ನಗರೀಕರಣದ ಕುರಿತು ಅಧ್ಯಯನ ನಡೆಸುವುದು ನೇರವಾಗಿ ಚರಿತ್ರೆಗೆ ಸಂಬಂಧಿಸಿದ ವಿಚಾರವಲ್ಲ ಎನ್ನುವ ವಾದ ಇಂದಿಗೂ ಚರಿತ್ರೆ ಅಧ್ಯಯನ ವಲಯಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಇದಕ್ಕೆ ಮೂಲ ಕಾರಣ ಚರಿತ್ರೆಯನ್ನು ರಾಜಕೀಯ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸಿಕೊಂಡಿರುವುದು. ಅಂಥ ಅಧ್ಯಯನಗಳಲ್ಲಿ ಕೃಷಿ ವ್ಯವಸ್ಥೆಯಾಗಲಿ ಅಥವಾ ನಗರ ವ್ಯವಸ್ಥೆಯಾಗಲಿ ಸ್ಥಾನವನ್ನು ಪಡೆದುಕೊಳ್ಳುವುದು ಕಷ್ಟದ ಕೆಲಸ. ರಾಜಪ್ರಭುತ್ವ ವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಇತರ ಅಂಗ ಸಂಸ್ಥೆಗಳಾಗಲಿ ಅಸ್ತಿತ್ವಕ್ಕೆ ಬರುವಲ್ಲಿ ಆಯಾ ಸಂದರ್ಭದ ಆರ್ಥಿಕ ಚಟುವಟಿಕೆಗಳು ಬಹುಮುಖ್ಯವಾಗುತ್ತವೆ. ಆರ್ಥಿಕ ಚಟುವಟಿಕೆ ಗಳು ಚರಿತ್ರೆಯ ಪ್ರತಿಯೊಂದು ಹಂತದಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸಿರುವುದಂತೂ ಸ್ಪಷ್ಟ. ಕೃಷಿ, ಕೃಷಿ ಉತ್ಪನ್ನಗಳ ವ್ಯಾಪಾರ, ಕೃಷಿಯೇತರ ಉತ್ಪಾದನೆ, ಕುಶಲಕರ್ಮಿಗಳು, ಕೈಗಾರಿಕೆ ಇವೆಲ್ಲವೂ ರಾಜ್ಯ ವ್ಯವಸ್ಥೆಯ ನಿರ್ಮಾಣಕ್ಕೆ ಪೂರಕವಾಗಿ ಕೆಲಸ ಮಾಡಿರುವಂತವು. ಆದರೆ ಕರ್ನಾಟಕದ ಚರಿತ್ರೆ ಬರವಣಿಗೆಯನ್ನೊಮ್ಮೆ ಅವಲೋಕಿಸಿದಾಗ ಆರ್ಥಿಕ ಚರಿತ್ರೆ ಎಷ್ಟರಮಟ್ಟಿಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವುದು ತಿಳಿದುಬರುತ್ತದೆ. ಆರ್ಥಿಕ ಚಟುವಟಿಕೆ ಗಳ ಕುರಿತು ಕೆಲವೊಂದು ಅಧ್ಯಯನಗಳು ನಡೆದಿದ್ದರೂ ಅವುಗಳಲ್ಲಿ ಹೆಚ್ಚಿನವು ರಾಜಪ್ರಭುತ್ವದ ಹಿನ್ನೆಲೆಯಿಂದ ಆರ್ಥಿಕತೆಯನ್ನು ನೋಡಿರುವಂತದ್ದೇ ಆಗಿವೆ. ಇನ್ನು ಪೇಟೆ-ಪಟ್ಟಣಗಳ ಕುರಿತಾದ ಅಧ್ಯಯನವಂತೂ ದೂರವೇ ಉಳಿಯಿತು.

