ಬ್ಯಾಂಕಿಂಗ್ ಉದ್ಯಮದ ಬೆಳವಣಿಗೆಗೆ

ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕುಗಳು ತುಂಬಾ ಮುಖ್ಯ ಪಾತ್ರವಹಿಸುತ್ತವೆ. ಆರ್ಥಿಕ ಚಟುವಟಿಕೆ ಎಲ್ಲಿರುತ್ತದೆಯೋ ಅಲ್ಲಿ ಬ್ಯಾಂಕುಗಳಿರುತ್ತವೆ. ಬ್ಯಾಂಕು ಎಲ್ಲಾ ಆರ್ಥಿಕ ಚಟುವಟಿಕೆಯನ್ನು ಹತೋಟಿಯಲ್ಲಿಡುತ್ತದೆ. ಅಲ್ಲದೇ ಆರ್ಥಿಕ ಚಟುವಟಿಕೆಗಳಾದ ವ್ಯಾಪಾರ, ವಾಣಿಜ್ಯ ಮುಂತಾದ ಚಟುವಟಿಕೆಯೊಡನೆ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡಿರುತ್ತದೆ. ಇಂತಹ ಬ್ಯಾಂಕಿಂಗ್ ಉದ್ಯಮವು ಯಾವ ರೀತಿ ತನ್ನ ಬೆಳವಣಿಗೆಯನ್ನು ಕಂಡಿತು ಎಂಬುದನ್ನು ತಿಳಿದು ಕೊಳ್ಳುವುದು ಅವಶ್ಯಕ.

ಏಜೆನ್ಸಿ ಮಳಿಗೆಗಳು: ಬಾಂಬೆ ಮತ್ತು ಕಲ್ಕತ್ತಾ ನಗರಗಳಲ್ಲಿ ಏಜೆನ್ಸಿ ಮಳಿಗೆಯನ್ನು ಮ್ಯಾನೇಜಿಂಗ್ ಏಜೆಂಟರುಗಳು ಸ್ಥಾಪಿಸುವುದರ ಮೂಲಕ ಬ್ಯಾಂಕಿಂಗ್ ಉದ್ಯಮದ ಬೆಳವಣಿಗೆಗೆ ಅಡಿಪಾಯವನ್ನು ಹಾಕಿದರು. ಏಜೆನ್ಸಿ ಮಳಿಗೆಯನ್ನು ತೆರೆಯುವ ಉದ್ದೇಶ ವ್ಯಾಪಾರ, ವ್ಯವಹಾರಕ್ಕೆ ಸಹಾಯ ಮಾಡುವುದು ಮತ್ತು ಹಣವನ್ನು ಚಲಾವಣೆ ಮಾಡುವುದೇ ಆಗಿತ್ತು. ಆದರೆ ೧೮೨೯-೩೨ ರ ಅವಧಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ವಾಣಿಜ್ಯ ಬಿಕ್ಕಟ್ಟು ಈ ಬ್ಯಾಂಕ್‌ಗಳಿಗೆ ಯಾವುದೇ ತೆರನಾದ ಲಾಭಕರವಾಗದೇ ವಿಫಲವಾಗಿ ೧೮೨೯-೩೨ ರ ಅವಧಿಯಲ್ಲಿ ಭಾರತದ ಆರ್ಥಿಕ ಕ್ಷೇತ್ರದಿಂದ ನಿರ್ಗಮಸಿದವು.

ಜಾಯಿಂಟ್ ಸ್ಟಾಕ್ ಬ್ಯಾಂಕ್ : ಏಜೆನ್ಸಿ ಮಳಿಗೆಗಳ ನಂತರ ಜಾಯಿಂಟ್ ಸ್ಟಾಕ್ ಬ್ಯಾಂಕುಗಳು ಬೆಳವಣಿಗೆಯಾದವು. ೧೭೩೦ರಲ್ಲಿ ಕಲ್ಕತ್ತಾದ “ಹಿಂದುಸ್ತಾನ್” ತನ್ನ ಬ್ಯಾಂಕಿಂಗ್ ಉದ್ಯಮವನ್ನು ಪ್ರಾರಂಭಿಸಿತು. ಉಳಿದ ಇನ್ನಿತರ ಬ್ಯಾಂಕ್‌ಗಳು ಇದರ ಚಟುವಟಿಕೆಯನ್ನೇ ಅನುಸರಿಸಿದವು. ಆದರೆ ಇದು ಸಹ ೧೮೨೯-೩೨ ರ ಮುಂದುವರಿದ ಏಜೆನ್ಸಿ ಮಳಿಗೆಗಳ ಜೊತೆಯಲ್ಲೇ ತಮ್ಮ ಕೆಲಸವನ್ನು ನಿಲ್ಲಿಸಿದವು.

ಪ್ರಾಂತೀಯ ಬ್ಯಾಂಕು : ಪ್ರಾಂತೀಯ ರಾಜಧಾನಿಗಳಲ್ಲಿ ಈ ಬ್ಯಾಂಕುಗಳು ಸ್ಥಾಪನೆಯಾಗುವುದರ ಮೂಲಕ ಬ್ಯಾಂಕುಗಳ ಉದ್ಯಮದ ಬೆಳವಣಿಗೆಯು ಮೂರನೇ ಹಂತವನ್ನು ಮುಟ್ಟಿತು. ೧೮೦೬ರಲ್ಲಿ ಈ ರೀತಿಯ ಪ್ರಾಂತೀಯ ಬ್ಯಾಂಕು ಬಂಗಾಳದಲ್ಲಿ ಸ್ಥಾಪನೆಯಾಯಿತು. ಬಾಂಬೆಯಲ್ಲಿ ೧೮೪೦ರಲ್ಲಿ ಮದ್ರಾಸಿನಲ್ಲಿ ೧೮೪೩ರಲ್ಲಿ ಈ ಬ್ಯಾಂಕುಗಳು ಸ್ಥಾಪನೆಯಾದವು. ಈ ಬ್ಯಾಂಕುಗಳು ತಮ್ಮ ಬ್ಯಾಂಕ್ ಬೆಳವಣಿಗೆಯ ಉದ್ಯಮಕ್ಕೆ ಬಂಡವಾಳವನ್ನು ಒದಗಿಸಿ ಕೊಟ್ಟಿದ್ದ ಸರ್ಕಾರದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವು. ಸರ್ಕಾರಿ ಬ್ಯಾಂಕುಗಳ ಏಕಸ್ವಾಮ್ಯ ಮತ್ತು ನೋಟುಗಳನ್ನು ಚಲಾವಣೆಗೆ ತರುವ ಹಕ್ಕನ್ನು ಈ ಬ್ಯಾಂಕುಗಳು ಹೊಂದಿದ್ದವು. ಅಂದರೆ ಈ ಪ್ರಾಂತೀಯ ಬ್ಯಾಂಕಿಗಿದ್ದ ಸ್ಥಾನ ಒಂದು ರೀತಿಯ ಕೇಂದ್ರ ಬ್ಯಾಂಕಿಗಿದ್ದ ಸ್ಥಾನವೇ ಆಗಿತ್ತು. ಈ ಬ್ಯಾಂಕುಗಳು ಕೇವಲ “ಈಸ್ಟ್ ಇಂಡಿಯಾ ಕಂಪನಿಯ ಚಟುವಟಿಕೆಗೆ ಮತ್ತು ಬ್ರಿಟಿಷ್ ವ್ಯಾಪಾರಿಗಳ ಅನುಕೂಲಕ್ಕೋಸ್ಕರ ಇದ್ದವೆಂದೇ ಹೇಳಬಹುದು. ೧೮೯೬ರಲ್ಲಿ ಈ ಬ್ಯಾಂಕುಗಳಿಂದ ನೋಟನ್ನು ಚಲವಾಣೆಗೆ ತರುವ ಹಕ್ಕನ್ನು ವಾಪಸ್ಸು ಕಸಿದುಕೊಳ್ಳಲಾಯಿತು.

ಹೊಸ ಜಾಯಿಂಟ್ ಸ್ಟಾಕ್ ಬ್ಯಾಂಕ್ : ಷೇರುದಾರರು ಒಂದು ನಿಗದಿಯಾದ ಮೊತ್ತದ ಹಣವನ್ನು ಠೇವಣಿಯಾಗಿಟ್ಟುಕೊಂಡು ನಡೆಸುವ ಬ್ಯಾಂಕೇ ಈ ಹೊಸ ಜಾಯಿಂಟ್ ಸ್ಟಾಕ್ ಬ್ಯಾಂಕ್. ೧೮೩೦-೬೦ರ ಸಮಯದಲ್ಲಿಯೇ ಸುಮಾರು ೧೨ ಹೊಸ ಜಾಯಿಂಟ್ ಸ್ಟಾಕ್ ಬ್ಯಾಂಕುಗಳು ಪ್ರಾರಂಭವಾದವು. ನಂತರ ೧೮೯೧ರಲ್ಲಿ ಔದ್‌ ಕಮರ್ಷಿಯಲ್ ಬ್ಯಾಂಕ್, ೧೮೯೪ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಾರಂಭವಾದವು. ಆದರೆ ಈ ಬ್ಯಾಂಕ್‌ನಲ್ಲಿ ಕೆಲವರು ಮಾಡಿದ ಮೋಸದಿಂದ ಇದರಲ್ಲಿ ೬ ಬ್ಯಾಂಕುಗಳು ಹಾಳಾದವು. ಹೀಗಾಗಿ ಈ ಹೊಸ ಜಾಯಿಂಟ್ ಸ್ಟಾಕ್ ಬ್ಯಾಂಕ್ ಉದ್ಯಮವು ಅಷ್ಟಾಗಿ ಬೆಳವಣಿಗೆ ಹೊಂದಲಿಲ್ಲ.

೧೮೬೦೧೯೦೦ ಬ್ಯಾಂಕ್ ಉದ್ಯಮದ ಬೆಳವಣಿಗೆಯ ಸಾಧಾರಣ ಪ್ರಗತಿ : ಈ ಅವಧಿಯಲ್ಲಿ ಈ ಹೊಸ ಜಾಯಿಂಟ್ ಸ್ಟಾಕ್ ಬ್ಯಾಂಕುಗಳು ಸಾಧಾರಣ ಪ್ರಗತಿ ಕಂಡವು. ಕಾರಣ ಮಿತವಾದ ಹೊಣೆಗಾರಿಕೆಯ ನೀತಿಯನ್ನು ೧೮೬೦ರಲ್ಲಿ ಅಳವಡಿಸಿಕೊಳ್ಳಲಾಯಿತು. ೧೮೬೩- ೬೫ರ ಸಮಯದಲ್ಲಿ ಸುಮಾರು ೨೫ ಹೊಸ ಜಾಯಿಂಟ್ ಬ್ಯಾಂಕ್‌ಗಳು ಸ್ಥಾಪನೆಯಾದವು. ಆದರೆ ಯಾವುದೇ ರೀತಿಯ ಲಾಭಕರ ವ್ಯವಹಾರವಾಗದೇ ಇದ್ದರೂ, ಈ ಜಾಯಿಂಟ್ ಸ್ಟಾಕ್ ಬ್ಯಾಂಕ್‌ಗಳ ಸಂಖ್ಯೆಯ ಒಟ್ಟು ಬಂಡವಾಳ ೮೨ ಲಕ್ಷವಿದ್ದಿತು. ನಂತರ ಈ ಬ್ಯಾಂಕುಗಳ ಬೆಲೆ ಏರಿಕೆ, ಬ್ಯಾಂಕ್ ನಡೆಸುವವರಲ್ಲಿದ್ದಂತಹ ಬೇಜವಾಬ್ದಾರಿ, ವಿನಿಮಯ ಬ್ಯಾಂಕುಗಳ ಬೆಲೆ ಏರಿಕೆ, ಬ್ಯಾಂಕ್ ನಡೆಸುವವರಲ್ಲಿದ್ದಂತಹ ಬೇಜವಾಬ್ದಾರಿ, ವಿನಿಮಯ ಬ್ಯಾಂಕುಗಳ ಪೈಪೋಟಿ, ಬಂಡವಾಳದ ಕೊರತೆ, ಸರ್ಕಾರದ ಬೆಂಬಲವಿಲ್ಲದೇ ಹೋದುದರಿಂದಲೂ ಮತ್ತು ಬ್ಯಾಂಕ್ ಮೇಲ್ವಿಚಾರಕರು ಠೇವಣಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರಿಂದ ಈ ಬ್ಯಾಂಕ್ ಉದ್ದಿಮೆಯು ತನ್ನ ಬೆಳವಣಿಗೆಯಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡು ಕುಂಠಿತಗೊಂಡಿತು.

