ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಕೇವಲ ನಗರ ಪ್ರದೇಶಗಳನ್ನಷ್ಟೇ ಕೇಂದ್ರವನ್ನಾಗಿಟ್ಟುಕೊಂಡು ನೋಡಲು ಸಾಧ್ಯವಾಗುವುದಿಲ್ಲ. ನಗರ ಮತ್ತು ಗ್ರಾಮಗಳು ಒಂದು ಇನ್ನೊಂದರ ಬೆಳವಣಿಗೆಗೆ ಪರಸ್ಪರ ಪೂರಕವಾಗಿದ್ದವು. ಭಾರತವು ಮೂಲತಃ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿನ ಕೈಗಾರಿಕಾ ಬೆಳವಣಿಗೆ ಕೃಷಿಯೊಂದಿಗೆ ನೇರ ಸಂಪರ್ಕವನ್ನು ಇಟ್ಟುಕೊಂಡಿತ್ತು. ಭಾರತದ ಸಂದರ್ಭದಲ್ಲಿ ಗ್ರಾಮ ಮತ್ತು ನಗರಗಳನ್ನು ಎರಡು ಪ್ರತ್ಯೇಕ ಘಟಕಗಳು ಎಂಬುದಾಗಿ ವಿಂಗಡಿಸಲು ಸಾಧ್ಯವಾಗುವುದಿಲ್ಲ. ವಸಾಹತುಪೂರ್ವ ಕರ್ನಾಟಕದಲ್ಲಿ ಬೃಹತ್ ಕೈಗಾರಿಕಾ ಕ್ರಾಂತಿಯೂ ನಡೆದಿರಲಿಲ್ಲ. ಆದರೆ ಅನೇಕ ಸಣ್ಣಪುಟ್ಟ ಕೈಗಾರಿಕೆಗಳು ಪೇಟೆ-ಪಟ್ಟಣಗಳಲ್ಲಿ ಇದ್ದವು. ಅವು ಕೃಷಿಯನ್ನು ಅವಲಂಬಿಸಿದ್ದವು ಹಾಗೂ ಅವುಗಳಲ್ಲಿ ತೊಡಗಿಸಿಕೊಳ್ಳುವವರು ಕೃಷಿಯೊಂದಿಗೆ ನೇರೆ ಸಂಪರ್ಕವಿದ್ದವರೇ ಅಗಿರುತ್ತಿದ್ದರು. ಕರ್ನಾಟಕವು ಬ್ರಿಟಿಷ್ ವಸಾಹತುವಾಗಿ ಪರಿವರ್ತನೆಗೊಂಡ ಬಳಿಕ ಇಲ್ಲಿನ ಗ್ರಾಮ ಮತ್ತು ನಗರ ಜೀವನಗಳೆರಡರಲ್ಲೂ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು.

ಬ್ರಿಟಿಷರಿಗೆ ಭಾರತವನ್ನು ಕೈಗಾರಿಕಾ ಪ್ರದೇಶವನ್ನಾಗಿ ಪರಿವರ್ತಿಸುವುದರಲ್ಲಾಗಲಿ ಅಥವಾ ನಗರೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸುವುದರಲ್ಲಾಗಲಿ ಆಸಕ್ತಿ ಇರಲಿಲ್ಲ. ಬ್ರಿಟಿಷರು ಇಂಗ್ಲೆಂಡ್‌ನಲ್ಲಿ ಈ ಎರಡೂ ವ್ಯವಸ್ಥೆಗಳನ್ನು ಅನುಭವಿಸಿದವರೇ ಆಗಿದ್ದು, ಆ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಪೂರಕ ವ್ಯವಸ್ಥೆಯನ್ನು ಭಾರತದಲ್ಲಿ ನಿರ್ಮಿಸುವುದು ಅದರ ಉದ್ದೇಶವಾಗಿತ್ತು. ಅಂದರೆ, ಭಾರತದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಹಾಗೂ ಇಲ್ಲಿರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದೇ ಇರುವುದು. ಭಾರತದ ಕೈಗಾರಿಕಾ ಹಿಂದುಳಿದಿರುವಿಕೆಯನ್ನು ಬ್ರಿಟಿಷರು ಪ್ರಜ್ಞಾಪೂರ್ವಕವಾಗಿಯೇ ಪ್ರೋತ್ಸಾಹಿಸಿದರು, ಇದರಿಂದ ಬ್ರಿಟಿಷ್ ಸರಕಾರಕ್ಕೆ ಲಾಭ ಹೆಚ್ಚಾಗುತ್ತಿತ್ತೇ ವಿನಾ ಕಡಿಮೆಯಾಗುತ್ತಿರಲಿಲ್ಲ. ಯುರೋಪಿನ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳನ್ನು ಇಲ್ಲಿಂದ ರಫ್ತು ಮಾಡುವುದು ಹಾಗೂ ಅಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು ಅವರ ವಸಾಹತು ನೀತಿಗಳಲ್ಲಿ ಒಂದಾಗಿತ್ತು. ಈ ಕಾರಣಗಳಿಂದಾಗಿ ಬಂದರು ಪಟ್ಟಣಗಳು ಬಿರುಸಿನ ವ್ಯಾಪಾರ ನಡೆಸುವ ಕೇಂದ್ರಗಳಾದವು. ಯುರೋಪಿಗೆ ಬೇಕಾದ ವಸ್ತುಗಳನ್ನು ರಫ್ತು ಮಾಡುವ ಹಾಗೂ ಅಲ್ಲಿಂದ ಸಿದ್ಧವಾದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಕೆಲಸವನ್ನು ಬಂದರು ಪಟ್ಟಣಗಳು ಮಾಡಿದವು. ಈ ಪ್ರಕ್ರಿಯೆ ಸ್ಥಳೀಯವಾಗಿ ಎಷ್ಟರಮಟ್ಟಿಗೆ ಸಹಕಾರಿಯಾಯಿತು ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತದೆ. ಬ್ರಿಟಿಷರು ಇಂಗ್ಲೆಂಡಿನಲ್ಲೂ ಹಾಗೂ ಕರ್ನಾಟಕದಲ್ಲೂ ಏಕಪ್ರಕಾರವಾಗಿ ಇದರ ಲಾಭವನ್ನು ಪಡೆದುಕೊಂಡರು.

