೧೯೩೮ ಜುಲೈ ದಿ ಮೈಸೂರು ಹಿಂದೂ ವಿಡೋ ರೀಮ್ಯಾರೇಜ್ ಆಕ್ಟ್

ಮೈಸೂರು ಸಂಸ್ಥಾನವು ೧೮೯೬ರಲ್ಲಿ ಬಾಲ್ಯವಿವಾಹ ನಿಷೇಧ ಕಾನೂನನ್ನು ಜಾರಿಗೆ ತಂದು ಬಾಲ್ಯ ವಿವಾಹಗಳನ್ನು ನಿಷೇಧಿಸುವುದರ ಮೂಲಕ ಬಾಲವಿಧವೆಯರ ಸಂಖ್ಯೆಯನ್ನು ಕಡಿತಗೊಳಿಸಿತ್ತು. ಇಂದಿನ ಪ್ರಜಾಪ್ರಭುತ್ವ ಸರ್ಕಾರದ ಸಂವಿಧಾನಾತ್ಮಕ ಕಾನೂನುಗಳನ್ನೇ ಲೆಕ್ಕಿಸದೆ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿರುವ ಸನ್ನಿವೇಶದಲ್ಲಿ ಇನ್ನು ಅಲಿಖಿತ ಸಂವಿಧಾನದ ರಾಜಪ್ರಭುತ್ವದಲ್ಲಿ ಇದರ ಪ್ರಭಾವ ಹೆಚ್ಚಾಗಿಯೇ ಇತ್ತು. ವಿಧವೆಯರ ಸ್ಥಿತಿಯಂತೂ ಮಾತುಬಾರದ ಮೂಕ ಪ್ರಾಣಿಗಳಿಗಿಂತ ಹೀನಾಯವಾಗಿತ್ತು. ವಿಧವೆಯರ ಸ್ಥಿತಿಯು ಹಿಂದೂ ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿದ್ದು ಅವರು ಕಷ್ಟದಾಯಕವಾದ ಜೀವನವನ್ನು ನಡೆಸುತ್ತಿದ್ದರೆಂಬುದಕ್ಕೆ ನೂರಾರು ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಈ ಕುರಿತು ಬರೆದಂತಹ ಕಾದಂಬರಿಗಳಿಗೆ. ಚಲನಚಿತ್ರಗಳಗೆ ನಾವು ‘ರಾಷ್ಟ್ರ ಪ್ರಶಸ್ತಿ’ ಯನ್ನು ನೀಡಿ ಗೌರವಿಸುತ್ತಿದ್ದೇವೆ. ಒಂದರ್ಥದಲ್ಲಿ ಬಾಲ್ಯ ವಿವಾಹದ ಹೆಚ್ಚಳ, ಸತಿ ಪದ್ಧತಿಯ ಕಣ್ಮರೆ ಮತ್ತು ವಿಧವೆಯರ ಪುನರ್ವಿವಾಹಕ್ಕೆ ಇದ್ದಂತಹ ಅಡಚಣೆಗಳು ವಿಧವೆಯರ ಸಂಖ್ಯೆಯನ್ನು ಹಾಗೂ ಅವರ ಕಷ್ಟವನ್ನು ಜಾಮಿತಿಯ ಪ್ರಮಾಣದಲ್ಲಿ ಹೆಚ್ಚಿಸುತ್ತಿತ್ತು. ಸಾಮಾನ್ಯ ಶಿಕ್ಷೆಯಾಗಿದ್ದಂತಹ ಆಭರಣ, ಉತ್ತಮ ವಸ್ತ್ರಗಳನ್ನು ಧರಿಸದಂತೆ ನಿರ್ಬಂದಿಸಿದ್ದು ಹಾಗೂ ದಿನಕ್ಕೊಮ್ಮೆ ಊಟ ನೀಡುವುದರ ಜೊತೆಗೆ ಪ್ರಮುಖವಾಗಿ ಅವರ ಇರುವಿಕೆಯನ್ನು ದುರ್ಲಕ್ಷಣವೆಂದು ಭಾವಿಸಿದ್ದು ಹಾಗೂ ತಲೆಯ ಕೂದಲನ್ನು ಬೋಳಿಸುತ್ತಿದ್ದದ್ದು ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಹೀಗೆ ಹಿಂದೂ ಸಂಪ್ರದಾಯಸ್ಥರು ವಿಧವೆಯರನ್ನು ಹೀನ ಸ್ಥಿತಿಯಲ್ಲಿ ಉಳಿಸದ್ದನ್ನು ಗಮನಿಸಿದ ಸಮಾಜ ಸುಧಾರಕರು ವಿಧವೆಯರ ಪುನರ್ವಿವಾಹಕ್ಕೆ ಗಮನ ನೀಡಿದರು. ದಲಿತರು ಹಿಂದೂ ಸಂಪ್ರದಾಯಸ್ಥರ ಸಂಪರ್ಕದಿಂದ ಪ್ರಭಾವಿತರಾಗಿ ಈ ಪದ್ಧತಿಯನ್ನೇ ತಮ್ಮ ಸಮಾಜದಲ್ಲಿಯೂ ಅನುಸರಿಸಿಕೊಂಡು ಬರುತ್ತಿದ್ದರು. ಇದನ್ನು ನಿರ್ಮೂಲನಗೊಳಿಸುವ ದೃಷ್ಟಿಯಿಂದ ೧೯೨೯ರಲ್ಲೆ ಪ್ರಜಾಪ್ರತಿನಿಧಿ ಸಭೆಯಲ್ಲಿ ವಿಧವೆಯರ ಪುನರ್ವಿವಾಹಕ್ಕೆ ಇರುವ ಅಡೆತಡೆಗಳನ್ನು ಕಾನೂನಾತ್ಮಕವಾಗಿ ತೊಲಗಿಸಬೇಕೆಂಬ ಬೇಡಿಕೆ ಬಂದಿತು. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸರ್ಕಾರವು ಹಿಂದೂ ಸಂಪ್ರದಾಯಸ್ಥರು ಮತ್ತು ಧಾರ್ಮಿಕ ಮಠಗಳು ವಿರೋಧಿಸಬಹುದೆಂಬ ಕಾರಣದಿಂದ ಸಾರ್ವಜನಿಕ ಒತ್ತಾಯ ಬರುವವರೆಗೆ ಅಂತಹ ಕಾನೂನನ್ನು ಜಾರಿಗೆ ತರುವ ಅವಶ್ಯಕತೆಯಿಲ್ಲವೆಂದು ವಾದಿಸಿದರು. ೧೯೩೬ರ ಪ್ರಜಾಪ್ರತಿನಿಧಿ ಸಭೆಯು ಹಿಂದೂ ವಿಧವೆಯರ ಪುನರ್ವಿವಾಹಕ್ಕೆ ಸಂಬಂಧಿಸಿದ ಮಸೂದೆಯನ್ನು ಬಹುಮತದಿಂದ ಬೆಂಬಲಿಸಿತು. ಸಾರ್ವಜನಿಕ ಬೇಡಿಕೆಯನ್ನು ಗಮನಿಸಿದ ನಾಲ್ವಡಿ ಅವರು ೧೯೩೮ರ ಜುಲೈ ೭ ರಂದು ‘ದಿ ಮೈಸೂರು ಹಿಂದೂ ವಿಡೋ ರೀ ಮ್ಯಾರೇಜ್ ಆಕ್ಟ್‌’ ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಹಿಂದೂ ವಿಧವೆಯರಿಗೆ ಪುನರ್‌ವಿವಾಹಕ್ಕೆ ಇದ್ದಂತಹ ಅಡಚಣೆಗಳನ್ನು ತೊಲಗಿಸಿ ಹಿಂದೂ ವಿಧವೆಯರ ಪುನರ್ ವಿವಾಹಗಳನ್ನು ಸಂರಕ್ಷಿಸಿತು. ನಾಲ್ವಡಿಯವರು ಜಾರಿಗೆ ತಂದ ವಿಧವಾ ವಿವಾಹ ಕಾನೂನು ಮತ್ತು ಕನ್ಯೆಯರ ವಿವಾಹ ವಯಸ್ಸಿನ ಹೆಚ್ಚಳದ ಕ್ರಮವನ್ನು ಕೈಗೊಂಡಿದ್ದರಿಂದ ವಿಧವೆಯರ ಸಂಖ್ಯೆ ಕಡಿತಗೊಂಡಿತು. ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ವಿಧವೆಯವರ ಮತ್ತು ಹೆಣ್ಣು ಮಕ್ಕಳ ಪುನರುದ್ದಾರಕ್ಕೆ ಕಾನೂನು ಅನೇಕ ರೀತಿಯಲ್ಲಿ ಸಹಾಯಕವಾಯಿತು. ಸರ್ಕಾರದ ವತಿಯಿಂದಲೇ ದೇವರಾಜ ಬಹದ್ದೂರ್ ಫಂಡ್ ಎಂಬುದನ್ನು ಸ್ಥಾಪಿಸಿ ಈ ಹಣದಿಂದ ವಿಧವೆಯರಿಗೆ ಸಹಾಯಕವಾಗಲು ಪ್ರತ್ಯೇಕವಾಗಿ ವಿಡೋ ಹೋಂಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುವ ಪರಿಪಾಠ ಜಾರಿಗೆ ಬಂದಿತ್ತು. ಈ ರೀತಿಯ ವಿಡೋ ಹೋಂಗಳಲ್ಲಿ ದಲಿತ ಮಹಿಳೆಯರೂ ಸಹ ಆಶ್ರಯ ಪಡೆದಿದ್ದರೆಂಬುವುದು ವಿಶೇಷ. ದಲಿತ ಮಹಿಳೆಯರು ಹೆಚ್ಚಾಗಿದ್ದಂತಹ ಸ್ಥಳವನ್ನು ಅಬಲಾಶ್ರಮ ಎಂದು ಕರೆಯಲಾಗುತ್ತಿತ್ತು. ಮೈಸೂರಿನಲ್ಲಿ ರಾವ್ ಬಹದ್ದೂರ್ ಎ. ನರಸಿಂಹ ಅಯ್ಯಂಗಾರ್‌ರ ಅಧ್ಯಕ್ಷತೆಯ ಸಮಿತಿ ನಡೆಸುತಿದ್ದಂತಹ ವಿಧವಾ ವಸತಿ ಗೃಹವನ್ನು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಕಲ್ಪಿಸಲು ಬಳಸಿಕೊಳ್ಳುವಂತೆ ಅಜ್ಞೆಯನ್ನು ಹೊರಡಿಸಲಾಗಿತ್ತು. ಇದರಿಂದ ಗ್ರಾಮೀಣ ಪ್ರದೇಶದ ಆಸಕ್ತ ದಲಿತ ವಿಧವೆಯರು ನಗರಕ್ಕೆ ಒಂದು ಜೀವನೋಪಾಯದ ಶಿಕ್ಷಣದ ತರಬೇತಿ ಪಡೆದು ತಮ್ಮ ಜೀವನವನ್ನು ಯಾರ ಕೈಯಾಸರೆ ಇಲ್ಲದೆಯೇ ನಡೆಸಿಕೊಂಡು ಹೋಗುವ ಪರಿಪಾಟವನ್ನು ಕಲಿತು ರೂಢಿಸಿಕೊಳ್ಳಲು ಸಹಕಾರಿಯಾಯಿತು.

