ಬ್ರಿಟಿಷ್ ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಎರಡು ವಿಚಾರಗಳು ಪ್ರಮುಖವೆನಿಸುತ್ತವೆ. ಅವುಗಳೆಂದರೆ ವಸಾಹತುಪೂರ್ವ ಕರ್ನಾಟಕದಲ್ಲಿದ್ದ ನಗರ ವ್ಯವಸ್ಥೆ ಹಾಗೂ ವಸಾಹತು ಕರ್ನಾಟಕದ ನಗರ ವ್ಯವಸ್ಥೆ. ಕರ್ನಾಟಕವು ಬ್ರಿಟಿಷ್ ವಸಾಹತುವಾಗಿ ಪರಿವರ್ತನೆಗೊಂಡ ಬಳಿಕ ನಗರೀಕರಣ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾದವು. ವಸಾಹತುಪೂರ್ವ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಪೇಟೆ-ಪಟ್ಟಣಗಳು ಮತ್ತು ಕೈಗಾರಿಕೆಗಳು ವಸಾಹತುಶಾಹಿ ಆಳ್ವಿಕೆಯಿಂದಾಗಿ ಅನೇಕ ರೀತಿಯ ಸ್ಥಿತ್ಯಂತರಗಳಿಗೆ ಒಳಗಾದವು. ಅರಮನೆ ಕೇಂದ್ರಿತ ಪಟ್ಟಣಗಳು ಬದಲಾದ ವ್ಯವಸ್ಥೆಯಲ್ಲಿ ತಮ್ಮ ನೆಲೆಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ವ್ಯಾಪಾರ ಕೇಂದ್ರಗಳು, ಅದರಲ್ಲೂ ಬಂದರು ಪಟ್ಟಣಗಳು ಬದಲಾದ ವ್ಯವಸ್ಥೆಯಲ್ಲೂ ಕೆಲವೊಂದು ಬದಲಾವಣೆಗಳೊಂದಿಗೆ ಮುಂದುವರಿದುಕೊಂಡೆ ಬಂದವು. ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಗೆ ಹಾಗೂ ವ್ಯಾಪಾರದಲ್ಲಿನ ಏಕಸ್ವಾಮ್ಯಕ್ಕೆ ಈ ಕೇಂದ್ರಗಳು ನೇರವಾಗಿ ಬಳಕೆಯಾದವು. ಕರ್ನಾಟಕವು ಬ್ರಿಟಿಷ್ ವಸಾಹತುವಾಗಿ ಪರಿವರ್ತನೆಗೊಂಡ ಬಳಿಕ ಬ್ರಿಟಿಷ್ ಮಾದರಿಯ ಆಧುನೀಕರಣವು ಆರಂಭಗೊಂಡಿತು. ಬ್ರಿಟನ್ ಕೈಗಾರಿಕಾ ದೇಶವಾಗಿದ್ದರಿಂದಾಗಿ ಹಾಗೂ ಅಲ್ಲಿ ನಗರೀಕರಣ ಪ್ರಕ್ರಿಯೆ ಚುರುಕಿನಿಂದ ಕೂಡಿದ್ದರಿಂದಾಗಿ ಭಾರತವನ್ನು ಮತ್ತೊಂದು ಕೈಗಾರಿಕಾ ದೇಶವನ್ನಾಗಿ ಅಭಿವೃದ್ಧಿಪಡಿಸಲು ಬ್ರಿಟಿಷ್ ಸರಕಾರ ಇಷ್ಟಪಡಲಿಲ್ಲ. ಯುರೋಪಿನ ಕೈಗಾರೀಕರಣ ಮತ್ತು ನಗರೀಕರಣಕ್ಕೆ ಪೂರಕವಾದ ವ್ಯವಸ್ಥೆಯೊಂದನ್ನು ಭಾರತದಲ್ಲಿ ಹುಟ್ಟು ಹಾಕುವುದೇ ಬ್ರಿಟಿಷರ ಉದ್ದೇಶವಾಗಿತ್ತು. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ಕೆಲವೊಂದು ಪ್ರಯೋಗಗಳಾದವು. ಇದು ಪರೋಕ್ಷವಾಗಿ ಕೆಲವೊಂದು ಕೈಗಾರಿಕೆಗಳ ಹುಟ್ಟಿಗೆ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಯಿತು. ಹಳೆಯ ರಸ್ತೆಗಳ ದುರಸ್ತಿ, ಹೊಸ ರಸ್ತೆಗಳ ನಿರ್ಮಾಣ, ರೈಲು ಮಾರ್ಗಗಳ ನಿರ್ಮಾಣ ಮುಂತಾದವುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದಾಗಿದೆ.

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕೃಷಿ ಮತ್ತು ನಗರ ವ್ಯವಸ್ಥೆಗಳಲ್ಲಿ ಆದ ಕೆಲವೊಂದು ಬದಲಾವಣೆಗಳು ಭಾರತವನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಆದಂತವುಗಳಲ್ಲ. ಬ್ರಿಟಿಷ್ ಆಡಳಿತದ ಅವಶ್ಯಕತೆಗಳನ್ನು ಪೂರೈಸುವ ಹಿನ್ನಲೆಯಲ್ಲಿ ಬ್ರಿಟಿಷ್ ಮಾದರಿಯ ಆಧುನಿಕತೆ ಅಥವಾ ಅಭಿವೃದ್ಧಿ ಜಾರಿಗೆ ಬಂತು. ಅದು ಭಾರತದ ನೆಲದಲ್ಲಾದ ಬ್ರಿಟಿಷರ ಆಧುನೀಕರಣ. ಕೈಗಾರಿಕಾ ಯುರೋಪಿನ ಅವಶ್ಯಕತೆಗಳನ್ನು ಪೂರೈಸುವ ಹಿನ್ನಲೆಯಲ್ಲಿ ಕೃಷಿ ಪ್ರಧಾನ ಭಾರತವನ್ನು ಸಜ್ಜುಗೊಳಿಸಲಾಯಿತು. ಬ್ರಿಟಿಷ್ ಭಾರತ ನಿರ್ಮಾಣಗೊಂಡಿದ್ದೇ ಈ ಅಡಿಪಾಯದಲ್ಲಿ. ಇದರ ಲಾಭವನ್ನು ಬ್ರಿಟಿಷರಷ್ಟೇ ಅಲ್ಲದೆ ಸ್ಥಳೀಯ ಶ್ರೀಮಂತ ವರ್ತಕರು, ಜಮೀನ್ದಾರರು ಮತ್ತು ಮಧ್ಯವರ್ತಿಗಳು ಪಡದುಕೊಂಡರು. ಇದರಿಂದಾಗಿ ಬಂಡವಾಳ ಕೇಂದ್ರಿತ ಶ್ರೀಮಂತರ ಕೂಟವೊಂದು ನಿರ್ಮಾಣಗೊಂಡಿತು. ದುಡಿಯುವ ವರ್ಗಗಳ ಬದುಕಿನಲ್ಲಿ ಬದಲಾದ ವ್ಯವಸ್ಥೆ ಹೊಸತನವನ್ನೇನೂ ತರಲಿಲ್ಲ. ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಕಟ್ಟಲ್ಪಟ್ಟಿದ್ದ ಸ್ಥಳೀಯ ಯಜಮಾನಿಕೆಯ ಜೊತೆಗೆ ಬಂಡವಾಳ ಕೇಂದ್ರಿತ ಪಶ್ಚಿಮದ ಯಜಮಾನಿಕೆಯು ಭಾರತದಲ್ಲಿ ಸ್ವಚ್ಛಂದವಾಗಿ ವಿಹರಿಸುವಂತಾಯಿತು. ಹೀಗಾಗಿ ಆಧುನೀಕರಣ ಮತ್ತು ಹಿಂದುಳಿದಿರುವಿಕೆಗಳೆರಡೂ ಒಟ್ಟೊಟ್ಟಿಗೆ ಸಾಗಿದವು. ಚರಿತ್ರೆಕಾರ ಬಿಪನ್ ಚಂದ್ರ ಅವರು ಬ್ರಿಟಿಷ್ ಭಾರತದ ಕುರಿತು ಚರ್ಚಿಸುವಾಗ ಈ ತೀರ್ಮಾನಕ್ಕೆ ಬರುತ್ತಾರೆ.

