ಮೈಸೂರಿನೊಂದಿಗೆ ವಸಾಹತುಶಾಹಿಗಳ ಸಂಬಂಧ

ಕ್ರಿ.ಶ. ೧೭೬೧ರಲ್ಲಿ ಮೈಸೂರಿನಲ್ಲಿ ಪ್ರಾಮುಖ್ಯತೆಗೆ ಬಂದ ಹೈದರನು ಪ್ರಬಲನಾಗುತ್ತಿರುವುದನ್ನು ಕಂಡು ಸಹಿಸದ ಬ್ರಿಟಿಷರು ಮೈಸೂರಿನೊಡನೆ ಹೋರಾಟಕ್ಕಿಳಿದರು. ೧ನೇ ಆಂಗ್ಲೋ ಮೈಸೂರು ಕದನವು ೧೭೬೭-೬೯ರ ನಡುವೆ ಹೈದರ್ ಮತ್ತು ಬ್ರಿಟಿಷರ ನಡುವೆ ನಡೆಯಿತು. ಹೈದರ್ ಮದ್ರಾಸನ್ನು ಆಕ್ರಮಿಸಿದಾಗ ಬ್ರಿಟಿಷರು ಅಪಮಾನಕರವಾದ ‘ಮದ್ರಾಸ್ ಒಪ್ಪಂದಕ್ಕೆ’ ಸಹಿ ಹಾಕಿದರು. ೨ನೇ ಆಂಗ್ಲೋ-ಮೈಸೂರು ಕದನವು ೧೭೮೦-೮೪ರ ನಡುವೆ ಬ್ರಿಟಷರು, ಮರಾಠರು ಮತ್ತು ಹೈದರಾಬಾದಿನ ನಿಜಾಮನ ತ್ರಿಪಕ್ಷೀಯ ಒಕ್ಕೂಟಕ್ಕೂ ಹಾಗೂ ಹೈದರನ ಮಗ ಟಿಪ್ಪುವಿನ ನಡುವೆ ನಡೆಯಿತು. ಈ ಯುದ್ಧ ಮಧ್ಯದಲ್ಲಿ ಹೈದರನು ಅನಾರೋಗ್ಯ ಪೀಡಿತನಾಗಿ ೧೭೮೨ರಲ್ಲಿ ಮೃತನಾದನು. ಟಿಪ್ಪು ಯುದ್ಧ ಮುಂದುವರೆಸಿದನು. ಈ ಯುದ್ಧದಲ್ಲಿ ಬ್ರಿಟಿಷರಿಗೆ ಪೋರ್ಟಿನೋವ ಮತ್ತು ಸೋಲೀಮಗರ್‌ನಲ್ಲಿ ಜಯ ದೊರೆತರೆ, ಹೈದರ್ ಮತ್ತ ಟಿಪ್ಪುವಿಗೆ ಆರ್ಕಾಟ್ ಮತ್ತು ತಂಜಾವೂರಿನಲ್ಲಿ ಜಯ ದೊರೆಯಿತು. ಯುದ್ಧದಿಂದ ಸಾಕಷ್ಟು ಬಳಲಿದ್ದ ಬ್ರಿಟಿಷರು “ಮಂಗಳೂರು ಒಪ್ಪಂದಕ್ಕೆ” ಸಹಿ ಹಾಕಿದರು. ೩ನೇ ಆಂಗ್ಲೋ ಮೈಸೂರು ಕದನವು (೧೭೯೦-೯೨)ರಲ್ಲಿ, ಟಿಪ್ಪು ಮತ್ತು ಬ್ರಿಟಿಷ್, ನಿಜಾಮ್ ಮತ್ತು ಮರಾಠರ ತ್ರಿಪಕ್ಷೀಯ ಒಕ್ಕೂಟದ ನಡುವೆ ನಡೆಯಿತು. ಟಿಪ್ಪು, ತ್ರಿಪಕ್ಷೀಯ ಕೂಟದ ಸೇನಾನಾಯಕ ಕಾರ್ನವಾಲೀಸನ ವಿರುದ್ಧ ಹೋರಾಡಬೇಕಾಯಿತು. ಬ್ರಿಟಿಷರು ಬೆಂಗಳೂರು ಮತ್ತು ಕರಿಘಟ್ಟ ಕದನದಲ್ಲಿ ಜಯಗಳಿಸಿ ಶ್ರೀರಂಗಪಟ್ಟಣವನ್ನು ೧೭೯೨ರಲ್ಲಿ ಮುತ್ತಿಗೆ ಹಾಕಿದರು. ಸೋತ ಟಿಪ್ಪು ‘ಶ್ರೀರಂಗಪಟ್ಟಣ’ ಒಪ್ಪಂದಕ್ಕೆ ಸಹಿಹಾಕಿದನು. ಇದರಂತೆ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಮತ್ತು ೩ ಕೋಟಿ ೩೦ ಲಕ್ಷ ರೂಪಾಯಿಗಳನ್ನು ಯುದ್ಧ ದಂಡವಾಗಿ ನೀಡಬೇಕಾಯಿತು,

೪ನೇ ಆಂಗ್ಲೋ-ಮೈಸೂರು ಕದನವು ೧೭೯೯ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ತ್ರಿಪಕ್ಷೀಯ ಕೂಟದ ವಿರುದ್ಧ ನಡೆಯಿತು. ಶ್ರೀರಂಗಪಟ್ಟಣದ ಒಪ್ಪಂದದಿಂದ ಅವಮಾನಗೊಂಡು, ನಷ್ಟ ಅನುಭವಿಸಿದ್ದ ಟಿಪ್ಪು ಸೇಡು ತೀರಿಸಿಕೊಳ್ಳಲು ಯತ್ನಿಸಿ ತನ್ನ ರಾಯಭಾರಗಳನ್ನು ಅರೇಬಿಯಾ, ಪರ್ಷಿಯಾ, ಫ್ರಾನ್ಸ್, ಮೊರಾಕ್ಕೋ, ಕಾನಸ್ಟಾಂಟಿನೋಪಲ್ ಮತ್ತು ಟರ್ಕಿಗಳಿಗೆ ಕಳುಹಿಸಿದನು. ಆದರೆ ಯಾವುದೇ ಸಹಾಯ ದೊರೆಯಲಿಲ್ಲ. ಗೌರ‍್ನರ್ ಕನರಲ್ ಲಾರ್ಡ್ ವೆಲ್ಲೆಸ್ಲಿ ಟಿಪ್ಪು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕುವಂತೆ ಬಲಾತ್ಕರಿಸಿದಾಗ, ಟಿಪ್ಪು ವಿರೋಧಿಸಿ ತನ್ನ ಸ್ವಾತಂತ್ರ ಘೋಷಿಸಿಕೊಂಡನು. ೧೭೯೯ರಲ್ಲಿ ಬ್ರಿಟಿಷರ ತ್ರಿಪಕ್ಷೀಯ ಕೂಟಕ್ಕೂ, ಟಿಪ್ಪುವಿಗೂ ಮಳವಳ್ಳಿ ಸಿದ್ಧೇಶ್ವರ ಮತ್ತು ಶ್ರೀರಂಗಪಟ್ಟಣಗಳಲ್ಲಿ ನಡೆದ ಕದನದಲ್ಲಿ ಟಿಪ್ಪು ಸೋತು, ೧೭೯೯ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೃತನಾದನು. ಬ್ರಿಟಿಷರು ಮೈಸೂರು ರಾಜ್ಯವನ್ನು ೪ ಭಾಗವಾಗಿ ವಿಭಾಗಿಸಿ ಬ್ರಿಟಿಷರು, ಮರಾಠರು, ನಿಜಾಮ ಒಂದೊಂದು ಭಾಗವನ್ನು ಪಡೆದುಕೊಂಡು ಉಳಿದ ಒಂದು ಭಾಗವನ್ನು ಮೈಸೂರು ಒಡೆಯರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ತಮ್ಮ ಅರ್ಧ ಸ್ವಾತಂತ್ರವನ್ನು ಕಳೆದುಕೊಂಡರು. ೧೮೩೧ರಲ್ಲಿ ನಡೆದ ನಗರ ದಂಗೆಯ ನೆಪಮಾಡಿಕೊಂಡು ವಿಲಿಯಂ ಬೆಂಟಿಂಕ್ ಮೈಸೂರನ್ನು ೧೮೩೧-೮೧ರ ವರೆಗೆ ಬ್ರಿಟಿಷ್ ಕಮಿಷನರುಗಳ ಆಳ್ವಿಕೆಗೆ ಒಳಪಡಿಸಿ ಮೈಸೂರಿನ ಆಡಳಿತವನ್ನು ನೇರವಾಗಿ ತಮ್ಮ ಕೈಗೆ ತೆಗೆದುಕೊಂಡರು.