ದಿ ಹಿಂದೂ ಲಾ ವುಮೆನ್ಸ್ ರೈಟ್ಸ್ ಆಕ್ಟ್

ಸಮಾಜವು ಸ್ತ್ರೀಯನ್ನು ಶೋಷಿಸಲು ಮತ್ತು ಅಸಡ್ಡೆಗೀಡುಮಾಡಲು ಪ್ರಮುಖ ಕಾರಣವೆಂದರೆ, ಪ್ರಮುಖವಾಗಿ ಆಕೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿಲ್ಲದಾಗಿದ್ದುದು. ಸಹಸ್ರಾರು ವರ್ಷಗಳ ಹಿಂದೆ ರಚನೆಯಾದ ಹಿಂದು ಮೂಲಭೂತವಾದಿಗಳ ಕಾನೂನಿನಂತೆಯೇ ಆಧುನಿಕ ಸಮಾಜವು ಮುಂದುವರೆಯುತ್ತಿರುವುದನ್ನು ಕೆಲವು ಸಮಾಜ ಸುಧಾರಕರು ವಿರೋಧಿಸಿದರು. ಈ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಬೇಡಿಕೆಯ ಪ್ರಜಾಪ್ರತಿನಿಧಿಗಳಲ್ಲಿ ಪ್ರಬಲವಾಯಿತು. ಇದರಿಂದಾಗಿ ನಾಲ್ವಡಿ ಅವರು ೧೯೩೩ ಜೂನ್ ೨೯ರಂದು ‘ದಿ ಹಿಂದೂ ಲಾ ವುಮೆನ್ಸ್‌ ರೈಟ್ಸ್ ಆಕ್ಟ್’ ಅನ್ನು ಜಾರಿಗೆ ತಂದರು. ಈ ಕಾಯಿದೆಯ ಅನ್ವಯ ಸ್ತ್ರೀಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ನಿಡಿತು. ಹೀಗೆ ಕಾನೂನಾತ್ಮಕವಾಗಿ ಆಸ್ತಿಯ ಹಕ್ಕನ್ನು ನೀಡಿದ್ದರಿಂದ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಉತ್ತಮ ಸ್ಥಿತಿಗೇರಿತೆಂದರೆ ತಪ್ಪಾಗಲಾರದು.

ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ ಆಕ್ಟ್

ಇಂದಿಗೂ ನಮ್ಮ ಜನತೆಯನ್ನು ಎಡೆಬಿಡದೆ ಕಾಡುತ್ತಿರುವ ಪಿಡುಗುಗಳಾದಂತಹ ಕುಡಿತ ಮತ್ತು ಧೂಮಪಾನವು ಸಮಾಜಕ್ಕಂಟಿದ ಅದರಲ್ಲಿಯೂ ದಲಿತ ಸಮಾಜಕ್ಕಂಟಿದ ಶಾಪಗಳು. ಧೂಮಪಾನದಲ್ಲಿ ಉಪಯೋಗಿಸುವ ಹೊಗೆಸೊಪ್ಪು ಮನುಷ್ಯನ ಶ್ವಾಸಕೋಶ, ಹೃದಯಬೇನೆ, ಕುರುಡುತನ, ರುಚಿ ಮತ್ತು ಶ್ರವಣ ಶಕ್ತಿಯ ಕಳೆದುಕೊಳ್ಳುವುದು ಮುಂತಾದ ಕಾಯಿಲೆಗಳಿಗೆ ಈಡು ಮಾಡುತ್ತದೆ. ಹಾಗೆಯೇ ಮದ್ಯಪಾನದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಬಿಡಿಸಿ ಏಳುವ ಸಂದರ್ಭವೇ ಬರುವುದಿಲ್ಲವೇನೋ. ಸಾರ್ವಜನಿಕ ಆರೋಗ್ಯಕ್ಕೆ ಕಂಟಕಪ್ರಾಯವಾದ ಧೂಮಪಾನ ಮತ್ತು ಮಧ್ಯಪಾನಗಳನ್ನು ತಡೆಗಟ್ಟಲು ಅದರಲ್ಲೂ ಅಪ್ರಾಪ್ತ ವಯಸ್ಕ ಉಡುಗರನ್ನು ಧೂಮಪಾನದಿಂದ ದೂರವಿಡಲು ನಾಲ್ವಡಿ ಕೃಷ್ಣರಾಜರು ೧೯೧೧ ಅಕ್ಟೋಬರ್ ೯ ರಂದು ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ್ ಆಕ್ಟ್ ಎಂಬ ಮಹತ್ವದ ಕಾನೂನಿಗೆ ಸಹಿ ಮಾಡಿದರು ಇಂದೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತರಲು ಮುಂದಾಗಿವೆ. ಆದರೆ ಈ ಕೆಲಸ ೧೯೧೧ರಲ್ಲೇ ನಡೆದಿತ್ತೆಂದರೆ ಮೈಸೂರು ಅರಸರ ಮುಂಜಾಗ್ರತಾ ಕ್ರಮದ ಬಗ್ಗೆ ಹೆಮ್ಮೆ ಮೂಡದೇ ಇರಲಾರದು. ಈ ಕಾನೂನು ೧೬ ವರ್ಷಕ್ಕೆ ಕೆಳಗಿನ ಅಪ್ರಾಪ್ತ ವಯಸ್ಕರಿಗೆ ತಂದೆಯ ಅನುಮತಿ ಪತ್ರವಿಲ್ಲದೆ ಹೊಗೆಸೊಪ್ಪಿನ ಪಾದರ್ಥಗಳನ್ನು ಮಾರುವವರನ್ನು ಶಿಕ್ಷೆಗೆ ಗುರಿ ಮಾಡಿತು.

೧೯೩೭ರಲ್ಲಿ ದಿ ಮೈಸೂರ್ ಮೆಟರ್ನಿಟಿ ಬೆನಿಫಿಟ್ ಆಕ್ಟ್

ನಗರೀಕರಣ, ಜಾಗತೀಕತರಣ ಹಾಗೂ ಕೈಗಾರಿಕೀಕರಣದ ಪ್ರಭಾವದಿಂದಾಗಿ ಹೆಚ್ಚು ಹೆಚ್ಚು ಕಾರ್ಖಾನೆಗಳು ಸಂದರ್ಭದಲ್ಲಿ ಸ್ಥಾಪನೆಗೊಂಡವು. ಕಾರ್ಖಾನೆಗಳು ಹೆಚ್ಚಿದ ಹಾಗೆಯೇ ಕಾಮಿರ್ಕರ ಸಂಖ್ಯೆಯು ಬೆಳೆಯಿತು. ಸ್ವಾಭಾವಿಕವಾಗಿಯೇ ಕಾರ್ಖಾನೆಗಳ ಮಾಲೀಕರು ಕಡಿಮೆ ವೇತನಕ್ಕೆ ಸ್ತ್ರೀಯರನ್ನು ಕಾರ್ಮಿಕರಾಗಿ ನೇಮಿಸಿಕೊಳ್ಳಲಾರಂಭಿಸಿದ್ದರಿಂದ ಸ್ತ್ರೀ ಕಾರ್ಮಿಕರ ಸಂಖ್ಯೆ ಹೆಚ್ಚಳಗೊಂಡಿತು (ಸ್ತ್ರೀ ಕಾರ್ಮಿಕರಲ್ಲಿಯೂ ಸಹ ಗ್ರಾಮೀಣ ಪ್ರದೇಶದಿಂದ ಕೆಲಸವನ್ನು ಹುಡುಕಿಕೊಂಡು ನಗರಕ್ಕೆ ಬಂದಿದ್ದಂತಹ ದಲಿತ ಮಹಿಳೆಯರೇ ಹೆಚ್ಚಾಗಿದ್ದರು. ಒಂದೊತ್ತಿನ ಕೂಲಿಗೂ ಸಾಧ್ಯವಾಗದ ಸನ್ನಿವೇಶದಲ್ಲಿ ಕೆಲಸಕ್ಕಾಗಿ ನಗರದ ಕಡೆಗೆ ಪರಿವಾರ ಸಮೇತ ಗುಳೆ ಬಂದವರು). ಇಂತಹ ಮಹಿಳೆಯರು ಇಲ್ಲಿ ಕೆಲಸಕ್ಕೆ ಸೇರಿದ ನಂತರ ಮಾಲೀಕರಿಂದ ಹಾಗೂ ಸಂಸ್ಥೆಗಳಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿತ್ತು. ನೆರೆಯ ಭಾರತದ ಬ್ರಿಟಿಷ್ ಸರ್ಕಾರದ ಕಾರ್ಖಾನೆಗಳಲ್ಲಿ ಸ್ತ್ರೀ ಕಾರ್ಮಿಕರ ಹೆರಿಗೆಗೆ ಅನುಕೂಲವಾಗಲು ಮೂರು ವಾರಗಳ ಪ್ರಸೂತಿ ರಜೆ ಮತ್ತು ಅವಶ್ಯವಿದ್ದಾಗ ಕಾಯಿಲೆಯ ರಚನೆಯನ್ನು ನೀಡಲಾಗುತ್ತಿತ್ತು. ಮೈಸೂರು ಸಂಸ್ಥಾನದಲ್ಲಿಯೂ ಸರ್ಕಾರಿ ಕಾರ್ಖಾನೆಗಳಲ್ಲಿ ಇದೇ ಕಾನೂನು ಅನುಸರಿಸಲ್ಪಡುತ್ತಿತ್ತು. ಆದರೆ ಖಾಸಗಿ ಕಾರ್ಖಾನೆಗಳು ತಮ್ಮ ಸ್ತ್ರೀ ಕಾರ್ಮಿಕರಿಗೆ ಹೆರಿಗೆ ರಜೆ ಭತ್ಯೆ ಅಥವಾ ಇತರೆ ಭತ್ಯೆಯನ್ನು ಒದಗಿಸುತ್ತಿರಲಿಲ್ಲ. ೧೯೨೯ರಲ್ಲಿ ಬೊಂಬಾಯಿ ಸರ್ಕಾರ ಹೆರಿಗೆ ಭತ್ಯೆ ಕಾನೂನಿಗನುಗುಣವಾಗಿ ಮೈಸೂರಿನಲ್ಲಿ ಅಂತಹ ಕಾನೂನನ್ನು ಜಾರಿಗೆ ತರಬೇಕೆಂದು ಬೋರ್ಡ್‌ ಆಫ್‌ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಕೋರಿಕೊಂಡಿತು. ಮೈಸೂರಿನ ಸ್ತ್ರೀ ಕಾರ್ಮಿಕರ ಹೆರಿಗೆ ಮೈಸೂರು ಮೆಟರ್ನಿಟಿ ಬೆನಿಫಿಟ್ ಆಕ್ಟ್‌ನ್ನು ಜಾರಿಗೆ ತರಲಾಯಿತು. ಈ ಕಾನೂನು ಕಾರ್ಖಾನೆಗಳಲ್ಲಿ (ಖಾಸಗಿ ಕಾರ್ಖಾನೆಗಳು ಸಂಬಂಧೀಸಿದಂತೆ) ದುಡಿಯುವ ಸ್ತ್ರೀ ಕಾರ್ಮಿಕರಿಗೆ ಎಂಡು ವಾರಗಳ ಹೆರಿಗೆ ಭತ್ಯೆ ಸೌಲಭ್ಯ ನೀಡಬೇಕೆಂದು ತಿಳಿಸಿತು. ನಾಲ್ವಡಿ ಕೃಷ್ಣರಾಜ ತಂದುದಲ್ಲದೆ ಪ್ರಸೂತಿ ಮತ್ತು ಮಕ್ಕಳ ಕೇಂದ್ರಗಳನ್ನು ಸ್ಥಾಪಿಸಲು ಆಡಳಿತಾತ್ಮಕವಾಗಿ ಸಹಾಯ ಮಾಡಿದರು. ಪ್ರಮುಖ ನಗರಗಳಾದ ಬೆಂಗಳೂರು ಮೈಸೂರು ಹಾಸನಗಳಲ್ಲಿ ಪ್ರಸೂತಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ ೧೯೨೨ರಲ್ಲಿ ಬಾಲಕೇಂದ್ರವನ್ನು ಸ್ಥಾಪಿಸಿ ಅನಾಥ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಉಚಿತ ಹಾಲಿನ ಪೂರೈಕೆಯನ್ನು ಮಾಡುವ ವ್ಯವಸ್ಥೆ ಜಾರಿಗೆ ತರಲಾಯಿತು. ದಿವಾನ್ ಕಾಂತರಾಜ ಅರಸ ಅವರು ಸ್ತ್ರೀಯರ ಬಗ್ಗೆ ಹೆಚ್ಚಿನ ಅನುಕಂಪ ಹೊಂದಿದ್ದಂತವರು. ಇವರು ಸರ್ಕಾರದಿಂದ ಮಂಜೂರು ಮಾಡಿಸಿದ ೧,೨೦,೦೦೦ ರೂ. ಹಣದಿಂದ ಮೈಸೂರಿನಲ್ಲಿ ಗುಣಾಂಬ ಪ್ರಸೂತಿ ಮತ್ತು ಮಕ್ಕಳ ಕಲ್ಯಾಣ ಟ್ರಸ್ಟನ್ನು ಸ್ಥಾಪಿಸಿ. ಈ ಟ್ರಸ್ಟನ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಹೋಗಿ ದಲಿತ ಮಹಿಳೆಯರಲ್ಲಿ ಪ್ರಸೂತಿ ಹಾಗೂ ಇನ್ನಿತರ ವಿಷಯಗಳಲ್ಲಿ ಅಜ್ಞಾನ ಹಾಗೂ ಮೂಢನಂಬಿಕೆಗಳಿಂದಾಗುವ ತೊಂದರೆಯನ್ನು ತಿಳಿಸಿ ಅವರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಬರಲು ಶ್ರಮಿಸಿದರು.

