ನೆಲೆ ನಿಂತ ಹಂತಗಳು

ಈಸ್ಟ್ ಇಂಡಿಯಾ ಕಂಪನಿಯು ೧೭೫೭ರ ಪ್ಲಾಸಿ ಕದನದ ಜಯದ ನಂತರ ಬಂಗಾಳದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಭಾರತವನ್ನು ವಸಾಹತು ನೆಲೆಯನ್ನಾಗಿಸಿಕೊಂಡಿತು. ಹಾಗೆಯೇ ಬ್ರಿಟನ್‌ನ ಸಾಮಾಜಿಕ, ಆರ್ಥಿಕ ಸಂಸ್ಥೆಗಳು ಮತ್ತು ಆಧುನಿಕವಾದ ತಾಂತ್ರಿಕ ಜ್ಞಾನ ವಸಾಹತುವಿನ ಮೇಲೆ ಹಿಡಿತ ಸಾಧಿಸಲು ಕಾರಣವಾದವು. ಈಸ್ಟ್‌ ಇಂಡಿಯಾ ಕಂಪನಿಯು ಸಹ ಪ್ರಪಂಚದ ಇತರ ಬಂಡವಾಳ ಏಕಸ್ವಾಮ್ಯದ ಸಂಸ್ಥೆಗಳಂತೆ ವಿದೇಶಗಳಲ್ಲಿ ದೊರೆಯುವ ವಸ್ತುಗಳಿಂದ ಅಧಿಕ ಲಾಭ ಪಡೆಯುವ ಉದ್ದೇಶ ಹೊಂದಿತ್ತು. ಆದ್ದರಿಂದ ಇಂಗ್ಲೆಂಡ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇರುವ ವಸ್ತುಗಳ ದೊರೆಯುವಿಕೆಯ ಮೇಲೆ ಹತೋಟಿ ಹೊಂದಲು ಅನೇಕ ವಿಧಾನಗಳನ್ನು ಅಳವಡಿಸಿಕೊಂಡಿತು. ಮೊದಲು ತನ್ನ ನೌಕಾ ಶಕ್ತಿಯನ್ನು ಕರಾವಳಿಗುಂಟ ಬಲಗೊಳಿಸಿ, ಪ್ಲಾಸಿ ಕದನದ ನಂತರ ಬಂಗಾಳ, ಬಿಹಾರ್ ಮತ್ತು ಒರಿಸ್ಸಾ ಪ್ರಾಂತ್ಯಗಳನ್ನು ತನ್ನ ಹತೋಟಿಗೆ ಪಡೆದು ಅಲ್ಲಿನ ಸ್ಥಳೀಯ ನವಾಬರು, ಜಮೀನ್ದಾರರು ಮತ್ತಿತರ ಮುಖ್ಯಸ್ಥರ ಬಳಿಯಿದ್ದ ಸಂಪತ್ತನ್ನು ದೋಚಿತು. ಇದರ ಪರಿಣಾಮವೆಂದರೆ ಪ್ಲಾಸಿ ಕದನಕ್ಕಿಂತ ಮೊದಲು ಬ್ರಿಟನ್ ಭಾರತ ದೇಶದೊಂದಿಗೆ ವ್ಯಾಪಾರ ಮಾಡಲೂ ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಉಪಯೋಗಿಸುತ್ತಿತ್ತು. ಆದರೆ ೧೭೫೭ರ ನಂತರ ಈ ಲೋಹಗಳನ್ನು ಉಪಯೋಗಿಸದೆ ಕಂಪನಿಯ ವರ್ತಕರು ಭಾರತೀಯ ಉತ್ಪಾದಕರ ಮೇಲೆ ನೀತಿ ನಿಯಮಗಳನ್ನು ಹೇರಲಾರಂಭಿಸಿದರು. ಹೀಗಾಗಿ ಪ್ರತಿವರ್ಷ ಭಾರತದ ಸಂಪತ್ತು ಇಂಗ್ಲೆಂಡ್‌ಗೆ ಹರಿದು ಇಂಗ್ಲೆಂಡ್ ಶ್ರೀಮಂತವಾಯಿತು. ವಸಾಹತುವಿನ ಪ್ರಮುಖ ಸಿದ್ದಾಂತ ಆರ್ಥಿಕ ಸುಲಿಗೆ, ಆರ್ಥಿಕ ಸುಲಿಗೆಯನ್ನು ವ್ಯವಸ್ಥಿತವಾಗಿ ಮುಂದುವರಿಸಲು ರಾಜಕೀಯ ನಿಯಂತ್ರಣವು ಅವಶ್ಯಕವಾದುದರಿಂದ ಬ್ರಿಟಿಷರು ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು. ಆರ್‌. ಪಿ. ದತ್‌ರವರು ತಮ್ಮ ಅಮೂಲ್ಯ ಕೃತಿ “ಇಂಡಿಯಾ ಟುಡೆ” ಗ್ರಂಥದಲ್ಲಿ ಕಾರ್ಲ್‌‌ಮಾರ್ಕ್ಸ್‌‌ರವರ ಮೂರು ಹಂತದ ಬ್ರಿಟಿಷ್ ವಸಾಹತು ನೀತಿ ಮತ್ತು ಆರ್ಥಿಕ ಶೋಷಣೆಯ ಅಂಶವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲ ಹಂತವು ೧೭೫೭ ರಿಂದ ೧೮೫೩ ರವರೆಗಿನ ವ್ಯಾಪಾರಿ ಪ್ರವೃತ್ತಿಯ ಹಂತ ಈ ಹಂತದಲ್ಲಿ ಈಸ್ಟ್‌ಇಂಡಿಯಾ ಕಂಪನಿಯೂ ಇಂಗ್ಲೆಂಡ್ ಮತ್ತು ಯುರೋಪಿನ ದೇಶಗಳಿಗೆ ರಫ್ತಾಗುವ ಸಿದ್ಧವಸ್ತುಗಳ ಬೆಲೆಯನ್ನು ಸಂಪೂರ್ಣವಾಗಿ ಇಳಿಸಿ ಭಾರತದ ವ್ಯಾಪಾರದ ಮೇಲೆ ತನ್ನ ಹತೋಟಿ ಪಡೆದು ಭಾರತದ ಸಂಪತ್ತನ್ನು ನೇರವಾಗಿ ಸೂರೆಗೈದಿತು. ಈ ಹಂತದಲ್ಲಿ ಬಂಗಾಳ ಮತ್ತಿತರ ಪ್ರಾಂತ್ಯಗಳ ಆದಾಯದ ಹೆಚ್ಚಿನ ಭಾಗವನ್ನು ಭಾರತದ ಸಿದ್ಧವಸ್ತುಗಳನ್ನು ಕೊಂಡು ಇಂಗ್ಲೆಂಡ್‌ಗೆ ರಫ್ತುಮಾಡಲು ಉಪಯೋಗಿಸಿತು. ಎರಡನೇ ಹಂತವು ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ೧೮೧೩ ರಿಂದ ೧೮೫೮ ರವರೆಗೆ ಅನುಸರಿಸಿದ ಮುಕ್ತ ವ್ಯಾಪಾರಿ ನೀತಿ. ಈ ಹಂತದಲ್ಲಿ ಬ್ರಿಟನ್‌ನ ಕೈಗಾರಿಕೆಗಳಲ್ಲಿ ಸಿದ್ಧಗೊಂಡ ವಸ್ತುಗಳ ವ್ಯಾಪಾರಿ ಮಾರುಕಟ್ಟೆಯಾಗಿ ಭಾರತವು ಬದಲಾಯಿತು. ಹಾಗೆಯೇ ಇಂಗ್ಲೆಂಡ್‌ನ ಕೈಗಾರಿಕೆಗೆ ಅವಶ್ಯವಾದ ಕಚ್ಚಾವಸ್ತುಗಳ ಪೂರೈಕೆಯ ದೇಶವಾಯಿತು. ಈ ಹಂತದಲ್ಲಿ ಬ್ರಿಟನ್ ಯಾವ ರೀತಿ ಶೋಷಣೆಗೆ ಈಡು ಮಾಡಿತೆಂದರೆ ಶತಮಾನಗಳಿಂದ ಭಾರತವು ಪ್ರಪಂಚಕ್ಕೆಲ್ಲಾ ಹತ್ತಿಯ ಮತ್ತಿತರ ಸಿದ್ಧ ವಸ್ತುಗಳ್ನು ರಫ್ತು ಮಾಡುತ್ತಿದ್ದುದು ೧೮೫೦ರ ವೇಳೆಗೆ ಬ್ರಿಟನ್‌ನ ಸಿದ್ಧ ವಸ್ತುಗಳ ೧/೪ ಭಾಗವನ್ನು ಆಮದು ಮಾಡಿಕೊಳ್ಳುವಂತಾಯಿತು.

೧೮೧೩ರಿಂದ ಕಂಪನಿಯು ಭಾರತದೊಂದಿಗಿನ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿತು ಮತ್ತು ೧೮೩೩ರಲ್ಲಿ ಕಂಪನಿಯು ಭಾರತದೊಂದಿಗಿನ ವ್ಯಾಪಾರಿ ಚಟುವಟಿಕೆಗಳ ಮೇಲೆ ಸಂಪೂರ್ಣ ತಡೆ ಹಾಕಿತು. ನಂತರ ಭಾರತವು ಬ್ರಿಟನ್ ವ್ಯಾಪಾರಿ, ಕೈಗಾರಿಕಾ ಬಂಡವಾಳ ವರ್ಗದ ಶೋಷಣೆಗೆ ತೆರೆಯಲ್ಪಟ್ಟಿತು. ಈ ವರ್ಗವು ಕಚ್ಚಾ ವಸ್ತುಗಳನ್ನು ಕೊಂಡು ಹೋಗಿ ಸಿದ್ಧವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿತು ಮತ್ತು ಈ ವರ್ಗವು ತನ್ನ ಬ್ರಿಟನ್‌ನ ಕೈಗಾರಿಕಾ ಕಾರ್ಮಿಕರಿಗೆ ಅವಶ್ಯಕವಾದ ಆಹಾರ ಪದಾರ್ಥಗಳನ್ನು ಕೊಂಡ್ಯೊಯ್ಯಲು ಪ್ರಾರಂಭಿಸಿತು. ಈ ಕಾರಣದಿಂದ ೧೯ನೇ ಶತಮಾನದಲ್ಲಿ ಕ್ಷಾಮಗಳು ಸಂಭವಿಸಿ ಸುಮಾರು ೨೦ ದಶಲಕ್ಷ ಜನರ ಸಾವು ನೋವಿಗೆ ಕಾರಣವಾಯಿತು. ೧೮೬೦ರ ನಂತರದ ಮೂರನೇ ಹಂತ ಬ್ರಿಟಿಷ್ ವಸಾಹತು ನೀತಿಯನ್ನು ಆರ್ಥಿಕ ಬಂಡವಾಳ ಹೂಡುವಿಕೆ ಎಂದು ಕರೆಯುತ್ತಾರೆ. ೧೮೫೭ರ ದಂಗೆಯಲ್ಲಿ ಭಾರತೀಯರು ಅದರಲ್ಲೂ ರೈತ ವರ್ಗವು ತೋರಿಸಿದ ವಿರೋಧವು ಬ್ರಿಟನ್‌ನ ವಸಾಹತು ನೀತಿಗಳ ವಿರುದ್ಧವೇ ಆಗಿತ್ತು. ದಂಗೆಯ ನಂತರ ಬ್ರಿಟಿಷರಿಗೂ ಮತ್ತು ಭಾರತೀಯರಿಗೂ ಸಂಘರ್ಷ ಪ್ರಾರಂಭವಾಯಿತು. ಆದ್ದರಿಂದ ಭಾರತೀಯರ ವ್ಯಾಪಾರ ಮತ್ತು ಸಾಮಾಜಿಕ ಅವಶ್ಯಕತೆಗಳಾದ ರಸ್ತೆ ಮತ್ತು ರೈಲ್ವೆ, ಅಂಚೆ ಮತ್ತು ತಂತಿ, ಬ್ಯಾಂಕ್ ಮತ್ತಿತರ ಸಂಸ್ಥೆಗಳು ಅಭಿವೃದ್ಧಿಗೊಂಡವು. ಈ ಕ್ರಮಗಳು ಬ್ರಿಟನ್ನಿನ ಬಂಡವಾಳಸ್ಥರಿಗೆ ಭಾರತದಲ್ಲಿ ಬಂಡವಾಳ ಹೂಡಲು ಪ್ರೋತ್ಸಾಹ ದೊರೆಯಿತು. ಈ ಬಂಡವಾಳದ ಪರಿಣಾಮವಾಗಿ ಭಾರತದ ಸಾಲವು ಪ್ರತಿವರ್ಷ ಹೆಚ್ಚುತ್ತಾ ಹೋಯಿತು. ಹೀಗೆ ಭಾರತದ ಬಂಡವಾಳ ಮತ್ತು ಕೈಗಾರಿಕಾ ಬೆಳವಣಿಗೆಯ ಬಗ್ಗೆ ಹತೋಟಿ ಹೊಂದಿರಲು “ನಿರ್ವಾಹಕ ಮಂಡಳಿ” ವ್ಯವಸ್ಥೆಯನ್ನು ಜಾರಿಗೆ ತಂದರು. ಹೀಗೆ ಈ ಮೂರನೇ ಹಂತದಲ್ಲಿ ಭಾರತವು ಬ್ರಿಟನ್‌ನ ನಿಜವಾದ ವಸಾಹತು ದೇಶವಾಯಿತು.

