ಎಂ. ವಿಶ್ವೇಶ್ವರಯ್ಯ

೧೯೧೨ರ ಕೊನೆಯ ಕಾಲಕ್ಕೆ ಟಿ. ಅನಂತರಾಮ್ ಅವರ ತರುವಾಯ ಎಂ. ವಿಶ್ವೇಶ್ವರಯ್ಯ ಅವರು ದಿವಾನರಾದರು. ಇದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಾಂತ್ರಿಕ ಇಲಾಖೆಯ ಮುಖ್ಯಸ್ಥರೊಬ್ಬರನ್ನು ದಿವಾನ ಪದವಿಗೆ ತಂದ ಹೊಸ ಸಂಪ್ರದಾಯವನ್ನು ಜಾರಿಗೆ ತಂದಂಥವರಾದರು. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಜನಿಸಿದರೂ ಪದವೀಧರರಾದ ಕೂಡಲೆ ಮುಂಬೈ ಪ್ರಾಂತದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರು ಶ್ರೇಷ್ಠ ಸೇವೆಸಲ್ಲಿಸಿ ತಮ್ಮ ೪೮ನೇ ವಯಸ್ಸಿನಲ್ಲಿಯೇ ನಿವೃತ್ತಿ ಪಡೆದರು. ನಂತರ ಅವರು ಮಹಾರಾಜರ ಮತ್ತು ದಿವಾನರ ಕರೆಗೆ ಓಗೊಟ್ಟು ತಮ್ಮ ಸ್ವಂತ ಸಂಸ್ಥಾನಕ್ಕೆ ಸೇವೆ ಸಲ್ಲಿಸಲು ಸಂತೋಷದಿಂದ ಒಪ್ಪಿಕೊಂಡರು.

ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ರಾಜ್ಯದ ಸರ್ವ ವಿಧದ ಬೆಳವಣಿಗೆ ಆರಂಭವಾಯಿತು. ಕೈಗಾರಿಕೆಯ ಕ್ಷೇತ್ರ ವಿಶೇಷವಾಗಿ ಬೆಳೆಯಿತು. ಅವರು ಜನರಲ್ಲಿ ಯೋಜನಾ ಮನೋಧರ್ಮವನ್ನು ಮೂಡಸಿ, ಸ್ಪಷ್ಟವಾದ ಗುರಿಗಳನ್ನಿಟ್ಟುಕೊಂಡು ಅವುಗಳ ಸಾಧನೆಗೆ ಅಧಿಕಾರಿಗಳೂ, ಖಾಸಗಿ ಜನರು ಶ್ರಮಿಸುವಂತೆ ಮಾಡಿದರು. ಶಿಕ್ಣಣದ ವಿಷಯದಲ್ಲಿ ಕಡ್ಡಾಯ ಪದ್ಧತಿಯನ್ನು ಹಂತಹಂತವಾಗಿ ಜಾರಿಗೆ ತರಲು ಕಾನೂನು ಜಾರಿಗೊಳಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪ್ರಗತಿಗೆ ಉಪಯುಕ್ತ ಕಾರ್ಯಕ್ರಮ ಕೈಗೊಂಡರು. ಹಿಂದುಳಿದ, ದಲಿತಾ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಶಿಷ್ಯ ವೇತನವನ್ನು ಜಾರಿಗೆ ತಂದರು. ಮೆಕ್ಯಾನಿಕಲ್ ಇಂಜನಿಯರಿಂಗ್ ಶಾಲೆ ಹಾಗೂ ವಾಣಿಜ್ಯ ಮತ್ತು ವ್ಯವಸಾಯ ಶಾಲೆ, ಚಾಮರಾಜೇಂದ್ರ ಕಲಾ ಶಾಲೆ ಮೈಸೂರಿನಲ್ಲಿ ಹಾಗೂ ಜಿಲ್ಲಾ ಮುಖ್ಯ ಪಟ್ಟಣಗಳಲ್ಲಿ ಕೈಗಾರಿಕೆಯ ಶಾಲೆಗಳು ಸ್ಥಾಪನೆಗೊಂಡವು. ಬೆಂಗಳೂರಿನಲ್ಲಿ ಸರಕಾರಿ ಇಂಜನಿಯರಿಂಗ್ ಕಾಲೇಜ್ ಸ್ಥಾಪನೆಗೊಂಡಿತ್ತು. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೆ ತಂದರು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಕಾಶಿ ಹಿಂದೂ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ತಮ್ಮ ಸಂಸ್ಥಾನದ ದೇಶೀಯ ವಿಶ್ವವಿದ್ಯಾಲಯಕ್ಕೆ ೨ ಲಕ್ಷ ರೂಪಾಯಿಗಳನ್ನು ದಾನರೂಪದಲ್ಲಿ ನೀಡಿದರು. ಪ್ರತಿವರ್ಷ ೧೨,೦೦೦ ರೂಪಾಯಿ ಆರ್ಥಿಕ ನೆರವನ್ನು ನೀಡಲು ಒಪ್ಪಿದರು. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪಿತವಾದವು. ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಲೋಹ ಗಳ ಕಾರ್ಖಾನೆ, ಚರ್ಮ ಹದ ಮಾಡುವ ಕಾರ್ಖಾನೆ, ಸೆಂಟ್ರಲ್ ಇಂಡಸ್ಟ್ರಿಯಲ್ ವರ್ಕ್‌‌ಷಾಪ್, ಎಚ್.ಎ.ಎಲ್. ಎಚ್.ಎಂ.ಟಿ., ಮೈಕೊ ಇತ್ಯಾದಿ. ಭದ್ರಾವತಿಯಲ್ಲಿ ಕಬ್ಬಿಣದ ಕಾರ್ಖಾನೆ ಮತ್ತು ಮರದ ಎಣ್ಣೆ ತೆಗೆಯುವ ಕಾರ್ಖಾನೆ ಸ್ಥಾಪನೆಯಾದವು. ಮೈಸೂರು ಬ್ಯಾಂಕ್ (State Bank of Mysore), ಮೈಸೂರು ವಾಣಿಜ್ಯ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮೈಸೂರುಗಳಲ್ಲಿ ಸಾರ್ವಜನಿಕ ಪುಸ್ತಕ ಭಂಡಾರಗಳು, ಬೆಂಗಳೂರಿನ ಸೆಂಚುರಿ ಕ್ಲಬ್ ಮತ್ತು ಮೈಸೂರಿನಲ್ಲಿ ಕಾಸ್ಮೋಪಾಲಿಟನ್ ಕ್ಲಬ್ ಇವೆಲ್ಲವೂ ನಾಲ್ವಡಿ ಹಾಗೂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಸ್ಥಾಪನೆಗೊಂಡವು.

ವಿಶ್ವೇಶ್ವರಯ್ಯ ಅವರ ಆಡಳಿತದ ಕಾಲದಲ್ಲಿಯೇ ಹಾಸನದ ಮೂಲಕವಾಗಿ ಬೆಂಗಳೂರು ಅರಸೀಕೆರೆ ರೈಲು ಮಾರ್ಗ ಆರಂಭವಾಯಿತು. ಬಂಗಾರಪೇಟೆಯನ್ನು ಕೋಲಾರದ ಮೂಲಕ ಚಿಕ್ಕಬಳ್ಳಾಪುರಕ್ಕೆ ಸೇರಿಸುವ ರೈಲುಮಾರ್ಗವು ಪೂರ್ಣಗೊಂಡಿತ್ತು. ಮಲೆನಾಡಿನ ಅರಣ್ಯಗಳಿಂದ ಮರದ ದಿಮ್ಮೆಗಳನ್ನು ಸಾಗಿಸಲು ಅನುಕೂಲವಾಗುವಂತೆ ತರೀಕೆರೆ ನರಸಿಂಹರಾಜಪುರಗಳ ನಡುವೆ ಟ್ರಾಂವೇ ಆರಂಭವಾಯಿತು. ಎಂ.ಎಸ್.ಎಂ. ರೈಲ್ವೇ ಕಂಪನಿಯಿಂದ ೩೭೨ ಮೈಲಿಗಳ ರೈಲು ಮಾರ್ಗದ ಆಡಳಿತವು ಮೈಸೂರು ಸರ್ಕಾರಕ್ಕೆ ಕೊಡಲ್ಪಟ್ಟಿತು. ೧೭೯೯ರ ಒಪ್ಪಂದದ ಪ್ರಕಾರ ಮೈಸೂರು ರಾಜ್ಯಕ್ಕೆ ಸಮುದ್ರ ತೀರ ಪ್ರದೇಶದೊಡನೆ ಸಂಪರ್ಕವೇ ಇಲ್ಲದಂತಾಯಿತು. ಆದುದರಿಂದ ಮೈಸೂರಿನಿಂದ ಮೈಸೂರಿನ ದೂರದ ಭಟ್ಕಳದ ವರೆಗೆ ರೈಲ್ವೇ ಸಂಪರ್ಕ ಹೊಂದಿದ ಬಂದರಿನವರೆಗೆ ಬೆಳವಣಿಗೆಯಾಗುವಂತೆ ಅವಕಾಶ ಕೊಡಬೇಕೆಂದು ವಿಶ್ವೇಶ್ವರಯ್ಯ ಭಾರತ ಸರ್ಕಾರದೊಡನೆ ಪತ್ರ ವ್ಯವಹಾರ ನಡೆಸಿದ್ದರು. ಇದರಿಂದ ಯಶಸ್ವಿಯೂ ಆದರು. ಆದರೆ ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದ ಆರು ವರ್ಷಗಳ ಕಾಲದಲ್ಲಿ ನಾಲ್ಕು ವರ್ಷಗಳು (೧೯೧೪-೧೮) ಪ್ರಥಮ ಪ್ರಪಂಚ ಯುದ್ಧದ ಕಾಲವಾಗಿತ್ತು. ಈ ರೀತಿಯಲ್ಲಿ ಅನಾನುಕೂಲ ಸ್ಥಿತಿಗಳಿದ್ದರೂ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆದವೆಂಬುದು ಇಂದಿನ ಆರ್ಥಿಕ ತಜ್ಞರಿಗೆ ಹೆಚ್ಚಿನ ಅಧ್ಯಯನಕ್ಕೆ ಎಡೆಮಾಡಿಕೊಡುತ್ತದೆ.

