ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವು ವಸಾಹತು ನಗರ ನೀತಿ ಮತ್ತು ವಸಾಹತು ಕರ್ನಾಟಕದ ನಗರ ಅನುಭವಗಳಿಗೆ ಸಂಬಂಧಪಟ್ಟಂತವು. ವಸಾಹತುಶಾಹಿ ಎನ್ನುವುದೇ ಬಂಡವಾಳದೊಂದಿಗೆ ತಳುಕು ಹಾಕಿಕೊಂಡಿರುವಂತದ್ದು. ಬಂಡವಾಳ ಶೇಖರಣೆಯೇ ಅದರ ಮೂಲ ಮಂತ್ರ. ಅದಕ್ಕಾಗಿ ಅದು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ, ತನ್ನ ಗಡಿಯನ್ನು ಸದಾ ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ಸ್ಥಳೀಯ ಸಮುದಾಯಗಳನ್ನು, ಅವರ ಚರಿತ್ರೆ ಮತ್ತು ಸಂಸ್ಕೃತಿಗಳನ್ನು ತನ್ನ ಉದ್ದೇಶಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತದೆ. ಇದು ಬಂಡವಾಳಶಾಹಿಯು ಹುಟ್ಟು ಹಾಕಿರುವ ಆರ್ಥಿಕ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಬಂಡವಳಿಗರ ಆರ್ಥಿಕ ಅಭ್ಯುದಯವಷ್ಟೇ ಪ್ರಧಾನವಾಗಿರುವಂತದ್ದು. ಬಂಡವಾಳಶಾಹಿಯು ತನ್ನ ಅವಶ್ಯಕತೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ಈಡೇರಿಸಿಕೊಂಡಿತು. ಕೃಷಿ ಮತ್ತು ನಗರಗಳೆರಡೂ ಈ ಉದ್ದೇಶಕ್ಕೆ ಬಳಕೆಯಾದವು. ಕೃಷಿಯನ್ನು ಆಯ್ದ ಪ್ರದೇಶಗಳಲ್ಲಿ ವಾಣಿಜ್ಯೀಕರಿಸಿ ಅದಕ್ಕೆ ಪೂರಕವಾಗಿ ಮಾರುಕಟ್ಟೆಗಳನ್ನು ಸಜ್ಜುಗೊಳಿಸಲಾಯಿತು. ಕೃಷಿ ಉತ್ಪನ್ನಗಳನ್ನು ಶೇಖರಿಸಿಡಲು ಹಾಗೂ ಅವುಗಳ ವ್ಯಾಪಾರ ನಡೆಸಲು ಮಾರುಕಟ್ಟೆಗಳು ಅನಿವಾರ್ಯವಾಗಿದ್ದವು. ಹೀಗಾಗಿ ಅನೇಕ ಪಟ್ಟಣಗಳು ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ಇವೆಲ್ಲವೂ ಬ್ರಿಟಿಷರ ವಸಾಹತು ನೀತಿಗೆ ಪೂರಕವಾಗಿಯೇ ಇದ್ದವು.

ಬ್ರಿಟಿಷ್ ಆಳ್ವಿಕೆಯಲ್ಲಿ ಕೆಲವೇ ಕೆಲವು ನಗರ ಕೇಂದ್ರಗಳು ಹೆಚ್ಚಿನ ಪ್ರಾಮುಕ್ಯತೆಯನ್ನು ಪಡೆದುಕೊಂಡವು. ಬ್ರಿಟಿಷರು ತಮ್ಮ ಆಡಳಿತ, ವ್ಯಾಪಾರ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಕೆಲವು ನಗರಗಳನ್ನು ಬೆಳೆಸಿದರು. ಉದಾಹರಣೆಗೆ ಕಲ್ಕತ್ತಾ, ಮುಂಬಯಿ ಮತ್ತು ಮದರಾಸು ಬ್ರಿಟಿಷರ ನಾನಾ ರೀತಿಯ ಪ್ರಯೋಗಗಳಿಗೆ ವೇದಿಕೆಗಳಾಗಿ ಬೃಹತ್ ನಗರಗಳಾಗಿ ಬೆಳೆದವು. ಅವುಗಳನ್ನು ವಸಾಹತು ನಗರಗಳೆಂದೇ ಕರೆಯಲಾಗಿದೆ. ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡ ಮುಂತಾದ ಪಟ್ಟಣಗಳು ಬ್ರಿಟಿಷರ ಬಹುಮುಖಿ ಚಟುವಟಿಕೆಗಳ ಕೇಂದ್ರಗಳಾಗಿದ್ದವು. ಬಂದರು ಪಟ್ಟಣವಾದ ಮಂಗಳೂರು ವಸಾಹತುಪೂರ್ವ ಅವಧಿಯಲ್ಲಿಯೇ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಅದು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿತು. ಬ್ರಿಟಿಷರ ಆಡಳಿತಕ್ಕೆ ಸಂಬಂಧಿಸಿದ ಕಛೇರಿಗಳು, ಬಾಷೆಲ್ ಮಿಷನ್ ಬಂದನಂತರ ಆರಂಭಗೊಂಡ ಶೈಕ್ಷಣಿಕ ಸಂಸ್ಥೆಗಳು, ವಿವಿಧ ಜಾತಿ ಮತ್ತು ಧರ್ಮಗಳ ಧಾರ್ಮಿಕ ಸಂಸ್ಥೆಗಳು ಮುಂತಾದವು ಆರಂಭಗೊಂಡು ಮಂಗಳೂರನ್ನು ಕರಾವಳಿ ಕರ್ನಾಟಕದ ಪ್ರಮುಖ ಬಂದರು ಪಟ್ಟಣವನ್ನಾಗಿ ಬೆಳೆಸಿದವು. ಮದರಾಸು ಸರಕಾರ ಮುನಿಸಿಪಾಲಿಟಿಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಇಲ್ಲಿನ ಆಡಳಿತವನ್ನು ವ್ವವಸ್ಥಿತಗೊಳಿಸಿತು. ಮಂಗಳೂರು ಶ್ರೀಮಂತ ಮತ್ತು ಫಲವತ್ತಾದ ಒಳನಾಡನ್ನು ಹೊಂದಿದ್ದರಿಂದಾಗಿ ಹಾಗೂ ಸಮುದ್ರ ವ್ಯಾಪಾರಕ್ಕೆ ಬೇಕಾದ ಬಂದರು ಅಲ್ಲಿದ್ದರಿಂದಾಗಿ ಬ್ರಿಟಿಷರು ಸಹಜವಾಗಿಯೇ ಮಂಗಳೂರಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದರು. ಬಂದರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡರೇ ವಿನಹ ಅದರ ಅಭಿವೃದ್ಧಿಯತ್ತ ಗಮನಹರಿಸಲಿಲ್ಲ. ಇದು ಬ್ರಿಟಿಷ್ ವಸಾಹತು ನೀತಿಯ ಸರ್ವೇಸಾಮಾನ್ಯವಾದ ಲಕ್ಷಣ.