ದುಡಿಯುವ ವರ್ಗ ಮತ್ತು ಕೃಷಿ ಶಿಕ್ಷಣ

ನಮ್ಮ ಸಂಸ್ಥಾನವು ವ್ಯಾವಸಾಯಿಕ ದೇಶ. ಹಳ್ಳಿಗಳೇ ಇಲ್ಲಿಯ ಐಶ್ವರ್ಯದ ಆಧಾರ. ರೈತನೇ ಹಳ್ಳಿಗಳ ಮತ್ತು ರಾಷ್ಟ್ರದ ಅವನ ಸಂಪತ್ತೇ ದೇಶದ ಸಂಪತ್ತು, ಅವನ ಭಾಗ್ಯವೇ ದೇಶದ ಭಾಗ್ಯ, ಅವನ ಉದ್ದಾರವೇ ದೇಶೋದ್ದಾರ. ಸಂಸ್ಥಾನದ ಗ್ರಾಮೀಣ ಜನರಲ್ಲಿ ಸುಖ ಸಂಪತ್ತು. ಸಮೃದ್ಧಿಯಾಗಿದ್ದರೆ ದೇಶದಲ್ಲಿ ನೆಲವೂ ಬಲವೂ ಸಂಪತ್ತೂ ನದಿಯಂತೆ ಅವಿಚ್ಚಿನ್ನವಾಗಿ ಹರಿಯುತ್ತದೆ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರತಿನಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ಆಡಿದ ಮಾತುಗಳು. ಈ ಮಾತುಗಳಿಂದಲೇ ನಾವು ಅರಸರು ರೈತ ಹಾಗೂ ಗ್ರಾಮಗಳ ಬಗ್ಗೆ ಇಟ್ಟು ಕೊಂಡಿದ್ದಂತಹ ಅಭಿಲಾಷೆಯನ್ನು ಗ್ರಹಿಸಬಹುದಾಗಿದೆ. ಭರತಖಂಡದಲ್ಲಿದ್ದಂತೆಯೇ ಮೈಸೂರು ಸಂಸ್ಥಾನದಲ್ಲಿಯೂ ದಲಿತವರ್ಗದವರು ಮೇಲ್ವರ್ಗದವರ ಸೇವೆ ಹಾಗೂ ಕೃಷಿ ದುಡಿಮೆಯಲ್ಲಿ ನಿರತರಾದ ಜಾತಿಗಳಿಗೆ ಸೇರಿದವರಾಗಿದ್ದರು. ಪಾರಂಪರಿಕವಾಗಿ ಚರ್ಮ ಕೈಗಾರಿಕೆ, ಗ್ರಾಮ ನೈರ್ಮಲ್ಯವನ್ನು ನೋಡಿಕೊಳ್ಳುವ, ಸತ್ತ ಜಾನುವಾರುಗಳನ್ನು ಹೊರಗೆ ಹಾಕುವ ಕೆಲಸದಲ್ಲಿ ಅವರು ನಿರತರಾಗಿದ್ದರು. ಗ್ರಾಮಕ್ಕೆ ಹಾಗೂ ಸರ್ಕಾರದ ಇತರ ಅಧಿಕಾರಿಗಳಿಗೆ ಅವರು ಅವಶ್ಯಕವಾದ ಕೆಲಸಗಳನ್ನು ಮಾಡಿಕೊಡಬೇಕಾಗಿತ್ತು. ವಸಾಹತು ಕಾಲದಲ್ಲಿ ಭೂಮಿಯ ಖಾಸಗೀಕರಣ ಹಾಗೂ ವಾಣಿಜ್ಯೀಕರಣದ ಹೆಚ್ಚಳದಿಂದ ದಲಿತರು ಅತ್ಯಂತ ದಯನೀಯ ಸ್ಥಿತಿಗೆ ದೂಡಲ್ಪಟ್ಟರು. ಆದರೆ ಕರ್ನಾಟಕದ ಖುಷ್ಕಿ ಪ್ರದೇಶದಲ್ಲಿ ಮಾತ್ರ ಅವರು ಸ್ವಲ್ಪ ಭೂಮಿ ಹೊಂದಿದ್ದರು. ಖಾಸಗೀಕರಣದಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಭೂ ಮಾಲೀಕರು ಹೆಚ್ಚು ಬಲವಾಗ ತೊಡಗಿದ೦ತೆ ಅಸ್ಪೃಶ್ಯರು ಇತರ ಕುಲಕಸುಬುದಾರರ೦ತೆಯೇ ಭೂಮಿಯ ಮೇಲಿನ ತಮ್ಮ ಪಾರ೦ಪರಿಕವಾದ ಹಕ್ಕನ್ನು ಕಳೆದುಕೊ೦ಡರು ಕಾನೂನಿನ ದೃಷ್ಟಿಯಲ್ಲಿ ಜಾತಿಗಳ ನಡುವೆ ಯಾವ ಅ೦ತರವಿಲ್ಲದಿದ್ಪರೂ ಸಾಮಾಜಿಕ ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಮಧ್ಯೆ ಪ್ರವೇಶಿಸಬಾರದೆಂಬ ಸರಕಾರದ ನೀತಿಯಿಂದಾಗಿ ಈ ಕಾನೂನು ನಿಷ್ಪ್ರಯೋಜಕವಾಯಿತು.

ಮೊದಲೇ ತಿಳಿಸಿರುವ ಹಾಗೆ ಸಂಸ್ಥಾನದ ಆರ್ಥಿಕ ಬೆನ್ನೆಲುಬು ಕೃಷಿ. ಅದರ ಆಧಾರಗಳೇ ರೈತರು. ಇಂದಿಗೂ ಸಹ ನಮ್ಮ ದೇಶದ ಜನರ ಪ್ರಧಾನ ವೃತ್ತಿ ಕೃಷಿಯೇ ಆಗಿದ್ದು, ಈ ಕ್ಷೇತ್ರವು ಬಹುಸಂಖ್ಯಾತ ಜನರಿಗೆ ಉದ್ಯೋಗನ್ನೊದಗಿಸಿದೆ. ದಲಿತ ಜನತೆಯು ಇಂದಿಗೂ ಸಹ ಶೇ. ೯೦ರಷ್ಟು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವುದು ಮೂಲಾಧಾರಗಳಿಂದ ಕಂಡು ಬರುತ್ತದೆ. ದಲಿತರು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚಾಗಿ ಅವಲಂಬಿತಗಳಾದಂತೆ ಸಮಸ್ಯೆಗಳು ಅಷ್ಟೇ ಹೆಚ್ಚಿವೆ. ಇಂತವುಗಳಲ್ಲಿ ಪ್ರಮುಖವಾದವುಗಳೆಂದರೆ (ಅ) ಕೃಷಿಗೆ ಬೇಕಾದ ಬಂಡವಾಳದ ಕೊರತೆ. ಈ ಕೊರತೆಯನ್ನು ನೀಗಿಸಲು ನಾಲ್ವಡಿಯವರು ಆರ್ಥಿಕ ಪರಿಷತ್ತನ್ನು ಸ್ಥಾಪಿಸಿದರು. ಪರಿಷತ್ತಿನ ಸ್ಥಾಪನೆಯಿಂದಾಗಿ ಅದರ ಅಂಗವಾಗಿದ್ದಂತಹ ವ್ಯವಸಾಯ ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅದು ಸಂಸ್ಥಾನದಲ್ಲಿ ಕಬ್ಬು ಬೆಳೆ ಅಭಿವೃದ್ಧಿ, ರೇಷ್ಮೆ ಕೃಷಿ ವಿಸ್ತರಣೆ, ಕೆರೆಗಳ ಅಭಿವೃದ್ಧಿ, ಖಾಯಂ ನೀರಾವರಿಗೆ ಅಂತರ್ಜಲ ಬಳಕೆ, ಗ್ರಾಮೀಣ ಕೈಗಾರಿಕೆಗಳ ಸ್ಥಾಪನೆ, ವ್ಯವಸಾಯದ ಶಿಕ್ಷಣದ ವಿಸ್ತರಣೆ ಇವುಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ರೈತರಿಗೆ ತರಬೇತಿ ನೀಡಿ ಮುಂದೆ ಈ ಕೆಲಸಕ್ಕಾಗಿಯೇ ಪ್ರತ್ಯೇಕ ಸರ್ಕಾರಿ ಇಲಾಖೆಯನ್ನು ತೆರೆಯಿತು. ೧೯೧೨ರಲ್ಲಿ ವ್ಯವಸಾಯ ಇಲಾಖೆಯು ಅಸ್ತಿತ್ವಕ್ಕೆ ಬಂದಿತು. ಈ ಇಲಾಖೆಯಿಂದ ಅಸಂಖ್ಯಾತ ದಲಿತರು ಆರ್ಥಿಕ ನೆರವು ಪಡೆದು ತಮಗೆ ಇದ್ದಂತಹ ಬಂಜರು ಭೂಮಿಯನ್ನೇ ಹಸನು ಮಾಡಿಕೊಂಡು ವ್ಯವಸಾಯ ಮಾಡುವಂತೆ ಅನುಕೂಲ ಮಾಡಿಕೊಡಲಾಯಿತು.

