ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಕಂಡು ಬರುವ ಬಹುಮುಖ್ಯ ವಿಚಾರವೆಂದರೆ ನಗರ ಪ್ರದೇಶಗಳ ಆಡಳಿತ. ಇದು ಮೇಲ್ನೋಟಕ್ಕೆ ಆಡಳಿತಕ್ಕೆ ಸಂಬಂಧಪಟ್ಟ ವಿಚಾರವಾಗಿ ಕಂಡು ಬಂದರೂ, ಆಯಾ ಸಂದರ್ಭದ ಉತ್ಪಾದನಾ ವಿಧಾನ ಮತ್ತು ಸಂಬಂಧಗಳ ನೇರ ಫಲಿತಾಂಶವೂ ಆಗಿದೆ. ಆಡಳಿತ ನಡೆಸುತ್ತಿದ್ದವರು ಅರಸೊತ್ತಿಗೆ, ಅಧಿಕಾರ, ಸವಲತ್ತು ಮುಂತಾದ ಯಜಮಾನಿಕೆಯ ಸಂಕೇತಗಳನ್ನು ಪ್ರತಿನಿಧಿಸುತ್ತಿದ್ದವರೇ ಆಗಿರುತ್ತಿದ್ದರು. ಪ್ರಾಚೀನ ಸಂದರ್ಭದಿಂದಲೂ ಈ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ನಗರ ಜೀವನವನ್ನು ವ್ಯವಸ್ಥಿತಗೊಳಿಸುವುದು ಆಡಳಿತದ ಮೂಲ ಉದ್ದೇಶ. ಆ ಕಾರಣಕ್ಕಾಗಿ ಹಲವಾರು ಸಂಸ್ಥೆಗಳು ಹುಟ್ಟಿಕೊಡವು. ಮೌರ್ಯ ಅರಸ ಅಶೋಕನ ಆಳ್ವಿಕೆಯ ಸಂದರ್ಭ ದಿಂದಲೇ ನಗರಾಡಳಿತಕ್ಕೆ ಸಂಬಂಧಪಟ್ಟ ವಿವರಗಳು ಸಿಗುತ್ತವೆ. ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ನಗರಾಡಳಿತದ ಕುರಿತು ಮಾಹಿತಿಗಳು ಸಿಗುತ್ತವೆ. ಬ್ರಹ್ಮಗಿರಿ ಶಾಸನದಲ್ಲಿ ಅಶೋಕನ ಆಜ್ಞೆಯನ್ನು ಸುವರ್ಣಗಿರಿಯಲ್ಲಿದ್ದ ಅಧಿಕಾರಿಗಳು ಇಸಿಲಾದ ಅಧಿಕಾರಿಗಳಿಗೆ ತಿಳಿಸಿದ ಉಲ್ಲೇಖವಿದೆ. ಇಸಿಲಾವು ಮೌರ್ಯ ಸಾಮ್ರಾಜ್ಯದ ಆಡಳಿತ ಪ್ರಾಂತ್ಯಗಳ ಲ್ಲೊಂದಾಗಿದ್ದು, ಅಲ್ಲಿನ ಆಡಳಿತಕ್ಕೆ ಮಹಾಮಾತ್ರನೆಂಬ ಅಧಿಕಾರಿ ನೇಮಕಗೊಂಡಿದ್ದನು. ಸುವರ್ಣಗಿರಿಯು ಹಿರಿಯ ಆಡಳಿತ ಭಾಗವಾಗಿತ್ತು. ಸುವರ್ಣಗಿರಿಯ ಆಡಳಿತಕ್ಕೆ ರಾಜಪುತ್ರ-ಯುಜರಾಜನೊಬ್ಬನನ್ನು ನೇಮಕಗೊಳಿಸಲಾಗುತ್ತಿದ್ದು, ಆತನ ಅಧೀನಾಧಿಕಾರಿಯಾಗಿ ಮಹಾಮಾತ್ಯನಿರುತ್ತಿದ್ದ. ಸುವರ್ಣಗಿರಿಯನ್ನು ಇನ್ನೂ ಸರಿಯಾಗಿ ಗುರುತಿಸಿಲ್ಲವಾದ್ದರಿಂದ ಕರ್ನಾಟಕದ ಯಾವ ಭಾಗ ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು ಹಾಗೂ ಆಡಳಿತ ವ್ಯವಸ್ಥೆ ಯಲ್ಲಿ ಭಾಗಿಗಳಾಗುತ್ತಿದ್ದವರು ಯಾರು ಎನ್ನುವುದು ಖಚಿತವಾಗಿ ತಿಳಿದು ಬರುವುದಿಲ್ಲ. ಆದರೂ ಉತ್ತರ ಕರ್ನಾಟಕದ ಬಹುಭಾಗ ಮೌರ್ಯ ಆಡಳಿತಕ್ಕೆ ಒಳಪಟ್ಟಿತ್ತು ಎನ್ನುವ ತೀರ್ಮಾನಕ್ಕೆ ಹಲವಾರು ವಿದ್ವಾಂಸರು ಬಂದಿದ್ದಾರೆ.

ಮೌರ್ಯ ಯುಗದ ಕರ್ನಾಟಕದಲ್ಲಿ ಆಡಳಿತವನ್ನು ನಡೆಸುತ್ತಿದ್ದ ಅಧಿಕಾರಿಗಳ ಹುದ್ದೆಗಳ ಹೆಸರುಗಳು ಲಭ್ಯವಿವೆ. ಅವುಗಳೆಂದರೆ ರಾಜ ಯುವರಾಜ, ಮಹಾಮಾತ್ರ, ಧರ್ಮ-ಮಹಾಮಾತ್ರ, ಅಂತಮಹಾಮಾತ್ರ ಪ್ರಾದೇಶಿಕ, ರಾಷ್ಟ್ರೀಕ, ರಜ್ಜುಕ, ಯುಕ್ತ ಆಯುಕ್ತ ಮೊದಲಾದವು. ಇವರೆಲ್ಲರೂ ಅಧಿಕಾರಿಗಳಾಗಿದ್ದು, ರಾಜನ ನಿರ್ದೇಶನದಂತೆ ಆಡಳಿತವನ್ನು  ನಡೆಸುತ್ತಿದ್ದರು. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು. ಅಶೋಕ ಯುದ್ಧದ ಮೂಲಕ ಈ ಪ್ರದೇಶಗಳನ್ನು ಗೆದ್ದು ಕೊಂಡಿರಲಿಲ್ಲ. ಅವನ ಸಾಮ್ರಾಜ್ಯದ ಬಹುಭಾಗ ಆನುವಂಶಿಕವಾಗಿ ಬಂದ ಮೌರ್ಯ ಸಾಮ್ರಾಜ್ಯದ ಭಾಗಗಳಾಗಿದ್ದವು. ಹೀಗಾಗಿ ಸ್ಥಳೀಯ ಅಧಿಕಾರಿಗಳು ಆಡಳಿತದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರು.

ಶಾತವಾಹನರ ಆಳ್ವಿಕೆಯ ಸಂದರ್ಭದಲ್ಲಿ ಬನವಾಸಿ, ಸನ್ನತಿ, ಚಂದ್ರವಳ್ಳಿ, ವಡಗಾಂವ್-ಮಾಧವಪುರ ಮುಂತಾದ ಪ್ರದೇಶಗಳು ಆಡಳಿತದ ದೃಷ್ಟಿಯಿಂದ ಮಹತ್ವದ ಕೇಂದ್ರ ಗಳಾಗಿದ್ದವು. ಬನವಾಸಿಯು ಪಶ್ಚಿಮದಲ್ಲಿ, ಸನ್ನತಿಯು ಪೂರ್ವದಲ್ಲಿ ಶಾತವಾಹನರ ಆಡಳಿತ ಕೇಂದ್ರಗಳಾಗಿದ್ದವು. ಚಂದ್ರವಳ್ಳಿ, ವಡಗಾಂವ್-ಮಾಧವಪುರವು ಉಪಕೇಂದ್ರ ಗಳಾಗಿದ್ದವು ಎಂಬುದಾಗಿ ತಿಳಿಯಲಾಗಿದೆ. ಸನ್ನತಿ ಭಾಗವು ಶಾತವಾಹನರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಸನ್ನತಿಯು ಮೌರ್ಯರ ಕಾಲದಿಂದಲೂ ಬೆಳೆಯುತ್ತಾ ಬಂದ ನಗರವಾದ್ದರಿಂದ ಸಹಜವಾಗಿಯೇ ಶಾತವಾಹನರು ಅದನ್ನು ಆಡಳಿತ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡರು. ಬನವಾಸಿ ಭಾಗವನ್ನು ಚುಟು ಮನೆತನದವರು ಆಳುತ್ತಿದ್ದರು. ಚುಟುಗಳು ಶಾತವಾಹನರ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದರು. ಸನ್ನತಿಯ ಶಾಸನಗಳಲ್ಲಿ ಅಮಾತ್ಯ, ಮಹಾತಲವರರು ಎನ್ನುವ ಅಧಿಕಾರಿಗಳ ಉಲ್ಲೇಖಗಳು ಕಂಡು ಬರುತ್ತವೆ. ಶಾತವಾಹನರ ಆಡಳಿತ ಪದ್ಧತಿಯೂ ವಿಕೇಂದ್ರೀಕೃತವಾದದ್ದಾಗಿತ್ತು.

ಶಾತವಾಹನರ ಅವನತಿಯ ನಂತರ ಕದಂಬರು ಮತ್ತು ಗಂಗರು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಅಧಿಕಾರಕ್ಕೆ ಬಂದರು. ಶಾತವಾಹನರ ಅವನತಿಯ ಬಳಿಕ ಕೃಷಿ ವ್ಯವಸ್ಥೆ ಹೆಚ್ಚು ಗಟ್ಟಿಯಾಗಿ ರೂಪುಗೊಳ್ಳಲಾರಂಭಿಸಿತು. ಈ ಪ್ರಕ್ರಿಯೆ ನಗರೀಕರಣದ ಮೇಲೆ ಬೀರಿದ ಪರಿಣಾಮಗಳು ನಗರ ವ್ಯವಸ್ಥೆಯ ರೂಪುಗೊಳ್ಳುವಿಕೆಗೆ ಪೂರಕವಾಗಿರಲಿಲ್ಲ. ಕೆಲವು ಪಟ್ಟಣಗಳಷ್ಟೆ ಅಭಿವೃದ್ದಿ ಹೊಂದಿದವು. ಅವುಗಳಲ್ಲಿ ಬನವಾಸಿ ಮತ್ತು ತಲಕಾಡು ಪ್ರಮುಖವಾದವು. ಹೆಚ್ಚಿನ ನಗರ ಪ್ರದೇಶಗಳು ಆಯಾ ಪ್ರದೇಶದ ಆಡಳಿತವನ್ನು ನೋಡಿಕೊಳ್ಳುವ ಕೇಂದ್ರಗಳಾಗಿದ್ದವು. ನಗರ ಕೇಂದ್ರಗಳಲ್ಲಿ ನಗರಾಡಳಿತದ ಕಛೇರಿಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ಕಛೇರಿಗಳೂ ಇರುತ್ತಿದ್ದವು. ನಗರ ಮತ್ತು ಗ್ರಾಮಗಳೆನ್ನುವ ಸ್ಪಷ್ಟವಾದ ವಿಂಗಡಣೆಗಳು ಇದ್ದಿರಲಿಲ್ಲ. ಸಂತೆಗಳು ನಗರ ಮತ್ತು ಗ್ರಾಮಗಳೆರಡರ ಲಕ್ಷಣಗಳನ್ನು ಸೂಚಿಸುತ್ತಿದ್ದವು. ಪೇಟೆಗಳಲ್ಲಿ ಮಾರಾಟವಾಗುವ ವಸ್ತುಗಳ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಕದಂಬರ ಕಾಲದಲ್ಲಿ ಸರ್ವಕಾರ್ಯಕರ್ತ ಎನ್ನುವ ಅಧಿಕಾರಿ ಪ್ರಧಾನ ಆಡಳಿತಗಾರನಾಗಿದ್ದನು. ಗಂಗರ ಕಾಲದಲ್ಲಿ ಪಟ್ಟಣಗಳಲ್ಲಿ ವ್ಯಾಪಾರಿಗಳ, ಕಸುಬುದಾರರ ಸಮಿತಿಗಳಿದ್ದವು. ಅದೇ ರೀತಿ ಅಗ್ರಹಾರಗಳಲ್ಲಿ ಮಹಾಜನ ರೆಂಬ ಕುಟುಂಬ ಪ್ರಮುಖರ ಕೂಟವಿತ್ತು. ಗ್ರಾಮಗಳ ಗಾವುಂಡರು ಮತ್ತು ಪ್ರಜೆಗಾಮುಂಡರು ಪಟ್ಟಣಗಳ ವ್ಯಾಪಾರಿ ಸಮಿತಿಗಳೊಂದಿಗೆ ಮತ್ತು ಮಹಾಜನರೊಂದಿಗೆ ನಗರ ಆಡಳಿತಕ್ಕೆ ಸಂಬಂಧಿಸಿದಂತೆ ಸಹಕರಿಸುತ್ತಿದ್ದರು. ಗಂಗರ ಕಾಲದಲ್ಲಿ ತಲಕಾಡಿನಲ್ಲಿ ಮಣಿಗ್ರಾಮ ಶ್ರೇಣಿ ಎನ್ನುವ ವರ್ತಕ ಸಂಘ ಅಸ್ತಿತ್ವದಲ್ಲಿತ್ತು.

ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಅನೇಕ ಪಟ್ಟಣಗಳಿದ್ದವು. ಅವುಗಳನ್ನು ಪುರ ಹಾಗೂ ನಗರ ಎಂದು ಕರೆಯಲಾಗುತ್ತಿತ್ತು. ಬಾದಾಮಿ, ಬನವಾಸಿ, ಐಹೊಳೆ, ಪಟ್ಟದಕಲ್ಲು, ಪುಲಿಗೆರೆ ಮೊದಲಾದವು ಅಂದಿನ ಪ್ರಮುಖ ನಗರ ಕೇಂದ್ರಗಳು. ಬಾದಾಮಿ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ವರ್ತಕ ಸಂಘಗಳು ನಗರಾಡಳಿತದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದವು. ಪಟ್ಟಣಗಳ ಆಡಳಿತವು ಮಹಾಜನರು, ಪಟ್ಟಣಸೆಟ್ಟಿ ಹಾಗೂ ಉಳಿದ ಜಾತಿಗಳ ಮುಖಂಡರಿಂದ ನಡೆಯುತ್ತಿತ್ತು. ವರ್ತಕ ಸಂಘದ ಮುಖ್ಯಸ್ಥ ಪಟ್ಟಣಸೆಟ್ಟಿ ಯಾಗಿದ್ದು, ಅವನು ನಗರಾಧಿಪತಿಯಾಗಿರುತ್ತಿದ್ದ. ಮಹಾಜನರೊಂದಿಗೆ ನಗರ ಅಥವಾ ನಗರ ಸಮೂಹಗಳೆಂಬ ವರ್ತಕ ಶ್ರೇಣಿಗಳು ಪೌರ ಕಾರ್ಯಗಳನ್ನು ನಿರ್ವಹಿಸುತ್ತಿದ್ದವು. ದೇವಾಲಯ ನಿರ್ಮಾಣ ದತ್ತಿ ಬಿಡುವುದು, ವ್ಯಾಪಾರಸ್ಥರಿಗೆ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ಚಟುವಟಿಕೆಗಳು ವರ್ತಕ ಶ್ರೇಣಿಯ ಸಮ್ಮುಖದಲ್ಲಿ ನಡೆಯುತ್ತಿದ್ದವು.  ನಗರ ಆಡಳಿತದ ಅತ್ಯಂತ ಪ್ರಾಚೀನ ಉದಾಹರಣೆಗಳಲ್ಲಿ ಉದ್ಯಾವರವು ಒಂದು. ಇದು ಕ್ರಿ.ಶ. ೬ನೆಯ ಶತಮಾನಕ್ಕೆ ಸಂಬಂಧಿಸಿದ್ದು. ಸಂಭುಕಳ್ಳಿ ಎನ್ನುವ ಪ್ರದೇಶದಲ್ಲಿ ದೊರೆತ ಶಾಸನದಲ್ಲಿ ಉದ್ಯಾವರವನ್ನು ನಗರ ಎಂದೂ ಅದರ ಆಡಳಿತಗಾರರನ್ನು ಒಕ್ಕಲು ಎಂದೂ ಕರೆಯಲಾಗಿದೆ. ಇದೇ ರೀತಿಯ ಇನ್ನೊಂದು ಉದಾಹರಣೆ ಪುಲಿಗೆರೆ (ಗದಗ ಜಿಲ್ಲೆಯ ಇಂದಿನ ಲಕ್ಷ್ಮೇಶ್ವರ). ಪುಲಿಗೆರೆಯ ನಗರ ಸಭೆಯಲ್ಲಿ ಮಹಾಜನರು, ನಗರ ಮತ್ತು ವರ್ತಕ ಸಮುದಾಯಗಳು ಇದ್ದವು. ಪುಲಿಗೆರೆ ನಗರ ಸಭೆಗೆ ಕ್ರಿ.ಶ. ೭೨೫ರಲ್ಲಿ ಯುವರಾಜ ವಿಕ್ರಮಾದಿತ್ಯನಿಂದ ಮನ್ನಣೆ ದೊರಕಿತು. ಈ ಅಧಿಕೃತ ಮನ್ನಣೆಗೆ ಆಚಾರ ವ್ಯವಸ್ಥೆ ಎನ್ನುವ ಹೆಸರಿತ್ತು. ಇದು ಪೌರಾಡಳಿತದ ಕೈಪಿಡಿಯಂತಿತ್ತು. ಮಹಾಜನರ ಅಧಿಕಾರಿಗಳು, ತೆರಿಗೆ ಮತ್ತು ದಂಡಗಳನ್ನು ವಿಧಿಸುವ ಅಧಿಕಾರಿಗಳು, ಗಿಲ್ಡ್‌ಗಳ ಕಾರ್ಯ ವ್ಯಾಪ್ತಿ ಮೊದಲಾದವು ಕೈಪಿಡಿಯಲ್ಲಿ ಸೇರಿಕೊಂಡಿತ್ತು.

ಉದ್ಯಾವರ, ಪುಲಿಗೆರೆಯಂಥದೇ ನಗರಾಡಳಿತ ವ್ಯವಸ್ಥೆಯನ್ನು ಹೊಂದಿದ್ದ ಇತರ ಪಟ್ಟಣಗಳೆಂದರೆ ಐಹೊಳೆ, ಗುಣುಪುರ, ಸೂಡಿ, ನರೆಗಲ್ ಮುಂತಾದವು. ಇವುಗಳ ಸಂದರ್ಭದಲ್ಲಿಯೂ ನಗರಸಭೆಯ ಉಲ್ಲೇಖ ಕಂಡು ಬರುತ್ತದೆ. ಅದೇ ರೀತಿ ಮಹಾಜನರು ಹಾಗೂ ಗಿಲ್ಡ್‌ಗಳ ಉಲ್ಲೇಖಗಳೂ ಸಿಗುತ್ತವೆ. ನಗರಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯನ್ನು ನಗರಸಭೆ ಎನ್ನುವ ಹೆಸರಿನಿಂದ ಕರೆಯಲಾಗಿದೆ. ನಗರ ಅಥವಾ ನಗರ ಮಹಾಜನ ಎನ್ನುವುದು ನಗರ ಸಭೆಯ ಹೆಸರಾಗಿತ್ತು. ನಗರ ಸಭೆಯಲ್ಲಿ ವರ್ತಕರು, ಹಳ್ಳಿಯ ಮುಖಂಡರು, ಮಹಾಜನರು, ಮಠಗಳು, ಸರಕಾರದ ಪ್ರತಿನಿಧಿಗಳು, ಸ್ಥಾನಪತಿಗಳು ಮೊದಲಾದವರು ಸೇರಿಕೊಂಡಿರುತ್ತಿದ್ದರು. ನಗರ ಸಭೆಯ ಮುಖಂಡ ಪಟ್ಟಣಸ್ವಾಮಿ ಅಥವಾ ಮೇಯರ್. ಪಟ್ಟಣಸ್ವಾಮಿಯೊಂದಿಗೆ ಸೇನಭೋವ ತೋಟಿಕಾರ, ಸೂತ್ರಧಾರಿ ಹಾಗೂ ಇನ್ನಿತರ ಅಧಿಕಾರಿಗಳು ಇರುತ್ತಿದ್ದರು.

ನಗರಾಡಳಿತಕ್ಕೆ ಸಂಬಂಧಿಸಿದ ಅಧಿಕಾರಿಯ ಉಲ್ಲೇಖ ಬರುವುದು ಕ್ರಿ.ಶ. ೭೨೫ರ ಲಕ್ಷ್ಮೀಶ್ವರ ಶಾಸನದಲ್ಲಿ. ಇದರಲ್ಲಿ ಸೆಟ್ಟಿಗಳು ಎನ್ನುವ ಉಲ್ಲೇಖವಿದೆ. ಸೆಟ್ಟಿ ಎನ್ನುವುದು ಪಟ್ಟಣಸ್ವಾಮಿಯ ಆರಂಭದ ಹೆಸರು. ನಂತರ ಸೆಟ್ಟಿಗಳನ್ನು ಪಟ್ಟಣಸೆಟ್ಟಿ ಅಥವಾ ಪಟ್ಟಣಸ್ವಾಮಿ ಎಂಬುದಾಗಿ ಕರೆಯಲಾಗುತ್ತಿತ್ತು. ನಗರ ಪ್ರದೇಶಗಳ ವ್ಯಾಪ್ತಿಯನ್ನು ಅವಲಂಬಿಸಿಕೊಂಡು ಪಟ್ಟಣಸ್ವಾಮಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತಿತ್ತು. ಬಳ್ಳಿಗಾವೆಯಲ್ಲಿ ಮೂರು ಜನ ಪಟ್ಟಣ ಸೆಟ್ಟಿಗಳಿದ್ದರೆ, ತಲಕಾಡಿನಲ್ಲಿ ನಾಲ್ಕು ಮತ್ತು ದೋರಸಮುದ್ರದಲ್ಲಿ ಇಬ್ಬರು ಇದ್ದರು. ಪಟ್ಟಣಸ್ವಾಮಿಗಳ ಜೊತೆಗೆ ಹೆಗ್ಗಡೆಗಳು ಮತ್ತು ಪುರಪತಿಗಳು ಇರುತ್ತಿದ್ದರು. ಅವರು ಪೇಟೆ-ಪಟ್ಟಣಗಳ ಆಡಳಿತದಲ್ಲಿ ಪಟ್ಟಣಸ್ವಾಮಿಗಳಿಗೆ ನೆರವಾಗುತ್ತಿದ್ದರು. ಕೆಲವೊಂದು ಅಧಿಕಾರಗಳನ್ನು ಅವರು ಸ್ವತಂತ್ರವಾಗಿಯೂ ನಿರ್ವಹಿಸುತ್ತಿದ್ದರು. ಹೆಗ್ಗಡೆಗಳು ಮತ್ತು ಪುರಪತಿಗಳನ್ನು ಸರಕಾರವೇ ನೇರವಾಗಿ ನೇಮಿಸುತ್ತಿತ್ತು. ಅರಸೀಕೆರೆಯ ಶಾಸನವೊಂದರಲ್ಲಿ ರಾಜಾಧ್ಯಕ್ಷ ಹೆಗ್ಗಡೆ ಎನ್ನುವ ಉಲ್ಲೇಖವಿರುವುದು ಕಂಡು ಬರುತ್ತದೆ.

