ಹಾರ್ಟಗನ್ ಸಮಿತಿಯ ಶಿಫಾರಸ್ಸುಗಳು : . ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ಇದನ್ನು ಕಡ್ಡಾಯ ಮಾಡಬಾರದು. ೨. ಸೆಕಂಡರಿ ಮತ್ತು ಇಂಟರ್ ಮೀಡಿಯಟ್ ಶಿಕ್ಷಣವನ್ನು ಅರ್ಹರಾದವರಿಗೆ ಮಾತ್ರ ಕೊಡಬೇಕು. . ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಶಿಕ್ಷಣದಲ್ಲಿ ಸುಧಾರಣೆಯಾಗಬೇಕು. ಅಲ್ಲದೇ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.

೧೯೩೭ರಲ್ಲಿ ಭಾರತ ಸರ್ಕಾರ ಪ್ರಾಂತ್ಯಗಳ ಶಿಕ್ಷಣ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಶಿಕ್ಷಣ ಬ್ಯೂರೋವನ್ನು ಸ್ಥಾಪಿಸಿತು. ಗಾಂಧೀಜಿಯವರು ಹರಿಜನ ಪತ್ರಿಕೆಯಲ್ಲಿ ಮೂಲಭೂತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆದರು. ಮೂಲ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಯೋಜನೆ ಹಾಕಿಕೊಳ್ಳಲಾಯಿತು. ಈ ಯೋಜನೆಯನ್ನು ವಾರ್ದ ಯೋಜನೆಯೆಂದು ಕರೆಯಲಾಯಿತು. ಮೂಲ ವಿದ್ಯಾಭ್ಯಾಸವನ್ನು ಚಟುವಟಿಕೆಯ ಮೂಲಕ ಕಲಿಯಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು. ಜಾಕೀರ್ ಹುಸೇನ್ ಸಮಿತಿಯು ಪಠ್ಯಕ್ರಮ ಮತ್ತು ಉಪಾಧ್ಯಾಯರ ತರಬೇತಿ, ಪರೀಕ್ಷೆ ಶಿಕ್ಷಣ ಸಂಸ್ಥೆಗಳ ಆಡಳಿತ ಮುಂತಾದ ವಿಷಯಗಳ ಬಗ್ಗೆ ವಿವರ ಸಲ್ಲಿಸಿತು. ಈ ಅವಧಿಯಲ್ಲಿ ಜನ ಸಾಮಾನ್ಯರಿಗೆ ಶಿಕ್ಷಣ ತಲುಪುವಂತೆ ಆದದ್ದು ಒಂದು ಮಹತ್ವದ ಅಂಶವಾಗಿತ್ತು. ಹಲವಾರು ಕಾಯಿದೆಗಳನ್ನು ಜಾರಿಗೆ ತಂದು ಅದರ ಮೂಲಕ ಶಿಕ್ಷಣದ ಬೆಳವಣಿಗೆಗೆ ಅವಕಾಶ ಮಾಡಲಾಯಿತು. ೧೯೨೧ರಿಂದ ೧೯೩೭ರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನು ಭಾರತೀಯ ಶಿಕ್ಷಣ ತಜ್ಞರು ಮತ್ತು ರಾಷ್ಟ್ರೀಯ ಚಳವಳಿಯ ನಾಯಕರು ನಡೆಸಿದರು. ರವೀಂದ್ರನಾಥ ಟಾಗೋರರು ವಿಶ್ವಭಾರತಿಯನ್ನು ಕಾರ್ವೆಯವರು ಮತ್ತು ಎಸ್.ಎನ್.ಡಿವಿ. ಮಹಿಳಾ ವಿಶ್ವವಿದ್ಯಾನಿಲಯವನ್ನು ಸಂಘಟಿಸಿದರು. ಅಲ್ಲದೇ ಕಾಶಿ ವಿದ್ಯಾಪೀಠ, ಗುಜರಾತ್ ವಿದ್ಯಾಪೀಠ ಮತ್ತು ಮಹಾರಾಷ್ಟ್ರ ವಿದ್ಯಾಪೀಠ ಮುಂತಾದವು ಈ ಕಾಲದಲ್ಲಿ ಸ್ಥಾಪನೆಗೊಂಡ ವಿದ್ಯಾಸಂಸ್ಥೆಗಳಾಗಿವೆ.

ಸಾರ್ಜೆಂಟ್ ಯೋಜನೆ (೧೯೪೪) : ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಶಿಕ್ಷಣದ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸುವ ಶೈಕ್ಷಣಿಕ ಪುನರ‍್ರಚನೆಯ ಯೋಜನೆಯನ್ನು ೧೯೪೪ರ ಆರಂಭದಲ್ಲಿ ಭಾರತದ ಸರ್ಕಾರದ ಶಿಕ್ಷಣ ಸಲಹೆಗಾರ ಸರ್ ಜಾನ್ ಸಾರ್ಜೆಂಟ್ ರೂಪಿಸಿದ. ಈ ಯೋಜನೆಯನ್ನು ಸಾರ್ಜೆಂಟ್ ಯೋಜನೆ ಎಂದು ಕರೆಯಲಾಗಿದೆ. ಈ ಯೋಜನೆ ೬ ರಿಂದ ೧೪ ವರ್ಷ ವಯಸ್ಸಿನ ಎಲ್ಲರಿಗೂ ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡಬೇಕೆಂದು ನಿಯಮಿಸಿದುದಲ್ಲದೇ, ವಿದ್ಯಾರ್ಥಿಗಳ ಅಭಿರುಚಿಗೆ ಹೊಂದುವಂತಹ ವಿವಿಧ ರೀತಿಯ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಸೆಕೆಂಡರಿ ಶಾಲೆಗಳ ಸ್ಥಾಪನೆಗೆ ಶಿಫಾರಸ್ಸನ್ನು ಮಾಡಿತು. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಸಹಾಯ ಧನ ಮೊದಲಾದ ರೀತಿಗಳಲ್ಲಿ ಉದಾರ ಧನ ಸಹಾಯ ಮಾಡುವುದನ್ನು ಸಮರ್ಥಿಸಿತು. ಇಂಟರ್ ಮೀಡಿಯಟ್ ಶಾಲೆಗಳನ್ನು ರದ್ದುಪಡಿಸಲು ಯೋಜನೆ ಶಿಫಾರಸ್ಸನ್ನು ಮಾಡಿತು. ಅಲ್ಲದೇ ಪ್ರಾಯೋಗಿಕ ಶಿಕ್ಷಣವನ್ನು ನೀಡುವುದರ ಬಗ್ಗೆ ಒತ್ತಿ ಹೇಳಿತು. ವಿದ್ಯಾರ್ಥಿಗಳು ವೈಯಕ್ತಿವಾಗಿ ಪರಿಪೂರ್ಣರಾಗಲು ನೆರವಾಗುವ ಸಾಂಸ್ಕೃತಿಕ ಹಾಗೂ ಮನರಂಜನಾ ಕ್ಷೇತ್ರಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿತು. ಅಲ್ಲದೇ ಸ್ತ್ರೀಯರಿಗೆ ಶಿಕ್ಷಣವನ್ನು ಬಾಲಕರಿಗಿರುವಂತಯೇ ಕಲ್ಪಿಸಬೇಕೆಂದು, ಜೂನಿಯರ್ ಮತ್ತು ಸೀನಿಯರ್ ಬೆಸಿಕ್ ಶಾಲೆಗಳನ್ನು ತೆರೆಯಲು ಶಿಫಾರಸ್ಸು ಮಾಡಿತು.

ರಾಧಾಕೃಷ್ಣನ್ ಸಮಿತಿ (೧೯೪೮೪೯) : ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತ ಸರ್ಕಾರ ಡಾ. ರಾಧಾಕೃಷ್ಣನ್‌ರವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈ ಸಮಿತಿಯನ್ನು ನೇಮಿಸಲಾಯಿತು.

ಸಮಿತಿಯ ಶಿಫಾರಸ್ಸುಗಳು : . ಪದವಿಪೂರ್ವ ಶಿಕ್ಷಣ ೧೨ ವರ್ಷಗಳು ಇರಬೇಕು. . ವಿಶ್ವವಿದ್ಯಾನಿಲಯಗಳು ಕನಿಷ್ಠ ೧೮೦ ದಿನಗಳು ಕೆಲಸ ಮಾಡಬೇಕು. . ಆಡಳಿತ ಸೇವೆಗಳಿಗೆ ವಿಶ್ವವಿದ್ಯಾನಿಲಯದ ಶಿಕ್ಷಣ ಒಂದೇ ಸಾಲದು. . ಪದವಿ ಮಟ್ಟದಲ್ಲಿ ವಾರ್ಷಿಕ ಪರೀಕ್ಷೆಗಳು ಕಡ್ಡಾಯವಾಗಿರಬೇಕು. . ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿಯೂ ಏಕರೀತಿಯ ಶಿಕ್ಷಣ ನೀಡಬೆಕು. ೬. ವಿಶ್ವವಿದ್ಯಾನಿಲಯಗಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳಲು ವಿಶ್ವವಿದ್ಯಾನಿಲಯಗಳ ಧನ ಸಹಾಯ ಸ್ಥಾಪಿಸಬೇಕು. . ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರ ಸಂಬಳವನ್ನು ಹೆಚ್ಚಿಸಬೇಕು.

ಹೀಗೆ ಹಲವಾರು ಶಿಫಾರಸ್ಸನ್ನು ಈ ಸಮಿತಿ ಮಾಡಿತು. ಈ ನಿಟ್ಟಿನಲ್ಲಿ ೧೯೫೨ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವನ್ನು ಸ್ಥಾಪಿಸಲಾಯಿತು. ಮೇಲಿನ ಈ ಎಲ್ಲಾ ಆಯೋಗಗಳು ಭಾರತದಲ್ಲಿ ವ್ಯವಸ್ಥಿತವಾದ ಶಿಕ್ಷಣದ ಬೆಳವಣಿಗೆಗೆ ಕಾರಣವಾದವು. ಮುಂದೆ ಭಾರತ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು. ಪತ್ರಿಕೋದ್ಯಮದ ಬೆಳವಣಿಗೆ ಭಾರತದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ. ಪತ್ರಿಕೋದ್ಯಮದ ಹುಟ್ಟು ಮತ್ತು ಬೆಳವಣಿಗೆಯ ಇತಿಹಾಸ ಅತ್ಯಂತ ಸ್ವಾರಸ್ಯಕರವಾದದ್ದು. ಹೇಗೆ ಭಾರತದಲ್ಲಿ ಪತ್ರಿಕೆಗಳು ಆರಂಭವಾದವು. ಪತ್ರಿಕೆಗಳ ಬಗ್ಗೆ ಬ್ರಿಟಿಷರು ಹೊಂದಿದ್ದ ನಿಲುವೇನು ಮುಂತಾದ ವಿಷಯಗಳನ್ನು ತಿಳಿಯುವುದು ಸೂಕ್ತ ಭಾರತದಲ್ಲಿ ಪತ್ರಿಕೋದ್ಯಮದ ಆರಂಭವು ಯೂರೋಪಿಯನ್ನರ ಆಗಮನದಿಂದ ಆರಂಭವಾಯಿತು. ಭಾರತದಲ್ಲಿ ಮೊದಲ ಬಾರಿಗೆ ಮುದ್ರಣ ಯಂತ್ರವನ್ನು ಸ್ಥಾಪಿಸಿದವರು ಪೋರ್ಚ್‌‌ಗೀಸರು. ೧೫೫೭ರಲ್ಲಿ ಗೋವಾದ ಜೆಸ್ಯೂಟ್ ಪಾದ್ರಿಗಳು ಮೊದಲ ಪುಸ್ತಕವನ್ನು ಪ್ರಕಾಶಿಸಿದರು. ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯು ಬೊಂಬಾಯಿಯಲ್ಲಿ ಮುದ್ರಣ ಯಂತ್ರವನ್ನು ಸ್ಥಾಪಿಸಿತು. ಬ್ರಿಟಿಷ್ ಆಡಳೀತ ಸ್ಥಾಪನೆಯಾದ ಮೊದಲ ನೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಯಾವುದೇ ಪತ್ರಿಕೆಗಳು ಆರಂಭವಾಗಲಿಲ್ಲ. ಇದಕ್ಕೆ ಕಾರಣ ಕಂಪನಿಯ ನೌಕರರ ಸ್ವಂತ ವ್ಯಾಪಾರ, ಭ್ರಷ್ಟಾಚಾರ, ಮುಂತಾದ ಅವ್ಯವಹಾರಗಳು ಗೊತ್ತಾಗದಂತೆ ಮಾಡುವ ಉದ್ದೇಶದಿಂದ ಮೊದಲು ಪತ್ರಿಕೆಗಳನ್ನು ಬೆಳೆಯಲು ಅವಕಾಶ ಕೊಡಲಿಲ್ಲ.

