ಕ್ಷಾಮಗಳು ಮತ್ತು ಕ್ಷಾಮ ನೀತಿ

ಕ್ಷಾಮವೆಂದರೆ “ಸಮಾಜದಲ್ಲಿ ವಾಸಿಸುವ ಮಾನವನಿಗೆ ಬೇಕಾದ ಅಗತ್ಯ ವಸ್ತುಗಳ ಅಭಾವವಿದ್ದು ಪೂರೈಕೆಯಲ್ಲಿ ಕೊರತೆ ಕಂಡು ಬಂದಾಗ ಕ್ಷಾಮ ಪರಿಸ್ಥಿತಿ ಉದ್ಭವಿಸುತ್ತದೆ”. ಕೇವಲ ಪ್ರಾಕೃತಿಕ ಕಾರಣಗಳಿಂದಲೇ ಕ್ಷಾಮ ಉಂಟಾಗಲಾರದು. ಮಳೆ ಬಾರದೇ ಬೆಳೆ ನಾಶವಾಗಿ, ಅತಿವೃಷ್ಟಿಯಿಂದಾಗಿಯೂ ಅಭಾವ ಪರಿಸ್ಥಿತಿಯುಂಟಾಗಿ ಕ್ಷಾಮ ಉಂಟಾಗಬಹುದು. ಮತ್ತೆ ಕೆಲವೊಮ್ಮೆ ಮಾನವ ನಿರ್ಮಿತ ಕಾರಣಗಳಿಂದಲೂ ಕ್ಷಾಮ ಬರುವುದುಂಟು. ಆಡಳಿತದಲ್ಲಿ ನಿರ್ಲಕ್ಷತೆ, ಸರ್ಕಾರದ ಆಡಳಿತ ಯಂತ್ರದಲ್ಲಿ ನಿಷ್ಕ್ರೀಯತೆ. ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ಕ್ರಮಕೈಗೊಳ್ಳದಿರುವುದು. ಆಹಾರ ಧಾನ್ಯವನ್ನು ದಲ್ಲಾಳಿಗಳು ಅಥವಾ ಇತರ ದಗಾಕೋರರು ಬಚ್ಚಿಡುವುದು, ಸರಿಯಾದ ವಿತರಣಾ ವ್ಯವಸ್ಥೆಯ ಕೊರತೆಯಿರುವುದು, ಅದಕ್ಕಿಂತ ಹೆಚ್ಚಾಗಿ ಲಾಭಗಳಿಸುವ ಮನೋಭಾವ, ಈ ಮಾನವ ನಿರ‍್ಮಿತ ಕಾರಣಗಳಿಂದ ಕ್ಷಾಮ ಸಂಭವಿಸಬಹುದು. ಬ್ರಿಟಿಷರು ಭಾರತವನ್ನು ತಮ್ಮ ವಸಾಹತುವಾಗಿ ಇಟ್ಟುಕೊಂಡು ಆಳಿದರೂ ಭಾರತದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಇದು ಭಾರತದ ಅಭಿವೃದ್ಧಿಗೆ ಅಂದರೆ ಆರ್ಥಿಕ ನೀತಿಗೆ ಮಾರಕವಾಗಿತ್ತು. ಬ್ರಿಟೀಷರು ಭಾರತಕ್ಕೆ ಬರುವುದಕ್ಕಿಂತ ಮುನ್ನ ಅಂದರೆ ದೆಹಲಿ ಸುಲ್ತಾನರ ಕಾಲದಲ್ಲಿಯೂ ಕ್ಷಾಮ ಸಂಭವಿಸಿತು. ಆದರೆ ಕ್ಷಾಮ ಬಂದಾಗ ಮಹಮ್ಮದ್ ಬಿನ್ ತೊಘಲಕ್‌ನೂ ಸಾಕಷ್ಟು ಪರಿಹಾರ ಕಾರ್ಯ ಕೈಗೊಂಡನು. ಅದೇ ರೀತಿ ಮೊಗಲ್ ಅರಸರು ಕ್ಷಾಮ ಬಂದಾಗ ಜನರಿಗೆ ಆಹಾರ, ವಸತಿ, ಉದ್ಯೋಗ ಕಲ್ಪಿಸಿ ಸೂಕ್ತ ಪರಿಹಾರ ಕ್ರಮ ಕೈಗೊಂಡಿದ್ದುದನ್ನು ಬ್ರಿಟಿಷ್ ಅಧಿಕಾರಿಗಳೇ ಪ್ರಶಂಸಿದ್ದಾರೆ. ಈಸ್ಟ್‌ಇಂಡಿಯಾ ಕಂಪನಿಯ ಆಳ್ವಿಕೆಯ ನೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ೧೨ ಕ್ಷಾಮಗಳು, ೪ ಅಭಾವ ಪರಿಸ್ಥಿತಿಗಳು ಸಂಭವಿಸಿದುದನ್ನು ಕಾಣುತ್ತೇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ.

ಲಾರ್ಡ್‌ ಎಲೆನ್‌ ಬರೋ ಅಧಿಕಾರವಧಿಯಲ್ಲಿ ಎರಡು ಭೀಕರ ಕ್ಷಾಮಗಳು ತಲೆ ದೋರಿದವು. ೧೮೬೬ರಲ್ಲಿ ಒರಿಸ್ಸಾದಲ್ಲಿ ಕ್ಷಾಮವು ಭೀಕರ ರೂಪವನ್ನು ತಾಳಿದಾಗ ಬಂಗಾಳದಲ್ಲಿ ಲೆಫ್ಟಿನೆಂಟ್ ಗೌರ‍್ನರ್ ಆಗಿದ್ದ ಸರ್‌ಸೆನೆಟ್ ಬೆಡನ್ ಜನರಿಗೆ ಬರಗಾಲದ ಅಪಾಯವೇನು ಇಲ್ಲವೆಂದು ತಿಳಿಸಿದನು. ಆದರೆ ಕ್ಷಾಮಗಳ ಜೊತೆಯಲ್ಲಿಯೇ ಅನೇಕ ಪ್ರವಾಹಗಳು ಉಂಟಾಗಿ ಅನೇಕ ಜನ ಮರಣ ಹೊಂದಿ, ರೈತರು ತಮ್ಮ ಜಮೀನನ್ನು ಕಳೆದುಕೊಂಡು ನಿರ್ಗತಿಕರಾದರು. ಅಂದಿನ ಒರಿಸ್ಸಾದಲ್ಲುಂಟಾದ ಕ್ಷಾಮದ ಬಗ್ಗೆ ಲಾರೆನ್ಸ ಈ ರೀತಿ ಬುಂದೇಲ್ ಖಂಡ ಮತ್ತು ರಾಜಪುಟಾಣದಲ್ಲಿ ೧೮೬೮-೬೯ರಲ್ಲಿ ಕ್ಷಾಮ ಉಂಟಾಯಿತು. ರೈತರಂತು ಬಹಳ ಕಷ್ಟ ನಷ್ಟ ಅನುಭವಿಸಿದರು. ಆದರೆ ಒರಿಸ್ಸಾದಲ್ಲಿ ಸಂಭವಿಸಿದ ಕ್ಷಾಮದ ಅರಿವನ್ನು ತಿಳಿದಿದ್ದ ಲಾರ್ಡ್‌ ಎಲ್ಲಿನ್ ಬರೋ ಮುಂಜಾಗ್ರತೆ ವಹಿಸಿದನು. ಆದರೆ ಸರ್ ಜಾರ್ಜ್‌ಕ್ಯಾಫ್‌ಬಲ್ ಪ್ರಕಾರ “೧೯ನೇ ಶತಮನಾದ ಭೀಕರ ಕ್ಷಾಮದಲ್ಲಿ ಎಲ್ಲೆಲ್ಲಿಯೂ ಹೆಣಗಳು, ಅಸ್ಥಿಪಂಜರಗಳನ್ನು ಕಂಡು ನನಗೆ ದಿಗ್ಭ್ರಮೆಯಾಯಿತು” ಎಂದಿದ್ದಾನೆ. ೧೮೭೬-೮೦ರ ಲಾರ್ಡ್‌ ಲಿಟ್ಟನ್ ವೈಸ್‌ರಾಯ್ ಆಗಿದ್ದ ಕಾಲದಲ್ಲಿ ಮದ್ರಾಸ್ ಹೈದರಾಬಾದ, ಬೊಂಬಾಯಿ, ಮೈಸೂರು ರಾಜ್ಯಗಳಲ್ಲಿ ಕ್ಷಾಮ ಉಲ್ಬಣಗೊಳಿಸಿತು. ಇದರ ಹಿಂದೆಯೇ ವಿಷಮಶೀತ ಜ್ವರ, ಕಾಲರಾ, ಪ್ಲೇಗು ಬಂದಿತು. ಇದೇ ಸಮಯದಲ್ಲಿ ಮಧ್ಯಭಾರತ ಪಂಜಾಬಿನ ಕೆಲವು ಭಾಗಗಳಲ್ಲಿ ಕ್ಷಾಮ ಆವರಿಸಿತು. ಒಟ್ಟಿನಲ್ಲಿ ಈ ಎಲ್ಲಾ ಪ್ರದೇಶಗಳಿಂದ ೧೦ ಲಕ್ಷಕ್ಕೂ ಹೆಚ್ಚು ಮಂದಿ ಸತ್ತರು. ಬ್ರಿಟಿಷರಿಗೆ ಬರುತ್ತಿದ್ದ ಎರಡು ಕೋಟಿ ಕಂದಾಯದ ಹಣ ನಿಂತು ಹೋಯಿತು. ಭಾರತದಲ್ಲಿ ಪರಿಹಾರದ ತತ್ವ ಮತ್ತು ಶ್ರಮವನ್ನು ನಿಶ್ಚಿತವಾದ ಆಧಾರದ ಮೇಲೆ ಕೈಗೊಳ್ಳದಿದ್ದುದರಿಂದ ಪರಿಸ್ಥಿತಿ ಚಿಂತಾಜನಕವಾಗಿತ್ತು. ಹೆಚ್ಚು ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿದವು. ಇಂತಹ ಸಮಯದಲ್ಲಿಯೂ ದೆಹಲಿಯಲ್ಲಿ ದರ್ಬಾರನ್ನು ಏರ್ಪಡಿಸಿಕೊಂಡ ಬ್ರಿಟಿಷ್ ಅಧಿಕಾರಿಗಳು ೧೮೭೭ ಮೊದಲನೆ ದಿನ ವಿಕ್ಟೋರಿಯಾ ಮಹಾರಾಣಿ ಭಾರತದ ಚಕ್ರವರ್ತಿನಿ ಎಂಬುದಾಗಿ ಘೋಷಿಸಿ ಐಷಾರಾಮವಾಗಿದ್ದರು.

೨ನೇ ಲಾರ್ಡ್‌ಎಲ್ಲಿನ್‌ಬರೋ ವೈಸ್‌ರಾಯಿಯಾಗಿ ಪದವಿ ಸ್ವೀಕರಿಸಿದ ಮರು ವರ್ಷವೇ ೧೮೬೬ರಲ್ಲಿ ಮಳೆ ಬೀಳದೇ ಅನಾವೃಷ್ಟಿಯುಂಟಾಗಿ ಪಂಜಾಬ್, ರಾಜಸ್ತಾನ್, ಅಯೋಧ್ಯ, ಬಿಹಾರ, ಬಂಗಾಳ್, ಬೊಂಬಾಯಿ, ಮದ್ರಾಸ್‌ನಲ್ಲಿ ಕ್ಷಾಮ ತಲೆದೋರಿ ಸುಮಾರು ೭೧/೨ ಲಕ್ಷ ಜನ ಬ್ರಿಟಿಷ್ ಭಾರತದಲ್ಲಿ ಮೃತರಾದರು. ಸುಮಾರು ೪೦ ಲಕ್ಷದಷ್ಟು ಜನರು ಸಂಸ್ಥಾನ ರಾಜರುಗಳ ಆಶ್ರಯವನ್ನು ಪಡೆದರು. ಇಷ್ಟೆಲ್ಲದರ ಜೊತೆಗೆ ೧೮೯೬ರಲ್ಲಿ ಬೊಂಬಾಯಿಯಲ್ಲಿ ಪ್ಲೇಗು ಕಾಣಿಸಿಕೊಂಡಿತು. ೧೮೯೭ರಲ್ಲಿ ಪೂನಾದಲ್ಲಿ ಸಿಟ್ಟಿಗೆದ್ದ ಜನತೆ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ನಂತರ ಬೋಂಬಾಯಿಯಲ್ಲಿ ಜನತೆ ಬ್ರಿಟಿಷ್ ಆಡಳಿತದ ವಿರುದ್ಧ ದಂಗೆಯೆದ್ದರು. ನಂತರ ಭಾರತದ ವೈಸರಾಯ್‌ಆಗಿ ಬಂದ ಲಾರ್ಡ್‌ಕರ್ಜನ್ (೧೮೯೯-೧೯೦೫) ಭಾರತದಲ್ಲಿನ ಮುಂದುವರಿದ ಕ್ಷಾಮ ಪ್ಲೇಗು, ರೋಗರುಜಿನಗಳ ವಿರುದ್ಧ ಹೋರಾಟ ಬೇಕಾಯಿತು. ಈ ಕ್ಷಾಮವೂ ಹಿಂದಿನ ಕ್ಷಾಮವನ್ನೇ ಹಿಂಬಾಲಿಸಿ ಬಂದಿತ್ತಾದರೂ ಭಾರತ ಭೀಕರವಾದ ಕಾಲರಾ, ಮಲೇರಿಯಾದ ದವಡೆಗೆ ಸಿಲುಕಿತು. ಪಶ್ಚಿಮ ಭಾರತ ಮತ್ತು ದಕ್ಷಿಣ ಭಾರತ ಇವುಗಳು ಸಹ ಕ್ಷಾಮಕ್ಕೆ ಬಲಿಯಾದವು. ಈ ಪರಿಸ್ಥಿತಿಯು ಉಪವಾಸದಿಂದ ನರಳುತ್ತಿದ್ದ ಜನರ ಸಂಕಷ್ಟಗಳನ್ನು ತೀವ್ರಗೊಳಿಸಿತು. ಸುಮಾರು ೪,೭೫,೦೦೦ ಚದರ ಮೈಲು ಪ್ರದೇಶದಲ್ಲಿ ಅಭಾವ ಪರಿಸ್ಥಿತಿ ಹರಡಿ ಸುಮಾರು ೬ ಕೋಟಿ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡರು. ಸುಮಾರು ೧೦ ಲಕ್ಷ ಜನ ಮರಣ ಹೊಂದಿದರು. ಕಾನ್‌ಪುರದಲ್ಲಿ ಗಲಭೆ ಸಂಭವಿಸಿ ಸಾವಿಗೆ ತುತ್ತಾದವರ ಸಂಖ್ಯೆ ೪೦೦ ಕ್ಕೂ ಮೀರಿತ್ತೆಂದು ಅಂದಾಜು ಮಾಡಲಾಗಿದೆ. ಈ ಮೇಲಿನ ಎಲ್ಲಾ ಕ್ಷಾಮಗಳು ಬ್ರಿಟಷ್ ಆಡಳಿತದ ನಿಷ್ಕ್ರೀಯತೆಯಿಂದಾಗಿ ಸಂಭವಿಸಿದರೂ, ಬಹುಪಾಲು ಕಾರಣ ಪ್ರಕೃತಿಗೆ ಸೇರಿದ್ದಿತೆನ್ನಬಹುದು. ಆದರೆ ೧೭೬೭ ರಿಂದ ೧೭೭೦ ರ ಅವಧಿಯಲ್ಲಿ ಸಂಭವಿಸಿದ ಕ್ಷಾಮಕ್ಕೆ ಬ್ರಿಟಿಷ್‌ರು ಅನುಸರಿಸಿದ ನೀತಿಯೇ ಬಹುಪಾಲು ಕಾರಣವೆನ್ನಬಹುದು.