ಮೈಸೂರು ಸಂಸ್ಥಾನವು ೧೮೯೪ರಲ್ಲೇ ಕೃಷಿ ಬ್ಯಾಂಕನ್ನು ಸ್ಥಾಪಿಸಿತು. ಈ ಮೂಲಕ ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಬಹು ಸುಲಭವಾಗಿ ಸಾಲ ದೊರೆಯುವಂತೆ ಮಾಡಿತು. ಆದರೆ ಕೃಷಿ ಬ್ಯಾಂಕುಗಳಲ್ಲಿದ್ದಂತಹ ಅನೇಕ ದೋಷಗಳು ಅವರ ನೈಜ ಉದ್ದೇಶವನ್ನು ನಾಶ ಮಾಡಿ ಬ್ಯಾಂಕುಗಳನ್ನು ಮುಚ್ಚುವಂತೆ ಮಾಡಿತು. ನಾಲ್ವಡಿಯವರ ಸರ್ಕಾರ ರೈತರಿಗೆ ಅವಶ್ಯವಾದಂತಹ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಿ ೧೯೦೫ರಲ್ಲಿ ಸಹಕಾರಿ ಸೊಸೈಟಿಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಆಧಾರದ ಮೇಲೆ ಅನೇಕ ಸದಸ್ಯರು ಒಗ್ಗೂಡಿ ಷೇರು ಬಂಡವಾಳವನ್ನು ತೊಡಗಿಸಿ ಮತ್ತು ಸರ್ಕಾರದ ಸಹಾಯ ಧನವನ್ನು ಉಪಯೋಗಿಸಿಕೊಂಡು ಅನೇಕ ಸಹಕಾರಿ ಬ್ಯಾಂಕುಗಳನ್ನು ಸ್ಥಾಪನೆ ಮಾಡಿದರು (ಈ ಸಹಕಾರಿ ಸಂಘಗಳನ್ನು ಸಂಸ್ಥಾನದ ಪರಿಶಿಷ್ಟವರ್ಗ ಹಾಗೂ ಪರಿಶಿಷ್ಟ ಜಾತಿಯ ಜನಾಂಗದವರೂ ಸಹ ಸ್ಥಾಪಿಸಿದರು. ೧೯೧೫ರಲ್ಲಿ ಪರಿಶಿಷ್ಟರ ಈ ರೀತಿಯ ಸಹಕಾರಿ ಬ್ಯಾಂಕುಗಳ ಸಂಖ್ಯೆ ೬ಕ್ಕೆ ಏರಿತು. ಇದರಲ್ಲಿ ಪ್ರಮುಖವಾಗಿ ೧೯೦೮ರಲ್ಲಿಯೇ ಸ್ಥಾಪನೆಯಾದಂತಹ ಮೈಸೂರಿನ ಅಶೋಕಪುರಂ ಬಡಾವಣೆಯ ಆದಿ ಕರ್ನಾಟಕ ಸಹಕಾರ ಸಂಘವೂ ಒಂದು). ಸೊಸೈಟಿಗಳು ಕೃಷಿಗೆ ಬೇಕಾದ ಆಧುನಿಕ ಕೃಷಿ ಸಲಕರಣೆಗಳು ಉತ್ತಮ ತಳಿಯ ರಾಸುಗಳು ಮತ್ತು ಬೀಜಗಳು, ರಾಸಾಯನಿಕ ಗೊಬ್ಬರ, ಕಬ್ಬು ಅರೆಯುವ ಯಂತ್ರಗಳು, ಹೆಚ್ಚು ಹೆಚ್ಚಾಗಿ ಇಳುವರಿ ನೀಡುವ ಭತ್ತ. ರಾಗಿ, ಜೋಳ, ದ್ವಿದಳ ಧಾನ್ಯಗಳು ಮುಂತಾದವುಗಳನ್ನು ಒದಗಿಸುತ್ತಿದ್ದವು. ಇಷ್ಟೇ ಅಲ್ಲದೆ ಈ ಸೊಸೈಟಿಗಳು ವ್ಯವಸಾಯಕ್ಕೆ ಮುನ್ನವೇ ರೈತರಿಗೆ ಮುಂಗಡ ಹಣ ನೀಡಿ ಅವರು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದವು. ಈ ಎಲ್ಲ ಸರ್ಕಾರದ ಸೌಲಭ್ಯಗಳಿಂದಾಗಿ ಜನತೆ ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸುವಂತಾಯಿತು.

ಅಸ್ಪೃಶ್ಯರು ಸಾರ್ವಜನಿಕ ಶಾಲೆಗಳಲ್ಲಿ ಸೇರಿ ವಿದ್ಯೆ ಕಲಿಯಲು ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ಕೊಟ್ಟಿದ್ದಾದರೂ ಸಮಾಜದ ವಿವಿಧ ವಲಯಗಳಲ್ಲಿ ಅದಕ್ಕೆ ಸಾಕಷ್ಟು ವಿರೋಧವಿತ್ತು ಇದರಿಂದಾಗಿ ಸರ್ಕಾರವು ಪಂಚಮ ಶಾಲೆಗಳೆಂಬ ಪ್ರತ್ಯೇಕ ಶಾಲೆಗಳನ್ನು ತೆರೆಯುವತ್ತ ಹೆಚ್ಚು ಒಲವು ತೋರಿಸಿತು. ಅನೇಕ ಪಂಚಮ ಶಾಲೆಗಳು ಕ್ರೈಸ್ತ ಮಿಷನ್ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದ್ದವು. ೧೯೧೩ರಲ್ಲಿ ವಿ. ಎಸ್. ನರಸಿಂಹ ಅಯ್ಯಂಗಾರ್ ಅವರ ಶ್ರಮದಿಂದಾಗಿ ದಲಿತ ಶಿಕ್ಷಣ ಮಿಷನ್ ಎಂಬ ಸಂಸ್ಥೆ ಸ್ಥಾಪಿತವಾಯಿತು. ೧೯೧೫ರ ಒತ್ತಿಗೆ ಅದು ೧೫ ಶಾಲೆಗಳನ್ನು ನಡೆಸುತ್ತಿತ್ತು. ಈ ಸಂಸ್ಥೆಗೆ ಸ್ವತಃ ವಾಣಿವಿಲಾಸ ಸನ್ನಿಧಾನದವರು ಮಹಾಪೋಷಕರಾಗಿದ್ದರು.

೧೯೧೫ರಲ್ಲಿ ರ್ಕಾಸರ್ಕಾರ ಒಂದು ಸಾರ್ವಜನಿಕ ಸುತ್ತೊಲೆ ಹೊರಡಿಸಿ ಯಾರನ್ನು ಸಾಮಾಜಿಕ ಅಥವಾ ಧಾರ್ಮಿಕ ನಿರ್ಬ೦ಧದ ಆಧಾರದ ಮೇಲೆ ಸಾರ್ವಜನಿಕ ಶಾಲೆಗಳಿಗೆ ಸೇರಿರುವುದನ್ನು ನಿಷೇಧಿಸಕೂಡದು ಎಂದು ತಿಳಿಸಿತು. ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಪಂಚಮ ಶಾಲೆಗಳನ್ನು ಪ್ರಾರಂಭಿಸಿತು. ೧೯೧೦-೧೧ರಲ್ಲಿ ಪಂಚಮರಿಗಾಗಿ ೬೭ ಸರ್ಕಾರಿ ಶಾಲೆಗಳು ಮತ್ತು ೩೭ ಅನುದಾನಿಕ ಶಾಲೆಗಳು ಹಾಗು ೪ ಅನುದಾನರಹಿತ ಶಾಲೆಗಳಿದ್ದರೆ ೧೯೧೫ -೧೬ರಲ್ಲಿ ೧೭೧ ಸರ್ಕಾರಿ ಶಾಲೆಗಳು ೧೦೮ ಅನುದಾನಿತ ಶಾಲೆಗಳು ಮತ್ತು ೮೮ ಅನುದಾನರಹಿತ ಶಾಲೆಗಳು ಅಸ್ತಿತ್ವದಲ್ಲಿದ್ದವು. ಮೈಸೂರು, ತುಮಕೂರು, ಚಿಕ್ಕಮಗಳೂರು, ಹಾಸನ, ಚಾಮರಾಜ ನಗರಗಳಲ್ಲಿ ಪಂಚಮ ವಿದ್ಯಾ‌‌‌‌‌‌‌‌‌‌‌‌‌‌‌‌‌‌‌‌ರ್ಥಿಗಳಿಗೆ ಶಿಕ್ಷಣದ ಅವಕಾಶವನ್ನು ಮಾಡಲು ಶ್ರಮಿಸಿದರು.