ಭಾರತದಲ್ಲಿ ವೃತ್ತ ಪತ್ರಿಕೆಗಳನ್ನು ಆರಂಭಿಸಿದ ಕೀರ್ತಿ ಈಸ್ಟ್ ಇಂಡಿಯಾ ಕಂಪನಿಯ ನೌಕರುಗಳಿಗೆ ಸಲ್ಲುತ್ತದೆ. ವೃತ್ತ ಪತ್ರಿಕೆಯನ್ನು ತರುವ ಮೊದಲ ಪ್ರಯತ್ನ ಮಾಡಿದವನು ಜೇಮ್ಸ್ ಆಗಸ್ಟ್‌ಸ್‌ಹಿಕೆ. ೧೭೮೦ರಲ್ಲಿ “ದಿ ಬೆಂಗಾಲ್ ಗೆಜೆಟ್” ಎಂಬ ವಾರಪತ್ರಿಕೆಯನ್ನು ಆರಂಭಿಸಿದ. ಗೌರ‍್ನರ್ ಜನರಲ್ ಮತ್ತು ಕಂಪನಿಯ ಅಧಿಕಾರಿಗಳ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿ ಆ ಪತ್ರಿಕೆಯಲ್ಲಿ ಬರೆದನು. ಇದರಿಂದ ಸರ್ಕಾರದ ಕೋಪಕ್ಕೆ ಗುರಿಯಾದ ಜೇಮ್ಸ್ ಅಗಸ್ಟ್‌ಸ್‌ನನ್ನು ಬಂಧಿಸಿ ಮುದ್ರಣಾಲಯವನ್ನು ೧೨೮೭ರಲ್ಲಿ ಮುಚ್ಚಲಾಯಿತು. ನಂತರದ ವರ್ಷಗಳಲ್ಲಿ ಈ ಕೆಳಗಿನ ಪತ್ರಿಕೆಗಳು ಆರಂಭವಾದವು. ದಿ ಕಲ್ಕತ್ತಾ ಗೆಜೆಟ್, ೧೭೭೫ರಲ್ಲಿ ಓರಿಯಂಟಲ್ ಮ್ಯಾಗಜಿನ್ ಆಪ್ ಕಲ್ಕತ್ತಾ, ೧೭೮೬ರಲ್ಲಿ ದಿ ಕಲ್ಕತ್ತಾ ಕ್ರೋನಿಕಲ್, ೧೭೮೮ರಲ್ಲಿ ಮದ್ರಾಸ್ ಕೋರಿಯರ್, ೧೭೮೯ರಲ್ಲಿ ಬಾಂಬೆ ಹೆರಾಲ್ಡ್ ನಂತರ ಏಷ್ಯಾಟಿಕ್ ಮಿರರ್, ಓರಿಯಂಟಲ್ ಸ್ಟಾರ್, ಮದ್ರಾಸ ಗೆಜೆಟ್, ಬಾಂಬೆ ಗೆಜೆಟ್ ಮುಂತಾದವು. ಭಾರತದಲ್ಲಿ ಪತ್ರಿಕೋದ್ಯಮವನ್ನು ಆರಂಭಿಸಿದವರು ಇಂಗ್ಲೀಷರು. ಆದರೆ ಇವರಾರು ಕಂಪನಿಯ ನೌಕರರಾಗಿರಲಿಲ್ಲ. ಇವರು ಕಂಪನಿಯ ನೌಕರರು ಅನುಭವಿಸುತ್ತಿದ್ದ ಸವಲತ್ತುಗಳು ಮತ್ತು ಸರ್ಕಾರದ ಸವಲತ್ತುಗಳ್ನು ವಿಮರ್ಶಾತ್ಮಕವಾಗಿ ಬರೆಯಲಾರಂಭಿಸಿದರು. ಪತ್ರಿಕೆಗಳು ಆರಂಭವಾದಾಗ ಯಾವುದೇ ಪೈಪೋಟಿ ಇರಲಿಲ್ಲ. ಹೆಚ್ಚು ಪತ್ರಿಕೆಗಳು ವಾರಕ್ಕೊಮ್ಮೆ ಪ್ರಕಟಗೊಳ್ಳುತ್ತಿದ್ದವು.

ಗಂಗಾಧರ ಭಟ್ಟಾಚಾರ್ಯ ಎಂಬುವವರು ೧೮೧೬ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮೊದಲ ಪತ್ರಿಕೆಯನ್ನು ಆರಂಬಿಸಿದರು. ಭಾರತೀಯರು ೧೮೧೮ರ ನಂತರ ಭಾರತೀಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಲಾರಂಭಿಸಿದರು. ಅಂತಹ ಪತ್ರಿಕೆಗಳಲ್ಲಿ “ದೀರ್ಘದರ್ಶನ” ಎಂಬ ಮಾಸ ಪತ್ರಿಕೆ ಬಂಗಾಲಿ ಭಾಷೆಯಲ್ಲಿ ಆರಂಭವಾಯಿತು. ನಂತರ ’ಸಮಾಚಾರ ದರ್ಪಣ’ ಮತ್ತು ’ಸಂವದ್ ಕೌಮುದಿ’ ಎಂಬ ಪತ್ರಿಕೆಗಳು ಆರಂಭವಾದವು ರಾಜಾರಾಮ್ ಮೋಹನ್ ರಾಯರು ಭಾರತೀಯ ಪತ್ರಿಕೋದ್ಯಮದ ಆರಂಭಕ್ಕೆ ಅಪಾರವಾಗಿ ಶ್ರಮಪಟ್ಟಿದ್ದಾರೆ. ಇವರು ಪರ್ಶಿಯನ್ ಭಾಷೆಯಲ್ಲಿ ಮಿರಾತ-ಉಲ್-ಅಕ್ಬರ್ ಎಂಬ ಸಾಪ್ತಾಹಿಕವನ್ನು ಆರಂಭಿಸಿದರು. ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ’ಬ್ರಹ್ಮ ನಿಖಿಲ’ ಎಂಬ ಸಂಕೀರ್ಣ ಪತ್ರಿಕೆಗಳು ಮುದ್ರಣವಾಗಲು ಆರಂಭಿಸಿದವು. ಇಂಗ್ಲೀಷರು ಮತ್ತು ಭಾರತೀಯರು ಪತ್ರಿಕೆಗಳ ಬೆಳವಣಿಗೆಗೆ ಸಹಾಯ ಮಾಡಿದರು. ೧೯ನೇ ಶತಮಾನದ ಮೊದಲನೆ ಭಾಗದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪತ್ರಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗಲಾರಂಭಿಸಿದವು. ಅವುಗಳೆಂದರೆ ಟೈಮ್ಸ್ ಆಫ್ ಇಂಡಿಯಾ, ಸ್ಟೇಟ್ಸ್‌ಮನ್, ಫ್ರೆಂಡ್ ಆಫ್ ಇಂಡಿಯಾ, ಮದ್ರಾಸ ಮೇಲ್ ಮುಂತಾದವು. ಭಾರತೀಯರಿಂದ ಪ್ರಕಟಣೆಗೊಳ್ಳುತ್ತಿದ್ದ ಪತ್ರಿಕೆಗಳೆಂದರೆ ಅಮೃತ ಬಜಾರ್ ಪತ್ರಿಕೆ, ಸಂಜೀವಿ, ಮದ್ರಾಸ್ ಹಿಂದು, ಮರಾಠಿ ಭಾಷೆಯ ಕೇಸರಿ ಮುಂತಾದವು ಮುಖ್ಯವಾದವು.

೧೯ ನೇ ಶತಮಾನದ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಗಳು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆ, ಬಂಗಾಳದ ವಿಭಜನೆ ಮುಂತಾದ ಪ್ರಮುಖ ಘಟನೆಗಳು ಪತ್ರಿಕೋದ್ಯಮಕ್ಕೆ ಸ್ಫೂರ್ತಿಯನ್ನು ನೀಡಿತು. ಈ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ರಾಷ್ಟ್ರೀಯತೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು. ರಾಷ್ಟ್ರೀಯ ಚಳುವಳಿ ಹೆಚ್ಚು ಜನಪ್ರಿಯತೆಯನ್ನು ಪಡೆಯಲಾರಂಭಿಸಿದ ಮೇಲೆ ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಇಂಗ್ಲೀಷ್ ಮತ್ತು ದೇಶೀಯ ಭಾಷೆಯಲ್ಲಿ ಪ್ರಾರಂಭವಾದವು. ಗಾಂಧೀಜೀಯವರು ಗುಜರಾತಿ ಭಾಷೆಯಲ್ಲಿ ಜೈಜವಾನ್ ಮತ್ತು ಇಂಗ್ಲೀಷಿನಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆಗಳು ಸರ್ಕಾರದ ಪರವಾಗಿದ್ದು. ಸರ್ಕಾರದ ನೀತಿಗಳನ್ನು ಬೆಂಬಲಿಸಿದವು. ಭಾರತೀಯರಿಂದ ಪ್ರಕಟವಾಗುತ್ತಿದ್ದ ಇಂಗ್ಲೀಷ್ ಮತ್ತು ಭಾರತೀಯ ಭಾಷೆಗಳ ಪತ್ರಿಕೆಗಳು ರಾಷ್ಟ್ರೀಯ ಮನೋಭಾವನೆಯನ್ನು ಬೆಂಬಲಿಸಿ ಅದನ್ನು ಬೆಳೆಸಿದವು. ಈ ಪತ್ರಿಕೆಗಳು ಧಾರ್ಮಿಕ, ಸಾಮಾಜಿಕ, ಆರ್ಥಿಕ, ಪರಿಸ್ಥಿತಿಯನ್ನು ಟೀಕಿಸಿ ಬರೆಯಲಾರಂಭಿಸಿದವು. ಇದು ನಿಜಕ್ಕೂ ಒಂದು ಮಹತ್ವದ ಬೆಳವಣಿಗೆ ಏಕೆಂದರೆ ಅಂದಿನ ದಿನಗಳಲ್ಲಿ ಈ ಪತ್ರಿಕೆಗಳು, ಬ್ರಿಟಿಷರ ಕೆಟ್ಟ ಆಡಳಿತ, ಅವರ ನೀತಿ ಮುಂತಾದವುಗಳನ್ನು ಜನರ ಮನಸ್ಸಿಗೆ ಮುಟ್ಟುವಂತೆ ಬರೆಯಲಾರಂಭಿಸಿದವು. ಕೆಲವು ಗೌರ‍್ನರ್ ಜನರಲ್‌ಗಳು ಭಾರತೀಯ ಪತ್ರಿಕೆಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟರೆ ಮತ್ತೆ ಕೆಲವರು ಪತ್ರಿಕೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಪ್ರಯತ್ನಿಸಿದರು. ಬ್ರಿಟಿಷ್ ಸರಕಾರದ ನೀತಿ ಭಾರತೀಯ ಪತ್ರಿಕೆಗಳ ಮೇಲೆ ಯಾವ ರೀತಿ ಇತ್ತು ಮತ್ತು ಬ್ರಿಟಿಷರ ದಮನಕಾರಿ ನೀತಿಯಿಂದಾಗಿ ಭಾರತೀಯ ಪತ್ರಿಕೋದ್ಯಮದ ಮೇಲೆ ಯಾವ ಪ್ರಭಾವ ಉಂಟಾಯಿತು ಎಂಬುದನ್ನು ತಿಳಿಯುವುದು ಸೂಕ್ತ. ಆರಂಭದಲ್ಲಿ ವೃತ್ತ ಪತ್ರಿಕೆಗಳನ್ನು ಆರಂಭಿಸಿದರು ಬ್ರಿಟಿಷರೆ. ಆದರೆ ಕಂಪನಿಯ ಆಡಳಿತದ ವಿರುದ್ಧವಾಗಿ ವೃತ್ತಪತ್ರಿಕೆಗಳಲ್ಲಿ ಬರೆದರೆ ಅಂತಹ ಪತ್ರಿಕೆಗಳ ಸಂಪಾದಕರನ್ನು ಗಡಿಪಾರು ಮಾಡುತ್ತಿದ್ದರು ಇಲ್ಲವೇ ಇಂಗ್ಲೆಂಡಿಗೆ ಕಳುಹಿಸುತ್ತಿದ್ದರು. ಆದರೆ ಭಾರತೀಯ ವೃತ್ತ ಪತ್ರಿಕೆಗಳ ಸಂಪಾದಕರಿಗೆ ಇಂತಹ ಶಿಕ್ಷೆಯನ್ನು ವಿಧಿಸುವುದಕ್ಕೆ ಬದಲಾಗಿ ಕಾನೂನಿನ ಮೂಲಕ ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾರಂಭಿಸಿದರು. ಈ ರೀತಿ ನಿರ್ಬಂಧಗಳನ್ನು ಶಾಸನದ ಮೂಲಕವೇ ಆರಂಬಿಸಿದರು. ಈ ರೀತಿಯ ನಿರ್ಬಂಧಗಳನ್ನು ಭಾರತೀಯ ಪತ್ರಿಕೋದ್ಯಮದ ಮೇಲೆ ವಿಧಿಸಿದ್ದು ಪತ್ರಿಕಾ ಸ್ವಾತಂತ್ರ್ಯ ಮತ್ತು ಬೆಳವಣಿಗೆಗೆ ಸ್ವಲ್ಪ ಅಡ್ಡಿಯನ್ನುಂಟುಮಾಡಿತು. ಅದೇ ರೀತಿ ಭಾರತೀಯ ಪತ್ರಿಕೆಗಳ ಮೇಲೆ ನಿಯಂತ್ರಣವನ್ನು ಹೇರಲು ಬ್ರಿಟೀಷ್ ಸರ್ಕಾರ ಹಲವಾರು ನಿರ್ಬಂಧಗಳನ್ನು ಕಾನೂನಿನ ಮೂಲಕ ಕಾಲ, ಕಾಲಕ್ಕೆ ತಂದಿತು.

