ಕರ್ನಾಟಕದಲ್ಲಿ ಅಶೋಕನ ಶಾಸನಗಳು ಪತ್ತೆಯಾಗಿರುವುದು ಕರ್ನಾಟಕದ ನಗರ ಚರಿತ್ರೆಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಒದಗಿಸಿಕೊಟ್ಟಿತು. ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಹಲವಾರು ನಗರ ಪ್ರದೇಶಗಳು ಕರ್ನಾಟಕದ ನಗರ ಚರಿತ್ರೆಯ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಾಡಿದವು. ಅಶೋಕನ ಸಾಮ್ರಾಜ್ಯ ಕರ್ನಾಟಕದ ಬಹುಭಾಗವನ್ನು ಆವರಿಸಿತ್ತು ಎನ್ನುವುದು ಶಾಸನಗಳಿಂದ ಸ್ಪಷ್ಟವಾಗಿದೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗರಾಮೇಶ್ವರ; ರಾಯಚೂರು ಜಿಲ್ಲೆಯ ಮಸ್ಕಿ; ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೇಗೋಳಂ; ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡು; ಹಾಗೂ ಗುಲ್ಬರ್ಗಾ ಜಿಲ್ಲೆ, ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ದೊರೆತ ಅಶೋಕನ ಶಾಸನಗಳು ಕೆಲವೊಂದು ಪಟ್ಟಣಗಳ ಕುರಿತು ಮಾಹಿತಿ ನೀಡುತ್ತವೆ. ಮೌರ್ಯರ ಆಳ್ವಿಕೆಯ ಸಂದರ್ಭದಲ್ಲಿ ಬನವಾಸಿ, ಮಸ್ಕಿ, ತೆಕ್ಕಲಕೋಟೆ, ಸನ್ನತಿ, ಜಟಿಂಗರಾಮೇಶ್ವರ, ಬ್ರಹ್ಮಗಿರಿ, ಚಂದ್ರವಳ್ಳಿ ಮೊದಲಾದವು ಪ್ರಮುಖ ಪಟ್ಟಣಗಳಾಗಿದ್ದವು. ಕೊಪ್ಪಳವು ಕೋಪಣನಗರವೆಂದು ಪ್ರಸಿದ್ದಿಯಾಗಿತ್ತು. ಕೊಪ್ಪಳದ ಸಮೀಪದ ಪಾಲ್ಕಿ ಗುಂಡಿ ಬೆಟ್ಟದಲ್ಲಿ ಮೊರಿಯರ ಅಂಗಡಿ ಎಂದು ಕರೆಯುವ ಬೃಹತ್ ಶಿಲಾಸಮಾಧಿಗಳಿವೆ. ಕಿಬ್ಬನಹಳ್ಳಿ, ನರಸೀಪುರ, ಅರಸೀಕೆರೆ, ನಿಟ್ಟೂರು, ಕೀರ್ತಿಪುರ, ಮೈಸೂರು, ಶ್ರವಣಬೆಳಗೊಳ ಮೊದಲಾದವು ದಕ್ಷಿಣ ಕರ್ನಾಟಕದ ಪಟ್ಟಣಗಳಾಗಿದ್ದವು.

ಮೌರ್ಯ ಸಾಮ್ರಾಜ್ಯದ ಆಡಳಿತ ಕೇಂದ್ರವಾಗಿದ್ದ ಬ್ರಹ್ಮಗಿರಿಗೆ ಅಂದಿನ ಸಂದರ್ಭದಲ್ಲಿ ಇದ್ದ ಹೆಸರು ಇಸಿಲಾ ಎಂಬುದಾಗಿ ಶಾಸನಗಳು ತಿಳಿಸುತ್ತವೆ. ಇಸಿಲಾ ನಗರವು ಸುವರ್ಣಗಿರಿ ಪ್ರಾಂತ್ಯದಲ್ಲಿತ್ತೆಂದು ಉಲ್ಲೇಖಿಸಲ್ಪಟ್ಟಿದೆ. ಆದರೆ ಸುವರ್ಣಗಿರಿಯನ್ನು ಸರಿಯಾಗಿ ಗುರುತಿಸಲಾಗಿಲ್ಲ. ಈಗಿನ ಮಸ್ಕಿ ಮತ್ತು ಹಂಪೆ ನಡುವೆ ಇರುವ ಕನಕಗಿರಿಯೇ ಸುವರ್ಣಗಿರಿ ಎಂಬ ಅಭಿಪ್ರಾಯವೊಂದಿದೆ. ಟಾಲೆಮಿಯು ಕನಕಗಿರಿಯನ್ನು ಕಲ್ಲಿಗೇರಿಸ್ ಎಂಬ ಹೆಸರಿನಿಂದ ಕರೆದಿದ್ದಾನೆ. ಮಸ್ಕಿಯೇ ಸುವರ್ಣಗಿರಿಯಾಗಿದ್ದಿರಬೇಕೆನ್ನುವ ವಾದವೂ ಇದೆ. ಅದೇ ರೀತಿ ಅಂದಿನ ಪ್ರಮುಖ ನಗರಕೇಂದ್ರವಾಗಿದ್ದ ಸನ್ನತಿಯೇ ಸುವರ್ಣಗಿರಿಯಾಗಿದ್ದಿತೆಂಬ ವಾದವೂ ಇದೆ. ಕೆಲವು ರಾಜಾಜ್ಞೆಗಳು ಮೊದಲು ಸುವರ್ಣಗಿರಿ ಪ್ರಾಂತಾಧಿಕಾರಿಗೆ ತಲುಪಿ, ಅನಂತರ ಅದನ್ನು ಇಸಿಲ ಅಧಿಕಾರಿಗಳಿಗೆ ಕಳುಹಿಸಿರುವುದು ಅಶೋಕನ ಶಾಸನಗಳಿಂದ ಉಕ್ತವಾಗಿದೆ. ಇಂಥ ಉಲ್ಲೇಖಗಳನ್ನು ನೋಡಿದಾಗ ಇಸಿಲಾ ನಗರವು ಅಶೋಕನ ಪ್ರಾಂತಾಧಿಕಾರಿಯ ರಾಜಧಾನಿಯಾಗಿತ್ತೆಂಬುದು ತಿಳಿದು ಬರುತ್ತದೆ. ಬ್ರಹ್ಮಗಿರಿಯೇ ಇಸಿಲಾ ನಗರವಾಗಿತ್ತೆ  ಅಥವಾ ಬ್ರಹ್ಮಗಿರಿಯ ಹತ್ತಿರ ಇಸಿಲ ಎನ್ನುವ ಪಟ್ಟಣವಿತ್ತೆ ಎನ್ನುವುದರ ಕುರಿತು ಸಂದೇಹಗಳಿವೆ. ಇಸಿಲವನ್ನು ಬ್ರಹ್ಮಗಿರಿ – ಸಿದ್ಧಾಪುರ ನಿವೇಶನವೆಂದು ಗುರುತಿಸ ಲಾಗಿದ್ದು, ಇದು ಮೌರ್ಯರ ಸಂದರ್ಭದ ನಗರಕೇಂದ್ರ ಎಂಬುದಾಗಿ ಶಾಸನಗಳಿಂದ ತಿಳಿಯಲಾಗಿದೆ. ಮೌರ್ಯರ ದಕ್ಷಿಣ ಪ್ರಾಂತವಾಗಿದ್ದ ಸುವರ್ಣಗಿರಿಯಲ್ಲಿ ಉತ್ತರ ಕರ್ನಾಟಕದ ಹಲವಾರು ಪ್ರದೇಶಗಳು ಸೇರಿಕೊಂಡಿದ್ದವು. ಇಸಿಲಾವು ಅತ್ಯಂತ ದಕ್ಷಿಣಕ್ಕಿದ್ದ ಉಪಘಟಕವಾಗಿತ್ತು. ಇಸಿಲಾವನ್ನು ಮೌರ್ಯ ಅರಸರ ಮಹಾಮಾತ್ರರೆಂಬ ಮಂತ್ರಿಗಳು ಆಳುತ್ತಿದ್ದರು. ಈ ಎಲ್ಲ ವಿವರಗಳನ್ನು ನೋಡಿದಾಗ ಇಸಿಲಾವು ಒಂದು ಪ್ರಾಂತೀಯ ರಾಜಧಾನಿ ಪಟ್ಟಣವಾಗಿದ್ದಿರಬೇಕೆಂದು ತೋರುತ್ತದೆ. ವಿಶಾಲ ಮೌರ್ಯ ಸಾಮ್ರಾಜ್ಯದ ಆಡಳಿತದ ಅನುಕೂಲತೆಗಾಗಿ ಇಸಿಲಾದಂಥ ಅನೇಕ ಪಟ್ಟಣಗಳು ಹುಟ್ಟಿಕೊಂಡವು. ರಾಜಕೀಯ ಆಶೋತ್ತರಗಳು ಇಂಥ ಸಂದರ್ಭಗಳಲ್ಲಿ ನಿರ್ಣಾಯಕವಾಗಿರುತ್ತಿದ್ದವು.

ಶಾತವಾಹನರ ಆಳ್ವಿಕೆಯ ಸಂದರ್ಭದಲ್ಲಿನ ಕೆಲವು ನಗರ ಪ್ರದೇಶಗಳೆಂದರೆ, ಚಂದ್ರವಳ್ಳಿ, ಮಸ್ಕಿ, ಸನ್ನತಿ, ಬನವಾಸಿ, ಇಂಡಿ, ಬಾದಾಮಿ, ತಾಳಗುಂದ, ಹೀರಕಲ್, ವಡಗಾಂವ್-ಮಾಧವಪುರ, ಹಲಶಿ, ಹಾನಗಲ್, ಕಾರವಾರ ಮುಂತಾದವು. ಇವುಗಳಲ್ಲಿ ಚಂದ್ರವಳ್ಳಿಯು ಶಾತವಾಹನರ ಆಳ್ವಿಕೆಗೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರ. ಸುಮಾರು ಕ್ರಿ.ಶ. ೨೦೦ರ ನಂತರ ಶಾತವಾಹನರು ಚಂದ್ರವಳ್ಳಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದರೆಂಬ ಅಂಶ ಶಾಸನಗಳಿಂದ ತಿಳಿದುಬರುತ್ತದೆ. ಚಂದ್ರವಳ್ಳಿಯಲ್ಲಿ ನಡೆದ ಭೂ ಸಂಶೋಧನೆಯಿಂದ ಶಾತವಾಹನರ ಆಳ್ವಿಕೆಯ ಮೇಲೆ ಹಾಗೂ ಚಂದ್ರವಳ್ಳಿಯ ನಗರ ವ್ಯವಸ್ಥೆಯ ಮೇಲೆ ಹೆಚ್ಚಿನ ಅಧ್ಯಯನ ಸಾಧ್ಯವಾಯಿತು. ಶಾತವಾಹನರ ಹಾಗೂ ಅವರ ಸಾಮಂತ ಅರಸರ ನಾಣ್ಯಗಳು ಚಂದ್ರವಳ್ಳಿಯಲ್ಲಿ ದೊರೆತಿವೆ. ಭೂ ಸಂಶೋಧನೆಯಲ್ಲಿ ನಾಣ್ಯಗಳು, ಇಟ್ಟಿಗೆಗಳು, ಹೆಂಚುಗಳು, ವಿಧವಿಧವಾದ ಬಣ್ಣದ ಗಾಜಿನ ಬಳೆಗಳು, ಕಪ್ಪೆ ಚಿಪ್ಪುಗಳು, ಮಣಿಗಳು, ವರ್ಣಾಲಂಕಾರದ ಮಡಕೆಗಳು, ಮಣ್ಣಿನ ಜಾಡಿಗಳು, ಬಟ್ಟಲು, ತಟ್ಟೆ, ಪಾತ್ರೆಗಳು ದೊರೆತಿವೆ. ಈ ಎಲ್ಲ ಕಾರಣಗಳಿಂದಾಗಿ ಚಂದ್ರವಳ್ಳಿಯು ಶಾತವಾಹನರ ರಾಜಧಾನಿ ಅಥವಾ ರಾಜಧಾನಿಗಳಲ್ಲಿ ಒಂದು ಆಗಿರಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

