ವರ್ತಕ ಸಮುದಾಯಗಳು

ಬ್ರಿಟಿಷ್ ಕರ್ನಾಟಕದಲ್ಲಿ ವಿವಿಧ ಆಡಳಿತಗಳಿಗೆ ಒಳಪಟ್ಟಿದ್ದ ಎಲ್ಲ ಪ್ರದೇಶಗಳೂ ವ್ಯಾಪಾರದ ಮೂಲಕ ಪರಸ್ಪರ ಸಂಪರ್ಕವನ್ನು ಸಾಧಿಸಿದ್ದವು. ಬಳ್ಳಾರಿ ಮತ್ತು ಮೈಸೂರು ಒಂದು ಕಡೆ, ಧಾರವಾಡ ಮತ್ತು ಕೆನರಾ ಇನ್ನೊಂದು ಕಡೆ ಈ ಸ್ಥಳಗಳ ನಡುವೆ ವರ್ತಕರು ವ್ಯಾಪಕವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಪ್ರತಿಯೊಂದು ನಗರ ಕೇಂದ್ರದಲ್ಲೂ ವರ್ತಕ ಸಮುದಾಯಗಳು ಇರುತ್ತಿದ್ದು, ಅವು ತಮ್ಮ ಬಹುಮುಖಿ ಚಟುವಟಿಕೆಗಳ ಮೂಲಕ ನಗರಗಳ ವ್ಯಾಪ್ತಿ ವಿಸ್ತಾರವಾಗುವಂತೆ ಮಾಡಿದವು. ನಗರ ಸಮುದಾಯಗಳು ಕೇವಲ ವ್ಯಾಪಾರವನ್ನಷ್ಟೇ ವೃತ್ತಿಯನ್ನಾಗಿರಿಸದೆ, ಕೈಗಾರಿಕೆಗಳನ್ನು ಸ್ಥಾಪಿಸುವುದು, ಬ್ಯಾಂಕುಗಳನ್ನು ಆರಂಭಿಸುವುದು,ಲೇವಾದೇವಿಗಾರರಾಗಿ ಕೆಲಸ ಮಾಡುವುದು, ಮಧ್ಯವರ್ತಿಗಳಾಗಿ ವ್ಯವಹರಿಸುವುದು ಮುಂತಾದ ಹತ್ತು ಹಲವು ಕೆಲಸಗಳನ್ನೂ ಮಾಡುತ್ತಿದ್ದರು. ಬ್ರಿಟಿಷ್ ಕರ್ನಾಟಕದ ಪ್ರಮುಖ ವರ್ತಕ ಸಮುದಾಯಗಳೆಂದರೆ ಬಣಜಿಗರು, ಗೌಡ ಸಾರಸ್ವತ ಬ್ರಾಹ್ಮಣರು (ಕೊಂಕಣಿಗಳು), ಗುಜರಾತಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು.

ಬಣಜಿಗರು ಕರ್ನಾಟಕದ ಪ್ರಮುಖ ವ್ಯಾಪಾರಸ್ಥರು. ಇವರು ಮುಖ್ಯವಾಗಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಕೊಂಡಂತವರು. ನೇಕಾರರಿಗೆ ಬೇಕಾಗುವ ಸವಲತ್ತು, ಸೌಕರ್ಯಗಳನ್ನು ಒದಗಿಸುವುದು, ಹತ್ತಿ ಬಟ್ಟೆಗಳನ್ನು, ಕಚ್ಚಾಹತ್ತಿಯನ್ನು ಸಾಗಿಸುವುದು, ಮಾರಾಟ ಮಾಡುವುದು ಇವರ ಮುಖ್ಯ ಕೆಲಸವಾಗಿತ್ತು. ಹತ್ತಿ ಬೆಳೆಯುವ ಪ್ರದೇಶಗಳೊಂದಿಗೆ ಇವರು ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಬಳ್ಳಾರಿ, ಆದೋನಿ, ಧಾರವಾಡ, ಹುಬ್ಬಳ್ಳಿ, ನರಗುಂದ, ನವಲಗುಂದ, ಗುತ್ತಿ, ಸವಣೂರು, ಗಜೇಂದ್ರಗಡ ಮುಂತಾದ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಬಣಜಿಗರು ಸಾಲ ನೀಡುವ, ಹತ್ತಿಯನ್ನು ಖರೀದಿಸುವ, ವಿವಿಧ ಪ್ರದೇಶಗಳಿಗೆ ಸಾಗಿಸುವ ಕೆಲಸವನ್ನು ಮಾಡುತ್ತಿದ್ದರು. ಸಿದ್ಧ ವಸ್ತುಗಳನ್ನು ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು, ಗುಬ್ಬಿ, ನಗರ, ಚಿತ್ರದುರ್ಗ, ಚನ್ನಪಟ್ಟಣ, ಮಂಗಳೂರು, ಭಟ್ಕಳ, ಹೊನ್ನಾವರ, ಕಾರವಾರ ಮುಂತಾದ ಪ್ರದೇಶಗಳಿಗೆ ಸಾಗಿಸಿ, ವ್ಯಾಪಾರ ನಡೆಸುತ್ತಿದ್ದರು.

ಕೊಂಕಣಿಗಳು ಅಥವಾ ಗೌಡ ಸಾರಸ್ವತ ಬ್ರಾಹ್ಮಣರು ಕರಾವಳಿ ತೀರದ ಪಟ್ಟಣಗಳಲ್ಲಿ ಹೆಚ್ಚಾಗಿ ವ್ಯಾಪಾರ ನಡೆಸುತ್ತಿದ್ದರು. ಇವರಲ್ಲಿ ಸಾರಸ್ವತರು, ಗೌಡ ಸಾರಸ್ವತರು, ಗುರ್ಜರ ಸಾರಸ್ವತರು. ಕಾಶ್ಮೀರಿ ಸಾರಸ್ವತರು ಮುಂತಾದ ಪಂಗಡಗಳಿದ್ದವು. ಕೊಂಕಣಿಗಳು ಭಾರತದ ಪಶ್ಚಿಮ ಕರಾವಳಿಯ ಪ್ರಮುಖ ವರ್ತಕ ಸಮುದಾಯವಾಗಿದ್ದು, ಮುಂಬಯಿಯಿಂದ ಕೇರಳದವರೆಗೆ ವ್ಯಾಪಾರ ನಡೆಸುತ್ತಿದ್ದರು. ಕೊಂಕಣಿಗಳು ಗೋವಾವನ್ನು ಪ್ರಮುಖ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿಂದ ಕರ್ನಾಟಕದ ವಿವಿಧ ಪ್ರದೇಶಗಳಿಗೆ ವಲಸೆ ಬಂದರು. ಹೈದರ್ ಆಲಿಯು ಇವರನ್ನು ಮೈಸೂರು ರಾಜ್ಯಕ್ಕೆ ಬರಮಾಡಿಕೊಂಡನು. ಬ್ರಿಟಿಷರ ಆಳ್ವಿಕೆಯುದ್ದಕ್ಕೂ ಇವರು ಯಶಸ್ವಿ ವರ್ತಕರಾಗಿಯೇ ಮುಂದುವರಿದರು. ಬ್ರಿಟಿಷ್ ಮತ್ತು ಅರಬ್ ವರ್ತಕರ ನಡುವಿನ ಮನಸ್ತಾಪದ ಲಾಭವನ್ನು ಇವರು ಪಡೆದುಕೊಂಡರು. ಬಂದರು ಪಟ್ಟಣವಾದ ಮಂಗಳೂರಿನಲ್ಲಿ ಇವರು ಪ್ರಮುಖ ವ್ಯಾಪಾರಸ್ಥರಾಗಿ ಕಾಣಿಸಿಕೊಂಡರು. ಬ್ರಿಟಿಷರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಕೊಂಕಣಿಗಳು ಪೋರ್ಚುಗೀಸರೊಂದಿಗೆ ನಡೆಸುತ್ತಿದ್ದ ವ್ಯಾಪಾರ ಅವರಿಗೆ ವ್ಯಾಪಾರ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ತಂದುಕೊಟ್ಟಿತು. ಪೋರ್ಚುಗೀಸ್ ವರ್ತಕರಿಗೆ ಸ್ಥಳೀಯ ಏಜೆಂಟರಾಗಿಯೂ ಇವರು ಕೆಲಸ ಮಾಡುತ್ತಿದ್ದರು. ಸಮುದ್ರತೀರದ ಪಟ್ಟಣಗಳ ವ್ಯಾಪಾರ ಹೆಚ್ಚು ಕಡಿಮೆ ಇವರ ಹಿಡಿತದಲ್ಲಿಯೇ ಇತ್ತು.

