ಇಂದು ನಾವು ಹೆಸರಿಸುವ ಕರ್ನಾಟಕವು ಚರಿತ್ರೆಯುದ್ದಕ್ಕೂ ಹಲವಾರು ವಿಭಾಗಗಳಾಗಿ ವಿಭಜನೆಗೊಂಡು ಬಂದಿರುವುದನ್ನು ನಾವು ಶಾಸನಗಳು ಮತ್ತು ಸಾಹಿತ್ಯಕೃತಿಗಳಲ್ಲಿ ನೋಡಬಹುದಾಗಿದೆ. ವಿವಿಧ ಅರಸು ಮನೆತನಗಳು ಕರ್ನಾಟಕದ ವಿವಿಧ ಪ್ರದೇಶಗಳನ್ನು ತಮ್ಮ ಆಡಳಿತ ವ್ಯಾಪ್ತಿಗೆ ಸೇರಿಸಿಕೊಂಡಿದ್ದವು. ಹೀಗಾಗಿ ಕರ್ನಾಟಕದ ಗಡಿಗಳು ಪ್ರತಿಯೊಂದು ಅರಸುಮನೆತನದ ಆಳ್ವಿಕೆಯ ಸಂದರ್ಭದಲ್ಲೂ ಬದಲಾಗುತ್ತಿತ್ತು. ಕೆಲವೊಮ್ಮೆ ಕರ್ನಾಟಕದ ಗಡಿಗಳು ದಕ್ಷಿಣ ಭಾರತದ ಗಡಿಯನ್ನು ಮೀರಿದ್ದೂ ಉಂಟು. ಅದೇ ರೀತಿ ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಬಹುಭಾಗ ಕರ್ನಾಟಕದ ವ್ಯಾಪ್ತಿಗೆ ಬಂದಿತ್ತು. ಆದರೆ ಈ ಚಾರಿತ್ರಿಕ ದಾಖಲೆಗಳನ್ನು ಇಟ್ಟುಕೊಂಡು ಆ ಪ್ರದೇಶಗಳೆಲ್ಲವೂ ಕರ್ನಾಟಕ ಎಂಬುದಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಏಕೀಕರಣೋತ್ತರ ಕರ್ನಾಟಕಕ್ಕೂ ಅದಕ್ಕಿಂತ ಹಿಂದಿನ ಕರ್ನಾಟಕಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಏಕೀಕರಣಪೂರ್ವ ಕರ್ನಾಟಕಕ್ಕೆ ಅದರದ್ದೇ ಆದ ಖಚಿತವಾದ ಭೌಗೋಳಿಕ ಎಲ್ಲೆಕಟ್ಟುಗಳಿರಲಿಲ್ಲ. ಅದರ ಗಡಿಗಳು ನಿರಂತರ ಬದಲಾವಣೆಗೆ ಒಳಗಾಗುತ್ತಿದ್ದವು. ಕರ್ನಾಟಕದ ಗಡಿಗಳು ಆಯಾ ಅರಸುಮನೆತನಗಳ ಆಳ್ವಿಕೆಯ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಆಡುವ ಪ್ರದೇಶಗಳು ಹರಿದು ಹಂಚಿಹೋದಂತೆ, ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲೂ ಹರಿದು ಹಂಚಿಹೋಯಿತು.

ಬ್ರಿಟಿಷರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಟಿಪ್ಪು ಸುಲ್ತಾನನನ್ನು ಸೋಲಿಸಲು ಬ್ರಿಟಿಷರು ಮರಾಠರು ಮತ್ತು ಹೈದರಬಾದಿನ ನಿಜಾಮನೊಂದಿಗೆ ಮೈತ್ರಿ ಮಾಡಿಕೊಂಡರು. ಮಲಬಾರ್ ಮತ್ತು ಕರ್ನಾಟಕ ಕರಾವಳಿಯ ಅನೇಕ ಸಣ್ಣಪುಟ್ಟ ಅರಸುಮನೆತನಗಳು ಟಿಪ್ಪುವಿನ ವಿರುದ್ಧ ನಿಂತು ಬ್ರಿಟಿಷರಿಗೆ ನೆರವಾದರು. ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸೋತು ಸಾವನಪ್ಪಿದಾಗ ಬ್ರಿಟಿಷರು ಕರ್ನಾಟಕವನ್ನು ಮತ್ತೊಮ್ಮೆ ಮೈತ್ರಿ ಕೂಟದೊಂದಿಗೆ ಹಂಚಿಕೊಂಡರು. ೫೦ ಲಕ್ಷ ರೂಪಾಯಿ ಉತ್ಪತ್ತಿಯಿರುವ ಪ್ರದೇಶವನ್ನು ಮೈಸೂರು ಅರಸರಿಗೆ ಕೊಟ್ಟು ಮೈಸೂರು ಸಂಸ್ಥಾನವನ್ನು ನಿರ್ಮಿಸಲಾಯಿತು. ಮೈಸೂರು ಸಂಸ್ಥಾನವು ಒಡೆಯರ್‌ಗಳ ಆಳ್ವಿಕೆಗೆ ಒಳಪಟ್ಟಿತು. ಆದರೆ ಅದು ಬ್ರಿಟಿಷರ ನೇರ ಹತೋಟಿಯಲ್ಲಿದ್ದ ಆಶ್ರಿತ ಸಂಸ್ಥಾನವಾಗಿತ್ತು. ೨೪ ಲಕ್ಷ ರೂಪಾಯಿ ಕಂದಾಯ ಸಿಗುವ ಭಾಗವು ಬ್ರಿಟಿಷರಿಗೆ ಸಿಕ್ಕಿತು. ೨೪ ಲಕ್ಷ ರೂಪಾಯಿ ಕಂದಾಯ ಬರುವ ಪಾಲನ್ನು ಪೇಶ್ವೆ ರಾವ್ ಪಂಡಿತ ಪರಧಾನನಿಗೆ ಕೊಡಲಾಯಿತು. ಬ್ರಿಟಿಷರಿಗೆ ಮಂಗಳೂರು, ಬೇಕಲ ಮತ್ತು ನೀಲೇಶ್ವರ ಎಂಬ ೧,೩೩, ೬೬೨ ಕಂಠೀರವ ವರಹ ೭೧/೪ ಹಣ ಉತ್ಪತ್ತಿಯಾಗುವ ಜಿಲ್ಲೆ, ೧೧,೩೯೩ ಕಂಠೀರವ ವರಹ ೨೧/೪ ಹಣ ಉತ್ಪತ್ತಿ ಇರುವ ಕಾರ್ಕಳ ಜಿಲ್ಲೆ, ೪೮, ೩೮೯ ಕಂಠೀರವ ವರಹ ೮೧/೨ ಹಣ ಉತ್ಪತ್ತಿ ಇರುವ ಭಟ್ಕಳ ಜಿಲ್ಲೆ, ೯,೧೯೨ ಕಂಠೀರವ ವರಹ ೧/೨ ಹಣ ಉತ್ಪತ್ತಿ ಇರುವ ಹೊನ್ನಾವರ ಜಿಲ್ಲೆ ದೊರಕಿತು. ಹೀಗೆ ಈಗಿನ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಕನ್ನಡ ಜಿಲ್ಲೆಯನ್ನು ೧೭೯೯ರಲ್ಲಿ ಕ್ಯಾಪ್ಟನ್ ಮುನ್ರೋನ ಅಧೀನಕ್ಕೆ ಒಪ್ಪಿಸಲಾಯಿತು. ಈ ಮೇಲಿನ ವಿವರಗಳನ್ನು ಎಂ. ಗಣಪತಿರಾವ್ ಐಗಳ್ ಅವರು, ತಮ್ಮ ಕೃತಿ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ದಲ್ಲಿ ನೀಡಿದ್ದಾರೆ.