ಸನ್ನತಿಯು ಮೌರ್ಯ-ಶಾತವಾಹನರ ಕಾಲದ ಒಂದು ಪ್ರಮುಖ ಪಟ್ಟಣ. ಸನ್ನತಿಯಲ್ಲಿ ಮೌರ್ಯ ಅರಸ ಅಶೋಕನ ೧೩ ಮತ್ತು ೧೪ನೆಯ ಬೃಹತ್ ಬಂಡೆ ಶಾಸನಗಳು ಮತ್ತು ಪ್ರತ್ಯೇಕ ಎರಡು ಕಳಿಂಗ ಶಾಸನ ಪ್ರತಿಗಳು ಸಿಕ್ಕಿವೆ. ಸನ್ನತಿಯು ಸುತ್ತಲೂ ಬಲಾಢ್ಯವಾದ ಇಟ್ಟಿಗೆ ರಕ್ಷಣಾ ಗೋಡೆಗಳಿಂದ ಆವೃತವಾದ ವಿವಿಧ ಪ್ರಾಕಾರಗಳಿಂದ, ನೂರಾರು ಇಟ್ಟಿಗೆ ಸೌಧಗಳಿಂದ ಕೂಡಿದ ಪಟ್ಟಣವಾಗಿತ್ತು. ಸನ್ನತಿಯಲ್ಲಿ ನಡೆಸಲಾದ ಉತ್ಖನನದಲ್ಲಿ ಒಂದು ಬೃಹತ್ ಸರಕುಗಳ ಕೋಠಿ ಕಂಡು ಬಂದಿದೆ. ಅದೊಂದು ದೊಡ್ಡ ಇಟ್ಟಿಗೆ ಕಟ್ಟಡವಾಗಿದ್ದು, ಅದರ ವಿನ್ಯಾಸವನ್ನು ನೋಡಿದರೆ ಅದೊಂದು ಧಾನ್ಯ ಹಾಗೂ ಇತರ ಸರಕುಗಳನ್ನು ಸಂಗ್ರಹ ಮಾಡುವ ಜಾಗವಿರಬೇಕೆಂದು ತೀರ್ಮಾನಿಸಬಹುದು. ಕಟ್ಟಡದ ಸುತ್ತಲೂ ಎತ್ತರವಾದ ಇಟ್ಟಿಗೆಯ ರಕ್ಷಣಾ ಗೋಡೆ ಇದೆ. ಸನ್ನತಿಯಲ್ಲಿ ಕೆಲವು ಬೌದ್ಧ ಸ್ತೂಪಗಳು ಪತ್ತೆಯಾಗಿವೆ. ಬೌದ್ಧ ಸ್ತೂಪ ಶಿಲ್ಪಾವಶೇಷಗಳು ಉತ್ಖನನ ಸಂದರ್ಭದಲ್ಲಿ ಬೆಳಕಿಗೆ ಬಂದವು.

ಬನವಾಸಿಯು ಅಶೋಕನ ಆಳ್ವಿಕೆಯ ಸಂದರ್ಭದಲ್ಲಿಯೇ ಒಂದು ಪ್ರಮುಖ ನಗರ ಕೇಂದ್ರವಾಗಿತ್ತು. ಬನವಾಸಿಯಲ್ಲಿ ನಡೆದ ಉತ್ಖನನದ ಫಲವಾಗಿ ಅದೊಂದು ನಗರ ಕೇಂದ್ರವೆನ್ನುವುದು ತಿಳಿಯುವಂತಾಯಿತು. ಅಲ್ಲಿ ಅಗಲವಾದ ರಸ್ತೆಗಳು ಇದ್ದು, ಅವುಗಳಿಗೆ ಸಮಾನಾಂತರ ಕಾಲು ದಾರಿಗಳು ಇದ್ದವು. ರಸ್ತೆಯ ಇಕ್ಕೆಡೆಗಳಲ್ಲೂ ಇಟ್ಟಿಗೆಯಿಂದ ನಿರ್ಮಿಸಲಾದ ಕಟ್ಟಡಗಳಿದ್ದವು. ವಸತಿ ಗೃಹಗಳಿಗೆ ಇಟ್ಟಿಗೆಯ ಆವರಣವಿರುವ ಬಾವಿಯ ಪೂರೈಕೆ ಇತ್ತು. ಇಟ್ಟಿಗೆ ಕಟ್ಟಡವಿರುವ ಬೃಹತ್ತಾದ ಕೆರೆಗಳೂ ಇದ್ದವು. ವಸತಿ ಪ್ರದೇಶದ ಸುತ್ತ ಎತ್ತರದ ಗೋಡೆಗಳ ಆವರಣವಿತ್ತು. ಕೋಟೆಯ ಗೋಡೆಯ ಸುತ್ತ ನೀರು ತುಂಬುವ ಕಂದಕಗಳಿದ್ದವು. ಬನವಾಸಿಯಲ್ಲಿ ವೈವಿಧ್ಯಮಯವಾದ ಇಟ್ಟಿಗೆ ಕಟ್ಟಡಗಳ ಅವಶೇಷಗಳು ಕಂಡುಬರುತ್ತವೆ. ಅಂಥದೇ ರೀತಿಯ ಕಟ್ಟಡಗಳನ್ನು ಬ್ರಹ್ಮಗಿರಿ, ವಡಗಾಂವ್-ಮಾಧವಪುರ ಗಳಲ್ಲೂ ಕಾಣಬಹುದಾಗಿದೆ. ಬನವಾಸಿಯಲ್ಲಿ ಶಾತವಾಹನರ ಕಾಲದ ನಾಣ್ಯಗಳು, ಎರಡು ಬೃಹತ್ ಗಜಪೃಷ್ಠ ಇಟ್ಟಿಗೆ ಕಟ್ಟಡಗಳೂ ಸಿಕ್ಕಿವೆ. ಶಾತವಾಹನರ ಆಳ್ವಿಕೆಯಲ್ಲಿ ಬನವಾಸಿ ವ್ಯಾಪಾರ ಕೇಂದ್ರವೂ ಆಗಿತ್ತು. ಬನವಾಸಿಯಲ್ಲಿ ನಡೆದ ಉತ್ಖನನದಲ್ಲಿ ಬೌದ್ಧ ಸ್ತೂಪದ ಅವಶೇಷಗಳು ದೊರಕಿವೆ. ಬನವಾಸಿಯಲ್ಲಿ ಶಾತವಾಹನರ ನಂತರ ಚುಟುಗಳು ಅಧಿಕಾರಕ್ಕೆ ಬಂದರು. ನಂತರ ಕದಂಬರು ಬನವಾಸಿಯನ್ನು ತಮ್ಮ ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡರು. ಬನವಾಸಿಯು ರಾಜಕೀಯ ಕೇಂದ್ರದ ಜೊತೆ ಜೊತೆಗೆ ಧಾರ್ಮಿಕ ಹಾಗೂ ವ್ಯಾಪಾರ ಕೇಂದ್ರವೂ ಆಗಿತ್ತು.

ಬಾದಾಮಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ. ಶಾಸನಗಳಲ್ಲಿ ಬಾದಾಮಿಯು ವಾತಾಪಿ, ಬಾದಾವಿ ಎಂಬ ರೂಪಗಳಲ್ಲಿದೆ. ಬಾದಾಮಿಯ ಉಲ್ಲೇಖವು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಟಾಲೆಮಿ (ಸು. ಕ್ರಿ.ಶ. ೧೫೦) ಬರೆದ ‘ಎ ಗೈಡ್ ಟು ಜಿಯೋಗ್ರಫಿ’ ಎಂಬ ಪುಸ್ತಕದಲ್ಲಿ. ಟಾಲೆಮಿಯು ವಾಣಿಜ್ಯ ವ್ಯವಹಾರಗಳಿಗೆ ಹೆಸರುವಾಸಿಯಾಗಿದ್ದ ನಗರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನ್ನ ಕೃತಿಯನ್ನು ರಚಿಸಿದ್ದರಿಂದಾಗಿ ಬಾದಾಮಿಯು ನಗರ ಪ್ರದೇಶವಾಗಿ ಬೆಳೆದಿರಬೇಕೆಂದು ಊಹಿಸಬಹುದಾಗಿದೆ. ಬಾದಾಮಿಯು ವಾತಾಪಿ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುವುದು ಒಂದನೆಯ ಪುಲಕೇಶಿಯ ಶಾಸನದಲ್ಲಿ (ಕ್ರಿ.ಶ. ೫೪೩). ಚಾಳುಕ್ಯೋತ್ತರ ಕಾಲದ ಶಾಸನಗಳಲ್ಲಿ ಬಾದಾಮಿ ಎಂಬ ಹೆಸರು ಇದ್ದುದು ತಿಳಿದು ಬರುತ್ತದೆ. ಬಾದಾಮಿಯು ಪ್ರಮುಖ ರಾಜಧಾನಿ ಪಟ್ಟಣವಾಗಿ ಹಾಗೂ ನಗರ ಪ್ರದೇಶವಾಗಿ ಬೆಳೆದಿರುವುದು ಚಾಳುಕ್ಯರ ಆಳ್ವಿಕೆಯ ಸಂದರ್ಭದಲ್ಲಿ. ಅದಕ್ಕಿಂತಲೂ ಮೊದಲು, ಶಾತವಾಹನರ ಹಾಗೂ ಕದಂಬರ ಆಳ್ವಿಕೆಯಲ್ಲಿ ಬಾದಾಮಿಯ ಉಲ್ಲೇಖಗಳು ಕಂಡು ಬರುತ್ತವೆ. ಇದರಿಂದಾಗಿ ಬಾದಾಮಿಯನ್ನು ಚಾಳುಕ್ಯರಿಗಷ್ಟೇ ಸೀಮಿತಗೊಳಿಸಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಚಾಳುಕ್ಯರ ಆಳ್ವಿಕೆಯ ನಂತರದ ದಿನಗಳಲ್ಲಿ ಬಾದಾಮಿಯು ರಾಜಧಾನಿ ಪಟ್ಟವನ್ನು ಕಳೆದುಕೊಂಡು ವಿವಿಧ ಅರಸು ಮನೆತನಗಳ ಆಳ್ವಿಕೆಯ ಒಂದು ಪ್ರದೇಶವಾಗಿ ಉಳಿಯಿತು. ಚಾಳುಕ್ಯರ ಆಳ್ವಿಕೆಯ ಸಂದರ್ಭದಲ್ಲೂ ವಿವಿಧ ಅವಧಿಗಳಲ್ಲಿ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ರಾಜಧಾನಿ ಪಟ್ಟಣಗಳಾಗಿ ಬೆಳೆದವು. ಅರಸು ಮನೆತನಗಳು ತಮ್ಮ ರಾಜಧಾನಿಯನ್ನು ರಾಜಕೀಯ ಹಾಗೂ ಇನ್ನಿತರ ಕಾರಣಗಳಿಗಾಗಿ ಬದಲಾಯಿಸುತ್ತಿದ್ದವು.

ಬಾದಾಮಿಗೆ ಹತ್ತಿರದಲ್ಲಿರುವ ಇನ್ನೊಂದು ನಗರ ಕೇಂದ್ರ ಪಟ್ಟದಕಲ್ಲು. ಪಟ್ಟದಕಲ್ಲು ನಗರ ಕೇಂದ್ರವಾಗಿ ಬೆಳೆದಿರುವುದು ರಾಜಕೀಯ ಕಾರಣಗಳಿಗಾಗಿ. ಕ್ರಿ.ಶ. ೬೦೨ರಲ್ಲಿ ಈ ಪ್ರದೇಶವನ್ನು ಚಾಳುಕ್ಯರು ತಮ್ಮ ಆಡಳಿತದ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡರು. ಚಾಳುಕ್ಯ ಅರಸರ ಪಟ್ಟಾಭಿಷೇಕ ಕಾರ್ಯಕ್ರಮ ಇಲ್ಲಿ ನಡೆಯುತ್ತಿತ್ತು. ಈ ಪ್ರದೇಶವನ್ನು ಕಿಸುವೊಳಲು ಅಥವಾ ಪಟ್ಟದ-ಕಿಸುವೊಳಲು ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಕ್ರಿ.ಶ. ೭ನೆಯ ಶತಮಾನದಲ್ಲಿ ಇದೊಂದು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಚಾಳುಕ್ಯರ ಅವನತಿಯ ನಂತರ ಪಟ್ಟದಕಲ್ಲು ರಾಜಕೀಯ ಕೇಂದ್ರವಾಗಿ ಉಳಿಯಲಿಲ್ಲ. ಬಾದಾಮಿಯಿಂದ  ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಐಹೊಳೆ ಇನ್ನೊಂದು ನಗರ ಕೇಂದ್ರ. ಅದರ ಹಿಂದಿನ ಹೆಸರು ಅಯ್ಯಾವೊಳೆ. ಅಲ್ಲಿದ್ದ ವ್ಯಾಪಾರಿ ಸಂಘವು ‘ಅಯ್ಯಾವೊಳೆ ಐನೂರ್ವರು’ ಎಂಬ ಹೆಸರನ್ನು ಪಡೆದು ದಕ್ಷಿಣ ಭಾರತದಲ್ಲಿ ಹಲವು ಶಾಖೆಗಳನ್ನು ಇಟ್ಟುಕೊಂಡು ವರ್ತಕರ ರಕ್ಷಣೆ, ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತಿತ್ತು. ಐಹೊಳೆಯು ವ್ಯಾಪಾರಿ ಕೇಂದ್ರವಾಗಿದ್ದರ ಜೊತೆಗೆ ಧಾರ್ಮಿಕ ಕೇಂದ್ರವೂ ಆಗಿತ್ತು. ಅಲ್ಲಿ ಕ್ರಿ.ಶ. ೬, ೭, ೮ನೆಯ ಶತಮಾನಗಳಿಗೆ ಸೇರಿದ ಹಲವಾರು ಗುಡಿಗಳಿವೆ. ಬಾದಾಮಿ-ಪಟ್ಟದಕಲ್ಲು-ಐಹೊಳೆಗಳು ಇಂದು ಪ್ರವಾಸಿ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.

