ತುಂಗಭದ್ರಾ ನದಿಯ ಉತ್ತರಕ್ಕೆ ಇರುವ ಕನ್ನಡ ಪ್ರದೇಶವು ರಾಜಕೀಯ ಪರಿವರ್ತನೆಗಳ ಮೂಲಕ ಹಾದು ಬರಬೇಕಾಯಿತೆಂಬುದನ್ನು ಇಲ್ಲಿ ಗ್ರಹಿಸಬೇಕಾಗಿದೆ. ಯಾದವ ವಂಶವು ಅಧಿಕಾರದಿಂದ ಇಳಿದು ನಿರ್ನಾಮವಾದಾಗಿನಿಂದ ಹಾಗೂ ಬಹುಮನಿ ರಾಜ್ಯವು ೧೪ನೆಯ ಶತಮಾನದ ಮಧ್ಯಭಾಗದಲ್ಲಿ ಸ್ಥಾಪನೆಯಾದ ಮೇಲೆ, ತುಂಗಭದ್ರಾ ನದಿಯ ಬಗಲಲ್ಲಿರುವ ಕನ್ನಡನಾಡು ಸ್ಥೂಲವಾಗಿ ಬಿಜಾಪುರ ಮತ್ತು ಹೈದರಾಬಾದ್ ಕರ್ನಾಟಕದ ಭಾಗಗಳೆಲ್ಲವೂ ಸುಲ್ತಾನರ ವಶವಾಯಿತು. ಮೊದಲು ಬಹುಮನಿ ಸುಲ್ತಾನರು ಸುಮಾರು ೧೫೦ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಆ ನಂತರ ಬಿಜಾಪುರದ ಆದಿಲ್‌ಶಾಹಿ ವಂಶವೂ, ಆ ಬಳಿಕ ೧೬ನೆಯ ಶತಮಾನದ ಪ್ರಾರಂಭದಿಂದ ಗೋಲ್ಕಂಡ ಮತ್ತು ಬೀದರೆಯ ಸುಲ್ತಾನರೂ ಆಳಿದರು. ತುಂಗಭದ್ರೆಯ ತೆಂಕಣಕ್ಕೆ ವಿಜಯನಗರ ಸಾಮ್ರಾಜ್ಯವು ತಲೆಯೆತ್ತಿದರೂ ಮುಸ್ಲಿಮರ ಆಳ್ವಿಕೆಯಲ್ಲಿದ್ದ ಕರ್ನಾಟಕ ಪ್ರದೇಶಗಳು ಅನುಕೂಲಕ್ಕಾಗಿ ಇನ್ನೂ ಕಾದಿರಬೇಕಾಗಿತ್ತು. ಆದರೆ ಧಾರವಾಡದ ಕೆಲವು ಭಾಗಗಳು ವಿಜಯನಗರದ ಸಾಮಂತರ ಆಳ್ವಿಕೆಗೆ ಬಂದವು. ಆದರೂ ಕರ್ನಾಟಕ ಪ್ರದೇಶವು ಪೂರ್ವದಿಕ್ಕಿನಿಂದ ಮುಸ್ಲಿಮರ ಧಾಳಿಗೆ ತುತ್ತಾಗುತ್ತಿತ್ತು. ಕೃಷ್ಣಾ, ತುಂಗಭದ್ರಾ ನದಿಗಳ ನಡುವಣ ಪ್ರದೇಶವು ವಿವಾದಭೂಮಿಯಾಗಿ ಅದರ ಮೇಲೆ ಮುಸ್ಲಿಮರು ಧಾಳಿ ಮಾಡುತ್ತಲೇ ಇದ್ದರು. ಹದಿನೇಳನೆಯ ಶತಮಾನದ ಮಧ್ಯದಲ್ಲಿ ಶಿವಾಜಿಯ ಪ್ರಭಾವವು ಕಂಡುಬಂದ ನಂತರ ಮುಂಬಯಿಯ ಪ್ರಾಂತಕ್ಕೆ ಸೇರಿದ ಕರ್ನಾಟಕದ ಜಿಲ್ಲೆಗಳಲ್ಲಿ ಮರಾಠರ ಪ್ರಗತಿಗೆ ಅವಕಾಶವಾಯಿತು. ಆದರೆ ೧೬೮೦ರಲ್ಲಿ ಶಿವಾಜಿಯು ಮರಣ ಹೊಂದಿದ ಮೇಲೆ ಮೊಗಲರು ಮತ್ತೆ ಈ ಭಾಗದ ಮೇಲೆ ದಾಳಿ ಮಾಡಿದರು. ೧೭೦೭ರಲ್ಲಿ ಔರಂಗಜೇಬನು ಮರಣ ಹೊಂದಿದಾಗ ಪರಿಸ್ಥಿತಿ ಬದಲಾಗಿ ಮರಾಠರಿಗೆ ಅನುಕೂಲವಾಯಿತು.

ಪೇಶ್ವೆ ಬಾಜೀರಾಯನು ೧೭೨೬ರಲ್ಲಿ ದಂಡೆತ್ತಿ ಕರ್ನಾಟಕವನ್ನು ಪ್ರವೇಶಿಸಿ ಶ್ರೀರಂಗಪಟ್ಟಣದವರೆಗೆ ದಾಳಿ ಮಾಡಿದನು. ಸವಣೂರು ನವಾಬನು ನಿಜಾಮನ ಸಾಮಂತ ಮರಾಠರನ್ನು ಎದುರಿಸಿದನು. ಇದರ ಫಲ ೧೭೪೭ರಲ್ಲಿ ಆದ ಸವಣೂರು ಒಪ್ಪಂದ. ಕದನ ನಿಂತು ಒಪ್ಪಂದವಾಗಿ ಹುಬ್ಬಳ್ಳಿ, ಬಂಕಾಪುರ, ಹಾನಗಲ್ಲು, ಸವಣೂರು, ಧಾರವಾಡ, ನವಲುಗುಂದ, ಗದಗ ಮತ್ತು ರಾಣಿಬೆನ್ನೂರಿನ ಭಾಗಗಳೂ ಪೇಶ್ವೆಯ ವಶಕ್ಕೆ ಬಂದವು. ಸವಣೂರು ನವಾಬನು ಸ್ವತಂತ್ರವಾಗುವ ಧೈರ‍್ಯ ತೋರಿಸಿದನು. ಆಗ ನಿಜಾಮನೂ ಮರಾಠರೂ ಒಂದಾಗಿ ಅವನನ್ನು ಸೆರೆಯಲ್ಲಿರಿಸಿದರು. ಈ ಪ್ರದೇಶಕ್ಕೆ ೧೭೬೪-೬೫ರಲ್ಲಿ ಹೈದರನು ಧಾಳಿ ನಡೆಸಿದಾಗ, ಸವಣೂರಿನ ನವಾಬನನ್ನು ಒಲಿಸಲು ಹೈದರನು ಪ್ರಯತ್ನಿಸಿದನಾದರೂ ನವಾಬನು ಜಗ್ಗಲಿಲ್ಲ. ಆದರೆ ೧೭೭೬ರಲ್ಲಿ ಹೈದರನು ಮರಾಠರನ್ನು ಸೋಲಿಸಿದಾಗ ಸವಣೂರು ನವಾಬನು ಶರಣಾಗಿ ಹೈದರನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿ ಸಂಬಂಧವನ್ನು ಬೆಳಸಿದನು. ೧೭೮೨ರಲ್ಲಿ ಹೈದರನು ಮರಣ ಹೊಂದಿದನು. ಟಿಪ್ಪೂಸುಲ್ತಾನನು ತಂದೆಯನಂತರ ಪಟ್ಟಾಭಿಷಕ್ತನಾಗಿ ಉತ್ತರ ಕರ್ನಾಟಕದ ಮೇಲೆ ಧಾಳಿ ನಡೆಸಿ ಕಿತ್ತೂರು-ನರಗುಂದ ಪ್ರದೇಶಗಳನ್ನು ಆಕ್ರಮಿಸಿದನು. ಇದು ನಿಜಾಮ ಹಾಗೂ ಮರಾಠರಿಗೆ ೧೭೮೬ರಲ್ಲಿ ಟಿಪ್ಪುವಿಗೆ ವಿರೋಧವಾಗಿ ಒಪ್ಪಂದಕ್ಕೆ ಬರಲು ದಾರಿ ಮಾಡಿತು.

ಬ್ರಿಟಿಷರು ಮರಾಠರ ಮತ್ತು ನಿಜಾಮರ ಸಹಕಾರದಿಂದ ಟಿಪ್ಪುವನ್ನು ೧೭೯೨ರ ಮೂರನೇ ಮೈಸೂರು ಯುದ್ಧದಲ್ಲಿ ಸೋಲಿಸಿದಾಗ, ಅವನ ರಾಜ್ಯದಲ್ಲಿ ಅರ್ಧಭಾಗವನ್ನು ಕಿತ್ತುಕೊಂಡರು. ಅದು ಈ ಮೂವರಲ್ಲಿ ಹರಿದು ಹಂಚಿಹೋಯಿತು. ಹಳೇ ಮೈಸೂರಿನ ಪಶ್ಚಿಮ ದಕ್ಷಿಣ ಪೂರ್ವ ದಿಕ್ಕುಗಳಿಗಿದ್ದ ಭಾಗವನ್ನು ಬ್ರಿಟಿಷರು, ಮರಾಠರು ತುಂಗಭದ್ರೆಯ ದಕ್ಷಿಣ ಪೂರ್ವ ದಿಕ್ಕುಗಳಿಗಿದ್ದ ಭಾಗವನ್ನು ತಮ್ಮ ಪಾಲಿಗಿಟ್ಟುಕೊಂಡರು. ಮರಾಠರು ತಂಗಭದ್ರೆಯ ದಕ್ಷಿಣ ಗಡಿಯಾದ ಉತ್ತರ ಕರ್ನಾಟಕದ ಭಾಗವನ್ನು ತಮ್ಮದಾಗಿಸಿಕೊಂಡರು. ನಿಜಾಮನ ಪಾಲಿಗೆ ಹಳೆಯ ಮೈಸೂರಿನ ಈಶಾನ್ಯಭಾಗವೂ ರಾಜ್ಯದ ಅರ್ಧ ಭಾಗದಷ್ಟು ಪ್ರದೇಶ ಹಸ್ತಾಂತರಿಸಲು ಒಪ್ಪಿಕೊಳ್ಳಬೇಕಾಯಿತು. ಬ್ರಿಟಿಷರು ಅವನ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಏಳು ವರ್ಷ ಕಳೆದ ನಂತರ ಬ್ರಿಟಿಷರೂ ಅವರ ಮಿತ್ರರೂ ಸೇರಿಕೊಂಡು ಟಿಪ್ಪುವಿನೊಂದಿಗೆ ೪ನೇ ಯುದ್ಧ ಮಾಡಿ ಸೋಲಿಸಿದರು. ಈ ಯುದ್ಧದಲ್ಲಿ ಟಿಪ್ಪು ಮರಣ ಹೊಂದಬೇಕಾಯಿತು.

ಬ್ರಿಟಿಷ್ ಆಳ್ವಿಕೆಯ ಪ್ರಭಾವವು ಭಾರತದ ಎಲ್ಲಡೆಯಂತೆ ಕರ್ನಾಟಕದಲ್ಲೂ ಅನೇಕ ಬದಲಾವಣೆಗಳನ್ನು ತಂದಿತು. ಪೇಶ್ವೆಗಳಿಂದ ಗೆದ್ದಿದ್ದ ಧಾರವಾಡ, ಬಿಜಾಪುರ ಮತ್ತು ಬೆಳಗಾವಿ ಮೂರೂ ಜಿಲ್ಲೆಗಳನ್ನು ೧೮೧೮ರಲ್ಲಿ ಮುಂಬಯಿ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು. ಟಿಪ್ಪುವಿನಿಂದ ಪಡೆದಿದ್ದ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಬಳ್ಳಾರಿ ಜಿಲ್ಲೆಗಳನ್ನು ಮದ್ರಾಸ್ ಪ್ರಾಂತಕ್ಕೆ ಸೇರಿಸಲಾಯಿತು. ಕೆನರಾ ಜಿಲ್ಲೆಯನ್ನು ೧೮೬೨ರಲ್ಲಿ ಎರಡು ಭಾಗಮಾಡಿ ಉತ್ತರ ಕನ್ನಡ ಜಿಲ್ಲೆಯನ್ನು ಮುಂಬಯಿ ಪ್ರಾಂತಕ್ಕೆ ಸೇರಿಸಲಾಯಿತು ೧೮೩೪ರಲ್ಲಿ ಅಧೀನ ರಾಜತ್ವ ಮುಗಿದು ಕೊಡಗು ರಾಜ್ಯವನ್ನು ಮದ್ರಾಸ್ ಗೌರ‍್ನರ್‌ನ ಮೇಲ್ವಿಚಾರಣೆಯಿಂದ ಕಮಿಷನರ್ ಆಳ್ವಿಕೆಗೆ ಒಪ್ಪಿಸಲಾಯಿತು. ಆದರೆ ಮೈಸೂರನ್ನು ಪ್ರತ್ಯೇಕ ಸಂಸ್ಥಾನವಾಗಿಯೇ ಉಳಿಸಲಾಯಿತು. ೧೭೯೯ರಲ್ಲಿ ಯದುವಂಶದವರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಅಧಿಕಾರ ಸ್ವೀಕರಿಸಿದಾಗ ಇನ್ನೂ ಬಾಲಕರಾಗಿದ್ದರು. ಈಗಿನ ಗುಲ್ಬರ್ಗಾ, ರಾಯಚೂರು ಮತ್ತು ಬೀದರ್ ಜಿಲ್ಲೆಗಳ ಭಾಗಗಳನ್ನು ಹೈದರಾಬಾದ್ ನಿಜಾಮರಿಗೆ ನೀಡಲಾಯಿತು. ಇದಲ್ಲದೆ ಸವಣೂರಿನ ನವಾಬನೂ ಸೇರಿದಂತೆ ಕರ್ನಾಟಕದಲ್ಲಿ ಸಣ್ಣ ಪುಟ್ಟ ಸಂಸ್ಥಾನಗಳನ್ನು ಆಳುತ್ತಿದ್ದ ಹದಿನೈದಕ್ಕೂ ಹೆಚ್ಚು ಸಂಸ್ಥಾನಿಕರಿದ್ದರು. ಜಮಖಂಡಿ, ರಾಮದುರ್ಗ, ಮುಧೋಳ, ಸಂಡೂರು ಇತ್ಯಾದಿಗಳು ಸೇರಿದಂತೆ ಅವರಲ್ಲಿ ಬಹುತೇಕರು ಮರಾಠಿಗರಾಗಿದ್ದುದು ವಿಶೇಷವಾಗಿತ್ತು.