ನಗರೀಕರಣದ ಕುರಿತು ಅಧ್ಯಯನ ನಡೆಸುವುದು ಇತ್ತೀಚೆಗೆ ಬೆಳೆದು ಬಂದಿರುವ ಶೈಕ್ಷಣಿಕ ಶಿಸ್ತು. ನಗರ ವ್ಯವಸ್ಥೆಯನ್ನು ಚರಿತ್ರೆ, ಪುರಾತತ್ವ, ಭೂಗೋಳಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಜ್ಞಾನ ಶಾಖೆಗಳ ನೆಲೆಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ನಗರಗಳು ಅಸ್ತಿತ್ವಕ್ಕೆ ಬಂದ ಬಗೆ, ಅವುಗಳ ಹುಟ್ಟು-ಬೆಳವಣಿಗೆ- ಅವನತಿ ಹಾಗೂ ನಗರ ಸಿದ್ಧಾಂತ ಮತ್ತು ನಗರ ಅಧ್ಯಯನ ವಿಧಾನದ ಕುರಿತು ಅನೇಕ ವಿದ್ವಾಂಸರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಅವರಲ್ಲಿ ಆರ‍್ನಾಲ್ಡ್ ಟಾಯಿನ್‌ಬಿ, ಸ್ಪೆಂಗ್ಲರ್, ಗೋರ್ಡನ್ ಚೈಲ್ಡ್, ಕಿಂಗ್‌ಸ್ಲೀ ಡೇವಿಸ್, ಜಿ.ಎಸ್. ಘುರ್ಯೆ, ಹೆನ್ರಿ ಪೈರೆನ್, ಲೂಯಿ ಮುಮ್‌ಫರ್ಡ್, ಮ್ಯಾಕ್ಸ್ ವೇಬರ್, ಗಿಡ್ಯಾನ್ ಸ್ಜೋಬರ್ಗ್, ಬಿ.ಬಿ. ದತ್ತ, ಅಮಿತ್ ರಾಯ್, ಎ. ಘೋಷ್, ಆರ್.ಎಸ್. ಶರ್ಮ, ವಿಜಯ ಕುಮಾರ್ ಟಾಕೂರ್, ಇಂದು ಬಂಗಾ, ಚಂಪಕಲಕ್ಷ್ಮಿ, ದಿಲೀಪ್ ಬಸು, ಆಶಿಸ್ ಬೋಸ್, ಓಮ್ ಪ್ರಕಾಶ್ ಪ್ರಸಾದ್ ಮೊದಲಾದವರು ಪ್ರಮುಖರು. ಆರಂಭದಲ್ಲಿ ನಗರ ಚರಿತ್ರೆ ಚರಿತ್ರೆ ಬರವಣಿಗೆಯಲ್ಲಿಯೇ ತುಂಬಾ ನಿರ್ಲಕ್ಷ್ಯಕ್ಕೆ ಒಳಪಟ್ಟ ವಿಷಯವಾಗಿತ್ತು. ಆದರೆ ಇವೆರಲ್ಲರ ಚಿಂತನೆಗಳು ನಗರ ಚರಿತ್ರೆಯ ಅಧ್ಯಯನ ಒಂದು ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳಲು ಅನಿವಾರ್ಯ ಎನ್ನುವುದನ್ನು ತೋರಿಸಿಕೊಟ್ಟಿತು.

ಪ್ರಸ್ತುತ ಅಧ್ಯಯನವು ಮೌರ್ಯರಿಂದ ಮೈಸೂರು ಸುಲ್ತಾನರವರೆಗಿನ ಕರ್ನಾಟಕದಲ್ಲಿ ನಗರ ವ್ಯವಸ್ಥೆ ಯಾವ ರೀತಿ ಇತ್ತು ಎನ್ನುವುದನ್ನು ಅಧ್ಯಯನ ನಡೆಸುವ ಉದ್ದೇಶದ್ದಾಗಿದೆ. ಅಧ್ಯಯನದ ವ್ಯಾಪ್ತಿ ತುಂಬಾ ವಿಸ್ತಾರವಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಮೌರ್ಯರಿಂದ ಟಿಪ್ಪುವಿನವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ನಾನಾ ಸ್ವರೂಪಗಳ ನಗರ ಕೇಂದ್ರಗಳ ಅಧ್ಯಯನ ನಡೆಸುವುದು ಕಷ್ಟದ ಕೆಲಸವೇ ಆಗಿದೆ. ಇಲ್ಲಿ ವಸಾಹತುಪೂರ್ವ ಕರ್ನಾಟಕದ ಕೆಲವು ನಗರ ಕೇಂದ್ರಗಳ ಅಧ್ಯಯನವನ್ನಷ್ಟೇ ಮಾಡಲಾಗಿದೆ. ಕರ್ನಾಟಕದ ಸಂದರ್ಭದಲ್ಲಿ ನಗರ ಕೇಂದ್ರಗಳ ಅಧ್ಯಯನ ನಡೆಸುವಾಗ ಏಕರೂಪದ ವ್ಯಾಖ್ಯಾನವನ್ನು ನೀಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಗರಗಳು ಅಸ್ತಿತ್ವಕ್ಕೆ ಬಂದ ಬಗೆ, ಅವುಗಳ ಸ್ಥಿತ್ಯಂತರಗಳು, ನಾನಾ ಸ್ವರೂಪದ ನಗರ ಕೇಂದ್ರಗಳು ಮುಂತಾದವು ಅಧ್ಯಯನಕಾರರನ್ನು ಸೂಕ್ಷ್ಮ ಅಧ್ಯಯನದತ್ತ ಕೊಂಡೊಯ್ಯುತ್ತವೆ. ಆದ್ದರಿಂದ ಮೇಲ್ನೋಟದ ಅಧ್ಯಯನಗಳಿಂದ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೃಷಿ ಪ್ರಧಾನವಾದ ಭಾರತದಲ್ಲಿ ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬಂದ ಬಗೆ, ಅರ್ಥ ವ್ಯವಸ್ಥೆಯಲ್ಲಿ ಅವು ಬೀರಿದ ಪರಿಣಾಮಗಳು, ರಾಜ್ಯ ವ್ಯವಸ್ಥೆ ನಗರ ವ್ಯವಸ್ಥೆಯೊಂದಿಗೆ ಹೊಂದಿದ್ದ ಸಂಬಂಧಗಳು, ನಗರ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಕಂಡುಕೊಂಡ ಬಗೆ, ನಗರ ಆಡಳಿತದಲ್ಲಿ ಭಾಗಿಗಳಾಗುತ್ತಿದ್ದ ಜನವರ್ಗ ಮುಂತಾದವು ನಗರ ಅಧ್ಯಯನ ಸಂದರ್ಭದಲ್ಲಿ ಕಂಡು ಬರುವ ಪ್ರಮುಖ ವಿಚಾರಗಳು.