ದಲಿತರು ಸರ್ಕಾರಿ ಅಥಾವಾ ಖಾಸಗಿ ಶಾಲೆಗಳಲ್ಲಿ ಇತರೇ ಸವರ್ಣೀಯರೊಂದಿಗೆ ವಿದ್ಯೆ ಕಲಿಯಲು ಸಾಕಷ್ಟು ಸಾಮಾಜಿಕ ಪ್ರತಿರೋಧವಿತ್ತು ಹೀಗೆ ವಿರೋಧಿಸುತ್ತಿದ್ದವರಲ್ಲಿ ಎಲ್ಲ ಸವರ್ಣೀಯ ಜಾತಿಗಳವರೂ ಸೇರಿರುತ್ತಿದ್ದರು. ಬ್ರಾಹ್ಮಣರು ಹಾಗೂ ಸವರ್ಣೀಯ ಹಿಂದೂಗಳು ವಿಶೇಷವಾಗಿ ಅಸ್ಪೃಶ್ಯರೊಂದಿಗೆ ತಮ್ಮ ಮಕ್ಕಳು ವ್ಯಾಸಂಗ ಮಾಡುವುದನ್ನು ಅವರ ಈ ಮನೋಭಾವನೆಗೆ ಶತಮಾನಗಳದಿಂದಲೂ ಅವರು ಬೆಳೆಸಿಕೊಂಡುಬಂದಿದ್ದ ಪ್ರತ್ಯೇಕ ಸಾಂಸ್ಕೃತಿಕ ಆವರಣ ಮತ್ತು ಪಂಚಮರ ಬಗ್ಗೆ ಸಮಾಜ ಹೊಂದಿದ್ದ ಕೀಳು ಭಾವನೆಗೆಳು ಕಾರಣವಾಗಿದ್ದವು. ೧೯೧೫ರಲ್ಲಿ ಸರ್ಕಾರ ಹೊರಡಿಸಿದ್ದ ಶಾಲೆಗಳನ್ನು ಎಲ್ಲ ವರ್ಗದವರಿಗೂ ತೆರೆದಿಡುವ ಸುತ್ತೋಲೆಗೆ ಶೃಂಗೇರಿಯಲ್ಲಿ ಪ್ರಬಲ ವಿರೋಧ ಕಂಡುಬಂದಿತು. ಏಕೆಂದರೆ ಅಲ್ಲಿನ ಆಂಗ್ಲೋ ವರ್ನಾಕ್ಯುಲರ್ ಶಾಲೆಗೆ ಒಬ್ಬ ದಲಿತ ವಿದ್ಯಾರ್ಥಿಯನ್ನು ಸೇರಿಸಲಾಗಿತ್ತು. ಅದನ್ನು ಪ್ರತಿಭಟಿಸಿ ೪೦೦ ವೈದಿಕ ಬ್ರಾಹ್ಮಣರು ಒಂದು ಸಮಿತಿ ರಚಿಸಿಕೊಂಡು ಸರ್ಕಾರಕ್ಕೆ ಅಹವಾಲು ಸಲ್ಲಿಸಿದರು. ಈ ಬಗ್ಗೆ ಶೃಂಗೇರಿ ಜಹಗೀರಿನ ವ್ಯವಹಾರಗಳು ನಡೆದವು. ಎಂ ಶಾಮರಾವ್ ಅವರು ಶಿಕ್ಷಣದ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದಾಗ ಪ್ರಾರಂಭವಾದ ಈ ವಿವಾದ ೧೯೧೬ರ ಮಧ್ಯಾಮವಧಿಯಲ್ಲಿ ಸಿ. ಆರ್. ರೆಡ್ಡಿಯವರು ಆ ಹುದ್ದೆಗೆ ಬಂದಾಗಲೂ ಮುಂದುವರೆದಿತ್ತು. ಸರ್ಕಾರ ಈ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಒಪ್ಪಲಿಲ್ಲ. ಕೊನೆಗೆ ಜಹಗೀರುದಾರರು ಪ್ರತ್ಯೇಕ ಆಂಗ್ಲೋ ವಾರ್ನಾಕ್ಯುಲರ್ ಶಾಲೆಯನ್ನು ಸ್ಥಾಪಿಸಿಕೊಳ್ಳಲು ಸರ್ಕಾರದ ಅನುಮತಿ ಕೇಳಿದರು. ಅದಕ್ಕೆ ಸರ್ಕಾರ ಕೆಲವು ಷರತ್ತುಗಳ ಮೇಲೆ ಅನುಮತಿ ನೀಡಿತು. ಅಂದರೆ ಆ ಶಾಲೆಗೆ ಸರ್ಕಾರ ಅನುದಾನ ನೀಡಲಿಲ್ಲ. ಸರ್ಕಾರ ಈ ಬಗ್ಗೆ ೧೯೦೮ರ ನವೆಂಬರ್ ೨೯ರಂದು ಆದೇಶ ಹೊರಡಿಸಿ ರೈಲು, ಆಸ್ಪತ್ರೆ, ನ್ಯಾಯಾಲಯಗಳಂತೆಯೇ ಶಾಲೆಗಳೂ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಿತು. ಈ ರೀತಿ ಸರ್ಕಾರ ಅಸ್ಪೃಶ್ಯರು ವಿದ್ಯೆ ಕಲಿಯುವ ಹಕ್ಕನ್ನು ಎತ್ತಿ ಹಿಡಿಯಿತು.

ಅಸ್ಪೃಶ್ಯತೆ ಎನ್ನುವ ಪಿಡುಗು ಕೇವಲ ವ್ಯಕ್ತಿಗತ ಕಾರಣದಿಂದ ಬಂದದ್ದಾಗಿರದೆ ಪರಂಪರಾನುಗತ ಪೂರ್ವಗ್ರಹ ಭಾವನೆಯಿಂದ ಬಂದದ್ದಾಗಿದೆ. ಆದ್ದರಿಂದ ಆಗ ಬ್ರಾಹ್ಮಣೇತರ ಚಳವಳಿ ಒಂದು ಕಡೆ ಬಿರುಸಾಗಿದ್ದರೂ ಸಹ ಅಸ್ಪೃಶ್ಯರ ಶಿಕ್ಷಣದ ಬಗ್ಗೆ ಬ್ರಾಹ್ಮಣರಲ್ಲದೆ ಇತರ ಶೂದ್ರ ಸವರ್ಣೀಯ ಜಾತಿಗಳವರೂ ವಿರೋಧ ವ್ಯಕ್ತಪಡಿಸಿರುವುದಕ್ಕೆ ಅನೇಕ ಆಧಾರಗಳಿವೆ. ೧೯೧೮-೧೯ರಲ್ಲಿ ಚಿತ್ರದುರ್ಗದ ಆಂಗ್ಲೋ ವರ್ನಾಕ್ಯುಲರ್ ಶಾಲೆಗೆ ಮಾದಿಗರ ಹುಡುಗನೊಬ್ಬನನ್ನು ಮುಖ್ಯೋಪಾಧ್ಯಾಯರು ಒತ್ತಾಸೆ ನೀಡಿ ಸೇರಿಸಿದಾಗಲೂ ಇದೇ ರೀತಿ ಪ್ರತಿಭಟನೆ ವ್ಯಕ್ತವಾಯಿತು. ಈ ಸಮಯದಲ್ಲಿ ಬಹುತೇಕ ಸವರ್ಣೀಯರು ಈ ಪ್ರತಿಭಟನೆಯಲ್ಲಿ ಸೇರಿದ್ದರು. ಈ ಪ್ರತಿಭಟನೆಗಳಿಗೆ ಎದುರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸರ್ಕಾರವು ಅಸ್ಪೃಶ್ಯರು ಸಾರ್ವಜನಿಕ ಶಾಲೆಗಳಿಗೆ ಸೇರುವ ಹಕ್ಕನ್ನು ಮಾನ್ಯ ಮಾಡಿತು. ನಂತರ ಪ್ರತಿಭಟನೆಗಳು ಹೆಚ್ಚಾಗಿ ನಡೆಯದೆ ತಮ್ಮಲ್ಲಿಯೇ ಈ ಕ್ರಮದ ಬಗ್ಗೆ ಮನವರಿಕೆ ಮಾಡಿಕೊಂಡು ಸುಮ್ಮನಾಗಬೇಕಾಯಿತು.

ಮೈಸೂರು ಸಂಸ್ಥಾನವು ೧೯೩೪ರಲ್ಲಿ ಸ್ಥಾಪನೆಯಾಗಿ ಭಾರತಕ್ಕೆ ವಸಾಹತುಶಾಹಿಗಳು ಸ್ವಾತಂತ್ರ್ಯ ನೀಡುವವರೆಗೂ ಅಂದರೆ ೧೯೪೭ ಅಗಸ್ಟ್ ರವರೆಗೂ ಆಳ್ವಿಕೆ ನಡೆಸಿದರೂ ಸಹ, ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ೧೮೯೪ ರಿಂದ ೧೯೪೦ರರವರೆಗೆ ಸುಮಾರು ೪೬ ವರ್ಷಗಳ ಸುದೀರ್ಘಾವಧಿಯ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜರ ಒಡೆಯರು ಮಾದರಿಯಾಗಿದ್ದಾರೆ. ಶತ ಶತಮಾನಗಳಿಂದ ಪಶುಗಳಿಗಿಂತಲೂ ಹೀನಾಯವಾಗಿ ಕಡೆಗಣಿಸಲಾಗಿದ್ದಂತಹ ದಲಿತರ ಪುನಶ್ಚೇತನದ ದೃಷ್ಟಿಯಿಂದ ಇದು ತುಂಬ ಮಹತ್ವದ ಕಾಲ. ಈ ಕಾಲದಲ್ಲಿಯೇ ಅಸ್ಪೃಶ್ಯರಿಗೆ ಶಾಲೆಗಳಲ್ಲಿ ಮುಕ್ತ ಪ್ರವೇಶ ದೊರೆಯಿತು. ಅವರ ನೋವಿನ ಬಗ್ಗೆ, ಅವರ ಬವಣೆಯ ಕಡೆಗೆ, ಆ ನೋವು ಗಮನ ಹರಿಸುವ ಪ್ರಯತ್ನಗಳು ಈ ಕಾಲದಲ್ಲಿ ಚೆನ್ನಾಗಿ ನಡೆದವು ದಲಿತ ಯುವಕರು/ಯುವತಿಯರು ಶಿಕ್ಷಣ ಪಡೆದು, ತನ್ನ ಹಕ್ಕುಬಾಧ್ಯತೆಗಳಿಗಾಗಿ ಧ್ವನಿ ಎತ್ತಿದ್ದರು ಶತಮಾನಗಳಿಂದಲೂ ಆಚರಣೆಯಲ್ಲಿದ್ದಂತಹ ಸಾಮಾಜಿಕ ಅನಿಷ್ಟಗಳು ಮತ್ತು ಮೂಢನಂಬಿಕೆಗಳು ಹೆಚ್ಚು ಹೆಚ್ಚಾಗಿ ವಿಮರ್ಶೆಗೊಳಗಾದವು.

ಇಂದು ನಮ್ಮ ಕಾಲದಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳು ವಿಭಿನ್ನವಾಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಾವು ಬದುಕುತ್ತಿರುವ ಕಾಲ. ಜಾಗತೀಕರಣ, ಕೈಗಾರೀಕರಣ, ದಲಿತೀಕರಣ ಹಾಗೂ ನಗರೀಕರಣಗಳಂತಹ ಭೂತಗಳು ದಲಿತ ವರ್ಗವು ಈ ಕಾಲದಲ್ಲಿಯೂ ಒಂದು ರೀತಿಯ ಅಸ್ಪೃಶ್ಯತೆಗೆ ಎಡೆಯಾಗಲು ಅನುವು ಮಾಡಿಕೊಡುತ್ತಿವೆ. ಏಕೆಂದರೆ ನಮ್ಮದು ಏಕಕಾಲದಲ್ಲಿ ಅನೇಕ ಕಾಲಗಳು ಜೀವಂತ ಮನುಷ್ಯರಿದ್ದಾರೆ. ಇಪ್ಪತ್ತನೆಯ ಶತಮಾನದ ಆರಂಭದ ಮನಸ್ಥಿತಿಯ ಮನುಷ್ಯರೂ ಇದ್ದಾರೆ ಎಂದರೆ ಅತಿಶಯವಾಗಲಾರದು.