ಅಂದಿನ ರಾಜಕೀಯ ಸಂದರ್ಭ ಕುರಿತು ಚರ್ಚಿಸುವಾಗ ಮೈಸೂರಿಗೆ ವಿಶೇಷವಾದ ಸ್ಥಾನ ನೀಡಬೇಕಾಗುತ್ತದೆ. ಅಂದು ಕರ್ನಾಟಕದ ಕೇಂದ್ರವಾಗಿ ಮೈಸೂರು ಪ್ರಗತಿಪರ ಸಂಸ್ಥಾನವಾಗಿ ಬೆಳೆಯುತ್ತಿತ್ತು. ಅದು ಕನ್ನಡ ಸಂಸ್ಕೃತಿಯನ್ನು ಪೋಷಿಸುವತ್ತ ಮುಂದಾಗಿತ್ತು. ಅಂದಿನ ಕರ್ನಾಟಕದ ರಾಜಕೀಯದ ಸಂದರ್ಭದಲ್ಲಿ ಮೈಸೂರು ಸಂಸ್ಥಾನವು ಇಲ್ಲದೇ ಇದ್ದಲ್ಲಿ ಕರ್ನಾಟಕವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿತ್ತು ಎಂದರೆ ತಪ್ಪಾಗದು. ಬಾಲಕರಾಗಿದ್ದ ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಪೂರ್ಣಯ್ಯನವರು ದಿವಾನರಾಗಿ ಆಳ್ವಿಕೆಮಾಡಿ ಮೈಸೂರನ್ನು ಅಭಿವೃದ್ಧಿಯ ಹಾದಿಗೆ ಕೊಂಡೊಯ್ದರು. ೧೮೧೦ರಲ್ಲಿ ಕೃಷ್ಣರಾಜರೇ ಆಡಳಿತವನ್ನು ವಹಿಸಿಕೊಂಡರು. ಆದರೆ ೧೮೩೧ರಲ್ಲಿ ನಡೆದ ನಗರ ದಂಗೆಯು ವಸಾಹತುಶಾಹಿಗಳು ನೇರವಾಗಿ ಮೈಸೂರಿನ ಆಡಳಿತ ವಹಿಸಿಕೊಳ್ಳುವಂತೆ ಮಾಡಿತು. ಈ ಘಟನೆಯಿಂದಾಗಿ ಮೈಸೂರು ಸಂಸ್ಥಾನವನ್ನು ವಸಾಹತುಶಾಹಿಗಳು ಐವತ್ತು ವರ್ಷಗಳ ಕಾಲ ಆಳಿದರು.

ಬ್ರಿಟಿಷರ ವಿದೇಶಿ ಆಡಳಿತ ಪದ್ಧತಿಗೆ ಕನ್ನಡ ಮಾತಾಡುತ್ತಿದ್ದ ಪ್ರದೇಶ ಸುಲಭವಾಗಿ ತಲೆಬಾಗಲಿಲ್ಲ. ೧೮೦೦ರಿಂದ ೧೮೫೮ರ ನಡುವಿನ ಅವಧಿಯಲ್ಲಿ ರಾಜ್ಯದಾದ್ಯಂತ ಹಾಗೂ ದಕ್ಷಿಣ ಭಾರತದಲ್ಲಿ ಹಿಂಸಾತ್ಮಕವಾದ ಬ್ರಿಟಿಷ್ ವಿರೋಧಿ ಬಂಡಾಯಗಳಾದವು. ಇಂತಹವುಗಳಲ್ಲಿ ಮೊದಲನೆಯದೇ ಟಿಪ್ಪುವಿನ ಪತನಾನಂತರ ೧೮೦೦ರಲ್ಲಿ ಬಿದನೂರು-ಶಿಕಾರಿಪುರ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯವನ್ನು ದೋಂಡಿಯಾವಾಘ್ ಹಾರಿಸಿದ್ದೇ ಆಗಿದೆ. ಅನೇಕ ಸಣ್ಣ ಪುಟ್ಟ ಸಂಸ್ಥಾನ ಹಾಗೂ ಪಾಳೆಯಗಾರರು ಅವನೊಡನೆ ಸೇರಿದ್ದರು. ಅವನ ಬಂಡಾಯವು ಜಮಾಲಾಬಾದ್‌ನಿಂದ ಕರಾವಳಿ ಜಿಲ್ಲೆಗಳಲ್ಲಿನ ಸೋದೆಯವರೆಗೆ ಮತ್ತು ಘಟ್ಟಗಳ ಮೇಲಿನ ಪ್ರದೇಶಗಳಲ್ಲಿ ಹಾಗೂ ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳವರೆಗೆ ಹಬ್ಬಿತ್ತು.

ಹುಟ್ಟಿನಿಂದ ಮರಾಠಾ ಆಗಿದ್ದ ದೋಂಡಿಯಾವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿ ಸೈನಿಕ. ಮೊದಲು ಅವನು ಪಟವರ್ದನರ ಬಳಿ, ಕೊಲ್ಲಾಪುರದ ರಾಜನ ಬಳಿ ಮತ್ತು ಧಾರವಾಡದ ದೇಸಾಯಿ ಬಳಿ ಸೇವೆ ಸಲ್ಲಿಸುತ್ತಿದ್ದನು. ೧೭೮೦ರಲ್ಲಿ ಹೈದರ್ ಆಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿಕೊಂಡನು. ಆಮೇಲೆ ಸೇನಾನಾಯಕನಾದನು. ಪಡಪಡಿಕೆಯ ಸ್ವಭಾವದ ವ್ಯಕ್ತಿಯಾಗಿ ಸೈನ್ಯದಿಂದ ಓಡಿಹೋದ ವಾಘ್ ತನಗೆ ಬೇಕಾದ ಜನರ ಒಂದು ತಂಡವನ್ನು ಖಾಸಗಿ ಸೈನ್ಯವಾಗಿ ಕಟ್ಟಿದ. ೧೭೯೪ರಲ್ಲಿ ಶ್ರೀರಂಗಪಟ್ಟಣಕ್ಕೆ ಬರುವಂತೆ ಅವನನ್ನು ಪ್ರಚೋದಿಸಲಾಯಿತು. ಆಮೇಲೆ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಸೇನೆಯಲ್ಲಿ ಅವನಿಗೆ ಒಂದು ಸ್ಥಾನವು ದೊರೆಯಿತು. ಆದರೆ ಭಿನ್ನಾಭಿಪ್ರಾಯಗಳು ಕಾರಣವಾಗಿ ಅವನ್ನು ೧೭೯೯ರ ವರೆಗೂ ಸೆರೆಯಲ್ಲಿಡಲಾಯಿತು.

ಬ್ರಿಟಿಷರು ೧೭೯೯ರಲ್ಲಿ ಶ್ರೀರಂಗಪಟ್ಟಣವನ್ನು ಜಯಿಸಿದ ನಂತರ, ಕಾರಾಗೃಹದ ಗೋಡೆಗಳಿಗೆ ಸರಪಣಿಗಳಿಂದ ಬಂಧಿಸಲ್ಪಟ್ಟಿದ್ದ ವಾಘ್‌ನನ್ನು ನೋಡಿದ ಕಂಪೆನಿ ಸೈನಿಕರು ಅವನನ್ನು ಅಲ್ಲಿಂದ ಬಿಡುಗಡೆ ಮಾಡಿದರು. ಒಡನೆಯೇ ಅವನು ಓಡಿಹೋಗಿ ತನ್ನ ಅನುಚರರ ತಂಡವನ್ನು ಸೇರಿಕೊಂಡನು.

ಆ ಸಮಯದಲ್ಲಿ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೊಯಮತ್ತೂರು, ಸೇಲಂ, ಮಲಬಾರ್ ಮೊದಲಾದ ಕಡೆಗಳಲ್ಲಿ, ಬ್ರಿಟಿಷ್ ಆಳ್ವಿಕೆಯ ಹಿಡಿತದಿಂದ ತಮ್ಮನು ಬಿಡಿಸಿಕೊಳ್ಳಬೇಕೆಂಬ ಭಾವನೆಯು ವೇಗವಾಗಿ ಹರಡುತ್ತಿತ್ತು, ರೈತ ವರ್ಗದಲ್ಲಿ ಈ ಭಾವನೆ ಹೆಚ್ಚಾಗಿತ್ತು. ಇದು ವಿಪರೀತ ಸ್ವತಂತ್ರ ಮನಸ್ಕನೂ, ಇತರ ಒಡೆಯರಿಗೆ ಸೇವೆ ಮಾಡುವುದಕ್ಕಿಂತ ಇತರರಿಂದ ಸೇವೆ ಮಾಡಿಸಿಕೊಳ್ಳುವ ಪವೃತ್ತಿಯವನೂ ಆದ ದೋಂಡಿಯಾವಾಘ್‌ನಿಗೆ ಸಹಜವಾಗಿಯೇ ಪ್ರೋತ್ಸಾಹಕರ ಪರಿಸ್ಥಿತಿಯಾಯಿತು. ಆದ್ದರಿಂದ ತನ್ನಂತೆಯೇ ಅನಿರ್ಬಂಧಿತ ಯೋಧರಾಗಿದ್ದ ಕೆಲವು ಜನರ ತಂಡವನ್ನು ಕಟ್ಟಿಕೊಂಡು ಅವನು ಶಿವಮೊಗ್ಗ, ಬಿದನೂರುಗಳ ಬಳಿ ಕೆಲವು ಕೋಟೆಗಳನ್ನು ವಶಪಡಿಸಿಕೊಂಡು ಅನೇಕ ಕೀಳು ಕೆಲಸಗಳಲ್ಲಿ ತೊಡಗಿದನು. ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷ್ ಪ್ರಭುತ್ವದ ವಿರುದ್ಧವಾಗಿ ದೋಂಡಿಯಾವಾಘ್ ಎಬ್ಬಿಸಿದ ದಂಗೆಯ ಪ್ರಾರಂಭ ಇದು. ಬ್ರಿಟಿಷರಿಂದ ಬಿಡುಗಡೆ ಪಡೆಯಬೇಕೆಂಬ ಆಸೆಯಿಂದ, ಟಿಪ್ಪುಸುಲ್ತಾನನ ಸೈನ್ಯದಲ್ಲಿದ್ದ ಅನೇಕ ಸಶಸ್ತ್ರ ಯೋಧರು, ಅನೇಕ ನಿವೃತ್ತ ಪಾಳೆಯಗಾರರು ಮತ್ತು ಕಿಲ್ಲೆದಾರರು ದೋಂಡಿಯಾನೊಂದಿಗೆ ಸೇರಿಕೊಂಡರು. ಟಿಪ್ಪುಸುಲ್ತಾನನ ಸೈನ್ಯದಲ್ಲಿ ಅಳಿದುಳಿದಿದ್ದ ಸುಮಾರು ಐದುಸಾವಿರ ಆಯುಧಗಳನ್ನು ಅವನು ಸಂಗ್ರಹಿಸಿದನು. ಅತೃಪ್ತರಾಗಿದ್ದ ಅನೇಕ ಜನ ಮುಸ್ಲಿಂ ಸೈನಿಕರು ಅವನ ಜೊತೆಗೂಡಿದರು. ಅವನು ತನ್ನನ್ನು ‘ಎರಡು ಜಗತ್ತುಗಳ ರಾಜ‘ ಎಂದು ಘೋಷಿಸಿಕೊಂಡನು.

ದೋಂಡಿಯಾನು ೧೭೯೯ ಜೂನ್ ತಿಂಗಳಲ್ಲಿ ಶಿವಮೊಗ್ಗವನ್ನು ಆಕ್ರಮಿಸಿಕೊಂಡನು. ತನ್ನ ಬ್ರಿಟಿಷ್ ವಿರೋಧಿ ಕಾರ‍್ಯ ಚಟುವಟಿಕೆಗಳಿಗೆ ಅಲ್ಲಿ ಕೇಂದ್ರವನ್ನು ಸ್ಥಾಪಿಸಿಕೊಂಡನು. ಅಲ್ಲಿಂದ ಅವನು ಮೈಸೂರಿನ ವಾಯುವ್ಯಕ್ಕಿದ್ದ ಬ್ರಿಟಿಷರ ಯುದ್ಧ ಸಾಮಗ್ರಿ ಗಳನ್ನು ಅವರ ಉಗ್ರಾಣಗಳನ್ನೂ ಲೂಟಿ ಮಾಡತೊಡಗಿದನು. ಮೈಸೂರಿನ ಮುಸ್ಲಿಮರಿಂದ ಹೆಚ್ಚಿನ ಬೆಂಬಲವು ದೊರಕಿದ ಮೇಲೆ ದೋಂಡಿಯಾನು ನಗರ ವಿಭಾಗದಲ್ಲಿ ಮತ್ತು ಕರಾವಳಿಯಲ್ಲಿ ಮುಖ್ಯವಾದ ಬಂದರುಗಳನ್ನು ಆಕ್ರಮಿಸಿಕೊಂಡನು. ಬ್ರಿಟಿಷರ ಮುಷ್ಠಿಯಿಂದ ಜನರನ್ನು ವಿಮೋಚನೆಗೊಳಿಸುತ್ತೇನೆ ಎಂಬ ವಿಚಾರ ತುಂಬಿಕೊಂಡಿದ್ದ ಅವನು ನಿಜಾಮನ ರಾಜ್ಯದ ಗಡಿಯವರೆಗೆ ಹೋಗಿ ಗುತ್ತಿಯನ್ನು ವಶಪಡಿಸಿಕೊಂಡನು. ಮೈಸೂರಿನ ಗಡಿಗಳಲ್ಲಿ ಬ್ರಿಟಿಷರ ಪ್ರಭಾವವು ವ್ಯಕ್ತವಾಗ ಕೂಡದೆಂಬುದು ಅವನ ಬಯಕೆಯಾಗಿತ್ತು.

ಅಲ್ಲಿಂದ ದೋಂಡಿಯಾ ಮತ್ತು ಅವನ ಅನುಚರರು ೧೭೯೯ರಲ್ಲಿ ಜುಲೈ ತಿಂಗಳಲ್ಲಿ ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು.ಈ ಹಂತದಲ್ಲಿ ಭಾರತದಾದ್ಯಂತ ವಿಶೇಷವಾಗಿ ಮೈಸೂರಿನಲ್ಲಿ ಕಂಡುಬಂದಿದ್ದ ಬ್ರಿಟಿಷ್ ವಿರೋಧಿ ಶಕ್ತಿಗಳನ್ನು ಸದೆಬಡಿಯಲು ಆಯುಧ ಪ್ರಯೋಗ ಮಾಡಲು ಹಿಂಜರಿಯಲಿಲ್ಲ. ದೇಶಿಯವಾದ ಸೈನ್ಯ ನಿಜಾಮನ ಸೇನೆ ಹಾಗೂ ಮುಂಬಯಿ ಕಲ್ಕತ್ತದಿಂದ ಬಂದ ತುಕಡಿಗಳು ಅವರ ಬೆಂಬಲಕ್ಕಿದ್ದವು. ತಮ್ಮವರೇ ಸೋದರರನ್ನು ಬಗ್ಗುಬಡಿಯಲು ಸ್ಥಳೀಯ ಸೇನೆಯು ಮುಂದಾಗಿ, ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸಿತು. ಅಲ್ಲದೆ ಸಬ್ಸಿಡಿಯರಿ ಒಪ್ಪಂದವನ್ನು ರಚಿಸಿದ್ದುದೇ ಬ್ರಿಟಿಷರಿಗೆ ಲಾಭವಾಗುವ ರೀತಿಯಲ್ಲಿ. ಮಹಾರಾಜರು ತಮ್ಮ ಸೈನ್ಯವನ್ನೂ, ಹಣವನ್ನೂ ಕಂಪನಿಯ ವೈಭವೀಕರಣಕ್ಕಾಗಿ ಒಪ್ಪಿಸುವಂತೆ ಬಲಾತ್ಕರಿಸಲು ಅದರಿಂದ ಸುಲಭವಾಯಿತು.

