ನುವ ತೆರಿಗೆಯನ್ನು ಕೊಡಬೇಕಾಗಿತ್ತು. ಈ ವ್ಯಾಪಾರಿ ಮಳಿಗೆಗಳು ಪಟ್ಟಣದ ಒಳಭಾಗದಲ್ಲಿ ಬಿಡಿ ಬಿಡಿಯಾಗಿರುತ್ತಿದ್ದವು.

ಆಂತರಿಕ ವ್ಯಾಪಾರದೊಂದಿಗೆ ವಿದೇಶಿ ವ್ಯಾಪಾರವೂ ನಡೆಯುತ್ತಿತ್ತು. ಸಮುದ್ರ ವ್ಯಾಪಾರವು ಮುಖ್ಯವಾಗಿ ಮಂಗಳೂರು, ಹೊನ್ನಾವರ, ಭಟ್ಕಳ ಮುಂತಾದ ಬಂದರುಗಳ ಮೂಲಕ ನಡೆಯುತ್ತಿತ್ತು. ಶ್ರವಣಬೆಳ್ಗೊಳ, ಬೇಲೂರು, ದೋರಸಮುದ್ರ ಮುಂತಾದ ಪಟ್ಟಣಗಳ ವ್ಯಾಪಾರಸ್ಥರು ಸಮುದ್ರ ವ್ಯಾಪಾರದಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು ಎನ್ನುವುದು ಶಾಸನಗಳಿಂದ ತಿಳಿದು ಬರುತ್ತದೆ. ಚೀಣಾ, ಶ್ರೀಲಂಕಾ, ಕಾಂಬೋಡಿಯಾ, ಮಲಯಾ, ಸುಮಾತ್ರ, ಜಾವಾ, ಬರ್ಮಾ, ಟರ್ಕಿ, ಪರ್ಷಿಯಾ, ಅರೇಬಿಯಾ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಇಟ್ಟುಕೊಳ್ಳಲಾಗಿತ್ತು. ಕ್ರಿ.ಶ. ಏಳನೆಯ ಶತಮಾನದಿಂದ ಪರ್ಷಿಯನ್ನರು ಮತ್ತು ಅರಬ್ಬರು ವಿದೇಶಿ ವ್ಯಾಪಾರದಲ್ಲಿ ಪ್ರಮುಖ ಪಾತ್ರವಹಿಸಲಾ ರಂಭಿಸಿದರು. ಅವರು ಹೆಚ್ಚಾಗಿ ಕರಾವಳಿ ತೀರದಲ್ಲಿ ತಂಗುತ್ತಿದ್ದರು. ಇಬಾನ್ ಬತೂತಾ, ಯಾಕುತ್, ಬಾರ್ಬೊಸಾ ಮುಂತಾದ ಪ್ರವಾಸಿಗರು ವಿದೇಶಿ ವ್ಯಾಪಾರದ ಕುರಿತು ತಮ್ಮ ಕಥನಗಳಲ್ಲಿ ವಿವರಿಸಿದ್ದಾರೆ. ಅರಬ್ ಮತ್ತು ಪರ್ಷಿಯನ್ ವ್ಯಾಪಾರಸ್ಥರು ಕುದುರೆ ವ್ಯಾಪಾರ ದಲ್ಲಿ ಅಪಾರವಾದ ಲಾಭವನ್ನು ಪಡೆಯುತ್ತಿದ್ದರು.

ಬಂದರು ಪಟ್ಟಣಗಳ ಮೂಲಕ ವ್ಯಾಪಾರದ ವಸ್ತುಗಳು ವಿದೇಶಗಳಿಗೆ ರಫ್ತಾಗುತ್ತಿತ್ತು. ಸುಗಂಧ ದ್ರವ್ಯಗಳು, ಹತ್ತಿ, ಸಕ್ಕರೆ, ತೆಂಗಿನಕಾಯಿ, ಚರ್ಮ ಮೊದಲಾದ ವಸ್ತುಗಳು ಹೊರದೇಶಗಳಿಗೆ ಹೆಚ್ಚಾಗಿ ರಫ್ತಾಗುತ್ತಿದ್ದವು. ಕುದುರೆಗಳು, ಆನೆಗಳು, ಔಷಧಗಳು, ಖರ್ಜೂರ, ಸಿಲ್ಕ್, ಲೋಹಗಳು ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳ ಲಾಗುತ್ತಿತ್ತು. ಆಂತರಿಕ ಮತ್ತು ವಿದೇಶಿ ವ್ಯಾಪಾರಕ್ಕೆ ಅನುಕೂಲವಾಗುವುದಕ್ಕೋಸ್ಕರ ಉಗ್ರಾಣಗಳನ್ನು ನಿರ್ಮಿಸಲಾಗುತ್ತಿತ್ತು. ಇವುಗಳ ಮೇಲ್ವಿಚಾರಣೆಯನ್ನು ಪಟ್ಟಣಸ್ವಾಮಿ, ಮಂಡಲಸ್ವಾಮಿ ಮತ್ತು ನಾಡಸ್ವಾಮಿಗಳು ಮಾಡುತ್ತಿದ್ದರು. ಈ ಅಧಿಕಾರಿಗಳು ವ್ಯಾಪಾರದ ಮೂಲಕ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುವ ಕೆಲಸವನ್ನು ಮಾಡುತ್ತಿದ್ದರು.

ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ವ್ಯಾಪಾರ-ವಾಣಿಜ್ಯ, ವರ್ತಕರು ಮತ್ತು ವರ್ತಕ ಸಂಘಗಳು ನಗರ ಅರ್ಥ ವ್ಯವಸ್ಥೆಯಲ್ಲಿ ವಹಿಸಿದಷ್ಟೇ ಮಹತ್ವದ ಪಾತ್ರವನ್ನು ಕುಶಲಕರ್ಮಿಗಳೂ ವಹಿಸಿದ್ದರು. ಕಮ್ಮಾರರು, ಬಡಗಿಗಳು, ಅಕ್ಕಸಾಲಿಗರು, ಶಿಲ್ಪಿಗಳು ಮೊದಲಾದವರು ಅಂದಿನ ಪ್ರಮುಖ ಕುಶಲಕರ್ಮಿಗಳಾಗಿದ್ದರು. ಅವರೆಲ್ಲರೂ ತಮ್ಮ ಹಿತರಕ್ಷಣೆಗೋಸ್ಕರ ವೃತ್ತಿ ಸಂಘಗಳನ್ನು ರಚಿಸಿಕೊಂಡಿದ್ದರು. ಮರದ ಕೆಲಸ, ಮಡಕೆ  ತಯಾರಿಕೆ, ಆಭರಣಗಳ ತಯಾರಿಕೆ, ಗಣಿಗಾರಿಕೆ, ಯುದ್ಧೋಪಕರಣಗಳ ತಯಾರಿಕೆ, ಮನೆ ಬಳಕೆ ಸಾಮಾಗ್ರಿಗಳ ತಯಾರಿಕೆ ಮುಂತಾದ ಕೈಗಾರಿಕೆಗಳು ನಗರ ಅರ್ಥ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವಹಿಸಿದವು. ವ್ಯಾಪಾರ-ವಾಣಿಜ್ಯ ಚುರುಕುಗೊಳ್ಳುವುದಕ್ಕೆ ಕುಶಲಕರ್ಮಿ ಗಳ ಉತ್ಪಾದನೆ ಸಹಕಾರಿಯಾಯಿತು.

ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಕೃಷಿಯೇತರ ಚಟುವಟಿಕೆಗಳು ಗಟ್ಟಿಯಾಗಿ ಕಾಣಿಸಿಕೊಳ್ಳಲಾರಂಭಿಸಿದವು. ನಗರ ಅರ್ಥ ವ್ಯವಸ್ಥೆ ಒಂದು ಮುಖ್ಯ ಆರ್ಥಿಕ ಪರಿವರ್ತನೆಯಾಗಿ ರೂಪುಗೊಳ್ಳತೊಡಗಿತು. ಕೈಗಾರಿಕೆ ಮತ್ತು ವ್ಯಾಪಾರ-ವಾಣಿಜ್ಯಗಳಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸಲಾಯಿತು. ಮಾರುಕಟ್ಟೆ ಕೇಂದ್ರಿತವಾದ ಅರ್ಥ ವ್ಯವಸ್ಥೆ ಪ್ರಧಾನ ಅಂಶವಾಗಿ ಕಂಡು ಬಂತು. ಇದನ್ನೇ ಬಂಡವಾಳಗಾರಿಕೆಯ ಅರ್ಥ ವ್ಯವಸ್ಥೆ ಎಂಬುದಾಗಿಯೂ ಕರೆಯಲಾಗಿದೆ. ಮಾರುಕಟ್ಟೆಗಾಗಿ ಅಥವಾ ವಿನಿಮಯಕ್ಕಾಗಿ ಉತ್ಪಾದನೆ ಆರಂಭಗೊಂಡಿತು. ಉತ್ಪಾದನೆಯ ತಾಂತ್ರಿಕತೆಯಲ್ಲಿಯೂ ಬದಲಾವಣೆಗಳು ಕಾಣಿಸಿ ಕೊಂಡವು. ಹತ್ತಿ ನೂಲುವುದು, ಬಟ್ಟೆ ನೇಯುವುದು, ಎಣ್ಣೆ ತೆಗೆಯುವುದು, ಸಕ್ಕರೆ ಮತ್ತು ಬೆಲ್ಲ ತಯಾರಿಸುವುದು, ಇಟ್ಟಿಗೆ ತಯಾರಿಕೆ, ಉಪ್ಪು ತಯಾರಿಕೆ, ಅದಿರು ಕರಗಿಸಿ ಕಬ್ಬಿಣ ತಯಾರಿಸುವುದು, ಮರಗೆಲಸ, ಗೊಂಬೆಗಳ ತಯಾರಿಕೆ, ಆಭರಣಗಳ ತಯಾರಿಕೆ, ಯುದ್ಧದ ಆಯುಧಗಳ ತಯಾರಿಕೆ, ಮನೆ ಬಳಕೆಯ ವಸ್ತುಗಳ ತಯಾರಿಕೆ ಮುಂತಾದ ಕೈಗಾರಿಕೆಗಳು ಸ್ಥಳೀಯ ಮಾರುಕಟ್ಟೆಯನ್ನಷ್ಟೇ ಕೇಂದ್ರವನ್ನಾಗಿಟ್ಟುಕೊಳ್ಳದೆ ವಿದೇಶಿ ವ್ಯಾಪಾರದ ದೃಷ್ಟಿಯಿಂದಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು.

