ಈಸ್ಟ್ ಇಂಡಿಯಾ ಕಂಪನಿಗೆ ಬೇಕಾಗಿದ್ದದ್ದು ಭಾರತೀಯ ಮಾರುಕಟ್ಟೆ ಹಾಗೂ ಯುರೋಪಿನ ಕೈಗಾರಿಕೆಗಳಿಗೆ ಅಗತ್ಯವಾಗಿದ್ದಂಥ ಕಚ್ಚಾವಸ್ತುಗಳು. ಇದನ್ನು ಗಮನದಲ್ಲಿಟ್ಟುಕೊಂಡು ಬ್ರಿಟಿಷ್ ಸರಕಾರ ತನ್ನ ವ್ಯಾಪಾರ-ವಾಣಿಜ್ಯ ನೀತಿಯನ್ನು ರೂಪಿಸಿತು. ಕೃಷಿಯ ವಾಣಿಜ್ಯೀಕರಣ, ಮಾರುಕಟ್ಟೆ ಕೇಂದ್ರಿತ ಆರ್ಥವ್ಯವಸ್ಥೆಯ ಹುಟ್ಟು ಹಾಗೂ ಆಡಳಿತವನ್ನು ವ್ಯವಸ್ಥಿತಗೊಳಿಸುವ ಬ್ರಿಟಿಷರ ಹೊಸ ಯೋಜನೆಗಳು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವ ಉದ್ದೇಶವನ್ನು ಹೊಂದಿದ್ದವು. ಪರ್ಷಿಯನ್ನರು, ಅರೇಬಿಯನ್ನರು ಮತ್ತು ಯುರೋಪಿಯನ್ನರು ಭಾರತಕ್ಕೆ ಬಂದದ್ದೇ ವ್ಯಾಪಾರಿಗಳಾಗಿ. ಇವರಲ್ಲಿ ಬ್ರಿಟಿಷರನ್ನು ಬಿಟ್ಟು ಮಿಕ್ಕಿದವರು ಯಾರಿಗೂ ವ್ಯಾಪಾರದ ಮೂಲಕ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಾಗಲಿಲ್ಲ. ಬ್ರಿಟಿಷರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಏಕಸ್ವಾಮ್ಯವನ್ನು ಹಾಗೂ ಯಜಮಾನಿಕೆಯನ್ನು ಸ್ಥಾಪಿಸಿಕೊಂಡರು. ವ್ಯಾಪಾರ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವಾಗಿತ್ತು. ಬ್ರಿಟಿಷ್ ವ್ಯಾಪಾರಕ್ಕೆ ಪೂರಕವಾಗುವಂತೆ ಭಾರತವನ್ನು ಸಜ್ಜುಗೊಳಿಸಲಾಯಿತು.

ಕೃಷಿಯ ವಾಣಿಜ್ಯೀಕರಣದಿಂದಾಗಿ ವಾಣಿಜ್ಯ ಬೆಳೆಗಳು ನೇರವಾಗಿ ಮಾರುಕಟ್ಟೆಗಳಿಗೆ ಪ್ರವೇಶಿಸುವಂತಾಯಿತು. ಅನೇಕ ಪೇಟೆ-ಪಟ್ಟಣಗಳು ಬಿರುಸಿನ ವ್ಯಾಪಾರ ಚಟುವಟಿಕೆಗಳ ಕೇಂದ್ರಗಳಾಗಿ ಪರಿವರ್ತನೆಗೊಂಡವು. ವ್ಯಾಪಾರ ಸಾಮಗ್ರಿಗಳ ಸಾಗಾಣಿಕೆಯ ದೃಷ್ಟಿಯಿಂದ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳುಂಟಾದವು. ಅನೇಕ ಹೊಸ ರಸ್ತೆಗಳ ನಿರ್ಮಾಣ, ರೈಲು ಮಾರ್ಗದ ನಿರ್ಮಾಣ, ನದಿ ಮತ್ತು ಸಮುದ್ರದ ಬಳಕೆ ಇವೆಲ್ಲವೂ ವ್ಯಾಪಕವಾಗಿ ನಡೆದವು. ರೈತರ ಮತ್ತು ವರ್ತಕರ ಮಧ್ಯೆ ಕೊಂಡಿಗಳಾಗಿ ವ್ಯವಹರಿಸುವ ಏಜೆಂಟರುಗಳು ಅಥವಾ ಲೇವಾದೇವಿದಾರರ ವರ್ಗವೊಂದು ಹುಟ್ಟಿಕೊಂಡಿತು. ಇವರು ಮಧ್ಯವರ್ತಿಗಳಾಗಿದ್ದು, ಹಣಕಾಸಿನ ನೆರವನ್ನು ಕೃಷಿಕರಿಗೆ ಮತ್ತು ವರ್ತಕರಿಗೆ ಒದಗಿಸುತ್ತಿದ್ದರು. ವ್ಯಾಪಾರಸ್ಥರಿಗೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವವರಿಗೆ ಹಣಕಾಸಿನ ನೆರವನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದ ಬ್ಯಾಂಕುಗಳು ನೀಡಲಾರಂಭಿಸಿದವು. ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ವಣಿಕ ಸಂಘಗಳು ಹುಟ್ಟುಕೊಂಡವು. ಹೀಗೆ ಇವೆಲ್ಲವೂ ಹಂತ ಹಂತವಾಗಿ ಬೆಳೆದು ಬಂದು ವ್ಯಾಪಾರ ಮತ್ತು ವಾಣಿಜ್ಯ ವ್ಯವಸ್ಥಿತವಾಗಿ ನಡೆಯುವಂತೆ ಹಾಗೂ ಲಾಭದಾಯಕವಾಗುವಂತೆ ಆಯಿತು. ಇದರರ್ಥ ಈ ಬದಲಾವಣೆಗಳ ಲಾಭಗಳನ್ನು ಎಲ್ಲರೂ ಪಡೆದುಕೊಂಡರು ಎಂದಲ್ಲ. ಶ್ರೀಮಂತ ವರ್ತಕರು, ಪ್ಲಾಂಟರುಗಳು, ಖಾಸಗಿ ಕಂಪನಿಗಳು ಮತ್ತು ಮಧ್ಯವರ್ತಿಗಳು ಇದರ ಲಾಭವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಂಡರು.

ಬ್ರಿಟಿಷ್ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿಯೂ ಏಕರೂಪದ ಬೆಳವಣಿಗೆಗಳೇನೂ ಕಂಡುಬರಲಿಲ್ಲ. ವಸಾಹತುಪೂರ್ವ ಅವಧಿಯಲ್ಲಿಯೇ ವ್ಯಾಪಾರ ಕೇಂದ್ರಗಳಾಗಿ ಗುರುತಿಸಿಕೊಂಡಿದ್ದ ಕೆಲವು ಪಟ್ಟಣಗಳೂ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿದವು. ಈ ನಿಟ್ಟಿನಲ್ಲಿ ಬಂದರು ಪಟ್ಟಣಗಳನ್ನು ಹೆಸರಿಸಬಹುದಾಗಿದೆ. ಬ್ರಿಟಿಷ್ ಸರಕಾರ ಬಂದರು ಪಟ್ಟಣಗಳಿಗೆ ಆಂತರಿಕ ಮತ್ತು ವಿದೇಶಿ ವ್ಯಾಪಾರದ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿತು. ಅದೇ ರೀತಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮುಂತಾದ ಪಟ್ಟಣಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿ ಬೆಳೆದವು. ನಗರ ಪ್ರದೇಶಗಳಲ್ಲಿ ವಾಸವಾಗಿದ್ದ ನಗರ ಸಮುದಾಯಗಳು ತಮ್ಮ ಬಹುಮುಖಿ ಚಟುವಟಿಕೆಗಳಿಂದ ನಗರಗಳ ವ್ಯಾಪ್ತಿಗೆ ವಿಸ್ತಾರವಾಗುವಂತೆ ಮಾಡಿದವು. ನಗರಗಳು ರಚನಾತ್ಮಕವಾಗಿ ಹಾಗೂ ಕಾರ್ಯಾತ್ಮಕವಾಗಿ ಬೆಳವಣಿಗೆ ಹೊಂದುವಂತಾಯಿತು. ನಗರ ಸಮುದಾಯಗಳು ಹೆಚ್ಚಾಗಿ ತಮ್ಮ ವಾಸಕ್ಕೆ ಪ್ರತ್ಯೇಕ ಪ್ರತ್ಯೇಕವಾದ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಒಂದು ಜಾತಿಯ ಅಥವಾ ಧರ್ಮದ ಜನರು ಒಂದೇ ಕಡೆ ನೆಲೆ ನಿಲ್ಲಲು ಇಷ್ಟಪಡುತ್ತಿದ್ದರು. ಇದಕ್ಕೆ ಅವರ ವ್ಯಾಪಾರದ ಮತ್ತು ಧರ್ಮದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಉದ್ದೇಶವಾಗಿದ್ದಿರಬೇಕು. ಉದಾಹರಣೆಗೆ ಕ್ರಿಶ್ಚಿಯನ್ನರು, ಮುಸ್ಲಿಮರು, ಗುಜರಾತಿಗಳು ಕೊಂಕಣಿಗಳು ಮುಂತಾದವರು ಪ್ರತ್ಯೇಕ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಏಕೆಂದರೆ ವ್ಯಾಪಾರದಲ್ಲಿ ಪರಸ್ಪರ ಪೈಪೋಟಿ ಇತ್ತು. ಆದರೆ ಇದು ಧಾರ್ಮಿಕ ಕಲಹಗಳಿಗೆ ಕಾರಣವಾಗಿದ್ದು ಕಂಡುಬರುವುದಿಲ್ಲ. ಇವರೆಲ್ಲರೂ ವ್ಯಾಪಾರಿ ಸಮುದಾಯಗಳಾಗಿದ್ದರಿಂದ ಸಹಜವಾಗಿಯೇ ಪರಸ್ಪರ ಹೊಂದಾಣಿಕೆಗಳು, ವಿರೋಧಗಳು ಏರ್ಪಡುತ್ತಿದ್ದವು. ಈ ಸಮುದಾಯಗಳು ತಾವು ನೆಲೆ ನಿಂತ ಪ್ರದೇಶಗಳಲ್ಲಿ ತಮ್ಮ ಧರ್ಮಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಹಾಗಾಗಿ ಆ ಪ್ರದೇಶಗಳು ವಾಸದ- ಧಾರ್ಮಿಕ ಕೆಲಸ ಕಾರ್ಯಗಳ ವ್ಯಾಪಾರ ಮತ್ತು ವಾಣಿಜ್ಯದ ಕೇಂದ್ರಗಳಾಗಿಯೂ ಬೆಳೆದವು. ಅನೇಕ ಸಂದರ್ಭಗಳಲ್ಲಿ ಇವರೆಲ್ಲರೂ ಒಂದೇ ಕಡೆ ವ್ಯಾಪಾರ ನಡೆಸುತ್ತಿದ್ದುದೂ ಉಂಟು. ಒಂದೇ ನಗರ ಕೇಂದ್ರದಲ್ಲಿ ಹಲವಾರು ಕೇಂದ್ರಗಳು ಈ ಕಾರಣಗಳಿಂದಾಗಿ ನಿರ್ಮಾಣಗೊಳ್ಳುತ್ತಿದ್ದವು. ಈ ಎಲ್ಲ ವಿಚಾರಗಳನ್ನು ಆಯಾ ಪ್ರದೇಶಕ್ಕನುಗುಣವಾಗಿ ಇಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