೪ನೆಯ ಅಶ್ವಾರೋಹಿ ಪಡೆಯ ಕರ್ನಲ್ ಪೇಟರನಿಗೆ ದೋಂಡಿಯಾ ಮತ್ತು ಅವನ ಜನರ ಮುನ್ನಡೆ ಹಾಸನದ ಕೋಟೆಯ ಬಳಿ ತಡೆಯುವಂತೆ ಅರ್ಥರ್ ವೆಲ್ಲೆಸ್ಲಿಯು ಆಜ್ಞೆ ಮಾಡಿದನು. ಆಗಲೆ ಮೈಸೂರಿನ ಒಳಗೆ ಬಂಡಾಯದ ಪ್ರಚಾರ ವ್ಯಾಪಕವಾಗಿ ಹರಡುತ್ತಿತ್ತು. ದಂಗೆಕೋರರ ಠಾಣ್ಯಗಳಲ್ಲಿ ಆಹಾರ ಪೂರೈಕೆಯನ್ನು ತಡೆಯಲು ಅನುಕೂಲಿಸುವಂತೆ ಕಲ್ಕತ್ತಾದಿಂದ ಸೇನಾಪಡೆಯನ್ನು ಕರೆಸಿಕೊಳ್ಳಲು ಕೂಡ ಬ್ರಿಟಿಷರು ಆಲೋಚಿಸಿದರು. ಆದರೆ ಇಂತಹ ತಡೆಗಳಿಗೆಲ್ಲ ಜಗ್ಗದ ಈ ಸ್ವಾತಂತ್ರ ಹೋರಾಟಗಾರರು ಗೂಂಡಿಯ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು. ಆದರೆ ಚಿತ್ರದುರ್ಗದ ಕೋಟೆ ಬ್ರಿಟಿಷರ ವಶವಾಯಿತು. ಬಂಗಾಳ ಮತ್ತು ಬೆಂಗಳೂರುಗಳಿಂದ ಬಂದ ಸೇನೆಯು ಗೂಂಡಿಯರ್‌ನಲ್ಲಿದ್ದ ದಂಗೆಕೋರರನ್ನು ಸೋಲಿಸಿತು. ಅವರಿಂದ ಚನ್ನಗಿರಿ ಕೋಟೆಯನ್ನು ಬಿಡಿಸಿಕೊಂಡಿತು. ಗೂಂಡಿಯರ್‌ನಲ್ಲಿ ಸುಮಾರು ೪೦ ಜನರನ್ನು ಸೆರೆಹಿಡಿಯಲಾಯಿತು. ಸುಮಾರು ೨೫೦ ಕುದುರೆಗಳನ್ನು ಸಾಯಿಸಲಾಯಿತು. ಸೆರೆಹಿಡಿದಿದ್ದವರನ್ನೂ, ಒಬ್ಬ ಕಿಲ್ಲೇದಾರನೂ ಸೇರಿದಂತೆ, ಗಲ್ಲಿಗೇರಿಸಲಾಯಿತು. ಒಬ್ಬನನ್ನು ಮಾತ್ರ ಉಳಿಸಲಾಯಿತು. ಮೈಸೂರಿನ ಜನರಿಗೆ ಬ್ರಿಟಿಷರು ದೇಶಿಯರ ವಿರುದ್ಧವಾಗಿ ಎಂತಹ ಉಗ್ರಕ್ರಮವನ್ನು ಕೈಗೊಳ್ಳಬಲ್ಲರು ಎಂಬುದನ್ನು ತಿಳಿಯಪಡಿಸಲು ಅವನು ಉಳಿದಿಕೊಂಡನು. ತಮ್ಮ ಉದ್ಧೇಶವನ್ನು ನೆರವೇರಿಸಿಕೊಳ್ಳಲು ಅವರು ಎಂತಹ ಮಾರ್ಗವನ್ನು ಹಿಡಿಯಲೂ ಹಿಂಜರಿಯುತ್ತಿರಲಿಲ್ಲ. ಅದೆಷ್ಟೇ ಅವಮಾನೀಯವಾಗಿರಲಿ, ಅನ್ಯಾಯವಾಗಿರಲಿ, ಆದರೆ ಇಂತಹ ಕೆಲಸಗಳು ದೋಂಡಿಯಾನ ಜನರನ್ನು ಭಯ ಪಡಿಸಲಿಲ್ಲ. ಅವರು ಕರ್ನಾಟಕದಲ್ಲಿ ಬ್ರಿಟಿಷ್ ಶಕ್ತಿಗೆ ಮುಕ್ತಾಯ ಹಾಡಲು ಬದ್ಧ ಕಂಕಣರಾಗಿ ನಿಂತಿದ್ದರು.

ಬ್ರಿಟಿಷರ ಮುಂದಿನ ಲಕ್ಷ್ಯ ದೋಂಡಿಯಾವಾಘ್ ಆಕ್ರಮಿಸಿಕೊಂಡಿದ್ದ ಹೊನ್ನಾಳಿ ಮತ್ತು ಶಿವಮೊಗ್ಗ ಕೋಟೆಗಳ ಮೇಲೆ ಧಾಳಿ ಮಾಡುವುದು. ದೋಂಡಿಯಾ ಜೀವಸಹಿತ ಇರುವವರೆಗೂ ಕಂಪೆನಿಯ ಪ್ರದೇಶಗಳಲ್ಲಿ ಶಾಂತಿ ಉಳಿದಿರುವುದಿಲ್ಲ ಎಂದು ವೆಲ್ಲೆಸ್ಲಿ, ತನ್ನ ಪತ್ರಗಳಲ್ಲಿ ಸ್ಪಷ್ಟಪಡಿಸಿದನು. ಆದ್ದರಿಂದ ಅವನನ್ನೂ ಅವನ ಅನುಚರರನ್ನೂ ನಿರ್ನಾಮ ಮಾಡಲು ಅವನು ಬಯಸಿದನು. ೧೭೯೯ರಲ್ಲಿ ವೆಲ್ಲೆಸ್ಲಿಯು ದೇಶೀಯ ಪಡೆಗಳನ್ನೂ ಕಂಪೆನಿಯ ಬೆಟಾಲಿಯನ್ ಜೊತೆ ಕರ್ನಲ್ ಜೀಮ್ಸ್ ಸ್ಟೀವನ್ ಸನ್ ಮತ್ತು ಕರ್ನಲ್ ದಾರ್ಲಿಂಪಲ್ ಇವರ ನೇತೃತ್ವದಲ್ಲಿ ಕಳುಹಿಸಿದನು. ಇವರು ಬಂದು ಶಿವಮೊಗ್ಗ ಮತ್ತು ಹೊನ್ನಾಳಿ ಕೋಟೆಗಳಿಗೆ ಮುತ್ತಿಗೆ ಹಾಕಿದರು. ಆ ವೇಳೆಗೆ ದೋಂಡಿಯಾ ಮತ್ತು ಅವನ ಹರಿಹರದ ಉತ್ತರಕ್ಕಿದ್ದ ವೊಲಾಲ್ ಕೋಟೆಯನ್ನು ವಶಪಡಿಸಿಕೊಂಡಿದ್ದರು. ಕಂಪೆನಿಯ ಸೈನ್ಯವು ಅವರ ಬೆನ್ನಟ್ಟಿ ತುಂಗಭದ್ರೆಯ ಫೂರ್ವ ದಂಡೆಯ ಮೇಲೆ ಹರಿಹರದ ಕಡೆಗೆ ನಡೆಯಿತು. ಲೆ.ಕ. ವ್ಯಾಲೇಸ್‌ನ ಕೈಕೆಳಗೆ ಬ್ರಿಟಿಷ್ ಸೇನೆಯೂ, ಕ್ಯಾಪ್ಟನ್ ವಿಲ್ಗೆಟ್‌ನ ಕೈಕೆಳಗೆ ಬೆಂಗಾಲ್ ಸಿಪಾಯಿ ತುಕಡಿಯೂ ಆಗಲೆ ಕೋಟೆಯನ್ನು ವಶಪಡಿಸಿಕೊಂಡಿದ್ದರು.

ದೋಂಡಿಯಾನು ತನ್ನ ೧೨೦೦ ಕುದುರೆಗಳು ಮತ್ತು ೩೦೦ ಪದಾತಿ ದಳದೊಂದಿಗೆ ನಗರ ವಿಭಾಗದ ಶಿಕಾರಿಪುರ ಕೋಟೆಯಲ್ಲಿ ಆಶ್ರಯ ಪಡೆದುಕೊಂಡನು. ಬ್ರಿಟಿಷರು ಅಲ್ಲಿಯೂ ಅವನನ್ನು ಬಿಡಲಿಲ್ಲ. ಕ. ದಾರ್ಲಿಂಪಲ್ ಮತ್ತು ಕ. ಸ್ಟೀವನ್‌ಸನ್‌ರ ಸೈನ್ಯಗಳು ಅವನನ್ನು ಸೋಲಿಸಿದವು. ಈ ವೇಳೆಗೆ ಸಂಖ್ಯಾಬಲ ಹೆಚ್ಚಾದ ದೋಂಡಿಯಾ ಮತ್ತು ಅವನ ಸಹಚರರು ದೈರ್ಯವನ್ನು ಕಳೆದುಕೊಳ್ಳದೆ ಗೂಟಿಯ ನಿಜಾಂ ರಾಜ್ಯದ ಕಡೆಗೆ ಹೋದರು. ಆದರೆ ನಿಜಾಮನು ಬ್ರಿಟಿಷರೊಂದಿಗೆ ಸೇರಿಕೊಂಡು, ಗೂಟಿಯನ್ನು ಹಿಂದಕ್ಕೆ ಪಡೆದುಕೊಂಡನು. ಅಲ್ಲಿಂದ ದೋಂಡಿಯಾನನ್ನು ಮರಾಠಾ ಗಡಿಗೆ ನೂಕಲಾಯಿತು.

ಬಂಡಾಯಗಾರರ ವಿರುದ್ಧ ಹೋರಾಡುವಾಗ ಬ್ರಿಟಿಷರ ವೆಚ್ಚವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಲು ಬಯಸಿದರು. ಕಂಪೆನಿಯ ದೈಹಿಕ ಪರಿಶ್ರಮವೂ ಸಾಧ್ಯವಾದಷ್ಟು ಉಳಿಯಬೇಕೆಂಬುದು ಅವರಿಚ್ಛೆಯಾಗಿತ್ತು. ಎಲ್ಲ ಹೊಣೆಗಾರಿಕೆಯೂ ಮಹಾರಾಜನ ಹೆಗಲಮೇಲೆ ಬೀಳುತ್ತಿತ್ತು. ಆದ್ದರಿಂದ ಕೋಟೆಗಳ ಕಾವಲಿಗಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಎಲ್ಲ ಕೋಟೆಗಳಲ್ಲೂ ದೇಶೀಯ ಸೈನಿಕರನ್ನು ಕಾವಲಿಗೆ ಇರಿಸಬೇಕೆಂದು ಪೂರ್ಣಯ್ಯನಿಗೆ ಆಜ್ಞೆಮಾಡಲಾಯಿತು. ಕೋಟೆಗಳನ್ನು ದುರಸ್ತಿ ಪಡಿಸಿ, ಬಂಡಾಯಗಾರರ ವಿರುದ್ಧ ಹೋರಾಡಲು ಬ್ರಿಟಿಷರಿಗೆ ಅಗತ್ಯವಾಗುವಷ್ಟು ಆಹಾರ ವಸ್ತುಗಳನ್ನು ದಾಸ್ತಾನು ಮಾಡಿಡುವಂತೆ ಹರಿಹರದ ಕಿಲ್ಲೇದಾರನಿಗೆ ಆಜ್ಞೆಮಾಡಲಾಯಿತು.

ಬ್ರಿಟಿಷರು ಮಾಡಿಕೊಳ್ಳುತ್ತಿದ್ದ ಈ ಬೃಹತ್ ಸಿದ್ಧತೆಗಳನ್ನು ಸ್ವಲ್ಪವೂ ಲಕ್ಷಿಸದೆ ದೋಂಡಿಯನು ಶಿಕಾರಿಪುರದ ಕೋಟೆಯನ್ನು ವಶಪಡಿಸಿಕೊಂಡನು. ಆದರೆ ಹೆಚ್ಚು ಕಾಲ ಅದನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗಲಿಲ್ಲ. ದಾರ್ಲಿಂಪಲ್ ಮತ್ತು ಸ್ಟೀವನ್‌ಸನ್‌ ಇಬ್ಬರೂ ಕೋಟೆಗೆ ಮುತ್ತಿಗೆ ಹಾಕಿದರು. ಬಂಡಾಯಗಾರರು ಅಪ್ರತಿಮ ವೀರಾವೇಶದಿಂದ ಕಾದಿದರೂ ದೋಂಡಿಯಾನ ಕಡೆ ಅಪಾರವಾದ ಜನಹಾನಿಯಾಯಿತು. ಅವರು ತಪ್ಪಿಸಿಕೊಂಡು ಮರಾಠಾ ಸಾಮ್ರಾಜ್ಯಕ್ಕೆ ನುಗ್ಗಿದರು. ಆದರೆ ಇಲ್ಲಿ ಅನಿರೀಕ್ಷಿತವಾಗಿ ಪೇಶ್ವೆ ಮತ್ತು ಅವನ ಜನರು ದೋಂಡಿಯಪಂತ್ ಗೋಕ್ಲ ಎನ್ನುವವನ ನೇತೃತ್ವದಲ್ಲಿ ಅವರ ಮೇಲೆ ಬಿದ್ದು ಅವರ ಎಲ್ಲ ಒಂಟೆಗಳು, ಆನೆಗಳು, ತೋಪುಗಳನ್ನು ವಶಪಡಿಸಿಕೊಂಡರು. ಇದು ಬ್ರಿಟಿಷರಿಗೆದುರಾಗಿ ದೋಂಡಿಯಾ ವಾಘ್‌ನಿಗೆ ಉಂಟಾದ ಮುಖ್ಯ ಹಿನ್ನಡೆ.

ಆದರೆ ಸೋಲಿನ ಸರಣಿಯಿಂದ ದಿಕ್ಕೆಡುವಂತಹ ವ್ಯಕ್ತಿಯಾಗಿರಲಿಲ್ಲ ದೋಂಡಿಯ. ಎಲ್ಲ ವರ್ಣನೆಯ ಸುಮಾರು ಏಳೆಂಟು ಸಾವಿರ ಜನರನ್ನು ಒಟ್ಟುಗೂಡಿಸಲು ಅವನು ಶಕ್ತನಾದನು. ಹೈದರಾಬಾದಿನಿಂದ ಸೈನ್ಯ ತೊರೆದು ಬಂದವರು ಅನೇಕರು ಅವನೊಂದಿಗೆ ಕೂಡಿಕೊಂಡರು. ಅವರೆಲ್ಲರೂ ಒಟ್ಟಾಗಿ ಮಹಾರಾಷ್ಟ್ರದ ಗಡಿಯ ಸವಣೂರಿನ ಕಡೆಗೆ ನಡೆದರು. ಇದನ್ನು ನೋಡಿ ಪೇಶ್ವೆಯ ಸವಣೂರಿನ ಬಳಿ ಅವರನ್ನು ತಡೆಯುವುದಕ್ಕಾಗಿ ೫ ಸಾವಿರ ಅಶ್ವಾರೋಹಿಗಳು ಮತ್ತು ಭಾರೀ ಸಂಖ್ಯೆ ಪದಾತಿದಳವಿದ್ದ ಸೈನ್ಯವನ್ನು ಕಳುಹಿಸಿದನು.