ಇಂಪಿರಿಯಲ್ ಬ್ಯಾಂಕ್ ೧೯೨೦೨೧ : ೧೯೨೧ರಲ್ಲಿ ೩ ಪ್ರಾಂತೀಯ ಬ್ಯಾಂಕುಗಳು ಒಂದುಗೂಡಿ “ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ” ಎಂಬ ಒಂದು ದೊಡ್ಡ ಬ್ಯಾಂಕನ್ನು ಸ್ಥಾಪಿಸಲಾಯಿತು. ಈ ಬ್ಯಾಂಕು ಸುಮಾರು ತನ್ನ ೪೫೩ ಬ್ರಾಂಚನ್ನು ತೆರೆಯಿತು. ಇದನ್ನು ೧೯೫೫ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಅಂದಿನ ಇಂಪೀರಿಯಲ್ ಬ್ಯಾಂಕನ್ನೇ ಈಗ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ಎಂದು ಹೆಸರಿಡಲಾಗಿದೆ. ಇದು ಇತರ ಬ್ಯಾಂಕನ್ನು ನಿರ್ವಹಿಸುವ ಅಧಿಕಾರವನ್ನು ಹೊಂದಿತ್ತು. ಆದರೆ ೧೮೬೨ರಲ್ಲಿ ಈ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು. ನಂತರ ಈ ಬ್ಯಾಂಕು ಯೂರೋಪಿಯನ್ನರ ಅಧೀನಕ್ಕೆ ಒಳಪಟ್ಟಿತು. ಆದ್ದರಿಂದ ಈ ಬ್ಯಾಂಕಿನಲ್ಲಿದ್ದ ದೊಡ್ಡ ಹುದ್ದೆಗಳು ಯೂರೋಪಿಯನ್ನರಿಗೆ ಮೀಸಲಾಗಿದ್ದವು.

ರಿಸರ್ವ್ ಬ್ಯಾಂಕ್ : ೧೯೩೫ರಲ್ಲಿ ಸ್ಥಾಪನೆಯಾದ ರಿಸರ್ವ್‌ಬ್ಯಾಂಕ್, ಬ್ಯಾಂಕ್ ಉದ್ಯಮಗಳ ಬೆಳವಣಿಗೆಯ ಅಡಿಗಲ್ಲಾಯಿತು. ಇದು ಜನರ ಆರ್ಥಿಕ ಚಟುವಟಿಕೆಯನ್ನು ಬದಲಾಯಿಸಿತಲ್ಲದೇ ಬ್ಯಾಂಕುಗಳ ಬ್ಯಾಂಕಾಗಿಯೂ ಕೆಲಸ ಮಾಡಲಾರಂಭಿಸಿತು. ಇತರ ಬ್ಯಾಂಕುಗಳ ದೋಷವನ್ನು ಹೋಗಲಾಡಿಸುವ ಕಾರ್ಯದ ಜೊತೆಗೆ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಬ್ಯಾಂಕುಗಳ ಬ್ಯಾಂಕಾಗಿ, ಸರ್ಕಾರದ ಬ್ಯಾಂಕಾಗಿ, ವಿದೇಶಿ ವಿನಿಮಯದಂತಹ ಮಹತ್ತರ ಕಾರ್ಯವನ್ನು ನಿರ್ವಹಿಸಲಾರಂಭಿಸಿತು. ಅಲ್ಲದೇ ಇಂಪೀರಿಯಲ್ ಬ್ಯಾಂಕ್ ಹಿಂದೆ ನಿರ್ವಹಿಸುತ್ತಿದ್ದ ಆ ಕೆಲಸ ಕಾರ್ಯವನ್ನು ತಾನೇ ವಹಿಸಿಕೊಂಡಿತು. ಇತರ ಎಲ್ಲಾ ಬ್ಯಾಂಕುಗಳು ತನ್ನ ಆದೇಶವನ್ನು ಪಾಲಿಸುವಂತಹ ಅಧಿಕಾರವನ್ನು ರಿಸರ್ವ್‌ ಬ್ಯಾಂಕ್ ಹೊಂದಿದೆ.

ಜಾಯಿಂಟ್ ಸ್ಟಾಕ್ ಬ್ಯಾಂಕುಗಳ ಮರು ಬೆಳವಣಿಗೆ : ೧೯೧೩-೨೩ ರ ಅವಧಿಯಲ್ಲಿ ಜಾಯಿಂಟ್ ಸ್ಟಾಕ್ ಬ್ಯಾಂಕಗಳು ಪುನಃ ತಮ್ಮ ಕಾರ್ಯಾರಂಭವನ್ನು ಮಾಡಲಾರಂಭಿಸಿದವು. ಏಕೆಂದರೆ ಈ ಸಮಯದಲ್ಲಿ ಮೊದಲನೆ ಮಹಾ ಯುದ್ಧವು ಪ್ರಾರಂಭವಾಗಿ ಆರ್ಥಿಕ ಚಟುವಟಿಕೆಗಳು ಬಿರುಸಾಗಿದ್ದವು. ಈ ಬ್ಯಾಂಕುಗಳ ಠೇವಣೀ ೫೬ ಕೋಟಿಯಿಂದ ೮೦ ಕೋಟಿಗೂ, ೧೯೨೧ ರಿಂದ ೧೯೩೭ ರ ಹೊತ್ತಿಗೆ ೧೦೯ ಕೋಟಿ ರೂ. ಗಳಿಗೇರಿ ಈ ಬ್ಯಾಂಕುಗಳ ಬೆಳವಣಿಗೆಯಾಯಿತು. ಜೊತೆಗೆ ಪ್ರತಿಯೊಂದು ಜಾಯಿಂಟ್ ಸ್ಟಾಕ್ ಬ್ಯಾಂಕುಗಳಲ್ಲಿ ಒಂದು ಲಕ್ಷ ಬಂಡವಾಳವಿರುತ್ತಿತ್ತು. ಅಲ್ಲದೇ ೧೪೦೦ ಚಿಕ್ಕ ಬ್ಯಾಂಕುಗಳು ಇದ್ದವು. ಇದೇ ಸಮಯದಲ್ಲಿ ಇಂಪೀರಿಯಲ್ ಬ್ಯಾಂಕ್ ೧೯೩೭ ರ ಹೊತ್ತಿಗೆ ತನ್ನ ೧೫೧ ಶಾಖೆಯನ್ನು ತೆರೆಯಿತು.

ವಿನಿಮಯ ಬ್ಯಾಂಕ್ : ಮೊದಲು ಈ ಬ್ಯಾಂಕು ಠೇವಣಿ ಇಟ್ಟುಕೊಳ್ಳುವ ಮತ್ತು ಭದ್ರತೆ ಒದಗಿಸುವ ಕೆಲಸವನ್ನು ಮಾಡುತ್ತಿತ್ತು. ೧೯೩೦ರ ನಂತರ ಪ್ರತಿಯೊಂದು ಬ್ಯಾಂಕಿನ ಹಣದ ವಿನಿಮಯ ಕಾರ್ಯವನ್ನು ಈ ಬ್ಯಾಂಕು ಮಾಡಲಾರಂಭಿಸಿತು. ಬ್ಯಾಂಕುಗಳು, ಯಾವ ದೇಶದಲ್ಲೇ ಇರಲಿ, ವ್ಯಕ್ತಿಯು ಈ ಬ್ಯಾಂಕಿನಲ್ಲಿ ಬಂದು ಹಣವನ್ನು ತನ್ನ ಬ್ಯಾಂಕಿನ ಖಾತೆಯ ಮೂಲಕ ವಿನಿಮಯ ಮಾಡಿಕೊಳ್ಳುವಂತಹ ಕಾರ್ಯವನ್ನು ನಿರ್ವಹಿಸಲಾರಂಭಿಸಿತು.

ಸ್ವಾತಂತ್ರ್ಯ ನಂತರ ಬ್ಯಾಂಕ್ ಉದ್ಯಮದ ಬೆಳವಣಿಗೆ

ಕೇಂದ್ರೀಯ ಬ್ಯಾಂಕ್ : ೧೯೪೭ ದಿಂದ ಈ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವು ಗಮನಾರ್ಹ ಬೆಳವಣಿಗೆಯಾಯಿತು. ೧೯೪೮ರಲ್ಲಿ ರಿಸರ್ವ್‌ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು. ೧೯೪೯ ರ ಬ್ಯಾಂಕಿಂಗ್ ಕಾಯ್ದೆ ಪ್ರಕಾರ ರೇಟ್ ಮತ್ತು ತೆರೆದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಕೆಲವು ತಿದ್ದುಪಡಿ ಮಾಡಲಾಯಿತು.

ವಾಣಿಜ್ಯ ಬ್ಯಾಂಕುಗಳು : ೧೯೪೯ ರಿಂದ ೬೫ ರ ಅವಧಿಯಲ್ಲಿ ೪೪೫ ಶಾಖೆಯನ್ನು ಹೊಂದಿದ್ದ ಈ ಬ್ಯಾಂಕುಗಳ ಸಂಖ್ಯೆ ೧೦೯ ಬ್ಯಾಂಕುಗಳಿಗಿಳಿಯಿತು. ಕೆಲವು ಸಣ್ಣ ಪುಟ್ಟ ಬ್ಯಾಂಕ್‌ಗಳು ಒಂದುಗೂಡಿ ದೊಡ್ಡ ಬ್ಯಾಂಕ್‌ಗಳಾದವು. ಈ ವಾಣಿಜ್ಯ ಬ್ಯಾಂಕ್‌ಗಳು ೧೯೨೯ರಲ್ಲಿ ರಾಷ್ಟ್ರೀಕರಣಕ್ಕೆ ಒಳಗಾದವು. ಆ ಸಮಯದಲ್ಲಿ ರಾಷ್ಟ್ರೀಕರಣದ ಪ್ರತಿಯೊಂದು ಬ್ಯಾಂಕಿನಲ್ಲಿ ೫೦ ಕೋಟಿ ರೂಪಾಯಿಗಳ ಠೇವಣಿಯಿತ್ತು.

ಸಹಕಾರ ಬ್ಯಾಂಕ್ : ೧೯೫೭ರಿಂದ ನಮ್ಮ ದೇಶದಲ್ಲಿ ಈ ಬ್ಯಾಂಕುಗಳು ರೂಪುಗೊಂಡವು ಈ ಬ್ಯಾಂಕುಗಳನ್ನು ಸ್ಥಳೀಯ ಬ್ಯಾಂಕುಗಳೆಂತಲೂ ಸಹ ಹೇಳಬಹುದು. ಇವು ಕಡಿಮೆ ಬಡ್ಡಿಯನ್ನು ತೆಗೆದುಕೊಂಡು, ವ್ಯವಸಾಯದಾರರಿಗೆ, ಕೈ ಕಸುಬುದಾರರಿಗೆ ಸಾಲ ನೀಡಲಾರಂಭಿಸಿದವು. ಹೀಗೆ ಹಂತ ಹಂತವಾಗಿ ಬ್ಯಾಂಕ್ ಉದ್ಯಮವು ರೂಪುಗೊಂಡು ಇಂದಿನ ಸ್ಥಿತಿಯನ್ನು ತಲುಪಿವೆ.