ಕೊಂಕಣಿಗಳು ಕರಿಮೆಣಸು, ಭತ್ತ, ಅಡಿಕೆ, ತೆಂಗು ಮುಂತಾದವುಗಳ ವ್ಯಾಪಾರ ನಡೆಸುತ್ತಿದ್ದರು. ಬಂದರು ಪಟ್ಟಣಗಳ ಒಳನಾಡುಗಳೊಂದಿಗೆ ನೇರ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಒಳನಾಡುಗಳಲ್ಲಿ ಬೆಳೆಯಲಾಗುತ್ತಿದ್ದ ವಾಣಿಜ್ಯ ಬೆಳೆಗಳನ್ನು ಮಾರುಕಟ್ಟೆಗಳಿಗೆ ತರುತ್ತಿದ್ದರು. ಕೃಷಿಕರಿಗೆ ಬೆಳೆಗಳನ್ನು ಬೆಳೆಯಲು ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದರು. ಸಾಲವನ್ನು ಮರುಪಾವತಿಸುವಲ್ಲಿ ಕೃಷಿಕರು ವಿಫಲರಾದರೆ ಆ ಕೃಷಿ ಭೂಮಿ ಇವರ ಸ್ವಾಧೀನಕ್ಕೆ ಬರುತ್ತಿತ್ತು. ಹೀಗೆ ವ್ಯಾಪಾರದ ಜೊತೆಗೆ ಭೂಮಾಲೀಕರಾಗಿಯೂ ಇವರು ಕಾಣಿಸಿಕೊಂಡರು. ಲೇವಾದೇವಿಗಾರರಾಗಿ, ಮಧ್ಯವರ್ತಿಗಳಾಗಿ, ಬ್ರಿಟಿಷರ ವ್ಯಾಪಾರದ ಏಜೆಂಟರುಗಳಾಗಿ ಕೆಲಸ ಮಾಡಿ, ಸ್ಥಳೀಯ ಹಾಗೂ ಹೊರನಾಡುಗಳೊಂದಿಗಿನ ವ್ಯಾಪಾರದಲ್ಲೂ ಪ್ರಮುಖವಾಗಿ ಕಾಣಿಸಿಕೊಂಡರು. ಕೃಷಿಕರಿಗೆ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದರು. ಆ ಉದ್ದೇಶಕ್ಕಾಗಿಯೇ ಬ್ಯಾಂಕುಗಳನ್ನು ಸ್ಥಾಪಿಸಿಕೊಂಡರು. ಶ್ರೀಮಂತ ವರ್ತಕರಾಗಿ ಕಾಣಿಸಿಕೊಂಡ ಗೌರ ಸಾರಸ್ವತ ಬ್ರಾಹ್ಮಣರು ಬ್ರಿಟಿಷ್ ಆಳ್ವಿಕೆಯುದ್ದಕ್ಕೂ ಸ್ಥಳೀಯರೊಂದಿಗೆ ಮತ್ತು ಬ್ರಿಟಿಷರೊಂದಿಗೆ ಸಹಕಾರ ಮತ್ತು ಸಹಯೋಗ ನೀತಿಗಳನ್ನು ಅನುಸರಿಸಿಕೊಂಡು ಬಂದರು.

ಗುಜರಾತಿಗಳು ದಕ್ಷಿಣ ಭಾರತದುದ್ದಕ್ಕೂ ತಮ್ಮ ವ್ಯಾಪಾರ ಜಾಲವನ್ನು ಹೊಂದಿದ್ದರು. ಗುಜರಾತಿ ವರ್ತಕರಲ್ಲಿ ಪಾರ್ಸಿಗಳು, ಬೊಹ್ರಾಗಳು, ಬನಿಯಾಗಳು, ಗುಜರಾತಿ ಜೈನರು, ಲೊಹಾನರು, ಪಟೇಲರು, ಮಾರವಾಡಿಗಳು ಮತ್ತು ಗುಜರಾತಿ ಬ್ರಾಹ್ಮಣರು ಪ್ರಮುಖರು. ಇವರು ಕೊಂಕಣಿಗಳಂತೆ ಹೆಚ್ಚಾಗಿ ಕರಾವಳಿಯ ಪಟ್ಟಣಗಳಿಗೆ ವಲಸೆ ಬಂದರು. ಹೈದರಾಲಿಯು ಗುಜರಾತಿಗಳನ್ನು ಮಂಗಳೂರಿಗೆ ಆಹ್ವಾನಿಸಿ ಅಕ್ಕಿ, ಕಬ್ಬು, ತೆಂಗು, ಕರಿಮೆಣಸು ಮುಂತಾದ ವಸ್ತುಗಳೊಂದಿಗೆ ವ್ಯಾಪಾರ ನಡೆಸಲು ಅವಕಾಶ ನೀಡಿದನು. ಗುಜರಾತಿ ವರ್ತಕರಿಗೆ ಕೆಲವೊಂದು ವ್ಯಾಪಾರದ ಸವಲತ್ತು ಮತ್ತು ರಿಯಾಯಿತಿಗಳನ್ನೂ ನೀಡಲಾಯಿತು. ಈ ಅವಕಾಶಗಳನ್ನು ಬಳಸಿಕೊಂಡ ಗುಜರಾತಿಗಳು ಬಂದರು ಪಟ್ಟಣಗಳಲ್ಲಿ ಭದ್ರ ನೆಲೆಗಳನ್ನು ಸ್ಥಾಪಿಸಿಕೊಂಡರು. ಅಡಿಕೆ, ತೆಂಗು, ಕರಿಮೆಣಸು, ಏಲಕ್ಕಿ, ಬೆಲ್ಲ, ಬಟ್ಟೆ, ಮರಮಟ್ಟು ಮುಂತಾದ ವಸ್ತುಗಳ ವ್ಯಾಪಾರ ನಡೆಸುತ್ತಿದ್ದರು. ಗುಜರಾತಿಗಳು ಸೂರತ್ ಮತ್ತು ಕಚ್‌ನಿಂದ ವಿವಿಧ ಮಾದರಿಯ ಬಟ್ಟೆಗಳನ್ನು ತರಿಸಿಕೊಳ್ಳುತ್ತಿದ್ದರು. ಗುಜರಾತಿಗೆ ಮಂಗಳೂರು, ಕಾರವಾರ ಮುಂತಾದ ಪಟ್ಟಣಗಳಿಂದ ಕರಿಮೆಣಸು, ವೀಳ್ಯದೆಲೆ, ಏಲಕ್ಕಿ ಮುಂತಾದ ವಸ್ತುಗಳನ್ನು ರಫ್ತು ಮಾಡಿ ಅಲ್ಲಿಂದ ಹತ್ತಿ ಬಟ್ಟೆಗಳು, ರೇಷ್ಮೆ ಮುಂತಾದವುಗಳನ್ನು ತರಿಸಿಕೊಳ್ಳುತ್ತಿದ್ದರು.

ಗುಜರಾತಿ ವರ್ತಕರು ಕೊಂಕಣಿಗಳಂತೆ ಶ್ರೀಮಂತ ವರ್ತಕರಾಗಿ ಕಾಣಿಸಿಕೊಂಡದಷ್ಟೇ ಅಲ್ಲದೆ ಹಣಕಾಸಿನ ವ್ಯವಹಾರ ನಡೆಸುವ ಲೇವಾದೇವಿದಾರರಾಗಿ, ಬ್ಯಾಂಕರುಗಳಾಗಿಯೂ ಕಾಣಿಸಿಕೊಂಡರು. ಈಸ್ಟ್ ಇಂಡಿಯಾ ಕಂಪೆನಿಗೆ ವ್ಯಾಪಾರದಲ್ಲಿ ಹೆಚ್ಚಿನ ಅನುಭವವನ್ನು ಪಡೆದಿರುವ ಸ್ಥಳೀಯ ವ್ಯಾಪಾರಿಗಳ ಅವಶ್ಯಕತೆಯಿತ್ತು. ಸ್ಥಳೀಯ ನಾಣ್ಯಗಳ ಪರಿಚಯವಿರುವ, ಕೃಷಿಕರಿಗೆ ಮತ್ತು ಕುಶಲಕರ್ಮಿಗಳಿಗೆ ಸಾಲದ ರೂಪದಲ್ಲಿ ಹಣವನ್ನು ನೀಡುವ ಸಾಮರ್ಥ್ಯವಿರುವ, ಸಿದ್ಧವಸ್ತುಗಳನ್ನು ಮಾರುಕಟ್ಟೆಗಳಿಗೆ ಪೂರೈಕೆ ಮಾಡುವ ಹಾಗೂ ಬ್ರಿಟಿಷರಿಗಾಗಿ ನಾವೆಗಳನ್ನು ನಿರ್ಮಿಸಿಕೊಡುವ ವರ್ತಕ ಸಮುದಾಯಗಳ ಅನಿವಾರ್ಯತೆ ಬ್ರಿಟಿಷರಿಗಿತ್ತು. ಈ ಎಲ್ಲ ಅವಶ್ಯಕತೆಗಳನ್ನು ಪೂರೈಸುವಷ್ಟರ ಮಟ್ಟಿಗೆ ಗುಜರಾತಿ ವರ್ತಕರು ಬೆಳೆದಿದ್ದರು. ಹೀಗಾಗಿ ಬ್ರಿಟಿಷರು ಗುಜರಾತಿ ವರ್ತಕರನ್ನು ತಮ್ಮ ವ್ಯಾಪಾರದ ಏಜೆಂಟರುಗಳನ್ನಾಗಿ ನೇಮಕ ಮಾಡಿಕೊಂಡರು. ಬ್ರಿಟಿಷರಿಂದ ಹಣಕಾಸಿನ ನೆರವನ್ನು ಪಡದು ಬ್ರಿಟಿಷರಿಗಾಗಿ ವ್ಯಾಪಾರ ನಡೆಸುವ, ಕೃಷಿಕರಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುವ, ಸ್ವತಂತ್ರವಾಗಿ ವ್ಯಾಪಾರ ನಡಸುವ ಹಾಗೂ ಬಡ್ಡಿಯ ರೂಫದಲ್ಲಿ ಹಣವನ್ನು ಪಡೆಯುವ ಮೂಲಕ ಗುಜರಾತಿ ವರ್ತಕರು ವ್ಯಾಪಾರ ಮತ್ತು ಹಣಕಾಸಿನ ವ್ಯವಹಾರದಲ್ಲಿ ಲಾಭವನ್ನು ಗಳಿಸಿದ್ದರು.