ಕೆಲವು ಸ್ಥಳೀಯ ದಂಗೆಕೋರರನ್ನು ಕೊಲ್ಲಲು ಬ್ರಿಟಿಷರು ಬೇಕಾದಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರು. ಮುಂಬಯಿ ಸೈನ್ಯದ ಒಂದು ದೇಶೀಯ ತುಕಡಿಯನ್ನು ಹರಿಹರ, ಚಿತ್ರದುರ್ಗ ಮೊದಲಾದ ಸ್ಥಳಗಳಲ್ಲಿ ಇರಿಸಿ, ದೋಂಡಿಯನ ಮುನ್ನಡೆಯನ್ನು ತಡೆಯಲು ಅಥವ ಅವನ ಆಕ್ರಮಣ ಸಾಧ್ಯತೆಯನ್ನು ಎದುರಿಸಲು ಸಿದ್ಧವಾಗಿಟ್ಟರು. ಹೈದರಾಬಾದಿನಿಂದ ಕ. ಮೆಕ್ಲೀನನ ಕೈಕೆಳಗೆ ಒಂದು ಸಹಾಯಕ ಸೈನ್ಯವೂ. ಲೆ.ಕ. ಬೌಸರನ ಕೈಕೆಳಗೆ ಇನ್ನೊಂದು ಪಡೆಯೂ ಕಂಪೆನಿಯ ರಕ್ಷಣೆಗಾಗಿ ಬಂದವು. ದೋಂಡಿಯ ಕಾವಲು ಪಡೆಯಲ್ಲಿ ಸುಮಾರು ೧೫೦೦ ಜನರನ್ನು ಕೊಲ್ಲಲಾಯಿತು. ಕರ್ನಲ್ ವೆಲ್ಲೆಸ್ಲಿಯು, ಬಂಡುಕೊರರು ಪಾಳೆಯಹೂಡಿದ್ದ ರಾಣಿಬೆನ್ನೂರಿನ (ಹರಹರದಿಂದ ೧೪ ಮೈಲು) ಕಡೆಗೆ ನಡೆದನು. ದೋಂಡಿಯನು ಅಲ್ಲಿಂದಲೂ ತಪ್ಪಿಸಿಕೊಂಡು ಕಿತ್ತೂರಿಗೆ ಓಡಿಹೋದನು. ಅಲ್ಲಿ ಹತ್ತು ಸಾವಿರ ಕುದುರೆ ಐದು ಸಾವಿರ ಪದಾತಿ ದಳ ಹಾಗೂ ಎಂಟು ತೋಪುಗಳ ಸೇನೆಯೊಂದಿಗೆ ತನ್ನನ್ನು ಎದುರಿಸಿದ ಗೋಕ್ಲನನ್ನು ಕೊಂದನು.

ಈ ಪರಿಭವಕ್ಕೆ ವೆಲ್ಲೆಸ್ಲಿಯು ಬಹಳ ಬೇಗನೆ ಮುಯ್ಯಿ ತೀರಿಸಿಕೊಂಡನು. ದೋಂಡಿಯನು ವಶಪಡಿಸಿಕೊಂಡಿದ್ದ ಕುಂದಗೋಳ, ಶಿರಹಟ್ಟಿ ಮೊದಲಾದ ಎಲ್ಲ ಸ್ಥಳಗಳನ್ನೂ ಅವನು ಗೆದ್ದುಕೊಂಡನು. ದೋಂಡಿಯನ ಕಡೆಯ ಸುಮಾರು ೬೦೦ ಜನರನ್ನು ೧೮೦೦ ಜುಲೈ ತಿಂಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದನು.

ರೈತವರ್ಗವು ದೋಂಡಿಯಾನಿಗೆ ಬೆಂಬಲ

ಬ್ರಿಟಿಷರ ವಿರುದ್ಧ ದೋಂಡಿಯನು ದೃಢನಿರ್ಧಾರದಿಂದ ಲೆಕ್ಕಾಚಾರಮಾಡಿ ಕ್ರಮಗಳನ್ನು ಕೈಗೊಳ್ಳುತ್ತಿದ್ದುದಕ್ಕೆ ಸಹಾಯಕವಾದ ಒಂದು ಅಂಶ ಕೊಯಮತ್ತೂರು, ಸೇಲಂ, ಮಲಬಾರ್ ಮೊದಲಾದ ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಅವನು ಪಡೆದ ಪ್ರೋತ್ಸಾಹ ಮತ್ತು ಬೆಂಬಲ. ಅವನು ೧೭೯೯ರಷ್ಟು ಮೊದಲೇ ಫ್ರೆಂಚ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದನೆಂದು ಹೇಳಲಾಗಿದೆ. ಇಂಗ್ಲಿಷರನ್ನು ದೇಶದಿಂದ ಹೊರಹಾಕಲು ಅವರು ದೋಂಡಿಯಾನಿಗೆ ಸಹಾಯ ಮಾಡಲು ಯತ್ನಿಸಿದರು. ಆದರೆ ಅದರಿಂದ ಗಮನಾರ್ಹವಾಗಿ ಏನೂ ಸಾಧಕವಾಗಲಿಲ್ಲ. ಏಕೆಂದರೆ ದಕ್ಷಿಣ ಭಾರತದಲ್ಲಿ ಫ್ರೆಂಚರಿಗಿಂತ ಇಂಗ್ಲಿಷರು ಪ್ರಬಲವಾಗಿದ್ದರು. ಒಂದು ಸ್ವಾರಸ್ಯವಾದ ವಿಷಯವೆಂದರೆ, ಕೊಯಮತ್ತೂರು ಮತ್ತು ಸೇಲಂಗಳ ರೈತರು ಬ್ರಿಟಿಷರ ವಿರುದ್ಧ ತೀವ್ರ ಅಸಂತುಷ್ಟರಾಗಿದ್ದು ಅವರು ದೋಂಡಿಯನಿಗೆ ಬೆಂಬಲವಾಗಲು ಪ್ರಯತ್ನಿಸಿದರು. ಪೆರಿಂತುಲೈ ಗ್ರಾಮದ ಮುಖಂಡನಾಗಿದ್ದ ಚಿನ್ನಗೌರ್ ಎನ್ನುವವನು (ಚಿನ್ನ ಗೌಡರ್) ತನ್ನ ಸಹಚರರೊಂದಿಗೆ ೧೭೯೯ರ ಮಧ್ಯಭಾಗದಲ್ಲಿ ಸೋಂದಾದ ಬಳಿ ದೊಂಡಿಯನನ್ನು ಭೇಟಿ ಮಾಡಿದನು ಈ ವೇಳೆಗಾಗಲೆ ದೋಂಡಿಯನು ತನ್ನ ಹೋರಾಟವನ್ನು ಪ್ರಾರಂಭಿಸಿಯಾಗಿತ್ತು. ಸಬಂದಾವನ್ನು ವಶಪಡಿಸಿಕೊಂಡೂ ಆಗಿತ್ತು.

ಕೊಯಮತ್ತೂರಿನ ಕಂಪನಿ ಕಲೆಕ್ಟರರ ವಿರುದ್ಧ ರೈತರಲ್ಲಿ ತೀವ್ರವಾದ ಅಸಮಾಧಾನ ಅತೃಪ್ತಿಗಳು ಉಂಟಾಗಿದ್ದವು. ಅಲ್ಲಿನ ಮೂವರು ಮುಖಂಡರು ಅಪ್ಪಾಜಿಗೌರ್, ವೆಂಕಟರಾಮಯ್ಯ ಮತ್ತು ಕಸ್ತೂರಿರಂಗ ಎನ್ನುವವರು ಬ್ರಿಟಿಷರಿಗೆದುರಾಗಿ ಒಂದು ಬಂಡಾಯ ಕೂಟವನ್ನು ರಚಿಸಿಕೊಂಡರು. ಅವರು ಮೈಸೂರಿನಲ್ಲಿ ದೊಂಡಿಯನು ಬಹಿರಂಗವಾಗಿ ದಂಗೆಯೆದ್ದದರಿಂದ ಬಹುವಾಗಿ ಪ್ರಭಾವಿತರಾಗಿದ್ದರು. ಅವರು ಮೈಸೂರು ಬಳಿಯ ಮದ್ದೂರಿನಲ್ಲಿ ದೋಂಡಿಯನನ್ನು ರಹಸ್ಯವಾಗಿ ಸಂಧಿಸಿ ಮಾತು ಕತೆಗಳನ್ನು ನಡೆಸಿದರು. ಅವರೊಂದಿಗೆ ಸಹಕರಿಸಲು ದೋಂಡಿಯಾನೂ. ಸಮ್ಮತಿಸಿದನೆಂದು ಹೇಳಲಾಗಿದೆ. ಅವನು ತಮಿಳುನಾಡಿನ ಶಿವಗಂ, ಮಾನಮಧುರೆ, ಮಧುರೈ, ಅಣ್ಣಾಮಲೈ, ಕುಮಾರಪಾಳ್ಯ, ಚೆಯ್ಯಾರ್, ಈರೋಡು, ಪುನಸುರಂ ಅರುವ ಕುಂಚಿ, ಕರೂರು, ಕಂಗೆಯಂ, ಪೆರಿಂತುರೈ ಮತ್ತು ಸತ್ಯಮಂಗಲಂ ಮೊದಲಾದ ಸ್ಥಳಗಳಲ್ಲಿದ್ದ ಬಂಡಾಯ ನಾಯಕರೆಲ್ಲರಿಗೂ ಪತ್ರಗಳನ್ನು ಬರೆದನು. ಆದರೆ ದುದೃಷ್ಟವಶಾತ್, ಈ ಎಲ್ಲ ನಾಯಕರೂ ಬ್ರಿಟಿಷರಿಗೆದುರಾಗಿ ಒಂದು ಐಕ್ಯರಂಗವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ದೇಶಭಕ್ತರ ಅನೇಕ ಸಂದೇಶವಾಹಕರನ್ನು ಬ್ರಿಟಿಷರು ಸರೆಹಿಡಿದರು. ಈ ಬಂಡಾಯಗಾರ ನಾಯಕರು ಎಲ್ಲ ಕಡೆಯೂ ದಂಗೆಯ ಸಹಾಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದ್ದರು. ಎಲ್ಲ ಜಿಲ್ಲೆಗಳಲ್ಲಿ ಶಸ್ತ್ರಧಾರಿಯೋಧರನ್ನು ಕೂಡಿಸುತ್ತಿದ್ದರು. ಈ ಮಾಹಿತಿ ಬ್ರಿಟಿಷರಿಗೆ ತಿಳಿದು ಹೋಗಿ ಅನೇಕ ಸ್ಥಳಗಳಲ್ಲಿ ಅವುಗಳನ್ನು ಅವರು ನಿರ್ಮೂಲ ಮಾಡಿದರು. ಬಂಡುಕೋರರು ಅಲ್ಲಿಂದ ಮರಾಠಾ ರಾಜ್ಯದ ಕಡೆ ಓಡಿಹೋದರು.

ಈ ಅವಕಾಶವನ್ನು ಉಪಯೋಗಿಸಿಕೊಂಡು ವೆಲ್ಲೆಸ್ಲಿಯು ದೋಂಡಿಯಾ ವಶವಾಗಿದ್ದ ಕುಣಿಗಲ್, ಶಿರಹಟ್ಟಿ ಮೊದಲಾದ ಸ್ಥಳಗಳನ್ನು ಮತ್ತೆ ಗೆದ್ದುಕೊಂಡನು. ದೋಂಡಿಯನ ಕಡೆಯ ಸುಮಾರು ಆರುನೂರು ಜನರನ್ನು ಕೊಲ್ಲಲಾಯಿತು. ದೋಂಡಿಯನು ಜನ-ಧನ ಎರಡು ದೃಷ್ಟಿಯಿಂದ ತುಂಬಾ ನಷ್ಟವನ್ನು ಅನುಭವಿಸುತ್ತಿದ್ದರೂ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಹೋರಾಡಿ ದುಮ್ಮಾಲ್ ಕೋಟೆಯನ್ನು ಆಕ್ರಮಿಸಿಕೊಂಡನು. ಈ ದಂಗೆ ಕೋರರ ಸಂಖ್ಯೆಯನ್ನೂ, ನಿಜವಾದ ಸ್ಥಿತಿಗತಿಯನ್ನೂ ತಿಳಿದುಕೊಳ್ಳಲು ಇಂಗ್ಲಿಷರು ಅನೇಕ ಗುಪ್ತಚರರನ್ನು ಕಳುಹಿಸಿದರು ಎಂದು ಹೇಳಲಾಗಿದೆ. ಅವರು ಬ್ರಿಟಿಷರಿಗೆ ದಂಗೆಯ ನಾಯಕರ ಸಜ್ಜು, ಸಿದ್ಧತೆ, ಸ್ಥಿತಿಗತಿಗಳ ವಿವರವಾದ ಚಿತ್ರವನ್ನು ಒದಗಿಸಿದರು. ಅದರ ಪ್ರಕಾರ ದೋಂಡಿಯನ ಬಳಿ ಸುಮಾರು ಐವತ್ತು ಸಾವಿರ ಉತ್ತಮವಾದ ಕುದುರೆಗಳಿದ್ದವು. ನಲವತ್ತು ಸಾವಿರ ಸ್ವಲ್ಪ ಕಡಿಮೆ ದರ್ಜೆಯ ಕುದುರೆಗಳಿದ್ದವು. ಹದಿನಾಲ್ಕು ಸಾವಿರ ಪದಾತಿ ಸೈನ್ಯವಿದ್ದಿತು, ಹತ್ತು ಸಾವಿರ ಯೋಧರು ಕತ್ತಿ, ಈಟಿ, ದಂಡಗಳನ್ನು ಪ್ರಯೋಗಿಸುವವರಿದ್ದರು. ಮೂವತ್ತು ಸಾವಿರ ಬೃಂಜಾರಿಗಳಿದ್ದರು. ಈಗ ದೋಂಡಿಯನು ಸವಣೂರನ್ನು ವಶಪಡಿಸಿಕೊಂಡಿದ್ದನು. ಈ ಬಲವಾದ ಕೋಟೆಯನ್ನು ಗೆಲ್ಲುವ ಸಲುವಾಗಿ ವೆಲ್ಲೆಸ್ಲಿಯು ಹರಿಹರ ಮತ್ತು ವಾರ್ಧಾಗಳಲ್ಲಿ ತುಂಗಭದ್ರಾ ನದಿಯನ್ನು ದಾಟಿ ಮರಾಠಾ ರಾಜ್ಯದ ಕಡೆಗೆ ನಡೆದನು. ಅಲ್ಲಿ ಪೇಶ್ವೆಯ ಒಬ್ಬ ಅಧೀನನಾಗಿದ್ದ ಬಾಲಕೃಷ್ಣಪಂತ್ ಎನ್ನುವವನ ನೆರವು ದೊರಕುತ್ತದೆಂದು ನಿರೀಕ್ಷಿಸಿದ್ದನು. ಅದೇ ಸಮಯಕ್ಕೆ ಮುಂಬಯಿ ಸೈನ್ಯ ಮರಾಠರ ಸೈನ್ಯ ಮತ್ತು ಸ್ಥಳೀಯರ ಅಶ್ವಪಡೆ ಇವು ಕ. ಸ್ಟೀವನ್‌ಸನ್‌ನ ನೇತೃತ್ವದಲ್ಲಿ ಗದಗ ಮತ್ತು ದುಮ್ಮಲ್ ಕೋಟೆಗಳನ್ನು ಆಕ್ರಮಿಸಿದವು. ಹೀಗೆ ದೋಂಡಿಯನು ಸವಣೂರು ಮತ್ತು ಧಾರವಾಡಗಳಲ್ಲೂ ಎಲ್ಲಾ ಕೋಟೆಗಳನ್ನು ಕಳೆದುಕೊಂಡನು. ಸವಣೂರಿನಲ್ಲಿ ದೋಂಡಿಯನು ಪ್ರತ್ಯೇಕ ಆಡಳಿತವನ್ನು ನಡೆಸುವ ಹಂತಕ್ಕೆ ಹೋಗಿದ್ದನು. ಹೀರನಾಯಕ ಎನ್ನುವವನನ್ನು ಹಳ್ಳಿಗಳ ಆಡಳಿತ ನೋಡಿಕೊಳ್ಳುವುದಕ್ಕಾಗಿ ಬಂಡಾಯಗಾರರಿಗೆ, ಹಣಪಡೆದು, ಆಹಾರ ಧಾನ್ಯಗಳನ್ನೂ ಇತರ ವಸ್ತುಗಳನ್ನೂ ಒದಗಿಸುವ ಸಲುವಾಗಿ ನೇಮಿಸಿದ್ದನು. ಆದರೆ ಸವಣೂರನ್ನು ಕಳೆದು ಕೊಂಡುದರಿಂದ ದೋಂಡಿಯನು ಕೊಲ್ಲಾಪುರದಲ್ಲಿ ಆಶ್ರಯ ಪಡೆಯಬೇಕಾಯಿತು. ಅವನು ನಾಲ್ವರು ಮುಸ್ಲಿಮರು ಮತ್ತು ಒಬ್ಬ ಹಿಂದೂ ಇದ್ದ ನಿಯೋಗವನ್ನು ದಕ್ಷಿಣಕ್ಕೆ ಕಳುಹಿಸಿದನು. ಅವರು ೧೮೦೦ರ ಏಪ್ರಿಲ್‌ನಲ್ಲಿ ವಿರೂಪಾಕ್ಷಿಯನ್ನು ತಲುಪಿದರು. ತಮಿಳುಕೂಟಗಳ ಪ್ರತಿನಿಧಿಗಳು ಕೊಲ್ಲಾಪುರಕ್ಕೆ ಬಂದು, ಕರ್ನಾಟಕ-ಮರಾಠಾ ಮೈತ್ರಿ ನಿಯೋಗಗಳು ವಿರೂಪಾಕ್ಷಿಯಲ್ಲಿ ಸೇರಿ ಐಕ್ಯ ರಂಗವು ತಮ್ಮ ಮುಂದಿನ ಸನ್ನಾಹವನ್ನು ಸಂಘಟಿಸಲು ಮುಂದಾಯಿತು.