ಮೈಸೂರು ಬ್ರಿಟಿಷರ ವಶವಾದ ಬಳಿಕ ತುಂಗಭದ್ರೆಯ ಉತ್ತರದ ಪ್ರದೇಶ ಹಾಗೂ ಪೂರ್ವ ಘಟ್ಟದ ದಕ್ಷಿಣದ ಮತ್ತು ಪಶ್ಚಿಮಘಟ್ಟದ ಪಶ್ಚಿಮ ಪ್ರದೇಶಗಳನ್ನು ಮೈಸೂರಿನಿಂದ ಬೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಹಂಚುವುದಕ್ಕಾಗಿ ವೆಲ್ಲೆಸ್ಲಿಯು ಆಯೋಗವೊಂದನ್ನು ನೇಮಿಸಿದನು. ಅದರಲ್ಲಿ ಜನರಲ್ ಹ್ಯಾರಿಸ್, ಕರ್ನಲ್ ವೆಲ್ಲೆಸ್ಲಿ, ಹೆನ್ರಿ ವೆಲ್ಲೆಸ್ಲಿ, ಲೆ.ಕ. ಕಿರ್ಕ್ ಪ್ಯಾಟ್ರಿಕ್ ಮತ್ತು ಲೆ.ಕ. ಬ್ಯಾರಿ ಕ್ಲೋಸ್ ಇದ್ದರು. ಕಂಪೆನಿಯು ಮಲಬಾರ್, ಧರ್ಮಪುರಂ, ಕೊಯಮತ್ತೂರು, ಪೂರ್ವ ಹಾಗೂ ಪಶ್ಚಿಮ ಕರಾವಳಿಗಳ ನಡುವಣ ಪ್ರದೇಶ, ಎಲ್ಲ ಘಟ್ಟ ಮಾರ್ಗಗಳ ಪ್ರವೇಶ ಸ್ಥಾನಗಳು, ಕೋಟೆಗಳು, ಬಂದರು ಪಟ್ಟಣಗಳು, ವೈನಾಡು ಜಿಲ್ಲೆ ಹಾಗೂ ಶ್ರೀರಂಗಪಟ್ಟಣದ ಕೋಟೆ ಇವುಗಳನ್ನು ಒಳಗೊಂಡ ೬.೯ ಲಕ್ಷ ಪಗೋಡದ ವರಮಾನದ ರಾಜ್ಯವನ್ನು ತನಗಾಗಿ ಇರಿಸಿಕೊಂಡಿತು. ನಿಜಾಮನಿಗೆ ಗುತ್ತಿ, ಗುರಮಕೊಂಡ, ಚಿತ್ರದುರ್ಗದ ಕೆಲಭಾಗಗಳು, ಸಿರಾ, ನಂದಿದುರ್ಗ ಮತ್ತು ಕೋಲಾರ ದೊರಕಿತು. ಮೈಸೂರು ಮಹಾರಾಜನಿಗೆ ವಾರ್ಷಿಕ ೧೩.೫ ಲಕ್ಷ ಪಗೋಡಗಳನ್ನು ಕೊಡುವ ರಾಜ್ಯ ದೊರಕಿತು. ಕೇವಲ ೨.೬ ಲಕ್ಷ ಪಗೋಡ ವರಮಾನದ ರಾಜ್ಯ ಭಾಗವನ್ನು ಮಾತ್ರ ಮರಾಠರಿಗೆಂದು ಪ್ರತ್ಯೇಕವಾಗಿರಿಸಲಾಯಿತು. ಅದರ ಭಾಗವು ಇತರರು ಪಡೆದುದರ ಅರ್ಧಕ್ಕೂ, ಮೂರನೆ ಎರಡಕ್ಕೂ ನಡುವೆ. ಅದರಲ್ಲಿ ಹರಪನಹಳ್ಳಿ, ಸುಂದಾ, ಆನೆಗೊಂದಿ ಮತ್ತು ಕೆಲವು ಕೋಟೆಗಳು ಇದ್ದವು. ಈ ಹಂಚಿಕೆಯು ಒಪ್ಪಂದದ ಪ್ರಕಾರವೇ ಉಳಿಯಲಿಲ್ಲ. ಬ್ರಿಟಿಷರು ಕ್ರಮೇಣ ರಾಜ್ಯದ ಎಲ್ಲ ಕಡೆಗೂ ತಮ್ಮ ಅಧಿಕಾರವನ್ನು ವಿಸ್ತರಿಸಲಾರಂಭಿಸಿದರು.