೧೮೬೧ರಲ್ಲಿ ಮೈಸೂರಿನಲ್ಲಿ ಕಮಿಷನರ್‌ಗಳ ಆಳ್ವಿಕೆ ಪ್ರಾರಂಭವಾಯಿತು. ತರುವಾಯ ಸಂಸ್ಥಾನದ ಆಡಳಿತದಲ್ಲಿ ಸುಧಾರಣೆಗಳ ಹೊಸ ಯುಗವೇ ಪ್ರಾರಂಭವಾಯಿತು. ಮೈಸೂರು ಸಂಪೂರ್ಣವಾಗಿ ಮದ್ರಾಸಿನ ಕೇಂದ್ರ ಪಟ್ಟಣದ ವಸಾಹತುಗಳ ಅಧೀನದಲ್ಲಿತ್ತು. ಪ್ರಾರಂಭದಲ್ಲಿ ಮೈಸೂರಿಗೆ ಆಡಳಿತಾಧಿಕಾರಿಗಳಾಗಿ ಹಿರಿಯ ಮತ್ತು ಕಿರಿಯ ಕಮಿಷನರ್‌ಗಳನ್ನು ನೇಮಿಸಲಾಯಿತು. ಮೈಸೂರಿನಲ್ಲಿ ಐವತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಮಿಷನರ್‌ಗಳನ್ನು ಕ್ರಮಬದ್ಧವಾಗಿ ಗುರ್ತಿಸುವುದಾದರೆ

ಹಿರಿಯ ಕಮಿಷನರ್‌ಗಳು

ಅಕ್ಟೋಬರ್ ೧೮೩೧ ಕರ್ನಲ್ ಜೆ.ಬ್ರಿಗ್ಸ್
ಅಕ್ಟೋಬರ್ ೧೮೩೧ ಸಿ.ಎಂ. ಲುಷಿಂಗ್‌ಟನ್
ಫೆಬ್ರವರಿ ೧೮೩೨ ಕರ್ನಲ್ ಡಬ್ಲ್ಯು ಮಾರಿಸನ್
ಫೆಬ್ರವರಿ ೧೮೩೨ ಜೆ.ಡಿ. ಡ್ಯೂರಿ
ಜೂನ್ ೧೮೩೨ ಜೆ.ಎಂ. ಮ್ಯಾಕ್ಲಿಆಪ್
ಫೆಬ್ರವರಿ ೧೮೩೨ ಕರ್ನಲ್ ಮಾರ್ಕ್ ಕಬ್ಬನ್

ಮುಖ್ಯ ಕಮಿಷನರುಗಳು

೧೮೩೪-೧೮೬೧ ಮಾರ್ಕ್ ಕಬ್ಬನ್
೧೮೬೨-೧೮೭೦ ಲ್ಯೂವಿನ್ ಬೆನ್ರಮ್ ಬೌರಿಂಗ್

ಇತರ ಕಮಿಷನರುಗಳು

  ರಿಚರ್ಡ್ ಮೀಡ್
೧೮೭೫-೧೮೭೫ ಆರ್.ವಿ. ಡ್ಯಾಲ್ಸೆಲ್
೧೮೭೫-೧೯೭೮ ಸಿ.ಬಿ. ಸ್ಯಾಂಡರ್ಸ್
೧೮೭೮-೧೮೮೧ ಜೀಮ್ಸ್ ಗಾರ್ಡನ್

೧೮೩೧ರಿಂದ ೧೮೮೧ರ ವರೆಗಿನ ವಸಾಹತುಶಾಹಿಗಳ ನೇರ ಆಳ್ವಿಕೆಯಲ್ಲಿ ಮೈಸೂರನ್ನು ಆಳಿದ ಕಮಿಷನರುಗಳಲ್ಲಿ ಪ್ರಮುಖವಾಗಿ ಇಬ್ಬರು ಉಲ್ಲೇಖನೀಯರಾಗಿದ್ದಾರೆ. ಅವರೆಂದರೆ ಮಾರ್ಕ್ ಕಬ್ಬನ್ (೧೮೩೪-೧೮೬೧) ಮತ್ತು ಲ್ಯೂವಿಂಗ್ ಬೌರಿಂಗ್ (೧೮೬೨ ರಿಂದ ೧೮೭೦). ಈ ಇಬ್ಬರಿಗೆ ಸಂಸ್ಥಾನದ ಆಡಳಿತವನ್ನು ಯೂರೋಪಿನ ಮಾದರಿಯಲ್ಲಿ ವ್ಯವಸ್ಥೆಗೊಳಿಸಿ ಬ್ರಿಟಿಷ್ ಆಧಿಪತ್ಯದ ಇತರ ಜಿಲ್ಲೆಗಳೊಡನೆ ಸರಿಸಮನಾಗುವಂತೆ ಮಾಡಿ ಮೈಸೂರು ಸಂಸ್ಥಾನವನ್ನು ಆಧುನಿಕ ಸಂಸ್ಥಾನವನ್ನಾಗಿ ಮಾಡಿದ ಕೀರ್ತಿ ಸಲ್ಲುತ್ತದೆ. ಇವರು ಸಂಸ್ಥಾನದಲ್ಲಿ ಶಾಲಾ-ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಿ ವಿದ್ಯಾಭ್ಯಾಸವನ್ನು ಅಭಿವೃದ್ಧಿಪಡಿಸಲು ಮೊದಲ ಆದ್ಯತೆ ನೀಡಿದರು. ರಸ್ತೆ-ರೈಲು ಮಾರ್ಗಗಳನ್ನು ನಿರ್ಮಿಸಿ ರಾಜ್ಯದ ವ್ಯಾಪಾರ-ವಾಣಿಜ್ಯದ ಅಭಿವೃದ್ಧಿಗೆ ಮುಂದಾದರು. ಪ್ರಥಮ ಬಾರಿಗೆ ಟೆಲಿಗ್ರಾಫ್ ವ್ಯವಸ್ಥೆ ಮೈಸೂರು ಸಂಸ್ಥಾನದಲ್ಲಿ ಜಾರಿಗೊಳಿಸಿದರು. ತಾವೇ ನಿರೀಕ್ಷಿಸದಿದ್ದ ಕೈಗಾರಿಕಾ ಪ್ರಗತಿಗೆ ಸಂಪನ್ಮೂಲದ ಅವಶ್ಯಕತೆಗಳನ್ನು ಸಿದ್ಧಗೊಳಿಸಿದರು. ಇದೇ ಸಮಯದಲ್ಲಿ ಮೈಸೂರು ಸಂಸ್ಥಾನವಲ್ಲದೆ ಇಂದು ಗುರ್ತಿಸಿಕೊಂಡಿರುವ ಕರ್ನಾಟಕದ ಇತರೆಡೆಗಳಲ್ಲೂ ಕೈಗಾರೀಕರಣ ಆರಂಭವಾಗಿ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸ ಆರಂಭವಾದವು. ೧೮೮೮ರಲ್ಲಿ ಹರಿಹರ-ಪುಣೆ ರೈಲ್ವೆ ಮಾರ್ಗ ಪೂರ್ಣವಾಯಿತು. ೧೯೦೦೭ರಲ್ಲಿ ಮಂಗಳೂರು -ಮದ್ರಾಸ್ ರೈಲ್ವೆ ಸಂರ್ಪಕವನ್ನು ಪೂರ್ಣಗೊಳಿಸಲಾಯಿತು. ಗೋಕಾಕ್ ಜಲಪಾತದಿಂದ (೧೮೮೭) ವಿದ್ಯುತ್ ಪಡೆದು ಗೋಕಾಕ್ ಸ್ಪಿನ್ನಿಂಗ್‌ಮಿಲ್ ೧೮೮೫ರಲ್ಲಿ ಆರಂಭವಾಯಿತು. ಮೊದಲು ಬಾಸೆಲ್ ಮಿಷಿನ್‌ನವರಿಂದ ಆರಂಭಗೊಂಡು ಹಾಗೂ ನಂತರ ೧೮೬೫ರವರೆಗೆ ಮಂಗಳೂರಿನಲ್ಲಿ ಹಲವು ಕಾರ್ಖಾನೆಗಳ ಕಾರ್ಯನಿರ್ವಹಿಸುತ್ತಿದ್ದವು. ೧೮೮೮ರಲ್ಲಿ ಗುಲ್ಬರ್ಗಾದಲ್ಲಿ ಒಂದು ನೂಲುವ ಮತ್ತು ನೇಯುವ ಗಿರಣಿಯು ಸ್ಥಾಪನೆಗೊಂಡಿತು. (MSK Mill) ನಂತರ ೧೮೮೬ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿರುವ ಹಟ್ಟಿ ಪ್ರದೇಶದಲ್ಲಿರುವ ಚಿನ್ನದ ಗಣಿಗಾರಿಕೆ ಆರಂಭವಾಯಿತು. ಆ ಹೊತ್ತಿಗೆ ಹುಬ್ಬಳ್ಳಿಯಲ್ಲಿ ಹಲವು ಹತ್ತಿ ಗಿರಣಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ರೀತಿ ವಸಾಹತುಶಾಹಿಗಳು ಕೈಗಾರಿಕಾಕರಣ, ನಗರೀಕರಣ ಮತ್ತು ಆಧುನೀಕರಣಗಳಿಗೆ ಅವಶ್ಯಕವಾದ ಚಾಲನೆ ನೀಡಿದರು. ಉತ್ತಮ ನೀರಾವರಿ ಮತ್ತು ಕಚ್ಛಾವಸ್ತುಗಳ ಬೇಡಿಕೆಯಿಂದಾಗಿ ಕೃಷಿ ಹೆಚ್ಚಿನ ಮಹತ್ವ ಪಡೆಯಿತು. ಅಮೆರಿಕದ ಆಂತರಿಕ ಯುದ್ಧಗಳ ಸಂದರ್ಭದಲ್ಲಿ, ಅಂದರೆ ೧೮೬೦ರಲ್ಲಿ ಹತ್ತಿ ಬೆಲೆ ಏರಿಕೆಗೆ (ಕಾಟನ್ ಬೂಮ್) ಕಾರಣವಾದಾಗ ಸಂಸ್ಥಾನದಲ್ಲಿ ಹತ್ತಿ ಬೆಳೆಗೆ ಆದ್ಯತೆ ಹೆಚ್ಚಾಗಿ ದೊರೆಯಿತು. ೧೮೬೦ರ ನಂತರ ಮಾಂಚೆಸ್ಟರ್‌ನಿಂದ ಹತ್ತಿ ಬೇಡಿಕೆ ಕಡಿಮೆಯಾದರೂ ಬಾಂಬೆ ಮತ್ತು ಸೋಲಾಪುರಗಳಲ್ಲಿ ಆರಂಭವಾಗಿದ್ದ ಹೊಸ ಕಾರ್ಖಾನೆಗಳು ಉತ್ತರ ಕರ್ನಾಟಕ ಪ್ರದೇಶದ ಹತ್ತಿಯನ್ನು ಹೆಚ್ಚಾಗಿ ಖರೀದಿಸಿದವು. ಇದರಿಂದ ಈ ಭಾಗದ ಲಕ್ಷಾಂತರ ಪುರುಷ ಮತ್ತು ಮಹಿಳೆಯರಿಗೆ ಉದ್ಯೋಗ ದೊರಕಿದಂತಾಯಿತು. ಕೃಷಿ ಕಾರ್ಮಿಕರಿಗೆ ಸಮನಾದ ಕೂಲಿಯನ್ನು ದೊರಕಿಸುತ್ತಿದ್ದ ನೂಲುವ ಗೃಹ ಕೈಗಾರಿಕೆಯು ಯೂರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಸಂಪೂರ್ಣವಾಗಿ ಅವನತಿ ಹೊಂದಿತು. ಈ ಹಾದಿಯಲ್ಲಿ ನೇಯ್ಗೆ ಉದ್ಯಮವು ಕೂಡ ನಡೆಯಿತು.ಈ ಎಲ್ಲ ಕಾರಣಗಳಿಂದಾಗಿ ಕೃಷಿಗಾಗಿ ಹೆಚ್ಚಿನ ಪ್ರಮಾಣದ ಭೂ ಬಳಕೆಯು ಕಂಡುಬಂದಿತು.