ಇಂಗ್ಲೆಂಡಿನ ಕೈಗಾರೀಕರಣವನ್ನು ಹಾಗೂ ಆ ಮೂಲಕ ನಗರೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸುವ, ಅಲ್ಲಿನ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವ, ಇತರ ದೇಶಗಳೊಂದಿಗೆ ಲಾಭದಾಯಕ ವ್ಯಾಪಾರ ನಡೆಸುವ ಉದ್ದೇಶಗಳನ್ನು ಇಟ್ಟುಕೊಂಡು ಭಾರತದಲ್ಲಿ ಬಲವಂತವಾಗಿ ಕೃಷಿಯನ್ನು ವಾಣಿಜ್ಯೀಕರಿಸುವ ಪ್ರಯತ್ನವನ್ನು ಬ್ರಿಟಿಷರು ಮಾಡಿದರು. ಕೃಷಿಯನ್ನು ವಾಣಿಜ್ಯೀಕರಿಸುವ ಬ್ರಿಟಿಷರ ನೀತಿಗೆ ಕರ್ನಾಟಕ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಯಿತು. ಇದರರ್ಥ ಕೃಷಿ ಪ್ರದೇಶಗಳೆಲ್ಲವೂ ಅಭಿವೃದ್ಧಿ ಹೊಂದಿದವು ಎಂದಲ್ಲ. ಆಯಾ ಪ್ರದೇಶದ ಭೌಗೋಳಿಕತೆ, ಫಲವತ್ತತೆ ಹಾಗೂ ಬ್ರಿಟಿಷರ ವಸಾಹತುಶಾಹಿ ಅವಶ್ಯಕತೆಗಳಿಗನುಗುಣವಾಗಿ ಆಯ್ದ ಕೆಲವು ಪ್ರದೇಶಗಳು ಈ ರೀತಿಯ ಹೊಸ ಪ್ರಯೋಗಕ್ಕೆ ಒಳಗಾದವು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ತಳಹದಿ ವ್ಯಾಪಾರ ವಾಣಿಜ್ಯವಾಗಿದ್ದು, ಅದು ಕೃಷಿಯನ್ನು ಅವಲಂಬಿಸಿತ್ತು. ಪರೋಕ್ಷವಾಗಿ ಅದು ನಗರ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಯಿತು.

ಕೃಷಿಯನ್ನು ವಾಣೀಜ್ಯೀಕರಿಸುವುದರ ಜೊತೆ ಜೊತೆಗೆ ಸಾರಿಗೆ ವ್ಯವಸ್ಥೆಯಲ್ಲೂ ಅನೇಕ ಬದಲಾವಣೆಗಳನ್ನು ತರಲಾಯಿತು. ಘಟ್ಟ ರಸ್ತೆಗಳ ನಿರ್ಮಾಣ, ರೈಲ್ವೆಯ ಪ್ರವೇಶ, ನದಿಗಳ ಬಳಕೆ, ಬಂದರು ಪಟ್ಟಣಗಳ ಮೂಲಕ ಸಮುದ್ರದ ಬಳಕೆ ಮುಂತಾದವು ಪೇಟೆ ಪಟ್ಟಣಗಳು ಬಿರುಸಿನ ವ್ಯಾಪಾರ ವಾಣಿಜ್ಯದ ಕೇಂದ್ರಗಳಾಗುವಂತೆ ಮಾಡಿದವು. ಹೀಗಾಗಿ ಕೃಷಿಯ ವಾಣಿಜ್ಯೀಕರಣಕ್ಕೂ ಪೇಟೆ-ಪಟ್ಟಣಗಳ ಅಭಿವೃದ್ಧಿಗೂ ಸಂಬಂಧವಿತ್ತು. ಕೃಷಿಯು ಒಂದು ಉದ್ಯಮವಾಗಿ ಕಂಡುಬರಲಾರಂಭಿಸಿತು. ವಸಾಹತು ಆಳ್ವಿಕೆ ಆರಂಭಗೊಂಡ ನಂತರ ಪಶ್ಚಿಮ ಘಟ್ಟಗಳು ರಬ್ಬರ್, ತಂಬಾಕು, ಟೀ, ಕಾಫಿ ತೋಟಗಳಾಗಿ ಪರಿವರ್ತನೆಗೊಳ್ಳಲಾರಂಭಿಸಿದವು. ವಾಣಿಜ್ಯ ಬೆಳೆ ಬೆಳೆಯುವ ಪ್ರವೃತ್ತಿ ಇಲ್ಲಿಂದ ಆರಂಭಗೊಂಡಿತು. ಹೀಗೆ ವಸಾಹತು ಕರ್ನಾಟಕದ ಅರ್ಥವ್ಯವಸ್ಥೆಯು ಸೀಮಿತ ಪ್ರದೇಶಗಳಲ್ಲಿ ವ್ಯವಸ್ಥಿತವಾದ ಬಂಡವಾಳಶಾಹಿ ಬೆಳವಣಿಗೆಗೆ ಆಸ್ಪದ ನೀಡಿತು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ತೋಟದ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. ಈ ಪ್ರಕ್ರಿಯೆ ಭಾರತದಾದ್ಯಂತ ಕಂಡುಬಂತು. ಅಸ್ಸಾಂ, ಬಂಗಾಳ, ಅಹಮದಾಬಾದ್, ಮುಂಬಯಿ, ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ , ಚಿಕ್ಕಮಗಳೂರು, ಧಾರವಾಡ, ದಾವಣಗೆರೆ ಮುಂತಾದ ಪ್ರದೇಶಗಳಲ್ಲಿ ಪ್ಲಾಂಟೇಷನ್ ಆರ್ಥಿಕತೆ ಕಾಣಿಸಿಕೊಂಡಿತು.