ನಾಣ್ಯ ವ್ಯವಸ್ಥೆ : ಬ್ರಿಟಿಷರು ಭಾರತಕ್ಕೆ ಬರುವದಕ್ಕಿಂತ ಮುಂಚೆ ಭಾರತದ ನಾಣ್ಯ ಪದ್ಧತಿಯ ವ್ಯವಸ್ಥೆ ಅಸಮರ್ಪಕವಾಗಿತ್ತು. ಭಾರತ ಹಲವಾರು ರಾಜ್ಯಗಳಿಂದ ಕೂಡಿದ್ದು ಪ್ರತಿಯೊಂದು ರಾಜ್ಯವು ತನ್ನದೇ ಆದ ಸ್ವತಂತ್ರ ನಾಣ್ಯ ವ್ಯವಸ್ಥೆಯನ್ನು ಚಲಾವಣೆಯಲ್ಲಿ ತಂದಿದ್ದವು. ಸರ್ಕಾರಿ ವರದಿಯೊಂದರಂತೆ ಭಾರತದಲ್ಲಿ ಆಗ ೯೯೪ ವಿವಿಧ ರೀತಿಯ ನಾಣ್ಯಗಳು ಚಲಾವಣೆಯಲ್ಲಿದ್ದವು. ಇವುಗಳು ಉತ್ತಮ ಗುಣಮಟ್ಟದಿಂದ ಕೂಡಿರದೇ ಅವುಗಳ ದರದಲ್ಲಿ ವ್ಯವಸ್ಥೆಯಿಂದ ಭಾರತದ ವಿದೇಶಿ ವ್ಯಾಪಾರವೂ ಸಹ ಅಸಮತೋಲನೆಯಿಂದ ಕೂಡಿತ್ತು. ಆದ್ದರಿಂದ ೧೮೦೬ರಲ್ಲಿ ಬ್ರಿಟಿಷರು ಭಾರತದಾದ್ಯಂತ ಹಣ ಮತ್ತು ಪೈಸೆ ಎಂಬ ಬೆಳ್ಳಿ ನಾಣ್ಯವನ್ನು ಸಾರ್ವತ್ರಿಕವಾಗಿ ಜಾರಿಗೆ ತಂದಿತು. ಈ ಬೆಳ್ಳಿ ನಾಣ್ಯಗಳ ತೂಕ ೧೮೦ ಗ್ರೇನ್‌ಗಳಿಂದ ಕೂಡಿದ್ದಾಗಿತ್ತು. ಈ ರೀತಿಯ ಸಮರ್ಪಕ ನಾಣ್ಯ ವ್ಯವಸ್ಥೆಯನ್ನು ಬ್ರಿಟಿಷರು ಬೆಳ್ಳಿಯ ರೂಪದಲ್ಲಿ ತಂದಿದ್ದರಿಂದ ಭಾರತದ ಬೆಳ್ಳಿಯ ನಾಣ್ಯ ಸಂಪತ್ತು ವ್ಯಾಪಾರದ ರೂಪದಲ್ಲಿ ಬ್ರಿಟನ್ನಿಗೆ ಹರಿದು ಹೋಯಿತು. ಆದರೆ ಬ್ರಿಟಿಷರು ಜಾರಿಗೆ ತಂದ ಈ ನಿರ್ದಿಷ್ಟ ನಾಣ್ಯ ವ್ಯವಸ್ಥೆ ಭಾರತದ ಆಧುನಿಕ ಅರ್ಥ ವ್ಯವಸ್ಥೆಗೆ ತಳಪಾಯವಾಯಿತು.

ಬ್ರಿಟಿಷರ ಕಾಲದಲ್ಲಿ ಪಟ್ಟಣ ಮತ್ತು ನಗರಗಳ ಬೆಳವಣಿಗೆ

೧೯ನೇ ಶತಮಾನದ ಕೊನೆಯ ಭಾಗದಲ್ಲಿ ಬ್ರಿಟಿಷರು ತಮ್ಮ ವ್ಯಾಪಾರಾಭಿವೃದ್ಧಿಗಾಗಿ ಭಾರತದಲ್ಲಿ ಸ್ಥಾಪಿಸಿದಂತಹ ಕೈಗಾರಿಕೆಗಳ ಬೆಳವಣಿಗೆಯು ನಗರ ಮತ್ತು ಪಟ್ಟಣಗಳ ಬೆಳವಣಿಗೆ ಸಹಕಾರಿಯಾಯಿತು. ಬ್ರಿಟಿಷರು ಭರತಕ್ಕೆ ಬಂದಾಗ ಮದ್ರಾಸ್ ಮತ್ತು ಕಲ್ಕತ್ತಾ ನಗರಗಳು ಮಾತ್ರ ಮುಖ್ಯ ವ್ಯಾಪಾರಿ ನಗರಗಳಾಗಿದ್ದವು. ಆ ನಂತರ ಅವರ ಮುಂದುವರಿದ ಆರ್ಥಿಕ ಚಟುವಟಿಕೆಯಿಂದ ಕಾನ್ಪುರ ಮತ್ತು ಸೋಲಾಪುರ ನಗರಗಳು ಶೀಘ್ರವಾಗಿ ಬೆಳವಣಿಗೆಯಾದವು. ಬ್ರಿಟಿಷರ ಹೊಸ ಕೈಗಾರಿಕಾ ಸ್ಥಾಪನೆಯು ಸಾವಿರಾರು ಕಾರ್ಮಿಕರನ್ನು ಸೃಷ್ಟಿಸಿದವು. ಕಾರ್ಮಿಕರುಗಳು ನಗರಗಳಲ್ಲಿ ಕೆಲಸ ಮಾಡಲಾರಂಭಿಸಿದ್ದರಿಂದ ಅಹಮ್ಮದಾಬಾದ್, ಔರಂಗಾಬಾದ್, ಕಾನ್ಪುರ ಕಾರ್ಮಿಕರ ಕೈಗಾರಿಕಾ ಕೇಂದ್ರಗಳಾಗಿ ಬೆಳವಣಿಗೆಯಾದವು. ೧೯೧೧ರಲ್ಲಿ ಜೆಮ್‌ಷೆಡ್‌ಪುರದಲ್ಲಿ ಅನೇಕ ಕೈಗಾರಿಕಾ ನಗರವಾಗಿ ಬೆಳೆದು ಅತಿ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿತ್ತು. ರೈಲ್ವೆ ಮತ್ತು ಸಮುದ್ರ ಮಾರ್ಗಗಳನ್ನು ಬ್ರಿಟಿಷರು ತಮ್ಮ ವಾಣಿಜ್ಯ ವ್ಯಾಪಾರದ ಪ್ರಗತಿಗೆ ಅಭಿವೃದ್ಧಿಪಡಿಸಿದರು. ಇದರಿಂದ ಬಾಂಬೆ, ಮದ್ರಾಸ್, ಕಲ್ಕತ್ತಾ, ದೆಹಲಿ, ಕಂಚಿ, ಲಾಹೋರ, ಹುಬ್ಬಳ್ಳಿ, ಹೈದರಾಬಾದ್ ಈ ಪಟ್ಟಣಗಳು, ವಾಣಿಜ್ಯದ ಪ್ರಮುಖ ಕೇಂದ್ರಗಳಾಗಿ ಮಾರ್ಪಟ್ಟು ದೊಡ್ಡ ವ್ಯಾಪಾರ ಕೇಂದ್ರ ನಗರಗಳಾಗಿ ಬೆಳೆಯಲು ಕಾರಣವಾದವು. ಬ್ರಿಟಿಷರು ತಮ್ಮ ಕಾಲದಲ್ಲಿ ಪ್ರವಾಸಿ ಕೇಂದ್ರಗಳಿಗೆ ಸೂಕ್ತ ರೈಲ್ವೆ ಮತ್ತು ವಾಹನ ಸಂಪರ್ಕವನ್ನು ಕಲ್ಪಿಸಿದ್ದರಿಂದ ಜನರು ಸುಲಭವಾಗಿ ಹೋಗಿ ತಮ್ಮ ಮನರಂಜನಾ ಕಾರ್ಯವನ್ನು ಕೈಗೊಳ್ಳುತ್ತಿದ್ದುದರಿಂದ ಪ್ರವಾಸಿ ಸ್ಥಳಗಳು ಅಭಿವೃದ್ಧಿ ಹೊಂದಿ ದೊಡ್ಡ, ದೊಡ್ಡ ನಗರಗಳಾದವು. ಉದಾ : ಆಗ್ರಾ, ವಾರಣಾಸಿ, ಡಾರ್ಜಲಿಂಗ್, ಬ್ರಿಟಿಷರು ನಗರಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲಿಸಿದ್ದರಿಂದ ಅಧಿಕ ಸಂಖ್ಯೆಯಲ್ಲಿ ಜನರು ನಗರಗಳಿಗೆ ಬರತೊಡಗಿದರು. ಈ ನಿಟ್ಟಿನಲ್ಲಿ ಮದ್ರಾಸ್, ಕಲ್ಕತ್ತಾ, ಬಾಂಬೆ ಮುಂತಾದ ನಗರಗಳಲ್ಲಿ ಕಾಲೇಜು ಸ್ಥಾಪನೆಯಾದವು. ೧೯ನೇ ಶತಮಾನದ ನಂತರ ಅಧಿಕ ಕಾಲೇಜು ಸ್ಥಾಪನೆಯಾಗಿದ್ದರಿಂದ ವಿದ್ಯಾರ್ಥಿಗಳು ಹಳ್ಳಿಗಳಿಂದ ನಗರಗಳಿಗೆ ಬರಲಾರಂಭಿಸಿದ್ದರಿಂದ ನಗರಗಳು ಅಧಿಕ ಜನಸಂಖ್ಯೆಯಿಂದ ಬೆಳವಣಿಗೆ ಕಂಡವು.

ಸಾರಿಗೆ ವ್ಯವಸ್ಥೆಯು ವೃದ್ಧಿಗೊಂಡು ಪಟ್ಟಣಗಳಲ್ಲಿ ಉತ್ಪಾದಿಸಿದ ವಸ್ತುವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯಾಪಾರ ಮಾಡಲು ಸಹಾಯಕವಾಗಿದ್ದರಿಂದ ಆ ನಗರಗಳು ಕೈಗಾರಿಕಾ ಪ್ರದೇಶವಾಗಿ ಬೆಳೆಯಲಾರಂಭಿಸಿದವು. ಬ್ರಿಟಿಷರ ಸೈನಿಕ ದಂಡು ಪ್ರದೇಶಗಳು ಮೀರತ್, ಬೆಂಗಳೂರು, ಲಕ್ನೋ, ಸೊಲ್ಲಾಪುರ, ಲಾಹೋರ್, ಮುಂತಾದ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದರಿಂದ ಈ ಪ್ರದೇಶಗಳು ಅಭಿವೃದ್ಧಿ ಹೊಂದಿ ರಾಜಕೀಯ ಪ್ರಜ್ಞೆಯು ಮುಂದುವರೆಯಿತು. ಬ್ರಿಟಿಷರ ಕಾಲದಲ್ಲಿ ಅನೇಕ ಕ್ಷಾಮಗಳು ತಲೆದೋರಿದವು. ಇದು ಹಳ್ಳಿಗಾಡಿನ ಜನತೆಯನ್ನು ಬಹುಕಷ್ಟಕ್ಕೀಡು ಮಾಡಿತು. ಆದ್ದರಿಂದ ಹಳ್ಳಿಗಾಡಿನ ಜನತೆ ತಮ್ಮ ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಬರಲಾರಂಭಿಸಿದರು. ಹೀಗೆ ಬಂದ ಜನಸಂಖ್ಯೆಯ ಒಂದು ಭಾಗ ಕೈಗಾರಿಕೆ, ಗಣಿ ಕೆಲಸ, ಕಟ್ಟೆವನ್ನು ಕಟ್ಟುವುದಕ್ಕೆ ತೊಡಗುತ್ತಿದ್ದರು. ಮತ್ತೆ ಕೆಲವರು ವಾಹನ ಚಾಲಕರಾಗಿ ನೇಮಕಗೊಂಡು ನಗರಗಳಲ್ಲಿಯೇ ವಾಸಿಸತೊಡಗಿದರು.