೧೮೩೦ರಲ್ಲಿ ಮೈಸೂರು ರಾಜ್ಯದ ನಗರ ಪ್ರದೇಶದಲ್ಲಿ ಗಲಾಟೆ ನಡೆಯಿತು. ಈ ಪ್ರದೇಶವನ್ನು ದಶಕಗಳಿಂದ ಕೆಳದಿಯ ನಾಯಕರು ಆಳುತ್ತಿದ್ದರು. ಕೆಳದಿ ನಾಯಕರು ಮೈಸೂರು ರಾಜವಂಶಕ್ಕೆ ಮೊದಲಿನಿಂದಲೂ ನಿಷ್ಠರಾಗಿರಲಿಲ್ಲ. ಬೂದಿ ಬಸಪ್ಪನೆಂಬುವನು ಕೆಳದಿ ನಾಯಕರ ಸಿಂಹಾಸನಕ್ಕೆ ಹಕ್ಕುದಾರನೆಂದು ಹೇಳಿಕೊಳ್ಳುತ್ತಾ ದಂಗೆ ಎದ್ದನು. ರೈತರನ್ನು ಕೆರಳಿಸಿ ದಂಗೆಯ ಮುಂದಾಳಾದನು. ಗಲಭೆಯ ಪ್ರದೇಶಕ್ಕೆ ಮೈಸೂರು ಸೈನ್ಯವೂ ಹೋಗಿ ದಂಗೆಯನ್ನಡಗಿಸಿತು. ಈ ದಂಗೆಗೆ ಇದ್ದ ಕಾರಣ ಸಂದರ್ಭಗಳೇನೆಂಬುದನ್ನು ಕಂಡು ಹಿಡಿಯಲು ಮೈಸೂರು ಸಂಸ್ಥಾನದ ಸರ್ಕಾರ ಒಂದು ಸಮಿತಿ ನೇಮಕ ಮಾಡಿತು. ಈ ಸಮಿತಿ ಅಭಿಪ್ರಾಯ ಏನೆಂಬ ವರದಿ ಹೊರಬೀಳುವುದರೊಳಗಾಗಿ ಗರ್ವನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷರ ನೇರವಾದ ಆಡಳಿತಕ್ಕೆ ಸ್ವಾಧಿನಪಡಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದ್ದನು. ಈ ಆದೇಶದನ್ವಯ ೧೮೩೧ರಲ್ಲಿ ರಾಜ್ಯವು ಮುಮ್ಮಡಿ ಕೃಷ್ಣರಾಜ ಒಡೆಯರ ಕೈತಪ್ಪಿ ಹೋಯಿತು. ನವರಾತ್ರಿಯ ಉತ್ಸವ ಸಂಭ್ರಮದಲ್ಲಿದ್ದಾಗ ರಾಜ್ಯವನ್ನು ಬ್ರಿಟಿಷರ ಆಡಳಿತಕ್ಕೆ ಒಪ್ಪಿಸಬೇಕೆಂಬ ಆಜ್ಞೆಯ ಪತ್ರ ರಾಜರ ಕೈಗೆ ಬಂದಿತು. ಕೃಷ್ಣರಾಜರು ಬ್ರಿಟಿಷರ ತೀರ್ಮಾನಕ್ಕೆ ತಲೆಬಾಗಿದರು. ೧೮೩೧ ರಿಂದ ೧೮೮೧ರ ವರೆಗೆ ಐವತ್ತು ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಬ್ರಿಟಿಷ್ ಕಮಿಷನರು ಆಳಿದರು.

ರಾಜ್ಯವು ಕೈತಪ್ಪಿ ಹೋದರೂ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪ್ರಜೆಗಳು ಬಹು ಪ್ರೀತಿಯಿಂದ ನಡೆಸಿಕೊಂಡರು. ಅರಸರು ವೈಯುಕ್ತಿಕ ಗುಣ ಪ್ರಭಾವಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಲೆ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಸ್ವತಃ ಅವರು ಕನ್ನಡ, ಸಂಸ್ಕೃತ, ಮರಾಠಿ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದರು. ಅವರಿಗೆ ಮಕ್ಲಳಿಲ್ಲವಾದ್ದರಿಂದ, ಮುಂದೆ ರಾಜ್ಯವನ್ನು ಬ್ರಿಟಿಷರು ಹಿಂತಿರುಗಿಸಿದರೆ ಉತ್ತರಾಧಿಕಾರಿಯ ಪ್ರಶ್ನೆಯಿರಬಾರದು ಎಂದು ಯೋಗ್ಯರಾದವರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಇದಕ್ಕಾಗಿ ತಮಗಿದ್ದ ಹಕ್ಕನ್ನು ರೂಢಿಸಿಕೊಳ್ಳಲು ರಾಜ್ಯಾಡಳಿತವನ್ನು ತಮ್ಮ ಮಂಶಕ್ಕೆ ಮತ್ತೆ ವಹಿಸಿಕೊಡಬೇಕೆಂದು ಹೋರಾಡಿದರು. ಅವರ ಪ್ರಯತ್ನದ ಫಲವಾಗಿ ದತ್ತು ಸ್ವೀಕಾರ ಪ್ರಶ್ನೆ ೧೮೬೭ರಲ್ಲಿ ಮೈಸೂರಿನ ಮಟ್ಟಿಗೆ ಇತ್ಯರ್ಥವಾಯಿತು. ನಿಯಮದಂತೆ ೧೦ನೇ ಚಾಮರಾಜ ಒಡೆಯರನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಲಾಯಿತು. ಆದರೆ ಮಾರನೆ ವರ್ಷ ೧೮೬೮ರಲ್ಲಿ ಮುಮ್ಮಡಿ ಕೃಷ್ಣರಾಜರು ಪದಚ್ಯುತಿಯ ನಂತರ ಮರಣ ಹೊಂದಿದರು. ೧೦ನೇ ಚಾಮರಾಜ ಒಡೆಯರು ೧೮೮೧ರಲ್ಲಿ ಪ್ರಾಪ್ತವಯಸ್ಕರಾದಾಗ ಬ್ರಿಟಿಷರು ಅವರನ್ನು ಮೈಸೂರು ರಾಜವಂಶದ ನ್ಯಾಯವಾದ ಉತ್ತರಾಧಿಕಾರಿಯೆಂದು ಅಂಗೀಕರಿಸಿ ರಾಜ್ಯವನ್ನು ಹಿಂದಿರುಗಿಸಿದರು. ೧೮೩೧ ರಿಂದ ೧೮೮೧ರ ವರೆಗೆ ಮೈಸೂರು ರಾಜ್ಯವನ್ನಾಳಿದ ಬ್ರಿಟಿಷ್ ಕಮಿಷನರರ ವಿವರಗಳನ್ನು ಮುಂದೆ ಗಮನಿಸಬಹುದು.