ಬಿಪನ್ ಚಂದ್ರ ಅವರ ಪ್ರಕಾರ ವಸಾಹತುಶಾಹಿ ಒಂದು ಹೊಸ ಉತ್ಪಾದನಾ ವಿಧಾನವಲ್ಲ. ಅದು ಹಲವಾರು ಉತ್ಪಾದನಾ ವಿಧಾನಗಳನ್ನು ಒಳಗೊಂಡಿರುವ ಸಂಮಿಶ್ರವಾದ ವ್ಯವಸ್ಥೆ. ಆ ವ್ಯವಸ್ಥೆಯೊಳಗೆ ಊಳಿಗಮಾನ್ಯತೆ, ಬಂಡವಾಳಶಾಹಿ, ಜೀತ, ಶೋಷಣೆ, ವ್ಯಾಪಾರ, ಕೈಗಾರಿಕೆ, ಕೃಷಿ ಮುಂತಾದವುಗಳೆಲ್ಲವೂ ಸೇರಿಕೊಂಡಿರುತ್ತವೆ. ವಸಾಹತುಶಾಹಿಯು ಊಳಿಗಮಾನ್ಯತೆಯೊಂದಿಗೆ ಸಂಬಂಧ ಬೆಳೆಸಿತು. ಹೀಗಾಗಿ ವಸಾಹತು ಆಳ್ವಿಕೆಯಲ್ಲಿ ಊಳಿಗಮಾನ್ಯತೆಯೊಂದಿಗೆ ಸಂಬಂಧ ಬೆಳೆಸಿತು. ಹೀಗಾಗಿ ವಸಾಹತು ಆಳ್ವಿಕೆಯಲ್ಲಿ ಊಳಿಗಮಾನ್ಯ ವ್ಯವಸ್ಥೆಯು ನಾಶಹೊಂದುವ ಬದಲು ಮತ್ತೆ ಚಿಗುರಿಕೊಂಡಿತು. ಬಂಡವಾಳ ಶೇಖರಣೆಗೆ ಅನುಕೂಲವಾಗುವ ರೀತಿಯಲ್ಲಿ ಹೊಸ, ಹೊಸ ಎಸ್ಟೇಟ್‌ಗಳು (ತೋಟದ ಉದ್ಯಮ ಅಥವಾ ಪ್ಲಾಂಟೇಷನ್ ಆರ್ಥಿಕತೆ) ಹುಟ್ಟಿಕೊಂಡವು. ಇದು ಹೊಸ ಭೂಮಾಲೀಕ ವರ್ಗಗಳ ಹುಟ್ಟಿಗೂ ಕಾರಣವಾಯಿತು. ಬೇರೆ, ಬೇರೆ ರೀತಿಯ ಉತ್ಪಾದನಾ ವಿಧಾನಗಳಿಂದ ಹೆಚ್ಚುವರಿಯನ್ನು ಕ್ರೋಢೀಕರಿಸುವುದು ವಸಾಹತುಶಾಹಿಯ ಉದ್ದೇಶವಾಗಿತ್ತು. ಈ ಉದ್ದೇಶಕ್ಕೆ ಅದು ಅನುಸರಿಸಿದ ವಿಧಾನ ದೇಶದಿಂದ ದೇಶಕ್ಕೆ ಬೇರೆ ಬೇರೆಯದೇ ಆಗಿತ್ತು. ಒಟ್ಟಾರೆಯಾಗಿ ಅದೊಂದು ಬಂಡವಾಳ ಕೇಂದ್ರಿತ ಉತ್ಪಾದನಾ ವಿಧಾನವಂತೂ ಹೌದು. ಅದು ತರುವ ಆಧುನೀಕರಣ ಕೇವಲ ಆರ್ಥಿಕ ಪರಿವರ್ತನೆಗಳಿಗಷ್ಟೇ ಸೀಮಿತವಾದದ್ದಲ್ಲ. ಅದು ಆಯಾ ದೇಶದ ಸಾಮಾಜಿಕ, ಆಡಳಿತ ಮತ್ತು ಸಾಂಸ್ಕೃತಿಕ ಜೀವನದ ಮೇಲೂ ಗಾಢವಾದ ಪರಿಣಾಮಗಳನ್ನು ಬೀರುವಂತದ್ದು. ಬ್ರಿಟಿಷ್ ಆಳ್ವಿಕೆ ಅನಿವಾರ್ಯ ಎನ್ನುವ ಭಾವನೆಯನ್ನು ಮೂಡಿಸುವುದೇ ಅದರ ಮೊದಲ ಕೆಲಸ. ಆ ಕಾರಣಕ್ಕಾಗಿಯೇ ಅದು ಬ್ರಿಟಿಷ್ ಆಡಳಿತವನ್ನು ಆಧುನಿಕ ಎನ್ನುವ ಹೆಸರಿನಿಂದ ಕರೆಯಿತು. ಬ್ರಿಟಿಷ್‌ಪೂರ್ವ ಅವಧಿಯನ್ನು ಕತ್ತಲೆಯ ಯುಗ ಎಂಬುದಾಗಿ ಕರೆಯಲಾಯಿತು.

ಬ್ರಿಟಿಷ್ ಸರಕಾರದ ಪ್ರಕಾರ ಆಧುನಿಕ ಎಂದರೆ ಅದು ಕೈಗಾರಿಕ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು ಹಾಗೂ ಆ ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಮಾಡಿರುವಂತದ್ದು. ಕೈಗಾರಿಕಾ ಬಂಡವಾಳವು ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ತರುವಷ್ಟು ಸಾಮರ್ಥ್ಯವನ್ನು ಹೊಂದಿರುವಂತದ್ದು ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನವನ್ನು ಬ್ರಿಟಿಷ್ ಸರಕಾರ ಮಾಡಿತು. ಭಾರತವು ಪ್ರಾಚೀನ ಮತ್ತು ಮಧ್ಯಕಾಲೀನದಲ್ಲಿ ಸಾಧಿಸಲಾಗದ್ದನ್ನು ಆಧುನಿಕದಲ್ಲಿ ಬ್ರಿಟಿಷರ ನೆರವಿನೊಂದಿಗೆ ಸಾಧಿಸಬಹುದು ಎನ್ನುವುದು ಇಲ್ಲಿನ ಒಟ್ಟು ಸಾರಾಂಶ. ನಗರೀಕರಣ ಮತ್ತು ಕೈಗಾರಿಕೀಕರಣಗಳು ಆಧುನಿಕ ಸಮಾಜದ ಲಕ್ಷಣಗಳು ಹಾಗೂ ಅವು ನಾಗರಿಕತೆಯ ಸಂಕೇತಗಳು ಎಂಬಿತ್ಯಾದಿ ವ್ಯಾಖ್ಯಾನಗಳು ಹುಟ್ಟಿಕೊಂಡವು. ಈ ಹಿನ್ನಲೆಯಿಂದಲೇ ಸಾಂಪ್ರದಾಯಿಕ ಪಟ್ಟಣಗಳು ಮತ್ತು ಆಧುನಿಕ ಪಟ್ಟಣಗಳು, ಕೈಗಾರಿಕಾ ಪೂರ್ವ ಪಟ್ಟಣಗಳು ಮತ್ತು ಕೈಗಾರಿಕಾ ಪಟ್ಟಣಗಳು ಮುಂತಾದ ವಿಂಗಡಣೆಗಳು ಕಾಣಿಸಿಕೊಂಡವು. ಕೈಗಾರಿಕಾ ಕ್ರಾಂತಿಯ ನಂತರ ಪಶ್ಚಿಮವು ಕೈಗಾರಿಕಾ ಬಂಡವಾಳದ ಮೂಲಕವೇ ಪೂರ್ವವನ್ನು ವ್ಯಾಖ್ಯಾನಿಸತೊಡಗಿತು.