ಇದಕ್ಕಿಂತ ವಿಭಿನ್ನ ಸ್ಥಿತಿಯೆಂದರೆ, ಅನೇಕ ಶತಮಾನದ ಹಿಂದಿನ ಜೀವನ ಕ್ರಮದ ಜನರು ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದಾರೆ. ಊರಂಚಿನಲ್ಲಿ ಇಂದಿಗೂ ಜೀವಿಸುತ್ತಿರುವ ದಲಿತರ ಪಾಡು ಇದೇ ಆಗಿದೆ. ಈ ರೀತಿಯಾಗಿ ಎಷ್ಟು ಇಂದಿನ ಪ್ರಜೆಗಳ ಸರ್ಕಾರ ಅನೇಕ ಸಂವಿಧಾನಗಳನ್ನು ನಿರ್ಮಿಸಿಕೊಂಡು ಏನೇ ಕಾನೂನುಗಳನ್ನು ಸೃಷ್ಟಿಸಿದರೂ ಸಹ ದಲಿತರನ್ನು ಭಾರತೀಯ ಸವರ್ಣೀಯರು ಸಮಾನ ದೃಷ್ಟಿಯಿಂದ ಕಾಣುವುದು ಕಷ್ಟವೇ ಎನ್ನಬಹುದು. ಏಕೆಂದರೆ ಈ ಆಧುನಿಕ ಶತಮಾನವೂ ಸಹ ಅನೇಕ ಶತಮಾನಗಳು ಮೇಳೈಸಿರುವ ಕಾಲವೆಂದೇ ಹೇಳಬಹುದಾಗಿದೆ. ಆದ್ದರಿಂದ ಈ ಶತಮಾನದ ಸಂಕಟ ಮತ್ತು ಸಂಭ್ರಗಳು ಮನುಷ್ಯರನ್ನು ರೂಪಿಸುತ್ತಿರುವ ಬಗೆಯೇ ಬೇರೆ ಆಗಿದೆ.

ಚರಿತ್ರೆಯಲ್ಲಿ ಕಾಣುವ ಮುಖ್ಯ ಗುಣಲಕ್ಷಣವೆಂದರೆ, ವಿವಿಧ ಕಾಲಘಟ್ಟಗಳಲ್ಲಿ ಚರಿತ್ರೆಕಾರರು ಹಾಗೂ ಸಾಹಿತಿಗಳು ಕಂಡ ಮನುಷ್ಯನ ಕಲ್ಪನೆ. ಇದು ಪ್ರಾಕ್ತಾನಶಾಸ್ತ್ರದಿಂದ ಹಿಡಿದು ವಿವಿಧ ಚರಿತ್ರೆಯ ಕಾಲಘಟ್ಟಗಳನ್ನು ದಾಟಿಕೊಂಡು ಇಂದಿನ ನಮ್ಮ ನವ ಚರಿತ್ರೆಯವರೆಗೂ ಒಡಮೂಡಿಕೊಂಡಿರುವುದು ಕಂಡುಬರುತ್ತದೆ. ಉದಾಹರಣೆಗೆ ಕೆಲವು ಭಾರತೀಯರು ತಮ್ಮ ಮೂಲ ಸಂಸ್ಕೃತಿಯು ಇಡೀ ಪ್ರಪಂಚಕ್ಕೆ ಮಾದರಿ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡು, ಆ ಸಂಸ್ಕೃತಿಯೊಳಗೆಯೇ ಪ್ರಪಂಚದ ಇತರ ಸಂಸ್ಕೃತಿಯ ಮುಂದೆ ತಲೆತಗ್ಗಿಸುವಂತಹ ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರುತ್ತಿರುವುದು ಇಂದಿಗೂ ನಮ್ಮ ಮುಂದೆ ಗೋಚರಿಸುವ ಸಂದರ್ಭವೇ ಆಗಿದೆ. ನಮ್ಮ ಈ ಸಂದರ್ಭದಲ್ಲಿಯೂ ಚರ್ಮಕ್ಕೆ ಒಂದು ಸಾಮಾಜಿಕ ಚರಿತ್ರೆಯಿರುವುದರಿಂದ ಅದು ಸಾಹಿತ್ಯಕ್ಕೂ ಹಾಗೂ ಚರಿತ್ರೆಗೂ ಹೆಚ್ಚಿನ ಪ್ರೇರಣೆ ನೀಡಿದೆ ಅನ್ನಿಸುತ್ತದೆ. ಚರ್ಮ ಕಪ್ಪಾಗಿರಬಹುದು, ಕೆಂಪಾಗಿರಬಹುದು, ಎಣ್ಣೆಗೆಂಪಾಗಿರಬಹುದು ಆದರೆ ಕಪ್ಪು ಚರ್ಮಕ್ಕೆ ಕರಾಳ ಚರತ್ರೆಯನ್ನು ಕೊಟ್ಟ ಸಮಾಜ ನಮ್ಮದು, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಬಗ್ಗೆ ಇಂದಿನ ಜನರಿಗೆ ಇರುವ ಪರಿಕಲ್ಪನೆಯೂ ಇದಕ್ಕೆ ಹೊರತಾದುದಲ್ಲ. ಸುಂದರವಾದ ವರ್ಣನಾತ್ಮಕ ಸನ್ನಿವೇಶವನ್ನು, (ಅದು ಪುರಾಣದಲ್ಲಾಗಲೀ ಅಥವಾ ವಾಸ್ತವತೆಯಲ್ಲಿಯೇ ಆಗಲಿ) ಹುಣ್ಣಿಮೆಗೆ ಹೋಲಿಸಿಕೊಂಡು ಸಂತೋಷಪಟ್ಟರೆ, ಇದೇ ಅಮವಾಸೆಗೆ ಅನಿಷ್ಟಕರ ಸನ್ನಿವೇಶಗಳನ್ನು, ಭಯಾನಕ ರೂಪಕಗಳನ್ನು ಹಾಗೂ ದೇವತೆಗಳಲ್ಲಿಯೇ ಕೆಟ್ಟ ವಿಕಾರ ರೂಪದ ದೇವತೆಗಳನ್ನು ಉದಾಹರಿಸಿ ಇಂದಿನ ಪೀಳಿಗೆಗೂ ತಿಳಿಹೇಳುವ ರೀತಿಯಲ್ಲಿ ಕಪ್ಪು ಎನ್ನುವ ಬಣ್ಣವನ್ನು ವಿಕಾರಗೊಳಿಸಿದ್ದಾರೆನ್ನಬಹುದು. ‘ಕಪ್ಪಿಟ್ಟ ಮುಖ’ ಎಂಬ ಕಲ್ಪನೆ ಈ ಕಾರಳ ಚರಿತ್ರೆಯ ಕೊಡುಗೆಯಾಗಿಯೇ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಚರ್ಮಕ್ಕೆ ಸ್ಪರ್ಶದ ಸಮಸ್ಯೆಯೂ ಇದೆ. ಈ ಸಮಾಜದಲ್ಲಿ ಅನೇಕರ ಚರ್ಮವನ್ನು ಮುಟ್ಟದೆ ಮೂಗು ಮುಚ್ಚಿಕೊಂಡು ಮಾರುದ್ಧ ಹಾರುವ ಮನುಷ್ಯರು ನಮ್ಮ ನಡುವೆಯೇ ಇದ್ದಾರೆ. ಈ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನದಲ್ಲಿ ಸಂಧಿಸಿದ ಒಂದು ಘಟನೆಯನ್ನು ತಿಳಿಸಿದರೆ ಸೂಕ್ತವೆನ್ನಿಸುತ್ತದೆ.

ಡಾ. ಬಿ. ಆರ್. ಅಂಬೇಡ್ಕರ್ ಅವರ ಗೆಳೆಯರಾಗಿದ್ದಂತಹ ಸೋಹಾನ್ ಲಾಲ್‌ಶಾಸ್ತ್ರಿ ಎಂಬುವರು ಅಂಬೇಡ್ಕರ್ ಅವರೊಂದಿಗೆ ಇಪ್ಪತ್ತೈದು ವರ್ಷಗಳು ಎಂಬ ಗ್ರಂಥವನ್ನು ಬರೆದು ಓದುಗರ ಮುಂದಿಟ್ಟಿದ್ದಾರೆ. ಈ ಗ್ರಂಥದ ಒಂದು ಘಟನೆಯನ್ನು ವಿವರಿಸುವುದರ ಮುಖಾಂತರ ಅಂಬೇಡ್ಕರ್ ಅವರು ಕಪ್ಪು ಚರ್ಮಕ್ಕೆ ಸಂಬಂಧಿಸಿದಂತೆ ರಾಷ್ಟ್ರನಾಯಕ ಅನ್ನಿಸಿಕೊಂಡಿದ್ದಂತಹವರ ಅವಹೇಳನಕಾರಿ ಪ್ರಶ್ನೆಗೆ ನೀಡಿದ ಉತ್ತರವನ್ನು ತಿಳಿಯ ಬಯಸಿದ್ದಾರೆ. ಮದನಮೋಹನ ಮಾಳವೀಯರು (ಬನಾರಾಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಭಾರತದ ಶಿಕ್ಷಣ ತಜ್ಞರೆಂದು ಖ್ಯಾತಿಯಾಗಿರುವ ವ್ಯಕ್ತಿ) ಒಮ್ಮೆ ಅಂಬೇಡ್ಕರ್ ಅವರಿಗೆ ಹೇಳಿದ ಮಾತು: ನೋಡಿ ಮಿಸ್ಟರ್ ಅಂಬೇಡ್ಕರ್ ನಿಮ್ಮವರೆಲ್ಲಾ ಕಪ್ಪಾಗಿರುವುದರಿಂದ ಸವರ್ಣೀಯ ಹಿಂದೂಗಳ ತಿರಸ್ಕಾರಕ್ಕೆ, ಅಸಹ್ಯತೆಗೆ ಗುರಿಯಾಗಿದ್ದಾರೆ. ನನಗೊಂದು ಉಪಾಯ ಹೊಳೆದಿದೆ. ನಿಮ್ಮ ಹೆಂಗಸರೆಲ್ಲ ಗರ್ಭವತಿಯರಾದಾಗ ಜಾಲಿಕಾಯಿ ಸಿಪ್ಪೆಯ ಪೌಡರ್ ಮಾಡಿಸಿ ತಿನ್ನಲು ಕೊಟ್ಟರೆ, ಹುಟ್ಟುವವರೆಲ್ಲ ಬೆಳ್ಳಗಿರುತ್ತಾರೆ. ಆಗ ಸವರ್ಣೀಯರು ಅಸಹ್ಯ ಪಡುವುದಿಲ್ಲ ಎಂದರು. ಅವರ ಈ ನೀಚ ಸಲಹೆಗೆ ಅಂಬೇಡ್ಕರ್ ಕೂಡಲೇ ಉತ್ತರಿಸಿದರು. ದಕ್ಷಿಣ ಭಾರತದ ಆಂಧ್ರ, ಮೈಸೂರು, ಕೇರಳ, ಮದ್ರಾಸು ಪ್ರಾಂತಗಳಲ್ಲಿ ಬ್ರಾಹ್ಮಣರು ದಲಿತರಿಗಿಂತಲೂ ಕಪ್ಪಾಗಿದ್ದಾರೆ ಆದ್ದರಿಂದ ತಾವು ತಮ್ಮ ಜನಾಂಗದ ಗರ್ಭವತಿಯರಿಗೆ ಈ ಪೌಡರ್ ಕೊಟ್ಟು ಏಕೆ ಮೊದಲು ಪ್ರಯೋಗ ಮಾಡಬಾರದು ಎಂದು ಹೇಳಿದರು. ಇಲ್ಲಿ ಯಾವುದೇ ವೈಜ್ಞಾನಿಕ ಕಾರಣವಿಲ್ಲದೆ ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬರುತ್ತಿರುವ ಆ ಅಸ್ಪೃಶ್ಯತೆಗೆ ಒಂದು ಕುಂಟು ನೆವವನ್ನು ಇಡಲು ನೋಡಿದವರೆಗೆ ಅಂಬೇಡ್ಕರ್ ಕೊಟ್ಟ ಉತ್ತರದಲ್ಲಿ ವ್ಯಂಗವಿದೆ. ಅಕ್ರೋಶದಿಂದ ಹಾಗೆಯೇ ಇತಿಹಾಸವನ್ನು ಕರತಾಲಮಲಕ ಮಾಡಿಕೊಂಡ ವಿದ್ವತ್ತಿದೆ. ಪ್ರಮುಖವಾಗಿ ತನ್ನ ಜನಾಂಗದ ಜೊತೆ ತನ್ನನ್ನು ಗುರುತಿಸಿಕೊಳ್ಳುವ ಕಳಕಳಿಯಿದೆ. ಈ ಮಾತಿನ ಮೂಲಕ ತನ್ನ ಜನಾಂಗಕ್ಕೆ ಯುಗಯುಗಗಳಿಂದಲೂ ಆಗಿರುವ, ಆಗುತ್ತಿರುವ ಅನ್ಯಾಯಕ್ಕಾಗಿ ವೇದನೆ ಪಡುತ್ತ ನ್ಯಾಯಕ್ಕಾಗಿ ಆಗ್ರಹ ಪಡಿಸುವಂಥ ನ್ಯಾಯವಾದಿಯ ಒಟ್ಟು ಧೋರಣೆ ಈ ಮಾತುಗಳಲ್ಲಿ ಎದ್ದು ಕಾಣುತ್ತದೆ. ಈ ಥರದ ಧೋರಣೆಗಳೇ ಇಂದು ಪುನರ್ ಮೌಲೀಕರಣಗೊಳ್ಳುತ್ತಿರುವ ಸಮಾಜ ಚರಿತ್ರೆಯಲ್ಲಿ ಸ್ಪೂರ್ತಿ ಎಂದು ಭಾವಿಸಬಹುದಾಗಿದೆ.