ವಿಶ್ವೇಶ್ವರಯ್ಯ ಅವರು ತಂತ್ರಜ್ಞಾನವಲ್ಲದೆ ಉತ್ತಮ ರಾಜಕಾರಣ ಪಟುವಾಗಿದ್ದರು. ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದರು. ಪ್ರಜಾಪ್ರತಿನಿಧಿಗಳಿಗೆ ದೇಶದ ಆಡಳಿತದಲ್ಲಿ ಹೆಚ್ಚು ಸಂಪರ್ಕವನ್ನು ಕಲ್ಪಿಸುವುದು ಅವರ ಉದ್ಧೇಶವಾಗಿತ್ತು. ಖಾಸಗಿ ಜನರಿಂದ ಕೂಡಿದ ಮೈಸೂರು ಆರ್ಥಿಕ ಸಮ್ಮೇಳನಗಳೂ ಅದರ ಸಮಿತಿಗಳೂ ಈ ಭಾಗದ ಬೆಳವಣಿಗೆಗೆ ನೆರವನ್ನು ನೀಡಿದವು. ಅವರು ಸ್ವಯಂ ಆಡಳಿತ ಹೊಂದಿದ ಜಿಲ್ಲಾ ಮತ್ತು ತಾಲ್ಲೂಕು ಮಂಡಳಿಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಕರ್ತವ್ಯಗಳನ್ನು ಹೆಚ್ಚಿಸಲು ತೀವ್ರ ಆಸಕ್ತಿ ಹೊಂದಿದ್ದರು. ೧೯೧೮ರಲ್ಲಿ ಅಂಗೀಕೃತವಾದ ಮೈಸೂರು ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯತಿಗಳ ಒಪ್ಪಂದದ ಪ್ರಕಾರ ಜಿಲ್ಲಾ ಮತ್ತು ತಾಲ್ಲೂಕು ಮಂಡಳಿಗಳಲ್ಲಿ ಚುನಾಯಿತ ಸದಸ್ಯರ ಬಹುಮತ ಇರುವಂತೆಯೂ, ಮೈನರ್ ಟೌನ್ ಮತ್ತು ನಗರ ಸಭೆಗಳಿಗೆ ಚುನಾಯಿತ ಉಪಾಧ್ಯಕ್ಷರಿರುವಂತೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಕೆಲವು ಕರ್ತವ್ಯಗಳಿಂದ ಕೂಡಿದ ಚುನಾಯಿತ ಅಧ್ಯಕ್ಷರಿರುವಂತೆಯೂ ಕಾನೂನು ಜಾರಿಗೆ ತರಲಾಯಿತು.ಈ ಆಧಾರದಲ್ಲಿಯೇ ಇಂದು ಪ್ರಜಾಪ್ರಭುತ್ವ ಭಾರತದಲ್ಲಿ ಜಾರಿಯಲ್ಲಿರುವ ಗ್ರಾಮ ಪಂಚಾಯತಿಗಳ ಸ್ವರೂಪವಾಗಿದೆ.

ಮೈಸೂರು ನ್ಯಾಯ ವಿಧೇಯಕ ಸಭೆ ಸುಧಾರಣೆ ಹೊಂದಿತು. ಅದರ ಸಂಖ್ಯೆ ೧೮ರಿಂದ ೨೪ಕ್ಕೆ ಏರಿತು. ಅದರಲ್ಲಿ ಪ್ರಜಾಪ್ರತಿನಿಧಿ ಸಭೆಯಿಂದ ಚುನಾಯಿತರಾದ ೪ ಮಂದಿ ಸದಸ್ಯರೂ ಜಿಲ್ಲಾ ಪ್ರಾದೇಶಿಕ ಪ್ರಾತಿನಿಧ್ಯವುಳ್ಳ ೪ ಮಂದಿ ಸದಸ್ಯರೂ ಇರುವಂತಾಯಿತು. ನ್ಯಾಯ ವಿಧೇಯಕ ಸಭೆಗೆ ಆಯವ್ಯಯ ಅಂದಾಜಿನ ವಿಷಯದಲ್ಲಿ ಚರ್ಚೆ ನಡೆಸುವುದಕ್ಕೂ ಹಾಗೂ ಆಡಳಿತ ವಿಷಯದಲ್ಲಿ ಪ್ರಶ್ನೆಯನ್ನು ಕೇಳುವುದಕ್ಕೂ ಅಧಿಕಾರವನ್ನು ನೀಡಲಾಯಿತು. ೧೯೧೭ರಿಂದ ಆಯವ್ಯಯ ಅಂದಾಜು ಅಧಿವೇಶನ ಎಂಬ ಹೆಸರಿನಿಂದ ಪ್ರಜಾಪ್ರತಿನಿಧಿ ಸಭೆಯ ಎರಡನೆಯ ಅಧಿವೇಶನ ನಡೆಸಲು ಅನುಮತಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಥಮ ಪ್ರಪಂಚ ಯುದ್ಧ ನಡೆಯುತ್ತಿತ್ತು. ನಾಲ್ವಡಿ ಅವರು ಯುದ್ಧ ಆರಂಭವಾದಾಗಲೇ ತಮ್ಮ ಸೈನ್ಯವನ್ನೆಲ್ಲಾ ಬ್ರಿಟಿಷ್ ಸರ್ಕಾರದ ವಶಕ್ಕೆ ಕೊಟ್ಟಿದ್ದಲ್ಲದೆ, ಯುದ್ಧದ ಖರ್ಚಿಗೆ ೫೦ ಲಕ್ಷ ರೂಪಾಯಿಗಳ ಹಾಗೂ ೨ ಲಕ್ಷ ರೂಪಾಯಿಗಳನ್ನು ಇಂಪೀರಿಯಲ್ ಇಂಡಿಯಾ ರಿಲೀಫ್ ಫಂಡಿಗೂ ನೀಡಿದರು. ಯುದ್ಧ ಕೊನೆಗೊಳ್ಳುವ ವೇಳೆಗೆ ರಾಜ್ಯದ ಪ್ರಜೆಗಳಿಂದ ಸಂಗ್ರಹಿಸಿದ ೩೬ ಲಕ್ಷವನ್ನು ಹಾಗೂ ನಾಲ್ವಡಿ ಅವರು ಇನ್ನೊಮ್ಮೆ ೨೦ ಲಕ್ಷವನ್ನು ಸಲ್ಲಿಸಿದರು. ಮೈಸೂರಿನ ಸೈನಿಕರು ಈಜಿಪ್ಟ್, ಮೆಸಪೋಟೇಮಿಯಾ ಮತ್ತು ಪ್ಯಾಲೆಸ್ಟ್ಯೆನ್‌ಗಳಲ್ಲಿ ಹೋರಾಡಿದರು.

ಯುದ್ಧವು ೧೯೧೮ರ ನವೆಂಬರ್‌ನಲ್ಲಿ ಕೊನೆಗೊಳ್ಳುವ ಕಾಲಕ್ಕೆ ಆಹಾರ ಧಾನ್ಯದ ಕೊರತೆ ಜೊತೆಗೆ ಇನ್‌ಫ್ಲುಯೆಂಜಾ ರೋಗವು ಸಂಸ್ಥಾನದಲ್ಲೆಲ್ಲಾ ಹರಡಿತು. ಇದಕ್ಕೆ ತಕ್ಷಣ ವಿಶ್ವೇಶ್ವರಯ್ಯ ಅವರು ತಮ್ಮ ಎಂದಿನಂತೆ ಪರಿಹಾರ ಕ್ರಮಗಳನ್ನು ಕೈಗೊಂಡರು. ಈ ಕಾರ್ಯಕ್ಕಾಗಿಯೇ ಆಹಾರ ನಿಯಂತ್ರಣಾಧಿಕಾರಿಯೊಬ್ಬರು ನೇಮಕಗೊಂಡರು. ಆಹಾರ ಧಾನ್ಯಗಳ ರಫ್ತನ್ನು ನಿಲ್ಲಿಸಲಾಯಿತು. ಪರಮಾವಧಿ ಚಿಲ್ಲರೆ ಮಾರಾಟದ ಬೆಲೆಯನ್ನು ಗೊತ್ತುಮಾಡಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಯಿತು. ಆಗ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಯೆಂದರೆ, ಅಕ್ಕಿ ರೂಪಾಯಿಗೆ ೩ ಹಾಗೂ ೫ ಸೇರಿನಂತೆಯೂ, ರಾಗಿ ರೂಪಾಯಿಗೆ ೮ ಸೇರಿನಂತೆಯೂ ಮಾರಾಟವಾಯಿತು ಎಂದು ೧೯೧೮ರ ಬ್ಲುಬುಕ್ ಜರ್ನಲ್ ಉಲ್ಲೇಖಿಸುತ್ತದೆ.

ವಿಶ್ವೇಶ್ವರಯ್ಯ ಅವರು ೧೯೧೮ರ ಕೊನೆಗೆ ನಿವೃತ್ತರಾದರು. ಅವರು ಮೈಸೂರು ರಾಜರ ಆಡಳಿತ ಸಂಬಂಧದಿಂದ ದೂರವಾದರೂ ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೨೩ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಮಂಡಲಿಯ ಅಧ್ಯಕ್ಷರಾಗಿ ನೇಮಕಗೊಂಡರು. ಇಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅದಕ್ಕಾಗಿ ಅವರಿಗೆ ಕೊಡಲಾಗಿದ್ದ ಗೌರವ ಸಂಭಾವನೆಯ ಮೊತ್ತ ೨ ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳದೆ ಜಯಚಾಮ ರಾಜೇಂದ್ರ ಔದ್ಯೋಗಿಕ ಸಂಸ್ಥೆಯನ್ನು ಸ್ಥಾಪಿಸಲು ದಾನವಾಗಿ ನೀಡಿದರು. ಅಲ್ಲಿ ಭೋಧನ ವಿಷಯಗಳನ್ನೂ ಅವರೇ ರಚಿಸಿ ಕೊಟ್ಟರು. ಈ ಸಂಸ್ಥೆ ದೇಶದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಪಾಲಿಟೆಕ್ನಿಕ್‌ಗಳಿಗೆ ಮಾದರಿಯಾಗಿದೆ. ಅವರು ಕಾವೇರಿ ನಾಲೆಯ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಸಮಿತಿ ಕೃಷ್ಣರಾಜಸಾಗರದಿಂದ ನೀರನ್ನು ಎತ್ತರವಾದ ನಾಲೆಯ ಮೂಲಕ ಉಪಯೋಗಿಸಲು ಅನುಕೂಲವಾಗುವಂತೆ ತಾಂತ್ರಿಕತೆಯಿಂದ ಕೂಡಿದ ಯೋಜನೆಯನ್ನು ರಚಿಸಿತು. ಅವರ ನಿಪುಣ ಮಾರ್ಗದರ್ಶನದಲ್ಲೇ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ಹೊಸ ಯೋಜನೆಯೂ ಕಾರ್ಯಗತವಾಯಿತು. ೧೯೪೦ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಹಿಂದೂಸ್ಥಾನ ವಿಮಾನ ಕಾರ್ಖಾನೆಗೂ (HAL) ಅವರೇ ಕಾರಣಕರ್ತರು. ೧೯೪೯ರಲ್ಲಿ ಅವರಿಗೆ ೯೦ವರ್ಷ ವಯಸ್ಸಾಗಿದ್ದರೂ ಗ್ರಾಮಾಂತರ ಕೈಗಾರಿಕೆಯ ಯೋಜನೆಯನ್ನು ಆರಂಭಿಸಿ ಅದಕ್ಕೆ ಖಾಸಗಿ ಹಣಕಾಸಿನ ಸಂಸ್ಥೆಯಿಂದ ಆರ್ಥಿಕ ನೆರವನ್ನು ಒದಗಿಸಲು ಪ್ರಯತ್ನಿಸಿದರು.