ಪಟ್ಟಣಗಳ ಆಡಳಿತಾಧಿಕಾರಿಗಳ ಹೆಸರುಗಳು ಪಟ್ಟಣದಿಂದ ಪಟ್ಟಣಕ್ಕೆ ಬದಲಾಗುತ್ತಿದ್ದವು. ಉದಾಹರಣೆಗೆ, ಸೆಟ್ಟಿ (ಪುಲಿಗೆರೆ), ಪಟ್ಟಣಸೆಟ್ಟಿ (ಧಾರವಾಡ), ಪಟ್ಟಣ-ವಸಂತರ (ತಲಕಾಡು), ಗೌಡ-ಪಟ್ಟಣಸ್ವಾಮಿ (ಗೌಡಗೆರೆ), ಸೆಟ್ಟಿವಾಳ (ಅಜ್ಜಾಡಿ), ಪಟ್ಟಣಸ್ವಾಮಿ (ಬಳ್ಳಿಗಾವೆ). ನಗರಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಸರಕಾರಿ ಅಧಿಕಾರಿಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗಿದೆ. ನಾಯಕ (ಉದ್ಯಾವರ), ಪುರಪತಿ (ಗುಣುಪುರ), ಪುರದ ಪೆರ್ಗಡೆ (ಬಂಕಾಪುರ), ನಗರ ಪೆರ್ಗಡೆ (ಮುತ್ತುಗೆ), ಪಟ್ಟಣದ ಹೆಗ್ಗಡೆ (ಆಳಂದೆ), ನಗರಪತಿ (ಬಾಂಡುಪ), ಪಟ್ಟಣ ವೆರ್ಗಡೆ (ಅಣ್ಣಿಗೆರೆ), ರಾಜಾಧ್ಯಕ್ಷ ಹೆಗ್ಗಡೆ (ಅರಸೀಕೆರೆ), ಸ್ಥಾನಪತಿ (ತಲಕಾಡು), ಪೊಳಲ ಹೆಗ್ಗಡೆ (ಕುಡಿಕಾರ, ದಕ್ಷಿಣ ಕನ್ನಡ), ಅಧಿಕಾರಿ (ಬೇಲೂರು), ಪೊಳಲ ಪ್ರಧಾನ, ನಗರ ಪ್ರಧಾನ ಮುಂತಾದವರು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳಾಗಿದ್ದು, ಪಟ್ಟಣಸ್ವಾಮಿಗಳ ಜೊತೆ ಕಾರ್ಯ ನಿರ್ವಹಿಸುತ್ತಿದ್ದರು.

ಪಟ್ಟಣಸ್ವಾಮಿಗಳ ಕೆಲಸ ಕಾರ್ಯಗಳು ಹೆಚ್ಚು ಕಡಿಮೆ ಹಳ್ಳಿಗಳ ಮುಖಂಡರಾದ ಗಾವುಂಡರ ರೀತಿಯದ್ದೇ ಆಗಿರುತ್ತಿತ್ತು. ಪಟ್ಟಣಸ್ವಾಮಿಗಳು ಸಂತೆಗಳನ್ನು ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಆ ಮೂಲಕ ಪಟ್ಟಣಗಳ ಹುಟ್ಟಿಗೆ ಕಾರಣರಾಗುತ್ತಿದ್ದರು. ನಗರ ಚರಿತ್ರೆಯಲ್ಲಿ ಸಂತೆ-ಮಾರುಕಟ್ಟೆಗಳ ಪಾತ್ರ ಹಿರಿದಾದದ್ದು. ಸಂತೆಗಳನ್ನು ಏರ್ಪಡಿಸು ತ್ತಿದ್ದುದಕ್ಕಾಗಿ ಪಟ್ಟಣಸ್ವಾಮಿಗಳು ಅನೇಕ ಸವಲತ್ತುಗಳನ್ನು ಪಡೆಯುತ್ತಿದ್ದರು. ಕೆಲವೊಂದು ತೆರಿಗೆಗಳಿಂದ ವಿನಾಯಿತಿ ದೊರಕುತ್ತಿತ್ತು. ಪಟ್ಟಣಸ್ವಾಮಿಗಳ ಆದಾಯ ಹೆಚ್ಚಾಗಿ ಇನಾಮು, ದಾನದ ರೂಪದ್ದೇ ಆಗಿರುತ್ತಿತ್ತು. ನಗರ ವಾಸಿಗಳು ನೀಡಬೇಕಾದ ತೆರಿಗೆಯನ್ನು ಪಟ್ಟಣಸ್ವಾಮಿಗಳು ನಿಗದಿಪಡಿಸುತ್ತಿದ್ದರು. ಕೆರೆಗಳ ನಿರ್ಮಾಣ, ದೇವಾಲಯ, ಜಿನಾಲಯಗಳ ನಿರ್ಮಾಣ ಮುಂತಾದ ಕೆಲಸಗಳನ್ನೂ ಪಟ್ಟಣಸ್ವಾಮಿಗಳು ಮಾಡುತ್ತಿದ್ದರು. ನಗರಗಳು ಯೋಜನಾಬದ್ಧವಾಗಿ ಬೆಳೆಯುವಲ್ಲಿ ನಗರ ಆಡಳಿತಾಧಿಕಾರಿಗಳ ಪಾತ್ರ ಬಹುಮುಖ್ಯ ವಾದದ್ದು. ನಗರ ಯೋಜನೆಯು ಸುಸಜ್ಜಿತ ಜೀವನ ನಡೆಸಲು ಬಹುಮುಖ್ಯವಾದ ಅಂಶ. ನಗರ ಪ್ರದೇಶದಲ್ಲಿ ಜನರು ವಾಸಿಸುವ ಪ್ರದೇಶ, ವ್ಯಾಪಾರ ನಡೆಸುವ ಪ್ರದೇಶ, ಆಡಳಿತ ಕಛೇರಿಗಳಿರುವ ಪ್ರದೇಶಗಳು ಕ್ರಮಬದ್ಧವಾಗಿ ರಚನೆಗೊಳ್ಳುವಂತೆ ಹಾಗೂ ಅವು ಒಂದು ಇನ್ನೊಂದರ ಮೇಲೆ ಅಡ್ಡಿಯನ್ನುಂಟುಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತಾಧಿಕಾರಿಯದ್ದಾಗಿತ್ತು. ಅದೇ ರೀತಿ ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ಆರೋಗ್ಯ, ನೈರ್ಮಲ್ಯ ಮುಂತಾದವುಗಳ ಕಡೆಗೂ ಪಟ್ಟಣಸ್ವಾಮಿಗಳು ಗಮನಹರಿಸುತ್ತಿದ್ದರು. ಪಟ್ಟಣಸ್ವಾಮಿಗಳ ನೇಮಕ ಹೆಚ್ಚಾಗಿ ಆನುವಂಶಿಕವಾದದ್ದಾಗಿತ್ತು. ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ವರ್ಚಸ್ಸು, ಕೆಲಸಕಾರ್ಯಗಳು ಆಯ್ಕೆಯ ಮಾನದಂಡಗಳಾಗುತ್ತಿದ್ದವು. ಪಟ್ಟಣಸ್ವಾಮಿಗಳು ಆಯ್ಕೆಗೊಂಡ ಬಳಿಕ ಮುಖ್ಯವಾಗಿ ಸರಕಾರ, ವರ್ತಕರು ಮತ್ತು ನಗರ ಸಮುದಾಯಗಳ ಸಹಕಾರದೊಂದಿಗೆ ನಗರ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ನಗರಸಭೆಯ ಆದಾಯದ ಮೂಲಗಳೆಂದರೆ ತೆರಿಗೆ ಮತ್ತು ಸುಂಕ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಸಮುದಾಯಗಳು ತಾವು ವಾಸಿಸುವ ಮನೆ ಹಾಗೂ ವ್ಯಾಪಾರ ನಡೆಸುವ ವ್ಯಾಪಾರಿ ಮಳಿಗೆಗಳ ತೆರಿಗೆಯನ್ನು ಕೊಡಬೇಕಾಗಿತ್ತು. ನಗರವಾಸಿಗಳಿಂದ ಸಂಗ್ರಹವಾಗುತ್ತಿದ್ದ ತೆರಿಗೆಯ ಎಷ್ಟು ಭಾಗ ರಾಜ್ಯ ಬೊಕ್ಕಸಕ್ಕೆ ಹೋಗುತ್ತಿತ್ತು ಹಾಗೂ ಎಷ್ಟು ಭಾಗ ನಗರಗಳ ಆಡಳಿತಕ್ಕೆ ವಿನಿಯೋಗಿಸಲ್ಪಡುತ್ತಿತ್ತು ಎನ್ನುವುದರ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಸುಂಕವನ್ನು ವಿಧಿಸುತ್ತಿದ್ದರ ಕುರಿತು ಶಾಸನ ಉಲ್ಲೇಖಗಳು ಸಿಗುತ್ತವೆ. ನಗರಗಳ ದಿನನಿತ್ಯದ ಆಡಳಿತಕ್ಕೆ ಹೆಚ್ಚಿನ ಗಮನ ಕೊಡಲಾಗುತ್ತಿತ್ತು. ಇದನ್ನು ‘ನಿತ್ಯ ವ್ಯವಸ್ಥೆ’ ಎಂಬುದಾಗಿ ಕರೆಯಲಾಗಿದೆ.