ವಸಾಹತುಶಾಹಿಯ ಆಗಮನದಿಂದಾಗಿ ಕರ್ನಾಟಕವು ಹಲವು ತುಂಡುಗಳಾಗಿ ಒಡೆದು ಹೋಯಿತು. ಕರ್ನಾಟಕವನ್ನು ಮೈಸೂರು ಸಂಸ್ಥಾನ, ಹೈದರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕ ಮದರಾಸು ಕರ್ನಾಟಕ ಮುಂತಾದ ವಿವಿಧ ಭಾಗಗಳನ್ನಾಗಿ ವಿಂಗಡಿಸಲಾಯಿತು. ಹೀಗಾಗಿ ವಸಾಹತು ಆಳ್ವಿಕೆಯುದ್ದಕ್ಕೂ ಇವೆಲ್ಲವೂ ಪರಾಧೀನ ತುಂಡುಗಳಾಗಿ, ಬೇರೆ ಬೇರೆ ಬಗೆಯ ಆಡಳಿತಗಳಿಗೆ ಒಳಪಡಬೇಕಾಯಿತು. ಮೈಸೂರು ರಾಜ್ಯವು ಮಧ್ಯ ಭಾಗದಲ್ಲಿದ್ದರೆ, ಇಂದಿನ ರಾಜ್ಯದ ಕೆಲವು ಭಾಗಗಳು ಕೊಲ್ಹಾಪುರ, ಮುಧೋಳ, ಜಮಖಂಡಿ, ಜತ್ತಸಾಂಗ್ಲಿ ಮತ್ತು ಅಕ್ಕಲಕೋಟೆ ಈ ಮರಾಠಾ ನಾಯಕರ ಸಣ್ಣಪುಟ್ಟ ರಾಜ್ಯಗಳಿಗೆ ಒಳಪಟ್ಟಿದ್ದವು. ಶೋಲಾಪುರ (ಉತ್ತರ ಮತ್ತು ದಕ್ಷಿಣ), ಉತ್ತರ ಕನ್ನಡ, ಬಿಜಾಪುರ, ಬೆಳಗಾಂ, ಧಾರವಾಡ, ಮಂಗಳವೇಢ ಮತ್ತು ಆಸುಪಾಸಿನ ಪ್ರದೇಶಗಳು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿದ್ದವು. ಒಂದು ಕಡೆ ನೀಲಗಿರಿ ಮತ್ತು ಬಳ್ಳಾರಿ ಜಿಲ್ಲೆ, ಇನ್ನೊಂದು ದಕ್ಷಿಣ ಕನ್ನಡ ಇವು ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಸೇರಿಕೊಂಡಿದ್ದವು. ಗುಲ್ಬರ್ಗಾ, ಬೀದರ್, ಮತ್ತು ರಾಯಚೂರು ನಿಜಾಮನ ಆಳ್ವಿಕೆಗೆ ಒಳಪಟ್ಟಿದವು.