ಕಾಂತರಾಜು ಅರಸು ಮತ್ತು ಆಲ್ಬಿಯನ್ ಬ್ಯಾನರ್ಜಿ

ವಿಶ್ವೇಶ್ವರಯ್ಯ ಅವರ ನಂತರ ೧೯೧೩ರಿಂದಲೂ ಸಂಸ್ಥಾನದ ಸಲಹಾ ಸಮಿತಿ ಸದಸ್ಯರಾಗಿದ್ದ ಹಾಗೂ ಒಡೆಯರ ಸಂಬಂಧಿಯೂ ಆಗಿದ್ದ ಎಂ. ಕಾಂತರಾಜು ಅರಸರು ದಿವಾನರಾದರು. ಮೈಸೂರಿಗೆ ಸಂಬಂಧಿಸಿದ ಬ್ರಾಹ್ಮಣೇತರ ಚಳುವಳಿಯ ಪರಿಣಾಮವಾಗಿ ಎಂ.ಕಾಂತರಾಜ ಅರಸ್ ಅವರು ೧೯೧೯ರಲ್ಲಿ ದಿವಾನರಾದರು. ಅವರು ಪ್ರಪಂಚದ ಯುದ್ಧದ ಪರಿಣಾಮವಾಗಿ ಸಂಭವಿಸಿದ ಕ್ಲಿಷ್ಟವಾದ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡಬೇಕಾಯಿತು. ಅವರ ಕಾಲದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆ ಉತ್ಪಾದನೆ ಕಾರ್ಯಾರಂಭ ಮಾಡಿತು. ಸರಕಾರಿ ನೌಕರಿಯಲ್ಲಿ ಹಿಂದುಳಿದ ಪಂಗಡದವರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಬೇಕೆಂಬ ಆಜ್ಞೆ ಅವರ ಕಾಲದ ಮುಖ್ಯ ಸಾಧನೆ. ಮಾಧ್ಯಮಿಕ ಶಾಲೆಗಳಲ್ಲಿ ಶುಲ್ಕವನ್ನು ರದ್ದು ಮಾಡಿದ್ದು ಇನ್ನೊಂದು ಮುಖ್ಯ ಸಾಧನೆ. ೧೯೧೨ರಲ್ಲಿ ಚಿಕ್ಕಜಾಜೂರಿನಿಂದ ಚಿತ್ರದುರ್ಗದವರೆಗೆ ೨೧ ಮೈಲಿಗಳ ರೈಲು ಮಾರ್ಗವೂ ಆರಂಭವಾಯಿತು. ಕಾಂತರಾಜ ಅರಸರು ೧೯೨೨ರಲ್ಲಿ ಅಧಿಕಾರದಿಂದ ನಿವೃತ್ತಿ ಹೊಂದಿದರು.

ನಿವೃತ್ತ ಐ.ಸಿ.ಎಸ್. ಅಧಿಕಾರಿಯಾಗಿದ್ದ ಮತ್ತು ಸಂಸ್ಥಾನದ ಆರ್ಥಿಕ ಸಲಹಾಸಮಿತಿಯ ಸದಸ್ಯರಾಗಿದ್ದ ಸರ್ ಆಲ್ಬಿಯನ್ ಬ್ಯಾನರ್ಜಿ ಅವರು ೧೯೨೨ರಲ್ಲಿ ದಿವಾನರಾಗಿ ನೇಮಕವಾದರು. ಅವರ ಆಡಳಿತ ಕಾಲದಲ್ಲಿ ೧೯೨೩ರಲ್ಲಿ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಸಮ್ಮೇಳನ ನಡೆಯಿತು. ಸಮ್ಮೇಳನ ಮಾಡಿದ ಸಲಹೆಗಳಲ್ಲಿ ತಾಲೂಕ ಮಂಡಳಿಗಳನ್ನು ರದ್ದುಪಡಿಸುವುದು, ಗ್ರಾಮ ಪಂಚಾಯತಿಗಳನ್ನು ಶಾಸನಬದ್ಧ ಸಂಸ್ಥೆಗಳನ್ನಾಗಿ ಮಾರ್ಪಡಿಸಿ ಸ್ಥಳೀಯ ತೆರಿಗೆಗಳನ್ನು ವಿಧಿಸುವುದು, ನೈರ್ಮಲ್ಯಕ್ಕೆ ಸಂಬಂಧಸಿದಂತೆ ಕರ್ತವ್ಯಗಳನ್ನು ವಿಧಿಸುವುದಕ್ಕೆ ಸ್ಪಷ್ಟವಾದ ಅಧಿಕಾರ ನೀಡುವುದು, ನಗರ ಮತ್ತು ಟೌನ್ ಪುರ ಸಭೆಗಳಿಗೆ ಅಧ್ಯಕ್ಷರನ್ನು ಚುನಾಯಿಸುವ ಅಧಿಕಾರ ನೀಡುವುದು, ಸ್ತ್ರೀಯರಿಗೆ ಮತದಾನದ ಹಕ್ಕನ್ನು ವಿಸ್ತರಿಸುವುದು ಇತ್ಯಾದ ಆಗಿದ್ದವು. ಈ ಸಲಹೆಗಳನ್ನು ಜಾರಿಗೆ ತರಲಾಯಿತು. ಕೃಷಿ ಸಾಲಕ್ಕಾಗಿಯೇ ಮೈಸೂರು ಹಾಗೂ ಬೆಂಗಳೂರುಗಳಲ್ಲಿ ಅಪೆಕ್ಸ್ ಬ್ಯಾಂಕ್ ಸ್ಥಾಪಿತವಾಯಿತು. ೧೯೨೪ರಲ್ಲಿ ಕಾವೇರಿ ನದಿಯ ಪ್ರವಾಹದ ಹಾವಳಿಯಿಂದ ಅಫಾರ ನಷ್ಟವಾಯಿತು. ಇದಕ್ಕೆ ಸಂಬಂಧಿಸಿದಂತೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಆದರೆ ಅವರ ಆಡಳಿತ ಕಾಲದಲ್ಲಿ ನಡೆದ ಎಲ್ಲಕ್ಕಿಂತ ಮುಖ್ಯವಾದ ಕಾರ್ಯವೆಂದರೆ ರಾಜ್ಯದ ರಾಜಕೀಯ ಸುಧಾರಣೆಗಳನ್ನು ಕುರಿತು ಪರಿಶೀಲಿಸಿ, ಸಲಹೆ ಮಾಡಲು ಮಹಾವಿದ್ವಾಂಸರೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿದ್ದ ಸರ್. ಬ್ರಜೇಂದ್ರನಾಥ್ ಸೀಲ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ಜಾರಿಗೆ ತಂದದ್ದು.

ಸೀಲ್ ಸಮಿತಿ ೧೯೨೩ರ ಮಾರ್ಚ್ ೨೩ರಂದು ತನ್ನ ವರದಿಯನ್ನು ಸರಕಾರಕ್ಕೆ ಒಪ್ಪಿಸಿತು, ಅದರ ಬಗೆಗೆ ಸಾರ್ವಜನಿಕ ಅಭಿಪ್ರಾಯವನ್ನು ತಿಳಿದುಕೊಂಡು ೧೯೨೩ರ ಅಕ್ಟೋಬರ್ ೧೭ರಂದು ಸರ್ಕಾರ ಒಂದು ಸುತ್ತೋಲೆ ಹೊರಡಿಸಲಾಯಿತು. ಇದರನ್ವಯ ಪ್ರಜಾಪ್ರತಿನಿಧಿ ಸಭೆಯು ಪ್ರಥಮ ಬಾರಿಗೆ ಶಾಸನಬದ್ಧ ಸಂಸ್ಥೆಯಾಯಿತು. ಹೊಸ ತೆರಿಗೆಗಳನ್ನು ವಿಧಿಸುವ ಸಲಹೆಗಳನ್ನು ಅವರೊಡನೆ ಸಮಾಲೋಚಿಸಬೇಕಾಯಿತು. ನ್ಯಾಯ ವಿಧೇಯಕ ಸಭೆಯು ಎಲ್ಲ ಮಸೂದೆಗಳ ಸಾಮಾನ್ಯ ನೀತಿಯನ್ನು ಚರ್ಚಿಸುವ ಅಧಿಕಾರವನ್ನು ಪಡೆಯಿತು. ಅದರ ಸದಸ್ಯರ ಸಂಖ್ಯೆ ೨೫೦-೨೭೫ ಎಂದು ನಿರ್ಧಾರವಾಯಿತು. ಮತದಾನದ ಅಧಿಕಾರವೂ ಬಹಳವಾಗಿ ವಿಸ್ತೃತವಾಯಿತು. ೨೫ರೂ. ಭೂ ಕಂದಾಯ ನೀಡುವವರಿಗೂ ಪೌರಸಭೆಗಳಿಗೆ ಮತದಾನದ ಅಧಿಕಾರ ನೀಡಲಾಯಿತು. ೫ರೂ. ಕೊಡುವ ಸ್ತ್ರೀಯರಿಗೂ ಮತದಾನದ ಹಕ್ಕು ದೊರೆಯಿತು. ಸರಕಾರಕ್ಕೆ ಸಲಹೆ ನೀಡಲು ಪ್ರಜಾಪ್ರತಿನಿಧಿ ಸಭೆಯ ಮತ್ತು ನ್ಯಾಯ ವಿಧೇಯಕ ಸಭೆಯ ಸದಸ್ಯರನ್ನುಳ್ಳ ಸ್ಥಾಯಿ ಸಮಿತಿಗಳು ರೂಪುಗೊಂಡವು. ಉಭಯ ಸಭೆಗಳಲ್ಲೂ ಕಾರ್ಮಿಕ ವರ್ಗಕ್ಕೆ ಒಂದೊಂದು ಸ್ಥಾನವೂ ಶಿಕ್ಷಣ-ಯೋಜನೆ-ಗಣಿಗಳು-ವಾಣಿಜ್ಯ ಮತ್ತು ವ್ಯಾಪಾರ ಕ್ಷೇತ್ರದ ಗಣ್ಯರಿಗೆ ವಿಶೇಷ ಪ್ರಾತಿನಿಧ್ಯವನ್ನೂ ನೀಡಲಾಯಿತು. ಅಲ್ಪಸಂಖ್ಯಾತ ವರ್ಗದವರೆನಿಸಿಕೊಂಡಿದ್ದ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಳಿದ ವರ್ಗಗಳಿಗೆ ೩೫ ಸ್ಥಾನಗಳು ಮೀಸಲಾದವು. ಬ್ರಜೇಂದ್ರನಾಥ್ ಸೀಲ್ ಸಮಿತಿಯ ಸಿಫಾರಿಸಿನಂತೆ ಕಡೆಯ ಪಕ್ಷ ೧೫೦ ಮಂದಿ ಸದಸ್ಯರು ಗ್ರಾಮಾಂತರ ಪ್ರದೇಶಗಳಿಂದ ಚುನಾಯಿತರಾಗಬೇಕಾಯಿತು.

ನ್ಯಾಯ ವಿಧೇಯಕ ಸಭೆಯ ಸದಸ್ಯತ್ವವು ಕಾರ್ಯ ನಿರ್ವಹಿಸುತ್ತಿರುವ ಸದಸ್ಯರನ್ನು ಹೊರತುಪಡಿಸಿ ಮಿಕ್ಕಂತೆ ೫೦ಕ್ಕೆ ಏರಿಸಲಾಯಿತು. ಅದಕ್ಕೆ ಶೇಕಡ ಕಡಿಮೆಯಿಲ್ಲದಂತೆ ಖಾಸಗಿಯವರೂ ೧೩ಕ್ಕೆ ಮೀರದಂತೆ ನಾಮಕರಣ ಹೊಂದಿದ ಸದಸ್ಯರೂ ಇರಬೇಕಾಯಿತು. ಪ್ರಜಾಪ್ರತಿನಿಧಿ ಸಭೆಯಿಂದ ೮ ಮಂದಿಯೂ, ಜಿಲ್ಲಾ ಕೇಂದ್ರಗಳಿಂದ ೮ ಮಂದಿಯೂ, ಬೆಂಗಳೂರು ಮತ್ತು ಮೈಸೂರು ಪ್ರದೇಶಗಳಿಂದ ತಲಾ ಒಂದು ಮತ್ತು ವಿಶೇಷ ಉದ್ಧೇಶಗಳನ್ನು ಪ್ರತಿನಿಧಿಸಲು ೪ ಸ್ಥಾನಗಳೂ ಹಾಗೂ ೨ ಮುಸ್ಲಿಂ ಸದಸ್ಯರೂ ಒಬ್ಬ ಕ್ರೈಸ್ತನೂ ಮತ್ತು ಒಬ್ಬ ದಲಿತ ವರ್ಗದ ಪ್ರತಿನಿಧಿಯೂ ಇರುವಂತೆ ನಿಯಮ ರೂಪಿಸಲಾಯಿತು.

