ವಸಾಹತುಪೂರ್ವ ಕರ್ನಾಟಕದಲ್ಲಿ ಯಾವ ಸ್ವರೂಪದ ನಗರ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಹಾಗೂ ನಗರ ಕೇಂದ್ರಗಳು ಯಾವ ಬಗೆಯ ಬಿಕ್ಕಟ್ಟನ್ನು ಎದುರಿಸಿದವು ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನವನ್ನು ಈ ಗ್ರಂಥದಲ್ಲಿ ಮಾಡಲಾಗಿದೆ. ರಾಜ್ಯಗಳ ಹಾಗೂ ಪ್ರಭುತ್ವಗಳ ರೂಪುಗೊಳ್ಳುವಿಕೆಯಲ್ಲಿ ನಗರ ಆರ್ಥಿಕತೆಯದ್ದು ನಿರ್ಣಾಯಕ ಪಾತ್ರ. ಆದರೆ ಚರಿತ್ರೆ ಅಧ್ಯಯನದಲ್ಲಿ ಇತ್ತೀಚಿನವರೆಗೂ ನಗರೀಕರಣ ಕುರಿvಯ ಅಧ್ಯಯನ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿರಲಿಲ್ಲ. ಆರ್ಥಿಕ ಚರಿತ್ರೆ ನಿರ್ಮಾಣಕ್ಕೆ ಹೆಚ್ಚಿನ ಮಹತ್ವವನ್ನು ನೀಡದಿರುವುದೇ ಇದಕ್ಕೆ ಮೂಲ ಕಾರಣ. ಈ ಗ್ರಂಥದಲ್ಲಿ ವಸಾಹತುಪೂರ್ವ ಕರ್ನಾಟಕದ ನಗರೀಕರಣದ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆಸಲಾಗಿದೆ.

ಈ ಗ್ರಂಥವನ್ನು ಹೊರತರುವಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಗ್ರಂಥದ ಹಸ್ತಪ್ರತಿಯನ್ನು ಕೂಲಂಕಷವಾಗಿ ಓದಿ ಸೂಕ್ತ ಸಲಹೆಗಳನ್ನು ನೀಡಿದ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರೊ. ಅಶೋಕ ಶೆಟ್ಟರ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಗ್ರಂಥದ ಸಿದ್ಧತೆಯಲ್ಲಿ ಸಹಕಾರ ನೀಡಿದ ವಿಭಾಗದ ನನ್ನ ಸಹೋದ್ಯೋಗಿಗಳಿಗೆ, ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತಂದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ, ಪುಸ್ತಕ ವಿನ್ಯಾಸವನ್ನು ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಹಾಗೂ ಶ್ರೀ ಕೆ.ಎಲ್. ರಾಜಶೇಖರ್ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಜೆ. ಬಸವರಾಜ ಅವರಿಗೆ ನನ್ನ ಕೃತಜ್ಞತೆಗಳು.

ಡಾ. ಕೆ. ಮೋಹನ್ಕೃಷ್ಣ ರೈ