ಇತಿಹಾಸದ ಅಧ್ಯಯನ ಇಂದು ಬದಲಾವಣೆಯ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಪ್ರಖ್ಯಾತರಾದ ರಾಜರು, ಅವರ ವಂಶಾವಳಿ, ಅವರು ತಮ್ಮ ಹೊಗಳು ಭಟ್ಟರಿಗೆ ಹೇಳಿ ಬರಸಿದಂತಹ ಭಟ್ಟಂಗಿ ಶಾಸನ, ಕಾವ್ಯಗಳಿಗೆ ಹಿಂದೆ ಸಲ್ಲಿಸುತ್ತಿದ್ದ ಮನ್ನಣೆ ಇಂದಿಲ್ಲ. ಒಂದು ದೇಶದ ಚರಿತ್ರೆಯೆಂದರೆ ಅದನ್ನು ಆಳಿದ ರಾಜವಂಶಗಳ ಇತಹಾಸ ಎಂಬ ಪರಿಕಲ್ಪನೆ ಗಟ್ಟಿಯಾಗಿ ಬೇರು ಬಿಟ್ಟಿದ್ದ ಕಾಲದಲ್ಲಿ, ಕರ್ನಾಟಕದ ರಾಜ ಮನೆತನಗಳೆಂದರೆ ಕೇವಲ ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರವೆಂಬುದಷ್ಟೇ ಎನ್ನುವ ಭ್ರಮೆ ಇಂದು ಸಂಪೂರ್ಣವಾಗಿ ಇಲ್ಲವಾಗಿದೆ. ಇದರ ಬದಲಿಗೆ ಈ ಪ್ರಖ್ಯಾತ ರಾಜವಂಶಗಳ ಯಶಸ್ಸಿಗೆ ಕಾರಣಕರ್ತರೂ, ಮೂಲಾಧಾರ ಸ್ವರೂಪರೂ ಆದಂತಹ ಸಾಮಂತರು ಸೈನಿಕರೂ, ಪಾಳೆಯಗಾರರೂ, ನಾಡಗೌಡರಂತಹ ಮಧ್ಯಮ ಹಾಗೂ ಕೆಳಸ್ತರದ ಆಡಳಿತಗಾರರನ್ನು ಕುರಿತು ಸೂಕ್ಷ್ಮ ಅಧ್ಯಯನ ಇಂದಿನ ಸಂಶೋಧನೆಯ ಪದ್ಧತಿಯ ನೆಲೆಗಟ್ಟಾಗಿದೆ. ಬದಲಾಗುತ್ತಿರುವ ಬದುಕಿನ ಹೊಸ ಪರಿಕಲ್ಪನೆಗಳು ಮತ್ತು ಪರಿಕರಗಳು ಚರೆತ್ರೆ ಮತ್ತು ಚರಿತ್ರೆ ಸಂಭವವಾದ ಕಲೆಯನ್ನು ಕಾಲ ಕಾಲಕ್ಕೆ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯ. ಇದೇ ಚರಿತ್ರೆಯ ಪುನರ್ ಮೌಲ್ಯೀಕರಣ. ಈ ರೀತಿಯ ಚರಿತ್ರೆಯು ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಾಗಿ ಅಧ್ಯಯನಕ್ಕೆ ಒಳಗಾಗಿರುವುದು ಮೈಸೂರು ಸಂಸ್ಥಾನದ ಚರಿತ್ರೆ. ಕರ್ನಾಟಕದ ಚರಿತ್ರೆಯಲ್ಲಿಯೇ ಮೈಸೂರು ಸಂಸ್ಥಾನದ ಚರಿತ್ರೆ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಕಾರಣ ಇವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಅಸ್ಪೃಶ್ಯತೆಯ ನಿವಾರಣೆಗೆ ಹಾಗೂ ಅಸ್ಪೃಶ್ಯರಲ್ಲಿ (ಪಂಚಮರಲ್ಲಿ) ಅಭಿವೃದ್ಧಿಯ ಕನಸನ್ನು ಕಾಣಿಸಿದವರೆಂದರೆ ತಪ್ಪಾಗಲಾರದು. ಮುಂದಿನ ಅಧ್ಯಾಯದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಸುಧಾರಣಾಕ್ರಮಗಳನ್ನು ಕುರಿತು ಚರ್ಚಿಸಲಾಗಿದೆ.

ಮಹಿಳಾ ಶಿಕ್ಷಣ

“ಭರತ ಖಂಡದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧಿಸಿ ಮುಂದುವರಿಯುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಮೈಸೂರು ಮಾದರಿ ಸಂಸ್ಥಾನವಾಗಿದೆ. ಮಾದರಿ ಸಂಸ್ಥಾನ ಎಂಬ ಹೆಗ್ಗಳಿಕೆ ಮತ್ಯಾವ ಭಾರತೀಯ ಸಂಸ್ಥಾನಕ್ಕೂ ಇರುವುದು ದಾಖಲಾಗಿಲ್ಲ. ಹಾಗೆಯೇ ಮೈಸೂರು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೇ ಮಾದರಿಯಾಗಿರುವ ಸಂಸ್ಥಾನವಾಗಿದೆ.” ಇದು ಭಾರತದ ಸುಧಾರಣೆಗಳಿಗೆ ಸಂಬಂಧಿಸಿದ ಪ್ರಥಮ ದುಂಡುಮೇಜಿನ ಸಮ್ಮೇಳನದ ಸಂಯುಕ್ತ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಲಾರ್ಡ್ ಸಾಂಕಿಯವರು ಮಾಡಿರುವ ಶ್ಲಾಘನೆ.

ಈ ಮೇಲಿನ ಮಾತುಗಳು ಒಂದು ರಾಜ್ಯದ ಹಾಗೂ ರಾಜನ ಹೊಗಳಿಕೆಯ ಮಾತುಗಳಲ್ಲ. ಇವುಗಳೆಲ್ಲವೂ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ ಇದ್ದಂತಹ ಮೈಸೂರು ಸಂಸ್ಥಾನದ ವಸ್ತು ಸ್ಥಿತಿಯ ಸ್ಪಷ್ಟ ವಿವರಣೆ ಯಾಗಿದೆ. ಇಂದಿನ ಕಾಲದಲ್ಲಿನ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧಿಸಲಾಗಿದ್ದ ಸರ್ವಾಂಗೀಣ ಪ್ರಗತಿಯನ್ನು ವಸ್ತುನಿಷ್ಠ ದೃಷ್ಟಿಯಿಂದ ಅವಲೋಕಿಸಿ, ತೆರೆದ ಬುದ್ಧಿಯಿಂದ ವಿಶ್ಲೇಷಿಸಿ ಹೇಳಲಾಗಿರುವ ತೀರ್ಮಾನದ ಮಾತುಗಳಾಗಿವೆ. ಏಕೆಂದರೆ ನಾಲ್ವಡಿ ಅವರ ಆಳ್ವಿಕೆಯ ಅವಧಿಯಲ್ಲಿಯೇ ಹೊಸ ಶಿಕ್ಷಣ ಮತ್ತು ಸಾಮಾನ್ಯ ಉದ್ಯೋಗಾವಕಾಶಗಳನ್ನು ಪಡೆಯುವ ಸಲುವಾಗಿ ವಿವಿಧ ಸಾಮಾಜಿಕ ಸಮುದಾಯಗಳು ಸಂಘಟಿತವಾದವು. ಮಹಿಳೆಯರು ಮತ್ತು ವಿದ್ಯಾವಂತ ಯುವಕರು ತಮ್ಮ ಹಕ್ಕು ಬಾಧ್ಯತೆಗಳಿಗಾಗಿ ಧ್ವನಿ ಎತ್ತಿದ್ದರು. ಜಾತಿ ಪದ್ಧತಿ, ಅಸ್ಪೃಶ್ಯತೆ ಇನಿತರ ಸಾಮಾಜಿಕ ಅನಿಷ್ಟಗಳು ಮತ್ತು ಮೂಢನಂಬಿಕೆಗಳು ವಿಮರ್ಶೆ ಗೊಳಗಾದವು. ನಾಲ್ವಡಿ ಕೃಷ್ಣರಾಜರು ಈ ಹೊಸ ಬೆಳವಣಿಗೆಗೆ ವೈಜ್ಞಾನಿಕವಾದ ಹಾಗೂ ಸಮತೋಲನವಾದ ನಿಲುವನ್ನು ತಳೆದರು.