ಸುಧಾರಿತವಾದ ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧೇಯಕ ಸಭೆಗಳ ಸಂಯುಕ್ತ ಅಧಿವೇಶನವನ್ನು ೧೯೨೪ರ ಮಾರ್ಚ್ ೧೭ರಂದು ನಾಲ್ವಡಿ ಅವರು ಉದ್ಘಾಟನೆ ಮಾಡಿದರು. ಹೊಸ ಚುನಾಯಿತ ಪ್ರಜಾಪ್ರತಿನಿಧಿ ಸಭೆಯಲ್ಲಿ ಧುರೀಣರೆನಿಸಿದ ಎಂ. ಕೃಷ್ಣಯ್ಯ, ಸಿ. ಶ್ರೀನಿವಾಸರಾವ್, ಕರಣಿಕ ಕೃಷ್ಣಮೂರ್ತಿ ಮತ್ತು ಬಿ. ನರಸಿಂಗರಾವ್ ಅವರು. ಇವರಿಗೆ ಸಹಾಯಕರಾಗಿ ಹೊಸಕೊಪ್ಪ ಕೃಷ್ಣರಾವ್, ಜಿ. ಪರಮಶಿವಯ್ಯ ಮತ್ತು ಡಿ.ಎಸ್. ಮಲ್ಲಪ್ಪ ಮೊದಲಾದ ಯುವಕರೂ ಆಯ್ಕೆಯಾದರು. ನ್ಯಾಯವಿಧೇಯಕ ಸಭೆಯಲ್ಲಿ ವೃತ್ತಪತ್ರಿಕಾ ಲೇಖಕರಾದ ಸರ್. ಕೆ.ಪಿ. ಪುಟ್ಟಣ್ಣಚೆಟ್ಟಿ, ಬಿ.ಕೆ ಗರುಡಾಚಾರ್, ಡಿ. ವೆಂಕಟರಾಮಯ್ಯ, ರಾವ್ ಬಹದ್ದೂರ್, ಎನ್.ಎಸ್. ನಂಜುಂಡಯ್ಯ, ಎಸ್. ವೆಂಕಟೇಶಯ್ಯ ಇವರು ಇದ್ದರು. ಈ ಹೊಸ ಸುಧಾರಣೆಗಳು ರಾಜ್ಯದ ಜಾಗೃತ ಸಾರ್ವಜನಿಕಾಭಿಪ್ರಾಯವನ್ನು ತೃಪ್ತಿಗೊಳಿಸಲು ವಿಫಲವಾದವು ಎಂಬುದಕ್ಕೆ ನಿದರ್ಶನವಾಗಿ ಜವಾಬ್ದಾರಿ ಸರ್ಕಾರದತ್ತ ಮೈಸೂರು ಹೋರಾಟದ ಸಂದರ್ಭದಲ್ಲಿ ಕಂಡುಬರುತ್ತದೆ. ಒಂದರ್ಥದಲ್ಲಿ ಬ್ರಿಟಿಷ್ ಭಾರತದ ರಾಜಕೀಯ ಆಂದೋಲನ ಈ ಭಾವನೆಗಳಿಗೆ ಪ್ರಚೋದಕವಾಗಿದ್ದಿತ್ತು.

ಮಿರ್ಜಾ ಇಸ್ಮಾಯಿಲ್

೧೯೨೬ರಲ್ಲಿ ಆಲ್ಬಿಯನ್ ಬ್ಯಾನರ್ಜಿ ಅವರು ನಿವೃತ್ತರಾದ ಮೇಲೆ ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾದರು. ಅವರು ನಾಲ್ವಡಿ ಕೃಷ್ಣರಾಜರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಇದರಿಂದಾಗಿ ನಾಲ್ವಡಿ ಅವರ ಪೂರ್ಣ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರು ೧೫ ವರ್ಷಗಳು ದಿವಾನರಾಗಿದ್ದ ಕಾಲ ಮೈಸೂರು ಸಂಸ್ಥಾನದ ರಾಜಕೀಯ ಮಹತ್ದದ ಘಟನೆಗಳಿಂದ ಕೂಡಿದ್ದಿತು. ಅವರು ಹಿಂದಿನ ದಿವಾನರು ಹಾಕಿದ ಅಭಿವೃದ್ಧಿ ತಳಹದಿಯ ಮೇಲೆ ರಾಜ್ಯದ ಸರ್ವತೋಮುಖ ಬೆಳವಣಿಗೆ ಸಾಧಿಸಲು ಯತ್ನಿಸಿದರು. ಖಾಸಗಿ ಮತ್ತು ಸರಕಾರಿ ಎರಡೂ ಕ್ಷೇತ್ರಗಳಲ್ಲಿಯೂ ಕೈಗಾರಿಕಾಭಿವೃದ್ಧಿಗೆ ಬಹುವಾಗಿ ಶ್ರಮಿಸಿದರು. ಭದ್ರಾತಿಯಲ್ಲಿ ಉಕ್ಕಿನ ಕಾರ್ಖಾನೆ, ಕಾಗದ ಕಾರ್ಖಾನೆ ಮತ್ತು ಸಿಮೆಂಟ್ ಕಾರ್ಖಾನೆಗಳನ್ನು, ಬೆಂಗಳೂರಿನಲ್ಲಿ ಪಿಂಗಾಣಿ ಮತ್ತು ಗಾಜಿನ ಕಾರ್ಖಾನೆಗಳನ್ನು, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳನ್ನು, ಬೆಳಗೊಳದಲ್ಲಿ ರಾಸಯಾನಿಕ ಮತ್ತು ಗೊಬ್ಬರದ ಕಾರ್ಖಾನೆಗಳನ್ನು, ಶಿವಮೊಗ್ಗದಲ್ಲಿ ಬೆಂಕಿಪೆಟ್ಟಿಗೆ ಕಾರ್ಖಾನೆ, ಬೆಂಗಳೂರಿನಲ್ಲಿ ಹಿಂದೂಸ್ತಾನ ವಿಮಾನ ಕಾರ್ಖಾನೆಯನ್ನು ಸ್ಥಾಪಿಸಿದರು. ಗ್ರಾಮ ಕೈಗಾರಿಕೆಗಳನ್ನೂ ಉತ್ತಮ ಪಡಿಸಲು ಶ್ರಮಿಸಿದರು. ಮಹಾತ್ಮ ಗಾಂಧೀಜಿ ಅವರ ಆಪ್ತರಾಗಿದ್ದ ಇವರು ಅವರ ಸಲಹೆಯಂತೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಬದನವಾಳದಲ್ಲಿ ಖಾದೀ ಉತ್ಪನ್ನ ಕೇಂದ್ರವನ್ನು ಸ್ಥಾಪಿಸಿ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ಸಹಾಯ ಮಾಡಿದರು. ಸರಕಾರವೊಂದು ಇಂಥ ಗ್ರಾಮೀಣ ಕೈಗಾರಿಕೆಯನ್ನು ಸ್ಥಾಪಿಸಲು ಅದರಲ್ಲಿಯೂ ರಾಷ್ಟ್ರೀಯ ಚಳುವಳಿಯು ಮಹಾತ್ಮ ಗಾಂಧೀಜಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಾಲದಲ್ಲಿ ಸ್ಥಾಪಿಸಿದ್ದು ಪ್ರಥಮವಾಗಿತ್ತು. ರೇಷ್ಮೆ ಕೈಗಾರಿಕೆಗೆ ಹೆಚ್ಚಿನ ಗಮನ ನೀಡಿದ್ದರ ಫಲವೇ ಮೈಸೂರು ಹಾಗೂ ತಿರಮಕೂಡಲು ನರಸೀಪುರಗಳಲ್ಲಿ ರೇಷ್ಮೆ ಕೈಗಾರಿಕೆಗಳು ಸ್ಥಾಪನೆಗೊಂಡವು. ಕೊಳ್ಳೇಗಾಲ (ಮುಡಿಗುಂಡಂ) ಹಾಗೂ ಸಂತೆ ಮಾರನ ಹಳ್ಳಿಗಳಲ್ಲಿ ರೇಷ್ಮೆ ಮಾರುಕಟ್ಟೆಗಳು ಪ್ರಾರಂಭವಾದವು. ಮೈಸೂರಿನ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಪಡೆಯುವ ಸಲುವಾಗಿ ಲಂಡನ್ನಿನಲ್ಲಿ ಸಂಸ್ಥಾನದ ಹಿರಿಯ ವ್ಯಕ್ತಿಯನ್ನು ಟ್ರೇಡ್ ಕಮೀಷನರನ್ನಾಗಿ ನೇಮಿಸಿದರು. ವ್ಯವಸಾಯ ಉತ್ಪನ್ನವನ್ನು ಹೆಚ್ಚಿಸಲು ಜನಪರ ಕಾರ್ಯ ಕೈಗೊಂಡುದುದಲ್ಲದೆ, ಒಣ ಪ್ರದೇಶಗಳಾದ ಮಂಡ್ಯ, ಮಳವಳ್ಳಿ, ಮತ್ತು ಟೀ ನರಸೀಪುರ ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಲು ಕೃಷ್ಣರಾಜ ಸಾಗರದಿಂದ ೯೧೩೮ ಅಡಿ ಉದ್ದದ ಸುರಂಗವುಳ್ಳ ಹೈ ಲೆವಲ್ ಕಾಲುವೆ ನಿರ್ಮಾಣವಾಯಿತು. ಅವರ ಆಡಳಿತ ಕಾಲದಲ್ಲಿ ೧,೨೦,೦೦೦ ಎಕರೆ ಭೂಮಿ ನೀರಾವರಿ ಕೃಷಿಗೆ ಅಳವಡಿಸಲಾಗಿತ್ತು.