ಕೃಷಿಯೇತರ ಉತ್ಪಾದನೆಯ ಹೆಚ್ಚಳ, ಸಂತೆ ಮತ್ತು ಮಾರುಕಟ್ಟೆ ಕೇಂದ್ರಿತ ವ್ಯಾಪಾರ ಒಳನಾಡ ಹಾಗೂ ಸಾಗರೋತ್ತರ ವಾಣಿಜ್ಯ ವಹಿವಾಟಿನ ವೃದ್ದಿಗೆ ಕಾರಣವಾಯಿತು. ಸಂತೆಗಳು ಮತ್ತು ಮಾರುಕಟ್ಟೆಗಳು ಬಹುಬೇಗ ದೊಡ್ಡ ವ್ಯಾಪಾರ ಕೇಂದ್ರಗಳಾಗಿ ಬೆಳೆದವು ಹಾಗೂ ಅವುಗಳ ಸುತ್ತ ನೂತನ ಪಟ್ಟಣಗಳು ಮತ್ತು ನಗರ ಕೇಂದ್ರಗಳು ಹುಟ್ಟಿಕೊಂಡವು. ಇದು ನಗರ ಅರ್ಥ ವ್ಯವಸ್ಥೆಯನ್ನು ಬೆಳೆಯಿಸಿತು. ಬಂದರು ಪಟ್ಟಣಗಳು ವಿದೇಶಿ ವ್ಯಾಪಾರದಲ್ಲಿ ಪ್ರಮುಖ ಪಾತ್ರವಹಿಸಿದವು. ಗೋವಾ, ಕಾರವಾರ, ಅಂಕೋಲಾ, ಮಿರ್ಜಾನ್, ಹೊನ್ನಾವರ, ಭಟ್ಕಳ, ಬಸ್ರೂರು, ಬಾರಕೂರು, ಮಂಗಳೂರು, ಮಂಜೇಶ್ವರ, ಕುಂಬ್ಳೆ, ನೀಲೇಶ್ವರ ಮುಂತಾದವು ಪ್ರಮುಖ ಬಂದರು ಪಟ್ಟಣಗಳಾಗಿದ್ದವು. ಇವು ವಿಜಯನಗರ ಪೂರ್ವ, ವಿಜಯನಗರ ಹಾಗೂ ವಿಜಯನಗರೋತ್ತರ ಸಂದರ್ಭಗಳಲ್ಲೂ ಬಂದರು ಪಟ್ಟಣಗಳೇ ಆಗಿದ್ದು ನಗರ ಅರ್ಥ ವ್ಯವಸ್ಥೆ ರೂಪುಗೊಳ್ಳುವಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿದವು.

ಕಾಳಿ ನದಿಯ ದಕ್ಷಿಣ ದಂಡೆಯಲ್ಲಿರುವ ಕಾರವಾರವು ಪ್ರಮುಖ ಬಂದರು ಪಟ್ಟಣ ವಾಗಿತ್ತು. ಇದು ಕೃಷಿ ಸಂಬಂಧಿ ಸರಕುಗಳ ಸಾಗಾಣಿಕೆಯ ಕೇಂದ್ರವಾಗಿತ್ತು. ಸುಮಾರು ಕ್ರಿ.ಶ. ೧೬ನೆಯ ಶತಮಾನದ ನಂತರ ಕಾರವಾರವು ಪ್ರಮುಖ ಕೃಷಿ ಸಂಬಂಧಿ ವ್ಯಾಪಾರ ಕೇಂದ್ರವಾಗಿ ರೂಪುಗೊಂಡಿತು. ಕಾರವಾರವು ಬ್ರಿಟನ್‌ನೊಂದಿಗೆ ನೇರ ವ್ಯಾಪಾರ ಸಂಬಂಧ ವನ್ನು ಹೊಂದಿತ್ತು. ಕಾರವಾರ ಬಂದರಿನಲ್ಲಿ ವ್ಯಾಪಾರಕ್ಕಾಗಿ ಬರುತ್ತಿದ್ದ ಪ್ರಮುಖ ಕೃಷಿ ಉತ್ಪನ್ನಗಳೆಂದರೆ ಅಕ್ಕಿ, ಕರಿಮೆಣಸು, ಏಲಕ್ಕಿ, ತೆಂಗಿನಕಾಯಿ ಮುಂತಾದವು. ಕಾರವಾರ  ಪ್ರದೇಶದಲ್ಲಿ ಬೆಳೆಯುತ್ತಿದ್ದ ಕರಿಮೆಣಸಿಗೆ ಯುರೋಪಿನ ದೇಶಗಳಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿತ್ತು. ಪಂಚಗಂಗಾವಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಪ್ರದೇಶದಲ್ಲಿರುವ ಗಂಗೊಳ್ಳಿಯು ಕೃಷಿ ಉತ್ಪನ್ನಗಳಾದ ಅಕ್ಕಿ, ಕಬ್ಬು, ತೆಂಗು, ವೀಳ್ಯದೆಲೆ, ಗೇರುಬೀಜ, ಕರಿಮೆಣಸು ಮುಂತಾದವುಗಳ ವ್ಯಾಪಾರ ಕೇಂದ್ರವಾಗಿತ್ತು. ಕ್ರಿ.ಶ. ೧೭ನೆಯ ಶತಮಾನದ ಪ್ರಥಮಾರ್ಧದಲ್ಲಿ ಪೋರ್ಚುಗೀಸರು ತಮ್ಮ ವ್ಯಾಪಾರ ಕೇಂದ್ರವನ್ನು ಗಂಗೊಳ್ಳಿಯಲ್ಲಿ ತೆರೆದರು.

ವಾರಾಹಿ ನದಿ ದಂಡೆಯಲ್ಲಿರುವ ಬಸ್ರೂರು ವಿದೇಶಿ ವ್ಯಾಪಾರದಲ್ಲಿ ಹೆಸರುವಾಸಿಯಾದ ಪಟ್ಟಣ. ಇದು ಅರೇಬಿಯಾ, ಪರ್ಷಿಯಾ, ಗ್ರೀಸ್, ರೋಮ್, ಚೀಣಾ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಬಸ್ರೂರು ಪಟ್ಟಣದ ಒಳನಾಡಿನಲ್ಲಿ ಅಕ್ಕಿ, ತೆಂಗು, ಕರಿಮೆಣಸು, ಕಬ್ಬು, ಶುಂಠಿ, ಲವಂಗ, ದಾಲಚೀನಿ ಮುಂತಾದ ಕೃಷಿ ಉತ್ಪನ್ನಗಳನ್ನು ಬೆಳೆಯಲಾಗುತ್ತಿತ್ತು. ಕ್ರಿ.ಶ. ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಬಸ್ರೂರಿನಿಂದ ಹಡಗುಗಳು ಕೃಷಿ ಉತ್ಪನ್ನಗಳನ್ನು ತುಂಬಿಸಿಕೊಂಡು ಮಸ್ಕತ್, ಏಡನ್ ಮತ್ತು ಆರ್ಮುಜ್‌ಗಳಿಗೆ ಹೋಗುತ್ತಿತ್ತು. ಪೋರ್ಚುಗೀಸರು ಬಸ್ರೂರಿನಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ೧೬ನೆಯ ಶತಮಾನದ ಕೊನೆಯ ದಶಕದಲ್ಲೂ, ಡಚ್ಚರು ೧೭ನೆಯ ಶತಮಾನದ  ಮಧ್ಯದಲ್ಲೂ ತೆರೆದರು. ಡಚ್ಚರು ಬಸ್ರೂರಿನಲ್ಲಿ ಅಕ್ಕಿ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಹೊಂದಿದ್ದರು. ಆದರೆ ೧೮ನೆಯ ಶತಮಾನದ ಕೊನೆಯ ವೇಳೆಗೆ ಬಸ್ರೂರು ನೈಸರ್ಗಿಕ ಕಾರಣಗಳಿಂದಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಬಸ್ರೂರಿನಲ್ಲಿ ಅರಬರು, ಮಾಪಿಳ್ಳೆಯವರು, ದ್ವೀಪವಾಸಿಗಳು ಮತ್ತು ಮಲಯಾಳಿಗಳು ಪಾಯಿದೋಣಿ, ಮಂಜಿ, ಪಟ್ಟಮಾರ್‌ಗಳ ಮುಖಾಂತರ ವ್ಯಾಪಾರ ನಡೆಸುತ್ತಿದ್ದರು. ಗೌಡ ಸಾರಸ್ವತರು, ಖಾರ್ವಿಗಳು, ಮುಸ್ಲಿಮರು, ಅರಬರು, ಬಣಜಿಗರು ಮುಂತಾದವರು ಬಸ್ರೂರಿನ ಪ್ರಮುಖ ವರ್ತಕರು. ಹಲರು, ಸೆಟ್ಟಿಕಾರ, ನಖರ ಹಾಗೂ ಹಂಜಮಾನ ಬಸ್ರೂರಿನ ಪ್ರಮುಖ ವರ್ತಕ ಸಂಘಗಳು.