ಟಿಪ್ಪು ಸುಲ್ತಾನನ ಆಳ್ವಿಕೆಯ ಸಂದರ್ಭದಲ್ಲಿ ಬ್ರಿಟಿಷ್ ವ್ಯಾಪಾರಸ್ಥರು ಸ್ವತಂತ್ರವಾಗಿ ವ್ಯಾಪಾರ ನಡೆಸುವಂತಿರಲಿಲ್ಲ. ಟಿಪ್ಪು ಬ್ರಿಟಿಷರೊಂದಿಗೆ ಹೊಂದಿದ್ದ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಸರಕಾರಿ ವಾಣಿಜ್ಯ ಇಲಾಖೆಯನ್ನು ರಾಜ್ಯದ ಆಂತರಿಕ ಮತ್ತು ವಿದೇಶಿ ವ್ಯಾಪಾರದ ಅಭಿವೃದ್ಧಿಗಾಗಿ ಸ್ಥಾಪಿಸಿ ಅದರ ಕಾರ್ಯನಿರ್ವಹಣೆಗೆ ಪೂರ್ಣಾಧಿಕಾರದ ಪ್ರತಿನಿಧಿ ಮಂಡಲಿಯನ್ನು ನೇಮಿಸಿದನು. ಪ್ರಮುಖ ನಗರ ಕೇಂದ್ರಗಳಲ್ಲಿ ಸರಕಾರಿ ಸ್ವಾಮ್ಯಕ್ಕೊಳಪಟ್ಟ ಅಂಗಡಿಗಳನ್ನು ತೆರೆದು ಗ್ರಾಹಕರ ಅನುಕೂಲಕ್ಕೆ ಸರಕುಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಈ ಅಂಗಡಿಗಲು ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವುದರ ಜೊತೆಗೆ ಸರಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನು ಸಲ್ಲಿಸುತ್ತಿದ್ದವು. ಗುಜರಾತ್ ರಾಜ್ಯದ ಮುಂಧ್ರ ಮತ್ತು ಮಾಂಡವಿ ನಗರಗಳಲ್ಲಿ, ಸಿಂಧ್‌ನಲ್ಲಿರುವ ಕರಾಚಿ, ಪೂರ್ವ ಏಶ್ಯಾದ ಜೆಡ್ಡಾ ಮತ್ತು ಇತರ ಮುಖ್ಯ ನಗರಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ವಿದೇಶಿ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದನು. ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ತಂಬಾಕು, ಕಬ್ಬಿಣ, ಮೆಣಸು ಮತ್ತು ಶ್ರೀಗಂಧದ ಮರ ಇವು ಸರಕಾರಿ ಸ್ವಾಮ್ಯಕ್ಕೊಳಪಟ್ಟ ವಸ್ತುಗಳಾಗಿದ್ದವು. ಇವುಗಳನ್ನು ಸಾರ್ವಜನಿಕರಿಂದ ಸರಕಾರ ಮಾತ್ರ ಖರೀದಿಸಬೇಕಿತ್ತು. ಟಿಪ್ಪುವಿನ ಈ ನೀತಿ ಬ್ರಿಟಿಷ್ ವರ್ತಕರಲ್ಲಿ ಅಸಮಾಧಾನವನ್ನುಂಟು ಮಾಡಿತು. ಬ್ರಿಟಿಷ್ ವ್ಯಾಪಾರವನ್ನು ಮೈಸೂರು ರಾಜ್ಯದಲ್ಲಿ ಕುಂಠಿತಗೊಳಿಸುವುದು ಹಾಗೂ ಆ ಮೂಲಕ ಆರ್ಥಿಕವಾಗಿ ಅವರಿಗೆ ಹಿನ್ನಡೆಯುಂಟಾಗುವಂತೆ ಮಾಡುವುದು ಟಿಪ್ಪುವಿನ ಉದ್ದೇಶವಾಗಿತ್ತು. ಟಿಪ್ಪುವಿನ ಈ ಪ್ರಯತ್ನಗಳು ಬ್ರಿಟಿಷರಿಗೆ ತಾತ್ಕಾಲಿಕವಾಗಿ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡಿದರೂ, ಅದರಿಂದ ಹೊರಬರಲು ಅವರೇನೂ ಹೆಚ್ಚು ಸಮಯ ಕಾಯಬೇಕಾಗಿರಲಿಲ್ಲ.

ಬ್ರಿಟಿಷ್ ಆಳ್ವಿಕೆಯಲ್ಲಿ ಹತ್ತಿ ಉದ್ಯಮವು ಪಡೆದುಕೊಂಡ ಪ್ರೋತ್ಸಾಹ ಅನೇಕ ಕಾರ್ಖಾನೆಗಳ ಹುಟ್ಟಿಗೆ ಕಾರಣವಾಯಿತು. ಇದು ವ್ಯಾಪಾರದ ಮೇಲೂ ಉತ್ತಮ ಪರಿಣಾಮಗಳನ್ನು ಬೀರಿತು. ಹತ್ತಿ ವ್ಯಾಪಾರ ಲಾಭದಾಯಕವಾಗಿ ಕಂಡುಬಂತು. ಇತರ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ರಬ್ಬರ್ ಮುಂತಾದವುಗಳ ವ್ಯಾಪಾರವೂ ಚುರುಕಿನಿಂದ ಕೂಡಿತ್ತು. ಕೈಗಾರಿಕಾ ಕ್ಷೇತ್ರದಲ್ಲಾದ ಬದಲಾವಣೆಗಳು, ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ವ್ಯಾಪಾರದ ಮೇಲೆ ಪರಿಣಾಮವನ್ನು ಬೀರಿತು. ಇವುಗಳ ನಿರ್ಮಾಣಕ್ಕೆ ಬೇಕಾದ ರೈಲು ಇಂಜಿನುಗಳು, ಯಂತ್ರೋಪಕರಣಗಳು, ಉಕ್ಕು ಮೊದಲಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಗಂಧದ ಎಣ್ಣೆ, ರೇಷ್ಮೆ, ಗಂಧದ ಸಾಬೂನು ಮತ್ತು ರಾಸಾಯನಿಕ ವಸ್ತುಗಳನ್ನ ಮೈಸೂರು ಪ್ರದೇಶದಿಂದಲೂ, ಹಂಚು, ಗೋಡಂಬಿ, ಭತ್ತ, ಮೀನು ಮುಂತಾದವು ಮಂಗಳೂರಿನಿಂದಲೂ, ಹತ್ತಿ, ಹದ ಮಾಡಿದ ಚರ್ಮ, ಎಣ್ಣೆ ಕಾಳುಗಳು ಮುಂಬಯಿ ಕರ್ನಾಟಕ ಪ್ರಾಂತದಿಂದಲೂ, ಕಬ್ಬಿಣದ ಅದುರು ಉತ್ತರ ಕನ್ನಡ ಜಿಲ್ಲೆಯಿಂದಲೂ ರಫ್ತಾಗುತ್ತಿದ್ದವು.

ಹೊಸದಾಗಿ ನಿರ್ಮಾಣಗೊಂಡ ರಸ್ತೆಗಳು, ದುರಸ್ತಿಗೊಂಡ ಹಳೆಯ ರಸ್ತೆಗಳು ಹಾಗೂ ರೈಲು ಮಾರ್ಗದ ನಿರ್ಮಾಣ ವ್ಯಾಪಾರ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಿದವು. ಬೆಂಗಳೂರು, ಮೈಸೂರು, ಅರಸಿಕೆರೆ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಗದಗ, ರಾಯಚೂರು, ಬಾಗಲಕೋಟೆ, ಗುಲ್ಬರ್ಗಾ, ವಿಜಾಪುರ, ಬೆಳಗಾವಿ ಮುಂತಾದ ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ರೈಲು ಸಂಪರ್ಕವನ್ನು ಕಲ್ಪಿಸಲಾಗಿತ್ತು. ಇದರಿಂದಾಗಿ ಮುಂಬಯಿ ಮತ್ತು ಮದರಾಸು ನಗರಗಳಿಗೂ ರೈಲು ಸಂಪರ್ಕ ಬೆಳೆಯುವಂತಾಯ್ತು. ವ್ಯಾಪಾರದ ವಸ್ತುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಗಳಿಗೆ ಹೋಗುವಂತಾಯಿತು. ಪಶ್ಚಿಮ ಘಟ್ಟಗಳಲ್ಲಿ ಹಾದು ಹೋಗುವ, ಹೊಸದಾಗಿ ನಿರ್ಮಾಣಗೊಂಡ ಘಟ್ಟರಸ್ತೆಗಳು ಮೈಸೂರು ಮತ್ತು ಕೊಡಗು ಪ್ರದೇಶಗಳನ್ನು ಕರಾವಳಿಯ ಜಿಲ್ಲೆಗಳೊಂದಿಗೆ ಜೋಡಿಸಿದವು. ಹೀಗಾಗಿ ಬಂದರು ಪಟ್ಟಣಗಳು ಅಭಿವೃದ್ಧಿಯನ್ನು ಹೊಂದುವಂತಾಯಿತು. ಅವೆಲ್ಲವೂ ಬಿರುಸಿನ ವ್ಯಾಪಾರ ಚಟುವಟಿಕೆಯ ಕೇಂದ್ರಗಳಾದವು. ಅನೇಕ ವರ್ತಕ ಸಮುದಾಯಗಳು ನಗರ ಪ್ರದೇಶಗಳಲ್ಲಿಯೇ ನೆಲೆ ನಿಂತು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ತೊಡಗಿಕೊಂಡವು. ಈ ಸಮುದಾಯಗಳು ನಗರ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳಾದ ಸಾರಿಗೆ ಮತ್ತು ಸಂಪರ್ಕ, ಮಾರುಕಟ್ಟೆಗಳು ಮುಂತಾದವುಗಳನ್ನು ಒದಗಿಸುವುದರಲ್ಲಿ ಬ್ರಿಟಿಷ್ ಸರಕಾರಕ್ಕೆ ನೆರವಾದವು. ಅದೇ ರೀತಿ ತಮ್ಮ ವ್ಯಾಪಾರ ಮತ್ತು ಹಣಕಾಸಿನ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನೂ ರಚಿಸಿಕೊಂಡವು.

ಆಮದು ಮತ್ತು ರಫ್ತು ವ್ಯಾಪಾರ

ವಸಾಹತು ಕರ್ನಾಟಕದಲ್ಲಿ ಬೆಂಗಳೂರು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಬೆಂಗಳೂರನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಕರ್ನಾಟಕದ ಎಲ್ಲ ಭಾಗಗಳಿಗೆ ವ್ಯಾಪಾರ ಮಾರ್ಗಗಳು ಹಾದುಹೋಗಿದ್ದವು. ಬೆಂಗಳೂರು ವರ್ತಕರು ಬಿದನೂರು, ಶೃಂಗೇರಿ, ಕೊಪ್ಪ ಮೊದಲಾದ ಸ್ಥಳಗಳಿಂದ ಬೃಹತ್ ಪ್ರಮಾಣದಲ್ಲಿ ಅಡಿಕೆ, ಕರಿಮೆಣಸು, ಶ್ರೀಗಂಧ ಮತ್ತು ಏಲಕ್ಕಿಗಳನ್ನು ತರಿಸಿಕೊಳ್ಳುತ್ತಿದ್ದರು. ಅದಕ್ಕೆ ಬದಲಾಗಿ ಧಾನ್ಯಗಳು, ತಂಬಾಕು, ಹುಣಿಸಿಹಣ್ಣು, ಕಂಬಳಿಗಳು, ಮಸ್ಲಿನ್, ಮುಂಡಾಸುಗಳು, ಬಣ್ಣದ ಹತ್ತಿಬಟ್ಟೆಗಳು ಮತ್ತು ರೇಷ್ಮೆಗಳನ್ನು ಕಳುಹಿಸಿಕೊಡುತ್ತಿದ್ದರು. ಸಗಟು ವ್ಯಾಪಾರವು ಹೆಚ್ಚು ಪ್ರಚುರವಾಗಿದ್ದಿತು. ವ್ಯಾಪಾರಸ್ಥರು ಮಧ್ಯವರ್ತಿಗಳ ಮೂಲಕ ವಿವಿಧ ಭಾಗಗಳ ಸಂತೆಗಳಲ್ಲಿ ಭಾಗವಹಿಸಿ ವ್ಯಾಪಾರ ನಿರ್ವಹಿಸುತ್ತಿದ್ದರು. ಗುಬ್ಬಿ ಮತ್ತು ನೆರೆಯ ಪ್ರದೇಶಗಳಿಂದ ಕರಿಮೆಣಸು, ಅಡಿಕೆ ಮತ್ತು ತೆಂಗಿನಕಾಯಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.

