ಕೃಷಿ ಪ್ರಧಾನ ದೇಶವಾದ ಭಾರತದ ಮೇಲೆ ಕೈಗಾರಿಕಾ ಪ್ರಧಾನ ದೇಶವಾದ ಬ್ರಿಟನ್ ಆಳ್ವಿಕೆ ನಡೆಸಲು ಆರಂಭಿಸಿದಾಗ ಸಹಜವಾಗಿಯೇ ಕೆಲವೊಂದು ಬದಲಾವಣೆಗಳು ಉಂಟಾದವು. ಬ್ರಿಟಿಷರು ಭಾರತದಲ್ಲಿ ಕೃಷಿ ಅಥವಾ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಉದ್ದೇಶವನ್ನು ಇಟ್ಟುಕೊಂಡು ಬಂದವರಲ್ಲ. ಅವರಿಗಿದ್ದ ಉದ್ದೇಶವೆಂದರೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಕಟ್ಟುವುದು ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ಗಳಿಸುವುದು ಮತ್ತು ಏಕಸ್ವಾಮ್ಯವನ್ನು ಸ್ಥಾಪಿಸುವುದು. ಈ ಉದ್ದೇಶಗಳಿಗೆ ಪೂರಕವಾದ ಕೃಷಿ ಹಾಗೂ ಕೈಗಾರಿಕಾ ನೀತಿಯನ್ನು ಬ್ರಿಟಿಷರು ಜಾರಿಗೊಳಿಸಿದರು. ಪ್ರಸ್ತುತ ಅಧ್ಯಾಯದಲ್ಲಿ ಕರ್ನಾಟಕದ ಕೈಗಾರಿಕಾ ಸ್ವರೂಪವನ್ನು ಅರ್ಥೈಸಿಕೊಳ್ಳುವ ಹಾಗೂ ವಸಾಹತು ಅವಧಿಯಲ್ಲಾದ ಕೈಗಾರಿಕೀಕರಣ ಪ್ರಕ್ರಿಯೆ ನಗರೀಕರಣ ಪ್ರಕ್ರಿಯೆಯ ಮೇಲೆ ಬೀರಿದ ಪ್ರಭಾವ, ಪರಿಣಾಮಗಳನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ. ಅದೇ ರೀತಿ ಸ್ಥಳೀಯ ಕೈಗಾರಿಕೆಗಳ ನಾಶದ ಕುರಿತು ಸಾಮ್ರಾಜ್ಯಶಾಹಿಗಳು ಮತ್ತು ರಾಷ್ಟ್ರೀಯವಾದಿಗಳು ನಡೆಸಿದ ಪರಸ್ಪರ ವಾದ ಪ್ರತಿವಾದಗಳನ್ನು ಹಾಗೂ ಅದರ ಹಿಂದಿದ್ದ ಧೋರಣೆಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಗಿದೆ.

ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯನ್ನು ಒಂದು ಚಾರಿತ್ರಿಕ ಘಟ್ಟವನ್ನಾಗಿ ಇಟ್ಟುಕೊಂಡು ಕೈಗಾರಿಕೀಕರಣ ಮತ್ತು ನಗರೀಕರಣದ ಅಧ್ಯಯನ ಮಾಡುವ ವಿಧಾನ ಹೆಚ್ಚು ಪ್ರಚಾರದಲ್ಲಿರುವಂತದ್ದು. ಸಾಮ್ರಾಜ್ಯಶಾಹಿ ಚರಿತ್ರೆಕಾರರು ಈ ವಿಧಾನವನ್ನು ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡರೆ, ರಾಷ್ಟ್ರೀಯವಾದಿಗಳು ಸಾಮ್ರಾಜ್ಯಶಾಹಿಗಳನ್ನು ವಿರೋಧಿಸುವ ಭರದಲ್ಲಿ ಮತ್ತದೇ ವಿಧಾನವನ್ನು ಬಳಸಿಕೊಂಡರು. ಯುರೋಪಿನ ಕೈಗಾರಿಕೀಕರಣವನ್ನು ಆಧಾರವನ್ನಾಗಿಟ್ಟುಕೊಂಡು ನಗರಗಳನ್ನು ಕೈಗಾರಿಕಾಪೂರ್ವ ನಗರಗಳು ಹಾಗೂ ಕೈಗಾರಿಕಾ ನಗರಗಳು ಎಂಬುದಾಗಿಯೂ ವಿಂಗಡಿಸಲಾಗಿದೆ. ಇದು ಕೈಗಾರಿಕೀಕರಣದ ಮೂಲಕ ನಗರೀಕರಣವನ್ನು ನೋಡುವ ಪ್ರಯತ್ನವಾಗಿದೆ. ಬ್ರಿಟಿಷರು ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಪ್ರಗತಿಯನ್ನೇ ‘ಆಧುನಿಕ’ ಎಂಬರ್ಥದಲ್ಲಿ ವ್ಯಾಖ್ಯಾನಿಸಿದರು. ಹಾಗಾದಾಗ ಕೈಗಾರಿಕಾ ಪೂರ್ವ ಎನ್ನುವುದು ಸಾಂಪ್ರದಾಯಿಕ ಎಂದಾಗುತ್ತದೆ. ಇವೆಲ್ಲವೂ ವಸಾಹತು ಸಿದ್ಧಾಂತದೊಳಗಿರುವ ಕೆಲವು ವಿವರಣೆಗಳು. ಕೈಗಾರಿಕೆಗಳಿಂದಾಗಿಯೇ ನಗರ ಪ್ರದೇಶಗಳು ನಿರ್ಮಾಣಗೊಳ್ಳುವುದಿಲ್ಲ. ನಗರೀಕರಣ ಪ್ರಕ್ರಿಯೆಯಲ್ಲಿ ಕೈಗಾರಿಕೆಗಳೂ ಒಂದು ಕಾರಣವಾಗಿ ಕಂಡುಬರುತ್ತವೆ. ವ್ಯಾಪಾರ, ಶಿಕ್ಷಣ, ರಾಜಕೀಯದಂತೆ ಕೈಗಾರಿಕೆಯೂ ನಗರಗಳ ಹುಟ್ಟಿಗೆ ಒಂದು ಕಾರಣವಾಗಿ ಕಂಡುಬರುತ್ತದೆ. ಹಾಗಾಗಿ ಕೈಗಾರಿಕೆಗಳ ಮೂಲಕವೇ ನಗರಗಳನ್ನು ನೋಡಬೇಕೆಂದೇನಿಲ್ಲ. ಆದರೆ ಕೈಗಾರಿಕಾ ಕ್ರಾಂತಿಯ ಬಳಿಕ ಬಂಡವಾಳ ಮತ್ತು ಬಂಡವಾಳಶಾಹಿ ಹಲವಾರು ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಾರಂಭಿಸಿತು. ಆರ್ಥಿಕತೆಯ ಹಿಂದಿನ ಚಾಲಕ ಶಕ್ತಿಯಾಗಿ ಅದು ಬೆಳೆಯಿತು. ವಸಾಹತುಶಾಹಿಯೂ ಕೈಗಾರಿಕಾ ಬಂಡವಾಳದೊಂದಿಗೆ ತಳುಕು ಹಾಕಿಕೊಂಡಿತು. ಇದರರ್ಥ ಅದಕ್ಕೆ ವಿರೋಧಗಳೇ ಇರಲಿಲ್ಲ ಎಂದಲ್ಲ. ಬಂಡವಾಳಶಾಹಿ ಉತ್ಪಾದನಾ ವಿಧಾನ ಆರಂಭಗೊಂಡು ರಾಜಪ್ರಭುತ್ವದಂತೆ ವ್ಯವಹರಿಸಲು ಆರಂಭಿಸಿದಾಗ, ಅದಕ್ಕೆ ವಿರುದ್ಧವಾಗಿ ಸಮಾಜವಾದಿ ಚಿಂತನೆಗಳು ಕಾಣಿಸಿಕೊಂಡವು. ಕಾರ್ಮಿಕರ ಸಂಘಟನೆಗಳು, ಕಾರ್ಮಿಕರ ಮುಷ್ಕರಗಳು, ಈ ಹಿನ್ನೆಲೆಯಿಂದಲೇ ಹುಟ್ಟಿಕೊಂಡವು. ಆದರೂ ಕೈಗಾರಿಕಾ ಬಂಡವಾಳ ತನ್ನ ಯಜಮಾನಿಕೆಯನ್ನು ಉಳಿಸಿಕೊಂಡೇ ಬಂತು, ಹಾಗೂ ಇನ್ನಿತರ ಕ್ಷೇತ್ರಗಳಿಗೂ ನೇರ ಪ್ರವೇಶ ಪಡೆಯಿತು.

ಯುರೋಪಿನ ಬಂಡವಾಳಶಾಹಿಗಳು ಕೈಗಾರಿಕೀಕರಣಕ್ಕೆ ಪೂರಕವಾಗುವಂಥ ಉತ್ಪಾದನಾ ವ್ಯವಸ್ಥೆಗೆ ಒತ್ತು ನೀಡುತ್ತಲೇ ಬಂದರು. ಯುರೋಪಿನ ಕೈಗಾರಿಕೀಕರಣಕ್ಕೆ ಪೂರಕವಾಗುವಂಥ ವ್ಯವಸ್ಥೆಯನ್ನು ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಅಂದರೆ, ಯುರೋಪಿನ ಕೈಗಾರಿಕೆಗಳಿಗೆ ಬೇಕಾಗುವಂಥ ಕಚ್ಚಾಸಾಮಾಗ್ರಿಗಳನ್ನು ಆಫ್ರಿಕಾ ಮತ್ತು ಏಷ್ಯಾದ ದೇಶಗಳಿಂದ ಪಡೆಯುವುದು ಹಾಗೂ ಯುರೋಪಿನಲ್ಲಿ ಸಿದ್ಧಗೊಂಡ ವಸ್ತುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗಳನ್ನಾಗಿ ಈ ದೇಶಗಳನ್ನು ಬಳಸುವುದು. ಈ ಕಾರಣದಿಂದಾಗಿಯೇ ಭಾರತದಂಥ ದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ, ಗಣಿಗಾರಿಕೆಯನ್ನು ನಡೆಸುವ, ಬಂದರು ಪಟ್ಟಣಗಳಿಗೆ ವಿಶೇಷ ಆದ್ಯತೆಯನ್ನು ನೀಡುವ ಯೋಜನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಯಿತು. ಇದರಿಂದಾಗಿ ಅನೇಕ ಪ್ರದೇಶಗಳು ಕೈಗಾರಿಕಾ ಪ್ರದೇಶಗಳಾಗಿ, ನಗರ ಪ್ರದೇಶಗಳಾಗಿ ಬೆಳೆದವು. ಆದರೆ ಈ ಪರಿವರ್ತನೆ ಸ್ಥಳೀಯ ಅರ್ಥ ವ್ಯವಸ್ಥೆಗೆ ನೆರವಾಗಿದ್ದಕ್ಕಿಂತ ಹೆಚ್ಚು ಇಂಗ್ಲೆಂಡಿನ ಅರ್ಥವ್ಯವಸ್ಥೆಗೆ ನೆರವಾಯಿತು. ಇದಕ್ಕೆ ಬಲವಂತದ ಕೃಷಿಯ ವಾಣಿಜ್ಯೀಕರಣವೇ ಉತ್ತಮ ಉದಾಹರಣೆಯಾಗಿದೆ.

ಕರ್ನಾಟಕವು ಬ್ರಿಟಿಷ್ ವಸಾಹತುವಾಗಿ ಪರಿವರ್ತನೆಗೊಳ್ಳುವ ಮೊದಲು ಇಲ್ಲಿದ್ದ ಸ್ಥಳೀಯ ಕೈಗಾರಿಕೆಗಳು ಹಾಗೂ ಅವುಗಳ ಸ್ವರೂಪ, ವಸಾಹತುವಾಗಿ ಪರಿವರ್ತನೆಗೊಂಡ ಬಳಿಕ ಅವುಗಳಲ್ಲಾದ ಬದಲಾವಣೆಗಳು, ಬ್ರಿಟಿಷರ ಹೊಸ ಕೈಗಾರಿಕಾ ನೀತಿ ಈ ಮುಂತಾದ ವಿಚಾರಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಪ್ರಮುಖವಾದದ್ದು ಸಾಮ್ರಾಜ್ಯಶಾಹಿಗಳು ಮತ್ತು ರಾಷ್ಟ್ರೀಯವಾದಿಗಳ ನಡುವೆ ನಡೆದ ವಾಗ್ವಾದಗಳು. ರಾಷ್ಟ್ರೀಯವಾದಿಗಳ ಪ್ರಕಾರ ಇಲ್ಲಿನ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಅವನತಿಯ ಅಂಚಿಗೆ ಸರಿಯಲು ಯುರೋಪಿನ ಕೈಗಾರಿಕಾ ಬಂಡವಾಳವೇ ಮೂಲ ಕಾರಣ. ಯುರೋಪಿನ ಬಂಡವಾಳವು ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದೇ ಅಲ್ಲದೆ ಅದನ್ನು ಛಿದ್ರಗೊಳಿಸಿತು. ಕೈಗಾರಿಕಾ ಕ್ರಾಂತಿಯ ನಂತರ ಸ್ಥಳೀಯ ಕೈಗಾರಿಕೆಗಳು ಮೂಲೆಗುಂಪಾಗಿ, ಅವುಗಳಲ್ಲಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು ನಿರುದ್ಯೋಗಿಗಳಾಗುವಂತಾಯಿತು. ರಾಷ್ಟ್ರೀಯವಾದಿಗಳ ಈ ವಾದಕ್ಕೆ ಸಾಮ್ರಾಜ್ಯಶಾಹಿಗಳು ಪ್ರತಿವಾದ ಹೂಡುತ್ತಾ, ಭಾರತದ ಗುಡಿ ಕೈಗಾರಿಕೆಗಳು ಬ್ರಿಟಿಷರ ಆಗಮನದ ವೇಳೆಗೆ ಅವಾಗಿಯೇ ಅವನತಿಯತ್ತ ಹೋಗಿದ್ದವು ಹಾಗೂ ತಂತ್ರಜ್ಞಾನದಲ್ಲಿ ಅವು ಬಹಳ ಹಿಂದುಳಿದಿದ್ದವು ಎಂಬುದಾಗಿ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಆದರೆ ಹೊಸ ಕೈಗಾರಿಕೆಗಳ ಆಗಮನ ಮತ್ತು ಹೊಸ ಕೈಗಾರಿಕಾ ನೀತಿ ಸ್ಥಳಿಯ ಕೈಗಾರಿಕೆಗಳ ಮೇಲೆ ಬೀರಿದ ಕೆಟ್ಟ ಪರಿಣಾಮಗಳ ಕುರಿತು ಅರಿವಿದ್ದರೂ ಉದ್ದೇಶಪೂರ್ವಕವಾಗಿ ಬ್ರಿಟಿಷ್ ಆಡಳಿತವನ್ನು ಸಮರ್ಥಿಸಿಕೊಂಡರು. ಸಾಮ್ರಾಜ್ಯಶಾಹಿಗಳ ಪ್ರಕಾರ ಬ್ರಿಟಿಷರ ಆಗಮನಕ್ಕಿಂತ ಮೊದಲು ಭಾರತದಲ್ಲೇನೂ ಕೈಗಾರಿಕಾ ಕ್ರಾಂತಿ ನಡೆದಿರಲಿಲ್ಲ. ಹಾಗಾಗಿ ಕೈಗಾರಿಕೆಗಳ ಅವನತಿ ಎನ್ನುವ ಮಾತೇ ಹುಟ್ಟಿಕೊಳ್ಳುವುದಿಲ್ಲ. ಬ್ರಿಟಿಷ್ ಆಳ್ವಿಕೆಯಲ್ಲಿ ಹತ್ತಿ ಉದ್ಯಮದಂಥ ಕೆಲವು ಕೈಗಾರಿಕೆಗಳು ಪ್ರೋತ್ಸಾಹ ಕಂಡಿದ್ದರ ಬಗ್ಗೆ ಹಾಗೂ ಕೆಲವು ಹೊಸ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದರ ಬಗ್ಗೆ ರಾಷ್ಟ್ರೀಯವಾದಿಗಳು ಮೌನವಹಿಸಿದರೆ, ಯುರೋಪಿನ ಕೈಗಾರಿಕಾ ಬಂಡವಾಳ ಇಲ್ಲಿನ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರ ಬಗ್ಗೆ ಸಾಮ್ರಾಜ್ಯಶಾಹಿಗಳು ಮೌನವಹಿಸುತ್ತಾರೆ. ವಸಾಹತು ಆಳ್ವಿಕೆಯಲ್ಲಿ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಕೆಲವು ಕೈಗಾರಿಕೆಗಳು ಸ್ಥಾಪನೆಗೊಂಡಿದ್ದು ನಿಜ. ಅದೇ ರೀತಿ ಬ್ರಿಟಿಷ್ ಅಗತ್ಯಗಳನ್ನು ಪೂರೈಸುವ ಕೆಲವು ಬೃಹತ್ ಕೈಗಾರಿಕೆಗಳೂ ಸ್ಥಾಪನೆಗೊಂಡವು. ಈ ಎಲ್ಲ ವಿಚಾರಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧ ಮತ್ತು ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಬ್ರಿಟಿಷ್ ಕರ್ನಾಟಕದಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಗೊಂಡವು. ಅವುಗಳಲ್ಲಿ ಮೈಸೂರು ಸಂಸ್ಥಾನದಲ್ಲಿ ಸ್ಥಾಪನೆಗೊಂಡ ಕೈಗಾರಿಕೆಗಳ ಸಂಖ್ಯೆಯೇ ಹೆಚ್ಚಿನದು. ಮೈಸೂರು ಸಂಸ್ಥಾನವು ಯೋಜನಾಬದ್ಧ ಆರ್ಥಿಕ ಪ್ರಗತಿಯತ್ತ ಮುನ್ನಡೆಯಿತು. ಅದಕ್ಕೆ ಅಂದಿನ ದಿವಾನರುಗಳು, ಯುರೋಪಿನ ಕೈಗಾರಿಕಾ ಕ್ರಾಂತಿಯ ಅರಿವು, ಶಿಕ್ಷಣ ಕ್ಷೇತ್ರದಲ್ಲಾದ ಬದಲಾವಣೆಗಳು ಮೂಲ ಕಾರಣ. ಹೈದರಾಬಾದ್ ಮತ್ತು ಮುಂಬಯಿ ಕರ್ನಾಟಕದ ಪ್ರದೇಶಗಳಲ್ಲಿ ಈ ಪ್ರಯತ್ನಗಳು ನಡೆಯಿತಾದರೂ ಅವು ಅಷ್ಟೊಂದು ಯೋಜನಾಬದ್ಧವಾಗಿರಲಿಲ್ಲ. ಮುಂಬಯಿ ಕರ್ನಾಟಕದ ಪ್ರದೇಶಗಳಲ್ಲಿ ಹತ್ತಿಗೆ ಸಂಬಂಧಿಸಿದ ಉದ್ಯಮಗಳು ಸ್ಥಾಪನೆಗೊಳ್ಳುವುದಕ್ಕೆ ೧೮೬೦ರ ದಶಕದಲ್ಲಿ ಅಮೆರಿಕಾದಲ್ಲಿ ಕಾಣಿಸಿಕೊಂಡ ಅಂತರ್ಯುದ್ಧ ಮೂಲ ಕಾರಣವಾಯಿತು. ಮದರಾಸು ಪ್ರೆಸಿಡೆನ್ಸಿಗೆ ಸೇರಿದ ಕರ್ನಾಟಕದ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಯಾದ ಬಾಷಲ್ ಮಿಶನ್ ಕೈಗಾರಿಕೆಗಳ ಸ್ಥಾಪನೆಗೆ ಚಾಲನೆ ನೀಡಿತು. ಹೀಗೆ ಕರ್ನಾಟಕದ ವಿವಿಧ ಪ್ರದೇಶಗಳು ಬೇರೆ ಬೇರೆ ಹಿನ್ನೆಲೆಯಿಂದಲೇ ಕೈಗಾರಿಕೆಗಳನ್ನು ಬರಮಾಡಿಕೊಂಡವು.