ಬ್ರಿಟಿಷ್ ಸರಕಾರ ತನಗೆ ಅವಶ್ಯಕತೆ ಇದ್ದಾಗ ನಗರಗಳನ್ನು ಬೆಳೆಸುವ ಅಥವಾ ನಿರ್ಮಿಸುವ ಹಾಗೂ ತನ್ನ ಉದ್ದೇಶ ಈಡೇರಿದಾಗ ಅರ್ಧಕ್ಕೆ ಕೈಬಿಡುವ ಕೆಲಸವನ್ನು ಮಾಡುತ್ತಿತ್ತು ಎನ್ನುವುದಕ್ಕೆ ಕರ್ನಾಟಕದಲ್ಲಿ ಅನೇಕ ನಿದರ್ಶನಗಳಿವೆ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಸದಾಶಿವಘಟ್ಟ ಬಂದರನ್ನು ಬ್ರಿಟಿಷರು ಅಭಿವೃದ್ಧಿಪಡಿಸಲು ಹೊರಟಿದ್ದು. ಅಮೇರಿಕಾದಲ್ಲಿ ನಡೆದ ಆಂತರಿಕ ಕಲಹದಿಂದಾಗಿ ಯುರೋಪಿನ ಹತ್ತಿ ವ್ಯಾಪಾರ ಮತ್ತು ಅಲ್ಲಿದ್ದ ಹತ್ತಿ ಗಿರಣಿಗಳಲ್ಲಿ ಏರುಪೇರುಗಳು ಉಂಟಾದಾಗ ಸಹಜವಾಗಿಯೇ ಹತ್ತಿ ಬೆಳೆಯಲಾಗುತ್ತಿದ್ದ ಕರ್ನಾಟಕದ ಪ್ರದೇಶಗಳು ವಿಶೇಷ ಪ್ರಾಧಾನ್ಯತೆಯನ್ನು ಪಡೆದುಕೊಂಡವು. ಯುರೋಪಿನ ಹತ್ತಿ ಗಿರಣಿಗಳು ಅಮೆರಿಕಾದ ಹತ್ತಿಯನ್ನು ಹೆಚ್ಚಾಗಿ ಅವಲಂಬಿಸಿದ್ದವು. ಕರ್ನಾಟಕದಲ್ಲಿ ಹತ್ತಿಯನ್ನು ವಾಣಿಜ್ಯ ಬೆಳೆಯನ್ನಾಗಿ ಪ್ರಚಾರ ಪಡಿಸುವ ಹಾಗೂ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನೀತಿಯನ್ನು ಬ್ರಿಟಿಷ್ ಸರಕಾರ ಜಾರಿಗೊಳಿಸಿತು. ಅದೇ ರೀತಿ ಹತ್ತಿಯ ಸಾಗಾಣಿಕೆಗೆ ಬೇಕಾಗುವ ರಸ್ತೆಗಳ ನಿರ್ಮಾಣ ಹಾಗೂ ಬಂದರುಗಳ ಅಭಿವೃದ್ಧಿಯ ಕಡೆಗೂ ಗಮನಹರಿಸಲಾಯಿತು. ಈ ಹಿನ್ನಲೆಯಲ್ಲಿ ಸದಾಶಿವಘಡ ಬಂದರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಬಂದರು ಅಭಿವೃದ್ಧಿ ಮತ್ತು ರಸ್ತೆಗಳ ನಿರ್ಮಾಣದ ಕುರಿತು ಯೋಜನೆಗಳನ್ನು ರೂಪಿಸಲಾಯಿತು. ಆದರೆ ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡು ಯುರೋಪಿಗೆ ಮೊದಲಿನಂತೆಯೇ ಹತ್ತಿ ಪೂರೈಕೆಯಾಗತೊಡಗಿದಾಗ ಸದಾಶಿವಘಡ ಬಂದರು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳೂ ನಿಂತು ಹೋದವು. ಇದು ಬ್ರಿಟಿಷ್ ಸರಕಾರ ತನ್ನ ಉದ್ದೇಶಗಳಿಗೆ ಕರ್ನಾಟಕವನ್ನು ಯಾವ ರೀತಿ ಬಳಸಿಕೊಂಡಿತು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ಹೀಗಾಗಿ ವಸಾಹತು ಆಳ್ವಿಕೆಯ ಅವಧಿಯಲ್ಲಾದ ಅಭಿವೃದ್ಧಿಯೆಂದರೆ, ಅದು ಬ್ರಿಟಿಷರ ಅಭಿವೃದ್ಧಿಗೆ ನೆರವಾಗಬಲ್ಲ ಪರಿಕರಗಳ ನಿರ್ಮಾಣ ಎಂದಷ್ಟೇ ಅರ್ಥ. ಆ ಪರಿಕರಗಳನ್ನು ಬಳಸಿಕೊಂಡು ಬ್ರಿಟಿಷ್ ಸರಕಾರ ತನ್ನ ಉದ್ದೇಶಗಳನ್ನು ಈಡೇರಿಸಿಕೊಂಡಿತು. ಸ್ಥಳೀಯವಾಗಿ ಆದ ಬದಲಾವಣೆಗಳನ್ನು ಬ್ರಿಟಿಷ್ ಸರಕಾರ ತನ್ನ ಲಾಭಕ್ಕಾಗಿ ಬಳಸಿಕೊಂಡಿತು. ಹೀಗಾಗಿ ಬ್ರಿಟಿಷ್ ಸರಕಾರ ಹಾಕಿಕೊಟ್ಟ ಚೌಕಟ್ಟಿನೊಳಗೆ ಎಲ್ಲ ವ್ಯವಹಾರಗಳೂ ನಡೆಯಬೇಕಾಗಿತ್ತೇ ವಿನಹ, ಸ್ವಂತ ತೀರ್ಮಾನಗಳಾಗಲಿ ಅಥವಾ ವಸಾಹತು ಚೌಕಟ್ಟನ್ನು ಮೀರುವ ಪ್ರಯತ್ನಗಳಾಗಲಿ ಸಾಧ್ಯವಿರಲಿಲ್ಲ. ಹಾಗೇನಾದರೂ ವಿರೋಧಗಳು ಕಂಡುಬಂದಲ್ಲಿ ಅದನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿತ್ತು.