ಇದರ ಜೊತೆಗೆ ಸಿಂಧಿಯನೂ ದಂಗೆಯನ್ನು ಪ್ರೋತ್ಸಾಹಿಸಿದನು. ಬ್ರಿಟಿಷರೊಂದಿಗೆ ಹೋರಾಡುವಾಗ ಬಳಸಲು ದೋಂಡಿಯನಿಗೆ ಅವನು ಒಂದು ಪಲ್ಲಕ್ಕಿಯನ್ನು ಕೊಟ್ಟನು. ಸಿಂಧಿಯನು ದಂಗೆಗೆ ಸಹಾಯ ಮಾಡಲು ಕಾರಣ, ಅವನ ಬದ್ಧ ವೈರಿಯಾಗಿದ್ದ ಪೇಶ್ವೆಯು ದೋಂಡಿಯನ ವಿರುದ್ದ ಬ್ರಿಟಿಷರಿಗೆ ಬೆಂಬಲವಾಗಿದ್ದುದು. ಇಷ್ಟಲ್ಲದೆ ಮೈಸೂರಿನ ಅತೃಪ್ತ ಹಾಗೂ ಸೇನೆಯಿಂದ ವಿಸರ್ಜಿತ ಮುಸ್ಲಿಮರೂ, ದಿವಂಗತ ಟಿಪ್ಪೂಸುಲ್ತಾನನ ಮಗ ಫತೇ ಹೈದರನೂ ದೋಂಡಿಯನ ಜೊತೆಗೆ ಸೇರಿಕೊಂಡನು. ಈ ಬೆಂಬಲದೊಂದಿಗೆ ದೋಂಡಿಯನು ಗಡಕ್‌ಕೋಟೆಯನ್ನು ಸುಲಭವಾಗಿ ಗೆದ್ದು ಕಿತ್ತೂರು ಮತ್ತು ಬೀತುಗೆಗಳಿಗೆ ಮುತ್ತಿಗೆ ಹಾಕಿದರು. ಮಲಬಾರಿನ ಜನರೂ ತಮ್ಮೊಂದಿಗೆ ಸೇರಿಕೊಳ್ಳುವಂತೆ ಬಂಡಾಯಗಾರರು ಪ್ರಚೋದಿ ಸಿದರು.ಅನೇಕ ಪೋರ್ಚುಗೀಸರೂ ಸೇರಿಕೊಂಡಿದ್ದರು. ಇವರೆಲ್ಲ ಸೇರಿ ತಮ್ಮ ಮುಖ್ಯ ಕೇಂದ್ರವಾದ ದಿಂಡಿಗಲ್ಲಿನಿಂದ ಬ್ರಿಟಿಷರ ಮೇಲೆ ಆಕ್ರಮಣ ಮಾಡಲು ಉದ್ದೇಶಿಸಿದ್ದರು. ಆದರೆ ಈ ಪ್ರಯತ್ನವು ವಿಫಲಗೊಂಡಿತು. ಈಗ ದೋಂಡಿಯಾವಾಘ್ ಮೈಸೂರಿನಲ್ಲೇ ಬ್ರಿಟಿಷರನ್ನು ಬಲವಾಗಿ ಎದುರಿಸಿ ಹೋರಾಡಲು ನಿರ್ಧರಿಸಿದನು. ಈಗ ಅವನ ಸೈನ್ಯದಲ್ಲಿ ಸುಮಾರು ೫೦,೦೦೦ ಜನರಿದ್ದರು. ಅವರಲ್ಲಿ ೩೦,೦೦೦ ಜನರು ಅಶ್ವಾರೋಹಿಗಳು. ಇತರ ತಾತ್ಕಾಲಿಕ ಭರ್ತಿಯೂ ಸೇರಿ ಒಟ್ಟು ೭೦,೦೦೦ ದಿಂದ ೮೦,೦೦೦ ಬಲಶಾಲಿಗಳಾದ ಯೋಧರು ಬ್ರಿಟಿಷರನ್ನೂ ಅವರ ಮಿತ್ರರನ್ನೂ ಸದೆ ಬಡಿಯಲು ಸಿದ್ದರಾಗಿದ್ದರು. ದೋಂಡಿಯನ ಒಂದು ತಂಡವು ಹೊನ್ನಾಳಿಯನ್ನು ಆಕ್ರಮಿಸಿಕೊಂಡಿತು. ಅಲ್ಲಿದ್ದ ಬ್ರಿಟಿಷ್ ಖಜಾನೆಗಳನ್ನು ಲೂಟಿಮಾಡಿದರು. ಆದರೆ ಅಲ್ಲಿಗೆ ಸಮೀಪದಲ್ಲಿದ್ದ ಮನೋಲಿಕೋಟೆಯ ಬಳಿ ದೋಂಡಿಯ ಮತ್ತು ಅವನ ಜನರ ಮೇಲೆ ಕರ್ನಲ್ ವೆಲ್ಲೆಸ್ಲಿ ಮತ್ತು ಲೆ.ಕ. ಟೋರಿನ್ ಕಾದಿದರು. ದೋಂಡಿಯನು ಭಾರೀ ಪ್ರಮಾಣದಲ್ಲಿ ಯೋಧರು, ಆನೆಗಳು, ಒಂಟೆಗಳು, ಎತ್ತುಗಳು ಮತ್ತು ಕುದುರೆಗಳನ್ನು ಕಳೆದುಕೊಳ್ಳಬೇಕಾಯಿತು. ಈ ಸಾರಿ ದೋಂಡಿಯ ಮತ್ತು ಅವನ ಜನರ ಚಟುವಟಿಕೆಗಳನ್ನು ಬುಡಸಮೇತ ಹತ್ತಿಕ್ಕಲು ವೆಲ್ಲೆಸ್ಲಿ ನಿರ್ಧರಿಸಿದ್ದನು. ದೋಂಡಿಯನ ಮಿತ್ರನಾಗಿದ್ದ ಕೊಲ್ಹಾಪುರದ ರಾಜನಿಗೆ, ಉಗ್ರಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದನು. ಮೊದಲು ರಾಜನು ಹಿಂಜರಿದರೂ, ಮದರಾಸು ಸರಕಾರದಿಂದ ಬಂದ ಎಚ್ಛರಿಕೆಗಳಿಂದ ಹೆದರಿ ಅವನು ಕಂಪನಿಯೊಂದಿಗೆ ಸಹಕರಿಸಲು ಸಮ್ಮತಿಸಿದನು.

ದಂಗೆಕೋರರು ಉಪಯೋಗಿಸುತ್ತಿದ್ದ ಎಲ್ಲ ದಾರಿಗಳನ್ನು ಬಂದ್ ಮಾಡಲು ವೆಲ್ಲೆಸ್ಲಿ ಬಯಸಿದನು. ಸವದತ್ತಿಯಿಂದ ದೋಂಡಿಯನನ್ನು ಹುಡುಕಿಕೊಂಡು ಕಾಡನ್ನು ಹೊಕ್ಕನು. ಅವನು ಮಲಪ್ರಭಾ ನದಿಯ ಮೂಲಕ ಶೋಲಾಪುರದ ಕಡೆಗೆ ಹೋಗುತ್ತಿದ್ದನು. ಕ. ಸ್ಟೀವನ್‌ಸನ್ ಮತ್ತು ಲೆ.ಕ. ಬೌಸರ್ ಇವರ ನೇತೃತ್ವದಲ್ಲಿ ದಂಗೆಕೋರರನ್ನು ಮಲಪ್ರಭಾದಿಂದ ಆಚೆಗೆ ನೂಕಲು ಪ್ರಯತ್ನಿಸಲಾಯಿತು.

ದೋಂಡಿಯನ ಸೇನೆಯನ್ನು ಮತ್ತೆ ಘಟಪ್ರಭಾ ನದಿಯಲ್ಲಿ ಅಡ್ಡಹಾಕಲಾಯಿತು. ಗೋಕಾಕ್ ನದಿಯ ಪಶ್ಚಿಮಕ್ಕೆ ಹೋಗಲು ಅವರು ಪ್ರಯತ್ನಿಸುತ್ತಿದ್ದಾಗ ಒಬ್ಬ ಪಾಳೆಯಗಾರ ನರಿಟಿ ಫರ್ಜರಿ ಎನ್ನುವವನು ಅವನನ್ನು ತಡೆದನು. ಕಂಪನಿಯ ನಿರಂತರ ಮಿತ್ರನಾಗಿದ್ದ ನಿಜಾಮ ಹಾಗೂ ಪೇಶ್ವೆಯ ಸೇನೆಗಳು ಸೇರಿದವು. ಬಾಬಾಸಾಹೇಬ್ ಮತ್ತು ಚಿಂತಾಮಣಿರಾವ್ (ಮರಾಠಾ ಕ್ಯಾವಲ್ರಿ), ಲೆ.ಕ. ಕ್ಯಾಪರ್‌ನ ದಳದೊಂದಿಗೆ ಸೇರಿದರು. ಇವರು ಭೂಮಾರ್ಗವಾಗಿ ಹೋಗುತ್ತಿದ್ದ ದೋಂಡಿಯನ ಭಾರೀ ಸೈನ್ಯವೊಂದನ್ನು ಬಾದಾಮಿಯ ಬಳಿ ತಡೆಯಲು ಪ್ರಯತ್ನಿಸಿದರು. ಮೊದಲು ಅನುಮಾನಿಸುತ್ತಿದ್ದ ಸಿಂದಿಯನು ಕೊನೆಗೆ ದಂಗೆಕೋರರೊಂದಿಗೆ ಸೇರಿಕೊಂಡನು.

ಲೆ.ಕ. ಕ್ಯಾಪರನು ತನ್ನ ಭಾರೀ ಸೈನ್ಯದೊಂದಿಗೆ ಹೂಲಿಕೋಟೆಯ ಮೇಲೆ ತನ್ನ ಮುತ್ತಿಗೆಯನ್ನು ಮುಂದುವರಿಸಿದನು. ಪುರುಸ್‌ಗರ್ ಕಣಿವೆಯಲ್ಲಿ ೧೮೦೦ರ ಆಗಸ್ಟ್ ೨೨ರಂದು ಹೂಲಿಯಿಂದ ಎಂಟು ಮೈಲಿ ದೂರದ ಸ್ರಿಂಗಿ ಕೋಟೆಯನ್ನು ವಶಪಡಿಸಿಕೊಳ್ಳಲಾಯಿತು. ಇದು ದಂಗೆಕೋರ ಪಾಳೇಗಾರನೊಬ್ಬನ ವಶದಲ್ಲಿತ್ತು. ಮುಂಬಯಿ ಸೈನ್ಯದ ಗೋಲಂದಾಜು ಪಡೆಯ ವಿರುದ್ಧವಾಗಿ ಬಂಡಾಯಗಾರರು ವೀರಾವೇಶದಿಂದ ಕಾದಿದರೂ, ಸರಿಯಾದ ಸಜ್ಜಿಕೆಗಳಿಲ್ಲದೆ ಅವರು ಭಾರೀ ನಷ್ಟವನ್ನು ಅನುಭವಿಸಬೇಕಾಯಿತು.

ಬ್ರಿಟಿಷ್ ವಿರೋಧಿ ಸೈನ್ಯಗಳಿಗೆ ಬೆಂಬಲವಾಗಿ ನಿಂತ ಯಾವನೇ ಪಾಳೆಯಗಾರನನ್ನಾಗಲಿ ಕಿಲ್ಲೇದಾರನನ್ನಾಗಿ ಬ್ರಿಟಿಷರು ಬಿಡಲಿಲ್ಲ. ತಲ್ಲೂರಿನ ಒಬ್ಬ ಪಾಳೆಯಗಾರನು ದೋಂಡಿಯನಿಗೆ ಸೇರಿದ ಮದ್ದು ಗುಂಡುಗಳನ್ನೂ ಆಯುಧಗಳನ್ನೂ ಇಟ್ಟುಕೊಂಡಿದ್ದಾನೆ ಎಂದು ತಿಳಿಯಲು ವೆಲ್ಲೆಸ್ಲಿಯು ಲೆ.ಕ. ಮಾಂಟ್ರೆಸರ್‌ನನ್ನು ಕಳುಹಿಸಿ ಅವೆಲ್ಲವನ್ನೂ ವಶಪಡಿಸಿಕೊಂಡು ನಾಶ ಮಾಡಲು ಆಜ್ಞೆ ಮಾಡಿದನು. ದವಸ ಧಾನ್ಯಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಗಳೆಲ್ಲವನ್ನೂ ಬ್ರಿಟಿಷರು ವಶಪಡಿಸಿಕೊಂಡು ಬಿಟ್ಟುದರಿಂದ ಬಂಡಾಯಗಾರರು ಕತಾರಘರ್ ಕೋಟೆಯಿಂದ ಕಾಲ್ತೆಗೆಯಲೇ ಬೇಕಾಯಿತು.