ತಲಕಾಡು ಗಂಗರ ಆಳ್ವಿಕೆಯ ಸಂದರ್ಭದಲ್ಲಿ ರಾಜಧಾನಿ ಪಟ್ಟಣವಾಗಿತ್ತು. ತಲಕಾಡು ಪಟ್ಟಣದೊಳಗೆ ಅರಮನೆಗಳು, ಶ್ರೀಮಂತರ ನಿವಾಸಗಳು, ವ್ಯಾಪಾರಸ್ಥರ ಮನೆಗಳು ಮತ್ತು ಮಳಿಗೆಗಳು, ಮಾರುಕಟ್ಟೆಗಳು ಹಾಗೂ ಸಾರ್ವಜನಿಕ ಉಪಯೋಗದ ಕಟ್ಟಡಗಳು ಇದ್ದವು. ಈಗ ಲಭ್ಯವಿರುವ ಆಕರಗಳಾವುವೂ ತಲಕಾಡು ಪಟ್ಟಣದ ನಗರ ಯೋಜನೆಯ ಕುರಿತು ಮಾಹಿತಿಯನ್ನು ನೀಡುವುದಿಲ್ಲ. ಆದರೆ ಅಂದಿನ ಇತರ ಕೆಲವು ಪೇಟೆ-ಪಟ್ಟಣಗಳ ಅಧ್ಯಯನ ನಡೆಸಿದಾಗ ಸಿಗುವ ಅನೇಕ ವಿಚಾರಗಳು ತಲಕಾಡಿಗೂ ಅನ್ವಯಿಸುತ್ತದೆ. ಅದೇನೆಂದರೆ, ಒಂದೇ ಜಾತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಜನರು ಇತರರಿಗಿಂತ ಪ್ರತ್ಯೇಕವಾಗಿ ಗುಂಪು ಗುಂಪಾಗಿ ವಾಸಿಸುತ್ತಿದ್ದರು. ಬ್ರಾಹ್ಮಣರು ವಾಸಿಸುವ ಪ್ರದೇಶವನ್ನು ಅಗ್ರಹಾರ ಎಂಬುದಾಗಿ ಕರೆಯಲಾಗುತ್ತಿತ್ತು. ಅದೇ ರೀತಿ ವೇಶ್ಯೆಯರ ಮನೆಗಳಿರುವ ಪ್ರದೇಶವನ್ನು ಸೂಳೆಗೇರಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ನಾನಾ ವೃತ್ತಿಯ ಜನರು ಪ್ರತ್ಯೇಕ ವಾಗಿಯೇ ಜೀವಿಸಬೇಕಾದ ಅನಿವಾರ್ಯತೆ ಅಂದಿನ ಸಂದರ್ಭದಲ್ಲಿ ನಿರ್ಮಾಣಗೊಂಡಿತ್ತು. ನಗರ ಜೀವನ ಗ್ರಾಮೀಣ ಜೀವನದಂತೆ ಅನೇಕ ಜಾತಿ ಆಧಾರಿತ ನಿಯಮಗಳಿಗೆ ಒಳಪಟ್ಟಿತ್ತು. ಗಂಗರ ಅವನತಿಯ ಬಳಿಕ (ಸು. ಕ್ರಿ.ಶ. ೧೧ನೆಯ ಶತಮಾನ) ತಲಕಾಡು ಚೋಳರ ಅಧೀನಕ್ಕೆ ಒಳಪಟ್ಟಿತು. ಹೊಯ್ಸಳ ಅರಸ ತ್ರಿಭುವನಮಲ್ಲ ಹೊಯ್ಸಳದೇವ ತಲಕಾಡನ್ನು ಕೇಂದ್ರವನ್ನಾಗಿಟ್ಟುಕೊಂಡು ಆಳ್ವಿಕೆ ನಡೆಸಿದ. ಗಂಗರ ಆಳ್ವಿಕೆಯಲ್ಲಿ ಮಹಾನಗರವಾಗಿ ಮೆರೆದ ತಲಕಾಡು ನಂತರದ ದಿನಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳಲಾರಂಭಿಸಿತು.

ಶ್ರವಣಬೆಳ್ಗೊಳವು ಪ್ರಾಚೀನ ಕಾಲದಿಂದಲೂ ಧಾರ್ಮಿಕ ಕೇಂದ್ರವಾಗಿ ಗುರುತಿಸಿ ಕೊಂಡಿತ್ತು. ಶ್ರವಣಬೆಳ್ಗೊಳವನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗಿದೆ. ಅವುಗಳೆಂದರೆ, ಗೊಮ್ಮಟಪುರ, ದೇವರ-ಬೆಳ್ಗೊಳ, ಅಭಿನವಪೌದನಪುರ, ಜಿನಗಿರಿ, ತೀರ್ಥಗಿರಿ, ದಕ್ಷಿಣಕಾಶಿ, ಚೋಳರಾಜಪುರ, ಕಸಬಾಬೆಳ್ಗೊಳ, ಬೆಳುಗುಳ ಪಟ್ಟಣ, ಬೆಳುಗುಳನಗರಿ, ಬೆಳುಗುಳನಾಡು ಇತ್ಯಾದಿ. ಶ್ರವಣಬೆಳ್ಗೊಳವನ್ನು ಜೈನರ ದಕ್ಷಿಣ ಕಾಶಿಯೆಂದು ಕರೆಯಲಾಗಿದೆ. ಕರ್ನಾಟಕದ ಚರಿತ್ರೆಯಲ್ಲಿ ಶ್ರವಣಬೆಳ್ಗೊಳದ ಪ್ರಸ್ತಾಪ ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ. ಕ್ರಿ.ಶ. ೫ ರಿಂದ ೧೧ನೆಯ ಶತಮಾನದವರೆಗಿನ ದಾಖಲೆಗಳಲ್ಲಿ ಜೈನಧರ್ಮದ ಕುರಿತಾಗಿ ಸಿಗುವ ವಿವರಣೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಶ್ರವಣಬೆಳ್ಗೊಳವು ಹೆಚ್ಚಿನ ಪ್ರಚಾರ, ಪ್ರಸಿದ್ದಿಯನ್ನು ಪಡೆದುಕೊಂಡಿರುವುದು ಚಾವುಂಡರಾಯನಿಂದ. ಚಾವುಂಡರಾಯನು ಕ್ರಿ.ಶ. ೧೦ನೆಯ ಶತಮಾನದ ಕೊನೆಯಲ್ಲಿ ಗೊಮ್ಮಟೇಶ ಮೂರ್ತಿಯನ್ನು ನಿಲ್ಲಿಸಿದ. ಆನಂತರ ಶ್ರವಣಬೆಳ್ಗೊಳವು ಕೇವಲ ಧಾರ್ಮಿಕ ಕೇಂದ್ರ ಮಾತ್ರವಾಗಿರದೆ ವ್ಯಾಪಾರ ಕೇಂದ್ರವಾಗಿಯೂ ಬೆಳೆಯಿತು. ಅಪಾರ ಸಂಖ್ಯೆಯ ಜನರ ಆಗಮನ, ಜನವಸತಿ ಲಾಭದಾಯಕ ವ್ಯಾಪಾರಕ್ಕೆ ಎಡೆಮಾಡಿಕೊಟ್ಟಿತು. ವ್ಯಾಪಾರಸ್ಥರ ವಿವಿಧ ಚಟುವಟಿಕೆಗಳನ್ನು, ವ್ಯಾಪಾರದ ರೀತಿ ನೀತಿಗಳನ್ನು ಶ್ರವಣಬೆಳ್ಗೊಳದ ಅನೇಕ ಶಾಸನಗಳು ತಿಳಿಸುತ್ತವೆ.

ಮಧ್ಯಕಾಲೀನ ಕರ್ನಾಟಕದ ಪ್ರಮುಖ ರಾಜಧಾನಿ ಪಟ್ಟಣಗಳೆಂದರೆ, ಮಾಲ್ಕೇಡ್ ಅಥವಾ ಮಾನ್ಯಖೇಟ, ಕಲ್ಯಾಣಿ, ಬೇಲೂರು, ದೋರಸಮುದ್ರ ಹಾಗೂ ಹಂಪಿ. ಮಾಲ್ಕೇಡ್ ರಾಷ್ಟ್ರಕೂಟರ ರಾಜಧಾನಿಯಾಗಿದ್ದು, ಕ್ರಿ.ಶ. ೮ ರಿಂದ ೧೦ನೆಯ ಶತಮಾನದವರೆಗೆ ರಾಜಧಾನಿ ಪಟ್ಟಣವಾಗಿ ಹೆಸರುವಾಸಿಯಾಗಿತ್ತು. ಕ್ರಿ.ಶ. ೧೦ ರಿಂದ ೧೨ನೆಯ ಶತಮಾನದವರೆಗೆ ಕಲ್ಯಾಣಿವು ಕಲ್ಯಾಣಿ ಚಾಳುಕ್ಯರ ರಾಜಧಾನಿಯಾಗಿತ್ತು. ಬೇಲೂರು ಮತ್ತು ದೋರಸಮುದ್ರ ಕ್ರಿ.ಶ. ೧೨ ರಿಂದ ೧೪ನೆಯ ಶತಮಾನಗಳ ವಿವಿಧ ಅವಧಿಗಳಲ್ಲಿ ಹೊಯ್ಸಳರ ರಾಜಧಾನಿಗಳಾಗಿದ್ದವು. ವಿಜಯನಗರದ ರಾಜಧಾನಿಯಾಗಿದ್ದ ಹಂಪಿಯು ಕ್ರಿ.ಶ. ೧೪ ರಿಂದ ೧೭ನೆಯ ಶತಮಾನದವರೆಗೆ ರಾಜಧಾನಿ ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಈ ಎಲ್ಲ ರಾಜಧಾನಿ ಕೇಂದ್ರಗಳು ಕೇವಲ ರಾಜಕೀಯ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರದೆ ಧಾರ್ಮಿಕ ಹಾಗೂ ವ್ಯಾಪಾರದ ಕೇಂದ್ರಗಳೂ ಆಗಿದ್ದವು. ರಾಜಧಾನಿ ಪಟ್ಟಣಗಳ ಹುಟ್ಟು, ಬೆಳವಣಿಗೆ ಹಾಗೂ ಅವನತಿ ಅರಸು ಮನೆತನಗಳ ಆಳ್ವಿಕೆಯ ಸ್ವರೂಪ ಹಾಗೂ ರಾಜಕೀಯ ಬದಲಾವಣೆಗಳನ್ನು ಅವಲಂಬಿಸಿರುತ್ತಿತ್ತು.