ಮುಸ್ಲಿಮರು ವಸಾಹತುಪೂರ್ವ ಅವಧಿಯಲ್ಲಿಯೇ ಕರ್ನಾಟಕದ ಪ್ರಮುಖ ವ್ಯಾಪಾರಸ್ಥರಾಗಿದ್ದರು. ಅರೇಬಿಯನ್ನರು ಮತ್ತು ಪರ್ಷಿಯನ್ನರು ಇಲ್ಲಿನ ಪ್ರಮುಖ ವ್ಯಾಪಾರಸ್ಥರಾಗಿದ್ದರು. ಟಿಪ್ಪು ಸುಲ್ತಾನನು ಬ್ರಿಟಿಷರಿಗೆ ವ್ಯಾಪಾರದಲ್ಲಿ ನಷ್ಟವನ್ನುಂಟು ಮಾಡಲು ಮುಸ್ಲಿಂ ಮತ್ತು ಕೊಂಕಣಿ ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದನು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಅರೇಬಿಯನ್ ಮತ್ತು ಪರ್ಷಿಯನ್ ವ್ಯಾಪಾರಕ್ಕೆ ಹಿನ್ನಡೆಯುಂಟಾಯಿತು. ಅದಕ್ಕೂ ಮೊದಲು ಪೋರ್ಚುಗೀಸರು ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭವಾಗದಂತೆ ನೋಡಿಕೊಂಡಿದ್ದರು. ಆದರೂ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರು ತಮ್ಮ ನೆಲೆಗಳನ್ನು ಉಳಿಸಿಕೊಂಡಿದ್ದರು.

ಮುಸ್ಲಿಂ ವ್ಯಾಪಾರಸ್ಥರಲ್ಲಿ ಹಲವಾರು ಪಂಗಡಗಳಿದ್ದವು. ಅವುಗಳೆಂದರೆ ಬ್ಯಾರಿಗಳು, ದಕ್ಕನಿ ಮುಸ್ಲಿಮರು, ಮೆಮೋನ್‌ಗಳು, ಭಟ್ಕಳಿಗಳು, ಬೊಹ್ರಾಗಳು ಮುಂತಾದವರು. ಬ್ಯಾರಿಗಳನ್ನು ಮಾಪಿಳ್ಳೆಗಳೆಂದೂ ಕರೆಯಲಾಗಿದೆ. ಮಲಬಾರಿನ ಮಾಪಿಳ್ಳೆಗಳ ನೇರ ಪ್ರಭಾವಕ್ಕೆ ಬ್ಯಾರಿಗಳು ಒಳಗಾಗಿದ್ದರು. ಕಾಸರಗೋಡು, ಮಂಜೇಶ್ವರ, ಕುಂಬಳೆ, ಮಂಗಳೂರುಗಳಲ್ಲಿ ಇವರು ವ್ಯಾಪಾರ ನಡೆಸುತ್ತಿದ್ದರು. ಕರ್ನಾಟಕದ ಇತರ ಪ್ರದೇಶಗಳಿಗೂ ಇವರು ವಲಸೆ ಹೋಗುತ್ತಿದ್ದರು. ವ್ಯಾಪಾರವೇ ಇವರ ಮೂಲ ಕಸುಬಾಗಿತ್ತು. ದಕ್ಕನಿಗಳು, ಮೈಸೂರು ಸಂಸ್ಥಾನ, ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿದ್ದ ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದರು. ಇವರನ್ನು ತುರ್ಕರು ಎಂಬುದಾಗಿಯೂ ಕರೆಯಲಾಗುತ್ತಿತ್ತು. ಇವರು ಕುದುರೆ ವ್ಯಾಪಾರ, ಬಟ್ಟೆಗಳ ವ್ಯಾಪಾರ, ಶಾವಿಗೆ ತಯಾರಿ ಮತ್ತು ಮಾರಾಟ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದರು. ಮೆಮೋನ್‌ಗಳು ಮತ್ತು ಖೋಜಾಗಳು ಶ್ರೀಮಂತ ವರ್ತಕರಾಗಿದ್ದು ಮೈಸೂರು, ಮಂಗಳೂರು, ಕಾರವಾರ ಮುಂತಾದೆಡೆಗಳಲ್ಲಿ ವಾಸಿಸುತ್ತಿದ್ದರು. ಇವರು ಪರ್ಷಿಯಾ, ಚೀಣಾ ಮುಂತಾದ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸುತ್ತಿದ್ದರು. ಭಟ್ಕಳಿಗಳು ಅಥವಾ ನವಾಯತರು ಭಟ್ಕಳ, ಹೊನ್ನಾವರ, ಮಂಗಳೂರು ಮುಂತಾದ ಪಟ್ಟಣಗಳಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಬೊಹ್ರಾಗಳು ಸೂರತ್‌ನಿಂದ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದರು. ಹೆಚ್ಚಾಗಿ ಇವರು ಬಂದರು ಪಟ್ಟಣಗಳಲ್ಲಿಯೇ ವ್ಯಾಪಾರ ನಡೆಸುತ್ತಿದ್ದರು. ಮಂಗಳೂರಿನಲ್ಲಿ ಇವರು ಗಡಿಯಾರ ರಿಪೇರಿ, ಗ್ಲಾಸುಗಳ ವ್ಯಾಪಾರ, ತಾಮ್ರ ಮತ್ತು ಹಿತ್ತಾಳೆಯ ಕೆಲಸ, ಕಲಾಯಿ ಹಾಕುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಒಟ್ಟಾರೆಯಾಗಿ ಮುಸ್ಲಿಮರು ಗುಜರಿ ಕೆಲಸಗಳಿಂದ ಹಿಡಿದು ವಾಣಿಜ್ಯ ಬೆಳೆಗಳ ವ್ಯಾಪಾರದವರಗೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರು.

ಬ್ರಿಟಿಷ್ ಆಳ್ವಿಕೆಯಲ್ಲಿ ಇಲ್ಲಿನ ವ್ಯಾಪಾರ ಮತ್ತು ವಾಣಿಜ್ಯದ ಮೆಲೆ ನೇರ ನಿಯಂತ್ರಣ ಸಾಧಿಸಿದ್ದವರು ಬ್ರಿಟಿಷ್ ವರ್ತಕರು. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಈ ಉದ್ದೇಶದಿಂದಲೇ ಹುಟ್ಟಿಕೊಂಡಿತ್ತು. ಹದಿನೇಳನೆಯ ಶತಮಾನದ ಆರಂಭಿಕ ಕಾಲದಲ್ಲಿ ಸ್ಥಾಪಿತವಾದ ಈ ಕಂಪೆನಿಗೆ ಬ್ರಿಟಿಷ್ ಸರಕಾರವು ಹೆಚ್ಚು ಅಧಿಕಾರಗಳನ್ನು ನೀಡಿತು. ಈಸ್ಟ್ ಇಂಡಿಯಾ ಕಂಪನಿಗೆ ಬೇಕಾಗಿದ್ದದ್ದು ಭಾರತೀಯ ಮಾರುಕಟ್ಟೆ ಹಾಗೂ ಯುರೋಪಿನ ಕೈಗಾರಿಕೆಗಳಿಗೆ ಅಗತ್ಯವಾಗಿದ್ದಂಥ ಕಚ್ಚಾವಸ್ತುಗಳು. ಲಂಕಶೈರ್ ಮತ್ತು ಮ್ಯಾನ್‌ಚೆಸ್ಟರ‍್ಗಳ ಹಿತಕ್ಕನುಗುಣವಾಗಿ ವ್ಯಾಪಾರ ಮತ್ತು ವಾಣಿಜ್ಯದ ಲೆಕ್ಕಾಚಾರಗಳು ನಡೆಯುತ್ತಿದ್ದವು. ಬ್ರಿಟಿಷರು ತಮ್ಮ ವ್ಯಾಪಾರದ ಉದ್ದೇಶಗಳ ಈಡೇರಿಕೆಗೆ ಸ್ಥಳೀಯ ವರ್ತಕರನ್ನೇ ಬಳಸಿಕೊಂಡರು. ಕ್ರಿಶ್ಚಿಯನ್ನರಲ್ಲಿ ರೋಮನ್ ಕೆಥೋಲಿಕ್‌ಗಳು ಮತ್ತು ಪ್ರೊಟೆಸ್ಟೆಂಟ್‌ಗಳು ಪ್ರಮುಖವಾದ ಎರಡು ಸಮುದಾಯಗಳು. ಇವು ಕರ್ನಾಟಕದಾದ್ಯಂತ ನೆಲೆಸಿದ್ದವು. ತಮ್ಮ ಸಮುದಾಯಗಳಿಗೆ ವ್ಯಾಪಾರ ಮತ್ತು ಉದ್ದಿಮೆಗಳಲ್ಲಿ ನೆರವಾಗಲು ಹಣಕಾಸಿನ ಸಂಸ್ಥೆಗಳನ್ನು ತೆರದವು. ಬಾಸೆಲ್ ಮಿಶನ್ ವ್ಯಾಪಾರ ಮತ್ತು ವಾಣಿಜ್ಯದ ಉದ್ದೇಶಕ್ಕಾಗಿ ೧೮೫೨ರಲ್ಲಿ ಹೊಸ ವಿಭಾಗವೊಂದನ್ನು ಸ್ಥಾಪಿಸಿತು. ಅದು ಹಣಕಾಸಿನ ವ್ಯವಹಾರ, ಆಮದು ಮತ್ತು ರಫ್ತು ವ್ಯವಹಾರ ನಡೆಸುವುದು, ಬಾಸೆಲ್ ಮಿಶನ್ ಸ್ಥಾಪಿಸಿದ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಮುಂತಾದ ಕೆಲಸಗಳನ್ನು ಮಾಡುತ್ತಿತ್ತು. ಕೈಗಾರಿಕೆಗಳಿಗೆ ಬೇಕಾಗುವ ಯಂತ್ರಗಳನ್ನು ಹಾಗೂ ಬಿಡಿ ಭಾಗಗಳನ್ನು ಯುರೋಪಿನಿಂದ ತರಿಸಿಕೊಳ್ಳಲಾಗುತ್ತಿತ್ತು. ಬ್ರಿಟಿಷ್ ವರ್ತಕರು ಕೊಡಗು, ಮೈಸೂರು, ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ವಾಣಿಜ್ಯ ಬೆಳೆಗಳನ್ನು ಇಂಗ್ಲೆಂಡಿಗೆ ರಫ್ತು ಮಾಡುತ್ತಿದ್ದರು. ಬ್ರಿಟಿಷ್ ವ್ಯಾಪಾರವು ರಫ್ತು ಆಧಾರಿತವಾಗಿದ್ದು, ಕರ್ನಾಟಕದಿಂದ ಸರಕುಗಳನ್ನು ಇಂಗ್ಲೆಂಡಿಗೆ ರಫ್ತು ಮಾಡುವುದು ಹಾಗೂ ಇಂಗ್ಲೆಂಡಿನಲ್ಲಿ ತಯಾರಾಗುವ ವಸ್ತುಗಳನ್ನು ಕರ್ನಟಕಕ್ಕೆ ರಫ್ತು ಮಾಡುವುದು ಬ್ರಿಟಿಷ್ ವ್ಯಾಪಾರ ನೀತಿಯಾಗಿತ್ತು.