ನಾಲ್ವಡಿ ಕೃಷ್ಣರಾಜರಿಗೆ ಕಾರ್ಯದರ್ಶಿಯಾಗಿದ್ದಾಗ ಮೈಸೂರಿನಲ್ಲೇ ವಾಸವಾಗಿದ್ದುದರಿಂದ ಮಿರ್ಜಾ ಅವರು ಮೈಸೂರು ನಗರವನ್ನು ಉದ್ಯಾನವನಗಳು, ಸಾಲು ಮರಗಳಿಂದ ಕೂಡಿದ ದೊಡ್ಡ ರಸ್ತೆಗಳು, ಪಾದಚಾರಿ ರಸ್ತೆಗಳು, ದೀಪರಂಜಿತ ಚೌಕಗಳಿಂದ ಕಂಗೊಳಿಸುವಂತೆ ಮಾಡಿದರು. ನಗರ ನಿರ್ಮಾಣ ಹಾಗೂ ಸೌಂದರ್ಯಾಭಿರುಚಿ ಅವರಿಗೆ ಹೆಚ್ಚಾಗಿತ್ತು. ಬೆಂಗಳೂರು ನಗರ ಹಾಗೂ ಇತರೆ ಅನೇಕ ಪಟ್ಟಣ, ಗ್ರಾಮಗಳೂ ಸಹ ಉತ್ತಮವಾಧ ರಸ್ತೆ-ದೀಪಗಳಿಂದ ಕೂಡಿದ ಚೌಕಗಳು, ನೈರ್ಮಲ್ಯ ಸೌಲಭ್ಯ ಇತ್ಯಾಧಿಗಳನ್ನೆಲ್ಲ ಹೊಂದಿದವು. ಮಿರ್ಜಾ ಅವರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜನ ಮುಖಂಡರ ವೈಯುಕ್ತಿಕ ಸಂಬಂಧವನ್ನು ಗಳಿಸಿಕೊಂಡುದುದಲ್ಲದೆ, ಆಸ್ಪತ್ರೆಗಳು, ಪ್ರಸೂತಿ ಆಲಯಗಳು, ಶಾಲಾ ಕಟ್ಟಡ ಇವುಗಳಿಗೆಲ್ಲ ಹೆಚ್ಚಿನ ಅನದಾನ ದೊರೆಯುವಂತೆ ಮಾಡಿದರು. ರಾಜ್ಯದಲ್ಲಿ ಇಂದು ಪ್ರವಾಸಿಗರಿಗೆ ಅತ್ಯಂತ ಜಗತ್ಪ್ರಸಿದ್ಧ ಬೃಂದಾವನ (KRS) ಉದ್ಯಾನವನ್ನು ಕೃಷ್ಣರಾಜ ಸಾಗರ ಜಲಾಶಯದ ಹಿಂಬದಿಯಲ್ಲಿ ನಿರ್ಮಿಸಲು ಮಿರ್ಜಾ ಅವರೇ ಕಾರಣಕರ್ತರು. ಗಾಂಧೀ ಅವರ ಬಗೆಗೆ ಗೌರವ ಮತ್ತು ವಿಶ್ವಾಸಗಳಿದ್ದವು. ೧೯೨೭ರಲ್ಲಿ ಅವರನ್ನು ಸಂಸ್ಥಾನಕ್ಕೆ ಆಹ್ವಾನಿಸಿ ಕೆಲ ಕಾಲ ಆರೋಗ್ಯ ಸುಧಾರಣೆಯ ಸಲುವಾಗಿ ನಂದಿ ಬೆಟ್ಟದಲ್ಲಿ ತಂಗುವಂತೆ ಮಾಡಿದರು.

ಕೇಂದ್ರ ವಸಾಹತುಶಾಹಿ ಸರ್ಕಾರದ ವೈಸ್‌ರಾಯ್ ಲಾರ್ಡ್ ಇರ‍್ವಿನ್ ೧೯೨೭ರಲ್ಲಿ ರಾಜ್ಯಕ್ಕೆ ಭೇಟಿ ನೀಡಿದರು. ಇವರನ್ನು ಮನವೊಲಿಸಿದ ಮಿರ್ಜಾ ಅವರು ೧೮೯೬ರಿಂದ ಸಲ್ಲಿಸುತ್ತಾ ಬಂದಿದ್ದ ೩೫ ಲಕ್ಷ ರೂ. ಪೊಗದಿಯಲ್ಲಿ ೧೦.೫ ಲಕ್ಷವನ್ನು ಕಡಿಮೆ ಮಾಡುವಂತೆ ಮಾಡಿದರು. ಇದಕ್ಕೆ ಪ್ರಮುಖ ಕಾರಣ ಸಂಸ್ಥಾನದಲ್ಲಿ ಜನಪರವಾಗಿ ನಡೆಯುತ್ತಿದ್ದಂತಹ ಕಾರ್ಯಕ್ರಮ ಆಧಾರವಾಗಿದ್ದವು. ೧೯೨೮ರಲ್ಲಿ ಕೃಷ್ಣರಾಜ ಒಡೆಯರ ರಜತ ಮಹೋತ್ಸವ ಸಮಾರಂಭವು ರಾಜ್ಯದಾದ್ಯಂತ ಅತ್ಯಂತ ಉತ್ಸಾಹದಿಂದ ನಡೆಯಿತು. ಅದರ ಜ್ಞಾಪಕಾರ್ಥವಾಗಿ ಅನೇಕ ಕಡೆ ಆಸ್ಪತ್ರೆಗಳು, ದೇವಾಲಯಗಳು, ವಾಚನಾಲಯಗಳು, ಸ್ಮಾರಕಗಳು ನಿರ್ಮಾಣವಾದವು. ಈ ಸಮಾರಂಭದ ನೆನಪಿಗಾಗಿ ಮೈಸೂರಿನಲ್ಲಿ ‘ದೊಡ್ಡ ಗಡಿಯಾರ’ ಎಂದು ಕರೆಸಿ ಕೊಳ್ಳುವ ಸಿಲ್ವರ್ ಜ್ಯೂಬಿಲಿ ಗೋಪುರ ನಿರ್ಮಾಣವಾಯಿತು.

ಭಾರತದ ರಾಷ್ಟ್ರೀಯ ಚಳುವಳಿಯ ಪ್ರಮುಖವಾದ ಕಾಲಘಟ್ಟ ಎಂದು ಗುರುತಿಸಿಕೊಂಡಿರುವುದು ೧೯೩೦, ೩೧, ೩೨. ಈ ಮೂರು ವರ್ಷಗಳು ನಡೆದ ಮೂರು ದುಂಡು ಮೇಜಿನ ಸಮ್ಮೇಳನಗಳು ಲಂಡನ್ನಲ್ಲಿ ನಡೆದ ಈ ಸಭೆಗೆ ದೇಶ-ವಿದೇಶದ ರಾಜಕೀಯ ತಜ್ಞರು ಭಾಗವಹಿಸಿದ್ದರು. ಮಿರ್ಜಾ ಇಸ್ಮಾಯಿಲ್ ಅವರು ಲಂಡನ್ನಿನಲ್ಲಿ ೧೯೩೧-೩೨ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದ ದಕ್ಷಿಣ ಭಾರತದ ದೇಶೀ ರಾಜ್ಯಗಳ ಪ್ರತಿನಿಧಿಯಾಗಿ ನಾಮಕರಣಗೊಂಡು ಭಾಗವಹಿಸಿದ್ದರು. ಇಲ್ಲಿ ರಾಜ್ಯ ಘಟನೆಯಲ್ಲಿ ದೇಶಿ ಸಂಸ್ಥಾನಗಳ ಮತ್ತು ಬ್ರಿಟಿಷ್ ಪ್ರಾಂತಗಳ ಸಂಯುಕ್ತ ವ್ಯವಸ್ಥೆಯ ಅಭಿಪ್ರಾಯವನ್ನು ಸ್ಪಷ್ಟೀಕರಿಸಿದರು.

ಮಿರ್ಜಾ ಇಸ್ಮಾಯಿಲ್ ಹಾಗೂ ಅವರ ಸರಕಾರ ಆಡಳಿತದ ಆರಂಭದಿಂದಲೇ ಮೈಸೂರಿನ ಮೂಲಭೂತವಾದಿಗಳ ಪಟ್ಟಭದ್ರಹಿತಾಸಕ್ತಿಗಳ ಹಾಗೂ ಬಂಡವಾಳಶಾಹಿ ಅಸುಂತುಷ್ಟಿಯನ್ನೂ ಹಾಗೂ ಟೀಕೆಗಳನ್ನೂ ಎದುರಿಸಬೇಕಾಯಿತು. ಭಾರತದಲ್ಲಿ ನಡೆದ ಸೈಮನ್ ಬಹಿಷ್ಕಾರ ೧೯೨೭, ಲಾಹೋರ್‌ಕಾಂಗ್ರೆಸ್‌ನ ಸಂಪೂರ್ಣ ಸ್ವಾತಂತ್ರ‍್ಯ ನಿರ್ಧಾರ ೧೯೨೯, ಉಪ್ಪಿನ ಸತ್ಯಾಗ್ರಹ ೧೯೩೦, ಇತ್ಯಾದಿ ಘಟನೆಗಳಿಂದಲೂ ಹಾಗೂ ೧೯೩೫ರ ಭಾರತ ಸರಕಾರ ನಿಬಂಧನೆಯ ಪ್ರಕಾರ ಪ್ರಾಂತೀಯ ಸ್ವಾಯುತ್ತತೆ ದೊರೆತುದರಿಂದಲೂ ಭಾರತದ ದೇಶಿ ರಾಜ್ಯಗಳ ಸಂಸ್ಥೆಯ ಸ್ಥಾಪನೆ, ಮೈಸೂರಿನ ಸಾರ್ವಜನಿಕ ಅಭಿಪ್ರಾಯ ಹೆಚ್ಚು ಉಚ್ಚಾರವಾಗುವಂತಾಯಿತು. ಭಾರತದಲ್ಲಿ ವೇಗಗತಿಯಿಂದ ಸಾಗುತ್ತಿದ್ದ ಘಟನೆಗಳು ಮೈಸೂರಿನಲ್ಲಿಯೂ ಪ್ರತಿಕ್ರಿಯಿಸದೆ ಇರಲಿಲ್ಲ. ಇಲ್ಲಿಯವರೆಗೆ ಪ್ರಜಾಪ್ರತಿಧಿ ಸಭೆ ಮತ್ತು ನ್ಯಾಯ ವಿಧೇಯಕ ಸಭೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳಿಗೆಲ್ಲ ಹಿಂದುಳಿದ ಜನಾಂಗಗಳಿಗೆ ಸರಕಾರಿ ಕೆಲಸ ನೀಡುವ ಬಗೆಗೆ ನ್ಯಾಯವನ್ನು ದೊರಕಿಸಿಕೊಳ್ಳಬೇಕೆಂಬುದೇ ಆಗಿರುತ್ತಿತ್ತು. ಆದರೆ ಮೈಸೂರಿನ ವೃತ್ತ ಪತ್ರಿಕಾ ಲೇಖಕರು ಬೇಗನೆ ರಾಜ್ಯಘಟನೆಯ ದೊಡ್ಡ ಸಮಸ್ಯೆಗಳ ಕಡೆಗೆ ಗಮನವನ್ನು ಹರಿಸಿದರು.೧೯೨೮ರಲ್ಲಿ ಬೆಂಗಳೂರು ನಗರದ ಮಧ್ಯಭಾಗದಲ್ಲಿರುವ ಮಾಧ್ಯಮಿಕ ಶಾಲೆಯ ಆವರಣವೊಂದರಲ್ಲಿದ್ದ ಗಣಪತಿ ವಿಗ್ರಹವನ್ನು ಕೆಲವು ಸ್ಥಳೀಯ ಮುಸ್ಲಿಮರ ಕೋರಿಕೆಯ ಪ್ರಕಾರ ಸರ್ಕಾರಿ ಅಧಿಕಾರಿಗಳು ತೆಗೆದು ಹಾಕಿದರೆಂಬ ಆಪಾದನೆಯಿಂದ ಗಣಪತಿ ಗಲಭೆಯ ದುರಂತ ನಡೆಯಿತು. ಇದು ಸಂಸ್ಥಾನದಲ್ಲಿ ದೊಡ್ಡ ಪ್ರಮಾಣದ ಕೋಮು ಚಳುವಳಿಯ ಕಿಚ್ಚನ್ನು ಹಬ್ಬಿಸಿತು. ಪೂರ್ಣ ಸ್ವಾತಂತ್ರ್ಯ ಘೋಷಣೆ ಮಾಡಿ, ಧ್ವಜಾರೋಹಣ ಸಮಾರಂಭಗಳನ್ನು ದೆಹಲಿಯಲ್ಲಿ ನಡೆಸಿದಂತೆ, ರಾಜ್ಯದಲ್ಲಿಯೂ ನಡೆದವು. ಆದರೆ ಮೈಸೂರು ಸರಕಾರ ಇದಕ್ಕೆ ಅನುಮತಿ ನೀಡುತ್ತಿರಲಿಲ್ಲ. ಇದೆಲ್ಲದರ ಪರಿಣಾಮವಾಗಿ ಸರ್ಕಾರಕ್ಕೂ ಪ್ರಜೆಗಳಿಗೂ ನಡುವೆ ಉದ್ವೇಗದ ಸನ್ನಿವೇಶಗಳು ಕಂಡು ಬಂದಿತ್ತು ಈ ಘಟನೆಯವರೆವಿಗೂ ಬ್ರಾಹ್ಮಣೇತರ ಮುಖಂಡರು, ಸಾಮಾನ್ಯವಾಗಿ ಸರ್ಕಾರದ ವಿಷಯದಲ್ಲಿ ವಿಧೇಯತೆ ಹಾಗೂ ಸೌಮ್ಯದಿಂದ ನಡೆದುಕೊಳ್ಳುತ್ತಿದ್ದರು. ಆದರೆ ೧೯೨೭ರ ಚುನಾವಣೆಗಳಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಆರಿಸಿ ಬಂದಿದ್ದ ಬ್ರಾಹ್ಮಣೇತರ ಮುಖಂಡರಾದ ಟಿ. ಸಿದ್ದಲಿಂಗಯ್ಯ, ಎಚ್.ಸಿ. ದಾಸಪ್ಪ, ಕೆ.ಸಿ ರೆಡ್ಡಿ ಮತ್ತು ಡಿ.ಎಚ್. ಚಂದ್ರಶೇಖರಯ್ಯ ಮೊದಲಾದವರು ಸರಕಾರವನ್ನು ಟೀಕೆಗೆ ಗುರಿ ಮಾಡಿದರು. ಗಣಪತಿ ಗಲಭೆಗಳ ಸಂದರ್ಭದಲ್ಲಿ ಕೆಲವರ ಬಂಧನಗಳೂ ಆದವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೨೯ರಲ್ಲಿ ಎಂದು ‘ಬದುಕು-ಮೆಲಕು’ ಎಂಬ ತಮ್ಮ ಆತ್ಮ ಚರಿತ್ರೆಯಲ್ಲಿ ಕೆ.ವಿ. ಶಂಕರೇಗೌಡರು ಉಲ್ಲೇಖಿಸುತ್ತಾರೆ.