ಸರ್ ಎಂ. ವಿಶ್ವೇಶ್ವರಯ್ಯನವರು ೧೯೦೯ರಲ್ಲಿ ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡಾಗಿನಿಂದ ಕೈಗಾರಿಕಾ ನೀತಿ ವ್ಯವಸ್ಥಿತವಾಗಿ ಜಾರಿಗೊಳ್ಳಲಾರಂಭಿಸಿತು. ೧೯೧೧ರಲ್ಲಿ ನಡೆದ ಪ್ರಥಮ ಮೈಸೂರು ಆರ್ಥಿಕ ಸಮ್ಮೇಳನ ನಡೆಯಲು ಅವರೇ ಮುಖ್ಯ ಕಾರಣಕರ್ತರು. ಆರ್ಥಿಕ ಸಮ್ಮೇಳನದ ಶಿಫಾರಸ್ಸುಗಳನ್ನು ಅಂಗೀಕರಿಸಿದ ರಾಜ್ಯ ಸರಕಾರದ ೧೯೧೩ರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಕುರಿತ ವಿಷಯಗಳಿಗೆ ಪ್ರತ್ಯೇಕ ಇಲಾಖೆಯನ್ನು ರಚಿಸಿತು. ಈ ಇಲಾಖೆಯ ಮುಖ್ಯ ಉದ್ದೇಶಗಳು ಈ ರೀತಿ ಇದ್ದವು :

೧. ಗಿರಣಿ, ಮುದ್ರಣಾಲಯ, ನೀರಾವರಿ ಮತ್ತು ಹೂಳೆತ್ತುವ ಯಂತ್ರಗಳು, ಎಣ್ಣೆ ಗಿರಣಿ ಮತ್ತು ಅಕ್ಕಿ ಗಿರಣಿಗಳಿಗೆ ಬೇಕಾದ ಯಂತ್ರ ಸಾಮಾಗ್ರಿಗಳು ಮೊದಲಾದವುಗಳನ್ನು ಸ್ಥಾಪಿಸಲು ಹಾಗೂ ಹೊಸ, ಹೊಸ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಆರಂಭಿಸಲು, ಖಾಸಗಿ ಉದ್ಯಮಾಸಕ್ತರಿಗೆ ತಾಂತ್ರಿಕ ಸಲಹೆ, ಸರಕಾರಿ ಸಾಲ ಮೊದಲಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.

೨. ಖಾಸಗಿ ಬಂಡವಾಳ ಹೂಡಲಿಚ್ಚಿಸುವವರಿಗೆ ಹಾಗೂ ಷೇರು ಪತ್ರಗಳ ಮೂಲಕ ಜಾಯಿಂಟ್ ಸ್ಟಾಕ್ ಕಂಪೆನಿಗಳನ್ನು ಆರಂಭಿಸಿ, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಆರಂಭಿಸುವ ಉದ್ಯಮಗಳಿಗೆ ಅಂದಾಜು ವೆಚ್ಚ, ಯೋಜನೆಗಳ ವಿವರ, ಆಡಳಿತ ವಿಧಾನಗಳ ಅಂಗರಚನೆ ಮೊದಲಾದ ವಿಷಯಗಳಲ್ಲಿ ಸಾಧ್ಯವಾದಷ್ಟು ಉಚಿತವಾಗಿ ವಿವರ ಸಲಹೆಗಳನ್ನು ಒದಗಿಸುವುದು.

೩. ಸಕ್ಕರೆ ಕಾರ್ಖಾನೆಗಳು, ಮರಗೆಲಸದ ಲೇತ್‌ಗಳು, ರೇಷ್ಮೆ ಗೂಡಿನಿಂದ ನೂಲು ಬಿಚ್ಚುವ ಉದ್ಯಮ ಮೊದಲಾದವುಗಳಿಗೆ ಅನುಕೂಲವಾಗುವಂಥ ಪ್ರಾಯೋಗಿಕ ಯಂತ್ರ ಸ್ಥಾವರಗಳನ್ನು ಸರಕಾರದ ಅಥವಾ ಖಾಸಗಿಯವರ ವೆಚ್ಚದಲ್ಲಿ ಸ್ಥಾಪಿಸುವುದು.

೪. ರಾಜ್ಯಾದ್ಯಂತ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಉದ್ಯಮ ಮತ್ತು ವಾಣಿಜ್ಯ ಕುರಿತ ಅಂಕಿ ಅಂಶಗಳ ಕ್ರೋಢೀಕರಣ ಹಾಗೂ ಕೈಗಾರಿಕಾ ಸಮೀಕ್ಷೆ, ಮೂಲವಸ್ತುಗಳ ಸುಗಮ ಸರಬರಾಜಿಗಾಗಿ ಕೇಂದ್ರ ಕೈಗಾರಿಕಾ ಡಿಪೋಗಳ ರಚನೆ, ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ಸಿದ್ಧವಸ್ತುಗಳ ಪ್ರಚಾರಕ್ಕಾಗಿ ಒಂದು ಕೈಗಾರಿಕಾ ವಸ್ತು ಪ್ರದರ್ಶನ ಸ್ಥಾಪನೆ ಮತ್ತು ಮೈಸೂರು ಕೈಗಾರಿಕಾ ಉತ್ಪನ್ನಗಳಿಗೆ ಇರುವ ಬೇಡಿಕೆಗಳ ಅಧ್ಯಯನಕ್ಕಾಗಿ ಒಂದು ವಾರ್ತಾ ಸಂಸ್ಥೆಯನ್ನು ಸ್ಥಾಪಿಸುವುದು.

೧೯೨೨ರಲ್ಲಿ ಅಧಿಕೃತ ಮಾನ್ಯತೆ ಪಡೆದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಬೆಳೆಯುತ್ತಿದ್ದ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುತ್ತಿತ್ತು. ಆರ್ಥಿಕ ಸಮ್ಮೇಳನ ಮತ್ತು ಕೈಗಾರಿಕಾ ಸರ್ವೇಕ್ಷಣಗಳ ಫಲವಾಗಿ ಸರಕಾರಿ ಕೈಗಾರಿಕೆ, ಖಾಸಗಿ ಕೈಗಾರಿಕೆ ಮತ್ತು ಸಂಯುಕ್ತ ಕೈಗಾರಿಕೆಗಳ ಕಲ್ಪನೆ ಉದಯವಾಯಿತು. ಈ ಇಲಾಖೆ ಆರಂಭಗೊಳ್ಳುವ ಮೊದಲೇ, ಅಂದರೆ ಲಾರ್ಡ್ ರಿಪ್ಪನ್‌ನ ಆಳ್ವಿಕೆಯ ಅವಧಿಯಲ್ಲಿ ಸ್ಥಳೀಯ ಕೈಗಾರಿಕೆಗಳಿಗೆ ನೆರವಾಗಬಲ್ಲ ಕೆಲವೊಂದು ಪ್ರಯತ್ನಗಳು ನಡೆದಿದ್ದವು. ಲಾರ್ಡ್ ರಿಪ್ಪನ್‌ನ ಆಳ್ವಿಕೆಯ ಅವಧಿಯಲ್ಲಿ ಸ್ಥಳೀಯ ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿತು. ಸ್ಥಳೀಯ ಉದ್ದಿಮೆದಾರರಿಗೆ ಹೊಸ ಯೋಜನೆಗಳಲ್ಲಿ ಪಾಲು ದೊರಕುವಂತಾಯಿತು. ರಸ್ತೆಗಳ ನಿರ್ಮಾಣ, ರೈಲು ಮಾರ್ಗಗಳ ನಿರ್ಮಾಣ, ಮಿಲಿಟರಿ ಮತ್ತು ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ಸ್ಥಳೀಯ ಉದ್ದಿಮೆದಾರರು ಭಾಗವಹಿಸುವಂತಾಯಿತು. ರಿಪ್ಪನ್‌ನ ೧೮೭೬ರ ಆದೇಶವೊಂದು ಸ್ಥಳೀಯವಾಗಿ ಉತ್ಪಾದನೆಗೊಳ್ಳುವ ಉದ್ದಿಮೆಗಳಿಗೆ ಬಳಕೆಯಾಗುವಂಥ ವಸ್ತುಗಳನ್ನು ಸರಕಾರ ಖರೀದಿಸಬೇಕು ಹಗೂ ಆದ್ಯತೆ ನೀಡಬೇಕೆಂದು ಸೂಚಿಸಿತು. ಇದು ಸ್ಥಳೀಯವಾಗಿ ಕೈಗಾರಿಕೆಗಳು ಹುಟ್ಟಿಕೊಳ್ಳಲು ಹಾಗೂ ಅವುಗಳು ತಯಾರಿಸುವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿತು. ಆದರೆ ಇಂಗ್ಲೆಂಡ್ ಭಾರತದ ಕೈಗಾರಿಕೆಗಳನ್ನು ರಕ್ಷಿಸುವ ರಿಪ್ಪನ್‌ನ ಹೊಸ ನೀತಿಯನ್ನು ಸ್ವಾಗತಿಸಲಿಲ್ಲ. ಆದರೂ ಅದು ಕೆಲಮಟ್ಟಿಗೆ ಯಶಸ್ವಿಯಾಯಿತು. ಬ್ರಿಟಿಷ್ ಭಾರತದ ಕೈಗಾರಿಕಾ ಅರ್ಥವ್ಯವಸ್ಥೆಯ ಅಧ್ಯಯನದ ಸಂದರ್ಭದಲ್ಲಿ ರಿಪ್ಪನ್‌ನ ಪ್ರಯತ್ನಗಳು ಪ್ರಮುಖವಾದದ್ದಾಗಿ ಕಂಡುಬರುತ್ತವೆ.

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ಕರ್ನಾಟಕದಲ್ಲಿ ಮುಖ್ಯವಾಗಿ ತೋಟದ ಉದ್ಯಮ ಹಾಗೂ ಗಣಿಗಾರಿಕೆಗೆ ಪ್ರೋತ್ಸಾಹ ನೀಡಲಾಯಿತು. ಮೈಸೂರು ಸಂಸ್ಥಾನದಲ್ಲಿ ಗಣಿಗಾರಿಕೆ ಮತ್ತು ಬಟ್ಟೆ ಗಿರಣಿಗಳ ಸ್ಥಾಪನೆಗೆ ಹೆಚ್ಚಿನ ಬಂಡವಾಳವನ್ನು ಹೂಡಲಾಯಿತು. ಕೋಲಾರದ ಚಿನ್ನದ ಗಣಿಗಳು ಬ್ರಿಟಿಷರನ್ನು ಆಕರ್ಷಿಸಿದವು. ಚಿನ್ನದ ಉದ್ಯಮ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿತು. ೧೮೮೦ರಲ್ಲಿ ಜಾನ್ ಟೇಲರ್ ಎಂಡ್ ಸನ್ಸ್ ಬ್ರಿಟಿಷ್ ಗಣಿಗಾರಿಕೆ ಕಂಪೆನಿಯು ಕೋಲಾರ ಜಿಲ್ಲೆಯ ಉರಿಗಾಂ ಬಳಿ ಚಿನ್ನದ ಅದಿರನ್ನು ತೆಗೆದು ಚಿನ್ನವನ್ನು ಉತ್ಪಾದಿಸುವ ಕಾರ್ಯವನ್ನು ಆರಂಭಿಸಿತು. ಅಂದಿನಿಂದ ಆ ಗಣಿ ಪ್ರದೇಶವು ಕೋಲಾರ ಚಿನ್ನದ ಗಣಿಗಳು ಎಂದೇ ಪ್ರಸಿದ್ಧವಾಯಿತು. ೧೯೦೫ರಲ್ಲಿ ಸುಮಾರು ೧,೪೦,೦೦೦ ಕೆ.ಜಿ.ಗಿಂತಲೂ ಹೆಚ್ಚು ಚಿನ್ನವನ್ನು ಉತ್ಪಾದಿಸಿತು. ಅದು ಅತಿ ಹೆಚ್ಚು ಉತ್ಪಾದನೆಯ ವರ್ಷವಾಗಿತ್ತು. ಗಣಿಗಳಲ್ಲಿ ಮೊದಲಿಗೆ ಸರಾಸರಿ ವಾರ್ಷಿಕ ೨,೨೦೦ ಕೆ.ಜಿ. ಚಿನ್ನ ಸಿಗುತ್ತಿದ್ದು, ವರ್ಷಗಳು ಕಳೆದಂತೆ ಇದರ ಪ್ರಮಾಣವೂ ಕಡಿಮೆಯಾಗುತ್ತಾ ಹೋಯಿತು. ಗಣಿಯು ೩೫೦೦ಕ್ಕಿಂತಲೂ ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಹೊಂದಿತ್ತು. ಅದು ನಂತರ ಗಿಜಿಗುಟ್ಟುವ ಗಣಿಗಾರಿಕೆಯ ಕೇಂದ್ರವಾಗಿ ಪರಿವರ್ತಿತವಾಯಿತು. ರಾಬರ್ಟ್‌ಸನ್ ಪೇಟೆ ಮತ್ತು ಆಂಡರ್‌ಸನ್ ಪೇಟೆ ಎಂಬ ಎರಡು ವಸತಿಗಳು ಅಸ್ತಿತ್ವಕ್ಕೆ ಬಂದವು. ಅದೇ ರೀತಿ ಕೂಲಿ ಲೈನುಗಳು (ಗುಡಿಸಲುಗಳ ಸಾಲುಗಳು) ತಲೆಯೆತ್ತಿದವು. ಹೀಗಾಗಿ ಅದೊಂದು ಪಟ್ಟಣವಾಗಿ ಬೆಳೆಯಿತು.

