ನಗರೀಕರಣ ಪ್ರಕ್ರಿಯೆಯಲ್ಲಿ ಬಹುಮುಖ್ಯವಾಗಿ ಕಂಡು ಬರುವ ಅಂಶ ನಗರವಾಸಿಗಳ ಬದುಕು. ನಗರ ಸಮುದಾಯಗಳು ತಮ್ಮ ಬಹು ವಿಧದ ಕೆಲಸ ಕಾರ್ಯಗಳ ಮೂಲಕ ನಗರ ಕೇಂದ್ರಗಳ ವಿಸ್ತರಣೆಗೆ ಕಾರಣವಾದವು. ನಗರ ಅರ್ಥ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಈ ಸಮುದಾಯಗಳು ಮತ್ತು ಅವುಗಳ ದುಡಿಮೆ ಪ್ರಮುಖ ವಿಚಾರವಾಗಿ ಕಂಡು ಬರುತ್ತದೆ. ನಗರ ಅರ್ಥ ವ್ಯವಸ್ತೆಯ ರೂಪುಗೊಳ್ಳುವಿಕೆಯಲ್ಲಿ ನಗರ ಸಮುದಾಯಗಳು ಮತ್ತು ಅವುಗಳ ವ್ಯಾಪಾರ ಚಟುವಟಿಕೆಗಳು, ವರ್ತಕ ಸಂಘಗಳು ಹಾಗೂ ಇನ್ನಿತರ ನಗರ ಸಂಬಂಧಿ ಚಟುವಟಿಕೆಗಳು ನೇರವಾಗಿ ಭಾಗಿಯಾದವು. ನಗರ ಅರ್ಥ ವ್ಯವಸ್ಥೆಯು ಕೃಷಿ ಆರ್ಥಿಕತೆಗೆ ಪೂರಕವಾಗಿ ಕಾಣಿಸಿಕೊಂಡಿತು. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ನಗರಗಳನ್ನಾಧರಿಸಿದ ಅರ್ಥ ವ್ಯವಸ್ಥೆ ನಿರ್ಣಾಯಕ ಪಾತ್ರವನ್ನು ವಹಿಸಿತು. ಆದರೆ ಇದು ದಿqsರನೆ ಆದ ಆರ್ಥಿಕ ಪರಿರ್ವನೆಯಲ್ಲ. ಮೌರ್ಯರಿಂದ ಮೈಸೂರು ಸುಲ್ತಾನರವರೆಗಿನ ಅವಧಿಯಲ್ಲಿ ಪೇಟೆ-ಪಟ್ಟಣಗಳು ಹುಟ್ಟು ಹಾಕಿದ ನಗರ ಆರ್ಥಿಕತೆ ವಿಭಿನ್ನ ಆಯಾಮಗಳನ್ನು ಹೊಂದಿರುವಂತದ್ದು. ಪೇಟೆ-ಪಟ್ಟಣಗಳು ಪ್ರತಿಯೊಂದು ಹಂತದಲ್ಲೂ ಬದಲಾವಣೆಗಳಿಗೆ ಒಳಗಾಗುತ್ತಿದ್ದವು. ನಗರ ಅರ್ಥ ವ್ಯವಸ್ಥೆಯ ಕುರಿತು ಚರ್ಚಿಸುವಾಗ ಕೃಷಿಯೇತರ ಉತ್ಪಾದನೆ, ಮಾರುಕಟ್ಟೆಯನ್ನಾಧರಿಸಿದ ಅರ್ಥ ವ್ಯವಸ್ಥೆ ಮತ್ತು ವರ್ತಕ ಸಮುದಾಯಗಳು ಪ್ರಮುಖ ವಸ್ತುಗಳಾಗಿ ಕಂಡು ಬರುತ್ತವೆ.

ಪ್ರಾಚೀನ ಕರ್ನಾಟಕದಲ್ಲಿ ಕೃಷಿ ವ್ಯವಸ್ಥೆಗೆ ಪೂರಕವಾದ ನಗರ ವ್ಯವಸ್ಥೆ ರೂಪು ಗೊಂಡಿತ್ತು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಂತೆ, ಮಾರುಕಟ್ಟೆಗಳ ಅವಶ್ಯಕತೆಯಿತ್ತು. ಕೃಷಿಯ ವಿಸ್ತರಣೆ ಆದಾಗ ಸಹಜವಾಗಿಯೇ ನಗರ ಕೇಂದ್ರಗಳ ವ್ಯಾಪ್ತಿ, ಸ್ವರೂಪಗಳೂ ಬದಲಾದವು. ರಸ್ತೆ ವ್ಯವಸ್ಥೆ, ಆಡಳಿತ ನೋಡಿಕೊಳ್ಳಲು ಅಧಿಕಾರಿಗಳ ನೇಮಕ, ಆ ಮೂಲಕ ರಾಜಕೀಯ ವ್ಯವಸ್ಥೆಯೊಂದರ ಹುಟ್ಟು, ವಿದೇಶಿ ಸಂಪರ್ಕ, ವರ್ತಕರ ಹಿತಾಸಕ್ತಿಗಳನ್ನು ಕಾಪಾಡಲು ವರ್ತಕ ಸಂಘಗಳ ಹುಟ್ಟು ಮುಂತಾದ ಹೊಸ ಬದಲಾವಣೆಗಳು ಕಾಣಿಸಿಕೊಂಡವು. ಮೌರ್ಯರ ಕಾಲದ ಕರ್ನಾಟಕದಲ್ಲಿ ಕೃಷಿ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ ಕೃಷಿಯೇತರ ಚಟುವಟಿಕೆಗಳೂ ನಡೆಯುತ್ತಿದ್ದವು. ಕೈಕಸುಬುಗಳಿಗೆ ಲಕಿಜಿತ್ಸಾಹ ನೀಡಲಾಗುತ್ತಿತ್ತು ಹಾಗೂ ಕೈಕಸುಬುಗಳಿಗೆ ಲಕಿಜಿತ್ಸಾಹ ದೊರೆಯುವ ಕಸುಬುದಾರರ ಶ್ರೇಣಿಗಳು ಅಸ್ತಿತ್ವಕ್ಕೆ ಬಂದವು. ಸಣ್ಣ ಪ್ರಮಾಣದ ಕೈಗಾರಿಕೆಗಳು ಆರಂಭ ಗೊಂಡವು. ಶಸ್ತ್ರಾಸ್ತ್ರಗಳನ್ನು ತಯಾರಿಸುವ, ನೌಕೆಗಳನ್ನು ಕಟ್ಟುವ ಕಸುಬುದಾರರ ಬಗ್ಗೆ ಸರಕಾರವೇ ನೇರವಾಗಿ ಆಸಕ್ತಿ ತೋರಿಸುತ್ತಿತ್ತು. ಅವರಿಗೆ ತೆರಿಗೆ ವಿನಾಯಿತಿಯನ್ನೂ ನೀಡಲಾಗುತ್ತಿತ್ತು. ಸಿದ್ಧವಸ್ತುಗಳ ಮೇಲೆ ತೆರಿಗೆ ವಿಧಿಸುವ, ದಂಡಗಳನ್ನು ನಿಗದಿಪಡಿಸುವ, ಸಾಲ ನೀಡುವ ಮುಂತಾದ ಕೆಲಸ ಕಾರ್ಯಗಳು ಸಹಜವಾಗಿಯೇ ಅಸ್ತಿತ್ವದಲ್ಲಿದ್ದವು. ಮೌರ್ಯರ ಮುದ್ರಾಂಕಿತ ನಾಣ್ಯಗಳು ಕರ್ನಾಟಕದಲ್ಲಿಯೂ ಪ್ರಚಾರದಲ್ಲಿದ್ದವು. ಈ ನಾಣ್ಯಗಳನ್ನು ಕರ್ನಾಟಕದಲ್ಲಿಯೆ ಟಂಕಿಸುತ್ತಿದ್ದರೊ ಇಲ್ಲವೆ ಟಂಕಿತಗೊಂಡ ನಾಣ್ಯಗಳನ್ನು ಕರ್ನಾಟಕದ ಹೊರಗಿನಿಂದ ತರಿಸಿಕೊಳ್ಳಲಾಗುತ್ತಿತ್ತೊ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗಳು ಏನೇ ಇದ್ದರೂ ಮಾರ್ಯರ ಆಳ್ವಿಕೆಗೆ ಒಳಪಟ್ಟ ಕರ್ನಾಟಕದ ನಗರ ಪ್ರದೇಶಗಳಲ್ಲಿ ವ್ಯಾಪಾರ-ವಾಣಿಜ್ಯದ ವಿನಿಮಯ ಸಾಧನವಾಗಿ ನಾಣ್ಯ ಇತ್ತು ಎನ್ನುವುದಂತೂ ಸ್ಪಷ್ಟ. ಕರ್ನಾಟಕದ ಬನವಾಸಿ, ಸನ್ನತಿ, ವಡಗಾಂವ್-ಮಾಧವಪುರ, ಚಂದ್ರವಳ್ಳಿ ಮುಂತಾದ ಪ್ರದೇಶಗಳಲ್ಲಿ ಮುದ್ರಾಂಕಿತ ನಾಣ್ಯಗಳು ದೊರೆತಿವೆ. ಮುದ್ರಾಂಕಿತ ನಾಣ್ಯಗಳು ಬೆಳ್ಳಿ ನಾಣ್ಯಗಳಾಗಿದ್ದವು. ಈ ನಾಣ್ಯಗಳು ಕರ್ನಾಟಕದಲ್ಲಿ ದೊರೆತಿರುವುದರಿಂದ ವ್ಯಾಪಾರಸ್ಥರು ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಸಂಚರಿಸಿ ವ್ಯಾಪಾರ ನಡೆಸುತ್ತಿದ್ದ ರೆಂಬುದಾಗಿ ತಿಳಿಯಬಹುದಾಗಿದೆ.