ಗ್ರಾಮೀಣ ಪ್ರದೇಶ ನಗರ ಪ್ರದೇಶವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಸರಳ ವಾದದ್ದಲ್ಲ. ಅದೊಂದು ಸಂಕೀರ್ಣ ಪ್ರಕ್ರಿಯೆ. ಆ ಪ್ರಕ್ರಿಯೆಯನ್ನೇ ನಗರೀಕರಣ ಎಂಬುದಾಗಿ ಕರೆದಿರುವುದು. ನಗರೀಕರಣ ಪ್ರಕ್ರಿಯೆಯಲ್ಲಿ ನಗರಗಳ ಹುಟ್ಟು ಮತ್ತು ಅವುಗಳ ಬೆಳವಣಿಗೆ ಪ್ರಧಾನ ಅಂಶಗಳು. ನಗರ ಕೇಂದ್ರಗಳ ಹೆಚ್ಚಳ ಮತ್ತು ನಗರಗಳ ವಿಸ್ತಾರದ ಮೂಲಕ ಅವುಗಳ ಬೆಳವಣಿಗೆಯನ್ನು ಗುರುತಿಸಲು ಸಾಧ್ಯ. ಈ ಪ್ರಕ್ರಿಯೆಗಳಿಗೆ ಭೌಗೋಳಿಕ ಸನ್ನಿವೇ ಗಳು, ಕೃಷಿ ಕ್ಷೇತ್ರದಲ್ಲಿನ ಹೆಚ್ಚುವರಿ ಉತ್ಪಾದನೆ, ರಾಜಕೀಯ ವ್ಯವಸ್ಥೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದ್ದ ಕುಶಲಕರ್ಮಿಗಳ ಉತ್ಪಾದನೆ, ವ್ಯಾಪಾರ-ವಾಣಿಜ್ಯ ಪ್ರಧಾನ ಅರ್ಥ ವ್ಯವಸ್ಥೆ, ಸಾರಿಗೆ-ಸಂಪರ್ಕ, ಧರ್ಮ ಮೊದಲಾದವು ಕಾರಣಗಳಾಗಿ ಪರಿಣಮಿಸಿದವು. ರಾಜಕೀಯ ಚಟುವಟಿಕೆಗಳು ಪ್ರಧಾನವಾಗಿದ್ದ ಕೇಂದ್ರಗಳು ರಾಜಧಾನಿ ಪಟ್ಟಣಗಳಾಗಿ, ವ್ಯಾಪಾರ-ವಾಣಿಜ್ಯದ ಕೇಂದ್ರಗಳು ವ್ಯಾಪಾರ ಕೇಂದ್ರಗಳಾಗಿ, ಧಾರ್ಮಿಕ ಚಟುವಟಿಕೆಗಳೇ ಪ್ರಧಾನವಾಗಿದ್ದ ಕೇಂದ್ರಗಳು ಧಾರ್ಮಿಕ ಕೇಂದ್ರಗಳಾಗಿ ರೂಪುಗೊಂಡವು. ನಗರ ಕೇಂದ್ರಗಳಲ್ಲಿ ಯಾವುದಾದರೂ ಒಂದು ಪ್ರಧಾನ ಕೆಲಸ ಕಾರ್ಯಗಳಿರುತ್ತಿದ್ದವು. ಉದಾಹರಣೆಗೆ ಹಂಪೆಯು ರಾಜಧಾನಿ ಪಟ್ಟಣವಾಗಿ ಗುರುತಿಸಕೊಂಡಿದ್ದರೂ, ಅದರ ಜೊತೆಗೆ ವ್ಯಾಪಾರ ಚಟುವಟಿಕೆಗಳು, ಧಾರ್ಮಿಕ ಕೆಲಸ ಕಾರ್ಯಗಳು ನಿರಂತರ ನಡೆಯುತ್ತಿದ್ದವು. ಮಂಗಳೂರು ವ್ಯಾಪಾರವೇ ಪ್ರಧಾನವಾಗಿದ್ದ ಬಂದರು ಪಟ್ಟಣವಾಗಿದ್ದರೂ ಅದು ಸ್ಥಳೀಯ ಅರಸುಮನೆತನಗಳ ರಾಜಕೀಯ ಕೇಂದ್ರವಾಗಿ ಹಾಗೂ ಅಲ್ಲಿನ ವಿವಿಧ ನಗರ ಸಮುದಾಯಗಳ ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿತ್ತು.