ಬ್ರಿಟಿಷರ ಕಾಲದಲ್ಲಿ ರೈತರು ಕಂದಾಯ ಏರಿಕೆಯಿಂದ, ಜಮೀನ್ದಾರರ ಶೋಷಣೆಯಿಂದ, ತಮ್ಮ ಜಮೀನಿನ ಸಾಗುವಳಿಗಾಗಿ ಮಾಡಿದ ಸಾಲದ ಅತಿಯಾದ ಭಾರ, ಇನ್ನು ಮುಂತಾದ ಕಾರಣಗಳಿಂದ ತಮ್ಮ ಜಮೀನನ್ನು ಕಳೆದುಕೊಂಡು ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಲು ನಗರಕ್ಕೆ ಬಂದು ನೆಲೆಸಿದ್ದರಿಂದ ನಗರವು ಬೆಳವಣಿಗೆಯನ್ನು ಕಂಡವು. ಆಡಳಿತದ ಪ್ರಮುಖ ಕಛೇರಿಗಳು ರಾಜ್ಯಗಳು, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೇಂದ್ರೀಕೃತವಾಗಿದ್ದರಿಂದ ಆಡಳಿತಕ್ಕೆ ಸಂಬಂಧಪಟ್ಟಂತಹ ಜನರು ನಗರಗಳಿಗೆ ಬರುತ್ತಿದ್ದರಿಂದ ನಗರಗಳು ಮತ್ತಷ್ಟು ಬೆಳೆಯಲು ಕಾರಣವಾಯಿತು. ಶ್ರೀಮಂತರು, ಜಮೀನ್ದಾರರು ತಮ್ಮ ವಿಲಾಸೀ ವಸ್ತುಗಳಿಗೆ ಜೀವನಕ್ಕಾಗಿ ನಗರಗಳಿಗೆ ಅಧಿಕ ಸಂಖ್ಯೆಯಲ್ಲಿ ಬರತೊಡಗಿದ್ದರಿಂದ ನಗರಗಳು ವಿಲಾಸೀ ವಸ್ತುಗಳಿಗೆ ಪ್ರಾಮುಖ್ಯಕೊಟ್ಟು ಮತ್ತಷ್ಟು ಬೆಳೆಯತೊಡಗಿದವು. ಬಟ್ಟೆ ಉದ್ಯಮವು ಸಹ ನಗರಗಳ ಬೆಳವಣಿಗೆ ಪ್ರಮುಖ ಕಾರಣವಾಗಿದೆ. ಬ್ರಿಟಿಷರು ಭಾರತಕ್ಕೆ ಬಂದ ನಂತರ ಈ ಉದ್ಯಮವು ಬೃಹದಾಕಾರವಾಗಿ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತು ಮಾಡುವಂತಾದವು. ಈ ನಿಟ್ಟಿನಲ್ಲಿ ಮಚಲೀಪಟ್ಟಣವು ಬಣ್ಣದ ಬಟ್ಟೆಯ ತಯಾರಿಕೆಯಲ್ಲಿ, ಅಹಮ್ಮದಾಬಾದ್ ಪಂಚೆಯನ್ನು ತಯಾರಿಸುವುದರಲ್ಲಿ ಪ್ರಸಿದ್ದಿ ಪಡೆದಿದ್ದವು. ಈ ಬಟ್ಟೆ ಉದ್ಯಮದಿಂದ ತಯಾರಿಸಿದ ವಸ್ತುಗಳು ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದ್ದುದರಿಂದ ಈ ನಗರಗಳು ಬೆಳವಣಿಗೆಯನ್ನು ಕಂಡವು. ರೇಷ್ಮೆ ಉದ್ಯಮವು ಸಹ ನಗರಗಳ ಬೆಳವಣಿಗೆಗೆ ಸಹಾಯಕವಾಯಿತು. ಭಾರತದ ರೇಷ್ಮೆಯು ಜಗತಿನಲ್ಲಿಯೇ ಪ್ರಸಿದ್ಧಿ ಪಡೆದಿದ್ದುದರಿಂದ ವಿದೇಶಗಳಿಂದ ಬೇಡಿಕೆ ಅಪಾರ ಪ್ರಮಾಣದಲ್ಲಿತ್ತು.

ರೇಷ್ಮೆ ಸೀರೆ ಮತ್ತು ರೇಷ್ಮೆ ಪಂಚೆ ಗುಣಮಟ್ಟದಲ್ಲಿ ಖ್ಯಾತಿ ಪಡೆದಿದ್ದವು. ಆದ್ದರಿಂದ ಇಂತಹ ರೇಷ್ಮೆ ಬಟ್ಟೆಯನ್ನು ತಯಾರಿಸುತ್ತಿದ್ದರಿಂದ ಬನಾರಸ್, ಮುರ್ಷಿದಾಬಾದ್, ಕಾಶ್ಮೀರ, ಪೂನ, ಮೈಸೂರು, ಮದ್ರಾಸ್, ಕೇಂದ್ರಗಳು ಅಪಾರವಾಗಿ ಬೆಳವಣಿಗೆಯನ್ನು ಕಂಡವು. ಉಣ್ಣೆ ಬಟ್ಟೆಯು, ಉಣ್ಣೆ ಶಾಲುಗಳು, ಯೂರೋಪ್, ಫ್ರಾನ್ಸ್‌ಗೆ ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದ್ದುದರಿಂದ ಉಣ್ಣೆ ಉದ್ಯಮಕ್ಕೆ ಹೆಸರಾಗಿದ್ದ ಅಮೃತ್‌ಸರ್, ಆಗ್ರಾ, ಜಯಪುರ, ದಕ್ಷಿಣದ ವಾರಂಗಲ್ ವಿದೇಶಿ ವ್ಯಾಪಾರದ ಸಂಪರ್ಕ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಿದವು. ಕೆತ್ತನೆ ಕೆಲಸವು ಪಟ್ಟಣಗಳ ಬೆಳವಣಿಗೆಗೆ ಪ್ರಮುಖ ಕಾರಣವೆನ್ನಬಹುದು. ಮರ ಅದರ‍್ಲಲೂ ಶ್ರೀಗಂಧದ ಕೆತ್ತನೆ ಕೆಲಸ, ಕಲ್ಲು, ಅಮೃತಶಿಲೆ ಮುಂತಾದ ಕೆತ್ತನೆ ಕೆಲಸದಲ್ಲಿ ದಕ್ಷಿಣ ಭಾರತ ಪ್ರಸಿದ್ದಿ ಬಂದವು. ಆಭರಣ ತಯಾರಿಕೆಯು ಪಟ್ಟಣಗಳ ಪ್ರಮುಖ ಬೆಳವಣಿಗೆಗೆ ಕಾರಣವಾಯಿತೆನ್ನಬಹುದು. ಬೆಳ್ಳಿ, ಬಂಗಾರ, ಕಂಚು ಇತರ ಲೋಹಗಳಿಂದ ವಿವಿಧ ಬಗೆಯ ವಸ್ತುವನ್ನು ಆಭರಣವನ್ನು ತಯಾರಿಸುವ ಉದ್ಯಮದಲ್ಲಿ ಭಾರತದ ಪಟ್ಟಣಗಳು ಪ್ರಪಂಚದಲ್ಲಿಯೇ ಪ್ರಸಿದ್ಧಿ ಪಡೆದಿದ್ದವು. ಸೂರತ್ ಪಟ್ಟಣವು ಈ ಆಭರಣ ತಯಾರಿಕೆಯಲ್ಲಿ ಹೆಸರುವಾಸಿಯಾಗಿತ್ತು.

ಶೈಕ್ಷಣಿಕ ನೀತಿ ಮತ್ತು ಬೆಳವಣಿಗೆ

ಬ್ರಿಟಿಷರ ಆಳ್ವಿಕೆಯ ಪರಿಣಾಮ ಮತ್ತು ಅವರ ಸಂಪರ್ಕದಿಂದಾಗಿ ಪಾಶ್ಚಿಮಾತ್ಯ ಶಿಕ್ಷಣದ ಪರಿಚಯ ಭಾರತೀಯರಿಗೆ ಆಯಿತು. ಜೊತೆಗೆ ವೈಜ್ಞಾನಿಕ ವಿಚಾರವನ್ನು ತಿಳಿಯುವಂತಾಯಿತು. ಬ್ರಿಟಿಷ್ ಪೂರ್ವಕಾಲದಲ್ಲಿಯೂ ಭಾರತದಲ್ಲಿ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು. ಮುಖ್ಯವಾಗಿ ಸಂಸ್ಕೃತ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕೊಡಲಾಗುತ್ತಿತ್ತು. ಈ ಕಾಲದಲ್ಲಿ ಹೆಚ್ಚಾಗಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿತ್ತು. ಆದರೆ ವಿದ್ಯೆ ಸಾರ್ವತ್ರಿಕವಾಗಿರದೇ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಬ್ರಾಹ್ಮಣರು ವಿದ್ಯಾಭ್ಯಾಸವನ್ನು ಪಡೆಯುವ ಸಂಪೂರ್ಣ ಏಕಸ್ವಾಮ್ಯವನ್ನು ಹೊಂದಿದ್ದರು, ಆದರೆ ಮುಸ್ಲಿಮರಲ್ಲಿ ಈ ರೀತಿಯ ಯಾವುದೇ ಏಕಸ್ವಾಮ್ಯತೆಯನ್ನು ಹೊಂದದೆ ಉನ್ನತ ಶಿಕ್ಷಣ ಸಾರ್ವತ್ರಿಕವಾಗಿತ್ತು. ಎಲ್ಲಾ ಮುಸ್ಲಿಮರಿಗೂ ಮದ್ರಾಸ್‌ಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆಯಲು ಅವಕಾಶವಿತ್ತು. ಉನ್ನತ ವಿದ್ಯಾಭ್ಯಾಸವನ್ನು ಅರೆಬಿಕ್ ಭಾಷೆಯಲ್ಲಿ ನೀಡಲಾಗುತ್ತಿತ್ತು. ಬ್ರಿಟಿಷ್ ಪೂರ್ವಕಾಲದ ವಿದ್ಯಾಭ್ಯಾಸವು ತರ್ಕ ಸಮ್ಮತವಾದ ಮತ್ತು ವ್ಯಕ್ತಿ ವಿಕಾಸಕ್ಕೆ ಬೇಕಾದ ವಿಚಾರಗಳನ್ನು ತುಂಬದೇ ವಿದ್ಯಾರ್ಥಿಗಳನ್ನು ಕಟ್ಟಾ ಹಿಂದೂ ಅಥವಾ ಮುಸ್ಲಿಮರನ್ನಾಗಿಸಿತು. ಆಧುನಿಕ ಮಾದರಿಯ ಶಿಕ್ಷಣವನ್ನು ಭಾರತದ ಚರಿತ್ರೆಯಲ್ಲಿ ಪರಿಚಯಿಸಿದ್ದು ಭಾರತದ ಚರಿತ್ರೆಯಲ್ಲಿ ಮಹತ್ವದ ಘಟನೆ. ಇದು ಬ್ರಿಟಿಷ್ ಆಡಳಿತದ ಪ್ರಗತಿಪರ ಕಾಯಿದೆಗಳ ಪ್ರಭಾವ, ಈಸ್ಟ್ ಇಂಡಿಯಾ ಕಂಪನಿ ಆಡಳಿತವನ್ನು ಆರಂಭಿಸಿದಾಗ ಯಾವುದೇ ಬದಲಾವಣೆಯನ್ನು ತರದೆ, ಹಿಂದಿನ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಯಿತು.