ಬೆಂಗಳೂರು ಮತ್ತು ಮೈಸೂರಿನ ಪಶ್ಚಿಮ ಭಾಗಗಳ ನಡುವೆಯೂ ಗಣನೀಯ ಪ್ರಮಾಣದ ವ್ಯಾಪಾರವು ನಡೆಯುತ್ತಿದ್ದಿತು. ಮುಖ್ಯವಾದ ರಫ್ತು ಸರಕುಗಳು ಅಡಿಕೆ, ಕರಿಮೆಣಸು, ಶ್ರೀಗಂಧ ಮತ್ತು ಏಲಕ್ಕಿ. ಆಮದು ಸರಕುಗಳು ಧಾನ್ಯಗಳು, ತಂಬಾಕು, ಅರಿಶಿನ, ಕಂಬಳಿಗಳು, ಮುಂಡಾಸುಗಳು, ಬಣ್ಣದ ಹತ್ತಿ ಬಟ್ಟೆ ಮತ್ತು ರೇಷ್ಮೆ. ಬಳ್ಳಾರಿ, ಅದೋನಿ, ಧಾರವಾಡ, ಹುಬ್ಬಳ್ಳಿ, ನರಗುಂದ ಮತ್ತು ನವಲಗುಂದಗಳಲ್ಲಿನ ವರ್ತಕರ ಏಜೆಂಟರು ಬೆಂಗಳೂರಿಗೆ ಬರುತ್ತಿದ್ದರು. ಹೈದರಾಬಾದಿನ ನಿಜಾಮನ ಪ್ರದೇಶ ಮತ್ತು ಮರಾಠಾ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದ ಸರಕುಗಳು ಎಕ್ಕದ ಹತ್ತಿ, ಒರಟು ಹತ್ತಿ ಬಟ್ಟೆಗಳು, ಮಸ್ಲಿನ್, ಧೋತ್ರಗಳು, ಕಂಬಳಿಗಳು, ಗೋಧಿ ಮತ್ತು ಕೆಂಪು ರಂಗು ಬೆಂಗಳೂರಿನಿಂದ ಆ ಪ್ರದೇಶಗಳಿಗೆ ಮುಖ್ಯವಾಗಿ ನಗದಾಗಿ ಪ್ರತಿಫಲವು ಹೋಗುತ್ತಿತ್ತು. ಬೆಂಗಳೂರು, ಮೈಸೂರು ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳಿಂದ ವ್ಯಾಪಾರಸ್ಥರು ಮಂಗಳೂರಿಗೆ ಬಿಳುಪು ಮತ್ತು ಬಣ್ಣದ ಹತ್ತಿ ಬಟ್ಟೆಗಳನ್ನು ಕಳುಹಿಸುತ್ತಿದ್ದರು. ಮಂಗಳೂರಿನಿಂದ ಕಚ್ಚಾ ರೇಷ್ಮೆಯನ್ನು ಹಾಗೂ ರೇಷ್ಮೆ ಬಟ್ಟೆಗಳನ್ನು ತರಿಸಿಕೊಳ್ಳುತ್ತಿದ್ದರು.

ಮೈಸೂರು ರಾಜಕೀಯ ಚಟುವಟಿಕೆಗಳ ಕೇಂದ್ರವಾಗುವುದರ ಜೊತೆ ಜೊತೆಗೆ ವ್ಯಾಪಾರ ಕೇಂದ್ರವೂ ಆಗಿತ್ತು. ೧೭೯೯ರಲ್ಲಿ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿದ ಬಳಿಕ ಮೈಸೂರು ವಾಣಿಜ್ಯ ಕೇಂದ್ರವಾಗಿ ಬೆಳೆಯಿತು. ವ್ಯಾಪಾರಸ್ಥರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರಲಾರಂಭಿಸಿದರು ೧೮೩೧ರಲ್ಲಿ ಬ್ರಿಟಿಷ್ ಸರಕಾರ ಮೈಸೂರು ಪಟ್ಟಣವನ್ನು ಅಭಿವೃದ್ಧಿಪಡಿಸಲು ಯೋಜನೆಯೊಂದನ್ನು ರೂಪಿಸಿತು. ಅದಕ್ಕೆ ಸಂಬಂಧಪಟ್ಟಂತೆ ಆಯೋಗವೊಂದನ್ನು ರಚಿಸಲಾಯಿತು. ಮೈಸೂರಿನ ವ್ಯಾಪಾರವನ್ನು ಚುರುಕುಗೊಳಿಸುವುದು, ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಮಿಸುವುದು ಮುಂತಾದ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಯಿತು.

ವ್ಯಾಪಾರ ಮತ್ತು ವ್ಯಾಪಾರಸ್ಥರಿಗೆ ಉತ್ತೇಜನ ನೀಡುವ ಸಲುವಾಗಿ ವಸ್ತುಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಈ ವಸ್ತು ಪ್ರದರ್ಶನದ ಮುಖ್ಯ ಉದ್ದೇಶ ಕುಶಲಕರ್ಮಿಗಳಿಗೆ ಮತ್ತು ಕೃಷಿಕರಿಗೆ ಉತ್ತೇಜನ ನೀಡುವುದು. ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದ್ದ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಪ್ರದರ್ಶನಕ್ಕಿಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ರೇಷ್ಮೆ ಬಟ್ಟೆಗಳು, ಕಂಬಳಿ, ಮಡಕೆಗಳು, ಕೃಷಿಗೆ ಸಂಬಂಧಿಸಿದ ನೇಗಿಲು, ಕತ್ತಿ, ಕೊಡಲಿ ಮುಂತಾದವು ಪ್ರದರ್ಶನಕ್ಕೆ ಬರುತ್ತಿದ್ದ ಪ್ರಮುಖ ವಸ್ತುಗಳು. ೧೮೯೨-೯೩ರಲ್ಲಿ ನಡೆದ ಚಿಕಾಗೊ ವಸ್ತುಪ್ರದರ್ಶನದಲ್ಲಿ ಮೈಸೂರು ಸರಕಾರ ಭಾಗವಹಿಸಿತ್ತು. ಅದೇ ರೀತಿ ೧೯೦೮ರಲ್ಲಿ ನಡೆದ ಫ್ರಾಂಕೋ-ಬ್ರಿಟಿಷ್ ವಸ್ತುಪ್ರದರ್ಶನದಲ್ಲೂ ಮೈಸೂರು ಸರಕಾರ ಭಾಗವಹಿಸಿತ್ತು. ಸರಕಾರದ ಈ ಎಲ್ಲ ಪ್ರಯತ್ನಗಳು ವ್ಯಾಪಾರ ಚಟುವಟಿಕೆ ಚುರುಕುಗೊಳ್ಳುವುದಕ್ಕೆ, ಹೆಚ್ಚೆಚ್ಚು ಜನರು ವ್ಯಾಪಾರದಲ್ಲಿ ತೊಡಗಿಕೊಳ್ಳುವುದಕ್ಕೆ ಹಾಗೂ ಪೇಟೆ-ಪಟ್ಟಣಗಳು ಬಿರುಸಿನ ವ್ಯಾಪಾರ ಕೇಂದ್ರಗಳಾಗುವುದಕ್ಕೆ ಕಾರಣವಾದವು. ಲಿಂಗಾಯಿತರು, ಬಣಜಿಗರು, ಮುಸ್ಲಿಮರು, ಕುಂಚಿಟಿಗರು ಮುಂತಾದವರು ಮೈಸೂರು ಪ್ರದೇಶದ ಪ್ರಮುಖ ವರ್ತಕ ಸಮುದಾಯಗಳಾಗಿದ್ದರು. ಮೈಸೂರಿನ ಸುತ್ತಮುತ್ತಲ ಪ್ರದೇಶಗಳಾದ ಕೊಳ್ಳೆಗಾಲ, ಚಾಮರಾಜನಗರ, ಹುಣಸೂರು, ನಂಜನಗೂಡು, ಕೆ.ಆರ್. ನಗರ ಮುಂತಾದವು ಪ್ರಮುಖ ವ್ಯಾಪಾರ ಕೇಂದ್ರಗಳಾಗಿ ಗುರುತಿಸಿಕೊಂಡವು.

ಮೈಸೂರಿನಿಂದ ರಫ್ತು ಮಾಡಲಾಗುತ್ತಿದ್ದ ಪ್ರಮುಖ ಸರಕುಗಳೆಂದರೆ ಕೃಷಿ ಉತ್ಪನ್ನಗಳಾದ ಅಕ್ಕಿ, ರಾಗಿ, ಜೋಳ, ಹುರುಳಿ, ವೀಳ್ಯದಲೆ, ಎಣ್ಣೆ ಬೀಜಗಳು, ರೇಷ್ಮೆ, ತಂಬಾಕು, ಹತ್ತಿ, ಕಾಫಿ, ಗಂಧದೆಣ್ಣೆ, ಸಕ್ಕರೆ ಮುಂತಾದವು. ಅರಣ್ಯ ಉತ್ಪನ್ನಗಳಾದ ಶ್ರೀಗಂಧ ವಿವಿಧ ಮಾದರಿಯ ಮರಗಳು ; ಚರ್ಮ, ರೇಷ್ಮೆ ನೂಲು, ಕಂಬಳಿಗಳು ಮುಂತಾದವು. ಆಮದು ಮಾಡಿಕೊಳ್ಳಲಾಗುತ್ತಿದ್ದ ವಸ್ತುಗಳೆಂದರೆ ಗೋಧಿ, ಉಪ್ಪು, ಗ್ಯಾಸ್ ವಸ್ತುಗಳು, ಬಟ್ಟೆ, ಲೋಹದ ಸಾಮಗ್ರಿಗಳು ಮುಂತಾದವು.