ನಗರಗಳು ವಿಸ್ತಾರದಲ್ಲಿ ದೊಡ್ಡದಾಗಿದ್ದರೆ ಅವುಗಳನ್ನು ವಾರ್ಡುಗಳಾಗಿ ವಿಂಗಡಿಸ ಲಾಗುತ್ತಿತ್ತು. ಪಟ್ಟಣಗಳನ್ನು ಪಶ್ಚಿಮ ವಾರ್ಡ್, ಪೂರ್ವ ವಾರ್ಡ್ ಮುಂತಾಗಿ ವಿಂಗಡಿಸ ಲಾಗುತ್ತಿತ್ತು. ಪ್ರತಿ ವಾರ್ಡ್‌ಗಳಲ್ಲಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಮುಖಂಡರಿ ರುತ್ತಿದ್ದರು. ನಗರಸಭೆಯ ಅಧೀನದಲ್ಲಿ ವಾರ್ಡ್ ಸಭೆಗಳು ಕೆಲಸ ನಿರ್ವಹಿಸುತ್ತಿದ್ದವು. ಉದ್ಯಾವರದಲ್ಲಿ ೭೦ ಮುಖಂಡರಿದ್ದರು. ಮುಳುಗುಂದದಲ್ಲಿ ೧೨೦ ನಗರ ಮಹಾ ಜನರಿದ್ದರು. ಇದೇ ರೀತಿಯ ವ್ಯವಸ್ಥೆ ಪುಲಿಗೆರೆ, ನರಗುಂದ, ರೋಣ, ನರೆಗಲ್, ಲಿಂಗಸಗೂರ್ ಮುಂತಾದ ಪಟ್ಟಣಗಳಲ್ಲಿಯೂ ಇತ್ತು. ವಾರ್ಡ್‌ಗಳಂತೆ ನಗರ ಪ್ರದೇಶಗಳಲ್ಲಿ ಇದ್ದ ಇನ್ನೊಂದು ವಿಂಗಡಣೆ ಕೇರಿ. ಕೇರಿ ಎನ್ನುವ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಅನೇಕ ಪಟ್ಟಣಗಳಿದ್ದವು. ಉದಾಹರಣೆಗೆ, ಪಡುವಗೇರಿ, ಮೆಕ್ಕೆಗೇರಿ, ಹೇಮಗೇರಿ, ಬ್ರಹ್ಮೇಶ್ವರಗೇರಿ, ಕಪ್ಪೆಯಗೇರಿ ಮುಂತಾದವು. ಇವು ಪಟ್ಟಣಗಳ ಒಂದು ಬೀದಿಯಾಗಿ ರುತ್ತಿದ್ದವು ಹಾಗೂ ನಂತರ ಅವೇ ಉಪನಗರಗಳಾಗಿ ಬೆಳೆದವು. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಬಂದರು ಪಟ್ಟಣಗಳಾದ ಮಂಗಳೂರು ಮತ್ತು ಬಸ್ರೂರು. ಮಂಗಳೂರು ಅನೇಕ ಕೇರಿಗಳಾಗಿ ವಿಭಾಗಿಸಲ್ಪಟ್ಟಿತ್ತು. ಅವುಗಳೆಂದರೆ ಗೊಲ್ಲರಕೇರಿ, ಬಸ್ತಿಕೇರಿ, ಗುಜ್ಜರಕೇರಿ, ಡೊಂಗರಕೇರಿ, ಕಸೈಗಲ್ಲಿ, ಬಸವನಗುಡಿಕೇರಿ ಮುಂತಾದವು. ಮಂಗಳೂರಿನಲ್ಲಿ ಆಡಳಿತ ನಡೆಸುವ ನಗರ ಸಮಿತಿಗಳಿದ್ದವು. ಸಮಿತಿಗಳಲ್ಲಿ ಭೂಮಾಲೀಕರು ಇರುತ್ತಿದ್ದರು. ಅವರನ್ನು ಊರಾಳುವ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಅವರೊಂದಿಗೆ ಸೇನಬೋವ ಎನ್ನುವ ಅಧಿಕಾರಿಗಳಿದ್ದರು. ಹಂಜಮಾನ, ಸೆಟ್ಟಿಕಾರ, ಬಳಂಜು, ನಾನಾದೇಶಿ, ಗವರೆ ಮತ್ತು ನಖರ ಮಂಗಳೂರಿನಲ್ಲಿದ್ದ ಪ್ರಮುಖ ವರ್ತಕ ಸಂಘಗಳು. ನಾವಿಗದ ಪ್ರಭು ಎನ್ನುವ ಅಧಿಕಾರಿಯೂ ಮಂಗಳೂರಿನಲ್ಲಿ ಇದ್ದುದಾಗಿ ತಿಳಿದುಬರುತ್ತದೆ. ಕರಾವಳಿಯ ಇನ್ನೊಂದು ಪ್ರಮುಖ ಪಟ್ಟಣವಾದ ಬಸ್ರೂರು ಏಳುಕೇರಿಗಳಾಗಿ ವಿಭಾಗಿ ಸಲ್ಪಟ್ಟಿತ್ತು. ಅವುಗಳೆಂದರೆ ಕೋಟೆಯ ಕೇರಿ, ಚೋಳಿಯ ಕೇರಿ, ಹೊಸಕೇರಿ, ಸಾಲಿಗರ ಕೇರಿ, ಮೂರುಕೇರಿ ಅಥವಾ ಮೂಡುಕೇರಿ, ಪಡುವಕೇರಿ ಮತ್ತು ದೇವರ ಕೇರಿ. ಪ್ರತಿ ಕೇರಿಗಳಲ್ಲಿಯೂ ಸೆಟ್ಟಿಕಾರ, ನಖರ ಮತ್ತು ನಖರ ಹಂಜಮಾನ ಎಂಬ ಶ್ರೇಣಿಗಳಿದ್ದವು. ಹೆಚ್ಚಾಗಿ ಜಾತಿಯ ಹಾಗೂ ಉದ್ಯೋಗದ ಹಿನ್ನೆಲೆಯಿಂದಲೂ ಕೇರಿಗಳು ನಿರ್ಮಾಣ ಗೊಳ್ಳುತ್ತಿದ್ದವು. ಉದಾಹರಣೆಗೆ, ಬ್ರಾಹ್ಮಣಗೇರಿ, ಹೊಲೆಗೇರಿ ಮುಂತಾದವು. ಪ್ರತಿಯೊಂದು ಕೇರಿಯೂ ಮುಖಂಡನೊಬ್ಬನನ್ನು ಹೊಂದಿರುತ್ತಿತ್ತು. ಮುಖಂಡನನ್ನು ಹೆಗ್ಗಡೆ, ಹಿರಿಯ ಅಥವಾ ಗೌಡ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಕೇರಿಗಳು ತಮ್ಮದೇ ಆದ ಆಡಳಿತ ಸಭೆಗಳನ್ನು ಹೊಂದಿರುತ್ತಿದ್ದವು. ಇದು ದೊಡ್ಡ ಪ್ರಮಾಣದ ನಗರ ಕೇಂದ್ರಗಳಿಗಷ್ಟೇ ಸೀಮಿತವಾದ ಲಕ್ಷಣವಾಗಿದೆ.

ತಲಕಾಡು ರಾಜಧಾನಿ ಪಟ್ಟಣವಾಗಿದ್ದು, ನಗರ ಸಭೆಯನ್ನು ಹೊಂದಿತ್ತು. ತಲಕಾಡಿನ ಆಡಳಿತವನ್ನು ಪಟ್ಟಣ-ವಸಂತರ (ಪಟ್ಟಣಸ್ವಾಮಿ) ಮತ್ತು ಇಪ್ಪತ್ತೈದು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಕ್ರಿ.ಶ. ೧೧೮೦ರಲ್ಲಿ ಹೊಯ್ಸಳ ದೊರೆ ಎರಡನೆಯ ವೀರಬಲ್ಲಾಳ ತಲಕಾಡಿಗೆ ಸ್ಥಾನಪತಿಯನ್ನು ನೇಮಕ ಮಾಡಿದ. ಸ್ಥಾನಪತಿಯು ತಲಕಾಡಿನ ರಾಜ್ಯಪಾಲ ನಾಗಿದ್ದ. ಕ್ರಿ.ಶ. ೧೪ನೆಯ ಶತಮಾನದ ಆರಂಭದವರೆಗೂ ಸ್ಥಾನಪತಿಯೇ ತಲಕಾಡಿನ ಆಡಳಿತಾಧಿಕಾರಿಯಾಗಿದ್ದ. ಆತನ ಕಾರ್ಯಕ್ಷೇತ್ರವನ್ನು ನಿಗದಿಪಡಿಸಲಾಗಿತ್ತು. ಪಟ್ಟಣದ ಏಳು ವಾರ್ಡ್‌ಗಳು ಆತನ ಅಧೀನದಲ್ಲಿದ್ದವು. ತಲಕಾಡಿನಲ್ಲಿ ಕ್ರಿ.ಶ. ಹತ್ತನೆಯ ಶತಮಾನ ದಿಂದ ಹದಿನಾಲ್ಕನೆಯ ಶತಮಾನದವರೆಗೆ ಒಟ್ಟು ನಾಲ್ಕು ಪಟ್ಟಣಸ್ವಾಮಿಗಳಿದ್ದರು. ಪಟ್ಟಣಸ್ವಾಮಿಗಳ ಜೊತೆಗೆ ಪ್ರಜೆ-ಗೌಂಡರು ಇರುತ್ತಿದ್ದರು. ಪ್ರಜೆ-ಗೌಂಡರು ಹಳ್ಳಿಯ ಮುಖಂಡರಾಗಿದ್ದರು.

ಐಹೊಳೆ ಪಟ್ಟಣದಲ್ಲಿ ಮಹಾಜನರು, ನಗರರು ಮತ್ತು ಊರು ಆಡಳಿತವನ್ನು ನಿರ್ವಹಿಸುತ್ತಿದ್ದರು. ಐಹೊಳೆಯಲ್ಲಿ ಐನೂರು ಜನ ಮಹಾಜನರು, ಎಂಟು ನಗರರು ಮತ್ತು ನೂರಾ ಇಪ್ಪತ್ತು ಊರುಗಳು ಒಟ್ಟಾಗಿ ಧಾರ್ಮಿಕ ಕಾರ್ಯ ಕೈಗೊಂಡಿದ್ದರ ವಿವರಣೆಯನ್ನು ಶಾಸನವೊಂದು ನೀಡುತ್ತದೆ. ಐಹೊಳೆಯಲ್ಲಿ ಐಹೊಳೆ ಐದುನೂರು ಸಂಘವು ಹೆಚ್ಚು ಪ್ರಭಾವಶಾಲಿಯಾಗಿ ಬೆಳೆದಿತ್ತು. ಅದು ಪಶ್ಚಿಮದ ಕಲ್ಯಾಣಿ ಚಾಲುಕ್ಯರು ಮತ್ತು ದೋರಸಮುದ್ರದ ಹೊಯ್ಸಳರ ಬೆಂಬಲವನ್ನು ಪಡೆದುಕೊಂಡಿತ್ತು. ಈ ಬೆಂಬಲದ ಸಹಾಯದಿಂದ ಅದು ಅನೇಕ ಪಟ್ಟಣಗಳನ್ನು ಹುಟ್ಟು ಹಾಕಿತು. ದಕ್ಷಿಣದ ಐಹೊಳೆ ಈ ರೀತಿಯಾಗಿ ರಚನೆಗೊಂಡ ಒಂದು ಪಟ್ಟಣ. ಐಹೊಳೆ ಐದುನೂರು ಸಂಘವು ತನ್ನ ವ್ಯಾಪಾರ ವಸ್ತುಗಳನ್ನು ರಕ್ಷಿಸುವುದಕ್ಕೋಸ್ಕರ ಬಾಡಿಗೆ ಸೈನಿಕರನ್ನು ನೇಮಿಸಿಕೊಂಡಿತ್ತು. ಮಧ್ಯಕಾಲೀನ ಕರ್ನಾಟಕದ ಆರ್ಥಿಕ ಚಟುವಟಿಕೆಗಳಲ್ಲಿ ಇಂಥ ವರ್ತಕ ಸಂಘಗಳು ಬಹುಮುಖ್ಯವಾದ ಪಾತ್ರವನ್ನು ವಹಿಸಿದವು.

ಪುಲಿಗೆರೆಯು ರಾಜಧಾನಿ ಪಟ್ಟಣವಾಗಿತ್ತು. ಕ್ರಿ.ಶ. ೭೨೫ರ ಸುಮಾರಿಗೆ ಅಲ್ಲಿನ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಸಂವಿಧಾನವೊಂದಿತ್ತು. ಅದರಲ್ಲಿ ಸರಕಾರಿ ಅಧಿಕಾರಿಗಳು (ರಾಜ ಪುರುಷರು), ನಗರವಾಸಿಗಳು (ನಗರ), ಬ್ರಾಹ್ಮಣರು (ಮಹಾಜನರು) ಮತ್ತು ಪ್ರಜೆಗಳು ಸೇರಿಕೊಂಡಿದ್ದರು. ನಂತರದ ಅವಧಿಗಳಲ್ಲಿ ನಗರ ಮಹಾಜನರು ಮತ್ತು ಗೌಂಡರು ಆಡಳಿತಾಧಿಕಾರಿಗಳಾಗಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಅಧಿಕಾರಿಗಳು ಮತ್ತು ಅವರ ಸಂಖ್ಯೆ ಕಾಲದಿಂದ ಕಾಲಕ್ಕೆ ಬದಲಾಗುತ್ತಿತ್ತು. ಮುಳುಗುಂದದಲ್ಲಿ ನಗರ-ಮಹಾಜನರು ನಗರಸಭೆಯ ಆಡಳಿತಗಾರರಾಗಿದ್ದರು. ನಗರ-ಮಹಾಜನರಲ್ಲದೆ ಮಹಾಜನ, ಮುನ್ನೂರು ಸೆಟ್ಟಿಗಳು, ಗಾಮುಂಡರು, ಐವತ್ತು ನೇಕಾರರು, ನೂರ ಇಪ್ಪತ್ತು ಎಣ್ಣೆ ವ್ಯಾಪಾರಿಗಳು ಮತ್ತು ಪಂಚಮಠಗಳು ಮುಳುಗುಂದದ ಆಡಳಿತದಲ್ಲಿ ಭಾಗಿಯಾಗಿದ್ದರು. ಮುಳುಗುಂದವು ಹನ್ನೆರಡು ಗ್ರಾಮಗಳನ್ನೊಳಗೊಂಡ ಆಡಳಿತ ವಿಭಾಗದ ಕೇಂದ್ರ ಪಟ್ಟಣವಾಗಿತ್ತು. ಈ ರೀತಿಯ ಆಡಳಿತ ವಿಭಾಗಗಳು ಅನೇಕ ಕಂಡು ಬರುತ್ತವೆ. ಉದಾಹರಣೆಗೆ, ಆಲಂದೆ ಸಾಸಿರಕ್ಕೆ ಅಲಂದೆ, ನಾಗವಾವಿ ೧೨ ವಿಭಾಗಕ್ಕೆ ನಾಗಾವಿ, ಕೋಗಳಿ ೫೦೦ ವಿಭಾಗಕ್ಕೆ ಕೋಗಳಿ, ಅಣಂದೂರು ೨೦೦ಕ್ಕೆ ಅಣಂದೂರು, ಸಗರ ೨೦೦ಕ್ಕೆ ಸಗರ, ತರ್ದವಾಡಿ ೧೦೦೦ಕ್ಕೆ ತರ್ದವಾಡಿ, ಸಿಂದಗಿ ೧೨ಕ್ಕೆ ಸಿಂದಗಿ, ನವಿಲುಗುಂದ ೪೦ಕ್ಕೆ ನವಿಲುಗುಂದ, ಬನವಾಸಿ ೧೨೦೦೦ಕ್ಕೆ ಬನವಾಸಿ, ಗಂಗವಾಡಿ ೯೬೦೦೦ಕ್ಕೆ ಗಂಗವಾಡಿ.

