ಬ್ರಿಟಿಷ್ ಸರಕಾರ ತನ್ನ ಅನುಕೂಲಕೋಸ್ಕರ ಏಕರೀತಿಯ ಆಡಳಿತ ನೀತಿ, ಕಾನೂನುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಿತು. ಕರ್ನಾಟಕವು ಬ್ರಿಟಿಷ್ ಆಳ್ವಿಕೆಯಲ್ಲಿ ವಿವಿಧ ಘಟಕಗಳಾಗಿ ವಿಭಜನೆಗೊಂಡಿದ್ದರಿಂದಾಗಿ ಈ ರೀತಿಯ ಏಕರೂಪಗಳಿಸುವ ಅನಿವಾರ್ಯತೆ ಇತ್ತು. ಈ ಪ್ರಯತ್ನಗಳಿಗೆ ನೇರವಾಗಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು ಹಾಗೂ ಆಶ್ರಿತ ರಾಜ್ಯಗಳು ಒಳಗಾದವು. ಬ್ರಿಟಿಷ್ ಆಳ್ವಿಕೆಲ್ಲಿ ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ನಡೆದಿದ್ದರಿಂದಾಗಿ ಹಾಗೂ ಸಾರಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆಗಳು ಕಂಡುಬಂದಿದದರಿಂದಾಗಿ ಸಹಜವಾಗಿಯೇ ಹಲವಾರು ಪೇಟೆ-ಪಟ್ಟಣಗಳು ಚುರುಕಿನ ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ವರ್ತಕ ಸಮುದಾಯಗಳು ನಗರ ಪ್ರದೇಶಗಳಲ್ಲಿಯೇ ನೆಲೆ ನಿಲ್ಲಲಾರಂಭಿಸಿದರು. ವಿವಿಧ ಜಾತಿ ಮತ್ತು ಧರ್ಮಗಳ ವ್ಯಾಪಾರಸ್ಥರು ಪ್ರತ್ಯೇಕ ಪ್ರತ್ಯೇಕವಾಗಿಯೇ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರು. ವ್ಯಾಪಾರ ನಡೆಸುವ ಪ್ರದೇಶ ಒಂದೇ ಆಗಿದ್ದರೂ, ಅವರು ವಾಸಿಸುವ, ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಪ್ರದೇಶಗಳು ಬೇರೆ ಬೇರೆಯದೇ ಆಗಿರುತ್ತಿದ್ದವು. ಹೀಗಾಗಿ ನಗರಗಳ ವ್ಯಾಪ್ತಿ ವಿಸ್ತಾರವಾಗತೊಡಗಿತು. ನಗರಗಳು ಹಲವಾರು ಸಂಸ್ಕೃತಿಗಳನ್ನು ಒಳಗೊಂಡ ಸಂಕೀರ್ಣ ಪ್ರದೇಶಗಳಾಗಿ ಕಂಡುಬರಲಾರಂಭಿಸಿದವು. ಜನಸಂಖ್ಯೆಯಲ್ಲಾದ ಹೆಚ್ಚಳ, ವ್ಯಾಪಾರದಲ್ಲಿ ಪ್ರಗತಿ, ಕೈಗಾರಿಕೆಗಳ ಸ್ಥಾಪನೆ, ಸರಕಾರಿ ಕಚೇರಿಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸ್ಥಾಪನೆ ಮುಂತಾದವು ನಗರ ಪ್ರದೇಶಗಳಲ್ಲಿ ವ್ಯವಸ್ಥಿತ ಆಡಳಿತವೊಂದರ ಹುಟ್ಟಿಗೆ ಕಾರಣವಾದವು.

ನಗರ ಪ್ರದೇಶಗಳನ್ನು ಆಡಳಿತದ ಚೌಕಟ್ಟಿನೊಳಗೆ ತರುವುದು ಬ್ರಿಟಿಷರಿಗೆ ಹಲವಾರು ಕಾರಣಗಳಿಗೆ ಮುಖ್ಯವಾಗಿತ್ತು. ಪೇಟೆ-ಪಟ್ಟಣಗಳು ಆದಾಯದ ಮೂಲಗಳಾಗಿದ್ದವು. ಆಮದು ಮತ್ತು ರಫ್ತು ವ್ಯಾಪಾರಕ್ಕೆ ಸುಂಕಗಳಿರುತ್ತಿದ್ದವು. ಅದೇ ರೀತಿ ಮಾರುಕಟ್ಟೆಗಳು ಖಾಸಗಿಯವರು ಪಡೆದುಕೊಂಡ ಪ್ರದೇಶಗಳು, ಖಾಸಗಿಯವರಿಂದ ಸ್ಥಾಪಿಸಲ್ಪಟ್ಟ ಉದ್ದಿಮೆಗಳು, ನಗರಗಳಲ್ಲಿ ಓಡಾಡುವ ವಾಹನಗಳು ಮುಂತಾದವುಗಳ ಮೇಲೆ ತೆರಿಗೆಗಳನ್ನು ವಿಧಿಸಲಾಗಿತ್ತು. ತೆರಿಗೆಗಳನ್ನು ಸಂಗ್ರಹಿಸಲು, ಅದಕ್ಕೆ ಸಂಬಂಧಪಟ್ಟ ನೀತಿ-ನಿಯಮಗಳನ್ನು ಸಿದ್ಧಪಡಿಸಲು ಅಧಿಕಾರಗಳ ನೇಮಕ ಅನಿವಾರ್ಯವಾಗಿತ್ತು. ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಶ್ರೀಮಂತ ವರ್ತಕರನ್ನು ಹಾಗೂ ನಗರಗಳ ಸುತ್ತಮುತ್ತಲಿನ ಪ್ರದೇಶಗಳ ಶ್ರೀಮಂತ ಭೂಮಾಲೀಕರನ್ನು ಆಡಳಿತ ವ್ಯವಸ್ಥೆಯೊಳಗೆ ತಂದು, ಅವರನ್ನೂ ನಗರಾಡಳಿತದಲ್ಲಿ ಭಾಗಿಗಳಾಗುವಂತೆ ಮತ್ತು ಜವಾಬ್ದಾರಿಗಳನ್ನು ಹೊರುವಂತೆ ಮಾಡುವುದಕ್ಕೂ ಹೊಸ ಬಗೆಯ ಅಡಳಿತವನ್ನು ಅನುಷ್ಠಾನಗೊಳಿಸುವ ಅನಿವಾರ್ಯತೆಯಿತ್ತು. ಹೀಗಾಗಿ ಸ್ಥಳೀಯ ಶ್ರೀಮಂತ ವರ್ಗಗಳು ಬ್ರಿಟಿಷ್ ಹಿಡಿತದೊಳಗೆ ಬರುವಂತಾಯಿತು. ಬ್ರಿಟಿಷ್ ಆಡಳಿತದಲ್ಲಿ ಭಾಗಿಗಳಾಗುವುದು ಸ್ಥಳೀಯ ಶ್ರೀಮಂತ ವರ್ಗಗಳಿಗೆ ಪ್ರತಿಷ್ಠೆಯ ವಿಚಾರವೂ ಆಗಿತ್ತು. ಇದರಿಂದ ಬ್ರಿಟಿಷ್ ಸರಕಾರ ತನ್ನ ಮೇಲಿನ ಹೊರೆಯನ್ನು ಆದಷ್ಟು ಕಡಿಮೆಗೊಳಿಸಿ, ಅದನ್ನು ಸ್ಥಳೀಯರ ಮೇಲೆ ಹೊರಿಸಿತು. ಬ್ರಿಟಿಷ್ ಭಾರತ ನಿರ್ಮಾಣಗೊಂಡಿದ್ದೇ ಈ ರೀತಿಯಲ್ಲಿ ಎನ್ನುವುದು ವಾಸ್ತವ.