ಫಲವತ್ತಾದ ಹಾಗೂ ಆಯಕಟ್ಟಿನ ಪ್ರದೇಶವಾದ ಕೆನರಾ ಪ್ರಾಂತವು ಕರಾವಳಿಯ ಸಮೇತವಾಗಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಕೈ ಸೇರಿತು. ಮಲಬಾರಿನ ನೆರೆಯ ಕೆನರಾದ ಅತ್ಯಂತ ದಕ್ಷಿಣ ಭಾಗವನ್ನು ಬೇರೆಯೇ ಒಂದು ಜಿಲ್ಲೆಯಾಗಿ ರೂಪಿಸಿ ದಕ್ಷಿಣ ಕನ್ನಡ ಎಂದು ಕರೆದರು. ಅದರಲ್ಲಿ ಮಂಗಳೂರು, ಕಾಸರಗೋಡು ಮತ್ತು ನೀಲೇಶ್ವರಗಳು ಸೇರಿದ್ದವು. ೧೭೯೯ರಿಂದ ಕುಂದಾಪುರ, ಉಡುಪಿ, ಮಂಗಳೂರು, ಉಪ್ಪಿನಂಗಡಿ ಮತ್ತು ಕಾಸರಗೋಡು ತಾಲೂಕುಗಳನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ರೂಪುಗೊಳ್ಳುವವರೆಗೆ, ಇಡೀ ಬ್ರಿಟಿಷ್ ಪ್ರದೇಶವನ್ನು ಕೆನರಾ ಪ್ರಾಂತ ಎಂದು ಕರೆಯಲಾಗುತ್ತಿತ್ತು. ಕಂಪೆನಿಯು ಅದನ್ನು ವಶಪಡಿಸಿಕೊಂಡ ಕೂಡಲೇ ಕ್ಯಾಪ್ಟನ್ ಥಾಮಸ್ ಮುನ್ರೊನನ್ನು ಸೆಟ್ಲೆಮೆಂಟ್ ಅಧಿಕಾರಿಯಾಗಿ ಮತ್ತು ಕೆನರಾದ ಕಲೆಕ್ಟರ್‌ನನ್ನಾಗಿ ನೇಮಕ ಮಾಡಲಾಯಿತು. ೧೮೦೦ರಲ್ಲಿ ಕೆನರಾ ಪ್ರಾಂತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಉತ್ತರ ಮತ್ತು ದಕ್ಷಿಣ ವಿಭಾಗಗಳಿಗೆ ಇಬ್ಬರು ಬೇರೆ ಬೇರೆ ಕಲೆಕ್ಟರುಗಳನ್ನು ನೇಮಿಸಲಾಯಿತು. ಉತ್ತರದ ವಿಭಾಗಕ್ಕೆ ಹೊನ್ನಾವರ ಕೇಂದ್ರವಾದರೆ, ದಕ್ಷಿಣ ವಿಭಾಗಕ್ಕೆ ಮಂಗಳೂರು ಕೇಂದ್ರವಾಯಿತು. ಇಂದಿನ ಉಡುಪಿ ಜಿಲ್ಲೆಯ ಕುಂದಾಪುರವು ಉತ್ತರ ವಿಭಾಗಕ್ಕೆ ಸೇರಿತ್ತು. ೧೮೧೭ರಲ್ಲಿ ಮತ್ತೇ ಒಬ್ಬನೇ ಕಲೆಕ್ಟರನ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತು. ೧೮೨೬ರಲ್ಲಿ ಮತ್ತೊಮ್ಮೆ ಕೆನರಾ ಪ್ರಾಂತವು ವಿಭಜನೆಗೊಂಡಿತು. ಉತ್ತರ ಕನ್ನಡವು ಬಾಂಬೆ ಪ್ರೆಸಿಡೆನ್ಸಿಗೆ ಸೇರೆದರೆ, ದಕ್ಷಿಣ ಕನ್ನಡವು ಮದರಾಸು ಪ್ರೆಸಿಡೆನ್ಸಿಯಲ್ಲಿ ಉಳಿಯಿತು.

ಬ್ರಿಟಿಷರು ತಮಗೆ ಬೇಕಾದ ರೀತಿಯಲ್ಲಿ ಕರ್ನಾಟಕವನ್ನು ಹೇಗೆ ಬಳಸಿಕೊಂಡರು ಹಾಗೂ ಭಾಗಗಳನ್ನಾಗಿ ವಿಂಗಡಿಸಿದರು ಎನ್ನುವುದಕ್ಕೆ ೧೮೬೨ರಲ್ಲಿ ಕೆನರಾವನ್ನು ವಿಭಜಿಸಿರುವುದು ಉತ್ತಮ ಉದಾಹರಣೆಯಾಗಿದೆ. ಹತ್ತಿ ವ್ಯಾಪಾರದ ಉದ್ದೇಶದಿಂದ ಕೆನರಾವನ್ನು ವಿಭಜಿಸಲಾಯಿತು. ಯುರೋಪಿನ ಹತ್ತಿ ಗಿರಣಿಗಳಿಗೆ ಅಮೆರಿಕಾದಿಂದ ಬೇಕಾದಷ್ಟು ಹತ್ತಿ ಪೂರೈಕೆಯಾಗುತ್ತಿತ್ತು. ಅಮೆರಿಕಾದಲ್ಲಿ ಆಂತರಿಕ ಕಲಹ ಕಾಣಿಸಿಕೊಂಡಾಗ ಹತ್ತಿ ವ್ಯಾಪಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿತು. ಆ ಸಂದರ್ಭದಲ್ಲಿ ಧಾರವಾಡ, ವಿಜಾಪುರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಹತ್ತಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಹತ್ತಿಯನ್ನು ಯುರೋಪಿಗೆ ಸಾಗಿಸಲು ಉತ್ತಮ ಬಂದರಿನ ಅವಶ್ಯಕತೆಯಿತ್ತು. ಸದಾಶಿವಘಡ ಬಂದರನ್ನು ಸೂಕ್ತ ಜಾಗವೆಂದು ಆಯ್ಕೆ ಮಾಡಿ ಅದನ್ನು ಅಭಿವೃದ್ಧಿಪಡಿಸುವಂತೆ ನಿರ್ಧರಿಸಲಾಯಿತು. ಸದಾಶಿವಘಡವು ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದರಿಂದ ಮುಂಬಯಿ ಸರಕಾರವು ಬಂದರನ್ನು ಅಭಿವೃದ್ಧಿಪಡಿಸುವಂತೆ ಮದರಾಸು ಸರಕಾರವನ್ನು ಕೇಳಿಕೊಂಡಿತು. ಆದರೆ ಮದರಾಸು ಸರಕಾರವು ಈ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿಸಲಿಲ್ಲ. ಮುಂಬಯಿ ಸರಕಾರಕ್ಕೆ ಬಂದರನ್ನು ಅಭಿವೃದ್ಧಿಪಡಿಸುವಂತೆ ಮುಂಬಯಿಯ ಹತ್ತಿ ವರ್ತಕರು, ಮಂಜೆಸ್ಟರ್ ಮತ್ತು ಬಿರ್‌ಮಿಂಗ್‌ಹಾಮ್‌ನ ಹತ್ತಿ ವರ್ತಕರು ಒತ್ತಡ ಹೇರಿದರು. ಈ ಕಾರಣದಿಂದಾಗಿ ಮುಂಬಯಿ ಸರಕಾರವು ಅನಿವಾರ್ಯವಾಗಿ ಸದಾಶಿವಘಡವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕಾಯಿತು. ಇದರಿಂದಾಗಿ ೧೮೬೨ರಲ್ಲಿ ಉತ್ತರ ಕನ್ನಡ ಜಿಲ್ಲೆಯು ಮುಂಬಯಿ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಸೇರುವಂತಾಯಿತು. ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡು ಯುರೋಪಿಗೆ ಮೊದಲಿನಂತೆ ಹತ್ತಿ ಪೂರೈಕೆಯಾದಾಗ ಇಲ್ಲಿನ ಬಂದರು ಅಭಿವೃದ್ಧಿ ಯೋಜನೆಯನ್ನು ತಕ್ಷಣ ಕೈಬಿಡಲಾಯಿತು.