ಹೊನ್ನಾವರದಿಂದ ಅಕ್ಕಿಯನ್ನು ಮಲಬಾರಿಗೆ ರಫ್ತು ಮಾಡಲಾಗುತ್ತಿತ್ತು. ಮಲಬಾರಿನ ವರ್ತಕರು ಹಡಗುಗಳ ಮೂಲಕ ಅಕ್ಕಿಯನ್ನು ಮಲಬಾರಿಗೆ ಕೊಂಡೊಯ್ಯುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮಲಬಾರಿ ವರ್ತಕರು ತೆಂಗು, ತೆಂಗಿನೆಣ್ಣೆ, ಬೆಲ್ಲ ಮುಂತಾದವುಗಳನ್ನು ಹೊನ್ನಾವರದಲ್ಲಿ ಮಾರಾಟ ಮಾಡುತ್ತಿದ್ದರು. ಆಡೆನ್ (ಕೆಂಪು ಸಮುದ್ರ) ಮತ್ತು ಸೊಪಾಲಾ (ಪೂರ್ವ ಆಫ್ರಿಕಾ)ದಿಂದ ವ್ಯಾಪಾರಿ ಹಡಗುಗಳು ಅಕ್ಕಿಗಾಗಿ ಹೊನ್ನಾವರಕ್ಕೆ ಬರುತ್ತಿದ್ದವು. ಅದೇ ರೀತಿ ಚೀಣಾ, ಆರ್ಮುಜ್ ಮುಂತಾದ ದೇಶಗಳೊಂದಿಗೂ ವ್ಯಾಪಾರ ಸಂಪರ್ಕ ಇತ್ತು. ಪೋರ್ಚುಗೀಸರು ವ್ಯಾಪಾರದಲ್ಲಿ ಹಿಡಿತವನ್ನು ಸಾಧಿಸುವುದಕ್ಕೋಸ್ಕರ ಅನೇಕ ಬಾರಿ ಹೊನ್ನಾವರದ ಮೇಲೆ ದಾಳಿ ನಡೆಸಿದರು. ಪೋರ್ಚುಗೀಸರು ಹೊನ್ನಾವರದಿಂದ ಮುಖ್ಯವಾಗಿ ಕರಿಮೆಣಸನ್ನು ಖರೀದಿಸುತ್ತಿದ್ದರು. ಅಕ್ಕಿ, ಕರಿಮೆಣಸು, ಕಬ್ಬು, ಶ್ರೀಗಂಧ, ವೀಳ್ಯದೆಲೆ, ತೆಂಗು ಮುಂತಾದವು. ವ್ಯಾಪಾರ ವಹಿವಾಟಿನ ಪ್ರಮುಖ ವಸ್ತುಗಳಾಗಿದ್ದವು. ವಿಜಯನಗರದ ಅರಸರು, ಪೋರ್ಚುಗೀಸರು ಮತ್ತು ಡಚ್ಚರು ಕ್ರಿ.ಶ. ೧೪ ರಿಂದ ೧೬,  ೧೬ ಮತ್ತು ೧೮ನೆಯ ಶತಮಾನಗಳಲ್ಲಿ ಕ್ರಮವಾಗಿ ಹೊನ್ನಾವರದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರು.

ಕರ್ನಾಟಕ ಕರಾವಳಿಯ ಪ್ರಮುಖ ಐತಿಹಾಸಿಕ ಕೇಂದ್ರವಾದ ಮಂಗಳೂರು ಪ್ರಾಚೀನ ಕಾಲದಿಂದಲೂ ವ್ಯಾಪಾರದ ಮೂಲಕ ಗುರುತಿಸಿಕೊಂಡ ಬಂದರು ಪಟ್ಟಣ. ಕರ್ನಾಟಕದ ವಿವಿಧ ಸಣ್ಣ-ದೊಡ್ಡ ಅರಸುಮನೆತನಗಳ ವ್ಯಾಪಾರಿ ಹಿತಾಸಕ್ತಿಗಳಿಗೆ ವೇದಿಕೆಯಾಗಿದ್ದ ಪಟ್ಟಣ. ಪರ್ಷಿಯನ್ನರು, ಅರೇಬಿಯನ್ನರು ಹಾಗೂ ಯುರೋಪಿಯನ್ನರು ಮಂಗಳೂರಿನ ಮೂಲಕ ತಮ್ಮ ನೆಲೆಗಳನ್ನು ಕರ್ನಾಟಕದಲ್ಲಿ ಕಂಡುಕೊಂಡರು. ಮಂಗಳೂರನ್ನು ‘ಪಶ್ಚಿಮದ ದೇಶಗಳನ್ನು ನೋಡುವ ಕಿಟಕಿ’ ಎಂಬುದಾಗಿ ಕರೆಯಲಾಗಿದೆ. ಗುರುಪುರ ಮತ್ತು ನೇತ್ರಾವತಿ ನದಿಗಳು ಅರಬ್ಬಿ ಸಮುದ್ರವನ್ನು ಸೇರುವ ಪ್ರದೇಶದಲ್ಲಿ ಈ ಪಟ್ಟಣ ನೆಲೆಗೊಂಡಿದೆ. ವಿಜಯನಗರದ ಅರಸರ ಕಾಲದಲ್ಲಿ ಮಂಗಳೂರು ಮಂಗಳೂರು ರಾಜ್ಯದ ಕೇಂದ್ರವಾಗಿತ್ತು. ಆಡಳಿತ ನಡೆಸಲು ಅಲ್ಲಿ ರಾಜ್ಯಪಾಲರುಗಳಿರುತ್ತಿದ್ದರು. ಇಬನ್‌ಬತೂತ, ಬಾರ್ಬೋಸಾ, ವರ್ತೆಮಾ, ಫ್ರೆಡರಿಕ್, ಡಲ್ಲಾ ವೆಲ್ಲೆ ಮುಂತಾದ ವಿದೇಶಿ ಪ್ರವಾಸಿಗರ ವರದಿಗಳು ಕ್ರಿ.ಶ. ೧೪ ರಿಂದ ೧೭ನೆಯ ಶತಮಾನದವರೆಗಿನ ಮಂಗಳೂರಿನ ವ್ಯಾಪಾರ-ವಾಣಿಜ್ಯದ ಬಗ್ಗೆ ಮಾಹಿತಿ ನೀಡುತ್ತವೆ.

ಮಂಗಳೂರಿನಲ್ಲಿ ಹಂಜಮಾನ ಅಥವಾ ನಗರ ಹಂಜಮಾನ ಎನ್ನುವ ವರ್ತಕ ಸಂಘವಿತ್ತು. ಇದೊಂದು ಪರ್ಷಿಯಾದ ಮುಸ್ಲಿಂ ವರ್ತಕ ಸಂಘ. ಇತರ ಸಂಘಗಳೆಂದರೆ, ಸೆಟ್ಟಿಕಾರ, ಬಳಂಜು, ನಾನಾದೇಶಿ, ಗವರೆ, ನಖರ ಮುಂತಾದವು. ಮಂಗಳೂರಿನಿಂದ ಕೃಷಿ ಉತ್ಪನ್ನಗಳಾದ ಅಕ್ಕಿ, ಕರಿಮೆಣಸು, ತೆಂಗು, ಶ್ರೀಗಂಧ, ಏಲಕ್ಕಿ, ಕಬ್ಬು ಮುಂತಾದ ವಸ್ತುಗಳನ್ನು ಸೂರತ್, ಬಂಗಾಳ, ಕಲ್ಲಿಕೋಟೆ, ಮಸ್ಕತ್, ಆರ್ಮುಜ್, ಮಾಲ್ಡ್‌ವ್ಸ್, ದ್ವೀಪಗಳು, ಚೀಣಾ ಮುಂತಾದ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಕ್ರಿ.ಶ. ೧೬ನೆಯ ಶತಮಾನದಿಂದ ಮೈಸೂರು ಸುಲ್ತಾನರ ಕಾಲದವರೆಗೆ ಪೋರ್ಚುಗೀಸರ ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿಗಳಿಗೆ ಮಂಗಳೂರು ವೇದಿಕೆಯಾಗಿ ಬಳಸಲ್ಪಟ್ಟಿತು. ಮಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಸ್ಥಳೀಯ ವರ್ತಕರೆಂದರೆ, ಬಣಜಿಗರು, ಲೊಂಬಾರ್ಡಿಗಳು, ಪಾರ್ಸಿಗಳು, ಮಾಪಿಳ್ಳೆಗಳು, ಗೌಡ ಸಾರಸ್ವತರು ಮುಂತಾದವರು. ವಿದೇಶಿ ವರ್ತಕರಲ್ಲಿ ಅರೇಬಿಯನ್ನರು, ಪರ್ಷಿಯನ್ನರು ಹಾಗೂ ಯುರೋಪಿಯನ್ನರು ಪ್ರಮುಖರು. ಟಿಪ್ಪುವಿನ ಪತನದ ಬಳಿಕ ಮಂಗಳೂರು ಸಂಪೂರ್ಣವಾಗಿ ಬ್ರಿಟಿಷರ ಅಧೀನಕ್ಕೆ ಒಳಪಟ್ಟಿತು.