ಮೌರ್ಯ ಸಾಮ್ರಾಜ್ಯ ವರ್ತಕರಿಗೆ ರಾಜಕೀಯ ಶಕ್ತಿಯನ್ನು ತಂದುಕೊಟ್ಟರೆ, ಬೌದ್ಧಧರ್ಮ ಧರ್ಮ ಸಂದೇಶವನ್ನು ಹೊರ ಭೂ ಭಾಗಗಳಿಗೆ ಒಯ್ಯುವ ಅವಕಾಶವನ್ನು ಒದಗಿಸಿತು. ಪ್ರಭುತ್ವದ ದೃಷ್ಟಿಯಿಂದ ನೋಡುವಾಗ ಇದು ಧರ್ಮದ ಮೂಲಕ ರಾಜ್ಯ ವಿಸ್ತರಣೆ ಮಾಡುವ ತಂತ್ರವಾಗಿ ಕಂಡು ಬಂದರೂ, ವ್ಯಾಪಾರಸ್ಥರಿಗೆ ಹೊರ ನಾಡಿನೊಂದಿಗೆ ಸಂಪರ್ಕ ಸಾಧಿಸಲು ಅನುಕೂಲಕರವಾಗಿಯೇ ಪರಿಣಮಿಸಿತು. ವ್ಯಾಪಾರಿ ಸಂಘಗಳ ಹುಟ್ಟಿಗೂ ಇದು ಕಾರಣವಾಯಿತು. ಮೆಗಸ್ತನೀಸನು ತನ್ನ ಕಥನದಲ್ಲಿ, ಮೌರ್ಯ ಸಾಮ್ರಾಜ್ಯ ದಲ್ಲಿ ವಿದೇಶಿಯರ ಯೋಗಕ್ಷೇಮ ನೋಡಿಕೊಳ್ಳಲೆಂದೇ ಒಂದು ಇಲಾಖೆ ಇತ್ತು ಎಂಬುದಾಗಿ ತಿಳಿಸಿದ್ದಾನೆ.

ಮೌರ್ಯರ ಆಳ್ವಿಕೆಯ ಸಂದರ್ಭದ ಕರ್ನಾಟಕದ ಕುರಿತು ಅಧ್ಯಯನ ನಡೆಸುವಾಗ ಬಹುಮುಖ್ಯವಾಗಿ ಕಂಡುಬರುವ ವಿಚಾರ ವಾಣಿಜ್ಯ ಮಾರ್ಗಗಳಿಗೆ ಸಂಬಂಧಪಟ್ಟದ್ದು. ಬೌದ್ಧ ಸಾಹಿತ್ಯದಲ್ಲಿ ಉತ್ತರಾಪಥ ಮತ್ತು ದಕ್ಷಿಣಾಪಥಗಳೆಂಬ ಹೆದ್ದಾರಿಗಳ ಉಲ್ಲೇಖ ವಿರುವುದು ಕಂಡುಬರುತ್ತದೆ. ಇದರಿಂದ ತಿಳಿದುಬರುವ ವಿಚಾರವೆಂದರೆ ಮೌರ್ಯರ ಕಾಲಕ್ಕೂ ಹಿಂದಿನಿಂದಲೇ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳು ಪರಸ್ಪರ ಸಂಬಂಧ ಹೊಂದಿದ್ದವು ಎನ್ನುವುದು. ಇದು ಭಾರತದ ಎರಡನೆಯ ಹಂತದ ನಗರೀಕರಣದ ಸಂದರ್ಭ ವಾಗಿತ್ತು. ದಕ್ಷಿಣಾಪಥವೆಂದರೆ ದಕ್ಷಿಣದತ್ತ ಸಾಗುವ ವಾಣಿಜ್ಯ ಮಾರ್ಗ. ಈ ಮಾರ್ಗವು ತಕ್ಷಶಿಲೆಯಿಂದ ರಾಜಸ್ತಾನ-ಮಾಳ್ವ ಮೂಲಕ ದಖ್ಖನ್ ಮಾರ್ಗವಾಗಿ ಮುಂದುವರೆದು ದಕ್ಷಿಣದ ರಾಜ್ಯಗಳನ್ನು ತಲುಪುತ್ತಿತ್ತು. ಮೋತೀಚಂದ್ರ ಅವರ ‘ಸಾರ್ಥವಾಹ (ಪ್ರಾಚೀನ ಭಾರತದ ಪಥ ಪದ್ಧತಿ)’ ಎನ್ನುವ ಕೃತಿಯಲ್ಲಿ ಈ ಮಾರ್ಗಗಳ ಕುರಿತ ಉಲ್ಲೇಖಗಳು ಕಂಡುಬರುತ್ತವೆ. ಬೌದ್ಧ ಸನ್ಯಾಸಿಗಳು ಸಂಚರಿಸುತ್ತಿದ್ದ ಈ ಮಾರ್ಗಗಳು ಉತ್ತಮ ಸ್ಥಿತಿಯಲ್ಲಿದ್ದು ವ್ಯಾಪಾರ ವಹಿವಾಟು ಮತ್ತು ಸಂಪರ್ಕ ಏರ್ಪಡುವುದಕ್ಕೆ ಸಹಕಾರಿಯಾದವು ಎನ್ನುವುದಾಗಿ ರೋಮಿಲಾ ಥಾಪರ್ ತಮ್ಮ ‘ಅಶೋಕ ಎಂಡ್ ದಿ ಡಿಕ್ಲೈನ್ ಆಫ್ ಮೌರ್ಯಾಸ್’ ಎನ್ನುವ ಕೃತಿಯಲ್ಲಿ ಹೇಳಿದ್ದಾರೆ. ಆರ್.ಎಸ್. ಶರ್ಮ, ಎನ್. ಲಾಹಿರಿ, ಡಿ.ಡಿ. ಕೊಸಾಂಬಿ, ತಾಳ್ತಜೆ ವಸಂತಕುಮಾರ, ಅ.ಸುಂದರ ಮೊದಲಾದ ವಿದ್ವಾಂಸರು ಮೌರ್ಯ ಕಾಲದಲ್ಲಿದ್ದ ವಾಣಿಜ್ಯ ಮಾರ್ಗಗಳು ಹಾಗೂ ಅವುಗಳಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟಿನ ಕುರಿತು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ದಕ್ಷಿಣಾಪಥ ವಾಣಿಜ್ಯ ಮಾರ್ಗದಲ್ಲಿ ಮುತ್ತು-ರತ್ನಗಳು, ಸಮುದ್ರ ಚಿಪ್ಪಿನಿಂದ ತಯಾರಿಸಿದ ವಸ್ತುಗಳು, ಬಂಗಾರ ಮುಂತಾದ ವಸ್ತುಗಳನ್ನು ವ್ಯಾಪಾರಸ್ಥರು ಸಾಗಿಸುತ್ತಿದ್ದರು. ಮೌರ್ಯರು ದಕ್ಷಿಣ ಭಾರತದೊಂದಿಗೆ ಗಣಿ ಸಂಬಂಧವಾದ ಸಂಪರ್ಕ ಹೊಂದಿದ್ದರು. ಕರ್ನಾಟಕದ ಕೋಲಾರ ಹಾಗೂ ಹಟ್ಟಿ ಚಿನ್ನದಗಣಿಗಳಲ್ಲಿ ಮೌರ್ಯರ ಆಳ್ವಿಕೆಯ ಅವಧಿಯಲ್ಲಿಯೇ ಗಣಿಗಾರಿಕೆ ನಡೆಯುತ್ತಿತ್ತು. ದ್ರಾವಿಡ ಅರಸುಮನೆತನಗಳಾದ ಚೋಳ-ಚೇರ-ಪಾಂಡ್ಯರು ಬಂಗಾರವನ್ನು ಕೋಲಾರ ಚಿನ್ನದಗಣಿಯಿಂದ ಪಡೆದುಕೊಳ್ಳುತ್ತಿದ್ದರು ಹಾಗೂ ಹಟ್ಟಿಯಿಂದ ತೆಗೆದ ಬಂಗಾರವು ಪಾಟಲಿಪುತ್ರಕ್ಕೆ ರವಾನೆಯಾಗುತ್ತಿತ್ತೆಂದು ತಿಳಿಯಲಾಗಿದೆ.