ರಾಷ್ಟ್ರಕೂಟರ ಆಳ್ವಿಕೆಯ ಸಂದರ್ಭದಲ್ಲಿ ನಗರ ಆಡಳಿತವನ್ನು ನೋಡಿಕೊಳ್ಳುತ್ತಿದ್ದವರು ಪುರಪತಿ ಅಥವಾ ನಗರಪತಿಗಳು. ಮಾನ್ಯಖೇಟದಲ್ಲಿ ನಗರಸಭೆ ಇದ್ದು ಪುರಪತಿ ಅದರ ಮುಖಂಡನಾಗಿದ್ದನು. ಕ್ರಿ.ಶ. ಸುಮಾರು ೯ನೆಯ ಶತಮಾನದಿಂದ ೧೪ನೆಯ ಶತಮಾನ ದವರೆಗೆ ನಗರ ಮತ್ತು ನಗರಸಭೆಯನ್ನು ಮುಖ್ಯವಾಗಿ ನಖರ ಮತ್ತು ನಖರ ಸಮೂಹ ಎಂಬುದಾಗಿ ಕರೆಯಲಾಗುತ್ತಿತ್ತು. ಇತರ ಹೆಸರುಗಳೆಂದರೆ ನಗರ ಮಹಾಜನ, ಮಹಾನಗರಮ್, ಸಮೂಹ ಮುಂತಾದವು. ನಗರ ಆಡಳಿತ ಗ್ರಾಮಗಳ ಆಡಳಿತಕ್ಕಿಂತ ಭಿನ್ನವಾಗಿದ್ದರೂ ಗ್ರಾಮಗಳ ಮುಖಂಡರಾದ ನಾಡ ಗವುಂಡರು, ಪೆರ್ಗಡೆಗಳು, ಇನ್ನಿತರ ಗಣ್ಯರು ನಗರಸಭೆ ರೂಪುಗೊಳ್ಳುವುದಕ್ಕೆ ಹಾಗೂ ಅದರ ಸ್ವರೂಪವನ್ನು ನಿರ್ಧರಿಸುವುದಕ್ಕೆ ನೆರವಾಗುತ್ತಿದ್ದರು. ಹೀಗಾಗಿ ಭಿನ್ನ ಲಕ್ಷಣಗಳಿದ್ದರೂ ಅವು ಎರಡೂ ಭಿನ್ನ ಘಟಕಗಳು ಅಥವಾ ಪರಸ್ಪರ ಸಂಬಂಧ ಇರದ ರೀತಿಯಲ್ಲಿ ಇರುವಂತವು ಎನ್ನುವ ತೀರ್ಮಾನವೇನೂ ಇರಲಿಲ್ಲ. ಅಂದಿನ ಗ್ರಾಮ ಮತ್ತು ನಗರಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿಯೇ ಇದ್ದವು.

ಸೂಡಿ ಪಟ್ಟಣವು ಕಿಸುಕಾಡು ಎಪ್ಪತ್ತು ಇದರ ಕೇಂದ್ರವಾಗಿತ್ತು. ಅಲ್ಲಿ ಬ್ರಹ್ಮಪುರಿಯೊಂದಿದ್ದು ಮಹಾಜನರು ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪಟ್ಟಣದ ಉಳಿದ ಭಾಗವನ್ನು ಆರು ಗೌಂಡರು ಮತ್ತು ಎಂಟು ಸೆಟ್ಟಿಗಳು ನೋಡಿ ಕೊಳ್ಳುತ್ತಿದ್ದರು. ಈ ಸಂಖ್ಯೆ ಬದಲಾಗುತ್ತಿತ್ತು. ಕ್ರಿ.ಶ. ೧೦೧೦ರಲ್ಲಿ ಮೇಲಿನ ಸಂಖ್ಯೆ ಕಂಡು ಬಂದರೆ, ಕ್ರಿ.ಶ. ೧೦೫೦ರಲ್ಲಿ ಎಂಟು ಸೆಟ್ಟಿಗಳು ಮತ್ತು ಎಂಬತ್ತು ಒಕ್ಕಲುಗಳು  ಆಡಳಿತ ವ್ಯವಸ್ಥೆಯಲ್ಲಿದ್ದರು. ಸೂಡಿಯ ಆಡಳಿತಕ್ಕೆ ಸಂಬಂಧಪಟ್ಟಂತೆ ನಿಯಮಾವಳಿ ಯೊಂದನ್ನು ರೂಪಿಸಲಾಗಿತ್ತು. ಅದರ ಪ್ರಕಾರ ಮಳಿಗೆಗಳು ಮತ್ತು ಮನೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಇರಬೇಕಾಗುತ್ತಿತ್ತು, ನಗರವಾಸಿಗಳು ಹದಿನೆಂಟು ಚಿನ್ನದ ಗದ್ಯಾಣಗಳ ಭೂಕಂದಾಯವನ್ನು ಕೊಡಬೇಕಾಗಿತ್ತು, ಅಪರಾಧ ಎಸಗುವವರಿಗೆ ಶುಲ್ಕವನ್ನು ವಿಧಿಸಲಾ ಗುತ್ತಿತ್ತು, ಪಟ್ಟಣ ಪ್ರದೇಶದಲ್ಲಿ ಮನೆ ಮತ್ತು ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸ ಬಯಸುವವರಿಗೆ ಎರಡು ವರ್ಷಗಳವರೆಗೆ ಕೆಲವೊಂದು ರಿಯಾಯಿತಿಗಳನ್ನು ನೀಡಲಾ ಗುತ್ತಿತ್ತು. ಈ ನಿಯಮಾವಳಿಗಳು ಸೂಡಿ ಪಟ್ಟಣವು ಯೋಜನಾಬದ್ಧವಾಗಿ ಬೆಳೆಯುವುದಕ್ಕೆ ಸಹಕಾರಿಯಾದವು.

ಬಳ್ಳಿಗಾವೆಯು (ಶಿವಮೊಗ್ಗ ಜಿಲ್ಲೆ) ಪ್ರಾಂತೀಯ ರಾಜಧಾನಿಯಾಗಿತ್ತು. ಅಲ್ಲಿನ ಆಡಳಿತ ವ್ಯವಸ್ಥೆಯನ್ನು ನಗರ ಎನ್ನುವ ಹೆಸರಿನಿಂದ ಕರೆಯಲಾಗಿದೆ. ನಗರದ ಅಧಿಕಾರಿಯನ್ನು ಪಟ್ಟಣಸ್ವಾಮಿ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ. ೧೦೯೪ರಲ್ಲಿ ಬಳ್ಳಿಗಾವೆಯು ಮಹಾಪಟ್ಟಣವಾಗಿತ್ತು. ಅಲ್ಲಿ ಮೂರು ಜನ ಪಟ್ಟಣಸ್ವಾಮಿಗಳಿದ್ದರು. ಅವರುಗಳೆಂದರೆ ಹನುಮಂತ ಸೆಟ್ಟಿ, ಬೊಮ್ಮಿಸೆಟ್ಟಿ ಮತ್ತು ಮೇದಿಸೆಟ್ಟಿ. ಬಳ್ಳಿಗಾವೆಯಲ್ಲಿ ಅನೇಕ ವರ್ತಕ ಸಂಘಗಳಿದ್ದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಅಯ್ಯಾವೊಳೆ ಮತ್ತು ಮುಮ್ಮರಿದಂಡ. ಪಟ್ಟಣಸ್ವಾಮಿಗಳ ಜೊತೆಗೆ ಅನೇಕ ಅಧಿಕಾರಿಗಳಿರುತ್ತಿದ್ದರು. ಅವರು ಗಳೆಂದರೆ ಮೂಳಿಗ, ಸೌದೊರೆ-ಹೆಗ್ಗಡೆ, ಸೇನಭೋವ, ಮನೆಗಾರ ಮತ್ತು ತಳಾರ. ಬಳ್ಳಿಗಾವೆ ಪಟ್ಟಣದಲ್ಲಿ ಅನೇಕ ಕೇರಿಗಳು ಇದ್ದವು.

ಶ್ರವಣಬೆಳ್ಗೊಳದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ ಪಟ್ಟಣಸ್ವಾಮಿ. ಅಲ್ಲಿ ನಗರ ಎಂಬ ನಗರಸಭೆ ಇತ್ತು. ಶ್ರವಣಬೆಳ್ಗೊಳವು ಜೈನರ ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿನ ಆಡಳಿತದ ವಿಶೇಷತೆಯೆಂದರೆ ಆಚಾರ್ಯ ಎನ್ನುವ ಮುಖಂಡನಿದ್ದುದು. ಆಚಾರ್ಯ ಇತರ ಅಧಿಕಾರಿಗಳ ಸಹಕಾರದಿಂದ ಆಡಳಿತ ನೋಡಿಕೊಳ್ಳುತ್ತಿದ್ದ. ನಾನಾದೇಶಿಗಳು ಮತ್ತು ಸೆಟ್ಟಿಗಳು ಶ್ರವಣಬೆಳ್ಗೊಳದ ಧಾರ್ಮಿಕ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ನೇರ ಭಾಗಿಗಳಾಗುತ್ತಿದ್ದರು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ ಶ್ರವಣಬೆಳ್ಗೊಳವು ವ್ಯಾಪಾರಿ ಕೇಂದ್ರವಾಗಿಯೂ ಗುರುತಿಸಿಕೊಂಡಿತು. ಹಾಗಾಗಿ ವರ್ತಕ ಸಂಘಗಳು ಪಟ್ಟಣದ ಆಡಳಿತದ ಜವಾಬ್ದಾರಿಯನ್ನು ಇನ್ನಿತರ ಅಧಿಕಾರಿಗಳೊಂದಿಗೆ ಹಂಚಿಕೊಂಡವು. ಶ್ರವಣಬೆಳ್ಗೊಳದ ನಗರಸಭೆಗೆ ಅಲ್ಲಿನ ನಿವಾಸಿಗಳು ಎಂಟು ಹಣವನ್ನು ಮನೆ ತೆರಿಗೆಯಾಗಿ ಕೊಡಬೇಕಾಗಿತ್ತು.

ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಸಂದರ್ಭದಲ್ಲಿ ಹಲವಾರು ಪೇಟೆ-ಪಟ್ಟಣಗಳಿದ್ದವು. ಕಲ್ಯಾಣ, ಲಕ್ಕುಂಡಿ, ಲಕ್ಷ್ಮೀಶ್ವರ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದವು ನಗರ ಕೇಂದ್ರಗಳಾಗಿದ್ದು, ನಗರ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು. ಹೆಚ್ಚಾಗಿ ನಗರ ಕೇಂದ್ರಗಳಿಗೆ ಊರು ಮತ್ತು ನಗರ ಎನ್ನುವ ಪದ ಬಳಕೆಯಲ್ಲಿತ್ತು. ಊರೊಡೆಯ ಅಥವಾ ಊರಗಾವುಂಡ ಊರಿನ ಅಧಿಕಾರಿಯಾಗಿರುತ್ತಿದ್ದ. ನಗರವು ಸಾಮಾನ್ಯವಾಗಿ ವ್ಯಾಪಾರ ನಡೆಯುವ ಪ್ರದೇಶವಾಗಿದ್ದು, ಅದನ್ನು ನಖರ ಎನ್ನುವ ವ್ಯಾಪಾರಿ ಸಂಸ್ಥೆ ನೋಡಿ ಕೊಳ್ಳುತ್ತಿತ್ತು. ನಗರಾಧ್ಯಕ್ಷ ಅಂಥ ಪ್ರದೇಶಗಳ ಮುಖ್ಯಾಧಿಕಾರಿಯಾಗಿರುತ್ತಿದ್ದ. ನಖರ ವರ್ತಕ ಸಂಘದ ಮುಖಂಡ ಮತ್ತು ಅಧ್ಯಕ್ಷನನ್ನು ನಗರಶ್ರೇಷ್ಠ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಪಟ್ಟಣಸ್ವಾಮಿ ಎನ್ನುವ ಪದವು ಬಳಕೆಯಲ್ಲಿತ್ತು.