ವಸಾಹತು ಆಳ್ವಿಕೆಯಲ್ಲಿ ಸ್ಥಳೀಯ ಮಧ್ಯವರ್ತಿಗಳು ಬ್ರಿಟಿಷರೊಂದಿಗಿನ ತಮ್ಮ ಸಹಕಾರ ಮತ್ತು ಸಹಯೋಗ ನೀತಿಯಿಂದಾಗಿ ಉತ್ತಮ ಸ್ಥಿತಿಯಲ್ಲಿಯೇ ಇದ್ದರು. ಬ್ರಿಟಿಷ್ ಸರಕಾರಕ್ಕೆ ಸ್ಥಳೀಯ ಏಜೆಂಟರುಗಳ ಅವಶ್ಯಕತೆಯೂ ಇತ್ತು. ಬ್ರಿಟಿಷರು ತಮ್ಮ ಸಾಮ್ರಾಜ್ಯವನ್ನು ಕಟ್ಟುವ ಉದ್ದೇಶಕ್ಕೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಪರಿಚಯವಿರುವ ಮಧ್ಯವರ್ತಿಗಳ ನೆರವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಂಡರು. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಶ್ರೀಮಂತ ವರ್ತಕರಾಗಿ, ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳಾಗಿ ಹಾಗೂ ಲೇವಾದೇವಿದಾರರಾಗಿ ಬೆಳೆದರು. ಬಣಜಿಗರು, ಗೌಡಸಾರಸ್ವತ ಬ್ರಾಹ್ಮಣರು, ಗುಜರಾತಿಗಳು ಮುಂತಾದವರು ಬ್ರಿಟಿಷರೊಂದಿಗೆ ವ್ಯಾಪಾರದ ಮತ್ತು ಹಣಕಾಸಿನ ಸಂಬಂಧವನ್ನು ಹೊಂದಿದ್ದರು. ರಸ್ತೆಗಳ ಮತ್ತು ರೈಲು ಮಾರ್ಗಗಳ ನಿರ್ಮಾಣ ಸಂದರ್ಭದಲ್ಲಿ ಇವರು ಬ್ರಿಟಿಷರಿಗೆ ನೆರವಾಗುತ್ತಿದ್ದರು. ಅದೇ ರೀತಿ ತಮ್ಮ ತಮ್ಮ ಸಮುದಾಯಗಳಿಗೆ ನೆರವಾಗಬಲ್ಲ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ಇಪ್ಪತ್ತನೆಯ ಶತಮಾನದ ಆರಂಭದ ದಶಕದಿಂದಲೇ ಈ ರೀತಿಯ ಪ್ರಯತ್ನಗಳು ಕಂಡುಬರಲಾರಂಭಿಸಿದವು. ಹೀಗೆ ವರ್ತಕ ಸಮುದಾಯಗಳು ನಾನಾ ರೀತಿಯ ಕೆಲಸಕಾರ್ಯಗಳನ್ನು ನಿರ್ವಹಿಸಿ, ಬ್ರಿಟಿಷರಿಗೆ ನೆರವಾಗುವುದರ ಜೊತೆ ಜೊತೆಗೆ ತಮ್ಮ ಆರ್ಥಿಕ ಮಟ್ಟವನ್ನೂ ಸುಧಾರಿಸಿಕೊಂಡವು. ಈ ವರ್ತಕ ಸಮುದಾಯಗಳಿಗೆ ವ್ಯಾಪಾರದ ವಿಶೇಷ ತರಬೇತಿ ದೊರೆತಿರುವುದು ಕೇವಲ ಬ್ರಿಟಿಷರಿಂದಷ್ಟೇ ಅಲ್ಲ. ಪೋರ್ಚುಗೀಸರೊಂದಿಗಿನ ವ್ಯಾಪಾರ ಸಂಬಂಧಗಳು ಅನೇಕ ಸ್ಥಳೀಯ ವರ್ತಕ ಸಮುದಾಯಗಳಿಗೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ತಂತ್ರವನ್ನು ಕಲಿಸಿಕೊಟ್ಟವು.

ಕೃಷಿಯ ವಾಣಿಜ್ಯೀಕರಣ ಮತ್ತು ಮಾರುಕಟ್ಟೆ ಕೇಂದ್ರಿತ ಅರ್ಥವ್ಯವಸ್ಥೆಯ ಹುಟ್ಟುನಗರ ಸಮುದಾಯಗಳಿಗೆ, ಅದರಲ್ಲೂ ನಗರ ವರ್ತಕ ಸಮುದಾಯಗಳಿಗೆ ಲಾಭಕರವಾಗಿ ಪರಿಣಮಿಸಿತು. ಕೃಷಿಕರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ಸಾಲ ನೀಡುವ, ಕೃಷಿ ಉತ್ಪನ್ನಗಳನ್ನು ಶೇಖರಿಸಿಡುವ ಹಾಗೂ ಮಾರುಕಟ್ಟೆಗಳಿಗೆ ಸಾಗಿಸುವ, ಯುರೋಪಿನ ವರ್ತಕರಿಗೆ ಅವುಗಳನ್ನು ತಲುಪಿಸುವ ಈ ಮುಂತಾದ ಕೆಲಸಗಳನ್ನು ವರ್ತಕರು ಮಾಡುತ್ತಿದ್ದರು. ಇವರ ಕೆಲಸಕಾರ್ಯಗಳಿಂದಾಗಿ ಅನೇಕ ಪಟ್ಟಣಗಳೂ ಬಿರುಸಿನ ವ್ಯಾಪಾರ ಕೇಂದ್ರಗಳಾಗಿ ಬೆಳೆದವು. ಪಟ್ಟಣಗಳಲ್ಲಿ ವಾಣಿಜ್ಯ ಮಂಡಳಿಗಳು ಸ್ಥಾಪನೆಗೊಂಡ ಮೇಲೆ ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೆಚ್ಚು ಕಷ್ಟಪಡಬೇಕಾಗಿರಲಿಲ್ಲ. ಬ್ರಿಟಿಷರು ಮೂಲತಃ ವ್ಯಾಪಾರಸ್ಥರಾಗಿದ್ದರಿಂದಾಗಿ, ಅವರಿಗೆ ನೆರವಾದ ಸ್ಥಳೀಯ ವ್ಯಾಪಾರಸ್ಥರು ಸ್ವಲ್ಪ ಮಟ್ಟಿನ ಲಾಭವನ್ನು ತಾವು ಪಡೆದುಕೊಂಡರು. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿದಿದ್ದ ವರ್ಗಗಳು ತ್ರ್ಯೋಸ್ವಾತಂತ್ರ್ಯೋತ್ತರ ಅವಧಿಯಲ್ಲೂ ಅದೇ ಸ್ಥಿತಿಯನ್ನು ಕಾಯ್ದುಕೊಂಡು ಬಂದವು. ಉದಾಹರಣೆಗೆ ಶ್ರೀಮಂತ ವರ್ತಕರು, ಪ್ಲಾಂಟರುಗಳು ಹಾಗೂ ಖಾಸಗಿ ಕಂಪನಿ ಹೊಂದಿದವರು ಈ ಎರಡೂ ಅವಧಿಗಳಲ್ಲಿ ತಮ್ಮ ನೆಲೆಗಳನ್ನು ಭದ್ರಗೊಳಿಸಿಕೊಂಡರು. ದುಡಿಯುವ ವರ್ಗಗಳ ಬದುಕಿನಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರಲಿಲ್ಲ. ನಗರ ಕೇಂದ್ರಗಳಲ್ಲಿ ನಿಧಾನವಾಗಿ ಕೊಳಚೆ ಪ್ರದೇಶಗಳು ಕಾಣಿಸಿಕೊಳ್ಳಲಾರಂಭಿಸಿದವು. ಪಟ್ಟಣಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ನಿರ್ಮಾಣ ಕೆಲಸಗಳಲ್ಲಿ ದುಡಿಯುತ್ತಿದ್ದವರಲ್ಲಿ ಅನೇಕರು ಕೊಳಚೆ ಪ್ರದೇಶಗಳಲ್ಲಿ ಜೀವಿಸುವ ಒತ್ತಾಯಕ್ಕೆ ಒಳಗಾಗಿದ್ದರು. ಶ್ರೀಮಂತ ನಗರ ಸಮುದಾಯಗಳು ಪಟ್ಟಣದ ಹೃದಯಭಾಗದಲ್ಲಿ ಮನೆಗಳನ್ನು ಹೊಂದಿರುತ್ತಿದ್ದರು.