ಮೈಸೂರು ರಾಜ್ಯದಲ್ಲಿ ನಡೆಯುತ್ತಿದ್ದ ವ್ಯಾಪಾರದಲ್ಲಿ ಶ್ರೀಗಂಧದ ವ್ಯಾಪಾರ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಮೈಸೂರು ಮತ್ತು ಮಲಬಾರುಗಳ ಮೂಲಕ ಪ್ರವಾಸ ಮಾಡಿದ ಪ್ರಾನ್ಸಿಸ್ ಬುಕನನ್ ಶ್ರೀಗಂಧದ ಮರವನ್ನು ಕಡಿಯುತ್ತಿದ್ದುದರ ಕುರಿತು ತನ್ನ ವರದಿಯಲ್ಲಿ ತಿಳಿಸಿದ್ದಾನೆ. ವಿವೇಚನೆಯಿಲ್ಲದೆ ಶ್ರೀಗಂಧದ ಮರವನ್ನು ಕಡಿಯಕೂಡದೆಂಬ ನಿಯಮವನ್ನು ವಿಧಿಸಿ ದೀರ್ಘಕಾಲಿಕ ಗೇಣಿಯ ಮೇಲೆ ಮಧ್ಯವರ್ತಿಗಳಿಗೆ ಶ್ರೀಗಂಧದ ಒದಗಣೆಯ ಕೆಲಸವನ್ನು ವಹಿಸುವುದನ್ನು ಅವನು ಶಿಫಾರಸು ಮಾಡಿದನು. ಶ್ರೀಗಂಧದ ವ್ಯಾಪಾರದಿಂದ ಮೈಸೂರಿನ ಆಡಳಿತಕ್ಕೆ ಅಪಾರ ಲಾಭ ಬಂದಿತು. ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಶ್ರೀಗಂಧದ ಬೆಲೆಯನ್ನು ನಿಯಂತ್ರಿಸಬೇಕೆಂದು ಗವರ್ನರ್ ಜನರಲ್ ವೆಲ್ಲೆಸ್ಲಿಯು ಮೈಸೂರು ಸರಕಾರಕ್ಕೆ ನಿರ್ದೇಶನ ನೀಡಿದನು. ಮೈಸೂರಿನ ಬ್ರಿಟಿಷ್ ರೆಸಿಡೆಂಟನು ಈ ಕುರಿತು ಸೂಕ್ತಕ್ರಮ ತೆಗೆದುಕೊಂಡನು ಮೈಸೂರಿನಿಂದ ಶ್ರೀಗಂಧವು ಮದರಾಸು, ಮಲಬಾರ್ ಮತ್ತು ಕೆನರಾ ಪ್ರಾಂತ್ಯಗಳಿಗೆ ಹೋಗುತ್ತಿತ್ತು. ಶ್ರೀಗಂಧವನ್ನು ಸಂಗ್ರಹಿಸಿಡಲು ಉಗ್ರಾಣಗಳನ್ನು ಸ್ಥಾಪಿಸಲಾಯಿತು. ಕ್ಲೋಸ್‌ಪೇಟೆಯಲ್ಲಿ ಗಂಧದ ಮರವನ್ನು ದಾಸ್ತಾನು ಮಾಡಲು ಒಂದು ಕೇಂದ್ರ ಉಗ್ರಾಣವನ್ನು ಸ್ಥಾಪಿಸುವಂತೆ ತೀರ್ಮಾನಿಸಲಾಯಿತು. ಏಕೆಂದರೆ ಇದು ಆರ್ಥಿಕವಾಗಿ ಬ್ರಿಟಿಷರಿಗೆ ಲಾಭದಾಯಕವಾಗಿತ್ತು. ಶ್ರೀಗಂಧವನ್ನು ಸಂಗ್ರಹಿಸಿಡಲು ಮಂಗಳೂರು, ಬಿದನೂರು, ಮಲಬಾರ್ ಮುಂತಾದ ಪ್ರದೇಶಗಳಲ್ಲಿ ಡಿಪೋಗಳನ್ನು ತೆರೆಯುವ ಪ್ರಯತ್ನಗಳನ್ನು ಬ್ರಿಟಿಷ್ ಸರಕಾರ ಮಾಡಿತ್ತಾದರೂ ಅದು ತುಂಬಾ ವೆಚ್ಚದ್ದು ಮತ್ತು ಕಷ್ಟಕರವಾದದ್ದು ಎನ್ನುವುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು. ಕ್ಲೋಸ್‌ಪೇಟೆಯಿಂದ ಮದರಾಸಿಗೆ ಶ್ರೀಗಂಧವನ್ನು ಅಗ್ಗದ ಬೆಲೆಗೆ ಕಳುಹಿಸಬಹುದಾಗಿತ್ತು. ಮೈಸೂರು ವ್ಯಾಪಾರ ಮಂಡಳಿಯೂ ಇದರ ಪರವಾಗಿತ್ತು.

ಏಲಕ್ಕಿ ವ್ಯಾಪಾರವೂ ಶ್ರೀಗಂಧದಂತೆ ಲಾಭದಾಯಕವಾಗಿದ್ದು, ಅದರ ವ್ಯಾಪಾರಕ್ಕೆ ಸರಕಾರ ಸೂಕ್ತ ಕ್ರಮ ತೆಗೆದುಕೊಂಡಿತು. ಸ್ಥಳೀಯ ವರ್ತಕರಿಗೆ ಇದರ ವ್ಯಾಪಾರದಿಂದ ಹೆಚ್ಚಿನ ಲಾಭವಾಗದಂತೆ ಬ್ರಿಟಿಷ್ ಸರಕಾರ ನೋಡಿಕೊಂಡಿತು. ಏಲಕ್ಕಿ ಮತ್ತು ಶ್ರೀಗಂಧದ ರಹಸ್ಯ ವ್ಯಾಪಾರವನ್ನು ನಿಲ್ಲಿಸಲು ಕಾನೂನು ಕ್ರಮ ತೆಗೆದುಕೊಳ್ಳಲಾಯಿತು. ತಂಬಾಕು ಕಳ್ಳ ಸಾಗಾಣೆದಾರರಿಗೂ ಅತ್ಯುಗ್ರವಾದ ಶಿಕ್ಷೆಯನ್ನು ವಿಧಿಸಲಾಯಿತು. ಮೈಸೂರು ಮತ್ತು ಕೊಡಗುಗಳಿಂದ ತಂಬಾಕು ಬೃಹತ್ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಆದರೆ ಅದು ಕಂಪನಿಯ ಗಮನಕ್ಕೆ ಬಂದಿರಲಿಲ್ಲ. ಬ್ರಿಟಿಷ್ ಸರಕಾರ ಆಯಾ ಪ್ರದೇಶದ ಬ್ರಿಟಿಷ್ ರೆಸಿಡೆಂಟರಿಗೆ ಹೆಚ್ಚಿನ ಅಧಿಕಾರವನ್ನು ನೀಡಿ, ಅವರ ಮೂಲಕವೇ ಕೃಷಿ ಉತ್ಪನ್ನಗಳನ್ನು ತರಿಸಿಕೊಳ್ಳಲಾರಂಭಿಸಿತು. ಬ್ರಿಟಿಷ್ ಸರಕಾರ ಎಲ್ಲ ವಸ್ತುಗಳ ಮೇಲೂ ಏಕಸ್ವಾಮ್ಯವನ್ನು ಹೊಂದಿದ್ದರಿಂದಾಗಿ ಸ್ಥಳೀಯ ರೈತರು ಮತ್ತು ವರ್ತಕರು ಸ್ವತಂತ್ರವಾಗಿ ಯಾವುದೇ ರೀತಿಯ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಷ್ಟಕರವಾಗಿತ್ತು. ಇದು ಸ್ಥಳೀಯ ಜನರಿಗೆ ಅನೇಕ ರೀತಿಯ ಸಮಸ್ಯೆಗಳನ್ನುಂಟು ಮಾಡಿತು. ಇದು ಕಳ್ಳಸಾಗಾಣಿಕೆಗೂ ಕಾರಣವಾಯಿತು. ಬ್ರಿಟಿಷ್ ಸರಕಾರಕ್ಕೆ ಇದು ಅಪರಾಧವಾಗಿ ಕಂಡುಬಂದರೂ ಸ್ಥಳೀಯ ಜನರಿಗೆ ಅನಿವಾರ್ಯವಾಗಿತ್ತು.

ಅಡಿಕೆಯು ನಗರ ಪ್ರದೇಶದಿಂದ ರಫ್ತಾಗುತ್ತಿದದ ಅತ್ಯಂತ ಮುಖ್ಯವಾದ ವಸ್ತುವಾಗಿತ್ತು. ವ್ಯಾಪಾರಸ್ತರು ಅಡಿಕೆಯನ್ನು ಕೊಂಡು ಮೈಸೂರು ರಾಜ್ಯದ ಶ್ರೀರಂಗಪಟ್ಟಣ, ಬೆಂಗಳೂರು, ಶಿವಮೊಗ್ಗ ಮೊದಲಾದ ಸ್ಥಳಗಳಿಗೆ ರಫ್ತು ಮಾಡುತ್ತಿದ್ದರು. ಅಡಿಕೆಯ ಒಟ್ಟು ಹುಟ್ಟುವಳಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ದೂರದ ಸ್ಥಳಗಳಿಂದ ಬಂದ ವರ್ತಕರು ಕೊಂಡುಕೊಳ್ಳುತ್ತಿದ್ದರು. ನಗರದಲ್ಲಿ ಉತ್ಪನ್ನವಾದ ಅಡಿಕೆಗೆ ಹೆಚ್ಚಿನ ಬೇಡಿಕೆಯಿದ್ದಿತು, ಸರಕನ್ನು ಪೂರೈಸಿದಾಗ ಮಾರುಕಟ್ಟೆಯಲ್ಲಿ ಯಾವ ಬೆಲೆಯಿತ್ತೋ ಅದರ ಪ್ರಕಾರ ಅಡಿಕೆಗೆ ಬೆಲೆ ಕಟ್ಟಲಾಗುತ್ತಿತ್ತು. ಅಡಿಕೆಗೆ ಪೂರ್ವದಲ್ಲಿ ಮದರಾಸಿನವರೆಗೂ ಮಾರುಕಟ್ಟೆಯಿದ್ದಿತು. ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಅಡಿಕೆ ತೋಟಗಳು ಕಾಣಿಸಿಕೊಂಡುದರಿಂದ ಅಡಿಕೆಯ ಬೆಲೆ ಕಡಿಮೆಯಾಗತೊಡಗಿತು.

ಮುಂಬಯಿ ಕರ್ನಾಟಕದಲ್ಲಿ ವಿಜಾಪುರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಕಾರವಾರ, ಭಟ್ಕಳ, ಹೊನ್ನಾವರ; ಮುಂತಾದ ಪಟ್ಟಣಗಳು ಪ್ರಮುಖ ವ್ಯಾಪಾರ ಕೆಂದ್ರಗಳಾಗಿದ್ದವು. ವಿಜಾಪುರ ಜಿಲ್ಲೆಯ ವಿಜಾಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಾಗಲಕೋಟೆ, ಬಾದಾಮಿ, ಬೇಲೂರು, ಹುನಗುಂದ, ಬಾಗೇವಾಡಿ ಮುಂತಾದವು ವ್ಯಾಪಾರ ನಡೆಯುವ ಪ್ರದೇಶಗಳಾಗಿದ್ದವು. ಇಂಡಿ ತಾಲ್ಲೂಕಿನಲ್ಲಲಿ ಇಂಡಿ, ತಂಬ, ಚಡಚಾಣ, ಹಲಸಂಗಿಗಳಲ್ಲಿ ಸಂತೆಗಳಾಗುತ್ತಿದ್ದವು. ಅಲ್ಲಿಗೆ ವಸ್ತ್ರ, ಅಕ್ಕಿ, ಕಿರಾಣಿ, ತೆಂಗಿನಕಾಯಿ ಮುಂತಾದ ಸರಕುಗಳನ್ನು ಹೊರಗಿನಿಂದ ತರಲಾಗುತ್ತಿತ್ತು. ಜೋಳ, ಶೆಜ್ಜೆ, ಗೋಧಿ, ಕಡ್ಲೆ, ಅಗಸೆ, ಅರಳೆ ಮುಂತಾದ ವಸ್ತುಗಳನ್ನು ಬೇರೆ ಮಾರುಕಟ್ಟೆಗೂ ಕಳುಹಿಸಲಾಗುತ್ತಿತ್ತು. ಸಿಂದಗಿ ತಾಲ್ಲೂಕಿನ ಸಿಂದಗಿ, ಹಿಪ್ಪರಿಗಿ, ಭಟನೂರು, ಮೋರಟಿಗಿ, ಮಲಘಾಣ, ಆಲಮೇಲ, ಕೋವಾರ, ಗೋಲಗೇರಿ ಪ್ರದೇಶಗಳಲ್ಲಿ ಸಂತೆಗಳಾಗುತ್ತಿದ್ದವು. ರುಮಾಲು, ನೂಲು, ರೇಷ್ಮೆ, ಉಪ್ಪು, ಮೆಣಸು, ಕಬ್ಬಿಣ, ಧಾನ್ಯಗಳು ವ್ಯಾಪಾರಗೊಳ್ಳುತ್ತಿದ್ದ ಪ್ರಮುಖ ವಸ್ತುಗಳು. ವಿಜಾಪುರ ತಾಲೂಕಿನ ವಿಜಾಪುರ, ಕನ್ನೂರು, ಬಬ್ಲಾದ, ಮಮದಾಪುರ, ಶಿಂದಗಿಗಳಲ್ಲಿ ಸಂತೆಗಳಾಗುತ್ತಿದ್ದವು. ಸಂತೆಗಳಲ್ಲಿ ದೇಶಿ ವಸ್ತ್ರ, ಉಪ್ಪು, ಮೆಣಸು, ತೆಂಗಿನಕಾಯಿ, ಧಾನ್ಯ ಮುಂತಾದವು ವ್ಯಾಪಾರಗೊಳ್ಳುತ್ತಿದ್ದವು. ಮುದ್ದೇಬಿಹಾಳ ತಾಲೂಕಿನ ನಾಲತವಾಡ, ತಾಳೀಕೋಟೆ, ಹಿರೇಮುರಾಳ, ಮುದ್ದೇಬಿಹಾಳ, ಢವಳಿಗೆ, ತುಂಬಗಿ ಮುಂತಾದ ಪ್ರದೇಶಗಳಲ್ಲಿ ಸಂತೆಗಳಾಗುತ್ತಿದ್ದವು. ಬಾಗಲಕೋಟೆ ತಾಲೂಕಿನ ಬಾಗಲಕೋಟೆ, ಕಲಾದಗಿಗಳಲ್ಲಿ ಸಂತೆಗಳು ಏರ್ಪಡುತ್ತಿದ್ದವು. ಬಾಗಲಕೋಟೆಯು ವಿಜಾಪುರ ಜಿಲ್ಲೆಯಲ್ಲಿ ಅತಿದೊಡ್ಡ ಪಟ್ಟಣವಾಗಿತ್ತು. ಬಾದಾಮಿ ತಾಲೂಕಿನ ಬಾದಾಮಿ, ಗೋವನಕೊಪ್ಪ, ಹೆಬ್ಬಾಳ, ಕೆರೂರು, ಗುಳೇದಗುಡ್ಡ, ನೀಲಗುಂದ, ಬೇಲೂರು, ಗಜೇಂದ್ರಗಡಗಳಲ್ಲಿ ಸಂತೆಗಳಾಗುತ್ತಿದ್ದವು. ಹುನಗುಂದದ ಕಂದಗಲ್ಲು, ಕರಡಿ ಇಲಕಲ್ಲು, ಗುಡೂರು, ಹುನಗುಂದ, ಕಮತಿಗಿ ಮತ್ತು ಅಮೀನಗಡಗಳಲ್ಲಿ ಸಂತೆಗಳಾಗುತ್ತಿದ್ದವು. ಬಾಗೇವಾಡಿ ತಾಲೂಕಿನ ಸಂತೆಗಳಾಗುತ್ತಿದ್ದ ಪ್ರದೇಶಗಳೆಂದರೆ ಬಾಗೇವಾಡಿ, ಕೊಲ್ಲಾರ, ಗೊಳಸಂಗಿ, ಉಕ್ಕಲಿ, ವಂದಲ, ಮನಗೋಳಿ, ನಿಡಗುಂದ ಮತ್ತು ಹೂವಿನ ಹಿಪ್ಪರಿಗಿ, ಸಂತೆಗಳು ಸೇರುವ ಪ್ರದೇಶಕ್ಕೆ ಸುತ್ತಮುತ್ತಲಿನ ಹಾಗೂ ಹೊರಗಿನ ಪ್ರದೇಶಗಳಿಂದ ವ್ಯಾಪಾರದ ಸರಕುಗಳು ಬರುತ್ತಿದ್ದವು. ಆಮದು ಮತ್ತು ರಫ್ತು ವ್ಯಾಪಾರಗಳೆರಡೂ ಸಂತೆಗಳಲ್ಲಿ ನಡೆಯುತ್ತಿದ್ದವು.