ಮಾನ್ಯಖೇಟ ಅಥವಾ ಮಾಲ್ಕೇಡ್ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಮಾನ್ಯಖೇಟವು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನಲ್ಲಿದೆ. ಮಾನ್ಯಖೇಟವನ್ನು ವಿವಿಧ ಹೆಸರುಗಳಿಂದ ಕರೆಯಲಾಗಿದೆ. ಅವುಗಳೆಂದರೆ, ಮಾನ್ಯಖೇಟ, ಮನ್ನಖೇಡ, ಮನ್ನೆಖೇಡ, ಮಂಕಿರ್ ಹಾಗೂ ಮಾಲ್ಗೀರ್. ರಾಷ್ಟ್ರಕೂಟ ಅರಸ ಅಮೋಘವರ್ಷನು ಮಾನ್ಯಖೇಟವನ್ನು ರಾಜಧಾನಿ ಪಟ್ಟಣವನ್ನಾಗಿ ಪರಿವರ್ತನೆಗೊಳಿಸಿದ ಎನ್ನುವ ವಿಚಾರ ಶಾಸನಗಳಿಂದ ತಿಳಿದುಬರುತ್ತದೆ. ಮಾನ್ಯಖೇಟವು ಸುಂದರ ನಗರವಾಗಿತ್ತು ಎಂಬುದಾಗಿ ಅರಬ್ ಪ್ರವಾಸಿಗರಾದ ಅಲ್ ಮಸೂದಿ ಮತ್ತು ಇಬನ್ ಹೌಕಲ್ ತಮ್ಮ ವರದಿಗಳಲ್ಲಿ ತಿಳಿಸಿದ್ದಾರೆ. ಕಲ್ಯಾಣಿ ಚಾಳುಕ್ಯರು ಅಧಿಕಾರಕ್ಕೆ ಬಂದ ಬಳಿಕ ಮಾನ್ಯಖೇಟವು ಅವನತಿಯನ್ನು ಹೊಂದಲಾರಂಭಿಸಿತು. ಮಾನ್ಯಖೇಟವು ಬಾದಾಮಿ ಮತ್ತು ಪಟ್ಟದಕಲ್ಲುಗಳ ಹಾಗೆ ರಾಜಧಾನಿ ಪಟ್ಟಣವಾಗಿ ಬೆಳೆದು ರಾಜಧಾನಿ ಪಟ್ಟಣವಾಗಿಯೇ ಅವನತಿಗೊಂಡಿತು. ಮಾನ್ಯಖೇಟವು ಪ್ರಮುಖವಾಗಿ ರಾಜಧಾನಿ ಕೇಂದ್ರವಾಗಿದ್ದರೂ, ಅದರ ಜೊತೆಗೆ ವ್ಯಾಪಾರ ಹಾಗೂ ಶಿಕ್ಷಣದ ಕೇಂದ್ರವೂ ಆಗಿತ್ತು. ಅರಬ್ ಪ್ರವಾಸಿಗರಾದ ಇದ್ರಿಸಿ ಮತ್ತು ಸುಲೈಮಾನ್ ತಮ್ಮ ಪ್ರವಾಸಿ ಕಥನಗಳಲ್ಲಿ ಮಾನ್ಯಖೇಟದ ವ್ಯಾಪಾರ ಸಂಬಂಧದ ಕುರಿತು ಅನೇಕ ಮಾಹಿತಿಗಳನ್ನು ನೀಡಿದ್ದಾರೆ. ಮಾನ್ಯಖೇಟವು ಅರಬರೊಂದಿಗೆ ಆಮದು-ರಫ್ತು ವ್ಯಾಪಾರ ಸಂಬಂಧವನ್ನು ಹೊಂದಿತ್ತು. ವ್ಯಾಪಾರ ಚಟುವಟಿಕೆಯ ಜೊತೆಗೆ ಅದು ಶಿಕ್ಷಣ ಕೇಂದ್ರವೂ ಆಗಿತ್ತು. ಅದೊಂದು ಘಟಿಕ ಸ್ಥಾನವಾಗಿತ್ತು. ಅಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ರಾಷ್ಟ್ರಕೂಟ ಅರಸರು ಮಾನ್ಯಖೇಟದಲ್ಲಿ ಶೈವ, ವೈಷ್ಣವ ದೇವಾಲಯ ಗಳನ್ನು, ಜೈನ ಬಸದಿಗಳನ್ನು ಹಾಗೂ ಕೋಟೆಗಳನ್ನು ನಿರ್ಮಿಸಿದರು.

ಕಲ್ಯಾಣವು ಕಲ್ಯಾಣ ಚಾಳುಕ್ಯರ ರಾಜಧಾನಿಯಾಗಿತ್ತು. ಪ್ರಸ್ತುತ ಕಲ್ಯಾಣವು ಬೀದರ್ ಜಿಲ್ಲೆಯಲ್ಲಿದೆ. ಒಂದನೆಯ ಸೋಮೇಶ್ವರ ಮತ್ತು ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯ ಅವಧಿಗಳಲ್ಲಿ ಕಲ್ಯಾಣವು ರಾಜಧಾನಿ ಪಟ್ಟಣವಾಗಿ ಗುರುತಿಸಿಕೊಂಡಿತು. ಬಿಲ್ಹಣನ ಪ್ರಕಾರ ಸೋಮೇಶ್ವರನು ಕಲ್ಯಾಣ ನಗರವನ್ನು ಎಷ್ಟು ಮಟ್ಟಿಗೆ ಅಲಂಕರಿಸಿದನೆಂದರೆ ‘ಅಂಥ ಇನ್ನೊಂದು ನಗರವು ಹಿಂದೆ ಎಂದೂ ಇರಲಿಲ್ಲ, ಮುಂದೆ ಎಂದೂ ಇರುವುದಿಲ್ಲ’. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕೊನೆಗೆ ಹಂತದಲ್ಲಿ ಕಲ್ಯಾಣವು ಕಲಚೂರಿ ಅರಸ ಬಿಜ್ಜಳನ ವಶವಾಯಿತು. ಆಮೇಲೆ ಅದು ಬಿಜ್ಜಳನ ಕೇಂದ್ರ ಸ್ಥಾನವಾಯಿತು. ಇಂದು ಕಲ್ಯಾಣದಲ್ಲಿ ಚಾಲುಕ್ಯರ ಆಳ್ವಿಕೆಯನ್ನು ನೆನಪಿಸುವ ಸ್ಮಾರಕಗಳು ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ ಬಿಜ್ಜಳನ ಅರಮನೆ ಪ್ರದೇಶ, ಬಸವಣ್ಣನಿಗೆ ಸಂಬಂಧಿಸಿದ ಎರಡು ಗುಹೆಗಳು, ಪ್ರಭುದೇವನ ಗದ್ದುಗೆ, ಅನುಭವ ಮಂಟಪದ ಸ್ತಂಭಗಳು ಕಲ್ಯಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಕ್ರಿ.ಶ. ೧೧ ಮತ್ತು ೧೨ನೆಯ ಶತಮಾನಗಳಲ್ಲಿ ಬೇಲೂರು ಪ್ರಮುಖ ರಾಜಧಾನಿ ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಈ ಪಟ್ಟಣವು ಇಂದು ಹಾಸನ ಜಿಲ್ಲೆಯಲ್ಲಿದೆ. ಹೊಯ್ಸಳರು ಸುಮಾರು ಕ್ರಿ.ಶ. ೧೦೪೮ರ ವೇಳೆಗೆ ಬೇಲೂರನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಅದಕ್ಕಿಂತ ಮೊದಲು ಸೊಸೆವೂರ್ ಹೊಯ್ಸಳರ ರಾಜಧಾನಿಯಾಗಿತ್ತು. ಬೇಲೂರಿನ ಭೌಗೋಳಿಕ ಸನ್ನಿವೇಶಗಳು ರಾಜಧಾನಿಯ ಬದಲಾವಣೆಗೆ ಪೂರಕ ಅಂಶ ಗಳಾದವು. ರಕ್ಷಣೆಯ ದೃಷ್ಟಿಯಿಂದ ಬೇಲೂರು ಹೊಯ್ಸಳರ ಕೇಂದ್ರವಾಗಿ ಆಯ್ಕೆಗೊಂಡಿತು. ಬೆಟ್ಟುಗುಡ್ಡಗಳಿಂದಾವೃತವಾಗಿದ್ದ ಬೇಲೂರು ವ್ಯಾಪಾರ ಕೇಂದ್ರವೂ ಆಗಿತ್ತು. ವ್ಯಾಪಾರ, ವಾಣಿಜ್ಯ ಮತ್ತು ರಾಜ್ಯತಂತ್ರ ಅಗತ್ಯಗಳು ಬೇಲೂರನ್ನು ರಾಜಧಾನಿ ಕೇಂದ್ರವನ್ನಾಗಿ ಮಾರ್ಪಡಿಸಿದವು. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ಬೇಲೂರು, ದೋರಸಮುದ್ರ, ಸೋಮನಾಥಪುರ, ತಲಕಾಡು, ತೊಣ್ಣೂರು ಮೊದಲಾದ ಪ್ರದೇಶಗಳು ವ್ಯಾಪಾರ, ಧಾರ್ಮಿಕ ಹಾಗೂ ರಾಜಕೀಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದವು.

ಬೇಲೂರು ರಾಜಧಾನಿ ನಗರವಾಗಿ ಹೆಚ್ಚು ಸಮಯ ಉಳಿಯಲಿಲ್ಲ. ಕ್ರಿ.ಶ. ೧೦೬೨ರ ಶಾಸನವೊಂದು ಹೊಯ್ಸಳರು ದೋರಸಮುದ್ರದಿಂದ ಆಳ್ವಿಕೆ ನಡೆಸುತ್ತಿದ್ದುದಾಗಿ ತಿಳಿಸುತ್ತದೆ. ದೋರಸಮುದ್ರವು ಬೇಲೂರಿನಿಂದ ಹನ್ನೆರಡು ಮೈಲಿ ದೂರದಲ್ಲಿರುವ ಪ್ರದೇಶ. ಹೊಯ್ಸಳರು ಎರಡನೆಯ ಬಾರಿಗೆ ತಮ್ಮ ರಾಜಧಾನಿಯನ್ನು ಬದಲಾಯಿಸಿದರು. ಇದಕ್ಕೆ ಸ್ಪಷ್ಟ ಕಾರಣಗಳು ಸಿಗುವುದಿಲ್ಲವಾದರೂ, ಕೆಲವೊಂದು ಅಂಶಗಳು ಕಂಡು ಬರುತ್ತವೆ. ಅವುಗಳೆಂದರೆ ದೋರಸಮುದ್ರವು ಹೊಂದಿದ್ದ ವ್ಯಾಪಾರ-ವಾಣಿಜ್ಯ ಸಂಪರ್ಕಗಳು, ಜನವಸತಿ, ನೀರಾವರಿ ಸೌಲಭ್ಯ ಮುಂತಾದವು. ಯಾಗಚಿ ನದಿಯ ನೀರನ್ನು ದೋರಸಮುದ್ರದಲ್ಲಿ ಬಳಸಲಾಗುತ್ತಿತ್ತು. ದೋರಸಮುದ್ರವನ್ನು ಹಳೇಬಿಡು ಎನ್ನುವ ಹೆಸರಿನಿಂದ ಕರೆಯಲಾ ಗುತ್ತಿದೆ. ಹಳೇಬೀಡು ಹಾಸನ ಜಿಲ್ಲೆಯಲ್ಲಿದೆ. ಕ್ರಿ.ಶ. ೧೦೬೨ರಲ್ಲಿ ಹೊಯ್ಸಳ ಅರಸ ವಿನಯಾದಿತ್ಯ ತನ್ನ ರಾಜಧಾನಿಯನ್ನು ಬೇಲೂರಿನಿಂದ ದೋರಸಮುದ್ರಕ್ಕೆ ಬದಲಾಯಿಸಿದ. ಅಂದಿನಿಂದ ದೋರಸಮುದ್ರ ರಾಜಧಾನಿ ಪಟ್ಟಣವಾಯಿತು. ಅನೇಕ ದೇವಾಲಯಗಳು, ಬಸದಿಗಳು ನಿರ್ಮಾಣಗೊಂಡವು. ಆಡಳಿತ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಈ ಪ್ರದೇಶ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ದೋರಸಮುದ್ರವು ಬೇಲೂರಿನೊಂದಿಗೆ ಸಂಪರ್ಕವನ್ನು ಹೊಂದಿತ್ತು. ಯಾಗಜಿ ನದಿಯ ನೀರು ಕಾಲುವೆಯ ಮೂಲಕ ಬೇಲೂರಿನಿಂದ ದೋರಸಮುದ್ರಕ್ಕೆ ಬರುತ್ತಿತ್ತು. ಕ್ರಿ.ಶ. ೧೩೦೦ರ ಹೊಯ್ಸಳರ ಶಾಸನದಲ್ಲಿ ಯಾಗಚಿ ನದಿಯ ಕುರಿತು ಹಾಗೂ ಯಾಗಚಿ ನದಿಗೆ ತೋಡಿದ ನಾಲೆಯ ಕುರಿತು ಮಾಹಿತಿ ಇದೆ. ಕ್ರಿ.ಶ. ೧೨ನೆಯ ಶತಮಾನದಿಂದ ದೋರಸಮುದ್ರ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯಿತು. ಬಿರೂರು, ಅರಸೀಕೆರೆ, ಶ್ರವಣಬೆಳಗೊಳ ಮುಂತಾದ ಪ್ರದೇಶಗಳಿಂದ ವ್ಯಾಪಾರಸ್ಥರು ದೋರಸಮುದ್ರದಕ್ಕೆ ಬರುತ್ತಿದ್ದರು. ಕ್ರಿ.ಶ. ೧೪ನೆಯ ಶತಮಾನದ ಆರಂಭದಲ್ಲಿ ದೋರಸಮುದ್ರವು ತನ್ನ ಅವನತಿಯ ದಿನಗಳನ್ನು ಎದುರಿಸಲಾರಂಭಿಸಿತು.