ಕೃಷಿಯನ್ನು ವಾಣಿಜ್ಯೀಕರಿಸುವ ಬ್ರಿಟಿಷರ ನೀತಿ ಅವರ ಆಳ್ವಿಕೆಯುದ್ದಕ್ಕೂ ಮುಂದುವರಿಯಿತು. ಇದರಿಂದಾಗಿ ಕೃಷಿಯ ವಿಸ್ತರಣೆ ಕಂಡುಬಂತು. ಮುಖ್ಯಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿಯನ್ನು ವಿಸ್ತರಿಸಲಾಯಿತು. ಬ್ರಿಟಿಷರ ಆಗಮನವಾದ ಬಳಿಕ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲವು ಮೂಲೆಗುಂಪಾದವು. ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿ ಭಾರತದ ಕೈಗಾರಿಕೆಗಳ ಮೇಲೆ ಒಳ್ಳೆಯ ಪರಿಣಾಮಗಳನ್ನೇನೂ ಬೀರಲಿಲ್ಲ. ಹೀಗಾಗಿ ಸ್ಥಳೀಯ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಕುಶಲಕರ್ಮಿಗಳು ನಿರುದ್ಯೋಗಿಗಳಾಗಬೇಕಾಗಿ ಬಂತು. ಅವರೆಲ್ಲರೂ ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಮತ್ತು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಒತ್ತಾಯಕ್ಕೆ ಒಳಗಾದರು. ಬ್ರಿಟಿಷರಿಗೆ ಇದು ಅನುಕೂಲವಾಗಿಯೇ ಪರಿಣಮಿಸಿತು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ದೊಡ್ಡ ದೊಡ್ಡ ಎಸ್ಟೇಟ್‌ಗಳು ನಿರ್ಮಾಣವಾಗುತ್ತಿದ್ದ ಆ ಸಂದರ್ಭದಲ್ಲಿ ಕೂಲಿ ಕೆಲಸಗಾರರ ಅವಶ್ಯಕತೆಯಿತ್ತು.

ಬ್ರಿಟಿಷರ ವಾಣಿಜ್ಯ ಕೃಷಿಯ ಪ್ರಯತ್ನಗಳಿಗೆ ಬಲ ಬಂದದ್ದು ೧೮೬೧ರ ನಂತರ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆಯಲು ಭೂಮಿಯ ತಾಕುಗಳನ್ನು ಹರಾಜು ಮಾಡಲಾಯಿತು. ಮಾರ್ಕ್ ಕಬ್ಬನ್ ಕಾಫಿ ಬೇಸಾಯವನ್ನು ಪರಿಚಯ ಮಾಡಿಸುವ ಪ್ರಯತ್ನಪಟ್ಟನು. ಬ್ರಿಟಿಷರು ವಾಣಿಜ್ಯ ಬವೆಳೆಗಳಲ್ಲೂ ತಮಗೆ ಲಾಭ ತರುವಂಥ ಬೆಳೆಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟರು. ಕರ್ನಾಟಕದಲ್ಲಿ ಹತ್ತಿಯನ್ನು ಹಿಂದಿನಿಂದಲೂ ಬೆಳೆಯಲಾಗುತ್ತಿತ್ತು ಹಾಗೂ ಹತ್ತಿಗೆ ಸಂಬಂಧಿಸಿದ ಕಾರ್ಖಾನೆಗಳೂ ಇದ್ದವು. ಹತ್ತಿ ನೂಲು ತೆಗೆಯುವುದು, ಹತ್ತಿ ಬಟ್ಟೆ ತಯಾರಿಕೆ ಮುಂತಾದ ಕೆಲಸಗಳಲ್ಲಿ ಅನೇಕರು ತೊಡಗಿಕೊಂಡಿರುತ್ತಿದ್ದರು. ೧೮೬೦ರ ದಶಕದಲ್ಲಿ ಅಮೆರಿಕಾದಲ್ಲಾದ ಆಂತರಿಕ ಕಲಹಕ್ಕೂ ಕರ್ನಾಟಕದ ಹತ್ತಿ ಉದ್ಯಮಕ್ಕೂ ನೇರ ಸಂಬಂಧವಿದೆ. ಯುರೋಪಿನ ಹತ್ತಿ ಗಿರಣಿಗಳಿಗೆ ಅಮೆರಿಕಾದಿಂದ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಪೂರೈಕೆಯಾಗುತ್ತಿತ್ತು. ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡು ಹತ್ತಿ ಪೂರೈಕೆಯಲ್ಲಿ ವ್ಯತ್ಯಯಗಳು ಕಾಣಿಸಿಕೊಂಡಾಗ ಸಹಜವಾಗಿಯೇ ಯುರೋಪಿನ ಹತ್ತಿ ವರ್ತಕರ ಹಾಗೂ ಹತ್ತಿ ಮಿಲ್ಲುಗಳ ದೃಷ್ಟಿ ಭಾರತದತ್ತ ಹೊರಳಿತು ಹತ್ತಿ ಬೆಳೆಯುತ್ತಿದ್ದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಯಿತು. ಧಾರವಾಡ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು, ಉತ್ತರ ಕರ್ನಾಟಕದ ಕೆಲಭಾಗಗಳು ಹಾಗೂ ಚಿತ್ರದುರ್ಗದ ದಾವಣಗೆರೆ ಮುಂತಾದ ಪ್ರದೇಶಗಳಲ್ಲಲಿ ಹತ್ತಿ ಬೆಳೆ ವ್ಯಾಪಕವಾಗಿ ಹಬ್ಬಿತು. ಇಲ್ಲಿನ ಕಚ್ಚಾ ಹತ್ತಿಗೆ ಲಂಕಶೈರ್ ಮತ್ತು ಮ್ಯಾನ್‌ಚೆಸ್ಟರುಗಳಲ್ಲಿ ಹೆಚ್ಚಿನ ಬೇಡಿಕೆ ಇತ್ತು. ವಿದೇಶಿ ತಳಿಗಳು ಈ ಪ್ರದೇಶಗಳಲ್ಲಿ ಬಳಕೆಗೊಂಡವು. ಹತ್ತಿಗೆ ಸಂಬಂಧಿಸಿದ ಕಾರ್ಖಾನೆಗಳೂ ಆರಂಭಗೊಂಡವು. ೧೯೦೪ರಲ್ಲಿ ಧಾರವಾಡದಲ್ಲಿ ಹತ್ತಿ ಬಿತ್ತನೆ ಕೋಠಿ ಆರಂಭವಾಯಿತು. ರೈಲ್ವೆ ಅಭಿವೃದ್ಧಿಯ ಪರಿಣಾಮವಾಗಿ ಹತ್ತಿ ಮುಂತಾದ ಪದಾರ್ಥಗಳು ಗ್ರಾಮೀಣ ಪ್ರದೇಶಗಳಿಂದ ಮಾರುಕಟ್ಟೆಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಯಿತು.

ಮೈಸೂರಿಗೆ ಹತ್ತಿಯನ್ನು ಧಾರವಾಡ ಮತ್ತು ಬಳ್ಳಾರಿಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಧಾರವಾಡವು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿದ ಮೇಲೆ ಬ್ರಿಟಿಷರು ೧೮೧೯, ೧೮೨೯ ಮತ್ತು ೧೮೬೧-೬೨ರಲ್ಲಿ ಮುಂಬಯಿ ಕರ್ನಾಟಕದಲ್ಲಿ ಅಮೆರಿಕನ್ ಹತ್ತಿಯನ್ನು ಬಿತ್ತನೆ ಮಾಡಿ ನೋಡಲಾಯಿತು. ಬೆಳಗಾವಿಯಲ್ಲೂ ಆ ಪ್ರಯೋಗವನ್ನು ಮಾಡಲಾಯಿತು. ಆದರೆ ಧಾರವಾಡದಲ್ಲಿ ಅದು ಹೆಚ್ಚು ಯಶಸ್ವಿಯಾಯಿತು. ಅಮೆರಿಕಾದ ಹತ್ತಿ ಗಿರಣಿಗಳು ದಖ್ಖನ್ ಮತ್ತು ಬಾಂಬೆ ಕರ್ನಾಟಕದಲ್ಲಿ ಬೆಳೆದ ಹತ್ತಿಯನ್ನು ತರಿಸಿಕೊಳ್ಳುತ್ತಿದ್ದರು. ಆದರೆ ಹತ್ತಿಗಿದ್ದ ಬೇಡಿಕೆ ಮತ್ತು ಅದರ ವ್ಯಾಪಾರದಲ್ಲಾಗುತ್ತಿದ್ದ ಲಾಭವನ್ನು ನೋಡಿದರೆ ರೈತರಿಗೆ ಅದರಿಂದ ಲಾಭವಾಗಬೇಕಿತ್ತು. ರೈತರಿಗಾದ ಲಾಭಾಂಶ ಒಂದೇ ತೆರನಾಗಿರಲಿಲ್ಲ. ಅವು ಏರುಪೇರಾಗುತ್ತಿದ್ದವು. ಬ್ರಿಟಿಷರೊಂದಿಗೆ ಹಾಗೂ ಹತ್ತಿ ಗಿರಣಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದ ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದರು. ಮಧ್ಯವರ್ತಿಗಳ ಮೂಲಕ ವ್ಯವಹರಿಸುತ್ತಿದ್ದ ರೈತರಿಗೆ ಹೆಚ್ಚಿನ ಲಾಭಗಳಾಗುತ್ತಿರಲಿಲ್ಲ. ಗುಲ್ಬರ್ಗ, ಧಾರವಾಡ, ಬೆಳಗಾಂ, ದಾವಣಗೆರೆ ಮುಂತಾದ ಪ್ರದೇಶಗಳಲ್ಲಿ ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳುವುದಕ್ಕೆ ಹತ್ತಿ ವ್ಯಾಪಾರ ಮತ್ತು ಹತ್ತಿಗೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆ ಕಾರಣವಾಯಿತು.

