ವಸಾಹತುಪೂರ್ವ ಕರ್ನಾಟಕದಲ್ಲಿ ಪೇಟೆ-ಪಟ್ಟಣಗಳು ಅಸ್ತಿತ್ವದಲ್ಲಿ ಇದ್ದವು ಹಾಗೂ ಅವು ರಾಜ್ಯ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದವು ಎನ್ನುವ ಅಂಶ ಪ್ರಸ್ತುತ ಅಧ್ಯಯನದಿಂದ ತಿಳಿದು ಬರುತ್ತದೆ. ಚರಿತ್ರೆಯನ್ನು ಆರ್ಥಿಕ ಚರಿತ್ರೆಯನ್ನಾಗಿ ಪರಿಭಾವಿಸಿಕೊಂಡಾಗ ಹಾಗೂ ಜನಮುಖಿ ಅಧ್ಯಯನಗಳು ನಡೆದಾಗ ಮಾತ್ರ ನಗರೀಕರಣ ಪ್ರಕ್ರಿಯೆ ಮಹತ್ವದ್ದಾಗಿ ಕಂಡು ಬರಲು ಸಾಧ್ಯ. ಚರಿತ್ರೆ ಬರವಣಿಗೆಯಲ್ಲಿ ನಗರೀಕರಣ ಕುರಿತ ಚರ್ಚೆಗಳು ಪ್ರಮುಖ ವಿಚಾರವಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಸಾಮ್ರಾಜ್ಯಶಾಹಿ ಮತ್ತು ರಾಷ್ಟ್ರೀಯವಾದಿಗಳ ವಾದ-ಪ್ರತಿವಾದದ ಹಿನ್ನೆಲೆಯಿಂದ ಕೂಡಿದ ಹಾಗೂ ಪೂರ್ವಾಗ್ರಹಪೀಡಿತವಾದ ಚರಿತ್ರೆ ಅಧ್ಯಯನಗಳಿಂದಾಗಿ ಪೇಟೆ-ಪಟ್ಟಣಗಳ ಚರಿತ್ರೆ ಬದಿಗೆ  ಸರಿಯಬೇಕಾಯಿತು. ನಗರೀಕರಣವು ಚರಿತ್ರೆ ಬರವಣಿಗೆಯಲ್ಲಿ ಅಲಕ್ಷ್ಯಕ್ಕೆ ಒಳಗಾದ ಒಂದು ವಿಚಾರ. ಹೇಗೆ ದುಡಿಯುವ ವರ್ಗಗಳು ಮತ್ತು ಅವರ ದುಡಿಮೆ ನಿರ್ಲಕ್ಷ್ಯಕ್ಕೆ ಒಳಗಾಯಿತೋ, ಅದೇ ರೀತಿ ನಗರ ವ್ಯವಸ್ಥೆ ಹಾಗೂ ಆ ವ್ಯವಸ್ಥೆಯೊಳಗಿರುವ ವರ್ತಕ ಸಮುದಾಯಗಳು, ಕುಶಲಕರ್ಮಿಗಳು ಮತ್ತು ಅವರ ಸಂಘಗಳು ನಿರ್ಲಕ್ಷ್ಯಕ್ಕೆ ಒಳಗಾದವು. ನಮ್ಮಲ್ಲಿರುವ ಹೆಚ್ಚಿನ ಚರಿತ್ರೆ ಗ್ರಂಥಗಳಲ್ಲಿ ಅವುಗಳ ಕೊನೆಯಲ್ಲಿ ಬರುವ ಆರ್ಥಿಕತೆ ಎನ್ನುವ ಭಾಗದಲ್ಲಿ ಮೂರು ಅಥವಾ ನಾಲ್ಕು ವಾಕ್ಯಗಳು ಪೇಟೆ-ಪಟ್ಟಣಗಳ ಕುರಿತಾಗಿರುತ್ತವೆ. ಹೀಗಾಗಿ ನಗರ ಅಧ್ಯಯನವು ವಿಶೇಷ ಆಸಕ್ತಿಯ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿಲ್ಲ.

ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಈ ಕ್ಷೇತ್ರದಲ್ಲಿ ಕೆಲವು ಅಧ್ಯಯನಗಳು ನಡೆದಿವೆ. ಆದರೆ ಅವು ಮತ್ತೆ ಉತ್ತರ ಭಾರತ ಕೇಂದ್ರಿತವಾಗಿರುವುದು ಇಲ್ಲಿ ಗಮನಿಸಬೇಕಾದ ವಿಚಾರ. ನಗರ ಸಿದ್ಧಾಂತಗಳ ರೂಪುಗೊಳ್ಳುವಿಕೆ ಹಾಗೂ ನಗರ ಅಧ್ಯಯನ ವಿಧಾನದ ಕುರಿತಾಗಿ ಈ ಅಧ್ಯಯನಗಳು ಸಹಕಾರಿಯಾಗಿವೆಯಾದರೂ ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ, ನಗರ ಚರಿತ್ರೆಯ ಅಧ್ಯಯನಕ್ಕೆ ನೇರವಾಗಿ ಅವು ಸಂಬಂಧಪಟ್ಟಿಲ್ಲ. ಏಕೆಂದರೆ ನಗರ ಅಧ್ಯಯನವನ್ನು ಮೇಲ್ನೋಟದ ಅಧ್ಯಯನದಿಂದ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಅಧ್ಯಯನದ ಕಾಲಾವಧಿಯಲ್ಲಿ ನಗರ ಕೇಂದ್ರಗಳ ಹುಟ್ಟು-ಬೆಳವಣಿಗೆ-ಅವನತಿ ಈ ಮೂರು ಅಂಶಗಳು ಕಂಡು ಬರುವುದರಿಂದಾಗಿ ಹಾಗೂ ಅವುಗಳ ಸ್ಥಿತ್ಯಂತರಗಳಿಗೆ ನಾನಾ ಕಾರಣಗಳಿರುವುದರಿಂದಾಗಿ ಅದು ಸೂಕ್ಷ್ಮ ಅಧ್ಯಯನವನ್ನು ಬಯಸುತ್ತಿರುತ್ತದೆ.

ಮೌರ್ಯರಿಂದ ಮೈಸೂರು ಸುಲ್ತಾನರವರೆಗಿನ ಅವಧಿಯಲ್ಲಿ ನಾನಾ ಸ್ವರೂಪದ ಹಲವಾರು ನಗರ ಕೇಂದ್ರಗಳು ಅಸ್ತಿತ್ವದಲ್ಲಿದ್ದವಾದರೂ ರಾಜಧಾನಿ ಪಟ್ಟಣಗಳು, ವ್ಯಾಪಾರ ಕೇಂದ್ರಗಳು, ಅದರಲ್ಲೂ ಬಂದರು ಪಟ್ಟಣಗಳು ಹಾಗೂ ಧಾರ್ಮಿಕ ಕೇಂದ್ರಗಳು ಮುಖ್ಯವಾಗಿದ್ದವು. ಅವು ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ನಿರಂತರ ಪರಿವರ್ತನೆಗಳಿಗೆ ಒಳಗಾಗುತ್ತಿದ್ದವು. ಭೂಒಡೆತನ, ಕೃಷಿಯ ವಿಸ್ತರಣೆ, ಉತ್ಪಾದನಾ ತಾಂತ್ರಿಕತೆಯಲ್ಲಾಗುತ್ತಿದ್ದ ಬದಲಾವಣೆಗಳು, ಸಂತೆ ಮತ್ತು ಮಾರುಕಟ್ಟೆ ಕೇಂದ್ರಿತ ಅರ್ಥ ವ್ಯವಸ್ಥೆಯ ಹುಟ್ಟು, ಕಡಲಾಚೆಯ ದೇಶಗಳೊಂದಿಗಿನ ಸಂಪರ್ಕಗಳು, ಬಂದರು ಪಟ್ಟಣಗಳು ಮತ್ತು ಅವುಗಳ ಒಳನಾಡು ಮುಂತಾದವು ಆರ್ಥಿಕತೆಯ ಪರಿವರ್ತನೆಗಳಿಗೆ ಚಾಲನೆ ಒದಗಿಸಿದವು. ಈ ಬದಲಾವಣೆಗಳು ಆಯಾ ಸಂದರ್ಭದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ದಟ್ಟವಾದ ಪರಿಣಾಮಗಳನ್ನು ಬೀರಿದವು. ಉತ್ಪಾದನಾ ವಿಧಾನದಲ್ಲಿ ಬದಲಾವಣೆ ಕಾಣಿಸಿ ಕೊಂಡು ಅದು ಸಾಮಾಜಿಕ ಸಂಬಂಧಗಳ ಮರುವ್ಯಾಖ್ಯಾನಕ್ಕೂ ಕಾರಣವಾಯಿತು.

