ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ದಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟ ಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ದಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಡಾ. ಕೆ. ಮೋಹನ್‌ಕೃಷ್ಣ ರೈ ಅವರ ವಸಾಹತುಪೂರ್ವ ಕರ್ನಾಟಕದ ನಗರ ಚರಿತ್ರೆ ಎನ್ನುವ ಕೃತಿಯಲ್ಲಿ ಮೌರ್ಯರಿಂದ ಮೈಸೂರು ಸುಲ್ತಾನರವರೆಗೆ ಬೇರೆ ಬೇರೆ ರಾಜಮನೆತನಗಳ ಆಳ್ವಿಕೆಯಲ್ಲಿ ಪಟ್ಟಣಗಳು ಮತ್ತು ನಗರಗಳು ನಿರ್ಮಾಣಗೊಂಡ ಕ್ರಿಯಾಶೀಲವಾದ ಬಗೆಗಳನ್ನು ಅಧ್ಯಯನ ಮಾಡಲಾಗಿದೆ. ನಗರ ಅಥವಾ ಪಟ್ಟಣ ಎನ್ನುವ ಪರಿಕಲ್ಪನೆಯನ್ನು ಇಲ್ಲಿ ಚರ್ಚಿಸಲಾಗಿದೆ. ರಾಜಧಾನಿ ಪಟ್ಟಣಗಳು, ವ್ಯಾಪಾರಿ ಕೇಂದ್ರಗಳಂಥ ಬಂದರು ಪಟ್ಟಣಗಳು, ಧಾರ್ಮಿಕ ಕೇಂದ್ರಗಳು ಹೇಗೆ ನಗರಗಳ ಆಕಾರವನ್ನು ಪಡೆದವು ಎನ್ನುವುದನ್ನು ನಿದರ್ಶನಗಳ ಮೂಲಕ ವಿವರಿಸಲಾಗಿದೆ. ಕೃಷಿಯೇತರ ಚಟುವಟಿಕೆಗಳು ಸಂಘಟಿತ ಆರ್ಥಿಕ ಚಟುವಟಿಕೆಗಳಾಗಿ ಕಾಣಿಸಿಕೊಂಡಾಗ ನಗರಗಳು ರೂಪು ತಾಳುತ್ತವೆ ಎನ್ನುವ ಮಹತ್ವದ ಅಂಶವನ್ನು ಡಾ. ಕೆ. ಮೋಹನಕೃಷ್ಣ ರೈ ಇಲ್ಲಿ ಪ್ರಸ್ತಾವಿಸಿದ್ದಾರೆ. ಉತ್ಪಾದನೆ ಮತ್ತು ಆರ್ಥಿಕತೆಯ ಸಂಬಂಧಗಳು ನಗರಗಳ ಸ್ವರೂಪವನ್ನು ನಿರ್ಧರಿಸುತ್ತವೆ ಎನ್ನುವ ಸಂಗತಿಯನ್ನು ಇಲ್ಲಿ ತಿಳಿಸಲಾಗಿದೆ. ನಗರ ಅಥವಾ ಸಿಟಿಯ ಪರಿಕಲ್ಪನೆ ಕುರಿತು ಇಂಗ್ಲಿಷ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಕನ್ನಡದಲ್ಲಿ ಇಂಥ ಸಂವಾದಗಳು ಹೆಚ್ಚಾಗಿ ನಡೆದಿಲ್ಲ. ಚರಿತ್ರೆಯ ಭಿನ್ನ ನೆಲೆಗಳಿಂದ ನಗರ ಅಥವಾ ಪಟ್ಟಣ ಎನ್ನುವ ಪರಿಕಲ್ಪನೆ ರೂಪು ತಾಳಿದ ಕಾಲಕಾಲಕ್ಕೆ ಬದಲಾದ ಪ್ರಕ್ರಿಯೆ ಕುತೂಹಲಕಾರಿಯಾಗಿದೆ. ಐರೋಪ್ಯ ಪ್ರಭಾವದ ಪೂರ್ವದಲ್ಲಿ ಅಂದರೆ ವಸಾಹತೀಕರಣದ ಪೂರ್ವದಲ್ಲಿ ಕರ್ನಾಟಕದಲ್ಲಿ ನಗರಗಳು ರೂಪುಗೊಂಡ ಮತ್ತು ಕಾರ್ಯನಿರ್ವಹಿಸಿದ ವಿಶಿಷ್ಟ ಸ್ವರೂಪವನ್ನು ಇಲ್ಲಿ ಪರಿಶೀಲಿಸಲಾಗಿದೆ. ಯೂರೋಪಿನ ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ ಕರ್ನಾಟಕದಲ್ಲಿ ಕೃಷಿ ಸಂಬಂಧಿಯಾದ ಮತ್ತು ವ್ಯಾಪಾರಿ ಸಂಬಂಧಿಯಾದ ಅಂಶಗಳು ಹೇಗೆ ಪರಸ್ಪರ ಸಂಬಂಧ ಹೊಂದಿದ್ದವು ಎನ್ನುವುದನ್ನು ತಿಳಿದುಕೊಳ್ಳುವ ದೃಷ್ಟಿಯಿಂದಲೂ ಈ ಅಧ್ಯಯನಕ್ಕೆ ವಿಶೇಷ ಮಹತ್ವ ಇದೆ. ವಸಾಹತುಪೂರ್ವದಲ್ಲಿ ಅರಸು ಮನೆತನಗಳು ನಗರವನ್ನು ಪರಿಕಲ್ಪಿಸಿದ, ಕಟ್ಟಿದ, ಬೆಳೆಸಿದ ರೀತಿಗಳು  ಭಿನ್ನ ಭಿನ್ನವಾದವು ಎನ್ನುವುದನ್ನು ಇಲ್ಲಿ ಮನಗಾಣಬಹುದು. ಹೀಗೆ ಆರ್ಥಿಕ ಕ್ರೋಡೀಕರಣ ಮತ್ತು ವಿನಿಮಯದ ನೆಲೆಯಲ್ಲಿ ಕೇಂದ್ರವಾಗಿ ರೂಪು ಗೊಳ್ಳುವ, ಆರ್ಥಿಕ ವಹಿವಾಟಿನ ಒಂದು ಸ್ಥಳವನ್ನು ನಗರವನ್ನಾಗಿ ಪರಿವರ್ತಿಸುವ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಸಂಕ್ಷಿಪ್ತವಾಗಿಯಾದರೂ ಕೆಲವು ಮುಖ್ಯ ಸಂಗತಿಗಳ ಕಡೆಗೆ ಗಮನವನ್ನು ಸೆಳೆದು ನಿರ್ವಸಾಹತೀಕರಣದ ನೆಲೆಯಿಂದ ನಗರವನ್ನು ನೋಡಲು ಅನುವು ಮಾಡಿಕೊಟ್ಟ ಪ್ರಯತ್ನಕ್ಕಾಗಿ ಸಂಶೋಧಕರಾದ ಡಾ. ಕೆ. ಮೋಹನ್‌ಕೃಷ್ಣ ರೈ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.. ವಿವೇಕ ರೈ
ಕುಲಪತಿ