ಬೆಳಗಾವಿಯು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಬೆಳಗಾವಿ ಜಿಲ್ಲೆಯ ಬೆಳಗಾವಿ, ಸಂಪಗಾವಿ, ಖಾನಾಪುರ, ಪರಸಗಡ, ಚಿಕ್ಕೋಡಿ, ಅಥಣಿ ಮತ್ತು ಗೋಕಾವಿ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು. ಬೆಳಗಾವಿ ತಾಲೂಕಿನ ಬೆಳಗಾವಿ, ಬಾಗೇಶ್ವರಿ ಮತ್ತು ಪಾಟನಾ; ಸಂಪಗಾವಿ ತಾಲೂಕಿನ ಸಂಪಗಾವಿ, ಬೈಲಹೊಂಗಲ ಮತ್ತು ಕಿತ್ತೂರು; ಖಾನಾಪುರ ತಾಲೂಕಿನ ಖಾನಾಪುರ ಮತ್ತು ನಂದಗಡ; ಪರಸಗಡ ತಾಲೂಕಿನ ಸವದತ್ತಿ ಮತ್ತು ಮುರಗೋಡ; ಚಿಕ್ಕೋಡಿ ತಾಲೂಕಿನ ನಿಪಾಣಿ ಮತ್ತು ಸಂಕೇಶ್ವರ ಮುಂತಾದ ಪ್ರದೇಶಗಳಲ್ಲಿ ಸಂತೆಗಳು ಸೇರುತ್ತಿದ್ದವು. ಅಕ್ಕಿ, ಧಾನ್ಯ, ವಸ್ತ್ರಗಳು, ಅಡಿಕೆ, ತೆಂಗು, ಏಲಕ್ಕಿ, ಮೆಣಸು, ಸಕ್ಕರೆ, ಉಪ್ಪು, ತುಪ್ಪ ಮುಂತಾದವು ವ್ಯಾಪಾರದ ಪ್ರಮುಖ ಸರಕುಗಳಾಗಿದ್ದವು. ಬೆಳಗಾವಿಗೆ ಗೋವಾದಿಂದ ಉಪ್ಪು, ಮಲಬಾರಿನಿಂದ ಸಂಬಾರ ವಸ್ತುಗಳು, ತೆಂಗಿನಕಾಯಿ, ಕೊಬ್ಬರಿ, ಅಡಿಕೆ ಮತ್ತು ಅಲಂಕಾರದ ವೆನೀಷಿಯನ್ ಬಿಲ್ಲೆಗಳು ಆಮದಾಗಿ ಬರುತ್ತಿದ್ದವು. ರೇಷ್ಮೇ ಕಿರುಮಂಜಿ ಮತ್ತು ಕೆಲವು ಔಷದಿಗಳನ್ನು ಮುಂಬಯಿಯಿಂದಲೂ, ಹಲವು ಬಗೆಯ ಬಟ್ಟೆಗಳನ್ನು ನಾಗಪುರದಿಂದಲೂ ತರಿಸಿಕೊಳ್ಳಲಾಗುತ್ತಿದ್ದಿತು. ಕರ್ನಾಟಕದ ಸುತ್ತಮುತ್ತಲಿಲನ ಪ್ರದೇಶಗಳೊಂದಿಗೂ ಬೆಳಗಾವಿಯು ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಬಳ್ಳಾರಿಯಿಂದ ಜೋರೀ ಎಂಬ ಉತ್ತಮ ದರ್ಜೆಯ ಬಟ್ಟೆಯನ್ನು ಬೆಳಗಾವಿಗೆ ತರಿಸಿಕೊಳ್ಳಲಾಗುತ್ತಿತ್ತು. ಕಿತ್ತೂರು ಮತ್ತು ಹುಬ್ಬಳ್ಳಿಗಳಿಂದ ಹತ್ತಿ ಮತ್ತು ಎಣ್ಣೆ ಬೀಜಗಳು ಬೆಳಗಾವಿಗೆ ಹೋಗುತ್ತಿದ್ದವು. ಕೊಂಕಣದಿಂದ ಸ್ವಲ್ಪಮಟ್ಟಿಗೆ ಕಬ್ಬಿಣವು ಬೆಳಗಾವಿಗೆ ಬರುತ್ತಿದ್ದಿತು. ಬೆಳಗಾವಿಯಿಂದ ಗೋವಾಕ್ಕೆ ಅಕ್ಕಿಯೂ, ಪುಣೆಗೆ ಬಟ್ಟೆಯೂ ಹೋಗುತ್ತಿತ್ತು.

ಧಾರವಾಡವು ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಮುಖ್ಯವಾದ ಮಾರುಕಟ್ಟೆಯಾಗಿತ್ತು. ಅಲ್ಲಿ ಮಾರಾಟವಾಗುತ್ತಿದ್ದ ಪ್ರಮುಖ ವಸ್ತುಗಳೆಂದರೆ ಬಯಲು ಗ್ರಾಮಗಳ ಹತ್ತಿ, ಅಕ್ಕಿ, ಸಕ್ಕರೆ, ಜೋಳ, ಗೋಧಿ, ಮೆಣಸು, ಅಡಿಕೆ, ತೆಂಗು, ತಾಮ್ರ, ಹಿತ್ತಾಳೆ, ತಂಬಾಕು, ವಸ್ತ್ರ ಮುಂತಾದವು. ಧಾರವಾಡ ಜಿಲ್ಲೆಯಲ್ಲಿ ವ್ಯಾಪಾರ ನಡೆಯುತ್ತಿದ್ದ ಹಾಗೂ ಸಂತೆಗಳು ಸೇರುತ್ತಿದ್ದ ಪ್ರಮುಖ ಪ್ರದೇಶಗಳೆಂದರೆ, ಹುಬ್ಬಳ್ಳಿ, ಧಾರವಾಡ, ನವಲಗುಂದ, ಗದಗ, ರಾಣಿಬೆನ್ನೂರು, ಹಾವೇರಿ, ನರಗುಂದ, ಬ್ಯಾಡಗಿ, ಧುಂಡಸಿ ಮುಂತಾದ ಪ್ರದೇಶಗಳು. ಹುಬ್ಬಳ್ಳಿಯು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಹುಬ್ಬಳ್ಳಿ ಪಟ್ಟಣದಲ್ಲಿ ಸುಮಾರು ೭೦೦ ಜನ ವ್ಯಾಪಾರಸ್ಥರು ಇದ್ದರೆಂಬುದು ದಾಖಲೆಗಳಿಂದ ತಿಳಿದುಬರುತ್ತದೆ. ಹುಬ್ಬಳ್ಳಿಗೆ ನೂಲು, ರೇಷ್ಮೆ, ಕಸ್ತೂರಿ, ಸೀಮೆಎಣ್ಣೆ, ಅರಿಶಿಣ, ದೇಶಿ ವಿಲಾಯತೀ ವಸ್ತ್ರ, ಜೀರಿಗೆ, ತೆಂಗಿನಕಾಯಿ, ಕೊಬ್ಬರಿ, ಬೆಲ್ಲ, ಮೆಣಸು, ಅಡಿಕೆ, ಏಲಕ್ಕಿ ಮೊದಲಾದ ವಸ್ತುಗಳನ್ನು ಹೊರಗಿನಿಂದ ತರಲಾಗುತ್ತಿತ್ತು. ಅದೇ ರೀತಿ ಅರಳೆ, ಕುಶಿಬೆ, ಹತ್ತಿಬಟ್ಟೆ, ತಾಮ್ರ, ಬೆಳ್ಳುಳ್ಳಿ, ಈರುಳ್ಳಿ ಮುಂತಾದವುಗಳನ್ನು ಬೇರೆ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿತ್ತು. ಮತ್ತೊಂದು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಗದಗದಲ್ಲಿ ವಿಲಾಯತಿಯ ವಸ್ತ್ರ, ನೂಲು, ರೇಷ್ಮೆ, ಅರಳೆ ಮುಂತಾದ ಸರಕುಗಳು ವ್ಯಾಪಾರಗೊಳ್ಳುತ್ತಿದ್ದವು.