ಕ್ರಿ.ಶ. ೧೪ ರಿಂದ ೧೮ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ರಫ್ತು ಮಾಡಲಾಗುತ್ತಿದ್ದ ಪ್ರಮುಖ ವಸ್ತುಗಳೆಂದರೆ, ಅಕ್ಕಿ, ಕರಿಮೆಣಸು, ಸಾಂಬಾರ ಪದಾರ್ಥಗಳು, ಶುಂಠಿ, ಸಕ್ಕರೆ, ಬಟ್ಟೆ, ಶ್ರೀಗಂಧ, ತೇಗ, ಕೇಸರಿ, ನೀಲಿ, ವೈದ್ಯಕೀಯ ಮೂಲಿಕೆಗಳು ಮುಂತಾದವು ಆಮದು ಮಾಡಿಕೊಳ್ಳಲಾಗುತ್ತಿದ್ದ ವಸ್ತುಗಳಲ್ಲಿ ಚಿನ್ನ, ಮುತ್ತು, ಹವಳ, ಕರ್ಪೂರ, ಸೀಸ, ತವರ, ಕಬ್ಬಿಣ, ಹಿತ್ತಾಳೆ, ಪಾದರಸ, ಗಾಜು, ಕಾಗದ, ಬಣ್ಣಗಳು, ರೇಷ್ಮೆ, ಕುದುರೆಗಳು, ಆನೆಗಳು, ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು ಮುಖ್ಯವಾದವು. ಆಂತರಿಕ ವ್ಯಾಪಾರದ ಮುಖ್ಯವಸ್ತು ಗಳೆಂದರೆ ಅಕ್ಕಿ, ರಾಗಿ, ಗೋಧಿ, ಜೋಳ, ಬಾರ್ಲಿ, ಸಾವೆ, ಕಡಲೆ, ಎಳ್ಳು, ಕುಸುಬೆ, ಹೆಸರು, ಉದ್ದು, ತೊಗರಿ, ಸಕ್ಕರೆ, ತುಪ್ಪ, ಉಪ್ಪು, ಬೆಲ್ಲ, ಅಡಕೆ, ತೆಂಗು, ವೀಳ್ಯದೆಲೆ, ಮೆಣಸು, ಅರಶಿನ, ಈರುಳ್ಳಿ, ಸಾಸಿವೆ, ಜೀರಿಗೆ, ಮೆಂತ್ಯ, ಕಬ್ಬು, ಹತ್ತಿ, ಹತ್ತಿನೂಲು, ಹತ್ತಿ ಬಟ್ಟೆ, ಗೋಣಿಚೀಲಗಳು, ಬಣ್ಣ ಕೊಡುವ ವಸ್ತುಗಳು, ಕಬ್ಬಿಣ, ಸೀಸ, ತವರ, ತಾಮ್ರ ಮುಂತಾದವು. ವ್ಯಾಪಾರ-ವಾಣಿಜ್ಯದಲ್ಲಿ ತೊಡಗಿದ್ದ ವರ್ತಕರಲ್ಲಿ ಸೆಟ್ಟಿಗಳು, ಬಣಜಿಗರು, ಪರ್ಷಿಯನ್ನರು, ಅರೇಬಿಯನ್ನರು, ಮಾಪಿಳ್ಳೆಗಳು, ದಕ್ಕನಿಗಳು, ನವಾಯತರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು, ಕೊಂಕಣಿಗಳು ಮತ್ತು ಗುಜರಾತಿಗಳು ಪ್ರಮುಖರು. ವರ್ತಕ ಸಂಘಗಳಲ್ಲಿ ಬಣಜಿಗರು, ವೀರ ಬಣಜಿಗರು, ಸಾಲುಮೂಲೆ ಬಣಜಿಗರು, ನಾನಾದೇಶಿಗಳು, ಉಭಯ-ನಾನಾದೇಶಿಗರು, ನಖರರು, ಸೆಟ್ಟಿಗಳು, ಸೆಟ್ಟಿಗುಟ್ಟರು, ನಗರ ಹಂಜಮಾನರು ಮುಂತಾದವು ಮುಖ್ಯವಾಗಿದ್ದವು. ಈ ಅವಧಿಯಲ್ಲಿ ವ್ಯಾಪಾರ ವಾಹಿವಾಟಿನಲ್ಲಿ ನಿರತವಾಗಿದ್ದ ಬಂದರು ಪಟ್ಟಣಗಳೆಂದರೆ, ಗೋವಾ, ಅಂಕೋಲಾ, ಹೊನ್ನಾವರ, ಭಟ್ಕಳ, ಬಸ್ರೂರು, ಬಾರಕೂರು, ಮಂಗಳೂರು, ಮಂಜೇಶ್ವರ, ಕುಂಬ್ಳೆ, ನೀಲೇಶ್ವರ ಮತ್ತು ಕಾಸರಗೋಡು. ಕರ್ನಾಟಕವು ಆಮದು-ರಫ್ತು ವ್ಯಾಪಾರ ನಡೆಸುತ್ತಿದ್ದ ದೇಶಗಳಲ್ಲಿ ಪರ್ಷಿಯ, ಅರೇಬಿಯ, ಯೆಮನ್, ಚೈನಾ, ಮಾಲ್ಡೀವ್ಸ್, ಮೆಕ್ಕಾ, ಓರ್ಮಜ್, ಏಡನ್, ಮಲಕ್ಕಾ, ಸುಮಾತ್ರಾ, ಪೋರ್ಚುಗಲ್, ಬ್ರಿಟನ್ ಮುಖ್ಯವಾದವು.

ಬಹಮನಿಗಳ ಮತ್ತು ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಕುಶಲಕಲೆಗಳು ಪ್ರಾಧಾನ್ಯತೆಯನ್ನು ಪಡೆದುಕೊಂಡವು. ವಿಜಯನಗರದ ಅರಸರಂತೆ ಬಹಮನಿಗಳು ಮತ್ತು ಆದಿಲ್‌ಶಾಹಿಗಳು ಬಂದರು ಪಟ್ಟಣಗಳ ಮೂಲಕ ವಿದೇಶಿ ವ್ಯಾಪಾರವನ್ನು ನಡೆಸುತ್ತಿದ್ದರು. ಬಹಮನಿಗಳ ಕಾಲದಲ್ಲಿ ಪರ್ಷಿಯ, ಟರ್ಕಿ, ಅರೇಬಿಯ ಮತ್ತು ಮಧ್ಯ ಏಷ್ಯಗಳಿಂದ ವಿದೇಶಿಯರು ವ್ಯಾಪಾರದ ಉದ್ದೇಶದಿಂದ ಬರುತ್ತಿದ್ದರು. ಅವರೆಲ್ಲರೂ ನಗರಗಳಲ್ಲಿ ತಂಗುತ್ತಿದ್ದರು. ಬಿಜಾಪುರ, ಬೀದರ್, ಅಹಮದ್‌ನಗರ ಮತ್ತು ಗೋಲ್ಕೊಂಡಗಳಲ್ಲಿ ವಿದೇಶಿ ವರ್ತಕರನ್ನು ಹೆಚ್ಚಾಗಿ ಇರಿಸಲಾಗುತ್ತಿತ್ತು. ಗೋವಾ, ಚೌಲ್, ಸೋಲಾಪುರ, ರಾಯಚೂರು, ಬೆಂಗಳೂರು, ಹುಬ್ಬಳ್ಳಿ ಮೊದಲಾದ ಪಟ್ಟಣಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಬೆಳೆದವು. ಆಗ ಪ್ರಚಲಿತವಿದ್ದ ಕೃಷಿ ಉತ್ಪನ್ನಗಳೆಂದರೆ ಅಕ್ಕಿ, ಕಬ್ಬು, ಮೆಣಸು, ಜೋಳ, ಮೆಕ್ಕೆಜೋಳ, ಹುಣಿಸೆ ಹಣ್ಣು, ಸಾಸಿವೆ, ಬೇಳೆಕಾಳುಗಳು, ಸಾಂಬಾರ ಪದಾರ್ಥಗಳು ಮುಂತಾದವು. ಕೈಗಾರಿಕೋತ್ಪನ್ನ ವಸ್ತುಗಳಲ್ಲಿ ಹತ್ತಿಬಟ್ಟೆ, ರೇಷ್ಮೆ, ಚರ್ಮದ ವಸ್ತುಗಳು, ದಂತದ ಕೆತ್ತನೆಗಳು, ಆಭರಣಗಳು ಮುಖ್ಯವಾದವು. ಕುದುರೆಗಳು, ಮುತ್ತುಗಳು, ಕಚ್ಚಾರೇಷ್ಮೆ ಮೊದಲಾದ ಸ್ಥಳೀಯವಾಗಿ ಸಿಗದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

ಹತ್ತಿ ಮತ್ತು ರೇಷ್ಮೆ ಬಟ್ಟೆಗಳನ್ನು ನೇಯುವುದು ಅಭಿವೃದ್ದಿಯಲ್ಲಿದ್ದ ಉದ್ಯಮವಾಗಿತ್ತು. ನೇಕಾರರಿಗೆ ಬೇಕಾಗಿದ್ದ ರೇಷ್ಮೆಯನ್ನು ಚೀಣಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಹತ್ತಿಬಟ್ಟೆಗಳಲ್ಲಿ ಕ್ಯಾಲಿಕೊ ಮತ್ತು ಮಸ್ಲಿನ್ ಹೆಸರುವಾಸಿಯಾಗಿದ್ದವು. ಗಣಿಗಾರಿಕೆ ಅಂದಿನ ಅರ್ಥ ವ್ಯವಸ್ಥೆಯ ಮೇಲೆ ಮಹತ್ತರ ಪ್ರಭಾವವನ್ನು ಬೀರಿತ್ತು. ಕಬ್ಬಿಣ ಮತ್ತು ರತ್ನಗಳ ನಿಕ್ಷೇಪಗಳು ಇದ್ದವು. ಗಣಿಗಳಲ್ಲಿ ಸಾಕಷ್ಟು ಜನ ದುಡಿಯುತ್ತಿದ್ದರು. ವಜ್ರವನ್ನು ಕತ್ತರಿಸಿ ಸಾಣೆ ಹಿಡಿಯುವ ಕೆಲಸಗಾರರಿದ್ದರು. ಸಿದ್ಧವಾದ ವಜ್ರಗಳು ಸೂರತ್, ಗೋವಾ, ಬಿಜಾಪುರ, ಆಗ್ರಾ, ದೆಹಲಿ, ವಿಜಯನಗರ ಮೊದಲಾದ ನಗರಗಳಲ್ಲಿ ಮಾರಾಟವಾಗುತ್ತಿದ್ದವು. ವಜ್ರ ವ್ಯಾಪಾರದಿಂದ ಅನೇಕ ವ್ಯಾಪಾರಸ್ಥರು ಶ್ರೀಮಂತರಾಗಿದ್ದರು. ಗುಜರಾತಿ ವರ್ತಕರು ವಜ್ರದ ಗಣಿಗಾರಿಕೆಯಲ್ಲಿ ಏಕಸ್ವಾಮ್ಯ ಪಡೆದಿದ್ದರು.