ಬನವಾಸಿ ಕದಂಬರ ಆಳ್ವಿಕೆಯಿಂದ ಸುಮಾರು ೯-೧೦ನೆಯ ಶತಮಾನದವರೆಗಿನ ಅವಧಿಗೂ, ಆನಂತರದ ಅವಧಿಗೂ ಸಾಕಷ್ಟು ಭಿನ್ನತೆಗಳು ಇರುವುದು ಕಂಡುಬರುತ್ತದೆ. ಸಮಾಜ ಊಳಿಗಮಾನ್ಯ ಹಿಡಿತದಲ್ಲಿದ್ದಾಗ, ಭೂಮಾಲೀಕರು ನಿರ್ಣಾಯಕ ಶಕ್ತಿಗಳಾಗಿ ಕಾಣಿಸಿಕೊಂಡಿದ್ದಾಗ ನಗರ ವ್ಯವಸ್ಥೆ ಸ್ವತಂತ್ರವಾಗಿ ವ್ಯವಹರಿಸುವುದಾಗಲಿ ಅಥವಾ ನಗರಗಳ ವಿಸ್ತರಣೆಯಾಗಲಿ ಸಾಧ್ಯವಿರಲಿಲ್ಲ. ಅದರಲ್ಲೂ ವ್ಯಾಪಾರ ಕೇಂದ್ರಗಳು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಅಭಿವೃದ್ದಿಯನ್ನು ಹೊಂದುವುದಂತೂ ದೂರದ ಮಾತಾಗಿತ್ತು. ಆದರೆ ಈ ಅವಧಿಯಲ್ಲೂ ವ್ಯಾಪಾರ-ವಾಣಿಜ್ಯ ನಡೆಯುತ್ತಿತ್ತು. ಅದು ಕೃಷಿ ಪ್ರಧಾನ ವ್ಯವಸ್ಥೆಯೊಳಗೆ ನಡೆಯುತ್ತಿತೇ ಹೊರತು ಪ್ರಧಾನ ಚಟುವಟಿಕೆಯಾಗಿಯಲ್ಲ. ಕ್ರಿ.ಶ. ೧೦ನೆಯ ಶತಮಾನದ ಸುಮಾರಿಗೆ ವ್ಯಾಪಾರ ಕೇಂದ್ರಗಳು ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಲಾರಂಭಿಸಿದವು. ಬಂದರು ಪಟ್ಟಣಗಳು ಪ್ರತಿಯೊಂದು ಸಣ್ಣ-ದೊಡ್ಡ ಅರಸುಮನೆತಗಳ ಆಕರ್ಷಣೆಯ ಕೇಂದ್ರಗಳಾದವು. ಕೃಷಿಯೇತರ ಚಟುವಟಿಕೆಗಳು ಪ್ರಧಾನವಾಗಿ ಕಾಣಿಸಿಕೊಳ್ಳ ಲಾರಂಭಿಸಿದವು. ಸಂತೆ-ಮಾರುಕಟ್ಟೆಗಳ ನಿರ್ಮಾಣಕ್ಕೆ ಅರಸರು, ಅಧಿಕಾರಿಗಳು, ಹಳ್ಳಿಗಳ ಮುಖಂಡರು ಮುಂತಾದವರು ಆಸಕ್ತರಾಗಿದ್ದರು ಎನ್ನುವುದೇ ಬದಲಾದ ಆರ್ಥಿಕತೆಯನ್ನು ಸೂಚಿಸುತ್ತದೆ. ಇದರಿಂದಾಗಿ ಅಂದಿನ ಸಮಾಜ ನಿರಂತರ ಪರಿವರ್ತನೆಗಳಿಗೆ ಒಳಗಾಗುತ್ತಿತ್ತು ಹಾಗೂ ಹೆಚ್ಚಿನ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತಾಯಿತು ಎಂಬುದಾಗಿ ತೀರ್ಮಾನಿಸ ಬಹುದಾಗಿದೆ.