ಮೊದಲು ಮದರಾಸು ಪ್ರಸಿಡೆನ್ಸಿಯ, ಆನಂತರ ಮುಂಬಯಿ ಪ್ರೆಸಿಡೆನ್ಸಿಯ ಆಳ್ವಿಕೆಗೆ ಒಳಪಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ಬಂದರು ಪಟ್ಟಣಗಳನ್ನು ಹೊಂದಿದ್ದರಿಂದಾಗಿ ಆಂತರಿಕವಷ್ಟೇ ಅಲ್ಲದೆ ವಿದೇಶಿ ವ್ಯಾಪಾರದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಈ ಜಿಲ್ಲೆಯ ಬಂದರುಗಳಿಂದ ಹೊರರಾಷ್ಟ್ರಗಳಿಗೆ ಶ್ರೀಗಂಧ, ಏಲಕ್ಕಿ, ಮೆಣಸು, ಅಡಿಕೆ, ಅಕ್ಕಿ, ಫಲಗಳು, ಕಬ್ಬಿಣ, ವಸ್ತ್ರಗಳು ಮುಂತಾದವು ಬಹುಪ್ರಾಚೀನ ಕಾಲದಿಂದಲೇ ಹೋಗುತ್ತಿದ್ದವು. ಹೊನ್ನಾವರ, ಭಟ್ಕಳ, ಕಾರವಾರ ಮುಂತಾದ ಬಂದರುಗಳಿಂದ ಮೆಣಸು, ರೇಷ್ಮೆವಸ್ತ್ರ, ದಂತ, ಮುತ್ತು, ವಜ್ರ, ಮಾಣಿಕ್ಯ ಹರಳುಗಳು ಮುಂತಾದ ಸರಕುಗಳು ಗ್ರೀಸ್, ರೋಮ್, ಈಜಿಪ್ಟ್, ಅರೇಬಿಯಾ, ಟರ್ಕಿ ಮುಂತಾದ ರಾಷ್ಟ್ರಗಳಿಗೆ ಹೋಗುತ್ತಿದ್ದವು. ಹೊರರಾಷ್ಟ್ರಗಳಿಂದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ವೈಢೂರ್ಯ, ಧಡೋತಿಯ ವಸ್ತ್ರ, ಹವಳ, ತವರ, ಸೀಸೆ, ಹಿತ್ತಾಳೆ, ದ್ರಾಕ್ಷಾ ಮಧ್ಯ, ಇಂಗಳೀಕ ಮುಂತಾದವು ಇಲ್ಲಿನ ಬಂದರುಗಳಿಗೆ ಬರುತ್ತಿದ್ದವು. ಪೋರ್ಚುಗೀಸರ ಆಗಮನವಾದ ಬಳಿಕ ಇಲ್ಲಿನ ಬಂದರು ಪಟ್ಟಣಗಳು ಚುರುಕಿನ ವ್ಯಾಪಾರ ಕೇಂದ್ರಗಳಾಗಿ ಕಾಣಿಸಿಕೊಂಡವು.

ಬ್ರಿಟಿಷ್ ಆಳ್ವಿಕೆ ಸ್ಥಾಪನೆಗೊಂಡ ಬಳಿಕ ಬಂದರು ಪಟ್ಟಣಗಳಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಸಾರಿಗೆ ಕ್ಷೇತ್ರದಲ್ಲಾದ ಬದಲಾವಣೆಗಳು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು, ಚುರುಕುಗೊಳ್ಳುವಂತೆ ಮಾಡಿದವು. ಸಮುದ್ರ ವ್ಯಾಪಾರದಲ್ಲಿ ಹಿಂದಿನಿಂದಲೂ ದೊಡ್ಡ ಸಮಸ್ಯೆಯಾಗಿದ್ದದ್ದು ಸಮುದ್ರಗಳ್ಳರ ಹಾವಳಿ. ಬ್ರಿಟಿಷರು ಸಮುದ್ರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಿದ ಮೇಲೆ ಸಮುದ್ರಗಳ್ಳರ ಹಾವಳಿಯು ನಿಂತುಹೋಯಿತು. ಇದರಿಂದಾಗಿ ಹಡಗುಗಳು ದೂರದ ಊರುಗಳಿಗೆ ನಿರಾತಂಕವಾಗಿ ಸಂಚರಿಸುವಂತಾಯಿತು. ಇದರಿಂದಾಗಿ ಆಂತರಿಕ ಮತ್ತು ವಿದೇಶಿ ವ್ಯಾಪಾರಗಳೆರಡೂ ಅಭಿವೃದ್ಧಿ ಕಂಡವು. ತೇಗ, ಶ್ರೀಗಂಧ, ಏಲಕ್ಕಿ, ಮೆಣಸು, ಅಡಿಕೆ, ಅಕ್ಕಿ, ಗೋಧಿ, ಕಡ್ಲೆ, ಅರಳೆ ಮುಂತಾದ ಸರಕುಗಳು ಮುಂಬಯಿ, ರತ್ನಗಿರಿ, ಮೈಸೂರು, ಮುಂತಾದ ಪ್ರದೇಶಗಳಿಗೆ ಹೋಗುತ್ತಿದ್ದವು. ಹೊರಗಿನಿಂದ ವಿಲಾಯತಿಯ ವಸ್ತ್ರ, ದೇಶಿವಸ್ತ್ರ, ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳೆ, ಬಳೆಗಳು, ಕಬ್ಬಿಣ ಮುಂತಾದ ಸರಕುಗಳು ಬರುತ್ತಿದ್ದವು.

ಉತ್ತರ ಕನ್ನಡ ಜಿಲ್ಲೆಯ ಸಮುದ್ರ ತೀರದ ವ್ಯಾಪಾರ ಕೇಂದ್ರಗಳಲ್ಲಿ ಕಾರವಾರ ತಾಲೂಕಿನ ಕಾರವಾರ, ಸದಾಶಿವಘಡ, ಚಂಡಿಯಾ ಮತ್ತು ಬಂಘಿ; ಅಂಕೋಲಾ ತಾಲೂಕಿನ ಅಂಕೋಲಾ, ಬೆಲೀಕೇರಿ ಮತ್ತು ಗಂಗಾವಳಿ; ಕುಮಟಾ ತಾಲೂಕಿನ ಕುಮಟಾ, ತದಡಿ ಮತ್ತು ಗೋಕರ್ಣ; ಹೊನ್ನಾವರ ತಾಲೂಕಿನ ಹೊನ್ನಾವರ, ಮಂಕಿ, ಮುರಡೇಶ್ವರ, ಶಿರಾಳಿ ಮತ್ತು ಭಟ್ಕಳ ಮುಖ್ಯವಾದವು. ಸಮುದ್ರತೀರದ ಪಟ್ಟಣಗಳಲ್ಲಿ ಸಣ್ಣ ಮತ್ತು ದೊಡ್ಡ ನಾವೆಗಳ ಮೂಲಕ ವ್ಯಾಪಾರ ನಡೆಯುತ್ತಿತ್ತು. ಘಟ್ಟದ ಮೇಲಿನ ಪ್ರದೇಶಗಳಲ್ಲೂ ವ್ಯಾಪಾರ ನಡೆಯುತ್ತಿತ್ತು. ಅವುಗಳಲ್ಲಿ ಸುಪೆ ತಾಲೂಕಿನ ಯಲ್ಲಾಪುರ, ಮುಂಡಗೋಡ, ಮಳಿಗಿ ಮತ್ತು ಪಾಳೆ; ಶಿರಸಿ ತಾಲೂಕಿನ ಶಿರಸಿ ಮತ್ತು ಬನವಾಸಿ; ಸಿದ್ಧಾಪುರ ತಾಲೂಕಿನ ಸಿದ್ಧಾಪುರ ಗೆರಸಪ್ಪೆ ಮತ್ತು ಬೀಳಗಿ ಮುಖ್ಯವಾದವು.

ಮುಂಬಯಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದವು. ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ವಿವಿಧ ವಸ್ತುಗಳ ವ್ಯಾಪಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿತ್ತು. ಜಾತ್ರೆಗಳ ಸಂದರ್ಭದಲ್ಲಿ ಸಂತೆಗಳು ಏರ್ಪಡುತ್ತಿದ್ದವು. ದೊಡ್ಡ ಪ್ರಮಾಣದಲ್ಲಿ ಸರಕುಗಳ ಆಮದು ಮತ್ತು ರಫ್ತು ವ್ಯಾಪಾರ ನಡೆಯುತ್ತಿತ್ತು. ಮುಂಬಯಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರಮುಖ ಜಾತ್ರೆಗಳೆಂದರೆ ವಿಜಾಪುರ ಜಿಲ್ಲೆಯ ಇಲಕಲ್ಲಿನ ಸಂಗಮದ ಜಾತ್ರೆ ಮತ್ತು ಗಜೇಂದ್ರಗಡ ಜಾತ್ರೆ; ಬೆಳಗಾವಿಯ ಸಂಕೇಶ್ವರ, ಯೆಡೂರ ಮತ್ತು ಉಗರಗೋಳ್ಳದ ಜಾತ್ರೆಗಳು; ಧಾರವಾಡ ಜಿಲ್ಲೆಯ ಯಮನೂರು, ಗುಡ್ಡ ಮತ್ತು ಹುಲಗೂರುಗಳಲ್ಲಿನ ಜಾತ್ರೆಗಳು; ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಶಿರಸಿ ಮತ್ತು ಉಳವಿಯ ಜಾತ್ರೆಗಳು. ಜಾತ್ರೆಗಳು ನಡೆಯುವ ಪ್ರದೇಶಗಳಿಗೆ ಕೃಷಿಕರು ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ನೇರವಾಗಿ ಇಲ್ಲವೆ ಮಧ್ಯವರ್ತಿಗಳ ಮೂಲಕ ತರುತ್ತಿದ್ದರು. ವ್ಯಾಪಾರಸ್ಥರು ಕೃಷಿಕರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಮಾರಾಟ ಮಾಡುತ್ತಿದ್ದರು. ಕುಶಲಕರ್ಮಿಗಳು ತಾವು ಉತ್ಪಾದಿಸಿದ ವಸ್ತುಗಳನ್ನು ಕೆಲವು ಸಂದರ್ಭಗಳಲ್ಲಿ ತಾವೇ ನೇರವಾಗಿ ಮಾರಾಟ ಮಾಡುತ್ತಿದ್ದರು. ವರ್ತಕರು, ಕುಶಲಕರ್ಮಿಗಳ ಉತ್ಪನ್ನಗಳನ್ನು ಖರೀದಿಸುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯವರ್ತಿಗಳ ಪ್ರವೇಶವೂ ಇರುತ್ತಿತ್ತು.

ಮದರಾಸು ಪ್ರೆಸಿಡೆನ್ಸಿಯ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪಾರದ ದೃಷ್ಟಿಯಿಂದ ಕರ್ನಾಟಕದಲ್ಲೇ ಮಹತ್ವದ ಸ್ಥಾನವನ್ನು ಪಡೆದುಕೊಂಡಿತ್ತು. ಇದಕ್ಕೆ ಕಾರಣ ಬಂದರು ಪಟ್ಟಣವಾದ ಮಂಗಳೂರು ಪ್ರಾಚೀನ ಕಾಲದಿಂದಲೇ ವ್ಯಾಪಾರದ ಕೇಂದ್ರವಾಗಿ ಹಾಗೂ ಬಂದರು ಪಟ್ಟಣವಾಗಿ ಗುರುತಿಸಿಕೊಂಡಿತು. ಮೈಸೂರು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ಯುದ್ಧದಲ್ಲಿ ಮಂಗಳೂರನ್ನು ಕೇಂದ್ರ ಬಿಂದುವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಸ್ವಂತ ನೌಕಾ ನೆಲೆಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿದ್ದರು. ಅದೇ ರೀತಿ ಮಂಗಳೂರಿನ ಮೂಲಕ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಅಂತಿಮವಾಗಿ ಬ್ರಿಟಿಷರು ಈ ಬಂದರು ಪಟ್ಟಣವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ವಸಾಹತು ಆಳ್ವಿಕೆಯಲ್ಲಿ ಮಂಗಳೂರು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯದ ಕೇಂದ್ರವಾಗಿ ಬೆಳೆಯಿತು. ಅದರಲ್ಲಿ ಬ್ರಿಟಿಷರ ಸ್ವಾರ್ಥವೂ ಸೇರಿಕೊಂಡಿತ್ತು. ಬ್ರಿಟಿಷರ ಸಾಮ್ರಾಜ್ಯವನ್ನು ಕಟ್ಟುವ ಹಾಗೂ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಉದ್ದೇಶಗಳಿಗೆ ಮಂಗಳೂರು ಬಳಕೆಯಾಯಿತು. ಘಟ್ಟ ರಸ್ತೆಗಳ ನಿರ್ಮಾಣ, ಹಳೆಯ ರಸ್ತೆಗಳ ದುರಸ್ತಿ, ರೈಲು ಮಾರ್ಗದ ನಿರ್ಮಾಣ ಮುಂತಾದವು ಮಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪಟ್ಟಣಗಳು ಅಭಿವೃದ್ಧಿ ಹೊಂದುವಂತೆ ಮಾಡಿದವು. ಈ ಅಭಿವೃದ್ಧಿಯ ಲಾಭವನ್ನು ಬ್ರಿಟಿಷ್ ವರ್ತಕರು, ಸ್ಥಳೀಯ ಶ್ರೀಮಂತ ಭೂಮಾಲೀಕರು ಮತ್ತು ವರ್ತಕರು, ಮಧ್ಯವರ್ತಿಗಳು ಮುಂತಾದವರು ಪಡೆದುಕೊಂಡರು, ನಗರಾಭಿವೃದ್ಧಿಯಲ್ಲಿ ಅದು ಮಹತ್ವದ ಪಾತ್ರವನ್ನು ವಹಿಸಿದ್ದಂತೂ ನಿಜ.