ಕರ್ನಾಟಕದ ಚರಿತ್ರೆಯಲ್ಲಿ ಆದರ್ಶಪ್ರಿಯರು ರಾಜರ್ಷಿ ಎಂಬ ಬಿರುದನ್ನು ಪಡೆದುಕೊಂಡು ತಮ್ಮ ಸಾಮ್ರಾಜ್ಯ ಭರತ ಖಂಡದಲ್ಲಿಯೇ ಮಾದರಿ ಸಂಸ್ಥಾನ ಎಂಬ ಪ್ರಶಸ್ತಿಯನ್ನು ತಂದುಕೊಂಡು, ಮೈಸೂರಿನ ಪ್ರಜೆಗಳು ಹಾಗೂ ಅಲ್ಲಿನ ಸಮಾಜದ ಕೀತಿಯ ಕಂಪು ಎಲ್ಲಡೆ ಹರಡುವಂತೆ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ರಾಜ್ಯಾಡಳಿತ ಕಾಲಕ್ಕೆ ಸಂಬಂಧಪಟ್ಟಿರುವ ಅಧಿಕೃತ ದಾಖಲೆಗಳು ಪ್ರತ್ಯಕ್ಷ ವರದಿಗಳು ಹಾಗೂ ವಿವರಣೆಗಳು ಅಂದು ಕೈಗೊಳ್ಳಲಾಗಿದ್ದಂತಹ ಜನೋಪಯೋಗಿ ಕಾರ್ಯಗಳಿಗೆ ಮೂಕವಾದ ಹಾಗೂ ಬಲವಾದ ಸಾಕ್ಷಿಗಳಾಗಿ ಉಳಿದುಬಂದಿವೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ಪಂಚಮರಿಗಾಗಿಯೇ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು, ಜಲಾಶಯಗಳು, ಕೇಂದ್ರ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆ ಉನ್ನತ ಹಾಗೂ ಆಧುನಿಕ ಶಿಕ್ಷಣ ಇತ್ಯಾದಿಗಳನ್ನು ಒಬ್ಬ ಸಾಮಾಜಿಕ ಇತಿಹಾಸ ಲೇಖಕರು ಎಚ್ಚರಿಕೆಯಿಂದ, ವಸ್ತುನಿಷ್ಠ ದೃಷ್ಟಿಯಿಂದ ವೀಕ್ಷಿಸುತ್ತ ಬಂದಿದ್ದಾರೆ. ಅವರು ತಮ್ಮ ಮನೋಬುದ್ಧಿಗಳ ಪರದೆಯ ಕಾಲದಲ್ಲಿ ಜನರು ಅಂಗೀಕರಿಸಿ ಅನುಸರಿಸುತ್ತಿದ್ದ ಆದರ್ಶಗಳು, ಅವರ ವಿಶಿಷ್ಟ ಜೀವನ ಕ್ರಮ, ಅವರು ಬೆಳೆಸಿಕೊಂಡಿದ್ದ ಸಹಿಷ್ಣತಾ ಮನೋಭಾವ, ಅವರ ಸಹಕಾರಕ ನಡೆವಳಿ, ಅವರ ಸೇವೆಗಾಗಿಯೇ ರೂಪಿಸಿ ಬೆಳೆಸಲಾಗಿದ್ದ ಸಂಸ್ಥೆಗಳು, ಅವರು ನಡೆಸುತ್ತಿದ್ದಂತಹ ಲೋಕೋಪಯೋಗಿ ಕೆಲಸ ಸ್ತ್ರೀಯರ ಹಾಗೂ ಇತರ ಹಿಂದುಳಿದ ವರ್ಗಗಳ ಒಳಿತಿಗಾಗಿ ಕೈಗೊಳ್ಳಲಾಗಿದ್ದ ಕ್ರಮಗಳು ಚರಿತ್ರೆಯಲ್ಲಿ ಅಮೋಘವಾದವುಗಳಾಗಿವೆ. ಗ್ರಾಮಾಭ್ಯುದಯ ಕಾರ್ಯಗಳು ಮುಂತಾದ ಸಂಗತಿಗಳು ಸ್ಪಷ್ಟ ದೃಶ್ಯಾವಳಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಹಿಂದಿನಿಂದ ಪರಂಪರಾಗತವಾಗಿ ಬಂದಿದ್ದ ಉತ್ತಮ ಸಾಮಾಜಿಕ ಆದರ್ಶಗಳನ್ನು ಹಿತಕರ ವ್ಯವಸ್ಥೆಗಳನ್ನು ಸಂರಕ್ಷಿಸಿ ಕಾಲ-ದೇಶದ ಪರಿಸ್ಥಿತಿಗಳಿಗೆ ತಕ್ಕಂತೆ ಸೂಕ್ತವಾದ ಮಾರ್ಪಾಡುಗಳನ್ನು ಮಾಡಿಕೊಂಡು ಬಂದಿರುವುದು ಕಂಡುಬರುತ್ತದೆ. ನಾಲ್ವಡಿಯವರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ದಲಿತ ವರ್ಗದಲ್ಲಿ ಇಡೀ ಭರತ ಖಂಡದಲ್ಲಿಯೇ ಐವತ್ತು ವರ್ಷಗಳಷ್ಟು, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿರಿತನವನ್ನು ತಂದುಕೊಟ್ಟರು. ಈ ಭಾಗದ ದಲಿತ ವರ್ಗದ ಜನರಲ್ಲಿ ಏಳಿಗೆ ಸಾಧ್ಯವಾಗಿದೆ ಎಂದರೆ, ಅದು ನಾಲ್ವಡಿಯವರ ಸಮರ್ಥ ಆಡಳಿತದಿಂದ ಸಾಧ್ಯವಾಗಿದೆ.

ವರ್ತಮಾನ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಬೇಕಾದರೆ ಅದು ಎಲ್ಲೋ ಭೂತದ ಬುತ್ತಿಯನ್ನು ಮೊದಲು ಬಿಚ್ಚುತ್ತದೆ ಎನ್ನುವ ಹಾಗೆ ಇಲ್ಲಿಯೂ ಸಹ ಹಿಂದಿನಿಂದ ಬಂದಿದ್ದ ಸಾಮಾಜಿಕ ಸ್ತರವಿನ್ಯಾಸವೇ ಮುಂದುವರಿದುಕೊಂಡು ಬಂದಿತ್ತು. ಆದರೆ ಹೆಚ್ಚಾಗಿ ಸಾಮಾಜಿಕ ಸಾಮರಸ್ಯಕ್ಕೆ ಭಂಗವಾಗಲಿಲ್ಲವೆನ್ನಬಹುದು. ಬ್ರಾಹ್ಮಣರು, ಆಳುವ ವರ್ಗ, ವೈಶ್ಯರು ಹಾಗೂ ಶೂದ್ರರೆಂಬ ಪ್ರಧಾನ ಜಾತಿಗಳಿದ್ದವು. ಇವುಗಳಲ್ಲದೆ ಇಂದಿನ ಹಾಗೆಯೇ ಒಕ್ಕಲಿಗ, ಬೋಗಾರ, ಗಾಣಿಗ, ಮಲ್ಲ, ದೀವಟಿಗ, ರಾಯರಾವುತ, ಕಲಾಕೋವಿದ, ಪರಿವಾರದವರು, ಲಿಂಗಾಯಿತರು, ನಾಮಧಾರಿ ಹಾಗೂ ಪಂಚಮರು (ಅಸ್ಪೃಶ್ಯರು) ಮುಂತಾದ ಜಾತಿ ಹಾಗೂ ವೃತ್ತಿಪರ ವಿಭಾಗಗಳೂ ಇದ್ದವು. ನಾಲ್ವಡಿಯರು ತಮ್ಮ ನಾಡಿನ ಸಮಾಜದಲ್ಲಿ ಹಿತಕರವಾಗಿದ್ದ ಶ್ರಮ ವಿಭಜನಾ ಕ್ರಮವನ್ನು ಮತ್ತು ನಾಡಿನ ಸಮಾಜದಲ್ಲಿ ಹಿತಕರವಾಗಿದ್ದ ಶ್ರಮ ವಿಭಜನಾ ಕ್ರಮವನ್ನು ಮತ್ತು ಪರಸ್ಪರ ಹೊಂದಾಣಿಕೆಯ ತತ್ವಗಳನ್ನು ಎತ್ತಿ ಹಿಡಿದು, ಸಾಮಾಜಿಕ ಸಾಮರಸ್ಯವನ್ನು ಮತ್ತು ರಾಜಕೀಯ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಂಡು ಬರುವಲ್ಲಿ ಆಸಕ್ತಿ ವಹಿಸಿದ್ದರು. ಜಾತಿ ಪಂಗಡಗಳ ಮುಖ್ಯ ಸ್ಥಾವರಗಳು ಸಮಾಜದ ಸದಸ್ಯರಲ್ಲಿರುವ ಐಕಮತ್ಯವನ್ನು, ಪ್ರೀತಿಯನ್ನು ಕುಂಠಿತಗೊಳಿಸಿದೆ ಇನ್ನು ಹೆಚ್ಚು ಬಲವಾಗುವಂತೆ ಮಾಡಬೇಕು ಮತ್ತು ಭಾರತೀಯ ಸಮಾಜದಲ್ಲಿ ಶ್ರೇಷ್ಠರಾದವರೆಂದು ಸ್ವ-ಘೋಷಿಸಿಕೊಂಡು ಶತ ಶತಮಾನಗಳವರೆಗೂ ಇನ್ನೊಂದು ವರ್ಗವನ್ನು ಪಶುಗಳಿಗಿಂತಲೂ ಹೀನಾಯವಾಗಿ ನೋಡುತ್ತಿದ್ದಂತಹ ಬ್ರಾಹ್ಮಣೇತರ ವರ್ಗದ ಪ್ರಬಲ ಶೂದ್ರದವರು ಅಸ್ಪೃಶ್ಯರ ಏಳಿಗೆಗೆ ದುಡಿಬೇಕೆಂದು ತಿಳಿಸಿದರು. ಸಹಜವಾಗಿ ತಲೆದೋರುತ್ತಿದ್ದ ನ್ಯಾಯಬದ್ಧ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿ, ಅಸ್ಪೃಶ್ಯರ ಏಳಿಗೆಗೆ ಎಲ್ಲಾ ರೀತಿಯ ಸಹನುಭೂತಿಯುತ ಸಹಕಾರವನ್ನು ನೀಡಬೇಕೆಂಬುದಾಗಿ ಎದುರು ನೋಡಲಾಗಿದ್ದಿತು. ಇದಕ್ಕೆ ಸದಸ್ಯರು ಸ್ಪಂದಿಸಿದರೋ ಇಲ್ಲವೋ ಅದು ಚರ್ಚೆಯ ವಿಷಯ. ಆದರೆ ಇದಕ್ಕೆ ಎಲ್ಲಾ ಮೇಲುಜಾತಿ ಎಂದು ಕರೆದುಕೊಂಡಿದ್ದಂತಹ ಜನರು ಈ ನಿರೀಕ್ಷೆಯ ವಸ್ತುಸ್ಥಿತಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬುದು ಅನೇಕ ದಾಖಲೆಗಳಿಂದ ತಿಳಿದುಬರುತ್ತದೆ.