ಕೃಷಿಯೇತರ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು, ಅದು ಅನೇಕ ರೀತಿಯ ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿತು. ಕುಶಲಕರ್ಮಿಗಳು ನಗರ ಪ್ರದೇಶಗಳಲ್ಲಿ ಸ್ವತಂತ್ರವಾಗಿ ತಮ್ಮ ವೃತ್ತಿಯಲ್ಲಿ ತೊಡಗುವುದಕ್ಕೂ, ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಅವರು ಕಾರ್ಯ ನಿರ್ವಹಿಸುವುದಕ್ಕೂ ಅನೇಕ ವ್ಯತ್ಯಾಸಗಳಿವೆ. ನಗರ ವ್ಯವಸ್ಥೆ ರೂಪುಗೊಂಡಾಗ ಅದರೊಂದಿಗೆ ಪರಿಣತ ಕುಶಲಕರ್ಮಿಗಳು ಗುರುತಿಸಿಕೊಂಡರು ಹಾಗೂ ತಮ್ಮದೇ ಆದ ವೃತ್ತಿ ಸಂಘಗಳನ್ನು ಸ್ಥಾಪಿಸಿಕೊಂಡರು. ಕೈಗಾರಿಕೆ ಎನ್ನುವ ವ್ಯವಸ್ಥೆ ನಗರ ವ್ಯವಸ್ಥೆಯೊಳಗೆ ಸೇರಿಕೊಂಡು ನಗರೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿತು. ಇದರರ್ಥ ನಗರ ಸಮಾಜ ಆದರ್ಶವಾದುದ್ದಾಗಿತ್ತು ಎಂದಲ್ಲ. ಊಳಿಗಮಾನ್ಯ ಲಕ್ಷಣಗಳು ಅದರಲ್ಲೂ ಸೇರಿಕೊಂಡಿದ್ದವು. ಮಧ್ಯವರ್ತಿಗಳ ಹುಟ್ಟು ಹಾಗೂ ಅವು ನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳು ಅನೇಕ ರೀತಿಯ ಸಂದೇಹಗಳಿಗೆ ಎಡೆಮಾಡಿಕೊಡುತ್ತದೆ. ವೈಯಕ್ತಿಕ ಹಿತಾಸಕ್ತಿಗಳು, ಯಜಮಾನಿಕೆ, ಶೋಷಣೆ ಇವು ಕೃಷಿ ಮತ್ತು ನಗರ ವ್ಯವಸ್ಥೆಗಳೆರಡರಲ್ಲೂ ಕಂಡು ಬರುತ್ತಿದ್ದ ಸಾಮಾನ್ಯ ಲಕ್ಷಣವಾಗಿತ್ತು.