ಬ್ರಿಟಿಷ್ ಆಳ್ವಿಕೆಯಲ್ಲಿ ಹತ್ತಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದ ಕಾರಣ ಬಟ್ಟೆಯ ಗಿರಣಿಗಳು ಹೆಚ್ಚಾಗಿ ಸ್ಥಾಪಿತವಾದವು. ಮೊದಲಿಗೆ ಕೇವಲ ಗೃಹ ಕೈಗಾರಿಕೆಯಾಗಿದ್ದ ನೇಯ್ಗೆಯು ೧೯ನೆಯ ಶತಮಾನದಲ್ಲಿ ಕಾರ್ಖಾನೆಗಳನ್ನು ಪ್ರವೇಶಿಸಿತು. ಬೆಂಗಳೂರಿನಲ್ಲಿ ಎರಡು ಭಾರಿ ಪ್ರಮಾಣದ ಬಟ್ಟೆಯ ಗಿರಣಿಗಳು ಆರಂಭಗೊಂಡವು ಅವುಗಲನ್ನು ೧೮೮೪ರಲ್ಲಿ ಆರಂಭಗೊಂಡ ಬೆಂಗಳೂರು ಉಣ್ಣೆ, ಹತ್ತಿ ಮತ್ತು ರೇಷ್ಮೆ ಕಾರ್ಖಾನೆ ಮತ್ತು ೧೮೯೪ರಲ್ಲಿ ಸ್ಥಾಪನೆಗೊಂಡ ಮೈಸೂರು ಸ್ಪಿನ್ನಿಂಗ್ ಮತ್ತು ಮ್ಯಾನುಪಾಕ್ಚರಿಂಗ್ ಕಂಪನಿ ಲಿ. ಇವು ಕರ್ನಾಟಕದಲ್ಲಿ ಆರಂಭಗೊಂಡ ಮೊದಲ ಬೃಹತ್ ಪ್ರಮಾಣದ ಹಾಗೂ ಮುಂದುವರಿದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದ ಗಿರಣಿಗಳು. ಬೆಂಗಳೂರು ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಬಟ್ಟೆಗಳನ್ನು ಮತ್ತು ಯುದ್ದೋಪಕರಣಗಳನ್ನು ತಯಾರಿಸುವ ಕೇಂದ್ರವಾಗಿತ್ತು. ೧೯೨೦ರ ಮಧ್ಯದ ವೇಳೆಗೆ ಬೆಂಗಳೂರು ಒಂದು ಬಗೆಯ ಮಿಶ್ರ ಕೈಗಾರಿಕಾ ಚಿತ್ರವನ್ನು ಬೆಳೆಸಿಕೊಂಡಿತ್ತು. ಹಲವು ಸಣ್ಣ ಪ್ರಮಾಣದ ಬಟ್ಟೆ ಗಿರಣಿಗಳು, ತಂಬಾಕು ಕಾರ್ಖಾನೆಗಳು, ಚರ್ಮ ಹದಗೊಳಿಸುವ ಘಟಕಗಳು, ಮುದ್ರಣಾಲಯಗಳು ಮುಂತಾದ ವಿಧ ವಿಧವಾದ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಹುಟ್ಟಿಕೊಂಡವು. ೧೯೪೦ರ ವೇಳೆಗೆ ಹಿಂದೂಸ್ತಾನ್ ಏರೋನಾಟಿಕಲ್ ಲ್ಯಾಬೊರೇಟರಿಯಂಥ ಬಾರಿ ಪ್ರಮಾಣದ ಘಟಕಗಳು ಆರಂಭಗೊಂಡವು.

ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಹಲವಾರು ಉದ್ಯಮಗಳು ರಾಜ್ಯಾದ್ಯಂತ ಸ್ಥಾಪನೆಗೊಂಡವು. ಅವುಗಳಲ್ಲಿ ಮೈಸೂರು ಸಂಸ್ಥಾನದಲ್ಲಿ ಸ್ಥಾಪನೆಗೊಂಡ ಕೈಗಾರಿಕೆಗಳ ಸಂಖ್ಯೆಯೇ ಹೆಚ್ಚಿನದು. ಮೈಸೂರು ಮತ್ತು ಬೆಂಗಳೂರು ಪಟ್ಟಣಗಳು ಈ ಹಿನ್ನೆಲೆಯಲ್ಲಿ ತಮ್ಮ ನಗರ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬೆಳೆದವು. ೧೯೦೮ರಲ್ಲಿ ದಿ. ಮೈಸೂರು ಕ್ರೋಂ ಟ್ಯಾನಿಂಗ್ ಕಂಪನಿ ಲಿ. ಸಂಸ್ಥೆಯು ಸ್ಥಾಪನೆಗೊಂಡಿತು. ಅದು ಚರ್ಮದ ಸಂಸ್ಕರಣ ಮಾಡಿ ಪಾದರಕ್ಷೆಗಳು ಹಾಗೂ ವಿವಿಧ ಬಗೆಯ ಚರ್ಮದ ಚೀಲಗಳನ್ನು ತಯಾರಿಸುತ್ತಿತ್ತು. ೧೯೧೫ರಲ್ಲಿ ಬೆಂಗಳೂರಿನಲ್ಲಿ ಸರಕಾರಿ ಸಾಬೂನು ಕಾರ್ಖಾನೆ ಆರಂಭಗೊಂಡಿತು. ಇದು ಆರಂಭದಲ್ಲಿ ಶ್ರೀಗಂಧದ ಸಾಬೂನುಗಳ ತಯಾರಿಕೆಗೆ ಹೆಸರುವಾಸಿಯಾಗಿತ್ತು. ೧೯೧೯ರಲ್ಲಿ ಬೆಂಗಳೂರಿನಲ್ಲಿ ಮಿನರ್ವಾ ಮಿಲ್ಸ್ ಅಸ್ತಿತ್ವಕ್ಕೆ ಬಂದಿತು. ೧೯೨೦ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆಯಾಯಿತು.

ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಆಗಿನ ಆಡಳಿತಗಾರರ, ವಿಶೇಷವಾಗಿ ದಿವಾನರ ಕೊಡಗೆಯೇ ಹೆಚ್ಚು. ೧೯೩೧ರ ನಂತರ ಕೈಗಾರಿಕೆಗಳ ಸ್ಥಾಪನೆಗೆ ಮತ್ತಷ್ಟು ಉತ್ತೇಜನ ಸಿಕ್ಕಿತು. ವಿಶ್ವೇಶ್ವರಯ್ಯನವರ ಪ್ರಯತ್ನಗಳಿಂದಾಗಿ ಖಾಸಗಿ ಸಂಸ್ಥೆಯವರು ಕೈಗಾರಿಕೆಗಳನ್ನು ಆರಂಭಿಸುವಂತೆ ಹಾಗೂ ಸರಕಾರವು ನೇರವಾಗಿ ಹಲವಾರು ಉದ್ಯಮಗಳಲ್ಲಿ ಬಂಡವಾಳ ಹೂಡುವಂತೆ ಆಯಿತು. ೧೯೩೧ರಲ್ಲಿ ಮೈಸೂರು ಇಂಡಸ್ಟ್ರಿಯಲ್ ಎಂಡ್ ಟೆಸ್ಟಿಂಗ್ ಲ್ಯಾಬೋರೇಟರಿ ಸ್ಥಾಪನೆಯಾಯಿತು. ಇದು ಔಷಧಿಗಳನ್ನು ಹೆಚ್ಚಾಗಿ ತಯಾರಿಸುತ್ತಿತ್ತು. ೧೯೩೨ರಲ್ಲಿ ಮೈಸೂರಿನಲ್ಲಿ ಸರಕಾರಿ ಪಿಂಗಾಣಿ ಕಾರ್ಖಾನೆಯು ಆರಂಭಗೊಂಡಿತು. ಅದು ವಿದ್ಯುತ್ ಇನ್‌ಸುಲೇಟರ್ಗಳನ್ನು ತಯಾರಿಸುತ್ತಿತ್ತು. ೧೯೩೨ರಲ್ಲಿ ಮೈಸೂರಿನಲ್ಲಿ ಸರಕಾರವೇ ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಿತು. ೧೯೩೪ರಲ್ಲಿ ಸರಕಾರವು ಆರಂಭಿಸಿದ ಸರಕಾರಿ ಎಲೆಕ್ಟ್ರಿಕ್ ಕಾರ್ಖಾನೆಯು ವಿದ್ಯುತ್ ವಿತರಣೆಗೆ ಬೇಕಾದ ಟ್ರಾನ್ಸ್‌ಫಾರ್ಮರುಗಳನ್ನು, ಮೋಟಾರ್ ಪಂಪ್‌ಗಳು ಮುಂತಾದ ವಸ್ತುಗಳನ್ನು ತಯಾರಿಸುತ್ತಿತ್ತು.

೧೯೩೩ರಲ್ಲಿ ಮಂಡ್ಯದಲ್ಲಿ ಮೈಸೂರು ಷುಗರ್ಸ್ ಲಿಮಿಟೆಡ್ ಕಂಪೆನಿಯು ಆರಂಭಗೊಂಡಿತು. ಈ ಕಂಪನಿಯು ಸಕ್ಕರೆಯ ಜೊತೆಗೆ ಸ್ಪಿರಿಟ್, ಆಲ್ಕೋಹಾಲ್ ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಿತ್ತು. ಭದ್ರಾವತಿಯಲ್ಲಿ ಕಾಗದದ ತಯಾರಿಕಾ ಸಂಸ್ಥೆಯಾದ ಭದ್ರಾವತಿ ಪೇಪರ್ ಮಿಲ್ಸ್ ಲಿ. ಸರಕಾರದ ಬಂಡವಾಳದೊಂದಿಗೆ ೧೯೩೪ರಲ್ಲಿ ಆರಂಭಗೊಂಡಿತು. ೧೯೩೬ರಲ್ಲಿ ದಾವಣಗೆರೆಯಲ್ಲಿ ದಾವಣಗೆರೆ ಕಾಟನ್ ಮಿಲ್ಸ್ ಲಿ. ಸಂಸ್ಥೆಯು ಆರಂಭಗೊಂಡಿತು. ಇದು ನಗರದ ಮೊದಲ ಹತ್ತಿ ಗಿರಿಣಿಯಾಗಿತ್ತು. ನಂತರ ೧೯೪೫ರಲ್ಲಿ ಶ್ರೀ ಗಣೇಶ ಹತ್ತಿ ಗಿರಣಿ ಸ್ಥಾಪನೆಗೊಂಡಿತು. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲೂ ಅನೇಕ ಹತ್ತಿ ಗಿರಣಿಗಳು ಸ್ಥಾಪನೆಗೊಂಡವು. ದಾವಣಗೆರೆಯು ಕರ್ನಾಟಕದ ಮ್ಯಾಚೆಂಸ್ಟರ್ ಎಂಬುದಾಗಿ ಬಿಂಬಿತವಾಗಿತ್ತು. ದಾವಣಗೆರೆಯು ಹತ್ತಿಯ ಉತ್ಪಾದನೆ ಹಾಗೂ ಹತ್ತಿಗೆ ಸಂಬಂಧಿಸಿದ ಉದ್ದಿಮೆಗಳಿಗೆ ಹೆಸರುವಾಸಿಯಾಗಿತ್ತು. ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಖಾದಿ ಉದ್ಯಮವು ಹೆಚ್ಚಾಗಿ ಬೆಳೆಯಿತು. ೧೯೩೬ರಲ್ಲಿ ಮೈಸೂರು ಲ್ಯಾಂಪ್ ವರ್ಕ್ಸ್ ಕಾರ್ಖಾನೆಯು ಬೆಂಗಳೂರಿನಲ್ಲಿ ಆರಂಭವಾಯಿತು. ಇದು ವಿವಿಧ ಸಾಮರ್ಥ್ಯದ ಮತ್ತು ವಿವಿಧ ಬಗೆಯ ವಿದ್ಯುತ್ ದೀಪಗಳನ್ನು ತಯಾರಿಸುತ್ತಿತ್ತು.

೧೯೩೭ರಲ್ಲಿ ಬೆಳಗೊಳದಲ್ಲಿ ಮೈಸೂರು ಕೆಮಿಕಲ್ಸ್ ಎಂಡ್ ಫರ್ಟಿಲೈಸರ್ಸ್ ಲಿ. ಸಂಸ್ಥೆ ಆರಂಭಗೊಂಡಿತು. ೧೯೩೭ರಲ್ಲಿ ಬೆಂಗಳೂರಿನಲ್ಲಿ ವಿದ್ಯುತ್ ಪ್ರಸರಣದಲ್ಲಿ ಬೇಕಾದ ಇನ್ಸ್‌ಲೇಟರ್‌ಗಳ ತಯಾರಿಕಾ ಕಂಪೆನಿ ಪೋರ್ಸೆಲೀನ್ ಆರಂಭಗೊಂಡಿತು. ೧೯೩೮ರಲ್ಲಿ ಚಿಕ್ಕಮಗಳೂರಿನಲ್ಲಿ ಮೈಸೂರು ಕಾಫಿ ಕ್ಯೂರಿಂಗ್ ವರ್ಕ್ಸ್ ಲಿ. ಸಂಸ್ಥೆ ಹುಟ್ಟಿಕೊಂಡಿತು. ೧೯೩೯ರಲ್ಲಿ ಹಾಸನದಲ್ಲಿ ಕೃಷಿ ಉಪಕರಣಗಳ ತಯಾರಿಕೆಗಾಗಿ ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆಯು ಆರಂಭಗೊಂಡಿತು. ೧೯೩೫ರ ವೇಳೆಗೆ ಹಳೆಯ ಮೈಸೂರು ರಾಜ್ಯದಲ್ಲಿ ೩೩೫ ಕಾರ್ಖಾನೆಗಳಿದ್ದವು. ೧೯೪೪ರ ವೇಳೆಗೆ ೬೦೫ ಕಾರ್ಖಾನೆಗಳು ಕಾರ್ಯನಿರತವಾಗಿದ್ದವು.