ವ್ಯಾಪಾರ ಮತ್ತು ವಾಣಿಜ್ಯ

ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿಯು ೧೬೦೦ ರಿಂದ ೧೭೫೭ ರವರೆಗೆ ಒಂದು ವಾಣಿಜ್ಯ ಸಂಸ್ಥೆಯಾಗಿ ವಸ್ತುಗಳನ್ನು ಮತ್ತು ಅಮೂಲ್ಯ ಲೋಹಗಳನ್ನು ಭಾರತಕ್ಕೆ ತಂದು ಅದಕ್ಕೆ ಪರಿವರ್ತನೆಯಾಗಿ ಭಾರತದ ವಸ್ತುಗಳಾದ ಬಟ್ಟೆ ಮತ್ತು ಸಾಂಬಾರ ಪದಾರ್ಥಗಳನ್ನು ಕೊಂಡು ಹೊರದೇಶದಲ್ಲಿ ಮಾರಾಟ ಮಾಡುತ್ತಿತ್ತು. ಕಂಪನಿಯ ಪ್ರಮುಖ ಆದಾಯದ ಮೂಲವೆಂದರೆ ಭಾರತೀಯ ವಸ್ತುಗಳಾಗಿದ್ದವು. ಹೀಗಾಗಿ ಬ್ರಿಟನ್ ಮತ್ತಿತರ ದೇಶಗಳಲ್ಲಿ ಭಾರತೀಯ ವಸ್ತುಗಳಿಗೆ ಮಾರುಕಟ್ಟೆ ಸ್ಥಾಪಿಸಿಕೊಂಡಿತು. ಆದಕಾರಣ ಭಾರತೀಯ ವಸ್ತುಗಳ ರಫ್ತನ್ನು ಹೆಚ್ಚಿಸಿತು ಮತ್ತು ಉತ್ಪಾದನೆಗೆ ಪ್ರೋತ್ಸಾಹ ನೀಡಿದರು. ಆದರೆ ಮೊದಲಿನಿಂದ ಬ್ರಿಟನ್‌ನ ಉತ್ಪಾದಕರು ಭಾರತೀಯ ಬಟ್ಟೆಯು ಬ್ರಿಟನ್‌ನಲ್ಲಿ ಪ್ರಸಿದ್ದಿಯಾದುದನ್ನು ಕಂಡು ಈರ್ಷೆ ಉಂಟಾಗಿತ್ತು. ರಾಬಿನ್‌ಸನ್‌ ಕ್ರೋಸೊ ಕಾದಂಬರಿಯ ಕರ್ತೃ ಈ ರೀತಿಯಾಗಿ ಆಪಾದನೆ ಮಾಡಿದ್ದಾನೆ. “ಭಾರತೀಯ ಬಟ್ಟೆಗಳು ನಮ್ಮ ಮನೆಯ ಎಲ್ಲವನ್ನೂ ಆಕ್ರಮಿಸಿವೆ, ಪರದೆಗಳು, ಪೀಠೋಪಕರಣ ಹೊದಿಕೆಗಳು, ಕೊನೆಗೆ ಹಾಸಿಗೆಯ ಬಟ್ಟೆಯು ಭಾರತದ ಕ್ಯಾಲಿಕೋಟೆ ಆಗಿದೆ” ಬ್ರಿಟನ್‌ನ ಉತ್ಪಾದಕರು ಸರ್ಕಾರದ ಮೇಲೆ ಒತ್ತಡ ತಂದು ಭಾರತೀಯ ವಸ್ತುಗಳ ಮೇಲೆ ನಿರ್ಬಂಧ ಮತ್ತು ನಿಷೇಧವನ್ನು ತಂದರು. ೧೭೨೦ ರಿಂದ ಭಾರತದ ಹತ್ತಿ ಬಟ್ಟೆಯನ್ನು ತೊಡುವುದಾಗಲಿ ಅಥವಾ ಉಪಯೋಗಿಸುವುದನ್ನು ಕಾನೂನಿನ ಮೂಲಕ ನಿಷೇಧಿಸಿತು. ೧೭೬೦ರಲ್ಲಿ ಒಬ್ಬ ಸ್ತ್ರೀಯು ಈ ಕಾನೂನು ಮೀರಿ ಭಾರತದ ಕರವಸ್ತ್ರವನ್ನು ಹೊಂದಿದ್ದಕ್ಕೆ ೨೦೦ ಪೌಂಡ್‌ಗಳ ದಂಡ ವಿಧಿಸಿತು. ಇದರ ಜೊತೆಗೆ ಭಾರತೀಯ ಬಟ್ಟೆಯ ಮೇಲೆ ಅಧಿಕ ತೆರಿಗೆ ವಿಧಿಸಿತು. ಹಾಲೆಂಡ್ ದೇಶವನ್ನು ಹೊರತುಪಡಿಸಿ ಇತರ ಎಲ್ಲಾ ಯುರೋಪಿಯನ್ ದೇಶಗಳು ಭಾರತೀಯ ಬಟ್ಟೆಗಳ ಮೇಲೆ ಅಧಿಕ ಸುಂಕ ವಿಧಿಸಿದವು. ಈ ಎಲ್ಲ ಕಾನೂನು ಕ್ರಮಗಳಿದ್ದರೂ ಭಾರತದ ಹತ್ತಿ ಉದ್ಯಮದ ವಸ್ತುಗಳಿಗೆ ೧೮ ನೇ ಶತಮಾನದ ಮಧ್ಯದವರೆಗೂ ಬೇಡಿಕೆ ಇತ್ತು. ಆದರೆ ನಂತರ ಬ್ರಿಟನ್‌ನ ಬಟ್ಟೆ ಉದ್ಯಮವು ಆಧುನಿಕ ತಾಂತ್ರಿಕ ಜ್ಞಾನವನ್ನುಪಯೋಗಿಸಿ ಬಟ್ಟೆ ಉತ್ಪನ್ನ ಹೆಚ್ಚಿಸಿತು ಹಾಗೂ ಇಂಗ್ಲೆಂಡ್‌ನಲ್ಲಿ ವೇಷಭೂಷಣದಲ್ಲಾದ ತತ್‌ಕ್ಷಣದ ಬದಲಾವಣೆ ಮತ್ತು ಹಗುರವಾದ ಹತ್ತಿ ಬಟ್ಟೆಯ ಬದಲು ಉಣ್ಣೆ ಬಟ್ಟೆಯನ್ನು ತೊಡುವಂತಾದುದು ಸಹ ಭಾರತೀಯ ವಸ್ತುಗಳಿಗೆ ಬೇಡಿಕೆ ಕಡಿಮೆಯಾಯಿತು.

ಭಾರತೀಯ ವಸ್ತುಗಳು ೧೭೫೦-೫೧ರಲ್ಲಿ ೧.೫ ದಶಲಕ್ಷ ಪೌಂಡ್ ರಪ್ತು ಇದ್ದುದು. ೧೭೯೭-೯೮ರಲ್ಲಿ ೫.೮ ದಶಲಕ್ಷ ಹೆಚ್ಚಿತು. ಆದರೆ ಕಂಪನಿಯು ತಾನು ಬಂಗಾಳದಲ್ಲಿ ಹೊಂದಿದ್ದ ರಾಜಕೀಯ ಅಧಿಕಾರವನ್ನುಪಯೋಗಿಸಿ ಬಂಗಾಳ ನೇಯ್ಗೆಗಾರರು ಬಲವಂತವಾಗಿ ತಮ್ಮ ಉತ್ಪಾದನೆಗಳನ್ನು ಕಡಿಮೆ ಬೆಲೆಗೆ ಮತ್ತು ಕೆಲವು ವೇಳೆ ನಷ್ಟ ಮಾಡಿಕೊಂಡು ಮಾರುವಂತಹ ಷರತ್ತುಗಳನ್ನು ವಿಧಿಸಿತು. ಅನೇಕ ನೇಯ್ಗೆಗಾರರನ್ನು ಕಂಪನಿಗೆ ಕಡಿಮೆ ಕೂಲಿಗೆ ದುಡಿಯುವಂತೆ ಬಲಾತ್ಕರಿಸಲಾಯಿತು ಮತ್ತು ಭಾರತದ ವರ್ತಕರಲ್ಲಿ ಅವರು ದುಡಿಯಲು ನಿರ್ಬಂಧ ವಿಧಿಸಿತು. ಬಂಗಾಳ ಕರಕುಶಲಗಾರರಿಗೆ ಹೆಚ್ಚಿನ ವೇತನ ನೀಡುತ್ತಿದ್ದ ಭಾರತೀಯ ಮತ್ತು ವಿದೇಶಿ ವರ್ತಕರ ಪೈಪೋಟಿಯನ್ನು ಸಂಪೂರ್ಣವಾಗಿ ನಿವಾರಿಸಿತು. ಕಂಪನಿಯ ಉದ್ಯೋಗಿಗಳು ಕಚ್ಚಾ ಹತ್ತಿಯ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿದ್ದು ಬಂಗಾಳದ ನೇಯ್ಗೆಗಾರರು ಹೆಚ್ಚಿನ ಬೆಲೆ ಕೊಡುವಂತೆ ಮಾಡಿದರು. ಕೊನೆಗೆ ಭಾರತವು ಸಿದ್ಧ ವಸ್ತುವನ್ನು ರಪ್ತು ಮಾಡುವ ಬದಲು ಕಚ್ಚಾ ವಸ್ತುಗಳಾದ ಹತ್ತಿ, ರೇಷ್ಮೆ ಮತ್ತಿತರ ವಸ್ತುಗಳನ್ನು ಬ್ರಿಟನ್‌ನ ಕೈಗಾರಿಕೆಗಳು ಕಳುಹಿಸುವಂತಾಯಿತು. ಹಾಗೆಯೇ ಪ್ಲಾಂಟೇಶನ್ ವಸ್ತುಗಳಾದ ಇಂಡಿಗೊ ಮತ್ತು ಟೀ ಜೊತಗೆ ಇಂಗ್ಲೆಂಡ್‌ಗೆ ಕೊರತೆಯಿದೆ ಆಹಾರ ಧಾನ್ಯಗಳನ್ನು ಕಳುಹಿಸುತ್ತಿತ್ತು. ೧೮೫೬ರಲ್ಲಿ ಭಾರತವು ೪,೩೦೦,೦೦ ಪೌಂಡ್ ಕಚ್ಚಾಹತ್ತಿ ಮತ್ತು ಕೇವಲ ೪,೧೦,೦೦೦ ಪೌಂಡ್ ಹತ್ತಿ ಸಿದ್ಧವಸ್ತುಗಳನ್ನು ೨,೯೦೦, ೦೦೦ ಪೌಂಡ್ ಕಚ್ಚಾ, ರೇಷ್ಮೆಯನ್ನು ರಫ್ತು ಮಾಡಿತು. ಬ್ರಿಟನ್ ಇಂಡಿಯಾದಲ್ಲಿ ದೊರೆಯುವ ಅಫೀಮನ್ನು ಚೀನ ಸರ್ಕಾರವು ನಿಷೇಧಿಸಿದ್ದರೂ ಮಾರಾಟ ಮಾಡಿ ಅಧಿಕ ಲಾಭ ಸಂಪಾದಿಸುತ್ತಿತ್ತು. ಆದರೆ ಬ್ರಿಟನ್ ಅಫೀಮಿನ ದುಷ್ಪರಿಣಾಮಗಳನ್ನು ಮನಗಂಡು ತನ್ನ ದೇಶಕ್ಕೆ ಮಾತ್ರ ವಸ್ತುಗಳೆಂದರೆ ಕಚ್ಚಾ ಹತ್ತಿ, ಸೆಣಬು, ರೇಷ್ಮೆ, ಎಣ್ಣೆ ಕಾಳುಗಳು, ಗೋಧಿ, ಚರ್ಮ ಇಂಡಿಗೊ ಮತ್ತು ಟೀ.