ಇಂತಹ ರಾಜಕೀಯದ ಧ್ರುವೀಕರಣದ ಸಂದರ್ಭ (೧೯೨೮)ದಲ್ಲಿ ಸರಕಾರ ಸಲಹಾ ಸಮಿತಿಯ ನಿವೃತ್ತ ಸದಸ್ಯರಾಗಿದ್ದ ಕೆ.ಆರ್. ಶ್ರೀನಿವಾಸ ಅಯ್ಯಂಗಾರ್ಯರ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಿ, ರಾಜಕೀಯ ಸುಧಾರಣೆಗಾಗಿ ಸಲಹೆ ಮಾಡಲು ಸೂಚಿಸಲಾಯಿತು. ಆ ವೇಳೆಗಾಗಲೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನಿಂದ ನೇರ ಸಂಪರ್ಕವಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದ ಮೈಸೂರು ರಾಜ್ಯ ಕಾಂಗ್ರೆಸ್ ಸದಸ್ಯರು ಸಮಿತಿಗೆ ನಿರ್ಲಕ್ಷ್ಯ ಭಾವ ತೋರಿಸಿದ್ದಲ್ಲದೆ, ಸತ್ಯಾಗ್ರಹವನ್ನೂ ಅಚರಿಸಿ ಬಂಧಿತರಾದರು. ಸಮಿತಿಯ ಶಿಫಾರಸುಗಳು ಕಾಂಗ್ರೇಸಿನ ನಿರೀಕ್ಷಿತ ಆಶೋತ್ತರಗಳನ್ನು ಈಡೇರಿಸುವಂತಿರಲಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಚರ್ಚಿಸು ಅವಶ್ಯಕತೆ ಇರುವುದಿಲ್ಲವೆನ್ನಿಸುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರು ೧೯೪೦ರ ಆಗಸ್ಟ್ ತಿಂಗಳಲ್ಲಿ ಮರಣ ಹೊಂದಿದರು. ಅವರ ಆಡಳಿತ ಧೀರ್ಘಕಾಲದ್ದಾಗಿಯೂ ಸಮಾಜಮುಖಿ ಪ್ರಗತಿ ಹಾಗೂ ಅಭಿವೃದ್ಧಿ ಪರವಾಗಿ ಇದ್ದಿತು ಎಂಬುವುದಕ್ಕೆ ಇಲ್ಲಿನ ಅಧ್ಯಯನವೇ ಸಾಕ್ಷಿ ಯಾಗಿದೆ. ಅವರು ಧಾರ್ಮಿಕ ಸ್ವಭಾವದಿಂದ ಕೂಡಿದವರಾಗಿದ್ದರು. ಅವರಲ್ಲಿ ಸಾಂಸ್ಕೃತಿಕ ಅಭಿರುಚಿ ಗಾಢವಾಗಿತ್ತು. ಅವರು ಪ್ರಾಚೀನ ಕಾಲದ ರಾಜ ಮಹಾರಾಜರ ನೆನಪನ್ನು ತರುವಂತೆ ಸಾರ್ವಜನಿಕ ಮಾನಸದಲ್ಲಿ ಚಿರಂತನ ಸ್ಥಾನ ಪಡೆದಿದ್ದಾರೆ. ಸರ್ ಮಿರ್ಜಾ ಅವರು ೧೯೪೧ರ ಮೇ ತಿಂಗಳವರೆಗೂ ಅಧಿಕಾರದಲ್ಲಿದ್ದು ನಂತರ ನಿವೃತ್ತರಾದರು. ನಂತರ ಸಲಹಾ ಸಮಿತಿ ಸದಸ್ಯರಾಗಿದ್ದ ಮಾಧವರಾಯರು ದಿವಾನರಾದರು.

ದ್ವಿತೀಯ ಪ್ರಪಂಚ ಯುದ್ಧವು ೧೯೩೯-೪೫ರ ವರೆಗೆ ನಡೆಯಿತು. ಅದು ರಾಜ್ಯದ ಅರ್ಥವ್ಯವಸ್ಥೆಯನ್ನು ಬಹಳವಾಗಿ ಅಲ್ಲೋಲ ಕಲ್ಲೋಲ ಮಾಡಿತು. ಇತರ ಕಡೆಗಳಂತೆಯೇ ಮೈಸೂರಿನಲ್ಲಿಯೂ ಆಹಾರದ ಅಭಾವ ತಲೆದೋರಿತ್ತು. ಹೊಸ ದಿವಾನರು ರಾಜ್ಯದ ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಸರಿತೂಗಿಸಿದರು. ಇದಕ್ಕಾಗಿ ದಿವಾನರು ಕೆ.ಆರ್. ಶ್ರೀನಿವಾಸ ಅಯ್ಯಂಗಾರರ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತಂದರು. ಈ ಸಮಿತಿಯ ಮುಖ್ಯಾಂಶಗಳು ಹೀಗಿದ್ದವು. ಪ್ರಜಾಪ್ರತಿನಿಧಿಯ ಸಂಖ್ಯೆ ೩೧೫ಕ್ಕೆ ಏರಿಸುವುದು. ಅದರಲ್ಲಿ ಮುಸ್ಲಿಮರಿಗೆ ೨೬ ಸ್ಥಾನಗಳು, ಹಿಂದುಳಿದ ವರ್ಗಗಳಿಗೆ ೨೬ ಸ್ಥಾನಗಳು, ಭಾರತೀಯ ಕ್ರೈಸ್ತರಿಗೆ ೫ ಸ್ಥಾನಗಳು, ಐರೋಪ್ಯರಿಗೆ ೧, ವಿಶೇಷ ಹಿತ ಪ್ರಾತಿನಿಧ್ಯಕ್ಕೆ ೨೮, ಸ್ತ್ರೀಯರಿಗೆ ೧೧ ಸ್ಥಾನಗಳು, ಸ್ತ್ರೀಯರ ಮತದಾನದಿಂದಲೇ ಚುನಾಯಿತರಾಗಬೇಕು ಎಂದು ನಿಯಮ ರೂಪಿಸಿದರು. ಸರ್ಕಾರದಿಂದ ನಾಮಕರಣ ಹೊಂದಿದ ಸದಸ್ಯರು ೧೦, ದಿವಾನರೇ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದ ಅಧ್ಯಕ್ಷರಾಗಿ ಮುಂದುವರೆದರು. ನ್ಯಾಯ ವಿಧೇಯಕ ಸಭೆಯ ಸಂಖ್ಯೆ ೬೮ಕ್ಕೆ ಏರಿತು, ಮುಸ್ಲಿಮರಿಗೆ ೪ ಸ್ಥಾನಗಳು, ಹಿಂದುಳಿದ ವರ್ಗಗಳಿಗೆ ೪ ಸ್ಥಾನಗಳು, ಭಾರತೀಯ ಕ್ರೈಸ್ತರಿಗೆ ೧, ಐರೋಪ್ಯರಿಗೆ ೧, ವಿಶೇಷ ಹಿತಗಳ ಪ್ರಾತಿನಿಧ್ಯ ೧೦ರಿಂದ ೧೬. ಅಧಿಕಾರಗಳನ್ನೊಳಗೊಂಡಂತೆ ೨೪ ನಾಮಕರಣ ಸದಸ್ಯರು. ಮೊದಲನೆಯ ಕಾಲಾವಧಿಗೆ ಅಧ್ಯಕ್ಷರು ಮಹಾರಾಜರಿಂದಲೇ ನೇಮಕವಾಗಬೇಕು. ತರುವಾಯ ಸಭೆಯ ಖಾಸಗಿ ಸದಸ್ಯರಿಂದ ಚುನಾಯಿತರಾಗಬೇಕು ಎಂದು ನಿಯಮ ರೂಪಿಸಲಾಯಿತು. ದಿವಾರನ್ನು ಬಿಟ್ಟು ಮೂರು ಮಂದಿ ಅಧಿಕಾರಿ ಸಲಹೆಗಾರರ ಜೊತೆಗೆ ಇಬ್ಬರಿಗೆ ಕಡಿಮೆ ಇಲ್ಲದಂತೆ ಖಾಸಗಿಯವರನ್ನು ಸದಸ್ಯರನ್ನಾಗಿ ನಾಮಕರಣ ಮಾಡುವ ಅವಕಾಶವಾಯಿತು. ಈ ಮಂತ್ರಿಗಳು ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧೇಯಕ ಸಭೆಯ ಚುನಾಯಿತ ಖಾಸಗಿ ಸದಸ್ಯರಾಗಿರಬೇಕು. ಈ ಖಾಸಗಿ ಸಲಹೆಗಾರರು ಅಥವ ಮಂತ್ರಗಳ ಮೇಲೆ ಅವಿಶ್ವಾಸ ನಿರ್ಣಯ ತರುವುದಕ್ಕೆ ಅವಕಾಶವಿರಲಿಲ್ಲ ಎಂಬ ಸರ್ವಾಧಿಕಾರಿ ಮನೋಭಾವದ ಕಾನೂನುಗಳು ಜಾರಿಗೆ ಬಂದವು.