ವಾಣಿಜ್ಯ ಬೆಳೆಗಳಲ್ಲಿ ಕಾಫಿ ಜಗತ್ತಿನಾದ್ಯಂತ ದೊಡ್ಡ ಸ್ಥಾನವನ್ನು ಪಡೆದುಕೊಂಡಿತ್ತು. ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಮುಂತಾದೆಡೆಗಳಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಮೈಸೂರಿನಲ್ಲಿ ಕಾಫಿ ಪ್ಲಾಂಟರರಲ್ಲಿ ಮುಕ್ಕಾಲು ಜನ ಭಾರತೀಯರಾಗಿದ್ದರು. ೧೮೬೦ರಲ್ಲಿ ಸಮಕಾಲೀನ ಪ್ಲಾಂಟರನೊಬ್ಬನು ಹೀಗೆ ಬರೆದನು, “ಈಗ ಮೈಸೂರು ಯುರೋಪಿಯನ್ ನೆಲಸಿಗರು, ಕಾಫಿ ಪ್ಲಾಂಟರರು ಮತ್ತು ಇತರರಿಂದ ತುಂಬಿಹೋಗಿದೆ. ಪ್ರತಿದಿನವೂ ಅವರ ಸಂಖ್ಯೆ ಹೆಚ್ಚುತ್ತಿದೆ” ಸರ್ ಮಾರ್ಕ್ ಕಬ್ಬನ್ ಕಾಫಿ ಬೆಳೆಯುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದನು. ಕಾಫಿಯನ್ನು ನೆಟ್ಟು ಬೇಸಾಯ ಮಾಡಲು ಅಪೇಕ್ಷಿಸುವ ಎಲ್ಲರಿಗೂ ಕಬ್ಬನ್ ಭೂಮಿಯನ್ನು ಕೊಟ್ಟನು.

ಕಾಫಿ ವ್ಯವಸಾಯವು ಕೊಡಗಿನಲ್ಲಿ ಲಾಭದಾಯಕವಾಗಿ ಕಂಡುಬಂತು. ಕೊಡಗಿನಲ್ಲಿ ಕಾಫಿ ಬೆಳೆಯನ್ನು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿದವರು ಯುರೋಪಿನ ತೋಟಗಾರರು ಡಾಕ್ಟರ್ ಫೌಲರ್ ಎಂಬಾತ ಮಡಿಕೇರಿ ಕಾಫಿ ತೋಟವೆಂಬ ಹೆಸರಿನ ತೋಟವನ್ನು ೧೮೫೪ರಲ್ಲಿ ಮಡಿಕೇರಿಯ ಹತ್ತಿರ ಹೊರಮನೆಯಲ್ಲಿ ಆರಂಭಿಸಿದನು. ೧೮೫೫ರಲ್ಲಿ ಹರ್ಬರ್ಟ್ ಮ್ಯಾನ್ ಸಂಪಾಜೆ ರಸ್ತೆಯ ಬದಿಯ ಕಾಡಿನಲ್ಲಿ, ಡೊನಾಲ್ಡ್ ಸ್ಟೀವಾರ್ಟನು ಅಬ್ಬಿ ಜಲಪಾತಕ್ಕೆ ಹೋಗುವ ದಾರಿ ಬದಿಯಲ್ಲಿ, ೧೮೫೬ರಲ್ಲಿ ಡಾಕ್ಟರ್ ಮ್ಯಾಕ್ಸ್‌ವೆಲ್ಲನು ಪೆರಂಬಾಡಿಯ ಹತ್ತಿರದಲ್ಲಿ, ೧೮೫೭ರಲ್ಲಿ ಕ್ರೈಸ್ತ ಪಾದ್ರಿ ಕೌಂಡಿನ್ಯನು ಆನಂದಪುರದಲ್ಲಿ ಕಾಫಿ ತೋಟಗಳನ್ನು ತೆರೆದರು. ಹೀಗೆ ಕೊಡಗಿನಲ್ಲಿ ಕಾಫಿ ತೋಟಗಾರಿಕೆಯು ಲಾಭದಾಯಕ ಉದ್ದಿಮೆಯಾಗಿ ಬೆಳೆಯಿತು. ಕಾಫಿಗೆ ಸಂಬಂಧಿಸಿದ ಕೆಲವೊಂದು ಕೈಗಾರಿಕೆಗಳೂ ಸ್ಥಾಪನೆಗೊಂಡವು.

ಮೈಸೂರು ರಾಜ್ಯದಲ್ಲಿ ಕಬ್ಬಿನ ಬೇಸಾಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತು. ಮಾರಿಷಸ್, ಚೈನಾ ಮತ್ತು ದಕ್ಷಿಣ ಸಮುದ್ರ ಪ್ರದೇಶಗಳಿಂದ ಹೊಸ ಮಾದರಿಯ ಕಬ್ಬು ತಳಿಗಳನ್ನು ತರಿಸಿ ಮೈಸೂರಿನಲ್ಲಿ ಬೆಳೆಯಲಾಗುತ್ತಿತ್ತು. ಮೈಸೂರಿನಲ್ಲಿ ಉತ್ಪಾದನೆಯಾಗುತ್ತಿದ್ದ ರೇಷ್ಮೆ ಸ್ಥಳೀಯ ಜನರ ಅಗತ್ಯಗಳನ್ನು ಪೂರೈಸುತ್ತಿದ್ದುದೇ ಅಲ್ಲದೆ ಮಧುರೆ, ತಂಜಾವೂರು, ಕೊಯಮತ್ತೂರು, ಬಳ್ಳಾರಿ ಮತ್ತು ಧಾರವಾಡಗಳಿಗೂ ಹೋಗುತ್ತಿತ್ತು. ಏಲಕ್ಕಿ ವ್ಯಾಪಾರವು ಬ್ರಿಟಿಷರ ಗಮನವನ್ನು ಸೆಳೆಯಿತು. ಮೈಸೂರು ಮತ್ತು ಕೊಡಗುಗಳಲ್ಲಿ ಏಲಕ್ಕಿಯನ್ನು ಹೆಚ್ಚು ಉತ್ಪಾದಿಸಲಾಗುತ್ತಿತ್ತು. ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳ ಇಳಿಜಾರುಗಳಲ್ಲಿ ಕಾಫಿ, ಟೀ, ಕಿತ್ತಳೆ, ಏಲಕ್ಕಿ, ಮೆಣಸು ಮುಂತಾದ ವಾಣಿಜ್ಯ ಬೆಳೆಯಲಾಗುತ್ತಿತ್ತು. ತಂಬಾಕು, ಶ್ರೀಗಂಧ, ಕರಿಮೆಣಸು, ಅಡಿಕೆ, ತೆಂಗು, ವೀಳ್ಯದೆಲೆ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ತಂಬಾಕು ಮತ್ತು ಶ್ರೀಗಂಧ ಮೈಸೂರು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಮೈಸೂರು ಮತ್ತು ಕೆನರಾದ ವರ್ತಕರು ಈ ವ್ಯಾಪಾರದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಕರಿಮೆಣಸು, ಅಡಿಕೆ, ತೆಂಗು, ಏಲಕ್ಕಿ ಮುಂತಾದ ನಗದು ಬೆಳೆಗಳನ್ನು ಮಾರುಕಟ್ಟೆಗೋಸ್ಕರವಾಗಿಯೇ ಬೆಳೆಯಲಾಗುತ್ತಿತ್ತು. ಭತ್ತವೂ ಇಲ್ಲಿನ ಪ್ರಮುಖ ಬೆಳೆಯಾಗಿತ್ತು.