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಸಾರಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾದವು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕ್ಷಿಪ್ರಗತಿಯಲ್ಲಿ ಬೆಳೆಯಲಾರಂಭಿಸಿದ ಯುರೋಪ್ ಹೆಚ್ಚಿನ ಅಧ್ಯತೆಯನ್ನು ನೀಡಿದ್ದು ಸಾರಿಗೆ ಕ್ಷೇತ್ರಕ್ಕೆ. ಯುರೋಪಿನ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಸಾಗಿಸಲು ಹಾಗೂ ಸಿದ್ಧವಸ್ತುಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಉತ್ತಮ ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇತ್ತು. ಕರ್ನಾಟಕದಲ್ಲಿ ನಿರ್ಮಾಣಗೊಂಡ ಘಟ್ಟ ರಸ್ತೆಗಳು ಬ್ರಿಟಿಷರಿಗೆ ಸವಾಲಿನ ಯೋಜನೆಗಳೇ ಆಗಿದ್ದವು. ಆದರೆ ವ್ಯಾಪಾರ ಮತ್ತು ಮಿಲಿಟರಿ ಉದ್ದೇಶಗಳ ಈಡೇರಿಕೆಗೆ ಅವು ಅನಿವಾರ್ಯವಾಗಿದ್ದವು. ದುಬಾರಿ ಯೋಜನೆಗಳಾಗಿದ್ದರೂ ಕೈಬಿಡುವಂತಿರಲಿಲ್ಲ. ರೈಲ್ವೆಯ ಪ್ರವೇಶವೂ ಈ ಹಿನ್ನಲೆಯಿಂದಲೇ ಆಯಿತು. ಬ್ರಿಟಿಷರ್ ಈ ಪ್ರಯತ್ನಗಳಿಂದಾಗಿ ಕರ್ನಾಟಕದ ಹಲವಾರು ಪ್ರದೇಶಗಳು ಪರಸ್ಪರ ಸಂಪರ್ಕ ಹೊಂದುವಂತಾಯಿತು. ಅದೇ ರೀತಿ ಕೃಷಿ ಉತ್ಪನ್ನಗಳು ಕ್ಷಿಪ್ರಗತಿಯಲ್ಲಿ ಮಾರುಕಟ್ಟೆಗಳಿಗೆ ಬರುವಂತಾಯಿತು. ಕರ್ನಾಟಕದ ಯಾವುದೇ ಮೂಲೆಯಲ್ಲಾದರೂ ಗಲಭೆಗಳು ಕಾಣಿಸಿಕೊಂಡಾಗ ಬ್ರಿಟಿಷರು ರಸ್ತೆಗಳ ಅಥವಾ ರೈಲಿನ ಮೂಲಕ ಸೈನ್ಯವನ್ನು ಕಳುಹಿಸಿ ಅದನ್ನು ಹತ್ತಿಕ್ಕುತ್ತಿದ್ದರು. ಹೀಗಾಗಿ ಸಾರ್ವಜನಿಕರ ಉಪಯೋಗಕ್ಕಿಂತ ಹೆಚ್ಚಾಗಿ ಬ್ರಿಟಿಷ್ ಸರಕಾರದ ಬಂಡವಾಳದ ಶೇಖರಣೆ; ಮತ್ತು ವಿರೋಧಗಳನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಹೊಸ ರಸ್ತೆಗಳು ಮತ್ತು ರೈಲು ಮಾರ್ಗಗಳು ಬಳಕೆಯಾದವು. ಇದರೊಂದಿಗೆ ಸ್ಥಳೀಯ ಅರ್ಥ ವ್ಯವಸ್ಥೆಯಲ್ಲೂ ಕೆಲವೊಂದು ಬದಲಾವಣೆಗಳು ಉಂಟಾದವು. ಅವುಗಳೆಂದರೆ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಕಾಣಿಸಿಕೊಳ್ಳಲಾರಂಭಿಸಿದವು. ನಗರ ಪ್ರದೇಶಗಳಿಗೆ ಹೆಚ್ಚೆಚ್ಚು ಜನರು ವಲಸೆ ಹೋಗಲಾರಂಭಿಸಿದರು ಹಾಗೂ ಪಟ್ಟಣಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದವು. ಹೀಗೆ ಬದಲಾವಣೆಯ ಗಾಳಿ ಅನೇಕ ಪ್ರದೇಶಗಳಿಗೆ ನುಗ್ಗಿತು.

