ಆಧುನಿಕ ಮೈಸೂರು ಸಂಸ್ಥಾನಕ್ಕೆ ಮೇಲಿನವರ ಕೊಡುಗೆಯಿಂದ ಉಂಟಾದ ರಾಜಕೀಯ ಹಾಗೂ ಆರ್ಥಿಕಾಭಿವೃದ್ಧಿಯನ್ನು ಸಹಜವಾಗಿಯೂ ನೆರೆಯ ದೇಶೀಯ ಹಾಗೂ ವಸಾಹತುಶಾಹಿ ಆಡಳಿತಾಧಿಕಾರಿಗಳು ಕುತೂಹಲದಿಂದ ನೋಡುತ್ತಿದ್ದರು. ಕೈಗಾರಿಕೆ, ವ್ಯಾಪಾರ ಮುಂತಾದ ವಿಚಾರಗಳಲ್ಲಿ ಸಂಸ್ಥಾನವು ಇತರ ಪ್ರಾಂತ್ಯಗಳಿಗೆ ಉತ್ತಮ ಮಾದರಿಯಾಗಿತ್ತು. ಈ ಸಂದರ್ಭದಲ್ಲಿ ಮೈಸೂರು ಸರ್ಕಾರವು ಇಲ್ಲಿಯ ರಾಜಕೀಯ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಭಾರತದ ಯಾವ ಸಂಸ್ಥಾನದಲ್ಲಿಯೂ ಸಿಗಲು ಸಾಧ್ಯವಾಗುವುದಿಲ್ಲ ಎಂಬುವುದು ಗಮನಾರ್ಹವಾದದ್ದಾಗಿದೆ. ಸಂಸ್ಥಾನದಲ್ಲಿರುವ ಪ್ರಾಕೃತಿಕ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಂಡಿರುವುದಕ್ಕೆ ಸರ್ಕಾರ ಮಾದರಿಯಾಗಿತ್ತು. ವಿಪರ‍್ಯಾಸವೆಂದರೆ ಪ್ರಾಕೃತಿಕ ಸಂಪತ್ತು ಇತರ ಪ್ರದೇಶಕ್ಕಿಂತಲೂ ಹೆಚ್ಚಿನ ಉತ್ಕೃಷ್ಟತೆಯನ್ನು ಇಲ್ಲಿ ನೀಡಿದೆ. ಆದರೆ ಇಂದಿಗೂ ನಾವು ಈ ಅನುಕೂಲಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ. ಇದಕ್ಕೆ ನಮ್ಮ ಸರ್ಕಾರ ಹಾಗೂ ಜನರ ನಿರ್ಲಕ್ಷ್ಯವೇ ಮುಖ್ಯ ಕಾರಣ. ದಿವಾನರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಹಲವು ದೊಡ್ಡ ಕಾರ್ಖಾನೆಗಳು ಸ್ಥಾಪನೆಗೊಂಡವು. ಇವುಗಳ ಜೊತೆಯಲ್ಲಿ ಅನೇಕ ಗ್ರಾಮೀಣ ಕೈಗಾರಿಕೆ ಅಭಿವೃದ್ಧಿ ಹೊಂದಿದವು. ಆದರೆ ಸ್ವಾತಂತ್ರ್ಯ ಬಂದು ೬೪ ವರ್ಷ ಕಳೆದರು. ಕರ್ನಾಟಕ ರಚನೆಯಾಗಿ ೬೦ ವರ್ಷಗಳು ಕಳೆದರೂ ಸಹ ಸರ್ಕಾರದ ಸ್ವಾಮ್ಯದಲ್ಲಿ ಒಂದೇ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗಿಲ್ಲದಿರುವುದು ವಿಪರ‍್ಯಾಸವೆ ಸರಿ. ನಾಲ್ವಡಿ ಅವರ ಸರ್ಕಾರ ಕೈಗೊಂಡ ಗ್ರಾಮಪುನರುಜ್ಜೀವನಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಮಗಳಲ್ಲಿ ಗ್ರಾಮ ಕೈಗಾರಿಕೆಗಳ ಪುನರುದ್ದಾರವು ಅತಿ ಮುಖ್ಯವಾಗಿತ್ತು. ಗೃಹ ಕೈಗಾರಿಕೆಗಳ ಅಭಿವೃದ್ಧಿ ವಿಷಯದಲ್ಲಿ ಸರ್ಕಾರವು ಅಖಿಲ ಭಾರತ ಚರಕ ಸಂಘ ಮತ್ತು ಅಖಿಲ ಭಾರತ ಗ್ರಾಮೋದ್ಯೋಗ ಸಂಘ ಇವುಗಳೊಡನೆ ಒಪ್ಪಂದ ಮಾಡಿಕೊಂಡು ಮುನ್ನಡೆದಿದ್ದನ್ನು ದಾಖಲೆಗಳಿಂದ ಸ್ಪಷ್ಟಪಡಿಸಬಹುದು. ಅಂದೇ ಕೈಗಾರಿಕಾ ಇಲಾಖೆ ಅವರು ಮುಖ್ಯ ಗ್ರಾಮ ಕೈಗಾರಿಕೆಗಳ ಸ್ಥಿತಿ, ಆಯಾ ಸ್ಥಳದ ಅವಶ್ಯಕತೆ, ಆಮದಾಗುತ್ತಿದ್ದ ವಸ್ತುಗಳು, ಅವುಗಳ ತಯಾರಿಗೆ ಎದುರಾಗುವ ತೊಂದರೆ ಅಂದಿನ ಆಡಳಿತ ಆಡಳಿತ ನೀತಿ ಸ್ಪಷ್ಟವಾಗುತ್ತದೆ.

ಇಂದು ದೇಶದ ಅಭಿವೃದ್ಧಿಗೆ ಮೂಲ ಕಾರಣವಾಗಿರುವುದೆಂದುಕೊಂಡಿರುವ ಕೃಷಿ-ಕೈಗಾರಿಕೆ ಮತ್ತು ತಂತ್ರಜ್ಞಾನ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಹೊಂದಿತು. ಕೃಷಿಯ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂಬುದಕ್ಕೆ ಮಂಡ್ಯದಲ್ಲಿ ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆ ಉತ್ತಮ ನಿದರ್ಶನವಾಗಿದೆ. ನಾಲ್ವಡಿ ಅವರ ಸರ್ಕಾರವು ಕೃಷ್ಣರಾಜ ಸಾಗರ (ಕನ್ನಂಬಾಡಿ) ನಿರ್ಮಾಣ ಮಾಡಿದ್ದರ ಅಂಗವಾಗಿ, ನೀರಾವರಿ ಕಾಮಗಾರಿಗಳ ಅಭಿವೃದ್ಧಿಯಿಂದಾಗಿ ಮಂಡ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಯಿತು. ಅಂದು ಇದು ಭರತಖಂಡದಲ್ಲಿಯೇ ಅತಿ ದೊಡ್ಡ ಕಾರ್ಖಾನೆಯಾಗಿತ್ತು. ಆರ್ಥಿಕಾಭಿವೃದ್ಧಿಯ ವಿಷಯವಾಗಿ ಮೈಸೂರು ಸಂಸ್ಥಾನವು ಉತ್ತಮವಾದ ಸುಧಾರಣೆಗಳನ್ನು ಜಾರಿಗೆ ತಂದಿತ್ತು. ಕೈಗಾರಿಕಾ ಅಭಿವೃದ್ಧಿಗೆ ಮೂಲಭೂತವಾಗಿ ಬೇಕಾಗಿರುವ ಪ್ರಾಕೃತಿಕ ಸಂಪತ್ತು ಮತ್ತು ಅಪೂರ್ಣ ವಸ್ತುಗಳ ಸಹಾಯವು ಇಲ್ಲಿ ಸಮೃದ್ದಿಯಾಗಿತ್ತು. ಇವುಗಳ ಜೊತೆಗೆ ಸಂಸ್ಥಾನದಲ್ಲಿ ಖಾಸಗಿ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದವು. ಈ ಎಲ್ಲ ಕಾರ್ಯಗಳು ನಾಲ್ವಡಿ ಅವರ ’ರಾಜನೀತಿ’ ಯಿಂದ ಜಾರಿಗೆ ಬಂದವೆಂದು ರಾಬರ್ಟ್ ಗ್ರೇಸ್ಪೀಲ್ಡ್ಎಂಬ ಪ್ರಸಿದ್ದ ಲಂಡನ್ ಬರಹಗಾರರು ತಿಳಿಸದ್ದಾರೆ. ಹಾಗೆಯೇ ಈ ಸಂದರ್ಭದ ಮೈಸೂರನ್ನು ಕುರಿತು, ಇಲ್ಲಿನ ಶಿಕ್ಷಣ ವ್ಯವಸ್ಥೆ, ಕೈಗಾರಿಕೆ, ಆರ್ಥಿಕತೆಯ ಅಭಿವೃದ್ಧಿ ಕುರಿತು ಸೂಕ್ತಕ್ರಮ ಕೈಗೊಂಡಿರುವ ಸರ್ಕಾರ ಕುರಿತು ವಿಶ್ವವಿಖ್ಯಾತ ಸಾಹಿತಿ ಹಾಗೂ ಪ್ರಸಿದ್ಧ ಪ್ರವಾಸಿಗರೆಂದೂ ಹೆಸರು ಮಾಡಿರುವ ಮಿಸ್ ರೋಸಿಟಾ ಪ್ಲೇರ್ಬ್ಸ್ ಎಂಬುವವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ವಸಾಹತು ಕಾಲಘಟ್ಟದ ಮೈಸೂರು ಅಥವಾ ಆಧುನಿಕ ಮೈಸೂರಿನ ಇತಿಹಾಸವೆಂದರೆ ಕ್ರಿ. ಶ. ಹದಿನೆಂಟನೇ ಶತಮಾನದ ಪ್ರಾರಂಭದಿಂದ ಇಪ್ಪತ್ತನೇ ಶತಮಾನದ ಅರ್ಧಭಾಗದವರೆಗೆ ಸುಮಾರು ನೂರೈವತ್ತು ವರ್ಷಗಳ ಕಾಲದಲ್ಲಿ ಮೈಸೂರು ಸಂಸ್ಥಾನವು ಪಡೆದ ಪ್ರಗತಿಯ ನೋಟ, ಎದುರಿಸಿದ ಕಷ್ಟ, ಅಭಿವೃದ್ಧಿಪರ ಕಾರ್ಯಗಳು ಇಂದು ಇತಿಹಾಸ ಆದ್ಯಯನಕಾರರಿಗೆ ದಾಖಲೆಗಳ ರೂಪದಲ್ಲಿ ಸಹಕಾರಿಯಾಗುತ್ತಿವೆ.

೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಗುವುದಕ್ಕೆ ಮುಂಚೆ ಇಂದಿನ ಕರ್ನಾಟಕದಲ್ಲಿ ಆಡಳಿತಾತ್ಮಕವಾಗಿ ಪರಸ್ಪರ ಸಂಬಂಧಪಟ್ಟಿರುವ ಭಾಗಗಳು ಸೇರಿದ್ದವು. ವಸಾಹತುಕಾಲದ ಮೈಸೂರಿನ ಚರಿತ್ರೆಯನ್ನು ರಚಿಸಬೇಕಾದರೆ ಈ ಭಾಗಗಳ ಮತ್ತು ಬ್ರಿಟಿಷ್ ಚಕ್ರಾಧಿಪತ್ಯದೊಂದಿಗೆ ಅವು ಹೊಂದಿದ್ದ ಸಂಬಂಧ ಇವುಗಳನ್ನು ಸೇರಿಸಿ ಚರ್ಚಿಸಬೇಕಾಗುತ್ತದೆ. ಮೈಸೂರು ಸಂಸ್ಥಾನ, ಬ್ರಿಟಿಷ್ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮತ್ತು ಕೊಡಗು ಪ್ರದೇಶಗಳೇ ಆ ಭಾಗಗಳಾಗಿದ್ವು. ಪ್ರಸ್ತುತ ಕೃತಿಯಲ್ಲಿ ೧೯ ನೇ ಶತಮಾನದಲ್ಲಿ ಮೈಸೂರು ಸಂಸ್ಥಾನಕ್ಕೂ ಹಾಗೂ ಭಾರತದಲ್ಲಿ ವಿಸ್ತಾರಗೊಳ್ಳುತ್ತಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೂ ನಡುವೆ ನಡೆದ ಮುಖಾಮುಖಿಗಳನ್ನು ಚರ್ಚಿಸಲಾಗಿದೆ. ಪ್ರಾರಂಭದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಇತರ ವಸಾಹತುಪೂರ್ವ ಸಮಾಜವನ್ನು ಸಂಗ್ರಹವಾಗಿ ಚರ್ಚಿತಗೊಂಡಿವೆ. ಬಹುಮುಖ್ಯವಾಗಿ ನೇರ ವಸಾಹತುಶಾಹಿ ಆಡಳಿತದಲ್ಲಿ ರೂಪುಗೊಂಡ ಮೈಸೂರಿನ ಚರಿತ್ರೆಯನ್ನು ಚರ್ಚಿಸಲಾಗುತ್ತದೆ. ೧೮೮೧ರಲ್ಲಿ ಅದರ ವಿನಾಶಕ್ಕೆ ಕಾರಣವಾದ ಅಂಶಗಳು ಚರ್ಚಿತಗೊಂಡಿವೆ. ಬಹುಮುಖ್ಯವಾಗಿ ನೇರ ವಸಾಹತುಶಾಹಿ ಆಡಳಿತದಲ್ಲಿ ರೂಪುಗೊಂಡ ಮೈಸೂರಿನ ಚರಿತ್ರೆಯನ್ನು ಚರ್ಚಿಸಲಾಗುತ್ತದೆ. ೧೮೮೧ರಲ್ಲಿ ದಿವಾನರ ಆಳ್ವಿಕೆಯಲ್ಲಿ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನ ನೇರವಾಗಿ ಆಳ್ವಿಕೆ ಪ್ರಾರಂಭಿಸಿದರೂ ವಸಾಹತುಶಾಹಿಗಳ ಪ್ರಭಾವ ಎಷ್ಟಿತ್ತು ಎಂಬುದನ್ನು ಚರ್ಚಿಸಲಾಗಿದೆ.

೧೮೮೧ರಲ್ಲಿ ವಸಾಹತುಶಾಹಿಗಳು ಮೈಸೂರು ಸಂಸ್ಥಾನದ ನೇರ ಆಳ್ವಿಕೆಯನ್ನು ಅಂತ್ಯಗೊಳಿಸಿ ಮೂಲ ವಂಶಸ್ಥರಿಗೆ ಹಿಂದಿರುಗಿಸಿದರು. ಅಂದಿನಿಂದ ೧೯೪೭ರವರೆಗೂ ಭಾರತದ ಬೇರೆ ಯಾವುದೇ ಸಂಸ್ಥಾನಕ್ಕಿಂತಲೂ ಮಿಗಿಲಾಗಿ ಮೈಸೂರು ’ವಸಾಹತುಶಾಹಿಗಳ ಕೂಸು’ ಎಂದು ಕರೆಸಿಕೊಳ್ಳುತ್ತಿತ್ತು. ಏಕೆಂದರೆ ಮೈಸೂರು ಸಂಸ್ಥಾನದ ಗಡಿಗಳನ್ನು ಗೊತ್ತು ಮಾಡಿದವರು, ಆಡಳಿತವನ್ನು ರೂಪಿಸಿದವರು ವಸಾಹತುಶಾಹಿ ಸರ್ಕಾರದವರೇ ಎಂಬುದು ಗಮನಾರ್ಹವಾದದ್ದೇ ಆಗಿದೆ. ಮೈಸೂರನ್ನು ಹಸ್ತಾಂತರ ಮಾಡಿ ರಾಜರನ್ನು ನೇಮಿಸಿ, ಅವರು ವಸಾಹತುಶಾಹಿಗಳೊಂದಿಗೆ ತಗ್ಗಿ ನಡೆಯುವಂತೆ ಕರಾರರುಗಳನ್ನು ನಿರ್ಮಿಸಿದ್ದು ಇದೇ ಸಾಮ್ರಾಜ್ಯಶಾಹಿಗಳು. ಇದು ಒಂದು ರೀತಿಯಲ್ಲಿ ನೆಪಮಾತ್ರಕ್ಕೆ ಮೈಸೂರು ಸಂಸ್ಥಾನದ ವಂಶಸ್ಥರಿಗೆ ರಾಜ್ಯ ಹಸ್ತಾಂತರ ಮಾಡಿದ್ದಾರೆಂದು ಸಮಕಾಲೀನ ಚರಿತ್ರೆಕಾರರು ದಾಖಲಿಸುತ್ತಾರೆ. ಸಂಸ್ಥಾನದಲ್ಲಿ ಅಂದು ಜಾಗತೀಕರಣವು ತಡೆಯೇ ಇಲ್ಲದೆ ಸಾಗಿತು. ಮೈಸೂರು ಸಂಸ್ಥಾನ ಈ ವಿಷಯದಲ್ಲಿ ಕೂಸು ಅದು. ಎಂದೆಂದಿಗೂ ಕೂಸಾಗಿಯೇ ಇರಬೇಕಾಯಿತು. ಸ್ವತಂತ್ರವಾಗಿ ಬೆಳೆಯಲು ಅದಕ್ಕೆ ಪೂರ್ಣ ಸ್ವಾಂತ್ರ್ಯವಿರಲಿಲ್ಲ. ಆದರೆ ೧೮೮೧ ರಿಂದ ಮೈಸೂರಿನಲ್ಲಿ ರಾಜಕೀಯ ವ್ಯವಸ್ಥೆಯು ರೂಪುಗೊಂಡ ವಿಚಿತ್ರ ವಿಧಾನವು ಜನತೆಯ ಕಣ್ಣಿಗೆ ಅವರ ಶಾಸನಬದ್ಧತೆಯ ಬಗೆಗೆ ಅನುಮಾನ ಮೂಡುವಂತೆ ಮಾಡಿತು. ಆದ್ದರಿಂದ, ಮೈಸೂರು ಸಂಸ್ಥಾನದ ಶಕ್ತಿ ಕೇಂದ್ರವು ತನ್ನ ಸಾಮಾಜಿಕ ತಳಹದಿಯನ್ನು ವಿಸ್ತಾರಗೊಳಿಸಿಕೊಂಡು ವಸಾಹತುಶಾಹಿಯ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ದಾಖಲೆಗಳಿಂದ ತಿಳಿದುಬರುತ್ತದೆ. ಸಂಸ್ಥಾನದಲ್ಲಿ ದಲಿತರು, ಹಿಂದುಳಿದ ವರ್ಗದ ಜನರು, ಮುಸ್ಲಿಂ, ಕ್ರೈಸ್ತ ಮುಂತಾದ ಜನಾಂಗದವರ ಅಭಿವೃದ್ಧಿಗೆ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲಾಗಿತ್ತು. ಅಧಿಕಾರ ಕೇಂದ್ರಕ್ಕೂ ಸ್ಥಳೀಯ ಗಣ್ಯವರ್ಗಕ್ಕೂ ನಡುವೆ ಸಂಪರ್ಕವಾಹಿನಿಯೊಂದನ್ನು ಒದಗಿಸಲು ಜನಪ್ರತಿನಿಧಿ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಅಂದಿನ ಸನ್ನಿವೇಶದ ಪ್ರಭುತ್ವದ ವಿಸ್ತಿರ್ಣವು ಒಂದು ರೀತಿಯಲ್ಲಿ ಅಪಾಯಕಾರಿ ಪ್ರಕ್ರಿಯೆ ಆಗಿತ್ತು. ಜನಪ್ರತಿನಿಧಿಗಳಿಗೆ ಪದೇ ಪದೇ ಅವರಿಗೆ ಸ್ವತಂತ್ರ ಅಧಿಕಾರಿ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ವಸಾಹತುಶಾಹಿಗಳನ್ನು ಮುಂದೆ ಈ ವಿಷಯದಲ್ಲಿ ಮನ ಒಲಿಸಿವುದು ವಿಪರೀತ ಕಷ್ಟವಾಯಿತು ಎಂಬುದೂ ಚರಿತ್ರೆಯ ದಾಖಲೆಗಳಿಂದ ಸ್ಪಷ್ಟಪಡುತ್ತವೆ. ಮೈಸೂರು ಸಂಸ್ಥಾನದ ರೆಸಿಡೆಂಟ್ ಮತ್ತು ಇತರ ಬ್ರಿಟಿಷ್ ಅಧಿಕಾರಗಳ ನೇರ ಆಳ್ವಿಕೆಯು, ಸ್ಪಷ್ಟವಾಗಿ ಕಾಣಿಸುವ ಉಳಿಕೆಗಳಾಗಿದ್ದರು. ಆದರೆ ೧೮೮೧ ರ ನಂತರ ಸಾಮ್ರಾಜ್ಯದ ನಿಯಂತ್ರನವು ಅತ್ಯಂತ ಸೂಕ್ಷ್ಮವೂ, ಅನೌಪಚಾರಿಕವೂ ಆದ ಲಕ್ಷಣವನ್ನು ಪಡೆದಿತ್ತು. ಅತ್ಯಂತ ಮುಖ್ಯವಾಗಿದ್ದದ್ದು ಸಹಯೋಗ ಕೊಡುತ್ತಿದ್ದ ಗಣ್ಯವರ್ಗ, ಎರಡನೇಯದಾಗಿ, ಒಂದು ರಾಜಕೀಯ ಘಟಕವಾಗಿ ಮೈಸೂರು ರಾಜ್ಯ, ವಸಾಹತು ವಿರೋಧ ರಂಗವೊಂದನ್ನು ನಿರ್ಮಿಸಬಹುದಾಗಿದ್ದ ಇತರ ರಾಜ್ಯಗಳಿಂದ ಬೇರ್ಪಟ್ಟಿತು. ಮೂರನೆಯದಾಗಿ ಮೈಸೂರು ಆರ್ಥಿಕ, ತಂತ್ರಜ್ಞಾನ ಮತ್ತು ವಿಷಯ ಪರಿಣತಿಗಳಲ್ಲಿ ವಿದೇಶಿ ಬಂಡವಾಳವನ್ನು ಅವಲಂಬಿಸಿತು. ಈ ಅತಿರೇಕದ ಪರಾಧೀನತೆಯನ್ನು ಸ್ಥಳೀಯ ಮಹಾರಾಜರ ಸರ್ಕಾರವು ಒಪ್ಪುತ್ತಿರಲಿಲ್ಲ. ಆದರೂ ನೂತನ ಮೈಸೂರು ಸಂಸ್ಥಾನದ ರಾಜ್ಯವು ಸ್ಥಾಪಿತವಾದದ್ದು ಈ ವಾಸ್ತವಾಂಶದ ತಳಹದಿಯ ಮೇಲೆಯೇ ಎಂಬುದು ಬಹುಮುಖ್ಯವಾದ ಅಂಶವಾಗಿದೆ.