ಪ್ಲಾಂಟೇಷನ್‌ಗಳು ಬೃಹತ್ ಪ್ರಮಾಣದ ಬಂಡವಾಳಶಾಹಿ ಉತ್ಪಾದನಾ ವಿಧಾನವನ್ನು ಜಾರಿಗೆ ತಂದವು. ಬಂಡವಾಳದ ಕೊರತೆಯಿಂದಾಗಿ ಸ್ಥಳೀಯ ರೈತರು ಈ ನೂತನ ಪ್ರಯೋಗಗಳಲ್ಲಿ ಹೆಚ್ಚಾಗಿ ಭಾಗಿಗಳಾಗಲು ಸಾಧ್ಯವಾಗಲಿಲ್ಲ. ಈ ವ್ಯವಸ್ಥೆಯು ಕೆಲವು ವರ್ಗದಾರರ ಅಥವಾ ಸ್ವತಂತ್ರ ಭೂಮಿ ಹೊಂದಿದವರ ಮತ್ತು ಪರಾವಲಂಬಿ ಜಮೀನುದಾರರ ಶ್ರೀಮಂತಿಕೆಗೆ ಇನ್ನಷ್ಟು ಇಂಬುಕೊಟ್ಟಿತು. ಬ್ರಿಟಿಷರ ಈ ನೀತಿ ಕೆಲವೇ ವರ್ಗದಾರರ ಬೆಳವಣಿಗೆಗೆ ಅನುಕೂಲಕರವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಾಯಕ್ಕೆ ಒಳಗಾಗಿದ್ದರು. ಇದು ಅನೇಕ ರೀತಿಯ ಕೆಟ್ಟ ಪರಿಣಾಮಗಳನ್ನು ಉಂಟುಮಾಡಿತು. ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಸಣ್ಣ ಹಿಡುವಳಿದಾರರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಲಾಭಗಳಾಗುತ್ತಿರಲಿಲ್ಲ. ಆಹಾರ ಧಾನ್ಯಗಳ ಬದಲು ಹತ್ತಿ, ರಬ್ಬರ್, ಕಾಫಿ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಬ್ರಿಟಿಷರಿಗೆ ಲಾಭದಾಯಕವಾಗಿತ್ತು.

ಬ್ರಿಟಿಷರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶಗಳಿಗೆ ಬೇರೆ ಪ್ರದೇಶಗಳಲ್ಲಿ ಬೆಳೆಯುವ ಆಹಾರ ಧಾನ್ಯಗಳನ್ನು ರವಾನಿಸಿ ಅಲ್ಲಿಂದ ವಾಣಿಜ್ಯ ಬೆಳೆಗಳನ್ನು ತರಿಸಿಕೊಳ್ಳುತ್ತಿದ್ದರು. ಇದು ಸ್ಥಳೀಯ ಕೃಷಿ ಆರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿತು.ಬಲವಂತದ ವಾಣಿಜ್ಯೀಕರಣ ಪ್ರಕ್ರಿಯೆಯಿಂದಾಗಿ ಆಹಾರ ಧಾನ್ಯಗಳ ಬೆಳೆ ಕಡಿಮೆಯಾಯಿತು. ಈ ಪ್ರಕ್ರಿಯೆಯು ಕ್ಷಾಮ ಪರಿಸ್ಥಿತಿಯನ್ನು ಉಂಟುಮಾಡಿತು ಹಾಗೂ ಉಲ್ಬಣಗೊಳಿಸಿತು. ಕ್ಷಾಮದ ಸಂದರ್ಭದಲ್ಲೂ ಆಹಾರ ಧಾನ್ಯಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತು. ಉದಾಹರಣೆಗೆ, ೧೮೭೬-೭೮ರಲ್ಲಿ ಮೈಸೂರಿನಲ್ಲಿ ಕ್ಷಾಮ ತಲೆದೋರಿದ ಸಂದರ್ಭ. ಆ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತಗಾರರು ರೈತರ ಸಮಸ್ಯೆಗಳತ್ತ ಗಮನ ಹರಿಸಲೇ ಇಲ್ಲ. ಕ್ಷಾಮದ ಸಂದರ್ಭದಲ್ಲೂ ಮೈಸೂರಿನಿಂದ ಆಹಾರ ಧಾನ್ಯಗಳನ್ನು ಧಾರವಾಡ ಮತ್ತು ಬಳ್ಳಾರಿಗೆ ಕಳುಹಿಸಿ ಅಲ್ಲಿಂದ ಹತ್ತಿಯನ್ನು ತರಿಸಿಕೊಳ್ಳುತ್ತಿದ್ದರು. ಬ್ರಿಟಿಷರು ಮುಕ್ತ ವ್ಯಾಪಾರ ನೀತಿಯನ್ನು ಅನುಸರಿಸಿದರು. ಧಾನ್ಯಗಳನ್ನು ತಮಗೆ ಇಷ್ಟ ಬಂದ ಹಾಗೆ ಮಾರಲು ಅಥವಾ ಬೇರೆಡೆಯಿಂದ ಕೊಂಡುತರಲು ಖಾಸಗಿ ವರ್ತಕರಿಗೂ, ರೈತರಿಗೂ ಮುಕ್ತ ಅವಕಾಶವನ್ನು ನೀಡಿದರು. ಇದರ ಲಾಭವನ್ನು ಮಧ್ಯವರ್ತಿಗಳು ಹೆಚ್ಚಾಗಿ ಪಡೆದುಕೊಳ್ಳುವಂತಾಯಿತು. ವಾಣಿಜ್ಯ ಬೆಳಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಪ್ರತಿಯೊಬ್ಬರನ್ನೂ ಸಾಧ್ಯವಿದ್ದೆಡೆಗಳಲ್ಲೆಲ್ಲಾ ಈ ಬೆಳೆಗಳನ್ನು ಬೆಳೆಯುವಂತೆ ಮಾಡುವುದೇ ಬ್ರಿಟಿಷರ ಈ ನೀತಿಯ ಹಿಂದಿನ ಉದ್ದೇಶವಾಗಿತ್ತು.