ಕರ್ನಾಟಕವು ವಸಾಹತು ಆಳ್ವಿಕೆಯಲ್ಲಿ ಕೈಗಾರಿಕಾ ಯುರೋಪಿನ ಅವಶ್ಯಕತೆಗಳನ್ನು ಪೂರೈಸುವ ಒಂದು ಪ್ರದೇಶವಾಗಿ ಕಾಣಿಸಿಕೊಂಡಿತು. ಹೀಗಾಗಿ ಇಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡವು. ಯುರೋಪಿನ ಕೈಗಾರಿಕಾ ಬಂಡವಾಳ ಈ ಎರಡೂ ವ್ಯವಸ್ಥೆಯೊಳಗೆ ಪ್ರವೇಶಿಸಿ ತನಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸಿಕೊಂಡಿತು. ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಅಥವಾ ನಗರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಬ್ರಿಟಿಷ್ ಸರಕಾರದ್ದಾಗಿರಲಿಲ್ಲ. ಆದರೆ ಕೆಲವೊಂದು ಕೈಗಾರಿಕೆಗಳನ್ನು ಸ್ಥಾಪಿಸುವುದು ಮತ್ತು ನಗರಗಳನ್ನು ಬೆಳೆಸುವುದು ಬ್ರಿಟಿಷ್ ಸರಕಾರಕ್ಕೆ ಅನಿವಾರ್ಯವಾಗಿತ್ತು. ಉದಾಹರಣೆಗೆ, ರಸ್ತೆಗಳ ನಿರ್ಮಾಣ ಮತ್ತು ರೈಲುಮಾರ್ಗಗಳ ನಿರ್ಮಾಣ ಸಂದರ್ಭದಲ್ಲಿ ಬೇಕಾಗುವ ಉಪಕರಣಗಳನ್ನು ಉತ್ಪದಿಸುವುದು ಅವಶ್ಯಕವಾಗಿತ್ತು. ಅದೇ ರೀತಿ ವಿದ್ಯುತ್ ಉತ್ಪಾದಿಸುವ ಹಾಗೂ ವಿದ್ಯುತ್ಗೆ ಸಂಬಂಧಿಸಿದ ಉಪಕರಣಗಳ ಉತ್ಪಾದನೆಯೂ ಅಷ್ಟೇ ಅನಿವಾರ್ಯವಾಗಿತ್ತು. ಸೇನಾಪಡೆಗಳ ಅವಶ್ಯಕತೆಗಳನ್ನು ತಕ್ಷಣ ಪೂರೈಸಬೇಕಾಗಿದ್ದರಿಂದಾಗಿ ಹಲವಾರು ಕೈಗಾರಿಕೆಗಳು ಹುಟ್ಟಿಕೊಂಡವು. ಯುರೋಪಿನಲ್ಲಿ ಮಹಾಯುದ್ಧಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಯಂತ್ರೋಪಕರಣಗಳನ್ನು ಹಾಗೂ ಯುದ್ಧೋಪಕರಣಗಳನ್ನು ಅಲ್ಲಿಂದ ಆಮದು ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅಂಥ ಸಂದರ್ಭಗಳಲ್ಲಿ ಅವು ಸ್ಥಳೀಯವಾಗಿ ಉತ್ಪಾದನೆಗೊಳ್ಳಲಾರಂಭಿಸಿದವು. ಹೀಗೆ ಬ್ರಿಟಿಷ್ ಸರಕಾರದ ಅನಿವಾರ್ಯತೆಗಳು ಹಲವಾರು ಕೈಗಾರಿಕೆಗಳ ಹುಟ್ಟಿಗೆ ಕಾರಣವಾದವು. ಬಾಷೆಲ್ ಮಿಷನ್‌ನಂಥ ಖಾಸಗಿ ಸಂಸ್ಥೆಗಳೂ ಕರ್ನಾಟಕದಲ್ಲಿ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿದವು. ಸ್ಥಳೀಯ ಜನರಿಗೆ ನೆರವಾಗುವುದರ ಜೊತೆ ಜೊತೆಗೆ ತಮ್ಮ ಧರ್ಮದ ಜನರಿಗೆ, ಅದರಲ್ಲೂ ಮತಾಂತರ ಹೊಂದಿದ ಜನರಿಗೆ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದು ಬಾಷೆಲ್ ಮಿಷನ್‌ನ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯ ಉದ್ಯಮಿಗಳೂ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿದರು. ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಆರಂಭಗೊಂಡ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಂಥ ಕಾರ್ಖಾನೆಗಳು ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರಗಳು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಬೃಹತ್ ಯೋಜನೆಗಳಾಗಿ ಬೆಳೆದವು. ಹೀಗೆ ಬ್ರಿಟಿಷ್ ಕರ್ನಾಟಕದಲ್ಲಿ ನಾನಾ ಕಾರಣಗಳಿಗಾಗಿ ಸ್ಥಾಪನೆಗೊಂಡ ಕೈಗಾರಿಕೆಗಳು ನಂತರದ ಅವಧಿಯಲ್ಲಿ ಕರ್ನಾಟಕದಲ್ಲಿ ಕೈಗಾರಿಕೀಕರಣ ಪ್ರಕ್ರಿಯೆ ಚುರುಕುಗೊಳ್ಳುವುದಕ್ಕೆ ಕಾರಣವಾದವು. ಅದೇ ರೀತಿ ಕಾರ್ಮಿಕ ಚಳುವಳಿಗಳ ಹುಟ್ಟಿಗೂ ಕಾರಣವಾಯಿತು.