ಬಳ್ಳಾರಿ ಪ್ರದೇಶವು ಕ್ರಿ.ಶ. ೧೮೦೦ರಲ್ಲಿ ಬ್ರಿಟಿಷರ ನೇರ ಆಳ್ವಿಕೆಗೆ ಒಳಗಾಯಿತು. ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಹೈದರಾಬಾದಿನ ನಿಜಾಮನು ಬಳ್ಳಾರಿ, ಅನಂತಪುರ, ಕರ್ನೂಲು ಮತ್ತು ಕಡಪ ಜಿಲ್ಲೆಗಳನ್ನು ಸಂಭಾವನೆ ಬಾಬ್ತು ಬ್ರಿಟಿಷರಿಗೆ ಕಾಣಿಕೆಯಾಗಿ ನೀಡಿದನು. ಬ್ರಿಟಿಷರು ಬಳ್ಳಾರಿ ಪ್ರದೇಶವನ್ನು ಮದರಾಸು ಪ್ರಾಂತಕ್ಕೆ ಸೇರಿಸಿಕೊಂಡರು. ೧೮೦೦ರಲ್ಲಿ ಬಳ್ಳಾರಿ ಪ್ರದೇಶದಲ್ಲಿದ್ದ ತಾಲೂಕುಗಳೆಂದರೆ, ಧರ್ಮಾವರಂ, ಗೂಟಿ, ತಾಡಪತ್ರಿ, ಪೆನುಗೊಂಡ, ಹಿಂದೂಪುರ, ಮಡಕಶಿರ, ಅನಂತಪುರ, ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ರಾಯದುರ್ಗ, ಆಲೂರು ಮತ್ತು ಆದವಾನಿ. ೧೮೮೨ರಲ್ಲಿ ಬಳ್ಳಾರಿ ಪ್ರದೇಶವನ್ನು ಬಳ್ಳಾರಿ ಮತ್ತು ಅನಂತಪುರಗಳೆಂಬ ಎರಡು ಜಿಲ್ಲೆಗಳನ್ನಾಗಿ ವಿಂಗಡಿಸಲಾಯಿತು.

ಕೊಡಗು ಪ್ರಾಂತ್ಯ ೧೮೩೪ರಲ್ಲಿ ಬ್ರಿಟಿಷರ ವಶಕ್ಕೆ ಬಂತು. ೧೮೩೪ಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ಕೊಡಗಿಗೆ ಸೇರಿದ್ದವು. ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡ ಬಳಿಕ ಸುಳ್ಯ, ಪುತ್ತೂರು ಮುಂತಾದ ಪ್ರದೇಶಗಳು ಮದರಾಸು ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟವು. ಕೊಡಗು ಪ್ರಾಂತ್ಯದಲ್ಲಿದ್ದ ಆರು ತಾಲ್ಲೂಕುಗಳೆಂದರೆ, ಮಡಿಕೇರಿ, ಪಾಡಿನಾಲ್ಕುನಾಡು (ನಾಪೊಕ್ಲು), ಎಡೆನಾಲ್ಕುನಾಡು (ವೀರ ರಾಜೇಂದ್ರ ಪೇಟೆ), ಕಿಗ್ಗಟ್ಟುನಾಡು (ಹಂದಿಕೇರಿ), ನಂಜರಾಜಪಟ್ಟಣ (ಫ್ರೇಸರ್‌ಪೇಟೆ) ಮತ್ತು ಏಳುಸಾವಿರ ಸೀಮೆ (ಶನಿವಾರಪೇಟೆ). ಇವೆಲ್ಲವೂ ಬ್ರಿಟಿಷ್ ಆಡಳಿತಕ್ಕೆ ನೇರವಾಗಿ ಒಳಪಟ್ಟಿದ್ದವು. ಕೊಡಗಿನ ಆಡಳಿತವನ್ನು ಮದರಾಸು ಪ್ರೆಸಿಡೆನ್ಸಿಯು ನೋಡಿಕೊಳ್ಳುತ್ತಿದ್ದರೂ, ಕೊಡಗಿನಲ್ಲಿ ಕಮಿಶನರುಗಳಿದ್ದರು. ಕಮಿಶನರುಗಳ ಮೂಲಕ ಮದರಾಸು ಸರಕಾರ ಆಡಳಿತ ನಡೆಸುತ್ತಿತ್ತು.