೧೯೪೧ರಲ್ಲಿ ಹರಿಹರದಲ್ಲಿ ಮೈಸೂರು ಕಿರ್ಲೋಸ್ಕರ್ ಸಂಸ್ಥೆ ಆರಂಭಗೊಂಡಿತು. ವಿದ್ಯುತ್ ಮೋಟಾರ್ ಪಂಪುಗಳು, ಇನ್ನಿತರ ಉಪಕರಣಗಳ ಜೊತೆಗೆ ಲೇತ್, ಡ್ರಿಲ್ಲಿಂಗ್ ಮತ್ತು ಭಾರೀ ಯಂತ್ರಗಳನ್ನು ಈ ಕಂಪನಿಯು ತಯಾರಿಸುತ್ತಿತ್ತು. ೧೯೪೩ರಲ್ಲಿ ಬೆಂಗಳೂರಿನಲ್ಲಿ ರೇಡಿಯೊ ಎಂಡ್ ಎಲೆಕ್ಟ್ರಿಕಲ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ, ರೆಂಕೋ ಆರಂಭಗೊಂಡಿತು. ಈ ಕಾರ್ಖಾನೆಯು ರೇಡಿಯೋಗೆ ಸಂಬಂಧಿಸಿದ ಬಿಡಿ ಭಾಗಗಳು, ವಿದ್ಯುತ್ ಮೀಟರುಗಳು, ನೀರಿನ ಮೀಟರುಗಳು ಮುಂತಾದವುಗಳನ್ನು ಉತ್ಪಾದಿಸುತ್ತಿತ್ತು. ೧೯೪೦ ರಲ್ಲಿ ಬೆಂಗಳೂರಿನಲ್ಲಿ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ಕಾರ್ಖಾನೆಯು ಆರಂಭಗೊಂಡಿತು. ವಾಲ್‌ಚಂದ್ ಎನ್ನುವವರಿಂದ ಇದು ಸ್ಥಾಪಿತವಾಯಿತು. ಈ ಕಾರ್ಖಾನೆಯನ್ನು ಸ್ಥಾಪಿಸುವುದರ ಮೂಲ ಉದ್ದೇಶ ಕಾರುಗಳ ತಯಾರಿಕೆ. ಕಾರು ತಯಾರಿಕೆಯ ಬದಲು ವಿಮಾನದ ಬಿಡಿಭಾಗಗಳನ್ನು ಬೇರೆ ದೇಶಗಳಿಂದ ತರಿಸಿ, ಅವುಗಳನ್ನು ಜೋಡಿಸುವ ಕೆಲಸವನ್ನು ಈ ಕಾರ್ಖಾನೆಯು ಮಾಡಿತು. ಇಲ್ಲಿ ಪ್ರಥಮವಾಗಿ ತಯಾರಾದದ್ದು ಫೈಟರ್ ಜೆಟ್ ವಿಮಾನ. ಕಾರ್ಖಾನೆಯ ಆರಂಭದ ದಿನಗಳಲ್ಲಿ ಎರಡನೆಯ ವಿಶ್ವಯುದ್ಧ ನಡೆಯುತ್ತಿದ್ದುದರಿಂದ ಹಲವಾರು ಯುದ್ಧ ವಿಮಾನಗಳ ದುರಸ್ತಿ ಕಾರ್ಯವನ್ನು ಮಾಡಬೇಕಾಗುತ್ತಿತ್ತು. ಎಚ್.ಎ.ಎಲ್ ಎಂದೇ ಹೆಸರುವಾಸಿಯಾದ ಇದು ೧೯೪೭ರಲ್ಲಿ ರೈಲ್ವೆ ಕೋಚ್ ವಿಭಾಗವನ್ನು ಆರಂಬಿಸಿತು. ೧೯೪೫ರಲ್ಲಿ ಬೆಂಗಳೂರಿನಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಕಂಪೆನಿಯು ಆರಂಭಗೊಂಡಿತು. ಇದು ವಿದ್ಯುತ್ ಸ್ವಿಚ್‌ಗೇರ್‌ಗಳನ್ನು ಉತ್ಪಾದಿಸುತ್ತಿತ್ತು.

ಕೈಗಾರಿಕೆಗಳ ಚಾಲನೆಗೆ ಬೇಕಾದ ವಿದ್ಯುತ್‌ನ ಉತ್ಪಾದನೆ ಅಂದಿನ ತುರ್ತುಗಳಲ್ಲಿ ಒಂದಾಗಿತ್ತು. ಈ ನಿಟ್ಟಿನಲ್ಲಿ ವಸಾಹತು ಅವಧಿಯಲ್ಲಿ ಮಹತ್ತರವಾದ ಕೆಲಸಗಳು ನಡೆದವು. ಕೈಗಾರಿಕೆಗಳಲ್ಲಿ ಯಂತ್ರ ಚಾಲನೆಗೆ ಅವಶ್ಯವಾದ ವಿದ್ಯುತ್‌ನ ಉತ್ಪಾದನೆಯು ೧೯೦೨ರಲ್ಲಿ ಆರಂಭಗೊಂಡಿತು. ಕರ್ನಾಟಕದಲ್ಲಿ ಕಾವೇರಿಯು ಜಲಪಾತವಾಗಿ ಧುಮುಕುವ ಶಿವನಸಮುದ್ರದ ಬಳಿ ೧೯೦೨ರಲ್ಲಿ ದಕ್ಷಿಣ ಏಷ್ಯಾದಲ್ಲೇ ಪ್ರಥಮವೆಂದು ಪರಿಗಣಿತವಾದ ಜಲವಿದ್ಯುತ್ ಉತ್ಪಾದನಾ ಕೇಂದ್ರವು ಆರಂಭಗೊಂಡಿತು. ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ತನ್ನು ಒದಗಿಸುವುದು ಇವರ ಮೊದಲ ಉದ್ದೇಶವಾಗಿದ್ದರೂ, ನಂತರ ಮನೆಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಇದೇ ರೀತಿಯ ಇನ್ನೊಂದು ಮಹತ್ವದ ವಿದ್ಯುತ್ ಉತ್ಪಾದನಾ ಯೋಜನೆಯೆಂದರೆ ಜೋಗ್ ಜಲವಿದ್ಯುತ್ ಯೋಜನೆ. ಶರಾವತಿ ನದಿಯು ಜಲಪಾತವಾಗಿ ಧುಮುಕುವ ಜೋಗ್‌ನ ಬಳಿ ೧೯೪೭-೪೮ರಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರವು ಆರಂಭಗೊಂಡಿತು.

ಮುಂಬಯಿ ಕರ್ನಾಟಕದ ಪ್ರದೇಶಗಳಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದ್ದರಿಂದ ಹತ್ತಿಯಾಧಾರಿತ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದವು. ಹತ್ತಿಯನ್ನು ಅರೆಯುವ, ಗಂಟುಕಟ್ಟುವ, ನೇಯುವ, ಬಣ್ಣ ಹಾಕುವ ಕಾರ್ಖಾನೆಗಳು ಈ ಪ್ರದೇಶಗಳಲ್ಲಿ ಅಸ್ತಿತ್ವಕ್ಕೆ ಬಂದವು. ಮುಂಬಯಿ ಕರ್ನಾಟಕದ ಗೋಕಾಕ, ಚಿಕ್ಕೋಡಿ, ಸಂಕೇಶ್ವರ, ಬೈಲಹೊಂಗಲ, ಬೆಳಗಾವಿ, ಮುರಗೋಡು, ಆಥಣಿ, ದೇಶನೂರು, ಶಹಾಪುರ, ಸವದತ್ತಿ, ಕಿತ್ತೂರು, ಮುನ್ನೊಳಿ, ಹುಬ್ಬಳ್ಳಿ, ಗದಗ, ಬೆಟಗೇರಿ, ಲಕ್ಕುಂಡಿ, ನರಗುಂದ, ಅಣ್ಣಿಗೇರಿ, ಇಲಕಲ್, ಹುನಗುಂದ, ಗೂಡೂರು, ಮಲ್ಲಾಪುರ, ಬಾಗಲಕೋಟೆ ಮೊದಲಾದ ಪ್ರದೇಶಗಳಲ್ಲಿ ಸೀರೆ, ಧೋತಿ, ರುಮಾಲು, ಜಮಖಾನೆ ಹಾಗೂ ಖಾದಿ ಸಿದ್ಧ ಉಡುಪುಗಳನ್ನು ತಯಾರಿಸುವ ಕೈಗಾರಿಕೆಗಳು ಇದ್ದವು. ೧೮೮೫ರಲ್ಲಿ ಗೋಕಾಕ್‌ನಲ್ಲಿ ಹಾಗೂ ೧೮೯೮ರಲ್ಲಿ ಹುಬ್ಬಳ್ಳಿಯಲ್ಲಿ ಬಟ್ಟೆ ಗಿರಣಿಗಳು ಆರಂಭಗೊಂಡವು.

ಹುಬ್ಬಳ್ಳಿಯಲ್ಲಿ ಹತ್ತಿ ಅರಿಯುವ ಕಾಖಾನೆ, ಅರಳಿಯ ಒತ್ತುವ ಕಾರ್ಖಾನೆ, ನೂಲು ನೇಯುವ ಯಂತ್ರದ ಕಾರ್ಖಾನೆ, ರೈಲ್ವೇ ವರ್ಕ್ ಶಾಫ್ ಮುಂತಾದ ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದವು. ಬಾಗಲಕೋಟೆ, ಬಾದಾಮಿ, ಚಿಕ್ಕೋಡಿ, ಹುಬ್ಬಳ್ಳಿ, ಗದಗ ಮುಂತಾದೆಡೆಗಳಲ್ಲಿ ರುಮಾಲುಗಳು ತಯಾರಾಗುತ್ತಿದ್ದವು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮುಂಡಾಸುಗಳು ಉತ್ಪಾದನೆಗೊಳ್ಳುತ್ತಿದ್ದವು. ವಿಜಾಪುರ, ಇಲಕಲ್, ಕೋಲಾರ ಮುಂತಾದ ಪ್ರದೇಶಗಳಲ್ಲಿ ಜಮಖಾನೆಗಳು ತಯಾರಾಗುತ್ತಿದ್ದವು. ರಾಣಿಬೆನ್ನೂರು, ಲಕ್ಷ್ಮೇಶ್ವರ, ಸಿಂಧಗಿಗಳಲ್ಲಿ ಕಂಬಳಿಗಳನ್ನು ತಯಾರಿಸಲಾಗುತ್ತಿತ್ತು. ಉಪ್ಪು ಹೆಚ್ಚಾಗಿ ಕುಮಟಾದ ಸಾಣೀಕಟ್ಟೆಯಲ್ಲಿ ಉತ್ಪಾದನೆಗೊಳ್ಳುತ್ತಿತ್ತು. ಧಾರವಾಡ, ಹುಬ್ಬಳ್ಳಿ, ಗದಗ ಮುಂತಾದ ಪ್ರದೇಶಗಳಲ್ಲಿ ಕಾಗದವನ್ನು ತಯಾರಿಸಲಾಗುತ್ತಿತ್ತು.

ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಜನರಿಗೆ ಬೇಕಾಗುವಂಥ, ಅದರಲ್ಲೂ ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ತಯಾರಿಸುತ್ತಿದ್ದ ಕುಶಲಕರ್ಮಿಗಳೆಂದರೆ ಸೊನ್ನಗಾರರು, ಉಪ್ಪಾರರು, ಬಡಗಿಗಳು, ಕಮ್ಮಾರರು, ಗಾಣಿಗರು, ಕಲಾಯಿಗಾರರು, ಸಮಗಾರರು, ಡೋರರು ಮೊದಲಾದವರು. ಈ ಕುಶಲಕರ್ಮಿಗಳು ತೊಡಗಿಸಿಕೊಂಡಿದ್ದ ಪ್ರಮುಖ ಕೈಗಾರಿಕೆಗಳೆಂದರೆ, ಅರಳೆಯನ್ನು ಅರಿಯುವುದು, ಅರಳೆಯನ್ನು ಒತ್ತಿ ಗಂಟು ಕಟ್ಟುವ ಯಂತ್ರಗಳು, ನೂಲುವುದು, ವಸ್ತ್ರಗಳನ್ನು ನೇಯುವುದು, ರುಮಾಲು-ಮುಂಡಾಸುಗಳ ತಯಾರಿಕೆ, ಧೋತ್ರಗಳ ತಯಾರಿಕೆ, ಸೀರೆ ನೇಯುವುದು, ಪೀತಾಂಬರಗಳು, ಜಮಖಾನೆಗಳು, ಟೊಪ್ಪಿಗೆಗಳನ್ನು ಮಾಡುವುದು, ಹಿತ್ತಾಳಿ-ತಾಮ್ರದ ಪಾತ್ರೆಗಳ ತಯಾರಿಕೆ, ಉಪ್ಪು ತಯಾರಿಸುವುದು, ಕಾಗದ ತಯಾರಿ, ಬೀಸುವ ಕಲ್ಲು ತಯಾರಿ, ಬೆಲ್ಲ ತಯಾರಿ, ಬಳೆಗಳ ತಯಾರಿ, ಚಂದನದ ಸಾಮಾನುಗಳು, ಕೋಡಿನ ಚಿತ್ರಗಳು, ಹುಲ್ಲಿನ ಚಾಪೆಗಳನ್ನು ತಯಾರಿಸುವುದು ಮುಂತಾದವು. ದಾಂಡೇಲಿಯಲ್ಲಿ ೧೯೪೩ರಲ್ಲಿ ಜೈ ಹಿಂದ್ ಸಾಮಿಲ್ಸ್ ಹೆಸರಿನಲ್ಲಿ ಮರಗೆಲಸದ ಕಾರ್ಖಾನೆಯನ್ನು ಸರಕಾರವು ಸ್ಥಾಪಿಸಿತು. ಮುಂಬಯಿ ಕರ್ನಾಟಕದ ಕೈಗಾರಿಕೆಗಳನ್ನು ಕಾರ್ಖಾನಾದುರ್, ಮಾರವಾಡಿ, ಸ್ವತಂತ್ರ ಕುಶಲಕರ್ಮಿಗಳು ಹಾಗೂ ಸಣ್ಣ ಕೈಗಾರಿಕಾ ಕಾರ್ಮಿಕರು ನಡೆಸುತ್ತಿದ್ದರು.

ಬ್ರಿಟಿಷರ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪವರ್‌ಲೂಮ್‌ಗಳಿಂದಾಗಿ ಅನೇಕ ಸ್ಥಳೀಯ ಕೈಗಾರಿಕೆಗಳು ತೊಂದರೆಗಳನ್ನು ಎದುರಿಸಬೇಕಾಗಿ ಬಂತು. ವಿದೇಶಿ ವಸ್ತುಗಳು ಆಕರ್ಷಣೀಯವಾಗಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದ ಕಾರಣ ಲಕ್ಷಾಂತರ ಜನರು ತಮ್ಮ ಉದ್ಯೋಗದಲ್ಲಿನ ಬೇಡಿಕೆ ಮತ್ತು ಹಿಡಿತವನ್ನು ಕಳೆದುಕೊಳ್ಳುವಂತಾಯಿತು. ಹತ್ತಿಯು ವಾಣಿಜ್ಯ ಬೆಳೆಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡ ಮೇಲೆ ಬ್ರಿಟಿಷ್ ಸರಕಾರವು ಹೊಸ ತಂತ್ರಜ್ಞಾನದೊಂದಿಗೆ ಹತ್ತಿಗೆ ಸಂಬಂಧಿಸಿದ ಕೆಲವು ಕಾರ್ಖಾನೆಗಳನ್ನು ಸ್ಥಾಪಿಸಿತು. ಇದರ ಲಾಭವನ್ನು ಸ್ಥಳೀಯರಲ್ಲಿ ಕೆಲವರು ಪಡೆದುಕೊಂಡರು. ಒಂದು ಕಡೆಯಲ್ಲಿ ಅವನತಿ ಇನ್ನೊಮದು ಕಡೆಯಲ್ಲಿ ಪ್ರಗತಿ ಇವೆರಡೂ ವಸಾಹತು ಆಳ್ವಿಕೆಯಲ್ಲಿ ಕಂಡುಬಂದವು. ೧೯೨೦ರ ದಶಕದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಂಗವಾಗಿದ್ದ ಸ್ವದೇಶೀ ಚಳವಳಿಯು ಈ ಪ್ರಾಂತ್ಯದಲ್ಲಿ ದೇಶೀಯ ಉದ್ಯಮಗಳ ಅಭಿವೃದ್ಧಿಗೆ ಸಹಕರಿಸಿತು. ಅದೇ ರೀತಿ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲೂ ಉತ್ತರ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಉಪ್ಪನ್ನು ತಯಾರಿಸುವ ಪ್ರಯತ್ನಗಳು ನಡೆದವು.