ನಿಜವಾದ ಕೆಲಸವನ್ನು ಗಮನಿಸಿ ಹೇಳುವುದಾದರೆ ನಾಲ್ವಡಿಯವರ ಸರ್ಕಾರಕ್ಕೆ ಆ ಕೀರ್ತಿ ಸಲ್ಲಬೇಕು. ಅಸ್ಪೃಶ್ಯರ ಸಮಸ್ಯೆಯನ್ನು ಬಗೆಹರಿಸುವ ದಿಶೆಯಲ್ಲಿ ಸರ್ಕಾರ ಅಷ್ಟೋ ಇಷ್ಟೋ ಕ್ರಮಗಳನ್ನು ಕೈಗೊಂಡಿದ್ದನ್ನು ನಾವು ಕಾಣಬಹುದಾಗಿದೆ. ಸರ್ಕಾರದ ವಿರುದ್ದ ಎಲ್ಲ ಬಾಲಾಢ್ಯ ಜಾತಿಯವರು ನಿಂತ ಸನ್ನಿವೇಶದಲ್ಲಿ ತನ್ನ ಹಿತದೃಷ್ಟಿಯಿಂದಲೇ ಸರಕಾರವು ಕೆಲವು ಕ್ರಮಗಳನ್ನು ಕೈಗೊಂಡು ಅಸ್ಪೃಶ್ಯರ ಬಹು ವಿಧದ ಶೋಷಣೆಯನ್ನು ಪ್ರಯತ್ನಿಸಿತು. ಏಕೆಂದರೆ ದಲಿತರ ಸಮಸ್ಯೆ ಎಲ್ಲ ಸಮಸ್ಯೆಗಳಿಗಿಂತಲೂ ಅತ್ಯಂತ ಕಠಿಣವಾದ ಸಮಸ್ಯೆಯಾಗಿತ್ತು. ಅಧಿಕಾರಶಾಹಿಗಳ ದಬ್ಬಾಳಿಕೆ ಹಾಗೂ ಕುತಂತ್ರದ ವಿರುದ್ಧ ಅವರು ಪ್ರಶ್ನಿಸುವ ಪ್ರಯತ್ನದಲ್ಲಿದ್ದರು. ಸಹಸ್ರಾರು ವರ್ಷಗಳಿಂದ ತನ್ನ ಕೀಳು ವ್ಯಕ್ತಿಗಳನ್ನೂ ಮೂಕವಾಗಿ ಪಾಲಿಸಿಕೊಂಡು ಬರುತ್ತಿದ್ದಂತಹ ಲಕ್ಷಾಂತರ ಜನರ ಧ್ವನಿ ಮೆಲ್ಲಗೆ ಪುಟಿಯ ತೊಡಗಿತು. ನಾಲ್ವಡಿಯವರ ಕೆಲವು ಸುಧಾರಣಾ ಕ್ರಮಗಳು ದಲಿತರನ್ನು ಸವರ್ಣೀಯರ ಕ್ರೂರ ಮತ್ತು ಅಸಮರ್ಥನೀಯ ರೂಢಿ ಮತ್ತು ಪರಂಪರೆಗಳಿಂದ ಎದ್ದು ಬರಲು ಪ್ರಯತ್ನಿಸುವಂತೆ ಮಾಡಿತು. ಆದರೆ ಒಂದರ್ಥದಲ್ಲಿ ಈ ನತದೃಷ್ಟ ಮಾನವ ಪ್ರಾಣಿಗಳಿಗೆ ಅದು ಯಾವಾಗಲೂ ನಿರಾಶೆಯ ಕರಾಳ ಸನ್ನಿವೇಶವೇ ಆಗಿರುತ್ತಿತ್ತು. ಏಕೆಂದರೆ ಅವರ ಕೂಗಿಗೆ ಸರ್ಕಾರ ಸ್ಪಂದಿಸಿದರೂ ಸಹ ಸವರ್ಣೀಯರಿಂದಾಗುತ್ತಿದ್ದ ದೌರ್ಜನ್ಯಕ್ಕೆ ಸರ್ಕಾರ ಸವಾಲಾಗಿ ನಿಲ್ಲುವ ಧೈರ್ಯ ಮಾಡುತ್ತಿರಲಿಲ್ಲ.

೧೮೮೧ರಲ್ಲಿ ೧೦ನೇ ಚಾಮರಾಜ ಒಡೆಯರ್ ಅವರು ಮದ್ರಾಸ್ ಮೂಲದ ರಂಗಚಾರ್ಲು ಅವರನ್ನು ಸಂಸ್ಥಾನದ ದಿವನರನ್ನಾಗಿ ನೇಮಿಸಿದರು. ಇವರ ನಂತರವೂ ಮದ್ರಾಸ್ ಮೂಲದ ಎಸ್. ಕೆ. ಶೇಷಾದ್ರಿ ಅಯ್ಯರ್ ಅವರು ದಿವಾನರಾದರು. ಇದು ಮೈಸೂರಿನ ಬ್ರಾಹ್ಮಣರಿಗೆ ಸಹಿಸಲಾಗದಾಯಿತು. ಇದರಿಂದಾಗಿ ಮೈಸೂರು ಬ್ರಾಹ್ಮಣ ಹಾಗೂ ಮದ್ರಾಸಿ ಬ್ರಾಹ್ಮಣರಿಗೆ ಆಂತರಿಕ ಕಚ್ಚಾಟ ಪ್ರಾರಂಭವಾಗಿ ನಾಲ್ವಡಿಯವರಿಗೆ ತಮ್ಮ ಬೇಡಿಕೆಯ ನಿವಾರಣೆಗಾಗಿ ಮೈಸೂರು ಬ್ರಾಹ್ಮಣರು ಅಹವಾಲನ್ನ ಸಲ್ಲಿಸಿದರು. ಇದನ್ನು ಮನಗಂಡ ಇವರು ಸರ್. ಎಂ. ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು. ಪ್ರಥಮ ಮೈಸೂರು ಸಂಸ್ಥಾನದ ಪ್ರಥಮ ಬ್ರಾಹ್ಮಣ ದಿವಾನರಾಗಿ ೧೯೧೨ರಲ್ಲಿ ಅಧಿಕಾರ ವಹಿಸಿಕೊಂಡರು.