ಸೂಯೆಜ್ ಕಾಲುವೆಯ ತೆರೆಯುವಿಕೆಯೊಡನೆ ಕಡಲಾಚೆಯ ವ್ಯಾಪಾರ ಭಾರಿ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿತು. ೧೮೫೫-೬೦ರಲ್ಲಿ ಭಾರತದ ವ್ಯಾಪಾರದ ಸರ್ಕಾರಿ ವಾರ್ಷಿಕ ಮೌಲ್ಯ ೫೨ ಲಕ್ಷಗಳಾಗಿದ್ದವು. ಸೂಯೆಜ್ ಕಾಲುವೆಯು ತೆರೆದ ೧೮೬೯ ರಿಂದ ಆರಂಭದ ಐದು ವರ್ಷಗಳಲ್ಲಿ ಆಮದು ರಫ್ತುಗಳ ಸರಾಸರಿ ವಾರ್ಷಿಕ ಮೌಲ್ಯ ಸುಮಾರು ೯೦ ಕೋಟಿಗಳನ್ನು ಮೀರಿತು. ೧೯೦೦ರಲ್ಲಿ ಸರಾಸರಿ ೨೦ ಕೋಟಿಗಳನ್ನು ಮೀರಿದ್ದರೆ ಅದು ೧೯೨೮-೨೯ರಲ್ಲಿ ೬೦೦ ಕೋಟಿಗಳನ್ನು ಮೀರಿತ್ತು. ಆಮದು ರಫ್ತುಗಳ ಸ್ವರೂಪವೂ ಬದಲಾವಣೆಗೊಂಡಿತು. ವಿದೇಶಿ ವ್ಯಾಪಾರದಲ್ಲಿನ ಭಾರಿ ಪ್ರಮಾಣ ದೇಶದ ಒಳಭಾಗದ ವ್ಯಾಪಾರದ ವಿಸ್ತರಣೆಗೆ ಕಾರಣವಾಯಿತು. ದುಬಾರಿಯಾಗಿದ್ದ ಅಂತರ್ದೇಶೀಯ ಸಾಗಣೆ ತೆರಿಗೆಗಳನ್ನು ಕ್ರಮೇಣ ರದ್ದುಪಡಿಸಿದುದು ಮತ್ತು ಸಾರಿಗೆ ಹಾಗೂ ಸಂಪರ್ಕ ಮಾಧ್ಯಮಗಳು ಅಭಿವೃದ್ಧಿಗೊಂಡುದು ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿತು. ಬಹುದೀರ್ಘಕಾಲದವರೆಗೆ ಬ್ರಿಟನ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ಆದರೆ ೧೯ನೇ ಶತಮಾನದ ಮುಕ್ತಾಯದ ವೇಳೆಗೆ ಜಪಾನ್, ಜರ್ಮನಿ ಮತ್ತು ಅಮೇರಿಕಾ ಇತರ ರಾಷ್ಟ್ರಗಳು ಭಾರತೀಯ ವ್ಯಾಪಾರದಲ್ಲಿ ಅದರ ಪ್ರತಿಸ್ಪರ್ಧಿಗಳಾಗಿ ತಲೆಯೆತ್ತಿದವು ಮತ್ತು ಅವುಗಳ ವ್ಯಾಪಾರ ಅಧಿಕಗೊಂಡಿತು. ೧೯೧೪-೧೮ ರವರೆಗಿನ ಮೊದಲ ಮಹಾಯುದ್ಧದ ಪರಿಣಾಮವಾಗಿ ಆಮದು ವ್ಯಾಪಾರ ಕಡಿಮೆಯಾಯಿತು. ಆದರೆ ಯುದ್ಧ ಮುಗಿದ ನಂತರ ಕೆಲವು ಅನುಕೂಲಕರ ಅಂಶಗಳಿಂದಾಗಿ ಇತರ ರಾಷ್ಟ್ರಗಳಲ್ಲಾದಂತೆ ಭಾರತದಲ್ಲಿಯೂ ವ್ಯಾಪಾರೋತ್ಕರ್ಷವಾಯಿತು ಮತ್ತು ಅನಂತರ ಕುಸಿತವು ಉಂಟಾಯಿತು.

೧೯೩೨-೩೩ರಲ್ಲಿ ರಫ್ತು ವ್ಯಾಪಾರದ ಮೌಲ್ಯ ೧೩೮ ಕೋಟಿಗೆ ಇಳಿಯಿತು ಮತ್ತು ಆಮದು ವ್ಯಾಪಾರ ೧೯೩೩-೩೪ರಲ್ಲಿ ಅತ್ಯಂತ ಕನಿಷ್ಠ ಮಟ್ಟವಾದ ೧೧೭ ಕೋಟಿ ರೂ.ಗಳ ಮಟ್ಟ ತಲುಪಿತು. ಅಲ್ಪಕಾಲದಲ್ಲಿಯೇ ಪೂರ್ವ ಸ್ಥಿತಿ ತಲುಪಿತು. ೧೯೩೪-೩೫ ರಫ್ತು ವ್ಯಾಪಾರದ ಮೌಲ್ಯ ೧೫೫ ಕೋಟಿ ರೂ.ಗಳಿಗೂ ಆಮದು ವ್ಯಾಪಾರದ ಮೌಲ್ಯ ೧೩೫ ಕೋಟಿ ರೂ. ಗಳಿಗೂ ಹೆಚ್ಚಿತು.

೧೯೧೪-೧೮ ರ ಯುದ್ಧಕ್ಕೆ ಮೊದಲು ಭಾರತದ ವಿದೇಶಿ ವ್ಯಾಪಾರ ಬ್ರಿಟನ್‌ನಿಂದ ಯುರೋಪಿನ ಇತರ ರಾಷ್ಟ್ರಗಳತ್ತ ತಿರುಗುವ ಪ್ರವೃತ್ತಿ ಕಂಡುಬಂದಿತು. ಯುದ್ಧ ಕಾಲದಲ್ಲಿ ಬ್ರಿಟನ್ ಆಮದು ವ್ಯಾಪಾರದ ಪರಿಮಾಣ ಕಡಿಮೆಯಾದರೂ ರಫ್ತು ವ್ಯಾಪಾರದಲ್ಲಿ ತನ್ನ ಹೆಚ್ಚಿನ ಭಾಗವನ್ನು ಮರಳಿ ಗಳಿಸಿಕೊಂಡಿತು. ಇದಕ್ಕೆ ಅಮೇರಿಕಾ, ಜಪಾನ್ ಮತ್ತು ಮಧ್ಯೆ ಯುರೋಪಿನ ರಾಷ್ಟ್ರಗಳ ತೀವ್ರ ಪೈಪೋಟಿಯೇ ಕಾರಣವಾಗಿತ್ತು. ಬ್ರಿಟನ್‌ನ ಆಮದು ವ್ಯಾಪಾರ ೧೯೧೩-೧೪ರಲ್ಲಿ ಶೇ ೬೪ ಭಾಗಕ್ಕೆ ಹೋಲಿಸಿದರೆ ೧೯೩೪-೩೫ರಲ್ಲಿ ಅದು ಶೇ. ೪೦.೬ ಇತ್ತು. ಅಂದರೆ ಬ್ರಿಟನ್ ಜೊತೆಗೆ ಬೇರೆ ದೇಶಗಳು ಸಹ ಭಾರತದಲ್ಲಿ ಸಿದ್ಧ ವಸ್ತುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಕಟ್ಟಿಕೊಂಡು ಬ್ರಿಟಿಷರಿಗೆ ಪ್ರತಿಸ್ಪರ್ಧಿಗಳಾಗಿದ್ದರು. ಭಾರತದ ವಿದೇಶಿ ವ್ಯಾಪಾರದ ಜೊತೆಗೆ ಅದರ ಆಂತರಿಕ ವ್ಯಾಪಾರದಲ್ಲಿ ಅಂತರ್ದೇಶೀಯ ವ್ಯಾಪಾರವು ಬ್ರಿಟಿಷರು ಕೈಗೊಂಡ ಗಂಗಾನದಿಯಲ್ಲಿನ ನೌಕಾಯಾನದ ವ್ಯವಸ್ಥೆ, ಉತ್ತಮ ರಸ್ತೆ, ರೈಲು ಮಾರ್ಗ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ಬೆಳವಣಿಗೆಗೊಂಡಿತು. ಬರ್ಮಾದೊಡನೆಯ ಕರಾವಳಿ ವ್ಯಾಪಾರವೂ ವಿಶೇಷವಾಗಿ ಮುಖ್ಯವಾಗಿದೆ.

ವಾಣಿಜ್ಯ ಚಟುವಟಿಕೆಯ ಬಗ್ಗೆ ವಿಶೇಷ ಗಮನಹರಿಸಲು ವಾಣಿಜ್ಯ ಇಂಟೆಲಿಜೆನ್ಸ್ ಮತ್ತು ಅಂಕಿ ಸಂಖ್ಯೆಗಳ ಇಲಾಖೆಗಳಲ್ಲದೆ ಲಂಡನ್ ಮತ್ತು ಹ್ಯಾಂಬರ್ಗ್‌ಗಳಲ್ಲಿ ಇಂಡಿಯನ್ ಟ್ರೇಡ್ ಕಮಿಷನರುಗಳಿದ್ದರೂ ಯುರೋಪಿಯನ್ ಹಾಗೂ ಭಾರತೀಯ ಛೇಂಬರ್ಸ್‌ ಆಫ್ ಕಾಮರ್ಸನಂಥ ಅಧೀಕಾರೇತರ ಸಂಘ ಸಂಸ್ಥೆಗಳು ವ್ಯಾಪಾರದ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದವು.

ಎರಡನೆಯ ಮಹಾಯುದ್ಧ ವಾಸ್ತವವಾಗಿ ಭಾರತದ ವ್ಯಾಪಾರದ ಮೇಲೆ ಪರಿಣಾಮಕಾರಿ ಪ್ರಭಾವ ಬೀರಿತು. ೧೯೩೮-೩೯ರ ಯುದ್ಧ ಪೂರ್ವ ವರ್ಷದೊಡನೆ ಹೋಲಿಸಿದಲ್ಲಿ ರಫ್ತಿನಲ್ಲಿ ಶೇ. ೩೮ ಭಾಗ, ಆಮದಿನಲ್ಲಿ ಶೇ. ೭೦ ಭಾಗ ಕಡಿಮೆಯಾಗಿತ್ತು. ೧೯೪೩-೪೪ರಲ್ಲಿ ಭಾರತದ ವ್ಯಾಪಾರ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಣೆಗೊಂಡಿತು. ಭಾರತದ ರಫ್ತು ವ್ಯಾಪಾರದ ಸ್ಥಿತಿಯೂ ಬದಲಾವಣೆಗೊಂಡು ಸಿದ್ಧವಸ್ತುಗಳ ರಫ್ತಿನಲ್ಲಿನ ಹೆಚ್ಚಳವು, ಕಚ್ಚಾವಸ್ತುಗಳ ರಫ್ತಿನಲ್ಲಿ ಕುಸಿತವು ಉಂಟಾಗಿತ್ತು. ೧೯೩೮ರಲ್ಲಿ ರಫ್ತಿನಲ್ಲಿ ಸಿದ್ಧಗೊಳಿಸಿದ ವಸ್ತುಗಳ ಭಾಗ ಶೇ. ೩೦.೫ ಭಾಗವಿತ್ತು. ೧೯೪೪ರಲ್ಲಿ ಇದೇ ರಫ್ತಿನ ಪ್ರಮಾಣ ಸಿದ್ಧಪಡಿಸಿದ ಸರಕುಗಳು ಶೇ. ೫೧.೫ ಮತ್ತು ಕಚ್ಚಾ ವಸ್ತುಗಳು ಹಾಗೂ ಆಹಾರ ವಸ್ತುಗಳ ರಫ್ತು ಕ್ರಮವಾಗಿ ಶೇ. ೨೪.೭ ಮತ್ತು ೨೨.೫ ಭಾಗ ಮಾತ್ರ ಇತ್ತು.

೧೯೪೫ ರ ಭಾರತದ ಒಟ್ಟು ವ್ಯಾಪಾರವಾದ ೪೮೧.೯ ಕೋಟಿಗಳೊಡನೆ ಹೋಲಿಸಿದಲ್ಲಿ ೧೯೪೬ರಲ್ಲಿ ಅದರ ಮೌಲ್ಯ ೫೬೬.೨ ಕೋಟಿ ರೂ. ಗಳಾಗಿದ್ದು. ಆಮದಿಗಿಂತ ರಫ್ತಿನಲ್ಲಿ ಹೆಚ್ಚಳ ಅಧಿಕವಾಗಿತ್ತು. ತಯಾರಿಸಿದ ವಸ್ತುಗಳ ಆಮದು ಸಹ ೧೯೪೪ರಲ್ಲಿ ಶೇ. ೩೧.೯ ಇದ್ದುದು ೧೯೪೬ರಲ್ಲಿ ೫೫.೪ ಕ್ಕೆ ಏರಿತು. ಆದರೆ ಕೆಲವು ಅಂಶಗಳಿಂದಾಗಿ ಆಮದನ್ನು ಕಡಿಮೆ ಮಾಡುವ ಸಲುವಾಗಿ ೧೯೪೭ ರ ಮೇ ಮತ್ತು ಜುಲೈನಲ್ಲಿ ಆಮದು ನಿಯಂತ್ರಣ ಆದೇಶವನ್ನು ಹೊರಡಿಸಲಾಯಿತು. ಅಮೇರಿಕಾದ ಜೊತೆ ಹೆಚ್ಚೆಚ್ಚು ಭಾರತ ವ್ಯಾಪಾರಕ್ಕೆ ತೊಡಗಿತು. ಅಮೇರಿಕಾದ ವಸ್ತುಗಳ ಅಮದು ೧೯೩೮-೩೯ರಲ್ಲಿ ೯೭೮ ಲಕ್ಷಗಳಿದ್ದು ೧೯೪೫-೪೯ ರ ವೇಳೆಗೆ ೬೭೪೦ ಲಕ್ಷ ಗಳಿಗೇರಿತು. ಇದೇ ಅವಧಿಯಲ್ಲಿ ಬ್ರಿಟನ್‌ನೊಂದಿಗೆ ಆಮದು ೮,೮೫೬ ಲಕ್ಷಗಳಿಂದ ೧೦,೧೮೫ ಲಕ್ಷಗಳಿಗೇರಿತು.