ಹೈದರಾಬಾದ್ ಕರ್ನಾಟಕದ ಬೀದರ್, ಗುಲ್ಬರ್ಗಾ ಮತ್ತು ರಾಯಚೂರುಗಳಲ್ಲಿ ಹತ್ತಿಗೆ ಸಂಬಂಧಿಸಿದ ಗಿರಣಿಗಳು ಹೆಚ್ಚು ಸ್ಥಾಪನೆಗೊಂಡವು. ಗುಲ್ಬರ್ಗಾದಲ್ಲಿ ೧೮೮೪ರಲ್ಲಿ ಹೈದರಾಬಾದಿನ ನಿಜಾಮನ ಸರಕಾರದ ನೆರವಿನೊಡನೆ ಮೆಹಬೂಬ್‌ಷಾಹಿ ಕಲ್ಬುರ್ಗ ಮಿಲ್ಸ್ ಕಂಪನಿ ಲಿ. ಹೆಸರಿನ ಬಟ್ಟೆ ಗಿರಣಿ ಸ್ಥಾಪಿಸಲಾಯಿತು. ಈ ಬಟ್ಟೆ ಗಿರಣಿಯನ್ನು ೧೮೮೮ರಲ್ಲಿ ಭಾರತೀಯ ಕಂಪೆನಿಗಳ ಕಾಯಿದೆ ಪ್ರಕಾರ ಎಂ.ಎಸ್.ಕೆ. ಮಿಲ್ಸ್ ಕಂಪೆನಿ ಲಿಮಿಟೆಡ್ ಎಂಬುದಾಗಿ ನೋಂದಣಿ ಮಾಡಿಸಲಾಯಿತು. ಈ ಕಂಪೆನಿಯ ಹುಟ್ಟಿಗೆ ಬೆಂಗಳೂರಿನವರಾದ ಸಭಾಪತಿ ಅಯ್ಯ ಮತ್ತು ಅಖಿಲಾಂಡಯ್ಯ ಎನ್ನುವವರು ಕಾರಣರಾದು. ಇವರು ಗುಲ್ಬರ್ಗಾದಲ್ಲಿ ಒಂದು ನೂಲುವ ಮತ್ತು ನೇಯುವ ಕಾರ್ಖಾನೆಯನ್ನು ಸ್ಥಾಪಿಸಲು ಸನ್ನದು ಅಥವಾ ಅನುಮತಿ ನೀಡಬೇಕೆಂದು ನಿಜಾಂ ಸರಕಾರವನ್ನು ಕೋರಿದರು. ಸರಕಾರವು ಸಭಾಪತಿ ಮತ್ತು ಕಂಪೆನಿ ಎಂಬ ಹೆಸರಿನಲ್ಲಿ ಸನದವನ್ನು ಮಂಜೂರು ಮಾಡಿತು. ಇದನ್ನು ಮದರಾಸಿನಲ್ಲಿ ೧೮೮೩ ಜುಲೈ ೧೨ರಂದು ಮೆಹಬೂಬ್ ಷಾಹಿ ಕಲ್ಬುರ್ಗ ಮಿಲ್ಸ್ ಕಂಪೆನಿ ಲಿಮಿಟೆಡ್ ಎಂಬ ಹೆಸರಿನಲ್ಲಿ ನೋಂದಾಯಿಸಲಾಯಿತು. ಅಧಿಕೃತ ಬಂಡವಾಳದ ೧೨ ಲಕ್ಷ ರೂಪಾಯಿಗಳನ್ನು ೫೦೦ ರೂಪಾಯಗಳ ೨೪೦೦ ಶೇರುಗಳನ್ನಾಗಿ ವಿಭಾಗಿಸಲಾಯಿತು. ಕಾರ್ಖಾನೆಯ ಅಡಿಗಲ್ಲನ್ನು ೧೮೮೪ ಜನವರಿ ೧೦ರಂದು ಹಾಕಲಾಯಿತು. ರಚನೆಗೆ ಸಂಬಂಧಿಸಿದಂತೆ ಒಂದು ಕಾನೂನು ದೋಷ ಕಂಡುಬಂದುದರಿಂದ ಕಂಪೆನಿಯನ್ನು ಮುಚ್ಚಿ ಪುನರ್ ರಚಿಸಿ ಮತ್ತೆ ೧೮೮೮ ಆಗಸ್ಟ್ ೨೪ ರಂದು ಮುಂಬಯಿಯಲ್ಲಿ ನೋಂದಾಯಿಸಲಾಯಿತು. ಎಂ.ಎಸ್.ಕೆ. ಮಿಲ್ ಹೈದರಾಬಾದ್ ಕರ್ನಾಟಕದ ಪ್ರಮುಖ ಜವಳಿ ಉದ್ದಿಮೆಯಾಗಿತ್ತು. ಈ ಮಿಲ್‌ನಲ್ಲಿ ವಿವಿಧ ರೀತಿಯ ಬಟ್ಟೆಗಳನ್ನು ಉತ್ಪಾದಿಸಲಾಗುತ್ತಿತ್ತು. ಸೀರೆ. ಪಂಚೆ, ಪಾಲಿಸ್ಟರ್, ಕಾಟನ್ ಮುಂತಾದವುಗಳು ಇದರಲ್ಲಿ ಉತ್ಪಾದನೆಗೊಂಡು, ಬೇರೆ ಪ್ರದೇಶಗಳಿಗೆ ರಫ್ತಾಗುತ್ತಿದ್ದವು. ೧೯೨೨ರಲ್ಲಿ ಮಿಲ್‌ನಲ್ಲಿ ೨೮,೧೧೮ ಕದಿರುಗಳು ಮತ್ತು ೩೯೦ ಮಗ್ಗಗಳಿದ್ದವು. ಮಿಲ್ಲಿನ ಎಲ್ಲ ವಿಭಾಗಗಳಿಗೆ ವಿದ್ಯುತ್ತನ್ನು ಪೂರೈಸಲು ಭೀಮಾ ಪವರ್ ಹೌಸ್ ಎನ್ನುವ ವಿದ್ಯುತ್ ಪೂರೈಸುವ ಘಟಕವನ್ನು ಸ್ಥಾಪಿಸಲಾಯಿತು. ನಿಜಾಮ್ ಸರಕಾರ ಈ ಮಿಲ್ಲಿಗೆ ಎಲ್ಲ ರೀತಿಯ ನೆರವನ್ನು ನೀಡಿತ್ತು. ಗುಲ್ಬರ್ಗಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದುದರಿಂದ ಈ ಮಿಲ್‌ನ ಅವಶ್ಯಕತೆ ಇತ್ತು.

ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಾರಿಕೆಗೆ ಹೆಸರುವಾಸಿಯಾದ ಪ್ರದೇಶ. ಮೌರ್ಯರ ಆಳ್ವಿಕೆಯ ಸಂದರ್ಭದಿಂದ ಇಂದಿನವರೆಗೂ ಹಟ್ಟಿ ಚಿನ್ನದ ಗಣಿ ತನ್ನ ಪ್ರಾಮುಖ್ಯತೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ. ಹೈದರಾಬಾದ್ ನಿಜಾಮರ ಆಳ್ವಿಕೆಯ ಅವಧಿಯಲ್ಲಿ ಹಟ್ಟಿ ಚಿನ್ನದ ಗಣಿ ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಗಣಿಗಾರಿಕೆಗೆ ಅನೇಕ ಸುಧಾರಿತ ಯಂತ್ರಗಳನ್ನು ಅಳವಡಿಸಲಾಯಿತು. ೧೮೭೪ರಲ್ಲಿ ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಗುರುತಿಸಿದವನು ರಾಬರ್ಟ್ ಬ್ರೂಸ್‌ಪುಟ್. ೧೮೭೭ರಲ್ಲಿ ಹೈದರಾಬಾದ್ ಡೆಕ್ಕನ್ ಕಂಪೆನಿ ಎನ್ನುವ ಸಂಸ್ಥೆಯು ರಾಯಚೂರು ದೋ-ಅಬ್ ಗೋಲ್ಡ್‌ಫೀಲ್ಡ್ ಹೆಸರಿನಲ್ಲಿ ಚಿನ್ನ ಶೋಧಿಸಲು ಆರಂಭಿಸಿತು. ೧೮೮೭-೧೯೦೦ರಲ್ಲಿ ಡೆಕ್ಕನ್ ಗೋಲ್ಡ್‌ಫೀಲ್ಡ್ ಚಿನ್ನದ ಶೋಧನೆಗೆ ತೊಡಗಿತು. ೧೯೦೧ರಲ್ಲಿ ನಿಜಾಮ್ ಹಟ್ಟಿ ಗೋಲ್ಡ್‌ಮೈನ್ಸ್ ಲಿಮಿಟೆಡ್ ಕಂಪನಿಯು ಗಣಿಗಾರಿಕೆಯಲ್ಲಿ ತೊಡಗಿತು. ಈ ಕಂಪನಿಯು ೧೯೦೩-೧೯೨೦ರ ನಡುವೆ ೭೩೭೧ ಕಿ.ಗ್ರಾಂ. ಚಿನ್ನವನ್ನು ಉತ್ಪಾದಿಸಿತು. ಅನೇಕ ಏಳುಬೀಳುಗಳನ್ನು ಕಂಡ ಹಟ್ಟಿ ಚಿನ್ನದ ಗಣಿಯು ನಿಜಾಮರ ಆಳ್ವಿಕೆಯಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. ೧೯೫೬ರಲ್ಲಿ ಏಕೀಕೃತ ಕರ್ನಾಟಕ ನಿರ್ಮಾಣಗೊಂಡಾಗ ಈ ಚಿನ್ನದ ಗಣಿ ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಆವಾಗ ಅಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದ್ದ ಹೈದರಾಬಾದ್ ಗೋಲ್ಡ್‌ಮೈನ್ಸ್ ಕಂಪೆನಿಯು ದಿ. ಹಟ್ಟಿ ಗೋಲ್ಡ್‌ಮೈನ್ಸ್ ಲಿಮಿಟೆಡ್ ಎಂಬುದಾಗಿ ನಾಮಕರಣಗೊಂಡಿತು. ಪ್ರಸ್ತುತ ಸಂದರ್ಭದಲ್ಲಿಯೂ ಹಟ್ಟಿ ಚಿನ್ನದ ಗಣಿ ಲಾಭಾಂಶದಿಂದ ಕೂಡಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದ್ದ ಕೈಮಗ್ಗದ ಬಟ್ಟೆಯ ಕೈಗಾರಿಕೆಗಳು ಮಿಲ್ ಬಟ್ಟೆ ಬಂದಾಗಿನಿಂದ ಕಷ್ಟವನ್ನು ಎದುರಿಸತೊಡಗಿದವು. ಕೈಮಗ್ಗದ ಬಟ್ಟೆಯ ಸ್ಥಾನವನ್ನು ಮಿಲ್ ಬಟ್ಟೆ ಆಕ್ರಮಿಸಿಕೊಂಡಿತು. ಕುಂಬಾರಿಕೆ, ಕಲ್ಲು ಕೆಲಸ, ಮರಗೆಲಸ, ಚಿನ್ನದ ಕೆಲಸ, ಕಮ್ಮಾರಿಕೆ ಮುಂತಾದವು ಈ ಪ್ರಾಂತದ ಹಳೆಯ ಗ್ರಾಮೀನ ಹಾಗೂ ನಗರ ಅರ್ಥವ್ಯವಸ್ಥೆಯ ಭಾಗವಾಗಿದ್ದವು. ವಸಾಹತುಪೂರ್ವ ಅವಧಿಯಲ್ಲೂ ಈ ಪ್ರಾಂತ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳು ಇರಲಿಲ್ಲ. ಹೊಳಪಿನ ಸುಣ್ಣಕಲ್ಲು ಶಹಾಬಾದ್, ಚಿತ್ತಾಪುರ, ಸೇಡಂಗಳಲ್ಲಿ ಸಿಗುತ್ತಿದ್ದ ಅತ್ಯಂತ ಮುಖ್ಯವಾದ ಖನಿಜವಾಗಿತ್ತು. ಈ ಕಲ್ಲನ್ನು ಶಹಾಬಾದ್ ಕಲ್ಲು ಎಂಬುದಾಗಿಯೂ ಕರೆಯಲಾಗುತ್ತಿತ್ತು. ಈ ಕಲ್ಲನ್ನು ಬಹಳವಾಗಿ ಚಾವಣಿ ಮತ್ತು ನೆಲಗಳಿಗೆ ಬಳಸುತ್ತಿದ್ದರು. ನಿಜಾಮನ ಕಾಲದಲ್ಲಿ ಇದ್ದ ಇನ್ನೊಂದು ಕೈಗಾರಿಕೆ ಫೆಜ್ ಟೋಪಿಗಳಿಗೆ ಹಾಕುವ ಕುಚ್ಚುಗಳ ತಯಾರಿಕೆ. ಈ ಉದ್ಯಮದಲ್ಲಿ ಸುಮಾರು ೫೦೦ ಜನ ಹೆಂಗಸರು ಮತ್ತು ಮಕ್ಕಳು ಕೆಲಸ ಮಾಡುತ್ತಿದ್ದರೆಂದು ಅಂದಾಜು ಮಾಡಲಾಗಿದೆ. ನಿಜಾಮನ ರಾಜ್ಯದಲ್ಲಿ ಕುಚ್ಚು ತಯಾರಿಸುವ ನಾಲ್ಕು ಕಾರ್ಖಾನೆಗಳಿದ್ದವು. ಕುಚ್ಚು ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳು ಸ್ಥಳೀಯವಾಗಿ ದೊರಕುತ್ತಿರಲಿಲ್ಲವಾದ್ದರಿಂದ ಈ ಉದ್ಯಮವು ಹಂತ ಹಂತವಾಗಿ ನೆಲಕಚ್ಚಿತು.

ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸಣ್ಣಪುಟ್ಟ ಕೈಗಾರಿಕೆಗಳಿದ್ದವು. ಮಡಕೆ ತಯಾರಿಕೆ, ತಾಮ್ರ, ಕಂಚು, ಹಿತ್ತಾಳೆ ಕೆಲಸ, ಚಿನ್ನ ತಯಾರಿಕೆ, ಕಮ್ಮಾರಿಕೆ, ಕಬ್ಬಿಣದ ಕೆಲಸ, ಮರದ ಕೆಲಸ, ಕೃಷಿ ಉಪಕರಣಗಳ ತಯಾರಿಕೆ ಮುಂತಾದವು ವಸಾಹತುಪೂರ್ವ ಅವಧಿಯಲ್ಲಿದ್ದ ಕೆಲವು ಗುಡಿಕೈಗಾರಿಕೆಗಳು ಮತ್ತು ಕೈಕಸುಬುಗಳು. ಬ್ರಿಟಿಷ್ ಆಳ್ವಿಕೆ ಆರಂಭಗೊಂಡ ನಂತರ ಕೈಗಾರಿಕಾ ಕ್ಷೇತ್ರದಲ್ಲೇನೂ ಮಹತ್ವದ ಬದಲಾವಣೆಗಳು ಆಗಲಿಲ್ಲ. ಹಿಂದಿದ್ದ ಕೈಗಾರಿಕೆಗಳೇ ಮುಂದುವರಿದವು. ಈ ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಯನ್ನು ತಂದದ್ದು ಖಾಸಗಿ ಸಂಸ್ಥೆಯಾದ ಬಾಸೆಲ್ ಮಿಷನ್. ವಸಾಹತು ಆಳ್ವಿಕೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಕಾಲಿಟ್ಟ ಬಾಸೆಲ್ ಮಿಷನ್ ಹಂಚು ತಯಾರಿಕೆ, ಬಟ್ಟೆ ಉತ್ಪಾದನೆ, ಮುದ್ರಣಾಲಯಗಳ ಸ್ಥಾಪನೆ ಮತ್ತು ಪತ್ರಿಕೋದ್ಯಮದಲ್ಲಿ ಮಹತ್ವದ ಸಾಧನೆಗಳನ್ನು ಮಾಡಿತು. ಬ್ರಿಟಿಷ್ ಸರಕಾರ ಬಾಸೆಲ್ಲ ಮಿಷನ್‌ನ ಕೆಲಸ ಕಾರ್ಯಗಳಿಗೆ ಅನುಮತಿ ಮತ್ತು ಪ್ರೋತ್ಸಾಹ ನೀಡಿತು. ಆದರೆ ಪ್ರಥಮ ಜಾಗತಿಕ ಯುದ್ಧ ಆರಂಭಗೊಳ್ಳುವ ವೇಳೆಗೆ ಬಾಸೆಲ್ ಮಿಶನ್‌ಗೆ ಎಲ್ಲ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಆಜ್ಞಾಪಿಸಿತು. ಎರಡನೆಯ ಜಾಗತಿಕ ಯುದ್ಧದ ವೇಳೆಗೆ ಅದನ್ನು ನಿಷೇಧಿಸಲಾಯಿತು. ಇದಕ್ಕೆ ಬಾಸೆಲ್ ಮಿಶನ್‌ನ ಜರ್ಮನಿ ಮೂಲವೇ ಮುಖ್ಯಕಾರಣ. ಜರ್ಮನಿಯು ಬ್ರಿಟನ್ನಿನ ವೈರಿ ರಾಷ್ಟ್ರವಾಗಿತ್ತು.

ಬಾಸೆಲ್ ಮಿಷನ್ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾದ ಮಂಗಳೂರನ್ನು ತನ್ನ ನೂತನ ಪ್ರಯೋಗಗಳಿಗೆ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿತು. ೧೮೪೦ರಿಂದಲೇ ಇದು ಮಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕೆಲಸವನ್ನು ಆರಂಭಿಸಿತು. ಮಂಗಳೂರಿನ ಬಲ್ಮಠ ಎನ್ನುವ ಪ್ರದೇಶ ಬಾಸೆಲ್ ಮಿಷನ್‌ನ ಕೇಂದ್ರಸ್ಥಾನವಾಗಿತ್ತು. ಬಲ್ಮಠದಲ್ಲಿ ಕಾಫಿ ಪ್ಲಾಂಟೇಶನ್ ಮಾಡಲಾಯಿತಾದರೂ, ಅದು ಪಲಕಾರಿಯಾಗಲಿಲ್ಲ. ನಂತರ ತೆಂಗಿನ ಮರದಿಂದ ದೊರೆಯುವ ಶೇಂದಿಯಿಂದ ಸಕ್ಕರೆ ತಯಾರಿಸುವ ಪ್ರಯತ್ನ ಮಾಡಲಾಯಿತು. ಆದರೆ ಇಂಧನ ಸಮಸ್ಯೆಯಿಂದಾಗಿ ಅದನ್ನೂ ಕೈಬಿಡಲಾಯಿತು. ೧೮೪೬ರಲ್ಲಿ ಮಂಗಳೂರಿನಲ್ಲಿ ಕೈಗಾರಿಕಾ ತರಬೇತಿ ಶಾಲೆಯೊಂದನ್ನು ಸ್ಥಾಪಿಸಿ, ಅಲ್ಲಿ ಮರದ ಕೆಲಸ, ನೇಯ್ಗೆ, ಬೀಗ ತಯಾರಿಕೆ ಮುಂತಾದವುಗಳ ಬಗ್ಗೆ ತರಬೇತಿಯನ್ನು ಕೊಡಲಾಗುತ್ತಿತ್ತು. ೧೮೫೪ರಲ್ಲಿ ಬಾಸೆಲ್ ಮಿಷನ್ ಇಂಡಸ್ಟ್ರಿಯಲ್ ಕಮಿಷನ್ ಎಂಬ ಸಹಸಂಸ್ಥೆಯೊಂದನ್ನು ಆರಂಭಿಸಿತು. ಭಾರತದಲ್ಲಿ ಬಾಸೆಲ್ ಮಿಷನ್‌ನ ಪರವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ನಡೆಸಿಕೊಂಡು ಬರುವುದು ಇಂಡಸ್ಟ್ರಿಯಲ್ ಕಮಿಷನ್‌ನ ಮುಖ್ಯ ಕರ್ತವ್ಯವಾಗಿತ್ತು. ಈ ಸಂಸ್ಥೆಯ ಮೂಲಕ ದಕ್ಷಿಣ ಕನ್ನಡದಲ್ಲಿ ಸ್ಥಾಪಿಸಲ್ಪಟ್ಟ ಅಂತರ್‌ರಾಷ್ಟ್ರೀಯ ಖ್ಯಾತಿಗಳಿಸಿದ ಕೈಗಾರಿಕೆಗಳಲ್ಲಿ ಹಂಚು ಉದ್ಯಮ ಪ್ರಮುಖವಾದದ್ದು.

ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಷನ್ ತನ್ನ ಪ್ರಥಮ ಹಂಚಿನ ಕಾರ್ಖಾನೆಯನ್ನು ಮಂಗಳೂರಿನ ಜೆಪ್ಪು ಎನ್ನುವಲ್ಲಿ ೧೮೬೫ರಲ್ಲಿ ಸ್ಥಾಪಿಸಿತು. ಈ ಕಾರ್ಖಾನೆಯಲ್ಲಿ ತಯಾರಾದ ಹಂಚಿಗೆ ಮಂಗಳೂರು ಹಂಚು ಎಂಬುದಾಗಿ ಹೆಸರಿಡಲಾಯಿತು. ೧೮೭೧ರಲ್ಲಿ ಜೆಪ್ಪು ಕಾರ್ಖಾನೆಯಲ್ಲಿ ೬೦ ಕೆಲಸಗಾರರಿದ್ದು, ಅದರ ವಾರ್ಷಿಕ ಉತ್ಪಾದನೆ ೨,೦೯,೦೦೦ ಹಂಚುಗಳು. ೧೮೮೦ರಲ್ಲಿ ಇಲ್ಲಿ ೧೮೦ ಕೆಲಸಗಾರರಿದ್ದು ೧೦ ಲಕ್ಷ ಹಂಚುಗಳನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತಿತ್ತು. ಮಂಗಳೂರು ಹಂಚಿಗೆ ಬೇಡಿಕೆ ಇನ್ನೂ ಹೆಚ್ಚಿದಾಗ ೧೮೮೨ರಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆಯ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು. ೧೮೮೬ರಲ್ಲಿ ಉಡುಪಿಯ ಮಲ್ಪೆಯಲ್ಲಿ ತನ್ನ ಮೂರನೆಯ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು. ೧೯೧೪ರ ವೇಳೆಗೆ ದಕ್ಷಿಣ ಕನ್ನಡದಲ್ಲಿದ್ದ ಮೂರು ಬಾಸೆಲ್ ಮಿಷನ್ ಹಂಚಿನ ಕಾರ್ಖಾನೆಗಳಲ್ಲಿ ಒಟ್ಟು ೯೧೪ ಜನರು ಉದ್ಯೋಗ ಪಡೆದಿದ್ದರು.

ಮಂಗಳೂರು ಹಂಚುಗಳಿಗೆ ಭಾರತದಾದ್ಯಂತ ಮಾತ್ರವಲ್ಲದೆ ಪೂರ್ವ ಆಫ್ರಿಕ ದೇಶಗಳು, ಏಡಾನ್, ಬಸ್ರಾ, ಸುಮಾತ್ರಾ, ಬರ್ಮಾ, ಬ್ರಿಟಿಷ್ ಬೋರ್ನಿಯೊ, ಆಸ್ಟ್ರೇಲಿಯಾ, ಶ್ರೀಲಂಕಾ, ಫಿಜಿ, ಆಫ್ರಿಕದಲ್ಲಿದ್ದ ಜರ್ಮನ್ ವಸಾಹತುಗಳು ಮುಂತಾದೆಡೆಯಿಂದ ಬೇಡಿಕೆ ಇದ್ದು, ಈ ಎಲ್ಲ ದೇಶಗಳಿಗೆ ಅದನ್ನು ರಫ್ತು ಮಾಡಲಾಗುತ್ತಿತ್ತು. ಬಾಸೆಲ್ ಮಿಷನ್‌ನಿಂದ ಪ್ರೇರಿತರಾದ ಅನೇಕ ಮಂದಿ ಉದ್ಯಮಿಗಳು ಈ ಉದ್ಯಮ ಸ್ಥಾಪಿಸಲು ಮುಂದಾದರು. ೧೮೬೫ರಿಂದ ೧೯೪೨ರವರೆಗೆ ಒಟ್ಟು ೧೬ ಹಂಚಿನ ಕಾರ್ಖಾನೆಗಳು ಮಂಗಳೂರಿನ ಸುತ್ತ ಮುತ್ತ ನದಿ ತೀರದಲ್ಲಿ, ನದಿಗೆ ಸಂಪರ್ಕವಿರುವ ಕಾಲುವೆಗಳ ಬದಿಯಲ್ಲಿ, ಹಿನ್ನೀರು ಪ್ರದೇಶ ಮತ್ತು ಸಮುದ್ರ ಬದಿಗಳಲ್ಲಿ ಹಂಚಿನ ಕಾರ್ಖಾನೆಗಳು ಹೆಚ್ಚಾಗಿ ಕೇಂದ್ರೀಕೃತಗೊಂಡವು.

ಬಾಸೆಲ್ ಮಿಷನ್ ಹಂಚಿನ ಉದ್ಯಮದ ಜೊತೆಗೆ ಇನ್ನೂ ಹಲವಾರು ಬೇರೆ ಉದ್ಯಮಗಳನ್ನು ಸ್ಥಾಪಿಸಿತು. ಅವುಗಳಲ್ಲಿ ೧೮೪೪ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಹತ್ತಿ ನೇಯುವ ಕಾರ್ಖಾನೆಯೂ ಒಂದು. ಅಲ್ಲಿ ಹತ್ತಿಯಿಂದ ಬಟ್ಟೆಗಳನ್ನು ತಯಾರಿಸಲಾಗುತ್ತಿತ್ತು. ದೇಶ ವಿದೇಶಗಳಿಗೆ ಅವು ರಫ್ತಾಗುತ್ತಿದ್ದವು. ಬಾಸೆಲ್ಲ ಮಿಷನ್ ತನ್ನೆಲ್ಲಾ ಕೈಗಾರಿಕಾ ಉತ್ಪನ್ನಗಳ ವಿಲೇವಾರಿಗೆ ಮಂಗಳೂರನ್ನು ಕೇಂದ್ರ ಮಾರುಕಟ್ಟೆಯನ್ನಾಗಿ ಆಯ್ಕೆ ಮಾಡಿಕೊಂಡಿತು. ಅದೇ ರೀತಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಮುದ್ರಣಾಲಯಗಳನ್ನು ಸ್ಥಾಪಿಸುವುದರ ಮೂಲಕ ಒಂದು ಹೊಸ ವಾತಾವರಣವನ್ನು ಹುಟ್ಟುಹಾಕಿತು. ಬಾಸೆಲ್ ಮಿಷನ್‌ನ ಪ್ರವೇಶದಿಂದ ಕೈಗಾರಿಕಾ ಕ್ಷೇತ್ರದಲ್ಲಾದ ಈ ಬದಲಾವಣೆಗಳು ಮಂಗಳೂರಿನ ಸ್ವರೂಪವನ್ನು ರಚನಾತ್ಮಕವಾಗಿ ಹಾಗೂ ಕಾರ್ಯಾತ್ಮಕವಾಗಿ ಬದಲಾಯಿಸಿದವು. ಮಂಗಳೂರು ಕೇವಲ ವ್ಯಾಪಾರ ಕೇಂದ್ರವಷ್ಟೇ ಅಲ್ಲದೆ ವಸ್ತುಗಳನ್ನು ಉತ್ಪಾದಿಸುವ ನಗರವಾಗಿಯೂ ಬೆಳೆಯಿತು. ಯುರೋಪಿನ ಉದ್ದಿಮೆದಾರರು ಹಾಗೂ ಸ್ಥಳೀಯ ಏಜೆಂಟರುಗಳು ಇದರ ಲಾಭವನ್ನು ಪಡೆದುಕೊಂಡರು. ನಗರ ವರ್ತಕ ಸಮುದಾಯಗಳೂ ಲಾಭವನ್ನು ಪಡೆಯುವಲ್ಲಿ ಹಿಂದಕ್ಕೆ ಬೀಳಲಿಲ್ಲ.

ಬಾಸೆಲ್ ಮಿಷನ್ ತನ್ನ ಕೆಲಸ ಕಾರ್ಯಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದಲಾವಣೆಯ ಅಲೆಯನ್ನು ಎಬ್ಬಿಸಿದ್ದಂತೂ ನಿಜ. ಅದರ ಜೊತೆಗೆ ಮಿಷನ್ ತನ್ನ ಕೆಲವು ವೈಯಕ್ತಿಕ ಹಿತಾಸಕ್ತಿಗಳನ್ನೂ ಈಡೇರಿಸಿಕೊಂಡಿತು. ಬಾಸೆಲ್ ಮಿಷನ್ ಅಷ್ಟೊಂದು ಕೈಗಾರಿಕೆಗಳನ್ನು ಸ್ಥಾಪಿಸುವಾಗ ಆಗ ತಾನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಉದ್ಯೋಗ ನೀಡುವ, ಸ್ಥಳೀಯ ಕ್ರಿಶ್ಚಿಯನ್ನರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶವನ್ನು ಹೊಂದಿತ್ತು. ಕ್ರಿಶ್ಚಿಯನ್ನರ ಜನಸಂಖ್ಯೆ ಹೆಚ್ಚಾಗಿ, ಬಾಸೆಲ್ ಮಿಷನ್‌ಗೆ ಅವರೆಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಾಗದಾಗ ಆರ್ಥಿಕ ನೆರವನ್ನು ನೀಡುವ ಯೋಜನೆಯನ್ನು ಆರಂಭಿಸಿತು. ಕೈಗಾರಿಕೆಗಳನ್ನು ಸ್ಥಾಪಿಸುವ ಕ್ರಿಶ್ಚಿಯನ್ನರಿಗೆ ನೆರವಾಗಲೆಂದೇ ೧೯೧೮ರಲ್ಲಿ ಬಲ್ಮಠದಲ್ಲಿ ಮಂಗಳೂರ್ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿತು. ಈ ವಿಚಾರಗಳೇನೇ ಇದ್ದರೂ ಬಾಸೆಲ್ ಮಿಷನ್ ಮಂಗಳೂರಿನಲ್ಲಿ ಹೊಸ ಕೈಗಾರಿಕಾ ವಾತಾವರಣವೊಂದನ್ನು ಹುಟ್ಟು ಹಾಕಿದ್ದಂತೂ ನಿಜ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ಕೈಗಾರಿಕೆ ಇಪ್ಪತ್ತನೆಯ ಶತಮಾನದ ಆರಂಭದಿಂದಲೇ ಒಂದು ಜನಪ್ರಿಯ ಕಸುಬಾಗಿ ಬೆಳೆದುಬಂತು. ಜಿಲ್ಲೆಯ ಗ್ರಾಮೀಣ ಪ್ರದೇಶದ ಅರ್ಥಿಕತೆಯ ಮೇಲೆ ಈ ಉದ್ದಿಮೆ ಬೀರಿದ ಪರಿಣಾಮ ಹಾಗೂ ನೀಡಿದ ಕೊಡುಗೆ ಬಹಳಷ್ಟು. ಜಿಲ್ಲೆಯ ಹಳ್ಳಿಗಳನ್ನು ಪಟ್ಟಣ ಪ್ರದೇಶಗಳೊಂದಿಗೆ ಜೋಡಿಸಿ ಸಂಪರ್ಕ, ಸಂಚಾರ, ರಸ್ತೆ ನಿರ್ಮಾಣ ಇತ್ಯಾದಿಗಳನ್ನು ಬೆಳೆಸುವಲ್ಲಿ ಅದು ಪ್ರಮುಖ ಪಾತ್ರ ವಹಿಸಿತು. ಶಾಸನಬದ್ಧವಾಗಿ ಲೇಬಲ್‌ಗಳೊಡನೆ ಬೀಡಿ ಕಟ್ಟುಗಳ ತಯಾರಿಕೆ ಆರಂಭವಾದದ್ದು ೧೯೧೪ರಲ್ಲಿ. ಆಗ ಪಾಣೆಮಂಗಳೂರಿನಲ್ಲಿ ಮಹಾಲಕ್ಷ್ಮಿ ಬೀಡಿ ವರ್ಕ್ಸ್ ಆರಂಭವಾಯಿತು. ೧೯೧೮ರಲ್ಲಿ ಪಿ.ವಿ.ಎಸ್ (ಪುತ್ತು ವೈಕುಂಠ ಶೇಟ್) ಬೀಡಿ ವರ್ಕ್ಸ್ ಹಾಗೂ ೧೯೩೦ರಲ್ಲಿ ಭಾರತ್ ಬೀಡೀಸ್ ಮತ್ತು ಗಣೇಶ್ ಬೀಡೀಸ್ ಅಸ್ತಿತ್ವಕ್ಕೆ ಬಂದವು. ಬೀಡಿ ಕೈಗಾರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಆರಂಭದಲ್ಲಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಕೈಗಾರಿಕೆ ನಂತರದ ದಿನಗಳಲ್ಲಿ ಜಿಲ್ಲೆಯಾದ್ಯಂತ ಹರಡಿಕೊಂಡಿತು. ಇದು ದುಡಿಯುವ ವರ್ಗಗಳಲ್ಲಿ ಆತ್ಮವಿಶ್ವಾಸ ಹಾಗೂ ಬದುಕಿನ ಬಗ್ಗೆ ಆಶಾದಾಯಕ ಭಾವನೆ ಮೂಡುವಂತೆ ಮಾಡಿತು. ಗದ್ದೆಕೂಲಿಗಳು ಬೀಡಿ ಕಟ್ಟುವ ಉದ್ದಿಮೆಯಲ್ಲಿ ತೊಡಗಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡವು.