ಹೊಸ ರಾಜ್ಯಾಂಗಕ್ಕೆ ಅನುಗುಣವಾಗಿ ೧೯೪೧ರಲ್ಲಿ ಚುನಾವಣೆಗಳು ನಡೆದವು. ಹಲವಾರು ರಾಜಕೀಯ ಮುಖಂಡರು ಕಾಂಗ್ರೇಸಿನವರೊಂದಿಗೆ ಗುರುತಿಸಿಕೊಂಡಿರುವ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದರಿಂದ ಮತದ ಹಕ್ಕನ್ನು ಕಳೆದುಕೊಂಡಿದ್ದರು. ಅವರಿಗೆ ಚುನಾವಣೆಗಳಲ್ಲಿ ಭಾಗವಹಿಸಲಾಗಲಿಲ್ಲ.

ಈ ರಾಜ್ಯಂಗ ೧೯೧೯ರ ಭಾರತ ಸರಕಾರದ ನಿಬಂಧನೆ ಪ್ರಕಾರ, ಇಜ್ಜೋಡಿ ಅಧಿಕಾರದ ಪ್ರತಿರೂಪದಂತೆ ಭಾಸವಾದರೂ ದಿವಾನರು ಹಾಗೇ ಇಬ್ಬರು ಅಧಿಕಾರೇತರ ಸದಸ್ಯರು ಮತ್ತು ಇಬ್ಬರು ಅಧಿಕಾರಿ ಸದಸ್ಯರು ದಿವಾನ್ ಮಾಧವರಾಯರ ದೂರದೃಷ್ಟಿಯಿಂದ ಒಂದು ತಂಡದಂತೆ ಕೆಲಸ ನಿರ್ವಹಿಸಿ ಎರಡನೇ ಪ್ರಪಂಚ ಯುದ್ಧದ ಪರಿಣಾಮವಾಗಿ, ಭಾರತದ ರಾಜಕೀಯ ಸ್ಥಿತಿಯ ಪರಿಣಾಮವಾಗಿ ಮೈಸೂರಿನಲ್ಲಿ ಉಂಟಾಗಿದ್ದ ಕಷ್ಟ ಪರಿಹರಿಸಲು ಯತ್ನಿಸಿದರು. ಆಗಲೇ ಕಾರ‍್ಯಾರಂಭವಾಗಿದ್ದ ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ವಿದ್ಯುತ್‌ ಅನ್ನು ಉತ್ಪಾದಿಸಲಾಯಿತು. ಇದೇ ಕಾಲದಲ್ಲಿ ಭದ್ರಾಯೋಜನೆ ಕಾರ್ಯಾರಂಭವಾಯಿತು. ೧೯೪೪ರಲ್ಲಿ ಕ್ವಿಟ್‌ಇಂಡಿಯಾ ಚಳುವಳಿಯ ಪರಿಣಾಮವಾಗಿ ಭಾರತದಲ್ಲಿ ಚಳುವಳಿ ಆರಂಭವಾಗಿ ಭಾರತದ ಎಲ್ಲ ಅಗ್ರ ನಾಯಕರನ್ನು ಸೆರೆಯಲ್ಲಿ ಇರಿಸಲಾಯಿತು. ಅದು ೧೯೪೫ರಲ್ಲಿ ಎರಡನೇ ಮಹಾಯುದ್ಧ ಮುಗಿಯುವವರೆಗೂ ಉತ್ತಮಕಾಲ ಬಂದೀತೆಂಬ ನಿರೀಕ್ಷಣೆಯ ಕಾಲವಾಗಿತ್ತು ಎಂಬುದು ಅಂದಿನ ಚಿಂತಕರ ಅಭಿಪ್ರಾಯವಾಗಿತ್ತು.

ಪ್ರಜಾಪ್ರತಿನಿಧಿಗಳ ಮತ್ತು ನ್ಯಾಯ ವಿಧೇಯಕ ಸಭೆಯ ನಾಲ್ಕು ವರ್ಷಗಳ ಅವಧಿ ೧೯೪೫ರಲ್ಲಿ ಮುಗಿಯಿತು. ನಂತರ ಹೊಸ ಚುನಾವಣೆಗಳು ನಡೆದವು. ಎರಡು ಸಭೆಗಳಲ್ಲಿಯೂ ಕಾಂಗ್ರೆಸ್ ಸದಸ್ಯರೇ ಬಹುಮತದಿಂದ ಆರಿಸಿ ಬಂದರು. ಕೆಂಗಲ್ ಹನುಮಂತಯ್ಯ ಅವರು ಪ್ರಜಾಪ್ರತಿನಿಧಿ ಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿಯೂ ಕೆ. ಸಿ. ರೆಡ್ಡಿ ಅವರು ನ್ಯಾಯ ವಿಧೇಯಕ ಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು.

ಇಬ್ಬರೂ ಕರ್ನಾಟಕದ ಪ್ರಬಲ ಕೋಮು ಎನಿಸಿದ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದರು. ಇದರ ಪರಿಣಾಮವಾಗಿ ೪೦ ವರ್ಷಗಳ ಕಾಲ ರಾಜ್ಯಕ್ಕೆ ಬಹುವಿಧವಾಗಿ ಸೇವೆ ಸಲ್ಲಿಸಿದ ಮಾಧವರಾಯರು ೧೯೪೫ರ ಆಗಸ್ಟ್ ತಿಂಗಳಲ್ಲಿ ದಿವಾನ ಹುದ್ದೆಯಿಂದ ನಿವೃತ್ತಿ ಪಡೆದರು. ನಿವೃತ್ತರಾದ ಮೇಲೂ ಅವರು ರಾಜ್ಯಾಂಗ ನಿರ್ಮಾಣ ಸಮಿತಿಯ ಸದಸ್ಯರಾಗಿಯೂ ಅದರ ಕರಡು ರಚನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವುದು ಗಮನಾರ್ಹವಾಗಿದೆ.

ಮೈಸೂರು ಸಂಸ್ಥಾನದ ಕೊನೆಯ ದಿವಾನರು

ವೈಸ್‌ರಾಯರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ೧೯೪೬ರ ಆಗಸ್ಟ್ ತಿಂಗಳಲ್ಲಿ ದಿವಾನರಾಗಿ ನೇಮಕ ಹೊಂದಿದರು. ಬ್ರಿಟನ್ನಿನಲ್ಲಿ ಅಟ್ಲಿಯವರ ಮುಖಂಡತ್ವದಲ್ಲಿ ಹೊಸ ಕಾರ್ಮಿಕ ಸರಕಾರ ಅಧಿಕಾರ ಸ್ವೀಕಾರ ಮಾಡಿತ್ತು. ಈ ಸಮಯದಲ್ಲಿ ತಾರಕಕ್ಕೇರಿದ ಭಾರತದ ರಾಷ್ಟ್ರೀಯ ಚಳವಳಿಯ ಫಲವಾಗಿ ಬ್ರಿಟಿಷ್ ಮಂತ್ರಿಮಂಡಲದ ನಿಯೋಗವೊಂದು ಭಾರತಕ್ಕೆ ಬಂದು ತನ್ನ ಸಲಹೆಗಳನ್ನು ಮುಂದಿಟ್ಟಿತು. ೧೯೪೮ರ ಏಪ್ರಿಲ್‌ನಲ್ಲಿ ಬ್ರಿಟಿಷ್‌ಸರಕಾರ ಭಾರತದಿಂದ ನಿರ್ಗಮಿಸುವುದಾಗಿಯೂ, ದೇಶಿಯ ಸಂಸ್ಥಾನಗಳು ಮುಂದೆ ಬರುವ ಭಾರತ ಸರಕಾರದೊಡನೆ ತಮ್ಮ ಸ್ಥಾನಮಾನಗಳ ಬಗೆಗೆ ಚರ್ಚಿಸಿ ತೀರ್ಮಾನಿಸಿ ಕೈಗೊಳ್ಳಬೇಕೆಂದು ಘೋಷಣೆ ಮಾಡಿತು. ಆರ್ಕಾಟ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆಗಾಗಲೇ ದಿಲ್ಲಿಯಲ್ಲಿ ತಾತ್ಕಾಲಿಕ ಸರಕಾರವು ಪಂಡಿತ್ ಜವಹರಲಾಲ್ ನೆಹರು ಅವರ ಪ್ರಧಾನ ಮಂತ್ರಿತ್ವದಲ್ಲಿ ರಚನೆಯಾಗಿತ್ತು.

ಮೈಸೂರಿನ ರಾಜಕೀಯ ಮುಖಂಡರು ತಕ್ಷಣ ಜವಾಬ್ದಾರಿ ಸರಕಾರ ಸ್ಥಾಪನೆಯ ಬಗೆಗೆ ತವಕಗೊಂಡರು. ಆದರೆ ದಿವಾನರು ಮುಂದಿನ ಹೆಜ್ಜೆ ಏನೆಂದು ಸೂಚಿಸುವ ಬಗೆಗೆ ಆಸಕ್ತಿ ಹೊಂದಿರಲಿಲ್ಲ. ಕಾಂಗ್ರೆಸ್ ಸಮಿತಿಯು ೧೯೪೭ರ ಮೇ ೧ರಂದು ಸತ್ಯಾಗ್ರಹ ಹೂಡುವುದಾಗಿ ನಿರ್ಧಾರ ಮಾಡಿತು. ಜೂನ್ ೩ರಂದು ದಿವಾನರೊಡನೆ ಮಾತುಕತೆ ನಡೆಸಿದ ಪರಿಣಾಮವಾಗಿ ತಾತ್ಕಾಲಿಕವಾಗಿ ಅದು ನಿಂತಿತು. ಲಾರ್ಡ್ ಮೌಂಟ್ ಬೇಟನ್ ಆಗಸ್ಟ್ ೧೫ರಂದು ಸ್ವತಂತ್ರ ಭಾರತದ ವಿಭಜನೆ ಮತ್ತು ರಾಜ್ಯಾಂಗ ನಿರ್ಮಾಣ ಸಭೆಯ ರಚನೆ ಕುರಿತು ನಿರ್ಣಾಯಕ ಘೋಷಣೆ ಹೊರಡಿಸಿದನು. ಮೈಸೂರು ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದುದರಿಂದ ಭಾರತದ ರಾಜ್ಯಾಂಗ ನಿರ್ಮಾಣ ಸಭೆಯಲ್ಲಿ ಮೈಸೂರಿನ ೭ ಮಂದಿ ಪ್ರತಿನಿಧಿಗಳು ಭಾಗವಹಿಸುವುದೆಂದು ದಿವಾನರು ಘೋಷಿಸುವುದಲ್ಲದೆ, ಆ ಏಳರಲ್ಲಿ ಇಬ್ಬರು ಪ್ರಜಾಪ್ರತಿನಿಧಿ ಸಭೆಯಿಂದಲೂ ಮತ್ತಿಬ್ಬರು ನ್ಯಾಯ ವಿಧೇಯಕ ಸಭೆಯಿಂದಲೂ ಚುನಾಯಿತರಾಗುವರೆಂದು ನಿರ್ಧರಿಸಲಾಯಿತು. ದೀವಾನರೊಳಗೊಂಡ ಉಳಿದ ೩ ಮಂದಿಯನ್ನು ಸರಕಾರ ನಾಮಕರಣ ಮಾಡುವುದೆಂದು ತಿಳಿಸಿದರು. ಈ ವಿಧಾನಕ್ಕೆ ಸಂಸ್ಥಾನದಲ್ಲೆಲ್ಲಾ ಉಗ್ರ ಪ್ರತಿಭಟನೆ ವ್ಯಕ್ತವಾದುದಲ್ಲದೆ ಜುಲೈ ೫ರಂದು ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರು ಸಭಾತ್ಯಾಗವನ್ನು ಮಾಡಿದರು. ಆದರೆ ದಿವಾನರು ಇದನ್ನು ಲೆಕ್ಕಿಸದೆ ತಮ್ಮ ದಾರಿಯಲ್ಲೇ ನಡೆದು ಹೋರಾಟಕ್ಕೆ ಮುನ್ನುಡಿ ಬರೆದರು. ಈ ಹೋರಾಟದ ಫಲವಾಗಿ ಭಾರತ ಸರಕಾರ ಬ್ರಿಟಿಷ್ ಆಡಳಿತದ ನಿರ್ಗಮನಕ್ಕೆ ಪೂರ್ವಭಾವಿಕ್ರಮವಾಗಿ ದಂಡಿನ ಪ್ರದೇಶವು ಮಹಾರಾಜರಿಗೆ ಕೊಡಲ್ಪಟ್ಟಿತು. ಇಲ್ಲಿಗೆ ರಾಜಪ್ರಭುತ್ವ ಕೊನೆಗೊಂಡಿತು.