ಕೃಷಿ ಅಭಿವೃದ್ಧಿ: ವಸಾಹತುಪೂರ್ವ ಭಾರತವು ಕೃಷಿಯಾಧಾರಿತ ಆರ್ಥಿಕತೆಯನ್ನೊಂದಿದ್ದು, ಬಹುಪಾಲು ಜನರ ಉದ್ದೋಗವು ಆಗಿತ್ತು ಮತ್ತು ಕೈಗಾರಿಕೆಗಳಾದ ಹತ್ತಿ ಕೈಗಾರಿಕೆಗಾಳಾದ ಹತ್ತಿ ಕೈಗಾರಿಕೆ, ಸಕ್ಕರೆ, ಎಣ್ಣೆ ಮುಂತಾದ ಕೈಗಾರಿಕೆಗಳು ಕೃಷಿಯನ್ನವಲಂಬಿಸಿದ್ದವು. ಆದರೆ ಬ್ರಿಟೀಷರು ತಮ್ಮ ಆಡಳಿತದಲ್ಲಿ ತಂದ ಭೂ ಒಡೆತನ, ಭೂಕಂದಾಯ ವಿಧಿಸುವಿಕೆ ಮತ್ತು ವಸೂಲಾತಿಯ ಬಗ್ಗೆ ಕೈಗೊಂಡ ಕ್ರಮಗಳು ಹಿಂದಿನ ಭಾರತದ ಕೃಷಿ ವ್ಯವಸ್ಥೆಯಾದ ಗ್ರಾಮೀಣ ಸ್ವಾವಲಂಬನೆಯ ತತ್ವವನ್ನೇ ನಾಶ ಮಾಡಿತು. ಬ್ರಿಟಿಷ್ ಕಂಪನಿಯು ಭಾರತೀಯ ಕರಕುಶಲ ವಸ್ತುಗಳು ಮತ್ತಿತರ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮತ್ತು ಭಾರತವನ್ನು ಸಂಪೂರ್ಣವಾಗಿ ಜಯಿಸಲು ಬೇಕಾಗುವ ವೆಚ್ಚಕ್ಕೆ ಭಾರತದ ಭೂಕಂದಾಯವನ್ನೇ ಅವಲಂಬಿಸಿತ್ತು. ಹಾಗೆಯೇ ಭಾರತದಲ್ಲಿ ಸೀಮಿತರಾದ ಬ್ರಿಟಿಷ್ ಅಧಿಕಾರಿಗಳು, ಸೈನಿಕರು ಮುಂತಾದ ವರ್ಗಕ್ಕೆ ಹೆಚ್ಚಿನ ವೇತನ ನೀಡಲು, ವಸಾಹತುವಿನ ಎಲ್ಲ ಹಂತದ ಆಡಳಿತ ವ್ಯವಸ್ಥೆಗೆ ಬೇಕಾದ ವರ್ಗಕ್ಕೆ ಹೆಚ್ಚಿನ ವೇತನ ನೀಡಲು, ವಸಾಹತುವಿನ ಎಲ್ಲ ಹಂತದ ಆಡಳಿತ ವ್ಯವಸ್ಥೆಗೆ ಬೇಕಾದ ಹಣಕ್ಕೆ ಭೂಕಂದಾಯವನ್ನೇ ಅವಲಂಬಿಸಿತ್ತು. ಇದರರ್ಥ ಭಾರತೀಯ ರೈತರ ಮೇಲೆ ಅಧಿಕ ತೆರಿಗೆಯ ಹೊರೆ ವೀಧಿಸುದುದೇ ಆಗಿತ್ತು. ೧೮೧೩ ರವರೆಗೆ ಆದ ಆಡಳೀತಾತ್ಮಕ ಮತ್ತು ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳು ಸಹ ಭೂಕಂದಾಯ ಹೆಚ್ಚಿಸುವ ಉದ್ದೇಶವನ್ನೇ ಹೊಂದಿದ್ದವು. ಹೀಗೆ ಬ್ರಿಟಿಷರ ವ್ಯಾಪಾರಕ್ಕೆ ಬಂಡವಾಳವನ್ನು, ಆಡಳಿತಾತ್ಮಕ ವೆಚ್ಚವನ್ನು ಮತ್ತು ಬ್ರಿಟೀಷರ ವಿಸ್ತರಣಾ ನೀತಿಗೆ ಅವಶ್ಯಕ ಸಂಪತ್ತು ಭಾರತೀಯ ರೈತರಿಂದ ಬರುತ್ತಿತ್ತು. ಹೀಗೆ ಬ್ರಿಟಿಷರು ಭೂಕಂದಾಯವನ್ನು ಹೇರಳವಾಗಿ ಹೆಚ್ಚಿಸದಿದ್ದರೆ ವಿಶಾಲ ಭಾರತವನ್ನು ಗೆಲ್ಲಲಾಗುತ್ತಿರಲಿಲ್ಲ. ಭಾರತದ ರಾಜ್ಯಗಳು ಹಿಂದಿನಿಂದಲೂ ಭೂಕಂದಾಯವನ್ನೆ ಹೆಚ್ಚು ಅವಲಂಬಿಸಿದ್ದ ಆದಾಯ ಮೂಲವಾಗಿದ್ದು ಅದನ್ನು ನೇರವಾಗಿ ಸರ್ಕಾರಿ ಅಧಿಕಾರಿಗಳಿಂದ ಅಥವಾ ಮಧ್ಯವರ್ತಿಗಳಾದ ಜಮೀನ್ದಾರರು, ಮುಂತಾದ ಮಧ್ಯವರ್ತಿಗಳ ಮೂಲಕ ರೈತರಿಂದ ವಸೂಲಿ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಮಧ್ಯವರ್ತಿಗಳ ಮೂಲಕ ರೈತರಿಂದ ವಸೂಲಿ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಮಧ್ಯವರ್ತಿಗಳಿಗೆ ಕಮಿಷನ್ ನೀಡುತ್ತಿದ್ದರು. ಈ ಮಧ್ಯವರ್ತಿಗಳು ಪ್ರಮುಖವಾಗಿ ವಸೂಲಿಗಾರರಾಗಿದ್ದರೂ ಕೆಲವು ವೇಳೆ ಸ್ವತಂತ್ರ ಜಮೀನನ್ನು ಅದೇ ವ್ಯಾಪ್ತಿಯಲ್ಲಿ ಉಳ್ಳವರಾಗಿದ್ದರು.

೧೭೬೫ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯು ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿ ಅಥವಾ ಕಂದಾಯದ ಹತೋಟಿಯನ್ನು ಹೊಂದಿತು. ಪ್ರಾಂತದಲ್ಲಿ ಮೊದಲಿನ ಪದ್ಧತಿಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸಿತು. ಏಕೆಂದರೆ ಹಳೇ ಪದ್ಧತಿಯಿಂದ ಕಂದಾಯ ಸಂಗ್ರಹಣೆಯು ೧೭೨೨ರಲ್ಲಿ ೧,೪೨,೯೦,೦೦೦ ರೂ. ಇದ್ದುದು ೧೭೬೪ರಲ್ಲಿ ೧,೮೧,೮೦,೦೦೦ ರೂ. ಗೆ ಹೆಚ್ಚಿತು. ಮತ್ತು ೧೭೭೧ರಲ್ಲಿ ೨,೩೪,೦೦೦,೦೦ ರೂ. ಗೆ ಹೆಚ್ಚಿತು. ಹೀಗೆ ಕಂದಾಯವು ಹಳೆಯ ಪದ್ಧತಿಯಿಂದ ಹೆಚ್ಚಿದರೂ ವಾರನ್ ಹೇಸ್ಟಿಂಗ್ಸ್‌ನು ಹರಾಜಿನ ಮೂಲಕ ಹೆಚ್ಚು ಕಂದಾಯದ ಕೊತ್ತಕ್ಕೆ ಕೂಗಿದವರಿಗೆ ಕೊಡುವ ಪದ್ಧತಿ ಜಾರಿಗೆ ತಂದ. ಆದರೆ ಈ ಪದ್ಧತಿಯು ಯಶಸ್ವಿಯಾಗಲಿಲ್ಲ. ಹರಾಜಿನಲ್ಲಿ ಜಮೀನ್ದಾರರು ಹೆಚ್ಚು ಮೊತ್ತದ ಕಂದಾಯ ಕೊಡಲು ಒಪ್ಪಿದರೂ ಮತ್ತು ಪರಸ್ಪರ ಪೈಪೋಟಿಯಿಂದ ಹರಾಜಿನ ವೇಳೆ ಜಮೀನ್ದಾರರು ಹೆಚ್ಚು ಕಂದಾಯಕ್ಕೆ ಒಪ್ಪಿ ನಂತರ ವಸೂಲಿಯಲ್ಲಿ ವಿಫಲರಾಗುತ್ತಿದ್ದರು. ಹೀಗೆ ಕಂದಾಯದ ಪ್ರಮಾಣವು ಕಂದಾಯ ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದರಿಂದ ರೈತ ಮತ್ತು ಜಮೀನ್ದಾರರು ಮುಂದಿನ ವರ್ಷದ ಸರ್ಕಾರದ ನೀತಿಯ ಬಗ್ಗೆ ಅನುಮಾನ ಪಟ್ಟು ಸಾಗುವಳಿಯ ಅಭಿವೃದ್ಧಿಗೆ ಗಮನ ಕೊಡುತ್ತಿರಲಿಲ್ಲ.

ಭೂ ಹಿಡುವಳಿ

ಖಾಯಂ ಜಮೀನ್ದಾರಿ ಪದ್ಧತಿ : ಇಂತಹ ಒಂದು ಸ್ಥಿತಿಯಲ್ಲಿ ಭೂಕಂದಾಯವನ್ನು ಖಾಯಂಗೊಳಿಸುವ ವಿಚಾರವು ಚರ್ಚೆಯ ನಂತರ ೧೭೯೩ರಲ್ಲಿ ಕಾರ್ನ್‌‌ವಾಲೀಸ್‌ನಿಂದ ಬಂಗಾಳ ಮತ್ತು ಬಿಹಾರಗಳಲ್ಲಿ ಜಾರಿಗೆ ಬಂದಿತು. ಕಂದಾಯ ಸುಧಾರಣೆಯಲ್ಲಿ ಈ ಪದ್ಧತಿಯು ಅತಿಮುಖ್ಯವಾದುದರಿಂದ ಇದನ್ನು ಖಾಯಂ ಜಮೀನ್ದಾರಿ ಪದ್ಧತಿಯೆಂದರೆ, “ಜಮೀನ್ದಾರರನ್ನು ಭೂ ಒಡೆಯರನ್ನಾಗಿ ಮಾಡಿ ಅವರು ಒಂದು ನಿರ್ಧಿಷ್ಷಪಡಿಸಿದ ಕಂದಾಯವನ್ನು ಕಂಪನಿಗೆ ಸಲ್ಲಿಸುವ ಪದ್ಧತಿಯೇ” ಖಾಯಂ ಜಮೀನ್ದಾರಿ ಪದ್ಧತಿ. ಈ ಪದ್ಧತಿಯಿಂದ ಕಂದಾಯದಲ್ಲಿ ರಾಜ್ಯದ ಭಾಗವನ್ನು ನಿರ್ಧರಿಸಿ ಜಮೀನ್ದಾರರ ಮತ್ತು ರೈತರ ಹಕ್ಕನ್ನು ಸ್ಪಷ್ಟಪಡಿಸಲಾಯಿತು. ಇದರಿಂದ ಜಮೀನ್ದಾರರು ಕಂದಾಯವನ್ನು ತಮ್ಮ ವ್ಯಾಪ್ತಿಯಲ್ಲಿ ವಸೂಲಿಗೆ ಪಡೆದಂತಾಯಿತು. ಹಾಗೆಯೇ ಕಂದಾಯವನ್ನು ಸಂದಾಯ ಮಾಡಿಲ್ಲದ ಜಮೀನನ್ನು ಸರ್ಕಾರ ಮಾರಾಟ ಮಾಡುವಂತಾಗಿ ಇತರೆ ಬೆಳೆಗಾರರ, ರೈತರ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ನೋಡಿಕೊಳ್ಳಲಾಯಿತು.