ಹೈದರಾಬಾದ್ ಕರ್ನಾಟಕ ಎನ್ನುವುದು ಬೀದರ್, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿತ್ತು. ಇವು ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಸೇರಿದ್ದ ಪ್ರದೇಶಗಳಾಗಿದ್ದವು ಈ ಮೂರು ಜಿಲ್ಲೆಗಳು ರಾಜ್ಯ ಪುನರ್ವಿಂಗಡಣೆಯಾದಾಗ ಕರ್ನಾಟಕ ರಾಜ್ಯಕ್ಕೆ ಸೇರಿದವು. ಸಹಾಯಕ ಸೈನ್ಯ ಪದ್ಧತಿ ಒಪ್ಪಂದ ಪ್ರಕಾರ ನಿಜಾಮನು ಈಸ್ಟ್ ಇಂಡಿಯಾ ಕಂಪೆನಿಯ ಅಧೀನರಾಜನಾದನು. ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿ ಒಪ್ಪಂದಕ್ಕೆ ನಿಜಾಮನು ೧೭೯೮ರಲ್ಲಿ ಸಹಿ ಹಾಕಿದನು. ಈ ಒಪ್ಪಂದದ ಪ್ರಕಾರ ನಿಜಾಮನು ೬ ಬ್ಯಾಟಾಲಿಯನ್ ಸೈನಿಕರಿಂದ ಕೂಡಿದ್ದ ಸೈನ್ಯದ ವಾರ್ಷಿಕ ಖರ್ಚಾದ ೨೪,೧೭,೦೦೦ ರೂಪಾಯಿಗಳನ್ನು ಭರಿಸಬೇಕಾಗಿತ್ತು. ಆಂತರಿಕ ಆಡಳಿತದಲ್ಲಿ ನಿಜಾಮನು ಕಂಪೆನಿಯ ಪೂರ್ವಾನುಮತಿಯನ್ನು ಪಡೆದುಕೊಂಡು ಯಾವುದೇ ನೀತಿಯನ್ನು ಜಾರಿಗೊಳಿಸಬೇಕಾಗಿತ್ತು. ಹೈದರಾಬಾದಿನಲ್ಲಿ ಬ್ರಿಟಿಷ್ ರೆಸಿಡೆಂಟರಿರುತ್ತಿದ್ದರು. ಆದರೂ ನಿಜಾಮನ ದಮನಕಾರಿ ಆಳ್ವಿಕೆ ಮುಂದುವರಿದಿತ್ತು. ಹಾಗಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯಕರವಾದ ಆರ್ಥಿಕ ಬೆಳವಣಿಗೆ ಕಂಡುಬರಲಿಲ್ಲ. ಇದಕ್ಕೆ ನಿಜಾಮನಷ್ಟೇ ಬ್ರಿಟಿಷ್ ಆಳ್ವಿಕೆಯೂ ಕಾರಣವಾಗಿತ್ತು.

ಮೇಲೆ ವಿವರಿಸಿದಂತೆ ಬ್ರಿಟಿಷ್ ಕರ್ನಾಟಕವು ಹಲವಾರು ಘಟಕಗಳಾಗಿ ವಿಭಜನೆಗೊಂಡಿತ್ತು. ಬ್ರಿಟಿಷ್ ಆಡಳಿತದಲ್ಲಿ ಕನ್ನಡ ಭಾಷಿಕರೇ ಅಧಿಕವಾಗಿದ್ದ ೨೨ ಘಟಕಗಳಿದ್ದವು. ಕರ್ನಾಟಕದ ಏಕೀಕರಣದ ಕುರಿತು ಬಂದಿರುವ ಕೃತಿಗಳಲ್ಲಿ ಈ ಘಟಕಗಳ ಕುರಿತು ಮಾಹಿತಿಗಳು ಸಿಗುತ್ತವೆ. ಅವುಗಳೆಂದರೆ,

೧. ಮೈಸೂರು ಸಂಸ್ಥಾನಕ್ಕೆ ಸೇರಿದ್ದ ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳು.

೨. ಮದರಾಸು ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟ ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ನೀಲಗಿರಿ ಜಿಲ್ಲೆಗಳು, ಕೊಳ್ಳೆಗಾಲ, ಹೊಸೂರು ಮತ್ತು ಮಡಕಶಿರಾ ತಾಲ್ಲೂಕು ತಾಲೂಕುಗಳು.

೩. ಮುಂಬಯಿ ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟಿದ್ದ ಉತ್ತರ ಕನ್ನಡ, ಬಿಜಾಪುರ, ಬೆಳಗಾವಿ, ಮತ್ತು ಧಾರವಾಡ ಜಿಲ್ಲೆಗಳು ಹಾಗೂ ಸೊಲ್ಲಾಪುರ ಹಾಗೂ ಮಂಗಳವೇಢೆ ಪ್ರಾಂತ್ಯಗಳು.

೪. ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿದ್ದ ಗುಲ್ಬರ್ಗಾ, ಬೀದರ್ ಮತ್ತು ರಾಯಚೂರು ಜಿಲ್ಲೆಗಳು.

೫. ಹೈದರಾಬಾದ್ ಕರ್ನಾಟಕದ ಜಹಗೀರು (ಕೊಪ್ಪಳ, ಗದ್ವಾಲ)

೬. ಕೊಡಗು ಜಿಲ್ಲೆಯನ್ನು ಒಬ್ಬ ಆಯುಕ್ತರು ಆಳುತ್ತಿದ್ದು, ಅದಕ್ಕೆ ಪ್ರತ್ಯೇಕವಾದ ಒಂದು ಪ್ರಾಂತ್ಯದ ಸ್ಥಾನವನ್ನು ನೀಡಲಾಗಿತ್ತು.

೭. ಕೊಲ್ಲಾಪುರ ಸಂಸ್ಥಾನದ ರಾಯಭಾಗ್, ಕಡಕೋಳ ಹಾಗೂ ತೋರಗಲ್ಲು ಪ್ರದೇಶಗಳು.