ವಸಾಹತು ಆಳ್ವಿಕೆಗೆ ಸಂಬಂಧಪಟ್ಟಂತೆ ಇರುವ ಒಂದು ಪ್ರಮುಖ ಚರ್ಚೆಯೆಂದರೆ, ವಸಾಹತು ಆಳ್ವಿಕೆಯಿಂದಾಗಿ ಸ್ಥಳೀಯ ಪೇಟೆ-ಪಟ್ಟಣಗಳು ಮತ್ತು ಕೈಗಾರಿಕೆಗಳು ನಾಶ ಹೊಂದಿದವು ಎನ್ನುವುದು. ಈ ವಾದವನ್ನು ಮುಂದಿಟ್ಟವರು ರಾಷ್ಟ್ರೀಯವಾದಿಗಳು. ಅವರ ಪ್ರಕಾರ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಸ್ಥಳೀಯ ಕೈಗಾರಿಕೆಗಳು ಮೂಲೆಗುಂಪಾದವು ಹಾಗೂ ಅವುಗಳಲ್ಲಿ ದುಡಿಯುತ್ತಿದ್ದ ಕುಶಲಕರ್ಮಿಗಳು ನಿರುದ್ಯೋಗಿಗಳಾದರು. ಸಾಮ್ರಾಜ್ಯಶಾಹಿಗಳ ಪ್ರಕಾರ ಭಾರತದ ಗುಡಿ ಕೈಗಾರಿಕೆಗಳು ಅವುಗಳ ಹಿಂದುಳಿದ ತಂತ್ರಜ್ಞಾನದಿಂದಾಗಿ ಅವಾಗಿಯೇ ಅವನತಿಯತ್ತ ಸಾಗಿದ್ದವು. ಈ ವಾದ ಪ್ರತಿವಾದಗಳ ಹಿಂದೆ ಅವರವರ ಹಿತಾಸಕ್ತಿಗಳು ಅಡಗಿದ್ದವು. ಅದೇನೆ ಇದ್ದರೂ ಹೊಸ ಕೈಗಾರಿಕಾ ನೀತಿಯ ಪ್ರವೇಶವಾದಾಗ ಸ್ಥಳೀಯ ಕೈಗಾರಿಕೆಗಳು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಂತೂ ನಿಜ. ಯುರೋಪಿನ ಕೈಗಾರಿಕಾ ಬಂಡವಾಳ ಇಲ್ಲಿನ ಅರ್ಥವ್ಯವಸ್ಥೆಯನ್ನು ನಿಯಂತ್ರಿಸಿದ್ದೇ ಅಲ್ಲದೆ ಹೊಸ ಅರ್ಥ ವ್ಯವಸ್ಥೆಯೊಂದನ್ನು ಹುಟ್ಟುಹಾಕಿತು. ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಕೈಗಾರಿಕಗಳೂ ಹುಟ್ಟಿಕೊಂಡವು. ಹೀಗಾಗಿ ಹತ್ತಿ, ರಬ್ಬರ್, ಕಾಫಿ ಮುಂತಾದ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಹೊಸ ಕೈಗಾರಿಕೆಗಳು ಹುಟ್ಟಿಕೊಂಡವು. ಬ್ರಿಟಿಷರ ಆಳ್ವಿಕೆ ಆರಂಭಗೊಳ್ಳುವ ಮೊದಲು ಕರ್ನಾಟಕದಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆಗಳೇನೂ ಇರಲಿಲ್ಲ. ಕೃಷಿ ಆಧಾರಿತ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಇದು ಸಹಜ. ಏಕೆಂದರೆ ಭಾರತವು ಕೃಷಿ ಪ್ರಧಾನ ದೇಶವೇ ಹೊರತು ಕೈಗಾರಿಕಾ ಪ್ರಧಾನ ದೇಶವಲ್ಲ. ಬ್ರಿಟಿಷ್ ಆಳ್ವಿಕೆ ಆರಂಭಗೊಂಡ ಮೇಲೆ ಕೆಲವು ಬೃಹತ್ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಗೊಂಡವು. ಅವು ಕರ್ನಾಟಕದ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು. ಬೆಂಗಳೂರು, ಮೈಸೂರು ಮುಂತಾದ ಪಟ್ಟಣಗಳಲ್ಲಿ ಆರಂಭಗೊಂಡ ಕೈಗಾರಿಕೆಗಳು ಬ್ರಿಟಿಷ್ ಸರಕಾರದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು. ಅದರ ಜೊತೆಗೆ ಪೇಟೆ-ಪಟ್ಟಣಗಳ ಅಭಿವೃದ್ಧಿಗೂ ಸಹಕಾರಿಯಾದವು. ಅನೇಕ ಪಟ್ಟಣಗಳು ಕೈಗಾರಿಕಾ ಪಟ್ಟಣಗಳಾಗಿ ಬೆಳೆದವು. ಇದರ ಹೆಚ್ಚಿನ ಲಾಭವನ್ನು ಬ್ರಿಟಿಷ್ ಉದ್ದಿಮೆದಾರರು ಪಡೆದುಕೊಳ್ಳುತ್ತಿದ್ದರು.