ಖಾಯಂ ಜಮೀನ್ದಾರಿ ಪದ್ಧತಿಯಿಂದಾದ ಅನುಕೂಲಗಳೆಂದರೆ ಈ ಕಾಯಂ ಕಂದಾಯ ಒಪ್ಪಂದದಿಂದಾಗಿ ಸರ್ಕಾರಕ್ಕೆ ಪ್ರತಿವರ್ಷ ನಿರ್ಧಿಷ್ಟ ಪ್ರಮಾಣದ ಆದಾಯ ನಿರ್ಧಿಷ್ಟ ವರ್ಷದಲ್ಲಿ ಬರುವಂತಾಯಿತು. ಇದರಿಂದ ಸರ್ಕಾರ ತನ್ನ ಆದಾಯ ಮತ್ತು ಖರ್ಚನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಯಿತು. ಹಿಂದಿನ ವಾರ್ಷಿಕ ಹರಾಜು ಪದ್ಧತಿಯ ದೋಷಗಳು ಮಾಯವಾಗಿ ಸರ್ಕಾರ ಕಂದಾಯ ವಸೂಲಿಗಾಗಿ ಮಾಡುತ್ತಿದ್ದ ವೆಚ್ಚ ಕಡಿಮೆಯಾದುದಲ್ಲದೇ ಆ ಕಾರ್ಯಕ್ಕಾಗಿ ನೇಮಿಸಲಾಗಿದ್ದ ಅಧಿಕಾರಿಗಳ ಸೇವೆಯನ್ನು ಇತರ ಇಲಾಖೆಗಳಿಗೆ ಬಳಸಿಕೊಳ್ಳು ಸಾಧ್ಯವಾಯಿತು. ಬಂಗಾಳದಲ್ಲಿ ಬ್ರಿಟಿಷರಿಗೆ ವಿಧೇಯರಾದ ಪ್ರಬಲ ಜಮೀನ್ದಾರರನ್ನು ಭೂಮಾಲಿಕರನ್ನಾಗಿ ಮಾಡಿದ್ದರಿಂದ ಅವರು ಬ್ರಿಟಿಷರಿಗೆ ವಿಧೇಯರಾಗಿದ್ದು ಕೆಲವು ಕಠಿಣ ಸಂದರ್ಭಗಳಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿದರು ಮತ್ತು ಜಮೀನ್ದಾರರನ್ನು ಅವರು ಹಿಂದೆ ನಿರ್ವಹಿಸುತ್ತಿದ್ದ ಪೋಲಿಸ್ ಕರ್ತವ್ಯದಿಂದ ವಿಮುಕ್ತಿಗೊಳಿಸಲಾಯಿತು.

ಹಾಗೆಯೇ ಈ ಪದ್ಧತಿಯ ಅನಾನುಕೂಲಗಳೆಂದರೆ, ಜಮೀನ್ದಾರರು ನಿಗದಿಪಡಿಸಿದ ದಿನಾಂಕವೇ ನಿರ್ಧಿಷ್ಟ ಮೊತ್ತದ ಹಣವನ್ನು ಸಕಾರಕ್ಕೆ ಪಾವತಿ ಮಾಡಬೇಕಾದ್ದರಿಂದ ಅವರು ಬೇಳೆ ಉತ್ಪತ್ತಿಯಾಗದ ಮತ್ತು ಕ್ಷಾಮದ ಪರಿಸ್ಥಿತಿಯಲ್ಲಿ ಕಂದಾಯವನ್ನು ಸಲ್ಲಿಸಲು ಅಸಮರ್ಥರಾದರು ರೈತರಿಂದ ಹೆಚ್ಚು ಕಂದಾಯವನ್ನು ವಸೂಲಿ ಮಾಡಿಕೊಂಡು ತಾವು ನಿಗದಿಪಡಿಸಿದ ಹಣವನ್ನಷ್ಟೇ ಸರ್ಕಾರವು ಸಲ್ಲಿಸಿ ವಿಲಾಸಿ ಜೀವನ ನಡೆಸಿ ರೈತರನ್ನು ತಮ್ಮ ಕ್ರೂರ ದಬ್ಬಾಳಿಕೆಗೆ ಒಳಪಡಿಸಿಕೊಂಡರು. ರೈತರಿಗೆ ನ್ಯಾಯ ದೊರೆಯದಂತಾಗಿ ಜಮೀನ್ದಾರರ ಶೋಷಣೆಗೆ ಒಳಗಾದರು. ಜಮೀನ್ದಾರರು ಕೃಷಿ ಆದಾಯ ಹೆಚ್ಚಿದಾಗಲು ಸರ್ಕಾರಕ್ಕೆ ನಿಗದಿಪಡಿಸಿದ ಕಂದಾಯವನ್ನಷ್ಟೇ ಸಲ್ಲಿಸುತ್ತಿದ್ದುದರಿಂದ ಸರ್ಕಾರ ಕಂದಾಯ ಹೆಚ್ಚಿಸುವ ಅಧಿಕಾರವನ್ನು ಕಳೆದುಕೊಂಡಿತು. ಇದರಿಂದ ಹೆಚ್ಚುವರಿ ಕಂದಾಯ ಜಮೀನ್ದಾರರ ಪಾಲಾಯಿತು. ಜಮೀನ್ದಾರರು ಕೇವಲ ಕಂದಾಯವನ್ನು ರೈತರಿಂದ ವಸೂಲಿ ಮಾಡುವದರಲ್ಲಿ ಹೆಚ್ಚು ಆಸಕ್ತಿ ವಹಿಸಿದರೇ ಹೊರತು ಭೂಮಿಯ ಫಲವತ್ತತೆಯ ಬಗ್ಗೆ ನಿರ್ಲಕ್ಷ್ಯ ತಾಳದ್ದರಿಂದ ಕ್ರಮೇಣ ಭೂ ಉತ್ಪತ್ತಿಯು ಇಳಿಮುಖವಾಯಿತು. ಒಟ್ಟಿನಲ್ಲಿ ಕಾರನ್‌ವಾಲಿಸ್‌ ಜಾರಿಗೆ ತಂದ ಈ ಹೊಸ ಖಾಯಂ ಜಮೀನ್ದಾರಿ ವ್ಯವಸ್ಥೆಯಿಂದ ಕೃಷಿಕ್ಷೇತ್ರದಲ್ಲಿ ನಿರ್ದಿಷ್ಟ ಪ್ರಗತಿ ಆಗದೇ ಸರ್ಕಾರ ಕೇವಲ ಕಂದಾಯ ವಸೂಲಿಗೆ ಗಮನ ನೀಡಿತೇ ವಿನಃ ಜನರ ಸಮಸ್ಯೆಗಳತ್ತ ಗಮನಹರಿಸಲಿಲ್ಲ.

ರೈತವಾರಿ ಪದ್ಧತಿ : ಬ್ರಿಟಿಷ್ ಸರ್ಕಾರವು ಭಾರತದ ಬಹುಸಂಖ್ಯಾತ ರೈತಾಪಿ ವರ್ಗದ ಮೇಲೆ ಕಂದಾಯ ವಿಧಿಸಿ, ವಸೂಲಿ ಮಾಡಲು ಹೊಸ, ಹೊಸ ಪ್ರಯೋಗಗಳನ್ನು ಕೈಗೊಂಡಿತು. ಆದ್ದರಿಂದ ಬ್ರಿಟಿಷ್ ಸರ್ಕಾರವು ಭಾರತದ ರೈತಾಪಿ ವರ್ಗದ ಮೇಲೆ ಕಂದಾಯ ವಸೂಲಿ ಮಾಡಲು ಜಾರಿಗೆ ತಂದಿದ್ದ ಜಮೀನ್ದಾರಿ ಪದ್ಧತಿಯು ರೈತರನ್ನು ಶೋಷಣೆ ಮಾಡಲಾರಂಭಿಸಿತು. ಇದರಿಂದ ಭಾರತದ ಬಹುಸಂಖ್ಯಾತ ರೈತರನ್ನು ಈ ಜಮೀನ್ದಾರ್ ಪದ್ಧತಿಯ ಶೋಷಣೆಯಿಂದ ಮುಕ್ತಿಗೊಳಿಸಿ ರೈತರಿಗೆ ಆಸ್ತಿಯ ಹಕ್ಕಿನ ರಕ್ಷಣೆ ನಿಡುವ ಸಲುವಾಗಿ ಕೋರ್ಟ್‌ ಆಫ್‌ ಡೈರೆಕ್ಟ್‌ರ್‌೧೮೧೭ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆಗೊಳಿಸಲು ಆದೇಶಿಸಿತು. ಆಂಗ್ಲೋ ಅಧಿಕಾರಿಯಾಗಿದ್ದ ಜೇಮ್ಸ್‌ಮನ್ರೋ ರೈತವಾರಿ ಪದ್ಧತಿಯನ್ನು ಜಾರಿಗೆ ತಂದನು. ರೈತವಾರಿ ಪದ್ಧತಿಯೆಂದರೆ “ಮಧ್ಯವರ್ತಿಗಳ ಸಹಾಯವಿಲ್ಲದೇ ರೈತನೇ ನೇರವಾಗಿ ಸರ್ಕಾರಕ್ಕೆ ಕಂದಾಯ ಸಲ್ಲಿಸುವ ಪದ್ಧತಿಯೇ” ರೈತವಾರಿ ಪದ್ಧತಿ. ಸರ್ಕಾರ ಹಾಗೂ ಸಾಗುವಳಿದಾರನ ನಡುವಿನ ಸಂಬಂಧವೇ ರೈತವಾರಿ ಪದ್ಧತಿಯು ವಿಶಿಷ್ಟತೆ. ಜೇಮ್ಸ್‌ಮನ್ರೋ ಕೆಲವು ನಿಯಮಗಳ ಆಧಾರದ ಮೇಲೆ ಮದ್ರಾಸ್ ಹಾಗೂ ಇನ್ನಿತರ ಪ್ರದೇಶಗಳ ವ್ಯಾಪ್ತಿಯಲ್ಲಿ ಇದನ್ನು ಜಾರಿಗೆ ತಂದನು. ಆ ಪ್ರಕಾರ ರೈತವಾರಿ ಪದ್ಧತಿಯು ಕೆಲವು ನಿಯಮಗಳಿಂದ ಕೂಡಿತ್ತು. ಪ್ರತಿಯೊಬ್ಬ ರೈತನೊಂದಿಗೆ ಸರ್ಕಾರವು ಕಂದಾಯವನ್ನು ನಿಗದಿಮಾಡಿಕೊಳ್ಳಬೇಕಿತ್ತು. ಭೂಮಿಯನ್ನು ಅಳತೆಮಾಡಿ ಒಟ್ಟು ಉತ್ಪನ್ನದಲ್ಲಿ ವೆಚ್ಚವನ್ನು ಕಳೆದು ಬರುವ ನಿವ್ವಳ ಉತ್ಪನ್ನವನ್ನು ಹಣದ ರೂಪದಲ್ಲಿ ಪರಿವರ್ತಿಸಿ ಸರ್ಕಾರಕ್ಕೆ ಕಂದಾಯದ ಭಾಗವನ್ನು ಸಲ್ಲಿಸಬೇಕಿತ್ತು.

ಸಾಗುವಳಿ ಭೂಮಿಗೆ ಯಂತ್ರಗಳಿಂದ ನೀರಾವರಿ ಸೌಲಭ್ಯವನ್ನು ಒದಗಿಸಿಕೊಂಡರೆ ಅದರ ದುರಸ್ತಿ ಖರ್ಚನ್ನು ರೈತನೇ ನಿರ್ವಹಿಸಿಕೊಂಡರೆ ಕಂದಾಯದ ಭಾಗದಲ್ಲಿ ಶೇ. ೮ ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ವೈಯಕ್ತಿಕವಾಗಿ ರೈತನಿಗೆ ಬೆಳೆಯಲ್ಲಿ ನಷ್ಟವಾದರೆ ಯಾವುದೇ ರೀತಿಯ ಪರಿಹಾರ ನೀಡುತ್ತಿರಲಿಲ್ಲ. ಸಾಮೂಹಿಕ ಪ್ರದೇಶದಲ್ಲಿ ನಷ್ಟವಾದರೆ ಶೇ. ೧೦ ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಕಂದಾಯ ನಿಗದಿಯು ಸಾಮಾನ್ಯವಾಗಿ ಭೂಮಿಯ ಫಲವತ್ತತೆಯ ಮೇಲೆ ನಿರ್ಧಾರವಾಗುತ್ತಿತ್ತು. ಚೌಗು ಭೂಮಿಗೆ ೧/೫ ಭಾಗ ಕಂದಾಯ, ಒಣ ಭೂಮಿಗೆ ೧/೩ ಭಾಗ ಕಂದಾಯ ನಿಗದಿ ಮಾಡಲಾಗುತ್ತಿತ್ತು. ರೈತ ಭೂ ಒಡೆಯನಾಗಿದ್ದರೂ ಸಾಗುವಳಿ ಮಾಡುವ, ಮಾರಾಟ, ಗೇಣಿ ಕೊಡುವ ಕೆಲವು ಕ್ರಮಗಳಲ್ಲಿ ಸರ್ಕಾರಕ್ಕೆ ವಿವರಣೆ ಕೊಡಬೇಕಿತ್ತು. ಬಂಜರು ಭೂಮಿಯನ್ನು ಸಾಗುವಳಿ ಮಾಡಲು ಮುಂದೆ ಬಂದ ರೈತರಿಗೆ ಕೆಲವು ವರ್ಷಗಳ ಕಾಲ ಪುಕ್ಕಟೆಯಾಗಿ ನೀಡಿ ಅನಂತರ ಕಂದಾಯ ವಸೂಲಿ ಮಾಡುವ ನಿಯಮವಿತ್ತು.