ಪ್ರಾಚೀನ ಕರ್ನಾಟಕದ ವ್ಯಾಪಾರ ಮತ್ತು ವ್ಯಾಪಾರಸ್ಥರ ಕುರಿತು ಅಧ್ಯಯನ ನಡೆಸುವಾಗ ಗ್ರೀಕರು, ಶಕರು, ಪಾರ್ಥಿಯನರು, ಕುಶಾನರು, ರೋಮನ್ನರು ಮುಂತಾದವರು ವ್ಯಾಪಾರಕ್ಕಾಗಿ ನಡೆಸಿದ ಪೈಪೋಟಿ ಹಾಗೂ ಆ ಮೂಲಕ ರೂಪುಗೊಂಡ ನಗರ ಅರ್ಥ ವ್ಯವಸ್ಥೆ ಪ್ರಮುಖ ವಸ್ತುಗಳಾಗಿ ಕಂಡು ಬರುತ್ತವೆ. ಭಾರತೀಯ ವ್ಯಾಪಾರಸ್ಥರಿಗೆ ವಿದೇಶಿ ನೆಲೆಗಳನ್ನು ಪರಿಚಯಿಸುವಲ್ಲಿ ಮತ್ತು ಹೊಸ ಆಂತರಿಕ ನೆಲೆಗಳನ್ನು ಕಂಡು ಹಿಡಿಯುವಲ್ಲಿ ಈ ವಿದೇಶಿ ವ್ಯಾಪಾರಸ್ಥರು ನೆರವಾದರು. ಶಾತವಾಹನರ ಆಳ್ವಿಕೆಯ ಸಂದರ್ಭದಲ್ಲಿ ಈ ವ್ಯಾಪಾರಸ್ಥರು ಸ್ವತಂತ್ರವಾಗಿ ವ್ಯಾಪಾರ ವಹಿವಾಟು ನಿರ್ವಹಿಸುತ್ತಿದ್ದರು. ವಿದೇಶಿ ವ್ಯಾಪಾರಿ ಸಂಸ್ಥೆಗಳು ಮತ್ತು ದೇಶಿ ವ್ಯಾಪಾರಿ ಸಂಸ್ಥೆಗಳು ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದ್ದವೆಂದು ತೋರುತ್ತದೆ. ಪ್ರಾಚೀನ ಭಾರತದಲ್ಲಿ ಅತ್ಯಂತ ಲಾಭದಾಯಕ ಸಮುದ್ರ ವ್ಯಾಪಾರವೆಂದರೆ ದಕ್ಷಿಣ ಭಾರತದೊಂದಿಗೆ ನಡೆಯುತ್ತಿದ್ದ ರೋಮನ್ ವ್ಯಾಪಾರ. ರೋಮನ್ ವ್ಯಾಪಾರಸ್ಥರು ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ, ತಮ್ಮ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದರು.

ರೋಮ್ ಕರ್ನಾಟಕದೊಂದಿಗೆ ಹೊಂದಿದ್ದ ವ್ಯಾಪಾರ ಸಂಪರ್ಕದ ಕುರಿತು ವಿದೇಶಿ ಪ್ರವಾಸಿಗರ ಮತ್ತು ವರ್ತಕರ ಬರವಣಿಗೆಗಳು ಹಾಗೂ ರೋಮನ್ನರ ನಾಣ್ಯಗಳು ಹೆಚ್ಚಿನ ಬೆಳಕು ಚೆಲ್ಲುತ್ತವೆ. ವಿದೇಶಿ ಪ್ರವಾಸಿಗರಿಗೆ ಭಾರತದ ಭೌಗೋಳಿಕತೆಯ ಸ್ಪಷ್ಟ ಚಿತ್ರಣ ಇರಲಿಲ್ಲ. ಅವರು ಕರಾವಳಿ ಪ್ರದೇಶವನ್ನು ಮಲಬಾರ್ ಎಂದು ಕರೆಯುತ್ತಿದ್ದರು. ರೋಮನ್ ವಾಣಿಜ್ಯ ಸಂಪರ್ಕದ ಕುರಿತು ತಿಳಿಸುವ ಕಥನಗಳಲ್ಲಿ ಪೆರಿಪ್ಲಸ್ ಮಹತ್ವದ ಕೃತಿ. ಪೆರಿಪ್ಲಸ್ ಕರ್ನಾಟಕದ ಹಾಗೂ ದಕ್ಷಿಣ ಭಾರತದ ಭೌಗೋಳಿಕ ಮತ್ತು ವಾಣಿಜ್ಯ ವಿವರಗಳನ್ನು ನೀಡುತ್ತದೆ. ಈ ಕೃತಿಯು ಕ್ರಿ.ಶ. ೬೦ರಲ್ಲಿ ರಚನೆಗೊಂಡಿರಬೇಕು. ಇದರಲ್ಲಿ ಕೆಲವು ಬಂದರುಗಳ ಹಾಗೂ ಒಳನಾಡ ಪಟ್ಟಣಗಳ ಕುರಿತು ಉಲ್ಲೇಖಗಳಿವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ತಗರ, ಕಲ್ಲೀಣ (ಕಲ್ಯಾಣ), ಬೈಜಂಟೀಯಂ (ವೈಜಯಂತಿ), ಸುಪ್ಪಾರ (ಸೋಪಾರ), ಮಂಡಗೋರ (ಮಂಗಳೂರು), ಸಿನೀತಿ (ಕಾರವಾರದ ಎದುರಿಗಿರುವ ದ್ವೀಪಗಳು) ಮುಂತಾದುವು. ಟಾಲೆಮಿಯ ಕಥನದಲ್ಲೂ ಕೆಲವು ಉಪಯುಕ್ತ ಮಾಹಿತಿಗಳು ಸಿಗುತ್ತವೆ. ಬನವಾಸಿ, ಗೋವ, ಕೊಳ್ಳೆಗಾಲ, ಮೈಸೂರು, ಪುನ್ನಾಟ, ಯಲ್ಲಾಪುರ, ಪಂಟಿಯಪುರ ಮುಂತಾದ ಪ್ರದೇಶಗಳ ಉಲ್ಲೇಖಗಳಿವೆ. ಇವೆಲ್ಲವೂ ವ್ಯಾಪಾರ ಕೇಂದ್ರ ಗಳಾಗಿದ್ದವು ಎನ್ನುವುದು ಟಾಲೆಮಿಯ ಕಥನದಿಂದ ತಿಳಿದು ಬರುತ್ತದೆ. ಟಾಲೆಮಿಯು ಕ್ರಿ.ಶ. ಎರಡನೆಯ ಶತಮಾನದ ಸುಮಾರಿಗೆ ಕರ್ನಾಟಕದಲ್ಲಿ ಇದ್ದ ವಾಣಿಜ್ಯ ನಗರಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಕ್ರಿ.ಶ. ಎರಡನೆಯ ಶತಮಾನ ರೋಮನ್ ವಾಣಿಜ್ಯ ತೀವ್ರ ಚಟುವಟಿಕೆಯಿಂದ ಕೂಡಿದ್ದ ಕಾಲ. ಭೀಮಾ ನದಿಗೂ ಬನವಾಸಿಗೂ ನಡುವಿನ ಒಳನಾಡಿನ ಪ್ರದೇಶಗಳನ್ನು ಟಾಲೆಮಿಯು ಈ ರೀತಿ ಗುರುತಿಸಿದ್ದಾನೆ: ನಗರೂರು (ನಾಗೂರು), ತಬಸೊ (ತಾವಸಿ), ಇಂಡೆ (ಇಂಡಿ), ತಿರಿಪಂಗಲಿದ (ಗಡಹಿಂಗ್ಲಜ), ಡಿಪ್ಟೊಕೂರ (ಹೂವಿನ ಹಿಪ್ಪರಗಿ), ಸಬಡ (ಸವಡಿ), ಸಿರಿಮಲಗಿ (ಚಿಮ್ಮಲಗಿ ಅಥವಾ ನಿರ್ಮಲಿಗೆ), ಕಲ್ಲಿಗೇರಿಸ್ (ಕನಕಗಿರಿ), ಮೊದೊಗೊಲ್ಲ (ಮುದುಗಲ್), ಪೆತಿರ್ಗಾಲು (ಹತ್ತಿರ್ಕಹಾಳ).