ಕೈಗಾರಿಕಾಭಿವೃದ್ಧಿ ಅಥವಾ ನಗರಾಭಿವೃದ್ಧಿ ಬ್ರಿಟಿಷರ ಉದ್ದೇಶವಾಗಿರಲಿಲ್ಲ. ಅವರು ಭಾರತಕ್ಕೆ ಬಂದದ್ದೂ ಆ ಉದ್ದೇಶದಿಂದಲ್ಲ. ಯುರೋಪಿನ ಕೈಗಾರಿಕಾಭಿವೃದ್ಧಿ ಅವರ ಮುಖ್ಯ ಉದ್ದೇಶವಾಗಿತ್ತು. ಅಲ್ಲಿನ ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ಭಾರತದಿಂದ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡುವ ಹಾಗೂ ಆ ಕಚ್ಚಾವಸ್ತುಗಳನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಬ್ರಿಟಿಷ್ ಸರಕಾರ ಮಾಡಿತು. ಈ ಕಾರಣಕ್ಕಾಗಿ ಕೃಷಿಯನ್ನು ವಾಣಿಜ್ಯೀಕರಿಸುವ ಹೊಸ ಕೃಷಿ ನೀತಿಯೊಂದನ್ನು ಜಾರಿಗೊಳಿಸಲಾಯಿತು. ಇದು ಬ್ರಿಟೀಷರ ಕೈಗಾರಿಕಾ ನೀತಿಗೆ ಪೂರಕವಾಗಿ ಕೆಲಸ ಮಾಡಿತು. ಕೃಷಿಯನ್ನು ಒಂದು ಉದ್ದಿಮೆಯನ್ನಾಗಿ ಪರಿವರ್ತಿಸಿ ಪ್ಲಾಂಟೇಷನ್ ಆರ್ಥಿಕತೆ ರೂಪುಗೊಳ್ಳುವಂತೆ ಮಾಡಲಾಯಿತು. ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಮೂಲಕ ಮಾರುಕಟ್ಟೆ ಕೇಂದ್ರಿತ ಅರ್ಥವ್ಯವಸ್ಥೆಯನ್ನು ಹುಟ್ಟು ಹಾಕಲಾಯಿತು. ವಾಣಿಜ್ಯ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸುವ ಉದ್ದೇಶಕ್ಕಾಗಿ ಸಾರಿಗೆ ಕ್ಷೇತ್ರದಲ್ಲಿ ಕೆಲವೊಂದು ಹೊಸ ಬದಲಾವಣೆಗಳನ್ನು ಮಾಡಲಾಯಿತು. ಘಟ್ಟ ರಸ್ತೆಗಳ ನಿರ್ಮಾಣ, ರೈಲು ಮಾರ್ಗದ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಆರಂಭಿಸಲಾಯಿತು. ಇದರಿಂದಾಗಿ ಹಲವಾರು ಪಟ್ಟಣಗಳು ಬಿರುಸಿನ ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ಬಂದರು ಪಟ್ಟಣಗಳು ಇದರ ಹೆಚ್ಚಿನ ಲಾಭವನ್ನು ಪಡೆದುಕೊಂಡವು. ಹೆಚ್ಚಿನ ನಗರ ಕೇಂದ್ರಗಳು ವಾಣಿಜ್ಯ ಬೆಳೆಗಳನ್ನು ಗ್ರಾಮೀಣ ಪ್ರದೇಶಗಳಿಂದ ತರಿಸಿಕೊಂಡು ಅವುಗಳನ್ನು ಯುರೋಪಿಗೆ ಸಾಗಿಸುವ ಕೆಲಸವನ್ನು ಮಾಡುತ್ತಿದ್ದವು. ಆ ರೀತಿಯ ಕೆಲಸವನ್ನು ಮಾಡುವ ಒತ್ತಾಯಕ್ಕೆ ಅವು ಒಳಗಾಗಿದ್ದವು. ಕೃಷಿಯ ವಾಣಿಜ್ಯೀಕರಣವೂ ಬಲವಂತದ ಒಂದು ಪ್ರಯತ್ನವಾಗಿ ಕಂಡುಬರುತ್ತದೆ. ಆಹಾರ ಧಾನ್ಯಗಳ ಬದಲು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಾಯಕ್ಕೆ ರೈತರು ಒಳಗಾಗಿದ್ದರು. ಇದರ ಹೆಚ್ಚಿನ ಲಾಭವನ್ನು ಪಡೆದುಕೊಂಡವರಲ್ಲಿ ಮಧ್ಯವರ್ತಿಗಳು ಪ್ರಮುಖರು. ಬ್ರಿಟಿಷ್ ಆಳ್ವಿಕೆಯಲ್ಲಿ ಸ್ಥಳೀಯ ಮಧ್ಯವರ್ತಿಗಳು ಲೇವಾದೇವಿದಾರರಾಗಿ, ಶ್ರೀಮಂತ ವರ್ತಕರಾಗಿ ಹಾಗೂ ಬ್ರಿಟಿಷರ ಮತ್ತು ಸ್ಥಳೀಯ ನಡುವಿನ ಏಜೆಂಟರುಗಳಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಆಡಳಿತದಲ್ಲೂ ಅವರು ಭಾಗವಹಿಸುತ್ತಿದ್ದರು. ಬ್ರಿಟಿಷ್ ಆಡಳಿತಕ್ಕೆ ಈ ಮಧ್ಯವರ್ತಿಗಳ ಅವಶ್ಯಕತೆಯೂ ಇತ್ತು.

ಕರ್ನಾಟದಕ ನಗರ ವ್ಯವಸ್ಥೆಯ ಮೇಲೆ ಬ್ರಿಟಿಷ್ ವಸಾಹತುಶಾಹಿ ಬೀರಿದ ಪ್ರಭಾವ ಹಾಗೂ ಪರಿಣಾಮಗಳು ಸಂಶೋಧಕರಿಂದ ಹೆಚ್ಚಿನ ಅಧ್ಯಯನಕ್ಕೆ ಒಳಪಟ್ಟಿಲ್ಲ. ಬ್ರಿಟಿಷ್ ಆಳ್ವಿಕೆಯಲ್ಲಿ ಸ್ಥಳೀಯ ಪೇಟೆ-ಪಟ್ಟಣಗಳಿಗೆ ಒಳ್ಳೆಯ ಹಾಗೂ ಕೆಟ್ಟ ಅನುಭವಗಳು ಆದವು. ಬ್ರಿಟಿಷ್ ವಸಾಹತುಶಾಹಿಯ ಪ್ರಭಾವದ ಸ್ವರೂಪವನ್ನು ಹಾಗೂ ವಸಾಹತುಶಾಹಿ ಅನುಭವವನ್ನು ಅರ್ಥೈಸಿಕೊಳ್ಳಬೇಕಾದರೆ ಮೊದಲು ವಸಾಹತುಶಾಹಿಯ ಸ್ವರೂಪವನ್ನು ಹಾಗೂ ಅದರ ಧೋರಣೆಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಅಧ್ಯಯನದಲ್ಲಿ ಈ ಪ್ರಯತ್ನವನ್ನು ಮಾಡಲಾಗಿದೆ. ವಸಾಹತುಶಾಹಿ ಎನ್ನುವುದು ಆಧುನಿಕವಾದ, ಸಂಕೀರ್ಣವಾದ, ಬಂಡವಾಳ ಕೇಂದ್ರಿತವಾದ ಹಾಗೂ ವಿರೋಧಾಭಾಸಗಳಿಂದ ಕೂಡಿದ ಪರಿಕಲ್ಪನೆಯಾಗಿದೆ. ಅದು ಒಡಂಬಡಿಕೆ, ಹೇರಿಕೆ, ಬಲಪ್ರಯೋಗ ಮುಂತಾದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಬೆಳೆದಿರುವಂತದ್ದು. ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಏಕರೂಪದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಕರ್ನಾಟಕವು ಹಲವಾರು ಘಟಕಗಳಾಗಿ ವಿಭಜನೆಗೊಂಡಿತ್ತು. ಪ್ರತಿಯೊಂದ ಪ್ರದೇಶವನ್ನೂ ಅಲ್ಲಿನ ಭೌಗೋಳಿಕತೆ ಮತ್ತು ಜನಜೀವನದ ಹಿನ್ನಲೆಯಿಂದಲೇ ಅಧ್ಯಯನ ನಡೆಸಬೇಕಾಗುತ್ತದೆ.