ಮೇಲೆ ತಿಳಿಸಿದಂತೆ ಅನೇಕ ಮಾರ್ಪಾಡುಗಳ ಮೂಲಕ ಅಸ್ಪೃಶ್ಯತೆಯ ನಿವಾರಣೆಗೆ ಹಾಗೂ ಅಸ್ಪೃಶ್ಯರ ಏಳ್ಗೆಗೆ ಸರ್ಕಾರ ಮುಂದಾದರೂ ಸಹ, ಭೂಮಿಯಲ್ಲಿ ಜೀವಜಂತುಗಳು ಸೃಷ್ಟಿಯಾದಾಗಿನಿಂದಲು ಹುಟ್ಟಿಕೊಂಡು ಬದ್ದಿದ್ದಂಥ ಈ ಅಸ್ಪೃಶ್ಯತೆ ಎಂಬುದು ಕೇಲ ನಾಲ್ವಡಿ ಅವರ ಕೆಲವೇ ಕೆಲವು ಕಾನೂನುಗಳಿಂದ ಮುಕ್ತವಾಗಿರಲಿಲ್ಲ ಎಂಬುದು ಒಪ್ಪಬೇಕಾದ ಮಾತು. ಆದರೆ ಪ್ರಪ್ರಥಮಬಾರಿಗೆ ಈ ವರ್ಗದವರಿಗೆ ಶಿಕ್ಷಣ ಹಾಗೂ ಅವರ ರಾಜಕೀಯ ಆರ್ಥಿಕ ಸಾಮಾಜಿಕ ಪರಿಸ್ಥಿತಿಗಳನ್ನು ಉತ್ತಮಪಡಿಸುವುದಕ್ಕೆ ಹಾಗೂ ಅವರು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಮೈಸೂರು ಸಂಸ್ಥಾನ ನೀಡಿದ ಪ್ರೋತ್ಸಾಹ, ಮಾಡಿದ ಸಹಾಯ, ಕೈಗೊಂಡ ಕಾರ್ಯಕ್ರಮ, ತೋರಿದಂತಹ ಕಳಕಳಿ ಗಮನಾರ್ಹವಾದವು. ಪಂಚಮರಿಗಾಗಿ (ಹೊಲೆಯ-ಮಾದರಿಗಾಗಿ) ಹೈಸ್ಕೂಲು ಹಾಗೂ ನರಸಾಪುರದಲ್ಲಿ ಎರಡು ಸರ್ಕಾರಿ ಶಾಲೆಗಳನ್ನು ತೆರೆಯಲಾಯಿತು. ಅನಂತರ ಮೈಸೂರು, ಆನೇಕಲ್ಲು ಹಾಗೂ ಹಾಸನಗಳಲ್ಲಿ ಅನುದಾನರಹಿತ ಶಾಲೆಗಳನ್ನು ಅಸ್ಪೃಶ್ಯರ ಶಿಕ್ಷಣಕ್ಕಾಗಿಯೇ ಆರಂಭಿಸಲಾಯಿತು. ಅಷ್ಟೆ ಅಲ್ಲದೆ ಮಿಕ್ಕೆಲ್ಲ ಸಾರ್ವಜನಿಕ ಶಾಲೆಗಳಿಗೂ ಯಾವುದೇ ಜಾತಿಯ ಧರ್ಮದ ಭೇದಭಾವವಿಲ್ಲದೆ ಪ್ರವೇಶ ಪಡೆಯುವ ಅವಕಾಶವನ್ನು ಕಲ್ಪಿಸಲಾಯಿತು. ಈ ಸಾರ್ವಜನಿಕ ಶಾಲೆಗಳಲ್ಲಿ ಪಂಚಮರ ಮಕ್ಕಳು ಹೊರಗಿನ ವರಾಂಡದಲ್ಲಿ ಕುಳಿತು ಅಥವಾ ತರಗತಿಯಲ್ಲಾದರೆ ಬಾಗಿಲ ಬಳಿ ಪ್ರತ್ಯೇಕವಾಗಿ ಕುಳಿತು ಪಾಠ ಕಲಿಯಬೇಕಾಗಿದ್ದಿತು. ಇದು ಸರ್ಕಾರದ ಆಜ್ಞೆಯಾಗಿರಲಿಲ್ಲ (ಬದಲಾಗಿ ಇದು ಸ್ಥಳೀಯ ಮೇಲ್ಜಾತಿಯವರ ಕಟ್ಟೆಚ್ಚರವಾಗಿತ್ತು) ಕಾರಣ ಪ್ರಬಲವಾದ ಬೇರು ಬಿಟ್ಟಿದ್ದಂತಹ ಜಾತಿಯ ನಿಷೇಧಗಳು, ಅದೇನೇ ಇದ್ದರೂ ಸಹ ನಾಲ್ವಡಿ ಕೃಷ್ಣರಾಜರ ಈ ದೃಢ ನಿರ್ಧಾರದಿಂದಾಗಿ ೧೯೧೪-೧೫ರ ಅವಧಿಯಲ್ಲಿ ದಲಿತರು ಶಿಕ್ಷಣ ಪಡೆಯುವ ಮಟ್ಟಕ್ಕೆ ಬೆಳೆದು ಬಂದಿದ್ದರೆಂದು ಅಂದಿನ ಶಿಕ್ಷಣಾಧಿಕಾರಿಗಳ ದಾಖಲೆಗಳು ತಿಳಿಸುತ್ತದೆ.

ಪಂಚಮರ ಶಿಕ್ಷಣದಿಂದ ಹೊಂದಿದ ಪ್ರಗತಿಯನ್ನು ಗಮನಿಸುವ ರಾಜರು, ಇವರಿಗೆ ಸಾಮಾನ್ಯ ವಿದ್ಯಾಭ್ಯಾಸ ಮಾತ್ರವಲ್ಲದೆ ವೃತ್ತಿಪರ ಶಿಕ್ಷಣವನ್ನು ನೀಡಲು ಮುಂದಾದರು. ಈ ದೃಷ್ಟಿಯಿಂದ ಮೈಸೂರು ತುಮಕೂರು ಚಿಕ್ಕಮಗಳೂರು ಬೆಂಗಳೂರು ಹಾಗೂ ಹಾಸನ ಮುಂತಾದ ಕಡೆಗಳಲ್ಲಿ ವಸತಿ ಶಾಲೆಗಳನ್ನು ತೆರೆದು ಎಷ್ಟೇ ಸಾಮಾಜಿಕ ತೊಂದರೆಗಳಿದ್ರೂ (ಉನ್ನತ ವರ್ಗದವರೆಂದು ಹೇಳಿಕೊಂಡಿರುವ ಜನರ ವಿರೋಧದ ನಡುವೆಯೂ) ವಿಚಲಿತರಾಗದೆ ಉತ್ತವಾಗಿ ನಡೆಸಿಕೊಂಡು ಬರುತ್ತಿದ್ದರು. ಇಷ್ಟೆಲ್ಲ ಬೆಳವಣಿಗೆಯಿಂದ ಮುಂದೆ ೧೯೧೮-೧೯ರ ವೇಳೆಗೆ ಅಸ್ಪೃಶ್ಯರನ್ನು ಯಾವುದೇ ಸಾರ್ವಜನಿಕ ಶಾಲೆಗಳಿಗೆ ಸೇರಲು ಅವಕಾಶವನ್ನು ಉಂಟುಮಾಡಿಕೊಡಲಾಯಿತು. ಸರ್ಕಾರವು ಆಡಳಿತದಲ್ಲಿ ಜಾತಿಯ ಆಧಾರದ ಮೇಲೆ ವ್ಯಕ್ತಿಗಳಿಗೆ ಪ್ರವೇಶಾತಿಯನ್ನು ನಿರಾಕರಿಸುವುದನ್ನು ಒಪ್ಪಲಾಗುವುದಿಲ್ಲ. ಈ ಬಗೆಯ ಅನ್ಯಾಯವಾದ, ಸಾಮಾಜಿಕ ಪೂರ್ವಗ್ರಹಗಳಿಂದ ಸಮಾಜದ ಪ್ರಗತಿ ಸಂಪೂರ್ಣವಾಗಿ ಕುಂಠಿತವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ವಿಷಯದಲ್ಲಿ ಎಂತಹ ಕಾಳಜಿ ಇದ್ದಿತು ಹಾಗೂ ಸಾಮಾಜಿಕ ಬದಲಾವಣೆಗೆ ಅವರು ಎಷ್ಟು ಪ್ರಗತಿಪರವಾಗಿದ್ದರು ಎಂಬುದಕ್ಕೆ ೧೯೩೬ರ ಅಕ್ಟೋಬರನಲ್ಲಿ ನಡೆದ ಘಟನೆಯೊಂದು ಪೂರ್ಣವಾಗಿ ಧೃಢೀಕರಿಸುತ್ತದೆ. ಭಾರತದ ಚರಿತ್ರೆಯಲ್ಲಿಯೇ ಕಂಡರಿಯದ ದಲಿತರ ಅಭೂತಪೂರ್ವವೆನ್ನಿಸಿದ ಒಂದು ಬದಲಾವಣೆಯನ್ನು ಅವರು ಜಾರಿಗೆ ತಂದರು. ಅದೆಂದರೆ ಪ್ರಪ್ರಥಮಬಾರಿಗೆ ಅರಮನೆಯನ್ನು ಪ್ರವೇಶಿಸಲು ದಲಿತರಿಗೆ ಅವಕಾಶ ಕಲ್ಪಿಸಿದ್ದು. ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗಿದ್ದ ಜಾತಿ ಪದ್ಧತಿಗಳ ಕಟ್ಟುನಿಟ್ಟಾದ ರೂಢಿಯ ಕಪಿಮುಷ್ಟಿ ಹಿಡಿತವನ್ನು ಸಡಿಲಿಸುವ ವಿಷಯದಲ್ಲಿ ಇದೆಷ್ಟು ಅಮೋಘವಾದ ಮಾರ್ಪಾಡು ಎಂಬುದನ್ನು ಈ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದವರು ಹಾಗೂ ಪೂರ್ವ ಆಚರಣೆಗಳ ಒತ್ತಡ ಎಷ್ಟು ಕಟ್ಟುನಿಟ್ಟಿನದು ಮತ್ತು ಎಷ್ಟು ಕಠಿಣವಾದುದು ಎಂಬುದನ್ನು ಅರಿತವರು ಮಾತ್ರ ಪೂರ್ಣವಾಗಿ ಗ್ರಹಿಸಬಲ್ಲರು. ಮೊದಲೇ ಹೇಳಿದ ಹಾಗೆ ದಲಿತರೂ ಅರಮನೆಯನ್ನು ಪ್ರವೇಶಿಸಬಹುದೆಂಬುದಾಗಿ ಹೇಳಿ, ಅದರಂತೆ ಅವಕಾಶ ಮಾಡಿಕೊಟ್ಟ ಭಾರತದ ಅರಸರಲ್ಲಿ ನಾಲ್ವಡಿ ಅವರು ಮೊಟ್ಟ ಮೊದಲನೇಯವರು ಎಂಬುದಾಗಿ ಬ್ರಿಟಾನಿಕ ವಿಶ್ವಕೋಶವು ಸಂತೃಪ್ತಿಯಿಂದ ಹೇಳಿದೆ. ಭಾರತದ ಇತರ ಸಂಸ್ಥಾನದ ದಲಿತ ಜನತೆಯು ಸ್ವಾತಂತ್ರ್ಯದ ನಂತರ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನೀಯೋಜಿಸಿರುವುದನ್ನು ಕಂಡರೆ ಮೈಸೂರು ಅರಸರಾದ ನಾಲ್ವಡಿಯವರು ಅದಕ್ಕೆ ನಲವತ್ತು ವರ್ಷಗಳ ಹಿಂದೆಯೇ ದಲಿತರ ಬದುಕಿನ ಉತ್ತಮೀಕರಣಕ್ಕಾಗಿ ಕ್ರಮ ಕೈಗೊಂಡಿದ್ದರು ಹಾಗೂ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶ್ರಮಿಸಿದರು. ಈ ದೃಷ್ಟಿಯಿಂದೇ ಮೈಸೂರು ಸಂಸ್ಥಾನದ ದಲಿತರು ಇತರೆ ಸಂಸ್ಥಾನದ ದಲಿತರಿಂದ ೫೦ ವರ್ಷ ಹಿರಿತನವನ್ನು ಹೊಂದಿರುವುದು. ಈ ಹಿರಿತನ ಎನ್ನುವುದು ಅಭಿವೃದ್ಧಿಯ ದೃಷ್ಟಿಯಲ್ಲಿ ಹೇಳಿರುವ ಮಾತು.