ವಾರ್ನ್ ಹೇಸ್ಟಿಂಗ್ಸ್‌ಭಾರತದ ಗೌರ‍್ನರ್ ಆಗಿದ್ದ ಸಮಯದಲ್ಲಿ ೧೭೬೭-೭೦ರ ಅವಧಿಯಲ್ಲಿ ಬಂಗಾಳ ಮತ್ತು ಭಾರತದ ಬಹುಭಾಗದಲ್ಲಿ ಕ್ಷಾಮ ಸಂಭವಿಸಿತು. ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯಲ್ಲುಂಟಾದ ಬೆಳವಣಿಗೆಯಿಂದ ಇಂಗ್ಲೆಂಡ್ ಅತ್ಯಧಿಕ ಪ್ರಮಾಣದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳತೊಡಗಿತು. ಇದರಿಂದ ಕಾರ್ಮಿಕರಿಗೆ ಬೇಕಾದ ಅಪಾರ ಆಹಾರ ಪದಾರ್ಥವನ್ನು ಪೂರೈಸಲು ತೊಡಗಿದರು. ಇದರಿಂದ ಭಾರತದ ಜನತೆ ಆಹಾರದ ಅಭಾವಕ್ಕೆ ಸಿಲುಕಿ ಇನ್ನಿತರ ಕಾಯಿಲೆಯಿಂದ ಬಳಲಿ ಬಂಗಾಳದ ಸುಮಾರು ೧/೩ ಭಾಗದ ಜನಸಂಖ್ಯೆ ಹೆಚ್ಚು ಕಡಿಮೆ ಒಂದು ಕೋಟಿ ಜನ ಮರಣ ಹೊಂದಿದರು, ಬಹುಭಾಗದ ಭೂಮಿ ಪಾಳುಬಿದ್ದಿತು. ೧೭೭೦ರಲ್ಲಿ ಕಂಪನಿಯ ಸೇವಕನೊಬ್ಬ “ಕಡುಬಡತನದ ದೃಶ್ಯ ಇನ್ನು ಮುಂದುವರೆಯುತ್ತದೆ. ಅದರ ವರ್ಣನೆಯನ್ನು ಕೇಳಿದರೆ ಮಾನವ ಜನಾಂಗ ತಲ್ಲಣಿಸುವುದು ಸತ್ಯ” ಎಂದು ತಿಳಿಸಿದ್ದಾನೆ.

ಕ್ಷಾಮ ನೀತಿ

ಬ್ರಿಟಿಷ್ ಆಡಳಿತಾವಧಿಯ ಅತ್ಯಂತ ಮಹತ್ವಪೂರ್ಣ ಸಾಧನೆ ಕ್ಷಾಮ ನೀತಿಯನ್ನು ರೂಪಿಸಿದುದು. ತಮ್ಮ ಆಡಳಿತಾವಧಿಯಲ್ಲಿ ಸಂಭವಿಸಿದ ಕ್ಷಾಮಗಳಿಂದ ಜನರಿಗುಂಟಾದ ತೊಂದರೆಯನ್ನು ನಿವಾರಿಸಿ, ಜೊತೆಗೆ ಆರ್ಥಿಕ ವ್ಯವಸ್ಥೆಯ ರಚನೆಯಲ್ಲಿದ್ದ ದೋಷಗಳನ್ನು ನಿವಾರಿಸಿ, ಆಹಾರ ಧಾನ್ಯಗಳ ಉತ್ಪಾದನೆ ಕೈಗೊಳ್ಳಲು ಅನೇಕ ನೀತಿಯನ್ನು ರೂಪಿಸಿದರು. ೧೮೬೬-೬೭ರಲ್ಲಿ ಒರಿಸ್ಸಾದಲ್ಲಿ ಸಂಭವಿಸಿದ ಕ್ಷಾಮದ ಅಧ್ಯಯನಕ್ಕಾಗಿ ಮತ್ತು ಅದರ ಪರಿಹಾರಕ್ಕಾಗಿ ನೀತಿಯನ್ನು ರೂಪಿಸಲು “ಸರ್‌ ಜಾರ್ಜ್‌ಕ್ಯಾಂಪ್‌ಬೆಲ್”ನ ನೇತೃತ್ವದಲ್ಲಿ ಆಯೋಗವನ್ನು ಬ್ರಿಟಿಷ್ ಸರ್ಕಾರ ನೇಮಿಸಿತು. ಪರಿಸ್ಥಿತಿಯ ಅಧ್ಯಯನ ನಡೆಸಿದ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ರೈತರಿಗೆ ಭೂಮಿಯನ್ನು ನೀಡಿ, ನೀರಾವರಿ ಸೌಕರ್ಯವನ್ನು ಒದಗಿಸಿ, ಅನೇಕ ಕಾಲುವೆಗಳನ್ನು ನಿರ್ಮಾಣ ಮಾಡಬೇಕು. ಕ್ಷಾಮ ಬಂದಾಗ ಸರ್ಕಾರವು ಜನರಿಗೆ ಆಹಾರ ಸೌಲಭ್ಯ ಒದಗಿಸಲು ಆಹಾರ ಕ್ರೋಢೀಕರಿಸಿಕೊಂಡಿರಬೇಕು. ಸೂಕ್ತ ಮೊತ್ತದ ಹಣವನ್ನು ಕ್ಷಾಮ ಪರಿಹಾರ ಕಾರ್ಯಗಳಿಗಾಗಿ ಮೀಸಲಿಟ್ಟಿರಬೇಕೆಂದು ಶಿಫಾರಸ್ಸು ಮಾಡಿತು. ೧೮೯೬-೯೭ರಲ್ಲಿ ಭಾರತದ ವಾಯುವ್ಯ ಪ್ರಾಂತ್ಯದಲ್ಲಿ ಸಂಭವಿಸಿದ ಕ್ಷಾಮದ ಬಗ್ಗೆ ಅಧ್ಯಯನ ನಡೆಸುವಂತೆ ಜೇಮ್ಸ್‌ಲ್ಯಾಲೆಯನ್ನು ಸರ್ಕಾರ ನೇಮಿಸಿತು. ಪರಿಸ್ಥಿತಿಯ ಅಧ್ಯಯನ ನಡೆಸಿದ ಲ್ಯಾಲೆ ಸರ್ಕಾರಕ್ಕೆ ಬೆಲೆಗಳು ಏರದಂತೆ ನೋಡಿಕೊಳ್ಳಬೇಕೆಂದು, ಕಾರ್ಮಿಕರ ಸಂಬಳವನ್ನು ಹೆಚ್ಚಿಸಬೇಕೆಂದು ತನ್ನ ವರದಿ ಒಪ್ಪಿಸಿದನು. ಲಾರ್ಡ್‌‌ ಕರ್ಜನ್ ಕಾಲದಲ್ಲಿ ಸಂಭವಿಸಿದ ಕ್ಷಾಮದ ಪರಿಸ್ಥಿತಿ ತಿಳಿದು ತನ್ನ ನೀತಿಯನ್ನು ರೂಪಿಸಲು ಬ್ರಿಟಿಷ್ ಸರ್ಕಾರ ಸರ್ ಆಂಥೋನಿ ಮ್ಯಾಕ್‌ ಡೊನೆಲ್‌ನನ್ನು ನೇಮಿಸಿತು. ಈತನು ಈ ಕೆಳಕಂಡ ತನ್ನ ಸಲಹೆಯನ್ನು ಸರ್ಕಾರಕ್ಕೆ ಒಪ್ಪಿಸಿದನು. ಸರ್ಕಾರವು ಜನರಿಗೆ ಹಣವನ್ನು ಕೊಡುವಾಗ ಎಚ್ಚರಿಕೆಯಿಂದ ಪರಿಶೀಲಿಸುವುದು. ಕ್ಷಾಮ ಬಂದಾಗ ಕಂದಾಯವನ್ನು ಖೋತಾ ಮಾಡಬೇಕು. ರೈತರ ಉಪಯೋಗಕ್ಕಾಗಿ ಕೃಷಿ ಬ್ಯಾಂಕನ್ನು ಸ್ಥಾಪಿಸಿ, ಕೃಷಿ ವಿಧಾನವನ್ನು ಅಳವಡಿಸಬೇಕು. ಖಾಸಗಿ ವ್ಯಕ್ತಿಗಳ ಸಹಾಯ ಪಡೆದು ಪರಿಹಾರ ಕೈಗೊಳ್ಳಬೇಕು ಎಂದು ತಿಳಿಸಿದನು. ಈ ನಿಟ್ಟಿನಲ್ಲಿ ಬ್ರಿಟಿಷ್ ಸರ್ಕಾರ ಈ ಸಮಿತಿಗಳ ಕ್ಷಾಮ ನೀತಿಯನ್ನು ಪರಿಶೀಲಿಸಿ ಬಹುಪಾಲು ನೀತಿಯನ್ನು ರೈತರಿಗೆ ಉಪಯೋಗವಾಗುವಂತೆ ರೂಪಿಸಿತು. ಅಲ್ಲದೆ ಕ್ಷಾಮ ಕಾಲದಲ್ಲಿ ಅಗತ್ಯವಿರುವವರೆಗೆ ಪರಿಹಾರ ನೀಡುವುದು, ದುಂದುವೆಚ್ಚವನ್ನು ತಡೆಗಟ್ಟಿ ಸಮಾಜಕಲ್ಯಾಣ ಕಾರ್ಯಗಳಲ್ಲಿ ಆ ಹಣವನ್ನು ತೊಡಗಿಸುವುದು. ಕ್ಷಾಮದಿಂದುಂಟಾಗುವ ಅಪಾಯವನ್ನು ತಪ್ಪಿಸಲು “ಕ್ಷಾಮ ಪರಿಹಾರ ಮತ್ತು ವಿಮಾನಿಧಿ” ಸ್ಥಾಪಿಸಿ ಪ್ರತಿ ವರ್ಷ ೧೫ ಲಕ್ಷ ರೂ. ಗಳನ್ನು ಮೀಸಲಿಡಬೇಕೆಂದು ಬ್ರಿಟಿಷ್ ಸರ್ಕಾರ ತನ್ನ ಕ್ಷಾಮ ನೀತಿಯನ್ನು ರೂಪಿಸಿತು.