ಬೂದಿಹಾಳದ ಬಳಿ ದೋಂಡಿಯಾವಾಘನು ತನ್ನ ಭಾರೀ ಸೇನೆಯೊಂದಿಗೆ ಮಲಪ್ರಭಾ ನದಿಯನ್ನು ದಾಟಿ ನಿಜಾಮನ ರಾಜ್ಯವನ್ನು ಪ್ರವೇಶಿಸಿದನು. ಆದರೆ ಅಷ್ಟರಲ್ಲಿ ಪ್ರವಾಹವು ಬಂದು ಕೆಲವು ದಿನಗಳ ಕಾಲ ಕಂಪನಿಯ ಸೈನ್ಯವು ನದಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅದೃಷ್ಟವು ದೋಂಡಿಯನಿಗೆ ಒಲಿದಂತೆ ಕಾಣಿಸಿತು. ಕ. ಸ್ಟೀವನ್‌ಸನ್ ಮಾತ್ರ ದಾಟಿದನು. ಆಮೇಲೆ ಹತ್ತು ದಿನಗಳ ನಂತರ ವೆಲ್ಲಸ್ಲಿಯು ಹನುಮತ್ ಸಾಗರದ ಬಳಿ ದಾಟಿ ತನ್ನ ಮುಂದಿನ ಕಾರ‍್ಯವನ್ನು ರೂಪಿಸಿದನು.

ರಾಯಚೂರು ಡೋಬ್‌(Doab)ನಿಂದ ದೋಂಡಿಯನ ಚಲನೆ ಹೇಗಿರಬಹುದೆಂದು ಆಲೋಚಿಸಿ ವೆಲ್ಲೆಸ್ಲಿಯು ಹೀಗೆ ತೀರ್ಮಾನಿಸಿದನು. ಅವನು ಕನಗೆರ‍್ರಿ ಮತ್ತು ಕೊಪ್ಪಳಗಳಿಂದ ಹಿಂದಿರುಗೆದರೆ ಸವಣೂರಿನಲ್ಲಿ ತಡೆಯುವುದು ಅಥವಾ ಪಾಳೆಯಗಾರರು ಮತ್ತು ಕರ್ನೂಲಿನ ಪಠಾಣರ ನೆರವಿನಿಂದ ರಾಜನ ಪ್ರದೇಶವನ್ನು ಪ್ರವೇಶಿಸಿದರೆ ಅಲ್ಲಿ ತಡೆಯುವುದು. ದೋಂಡಿಯನನ್ನು ಎಲ್ಲ ದಿಕ್ಕುಗಳಿಂದಲೂ ಆಕ್ರಮಿಸಲು ವೆಲ್ಲೆಸ್ಲಿಯು ಹೊಂಚುಹಾಕಿದನು. ಆಗ ದೋಂಡಿಯನು ರಾಯಚೂರು ಪ್ರದೇಶದ ಬಳಿ ಮಾಸ್ಕಿಯಲ್ಲಿದ್ದನು. ಕ. ಸ್ಟೀವನ್‌ಸನ್ ಹುನಗುಂದ (ವಾಯುವ್ಯ ಗಡಿ) ದಲ್ಲಿಯೂ, ಕ. ವೆಲ್ಲೆಸ್ಲಿಯ ಹನುಮತ್ ಸಾಗರ (ನೈಋತ್ಯ ಗಡಿ)ದಲ್ಲೂ ಮರಾಠಾ ಮತ್ತು ನಿಜಾಂ ಅಶ್ವದಳಗಳು ನಡುವೆಯೂ ಕಾದಿರಬೇಕೆಂದು ನಿರ್ಧರಿಸಲಾಯಿತು. ಇವರ ಜೊತೆಗೆ ಬಕ್ಷಿ ರಾಮರಾವ್ ಮತ್ತು ಬಕ್ಷಿ ಸರ್ವೋತ್ತಮರಾವ್ ಇವರ ದೇಶಿಯ ಸೈನ್ಯವು ಮುಂಬಯಿ ಬೆಟಾಲಿಯನ್‌ನೊಂದಿಗೆ ಸೇರಿಕೊಳ್ಳುವುದಿತ್ತು. ಆಕ್ರಮಣಕ್ಕೆ ತೊಡಗಲು ಗೋವಾದಿಂದ ಒಂದು ವಿಶೇಷ ತುಕಡಿಯನ್ನು ಕಂಪನಿಗೆ ಕಳಿಸಿ ಕೊಡಲಾಯಿತು.

ವೆಲ್ಲೆಸ್ಲಿಯು ೧೮೦೦ ಸಪ್ಟೆಂಬರ್ ೯ರಂದು ಕನಗೆರ‍್ರಿಯಿಂದ ಬಸ್ವಾಪುರದ ಕಡೆಗೆ ಚಲಿಸಿದನು. ಇದರ ಅರಿವಿಲ್ಲದೆ, ದೋಂಡಿಯನು ಐದು ಸಾವಿರ ಬಲಶಾಲಿಗಳಾದ ಅಶ್ವಾರೋಹಿಗಳೊಂದಿಗೆ ರಾಯಚೂರಿನಿಂದ ೨೫ ಮೈಲು ದೂರದಲ್ಲಿದ್ದ ಮೂಡ ಗೆರ‍್ರಿಯಿಂದ ಕೃಷ್ಣಾ ನದಿಯ ಕಡೆಗೆ ಹೊರಟನು. ಆದರೆ ಕರ್ನಲ್ ಸ್ಟೀವ್‌ನ್‌ಸನ್‌ನನ್ನು ಗುರುತಿಸಿ ಒಡನೆಯೇ ಹಿಂದಿರುಗಿ, ಸಮೀಪದಲ್ಲಿಯೇ ವೆಲ್ಲೆಸ್ಲಿಯ ಶಿಬಿರವಿರುವುದನ್ನು ತಿಳಿಯದೆ ಐದು ಮೈಲು ದೂರದಲ್ಲಿ ಶಿಬಿರ ಹೂಡಿದನು.

ಇದರ ಸುಳಿವನ್ನು ಅರಿತ ವೆಲ್ಲೆಸ್ಲಿಯು ಮುನ್ನಡೆದು ಯೇಪಲ್‌ಪರ್ವಿಯ ಬಳಿ ಕೋನಗಲಂನಲ್ಲಿ ದೋಂಡಿಯನನ್ನು ಸಂಧಿಸಿದನು. ನಿಜಾಮ ಮತ್ತು ಮರಾಠ ಅಶ್ವಪಡೆಗಳ ನಡುವೆ ಸಿಕ್ಕಿಕೊಂಡು ತಪ್ಪಿಸಿಕೊಂಡು ಹೋಗಲು ಹತಾಶೆಯಿಂದ ಪ್ರಯತ್ನಿಸುತ್ತಿದ್ದ ದೋಂಡಿಯಾವಾಘ್‌ನ ಮೇಲೆ ಕರ್ನಲ್ ವೆಲ್ಲೆಸ್ಲಿಯು ದೇಶಿಯ ಸೈನ್ಯದೊಂದಿಗೆ ಆಕ್ರಮಣ ಮಾಡಿದನು. ಬಂಡಾಯಗಾರರು ಸಮೀಪದ ಹಳ್ಳಿಯೊಂದರಲ್ಲಿ ಬಲವಾಗಿ ನೆಲೆಗೊಂಡಿದ್ದರಾದರೂ, ವೆಲ್ಲೆಸ್ಲಿಯ ಅಶ್ವಾರೋಹಿ ಪಡೆಯ ನಾಲ್ಕು ತುಕಡಿಗಳು ಮುತ್ತಿಗೆ ಹಾಕಿದವು. ಕೋನಗಲ್‌ನಲ್ಲಿ ಭೀಕರ ಕಾಳಗದಲ್ಲಿ ದೋಂಡಿಯನು ಮಡಿದನು. ಇಂಗ್ಲಿಷರು ನಿರಾಳವಾಗಿ ನಿಟ್ಟುಸಿರು ಬಿಟ್ಟರು. ಯುದ್ಧರಂಗದಲ್ಲಿ ಅವನು ಮಡಿಯಲು, ನಾಯಕನಿಲ್ಲದ ಬಂಡಾಯಗಾರರು ಚದುರಿಹೋದರು. ಅವರಲ್ಲಿ ಅನೇಕರನ್ನು ಪೇಶ್ವೆ ಮತ್ತು ನಿಜಾಮರ ಅಶ್ವಾರೋಹಿಗಳು ಕೊಂದುಹಾಕಿದರು. ಕ. ಸ್ಟೀವನ್‌ಸನ್, ದೇವದುರ್ಗದಲ್ಲಿ ದಂಗೆಕೋರರು ಸಂಗ್ರಹಿಸಿದ್ದ ಬೃಹತ್ ಪ್ರಮಾಣದ ಮದ್ದು ಗುಂಡುಗಳನ್ನೂ ಒಂಟೆ ಮೊದಲಾದವನ್ನು ವಶಪಡಿಸಿಕೊಂಡನು.

ಹೀಗೆ ಅಪ್ರತಿಮ ಪರಾಕ್ರಮದಿಂದ ಹೋರಾಡಿದ ದೋಂಡಿಯಾವಾಘ್, ನಿಜಾಮ, ಮರಾಠರು, ಬ್ರಿಟಿಷರು ಮತ್ತು ಮೈಸೂರು ಈ ಒಟ್ಟು ಸೇನೆಗೆ ಸಿಕ್ಕಿ ತನ್ನ ಪ್ರಾಣವನ್ನು ಬಲಿಕೊಟ್ಟನು. ಟಿಪ್ಪುವಿನ ಅಸಾಮಾನ್ಯ ಪರಾಕ್ರಮದ ಪ್ರತಿಭಟನೆಯ ನಂತರ ಬ್ರಿಟಿಷರಿಗೆ ದೊರೆತ ಅಂಥದೆ ಇನ್ನೊಂದು ವಿಜಯ ಇದು. ಈ ಬ್ರಿಟಿಷ್ ವಿರೋಧಿ ಅಂಶವನ್ನು ಎದುರಿಸಿ ಹೋರಾಡಲು ಬ್ರಿಟಿಷೆರು ಸಾಧ್ಯವಿದ್ದ ಎಲ್ಲ ಮುಂಜಾಗ್ರತೆಗಳನ್ನೂ ಕೈಗೊಂಡಿದ್ದರು. ಮೈಸೂರಿನ ಮಹಾರಾಜನು ಇನ್ನೂ ಅಪ್ರಾಪ್ತ ವಯಸ್ಕನಾಗಿದ್ದ ಬ್ರಿಟಿಷರ ಕೈಗಳಲ್ಲಿ ಕೇವಲ ಒಂದು ಸಾಧನವಾಗಿದ್ದನು. ಮೈಸೂರಿನ ಈ ಕ್ರಾಂತಿಕಾರಿಗಳ ವಿರುದ್ಧ ಮಹಾರಾಜನು ಭಾರೀ ಸೈನ್ಯವನ್ನೇ ಕಳಿಸಲೇಬೇಕಾಯಿತು. ಭಾರೀ ಪ್ರಶಂಸೆ ಪಡೆದ ೧೮೯೭ರ ಹೋರಾಟಕ್ಕಿಂತ ಐವತ್ತೇಳು ವರ್ಷಗಳ ಹಿಂದೆಯೇ ವಸಾಹತು ಆಡಳಿತಗಾರರ ವಿರುದ್ಧ ನಡೆದ ಈ ಬಂಡಾಯದ ಮೂಲತತ್ವ ಏನಿತ್ತೆಂಬುದನ್ನು ಅವರು ಆಗ ಅರ್ಥ ಮಾಡಿಕೊಂಡಿರಲಿಲ್ಲ.

ಬ್ರಿಟಿಷರಿಗೆ ದೋಂಡೀಯಾವಾಘ್‌ನನ್ನು ಕುರಿತು ತುಂಬಾ ಅಸಂತೋಷವಿದ್ದಿತು. ಈಗ ಅವನನ್ನು ಅಡಗಿಸದೆ ಹೋದರೆ ಕಾಲಕ್ರಮದಲ್ಲಿ ಅವನು ೨ನೆ ಹೈದರಾಲಿ ಆಗಬಹುದೆಂದು ವಸಾಹತುಗಾರರು ಭಾವಿಸಿದರು. ಅದರಿಂದಾಗಿ ಸಾಮ್ರಾಜ್ಯಶಾಹಿ ಶಸ್ತ್ರಾಸ್ತ್ರ ಕೋಠಿಯಲ್ಲಿದ್ದ ಸಕಲ ಆಯುಧಗಳನ್ನೂ ಅವರು ಈ ದಕ್ಷಿಣ ಭಾರತದ ಕ್ರಾಂತಿಕಾರಿಯನ್ನು ಸೋಲಿಸಲು ಪ್ರಯೋಗಿಸಬೇಕಾಯಿತು.