ಕೃಷಿಯೇತರ ಚಟುವಟಿಕೆಗಳು ಸಂಘಟಿತ ಆರ್ಥಿಕ ಚಟುವಟಿಕೆಗಳಾಗಿ ಕಾಣಿಸಿಕೊಂಡಿ ರುವುದು ನಗರ ವ್ಯವಸ್ಥೆಯ ಪ್ರಮುಖ ಲಕ್ಷಣ. ಗ್ರಾಮ ಮತ್ತು ನಗರ ಸಂದರ್ಭಗಳು ಬೇರೆ ಬೇರೆಯದಾಗಿಯೇ ಕಂಡು ಬಂದರೂ, ಅವುಗಳ ನಡುವೆ ಖಚಿತ ಸ್ವರೂಪದ ಅಂತರ್‌ಕ್ರಿಯೆ ಇತ್ತು. ಎರಡೂ ಖಚಿತ ಮಾದರಿಗಳೇ ಆಗಿದ್ದು, ಪರಸ್ಪರ ಸಂಬಂಧವನ್ನು ಇರಿಸಿಕೊಂಡಿದ್ದವು. ಕೃಷಿಯೇತರ ಅರ್ಥ ವ್ಯವಸ್ಥೆ ಒಂದು ಮುಖ್ಯ ಆರ್ಥಿಕ ಪರಿವರ್ತನೆಯಾಗಿ ಕಂಡು ಬಂದರೂ ಅದು ಕೃಷಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿ ಬಂದದ್ದಲ್ಲ. ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳಿಗನುಗುಣವಾಗಿ ವ್ಯವಸ್ಥೆಗಳು ಬದಲಾಗು ತ್ತಿದ್ದವು ಹಾಗೂ ಅವುಗಳ ಪ್ರಭಾವ, ಪರಿಣಾಮಗಳು ಪ್ರಭುತ್ವದ ಧೋರಣೆಯನ್ನೂ ಬದಲಾಯಿಸುತ್ತಿದ್ದವು.

ಉತ್ಪಾದನೆ ಮಾನವನ ವಿಕಾಸದ ಆರಂಭಿಕ ಹಂತದಿಂದಲೇ ಆರಂಭಗೊಂಡಿರುವಂತಹ ಒಂದು ಚಟುವಟಿಕೆ. ದುಡಿಮೆ ಮತ್ತು ದುಡಿಯುವ ವರ್ಗಗಳು ಚರಿತ್ರೆಯ ತಳಹದಿ ಯಾಗಿದ್ದು, ಅದರಲ್ಲಿ ಕೃಷಿ ಅಥವಾ ನಗರ ಎನ್ನುವ ವಿಂಗಡಣೆಗಳಿರುವುದಿಲ್ಲ. ದುಡಿಮೆಯ ವಿಧಾನ, ತಾಂತ್ರಿಕತೆ, ಸ್ವರೂಪಗಳ ವಿಚಾರ ಬಂದಾಗ ಎರಡೂ ವ್ಯವಸ್ಥೆಗಳಲ್ಲಿರುವ ಸಾಮ್ಯತೆಗಳು ಮತ್ತು ಭಿನ್ನತೆಗಳು ಗೋಚರಿಸುತ್ತವೆ. ಆಹಾರ ಸಾಮಾಗ್ರಿಗಳ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳ ಉತ್ಪಾದನೆ ಒಂದು ವಿಧದ ದುಡಿಮೆಯಾದರೆ, ಅವುಗಳ ಸಂಗ್ರಹಣೆ, ಮಾರಾಟ, ಅವುಗಳನ್ನು ನೋಡಿಕೊಳ್ಳುವ ಅಧಿಕಾರಿ ಇಲ್ಲವೇ ವರ್ತಕ ಸಂಘಗಳು, ತೆರಿಗೆ ನಿಗದಿಪಡಿಸುವುದು, ಸಂತೆ ಮತ್ತು ಮಾರುಕಟ್ಟೆಗಳನ್ನು ಏರ್ಪಡಿಸುವುದು ಮುಂತಾದವು ನಗರ ಸಂಬಂಧಿಯಾದ ಕೆಲಸ ಕಾರ್ಯಗಳು. ವರ್ತಕರು, ವರ್ತಕ ಸಂಘಗಳು ಮತ್ತು ಕುಶಲಕರ್ಮಿಗಳು ನಗರ ವ್ಯವಸ್ಥೆಯೊಳಗೆ ಬರುವ ಪ್ರಮುಖ ಜನವರ್ಗಗಳು. ನಗರ ವ್ಯವಸ್ಥೆ ರೂಪುಗೊಳ್ಳುವಲ್ಲಿ ಇವರ ಕೆಲಸ ಕಾರ್ಯಗಳು ನಿರ್ಧಾರಕವಾದಂತವು.