ದೇಶಿಯ ಕೈಗಾರಿಕೆಗಳ ಅವನತಿ

ಭಾರತ ಯಾವಾಗಲೂ ಕೈಗಾರಿಕಾ ರಾಷ್ಟ್ರವಾಗಿರಲೇ ಇಲ್ಲ ಎಂಬ ಭಾವನೆ ಸಂಪೂರ್ಣವಾಗಿ ತಪ್ಪಾದುದು. ಭಾರತದ ಕುಶಲ ಕಲೆ ಹಾಗೂ ಕೈಗಾರಿಕಾ ಬಹಳ ಹಿಂದಿನಿಂದಲೂ ಭಾರತದ ವಿಪುಲ ಸಂಪತ್ತಿಗೆ ಆಧಾರವಾಗಿದ್ದವು. ಪಾಶ್ಚಾತ್ಯ ವರ್ತಕರು ಮೊದಲು ಭಾರತಕ್ಕೆ ಬಂದಾಗ ಭಾರತದ ಕೈಗಾರಿಕಾ ಪ್ರಗತಿಯು ಯಾವ ಯುರೋಪಿನ ರಾಷ್ಟ್ರಕ್ಕೂ ಕಡಿಮೆಯಿಲ್ಲವೆಂದು ತಿಳಿಸಿದ್ದಾರೆ. ಭಾರತದ ಆಮದು ವ್ಯಾಪಾರಕ್ಕಿಂತ ರಫ್ತು ವ್ಯಾಪಾರವೇ ಅಧಿಕವಾಗಿತ್ತು. ಪ್ಲಾನಿಯು ಮೊದಲನೇ ಶತಮಾನದಲ್ಲೇ “ಭಾರತದ ಭೋಗ ಸಾಮಾಗ್ರಿಗಳಿಂದ ರೋಮನ್ ಸಾಮ್ರಾಜ್ಯದ ಅಪಾರ ಚಿನ್ನ ಭಾರತಕ್ಕೊಗಿದೆ” ಎಂದು ದೂರಿದ್ದಾನೆ. ಹತ್ತಿ, ರೇಷ್ಮೆ ಹಾಗೂ ಉಣ್ಣೆ ನೇಯ್ಗೆ ಭಾರತದ ಪ್ರಮುಖ ಕೈಗಾರಿಕೆಗಳಾಗಿದ್ದವು. ಬಂಗಾಳವನ್ನು ಬಿಟ್ಟರೆ ಲಕ್ನೋ, ಅಹ್ಮದಾಬಾದ್, ನಾಗಪುರ ಹಾಗೂ ಮಥುರಾಗಳು ಹತ್ತಿ ಕೈಗಾರಿಕೆಯ ಪ್ರಮುಖ ಕೇಂದ್ರಗಳಾಗಿದ್ದವು. ಪಂಜಾಬು ಮತ್ತು ಕಾಶ್ಮೀರಗಳಲ್ಲಿ ಉತ್ತಮ ಶಾಲುಗಳನ್ನು ನೇಯುತ್ತಿದ್ದರು. ತಾಮ್ರ, ಹಿತ್ತಾಳೆ ಹಾಗೂ ಕಂಚಿನ ಸಾಮಾನುಗಳನ್ನು ಬನಾರಸ್, ತಂಜಾವೂರು, ಪೂನಾ, ನಾಸಿಕ್ ಮತ್ತು ಅಹ್ಮದ್‌ಬಾದ್‌ಗಳಲ್ಲಿ ತಯಾರಿಸಲಾಗುತ್ತಿತ್ತು. ಇವುಗಳ ಜೊತೆಗೆ ಚಿನ್ನ, ಬೆಳ್ಳಿಯ ಆಭರಣ, ಗಂಧ, ದಂತದಲ್ಲಿ ಕುಶಲ ಕೆಲಸ ಮಾಡುವ ಕಾರ್ಖಾನೆಗಳಿದ್ದವು. ಬ್ರಿಟಿಷರು ೧೭೫೭ರ ನಂತರ ಬಂಗಾಳದಲ್ಲಿ ಹೇಗೆ ಹತ್ತಿ ಕೈಗಾರಿಕೆಯನ್ನು ನಾಶ ಮಾಡಿದರು ಎಂದು ತಿಳಿದುಕೊಂಡರೆ ದೇಶಿಯ ಕೈಗಾರಿಕೆಗಳ ಅವನತಿಯ ಬಗ್ಗೆ ತಿಳಿದಂತಾಗುತ್ತದೆ. ಈಸ್ಟ್‌ ಇಂಡಿಯಾ ಕಂಪನಿಯು ಹತ್ತಿ ಬಟ್ಟೆಗಳ ನಿಯತ ಮತ್ತು ನಿಶ್ಚಿತ ಪ್ರಮಾಣದ ವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡು, ಅವರನ್ನು ದೌರ್ಜನ್ಯದ ಮೂಲಕ ನೇಕಾರರಿಗೆ ಅವರ ಸರಕುಗಳ ನಿಜ ಮೌಲ್ಯಕ್ಕಿನ್ನ ಕಡಿಮೆ ಬೆಲೆಯನ್ನು ನೀಡುತ್ತಿದ್ದರು. ಅಲ್ಲದೆ ದೇಹದಂಡನೆಯ ಬೆದರಿಕೆ ಹಾಕಿ ನೇಕಾರರು ಇತರ ಯಾರಿಗೆ ಆಗಲಿ ಕೆಲಸ ಮಾಡುವುದನ್ನು ನಿಷೇಧಿಸಿದರು. ಇದೇ ನೀತಿಯನ್ನು ರೇಷ್ಮೆ ನೇಯ್ಗೆಗಾರರಿಗೂ ಹೇರಿದರು. ಕಂಪನಿಗಾಗಿಯೇ ನೇಯಬೇಕೆಂದು ಬಲಾತ್ಕಾರಕ್ಕೊಳಗಾಗುವುದರ ಬದಲು ತಮ್ಮ ಹೆಬ್ಬೆರಳನ್ನೇ ಕತ್ತರಿಸಿಕೊಳ್ಳುತ್ತಿದ್ದರು ಎಂಬ ಪ್ರತೀತಿ ಇದೆ. ವೆರಲ್ಟ್ಸ್ ೧೭೬೭ರಲ್ಲಿ ತಮ್ಮ ವೃತ್ತಿ ಬಿಟ್ಟ ನೇಕಾರರ ಬಗ್ಗೆ ಬರೆದಿದ್ದಾನೆ. ಹೀಗೆ ಕಂಪನಿಯ ಏಕಾಧಿಕಾರ ನಿಯಂತ್ರಣ ಹಾಗೂ ಅದರ ನೌಕರರ ದುರ್ನಡತೆಗಳಿಂದಾಗಿ ಬಂಗಾಳದ ಎರಡು ಅಭಿವೃದ್ಧಿಗೊಂಡ ಕೈಗಾರಿಕೆಗಳಾದ ಹತ್ತು ಮತ್ತು ರೇಷ್ಮೆ ಕೈಗಾರಿಕೆಗಳ ಕ್ಷೀಣಿಸುವುಕೆ ೧೮ನೇ ಶತಮಾನದ ಮುಕ್ತಾಯದ ವೇಳೆಗೆ ಪ್ರಾರಂಭವಾಯಿತು. ಕ್ಷೀಣಿಸುವಿಕೆಗೆ ಪ್ರಮುಖ ಕಾರಣಗಳೆಂದರೆ; ಬ್ರಿಟಿಷ್ ಪಾರ್ಲಿಮೆಂಟಿನ ನೀತಿ, ಯಂತ್ರೋತ್ಪಾದಿತ ಅಗ್ಗದ ಸರಕುಗಳ ಪೈಪೋಟಿ. ಭಾರತದ ಕುಶಲ ಕಲೆ ಹಾಗೂ ಕೈಗಾರಿಕೆಯನ್ನು ರಕ್ಷಿಸುವುದರ ಬಗ್ಗೆ ಭಾರತ ಸರ್ಕಾರ ಉದಾಸೀನ ಮನೋಭಾವ.

ಈಸ್ಟ್‌ ಇಂಡಿಯಾ ಕಂಪನಿಯು ರಫ್ತು ಮಾಡಿದ ಹತ್ತಿ ಹಾಗೂ ರೇಷ್ಮೆ ಬಟ್ಟೆಗಳು ಇಂಗ್ಲೆಂಡಿನಲ್ಲಿ ಜನಪ್ರಿಯವಾದದನ್ನು ಕಂಡು ಬ್ರಿಟಿಷ್ ಕೈಗಾರಿಕೆಗಾರರು ಅಸೂಯೆ ಮತ್ತು ನಷ್ಟದಿಂದ ಸರ್ಕಾರದ ಮೇಲೆ ಒತ್ತಡ ತಂದು ಶಾಸನದ ಮೂಲಕ ತಡೆದರು. ೧೭೦೦ ಮತ್ತು ೧೭೨೦ರಲ್ಲಿ ಪಾರ್ಲಿಮೆಂಟ್ ಹೊರಡಿಸಿದ ಶಾಸನಗಳು “ಭಾರತದಿಂದ ಆಮದು ಮಾಡಿಕೊಂಡ ಹತ್ತಿ ಮತ್ತು ರೇಷ್ಮೆ ಬಟ್ಟೆಗಳನ್ನು ಇಂಗ್ಲೆಂಡಿನಲ್ಲಿ ಧರಿಸಬಾರದೆಂದು ಮತ್ತು ಉಪಯೋಗಿಸಬಾರದೆಂದು” ನಿಷೇಧಿಸಿತು. ಆದ್ದರಿಂದ ಇಂಗ್ಲೆಂಡಿಗೆ ಆಮದು ಮಾಡಿಕೊಳ್ಳಲಾದ ಎಲ್ಲ ಸರಕುಗಳನ್ನು ಯುರೋಪಿನ ಇತರ ದೇಶಗಳಿಗೆ ರಫ್ತು ಮಾಡಿ ಕಂಪನಿಯು ಲಾಭ ಮಾಡಿಕೊಂಡಿತು. ಆದರೆ ಇಂಗ್ಲೆಂಡ್ ಮತ್ತು ಅಮೇರಿಕಾದ ನಡುವಣ ಸ್ವಾತಂತ್ರ್ಯ ಯದ್ಧ, ನಂತರ ನೆಪೋಲಿಯನ್ ಜೊತೆಗಿನ ಯುದ್ಧ ಮತ್ತಿತರ ರಾಷ್ಟ್ರಗಳ ನಡುವೆ ವೈರತ್ವದಿಂದಾಗಿ ಭಾರತದ ಪುನರ್ ರಫ್ತು ನಿಂತಿತು. ಇಂಗ್ಲೆಂಡ್‌ನ ಪಾರ್ಲಿಮೆಂಟಿನ ಕೃತಕ ನಿರ್ಬಂಧ ಶಾಸನದಿಂದ ಇಂಗ್ಲೆಂಡಿನಲ್ಲಿ ಹತ್ತಿ ಕೈಗಾರಿಕೆ ಪ್ರೋತ್ಸಾಹ ದೊರೆಯಿತು. ನಿರಂತರ ಸಂಶೋಧನೆಗಳ ಮೂಲಕ ಇಂಗ್ಲೀಷ್ ಹತ್ತಿ ಉತ್ಪಾದಕರು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಿ ಕೊಂಡರು. ಹೀಗಾಗಿ ೧೭೮೮ ರ ನಂತರ ಭಾರತದಿಂದ ಕಚ್ಚಾ ಹತ್ತಿಯನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಂಡು, ಮ್ಯಾಂಚೆಸ್ಟ್‌ರ್ನ ಅಗ್ಗದ ಬೆಲೆಯ ಹತ್ತಿ ಬಟ್ಟೆಗಳನ್ನು ಭಾರತದ ಮಾರುಕಟ್ಟೆಗೆ ಕಳುಹಿಸಿತು. ೧೭೮೬-೯೦ ರ ನಡುವೆ ಇಂಗ್ಲೆಂಡಿನಿಂದ ರಫ್ತಾದ ಹತ್ತಿ ಬಟ್ಟೆಗಳ ವಾರ್ಷಿಕ ಮೌಲ್ಯ ಸುಮಾರು ೧೨,೦೦೦,೦೦ ಪೌಂಡ್‌ಗಳಾಗಿತ್ತು. ಮತ್ತೆ ೧೮೦೯ ರ ವೇಳೆಗೆ ೧೮,೪೦೦,೦೦೦ ಪೌಂಡ್‌ ಮೌಲ್ಯಕ್ಕೇರಿತು.

ಭಾರತದ ಕೈಗಾರಿಕೆಯ ಅವನತಿಗೆ ಬ್ರಿಟಿಷ್ ಸರ್ಕಾರದ ನೀತಿಯೇ ಕಾರಣವಾಗಿದೆ. ಈ ಅಭಿಪ್ರಾಯವನ್ನು ಅನುಮೋದಿಸುವ ರಷ್‌ಬ್ರೂಕ್ ವಿಲಿಯಮ್ಸ್‌ ಈ ರೀತಿ ಹೇಳಿದ್ದಾರೆ. “ಶಕ್ತಿ ಚಾಲಿತ ಬ್ರಿಟಿಷ್ ಕೈಗಾರಿಕೆ ಹೊಂದಿದ್ದಂತ ಹೊಸದಾದ ಹಾಗೂ ಅಪಾರವಾಗಿದ್ದ ಈ ಅನುಕೂಲಗಳಿಗೆ ಪ್ರತಿಯಾಗಿ ಭಾರತದ ಹತ್ತಿ ಸರಕು ತಯಾರಿಕೆಗಾರರನ್ನು ರಕ್ಷಿಸಲು ಯಾವ ಕ್ರಮಗಳನ್ನು ಬ್ರಿಟಿಷ್ ಅಧಿಕಾರವರ್ಗ ಕೈಗೊಳ್ಳಲಿಲ್ಲ” ಎಂದಿದ್ದಾರೆ. ಭಾರತದಿಂದ ಸೂರೆ ಮಾಡಿದ್ದ ಅಪಾರ ಐಶ್ವರ್ಯದ ಪರಿಣಾಮವೇ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ ಎಂದೂ, “ಕ್ಷಿಣಿಸುತ್ತಿದ್ದ ಭಾರತದ ಕೈಗಾರಿಕೆಗಳನ್ನು ರಕ್ಷಿಸಲು ಬ್ರಿಟಿಷ್ ಅಧಿಕಾರ ವರ್ಗ ಯಾವ ಕ್ರಮಗಳನ್ನು ಕೈಗೊಳ್ಳದಿದ್ದದು ಮಾತ್ರವಲ್ಲದೆ ಅವುಗಳ ಪ್ರಗತಿಪಥದಲ್ಲಿ ಅಡ್ಡಿ ತಡೆಗಳನ್ನೊಡ್ಡಿತು” ಎಂದು ಅನೇಕ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟಿಷರು ೧೭೦೦ ರಷ್ಟು ಮೊದಲೇ ಇಂಗ್ಲೆಂಡ್ ಕೈಗಾರಿಕೆಯನ್ನು ಭಾರತದ ಸ್ಪರ್ಧೆಯಿಂದ ಶಾಸನದ ಮೂಲಕ ರಕ್ಷಿಸುವಷ್ಟು, ಆಧುನಿಕ ಅರ್ಥವ್ಯವಸ್ಥೆಯ ಅರಿವು ಬ್ರಿಟಿಷ್ ರಾಜನೀತಿಜ್ಞರಿಗೆ ಇದ್ದಿತು ಎಂಬುದು ಗಮನಾರ್ಹ ವಿಷಯ. ಭಾರತದ ಕೈಗಾರಿಕೆಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳದಿದ್ದುದು ರಾಜನೀತಿ ಅಭಾವದಿಂದಾಗಿರದೇ ಬ್ರಿಟಿಷ್ ಕೈಗಾರಿಕೆಯನ್ನು ಮೇಲೆತ್ತಬೇಕೆಂಬ ಉದ್ದೇಶವೇ ಇದ್ದಿತು ಎಂದು ತಿಳಿಯಬಹುದು.