ಹಂಪೆಯು ಮಧ್ಯಯುಗೀನ ಭಾರತದ ಪ್ರಮುಖ ಪಟ್ಟಣಗಳಲ್ಲೊಂದು. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ತುಂಗಭದ್ರಾ ನದಿಯ ದಕ್ಷಿಣ ದಂಡೆಯಲ್ಲಿರುವ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಕ್ರಿ.ಶ. ೧೩ನೆಯ ಶತಮಾನದವರೆಗೆ ಧಾರ್ಮಿಕ ನೆಲೆಯಾಗಿದ್ದ ಹಂಪಿ ೧೪ನೆಯ ಶತಮಾನದಿಂದ ರಾಜಕೀಯ ಕೇಂದ್ರವಾಗಿ ಬೆಳೆಯಲಾರಂಭಿಸಿತು. ಪ್ರಾಚೀನಕಾಲದಿಂದಲೂ ವಿಜಯನಗರದ ಪ್ರದೇಶ ಪಂಪಾಕ್ಷೇತ್ರ ಅಥವಾ ಪಂಪಾತೀರ್ಥ, ಪಂಪಾನಗರಿ, ವಿರೂಪಾಕ್ಷ ತೀರ್ಥ, ಭಾಸ್ಕರ ತೀರ್ಥ, ಹಂಪೆ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಹಂಪೆಯನ್ನು ಶಾಸನಗಳಲ್ಲಿ ವಿಜಯನಗರ ಪಟ್ಟಣವೆಂದು ಉಲ್ಲೇಖಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ವಿಜಯನಗರ ಪಟ್ಟಣವು ಪಂಪಾಕ್ಷೇತ್ರದಲ್ಲಿ ಇದ್ದ ಕಾರಣ ಮುಂದೆ ಇದುವೇ ಹಂಪೆಯಾಗಿ ಮಾರ್ಪಾಡಾಯಿತು. ವಿಜಯನಗರದ ಆರಂಭಿಕ ಮನೆತನದ ಅರಸರು ಆನೆಗೊಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಆನೆಗೊಂದಿಯಿಂದ ರಾಜಧಾನಿಯನ್ನು ಹಂಪಿಗೆ ವರ್ಗಾಯಿಸಲ್ಪಟ್ಟ ನಂತರ ಹಂಪಿ ರಾಜಧಾನಿ ನಗರವಾಗಿ ಬೆಳೆಯಲಾರಂಭಿಸಿತು. ಸಂಗಮ, ಸಾಳುವ ಮತ್ತು ತುಳುವ ಶಾಖೆಗಳಿಗೆ ಹಂಪಿಯೇ ಕೇಂದ್ರ ಸ್ಥಾನವಾಗಿತ್ತು. ಆರಂಭದಲ್ಲಿ ಗುರುಗಳಾದ ವಿದ್ಯಾರಣ್ಯರ ಜ್ಞಾಪಕಾರ್ಥ ವಿದ್ಯಾನಗರವೆಂದು ಹೆಸರಿಸಲಾಯಿತು. ನಂತರ ವಿದ್ಯಾನಗರವು ವಿಜಯನಗರವಾಗಿ ಮಾರ್ಪಾಡಾಯಿತು. ಹರಿಹರ-ಬುಕ್ಕರಿಂದ ವಿಜಯನಗರ ಸ್ಥಾಪಿತವಾಯಿತು. ಹಂಪಿಯು ಸ್ವಾಭಾವಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಸುರಕ್ಷತೆಯ ದೃಷ್ಟಿಯಿಂದ ಅರಸು ಮನೆತನಗಳಿಗೆ ಇಂಥ ಪ್ರದೇಶಗಳು ಅವಶ್ಯಕ ವಾಗುತ್ತಿದ್ದವು.

ಐತಿಹ್ಯಗಳು ಮತ್ತು ಸ್ಥಳ ಪುರಾಣಗಳು ಹಂಪಿಯ ಸುತ್ತಮುತ್ತಲ ಪ್ರದೇಶದ ಪ್ರಾಚೀನತೆ ಯನ್ನು ರಾಮಾಯಣ ಮತ್ತು ಅದಕ್ಕೂ ಹಿಂದಿನ ಕಾಲಕ್ಕೆ ಒಯ್ಯುತ್ತವೆ. ರಾಮಾಯಣ ಮತ್ತು ಸ್ಕಂದ ಪುರಾಣಗಳಲ್ಲಿ ಹಂಪೆಯನ್ನು ಕಿಷ್ಕಿಂದೆಯೆಂದು ಕರೆಯಲಾಗಿದೆ. ಹಂಪಿಯ ಹೇಮಕೂಟ ಹಾಗೂ ಅದರ ನೆರೆಹೊರೆಯ ಪ್ರದೇಶಗಳಲ್ಲಿ ಕಂಡುಬರುವ ದೇವಾಲಯ ವಾಸ್ತುಶಿಲ್ಪಗಳನ್ನು ನೋಡುವಾಗ ಅದೊಂದು ಜೈನಕೇಂದ್ರವಾಗಿತ್ತೆಂದು ತಿಳಿದು ಬರುತ್ತದೆ. ಹಂಪೆಯ ಹೇಮಕೂಟ, ಕಮಲಾಪುರ, ಗಜಶಾಲೆಯ ಹಿಂಭಾಗ ಮತ್ತು ವಿರೂಪಾಕ್ಷ ದೇವಾಲಯದ ಉತ್ತರ ಭಾಗಗಳಲ್ಲಿ ಜೈನ ಬಸದಿಗಳು ಕಂಡು ಬರುತ್ತವೆ. ಹೊಯ್ಸಳ ಮೂರನೆಯ ಬಲ್ಲಾಳ ಹಂಪೆಯನ್ನು ಸೈನಿಕ ನೆಲೆಯನ್ನಾಗಿ ಮಾಡಿಕೊಂಡಿದ್ದ. ಉತ್ತರಿಂದ ಬರುವ ದಾಳಿಗೆ ಪ್ರತಿಯಾಗಿ ಸಜ್ಜಾಗಲು ಇದು ಅನಿವಾರ್ಯವಾಗಿತ್ತು. ಈ ಕಾರಣಕ್ಕಾಗಿ ಹಂಪೆ ಪ್ರದೇಶದಲ್ಲಿ ಹೊಸಪಟ್ಟಣವೆಂಬ ಹೆಸರಿನ ಉಪ ರಾಜಧಾನಿಯನ್ನು  ನಿರ್ಮಿಸಿದ. ಬಲ್ಲಾಳ ನಿರ್ಮಿತ ಈ ಹೊಸಪಟ್ಟಣವನ್ನು ಆ ಕಾಲದ ಶಾಸನಗಳು ಹೊಸ ಹಂಪೆಯ ಪಟ್ಟಣ, ಹೊಸನಾಡು, ಹೊಸಬೆಟ್ಟ, ವೀರವಿಜಯ ವಿರೂಪಾಕ್ಷಪುರ, ವಿರೂಪಾಕ್ಷ ಹೊಸಪಟ್ಟಣ, ವಿರೂಪಾಕ್ಷಪಾದ ಮುಂತಾದ ಹೆಸರುಗಳಿಂದ ಕರೆದಿವೆ.

ವಿದೇಶಿ ಪ್ರವಾಸಿಗರಾದ ನಿಕೊಲೆ-ದಿ-ಕಾಂಟಿ, ಅಬ್ದುಲ್ ರಜಾಕ್, ದುಆರ್ತೆ-ಬಾರ್ಬೊಸಾ, ಡೊಮಿಂಗೋ ಪಾಯೆಸ್, ನ್ಯೂನಿಜ್ ಮೊದಲಾದವರು ಈ ರಾಜಧಾನಿ ಪಟ್ಟಣವನ್ನು ವಿಜಯನಗರವೆಂದು ಕರೆದಿದ್ದಾರೆ. ನಿಕೊಲೆ-ದಿ-ಕಾಂಟಿಯು ನಗರದ ವಿಸ್ತಾರವನ್ನು ಕುರಿತು, ‘ನಗರದ ಸುತ್ತಳತೆ ಅರವತ್ತು ಮೈಲಿ, ಸುತ್ತ ಕಟ್ಟಿರುವ ಕೋಟೆಯು ಪರ್ವತಗಳಷ್ಟು ಎತ್ತರವಾಗಿದ್ದು, ಅವುಗಳ ಬುಡದಲ್ಲಿರುವ ಕಣಿವೆಗಳನ್ನು ಆಕ್ರಮಿಸಿ ಕೊಂಡಿವೆ’ ಎಂದಿದ್ದಾನೆ. ಅಬ್ದುಲ್ ರಜಾಕನು, ‘ವಿಜಯನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ, ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳುದುರ್ಗಗಳೂ, ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ’ ಎಂದಿದ್ದಾನೆ. ಡೊಮಿಂಗೊ ಪಾಯೆಸ್‌ನು ಹಂಪಿಯು ಕೋಟೆಗಳಿಂದಾವೃತವಾದ ಪಟ್ಟಣವೆಂದು ಹೇಳಿದ್ದಾನೆ.

ಹಂಪೆಗೆ ಹೊಂದಿಕೊಂಡಿದ್ದ ಅನೇಕ ಚಿಕ್ಕ ಪುಟ್ಟ ಪಟ್ಟಣಗಳಿದ್ದವು. ಅವುಗಳನ್ನು ಹಂಪಿಯ ಉಪ ನಗರಗಳೆಂದು ಕರೆಯಲಾಗಿದೆ. ಅವುಗಳೆಂದರೆ, ಕಾಮಲಾಪುರ, ಕೃಷ್ಣಾಪುರ, ಅಚ್ಯುತಾಪುರ, ವಿಠಲಾಪುರ, ವಿರೂಪಾಕ್ಷಪುರ, ಮಲಪನಗುಡಿ, ಅನಂತಶಯನಗುಡಿ, ತಿರುಮಲಾದೇವಿ ಪಟ್ಟಣ, ವರದರಾಜಮ್ಮನ ಪಟ್ಟಣ (ಅನಂತಾಪುರ), ವೆಂಕಟಾಪುರ, ಆನೆಗೊಂದಿ, ನಿಂಬಾಪುರ, ನಾಗಲಾಪುರ ಇತ್ಯಾದಿ. ಇವೆಲ್ಲವೂ ಏಳುಸುತ್ತಿನ ಕೋಟೆಯೊಳಗೆ  ಬರುವ ಪ್ರದೇಶಗಳು. ಆದರೆ ಏಳುಸುತ್ತಿನ ಕೋಟೆಯನ್ನು ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ಇವುಗಳಲ್ಲಿ ಹಂಪೆ, ಅಚ್ಯುತಾಪುರ, ಕೃಷ್ಣಾಪುರ ಮತ್ತು ವಿಠಲಾಪುರಗಳು ರಾಜಧಾನಿ, ಅರಮನೆ, ರಾಜರ ವಾಸಸ್ಥಾನ, ಅಧಿಕಾರಿಗಳು, ಮಂತ್ರಿಗಳು, ಪ್ರಮುಖರು ವಾಸಿಸುವ ಕೇಂದ್ರಗಳಾಗಿದ್ದವು. ಈ ಉಪನಗರಗಳಲ್ಲಿ ದೇವಾಲಯಗಳನ್ನು ಕಟ್ಟಿಸಿ ಅದಕ್ಕೆ ಪೂರಕವಾಗಿ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಬಜಾರುಗಳನ್ನು ನಿರ್ಮಿಸಲಾಗಿತ್ತು. ಮಲಪನಗುಡಿ, ವರದರಾಜಮ್ಮನ ಪಟ್ಟಣ, ಶಾಲೆ ತಿರುಮಲರಾಯ ಪಟ್ಟಣ (ಅನಂತಶಯನ ಗುಡಿ), ವೆಂಕಟಾಪುರ, ನಾಗಲಾಪುರ ಮತ್ತು ನಿಂಬಾಪುರಗಳು ವ್ಯವಸಾಯ ಉತ್ಪನ್ನಗಳನ್ನು ಉತ್ಪಾದಿಸುವ ಕೇಂದ್ರಗಳಾಗಿದ್ದವು. ಹಂಪೆಯ ದೈನಂದಿನ ಅಗತ್ಯ ವಸ್ತುಗಳನ್ನು ಈ ಉಪನಗರಗಳು ಪೂರೈಸುತ್ತಿದ್ದವು. ಈ ಉಪನಗರಗಳನ್ನು ಕೃಷಿ ಉತ್ಪನ್ನ ವಲಯಗಳೆಂದು ಗುರುತಿಸಬಹುದಾಗಿದೆ. ಕೋಟೆ ಗೋಡೆಯ ಹೊರಗಿರುವ ಮತ್ತು ರಾಜ್ಯದೊಳಗಿನ ನಗರ ಪ್ರದೇಶಗಳು ಹಂಪೆಯ ಆಡಳಿತಕ್ಕೆ ಒಳಪಟ್ಟಿದ್ದವು. ನಿಗದಿಪಡಿಸಿದ ವಸ್ತುಗಳನ್ನು ಅವುಗಳು ಸಲ್ಲಿಸಬೇಕಾಗುತ್ತಿತ್ತು. ರಾಜಧಾನಿ ಪಟ್ಟಣದ ಉಪನಗರಗಳು ರಾಜಧಾನಿಯ ಬೇಡಿಕೆಯನ್ನು ಪೂರೈಸುವ ಕೇಂದ್ರಗಳಾಗಿದ್ದವು.