ಭಾರತದಲ್ಲಿ ಆಧುನಿಕ ಶಿಕ್ಷಣ ಪ್ರಚಾರವಾಗಲು ವಿದೇಶಿ ಕ್ರೈಸ್ತ ಮಿಷನಿರಿಗಳು ಬ್ರಿಟಿಷ್ ಸರ್ಕಾರ ಮತ್ತು ಪ್ರಗತಿಪರ ಭಾರತೀಯ ಚಿಂತಕರು ಪ್ರಮುಖ ಕಾರಣ, ಬ್ರಿಟಿಷ್ ಸರ್ಕಾರ ಉದಾರವಾಗಿ ಆಧುನಿಕ ಮಾದರಿಯ ಶಿಕ್ಷಣವನ್ನು ಪ್ರಚಾರ ಮಾಡಲು ಶಾಲಾ, ಕಾಲೇಜುಗಳ ಜಾಲವನ್ನೇ ಆರಂಭಿಸಿದರು. ಮೂಲಭೂತವಾಗಿ ಭಾರತದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರು ಆರಂಭಿಸಲು ಹಲವಾರು ಕಾರಣಗಳಿದ್ದವು. ಅವರು ಭಾರತದಲ್ಲಿ ಆಡಳೀತ ವಿಸ್ತರಣೆ ಮತ್ತು ಸಂಘಟನೆಯನ್ನು ಆರಂಭಿಸಿದಾಗ ಆಡಳಿತದ ಅನುಕೂಲ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ನೌಕರರು ಬೇಕಾಗಿತ್ತು. ಜೊತೆಗೆ ದುಬಾರಿಯಾಗಿತ್ತು. ಈ ಒಂದು ಕಾರಣದಿಂದ ಬ್ರಿಟಿಷ ಸರ್ಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾ, ಕಾಲೇಜುಗಳನ್ನು ತೆರೆದ ಜನರಿಗೆ ವಿದ್ಯಾಭ್ಯಾಸವನ್ನು ಆರಂಭಿಸಬೇಕಾಗಿತ್ತು. ಜೊತೆಗೆ ಬ್ರಿಟಿಷರ ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳು ಭಾರತದಲ್ಲಿ ಬೆಳವಣಿಗೆ ಹೊಂದಲಾರಂಭಿಸಿದ್ದರಿಂದಾಗಿ ಬ್ರಿಟಿಷರಿಗೆ ಇಂಗ್ಲಿಷ್ ಜ್ಞಾನ ಹೊಂದಿರುವ ಗುಮಾಸ್ತರು, ವ್ಯವಸ್ಥಾಪಕರುಗಳು ಅವಶ್ಯಕವಾಯಿತು.

ಇಂಗ್ಲೀಷ್ ವಿದ್ಯಾಭ್ಯಾಸವನ್ನು ಭಾರತದಲ್ಲಿ ಆರಂಭಿಸಲು ಬ್ರಿಟಿಷ್ ರಾಜನೀತಿಜ್ಞರು ಪ್ರೋತ್ಸಾಹಿಸಿದರು. ಬ್ರಿಟಿಷರ ಸಂಸ್ಕೃತಿಯು ವಿಶ್ವದಲ್ಲಿಯೇ ಶ್ರೇಷ್ಠವಾದುದು ಹಾಗೂ ಉದಾರವಾದುದಾಗಿದೆ. ಆದುದರಿಂದ ಅದನ್ನು ಹರಡುವುದು ಮುಖ್ಯವೆಂಬುದು ಇವರ ಅಭಿಪ್ರಾಯವಾಗಿತ್ತು. ಭಾರತದಲ್ಲಿ ಪಾಶ್ಚಿಮಾತ್ಯ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ನೀಡಬೇಕೆಂದು ರಾಜರಾಮ ಮೋಹನರಾಯ್ ಮತ್ತು ತಿರುವನಂತಪುರದ ಕೇಶವದಾಸರಂತಹ ಪ್ರಗತಿಪರ ಭಾರತೀಯರು ಹೆಚ್ಚಿನ ಒಲವನ್ನು ಹೊಂದಿದ್ದರು. ಈ ಒಂದು ಹಿನ್ನೆಲೆಯಲ್ಲಿ ಹಲವಾರು, ಧಾರ್ಮಿಕ ಸಂಸ್ಥೆಗಳ, ಆಧುನಿಕ ಶಿಕ್ಷಣವನ್ನು ಪದ್ಧತಿಯ ಆರಂಭಕ್ಕೆ ನಾಂದಿಯಾಯಿತು. ಆದ್ದರಿಂದ ಈ ಆಧುನಿಕ ಶಿಕ್ಷಣ ಪದ್ಧತಿ ಭಾರತದಲ್ಲಿ ಹೇಗೆ ಹಂತ ಹಂತವಾಗಿ ಬೆಳವಣಿಗೆ ಹೊಂದಲಾರಂಭಿಸಿತು. ಇದಕ್ಕೆ ಸರ್ಕಾರ ಯಾವ ರೀತಿಯಲ್ಲಿ ಪ್ರೋತ್ಸಾಹವನ್ನು ಕೊಟ್ಟಿತು ಎಂಬುದನ್ನು ತಿಳಿಯುವುದು ಸೂಕ್ತ.

ವಾರನ್ ಹೇಸ್ಟಿಂಗ್ಸ ಭಾರತದ ಶಿಕ್ಷಣ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಕಲ್ಕತ್ತಾದಲ್ಲಿ ಮದ್ರಾಸವನ್ನು ಆರಂಭಿಸಿದ ಇದರಿಂದ ಸ್ಫೂರ್ತಿ ಪಡೆದ ವಿಲಿರ್ಯ ಜೋನ್ಸ್ ೧೭೮೪ರಲ್ಲಿ ಕಲ್ಕತ್ತಾದಲ್ಲಿ ಏಷಿಯಾಟಿಕ್ ಸೊಸೈಡಿ ಆಫ್ ಬೆಂಗಾಳವನ್ನು ಸ್ಥಾಪಿಸಿದರು. ಜೋನಾಥನು ೧೭೯೧ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದ. ಭಾರತೀಯರಿಗೆ ಇಂಗ್ಲೀಷ್ ಶಿಕ್ಷಣವನ್ನು ಬೋಧಿಸಲು ಶಾಲೆಗಳನ್ನು ತೆರೆಯುವ ವಿಚಾರವನ್ನು ಪ್ರಸ್ತಾಪಿಸಿದನು ಕೋರ್ಟ್‌ ಆಫ್‌ ಡೈರಕ್ಟರಿನ ಸದಸ್ಯ ಚಾರ್ಲ್ಸ್‌‌ಗ್ರಾಂಟ್. ಇಂಗ್ಲೀಷ್ ಶಿಕ್ಷಣವನ್ನು ಕೊಡುವುದರಿಂದ ಭಾರತೀಯರಲ್ಲಿರುವ ಅಧಿಕಾರವನ್ನು ತೊಡೆದು ಹಾಕಬಹುದು ಎಂಬುದಾಗಿ ಅಭಿಪ್ರಾಯ ಹೊಂದಿದ್ದ. ಆದರೆ ಗ್ರಾಂಟನ ಪ್ರಯತ್ನಗಳು ವಿಫಲವಾದವು. ಆದರೆ ಕ್ರೈಸ್ತ ಮಿಷನರಿಗಳು ಅದನ್ನು ನೀಡಲು ಒಪ್ಪಿಕೊಂಡಿತು. ಇದಲ್ಲದೆ ಪಾಶ್ಚಿಮಾತ್ಯ ವಿಜ್ಞಾನ ವಿಷಯಗಳ ಬೋಧನೆಗೆ ಆದ್ಯತೆ ನೀಡಿತು. ಯುರೋಪಿನ ವೈಜ್ಞಾನಿಕ ಗ್ರಂಥಗಳನ್ನು ಪೌರ್ವತ್ಯ ಭಾಷೆಗಳಿಗೆ ಭಾಷಾಂತರ ಕಾರ್ಯ ಮಾಡಲಾಯಿತು.

೧೮೧೩ರ ಚಾರ್ಟರ್ ಕಾಯಿದೆ ಭಾರತದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಒದಗಿಸಿದ ಹಣವನ್ನು ಪಾಶ್ಚಿಮಾತ್ಯ ವಿದ್ಯಾಭ್ಯಾಸದ ಪ್ರಚಾರಕ್ಕೆ ಉಪಯೋಗಿಸಿಕೊಳ್ಳಬೇಕೆ ಅಥವಾ ಪೌರ್ವಾತ್ಯ ವಿದ್ಯಾಭ್ಯಾಸ ಅಭಿವೃದ್ಧಿಗೆ ಉಪಯೋಗವಾಗಬೇಕೆ ಎಂಬ ವಿಷಯ ಲಾರ್ಡ್‌ವಿಲಿಯಂ ಬೆಂಟಿಕ್‌ನ ಕಾಲದಲ್ಲಿ ಉದ್ಭವವಾಗಿ ಬ್ರಿಟೀಷರಲ್ಲೇ ಎರಡು ಗುಂಪುಗಳಾಗಿ ಒಂದು ಗುಂಪು ಪೌರ್ವಾತ್ಯ ಭಾಷೆ ಸಾಹಿತಿಗಳ ಗುಂಪು ಎಂತಲು ಈ ಗುಂಪು ಸರ್ಕಾರ ಬಿಡುಗಡೆ ಮಾಡಿರುವ ಹಣ ಪೌರ್ವತ್ಯ ಭಾಷೆಗಳ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು, ಮತ್ತೊಂದು ಗುಂಪು ಪಾಶ್ಚಿಮಾತ್ಯ ಜ್ಞಾನದ ಬೋಧನೆಗೆ ಬಳಕೆಯಾಗಬೇಕೆಂಬ ಅಭಿಪ್ರಾಯ ಹೊಂದಿದ್ದವು. ಮೊದಲನೇ ಗುಂಪಿನಲ್ಲಿ ಹೋರೆಸ್ ಹಾಗೂ ಸಂಪ್ರದಾಯಸ್ಥ ಹಿಂದೂ , ಮುಸ್ಲಿಮ ಪಂಡಿತರು. ಇನ್ನೊಂದು ಗುಂಪಿನಲ್ಲಿ ಮೆಕಾಲೆ ಮತ್ತು ಉದಾರವಾದದ ಪ್ರಭಾವಕ್ಕೆ ಒಳಗಾಗಿದ್ದ ಡಪ್, ರಾಜಾರಾಮ್ ಮೋಹನ್‌ರಾಯ್‌ ಮುಂತಾದವರು ಇಂಗ್ಲೀಷ್ ಜ್ಞಾನವನ್ನು ಭಾರತೀಯ ಭಾಷೆಗಳ ಮೂಲಕ ಜನಸಾಮಾನ್ಯರಿಗೆ ತಲುಪಬೇಕು ಎನ್ನುವುದು ಈ ಗುಂಪಿನ ವಾದವಾಗಿತ್ತು. ಹೀಗೆ ಆಂಗ್ಲಿಸಿಸ್ಟರು ಮಂಡಿಸಿದ ಈ ಸಿದ್ಧಾಂತವನ್ನು ಸೋಸೊ ಸಿದ್ದಾಂತವೆಂದು ಕರೆಯುತ್ತಾರೆ. ಮೆಕಾಲೆಯನ್ನು ಶಿಕ್ಷಣ ಮಂಡಳಿಗೆ ಅಧ್ಯಕ್ಷನಾಗಿ ನೇಮಿಸುವವರೆವಿಗೂ ಈ ವಿಷಯದಲ್ಲಿ ಒಂದು ನಿರ್ದಿಷ್ಟವಾದ ನೀತಿ ರೂಪುಗೊಂಡಿರಲಿಲ್ಲ. ಮೆಕಾಲೆಗೆ ಪಾಶ್ಚಿಮಾತ್ಯ ನಾಗರೀಕತೆಯ ಹಿರಿಮೆಯ ಬಗ್ಗೆ ಹಾಗೂ ಇಂಗ್ಲೀಷ್ ಭಾಷೆಯ ಮೌಲ್ಯದ ಬಗ್ಗೆ ಅವನಿಗೆ ಅಚಲವಾದ ನಂಬಿಕೆ ಇತ್ತು.