ಕೃಷಿಯ ವಾಣಿಜ್ಯೀಕರಣ ಮತ್ತು ಮಾರುಕಟ್ಟೆಯ ಪ್ರವೇಶ ಗ್ರಾಮೀಣ ಅರ್ಥವ್ಯವಸ್ಥೆಯಂತೆ ನಗರ ಅರ್ಥವ್ಯವಸ್ಥೆಯ ಮೇಲೂ ಅನೇಕ ರೀತಿಯ ಪರಿಣಾಮಗಳನ್ನು ಬೀರಿತು. ವ್ಯಾಪಾರ ವಾಣಿಜ್ಯ ಬಿರುಸಿನಿಂದ ನಡೆಯುವುದಕ್ಕೆ ಹಾಗೂ ಕೆಲವು ಹೊಸ ಮಾರುಕಟ್ಟೆಗಳು ಮತ್ತು ಕೈಗಾರಿಕೆಗಳು ಹುಟ್ಟಿಕೊಳ್ಳುವುದಕ್ಕೂ ಇದು ಕಾರಣವಾಯಿತು. ವಾಣಿಜ್ಯ ಬೆಳೆಗಳು ಗ್ರಾಮೀಣ ಪ್ರದೇಶಗಳಿಂದ ಸ್ಥಳೀಯ, ಹೊರರಾಜ್ಯಗಳ ಹಾಗೂ ಹೊರದೇಶಗಳ ಮಾರುಕಟ್ಟೆಗಳಿಗೆ ಹೋದವು. ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ವರ್ಷಗಳಲ್ಲಿ ವಾಣಿಜ್ಯ ಬೆಳೆಗಳೇ ರಸ್ತೆ, ರೈಲು ಮತ್ತು ಜಲಮಾರ್ಗಗಳ ಮೂಲಕ ರಫ್ತಾಗಿರುವುದು ತಿಳಿದುಬರುತ್ತದೆ. ಹೀಗಾಗಿ ಮಾರುಕಟ್ಟೆ ಕೇಂದ್ರಿತ ಕೃಷಿನೀತಿ ಜಾರಿಗೊಳಿಸಿ ಕೈಗಾರಿಕೀಕರಣ ಮತ್ತು ನಗರೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಯಿತು.

ಸಂಪರ್ಕ ಸಾಧನಗಳ ಅಭಿವೃದ್ಧಿ ಹಾಗೂ ತೆರಿಗೆಗಳನ್ನು ನಗದು ರೂಪದಲ್ಲೇ ಪಾವತಿ ಮಾಡತಕ್ಕದ್ದೆಂದು ಕೇಂದ್ರ ಆಡಳಿತವು ಒತ್ತಯಪಡಿಸಿತ್ತು. ಇವುಗಳಿಂದ ಕೂಡ ವಾಣಿಜ್ಯೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಯಿತು. ವ್ಯಾಪಾರಸ್ಥರು ಆಮದು ರಫ್ತು ವ್ಯಾಪಾರಕ್ಕೆ ಹಣವನ್ನು ಬಳಸಿದರು. ತೆರಿಗೆ ಪಾವತಿಸಲೂ ಹಣವನ್ನು ಬಳಸಲಾಯಿತು. ಈ ಕಾರಣಕ್ಕಾಗಿ ಅನೇಕ ಟಂಕಸಾಲೆಗಳು ಅಸ್ತಿತ್ವಕ್ಕೆ ಬಂದವು. ಹಿಂದಿದ್ದ ಮೊಹರಾ ಮುಂತಾದವುಗಳನ್ನು ನಾಣ್ಯಗಳನ್ನಾಗಿ ಟಂಕಸಾಲೆಗಳಲ್ಲಿ ಪರಿವರ್ತಿಸಲಾಯಿತು. ನಾಣ್ಯಗಳ ಚಲಾವಣೆ ಮಾರುಕಟ್ಟೆ ಕೇಂದ್ರಿತ ಆರ್ಥಿಕತೆಯ ಬೆಳವಣಿಗೆಯನ್ನು ಸೂಚಿಸಿತು. ವಾಣಿಜ್ಯ ಬೆಳೆಗಳು ಹೆಚ್ಚೆಚ್ಚು ಪ್ರಚಾರಗೊಂಡಾಗ ಅವುಗಳಿಗೆ ಸಂಬಂಧಿಸಿದ ಸಣ್ಣಪುಟ್ಟ ಕೈಗಾರಿಕೆಗಳೂ ಕಾಣಿಸಿಕೊಂಡವು. ಕೆಲವು ಬೃಹತ್ ಕೈಗಾರಿಕೆಗಳಾಗಿಯೂ ಬೆಳೆದವು. ಧಾರವಾಡ, ರಾಯಚೂರು, ದಾವಣಗೆರೆ ಮುಂತಾದ ಪ್ರದೇಶಗಳಲ್ಲಿ ಹತ್ತಿ ಮಿಲ್ಲುಗಳು ಅಸ್ತಿತ್ವಕ್ಕೆ ಬಂದವು ಕುಶಲಕರ್ಮಿಗಳು ಇವುಗಳಲ್ಲಿ ತೊಡಗಿಸಿಕೊಂಡರು. ಇವರು ಉತ್ಪಾದನೆ ಮತ್ತು ವ್ಯಾಪಾರ ಕ್ಷೇತ್ರಗಳೆರಡರಲ್ಲೂ ಕಾಣಿಸಿಕೊಂಡರು.