ಬ್ರಿಟಿಷರು ಸಮುದ್ರ ವ್ಯಾಪಾರಕ್ಕೆ ಕರ್ನಾಟಕದ ಕರಾವಳಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡರೂ, ಬಂದರು ನಿರ್ಮಾಣ ಮತ್ತು ಹಡಗು ನಿರ್ಮಾಣಗಳೆರಡಕ್ಕೂ ಪ್ರೋತ್ಸಾಹ ನೀಡಲಿಲ್ಲ. ಮಂಗಳೂರು, ಭಟ್ಕಳ, ಕಾರವಾರ ಮುಂತಾದ ಬಂದರುಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಆಬಿವೃದ್ಧಿ ಹೊಂದಲಿಲ್ಲ. ಸ್ಥಳೀಯವಾಗಿ ಹಡಗುಗಳು ನಿರ್ಮಾಣಗೊಳ್ಳುವುದು, ಅವುಗಳ ನಿರ್ಮಾಣಕ್ಕೆ ಸ್ಥಳೀಯ ವಸ್ತುಗಳ ಬಳಕೆಯಾಗುವುದು ಹಾಗೂ ಸ್ಥಳೀಯೆರಿಗೆ ಉದ್ಯೋಗ ದೊರಕುವುದು ಬ್ರಿಟಿಷ್ ಸರಕಾರಕ್ಕೆ ಇಷ್ಟವಾಗದ ವಿಚಾರ. ಬ್ರಿಟಿಷ್ ಹಡಗು ನಿರ್ಮಾಣ ಕಂಪೆನಿಗಳು ಭಾರತದಲ್ಲಿ ಹಡಗುಗಳು ನಿರ್ಮಾಣಗೊಳ್ಳುವುದನ್ನು ವಿರೋಧಿಸಿದವು. ಈ ನಿಟ್ಟಿನಲ್ಲಿ ಬ್ರಿಟಿಷ್ ಸರಕಾರ ೧೮೧೪ರಲ್ಲಿಯೇ ಭಾರತೀಯ ಹಡಗು ನಿರ್ಮಾಪಕರಿಗೆ ಎಚ್ಚರಿಕೆ ನೀಡಿತು. ಸಮುದ್ರಯಾನ, ಸಮುದ್ರ ವ್ಯಾಪಾರ, ಬಂದರುಗಳ ಆಡಳಿತ, ಹಡಗುಗಳ ನಿರ್ಮಾಣ ಇವೆಲ್ಲವೂ ಬ್ರಿಟಿಷರ ಹಿಡಿತದಲ್ಲಿತ್ತು. ಹೀಗಾಗಿ ಭಾರತದ ಕರಾವಳಿಯಲ್ಲಿ ಬ್ರಿಟಿನ್ನಿನಲ್ಲಿ ನಿರ್ಮಾಣಗೊಂಡ ಹಡಗುಗಳು ಬಳಕೆಯಾದವು. ಸ್ಥಳೀಯವಾಗಿ ಸಣ್ಣ ದೋಣಿಗಳು ನಿರ್ಮಾಣಗೊಳ್ಳುತ್ತಿದ್ದವು. ಅವು ಮೀನುಗಾರಿಕೆಗೆ ಹಾಗೂ ಪ್ರಯಾಣಕ್ಕೆ ಬಳಕೆಯಾಗುತ್ತಿದ್ದವು. ಹಡಗು ನಿರ್ಮಾಣಕ್ಕೆ ಬೇಕಾದ ಮರಗಳು ಕರ್ನಾಟಕದಲ್ಲಿ ಯಥೇಚ್ಚವಾಗಿ ಲಭ್ಯವಿದ್ದರೂ, ಸ್ಥಳೀಯರು ಅದನ್ನು ಬಳಸುವಂತಿರಲಿಲ್ಲ. ಏಕೆಂದರೆ ಮರದ ವ್ಯಾಪಾರದ ಮೇಲೆ ಬ್ರಿಟಿಷರು ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿದ್ದರು. ಮಂಗಳೂರು ಮತ್ತು ಕಾರವಾರ ಈ ಕಾರಣಗಳಿಂದಾಗಿ ಬ್ರಿಟಿಷ್ ಆಳ್ವಿಕೆಯುದ್ದಕ್ಕೂ ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣದೆ, ಬ್ರಿಟಿಷರ ವಸಾಹತುಶಾಹಿ ಧೋರಣೆಗೆ ಪೂರಕವಾಗಿ ಕೆಲಸ ಮಾಡುವ ಒತ್ತಾಯಕ್ಕೆ ಒಳಗಾಗಿದ್ದವು.

ಮದ್ರಾಸ್ ಅಧಿಪತ್ಯದಲ್ಲಿದ್ದ ಬಳ್ಳಾರಿ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡಿತು. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಪಟ್ಟ ಹಲವಾರು ಪೂರಕ ವಿಚಾರಗಳಿದ್ದವು. ಅವುಗಳಲ್ಲಿ ಗಣಿಗಾರಿಕೆಯೂ ಒಂದು. ಸಂಡೂರು ಪ್ರದೇಶ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಅದೇ ರೀತಿ ಬಳ್ಳಾರಿ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗುತ್ತಿದ್ದುದ್ದರಿಂದಾಗಿ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಗೊಂಡವು. ಬಳ್ಳಾರಿ ಪ್ರದೇಶದಲ್ಲಿ ಕಬ್ಬಿಣ, ಉಕ್ಕು, ಮರದ ಸಾಮಾನು, ಕಾಗದ, ಸಕ್ಕರೆ, ಹತ್ತಿ, ರೇಷ್ಮೆ ಮುಂತಾದ ಕೈಗಾರಿಕೆಗಳು ಹುಟ್ಟಿಕೊಂಡವು. ಬಟ್ಟೆ, ಕಂಬಳಿ, ಸೋಪು, ದುಪ್ಪಡಿ ಮುಂತಾದ ವಸ್ತುಗಳನ್ನೂ ಬಳ್ಳಾರಿಯಲ್ಲಿ ತಯಾರಿಸಲಾಗುತ್ತಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಆರಂಭಗೊಂಡ ಕೆಲವು ದೊಡ್ಡ ಪ್ರಮಾಣದ ಕೈಗಾರಿಕೆಗಳೆಂದರೆ, ಸೊಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್ ಲಿಮಿಟೆಡ್, ತುಂಗಭದ್ರ ಸ್ಟೀಲ್ ಪ್ರಾಡೆಕ್ಟ್ ಲಿಮಿಟೆಡ್, ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆ, ಇಂಡಿಯಾ ಷುಗರ್ಸ್ ಎಂಡ್ ರಿಫೈನರೀಸ್ ಲಿಮಿಟೆಡ್ ಮುಂತಾದವು. ೧೯೪೫ರ ನಂತರ ಈ ಪ್ರದೇಶದಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಗೊಂಡವು. ರಾಯಲ್ ಸೀಮಾ ಪಾಲಿಟೆಕ್ನಿಕ್, ಸೈಂಟ್ ಜೋಸೆಫ್ಸ್ ಇಂಡಸ್ಟ್ರಿಯಲ್ ಸ್ಕೂಲ್ ಮುಂತಾದ ಕೈಗಾರಿಕಾ ತರಬೇತಿ ನೀಡುವ ಸಂಸ್ಥೆಗಳೂ ಹುಟ್ಟಿಕೊಂಡವು. ಬ್ರಿಟಿಷರು ತಮಗೆ ಅನಿವಾರ್ಯವಾದ ಕೈಗಾರಿಕೆಗಳನ್ನಷ್ಟೇ ಇಲ್ಲಿ ಸ್ಥಾಪಿಸಿಕೊಂಡರು.

ಕೊಡಗು ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಿದ್ದರೂ, ಕೈಗಾರಿಕೆಯಲ್ಲಿ ಅಷ್ಟೊಂದು ಅಭಿವೃದ್ಧಿಯನ್ನು ಹೊಂದಿರಲಿಲ್ಲ. ವಸಾಹತು ಆಳ್ವಿಕೆಯ ಅವಧಿಯಲ್ಲಿ ಕೊಡಗಿನಲ್ಲಿ ಸ್ಥಾಪನೆಗೊಂಡ ಪ್ರಮುಖ ಕೈಗಾರಿಕೆಗಳೆಂದರೆ, ೧೯೨೦ರಲ್ಲಿ ವೀರರಾಜಪೇಟೆಯಲ್ಲಿ ಅಸ್ತಿತ್ವಕ್ಕೆ ಬಂದ ಸಿಟಿಸಿ ಸ್ಟೋರ್ಸ್ ಮತ್ತು ಪ್ರಿಂಟಿಂಗ್ ವರ್ಕ್ಸ್. ಇದು ನೋಟು ಪುಸ್ತಕಗಳನ್ನು ತಯಾರಿಸುತ್ತಿತ್ತು. ೧೯೨೧ರಲ್ಲಿ ಮಡಿಕೇರಿಯಲ್ಲಿ ಕೊಡಗು ಪ್ರೆಸ್ ಆರಂಭಗೊಂಡಿತು. ೧೯೨೮ರಲ್ಲಿ ಮಡಿಕೇರಿಯಲ್ಲಿ ಪ್ರಕಾಶ ಪ್ರೆಸ್ ಆರಂಭಗೊಂಡಿತು. ೧೯೩೨ರಲ್ಲಿ ವೀರರಾಜಪೇಟೆಯಲ್ಲಿ ಚಾತುಕುಟ್ಟಿ ನಾಯಕ ಕಾರ್ಖಾನೆ ಆರಂಭಗೊಂಡಿತು. ಇದು ಹಿತ್ತಾಲೆ ಮತ್ತು ತಾಮ್ರದ ಪಾತ್ರೆಗಳನ್ನು ತಯಾರಿಸುತ್ತಿತ್ತು. ೧೯೩೫ರಲ್ಲಿ ಕೆ.ಟಿ. ಮಾಚಯ್ಯ ಕಾರ್ಖಾನೆ ಆರಂಭಗೊಂಡು, ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಉತ್ಪಾದಿಸಲಾರಂಭಿಸಿತು. ೧೯೪೦ರಲ್ಲಿ ಆರಂಭಗೊಂಡ ಫರ್ನಾಂಡಿಸ್ ಕಾಪರ್ ಸ್ಮಿತ್ ಹಾಗೂ ೧೯೪೬ರಲ್ಲಿ ಆರಂಭಗೊಂಡ ಪಿ.ವಿ.ಪೈ ಮತ್ತು ಕಂಪನಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ತಯಾರಿಸುತ್ತಿದ್ದವು. ೧೯೪೬ರಲ್ಲಿ ಲೂಯಿಸ್ ಇಂಡಸ್ಟ್ರೀಸ್ ಆರಂಭಗೊಂಡು ಇಂಜಿನಿಯರಿಂಗ್ ರಿಪೇರಿ ಮತ್ತು ಸ್ಪೇರ್‌ಗಳ ತಯಾರಿಕೆಯಲ್ಲಿ ತೊಡಗಿತು. ಕೊಡಗು ಜಿಲ್ಲೆಗೆ ೧೯೪೦ರಲ್ಲಿ ವಿದ್ಯುತ್ ಸಂಪರ್ಕ ದೊರೆಯಿತು. ೧೯೪೦ರಲ್ಲಿ ದಿ ಕೂರ್ಗ್ ಎಲೆಕ್ಟ್ರಿಕ್ ಕಂಪೆನಿ ಲಿಮಿಟೆಡ್ ಮಡಿಕೇರಿಯಲ್ಲಿ ಸ್ಥಾಪನೆಗೊಂಡಿತು. ಕೊಡಗಿನಲ್ಲಿ ವಾಣಿಜ್ಯ ಬೆಳೆಗಳು ಹೇರಳವಾಗಿದ್ದರಿಂದಾಗಿ ಹಾಗೂ ಕಾಫಿ, ಏಲಕ್ಕಿ, ಮೆಣಸು, ಭತ್ತ ಮುಂತಾದವುಗಳ ಮೇಲೆ ಅಲ್ಲಿನ ಅರ್ಥವ್ಯವಸ್ಥೆ ನಿಂತಿದ್ದರಿಂದಾಗಿ ಸಹಜವಾಗಿಯೇ ಕೈಗಾರಿಕಾ ಕ್ಷೇತ್ರ ಹೆಚ್ಚಿನ ಪ್ರಾಮುಖ್ಯತೆಯನ್ನೂ ಪಡೆದುಕೊಂಡಿರಲಿಲ್ಲ. ಕೊಡಗಿಗೆ ರೈಲು ಸಂಪರ್ಕವಿರಲಿಲ್ಲದ ಕಾರಣ ರಸ್ತೆಯ ಮೂಲಕವೇ ವಸ್ತುಗಳನ್ನು ಸಾಗಿಸಬೇಕಾಗಿತ್ತು. ಇದು ದುಬಾರಿಯಾಗಿತ್ತು. ಇವೆಲ್ಲವೂ ಕೈಗಾರಿಕಾ ಪ್ರಗತಿಗೆ ಅಡ್ಡಿಯಾದವು.