ಮೇಲಿನ ವಿವರಗಳು ನಗರ ಕೇಂದ್ರಗಳು ಎಷ್ಟೊಂದು ಸಂಕೀರ್ಣವಾಗಿದ್ದವು ಹಾಗೂ ಅವುಗಳ ಅಧ್ಯಯನ ಎಷ್ಟು ಸೂಕ್ಷ್ಮವಾಗಿರಬೇಕೆನ್ನುವುದನ್ನು ಸೂಚಿಸುತ್ತವೆ. ವಸಾಹತುಪೂರ್ವ ಕರ್ನಾಟಕದಲ್ಲಿ ಹಲವು ಬಗೆಯ ನಗರ ಕೇಂದ್ರಗಳು ಇದ್ದವು. ಅವುಗಳೆಂದರೆ ಆಡಳಿತ, ವಾಣಿಜ್ಯ, ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರಗಳು. ಇವುಗಳ ಅಧ್ಯಯನವನ್ನು ವಿವಿಧ ಆಕರ ಸಾಮಾಗ್ರಿಗಳ ಸಹಾಯದಿಂದ ನಡೆಸಬೇಕಾಗುತ್ತದೆ. ಅವುಗಳಲ್ಲಿ  ಮುಖ್ಯವಾದವು ಪುರಾತತ್ವೀಯ ಮತ್ತು ಸಾಹಿತ್ಯಕ ಆಕರಗಳು. ಪೇಟೆ-ಪಟ್ಟಣಗಳ ಕುರುಹುಗಳು, ಕಟ್ಟಡಗಳು, ದೇವಾಲಯಗಳು, ನಗರ ಯೋಜನೆಗೆ ಸಂಬಂಧಿಸಿದ ಕುರುಹುಗಳು, ಕೋಟೆಗಳು, ರಸ್ತೆಗಳು, ಮಡಕೆ ಚೂರುಗಳು, ದಿನೋಪಯೋಗಿ ವಸ್ತುಗಳು, ನಾಣ್ಯಗಳು, ಶಾಸನಗಳು ಮುಂತಾದವು ಪುರಾತತ್ವೀಯ ಆಕರಗಳಾಗಿವೆ. ವಸಾಹತುಪೂರ್ವ ಕರ್ನಾಟಕದ ನಗರ ವ್ಯವಸ್ಥೆಯ ಅಧ್ಯಯನ ಕೈಗೊಳ್ಳುವಾಗ ಇವೆಲ್ಲವೂ ಸಹಾಯಕ್ಕೆ ಬರುತ್ತವೆ. ಪ್ರಾಚ್ಯ ಸಂಶೋಧನೆಗಳು ಪ್ರಾಚೀನ ಪಟ್ಟಣಗಳ ಕುರಿತಾಗಿ ಒದಗಿಸುವ ಮಾಹಿತಿಗಳು ಬಹು ಉಪಯುಕ್ತದ್ದಾಗಿವೆ. ಚಂದ್ರವಳ್ಳಿ, ಸನ್ನತಿ, ಹಂಪೆ ಮೊದಲಾದ ಪ್ರದೇಶಗಳಲ್ಲಿ ನಡೆದ ಉತ್ಖನನಗಳು ನಗರ ಕೇಂದ್ರಗಳ ಅಧ್ಯಯನಕ್ಕೆ ಹೊಸ ಆಯಾಮವನ್ನು ಒದಗಿಸಿಕೊಟ್ಟವು.