ಕಾರ್ಲ್‌‌ಮಾರ್ಕ್ಸ್‌ರವರು ಈ ರೀತಿ ಹೇಳಿದ್ದಾರೆ, “ಬ್ರಿಟಿಷ್ ಆಕ್ರಮಣಕಾರರು ಭಾರತದ ಕೈಮಗ್ಗಗಳನ್ನು ಮತ್ತು ನೂಲುವ ತಕಲಿಯನ್ನು ಮುರಿದರು ಮತ್ತು ಹತ್ತಿ ವಸ್ತ್ರದ ಮಾತೃದೇಶವನ್ನು ಜಲಪ್ರವಾಹದಲ್ಲಿ ಮುಳುಗಿಸಿದರು”. ಭಾರತದಲ್ಲಿನ ಸ್ಥಿತಿ ಯುರೋಪಿನಂತಿರಲಿಲ್ಲ. ಯೂರೋಪಿನಲ್ಲಿ ಕೈಗಾರಿಕೀಕರಣಗೊಂಡು ದೊಡ್ಡ ಕಾರ್ಖಾನೆಗಳು ಪ್ರಾರಂಭವಾದಾಗ ಚಿಕ್ಕ ಕುಶಲಕರ್ಮಿಗಳು ಕಾರ್ಖಾನೆಯಲ್ಲಿ ದುಡಿಯಲು ಪ್ರಾರಂಭಿಸಿದರು. ಆದರೆ ಭಾರತದಲ್ಲಿ ಅವಸಾನಗೊಂಡ ದೇಶೀಯ ಕೈಗಾರಿಕೆಗಳ ಕಾರ್ಮಿಕರಿಗೆ ಬದಲಾದ ಮಾರ್ಗ ಇರಲಿಲ್ಲವಾಗಿ ನಿರುದ್ಯೋಗಿಗಳಾದರು. ಈ ನಿರುದ್ಯೋಗಿಗಳು ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿದರು. ಮೊದಲು ಕೃಷಿನಿರತ ರೈತರೂ ಸಹ ನೂಲು, ನೆಯ್ಯುವ ಕೈಗಾರಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯ ಪಡೆಯುತ್ತಿದ್ದರು. ಆದರೆ ಬದಲಾದ ಪರಿಸ್ಥಿತಿಯು ಭೂಮಿಯ ಮೇಲೆ ಹೆಚ್ಚಿನ ಜನರ ಅವಲಂಬನೆಗೆ ಕಾರಣವಾಯಿತು. ಭೂಮಿ ಇಲ್ಲದವರು ಗೇಣಿಕಾರರಾಗಿ, ಕೂಲಿಗಳಾಗಿ ಸೇರುವಂತಾಯಿತು. ಬ್ರಿಟಿಷರು ಇಡೀ ಭಾರತವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಅನೇಕ ರಾಜರು ಮತ್ತು ಅವರ ಆಸ್ಥಾನಗಳು ಕಣ್ಮರೆಯಾದವು. ಈ ರಾಜರೇ ಇಂತಹ ಕುಶಲಕೈಗಾರಿಕೆಗಳ ವಸ್ತುಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದವರು ಮತ್ತು ಪ್ರೋತ್ಸಾಹಿಸುತ್ತಿದ್ದವರು. ಈ ವರ್ಗದಿಂದ ಕರಕುಶಲ ಕೈಗಾರಿಕೆಗೆ ಬೇಡಿಕೆ ನಿಂತು ಅವಸಾನಕ್ಕೆ ಕಾರಣವಾಯಿತು. ಹಾಗೆಯೇ ರಾಜರ, ನವಾಬರ ಸ್ಥಾನಗಳಿಗೆ ಬಂದ ಬ್ರಿಟಿಷ್ ಅಧಿಕಾರಿ ವರ್ಗವು ತಮ್ಮದೇಶದ ವಸ್ತುಗಳಿಗೆ ಅವಲಂಭಿಸಿದ್ದರು ಮತ್ತು ತಮ್ಮ ಮನೆಗಳಲ್ಲಿ ಅವುಗಳನ್ನೇ ಉಪಯೋಗಿಸುತ್ತಿದ್ದರಿಂದ ಮೇಲ್ವರ್ಗದ ಬೇಡಿಕೆ ಭರತದ ಕೈಗಾರಿಕಾ ವಸ್ತುಗಳಿಗಿಲ್ಲವಾಯಿತು. ಬ್ರಿಟಿಷರು ತಮ್ಮ ಅವಶ್ಯಕ ಯುದ್ದೋಪಕರಣಗಳನ್ನು ಬ್ರಿಟನ್ ಸರ್ಕಾರಿ ಕೋಠಿಗಳಿಂದ ತರಿಸಲಾರಂಭಿಸಿದ್ದರಿಂದ ದೇಶೀಯ ಯುದ್ಧೋಪಕರಣ ಕೈಗಾರಿಕೆಗಳು ಕ್ಷೀಣಿಸಿದವು.

ಭಾರತದ ಕೈಗಾರಿಕೆಗಳು ಕ್ಷೀಣಿಸಿದ್ದರಿಂದ ಅವುಗಳ ಅಭಿವೃದ್ಧಿಯ ಮೇಲೆ ನಿಂತಿದ್ದ ಪಟ್ಟಣ ಮತ್ತು ನಗರಗಳ ಅವನತಿ ಕಾರಣವಾಯಿತು. ಢಾಕಾ, ಸೂರತ್, ಮುರ್ಷಿದಾಬಾದ್ ಮತ್ತಿತರ ಪಟ್ಟಣಗಳು ಜನಸಂದಣಿಯಿಂದ ಕೂಡಿದ್ದು, ಕೈಗಾರಿಕೆಗಳ ಅಭಿವೃದ್ಧಿ ಕೇಂದ್ರಗಳಾಗಿದ್ದವು. ಈ ಅವನತಿ ಕಾರಣದಿಂದ ಜನರಹಿತ ಮತ್ತು ಅನುಪಯುಕ್ತ ಪಟ್ಟಣಗಳಾದವು. ೧೯ನೇ ಶತಮಾನದ ಕೊನೆಯ ವೇಳೆಗೆ ದೇಶದ ಒಟ್ಟು ಜನಸಂಖ್ಯೆಯ ಶೇ. ೧೦ ಭಾಗ ಮಾತ್ರ ನಗರ ವಾಸಿಗಳಾಗಿದ್ದರು. ಗವರ್ನರ್ ಜನರಲ್ ವಿಲಿಯಂ ಬೆಂಟಿಕ್‌ನು ೧೮೩೪-೩೫ರಲ್ಲಿ ಭಾರತದ ಉದ್ಯಮಿಗಳ ಸ್ಥಿತಿಯನ್ನು ಗಮನಿಸಿ “ಹತ್ತಿ ನೇಯ್ಗೆಗಾರರ ಮೂಳೆಗಳು ಭಾರತದ ಬಯಲು ಪ್ರದೇಶದಲ್ಲಿ ತೊಳೆಯಲ್ಪಟ್ಟಿದ್ದವು” ಎಂದಿದ್ದಾನೆ ಅಂದರೆ ಕೈಗಾರಿಕೆಯನ್ನು ಅವಲಂಬಿಸಿದ್ದ ಉದ್ಯಮಿಗಳು ವ್ಯವಸಾಯವನ್ನು ಆಶ್ರಯಿಸಿದರು ಎಂದರ್ಥ. ೧೯೦೧-೧೯೪೧ ರವರೆಗಿನ ಜನಗಣತಿಯ ಪ್ರಕಾರ ಕೃಷಿಯನ್ನು ಅವಲಂಬಿಸಿದ್ದ ಜನರ ಪ್ರಮಾಣವು ಈ ಅವಧಿಯಲ್ಲಿ ಶೇ. ೬೩.೭ ರಿಂದ ಶೇ. ೭೦ ಕ್ಕೇ ಏರಿತು. ಹೀಗೆ ಸುಮಾರು ೨೦೦೦ ವರ್ಷ ಗಳಿಂದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೆತ್ರಗಳಲ್ಲಿ ಆಕ್ರಮಿಸಿದ್ದ ಸರ್ವಶ್ರೇಷ್ಠ ಸ್ಥಾನವನ್ನು ಭಾರತ ಕಳೆದುಕೊಂಡಿತು ಮತ್ತು ಕ್ರಮೇಣ ಕಚ್ಚಾ ವಸ್ತುಗಳ ಮಾರಾಟ ಕೇಂದ್ರವಾಗಿ ಪರಿವರ್ತನೆಗೊಂಡಿತು. ಇಷ್ಟೆಲ್ಲ ಅವನತಿಯಾಗುತ್ತಿದ್ದರೂ ತನ್ನ ಅಪಾರ ಜನ ಕೋಟಿಯ ಕಲ್ಯಾಣದ ಹೊಣೆ ಹೊತ್ತಿದ್ದ ಬ್ರಿಟಿಷ್ ಭಾರತ ಸರ್ಕಾರ ವಿಪತ್ತನ್ನು ತಪ್ಪಿಸಲು ಯಾವುದೇ ಅಗತ್ಯಕ್ರಮಗಳನ್ನು ಕೈಗೊಳ್ಳಲಿಲ್ಲ.

ಕೈಗಾರಿಕೆ ಮತ್ತು ಪ್ರಭುತ್ವ

ಬ್ರಿಟಿಷ್ ಭಾರತ ಸರ್ಕಾರವು ನೇಮಿಸಿದ್ದ ೧೮೮೦ ಮತ್ತು ೧೯೦೧ ರ ಕ್ಷಾಮ ಆಯೋಗಗಳು ಕ್ಷಾಮ ಸಮಸ್ಯೆಯನ್ನು ಎದುರಿಸಲು ಭಾರತವನ್ನು ಕೈಗಾರಿಕೀಕರಣಕ್ಕೆ ಒಳಪಡಿಸಬೇಕೆಂದು ಸಲಹೆ ನೀಡಿದ್ದವು. ಬ್ರಿಟಿಷ್ ಭಾರತೀಯ ಸರ್ಕಾರವು ಭಾರತದಲ್ಲಿ ಕೈಗಾರಿಕಾ ಸ್ಥಾಪನೆಯ ಬಗ್ಗೆ ಒಂದು ರೀತಿಯ ಉದಾಸೀನ ಮನೋಭಾವ ಬೆಳೆಸಿಕೊಂಡಿತ್ತು. ಹೀಗೆ ೧೯ನೇ ಶತಮಾನದ ಮಧ್ಯ ಭಾಗದವರೆಗೆ ದೊಡ್ಡ ಪ್ರಮಾಣದ ಯಾಂತ್ರೀಕೃತ ಕೈಗಾರಿಕೆಗಳು ಭಾರತದಲ್ಲಿ ಸ್ಥಾಪನೆಯಾಗಿರಲಿಲ್ಲ. ಯಾಂತ್ರೀಕೃತ ಯುಗವು ಭಾರತದಲ್ಲಿ ಹತ್ತಿ ಕೈಗಾರಿಕೆ, ಸೆಣಬು ಕೈಗಾರಿಕೆ, ಕಲ್ಲಿದ್ದಲು ಗಣಿಗಾರಿಕೆ ಮುಂತಾದವುಗಳಲ್ಲಿ ೧೮೫೦ ರಿಂದ ಪ್ರಾರಂಭವಾಯಿತು. ಮೊದಲ ಸ್ಥಾಪಿತವಾಯಿತು. ಹಾಗೆಯೇ ೧೮೫೫ರಲ್ಲಿ ಮೊದಲ ಸೆಣಬು ಕೈಗಾರಿಕೆಯ ರಿಶ್ರಾ (ಬಂಗಾಳ)ದಲ್ಲಿ ಪ್ರಾರಂಭವಾಯಿತು. ಈ ಕೈಗಾರಿಕೆಗಳು ನಿಧಾನವಾಗಿ ಮತ್ತು ನಿರಂತರವಾಗಿ ಬೆಳೆಯುತ್ತಾ ಬಂದವು. ೧೮೭೯ರಲ್ಲಿ ೫೬ ಹತ್ತಿ ಗಿರಣಿಗಳು ಭಾರತದಲ್ಲಿದ್ದು ೪೩,೦೦೦ ಕಾರ್ಮಿಕರನ್ನೊಳಗೊಂಡಿದ್ದುವು. ೧೯೦೫ ರಷ್ಟರಲ್ಲಿ ಭಾರತದಲ್ಲಿ ೨೦೬ ಹತ್ತಿಗಿರಣಿಗಳು ೧,೯೬,೦೦೦ ಕಾರ್ಮಿಕರನ್ನು ನೇಮಿಸಿಕೊಂಡಿದ್ದವು. ೧೯೦೧ರಲ್ಲಿ ೩೬ ಸೆಣಬಿನ ಕೈಗಾರಿಕೆಗಳಿದ್ದು ೧,೧೫,೦೦೦ ಕರ್ಮಿಕರನ್ನೊಂದಿದ್ದವು. ಕಲ್ಲಿದ್ದಲು ಗಣಿಗಾರಿಕೆಯು ಸುಮಾರು ಒಂದು ಲಕ್ಷ ಕಾರ್ಮಿಕರನೊಂದಿದ್ದಿತು.

ಲಾರ್ಡ್‌ ಕರ್ಜನನ್ನು ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ೧೯೦೫ರಲ್ಲಿ ಪ್ರತ್ಯೇಕ “ಇಂಪಿರಿಯಲ್ ಡಿಪಾರ್ಟ್‌‌ಮೆಂಟ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ” ಅನ್ನು ಸ್ಥಾಪಿಸಿದನು. ರಾಷ್ಟ್ರೀಯ ಚಳುವಳಿಯ ಅಂಗವಾಗಿ ನಡೆದ ಸ್ವದೇಶಿ ಚಳವಳಿ ಭಾರತದ ಕೈಗಾರಿಕಾ ಪುನರುಜ್ಜೀವನಕ್ಕೆ ಅದರಲ್ಲೂ ಹತ್ತಿ ಕೈಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಅಭಿವೃದ್ಧಿಗೊಂಡಿತು. ೧೯೩೦ರ ಅವಧಿಯಲ್ಲಿ ನೂಲು ಕೇಂದ್ರಗಳು, ಅಕ್ಕಿ ಗಿರಣಿ, ಮರದ ಮಿಲ್ಲುಗಳು. ಚರ್ಮ ಹದ ಮಾಡುವ ಕೈಗಾರಿಕೆ, ಉಣ್ಣೆ ಕೈಗಾರಿಕೆಗಳು, ಸಕ್ಕರೆ ಕಾರ್ಖಾನೆ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು ಉಪ್ಪು ಉತ್ಪಾದನೆ, ಸಿಮೆಂಟ್ ಕೈಗಾರಿಕೆ, ಕಾಗದ, ಬೆಂಕಿಪಟ್ಟಣ, ಗಾಜು ಮುಂತಾದ ತಯಾರಿಕಾ ಕೈಗಾರಿಕೆಗಳು ಸ್ಥಾಪಿತವಾದವು. ಲಾರ್ಡ್‌ ಮಾರ್ಲೆಯು ಕೈಗಾರಿಕೆಗಳ ಬಗ್ಗೆ ಪ್ರಾಂತೀಯ ವಿಭಾಗಗಳನ್ನು ತೆರೆಯುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿ ಭಾರತ ಸರ್ಕಾರಕ್ಕೆ ಕಳುಹಿಸಿದ ಸಲಹೆಯ ಪತ್ರದಿಂದ ಮತ್ತೊಮ್ಮೆ ಸರ್ಕಾರವು ತನ್ನ ಹಿಂದಿನ ನಿರ್ಬಂಧ ರಹಿತ ನೀತಿಗೆ ಹಿಂದಿರುಗಿತು. ಇದು ಕೈಗಾರಿಕೆಗಳ ಬೆಳವಣಿಗೆಗೆ ತಡೆಯಾಯಿತು.

೧೯೧೪-೧೮ ರ ಮೊದಲ ಮಹಾಯುದ್ಧದಿಂದ ಭಾರತವು ಕೈಗಾರಿಕೆಯಲ್ಲಿ ಹಿಂದುಳಿದಿರುವುದನ್ನು ಎತ್ತಿ ತೋರಿಸಿತು ಮತ್ತು ಬ್ರಿಟಿಷರು ಭಾರತದ ಕೈಗಾರಿಕೀಕರಣದ ಪ್ರಾಮುಖ್ಯವನ್ನು ಆರ್ಥಿಕ ದೃಷ್ಟಿಕೋನದಿಂದ ಮಾತ್ರವೇ ಅಲ್ಲದೆ ಸೈನಿಕ ದೃಷ್ಟಿಕೋನದಿಂದ ನೋಡಿ ೧೯೧೭ರ ಫೆಬ್ರವರಿಯಲ್ಲಿ ಯುದ್ಧ ಸಾಮಾಗ್ರಿಗಳ ಒಂದು ಮಂಡಳಿಯನ್ನು ಪ್ರಾರಂಭಿಸಿ ಅದರ ಮೂಲಕ ಕೈಗಾರಿಕೆಗಳಿಗೆ ಬೆಂಬಲ ನಿಡಿತು. ಭಾರತದ ಜನತೆಯ ಒತ್ತಾಯಕ್ಕಾಗಿ ಸರ್ಕಾರವು ೧೯೧೬ರಲ್ಲಿ ಕೈಗಾರಿಕಾ ಆಯೋಗವನ್ನು ನೇಮಿಸಿತು. ಕೈಗಾರಿಕಾ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಶೀಲಿಸುವುದು, ಕೈಗಾರಿಕೆಗಳಿಗೆ ಭಾರತೀಯ ಬಂಡವಾಳಕ್ಕೆ ಹೊಸ ಮಾರ್ಗಗಳನ್ನು ಕಂಡು ಹಿಡಿಯುವುದು ಮತ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಕ್ರಮಗಳನ್ನು ಸೂಚಿಸುವುದು ಇವು ಈ ಆಯೋಗದ ಧ್ಯೇಯಗಳಾಗಿದ್ದವು. ಈ ಆಯೋಗವು ೧೯೧೮ರಲ್ಲಿ ತನ್ನ ವರದಿಯಲ್ಲಿ ಕೈಗಾರಿಕೆಗಳ ಇಂಪೀರಿಯಲ್ ಮತ್ತು ಪ್ರಾಂತೀಯ ವಿಭಾಗಗಳನ್ನು ಸ್ಥಾಪಿಸುವುದು, ಕೈಗಾರಿಕಾ ಸಹಕಾರಕ್ಕೆ ಪ್ರೋತ್ಸಾಹ ಮುಂತಾದ ಸಲಹೆಗಳನ್ನು ನೀಡಿತು. ಸರ್ಕಾರವು ಅವುಗಳನ್ನು ಅನುಷ್ಠಾನಕ್ಕೆ ತಂದಿತು.

ಭಾರತದಲ್ಲಿ ಸ್ಥಾಪನೆಗೊಂಡ ಆಧುನಿಕ ಕೈಗಾರಿಕೆಗಳು ಬ್ರಿಟಿಷರ ಅಥವಾ ಬ್ರಿಟಿಷರ ಬಂಡವಾಳ ಒಡೆತನದಲ್ಲಿದ್ದವು. ಭಾರತದ ಕೈಗಾರಿಕೆಗಳ ಲಾಭವು ಬ್ರಿಟಿಷ್ ಬಂಡವಾಳಗಾರರನ್ನು ಆಕರ್ಷಿಸಿತು. ಇಲ್ಲಿ ಕಾರ್ಮಿಕರು ಕಡಿಮೆ ಕೂಲಿಗೆ ದೊರೆಯುತ್ತಿದ್ದರು. ಕಚ್ಚಾ ಪದಾರ್ಥಗಳು ಸುಲಭವಾಗಿ ಮತ್ತು ಇತರ ಪಕ್ಕದ ದೇಶಗಳಲ್ಲಿ ಬೇಡಿಕೆ ಇದ್ದಿತು. ಭಾರತದ ವಸ್ತುಗಳಾದ ಟೀ, ಸೆಣಬು ಮತ್ತು ಮ್ಯಾಂಗನೀಸ್‌ಗಳಿಗೆ ಪ್ರಪಂಚದಾದ್ಯಂತ ಬೇಡಿಕೆಯಿತ್ತು. ಆದರೆ ಬ್ರಿಟಿಷ್ ಬಂಡವಾಳಗಾರರು ತಮ್ಮ ದೇಶದಲ್ಲಿ ಕಡಿಮೆ ಲಾಭವನ್ನು ಪಡೆಯುತ್ತಿದ್ದರು. ಭಾರತದ ವಸಾಹತು ಸರ್ಕಾರ ಮತ್ತು ಅಧಿಕಾರಿಗಳು ಬಂಡವಾಳಗಾರರಿಗೆ ಎಲ್ಲ ವಿಧವಾದ ಸಹಾಯವನ್ನು ಒದಗಿಸಿದ್ದರಿಂದ ಬ್ರಿಟಿಷರು ಹೆಚ್ಚು ಹೆಚ್ಚಾಗಿ ಬಂಡವಾಳ ತೊಡಗಿಸಿದರು. ಹೀಗೆ ವಿದೇಶಿ ಬಂಡವಾಳವು ಭಾರತದ ಅನೇಕ ಕೈಗಾರಿಕೆಗಳಿಗೆ ದೊರೆಯಿತು. ಕೇವಲ ಹತ್ತಿ ಕೈಗಾರಿಕೆಯಲ್ಲಿ ಮಾತ್ರ ಮೊದಲಿನಿಂದಲೂ ಭಾರತೀಯರು ಹೆಚ್ಚು ಪಾಲು ಬಂಡವಾಳ ತೊಡಗಿಸಿದ್ದರು. ೧೯೩೦ರ ನಂತರ ಸಕ್ಕರೆ ಉದ್ಯಮಕ್ಕೆ ಭಾರತೀಯರು ಬೆಂಬಲ ನಿಡಿದರು. ಬ್ರಿಟಿಷರು ಬಂಡವಾಳ ತೊಡಗಿಸುವಿಕೆಯಲ್ಲಿ ಏಕಸ್ವಾಮ್ಯವನ್ನು ವ್ಯವಸ್ಥಾಪನಾ ಸಂಸ್ಥೆ ಮತ್ತು ಬ್ರಿಟಿಷ್ ಬ್ಯಾಂಕ್‌ಗಳ ಮೂಲಕ ಹೊಂದಿದ್ದರು. ಅನೇಕ ವೇಳೆ ಕೈಗಾರಿಕೆಗಳು ವಿದೇಶಿ ಒಡೆತನದಲ್ಲಿದ್ದವು ಮತ್ತು ಸರ್ಕಾರವು ಟೀ ಪ್ಲಾಂಟೇಶನ್‌ಗಳಿಗೆ ಅವಶ್ಯಕವಾದ ಭೂಮಿಯನ್ನು ಬಾಡಿಗೆಯಿಲ್ಲದೆ ನೀಡಿತು. ಇನ್ನಿತರ ಸೌಲಭ್ಯಗಳನ್ನು ಒದಗಿಸಿತು. ಹಾಗೆಯೇ ದಕ್ಷಿಣ ಭಾರತದಲ್ಲಿ ಕಾಫಿ ಬೆಳೆಯು ವಿದೇಶಿಯರ ಒಡೆತನದಲ್ಲಿ ಅಭಿವೃದ್ಧಿಗೊಂಡಿತು. ವಿದೇಶಿ ಬಂಡವಾಳ ಹೊಂದಿದ ಕೈಗಾರಿಕೆಗಳಾಗಲಿ ಅಥವಾ ಪ್ಲಾಂಟೇಶನ್‌ಗಳಿಂದಾಗಲಿ ಭಾರತಕ್ಕೆ ಯಾವ ವಿಧವಾದ ಲಾಭವು ಆಗಲಿಲ್ಲ. ಇಂತಹವುಗಳಿಂದ ಬಂದ ಲಾಭವು ದೇಶದಿಂದ ಹೊರಗೆ ಹೋಯಿತು. ಬ್ರಿಟೀಷರು ಯಂತ್ರೋಪಕರಣಗಳನ್ನು ವಿದೇಶಗಳಿಂದ ಕೊಂಡರು, ತಾಂತ್ರಿಕ ಸಿಬ್ಬಂದಿಯನ್ನು ಅಲ್ಲಿಂದಲೇ ಕರೆತರಲಾಯಿತು. ಕಾರ್ಖಾನೆಗಳಲ್ಲಿ ಸಿದ್ಧಗೊಂಡ ವಸ್ತುಗಳನ್ನು ವಿದೇಶಿ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡಿದಾಗ ಬಂದ ವಿದೇಶಿ ವಿನಿಮಯ ಹಣವನ್ನು ಬ್ರಿಟನ್ ಉಪಯೋಗಿಸಿಕೊಂಡಿತು. ಈ ಕಾರ್ಖಾನೆಗಳ ಬೆಳವಣಿಗೆಯಿಂದ ಆದ ಒಂದೇ ಒಂದು ಉಪಯೋಗವೆಂದರೆ ವೃತ್ತಿ ನಿಪುಣರಲ್ಲದ ಭಾರತೀಯ ಕಾರ್ಮಿಕರಿಗೆ ಉದ್ಯೋಗ ದೊರೆತುದುದು. ಆದರೆ ಆ ಕಾರ್ಮಿಕರಿಗೆ ಕಡಿಮೆ ವೇತನ, ಹೆಚ್ಚಿನ ದುಡಿಮೆ ಪರಿಸ್ಥಿತಿಯು ಗುಲಾಮರಿಗೆ ಸಮವಾಗಿತ್ತು. ಎರಡನೇ ಮಹಾಯುದ್ಧದ ಅವಧಿಯಲ್ಲಿ ಸರ್ಕಾರವು ಯುದ್ಧ ವಸ್ತುಗಳ ಬೇಡಿಕೆ ಸ್ವದೇಶದಲ್ಲಿ ಮತ್ತು ಕಾಮನ್‌ಲ್ತ್ ದೇಶಗಳಲ್ಲಿ ಹೆಚ್ಚಿದ್ದರಿಂದ ಭಾರತೀಯ ಕೈಗಾರಿಕೆಗಳಿಗೆ ಸಹಾಯ ನೀಡಿದರು. ವಿಶಾಖಪಟ್ಟಣದಲ್ಲಿ ೧೯೪೦ರಲ್ಲಿ ನೌಕಾ ನಿರ್ಮಾಣ ಕಟ್ಟೆಯನ್ನು ಸ್ಥಾಪಿಸಿ ರಿಪೇರಿ ಮಾಡಲಾಯಿತು. ಒಟ್ಟಾರೆ ಕೈಗಾರಿಕಾ ಬೆಳವಣಿಗೆಯು ನಿಧಾನವಾಗಿ ಮತ್ತು ಕಷ್ಟಕರವಾಗಿ ಮುಂದುವರೆಯಿತು. ೧೯೪೬ ರ ಅವಧಿಯಲ್ಲಿ ಹತ್ತಿ ಮತ್ತು ಸೆಣಬಿನ ಕೈಗಾರಿಕೆಗಳಲ್ಲಿ ಮಾತ್ರವೇ ಶೇ. ೪೦ ರಷ್ಟು ಕಾರ್ಮಿಕರಿದ್ದರು. ಆಧುನಿಕ ಕೈಗಾರಿಕೆಗಳು ಸರ್ಕಾರದ ಸಹಾಯವಿಲ್ಲದೆ ಬೆಳೆದರೂ ಬ್ರಿಟಿಷ್ ಉದ್ಯಮಿಗಳು ಹತ್ತಿ ಕೈಗಾರಿಕೆ ಮತ್ತಿತರ ಕೈಗಾರಿಕೆಗಳನ್ನು ವೈರ ಭಾವನೆಯಿಂದ ಅವುಗಳ ಬೆಳವಣಿಗೆಯನ್ನು ತಡೆಯಲು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು. ಆದ್ದರಿಂದ ಬ್ರಿಟಿಷ್ ನೀತಿಯು ಕೃತಕವಾಗಿ ಕೈಗಾರಿಕೆಗಳ ಬೆಳವಣಿಗೆಯನ್ನು ತಡೆಹಿಡಿಯಿತು. ಭಾರತೀಯ ಕೈಗಾರಿಕೆಗಳು ಶೈಶವಾಸ್ಥೆಯಲ್ಲಿರುವಾಗ ಅವುಗಳಿಗೆ ರಕ್ಷಣೆ ಅವಶ್ಯಕವಾಗಿತ್ತು. ಆದರೆ ಫ್ರಾನ್ಸ್, ಜರ್ಮನಿ ದೇಶಗಳ ಕೈಗಾರಿಕೆಗಳೊಂದಿಗೆ ಸ್ಪರ್ಧಿಸಲು ವಿಫಲ ಒತ್ತಡದಿಂದ ಭಾರತೀಯ ಕೈಗಾರಿಕೆಗಳಿಗೆ ರಕ್ಷಣೆ ನೋಡಲು ರಕ್ಷಣಾತ್ಮಕ ತೆರಿಗೆ ನೀತಿಯನ್ನು ಅನುಸರಿಸಿತು.

ಕೈಗಾರಿಕೆಗಳು ವಿದೇಶಿ ಬ್ಯಾಂಕಿಂಗ್ ಸಂಸ್ಥೆಗಳ ಒಡೆತನದಲ್ಲಿರುತ್ತಿದ್ದವು. ಭಾರತೀಯರು ಬಂಡವಾಳವನ್ನು ಬ್ರಿಟಿಷ್ ಬ್ಯಾಂಕ್‌ಗಳಿಂದ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಅಕಸ್ಮಾತ್ ಸಾಲ ಪಡೆದರೂ ಅಧಿಕ ಬಡ್ಡಿ ಕೊಡಬೇಕಿತ್ತು. ಅದಕ್ಕೆ ವ್ಯತಿರಿಕ್ತವಾಗಿ ವಿದೇಶೀಯರಿಗೆ ಸಾಲವು ಸುಲಭವಾಗಿ ದೊರೆಯುತ್ತಿತ್ತು. ೧೯೧೪ರಲ್ಲಿ ವಿದೇಶಿ ಬ್ಯಾಂಕ್‌ಗಳು ಶೇ. ೭೦ ಭಾಗ ಭಾರತದ ಠೇವಣಿಗಳನ್ನು ಹೊಂದಿದ್ದವು. ಇದು ೧೯೩೭ರಲ್ಲಿ ಶೇ. ೫೭ಕ್ಕೆ ಇಳಿಯಿತು. ಭಾರತದಲ್ಲಿದ್ದ ಬ್ರಿಟಿಷ್ ಉದ್ಯಮ ಸಂಸ್ಥೆಗಳು ಬ್ರಿಟಿಷ್ ವಸ್ತುಗಳಾದ ಯಂತ್ರೋಪಕರಣಗಳು. ಬಿಡಿಭಾಗಗಳನ್ನು ಸರಬರಾಜು ಮಾಡುವಲ್ಲಿ ರಾಜಕೀಯ ನಾಯಕರು, ಅಧಿಕಾರಿಗಳ ಪ್ರಭಾವ ಹೊಂದಿದ್ದು. ಅಧಿಕ ಲಾಭ ಪಡೆಯುತ್ತಿದ್ದರು. ಜೊತೆಗೆ ಬ್ರಿಟಿಷ್ ಭಾರತದ ಸರ್ಕಾರವು ವಿದೇಶಿ ಬಂಡವಾಳದ ಬಗ್ಗೆ ಪರವಾದ ನೀತಿಯನ್ನು ಪಾಲಿಸುತ್ತಿತ್ತು.

ರೈಲ್ವೆ ಅಭಿವೃದ್ಧಿಗೊಂಡ ಮೇಲೆ ರೈಲಿನಲ್ಲಿ ಸಾಗಿಸುವ ವಿದೇಶ ವಸ್ತುಗಳಿಗೆ ಕಡಿಮೆ ದರವನ್ನು ಭಾರತೀಯ ವಸ್ತುಗಳನ್ನು ಸಾಗಿಸುವಾಗ ಅಧಿಕ ದರವನ್ನು ನಿಗದಿ ಮಾಡುತ್ತಿದ್ದುದು ದೇಶಿಯ ಕೈಗಾರಿಕೆಗಳ ಬೆಳವಣಿಗೆಗೆ ತಡೆಯಾಯಿತು. ಭಾರತದಲ್ಲಿ ಕೈಗಾರಿಕೆಯ ಬೆಳವಣಿಗೆಗೆ ಅವಶ್ಯಕವಾದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ೧೯೧೩ರವರೆಗೂ ಇರಲಿಲ್ಲ. ಹಾಗೆಯೇ ಕೈಗಾರಿಕೆಗಳಿಗೆ ಅವಶ್ಯಕವಾದ ಲೋಹ ಉದ್ಯಮ, ಯಂತ್ರೋಪಕರಣ ತಯಾರಿಕೆ, ರಾಸಾಯನಿಕ, ತೈಲ ಮುಂತಾದ ಕೈಗಾರಿಕೆಗಳಿಲ್ಲದ್ದುದು ಮತ್ತು ವಿದ್ಯುಚ್ಛಕ್ತಿಯ ಉತ್ಪಾದನೆಯಲ್ಲಿ ಹಿಂದುಳಿದುದು ಕೈಗಾರಿಕಾ ಬೆಳವಣಿಗೆಗೆ ತೊಡಕಾಗಿತ್ತು.

ಯಂತ್ರಾಧಾರಿತ ಕೈಗಾರಿಕೆಗಳ ಜೊತೆಗೆ ೧೯ನೇ ಶತಮಾನದಲ್ಲಿ ಅನೇಕ ಕೃಷಿಯಾಧಾರಿತ ಕೈಗಾರಿಕೆಗಳು ಬೆಳವಣಿಗೆಗೊಂಡವು. ಅದರಲ್ಲಿ ಪ್ರಮುಖವಾದುದು ಇಂಡಿಗೋ ಅಥವಾ ನೀಲಿ ಬೆಳೆ. ಇದು ಸಂಪೂರ್ಣವಾಗಿ ಬ್ರಿಟಿಷರ ಒಡೆತನದಲ್ಲಿತ್ತು. ಇಂಡಿಗೋವನ್ನು ಬಂಗಾಳ ಮತ್ತು ಬಿಹಾರದಲ್ಲಿ ಹೆಚ್ಚು ಬೆಳೆಯುತ್ತಿದ್ದರು. ಇಂಡಿಗೋ ಪ್ಲಾಂಟರ್‌ಗಳು ರೈತರನ್ನು ಇಂಡಿಗೋ ಬೆಳೆಯಲು ಒತ್ತಾಯಿಸುತ್ತಿದ್ದರು. ಈ ಶೋಷಣೆಯ ಬಗ್ಗೆ ೧೮೬೦ರಲ್ಲಿ ದೀನಬಂಧು ಮಿತ್ರರವರು ತಮ್ಮ ನಾಟಕ “ನೀಲ್ ದರ್ಪಣ”ದಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ. ಇಂಡಿಗೋವನ್ನು ಬಟ್ಟೆಗೆ ಬಣ್ಣ ಹಾಕಲು ಉಪಯೋಗಿಸುತ್ತಿದ್ದರು. ಆದರೆ ಕೃತಕ ರಾಸಾಯನಿಕ ನೀಲಿಯನ್ನು ಕಂಡು ಹಿಡಿದಿದ್ದರಿಂದ ನೀಲಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದು ನಶಿಸಿತು. ಟೀ ಉದ್ಯಮವು ಅಸ್ಸಾಂ, ಬಂಗಾಳ, ದಕ್ಷಿಣ ಭಾರತ ಮತ್ತು ಹಿಮಾಚಲ ಪ್ರದೇಶದ ಬೆಟ್ಟಗಳಲ್ಲಿ ೧೮೫೦ರ ನಂತರ ಬೆಳೆಯಲಾರಂಭಿಸಿತು. ಆದರೆ ಮತ್ತೆ ಸರ್ಕಾರವು ಭಾರತೀಯ ಒಡೆತನದ ಕಾರ್ಖಾನೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿತು. ಭಾರತೀಯರ ಒಡೆತನದಲ್ಲಿದ್ದ ಸಿಮೇಂಟ್, ಕಬ್ಬಿಣ ಮತ್ತು ಉಕ್ಕು, ಗಾಜಿನ ಕೈಗಾರಿಕೆಗಳಿಗೆ ರಕ್ಷಣೆ ನೀಡಲು ತಿರಸ್ಕರಿಸತು. ಆದರೆ ವಿದೇಶಿ ಒಡೆತನದಲ್ಲಿದ್ದ ಬೆಂಕಿಪಟ್ಟಣ ಕಾರ್ಖಾನೆಗೆ ರಕ್ಷಣೆ ನೀಡಲಾಯಿತು. ಬ್ರಿಟನ್‌ನಿಂದ ಆಮದಾಗುತ್ತಿದ್ದ ವಸ್ತುಗಳಿಗೆ ವಿಶೇಷವಾದ ಸವಲತ್ತುಗಳನ್ನು ನೀಡಲಾಗುತ್ತಿತ್ತು. ಭಾರತೀಯ ಕೈಗಾರಿಕೆಗಳ ಬೆಳವಣಿಗೆಯ ಪ್ರಮುಖ ಲಕ್ಷಣವೆಂದರೆ ಎಲ್ಲ ಕೈಗಾರಿಕೆಗಳು ಒಂದೇ ಪ್ರದೇಶದಲ್ಲಿ ಸ್ಥಾಪನೆಯಾದುದು. ಕೈಗಾರಿಕೆಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕೇಂದ್ರಕೃತವಾದವು. ಇದರಿಂದ ಉಳಿದ ದೇಶದ ಹೆಚ್ಚು ಭಾಗ ಹಿಂದುಳಿದ ಪ್ರದೇಶವಾಗೇ ಉಳಿಯಿತು. ಕೈಗಾರಿಕಾ ಬೆಳವಣಿಗೆಯಿಂದಾದ ಮತ್ತೊಂದು ಸಾಮಾಜಿಕ ಬದಲಾವಣೆಯೆಂದರೆ ಎರಡು ಸಾಮಾಜಿಕ ವರ್ಗಗಳ ಉದಯ ಮತ್ತು ಬೆಳವಣಿಗೆ, ಬಂಡವಾಳ ಶಾಹಿಗಳು ಮತ್ತು ಕಾರ್ಮಿಕ ವರ್ಗಗಳು ಭಾರತೀಯ ಸಾಮಾಜಕ್ಕೆ ಹೊಸದಾಗಿ ಪರಿಚಿತವಾದವು.

ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಚಳುವಳಿಗಳು

ಆಧುನಿಕ ಕಾರ್ಖಾನೆಗಳ ಸ್ಥಾಪನೆಯಿಂದ ಕಾರ್ಮಿಕ ವರ್ಗ ರೂಪುಗೊಂಡಿತು. ಕಾರ್ಮಿಕರು ಕಡಿಮೆ ಕೂಲಿ, ಮಿತಿಯಿಲ್ಲದ ದುಡಿಮೆ. ಹೀನವಾದ ವಸತಿ ಸೌಕರ್ಯ ಮತ್ತು ದಬ್ಬಾಳಿಕೆಗೆ ಒಳಗಾಗಿದ್ದರು. ಇಂತಹ ಅಸಹನೀಯ ಪರಿಸ್ಥಿತಿಯನ್ನೆದುರಿಸಲು ಮತ್ತು ಜೀವನಸ್ಥಿತಿಯನ್ನು ಉತ್ತಮವಾಗಿಸಿಕೊಳ್ಳಲು ಸಂಘಟಿತರಾಗಿ ಹೋರಾಡಲು ಧಾರ್ಮಿಕ ಸಂಘ ಅಥವಾ ಟ್ರೇಡ್ ಯೂನಿಯನ್‌ಗಳನ್ನು ಸ್ಥಾಪಿಸಿಕೊಂಡರು. ಮೊದಮೊದಲ ಹೋರಾಟಗಳೆಂದರೆ ೧೮೨೭ರಲ್ಲಿ ಕಲ್ಕತ್ತೆಯ ಪಲ್ಲಕ್ಕಿ ಹೋರುವರು, ೧೮೬೨ರಲ್ಲಿ ಹೌರಾ ರೈಲ್ವೆ ನಿಲ್ದಾಣದ ಕೂಲಿಗಾರರು ಹೂಡಿದ ಮುಸ್ಕರಗಳು. ೧೮೭೭ರಲ್ಲಿ ನಾಗಪುರದ ಎಂಪ್ರೆಸ್ ಮಿಲ್ಲಿನ ಕಾರ್ಮಿಕರ ಮುಷ್ಕರವೇ ಮಿಲ್ ಕಾರ್ಮಿಕರ ಮೊದಲ ಮುಷ್ಕರವೆನ್ನಬಹುದು. ಇಂತಹ ಮುಷ್ಕರಗಳಿಗೆ ಕಾರ್ಮಿಕರಲ್ಲದವರು ಬೆಂಬಲ ನೀಡಿದರು. ಶಶಿಪಾದ ಬ್ಯಾನರ್ಜಿಯವರು ಕಲ್ಕತ್ತೆಯಲ್ಲಿ ೧೮೭೦ರಲ್ಲಿ “ವರ್ಕಿಂಗ್ ಮೆನ್ಸ್ ಕ್ಲಬ್” ಎಂಬ ಸಂಸ್ಥೆ ಸ್ಥಾಪಿಸಿ “ಶ್ರಮಜೀವಿ” ಎಂಬ ಪತ್ರಿಕೆಯ ಮೂಲಕ ಕಾರ್ಮಿಕರಿಗೆ ಶಿಕ್ಷಣ ನೀಡಲು ಮುಂದಾದರು. ಜ್ಯೋತಿಬಾ ಪುಲೆಯವರು ಅನುಯಾಯಿ ಎನ್. ಎಂ. ಲೋಖಂಡೆಯವರು ಪ್ರಥಮ ಭಾರತೀಯ ಕಾರ್ಮಿಕ ನಾಯಕರೆಂಬುದಾಗಿ ಕರೆಯಲ್ಪಟ್ಟಿದ್ದಾರೆ. ಇವರು ೧೮೯೦ರಲ್ಲಿ “ಬಾಂಬೆಮಿಲ್ ಹ್ಯಾಂಡ್ಸ್ ಅಸೋಸಿಯೇಷನ್” ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಕಾರ್ಮಿಕರ ಕುಂದುಕೊರತೆಗಳ ವಿರುದ್ಧ ಚಳುವಳಿ ನಡೆಸಲು ಪ್ರಯತ್ನಿಸಿದರು. ಇದು ಮೊದಲ ಕಾರ್ಮಿಕರ ಸಂಘವೆನ್ನಬಹುದು. ಇದೇ ರೀತಿಯ ಅನೇಕ ಸಂಘಗಳು ನಂತರದ ಕಾಲದಲ್ಲಿ ಪ್ರಾರಂಭವಾದವು. ಅವುಗಳೆಂದರೆ ಕಾಮ್ಗಾರ್ ಹಿತವರ್ಧಕ ಸಭಾ (೧೯೦೯) ಸೋಷಿಯಲ್ ಸವೀಸ್ ಲೀಗ (೧೯೧೧), ಅಮಲ್ಗಮೇಟೆಡ್ ಸೊಸೈಟಿ ಆಫ್ ರೈಲ್ವೆ ಸರ್ವೆಂಟ್ ಆಫ್ ಇಂಡಿಯಾ (೧೮೯೭) ಪ್ರಿಂಟರ್ಸ್ ಯೂನಿಯನ್ ಆಫ್ ಕಲ್ಕತ್ತಾ (೧೯೦೯), ಪೋಸ್ಟಲ್ ಯೂನಿಯನ್ ಆಫ್ ಬಾಂಬೆ ಮುಂತಾದವು. ೧೯೦೫ರಲ್ಲಿ ಕಲ್ಕತ್ತಾದ ಸರ್ಕಾರಿ ಮುದ್ರಾಣಾಲಯದಲ್ಲಿ ಒಂದು ತಿಂಗಳು ಚಳುವಳಿ ನಡೆಯಿತು. ೧೯೦೮ರಲ್ಲಿ ತಿಲಕ್‌ರವರನ್ನು ಎಂಟು ವರ್ಷ ಸೆರೆಮನೆಗೆ ಹಾಕಿದಾಗ ಬಾಂಬೆಯ ಬಟ್ಟೆ ಉದ್ಯಮದ ಕಾರ್ಮಿಕರು ಒಂದು ವಾರ ಚಳವಳಿ ನಡೆಸಿದರು. ಭಾರತದಿಂದ ಬ್ರಿಟಷ್ ವಸಾಹತುಗಳಿಗೆ ಕರೆದೊಯ್ದ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಚಳುವಳಿಯು ೧೮೩೦ ರಿಂದ ಆರಂಭವಾಗಿ ಕೂಲಿ ಕಾರ್ಮಿಕರನ್ನು ಕಳುಹಿಸುವುದನ್ನು ನಿಷೇಧಿಸುವವರೆಗೆ ಅಂದರೆ ೧೯೨೨ ರವರೆಗೆ ಮುಂದುವರೆಯಿತು.

ರಾಷ್ಟ್ರೀಯ ಚಳುವಳಿಯ ನಾಯಕರು ಕಾಂಗ್ರೆಸ್ ಅಧಿವೇಶನಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಕುರಿತು ಠರಾವುಗಳನ್ನು ಮಾಡುತ್ತಿದ್ದರು. ಆದರೆ ರಾಷ್ಟ್ರೀಯ ಚಳುವಳಿಗಾರರು ವಿದೇಶಿ ಒಡೆತನದ ಉದ್ಯಮಗಳ ಕಾರ್ಮಿಕರ ವಿಚಾರದಲ್ಲಿ ಮಾತ್ರ ಧ್ವನಿಯೆತ್ತುತ್ತಿದ್ದು, ದೇಶಿಯ ಒಡೆತನದ ಉದ್ಯಮಗಳ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ೧೮೮೧ರ ಫ್ಯಾಕ್ಟರಿ ಕಾಯ್ದೆಯು ಕಾರ್ಮಿಕರ ಹಿತದ ಅಂಶಗಳಿದ್ದರೂ ನಿಜವಾಗಿ ದೇಶೀಯ ಉದ್ಯಮಗಳ ನಾಶದ ಉದ್ದೇಶವಿದ್ದುದರಿಂದ ರಾಷ್ಟ್ರೀಯ ಚಳುವಳಿಗಾರರು ಮತ್ತು ಕಾರ್ಮಿಕರು ವಿರೋಧಿಸಿದರು. ಮೊದಲ ಮಹಾ ಯುದ್ಧದ ನಂತರ ಬೆಲೆಗಳು ಏರಿ ಆಹಾರ ಧಾನ್ಯಗಳು ಮತ್ತಿತರ ಅವಶ್ಯಕ ವಸ್ತುಗಳು ಕೊರತೆಯುಂಟಾದವು. ಈ ಆರ್ಥಿಕ ಬಿಕ್ಕಟ್ಟು ಬಡ ಕಾರ್ಮಿಕರಿಗೆ ಅತಿಯಾದ ಹೊರೆಯಾದವು. ಇಂತಹ ಸಂದಿಗ್ಧ ಸ್ಥಿತಿಗಳು ಕಾರ್ಮಿಕರನ್ನು ಟ್ರೇಡ್ ಯೂನಿಯನ್‌ಗಳ ಸ್ಥಾಪನೆಗೆ ಮನಸ್ಸು ಮೂಡಿಸಿತು. ಬಿ. ಪಿ. ವಾಡಿಯಾರವರಿಂದ ಮದ್ರಾಸ್‌ನಲ್ಲಿ ೧೯೧೮ರಲ್ಲಿ “ಮದ್ರಾಸ್ ಲೇಬರ್ ಯೂನಿಯನ್” ಸ್ಥಾಪನೆಯಾದವು. ೧೯೨೦ರಲ್ಲಿ ಭಾರತದ ಅನೇಕ ಕಡೆ ಅನೇಕ ಯೂನಿಯನ್‌ಗಳು ಸ್ಥಾಪನೆಯಾದವು. ಪ್ರಮುಖವಾದುವೆಂದರೆ ಮಜೂರು ಮಹಾಜನ್, ದಿ ಟೆಕ್ಸ್‌ಟೈಲ್ ಲೇನರ್ ಅಸೋಸಿಯೇಷನ್ ಆಫ ಅಹ್ಮದಾಬಾದ್ ಮತ್ತು ಬಿ. ಬಿ. ಮತ್ತು ಸಿ. ಐ. ರೈಲ್ವೆ ಎಂಪ್ಲಾಯಿಸ್ ಯೂನಿಯನ್. ೧೯೨೦ರಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪನೆಯಾಯಿತು. ಈ ಕಾಂಗ್ರೆಸನ ಮೊದಲ ಅಧಿವೇಶನವು ಅಕ್ಟೋಬರ್ ೧೯೨೦ರಲ್ಲಿ ಬೊಂಬಾಯಿಯಲ್ಲಿ ನಡೆಯಿತು. ರಾಷ್ಟ್ರೀಯ ನಾಯಕ ಲಾಲಾ ಲಜಪತರಾಯ್ ಅಧ್ಯಕ್ಷರಾಗಿದ್ದರು. ೧೯೨೦-೨೫ ರ ಅವಧಿಯಲ್ಲಿ ೧೬೭ ಟ್ರೇಡ್ ಯೂನಿಯನ್‌ಗಳು ಕೆಲಸ ನಿರ್ವಹಿಸುತ್ತಿದ್ದವು. ಎಂಟು ಟ್ರೇಡ್ ಯೂನಿಯನ್ ಒಕ್ಕೂಟಗಳಿದ್ದವು. ಅನೇಕ ಟ್ರೇಡ್ ಯೂನಿಯನ್‌ಗಳು ಹರತಾಳ ಆಚರಿಸಲೆಂದು ಸ್ಥಾಪನೆಯಾಗಿದ್ದು ನಂತರ ಮರೆಯಾಗುತ್ತಿದ್ದವು. ಈ ಅವಧಿಯಲ್ಲಿ ಅನೇಕ ಹರತಾಳಗಳು ಸಂಘಟಿತವಾಗಿ ನಡೆದವು. ಅನೇಕ ಕಡೆ ಚಳುವಳಿಯು ಹಿಂಸಾರೂಪಕ್ಕೂ ತಿರುಗಿತು. ೧೯೨೧ರಲ್ಲಿ ೪೦೦ಕ್ಕೂ ಹೆಚ್ಚು ಚಳುವಳಿಗಳು ಅಸಹಕಾರ ಚಳುವಳಿಯ ಪ್ರಭಾವದಿಂದ ನಡೆದವು. ಭಾರತದ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್‌ನ ಬೆಂಬಲವಿದೆ ಎಂದು ಘೋಷಿಸಿತು. ಹಾಗೆಯೇ ೧೯೨೨ರ ಗಯಾದ ಅಧಿವೇಶನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಒಟ್ಟುಗೂಡಿಸುವ ವಿಷಯದಲ್ಲಿ ಸಹಕರಿಸುವುದಾಗಿ ತಿಳಿಸಿತು.

೧೯೨೬ರಲ್ಲಿ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆಕ್ಟ್ ಭಾರತದಲ್ಲಿ ಜಾರಿಗೆ ಬಂದು ಟ್ರೇಡ್ ಯೂನಿಯನ್‌ಗಳಿಗೆ ಕಾನೂನಾತ್ಮಕ ಸ್ಥಾನವನ್ನು ನೀಡಿತು. ಮತ್ತು ಟ್ರೇಡ್ ಯೂನಿಯನ್‌ನ ಸದಸ್ಯರು ನಡೆಸುವ ಚಳುವಳಿಗಳಿಗೆ ನಾಗರಿಕ ಮತ್ತು ಕ್ರಿಮಿನಲ್ ಕಾನೂನಿಂದ ರಕ್ಷಣೆ ದೊರೆಯಿತು. ಈ ಕಾಯಿದೆ ಜಾರಿಗೆ ಬರಲು ೧೯೨೦ ರಿಂದಲೇ ಎನ್. ಎಂ. ಜೋಷಿ ಅವರು ಪ್ರಯತ್ನಿಸಿದರು. ಕಾರ್ಮಿಕ ಸಂಘಗಳಲ್ಲಿ ೧೯೨೩ ರ ನಂತರದ ಅವಧಿಯಲ್ಲಿ ಕಮ್ಯುನಿಸ್ಟ್ ತತ್ವ ತನ್ನ ಪ್ರಭಾವ ಹೊಂದಿತು. ಕಮ್ಯುನಿಸ್ಟ್‌ರ ನೇತೃತ್ವದಲ್ಲಿ ಕಾರ್ಮಿಕ ಚಳುವಳಿಗಳು ನಡೆಯಲಾರಂಭಿಸಿದವು. ೧೯೨೮ರಲ್ಲಿ ಕಮ್ಯುನಿಸ್ಟ್‌ ಕಾರ್ಮಿಕರ ಸಂಘವು ಬೊಂಬಾಯಿಯಲ್ಲಿ ಆರು ತಿಂಗಳ ಬೃಹತ್ ಚಳುವಳಿ ಆಚರಿಸಿತು. ಮುಂದಿನ ವರ್ಷ ಕಲ್ಕತ್ತದಲ್ಲಿ ಜಯವನ್ನು ಕಂಡಿತು. ಅದರಲ್ಲೂ ಸೆಣಬಿನ ಮತ್ತು ರೈಲ್ವೆ ಹರತಾಳುಗಳು ಯಶಸ್ವಿಯಾದವು.

೧೯೨೮ನೇ ವರ್ಷ ಕಾರ್ಮಿಕ ರಂಗದಲ್ಲಿ ಚಳುವಳಿಯ ವರ್ಷವೇ ಆಗಿತ್ತು. ೧೯೨೯ರಲ್ಲಿ ನಂತರ ಕಾರ್ಮಿಕರ ಸಂಘಗಳಲ್ಲಿ ಕಮ್ಯುನಿಸ್ಟ್‌ ಪ್ರಭಾವ ಕಡಿಮೆಯಾಗುತ್ತಾ ಹೋಯಿತು. ಕಾರಣವೆಂದರೆ ಸರ್ಕಾರವು ಕಮ್ಯುನಿಸ್ಟ್‌ ನಾಯಕರನ್ನು ಸೆರೆ ಹಿಡಿಯಲಾರಂಭಿಸಿತು. ಹೀಗಾಗಿ ಅನೇಕ ನುರಿತ ಕಾರ್ಮಿಕ ನಾಯಕರು ಸಂಘಗಳಿಂದ ಹೊರಹೋದರು. ೧೯೨೮ರ ಏಪ್ರಿಲ್ ೨೩ ರಂದು ಮುಂಬಯಿ ಮುಷ್ಕರದಲ್ಲಿ ೧೧/೨ ಲಕ್ಷ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಮಿಕರು ಹಳ್ಳಿ ಹಳ್ಳಿಗಳಲ್ಲಿ ಮುಷ್ಕರಕ್ಕೆ ಸಹಾನುಭೂತಿ ಗಳಿಸಲು ಪ್ರಚಾರ ಮಾಡಿ ಹಳ್ಳಿ ಮತ್ತು ನಗರಗಳ ಸಾರ್ವಜನಿಕರಿಂದ ಮುಷ್ಕರಕಾರರ ನೆರವಿಗೆ ಧನಧಾನ್ಯ ಸಂಗ್ರಹಿಸಿ ೮೦ ಸಾವಿರ ಕಾರ್ಮಿಕರಿಗೆ ಪರಿಹಾರ ದೊರಕಿಸಿದರು. ೧೯೨೯ರಲ್ಲಿ ಕಮ್ಯುನಿಸ್ಟ್‌ರು AITUCಯಿಂದ ಹೊರ ನಡೆದರು. ಅದೇ ರೀತಿ ೧೯೩೧ರಲ್ಲೂ ಎರಡನೇ ಬಾರಿಯ ವಿಭಜನೆಗೊಂಡಿತು. ಈ ವಿಭಜಿತ ಗುಂಪುಗಳನ್ನು ಒಗ್ಗೂಡಿಸಲು ೧೯೩೧-೩೨ರಲ್ಲಿ ಪ್ರಯತ್ನಗಳು ನಡೆದು ಹೊಸ ರಾಷ್ಟ್ರೀಯ ಟ್ರೇಡ್ ಯೂನಿಯನ್ ಫೆಡರೇಷನ್ ಅಸ್ತಿತ್ವಕ್ಕೆ ಬಂದಿತು. ಅದರ ನೇತೃತ್ವದಲ್ಲಿ ಎಲ್ಲಾ ಗುಂಪುಗಳು ಸೇರಿ ೧೯೩೮ರಲ್ಲಿ ನಾಗಪುರದಲ್ಲಿ ಅಧಿವೇಶನ ನಡೆಸಿದವು ಮತ್ತು ೧೯೪೦ರಲ್ಲಿ ಹೊಸ ಸಂಸ್ಥೆ ರಾಷ್ಟ್ರೀಯ ಟ್ರೇಡ್ ಯೂನಿಯನ್ ಫೆಡರೇಶನ್‌ನನ್ನು ಕೈಬಿಟ್ಟು ಅದರ ಕಾರ್ಮಿಕ ಒಕ್ಕೂಟಗಳನ್ನು ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನಲ್ಲಿ ಲೀನಗೊಳಿಸಲಾಯಿತು.

೧೯೩೪ರ ನಂತರ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದುದು ಮತ್ತು ಕಾರ್ಮಿಕ ಒಕ್ಕೂಟಗಳು ಒಂದಾದುದು ಚಳುವಳಿಯ ಚೇತರಿಕೆಗೆ ಕಾರಣವಾಯಿತು. ಹಾಗೆಯೇ ಕಾರ್ಮಿಕ ಸಂಘಗಳ ಮತ್ತು ಸದಸ್ಯರ ಸಂಖ್ಯೆಯೂ ಹೆಚ್ಚಿತು. ಉದಾ: ೧೯೩೭ರಲ್ಲಿ ೨೭೧ ಕಾರ್ಮಿಕ ಸಂಘಗಳಿದ್ದು, ೨,೬೧,೦೪೭ ಮಂದಿ ಸದಸ್ಯರಿದ್ದುದು ೧೯೩೯ರಲ್ಲಿ ೫೬೨ ಸಂಘಗಳಿಗೂ, ೩,೯೯,೧೫೯ ಸದಸ್ಯತ್ವಕ್ಕೂ ಏರಿತು. ಇದಕ್ಕೆ ಕಾರಣ ಕಾಂಗ್ರೆಸ್ ಅನೇಕ ಪ್ರಾಂತ್ಯಗಳಲ್ಲಿ ಅಧಿಕಾರಕ್ಕೆ ಬಂದುದು ಮತ್ತು ಆ ಮಂತ್ರಿಮಂಡಲಗಳು ಕಾರ್ಮಿಕರ ಪರವಾದ ನಿಲುವು ತಳೆದುದು ಒಂದು ಕಾರಣವೆನ್ನಬಹುದು. ಆದರೆ ಎಲ್ಲಾ ಪ್ರಾಂತೀಯ ಕಾಂಗ್ರೆಸ್ ಮಂತ್ರಿಮಂಡಲಗಳು ಕಾರ್ಮಿಕರ ಪರವಾಗಿರಲಿಲ್ಲ. ೧೯೩೮ರಲ್ಲಿ ಮುಂಬಯಿ ಪ್ರಾಂತ ಸರ್ಕಾರವು ಕಾರ್ಮಿಕ ವಿವಾದ ಕಾಯಿದೆ ಜಾರಿಮಾಡಿ ಅದರ ಪ್ರಕಾರ ಕಾರ್ಮಿಕ ವಿವಾದಗಳ ಮೇಲೆ ಕಡ್ಡಾಯ ಪಂಚಾಯ್ತಿ ಪದ್ಧತಿ ಹೇರಿ, ವಿವಾದ ಪಂಚಾಯ್ತಿಯ ಮುಂದಿರುವಾಗ ಮುಷ್ಕರವನ್ನು ನಿಷೇಧಿಸಿತು. ಅಕ್ರಮ ಮುಷ್ಕರಕ್ಕೆ ಆರು ತಿಂಗಳ ಶಿಕ್ಷೆ ವಿಧಿಸಿತು. ಕಾರ್ಮಿಕ ಸಂಘಗಳ ನೋಂದಣಿಯ ಬಗ್ಗೆ ಬಿಗಿ ನಿಲುವು ತಾಳಿತು. ೧೯೩೯ರ ವಿಶ್ವಯುದ್ಧವನ್ನು ಕಮ್ಯುನಿಸ್ಟರು ವಿರೋಧಿಸಿದರು. ಯುದ್ಧ ಅವಧಿಯಲ್ಲಿ ಆಹಾರ ಧಾನ್ಯ ಕೊರತೆ, ಬೆಲೆ ಏರಿಕೆಯಿಂದ ಕಷ್ಟಕ್ಕೆ ಸಿಲುಕಿ ವೇತನ ಏರಿಕೆ, ನ್ಯಾಯ ಬೆಲೆಯಲ್ಲಿ ಧಾನ್ಯ ಸರಬರಾಜು ಮುಂತಾದ ವಿಷಯಗಳ ಮೇಲೆ ಮುಸ್ಕರಗಳು ನಡೆದವು. ೧೯೪೧ರಲ್ಲಿ ಲಾಹೋರ್‌ನಲ್ಲಿ ಕಾರ್ಮಿಕ ಸಂಘಗಳು ಅಧಿವೇಶನ ನಡೆಸಿ ಹೊಸ “ಇಂಡಿಯನ್ ಫೆಡರೇಶನ್ ಆಫ್ ಲೇಬರ್” ಎಂಬ ಸಂಸ್ಥೆ ಕಟ್ಟಿದರು. ಇದರ ಉದ್ದೇಶ ಸ್ವತಂತ್ರ ಕಾರ್ಮಿಕ ಚಳುವಳಿಯನ್ನು ಉತ್ತಮ ಕಾರ್ಯವೆಸಗುವ ನೆಲೆಗಟ್ಟಿನ ಮತ್ತು ಜನಾಂದೋಲನ ಚಟುವಟಿಕೆ ಕೈಗೊಳ್ಳುವುದೇ ಆಗಿತ್ತು. ೧೯೪೦ರ ನಂತರ ಕಮ್ಯುನಿಸ್ಟ್‌ರು ರಷ್ಯಾದ ವಿದೇಶಾಂಗ ನೀತಿ ಬದಲಾದುದಕ್ಕೆ ಯುದ್ದಕ್ಕೆ ಬೆಂಬಲ ತೋರಿಸಿ ಕಾರ್ಮಿಕ ಚಳುವಳಿವಯಿಂದ ಹಿಂದೆ ಸರಿದರು. ಮುಂದಿನ ೧೯೪೨ರ ಕ್ವಿಟ್‌ಇಂಡಿಯಾ ಚಳುವಳಿಯಲ್ಲಿ ಅನೇಕ ನಾಯಕರು ಸೆರೆಯಾಳಾದರೂ ಕಾರ್ಮಿಕ ಸಂಘಗಳ ಚಳುವಳಿ ಇತಿಹಾಸದಲ್ಲಿ ಪ್ರಮುಖ ಘಟ್ಟವೆಂದರೆ ೧೯೪೪ರ ಮೇನಲ್ಲಿ ಸ್ಥಾಪಿತವಾದ “ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್” ಈ ಸಂಸ್ಥೆಯು ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸುತ್ತಾ ಗಾಂಧಿ ತತ್ವದ ಆಧಾರದ ಮೇಲೆ ಕಾರ್ಮಿಕ ಚಳುವಳಿಯನ್ನು ಮುಂದುವರಿಸಿಕೊಂಡು ಹೋಯಿತು. ೧೯೪೬-೪೭ ರ ವೇಳೆಗೆ ನಮೂದಿತ ಕಾರ್ಮಿಕ ಸಂಘಗಳು ೧೯೨೫ ಇದ್ದು ೧೩,೩೧,೯೬೨ ಸದಸ್ಯರಿದ್ದರು. ಹೀಗೆ ಈ ಅವಧಿಯಲ್ಲಿ ಕಾರ್ಮಿಕ ಸಂಘಗಳು ೧೯೨೫ ಇದ್ದು ೧೩,೩೧,೯೬೨ ಸದಸ್ಯರಿದ್ದರು. ಹೀಗೆ ಈ ಅವಧಿಯಲ್ಲಿ ಕಾರ್ಮಿಕ ಸಂಘಗಳ ಚಳುವಳಿಯು ಪ್ರಗತಿ ಪರವಾಗಿ ಮುಂದುವರಿಯಿತು. ಈ ಚಳುವಳಿಯ ಬಹುಮುಖ್ಯ ದುರ್ಬಲತೆಯೆಂದರೆ ಹೆಚ್ಚಿನ ಕಾರ್ಮಿಕರು ಅವಿದ್ಯಾವಂತರಾಗಿದ್ದುದು, ಈ ಕಾರ್ಮಿಕರು ಹೊರಗಿನ ನಾಯಕತ್ವವನ್ನು ಬಯಸಿದುದು ಮತ್ತು ರಾಜಕೀಯ ಚಟುವಟಿಕೆಯ ಚಳುವಳಿಯಲ್ಲಿ ಪ್ರವೇಶಿಸಿದುದ್ದು ಈ ಚಳುವಳಿಯ ಕುಂಠಿತಕ್ಕೆ ಕಾರಣವಾಯಿತು.