ಮಂಗಳೂರು ಪಟ್ಟಣವು ಉತ್ತರ ಕನ್ನಡ, ಮೈಸೂರು, ಕೊಡಗು, ಮದರಾಸು, ಮುಂಬಯಿ, ಮರಾಠ ರಾಜ್ಯಗಳು ಮತ್ತು ಮಲಬಾರಿನೊಂದಿಗೆ ಆಂತರಿಕ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಅದೇ ರೀತಿ ಟಿಪ್ಪು ಸುಲ್ತಾನನ ಆಳ್ವಿಕೆಯ ಸಂದರ್ಭದಲ್ಲಿಯೇ ಮಂಗಳೂರು ಪೆಗು, ಚೀಣಾ, ಮಸ್ಕತ್, ಟರ್ಕಿ, ಆರ್ಮೇನಿಯಾ, ಒಮಾನ್ ಮುಂತಾದ ಹೊರರಾಷ್ಟ್ರಗಳಿಂದ ವ್ಯಾಪಕ ಸಂಪರ್ಕವನ್ನು ಹೊಂದಿತ್ತು. ಅಕ್ಕಿ, ಶ್ರೀಗಂಧ, ಗಂಧದೆಣ್ಣೆ, ಕರಿಮೆಣಸು, ಏಲಕ್ಕಿ, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ದಂತ, ಹತ್ತಿ, ಮರಮಟ್ಟು, ಉಪ್ಪು ಮುಂತಾದ ವಸ್ತುಗಳನ್ನು ಮಂಗಳೂರಿನಿಂದ ರಫ್ತು ಮಾಡಲಾಗುತ್ತಿತ್ತು. ಮಂಗಳೂರಿಗೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಸರಕುಗಳೆಂದರೆ ವಿವಿಧ ಮಾದರಿಯ ರೇಷ್ಮೆ ವಸ್ತ್ರಗಳು, ತಾಮ್ರ, ವಜ್ರ, ಹರಳುಗಳು, ಹತ್ತಿ ಬಟ್ಟೆಗಳು, ಒಣಗಿದ ಹಣ್ಣುಗಳು, ಸಾಂಬಾರು ಪದಾರ್ಥಗಳು, ತಂಬಾಕು, ಕುದುರೆಗಳು ಮುಂತಾದವು. ಮಂಗಳೂರಿನ ಒಳನಾಡುಗಳಲ್ಲಿ ಬೆಳೆಯಲಾಗುತ್ತಿದ್ದ ಅಕ್ಕಿ, ಅಡಿಕೆ, ತೆಂಗು, ಏಲಕ್ಕಿ, ಕಾಫಿ, ವೀಳ್ಯದೆಲೆ ಮುಂತಾದವು ಮಂಗಳೂರು ಮಾರುಕಟ್ಟೆಗೆ ಬರುತ್ತಿದ್ದವು.

ಮಂಗಳೂರಿಗೆ ಸಮುದ್ರದ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದ್ದ ಸರಕುಗಳಲ್ಲಿ ಕಬ್ಬಿಣ, ತಾಮ್ರ, ತವರ ಬೇರೆ ಬೇರೆ ವಿಧದ ಕಾಗದಗಳು, ಲೇಖನ ಸಾಮಗ್ರಿಗಳು, ಗ್ಲಾಸ್‌ಗಳು, ವೈನ್, ಒಣಗಿದ ಹಣ್ಣುಗಳು, ಒಣಗಿದ ಮೀನು, ಮೀನಿನ ಎಣ್ಣೆ, ರೇಷ್ಮೆ, ಹತ್ತಿ ಮುಖ್ಯವಾದವು. ಸಮುದ್ರದ ಮೂಲಕ ರಫ್ತು ಮಾಡಲಾಗುತ್ತಿದ್ದ ಸರಕುಗಳೆಂದರೆ ಅಕ್ಕಿ, ತೆಂಗು, ವೀಳ್ಯದೆಲೆ, ಕರಿಮೆಣಸು, ಏಲಕ್ಕಿ, ಶ್ರೀಗಂಧ, ತೆಂಗಿನೆಣ್ಣೆ, ಕಾಫಿ, ಬೀಟೆಮರ ಮುಂತಾದವು.

ರಫ್ತು ಮಾಡಲಾಗುತ್ತಿದ್ದ ವಸ್ತುಗಳಲ್ಲಿ ಅಕ್ಕಿ ಪ್ರಮುಖವಾದದ್ದು. ಮಂಗಳೂರಿನಿಂದ ಅಕ್ಕಿಯನ್ನು ಮಸ್ಕತ್, ಗೋವಾ, ಮುಂಬಯಿ ಮತ್ತು ಮಲಬಾರಿಗೆ ರಫ್ತು ಮಾಡಲಾಗುತ್ತಿತ್ತು. ಹತ್ತಿ ವ್ಯಾಪಾರದಲ್ಲಿ ಮಂಗಳೂರು ಮುಂಬಯಿಯೊಂದಿಗೆ ನೇರ ಸಂಪರ್ಕವನ್ನು ಸಾಧಿಸಿತು. ಅಮೆರಿಕಾದ ಆಂತರಿಕ ಕಲಹದ ಸಂದರ್ಭದಲ್ಲಿ ಹತ್ತಿ ಪೂರೈಕೆಯಲ್ಲಿ ವ್ಯತ್ಯಯಗಳುಂಟಾದಾಗ ಮಂಗಳೂರು ಪಟ್ಟಣವು ಇಂಗ್ಲೆಂಡ್ ಮತ್ತು ಮುಂಬಯಿ ನಡುವಿನ ಹತ್ತಿ ವ್ಯಾಪಾರವನ್ನು ಗಟ್ಟಿಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿತು. ಕರ್ನಾಟಕದ ಅನೇಕ ಪಟ್ಟಣಗಳು ಮಂಗಳೂರಿನ ಮೂಲಕ ವ್ಯಾಪಾರದ ಸರಕುಗಳನ್ನು ತರಿಸಿಕೊಳ್ಳುತ್ತಿದದವು. ಮಂಗಳೂರಿಗೆ ಆಮದಾಗುವ ವಸ್ತುಗಳು ಅಲ್ಲಿಂದ ಬೇರೆ ಪ್ರದೇಶಗಳಿಗೆ ರಫ್ತಾಗುತ್ತಿದ್ದವು. ಉದಾಹರಣೆಗೆ, ಮುಂಬಯಿಯಿಂದ ಮಂಗಳೂರಿಗೆ ಆಮದಾಗುತ್ತಿದ್ದ ಹತ್ತಿ ಬಟ್ಟೆಗಳು ಮಂಗಳೂರಿನಿಂದ ಮೈಸೂರು ಮತ್ತು ಕೊಡಗಿಗೆ ರಫ್ತಾಗುತ್ತಿದ್ದವು. ಚೀಣಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ತೆಂಗಿನೆಣ್ಣೆಯನ್ನು ಮುಂಬಯಿಗೆ ಹಾಗೂ ಅಲ್ಲಿಂದ ಇಂಗ್ಲೆಂಡಿಗೆ ರಫ್ತು ಮಾಡಲಾಗುತ್ತಿತ್ತು.

ಮಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳಾದ ಬಂಟ್ವಾಳ, ಉಪ್ಪಿನಂಗಡಿ, ಪಾಣೆ ಮಂಗಳೂರು, ಪುತ್ತೂರು, ಮೂಡಬಿದರೆ, ಮೂಲ್ಕಿ, ಈಗಿನ ಕೇರಳ ರಾಜ್ಯದ ಕಾಸರಗೋಡು ಮುಂತಾದವು ವ್ಯಾಪಾರ ಕೇಂದ್ರಗಳಾಗಿದ್ದವು. ಬಂಟ್ವಾಳವು ಉಪ್ಪು, ಅಕ್ಕಿ ಮತ್ತು ಕಾಫಿ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ (ಈಗಿನ ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳನ್ನು ಸೇರಿಸಿಕೊಂಡಂತೆ) ಬಂದರು ಪಟ್ಟಣಗಳೂ ಕರ್ನಾಟಕದ ನಗರ ವ್ಯವಸ್ಥೆಯ ಮೇಲೆ ಮಹತ್ತರವಾದ ಪರಿಣಾಮಗಳನ್ನು ಬೀರಿದವು. ಅವು ಅವುಗಳ ಸುತ್ತಮುತ್ತಲಿನ ಪ್ರದೇಶಗಳ ಪೇಟೆ-ಪಟ್ಟಣಗಳು ಅಭಿವೃದ್ಧಿಯನ್ನು ಹೊಂದುವಂತೆ ಮಾಡಿದವು. ಅದೇ ರೀತಿ ಆಂತರಿಕ ಮತ್ತು ಸಮುದ್ರದಾಚೆಯ ವ್ಯಾಪಾರದಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸಿದವು. ಕಾರವಾರ, ಸದಾಶಿವಘಡ, ಆಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಬಸ್ರೂರು, ಬಾರ್ಕೂರು, ಕಲ್ಯಾಣಪುರ, ಬ್ರಹ್ಮಾವರ, ಮಲ್ಪೆ, ಉಡುಪಿ, ಕಾಪು, ಮುಲ್ಕಿ, ಮಂಗಳೂರು, ಉಳ್ಳಾಲ, ಮಂಜೇಶ್ವರ, ಕುಂಬಳೆ ಮತ್ತು ಕಾಸರಗೋಡು ಸಮುದ್ರತೀರದ ಸಣ್ಣ ಹಾಗೂ ದೊಡ್ಡ ಪಟ್ಟಣಗಳು. ಈ ಎಲ್ಲ ಪಟ್ಟಣಗಳಲ್ಲಿ ವ್ಯಾಪಾರ ಪ್ರಮುಖ ಚಟುವಟಿಕೆಯಾಗಿತ್ತು. ಕರ್ನಾಟಕದ ನಗರೀಕರಣ ಪ್ರಕ್ರಿಯೆಯಲ್ಲಿ ಈ ಬಂದರು ಪಟ್ಟಣಗಳ ಪಾತ್ರ ಮಹತ್ವದ್ದಾದರೂ, ಅವುಗಳ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿಲ್ಲ.