ಕರ್ನಾಟಕದಲ್ಲಿ ಸಿಕ್ಕಿರುವ ಸಾವಿರಾರು ಶಾಸನಗಳಲ್ಲಿ ಕೆಲವು ಪೇಟೆ-ಪಟ್ಟಣಗಳ ಕುರಿತು ಮಾಹಿತಿಗಳನ್ನು ನೀಡುತ್ತವೆ. ನಗರ ಕೇಂದ್ರಗಳ ಸ್ವರೂಪ, ಪ್ರಾದೇಶಿಕ ಹಂಚಿಕೆ, ಹೊಸ ನಗರ ಕೇಂದ್ರಗಳ ಹುಟ್ಟು ಮೊದಲಾದ ವಿಚಾರಗಳ ಕುರಿತು ಶಾಸನಗಳು ಮಾಹಿತಿ ನೀಡುತ್ತವೆ. ಪೇಟೆ-ಪಟ್ಟಣಗಳು ಯಾವ ಅವಧಿಯಲ್ಲಿ, ಯಾವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವು ಎನ್ನುವುದು ಶಾಸನಗಳ ಅಧ್ಯಯನದಿಂದ ತಿಳಿದು ಬರುತ್ತದೆ. ವರ್ತಕರು, ವರ್ತಕ ಶ್ರೇಣಿಗಳು, ಆಮದು ಮತ್ತು ರಫ್ತು ವ್ಯಾಪಾರ, ಸಾಗಾಣಿಕೆಯ ಸೌಕರ್ಯಗಳು, ನಾಣ್ಯ ಪದ್ಧತಿ, ಅಳತೆಗಳು ಮತ್ತು ತೂಕಗಳು ಮುಂತಾದ ವಿಚಾರಗಳೂ ಶಾಸನಗಳ ಅಧ್ಯಯನದಿಂದ ತಿಳಿದು ಬರುತ್ತವೆ.

ನಗರ ಚರಿತ್ರೆ ರಚನೆಗೆ ನಾಣ್ಯಗಳು ಸಹಾಯಕವಾಗಿವೆ. ನಾಣ್ಯಗಳು ದೊರೆತಿರುವ ಪ್ರದೇಶ ಅದರ ಚಲಾವಣೆಯ ವ್ಯಾಪ್ತಿಯನ್ನು ತಿಳಿಸುತ್ತದೆ. ಆರ್ಥಿಕ ಚರಿತ್ರೆಯ ನಿರ್ಮಾಣಕ್ಕೆ ನಾಣ್ಯಗಳು ಮುಖ್ಯ ಆಕರಗಳಾಗಿವೆ. ನಾಣ್ಯಗಳ ಚಲಾವಣೆ ವ್ಯಾಪಾರ-ವಾಣಿಜ್ಯವನ್ನು ಸೂಚಿಸುತ್ತದೆ. ನಾಣ್ಯಗಳನ್ನು ಅರಸರು ಹಾಗೂ ವ್ಯಾಪಾರಿ ಸಂಘಗಳು ಹೊರಡಿಸುತ್ತಿದ್ದವು. ಕ್ರಿ.ಶ. ೧೦ನೆಯ ಶತಮಾನದ ಬಳಿಕ ನಾಣ್ಯಗಳು ಹೆಚ್ಚಾಗಿ ಬಳಕೆಗೊಂಡವು. ಈ ಅವಧಿಯಲ್ಲಿ ಹೆಚ್ಚೆಚ್ಚು ವ್ಯಾಪಾರ ಕೇಂದ್ರಗಳು ಕಾಣಿಸಿಕೊಂಡವು. ಕ್ರಿ.ಶ. ೪ ರಿಂದ ೧೦ನೆಯ ಶತಮಾನದವರೆಗಿನ ಅವಧಿಗೆ ಸಂಬಂಧಿಸಿದಂತೆ ಕಡಿಮೆ ಪ್ರಮಾಣದಲ್ಲಿ ನಾಣ್ಯಗಳು ಸಿಗುತ್ತವೆ. ಇದರರ್ಥ ಆ ಅವಧಿಯಲ್ಲಿ ವ್ಯಾಪಾರ ಕೇಂದ್ರಗಳ ಸಂಖ್ಯೆ ಕಡಿಮೆಯಿತ್ತು ಎನ್ನುವುದೇ ಆಗಿದೆ. ಕರ್ನಾಟಕವು ಹೊರದೇಶಗಳೊಂದಿಗೆ ಹೊಂದಿದ್ದ ವ್ಯಾಪಾರ ಸಂಬಂಧಗಳ ಕುರಿತಾಗಿಯೂ ನಾಣ್ಯಗಳು ಬೆಳಕು ಚೆಲ್ಲುತ್ತವೆ. ಕರ್ನಾಟಕದ ಪ್ರಮುಖ  ನಗರ ಕೇಂದ್ರಗಳಲ್ಲಿ ರೋಮನ್ ನಾಣ್ಯಗಳು ಸಿಕ್ಕಿರುವುದರಿಂದಾಗಿ ರೋಮನ್ ವಾಣಿಜ್ಯ ಇತ್ತು ಎನ್ನುವ ತೀರ್ಮಾನಕ್ಕೆ ಬರಬಹುದಾಗಿದೆ. ನಾಣ್ಯಗಳು ಕಡಿಮೆ ಸಂಖ್ಯೆಯಲ್ಲಿ ದೊರೆತರೆ ಅದು ವಾಣಿಜ್ಯದ ಇಳಿಮುಖವನ್ನು ಸೂಚಿಸುತ್ತದೆ.