ರೋಮ್ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭೋಗ ವಸ್ತುಗಳ ಸಂಬಂಧವಾದ ವ್ಯಾಪಾರವೇ ಹೆಚ್ಚಾಗಿ ನಡಿಯುತ್ತಿತ್ತು. ಅಲ್ಲಿನ ವರ್ತಕರು, ಅಧಿಕಾರಿಗಳು, ಭೂಮಾಲೀಕರು ಹಾಗೂ ಇನ್ನಿತರ ಶ್ರೀಮಂತ ವರ್ಗದವರು ವಿದೇಶಿ ವ್ಯಾಪಾರದಲ್ಲಿ ತೊಡಗಿದ್ದರು. ವಾರ್ಮಿಂಗ್‌ಟನ್‌ರವರು ತಮ್ಮ ಕೃತಿಯಲ್ಲಿ ರೋಮನ್ ವಾಣಿಜ್ಯದಲ್ಲಿ ಒಳಗೊಂಡಿದ್ದ ವಸ್ತುಗಳ ಕುರಿತು ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸಸ್ಯೋತ್ಪನ್ನಗಳು (ಮೆಣಸು, ಶುಂಠಿ, ಅಡಕೆ, ಏಲಕ್ಕಿ, ದಾಲ್ಜಿನ್ನಿ, ತೆಂಗು, ಈರುಳ್ಳಿ, ಅಕ್ಕಿ, ಗಿಡಮೂಲಿಕೆಗಳು, ಸುಗಂಧ, ಸಕ್ಕರೆ ಇತ್ಯಾದಿ), ಅರಣ್ಯೋತ್ಪನ್ನಗಳು (ಶ್ರೀಗಂಧ, ಕರಿಮರ, ತೇಗ, ಸೀಗೆಕಾಯಿ ಇತ್ಯಾದಿ), ಪ್ರಾಣಿ ಪಕ್ಷಿಗಳು (ನವಿಲು, ಗಿಳಿ, ಬಣ್ಣದ ಹಕ್ಕಿಗಳು, ಹಾವು, ಜಿಂಕೆಯ ಕೋಡುಗಳು, ದಂತ, ವಿವಿಧ ಪ್ರಾಣಿಗಳ ಚರ್ಮಗಳು), ಉಡುಪುಗಳು (ಹತ್ತಿ ಬಟ್ಟೆ, ಹತ್ತಿ ನೂಲು ಹಾಗೂ ಹತ್ತಿ, ರೇಷ್ಮೆ, ಮಸ್ಲಿನ್ ಬಟ್ಟೆ ಇತ್ಯಾದಿ), ಲೋಹಗಳು (ವಜ, ವೈಡೂರ್ಯ, ಪಚ್ಚೆ, ರತ್ನ, ಮಾಣಿಕ್ಯ, ರತ್ನ ಮಣಿಗಳು, ಚಿನ್ನ, ಕೆಂಪು ಪದ್ಮರಾಗ, ನೀಲಮಣಿ, ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು ಇತ್ಯಾದಿ). ಈ ವಸ್ತುಗಳೆಲ್ಲವೂ ಕರ್ನಾಟಕ ದಿಂದಲೇ ರೋಮ್‌ಗೆ ರಫ್ತಾಗುತ್ತಿತ್ತು ಎನ್ನುವುದಕ್ಕೆ ಹೆಚ್ಚಿನ ರೋಮನ್ ದಾಖಲೆಗಳು ಸಿಗುವುದಿಲ್ಲ. ಆದರೆ ಈ ವಸ್ತುಗಳೆಲ್ಲವೂ ಕರ್ನಾಟಕದಲ್ಲಿ ದೊರೆಯುತ್ತಿದ್ದವು. ರೋಮನ್ನರಿಗೆ ಭಾರತದ ಒಳಗಿನ ಪ್ರದೇಶಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿರುವುದು ಅವರು ಕರ್ನಾಟಕದ ಹಲವಾರು ಪ್ರದೇಶಗಳನ್ನು ಬೇರೆ ಪ್ರದೇಶಗಳೊಂದಿಗೆ ಸೇರಿಸುವುದಕ್ಕೆ ಮತ್ತು ಬೇರೆಯದೇ ಹೆಸರುಗಳಿಂದ ಕರೆಯುವುದಕ್ಕೆ ಕಾರಣವಾಯಿತು. ಕರ್ನಾಟಕ ಕರಾವಳಿ  ಪ್ರದೇಶಗಳನ್ನು ರೋಮನ್ನರು ಮಲಬಾರ್ ಎಂದೇ ಕರೆಯುತ್ತಿದ್ದರು. ಹಾಗಾಗಿ ಪ್ರಾದೇಶಿಕ ಅಧ್ಯಯನ ಕೈಗೊಳ್ಳುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಶಾತವಾಹನರ ಆಳ್ವಿಕೆಯ ಸಂದರ್ಭದಲ್ಲಿ ರೋಮನ್ ವ್ಯಾಪಾರ ಬಿರುಸಿನಿಂದ ನಡೆಯುತ್ತಿತ್ತು ಹಾಗೂ ನಾಣ್ಯಗಳು ಚಲಾವಣೆಯಲ್ಲಿದ್ದವು. ಅಂದಿನ ನಾಣ್ಯಗಳು ರೋಮನ್ ವ್ಯಾಪಾರ ಸಂಪರ್ಕದ ಕುರಿತು ವಿಪುಲವಾದ ಮಾಹಿತಿಯನ್ನು ನೀಡುತ್ತವೆ. ನಗರ ಅರ್ಥ ವ್ಯವಸ್ಥೆಯ ಸ್ವರೂಪದ ಅಧ್ಯಯನಕ್ಕೂ ನಾಣ್ಯಗಳು ಸಹಕಾರಿಯಾಗಿವೆ. ಶಾತವಾಹನರ ನಾಣ್ಯಗಳು ಕರ್ನಾಟಕದ ಉತ್ತರ ಭಾಗದಲ್ಲಿ ಬಹಳಷ್ಟು ಸಿಕ್ಕಿವೆ. ಅದೇ ರೀತಿ ಅನೇಕ ರೋಮನ್ ನಾಣ್ಯಗಳೂ ಕರ್ನಾಟಕದಲ್ಲಿ ಸಿಕ್ಕಿವೆ. ರೋಮ್‌ನೊಂದಿಗಿನ ವ್ಯಾಪಾರ-ವಾಣಿಜ್ಯದ ಮೂಲಕ ಈ ನಾಣ್ಯಗಳು ಕರ್ನಾಟಕಕ್ಕೆ ಬಂದಿರಬಹುದು. ಕರ್ನಾಟಕದ ಅನೇಕ ಸ್ಥಳಗಳಲ್ಲಿ ರೋಮನ್ನರ ಮಡಿಕೆಗಳು ಹಾಗೂ ಇತರ ಪುರಾತನ ವಸ್ತುಗಳು ದೊರೆತಿವೆ. ರೋಮನ್ನರ ನಾಣ್ಯಗಳು ಕರ್ನಾಟಕದಲ್ಲಿ ಚಲಾವಣೆಯಲ್ಲಿತ್ತು ಎನ್ನುವ ಅಂಶ ಆಧಾರ ಗಳೊಂದಿಗೆ ಸಾಬೀತಾಗಿರುವುದು ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ. ೧೮೯೧ರಲ್ಲಿ ಬೆಂಗಳೂರು ಬಳಿಯ ಯಶವಂತಪುರದಲ್ಲಿ ರೈಲು ಲೈನುಗಳನ್ನು ಹಾಕುವ ಕೆಲಸ ನಡೆಯುತ್ತಿದ್ದಾಗ ೧೬೩ ಬೆಳ್ಳಿ ರೋಮನ್ ನಾಣ್ಯಗಳು ದೊರೆತವು. ಅವು ಕ್ರಿ.ಪೂ. ೩೧ ರಿಂದ ಕ್ರಿ.ಶ. ೫೧ರವರೆಗಿನ ಕಾಲಮಾನಕ್ಕೆ ಸೇರಿದವು. ೧೯೦೧ ಮತ್ತು ೧೯೪೭ರಲ್ಲಿ ಚಂದ್ರವಳ್ಳಿಯಲ್ಲಿ ನಡೆಸಿದ ಉತ್ಖನನಗಳಲ್ಲಿ ಅನೇಕ ರೋಮನ್ ಬೆಳ್ಳಿ ನಾಣ್ಯಗಳು ದೊರೆತವು. ೧೯೬೫ರಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ರನ್-ವೇ ವಿಸ್ತರಿಸಲು ಅಗೆಯುತ್ತಿದ್ದಾಗ ೨೫೬ ಬೆಳ್ಳಿ ನಾಣ್ಯಗಳಿದ್ದ ಒಂದು ಉದ್ದನೆ ಕುತ್ತಿಗೆವುಳ್ಳ ಕುಡಿಕೆಯೊಂದು ಸಿಕ್ಕಿತು. ಅವುಗಳಲ್ಲಿ ೨೨೯ ನಾಣ್ಯಗಳು ಟೈಬೀರಿಯಸ್‌ನವು (ರೋಮನ್ ಅರಸ) ಹಾಗೂ ಉಳಿದವು ಆಗಸ್ಟಸ್‌ನ (ರೋಮನ್ ಅರಸ) ಕಾಲಕ್ಕೆ ಸೇರಿದವು. ಧಾರವಾಡ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿ ಆಲೂರು ಗ್ರಾಮದಲ್ಲಿ ಮಡಿಕೆಯೊಂದರಲ್ಲಿ ೪೬ ಚಿನ್ನದ ನಾಣ್ಯಗಳು ದೊರೆತವು. ಈ ನಾಣ್ಯಗಳು ಆಗಸ್ಟಸ್, ಆಂಟೋನಿಯಸ್, ಥಿಯೋಡೋ ನಿಯಸ್, ಜಿನೋ, ಜಸ್ಟಿನನ್ ರಾಜರುಗಳ ಕಾಲಕ್ಕೆ ಸೇರಿದವು. ರೋಮನ್ ನಾಣ್ಯಗಳು ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಸಿಕ್ಕಿರುವುದರಿಂದಾಗಿ ಕರ್ನಾಟಕದ ಪ್ರಮುಖ ನಗರ ಕೇಂದ್ರಗಳಲ್ಲಿ ರೋಮನ್ ವಾಣಿಜ್ಯ ಇತ್ತು ಎನ್ನುವ ಸ್ಪಷ್ಟ ತೀರ್ಮಾನವನ್ನು ತೆಗೆದುಕೊಳ್ಳಬಹುದಾಗಿದೆ.