ಮಹಿಳೆ ಶತ ಶತಮಾನಗಳಿಂದಲೂ ಪುರುಷ ಪ್ರಧಾನವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ರೀತಿಯ ಶೋಷಣೆಗೆ ಒಳಪಡುತ್ತಿರುವುದಕ್ಕೆ ಇಂದಿಗೂ ನಮಗೆ ನೂರಾರು ಜ್ವಲಂತ ಸಾಕ್ಷಿಗಳಿವೆ. ಇಂತಹ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ ಪುರುಷ ಪ್ರಧಾನವಾದ ಸಾಮಾಜಿಕ ವ್ಯವಸ್ಥೆ ಇದ್ದರೂ ಸ್ತ್ರೀಯರಿಗೆ ಸಂಬಂಧಪಟ್ಟಂತೆ ಅನೇಕ ಪ್ರಗತಿಪರವಾಗಿದ್ದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸಿದ್ದದು ಮೈಸೂರು ಸಂಸ್ಥಾನ. ಒಂದು ಸಮಾಜದಲ್ಲಿ ಸ್ತ್ರೀಯರಿಗೆ ಕೊಡಲಾಗಿರುವ ಸ್ಥಾನಮಾನ, ಅವರ ಅಭ್ಯುದಯಕ್ಕಾಗಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಟ್ಟ ಎಂತಹುದು ಎಂಬುದನ್ನು ಸ್ಫುಟವಾಗಿ ತೋರುವ ಸೂಚಿಯಾಗಿರುತ್ತದೆ ಎಂಬ ಚಿಂತಕರ ಹೇಳಿಕೆಯು ಸತ್ಯವಾದುದು ಎಂಬ ಮಾತನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದ ಸಮಾಜವು ಸಮರ್ಥಿಸಿತು ಎಂದರೆ ತಪ್ಪಾಗಲಾರದು. ಮಹಿಳೆ ಶೋಷಣೆಯ ವಿರುದ್ಧ ದನಿ ಎತ್ತಲು ಮೊದಲು ನೀಲಿನಕ್ಷೆಯನ್ನು ತಯಾರಿಸಿದವರೆಂದರೆ ನಾಲ್ವಡಿ ಕೃಷ್ಣರಾಜರ ತಾಯಿಯವರಾದ ವಾಣಿವಿಲಾಸ ಸನ್ನಿದಾನದ ಕೆಂಪನಂಜಮ್ಮಣ್ಣಿಯವರು.

೧೮೮೧ರಲ್ಲಿ ಬ್ರಿಟಿಷರು ಪುನಃ ಮೈಸೂರು ವಂಶಸ್ಥರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದಾಗ, ಅಧಿಕಾರ ವಹಿಸಿಕೊಂಡಂತಹ ೧೦ನೇ ಚಾಮರಾಜ ಒಡೆಯರ್ ತಮ್ಮ ಬುದ್ದಿಶಕ್ತಿಯಿಂದ ಸಹದ್ಯೋಗಿಗಳ ಸಹಕಾರದಿಂದ ಹಾಗೂ ಭವಿಷ್ಯದ ದೃಷ್ಟಿಯಿಂದ ಜನಪರ, ಸಾಮಾಜಿಕ ಪರವಾದಂತಹ ಕಾರ್ಯಕ್ರಮಗಳನ್ನು ಕೈಗೊಂಡರು. ಈ ಹಂತದಲ್ಲಿ ಪ್ರಮುಖವಾದುದು ಸ್ತ್ರೀಯರಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದದ್ದು. ೧೮೮೧ರಲ್ಲಿ ಮಹಾರಾಣಿ ಹೆಸರಿನಲ್ಲಿ ಸ್ಥಾಪಿತವಾಗಿದ್ದ ಬಾಲಿಕಾ ಪಾಠಶಾಲೆಯು ಸರ್ಕಾರದ ಪ್ರೋತ್ಸಾಹ ಸಹಾಯಗಳಿಂದ ಅಭಿವೃದ್ಧಿ ಹೊಂದಿ ಮುಂದೆ ಪ್ರೌಢಶಾಲೆಯಾಗಿ ಬೆಳೆಯಿತು. ೧೮೮೯ ನವೆಂಬರ್ ತಿಂಗಳಲ್ಲಿ ಮೈಸೂರಿಗೆ ಭೇಟಿ ಕೊಟ್ಟಿದ್ದ ಪ್ರಿನ್ಸ್ ಆವ್‌ವೇಲ್ಸ್ (ಆಲ್ಬರ್ಟ್‌ವಿಕ್ಟರ್) ಅವರು ಅದನ್ನು ಮಾದರಿ ಪಾಠಶಾಲೆ ಎಂಬುದಾಗಿ ಶ್ಲಾಘಿಸಿದರು. ಅನಂತರ ಮಹಾರಾಣಿಯವರ ಅಪರಿಮಿತ ಆಸಕ್ತಿ, ಪ್ರೋತ್ಸಾಹದ ಕಾರಣ ಅದು ೧೯೦೦ರಲ್ಲಿ ದ್ವಿತೀಯ ದರ್ಜೆಯ ಶಿಕ್ಷಣ ಸಂಸ್ಥೆಯಾಗಿ, ನಂತರ ೧೯೦೧ರಲ್ಲಿ ಮಹಾರಾಣಿ ಕಾಲೇಜಾಯಿತು. ೧೮೯೭ರ ವೇಳೆಗೆ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದ್ದ ಪ್ರಥಮ ಕಲಾವಿಭಾಗಗಳು ಮಹಾರಾಣಿ ಬಾಲಿಕಾ ಶಾಲೆಯಲ್ಲಿ ಆರಂಭಗೊಂಡಿದ್ದವು. ೧೯೦೦ರಲ್ಲಿ ಮೊದಲೆ ನಿಯತವಾಗಿದ್ದ ಕಾಲೇಜು ವಿಭಾಗಗಳು ರೂಪಿಸಿಕೊಂಡಿದ್ದವು. ೧೯೦೦ರಲ್ಲಿ ಈ ಶಾಲೆ ಮಹಾರಾಣಿ ಕಾಲೇಜಾಗಿ ಮಾರ್ಪಟ್ಟಿತು. ಈ ಸಂಸ್ಥೆಗೆ ಭೇಟಿ ಕೊಟ್ಟಿದ್ದಂತಹ ಸರ್ ರೋಪರ್ ಲೆತ್‌ಬ್ರೀಡ್ಜ್ ಎಂಬ ಬ್ರಿಟಿಷ್ ಪ್ರಜೆಯೊಬ್ಬರು ಪರಿಶೀಲಕರ ಪುಸ್ತಕದಲ್ಲಿ “ಸ್ತ್ರೀ ಶಿಕ್ಷಣದ ವಿಚಾರದಲ್ಲಿ ಈ ಸಂಸ್ಥೆಯು ಭರತ ಖಂಡದಲ್ಲಿ ಮುಖ್ಯ ಸಂಸ್ಥೆಯಾಗಿದೆ. ಇದನ್ನು ಮಹಾರಾಜರ ಸಾಮ್ರಾಜ್ಯದಲ್ಲಿ ಈ ಸಂಸ್ಥೆಯ ಭರತ ಖಂಡದಲ್ಲಿಯೇ ಮುಖ್ಯ ಸಂಸ್ಥೆಯಾಗಿದೆ. ಇದನ್ನು ಮಹಾರಾಜರ ಸಾಮ್ರಾಜ್ಯದಲ್ಲಿ ಅತ್ಯಂತ ರತ್ನಗಳಲ್ಲೊಂದೆಂದು ಭಾವಿಸಬಹುದಾಗಿದೆ” ಎಂಬ ಬಹು ಮೆಚ್ಚುಗೆಯ ಮಾತುಗಳನ್ನು ಬರೆದಿರುವುದು ಮೈಸೂರು ಸಂಸ್ಥಾನದ ಘನತೆಯನ್ನು ಹೆಚ್ಚಿಸುತ್ತದೆ.