ವಸಾಹತುಪೂರ್ವ ಕರ್ನಾಟಕದ ಹಲವಾರು ನಗರ ಕೇಂದ್ರಗಳ ಉಲ್ಲೇಖಗಳು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುತ್ತವೆ. ನಗರೀಕರಣಕ್ಕೆ ನೇರವಾಗಿ ಸಂಬಂಧಪಡುವ ಕೃತಿಗಳು ಅನೇಕ ಸಿಗುತ್ತವೆ. ಇನ್ನು ಕೆಲವು ನೇರವಾಗಿ ಸಂಬಂಧಪಡದ ಕೃತಿಗಳು. ದಂಡಿನನ ದಶಕುಮಾರ ಚರಿತೆ, ಸೋಮದೇವ ಸೂರಿಯ ಯಶತಿಲಕ, ಬಿಲ್ಹಣನ ವಿಕ್ರಮಾಂಕದೇವ ಚರಿತ, ಮೂರನೆಯ ಸೋಮೇಶ್ವರನ ಮಾನಸೋಲ್ಲಾಸ ಮತ್ತು ವಿಕ್ರಮಾಂಕಾಭ್ಯುದಯಮ್, ಸಮರಾಂಗನ ಸೂತ್ರಧಾರ, ಮಾನಸಾರ ಮುಂತಾದ ಕೃತಿಗಳಲ್ಲಿ ನಗರ ಆಡಳಿತ, ನಗರ ಯೋಜನೆ, ಬಜಾರುಗಳು, ರಸ್ತೆಗಳು, ಅರಮನೆಗಳು, ಕೋಟೆಗಳು, ವಸತಿ ಪ್ರದೇಶಗಳು, ಕಟ್ಟಡಗಳ ರಚನೆ, ಪಟ್ಟಣಗಳ ವಿಂಗಡಣೆ ಮುಂತಾದ ನಗರ ಸಂಬಂಧಿ ವಿವರಗಳು ಸಿಗುತ್ತವೆ.

ಚೀಣಾ, ಪರ್ಷಿಯಾ, ಅರೇಬಿಯಾ ಮುಂತಾದೆಡೆಯಿಂದ ಮತ್ತು ಯುರೋಪ್ ಖಂಡದ ಪ್ರದೇಶಗಳಿಂದ ಬಂದ ಪ್ರವಾಸಿಗರು ತಮ್ಮ ಕಥನಗಳಲ್ಲಿ ನಗರ ಕೇಂದ್ರಗಳ ಕುರಿತಾದ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿರುವುದು ಕಂಡುಬರುತ್ತದೆ. ವಿದೇಶಿ ಪ್ರವಾಸಿಗರ ಬರಹಗಳು ಹೆಚ್ಚಾಗಿ ಬಂದರು ಪಟ್ಟಣಗಳ ಕುರಿತು ಮಾಹಿತಿ ನೀಡುತ್ತವೆ. ಟಾಲೆಮಿ, ಪ್ಲಿನಿ, ಯೂಲೆ, ಅಲ್ ಮಸೂದಿ, ಅಲ್‌ಬೆರೂನಿ, ಅಲ್ ಇದ್ರಿಸಿ, ಯಾಕುತ್, ಅಬ್ದುಲ್ ರಜಾಕ್, ಇಬನ್ ಬತೂತ, ನಿಕೊಲೋಕಾಂಟಿ, ಬಾರ್ಬೋಸಾ, ತಾಬತಾಬ, ವರ್ತೆಮಾ, ಸೀಸರ್ ಫ್ರೆಡರಿಕ್, ಪೆತ್ರೋ ಡೆಲ್ಲಾ ವೆಲ್ಲೆ, ಫ್ರಾನ್ಸಿಸ್ ಬುಕನಾನ್ ಮೊದಲಾದವರ ಕಥನಗಳು ನಗರ ಚರಿತ್ರೆಯ ನಿರ್ಮಾಣಕ್ಕೆ ಪ್ರಮುಖ ಆಕರಗಳಾಗಿವೆ. ಭೂ ವಿವರಣೆ, ವ್ಯಾಪಾರ ಮತ್ತು ವಾಣಿಜ್ಯ, ಬಂದರು ಪಟ್ಟಗಳು, ಆಮದು ಮತ್ತು ರಫ್ತು ಮಾಡಲಾಗುತ್ತಿದ್ದ ವಸ್ತುಗಳು, ವರ್ತಕರು ಮುಂತಾದ ಮಾಹಿತಿಗಳು ಈ ಕಥನಗಳಲ್ಲಿ ದೊರಕುತ್ತವೆ. ಒಟ್ಟಿನಲ್ಲಿ ಪ್ರಾಚೀನ ಅವಶೇಷಗಳು, ಶಾಸನಗಳು, ನಾಣ್ಯಗಳು, ಸಾಹಿತ್ಯ ಮೂಲಗಳು ಹಾಗೂ ವಿದೇಶಿ ಕಥನಗಳು ವಸಾಹತುಪೂರ್ವ ಕರ್ನಾಟಕದ ನಗರ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಮುಖ ಆಕರ ಸಾಮಗ್ರಿಗಳಾಗಿವೆ.