ಕ್ರಿ.ಶ. ಎರಡನೆಯ ಶತಮಾನದ ಕೊನೆಯ ವೇಳೆಗೆ ರೋಮನ್ ವಾಣಿಜ್ಯದ ಇಳಿಮುಖ ಆರಭಗೊಂಡಿತು. ಇದರ ಪ್ರಭಾವ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾಣಿಸಿಕೊಂಡಿತು. ಅನೇಕ ಪೇಟೆ-ಪಟ್ಟಣಗಳು ಅವನತಿಯತ್ತ ಸಾಗತೊಡಗಿದವು. ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲೂ ಬದಲಾವಣೆಗಳು ಕಾಣಿಸಿಕೊಂಡವು. ಶಾತವಾಹನರ ಅವನತಿಯಾಗಿ ಬನವಾಸಿಯ ಕದಂಬರು ಮತ್ತು ತಲಕಾಡಿನ ಗಂಗರು ಆಡಳಿತದ ಚುಕ್ಕಾಣಿ ಹಿಡಿದರು. ಇವರ ಕಾಲದಲ್ಲಿ ವ್ಯಾಪಾರದ ಇಳಿಮುಖ ಕಾಣಿಸಿಕೊಳ್ಳಲಾರಂಭಿಸಿತು. ಈ ಪ್ರಕ್ರಿಯೆ ಸುಮಾರು ೯-೧೦ನೆಯ ಶತಮಾನದವರೆಗೂ ಕೆಲವೊಂದು ಏರಿಳಿತಗಳೊಂದಿಗೆ ಮುಂದು ವರಿಯಿತು. ಶಾತವಾಹನರ ಕಾಲದ ಹೆಚ್ಚಿನ ಪೇಟೆ-ಪಟ್ಟಣಗಳು ಕ್ರಿ.ಶ. ೪ನೆಯ ಶತಮಾನದ ಬಳಿಕ ಅವನತಿಯತ್ತ ಸಾಗಬೇಕಾಯಿತು. ಕದಂಬರು, ಗಂಗರು, ಚುಟುಗಳು, ವಾಕಾಟಕರು ಮುಂತಾದವರು ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ನೀಡಲಿಲ್ಲ. ಅವರು ದೊಡ್ಡ ಪ್ರಮಾಣದಲ್ಲಿ ನಾಣ್ಯಗಳನ್ನೂ ಹೊರಡಿಸಲಿಲ್ಲ. ಕೃಷಿ-ವ್ಯವಸಾಯ ಹೆಚ್ಚು ವೃದ್ದಿಯಾಗುತ್ತ ಹೋಯಿತು. ಭೂಮಿಯನ್ನು ದಾನ ನೀಡುವ ಪ್ರಕ್ರಿಯೆ ಹೆಚ್ಚೆಚ್ಚು ಕಾಣಿಸಿಕೊಳ್ಳಲಾರಂಭಿಸಿತು. ಇದು ಊಳಿಗಮಾನ್ಯ ಉತ್ಪಾದನಾ ವಿಧಾನದ ಹುಟ್ಟಿಗೂ ಕಾರಣವಾಯಿತು. ಭೂಮಾಲೀಕ ವರ್ಗಗಳು ನಿರ್ಧಾರಕ ಶಕ್ತಿಗಳಾಗಿ ರೂಪುಗೊಳ್ಳಲಾರಂಭಿಸಿದವು. ವಾಣಿಜ್ಯ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ್ತೆ ಕಾಣಿಸಿಕೊಳ್ಳುವುದು ಹತ್ತನೆಯ ಶತಮಾನದ ವೇಳೆಗೆ. ಈ ಅವಧಿಯನ್ನು ಭಾರತದ ತೃತೀಯ ನಗರೀಕರಣದ ಅವಧಿ ಎಂಬುದಾಗಿ ಕರೆಯಲಾಗಿದೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರ ಅವಧಿಗಳಲ್ಲಿ ರಾಜಧಾನಿ ಪಟ್ಟಣಗಳು, ಆಡಳಿತ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ಕಾಣಿಸಿ ಕೊಂಡವು. ವಾಣಿಜ್ಯ ಕೇಂದ್ರಗಳು ಬೆರಳೆಣಿಕೆಯಷ್ಟೇ ಸಿಗುತ್ತವೆ. ಬಂದರು ಪಟ್ಟಣಗಳಾದ ಮಂಗಳೂರು, ಕಾರವಾರ, ಬಸ್ರೂರು ಮುಂತಾದವು ಈ ಅವಧಿಯಲ್ಲಿ ಹೆಚ್ಚಿನ ಲಕಿಜಿತ್ಸಾಹ ವನ್ನು ಪಡೆಯಲಿಲ್ಲ.