ಪೇಟೆ-ಪಟ್ಟಣಗಳಲ್ಲಿ ಮೇಲೆ ಉಲ್ಲೇಖಿಸಿದ ವರ್ತಕ ಸಮುದಾಯಗಳಲ್ಲದೆ ಇನ್ನೂ ಹತ್ತು ಹಲವಾರು ಸಮುದಾಯಗಳು ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿದ್ದವು. ಕುಶಲಕರ್ಮಿಗಳು ವಸ್ತುಗಳ ಉತ್ಪಾದನೆ ಮಾಡುವುದರ ಜೊತೆ ಜೊತೆಗೆ ಅವುಗಳ ಮಾರಾಟವನ್ನು ಮಾಡುತ್ತಿದ್ದರು. ಗಾಣಿಗರು ಎಣ್ಣೆಯನ್ನು ಉತ್ಪಾದಿಸುವುದರ ಜೊತೆಗೆ ಎಣ್ಣೆ ವ್ಯಾಪಾರದಲ್ಲೂ ಕಾಣಿಸಿಕೊಂಡಿದ್ದರು. ಅದೇ ರೀತಿ ಸಮಗಾರರು ಚರ್ಮದ ಕೆಲಸ ಮಾಡುವುದರ ಜೊತೆಗೆ ಅವುಗಳ ಉತ್ಪನ್ನಗಳ ಮಾರಾಟ ಮಾಡುತ್ತಿದ್ದನು. ಆದರೆ ಇವರೆಲ್ಲರೂ ಪೂರ್ಣ ಪ್ರಮಾಣದ ವ್ಯಾಪಾರಸ್ಥರಲ್ಲ. ಲಿಂಗಾಯಿತರು, ಜೈನರು, ಅಂಗಡಿಕಾರರು, ಚಿನಿವಾರರು, ನೇಕಾರರು, ರಜಪೂತರು, ನಾಯರರು, ವೈಶ್ಯರು, ಬೆಸ್ತರು ಮುಂತಾದವರು ಸಣ್ಣಪುಟ್ಟ ವ್ಯಾಪಾರ-ವಾಣಿಜ್ಯದಲ್ಲಿ ತೊಡಗಿಕೊಂಡಿದ್ದರು. ಲಿಂಗಾಯಿತರಲ್ಲಿ ಪಂಚಮ ಬಣಜಿಗರು ಕರ್ನಾಟಕದ ಪ್ರಮುಖ ವ್ಯಾಪಾರಸ್ಥರಾಗಿ ಗುರುತಿಸಿಗೊಂಡಿದ್ದರು. ನಾಯರರು ಕೇರಳದಿಂದ ವಲಸೆ ಬಂದವರು. ಅವರಲ್ಲಿ ಹೆಚ್ಚಿನವರು ಮೈಸೂರು ಭಾಗದಲ್ಲಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ಅವರು ವಂಶಪಾರಂಪರ್ಯವಾಗಿ ವ್ಯಾಪಾರಿಗಳು, ಕೈಕಸುಬುದಾರರು, ಎಣ್ಣೆ ಮಾರುವವರು ಮತ್ತು ಕೃಷಿಕರು.

ವೈಶ್ಯರನ್ನು ಆರ್ಯ ವೈಶ್ಯರು, ಕೋಮಟಿಗಳು ಹಾಗೂ ಸೆಟ್ಟಿಗಳೆಂದು ಕರೆಯಲಾಗುತ್ತಿತ್ತು. ಇವರ ಉದ್ಯೋಗ ವ್ಯಾಪಾರ ಮತ್ತು ವಾಣಿಜ್ಯವಾಗಿತ್ತು. ಇವರಲ್ಲಿ ಬಹಳಷ್ಟು ಮಂದಿ ಆಭರಣ ವ್ಯಾಪಾರಿಗಳು, ಬ್ಯಾಂಕ್ ವ್ಯವಹಾರ ನಡೆಸುವವರು, ಉದ್ದಿಮೆದಾರರು ಹಾಗೂ ಕಾಫಿ ಬೆಳೆಗಾರರು ಆಗಿದ್ದರು. ಕರಾವಳಿ ತೀರದಲ್ಲಿ ಬದುಕು ಸಾಗಿಸುವ ಬೆಸ್ತರು, ಮರಕ್ಕಳರು ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಮೀನನ್ನು ಹಿಡಿಯುವ, ಮೀನಿನ ವ್ಯಾಪಾರ ನಡೆಸುವ, ಸಮುದ್ರ ಮತ್ತು ನದಿಗಳಲ್ಲಿ ವಸ್ತುಗಳನ್ನು ಸಾಗಿಸುವುದರಲ್ಲಿ ಇತರ ವ್ಯಾಪಾರಸ್ಥರಿಗೆ ನೆರವಾಗುವ, ವ್ಯಾಪಾರಕ್ಕೆ ಬಳಸುವ ದೋಣಿಗಳನ್ನು ತಯಾರಿಸುವುದರಲ್ಲಿ ಮತ್ತು ಚಲಿಸುವುದರಲ್ಲಿ ಇತರರಿಗೆ ನೆರವಾಗುವ ಕೆಲಸಗಳನ್ನು ಬೆಸ್ತರು ಮಾಡುತ್ತಿದ್ದರು. ಬ್ರಿಟಿಷರು ಬೆಸ್ತರ ಸಹಾಯವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಂಡರು. ಬೆಸ್ತರು ಸಮುದ್ರದಲ್ಲಿ ಮೀನನ್ನು ಹಿಡಿಯುವುದರಲ್ಲಷ್ಟೇ ಅಲ್ಲದೆ ನಾವೆಗಳನ್ನು ನಡೆಸುವುದರಲ್ಲೂ ಪರಿಣತಿಯನ್ನು ಹೊಂದಿದ್ದರು. ಕಾರವಾರ, ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಬಂದರು ಪಟ್ಟಣಗಳ ಅಭಿವೃದ್ಧಿಯಲ್ಲಿ ಈ ಸಮುದಾಯದ ಪಾತ್ರ ಮಹತ್ವದಾಗಿತ್ತು.

ಬ್ಯಾಂಕುಗಳು

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಸ್ಥಾಪನೆಗೊಂಡ ಬ್ಯಾಂಕುಗಳು ಮತ್ತು ಇತರ ಹಣಕಾಸಿನ ಸಂಸ್ಥೆಗಳು ಉತ್ಪಾದನಾ ಚಟುವಟಿಕೆಗಳಿಗೆ ನೆರವಾದವು. ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಹೂಡಿಕೆಯ ಜೊತೆ ಜೊತೆಗೆ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಿದವು. ಆಧುನಿಕ ಬ್ಯಾಂಕುಗಳು ಸ್ಥಾಪನೆಗೊಳ್ಳುವ ಮೊದಲೇ ಕರ್ನಾಟಕದಲ್ಲಿ ಹಣಕಾಸಿನ ಚಟುವಟಿಕೆಗಳನ್ನು ನಡೆಸುವ ಅನೇಕ ವ್ಯಾಪಾರಿ ಸಂಘಗಳಿದ್ದವು. ಕರಕುಶಲ ಕಸುಬುದಾರರ ಮತ್ತು ವ್ಯಾಪಾರಸ್ಥರ ಶ್ರೇಣಿಗಳು ಪ್ರಬಲವಾದ ಮತ್ತು ಅಧಿಕಾರಯುತವಾದ ಆರ್ಥಿಕ ನಿಗಮಗಳಾಗಿದ್ದವು. ವ್ಯಾಪಾರಿ ಸಂಘಗಳ ವ್ಯಾಪಾರಿಗಳು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಹಣದ ವಹಿವಾಟನ್ನು ನಡೆಸುತ್ತಿದ್ದರು. ಸಾಲದ ರೂಪದಲ್ಲಿ ನೀಡಿದ ಹಣಕ್ಕೆ ಬಡ್ಡಿಯನ್ನು ನಿಗದಿಪಡಿಸಲಾಗುತ್ತಿತ್ತು. ಬಡ್ಡಿಯ ದರದಲ್ಲಿ ಏರಿಳಿತವಿರುತ್ತಿತ್ತು. ಬಡ್ಡಿಯನ್ನು ಹಣದ ಲೆಕ್ಕದಲ್ಲಿ ಎಣಿಕೆ ಮಾಡಿ ಅಥವಾ ವಸ್ತುವಿನ ರೂಪದಲ್ಲಿ ನೀಡಲಾಗುತ್ತಿತ್ತು. ಜೀವ ವಿಮಾ ಸಂಸ್ಥೆಗಳು ಸ್ಥಾಪನೆಗೊಂಡು ಶಿಕ್ಷಣ, ಮದುವೆ ಮುಂತಾದವುಗಳಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದವು. ಕುರಿ, ನಿಧಿ ಮುಂತಾದ ಹಣದ ವ್ಯವಹಾರ ನಡೆಸುವ ಸ್ಥಳೀಯ ಸಂಸ್ಥೆಗಳಿದ್ದವು. ಈ ತರದ ಹಣಕಾಸಿನ ವ್ಯವಹಾರವನ್ನು ನಡೆಸುವ ವ್ಯವಸ್ಥೆ ಕರ್ನಾಟಕದಾದ್ಯಂತ ಇತ್ತು. ಹುಂಡಿ ವ್ಯವಹಾರವನ್ನು ಅನೇಕ ವ್ಯಾಪಾರಸ್ಥರು, ಉದ್ದಿಮೆದಾರರು, ಹೋಟೆಲ್ ಮಾಲೀಕರು ಮುಂತಾದವರು ನಡೆಸುತ್ತಿದ್ದರು. ಹುಂಡಿ ವ್ಯವಹಾರದಲ್ಲಿ ಮಧ್ಯವರ್ತಿಗಳು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಮಂಗಳೂರು, ಕಾರವಾರ, ಧಾರವಾಡ, ಹುಬ್ಬಳ್ಳಿ, ಬಿಜಾಪುರ, ಬೆಳಗಾವಿಯ ಮುಂತಾದ ಪ್ರದೇಶಗಳಲ್ಲಿ ಹುಂಡಿ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಬೆಳಗಾವಿಯ ಹತ್ತಿರದ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ ಶಹಾಪುರದಲ್ಲಿ ಅತ್ಯಂತ ಹೆಚ್ಚಿನ ಹುಂಡಿ ವ್ಯವಹಾರ ನಡೆಯುತ್ತಿತ್ತು. ಪ್ರತಿ ವರ್ಷ ಸುಮಾರು ಎಂಟು ಲಕ್ಷ ರೂಪಾಯಿಯ ಹುಂಡಿಯ ವ್ಯವಹಾರವಾಗುತ್ತಿತ್ತು. ಅಲ್ಲಿ ಪರಸ್ಪರರ ಮೇಲೆ ಹುಂಡಿಗಳನ್ನು ಕೊಡುವುದಲ್ಲದೆ, ಮುಂಬಯಿ, ಮದರಾಸು, ಪುಣೆ, ಸತಾರ, ವೆಂಗುರ್ಲೆ, ಚಿಪಳೂಣ ಮುಂತಾದ ಪ್ರದೇಶಗಳಿಗೂ ಹುಂಡಿಗಳನ್ನು ಕೊಡಲಾಗುತ್ತಿತ್ತು. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ದೇಶಿ ವ್ಯಾಪಾರಸ್ಥರ ಜೊತೆಗೆ ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೆ ಹಾಗೂ ಯುರೋಪಿಯನ್ ವ್ಯಾಪಾರಸ್ಥರ ಜೊತೆಗೆ ಮೂರು ಲಕ್ಷದಿಂದ ನಾಲ್ಕು ಲಕ್ಷದವರೆಗೆ ಹುಂಡಿ ವ್ಯವಹಾರ ನಡೆಯುತ್ತಿತ್ತು.