ಹದಿನೇಳನೆಯ ಶತಮಾನದಲ್ಲಿ ಪೋರ್ಚುಗೀಸರಿಗೂ ಬಿಜಾಪುರದ ಅರಸರಿಗೂ ವ್ಯಾಪಾರ ಸಂಬಂಧಗಳ ಕುರಿತು ಮನಸ್ತಾಪಗಳುಂಟಾದವು. ಈ ರೀತಿಯ ಬೆಳವಣಿಗೆಗಳು ವಿಜಯನಗರೋತ್ತರ ಸಂದರ್ಭದಲ್ಲಿ ವ್ಯಾಪಾಕವಾಗಿ ಕಂಡು ಬಂದವು. ಕ್ರಿ.ಶ. ಹದಿನಾರನೆಯ ಶತಮಾನದ ಆರಂಭ ಕರ್ನಾಟಕದ ವ್ಯಾಪಾರದಲ್ಲಿ ಅನೇಕ ಬದಲಾವಣೆಗಳನ್ನು ಉಂಟು ಮಾಡಿತು. ಪೋರ್ಚುಗೀಸರ ಆಗಮನವೇ ಈ ಏರುಪೇರುಗಳಿಗೆ ಕಾರಣ. ಪೋರ್ಚುಗೀಸರು ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಹೊಸ ವ್ಯಾಪಾರಿ ತಂತ್ರದೊಂದಿಗೆ ಕರಾವಳಿಗೆ ಪ್ರವೇಶಿಸಿದರು. ಇದು ಸ್ಥಳೀಯ ಅರಸುಮನೆತನಗಳೊಂದಿಗಿನ ಯುದ್ಧಗಳಿಗೂ ಕಾರಣ ವಾಯಿತು. ಇದರ ಪರಿಣಾಮವಾಗಿ ಮಂಗಳೂರು, ಬಸ್ರೂರು, ಹೊನ್ನಾವರ ಮುಂತಾದ ಬಂದರು ಪಟ್ಟಣಗಳು ಪೋರ್ಚುಗೀಸರ ಆಕ್ರಮಣಕ್ಕೆ ತುತ್ತಾಗಬೇಕಾಯಿತು. ಪೋರ್ಚುಗೀಸರು ಸ್ಥಳೀಯ ವ್ಯಾಪಾರಸ್ಥರನ್ನು ನಿಯಂತ್ರಿಸಿದರು. ಅದೇ ವೇಳೆ ಯುರೋಪಿ ನವರೇ ಆದ ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರೊಂದಿಗೂ ಸ್ಪರ್ಧೆ ನೀಡಲಾರಂಭಿಸಿದರು. ಇದರಿಂದಾಗಿ ಹದಿನೇಳನೆಯ ಶತಮಾನ ಸಂಪೂರ್ಣವಾಗಿ ಹಾಗೂ ಹದಿನೆಂಟನೆಯ ಶತಮಾನದ ಮೊದಲಾರ್ಧ ವ್ಯಾಪಾರದ ಏಕಸ್ವಾಮ್ಯಕ್ಕಾಗಿ ನಡೆದ ಹೋರಾಟ, ಒಪ್ಪಂದಗಳಿಗೇ ಮೀಸಲಾಯಿತು. ಕೆಳದಿಯ ನಾಯಕರು, ಮೈಸೂರಿನ ಒಡೆಯರು, ಚಿತ್ರದುರ್ಗದ ನಾಯಕರು ಹಾಗೂ ಅಂದಿನ ಅನೇಕ ಸಣ್ಣಪುಟ್ಟ ಅರಸುಮನೆತನಗಳು ಒಂದಲ್ಲ ಒಂದು ರೀತಿಯಲ್ಲಿ ಈ ರೀತಿಯ ಅನುಭವಗಳಿಗೆ ಒಳಗಾದವು. ಹೀಗಾಗಿ ವಿಜಯನಗರೋತ್ತರ ಸಂದರ್ಭದಲ್ಲಿ ಯುರೋಪಿಯನ್ನರ ಅತಿಯಾದ ಮಧ್ಯಪ್ರವೇಶ, ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸಂಪಾದಿಸಿಕೊಳ್ಳುವ ಕಾತುರ, ಸ್ಥಳೀಯ ಅರಸುಮನೆತನಗಳ ನಿರಂತರ ಯುದ್ಧಗಳು ಮೊದಲಾದವು ನಗರ ಅರ್ಥ ವ್ಯವಸ್ಥೆಯಲ್ಲಿ ಏರುಪೇರುಗಳನ್ನುಂಟು ಮಾಡಿದವು. ಅನೇಕ ವಾಣಿಜ್ಯ ಕೇಂದ್ರಗಳು ತೀವ್ರ ಆಘಾತವನ್ನು ಅನುಭವಿಸಿದವು. ಮೈಸೂರು ಸುಲ್ತಾನರ ಆಳ್ವಿಕೆಯಲ್ಲೂ ಇದು ಮುಂದುವರಿಯಿತು.

ಯುರೋಪಿಯನ್ನರ ವ್ಯಾಪಾರ ಮತ್ತು ರಾಜ್ಯ ವಿಸ್ತರಣಾ ಧೋರಣೆಯನ್ನು ಬಲವಾಗಿ ವಿರೋಧಿಸುತ್ತಲೇ ಮೈಸೂರು ಸುಲ್ತಾನರು ಮೈಸೂರು, ಬೆಂಗಳೂರು, ಮಂಗಳೂರು ಮುಂತಾದ ಪಟ್ಟಣಗಳನ್ನು ಆರ್ಥಿಕ ಸ್ವಾವಲಂಬನೆಯ ಕೇಂದ್ರಗಳನ್ನಾಗಿ ಕಟ್ಟುವ ಪ್ರಯತ್ನ ಮಾಡಿದರು. ಹೊಸ ವಾಣಿಜ್ಯ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸಿದರು. ನಿರಂತರ ಯುದ್ಧಗಳ ನಡುವೆಯೂ ಹೊಸ ನಗರ ಅರ್ಥ ವ್ಯವಸ್ಥೆಯ ಹುಟ್ಟಿಗೆ ಕಾರಣರಾದರು. ಟಿಪ್ಪುವು ತನ್ನ ರಾಜತಾಂತ್ರಿಕ ಮತ್ತು ವ್ಯಾಪಾರ-ವಾಣಿಜ್ಯಗಳ ಉದ್ದೇಶಕ್ಕಾಗಿ ಹೊಸ ಪ್ರಯೋಗಗಳನ್ನು ಮಾಡಿದನು. ವಿದೇಶಗಳಲ್ಲಿ ವಾಣಿಜ್ಯ ಕೇಂದ್ರಗಳನ್ನು ಸ್ಥಾಪಿಸುವುದು, ವಿದೇಶಿ ಮತ್ತು ದೇಶಿ ವರ್ತಕರಿಗೆ ಎಲ್ಲ ಬಗೆಯ ಸೌಲಭ್ಯ, ಸವಲತ್ತುಗಳನ್ನು ನೀಡಿ ಮೈಸೂರಿಗೆ ಆಕರ್ಷಿಸುವುದು, ಹೊಸ ವಾಣಿಜ್ಯ ವಿಭಾಗವನ್ನು ಸ್ಥಾಪಿಸುವುದು, ನೌಕಾ ನೆಲೆಯ ನಿರ್ಮಾಣ, ಫಿರಂಗಿ ಹಾಗೂ ಇನ್ನಿತರ ಅತ್ಯಾಧುನಿಕ ಯುದ್ಧೋಪಕರಣಗಳ ನಿರ್ಮಾಣ ಇವೇ ಮುಂತಾದ ಹಲವಾರು ಪ್ರಯೋಗಗಳನ್ನು ಮಾಡುವ ಮೂಲಕ ನಗರ ಕೇಂದ್ರಗಳು ಚುರುಕುಗೊಳ್ಳುವಂತೆ ಹಾಗೂ ಅವು ಬ್ರಿಟಿಷರ ವಿರುದ್ಧದ ಸಮರದಲ್ಲಿ ನಿರ್ಣಾಯಕ ಪಾತ್ರವಹಿಸುವಂತೆ ಮಾಡಿದನು.