ಅಲ್ಲದೆ ೧೯೪೭ರ ಜುಲೈ ೨೭ರಂದು ರಾಜ್ಯದಲ್ಲಿದ್ದ ವಸಾಹತುಶಾಹಿ ಬ್ರಿಟಿಷ್ ಪ್ರತಿನಿಧಿಯ ಆಡಳಿತವು ಕೊನೆಗೊಂಡಿತು. ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರ ಸ್ಥಾಪನೆ ಮಾಡುವುದಕ್ಕೂ ರಾಜ್ಯಕ್ಕೆ ಪ್ರತ್ಯೇಕ ರಾಜ್ಯಾಂಗ ನಿರ್ಮಾಣ ಮಾಡುವುದಕ್ಕೂ ಮೈಸೂರು ರಾಜ್ಯಾಂಗ ನಿರ್ಮಾಣ ಸಭೆಯೊಂದನ್ನು ರಚನೆ ಮಾಡಬೇಕೆಂದು ಮೈಸೂರು ಕಾಂಗ್ರೆಸ್ ಒತ್ತಾಯ ಮಾಡಿತು. ಅದು ಅರಮನೆ ಸತ್ಯಾಗ್ರಹ ನಡೆಸಬೇಕೆಂದು ೧೯೪೭ರ ಸಪ್ಟೆಂಬರ್ ೧ರಿಂದ ಅರಮನೆಗೆ ಜಾಥಾ ಕೊಂಡೊಯ್ಯಬೇಕೆಂದು ನಿರ್ಧಾರ ಮಾಡಿತು. ಪತ್ರಿಕೆಗಳಲ್ಲಿ ಈ ಸುದ್ಧಿಗಳನ್ನು ಪ್ರತಿಬಂಧಿಸುವುದಕ್ಕೂ ಸರಕಾರ ಸುಗ್ರೀವಾಜ್ಞೆ ಮಾಡಿತು. ಸಪ್ಟೆಂಬರ್ ೧ರಂದು ರಾಜ್ಯದಾದ್ಯಂತ ಮೆರವಣಿಗೆಗಳು ನಡೆದು ಆರ್ಕಾಟ್ ಬೈಕಾಟ್, ಮೈಸೂರು ಚಲೋ ಇತ್ಯಾದಿ ಘೋಷಣೆಗಳು ಕೇಳಿಬಂದವು. ಸೆರಮನೆಗಳೆಲ್ಲ ಜನನಾಯಕರಿಂದ ತುಂಬಿಹೋದವು. ರಾಜ್ಯದ ಹೊರಗಿನವರೂ ಈ ಚಳುವಳಿಯಲ್ಲಿ ಭಾಗವಹಿಸಲು ಬಂದಿದ್ದರು.

ಜಯಚಾಮರಾಜೇಂದ್ರ ಒಡೆಯರ್ ಸಪ್ಟೆಂಬರ್ ೭ರಂದು ಸುತ್ತೋಲೆ ಹೊರಡಿಸಿ, ರಾಜ್ಯದಲ್ಲಿ ಜವಾಬ್ದಾರಿ ಸರಕಾರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಇದರ ನಂತರ ಸಪ್ಟೆಂಬರ್ ೨೪ರಂದು ಮುಂದಿರುವ ರಾಜಕೀಯ ಸುಧಾರಣೆಗಳನ್ನು ವಿವರಿಸುವ ಸುತ್ತೋಲೆ ಹೊರಟಿತು. ಕಾಂಗ್ರೆಸ್ ನಾಯಕರು ಸಪ್ಟೆಂಬರ್ ೭ರಂದು ಬಂಧಮುಕ್ತರಾಗಿ ಮಾತುಕತೆ ನಡೆಸಿದರು. ಅಕ್ಟೋಬರ್ ೧೧ರಂದು ದಿವಾನರಿಗೂ ಮೈಸೂರು ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ರೆಡ್ಡಿ ಅವರಿಗೂ ಮುಂದಿನ ವ್ಯವಸ್ಥೆ ಬಗೆಗೆ ಒಪ್ಪಂದವಾಯಿತು. ಅಕ್ಟೋಬರ್ ೨೪ರಂದು ವಿಶೇಷ ನಿಯಮದ ಪ್ರಕಾರ ಹೊಸ ಸರಕಾರದ ಮಂತ್ರಿ ಸಂಪುಟದ ಸ್ವರೂಪ ಪ್ರಕಟಿಸಿತು. ಅದರಲ್ಲಿ ದಿವಾನರನ್ನು ಬಿಟ್ಟು ೬ ಮಂದಿ ಕಾಂಗ್ರೇಸಿಗರು, ೩ ಮಂದಿ ಕಾಂಗ್ರೇಸೇತರರು ಇದ್ದರು. ಮಂತ್ರಿ ಸಂಪುಟದಲ್ಲಿ ದಿವಾನರ ಮುಂದುವರಿಕೆ ಒಂದು ಅಕ್ರಮವೆಂದು ಭಾವಿಸಲ್ಪಟ್ಟು ಅದರ ರದ್ದತಿಗಾಗಿ ಚಳುವಳಿ ನಡೆಯಿತು. ಇದರ ಫಲವಾಗಿ ೧೯೪೯ನೆಯ ಆಗಸ್ಟ್ ತಿಂಗಳಲ್ಲಿ ದಿವಾನರ ಸ್ಥಾನ ರದ್ದಾಯಿತು. ಈ ವೇಳೆಗೆ ಹಿಂದಿನ ನ್ಯಾಯ ವಿಧೇಯಕ ಸಭೆಯನ್ನು ಪ್ರಜಾಪ್ರತಿನಿಧಿ ಸಭೆಯು ನಾಲ್ಕು ವರ್ಷಗಳ ಕಾಲಾವಧಿ ಕೊನೆಗೊಂಡುದರಿಂದ ಹಿಂದಿನ ಪದ್ಧತಿಯಂತೆಯೇ ಚುನಾವಣೆ ನಡೆದು ಮೈಸೂರಿನ ರಾಜ್ಯಾಂಗ ನಿರ್ಮಾಣ ಸಭೆಯೊಂದು ರೂಪುಗೊಂಡಿತು. ಆದರೆ ಭಾರತ ರಾಜ್ಯಾಂಗ ನಿರ್ಮಾಣ ಸಭೆ ಆಗಲೇ ಕೆಲಸ ಮಾಡುತ್ತಿದ್ದುದರಿಂದ ಮೈಸೂರಿನ ಸಭೆಯು ಸ್ವಲ್ಪಕಾಲದಲ್ಲಿಯೇ ತನ್ನ ಕಾರ್ಯಕಲಾಪವನ್ನು ನಿಲ್ಲಿಸಿತು.

ಮೈಸೂರು ಸಂಸ್ಥಾನ ಪೂರ್ಣವಾಗಿ ಸ್ವತಂತ್ರ ಭಾರತದಲ್ಲಿ ವಿಭಾಗಗೊಂಡಿದ್ದ ‘ಎ’ ಗುಂಪಿನ ರಾಜ್ಯಗಳಲ್ಲಿ ಸೇರಲ್ಪಟ್ಟಿತು. ೧೯೫೦ನೇ ಜನವರಿ ೨೬ರಂದು ಭಾರತದಲ್ಲೆಲ್ಲ ಆಚರಣೆಗೆ ಬಂದ ಭಾರತದ ಗಣರಾಜ್ಯೋತ್ಸವ ಮೈಸೂರಿಗೂ ಅನ್ವಯಿಸಿತು. ಹಿಂದಿನ ತಾತ್ಕಾಲಿಕ ಸರಕಾರ ಮುಕ್ತಾಯವಾಗಿ ಪೂರ್ಣ ಕಾಂಗ್ರೆಸ್ ಮಂತ್ರಿಮಂಡಲವು ಕೆ.ಸಿ. ರೆಡ್ಡಿಯವರ ಮುಖ್ಯಮಂತ್ರಿತ್ವದಲ್ಲಿ ರೂಪುಗೊಂಡಿತು. ಜಯಚಾಮರಾಜ ಒಡೆಯರ್ ಅವರು ಮೈಸೂರು ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡು ರಾಜ್ಯ ಪ್ರಮುಖರಾಗಿ ಮುಂದುವರೆದರು. ಭಾರತದಲ್ಲಿಯೇ ಒಂದೇ ರಾಜ್ಯದವರು ಅದೇ ರಾಜ್ಯದ ರಾಜಪಾಲರಾಗಿದ್ದುದು ಇದೇ ಪ್ರಥಮವಾಗಿದೆ. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರಕಾರದ ಸ್ಥಾಪನೆಗೆ ಮೈಸೂರು ಚಲೋ ಹೋರಾಟ ನಡೆಯಿತು. ಹೋರಾಟವು ಯಶಸ್ವಿಯಾಗಿ ೧೯೪೭ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಯಾಗಿ ಕೆ.ಸಿ. ರೆಡ್ಡಿ ಮತ್ತು ಅವರ ನೇತೃತ್ವದಲ್ಲಿ ಸಚಿವರ ಒಂದು ತಂಡ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಂಡಿತು. ಕೆ.ಸಿ. ರೆಡ್ಡಿ ಅವರ ನಂತರ ಕೆಂಗಲ್ ಹನುಮಂತಯ್ಯ ೧೯೫೨ರ ವರೆಗೆ ಮತ್ತು ಕಡಿದಾಳ್ ಮಂಜಪ್ಪ ೧೯೫೬ರ ವರೆಗೆ ಮುಖ್ಯಮಂತ್ರಿಗಳಾದರು. ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಗೆ ಮೇಲಿನ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಪೂರಕವಾಗುತ್ತವೆ ಹಾಗೂ ವಿಮರ್ಶೆಗೆ ಒಳಪಡಿಸುತ್ತವೆ.