ಕೈಗಾರಿಕೆಗಳು ಸ್ಥಾಪನೆಗೊಂಡು ಕಾರ್ಯಾಚರಿಸಲು ಆರಂಭಿಸಿದಾಗಿನಿಂದ ಕಾರ್ಮಿಕ ಚಳುವಳಿಗಳೂ ಆರಂಭಗೊಂಡವು. ಮೈಸೂರು, ಬೆಂಗಳೂರು, ದಾವಣಗೆರೆ, ಕೋಲಾರ, ಭದ್ರಾವತಿ, ಹುಬ್ಬಳ್ಳಿ, ಗುಲ್ಬರ್ಗಾ, ಮಂಗಳೂರು ಮುಂತಾದ ಪ್ರದೇಶಗಳಲ್ಲಿ ಕಾರ್ಮಿಕ ಚಳುವಳಿಗಳು ಕಂಡುಬಂದವು. ಕೈಗಾರಿಕೆಗಳಲ್ಲಿ ಉತ್ತಮ ಕಾರ್ಯಪರಿಸ್ಥಿತಿಗಳಿಗಾಗಿ, ಕೆಲಸ ಮಾಡುವಾಗ ತಮಗಾಗುತ್ತಿದ್ದ ಶೋಷಣೆ, ಅವಮಾನದ ವಿರುದ್ಧ, ಅತಿಯಾದ ಕೆಲಸದ ಹೊರೆಯನ್ನು ಪ್ರತಿಭಟಿಸುವ ಸಲುವಾಗಿ, ಕೆಲಸದ ಅಸ್ತವ್ಯಸ್ತತೆಗಳಿಂದಾಗಿ ಕಾರ್ಮಿಕ ಹೋರಾಟಗಳು ಅನಿವಾರ್ಯವಾದವು. ಭಾರತದಲ್ಲಿ ೧೯೨೬ರಲ್ಲಿ ಟ್ರೇಡ್ ಯೂನಿಯನ್ ಆಕ್ಟ್ ಜಾರಿಗೆ ಬಂದರೆ, ಮೈಸೂರಿನಲ್ಲಿ ಅದು ೧೯೪೧ರಲ್ಲಿ ಜಾರಿಗೆ ಬಂತು. ಮೈಸೂರು ಪ್ರಾಂತ್ಯದ ಮೊದಲನೆಯ ಕಾರ್ಮಿಕ ಮುಷ್ಕರವನ್ನು ಬೆಂಗಳೂರಿನ ಬಿನ್ನಿ ಮಿಲ್ಲಿನ ಕಾರ್ಮಿಕರು ನಡೆಸಿದರು. ಆದರೆ ಮೈಸೂರು ಆಡಳಿತವು ಈ ಮುಷ್ಕರವನ್ನು ಅಮಾನವೀಯ ರೀತಿಯಲ್ಲಿ ಬಗ್ಗು ಬಡಿಯಿತು. ಮುಷ್ಕರಗಳು ಮತ್ತು ಲಾಕೌಟುಗಳು ನ್ಯಾಯಬಾಹಿರ ಎಂಬುದಾಗಿ ಪರಿಗಣನೆಯಾಗಿತ್ತು.

ಎರಡನೆಯ ಮಹಾಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಪದಾರ್ಥಗಳ ಬೆಲೆ ಏರಿದ ಕಾರಣ ದುಡಿಯುವ ವರ್ಗದ ಮೇಲೆ ಭಾರಿ ಒತ್ತಡವುಂಟಾಯಿತು. ಆ ಸಂದರ್ಭದಲ್ಲಿ ಕಾರ್ಮಿಕರಂಗದಲ್ಲಿ ಕಮ್ಯುನಿಸ್ಟರ ಚಟುವಟಿಕೆಗಳು ಹೆಚ್ಚು ಕಾಣಿಸಿಕೊಳ್ಳತೊಡಗಿತು. ಕಮ್ಯುನಿಸ್ಟರು ಕೈಗಾರಿಕಾ ನಗರಗಳಲ್ಲಿ ಕಾರ್ಮಿಕರ ನಡುವೆ ಕೆಲಸ ಮಾಡಲು ಆರಂಭಿಸಿದರು. ಭದ್ರಾವತಿ, ದಾವಣಗೆರೆ, ಮಂಡ್ಯ ಹಾಗೂ ಕೋಲಾರಗಳಲ್ಲಿ ಕಾರ್ಮಿಕ ಮುಷ್ಕರಗಳು ಆರಂಭಗೊಂಡವು. ಕೈಗಾರಿಕಾ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಕಮ್ಯುನಿಸ್ಟ್ ನಾಯಕರು ಮುಷ್ಕರಗಳಲ್ಲಿ ಪಾಲ್ಗೊಂಡರು. ಕರ್ನಾಟಕದ ಉತ್ತರ ಭಾಗದಲ್ಲಿ ಕೈಗಾರಿಕಾ ಹಿಂದುಳಿದಿರುವಿಕೆಯ ಕಾರಣದಿಂದಾಗಿ ಬಲವಾದ ಕಾರ್ಮಿಕ ಚಳವಳಿ ಹೊರಹೊಮ್ಮಲಿಲ್ಲ. ಆದರೂ ಕೆಲವು ನಗರ ಪ್ರದೇಶಗಳಲ್ಲಿ ಚಳವಳಿಗಳು ನಡೆದವು. ಹುಬ್ಬಳಿಯ ರೈಲ್ವೆ ಕಾರ್ಮಿಕರು ಹಾಗೂ ಗಿರಣಿ ಕೆಲಸಗಾರರು, ಗುಲ್ಬರ್ಗಾದ ಗಿರಣಿ ಕೆಲಸಗಾರರು, ಶಹಾಬಾದಿನ ಸಿಮೆಂಟ್ ಕಾರ್ಮಿಕರು ಚಳವಳಿಗಳನ್ನು ನಡೆಸಿದರು. ಈ ಕೈಗಾರಿಕಾ ಕಾರ್ಮಿಕರೆಲ್ಲರನ್ನೂ ವಾಮಪಂಥೀಯರು ಸಂಘಟಿಸಿದರು.

ದಕ್ಷಿಣ ಕನ್ನಡದಲ್ಲಿ ಹಂಚಿನ ಕಾರ್ಖಾನೆಗೆ ಸಂಬಂಧಿಸಿದ ‘ಸೌತ್ ಕೆನರಾ ಟೈಲ್ ವರ್ಕರ್ಸ್ ಯೂನಿಯನ್’ ಎಂಬ ಕಾರ್ಮಿಕ ಸಂಘಟನೆ ೧೯೪೪ರಲ್ಲಿ ಆರಂಭಗೊಂಡಿತು. ೧೯೪೭-೪೮ರಲ್ಲಿ ಕಾಂಟ್ರಾಕ್ಟ್ ಪದ್ಧತಿಯನ್ನು ತೆಗೆದುಹಾಕುವಂತೆ ಮಾಡಿದ್ದು ಈ ಸಂಘಟನೆಯ ಮುಖ್ಯ ಸಾಧನೆ. ಕಾಂಟ್ರಾಕ್ಟ್‌ದಾರರು ಕಾರ್ಮಿಕರಿಗೆ ಸರಿಯಾಗಿ ಸಂಬಳವನ್ನು ಕೊಡದೆ ಹಾಗೂ ಬಹಳಷ್ಟು ಹಣವನ್ನು ತಮ್ಮ ಜೇಬಿಗಿಳಿಸಿ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದರು. ಇದು ರಾಜ್ಯಾದ್ಯಂತ ಇದ್ದ ಸಾಮಾನ್ಯ ಲಕ್ಷಣವಾಗಿತ್ತು. ಕಾರ್ಮಿಕರಿಗೆ ಸರಿಯಾದ ಸಂಬಳ ಮತ್ತು ಬೋನಸ್ ನೀಡದೆ ಅವರನ್ನು ಶೋಷಣೆ ಮಾಡಲಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ಉದ್ದಿಮೆಯಾದ ಬೀಡಿ ಕಟ್ಟುವುದರಲ್ಲೂ ಇದೇ ರೀತಿಯ ಶೋಷಣೆಗಳಿದ್ದವು. ಬೀಡಿ ಕಾಂಟ್ರಾಕ್ಟ್‌ದಾರರು ಹಾಗೂ ಅವರ ಸ್ಥಳೀಯ ಏಜೆಂಟರುಗಳು ಬೀಡಿ ಕಟ್ಟುವವರಿಗೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ, ಸರಿಯಾದ ಬೋನಸ್ ನೀಡದೆ ಹಾಗೂ ಸರಿಯಾದ ಬೆಲೆಯನ್ನು ನಿಗದಿಪಡಿಸದೆ ಶೋಷಣೆ ಮಾಡುತ್ತಿದ್ದರು. ಬೀಡಿ ಕಾರ್ಮಿಕರನ್ನು ವಾಮ ಪಂಥೀಯರು ಸಂಘಟಿಸಿ ತಮ್ಮ ಬೇಡಿಕೆಗಳಿಗಾಗಿ ಹೋರಾಡುವಂತೆ ಮಾಡಿದರು. ಹೀಗೆ ವಸಾಹತು ಕರ್ನಾಟಕದ ಪ್ರತಿಯೊಂದು ಪ್ರಾಂತ್ಯದಲ್ಲೂ ಕೈಗಾರಿಕಾ ಕಾರ್ಮಿಕರ ಚಳವಳಿಗಳು ಕೈಗಾರಿಕಾ ಮಾಲೀಕರ ವಿರುದ್ಧವಷ್ಟೇ ಅಲ್ಲದೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧವೂ ಧ್ವನಿ ಎತ್ತಿದವು.

ಬ್ರಿಟಿಷ್ ಕರ್ನಾಟಕದಲ್ಲಿ ನಾನಾ ಕಾರಣಗಳಿಂದಾಗಿ ನಡೆದ ಕೈಗಾರಿಕೀಕರಣ ಪ್ರಕ್ರಿಯೆ ಇಲ್ಲಿನ ಪೇಟೆ-ಪಟ್ಟಣಗಳ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಿತು. ಕರ್ನಟಕದಲ್ಲಿ ಕೈಗಾರಿಕಾಭಿವೃದ್ಧಿ ಅಥವಾ ನಗರಾಭಿವೃದ್ಧಿ ಬ್ರಿಟಿಷರ ಯೋಜನೆಗಳಾಗಿರಲಿಲ್ಲ. ಆದರೆ ಬ್ರಿಟಿಷ್ ಅರ್ಥವ್ಯವಸ್ಥೆ ಕೈಗಾರಿಕೆ ಮತ್ತು ನಗರ ಅಭಿವೃದ್ಧಿಯನ್ನು ಬಯಸುತ್ತಿದ್ದುದು ಹಾಗೂ ಅವಲಂಬಿಸಿದ್ದುದು, ಸ್ಥಳೀಯವಾಗಿಯೂ ಅವೆರಡೂ ಕೆಲವೊಂದು ಬದಲಾವಣೆಗಳನ್ನು ಕಾಣುವಂತೆ ಮಾಡಿತು. ಸ್ವಾತಂತ್ರ್ಯ ಹೋರಾಟ ಮತ್ತು ಜಾಗತಿಕ ಯುದ್ಧಗಳೂ ಸ್ಥಳೀಯವಾಗಿ ಕೈಗಾರಿಕೆಗಳು ಬೆಳೆಯುವುದಕ್ಕೆ ಕಾರಣವಾದವು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದಲ್ಲಿ ಆರಂಭಗೊಂಡ ಸ್ವದೇಶಿ ಚಳವಳಿ ಅನೇಕ ಕೈಗಾರಿಕೆಗಳ ಹುಟ್ಟಿಗೂ ಕಾರಣವಾಯಿತು. ವಿದೇಶಿ ವಸ್ತುಗಳನ್ನು ತಿರಸ್ಕರಿಸುವ ಹಾಗೂ ಆ ವಸ್ತುಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಪ್ರಯತ್ನಗಳು ನಡೆದವು. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ದೇಶಾದ್ಯಂತ ಉಪ್ಪನ್ನು ತಯಾರಿಸುವ ಪ್ರಯತ್ನಗಳು ನಡೆದವು. ಹೀಗೆ ಬ್ರಿಟಿಷ್ ಆಳ್ವಿಕೆಗೆ ಪ್ರತಿಕ್ರಿಯೆಯ ರೂಪದಲ್ಲೂ ಅನೇಕ ಕೈಗಾರಿಕೆಗಳು ಹುಟ್ಟಿಕೊಂಡವು.

ವಿದ್ಯುತ್‌ನ ಉತ್ಪಾದನೆ ಅತ್ಯಂತ ಅನಿವಾರ್ಯವಾಗಿದ್ದರಿಂದಾಗಿ ಬ್ರಿಟಿಷರು ಹಾಗೂ ಕೆಲವು ಖಾಸಗಿ ಸಂಸ್ಥೆಗಳು ವಿದ್ಯುತ್ ಉತ್ಪಾದನೆಗೆ ಹಾಗೂ ವಿದ್ಯುತ್‌ಗೆ ಸಂಬಂಧಿಸಿದ ಉಪಕರಣಗಳ ಉತ್ಪಾದನೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಬ್ರಿಟಿಷರು ತಮ್ಮ ವ್ಯಾಪಾರ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದಾಗ, ರಸ್ತೆ ಮತ್ತು ರೈಲು ಮಾರ್ಗಗಳ ನಿರ್ಮಾಣ ಕಾರ್ಯ ಆರಂಭಗೊಂಡಾಗ ಸಹಜವಾಗಿಯೇ ಈ ಕಾಮಗಾರಿಗಳಿಗೆ ಬೇಕಾಗುವ ಉಪಕರಣಗಳ ಉತ್ಪಾದನೆಗೆ ಉತ್ತೇಜನ ನೀಡಲಾಯಿತು. ದೊಡ್ಡ ದೊಡ್ಡ ಯಂತ್ರಗಳನ್ನು ಯುರೋಪಿನಿಂದ ತರಿಸಿಕೊಳ್ಳುತ್ತಿದ್ದರಾದರೂ, ಅವುಗಳಿಗೆ ಬೇಕಾಗುವ ಬಿಡಿ ಭಾಗಗಳು ಸ್ಥಳೀಯವಾಗಿಯೇ ಉತ್ಪಾದನೆಗೊಳ್ಳುತ್ತಿದ್ದವು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ವಿದೇಶಿ ವಸ್ತುಗಳು, ಯಂತ್ರೋಪಕರಣಗಳು ಹಾಗೂ ಬಿಡಿ ಭಾಗಗಳ ಆಮದು ನಿಂತು ಹೋದದ್ದರಿಂದ ಅವುಗಳ ಉತ್ಪಾದನೆಗೆ ಎಂದೂ ಕಾಣದ ಬೇಡಿಕೆ ಬರಲಾರಂಭಿಸಿತು. ಬದಲಾದ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಬ್ರಿಟಿಷ್ ಸರಕಾರ ಹಲವು ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಬೇಕಾಗಿ ಬಂತು. ಜವಳಿ ಉದ್ಯಮಕ್ಕೆ ಬೇಕಾದ ಸ್ಟಾರ್ಚ್, ಸಸ್ಯ ಮೂಲದ ಬಣ್ಣಗಳೂ, ಪ್ಲಾಸ್ಟಿಕ್, ವಿದ್ಯುದುಪಕರಣಗಳು, ಕ್ಲೋರೀನ್, ಇಲೆಕ್ಟ್ರೊ-ಕೆಮಿಕಲ್ಸ್, ಯಂತ್ರೋಪಕರಣಗಳು, ಯುದ್ಧರಂಗದ ಹಾಗೂ ಸೇನಾಪಡೆಗಳ ಅವಶ್ಯಕತೆಗಳು ಮುಂತಾದವು ಸ್ಥಳೀಯವಾಗಿ ಉತ್ಪಾದನೆಗೊಳ್ಳಲಾರಂಭಿಸಿದವು. ಈ ಎಲ್ಲ ಕಾರಣಗಳಿಂದಾಗಿ ಕೈಗಾರಿಕಾ ಚಟುವಟಿಕೆ ಸಾಕಷ್ಟು ವಿಸ್ತರಣೆ ಕಂಡಿತು.