ವಸಾಹತು ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಬಹುಮುಖ್ಯವಾಗಿ ಕಂಡುಬರುವ ಅಂಶವೆಂದರೆ, ಬ್ರಿಟಿಷ್ ಸರಕಾರ ನಗರ ಕೇಂದ್ರಗಳನ್ನು ಯೋಜನಾಬದ್ಧವಾಗಿ ರೂಪಿಸಲು ಪ್ರಯತ್ನಪಟ್ಟಿರುವುದು. ಆಡಳಿತ, ಶಿಕ್ಷಣ, ಕಂದಾಯ, ನ್ಯಾಯಾಂಗ, ಪೊಲೀಸ್ ಮುಂತಾದ ಇಲಾಖೆಗಳನ್ನು ಶಿಸ್ತುಬದ್ಧವಾಗಿ ಹಾಗೂ ಯೋಜನಾಬದ್ಧವಾಗಿ ಬೆಳೆಸಲು ಬ್ರಿಟಿಷ್ ಸರಕಾರ ಪ್ರಯತ್ನಿಸಿತು. ಬ್ರಿಟಿಷರ ಆಡಳಿತ ಕಛೇರಿಗಳಿದ್ದ ಪಟ್ಟಣಗಳು ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಪಟ್ಟಣಗಳಲ್ಲಿ ಮುನಿಸಿಪಾಲಿಟಿಗಳನ್ನು ಸ್ಥಾಪಿಸುವುದರ ಮೂಲಕ ನಗರಾಡಳಿತವನ್ನು ವ್ಯವಸ್ಥಿತಗೊಳಿಸುವ ಕೆಲಸವನ್ನು ಬ್ರಿಟಿಷ್ ಸರಕಾರ ಮಾಡಿತು. ಬ್ರಿಟಿಷರು ಈ ಎಲ್ಲ ಕ್ಷೇತ್ರಗಳನ್ನು ಪ್ರಮಾಣಬದ್ಧವಾಗಿ ಅಭಿವೃದ್ಧಿಪಡಿಸುವುದರ ಹಿಂದೆ ನೈಸರ್ಗಿಕ ನ್ಯಾಯ ಧೋರಣೆಯನ್ನು ಪ್ರತಿಪಾದಿಸುವ ಉದ್ದೇಶವನ್ನು ಹೊಂದಿದ್ದರು. ಅದೇನೆಂದರೆ, ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ, ಅಸಮತೋಲನಗಳಿಂದ ಕೂಡಿರುವ ಹಾಗೂ ಅಸ್ತವ್ಯಸ್ತವಾಗಿರುವ ಸ್ಥಳೀಯರನ್ನು ನಾಗರೀಕರನ್ನಾಗಿ ಮಾಡುವ ಸಾಮರ್ಥ್ಯ ಹಾಗೂ ಹಕ್ಕು ಬ್ರಿಟಿಷರಿಗೆ ನಿಸರ್ಗದತ್ತವಾಗಿ ಬಂದಿರುವುದು ಎನ್ನುವುದು. ನೈಸರ್ಗಿಕ ನ್ಯಾಯ ಸಿದ್ಧಾಂತವು ಹದಿನೆಂಟನೆಯ ಶತಮಾನದಲ್ಲಿ ಯುರೋಪಿನಲ್ಲಿ ಹುಟ್ಟಿಕೊಂಡಿತು. ಬ್ರಿಟಿಷರು ತಮ್ಮ ವಸಾಹತುಗಳಲ್ಲಿ ಈ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿದರು. ಸ್ಥಳೀಯ ವಿರೋಧಗಳನ್ನು ಹತ್ತಿಕ್ಕುವುದಕ್ಕೆ, ಬ್ರಿಟಿಷ್ ಆಳ್ವಿಕೆ ಅವಶ್ಯಕ ಮತ್ತು ಅದು ಪ್ರಗತಿಪರ ಎನ್ನುವುದನ್ನು ಸಾಬೀತುಪಡಿಸುವುದಕ್ಕೆ ಹಾಗೂ ಬ್ರಿಟಿಷ್ ಆಳ್ವಿಕೆ ಅವಶ್ಯಕ ಮತ್ತು ಅದು ಪ್ರಗತಿಪರ ಎನ್ನುವುದನ್ನು ಸಾಬೀತುಪಡಿಸುವುದಕ್ಕೆ ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಒಪ್ಪಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆಯನ್ನು ಸೃಷ್ಟಿಸುವ ಉದ್ದೇಶಗಳಿಗೆ ಈ ಸಿದ್ಧಾಂತವು ಬಳಕೆಯಾಯಿತು.

ನಗರ ಪ್ರದೇಶಗಳನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಅನೇಕ ಭಾಗಗಳನ್ನಾಗಿ ವಿಂಗಡಿಸಲಾಯಿತು. ಸಿಟಿ ಎನ್ನುವುದು ಸ್ಥಳೀಯರು ಇರುವ ಜಾಗವಾಗಿತ್ತು. ಅದು ಸದಾ ಜನದಟ್ಟಣೆಯಿಂದ ಕೂಡಿರುವ ಹಾಗೂ ಗದ್ದಲಗಳಿಂದ ಕೂಡಿರುವ ಪ್ರದೇಶವಾಗಿತ್ತು. ಸ್ಥಳೀಯ ಶ್ರೀಮಂತ ಸಮುದಾಯಗಳು ಮತ್ತು ಕೆಲವು ಬ್ರಿಟಿಷ್ ಅಧಿಕಾರಿಗಳು ವಾಸಿಸುತ್ತಿದ್ದ ಪ್ರದೇಶವನ್ನು ಸಿವಿಲ್ ಸ್ಟೇಷನ್‌ಗಳೆಂದು ಹೆಸರಿಸಲಾಯಿತು. ನಗರದ ಬಹುಮುಖ್ಯ ಜಾಗವೆಂದರೆ ಕಂಟೋನ್ಮೆಂಟ್‌ಗಳು. ಅವು ಬ್ರಿಟಿಷರಷ್ಟೇ ವಾಸಿಸುವ ಪ್ರದೇಶಗಳಾಗಿದ್ದವು. ಈಗಲೂ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಮಂಗಳೂರು ಮುಂತಾದ ನಗರಗಳಲ್ಲಿ ಕಂಟೋನ್ಮೆಂಟ್‌ಗಳನ್ನು ನೋಡಬಹುದಾಗಿದೆ. ಕಂಟೋನ್ಮೆಂಟ್‌ಗಳಲ್ಲಿ ಬ್ರಿಟಿಷರು ತಮ್ಮ ಸೈನ್ಯವನ್ನು ಇರಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಬೆಳಗಾವಿ, ಬಳ್ಳಾರಿ, ಬೆಂಗಳೂರುಗಳನ್ನು ದಂಡು