ಹಂಪಿಯು ರಾಜಧಾನಿ ಪಟ್ಟಣವಾಗುವುದರ ಜೊತೆಗೆ ಇನ್ನಿತರ ಹಲವಾರು ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಅದು ಆಡಳಿತ ಕೇಂದ್ರವಾಗಿ, ಧಾರ್ಮಿಕ ಕೇಂದ್ರವಾಗಿ ಹಾಗೂ ವ್ಯಾಪಾರ-ವಾಣಿಜ್ಯದ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಒಂದು ನಗರ ಪ್ರದೇಶ ಹಲವಾರು ಚಟುವಟಿಕೆಗಳ ಕೇಂದ್ರವಾಗಿರುವುದಕ್ಕೆ ಹಂಪಿಯು ಉತ್ತಮ ನಿದರ್ಶನವಾಗಿದೆ. ಅರಸುಮನೆತನದವರು, ಮಂತ್ರಿಗಳು ಹಾಗೂ ಅಧಿಕಾರಿಗಳು ವಾಸಿಸುವ ಮನೆಗಳು ಹಂಪಿಯಲ್ಲಿ ಕೇಂದ್ರೀಕೃತವಾಗಿದ್ದವು. ಆಡಳಿತದ ಅನುಕೂಲಗೋಸ್ಕರ ಹಲವಾರು ಆಡಳಿತ ಸೌಧಗಳನ್ನು ನಿರ್ಮಿಸಲಾಗಿತ್ತು. ಶೈವ ಮತ್ತು ವೈಷ್ಣವ ಪಂಥಗಳಿಗೆ ಸಂಬಂಧಿಸಿದ ಅನೇಕ ದೇವಾಲಯಗಳು ಹಂಪೆಯಲ್ಲಿ ನಿರ್ಮಾಣಗೊಂಡವು. ಉದಾಹರಣೆಗೆ, ವಿರೂಪಾಕ್ಷ ದೇವಸ್ಥಾನ, ವೀರಭದ್ರ ದೇವಸ್ಥಾನ, ವಿಠಲ ದೇವಸ್ಥಾನ, ಪಟ್ಟಾಭಿರಾಮ ದೇವಸ್ಥಾನ ಇತ್ಯಾದಿ. ಕ್ರಿ.ಶ. ಸುಮಾರು ೧೪ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆ ಹಂಪೆಯು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಪ್ರತಿಯೊಂದು ಪ್ರಮುಖ ದೇವಾಲಯದ ಎದುರು ವ್ಯಾಪಾರ ಮಳಿಗೆಗಳಿರುವ ಬಜಾರುಗಳು ನಿರ್ಮಾಣಗೊಂಡು ವ್ಯಾಪಾರವನ್ನು ಚುರುಕುಗೊಳಿಸಿದವು. ವ್ಯಾಪಾರದ ಸಲುವಾಗಿ ಸಾಲು ಮಂಟಪಗಳಿಂದ ನಿರ್ಮಿತವಾದ ಬಜಾರುಗಳಿದ್ದವು. ನೀರಿನ ಅನುಕೂಲತೆಗಾಗಿ ವಿಶಾಲ ಕೊಳ್ಳಗಳಿದ್ದವು. ಅರಬ್, ಪರ್ಷಿಯನ್ ಹಾಗೂ ಯುರೋಪ್ ದೇಶಗಳ ವ್ಯಾಪಾರಸ್ಥರು ಹಂಪಿಯೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿದ್ದರು. ಈ ರೀತಿಯಾಗಿ ಹಂಪಿಯು ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ನಗರ ಪ್ರದೇಶವಾಗಿತ್ತು. ಕ್ರಿ.ಶ. ೧೫೬೫ರ ತಾಳಿಕೋಟೆ ಕದನದ ಬಳಿಕ ಹಂಪೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ತಾಳಿಕೋಟೆ ಕದನದ ಬಳಿಕ ರಾಜಧಾನಿಯನ್ನು ಹಂಪಿಯಿಂದ ಪೆನುಕೊಂಡಾಕ್ಕೆ ಸ್ಥಳಾಂತರಿಸಲಾಯಿತು.

ವಿಜಯನಗರ ಅರಸರ ಆಳ್ವಿಕೆಯಲ್ಲಿ ಪಶ್ಚಿಮ ಕರಾವಳಿಯ ಬಂದರು ಪಟ್ಟಣಗಳು ಹೆಚ್ಚಿನ ಲಕಿಜಿತ್ಸಾಹವನ್ನು ಕಂಡವು. ಅಂಕೋಲ, ಮಿರ್ಜಾನ್, ಹೊನ್ನಾವರ, ಭಟ್ಕಳ, ಬಾರ್ಕೂರು, ಬಸ್ರೂರು, ಮಂಗಳೂರು ಮುಂತಾದವು ಅಂದಿನ ಪ್ರಮುಖ ಬಂದರು ಪಟ್ಟಣಗಳಾಗಿದ್ದವು. ಧಾರ್ಮಿಕ ಕೇಂದ್ರಗಳಲ್ಲಿ, ತಲಕಾಡು, ಮೇಲುಕೋಟೆ, ಗುಬ್ಬಿ, ಮೂಡಬಿದಿರೆ, ಕಾರ್ಕಳ, ವೇಣೂರು, ಮುಳುಬಾಗಿಲು, ಕೋಲಾರ ಮುಂತಾದವು ಪ್ರಮುಖವಾಗಿದ್ದವು. ಹಂಪಿ, ತೆರಕಣಾಂಬಿ, ತಗಡೂರು, ಮುಳುಬಾಗಿಲು, ಚಿತ್ರದುರ್ಗ, ಮಧುಗಿರಿ, ಗೇರುಸೊಪ್ಪೆ, ಹಾಡುಹಳ್ಳಿ ಮುಂತಾದವು ರಾಜಕೀಯ ಕೇಂದ್ರಗಳಾಗಿದ್ದವು. ಕೋಟೆಯಿಂದ ಆವೃತವಾದ ನಗರಗಳಲ್ಲಿ ಹೆಗ್ಗಡದೇವನಕೋಟೆ, ಶ್ರೀರಂಗಪಟ್ಟಣ, ತೇಕಲ, ಸೂಗೂರು, ಉಚ್ಛಂಗಿ, ಚಿಮತ್ತೂರು, ಬಾದಾಮಿ, ಪೆನುಕೊಂಡ, ಚಂದ್ರಗಿರಿ ಹಾಗೂ ಹಂಪೆ ಮುಖ್ಯವಾದವು.

ಬಹಮನಿಗಳ ಮತ್ತು ಬಿಜಾಪುರದ ಆದಿಲ್‌ಶಾಹಿಗಳ ಆಳ್ವಿಕೆಯ ಸಂದರ್ಭದಲ್ಲಿ ಅನೇಕ ಪೇಟೆ-ಪಟ್ಟಣಗಳು ಹೊಸ ರೂಪವನ್ನು ಪಡೆದುಕೊಂಡವು. ಅವುಗಳಲ್ಲಿ ಬೀದರ್, ಬಿಜಾಪುರ, ಅಹಮದ್‌ನಗರ ಮತ್ತು ಗೋಲ್ಕೊಂಡ ಮುಖ್ಯವಾದವು. ಇವೆಲ್ಲವೂ ರಾಜಕೀಯವಾಗಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡವು. ಇವು ಆಯಾ ಪ್ರಾಂತಗಳ ರಾಜಧಾನಿಗಳಾಗಿದ್ದವು. ಕೆಲವು ನಗರಗಳು ವಾಣಿಜ್ಯ ಕೇಂದ್ರಗಳಾಗಿ ವರ್ತಿಸಿದವು. ಗೋವಾ, ಚೌಲ್, ಶೋಲಾಪುರ, ದಾಭೋಲ್, ರಾಯಚೂರು, ಬೆಂಗಳೂರು, ಹುಬ್ಬಳ್ಳಿ ಮೊದಲಾದವು ಪ್ರಮುಖ ವಾಣಿಜ್ಯ ನಗರಗಳಾಗಿದ್ದವು. ಬಹುತೇಕ ನಗರಗಳು ಕೋಟೆಯೊಳಗಿದ್ದವು. ಅಗಳು, ಆಳುವೇರಿ, ಬಾಗಿಲು, ರಕ್ಷಣಾ ಗೋಪುರಗಳು, ದೇವಾಲಯಗಳು, ಮಸೀದಿಗಳು, ಧಾನ್ಯಗಳನ್ನು ತುಂಬುವ ಹಗೇವುಗಳು, ವಿಶ್ರಾಂತಿಧಾಮಗಳು, ಅಂಗಡಿ, ಪೇಟೆ ಬೀದಿಗಳು, ಇತ್ಯಾದಿಗಳಿದ್ದವು. ಒಂದಿಲ್ಲೊಂದು ಸಮಯದಲ್ಲಿ ರಾಜಧಾನಿಗಳಾಗಿದ್ದ ಗುಲ್ಬರ್ಗಾ, ಬೀದರ್ ಮತ್ತು ಬಿಜಾಪುರಗಳಲ್ಲಿ ರಾಜರ ಅರಮನೆಗಳು, ಶ್ರೀಮಂತರ ಸೌಧಗಳು, ವರ್ತಕರು ಮತ್ತಿತರ ಶ್ರೀಮಂತರ ಭವ್ಯವಾದ ಮನೆಗಳು, ಸೈನಿಕರ ಹಾಗೂ ಇನ್ನಿತರ ವರ್ಗಗಳ ಜನರ ಮನೆಗಳ ಸಾಲು, ಅಂಗಡಿ ಬೀದಿಗಳು ಹಾಗೂ ಮಾರಾಟ ಕೇಂದ್ರಗಳು ಇದ್ದವು. ಪ್ರತಿಯೊಂದು ಜಾತಿ ಮತ್ತು ವೃತ್ತಿಗೆ ಬೇರೆ ಬೇರೆ ವಸತಿ ಬಡಾವಣೆಗಳಿದ್ದವು. ಬೀದರ್ ಮತ್ತು ಬಿಜಾಪುರ ನಗರಗಳ ಬಗ್ಗೆ ಹಾಗೂ ಅವುಗಳ ನಗರ ಯೋಜನೆಯ ಕುರಿತು ವಿದೇಶಿ ಪ್ರವಾಸಿಗರು ತಮ್ಮ ಕಥನಗಳಲ್ಲಿ ವಿವರಿಸಿದ್ದಾರೆ. ಈ ನಗರಗಳಲ್ಲಿ ಸಾರ್ವಜನಿಕ ಉದ್ಯಾನಗಳು, ಚೌಕಗಳು, ಅಂಗಳಗಳು ಮತ್ತು ಸ್ನಾನದ ಕೊಳಗಳು ಇದ್ದವು. ಬಹಮನಿಗಳು ನೀರಿನ ಪೂರೈಕೆಯ ಬಗ್ಗೆ ಹೆಚ್ಚಿನ  ಕಾಳಜಿ ತೋರಿಸುತ್ತಿದ್ದರು. ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ಬದಲಾಯಿಸಿದ್ದಕ್ಕೆ ಒಂದು ಕಾರಣ ಗುಲ್ಬರ್ಗದಲ್ಲಿ ನೀರಿಗೆ ಅಭಾವವಿದ್ದುದು.

ವಿಜಯನಗರದ ಅವನತಿಯ ಬಳಿಕ ಕರ್ನಾಟಕ ಚರಿತ್ರೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಯನ್ನು ಗಳಿಸಿಕೊಂಡ ನಗರಗಳಲ್ಲಿ ಕೆಳದಿ, ಚಿತ್ರದುರ್ಗ, ಮೈಸೂರು ಹಾಗೂ ಬೆಂಗಳೂರು ಪ್ರಮುಖವಾದವು. ಇವೆಲ್ಲವೂ ವಿಜಯನಗರದ ಆಳ್ವಿಕೆಯ ಸಂದರ್ಭದಲ್ಲಿಯೇ ಅಸ್ತಿತ್ವದಲ್ಲಿದ್ದವಾದರೂ ವಿಜಯನಗರೋತ್ತರ ಅವಧಿಯಲ್ಲಿ ಸ್ವತಂತ್ರ ಘಟಕಗಳಾಗಿ, ರಾಜಧಾನಿ ಪಟ್ಟಣಗಳಾಗಿ ಅಭಿವೃದ್ದಿ ಹೊಂದಿದವು. ಕೆಳದಿಯ ನಾಯಕರು, ಚಿತ್ರದುರ್ಗ ನಾಯಕರು, ಯಲಹಂಕ ನಾಯಕರು ಮತ್ತು ಮೈಸೂರು ಒಡೆಯರು ವಿಜಯನಗರ ಸಂದರ್ಭದಲ್ಲಿ ಮತ್ತು ವಿಜಯನಗರೋತ್ತರ ಸಂದರ್ಭದಲ್ಲಿ ಪ್ರಮುಖವಾಗಿ ಗುರುತಿಸಿ ಕೊಂಡ ಅರಸು ಮನೆತನಗಳು. ಅವರ ರಾಜಧಾನಿ ಕೇಂದ್ರಗಳು ಮತ್ತು ವಾಣಿಜ್ಯ ಕೇಂದ್ರಗಳು ವಿಜಯನಗರೋತ್ತರ ಸಂದರ್ಭದ ಪ್ರಮುಖ ನಗರ ಕೇಂದ್ರಗಳಾಗಿ ಗುರುತಿಸಿಕೊಂಡವು. ಕೆಳದಿಯ ಅರಸರು ತಮ್ಮ ರಾಜಧಾನಿಯನ್ನು ಎರಡು ಬಾರಿ ವರ್ಗಾಯಿಸಿದರು. ಅವುಗಳೆಂದರೆ ಕೆಳದಿಯಿಂದ ಇಕ್ಕೇರಿಗೆ ಹಾಗೂ ಇಕ್ಕೇರಿಯಿಂದ ಬಿದನೂರಿಗೆ. ಇದರಿಂದಾಗಿ ಇಕ್ಕೇರಿ ಮತ್ತು ಬಿದನೂರುಗಳು ನಗರ ಪ್ರದೇಶಗಳಾಗಿ ಬೆಳೆಯುವಂತಾಯಿತು. ಇಕ್ಕೇರಿಯಲ್ಲಿ ಅರಮನೆ, ಕೋಟೆ, ಮಾರುಕಟ್ಟೆ, ಪೊಲೀಸ್ ಠಾಣೆ, ಕೋಶಾಗಾರ, ಉಗ್ರಾಣ, ಕುದುರೆ ಮತ್ತು ಆನೆ ಲಾಯಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲಾಯಿತು.