ಬ್ರಿಟಿಷ್ ಸರಕಾರ ಆಡಳಿತವನ್ನು ವ್ಯವಸ್ಥಿತಗೊಳಿಸುವ ಹೊಸ ನೀತಿಯೊಂದನ್ನು ಜಾರಿಗೊಳಿಸಿತು. ನಗರ ಪ್ರದೇಶಗಳಲ್ಲಿ ನಡೆಯುವ ಪ್ರತಿಯೊಂದು ಕೆಲಸಕಾರ್ಯವನ್ನೂ ಕಾನೂನಿನ ಚೌಕಟ್ಟಿನೊಳಗೆ ತರಲಾಯಿತು. ಕೈಗಾರಿಕಾ ಬಂಡವಾಳದ ಪ್ರವೇಶವಾದಾಗಿನಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ಹಲವಾರು ರೀತಿಯ ಸ್ಥಿತ್ಯಂತರಗಳಿಗೆ ಒಳಗಾದವು. ವಸಾಹತುಪೂರ್ವ ಅವಧಿಯಲ್ಲಿ ಇದ್ದ ನಗರಾಡಳಿತ ವ್ಯವಸ್ಥೆಗಿಂತ ಭಿನ್ನವಾದ ಅಡಳಿತ ಕ್ರಮವನ್ನು ನಗರಗಳಲ್ಲಿ ಜಾರಿಗೊಳಿಸಲಾಯಿತು. ಮದರಾಸು ಮತ್ತು ಮುಂಬಯಿ ಪ್ರಸಿಡೆನ್ಸಿಗಳು ನಗರಗಳ ಆಡಳಿತಕ್ಕೆ ಸಂಬಂಧಿಸಿದ ಹೊಸ ಕಾಯಿದೆಗಳನ್ನು ರಚಿಸಿಕೊಂಡವು. ಈ ಕಾಯಿದೆಗಳು ಆಯಾ ಪ್ರೆಸಿಡೆನ್ಸಿಗಳ ಅಧೀನಕ್ಕೆ ಬರುವ ಪ್ರದೇಶಗಳಲ್ಲಿರುವ ಪಟ್ಟಣಗಳೆಲ್ಲವುದಕ್ಕೂ ಅನ್ವಯಿಸುತ್ತಿದ್ದವು. ಆಯಾ ಜಿಲ್ಲೆಗಳ ಕಲೆಕ್ಟರುಗಳು ಆಡಳಿತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಜಿಲ್ಲಾ ಕೇಂದ್ರಗಳಲ್ಲಿ ನಗರ ಆಡಳಿತಕ್ಕೆ ಸಂಬಂಧಿಸಿದ ಪ್ರತ್ಯೇಕ ಇಲಾಖೆಗಳನ್ನು ಸ್ಥಾಪಿಸಲಾಯಿತು. ನಗರಗಳಲ್ಲಿನ ಆದಾಯ ಮತ್ತು ಖರ್ಚುವೆಚ್ಚಗಳ ವಿವರಗಳ ಕುರಿತು ಹೆಚ್ಚಿನ ನಿಗಾ ವಹಿಸಲಾಯಿತು. ಬ್ರಿಟಿಷ್ ಸರಕಾರ ಬಂಡವಾಳ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಿತ್ತೇ ಹೊರತು ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸುವುದಕ್ಕಲ್ಲ. ನಗರಗಳಿಂದ ಸಾಧ್ಯವಾದಷ್ಟು ಹಣವನ್ನು ತೆರಿಗೆಯ ರೂಪದಲ್ಲಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳಲು ಬ್ರಿಟಿಷ್ ಸರಕಾರ ಉತ್ಸುಕವಾಗಿತ್ತು. ನಗರ ಪ್ರದೇಶಗಳಲ್ಲಿನ ಸಮಸ್ಯೆಗಳಾದ ಚರಂಡಿಗಳ ನಿರ್ಮಾಣ, ಶುಚಿತ್ವ, ನೂತನವಾಗಿ ನಿರ್ಮಾಣಗೊಂಡ ಕೈಗಾರಿಕೆಗಳ ಸುತ್ತಮುತ್ತ ನೈರ್ಮಲ್ಯವನ್ನು ಕಾಪಾಡುವುದು, ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವುದು, ನಗರ ಪ್ರದೇಶಗಳನ್ನು ದಿನಾ ಬೆಳಿಗ್ಗೆ ಶುಚಿಗೊಳಿಸುವ ಜನರಿಗೆ ಸೂಕ್ತ ಸೌಕರ್ಯವನ್ನು ಒದಗಿಸುವುದು. ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಈ ಮುಂತಾದ ಸಮಸ್ಯೆಗಳ ಬಗ್ಗೆ ಬ್ರಿಟಿಷ್ ಸರಕಾರ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಬಂದರು ಪಟ್ಟಣಗಳಲ್ಲಿ ಬಂದರುಗಳ ಆಡಳಿತಕ್ಕೆ ಸಂಬಂಧಪಟ್ಟಂತೆ ನೀತಿ-ನಿಯಮಗಳನ್ನು ಜಾರಿಗೊಳಿಸಲಾಯಿತೇ ಹೊರತು ಬಂದರುಗಳ ಅಭಿವೃದ್ಧಿಯತ್ತ ಗಮನಹರಿಸಲಿಲ್ಲ.

ಟಿಪ್ಪು ಸುಲ್ತಾನನ ಪತನದ ಬಳಿಕ ಬ್ರಿಟಿಷ್ ಸರಕಾರ ಮೈಸೂರು ಸಂಸ್ಥಾನವನ್ನು ಅಲ್ಲಿನ ರಾಜಮನೆತನದ ಆಳ್ವಿಕೆಗೆ ಒಪ್ಪಿಸಿತು. ದಿವಾನರುಗಳು ಮತ್ತು ರಾಜರು ಬೇರೆ ಬೇರೆ ಅವಧಿಗಳಲ್ಲಿ ಮೈಸೂರಿನ ಅಡಳಿತವನ್ನು ನೋಡಿಕೊಂಡರು. ಆದರ ಅದೊಂದು ಆಶ್ರಿತ ಸಂಸ್ಥಾನವಾಗಿ ಗುರುತಿಸಿಕೊಳ್ಳಬೇಕಾಯಿತು. ೧೮೩೧ರಲ್ಲಿ ನಗರ ಬಂಡಾಯದ ನೆಪದಲ್ಲಿ ಬ್ರಿಟಿಷರು ಸಂಸ್ಥಾನದ ಅಧಿಕಾರವನ್ನು ರಾಜರಿಂದ ಕಸಿದುಕೊಂಡರು. ಮದರಾಸು ಗವರ್ನರನ ಅಧೀನದಲ್ಲಿ ಆಯುಕ್ತರನ್ನು (ಕಮಿಷನರುಗಳು) ನೇಮಿಸಿ ತಾವೇ ಅಧಿಕಾರ ವಹಿಸಿಕೊಂಡು ನಂತರದ ೫೦ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ೧೮೩೨ರ ನಂತರ ಮೈಸೂರು ಸಂಸ್ಥಾನದ ಆಯುಕ್ತರು ಮದರಾಸು ಗವರ್ನರ್‌ನ ಬದಲು ನೇರವಾಗಿ ಭಾರತ ಸರಕಾರದೆ ಗವರ್ನರ್ ಜನರಲ್‌ನ ಅಧೀನರಾಗಿ ಕಾರ್ಯ ನಿರ್ವಹಿಸಿದರು. ಮೈಸೂರು ಸಂಸ್ಥಾನವನ್ನಾಳಿದ ಆಯುಕ್ತರ ಪೈಕಿ ಸರ್ ಮಾರ್ಕ್ ಕಬ್ಬನ್ (೧೮೩೪-೬೧) ಮತ್ತು ಲ್ಯುವಿನ್ ಬೌರಿಂಗ್ (೧೮೬೧-೭೦) ಪ್ರಮುಖರು

ಕಬ್ಬನ್‌ನ ಆಳ್ವಿಕೆಯ ಅವಧಿಯಲ್ಲಿ ಸಂಸ್ಥಾನದ ರಾಜಧಾನಿಯು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಸಂಸ್ಥಾನವನ್ನು ೧೨೦ ತಾಲೂಕುಗಳನ್ನಾಗಿ ವಿಂಗಡಿಸಿ, ಪ್ರತಿ ತಾಲೂಕಿಗೂ ಒಬ್ಬೊಬ್ಬ ಅಮಲ್ದಾರನನ್ನು ನೇಮಿಸಲಾಯಿತು. ಕಬ್ಬನ್ ಆಡಳಿತದಲ್ಲಿ ನಾನಾ ಬಗೆಯ ಬದಲಾವಣೆಗಳನ್ನು ಜಾರಿಗೆ ತಂದನು. ಪ್ರಾದೇಶಿಕ ಅಧೀಕ್ಷಕರಿಗೆ ವಿಶೇಷ ಅಧಿಕಾರಗಳನ್ನು ವಹಿಸಲಾಯಿತು. ಪ್ರತಿ ತಾಲೂಕಿನ ಅಮಲ್ದಾರನು ಅಧೀಕ್ಷಕನ ನೇರ ಹತೋಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಕಂದಾಯ, ಅಂಚೆ, ಪೊಲೀಸು, ಲೋಕೋಪಯೋಗಿ, ವೈದ್ಯಕೀಯ, ನ್ಯಾಯಸಂಬಂಧಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಭಾಗಗಳು ಕಮಿಷನರುಗಳು ಅಧೀನದಲ್ಲಿದ್ದವು. ಈ ಎಲ್ಲ ವಿಭಾಗಗಳು ಆರಂಭಗೊಂಡು ನಗರ ಪ್ರದೇಶಗಳಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದವು. ಅಧೀಕ್ಷಕರು, ನಿರ್ದೇಶಕರು ಮತ್ತು ನ್ಯಾಯ ಇಲಾಖೆಯ ಕಮಿಷನರುಗಳಲ್ಲಿ ಹೆಚ್ಚಿನವರು ಯುರೋಪಿನವರಾಗಿದ್ದರು.