ಬ್ಯಾಂಕುಗಳು ಆರಂಭಗೊಳ್ಳುವುದಕ್ಕೆ ಪೀಠಿಕೆಯಾಗಿ, ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದ ಹಣಕಾಸಿನ ವ್ಯವಹಾರಗಳು ನಡೆಯುತ್ತಿದ್ದವು. ಮನೆ ಮನೆಗೆ ತೆರಳಿ, ಉಳಿತಾಯದ ಪ್ರಾಮುಖ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸಿ, ಜನರು ಹಣಕಾಸಿನ ಸಂಸ್ಥೆಗಳ ಮೂಲಕ ತಾವು ದುಡಿದ ಹಣದ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುವಂತೆ ಒತ್ತಾಯಿಸಿರುವುದು ಬ್ಯಾಂಕಿಂಗ್ ಉದ್ದಿಮೆಯ ಮೊದಲ ಹಂತ. ಸಂಗ್ರಹಿಸಿದ ಹಣವನ್ನು ಕ್ರೋಢೀಕರಿಸಿ, ಅದರಲ್ಲಿ ಬಡ್ಡಿಯನ್ನು ನೀಡುವ ಮತ್ತು ಸಾಲವನ್ನು ನೀಡುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ಬೆಳೆದು ಅದು ಬ್ಯಾಂಕುಗಳಾಗಿ ಪರಿವರ್ತನೆಗೊಂಡಿತು. ಉದ್ದಿಮೆದಾರರು, ವಕೀಲರು, ಹೋಟೆಲ್ ಮಾಲೀಕರು, ಶ್ರೀಮಂತ ಕೃಷಿಕರು, ಶ್ರೀಮಂತ ವತ್ಕರು ಮುಂತಾದವರು ಬ್ಯಾಂಕುಗಳ ಸ್ಥಾಪನೆಯತ್ತ ಹೆಜ್ಜೆ ಹಾಕಿದರು.

ಇಪ್ಪತ್ತನೆಯ ಶತಮಾನದ ಆರಂಭದಿಂದಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಇಂಗ್ಲಿಷ್ ಶಿಕ್ಷಣ ಮತ್ತು ಯುರೋಪಿನ ರಾಷ್ಟ್ರಗಳೊಂದಿಗಿನ ಸಂಬಂಧ ಸ್ಥಳೀಯವಾಗಿ ಅನೇಕ ಬದಲಾವಣೆಗಳನ್ನುಂಟುಮಾಡಿತು. ಅನೇಕ ಸಮುದಾಯಗಳು ತಮ್ಮ ತಮ್ಮ ಸಮುದಾಯಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು ತೆರೆಯುವುದರಲ್ಲಿ ಉತ್ಸುಕವಾದವು. ಇದರಿಂದ ಜಾತಿ ಪದ್ಧತಿ ಇನ್ನಷ್ಟು ಗಟ್ಟಿಗೊಂಡರೂ, ಕೆಲವು ಉತ್ತಮ ಪರಿಣಾಮಗಳೂ ಉಂಟಾದವು. ನಗರ ಸಮುದಾಯಗಳು ಹುಟ್ಟು ಹಾಕಿದ ಬ್ಯಾಂಕುಗಳು ಆರಂಭಿಕ ದಿನಗಳಲ್ಲಿ ತಮ್ಮ ಸಮುದಾಯಗಳನ್ನಷ್ಟೇ ಗಮನದಲ್ಲಿಟ್ಟುಕೊಂಡಿದ್ದರೂ, ನಂತರ ಅದರ ವ್ಯಾಪ್ತಿ ವಿಸ್ತಾರವಾಗಿ ಬೆಳೆದಂತೆ ಎಲ್ಲ ಜಾತಿ ಮತ್ತು ಧರ್ಮದ ಜನರನ್ನೂ ಒಳಗೊಂಡಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿಯೇ ಜಿಲ್ಲೆಯು ಈ ಸಾಧನೆಯನ್ನು ಮಾಡಿತ್ತು. ಈ ಜಿಲ್ಲೆಯಲ್ಲಿ ಒಟ್ಟು ೨೨ ಬ್ಯಾಂಕುಗಳು ಸ್ಥಾಪನೆಗೊಂಡವು. ಅವುಗಳಲ್ಲಿ ಜಾತಿಯ ನೆಲೆಯಲ್ಲಿ ಮೂರು ಬ್ಯಾಂಕುಗಳು ಹುಟ್ಟಿಕೊಂಡವು. ತಮ್ಮ ಜಾತಿಯ ಜನರಿಂದ ಷೇರು ಬಂಡವಾಳವನ್ನು ಸಂಗ್ರಹಿಸಿ ವ್ಯವಹಾರ ಮಾಡುವ ನಿರ್ದಿಷ್ಟ ಗುರಿಯೊಂದಿಗೆ ಅವು ಆರಂಭಗೊಂಡವು. ಸಾರಸ್ವತ ಸಮಾಜದವರಿಂದ ೧೯೨೩ರಲ್ಲಿ ಜಯಲಕ್ಷ್ಮಿ ಬ್ಯಾಂಕ್ ಲಿ. ನ ಆರಂಭ, ಬ್ರಾಹ್ಮಣ ಸಮುದಾಯದಿಂದ ೧೯೨೪ರಲ್ಲಿ ಕರ್ನಾಟಕ ಬ್ಯಾಂಕ್ ಲಿ. ನ ಆರಂಭ, ಕ್ರೈಸ್ತರಿಂದ ೧೯೨೫ರಲ್ಲಿ ಕೆಥೋಲಿಕ್ ಬ್ಯಾಂಕ್ ಲಿ. ನ ಆರಂಭವಾಯಿತು. ಈ ರೀತಿಯ ಪ್ರಯುತ್ನಗಳು ಕರ್ನಾಟಕದಾದ್ಯಂತ ನಡೆದವು. ಆದರೆ ಕ್ರಮೇಣ ಅವು ತಮ್ಮ ಜಾತಿಯ ಚೌಕಟ್ಟಿನ ಹೊರಗೂ ವ್ಯವಹಾರ ನಡೆಸಲಾರಂಭಿಸಿದವು. ಎಲ್ಲ ಜಾತಿಯ ಗ್ರಾಹಕರನ್ನೂ ಆಕರ್ಷಿಸುವಲ್ಲಿ ಅವು ಯಶಸ್ವಿಯಾದವು. ತಮ್ಮ ಅಸ್ತಿತ್ವದ ದೃಷ್ಟಿಯಿಂದಲೂ ಬ್ಯಾಂಕುಗಳಿಗೆ ಅದು ಅನಿವಾರ್ಯವಾಗಿತ್ತು.

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸುಮಾರು ೭೪ ಬ್ಯಾಂಕುಗಳು ಸ್ಥಾಪನೆಗೊಂಡವು. ಕೇವಲ ಒಂದು ಬ್ಯಾಂಕು ಮಾತ್ರ ಸ್ವತಂತ್ರ ಭಾರತದಲ್ಲಿ ಹುಟ್ಟಿಕೊಂಡಿತು. ಇದು ಕರ್ನಾಟಕವು ಬ್ರಿಟಿಷ್ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ಸಾಧನೆ ಮಾಡಿತ್ತು ಎನ್ನುವುದನ್ನು ತೋರಿಸುತ್ತದೆ. ಆದರೆ ಸ್ಥಾಪನೆಗೊಂಡ ಬ್ಯಾಂಕುಗಳೆಲ್ಲವೂ ದೀರ್ಘ ಅವಧಿಯವರೆಗೆ ಅಸ್ತಿತ್ವದಲಿರಲಿಲ್ಲ. ಕೆಲವು ಬ್ಯಾಂಕುಗಳು ತಾವಾಗಿಯೇ ವಿಸರ್ಜನೆಗೊಂಡವು. ಇನ್ನು ಕೆಲವು ಇಂದಿನವರೆಗೂ (೨೦೦೭) ಮುಂದುವರಿದುಕೊಂಡೇ ಬಂದಿವೆ.