ಹೊಯ್ಸಳರ ಕಾಲದಲ್ಲಿ ನಗರಕೇಂದ್ರಗಳ ಹುಟ್ಟು ಮತ್ತು ಬೆಳವಣಿಗೆ ವ್ಯಾಪಕವಾಗಿ ಕಂಡು ಬಂತು. ಹೊಯ್ಸಳರ ಆಳ್ವಿಕೆಯಲ್ಲಿ ನಾಡು ಎಂಬ ಪ್ರಾದೇಶಿಕ ಆಡಳಿತ ಘಟಕ ವೊಂದಿತ್ತು. ನಾಡಿನ ಮುಖ್ಯಸ್ಥರು ವರ್ತಕರೊಂದಿಗೆ, ವರ್ತಕ ಸಂಘಗಳೊಂದಿಗೆ ಮತ್ತು ಹೊಯ್ಸಳ ಪ್ರಭುತ್ವದೊಂದಿಗೆ ಸಹಯೋಗದಿಂದ ಅನುಕೂಲವಾಗಿದ್ದ ಸ್ಥಳಗಳಲ್ಲಿ ಮಾರುಕಟ್ಟೆ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದರು. ಪ್ರತಿಯೊಂದು ನಾಡಿನ ಪಟ್ಟಣಗಳು ಅಥವಾ ಮಾರುಕಟ್ಟೆ ಕೇಂದ್ರಗಳು ಅಯ್ಯಾವೊಳೆಯ ಐನೂರ್ವರು, ನಾನಾದೇಶಿಗಳು, ದೇಶಿಗಳು, ಮುಮ್ಮುರಿ ದಂಡಂಗಳು ಮತ್ತು ಬಣಜಿಗರು ಮುಂತಾದವರೊಂದಿಗೆ ಸಂಬಂಧವಿರಿಸಿ ಕೊಂಡಿದ್ದವು. ಪಟ್ಟಣ ಕಟ್ಟಿಸುವ ಹಾಗೂ ಸಂತೆ ಕೂಡಿಸುವ ಕೆಲಸವನ್ನು ನಾಡಸ್ವಾಮಿಗಳು ಮಾಡುತ್ತಿದ್ದರು. ನಾಡಸ್ವಾಮಿಗಳ ಅಧಿಕಾರದ ವ್ಯಾಪ್ತಿ ವಿಸ್ತಾರವಾಗಿತ್ತು. ಅವರ ಅಧೀನದಲ್ಲಿ ಮಂಡಲಸ್ವಾಮಿಗಳಿರುತ್ತಿದ್ದರು. ಮಂಡಲವು ನಾಡಿನ ಒಂದು ಭಾಗವಾಗಿತ್ತು. ಮಂಡಲದಲ್ಲಿ ಪಟ್ಟಣ ಕಟ್ಟಿಸುವ ಹಾಗೂ ಸಂತೆ ಕೂಡಿಸುವ ಕೆಲಸವನ್ನು ಮಂಡಲಸ್ವಾಮಿಗಳು ಮಾಡುತ್ತಿದ್ದರು. ವಾಣಿಜ್ಯ ಕೇಂದ್ರಗಳಲ್ಲಿ ವಿವಿಧ ಕುಶಲಕರ್ಮಿಗಳು, ವರ್ತಕರು ಮತ್ತು ಸೆಟ್ಟಿಗಳು ಇರುತ್ತಿದ್ದರು. ಪಟ್ಟಣದಲ್ಲಿ ವರ್ತಕ ಸಂಘಗಳಿದ್ದವು ಹಾಗೂ ಒಬ್ಬ ಪಟ್ಟಣಸ್ವಾಮಿಯಿದ್ದನು. ಹೊಯ್ಸಳ ಶಾಸನಗಳು ವರ್ತಕರನ್ನು ಮತ್ತು ಪಟ್ಟಣಸ್ವಾಮಿಗಳನ್ನು ರಾಜ್ಯದ ಅಭಿವೃದ್ದಿಯ ಮೂಲಸ್ತಂಭ ಎಂಬುದಾಗಿ ವರ್ಣಿಸಿವೆ. ವರ್ತಕ ಸಂಘಗಳು ನಗರದ ಇನ್ನಿತರ ಆಡಳಿತಾಧಿಕಾರಿಗಳೊಂದಿಗೆ ಒಂದಾಗಿ ಕೆಲಸ ಮಾಡುತ್ತಿದ್ದವು. ವ್ಯಾಪಾರ ವಸ್ತುಗಳ ವಿಲೇವಾರಿ, ವಿತರಣೆ, ಸಂಗ್ರಹ ಮುಂತಾದ ವಿಷಯಗಳ ಕುರಿತು ವರ್ತಕ ಸಂಘಗಳು ನೇರ ತೀರ್ಮಾನ ತೆಗೆದುಕೊಳ್ಳುತ್ತಿದ್ದವು. ನಾಡಿನ ಆಡಳಿತಾಧಿಕಾರಿಗಳು, ನಾಡ ಮುಖಂಡರು ಮತ್ತು ವರ್ತಕರು ಒಟ್ಟಾಗಿ ಸಭೆ ಸೇರಿ ನಗರ ಆಡಳಿತದ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಪೇಟೆ ಪಟ್ಟಣಗಳ ಅಭಿವೃದ್ದಿಗೆ ದುಡಿಯುತ್ತಿದ್ದ ಅಧಿಕಾರಿಗಳಿಗೆ ಮತ್ತು ವರ್ತಕರಿಗೆ ಹೊಯ್ಸಳ ಅರಸರು ಧನಸಹಾಯ, ತೆರಿಗೆ ವಿನಾಯಿತಿ, ಅಧಿಕಾರ ಹಾಗೂ ಇನ್ನಿತರ ಸವಲತ್ತುಗಳನ್ನು ನೀಡುತ್ತಿದ್ದರು ಹಾಗೂ ಕೆಲವು ರಿಯಾಯಿತಿಗಳು ದೊರಕುತ್ತಿದ್ದವು. ಈ ಕಾರಣಗಳಿಂದಾಗಿ ಬೇಲೂರು, ದೋರಸಮುದ್ರ, ಸೋಮನಾಥಪುರ, ತಲಕಾಡು, ತೊಣ್ಣೂರು, ಮೂಗೂರು, ಮಂಗಳೂರು ಮೊದಲಾದ ನಗರಗಳು ಅಭಿವೃದ್ದಿ ಹೊಂದುವಂತಾಯಿತು.

ಹಳ್ಳಿಯು ಪಟ್ಟಣವಾಗಿ ಪರಿವರ್ತನೆಗೊಳ್ಳುವುದು, ಹಲವಾರು ಹಳ್ಳಿಗಳು ಸೇರಿ ನಗರ ಪ್ರದೇಶ ರೂಪುಗೊಳ್ಳುವುದು ಮಧ್ಯಕಾಲೀನ ಸಂದರ್ಭದ ಕರ್ನಾಟಕದ ಪ್ರಮುಖ ಲಕ್ಷಣವಾಗಿತ್ತು. ಈ ರೀತಿಯ ಪ್ರಕ್ರಿಯೆಯಿಂದಾಗಿ ನಗರಗಳ ಆಡಳಿತದಲ್ಲಿ ಹಳ್ಳಿಗಳ ಮುಖಂಡರೂ ಭಾಗವಹಿಸುವಂತಾಯಿತು. ಉದಾಹರಣೆಗೆ, ಹೊಯ್ಸಳರ ಕಾಲದಲ್ಲಿ ಪಟ್ಟಣವಾಗಿ ಪರಿವರ್ತನೆಗೊಂಡ ಮೂಗೂರು ಪ್ರದೇಶದ ಆಡಳಿತದಲ್ಲಿ ನಾಡಮುಖಂಡರು, ಗ್ರಾಮೀಣ ಗಣ್ಯರು ಮೊದಲಾದವರು ಭಾಗವಹಿಸುತ್ತಿದ್ದರು. ಅದೇ ರೀತಿ ಹುಬ್ಬಳ್ಳಿ ನಗರವು ಹಳೇ ಹುಬ್ಬಳ್ಳಿ, ಕೇಶವಾಪುರ, ನಾರಾಯಣಪುರ, ಬೊಮ್ಮಾಪುರ, ಮುದಿನಾಯಕನಹಳ್ಳಿ, ಅರಳಿಕಟ್ಟಿ, ಮಜೀದಪುರ ಹಾಗೂ ಬೆಂಗೇರಿ ಎನ್ನುವ ಹತ್ತು ಗ್ರಾಮಗಳ ಸೇರುವಿಕೆಯಿಂದ ರೂಪುಗೊಂಡಿತು. ಸಹಜವಾಗಿಯೇ ಹುಬ್ಬಳ್ಳಿ ನಗರದ ಆಡಳಿತದಲ್ಲಿ ಗ್ರಾಮೀಣ ಗಣ್ಯರು ಭಾಗವಹಿಸುವಂತಾಯಿತು. ಹುಬ್ಬಳ್ಳಿಯಲ್ಲಿ ಪಟ್ಟಣಸೆಟ್ಟಿ ಮತ್ತು ಆವಟಿ ಸರಕಾರದಿಂದ ನೇಮಿಸಲ್ಪಟ್ಟ ಮಾರುಕಟ್ಟೆ ಅಧಿಕಾರಿಗಳಾಗಿದ್ದರು. ಆವಟಿಯು ತೂಕ ಮತ್ತು ಅಳತೆಯ ಅಧಿಕಾರಿಯಾಗಿದ್ದರೆ, ಪಟ್ಟಣಸೆಟ್ಟಿ ನಗರದ ಮುಖ್ಯ ಆಡಳಿತಾಧಿಕಾರಿಯಾಗಿರುತ್ತಿದ್ದರು. ಇವರೊಂದಿಗೆ ಸೆಟ್ಟಿಗಳು, ಜೈನರು, ಮಾರವಾಡಿಗಳು, ನಾರ್ವೇಕರರು, ಶೀಲವಂತರು, ಕೋಮಟಿಗರು ಮೊದಲಾದ ವರ್ತಕರು ಇರುತ್ತಿದ್ದರು. ಹೀಗಾಗಿ ನಗರ ಸಮುದಾಯ ಗಳೆಲ್ಲವೂ ನಗರದ ವಿವಿಧ ಕೆಲಸ ಕಾರ್ಯಗಳನ್ನು ಪರಸ್ಪರ ಹಂಚಿಕೊಂಡವು.

ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಹೆಚ್ಚಿನ ನಗರಗಳು ರಾಜಕೀಯ ಶಕ್ತಿಯ ಕೇಂದ್ರಗಳಾಗಿದ್ದುವಲ್ಲದೆ ವ್ಯಾಪಾರ ಮತ್ತು ಕೈಗಾರಿಕೆಗಳ ಕೇಂದ್ರಗಳೂ ಆಗಿದ್ದವು. ಕೃಷಿ ಉತ್ಪನ್ನಗಳ ವ್ಯಾಪಾರವು ಹೆಚ್ಚಿದುದರಿಂದ ನಗರ ಕೇಂದ್ರಗಳ ಹುಟ್ಟಿಗೆ ಅವಕಾಶವಾಯಿತು. ಈ ಪ್ರಕ್ರಿಯೆ ವರ್ತಕರನ್ನು ಶ್ರೀಮಂತರನ್ನಾಗಿಸಿದ್ದಲ್ಲದೆ ಅವರಿಗೆ ರಾಜಕೀಯ ಶಕ್ತಿಯನ್ನೂ ಕೊಟ್ಟಿತು. ವರ್ತಕ ಸಂಘಗಳು ನಗರ ಕೇಂದ್ರಗಳ ಆಡಳಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು. ವಿಜಯನಗರದ ಸಂದರ್ಭದಲ್ಲಿ ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ಹಾಗೂ ನಗರಗಳ ಆಡಳಿತದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದ ವರ್ತಕ ಸಂಘಗಳೆಂದರೆ ಬಣಜಿಗರು, ನಾನಾದೇಶಿಗಳು, ಉಭಯ-ನಾನಾದೇಶಿಗರು, ನಖರರು, ವೈಶ್ಯರು, ಸೆಟ್ಟಿಗಳು, ಸೆಟ್ಟಿಗುಟ್ಟರು, ವೀರಬಣಜಿಗರು, ಹಂಜಮಾನ ಇತ್ಯಾದಿ. ಈ ಸಂಘಗಳ ಮುಖ್ಯಸ್ಥರು ನಗರ ಕೇಂದ್ರಗಳ, ಅದರಲ್ಲೂ ವಾಣಿಜ್ಯ ಕೇಂದ್ರಗಳ, ಮುಖ್ಯಸ್ಥರೂ ಆಗಿರುತ್ತಿದ್ದರು. ವಾಣಿಜ್ಯ ಕೇಂದ್ರಗಳ ಮುಖ್ಯಸ್ಥರನ್ನು ಉಭಯ ನಾನಾದೇಸಿ, ಪಟ್ಟಣಸ್ವಾಮಿ, ಮಹಾ ವಡ್ಡ ವ್ಯವಹಾರಿ, ವಡ್ಡವ್ಯವಹಾರಿ, ಪಟ್ಟ ವ್ಯಾಪಾರಿ, ಸೆಟ್ಟಿ, ಸ್ವಾಮಿ, ಪೃಥ್ವೀಸೆಟ್ಟಿ, ಸೆಟ್ಟಿ ಪಟ್ಟಣಸ್ವಾಮಿ, ಪುರಪತಿ, ನಗರೇಶ್ವರ, ಪಟ್ಟಣಾಧೀಶ್ವರ, ಮಹಾಪ್ರಭು ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಇವರು ವಾಣಿಜ್ಯ ನಗರಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.

ವಿಜಯನಗರ ಪಟ್ಟಣವು ರಾಜಧಾನಿ ಕೇಂದ್ರವಾಗಿದ್ದುದಲ್ಲದೆ ಪ್ರಮುಖ ವ್ಯಾಪಾರ ಕೇಂದ್ರವೂ ಆಗಿತ್ತು. ಈ ವಿಚಾರವನ್ನು ಕ್ರಿ.ಶ. ೧೫ ಮತ್ತು ೧೬ನೆಯ ಶತಮಾನಗಳಲ್ಲಿ ಬಂದ ವಿದೇಶಿ ಪ್ರವಾಸಿಗರ ಕಥನಗಳಿಂದ ತಿಳಿಯಬಹುದಾಗಿದೆ. ವಿಜಯನಗರ ಪಟ್ಟಣದಲ್ಲಿ ಅನೇಕ ಬಡಾವಣೆಗಳಿದ್ದವು. ಪ್ರತಿ ಬಡಾವಣೆಯೂ ಸ್ವಯಂಪೂರ್ಣವಾದ ಘಟಕವಾಗಿತ್ತು. ಅದರಲ್ಲಿ ಮುಖ್ಯವಾದೊಂದು ದೇವಾಲಯ, ಸಂತೆಬೀದಿ, ನೀರು ಸರಬರಾಜು ವ್ಯವಸ್ಥೆ ಇತ್ಯಾದಿಗಳಿದ್ದವು. ಈ ಬಡಾವಣೆಗಳನ್ನು ಬಜಾರುಗಳೆಂದು ಕರೆಯಲಾಗಿದೆ. ವಿಜಯನಗರ ಪಟ್ಟಣದ ಹೆಚ್ಚಿನ ಪೇಟೆ ಬೀದಿಗಳಿಗೆ ವಿಜಯನಗರದ ಅರಸರ ಹೆಸರುಗಳೇ ಇದ್ದವು. ಉದಾಹರಣೆಗೆ, ಅಚ್ಯುತರಾಯಪೇಟೆ, ಕೃಷ್ಣದೇವರಾಯಪೇಟೆ ಇತ್ಯಾದಿ. ಇವುಗಳ ಆಡಳಿತದಲ್ಲಿ ವರ್ತಕ ಸಂಘಗಳು ಪ್ರಮುಖ ಪಾತ್ರವಹಿಸುತ್ತಿದ್ದವು. ನಗರ ಆಡಳಿತದ ಕೆಲವು ಪ್ರಮುಖ ವಿಚಾರಗಳ ಕುರಿತು ವರ್ತಕ ಸಂಘಗಳು ಸಭೆಯನ್ನು ಕರೆಯುತ್ತಿದ್ದವು. ಇಂಥ ಒಂದು ಉದಾಹರಣೆಗೆ ಎರಡನೆಯ ಹರಿಹರನ ಅವಧಿಗೆ ಸಂಬಂಧಿಸಿದಂತೆ ಸಿಗುತ್ತದೆ. ಕ್ರಿ.ಶ. ೧೩೮೨ರಲ್ಲಿ ಸಾಲುಮೂಲೆ ಬಣಜಿಗ ವರ್ತಕರ ದೊಡ್ಡದೊಂದು ಸಭೆಯು ನಡೆಯಿತು. ಆ ಸಭೆಯಲ್ಲಿ ಸಾಲುಮೂಲೆ ಬಣಜಿಗರಲ್ಲದೆ ಪಟ್ಟಣಸೆಟ್ಟಿಗಳು, ಬಿಲ್ಲರು, ಮುಮ್ಮರಿದಂಡರು, ನಖರ ಪರಿವಾರದವರು ಮೊದಲಾದವರು ಭಾಗವಹಿಸಿದ್ದರು. ಸಭೆಯ ಮುಖ್ಯ ಉದ್ದೇಶ, ಸಾಲುಮೂಲೆ ಬಣಜಿಗರು ಸರಕಾರಕ್ಕೆ ಸಲ್ಲಿಸಬೇಕಾಗಿದ್ದ ತೆರಿಗೆಯ ದರವನ್ನು ನಿಗದಿಪಡಿಸುವುದಾಗಿತ್ತು. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಕುರಿತು ಮೊದಲು ನಗರವಾಸಿಗಳು ತಮ್ಮ ತಮ್ಮಲ್ಲೇ ಚರ್ಚಿಸಿಕೊಂಡು ಆಮೇಲೆ ಸರಕಾರದ ಗಮನಕ್ಕೆ ತರುತ್ತಿದ್ದರು ಎನ್ನುವುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ನಗರ ಆಡಳಿತಾಧಿಕಾರಿಗಳು, ವರ್ತಕ ಸಂಘಗಳು ಹಾಗೂ ಇನ್ನಿತರ ಗಣ್ಯರು ಪರಸ್ಪರ ಸಮಾಲೋಚಿ ಸುತ್ತಿದ್ದರು ಹಾಗೂ ಸಂಘಟಿತರಾಗಿದ್ದರು. ಈ ರೀತಿಯ ಒಕ್ಕೂಟಗಳನ್ನು ರಚಿಸಿಕೊಳ್ಳುವುದು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಅನಿವಾರ್ಯವಾಗಿತ್ತು.

ಬಹಮನಿಗಳ ಮತ್ತು ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲೂ ವರ್ತಕ ಸಂಘಗಳು ನಗರ ಆಡಳಿತದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದವು. ಬೀದರ್, ಬಿಜಾಪುರ, ಗುಲ್ಬರ್ಗ ಮುಂತಾದ ನಗರಗಳಲ್ಲಿ ವರ್ತಕ ಸಂಘಗಳು ಇದ್ದವು. ವ್ಯಾಪಾರ-ವಾಣಿಜ್ಯ ಪ್ರಧಾನ ಅರ್ಥ ವ್ಯವಸ್ಥೆ ಇದ್ದುದರಿಂದಾಗಿ ವರ್ತಕ ಸಂಘಗಳು ಸರಕಾರದ ಸಹಾಯ, ಸಹಕಾರವನ್ನು ಪಡೆಯುತ್ತಿದ್ದವು. ವರ್ತಕರಿಗೆ ಭದ್ರತೆಯನ್ನು ಒದಗಿಸುವುದಕ್ಕಾಗಿ ಸರಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದಿತು. ತೆರಿಗೆ ಸಂಗ್ರಹ, ರಸ್ತೆಗಳ ನಿರ್ಮಾಣ, ಸರಕುಗಳ ಸಾಗಣೆ,  ನೀರು ಪೂರೈಕೆ ಮುಂತಾದ ವಿಚಾರಗಳ ಕುರಿತು ವರ್ತಕ ಸಂಘಗಳು ಮೇಲ್ವಿಚಾರಣೆ ನಡೆಸುತ್ತಿದ್ದವು. ವರ್ತಕ ಸಂಘಗಳ ಮುಖ್ಯಸ್ಥರು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಗಳ ಸಹಯೋಗದಿಂದ ನಗರಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪ್ರತಿಯೊಂದು ಜಾತಿ ಮತ್ತು ಕಸುಬಿಗೆ ಬೇರೆ ಬೇರೆ ವಸತಿ ಬಡಾವಣೆಗಳಿದ್ದವು. ನಗರ ಆಡಳಿತಾಧಿಕಾರಿ ಒಟ್ಟಾರೆಯಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಬಹಮನಿಗಳ ಆಳ್ವಿಕೆಯಲ್ಲಿ ತರಫ್‌ದಾರನೆಂಬ ಅಧಿಕಾರಿ ಕಂದಾಯ ಸಂಗ್ರಹಣೆ, ವಾಣಿಜ್ಯದ ಮೇಲ್ವಿಚಾರಣೆ, ಆಡಳಿತದ ಇನ್ನಿತರ ಅಧಿಕಾರಿಗಳ ನೇಮಕ ಮುಂತಾದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ. ಆದಿಲ್‌ಶಾಹಿಗಳ ಕಾಲದಲ್ಲಿ ನಾಜಿರ್ ಎಂಬ ಆರ್ಥಿಕ ಆಡಳಿತಗಾರ, ಡಬೀರ್ ಎಂಬ ಆಡಳಿತ ವ್ಯವಹಾರಗಳನ್ನು ನೋಡುತ್ತಿದ್ದ ಅಧಿಕಾರಿ ಮತ್ತು ಹಿಸಾಬತ್ ಎಂಬ ಲೆಕ್ಕಪತ್ರಗಳ ತಪಾಸಣೆಗಾರ ಇದ್ದರು.