ವಸಾಹತು ಕರ್ನಾಟಕದಲ್ಲಿನ ನಗರೀಕರಣದ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ವಸಾಹತುಶಾಹಿ ಧೋರಣೆಯ ಕುರಿತು ಕೆಲವೊಂದು ಅಧ್ಯಯನಗಳು ನಡೆದಿವೆಯಾದರೂ, ಪೇಟೆ-ಪಟ್ಟಣಗಳ ಹುಟ್ಟು ಮತ್ತು ಬೆಳವಣಿಗೆಯ ಮೇಲೆ ವಸಾಹತುಶಾಹಿ ಬೀರಿದ ಪ್ರಭಾವ ಯಾವ ರೀತಿಯದ್ದು ಹಾಗೂ ನಗರೀಕರಣ ಪ್ರಕ್ರಿಯೆಯು ಯಾವ ರೀತಿಯ ವಸಾಹತುಶಾಹಿ ಅನುಭವಕ್ಕೆ ಒಳಗಾಗಿತ್ತು ಎನ್ನುವುದರ ಕುರಿತು ಅಧ್ಯಯನಗಳು ನಡೆದಿಲ್ಲ.

ಪ್ರಸ್ತುತ ಅಧ್ಯಯನವು ಪತ್ರಾಗಾರವನ್ನೇ ಹೆಚ್ಚಾಗಿ ಅವಲಂಬಿಸಿರುವಂತದ್ದು. ವಿದೇಶಿ ಪ್ರವಾಸಿಗರ ಹಾಗೂ ಬ್ರಿಟಿಷ್ ಆಡಳಿತಗಾರರ ವರದಿಗಳು ಮತ್ತು ದಾಖಲೆಗಳು, ಸ್ಥಳೀಯ ಲಿಖಿತ ಮತ್ತು ಮೌಖಿಕ ಆಕರಗಳು ಹಾಗೂ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡ ಸ್ಮಾರಕಗಳು ಮುಂತಾದವು ಈ ಅಧ್ಯಯನಕ್ಕೆ ನೆರವಾದ ಪ್ರಮುಖ ಆಕರಗಳು. ಅದರೊಂದಿಗೆ ಭಾರತದ ಇನ್ನಿತರ ಪ್ರದೇಶಗಳ ನಗರೀಕರಣದ ಕುರಿತು ಈಗಾಗಲೇ ಪ್ರಕಟಗೊಂಡ ಕೃತಿಗಳು ಮತ್ತು ಲೇಖನಗಳು ವಸಾಹತು ನಗರ ನೀತಿಯನ್ನು ಅರ್ಥೈಸಿಕೊಳ್ಳುವುದಕ್ಕೆ ನೆರವಾಗುತ್ತವೆ. ಬ್ರಿಟಿಷ್ ಆಡಳಿತಗಾರರ ಬರಹಗಳು ಪೂರ್ವಾಗ್ರಹ ಪೀಡಿತವಾಗಿದ್ದು ಅವುಗಳನ್ನು ಎಚ್ಚರಿಕೆಯಿಂದ ಅಧ್ಯಯನ ನಡೆಸಬೇಕಾಗುತ್ತದೆ. ಅದೇ ರೀತಿಯ ಸ್ಥಳೀಯ ಆಕರಗಳಲ್ಲಿನ ವೈಭವೀಕೃತ ನಿರೂಪಣೆಗಳನ್ನು ಕೈಬಿಡಬೇಕಾಗುತ್ತದೆ. ಈ ಎಲ್ಲ ಎಚ್ಚರಿಕೆಗಳೊಂದಿಗೆ ಪ್ರಸ್ತುತ ಅಧ್ಯಯನವನ್ನು ನಡೆಸಲಾಗಿದೆ.

ಯುರೋಪ್ ಕೇಂದ್ರಿತ ಅಧ್ಯಯನಗಳು ನಗರೀಕರಣದ ಕುರಿತು ಚರ್ಚಿಸುವಾಗ ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯನ್ನು ಆರಂಭಿಕ ಘಟ್ಟವನ್ನಾಗಿ ಪರಿಗಣಿಸಿ ಅಲ್ಲಿಂದ ಚರ್ಚೆಯನ್ನು ಬೆಳೆಸುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಾದ ಬದಲಾವಣೆ, ಕೈಗಾರಿಕಾ ಬಂಡವಾಳದ ಹುಟ್ಟು, ಹೊಸ ಪ್ರಯೋಗ ಮತ್ತು ಆಲೋಚನೆಗಳ ಹಿನ್ನೆಲೆಯಲ್ಲಿ ನಗರೀಕರಣ ಮತ್ತು ಕೈಗಾರೀಕರಣ ಪರಿಕಲ್ಪನೆಗಳನ್ನು ಕಟ್ಟಲಾಯಿತು. ಮುಂದುವರಿದ ಪಶ್ಚಿಮವು ಹಿಂದುಳಿದ ಪೂರ್ವವನ್ನು ನಾಗರಿಕತೆಯತ್ತ ಕೊಂಡೊಯ್ಯುವುದೇ ಯುರೋಪ್ ಕೇಂದ್ರಿತ ಅಧ್ಯಯನಗಳಲ್ಲಿನ ಪ್ರಮುಖ ವಿಚಾರಧಾರೆ, ರೋಡ್ಸ್ ಮರ್ಪಿ, ರಾಬರ್ಟ್ ರೆಡ್‌ಫೀಲ್ಡ್, ಮಿಲ್ಟನ್ ಸಿಂಗರ್, ಸ್ಜೋಬರ್ಗ್ ಮುಂತಾದ ನಗರೀಕರಣದ ಮೇಲೆ ಅಧ್ಯಯನ ನಡೆಸಿಸ ಯುರೋಪಿನ ವಿದ್ವಾಂಸರು ಪಶ್ಚಿಮದ ನಗರಗಳು ಪೂರ್ವದ ನಗರಗಳಿಗಿಂತ ಹೇಗೆ ಭಿನ್ನವಾಗಿವೆ ಎನ್ನುವುದರ ಕುರಿತು ಚರ್ಚಿಸಿದರು. ರೋಡ್ಸ್ ಮರ್ಫಿ ಅವರ ಪ್ರಕಾರ ಬಂದರು ಪಟ್ಟಣಗಳು ಎನ್ನುವುದೇ ಏಷ್ಯಾಕ್ಕೆ ಹೊಸದು. ಬಂದರು ಪಟ್ಟಣಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳು ಯಾವುವು ಎನ್ನುವುದನ್ನು ತೋರಿಸಿಕೊಟ್ಟವರು ಯುರೋಪಿಯನ್ನರು. ಮರ್ಫಿ ಅವರ ಪ್ರಕಾರ ಏಷ್ಯಾದ ಪಟ್ಟಣಗಳು ಆಡಳಿತ ಕೇಂದ್ರಗಳಾಗಿದ್ದವು ಹಾಗೂ ರಾಜವಂಶಗಳ ಅವನತಿಯೊಂದಿಗೆ ಅವು ಅವನತಿ ಹೊಂದುತ್ತಿದ್ದವು. ಪಟ್ಟಣಗಳಿಗೆ ಅವುಗಳದ್ದೇ ಆದ ಅಸ್ತಿತ್ವವಿರಲಿಲ್ಲ ಎನ್ನುವುದು ಅವರ ವಾದ. ರೆಡ್‌ಫೀಲ್ಡ್ ಮತ್ತು ಸಿಂಗರ್ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರ ಪ್ರಕಾರ ಏಷ್ಯಾದ ಪಟ್ಟಣಗಳು ಹಳೆಯ ಸಂಪ್ರದಾಯಗಳನ್ನೇ ಮುಂದುವರಿಸಿಕೊಂಡು ಬಂದವು. ಪಶ್ಚಿಮದ ಪ್ರಭಾವಕ್ಕೆ ಒಳಗಾದ ಹಲವಾರು ಪಟ್ಟಣಗಳು ಹೊಸ ಬಗೆಯ ಆಲೋಚನೆಯನ್ನು ಹುಟ್ಟು ಹಾಕಿ ನಗರ ಕೇಂದ್ರಗಳಿಗೊಂದು ಖಚಿತತೆಯನ್ನು ತಂದುಕೊಟ್ಟವು. ಸ್ಜೋಬರ್ಗ್ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕೈಗಾರಿಕಾ ಪಟ್ಟಣಗಳ ಕುರಿತು ಹೊಸ ವ್ಯಾಖ್ಯೆಯನ್ನು ನೀಡಿದರು. ಅವರ ಪ್ರಕಾರ ಕೈಗಾರಿಕಾ ಪೂರ್ವ ಪಟ್ಟಣಗಳು ಸಂಪ್ರದಾಯಸ್ಥವಾಗಿದ್ದು ತಂತ್ರಜ್ಞಾನದ ವಿಚಾರದಲ್ಲಿ ತುಂಬ ಹಿಂದುಳಿದಂತವು. ಆದರೆ ಕೈಗಾರಿಕಾ ಪಟ್ಟಣಗಳು ತಂತ್ರಜ್ಞಾನದಲ್ಲಿ ಮುಂದುವರಿದ ಹಾಗೂ ಅತ್ಯಂತ ಆಧುನಿಕವಾದಂತವು. ಇದಕ್ಕೆ ಪ್ರತಿಯಾಗಿ ಸ್ಥಳೀಯವಾಗಿ ಹುಟ್ಟಿಕೊಂಡ ವಾದದ ಪ್ರಕಾರ ಏಷ್ಯಾದ ಅಥವಾ ಭಾರತದ ಪಟ್ಟಣಗಳು ನಿರ್ದಿಷ್ಟ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದವು ಹಾಗೂ ಅವು ಹಂತ ಹಂತವಾಗಿ ವಿಕಾಸಹೊಂದುತ್ತಿದ್ದವು. ಆದರೆ ಯುರೋಪಿಯನ್ನರ ಆಗಮನ ಈ ವಿಕಾಸವನ್ನು ಮೊಟಕುಗೊಳಿಸಿ ಅದರ ಮೇಲೆ ಯುರೋಪಿನ ಮಾದರಿಯನ್ನು ಹೇರಿತು.

ವಸಾಹತು ಕರ್ನಾಟಕದ ನಗರೀಕರಣದ ಕುರಿತು ಸಮಗ್ರವಾಗಿ ಚರ್ಚೆ ನಡೆಸುವ ಕೃತಿ ಇಲ್ಲಿಯವರೆಗೆ ಬಂದಿಲ್ಲವೆಂದೇ ಹೇಳಬೇಕು. ಆದರೆ ಕರ್ನಾಟಕದ ಕೆಲವು ಪಟ್ಟಣಗಳ ಕುರಿತು ಬಿಡಿ ಬಿಡಿಯಾದ ಅಧ್ಯಯನಗಳು ಆಗಿವೆ. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿದ ಪಟ್ಟಣಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕೇಂದ್ರಗಳಾಗಿದ್ದವು. ಅಲ್ಲಿ ಬ್ರಿಟಿಷರ ನೇರ ಹಸ್ತಕ್ಷೇಪವಿರುತ್ತಿತ್ತು. ಪಟ್ಟಣಗಳು ಕೈಗಾರಿಕಾ ಕೇಂದ್ರಗಳಾಗಿ ಹಾಗೂ ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ಮದರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ್ದ ಕರ್ನಾಟಕದ ಅನೇಕ ಪ್ರದೇಶಗಳು ಹಲವಾರು ಕ್ಷೇತ್ರಗಳಲ್ಲಿ ಮುಂದುವರಿದಿದ್ದವು. ಆದರೆ ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿರಲಿಲ್ಲ. ಈ ತಾರತಮ್ಯಗಳ, ಪ್ರಾದೇಶಿಕ ಅಸಮಾನತೆಗಳ ಹಾಗೂ ಇವುಗಳಿಗೆ ಸಂಬಂಧಿಸಿದ ಬ್ರಿಟಿಷ್ ನೀತಿಗಳ ಕುರಿತು ಅಧ್ಯಯನ ನಡೆಸಿದಾಗ ಮಾತ್ರ ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಹಲವಾರು ಘಟಕಗಳಾಗಿ ವಿಭಜನೆಗೊಂಡಿದ್ದ ಕರ್ನಾಟಕವನ್ನು ಆಯಾ ಪ್ರದೇಶ, ಸಂದರ್ಭ ಮತ್ತು ಪರಿಸ್ಥಿತಿಗನುಗುಣವಾಗಿ ಅಧ್ಯಯನ ನಡೆಸುವ ಪ್ರಯತ್ನವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ.

ವಸಾಹತು ಆಳ್ವಿಕೆಯ ಸ್ವರೂಪದ ಹಾಗೂ ವಸಾಹತು ನಗರ ನೀತಿಯ ಕುರಿತು ಭಾರತಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಉದಾಹರಣೆಗೆ ಬಿಪನ್ ಚಂದ್ರ, ಇರ್ಫಾನ್ ಹಬೀಬ್, ಧರ್ಮಕುಮಾರ್, ಎಂ.ಎನ್. ಪರ್ಸನ್, ಪ್ರಮೀಳಾ ನೈಟಿಂಗೇಲ್, ಶಾರದಾ ರಾಜು, ಕೆ.ಕೆ.ಪಿಳ್ಳೆ ಮುಂತಾದವರ ಬರಹಗಳು ವಸಾಹತುಶಾಹಿ ಧೋರಣೆಯ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡುತ್ತವೆ. ನಗರೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅನೇಕ ಅಧ್ಯಯನಗಳು ನಡೆದಿವೆ. ಆರ್.ಎಸ್. ಶರ್ಮ, ಇಂದು ಬಂಗಾ, ವಿಜಯ್‌ಕುಮಾರ್ ಟಾಕೂರ್, ದಿಲೀಪ್ ಬಸು, ಸಿ.ಎ.ಬೈಲಿ, ಎ.ಬೋಸ್, ಆಶಿನ್‌ದಾಸ್ ಗುಪ್ತ, ಜೆ.ಎಸ್. ಗ್ರೆವಾಲ್, ಅರ್. ಚಂಪಕಲಕ್ಷ್ಮಿ, ಸಂಜಯ್ ಸುಬ್ರಹ್ಮಣ್ಯ, ಓ.ಪಿ. ಪ್ರಸಾದ್, ಸಿನ್ನಪ್ಪ ಅರಸರತ್ನಂ ಮುಂತಾದವರು ನಗರೀಕರಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಇವರ ಬರಹಗಳು ನಗರ ಕೇಂದ್ರಗಳ ಹುಟ್ಟು-ಬೆಳವಣಿಗೆ-ಅವನತಿ, ವಿವಿಧ ಸ್ವರೂಪದ ನಗರ ಕೇಂದ್ರಗಳು, ಬಂದರು ಪಟ್ಟಣಗಳು, ನಗರ ಸಮುದಾಯಗಳು ಮುಂತಾದ ವಿಚಾರಗಳ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡುತ್ತವೆ. ಇವು ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತವೆ.