ಕ್ರಿ.ಶ. ೪ನೆಯ ಶತಮಾನದಿಂದ ಸುಮಾರು ೧೦ನೆಯ ಶತಮಾನದವರೆಗೆ ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳು ಪ್ರಧಾನವಾಗಿ ಕಂಡುಬಂದವು ಎಂದಾಗ ನಗರ ವ್ಯವಸ್ಥೆ ಸಂಪೂರ್ಣ ಅವನತಿಯನ್ನು ಹೊಂದಿತ್ತು ಎಂದರ್ಥವಲ್ಲ. ಆ ಅವಧಿಯ ಪ್ರಮುಖ ಲಕ್ಷಣವಾಗಿ ಕೃಷಿ-ಊಳಿಗಮಾನ್ಯತೆ ಕಂಡು ಬಂತು. ವ್ಯಾಪಾರ-ವಾಣಿಜ್ಯ ಮುಖ್ಯವಾಹಿನಿ ಯಿಂದ ಹೊರಗೆ ನಿಲ್ಲುವಂತಾಯಿತು. ಆದರೂ ವರ್ತಕರು, ವರ್ತಕ ಸಂಘಗಳು, ವಿದೇಶಿ ವ್ಯಾಪಾರ ಇವೆಲ್ಲವೂ ಅಸ್ತಿತ್ವದಲ್ಲಿತ್ತು. ಕ್ರಿ.ಶ. ನಾಲ್ಕನೆಯ ಶತಮಾನದ ಸುಮಾರಿಗೆ ರೋಮನ್ ಸಾಮ್ರಾಜ್ಯ ಕುಸಿದ ಕಾರಣ ಮಧ್ಯ ಪ್ರಾಚ್ಯದಲ್ಲಿ ಪರ್ಷಿಯಾ ಸಾಮ್ರಾಜ್ಯ ತಲೆ ಎತ್ತಿತು. ಇದರ ಪರಿಣಾಮವಾಗಿ ಪರ್ಷಿಯನ್ನರು ಮತ್ತು ಅರೇಬಿಯನ್ನರು ಅಂತಾರಾಷ್ಟ್ರೀಯ ವ್ಯಾಪಾರ-ವಾಣಿಜ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಾಯಿತು. ಬಾಗ್ದಾದ್‌ನಲ್ಲಿ ಸ್ಥಾಪಿತವಾದ ಅರಬ್ ಮುಸ್ಲಿಮರ ಖಲಿಫತ್ ಪ್ರಭುತ್ವವು ಕರ್ನಾಟಕದ ಅರಸರೊಂದಿಗೆ ಉತ್ತಮ ವಾಣಿಜ್ಯ ಸಂಬಂಧ ಹೊಂದಿತ್ತು. ಅರಬ್ ಪ್ರವಾಸಿಗರ ಕಥನಗಳು ಈ ಕುರಿತು ಮಾಹಿತಿ ನೀಡುತ್ತವೆ. ಯುರೋಪಿಯನ್ನರ ಆಗಮನ ಪರ್ಷಿಯನ್ನರ ಮತ್ತು ಅರಬ್ಬರ ವ್ಯಾಪಾರದ ಇಳಿಮುಖಕ್ಕೆ ಕಾರಣವಾಯಿತು. ಹೀಗಾಗಿ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಕೃಷಿ ಪ್ರಧಾನ ವ್ಯವಸ್ಥೆಯೊಳಗೆ ನಡೆಯುತ್ತಿದ್ದವು. ಇಲ್ಲಿರುವ ಪ್ರಶ್ನೆಯೆಂದರೆ ವ್ಯಾಪಾರ-ವಾಣಿಜ್ಯ ಪ್ರಧಾನ ಚಟುವಟಿಕೆಯಾಗಿ ಇತ್ತೇ ಎನ್ನುವುದು. ವ್ಯಾಪಾರ ಕೃಷಿಗೆ ಪೂರಕವಾಗಿತ್ತು ಹಾಗೂ ಊಳಿಗಮಾನ್ಯ ಹಿತಾಸಕ್ತಿಗಳ ಹಿನ್ನೆಲೆಯಿಂದ ವ್ಯಾಪಾರ-ವಾಣಿಜ್ಯ ನಡೆಯುತ್ತಿತ್ತು. ಈ ಅವಧಿಯಲ್ಲಿ ಪೇಟೆ-ಪಟ್ಟಣಗಳು ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತವಾದರೂ, ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿರಲಿಲ್ಲ. ಅಂದಿನ ಆರ್ಥಿಕತೆಯ ಪ್ರಧಾನ ಲಕ್ಷಣ ವಾಗಿ ವ್ಯಾಪಾರ-ವಾಣಿಜ್ಯ ಕಂಡುಬರುವುದಿಲ್ಲ ಎಂದಷ್ಟೇ ಹೇಳಬಹುದು.

ಬಾದಾಮಿ ಚಾಲುಕ್ಯರ ಕಾಲದಲ್ಲಿ ವ್ಯಾಪಾರ-ವಾಣಿಜ್ಯದ ದೃಷ್ಟಿಯಿಂದ ಕಂಡು ಬರುವ ಪ್ರಮುಖ ಸಂಗತಿಯೆಂದರೆ ಐಹೊಳೆ ೫೦೦ ವರ್ತಕ ಸಂಘ ಹಾಗೂ ಅದರ ಚಟುವಟಿಕೆಗಳು. ಇದು ಸುಮಾರು ೮-೯ನೆಯ ಶತಮಾನಗಳಲ್ಲಿ ಅಸ್ತಿತ್ವಕ್ಕೆ ಬಂತು. ಬಾದಾಮಿ ಚಾಲುಕ್ಯರ ಕಾಲದ ಪಟ್ಟಣ ಐಹೊಳೆಯ ಹೆಸರಿನಿಂದಲೇ ಈ ಸಂಘ ಗುರುತಿಸಿಕೊಂಡಿತು. ಬಾದಾಮಿ ಚಾಲುಕ್ಯರ ಆಳ್ವಿಕೆಯ ಕೊನೆ ಹಾಗೂ ರಾಷ್ಟ್ರಕೂಟರ ಆರಂಭದ ದಿನಗಳಲ್ಲಿ ಈ ಸಂಘ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಅಂದಿನ ಕಾಲದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ಐಹೊಳೆ ೫೦೦ ವರ್ತಕ ಸಂಘ ಪ್ರಮುಖ ಆಕರವಾಗಿ ಕಂಡು ಬರುತ್ತದೆ. ಈ ಸಂಘವನ್ನು ಅಯ್ಯಾವೊಳೆ ಐನೂರ್ವರೆಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಾದಾಮಿ ಚಾಲುಕ್ಯರಿಂದ ವಿಜಯನಗರದ ಅರಸರ ಆಳ್ವಿಕೆಯವರೆಗೂ ಈ ಸಂಘ ಕಾರ್ಯ ನಿರ್ವಹಿಸುತ್ತಿತ್ತು. ಆರ್. ಚಂಪಕಲಕ್ಷ್ಮಿ ಮತ್ತು ಎಂ. ಅಬ್ರಹಾಂ ಅವರು ಈ ಸಂಘ ಮಧ್ಯಕಾಲೀನ ಕರ್ನಾಟಕದ ಆರ್ಥಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು ಎಂಬುದಾಗಿ ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ. ಈ ಸಂಘವು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಆಗ್ನೇಯ ಏಷ್ಯಾ ಮುಂತಾದ ಕಡೆಗಳಲ್ಲೂ ಪ್ರಸಿದ್ದಿ ಪಡೆದಿತ್ತು. ಕರ್ನಾಟಕದಲ್ಲಿ ಕ್ರಿ.ಶ. ೧೧ನೆಯ ಶತಮಾನದ ಬಳಿಕ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯಿತು. ಅದು ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಬೆಂಬಲವನ್ನು ಪಡೆದುಕೊಂಡಿತು. ವ್ಯಾಪಾರ-ವಾಣಿಜ್ಯದಲ್ಲಿ ತೊಡಗಿಕೊಂಡಿದ್ದಷ್ಟೇ ಅಲ್ಲದೆ ಅನೇಕ ಪಟ್ಟಣಗಳನ್ನೂ ಹುಟ್ಟು ಹಾಕಿತು.

ಸೆಟ್ಟಿಯರು, ಸೆಟ್ಟಿಗುತ್ತರು, ಅಂಕಕಾರರು, ಎಂಟ ನಾಡ ಪದಿನರ್ವರು, ಗವರೆಗಳು, ಗಾತ್ರಿಗಳು, ಬೀರರು, ಬೀರವಣಿಗರು, ಗಂದಿಗರು, ಗಾವುಂಡರು ಮೊದಲಾದವರು ಐಹೊಳೆ ೫೦೦ ವರ್ತಕ ಸಂಘದ ಸದಸ್ಯರಾಗಿದ್ದರು. ಇವರಲ್ಲಿ ಕರ್ನಾಟಕದವರಷ್ಟೇ ಅಲ್ಲದೆ ತಮಿಳುನಾಡು, ಕೇರಳ ಮುಂತಾದ ಹೊರನಾಡುಗಳನ್ನು ಪ್ರತಿನಿಧಿಸುತ್ತಿದ್ದ ಸದಸ್ಯರೂ ಇದ್ದರು. ಇವರು ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ತುಂಬಿಕೊಂಡು ನಾನಾ ಪ್ರದೇಶಗಳಿಗೆ ಹೋಗುತ್ತಿದ್ದರು. ಚೇರ, ಚೋಳ, ಮಲಯ, ಮಗಧ, ಕೌಶಲ, ಸೌರಾಷ್ಟ್ರ, ಕಾಂಭೋಜ, ನೇಪಾಳ, ಶ್ರೀಲಂಕಾ ಮುಂತಾದವು ವ್ಯಾಪಾರ ನಡೆಸುತ್ತಿದ್ದ ಪ್ರಮುಖ ಪ್ರದೇಶಗಳು. ಸರಕುಗಳನ್ನು ಕೊಳ್ಳುವ ಮತ್ತು ಮಾರುವ ಕಾರ್ಯದಲ್ಲಿ ಈ ಸಂಘದ ಸದಸ್ಯರು ತೊಡಗಿರುತ್ತಿದ್ದರು. ರಸ್ತೆಗಳ ಮೂಲಕ, ಜಲಮಾರ್ಗದ ಮೂಲಕ ವಿವಿಧ ಪ್ರದೇಶಗಳಿಗೆ ಹೋಗಿ ಬರುತ್ತಿದ್ದರು. ವಸ್ತುಗಳ ಸಾಗಾಣಿಕೆಗೆ ಕುದುರೆ, ಎತ್ತು, ಕೋಣ,  ಕತ್ತೆ, ಒಂಟೆ, ಆನೆಗಳನ್ನು ಉಪಯೋಗಿಸುತ್ತಿದ್ದರು. ದ್ವೀಪಾಂತರಗಳಿಗೆ ಹಡಗುಗಳ ಮೂಲಕ ಹೋಗುತ್ತಿದ್ದರು. ಈ ವರ್ತಕರು ಬಟ್ಟೆ, ಹತ್ತಿ, ಭತ್ತ, ಸಕ್ಕರೆ, ಗೋಧಿ, ಅಡಿಕೆ, ಸಾಸಿವೆ, ಜೀರಿಗೆ, ಮೆಣಸು, ಇಂದ್ರನೀಲ, ಚಂದ್ರಕಾಂತ ಮತ್ತು ಮಾಣಿಕ್ಯ, ವಜ್ರ ವೈಡೂರ್ಯ, ಚಂದನ, ಕಸ್ತೂರಿ, ಕುಂಕುಮ ಮೊದಲಾದ ವಸ್ತುಗಳನ್ನು ಅಮ ದೊರೆಯುವ ಸ್ಥಳಗಳಲ್ಲಿ ಕೊಂಡು ಅವಶ್ಯಕತೆಯಿರುವ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು.