ವಿಜಯನಗರೋತ್ತರ ಕಾಲದಲ್ಲಿ ನಗರ ಕೇಂದ್ರಗಳು ರಾಜರ ಮತ್ತು ಪ್ರಜೆಗಳ ಸಕಲ ಚಟುವಟಿಕೆಗಳ ಮುಖ್ಯ ಕೇಂದ್ರಗಳಾಗಿದ್ದವು. ನಗರ ಆಡಳಿತದಲ್ಲಿ ಶ್ರೀಮಂತ ವರ್ಗಗಳು, ಅದರಲ್ಲೂ ಭೂಮಾಲೀಕ ವರ್ಗ ಭಾಗಿಯಾಗುತ್ತಿತ್ತು. ನಗರವಾಸಿಗಳು ಪ್ರತ್ಯೇಕ ಪ್ರತ್ಯೇಕವಾಗಿಯೇ ಜೀವಿಸುತ್ತಿದ್ದರು. ಆಯಾ ಜಾತಿ-ಪಂಗಡಗಳ ಹೆಸರನ್ನೇ ಆಯಾ ಬೀದಿ-ಕೇರಿಗಳಿಗೆ ಕೊಡಲಾಗುತ್ತಿತ್ತು. ಒಕ್ಕಲಿಗರ ಕೇರಿ, ಬ್ರಾಹ್ಮಣರ ಕೇರಿ, ಉಪ್ಪಾರ ಬೀದಿ, ಸೆಟ್ಟರ ಬೀದಿ ಮುಂತಾದವು ಪ್ರಮುಖ ಬೀದಿಗಳು. ಈ ವ್ಯವಸ್ಥೆಯನ್ನು ವಿಜಯನಗರೋತ್ತರ ಕಾಲದ ಎಲ್ಲ ಅರಸುಮನೆತನಗಳ ಆಳ್ವಿಕೆಯ ಸಂದರ್ಭದಲ್ಲೂ ಕಾಣಬಹುದಾಗಿದೆ. ಮೈಸೂರು, ಇಕ್ಕೇರಿ, ಚಿತ್ರದುರ್ಗ ಮುಂತಾದ ಪ್ರದೇಶಗಳನ್ನು ಕೇಂದ್ರವನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ ಎಲ್ಲ ಅರಸುಮನೆತನಗಳೂ ನಗರ ಆಡಳಿತಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಬೆಂಗಳೂರು, ಮೈಸೂರು, ಚಿತ್ರದುರ್ಗ, ಇಕ್ಕೇರಿ, ಗುಬ್ಬಿ, ತುರುವೇಕೆರೆ, ಮಂಗಳೂರು ಮುಂತಾದ ನಗರ ಕೇಂದ್ರಗಳಲ್ಲಿ ಔದ್ಯಮಿಕ ಹಾಗೂ ವಾಣಿಜ್ಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿತ್ತು. ವರ್ತಕರ ಸಂಘಗಳು ಪ್ರತಿಯೊಂದು ವಾಣಿಜ್ಯ ನಗರದಲ್ಲೂ ರೂಪುಗೊಂಡಿದ್ದವು. ಸರಕಾರವನ್ನು ಪ್ರತಿನಿಧಿಸುತ್ತಿದ್ದ ನಗರ ಆಡಳಿತಗಾರರಿರುತ್ತಿದ್ದರು. ಪಟ್ಟಣಸ್ವಾಮಿ, ರಾಜ್ಯಪಾಲ, ಗುರಿಕಾರ, ಪೇಟೆ ಸೆಟ್ಟಿ, ಶಾನಬೋಗ ಮೊದಲಾದವರು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ರಾಜ್ಯಪಾಲರನ್ನು ನೇಮಕ ಮಾಡುವ ಪದ್ಧತಿಯನ್ನು ಜಾರಿಗೆ ತಂದವರು ವಿಜಯನಗರದ ಅರಸರು. ಮಂಗಳೂರು ಮತ್ತು ಬಾರ್ಕೂರುಗಳಲ್ಲಿ ರಾಜ್ಯಪಾಲರನ್ನು ನೇಮಿಸಿದ್ದರು. ಪ್ರಾಂತೀಯ ಆಡಳಿತದಲ್ಲಿ ವಿಜಯನಗರದ ಮಾದರಿಯನ್ನು ನಂತರದ ಅವಧಿಗಳಲ್ಲೂ ಕೆಲವೊಂದು ಪರಿಷ್ಕರಣೆಗಳೊಂದಿಗೆ ಅಳವಡಿಸಿಕೊಳ್ಳಲಾಗಿತ್ತು.

ಮೈಸೂರು ಸುಲ್ತಾನರ ಆಳ್ವಿಕೆಯಲ್ಲಿ, ಅದರಲ್ಲೂ ಟಿಪ್ಪುಸುಲ್ತಾನನ ಆಳ್ವಿಕೆಯಲ್ಲಿ ನಗರ ಕೇಂದ್ರಗಳಿಗೆ ಸಂಬಂಧಿಸಿದಂತೆ, ಅದರಲ್ಲೂ ನಗರ ಆಡಳಿತದ ಕುರಿತು ಅನೇಕ ಮಹತ್ತರ ಬದಲಾವಣೆಗಳುಂಟಾದವು. ಇದಕ್ಕೆ ಮೂಲಕಾರಣ ವ್ಯಾಪಾರ ಕ್ಷೇತ್ರದಲ್ಲಿ  ಕಂಡು ಬಂದ ಬ್ರಿಟಿಷರ ಮಹತ್ವಾಕಾಂಕ್ಷಿ ಧೋರಣೆಗಳು. ಟಿಪ್ಪುಸುಲ್ತಾನ್ ತನ್ನ ಆಳ್ವಿಕೆಗೆ ಒಳಪಟ್ಟ ನಗರಗಳನ್ನು ತನ್ನ ಅನುಕೂಲಗಳಿಗೆ ಸರಿ ಹೊಂದುವ ವೇದಿಕೆಗಳನ್ನಾಗಿ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದನು. ಟಿಪ್ಪುವಿನ ಆಳ್ವಿಕೆಯಲ್ಲಿ ಕೇಂದ್ರೀಕೃತ ಆಡಳಿತ ವ್ಯವಸ್ಥೆಯಿತ್ತು. ಸರಕಾರಿ ವ್ಯಾಪಾರ ವ್ಯವಸ್ಥೆಯ ಒಂದು ಮಾದರಿಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಟಿಪ್ಪು ಮಾಡಿದನು. ಟಿಪ್ಪುವು ಒಂದು ಹೊಸ ವಾಣಿಜ್ಯ ವಿಭಾಗವನ್ನು ಸ್ಥಾಪಿಸಿದನು. ಅದರ ಸದಸ್ಯರನ್ನು ಮಾಲಿಕ್-ಉಲ್-ತುಜ್ಜರ್ (ವಾಣಿಜ್ಯ ಸ್ಥಾವರಗಳ ಪ್ರಭುಗಳು) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅದೊಂದು ಖಾಯಂ ಸ್ವರೂಪದ ವಾಣಿಜ್ಯ ಮಂಡಳಿಯಾಗಿತ್ತು. ಮೈಸೂರು ನಗರದಲ್ಲಿ ಈ ಮಂಡಳಿಯು ಕಾರ್ಯ ನಿರ್ವಹಿಸುತ್ತಿತ್ತು. ಅದರಲ್ಲಿ ಒಂಬತ್ತು ಮಂದಿ ಸದಸ್ಯರಿದ್ದರು. ವಿವಿಧ ವಸ್ತುಗಳ ಆಯಾತನಿರ್ಯಾತಗಳ ಹೊಣೆ ಈ ಮಂಡಳಿಯದ್ದಾಗಿತ್ತು. ವಿದೇಶಿ ವರ್ತಕರನ್ನು ಮೈಸೂರಿಗೆ ಆಹ್ವಾನಿಸುವುದು ಮತ್ತು ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಮಂಡಳಿಯದ್ದಾಗಿತ್ತು. ವಾಣಿಜ್ಯ ಕೇಂದ್ರಗಳ ಮೇಲ್ವಿಚಾರಣೆ, ಲೆಕ್ಕಪತ್ರಗಳನ್ನಿಡುವುದು, ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು ಮುಂತಾದ ಕೆಲಸ ಕಾರ್ಯಗಳನ್ನು ಮಂಡಳಿಯು ನಿರ್ವಹಿಸುತ್ತಿತ್ತು. ವಾಣಿಜ್ಯ ವಿಭಾಗ ಮಾಲಿಕ್-ಉಲ್-ತುಜ್ಜರ್ ಅಧೀನದಲ್ಲಿದ್ದರೆ, ಕಂದಾಯ ವಿಭಾಗದ ಮೇಲ್ವಿಚಾರಕ ಮೀರ ಅಸೋಫ್, ಹಡಗು ವಿಭಾಗದ ಮುಖ್ಯಸ್ಥ ಮೀರ್ ಯೆಂ, ಸೈನ್ಯಕ್ಕೆ ಸಂಬಂಧಿಸಿದ ಮೇಲ್ವಿಚಾರಕನನ್ನು ಮೀರ್ ಮಿರಾನ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ನಗರ ಜೀವನವನ್ನು ಕ್ರಮಬದ್ಧ ಮತ್ತು ಯೋಜನಾಬದ್ಧವನ್ನಾಗಿಸುವಲ್ಲಿ ಆಡಳಿತದ ಪಾತ್ರ ಮಹತ್ವವಾದದ್ದು. ನಗರೀಕರಣ ಎಂದಾಗ ಅದು ಕೇವಲ ರಸ್ತೆ, ಕಟ್ಟಡ, ಕೋಟೆ, ದೇವಾಲಯ ಎಂದಷ್ಟೇ ಅಲ್ಲ. ನಗರಗಳಲ್ಲಿ ನಗರ ಸಮುದಾಯಗಳಿದ್ದವು ಹಾಗೂ ಅವು ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳುವಂತೆ ಮಾಡಿದವು. ನಗರ ಆಡಳಿತದ ಅನಿವಾರ್ಯತೆ ಹುಟ್ಟಿಕೊಂಡಿದ್ದುದೇ ನಗರಗಳು ಸಂಕೀರ್ಣವಾದಾಗ ಮತ್ತು ವಿಸ್ತಾರವಾಗಿ ಬೆಳೆಯಲು ಆರಂಭವಾದಾಗ. ಮಾರ್ಯರಿಂದ ಟಿಪ್ಪುವಿನವರೆಗೂ ನಗರ ಪ್ರದೇಶಗಳಲ್ಲಿ ಬೇರೆ ಬೇರೆ ಸ್ವರೂಪದ ಆಡಳಿತ ವ್ಯವಸ್ಥೆ ಇತ್ತು. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ವ್ಯಾಪಾರ-ವಾಣಿಜ್ಯ ಪ್ರಧಾನ ಪಾತ್ರವನ್ನು ವಹಿಸಲು ಆರಂಭಿಸಿದಂದಿನಿಂದ ವರ್ತಕ ಸಂಘಗಳ ಮಹತ್ವವೂ ಹೆಚ್ಚಾಯಿತು. ಅವು ನಗರ ಆಡಳಿತದಲ್ಲಿ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳಾಗಿ ಬೆಳೆದವು. ನಗರ ಆಡಳಿತದಲ್ಲಿ ಗಮನಿಸಬಹುದುದಾದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಮೇಲ್ವರ್ಗದ ಭಾಗವಹಿಸುವಿಕೆ. ಗ್ರಾಮ ಮತ್ತು ನಗರಗಳೆರಡರ ಆಡಳಿತದಲ್ಲೂ ಸ್ಥಳೀಯ ಮೇಲ್ವರ್ಗಗಳು ಸಂಪೂರ್ಣ ಹಿಡಿತ ಸಾಧಿಸಿಕೊಂಡಿದ್ದವು. ಇದಕ್ಕೆ ಮುಖ್ಯವಾಗಿ ಕಂಡು ಬರುವ ಕಾರಣಗಳೆಂದರೆ ಶ್ರೇಣೀಕೃತ ಸಮಾಜ ವ್ಯವಸ್ಥೆ, ಭೂಮಾಲೀಕ ವರ್ಗಗಳು, ಪುರೋಹಿತಶಾಹಿ ವ್ಯವಸ್ಥೆ ಮುಂತಾದವು. ರಾಜಪ್ರಭುತ್ವ ಇವುಗಳಿಗೆ ಪೂರಕ ವಾಗಿಯೇ ಇದ್ದುದರಿಂದಾಗಿ ನಗರ ಆಡಳಿತದಲ್ಲೂ ಅವು ಮೇಲುಗೈ ಸಾಧಿಸುವಂತಾಯಿತು. ಆಡಳಿತವು ರಾಜಕೀಯ ವ್ಯವಸ್ಥೆಯ ಒಂದು ಭಾಗವಾದ್ದರಿಂದಾಗಿ ಈ ಲಕ್ಷಣಗಳು ಅಲ್ಲಿ ಸಹಜವಾಗಿಯೇ ಕಾಣಿಸಿಕೊಂಡವು. ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ನಗರ ಕೇಂದ್ರಗಳು ವಿವಿಧ ಅರಸುಮನೆತನಗಳ ವೈಯಕ್ತಿಕ ಹಿತಾಸಕ್ತಿಗಳ ವೇದಿಕೆಗಳಾಗಿಯೂ ಗುರುತಿಸಿಕೊಳ್ಳ ಬೇಕಾಯಿತು. ಇದು ನಗರ ಆಡಳಿತ ವ್ಯವಸ್ಥೆಯ ಮೇಲೂ ವಿಭಿನ್ನ ಸ್ವರೂಪದ ಪರಿಣಾಮಗಳನ್ನು ಬೀರಿತು.