ಬ್ರಿಟಿಷ್ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಬ್ಯಾಂಕುಗಳು

ಬ್ಯಾಂಕಿನ ಹೆಸರು ಮುಖ್ಯ ಕಛೇರಿ ನೊಂದಾಯಿಸಲ್ಪಟ್ಟ ದಿನಾಂಕ
ಚಿತ್ರದುರ್ಗ ಬ್ಯಾಂಕ್ ಲಿ. ಚಿತ್ರದುರ್ಗ ೧೩-೭-೧೮೭೦
ನಂಜನಗೂಡು ಶ್ರೀಕಂಠೇಶ್ವರ ಬ್ಯಾಂಕ್ ಲಿ. ನಂಜನಗೂಡು ೧೯-೧೨-೧೮೮೫
ಬೆಂಗಳೂರು ಯೂನಿಯನ್ ಬ್ಯಾಂಕ್ ಲಿ. ಬೆಂಗಳೂರು ೩೦-೫-೧೮೯೦
ಶ್ರೀರಂಗಪಟ್ಟಣ ಟೌನ್ ಬ್ಯಾಂಕ್ ಲಿ. ಶ್ರೀರಂಗಪಟ್ಟಣ ೧೮೯೧
ಶಿಡ್ಲಘಟ್ಟ ಶ್ರೀ ವೆಂಕಟರಮಣಸ್ವಾಮಿ ಬ್ಯಾಂಕ್ ಲಿ. ಶಿಡ್ಲಘಟ್ಟ ೨೫-೪೧೮೯೨
ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ ಲಿ. ಉಡುಪಿ ೨೮-೫-೧೯೦೬
ಕೆನರಾ ಬ್ಯಾಂಕ್ ಲಿ. ಮಂಗಳೂರು ೧-೭-೧೯೦೬
ಯೂನಿಯನ್ ಬ್ಯಾಂಕ್ ಆಫ್ ಬಿಜಾಪುರ ಮತ್ತು ಶೋಲಾಪುರ ಲಿ ವಿಜಾಪುರ ೩೦-೧೦-೧೯೦೮
ಪೀಪಲ್ಸ್ ಬ್ಯಾಂಕ್ ಲಿ. ತೀರ್ಥಹಳ್ಳಿ ೪-೪-೧೯೧೩
ಬ್ಯಾಂಕ್ ಆಫ್ ಮೈಸೂರು ಲಿ. ಬೆಂಗಳೂರು ೧೯-೫-೧೯೧೩
ಶೃಂಗೇರಿ ಶ್ರೀ ಶಾರದಾ ಬ್ಯಾಂಕ್ ಲಿ. ಶೃಂಗೇರಿ ೧೩-೫-೧೯೧೪
ಶ್ರೀ ವರ್ತಕವರ್ಧಿನಿ ಬ್ಯಾಂಕ್ ಲಿ. (ಮಾಹಿತಿ ಲಭ್ಯವಿಲ್ಲ) ೧೦-೪-೧೯೧೬
ಸರಸ್ವತಿ ಬ್ಯಾಂಕ್ ಲಿ. ಕಲ್ಬುರ್ಗಿ ೧-೨-೧೯೧೮
ಕೆನರಾ ಎಂಟರ್‌ಪ್ರೈಸ್ ಲಿ. ಪುತ್ತೂರು ೧೩-೩-೧೯೨೦
ಪಾಂಗಾಳ ನಾಯಕ ಬ್ಯಾಂಕ್ ಲಿ.  ಉಡುಪಿ ೧೫-೪-೧೯೨೦
ಮಾಣಿಕ್ಯವೇಳು ಬ್ಯಾಂಕಿಂಗ್ ಕಾರ್ಪೊರೇಷನ್ ಲಿ. ಬೆಂಗಳೂರು ೨೪-೭-೧೯೨೦
ಬಾಗಲಕೋಟೆ ಕಮರ್ಷಿಯಲ್ ಬ್ಯಾಂಕ್ ಲಿ. ಬಾಗಲಕೋಟೆ ೧೩-೭-೧೯೨೨
ಕೊಪ್ಪ ಬ್ಯಾಂಕ್ ಲಿ ಕೊಪ್ಪ ೧೯೨೩
ಜಯಲಕ್ಷ್ಮಿ ಬ್ಯಾಂಕ್ ಲಿ. ಮಂಗಳೂರು ೧೧-೧೦-೧೯೨೩
ಕರ್ನಾಟಕ ಬ್ಯಾಂಕ್ ಲಿ. ಮಂಗಳೂರು ೨೮-೨-೧೯೨೪
ಉಡುಪಿ ಬ್ಯಾಂಕ್ ಲಿ. ಉಡುಪಿ ೫-೫-೧೯೨೫
ಕ್ಯಾಥಲಿಕ್ ಬ್ಯಾಂಕ್ ಲಿ. ಮಂಗಳೂರು ೫-೬-೧೯೨೫
ಕೆನರಾ ಇಂಡಸ್ಟ್ರೀಯಲ್ ಎಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿ. ಉಡುಪಿ ೨೦-೧೦-೧೯೨೫
ದೇವಾಂಗ ಬ್ಯಾಂಕ್ ಲಿ. ಬೆಂಗಳೂರು ೨೨-೧-೧೯೨೬
ಮೂಲ್ಕಿ ಬ್ಯಾಂಕ್ ಲಿ. ಮೂಲ್ಕಿ ೧೫-೭-೧೯೨೯
ಶ್ರೀ ಲಕ್ಷ್ಮೀ ಬ್ಯಾಂಕ್ ಲಿ. ಹಾನಗಲ್ ೧೯೨೯
ಬೆಳಗಾಂವ್ ಬ್ಯಾಂಕ್ ಲಿ. ಬೆಳಗಾವಿ ೧೧-೧-೧೯೩೦
ವೈಶ್ಯ ಮರ್ಕಂಟೈಲ್ ಬ್ಯಾಂಕ್ ಲಿ. ರಾಮನಗರ ೫-೩-೧೯೩೦
ವೈಶ್ಯ ಬ್ಯಾಂಕ್ ಲಿ. ಬೆಂಗಳೂರು ೨೯-೩-೧೯೩೦
ಶ್ರೀ ಮನ್ಮಧ್ವಸಿದ್ಧಾಂತ ಅಭಿವೃದ್ಧಿಕಾರಿಣಿ ಬ್ಯಾಂಕ್ ಲಿ. ಬೆಂಗಳೂರು ೧೨-೪-೧೯೩೦  
ಹುಬ್ಳಿ ಸಿಟಿ ಬ್ಯಾಂಕ್ ಲಿ ಹುಬ್ಬಳಿ ೧೪-೪-೧೯೩೦
ಶ್ರೀ ವಿಶ್ವೇಶ್ವರ ಬ್ಯಾಂಕ್ ಲಿ. (ಮಾಹಿತಿ ಲಭ್ಯವಿಲ್ಲ) ೨೭-೧೦-೧೯೩೦
ಗುಲ್ಬರ್ಗಾ ಬ್ಯಾಂಕಿಂಗ್ ಕಂಪನಿ ಲಿ. ಗುಲ್ಬರ್ಗಾ ೬-೧೧-೧೯೩೦
ವಿಜಯಾ ಬ್ಯಾಂಕ್ ಲಿ. ಮಂಗಳೂರು ೨-೫-೧೯೩೧
ಬ್ಯಾಂಕ್ ಆಫ್ ಮಂಗಳೂರು ಲಿ. ಮಂಗಳೂರು ೪-೫-೧೯೩೧
ಕುಂದಾಪುರ ಬ್ಯಾಂಕ್ ಲಿ. ಕುಂದಾಪುರ ೧೩-೮-೧೯೩೨
ಬಿಜಾಪುರ ಟ್ರಿನಿಟಿ ಬ್ಯಾಂಕ್ ಲಿ. ಬಿಜಾಪುರ ೨೯-೮-೧೯೩೨
ಮೈಸೂರು ಯೂನಿಯನ್ ಬ್ಯಾಂಕ್ ಲಿ. ದಾವಣಗೆರೆ ೨೬-೪-೧೯೩೩
ಕಣಿಯರ ಬ್ಯಾಂಕ್ ಲಿ. ಬೆಂಗಳೂರು ೨೬-೪-೧೯೩೩
ತುಳುನಾಡು ಬ್ಯಾಂಕ್‌ಆಫ್ ಸಪ್ಲಾಯ್ ಏಜೆನ್ಸಿ ಲಿ. ಉಡುಪಿ ೨-೧೦-೧೯೩೩
ಜಯಕರ್ನಾಟಕ ಬ್ಯಾಂಕಿಂಗ್ ಎಂಡ್ ಟ್ರೇಡಿಂಗ್ ಕಂಪೆನಿ ಲಿ. ಕಲ್ಯಾಣಪುರ ೨೬-೧೧-೧೯೩೩
ನಟರಾಜ್ ಬ್ಯಾಂಕ್ ಲಿ. ಬೆಂಗಳೂರು ೧೧-೧೨-೧೯೩೩
ಮಲ್ನಾಡ್ ಬ್ಯಾಂಕ್ ಲಿ. ತರೀಕೆರೆ ೨೯-೧೧-೧೯೩೩
ಸೆಂಚುರಿ ಬ್ಯಾಕ್ ಲಿ. ಬೆಂಗಳೂರು ೧೩-೪-೧೯೩೪
ನಗರಕಾರ್ಸ್ ಬ್ಯಾಂಕ್ ಲಿ. ಮಂಗಳೂರು ೨೫-೯-೧೯೩೪
ಅಗ್ರಿಕಲ್ಚರಲ್ ಎಂಡ್ ಇಂಡಸ್ಟ್ರೀಯಲ್ ಬ್ಯಾಂಕ್ ಲಿ. ಕುಂದಾಪುರ ೭-೧೧-೧೯೩೪
ಪೈಮನಿ ಬ್ಯಾಂಕ್ ಪ್ರೈವೇಟ್ ಲಿ. ಮಂಗಳೂರು ೨೧-೧೨-೧೯೩೪
ಮಲ್ನಾಡು ಕಮರ್ಶಿಯಲ್ ಎಂಡ್ ಬ್ಯಾಂಕಿಂಗ್ ಕಾರ್ಪೊರೇಷನ್ ಲಿ. ನರಸಿಂಹರಾಜಪುರ ೧೯೩೪
ಯುನೈಟೆಡ್ ಬ್ಯಾಂಕ್ ಆಫ್ ಕರ್ನಾಟಕ ಲಿ. ಬಾಗಲಕೋಟೆ ೨೩-೧೦-೧೯೩೫
ಶ್ರೀ ಗುರುಗೋವಿಂದ ಸ್ಪೀಸಿ ಬ್ಯಾಂಕ್ ಲಿ. ವಿಜಾಪುರ ೨೯-೧-೧೯೩೬
ಪ್ರೊವಿನ್ಸಿಯಲ್ ಬ್ಯಾಂಕ್ ಆಫ್ ಇಂಡಿಯಾ ಲಿ. ಬೆಂಗಳೂರು ೧೯-೬-೧೯೩೬
ಮೈಸೂರು ಬಾರಾಮಹಲ್ ಗೋಲ್ಕೊಂಡ ಬ್ಯಾಂಕ್ ಲಿ.   ೧೬-೭-೧೯೩೬
ಬಾಹುಸಾರ ಮರ್ಕೆಂಟೈಲ್ ಬ್ಯಾಂಕ್ ಲಿ. ಬೆಂಗಳೂರು ೮-೯-೧೯೩೬
ಬೆಂಗಳೂರು ಕಮರ್ಷಿಯಲ್ ಬ್ಯಾಂಕ್ ಲಿ. ಬೆಂಗಳೂರು ೨೧-೯-೧೯೩೬
ಕಾರ್ಪೊರೇಷನ್ ಬ್ಯಾಂಕ್ ಲಿ. ವಿಜಾಪುರ ೨೧-೧೦-೧೯೩೬
ಬ್ಯಾಂಕ್ ಆಫ್ ಸಿಟಿಜನ್ಸ್ ಲಿ. ಬೆಳಗಾವಿ ೧೩-೧-೧೯೩೭
ಶ್ರೀ ಶಾರದಾ ಬ್ಯಾಂಕಿಂಗ್ ಕಂಪೆನಿ ಲಿ. ರಾಯಚೂರು ೨೩-೧-೧೯೩೭
ಸಿಟಿಜನ್ಸ್ ಬ್ಯಾಂಕ್ ಲಿ. ರಾಬರ್ಟ್ ಸನ್‌ಪೇಟೆ ೧೦-೪-೧೯೩೭
ಸುಪ್ರೀಂ ಬ್ಯಾಂಕ್ ಆಫ್ ಇಂಡಿಯಾ ಲಿ. ಬೆಳಗಾವಿ ೨೭-೫-೧೯೩೯
ಅತ್ತೂರು ಎಂಡ್ ಜವಾಹರ ಬ್ಯಾಂಕ್ ಲಿ. ಮಂಗಳೂರು ೨೯-೬-೧೯೩೯
ರಾಯಲಸೀಮೆ ಬ್ಯಾಂಕ್ ಲಿ. ಬಳ್ಳಾರಿ ೨೫-೧೧-೧೯೩೬
ಕಮರ್ಷಿಯಲ್ ಬ್ಯಾಂಕಿಂಗ್ ಕಂಪೆನಿ ಲಿ. ಯಾದಗಿರಿ ೧೪-೪-೧೯೪೨
ಸದರ್ನ್ ಇಂಡಿಯಾ ಅಪೆಕ್ಸ್ ಬ್ಯಾಂಕ್ ಲಿ. ಉಡುಪಿ ೨೫-೬-೧೯೪೨
ಇಂಡಿಯಾಸ್ ಐಡಿಯಲ್ ಬ್ಯಾಂಕಿಂಗ್ ಕಾರ್ಪೊರೇಷನ್ ಲಿ. ಬೆಂಗಳೂರು ೧೯೪೨
ಮಹಾರಾಷ್ಟ್ರ ಅಪೆಕ್ಸ್ ಬ್ಯಾಂಕ್ ಲಿ. ಉಡುಪಿ ೨೬-೪-೧೯೪೩
ಮೈಸೂರು ಸ್ಟಾಂಡರ್ಡ್ ಬ್ಯಾಂಕ್ ಲಿ. ಬೆಂಗಳೂರು ೨೭-೩-೧೯೪೪
ರಾಮದುರ್ಗ ಬ್ಯಾಂಕ್ ಲಿ. ರಾಮದುರ್ಗ ೧೮-೧೧-೧೯೪೪
ಪ್ರಭಾಕರ ಬ್ಯಾಂಕ್ ಲಿ. ಮೂಡಬಿದ್ರೆ ೨೮-೩-೧೯೪೫
ಬ್ಯಾಂಕ್ ಆಫ್ ಕರ್ನಾಟಕ ಲಿ. ಹುಬ್ಬಳ್ಳಿ ೨೩-೯-೧೯೪೬
ಶ್ರೀ ಜಡೇಯ ಶಂಕರಲಿಂಗ ಬ್ಯಾಂಕ್ ಲಿ. ಬಿಜಾಪುರ ೧೧-೫-೧೯೪೮
ಮಂಡ್ಯ ಬ್ಯಾಂಕ್ ಲಿ ಮಂಡ್ಯ (ಮಾಹಿತಿ ಲಭ್ಯವಿಲ್ಲ)
ಬ್ಯಾಂಕ್ ಆಫ್ ರೂರಲ್ ಇಂಡಿಯಾ ಲಿ. ಕಾರವಾರ (ಮಾಹಿತಿ ಲಭ್ಯವಿಲ್ಲ)
ಧಾರವಾಡ ಬ್ಯಾಂಕ್ ಲಿ ಧಾರವಾಡ (ಮಾಹಿತಿ ಲಭ್ಯವಿಲ್ಲ)
ಮಂಡಯಮ್ ಬ್ಯಾಂಕಿಂಗ್ ಕಂಪನಿ ಲಿ. ಮೈಸುರು (ಮಾಹಿತಿ ಲಭ್ಯವಿಲ್ಲ)
ಉಸ್ಮಾನಿಯಾ ಅಜೀಜ್ ಬ್ಯಾಂಕ್ ಲಿ. ರಾಯಚೂರು (ಮಾಹಿತಿ ಲಭ್ಯವಿಲ್ಲ)