ವಸಾಹತುಪೂರ್ವ ಕರ್ನಾಟಕದ ನಗರ ಚರಿತ್ರೆಯನ್ನು ಪ್ರಮುಖ ನಗರ ಕೇಂದ್ರಗಳು, ನಗರ ಕೇಂದ್ರಗಳ ಸ್ಥಿತ್ಯಂತರ, ನಗರ ಅರ್ಥ ವ್ಯವಸ್ಥೆ ಹಾಗೂ ನಗರ ಆಡಳಿತ ಎನ್ನುವ ನಾಲ್ಕು ಅಧ್ಯಾಯಗಳ ಮೂಲಕ ಇಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರಮುಖ ನಗರ ಕೇಂದ್ರಗಳು ಅಧ್ಯಾಯದಲ್ಲಿ ಕೆಲವು ಪ್ರಮುಖ ರಾಜಧಾನಿ, ವ್ಯಾಪಾರ ಹಾಗೂ ಧಾರ್ಮಿಕ ಕೇಂದ್ರಗಳನ್ನಷ್ಟೇ ಅಧ್ಯಯನ ನಡೆಸಲಾಗಿದೆ. ಇದು ಮಾಹಿತಿಗಳನ್ನು ನೀಡುವ ಪ್ರಯತ್ನ ಮಾತ್ರವಾಗಿದ್ದು, ವಿಶ್ಲೇಷಣೆಯನ್ನು ಇನ್ನುಳಿದ ಅಧ್ಯಾಯಗಳಲ್ಲಿ ಮಾಡಲಾಗಿದೆ. ನಗರ ಕೇಂದ್ರಗಳ ಸ್ಥಿತ್ಯಂತರದ ಕುರಿತು ಚರ್ಚಿಸುವಾಗ ಪ್ರಥಮ, ದ್ವಿತೀಯ, ತೃತೀಯ ನಗರೀಕರಣ ಗಳೆನ್ನುವ ಈಗಾಗಲೇ ಸಾಕಷ್ಟು ಚರ್ಚೆಗೆ ಆಸ್ಪದ ಮಾಡಿಕೊಟ್ಟಿರುವ ನಗರೀಕರಣದ ವಿವಿಧ ಹಂತಗಳನ್ನು ಗಮನಿಸಲಾಗಿದೆ. ನಗರ ಕೇಂದ್ರಗಳ ಹುಟ್ಟು, ಬೆಳವಣಿಗೆ ಮತ್ತು ಅವನತಿ, ನಗರ ಕೇಂದ್ರಗಳ ಹುಟ್ಟಿಗೆ ಪೂರಕವಾದ ಅಂಶಗಳು, ನಗರಗಳ ಅವನತಿಗೆ ಕಾರಣಗಳು, ವಿವಿಧ ಸ್ವರೂಪದ ನಗರ ಕೇಂದ್ರಗಳು ಮುಂತಾದ ವಿಚಾರಗಳನ್ನು ಈ ಅಧ್ಯಾಯದಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ.