ಅವುಗಳೆಂದರೆ

೧೭೯೯ರ ಸೆನ್ಸಾರ್ ಶಿಪ್ ಕಾಯಿದೆ : ಲಾರ್ಡ್‌ವೆಲ್ಲೆಸ್ಲಿ ಪತ್ರಿಕೆಗಳ ಪರಿಶೀಲನಾಧಿಕಾರದ ಕಾಯಿದೆಯನ್ನು ೧೭೯೯ರಲ್ಲಿ ಜಾರಿಗೆ ತಂದ. ಫ್ರೆಂಚರ ದಾಳಿಯ ಭಯವಿದ್ದುದರಿಂದ ಈ ನಿರ್ಣಯವನ್ನು ಭಾರತೀಯ ಪತ್ರಿಕೆಗಳ ವಿರುದ್ಧ ಕೈಗೊಳ್ಳಬೇಕಾಯಿತು. ಪತ್ರಿಕೆಗಳಿಂದ ಬ್ರಿಟಿಷರ ಬಗ್ಗೆ ವಿಷಯ ಹೊರಗೆ ಗೊತ್ತಾಗಿ ಬ್ರಿಟಿಷರ ಸ್ಥಾನಮಾನಗಳನ್ನು ದುರ್ಬಲಗೊಳಿಸುತ್ತದೆ ಅಥವಾ ಬ್ರಿಟಿಷರ ದೌರ್ಬಲ್ಯಗಳನ್ನು ಆಕ್ರಮಣಕಾರರಿಗೆ ಮನದಟ್ಟು ಮಾಡಿಕೊಟ್ಟು ತೊಂದರೆ ಉಂಟಾಗಬಹುದು ಎಂಬ ಕಾರಣದಿಂದ ವೆಲ್ಲೆಸ್ಲಿ ಈ ಪತ್ರಿಕೆಗಳ ಮುದ್ರಣ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ. ಈ ಕಾಯಿದೆ ಪ್ರಕಾರ ಪತ್ರಿಕೆಯನ್ನು ಮುದ್ರಿಸಿದ ಮುದ್ರಣದ ಹೆಸರು, ಸಂಪಾದಕನ, ಮಾಲೀಕನ ಹೆಸರನ್ನು ಒಳಗೊಂಡಿರಬೇಕು. ಪತ್ರಿಕೆಯೊಂದು ಪತ್ರಿಕೆಯ ಪ್ರತಿಗಳನ್ನು ಮತ್ತು ಮುದ್ರಣಕ್ಕೆ ಮೊದಲೇ ಸಂಗ್ರಹಿಸಿದ ಸಾಮಗ್ರಿಗಳನ್ನು ಪತ್ರಿಕೆಗಳ ಪರಿಶೀಲನಾಧಿಕಾರಿಯಿಂದ ಪರಿಶೀಲನೆಗೆ ಒಳಪಡಿಸಬೇಕು. ೧೮೦೭ರಲ್ಲಿ ಈ ಕಾಯಿದೆಯನ್ನು ನಿಯತಕಾಲಿಕೆ, ಪತ್ರಿಕೆ. ಕರ ಪತ್ರ ಮತ್ತು ಪುಸ್ತಕಗಳ ಮೇಲೆ ವಿಧಿಸಲಾಯಿತು. ಲಾರ್ಡ್‌ಹೆಸ್ಟಿಂಗ್ಸ್ ಈ ಸೆನ್ಸಾರ್ ಶಿಪ್ ಕಾಯಿದೆಯನ್ನು ತೆಗೆದು ಹಾಕಿದನು. ಆದರೆ ರಾಷ್ಟ್ರಕ್ಕೆ ಗಂಡಾಂತರಕಾರಿಯಾದ, ಜನಾಭಿಪ್ರಾಯಕ್ಕೆ ವಿರುದ್ಧವಾದ ಪ್ರಕಟಣೆಯನ್ನು ನಿಷೇಧಿಸಲಾಯಿತು.

೧೮೨೩ ಶಾಸನ : ಗೌರ‍್ನರ್ ಜನರಲ್ ಜಾನ್ ಆಡಮ್, ಲಾರ್ಡ್ ಹೇಸ್ಟಿಂಗ್ಸ್‌ನ ನೀತಿಗೆ ವಿರುದ್ಧವಾಗಿ ೧೮೨೩ರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ಜಾರಿಗೆ ತಂದನು.

. ಪ್ರಕಾಶಕರು ಮುದ್ರಣಾಲಯವನ್ನು ನಡೆಸಲು ಅನುಮತಿಯನ್ನು ಪಡೆಯಬೇಕು

೨. ಎಲ್ಲಾ ಪತ್ರಿಕೆ, ಪುಸ್ತಕಗಳನ್ನು ಸರ್ಕಾರದ ಪರಿಶೀಲನೆಗೆ ಒಳಪಡಿಸಬೇಕು.

ಈ ಕಾನೂನು ಜಾರಿಗೆ ಬರುವುದನ್ನು ರಾಜಾರಾಮ್ ಮೋಹನರಾಯರು ವಿರೋಧಿಸಿದರು. ಇದನ್ನು ಪರಿಗಣಿಸದೆ ಸರ್ಕಾರ ಏಪ್ರಿಲ್ ೧೮೨೩ರಲ್ಲಿ ಈ ಶಾಸನವನ್ನು ಜಾರಿಗೆ ತಂದಿತು.

ಲಾರ್ಡ್‌ ವಿಲಿಯಂ ಬೆಂಟಿಕ್ ಪತ್ರಿಕೆಗಳ ಮೇಲೆ ಹಾಕಿದ್ದ ಲೈಸನ್ಸ್ ಕಾಯಿದೆಯನ್ನು ಬದಲಾವಣೆ ಮಾಡದೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಅವಕಾಶಕೊಟ್ಟು ಪತ್ರಿಕೆಗಳು ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟ ನಂತರ ಬಂದ ಚಾರ್ಲ್ಸ್ ಮೆಟ್‌ಕಾಪ್ ೧೮೨೩ರ ಕಾಯಿದೆಯನ್ನು ರದ್ದುಪಡಿಸಿದ. ಇದರಿಂದ ಇವನು ಭಾರತೀಯ ಪತ್ರಿಕೆಗಳ ವಿಮೋಚಕ ಎಂಬ ಬಿರುದುಗಳಿಸಿದ. ವೃತ್ತಪತ್ರಿಕೆಗಳ ಬಗ್ಗೆ ಇವನ ಉದಾರ ನೀತಿ ೧೮೫೬ರವರೆಗೂ ಮುಂದುವರೆಯಿತು. ಇದು ಭಾರತದಲ್ಲಿ ವೃತ್ತ ಪತ್ರಿಕೆಗಳ ಬೆಳವಣಿಗೆ ಸಹಾಯಕವಾಯಿತು. ಸಿಪಾಯಿ ದಂಗೆಯ ಕಾಲದಲ್ಲಿ ಪತ್ರಿಕೆಗಳ ಸಾಕಷ್ಟು ನಿರ್ಬಂಧಗಳನ್ನು ಹೇರಲಾಯಿತು.

೧೮೬೭ರ ರಿಜಿಸ್ಟ್ರೇಷನ್ ಕಾಯಿದೆ : ೧೮೩೫ರ ಚಾರ್ಲ್ಸ್‌ಮೆಟ್‌ಕಾಪ್‌ನ ಕಾಯಿದೆಗೆ ೧೮೬೭ರಲ್ಲಿ ಪತ್ರಿಕೆ ಮತ್ತು ಪುಸ್ತಕಗಳ ರಿಜಿಸ್ಟ್ರೇಶನ್ ಕಾಯಿದೆ ಜಾರಿಗೆ ಬಂದಿತು. ಈ ಕಾಯಿದೆ ಪತ್ರಿಕೆಗಳ ಸ್ವಾತಂತ್ರ್ಯವನ್ನು ನಿರ್ಬಂಧಪಡಿಸಲಿಲ್ಲ. ಆದರೆ ಈ ಕಾಯಿದೆ ಪ್ರಕಾರ ಮುದ್ರಣಾಲಯದ ಹೆಸರು ಮತ್ತು ಪ್ರಕಾಶಕರ ಹೆಸರು, ಮುದ್ರಣವಾಗುವ ಸ್ಥಳದ ಹೆಸರು ಮುಂತಾದ ದಾಖಲೆಗಳನ್ನು ಕೊಡಬೇಕಾಗಿತ್ತು. ಪ್ರತಿಯೊಬ್ಬ ಪ್ರಕಾಶಕನು ಪುಸ್ತಕದ ಪತ್ರಿಕೆಯನ್ನು ಪ್ರಕಟವಾದ ಒಂದು ತಿಂಗಳ ಒಳಗೆ ಸ್ಥಳೀಯ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ೧೮೭೧ರಲ್ಲಿ ಪತ್ರಿಕೆಗಳ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹಾಕಲಾಯಿತು.

೧೮೭೮ರ ದೇಶ ಭಾಷಾ ಪತ್ರಿಕಾ ಕಾಯಿದೆ : ಲಾರ್ಡ್‌ ಲಿಟ್ಟನ್ ದೇಶೀಯ ಭಾಷೆ ಪತ್ರಿಕೆಗಳ ಕಾಯಿದೆಯನ್ನು ಜಾರಿಗೆ ತಂದ. ಈ ಕಾಯಿದೆ ಜನಾಂಗೀಯ ಭಾವನೆಯನ್ನು ಹೊಂದಿತ್ತು ಮತ್ತು ಪತ್ರಿಕೆಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತು. ನ್ಯಾಯಾಧೀಶರಿಗೆ ಪತ್ರಿಕೆಗಳನ್ನು ಪ್ರಶ್ನಿಸುವ ಅಧಿಕಾರ ಕೊಡಲಾಯಿತು. ಪತ್ರಿಕೆಗಳು ಸರ್ಕಾರದ ವಿರುದ್ಧ ಮತ್ತು ಶಾಂತಿಯನ್ನು ಕದಡುವಂತಹ ವಿಚಾರಗಳನ್ನು ಮುದ್ರಿಸುವುದಿಲ್ಲ ಎಂದು ಭರವಸೆಯನ್ನು ಕೊಡಬೇಕಾಗಿತ್ತು. ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗಿದ್ದು, ಪ್ರಕಾಶಕರು ನಿಗದಿತ ಹಣವನ್ನು ಭದ್ರತೆಗಾಗಿ ಇಡಬೇಕಾಗಿತ್ತು. ಈ ಕಾಯಿದೆಯನ್ನು ಬರೀ ಭಾರತೀಯರ ಮೇಲೆ ವಿಧಿಸಲಾಯಿತೆ ವಿನಃ ಇಂಗ್ಲಿಷರು ನಡೆಸುತ್ತಿದ್ದ ಪತ್ರಿಕೆಗಳಾವುದಕ್ಕೂ ಇಂತಹ ನಿರ್ಬಂಧವನ್ನು ವಿಧಿಸಲಿಲ್ಲ. ಇದು ಬ್ರಿಟಿಷ್ ಸರ್ಕಾರದ ಕೆಟ್ಟ ನಡವಳಿಕೆಯಾಗಿತ್ತು.

ಲಾರ್ಡ್‌ ‌ರಿಪ್ಪನ್ ದೇಶೀಯ ಭಾಷೆಗಳ ಕಾಯಿದೆಯನ್ನು ೧೮೮೮ರಲ್ಲಿ ರದ್ದುಪಡಿಸಿದ ಅದರೆ ವೈಸರಾಯ್ ಕರ್ಜನ್ನನ ಕಾಲದಲ್ಲಿ ಭಾರತೀಯ ದಂಡಸಂಹಿತೆಯಲ್ಲಿ ಪತ್ರಿಕೆಗಳ ಮೇಲೆ ನಿಯಂತ್ರಣ ಹೇರುವ ಅಂಶಗಳನ್ನು ಸೇರಿಸಿದನು.