ಟಿಪ್ಪುವು ತನ್ನ ರಾಜ್ಯದ ವಾಣಿಜ್ಯ ಬೆಳೆಗಳಾದ ಮೆಣಸು, ಏಲಕ್ಕಿ, ರೇಷ್ಮೆ, ಶ್ರೀಗಂಧ, ಅಡಕೆ, ತೆಂಗಿನಕಾಯಿ, ದಂತ ಮೊದಲಾದವುಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ರಫ್ತು ಮಾಡಿ, ಅಲ್ಲಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ವಿದೇಶಿ ವ್ಯಾಪಾರದ ಅಭಿವೃದ್ದಿಯ ದೃಷ್ಟಿಯಿಂದ ಹೊಸ ವಾಣಿಜ್ಯ ವಿಭಾಗವೊಂದನ್ನು ಸ್ಥಾಪಿಸಿದ. ಹೊರದೇಶ ಗಳಲ್ಲಿ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿ ತನ್ನ ವಾಣಿಜ್ಯ ಪ್ರತಿನಿಧಿಗಳನ್ನು ನೇಮಿಸಿದ. ದೇಶೀಯ ಹಾಗೂ ವಿದೇಶೀಯ ವಾಣಿಜ್ಯ ವಲಯದಲ್ಲಿ ಟಿಪ್ಪು ನೇರವಾಗಿ ಹಸ್ತಕ್ಷೇಪ ನಡೆಸಿದ್ದರ ಉದ್ದೇಶ; ಮೆಣಸು, ಶ್ರೀಗಂಧ, ನಗದು ಬೆಳೆಗಳು ಹಾಗೂ ಅಮೂಲ್ಯ ಹರಳುಗಳು ಮೊದಲಾದ ವಸ್ತುಗಳ ಲಾಭದಾಯಕ ವ್ಯಾಪಾರದಲ್ಲಿ ಬ್ರಿಟಿಷರು ಕಾಲಿಡದಂತೆ ನೋಡಿ ಕೊಳ್ಳುವುದು ಹಾಗೂ ಆ ಮೂಲಕ ಬ್ರಿಟಿಷರನ್ನು ಆರ್ಥಿಕವಾಗಿ ಕ್ಷೀಣಿಸುವಂತೆ ಮಾಡುವುದು. ಈ ಉದ್ದೇಶಕ್ಕಾಗಿ ದೇಶಿ ವರ್ತಕರನ್ನು ಆಹ್ವಾನಿಸಲಾಯಿತು. ಗುಜರಾತ್, ಕಛ್, ಮಲಬಾರ್ ಮುಂತಾದ ಪ್ರದೇಶಗಳ ವ್ಯಾಪಾರಸ್ಥರನ್ನು ಕಾರವಾರ, ಹೊನ್ನಾವರ ಮತ್ತು ಮಂಗಳೂರು ಬಂದರುಗಳಲ್ಲಿ ಅಕ್ಕಿ, ಕರಿಮೆಣಸು, ತೆಂಗಿನಕಾಯಿ, ಅಡಕೆ, ಕಬ್ಬು ಮುಂತಾದ ಕೃಷಿ ಉತ್ಪನ್ನಗಳ ವ್ಯಾಪಾರ ನಡೆಸಲು ಆಹ್ವಾನಿಸಲಾಗುತ್ತಿತ್ತು. ಮುಸ್ಲಿಮರು ವ್ಯಾಪಾರದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದರು. ಅದೇ ರೀತಿ ಕೊಂಕಣಿಗಳು ಮತ್ತು ಗುಜರಾತಿಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಶ್ರೀಮಂತ ವರ್ತಕರಾಗಿ, ಮಧ್ಯವರ್ತಿಗಳಾಗಿ ಹಾಗೂ ಹಣವನ್ನು ಸಾಲ ನೀಡುವ ಸಂಸ್ಥೆಗಳಾಗಿ ಬೆಳೆದರು. ಟಿಪ್ಪುವಿನ ಪತನದ ನಂತರ ಈ ವರ್ತಕರು ಬ್ರಿಟಿಷರೊಂದಿಗೆ ಉತ್ತಮ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡರು.

ಟಿಪ್ಪುವು ವಿದೇಶಗಳಿಂದ ಕುಶಲಕರ್ಮಿಗಳನ್ನು ಹಾಗೂ ತಂತ್ರಜ್ಞರನ್ನು ಕರೆಸಿಕೊಂಡನು. ಆ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದನು. ಹಡಗು ನಿರ್ಮಾಣ, ಬಂದೂಕು ತಯಾರಿಕೆ, ಗಾಜು ಹಾಗೂ ಇತರ ಉಪಯುಕ್ತ ವಸ್ತುಗಳ ತಯಾರಿಕೆ ಯಲ್ಲಿ ನಿಪುಣರಾದವರನ್ನು ಕರೆತರುವ ವ್ಯವಸ್ಥೆಯನ್ನು ಮಾಡಿದನು. ಬಂದೂಕುಗಳು, ಕೋವಿಗಳು, ಫಿರಂಗಿಗಳು, ಚಾಕುಗಳು, ಕತ್ತರಿಗಳು ಮತ್ತು ಕೈಗಡಿಯಾರಗಳನ್ನು ಶ್ರೀರಂಗಪಟ್ಟಣದಲ್ಲಿ ತಯಾರಿಸಲಾಗುತ್ತಿತ್ತು. ಕಬ್ಬಿಣವನ್ನು ಕರಗಿಸುವ ಮತ್ತು ಎರಕ ಹೊಯ್ಯುವ ಕೆಲಸವನ್ನು ಮಧುಗಿರಿ, ಚೆನ್ನರಾಯದುರ್ಗ, ಹಾಗಲವಾಡಿ ಮತ್ತು ದೇವರಾಯ ದುರ್ಗಗಳಲ್ಲಿ ಕೈಗೊಳ್ಳಲಾಗಿದ್ದಿತು. ನೌಕಾ ನಿರ್ಮಾಣ ಟಿಪ್ಪುವಿನ ಕನಸುಗಳಲ್ಲಿ ಒಂದು. ಹಡಗುಗಳನ್ನು ಕಟ್ಟಲು ಮರವನ್ನು ಕಲ್ಲಿಕೋಟೆಯಿಂದ ನೌಕಾ ನಿರ್ಮಾಣ ನೆಲೆಯಿದ್ದ ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. ಮಂಗಳೂರು, ಸದಾಶಿವಗಡ ಹಾಗೂ ಭಾಸ್ಕೊರಾಜಿ ಎಂಬ ಸ್ಥಳಗಳಲ್ಲಿ ಹಡಗು ಕಟ್ಟುವ ಕೆಲಸ ನಡೆಯುತ್ತಿತ್ತು. ಹಡಗು ನಿರ್ಮಾಣಕ್ಕೆ ಅಗತ್ಯವಾದ ಮರಮುಟ್ಟು, ಕಬ್ಬಿಣ, ಹಗ್ಗಗಳು ಮೊದಲಾದವುಗಳನ್ನು ಸ್ಥಳೀಯವಾಗಿಯೇ ಕೊಂಡುಕೊಳ್ಳ ಲಾಗುತ್ತಿತ್ತು.

ಟಿಪ್ಪು ತನ್ನ ರಾಜಧಾನಿ ಮೈಸೂರಿನಲ್ಲಿ ರೇಷ್ಮೆ ಉದ್ಯಮವನ್ನು ಅಭಿವೃದ್ದಿ ಪಡಿಸಿದನು. ಟಿಪ್ಪು ಲಕಿಜಿತ್ಸಾಹ ನೀಡಿದ ಇನ್ನೊಂದು ಉದ್ಯಮವೆಂದರೆ ಜವಳಿ ಉದ್ಯಮ. ಶ್ರೀರಂಗ ಪಟ್ಟಣದ ಬಳಿ ಇದ್ದ ನೆಲಘಟ್ಟ ಜವಳಿ ಉದ್ಯಮದ ಕೇಂದ್ರವಾಗಿತ್ತು. ಶ್ರೀರಂಗಪಟ್ಟಣದಲ್ಲಿ ಕಾಗದ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಚನ್ನಪಟ್ಟಣದಲ್ಲಿ ಗಾಜಿನ ವಸ್ತುಗಳು ತಯಾರಾಗುತ್ತಿದ್ದವು. ಮೈಸೂರಿನಲ್ಲಿ ಸಾಕಷ್ಟು ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಚಿಕ್ಕಬಳ್ಳಾಪುರ ಕಲ್ಲುಸಕ್ಕರೆಗೆ ಪ್ರಸಿದ್ಧವಾಗಿತ್ತು. ಟಿಪ್ಪು ತನ್ನ ಟಂಕಸಾಲೆಗಳಿಂದ ಬಗೆಬಗೆಯಾದ ನಾಣ್ಯಗಳನ್ನು ಹೊರಡಿಸಿದನು. ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು, ಬಿದನೂರು ಚಿತ್ರದುರ್ಗ, ಕಲ್ಲಿಕೋಟೆ, ದಿಂಡಿಗಲ್, ಧಾರವಾಡ ಮತ್ತು ಗುತ್ತಿಗಳಲ್ಲಿ ಟಿಪ್ಪುವಿನ ಟಂಕಸಾಲೆಗಳಿದ್ದವು. ಟಿಪ್ಪುವಿನ ಈ ಪ್ರಯತ್ನಗಳೆಲ್ಲವೂ ಸಂಬಂಧಪಟ್ಟ ನಗರ ಕೇಂದ್ರಗಳೆಲ್ಲವನ್ನೂ ಚುರುಕುಗೊಳಿಸಿದುವು. ವರ್ತಕರು ಹಾಗೂ ಕುಶಲಕರ್ಮಿಗಳು ನಗರ ಜೀವನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡರು. ಬ್ರಿಟಿಷ್ ವ್ಯಾಪಾರಿ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಟಿಪ್ಪು ವ್ಯಾಪಾರ ಮತ್ತು ಕೈಗಾರಿಕಾ ನೀತಿಗಳನ್ನು ರೂಪಿಸಿದ್ದರಿಂದಾಗಿ, ಆತನ ಅನೇಕ ಯೋಜನೆಗಳು ಕನಸಾಗಿಯೇ ಉಳಿಯಬೇಕಾಯಿತು. ಆದರೂ ಅತ್ಯಲ್ಪ ಕಾಲಾವಧಿ ಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಅವು ತಂದ ಪರಿವರ್ತನೆಗಳು ಹಾಗೂ ಹೊಸತನಗಳು ನಗರ ಅರ್ಥ ವ್ಯವಸ್ಥೆಯ ಅಧ್ಯಯನ ಸಂದರ್ಭದಲ್ಲಿ ಮಹತ್ವದ್ದಾಗಿ ಕಂಡು ಬರುತ್ತವೆ.