ಚಿತ್ರದುರ್ಗದ ನಾಯಕರು ಚಿತ್ರದುರ್ಗವನ್ನು ಕೋಟೆಯಿಂದಾವೃತವಾದ ಪಟ್ಟಣವನ್ನಾಗಿ ಕಟ್ಟಿದರು. ಚಿತ್ರದುರ್ಗವು ಮಿಲಿಟರಿ ದೃಷ್ಟಿಯಿಂದ ಮಹತ್ವವನ್ನು ಪಡೆದುಕೊಂಡ ಪಟ್ಟಣ. ಚಿತ್ರದುರ್ಗದ್ದು ಭೂವೈಜ್ಞಾನಿಕ ಮಹತ್ವ ಪಡೆದ ಭೌಗೋಳಿಕ ಪರಿಸರ. ಚಿತ್ರದುರ್ಗ ಪಟ್ಟಣವು ಬೆಟ್ಟಸಾಲು, ಏಳುಸುತ್ತಿನ ಕೋಟೆ, ಜಲಾಶಯ, ಅಗಳು, ದೇವಾಲಯ, ಮಠ, ಮಂದಿರ ಮುಂತಾದವುಗಳಿಂದ ಕೂಡಿದ್ದಾಗಿದ್ದು, ಇವುಗಳಲ್ಲಿ ಹೆಚ್ಚಿನವು ಅಲ್ಲಿನ ನಾಯಕರ  ಆಳ್ವಿಕೆಯ ಸಂದರ್ಭದಲ್ಲಿ ನಿರ್ಮಾಣಗೊಂಡಂತವು. ಚಿತ್ರದುರ್ಗವನ್ನು ಚಿನ್ನದಗರಿ ಎಂತಲೂ ಕರೆಯಲಾಗಿದೆ. ಚಿತ್ರದುರ್ಗವು ಪ್ರಾಚೀನ ಕಾಲದಿಂದಲೇ ವಿದ್ಯಾಕೇಂದ್ರವಾಗಿ ಗುರುತಿಸಿ ಕೊಂಡಿತ್ತು. ಆದರೆ ಇಂದಿಗೂ ಚಿತ್ರದುರ್ಗ ಗುರುತಿಸಿಕೊಳ್ಳುತ್ತಿರುವುದು ಅಲ್ಲಿರುವ ಏಳುಸುತ್ತಿನ ಕೋಟೆಯ ಮೂಲಕ.

ಬೆಂಗಳೂರು ಯಲಹಂಕನಾಡು ಪ್ರಭುಗಳ ಆಳ್ವಿಕೆಯ ಸಂದರ್ಭದಿಂದ ಪ್ರಮುಖ ಪಟ್ಟಣ ಕೇಂದ್ರವಾಗಿ ಗುರುತಿಸಿಕೊಂಡಿತು. ಒಂದನೆಯ ಕೆಂಪೇಗೌಡನು ಕ್ರಿ.ಶ. ೧೫೩೭ರಲ್ಲಿ ಬೆಂಗಳೂರಿನಲ್ಲಿ ಒಂದು ಮಣ್ಣಿನ ಕೋಟೆಯನ್ನು ನಿರ್ಮಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಹಳೆಯ ಬಂಗಳೂರು (ಬೆಂಗಳೂರು), ವೊರ್ತೂರು, ಯಲಹಂಕ, ಬೇವೂರು, ಹಲಸೂರು, ತಂಚೇರಿ, ತಲೆಗಟ್ಟಿಪುರ, ದಿಗರಿ, ಕುಂಬಳಗೋಡು, ಕನಹಳ್ಳಿ, ಬಾಣಾವರ ಮತ್ತು ಹೆಸರುಘಟ್ಟ ಈ ಸ್ಥಳಗಳು ಒಂದನೆಯ ಕೆಂಪೇಗೌಡನ ಅಧೀನದಲ್ಲಿದ್ದವು. ಬೆಂಗಳೂರು ನಗರಕ್ಕೆ ದ್ವಾರಗಳು, ಗೋಪುರಗಳು, ರಾಜ ಬೀದಿಗಳು, ಕೆರೆಗಳು, ಒಂದೊಂದು ವೃತ್ತಿಯವರಿಗೂ ಒಂದೊಂದು ಪೇಟೆ ಮುಂತಾದವು ಕೆಂಪೇಗೌಡನ ಆಳ್ವಿಕೆಯಲ್ಲಿ ನಿರ್ಮಾಣ ಗೊಂಡವು. ನಗರಕ್ಕೆ ಪ್ರವೇಶಿಸಲು ಅನೇಕ ದ್ವಾರಗಳಿದ್ದವು. ಅವುಗಳೆಂದರೆ ಹಲಸೂರು ದ್ವಾರ (ಪೂರ್ವ), ಯಲಹಂಕ ದ್ವಾರ (ಉತ್ತರ) ಹಾಗೂ ಕೆಂಗೇರಿ ದ್ವಾರ (ಪಶ್ಚಿಮ). ಮುಖ್ಯ ದ್ವಾರಗಳಲ್ಲದೆ ‘ದಿಡ್ಡಿ’ ಎಂದು ಕರೆಯಲಾಗುತ್ತಿದ್ದ ಕೆಲವು ಚಿಕ್ಕ ದ್ವಾರಗಳೂ ಇದ್ದವು. ಶೈವ, ವೈಷ್ಣವ, ಜೈನ, ವಿಶ್ವಕರ್ಮ, ಮುಸ್ಲಿಂ ಇತ್ಯಾದಿ ಸಮುದಾಯದವರು ಪ್ರತ್ಯೇಕ ವಿಭಾಗಗಳಲ್ಲಿ ವಾಸಿಸುತ್ತಿದ್ದರು. ಬೆಂಗಳೂರು ವ್ಯಾಪಾರ ಕೇಂದ್ರವಾಗಿಯೂ ಬೆಳೆಯಿತು. ನಾಡಿನ ದಕ್ಷಿಣದಿಂದ ಉತ್ತರಕ್ಕೆ ಮತ್ತು ಪಶ್ಚಿಮಕ್ಕೆ ಚಲಿಸುವ ಮಾರ್ಗಗಳು ಬೆಂಗಳೂರನ್ನು ಸಂಧಿಸಿ ಮುನ್ನಡೆಯುತ್ತಿದ್ದವು. ಬೆಂಗಳೂರು ಕೋಟೆಯಿಂದಾವೃತವಾಗಿತ್ತು. ಅರಮನೆ ಆವರಣ ಮತ್ತು ಪ್ರಜೆಗಳು ವಾಸಿಸುತ್ತಿದ್ದ ಪ್ರದೇಶಗಳೆರಡೂ ಭದ್ರ ಗೋಡೆಗಳಿಂದ ಆವೃತವಾಗಿದ್ದವು. ಮೈಸೂರು ಒಡೆಯರ ಆಳ್ವಿಕೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಕೋಟೆ ನಿರ್ಮಾಣವಾಯಿತು. ಆಡಳಿತದ ದೃಷ್ಟಿಯಿಂದ ಬೆಂಗಳೂರನ್ನು ಹದಿನೆಂಟು ವಿಭಾಗಗಳನ್ನಾಗಿ ವಿಂಗಡಿಸಲಾಯಿತು. ಈ ಹದಿನೆಂಟು ಆಡಳಿತ ವಿಭಾಗಗಳು ಕ್ರಮೇಣ ಅಠಾರಾ ಕಛೇರಿಯೆಂದು ಪ್ರಸಿದ್ದಿ ಪಡೆದವು. ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯಲ್ಲಿ ಬೆಂಗಳೂರು ವೇಗವಾಗಿ ಬೆಳೆಯಿತು. ಅವರ ಆಳ್ವಿಕೆಯಲ್ಲಿ ಬೆಂಗಳೂರು ದಕ್ಷಿಣ ಒಳನಾಡಿನ ವಾಣಿಜ್ಯ ರಾಜಧಾನಿಯಾಗಿ ಬೆಳೆಯಿತು. ವಾಣಿಜ್ಯ ಚಟುವಟಿಕೆಗಳೊಂದಿಗೆ ಅದು ಮುಖ್ಯ ಆಯುಧ ತಯಾರಿಕಾ ಕೇಂದ್ರವಾಗಿಯೂ ರೂಪುಗೊಂಡಿತು. ಮೈಸೂರು ಸುಲ್ತಾನರ ಕೋಟೆ, ಅರಮನೆ ಹಾಗೂ ಇನ್ನಿತರ ಕಟ್ಟಡಗಳು ಬೆಂಗಳೂರಿನಲ್ಲಿ ನಿರ್ಮಾಣಗೊಂಡವು. ಹದಿನೆಂಟನೆಯ ಶತಮಾನದ ಕೊನೆಯ ಹೊತ್ತಿಗೆ ಬೆಂಗಳೂರು ಒಂದು ಉತ್ಪಾದಕ ಚಟುವಟಿಕೆಯ ಕೇಂದ್ರವಾಗಿ ರೂಪುಗೊಂಡಿತು.

ಮೈಸೂರು ಸುಲ್ತಾನರ ಆಳ್ವಿಕೆಯಲ್ಲಿ, ಅದರಲ್ಲೂ ಟಿಪ್ಪುಸುಲ್ತಾನನ ಆಳ್ವಿಕೆಯಲ್ಲಿ ದೇಶದ ಒಳಗೆ ಹಾಗೂ ಹೊರಗೆ ಅನೇಕ ವಾಣಿಜ್ಯ ಕೇಂದ್ರಗಳು ಹುಟ್ಟಿಕೊಂಡವು. ಮಸ್ಕತ್‌ನಲ್ಲಿ ಟಿಪ್ಪುವಿನ ಎರಡು ವ್ಯಾಪಾರ ಕೇಂದ್ರಗಳಿದ್ದವು. ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಟಿಪ್ಪು ತನ್ನ ರಾಜ್ಯದಲ್ಲಿ ಅನೇಕ ಡಿಪೋಗಳನ್ನು ತೆರೆದನು. ಅವುಗಳಲ್ಲಿ ಬಹುಮುಖ್ಯವಾದವುಗಳೆಂದರೆ ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು, ಕೋಲಾರ, ಸತ್ಯಮಂಗಲ, ಮದನಪಲ್ಲಿ, ಮುಳಬಾಗಲು, ಚಿತ್ರದುರ್ಗ, ಬಿದನೂರು, ಶಿಕಾರಿಪುರ, ಮಂಗಳೂರು, ಸೊಂದಾ, ಕುಶಾಲಪುರ, ಕಾರವಾರ, ಭಟ್ಕಳ, ಕಲ್ಲಿಕೋಟೆ, ಬನವಾಸಿ ಮತ್ತು ನಂದಿದುರ್ಗದಲ್ಲಿ ಇದ್ದಂತವು. ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ ಬಿದನೂರು, ಚಿತ್ರದುರ್ಗ, ಧಾರವಾಡ, ಚಿಕ್ಕಬಳ್ಳಾಪುರ ಮುಂತಾದವು ಕೈಗಾರಿಕಾ ಕೇಂದ್ರ ಗಳಾಗಿಯೂ ಬೆಳೆದವು. ಮಂಗಳೂರು, ಕಲ್ಲಿಕೋಟೆ, ಸದಾಶಿವಘಡಗಳು ನೌಕಾ ನಿರ್ಮಾಣದ ಪ್ರಮುಖ ನೆಲೆಗಳಾಗಿದ್ದವು. ಟಿಪ್ಪು ಅನೇಕ ದೇಶಗಳೊಂದಿಗೆ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದರಿಂದಾಗಿ ಮೈಸೂರು ಅಂದಿನ ಸಂದರ್ಭದ ಪ್ರಮುಖ ರಾಜಧಾನಿ ಕೇಂದ್ರವಾಗಿ ಗುರುತಿಸಿಕೊಂಡಿತು. ವಿಜಯನಗರದ ಅವನತಿಯ ಬಳಿಕ ಹುಟ್ಟಿಕೊಂಡ ನಗರ ಕೇಂದ್ರಗಳಲ್ಲಿ ಮೈಸೂರು ಅತ್ಯಂತ ಪ್ರಮುಖವಾದದ್ದು. ಮೈಸೂರನ್ನು ‘ಮಹಿಷೂರು’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮೈಸೂರಿನ ಸುತ್ತಲೂ ದೇವಲಾಪುರ, ಉತ್ತನಹಳ್ಳಿ, ಕುಕ್ಕರಹಳ್ಳಿ, ಬೇಗೂರು, ವರುಣ, ಬೆಲ್ಲವತ್ತ, ನಂಜನಗೂಡು, ಮಾರಗೌಡನಹಳ್ಳಿ ಇತ್ಯಾದಿ ಎಪ್ಪತ್ತು ಹಳ್ಳಿಗಳಿದ್ದವು. ಇವೆಲ್ಲವನ್ನೂ ಒಟ್ಟಾಗಿ ‘ಮೈಸೂರನಾಡು’ ಎಂಬುದಾಗಿ ಕರೆಯಲಾಗುತ್ತಿತ್ತು. ಈ ಎಪ್ಪತ್ತು ಹಳ್ಳಿಗಳ ಮೈಸೂರು ನಾಡಿಗೆ ಮೈಸೂರು ಕೇಂದ್ರ ಸ್ಥಳವಾಗಿತ್ತು. ಮೈಸೂರಿಗೆ ಪ್ರಾಚೀನ ಚರಿತ್ರೆಯಿದ್ದರೂ ಅದೊಂದು ರಾಜಧಾನಿ, ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರವಾಗಿ ಗುರುತಿಸಿಕೊಂಡಿರುವುದು ಒಡೆಯರು ಮತ್ತು ಹೈದರ್ ಅಲಿ-ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ.