೧೯೦೨ರಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು, ಯಹೂದಿಗಳು, ಅಸ್ಪೃಶ್ಯರು, ದಲಿತ ಕ್ರೈಸ್ತರು, ಮುಂತಾದ ಸಮುದಾಯಗಳಿಗೆ ಸೇರಿದ್ದ ಸ್ತ್ರೀಯರೂ ಸಹ ಯಾವುದೇ ಭೇದ-ಭಾವವಿಲ್ಲದೆ ವಿದ್ಯಾಭ್ಯಾಸ ಮಾಡಬಹುದೆಂದು ಪ್ರಜಾಪ್ರತಿನಿಧಿ ಸಭೆಯಲ್ಲಿ ಚರ್ಚಿಸಿ ತಿಳಿಸಲಯಿತು. ಇಷ್ಟಲ್ಲದೇ ಪ್ರತಿ ವಿದ್ಯಾರ್ಥಿನಿಯರಿಗೆ ಮಾಸಿಕವಾಗಿ ೩೦ (ಮೂವತ್ತು ರೂಪಾಯಿಗಳು) ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನಗಳನ್ನು ಕೊಡಲು ಲೋಯರ್ ಸೆಕಂಡರಿ ಪರೀಕ್ಷೆಯಲ್ಲಿ ಬಾಲಕಿಯೊಬ್ಬಳು ಪ್ರಥಮ ಸ್ಥಾನವನ್ನು ಪಡೆದಿದ್ದಳು ಎಂದು ೧೯೦೫ರ ಶಿಕ್ಷಣ ವರದಿಯಲ್ಲಿ ದಾಖಲಾಗಿರುವ ಸಂಗತಿಯು ಸ್ತ್ರೀ ಶಿಕ್ಷಣ ರಂಗದಲ್ಲಿ ಕೈಗೊಳ್ಳಲಾಗಿದ್ದ ಕ್ರಮಗಳು ಎಷ್ಟು ಫಲಪ್ರದವಾಗಿದ್ದವು ಎಂಬುದಕ್ಕೆ ಸಮರ್ಥನೆಯಾಗಿದೆ. ಆದ್ದರಿಂದ ೧೯೦೬ರಲ್ಲಿ ಮೈಸೂರಿಗೆ ಭೇಟಿ ಮಾಡಿದ್ದ ಪ್ರಿನ್ಸ್ ಆಫ್ ವೇಲ್ಸ್ ಅವರ ಧರ್ಮಪತ್ನಿ ಸ್ತ್ರೀ ವಿದ್ಯಭ್ಯಾಸವೆಂಬ ಸಾಹಸೋಧ್ಯಮದಲ್ಲಿ ಈ ಸಮಾಜವು ಇಷ್ಟೊಂದು ಶ್ಲಾಘನೀಯವಾಗಿದ್ದ ರೀತಿಯಲ್ಲಿ ಸಫಲತೆಯನ್ನು ಸಾಧಿಸಿದ್ದುದನ್ನು ಕಂಡು, ಈ ವಿಚಾರದಲ್ಲಿ ಮೈಸೂರು ಸಂಸ್ಥಾನವನ್ನು ಇತರ ಜೀವನ ರಂಗಗಳಲ್ಲಿದ್ದಂತೆ ಮಾದರಿ ಸಂಸ್ಥಾನವಾಗಿದೆ ಎಂದು ಘೋಷಿಸಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೂ ವಿಧವೆಯವರ ಶಿಕ್ಷಣಕ್ಕಾಗಿ ಮಹಾರಾಣಿ ಬಾಲಿಕಾ ಪಾಠಶಾಲೆಯಲ್ಲಿ ವಿಶೇಷ ಬಗೆಯ ಎರಡು ತರಗತಿಗಳನ್ನು ಆರಂಭಿಸಲಾಯಿತು. ಸ್ತ್ರೀಯರಿಗಾಗಿ ವಸತಿ ಗೃಹಗಳು, ವಸತಿ ಶಾಲೆಗಳನ್ನು ಆರಂಭಿಸಲಾಯಿತು. ತರಬೇತಿ ಸಂಸ್ಥೆಗಳು, ಬಾಲಕೀಯರ ಅಗತ್ಯಗಳಿಗೆ ತಕ್ಕಂತೆ ಸಮರ್ಪಕ ಪಠ್ಯ ವಿಷಯಗಳ ಯೋಜನೆ ಹಾಗೂ ನಿರೂಪಣೆಯನ್ನು ಜಾರಿಗೆ ತರಲಾಯಿತು. ಮಾತೃಭಾಷೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣದ ವ್ಯವಸ್ಥೆ ಜಾರಿಗೆ ಬಂದಿತು. ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಮಧ್ಯಮದಲ್ಲಿ ಶಿಕ್ಷಣದ ವ್ಯವಸ್ಥೆ ಜಾರಿಗೆ ಬಂದಿತು. ಕನ್ನಡ ಹಾಗೂ ಇಂಗ್ಲಿಷ್ ಭಾಷಾ ವ್ಯಾಸಂಗ ಹಾಗೂ ದೈಹಿಕ ಶಿಕ್ಷಣದ ಸೌಲಭ್ಯಗಳು ದೊರಕಿದವು. ೧೯೧೩ರಲ್ಲಿ ಸ್ತ್ರೀಶಿಕ್ಷಣದಲ್ಲಿ ಪುನರ್ವ್ಯವಸ್ಥೆ ಮಾಡಿ ಅಕ್ಷರ ಜ್ಞಾನ ಹಾಗೂ ಸಾಹಿತ್ಯಾತ್ಮಕ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ಕೈಗಾರಿಕೆ ಹಾಗೂ ಗೃಹಕಲೆಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ಎಲ್ಲ ಸೌಲಭ್ಯಗಳನ್ನು ಜಾರಿಗೆ ತರಲಾಯಿತು. ಮನೆಯಲ್ಲೇ ಇರುತ್ತಿದ್ದ ಮಹಿಳೆಯರಿಗಾಗಿ ಗೃಹ ತರಗತಿಗಳ ಏರ್ಪಾಡುಗಳನ್ನು ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ೧೯೧೩ ಮಾರ್ಚ್ ೮ ರಂದು ಮೈಸೂರಿನಲ್ಲಿದ್ದಂತಹ ವಿಧವಾ ಗೃಹವನ್ನು ಸರ್ಕಾರ ವಹಿಸಿಕೊಂಡು ಅದನ್ನು ವಿದ್ಯಾರ್ಥಿನಿಯರ ವಸತಿ ಗೃಹವನ್ನಾಗಿ ಪರಿವರ್ತಿಸಿ ಮಹಾರಾಣಿ ಕಾಲೇಜಿನ ಆಡಳಿತಾಂಗದ ಪರಿಮಿತಿಗೆ ವಹಿಸಿಕೊಡಲಾಯಿತು.

ಕರ್ನಾಟಕ ಚರಿತ್ರೆಯ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಮಹಿಳೆಯರಿಗೆ ಶಿಕ್ಷಣದ ಸೌಲಭ್ಯವನ್ನು ಒದಗಿಸಿದ್ದು ೧೯ನೇ ಶತಮಾನದ ಕೊನೆಯಲ್ಲಿ ಎಂದು ಹೇಳಬಹುದು. ನಾಲ್ವಡಿಯವರು ಮಹಿಳೆಯರಿಗೆ ನೀಡಿದ ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅನೇಕ ಮಹಿಳೆಯರು ವಿದ್ಯಾವಂತರಾಗಿ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡರು ಯಾವ ಸಂಸ್ಕೃತಿ ಮಹಿಳೆಯರಿಗೆ ಏಳು ಸುತ್ತಿನ ಕೋಟೆಯನ್ನು ಭೇದಿಸಿ ಹೊರಬರುವುದು ಅನಿವಾರ್ಯವಾಗುವಂತೆ ಮಾಡಿತ್ತು.

ಮೈಸೂರಿನಲ್ಲಿ ಮೊಟ್ಟಮೊದಲು ಕನ್ನಡ ಹೆಣ್ಣು ಮಕ್ಕಳ ಶಾಲೆ ಸ್ಥಾಪಿತವಾಗಿದ್ದು. ಕ್ರಿ. ಶ. ೧೮೪೦ರಲ್ಲಿ. ಇದನ್ನು ಸ್ಥಾಪಿಸಿದವರು ಲಂಡನ್ ಮಿಷನ್ ಅವರು. ಮೈಸೂರು ನಗರದಲ್ಲಿ ಪ್ರಥಮ ಮಹಿಳಾ ಶಾಲೆ ಪ್ರಾರಂಭವಾದದ್ದು ೧೮೮೧ರವರೆಗೂ ಇದು ಖಾಸಗೀ ಆಡಳಿತದಲ್ಲಿದ್ದು ೧೮೮೨ರಲ್ಲಿ ನಾರಾಯಣ ಶಾಸ್ತ್ರೀ ರಸ್ತೆಯ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲ್ಪಟ್ಟಿತು. ೧೯೧೬ರಲ್ಲಿ ಹೊಸದಾಗಿ ದೇಶದಲ್ಲಿಯೇ ದೇಶಿಯವರಿಂದ ಪ್ರಾರಂಭವಾದ ಮೈಸೂರು ವಿಶ್ವವಿದ್ಯಾಲಯದ ಒಂದು ಅಂಗವಾಗಿ ಈ ಶಾಲೆಯನ್ನು ಅಂಗೀಕರಿಸಿಕೊಳ್ಳಲಾಯಿತು. ೧೯೧೯ರಲ್ಲಿ ಶಾಲಾ ಭಾಗವನ್ನು ಬೇರ್ಪಡಿಸಿ, ಕಾಲೇಜಿನ ಭಾಗವನ್ನು ಮೈಸೂರು ವಿಶ್ವವಿದ್ಯಾಲಯ ವಹಿಸಿಕೊಂಡಿತು. ಈ ಶಾಲೆಯಲ್ಲಿ ಓದಿದ ಪ್ರಥಮ ವಿದ್ಯಾಥಿನಿಯರ ಪೈಕಿ. ಕೆ. ಡಿ. ರುಕ್ಮಿಣಿಯಮ್ಮ, ಶ್ರೀರಂಗಮ್ಮ, ಸುಬ್ಬಮ್ಮ ಎಂಬ ಮೂವರು ೧೯೦೬ರಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಬಿಎ. ಪದವಿ ಪಡೆದು ದಕ್ಷಿಣ ಭಾರತದಲ್ಲೇ ಪ್ರಥಮ ಸ್ತ್ರೀ ಪದವೀಧರರೆಂಬ ಕೀರ್ತಿಗೆ ಪಾತ್ರರಾದರು.