ನಗರ ಅರ್ಥ ವ್ಯವಸ್ಥೆಯ ಕುರಿತು ಚರ್ಚಿಸುವಾಗ ನಗರವಾಸಿಗಳ ಬದುಕು, ಆರ್ಥಿಕ ರೂಪಾಂತರಗಳು, ವ್ಯಾಪಾರ-ವಾಣಿಜ್ಯ, ಕುಶಲಕರ್ಮಿಗಳು ಮತ್ತು ಕೈಗಾರಿಕೆ, ವರ್ತಕ ಸಂಘಗಳ ಕಾರ್ಯ ಚಟುವಟಿಕೆಗಳು ಮುಂತಾದ ವಿಚಾರಗಳು ಪ್ರಮುಖವೆನಿಸುತ್ತವೆ. ಸಂತೆ ಮತ್ತು ಮಾರುಕಟ್ಟೆಗಳು ಆರ್ಥಿಕ ಪರಿವರ್ತನೆಯಲ್ಲಿ ವಹಿಸಿದ ಪಾತ್ರ, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಬಂದರು ಪಟ್ಟಣಗಳು ನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳು, ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವುದಕ್ಕೋಸ್ಕರ ಯುರೋಪಿನ ವರ್ತಕರು ಜಾರಿಗೆ ತಂದ ವ್ಯಾಪಾರಿ ನೀತಿಗಳು, ಸಾರಿಗೆ ಮತ್ತು ಸಂಪರ್ಕ ಮುಂತಾದ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬಂದ ಮೇಲೆ ಹಾಗೂ ಅವು ವಿಸ್ತಾರವಾಗಿ ಬೆಳೆದಂತೆ ನಗರ ಯೋಜನೆಯ ಹಾಗೂ ಆಡಳಿತದ ಅನಿವಾರ್ಯತೆ ಉಂಟಾಗುತ್ತದೆ. ವಸಾಹತುಪೂರ್ವ ಅವಧಿಯಲ್ಲಿ ಪ್ರತಿಯೊಂದು ನಗರ ಕೇಂದ್ರದಲ್ಲೂ ಆಡಳಿತ ವ್ಯವಸ್ಥೆ ಇತ್ತು. ನಗರ ಜೀವನವನ್ನು ವ್ಯವಸ್ಥಿತಗೊಳಿಸುವುದು, ನಗರಗಳನ್ನು ಯೋಜನಾಬದ್ಧವಾಗಿ ನಿರ್ಮಿಸುವುದು ಮತ್ತು ಬೆಳೆಸುವುದು ಆಡಳಿತ ವ್ಯವಸ್ಥೆಯ ಹುಟ್ಟಿನ ಮೂಲ ಉದ್ದೇಶವಾಗಿತ್ತು. ನಗರ ಆಡಳಿತದಲ್ಲಿ ಭಾಗಿಗಳಾಗುತ್ತಿದ್ದ ಅಧಿಕಾರಿ ವರ್ಗದವರು, ವರ್ತಕ ಸಂಘಗಳು ಹಾಗೂ ಅವುಗಳ ಕೆಲಸ ಕಾರ್ಯಗಳು ಮುಂತಾದವುಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಅಶೋಕನಿಂದ ಟಿಪ್ಪುವಿನವರೆಗಿನ ಅವಧಿಯಲ್ಲಿ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಚೌಕಟ್ಟಿನಲ್ಲೇ ನಗರಗಳ ಆಡಳಿತ ನಡೆಯುತ್ತಿತ್ತು. ಸಮಾಜ ವಿವಿಧ ರೀತಿಯ ಪರಿವರ್ತನೆ ಗಳಿಗೆ ಒಳಗಾಗುತ್ತಿದ್ದರೂ ಶ್ರೀಮಂತ ವರ್ಗಗಳು ಅದರ ಲಾಭವನ್ನು ಪಡೆಯುತ್ತಲೇ ಇದ್ದವು. ಕೃಷಿ ವ್ಯವಸ್ಥೆಯಲ್ಲಿ ಭೂಮಾಲೀಕ ವರ್ಗಗಳು ಯಜಮಾನಿಕೆಯನ್ನು ಸ್ಥಾಪಿಸುವ ಶಕ್ತಿಗಳಾಗಿದ್ದರೆ, ನಗರ ವ್ಯವಸ್ಥೆಯಲ್ಲಿ ಶ್ರೀಮಂತ ವರ್ತಕರು ವ್ಯಾಪಾರ-ವಾಣಿಜ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಂಡಿದ್ದರು. ಪ್ರತಿಯೊಂದು ಸಂದರ್ಭದಲ್ಲೂ ವೈಯಕ್ತಿಕ ಹಿತಾಸಕ್ತಿಗಳು ನಿರ್ಣಾಯಕವಾಗುತ್ತಿದ್ದವು. ಆದರೆ ಒಟ್ಟಾರೆಯಾಗಿ ರಾಜ್ಯದ ಆರ್ಥಿಕ ಚರಿತ್ರೆಯನ್ನು ಪುನರ್ರಚಿಸುವಾಗ ನಗರ ಚರಿತ್ರೆ ಬಹುಮುಖ್ಯವಾದ ಅಧ್ಯಯನ ಕ್ಷೇತ್ರವಾಗಿ ಕಂಡುಬರುತ್ತದೆ. ಇದು ಕೇವಲ ಪೇಟೆ-ಪಟ್ಟಣಗಳ ಹುಟ್ಟಿಗೆ ಸಂಬಂಧಪಟ್ಟ ವಿಚಾರವಷ್ಟೇ ಆಗಿರದೆ ಆಯಾ ಸಂದರ್ಭದ ಉತ್ಪಾದನಾ ವಿಧಾನ, ಸಾಮಾಜಿಕ ಸಂಬಂಧಗಳು ಹಾಗೂ ಆರ್ಥಿಕ ಪರಿವರ್ತನೆಗಳಿಗೆ ಸಂಬಂಧಿಸಿದ್ದೂ ಆಗಿದೆ.