ಪ್ರದೇಶಗಳೆಂದು ಕರೆಯಲಾಯಿತು. ಬುಡಕಟ್ಟು ಜನರನ್ನು ನಗರವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿತ್ತು. ಏಕೆಂದರೆ, ಬ್ರಿಟಿಷರ ಪ್ರಕಾರ ಅವರು ನಾಗರಿಕ ಪ್ರಪಂಚದಿಂದ ಹೊರಗಿರುವವರು ಹಾಗೂ ಆಧುನಿಕತೆಯ ಲಕ್ಷಣಗಳಾದ ವಿಚಾರವಾದ ಮತ್ತು ವೈಜ್ಞಾನಿಕ ಪ್ರಗತಿಯ ಅರಿವೇ ಇಲ್ಲದವರು. ಬುಡಕಟ್ಟು ಜನರನ್ನು ಅಪರಾಧಿಗಳು ಅಥವಾ ಕಳ್ಳರು ಎಂಬುದಾಗಿ ಗುರುತಿಸಲಾಗಿತ್ತು. ಹೀಗೆ ಬ್ರಿಟಿಷ್ ಸರಕಾರ ನಗರ ಪ್ರದೇಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ರಮಬದ್ಧಗೊಳಿಸುವ ಕೆಲಸವನ್ನು ಮಾಡಿತು. ಬ್ರಿಟಿಷರು ತಮ್ಮನ್ನು ತಾವು ನಾಗರೀಕರು ಎಂಬುದಾಗಿ ಕರೆದುಕೊಳ್ಳುತ್ತಾ ಅತ್ಯಂತ ಕ್ರೂರವಾದ ಕಾನೂನು-ಕಾಯಿದೆಗಳನ್ನು ಜಾರಿಗೊಳಿಸಿದರು. ಶತಮಾನಗಳಿಂದ ಅರಣ್ಯ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವನ ನಡೆಸುತ್ತಿದ್ದ ಜನರನ್ನು ಅವರ ಪ್ರದೇಶದಲ್ಲಿಯೇ ಪರಕೀಯರನ್ನಾಗಿಸುವ ಪ್ರಯತ್ನವನ್ನು ಬ್ರಿಟಿಷ್ ಸರಕಾರ ಮಾಡಿತು. ಅರಣ್ಯ ಪ್ರದೇಶಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನು-ಕಾಯಿದೆಗಳು ಜಾರಿಗೊಂಡಾಗ ಅರಣ್ಯವಾಸಿಗಳ ಬದುಕು ಛಿದ್ರಗೊಳ್ಳಲಾರಂಭಿಸಿತು. ಬ್ರಿಟಿಷ್ ಮಾದರಿಯ ಆಧುನಿಕತೆಯ ಚೌಕಟ್ಟಿನಲ್ಲಿ ಅರಣ್ಯವಾಸಿಗಳು ಬರುವುದಿಲ್ಲವಾದರೂ, ಅವರು ತಮ್ಮದೇ ಆದ ಜೀವನ ವಿಧಾನ ಹಾಗೂ ಲೋಕದೃಷ್ಟಿಯೊಂದನ್ನು ಹೊಂದಿದ್ದು, ಅದು ಅವರ ಬದುಕಿಗೆ ನಿರ್ದಿಷ್ಟತೆಯೊಂದನ್ನು ಒದಗಿಸಿಕೊಟ್ಟಿತು. ಇದರಿಂದಾಗಿಯೇ ಶತಮಾನಗಳಿಂದಲೂ ವಂಚಿತರಾದ ಕಾರಣಕ್ಕಾಗಿ ಅವರನ್ನು ಅನಾಗರಿಕರು ಎಂಬುದಾಗಿ ಕರೆದ ಬ್ರಿಟಿಷ್ ಸರಕಾರ ಅದಕ್ಕೆ ತಾನು ಹಾಗೂ ತನ್ನೊಂದಿಗೆ ಶಾಮೀಲಾದ ಸ್ಥಳೀಯ ಶ್ರೀಮಂತ ವರ್ಗಗಳು ಹೊಣೆಗಾರರು ಎನ್ನುವ ವಾಸ್ತವಾಂಶವನ್ನು ಬಹಿರಂಗಪಡಿಸಲಿಲ್ಲ. ಅವೆರಡೂ ಸ್ವಾರ್ಥ ರಾಜಕಾರಣದ ಗುಂಗಿನಲ್ಲಿದ್ದು, ತಮ್ಮ ಮೂಗಿನ ನೇರಕ್ಕೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು. ಹಾಗಾಗಿ ನಗರ ಪ್ರದೇಶಗಳಲ್ಲಿನ ಅಥವಾ ಗ್ರಾಮೀನ ಪ್ರದೇಶಗಳಲ್ಲಿನ ಅಲಕ್ಷಿತ ವರ್ಗಗಳಿಗೆ ಸ್ಥಳೀಯವಾಗಿಯೇ ಇದ್ದ ಜಾತ್ಯಾಧಾರಿತ ಯಾಜಮಾನ್ಯದ ಹಾಗೂ ಪಾಶ್ಚಿಮಾತ್ಯ ವಸಾಹತುಶಾಹಿ ಯಾಜಮಾನ್ಯದ ನಡುವೆ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬರಲಿಲ್ಲ. ಏಕೆಂದರೆ, ಅವೆರಡಕ್ಕೂ ಹೆಚ್ಚಿನ ವ್ಯತ್ಯಾಸಗಳೇ ಇರಲಿಲ್ಲ. ಅವು ತಮ್ಮ ತಮ್ಮ ಯಾಜಮಾನ್ಯವನ್ನು ಸ್ಥಾಪಿಸಲು ಬಳಸಿದ ಹಾದಿಗಳು ಬೇರೆ ಬೇರೆಯದಾಗಿದ್ದರೂ ಅವುಗಳ ಧೋರಣೆಗಳು ಒಂದೇ ರೀತಿಯದ್ದಾಗಿದ್ದವು. ಹೀಗೆ ವಸಾಹತುಶಾಹಿ ಸಂದರ್ಭದ ನಗರೀಕರಣವನ್ನು ಅರ್ಥೈಸಿಕೊಳ್ಳಬೇಕಾದರೆ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಕಡೆಗೂ ಗಮನಹರಿಸಬೇಕಾಗುತ್ತದೆ. ಬ್ರಿಟಿಷ್ ಸರಕಾರದ ಹೊಸ ಕೃಷಿ, ಕೈಗಾರಿಕಾ ಮತ್ತು ನಗರ ನೀತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಮಾತ್ರ ಅವುಗಳ ಹಿಂದಿದ್ದ ಧೋರಣೆಗಳು, ಅವು ಜಾರಿಗೊಂಡ ಬಗೆ ಹಾಗೂ ಅವುಗಳ ಲಾಭವನ್ನು ಪಡೆದುಕೊಂಡ ಸಮುದಾಯಗಳ ಬಗೆಗೆ ತಿಳಿದುಬರಲು ಸಾಧ್ಯ.