ಬೌರಿಂಗ್ ಬ್ರಿಟಿಷ್ ಇಂಡಿಯಾ ಪ್ರಾಂತ್ಯಗಳ ಮಾದರಿಯಲ್ಲಿ ಮೈಸೂರಿನ ಆಡಳಿತವನ್ನು ಪುನರ್‌ವ್ಯವಸ್ಥೆ ಮಾಡುವ ಪ್ರಯತ್ನ ಮಾಡಿದನು. ೧೮೬೧ರಲ್ಲಿ ರಾಜ್ಯವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಅವುಗಳ ಅಧೀನದ ಎಂಟು ಜಿಲ್ಲೆಗಳನ್ನು ರಚಿಸಲಾಯಿತು. ಪ್ರತಿ ವಿಭಾಗಕ್ಕೆ ಒಬ್ಬ ಅಧೀಕ್ಷಕರು (ಸೂಪರಿಂಟೆಂಡೆಂಟ್) ಮತ್ತು ಜಿಲ್ಲೆಗೆ ಉಪಅಧೀಕ್ಷಕರನ್ನು ನೇಮಿಸಲಾಯಿತು. ೧೮೭೯ರಲ್ಲಿ ರಾಜ್ಯಾಡಳಿತವನ್ನು ರಾಜವಂಶಕ್ಕೆ ಮರಳಿಸುವ ನಿರ್ಣಯವಾದ ಬಳಿಕ ಆಡಳಿತವನ್ನು ಮತ್ತೊಮ್ಮೆ ಪುನರ್‌ವ್ಯವಸ್ಥೆಗೊಳಿಸಲಾಯಿತು. ವಿಭಾಗೀಯ ಕಮಿಷನರ್ ಹುದ್ದೆಗಳು ರದ್ದಾದವು. ಚೀಫ್ ಕಮಿಷನರ್ ಕೈಕೆಳಗೆ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಮತ್ತು ಅವರ ಅಧೀನದಲ್ಲಿ ಸಹಾಯಕ ಕಮಿಷನರ್ ಮತ್ತು ಅಮಿಲ್ದಾರರು ಇದ್ದರು.

ಮೈಸೂರು ಅರಸರು ೧೮೮೧ರಲ್ಲಿ ಮತ್ತೆ ರಾಜ್ಯಾಧಿಕಾರ ಹಕ್ಕನ್ನು ಪಡೆದರು. ದಿವಾನರುಗಳ ಆಳ್ವಿಕೆ ಅಲ್ಲಿಂದ ಆರಂಭವಾಯಿತು. ಮೈಸೂರು ಅರಮನೆಯಲ್ಲಿ ಬ್ರಿಟಿಷ್ ರೆಸಿಡೆಂಟರನ್ನು ನೇಮಿಸಲಾಯಿತು. ೧೮೮೨ರಲ್ಲಿ ರಾಜ್ಯದ ವಿಭಾಗೀಯ ಎಲ್ಲೆಗಳನ್ನು ಬದಲಾವಣೆ ಮಾಡಲಾಯಿತು. ಇದರಂತೆ ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಶಿವಮೊಗ್ಗ ಮತ್ತು ಕಡೂರು ಎಂಬ ಆರು ಜಿಲ್ಲೆಗಳು, ಚಿತ್ರದುರ್ಗ, ಪಾಂಡವಪುರ ಮತ್ತು ಹಾಸನ ಎಂಬ ಮೂರು ವಿಭಾಗಗಳು, ೬೦ ತಾಲ್ಲೂಕುಗಳು ಮತ್ತು ೧೭ ಉಪತಾಲೂಕುಗಳು ರಚನೆಗೊಂಡವು. ೧೮೮೧ರಲ್ಲಿ ಕಾರ್ಯಕಾರಿ ಮಂಡಳಿಯೊಂದನ್ನು ರಚಿಸಲಾಯಿತು. ನಗರಾಡಳಿತದಲ್ಲಿ ಈ ಮಂಡಳಿಯು ಸಲಹೆ ಕೊಡುವ ಜವಾಬ್ದಾರಿಯನ್ನು ಹೊಂದಿತ್ತು. ದಿವಾನರ ನೇರ ಹತೋಟಿಯಲ್ಲಿ ಕಂದಾಯ, ಸುಂಕ, ಅರಣ್ಯ, ಗಣಿ, ಶಿಕ್ಷಣ, ಮುಜರಾಯಿ ಮುಂತಾದ ಇಲಾಖೆಗಳಿದ್ದವು. ೧೮೮೧ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಲಾಯಿತು. ಈ ಸಭೆಯಲ್ಲಿ ನಗರ ಸಭೆಗಳ, ವ್ಯಾಪಾರಿಗಳ, ಭೂಹಿಡುವಳಿದಾರರ ಪ್ರತಿನಿಧಿಗಳಿದ್ದರು. ೧೯೦೭ರಲ್ಲಿ ನ್ಯಾಯ ವಿಧಾಯಕ ಸಭೆ ಅಸ್ತಿತ್ವಕ್ಕೆ ಬಂತು. ಸಾರ್ವಜನಿಕರು ಆಡಳಿತದ ಜೊತೆ ಸಹಕರಿಸುವಂತೆ ಮಾಡುವುದು ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಮೈಸೂರು ಸಂಸ್ಥಾನದಲ್ಲಿ ನಗರಾಡಳಿತಕ್ಕೆ ಸಂಬಂಧಿಸಿದಂತೆ ಮುನಿಸಿಪಲ್ ಕಮಿಟಿಗಳು (ಪೌರ ಸಮಿತಿಗಳು) ೧೮೬೨ರಲ್ಲಿ ರಚನೆಗೊಂಡವು. ಅವು ೧೮೫೦ರಲ್ಲಿ ಮೈಸೂರು ರಾಜ್ಯದ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪೌರ ಸಮಿತಿಗಳು ರಚನೆಗೊಂಡವು. ಆನಂತರ ೧೮೬೪-೬೫ರ ವೇಳೆಗೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಪೌರ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ನಗರ ಪ್ರದೇಶಗಳಲ್ಲಿನ ನಿವಾಸಿಗಳ ಸಹಕಾರ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು. ಸಣ್ಣ ಪಟ್ಟಣಗಳಲ್ಲಿನ ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಆಡಳಿತ ನಡೆಸಲಾಗುತ್ತಿತ್ತು. ೧೯೦೩ರಲ್ಲಿ ಮೈಸೂರು ಸ್ಥಳೀಯ ಮಂಡಳಿಗಳನ್ನು ಕ್ರಮಬದ್ಧಗೊಳಿಸಲಾಯಿತು. ಇದಕ್ಕೆ ಪ್ರಯತ್ನಗಳು ೧೮೮೩ರಿಂದಲೇ ಆರಂಭಗೊಂಡವು. ಅದರ ಪ್ರಕಾರ ೧೯೦೩ರಲ್ಲಿ ೮ ಜಿಲ್ಲಾ ಮಂಡಳಿಗಳು, ೭೭ ತಾಲ್ಲೂಕು ಮಂಡಳಿಗಳು ಮತ್ತು ೩೮ ಯೂನಿಯನ್ (ಕೂಟ)ಗಳನ್ನು ರೂಪಿಸಲಾಯಿತು. ತಲಾ ೩,೦೦೦ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದ ಹಿಂದಿನ ಪುಟ್ಟ ಪುರಸಭೆಗಳನ್ನು ಕೂಟ (ಸಂಘ)ಗಳನ್ನಾಗಿ ಪರಿವರ್ತಿಸಲಾಯಿತು. ಜಿಲ್ಲಾಧಿಕಾರಿಯ ಶಿಫಾರಸಿಗೆ ಅನುಸಾರವಾಗಿ ಸಂಘದ ಅಧ್ಯಕ್ಷನನ್ನು ಸರಕಾರ ನೇಮಿಸುತ್ತಿತ್ತು. ತಾಲೂಕು ಮಂಡಳಿಯಲ್ಲಿ ಸರಕಾರ ನಾಮಕರಣ ಮಾಡಿದ ೧೨ ಸದಸ್ಯರು ಮತ್ತು ತಾಲೂಕು ಕೇಂದ್ರ ಸ್ಥಳದ ಪೌರ ಮಂಡಳಿಯ ಸದಸ್ಯರು ತಮ್ಮೊಳಗಿನಿಂದ ಆಯ್ಕೆ ಮಾಡಿ ಸದಸ್ಯನಿರುತ್ತಿದ್ದನು. ಜಿಲ್ಲಾ ಮಂಡಳಿಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವಹಿಸುತ್ತಿದ್ದನು. ಮೈಸೂರು ನಗರದ ಅಭಿವೃದ್ಧಿಗಾಗಿ ೧೯೦೩ರಲ್ಲಿ ಮೈಸೂರು ನಗರಾಭಿವೃದ್ಧಿ ಮಂಡಳಿಯನ್ನು ರಚಿಸಲಾಯಿತು. ೧೯೦೬ರ ಪುರಸಭೆಗಳ ೭ನೆಯ ಅಧಿನಿಯಮದ ಪ್ರಕಾರ ಹಲವಾರು ಪುರಸಭೆಗಳು ಅಸ್ತಿತ್ವಕೆ ಬಂದವು.