ನಾಲ್ವಡಿ ಕೃಷ್ಣರಾಜರು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಿಕ್ಷಣ ನೀಡುವ ಪ್ರಮುಖ ಉದ್ದೇಶದಿಂದ ೧೯೧೩ರಲ್ಲಿ ನಜರ್‌ಬಾದ್ ಅರಮನೆಯ ಬಂಗಲೆಯೊಂದರಲ್ಲಿ ವಾಣೀವಿಲಾಸ ಅರಸು ಗರ್ಲ್ಸ್ ಶಾಲೆಯ ವ್ಯಾಪ್ತಿಗೆ ಸೇರಿಸಲಾಯಿತು. ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿಗೃಹದ ವ್ಯವಸ್ಥೆ (Hostel) ದೊರಕಿದ್ದರಿಂದ ಪಂಚಮರೆಂದು ಕರೆಸಿಕೊಳ್ಳುತ್ತಿದ್ದ ಅಸ್ಪೃಶ್ಯ ಮಹಿಳೆಯರೂ ಇಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಯಿತು. ೧೯೧೪-೧೫ರಲ್ಲಿ ಈ ಶಾಲೆಯಲ್ಲಿ ಆರು ಜನ ಅಸ್ಪೃಶ್ಯ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದರೆಂದು ಮೈಸೂರು ಎಜುಕೇಷನ್ ರಿಪೋರ್ಟ್ಸ್‌(೧೯೧೬) ತಿಳಿಸುತ್ತದೆ.

ಮೈಸೂರು ಸಂಸ್ಥಾನದಲ್ಲಿಯೇ ಅಲ್ಲದೇ ಇಡೀ ಭರತಖಂಡದಲ್ಲಿಯೇ ಅಂದಿನ ಸಾಮಾಜಿಕ ಪದ್ಧತಿಯಲ್ಲಿ ಮಡಿವಂತಿಕೆ ತಾಂಡವಾಡುತ್ತಿತ್ತು (ಇಂದೇನೋ ಸ್ವಲ್ಪ ಬದಲಾವಣೆ ಹೊಂದಿದ್ದೇವೆ ಎಂದು ಹೇಳಿಕೊಂಡರೂ ಸಹ ವಾಸ್ತವದಲ್ಲಿ ಅದು ಕೇವಲ ೧೫% ಮಾತ್ರ. ಆದರೆ ಮಿಕ್ಕ ಶೇ. ೮೫ ರಷ್ಟು ಮಹಿಳೆ ಕೆಟ್ಟ ಮಡಿವಂತಿಕೆಯಲ್ಲಿಯೇ ಮುಳುಗಿದ್ದಾರೆ). ಶಾಲಾ ಕಾಲೇಜುಗಳಿಗೆ ಹೋದರೆ ಹೆಣ್ಣು ಮಕ್ಕಳ ಚಾರಿತ್ರ್ಯ ಭಂಗವಾಗುತ್ತದೆಂಬ ಪ್ರಬಲವಾದ ಶಂಕೆಗಳು ಇಡೀ ರಾಜ್ಯದ ಎಲ್ಲ ಜನಾಂಗಗಳಲ್ಲೂ ಪ್ರಚಲಿತವಾಗಿದ್ದ ಕಾಲವದು. ಮಹಿಳಾ ವ್ಯಾಸಂಗವು ಇಂತಹ ಸಾಮಾಜಿಕ ನಿರ್ಬಂಧಗಳಿಗೆ ಒಳಗಾಗಿರುವುದನ್ನು ತಿಳಿದು ನಾಲ್ವಡಿ ಕೃಷ್ಣರಾಜರು ಅದರಲ್ಲಿ ವಿಶೇಷ ಆಸಕ್ತಿ ವಹಿಸಿದರು ಎಂದರೆ ತಪ್ಪಾಗಲಾರದು. ದೇಶ ವಿದೇಶಗಳನ್ನು ಸುತ್ತಿ ಬಂದ ಅವರು ಜೊತೆಗೆ ಇಂಗ್ಲೀಷ್ ಶಿಕ್ಷಣವನ್ನು ಉತ್ತಮವಾಗಿ ಪಡೆದಿದ್ದರಿಂದ, ಈ ವೇಳೆಗಾಗಲೇ ಮಹಿಳಾ ವಿದ್ಯಾಭ್ಯಾಸ ಹಾಗೂ ಅವರ ಸ್ವಾತಂತ್ರ್ಯದ ಬಗ್ಗೆ ಬಂದಿದ್ದಂತಹ ಪುಸ್ತಕಗಳನ್ನು ಅಭ್ಯಸಿಸಿದ್ದರಿಂದ ಸಮಾಜದ ಹಾಗೂ ಸಂಸ್ಥಾನದ ಮುನ್ನಡೆಗೆ ಚಪಾತ್ರ ಅಪಾರವಾದುದು ಎಂಬ ಅಂಶವನ್ನು ಮನಗಂಡಿದ್ದರು.

ಮಹಿಳಾ ಶಿಕ್ಷಣಕ್ಕೆ ನಾಲ್ವಡಿಯವರು ಪ್ರೋತ್ಸಾಹ ನೀಡಲು ಎಷ್ಟು ಉತ್ಸುಕರಾಗಿದ್ದರು ಎಂಬುದಕ್ಕೆ ಮೈಸೂರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಅವರು ಶಿಕ್ಷಣವು ಕೆಲವೇ ಅದೃಷ್ಟಶಾಲೆಗಳಿಗೆ ಮಾತ್ರವಲ್ಲವೆಂದು ಹೇಳಿರುವ ಮಾತೇ ಸಾಕ್ಷಿ. ನಾಲ್ವಡಿಯವರ ಆಸಕ್ತಿಯ ಫಲವಾಗಿ ಸಂಸ್ಥಾನದುದ್ದಕ್ಕೂ ಮಹಿಳಾ ಶಾಲೆಗಳು ಸ್ಥಾಪಿತವಾದವು. ಸಂಸ್ಥಾನದ ೮೩ ಗ್ರಾಮಗಳಲ್ಲಿ ಪ್ರತ್ಯೇಕ ಮಹಿಳಾ ಶಾಲೆಗಳು ಪ್ರಾರಂಭಗೊಂಡವು ೧೯೧೫-೧೬ರಲ್ಲಿ ಮಹಿಳೆಯರಿಗಾಗಿ ಮೀಸಲಾದ ಶಾಲಾ ಕಾಲೇಜುಗಳ ಸಂಖ್ಯೆ ೫೨೫. ವಿದ್ಯಾರ್ಥಿನಿಯರ ಸಂಖ್ಯೆ ಕ್ರಮವಾಗಿ ಕಾಲೇಜುಗಳಲ್ಲಿ ೧೬ ಇದ್ದರೆ, ಪ್ರೌಢಶಾಲೆಗಳಲ್ಲಿ, ೧೧.೦೫೯, ಪ್ರೈಮರಿ ಮತ್ತು ಲೋವರ್ ಸೆಕಂಡರಿಯಲ್ಲಿ ೨೮.೪೩೦ ಮತ್ತು ತಾಂತ್ರಿಕ ಮತ್ತು ವೃತ್ತಿಪರ ಶಾಲೆಗಳಲ್ಲಿ ೩೪೦. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸಾವಿರ ರೀತಿಯಲ್ಲಿ ಹೆಚ್ಚಾಗತೊಡಗಿತು. ಮಹಿಳೆಯರು ಶೈಕ್ಷಣಿಕ ಪ್ರಗತಿ ಹೊಂದಿದರೆ ಅವರಿಂದಾಗುವ ಪ್ರಗತಿಯನ್ನು ನಾಲ್ವಡಿಯವರು ಮನಗಂಡಿದ್ದರು. “ಗಂಡಸು ವಿದ್ಯಾವಂತನಾದರೆ ಕೇವಲ ಒಬ್ಬ ಮಾತ್ರ ವಿದ್ಯಾವಂತನಾದಂತೆ ಎಂಬ ತತ್ವವನ್ನು, ಇಡೀ ಸಂಸಾರವೇ ವಿದ್ಯಾವಂತರಾದಂತೆ”, ಇದು ಅವರ ದೂರದೃಷ್ಟಿಯನ್ನು ತಿಳಿಸುತ್ತದೆ.