ರಾಜಪ್ರಭುತ್ವಕ್ಕೂ ತನ್ನ ಅಸ್ತಿತ್ವಕ್ಕಾಗಿ ಬದಲಾಗುತ್ತಿದ್ದ ಆರ್ಥಿಕತೆ ಅನಿವಾರ್ಯವೇ ಆಗಿದ್ದರಿಂದಾಗಿ, ಪೇಟೆ-ಪಣ್ಣಗಳ ಹುಟ್ಟು ಹಾಗೂ ಆ ಮೂಲಕ ವ್ಯಾಪಾರ ವಹಿವಾಟಿನ ವೃದ್ದಿಗೆ ಅದು ಸ್ಪಂದಿಸಿತು. ಆರ್ಥಿಕತೆಯಲ್ಲಾಗುತ್ತಿದ್ದ ಬದಲಾವಣೆಗಳೆಲ್ಲದಕ್ಕೂ ಪ್ರಭುತ್ವವೇ ಕಾರಣವಲ್ಲ. ಆದರೆ ಹಾಗೆಂದು ಭಾವಿಸಿಕೊಳ್ಳಲಾಗಿದೆ. ಎಲ್ಲವನ್ನೂ ರಾಜಪ್ರಭುತ್ವದ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳ ಹಿನ್ನೆಲೆಯಿಂದ ನೋಡುವ ಪ್ರವೃತ್ತಿ ಬದಲಾದಾಗ ಮಾತ್ರ ಆರ್ಥಿಕ ಚರಿತ್ರೆ, ಜನರ ಚರಿತ್ರೆ ಮುಂತಾದ ಪರಿಕಲ್ಪನೆಗಳು ಸ್ವತಂತ್ರವಾಗಿ ವ್ಯವಹರಿಸಲು ಸಾಧ್ಯ. ನಗರೀಕರಣದ ಅಧ್ಯಯನವು ಆರ್ಥಿಕ ಚರಿತ್ರೆಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಪ್ರಭುತ್ವದ ಹಿನ್ನೆಲೆಯಿಂದ ಅಧ್ಯಯನ ನಡೆಸುವ ಅವಶ್ಯಕತೆಯಿಲ್ಲ. ನಗರ ವ್ಯವಸ್ಥೆಯೊಳಗೆ ಅರಸರು ಮತ್ತು ಅರಸುಮನೆತನಗಳು ಒಂದು  ಭಾಗವಾಗಿರುವುದರಿಂದಾಗಿ ಒಟ್ಟಾರೆ ಅಧ್ಯಯನದಲ್ಲಿ ಅವುಗಳ ಚರಿತ್ರೆ ಒಂದು ಭಾಗವಾಗಿ ಯಷ್ಟೇ ಇರಬೇಕಾಗುತ್ತದೆ. ಅದೇ ಚರಿತ್ರೆಯಾಗಲು ಸಾಧ್ಯವಿಲ್ಲ. ಈ ಸೂಕ್ಷ್ಮಗಳನ್ನು ಗಮನಿಸಿಕೊಂಡಾಗ ಹಾಗೂ ಅಧ್ಯಯನಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ನಗರೀಕರಣ ದಂಥ ಪ್ರಮುಖ ಪರಿಕಲ್ಪನೆಗಳು ಸ್ವತಂತ್ರ ಶೈಕ್ಷಣಿಕ ಶಿಸ್ತುಗಳಾಗಿ ರೂಪುಗೊಳ್ಳಲು ಸಾಧ್ಯ.