ನಗರ ಅಧ್ಯಯನ ನನ್ನ ಅಸಕ್ತಿಯ ಕ್ಷೇತ್ರ. ಈ ಕ್ಷೇತ್ರದ ಕುರಿತು ಹೆಚ್ಚಿನ ಅಧ್ಯಯನ ನಡೆಸುವಂತೆ ನನ್ನಲ್ಲಿ ಆಸಕ್ತಿ ಮೂಡಿಸಿದವರು ಪ್ರೊ. ಬಿ. ಸುರೇಂದ್ರ ರಾವ್ ಅವರು. ಅವರ ಮಾರ್ಗದರ್ಶನದಲ್ಲಿ ನಾನು ವಸಾಹತು ಮಂಗಳೂರಿನ ನಗರೀಕರಣದ ಕುರಿತು ಪಿಎಚ್.ಡಿ ಅಧ್ಯಯನ ನಡೆಸುತ್ತಿದ್ದಾಗ ವಸಾಹತು ಕರ್ನಾಟಕದ ನಗರೀಕರಣದ ಕುರಿತು ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದ್ದೆ. ನಂತರ ಈ ಕುರಿತಾಗಿಯೇ ಯೋಜನೆಯನ್ನು ಕೈಗೊಂಡಾಗ ಹಲವಾರು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ಕರ್ನಾಟಕದ ನಗರ ಚರಿತ್ರೆಯ ಕುರಿತು ಇಂಗ್ಲಿಷ್‌ನಲ್ಲಾಗಲಿ ಅಥವಾ ಕನ್ನಡದಲ್ಲಾಗಲಿ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ವಸಾಹತು ಕರ್ನಾಟಕದಲ್ಲಿ ನಗರಗಳು ರೂಪುಗೊಂಡ ಬಗೆ ಮತ್ತು ಅವು ಕಾರ್ಯನಿರ್ವಹಿಸಿದ ವಿಶಿಷ್ಟ ಸ್ವರೂಪವನ್ನು ಪರಿಶೀಲಿಸುವ ಕೆಲಸವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ. ವಸಾಹತು ಕರ್ನಾಟಕದ ನಗರ ಅನುಭವಗಳನ್ನು ಅರ್ಥೈಸಿಕೊಳ್ಳುವುದು ಕಷ್ಟದ ಕೆಲಸ. ವಸಾಹತುಶಾಹಿ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳದೆ ವಸಾಹತು ನಗರ ನೀತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಬ್ರಿಟಿಷ್ ಸರಕಾರ ಎದುರಿಸುತ್ತಿದ್ದ ಸಮಸ್ಯೆಗಳು ಹಾಗೂ ಅದರ ಅಂದಿನ ತುರ್ತುಗಳು ಅನೇಕ ಅಭಿವೃದ್ಧಿ ಕೆಲಸಕಾರ್ಯಗಳಿಗೆ ಕಾರಣವಾದವು. ಬ್ರಿಟಿಷ್ ಮಾದರಿಯ ಆಧುನಿಕತೆಯ ಲಾಭವನ್ನು ಪಡದುಕೊಂಡ ನಗರ ಸಮುದಾಯಗಳು ತಮ್ಮ ಅಭಿವೃದ್ಧಿ ಕೆಲಸಕಾರ್ಯಗಳ ಮೂಲಕ ನಗರಗಳ ವ್ಯಾಪ್ತಿ ವಿಸ್ತರಿಸುವಂತೆ ಮಾಡಿದವು. ಬ್ರಿಟಿಷ್ ಸರಕಾರ ಸ್ಥಳೀಯ ಭೂಮಾಲೀಕರು ಮತ್ತು ಶ್ರೀಮಂತ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಥಳೀಯ ಆಡಳಿತದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಭಾಗಿಗಳಾಗುವಂತೆ ಮಾಡುವುದರ ಮೂಲಕ ಅವರನ್ನು ವಸಾಹತು ಆಡಳಿತದ ಚೌಕಟ್ಟಿನೊಳಗೆ ತಂದು ತನ್ನ ಕೆಲಸವನ್ನು ಸುಲಭವನ್ನಾಗಿಸಿಕೊಂಡಿತು. ಈ ಎಲ್ಲ ವಿಚಾರಗಳ ಕುರಿತು ಕೂಲಂಕಷ ಅಧ್ಯಯನ ನಡೆಸುವ ಪ್ರಯತ್ನವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ.

ಈ ಗ್ರಂಥವನ್ನು ಹೊರತರುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ವಸಾಹತು ಆಳ್ವಿಕೆಗೆ ಸಂಬಂಧಿಸಿದ ಕಡತಗಳನ್ನು ಬಳಸಿಕೊಳ್ಳಲು ಸಹಕರಿಸಿದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬೆಂಗಳೂರು ಮತ್ತು ಚೆನ್ನೈ ಪತ್ರಾಗಾರಗಳ ಸಿಬ್ಬಂದಿಗಳಿಗೆ, ಮಂಗಳೂರಿನ ಥಿಯಾಲಾಜಿಕಲ್ ಕಾಲೇಜಿನ ಆಡಳಿತ ವರ್ಗಕ್ಕೆ ಹಾಗೂ ಮಂಗಳೂರು, ಕಾರವಾರ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತಂದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ, ಪುಸ್ತಕ ವಿನ್ಯಾಸವನ್ನು ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀ ಜೆ.ಶಿವಕುಮಾರ್ ಅವರಿಗೆ ನನ್ನ ಕೃತಜ್ಞತೆಗಳು.

ಡಾ. ಕೆ. ಮೋಹನ್ ಕೃಷ್ಣ ರೈ