ನಾಲ್ವಡಿ ಅವರು ತಮ್ಮ ಸಂಸ್ಥಾನದಲ್ಲಿ ಹೊಲೆಯ, ಮಾದಿಗ, ಲಂಬಾಣಿ, ಬುಡಕಟ್ಟು ಹಾಗೂ ಅರಣ್ಯ ನಿವಾಸಿಗಳಿಗೆ ಶಿಕ್ಷಣದ ಮೂಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಅವರು ಹೆಚ್ಚಾಗಿರುವ ಪ್ರದೇಶಗಳಲ್ಲಿಯೇ ಶಾಲೆಗಳನ್ನು ತೆರೆದರು. ೧೯೨೧-೨೨ರ ಅಂಕಿ ಅಂಶಗಳ ಪ್ರಕಾರ ಸಂಸ್ಥಾನದಲ್ಲಿ ೩೨ ಲಂಬಾಣಿ ವಸತಿ ಶಾಲೆಗಳಿದ್ದು, ೬೧೦ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರು. ಬಿಳಿಗಿರಿ ರಂಗ ಬೆಟ್ಟ, ಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿ ೪ ಗಿರಿಜನ (ಸೋಲಿಗರ) ಶಾಲೆಗಳು, ಕಾಕನಕೋಟೆ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಜೇನು ಕುರುಬ ಮತ್ತು ಕುಂಬಿ ಜನರಿಗಾಗಿ ೫ ಶಾಲೆಗಳು, ಕೋಲಾರ ಜಿಲ್ಲೆಯಲ್ಲಿ ವಡ್ಡರಿಗಾಗಿ ೩ ಶಾಲೆಗಳೂ, ಒಟ್ಟು ೧೨ ಶಾಲೆಗಳಲ್ಲಿ ೨೨೪ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು ಎಂದು Mysore Adminstration Report ತಿಳಿಸುತ್ತದೆ.

ಅಸ್ಪೃಶ್ಯರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ತಮ್ಮ ಜೀವನಶೈಲಿಯನ್ನು ಮಾರ್ಪಾಡುಗೊಳಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರುವಂತಾಗುವ ಉದ್ದೇಶದಿಂದ ಸರ್ಕಾರವು ೨೯ನೇ ನವಂಬರ್ ೧೯೧೮ರಲ್ಲಿ ಹೊರಡಿಸಿದ ಗೆಜೆಟ್ ಪ್ರಕಟಣೆಯ ಪಾಠ ಈ ರೀತಿಯಾಗಿತ್ತು. “ಜಾತಿಯ ಆಧಾರದ ಮೇಲೆ ಯಾರನ್ನು ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಟವನ್ನು ಸರ್ಕಾರವು ಎತ್ತಿ ಹಿಡಿಯಲಾರದು. ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಟವನ್ನು ಸರ್ಕಾರವು ಎತ್ತಿ ಹಿಡಿಯಲಾರದು. ಸಾರ್ವಜನಿಕ ಶಾಲೆಗಳನ್ನು ಸರ್ಕಾರದ ಆದಾಯದಿಂದ ನಡೆಸುತ್ತಿರುವುದರಿಂದ, ಶಿಕ್ಷಣವೂ ಸಹ ಆಸ್ಪತ್ರೆ, ನ್ಯಾಯಾಲಯಗಳು, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಇರುವಂತೆಯೇ ರಾಜ್ಯದ ಎಲ್ಲ ವರ್ಗದ ಜನರಿಗೂ ಲಭ್ಯವಾಗಬೇಕು ಎಂದು ಉದ್ಧೇಶಿಸಲಾಗಿದೆ, ಎಂದು ಪ್ರಕಟಿಸುವುದರ ಜೊತೆಗೆ ಕೂಡಲೇ ಅದೇ ವರ್ಷ ಈ ಘೋಷಣೆಯ ಆಧಾರದ ಮೇಲೆ ಪಂಚಮ ವರ್ಗದ ಹಾಗೂ ಇತರೇ ಹಿಂದುಳಿದ ಎಲ್ಲ ವರ್ಗದ ಮಕ್ಕಳನ್ನು ಸಾರ್ವಜನಿಕ ಶಾಲೆಗಳಿಗೆ ನಿರಾಂತಕವಾಗಿ ಸೇರಿಸಿಕೊಳ್ಳಬೇಕು ಎಂಬ ಆಜ್ಞೆಯನ್ನು ಜಾರಿಗೆ ತಂದರು. ಇದರಿಂದಾಗಿ ಸಂಸ್ಥಾನದಲ್ಲಿದ್ದ ದಲಿತರ ಸಾಮಾಜಿಕ ಸ್ಥಾನಮಾನವು ಅಂದಿನಿಂದಲೇ ಬದಲಾವಣೆಯ ಹಾದಿಯನ್ನು ಪ್ರಾರಂಭಿಸಿತು. ೧೯೧೯-೨೦ರಲ್ಲಿ ೩.೧೪೪ ದಲಿತ ವರ್ಗದ ವಿದ್ಯಾರ್ಥಿ ವೇತನಕ್ಕಾಗಿಯೇ ಪ್ರತ್ಯೇಕ ೧೫ ಸಾವಿರ ರೂಪಾಯಿಗಳ ವಾರ್ಷಿಕ ಗ್ರ್ಯಾಂಟನ್ನು ಸರ್ಕಾರ ಮಂಜೂರು ಮಾಡಿತು. ಇತರೇ ಹಿಂದುಳಿದ ವರ್ಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನಗಳನ್ನು ಜಾರಿಗೆ ತರಲಾಯಿತು. ಅವರ ಅಂದಿನ ಈ ದೃಢ ಸಂಕಲ್ಪಗಳಿಂದ ಹಾಗೂ ನಿಷ್ಠಾವಂತ ಅಧಿಕಾರಿಗಳ ಪರಿಶ್ರಮದಿಂದ ಅಸ್ಪೃಶ್ಯ ವರ್ಗ ಸಾಮಾಜಿಕ ಹಾಗೂ ಶೈಕ್ಷಣಿಕ ಜೊತೆಗೆ ಬೌದ್ಧಿಕವಾಗಿ ಅರುಣೋದಯ ಪಡೆಯಿತು. ಇದರ ಫಲದಿಂದಾಗಿ ಉತ್ತರ ಕರ್ನಾಟಕದ ದಲಿತರಿಗೆ ಹೋಲಿಸಿದರೆ ಮೈಸೂರು ಸಂಸ್ಥಾನದ ದಲಿತರು ಸಾಮಾಜಿಕ, ಶೈಕ್ಷಣಿಕ ಹಾಗೂ ಬೌದ್ಧಿಕವಾಗಿ ಐವತ್ತು ವರ್ಷಗಳು ಹಿರಿಯ ಸ್ಥಾನದಲ್ಲಿ ಇರುವುದು ಕಂಡುಬರುತ್ತದೆ. ಮೈಸೂರಿನ ದಲಿತರು ೧೯೬೦ರಲ್ಲಿ ಸಾಧಿಸಿದ ಪ್ರಗತಿಯನ್ನು ಉತ್ತರ ಕರ್ನಾಟಕದ ದಲಿತರು ಇಂದು ಸಾಧಿಸುತ್ತಿದ್ದಾರೆ. ನಾಲ್ವಡಿಯವರ ಆಳ್ವಿಕೆಯ ಕಾಲದಲ್ಲಿ ಸ್ತ್ರೀ ಹಾಗೂ ದಲಿತರ ಪ್ರಗತಿಯ ತ್ವರಿತಗತಿಯಲ್ಲಿ ಮುನ್ನಡೆಯಿತೆನ್ನಬಹುದು.

ಅನಿಷ್ಟ ಪದ್ಧತಿಗಳ ನಿರ್ಮೂಲನ ಕಾನೂನುಗಳು

ಸರ್ಕಾರ ಜನತೆಯ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ರಚಿಸಿದ ವಿವಿಧ ಕಾರ್ಯಕ್ರಮಗಳು ಮತ್ತು ನೀತಿಗಳೇ ಸಾಮಾಜಿಕ ಕಾನೂನುಗಳು. ಈ ಹಂತದಲ್ಲಿ ಅಸ್ಪೃಶ್ಯರ ಸಮಸ್ಯೆಗೆ ಸ್ಪಂಧಿಸುವ, ಅವರ ಅಭಿವೃದ್ಧಿಗಾಗಿ ಅನೇಕ ಕಾನೂನುಗಳನ್ನು ಸಂಸ್ಥಾನ ತಂದಿತು. ಒಂದು ಸಂಸ್ಥಾನದ ಸರ್ವಕ್ಷೇತ್ರಗಳ ಬೆಳವಣಿಗೆಯನ್ನು ಅಳೆಯಲು ಆ ಸಂಸ್ಥಾನವು ಜಾರಿಗೆ ತಂದ ಸಾಮಾಜಿಕ ಕಾನೂನುಗಳನ್ನೇ ಮಾನದಂಡವನ್ನಾಗಿ ಬಳಸಬಹುದಾಗಿದೆ. ಸಾಮಾಜಿಕ ಕಾನೂನುಗಳ ಉದ್ಧೇಶವೇ ಸಮಾಜದ ಕುಂದುಕೊರತೆಯನ್ನು ಮತ್ತು ಸಮಾನತೆಯನ್ನು ನೀಗಿಸುವುದಾಗಿದೆ. ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ದಲಿತರ ಅಭಿವೃದ್ಧಿಗಾಗಿ ಸರ್ಕಾರದವತಿಯಿಂದ ಜಾರಿಗೆ ತಂದಂತಹ ಸಾಮಾಜಿಕ ಕಾನೂನುಗಳನ್ನು ಅವಲೋಕಿಸಿದಾಗ ಅವರಲ್ಲಿ ಆಧುನಿಕತೆಗೆ ಹೊಂದಿಕೊಳ್ಳುವ ಪ್ರಗತಿಪರ ಮನೋಭಾವನೆ, ಜನರ ಸ್ಥಿತಿಗತಿಯನ್ನರಿತು ಅದನ್ನು ಪರಿಹರಿಸಲು ನಡೆಸಿದ ಪ್ರಯತ್ನಗಳು ಕಂಡುಬರುತ್ತವೆ. ಅಂದು ಜಾರಿಗೆ ಬಂದಂತಹ ಪ್ರಮುಖ ಸಾಮಾಜಿಕ ಕಾನೂನುಗಳ ಅಧ್ಯಯನ ಮಾಡುವುದರ ಮೂಲಕ ಅವುಗಳ ಪ್ರಾಮುಖ್ಯತೆಯನ್ನು ಅರಿಯಬಹುದಾಗಿದೆ.