೧೮೩೫ರ ಫೆಬ್ರವರಿ ೨ರಂದು ಮೆಕಾಲೆ ಶಿಕ್ಷಣ ನೀತಿಗೆ ಸಂಬಂಧಿಸಿದ ಟಿಪ್ಪಣಿಯನ್ನು ಸಿದ್ದಪಡಿಸಿ ಕೌನ್ಸಿಲ್ಲಿನ ಮುಂಡಿಟ್ಟನು. ಮೆಕಾಲೆಯ ಟಿಪ್ಪಣಿಯು ಇಂಗ್ಲೀಷ್ ಭಾಷೆಯ ಶಿಕ್ಷಣದ ಪ್ರಚಾರಕ್ಕೆ ಅವಕಾಶಕೊಡುವ ವಿಚಾರದ ಪರವಾಗಿತ್ತು. ಮೆಕಾಲೆಯ ವರದಿಯು ಭಾರತೀಯ ಶಿಕ್ಷಣದ ಅಭಿವೃದ್ಧಿಗೆ ಹಾಗೂ ಪಾಶ್ಚಿಮಾತ್ಯ ಶಿಕ್ಷಣವನ್ನು ಜಾರಿಗೆ ತಂದನು. ಇದು ಭಾರತದಲ್ಲಿ ಆಧುನಿಕ ಶಿಕ್ಷಣದ ಆರಂಭಕ್ಕೆ ಬುನಾದಿ ಹಾಕಿತು. ಧರ್ಮ ಪ್ರಚಾರ ಕಾರ್ಯವನ್ನು ಸುಲಭಗೊಳಿಸಲು ಮದ್ರಾಸ್ ಮತ್ತು ಬಂಗಾಳಗಳಲ್ಲಿ ಮಿಷನರಿ ಶಾಲೆಗಳನ್ನು ವಿಲಿಯಂ ಕ್ಯಾರಿ ಮತ್ತು ಬ್ಯಾಪ್ಟಿಸ್ಟ್ ಸಂಸ್ಥೆಗಳು ಆರಂಭಿಸಿದವು.

೧೮೦೦ರಲ್ಲಿ ಲಾರ್ಡ್‌ವೆಲ್ಲಸ್ಲಿ ಪೋರ್ಟ್‌ವಿಲಿಯಂ ಕಾಲೇಜನ್ನು ಆರಂಭಿಸಿದ. ಇದು ಹಿಂದೂಸ್ಥಾನಿ ಮತ್ತು ಇಂಗ್ಲೀಷ್ ಪದಕೋಶವನ್ನು ಪ್ರಕಾಶಿಸಿತು. ೧೮೧೩ರ ಚಾರ್ಟರ್ ಕಾಯಿದೆಯಲ್ಲಿ ಇಂಗ್ಲೆಂಡಿನ ಸಂಸತ್ತು ಭಾರತೀಯರಿಗೆ ಇಂಗ್ಲೀಷ್ ಮತ್ತು ದೇಶೀಯ ಭಾಷೆಯಲ್ಲಿ ಶಿಕ್ಷಣ ಕೊಡುವುದರಿಂದ ಕಂಪನಿಯ ಆಡಳಿತದಲ್ಲಿ ಸುಧಾರಣೆ ಕಂಡುಬಂದು ನ್ಯಾಯಾಡಳಿತ ಮತ್ತು ಕಂದಾಯ ಇಲಾಖೆಯ ಆಡಳಿತವನ್ನು ಸುಧಾರಿಸಲು ಇಂಗ್ಲೀಷ್ ಮತ್ತು ದೇಶೀಯ ಭಾಷೆ ಬರುವುವರನ್ನು ನೇಮಿಸುವುದರಿಂದ ಆಡಳಿತ ದೊಷಗಳನ್ನು ನಿವಾರಿಸಿ ಜನರೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಬಹುದು ಎಂಬ ಅಭಿಪ್ರಾಯವಿತ್ತು.

ರಾಜಾರಮ್ ಮೋಹನರಾಯ್ ಮತ್ತು ಇನ್ನಿತರ ಪ್ರಗತಿಪರ ಚಿಂತಕರು ಇಂಗ್ಲಿಷ್ ವಿದ್ಯಾಭ್ಯಾಸವನ್ನು ಭಾರತೀಯರಿಗೆ ದೊರಕಿಸಿಕೊಟ್ಟು ಭಾರತದ ಶಿಕ್ಷಣ ಪದ್ಧತಿಯನ್ನು ಪಾಶ್ಚಿಮಾತ್ಯ ಶಿಕ್ಷಣದ ಮಾದರಿಯಲ್ಲಿ ಸುಧಾರಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಕಂಪನಿಯ ಸರ್ಕಾರ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜು ಮತ್ತು ಕಲ್ಕತ್ತಾದ ಒರಿಯಂಟಲ್ ಕಾಲೇಜುಗಳ ಸ್ಥಾಪನೆಯನ್ನು ವಿರೋಧಿಸಿದರು. ಸಂಸ್ಕೃತದಲ್ಲಿ ಶಿಕ್ಷಣವನ್ನು ಕೊಡುವುದರಿಂದ ದೇಶವನ್ನು ಅಂಧಕಾರದಲ್ಲಿ ಮುಳುಗಿಸಿದಂತಾಗುತ್ತದೆ, ಅದಕ್ಕೆ ಬದಲಾಗಿ ಜೀವನಕ್ಕೆ ಹತ್ತಿರವಾದ ಗಣಿತಶಾಸ್ತ್ರ, ರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ಇನ್ನಿತರ ವಿಷಯಗಳ ಜ್ಞಾನವನ್ನು ಪಡೆಯಲು ಸರ್ಕಾರ ಉದಾರವಾಗಿ ಸಹಾಯ ಮಾಡುವಂತೆ ಕೋರಿದರು. ಡೇವಿಡ್ ಹೇರ್ ಮತ್ತು ರಾಜರಾಮ್ ಮೋಹನ್‌ರಾಯರು ಕಲ್ಕತ್ತಾದಲ್ಲಿ ೧೮೧೭ರಲ್ಲಿ ಹಿಂದೂ ಕಾಲೇಜನ್ನು ಆರಂಭಿಸಿದರು. ಇದೇ ಕಾಲೇಜು ಮುಂದೆ ಪ್ರೆಸಿಡೆನ್ಸಿ ಕಾಲೇಜಾಗಿ ಜನಪ್ರಿಯವಾಯಿತು.

ಮೆಕಾಲೆ ತನ್ನ ಟಿಪ್ಪಣಿಯಲ್ಲಿ ಪಾಶ್ಚಿಮಾತ್ಯ ಶಿಕ್ಷಣಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಮಂಡಿಸಿದ್ದ. “ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯ ನಾಶವಾಗಬಹುದು. ಆದರೆ ಇಂಗ್ಲೀಷ್ ಸಾಹಿತ್ಯ ಸಾಮ್ರಾಜ್ಯ ಮಾತ್ರ ಶಾಶ್ವತ” ಎಂದು ತಿಳಿಸಿದ್ದಾನೆ. ಯುರೋಪಿನ ಪುನರುಜ್ಜೀವನದ ಮಾದರಿಯನ್ನು ಇಟ್ಟುಕೊಂಡು ಭಾರತೀಯ ಸಮಾಜದಲ್ಲಿದ್ದ ಪೂರ್ವಾಗ್ರಹವನ್ನು ತೊಡೆದು ಹಾಕಿ ಜ್ಞಾನದ ಶಾಖೆಗಳನ್ನು ವಿಸ್ತರಿಸುವ ಉದ್ದೇಶವನ್ನು ಮತ್ತು ಕಂಪನಿಯ ಕೆಳದರ್ಜೆಯ ಆಡಳಿತವನ್ನು ನಡೆಸಲು “ಕಂದು ಬಣ್ಣದ” ಇಂಗ್ಲೀಷರನ್ನು ತರಬೇತುಗೊಳಿಸುವ ಉದ್ದೇಶವನ್ನು ಮೆಕಾಲೆ ಹೊಂದಿದ್ದ. ಅವನಿಗೆ ಪೌರ್ವಾತ್ಯ ಸಾಹಿತ್ಯದ ಬಗ್ಗೆ ದುರಾಭಿಮಾನವಿತ್ತು. ಏಕೆಂದರೆ ಒಂದು ಕಪಾಟಿನಷ್ಟು ಇಂಗ್ಲೀಷ್ ಸಾಹಿತ್ಯ ಗ್ರಂಥಗಳಿಗಾಗಿ ಇಡೀ ಪ್ರಾಚ್ಯ ಸಾಹಿತ್ಯವನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಆತ ಹೇಳಿದ. ಒಟ್ಟಾರೆ ಮೆಕಾಲೆಯ ಕೆಲವು ಅಭಿಪ್ರಾಯಗಳು ಪೂರ್ವಗ್ರಹಪೀಡಿತವಾಗಿವೆ. ಪ್ರಾಚೀನ ಭಾರತದ ವೈಜ್ಞಾನಿಕ ಚಿಂತನೆ ಮತ್ತು ಸಾಧನೆಯ ಬಗ್ಗೆ ಆತ ತಿಳಿದುಕೊಂಡಿದ್ದರೆ ಮೇಲಿನ ಆಭಿಪ್ರಾಯಕ್ಕೆ ಬಹುಶಃ ಬರುತ್ತಿರಲಿಲ್ಲವೇನೋ. ಬೆಂಟಿಕ್ ಮೆಕಾಲೆಯ ವರದಿಯನ್ನು ಒಪ್ಪಿ ಅದನ್ನು ಜಾರಿಗೆ ತಂದು ಸರ್ಕಾರ ಶಿಕ್ಷಣದ ಅಭಿವೃದ್ಧಿಗೆ ಕೊಡುವ ಹಣ ಇಂಗ್ಲೀಷ್ ಭಾಷೆ ಮತ್ತು ಪಾಶ್ಚಿಮಾತ್ಯ ವಿಜ್ಞಾನದ ಬೋಧನೆಗಾಗಿ ಖರ್ಚು ಮಾಡಲು ನಿರ್ಧರಿಸಲಾಯಿತು. ಭಾರತದಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲೀಷ್ ಭಾಷೆಯಾಗಿರಬೇಕೆಂಬ ಆಜ್ಞೆಯನ್ನು ಬೆಂಟಿಕ್ ಹೊರಡಿಸಿದ. ಉನ್ನತ ಶಿಕ್ಷಣವನ್ನು ಇಂಗ್ಲಿ ಭಾಷಾ ಮಾಧ್ಯಮದ ಮೂಲಕ ಬೊಧಿಸಲು ಆರಂಭಿಸಲಾಯಿತು ಮತ್ತು ಪ್ರಾಥಮಿಕ ಶಿಕ್ಷಣವನ್ನು ದೇಶೀಯ ಭಾಷೆಯಲ್ಲಿ ಬೋಧಿಸಲಾಯಿತು.