ಕ್ರಿ.ಶ. ೧೧೫೦ರ ಬಳ್ಳಿಗಾವೆ ಶಾಸನದಲ್ಲಿ ಈ ವರ್ತಕ ಸಂಘದ ಕುರಿತು ಹೆಚ್ಚಿನ ಮಾಹಿತಿ ಸಿಗುತ್ತದೆ. ವರ್ತಕರು ಪ್ರತಿನಿಧಿಸುತ್ತಿದ್ದ ಜಾತಿ-ಧರ್ಮ-ಪ್ರದೇಶಗಳು, ವ್ಯಾಪಾರ ನಡೆಸುತ್ತಿದ್ದ ಪ್ರದೇಶಗಳು, ವ್ಯಾಪಾರದ ಪ್ರಮುಖ ಸರಕುಗಳು ಮುಂತಾದವುಗಳ ವಿವರ ಈ ದಾಖಲೆಯಿಂದ ಸಿಗುತ್ತದೆ. ಇಬ್ಬರು ಕಾಳಾಮುಖ ಬ್ರಾಹ್ಮಣರು ಬಳ್ಳಿಗಾವೆಯಲ್ಲಿ ಈ ವರ್ತಕ ಸಂಘದ ಕುರಿತಾಗಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಐಹೊಳೆ ೫೦೦ ವರ್ತಕ ಸಂಘವನ್ನು ಶ್ರೀಮಂತ ವರ್ಗದ ಸಂಘ ಎಂಬುದಾಗಿಯೂ ಕರೆಯಲಾಗಿದೆ. ಸಮಾಜದ ಮೇಲ್ವರ್ಗಗಳು ಈ ಸಂಘದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದವು. ಐಹೊಳೆ ೫೦೦ ಸಂಘ ಮಾತ್ರವಲ್ಲದೆ ಇನ್ನೂ ಅನೇಕ ವರ್ತಕ ಸಂಘಗಳು ಅಸ್ತಿತ್ವದಲ್ಲಿದ್ದವು. ಅವುಗಳೆಂದರೆ ನಾನಾ ದೇಶಿಗಳು, ಉಭಯ ನಾನಾ ದೇಶಿಗಳು, ಬಣಜಿಗರು, ಮಣಿಗ್ರಾಮ, ನಗರ, ಇತ್ಯಾದಿ. ವ್ಯಾಪಾರ-ವಾಣಿಜ್ಯದ ಇಳಿಮುಖವಾಗುತ್ತಿದ್ದಂತೆ ವರ್ತಕ ಸಂಘಗಳು ತಮ್ಮ ಕೇಂದ್ರ ಸ್ಥಳಗಳನ್ನು ಬದಲಾಯಿಸುತ್ತಿದ್ದರು. ಉದಾಹರಣೆಗೆ, ಐಹೊಳೆ ೫೦೦ ಸಂಘವು ಐಹೊಳೆಯಿಂದ ಬಳ್ಳಿಗಾವೆಗೆ, ನಂತರ ಹಳೇಬೀಡಿಗೆ ಮುಂದೆ ಕುರುಗೋಡಿಗೆ ಸ್ಥಳಾಂತರಿಸಲ್ಪಟ್ಟಿತು.

ತಲಕಾಡಿನಲ್ಲಿ ಮಣಿಗ್ರಾಮ ಶ್ರೇಣಿ ಎನ್ನುವ ವರ್ತಕ ಸಂಘವಿತ್ತು. ಅದು ವ್ಯಾಪಾರ-ವಾಣಿಜ್ಯದ ಮೇಲೆ ಹಿಡಿತ ಸಾಧಿಸಿತ್ತು ಹಾಗೂ ಕುಶಲಕರ್ಮಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿತ್ತು. ವರ್ತಕರು ಮತ್ತು ಕುಶಲಕರ್ಮಿಗಳು ಠೇವಣಿ ಇಡುವ ಮೊತ್ತಕ್ಕೆ ಬಡ್ಡಿಯನ್ನು ನೀಡಲಾಗುತ್ತಿತ್ತು. ವ್ಯಾಪಾರದಲ್ಲಿ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಚಿನ್ನ ಮತ್ತು ತಾಮ್ರದ ನಾಣ್ಯಗಳು ಹೆಚ್ಚಾಗಿ ಬಳಕೆಯಲ್ಲಿದ್ದವು. ಚಿನ್ನದ ನಾಣ್ಯಗಳನ್ನು ವರಾಹ, ಪಣ ಅಥವಾ ಹಣ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ತಾಮ್ರದ ನಾಣ್ಯಗಳಿಗೆ ಕಾಸು ಎನ್ನುವ ಹೆಸರಿತ್ತು. ಸಂತೆ ಮತ್ತು ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ತೂಕ ಮತ್ತು ಅಳತೆ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಅಳತೆಯ ಪ್ರಮುಖ ಸಾಧನಗಳೆಂದರೆ, ಕೊಳಗ, ಕೊಲ, ಸೊಲಿಗೆ, ಖಂಡುಗ, ಬಳ್ಳ, ಕುಳ, ಮಣ ಮುಂತಾದವು. ಆಹಾರ ಧಾನ್ಯಗಳು, ಎಣ್ಣೆ, ತುಪ್ಪ ಮತ್ತಿತರ ದ್ರವ್ಯ ಪದಾರ್ಥಗಳನ್ನು ಇವುಗಳಲ್ಲಿ ಅಳತೆ ಮಾಡಲಾಗುತ್ತಿತ್ತು. ವರ್ತಕ ಸಂಘಗಳು ಹಾಗೂ ಪಟ್ಟಣಸ್ವಾಮಿ ಇವುಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.