೮. ಕೊಲ್ಲಾಪುರ ಸಂಸ್ಥಾನದ ಜಹಗೀರುಗಳು.

೯. ಸಾಂಗಲಿ ಸಂಸ್ಥಾನದ ತೇರದಾಳ, ಶಹಾಪೂರ, ದೊಡ್ಡವಾಡ ಮತ್ತು ಶಿರಹಟ್ಟಿ ಪ್ರದೇಶಗಳು.

೧೦. ಮೀರಜ್ ಸಂಸ್ಥಾನ ಮತ್ತು ಲಕ್ಷ್ಮೇಶ್ವರ ಪ್ರದೇಶಗಳು.

೧೧. ಕಿರಿ ಮೀರಜ್ ಸಂಸ್ಥಾನದ ಬುಧಗಾವ್ ಮತ್ತು ಗುಡಗೇರಿ ಪ್ರದೇಶಗಳು.

೧೨. ಹಿರಿ ಕುರಂದವಾಡ ಸಂಸ್ಥಾನ.

೧೩. ಕಿರಿ ಕುರಂದವಾಡ ಸಂಸ್ಥಾನ.

೧೪. ಜಮಖಂಡಿ ಸಂಸ್ಥಾನದ ಕುಂದಗೋಳ ಮತ್ತು ಚಿಪ್ಪಲಕಟ್ಟಿ ಪ್ರದೇಶಗಳು.

೧೫. ಮುಧೋಳ ಸಂಸ್ಥಾನ.

೧೬. ಜತ್ ಸಂಸ್ಥಾನ

೧೭. ಅಕ್ಕಲಕೋಟೆ ಸಂಸ್ಥಾನ

೧೮. ಔಂಧ್ ಸಂಸ್ಥಾನ

೧೯. ರಾಮದುರ್ಗ ಸಂಸ್ಥಾನ

೨೦. ಸಂಡೂರು ಸಂಸ್ಥಾನ.

೨೧. ಸವಣೂರು ಸಂಸ್ಥಾನ.

೨೨. ಬೆಂಗಳೂರು, ಬೆಳಗಾವಿ ಮತ್ತು ಬಳ್ಳಾರಿ ದಂಡು ಪ್ರದೇಶಗಳು.

ಬ್ರಿಟಿಷರು ತಾವು ಗೆದ್ದ ಪ್ರದೇಶಗಳನ್ನು ವಿಭಜಿಸುವುದರ ಮೂಲಕ ಸಾಮ್ರಾಜ್ಯ ಕಟ್ಟುವ ಉದ್ದೇಶವನ್ನು ಹೊಂದಿದ್ದರು. ಬ್ರಿಟಿಷರು ಕರ್ನಾಟಕವನ್ನು ವಿಭಜಿಸುವುದರ ಮೂಲಕ ಬ್ರಿಟಿಷ್ ಕರ್ನಾಟಕವನ್ನು ನಿರ್ಮಿಸಿಕೊಂಡರು. ಬ್ರಿಟಿಷರು ತಾವು ಗೆದ್ದ ಪ್ರದೇಶಗಳನ್ನು ಕ್ರೋಢೀಕರಿಸಲು ಮತ್ತು ಸಾಮ್ರಾಜ್ಯದ ತಳಹದಿಯನ್ನು ಸುಭದ್ರಗೊಳಿಸಲು ಅಧೀನ ರಾಜರನ್ನು ಉಪಯೋಗಿಸಿಕೊಂಡರು. ಬ್ರಿಟಿಷ್ ಸರಕಾರದ ಸುಭದ್ರತೆ ಮತ್ತು ಲಾಭದ ದೃಷ್ಟಿಯಿಂದ ಆಯಾ ಪ್ರಾಂತ್ಯದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದವು. ಅಭಿವೃದ್ಧಿ ಕೆಲಸ ಕಾರ್ಯಗಳು ಆಯಾ ಸಂದರ್ಭದ ಅನಿವಾರ್ಯತೆಗನುಗುಣವಾಗಿ ನಡೆಯುತ್ತಿದ್ದವು. ವಸಾಹತು ಸಂದರ್ಭದ ನಗರ ಅರ್ಥವ್ಯವಸ್ಥೆಯ ಕುರಿತು ಚರ್ಚಿಸುವಾಗ ಈ ವಿಚಾರ ಬೆಳಕಿಗೆ ಬರುತ್ತದೆ. ಬ್ರಿಟಿಷ್ ಕರ್ನಾಟಕವು ವಸಾಹತುಶಾಹಿ ಧೋರಣೆಯ ಹಿನ್ನೆಲೆಯಿಂದ ನೋಡುವಾಗ ಒಂದು ಘಟಕವಾಗಿ ಕಂಡುಬಂದರೂ, ಸ್ಥಳೀಯವಾಗಿ ಅದು ಹಲವಾರು ಪ್ರಾಂತ್ಯಗಳಾಗಿ ವಿಂಗಡನೆಗೊಂಡಿರುವುದು ವಾಸ್ತವ ಸಂಗತಿ. ಹೀಗಾಗಿ ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಚರ್ಚಿಸುವಾಗ ನಗರೀಕರಣ ಪ್ರಕ್ರಿಯೆಯನ್ನು ಆಯಾ ಪ್ರಾಂತ್ಯದ ಹಿನ್ನೆಲೆಯಿಂದ ನೋಡಬೇಕಾಗುತ್ತದೆ. ಬ್ರಿಟಿಷ್ ಕರ್ನಾಟಕದಲ್ಲಿ ಪ್ರತಿಯೊಂದು ವಿಚಾರದಲ್ಲೂ ಏಕರೂಪದ ಬೆಳವಣಿಗೆಗಳು ಕಂಡುಬರುವುದಿಲ್ಲ. ಹೀಗಾಗಿ ಅಖಂಡ ನಿರೂಪಣೆಯೊಂದನ್ನು ನೀಡುವುದು ಸಾಧ್ಯವಾಗುವುದಿಲ್ಲ. ಆದರೆ ಬ್ರಿಟಿಷರು ಎಲ್ಲವನ್ನೂ ಏಕರೂಪಗೊಳಿಸುವ, ಒಂದೇ ರೀತಿಯ ಆಡಳಿತ, ಕಾನೂನನ್ನು ಜಾರಿಗೊಳಿಸುವ ಪ್ರಯತ್ನಪಟ್ಟರು. ಭಾರತದೊಳಗಿನ ಹಲವಾರು ಭಾರತಗಳನ್ನು ಅಥವಾ ಕರ್ನಾಟಕದೊಳಗಿನ ಹಲವಾರು ಕರ್ನಾಟಕಗಳನ್ನು ಮಟ್ಟಹಾಕಿ ಒಂದು ಸಾಮ್ರಾಜ್ಯವನ್ನು ನಿರ್ಮಿಸುವ ಉದ್ದೇಶ ಬ್ರಿಟಿಷರದ್ದಾಗಿತ್ತು.