ಸರ್ಕಾರಿ ಇಲಾಖೆಯ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಬೇಕು ಎಂಬ ಕಾನೂನನ್ನು ಹಾರ್ಡಿಂಜ್ ಜಾರಿಗೆ ತಂದಿದ್ದರಿಂದ ಇಂಗ್ಲೀಷ್ ಭಾಷೆಯ ಬೆಳವಣಿಗೆಗೆ ಮತ್ತು ಜನಪ್ರಿಯತೆ ಪುಷ್ಟಿ ನೀಡಿತು. ಸ್ಥಳೀಯ ಶಿಕ್ಷಣದ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡಲು ಬೆಂಟಿಂಕ್‌ನು ವಿಲಿಯಂ ಆಡಮ್ಸ್ ಎಂಬುವವನನ್ನು ನೇಮಿಸದ ಈತನ ವರದಿಯು ದೇಶೀಯ ಭಾಷಾ ಶಾಲೆಗಳ ದುಸ್ಥಿತಿ ಜನತೆಯ ಮನಸ್ಸಿನಲ್ಲಿ ಮೂಡಿದ್ದ ಮೂಢನಂಬಿಕೆ ಮತ್ತು ಅಜ್ಞಾನ ಮುಂತಾದ ಅಂಶಗಳನ್ನು ವಿವರಿಸಿತು. ಈ ಅವಧಿಯಲ್ಲಿ ದೇಶೀಯ ಭಾಷಾ ಶಿಕ್ಷಣಕ್ಕೆ ಗಮನಾರ್ಹವಾದ ಪ್ರೋತ್ಸಾಹ ದೊರೆಯಲಿಲ್ಲ. ಒಟ್ಟಿನಲ್ಲಿ ಮಧ್ಯಮ ವರ್ಗದ ಜನರು ಇಂಗ್ಲೀಷ್ ಗಮನಾರ್ಹವಾದ ಪ್ರೋತ್ಸಾಹ ದೊರೆಯಲಿಲ್ಲ. ಒಟ್ಟಿನಲ್ಲಿ ಮಧ್ಯಮ ವರ್ಗದ ಜನರು ಇಂಗ್ಲೀಷ್ ವಿದ್ಯಾಭ್ಯಾಸದ ಪ್ರಯೋಜನ ಪಡೆದುಕೊಂಡರು.

ಚಾರ್ಲ್ಸ್ವುಡ್ ವರದಿಯ ಕಾಲದಿಂದ ಕರ್ಜನ್ ವಿಶ್ವವಿದ್ಯಾನಿಲಯಗಳ ಕಾಯಿದೆವರೆಗಿನ ಶಿಕ್ಷಣದ ಬೆಳವಣಿಗೆ : ಚಾರ್ಲ್ಸ್‌ವುಡ್‌ನ ವರದಿಯು ಆಧುನಿಕ ಭಾರತದ ಶಿಕ್ಷಣ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಬೋರ್ಡ್ ಆಫ್ ಕಂಟ್ರೋಲಿನ ಅಧ್ಯಕ್ಷನಾಗಿದ್ದ ಸರ್ ಚಾರ್ಲ್ಸ್‌‌ವುಡ್ ಇಂಗ್ಲೀಷ್ ಶಿಕ್ಷಣದ ’ಮ್ಯಾಗ್ನಕಾರ್ಟ್’ ಎಂದು ಕರೆಯುತ್ತಾರೆ. ಇದು ಶಿಕ್ಷಣದ ಬಗ್ಗೆ ಆರಂಭದಲ್ಲಿದ್ದ ವಿವಾದಗಳಿಗೆ ತೆರೆ ಎಳೆಯಿತು. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಸಾರ ಮತ್ತು ಸರ್ಕಾರಿ ಆಡಳಿತಕ್ಕೆ ಬೇಕಾದ ನೌಕರರನ್ನು ನೇಮಿಸಲು ಈ ಉದ್ದೇಶಕ್ಕಾಗಿ ಭಾರತದಲ್ಲಿ ಶಿಕ್ಷಣ ಪದ್ಧತಿಯನ್ನು ಸಂಘಟಿಸಬೇಕಾಗಿತ್ತು.

. ಈ ವರದಿಯ ಪ್ರಕಾರ ಕಾಲೇಜು ವಿದ್ಯಾಭ್ಯಾಸವನ್ನು ಇಂಗ್ಲಿಷ್ ಭಾಷೆಯ ಮೂಲಕ ನೀಡುವುದು. ಪ್ರೌಢ ಶಿಕ್ಷಣವನ್ನು ಇಂಗ್ಲೀಷ್ ಮತ್ತು ಭಾರತೀಯ ಭಾಷೆಯಲ್ಲಿ ನೀಡುವುದು. . ಪ್ರಾಥಮಿಕ ಶಾಲೆಗಳನ್ನು ಹಳ್ಳಿಗಳಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಜಿಲ್ಲಾ ಮಟ್ಟದಲ್ಲಿ ತೆರೆಯುವುದು. . ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸರ್ಕಾರ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಅವುಗಳಿಗೆ ಧನ ಸಹಾಯ ಮಾಡಬೇಕು. . ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಇಲಾಖೆಯನ್ನು ತೆರೆದು ಮೇಲ್ವಿಚಾರಕರನ್ನು ನೇಮಿಸಿ ಶಿಕ್ಷಣ ಮಟ್ಟವನ್ನು ಸುಧಾರಿಸಬೇಕು. ೫. ಲಂಡನ್ನಿನ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಮದ್ರಾಸ್, ಬಾಂಬೆ, ಕಲ್ಕತ್ತಾಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿವುದು. . ತಾಂತ್ರಿಕ ಶಿಕ್ಷಣವನ್ನು ನೀಡುವ ಸಲುವಾಗಿ ಕಾಲೇಜುಗಳನ್ನು ತೆರೆಯುವುದು. . ಸ್ತ್ರೀ ಶಿಕ್ಷಣ, ದೇಶೀಯ ಸುಧಾರಣೆ ಮತ್ತು ಅಧ್ಯಾಪಕರ ತರಬೇತಿ ಮುಂತಾದ ವಿಷಯಗಳನ್ನು ವರದಿ ಒಳಗೊಂಡಿತ್ತು.

ಗೌರ‍್ನರ್ ಜನರಲ್ ಲಾರ್ಡ್‌‌ಡಾಲ್ ಹೌಸಿಯು ವುಡ್‌ನ ವರದಿಯನ್ನು ಜಾರಿಗೆ ತಂದು ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ೧೮೫೫ರಲ್ಲಿ ಸಂಘಟಿಸಿದರು. ಪ್ರಾಂತ್ಯಗಳಲ್ಲಿ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಲಾಯಿತು ಮತ್ತು ಶಾಲೆಗಳ ಮೇಲ್ವಿಚಾರಣಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಲ್ಕತ್ತಾದಲ್ಲಿ ಕೃಷಿ ಸಂಸ್ಥೆ ಮತ್ತು ಉತ್ತರ ಪ್ರದೇಶದ ವರದಿಯು ಭಾರತದಲ್ಲಿ ಆಧುನಿಕ ಮಾದರಿಯ ಶಿಕ್ಷಣ ಪದ್ಧತಿಗೆ ತಳಪಾಯವನ್ನು ಹಾಕಿತು.

ಹಂಟರ್ ವರದಿ (೧೮೮೨೮೩)

ಸರ್ಕಾರ ೧೮೮೨ರಲ್ಲಿ ಹಂಟರ್‌ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯು ೧೮೫೪ ರ ವುಡ್‌ನ ವರದಿಯ ಕಾಲದಿಂದ ಇಲ್ಲಿಯವರೆಗೂ ಭಾರತದ ಶಿಕ್ಷಣದಲ್ಲಿ ಉಂಟಾಗಿದ್ದ ಪ್ರಗತಿಯನ್ನು ಪರಿಶೀಲಿಸುವುದು ಇದರ ಕಾರ್ಯವಾಗಿತ್ತು. ಈ ಸಮಿತಿಯು ೧೮೮೩ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ಹಂಟರ್ ವರದಿಯ ಮುಖ್ಯಾಂಶಗಳು

. ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರಾಥಮಿಕ ಶಿಕ್ಷಣದ ಮೇಲ್ವಿಚಾರಣೆಯನ್ನು ಜಿಲ್ಲಾ ಮತ್ತು ಬೋರ್ಡ್‌‌ಗಳಿಗೆ ವಹಿದಿ ೧/೩ ಭಾಗದಷ್ಟು ಧನ ಸಹಾಯವನ್ನು ಸರ್ಕಾರ ಕೊಡಬೇಕು. ೨. ಖಾಸಗಿ ಶಿಕ್ಷಣ ಸಂಸ್ಥೆಯನ್ನು ಪ್ರೋತ್ಸಾಹಿಸಿ ಅವುಗಳಿಗೆ ಅನುದಾನವನ್ನು ಕೊಟ್ಟು ಸರ್ಕಾರಿ ಶಾಲೆಗಳಂತೆ ಮಾನ್ಯತೆ ಕೊಡಬೇಕು. . ಪ್ರಾಂತ್ಯಗಳಲ್ಲಿಯು ಸ್ತ್ರೀಯರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.

ಸರ್ಕಾರ ಈ ವರದಿಯು ಸಲ್ಲಿಸಿದ ಅಂಶಗಳನ್ನು ಅಂಗೀಕರಿಸಿತು. ಈ ವೇಳೆಗೆ ಶಿಕ್ಷಣ ಸಾಕಷ್ಟು ಕ್ಷೀಪ್ರವಾಗಿ ಪ್ರಗತಿ ಹೊಂದಲಾರಂಭಿಸಿತು. ಖಾಸಗಿ ಶಿಕ್ಷಣ ಸಂಸ್ಥಗಳು ಬೆಳವಣಿಗೆ ಹೊಂದಲಾರಂಭಿಸಿದವು. ಬಾಂಬೆಯಲ್ಲಿ ಡೆಕಾನ್ ಎಜುಕೇಷನ್ ಸೊಸೈಟಿಯನ್ನು ತಿಲಕ್ ಮತ್ತು ಅಗರ್‌ಕರ್‌ವರು ಸ್ಥಾಪಿಸಿದರು. ಈ ವೇಳೆಗಾಗಲೆ ರಾಷ್ಟ್ರೀಯ ಮನೋಭಾವನೆ ಭಾರತೀಯರಲ್ಲಿ ಬೆಳೆಯಲಾರಂಭಿಸಿದ್ದರಿಂದ ಭಾರತೀಯರು ರಾಜಕೀಯ ಅರಿವು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ಸಾಧಿಸಲು ಆಧುನಿಕ ಮಾದರಿಯ ಶಿಕ್ಷಣ ಅತ್ಯಂತ ಮುಖ್ಯವಾದುದು ಎಂಬುದಾಗಿ ರಾಷ್ಟ್ರೀಯ ಚಳುವಳಿಯ ಮುಂಚೂಣಿಯಲ್ಲಿದ್ದ ಕೆಲವು ನಾಯಕರ ಮನಸ್ಸಿನಲ್ಲಿ ಮೂಡಿತು. ೧೯ನೇ ಶತಮಾನದ ಕೊನೆ ಭಾಗದಲ್ಲಿ ರಾಷ್ಟ್ರೀಯ ಶಾಲೆ ತೆಲಂಗಾಣದಲ್ಲಿ ಆರಂಭವಾಯಿತು. ಇದು ಮುಂದೆ ಭಾರತೀಯರು ಸ್ವತಂತ್ರ ಶಿಕ್ಷಣ ಸಂಸ್ಥೆಯನ್ನು ತೆರೆಯಲು ಅವಕಾಶಮಾಡಿಕೊಟ್ಟಿತು. ೧೯ನೇ ಶತಮಾನದ ಕೊನೆಯ ವೇಳೆಗೆ ದೇಶೀಯ ಶಾಲೆಗಳು ಅವನತಿಯ ಹಾದಿಯನ್ನು ಹಿಡಿದವು. ಇದಕ್ಕೆ ಕಾರಣ ಸರ್ಕಾರದಿಂದ ಈ ಶಾಲೆಗಳಿಗೆ ಯಾವುದೇ ರೀತಿಯ ಸಹಾಯ ಧನ ಇಲ್ಲದೇ ಇದ್ದುದು ಮತ್ತು ಆಧುನಿಕ ಶಿಕ್ಷಣ ಪಡೆದವರಿಗೆ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ನೀಡುತ್ತಿದ್ದುದು ಒಟ್ಟಿನಲ್ಲಿ ೧೮೮೦ರಿಂದ ೧೯೦೧ರವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತವಾದ ಪ್ರಗತಿ ಕಂಡು ಬಂದಿತು.