ಸರ್ ಥಾಮಸ್ ಮನ್ರೋ: ೧೮೦೦ರಲ್ಲಿ ಸರ್ ಥಾಮಸ್ ಮನ್ರೋ ವಸಾಹತುಶಾಹಿಗಳ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಮಾತನಾಡುವ ಬಳ್ಳಾರಿ ಜಿಲ್ಲೆಯ ಕಲೆಕ್ಟರ್ (ಜಿಲ್ಲಾಧಿಕಾರಿ) ಆಗಿ ನೇಮಿಸಲ್ಪಟ್ಟನು. ಈತನು ಸಂಸ್ಥಾನದಲ್ಲಿ ಸಂಭವಿಸಿದ ಗಲಭೆಯನ್ನು ಅಡಗಿಸಿ, ಶಾಂತಿ ಸುವ್ಯವಸ್ಥೆಯನ್ನು ತರುವುದರಲ್ಲಿ ಮಾತ್ರವಲ್ಲದೆ, ಒಳ್ಳೆಯ ಆಡಳಿತವನ್ನು ಒದಗಿಸುವುದರಲ್ಲೂ ತುಂಬ ಉತ್ಸಾಹದಿಂದ ಕೆಲಸ ಮಾಡಿದನು. ಹರಪನಹಳ್ಳಿ, ರಾಯದುರ್ಗ ಮತ್ತು ಇತರ ಪ್ರದೇಶಗಳಲ್ಲಿ ದಂಗೆ ಎದ್ದಿದ್ದ ಪಾಳೆಯಗಾರರನ್ನು ಮುಖ್ಯವಾಗಿ ಅಡಗಿಸಬೇಕಾಯಿತು. ಮನೋಸ್ಥೈರ್ಯದಿಂದ ವರ್ತಿಸಿ ಈ ಕಾರ್ಯದಲ್ಲಿ ಯಶಸ್ವಿಯಾದನು. ಈತನು ಉತ್ತರ ಕರ್ನಾಟಕದ ಕಡೆ ತಿರುಗಿ ಆ ಪ್ರದೇಶವನ್ನು ಬ್ರಿಟಿಷರಿಗೆ ಜಯಿಸಿಕೊಟ್ಟನು. ಮಹಾರಾಷ್ಟ್ರದ ದೇಶಿಯ ಅಧಿಕಾರಿಗಳ ದಬ್ಬಾಳಿಕೆಯಿಂದ ಬಿಡುಗಡೆಯಾಗುವುದೆಂಬ ಸ್ಥಳೀಯ ಪ್ರಜೆಗಳು ಈತನ ದಂಡಯಾತ್ರೆಯನ್ನು ಸ್ವಾಗತಿಸಿದರು. ಈ ಯುದ್ಧದ ಫಲವಾಗಿ ಪುಣೆಯಲ್ಲಿ ಒಪ್ಪಂದ ಏರ್ಪಟ್ಟಿತು. ಅದರ ಒಪ್ಪಂದಂತೆ ಧಾರವಾಡ ಕುಸುಗಲ್ ಸೀಮೆಯನ್ನು ಪೇಶ್ವೆಯು ಬ್ರಿಟಿಷರಿಗೆ ಬಿಟ್ಟಕೊಟ್ಟನು. ಇಂಥ ಸಂದರ್ಭದಲ್ಲಿ ಕನ್ನಡ ಜನರು ವಾಸಿಸುತ್ತಿದ್ದ ಪ್ರದೇಶಗಳ ಮೇಲೆ ಧಾಳಿ ನಡೆಸಲು ತ್ರಿಯಂಬಕ ಡೇಂಗ್ಲೆಯನ್ನು ಪೇಶ್ವೆಗಳು ಹುರಿದುಂಬಿಸಿದರು. ಡೇಂಗ್ಲೆಯ ದಬ್ಬಾಳಿಕೆಗೆ ಕನ್ನಡ ಜನ ರೋಸಿ ಹೋಗಿದ್ದರು. ದಂಗೆಯೆದ್ದ ಇವರನ್ನು ಅಡಗಿಸಲು ಪೇಶ್ವೆ ಪಟ್ಟ ಪ್ರಯತ್ನ ವಿಫಲವಾಯಿತು. ೧೮೧೮ರ ಹೊತ್ತಿಗೆ ಈ ಪ್ರದೇಶದಲ್ಲಿ ಮರಾಠರ ಪ್ರಭಾವ ಪೂರ್ಣವಾಗಿ ಅಂತ್ಯ ಕಂಡಿತು. ಬ್ರಿಟಿಷರು ಅದನ್ನು ಆಕ್ರಮಿಸಿಕೊಂಡು ಅಲ್ಲಿ ಪೌರಾಡಳಿತ ಮತ್ತು ಸೈನ್ಯಾಡಳಿತವನ್ನು ಸ್ಥಾಪಿಸಿದರು.

ಸರ್ ಥಾಮಸ್ ಮನ್ರೋ ಯುದ್ಧ ಭೂಮಿಯಲ್ಲಿ ಪರಾಕ್ರಮ ತೋರಿಸಿದಂತೆಯೇ ಆಡಳಿತದಲ್ಲಿಯೂ ಪ್ರಾಜ್ಞನಾಗಿ ನಡೆದುಕೊಂಡಿದ್ದಾನೆ. ಈತನ ಆಡಳಿತದಲ್ಲಿ ದಕ್ಷತೆ ಎದ್ದು ಕಾಣುತ್ತಿತ್ತು. ಭೂ ಕಂದಾಯ ವ್ಯವಸ್ಥೆಯಲ್ಲಿ ಈತನು ತುಂಬ ಶ್ರದ್ಧೆ ತೋರಿಸಿ ಪ್ರಜೆಗಳಿಗೆ ಉಪಕಾರವಾಗುವ ಸುಧಾರಣೆಗಳನ್ನು ಜಾರಿಗೆ ತಂದನು. ಆಡಳಿತ ಸುಧಾರಣೆಯಿಂದಾಗಿ ಹೆಸರುವಾಸಿಯಾದ ರಾಜಕಾರಣಿಗಳಲ್ಲೊಬ್ಬನೆಂದು ಈತನನ್ನು ಜನ ಕೊಂಡಾಡುವಂತೆ ಆಳ್ವಿಕೆ ನಡೆಸಿದನು. ಇಂದು ಕಂಡು ಬರುವ ಏಕೀಕೃತ ಕರ್ನಾಟಕದ ಉದಯಕ್ಕೆ ಸಂಬಂಧಿಸಿದ ಆಲೋಚನೆ ೧೮೨೬ರಷ್ಟು ಹಿಂದೆಯೇ ಸರ್ ಥಾಮಸ್ ಮನ್ರೋ ಅವರ ಹೃದಯದಲ್ಲಿ ಉದಯಿಸಿತ್ತು ಎಂಬುದು ಕನ್ನಡಿಗರಿಗೆಲ್ಲ ಮನನ ಮಾಡಿಕೊಳ್ಳಬೇಕಾದ ಅಂಶವಾಗಿದೆ. ಕನ್ನಡ ಜಿಲ್ಲೆಗಳ ಆಡಳಿತ ಹೇಗಿರಬೇಕೆಂಬ ವಿಷಯ ಕೇಂದ್ರದ ವಸಾಹತುಶಾಹಿ ಪರ್ಯಾಲೋಚನೆಗೆ ಬಂದಾಗ ಮುಂಬಾಯಿ ಕರ್ನಾಟಕ ಜಿಲ್ಲೆಗಳನ್ನು ಹಾಗೂ ಮದರಾಸು ಪ್ರಾಂತದ ಕನ್ನಡ ಪ್ರದೇಶಗಳನ್ನು ಕನ್ನಡ ಮಾತನಾಡುವ ಆಡಳಿತದ ಸರ್ಕಾರದ ಮುಂದೆ ಸೇರಿಸಬೇಕೆಂಬ ಸಲಹೆಯನ್ನು ಸರ್ ಥಾಮಸ್ ಮನ್ರೋ ಮುಂದಿಟ್ಟನು. ಈ ಆಲೋಚನೆ ನ್ಯಾಯಯುತವಾದವು ಎಂಬುದಕ್ಕೆ ಆತ ಕೊಟ್ಟ ಕಾರಣಗಳಿವು.

೧. ಈ ಪ್ರದೇಶಗಳನ್ನು ಮೈಸೂರು ಸಂಸ್ಥಾನದ ಆಡಳಿತಕ್ಕೆ ವರ್ಗಾಯಿಸುವುದರಿಂದ ಅಲ್ಲಿ ಹಳೆಯ ಮರಾಠರ ಆಳ್ವಿಕೆಯ ನೆನಪು ಉಳಿಯದಂತೆ ಮಾಡಲು ಸಾಧ್ಯವಾಗುತ್ತದೆ.

೨. ಈ ಪ್ರದೇಶಗಳಲ್ಲಿ ಪ್ರಭಾವಶಾಲಿಗಳಾದವರು ಕೊಂಕಣದ ಜನ.

೩. ಬಹುಸಂಖ್ಯಾತ ಕನ್ನಡಿಗರ ಆಶೋತ್ತರಗಳನ್ನು ಗಮನಕ್ಕೆ ತಂದುಕೊಳ್ಳಲಾರದೆ ಅಲ್ಪ ಸಂಖ್ಯಾತರು, ಆಗುಂತಕರು ಕೃಷ್ನಾನದಿಯನ್ನು ದಾಟಿಬಂದು ನೆಲೆಸಿ, ಜಹಗೀರುದಾರರಾಗಿ ದರ್ಪ ನಡೆಸಿದವರನ್ನು ಅಂದು ಹೇಗೊ ಈ ಪ್ರದೇಶ ಮದರಾಸಿನ  ದಂಡಿನ ಕಂಟೋಮೆಂಟಿನವರ ನೆರವಿನಿಂದ ರಕ್ಷಸಿಕೊಂಡಿದೆ. ಈ ದೃಷ್ಟಿಯಿಂದ ಪೌರಾಧಿಕಾರವೂ ಮೈಸೂರು ಸಂಸ್ಥಾನದ ವ್ಯಾಪ್ತಿಯ ಸರಕಾರದ ವಶಕ್ಕೆ ಬಂದರೆ ಆಡಳಿತವು ಸುಗುಮವಾಗುತ್ತದೆ.