ರೈತವಾರಿ ಪದ್ಧತಿಯ ಗುಣಗಳು ಅಥವಾ ಈ ರೈತವಾರಿ ಪದ್ಧತಿಯಿಂದ ಆದ ಅನುಕೂಲಗಳೆಂದರೆ ಭೂಮಿಯ ಒಡೆತನದ ಹಕ್ಕು ರೈತನಾದ್ದರಿಂದ ರೈತನು ಉತ್ತಮ ಫಸಲನ್ನು ಬೆಳೆಯಲು ಆಸಕ್ತಿವಹಿಸಿದನು. ಸರ್ಕಾರ ಈ ನಿಟ್ಟಿನಲ್ಲಿ ನೀರಾವರಿ ಸೌಲಭ್ಯ ಬೀಜೋಪಕರಣವನ್ನು ಉತ್ತಮವಾಗಿ ಒದಗಿಸಿದ್ದರಿಂದ ಕೃಷಿ ಮುಂದುವರೆಯಿತು. ಪ್ರತಿ ಜಿಲ್ಲೆಯಲ್ಲಿ ರೆವಿನ್ಯೂ ಕಲೆಕ್ಟ್‌ರ್‌ ಇದ್ದುದರಿಂದ ಸರಿಯಾದ ವೇಳೆಯಲ್ಲಿ ಕಂದಾಯ ವಸೂಲಿಯಾಗುತ್ತಿತ್ತು. ಭೂಮಿಯನ್ನು ಸರ್ವೆ ಮಾಡಿ ಸರ್ವೇ ನಂಬರ್‌ನ್ನು ರೈತರಿಗೆ ನೀಡಿದ್ದರಿಂದ ರೈತರಿಗೂ, ಸರ್ಕಾರಕ್ಕೂ ಭೂಮಿಯನ್ನು ಸರ್ವೆ ಮಾಡಿ ಸರ್ವೇ ನಂಬರನ್ನು ರೈತರಿಗೆ ನೀಡಿದ್ದರಿಂದ ರೈತರಿಗೂ, ಸರ್ಕಾರಕ್ಕೂ ಭೂ ವಿವಾದದಿಂದ ಉಂಟಾಗಬಹುದಾದ ಘರ್ಷಣೆ ತಪ್ಪಿತು. ಕಡಿಮೆ ಕಂದಾಯವನ್ನು ನಿಗದಿ ಮಾಡಿದ್ದರಿಂದ ರೈತರಿಗೆ ಹೆಚ್ಚು ಹೆಚ್ಚು ಬೆಳೆಯನ್ನು ಬೆಳೆಯಲು ಅನುಕೂಲವಾಯಿತು. ಸಾಗುವಳಿ ಮಾಡದ ಭೂಮಿಯನ್ನು ಸಾಗುವಳಿಗೆ ಒಳಪಡಿಸಿದಂತೆಲ್ಲಾ ಸರ್ಕಾರಕ್ಕೆ ಬರುವ ಕಂದಾಯದ ಮೊತ್ತ ಹೆಚ್ಚುತ್ತಾ ಹೊಯಿತು. ಒಟ್ಟಿನಲ್ಲಿ ಈ ರೈತವಾರಿ ಪದ್ಧತಿಯಿಂದ ರೈತನು ಹಿಂದೆ ಜಮೀನ್ದಾರಿ ಪದ್ಧತಿಯಲ್ಲಿ ಅನುಭವಿಸುತ್ತಿದ್ದ ಶೋಷಣೆ ತಪ್ಪಿದಂತಾಯಿತು.

ರೈತವಾರಿ ಪದ್ಧತಿಯ ಅವಗುಣಗಳು ಅಥವಾ ಈ ರೈತವಾರಿ ಪದ್ಧತಿಯಿಂದಾದ ಅನಾನುಕೂಲವೆಂದರೆ ರೈತವಾರಿ ಪದ್ಧತಿಯನ್ನು ರಚಿಸಿದ್ದ ಮನ್ರೋ ರೈತನು ತಾನು ಭೂಮಿಯನ್ನು ಉಳುವವರೆಗೂ ಒಂದೇ ನಿಗದಿಯಾದ ಕಂದಾಯವನ್ನು ನಿಗದಿಪಡಿಸಿದ್ದ. ಆದರೆ ಮನ್ರೋ ನಂತರ ಭಾರತಕ್ಕೆ ಬಂದ ವಿವಿಧ ಗೌರ‍್ನರ್‌ಗಳ ಕಾಲದಲ್ಲಿ ಕಂದಾಯದ ದರವೂ ಬದಲಾವಣೆಯಾಯಿತು. ರೈತರಿಗೆ ಕಂದಾಯದಲ್ಲಿ ಅಸ್ಪಷ್ಟತೆ ತಲೆದೋರಿ ಹೆಚ್ಚುವರಿ ತೆರಿಗೆಯಿಂದ ಬೇಸತ್ತು ಸಾಗುವಳಿ ಬಿಟ್ಟು ಹೊರಟರೆ ಮತ್ತೆ ಆತನನ್ನು ತಪಾಸಣೆ ನಡೆಸಿ ಸಾಗುವಳಿ ಮಾಡುವಂತೆ ಒತ್ತಾಯಿಸುತ್ತಿದ್ದರು. ರೈತನು ಕೊನೆಗೆ ಬ್ರಿಟಿಷರಿಗಾದರೂ ಸಾಗುವಳಿ ಮಾಡಬೇಕಾದ ಪರಿಸ್ಥಿತಿ ಯುಂಟಾಯಿತು. ರೈತವಾರಿ ಪದ್ಧತಿಯ ಪ್ರಕಾರ ಕಂದಾಯ ನಿಗದಿ ಮಾಡುವಾಗ ಸರ್ಕಾರಿ ಅಧಿಕಾರಿಗಳು ಆತನನ್ನು ಪರಿಗಣಿಸದಯೇ ಹೆಚ್ಚುವರಿ ಕಂದಾಯ ನಿಗದಿಪಡಿಸಿ ಬಲವಂತವಾಗಿ ವಸೂಲಿ ಮಾಡುತ್ತಿದ್ದರು. ಕಲೆಕ್ಟರುಗಳು ಸಂಗ್ರಹಿಸಿದ ಕಂದಾಯದ ಹೆಚ್ಚಳದ ಮೇಲೆ ಆತನ ಯೋಜನೆಯ ಗುಣಮಟ್ಟವನ್ನು ಅಳೆಯಲಾಗುತ್ತಿದ್ದುದರಿಂದ ಆತ ಕಂದಾಯ ವಸೂಲಿಯಿಂದಾಗುವ ದೋಷಗಳ ಕಡೆ ಗಮನಹರಿಸದೇ ಕಂದಾಯದ ಹೆಚ್ಚಳಕ್ಕೆ ಗಮನ ನೀಡುತ್ತಿದ್ದರು. ಅನೇಕ ಸಿದ್ದವಸ್ತುಗಳನ್ನು ತಯಾರಿಸಲು ಬೇಕಾದ ಕಚ್ಚಾ ಮೂಲಗಳು ಕೃಷಿಯ ಮೂಲದಿಂದ ಬಂದವಾಗಿದ್ದರಿಂದ ಬ್ರಿಟಿಷರು ರೈತವಾರಿ ಪದ್ಧತಿಯನ್ನು ರೈತರ ಅನುಕೂಲಕ್ಕೆ ಬದಲಾಗಿ ತಮ್ಮ ಸ್ವಾರ್ಥಕ್ಕೋಸ್ಕರ ಇದನ್ನು ಜಾರಿಗೆ ತಂದರು. ಬ್ರಿಟಿಷರು ನಡೆಸುತ್ತಿದ್ದ ಯುದ್ದಗಳಿಗೂ ಹಾಗೂ ಆಡಳಿತ ಯಂತ್ರವನ್ನು ನಡೆಸಲು ಹಣದ ಅವಶ್ಯಕತೆ ಇದ್ದುದರಿಂದ ಸಾಧ್ಯವಾದಷ್ಟು ಭೂಕಂದಾಯವನ್ನು ರೈತರಿಂದ ವಸೂಲಿ ಮಾಡುತ್ತಿದ್ದರು.

೧೮೮೫ರಲ್ಲಿ ಒಬ್ಬ ಬ್ರಿಟಿಷ್ ಕಂಪನಿಯ ಅಧಿಕಾರಿಯು ತಿಳಿಸಿರುವಂತೆ ಉತ್ತರ ಅರ್ಕಾಟಿಕ್ ಮತ್ತಿತರ ಪ್ರದೇಶಗಳಲ್ಲಿ ಬಹುಸಂಖ್ಯೆಯ ರೈತರು ಸಾಮಾನ್ಯ ಬಡತನದ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದರು. ಅದರಲ್ಲೂ ಸಾಲ ಮತ್ತು ಬಡತನದ ಹೊರೆ ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೈತ ಕಂದಾಯ ಕಟ್ಟಲು ಚೆಟ್ಟಿಯಾರರಿಂದ ಹಣವನ್ನು ಸಾಲವಾಗಿ ಪಡೆಯುತ್ತಿದ್ದ, ಆತನ ಎತ್ತುಗಳು ಸಹ ೩ ೧/೨ ಯಿಂದ ೬ ರೂ. ಬೆಲೆ ಬಾಳುವಂತಿದ್ದವು. ಅವನ ವ್ಯವಸಾಯೋಪಕರಣಗಳು ಹಳೇ ಮಾದರಿಯವು. ಅವನ ವಾಸಸ್ಥಾನ ಮಣ್ಣಿನ ಗೋಡೆಯಿಂದ ಕೂಡಿದ್ದ ಆಹಾರವೆಂದರೆ ಕೇವಲ ಗಂಜಿಯಷ್ಟೆ. ಆತನು ಊಟ ಮಾಡಲು ಬಳಸುವ ಮಣ್ಣಿನ ತಟ್ಟೆ ಇಂಗ್ಲೆಂಡಿನಲ್ಲಿ ಉಪಯೋಗಿಸುವ ಹೆಂಚು ಮತ್ತು ಇಟ್ಟಿಗೆಗಳಿಂತ ಕೆಳದರ್ಜೆಯದು. ಹಿತ್ತಾಳೆ ಪಾತ್ರೆಗಳ ಬಳಕೆಯ ಮಾತೇ ಇರಲಿಲ್ಲ ಎಂದಿದ್ದಾನೆ. ಹೀಗೆ ಸಾಮಾನ್ಯ ರೈತನು ಜೀವನ ಮೇಲೆ ಹೇಳಿದ ರೀತಿಯಲ್ಲಿ ಇದೆ ಎಂಬುದನ್ನು ಗಮನಿಸಿದರೆ ರೈತನ ಜೀವನ ಎಷ್ಟೊಂದು ಅಧೋಗತಿಗಿಳಿದಿತ್ತೆಂದು ತಿಳಿಯುತ್ತದೆ. ಈ ರೀತಿಯಾಗಿ ರೈತವಾರಿ ಪದ್ಧತಿಯಿಂದ ಹಲವಾರು ಜಿಲ್ಲೆಗಳು ಸಂಕಷ್ಟದಲ್ಲಿ ಸಿಲುಕಿದವು.