ನಗರ ಅರ್ಥ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಶ್ರವಣಬೆಳ್ಗೊಳ ಪಟ್ಟಣ ವಿಶಿಷ್ಟವಾಗಿ ಕಂಡುಬರುತ್ತದೆ. ಕ್ರಿ.ಪೂ. ಮೂರನೆಯ ಶತಮಾನದಿಂದ ಆಧುನಿಕ ಸಂದರ್ಭದವರೆಗೂ ಈ ಪಟ್ಟಣ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡು ಬಂದಿದೆ. ರಾಜಕೀಯ ಕೇಂದ್ರವಾಗಿ, ಆಡಳಿತ ಕೇಂದ್ರವಾಗಿ ಹಾಗೂ ವ್ಯಾಪಾರ-ವಾಣಿಜ್ಯದ ಕೇಂದ್ರವಾಗಿ ಇದು ಗುರುತಿಸಿಕೊಂಡಿತು. ವ್ಯಾಪಾರಸ್ಥರ ವಿವಿಧ ಚಟುವಟಿಕೆಗಳನ್ನು, ವ್ಯಾಪಾರದ ರೀತಿ ನೀತಿಗಳನ್ನು ಶ್ರವಣಬೆಳ್ಗೊಳದ ಶಾಸನಗಳು ತಿಳಿಸುತ್ತವೆ. ವರ್ತಕ ಸಂಘದ ಮುಖ್ಯಸ್ಥನನ್ನು ಪಟ್ಟಣಸ್ವಾಮಿಯೆಂದು ಕರೆಯಲಾಗುತ್ತಿತ್ತು. ಬಣಜಿಗರಲ್ಲಿ ಪ್ರಮುಖನಾದವನು ಪಟ್ಟಣಸ್ವಾಮಿ. ಶಾಸನಗಳಲ್ಲಿ ಅನೇಕ ಪಟ್ಟಣಸ್ವಾಮಿಗಳ ಉಲ್ಲೇಖಗಳು ಕಂಡುಬರುತ್ತವೆ. ಉದಾಹರಣೆಗೆ, ಗೊಮ್ಮಟಪುರದ ಪಟ್ಟಣಸ್ವಾಮಿ ಮಲ್ಲಿಸೆಟ್ಟಿ, ಪಟ್ಟಣಸ್ವಾಮಿ ನಾಗದೇವ ಹೆಗ್ಗಡೆ, ಶ್ರೀ ಮನ್ಮಹಾವಡ್ಡಬ್ಯವಹಾರಿ, ಮೆಣಸಿನ ಸೊಯಿಸೆಟ್ಟಿ, ಉಂಡಿಗೆಯ ನಮ್ಮಿ ಸೆಟ್ಟಿ, ಅಂಕಿಸೆಟ್ಟಿ ಮುಂತಾದವರು. ಶ್ರವಣಬೆಳ್ಗೊಳದಲ್ಲಿ ತಲೆಯ ಮೇಲೆ ಹೊತ್ತು ಹಾಗೂ ಚಕ್ಕಡಿಗಳನ್ನು ಅವಲಂಬಿಸಿ ವ್ಯಾಪಾರ ನಡೆಸುತ್ತಿದ್ದರು. ವಸ್ತುಗಳನ್ನೊಳಗೊಂಡ ತಲೆಯ ಮೇಲಿನ ಗಂಟಿಗೆ ಹುಸಬೆಯೆಂದು ಕರೆಯುತ್ತಿದ್ದರು. ಅದಕ್ಕೆ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ವ್ಯಾಪಾರಗೊಳ್ಳುತ್ತಿದ್ದ ಪ್ರಮುಖ ವಸ್ತುಗಳೆಂದರೆ, ಮೆಣಸು, ಅರಿಸಿನ, ಅಡಿಕೆ, ಸೀರೆ, ಎಲೆಗಳು, ಉಪ್ಪು, ಗೋಧಿ, ಕಬ್ಬು, ಜಾತಿಹವಳ, ಮಾವು, ಹಲಸು, ನೇರಳೆ, ಕಿತ್ತಳೆ, ಖರ್ಜುರ, ಕೋಡುಬೀಜ, ಚಾರುಬೀಜ ಇತ್ಯಾದಿ. ಈ ವಸ್ತುಗಳನ್ನು ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿತ್ತು. ಇದಲ್ಲದೆ ಸಂತೆಗಳು ಏರ್ಪಡುತ್ತಿದ್ದವು.

ಸಂತೆಗಳು ವಾರಕ್ಕೊಮ್ಮೆ ಸೇರುತ್ತಿದ್ದವು. ಅವುಗಳನ್ನು ವಾರದ ಸಂತೆ ಎಂಬುದಾಗಿ ಕರೆಯಲಾಗುತ್ತಿತ್ತು. ಸಂತೆಗಳಿಗೆ ಸಂತೆಯ ಪಟ್ಟಣಸ್ವೋಮಿ ಎನ್ನುವ ಅಧಿಕಾರಿಯನ್ನು ನೇಮಿಸಲಾಗುತ್ತಿತ್ತು. ಸಂತೆಯ ವ್ಯವಹಾರವನ್ನು ನೋಡಿಕೊಳ್ಳುವ, ತೆರಿಗೆಯನ್ನು ವಿಧಿಸುವ ಜವಾಬ್ದಾರಿ ಈ ಅಧಿಕಾರಿಯದ್ದಾಗಿತ್ತು. ಸಂತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದ ವಸ್ತುಗಳ ಮೇಲೆ ಸಂತೆ ಸುಂಕ ಎಂಬ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಶ್ರವಣಬೆಳ್ಗೊಳದ ಶಾಸನಗಳಲ್ಲಿ ಅಳತೆ ಪ್ರಮಾಣಗಳ ಪ್ರಸ್ತಾಪವೂ ಕಂಡು ಬರುತ್ತದೆ. ಎಣ್ಣೆ, ಹಾಲು, ದವಸಧಾನ್ಯಗಳನ್ನು ಅಳೆಯಲು ಬೇರೆ ಬೇರೆ ಪ್ರಮಾಣಗಳನ್ನು ಬಳಸುತ್ತಿದ್ದರು. ಅವುಗಳೆಂದರೆ, ಬಳ್ಳ, ಮಾನ, ತೊಲ, ಬೀಸಗೆ, ಪಲ ಮುಂತಾದವು. ಶ್ರವಣಬೆಳ್ಗೂಳದ ಕೆಲವು ಶಾಸನಗಳಿಂದ ಭೂಮಿಯ ಅಳತೆಯ ಪ್ರಮಾಣಗಳು ತಿಳಿದು ಬರುತ್ತವೆ. ಸಲಗೆ, ಕೊಳಗ, ಕಂಡುಗ, ಕಂಭ ಮುಂತಾದವು ಅಳತೆಯ ಪ್ರಮಾಣಗಳಾಗಿದ್ದವು. ನಗರ ಪ್ರದೇಶಗಳಲ್ಲಿ ಹಲವಾರು ರೀತಿಯ ಕೆಲಸ ಕಾರ್ಯಗಳು ನಡೆಯುತ್ತಿದ್ದುದರಿಂದಾಗಿ ಹಾಗೂ ನಗರ ಸಮುದಾಯಗಳು ನಗರ ಪ್ರದೇಶ ಗಳಲ್ಲಿಯೇ ಜೀವಿಸುತ್ತಿದ್ದುದರಿಂದಾಗಿ ಅಳತೆ ಪ್ರಮಾಣಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು. ಶ್ರವಣಬೆಳ್ಗೊಳದಲ್ಲಿ ಹಣದ ಚಲಾವಣೆ ಇತ್ತು. ಚಲಾವಣೆಯಲ್ಲಿದ್ದ ಪ್ರಮುಖ ನಾಣ್ಯಗಳೆಂದರೆ ಗದ್ಯಾಣ, ಪಣ, ಹಾಗ, ಬೇಳೆ ಮತ್ತು ವೀಸ. ಶ್ರವಣಬೆಳ್ಗೊಳದ ಸ್ಥಳ ಪುರಾಣಗಳಲ್ಲಿ ಪಗೋಡ, ವರಾಹ ಎಂಬ ನಾಣ್ಯಗಳ ಬಳಕೆಯಿದ್ದುದು ತಿಳಿದುಬರುತ್ತದೆ. ಅಡವು ಇಡುವ ಪದ್ಧತಿಯೂ ಅಸ್ತಿತ್ವದಲ್ಲಿತ್ತು. ತೊಂದರೆಗೆ ಈಡಾದ ಜನರು ತಮ್ಮ ಬಳಿ ಇರುವ ವಸ್ತುಗಳನ್ನು ಹಣ ಇದ್ದವರ, ಅಂದರೆ ಶ್ರೀಮಂತರ, ಬಳಿ ಅಡವು ಇಡುತ್ತಿದ್ದರು. ಭೂಮಿಯನ್ನು ಅಡವು ಇಡುವ ಪದ್ಧತಿಯೂ ಇತ್ತು. ವರ್ತಕ ಸಂಘಗಳು ವರ್ತಕರಿಗೆ, ಕುಶಲಕರ್ಮಿಗಳಿಗೆ ಈ ನಿಟ್ಟಿನಲ್ಲಿ ನೆರವಾಗುತ್ತಿದ್ದವು. ಹಣವನ್ನು ಬಡ್ಡಿಗೆ ಕೊಡುವ ಪದ್ಧತಿಯೂ ಇತ್ತು. ಇದು ಹಣ ವ್ಯಾಪಾರ-ವಾಣಿಜ್ಯದಲ್ಲಿ ಹಾಗೂ ದೈನಂದಿನ ಬದುಕಿನಲ್ಲಿ ಎಷ್ಟರಮಟ್ಟಿಗೆ ಪ್ರಭಾವವನ್ನು ಬೀರಿತ್ತು ಎನ್ನುವುದನ್ನು ತಿಳಿಸುತ್ತದೆ.