ಪುರಸಭೆಗಳ ಆಡಳಿತದಲ್ಲಿನ ಕುಂದುಕೊರತೆಗಳು ಹಾಗೂ ಅವುಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಹಾಯಕವಾಗುವಂತೆ ೧೯೧೪ರಲ್ಲಿ ಮೈಸೂರು ಸರಕಾರ ಎರಡು ಸಮಿತಿಗಳನ್ನು ರಚಿಸಿತು. ಅವುಗಳೆಂದರೆ ಎಂ. ಕಾಂತರಾಜು ಅರಸು ಅವರು ಅಧ್ಯಕ್ಷರಾಗಿದ್ದ ಸ್ಥಳೀಯ ಸ್ವಯಮಾಧಿಕಾರ ಸಮಿತಿ ಮತ್ತು ದಿವಾನ್ ಬಹದ್ದೂರ್ ಸಿ. ಶ್ರೀನಿವಾಸ ಅಯ್ಯಂಗಾರ್ ಅವರು ಅಧ್ಯಕ್ಷರಾಗಿದ್ದ ಸ್ಥಳೀಯ ಹಣಕಾಸು ಸಮಿತಿ. ಎಲ್ಲ ಮಂಡಳಿಗಳಲ್ಲೂ ಆಯ್ಕೆಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿರಬೇಕೆಂದೂ, ತಾಲ್ಲೂಕು ಮಂಡಳಿಗಳಿಗೆ ಮುಕ್ತ ಅಧಿಕಾರವಿರಬೇಕೆಂದೂ ಆ ಸಮಿತಿಗಳು ಶಿಫಾರಸು ಮಾಡಿದವು. ಈ ಎರಡು ವರದಿಗಳ ಆಧಾರದ ಮೇಲೆ ೧೯೦೬ರ ಪುರಸಭಾ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಹೊಸ ಮಸೂದೆಯನ್ನು ೧೯೧೭ರಲ್ಲಿ ಮಂಡಿಸಲಾಯಿತು. ೧೯೧೮ರ ಅಧಿನಿಯಮದ ಪ್ರಕಾರ ತಾಲ್ಲೂಕು ಮತ್ತು ಜಿಲ್ಲಾ ಮಂಡಳಿಗಳಲ್ಲಿ ವಿವಿಧ ಹಿತಾಸಕ್ತಿಗಳು ಮತ್ತು ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸುವ ನಿಯಮಗಳನ್ನು ರೂಪಿಸಲಾಯಿತು. ಪುರ ಮತ್ತು ಸಣ್ಣ ಪೌರ ಮಂಡಳಿಗಳಿಗೆ ಸ್ವತಃ ತಮ್ಮ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಕೊಡಲಾಯಿತು. ಬೆಂಗಳೂರು ಜಿಲ್ಲಾ ಮಂಡಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಹಾಗೂ ಹಾಸನದ ಜಿಲ್ಲಾ ಮಂಡಳಿಗೆ ಅಧಿಕಾರೇತರರನ್ನು ಅಧ್ಯಕ್ಷರನ್ನಾಗಿ ನೇಮಿಸುವ ವಿಶೇಷ ಹಕ್ಕನ್ನು ನೀಡಲಾಯಿತು. ನಗರ ಮತ್ತು ಪುರಸಭೆಗಳಿಗೆ ಅಧ್ಯಕ್ಷರನ್ನು ಆಯ್ಕೆಮಾಡಬೇಕೆಂಬ ಅಂಶವನ್ನು ಅಂಗೀಕರಿಸಲಾದ್ದರಿಂದ ಜಿಲ್ಲಾಧಿಕಾರಿಗಳು ಅವುಗಳ ಅಧ್ಯಕ್ಷತೆಯನ್ನು ಬಿಟ್ಟುಕೊಟ್ಟರು. ಮೈಸೂರು ರಾಜ್ಯದಲ್ಲಿ ೧೯೧೫ರಲ್ಲಿ ಹಾಗೂ ೧೯೨೩ರಲ್ಲಿ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಸಮ್ಮೇಳನಗಳನ್ನು ನಡೆಸಲಾಯಿತು. ೧೯೨೮-೨೯ರಲ್ಲಿ ಪುರಸಭಾ ನಿಯಮವನ್ನು ತಿದ್ದುಪಡಿಗೊಳಿಸಿ, ಮಹಿಳೆಯರು ಪುರಸಭೆಗಳ ಸದಸ್ಯರಾಗುವುದಕ್ಕೆ ಇದ್ದ ಅಡ್ಡಿಯನ್ನು ನಿವಾರಿಸಲಾಯಿತು.

೧೯೩೩ರ ಮೈಸೂರು ಪುರಸಭೆಗಳ ಅಧಿನಿಯಮ, ೧೯೩೩ರ ಮೈಸೂರು ಪುಟ್ಟ ನಗರಸಭೆಗಳ ಅದಿನಿಯಮ ಹಾಗೂ ೧೯೩೩ರ ನಗರ ಪುರಸಭೆಗಳ ಅಧಿನಿಯಮ ಇವು ನಗರ ಪ್ರದೇಶಗಳಲ್ಲಿನ ಸಂಸ್ಥೆಗಳಿಗೆ ಸಂಬಂಧಿಸಿದ ಮುಖ್ಯ ಕಾನೂನು ಕ್ರಮಗಳಾಗಿದ್ದವು. ಇವು ಪುರಸಭಾ ಮಂಡಳಿಗಳಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದವು. ವಯಸ್ಕರ ಮತದಾನವನ್ನು ಆರಂಭಿಸಿದ್ದೇ ಇದಕ್ಕೆ ಕಾರಣ. ೧೯೩೯ರ ವೇಳೆಗೆ ರಾಜ್ಯದ ಪ್ರತಿಯೊಂದು ಜಿಲ್ಲಾ ಮಂಡಳಿಗೂ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿದ್ದರು. ಇದರಿಂದಾಗಿ ಅಧಿಕಾರಿ ಮತ್ತು ನಾಮಕರಣ ಸದಸ್ಯರ ಸಂಖ್ಯೆ ಕಡಿಮೆಯಾಯಿತು.

ಮುಂಬಯಿ ಕರ್ನಾಟಕದ ಪ್ರದೇಶಗಳಾದ ವಿಜಾಪುರ, ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವಿಭಾಗಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ವಿಭಾಗಕ್ಕೂ ಒಬ್ಬ ಕಮಿಷನರ್‌ನನ್ನು ನೇಮಕ ಮಾಡಲಾಗಿತ್ತು. ಜಿಲ್ಲೆಯ ಮುಖ್ಯಾಧಿಕಾರಿ ಕಲೆಕ್ಟರ್ ಆಗಿದ್ದನು. ಕಲೆಕ್ಟರ‍್ನ ಅಧೀನದಲ್ಲಿ ಸಹಾಯಕ ಕಲೆಕ್ಟರ್, ಡೆಪ್ಯೂಟಿ ಕಲೆಕ್ಟರ್, ಮಾಮಲೆದಾರರು, ವಲಯ ನಿರೀಕ್ಷಕ ಅಧಿಕಾರಿಗಳು ಇರುತ್ತಿದ್ದರು. ವಿಜಾಪುರದಲ್ಲಿ ೩೩ ಪೇಟೆಗಳಿದ್ದವು. ಅವುಗಳಲ್ಲಿ ಬಾರಾಖುಧಾನ ಬಜಾರು, ಮಹಮದ್‌ಖಾನನ ಬಜಾರು, ಅನೇ ಖೇಂಡೀ ಬಜಾರು, ಜಾಮಾ ಮಸೀದಿ ಪೇಟೆ, ಶಹಾಪೇಟೆ ಮುಖ್ಯವಾದವು. ಧಾರವಾಡವನ್ನು ೫ ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಕೋಟೆ, ಕಸಬೆ (ಪೇಟೆ), ನೆರೆಹಳ್ಳಿಗಳು, ಯುರೋಪಿಯನ್ ವಸ್ತಿ (ಯುರೋಪಿಯನ್ನರು ವಾಸಿಸುವ ಪ್ರದೇಶ) ಮತ್ತು ಲಷ್ಕರು ಹುಬ್ಬಳ್ಳಿಯನ್ನು ಹಳೇಹುಬ್ಬಳ್ಳಿ ಎಂಬುದಾಗಿ ವಿಭಜಿಸಲಾಗಿತ್ತು. ಹುಬ್ಬಳ್ಳಿಯ ಪಶ್ಚಿಮ ಭಾಗಕ್ಕೆ ಹಳೆ ಹುಬ್ಬಳ್ಳಿ ಎಂದೂ, ಪೂರ್ವ ಭಾಗಕ್ಕೆ ಹೊಸ ಹುಬ್ಬಳಿ ಎಂದೂ ಹೆಸರಿತ್ತು. ಬೆಳಗಾವಿಯಲ್ಲಿ ಕೋಟೆ, ಊರು, ಯುರೋಪಿಯನ್ ವಸ್ತಿ, ಲಷ್ಕರವೆನ್ನುವ ವಿಭಾಗಗಳಿದ್ದವು. ಅದೇ ರೀತಿ ಭೆಂಡೀ ಬಜಾರ್, ಖಡೇ ಬಜಾರ್, ಆದಿತ್ಯವಾರ ಪೇಟೆ, ಲಿಂಗಾಯಿತ ಪೇಟೆ ಎಂಬ ವ್ಯಾಪಾರ ನಡೆಯುವ ಪ್ರದರ್ಶನಗಳಿದ್ದವು.

ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಭಾರತ ಸರಕಾರದ ಕಾನೂನು ೧೮೫೦, ೨೬ನೆಯ ನಿಯಮಾನುಸಾರ ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಯಿತು. ೧೮೬೨ರ ಕಾನೂನಿನ ಪ್ರಕಾರ ತಾತ್ಕಾಲಿಕ ಪುರಸಭಾ ಸಮಿತಿಗಳು ರಚನೆಗೊಂಡವು. ೧೯೦೧ರಲ್ಲಿ ಮುಂಬಯಿ ಜಿಲ್ಲಾ ಪುರಸಭೆಗಳ ಅಧಿನಿಯಮ (೧೯೦೧ ರಲ್ಲಿ ತೃತೀಯ)ದ ಪ್ರಕಾರ ಪುರಸಭೆಗಳನ್ನು ರೂಪಿಸಲಾಯಿತು. ಈ ಅಧಿನಿಯಮದ ಪ್ರಕಾರ ರಾಜ್ಯ ಸರಕಾರವು ಅಧಿಸೂಚನೆಯ ಮೂಲಕ ಪುರಸಭೆಯನ್ನು ರಚಿಸಬೇಕಾದ ಯಾವುದಾದರೂ ಸ್ಥಳೀಯ ಪ್ರದೇಶವನ್ನು ಪುರಸಭಾ ಜಿಲ್ಲೆ ಎಂದು ಘೋಷಿಸುವ ಅಧಿಕಾರ ಹೊಂದಿತ್ತು. ಈ ಪುರಸಭೆಯ ಕಾಲಾವಧಿ ಮೂರು ವರ್ಷಗಳಾಗಿದ್ದು, ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸುವ ಅವಕಾಶವನ್ನು ಪಡೆದಿತ್ತು. ಅಧಿನಿಯಮದಲ್ಲಿ ಪುರಸಭೆಯ ಕಾರ್ಯಗಳಲ್ಲಿ ಬದ್ಧವಾದವು ಮತ್ತು ಐಚ್ಛಿಕವಾದವು ಎಂಬುದಾಗಿ ವಿಂಗಡಿಸಲಾಗಿತ್ತು. ಪುರಸಭೆಗಳು ಮಾಡಲೇಬೇಕಾದ ಕಾರ್ಯಗಳಲ್ಲಿ ಜನರ ಆರೋಗ್ಯ, ಸುರಕ್ಷತೆ, ಸಾರಿಗೆ ಮುಂತಾದವು ಸೇರಿದ್ದವು. ಎಲ್ಲ ಪುರಸಭೆಗಳಲ್ಲಿ ನಿರ್ವಹಣಾ ಸಮಿತಿಯನ್ನು ಹಾಗೂ ಯಾತಾರ್ಥಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಯಾತ್ರಾರ್ಥಿ ಸಮಿತಿಯನ್ನು ರಚಿಸಲಾಗಿತ್ತು.

೧೯೦೧ರ ಮುಂಬಯಿ ಜಿಲ್ಲಾ ಪುರಸಭಾ ಅಧಿನಿಯಮಕ್ಕೆ ಒಳಪಟ್ಟ ಪುರಸಭೆಗಳಿಗೆ ಹಿಂದಿಗಿಂತ ಹೆಚ್ಚಿನ ಅಧಿಕಾರವನ್ನು ೧೯೨೫ರಲ್ಲಿ ರೂಪುಗೊಂಡ ಅಧಿನಿಯಮವು ಒದಗಿಸಿತು. ಇದರ ಪರಿಣಾಮವಾಗಿ ಕೆಲವು ಪುರಸಭೆಗಳನ್ನು ಹಿರಿಯ ನಗರ ಸಭೆಗಳ ಮಟ್ಟಕ್ಕೆ ಏರಿಸಲಾಯಿತು. ಇಂಥ ಹಿರಿಯ ಪುರಸಭೆಗಳಲ್ಲಿ ಹೆಚ್ಚು ಅಧಿಕಾರವಿರುವ ಸ್ಥಾಯಿ ಸಮಿತಿಗಳನ್ನು ರಚಿಸಲಾಯಿತು. ಪುರಸಭೆಗಳ ಅಧ್ಯಕ್ಷರು ಜಿಲ್ಲಾ ಕಲೆಕ್ಟರ್‌ಗಳಾಗಿದ್ವರು. ತಾಲ್ಲೂಕು ಪುರಸಭೆಗಳ ಉಪಾಧ್ಯಕ್ಷರು ಅಸಿಸ್ಟೆಂಟ್ ಕಲೆಕ್ಟರ‍್ಗಳಾಗಿದ್ದರು. ಪುರಸಭೆಗಳಿಗೆ ತೆರಿಗೆ ಕೊಡುವವರು, ಸರಕಾರದಿಂದ ನೇಮಿಸಲ್ಪಡುವವರು ಸೇರಿ ಪುರಸಭಾ ಸಮಿತಿಗಳನ್ನು ರಚಿಸಲಾಗುತ್ತಿತ್ತು. ಈ ಸಮಿತಿಗಳ ವ್ಯಾಪ್ತಿಯಲ್ಲಿ ಪೇಟೆ-ಪಟ್ಟಣಗಳ ಸ್ವಚ್ಛತೆ, ನೀರಾವರಿ, ವಿದ್ಯುತ್ ಪೂರೈಕೆ, ಆರೋಗ್ಯ, ಸಾರಿಗೆ ಮುಂತಾದವು ಬರುತ್ತಿದ್ದವು. ಪುರಸಭೆಗಳು ಅನೇಕ ಕೆಲಸಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಅವುಗಳಲ್ಲಿ ರಸ್ತೆಗಳು ಮತ್ತಿತರ ಸಂಪರ್ಕ ಮಾರ್ಗಗಳ ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿ, ಆಸ್ಪತ್ರೆಗಳು, ಮಾರುಕಟ್ಟೆಗಳು, ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ, ನೈರ್ಮಲ್ಯೀಕರಣ ಮುಂತಾದವು ಸೇರಿದ್ದವು.

ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದ ಬಳ್ಳಾರಿ, ದಕ್ಷಿಣ ಕನ್ನಡ, ಕೊಳ್ಳೇಗಾಲ ಜಿಲ್ಲೆಗಳು ಪೂರ್ಣ ಅಧಿಕಾರವನ್ನು ಕಲೆಕ್ಟರ್ ಹೊಂದಿರುತ್ತಿದ್ದನು. ಕಲೆಕ್ಟರ್‌ನ ಅಧೀನದಲ್ಲಿ ಶಿರಸ್ತೇದಾರ, ಉಪಶಿರಸ್ತೇದಾರ, ಗುಮಾಸ್ತ, ಮುನಿಶಿ, ಆಂಗ್ಲ ಲಿಪಿಕಾರ ಮುಂತಾದವರು ಇರುತ್ತಿದ್ದರು. ಪ್ರತಿ ತಾಲೂಕಿಗೂ ಒಬ್ಬ ತಹಶೀಲ್ದಾರನಿದ್ದನು. ದೊಡ್ಡ ತಾಲೂಕುಗಳಲ್ಲಿ ಅಂದರೆ ಮುಖ್ಯ ಪಟ್ಟಣವಾದ ಬೆಳ್ತಂಗಡಿ, ಬಂಟ್ವಾಳಗಳಲ್ಲಿ ಒಬ್ಬ ಸಹಾಯಕ ಅಥವಾ ಉಪತಹಸೀಲ್ದಾರರಿರುತ್ತಿದ್ದರು. ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಕೊಳ್ಳೇಗಾಲಗಳಲ್ಲಿ ಸ್ಥಳೀಯ ಆಡಳಿತವು ೧೮೬೫ರ ಪುರಾಭಿವೃದ್ಧಿ ಹತ್ತನೆಯ ಅಧಿನಿಯಮ ಹಾಗೂ ೧೮೭೧ರ ಸ್ಥಳೀಯ ನಿಧಿಗಳ ನಾಲ್ಕನೆಯ ಶಾಸನ ಅಂಗೀಕಾರವಾದಾಗ ಆರಂಭವಾಯಿತು. ಪ್ರಥಮ ಅಧಿನಿಯಮದಿಂದ ಪುರಸಭೆಗಳನ್ನು ರೂಪಿಸಿದರೆ, ಎರಡನೆಯದು ಸ್ಥಳೀಯ ನಿಧಿಯ ಮಂಡಳಿಗಳನ್ನು ರೂಪಿಸಿತು.

೧೮೬೫ರ ಮದರಾಸು ಪುರಾಭಿವೃದ್ಧಿಯ ಹತ್ತನೆಯ ಅಧಿನಿಯಮದ ಪ್ರಕಾರ ಸ್ಥಳೀಯ ಪೊಲೀಸ್ ಪಡೆಯನ್ನು ನಿರ್ವಹಿಸುವ ಮತ್ತು ಸಾರ್ವಜನಿಕ ಅರೋಗ್ಯ ಸಂರಕ್ಷಿಸುವುದಕ್ಕಾಗಿ ಕೆಲಸಗಳನ್ನು ಮಾಡುವ ಖರ್ಚನ್ನು ನಿವಾಸಿಗಳೇ ನೋಡಿಕೊಳ್ಳಬೇಕು. ಈ ಅಭಿವೃದ್ಧಿ ಮಂಡಳಿಯಲ್ಲಿ ಸರಕಾರವು ಒಂದು ವರ್ಷದ ಅವಧಿಗಾಗಿ ನೇಮಿಸಿದ ಐವರು ಸದಸ್ಯರಿದ್ದು, ಜಿಲ್ಲಾ ದಂಡಾಧಿಕಾರಿ ಇದರ ಅಧ್ಯಕ್ಷರಾಗಿರುತ್ತಿದ್ದರು. ಈ ಅಧಿನಿಯಮದ ಪ್ರಕಾರ ಮಂಗಳೂರು ಪುರಸಭೆಯು ೧೮೬೬ರಲ್ಲಿ ಅಸ್ತಿತ್ವಕ್ಕೆ ಬಂತು. ಅದು ಮೊಗೇರು, ಕಸ್ಬಾ ಬಜಾರ್, ಅತ್ತಾವರ, ಕದ್ರಿ, ಕೊಡಿಯಾಬೈಲು, ಜೆಪ್ಪು ಮತ್ತು ಬೋಳಾರ ಪ್ರದೇಶಗಳನ್ನು ಒಳಗೊಂಡಿತ್ತು. ಮಂಗಳೂರು ಪುರಸಭೆಯನ್ನು ಪ್ರಥಮ ದರ್ಜೆ ಪುರಸಭೆಯನ್ನಾಗಿ ಪರಿಗಣಿಸಲಾಗಿತ್ತು. ೧೮೭೧ರ ಪುರಾಭಿವೃದ್ಧಿ ಮೂರನೆಯ ಅಧಿನಿಯಮದ ಪ್ರಕಾರ ಜನರಿಗೆ ಸೂಕ್ತಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಪೌರ ಮಂಡಳಿಗಳು ಸೂಕ್ತ ವ್ಯವಸ್ಥೆ ಮಾಡುವಂತೆ ಕ್ರಮವಹಿಸಲಾಗಿತ್ತು. ಸದಸ್ಯರ ಅಧಿಕಾರವಧಿಯನ್ನು ಒಂದು ವರ್ಷದಿಂದ ಮೂರು ವರ್ಷಕ್ಕೆ ಹೆಚ್ಚಿಸಲಾಯಿತು. ಜಿಲ್ಲಾಧಿಕಾರಿಯು ಅದರ ಅಧ್ಯಕ್ಷನಾಗಿರುತ್ತಿದ್ದನು. ಸದಸ್ಯರು ಮತ್ತು ಉಪಾಧ್ಯಕ್ಷರನ್ನು ತೆರಿಗೆದಾರರೇ ಚುನಾಯಿಸುವುದಕ್ಕೆ ಅವಕಾಶ ನೀಡಲಾಯಿತು.

ಸ್ಥಳೀಯ ಆಡಳಿತದ ಕುರಿತಾಗಿ ಸಮಗ್ರವಾಗಿ ಪರಾಮರ್ಶಿಸುವುದಕ್ಕೆ ಸರಕಾರವು ನೇಮಿಸಿದ್ದ ಸಮಿತಿಯು ೧೮೮೨ರಲ್ಲಿ ೧೮೮೪ನೆಯ ಮದ್ರಾಸ್ ಜಿಲ್ಲಾ ಪುರಸಭೆಗಳ ನಾಲ್ಕನೆಯ ಅಧಿನಿಯಮವೆಂಬ ಹೊಸ ಅಧಿನಿಯಮವನ್ನು ಶಿಫಾರಸು ಮಾಡಿತು. ಅದು ೧೮೭೧ರ ಪುರಾಭಿವೃದ್ಧಿ ಅಧಿನಿಯಮವನ್ನು ರದ್ದುಗೊಳಿಸಿತಲ್ಲದೆ ಪ್ರಥಮ ಬಾರಿಗೆ ಪುರಸಭೆ (ಮುನಿಸಿಪಾಲಿಟಿ) ಎಂಬ ಶಬ್ದವನ್ನು ಜಾರಿಗೆ ತಂದಿತು. ಈ ಅಧಿನಿಯಮದಲ್ಲಿ ತಿಳಿಸಿದ ಪ್ರಕಾರ ಪುರಸಭೆಯಲ್ಲಿ ೧೨ಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರಿದ್ದು, ಅವರ ಅಧಿಕಾರವಧಿ ಮೂರು ವರ್ಷಗಳಾಗಿತ್ತು. ಈ ಪುರಸಭೆಯು ಜಿಲ್ಲೆಯ ಯಾವ ವಿಭಾಗದಲ್ಲಿದೆಯೋ ಅಲ್ಲಿನ ಕಂದಾಯ ಅಧಿಕಾರಿಯು ಅದರ ಪದನಿಮಿತ್ತ ಸದಸ್ಯನಾಗಿರುತ್ತಿದ್ದ. ಸದಸ್ಯರ ಒಟ್ಟು ಸಂಖ್ಯೆಯ ಮುಕ್ಕಾಲು ಭಾಗವನ್ನು ತೆರಿಗೆದಾರರು ಆಯ್ಕೆ ಮಾಡಬೇಕಿತ್ತು. ಉಳಿದವರನ್ನು ಸರಕಾರವು ನೇಮಿಸುತ್ತಿತ್ತು. ವೃತ್ತಿ ತೆರಿಗೆ, ಭೂಮಿ ಮತ್ತು ಕಟ್ಟಡಗಳ ಮೇಲೆ ಅವುಗಳ ವಾರ್ಷಿಕ ಬಾಡಿಗೆ ಮೌಲ್ಯದ ಶೇ. ೭ ೧/೨ ರಷ್ಟನ್ನು ಮೀರದಂತೆ ತೆರಿಗೆ, ವಾಹನಗಳ ಮೇಲಿನ ತೆರಿಗೆ, ಸುಂಕದ ಕಟ್ಟೆ ಮುಂತಾದವು ಕಂದಾಯದ ಮುಖ್ಯ ಮೂಲಗಳಾಗಿದ್ದವು. ರಾಯಲ್ ಕಮೀಷನ್ನಿನ ಅಧೀಕೃತ ಆಯೋಗದ ಶಿಫಾರಸುಗಳ ಮೇರೆಗೆ ೧೯೨೦ರಲ್ಲಿ ೧೮೮೪ರ ಅಧಿನಿಯಮಕ್ಕೆ ಬದಲಾಗಿ ೧೯೨೦ರ ಮದರಾಸು ಜಿಲ್ಲಾ ಪುರಸಭೆಗಳ ಅಧಿನಿಯಮವನ್ನು ಅಂಗೀಕರಿಸಲಾಯಿತು. ಚುನಾಯಿತ ಸದಸ್ಯರ ಪ್ರಮಾಣವನ್ನು ಹಾಗೂ ಪುರಸಭೆಯ ಸಂಪನ್ಮೂಲಗಳು ಮತ್ತು ಅಧಿಕಾರವನ್ನು ಈ ಅಧಿನಿಯಮವು ಹೆಚ್ಚಿಸಿತು. ೧೯೩೦ರಲ್ಲಿ ಪರಿಷ್ಕೃತ ಅಧಿನಿಯಮವೊಂದನ್ನು ಜಾರಿಗೊಳಿಸಲಾಯಿತು. ಅದರ ಅನ್ವಯ ಸದಸ್ಯರೆಲ್ಲರೂ ಚುನಾಯಿತರಾಗಬೇಕಿತ್ತು. ಆದರೂ ಮುಸಲ್ಮಾನರು, ಭಾರತೀಯ ಕ್ರೈಸ್ತರು, ಯುರೋಪಿಯನ್ನರು, ಆಂಗ್ಲೋ ಇಂಡಿಯನ್ನರು. ಹರಿಜನರು ಮತ್ತು ಮಹಿಳೆಯರಿಗಾಗಿ ಸೀಟುಗಳನ್ನು ಮೀಸಲಾಗಿಡಲಾಗಿತ್ತು. ಈ ಅಧಿನಿಯಮವು ಸ್ತ್ರೀಯರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಅದೇ ರೀತಿ ಸರಕಾರಕ್ಕೆ ಅಥವಾ ಇತರ ಯಾವುದಾದರೂ ಸ್ಥಳೀಯ ಸಂಸ್ಥೆಗೆ ತೆರಿಗೆ ಸಲ್ಲಿಸುವ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು.