ವೃತ್ತ ಪತ್ರಿಕೆಗಳ ಕಾಯಿದೆ (೧೯೦೮) : ಈ ಕಾಯಿದೆಯನ್ನು ಭಾರತೀಯರಲ್ಲಿ ಸ್ವಾತಂತ್ರ್ಯ ಚಳುವಳಿ ಬೆಳೆಯುತ್ತಿದ್ದ ಕಾಲದಲ್ಲಿ ಜಾರಿಗೆ ತಂದು ರಾಷ್ಟ್ರೀಯತೆಯ ಮನೋಭಾವನೆಯನ್ನು ಹತ್ತಿಕಲು ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿದ. ಇದು ಭಾರತೀಯರಲ್ಲಿ ಅತೃಪ್ತಿಯನ್ನುಂಟು ಮಾಡಿ ಕ್ರಾಂತಿಕಾರಿಗಳನ್ನು ದಮನ ಮಾಡಲು ವೃತ್ತ ಪತ್ರಿಕೆಗಳ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ ಯಾವುದೇ ಪತ್ರಿಕೆ ಹಿಂಸೆಗೆ ಪ್ರಚೋದಿಸುವ ವಿಚಾರವನ್ನು ಮುದ್ರಿಸಿದರೆ ಮುದ್ರಣಾಲಯವನ್ನು ನ್ಯಾಯಾಧೀಶರು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತು. ಈ ಕಾಯಿದೆಯಡಿಯಲ್ಲಿ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಭಾರತೀಯ ಪತ್ರಿಕಾ ಕಾಯಿದೆ (೧೯೧೦) : ವೃತ್ತಪತ್ರಿಕೆಗಳ ಕಾಯಿದೆಯನ್ನು ಜಾರಿಗೆ ತಂದ ಎರಡು ವರ್ಷಗಳ ನಂತರದಲ್ಲಿ ಸರ್ಕಾರ ಭಾರತೀಯ ಪತ್ರಿಕಾ ಶಾಸನವನ್ನು ಜಾರಿಗೆ ತಂದಿತು. ಸರ್ಕಾರ ಪತ್ರಿಕೆಗಳಲ್ಲಿ ಭಯ ಹುಟ್ಟಿಸಿ ಅವುಗಳನ್ನು ಹಿಡಿತದಲ್ಲಿಡಲು ಇನ್ನು ಬಿಗಿಯಾದ ಕಾಯಿದೆ ತರಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿ ೧೯೧೦ ರ ಕಾಯಿದೆ ಜಾರಿಗೆ ಬಂದಿತು. ಈ ಕಾಯಿದೆಯ ಪ್ರಕಾರ ಸ್ಥಳೀಯ ಸರ್ಕಾರಗಳು ಕನಿಷ್ಠ ೫೦೦ ರೂಪಾಯಿಗಳಿಂದ ೨೦೦೦ ರೂಪಾಯಿಗಳವರೆಗೆ ಮುದ್ರಣಾಲಯದ ಮಾಲೀಕರಿಂದ ಭದ್ರತೆಯ ಹಣವನ್ನು ವಸೂಲಿ ಮಾಡಲು ಅಧಿಕಾರವನ್ನು ಪಡೆದವು. ನಿಷೇಧಿಸಲ್ಪಟ್ಟ ಯಾವುದೇ ವಿಷಯವನ್ನು ಮುದ್ರಿಸಿದರೆ, ಆ ಮುದ್ರಣಾಲಯವನ್ನು ವಶಪಡಿಸಿಕೊಂಡು ಅದರ ನೋಂದಣಿಯನ್ನು ರದ್ದುಪಡಿಸುವ ಅಧಿಕಾರವನ್ನು ಸ್ಥಳೀಯ ಸರ್ಕಾರಗಳಿಗೆ ಕೊಡಲಾಯಿತು. ಸರ್ಕಾರ ಈ ರೀತಿಯ ಕಾರ್ಯ ಕೈಗೊಂಡ ಅಂತಹ ಪತ್ರಿಕೆಗಳು ೨ ತಿಂಗಳ ಒಳಗೆ ಉಚ್ಚನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಬಹುದಾಗಿತ್ತು. ಈ ಶಾಸನ ಭಾರತೀಯ ಪತ್ರಿಕೋದ್ಯಮವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಪತ್ರಿಕೆಗಳ ಮೇಲೆ ದಮನಕಾರಿ ನೀತಿಯನ್ನು ಈ ಶಾಸನ ಅನುಸರಿಸಿತು. ಇದು ಜಾರಿಗೆ ಬಂದ ೫ ವರ್ಷದೊಳಗೆ ಸರ್ಕಾರ ಸುಮಾರು ೫ ಲಕ್ಷ ರೂಪಾಯಿಗಳಷ್ಟು ಭದ್ರತೆಗಾಗಿ ಇಟ್ಟಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿತು. ೧೯೨೧ರಲ್ಲಿ ಸರ್ ತೇಜ್ ಬಹದ್ದೂರ್ ಸಪ್ರುರವರ ಅಧ್ಯಕ್ಷತೆಯಲ್ಲಿ ಪ್ರೆಸ್ ಕಮೀಟಿಯನ್ನು ನೇಮಿಸಲಾಯಿತು. ಜೊತೆಗೆ ವೈಸರಾಯ್ ಸಮಿತಿಯಲ್ಲಿದ್ದ ಪತ್ರಿಕಾ ಕಾನೂನಗಳ ಬಗ್ಗೆ ಪುನರ್ ಪರಿಶೀಲನಾ ಕಾರ್ಯವನ್ನು ಆರಂಭಿಸಲಾಯಿತು. ಇದು ೧೯೦೮ ಮತ್ತು ೧೯೧೦ ರ ಕಾಯಿದೆಗಳನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡಿತು.

ಭಾರತೀಯ ಪತ್ರಿಕಾ ಕಾಯಿದೆ (೧೯೩೧): ೧೯೧೦ರಲ್ಲಿ ಜಾರಿಗೆ ತಂದಿದ್ದ ಪತ್ರಿಕಾ ಕಾಯಿದೆಯನ್ನು ಮತ್ತೆ ಪುನಶ್ಚೇತನಗೊಳಿಸಿತು. ಏಕೆಂದರೆ ೧೯೨೯ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿ ೧೯೩೦ ರ ಜನವರಿ ೨೬ ರಂದು ಸ್ವಾತಂತ್ರ್ಯದ ದಿನಾಚರಣೆಯನ್ನು ಭಾರತದಾದ್ಯಂತ ಆಚರಿಸಲಾಯಿತು. ಅಲ್ಲದೇ ಕಾಯಿದೆ ಭಂಗ ಚಳುವಳಿಗಳು ಆರಂಭವಾದವು. ಈ ಸಂದರ್ಭದಲ್ಲಿ ಪತ್ರಿಕೆಗಳು ಆಡಳಿತ ನೀತಿಯನ್ನು ಟೀಕಿಸಿ ಹಲವಾರು ಲೇಖನಗಳನ್ನು ಬರೆದವು ಹಾಗೂ ಸರ್ಕಾರ ರಾಷ್ಟ್ರೀಯ ನಾಯಕರನ್ನು ಬಂಧಿಸಿದಾಗ ಅವರ ಬಗ್ಗೆ ಹೆಚ್ಚು ಹೆಚ್ಚು ಲೇಖನವನ್ನು ಬರೆದು ಜನರನ್ನು ಚಳುವಳಿಗೆ ತೊಡಗುವಂತೆ ಪ್ರಚೋದಿಸಿದವು. ಈ ಹಿನ್ನೆಲೆಯಲ್ಲಿ ೧೯೩೧ರಲ್ಲಿ ಸರ್ಕಾರ ಭಾರತೀಯ ಪತ್ರಿಕಾ ಶಾಸನವನ್ನು ಜಾರಿಗೆ ತಂದು ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿತು. ಈ ಕಾಯಿದೆ ಪ್ರಕಾರ ಪ್ರಾಂತೀಯ ಸರ್ಕಾರಗಳು ಪತ್ರಿಕೆಗಳನ್ನು ದಮನ ಮಾಡಲು ಹಿಂಸೆಗೆ ಪತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚೋದಿಸುವ ಯಾವುದೇ ಪತ್ರಿಕೆಯನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನು ಕೊಡಲಾಯಿತು. ಪತ್ರಿಕೆಗಳು ಯಾವುದೇ ಸುದ್ಧಿಯನ್ನು ನ್ಯಾಯಾಧೀಶರು ಪರಿಶೀಲಿಸಿ ಆಜ್ಞೆ ನೀಡಿದ ನಂತರ ಪ್ರಕಟಿಸಬೇಕಾಗಿತ್ತು. ಮುದ್ರಕರು ಹೊಸದಾಗಿ ಪತ್ರಿಕೆಗಳನ್ನು ಆರಂಭಿಸುವುದಕ್ಕೆ ಪರವಾನಗಿ ನೀಡಲು ೧೦೦೦ ರೂಪಾಯಿಗಳಿಂದ ೧೦,೦೦೦ ರೂಪಾಯಿಗಳವರೆಗೆ ಭದ್ರತೆಯ ಹಣವನ್ನು ಇಡಬೇಕಾಗಿತ್ತು. ಭದ್ರತೆಯ ಹಣವನ್ನು ಕಟ್ಟದೇ ಇದ್ದ ಪತ್ರಿಕೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿತ್ತು. ೧೯೩೨ರಲ್ಲಿ ಈ ಕಾಯಿದೆಯನ್ನು ಇನ್ನು ವಿಸ್ತರಿಸಲಾಯಿತು. ದ್ವಿತೀಯ ಮಹಾಯುದ್ದದ ಸಂದರ್ಭದಲ್ಲಿ ಕಾರ್ಯಾಂಗ ಪತ್ರಿಕಾ ನಿರ್ಬಂಧನವನ್ನು ಹೇರಿ ಪತ್ರಿಕೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಸಂದರ್ಭದಲ್ಲಿ ಕಾರ್ಯಾಂಗ ಪತ್ರಿಕಾ ನಿರ್ಬಂಧನವನ್ನು ಹೇರಿ ಪರಿಶೀಲಿಸುವ ಅಧಿಕಾರವನ್ನು ಸಾಕಷ್ಟು ಪಡೆಯಿತು. ಅಲ್ಲದೇ ಕಾಂಗ್ರೆಸ್ಸಿನ ಬಗ್ಗೆ ಬರೆಯುವ ಲೇಖನಗಳೆಲ್ಲವನ್ನು ಕಾನೂನಿಗೆ ವಿರುದ್ಧವಾದವುಗಳು ಎಂಬುದಾಗಿ ಘೋಷಿಸಲಾಯಿತು. ಈ ವಿಶೇಷ ಅಧಿಕಾರಿಗಳು ೧೯೪೫ರಲ್ಲಿ ಕೊನೆಗೊಂಡಿತು.