ಮಹಲ್ವಾರಿ ಪದ್ದತಿ : ಜಮೀನ್ದಾರಿ ಪದ್ಧತಿ ಮತ್ತು ರೈತವಾರಿ ಪದ್ಧತಿಗಳು ನಿರ್ಮಾಪಕರಿಗೆ ನಿರೀಕ್ಷಿದ ಮಟ್ಟ ತಲುಪದೇ ಇದ್ದುದರಿಂದ ಮೂರನೇ ಹೊಸ ಪದ್ಧತಿಯಾಗದ ಮಹಲ್ವಾರಿ ಪದ್ದತಿಯನ್ನು ಜಾರಿಗೆ ತಂದರು. ಈ ಪದ್ಧತಿಯಲ್ಲಿ ಮಹಲ್ ಅಥವಾ ಎಸ್ಟೇಟ್‌ಗಳ ಉತ್ಪಾದನೆಯ ಆಧಾರದ ಮೇಲೆ ಸರ್ಕಾರವು ಕಂದಾಯವನ್ನು ಅನೇಕ ಮಹಲ್‌ಗಳ ಒಡೆಯರ ಗುಂಪಿಗೆ ವಿಧಿಸುತ್ತಿತ್ತು. ಈ ಕಂದಾಯದ ಮೊತ್ತಕ್ಕೆ ಮಹಲ್‌ಗಳ ಒಡೆಯರು ಜವಾಬ್ದಾರರಾಗಿದ್ದರು. ಮಹಲ್‌ನಲ್ಲಿ ಅನೇಕ ಒಡೆಯರಿದ್ದರೆ ಅವರಲ್ಲಿ ಕೆಲವರನ್ನು ಆಯ್ಕೆ ಮಾಡಿ ಮಹಲ್‌ಗಳ ಉಸ್ತುವಾರಿ ಮತ್ತು ಕಂದಾಯ ವಸೂಲಿಯ ಕೆಲಸಕ್ಕೆ ನೇಮಿಸುತ್ತಿದ್ದರು. ವಾಸ್ತವಿಕವಾಗಿ ಈ ಒಪ್ಪಂದವು ಪೂರ್ಣ ಹಳ್ಳಿಗರೊಂದಿಗೆ ಮತ್ತು ಪ್ರತ್ಯೇಕವಾಗಿ ಆಗಿದುದಾಗಿತ್ತು. ಇದು ಎರಡು ವಿಧದ ಒಪ್ಪಂದವಾಗಿತ್ತು. . ರೈತರಿಗೆ ಭೂ ಒಡೆತನವಿದ್ದು ಪ್ರತ್ಯೇಕವಾಗಿ ಆಗಿದುದಾಗಿತ್ತು. ಇದು ಎರಡು ವಿಧದ ಒಪ್ಪಂದವಾಗಿತ್ತು. ಬಿ. ರೈತರು ಸಾಮೂಹಿಕವಾಗಿ ಸರ್ಕಾರ ನಿಗದಿಗೊಳಿಸಿದ ಕಂದಾಯವನ್ನು ಸಲ್ಲಿಸಲು ಜವಾಬ್ದಾರರಾಗಿದ್ದರು. ಗ್ರಾಮವು ಪೂರ್ಣವಾಗಿ ಲಂಬಾರ್‌ದರ್‌ಎಂಬ ಮುಖ್ಯಸ್ಥನ ಮೂಲಕ ಕಂದಾಯ ಸಲ್ಲಿಸಬೇಕಿತ್ತು.

ಮಹಲ್ವಾರಿ ಪದ್ಧತಿಯನ್ನು ಮೊದಲು ಆಗ್ರ ಮತ್ತು ಔದ್‌ನಲ್ಲಿ ನಂತರ ಇತರ ಒಕ್ಕೂಟ ಪ್ರಾಂತ್ಯಕ್ಕೆ ವಿಸ್ತರಿಸಲಾಯಿತು. ಈ ಪದ್ಧತಿಯನ್ನು ಮೊದಲೆರಡು ಪದ್ಧತಿಗಳ ವಿಫಲತೆಯ ನಂತರ ಆ ಎರಡು ಪದ್ಧತಿಗಳಲ್ಲೂ ಇದ್ದ ಉತ್ತಮಾಂಶಗಳನ್ನು ಸೇರಿಸಿಕೊಂಡು ಜಾರಿಗೆ ತರಲಾಗಿತ್ತು. ಈ ಪದ್ಧತಿಯಲ್ಲಿ ಜಮೀನ್ದಾರಿ ಪದ್ಧತಿಯಂತೆ ಕಂದಾಯವು ಸ್ಥಿರವಾದ ಆದಾಯ ಹೊಂದಿತ್ತು. ಅದೇ ರೀತಿ ರೈತವಾರಿ ಪದ್ಧತಿಯಂತೆ ಸರ್ಕಾರ ಮತ್ತು ರೈತನ ನಡುವೆ ನೇರ ಸಂಬಂಧ ಹೊಂದಿತ್ತು. ಮಹಲ್ವಾರಿಯಲ್ಲಿ ಮಧ್ಯವರ್ತಿಗಳಾದ ಲಂಬಾರ್ ದರ್‌ಗಳು ಸರ್ಕಾರ ಮತ್ತು ರೈತನ ನಡುವೆ ಇರುತ್ತಿದ್ದರು. ರೈತವಾರಿ ಪದ್ಧತಿಯಂತೆ ಸರ್ಕಾರವು ಸಾಗುವಳಿ ಮತ್ತು ಕಂದಾಯ ವಸೂಲಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮಹಲ್ವಾರಿ ಪದ್ಧತಿಯಲ್ಲಿ ಸಾಗುವಳಿಯನ್ನು ರೈತರು ಪ್ರತ್ಯೇಕವಾಗಿ ಮಾಡುತ್ತಿದ್ದರೂ ಕಂದಾಯವನ್ನು ಒಗ್ಗೂಡಿ ಕೊಡಬೇಕಿತ್ತು. ಈ ಪದ್ಧತಿಯು ವಿಚಾರದಲ್ಲಿ ಶ್ರೇಷ್ಟವಾಗಿದ್ದರೂ ಕಂದಾಯವನ್ನು ಒಗ್ಗೂಡಿ ಕೊಡಬೇಕಿತ್ತು. ಈ ಪದ್ಧತಿಯು ವಿಚಾರದಲ್ಲಿ ಶ್ರೇಷ್ಟವಾಗಿದ್ದರೂ ಕಾರ್ಯರೂಪದಲ್ಲಿ ಅಂತೆಯೇ ಇರಲಿಲ್ಲ. ವಾಸ್ತವಿಕ ಸ್ಥಿತಿಯಲ್ಲಿ ಹಕ್ಕು ಎಲ್ಲರಿಗೂ ಸೇರಿರದೆ ಗ್ರಾಮದ ದೊಡ್ಡ ಕುಟುಂಬಗಳಿಗೆ ಸೇರಿರುತ್ತಿತ್ತು. ಈ ಗುಂಪು ಒಗ್ಗೂಡಿದ ಒಡೆತನದ ಹಕ್ಕನ್ನು ಉಪಯೋಗಿಸಿಕೊಂಡು ರೈತರನ್ನು ಗುತ್ತಿಗೆದಾರ. ಅರೆ ಗುತ್ತಿಗೆದಾರರ ಮಟ್ಟಕ್ಕೆ ಇಳಿಸಿದ್ದರು. ಆದ್ದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಹೆಚ್ಚಿ ರೈತರು ಕೆಳಮಟ್ಟಕ್ಕಿಳಿದರು. ಇದರಿಂದ ಕೃಷಿಯು ಅಭಿವೃಧ್ದಿಗೊಳ್ಳಲಿಲ್ಲ.

ಕೃಷಿ ಬೆಳವಣಿಗೆ : ೧೮೮೦ರ ಕ್ಷಾಮ ಆಯೋಗದ ಶಿಫಾರಸ್ಸುಗಳ ಪರಿಣಾಮವಾಗಿ ವಿವಿಧ ಪ್ರಾಂತ್ಯಗಳಲ್ಲಿ ಕೃಷಿ ಇಲಾಖೆಗಳನ್ನು ಸ್ಥಾಪಿಸಲಾಯಿತು. ಇಂಪೀರಿಯಲ್ ಮತ್ತು ಪ್ರಾಂತೀಯ ಸರ್ಕಾರಗಳಿಗೆ ಸಲಹೆ ನೀಡಲು ೧೯೦೧ರಲ್ಲಿ ಕೃಷಿ ಇನ್ಸ್‌ಪೆಕ್ಟ್‌ರ್‌ ಜನರಲ್‌ನ್ನು ನೇಮಕ ಮಾಡಲಾಯಿತು. ಈ ಹುದ್ದೆಯನ್ನು ೧೯೧೨ರಲ್ಲಿ ರದ್ದುಗೊಳಿಸಿ ಇದರ ಕಾರ್ಯಗಳನ್ನು ಪೂನಾದ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ವರ್ಗಾಯಿಸಲಾಯಿತು. ಈ ನಿರ್ದೇಶಕರು ೧೯೨೯ ರವರೆಗೆ ಭಾರತ ಸರ್ಕಾರಕ್ಕೆ ಕೃಷಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಆಧುನಿಕ ಕೃಷಿ ಇಲಾಖೆಗಳು ಲಾರ್ಢ್‌ ‌ಕರ್ಜನನ ಕಾಲದಲ್ಲಿ ಸ್ಥಾಪಿತವಾದವು. ೧೯೦೩ರಲ್ಲಿ ಉನ್ನತ ಕೃಷಿ ತರಬೇತಿ ನೀಡಲು ಕಾಲೇಜಿನೊಡನೆ ಪೂನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಖಿಲ ಭಾರತ ಕೃಷಿ ಮಂಡಳಿ ಸ್ಥಾಪಿಸಿ ಪ್ರಾಂತೀಯ ಸರ್ಕಾರಗಳು ಒಂದಕ್ಕೊಂದು ಹೆಚ್ಚು ಸಂಪರ್ಕ ಪಡೆದು ಸಹಾಯಕವಾಗಲು ಸೂಕ್ತ ಸಲಹೆ ಪಡೆಯುವಂತಾಯಿತು. ಪೂನಾದಲ್ಲಿ ೧೯೦೮ರಲ್ಲಿ ಕೃಷಿ ಕಾಲೇಜನ್ನು ತೆರೆಯಲಾಯಿತು. ಅನಂತರದ ವರ್ಷಗಳಲ್ಲಿ ಕಾನ್ಪುರ, ನಾಗಪುರ, ಲ್ಯಾಲಪುರ ಕೊಯಮತ್ತೂರು ಮತ್ತು ಮಾಂಡಲೆಗಳಲ್ಲೂ ಇದೇ ರೀತಿಯ ಕಾಲೇಜುಗಳನ್ನು ಸ್ಥಾಪಿಸಲಾಯಿತು.

ಕೃಷಿ ಸಂಬಂಧಿಸಿದಂತೆ ರಾಯಲ್ ಆಯೋಗ ಭಾರತದ ಕೃಷಿಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ಮುಂದಿನ ಕಾರ್ಯಗಳ ಬಗ್ಗೆ ಶಿಫಾರಸ್ಸುಗಳನ್ನು ತಿಳಿಸಿತು. ಅದರಂತೆ ಕೃಷಿಯ ಬೆಳವಣಿಗೆಗೆ ಅನುಕೂಲಕರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಲಾರ್ಡ್‌‌ ಲಾರೆನ್ಸ್‌ ೧೮೬೬ರಲ್ಲಿ ಒಂದು ಹೊಸ ನೀರಾವರಿ ನೀತಿ ಆರಂಭಿಸಿದ ಸಾರ್ವಜನಿಕ ಸಾಲಗಳಿಂದ ವ್ಯಾಪಕ ನೀರಾವರಿ ಯೋಜನೆಗಳಿಗೆ ಅವನು ಆರ್ಥಿಕ ನೆರವನ್ನು ಒದಗಿಸಿದ ಸರ್‌ಹಿಂದ ಕಾಲುವೆ (೧೮೮೨). ಕೆಳಗಣ ಗಂಗಾ ಕಾಲುವೆ (೧೮೭೮) ಮತ್ತು ಆಗ್ರಾ ಕಾಲುವೆ (೧೮೭೪). ಸರ್‌ಹಿಂದ್ ಕಾಲುವೆಯ ಉಪಕಾಲುವೆಗಳು ಸೇರಿ ಕಾಲುವೆಯ ಉದ್ದ ೩೭೦೦ ಮೈಲುಗಳು. ಪಂಜಾಬಿನ ’ಕಾಲೋನಿ ಕಾಲುವೆ’ಗಳನ್ನು ಸರ್ಕಾರಕ್ಕೆ ಸೇರಿದ ವಿಶಾಲವಾದ ಬಂಜರು ಭೂಮಿಗಳನ್ನು ಸಾಗುವಳಿ ಯೋಗ್ಯವನ್ನಾಗಿ ಮಾಡಲು ನಿರ್ಮಿಸಲಾಯಿತು. ೧೮೯೦-೧೮೯೯ ರ ನಡುವೆ ನಿರ್ಮಿಸಲಾದ ಕೆಳಗಣ ಚೀನಾಬ್ ಕಾಲುವೆಯ ಒಟ್ಟು ಉದ್ದ ೨,೭೦೦ ಮೈಲಿ, ಚೀನಾಬ್ ಹಾಗೂ ರಾವಿ ನದಿಗಳ ನಡುವೆ ಇರುವ ಎರಡು ದಶಲಕ್ಷ ಪ್ರದೇಶ ನೀರಾವರಿಯಾಗಿ ಸುಮಾರು ೮,೦೦,೦೦೦ ಜನರಿಗೆ ಜೀವನಾಧಾರ ಒದಗಿಸಿದೆ.

ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲಾದ ಪ್ರಭಾವ

ಬ್ರಿಟಿಷ್ ಕಂದಾಯ ಪದ್ಧತಿಯು ಭಾರತೀಯ ರೈತರ ಆರ್ಥಿಕತೆಯ ಮೇಲೆ ಅನರ್ಥವನ್ನುಂಟು ಮಾಡಿತು. ಈ ಹೊಸ ಒಪ್ಪಂದಗಳಿಂದ ಬಂದ ಜಮೀನ್ದಾರರು ಕಂದಾಯ ವಸೂಲಿಗೆ ಗಮನ ಕೊಟ್ಟರೇ ಹೊರತು ಕೃಷಿಯ ಅಭಿವೃದ್ಧಿಗೆ ಗಮನ ಕೊಡಲಿಲ್ಲ ಮತ್ತು ವಿದೇಶಿ ಶಕ್ತಿಯೊಂದಿಗೆ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವಂತಾದರು. ಈ ಜಮೀನ್ದಾರರು ಸಕಾರಕ್ಕೆ ನಿಗದಿಯುತವಾದ ಕಂದಾಯದ ಮೊತ್ತವನ್ನು ಕೊಡುವ ಒಪ್ಪಂದ ಮಾಡಿಕೊಂಡು “ರಾಜಕೀಯವಾಗಿ ಅರಕ್ಷರಾದ ಮತ್ತು ಆರ್ಥಿಕವಾಗಿ ಅಬಲರಾದ ರೈತರಿಂದ ತಮಗೆ ಬೇಕಾದಷ್ಟನ್ನು ಪಡೆಯುವ ಹಕ್ಕನ್ನು ಪಡೆದುಕೊಂಡರು”. ಈ ಹೊಸ ಒಪ್ಪಂದದ ಒತ್ತಡವು ಹಳೆಯ ಗ್ರಾಮದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಮುರಿದಂತಾಯಿತು. ಹೊಸ ಸಾಮಾಜಿಕ ವರ್ಗಗಳಾದ ಭೂ ಒಡೆಯರು, ವರ್ತಕರು, ಹಣ ಲೇವಾದೇವಿಗಾರರು ಮತ್ತಿತರ ಗ್ರಾಮದ ವೃತ್ತಿಗಾರರು ಹೊಸ ವ್ಯವಸ್ಥೆಯಿಂದ ಉಂಟಾದ ಪೈಪೋಟಿಯಿಂದ ಮೂಲೆಗುಂಪಾದರು. ಇದೆಲ್ಲದರ ಪರಿಣಾಮವಾಗಿ ಭೂರಹಿತ ಶ್ರಮಿಕ ವರ್ಗವು ಬೆಳವಣಿಗೆ ಗೊಂಡಿತು. ಬ್ರಿಟೀಷ್ ಕಂದಾಯ ಪದ್ಧತಿಯು ಕೃಷಿಯನ್ನು ವಾಣಿಜ್ಯೀಕರಣಗೊಳಿಸಿತು.

ಹೆಚ್ಚಿನ ಕಂದಾಯ ವಿಧಿಸುವಿಕೆಯು ಕೃಷಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿತು ಮತ್ತು ಸಾಗುವಳಿದಾರರ ವರ್ಗವನ್ನು ಬಡತನಕ್ಕೆ ದೂಡಿತು. ಕೃಷಿಯ ಮೇಲಾದ ದುಷ್ಪರಿಣಾಮವು ಕ್ಷಾಮ, ರೋಗರುಜಿನ ಮತ್ತು ನಿರುದ್ಯೋಗ ಸೃಷ್ಟಿಗೆ ಕಾರಣವಾದವು. ಕೃಷಿಯು ವಾಣಿಜ್ಯಕರಣಗೊಂಡಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಹತ್ತಿ, ಸೆಣಬು, ಗೋಧಿ, ಕಬ್ಬು, ಎಣ್ಣೆಕಾಳುಗಳು, ಇಂಡಿಗೊ, ಅಫೀಮು ಮುಂತಾದವನ್ನು ಬೆಳೆಯಲು ಪ್ರಾರಂಭಿಸಿದರು. ಈ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಮಧ್ಯವರ್ತಿಗಳು ಬೆಳೆದರು. ರೈತರ ಬಡತನ ಉಪಯೋಗ ಪಡೆದು ಸಾಲ ನೀಡಿ ಉತ್ಪಾದನೆಗೊಂಡ ಬೆಳೆಯನ್ನು ಕಡಿಮೆ ಬೆಲೆಗೆ ಪಡೆಯುವಂತಾದ ಮಧ್ಯವರ್ತಿಗಳು ಆರ್ಥಿಕವಾಗಿ ಅಭಿವೃದ್ದಿಯಾಗಲು ಕಾರಣವಾಯಿತು.

ಗ್ರಾಮೀಣ ಸಾಲ : ಮೇಲ್ಕಂಡ ಸಮಸ್ಯೆಗಳಿಂದ ರೈತನು ಪಾರಾಗಲು ಸಾಲ ಮಾಡಿದ. ಆದರೆ ಅದನ್ನು ಹಿಂತಿರುಗಿಸಲು ವಿಫಲನಾದಾಗ ಸಾಲಗಾರನಾದ. ೧೮೮೦ ನಂತರ ಗ್ರಾಮೀಣ ಸಾಲವು ರೇಖಾಗಣಿತದ ಮಾದರಿಯಲ್ಲಿ ಹೆಚ್ಚಿತು. ಭೂ ಒಡೆತನ ಹೊಂದಿದ್ದ ೧/೩ ಭಾಗದ ರೈತರು ಸಾಲದಲ್ಲಿ ಮುಳುಗಿದ್ದರು. ಮತ್ತು ಅದೇ ಮೊತ್ತದ ಜನ ಸಾಲವನ್ನು ಹಿಂತಿರುಗಿಸಲಾರದ ಮಟ್ಟ ತಲುಪಿದ್ದರು. ಈ ಗ್ರಾಮೀಣ ಸಾಲದ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಶೇ. ೭೫ ಭಾಗದ ರೈತರು ತಮ್ಮ ಜೀವನಾವಶ್ಯಕ ಆಹಾರವನ್ನು ತಮ್ಮ ಉತ್ಪಾದನೆಗೆ ಬೆಲೆ ಸಿಗಲಿಲ್ಲ. ಕೇಂದ್ರೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿ ೧೯೩೧ರಲ್ಲಿ ಇಂಡಿಯಾದಲ್ಲಿ ಪ್ರಾಂತ್ಯಗಳ ಒಟ್ಟು ಕೃಷಿ ಸಾಲ ಸುಮಾರು ೯೦೦ ಕೋಟಿ ರೂ.ಗಳೆಂದು ವರದಿ ಮಾಡಿತ್ತು. ಆದರೆ ೧೯೩೬ ರ ಕೊನೆಯ ವೇಳೆಗೆ ಆ ಸಂಖ್ಯೆ ೧,೮೦೦ ಕೋಟಿ ಮುಟ್ಟಿತು. ಹೆಚ್ಚಿನ ಬಡ್ಡಿಗೆ ಪಡೆದ ಈ ಗ್ರಾಮೀಣ ಸಾಲದ ಪೈಕಿ ಹೆಚ್ಚಿನ ಭಾಗ ಅನುತ್ಪಾದಕವಾಗಿತ್ತು. ಸರ್ಕಾರ ಈ ಸಮಸ್ಯೆಯನ್ನೇದುರಿಸಲು ಆಗಾಗ್ಗೆ ಕೆಲವು ಕ್ರಮಗಳನ್ನು ಕೈಗೊಂಡಿತು. ೧೯೧೮ರಲ್ಲಿ ಕ್ರೂಢಿಕರಿಸಲಾದ ಮತ್ತು ತಿದ್ದು ಪಡಿ ಮಾಡಲಾದ ಗರಿಷ್ಠ ಬಡ್ಡಿ ಮೊಬಲಗನ್ನು ನಿಗದಿಪಡಿಸಲು ಪ್ರಯತ್ನಿಸಿತು. ಕೃಷಿಗೆ ಸಂಬಂಧಿಸಿದ ರಾಯಲ್ ಆಯೋಗ ಸಾಲ ನೀಡುವುದನ್ನು ನಿಯಂತ್ರಿಸಲು ಶಿಫಾರಸ್ಸು ಮಾಡಿತು. ಕೆಲವು ಪ್ರಾಂತೀಯ ಬ್ಯಾಂಕಿಂಗ್ ಸಮಿತಿಗಳು ಸಾಲ ನೀಡುವವರಿಗೆ ರಹದಾರಿ ಪದ್ಧತಿ ಜನರಿಗೆ ತರಲು ಶಿಫಾರಸ್ಸು ಮಾಡಿದವು. ಭೂ ವರ್ಗಾವಣೆಯನ್ನು ಸೀಮಿತಗೊಳಿಸಲು ಭೂ ಪರಾಧೀನ ಕಾಯ್ದೆಗಳನ್ನು ಮಾಡಲಾಯಿತು. ಉದಾಹರಣೆಗೆ ಪಂಜಾಬಿನ ಭೂ ಪರಾಧಿನ ಕಾಯ್ದೆ (೧೯೦೦) ಕೃಷಿ ಮಾಡದ ವರ್ಗಗಳವರು ಕೃಷಿಕರಿಂದ ಜಮೀನು ಕೊಳ್ಳುವುದನ್ನು ಅಥವಾ ಇಪ್ಪತ್ತು ವರ್ಷಗಳಿಗೆ ಹೆಚ್ಚಿನ ಅವಧಿಗೆ ಗುತ್ತಿಗೆ ಪಡೆಯುವುದುನ್ನು ನಿಷೇಧಿಸಿತು.

ಆದರೂ ಕ್ಷಾಮ ಪೀಡಿತ ಮತ್ತಿತರ ಪ್ರದೇಶಗಳಲ್ಲಿ ಸರ್ಕಾರವು ತೋರಿದ ಕಂದಾಯ ವಿನಾಯಿತಿ ಕಡಿಮೆ ಪ್ರಮಾಣದ್ದಾಗಿತ್ತು. ಜಮೀನ್ದಾರಿ ಪದ್ಧತಿ ಇದ್ದ ಕಡೆ ಕಂದಾಯ ಸಲ್ಲಿಸಲು ಆಗದ ರೈತರು ಜಮೀನ್ದಾರರ ಕಿರುಕುಳ ತಾಳಲಾರದೆ ಸಾಲಗಾರರ ಬಳಿ ಸಾಲ ಮಾಡಿದರು. ಸಾಲವನ್ನು ತೀರಿಸಲಾಗದಿದ್ದಾಗ ಹೆಚ್ಚಿನ ಪ್ರಮಾಣದ ಭೂಮಿಯು ರೈತನ ಒಡೆತನದಿಂದ ಲೇವಾದೇವಿಗಾರನಿಗೆ ಬದಲಾಯಿತು. ಲೇವಾ ದೇವಿಗಾರರು ಶೇ. ೧೨ ರಿಂದ ಊಹಿಸಲಾಗದಂಥ ಶೇ. ೨೦೦ ರಿಂದ ೩೦೦ ಕ್ಕೇ ಏರಿಸಿದನು. ರೈತರ ಅಜ್ಞಾನವನ್ನುಪಯೋಗಿಸಿಕೊಂಡು ಮೋಸದ ಕಾಗದ ಪತ್ರಗಳಿಗೆ ಸಹಿ ಪಡೆದು ಭೂಮಿಯನ್ನು ಕಸಿದುಕೊಂಡರು. ನ್ಯಾಯಾಲಯದಲ್ಲಿ ಹೆಚ್ಚಿನ ಹಣ ಖರ್ಚಾಗುತ್ತಿದ್ದುದರಿಂದ ರೈತರು ದೂರವಿರುವಂತಾಯಿತು. ಸರ್‌. ಡೇನಿಯಲ್ ಹ್ಯಾಮಿಲ್ಟನ್ ಅಭಿಪ್ರಾಯದಂತೆ “ಸಂಪೂರ್ಣ ದೇಶವು ಮಹಾಜನಗಳ ಕಪಿಮುಷ್ಟಿಯಲ್ಲಿದೆ. ಈ ಸಾಲವು ರೈತನನ್ನು ಗುಲಾಮಗಿರಿಗೆ ಇಳಿಸುತ್ತದೆ” ಎಂದಿದ್ದಾರೆ. ಈ ಗ್ರಾಮೀಣ ಸಾಲದಿಂದ ರೈತನನ್ನು ಪಾರು ಮಾಡಲು ಸರ್ಕಾರವು ಅನೇಕ ಗ್ರಾಮೀಣ ಪುನರ‍್ರಚನಾ ಕಾರ್ಯಗಳನ್ನು ಕೈಗೊಂಡು ೧೯೩೫-೩೬ರಲ್ಲಿ ೨ ಕೋಟಿ ವ್ಯಯಮಾಡಿತು.