ಪ್ರಸ್ತುತ ಅಧ್ಯಯನದಲ್ಲಿ ವಸಾಹತು ಕರ್ನಾಟಕದ ನಗರ ವ್ವವಸ್ಥೆಯನ್ನು ವಸಾಹತು ಕರ್ನಾಟಕದ ಭೌಗೋಳಿಕ ಎಲ್ಲೆ ಕಟ್ಟುಗಳು, ಕೃಷಿಯ ವಾಣಿಜ್ಯೀಕರಣ ಮತ್ತು ಮಾರುಕಟ್ಟೆಯ ಪ್ರವೇಶ, ವ್ಯಾಪಾರ ಮತ್ತು ವಾಣಿಜ್ಯ, ಕೈಗಾರಿಕೆ ಮತ್ತು ಕೈಗಾರೀಕರಣ, ಸಾರಿಗೆ ವ್ಯವಸ್ಥೆ, ಮುನಿಸಿಪಾಲಿಟಿಗಳು ಮತ್ತು ನಗರಾಡಳಿತ ಎನ್ನುವ ಅಧ್ಯಾಯಗಳ ಮೂಲಕ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಮೈಸೂರು ಸಂಸ್ಥಾನ, ಮದರಾಸು ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ಕರ್ನಾಟಕ ಮತ್ತು ಕೊಡಗು ಪ್ರದೇಶಗಳಲ್ಲಿ ವಸಾಹತು ಆಳ್ವಿಕೆಯಲ್ಲಿ ಇದ್ದ ಸಾರಿಗೆ ವ್ಯವಸ್ಥೆ, ವ್ಯಾಪಾರ ಮತ್ತು ವಾಣಿಜ್ಯ, ನಗರಾಡಳಿತ, ಕೈಗಾರಿಕೆಗಳು ಮುಂತಾದ ವಿಚಾರಗಳನ್ನು ಬೇರೆ ಬೇರೆಯಾಗಿಯೇ ನೋಡಲಾಗಿದೆ. ಬ್ರಿಟಿಷರು ಕರ್ನಾಟಕವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿಕೊಂಡರು. ಟಿಪ್ಪು ಸುಲ್ತಾನನ ಪತನ ಬಳಿಕ ಬ್ರಿಟಿಷರು ಕರ್ನಾಟಕದ ಮೇಲೆ ಹೆಚ್ಚು ಕಡಿಮೆ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡರು. ಹೈದರಾಬಾದಿನ ನಿಜಾಮ, ಮರಾಠರು ಮತ್ತು ಮೈಸೂರಿನ ಅರಸರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಬ್ರಿಟಿಷರು ಹೆಚ್ಚು ಕಷ್ಟಪಡಲಿಲ್ಲ. ಬ್ರಿಟಿಷ್ ಸರಕಾರ ತಮ್ಮ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ಆಡಳಿತವನ್ನು ನಿಯಂತ್ರಿಸುತ್ತಿತ್ತು. ಕರ್ನಾಟಕವು ಹಲವಾರು ಘಟಕಗಳಾಗಿ ವಿಭಜನೆಗೊಂಡಿದ್ದರೂ, ಬ್ರಿಟಿಷ್ ಸರಕಾರ ಅವೆಲ್ಲವುಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿತ್ತು. ಬ್ರಿಟಿಷರು ಕರ್ನಾಟಕವನ್ನು ವಿಭಜಿಸುವುದರ ಮೂಲಕ ಬ್ರಿಟಿಷ್ ಕರ್ನಾಟಕವನ್ನು ನಿರ್ಮಿಸಿಕೊಂಡರು. ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಲು ಯಾವ ಯಾವ ತಂತ್ರಗಳನ್ನು ಬಳಸಬೇಕೋ ಅವೆಲ್ಲವುಗಳನ್ನು ಬ್ರಿಟಿಷರು ಬಳಸಿದರು. ಬ್ರಿಟಿಷರು ತಮ್ಮ ವ್ಯಾಪಾರದ ಮತ್ತು ಸೈನಿಕ ಉದ್ದೇಶಗಳ ಈಡೇರಿಕೆಗೆ ನೆರವಾಗಬಲ್ಲ ವರ್ಗವೊಂದನ್ನು ಸ್ಥಳೀಯವಾಗಿಯೇ ಹುಟ್ಟು ಹಾಕಿದರು. ಅದು ಸಣ್ಣಪುಟ್ಟ ಅರಸುಮನೆತನಗಳಿರಬಹುದು ಅಥವಾ ಜಮೀನ್ದಾರರಿರಬಹುದು ಅಥವಾ ಮಧ್ಯವರ್ತಿ ಕೆಲಸ ಮಾಡುವ ಶ್ರೀಮಂತ ವರ್ತಕರಿರಬಹುದು.

ಬ್ರಿಟಿಷರು ತಮ್ಮ ವ್ಯಾಪಾರದ ಮತ್ತು ಮಿಲಿಟರಿ ಉದ್ದೇಶಗಳಿಗೆ ನಿರ್ಮಿಸಿದ ರಸ್ತೆಗಳು, ರೈಲು ಮಾರ್ಗಗಳು ಹಾಗೂ ಸಾರಿಗೆ ಕ್ಷೇತ್ರದಲ್ಲಾದ ಇನ್ನಿತರ ಬದಲಾವಣೆಗಳು ಸ್ಥಳೀಯ ಅರ್ಥವ್ಯವಸ್ಥೆಯ ಮೇಲೂ ಗಾಢವಾದ ಪರಿಣಾಮಗಳನ್ನು ಬೀರಿತು. ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಘಟ್ಟ ರಸ್ತೆಗಳ ಹಾಗೂ ರೈಲು ಮಾರ್ಗಗಳ ಕುರಿತು ಪ್ರಸ್ತುತ ಅಧ್ಯಯನದಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿದೆ. ೧೮೫೦ರ ನಂತರ ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಬದಲಾವಣೆಗಳಿಂದಾಗಿ ಭಾರತವು ಹಲವಾರು ವಿಚಾರಗಳಲ್ಲಿ ಇಂಗ್ಲೆಂಡಿಗೆ ಹತ್ತಿರವಾಗುತ್ತಾ ಹೋಯಿತು. ಬ್ರಿಟಿಷ್ ಸರಕಾರದ ಉದ್ದೇಶವೂ ಅದಾಗಿತ್ತು. ಬರ್ಟನ್‌ಸ್ಟೈನ್ ಅವರ ಪ್ರಕಾರ ೧೯೧೦ರ ವೇಳೆಗೆ ಭಾರತವು ಪ್ರಪಂಚದ ನಾಲ್ಕನೆಯ ಅತಿದೊಡ್ಡ ರೈಲ್ವೆ ಸಂಪರ್ಕವನ್ನು ಹೊಂದಿದ ರಾಷ್ಟ್ರವಾಗಿ ಬೆಳೆಯಿತು. ಬ್ರಿಟಿಷರು ರೈಲ್ವೆಯ ಮೇಲೆ ಅತಿಯಾದ ಭರವಸೆಯನ್ನು ಹೊಂದಿದ್ದರು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಅತ್ಯಂತ ಶೀಘ್ರವಾಗಿ ತಲುಪಿಸಲು ಹಾಗೂ ಗಲಭೆಗ್ರಸ್ತ ಪ್ರದೇಶಗಳಿಗೆ ಸೈನಿಕರನ್ನು ಅತ್ಯಂತ ಬೇಗ ಕಳುಹಿಸಲು ರೈಲು ಸಹಕಾರಿಯಾಯಿತು. ಇದರ ಲಾಭವನ್ನು ಸ್ಥಳೀಯ ಪಟ್ಟಣಗಳೂ ಪಡೆದುಕೊಂಡವು. ಅನೇಕ ಪಟ್ಟಣಗಳು ತಮ್ಮ ನೆರೆಯ ಹಾಗೂ ಹೊರ ರಾಜ್ಯದ ಪಟ್ಟಣಗಳೊಂದಿಗೆ ನೇರ ಸಂಪರ್ಕವನ್ನು ಸಾಧಿಸಿದವು. ಹೀಗೆ ಬ್ರಿಟಿಷರು ತಮ್ಮ ವ್ಯಾಪಾರ, ಮಿಲಿಟರಿ ಮತ್ತು ರಾಜತಾಂತ್ರಿಕ ಉದ್ದೇಶಗಳ ಈಡೇರಿಕೆಗೆ ನಡೆಸಿದ ಪ್ರಯೋಗ ಮತ್ತು ಪ್ರಯತ್ನಗಳು ಸ್ಥಳೀಯವಾಗಿಯೂ, ಅದು ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಮೇಲೂ, ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಯಿತು. ಉದಾಹರಣೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು, ಆಡಳಿತವನ್ನು ವ್ಯವಸ್ಥಿತಗೊಳಿಸಿರುವುದು, ಇಂಗ್ಲೀಷ್ ಶಿಕ್ಷಣವನ್ನು ಜಾರಿಗೊಳಿಸಿರುವುದು, ಹೊಸರಸ್ತೆಗಳ ನಿರ್ಮಾಣ ಮತ್ತು ರೈಲ್ವೆಯ ಪ್ರವೇಶ, ಸ್ಮಾರಕಗಳ ರಕ್ಷಣೆ ಮುಂತಾದವು ಬ್ರಿಟಿಷರ ಅವಶ್ಯಕತೆಗಳನ್ನು ಪೂರೈಸುವುದರ ಜೊತೆ ಜೊತೆಗೆ ಸ್ವತಂತ್ರ ಭಾರತ ನಿರ್ಮಾಣಗೊಳ್ಳುವ ಪ್ರಕ್ರಿಯೆಗೂ ನೆರವಾಯಿತು. ಹಲವಾರು ನಗರ ಕೇಂದ್ರಗಳು ಸ್ವತಂತ್ರ ಘಟಕಗಳಾಗಿ ರೂಪುಗೊಳ್ಳುವುದರ ಜೊತೆಗೆ ಮಹಾನಗರಗಳಾಗಿಯೂ ಬೆಳೆಯುವಂತಾಯಿತು.

ಬ್ರಿಟಿಷ್ ಆಳ್ವಿಕೆಯಲ್ಲಿ ಗ್ರಾಮೀಣ ಮತ್ತು ನಗರ ವ್ಯವಸ್ಥೆಗಳೆರಡರಲ್ಲೂ ಆದ ಬದಲಾವಣೆಗಳ ಲಾಭವನ್ನು ಪಡೆದುಕೊಂಡವರಲ್ಲಿ ಹೆಚ್ಚಿನವರು ಸಮಾಜದ ಮೇಲ್‌ಸ್ತರದಲ್ಲಿ ಇದ್ದವರೇ ಆಗಿದ್ದರು. ಇಂಗ್ಲಿಷ್ ಶಿಕ್ಷಣವನ್ನು ಪಡದುಕೊಂಡವರು ಬದಲಾವಣೆಗಳ ಅಲೆಗಳನ್ನು ಅದಷ್ಟು ಬೇಗ ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಉಂಟಾದ ಹೆಚ್ಚಿನ ಪ್ರಮಾಣದ ವಲಸೆ ಹಿಂದಿದ್ದ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಬದಲಾಯಿಸುವಲ್ಲಿ ಯಶಸ್ವಿಯಾಯಿತು. ತೋಟದ ಉದ್ಯಮ, ಕೈಗಾರಿಕೆಗಳ ಸ್ಥಾಪನೆ, ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಮುಂತಾದವುಗಳಿಂದಾಗಿ ಹೆಚ್ಚೆಚ್ಚು ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವಂತಾಯಿತು. ಹೊಲದಿಂದ ಕಾರ್ಖಾನೆಗೆ, ಹಳ್ಳಿಯಿಂದ ನಗರಕ್ಕೆ ಜನರ ವಲಸೆ ಆರಂಭಗೊಂಡಿತು. ಇದು ಸಮಾಜದಲ್ಲಿ ಒಂದು ರೀತಿಯ ಸಂಕೀರ್ಣತೆಯನ್ನು ಹುಟ್ಟುಹಾಕಿದರೂ ಅಲ್ಲಿ ಬದಲಾವಣೆಗೆ ಅವಕಾಶವಿತ್ತು. ಅನೇಕ ನಗರ ಸಮುದಾಯಗಳು ತಮ್ಮ ತಮ್ಮ ಸಮುದಾಯಗಳ ಏಳಿಗೆಯ ಕುರಿತು ಆಲೋಚಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವ ಕೆಲಸದಲ್ಲಿ ತೊಡಗಿದವು. ನಗರ ಕೇಂದ್ರಗಳಲ್ಲಿ ಜನಸಂಖ್ಯೆ ನಿಧಾನವಾಗಿ ಹೆಚ್ಚುತ್ತಲೇ ಹೋಯಿತು. ಅದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಅದ ಬೆಳವಣಿಗೆಗಳು, ಸಾರ್ವಜನಿಕ ಆರೋಗ್ಯ, ಆಹಾರ ಪದಾರ್ಥಗಳ ಸರಬರಾಜಿನಲ್ಲಿ ಅದ ಅಬಿವೃದ್ಧಿ ಮುಂತಾದವು ಕಾರಣಗಳಾದವು. ವರ್ತಕ ಸಮುದಾಯಗಳು ನಗರ ಕೇಂದ್ರಗಳಲ್ಲಿ ವಾಸಿಸುತ್ತಿದ್ದು ನಗರಗಳ ವ್ಯಾಪ್ತಿ ವಿಸ್ತರಿಸುವುದಕ್ಕೂ ಕಾರಣವಾದವು. ಜನಸಂಖ್ಯೆಯ ಹೆಚ್ಚಳದಿಂದಾಗಿ ಕೊಳಚೆ ಪ್ರದೇಶಗಳು ಹುಟ್ಟಿಕೊಂಡವು. ಕೈಗಾರಿಕಾ ಕಾರ್ಮಿಕರಲ್ಲಿ ಅನೇಕರು, ಪಟ್ಟಣಗಳನ್ನು ಶುಚಿಗೊಳಿಸುವವರು, ಕಸವನ್ನು ಸಾಗಿಸುವವರು ಮುಂತಾದವರು ಕೊಳೆಗೇರಿಗಳಲ್ಲಿ ವಾಸಿಸುವ ಒತ್ತಾಯಕ್ಕೆ ಒಳಗಾಗಿದ್ದರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಂತೂ ಈ ಸಮಸ್ಯೆ ಭೀಕರವಾಗಿ ಕಂಡುಬಂತು. ಈ ಎಲ್ಲ ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ನಡೆಸಿದಾಗ ಮಾತ್ರ ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಹಲವಾರು ಮುಖಗಳು ಅನಾವರಣಗೊಳ್ಳಲು ಸಾಧ್ಯ.