೧೯೪೭ರಲ್ಲಿ ಸರ್ಕಾರ ಪ್ರೆಸ್ ಎನ್‌ಕ್ವೈರಿ ಕಮಿಟಿಯನ್ನು ಪತ್ರಿಕಾ ಕಾಯಿದೆಗಳನ್ನು ಪುನರ್ ಪರಾಮರ್ಶಿಸಲು ನೇಮಿಸಲಾಯಿತು. ಹಿಂದಿನ ಪತ್ರಿಕಾ ಕಾಯಿದೆಗಳನ್ನು ವಾಪಸ್ಸು ತೆಗೆದುಕೊಂಡು ಸರ್ಕಾರದ ನಿಯಂತ್ರಣದಿಂದ ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕು. ಎಂಬುದಾಗಿ ವರದಿ ಸಲ್ಲಿಸಿತು. ಈ ವರದಿಯ ಆಧಾರದ ಮೇಲೆ ಸರ್ಕಾರ ಪತ್ರಿಕಾ ಕಾನೂನುಗಳನ್ನು ಉದಾರಗೊಳಿಸಿತು. ೧೯೪೮ರಲ್ಲಿ ಹಿಂದೆ ಹೇರಿದ್ದ ಪತ್ರಿಕಾ ನಿರ್ಬಂಧಗಳನ್ನು ತೆಗೆದುಹಾಕಿತು. ೧೯೫೧ರಲ್ಲಿ ಭಾರತ ಸರ್ಕಾರ ಪತ್ರಿಕಾ ಕಾಯಿದೆಯನ್ನು ಜಾರಿಗೆ ತಂದು ಪತ್ರಿಕೆಗಳ ಮೇಲೆ ಸ್ವಲ್ಪ ನಿರ್ಬಂಧವನ್ನು ಹೇರಲಾಯಿತು. ಈ ಕಾಯಿದೆ ಪ್ರಕಾರ ಸರ್ಕಾರ ಭದ್ರತೆ ಹಣವನ್ನು ವಸೂಲಿ ಮಾಡುವುದು. ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಷೇಧಿತ ವಿಚಾರಗಳನ್ನು ಮತ್ತು ಶಿಕ್ಷಿಸುವ ಅಧಿಕಾರವನ್ನು ಪಡೆಯಿತು. ಇದನ್ನು ಅಖಿಲ ಭಾರತ ವೃತ್ತ ಪತ್ರಿಕೆಗಳ ಸಂಪಾದಕರ ಸಂಘ ವಿರೋಧಿಸಿತು. ಕೊನೆಗೆ ಸರ್ಕಾರ ಸಂಪಾದಕರ ಸಂಘದ ಒತ್ತಾಯಕ್ಕೆ ಮಣಿದು ೧೯೫೨ರಲ್ಲಿ ಪ್ರೆಸ್ ಕಮಿಷನ್ನನ್ನು ನ್ಯಾಯಮೂರ್ತಿ ರಾಜ್ಯಾಧ್ಯಕ್ಷನ ಅಧ್ಯಕ್ಷತೆಯಲ್ಲಿ ನೇಮಿಸಿತು. ೧೯೫೪ರಲ್ಲಿ ಈ ಪ್ರೆಸ್ ಕಮಿಷನ್ ತನ್ನ ವರದಿಯನ್ನು ಸಲ್ಲಿಸಿತು. ಈ ಪ್ರೆಸ್ ಕಮಿಷನ್ನಿನ ವರದಿಯ ಆಧಾರದ ಮೇಲೆ ಭಾರತ ಸರ್ಕಾರ ಪ್ರೆಸ್ ಕೌನ್ಸಿಲ್ಲನ್ನು ಸ್ಥಾಪಿಸಿತು. ಇದು ಪತ್ರಿಕೆಗಳ ನೈತಿಕ ಮಟ್ಟವನ್ನು ಸುಧಾರಿಸುವುದು ಪತ್ರಿಕೋದ್ಯಮದಲ್ಲಿ ಏಕಸ್ವಾಮ್ಯತೆಯನ್ನು ತಡೆಗಟ್ಟುವುದು ಸಮಾಜದಲ್ಲಿ ಪತ್ರಿಕೆಗಳ ಜವಾಬ್ದಾರಿ ಮುಂತಾದ ಧ್ಯೇಯೋದ್ಧೇಶಗಳನ್ನು ಪ್ರೆಸ್ ಕೌನ್ಸಿಲ್ ಹೊಂದಿತ್ತು. ನಂತರದ ಕಾಲದಲ್ಲಿ ಪತ್ರಿಕೋದ್ಯಮದ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ೧೯೫೪, ೧೯೫೫, ೧೯೫೬ ಮತ್ತು ೧೯೬೦ರಲ್ಲಿ ಶಾಸನಗಳನ್ನು ಜಾರಿಗೆ ತಂದು ಪತ್ರಿಕೋದ್ಯಮದ ಬೆಳವಣಿಗೆಗೆ ಸಹಕಾರಿಯಾಯಿತು.

ಮೈಸೂರು ಸಂಸ್ಥಾನದಲ್ಲಿ ಪತ್ರಿಕೋದ್ಯಮ

ವಸಾಹತುಶಾಹಿಗಳ ಆಳ್ವಿಕೆಯ ಕಾಲದಲ್ಲಿ ಸಂಸ್ಥಾನದ ಎಲ್ಲೆಡೆಯೂ ಆಧುನಿಕ ಶಿಕ್ಷಣ ಪ್ರಸಾರಕ್ಕೆ ನೆರವಾಯಿತು. ಭಾರತದಾದ್ಯಂತ ಪಾಶ್ಚಿಮಾತ್ಯ ಕ್ರಮದಲ್ಲೇ ಕ್ರೈಸ್ತ ಮಿಷನರಿಗಳು ಶಿಕ್ಷಣವನ್ನು ಪ್ರಾರಂಭಿಸಿದವು. ೧೮೮೧ ರ ಹೊತ್ತಿಗೆ ಮೈಸೂರು ಸಂಸ್ಥಾನದಲ್ಲಿ ೨,೦೦೦ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದವು. ಆ ಹೊತ್ತಿಗೆ ಮುಂಬಯಿ- ಕರ್ನಾಟಕ ಪ್ರದೇಶದಲ್ಲಿ ಸುಮಾರು ೬೫೦ ಶಾಲೆಗಳಿದ್ದವು. ಮುಂಬಯಿ ಕರ್ನಾಟಕದಲ್ಲಿ ಕೇವಲ ಮರಾಠಿ ಶಾಲೆಗಳಿದ್ದರೂ, ಎಲಿಯಟ್ ಮತ್ತು ಡೆಪ್ಯೂಟಿ ಚೆನ್ನಬಸಪ್ಪನವರಂತಹ ವ್ಯಕ್ತಿಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಲು ಶ್ರಮಿಸಿದರು. ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ೧೮೭೦ರಲ್ಲಿ ಸರ್ಕಾರಿ ಕಾಲೇಜನ್ನು ಸ್ಥಾಪಿಸಲಾಯಿತು. (ಈ ಕಾಲೇಜಿಗೆ ೧೮೭೫ರಲ್ಲಿ ಸೆಂಟ್ರಲ್ ಕಾಲೇಜು ಎಂದು ಹೆಸರಿಡಲಾಯಿತು) ೧೮೮೨ರಲ್ಲಿ ಬೆಂಗಳೂರಿನ ಎರಡನೇ ವಿದ್ಯಾಸಂಸ್ಥೆಯನ್ನಾಗಿ ಸೆಂಟ್ ಜೋಸೆಫ್ ಕಾಲೇಜು ಸ್ಥಾಪನೆಯಾಯಿತು. ಮೈಸೂರಿನ ಮಹಾರಾಜ ಕಾಲೇಜು ೧೮೭೦ರಲ್ಲಿ ಆರಂಭವಾಯಿತು. ಮಂಗಳೂರಿನಲ್ಲಿ ೧೮೬೯ರಲ್ಲಿ ಸರ್ಕಾರಿ ಕಾಲೇಜು ಸ್ಥಾಪನೆಯಾಯಿತು. ಹಾಗೂ ೧೮೨೯ರಲ್ಲಿ ಕನ್ನಡದಲ್ಲಿ ಮುದ್ರಣವನ್ನು ಆರಂಭಿಸಿದ್ದರು. ಮೊದಲಿಗೆ ಕಲ್ಕತ್ತಾದ ಸಮೀಪ ಸೇರಾಂಪುರದಿಂದ ಮಂಗಳೂರು ಸಮಾಚಾರ ಎಂಬ ಮೊದಲ ವಾರ್ತಾ ಪತ್ರಿಕೆಯನ್ನು ೧೮೪೩ರಲ್ಲಿ ಬಾಸೆಲ್ ಮಿಷನ್ ಅವರು ಆರಂಭಿಸಿದರು. ಅನೇಕ ಪ್ರಾಚೀನ ಕನ್ನಡ ಕಾವ್ಯಗಳು ಮುದ್ರಣಗೊಂಡವು. ಎಫ್. ಕಿಟೆಲ್ ಅವರು ಕನ್ನಡದ ಪ್ರಥಮ ಕನ್ನಡ ಇಂಗ್ಲಿಷ್ ಡಿಕ್ಷನರಿಯನ್ನು ರಚಿಸಿದರು. ಈ ಎಲ್ಲ ಪ್ರಗತಿಗಳಿಗೂ ಸಾಹಿತ್ಯ ಚಟುವಟಿಕೆಗಳು ಹೊಸ ಮಾರ್ಗದಲ್ಲಿ ಸಾಗಲು ನೆರವಾದವು. ಕನ್ನಡ ಗದ್ಯವು ಜನಪ್ರಿಯವಾಯಿತು ಮತ್ತು ಸಾಹಿತ್ಯದಲ್ಲಿ ಲೌಕಿಕ ವಿಷಯಗಳನ್ನು ಒಳಗೊಂಡ ಸಾಹಿತ್ಯ ಕೃತಿಗಳು ಪ್ರಕಟಗೊಂಡವು.

ಕನ್ನಡ ವೃತ್ತ ಪತ್ರಿಕೆಗಳಿಗೆ ೧೭೦ ವರ್ಷಗಳ ಇತಿಹಾಸವಿದೆ. ಕನ್ನಡದ ಪ್ರಥಮ ವೃತ್ತ ಪತ್ರಿಕೆ ಮಂಗಳೂರು ಸಮಾಚಾರ ಕರಾವಳಿಯ ಮಂಗಳೂರಿನಲ್ಲಿ ೧೮೪೩ರ ಜುಲೈನಲ್ಲಿ ಪ್ರಕಟವಾಯಿತು. ಆ ಪತ್ರಿಕೆಯ ಸಂಪದಾಕರು ರೆವರೆಂಡ್ ಹೆರ್ಮನ್ ಮೋಗ್ಲಿಂಗ್ ಎಂಬ ಬಾಸೆಲ್ ಮಿಷನ್ ಪಾದ್ರಿ. ಈ ಪತ್ರಿಕೆಯ ಪ್ರಕಾಶನದ ಹಿಂದೆ ಕ್ರೈಸ್ತ ಧರ್ಮದ ಪ್ರಚಾರದ ಉದ್ದೇಶವಿದ್ದರೂ, ಅದು ಅನೇಕ ಸ್ಥಳೀಯ ಸುದ್ದಿಯನ್ನು ಪ್ರಸಾರ ಮಾಡುತ್ತಿತ್ತು. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಿಯರು ಮೋಗ್ಲಿಂಗ್‌ರನ್ನು ಅನುಸರಿಸಿದರು. ಈ ಮೂಲಕ ಅನೇಕ ಕನ್ನಡ ವೃತ್ತಪತ್ರಿಕೆಗಳು ಪ್ರಕಟಗೊಂಡವು ಇದರಲ್ಲಿ ಮೈಸೂರು ಸಂಸ್ಥಾನ ಮುಂದಾಗಿಯೇ ಮುನ್ನಡೆಯಿತು.