ಹೈದರಬಾದ್ ಕರ್ನಾಟಕದ ಪ್ರದೇಶಗಳಾದ ಗುಲ್ಬರ್ಗಾ, ಬೀದರ್ ಮತ್ತು ರಾಯಚೂರುಗಳಲ್ಲಿ ನಿಜಾಮರು ಬ್ರಿಟಿಷರ ಸಲಹೆಯ ಪ್ರಕಾರ ಅಡಳಿತ ನಡೆಸುತ್ತಿದ್ದರು. ೧೮೬೭ರಲ್ಲಿ ಹೈದರಾಬಾದ್ ರಾಜ್ಯವನ್ನು ಐದು ವಿಭಾಗಗಳನ್ನಾಗಿ ಮತ್ತು ಹದಿನೇಳು ಜಿಲ್ಲೆಗಳನ್ನಾಗಿ ವಿಂಗಡಿಸಲಾಯಿತು. ಪ್ರತಿಯೊಂದು ವಿಭಾಗಕ್ಕೂ ರೆವಿನ್ಯೂ ಕಮಿಷನರ‍್ಗಳನ್ನು ನೇಮಿಸಲಾಗಿತ್ತು. ಪ್ರತಿ ಜಿಲ್ಲೆಗೂ ಒಬ್ಬ ಮ್ಯಾಜಿಸ್ಟ್ರೇಟ್ ಅಥವಾ ಕಲೆಕ್ಟರ್‌ನನ್ನು ನೇಮಿಸಲಾಯಿತು. ಹೈದರಾಬಾದ್ ರಾಜ್ಯದಲ್ಲಿ ೧೮೮೭-೮೮ರಲ್ಲಿ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಉಗಮವಾಯಿತು. ಬೀದರ್, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳು ಅದರ ಭಾಗಗಳಾಗಿದ್ದವು. ಪುರಸಭೆಗಳಿಗೆ ಸಂಬಂಧಿಸಿದಂತೆ ೧೯೦೦ರಲ್ಲಿ ಅಧಿನಿಯಮವೊಂದನ್ನು ಜಾರಿಗೊಳಿಸಲಾಯಿತು. ಈ ಅಧಿನಿಯಮವು ಪುರಸಭೆಯ ತೆರಿಗೆ ಹಾಗೂ ವಿಶೇಷ ತೆರಿಗೆಗಳನ್ನು ವಿಧಿಸಲು ಅವಕಾಶವಿತ್ತಿತು. ಜಿಲ್ಲಾ ಕೇಂದ್ರ ಸ್ಥಳಗಳೂ ಸೇರಿದಂತೆ ೫,೦೦೦ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ನೈರ್ಮಲ್ಯೀಕರಣ ಸಮಿತಿಯನ್ನು ರಚಿಸುವ ಅಧಿಕಾರ ಸರಕಾರಕ್ಕೆ ಸಿಕ್ಕಿತು. ಬೆಳೆಯುತ್ತಿದ್ದ ಪಟ್ಟಣಗಳಲ್ಲಿ ಬದಲಾಗುತ್ತಿದ್ದ ಪರಿಸ್ಥಿತಿಗನುಗುಣವಾಗಿ ೧೯೦೮, ೧೯೧೦ ಮತ್ತು ೧೯೩೩-೩೪ರಲ್ಲಿ ಈ ಅಧಿನಿಯಮದಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಲಾಯಿತು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮತ್ತಿತರ ದೊಡ್ಡ ಪಟ್ಟಣದಲ್ಲಿ ನೈರ್ಮಲ್ಯೀಕರಣ ಸಮಿತಿಗಳ ಬದಲಾಗಿ ಅಧಿಕಾರೇತರರು ಬಹುಮತದಲ್ಲಿದ್ದ ಪುರಸಮಿತಿಗಳನ್ನು ೧೯೩೪ರಲ್ಲಿ ರಚಿಸಲಾಯಿತು. ಪುರಸಭಾ ಸಮಿತಿಗಳಲ್ಲಿ ಹನ್ನೆರಡು ಅಧಿಕಾರೇತರರೂ ಸೇರಿದಂತೆ ಒಟ್ಟು ಹದಿನಾರು ಸದಸ್ಯರಿರುತ್ತಿದ್ದರು. ಪಟ್ಟಣ ಸಮಿತಿಯಲ್ಲಿ ಮೂವರು ಅಧಿಕಾರಿಗಳು ಮತ್ತು ಇಬ್ಬರು ಅಧಿಕಾರೇತರರು ಸೇರಿದಂತೆ ಐವರು ಸದಸ್ಯರಿದ್ದರು.

ಕೊಡಗಿನ ಆಡಳಿತವನ್ನು ಬ್ರಿಟಿಷರು ೧೮೩೪ರಿಂದ ಒಬ್ಬ ಕಮೀಷನರ್‌ನ ಮೂಲಕ ನಡೆಸುತ್ತಿದ್ದರು. ಆರಂಭದಲ್ಲಿ ಮೈಸೂರಿನ ಕಮಿಷನರ‍್ರೇ ಕೊಡಗಿನ ಕಮಿಷನರ್ ಆಗಿದ್ದರು. ಒಬ್ಬ ಐರೋಪ್ಯ ಅಧೀಕ್ಷಕ ಕೊಡಗಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ೧೮೬೯ರಲ್ಲಿ ಕಮಿಷನರ್ ಹುದ್ದೆಯನ್ನು ಮುಖ್ಯ ಕಮಿಷನರ್ ಎಂದೂ, ಅಧೀಕ್ಷಕ ಹುದ್ದೆಯನ್ನು ಕಮಿಷನರ್ ಎಂದೂ, ಸಹಾಯಕ ಅಧೀಕ್ಷಕರನ್ನು ಸಹಾಯಕ ಕಮಿಷನರ್ ಎಂದೂ ಕರೆಯಲಾಯಿತು. ಕೊಡಗಿನಲ್ಲಿ ಸ್ಥಳೀಯ ಸ್ವಯಮಾಡಳಿತ ಆರಂಭಗೊಂಡಿರುವುದು ೧೮೭೦ರಲ್ಲಿ. ೧೮೭೦ರಲ್ಲಿ ಪ್ರಥಮ ಬಾರಿಗೆ ಮಡಿಕೇರಿ ಮತ್ತು ವಿರಾಜಪೇಟೆಗಳಲ್ಲಿ ಪುರಸಮಿತಿಗಳನ್ನು ಸ್ಥಾಪಿಸಲಾಯಿತು. ನಂತರ ಸಣ್ಣ ಪಟ್ಟಣಗಳೀಗೆ ಪುರ ಅಧಿನಿಯಮವನ್ನು ಅನ್ವಯಿಸಲಾಯಿತು. ಮಡಿಕೇರಿ ಮತ್ತು ವಿರಾಜಪೇಟೆಯ ಪುರ ಮಂಡಳಿಗಳಲ್ಲದೆ ಚಿಕ್ಕಪಟ್ಟಣಗಳಲ್ಲಿ ಅಧಿಸೂಚಿತ ಪ್ರದೇಶ ಸಮಿತಿಗಳಿದ್ದವು. ಈ ಸಮಿತಿಗಳಲ್ಲಿ ಅಧಿಕಾರಿಗಳು ಮತ್ತು ಅಧಿಕಾರೇತರ ಸದಸ್ಯರಿದ್ದು, ಕಂದಾಯ ಅಧಿಕಾರಿಗಳು ಇದರ ಅಧ್ಯಕ್ಷರಾಗಿದ್ದರು. ಇವುಗಳ ಆದಾಯ ಮೂಲಗಳೆಂದರೆ ಸುಂಕ, ಮನೆ ಕಂದಾಯ, ದಂಡದ ಹಣ ಮತ್ತು ವೃತ್ತಿ ತೆರಿಗೆಗಳು, ೧೯೦೦ರ ಕೊಡಗಿನ ೧೧ನೆಯ ಅಧಿನಿಯಮದ ಅನುಸಾರ ೧೯೦೧ರಲ್ಲಿ ಕೊಡಗು ಜಿಲ್ಲಾ ಮಂಡಳಿಯನ್ನು ರಚಿಸಲಾಯಿತು. ಅದರ ಹದಿನಾಲ್ಕು ಜನ ಸದಸ್ಯರಲ್ಲಿ ಒಂಬತ್ತು ಜನ ನಾಮಕರಣಗೊಂಡವರು, ಇಬ್ಬರು ಚುನಾಯಿತರು ಮತ್ತು ಉಳಿದವರು ಪದನಿಮಿತ್ತ ಸದಸ್ಯರಾಗಿದ್ದರು. ಕೊಡಗಿನ ಆಡಳಿತಾಧಿಕಾರಿ ಅದರ ಅಧ್ಯಕ್ಷನಾಗಿದ್ದನು. ಸುಂಕದಕಟ್ಟೆ, ಮಾರುಕಟ್ಟೆ, ಶಿಕ್ಷಣ, ಔಷದಾಲಯಗಳು ಮುಂತಾದವುಗಳನ್ನು ನಿರ್ವಹಿಸುವುದು ಮಂಡಳಿಯ ಮುಖ್ಯ ಕೆಲಸವಾಗಿತ್ತು.