ವಾಣಿಜ್ಯ ಮಂಡಳಿಗಳು

ಬ್ರಿಟಿಷ್ ಕರ್ನಾಟಕದಲ್ಲಿ ವ್ಯಾಪಾರ ಮತ್ತು ವಾಣಿಜ್ಯವನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಹಾಗೂ ಅದಕ್ಕೊಂದು ಭದ್ರ ನೆಲೆಯನ್ನು ಒದಗಿಸುವುದಕ್ಕಾಗಿ ಚೇಂಬರ್ಸ್ ಆರ್ಫ ಕಾಮರ್ಸ್‌ಗಳು (ವಾಣಿಜ್ಯ ಮಂಡಳಿಗಳು) ಅಸ್ತಿತ್ವಕ್ಕೆ ಬಂದವು. ಇವು ಬ್ರಿಟಿಷ್ ಮಾದರಿಯ ಆಧುನಿಕ ವರ್ತಕ ಸಂಘಗಳೆಂಬ ಹೆಗ್ಗಳಿಕೆಯೊಂದಿಗೆ ಆರಂಭಗೊಂಡವು. ಕರ್ನಾಟಕದಲ್ಲಿ ವಸಾಹತು ಪೂರ್ವ ಸಂದರ್ಭದಲ್ಲೂ ಹಲವಾರು ವರ್ತಕ ಸಂಘಗಳಿದ್ದವು. ವಸಾಹತು ಸಂದರ್ಭದಲ್ಲಿ ಯುರೋಪಿನ ಬಂಡವಾಳ ಕೇಂದ್ರಿತ ಹಾಗೂ ವಿದೇಶಿ ವಾಣಿಜ್ಯ ಸಂಪರ್ಕ ಹೊಂದಿದ ವರ್ತಕ ಸಂಘಗಳು ಹುಟ್ಟಿಕೊಂಡವು. ಸ್ಥಳೀಯ ವ್ಯಾಪಾರಸ್ಥರು, ಮಧ್ಯವರ್ತಿಗಳು ಮತ್ತು ಹಣಕಾಸು ವ್ಯವಹಾರ ನಡೆಸುತ್ತಿದ್ದ ಲೇವಾದೇವಿದಾರರು ಬದಲಾದ ಈ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡರು. ಇವರು ಚೇಂಬರ್ಸ್‌ಗಳ ಹುಟ್ಟು ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಯುರೋಪಿನ ಬಂಡವಾಳಶಾಹಿ ವ್ಯವಸ್ಥೆಗೆ ವಿರುದ್ಧವಾಗಿ ಇದು ಕಾರ್ಯನಿರ್ವಹಿಸುವಂತಿರಲಿಲ್ಲ.