ಮೈಸೂರು ಸಂಸ್ಥಾನ ವಸಾಹತುಶಾಹಿಗಳ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಮೈಸೂರು ನಗರವು ಕನ್ನಡ ಸಾಹಿತ್ಯ ಮತ್ತು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು. ಸ್ವಾಭಾವಿಕವಾಗಿಯೇ ಅನೇಕ ವೃತ್ತ ಪತ್ರಿಕೆಗಳ ಹಾಗು ನಿಯತಕಾಲಿಕೆಗಳು ಪ್ರಮುಖವಾಗಿ ಮೈಸೂರು ವೃತ್ತಾಂತ ಬೋಧಿನಿ ಮತ್ತು ಕರ್ನಾಟಕ ಪ್ರಕಾಶಿಕಾ ಪತ್ರಿಕೆಗಳು ಗಮನಾರ್ಹವಾದವುಗಳಾಗಿವೆ. ಇದೇ ಸಮಯದಲ್ಲಿ ಬೆಳಗಾವಿ, ಬಿಜಾಪುರ, ಧಾರವಾಡ, ಮೈಸೂರು, ಶಿವಮೊಗ್ಗ, ಕಾರವಾರ ಮತ್ತು ಬೆಂಗಳೂರುಗಳಿಂದಲೂ ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳು ಪ್ರಕಟವಾಗಲು ಪ್ರಾರಂಭಗೊಂಡವು. ಮೈಸೂರು ನಗರದ ಲ್ಯಾಂನ್‌ಡೌನ್‌ ಕಟ್ಟಡದ ಎದುರುಗಡೆ ಇರುವ ಪುತ್ತಳಿಯು ಮೈಸೂರು ಸಂಸ್ಥಾನದ ಪತ್ರಿಕೆಯ ಪಿತಾಮಹಾರೆನ್ನಿಸಿಕೊಂಡಿರುವ ಎಂ. ವೆಂಕಟಕೃಷ್ಣಯ್ಯನವರದ್ದಾಗಿದೆ. ಇವರು ಕರ್ನಾಟಕದ ಪತ್ರಿಕೋದ್ಯಮದಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರು ೧೮೮೩ರಲ್ಲಿ ಉನ್ನತ ದರ್ಜೆಯ ಹಿತಬೋಧಿನಿ ಎಂಬ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದರು. ಈ ಪತ್ರಿಕೆಗೆ ಎಂ. ಬಿ. ಶ್ರೀನಿವಾಸ ಅಯ್ಯಂಗಾರ್ ಮತ್ತು ಎಂ. ಎಸ್, ಪುಟ್ಟಣ್ಣ ಅವರು ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ವೆಂಕಟಕೃಷ್ಣಯ್ಯ ಅವರು ಮೈಸೂರಿನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲಿಯೂ ಅನೇಕ ಪತ್ರಿಕೆಗಳನ್ನು ಪ್ರಾರಂಭಿಸಿದರು. ಉದಾಹರಣೆಗೆ ೧೮೮೬ರಲ್ಲಿ ಪ್ರಾರಂಭಗೊಂಡ ಇಂಗ್ಲೀಷ್ ಪತ್ರಿಕೆಯಾಗಿರುವ ಮೈಸೂರು ಹೆರಾಲ್ಡ್, ಇಂಗ್ಲೀಷ್ ವಾರಪತ್ರಿಕೆಯಾಗಿ ೧೯೧೨ರಲ್ಲಿ ಪ್ರಕಟವಾದ ವೆಲ್ತ್ ಆಫ್ ಮೈಸೂರು, ೧೯೧೨ರಲ್ಲಿ ಪ್ರಕಟಗೊಂಡ ಕನ್ನಡದ ದಿನಪತ್ರಿಕೆ ಸಂಪದಭ್ಯುದಯ, ಇದೇ ವರ್ಷ ಪ್ರಕಟಗೊಂಡ ಇಂಗ್ಲೀಷ್ ದಿನಪತ್ರಿಕೆಯಾದ ನೇಚರ್ಕ್ಯೂರ್ಗಳು ಬಹುಮುಖ್ಯವಾಗಿ ಕಂಡು ಬರುತ್ತವೆ. ೧೯೧೨ರಲ್ಲಿ ಮೈಸೂರು ಜಿಲ್ಲೆ ಯಳಂದೂರು ತಾಲ್ಲೂಕಿನ ಅಗರಂ ಎಂಬ ವಾರಪತ್ರಿಕೆ ಈ ಸಂದರ್ಭದ ಚರಿತ್ರೆ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಅನೇಕ ಕೊಡುಗೆ ನೀಡಿದೆ. ಈ ಪತ್ರಿಕೆ ಅರವತ್ತನೇ ದಶಕದವರೆಗೆ ದಿನಪತ್ರಿಕೆಯಾಗಿ ಪ್ರಕಟವಾಗುತ್ತಿದ್ದದ್ದು ವಿಶೇಷವಾಗಿದೆ. ಕನ್ನಡದ ಹಿರಿಯ ಸಾಹಿತಿಗಳಾದ ಡಿ.ವಿ. ಗುಂಡಪ್ಪ ಅವರು ಮೈಸೂರು ಸಂಸ್ಥಾನದಲ್ಲಿ ಪತ್ರಿಕೋದ್ಯಮಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ೧೯೦೭ರಲ್ಲಿ ಭಾರತಿ ಎಂಬ ಕನ್ನಡ ದಿನಪತ್ರಿಕೆಯನ್ನು ಹಾಗೂ ಮೈಸೂರು ಟವರ್ಸ್ ಎಂಬ ವಾರಪತ್ರಿಕೆಯನ್ನು ೧೯೦೯ರಲ್ಲಿ ಬೆಂಗಳೂರಿನಿಂದ ಪ್ರಕಟಿಸಲು ಮುಂದಾದರು. ಇವರು ಪ್ರಕಟಪಡಿಸಿದ ೧೯೧೫ ಅರ್ಥ ಸಾಧಕ ಪತ್ರಿಕೆ, ಕನ್ನಡ ಮಾಸ ಪತ್ರಿಕೆ ಮತ್ತು ಕರ್ನಾಟಕ ಎಂಬುವುದರ ಜೊತೆಗೆ ೧೯೧೨ರಲ್ಲಿ ಬೆಂಗಳೂರಿನಿಂದ ಪ್ರಕಟಣೆ ಪ್ರಾರಂಬಿಸಿದ ಇಂಗ್ಲೀಷ್ ವಾರಪತ್ರಿಕೆಗಳು ಪ್ರಮುಖವಾದವು. ಇದರ ಆಧಾರ ಮೇಲೆ ಉತ್ತರ ಕರ್ನಾಟಕದಲ್ಲಿ ಕನ್ನಡ ಇಂಗ್ಲೀಷ್ ವಾರಪತ್ರಿಕೆಯಾಗಿ ವಿಭಾಕರ ಎಂಬ ಪತ್ರಿಕೆ ೧೯೧೭- ೧೮ರಲ್ಲಿ ಪ್ರಕಟವಾಯಿತು. ಈ ಪತ್ರಿಕೆಯ ಸಂಪಾದಕರು ಉಲ್ಲೇಖವಾಗಿರುವ ಪಂತಪ್ಪ ಚಿಕ್ಕೋಡಿಯವರು ಎಂಬುದು ಗಮನಾರ್ಹವಾಗಿದೆ. ನಂತರ ಇಪ್ಪತನೇ ಶತಮಾನದ ಪ್ರಾರಂಭದ ಕಾಲದಲ್ಲಿ ಮೈಸೂರು ಸಂಸ್ಥಾನವಲ್ಲದೆ ಕನ್ನಡ ಪ್ರದೇಶಗಳಲ್ಲೆಲ್ಲ ಆವರಿಸಿದ್ದ ಭಾರತ ರಾಷ್ಟ್ರೀಯ ಚಳುವಳಿಗಳು ಕನ್ನಡ ಪತ್ರಿಕೋದ್ಯಮದ ರೂಪವನ್ನೇ ಬದಲಾಯಿಸಿತು. ಭಾರತದ ರಾಜಕೀಯ ರಂಗದಲ್ಲಿ ಮಹಾತ್ಮ ಗಾಂಧಿ ಅವರ ಪ್ರವೇಶ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಭಾವ ಬೀರಿತು. ಈ ಸಂದರ್ಭದಲ್ಲಿ ೧೯೧೩ರಲ್ಲಿ ಹುಬ್ಬಳ್ಳಿಯಿಂದ ಕನ್ನಡ ಕೇಸರಿ ಹಾಗೂ ಧಾರವಾಡದಿಂದ ಚಂದ್ರೋದಯ ಪತ್ರಿಕೆಗಳು ಪ್ರಕಟಗೊಂಡವು. ೧೯೧೭ರಲ್ಲಿ ಶುಭೋದಯ ಹಾಗೂ ೧೯೧೩ರಲ್ಲಿ ಸಚಿತ್ರ ಭಾರತ, ೧೯೨೧ರಲ್ಲಿ ಕರ್ಮವೀರ ಎಂಬ ಪತ್ರಿಕೆಗಳು ಪ್ರಕಟಗೊಂಡವು. ೧೯೨೫ರಲ್ಲಿ ಬಾಗಲಕೋಟೆಯಿಂದ ಕನ್ನಡಿಗ ಮತ್ತು ವಿಜಯ ಎಂಬ ಪತ್ರಿಕೆಗಳು ಧಾರವಾಡದಿಂದ ತಮ್ಮ ಪ್ರಕಟಣೆಯನ್ನು ಪ್ರಾರಂಭಿಸಿದವು. ಈ ಎಲ್ಲ ಪತ್ರಿಕೆಗಳು ವಸಾಹತುಶಾಹಿಗಳ ವಿರುದ್ಧ ಹಾಗೂ ಭಾರತ ರಾಷ್ಟ್ರೀಯ ಚಳವಳಿಗೆ ಬೆಂಬಲ ಸೂಚಿಸುವ ಅನೇಕ ಲೇಖನಗಳನ್ನು ಬರೆದು ಜನರಲ್ಲಿ ರಾಷ್ಟ್ರೀಯತೆ ಕುರಿತು ಅರಿತು ಮೂಡಿಸಿದವು. ಮೈಸೂರಿನಿಂದ ೧೯೨೬ರಲ್ಲಿ ಪಿ. ಆರ್. ರಾಮಯ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ತಾಯಿನಾಡು ಎಂಬ ಪತ್ರಿಕೆಯು ಒಂದು ರಾಷ್ಟ್ರೀಯವಾದಿ ವೃತ್ತಪತ್ರಿಕೆಯಾಗಿ ಹೊರಹೊಮ್ಮಿತು. ಪ್ರಾರಂಭದಲ್ಲಿ ಇದು ವಾರಪತ್ರಿಕೆಯಾಗಿತ್ತು. ನಂತರ ಅದು ೧೯೨೮ರಲ್ಲಿ ಬೆಂಗಳೂರಿಗೆ ತನ್ನ ಕೇಂದ್ರವನ್ನು ಬದಲಾಯಿಸಿಕೊಂಡು ದಿನಪತ್ರಿಕೆಯಾಗಿ ಪ್ರಕಟಗೊಂಡಿತು. ನಂತರ ೧೯೩೧ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ ದೇಶ ಬಂಧು ಎಂಬ ಪತ್ರಿಕೆಯು ಎನ್. ಎಸ್. ಸೀತಾ ರಾಮಶಾಸ್ತ್ರಿ ಹಾಗೂ ಸಿ. ಹಯವದನರಾವ್ ಅವರ ಸಂಪಾದಕತ್ವದಲ್ಲಿ ಹೊರಬರಲಾರಂಭಿಸಿದ ಪತ್ರಿಕೆ. ಇವರು ವಾರಪತ್ರಿಕೆ ಹಾಗೂ ದಿನಪತ್ರಿಕೆಯಾಗಿ ಪ್ರಕಟಗೊಂಡಿತು. ನಂತರ ೧೯೩೧ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ ದೇಶ ಬಂಧು ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ನಂತರ ಅಂದು ಕರ್ನಾಟಕದ ರಾಜಕೀಯದಲ್ಲಿ ತಮ್ಮ ಸಂಪಾದಕೀಯದಿಂದಲೇ ಮನೆಮಾತಾಗಿದ್ದ ಸೀತಾರಾಮ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳಲಾರಂಭಿಸಿದ ವೀರಕೇಸರಿ ಎಂಬ ಪತ್ರಿಕೆ ೧೯೨೮ರಲ್ಲಿ ಬೆಂಗಳೂರಿನಿಂದ ಪ್ರಕಟಗೊಳ್ಳಲು ಆರಂಭಗೊಂಡಿತ್ತು. ೧೯೨೫ರಲ್ಲಿ ತಿ. ತಾ. ಶರ್ಮ. ಅವರ ಸಂಪಾದಕತ್ವದ ವಿಶ್ವಕರ್ನಾಟಕ ಎಂಬ ಪತ್ರಿಕೆ ಪ್ರಕಟಣೆಗೊಂಡಿತ್ತು. ಆಡಳಿತಾತ್ಮಕ ಅಭಿವೃದ್ಧಿಗೆ ಇವರ ಲೇಖನಗಳು ಹೆಚ್ಚಿನ ಸಹಾಕಾರಿಯಾಗುವಂತೆ ಮಾಡಿದವು. ೧೯೩೧ ರಿಂದ ಬಿ. ಎನ್ ಗುಪ್ತ್ ಎಂಬುವವರು ಪ್ರಜಾಮಿತ್ರ ಎಂಬ ಪತ್ರಿಕೆಯನ್ನು ಹುಬ್ಬಳ್ಳಿಯಿಂದ ಪ್ರಕಟಿಸಲಾರಂಭಿಸಿದರು. ಇವರ ಸಂಪಾದಕತ್ವದಲ್ಲಿಯೇ ಜನವಾಣಿ ಎಂಬ ಸಾಮಾಜಿಕ ಸಮಸ್ಯೆಗಳ ಮೇಲೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾರಂಭಗೊಂಡ ಪತ್ರಿಕೆ ಪ್ರಕಟಣೆಗೊಂಡಿತ್ತು. ರಾಷ್ಟ್ರೀಯ ಚಳವಳಿಯು ಉತ್ತುಂಗಕ್ಕೇರಿದಾಗ ಹಲವಾರು ಪತ್ರಿಕೆಗಳು ಉಗಮವಾದವು. ರಾಷ್ಟ್ರೀಯ ಚಳವಳಿಗೆ ಮುಂದಾಗಿದ್ದ ಜನರೂ ಸಹ ಹೊಸ ಹೊಸ ಪತ್ರಿಕೆಗಳಿಗಾಗಿ ಹಾತೊರೆಯುತ್ತಿದ್ದರು. ಒಂದು ಸನ್ನಿವೇಶವನ್ನು ನಿರ್ಮಾಣ ಮಾಡಿಕೊಂಡಿದ್ದರು. ಇದಕ್ಕೆ ಕಾರಣವಾಗಿ ಸಂದರ್ಭದಲ್ಲಿದ್ದ ಪತ್ರಿಕೆಗಳಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಸೂಚಿಸುವಂತಹ ಪತ್ರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕಟಗೊಳ್ಳಲಾರಂಭಿಸಿದವು. ಆಲೂರು ವೆಂಕಟರಾಯರ ಜಯ ಕರ್ನಾಟಕ ೧೯೨೨ರಲ್ಲಿ ಧಾರವಾಡದಿಂದ ಪ್ರಕಟಣೆಗೆ ಮುಂದಾಯಿತು. ಧಾರವಾಡದಿಂದಲೇ ’ಜಯಂತಿಎಂಬ ಪತ್ರಿಕೆ ೧೯೩೮ರಲ್ಲಿ ಪ್ರಕಟಗೊಂಡರೆ, ೧೯೩೨ರಲ್ಲಿ ಬೆಂಗಳೂರಿನಿಂದ ಪ್ರಬುದ್ಧ ಕರ್ನಾಟಕ ಹಾಗೂ ೧೯೧೬ರಿಂದ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳು ಪ್ರಕಟಣೆಯನ್ನು ಪ್ರಾರಂಭಿಸಿದವು. ಹೀಗೆ ಪತ್ರಿಕೆಗಳು ವಸಾಹತುಶಾಹಿಗಳ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದಲ್ಲಿನ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಪ್ರಗತಿಗೆ ತಮ್ಮದೇ ಆದ ಪಾತ್ರವನ್ನು ನೀಡಿವೆ, ನೀಡುತ್ತಿವೆ. ವಸಾಹತು ಶಾಹಿಗಳ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಅವು ವಹಿಸಿರುವ ಪಾತ್ರ ಗಮನಾರ್ಹವಾದವುಗಳಾಗಿವೆ.