೪. ಧಾರವಾಡ ಜಿಲ್ಲೆಯ ಪೂರ್ವಕ್ಕೂ ಪಶ್ಚಿಮಕ್ಕೂ ಮೈಸೂರು ಸಂಸ್ಥಾನದ ಜಿಲ್ಲೆಗಳು ಹೊಂದಿಕೊಂಡಿವೆ. ಆದ್ದರಿಂದ ಆಡಳಿತ ಸೌಕರ್ಯಕ್ಕೋಸ್ಕರ ಈ ವರ್ಗಾವಣೆ ವಿಹಿತವಾದದ್ದು. ಮರಾಟರು ಧಾಳಿಯಿಟ್ಟು ಬಂದು ಪ್ರಬಲರಾಗಿದ್ದರೂ ಧಾರವಾಡವು  ಮರಾಠರ ಸೀಮೆಯಲ್ಲ.

೫. ಈಗಾಗಲೇ ಮದರಾಸಿನ ವಶದಲ್ಲಿರುವ ಕನ್ನಡ ಪ್ರದೇಶಗಳಾದ ಬಳ್ಳಾರಿ, ಸೊಂಡೂರುಗಳು, ಮೈಸೂರು ಸೀಮೆಗಳಿಗೆ ಯಾವ ದೃಷ್ಟಿಯಿಂದಲೂ ವ್ಯತ್ಯಾಸವಿಲ್ಲ. ಆಡುವ ಭಾಷೆ ಕನ್ನಡ. ಸ್ವಾಭಾವಿಕವಾಗಿ ಒಂದೇ ಆಗಿರುವ ಭಾಷೆಗೆ ಸೇರಬೇಕಾದವರನ್ನು ಒಂದೇ ಪ್ರದೇಶಕ್ಕೆ ಸೇರಿಸುವುದರಿಂದ ಜನ ಸಂತೋಷಪಡುತ್ತಾರೆ. ಹೀಗೆ ಮಾಡದೆ ಮರಾಠರ ಪ್ರಭಾವ ಬೆಳೆಯುವುದಕ್ಕೆ ಆಸ್ಪದ ಕೊಡುವ ಹಾಗೂ ಸ್ವಾಭಾವಿಕ ನಂಟು ಇಲ್ಲದ ಮುಂಬಯಿ ಪ್ರಾಂತಕ್ಕೆ ಧಾರವಾಡ ಸೀಮೆಯನ್ನು  ಸೇರಿಸುವುದು ಯುಕ್ತವಲ್ಲ ಎಂದು ತಿಳಿಸಿದರು.

೨೦ನೇ ಶತಮಾನದಲ್ಲಿ ಕನ್ನಡ ಏಕೀಕರಣಕ್ಕೆ ಸಿಕ್ಕ ಬೆಂಬಲ ಅಂದೇ ದೊರಕಿದ್ದರೆ ಕರ್ನಾಟಕ ದೇಶ ಉದಯಿಸಿ ಎರಡು ಶತಮಾನವೇ ಆಗಿರುತ್ತಿತ್ತು. ಇಂದು ಕನ್ನಡ ನಾಡು ಶಾಶ್ವತವಾದ ಏಕೀಕರಣವನ್ನು ಸಾಧಿಸುವುದರಲ್ಲಿ ಒಟ್ಟು ಕನ್ನಡ ಜನದ ಹಿತದೃಷ್ಟಿ ಎದ್ದು ಕಾಣುತ್ತದೆ. ತಮ್ಮ ಯೋಗಕ್ಷೇಮಕ್ಕೊಸ್ಕರ ಪುಣೆ ಮುಂಬಯಿ ನಗರಗಳ ಕಡೆ ನೋಡುವ ಮರಾಠರ ಹಿತರಕ್ಷಣೆಗಿಂತ ಕನ್ನಡ ಭಾಷೆ ಮಾತನಾಡುವವರೆಲ್ಲರ ಒಟ್ಟು ಜನಹಿತದ ದೃಷ್ಟಿ ಮೇಲಿಟ್ಟಿದ್ದು ಎಂದು ಮನ್ರೋ ಭಾವಿಸಿದ್ದನು ಎಂಬುದು ಇದರಿಂದ ತಿಳಿದುಬರುತ್ತದೆ.

ಸರ್ ಥಾಮಸ್ ಮನ್ರೋ ೦೫.೦೫.೧೮೨೬, ೨೬.೦೬.೧೮೨೬ ಮತ್ತು ೨೯.೦೮.೧೮೨೬ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಜ್ಞಾಪಕ ಪತ್ರಗಳ ಒಕ್ಕಣೆ ಹಾಗೂ ಸರ್.ಎ.ಎನ್. ಆರ‍್ಪತ್ನಾಟ್ ಎಂಬುವರು ಮನ್ರೋ ಕುರಿತು ಬರೆದಿರುವ ಜೀವನ ಚರಿತ್ರೆ ಧಾರವಾಡ ಜಿಲ್ಲೆಯ ಗೆಜೆಟ್ಟಿನಲ್ಲಿ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಈ ಕೃತಿಯಲ್ಲಿ ಮೇಲಿನ ಅಂಶ ವಿವರವಾಗಿ ಚರ್ಚಿತಗೊಂಡಿದೆ.

ಇಷ್ಟೆಲ್ಲ ಸಲಹೆ ನೀಡಿದರೂ ಕೇಂದ್ರ ಆಡಳಿತ ಮಂಡಲಿ ಈ ಸಲಹೆಗೆ ಒಪ್ಪಿಗೆ ನೀಡದೆ ೧೮೩೦ರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಮುಂಬಯಿ ಪ್ರಾಂತಕ್ಕೆ ಸೇರಿಸಿತು. ೧೮೩೬ರಲ್ಲಿ ಮನ್ರೋ ಅಭಿಪ್ರಾಯಗಳಿಗೆ ಮನ್ನಣೆ ದೊರೆತಿದ್ದರೆ ಇಂದಿನ ಕರ್ನಾಟಕ ಎರಡು ಶತಮಾನಗಳ ಹಿಂದೆಯೇ ಉದಯಿಸುತ್ತಿತ್ತು. ಅಂದು ಧಾರವಾಡವು ಕನ್ನಡ ಜಿಲ್ಲೆಗಳ ಮುಖ್ಯ ಜಿಲ್ಲಾಧಿಕಾರಿಯ ಕೇಂದ್ರ ಕಾರ್ಯಾಲಯವಾಯಿತು. ೧೮೩೬ರಲ್ಲಿ ಬೆಳಗಾವಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ವಿಭಾಗಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯನ್ನು ಹಿಂದೆಯೇ ಸೂಚಿಸಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಿಸಿ ೧೮೬೨ರಲ್ಲಿ ಮುಂಬಯಿ ಪ್ರಾಂತಕ್ಕೆ ಸೇರಿಸಲಾಯಿತು.