೧೯೦೭ರಲ್ಲಿ ಕೊಡಗಿಗೆ ಅನ್ವಯವಾಗುವಂತೆ ಕೊಡಗು ಮುನಿಸಿಪಲ್ ವಿನಿಯಮಗಳನ್ನು (ಕೂರ್ಗ್ ಮುನಿಸಿಪಲ್ ರೆಗ್ಯುಲೇಷನ್ II) ಜಾರಿಗೆ ತರಲಾಯಿತು. ಇದರಿಂದಾಗಿ ಪುರಸಭೆಗಳು ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ರೂಢಿಸಿಕೊಂಡು ನಾಗರಿಕರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಂತಾಯಿತು. ಕೊಡಗಿನ ಪಟ್ಟಣಗಳಾದ ಕುಶಾಲನಗರ, ಸೋಮವಾರಪೇಟೆ, ಕೊಡ್ಲಿಪೇಟೆಗಳಿಗೆ ಮುನಿಸಿಪಲ್ ನಿಯಮಾವಳಿಗಳನ್ನು ಅನ್ವಯಿಸಲಾಯಿತು. ಜಿಲ್ಲೆಯ ಇತರ ಸಣ್ಣ ಪಟ್ಟಣಗಳ ನಾಗರಿಕ ಅವಶ್ಯಕತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಆಯಾ ಪ್ರದೇಶಗಳಲ್ಲಿ ಅಧಿಸೂಚಿತ ಪ್ರದೇಶ ಅಭಿವೃದ್ಧಿ ಮಂಡಳಿಗಳನ್ನು ರಚಿಸಲಾಯಿತು. ೧೯೦೭ರ ಮುನಿಸಿಪಲ್ ರೆಗ್ಯುಲೇಷನ್ ಮತ್ತು ಅದರ ಅನ್ವಯ ರಚಿಸಲಾದ ನಿಯಮಾವಳಿಗಳ ಪ್ರಕಾರ ಅಧಿಸೂಚಿತ ಪ್ರದೇಶ ಸಮಿತಿಗಳನ್ನು ರಚಿಸಲಾಯಿತು. ಪುರಸಭೆಗೆ ಆದಾಯದ ಮುಖ್ಯ ಮೂಲಗಳೆಂದರೆ ಆಸ್ತಿ ತೆರಿಗೆ, ವಾಹನಗಳು ಮತ್ತು ಪ್ರಾಣಿಗಳ ಮೇಲಿನ ಸುಂಕ, ನೀರಿನ ದರ, ದೀಪದ ತೆರಿಗೆ, ವೃತ್ತಿ ತೆರಿಗೆ, ಅಂಗಡಿ ಮತ್ತು ಕಛೇರಿಗಳ ಮೇಲಿನ ತೆರಿಗೆ ಮುಂತಾದವು.

ಬ್ರಿಟಿಷ್ ಸರಕಾರ ನಗರಗಳ ಆಡಳಿತಕ್ಕೆ ಸಂಬಂಧಪಟ್ಟಂತೆ ಜಾರಿಗೊಳಿಸಿದ ಕಾನೂನು, ಕಾಯಿದೆಗಳು ನಗರಗಳ ಆಡಳಿತವನ್ನು ವ್ಯವಸ್ಥಿತಗೊಳಿಸುವುದರ ಜೊತೆ ಜೊತೆಗೆ ಬ್ರಿಟಿಷ್ ಸರಕಾರದ ಹಣ ಗಳಿಸುವ ಮತ್ತು ಹಣ ಉಳಿಸುವ ಉದ್ದೇಶಗಳನ್ನೂ ಈಡೇರಿಸಿದವು. ಸ್ಥಳೀಯ ಶ್ರೀಮಂತ ವರ್ಗಗಳು ನಗರಾಡಳಿತದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವು. ಶ್ರೀಮಂತ ಭೂಮಾಲೀಕರು ಮತ್ತು ವರ್ತಕರನ್ನು ನಗರಾಡಳಿತದಲ್ಲಿ ಭಾಗಿಗಳಾಗುವಂತೆ ಮಾಡಿ, ಅದರ ಪ್ರಯೋಜನವನ್ನು ಬ್ರಿಟಿಷ್ ಸರಕಾರ ಪಡೆದುಕೊಂಡಿತು. ಪೇಟೆ-ಪಟ್ಟಣಗಳನ್ನು ಆಡಳಿತ ಚೌಕಟ್ಟಿನೊಳಗೆ ತರುವುದರ ಮೂಲಕ ಅಲ್ಲಿನ ಪ್ರತಿಯೊಂದು ಚಟುವಟಿಕೆಗಳೂ ತೆರಿಗೆಯ ವ್ಯಾಪ್ತಿಗೆ ಬರುವಂತಾಯಿತು. ತೆರಿಗೆಯ ಮೂಲಕ ಬ್ರಿಟಿಷ್ ಸರಕಾರ ಹೆಚ್ಚಿನ ಆದಾಯವನ್ನು ಪಡೆಯಿತು. ನಗರ ಪ್ರದೇಶಗಳಲ್ಲಿ ಯಾವುದೇ ಉದ್ಯೋಗದಲ್ಲಿದ್ದರೂ ವೃತ್ತಿ ತೆರಿಗೆಯನ್ನು ನೀಡಬೇಕಾಗಿತ್ತು. ವೃತ್ತಿ ತೆರಿಗೆಯನ್ನು ಅವರವರ ಉದ್ಯೋಗ ಅಥವಾ ಸಂಬಳದ ಆಧಾರದ ಮೇಲೆ ವಿಧಿಸಲಾಗುತ್ತಿತ್ತು. ಕಟ್ಟಡಗಳ ಮೇಲಿನ ತೆರಿಗೆ, ಆಸ್ತಿಯ ಮೇಲಿನ ತೆರಿಗೆ, ನೀರಿನ ಮೇಲಿನ ತೆರಿಗೆ, ವಾಹನಗಳು ಮತ್ತು ಪ್ರಾಣಿಗಳ ಮೇಲಿನ ತೆರಿಗೆ, ಕುಶಲಕರ್ಮಿಗಳ ಮೇಲಿನ ತೆರಿಗೆ, ವಸ್ತುಗಳ ಮಾರಾಟದ ಮೇಲಿನ ತೆರಿಗೆ, ಮಾರುಕಟ್ಟೆಗಳ ಮೇಲಿನ ತೆರಿಗೆ, ಶಾಲಾ ಶುಲ್ಕಗಳು, ಪಟ್ಟಣಗಳ ನೈರ್ಮಲ್ಯೀಕರಣ ಮತ್ತು ಸಾರಿಗೆ ನಿರ್ವಹಣೆಗಾಗಿ ವಿವಿಧ ಮೂಲಗಳಿಂದ ಸಂಗ್ರಹಿಸುವ ಹಣ ಮುಂತಾದವು ಆದಾಯದ ಮೂಲಗಳಾಗಿದ್ದವು.

ಪುರಸಭೆಗಳಿಗೆ ಆದಾಯದ ಮೂಲಗಳಿದ್ದಂತೆ ಖರ್ಚಿನ ಮೂಲಗಳೂ ಇದ್ದವು. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಬಂಡವಾಳವನ್ನು ವಿನಿಯೋಗಿಸಬೇಕಾಗಿತ್ತು. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿ ಪ್ರಮುಖವಾದದ್ದು. ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಪುರಸಭೆಯ ಕರ್ತವ್ಯಗಳಲ್ಲೊಂದಾಗಿತ್ತು. ಅದೇ ರೀತಿ ಆಸ್ಪತ್ರೆಗಳು, ಮಾರುಕಟ್ಟೆಗಳು, ಶಾಲೆಗಳು ಮುಂತಾದವುಗಳ ನಿರ್ವಹಣೆ, ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ, ನೀರಿನ ಪೂರೈಕೆ ಮಾಡುವುದು ಮುಂತಾದವುಗಳಿಗೆ ಪುರಸಭೆಯ ಹಣವನ್ನು ವಿನಿಯೋಗಿಸುತ್ತಿತ್ತು. ಈ ಉದ್ದೇಶಕ್ಕಾಗಿಯೇ ಸಾರ್ವಜನಿಕ ಕೆಲಸಕಾರ್ಯಗಳ ಇಲಾಖೆಗಳು ಆರಂಭಗೊಂಡವು. ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಉದ್ಯೋಗಿಗಳಿಗೆ ಸಂಬಳವನ್ನು ನೀಡುವುದು, ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ಔಷಧಿಗಳ ಪೂರೈಕೆ, ಆರೋಗ್ಯಾಧಿಕಾರಿಗಳ ನೇಮಕ, ಆರೋಗ್ಯ ಇಲಾಖೆಗಳ ಸ್ಥಾಪನೆ, ಶುಚಿತ್ವವನ್ನು ಕಾಪಾಡುವುದು, ವಿದ್ಯುತ್‌ನ ಪೂರೈಕೆ ಮುಂತಾದವು ಪುರಸಭೆಯ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದವು. ಈ ಕಾರಣಗಳಿಂದಾಗಿ ಸ್ಥಳೀಯ ಶ್ರೀಮಂತ ವರ್ತಕರು, ಭೂಮಾಲೀಕರು, ಲೇವಾದೇವಿದಾರರು ಮುಂತಾದವರನ್ನು ಪುರಸಭೆಯ ಆಡಳಿತದಲ್ಲಿ ಭಾಗಿಗಳಾಗುವಂತೆ ಮಾಡಿ ಲಾಭ ನಷ್ಟದಲ್ಲಿ ಅವರನ್ನೂ ಪಾಲುದಾರರನ್ನಾಗಿ ಮಾಡಲಾಯಿತು. ಪುರಸಭೆಗಳ ಕೆಲಸಕಾರ್ಯಗಳು ಕೆಲವೊಂದು ಸಂದರ್ಭಗಳಲ್ಲಿ ಹಣಕಾಸಿನ ತೊಂದರೆಗಳಿಂದಾಗಿ ನಿಧಾನಗತಿಯಲ್ಲಿ ನಡೆಯುತ್ತಿದ್ದವು.