ನಗರ ಅರ್ಥ ವ್ಯವಸ್ಥೆಯ ರೂಪುಗೊಳ್ಳುವಿಕೆಯಲ್ಲಿ ಪ್ರಭುತ್ವ, ಅಧಿಕಾರಿಗಳು, ವರ್ತಕ ಸಮುದಾಯ, ವರ್ತಕ ಸಂಘ ಮುಂತಾದವುಗಳ ಜೊತೆಗೆ ಸಂಪರ್ಕ ಸಾಧನಗಳು ಮತ್ತು ರಸ್ತೆಗಳು ಮಹತ್ವದ ಪಾತ್ರವನ್ನು ವಹಿಸಿದವು. ಸಾರಿಗೆ ಮತ್ತು ಸಂಪರ್ಕ ಆರ್ಥಿಕ ಚಟುವಟಿಕೆಯ ಒಂದು ಭಾಗವಾಗಿದ್ದು, ಅದರಲ್ಲಿ ಮಾನವ ಮತ್ತು ಆತನಿಗೆ ಅವಶ್ಯಕ ವಾಗಿರುವ ವಸ್ತುಗಳು ಒಂದು ಪ್ರದೇಶದಿಂದ ಇನ್ನೊಂದೆಡೆಗೆ ನಾನಾ ಕಾರಣಗಳಿಗಾಗಿ ಚಲಿಸುತ್ತಿರುತ್ತವೆ. ನಗರ ವ್ಯವಸ್ಥೆ ರೂಪುಗೊಳ್ಳಲು ಇದೊಂದು ಅವಶ್ಯಕ ಅಂಶವಾಗಿದೆ. ವ್ಯಾಪಾರಿ ವಸ್ತುಗಳನ್ನು ಸಾಗಿಸಲು ಸಾಗಣೆ ಮಾರ್ಗಗಳನ್ನು ನಿರ್ಮಿಸುವುದು ಪ್ರತಿಯೊಂದು ಅರಸುಮನೆತನದ ಸಂದರ್ಭದಲ್ಲೂ ಕಂಡು ಬರುವ ಸಾಮಾನ್ಯ ಲಕ್ಷಣ. ಕರ್ನಾಟಕದಲ್ಲಿ ರಸ್ತೆ ವ್ಯವಸ್ಥೆಯ ಕುರಿತಾಗಿ ಮೌರ್ಯರಿಂದಲೇ ಮಾಹಿತಿಗಳು ಸಿಗುತ್ತವೆ. ಪ್ರತಿಷ್ಠಾನದಿಂದ ದಕ್ಷಿಣದತ್ತ ಹೊರಟ ಮಾರ್ಗ ಕೊಲ್ಲಾಪುರ, ಕೊಪ್ಪಳ, ಮಾಸ್ಕಿ, ಚಂದ್ರವಳ್ಳಿ, ಕನಕಗಿರಿ ಮೊದಲಾದ ಪ್ರಾಚೀನ ಪಟ್ಟಣಗಳನ್ನು ಸಂಪರ್ಕಿಸುತ್ತಿತ್ತು. ಬಾರಕನೂರು ಘಾಟಿ ಮಾರ್ಗದಲ್ಲಿ ಹೊನ್ನಾವರದಿಂದ ದಕ್ಷಿಣದತ್ತ ಹೊರಟ ಮಾರ್ಗ ಬನವಾಸಿ, ಹಾನಗಲ್, ಬಂಕಾಪುರ, ಬಳ್ಳಿಗಾವೆ, ಹರಿಹರ, ಅರಸೀಕೆರೆ, ಶ್ರವಣಬೆಳ್ಗೊಳಗಳನ್ನು ಹಾಯ್ದು ಪಶ್ಚಿಮದತ್ತ ತಲಕಾಡಿಗೂ, ಪೂರ್ವದತ್ತ ಬೆಂಗಳೂರು, ಕೋಲಾರದ ಕಡೆಗೂ ಹೋಗುತ್ತಿತ್ತು. ಕರ್ನಾಟಕದ ಕಲ್ಯಾಣದಿಂದ ತಮಿಳುನಾಡಿನ ತಂಜಾವೂರಿನವರೆಗೆ ಹಿರಿಯ ಹೆದ್ದಾರಿಯೊಂದು ಇತ್ತು.

ಮಲ್ಲಿಕಾಫರ್ ಉತ್ತರದಿಂದ ದಕ್ಷಿಣಕ್ಕೆ ಬರುವಾಗ ಮೊದಲು ಪಂಡರಾಪುರದಿಂದ ಬಿಜಾಪುರಕ್ಕೆ, ಬಿಜಾಪುರದಿಂದ ಹರಿಹರ, ಹರಿಹರದಿಂದ ಹಿರಿಯೂರು, ಹಿರಿಯೂರಿನಿಂದ ಬಾಣಾವರ, ನಂತರ ಹಳೇಬೀಡು ಈ ಮಾರ್ಗವನ್ನು ಬಳಸಿಕೊಂಡನು. ಚೋಳರ ರಾಜಧಾನಿ ತಂಜಾವೂರು ಮತ್ತು ಕಲ್ಯಾಣ ಚಾಲುಕ್ಯರ ರಾಜಧಾನಿ ಕಲ್ಯಾಣ ಪರಸ್ಪರ ರಸ್ತೆ ಸಂರ್ಪಕವನ್ನು ಹೊಂದಿದ್ದವು. ವಿಜಯನಗರದ ಸಂದರ್ಭಕ್ಕೆ ಸಂಬಂಧಿಸಿದಂತೆ ಅನೇಕ ವ್ಯಾಪಾರ ಮಾರ್ಗಗಳ ಮಾಹಿತಿ ಸಿಗುತ್ತದೆ. ವಿಜಯನಗರ ಪಟ್ಟಣದಿಂದ ಬಂಕಾಪುರದ ಮೂಲಕ ಗೋವಾಕ್ಕೆ, ಬಂಕಾಪುರದಿಂದ ಹೊನ್ನಾವರದ ಮೂಲಕ ಭಟ್ಕಳಕ್ಕೆ, ಬೀದರ್ ಮತ್ತು ಗೋಲ್ಕೊಂಡಗಳ ಮಾರ್ಗವಾಗಿ ದೌಲತಾಬಾದಿನಿಂದ ಗುಲ್ಬರ್ಗಕ್ಕೆ, ಬಂಕಾಪುರದಿಂದ ಬಿಜಾಪುರ ಮತ್ತು ಗುಲ್ಬರ್ಗಾ ಮಾರ್ಗವಾಗಿ ಗೋಲ್ಕೊಂಡಕ್ಕೆ, ವಿಜಯನಗರ ಪಟ್ಟಣದಿಂದ ಪೆನುಕೊಂಡಾ, ಚಂದ್ರಗಿರಿ, ತಿರುಪತಿ ಮತ್ತು ಪುಲಿಕೋಟೆ ಮೂಲಕ ಮೈಲಾಪುರಕ್ಕೆ, ವಿಜಯನಗರದಿಂದ ಆದೋನಿ, ರಾಯಚೂರುಗಳಿಗೆ, ವಿಜಯನಗರದಿಂದ ಶಿವನ ಸಮುದ್ರಕ್ಕೆ ಮತ್ತು ಶ್ರೀರಂಗಪಟ್ಟಣಕ್ಕೆ, ವಿಜಯನಗರದಿಂದ ಉದಯಗಿರಿ, ಕೊಂಡವೀಡು, ಕೊಂಡಪಲ್ಲಿ ಮತ್ತು ಕರಾವಳಿಯ ಸಿಂಹಾಚಲ ಮತ್ತು ಶ್ರೀಕೂರ್ಮಂಗಳಿಗೆ ವ್ಯಾಪಾರ ಮಾರ್ಗಗಳಿದ್ದವು.

ತಲಕಾಡು, ಮಣ್ಣೆ ಮತ್ತು ಕೋಲಾರಗಳಿಂದ ಕ್ರಮವಾಗಿ ಕೊಯಮತ್ತೂರು, ಧರ್ಮಪುರಿ ಮತ್ತು ಸೇಲಂಗಳಿಗೆ ಇದ್ದ ಹೆದ್ದಾರಿಗಳು ತಮಿಳುನಾಡಿನೊಂದಿಗೆ ಕರ್ನಾಟಕವನ್ನು ಬೆಸೆದಿದ್ದವು. ತಲಕಾಡಿನಿಂದ ವೈನಾಡಿನ ಮೂಲಕ ಕೇರಳಕ್ಕೂ ಸಂಪರ್ಕವಿತ್ತು. ಹಂಪೆ, ಅರಸೀಕೆರೆ, ಮಧುಗಿರಿ, ಮುಳಬಾಗಿಲುಗಳ ಕಡೆಯಿಂದ ಪೂರ್ವಕ್ಕೆ ಹೆಂಜೇರು, ನಿಡುಗಲ್ ಮತ್ತು ಪೆನುಕೊಂಡದ ಕಡೆಗೆ ಹೆದ್ದಾರಿಗಳಿದ್ದವು. ಮಂಗಳೂರಿನಿಂದ ಬೇಲೂರಿಗಿದ್ದ ಮಾರ್ಗ ಪಶ್ಚಿಮಘಟ್ಟ ಶ್ರೇಣಿಗಳಿಂದಾಗಿ ಸುಗಮವಾಗಿರಲಿಲ್ಲ. ಆದರೂ ಆ ಮಾರ್ಗ ಬಳಕೆಯಲ್ಲಿತ್ತು. ಅದು ಘಟ್ಟದ ಮೇಲೆ ಬರುತ್ತಿದ್ದಂತೆ ಕಳಸ ಸಿಗುತ್ತಿತ್ತು. ಮುಂದಕ್ಕೆ ಸುಂಕಸಾಲೆ ಮೂಲಕ ಹೋಗಿ ಚೌವಳಿ ಎನ್ನುವಲ್ಲಿ ಕವಲಾಗಿ ಒಡೆದು ಉತ್ತರಕ್ಕೆ ಶೃಂಗೇರಿ, ಶಿವಮೊಗ್ಗಗಳ ಕಡೆಗೆ ಹೋಗುತ್ತಿತ್ತು. ಅಲ್ಲಿಂದ ಮೂಡಿಗೆರೆ ತಲುಪಿ ಮಾಕೋನಹಳ್ಳಿಯ ಮೂಲಕ ಬೇಲೂರು ಸೇರುತ್ತಿತ್ತು. ಮೂಡಿಗೆರೆಯಿಂದ ಬೇಲೂರಿಗೆ ಹಾಗೂ ಸಕಲೇಶಪುರಕ್ಕೆ ಹೋಗುವ ಇನ್ನೊಂದು ಮಾರ್ಗ ಹೊಯ್ಸಳರ ಮೂಲ ಸ್ಥಳವಾದ ಸೊಸೆವೂರಿನ ಸಮೀಪ ಹಾದು ಹೋಗುತ್ತಿತ್ತು. ಮೂಡಿಗೆರೆಯಿಂದ ನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿ ಮುದ್ರೆಮನೆ ಎಂಬ ಸ್ಥಳವಿದ್ದು, ಅದು ಟಂಕಸಾಲೆಯಾಗಿತ್ತು. ಬೇಲೂರು ತಲುಪುತ್ತಿದ್ದ ಈ ಮಾರ್ಗ ಬಯಲುನಾಡು ಸೇರಿ ಕರ್ನಾಟಕದ ವಿವಿಧ ಮುಖ್ಯ ಸ್ಥಳಗಳೊಡನೆ ಸಂಪರ್ಕ ಸಾಧಿಸಿಕೊಂಡಿತ್ತು. ಈ ಮಾರ್ಗದಲ್ಲಿ ಎತ್ತುಗಳು ಮತ್ತು ಕತ್ತೆಗಳ ಮೇಲೆ ಮಾತ್ರ ಸರಕು ಸಾಗಿಸಬಹುದಾಗಿತ್ತು.

ಬಂದರು ಪಟ್ಟಣಗಳು ವ್ಯಾಪಾರ-ವಾಣಿಜ್ಯದ ಹಿನ್ನೆಲೆಯಿಂದ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದ್ದರೂ, ಪಶ್ಚಿಮ ಘಟ್ಟಗಳಿಂದಾಗಿ ಅವುಗಳೊಂದಿಗಿನ ಸಂಪರ್ಕ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅದರಲ್ಲೂ ಭಟ್ಕಳದಿಂದ ದಕ್ಷಿಣಕ್ಕಿದ್ದ ಮಲ್ಪೆ, ಮಂಗಳೂರು, ಕುಂಬ್ಳೆ ಮುಂತಾದ ಬಂದರು ಪಟ್ಟಣಗಳೊಂದಿಗಿನ ಸಂಪರ್ಕ ಕಠಿಣವಾಗಿತ್ತು. ಭಟ್ಕಳದಿಂದ ಉತ್ತರಕ್ಕಿದ್ದ ಬಂದರುಗಳಿಗೂ, ಅವುಗಳ ಒಳನಾಡಿಗೂ ಸಂಪರ್ಕ ಮಾರ್ಗಗಳು ಸುಲಭ ವಾಗಿದ್ದವು. ಮಂಗಳೂರು ಶ್ರೀರಂಗಪಟ್ಟಣದೊಂದಿಗೆ ಬಿಸ್ಲೆ ಘಾಟಿಯ ಮೂಲಕ ಸಂಪರ್ಕ ಹೊಂದಿತ್ತು. ಅದರಲ್ಲಿ ಎತ್ತುಗಳ ಮೂಲಕ ಮಾತ್ರ ಸರಕುಗಳನ್ನು ಸಾಗಿಸಬಹುದಾಗಿತ್ತು. ದಕ್ಷಿಣ ಕನ್ನಡವನ್ನು ಮೈಸೂರು ಮತ್ತು ಕೊಡಗಿನೊಂದಿಗೆ ಸಂಪರ್ಕಿಸುತ್ತಿದ್ದ ಪಶ್ಚಿಮ ಘಟ್ಟಗಳ ಮೂಲಕ ಹಾದು ಹೋಗುತ್ತಿದ್ದ ಘಟ್ಟ ರಸ್ತೆಗಳಲ್ಲಿ ಸಂಪಾಜೆ, ಆಗುಂಬೆ, ಚಾರ್ಮಾಡಿ, ಹೊಸಂಗಡಿ, ಮಂಜರಾಬಾದ್, ಶಿಶಿಲ ಮತ್ತು ಕೊಲ್ಲೂರು ಪ್ರಮುಖವಾದವು. ಇವು ಹೆಚ್ಚಿನ ಅಭಿವೃದ್ದಿಯನ್ನು ಕಂಡಿರುವುದು ಬ್ರಿಟಿಷರ ನೇರ ಆಳ್ವಿಕೆಯ ಸಂದರ್ಭದಲ್ಲಿ.

ವ್ಯಾಪಾರವು ಮುಖ್ಯವಾಗಿ ರಸ್ತೆ, ನದಿ ಮತ್ತು ಸಮುದ್ರದ ಮೂಲಕ ನಡೆಯುತ್ತಿತ್ತು. ರಸ್ತೆಗಳಲ್ಲಿ ಬಟ್ಟೆದಾರಿ, ಬಂಡಿದಾರಿ, ಹೆದ್ದಾರಿ, ಹೆಬ್ಬಟ್ಟೆ, ರಾಜಪಥ ಮೊದಲಾದ ರಸ್ತೆ ಗಳಿದ್ದವು. ರಾಜಧಾನಿ ಪಟ್ಟಣಗಳು ರಾಜಮಾರ್ಗವನ್ನು ಹೊಂದಿರುತ್ತಿದ್ದವು. ಭೂ ಮಾರ್ಗಗಳಲ್ಲಿ ಮುಖ್ಯವಾಗಿ ಎತ್ತಿನ ಬಂಡಿಗಳ ಮೇಲೆ ವ್ಯಾಪಾರ ನಡೆಯುತ್ತಿತ್ತು. ಎತ್ತು, ಕತ್ತೆ, ಕೋಣ, ಕುದುರೆ ಮುಂತಾದ ಪ್ರಾಣಿಗಳ ಮೇಲೆಯೂ ಸಾಮಾನುಗಳನ್ನು ಹೇರಿ ಸಾಗಿಸಲಾಗುತ್ತಿತ್ತು. ಸಣ್ಣ ಸಣ್ಣ ವಸ್ತುಗಳನ್ನು ತಲೆಯ ಮೇಲೆ ಹಸುಬೆ ಚೀಲಗಳಲ್ಲಿ ಹೊತ್ತು ಮಾರಾಟ ಮಾಡುತ್ತಿದ್ದರು. ಜಲಮಾರ್ಗದಲ್ಲಿ ಮುಖ್ಯವಾಗಿ ನದಿಗಳು ಮತ್ತು ಸಮುದ್ರ ಆಂತರಿಕ ಮತ್ತು ವಿದೇಶಿ ವ್ಯಾಪಾರಕ್ಕೆ ಬಳಕೆಯಾಗುತ್ತಿತ್ತು. ಅರೇಬಿಯನ್ನರು, ಪರ್ಷಿಯನ್ನರು, ಯುರೋಪಿಯನ್ನರು ಹಾಗೂ ಕರಾವಳಿ ತೀರದ ವರ್ತಕರು ಸಮುದ್ರ ಮಾರ್ಗದ ಮೂಲಕ ವ್ಯಾಪಾರ ನಡೆಸುತ್ತಿದ್ದರು. ಆಂತರಿಕ ವ್ಯಾಪಾರದಲ್ಲಿ ನದಿಗಳು ಮುಖ್ಯವಾಗಿ ಬಳಕೆಯಾಗುತ್ತಿದ್ದವು. ಜಲಮಾರ್ಗದಲ್ಲಿ ಮುಖ್ಯವಾಗಿ ದೋಣಿಗಳು, ಪಟ್ಟೆ ಮಾರಗಳು, ಸಣ್ಣ ಹಾಗೂ ದೊಡ್ಡ ಹಡಗುಗಳು ವಸ್ತುಗಳ ಸಾಗಾಣಿಕೆ ಮತ್ತು ವರ್ತಕರ ಪ್ರಯಾಣಕ್ಕೆ ಬಳಕೆಯಾಗುತ್ತಿದ್ದವು. ಹೀಗಾಗಿ ಭೂಮಾರ್ಗ ಮತ್ತು ಜಲಮಾರ್ಗಗಳ ಬಳಕೆ ಹೆಚ್ಚಾದಂತೆಲ್ಲಾ ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳಲಾರಂಭಿಸಿತು.