ಕ್ರಿ.ಶ.೧೪೫೩ರಲ್ಲಿ ‘ಕಾನ್‌ಸ್ಟಾಂಟಿನೋಪಲ್’ ಪತನವಾದ ನಂತರ ಐರೋಪ್ಯ ಖಂಡದ ದೇಶಗಳು ನಡೆಸುತ್ತಿದ್ದ ಪೂರ್ವದೇಶಗಳೊಡನೆಯ ವ್ಯಾಪಾರ ಚಟುವಟಿಕೆಗೆ ಅನಾನುಕೂಲವಾಯಿತು. ೧೫ನೇ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳು ಪ್ರಪಂಚದ ಭೌಗೋಳಿಕ ಅನ್ವೇಷಣೆಯ ಕಾಲವಾಗಿತ್ತು. ಈ ರೀತಿಯ ಅನ್ವೇಷಣೆಯು ವಿವಿಧ ರಾಷ್ಟ್ರಗಳ ವಾಣಿಜ್ಯ ಸಂಬಂಧಗಳ ಮೇಲೆ ತೀವ್ರತರವಾದ ಪರಿಣಾಮವನ್ನು ಉಂಟುಮಾಡಿದವು. ಈ ರೀತಿಯ ಅನ್ವೇಷಣೆಯಿಂದಾಗಿ ಮತ್ತು ಜಲಮಾರ್ಗದ ಆವಿಷ್ಕಾರದ ಫಲವಾಗಿ ೧೪೯೮ ಮೇ ೧೭ರಂದು ಪೋರ್ಚುಗಲ್‌ನ ವಾಸ್ಕೋಡಗಾಮನು ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದು ಕಲ್ಲಿಕೋಟೆಯ ಬಂದರನ್ನು ಬಂದು ತಲುಪಿದನು. ಇದರಿಂದಾಗಿ ಭಾರತಕ್ಕೆ ವ್ಯಾಪಾರದ ಉದ್ದೇಶವನ್ನು ಇಟ್ಟುಕೊಂಡು ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಮತ್ತು ಕೊನೆಯದಾಗಿ ಫ್ರೆಂಚರು ಬಂದರು. ವ್ಯಾಪರಕ್ಕಾಗಿ ಆಗಮಿಸಿದ ಈ ಐರೋಪಿಯನ್ನರು ಅದರಲ್ಲೂ ಬ್ರಿಟಿಷರು ತಮ್ಮ ಪ್ರತಿಸ್ಪರ್ಧಿಗಳಾದ ಪೋರ್ಚುಗೀಸರನ್ನು, ಡಚ್ಚರನ್ನು ಹಾಗೂ ಫ್ರೆಂಚರನ್ನು ತಮ್ಮ ವ್ಯಾಪಾರದ ಪೈಪೋಟಿಯಿಂದಲ್ಲದೆ ಹಲವಾರು ಕದನಗಳ ಮೂಲಕವೂ ಜಯವನ್ನು ಗಳಿಸಿ ಭಾರತದಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. “ವ್ಯಾಪಾರವು ದೇಶಗಳ ರಾಷ್ಟ್ರಧ್ವಜವನ್ನು ನಿರ್ಧರಿಸುತ್ತದೆ” ಎಂಬಂತೆ ಬ್ರಿಟಿಷರು ಕ್ರಿ,ಶ. ೧೬೦೦ ಡಿಸೆಂಬರ್ ೩೧ರಂದು ಇಂಗ್ಲೆಂಡಿನ ವಾಣಿಜ್ಯ ಅಭ್ಯುದಯದತ್ತ ಪ್ರಥಮ ಹೆಜ್ಜೆಯನ್ನು ಇಟ್ಟು ಆ ಸುವರ್ಣ ದಿನದಂದು ಈಸ್ಟ್ ಇಂಡಿಯಾ ಕಂಪನಿ ಆಫ್ ಬ್ರಿಟಿಷ್‌ನ್ನು ಭಾರತದಲ್ಲಿ ಸ್ಥಾಪಿಸಿದರು. ಹೀಗೆ ಸ್ಥಾಪಿತವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದ ಅಂದಿನ ಅರಾಜಕತಾ ಸ್ಥಿತಿಯನ್ನು ಉಪಯೋಗಿಸಿಕೊಂಡು ಇಲ್ಲಿನ ರಾಜರ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವ ಮತ್ತು ಪರಸ್ಪರ ರಾಜರಲ್ಲಿ ಭೇದವನ್ನುಂಟುಮಾಡುವ ನೀತಿಯನ್ನು ಅನುಸರಿಸಿ ಕ್ರಮೇಣ ಈ ದೇಶದ ಒಡೆಯರಾದರು. ಸುಮಾರು ೩ ಶತಮಾನಗಳಿಗೂ ಹೆಚ್ಚು ಕಾಲ ಇಲ್ಲಿ ನೆಲೆಸಿದ್ದ ಬ್ರಿಟಿಷರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಬಗೆ, ವಿಸ್ತರಣೆ ಹಾಗೂ ಸಂಘಟನೆಯ ಬಗ್ಗೆ ಈ ಕೆಳಕಂಡಂತೆ ನೋಡಬಹುದು.

ಭಾರತಕ್ಕೆ ವ್ಯಾಪಾರ ವಾಣಿಜ್ಯಕ್ಕೆ ಆಗಮಿಸಿದ ಐರೋಪ್ಯರಲ್ಲಿ ಫ್ರೆಂಚರು ಕೊನೆಯವರು. ಇವರು ಬ್ರಿಟಿಷರಿಗೆ ಇತರ ಯೂರೋಪಿಯನ್ನರಿಗಿಂತ ಪ್ರಬಲವಾದ ಪೈಪೋಟಿಯನ್ನು ನೀಡಿದರು. ಬ್ರಿಟಿಷರು ಪ್ರಥಮವಾಗಿ ೧೭೪೬-೪೮ರ ನಡುವೆ ಫ್ರೆಂಚರನ್ನು ಮೊದಲ ಕರ್ನಾಟಕ ಯುದ್ಧದಲ್ಲಿ ಎದುರಿಸಿದರೂ ಅಷ್ಟೇ ಯಶಸ್ವಿಯಾಗಲಿಲ್ಲ. ಆದರೆ ಮುಂದೆ ೧೭೪೯-೫೪ರ ಎರಡನೆಯ ಕರ್ನಾಟಕ ಯುದ್ಧದಲ್ಲಿ ಹಾಗೂ ೧೭೫೮-೬೩ರ ಮೂರನೇ ಕರ್ನಾಟಕ ಯುದ್ಧದಲ್ಲಿ ಫ್ರೆಂಚರನ್ನು ಸಂಪೂರ್ಣವಾಗಿ ಸೋಲಿಸಿ ತಮಗೆ ಬಲಯುತವಾಗಿದ್ದ ಶತ್ರುವನ್ನು ನಾಶ ಪಡಿಸಿದರು. ಅದರಲ್ಲೂ ೧೭೫೭ರ ಬಂಡಾಯ ಬಂಗಾಳದಲ್ಲಿ ಇಂಗ್ಲಿಷರ ಸೇವಾ ಪಾರಮ್ಯತೆಯನ್ನು ಸ್ಥಾಪಿಸಿತು. ಈ ನಿಟ್ಟಿನಲ್ಲಿ ೧೭೫೭ರ ಪ್ಲಾಸಿಕದನದಲ್ಲಿ ಪ್ರಮುಖ ಪಾತ್ರವಹಿಸಿದ ರಾಬರ್ಟ್ ಕ್ಲೈವನು ಸಿರಾಜ್-ಉದ್-ದೌಲನನ್ನು ಹತ್ತಿಕ್ಕುವ ಮೂಲಕ ಬ್ರಿಟಿಷ್ ಸಾಮ್ರಾಜ್ಯವು ಒಂದು ಭದ್ರ ಸ್ಥಾನವನ್ನು ಭಾರತದಲ್ಲಿ ಪಡೆದುಕೊಳ್ಳುವಂತೆ ಮಾಡಿದನು. ಅಂದರೆ ಪ್ಲಾಸಿ ಕದನದಿಂದ ಬಂಗಾಳದಲ್ಲಿ ಸುಭದ್ರವಾಗಿ ನೆಲೆಯೂರಲು ಬ್ರಿಟಿಷರಿಗೆ ಅವಕಾಶ ವಾಯಿತು ಎಂಬುದು ನಿಜ. ಆದರೆ ೧೭೬೪ (ಅಕ್ಟೋಬ್, ೨೨)ರಲ್ಲಿ ನಡೆದ ಬಕ್ಸಾರ್ ಕದನದಲ್ಲಿ ಮೀರ್‌ಖಾಸಿಂ, ಷೂಜಾ-ಉದ್-ದೌಲ ಮತ್ತು ಎರಡನೇ ಷಾ ಆಲಂರ ಒಕ್ಕೂಟವನ್ನು ಕ್ಲೈವನು ಸೋಲಿಸಿ ಬ್ರಿಟೀಷ್ ಸಾಮ್ರಾಜ್ಯದ ಆಧಿಪತ್ಯವನ್ನು ಮತ್ತಷ್ಟು ಬಲಪಡಿಸಿದನು. ನಂತರ ಕ್ಲೈವನು ೧೭೬೭ರಲ್ಲಿ ಸ್ವದೇಶಕ್ಕೆ ಮರಳಿದನು.

ನಂತರ ಗೌರ‍್ನರ್ ಆಗಿ ನೇಮಕಗೊಂಡ ವಾರನ್ ಹೇಸ್ಟಿಂಗ್ಸನು ಮರಾಠರ ವಿರುದ್ಧ ರೋಹಿಲ್ ಖಂಡದ ಜೊತೆ ಯುದ್ಧ ಮಾಡಿ (೧೭೭೪) ಬ್ರಿಟಿಷರ ಪ್ರಾಬಲ್ಯವನ್ನು ಹೆಚ್ಚಿಸಿದನು. ಇದರಿಂದಾಗಿ ಅಯೋಧ್ಯೆಯ ನವಾಬನನ್ನು ತನ್ನ ಅಧೀನನ್ನಾಗಿ ಮಾಡಿಕೊಂಡನು. ನಂತರ ಬ್ರಿಟಿಷರ ಸಹಾಯವನ್ನು ಕೋರಿದ ಮರಾಠರ ರಘೋಬನಿಗೆ ಸಹಾಯ ನೀಡುವ ನೆಪದಲ್ಲಿ ಸಾಲ್ಸೆಟ್ ಪ್ರದೇಶವನ್ನು ಪುರಂದರ ಒಪ್ಪಂದದ ರೀತ್ಯ ತನ್ನ ಅಧೀನ ಪಡಿಸಿಕೊಂಡನು. ಈ ರೀತಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯಾಗಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಕೆನ್ನಾಲಿಗೆಯನ್ನು ಚಾಚುತ್ತಾ ಹೊರಟಿತು. ದಕ್ಷಿಣ ಭಾರತದಲ್ಲಿ ಬ್ರಿಟಿಷರು ತಮ್ಮ ರಾಜ್ಯ ವಿಸ್ತರಣಾ ನೀತಿಯಲ್ಲಿ ಅನೇಕ ಯುದ್ಧಗಳನ್ನು ಕೈಗೊಳ್ಳಬೇಕಾಯಿತು. ಮುಖ್ಯವಾಗಿ ಕಂಪನಿಯ ಶತ್ರುವಾಗಿದ್ದ ಹೈದರ್ ಆಲಿಯನ್ನು ಎದುರಿಸಬೇಕಾಯಿತು. ೧೭೬೭ರಲ್ಲಿ ಹೈದರಾಲಿಯ ವಿರುದ್ಧ ಯುದ್ಧವನ್ನು ಹೇಸ್ಟಿಂಗ್ಸ್ ಸಾರಿದನು. ಇದು ಇತಿಹಾಸದಲ್ಲಿ ಮೊದಲನೆಯ ಮೈಸೂರು ಯುದ್ಧ ಎಂದು ಹೆಸರುಗಳಿಸಿದೆ. ಆದರೆ ಒಂದನೇ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಸೋತು ಮದರಾಸು ಒಪ್ಪಂದವನ್ನು ಮಾಡಿಕೊಳ್ಳಬೇಕಾಯ್ತು. ನಂತರ ಮರಾಠರು ಹೈದರನ ಮೇಲೆ ಯುದ್ಧ ಹೂಡಿದರು. ಮದ್ರಾಸ್ ಒಪ್ಪಂದದಂತೆ ಬ್ರಿಟಿಷರು ಹೈದರನಿಗೆ ಸಹಾಯಮಾಡಲಿಲ್ಲ. ಇದರಿಂದಾಗಿ ಹೈದರನು ೧೭೮೦ರಲ್ಲಿ ಬ್ರಿಟಿಷರ ಆರ್ಕಾಟನ್ನು ಮುತ್ತಿ ಪ್ರಬಲ ವಿರೋಧವನ್ನುಂಟುಮಾಡಿದನು. ಆದರೆ ಅವನು ಸೋಲಿಂಗರ್‌ನಲ್ಲಿ ಸೋತು ‘ನಾಗಪಟ್ಟಣ’ ಮುಂತಾದುವನ್ನು ಬ್ರಿಟಿಷರಿಗೆ ಬಿಟ್ಟು ಕೊಡಬೇಕಾಯ್ತು. ನಂತರ ಟಿಪ್ಪುಸುಲ್ತಾನನು ಯುದ್ಧವನ್ನು ಮುಂದುವರೆಸಿ, ಬ್ರಿಟಿಷರಿಗೆ ಅಪಮಾನವಾಗುವಂತಹ ಮಂಗಳೂರು ಒಪ್ಪಂದವನ್ನು ಮಾಡಿಕೊಂಡನು.

ಹೇಸ್ಟಿಂಗ್ಸ್‌ನ ನಂತರ ಮ್ಯಾಕ್‌ಫರ್‌ಸನ್ ಎಂಬುವನು ಹಂಗಾಮಿ ಗೌರ್ನರ್ ಆಗಿ ಒಂದೂವರೆ ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಅನಂತರ ಲಾರ್ಡ್‌‌ಕಾರ್ನವಾಲೀಸನು (೧೭೮೬-೧೭೯೩) ಗೌರ‍್ನರ್ ಜನರಲ್ ಆಗಿ ನೇಮಕಕೊಂಡನು. ಈತನ ಕಾಲದಲ್ಲಿ ಬ್ರಿಟಿಷರಿಗೂ ಟಿಪ್ಪೂಸುಲ್ತಾನನಿಗೂ ೩ನೇ ಮೈಸೂರು ಯುದ್ಧ ನಡೆದು ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣವನ್ನು ಮುತ್ತಿದನು. ೧೭೯೨ರಲ್ಲಿ ಟಿಪ್ಪು ಸೋತು ಶ್ರೀರಂಪಟ್ಟಣ ಒಪ್ಪಂದವನ್ನು ಮಾಡಿಕೊಂಡು ತನ್ನ ರಾಜ್ಯದ ಅರ್ಧಭಾಗವನ್ನು ಬ್ರಿಟಿಷರಿಗೆ ಬಿಟ್ಟು ಕೊಡಬೇಕಾಯ್ತು ಮತ್ತು ಈ ನಂತರ ಸರ್‌ರ್ಜಾನ್‌ಶೂರ್ ಕೆಲಕಾಲ ಗೌರ್ನರ್ ಹುದ್ದೆಯನ್ನು ಅಲಂಕರಿಸಿದ್ದನು.

ಅನಂತರ ಲಾರ್ಡ್‌ವೆಲ್ಲೆಸ್ಲಿಯು (೧೭೯೮-೧೮೦೫) ಗೌರ‍್ನರ್ ಜನರಲ್ ಆಗಿ ನೇಮಕಗೊಂಡು ೧೭೯೯ರಲ್ಲಿ ೪ನೇ ಮೈಸೂರು ಯುದ್ಧವನ್ನು ಟಿಪ್ಪುಸುಲ್ತಾನನ ವಿರುದ್ಧ ಹೂಡಿದನು. ಈ ಯುದ್ಧದಲ್ಲಿ ಟಿಪ್ಪುಸುಲ್ತಾನನು ಹೋರಾಡಿ ರಣರಂಗದಲ್ಲಿ ಮಡಿದನು. ಇದರಿಂದ ಬ್ರಿಟಿಷರಿಗೆ ಪಶ್ಚಿಮದಲ್ಲಿ ಕನರಾ, ದಕ್ಷಿಣದಲ್ಲಿ ಕೊಯಮತ್ತೂರು ಮತ್ತು ಪೂರ್ವದ ಕೆಲವು ಜಿಲ್ಲೆಗಳು ಸೇರಿದವು ಮತ್ತು ಕೋರಮಂಡಲ ತೀರಪ್ರದೇಶದಿಂದ ಮಲಬಾರ್ ತೀರ ಪ್ರದೇಶದವರೆಗೂ ಚಾಚಿಕೊಂಡಿದ್ದ ಕಂಪನಿಯ ಪ್ರದೇಶಗಳು ಬ್ರಿಟಿಷರ ವಶವಾಯಿತು. ವೆಲ್ಲೆಸ್ಲಿಯು ಸಹಾಯಕ ಸೈನಿಕ ಪದ್ಧತಿಯನ್ನು ಜಾರಿಗೆ ತಂದು ನಿಜಾಮರನ್ನು ಅದರ ಪರಿಧಿಗೆ ಒಳಪಡಿಸಿದನು. ಇದರಿಂದ ಮರಾಠರೊಡನೆ ವೆಲ್ಲೆಸ್ಲಿ ಯುದ್ಧಕ್ಕೆ ನಿಲ್ಲಬೇಕಾಯ್ತು. ಅಲ್ಲದೆ ಮರಾಠರು ಒಳಜಗಳ ಗಳಿಂದ ಕೂಡಿದ್ದರಿಂದ ವೆಲ್ಲೆಸ್ಲಿಗೆ ಅನುಕೂಲವೇ ಆಯಿತು. ಅವನು ಪೇಶ್ವೆಯೊಡನೆ ೧೮೦೨ರಲ್ಲಿ ಬೆನ್ಸಿನ್ ಒಪ್ಪಂದವನ್ನು ಮಾಡಿಕೊಂಡು ಸಹಾಯಕ ಸೈನಿಕ ಪದ್ಧತಿಯೊಳಗಡೆ ಅವನು ಸೇರುವಂತೆ ಮಾಡಿದನು. ಮತ್ತು ಹೋಳ್ಕರನ ಸೇನೆಯನ್ನು ಸೋಲಿಸಿದನು. ಬೆನ್ಸಿನ್ ಒಪ್ಪಂದದಿಂದ ಅತೃಪ್ತರಾಗಿದ್ದ ಮರಾಠರು ಒಟ್ಟುಗೂಡಿ ಬ್ರಿಟಿಷರ ವಿರುದ್ಧ ಯುದ್ಧ ಹೂಡಿದರು.ಈ ಯುದ್ಧವು ಎರಡನೆ ಮಹಾಯುದ್ಧ ಎಂದು ಹೆಸರುಗಳಿಸಿದೆ (೧೮೦೩-೦೫). ಈ ಯುದ್ಧದಲ್ಲಿ ಬ್ರಿಟಿಷ್ ಸೇನೆ ಜಯಗಳಿಸಿ ಮರಾಠರ ಒಕ್ಕೂಟವನ್ನು ಛಿಧ್ರಗೊಳಿಸಿ ಸಿಂಧ್ಯ ಮತ್ತು ಬೋಸ್ಲೆಯೂ ಸಹ ಸಹಾಯಕ ಸೈನ್ಯಪದ್ಧತಿಗೆ ಒಪ್ಪಿಕೊಳ್ಳುವಂತೆ ಮಾಡಲಾಯಿತು. ದೋಬ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದರಿಂದ ಮತ್ತು ದೆಹಲಿ, ಆಗ್ರಾಗಳ ಮೇಲೆ ಬ್ರಿಟಿಷರು ಅಧಿಕಾರ ಸ್ಥಾಪಿಸಿದ್ದರಿಂದ ರಾಜ್ಯದ ಗಡಿಯ ಉತ್ತರದಲ್ಲಿ ಹಿಮಾಲಯದವರೆಗೂ ವಿಸ್ತರಿಸಿತ್ತು. ಇದರ ಜೊತೆಗೆ ಬುಂದೇಲ್‌ಖಂಡ ಮತ್ತು ಗುಜರಾತ್‌ಗಳ ಸಂಪದ್ಭರಿತವಾದ ಹಲವಾರು ಜಿಲ್ಲೆಗಳನ್ನು ಬ್ರಿಟಿಷರು ವಶಪಡಿಸಿಕೊಂಡರು. ಬಹುಷ: ಇಂಗ್ಲಿಷರ ಪ್ರಬಲ ಶತ್ರುಗಳೆಲ್ಲರೂ ಸಾಮಾನ್ಯವಾಗಿ ವೆಲ್ಲೆಸ್ಲಿಯ ಕಾಲದಲ್ಲಿ ಕೊನೆಗೊಂಡರು ಎನ್ನಬಹುದು ಮತ್ತು ಅವನೊಬ್ಬ ಸಾಮ್ರಾಜ್ಯಶಾಹಿಯಾಗಿದ್ದನು.

ನಂತರ ಬಂದ ಸರ್‌ಜಾರ್ಜ್‌ ಬಾರ್ಲೋನು ೧೮೦೫ರಲ್ಲಿ ಸಿಂಧ್ಯನೊಡನೆ ಒಪ್ಪಂದ ಮಾಡಿಕೊಂಡು ಆತನಿಂದ ಗ್ವಾಲಿಯರ್ ಮತ್ತು ಗೋಹದ್ ಭಾಗಗಳನ್ನು ಪಡೆದನು. ನಂತರ ಬಾರ್ಲೋ ೧೮೦೬ರಲ್ಲಿ ರಣಜಿತ್ ಸಿಂಗ್‌ನೊಡನೆ ಲಾಹೋರ್ ಒಪ್ಪಂದವನ್ನು ಮಾಡಿಕೊಂಡು ಅವರನ್ನು ಬ್ರಿಟಿಷರ ಸ್ನೇಹಿತರನ್ನಾಗಿ ಮಾರ‍್ಪಡಿಸಿದನು. ೧೮೧೩ರಲ್ಲಿ ಲಾರ್ಡ್ ಹೇಸ್ಟಿಂಗ್ಸ್‌ನು ಭಾರತದ ಗೌರ‍್ನರ್ ಜನರಲ್ ಆಗಿ ಬಂದನು. ಇವನ ಕಾಲದಲ್ಲಿ ೧೮೧೪ರಲ್ಲಿ ನೇಪಾಳದ ಘೂರ್ಖರನ್ನು ಮತ್ವಾನಪುರ ಎಂಬಲ್ಲಿ ಸೋಲಿಸಿ ಅವನು ‘ಸಗೌಲಿ’ ಒಪ್ಪಂದಕ್ಕೆ ಒಪ್ಪಿಕೊಂಡು ತುಮಾಗ್ ಮತ್ತು ‘ಗರ್ಹಮಲ್’ ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಡುವಂತೆ ಮಾಡಿದನು. ಸಿಮ್ಲಾವೂ ಕೂಡ ಬ್ರಿಟಿಷರ ವಶವಾಗಿತ್ತು. ಹೇಸ್ಟಿಂಗ್ಸನು ೧೮೧೭-೧೮ರಲ್ಲಿ ಮೂರನೇ ಮರಾಠ ಯುದ್ಧವನ್ನು ಕೈಗೊಂಡು ಹೋಳ್ಕರನನ್ನು ಮಹಿಂದಪುರದಲ್ಲಿ ಸೋಲಿಸಿದನು. ಸಿಂಧ್ಯ ಮತ್ತು ಗಾಯಕವಾಡನು ಸಹ ಸೋಲನ್ನು ಅನುಭವಿಸಿದನು. ಇದರಿಂದಾಗಿ ನರ್ಮದಾ ನದಿಯ ದಕ್ಷಿಣದ ಪ್ರದೇಶ ಅಜ್ಮೀರ್, ಅಹಮದಾಬಾದ್ ಸೇರಿತಲ್ಲದೆ ಸತಾರದ ರಾಜನು ಬ್ರಿಟಿಷರಿಗೆ ಅಧೀನನಾದನು. ಆಗ ಬ್ರಿಟಿಷರ ಅಧಿಕಾರವು ಸಟ್ಲೇಜ್ ನದಿಯಿಂದ ಬ್ರಹ್ಮಪುತ್ರಾ ನದಿಯವರೆಗೂ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ವ್ಯಾಪಿಸಿತ್ತು.

೧೮೨೩ರಲ್ಲಿ ಲಾರ್ಡ್ ಆಮ್‌ಹರ್ಸ್ಟ್‌ನು ಭಾರತದ ಗೌರ್ನರ್ ಜನರಲ್ ಆಗಿ ನೇಮಕಗೊಂಡನು. ಇವನು ೧೮೨೪ರಲ್ಲಿ ಬರ್ಮಿಯರ ವಿರುದ್ಧ ಯುದ್ಧ ಕೈಗೊಂಡನು. ೧೮೨೧-೨೨ರಲ್ಲಿ ಬರ್ಮೀಯರು ಚಿತ್ತಗಾಂಗ್ ಪ್ರದೇಶವನ್ನು ಗೆದ್ದುಕೊಂಡರು. ಇದರಿಂದಾಗಿ ಆಮ್‌ಹರ್ಸ್ಟ್‌ನು ಬರ್ಮೀಯರ ಮೇಲೆ ಯುದ್ಧ ಸಾರಬೇಕಾಯಿತು. ಕ್ಯಾಂಪ್ಬೆಲ್‌ನು ಸೇನೆಯೊಡನೆ ಹೊರಟು ರಂಗೂನನ್ನು ವಶಪಡಿಸಿಕೊಂಡನು.೧೮೨೫ರಲ್ಲಿ ಕೆಳಗಣ ಬರ್ಮಾವನ್ನು ವಶಪಡಿಸಿಕೊಂಡ ಬ್ರಿಟಿಷ್ ಸೇನೆಯು ರಾಜಧಾನಿಯಾದ ಯೂನ್ದಬೂಗೆ ಮುನ್ನುಗ್ಗಿತು. ಬರ್ಮಿಯರು ಸೋತು ೧೮೨೬ರಲ್ಲಿ ಯಾಂಡ್‌ಬೋ ಒಪ್ಪಂದವನ್ನು ಮಾಡಿಕೊಂಡರು. ಈ ಯುದ್ಧವು ಪ್ರಥಮ ಬರ್ಮಾ ಯುದ್ಧವೆಂದು ಹೆಸರಾಗಿದೆ. ೧೮೨೬ರ ಒಪ್ಪಂದದ ಪ್ರಕಾರ ಒಂದು ಕೋಟಿ ರೂಪಾಯಿಗಳನ್ನು ಯುದ್ಧ ನಷ್ಟ ಪರಿಹಾರವಾಗಿ ಬ್ರಿಟಿಷರಿಗೆ ಕೊಡಲೊಪ್ಪಿದರು. ಅರಕಾನ್ ಮತ್ತು ತೆನಾಸೆರ‍್ರಿಮ್ ಭಾಗಗಳನ್ನು ಸಹಾ ಬಿಟ್ಟುಕೊಟರು. ಈ ಯುದ್ಧದ ವಿಜಯದಿಂದಾಗಿ ಬ್ರಿಟಿಷರಿಗೆ ಅಸ್ಸಾಂ, ಕಾಚಾರ್ ಮತ್ತು ಮಣಿಪುರಗಳು ಬ್ರಿಟಿಷರ ಆಶ್ರಿತ ಸಂಸ್ಥಾನಗಳಾದವು. ಲಾರ್ಡ್ ವಿಲಿಯಂ ಬೆಂಟಿಂಕನು ಸಿಂಧ್‌ನ ಅಮೀರನೊಂದಿಗೆ ಹಾಗೂ ಸಿಖ್ಖರ ದೊರೆ ರಣಜಿತ್‌ನೊಂದಿಗೂ ಕಲವು ಒಪ್ಪಂದಗಳನ್ನು ಮಾಡಿಕೊಂಡರು. ಈ ಒಪ್ಪಂದಗಳು ವಾಯುವ್ಯ ಸರಹದ್ದಿನ ಕಡೆಯಿಂದ ಬ್ರಿಟಿಷರಿಗೆ ರಕ್ಷಣೆಯನ್ನು ಒದಗಿಸಿದವು ಎನ್ನಬಹುದು. ನಂತರ ಬೆಂಟಿಂಕನು ೧೮೩೧ರಲ್ಲಿ ಮೈಸೂರಿನ ರಾಜನ ಆಡಳಿತ ಅಸಮರ್ಪಕವಾಗಿದೆ ಎಂಬ ಕಾರಣದಿಂದ ತಾನೇ ಆಡಳಿತವನ್ನು ವಹಿಸಿಕೊಂಡು ರಾಜರನ್ನು ನಿವೃತ್ತಿಗೊಳಿಸಿದನು ನಂತರ ಗೌರ‍್ನರ್ ಜನರಲ್ ಆಗಿ ಭಾರತಕ್ಕೆ ಬಂದ ಲಾರ್ಡ್ ಆಕ್ಲೆಂಡ್ (೧೮೩೬) ಆಫಘಾನಿಸ್ಥಾನದಮೇಲೆ ತನ್ನ ಗಮನಹರಿಸಬೇಕಾಯಿತು. ಇದು ಪ್ರಥಮ ಆಫಘನ್ ಯುದ್ಧ ಎಂಬುದಾಗಿ ಪರಿಚಿತವಾಗಿದೆ. ೧೮೩೮ರಲ್ಲಿ ದೋಸ್ತ್ ಮಹಮದ್‌ನನ್ನು ಪದಚ್ಯುತಗೊಳಿಸಿ ಷಾಷೂಜನನ್ನು ಅಧಿಕಾರಕ್ಕೆ ತರಲಾಯಿತು. ಜನರು ಅತೃಪ್ತಿಯಿಂದ ದಂಗೆಯೆದ್ದರು. ೧೮೪೦ರಲ್ಲಿ ದೋಸ್ತ್ ಮಹಮದ್ ಸೋತು ಬ್ರಿಟಿಷರಿಗೆ ಶರಣಾದನು.ಮತ್ತು ೧೮೪೧ ಬ್ರಿಟಷರ ಸೈನ್ಯವು ಕಾಬೂಲನ್ನು ವಶಪಡಿಸಿಕೊಂಡಿತು. ಆದರೆ ಕೊನೆಗೆ ಬ್ರಿಟಿಷರೆ ಆಫಘಾನಿಸ್ಥಾನದಿಂದ ಹಿಂದಿರುಗಬೇಕಾಯಿತು. ಏಕೆಂದರೆ ದಂಗೆಕೋರರು ಬ್ರಿಟಿಷರೇ ವಸಾಹತುವನ್ನು ವಶಪಡಿಸಿಕೊಂಡು ಸ್ವತಂತ್ರವನ್ನು ಘೋಷಿಸಿಕೊಂಡರು. ನಂತರ ಹಾರ್ಡಿಂಜ್ (೧೮೪೪-೪೮)ನ ಕಾಲದಲ್ಲಿ ಸಿಖ್‌ರನ್ನು ಯುದ್ಧದಲ್ಲಿ ಸೋಲಿಸಲಾಯ್ತು.

೧೮೪೫-೪೬ರಲ್ಲಿ ನಡೆದ ಪ್ರಥಮ ಸಿಖ್ ಯುದ್ಧದಲ್ಲಿ ಸಿಖ್‌ರು ಸೋತಿದ್ದರೂ ಯುದ್ಧವು ನಿರ್ಣಾಯಕವಾಗಿ ಮುಗಿದಿರಲಿಲ್ಲ. ಅಸಮಾಧಾನದಿಂದ ಕೂಡಿದ್ದ ಸಿಖ್‌ರು ಡಾಲ್‌ಹೌಸಿಯ ಕಾಲದಲ್ಲಿ ಎರಡನೆಯ ಸಿಖ್ ಯುದ್ಧವನ್ನು ಮಾಡಿದರು. ೧೮೪೮ ಅಕ್ಟೋಬರ್ ೧೦ರಂದು ಡಾಲ್‌ಹೌಸಿಯು ಒಂದು ಘೋಷಣೆಯನ್ನು ಹೊರಡಿಸಿ ಯಾವ ಮುನ್ಸೂಚನೆಯನ್ನು ಕೊಡದೆ ಮತ್ತು ಹಿಂದಿನ ಕಟ್ಟುಪಾಡುಗಳನ್ನು ಗಣನೆಗೆ ತಾರದೇ ಯುದ್ಧವನ್ನು ಘೋಷೊಸಿರುವ ಸಿಖ್‌ರ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿ ಸಾರಿದನು. ನವೆಂಬರ್ ೧೬ರಂದು ಲಾರ್ಡ್ ಗಾಘನ ನಾಯಕತ್ವದಲ್ಲಿ ಬ್ರಿಟಿಷ್‌ಸೇನೆ ರಾವಿ ನದಿಯನ್ನು ದಾಟಿ ಚೀನಾಬ್ ನದಿ ತೀರದಲ್ಲಿ ನಡೆದ ಕದನದಲ್ಲಿ ಬ್ರಿಟಿಷರಿಗೆ ಜಯ ದೊರಕಲಿಲ್ಲ. ಇದೇ ಸೈನ್ಯ ೧೮೪೯ರ ಜನವರಿಯಲ್ಲಿ ಗುಜರಾತ್ ಜಲಿಯನ್‌ವಾಲ ಎಂಬಲ್ಲಿ ಸಿಖ್‌ಸೇನೆಯನ್ನು ಸಂಧಿಸಿತು. ಇಲ್ಲಿ ನಡೆದ ಕದನದಲ್ಲಿ ಬ್ರಿಟಿಷರು ಅಪಾರ ನಷ್ಟವನ್ನು ಅನುಭವಿಸಿದರು. ಆದರೆ ಮಾರ್ಚ್ ತಿಂಗಳಲ್ಲಿ ಸಿಖ್‌ರನ್ನು ಸಂಪೂರ್ಣವಾಗಿ ಸೋಲಿಸಿ ‘ಖಾಲ್ಸಾ’ ಸೈನ್ಯವನ್ನು ಬ್ರಿಟಿಷರು ತಮ್ಮ ವಶಕ್ಕೆ ತೆಗೆದುಕೊಂಡರು ಮತ್ತು ಪಂಜಾಬ್ ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನವಾಯ್ತು. ಡಾಲ್‌ಹೌಸಿಯು ೧೮೨೬ರ ಯಾಂಡ್‌ಬೊ ಒಪ್ಪಂದವನ್ನು ಉಲ್ಲಂಘಿಸಿದ ಬರ್ಮಿಯರ ವಿರುದ್ಧ ೨ನೇ ಬರ್ಮಾ ಯುದ್ಧವನ್ನು ೧೮೫೨ರಲ್ಲಿ ಮಾಡಿದನು. ಈ ಯುದ್ಧದಲ್ಲಿ ಬ್ರಿಟಿಷರು ಮಾರ್ಟ್‌ಬನ್, ರಂಗೂನ್, ಬೆಸ್ಸಿನ್ ಮುಂತಾದುದನ್ನು ವಶಪಡಿಸಿಕೊಂಡರು. ಪೆಗುಪ್ರಾಂತವು ಸಹ ಅವರ ಅಧೀನಕ್ಕೆ ಒಳಪಟ್ಟಿತು. ಈ ಯುದ್ಧದ ಮುಕ್ತಾಯದೊಂದಿಗೆ ಬ್ರಿಟಿಷ್ ಸಾಮ್ರಾಜ್ಯ ಕನ್ಯಾಕುಮಾರಿಯಿಂದ ಮಲಯಾ ದ್ವೀಪದವರೆಗೆ ಇರುವ ಬಂಗಾಳಕೊಲ್ಲಿಯ ಪ್ರದೇಶದಲ್ಲಿ ಹರಡಿತ್ತು. ಇವೆಲ್ಲಕ್ಕಿಂತಲೂ ಮಿಗಿಲಾಗಿ ಲಾರ್ಡ್ ಡಾಲ್‌ಹೌಸಿಯು ಅನುಸರಿಸಿದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಿಂದಾಗಿ ಬ್ರಿಟಿಷರ ಸಾಮ್ರಾಜ್ಯ ಮತ್ತಷ್ಟು ವಿಶಾಲವಾಗಿ ವಿಸ್ತರಣೆ ಹೊಂದಿತು. (೧೮೪೮) ಈ ನೀತಿಯ ಪ್ರಕಾರ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿರುವ ರಾಜ್ಯಗಳು ಕಂಪನಿಯ ಅನುಮತಿಯಿಲ್ಲದೆ ಸಿಂಹಾಸನಕ್ಕೆ ದತ್ತು ಪುತ್ರರನ್ನು ನೇಮಿಸಿಕೊಳ್ಳುವಂತಿರಲಿಲ್ಲ. ಒಂದು ಪಕ್ಷ ರಾಜನು ಪುತ್ರನಿಲ್ಲದೆ ಮರಣವನ್ನು ಅಪ್ಪಿದರೆ ಆ ರಾಜ್ಯವು ಬ್ರಿಟಿಷರ ಸಾಮ್ರಾಜ್ಯಕ್ಕೆ ಸೇರಿಹೋಗುತ್ತಿತ್ತು. ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರ ವಿನಾಯತಿ ಇರುತ್ತಿತ್ತು.

ಈ ನೀತಿಯನ್ನು ಡಾಲ್‌ಹೌಸಿ ೧೮೪೮ರಲ್ಲಿ ಮೊದಲ ಬಾರಿಗೆ ಸತಾರ ರಾಜ್ಯದ ಮೇಲೆ ಪ್ರಯೋಗಿಸಿದನು. ನಂತರ ೧೮೪೯ರಲ್ಲಿ ಜಯಪುರದ (ಉತ್ತರ ಪ್ರದೇಶ) ಸಂಬಲ್‌ಪುರ (ಓರಿಸ್ಸಾ), ೧೮೫೦ರಲ್ಲಿ ಸಟ್ಲೇಜ್ ನದಿಯ ದಕ್ಷಿಣಕ್ಕಿರುವ ಬಘತ್ ಸಂಸ್ಥಾನ, ೧೮೫೨ರಲ್ಲಿ ಮಧ್ಯಪ್ರದೇಶದಲ್ಲಿರುವ ಉದಯಪುರ ಸಂಸ್ಥಾನ, ೧೮೫೩ರಲ್ಲಿ ಝಾನ್ಸಿ ಮತ್ತು ೧೮೫೪ರಲ್ಲಿ ನಾಗಪುರ ಸಂಸ್ಥಾನಗಳು ಈ ಬಗೆಯ ನೀತಿಗೆ ಬಲಿಯಾದವು. ಇದರಿಂದಾಗಿ ಬ್ರಿಟಿಷರ ಸಾಮ್ರಾಜ್ಯಕ್ಕೆ ಅನೇಕ ರೀತಿಯ ಲಾಭಗಳು ಲಭಿಸಿದವು. ಆದರೆ ಇದರಿಂದ ಹಿಂದೂ ರಾಜರು ಅತೃಪ್ತಿ ಹೊಂದಿ ಮುಂದೆ ಸಿಪಾಯಿದಂಗೆಯಲ್ಲಿ ರಾಜ್ಯವನ್ನು ಕಳೆದುಕೊಂಡವರು ಆ ದಂಗೆಯಲ್ಲಿ ಪಾಲ್ಗೊಂಡು ಬ್ರಿಟಿಷರಿಗೆ ತೀವ್ರ ತೊಂದರೆಯನ್ನು ನೀಡಿದರು ಮತ್ತು ಈ ದಿಶೆಯಲ್ಲಿ ಅದರ ಫಲಿತಾಂಸವು ೧೮೫೮ರ ಮಹಾರಾಣಿಯ ಘೋಷಣೆಯಾಗಿ ಹೊರಹೊಮ್ಮಿತು. ೧೮೫೦ರಲ್ಲಿ ಸಿಕ್ಕಿಂ ರಾಜ್ಯವನ್ನು ಸಹ ಬ್ರಿಟಿಷರು ವಶಪಡಿಸಿಕೊಂಡರು. ಇದಕ್ಕೆ ಅವರು ಕೊಟ್ಟ ಕಾರಣ, ಸಿಕ್ಕಿಂ ರಾಜನು ಬ್ರಿಟಿಷ್ ಅಧಿಕಾರಿಗಳಿಗೆ ಗೌರವವನ್ನು ನೀಡಲಿಲ್ಲ. ಎಂಬುದಾಗಿತ್ತು. ೧೮೫೫ರಲ್ಲಿ ಕರ್ನಾಟಕದ ನವಾಬನು ಮತ್ತು ತಂಜಾವೂರಿನ ಶಿವಾಜಿಯು ಮಕ್ಕಳಿಲ್ಲದೆ ಕಾಲವಾದ್ದರಿಂದ ಅವರ ಬಿರುದುಗಳನ್ನು ಬ್ರಿಟಿಷ್ ಸರಕಾರ ಕಸಿದುಕೊಂಡಿತು. ಅಯೋಧ್ಯೆ ಪ್ರಾಂತ್ಯವನ್ನು ಸಾಮ್ರಾಜ್ಯಕ್ಕೆ ಸೇರಿಸಿಕೊಂಡ ವಿಷಯವಂತೂ ಈತನ ಆಳ್ವಿಕೆಯಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ನವಾಬನಿಗೆ ವರ್ಷಕ್ಕೆ ೧೨ ಲಕ್ಷ ರೂಪಾಯಿಯನ್ನು ನಿವೃತ್ತಿ ವೇತನದಂತೆ ಕೊಡಲಾಯಿತು. ೧೮೫೭ರಲ್ಲಿ ಸಿಪಾಯಿ ದಂಗೆ ಅಥವಾ ಭಾರತದ ಸ್ವಾತಂತ್ರ ಸಂಗ್ರಾಮ ನಡೆದ ನಂತರ ಬ್ರಿಟಿಷ್ ಕಂಪನಿಯ ಧೋರಣೆಯಲ್ಲಿ ಸ್ವಲ್ಪ ಬದಲಾವಣೆಯುಂಟಾಯಿತು. ದಂಗೆಯನ್ನು ಅಡಗಿಸಿದ ಮೇಲೆ ಭಾರತದ ಆಡಳಿತವನ್ನು ಬ್ರಿಟಿಷರೆ ವಹಿಸಿಕೊಳ್ಳಲು ನಿರ್ಧರಿಸಿತು. ಗೌರ‍್ನರ ಜನರಲ್‌ಗೆ ವೈಸರಾಯ್‌ ಎಂಬ ಮತ್ತೊಂದು ಬಿರುದನ್ನು ನೀಡಲಾಯಿತು. ಬ್ರಿಟಿಷ್ ಸರಕಾರ ವೈಸರಾಯ್‌ನ ಮುಖಾಂತರ ನಡೆಸಲು ಪ್ರಾರಂಭಿಸಿತು. ಈ ರೀತಿಯಲ್ಲಿ ವಿಸ್ತರಣೆಯನ್ನು ಕಂಡಂತಹ ಬ್ರಿಟಿಷ್ ಷಾಮ್ರಾಜ್ಯವು ಮುಂದೆ ಲಾರ್ಡ್ ಲಿಟ್ಟನ್ ಕಾಲದಲ್ಲಿ ಎರಡನೇ ಆಫಘನ್ ಯುದ್ಧ ನಡೆದು (೧೮೭೬-೮೦) ೧೮೭೮ರಲ್ಲಿ ಖಾಂದಾಹಾರವನ್ನು ವಶಪಡಿಸಿಕೊಂದು ಯೂಕಬ್ ಖಾನ್‌ನೊಡನೆ ಗಂಡಮಕ್ ಒಪ್ಪಂದವನ್ನು ಮಾಡಿಕೊಳ್ಳಲಾಯ್ತು. ಆದರೆ ಈ ಒಪ್ಪಂದವು ಹೆಚ್ಚು ಕಾಲ ಉಳಿಯದೆ ಆಫಘನರು ಬ್ರಿಟಿಷ್ ರಾಯಭಾರಿಯನ್ನು ಕೊಳ್ಳುವ ಮೂಲಕ ಗಂಡಮಕ್ ಒಪ್ಪಂದವನ್ನು ಉಲ್ಲಂಘಿಸಿದರು. ೧೮೭೯ರಲ್ಲಿ ಮತ್ತೆ ಬ್ರಿಟಿಷರು ಘರನೀಯಾಬ್ ಕದನದಲ್ಲಿ ಆಫಘನರನ್ನು ಸೋಲಿಸಿದರು. ಈ ನಡುವೆ ಲಿಟ್ಟನ್‌ನನ್ನು ಹಿಂದಕ್ಕೆ ಕರೆಸಿಕೊಂಡು ಅವರ ಸ್ಥಾನಕ್ಕೆ ಲಾರ್ಡ್ ರಿಪ್ಟನ್‌ನ್ನನ್ನು ನೇಮಿಸಲಾಯಿತು (೧೮೮೦-೮೪). ರಿಪ್ಟನ್‌ನು ಚತುರತೆಯಿಂದ ಆಫಘಾನಿಸ್ತಾನವನ್ನು ಬ್ರಿಟಿಷರ ಅಂಕೆಗೆ ಒಳಪಡುವಂತೆ ಮಾಡಿದನು ಮತ್ತು ಇಂಗ್ಲೆಂಡ್ ವಿನಃ ಬೇರೆ ದೇಶಗಳೊಡನೆ ಯಾವ ರಾಜಕೀಯ ಸಂಪರ್ಕವನ್ನೂ ಇಟ್ಟುಕೊಳ್ಳ ಕೂಡದೆಂದು ಸೂಚಿಸಿದನು ಮತ್ತು ‘ಪಿಷಿನ್’ ಮತ್ತು ‘ಸಿಬಿ’ ಜಿಲ್ಲೆಗಳು ಬ್ರಿಟಿಷ್ ಸರಕಾರದ ಅಧೀನದಲ್ಲಿಯೇ ಉಳಿದುಕೊಂಡವು. ೧೮೮೫ರಲ್ಲಿ ಉತ್ತರ ಬರ್ಮಾ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಇಂಗ್ಲಿಷರು ಬರ್ಮಾದೊಡನೆ ಮತ್ತೊಂದು ಯುದ್ಧವನ್ನು ಮಾಡಿದರು. ಇದೇ ೩ನೇ ಬರ್ಮಾ ಯುದ್ಧವಾಗಿದ್ದು, ಈ ಯುದ್ಧದಲ್ಲಿ ಬ್ರಿಟಿಷರು ಸಂಪೂರ್ಣ ಬರ್ಮಾವನ್ನು ಗೆದ್ದುಕೊಂಡರು. (೧೮೮೭) ಆದರೆ ಆಡಳಿತ ನಿರ್ವಹಿಸಲು ಒಬ್ಬ ಲೆಫ್ಟಿನೆಂಟ್ ಗೌರರ್ನರನ್ನು ನೇಮಿಸಲಾಯಿತು. ಈ ಕಾರ್ಯ ಲಾರ್ಡ್‌ ‌ಡಫರಿನ್‌ನ ಕಾಲದಲ್ಲಿ ಜರುಗಿತು. ೧೮೯೯ರಲ್ಲಿ ವೈಸ್‌ರಾಯ್‌ ಆಗಿ ಬಂದ ಲಾರ್ಡ್ ಕರ್ಜನ್‌ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ದತ್ತು ಪುತ್ರನೆಂದು ಕರೆಯಬಹುದು. ಈತನ ವಿದೇಶಿಯ ಧೋರಣೆಯಲ್ಲಿ ಬ್ರಿಟಿಷರ ಕುತಂತ್ರ ಮತ್ತು ಯುದ್ಧ ನೀತಿಗಳು ಕಂಡು ಬರುತ್ತವೆ. ಇವನು ಭಾರತಕ್ಕೆ ಬಂದಾಗ ಬ್ರಿಟಿಷರಿಗೂ ಭಾರತೀಯರಿಗೂ ಸಂಬಂಧ ಹದಗೆಟ್ಟಿತು. ಆಫಘಾನಿಸ್ತಾನದಲ್ಲಿ ಹಬೀಬುಲ್ಲಾ ಸಿಂಹಾಸನವೇರಿದ. ಈತನು ಬ್ರಿಟಿಷರನ್ನು ಅನುಮಾನದಿಂದ ನೋಡಿದನು. ಮತ್ತು ಹೊಸ ಒಪ್ಪಂದ ಮಾಡಿಕೊಳ್ಳಲು ಬ್ರಿಟಿಷರು ಹಬೀಬುಲ್ಲಾನಿಗೆ ತಿಳಿಸಿದರು. ಆದರೆ ಅವನು ಸಮ್ಮತಿಸಲಿಲ್ಲ. ಯುದ್ಧ ಮಾಡಬೇಕು ಎಂದು ಎನಿಸಿದರೂ ಈ ಸಮಯದಲ್ಲಿ ಕರ್ಜನ್ ಸುಲಭವಲ್ಲ ಎಂಬುದನ್ನು ಅರಿತು ೧೯೦೪ರಲ್ಲಿ ತಾನು ಇಂಗ್ಲೆಂಡ್‌ಗೆ ಹೋಗಿದ್ದಾಗ, ಸರ್ ಲೂಯಿ ಡೇ ನ ನೇತೃತ್ವದಲ್ಲಿ ನಿಯೋಗವೆಂದು ಹೋಗಿ ಎರಡು ದೇಶಗಳ ನಡುವೆ ಒಪ್ಪಂದವನ್ನು ಏರ್ಪಡಿಸುವಲ್ಲಿ ಸಫಲನಾದನು. ಪರ್ಶಿಯಾ ಕೊಲ್ಲಿಯ ಮೇಲೆ ಬ್ರಿಟಿಷರು ಇತರರ ಹತೋಟಿಯನ್ನು ತಡೆಗಟ್ಟಲು ಕರ್ಜನ್ನನು ೧೮೯೯ರಲ್ಲಿ ನೌಕಾ ಸೈನ್ಯವೊಂದನ್ನು ಪರ್ಶಿಯಾ ಕೊಲ್ಲಿಗೆ ಕಳುಹಿಸಿ ಅಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸಿದನಲ್ಲದೆ ಫ್ರೆಂಚ್ ಸೇನಾಠಾಣೆಯನ್ನು ನಿಷೇಧಿಸಿದನು.

ಟಿಬೆಟ್ ಮೇಲೆ ಹೊಂದಿದ್ದ ಚೀನಾದ ಸಾರ್ವಭೌಮತ್ವವನ್ನು ಕೊನೆಗಾಣಿಸಲು ಟಿಬೆಟ್ಟಿನ ದಲೈಲಾಮನು ರಷ್ಯಾದೊಡನೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ಆರಂಭಿಸಿದನು. ಆದರೆ ಕರ್ಜನ್ ಇದನ್ನು ತಡೆಯಲು ಯತ್ನಿಸಿ ೧೯೦೪ರಲ್ಲಿ ರೀಜೆಂಟ್‌ನೊಡನೆ “ಲ್ಹಾಸ ಒಪ್ಪಂದ”ವನ್ನು ಮಾಡಿಕೋಂಡು ಟಿಬೆಟ್ಟಿನ ವಿದೇಶಾಂಗ ನೀತಿಯ ಮೇಲೆ ಬ್ರಿಟಷರು ಹತೋಟಿ ಹೊಂದುವಂತೆಯೂ ಮತ್ತು ‘ಚುಂಬಿ’ (ಸಿಕ್ಕಿಂ ಮತ್ತು ಭೂತಾನದ ನಡುವಿನ ಪ್ರದೇಶ) ಕಣಿವೆಯನ್ನು ತಮ್ಮ ಅಧೀನಕ್ಕೆ ಒಳಪಡಿಸಲು ಒಪ್ಪಿಸಿದನು.

ಹೀಗೆ ಬ್ರಿಟಿಷರು ೧೬೦೦ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಭಾರತದಲ್ಲಿ ಸ್ಥಾಪಿಸಿ ಕ್ರಮೇಣ ಇಲ್ಲಿಯ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡು ಕೇವಲ ಭಾರತವನ್ನೇ ಅಲ್ಲದೆ ಈಶಾನ್ಯ, ವಾಯುವ್ಯ ದಿಕ್ಕುಗಳ ರಾಜ್ಯಗಳ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡು ೧೯೦೪ರ ವರೆಗೆ ಒಂದು ಬೃಹತ್ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಈ ನಿಟ್ಟಿನಲ್ಲಿ ಗೌರ‍್ನರ್ ಜನರಲ್ ಆಗಿ ನೇಮಕಗೊಂಡಂತಹ ವ್ಯಕ್ತಿಗಳ ಚಾತುರ್ಯ ಸಾಧನೆಯನ್ನು ಬ್ರಿಟಿಷ್ ಸರಕಾರವು ಮೆಚ್ಚಲೇಬೇಕಾದುದ್ದು. ಆದರೆ ಬ್ರಿಟಿಷರು ಅನುಸರಿಸಿದ ದೇಶಿಯ ಮತ್ತು ವಿದೇಶಿ ನೀತಿಗಳಿಂದಾಗಿ ಭಾರತವು ಅಪಾರ ಕಷ್ಟನಷ್ಡವನ್ನು ಅನುಭವಿಸಿತು ಎಂಬುದನ್ನು ನೆನಪಿನಲ್ಲಿಡಬೇಕು. ಸಾಮ್ರಾಜ್ಯವನ್ನು ವಿಸ್ತರಿಸಿದರಲ್ಲದೆ ಅಲ್ಲಿ ತಮ್ಮ ಅಧಿಕಾರಿಗಳನ್ನು ರಾಜಪ್ರತಿ ನಿಧಿಗಳನ್ನಾಗಿ ನೇಮಿಸಿ ಆಯಾ ರಾಜ್ಯಗಳ ವ್ಯವಹಾರಗಳ ಮೇಲೆ ತಮ್ಮ ಹತೋಟಿಯನ್ನು ಹೊಂದಿದ ಯಾವ ರಾಜ್ಯವನ್ನು ಸ್ವತಂತ್ರ ಅಂಕೆಗೆ ಬಿಡದೆ ಉತ್ತಮ ಸಂಘಟನೆಯನ್ನು ಬ್ರಿಟಿಷೆರು ಏರ್ಪಡಿಸಿದ್ದರು. ಈ ರೀತಿಯ ಸಂಘಟನೆಯಿಂದಾಗಿ ಬ್ರಿಟಿಷರು ವಿಶಾಲ ಸಾಮ್ರಾಜ್ಯವನ್ನು ಏಕಕೇಂದ್ರದಿಂದ ನಿಯಂತ್ರಣ ಮಾಡಲು ಸಾಧ್ಯವಾಯಿತು. ಸಂಘಟನೆಯು ಛಿದ್ರವಾಗದಂತೆ ಪೂರ್ಣವಾಗಿ ಯಶಸ್ವಿಯಾದರು ಎನ್ನಬಹುದು.

ಬಂಗಾಳದೊಂದಿಗಿನ ಬ್ರಿಟಿಷರ ಸಂಬಂಧ

ಬ್ರಿಟಿಷರು ಭಾರತದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆದುದು ೧೭೫೭ರ ಪ್ಲಾಸಿ ಕದನದಿಂದಲೆ. ಬಂಗಾಳವು ಅತಿ ಫಲವತ್ತಾದ, ಶ್ರೀಮಂತವಾದ ಪ್ರಾಂತ್ಯ. ಇಲ್ಲಿನ ಕೈಗಾರಿಕೆ ಮತ್ತು ವ್ಯಾಪಾರೋದ್ಯಮವು ಅಭಿವೃದ್ಧಿ ಹೊಂದಿದ್ದಿತು. ಈಸ್ಟ್ ಇಂಡಿಯಾ ಕಂಪನಿಯು ತನ್ನ ಹೆಚ್ಚಿನ ವ್ಯಾಪಾರ ಆಸಕ್ತಿಯನ್ನು ಈ ಪ್ರಾಂತದಲ್ಲಿ ಹೊಂಧಿದ್ದಿತು. ಕಂಪನಿಯು ೧೭೧೭ರಲ್ಲಿ ಮೊಗಲ್ ದೊರೆಯಿಂದ ಪಡೆದ ಫರ್ಮಾನ್ (ಆದೇಶ)ದಿಂದಾಗಿ ಯಾವುದೇ ತೆರಿಗೆಯಿಲ್ಲದ ಬಂಗಾಳದಲ್ಲಿ ಆಮದು ಮತ್ತು ರಫ್ತು ಮಾಡುವ ಮುಕ್ತ ಅವಕಾಶ ಅವರಿಗೆ ಪಡೆಯಿತು ಮತ್ತು ದಸ್ತಕಗಳನ್ನು (ಅನುಮತಿ ಪತ್ರ) ಹೊರಡಿಸುವ ಹಕ್ಕು ಪಡೆಯಿತು. ೧೭೫೭ರಲ್ಲಿ ಅಲಿವರ್ದಿಖಾನ್‌ನ ನಂತರ ಅಧಿಕಾರಕ್ಕೆ ಬಂದ ಆತನ ಮೊಮ್ಮಗ ಚತುರ ನವಾಬ ಸಿರಾಜ್-ಉದ್-ದೌಲನು ಬ್ರಿಟಿಷ್ ಕಂಪನಿ ಪಡೆದಿದ್ದ ವಿಶೇಷ ಹಕ್ಕುಗಳನ್ನು ಒಪ್ಪಲು ನಿರಾಕರಿಸಿದನು. ಬ್ರಿಟಿಷರು ತನ್ನ ಅನುಮತಿ ಇಲ್ಲದೆ ಕಲ್ಕತ್ತದಲ್ಲಿ ನಿರ್ಮಿಸಿರುವ ಕೋಟೆಗಳನ್ನು ಕೆಡವಲು ಆಜ್ಞಾಪಿಸಿದನು. ಸಿರಾಜ್-ಉದ್-ದೌಲನು ಬ್ರಿಟಿಷರನ್ನು ಕೇವಲ ವ್ಯಾಪಾರಿಗಳಂತೆ ಮಾತ್ರ ಬಂಗಾಳದಲ್ಲಿರುವ ಅವಕಾಶ ನೀಡಲಿಚ್ಛಿಸಿದನೇ ಹೊರತು ಅವರೆಂದೂ ಬಂಗಾಳದ ಮಾಲೀಕರಾಗುವುದನ್ನು ಬಯಸಲಿಲ್ಲ. ೧೬೯೩ರಲ್ಲಿ ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು ಕಂಪನಿಗೆ ಪಾರ್ಲಿಮೆಂಟ್ ನೀಡಿದ್ದ ಅಧಿಕಾರ ಅಂತ್ಯ ಗೊಂಡಿತು. ಕಂಪನಿಯು ರಾಜ, ಪಾರ್ಲಿಮೆಂಟ್ ಮತ್ತು ಬ್ರಿಟನ್ನಿನ ರಾಜಕಾರಣಿಗಳಿಗೆ ಒಂದು ವರ್ಷದಲ್ಲಿ ೮೦,೦೦೦ ಪೌಂಡ್ ಹಣವನ್ನು ಲಂಚವಾಗಿ ನೀಡಿದರು. ಬಂಗಾಳದಲ್ಲಿ ತಮಗೆ ಸಂಪೂರ್ಣ ವ್ಯಾಪಾರದ ಸ್ವಾತಂತ್ರಕ್ಕೆ ಅನುಮತಿ ನೀಡುವಂತೆಯೂ, ಅವರ ಸ್ವಾತಂತ್ರಕ್ಕೆ ನವಾಬನ ಅಧಿಕಾರವು ಅಡ್ಡಿ ಬರಬಾರದಂತೆಯೂ ಇರುವಂತೆ ಪಾರ್ಲಿಮೆಂಟನ್ನು ಕೋರಿತು.

ಸಿರಾಜ್-ಉದ್-ದೌಲನು ಬ್ರಿಟಿಷರ ದಬ್ಬಾಳಿಕೆಯನ್ನು ಹತ್ತಿಕ್ಕಲು ನಿರ್ಧರಿಸಿ ಇಂಗ್ಲೀಷರ ಖಾಸಿಂ ಬಜಾರಿನ ವ್ಯಾಪಾರ ಕೋಟೆಯನ್ನು ಆಕ್ರಮಿಸಿ, ಕಲ್ಕತ್ತಾದ ಪೋರ್ಟ್ ವಿಲಿಯಂನ್ನು ೨೦ನೇ ಜೂನ್ ೧೭೫೬ರಂದು ಆಕ್ರಮಿಸಿದನು. ನವಾಬ ವಿರೋಧಗಳ ಬಲವನ್ನು ತಪ್ಪಾಗಿ ಗಣನೆ ಮಾಡಿ ತಪ್ಪು ಮಾಡಿದನು. ಬ್ರಿಟಿಷರು ನವಾಬನ ವಿರುದ್ಧ ಒಳಸಂಚು ಮಾಡಿ ಬಂಗಾಳದ ಸೇನಾ ದಂಡನಾಯಕ ಮೀರ್‌ಜಾಫರನನ್ನು ಪ್ರಮುಖ ಅಧಿಕಾರಿಗಳಾದ ಮಾನಿಕ್ ಚಂದ, ಮೀರ್ ಭಕ್ಷಿಯವರನ್ನು ಶ್ರೀಮಂತ ವ್ಯಾಪಾರಿ ಅಮಿಚಂದನನ್ನು, ಪ್ರಸಿದ್ಧ ಲೇವಾದೇವಿದಾರನಾದ ಜಗತ್‌ಸೇಠನನ್ನು ತಮ್ಮೆಡೆಗೆ ಸೆಳೆದುಕೊಂಡರು. ಪ್ಲಾಸಿ ಕದನವು ೨೩ನೇ ಜೂನ್ ೧೭೫೭ರಲ್ಲಿ ನವಾಬ ಸಿರಾಜ್-ಉದ್-ದೌಲ ಮತ್ತು ರಾಬರ್ಟ್ ಕ್ಲೈವ್ ನಡುವೆ ಮುರ್ಷಿದಾ ಬಾದ್‌ನಿಂದ ೩೦ ಕಿ.ಮೀ. ದೂರದಲ್ಲಿರುವ ಪ್ಲಾಸಿ ಎಂಬಲ್ಲಿ ನಡೆಯಿತು. ಈ ಕದನದಲ್ಲಿ ಕ್ಲೈವ್ ಜಯಗಳಿಸಿದನು. ಈ ಕದನದಲ್ಲಿ ಬ್ರಿಟಿಷರ ೨೯ ಮಂದಿ ಸೈನಿಕರು, ನವಾಬನ ೫೦೦ ಮಂದಿ ಸೈನಿಕರು ಹತರಾದರು. ಬಂಗಾಳದ ನವಾಬನ ಸೋಲಿಗೆ ಕಾರಣ ಅವನ ಸೇನೆಯ ನೇತೃತ್ವವಹಿಸಿದ್ದ ಮೀರ್‌ಜಾಫರ್ ಮತ್ತು ರಾಯ್‌ ದುರ್ಲಬರ ನಿರ್ಲಿಪ್ತತೆ. ಸೋತ ಸಿರಾಜ್-ಉದ್-ದೌಲ ಪಾಟ್ನಾಕ್ಕೆ ಓಡಿಹೋದನು. ಆದರೂ ಸಹ ಸೆರೆ ಸಿಕ್ಕಿ ಕೊಲೆಯಾದನು. ಈ ಕದನದಿಂದ ಕಂಪನಿಯು ಮೀರ್‌ಜಾಫರ್‌ನನ್ನು ಬಂಗಾಳದ ನವಾಬನಾಗಿ ನೇಮಿಸಿತು. ಬಂಗಾಳ, ಬಿಹಾರ ಮತ್ತು ಒರಿಸ್ಸಾ ರಾಜ್ಯದಲ್ಲಿ ಯಾವುದೇ ತಡೆಯಿಲ್ಲದ ಮುಕ್ತ ವ್ಯಾಪಾರದ ಅಧಿಕಾರ ಪಡೆಯಿತು. ೨೪ ಪರಗಣಗಳ ಜಮೀನ್ದಾರಿ ಹಕ್ಕು, ಕಲ್ಕತ್ತದ ಮೇಲೆ ದಾಳಿ ಮಾಡಿದುದರ ಪರಿಣಾಮವಾಗಿ ೧,೭೭,೦೦,೦೦೦ ರೂ.ಗಳನ್ನು ಪಡೆದರು. ಇಷ್ಟೇ ಅಲ್ಲದೆ ದೊಡ್ಡ ಮೊತ್ತದ ಕೊಡುಗೆಗಳು ಅಥವ ಲಂಚವನ್ನು ಕಂಪನಿಯ ಉನ್ನತ ಅಧಿಕಾರಿಗಳು ಪಡೆದರು. ರಾಬರ್ಟ್ ಕ್ಲೈವನು ೨೦ ಲಕ್ಷ ರೂ.ಗಳನ್ನು, ವ್ಯಾಟನು ೧೦ ಲಕ್ಷ ರೂ. ಗಳನ್ನು, ಕಂಪನಿಯ ಇತರ ನೌಕರರು ನವಾಬ ಮೀರ್‌ಜಾಫರ್‌ನಿಂದ ೩ ಕೋಟಿ. ರೂ.ಗಳನ್ನು ವಸೂಲಿ ಮಾಡಿದರು ಮತ್ತು ಬ್ರಿಟಿಷ್ ವ್ಯಾಪಾರಿಗಳು ಮತ್ತು ಅಧಿಕಾರಿಗಳು ನಡೆಸುವ ಖಾಸಗಿ ವ್ಯಾಪಾರಕ್ಕೆ ಯಾವುದೇ ತೆರಿಗಗಳನ್ನು ವಿಧಿಸುವಂತಿರಲಿಲ್ಲ. ಪ್ಲಾಸಿಯ ಗೆಲವು ಬ್ರಿಟಿಷರ ಪ್ರತಿಷ್ಠೆಯನ್ನು ಹೆಚ್ಚಿಸಿತು. ಬಂಗಾಳದ ಹೆಚ್ಚಿನ ಕಂದಾಯದ ಸಹಾಯದಿಂದ ಬಲವಾದ ಸೈನ್ಯ ನಿರ್ಮಿಸಿ ಭಾರತದ ಇತರ ಭಾಗಗಳನ್ನು ಆಕ್ರಮಿಸಲು ಸಹಾಯವಾಯಿತು. ಕಂಪನಿಯ ಅಧಿಕಾರಿಗಳು ಅಸಹಾಯಕ ನಾಗರಿಕರ ಹತ್ತಿರ ಲೆಕ್ಕವಿಲ್ಲದಷ್ಟು ಸಂಪತ್ತನ್ನು ದೋಚಿದರು. ಬ್ರಿಟಿಷರ ಹಣ ದಾಹವನ್ನು ಪೂರೈಸಲು ವಿಫಲನಾದ ಮೀರ್‌ಜಾಫರ್ ಬದಲು ಆತನ ಅಳಿಯ ಮೀರ್‌ಕಾಸಿಮ್‌ನನ್ನು ಕ್ರಿ.ಶ.೧೭೬೦ರಲ್ಲಿ ನವಾಬನನ್ನಾಗಿಸಿದರು. ಖಾಸಿಮ್‌ನು ಕಂಪನಿಗೆ ಬರ್ದ್ವಾನ, ಮಿಡ್ನಾಪುರ, ಚಿತ್ತಗಾಂಗ್ ಪ್ರದೇಶದ ಜಮೀನ್ದಾರಿ ಹಕ್ಕನ್ನು ಬಿಟ್ಟುಕೊಟ್ಟನು. ಅಷ್ಟೇ ಅಲ್ಲದೆ ಹಿರಿಯ ಇಂಗ್ಲಿಷ್ ಅಧಿಕಾರಿಗಳಿಗೆ ೨೯ ಲಕ್ಷ ರೂ.ಗಳ ಕಾಣಿಕೆಯನ್ನು ಸಲ್ಲಿಸಿದನು. ಖಾಸಿಮ್ ಸಮರ್ಥ, ದಕ್ಷ ಆಡಳಿತಗಾರ. ಈತ ಖಜಾನೆಯ ಸುಭದ್ರತೆ ಮತ್ತು ಪ್ರಬಲ ಸೈನ್ಯದಿಂದ ಮಾತ್ರ ತನ್ನ ಸ್ವಾತಂತ್ರ ರಕ್ಷಣೆ ಸಾಧ್ಯವೆಂದು ಅರಿತನು. ೧೭೧೭ರಲ್ಲಿ ಫರ್ಮಾನನ್ನು ಮತ್ತು ದಸ್ತಕ (ಉಚಿತ ಪ್ರವೇಶ ಪತ್ರ, ತೆರಿಗೆ ರಹಿತ ಪ್ರವೇಶ ಪತ್ರ)ಗಳನ್ನು ಬ್ರಿಟಿಷರು ಭಾರತೀಯ ವ್ಯಾಪಾರಿಗಳಿಗೂ ನೀಡಿ ಸರ್ಕಾರಕ್ಕೆ ಮೋಸ ಮಾಡಲಾರಂಭಿಸಿದರು. ಹಲವು ಬ್ರಿಟಿಷ್ ವ್ಯಾಪಾರಿಗಳು ಮತ್ತು ಅಧಿಕಾರಿಗಳು, ಭಾರತೀಯ ರೈತರು, ಕುಶಲ ಕರ್ಮಿಗಳು ಮತ್ತು ವ್ಯಾಪಾರಿಗಳನ್ನು ಕಡಿಮೆ ಬೆಲೆಗೆ ಅವರು ಉತ್ಪಾದಿಸಿದ ವಸ್ತುಗಳನ್ನು ಬ್ರಿಟಿಷರಿಗೆ ನೀಡಬೇಕೆಂದು ಬಲಾತ್ಕರಿಸುತ್ತಿದ್ದರು. ವಿರೋಧಿಸಿದವರನ್ನು ಬಂಧಿಸುತ್ತಿದ್ದರು. ಮೀರ್‌ಖಾಸಿಮ್‌ನು ಬ್ರಿಟಿಷರಿಗೆ ನೀಡಿದ್ದ ವ್ಯಾಪಾರದಲ್ಲಿನ ತೆರಿಗೆ ರಿಯಾಯತಿಯನ್ನು ಭಾರತೀಯರಿಗೂ ವಿಸ್ತರಿಸಿದನು. ಇದನ್ನು ಸಹಿಸದ ಬ್ರಿಟಿಷರು ಖಾಸಿಮ್‌ನ ಮೇಲೆ ಒತ್ತಾಯ ತರಲಾರಂಭಿಸಿದರು. ಬ್ರಿಟಿಷರು ಮತ್ತು ಭಾರತೀಯರೀರ್ವರು ಸಮಾನರೆಂದು ಒಪ್ಪಲು ಅವರು ಸಿದ್ಧರಿರಲಿಲ್ಲ. ಇದರಿಂದಾಗಿ ಮೀರ್‌ಕಾಸಿಮ್‌ನನ್ನು ಪದಚ್ಯುತಿಗೊಳಿಸಿ ಮೀರ್‌ಜಾಫರ್‌ನನ್ನೇ ಬಂಗಾಳದ ನವಾಬ ನನ್ನಾಗಿಸಿದರು. ಔದ್‌ಗೆ ಓಡಿಹೋದ ಬಂಗಾಳದ ನವಾಬ ಮೀರ್‌ಕಾಸಿಮ್, ಔದ್‌ನ ನವಾಬ ಶೂಜ್-ಉದ್-ದೌಲ, ಔದ್‌ನಲ್ಲಿ ಆಶ್ರಯ ಪಡೆದಿದ್ದ ಮೊಗಲರ ದೊರೆ ೨ನೇ ಷಾ ಆಲಂ, ತ್ರಿಪಕ್ಷೀಯ ಒಕ್ಕೂಟವನ್ನು ರಚಿಸಿಕೊಂಡು ಬ್ರಿಟಿಷರ ಮೇಲೆ ೨೨ನೇ ಅಕ್ಟೋಬರ್ ೧೭೬೪ರಲ್ಲಿ ಯುದ್ಧ ಸಾರಿದರು. ಬಕ್ಸಾರ್ ಎಂಬಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರು ಜಯಗಳಿಸಿದರು. ಬ್ರಿಟಿಷರು ಪುನಃ: ಮೀರ್‌ಜಾಫರ್‌ನಿಂದ ಅಪಾರ ಹಣ ಪಡೆದರು ಮತ್ತು ಬಂಗಾಳದಲ್ಲಿ ಕೆಲವು ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮೀರ್‌ಜಾಫರನ ಮರಣಾನಂತರ ಆತನ ಮಗ ನಿಜಾಮ್-ಉದ್-ದೌಲ ನವಾಬನಾದನು. ಈತನೊಂದಿಗೆ ೨೦ನೇ ಫೆಬ್ರವರಿ ೧೭೬೫ರಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದದಂತೆ ನಿಜಾಮನ ಸೈನ್ಯಪಡೆಯ ಸಂಖ್ಯೆಯನ್ನು ಕಡಿಮೆ ಮಾಡಲಾಯಿತು. ಒಬ್ಬ ಹೊಸ ಉಪ ಸುಭೇದಾರನನ್ನು ಕಂಪನಿ ಪರವಾಗಿ ಆಡಳಿತ ನೋಡಿಕೊಳ್ಳಲು ನೇಮಿಸಲಾಯಿತು. ಬ್ರಿಟಿಷರು ನಿಜಾಮನ (ಆಡಳಿತ)ದ ಮೇಲೆ ಸಂಪೂರ್ಣ ಹಿಡಿತ ಪಡೆದರು. ಬಂಗಾಳದ ಕೌನ್ಸಿಲ್ ಸದಸ್ಯರು ಪುನ: ನವಾಬನಿಂದ ೧೫ ಲಕ್ಷ ರೂ. ಪಡೆದುಕೊಂಡರು. ಮೊಗಲ್ ದೊರೆ ೨ನೇ ಷಾ ಆಲಂನಿಂದ ದಿವಾನಿ (ಕಂದಾಯ ವಸೂಲಿ) ಹಕ್ಕನ್ನು ಬಿಹಾರ, ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಪಡೆದರು. ಇದರಿಂದಾಗಿ ಬ್ರಿಟಿಷರು ಭಾರತದ ಪ್ರಗತಿ ಪರ ರಾಜ್ಯಗಳನ್ನು ತಮ್ಮ ಅಧೀನಕ್ಕೆ ಪಡೆದಂತಾಯಿತು. ಇದಕ್ಕೆ ಪ್ರತಿಯಾಗಿ ಕಂಪನಿಯು ಮೊಗಲ್ ದೊರೆಗೆ ೨೬ ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲು ಒಪ್ಪಿ, ಕಾರ ಮತ್ತು ಅಲಹಾಬಾದ್ ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದರು. ಷಾ ಆಲಂನು ಅಲಹಾಬಾದ್ ಕೋಟೆಯಲ್ಲಿ ೬ ವರ್ಷಗಳ ಕಾಲ ಬ್ರಿಟಿಷರ ಬಂಧಿಯಂತೆ ಇದ್ದನು. ಔದ್ ನವಾಬ ಶೂಜ್-ಉದ್-ದೌಲ ೫೦ ಲಕ್ಷ ರೂ. ಯುದ್ಧ ದಂಡವನ್ನು ನೀಡಿದನು. ನವಾಬ ಮತ್ತು ಕಂಪನಿ ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದರಂತೆ ೩ನೇ ಪಕ್ಷದವರ ಧಾಳಿಯ ಸಂದರ್ಭದಲ್ಲಿ ಕಂಪನಿ ಔದ್ ನವಾಬನಿಗೆ ಸೈನ್ಯ ಸಹಾಯ ನೀಡಲೊಪ್ಪಿ, ಅದಕ್ಕೆ ಪ್ರತಿಯಾಗಿ ಸಾಕಷ್ಟು ಹಣ ನೀಡಬೇಕಾಯಿತು. ಇದರಿಂದ ನವಾಬನು ಬ್ರಿಟಿಷರ ಅಧೀನಕ್ಕೊಳಪಟ್ಟನು.

ದ್ವಿಸರ್ಕಾರ ಪದ್ಧತಿ: ಬ್ರಿಟಿಷರು (ಈಸ್ಟ್ ಇಂಡಿಯಾ ಕಂಪನಿ) ೧೭೬೫ರ ವೇಳೆಗೆ ಬಂಗಾಳದ ನಿಜವಾದ ಮಾಲಿಕರಾದರು. ಕಂಪನಿಯು ಸೈನ್ಯದ ಮೇಲೆ ಪೂರ್ಣ ನಿಯಂತ್ರಣ ಮತ್ತು ಆಡಳಿತಾಧಿಕಾರ ಪಡೆಯಿತು. ನವಾಬ ಆಂತರಿಕ ಶಾಂತಿ ಪರಿಪಾಲನೆಗೆ ಬ್ರಿಟಿಷರನ್ನೇ ಅವಲಂಬಿಸಬೇಕಿತ್ತು. ದಿವಾನಿ (ಕಂದಾಯ ವಸೂಲಿ) ಹಕ್ಕನ್ನು ಬ್ರಿಟಿಷರು ಪಡೆದು, ವಸೂಲಿಗಾಗಿ ಉಪಸುಭೇದಾರರನ್ನು ನೇಮಿಸಿದರು. ಬ್ರಿಟಿಷರು ನಿಜಾಮರ ಅಥವಾ ಪೊಲೀಸ್ ಅಥವಾ ನ್ಯಾಯಾಂಗ ಅಧಿಕಾರವನ್ನು ಪಡೆದರು. ಬ್ರಿಟಿಷರು ಎಲ್ಲ ಅಧಿಕಾರ ಹೊಂದಿದ್ದರೂ ಯಾವುದೇ ಜವಾಬ್ದಾರಿಯಿರಲಿಲ್ಲ. ಆದರೆ ನವಾಬನಿಗೆ ಎಲ್ಲಾ ಜವಾಬ್ದಾರಿಯಿದ್ದು ಅದನ್ನು ನಿಭಾಯಿಸಲು ಅಧಿಕಾರವೇ ಇರಲಿಲ್ಲ. ಸರ್ಕಾರದ ನಿರ್ಲಿಪ್ತತೆಗೆ ಈಗ ಕಂಪನಿ ನವಾಬನನ್ನೇ ಜವಾಬ್ದಾರನೆನ್ನಲು ಅವಕಾಶವಾಯಿತು. ಇದರಿಂದಾಗಿ ನವಾಬನಾಗಲಿ, ಕಂಪನಿಯಾಗಲಿ ಪ್ರಜೆಗಳ ಹಿತಕ್ಕೆ ಗಮನಕೊಡಲಿಲ್ಲ. ಬಂಗಾಳದಲ್ಲಿ ಎಲ್ಲೂ ಕೇಳಿ-ಕಾಣದಿದ್ದಂತಹ ಅರಾಜಕತೆ, ಲಂಚಗುಳಿತನ, ಸುಲಿಗೆ, ಭಷ್ಟಾಚಾರಗಳಿದ್ದಿತು. ಬಂಗಾಳ, ಬಿಹಾರ, ಒರಿಸ್ಸಾ ಪ್ರಾಂತಗಳಿಂದ ೩೦ ಲಕ್ಷ ರೂ. ಕಂದಾಯ ವಸೂಲಾಗುತ್ತಿತ್ತು. ಎಲ್ಲಾ ಅಧಿಕಾರಗಳನ್ನು ಕಳೆದುಕೊಂಡ ನವಾಬನ ಸ್ಥಾನಮಾನ ಜಮೀನ್ದಾರನ ಮಟ್ಟಕ್ಕಿಳಿಯಿತು.

ಕಂಪನಿಯ ಅಧಿಕಾರಿಗಳು ಬಂಗಾಳದ ಸಂಪತ್ತನ್ನು ಸೂರೆಗೈದರು. ಕಂಪನಿಯು ಇಂಗ್ಲೆಂಡ್‌ನಿಂದ ತರಿಸಿಕೊಳ್ಳುತ್ತಿದ್ದ ಬಂಡವಾಳವನ್ನು ನಿಲ್ಲಿಸಿ, ಇಲ್ಲಿನ ಕಂದಾಯದ ಹಣದಿಂದ ವಸ್ತುಗಳನ್ನು ಕೊಂಡು ಲಾಭ ಮಾಡಲು ಆರಂಭಿಸಿದರು. ಈ ಮಧ್ಯೆ ೧೭೬೭ರಲ್ಲಿ ೪,೦೦,೦೦೦ ಲಕ್ಷ ಪೌಂಡ್ ಹಣವನ್ನು ಪ್ರತಿವರ್ಷ ಕಂಪನಿ ಸರ್ಕಾರದ ಪಾಲನ್ನು ನೀಡಬೇಕೆಂದು ತಿಳಿಸಿತು. ೧೭೬೬, ೧೭೬೭ ಮತ್ತು ೧೭೬೮ರಲ್ಲಿ ಬಂಗಾಳದ ದ್ವಿಸರ್ಕಾರದ ದಬ್ಬಾಳಿಕೆ, ಸಂಪತ್ತಿನ ಸೂರೆಯಿಂದ ಬಂಗಾಳ ಬಡವಾಯಿತು ೧೭೭೦ರಲ್ಲಿ ಉಂಟಾದ ಕ್ಷಾಮದಿಂದಾಗಿ ಬಂಗಾಳ ತತ್ತರಿಸಿಹೋಯಿತು. ಇದು ಮಾನವ ಇತಿಹಾಸದಲ್ಲೇ ಭೀಕರ ಕ್ಷಾಮಗಳಲ್ಲೊಂದು. ಲಕ್ಷಾಂತರ ಜನ ಅಸುನೀಗಿದರು ಮತ್ತು ಬಂಗಾಳದ ೧/೩ ಭಾಗದಷ್ಟು ಜನಸಂಖ್ಯೆ ಈ ಕ್ಷಾಮಕ್ಕೆ ಬಲಿಯಾದರು. ಈ ಕ್ಷಾಮ ಉಂಟಾದುದು ಮಳೆಯ ವೈಫಲ್ಯದಿಂದಾದರೂ ಕಂಪನಿಯ ನಿಯಮಗಳು ಇದನ್ನು ಮತ್ತಷ್ಟು ಹದಗೆಡಿಸಿತು. ಲಾರ್ಡ್‌ವಾರನ್‌ ಹೇಸ್ಟಿಂಗ್ಸನು ಬಂಗಾಳದಲ್ಲಿ ದ್ವಿಸರ್ಕಾರವನ್ನು ರದ್ದುಪಡಿಸಿ ಬಂಗಾಳ ಪ್ರಾಂತ್ಯವನ್ನು ನೇರವಾಗಿ ಕಂಪನಿಯ ವಶಕ್ಕೆ ತೆಗೆದುಕೊಂಡನು.

ಔದ್ ಮತ್ತು ಬ್ರಿಟಿಷ್ ಸಂಬಂಧ

ಸ್ವತಂತ್ರ ಔದ್. ರಾಜ್ಯವನ್ನು ಸಾದತ್‌-ಖಾನ್‌ ಬುರ್ಹಾನ್-ಮುಲ್ಕನು ೧೭೨೨ರಲ್ಲಿ ಸ್ಥಾಪಿಸಿದ. ೧೭೨೩ರಲ್ಲಿ ಉತ್ತಮ ಕಂದಾಯ ಪದ್ಧತಿಯನ್ನು ಜಾರಿಗೆ ತಂದು ರೈತರ ಅಭಿವೃದ್ಧಿಗೆ ಕಾರಣನಾದನು. ಇವನ ನಂತರ ೧೭೪೮ರಲ್ಲಿ ಸಫ್ದಾರ್ ಜಂಗನು ಅಧಿಕಾರಕ್ಕೆ ಬಂದನು. ಅಲಹಾಬಾದ್ ಪ್ರಾಂತವನ್ನು ಔದ್‌ಗೆ ಸೇರಿಸಲಾಯಿತು. ಸಫ್ದಾರ್ ಜಂಗನು ಯಶಸ್ವಿಯಾಗಿ ಆಳ್ವಿಕೆ ನಡೆಸಿ ೧೭೫೪ರಲ್ಲಿ ಮರಣ ಹೊಂದಿದನು. ೧೭೫೦-೫೧ ಬಂಗಾಲದ ಪಠಾಣರ ಮೇಲಿನ ಯುದ್ಧಕ್ಕೆ ಮರಾಠರ ಸೈನ್ಯವನ್ನು ದಿನಕ್ಕೆ ೨೫,೦೦೦ ರೂ.ಗಳನ್ನು ನೀಡಿದನು. ೧೭೬೫ರ ಆಂಗ್ಲೋ-ಔದ್‌ನ ಒಪ್ಪಂದದ ಪ್ರಕಾರ ಬ್ರಿಟಿಷ್ ಕಂಪನಿಯು ಮರಾಠರು ಅಥವಾ ಆಫಘನ್‌ರ ಧಾಳಿಗೆ ವಿರುದ್ಧವಾಗಿ ಬೆಂಬಲಗಳಿಸುವ ಉದ್ದೇಶದ ಮೇರೆಗೆ ಕಂಪನಿಯು ಔದ್‌ನೊಡನೆ ಮೈತ್ರಿಯುತ ಸಂಬಂಧ ಹೊಂದಿತ್ತು. ಎರಡನೇ ಷಾ-ಆಲಂನು ೧೭೭೦-೭೧ರಲ್ಲಿ ಮರಾಠರ ರಕ್ಷಣೆ ಪಡೆದಾಗ ವಾರನ್‌ಹೇಸ್ಟಿಂಗ್ಸ್ ಕೊರಾ ಮತ್ತು ಅಲಹಾಬಾದ್ ಜಿಲ್ಲೆಗಳನ್ನು ಅವನಿಂದ ಕಿತ್ತುಕೊಂಡು ಔದ್ ನವಾಬನಿಗೆ ವಹಿಸಿ ಪ್ರತಿಯಾಗಿ ೫೦ ಲಕ್ಷ ರೂಪಾಯಿಗಳನ್ನು ಮತ್ತು ನವಾಬನ ರಕ್ಷಣೆಗಾಗಿ ಕಂಪನಿಯ ಪಡೆಗಳ ಒಂದು ಕಾವಲು ಪಡೆ ನಿರ್ವಹಣೆಗೆ ವಾರ್ಷಿಕ ಸಹಾಯ ಹಣವನ್ನು ನೀಡುವ ಒಪ್ಪಂದ ಮಾಡಿಕೊಳ್ಳಲಾಯಿತು. ವೆಲ್ಲೆಸ್ಲಿಯ ಕಾಲದಲ್ಲಿ ವಾಯುವ್ಯ ಗಡಿಯ ಪರಿಣಾಮಕಾರಿ ಸುಭದ್ರತೆಗಾಗಿ ಔದ್ ಬ್ರಿಟಿಷ್ ನಿಯಂತ್ರಣಕ್ಕೊಳಗಾಗಬೇಕಾದ ಅವಶ್ಯಕತೆಯನ್ನರಿತು ಅದನ್ನು ಸಾಧಿಸಲು ಪ್ರಯತ್ನಿಸಿದ ಕಾಬೂಲಿನ ಜಮಾನ್‌ಷಾ ಭಾರತದ ಮೇಲೆ ಧಾಳಿ ಮಾಡಬಹುದೆಂಬ ನೆಪದಿಂದ ಔದ್‌ನ ಸೈನ್ಯವನ್ನು ಚದುರಿಸಿ ಕಂಪನಿಯ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡನು. ಆದರೆ ನವಾಬನು ಅದನ್ನು ವಿರೋಧಿಸಿದನು. ೧೮೦೧ರ ನವೆಂಬರ್ ೧೦ರಂದು ಮತ್ತೊಂದು ಒಪ್ಪಂದ ಮಾಡಿಕೊಂಡನು. ಅದರ ಪ್ರಕಾರ ನವಾಬನು ರೋಹಿಲಖಂಡ ಮತ್ತು ಕೆಳಗಣ ದೋಆಬ್‌ಗಳ ನಡುವಣ ಫಲವತ್ತಾದ ಅಮೂಲ್ಯ ಭೂ ಪ್ರದೇಶವನ್ನು ಬಿಟ್ಟುಕೊಡಬೇಕಾಯಿತು. ಹೀಗಾಗಿ ಔದ್ ಸುತ್ತಲೂ ಬ್ರಿಟಿಷ್ ಪ್ರಾಂತ್ಯಗಳೇ ಆವರಿಸಿದವು. ಹೀಗೆ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡಿದ್ದ ಇತರ ರಾಜ್ಯಗಳಂತೆ ದುರಾಡಳಿತದ ಆಪಾದನೆಯ ಮೇರೆಗೆ ಔದ್ ರಾಜ್ಯವನ್ನು ವಶಪಡಿಸಿಕೊಳ್ಳಲು ಅಲ್ಲಿನ ಆಡಳಿತ ದೋಷಗಳನ್ನೇ ಕಾಯುತ್ತ ಕುಳಿತುಕೊಂಡಿತು. ಹೀಗೆ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯು ಮುಂದಿನ ಡಾಲ್‌ಹೌಸಿಯ ಕ್ರಮಗಳಿಗೆ ಅವಕಾಶ ಮಾಡಿಕೊಟ್ಟವೆಂದು ಹೇಳಬಹುದು.

ಲಾರ್ಡ್‌‌ವೆಲ್ಲೆಸ್ಲಿಯ ೧೮೦೧ರ ಒಪ್ಪಂದವು ಔಧನ್ನು ಆಂತರಿಕ ಆಡಳಿತ ಮೇಲೆ ನಿಯಂತ್ರಣ ಪಡೆಯಲಾಗಿರುವ ಸುರಕ್ಷಿತ ಸಾಮಂತರ ರಾಜ್ಯ ಎಂದು ಪರಿಗಣಿಸಲಾಗಿತ್ತು. ಔದ್‌ನ ರಾಜನಿಗೆ ಅಧಿಕಾರವಿಲ್ಲದೆ ಜವಾಬ್ದಾರಿ ವಹಿಸಿದುದು ವಾಸ್ತವವಾಗಿ ವಿವೇಚನೆಯಿಲ್ಲದ ಕ್ರಮವಾಗಿತ್ತು. ಇದರಿಂದಾಗಿ ಔದ್‌ನ ಜನತೆ ಅಪಾರ ಕಷ್ಟ ನಷ್ಟಕ್ಕೀಡಾದರು ಮತ್ತು ರಾಜ್ಯದ ಆಡಳಿತವು ತೀವ್ರವಾಗಿ ಹದಗೆಟ್ಟಿತು. ಆಡಳಿತದ ದೋಷಗಳನ್ನು ಕುರಿತು ಲಾರ್ಡ್ ವಿಲಿಯಂ ಬೆಂಟಿಂಕ್ ಮತ್ತು ಲಾರ್ಡ್ ಹಾರ್ಡಿಂಜ್ ನವಾಬನಿಗೆ ಎಚ್ಚರಿಕೆ ನೀಡಿದರು. ಆದರೆ ಸಹಾಯಕ ಸೈನ್ಯ ಪದ್ಧತಿಯ ಮೂಲಭೂತ ದೋಷ ನಿವಾರಣೆಗೆ ಯಾರೂ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಭಾರತದಲ್ಲಿ ತೀವ್ರವಾಗಿ ವಿಸ್ತರಿಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ಮಧ್ಯದಲ್ಲಿದ್ದು ದುರಾಡಳಿತಕ್ಕೊಳಗಾದ ಔದ್ ರಾಜ್ಯದ ಇರುವಿಕೆಯು ಬ್ರಿಟಿಷ್ ಸಾಮ್ರಾಜ್ಯ ಶಿಲ್ಪಿಗಳಿಗೆ ಅಸಂಗತವೆಂದು ತಿಳಿದು ಕಂಟಕವನ್ನು ಕಿತ್ತೊಗೆಯಲು ಕಾಯುತ್ತಿತ್ತು. ಕೊನೆಗ ನಿಯಂತ್ರಕರ ಮಂಡಳಿಯು ೧೮೫೬ರ ಫೆಬ್ರವರಿ ೧೩ರಂದು ಔದನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡ ಬಗ್ಗೆ ಪ್ರಕಟಿಸಿತು. ಔದ್‌ನ ಕೊನೆಯ ದೊರೆ ವಾಜೀದ್ ಆಲಿ ಷಾನನ್ನು ಕಲ್ಕತ್ತಾಗೆ ಗಡಿಪಾರು ಮಾಡಿ ವರ್ಷಕ್ಕೆ ೧೨ ಲಕ್ಷ ರೂಪಾಯಿಗಳ ವಿಶ್ರಾಂತಿ ವೇತನ ನೀಡಿತು. ಹೀಗೆ ಔದ್ ಪ್ರಾಂತವನ್ನು ಬ್ರಿಟಿಷ್ ಸರ್ಕಾರವು ೧೮೩೭ರ ಒಪ್ಪಂದಕ್ಕೆ ವಿರುದ್ಧವಾಗಿ ದುರಾಡಳಿತದ ನೆಪ ಹೂಡಿ ನೇರ ಆಡಳಿತಕ್ಕೆ ಸೇರಿಸಿಕೊಂಡಿತು. ಔದ್‌ನ ಸ್ವಾಧಿನಪಡಿಸಿಕೊಳ್ಳುವಿಕೆಯು ಪ್ರಾದೇಶಿಕ ವಿಸ್ತರಣೆಯ ಅಂಶವೇ ಆಗಿತ್ತು.