ಕರ್ನಾಟಕದ ನಗರ ಚರಿತ್ರೆಯಲ್ಲಿ ಬಂದರು ಪಟ್ಟಣಗಳು ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿವೆ. ಬಂದರು ಪಟ್ಟಣಗಳು ಹೆಚ್ಚಾಗಿ ವ್ಯಾಪಾರ-ವಾಣಿಜ್ಯದ ಕೇಂದ್ರಗಳಾಗಿದ್ದು, ಸ್ಥಳೀಯ, ಹೊರ ರಾಜ್ಯಗಳ ಹಾಗೂ ಹೊರ ದೇಶಗಳ ಆಳ್ವಿಕೆಗೆ ಒಳಗಾಗಿರುವುದು ಈಗಾಗಲೇ ನಡೆದಿರುವ ನಗರ ಅಧ್ಯಯನಗಳಿಂದ ತಿಳಿದು ಬರುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅನೇಕ ಬಂದರು ಪಟ್ಟಣಗಳಿವೆ. ಇವು ವಸಾಹತುಪೂರ್ವ ಅವಧಿಯಲ್ಲಿಯೂ ಅಸ್ತಿತ್ವದಲ್ಲಿದ್ದವು. ಅವುಗಳೆಂದರೆ ಕಾಸರಗೋಡು, ಕುಂಬ್ಳೆ, ಮಂಜೇಶ್ವರ, ಮಂಗಳೂರು, ಉಡುಪಿ, ಬ್ರಹ್ಮಾವರ, ಬೈಂದೂರು, ಬಾರ್ಕೂರು, ಬಸ್ರೂರು, ಕಾಪು, ಮುಲ್ಕಿ, ಮಲ್ಪೆ, ಮಿರ್ಜಾನ್, ಗಂಗೊಳ್ಳಿ, ಭಟ್ಕಳ, ಹೊನ್ನಾವರ, ಸದಾಶಿವಘಡ, ಅಂಕೋಲಾ, ಕಲ್ಯಾಣಪುರ ಹಾಗೂ ಕಾರವಾರ. ಇವುಗಳಲ್ಲಿ ಮಂಗಳೂರು, ಹೊನ್ನಾವರ, ಭಟ್ಕಳ ಬಸ್ರೂರು ಮತ್ತು ಕಾರವಾರ ಪ್ರಮುಖ ಬಂದರು ಪಟ್ಟಣಗಳಾಗಿದ್ದವು. ಬಂದರು ಪಟ್ಟಣಗಳು ರೂಪುಗೊಳ್ಳು ವುದರಲ್ಲಿ ಅರಬ್ಬೀ ಸಮುದ್ರ ಮತ್ತು ಅದಕ್ಕೆ ಸೇರುವ ನದಿಗಳು ವಹಿಸಿದ ಪಾತ್ರ ಹಿರಿದಾದದ್ದು. ಪಶ್ಚಿಮ ಕರಾವಳಿಯಲ್ಲಿ ಪಟ್ಟಣಗಳು ಹುಟ್ಟಿಕೊಳ್ಳುವುದಕ್ಕೆ ಸಹಕಾರಿಯಾದ ನದಿಗಳಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ, ಸರಸ್ವತಿ, ಗಂಗೊಳ್ಳಿ, ಸೀತಾ, ಸುವರ್ಣ, ಶಾಂಭವಿ, ನೇತ್ರಾವತಿ, ಗುರುಪುರ, ಕುಂಬಳೆ ಮತ್ತು ಚಂದ್ರಗಿರಿ ಪ್ರಮುಖವಾದವು. ಈ ಬಂದರು ಪಟ್ಟಣಗಳು ಸಮೃದ್ಧ ಒಳನಾಡನ್ನು ಹೊಂದಿದ್ದು, ಸ್ಥಳೀಯ ಅರಸರು ಮತ್ತು ವ್ಯಾಪಾರಸ್ಥರನ್ನಷ್ಟೇ ಅಲ್ಲದೆ ವಿದೇಶಿ ವ್ಯಾಪಾರಸ್ಥರನ್ನೂ ಆಕರ್ಷಿಸಿದವು. ಹೀಗಾಗಿ ಬಂದರು ಪಟ್ಟಣಗಳು ವಿವಿಧ ಹಿತಾಸಕ್ತಿಗಳ ರಾಜಕೀಯ, ವ್ಯಾಪಾರ ಹಾಗೂ ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕಾಯಿತು.

ವಸಾಹತುಪೂರ್ವ ಕರ್ನಾಟಕದ ಕೆಲವು ಪ್ರಮುಖ ನಗರ ಕೇಂದ್ರಗಳನ್ನಷ್ಟೇ ಇಲ್ಲಿ ಚರ್ಚಿಸಲಾಗಿದೆ. ಕರ್ನಾಟಕದ ಪ್ರಮುಖ ಅರಸುಮನೆತನಗಳ ರಾಜಕೀಯ, ವ್ಯಾಪಾರ ಮತ್ತು ಧಾರ್ಮಿಕ ಕೇಂದ್ರಗಳಾಗಿದ್ದ ಪ್ರದೇಶಗಳನ್ನಷ್ಟೇ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಪ್ರಮುಖವಾಗಿ ಕಂಡು ಬರುವಂತವು ರಾಜಕೀಯ ಕೇಂದ್ರಗಳು ಅಥವಾ ರಾಜಧಾನಿ ಪಟ್ಟಣಗಳು, ವ್ಯಾಪಾರ ಕೇಂದ್ರಗಳು ಮತ್ತು ಧಾರ್ಮಿಕ ಕೇಂದ್ರಗಳು. ರಾಜಕೀಯ ಚಟುವಟಿಕೆಗಳನ್ನು ಕೇಂದ್ರವನ್ನಾಗಿಟ್ಟುಕೊಂಡಿದ್ದ ನಗರಗಳಲ್ಲಿ ಇಸಿಲಾನಗರ, ಚಂದ್ರವಳ್ಳಿ, ಬನವಾಸಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಾನ್ಯಖೇಟ, ತಲಕಾಡು, ಉಚ್ಛಂಗಿ, ಪುಲಿ, ಬಂಕಾಪುರ, ಸೊಸೆವೂರ್, ಗುತ್ತಿ, ಕಲ್ಯಾಣ, ಪುಲಿಗೆರೆ, ಅಣ್ಣಿಗೆರೆ, ಕುರುಗೋಡು, ಬೇಲೂರು, ದೋರಸಮುದ್ರ, ಹಂಪೆ, ಕೆಳದಿ, ಬಿದನೂರು, ಸವಣೂರು,  ಚಿತ್ರದುರ್ಗ, ಮೈಸೂರು, ಬೆಂಗಳೂರು ಪ್ರಮುಖವಾದವು. ವ್ಯಾಪಾರ-ವಾಣಿಜ್ಯವನ್ನು ಪ್ರಧಾನ ಚಟುವಟಿಕೆಯನ್ನಾಗಿ ಹೊಂದಿದ್ದ ನಗರ ಕೇಂದ್ರಗಳಲ್ಲಿ ಶ್ರವಣಬೆಳ್ಗೊಳ, ಲೊಕ್ಕಿಗುಂಡಿ, ಹುಬ್ಬಳ್ಳಿ, ಸೂಡಿ, ಕುರುಗೋಡು, ಹಿರಿಯ ಗೊಬ್ಬೂರು, ಬಳ್ಳಿಗಾವೆ, ಅರಸೀಕೆರೆ, ಬಾಣಾವರ, ಮಂಗಳೂರು, ಬಸ್ರೂರು, ಬಾರ್ಕೂರು, ಕಾರವಾರ ಇತ್ಯಾದಿ, ಮುಖ್ಯವಾದವು. ಇವುಗಳಲ್ಲಿ ಕೆಲವು ಒಂದು ಹಂತದಲ್ಲಿ ರಾಜಧಾನಿ ಪಟ್ಟಣಗಳಾಗಿದ್ದು, ನಂತರ ವ್ಯಾಪಾರ ಕೇಂದ್ರಗಳಾಗಿ ಬದಲಾವಣೆ ಹೊಂದಿರುವಂತವೂ ಇವೆ. ಅದೇ ರೀತಿ ಏಕಕಾಲಕ್ಕೆ ರಾಜಕೀಯ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಹೊಂದಿರುವಂತವೂ ಇವೆ. ಇದೇ ಮಾತು ಧಾರ್ಮಿಕ ಕೇಂದ್ರಗಳಿಗೂ ಅನ್ವಯಿಸುತ್ತದೆ. ಶ್ರವಣಬೆಳ್ಗೊಳ, ಐಹೊಳೆ, ಮುಳುಗುಂದ, ಪುಲಿಗೆರೆ, ಲೊಕ್ಕಿಗುಂಡಿ, ಹಿರೆ ಕುರವತ್ತಿ, ಗೋಕರ್ಣ ಮುಂತಾದವು ಧಾರ್ಮಿಕ ಹಿನ್ನೆಲೆಯಲ್ಲಿ ಗುರುತಿಸಿಕೊಂಡ ಪ್ರದೇಶಗಳು. ಧಾರ್ಮಿಕ ಪ್ರಭುತ್ವ ರಾಜಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಾಗಿ ಹಾಗೂ ಧರ್ಮ ರಾಜಕೀಯದಲ್ಲಿ ನೇರ ಪ್ರವೇಶ ಪಡೆದಿದ್ದ ರಿಂದಾಗಿ, ಪ್ರತಿಯೊಂದು ರಾಜಧಾನಿ ಪಟ್ಟಣದಲ್ಲೂ ದೇವಾಲಯಗಳು, ಬಸದಿಗಳು ಅಪಾರ ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ಇಂದು ನಾವು ಅಂದಿನ ರಾಜಧಾನಿ ಪಟ್ಟಣಗಳಿದ್ದ ಪ್ರದೇಶಗಳಿಗೆ ಭೇಟಿ ನೀಡಿದರೆ ಮೊದಲನೆಯದಾಗಿ ಕಂಡು ಬರುವುದು ದೇವಾಲಯಗಳು ಮಾತ್ರ. ಹೀಗಾಗಿ ಪ್ರತಿಯೊಂದು ನಗರ ಕೇಂದ್ರವೂ ಅದರ ಭೌಗೋಳಿಕ ಸನ್ನಿವೇಶ ಮತ್ತು ಸ್ಥಳೀಯ ರಾಜಕೀಯ ರಚನೆಗನುಗುಣವಾಗಿ ವಿವಿಧ ಕೆಲಸ ಕಾರ್ಯಗಳನ್ನು ಮಾಡುತ್ತಿತ್ತು. ಅರಸುಮನೆತನಗಳು, ಧರ್ಮ ಮತ್ತು ವ್ಯಾಪಾರ-ವಾಣಿಜ್ಯ ನಗರ ಕೇಂದ್ರಗಳ ಹುಟ್ಟು ಮತ್ತು ಬೆಳವಣಿಗೆಯ ನಿರ್ಣಾಯಕ ಶಕ್ತಿಗಳಾಗಿದ್ದವು.