೧೮೫೭-೫೮ರ ಸಿಪಾಯಿ ದಂಗೆಯಾಗುವ ಪೂರ್ವ ಮಾಹಿತಿಗಳ ಪರಿಚಯ ಕರ್ನಾಟಕದ ಯಾವುದೇ ಭಾಗಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕಕ್ಕೆ ಆಗಿತ್ತು. ೧೬ನೇ ಶತಮಾನದ ಮಧ್ಯಭಾಗದಿಂದ ಪ್ರಸಿದ್ಧಿಗೆ ಬಂದಿದ್ದ ಜಹಗೀರುದಾರರ ಕುಟುಂಬಕ್ಕೆ ಸೇರಿದ ನರಗುಂದದ ಭಾಸ್ಕರರಾಯ ಅಥವಾ ಬಾಬಾ ಸಾಹೇಬನು ತನಗಿರುವ ದತ್ತು ಪುತ್ರ ಸ್ವೀಕಾರದ ಹಕ್ಕನ್ನು ವಸಾಹತುಶಾಹಿ ಅರಸರು ನಿರಾಕರಿಸಿದ್ದರಿಂದ ದಂಗೆಯೆದ್ದನು. ಈತನೊಂದಿಗೆ ನೇರವಾಗಿ ಮಂಡರಗಿಯ ಭೀಮರಾಯನು ಸೇರಿಕೊಂಡನು. ಭೀಮರಾಯನು ಮೊದಲು ಬ್ರಿಟಿಷರ ಸೇನೆಯಲ್ಲಿದ್ದವನು. ಸ್ವಾತಂತ್ರ ಮನೋಧರ್ಮದಿಂದ ಸೇನೆಯನ್ನು ತ್ಯಜಿಸಿದ್ದನು. ಭಾಸ್ಕರನು ಧಾರವಾಡವನ್ನು ಹಿಡಿಯಬೇಕೆಂದು, ಭೀಮರಾಯನು ಕೊಪ್ಪಳ ಪ್ರದೇಶವನ್ನು ಆಕ್ರಮಿಸಿಕೊಳ್ಳಬೇಕೆಂದು ಇಬ್ಬರೂ ಒಪ್ಪಂದ ಮಾಡಿಕೊಂಡರು, ಇಬ್ಬರಿಗೂ ರಾಯದುರ್ಗ, ಆನೆಗೊಂದಿ ಪಾಳೆಯಗಾರರು ಸಹಾಯಕ್ಕೆ ಬರತ್ತೇವೆಂದು ತಿಳಿಸಿದರು. ಇವರಲ್ಲದೆ ಶಿರಹಟ್ಟಿಯ ಕೆಂಚನಗೌಡನೂ ಸರಟೂರಿನ ದೇಸಾಯಿಯೂ ಕೂಡಿಕೊಂಡು ದಂಗೆಯನ್ನು ವಿಸ್ತರಿಸಲು ಒಪ್ಪಂದ ಮಾಡಿಕೊಂಡರು. ದಂಗೆಯೆದ್ದವರು ಎಷ್ಟು ಪ್ರಯತ್ನಿಸಿದರೂ ಬ್ರಿಟಿಷ್ ವಸಾಹತುಶಾಹಿ ಸರಕಾರದ ಸೈನ್ಯಕ್ಕೆ ಯಶಸ್ಸು ಸಿಕ್ಕಿತು. ಭೀಮರಾಯನು ಕಾಳಗದಲ್ಲಿ ಮರಣಹೊಂದಿದನು. ಬಾಬಾಸಾಹೇಬನು ಸೆರೆ ಸಿಕ್ಕಿದನು. ಈತನನ್ನು ಗಲ್ಲಿಗೇರಿಸಲಾಯಿತು. ನರಗುಂದದಲ್ಲೂ ಕೊಪ್ಪಳದಲ್ಲೂ ೨೦೦ ಜನ ಸತ್ತರು. ನಲವತ್ತು ಜನರು ಗಲ್ಲಿಗೇರಿದರು. ನೂರು ಜನ ಕಾರಾಗೃಹ ಸೇರಿದರು. ಸೈನಿಕ ನ್ಯಾಯಾಸ್ಥಾನದ ತೀರ್ಪಿನಂತೆ ನೂರಾರು ಜನರನ್ನು ಗುಂಡಿಟ್ಟು ಕೊಲ್ಲಲಾಯಿತು. ನರಗುಂದ ಜಹಗೀರಿನಲ್ಲಿ ಇದ್ದ ೪೩ ಗ್ರಾಮಗಳನ್ನು ಧಾರವಾಡ ಜಿಲ್ಲೆಗೆ ಸೇರಿಸಲಾಯಿತು.

ಕ್ರಿ.ಶ.೧೮೩೧-೧೮೮೧ರ ವರೆಗೆ ೫೦ ವರ್ಷಗಳ ಕಾಲ ಆಳ್ವಿಕೆ ಮಾಡಿದ ಬ್ರಿಟಿಷ್ ವಸಾಹತುಶಾಹಿಯ ಕಮಿಷನರುಗಳ ಆಡಳಿತ ಒಂರ್ಥದಲ್ಲಿ ಮಾದರಿ ಮೈಸೂರಿನ ಬೆಳವಣಿಗೆಯಲ್ಲಿ ವಿಶಿಷ್ಟ ಸ್ಥಾನ ಪಡೆಯುವಂತೆ ಮಾಡಿತು. ರಾಜ್ಯಾಡಳಿತದ ಎಲ್ಲ ಮುಖ್ಯ ವಿಷಯಗಳಲ್ಲಿ ಆಗ ಬಳಕೆಯಲ್ಲಿದ್ದ ಭಾರತೀಯ ಸಂಪ್ರದಾಯ ಪದ್ಧತಿಯ ಬದಲಿಗೆ ಬ್ರಿಟಿಷ್ ಪದ್ದತಿಗೆ ಬದಲಾಗುತ್ತಾ ಬಂದಿತು. ಗಣ್ಯವಾದ ಮತ್ತು ಉಳಿಸಿಕೊಳ್ಳಲು ಯೋಗ್ಯವಾದ ಎಲ್ಲ ಹಳೆಯ ಸಂಪ್ರದಾಯ ಮತ್ತು ಪದ್ಧತಿಗಳು ಮುಂದುವರಿಯಲು ಅವಕಾಶ ಪಡೆದವು ಮತ್ತು ಅತಿ ಲಾಭದಾಯಕವಾದ ಸುಧಾರಣೆಗಳು ಕ್ರಮಬದ್ಧವಾಗಿ ಜಾರಿಗೆ ಬಂದವು. ಇದರಿಂದ ೧೮೮೧ರಲ್ಲಿ ಬ್ರಿಟಿಷ್ ಆಡಳಿತ ಕೊನೆಗೊಳ್ಳುವ ವೇಳೆಗೆ ಮೈಸೂರು ವ್ಯವಸ್ಥಿತ, ಶಾಂತಿಯುತ ಮತ್ತು ಅತ್ಯತ್ತಮ ಆಡಳಿತವನ್ನುಳ್ಳ ಸಂಸ್ಥಾನವಾಗಿ ರೂಪುಗೊಂಡಿತು. ೧೮೩೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತವು ಪೂರ್ಣವಾಗಿ ಅಸಮರ್ಥ ಆಳ್ವಿಕೆ ಎಂದು ಲಾರ್ಡ್ ವಿಲಿಯಂ ಬೆಂಟಿಂಕ್ ೧೭೯೯ರಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದ ನಂತರ ಮೈಸೂರು ಅರಸರಿಗೂ ಮತ್ತು ಬ್ರಿಟಿಷರಿಗೂ ನಡೆದ ಒಪ್ಪಂದದ ನಾಲ್ಕನೆಯ ವಿಭಾಗದ ಪ್ರಕಾರ, ಮೈಸೂರು ಸಂಸ್ಥಾನದ ರಾಜ್ಯಾಡಳಿತವನ್ನು ಪರಿಸ್ಥಿತಿಗೆ ಕಟ್ಟುಬಿದ್ದು ತಾತ್ಕಾಲಿಕವಾಗಿ ತನ್ನ ವಶಕ್ಕೆ ತೆಗೆದುಕೊಂಡನು. ಮೈಸೂರ ಸಂಸ್ಥಾನದಲ್ಲಿ ಕೆಲವು ವರ್ಷಗಳಿಂದ ಕ್ರಮವಾಗಿ ಸಂಬಳ ದೊರೆಯದೆ ಇದ್ದುದರಿಂದ ಸರ್ಕಾರಿ ಮತ್ತು ಸೈನ್ಯದ ಉದ್ಯೋಗದಲ್ಲಿ ಅತೃಪ್ತಿ ಮೂಡಿತ್ತು. ಇದು ಮಾತ್ರವಲ್ಲದೆ ಮೈಸೂರಿನ ಈ ಪರಿಸ್ಥಿತಿಗೆ ಈ ಕಾರಣಗಳನ್ನು ನೀಡಬಹುದು.

೧. ರಾಜರ ದುಂದು ವೆಚ್ಚದಿಂದುಂಟಾದ ಅತ್ಯಧಿಕ ಖರ್ಚು ಮತ್ತು ಅದರ ಪರಿಣಾಮವಾಗಿ ಅಗಾಧವಾದ ಸಾಲಗಳು

೨. ಸರ್ಕಾರಿ ಅಧಿಕಾರಿಗಳ ವೇತನ ಪಟ್ಟಿಯನ್ನು ರಾಜಧನದಿಂದ ಬೇರ್ಪಡಿಸದೇ ಇದ್ದುದು

೩. ಪ್ರತಿಕೂಲ ವಾಣಿಜ್ಯ ಮತ್ತು ಋತುಗಳ ಪರಿಸ್ಥಿತಿಯಿಂದ ದೇಶದ ಆದಾಯ ಇಳಿಮುಖವಾದುದು

೪. ಷರತ್ತು ಅಥವಾ ಗುತ್ತಿಗೆ ಪದ್ಧತಿಯ ದುರುಪಯೋಗದಿಂದ ನಗರ ಪ್ರದೇಶದಲ್ಲಿ ರೈತರಲ್ಲಿ ಬೆಳೆಯುತ್ತಿದ್ದ ಅಸಮಾಧಾನ. ಇದರ ಪರಿಣಾಮವಾಗಿ ರಾಜದ್ವೇಷಿಗಳಾದ ಹಳೆಯ ಪಾಳೆಯಗಾರರ ಕುಟುಂಬದವರ ಚಿತಾವಣೆಯಿಂದ ಈ ಭಾಗಗಳಲ್ಲಿ

ದಂಗೆಯುಂಟಾದುದ್ದು. ಮೈಸೂರಿನ ಬ್ರಿಟಿಷ್ ರೆಸಿಡಂಟರಾಗಿದ್ದ ಎ.ಎಚ್. ಕೋಲ್ ಸಂಸ್ಥಾನದಲ್ಲಿ ಕೆಡುತ್ತಿದ್ದ ಆರ್ಥಿಕ ಪರಿಸ್ಥಿತಿಯ ವಿಷಯವಾಗಿ ಸಕಾಲದಲ್ಲಿ ಮುನ್ನೆಚ್ಚರಿಕೆ ಪತ್ರಗಳನ್ನು ಕಳುಹಿಸಿದ್ದರೂ, ಹಿಂದಿನ ಗೌರ‍್ನರ್ ಲಾರ್ಡ್ ವೆಲ್ಲೆಸ್ಲಿಯ ವ್ಯವಸ್ಥೆಯಂತೆ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಮೈಸೂರು ದೇಶದ ಆಡಳಿತ ನಿಯಂತ್ರಣಾಧಿಕಾರವನ್ನು ಹೊಂದಿದ್ದ ಮದ್ರಾಸು ಸರ್ಕಾರ ಅದನ್ನು ಉಪೇಕ್ಷೆ ಮಾಡಿದ್ದೂ ಕೂಡ, ಮೈಸೂರಿನ ಪರಿಸ್ಥಿತಿ ಹದಗೆಡಲು ಕಾರಣವಾಯಿತೆಂದು  ಹೇಳಬಹುದು.