ರಾಜಕೀಯ ಸ್ಥಿರತೆಯನ್ನು ಸ್ಥಾಪಿಸುವುದು ಬ್ರಿಟಿಷರ ಆಧ್ಯತೆಗಳಲ್ಲಿ ಮೊದಲನೆಯದಾಗಿತ್ತು. ರಾಜಕೀಯ ಸ್ಥಿರತೆ ಇದ್ದಾಗ ಮಾತ್ರ ವಸಾಹತು ನೀತಿಯನ್ನು ಜಾರಿಗೊಳಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪೂರಕವಾದ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ. ಮೈಸೂರು ಸುಲ್ತಾನರ ವಿರೋಧ, ಪೋರ್ಚುಗೀಸ್ – ಡಚ್ – ಫ್ರೆಂಚರ ವಿರೋಧಗಳಿದ್ದ ಸಂದರ್ಭದಲ್ಲಿ ಬ್ರಿಟಿಷರಿಗೆ ತಮ್ಮ ಸಾಮ್ರಾಜ್ಯಶಾಹಿ ಮತ್ತು ವ್ಯಾಪಾರ ವಾಣಿಜ್ಯ ನೀತಿಯನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ತಮ್ಮ ವಿರುದ್ಧದ ಶಕ್ತಿಗಳನ್ನು ಮಟ್ಟ ಹಾಕಿದ ಮೇಲೆ ಬ್ರಿಟಿಷರು ಸ್ವತಂತ್ರವಾದ ಆಡಳಿತ ನೀತಿಯೊಂದನ್ನು ಜಾರಿಗೊಳಿಸಿದರು. ಬ್ರಿಟಿಷ್ ಆಯುಕ್ತರು, ರೆಸಿಡೆಂಟರು ಮತ್ತು ಕಲೆಕ್ಟರುಗಳು ಆಯಾ ಪ್ರದೇಶದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಆಯಾ ಪ್ರದೇಶದ ಅನಿವಾರ್ಯತೆಗನುಗುಣವಾಗಿ ಬಂಡವಾಳವನ್ನು ಹೂಡುವ, ರಸ್ತೆಗಳನ್ನು ನಿರ್ಮಿಸುವ, ಬಂದರುಗಳನ್ನು ಅಭಿವೃದ್ಧಿಪಡಿಸುವ ಹಾಗೂ ವರ್ತಕ ಸಮುದಾಯಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಬ್ರಿಟಿಷರು ಮಾಡಿದರು. ಬ್ರಿಟಿಷರು ಯಾವುದೇ ಯೋಜನೆಗೆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಾಗ ಅಲ್ಲಿನ ಭೌಗೋಳಿಕತೆ ಮತ್ತು ಫಲವತ್ತತೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಿದ್ದರು. ಕಡಿಮೆ ಬಂಡವಾಳ ಹೂಡಿ ಹೆಚ್ಚಿನ ಲಾಭಗಳಿಸುವ ಉದ್ದೇಶ ಅವರದ್ದಾಗಿತ್ತು. ಬ್ರಿಟಿಷ್ ಅವಧಿಯಲ್ಲಿ ಕರ್ನಾಟಕದ ಎಲ್ಲ ಪ್ರದೇಶಗಳಲ್ಲೂ ಏಕರೂಪದ ಬದಲಾವಣೆ ಅಥವಾ ಅಭಿವೃದ್ಧಿ ಕಂಡುಬರಲಿಲ್ಲ. ಮೈಸೂರು ಸಂಸ್ಥಾನ ಅಥವಾ ಮದರಾಸು ಆಳ್ವಿಕೆಗೆ ಸೇರಿದ್ದ ಕರ್ನಾಟಕದ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳು ಜಾರಿಗೆ ಬಂದು ಆರ್ಥಿಕತೆಯ ಮೇಲೆ ಹೆಚ್ಚಿನ ಬದಲಾವಣೆಯನ್ನು ತಂದಷ್ಟು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಬದಲಾವಣೆಗಳು ಆಗಲಿಲ್ಲ. ಈ ವಿಚಾರವನ್ನು ಆಯಾ ಪ್ರದೇಶದ ಭೌಗೋಳಿಕತೆ, ಫಲವತ್ತತೆ ಮತ್ತು ಆಡಳಿತ ಸ್ವರೂಪದ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ.