ಮಾರ್ಕ್ ಕಬ್ಬನ್: ೧೮೩೪ರ ಫೆಬ್ರವರಿಯಲ್ಲಿ ಜೂನಿಯರ್ ಕಮಿಷನರ್ ಮೈಸೂರನ್ನು ಬಿಟ್ಟಾಗ ಕರ್ನಲ್ ಕಬ್ಬನ್ ನೇಮಕಗೊಂಡರು. ೧೮೩೪ರ ಜೂನ್‌ನಲ್ಲಿ ಕರ್ನಲ್ ಬ್ರಿಗ್ಸ್‌ನ ಉತ್ತರಾಧಿಕಾರಿಯಾದ ಲೆಫ್ಟಿನೆಂಟ್ ಕರ್ನಲ್ ಡಬ್ಲ್ಯೂ ಮಾರಿಸನ್ ಸುಪ್ರೀಂ ಕೌನ್ಸಿಲ್‌ನ ಸದಸ್ಯನಾಗಿ ನೇಮಕಗೊಂಡಾಗ ಕಬ್ಬನ್ ಸೀನಿಯರ್ ಕಮಿಷನರಾಗಿ ನೇಮಕವಾಗಿದ್ದರು. ಮೈಸೂರಿನ ಏಕಮಾತ್ರ ಕಮಿಷನರಾಗಿ ನೇಮಕಗೊಂಡ ಕರ್ನಲ್ ಮಾರ್ಕ್ ಕಬ್ಬನ್ ಅವರಿಗೆ ೪೯ ವರ್ಷ ವಯಸ್ಸಾಗಿತ್ತು. ಇದಕ್ಕೂ ಮೊದಲಿನಿಂದಲೂ ಅನೇಕ ಕಾರಣಗಳಿಗಾಗಿ ಮೈಸೂರಿನ ಆಡಳಿತದೊಡನೆ ಸಂಬಂಧ ಹೊಂದಿದ್ದ ಕಬ್ಬನ್ ಅವರಿಗೆ ಕಮೀಷನರಾದಾಗ ಹೆಚ್ಚಿನ ಸಹಾಯವಾಯಿತು.

ಸಾಮಾನ್ಯವಾಗಿ ಹೇಳುವುದಾದರೆ ಕಮಿಷನರ ಆಳ್ವಿಕೆಯ ಕಾಲದಲ್ಲಿ, ಎರಡು ವಿರುದ್ಧ ಉದ್ದೇಶಗಳು ಜಾರಿಯಲ್ಲಿದ್ದುದರ ಫಲವಾಗಿ ಬ್ರಿಟಿಷರ ಕಾರ್ಯ ನೀತಿಯಲ್ಲಿ ಎರಡು ಪ್ರತ್ಯೇಕ ಅವಸ್ಥೆಗಳನ್ನು ಕಾಣಬೇಕಾಯಿತು. ಸರ್ಕಾರದ ಹಲವಾರು ಇಲಾಖೆಗಳಲ್ಲಿ ಮೇಲುಗೈಯಾಗಿದ್ದ ಅನ್ಯಾಯಗಳನ್ನು ಸುಧಾರಿಸುವುದು, ಶಾಂತಿ ನೆಲಸುವಂತೆ ಕ್ರಮ ಕೈಗೊಳ್ಳುವುದು ಹಾಗೂ ದೇಶದ ಮೂಲ ಸಂಪತ್ತನ್ನು ಅಭಿವೃದ್ಧಿಗೊಳಿಸುವುದು, ವ್ಯಯಸಾಯಗಾರರನ್ನು ಶೋಷಣೆ, ಸುಲಿಗೆಗಳಿಂದ ಮುಕ್ತರನ್ನಾಗಿಸುವುದು ಮತ್ತು ದೇಶೀಯ ನ್ಯಾಯಾಂಗ ಪದ್ಧತಿಯನ್ನು ಪುನಶ್ಚೇತನಗೊಳಿಸುವುದು ಮುಖ್ಯವಾಗಿದ್ದವು. ಇವು ಆಡಳಿತದ ಮೊದಲ ೩೦ ವರ್ಷಗಳ ಮುಖ್ಯ ಗುರಿಯಾಗಿದ್ದೀತೆ ಹೊರತು ಹೊಸ ಪದ್ದತಿಯ ಸರ್ಕಾರವನ್ನು ಪ್ರಾರಂಭಿಸುವುದಾಗಿರಲಿಲ್ಲ ಎಂಬುದು ವಸಾಹತುಶಾಹಿಗಳ ೫೦ ವರ್ಷಗಳ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ಗಮನಿಸಬೇಕಾದ ಅಂಶ. ಬ್ರಿಟಿಷರ ಆಡಳಿತವು ತಾತ್ಕಾಲಿಕವೆಂಬುದನ್ನು ಗಮನದಲ್ಲಿರಿಸಿ ಆಡಳಿತದಲ್ಲಿ ಸಾಧ್ಯವಾದ ಮಟ್ಟಿಗೂ ದೇಶೀಯ ಸಿಬ್ಬಂದಿಗಳನ್ನೇ ಇಟ್ಟುಕೊಳ್ಳಲು ಮತ್ತು ದೇಶೀಯ ಪದ್ಧತಿಯನ್ನು ಉಳಿಸಿ ಮುಂದುವರಿಸಲು ಪ್ರಯತ್ನಿಸಲಾಗಿತ್ತು. ಇದರ ಫಲವಾಗಿ ೧೮೧೩ರಿಂದ ೧೮೫೫ರವರೆಗಿನ ಮೊದಲ ಅವಧಿಯನ್ನು ಸಂಸ್ಥಾನದ ಆಡಳಿತವು ಬಹುಮಟ್ಟಿಗೆ ನಿರಂಕುಶ ಪ್ರಭುತ್ವದ ಮೇಲೆ ಆಧಾರಿತವಾಗಿದ್ದುದರಿಂದ, ಈ ಕಾಲವನ್ನು ಚರಿತ್ರೆಕಾರರ ಅಭಿಪ್ರಾಯದಂತೆ ಕುಟುಂಬ ಪಾಲಕ ಪದ್ಧತಿಯ ಕಾಲವೆಂದು ಕರೆಯಲಾಗಿದೆ. ೧೮೫೬-೬೨ರ ಮಧ್ಯದ ವರ್ಷಗಳನ್ನು ನಿಯಂತ್ರಿತ ಪದ್ಧತಿಯ ಕಾಲವೆಂದೂ ಕರೆಯಲಾಗಿದೆ.

ಆಡಳಿತವನ್ನು ಫಲಪ್ರದವನ್ನಾಗಿ ಸತ್ವಯುಕ್ತವನ್ನಾಗಿ ಕ್ರಮಬದ್ಧವನ್ನಾಗಿ ಮಾಡಲು ಕರ್ನಲ್ ಕಬ್ಬನ್ನನು ಅಳವಡಿಸಿದ ಸೂಕ್ತ ಕಾರ್ಯಗಳ ಸ್ಥೂಲ ಪರಿಚಯ ಮಾಡಿಕೊಳ್ಳುವುದು ಇಲ್ಲಿ ಅವಶ್ಯಕ. ಮೇಲಿನ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕಬ್ಬನ್ ಆಡಳಿತವನ್ನು ವಿಕೇಂದ್ರೀಕರಣಗೊಳಿಸಿ ದೇಶವನ್ನು ಬೆಂಗಳೂರು, ಚಿತ್ರದುರ್ಗ, ಅಷ್ಟಗ್ರಾಮ ಮತ್ತು ನಗರಗಳೆಂದು ನಾಲ್ಕು ಮುಖ್ಯ ವಿಭಾಗಗಳನ್ನಾಗಿ ಮಾಡಿ, ಪ್ರತಿಯೊಂದು ವಿಭಾಗವೂ ಒಬ್ಬ ಯೂರೋಪಿಯನ್ ಸೂಪರಿಂಟೆಂಡೆಂಟ್‌ನ ಆಳ್ವಿಕೆ ಯಲ್ಲಿರುವಂತೆ ನೋಡಿಕೊಂಡನು. ಪ್ರತಿ ವಿಭಾಗವೂ ತಾಲ್ಲೂಕುಗಳಿಂದ ಕೂಡಿದ್ದಿತು. ಈ ತಾಲ್ಲೂಕುಗಳ ಒಟ್ಟು ಸಂಖ್ಯೆ ೧೨೦. ನಂತರ ಸಣ್ಣ ತಾಲ್ಲೂಕುಗಳನ್ನು ದೊಡ್ಡದರಲ್ಲಿ ವಿಲೀನಗೊಳಿಸುವದರ ಮೂಲಕ ಈ ಸಂಖ್ಯೆಯನ್ನು ಕಡಿಮೆ ಮಾಡಲಾಯಿತು. ಪ್ರತಿಯೊಂದು ತಾಲ್ಲೂಕು ಒಬ್ಬೊಬ್ಬ ಅಮಲ್ದಾರನ ಆಡಳಿತದಲ್ಲಿದ್ದಿತು. ತಾಲ್ಲೂಕುಗಳನ್ನು ಹೋಬಳಿಗಳನ್ನಾಗಿ ವಿಭಜಿಸಲಾಯಿತು. ಪ್ರತಿಯೊಂದು ಹೋಬಳಿಯು ಹಳ್ಳಿಗಳ ಸಮುದಾಯದಿಂದ ಕೂಡಿತ್ತು. ಶೇಕ್‌ದಾರ ಅಥವಾ ಹೋಬಳಿದಾರನು ಹೋಬಳಿಯ ಮುಖ್ಯಾಧಿಕಾರಿಯಾಗಿದ್ದನು. ವಿಭಾಗದ ಸೂಪರಿಂಟೆಂಡೆಂಟರ ಅಧಿಕಾರ ವ್ಯಾಪ್ತಿಯು ಅನೇಕ ವಿಧದಲ್ಲಿ ವಿಸ್ತಾರಗೊಂಡಿತು. ಆದರೂ ತಾಲ್ಲೂಕಿನ ಅಮಲ್ದಾರರು ಕಮಿಷನರರ್‌ ಒಡನೆ ನೇರವಾಗಿ ವ್ಯವಹರಿಸಲು ಅವಕಾಶವಿತ್ತು.

ಕೇಂದ್ರ ಕಾರ್ಯಾಲಯವು ಕಂದಾಯ, ಅಂಚೆ ಪೋಲೀಸು, ಸವಾರ್ ಬಾರ್, ಲೋಕೋಪಯೋಗಿ, ವೈದ್ಯಕೀಯ, ಅಮೃತಮಹಲ್, ನ್ಯಾಯಾಂಗ ಮತ್ತು ವಿದ್ಯಾಭ್ಯಾಸ ಎಂದು ಒಂಬತ್ತು ಇಲಾಖೆಗಳಿಂದ ಕೂಡಿದ್ದಿತು. ಈ ಪ್ರತಿಯೊಂದು ಇಲಾಖೆಯು ಒಬ್ಬೊಬ್ಬ ಮುಖ್ಯಾಧಿಕಾರಿಯ ಅಧೀನದಲ್ಲಿತ್ತು. ಕಂದಾಯಶಾಖೆಯ ಮುಖ್ಯಾಧಿಕಾರಿಗೆ ಶಿರಸ್ತೇದಾರ ಎಂಬ ಹೆಸರಿತ್ತು.

ಸರ್ಕಾರದ ಕಾರ‍್ಯಕಲಾಪಗಳನ್ನು ತಿಳುವಳಿಕೆ ಪತ್ರ, ಸುತ್ತೋಲೆಗಳು, ಮತ್ತು ಘೋಷಣೆಗಳ ಮೂಲಕ ಜನರಿಗೆ ತಿಳಿಸಲಾಗುತ್ತಿತ್ತು. ಕಾನೂನು ಕಟ್ಟಳೆಗಳು ಪ್ರಮುಖ ಸ್ಥಳಗಳಲ್ಲಿ ಕನ್ನಡದಲ್ಲಿ ಬಹಿರಂಗವಾಗಿ ಪ್ರಕಟವಾಗುತ್ತಿದ್ದವು. ಮರಾಠಿ ಅಥವಾ ಕನ್ನಡವು ಸರ್ಕಾರದ ಆಡಳಿತ ಭಾಷೆಯಾಗಿ ಅಂಗೀಕೃತವಾಯಿತು ಕಮಿಷನರ್ ಕಛೇರಿಗೆ ಒಪ್ಪಿಸುತ್ತಿದ್ದ ಎಲ್ಲ ಲೆಕ್ಕ ಪತ್ರಗಳು ಮತ್ತು ವರದಿಗಳಲ್ಲೂ ಮರಾಠಿ ಬಳಕೆಯಲ್ಲಿತ್ತು. ಸಾರ್ವಜನಿಕವಾದ ಮುಖ್ಯ ವಿಷಯಗಳನ್ನು ಸೂಪರಿಂಟೆಂಡೆಂಟರು ಮತ್ತು ಅಮಲ್ದಾರರಿಗೆ ಸುತ್ತೋಲೆಗಳ ಮೂಲಕ ಕಳುಹಿಸುತ್ತಿದ್ದರು. ಘೋಷಣೆಗಳು ಮಹತ್ವದ ಉದ್ಧೇಶಗಳಿಗೆ ಮೀಸಲಾಗಿದ್ದವು. ತಮ್ಮ ಕುಂದು ಕೊರತೆಗಳ ಬಗ್ಗೆ ಪರಿಹಾರ ಪಡೆಯುವ ಸಲುವಾಗಿ ಮೇಲಧಿಕಾರಿಗಳಿಗೆ ಪತ್ರಗಳನ್ನು ಕಳುಹಿಸಲು ಜನರಿಗೆ ಅವಕಾಶ ಮಾಡಿಕೊಡಲಾಯಿತು. ಅನಪೇಕ್ಷಿತ ಮತ್ತು ದ್ವೇಷಪೂರಿತ ಜನರು ತಮ್ಮ ದುರುದ್ದೇಶ ಪೂರಿತ ಅರ್ಜಿಗಳಿಂದ ಅಧಿಕಾರಿಗಳಿಗೆ ಕಿರುಕೊಳ ಕೊಡುವುದನ್ನು ತಡೆಗಟ್ಟಲೂ ಸೂಕ್ತಕ್ರಮ ಕೈಗೊಳ್ಳಲಾಯಿತು.

ನ್ಯಾಯಾಂಗ ಪದ್ಧತಿಯಲ್ಲಿ ವ್ಯಾಪಕವಾದ ಬದಲಾಣೆ ತರಲಾಯಿತು. ಅದು ೮೫ ತಾಲ್ಲೂಕು ಕೋರ್ಟುಗಳು, ೮ ಮುಖ್ಯ ಸಾದರ್ ಮುನ್ಸಿಫ್ ಕೋರ್ಟುಗಳು, ೪ ಸೂಪರಿಂಟೆಂಡೆಂಟರ ಕೋರ್ಟುಗಳು, ನ್ಯಾಯಾಧಿಪತಿಗಳಿಂದ ಕೂಡಿದ ಒಂದು ಹುಜೂರ್ ಅದಾಲತ್ ಕೋರ್ಟು, ಕಮಿಷನರ್ ಕೋರ್ಟುಗಳು ಮೈಸೂರು ಸಂಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಮೇಲಿನ ಎರಡು ಕೋರ್ಟುಗಳು ಮೇಲ್ಮನವಿಯ ನ್ಯಾಯಾಸ್ಥಾನಗಳಾಗಿದ್ದವು. ೧೮೫೫-೫೬ರಲ್ಲಿ ಗೌರ‍್ನರ್ ಜನರಲ್ ಲಾರ್ಡ್ ಡಾಲ್ ಹೌಸಿಯ ಭೇಟಿಯ ಫಲವಾಗಿ ಕೆಲವು ನ್ಯಾಯಾಂಗ ಕಾರ‍್ಯಗಳಲ್ಲಿ ಕಮಿಷನರುಗಳ ಹೊರೆಯನ್ನು ಹಗುರಗೊಳಿಸಲು ಒಬ್ಬ ಜುಡಿಷಿಯಲ್ ಕಮಿಷನರ್ ನೇಮಿಸಿಕೊಳ್ಳಲು ಅನುಮತಿ ದೊರಕಿತ್ತು. ಕಮಿಷನ್ನಿನ ಆಡಳಿತದಲ್ಲಿ ನ್ಯಾಯ ವಿತರಿಕೆಯು ಮೊದಲಿಗಿಂತ ಉತ್ತಮಗೊಂಡಿದ್ದರೂ ನ್ಯಾಯ ವಿನಿಯೋಗದಲ್ಲಿ ಅನಿವಾರ್ಯವಾಗಿ ನಿಧಾನವಾಗುತ್ತಿತ್ತೆಂಬುದು ನಿಜವಾದರೂ ಉತ್ತಮ ನ್ಯಾಯವ್ಯವಸ್ಥೆ ಜಾರಿಯಲ್ಲಿತ್ತು.

ಪೊಲೀಸು ಇಲಾಖೆಯು ಅಮಲ್ದಾರರು ಮತ್ತು ಅವರ ಸಹಾಯಕರಾದ ಕಿಲ್ಲೇದಾರರು, ಹೋಬಳಿದಾರರು, ಶೇಕದಾರರು, ದಫೇದಾರರು ಮತ್ತು ಕಂದಾಚಾರ ಪೇದೆಗಳಿಂದ ಕೂಡಿದ್ದಿತು. ಅಂದಿನ ಕಾಲಘಟ್ಟದಲ್ಲಿ ಲಂಬಾಣಿಗಳ ನಾಯಕ, ಕೊರಮ ಮತ್ತು ವಡ್ಡರ ಗುಂಪಿನ ಮುಖ್ಯಸ್ಥರು ಕಳ್ಳ ಕಸುಬಿನ ಪಂಗಡದವರೆಂದು ಪರಿಗಣಿತವಾದ್ದರಿಂದ ಅವರು ತಮ್ಮ ವರ್ತನೆಯ ಬಗ್ಗೆ ಜಾಮೀನು ಕೊಡಬೇಕಾಗಿತ್ತು ಎಂದು ಸಿ.ಕೆ. ವೆಂಕಟರಾಮಯ್ಯ ಅವರು ತಮ್ಮ ಅಳಿದ ಮಹಾಸ್ವಾಮಿಗಳು ಎಂಬ ಕೃತಿಯಲ್ಲಿ ಉಲ್ಲೇಖಿಸಿರುತ್ತಾರೆ. ಪುನಾರಚಿತ ಯೋಜನೆಯ ಪ್ರಕಾರ ಮೈಸೂರು, ತುಮಕೂರು, ಶಿವಮೊಗ್ಗ ಮತ್ತು ಬೆಂಗಳೂರು ನಗರದಲ್ಲಿ ಮೊದಲಿಗಿಂತ ಹೆಚ್ಚಿಗೆ ಸಿಬ್ಬಂಧಿಯನ್ನು ನೇಮಿಸಲಾಗಿತ್ತು. ಕಾರಾಗೃಹಗಳ ಕೈದಿಗಳ ಜೀವನ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಕಾರ‍್ಯ ನಡೆಯಿತು. ೧೮೫೬ ಮತ್ತು ೧೮೬೨ರ ಮಧ್ಯಾವದಿಯಲ್ಲಿ ಲೋಕೋಪಯೋಗಿ ಇಲಾಖೆ, ವಿದ್ಯಾಭ್ಯಾಸ, ಲೆಕ್ಕಾಚಾರ ಮತ್ತು ಲೆಕ್ಕ ಪರಿಶೋಧನೆ, ಅರಣ್ಯ ಇತ್ಯಾದಿ ಅತಿಮುಖ್ಯ ಇಲಾಖೆಗಳನ್ನು ಪ್ರತ್ಯೇಕವಾಗಿ ರೂಪಿಸುವ ಕಾರ್ಯ ನಡೆಯಿತು.

ಕೇಂದ್ರ ಕಾರ್ಯಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸೂಪರಿಂಟೆಂಡೆಂಟರ ಅಧೀನದಲ್ಲಿ ಸಣ್ಣ ಸಿಬ್ಬಂದಿಯಿಂದ ಕೂಡಿದ್ದ ಅಂದಿನ ಲೋಕೋಪಯೋಗಿ ಇಲಾಖೆಯ ಮುಖ್ಯಸ್ಥ ಇಂದು ಒಬ್ಬ ಚೀಫ್ ಇಂಜಿನಿಯರ್‌ಗೆ ಸಮನಾಗಿದ್ದನು. ೧೧ ಜನ ಮೇಲುದರ್ಜೆ ಮತ್ತು ೧೯ ಜನ ಕೆಳದರ್ಜೆಯ ಅಧೀನಾಧಿಕಾರಿಗಳಿಂದ ಕೂಡಿ ಇಲಾಖೆಯು ಸಂಪೂರ್ಣವಾಗಿ ವಿಸ್ತರಿಸಿ ಕೊಂಡಿತ್ತು. ರಸ್ತೆ ನಿರ್ಮಾಣದಲ್ಲಿ ಕಬ್ಬನ್ನನಿಗಿದ್ದ ವಿಶೇಷ ಆಸಕ್ತಿಯ ಫಲವಾಗಿ ಅದಕ್ಕಾಗಿಯೇ ಒಬ್ಬ ಪ್ರತ್ಯೇಕ ಸೂಪರಿಂಟೆಂಡೆಂಟರನ್ನು ನೇಮಿಸಿದ್ದ. ಇದರ ಪರಿಣಾಮವಾಗಿ ೧೮೫೬ರ ವೇಳೆಗೆ ಎಲ್ಲ ಪ್ರಮುಖ ಪಟ್ಟಣಗಳನ್ನೂ ಬೆಂಗಳೂರಿಗೆ ಕೂಡಿಸುವ ಸುಮಾರು ೧೬೦೦ ಮೈಲಿಗಳ ರಸ್ತೆಯ ನಿರ್ಮಾಣವಾಯಿತು. ಮದ್ದೂರು, ಹೊಸಕೋಟೆ, ಭದ್ರಾವತಿ, ಶಿವಮೊಗ್ಗ ಮತ್ತು ಹಿರಿಯೂರುಗಳಲ್ಲಿ ನಿರ್ಮಿಸಿದ ಐದು ಪ್ರಧಾನ ಸೇತುವೆಗಳು ಕಬ್ಬನ್ನನ ಮತ್ತೊಂದು ಮಹತ್ಸಾಧನೆ. ಕೆರೆ ಮತ್ತು ಕಾಲುವೆಗಳ ಜೀರ್ಣೋದ್ದಾರ ಮತ್ತು ಸರಕಾರಿ ಅಧಿಕಾರಿಗಳ ವಸತಿ ನಿರ್ಮಾಣಗಳ ಕಡೆಗೂ ಸಾಕಷ್ಟು ಗಮನ ಕೊಡಲಾಯಿತು. ಇವುಗಳೆಲ್ಲದರ ಜೊತೆಗೆ ೩೩೬ ಮೈಲಿ ದೂರ ಸಂಪರ್ಕ ವ್ಯವಸ್ಥೆಯನ್ನು ನೆರವೇರಿಸಿದ್ದು ಮತ್ತು ೧೮೫೯ರಲ್ಲಿ ಜಾಲರ್‌ಪೇಟೆ ಮತ್ತು ಬೆಂಗಳೂರು ಮಧ್ಯೆ ಮೊದಲನೆಯ ರೈಲುಮಾರ್ಗ ನಿರ್ಮಿಸಿದ್ದು ಕಬ್ಬನ್ ಅವರ ಸಾಧನೆಗಳಾಗಿವೆ.

ಪೂರ್ಣರೂಪದಲ್ಲಿ ಅಭಿವೃದ್ಧಿ ಹೊಂದಿಲ್ಲದ, ದೇಶದ ವಿಶಾಲವಾದ ಕಾಡುಗಳಲ್ಲಿದ್ದ ಅಪಾರವಾದ ನಿಸರ್ಗ ಸಂಪತ್ತನ್ನು ಮನಗಂಡ ಕಬ್ಬನ್ ಸಂಸ್ಥಾನದಲ್ಲಿ ಅರಣ್ಯಪಾಲನಾಧಿಕಾರಿ ಮತ್ತು ಸಹಾಯಕರಾಗಿ ಕೆಲಸ ಕೈಗೊಳ್ಳುವ ಅಧೀನಾಧಿಕಾರಿಗಳಿಂದ ಕೂಡಿದ ಒಂದು ಪ್ರತ್ಯೇಕ ಅರಣ್ಯ ಇಲಾಖೆಯನ್ನು ಸ್ಥಾಪಿಸಿದನು. ರೋಗಪೀಡಿತರಾದ ಜನರಿಗೆ ಹೆಚ್ಚು ವೈದ್ಯಕೀಯ ಸೌಲಭ್ಯವನ್ನು ದೊರಕಿಸುವ ಸಲುವಾಗಿ ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ವಿಸ್ತಾರಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. ಶಿವಮೊಗ್ಗದಲ್ಲಿ ಎರಡನೇ ದರ್ಜೆಯ ಶಸ್ತ್ರವೈದ್ಯರನ್ನು ನೇಮಿಸಲಾಯಿತು. ಔಷಧಾಲಯಗಳನ್ನು ವೈದ್ಯರ ಅಧಿಕಾರಕ್ಕೆ ವಹಿಸಲಾಯಿತು. ಆದರೂ ಒಟ್ಟಿನಲ್ಲಿ ಜನಸಾಮಾನ್ಯರೆಲ್ಲರಿಗೂ ಸಾಕಾಗುವಷ್ಟು ವೈದ್ಯಕೀಯ ಸೌಲಭ್ಯ ಒದಗಿಸಲಾಗಲಿಲ್ಲ ವೆಂಬುದನ್ನು ಒಪ್ಪಿಕೊಳ್ಳಲೇಬೇಕು.

ಕಬ್ಬನ್ ಆಳ್ವಿಕೆಯ ಕಾಲದಲ್ಲಿ ಇದ್ದಂತಹ ದೇಶದ ಆರ್ಥಿಕ ಪರಿಸ್ಥಿತಿ ಗಮನಾರ್ಹವಾದದು. ಭೂಕಂದಾಯ, ಸುಂಕದ ತೆರಿಗೆ, ಏಕಸ್ವಾಮ್ಯ ವ್ಯಾಪಾರದ ಮೇಲಿನ ತೆರಿಗೆ, ಗಂಧದ ಮರ, ಛಾಪಾ ಕಾಗದ, ಜುಲ್ಮಾನೆ ಮತ್ತು ಮುಟ್ಟುಗೋಲು, ಅಂಚೆಗಳಿಂದ ಬರುತ್ತಿದ್ದ ಆದಾಯ ಮುಖ್ಯ ಆದಾಯಗಳಾಗಿದ್ದವು. ಕಬ್ಬನ್ ಕಮಿಷನರ್ ಆದ ಮೊದಲ ವರ್ಷ ೬೮ ಲಕ್ಷ ರೂಪಾಯಿ ಇದ್ದ ಸಂಸ್ಥಾನದ ಒಟ್ಟು ಆದಾಯ ೧೮೫೫-೦೫೬ರಲ್ಲಿ ೮೪ ಲಕ್ಷಕ್ಕೇರಿತು. ಮಧ್ಯದ ಸುಂಕದಂತಹ ಇತರ ಮೂಲಗಳ ಆದಾಯಗಳೂ ಹೆಚ್ಚಿದವು. ೧೮೩೪-೩೫ರಲ್ಲಿ ಸಂಸ್ಥಾನದಲ್ಲಿ ಕಬ್ಬನ್ ೬೫ ಲಕ್ಷ ವಾರ್ಷಿಕ ಖರ್ಚು ಇದ್ದದ್ದು, ೧೮೬೦-೬೧ರಲ್ಲಿ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಿದುದರ ಫಲವಾಗಿ ೮೫ ಲಕ್ಷಕ್ಕೇರಿತು. ಸರ್ಕಾರ ಮಾಡಿದ ಬಹು ದೊಡ್ಡ ಮೊತ್ತದ ಸಾಲಗಳನ್ನು ತೀರಿಸಿದ್ದು ಕಬ್ಬನ್ ನಿರ್ವಹಿಸಿದ ಮುಖ್ಯ ಕಾರ್ಯಗಳಲ್ಲೊಂದು. ಇದರಲ್ಲಿ ದೇಶದ ಆಡಳಿತವನ್ನು ಕೈಗೊಂಡಾಗ ಸರ್ಕಾರಿ ಸೈನಿಕ ಅಧಿಕಾರಿಗಳ ಬಾಕಿ ಉಳಿದಿದ್ದ ವೇತನಗಳನ್ನು ಪಾವತಿ ಮಾಡಲು ಮದ್ರಾಸ್ ಸರ್ಕಾರ ಕೊಟ್ಟ ೧೦ ಲಕ್ಷ ರೂಪಾಯಿಗಳ ಸಾಲವೇ ಪ್ರಮುಖವಾದುದಾಗಿತ್ತು. ಮಿಕ್ಕ ಸಾಲ ಸ್ಥಳೀಯ ಬ್ಯಾಂಕಿನವರು ಮತ್ತು ಶ್ರೀಮಂತ ವ್ಯಾಪಾರಿಗಳು ನೀಡಿದರು. ೧೮೫೭ರ ವೇಳೆಗೆ ಎಲ್ಲ ಸಾಲವನ್ನು ತೀರಿಸಿದ ಕೀರ್ತಿ ಕಬ್ಬನ್‌ಗೆ ಸೇರುತ್ತದೆ. ಇಷ್ಟೇ ಅಲ್ಲದೆ ಅವನ ಆಡಳಿತ ಅವಧಿಯಲ್ಲಿ ಕ್ರಮವಾಗಿ ೨೪.೫ ಲಕ್ಷ ರೂಪಾಯಿಗಳ ಕಪ್ಪವನ್ನು ತಪ್ಪದೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿದ್ದನು. ಹಲವು ಸರಕುಗಳ ಮೇಲಿನ ರಾಜ್ಯದ ಒಳಗಿನ ಹೊರಗಿನ ಸಾಗಾಣಿಕೆಯ ಸುಂಕವನ್ನು ವಜಾ ಮಾಡಿದ್ದು ವ್ಯಾಪಾರಾಭಿವೃದ್ಧಿಗೆ ಸಹಕರಿಸಿತ್ತು. ೧೮೪೨-೪೩ರಲ್ಲಿ ಮೈಸೂರು ತಾಲೂಕಿನ ಸಾಯರ್ ಮತ್ತು ಪಂಚಬಾಬುಗಳನ್ನು ಸರ್ಕಾರದ ಆಡಳಿತಕ್ಕೆ ಪ್ರಾಯೋಗಿಕವಾಗಿ ವಹಿಸಿಕೊಂಡಿದ್ದು ಮುಂದೆ ಫಲಪ್ರದವಾಯಿತು. ಆದ್ದರಿಂದ ಇದನ್ನು ಬೇರೆ ತಾಲೂಕುಗಳಿಗೂ ಅನ್ವಯಿಸಲಾಯಿತು. ಮದ್ಯ ಪದ್ಧತಿಯಲ್ಲಿ ಮಾಡಿದ ಮಾರ್ಪಾಡುಗಳಿಂದ ಸರಕು ಸಾಗಣೆ ಸುಲಭಸಾಧ್ಯವಾಯಿತು.

ಕೃಷಿ ಹಾಗೂ ಭೂಕಂದಾಯ ಆಡಳಿತವನ್ನು ಡಿವಿಜನಲ್ ಸೂಪರಿಂಟೆಂಡೆಂಟರು ಮತ್ತು ಅಮಲ್ದಾರರ ವಶಕ್ಕೆ ಒಪ್ಪಿಸಲಾಗಿತ್ತು. ಅಮಲ್ದಾರರು ಕಂದಾಯವನ್ನು ವಸೂಲು ಮಾಡಲು ಶೇಕ್‌ದಾರರ ಸಹಾಯವನ್ನು ಪಡೆಯುತ್ತಿದ್ದರು. ಪ್ರತಿ ಹಳ್ಳಿಗೂ ಹೋಗಿ ಕೆರೆ-ಕಟ್ಟೆ ಮತ್ತು ವ್ಯವಸಾಯದ ಸ್ಥಿತಿಗತಿಗಳನ್ನು ಪರಿಶೀಲಿಸುವುದೂ ಗ್ರಾಮಾಧಿಕಾರಿ ತೀರ್ಮಾನಿಸಲಾಗದಂತಹ ವ್ಯಾಜ್ಯಗಳನ್ನು ಬಗೆಹರಿಸುವುದು ಶೇಕದಾರರ ಕರ್ತವ್ಯವಾಗಿತ್ತು. ಶೇಕದಾರ ಹಳ್ಳಿಯ ಗೌಡರಿಂದ ಕಂದಾಯ ಪಡೆದು ಅಮಲ್ದಾರರಿಗೆ ತಲುಪಿಸುತ್ತಿದ್ದರು. ಭೂಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು. ಪ್ರಮುಖವಾಗಿ ರೈತವಾರಿ ಮತ್ತು ಬಟಾಯಿ ಸರ್ಕಾರ ಮತ್ತು ರೈತರ ಫಸಲುಗಳನ್ನು ಹಂಚಿಕೊಳ್ಳುವುದು ಮತ್ತು ಕಂದಾಯವನ್ನು ಧಾನ್ಯ ರೂಪದಲ್ಲಿ ಸಲ್ಲಿಸುವುದು ಎಂಬ ಎರಡು ಪದ್ಧತಿಗಳ ಪ್ರಕಾರ ಜಾಮೀನು ಹಿಡುವಳಿ ನಡೆಯುತ್ತಿತ್ತು. ಕಬ್ಬನ್ ರೈತರ ಅಭಿವೃದ್ಧಿಯಲ್ಲಿ ಸಹಾನುಭೂತಿಯುಳ್ಳವನಾಗಿದ್ದರಿಂದ, ಸರ್ಕಾರಕ್ಕೆ ಕೊಡಬೇಕಾದ ಹಣವು ಎಲ್ಲಿ ಹೆಚ್ಚಾಗಿ ಹೊರೆಯಾಗಿದ್ದಿತೋ ಅಲ್ಲಿ ಅದನ್ನು ಕಡಿಮೆ ಮಾಡಿದನು. ಕಂದಾಯ ಸಂಗ್ರಹದ ಕ್ರಮದಲ್ಲಿ ಎಲ್ಲಾ ರೀತಿಯಲ್ಲಿ ಔದಾರ್ಯ ತೋರಲಾಯಿತು ಹಾಗೂ ಮೇಲ್ವಿಚಾರಣೆ ಕೆಲಸ ಎಚ್ಚರಿಕೆಯಿಂದ ನಡೆಯುತ್ತಿತ್ತು. ಕಂದಾಯವನ್ನು ಧಾನ್ಯರೂಪದಿಂದ ಹಣ ರೂಪಕ್ಕೆ ಬದಲಾಯಿಸಲು ಮತ್ತು ರೈತರಿಗೆ ಅ ಉಪಯೋಗಕರವಾದ ಕೆಲಸಗಳು ನಡೆಯುತ್ತಿದ್ದಲ್ಲೆಲ್ಲಾ ಅವುಗಳನ್ನು ತೊಡೆದುಹಾಕಲು ಸರ್ವವಿಧವಾದ ಪ್ರಯತ್ನಗಳು ನಡೆದವು. ೧೮೮೫ರಲ್ಲಿ ೭೬೯ಕ್ಕೆ ಕಡಿಮೆಯಿಲ್ಲದ ರೀತಿಯ ತೆರಿಗೆಗಳನ್ನು ತೆಗೆದುಹಾಕಲಾಗಿದೆಯಂದು ಕಬ್ಬನ್ ಆಜ್ಞೆ ಹೊರಡಿಸಿದನು. ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ದೇಶದಲ್ಲಿ ಉತ್ಪತ್ತಿಯಾಗುತ್ತಿದ್ದ ಹತ್ತಿ, ಉಣ್ಣೆ, ರೇಷ್ಮೆ, ಮೊದಲಾದ ವಸ್ತುಗಳ ದರ್ಜೆಯನ್ನು ಉತ್ತಮಪಡಿಸಲು ಕೈಗೊಂಡ ಕ್ರಮಗಳು ದೇಶದ ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾದವು. ಸರ್ಕಾರದ ಪ್ರೋತ್ಸಾಹ ಪಡೆದ ಖಾಸಗಿ ಉದ್ಯಮಗಾರರಿಂದ ಕಾಫಿ ಬೆಳೆ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಪ್ರದೇಶಗಳಲ್ಲಿ ಸುಮಾರು ೧,೫೯,೧೬೫ ಎಕರೆಗಳಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಯಿತು.

ಆಂಗ್ಲ ಮಾಧ್ಯಮ ಪಾಠಶಾಲೆಗಳ ಮುಖಾಂತರ ವಿದ್ಯಾಭ್ಯಾಸ ಕಾರ್ಯವನ್ನು ವೆಸ್ಲಿಯನ್ ಮಿಷಿನ್ನಿನವರು ಆರಂಭಿಸಿದರು. ಮಿಷಿನರಿ ಮತ್ತು ಶಿಕ್ಷಣ ಪ್ರೇಮಿಯಾದ ರೆವೆರಂಡ್ ಎಂಬುವರು ಹೆಸರಾಂತ ಶಿಕ್ಷಣತಜ್ಞರಾಗಿದ್ದರು. ಮೈಸೂರು ಸಂಸ್ಥಾನದ ಶಿಕ್ಷಣಾಭಿವೃದ್ಧಿಗೆ ಇದರ ಕೊಡುಗೆ ಅಪಾರ. ಇಷ್ಟಾದರೂ ಸರ್ಕಾರವು ವಿದ್ಯಾಭ್ಯಾಸಕ್ಕೆ ಸಾಕಷ್ಟು ಗಮನ ಕೊಡಲಿಲ್ಲವೆಂಬುದೂ, ಅದಕ್ಕಾಗಿ ಮಾಡಿದ ಖರ್ಚು ಅತ್ಯಲ್ಪವೆಂಬುದು ಸಮಕಾಲೀನ ಎಲ್ಲ ದೇಶಿ ಹಾಗೂ ವಿದೇಶಿ ಚಿಂತಕರ ಕೃತಿ ಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯ.

ರಾಜಕೀಯ ಆರ್ಥಿಕಾಭಿವೃದ್ಧಿ, ವ್ಯಾಪಾರ, ವಾಣಿಜ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳಲ್ಲಿ ಮೈಸೂರು ಅಭಿವೃದ್ಧಿಯತ್ತ ಮುಖ ಮಾಡಿತು. ಹೀಗೆ ವಿಶೇಷತೆಗಳಿಂದ ಕೂಡಿದ ಕಮಿಷನರಾಗಿದ್ದ ಸರ್‌ ಮಾರ್ಕ್ ಕಬ್ಬನ್‌ನ ಕಾಲದಲ್ಲಿ ಮೈಸೂರು ಸಂಸ್ಥಾನವು ದೇಶದ ಸಾಧನಸಂಪತ್ತನ್ನು ಪ್ರಜೆಗಳ ಅನುಕೂಲಕ್ಕಾಗಿ ಬಳಸಿದ್ದಷ್ಟೇ ಅಲ್ಲದೆ ಆಡಳಿತಗಾರರ ಬಗ್ಗೆ ಜನರ ವಿಶ್ವಾಸಗಳು ಪುನಶ್ಚೇತನಗೊಳ್ಳುವಂತೆ ಮಾಡಿದವು. ಜನರ ಏಳಿಗೆ ಅಭ್ಯುದಯಕ್ಕಾಗಿ ದೃಢವಾದ ಹಾಗೂ ಸುಲಭವಾದ ತಳಹದಿ ಹಾಕಲಾಯಿತು. ಕಬ್ಬನ್ ಒಬ್ಬ ಶ್ರೇಷ್ಠ ರಾಜನೀತಿಜ್ಞನಾಗಿದ್ದನು. ಅವನನ್ನು ಕುರಿತು ಒಬ್ಬ ವಿಶಿಷ್ಠ ಸಂಪ್ರದಾಯಪಾಲಕ ಮತ್ತು ಮುಂಜಾಗ್ರತೆಯುಳ್ಳ ಆಡಳಿತಗಾರನೆಂದು ವಿವರಿಸಲಾಗಿದೆ. ಜನರ ಸದ್ಯದ ಅವಶ್ಯಕತೆ ಮತ್ತು ಅಗತ್ಯಗಳನ್ನು ಪೂರೈಸುವ ಉದ್ಧೇಶದಿಂದ ಆಡಳಿತಗಳನ್ನು ಕ್ರಿಯಾತ್ಮಕ ನಿಯಮಗಳ ಆಧಾರದ ಮೇಲೆ ನಡೆಸಲಾಯಿತು. ಅವನ ನ್ಯಾಯಪರತೆ, ಮಾನವೀಯತೆ, ಅನುಕಂಪ ಮತ್ತು ಔಚಿತ್ಯಜ್ಞಾನ ಶ್ರೇಷ್ಠಸ್ಥಾನವನ್ನು ಗಳಿಸಿಕೊಟ್ಟಿದ್ದವು. ೧೮೬೧ರಲ್ಲಿ ತನ್ನ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಕೆಲಸಕ್ಕೆ ರಾಜೀನಾಮೆ ನೀಡಿ ಭಾರತವನ್ನು ಬಿಟ್ಟು ತೆರಳಿದನು. ದುರದೃಷ್ಠವಶಾತ್ ಸೂಯೇಜ್‌ನಲ್ಲಿ ಮರಣ ಹೊಂದಿದನು.

ಬೌರಿಂಗ್: ೧೮೬೨ರಲ್ಲಿ ಲೂಯಿ ಬೆನ್ಥಾಮ್ ಬೌರಿಂಗನು ಸರ್ ಮಾರ್ಕ್ ಕಬ್ಬನ್‌ನ ಸ್ಥಾನಕ್ಕೆ ಬಂದನು. ಇವನು ಸುಮಾರು ೧೦ ವರ್ಷಗಳ ಕಾಲ ಅಧಿಕಾರದಲ್ಲಿದ್ದನು. ಶ್ರೇಷ್ಠ ಆಡಳಿತ ಸಾಮರ್ಥ್ಯವುಳ್ಳವನು ಹಾಗೂ ಭಾರತೀಯ ರಾಜಕೀಯದಲ್ಲಿ ಹೆಚ್ಚು ಅನುಭವವುಳ್ಳವನೂ ಆಗಿದ್ದನು.ಇವನ ಆಗಮನವು ಶ್ರದ್ಧೆಯ ಮತ್ತು ವ್ಯಾಪಕವಾದ ಆಡಳಿತ ಸುಧಾರಣೆಗಳ ಸಂಕೇತವಾಗಿತ್ತು. ೧೮೬೩ರಿಂದ ಆಡಳಿತಾತ್ಮಕವಾಗಿ ಮೈಸೂರು ಒಂದು ಕ್ರಮಬದ್ಧವಾದ ಪ್ರಾಂತವಾಯಿತು. ದಕ್ಷತೆಯನ್ನೇ ಮುಖ್ಯ ಧ್ಯೇಯವನ್ನಾಗುಳ್ಳ ಪುನರ್ ವ್ಯವಸ್ಥೆಯ ಸಾಮಾನ್ಯ ಯೋಜನೆಯು ೧೮೬೨-೬೩ರಿಂದ ಸಂಸ್ಥಾನದಲ್ಲಿ ಪ್ರಾರಂಭವಾಯಿತು. ಹೊಸ ಯೋಜನೆಯ ಪ್ರಕಾರ ಸಂಸ್ಥಾನವು ನಂದೀದುರ್ಗ-ಅಷ್ಠಗ್ರಾಮ-ನಗರಗಳೆಂಬ ಮೂರು ವಿಭಾಗವಾಯಿತು. ಮತ್ತೆ ಇವನ್ನು ಮೈಸೂರು, ಬೆಂಗಳೂರು, ಕೋಲಾರ, ಹಾಸನ, ಚಿಕ್ಕಮಗಳೂರು (ನಗರ), ಶಿವಮೊಗ್ಗ ಹಾಗೂ ಅಷ್ಠಗ್ರಾಮಗಳೆಂದು ೮ ಜಿಲ್ಲೆಗಳಾಗಿ ವಿಂಗಡಿಸಲಾಯಿತು. ಪ್ರತಿಯೊಂದು ವಿಭಾಗವು ೧೮೬೯ರ ವರೆಗೆ ಯುರೋಪಿಯನ್ ಸೂಪರಿಂಟೆಂ ಡೆಂಟನ ಅಧಿಕಾರದಲ್ಲಿತ್ತು. ನಂತರ ಅವರ ಸ್ಥಾನದಲ್ಲಿ ಒಬ್ಬೊಬ್ಬ ಕಮಿಷನರು ನೇಮಕವಾದರು. ಅಸಿಸ್ಟೆಂಟ್ ಸೂಪರಿಂಟೆಂಡೆಂಟರಿಗೆ ಸಹಾಯ ಪಡೆದ ಡೆಪ್ಯೂಟಿ ಸೂಪರಿಂಟೆಂಡಂಟರುಗಳಿಗೆ ಜಿಲ್ಲೆಯ ಆಡಳಿತವನ್ನು ವಹಿಸಲಾಯಿತು. ಐದು ಬೇರೆ ಬೇರೆ ದರ್ಜೆಗೆ ಸೇರಿದ ಅನೇಕ ತಾಲ್ಲೂಕುಗಳು ಒಂದು ಜಿಲ್ಲೆಯಲ್ಲಿದ್ದವು. ಮೈಸೂರಿನಲ್ಲಿದ್ದ ಬ್ರಿಟಿಷ್ ಪ್ರತಿನಿಧಿಗೆ ಕೇಂದ್ರ ಸರ್ಕಾರದ ಕಮಿಷನರ್ ಎಂಬುದಕ್ಕೆ ಬದಲಾಗಿ ಚೀಫ್ ಕಮಿಷನರ್ ಎಂದು ನಾಮಕರಣ ಮಾಡಲಾಗಿತ್ತು. ಮುಂದೆ ವಿಭಾಗದ ಕಮಿಷನರ ಕಚೇರಿಯನ್ನು ತೆಗದು ಹಾಕಿದಾಗ, ಕಂದಾಯದ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್, ಅಸಿಸ್ಟೆಂಟ್ ಕಮಿಷನರು ಮತ್ತು ಅಮಲ್ದಾರರು ಚೀಫ್ ಕಮಿಷನರ ಕೈಕೆಳಗೆ ಕೆಲಸ ಮಾಡುತ್ತಾ ಬಂದರು. ೧೮೬೯ರಲ್ಲಿ ಅಸಿಸ್ಟೆಂಟ್ ಸೂಪರಿಂ ಟೆಂಡೆಂಟರು ಸಾಮಾನ್ಯವಾಗಿ ಸಿವಿಲ್ ಕಾರ್ಯದಿಂದ ಮುಕ್ತರಾದರು ಮತ್ತು ನಿರ್ದಿಷ್ಟ ಕಾರ‍್ಯವನ್ನು ನೆರವೇರಿಸಲು ಪ್ರತಿಯೊಂದು ಜಿಲ್ಲೆಗೂ ಒಬ್ಬೊಬ್ಬ ನ್ಯಾಯಾಂಗ ಸಹಾಯಕನ ನೇಮಕ ಮಾಡಲಾಯಿತು. ಡೆಪ್ಯೂಟಿ ಕಮಿಷನರುಗಳ ಸಿವಿಲ್ ಅಧಿಕಾರವನ್ನು ಕ್ರಮೇಣ ಕಡಿಮೆ ಮಾಡಲಾಯಿತು. ೧೮೭೯ರಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕಾರ್ಯಗಳ ಬೇರ್ಪಡೆ ಕಾರ್ಯಗತವಾಯಿತು. ಅಮಲ್ದಾರರನ್ನು ಸಿವಿಲ್ ನ್ಯಾಯನಿರ್ವಾಹಕ ಕಾರ‍್ಯಗಳಿಂದ ಬಿಡುಗಡೆ ಮಾಡಿ, ಅವರು ತಮ್ಮ ಕಂದಾಯ ಕಾರ್ಯಗಳಿಗೆ ಹೆಚ್ಚು ಗಮನ ಕೊಡುವಂತೆ ಮಾಡುವ ಸಲುವಾಗಿ ೧೮೭೪-೭೫ರಲ್ಲಿ ಮುನ್ಸೀಫ್ ಕೋರ್ಟುಗಳ ಸ್ಥಾಪನೆ ಮಾಡಲಾಯಿತು. ಜಿಲ್ಲೆಯ ಭೂಕಂದಾಯದ ಅಂದಾಜು ಮತ್ತು ವಸೂಲಿಯ ಹೊಣೆಯನ್ನು ಹಾಗೂ ಜಿಲ್ಲೆಯ ಆಡಳಿತದ ಪೂರ್ಣ ನಿಯಂತ್ರಣಾಧಿಕಾರವನ್ನು ಟೆಪ್ಯೂಟಿ ಕಮಿಷನರನಿಗೆ ಒಪ್ಪಿಸಲಾಯಿತು. ಪ್ರತಿಯೊಂದು ಇಲಾಖೆ ಕಾರ್ಯವು ಹೆಚ್ಚಾಗಿ ಬೆಳೆದದ್ದರಿಂದ ವಿಭಾಗದ ಸೂಪರಿಂಟೆಂಡಂಟರಿಗೆ ಹೆಚ್ಚು ಅಧಿಕಾರ ಸ್ವಾತಂತ್ರವನ್ನು ಕೊಡಲಾಯಿತು. ಜಿಲ್ಲೆಯ ವ್ಯವಹಾರಗಳಲ್ಲಿ ಮೇಲಿನ ಅಧಿಕಾರಿಗಳು ಸಾಮಾನ್ಯವಾಗಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಈ ನಿಯಮ ಇಂದಿಗೂ ಜಾರಿಯಲ್ಲಿದೆ.

ಭೂಮಿಯ ಅಳತೆ ಮತ್ತು ಭೂಕಂದಾಯದ ತೀರ್ಮಾನದಲ್ಲಿ ಪ್ರಬಲ ನ್ಯೂನ್ಯತೆಗಳಿರುವುದನ್ನು ಮನಗಂಡು ಚೀಫ್ ಕಮಿಷನರು ರೆವೆನ್ಯೂ ಸರ್ವೇ ಮತ್ತು ಸೆಟಲ್‌ಮೆಂಟ್ ಇಲಾಖೆಯ ಪೂರ್ಣ ನಿರ್ವಹಣೆಯನ್ನು ಬೌರಿಂಗ್ ಅವರ ಇಲಾಖೆಯೇ ಕೈಗೊಂಡಿತ್ತು. ಭೂಮಿಯ ಅಳತೆ ಮತ್ತು ಅಂದಾಜಿನ ವಿಷಯದಲ್ಲಿ ಕ್ರಮಬದ್ಧತೆಯನ್ನೂ ಮತ್ತು ನಿಷ್ಪಷ್ಟತೆಯನ್ನೂ ಆಚರಣೆಗೆ ತರಲಾಯಿತು. ಬೌರಿಂಗ್ ಇನಾಮ್ ಕಮಿಷನನ್ನು ಸ್ಥಾಪಿಸಿ ೧೮೬೩ರಲ್ಲಿ ತನ್ನ ಕಾರ‍್ಯ ಪ್ರಾರಂಭಿಸುವಂತೆ ಕ್ರಮ ಕೈಗೊಂಡನು. ಅವಶ್ಯಕವಾದ ಹೊಸ ಮಾರ್ಪಾಡುಗಳನ್ನು ಕಾರ್ಯಗತ ಮಾಡಲು ಸರ್ವೇ ಸೆಟಲ್‌ಮೆಂಟ್‌ ಕಮಿಷನರ ಅಧೀನದಲ್ಲಿ ಹೊಸ ಇಲಾಖೆ ರೂಪಗೊಂಡಿತು. ಕಂದಾಯಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ಮತ್ತು ದಾಖಲೆಗಳನ್ನು ಕ್ರಮಬದ್ದಗೊಳಿಸಲು ೧೮೬೪ರಲ್ಲಿ ಪೂರ್ಣಪ್ರಮಾಣದ ಕಂದಾಯ ಸುತ್ತೋಲೆಯನ್ನು ಹೊರಡಿಸಲಾಯಿತು. ಸರ್ವೇ ಪದ್ಧತಿ ಮತ್ತು ನೀರಾವರಿ ವಿಷಯಗಳಿಗೆ ಸಂಬಂಧಿಸಿದ ಮುಖ್ಯಾಂಶಗಳಿಗೆ ಗಮನಕೊಡಲು ಸಮಿತಿಗಳನ್ನು ರಚಿಸಲಾಯಿತು. ಮುಂಬಯಿಯ ೧೮೬೫ರ ೧ನೇ ಶಾಸನ ಮತ್ತು ೧೮೬೮ರ ೪ನೇ ಶಾಸನಗಳು ಜಾರಿಗೆ ಬಂದು, ಅವುಗಳ ಆಧಾರದ ಮೇಲೆ ಸರ್ವೆ ಮತ್ತು ಸೆಟಲ್‌ಮೆಂಟ್ ನಿಯಮಗಳು ರಚಿತವಾದವು. ೧೮೬೩ರಲ್ಲಿ ಏಕರೀತಿಯ ಅಧಿಕಾರಪೂರ್ವಕ ವರದಿಗಳನ್ನು ಮತ್ತು ದಾಖಲೆಗಳನ್ನು ರೂಪಿಸಲಾಯಿತು. ಇದರಿಂದ ಮೈಸೂರು ಸಂಸ್ಥಾನದಲ್ಲಿ ಸೋರಿಕೆಯಾಗುತ್ತಿದ್ದ ತೆರಿಗೆ ರೂಪದ ಹಣ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಅನುಕೂಲವಾಯಿತು.

೧೮೬೨-೬೩ರ ನಂತರ ಕಾರ್ಯರೂಪಕ್ಕೆ ಬಂದ ಪುನರ್‌ವ್ಯವಸ್ಥಿತ ಯೋಜನೆಯ ಪ್ರಕಾರ, ನ್ಯಾಯಾಂಗದ ಅಧಿಕಾರಿಗಳೆಂದರೆ ಇಡೀ ಪ್ರಾಂತದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯ ವಿರ್ವಹಣೆ ಮಾಡುವುದರ ಜೊತೆಗೆ ಮುಖ್ಯ ನ್ಯಾಯಾಸ್ಥಾನದ ಅಧಿಕಾರ ವ್ಯಾಪ್ತಿ ಹೊಂದಿದ್ದ ನ್ಯಾಯಾಂಗ ಕಮಿಷನರು, ಸೆಷನ್ ಜಡ್ಜ್‌ಗಳು, ಜಿಲ್ಲೆಗಳ ಡೆಪ್ಯೂಟಿ ಸೂಪರಿಂಟೆಂಡೆಂಟ್‌ಗಳು, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್‌ಗಳು ಮತ್ತು ಅಮಲ್ದಾರರಾಗಿದ್ದರು. ನ್ಯಾಯಾಂಗ ಕಮಿಷನರ್ ಕಾರ‍್ಯಗಳು, ನ್ಯಾಯಾಂಗ ಪೊಲೀಸ್ ಮತ್ತು ಸೆರೆಮನೆ ಆಡಳಿತಕ್ಕೆ ಸೀಮಿತವಾಗಿದ್ದವು. ಆದರೆ ಇತರರ ಕಾರ‍್ಯಗಳು ಸಿವಿಲ್, ಕ್ರಿಮಿನಲ್ ಮತ್ತು ಕಂದಾಯ ನಿರ್ವಾಹಕ ಕಾರ‍್ಯಗಳಿಗೆ ಮಿತಿಗೊಂಡಿದ್ದವು. ಹುಜೂರ್ ಅದಾಲತ್ ಮತ್ತು ಸಾದರ್ ಮುನಿಸಿಫ್ ಕೋರ್ಟುಗಳನ್ನು ತೆಗೆದು ಹಾಕಿದ್ದು, ಇಂಡಿಯನ್ ಪೀನಲ್ ಕೋಡ್, ಕ್ರಿಮಿನಲ್ ಪ್ರೊಸೀಜರ್ ಕೋಡ್, ಅಪರಾಧದ ನಿರ್ಧಾರ ಮತ್ತು ಅದಕ್ಕೆ ನಿರ್ಧಿಷ್ಟವಾದ ದಂಡನಾ ಕ್ರಮವನ್ನು ಹೇಳುವ ೧೮೭೨ರ ೧೦ನೇ ಶಾಸನವನ್ನು ಆಚರಣೆಗೆ ತಂದುದು ಮಹತ್ವದ ಸಾಧನೆಗಳಾಗಿವೆ. ಹಣರೂಪದ ಶುಲ್ಕ ಪದ್ಧತಿಯನ್ನು ತೊಡೆದು ಛಾಪಾಕಾಗದಗಳನ್ನು ಬಳಕೆಗೆ ತಂದು ಕಾರ್ಯಗತವಾದ ಇತರ ಅಭಿವೃದ್ಧಿಪರ ಕೆಲಸಗಳಾಗಿವೆ. ಸರ್ಕಾರದ ಕಾರ್ಯಕ್ರಮ ಹಾಗೂ ನ್ಯಾಯಾಂಗ ಕಾರ್ಯಗಳಿಂದ ಬೇರ್ಪಡಿಸುವುದರಿಂದುಂಟಾಗುವ ಅನುಕೂಲತೆಗಳು ಬೌರಿಂಗ್ ಅವರಿಗೆ ತಿಳಿದಿತ್ತು. ಹೀಗಾಗಿ ನ್ಯಾಯಾಂಗ ಶಾಖೆಯ ವಿಸ್ತಾರವಾದ ಕಾರ್ಯಾಚರಣೆಯಲ್ಲಿ ಸುಧಾರಣೆಗಳನ್ನು ಮಾಡಿದನು. ೧೮೬೪ರ ೧೪ನೇ ರಿಜಿಸ್ಟೇಷನ್ ಶಾಸನದ ಪ್ರಕಾರ ಮುಖ್ಯ ದಾಖಲೆಗಳನ್ನು ರಿಜಿಸ್ಟರ್ ಮಾಡಿಸಲೂ ನ್ಯಾಯಾಸ್ಥಾನದ ಕಾರ‍್ಯಗಳನ್ನೂ ನೆರವೇರಿಸುವುದರಲ್ಲಿ ಹೆಚ್ಚು ಕಾಲನಿಷ್ಠೆ ಮತ್ತು ಕ್ರಮಬದ್ಧತೆ ಹೊಂದಿಸಲೂ ಒತ್ತಾಯ ಮಾಡಿದನು. ೧೮೭೩ರಲ್ಲಿ ನಂದಿದುರ್ಗ ವಿಭಾಗದಲ್ಲಿ ಮುನ್ಸೀಫ್ ಕೋರ್ಟುಗಳನ್ನು ಸ್ಥಾಪಿಸುವುದರ ಜೊತೆಗೆ ಸಿವಿಲ್ ಮತ್ತು ಕ್ರಿಮಿನಲ್ ಕಾರ್ಯಗಳನ್ನು ಬೇರ್ಪಡಿಸುವ ಪ್ರಯತ್ನ ನಡೆಯಿತು. ಪರಿಷ್ಕರಿಸಿದ ಈ ಪದ್ಧತಿಯ ಪ್ರಕಾರ ನ್ಯಾಯಾಲಯಗಳ ಸಂಖ್ಯೆ ೧೦೩ರಿಂದ ೧೨೫ಕ್ಕೆ ಏರಿತು.

ಮದ್ರಾಸು ಮಾದರಿಯಲ್ಲಿ ಮೈಸೂರಿನಲ್ಲಿಯೂ ಒಂದು ಹೊಸ ಪೊಲೀಸು ಇಲಾಖೆ ರಚನೆಯಾಯಿತು. ಅದು ಬೆಂಗಳೂರು ಪಟ್ಟಣ ಮತ್ತು ಇತರ ಜಿಲ್ಲೆಯಲ್ಲಿ ವಸಾಹತು ಶಾಹಿಗಳ ಮೇಲ್ವಿಚಾರಣೆಯಲ್ಲಿ ಜಾರಿಗೆ ತರಲಾಯಿತು ಹಳೆಯ ಕಂದಾಚಾರ ಸೈನ್ಯವನ್ನು ತೊಡೆದು ಹಾಕಲಾಯಿತು. ೧೮೭೨ರಲ್ಲಿ ಹೊಸ ಪೊಲೀಸು ನಿಯಮಗಳು ರೂಢಿಗೆ ಬಂದವು. ಪೊಲೀಸರು ಇಲ್ಲಿಂದ ಮುಂದೆ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರುಗಳ ನೇರ ನಿಯಂತ್ರಣಕ್ಕೆ ಒಳಪಡಲಿಲ್ಲ. ಇಲಾಖೆಯು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಅವರ ಸಹಾಯಕರಾದ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನಲ್‌ಗಳು ಮುತ್ತು ಡಿಸ್ಟ್ರಿಕ್ಟ್ ಸೂಪರಿಂಟೆಂಡೆಂಟ್‌ರಿಂದ ಕೂಡಿದ್ದಿತು. ಮುಖ್ಯ ಪಟ್ಟಣಗಳಲ್ಲಿದ್ದ ಸೆರಮೆನೆ ಮತ್ತು ಆಸ್ಪತ್ರೆಗಳಲ್ಲಿ ಅಧಿಕ ಸಂಖ್ಯೆಯ ವ್ಯೆದ್ಯಕೀಯ ಸಿಬ್ಬಂದಿ ನೇಮಕಗೊಂಡರು. ಅಭಿವೃದ್ಧಿಗಾಗಿ ಒಂದು ಶಿಕ್ಷಣ ಆಯೋಗ ಸ್ಥಾಪನೆಯಾಯಿತು. ಇಂಜನಿಯರಿಂಗ್ ಇಲಾಖೆಯನ್ನು ತೋಟಗಾರಿಕೆಯ ಉದ್ಯಾನಗಳನ್ನು ಅಭಿವೃದ್ಧಿಗೊಳಿಸುವ ಕಡೆಗೆ ವಿಶೇಷ ಗಮನ ಕೊಡಲಾಯಿತು. ವಿವಿಧ ವಸ್ತು ಸಂಗ್ರಹಾಲಯ ಮತ್ತು ಸರ್ಕಾರಿ ಮುದ್ರಣಾಲಯಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಯಿತು. ಹೀಗೆ ಹೊಸ ಅವಶ್ಯಕತೆ ಕಂಡಲ್ಲೆಲ್ಲ ತಕ್ಷಣ ಒಂದು ಹೊಸ ಇಲಾಖೆ ಮೂಡುತ್ತಿತ್ತು. ಅವರ ಕಾಲಾವಧಿಯಲ್ಲಿ ಯಾವ ನಿರ್ಬಂಧವೂ ಇಲ್ಲದೆ ಇಲಾಖೆಗಳನ್ನು ವಿಸ್ತೃತಗೊಳಿಸುವ ಕಾರ್ಯ ನಡೆಯಿತು. ಇದರಲ್ಲಿ ದೇಶದಲ್ಲಿ ಯೂರೋಪಿಯನ್ ಅಧಿಕಾರಗಳು ಅಧಿಕವಾಗಲು ಅವಕಾಶವಾಯಿತು.

ಬೌರಿಂಗನು ೧೮೭೦ರಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದನು. ಇವನ ರಾಜೀನಾಮೆ ಮತ್ತು ೧೮೮೧ರಲ್ಲಿ ಚಾಮರಾಜ ಒಡೆಯರ ಅಧಿಕಾರ ಸ್ವೀಕಾರದ ಮಧ್ಯಾವಧಿಯಲ್ಲಿ ೧೮೭೫ರ ವರೆಗೆ ಕರ್ನಲ್ ರಿಚರ್ಡ್ ಮೀಡ್, ಅನಂತರ ಎರಡು ವರ್ಷಗಳ ವರೆಗೆ ಸಿ. ಬಿ. ಸ್ಯಾಂಡರ್ಸ್ ಅನಂತರ ೧೮೭೭ರ ಏಪ್ರಿಲ್‌ನಿಂದ ಜಿ.ಡಿ. ಗೋರ್ವನ್ ಈ ಮೂವರು ಚೀಫ್ ಕಮಿಷನರುಗಳು ಆಳ್ವಿಕೆ ಮಾಡಿದರು. ಇವರು ಮೈಸೂರು ರಾಜವಂಶಸ್ಥರಿಗೆ ಹಲವಾರು ಪೂರ್ವಾರ್ಜಿತ ಆಸ್ತಿಗಳನ್ನು ಬಿಟ್ಟುಕೊಡಲು ಮುಂದಾದರು. ೧೮೮೧ರಲ್ಲಿ ೧೦ನೇ ಚಾಮರಾಜ ಒಡೆಯರ್ ರಾಜ್ಯಭಾರ ವಹಿಸಿಕೊಂಡಿದ್ದು, ಅಭೀವೃದ್ಧಿ ಮತ್ತು ಅಭ್ಯುದಯದ ಹೊಸ ಶಕೆಯನ್ನೇ ಪ್ರಾರಂಭಿಸಿತು. ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಚಾಮರಾಜ ಒಡೆಯರ್‌ರವರನ್ನು ದತ್ತು ತೆಗೆದುಕೊಂಡ ವಿಷಯಗಳಲ್ಲಿ ಧೀರ್ಘವಾದ ಚರ್ಚೆ ನಡೆಯುತ್ತಿತ್ತು. ಆದರೂ ಈ ಅವಧಿಯಲ್ಲಿ ಬ್ರಿಟಿಷ್ ಆಡಳಿತಗಾರರಿಗೂ ಮುಮ್ಮಡಿ ಕೃಷ್ಣರಾಜ ಒಡೆಯರಿಗೂ, ನಂತರ ಚಾಮರಾಜ ಒಡೆಯರಿಗೂ ಮಧ್ಯೆ ಸ್ನೇಹ ಪರಸ್ಪರ ಗೌರವ ಮತ್ತು ಮನ್ನಣೆಗಳು ಉಳಿದುಕೊಂಡ ಬಂದಿದ್ದವು.

ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಆಡಳಿತವನ್ನು ನಡೆಸುತ್ತಿದ್ದ ಬ್ರಿಟಿಷ್ ಕಮಿಷನರುಗಳೊಂದಿಗೆ ಅತ್ಯಂತ ಉತ್ತಮ ಸಂಬಂಧವನ್ನಿಟ್ಟುಕೊಂಡುದಲ್ಲದೆ, ಅವರನ್ನು ರಾಜ್ಯದ ಪ್ರಗತಿಪರ ಚಿಂತಕರೆಂದು ಭಾವಿಸಿ, ಅನುಕೂಲ ಪರಿಸ್ಥಿತಿ ಒದಗಿದೊಡನೆಯೇ ವಸಾಹತುಶಾಹಿಗಳು ಸಂಸ್ಥಾನದ ಆಡಳಿತವನ್ನು ತಮಗೆ ಕೊಡುವರೆಂದು ನಂಬಿಕೊಂಡಿದ್ದುದು ಅವರ ನಿಸ್ಸಾಹಯಕತೆಯ ಸೂಚನೆಯಾಗಿ ಕಂಡು ಬರುತ್ತದೆ. ಭಾರತವನ್ನು ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದ ವಸಾಹತುಶಾಹಿಗಳು ಇಂತಹ ಬದಲಾವಣೆ ಮಾಡುವ ಬಗೆಗೆ ಆಸಕ್ತಿ ಹೊಂದಿರಲಿಲ್ಲ. ಕೆಲವರಂತೂ ಇದಕ್ಕೆ ಬದಲಾಗಿ, ಮೈಸೂರನ್ನು ಬ್ರಿಟಿಷ್ ಭಾರತದೊಡನೆ ಸೇರಿಸಿಬಿಡಬೇಕೆಂದು ಅಭಿಪ್ರಾಯವನ್ನು ಹೊಂದಿದ್ದರು. ಹಿತವಾದ ವಾತಾವರಣ, ಸುಂದರ ಪ್ರಾಕೃತಿಕ ದೃಷ್ಯಗಳು, ಯಥೇಚ್ಛ ಸಂಪನ್ಮೂಲಗಳು ಇವುಗಳಿಂದ ಕೂಡಿದ ಮೈಸೂರು ಸಂಸ್ಥಾನವು ಎಲ್ಲ ದೃಷ್ಟಿಯಿಂದಲೂ ಬಯಸುವ ಪ್ರದೇಶವಾಗಿತ್ತು. ಆದರೆ ಮುಮ್ಮಡಿ ಕೃಷ್ಣರಾಜ ಒಡೆಯರು ಎಂದಿಗೂ ಬೇಸರ ಪಡದೆ, ಭಾರತೀಯ ಮತ್ತು ಬ್ರಿಟಿಷ್‌ಗೆಳೆಯರ ನೆರವನ್ನು ಗಳಿಸಿಕೊಂಡು, ಸಂಸ್ಥಾನವನ್ನು ವಾಪಸ್ಸು ಪಡೆದುಕೊಳ್ಳುವುದಕ್ಕೆ ಒತ್ತಾಯ ಪಡಿಸುತ್ತಿದ್ದರು. ಆದರೆ ಮುಮ್ಮಡಿಯವರು ಹೇಳಿದಂತೆ “೧೮೫೭ರ ಕಷ್ಟಕಾಲದಲ್ಲಿಯೂ ಬ್ರಿಟಿಷರಿಗೆ ನಿಷ್ಠೆಯಿಂದಿದ್ದು ಅವರು ನೀಡಿದ ಅನನುಕೂಲತೆಯನ್ನು ಸಹಿಸಿ ಕೊಂಡು ಬಂದರು. ಭದ್ರತೆಯ ವಿಷಯದಲ್ಲಿ ತಮ್ಮ ಸಂಪೂರ್ಣ ವಿಶ್ವಾಸವನ್ನು ಘೋಷಿಸುವ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತ ವಿಧೇಯತೆಯಿಂದ ಇದ್ದರು. ಇದರ ತರುವಾಯ ವಿಕ್ಟೋರಿಯಾ ರಾಣಿ, ಈಸ್ಟ್ ಇಂಡಿಯಾ ಕಂಪನಿಯಿಂದ ಭಾರತೀಯ ಪ್ರದೇಶಗಳ ನೇರ ಆಡಳಿತವನ್ನು ವಹಿಸಿಕೊಂಡಾಗ ಮುಮ್ಮಡಿ ಅವರು ಸಂತಸದಿಂದ ಸ್ವಾಗತಿಸಿದರು. ಅವರು ಸಿಂಹಾಸನವನ್ನು ಮತ್ತೆ ಪಡೆದು, ಅರವತ್ತನೆಯ ವಾರ್ಷಿಕೋತ್ಸವವನ್ನು ೧೮೫೯ರಲ್ಲಿ ಆಚರಿಸಿದ ಸಂದರ್ಭದಲ್ಲಿ ಹೊಸ ರಾಜ್ಯಭಾರದ ಕಾಲದಲ್ಲಾದರೂ ಸಂಸ್ಥಾನದ ಆಳ್ವಕೆ ತಮಗೆ ದೊರಕಬಹುದೆಂದು ಆಶಿಸಿದರು. ೧೮೬೦ ಗರ್ವನರ್ ಜನರಲ್ ಆಡಳಿತದಲ್ಲಿ ಮೈಸೂರನ್ನು ಮದರಾಸು ಗವರ‍್ನರ್ ಆಡಳಿತಕ್ಕೆ ವಹಿಸಬೇಕೆಂಬ ಪ್ರಯತ್ನ ನಡೆದಾಗ, ಅವರು ಆ ಬದಲಾವಣೆಯ ಬಗೆಗೆ ತಮ್ಮ ಪ್ತತಿಭಟನೆಯನ್ನು ವ್ಯಕ್ತಪಡಿಸಿದರು. ಆದ್ದರಿಂದ ತಮ್ಮ ಸ್ಥಾನಕ್ಕೆ ಚ್ಯುತಿ ಬರುವುದೆಂದೂ, ತಮ್ಮ ರಾಜ್ಯವನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲು ಅದೇ ಪ್ರಥಮ ಹೆಜ್ಜೆಯಾದೀತೆಂದೂ ತಿಳಿದಿದ್ದರು”. ಈ ವಿಷಯದಲ್ಲಿ ಸರ್ ಮಾರ್ಕ್‌ಕಬ್ಬನ್ ಅವರೇ ಸ್ವತ: ರಾಜೀನಾಮೆ ಸಲ್ಲಿಸುವುದಾಗಿ ಬೆದರಿಕೆ ಹಾಕಿದುದರ ಪರಿಣಾಮವಾಗಿ ಬದಲಾವಣೆಯ ಸಲಹೆ ನಿಂತಿತು.

ವೈಸರಾಯ್ ಲಾರ್ಡ್ ಕ್ಯಾನಿಂಗ್ ಬ್ರಿಟಿಷ್ ಸಿಂಹಾಸನದ ಬಗೆಗೆ ಮೈಸೂರು ಅರಸರ ರಾಜಭಕ್ತಿಯನ್ನು ಶ್ಲಾಘಿಸಿದ ಸಂದರ್ಭದಲ್ಲಿ, ಅವನಿಂದ ಅನುಕೂಲಕರವಾದ ಉತ್ತರ ಬರುತ್ತದೆಂದು ಆಶಿಸಿದ ಮುಮ್ಮಡಿ ಅವರು, ೧೮೬೧ರಲ್ಲಿ ಒಂದು ಮನವಿಯನ್ನು ಸಲ್ಲಸಿ, ರಾಜ್ಯದ ಆಡಳಿತ ಅಧಿಕಾರವನ್ನು ತಮಗೆ ಕೊಡಬೇಕೆಂದು ಕೇಳಿಕೊಂಡರು. ಆದರೆ, ಇದಕ್ಕೆ ಬಂದ ಉತ್ತರ ಕೇವಲ ನಿರಾಕರಣೆ. ಅವರು ಇದರಿಂದ ಕುಂಠಿತರಾಗದೆ ತಮ್ಮ ಹೋರಾಟವನ್ನು ಮುಂದುವರೆಸಿ ಮುಂದಿನ ವೈಸ್‌ರಾಯ್‌ಗಳ ಲಾರ್ಡ್‌ ಎಲ್ಗಿನ್ ಮತ್ತು ಲಾರ್ಡ್ ಲಾರೆನ್ಸ ಇವರುಗಳೊಡನೆ ಚರ್ಚಿಸಿದರು. ಆದರೆ ಪ್ರಭಾವ ಬೀರಲು ವಿಫಲರಾದರು. ಲಾರ್ಡ್ ಲಾರೆನ್ಸ್ ಮೈಸೂರನ್ನು ವಶಪಡಿಸಿಕೊಂಡ ವಿಷಯವನ್ನೇ ಮುಕ್ತಾಯ ಮಾಡಿಬಿಡಲು ಯೋಚಿಸಿದನು. ಇವನು ಡಾಕ್ಟ್ರಿನ್ ಆಫ್ ಲ್ಯಾಪ್ಸ್ ರದ್ಧತಿಯ ಸಿದ್ದಾಂತಕ್ಕೆ ಹೆಸರು ಪಡೆದು, ಅದರ ಪ್ರಕಾರ ಭಾರತದಲ್ಲಿ ಎಂಟು ವರ್ಷಗಳ ಆಳ್ವಿಕೆಯಲ್ಲಿ ೨೦ ರಾಜ್ಯಗಳನ್ನು ಬ್ರಿಟಿಷ್ ಆಡಳಿತಕ್ಕೆ ಸೇರಿಸಿದ್ದ ಇವನು ಲಾರ್ಡ್ ಡಾಲ್‌ಹೌಸಿಯ ಶಿಷ್ಯನಾಗಿದ್ದನು. ಜೊತೆಗೆ ಸಂಸ್ಥಾನದ ಅರಸರಿಗೆ ರಾಜ್ಯದ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯವರು ಸಹಾನುಭೂತಿಯನ್ನಾಗಲೀ ನೆರವನ್ನಾಗಲೀ ನೀಡುವದು ಅನುಮಾನವಾಗಿತ್ತು.

ಮುಮ್ಮಡಿ ಕೃಷ್ಣರಾಜರಿಗೆ ೭೦ ವರ್ಷ ವಯಸ್ಸಾಗಿತ್ತು. ಮಕ್ಕಳಿಲ್ಲದ ಇವರು ೧೮೬೪ರಲ್ಲಿ ದತ್ತು ಸ್ವೀಕಾರ ಮಾಡಲು ನಿರ್ಧಾರ ಮಾಡಿದರು. ೧೮೬೫ನೆಯ ಜೂನ್ ತಿಂಗಳಲ್ಲಿ ಸ್ವೀಕಾರ ಮಾಡಿದ ದತ್ತು ಮಗ ಚಾಮರಾಜ ಒಡೆಯರಿಗೆ ೨ ವರ್ಷ ವಯಸ್ಸಾಗಿತ್ತು. ಚಾಮರಾಜ ಒಡೆಯರ್ ಅವರು ಲಕ್ಷ್ಮಮ್ಮಣ್ಣಿ ಅವರ ಬೆಟ್ಟದ ಕೋಟೆ ವಂಶದವರಾಗಿದ್ದರು. ಇದು ಮೈಸೂರಿನ ರಾಜಕೀಯ ಭವಿಷ್ಯದ ಬಗೆಗೆ ಇತರ ದೇಶೀಯ ಅರಸರಲ್ಲದೇ, ಭಾರತದ ಬಗ್ಗೆ ಆಸಕ್ತಿ ವಹಿಸುತ್ತಿದ್ದ ಇಂಗ್ಲೆಂಡಿನ ಪ್ರಖ್ಯಾತ ವೃತ್ತ ಪತ್ರಿಕಾ ಲೇಖಕರ ಆಸಕ್ತಿಯನ್ನು ಕೆರಳಿಸಿತು. ೧೮೮೬ರಲ್ಲಿ ಸಾಮಾನ್ಯ ಸಭೆಯಲ್ಲಿ ಒಂದು ಮನವಿಯನ್ನು ಸಲ್ಲಿಸಲಾಯಿತು. ಅದಕ್ಕೆ ಸಹಿ ಮಾಡಿದವರಲ್ಲಿ ಮುಖ್ಯರಾದವರೆಂದರೆ ಸ್ಟೂಯರ್ಟ ಮಿಲ್, ಸರ್ ಹೆನ್ರಿ ರಾಲಿನ್‌ಸನ್, ಗ್ರಾಂಟ್ ಡೆಫ್, ಕರ್ನಲ್ ಸೈಕ್ಸ್, ಈವನ್ಸ್ ಬೆಲ್, ಜಾನ್ ಡಿಕಿನ್‌ಸನ್ ಮೊದಲಾದವರೆಲ್ಲ ಮೈಸೂರಿನಲ್ಲಿ ಸ್ವಲ್ಪವೂ ವಿಳಂಬ ಮಾಡದೆ, ದೇಶೀಯ ಅರಸರ ಆಳ್ವಿಕೆಯನ್ನು ಪುನಃ ಸ್ಥಾಪಿಸುವ ಬಗೆಗೆ ಭರವಸೆಯನ್ನು ಕೇಳಿದ್ದರು. ಆನ್ ಮಾರ್ಲೆ ಅವರು ಈ ವಿಷಯವಾಗಿ , ಫಾರ್ಟ ನೈಟ್ಲಿ ರಿವ್ಯೂ ಎಂಬ ನಿಯತಕಾಲಿಕ ಪತ್ರಿಕೆಯ ೧೮೬೬ರ ಸಪ್ಟೆಂಬರ್ ೧೯ರ ಸಂಚಿಕೆಯಲ್ಲಿ ಒಂದು ಧೀರ್ಘವೂ ತರ್ಕಬದ್ಧವೂ ಆದ ಲೇಖನವನ್ನು ಬರೆದು, ಮೈಸೂರಿನ ರಾಜ ಮನೆತನಕ್ಕೆ ರಾಜ್ಯಭಾರವನ್ನು ಹಿಂದಕ್ಕೆ ಕೊಡಬೇಕೆಂದು ವಾದಿಸಿದರು. ಇನ್ನೂ ಹಲವಾರು ಇಂಗ್ಲಿಷ್ ನಿಯತಕಾಲಿಕ ಪತ್ರಿಕೆಗಳು ಈ ಪ್ರಶ್ನೆಯ ವಿಷಯವಾಗಿ ಲೇಖನಗಳನ್ನು ಬರೆದವು. ಮೈಸೂರಿನ ಅರಮನೆ ವೈದ್ಯರಾಗಿದ್ದ ಡಾ.ಕ್ಯಾಂಬೆಲ್ ಅವರು ಇಂಗ್ಲೆಂಡಿಗೆ ಹೋಗಿ, ಈ ವಿಚಾರವಾಗಿ ತುಂಬ ಶ್ರಮಿಸಿದರು. ಸಾಮಾನ್ಯ ಸಭೆ ಈ ವಿಷಯವನ್ನು ೧೮೬೭ರ ಜುಲೈ ೨೨ರಂದು ಚರ್ಚಿಸಿ ಮೈಸೂರಿನ ಪರವಾಗಿ ತೀರ್ಮಾನ ನೀಡಿತು. ದತ್ತು ಸ್ವೀಕಾರವು ಅಂಗೀಕೃತವಾಯಿತು. ಮುಮ್ಮಡಿ ಕೃಷ್ಭರಾಜರಿಗೆ ಅವರ ಜೀವಿತಕಾಲದಲ್ಲಿ ರಾಜ್ಯಭಾರ ಮಾಡುವ ಹಕ್ಕು ಅಂಗೀಕೃತವಾದದ್ದು ಸಂತೋಷ ತಂದಿತ್ತು. ಚಾಮರಾಜ ಒಡೆಯರ್ ಪ್ರಾಪ್ತವಯಸ್ಕನಾದ ಕೂಡಲೇ ಮೈಸೂರಿನ ಅರಸನಾಗಬಹುದೆಂದು ಭರವಸೆಯನ್ನು ನೀಡಲಾಯಿತು. ಕೃಸ್ಣರಾಜ ಒಡೆಯರು ತಮ್ಮ ೭೪ನೆಯ ವಯಸ್ಸಿನಲ್ಲಿ ಮರಣ ಹೊಂದಿದಾಗ ರಾಜ್ಯದ ಆಡಳಿತವನ್ನು ತಮ್ಮ ಮನೆತನದವರಿಗೆ ಕೊಡಿಸಬೇಕೆಂದು ಮಾಡಿದ ಪ್ರಯತ್ನದಲ್ಲಿ ಯಶಸ್ಸನ್ನು ಕಂಡ ತೃಪ್ತಿಯನ್ನು ಹೊಂದಿದ್ದರು.