ರಾಜರು ದಂಗೆಯನ್ನಡಗಿಸುವುದರಲ್ಲಿ ತೋರಿಸಿದ್ದು ನಿಜವಾದರೂ ಅವರ ಪ್ರಯತ್ನಗಳು ಸಂಪೂರ್ಣ ವಿಫಲವಾದವು. ಅವರಲ್ಲಿ ತಕ್ಕಷ್ಟು ಸೈನ್ಯಬಲ ಇಲ್ಲದೆ ಇದ್ದುದು ಇದಕ್ಕೆ ಕಾರಣವೆಂದು ಹೇಳಬಹುದು. ೧೮೩೧ನೇ ಮೇ ತಿಂಗಳಿನಲ್ಲಿ ಮದ್ರಾಸಿನ ಗೌರ‍್ನರ್ ಎಸ್. ಆರ್. ಲಿಪ್ಟಿಂಗ್ಸನ್ ಮೈಸೂರಿಗೆ ಭೇಟಿ ನೀಡಿ ದೇಶದ ಪರಿಸ್ಥಿತಿಯನ್ನು ಖುದ್ದಾಗಿ ವಿಚಾರಿಸಿ, ಅಶಾಂತ ಪ್ರದೇಶಗಳಲ್ಲಿ ಶಾಂತ ಪರಿಸ್ಥಿತಿಯನ್ನುಂಟು ಮಾಡಲು ಹೆಚ್ಚಿನ ಸಹಾಯಕ ಸೈನ್ಯ ಅವಶ್ಯಕವೆಂಬುದನ್ನು ಒಪ್ಪಿಕೊಂಡನು. ಅವನು ಮೈಸೂರು ಬಿಟ್ಟ ನಂತರ ಈ ಸಲಹೆ ಜಾರಿಗೆ ಬಂದಿತ್ತು. ಇದಲ್ಲದೆ ದಂಗೆಯ ಹುಟ್ಟು, ಬೆಳವಣಿಗೆ ಮತ್ತು ಅಡಗಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಲು ಒಂದು ವಿಚಾರಣಾ ಆಯೋಗವನ್ನು ನೇಮಿಸಲಾಯಿತು. ಈ ವರದಿ ಸಿದ್ಧಗೊಳ್ಳುವವರೆಗೆ ರಾಜರ ಆಡಳಿತಕ್ಕೆ ಬದಲಾಗಿ ತಾತ್ಕಾಲಿಕವಾಗಿ ಬ್ರಿಟಿಷ್ ಕಮಿಷನರುಗಳ ಆಡಳಿತವನ್ನು ಜಾರಿಗೆ ತರಲಾಯಿತು. ಇಲ್ಲಿ ಮುಖ್ಯ ಜವಾಬ್ದಾರಿ ಕೆಲಸವನ್ನು ವಹಿಸಿಕೊಂಡು ಸಂಸ್ಥಾನ ಆಡಳಿತ ನಡೆಸುವಂತೆ ಮದ್ರಾಸಿನ ಗೌರ‍್ನರ್ ಜನರಲ್ ಆಗಿದ್ದ ಕರ್ನಲ್ ಬ್ರಿಗ್ಸ್‌ನನ್ನು ಸೀನಿಯರ್ ಕಮಿಷನರಾಗಿ ನೇಮಕ ಮಾಡಲಾಯಿತು. ಮದ್ರಾಸ್ ಸರ್ಕಾರ ಸಿ.ಎಂ. ಲಷಿಂಗಟನನ್ನು ಜೂನಿಯರ್ ಕಮಿಷನರಾಗಿ ನಿಯಮಿಸಿತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ತಿಳಿಸುವ ಪತ್ರವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ನಾಡಹಬ್ಬದ ದಿನವಾದ ದಸರಾ ಪ್ರಾರಂಭದ ದಿನದಂದು ೧೮೩೧ನೇ ಅಕ್ಟೋಬರ್ ೧೯ರಂದು ರಾಜರ ಕೈಯಲ್ಲಿಡಲಾಯಿತು. ನಿಸ್ಸಹಾಯಕರಾದ ಮುಮ್ಮಡಿ ಕೃಷ್ಣರಾಜರು ವಸಾಹತುಶಾಹಿಗಳ ಆಜ್ಞೆಯಂತೆ ವರ್ತಿಸಿದರು. ಇದರ ಹೊಣೆಗಾರನಾದ ಲಾರ್ಡ್ ವಿಲಿಯಂ ಬೆಂಟಿಂಕನೇ ಮುಂದೆ ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದು ಈಗ ಇತಿಹಾಸ.

ಸಿ.ಎಂ. ಲಷಿಂಗ್ಟನ್ ತನ್ನ ಹಿರಿಯ ಸಹೋದ್ಯೋಗಿಗಳಿಗಿಂತ ಮೂರು ತಿಂಗಳ ಮೊದಲೇ ಆಡಳಿತ ವಹಿಸಿಕೊಂಡನು. ಈ ಅವಧಿಯಲ್ಲಿ ಅವನು ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸಿದನು. ದುರದೃಷ್ಟವಶಾತ್ ಇವುಗಳಿಂದ ರಾಜ್ಯದ ಆಡಳಿತದಲ್ಲಿ ಹೆಚ್ಚು ಗೊಂದಲವುಂಟಾಯಿತು. ಕರ್ನಲ್ ಬ್ರಿಗ್ಸ್ ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆ ಕೆಲಸವಾಗಿ ತನ್ನ ಕಿರಿಯ ಸಹೋದ್ಯೋಗಿ ಮಾಡಿದ್ದ ಸುಧಾರಣೆಗಳನ್ನು ತಳ್ಳಿಹಾಕಿದನು. ಅವನು ತನ್ನ ನೇರ ಆಡಳಿತದಲ್ಲಿ ಸರ್ಕಾರಿ ಕಛೇರಿಗಳನ್ನು ಕ್ರಮಪಡಿಸಲು ಆಡಳಿತ ಶಾಖೆಯಲ್ಲಿ ತನ್ನದೇ ಆದ ಹಲವು ಸುಧಾರಣೆಗಳನ್ನು ಜಾರಿಗೆ ತಂದನು. ಆದರೆ ಮದ್ರಾಸ್ ಸರ್ಕಾರ ಇವನ ಸುಧಾರಣೆಯನ್ನು ಒಪ್ಪಲಿಲ್ಲ. ಕೆಲವು ತಿಂಗಳಲ್ಲಿ ಸಿ.ಎಂ. ಲಷಿಂಗ್ಟನ್ ಮೈಸೂರನ್ನು ಬಿಟ್ಟ ನಂತರ ಬಿ.ಎಂ. ಡ್ರೊರಿ ಇವನ ಜಾಗಕ್ಕೆ ಬಂದನು. ಅತ್ಯಲ್ಪ ಕಾಲದಲ್ಲೇ ಜೆ.ಎಂ. ಮ್ಯಾಕ್‌ಲಾಯ್ಡ್ ಇವನ ಸ್ಥಾನವನ್ನು ಪಡೆದನು. ಈ ಮಧ್ಯೆ ಕರ್ನಲ್ ಬ್ರಿಗ್ಸ್ ಕೆಳಗಿನ ಸಹೋದ್ಯೋಗಿಗಳೊಡನೆಯೂ ಮೈಸೂರಿನ ದಿವಾನರೊಡನೆಯೂ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅವನು ಹಿರಿಯ ಕಮಿಷನರಾಗಿ ಕೆಲಸಮಾಡುವುದು ಅಸಾಧ್ಯವಾಯಿತು. ಇದರ ಫಲವಾಗಿ ೧೮೩೨ನೇ ನವೆಂಬರಿನಲ್ಲಿ ರಾಜೀನಾಮೆ ನೀಡಿದನು. ಮೈಸೂರನ್ನು ಬಿಡುವ ಮೊದಲು ದೇಶದಲ್ಲಿ ಇಬ್ಬರು ಕಮಿಷನರುಗಳಿಗೆ ಒಬ್ಬರೇ ಕಮಿಷನರ್ ಇರಬೇಕೆಂಬ ಅಭಿಪ್ರಾಯವನ್ನು ಸಮರ್ಥಿಸಿ ಕೇಂದ್ರ ಸರ್ಕಾರಕ್ಕೆ ತನ್ನ ವಾದ ಮಂಡಿಸಿದನು. ಈ ಸೂಚನೆ ೧೮೩೪ರಲ್ಲಿ ಕಾರ್ಯಗತವಾಯಿತು. ಒಟ್ಟಿನಲ್ಲಿ ಬ್ರಿಗ್ಸ್‌ನನ್ನು ಅಸಾಧಾರಣ ಉತ್ಸಾಹ, ಕಾರ್ಯಶೀಲ, ದೃಢನಿಶ್ಚಿತ ಮತ್ತು ದೃಢಮನಸ್ಕ ವ್ಯಕ್ತಿಯೆಂದು ಹೇಳಬಹುದು. ನಗರ ಪ್ರದೇಶದಲ್ಲಿ (ಬಿದನೂರು) ಶಾಂತಿ ನೆಲೆ ನಿಲ್ಲಲು ಅವನು ಮಾಡಿದ ಪ್ರಯತ್ನಗಳು ಬಹು ಪ್ರಶಂಸಾರ್ಹವಾದವು.