೧೮೦೦ರ ಸಪ್ಟೆಂಬರ್‌ನಲ್ಲಿ ಅವನು ಕೊನೆಗಲ್‌ನಲ್ಲಿ ಮತ್ತು ಅವನ ಸಹವರ್ತಿ ಬೇಲೂರಿನ (ಬಲಿಂ) ಕೃಷ್ಣಪ್ಪನಾಯಕನು ೧೮೦೨ರ ಫೆಬ್ರವರಿಯಲ್ಲಿ ಕೊಲ್ಲಲ್ಲಪಟ್ಟ. ಅವನನ್ನು ಸೇರಿಸಿ ೧೮೧೬ರಲ್ಲಿ ವೀರಪ್ಪ ಎಂಬುವಿನಿಂದ ಕೊಪ್ಪಳದ ಬಂಡಾಯ ನಡೆಯಿತು. ೧೮೨೦ರಲ್ಲಿ ಬೀದರ್ ಸಮೀಪದ ದೇಶಮುಖ್‌ನಲ್ಲಿ ಬಂಡಾಯ ನಡೆಯಿತು. ೧೮೨೪ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯು ಪ್ರಬಲವಾದ ಬಂಡವಾಳಕ್ಕೆ ಸಾಕ್ಷಿಯಾಯಿತು. ೧೮೨೪ರ ಕಿತ್ತೂರು ಚೆನ್ನಮ್ಮನ ಬಂಡಾಯ ಮತ್ತೂ ಅದೇ ರಾಜ್ಯದ ಸಂಗೊಳ್ಳಿ ರಾಯಣ್ಣನ ೧೯೨೯ರ ಬಂಡಾಯಗಳು ಪ್ರಸಿದ್ದವಾಗಿವೆ. ಇದನ್ನೇ ಅನುಸರಿಸಿ ೧೮೩೦-೩೧ರಲ್ಲಿ ನಡೆದ ನಗರ ಬಂಡಾಯದ ಜೊತೆಗೆ ೧೮೩೧ರಲ್ಲಿ ಕೆನರಾ ಜಿಲ್ಲೆಯಲ್ಲಿ ರೈತ ಬಂಡಾಯವಾಯಿತು. ತರೀಕೆರೆಯ ಸರ್ಜಾ ಹನುಮಪ್ಪ ನಾಯಕನೂ ಬಂಡುಕೋರರನ್ನು ಸೇರಿದ. ಈ ಬಂಡಾಯವು ವಿಫಲವಾದರೂ, ಅದು ಯದುವಂಶದವರಿಗೆ ಮರುಕಳಿಸಿದ್ದಂತಹ ಸಂಸ್ಥಾನದ ಅಧಿಕಾರವು ಬಲಿತೆಗೆದುಕೊಂಡಿತು. ೧೮೩೫-೩೭ರಲ್ಲಿ ನಡೆದ ಕೊಡಗು ಬಂಡಾಯವು ದಕ್ಷಿಣ ಕನ್ನಡದಲ್ಲೂ (ಸೂಳ್ಯ ಮತ್ತು ಮಂಗಳೂರು) ಪ್ರಬಲವಾಗಿತ್ತು. ಪೇಶ್ವೆಗಳ ಕಾಲದಲ್ಲಿ ಈ ಮೊದಲು ಅಧಿಕಾರಿಯಾಗಿದ್ದ ನರಸಪ್ಪ ಪೇಟ್ಕರ್ ಎಂಬುವನು ೧೮೪೧ರಲ್ಲಿ ಬ್ರಿಟಿಷರ ವಿರುದ್ಧ ಬಂಡಾಯವನ್ನು ಸಂಘಟಿಸಿದನು. ೧೮೫೭-೫೮ರಲ್ಲಿ ಭಾರತ ದಾದ್ಯಂತ ನಡೆದ ಬಂಡಾಯಕ್ಕೆ ಕರ್ನಾಟಕವೂ ಪ್ರತಿಸ್ಪಂದಿಸಿತು. ೧೮೫೭ರ ನವೆಂಬರ್‌ನಲ್ಲಿ ಹಲಗಲಿಯ ಬೇಡರು ಶಸ್ತ್ರಾಸ್ತ್ರ ಕಾಯಿದೆಯ ವಿರುದ್ಧ ಬಂಡಾಯವೆದ್ದರು. ಮುಂಡರಗಿ ಭೀಮರಾವ್, ಸೂರಟೂರು, ಗೋವನ ಕೊಪ್ಪ, ಹೆಮ್ಮಿಗೆ ಇತ್ಯಾದಿ ಊರುಗಳ ದೇಸಾಯಿಗಳು, ನರಗುಂದ ಮತ್ತು ಸುರಪುರ ನಾಯಕರ ಜೊತೆ ಸೇರಿ ೧೮೫೮ರಲ್ಲಿ ಬಂಡಾಯವೆದ್ದರು. ಆದರೆ ಬ್ರಿಟಿಷರು ಈ ಎಲ್ಲ ಬಂಡಾಯಗಳನ್ನು ಸಂಪೂರ್ಣವಾಗಿ ಅಡಗಿಸಿದರು. ಇವುಗಳ ಪರಿಣಾಮ ಬ್ರಿಟಿಷರು ರಾಜ್ಯದಲ್ಲಿ ಕೆಲವು ಅಭಿವೃದ್ಧಿ ಪರ ಕೆಲಸಗಳು ಕೈಗೊಳ್ಳಲು ನೆರವಾದವು. ಉದಾಹರಣೆಗೆ ಬ್ರಿಟಿಷರು ಜನತೆಯ ದೂರುಗಳಿಗೆ ಕೂಡಲೆ ಸ್ಪಂದಿಸುವುದನ್ನು ಕಲಿತಿದ್ದು, ೧೮೫೦ ಮತ್ತು ೧೮೬೦ರ ದಶಕಗಳಲ್ಲಿ ಪಟ್ಟಣಗಳ ಆಡಳಿತ ನಿರ್ವಹಣೆಗೆ ಸ್ಥಳೀಯ ಸರಕಾರಗಳು ರಚನೆಗೊಂಡವು. ಈ ಘಟನೆಗಳಿಂದ ಸರಿಯಾದ ಸಂಘಟನೆ ಇಲ್ಲದೆ ದೇಶವನ್ನು ಬ್ರಿಟಿಷರಿಂದ ಬಿಡುಗಡೆ ಮಾಡುವುದು ಸಾಧ್ಯವಿಲ್ಲವೆಂದು ಜನರಿಗೆ ಅರಿವಾಯಿತು. ಈ ನಡುವೆ ಬ್ರಿಟಿಷರೂ ಸಹ ಶಾಂತಿ ಭಂಗದ ಸಂದರ್ಭಗಳನ್ನು ಎದುರಿಸಲು ಸಾರಿಗೆ ಮತ್ತು ಸಂಪರ್ಕ ವಲಯದಲ್ಲಿ ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡರು. ಈ ರೀತಿಯ ಅಭಿವೃದ್ಧಿ ಕಾರ್ಯಗಳು ವಸಾಹತುಶಾಹಿ ಆರ್ಥಿಕ ಉದ್ಧೇಶವನ್ನು ಈಡೇರಿಸಿದವು.

ಟಿಪ್ಪುವಿನ ಸೋಲಿನಿಂದ ಹೊರಟ ಫಲಶ್ರುತಿ ಎಂದರೆ ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಗೆ ಬಲ ಬಂದದ್ದು ಮತ್ತು ಕರ್ನಾಟಕವು ಬೇರೆ ಬೇರೆ ಆಡಳಿತಗಳಲ್ಲಿ ವಿಭಜನೆಯಾಗಿ ಶಿಥಿಲಗೊಂಡಿದ್ದು ಈಗ ಇತಿಹಾಸ. ಆದರೆ ಬ್ರಿಟಿಷರು ಯುದ್ಧದಲ್ಲಿ ಗೆದ್ದವರು ಸ್ವಾಧೀನಪಡಿಸಿಕೊಂಡ ರಾಜ್ಯವನ್ನು ಹಂಚಿಕೊಳ್ಳಲು ಒಂದು ಒಪ್ಪಂದ ಮಾಡಿಕೊಂಡರು. ನಿಜಾಮನ ಭಾಗಕ್ಕೆ ಈಗಿನ ಬಳ್ಳಾರಿ, ಅನಂತಪುರ, ಕಡಪ, ಮತ್ತು ಕರ್ನೂಲು ಜಿಲ್ಲೆಗಳು ಸೇರಿದವು. ಆದರೆ ಬ್ರಿಟಿಷರು ಜಾರಿಗೆ ತಂದ ರಕ್ಷಣಾ ನೀತಿಯಂತೆ ೧೮೦೦ರಲ್ಲಿ ನಿಜಾಮನು ತನ್ನ ರಾಜ್ಯದಲ್ಲಿ ಬ್ರಿಟಿಷ್ ಸೈನ್ಯದ ನೀತಿಗೆ ಒಪ್ಪಿಕೊಂಡು ತನ್ನ ರಾಜ್ಯಕ್ಕೆ ಸೇರಿದ ಈ ಜಿಲ್ಲೆಗಳ ಮೇಲಿನ ಹಕ್ಕನ್ನು ಬ್ರಿಟಿಷರಿಗೆ ಬಿಟ್ಟುಕೊಡುವ ಸನ್ನಿವೇಶ ಬಂದಿತ್ತು. ಈ ಜಿಲ್ಲೆಗಳು ಮುಂದೆ ರಚನೆಯಾದ ಆಂಧ್ರ ಮತ್ತು ಕರ್ನಾಟಕ ರಾಜ್ಯ ಪ್ರದೇಶಗಳಲ್ಲಿ ಡಿಸ್ಟ್ರಿಕ್ಟ್‌ಗಳಾದವು.

ಟಿಪ್ಪುವಿನ ಪತನಕ್ಕೆ ಕಾರಣವಾದ ಸೈನ್ಯದಲ್ಲಿ ಭಾಗವಹಿಸಿದ್ದ ಮರಾಠರ ಭಾಗಕ್ಕೆ ಮುಂಬಯಿ ಕರ್ನಾಟಕವೆಂದು ಕರೆಯಲಾದ ತುಂಗೆಯ ಉತ್ತರದಿಕ್ಕಿನ ಪ್ರದೇಶವನ್ನು ಸೇರಿಸಲಾಯಿತು. ಆದರೆ ಉತ್ತರ ಕನ್ನಡ ಜಿಲ್ಲೆಯನ್ನು (ಕಾರವಾರ) ಅದು ಸಮುದ್ರ ತೀರದ ನೆಲವಾದುದರಿಂದ ಬ್ರಿಟಿಷರು ತಮ್ಮ ಭಾಗಕ್ಕೆ ಉಳಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೈಸೂರಿನ ಪಶ್ಚಿಮದ ದಕ್ಷಿಣಪೂರ್ವದಿಕ್ಕಿನ ಪ್ರದೇಶಗಳನ್ನು ಬ್ರಿಟಿಷರೇ ತಮ್ಮ ಅಧೀನದಲ್ಲಿರಿಸಿಕೊಂಡರು. ೧೮೬೨ರ ವರೆಗೆ ಕಡಲತೀರದ ಕನ್ನಡ ಪ್ರದೇಶವೆಲ್ಲ ಒಂದು ಭಾಗವಾಗಿತ್ತು. ಕುಂದಾಪುರದವರೆಗೆ ಉತ್ತರಕ್ಕಿರುವ ಕನ್ನಡದ ನೆಲವನ್ನು ಉತ್ತರ ಕನ್ನಡವೆಂದು ವಿಭಜಿಸಿ ಆ ಮೇಲೆ ಅದನ್ನು ಮುಂಬಯಿ ಪ್ರದೇಶಕ್ಕೆ ಸೇರಿಸಿದವರು ಬ್ರಿಟಿಷರು. ಸಮುದ್ರ ತೀರದ ಭಾಗವನ್ನೆಲ್ಲ ತಮ್ಮ ಸ್ವಾಧಿನದಲ್ಲಿರುವುದು ಅನುಕೂಲವೆಂಬುದು ಬ್ರಿಟಿಷರು ಕೈಕೊಂಡ ತೀರ್ಮಾನ. ತೀರಪ್ರದೇಶಗಳಾವುದೂ ಭಾರತೀಯ ಮಿತ್ರರ ಅಧೀನದಲ್ಲಿರದಂತೆ ತುಂಬ ಎಚ್ಚರವಹಿಸಿದರು. ಟಿಪ್ಪುವಿನಂತೆ ಈ ಮಿತ್ರರು ಫ್ರೆಂಚರಂತೆ ಸಮುದ್ರ ಸಂಚಾರಿ ಶಕ್ತಿಗಳೊಡನೆ ಸಂಧಾನ ಮಾಡಿಕೊಂಡು ತಮಗೆ ಎದುರುಬಿದ್ದಾರೆಂದು ಪ್ರತಿಕೂಲ ಸಂದರ್ಭವನ್ನು ತಪ್ಪಿಸಲು ಬ್ರಿಟಿಷರು ಜಾಗರೂಕರಾಗಿದ್ದರು. ಹೀಗೆ ಇವರಲ್ಲಿ ರಾಜ್ಯವನ್ನು ಹರಿದು ಹಂಚಿದ್ದಾದ ಮೇಲೆ ಉಳಿದ ಮೈಸೂರು ರಾಜ್ಯಭಾರವನ್ನು ಬ್ರಿಟಿಷರು ಅದರ ಪಾರಂಪರಿಕವಾಗಿ ಆಳ್ವಿಕೆ ಮಾಡುತ್ತಿದ್ದ ಯದು ವಂಶಸ್ಥರಿಗೆ ಹಸ್ತಾಂತರಿಸಲು ನಿರ್ಧರಿಸಿದರು. ನಂತರ ವರ್ಷಗಳ ಹಿಂದೆ ಹೈದರನು, ಅನಂತರ ಟಿಪ್ಪುವೂ ರಾಜವಂಶವನ್ನು ಗದ್ದುಗೆಯಿಂದ ಇಳಿಸಿ ರಾಜ್ಯವನ್ನು ಸರ್ವಾಧಿಕಾರಿಗಳಾಗಿ ಆಳ್ವಿಕೆ ಮಾಡಿದ್ದು ಈಗ ಇತಿಹಾಸ.

ಈ ವಿಭಜನೆಯ ಹಿಂದೆ ಯಾವ ಮನೋಭಾವವಿದ್ದಿತೆಂಬುದು ಆಗ ಗೌರ್ವನರ್ ಜನರಲ್ ಆಗಿದ್ದ ವೆಲ್ಲೆಸ್ಲಿ ದಿ. ೭.೭.೧೭೯೯ರಂದು ಇಂಗ್ಲೆಂಡಿಗೆ ಬರೆದ ಪತ್ರದ ಒಕ್ಕಣೆಯಿಂದ ತಿಳಿಯಬಹುದಾಗಿದೆ.

ಟಿಪ್ಪುವಿನಿಂದ ವಶಪಡಿಸಿಕೊಂಡ ದೇಶವನ್ನೆಲ್ಲ ಒಂದು ಕಡೆ ಈಸ್ಟ್ ಇಂಡಿಯಾ ಕಂಪನಿ ಮತ್ತು ನಿಜಾಮರಿಬ್ಬರಲ್ಲಿ ಸಮನಾಗಿ ಹಂಚಿದ ಪಕ್ಷದಲ್ಲಿ ಮರಾಠರು ದಂಗೆ ಏಳುವುದು ಸಹಜವಾಗಿತ್ತು. ನಿಜಾಮನ ಪ್ರಾಬಲ್ಯವು ಹೆಚ್ಚಾಗುವುದು ಸರ್ವೇಸಾಮಾನ್ಯವಾದ ಅಂಶವಾಗಿತ್ತು. ಮೈಸೂರು ಅರಸರ ಸ್ವಾಧೀನಕ್ಕೆ ಬಂದ ಪ್ರದೇಶವು ಆಡಳಿತ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಸಿಗುತ್ತಿತ್ತು. ಆದರೆ ಈ ರೀತಿಯ ವಿಭಜನೆಯನ್ನು ಬಿಟ್ಟು ದೇಶವನ್ನು ಮೂರುಪಾಲಾಗಿ ವಿಂಗಡಿಸಿದ್ದರೆ, ಯುದ್ಧಕ್ಕೆ ತಗುಲಿದ ವೆಚ್ಚದಲ್ಲಿ ತನ್ನ ಪಾಲನ್ನಾಗಲಿ ಶ್ರಮವನ್ನಾಗಲಿ ವಹಿಸದೇ ಇದ್ದ ಮರಾಠರಿಗೆ ಶಾಂತಿಯಿಂದ ಮಾಡಿದ ಹೆಚ್ಚಿನ ಲಾಭಕ್ಕಾಗಿ, ಯುದ್ಧದಲ್ಲಿ ತಕ್ಕಷ್ಟು ಸಹಾಯ ಪೋಷಣೆ ಕೊಟ್ಟ ನಿಜಾಮನಿಗೆ ನ್ಯಾಯ ಸಲ್ಲುತ್ತಿರಲಿಲ್ಲ ಮತ್ತು ಮಿತ್ರರಲ್ಲೊಬ್ಬರಾದ ಮರಾಠರ ಸಾಮ್ರಾಜ್ಯ ವಿಸ್ತರಣೆಗೆ ಉತ್ತೇಜನ ಕೊಡುವ ಅವಿವೇಕವಾಗುತ್ತಿತ್ತು. ಮರಾಠರಿಗೆ ಸ್ವಾಧೀನ ಪಡಿಸಿದ್ದಕ್ಕಿಂತ ಹೆಚ್ಚು ಪ್ರದೇಶವನ್ನು ಕೊಡದೆ ಮಧ್ಯವರ್ತಿ ಜೊತೆ ಹೆಚ್ಚಿನ ಸ್ನೇಹ ಹೊಂದಿಲ್ಲದಂತೆ ಉಳಿದದ್ದನೆಲ್ಲ ನಿಜಾಮನೂ ಕಂಪನಿಯೂ ಸಮನಾಗಿ ಹಂಚಿಕೊಂಡಿದ್ದರೆ ಒಪ್ಪಂದದ ಷರತ್ತುಗಳನ್ನು ಪಾಲಿಸುವ ವಿಷಯದಲ್ಲಿ ಮರಾಠರು ಉತ್ಸಾಹ ತೋರುತ್ತಿರಲಿಲ್ಲ. ಆದ್ದರಿಂದ ಮೈಸೂರು ರಾಜ್ಯದ ಪ್ರಾಚೀನ ರಾಜವಂಶದ ಹಕ್ಕನ್ನು ರಾಜ್ಯದ ವಿಭಜನೆ ಕಾಲದಲ್ಲಿ ಪರಿಗಣನೆಗೆತ್ತಿಕೊಂಡು ಅವರಿಗೆ ರಾಜ್ಯವನ್ನು ಮತ್ತು ಹಿಂದಿರುಗಿಸುವುದು ಯುದ್ಧದಲ್ಲಿ ಪಾತ್ರವಹಿಸಿದ ಮೂವರು ಮಿತ್ರರ ಹಕ್ಕು ಬಾಧ್ಯತೆಗಳನ್ನೂ ಇತ್ಯರ್ಥಪಡಿಸಿ ನ್ಯಾಯ ಸಲ್ಲಸಿಲು ಅವಕಾಶ ಕೊಟ್ಟಿತು.

ಮಿತ್ರಮಂಡಲ ಗೆದ್ದ ನೆಲದಲ್ಲಿ ಟಿಪ್ಪುವಿನ ಮಕ್ಕಳಿಗೋಸ್ಕರ ಕೇಳಿದ ಹಕ್ಕನ್ನೂ ತಿರಸ್ಕರಿಸಿ, ವೆಲ್ಲೆಸ್ಲಿ ಪತ್ರ ಹೀಗೆ ಮಂದುವರೆಯುತ್ತದೆ. “ನಾನು ನೀತಿ ಧರ್ಮ ಪ್ರಶ್ನೆಯೊಂದನ್ನೇ ಪರಿಗಣಿಸಿದ್ದರೂ ನ್ಯಾಯ, ಮಾನವೀಯತೆ ಹಾಗೂ ರಾಜ್ಯದ ಪ್ರಜೆಗಳ ಕಲ್ಯಾಣಗಳೆಂಬ ಮೂರು ದೃಷ್ಟಿಗಳ ಸಮನ್ವಯದಿಂದಲೂ ಮೈಸೂರಿನ ಪ್ರಾಚೀನ ರಾಜಸಂತತಿಗೆ ಒಂದಷ್ಟು ರಾಜ್ಯವನ್ನು ಪುನ: ಹಿಂದಿರುಗಿಸುವುದರಿಂದ ರಾಜವಂಶದ ಗೌರವ ಘನತೆಗಳ ಪುನಸ್ಥಾಪನೆಗೂ ಪೋಷಕವಾಗಿತ್ತದೆಯೆಂದು” ಸೂಚಿಸುತ್ತಾನೆ. ಇದು ಮೈಸೂರು ರಾಜ್ಯದ ರಾಜ ಸಂತತಿಯನ್ನು ವಿಭಜನೆಕಾಲದಲ್ಲಿ ಪಾಲುದಾರರೆಂದು ಎಣಿಸಿ ತೀರ್ಮಾನಿಸಿದ್ದರೆಂದು ತಿಳಿದುಬರುತ್ತದೆ.

ಮೇಲೆ ಪ್ರಸ್ತಾಪಿಸಿದ ವಿಷಯದ ಜೊತೆಗೆ ಪರ್ಯಾಲೋಚನೆಗೆ ಬಂದ ಇನ್ನೊಂದು ಸಂಗತಿಯೂ ಇತ್ತು. ಮೈಸೂರು ರಾಜವಂಶದವರು ಹೈದರನ ದುರಾಕ್ರಮಣವನ್ನು ತಮ್ಮ ದುರ್ವಿಧಿಯೆಂದು ಒಪ್ಪಿಕೊಂಡು ಸುಮ್ಮನಿದ್ದವರಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಯಾವ ನೆಲೆಯಿಂದ ಹೈದರನು ಪ್ರಭಾವಶಾಲಿಯಾದನೋ ಅಲ್ಲಿಗೆ ಅವನನ್ನು ದಬ್ಬಲು ಈ ರಾಜಸಂತತಿಯವರು ಹಾಗೂ ಅವರ ಪಕ್ಷಪಾತಿಗಳು ತಮ್ಮ ಪ್ರಯತ್ನಗಳನ್ನು ಎಡಬಿಡದೆ ನಡೆಸುತ್ತಿದ್ದರು. ಸೇನಾಪತಿ ಸ್ಥಾನಕ್ಕೆ ತೃಪ್ತನಾಗಿ, ಅರಸರು ರಾಜ ಪದವಿಯಲ್ಲಿ ಸ್ಥಾನಮಾನಗಳನ್ನು ಪಡೆದು ಪೂರ್ವದ ಸ್ಥಿತಿಗೆ ಹಿಂದಿರುಗಬೇಕೆಂದು ಮತ್ತೆ ಮತ್ತೆ ಹೇಳತೊಡಗಿದರು. ಆದರೆ ಹೈದರನು ತನ್ನ ರಾಜಕೀಯ ತಜ್ಞತೆಯಿಂದ ರಾಜವಂಶದವರ ಪ್ರಯತ್ನಗಳನ್ನು ಮುರಿದನು. ೧೭೩೫ರಿಂದ ೧೭೬೬ರ ವರೆಗೆ ರಾಜ್ಯವಾಳಿದ ಚಿಕ್ಕ ಕೃಷ್ಣರಾಜ ಒಡೆಯರು ಮರಣ ಹೊಂದುವುದಕ್ಕೆ ಕೆಲವು ತಿಂಗಳು ಮೊದಲಿನಿಂದಲೂ ಲಕ್ಷ್ಮಿಯಮ್ಮಣ್ಣಿ ಶತಪ್ರಯತ್ನವನ್ನು ಕೈಗೊಂಡಿದ್ದರಿಂದ, ಚಿಕ್ಕ ಕೃಷ್ಣರಾಜ ಒಡೆಯರ ಇಬ್ಬರು ಮಕ್ಕಳಾದ ನಂಜರಾಜ ಒಡೆಯರು ೧೭೬೬ರಿಂದ ೧೭೭೦ರ ವರೆಗೂ, ಚಾಮರಾಜ ಒಡೆಯರು ೧೭೭೦ರಿಂದ ೧೭೭೬ರ ವರೆಗೂ ರಾಜರಾಗಿದ್ದರು. ಇಬ್ಬರೂ ಹೆಸರಿಗೆ ಮಾತ್ರ ಕೆಲ ಕಾಲ ರಾಜ ಪದವಿಯಲ್ಲಿದ್ದರು. ರಾಜವಂಶದವರ ಈ ಅಲ್ಪಾವದಿಯ ಆಳ್ವಿಕೆ ಮುಗಿದ ಮೇಲೆ ಹೈದರನು ೧೭೭೬ರಲ್ಲಿ ರಾಜ ವಂಶಕ್ಕೆ ಸೇರಿದ ದೂರದ ಸಂಬಂಧಿಯಾದ ಬಾಲಕನೊಬ್ಬನನ್ನು ಪಟ್ಟಕ್ಕೆ ತಂದು ರಾಜ್ಯಾಧಿಕಾರಿಗಳನ್ನೆಲ್ಲಾ ತನ್ನ ಕೈಲಿರಿಸಿಕೊಂಡು ಸರ್ವಾಧಿಕಾರಿಯಾಗಿ ಆಳ್ವಿಕೆ ನಡೆಸಿದನು. ಈ ಬಾಲಕನ ಹೆಸರು ಖಾಸಾ ಚಾಮರಾಜ ಒಡೆಯರ್. ಈತನು ೧೭೭೬ರಿಂದ ೧೭೯೭ರ ವರೆಗೆ ಹೆಸರಿಗೆ ಮಾತ್ರ ರಾಜನಾಗಿದ್ದನು. ಲಕ್ಷ್ಮಿಯಮ್ಮಣ್ಣಿ ಈ ಕ್ರಾಂತಿ ದರ್ಪಗಳ ಉದ್ದಕ್ಕೂ ಬದುಕಿದ್ದು ಹೈದರನ ವಿರುದ್ಧ ಹೋರಾಡಿದಳು. ಈ ಕಾರ್ಯಕ್ಕಾಗಿ ಬ್ರಿಟಿಷರ ಸಹಾಯವನ್ನು ಪಡೆದು ರಾಜವಂಶದ ನ್ಯಾಯವಾದ ಹಕ್ಕುದಾರರಾಗಿ ಸಿಂಹಾಸನವನ್ನು ಮರಳಿ ಗೆದ್ದುಕೊಳ್ಳಲು ಪ್ರಯತ್ನಿಸಿದಳು. ಮದರಾಸು ಸಂಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದಳು. ೧೭೮೨ರಲ್ಲಿ ಬ್ರಿಟಿಷರೊಡನೆ ಒಂದು ಮಹತ್ವದ ಒಪ್ಪಂದ ಮಾಡಿಕೊಂಡಳು. ಒಪ್ಪಂದಂತೆ ಬ್ರಿಟಿಷರು ಮೈಸೂರು ರಾಜ್ಯಕ್ಕೆ ಮುತ್ತಿಗೆ ಹಾಕಿ ಹೈದರನನ್ನು ಸೋಲಿಸಿ ಸಿಂಹಾಸನವನ್ನು ಪೂರ್ವದ ವಂಶಸ್ಥರಿಗೆ ಹಿಂದಿರುಗಿಸುವುದಾಗಿ ವಾಗ್ದಾನ ಮಾಡಿದರು. ಯುದ್ಧದ ವೆಚ್ಚಕ್ಕೋಸ್ಕರ ಲಕ್ಷ್ಮಿಯಮ್ಮಣ್ಣಿ ಹಣ ಕೊಡಲು ಒಪ್ಪಿದಳು.

ಮೈಸೂರು ಸಂಸ್ಥಾನವನ್ನು ಅದರ ಹಳೆಯ ರಾಜವಂಶಕ್ಕೆ ಹಸ್ತಾಂತರ ಮಾಡದೆ, ಬ್ರಿಟಿಷ್ ಪ್ರಭುತ್ವವನ್ನು ಭಾರತದಲ್ಲಿ ಭದ್ರಗೊಳಿಸುವ ರಾಜಕೀಯ ಉದ್ದೇಶವೂ, ಜೊತೆಗೆ ಬ್ರಿಟಿಷರ ವಿಜಯದ ದಂಡಯಾತ್ರೆಯಲ್ಲಿ ನೆರವಾದ ಮಿತ್ರಮಂಡಳಿಯ ಬಲ ಪ್ರಭಾವಗಳನ್ನು ಒಂದು ಮಿತಿಯಲ್ಲಿರಿಸುವ ಉದ್ದೇಶ ಇಲ್ಲಿ ಪ್ರಧಾನ ಕಾರಣವಾಗಿತ್ತೇ ಹೊರತು, ಲಕ್ಷ್ಮೀಯಮ್ಮಣ್ಣೀಯವರೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ನಿಯಮಾನುಸಾರ ಗೌರವ ತೋರತಕ್ಕದ್ದು ಮುಖ್ಯವಾಗಿರಲಿಲ್ಲ. ಬ್ರಿಟಿಷರು ಮೈಸೂರು ರಾಜಮನೆತನಕ್ಕೆ ನ್ಯಾಯ ಸಲ್ಲಿಸಿದವರೆಂಬುದನ್ನು ತೋರಿಸಿಕೊಂಡರೂ, ಆ ಮನೆತನದ ಪರವಾಗಿ ರಾಣಿಯೊಬ್ಬಳು ಒಪ್ಪಂದಕ್ಕೆ ಸಹಿ ಮಾಡಿದ್ದರೂ ಈ ದೊಡ್ಡ ಘಟನೆ ಅಂದಿನ ರಾಜತಾಂತ್ರಿಕ ವ್ಯವಹಾರದಲ್ಲಿ ಪಡೆಯಬೇಕಾಗಿದ್ದ ಗಣ್ಯಸ್ಥಾನವನ್ನು ಪಡೆಯದೆ ಅದು ಕೇವಲ ಪ್ರಾಸಂಗಿಕ ಘಟನೆಯೊಂದು ನಡೆಯಿತೆಂದು ಗೌಣವೆನಿಸಿ ಮೂಲೆಗೆ ಸೇರಿತು ಎಂಬುದೇ ಅಂದಿನ ರಾಜಕೀಯ ಸನ್ನಿವೇಶವನ್ನು ಅರ್ಥೈಸುತ್ತದೆ, ಈ ಒಪ್ಪಂದ ಪ್ರಕಾರ ಲಕ್ಷ್ಮಿಯಮ್ಮಣ್ಣಿಯವರ ಇಷ್ಟದಂತೆ, ಮುಮ್ಮಡಿ ಕೃಷ್ಣರಾಜ ಒಡೆಯರು ರಾಜರಾದರು. ಆಗ ಇವರಿಗೆ ಕೇವಲ ಮೂರು ವರ್ಷ ವಯಸ್ಸು. ಹೀಗೆ ಮೈಸೂರಿನ ನ್ಯಾಯಯುತವಾದ ಬೇಡಿಕೆಯನ್ನು ಗೆದ್ದುಕೊಂಡ ಲಕ್ಷ್ಮಿಯಮ್ಮಣ್ಣಿ ೧೮೧೦ರಲ್ಲಿ ಮರಣ ಹೊಂದಿದಳು. ಮರುವರ್ಷ ದಿವಾನ್ ಪೂರ್ಣಯ್ಯ ಮರಣ ಹೊಂದಿದರು. ರಾಜವಂಶಕ್ಕೆ ದೇಶವು ಮರುಕಳಿಸಿದ ನಂತರ ಪೂರ್ಣಯ್ಯ ಹತ್ತು ವರ್ಷಕ್ಕಿಂತ ಹೆಚ್ಚುಕಾಲ ರಾಜ್ಯದ ಆಡಳಿತ ನಡೆಸಿದರು. ಯುವ ಕೃಷ್ಣರಾಜ ಒಡೆಯರು ನೇರವಾಗಿ ಆಡಳಿತ ನಡೆಸಲು ಪ್ರಾಪ್ತ ವಯಸಕ್ಕರಾಗುವವರೆಗೆ ಯೋಗ್ಯ ಮಾರ್ಗದರ್ಶನ ಪರಾಮರ್ಶೆಗಳನ್ನು ನೀಡಬಲ್ಲ ಹಿತಚಿಂತಕರಾದ ಈ ಇಬ್ಬರು ಕಣ್ಮರೆಯಾಗಿದ್ದರು.