ಭಾರತದಲ್ಲಿ ವಾಣಿಜ್ಯ ಮಂಡಳಿಗಳು ಮೊದಲ ಬಾರಿಗೆ ಅಸ್ಥಿತ್ವಕ್ಕೆ ಬಂದಿರುವುದು ೧೮೩೩ರಲ್ಲಿ. ಕಲ್ಕತ್ತಾದಲ್ಲಿನ ಯುರೋಪಿನ ಉದ್ದಿಮೆದಾರರು ಇದರ ಅನಿವಾರ್ಯತೆಯನ್ನು ಮನಗಂಡು ಅಸ್ತಿತ್ವಕ್ಕೆ ತಂದರು. ಆನಂತರ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಲ್ಲಿ ೧೮೩೬ರಲ್ಲಿ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿ ವಾಣಿಜ್ಯ ಮಂಡಳಿಗಳ ಪ್ರಥಮ ಅವಧಿ ೧೮೩೩ರಿಂದ ೧೯೦೫ರ ವರೆಗೆ. ಈ ಅವಧಿಯಲ್ಲಿ ಬ್ರಿಟಿಷ್ ಮತ್ತು ಭಾರತದ ಉದ್ದಿಮೆದಾರರು ಜೊತೆಯಾಗಿ ಹಾಗೂ ಬೇರೆ ಬೇರೆಯಾಗಿ ಮಂಡಳಿಗಳನ್ನು ರಚಿಸಿಕೊಂಡರು. ೧೯೦೫ರಿಂದ ೧೯೪೭ರ ಅವಧಿಯಲ್ಲಿ ಭಾರತೀಯ ಉದ್ದಿಮೆದಾರರೇ ಹೆಚ್ಚಾಗಿ ವಾಣಿಜ್ಯ ಮಂಡಳಿಗಳ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವ ಕೇಂದ್ರೀಯ ಸಂಸ್ಥೆಯೊಂದು ೧೯೨೦ರಲ್ಲಿ ಆರಂಭಗೊಂಡಿತು. ಈ ಸಂಸ್ಥೆಯು ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವುದು, ಬಂದರುಗಳ ಅಭಿವೃದ್ಧಿ ನಡೆಸುವಂತೆ ಸರಕಾರವನ್ನು ಒತ್ತಾಯಿಸುವುದು, ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು ಮುಂತಾದ ವಿಚಾರಗಳ ಕಡೆಗೆ ಗಮನ ಹರಿಸಿತು. ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ನಡೆದ ಎರಡು ಜಾಗತಿಕ ಯುದ್ಧಗಳು ಪ್ರಪಂಚದ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿದವು. ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ಅತಿಯಾದ ತೆರಿಗೆಯಿಂದ ಕಂಗೆಡುವಂತಾಯಿತು. ಅವರಿಗ ಸೂಕ್ತ ಭದ್ರತೆಯೂ ಇಲ್ಲದಂತಾಯಿತು. ಈ ಪರಿಸ್ಥಿತಿಯೂ ವಾಣಿಜ್ಯ ಮಂಡಳಿಗಳು ಚುರುಕುಗೊಳ್ಳುವುದಕ್ಕೆ ಕಾರಣವಾಯಿತು.

ಕರ್ನಾಟಕದ ಪ್ರಮುಖ ಬಂದರು ಪಟ್ಟಣವಾದ ಹಾಗೂ ಬ್ರಿಟಿಷರ ವಿಶೇಷ ಆಧ್ಯತೆಗೆ ಒಳಪಟ್ಟಿದ್ದ ಮಂಗಳೂರಿನಲ್ಲಿ ೧೯೪೦ರಲ್ಲಿ ವಾಣಿಜ್ಯ ಮಂಡಳಿಯು ಸ್ಥಾಪನೆಗೊಂಡಿತು. ಅದನ್ನು ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂದು ಹೆಸರಿಸಲಾಯಿತು. ಮಂಗಳೂರಿನ ಪ್ರಮುಖ ವರ್ತಕ ಸಮುದಾಯಗಳಾದ ಕೊಂಕಣಿಗಳು, ಕ್ರಿಶ್ಚಿಯನ್ನರು, ಗುಜರಾತಿಗಳು ಮತ್ತು ಮುಸ್ಲಿಮರು ಈ ಮಂಡಳಿಯನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮಂಡಳಿಯು ಹೆಚ್ಚಾಗಿ ಕೊಂಕಣಿ ವ್ಯಾಪಾರಸ್ಥರು ಮತ್ತು ಉದ್ದಿಮೆದಾರರ ಹಿಡಿತದಲ್ಲಿಯೇ ಇತ್ತು. ವ್ಯಾಪಾರ ಸಾಮಾಗ್ರಿಗಳು ಮಾರುಕಟ್ಟೆಗಳಿಗೆ ಸಕಾಲದಲ್ಲಿ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಬೆಲೆಗಳಲ್ಲಾಗುತ್ತಿದ್ದ ಏರಿಳಿತಗಳ ಮೇಲೆ ನಿಯಂತ್ರಣ, ಬಡಜನರಿಗೆ ನೆರವಾಗುವಂತೆ ಅಕ್ಕಿ ಮತ್ತು ಬಟ್ಟೆಗಳ ಅಂಗಡಿಗಳನ್ನು ತೆರೆಯುವುದು ಮುಂತಾದ ಕೆಲಸಗಳನ್ನು ಈ ಮಂಡಳಿಯು ಮಾಡಿತು. ಮಂಗಳೂರು ಬಂದರನ್ರನು ಅಭಿವೃದ್ಧಿಪಡಿಸಿ ಉನ್ನತ ದರ್ಜೆಗೇರಿಸುವುದು, ಮಂಗಳೂರು ಮತ್ತು ಹಾಸನ ಮಧ್ಯೆ ರೈಲು ಸಂಪರ್ಕ ಕಲ್ಪಸುವಂತೆ ಸರಕಾರವನ್ನು ಒತ್ತಾಯಿಸುವುದು, ಮಂಗಳೂರಿಗೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಈ ಮುಂತಾದವು ಮಂಡಳಿಯ ಪ್ರಮುಖ ಬೇಡಿಕೆಗಳಾಗಿದ್ದವು.

ಬೆಂಗಳೂರು ವಾಣಿಜ್ಯ ಮಂಡಳಿಯು ೧೯೧೬ರಲ್ಲಿ ಸ್ಥಾಪನೆಗೊಂಡಿತು. ಅದನ್ನು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಎಂಬುದಾಗಿ ಹೆಸರಿಸಲಾಯಿತು. ೧೯೩೮ರಲ್ಲಿ ಮೈಸೂರು ಕಂಪನಿ ಕಾಯಿದೆ ೧೯೩೮ರ ಅಧಿನಿಯಮದಂತೆ ಮೈಸೂರು ವರ್ತಕರ ಸಂಘವು ಅಸ್ತಿತ್ವಕ್ಕೆ ಬಂತು. ಅದು ಲಿಮಿಟೆಡ್ ಕಂಪನಿಯಾಗಿ ಸಂಘಟನೆಗೊಂಡಿತು. ಈ ಸಂಸ್ಥೆಯು ಮೈಸೂರು ಸರಕಾರದ ಕೋರಿಕೆಯಂತೆ ವಾಣಿಜ್ಯ ಕೈಪಿಡಿಯನ್ನು ಸಿದ್ಧಪಡಿಸಿ ಪ್ರಕಟಿಸಿತು. ಈ ಮಂಡಳಿಯು ಅನೇಕ ವಾಣಿಜ್ಯ ಸಂಸ್ಥೆಗಳೊಂದಿಗೆ ನೇರ ಸಂಬಂಧವಿಟ್ಟುಕೊಂಡು ರಾಜ್ಯದ ಕೈಗಾರಿಕೆ ಮತ್ತು ವ್ಯಾಪಾರದ ಅಭಿವೃದ್ಧಿಗೆ ಶ್ರಮಿಸಿತು. ಹುಬ್ಬಳ್ಳಿ ವಾಣಿಜ್ಯ ಮಂಡಳಿಯು ೧೯೨೮ರಲ್ಲಿ ಸ್ಥಾಪನೆಗೊಂಡಿತು. ೧೯೩೮ರಲ್ಲಿ ಮುಂಬಯಿ ಸರಕಾರ ಈ ಮಂಡಳಿಯನ್ನು ಅಂಗೀಕರಿಸಿ ವಿವಿಧ ಶಾಸನಬದ್ಧ ಸಂಸ್ಥೆಗಳಿಗೆ ಮಂಡಳಿಯು ಪ್ರತಿನಿಧಿ ಸ್ಥಾನವನ್ನು ದೊರಕಿಸುವಂತೆ ಶಿಫಾರಸು ಮಾಡಿತು. ಮೊದಲು ಬಾಗಲಕೋಟೆ, ನಂತರ ಗದಗಿನಲ್ಲಿ ಇದ್ದ ಇದರ ಆಡಳಿತ ಕಛೇರಿಯನ್ನು ೧೯೪೮ರಲ್ಲಿ ಹುಬ್ಬಳ್ಳಿಗೆ ವರ್ಗಾಯಿಸಲಾಯಿತು. ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಹುಬ್ಬಳ್ಳಿಗೆ ಈ ಮಂಡಳಿಯ ಅವಶ್ಯಕತೆಯಿತ್ತು. ಕೈಗಾರಿಕೆಗಳು, ವಾಣಿಜ್ಯ ಉದ್ದಿಮೆಗಳು ಮತ್ತು ಅವುಗಳಲ್ಲಿ ತೊಡಗಿದವರ ಸಾಮಾನ್ಯ ಹಿತರಕ್ಷಣೆ ಮಾಡುವುದು ಮತ್ತು ಅವುಗಳ ಅಭಿವೃದ್ಧಿಗೆ ಸಹಾಯಕವಾಗುವ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಮಂಡಳಿಯ ಮುಖ್ಯ ಉದ್ದೇಶವಾಗಿತ್ತು.