ಈ ಮಧ್ಯೆ ದಂಗೆಗಳ ವಿಚಾರಣೆ ನಡೆಸಿದ ಸಮಿತಿಯ ವರದಿಯನ್ನು ಗೌರ‍್ನರ್ ಜನರಲ್‌ರಿಗೆ ಕಳುಹಿಸಿತ್ತು. ರಾಜರನ್ನು ದುರಾಡಳಿತದ ದೋಷಾರೋಪದಿಂದ ಪೂರ್ಣವಾಗಿ ಮುಕ್ತರನ್ನಾಗಿ ಮಾಡಿದ್ದು ಈ ವರದಿಯಲ್ಲಿ ಕಂಡು ಬಂದ ಬಹು ಮುಖ್ಯ ಅಂಶ. ಕ್ರಿ.ಶ. ೧೮೩೪, ಏಪ್ರಿಲ್‌ನಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ ಮೈಸೂರಿಗೆ ಭೇಟಿಯಿತ್ತಾಗ, ರಾಜರಿಂದ ಅಧಿಕಾರವನ್ನು ಕಸಿದುಕೊಂಡಿದ್ದು, ನೈತಿಕವಾಗಿಯೂ, ಕಾನೂನು ರೀತಿಯಾಗಿಯೂ ಸರಿಯೇ ಎಂದು ಸಂದೇಹ ಪಡುವಂತಾಯಿತು. ಕಪ್ಪ ಕಾಣಿಕೆಯನ್ನು ಸರಿಯಾದ ಕಾಲದಲ್ಲಿ ಕೊಡುತ್ತಿಲಿಲ್ಲವೆಂಬ ಆರೋಪ ಸುಳ್ಳೆಂದು ಕಂಡು ಬಂದಿತು. ರಾಜರ ಮನೋಧರ್ಮವನ್ನು ಕುರಿತು ವಿವರಿಸುತ್ತಾ, ಅವರ ಸ್ವಭಾವ ಕ್ರೂರ ಅಥವ ಪ್ರಜಾಪೀಡಕ ಹಾಗೂ ಧರ್ಮಕ್ಕೆ ವಿರುದ್ದವಾದುದೆಂದು ವಿರೋಧಿಸಿ ಹೇಳಿದನು. ಇವರಿಗೆ ರಾಜರಾಗುವ ಎಲ್ಲ ಅರ್ಹತೆಗಳಿವೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದನು. ಅಷ್ಟೇ ಅಲ್ಲದೆ ರಾಜ್ಯದ ಮುಕ್ಕಾಲು ಭಾಗ ಆದಾಯವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕೆಂದು ಹಾಗೂ ೧೭೯೯ರ ಸಂಧಾನಕ್ಕೆ ಆಧಾರವಾಗಿಟ್ಟು ಕೊಳ್ಳಬೇಕೆಂದೂ, ಈ ಎಲ್ಲ ಆಧಾರಗಳಿಂದ ಮೈಸೂರು ಅರಸರಿಗೆ ಸಂಸ್ಥಾನದ ಆಳ್ವಿಕೆಯ ಹಕ್ಕನ್ನು ನೀಡಬಹುದೆಂದು ಲಂಡನ್ನಿನ ಡೈರಕ್ಟರುಗಳ ಮಂಡಳಿಗೆ ಬೌರಿಂಗ್ ಶಿಫಾರಸ್ಸು ಮಾಡಿದನು. ಆದರೆ ಬ್ರಿಟಿಷ್ ಸರ್ಕಾರದ ಒಳಾಡಳಿತ ಶಾಖೆ ಈ ಸಲಹೆಯನ್ನು ತಿರಸ್ಕರಿಸುವದರ ಮೂಲಕ ಗೌರ‍್ನರ್ ಜನರಲ್ಲಿಗೂ ರಾಜರಿಗೂ ತೀವ್ರ ನಿರಾಶೆಯನ್ನುಂಟುಮಾಡಿತು. ೧೮೩೪ರಲ್ಲಿ ಬೆಂಟಿಂಕ್ ಮೈಸೂರಿನ ಆಡಳಿತವನ್ನು ಸುಧಾರಿಸಲು ಕೆಲವು ಅಮೂಲ್ಯವಾದ ರಚನಾತ್ಮಕವಾದ ಸಲಹೆಗಳನ್ನು ಕೊಟ್ಟನು. ಆ ಸಲಹೆಗಳಂತೆ ಇಡೀ ದೇಶವನ್ನು ನಾಲ್ಕು ಪ್ರಾದೇಶಿಕ ವಿಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ವಿಭಾಗವೂ ಅಲ್ಲಿಯವರೆಗೆದ್ದ ಫೌಜುದಾರನಿಗೆ ಬದಲಾಗಿ ಒಬ್ಬ ಯೂರೋಪಿನ್ ಸೂಪರಿಂಟೆಂಡಂಟನ ಕೈಕೆಳಗಿರಬೇಕು ಹಾಗೂ ಈ ಸೂಪರಿಂಟೆಂಡೆಂಟರು ಕಮಿಷನರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದು ಅವರ ಒಪ್ಪಿಗೆ ಪಡೆದು ಕಂದಾಯ, ತೆರಿಗೆ, ನಿರ್ಧಿಷ್ಟವಾದ ಕೆಲವು ನ್ಯಾಯ ತೀರ್ಮಾನಗಳಿಗೆ ಸಂಬಂಧಿಸಿದ ಕಾರ‍್ಯಗಳನ್ನು ನಡೆಸುವುದರ ಜೊತೆಗೆ ಸಿವಿಲ್ ಕೆಲಸ ಕಾರ್ಯಗಳ ಪ್ರತಿಯೊಂದು ಶಾಖೆಯ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳಬೇಕು ಎಂಬ ಆದೇಶ ಹೊರಡಿಸಿದನು. ತಾಲೂಕಿನ ಅಮಲ್ದಾರರು ಈ ಅಧಿಕಾರ ಚಲಾವಣೆಯಲ್ಲಿ ತಮ್ಮ ಕಂದಾಯಕ್ಕೆ ಸಂಬಂಧಿಸಿದ ಕಾರ್ಯದೊಡನೆ ಮೊದಲಿನಂತೆಯೇ ಪೊಲೀಸ್ ಶಾಖೆಯನ್ನು ಕೆಲವು ನಿಬಂಧಗಳಿಗೆ ಒಳಪಟ್ಟು ನೋಡಿಕೊಳ್ಳಬೇಕು ಎಂದು ಸಲಹೆ ಕೊಟ್ಟನು. ಬೆಂಟಿಂಕ್ ಅಧಿಕಾರಿಗಳ ವೇತನವನ್ನು ಹೆಚ್ಚಿಸಿ ಪ್ರಮುಖ ಸ್ಥಾನಗಳಿಗೆ ಅತ್ಯುತ್ತಮ ವ್ಯಕ್ತಿಗಳನ್ನು ನೇಮಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದನು. ಭೂಮಿಯ ಅಳತೆಯಲ್ಲಿ ಅಂದು ಜಾರಿಯಲ್ಲಿದ್ದ ಪದ್ಧತಿಗಳನ್ನು ರೈತರ ಒಪ್ಪಿಗೆ ಪಡೆದು ಪರಿಷ್ಕರಿಸಬೇಕೆಂದು ಸಲಹೆ ನೀಡಿದನು. ನ್ಯಾಯಾಂಗ ವಿಚಾರದಲ್ಲಿ ಕಮಿಷನರು ಮೂವರು ನ್ಯಾಯಾಧಿಪತಿಗಳಿಂದ ಕೂಡಿದ ಹುಜೂರ್ ಅದಾಲತ್ ನ್ಯಾಯಾಲಯ ಹಾಗೂ ಒಬ್ಬ ಪಂಡಿತ ಮತ್ತು ಮುನ್ಸೀಫರ ಸಹಾಯ ಪಡೆಯಬೇಕೆಂಬುದು ಅವನ ಮತ್ತೊಂದು ಸಲಹೆ. ಆದರೆ ಆ ಕಾಲದಲ್ಲಿ ಕ್ರಮಬದ್ಧವಾಗಿ ಸಂಗ್ರಹಿಸಿದ ಯಾವ ನ್ಯಾಯ ಸೂತ್ರಗಳೂ ಜಾರಿಯಲ್ಲಿರಲಿಲ್ಲ ಎಂಬುದು ಗಮನಿಸಬೇಕಾದ ಪ್ರಮುಖ ಅಂಶ ವಾಗುತ್ತದೆ. ಈ ನಿಯಮಗಳು ಇಂದಿಗೂ ತನ್ನ ಸ್ವರೂಪ ಉಳಿಸಿಕೊಂಡಿರುವುದು ಆಡಳಿತ ವ್ಯವಸ್ಥೆಯಲ್ಲಿ ಸ್ಪಷ್ಟಗೊಳ್ಳುತ್ತದೆ.