ಸಾಹಿತ್ಯ ನೀತಿ ಮತ್ತು ಬೆಳವಣಿಗೆ

ವಸಾಹತುಶಾಹಿಗಳು ರಚಿಸಿದ ಪ್ರಾರ್ಥನಾ ಗೀತೆಗಳಿಂದ ಆರಂಭಗೊಂಡು ಕನ್ನಡದಲ್ಲಿ ಭಾವಗೀತೆಗಳು ಸಹ ರಚನೆಗೊಂಡವು. ಮೈಸೂರು ಸಂಸ್ಥಾನವು ಅನೇಕ ಲೇಖಕರನ್ನು ಪ್ರೋತ್ಸಾಹಿಸಿತು. ಕೆಂಪು ನಾರಾಯಣನ ಮುದ್ರಾಮಂಜೂಷ (೧೮೨೩) ವು ಮೊದಲ ಗದ್ಯ ಕೃತಿಯಾಗಿದೆ. ಅನೇಕ ಇಂಗ್ಲೀಷ್ ಮತ್ತು ಸಂಸ್ಕೃತ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು ವೆಂಕಟರಾಮಶಾಸ್ತ್ರಿಗಳಿಂದ ರಚಿತವಾದ ’ಇಗ್ಗಪ್ಪ ಹೆಗ್ಗಡೆಯ ಪ್ರಹಸನ’ ಎಂಬುದು (೧೮೮೭) ಕನ್ನಡದ ಮೊಟ್ಟಮೊದಲ ಸ್ವತಂತ್ರ ಸಾಮಾಜಿಕ ನಾಟಕ ಎಂಬುದಕ್ಕೆ ಪಾತ್ರವಾಗಿದೆ. ಮೈಸೂರು ಸಂಸ್ಥಾನದಲ್ಲಿ ಸಿಂಗಿರಾರ್ಯನಿಂದ ರಚನೆಯಾದ ’ಮಿತ್ರವಿಂದಾ ಗೋವಿಂದಾ’ ಎಂಬುದು ಕನ್ನಡದ ಮೊಟ್ಟಮೊದಲ ನಾಟಕ ಕೃತಿಯಾಗಿದೆ. ಈ ವೇಳೆಗಾಗಲೇ ಇಂಗ್ಲೀಷ್, ಮರಾಠಿ ಮತ್ತು ಬಂಗಾಳಿಯಿಂದ ಹಲವಾರು ಸಾಮಾಜಿಕ ಕಾದಂಬರಿಗಳು ಅನುವಾದವಾಗಿದ್ದರೂ, ಗದಗ್‌ಕರ್ ಅವರು ಬರೆದ ’ಸೂರ್ಯಕಾಂತ’ (೧೮೮೨) ಎಂಬ ಕಾದಂಬರಿ ಕನ್ನಡದ ಮೊಟ್ಟಮೊದಲ ಸ್ವತಂತ್ರ್ಯ ಕೃತಿಯಾಗಿದೆ. ಈ ಬದಲಾವಣೆಗಳಿಂದ ರಂಗಭೂಮಿ ಮತ್ತು ಸಂಗೀತಗಳೂ ಪ್ರಭಾವಿತವಾದವು. ೧೮೭೪ರಲ್ಲಿ ಗದಗ ಮತ್ತು ಹಲಸಂಗಿಗಳಲ್ಲಿ ಹೊಸ ನಾಟಕ ತಂಡಗಳು ಅಸ್ತಿತ್ವಕ್ಕೆ ಬಂದವು. ಕರ್ನಾಟಕಕ್ಕೆ ೧೮೭೬- ೭೭ರಲ್ಲಿ ಸಾಂಗ್ಲಿಯಿಂದ ಪ್ರವೇಶಿಸಿದ ಮರಾಠಿ ನಾಟಕ ತಂಡ ಮತ್ತು ೧೮೭೮ರಲ್ಲಿ ಬಂದ ವಿಕ್ಟೋರಿಯಾ ಪಾರ್ಸಿ ತಂಡಗಳು ಇಲ್ಲಿನ ರಂಗಕಲೆಯನ್ನು ಶ್ರೀಮಂತಗೊಳಿಸಿದವು. ಅಂದಿನ ದಿನಕ್ಕೆ ಮೈಸೂರು ಸಂಸ್ಥಾನದಲ್ಲಿ ಪ್ರಖ್ಯಾತ ವೈಣಿಕರಾಗಿದ್ದ ವೀಣೆ ವೆಂಕಟಸುಬ್ಬಯ್ಯ, ಸಾಂಬಯ್ಯ ಮತ್ತು ಚಿಕ್ಕರಾಮಪ್ಪ ಅವರುಗಳಿಂದ ಕರ್ನಾಟಕ ಸಂಗೀತ ಶ್ರೀಮಂತವಾಗಿ ಮುನ್ನಡೆಯಿತು.

ಮೈಸೂರು ಸಂಸ್ಥಾನದಲ್ಲಿ ಕರ್ನಾಟಕ ಶಿಲ್ಪಕಲೆಗೆ ವಸಾಹತು ರಾಷ್ಟ್ರಗಳ ಪ್ರಭಾವ ಬೀರಿದ್ದನ್ನು ಕಾಣಬಹುದು. ಅಂದು ಗಾಥಿಕ್ ಶೈಲಿಯಲ್ಲಿ ೧೮೬೦ರಲ್ಲಿ ಸೆಂಟ್ರಲ್ ಕಾಲೇಜು. ಎತ್ತರದ ಸ್ತಂಭಗಳ ಆಠರಾ ಕಛೇರಿ ಮತ್ತು ಅಲಂಕಾರದಿಂದ ಕೂಡಿರುವ ಕೋರಿಯಂತಿಯನ್ ಶೈಲಿಯು ಬೆಂಗಳೂರು ಮ್ಯೂಸಿಯಂ ಕಟ್ಟಡಗಳು ನಿರ್ಮಾಣವಾದವು. ಬಾಸೆಲ್ ಮಿಷನ್ ಅವರು ಪರಿಚಯಿಸಿದ ಮಂಗಳೂರು ಹಗುರ ಹೆಂಚುಗಳ ವಾಸ್ತು ಮಾದರಿಗಳಲ್ಲಿ ಕ್ರಾಂತಿಯನ್ನುಂಟು ಮಾಡಿದವು. ಚರ್ಚುಗಳು ಪಾಶ್ಚಿಮಾತ್ಯ ಶೈಲಿಯನ್ನು ಬಳಸಿಕೊಂಡವು. ಅದಕ್ಕೆ ೧೮೫೭ರಲ್ಲಿ ನಿರ್ಮಾಣಗೊಂಡಿರುವ ಅವರ ಲೇಡಿ ಆಫ್ ಸಾರೋ ಚರ್ಚ್‌, ೧೮೮೨ರಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಸ್ಥಾಪನೆಗೊಂಡ ಸೇಂಟ್ ಮೇರಿಸ್ ಚರ್ಚ್. ೧೮೯೦ರಲ್ಲಿ ಮಂಗಳೂರಿನಲ್ಲಿ ನಿರ್ಮಾಣಗೊಂಡ ಸೇಂಟ್ ಜೋಸೆಫ್ಸ್ ಮಿಷನರಿ ಚರ್ಚ್ ಮತ್ತು ೧೮೬೯ರಲ್ಲಿ ಬೆಳಗಾವಿಯಲ್ಲಿ ನಿರ್ಮಾಣಗೊಂಡ ಸೇಂಟ್ ಮೇರಿಸ್ ಚರ್ಚ್‌ಗಳು ವಸಾಹತುಶಾಹಿ ಕಾಲಘಟ್ಟದ ಕೆಲವು ಪ್ರಮುಖ ಉದಾಹರಣೆಗಳು ಮಾತ್ರ.

ಮೈಸೂರು ಸಂಸ್ಥಾನದಲ್ಲಿ ವಸಾಹತುಶಾಹಿಗಳ ಆಳ್ವಿಕೆಯ ಕಾಲದಲ್ಲಿ ಅನೇಕ ಸಾಮಾಜಿಕ ಆಂದೋಲನಗಳು ಸಮಾಜವನ್ನು ಕಲುಕಿದವು. ಇದರ ಪರಿಣಾಮದಿಂದಾಗಿ ಅನೇಕ ಸಾಮಾಜಿಕ ಬದಲಾವಣೆಗಳು ಚಾಲನೆಯನ್ನು ಪಡೆದವು. ಇದಕ್ಕೆ ಕ್ರೈಸ್ತ ಮಿಷನರಿಗಳ ಪ್ರಚಾರವೂ ವಿಶೇಷವಾಗಿ ಕಾರಣವಾಗಿತ್ತು. ಹೊಸದಾಗಿ ಆರಂಭವಾದ ಪ್ರಾಟೆಸ್ಟೆಂಟ್ ಮಿಷನರಿಗಳು ಈ ದಿಸೆಯಲ್ಲಿ ಕಾರ್ಯೋನ್ಮುಖವಾದವು. ಮೈಸೂರಿನಲ್ಲಿ ಥಿಯೋಸಾಫಿಕಲ್ ಸೊಸೈಟಿಯು ೧೮೮೬ರಲ್ಲಿ ತನ್ನ ಕಾರ್ಯ ಪ್ರಾರಂಭಿಸಿತು. ೧೮೭೦ರಲ್ಲಿ ಬ್ರಹ್ಮ ಸಮಾಜವು ಮಂಗಳೂರು ಈ ಭಾಗದ ಬೆಂಗಳೂರಿನಲ್ಲಿ ಕಾರ್ಯ ಪ್ರಾರಂಭಿಸಿತು. ಕುದ್ಗಲ್ ರಂಗರಾಯರು ಮಂಗಳೂರಿನಲ್ಲಿ ನಿಮ್ನ ವರ್ಗದ ಅಭವೃದ್ಧಿಗೆ ೧೮೯೭ರಲ್ಲಿ ಆಶ್ರಮ ಸ್ಥಾಪಿಸಿದರು. ಇದೇ ಮಾದರಿಯಲ್ಲಿ ಭಾಗದ ಅನೇಕ ದಾನಿಗಳಿಂದ ನಿಮ್ನ ವರ್ಗದವರ, ಅಸ್ಪೃಶ್ಯರ ಅಭಿವೃದ್ಧಿ ಪರ ಅನೇಕ ಸಂಸ್ಥೆಗಳು ಹಾಗೂ ಶಾಲೆಗಳು ಆರಂಭವಾದವು. ಮೈಸೂರು ಸಂಸ್ಥಾನವು ಎಂಟು ವರ್ಷಕ್ಕೆ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ವಿವಾಹವನ್ನು ನಿಷೇಧಿಸಿತು. ಶೇಷಾದ್ರಿ ಅಯ್ಯರ್ ಅವರು ಅಸ್ಪೃಶ್ಯರಿಗೆ ಪ್ರಥಮಬಾರಿಗೆ ಪ್ರತ್ಯೇಕ ಶಾಲೆಗಳನ್ನು ಆರಂಭಿಸಿದರು. ಮೈಸೂರಿನಲ್ಲಿ ಅರಮನೆ ಭಕ್ಷಿ ಅಂಬಿಲ್ ನರಸಿಂಹ ಅಯ್ಯಂಗಾರ್ ಅವರು ೧೮೮೧ರಲ್ಲಿ ಮಹಾರಾಣಿ ಬಾಲಕೀಯರ ಶಾಲೆಯನ್ನು ಆರಂಭಿಸಿದರು. ಅದೇ ಸಾಲೆ ೧೮೯೧ರಲ್ಲಿ ಪ್ರೌಢಶಾಲೆಯಾಯಿತು. ೧೯೦೧ರಲ್ಲಿ ಮಹಾರಾಣಿ ಕಾಲೇಜಾಗಿ ಬೆಳೆಯಿತು. ೧೯೦೪ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಆರಂಭವಾಯಿತು. ಇವು ಮಹಿಳೆಯರು ಹಾಗೂ ಅಸ್ಪೃಶ್ಯರು ಪ್ರಗತಿಪರ ಚಿಂತನೆಯೆಡೆಗೆ ಮುಂದಾಗಲು ಸಹಕರಿಸಿದವು.