ಬ್ರಿಟಿಷ್ ಸರಕಾರ ಜಾರಿಗೊಳಿಸಿದ ಕೃಷಿ ನೀತಿ ಕೃಷಿಗಷ್ಟೇ ಸೀಮಿತವಾಗಿರಲಿಲ್ಲ. ಅದೇ ರೀತಿ ನಗರ ನೀತಿ ನಗರ ಕೇಂದ್ರಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅವೆರಡೂ ಸಾಮ್ರಾಜ್ಯಶಾಹಿ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾರಿಗೆ ಬಂದಂತವು. ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶದಲ್ಲಿದ್ದ ನಗರ ಕೇಂದ್ರಗಳು ಬ್ರಿಟಿಷ್ ಸರಕಾರದ ಮೊದಲ ಆಯ್ಕೆಯಾಗಿದ್ದು, ಅವು ವಸಾಹತು ನೀತಿಯ ದಟ್ಟ ಪ್ರಭಾವಕ್ಕೆ ಒಳಗಾದವು. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲೂ ಅವು ವಸಾಹತು ಲಕ್ಷಣಗಳನ್ನು ಮುಂದುವರಿಸಿಕೊಂಡೇ ಅಭಿವೃದ್ಧಿಯತ್ತ ಮುನ್ನಡೆದವು. ಅವು ಇಂದಿಗೂ ಬ್ರಿಟಿಷ್ ವಿನ್ಯಾಸದ ಮುದ್ರೆ ಉಳಿಸಿಕೊಂಡಿವೆ. ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಜಾತಿ/ವರ್ಗಗಳು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಸ್ವತಂತ್ರವಾಗಿ ವ್ಯವಹರಿಸಿ ಹಾಗೂ ಯೋಜನೆಗಳನ್ನು ರೂಪಿಸಿ ಪೇಟೆ-ಪಟ್ಟಣಗಳ ವ್ಯಾಪ್ತಿ ವಿಸ್ತರಿಸುವಂತೆ ಮಾಡಿದವು. ಹೀಗೆ ವಸಾಹತು ಆಳ್ವಿಕೆಯಲ್ಲಿ ಹಲವಾರು ನಗರ ಸಮುದಾಯಗಳಿಗೆ ವಿಶಿಷ್ಟ ಬಗೆಯ ನಗರ ಅನುಭವಗಳಾದವು. ಈ ಅನುಭವಗಳ ಹಿನ್ನೆಲೆಯಲ್ಲಿಯೇ ಅವು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಹಾಗೂ ಹಲವಾರು ಉದ್ದಿಮೆಗಳಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾದವು. ಈ ಎಲ್ಲ ಪ್ರಯೋಗಗಳ ಫಲವಾಗಿ ಕರ್ನಾಟಕದಲ್ಲಿ ಹಲವಾರು ಮುಂದುವರಿದ ಪ್ರದೇಶಗಳು ಅಥವಾ ಬಿಡಿ ಬಿಡಿ ದ್ವೀಪಗಳು ಹುಟ್ಟಿಕೊಂಡು ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡವು. ಈ ಅನುಭವಗಳಿಂದ ವಂಚಿತವಾದ ಪ್ರದೇಶಗಳು ವಸಾಹತು ಆಳ್ವಿಕೆಯ ಅವಧಿಯಲ್ಲೂ ಹಿಂದುಳಿದ ಪ್ರದೇಶಗಳೇ ಆಗಿದ್ದವು. ಮುಂಬಯಿ ಪ್ರೆಸಿಡೆನ್ಸಿ, ಮದರಾಸು ಪ್ರೆಸಿಡೆನ್ಸಿ, ಮೈಸೂರು ಸಂಸ್ಥಾನ ಮತ್ತು ಕೊಡಗು ಪ್ರದೇಶಗಳು ಬ್ರಿಟಿಷ್ ಮಾದರಿಯ ಆಧುನಿಕತೆಯ ಲಾಭವನ್ನು ಪಡೆದುಕೊಂಡರೆ ಹೈದರಾಬಾದ್ ಕರ್ನಾಟಕದ ಪ್ರದೇಶಗಳು ಇದರಿಂದ ವಂಚಿತವಾದವು. ಇದಕ್ಕೆ ಅಲ್ಲಿನ ಆಡಳಿತ ಹಾಗೂ ನಿಸರ್ಗದತ್ತವಾದ ಅಂಶಗಳು ಕಾರಣಗಳಾದವು. ಹೈದರಾಬಾದ್ ಕರ್ನಾಟಕದ ಪ್ರದೇಶಗಳು ಹೈದರಾಬಾದಿನ ನಿಜಾಮನ ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ. ಮುಂಬಯಿ ಕರ್ನಾಟಕದ ಕೆಲವು ಪ್ರದೇಶಗಳೂ ಅಲ್ಲಿನ ಸಣ್ಣಪುಟ್ಟ ಪಾಳೆಯಗಾರರ ವೈಮನಸ್ಸಿನಿಂದಾಗಿ ಸ್ವಲ್ಪಮಟ್ಟಿಗೆ ಹಿಂದುಳಿದಿದ್ದವು. ಆದರೆ ಮೈಸೂರು, ಕೊಡಗು ಹಾಗೂ ಮದರಾಸು ಪ್ರಾಂತ್ಯಗಳ ಅಧೀನದಲ್ಲಿದ್ದ ಪ್ರದೇಶಗಳು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯಿಂದಾಗಿ ಹಾಗೂ ಯೋಜನಾಬದ್ಧವಾದ ಆಡಳಿತದಿಂದಾಗಿ ಮುಂದುವರಿದ ಪ್ರದೇಶಗಳಾಗಿ ಗುರುತಿಸಿಕೊಂಡಿದ್ದವು. ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಈ ಪ್ರದೇಶಗಳು ಗಣನೀಯ ಸಾಧನೆ ಮಾಡಿದ್ದವು. ಇದು ಹೊಸ ಮಾಧ್ಯಮವರ್ಗವೊಂದರ ಹುಟ್ಟಿಗೂ ಕಾರಣವಾಯಿತು. ಈ ವರ್ಗ ಬ್ರಿಟಿಷ್ ಸರಕಾರದೊಂದಿಗೆ ಸಹಕಾರ ಮತ್ತು ಸಹಯೋಗ ನೀತಿಯನ್ನು ಹೊಂದಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿತು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಈ ರೀತಿಯ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅದು ಕೆಲವು ಪ್ರಮುಖ ನಗರ ಕೇಂದ್ರಗಳನ್ನು ಹೊರತುಪಡಿಸಿ ಇನ್ನಳಿದಂತೆ ಹಿಂದುಳಿದ ಪ್ರದೇಶವಾಗಿಯೇ ಗುರುತಿಸಿಕೊಳ್ಳಬೇಕಾಯಿತು. ನಗರ ಕೇಂದ್ರಗಳೂ ಸಹ ಶಿಕ್ಷಣ, ಆರೋಗ್ಯ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿಲ್ಲ. ಈ ಪ್ರಾದೇಶಿಕ ಅಸಮತೋಲನ ವಸಾಹತು ಆಳ್ವಿಕೆಯುದ್ದಕ್ಕೂ ಮುಂದುವರಿಯಿತು. ಹಿಂದುಳಿದಿರುವಿಕೆ ಮತ್ತು ಅಭಿವೃದ್ಧಿ ಇವೆರಡೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದು ಚರಿತ್ರೆಯುದ್ದಕ್ಕೂ ಕಂಡುಬರುವ ವಾಸ್ತವ ಸಂಗತಿ. ಇದಕ್ಕೆ ವಸಾಹತು ಕರ್ನಾಟಕವಾಗಲಿ ಅಥವಾ ಏಕೀಕೃತ ಕರ್ನಾಟಕವಾಗಲಿ ಹೊರತಾಗಿರಲು ಸಾಧ್ಯವಿಲ್ಲ.