ಮದರಾಸು ಪ್ರಸಿಡೆನ್ಸಿಯ ಭಾಗವಾಗಿದ್ದ ಬಳ್ಳಾರಿ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಇಲ್ಲಿ ಬೆಳೆಯುತ್ತಿದ್ದ ಭತ್ತ, ರಾಗಿ, ಜೋಳ, ತಂಬಾಕು, ಎಣ್ಣೆ ಬೀಜಗಳು, ಹತ್ತಿ, ತುಪ್ಪ, ತೆಂಗಿನಕಾಯಿ, ಸಕ್ಕರೆ, ಉಪ್ಪು, ಬೆಲ್ಲ, ಮೆಣಸು ಮುಂತಾದವುಗಳನ್ನು ಬ್ರಿಟಿಷರು ರಫ್ತು ಮಾಡುತ್ತಿದ್ದರು. ಅಫೀಮು, ಯಂತ್ರೋಪಕರಣ, ಕಬ್ಬಿಣ, ಚಿನ್ನ, ಸಿಮೆಂಟ್, ಪೇಪರ್, ರೈಲ್ವೆಗೆ ಬೇಕಾದ ಉಪಕರಣಗಳು ಮುಂತಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಳ್ಳಾರಿ ಮತ್ತು ಹೈದರಾಬಾದ್ ಪ್ರದೇಶಗಳಲ್ಲಿ ಹತ್ತಿಯನ್ನು ಬೆಳೆದು ಇಂಗ್ಲೆಂಡ್‌ಗೆ ರಫ್ತು ಮಾಡಲಾಗುತ್ತಿತ್ತು.

ಕೊಡಗು ೧೮೩೪ರಲ್ಲಿ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟ ನಂತರ, ಮುಕ್ತ ವ್ಯಾಪಾರ ಮತ್ತು ಮುಕ್ತ ಮಾರುಕಟ್ಟೆಯ ನೀತಿಯಿಂದ ಕೊಡಗಿನ ಆಮದು ಮತ್ತು ರಫ್ತು ವ್ಯಾಪಾರ ಚಟುವಟಿಕೆಗಳು ಉತ್ತೇಜನಗೊಂಡವು. ಪಶ್ಚಿಮ ಕರಾವಳಿಯ ಮೂಲಕ ಕೊಡಗಿನಿಂದ ರಫ್ತಾಗುವ ಮತ್ತು ಕೊಡಗಿಗೆ ಆಮದಾಗುವ ಎಲ್ಲ ಮಾರಾಟ ವಸ್ತುಗಳನ್ನು ಆಮದು ರಫ್ತು ಸುಂಕದಿಂದ ಮುಕ್ತಗೊಳಿಸಲಾಯಿತು. ಸುಧಾರಣೆಗೊಂಡ ಸಂಚಾರ ಸೌಲಭ್ಯ, ವೃದ್ಧಿಸುತ್ತಿರುವ ವ್ಯಾಪಾರ ವಹಿವಾಟುಗಳು, ಹೆಚ್ಚುತ್ತಿರುವ ಹಣದ ಬಳಕೆ ಮುಂತಾದವುಗಳು ದೂರದ ಊರಿನ ಲೇವಾದೇವಿಗಾರರು, ಗಿರವಿದಾರರು ಕೊಡಗಿನ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಬಂದು ನೆಲೆ ನಿಲ್ಲಲು ಸಹಾಯಕವಾದವು. ಮಡಿಕೇರಿ ಮತ್ತು ವೀರರಾಜಪೇಟೆ ಕೊಡಗಿನ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು. ಸೋಮವಾರಪೇಟೆ ಮತ್ತು ಕೊಡಲಿಪೇಟೆಗಳಲ್ಲೂ ವ್ಯಾಪಾರ ನಡೆಯುತ್ತಿತ್ತು. ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಅಮ್ಮತ್ತಿ ಮತ್ತು ಸಿದ್ಧಾಪುರಗಳಲ್ಲಿ ಹಾಗೂ ಉತ್ತರ ಕೊಡಗಿನ ಸುಂಟಿಕೊಪ್ಪ ಮತ್ತು ಶನಿವಾರಸಂತೆಗಳಲ್ಲಿ ವಾರದ ಸಂತೆಗಳು ನಡೆಯುತ್ತಿದ್ದವು. ಸಣ್ಣ ಪ್ರಮಾಣದ ಸಂತೆಗಳು ಕುಶಾಲನಗರ, ಪೊನ್ನಂಪೇಟೆ, ನಾಪೋಕ್ಲು, ಭಾಗಮಂಡಲ ಮತ್ತು ಮೂರ್ನಾಡುಗಳಲ್ಲಿ ನಡೆಯುತ್ತಿತ್ತು.

ಕೊಡಗು ಭತ್ತದ ಬೆಳೆಗೆ ಆರಂಭದಿಂದಲೂ ಪ್ರಸಿದ್ಧವಾಗಿತ್ತು. ಇಲ್ಲಿನ ಹೆಚ್ಚುವರಿ ಭತ್ತವು ಕೇರಳ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರಫ್ತಾಗುತ್ತಿತ್ತು. ಪ್ರಾನ್ಸಿಸ್ ಬುಕನನ್ ೧೮೦೧ರಲ್ಲಿ ವರದಿ ಮಾಡಿರುವಂತೆ ವಾರ್ಷಿಕ ಸುಮಾರು ಐದಾರು ಸಾವಿರ ಹೇರು ಪ್ರಮಾಣದ ಕೊಡಗಿನ ಭತ್ತ ಪಿರಿಯಾಪಟ್ಟಣದ ಸುಂಕದಕಟ್ಟೆಯ ಮೂಲಕ ಹಾದುಹೋಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಆ ಕಡೆಯಿಂದ ಒಣ ಧಾನ್ಯಗಳು, ಬಟ್ಟೆ, ತುಪ್ಪ, ಖಾದ್ಯತೈಲ, ಬೆಲ್ಲ, ಬೆಳ್ಳುಳ್ಳಿ, ವೀಳ್ಯದೆಲೆ, ಕಬ್ಬಿಣ ಮತ್ತು ಉಕ್ಕು, ಕಂಬಳಿ ಮತ್ತು ಹುಣಸೇಹಣ್ಣು ಆಮದಾಗುತ್ತಿದ್ದವು. ಭತ್ತದ ನಂತರ ಕೊಡಗಿನ ಮುಖ್ಯ ವಾಣಿಜ್ಯ ಬೆಳೆ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ರಬ್ಬರ್ ಇವು ಇನ್ನಿತರ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು ವ್ಯಾಪಾರದ ಪ್ರಮುಖ ಸರಕುಗಳಾಗಿದ್ದವು. ಕೊಡಗಿನ ಪ್ರಮುಖ ಆಮದು ವಸ್ತುಗಳೆಂದರೆ ಗ್ರಾಹಕರಿಗೆ ಬೇಕಾಗುವ ನಿತ್ಯ ಬಳಕೆಯ ಗೃಹ ಉಪಯೋಗಿ ವಸ್ತುಗಳಾದ ಖಾದ್ಯ ತೈಲ, ಮಸಾಲೆ ವಸ್ತುಗಳು, ಬಟ್ಟೆಗಳು, ಉಪ್ಪು ಮತ್ತು ಒಣಗಿಸಿದ ಮೀನು, ಬೆಲ್ಲ, ಸಕ್ಕರೆ, ತೆಂಗಿನಕಾಯಿ ಮುಂತಾದವು.

೧೯೨೦ರ ಕೊಡಗಿನ ಆಡಳಿತ ವರದಿಯು ಜಿಲ್ಲೆಯ ಆಮದು ಮತ್ತು ರಫ್ತು ವಸ್ತುಗಳನ್ನು ಕುರಿತಂತೆ ವಿವರಗಳನ್ನು ನೀಡುತ್ತದೆ. ೧೯೨೦-೨೧ರಲ್ಲಿ ಈ ಜಿಲ್ಲೆಯಿಂದ ರಫ್ತಾಗುತ್ತಿದ್ದ ಪ್ರಮುಖ ವಸ್ತುಗಳು ಹಾಗೂ ಅವುಗಳು ರಫ್ತಾಗುತ್ತಿದ್ದ ಪ್ರದೇಶಗಳು ಈ ರೀತಿ ಇವೆ. ಕಾಫಿಯು ಮಂಗಳೂರು, ತಲ್ಚೇರಿ ಮತ್ತು ಮದ್ರಾಸಿಗೆ; ಔಷಧಿಯು ಮಂಗಳೂರು ಮತ್ತು ಬೆಂಗಳೂರಿಗೆ; ಹಣ್ಣುಗಳು ಮಂಗಳೂರು, ತಲ್ಚೇರಿ ಮತ್ತು ಮೈಸೂರಿಗೆ; ಧಾನ್ಯಗಳು ಮತ್ತು ಬೇಳೆ ತಲ್ಚೇರಿ ಮತ್ತು ಮಲಬಾರಿನ ಇತರ ಪ್ರದೇಶಗಳಿಗೆ; ಹದಮಾಡಿದ ಚರ್ಮ ಮತ್ತು ಕೊಂಬುಗಳು ಮೈಸೂರು ಮತ್ತು ತಲ್ಚೇರಿಗೆ; ಏಲಕ್ಕಿ ಮತ್ತು ಮಸಾಲೆ ಮೈಸೂರು, ತಲ್ಚೇರಿ ಮತ್ತು ಮಂಗಳೂರಿಗೆ; ಮರಮಟ್ಟು ಮತ್ತು ಕಾಡಿನ ಇತರ ಉತ್ಪನ್ನಗಳು ಮೈಸೂರು, ಮಂಗಳೂರು, ಮಲಬಾರು ಮತ್ತು ಮದ್ರಾಸಿಗೆ; ಶ್ರೀಗಂಧ ಮಂಗಳೂರು, ತಲ್ಚೇರಿ ಮತ್ತು ಮದ್ರಾಸಿಗೆ.

೧೯೨೦-೨೧ರಲ್ಲಿ ಈ ಜಿಲ್ಲೆಗೆ ಆಮದಾಗುತ್ತಿದ್ದ ವಿವಿಧ ಸರಕುಗಳು ಹಾಗೂ ಆಮದಾಗುತ್ತಿದ್ದ ಸ್ಥಳಗಳು ಈ ಕೆಳಗಿನಂತಿವೆ. ವ್ಯವಸಾಯ ಉಪಕರಣಗಳು ಮಂಗಳೂರು, ತಲ್ಚೇರಿ ಮತ್ತು ಮದ್ರಾಸಿನಿಂದ; ಜಾನುವಾರುಗಳು ಮೈಸೂರಿನಿಂದ; ಅಲಂಕಾರಿಕ ಉಡುಪುಗಳು ಮದರಾಸು ಮತ್ತು ಮುಂಬಯಿಯಿಂದ; ಆಯುಧಗಳು ಮತ್ತು ಮದ್ದು ಗುಂಡುಗಳು ಮದರಾಸು ಮತ್ತು ಮುಂಬಯಿಯಿಂದ; ಹತ್ತಿ ಬಟ್ಟೆಗಳು ಮದರಾಸು ಮತ್ತು ಮುಂಬಯಿ; ಮೈಸೂರು ಮತ್ತು ಮಂಗಳೂರಿನಿಂದ; ಗಾಜು ಮತ್ತು ಗಾಜಿನ ವಸ್ತುಗಳು ಮದರಾಸು ಮತ್ತು ಮುಂಬಯಿಯಿಂದ; ಸಿದ್ಧಗೊಳಿಸಿದ ಚರ್ಮ ಮದರಾಸು, ಮಂಗಳೂರು, ಮೈಸೂರು ಮತ್ತು ತಲ್ಚೇರಿಯಿಂದ; ಲೋಹಗಳಊ ಮದರಾಸು, ಮೈಸೂರು, ಮಂಗಳೂರು ಮತ್ತು ತಲ್ಚೇರಿಯಿಂದ; ತಂಬಾಕು ಮದರಾಸು, ಮೈಸೂರು ಮತ್ತು ಮಂಗಳೂರಿನಿಂದ; ಉಣ್ಣೆ ಮತ್ತು ಉಣ್ಣೆ ಬಟ್ಟೆಗಳು ಮದರಾಸು, ಮುಂಬಯಿ, ಮಂಗಳೂರು, ತಲ್ಚೇರಿ ಮತ್ತು ಮೈಸೂರಿನಿಂದ; ಕಟ್ಟಡದ ಸಾಮಾಗ್ರಿ ಮತ್ತು ಇಂಜಿನಿಯರಿಂಗ್ ವಸ್ತುಗಳು ಮೈಸೂರು, ಮದರಾಸು, ಮಂಗಳೂರು ಮತ್ತು ತಲ್ಚೇರಿಯಿಂದ.