೨೦ ನೇ ಶತಮಾನದ ಪ್ರಾರಂಭದ ಹೊತ್ತಿಗೆ ಮೈಸೂರು ಸಂಸ್ಥಾನವು ಪ್ರಗತಿಪರ ಚಿಂತಕ ಅರಸರನ್ನೆಸಿಕೊಂಡಿದ್ದ ಡಾ. ನಾಲ್ವಡಿ ಕೃಷ್ಣರಾಜ ಒಡೆಯರ್‌ವರ ಆಳ್ವಿಕೆಯಲ್ಲಿ ಮುನ್ನಡೆಯುತ್ತಿತ್ತು. ಅವರಿಗೆ ಪ್ರಗತಿಯ ಬಗೆಗೆ ಇದ್ದ ಅತೀವ ಆಸಕ್ತಿಯು ಸಂಸ್ಥಾನದಲ್ಲಿನ ಜನತೆಯ ಪ್ರೀತಿ ಮತ್ತು ಗೌರವಗಳನ್ನು ತಂದುಕೊಟ್ಟಿತು. ೧೯೦೨ ರಿಂದ ೧೯೪೦ ರವರೆಗೆ ಆಳ್ವಿಕೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ ಅನೇಕ ಏಳುಬೀಳುಗಳ ನಡುವೆಯೇ ಆಧುನಿಕ ಮನೋಭಾವದೊಂದೊದಿಗೆ ಧರ್ಮಶ್ರದ್ಧೆಯನ್ನು ಬೆರೆಸಿ ಆಳ್ವಿಕೆ ಮಾಡಿದರು. ಮೈಸೂರು ಸಂಸ್ಥಾನದಲ್ಲಿ ಆಡಳಿತದ ಜವಾಬ್ದಾರಿ ಹೊತ್ತಿದ್ದ ದಿವಾನರು ಭಾರತದಲ್ಲಿಯೇ ಮೈಸೂರು ಸಂಸ್ಥಾನವನ್ನು ಆಧುನಿಕ ಮಾತ್ರವಲ್ಲ, ಮಾದರಿ ಸಂಸ್ಥಾನವನ್ನಾಗಿ ಮಾಡಲು ಶ್ರಮಿಸಿದರು. ಇದಕ್ಕೆಲ್ಲ ಪ್ರೇರಣೆಯಾಗಿ ನಾಲ್ವಡಿಯವರ ಪ್ರೋತ್ಸಾಹ ಇದ್ದೇ ಇತ್ತು.

೧೯೦೧- ೦೬ರಲ್ಲಿ ದಿವಾನರಾಗಿದ್ದ ಪಿ. ಎನ್. ಕೃಷ್ಣಮೂರ್ತಿ ಅವರು ಆಡಳಿತ ಮತ್ತು ದಾಖಲೆಗಳು ಸಂಗ್ರಹ ವ್ಯವಸ್ಥೆಯಲ್ಲಿ ವಸಾಹತುಶಾಹಿ ಆಳ್ವಿಕೆಯಲ್ಲಿ ಅನಸರಿಸುತ್ತಿದ್ದ ವಿಧಾನಗಳನ್ನು ಜಾರಿಗೆ ತಂದು ಆಡಳಿತವನ್ನು ಅಭಿವೃದ್ಧಿಪಡಿಸಿದರು. ೧೯೦೬ರಲ್ಲಿ ಸರಕಾರಿ ಇಲಾಖೆಯನ್ನು ಸ್ಥಾಪಿಸಿದರು. ನಂತರ ದಿವಾನರಾದ ಟಿ. ಪಿ. ಮಾಧವರಾವ್ ಅವರು ೧೯೦೭ರಲ್ಲಿ ಎರಡನೇ ಹಂತದ ವಿಧಾನ ಪರಿಷತ್ತನ್ನು ಆರಂಭಿಸಿದರು ಮತ್ತು ಅರಣ್ಯ ಸಂರಕ್ಷಣೆಗೆ ವ್ಯವಸ್ಥೆ ಮಾಡಿದರು. ಕಾನೂನು ಜಾರಿಗೆ ತರುವ ಈ ಅವಧಿಯಲ್ಲಿ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಯಾಯಿತು. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ಮೈಸೂರು ಸಂಸ್ಥಾನದ ದಿವಾನರಾದರು. ದೂರದರ್ಶಿತ್ವದ ಕ್ರಿಯಾಶೀಲ ಆಡಳಿತಗಾರರಾಗಿದ್ದ ಇವರು ತಮ್ಮ ಕಡಿಮೆ ಅಧಿಕಾರವಧಿಯಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿದರು ಪ್ರಗತಿಪರ ಆಡಳಿತಾತ್ಮಕ ಕ್ರಮಗಳನ್ನು ಜಾರಿಗೊಳಿಸಿದರು. ೧೯೧೮ರಲ್ಲಿ ಮೈಸೂರು ಕ್ರೋಮ್ ಟ್ಯಾನಿಂಗ್ ಫ್ಯಾಕ್ಟ್‌ರಿ, ೧೯೧೬ರಲ್ಲಿ ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆ ಮತ್ತು ಭದ್ರಾವತಿಯಲ್ಲಿ ವೃಕ್ಷ ಸಂಸ್ಕರಣ ಕಾರ್ಖಾನೆಗಳು ಸ್ಥಾಪನೆಯಾದವು. ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಅಂದಿನ ಭಾರತದಲ್ಲಿಯೇ ಬೃಹತ್ ಉದ್ಯಮ. ೧೯೧೭ರಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು, ೧೯೧೩ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿಶಾಲೆ (ಇದೇ ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (CKVK) ಎಂದು ಹೆಸರಾಗಿರುವ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವಾಗಿದೆ) ಬೆಂಗಳೂರಿನಲ್ಲಿ ೧೯೧೭ರಲ್ಲಿ ವೈದ್ಯಶಾಲೆ ಹಾಗೂ ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಗತಿಪರ ಚಿಂತನೆಗೆ ಹೆಚ್ಚಿನ ಸಹಕಾರ ನೀಡಿದ ದಿವಾನರೆಂದರೆ ಮಿರ್ಜಾ ಇಸ್ಮಾಯಿಲ್ ಅವರು. ಇವರು ೧೯೨೬ ರಿಂದ ೧೯೪೧ ರವರೆಗೆ ಸುದೀರ್ಘ ಆಳ್ವಿಕೆ ನಡೆಸಿದರು. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಸ್ಥಾಪನೆಯಾಗಿದ್ದ ಕೈಗಾರಿಕೆಗಳ ಪ್ರಗತಿಗೆ ಮುಂದಾದ ಇವರು ಅನೇಕ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕಾರಣಕರ್ತರಾದರು. ದೊಡ್ಡ ಪ್ರಮಾಣದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಮೈಸೂರನ್ನು ಅತ್ಯಂತ ಉತ್ತಮ ದೇಶೀಯ ಸಂಸ್ಥಾನವನ್ನಾಗಿ ಮಾಡಿದ ಕೀರ್ತಿಗೆ ಇಂದು ಪಾತ್ರರಾಗಿದ್ದಾರೆ. ಮೈಸೂರು ಸಂಸ್ಥಾನವು ತನ್ನ ಆರ್ಥಿಕ ಪ್ರಗತಿ ಮತ್ತು ಸಾಂಸ್ಕೃತಿಕ ಸಾಧನೆಗಳಿಂದಾಗಿ ಕರ್ನಾಟಕದ ಪ್ರಬಲ ಕೇಂದ್ರ ಬಿಂದುವಾಗಿ ಮೈಸೂರು ಮತ್ತು ಕೊಡುಗೆಗಳಲ್ಲಿ ತೋಟಗಾರಿಕೆಯನ್ನು ವಿಸ್ತರಿಸಲಾಯಿತು. ಇಸ್ಮಾಯಿಲ್ ಅವರು ದಿವಾನರಾಗಿದ್ದಾಗಲೆ ಕಾರ್ಯಾರಂಭ ಮಾಡಿದ ಕನ್ನಂಬಾಡಿ ಯೋಜನೆ ಈ ಪ್ರದೇಶದಲ್ಲಿ ಕಬ್ಬು ಬೆಳೆಗೆ ಚಾಲನೆ ನೀಡಿ, ನಂತರದ ದಿನಗಳಲ್ಲಿ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗುವುದಕ್ಕೆ ಕಾರಣವಾಯಿತು. ಇವರ ಕಾಲದಲ್ಲಿಯೇ ಒಂದು ಲಕ್ಷ ಎಕರೆಗೂ ಹೆಚ್ಚು ಭೂಮಿಗೆ ಕಾವೇರಿ ಮೇಲ್ದಂಡೆ ಕಾಲುವೆಯ ಮೂಲಕ ನೀರನ್ನು ಹರಿಸಲಾಯಿತು. ಸಹಜವಾಗಿಯೇ ಕೈಗಾರಿಕಾ ಕ್ರಾಂತಿ ಕೃಷಿ ಆಧಾರಿತ ಮೂಲದಿಂದ ಉಂಟಾಯಿತು. ವಿಶ್ವೇಸ್ವರಯ್ಯ ಅವರು ದಿವಾನರಾಗಿದ್ದಾಗ ಭದ್ರಾವತಿಯಲ್ಲಿ ಸ್ಥಾಪಿಸಲಾಗಿದ್ದ ಕಬ್ಬಿಣದ ಕಾರ್ಖಾನೆಯಲ್ಲಿ ಮಿರ್ಜಾ ಅವರು ಉಕ್ಕು ಘಟಕವನ್ನು ಸೇರಿಸಿ ಅದನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸಿದರು. ೧೮೭೦ರಲ್ಲಿ ಜಿಲ್ಲಾ ಖಜಾನೆಗಳಿಗೆ ಹೊಂದಿಕೊಂಡಂತೆಯೇ ಜಿಲ್ಲಾ ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ ೧೮೬೮ರಲ್ಲಿ ಎರಡು ಬ್ಯಾಂಕಿಂಗ್ ಸಂಸ್ಥೆಗಳಿದ್ದವು. ೧೮೭೬ರಲ್ಲಿ ಬ್ಯಾಂಕ್‌ಗಳ ಸಂಖ್ಯೆ ೨೪ ಕ್ಕೆ ಹೆಚ್ಚಿದವು. ಅವುಗಳಲ್ಲಿ ಅನೇಕ ಸಂಸ್ಥೆಗಳು ಉಳಿಯಲಿಲ್ಲ. ೧೮೭೦ರಲ್ಲಿ ಚಿತ್ರದುರ್ಗದಲ್ಲಿ ಉಳಿತಾಯದ ಬ್ಯಾಂಕ್ ಸ್ಥಾಪನೆಯಾಯಿತು. ೧೮೬೪ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕ್ ಬೆಂಗಳೂರಿನಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಭಿಸಿತ್ತು. ದಕ್ಷಿಣ ಕನ್ನಡವು ಕೆನರಾ ಬ್ಯಾಂಕನ್ನು ೧೯೦೬ರಲ್ಲಿ ಪ್ರಾರಂಭಿಸಿತು. ೧೯೨೦ರಲ್ಲಿ ಪಾಂಗಳನಾಯಕ್ ಬ್ಯಾಂಕ್, ೧೯೨೫ರಲ್ಲಿ ಕೆಥೋಲಿಕ್ ಬ್ಯಾಂಕ ಮತ್ತು ೧೯೨೫ರಲ್ಲಿ ಸಿಂಡಿಕೇಟ್ ಬ್ಯಾಂಕುಗಳು ಸ್ಥಾಪನೆಯಾಗಿ ಕಾರ್ಯ ಆರಂಭಿಸಿದವು. ೧೯೧೬ರಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್‌ ಸಂಸ್ಥೆಗಳು ಕೆಲಸ ಪ್ರಾರಂಭಿಸಿದವು. ೧೯೧೫ರಲ್ಲಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಟೌನ್ ಕೋ ಆಫರೇಟಿವ್ ಬ್ಯಾಂಕ್ ಸ್ಥಾಪನೆಗೊಂಡಿತ್ತು. ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ ೧೯೦೫ರಲ್ಲಿ ಆರಂಭಗೊಂಡ ಸಹಕಾರಿ ಸಂಸ್ಥೆಯೊಂದಿಗೆ ಈ ಭಾಗದಲ್ಲಿ ಹೆಚ್ಚಾಗಿ ಸಹಕಾರಿ ಸಂಘಗಳು ಸ್ಥಾಪನೆಗೊಂಡವು ನಂತರ ಸಹಕಾರಿ ಧುರಿಣರೆನ್ನಿಸಿಕೊಂಡಿರುವ ಶ್ರೀ ಎಚ್. ಕೆ. ಪಾಟೀಲರ ಶ್ರಮದಿಂದ ಗದಗ ಹಾಗೂ ಅದರ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕ್‌ಗಳು ಸ್ಥಾಪನೆಗೊಂಡವು. ೧೯೧೬ರಲ್ಲಿ ಧಾರವಾಡದಲ್ಲಿ ಡಿ. ಸಿ. ಸಿ. ಬ್ಯಾಂಕ್ ಸ್ಥಾಪನೆಗೊಂಡಿತ್ತು. ಈ ರೀತಿಯ ಸಹಕಾರ ಚಳವಳಿ ಮೈಸೂರು ಸಂಸ್ಥಾನದಲ್ಲಿ ಆರ್ಥಿಕ ಪ್ರಗತಿಗೆ ಹೆಚ್ಚಿನ ಪರಿಣಾಮ ಬೀರಿತು.