ಕೃಷಿಯ ವಾಣಿಜ್ಯೀಕರಣ ಮತ್ತು ಮಾರುಕಟ್ಟೆಯ ಪ್ರವೇಶಗಳೆರಡರಲ್ಲೂ ಮಹತ್ವದ ಪಾತ್ರವನ್ನು ವಹಿಸಿದವರು ಲೇವಾದೇವಿಗಾರರು. ಇವರನ್ನು ಮಧ್ಯವರ್ತಿಗಳೆಂಬುದಾಗಿಯೂ ಕರೆಯಲಾಗಿದೆ. ಇವರು ಬ್ರಿಟಿಷರು ಮತ್ತು ಸ್ಥಳೀಯ ರೈತರ ಮಧ್ಯೆ ಕೊಂಡಿಗಳಾಗಿ ಕೆಲಸ ಮಾಡಿದರು. ಕೆಲವು ಸಂದರ್ಭಗಳಲ್ಲಿ ಮಧ್ಯವರ್ತಿಗಳು ಬ್ರಿಟಿಷರ ಏಜೆಂಟರುಗಳಾಗಿಯೂ ಕೆಲಸ ಮಾಡಿದ್ದುಂಟು. ಇವರು ಕೃಷಿಕರಿಗೆ ಮತ್ತು ಕುಶಲಕರ್ಮಿಗಳಿಗೆ ಸಾಲದ ರೂಪದಲ್ಲಿ ಹಣವನ್ನು ನೀಡುತ್ತಿದ್ದರು. ಬಡ್ಡಿಗೆ ಹಣ ಕೊಡುವ ವ್ಯವಹಾರ ಮಾಡುತ್ತಿದ್ದವರಲ್ಲಿ ಮಾರವಾಡಿಗಳು, ಗುಜ್ಜರರು, ಗುಜರಾತಿಗಳು ಮತ್ತು ಕೊಂಕಣಿಗಳು ಪ್ರಮುಖರಾಗಿದ್ದರು. ಬಡ ರೈತರು ಭೂಮಿಯನ್ನು ಅಡವಿಟ್ಟು ಇವರಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದರು. ಸಾಲ ಮರುಪಾವತಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅವರು ಭೂಮಿಯನ್ನೇ ಕಳೆದುಕೊಳ್ಳುತ್ತಿದ್ದರು. ಹೀಗೆ ಬಡ್ಡಿ ವ್ಯವಹಾರ ನಡೆಸುತ್ತಿದ್ದವರು ಭೂಮಾಲೀಕರಾಗಿಯೂ ಪರಿವರ್ತನೆಗೊಂಡರು. ಈ ಮಧ್ಯವರ್ತಿಗಳು ಬ್ರಿಟಿಷರಿಗೂ ನೆರವಾಗುತ್ತಿದ್ದರು. ಬ್ರಿಟಿಷರು ತಮ್ಮ ಕೆಲಸಗಳನ್ನು ಇವರ ಮೂಲಕ ಮಾಡಿಸುತ್ತಿದ್ದರು. ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡುವ, ವಾಣಿಜ್ಯ ಬೆಳೆಗಳಿಗೆ ಪೂರಕವಾದ ಮಾರುಕಟ್ಟೆಗಳನ್ನು ಒದಗಿಸುವ, ಕೈಗಾರಿಕೋದ್ಯಮಿಗಳಿಗೆ, ರೈತರಿಗೆ ಮತ್ತು ವರ್ತಕರಿಗೆ ಬಂಡವಾಳವನ್ನು ಒದಗಿಸುವ ಹಾಗೂ ಆ ಮೂಲಕ ಪೇಟೆ-ಪಟ್ಟಣಗಳಲ್ಲಿ ವ್ಯಾಪಾರ-ವಾಣಿಜ್ಯ ಚುರುಕುಗೊಳ್ಳುವಂತೆ ಮಾಡುವ ಕೆಲಸವನ್ನು ಮಧ್ಯವರ್ತಿಗಳು ಮಾಡುತ್ತಿದ್ದರು. ಮಧ್ಯವರ್ತಿಗಳು ಬ್ರಿಟಿಷರಂತೆ ರೈತರನ್ನು ಸುಲಿಗೆ ಮಾಡುತ್ತಿದ್ದುದೂ ಉಂಟು. ಒಟ್ಟಾರೆಯಾಗಿ ಕೃಷಿಯ ವಾಣಿಜ್ಯೀಕರಣ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದಂತೂ ನಿಜ.