ಈ ಮೇಲಿನ ಹೋರಾಟವೇ ಸಂಸ್ಥಾನದ ಬ್ರಾಹ್ಮಣೇತರರಲ್ಲಿ ಪ್ರಜ್ಞೆಯನ್ನು ಮೂಡಿಸಲು ಕಾರಣವಾತಯಿತು. ಇರದಿಂದ ಬ್ರಾಹ್ಮಣೇತರರು ಅಂದರೆ (ಅಂದು ಅಸ್ಪೃಶ್ಯರನ್ನು ಹೊರತುಪಡಿಸಿ) ೧೯೦೬ರಲ್ಲಿ ಒಕ್ಕಲಿಗರ ಸಂಘ, ಇವರ ಜನಸಂಖ್ಯೆ ಶೇಕಡ ೨೧. ೧೯೦೫ರಲ್ಲಿ ಲಿಂಗಾಯತ್ ಎಜುಕೇಷನ್ ಅಂಡ್‌ಅಸೋಸಿಯೇಷನ್, ಇವರ ಜನಸಂಖ್ಯೆ ಶೇ. ೧೨. ಸೆಂಟ್ರಲ್ ಮಹಮಡನ್ ಅಸೋಸಿಯೇಷನ್ ೧೯೦೯, ಇವರ ಜನಸಂಖ್ಯೆ ಶೇ ೬. ಮುಂತಾದ ಬ್ರಾಹ್ಮಣೇತರ ಸಂಘಗಳು ಪ್ರಾರಂಭಗೊಂಡವು. ಈ ಪ್ರಮುಖ ಸಂಘಗಳ ಮೂಲಕ ಸಂಸ್ಥಾನದಲ್ಲಿ ಬ್ರಾಹ್ಮಣೇತರ ಸಂಘಗಳು ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿತೊಡಗಿದವು. ಸಂಸ್ಥಾನಕ್ಕೆ ಬ್ರಾಹ್ಮಣೇತರನ್ನು ದಿವಾನರನ್ನಾಗಿ ಮಾಡಲೇಬೇಕೆಂದಿರುವುದು ಇವರ ಪ್ರಮುಖ ಬೇಡಿಕೆಯಾದರೆ, ನಂತರದ್ದು ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ದೊರೆಯಬೇಕೆಂದು. ಚಳವಳಿಯ ತೀವ್ರತೆಯನ್ನು ಮನಗಂಡ ನಾಲ್ವಡಿಯವರು ಸರದಾರ್ ಎಂ. ಕಾಂತರಾಜ ಅರಸ್ ಅವರನ್ನು ೧೯೧೯ರಲ್ಲಿ ಸಂಸ್ಥಾನದ ದಿವಾನರನ್ನಾಗಿ ನೇಮಿಸಿದರು. ಇವರು ಮೈಸೂರು ಸಂಸ್ಥಾನದ ಪ್ರಥಮ ಬ್ರಾಹ್ಮಣೇತರ ದಿವಾನರು. ಇವರ ಕಾಲದಲ್ಲಿಯೇ ಮಿಲ್ಲರ್ ಕಮಿಟಿ (ದೇಶದಲ್ಲಿಯೇ ಮೊಟ್ಟಮೊದಲ ಹಿಂದುಳಿದ ವರ್ಗಗಳ ಆಯೋಗ ಎಂದು ಖ್ಯಾತಿಯಾಗಿದೆ) ಜಾರಿಗೆ ಬಂದದ್ದು. ಅಸ್ಪೃಶ್ಯರು ಅಲ್ಪ ಸ್ವಲ್ಪ ಶಿಕ್ಷಣ ಪಡೆದು ಮೇಲಿನ ಚಳವಳಿಯಿಂದ ಪ್ರಭಾವಿತವಾಗಿ ಇವರೂ ಸಹ ತಮ್ಮ ಹಕ್ಕು ಹಾಗೂ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮುಂದಾದರು. ೧೯೦೬ರಲ್ಲಿ ರಾಷ್ಟ್ರಮಟ್ಟದಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ ಸೊಸೈಟಿಯು ಸ್ಥಾಪನೆಯಾಯಿತು. ಕುಡುಮಲ್ ರಂಗರಾಯರ ಜೊತೆಗೆ ವಿ. ಆರ್ ಶಿಂಧೆ. ನಾರಾಯಣ ಚಂದಾವರ್‌ಕರ್ ಮುಂತಾದ ನಾಯಕರು ಈ ಸಂಘಟನೆಯಲ್ಲಿ ಕ್ರೀಯಾಶೀಲರಾಗಿದ್ದರು. ಇವರಲ್ಲಿ ನಾರಾಯಣ ಚಂದಾವರ್‌ಕರ್ ಹಾಗೂ ರಂಗರಾಯ್ ಅವರು ಕರ್ನಾಟಕದವರು. ನಂತರ ಕಾಂಗ್ರೆಸ್ ಪ್ರವೇಶ ಬೆಂಬಲಿಗರು ಒಂದೂಗೂಡಿ “ಮೈಸೂರು ರಾಜ್ಯ ಅಸ್ಪೃಶ್ಯತಾ ವಿರೋಧಿ ಒಕ್ಕೂಟ” (Mysore State Anti-Untouchabilty League)ವನ್ನು ರಚಿಸಿಕೊಂಡರು. ಒಕ್ಕೂಟದ ಹನ್ನೊಂದು ಜನರ ಪೈಕಿ ಒಬ್ಬರು ಅಸ್ಪೃಶ್ಯರಿದ್ದರು. ಇಬ್ಬರು ಬ್ರಾಹ್ಮಣರು, ಉಳಿದವರು ಬ್ರಾಹ್ಮಣೇತರರಾಗಿರುತ್ತಿದ್ದರು. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ಸರ್ಕಾರವು ಅಸ್ಪೃಶ್ಯರ ಏಳ್ಗೆಗೆ ಶಾಸನಗಳ ಮೂಲಕ ಸೌಲಭ್ಯಗಳನ್ನು ಒದಗಿಸಲು ಮುಂದಾಯಿತು.

ಶೈಕ್ಷಣಿಕ ಸುಧಾರಣೆ

೧೮೮೧ರಲ್ಲಿ ಮೈಸೂರಿನ ರಾಜರಾದ ಹತ್ತನೇ ಚಾಮರಾಜ ಒಡೆಯರ್ ಅವರು ಉತ್ತಮ ಪ್ರಜಾ ಸೇವಕ ಎಂದು ಹೆಸರು ಮಾಡಿದ್ದಾರೆ. ಭರತಖಂಡದಲ್ಲಿಯೇ ಪ್ರಜೆಗಳ ಆಳ್ವಿಕೆಗಾಗಿ ’ಪ್ರಜಾಪ್ರತಿನಿಧಿ ಸಭೆ’ ಎಂಬ ಪ್ರಜೆಗಳ ಸಭೆಯನ್ನು ಸೃಷ್ಟಿಸಿ ಅದರ ನಿರ್ಣಯದ ಮೂಲಕ ಆಳ್ವಿಕೆ ನಡೆಸುವ ಪದ್ಧತಿಯನ್ನು ಜಾರಿಗೆ ತಂದದ್ದು ಇವರ ಮೊದಲ ಸಾಧನೆ. ಇಷ್ಟೇ ಅಲ್ಲದೆ ಶತಮಾನಗಳಿಂದಲೂ ಶಿಕ್ಷಣವೆಂದರೆ, ತಮ್ಮದಲ್ಲವೆಂದೇ ನಂಬಿದ್ದಂತಹ ಪಂಚಮರಿಗೆ (ದಲಿತರಿಗೆ) ಶಿಕ್ಷಣ ಕಲಿಯುವ ಅವಕಾಶವನ್ನು ಸರ್ಕಾರದ ಮೂಲಕ ಕಲಿಸಿಕೊಟ್ಟು, ಅವರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಬರಲು ಪ್ರಯತ್ನಿಸಿದರು. ಇವರ ನಂತರ ಸಂಸ್ಥಾನದ ರಾಜರಲ್ಲಿಯೇ ದಲಿತೋದ್ಧಾರಕರೆಂದೇ ಹೆಸರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸರನ್ನು ಆಧುನಿಕ ಸಂಸ್ಥಾನವನ್ನಾಗಿ ಪರಿವರ್ತಿಸಿದರು. ಈ ಹಂತದಲ್ಲಿ ಅವರು ಪ್ರಥಮವಾಗಿ ಕೈಗೊಂಡ ಕಾರ್ಯವೆಂದರೆ ಆರ್ಥಿಕ ಪರಿಷತ್ ಸ್ಥಾಪಿಸಿದ್ದು. ಈ ಆರ್ಥಿಕ ಪರಿಷತ್ತಿನ ಪ್ರಮುಖ ಮೂರು ಸಮಿತಿಗಳಲ್ಲಿ ಮೊದಲನೆಯದೇ ಶಿಕ್ಷಣ ಸಮಿತಿಯಾಗಿದ್ದಿತು. ಈ ಸಮಿತಿಯ ೧೯೧೧ರಲ್ಲಿ ಪ್ರಾಥಮಿಕ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಒಂದು ವರದಿ ಜಿಲ್ಲಾಧಿಕಾರಿಯಾಗಿದ್ದಂತಹ ಎಂ. ಶಾಮರಾಯ ಅವರ ಅಧ್ಯಕ್ಷತೆಯಲ್ಲಿ ಒಂದು ವರದಿಯನ್ನು ಸಲ್ಲಿಸುವಂತೆ ಆಜ್ಞೆ ಮಾಡಿ ಒಂದು ಸಮಿತಿಯನ್ನು ರಚಿಸಿತು. ಆಗ ತುಮಕೂರು ಜಿಲ್ಲಾಧಿಕಾರಿಯಾಗಿದ್ದಂತಹ ಎಂ. ಶಾಮರಾಯ ಅಧ್ಯಕ್ಷತೆಯಲ್ಲಿ ಒಂದು ಉಪಸಮಿತಿಯನ್ನು ರಚಿಸಿತು. ಅದು ೧೯೨ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ೧೯೧೧ರಲ್ಲಿ ಮುಖ್ಯ ಎಂಜಿನಿಯರ್ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿ ಅಧ್ಯಕ್ಷರಾಗಿದ್ದಂತಹ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿದ ಆರ್ಥಿಕ ಪರಿಷತ್ತು ಆ ಸಂಸ್ಥೆಗೆ ಸಂಸ್ಥಾನದಲ್ಲಿ ತಾಂತ್ರಿಕ ಶಿಕ್ಷಣದ ಅಭಿವೃದ್ದಿಯ ಬಗ್ಗೆ ವರದಿ ಸಲ್ಲಿಸುವ ಕಾರ್ಯವನ್ನು ಸಂಪೂರ್ಣವಾಗಿ ವಹಿಸಿತು. ೧೯೧೨ರಲ್ಲಿ ಈ ಕುರಿತು ಸಿದ್ಧಪಡಿಸಿದ ವರದಿಗಳೂ ಸಹ ಸಿದ್ಧಗೊಂಡಿತು. ಈ ಎರಡು ವರದಿಗಳನ್ನು ಪರಿಶೀಲಿಸದಂತಹ ಆರ್ಥಿಕ ಪರಿಷತ್ತು ಮುಂದಿನ ದಶಕದಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದಂತಹ ಶಿಕ್ಷಣ ಯೋಜನೆಗಳ ಬಗ್ಗೆ ಒಂದು ನೀಲಿ ನಕಾಶೆಯನ್ನು ಸಿದ್ಧಪಡಿಸಿತು. ಈ ಕಾರ್ಯದಲ್ಲಿ ಆಗ ಕೌನ್ಸಿಲ್ ಸದಸ್ಯರಾಗಿದ್ದು ಶಿಕ್ಷಣ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ ಸ್ಥಾನವನ್ನು ಕಾರ್ಯಭಾರಿಯಾಗಿ ನಿರ್ವಹಿಸಿದ ಹೆಚ್.ವಿ. ನಂಜುಂಡಯ್ಯನವರು ಮತ್ತು ಎಂ. ವಿಶ್ವೇಶ್ವರಯ್ಯ ಹಾಗೂ ಎಂ. ಶಾಮರಾವ್ ಅವರು ಪ್ರಮುಖ ಪಾತ್ರ ವಹಿಸಿದರು. ಈ ಯೋಜನೆಯ ಪ್ರಮುಖ ನಿರ್ಣಾಯಕ ಅಂಶಗಳೆಂದರೆ:

೧. ಸಂಸ್ಥಾನದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಜಾರಿ ಮಾಡುವುದು.

೨. ಕಡ್ಡಾಯ ಶಿಕ್ಷಣವನ್ನು ಜಾರಿ ಮಾಡುವುದು.

೩. ಎಸ್‌. ಎಸ್. ಎಲ್. ಸಿ. ಪರೀಕ್ಷೆಯನ್ನು ಪ್ರಾರಂಭಿಸುವುದು.

೪. ತಾಂತ್ರಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸುವುದು.

೫. ಸ್ಥಳೀಯವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು.

೬. ಶೈಕ್ಷಣಿಕ ಪ್ರಗತಿಗಾಗಿ ಖಾಸಗಿ ಏಜೆನ್ಸಿ ಮತ್ತು ನಿಧಿಗಳನ್ನು ಗುರುತಿಸುವುದು.