ಭಾರತೀಯ ವಿಶ್ವವಿದ್ಯಾನಿಲಯಗಳ ಕಾಯಿದೆ (೧೯೦೪) : ಈ ಅವಧಿಯಲ್ಲಿ ಭಾರತೀಯರಲ್ಲಿ ರಾಷ್ಟ್ರೀಯತೆ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡು ಬ್ರಿಟೀಷರ ಮತ್ತು ಅವರ ನೀತಿಗಳು ಕಟುವಾಗಿ ಭಾರತೀಯರ ಟೀಕೆಗೊಳಗಾದವು. ಈ ಹಿನ್ನೆಲೆಯಲ್ಲಿ ಲಾರ್ಡ್‌ ಕರ್ಜನ್ ಶಿಕ್ಷಣವನ್ನು ಕೇಂದ್ರೀಕರಣಗೊಳಿಸಲು ಯೋಜಿಸಿದೆ. ಏಕೆಂದರೆ ವಿಶ್ವವಿದ್ಯಾನಿಲಯಗಳು ರಾಷ್ಟ್ರೀಯತೆಯನ್ನು ಪ್ರಚೋದಿಸುತ್ತವೆ. ವಿದ್ಯಾಸಂಸ್ಥೆಗಳು ರಾಜಕೀಯ ಕ್ರಾಂತಿಕಾರಿಗಳನ್ನು ಸೃಷ್ಟಿಸುತ್ತವೆ. ಆದ್ದರಿಂದ ವಿಶ್ವವಿದ್ಯಾನಿಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲು ಯೋಚಿಸಿ ೧೯೦೨ರಲ್ಲಿ ಸರ್‌ಥಾಮಸ್ ರ‍್ಯಾಲಿಯ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಮಿತಿಯನ್ನು ನೇಮಿಸಿದನು. ಈ ಸಮಿತಿಯಲ್ಲಿ ಇಬ್ಬರು ಭಾರತೀಯರಿದ್ದರು. ಅದೇ ವರ್ಷ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ೧೯೦೪ರಲ್ಲಿ ಕರ್ಜನ್ ಭಾರತೀಯ ವಿಶ್ವವಿದ್ಯಾನಿಲಯಗಳ ಕಾಯಿದೆಯನ್ನು ಜಾರಿಗೆ ತಂದ. ಈ ಕಾಯಿದೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಯನ್ನು ತಂದಿತು. ಅವುಗಳೆಂದರೆ,

. ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವುದು. ಸೆನೆಟ್ ಮತ್ತು ಸಿಂಡಿಕೇಟ್‌ಗಳಿಗೆ ನಾಮಕರಣಗೊಂಡ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವುದು. ಸೆನೆಟ್ ಸಭೆಯ ಸದಸ್ಯರ ಅಧಿಕಾರವಧಿಯನ್ನು ೫ ವರ್ಷಕ್ಕೆ ಸೀಮಿತಗೊಳಿಸಲಾಯಿತು. . ವಿಶ್ವವಿದ್ಯಾನಿಲಯಗಳು ಸಂಶೋಧನೆ ಮತ್ತು ಶಿಕ್ಷಣದ ಪ್ರಗತಿಗೆ ಹೆಚ್ಚು ಗಮನ ಕೊಡುವಂತೆ ಮಾಡಲಾಯಿತು. . ಸರ್ಕಾರ ವಿಶ್ವವಿದ್ಯಾನಿಲಯದ ವ್ಯಾಪ್ತಿಯನ್ನು ನಿರ್ಧರಿಸುವ ಹಕ್ಕನ್ನು ವಿಧಿಸಲಾಯಿತು. . ಖಾಸಗಿ ಕಾಲೇಜುಗಳನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಲಾಯಿತು.

ಈ ಕಾಯಿದೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ರಚನೆಯ ಸ್ವರೂಪದಲ್ಲಿ ಬದಲಾವಣೆಯನ್ನು ತಂದಿತು. ಉನ್ನತ ಶಿಕ್ಷಣದ ಅಭಿವೃದ್ಧಿಗೆ ವಾರ್ಷಿಕವಾಗಿ ೫ ಲಕ್ಷ ರೂಪಾಯಿಗಳನ್ನು ಸರ್ಕಾರ ಸೂಚಿಸಿತು. ನಂತರ ೧೯೧೦ರಲ್ಲಿ ಭಾರತ ಸರ್ಕಾರ ಶಿಕ್ಷಣ ಇಲಾಖೆಯನ್ನು ರಚಿಸಿತು. ಈ ಕಾಯಿದೆಯನ್ನು ರಾಷ್ಟ್ರೀಯ ನಾಯಕರು ಕಟುವಾಗಿ ಟೀಕಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕರು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾರಂಭಿಸಿದರು. ಸರ್ಕಾರ ಈ ಮೇಲಿನ ನಿರ್ಣಯವನ್ನು ೧೯೧೩ ಫೆಬ್ರವರಿ ೨೧ರಂದು ಅಂಗೀಕರಿಸಿ, ಭಾರತದಲ್ಲಿ ಅನಕ್ಷರತೆಯನ್ನು ತೊಡೆದು ಹಾಕಲು ನಿರ್ಣಯ ಕೈಗೊಂಡಿತು.

ಸ್ಯಾಡ್ಲರ್ ವಿಶ್ವವಿದ್ಯಾನಿಲಯ ಕಾಯಿದೆ (೧೯೧೭೧೯) : ಡಾ. ಎಂ. ಇ. ಸ್ಯಾಡ್‌ಲರ್‌ನ ಅಧ್ಯಕ್ಷತೆಯಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಸಮಸ್ಯೆಯನ್ನು ಅಧ್ಯಯನ ಮಾಡಲು ಈ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯಲ್ಲಿ ಅಸಂತೋಷ್ ಮುಖರ್ಜಿ ಮತ್ತು ಡಾ. ಜಿಯಾವುದ್ದೀನ್ ಅಹಮದ್ ಎಂಬ ಇಬ್ಬರು ಭಾರತೀಯ ಸದಸ್ಯರಿದ್ದರು. ಈ ಸಮಿತಿಯು ರಾಷ್ಟ್ರೀಯ ಚಳುವಳಿಯ ಬೆಳವಣಿಗೆ ಮತ್ತು ಮೊದಲನೆ ಮಹಾಯುದ್ಧ ಹಿನ್ನೆಲೆಯಲ್ಲಿ ಶಾಲೆಗಳಿಂದ ವಿಶ್ವವಿದ್ಯಾನಿಲಯದ ಮಟ್ಟದವರೆಗಿನ ಶಿಕ್ಷಣ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಿತು.

ಸಮಿತಿಯ ಶಿಫಾರಸ್ಸುಗಳು : . ಇಂಟರ್ ಮೀಡಿಯಟ್ ಶಾಲೆಗಳನ್ನು ತೆರೆಯುವುದು. ವಿದ್ಯಾರ್ಥಿಯು ಇಂಟರ್ ಮೀಡಿಯಟ್ ಪರೀಕ್ಷೆಯನ್ನು ಪಾಸಾಗಿದ್ದರೆ ಮಾತ್ರ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಕೊಡಬೇಕು. ಈ ಶಾಲೆಗಳು ವಿಶ್ವವಿದ್ಯಾನಿಲಯದ ನಿಯಂತ್ರಣದಿಂದ ಮುಕ್ತವಾಗಿರಬೇಕು. ಪ್ರೌಢಶಾಲೆ ಮತ್ತು ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ಇಲಾಖೆಯನ್ನು ಆರಂಭಿಸಬೇಕು. . ಪದವಿ ತರಗತಿಗಳು ಮೂರು ವರ್ಷಕ್ಕೆ ಸೀಮಿತವಾಗಿರಬೇಕು. . ಸ್ತ್ರೀಯರ ವಿದ್ಯಾಭ್ಯಾಸ, ಅಧ್ಯಾಪಕರ ತರಬೇತಿ, ವಿಜ್ಞಾನ ಮತ್ತು ತಂತ್ರಜ್ಞಾನದ ತರಬೇತಿಗೆ ಪ್ರೋತ್ಸಾಹ ಕೊಡಲು ಈ ಸಮಿತಿ ಸೂಚಿಸಿತು. . ಕಲ್ಕತ್ತಾ ವಿಶ್ವವಿದ್ಯಾನಿಲಯವನ್ನು ಬಂಗಾಳ ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಲಾಯಿತು.

ಈ ಸಮಿತಿಯ ವರದಿಯನ್ನು ಸ್ವೀಕರಿಸಿದ ನಂತರ ಸರ್ಕಾರ ೭ ಹೊಸ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿತು. ೧೯೧೯ರ ಮಾಂಟೆಗೋ ಚೆಲ್ಸ್‌ಫರ್ಡ್‌ಸುಧಾರಣೆಯಿಂದಾಗಿ ಶಿಕ್ಷಣ ಇಲಾಖೆಯನ್ನು ಪ್ರಾಂತೀಯ ಮಂಡಳಿಗಳ ಮಂತ್ರಿಯ ಅಧೀನಕ್ಕೆ ಒಪ್ಪಿಸಲಾಯಿತು. ಆದರೆ ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯಿಂದಾಗಿ ೧೯೦೨ರಿಂದ ವಿದ್ಯಾ ಸಂಸ್ಥೆಗಳಿಗೆ ಬರುತ್ತಿದ್ದ ಧನ ಸಹಾಯ ನಿಂತಿದ್ದರಿಂದ ಈ ಅವಧಿಯಲ್ಲಿ ಶಿಕ್ಷಣದ ಪ್ರಗತಿಗೆ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸುವುದು ಕಷ್ಟದ ಕೆಲಸವಾಯಿತು.

ಸರ್‌ಫಿಲಿಪ್ ಹಾರ್ಟಗನ್ ಸಮಿತಿ (೧೯೨೯) : ೧೯೧೯ರ ಕಾಯಿದೆಯಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯಲಾರಂಭಿಸಿದ್ದರಿಂದ ಮತ್ತು ಹೋಮ್‌ರೂಲ್ ಚಳವಳಿ, ಅಸಹಕಾರ ಚಳವಳಿಗಳ ಹಿನ್ನೆಲೆಯಲ್ಲಿ ೧೯೨೯ರಲ್ಲಿ ಇಂಡಿಯನ್ ಸ್ಟಾಟುಟರಿ ಕಮಿಷನ್ ಶಿಕ್ಷಣದ ಪ್ರಗತಿಯನ್ನು ಪರಿಶಿಲಿಸಲು ಹಾರ್ಟ್‌‌ಗನ್‌ನ ನೇತೃತ್ವದಲ್ಲಿ ಒಂದು ಸಮಿತಿಯನ್ನು ಸರ್ಕಾರ ನೇಮಿಸಿತು.