೧೮೯೨ರ ದೇವದಾಸಿ ನಿಷೇಧ ಕಾನೂನು

ಪ್ರಮುಖ ಸಾಮಾಜಿಕ ಪಿಡುಗಾಗಿರುವ ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಕಾನೂನು ಜಾರಿಗೆ ತಂದದ್ದು ನಾಲ್ವಡಿಯವರ ಪ್ರಮುಖ ಸಾಮಾಜಿಕ ಬೆಳವಣಿಗೆಯಾಗಿದೆ. ದೇವಾಲಯಗಳಲ್ಲಿ ದೇವದಾಸಿಯವರ ನೇಮಕಕ್ಕೆ ಅನ್ವಯವಾಗುತ್ತಿದ್ದ ಸನಾತನ ಧರ್ಮದ ಉಚ್ಛ ಧ್ಯೇಯಗಳನ್ನು ಗಾಳಿಗೆ ತೂರಿ ಅದಕ್ಕೆ ಬದಲು ಈ ಕೆಲಸನ್ನು ವಿಷಯಲಂಪಟ ವೃತ್ತಿಯಾಗಿ ಮಾರ್ಪಡಿಸಿ ಅಮಾಯಕ ದೇವದಾಸಿಯನ್ನು ತಮ್ಮ ತಮ್ಮ ಕಾಮ ತೃಪ್ತಿಗಾಗಿ, ಬೇಕಾಗಿದ್ದ ಭೋಗವಸ್ತುಗಳಾಗಿ ಬಳಸಿಕೊಳ್ಳುತ್ತಿದ್ದ ಹೇಯ ಪದ್ಧತಿಯನ್ನು ಕೊನೆಗಾಣಿಸುವುದಕ್ಕಾಗಿ ಸರ್ಕಾರವು ೧೯೦೯ ಮೇ ತಿಂಗಳಿನಲ್ಲಿ ಒಂದು ಸತ್ತೋಲೆಯನ್ನು ಹೊರಡಿಸಿತು. ಬ್ರಿಟಿಷರು ಹಾಗೂ ಸಂಸ್ಥಾನದ ಅನೇಕ ರಾಜರು ಈ ಅನಿಷ್ಟವನ್ನು ತಡೆಯುವ ಧೈರ್ಯ ಮಾಡದೇ ಹೋಗಿದ್ದರೂ, ಇದನ್ನು ಅಳಿಸಿ ಹಾಕುವ ಕಾರ್ಯಕ್ಕೆ ಕೈಹಾಕದೆ ಇದ್ದಂತಹ ಸಮಯದಲ್ಲಿ ನಾಲ್ವಡಿಯವರು ನಿರ್ಭೀತಿಯಿಂದ ಪ್ರವರ್ತಿಸಿ ಮಾರ್ಗದರ್ಶನ ಮಾಡಿದರು ಎಂಬುದಾಗಿ ಮದ್ರಾಸ್ ಹಾಗೂ ಬ್ರಿಟಿಷ್ ಪ್ರಾಂತ್ಯಗಳ ಪತ್ರಿಕೆಗಳಲ್ಲಿ ಪ್ರಶಂಸೆ ಕಂಡುಬಂದಿತು. ಸಾಮಾನ್ಯವಾಗಿ ಯಾವ ದೇಶೀಯ ರಾಜರನ್ನು ಹೊಗಳದೆ ಇದ್ದಂತಹ ಬ್ರಿಟಿಷ್ ಸರ್ಕಾರ ಈ ಕಾರ್ಯವನ್ನು ತೃಪ್ತಿಯಿಂದ ಮೆಚ್ಚಿಕೊಂಡು ಇದು ಧೈರ್ಯದ ಕೆಲಸ ಎಂದು ಬಣ್ಣಿಸಿತು. ಇದರಿಂದಾಗಿ ಸಂಸ್ಥಾನದ ಮುಜರಾಯಿ ಇಲಾಖೆಗ ಸೇರಿದ್ದ ದೇವಸ್ಥಾನದಲ್ಲಿ ದೇವದಾಸಿಯರನ್ನು ನೇಮಿಸಿಕೊಳ್ಳುವ ಅವಕಾಶ ತಪ್ಪಿತು. ಸ್ವಾತಂತ್ರ್ಯ ಪೂರ್ವದ ಐವತ್ತು ವರ್ಷಗಳಲ್ಲಿಯೇ ಈ ಅನಿಷ್ಟ ಪದ್ಧತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರಿಂದ ಮೈಸೂರು ಪ್ರಾಂತ್ಯ ಎನ್ನಬಹುದು. ಏಕೆಂದರೆ ಉತ್ತರ ಕರ್ನಾಟಕದ ಕೆಲವು ಪ್ರಾಚೀನ ದೇವಾಲಯಗಳಲ್ಲಿ ಇಂದಿಗೂ ಈ ದೇವದಾಸಿ ಪದ್ಧತಿ ಸರ್ಕಾರದ ಏನೆಲ್ಲ ಕಾನೂನು ಭದ್ರತೆಯ ನಡುವೆಯೂ ಕದ್ದು ಮುಚ್ಚಿ ನಡೆಯುತ್ತಿರುವುದು ಕಂಡುಬರುತ್ತಿದೆ.

ಸಮಾಜದ ಕಪ್ಪು ಚುಕ್ಕೆಯಾದ ದೇವದಾಸಿ ಪದ್ಧತಿಯು ಮೈಸೂರು ಸಂಸ್ಥಾನದಲ್ಲಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿತ್ತು. ದೇವದಾಸಿಯವರೆಂದರೆ ದೇವಾಲಯಗಳಲ್ಲಿ ದೇವರ ಹೆಸರಲ್ಲಿ ಸಮರ್ಪಿಸಿಕೊಂಡಿರುವ, ನೃತ್ಯ ಮತ್ತು ಸಂಗೀತ ಮಾಡುವ ಸ್ತ್ರೀಯರಾಗಿದ್ದರು. ಮೊದ ಮೊದಲು ಉನ್ನತ ಆದರ್ಶ, ಗೌರವವೆನ್ನಿಸಿಕೊಂಡಿದ್ದ ದೇವದಾಸಿ ಪದ್ಧತಿ ೧೮ ಮತ್ತು ೧೯ನೇ ಶತಮಾನದಲ್ಲಿ ತನ್ನ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡು ಬದಲಾವಣೆಗೊಂಡಿತು. ಅವರು ಸಲ್ಲಿಸುವ ಸೇವೆ ಮತ್ತು ಸ್ಥಾನಗಳು ಕೀಳು ಮಟ್ಟಕ್ಕಿಳಿದು ವೇಶ್ಯೆಯರಾದರೆಂದು ಇತಿಹಾಸ ತಿಳಿಸುತ್ತದೆ. ಮೈಸೂರು ಪ್ರಾಂತ್ಯದಲ್ಲಿ ಆಚರಣೆಯಲ್ಲಿದ್ದಂತಹ ಮತ್ತೊಂದು ಪ್ರಮುಖ ನೀಚ ಪದ್ಧತಿಯೆಂದರೆ ಬಸವಿ ಪದ್ಧತಿ, ಶಿವ ವಿಷ್ಣು ಮತ್ತಿತರ ಗ್ರಾಮ ದೇವತೆಗಳ ಸೇವೆಗಾಗಿ ಬಸವಿಯವರನ್ನು ಅರ್ಪಿಸಲಾಗುತ್ತಿತ್ತು. ಇಲ್ಲಿ ಗಮವಿಸಬೇಕಾದ ಬಹುಮುಖ್ಯವಾದ ಅಂಶವೆಂದರೆ ದೇವದಾಸಿಯರು ಹಾಗೂ ಬಸವಿಯರು ಸಾಮಾನ್ಯವಾಗಿ ದಲಿತರೇ ಆಗಿದ್ದುದು. ಆಳುವ ವರ್ಗ ಹಾಗೂ ಪುರೋಹಿತ ವರ್ಗ ಈ ವರ್ಗದ ಜನರನ್ನು ಧಾರ್ಮಿಕ ಹಾಗೂ ಮೂಢನಂಬಿಕೆಗಳಿಂದ ಕಟ್ಟಿ ಹಾಕಿ ಇವರು ಈ ಅನಿಷ್ಟ ಪದ್ಧತಿಯನ್ನು ದೇವರು ನಿಡಿದ ವರವೆಂದು ತಿಳಿಸಿ ಆಚರಿಸುವಂತೆ ಮಾಡಿದ್ದರೆಂದರೆ ತಪ್ಪಾಗದು. ಈ ಅನಿಷ್ಟ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನೆ ಗೊಳಿಸಲು ಸರ್ಕಾರವು ೧೮೯೨ರಲ್ಲಿಯೇ ಆಜ್ಞೆಯನ್ನು ಹೊರಡಿಸಿತು. ಪ್ರಮುಖವಾಗಿ ಈ ಆಜ್ಞೆ ನಂಜನಗೂಡಿನ ಭೋಗಾ ನಂದೀಶ್ವರ ದೇವಾಲಯದಲ್ಲಿ ದೇವದಾಸಿಯರನ್ನು ನೇಮಿಸಿಕೊಳ್ಳುವ ಮತ್ತು ಕನ್ಯೆಯರು ನೃತ್ಯ ಮಾಡುವುದನ್ನು ನಿಷೇಧಿಸಿತು. ಪ್ರಮುಖವಾಗಿ ಈ ಆಜ್ಞೆ ಕೇವಲ ನಂಜಗೂಡಿನ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಇದನ್ನು ಸಂಸ್ಥಾನದ ಎಲ್ಲ ದೇವಾಲಯಗಳಿಗೂ ಅನ್ವಯವಾಗುವಂತೆ ಮಾಡಲಾಯಿತು.

ನಾಲ್ವಡಿಯವರು ಅಧಿಕಾರ ವಹಿಸಿಕೊಂಡ ನಂತರ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ೧೯೦೯ರಲ್ಲಿ ಸರ್ಕಾರಿ ಆಜ್ಞೆಯನ್ನು ಹೊರಡಿಸಿ ದೇವದಾಸಿ ಪದ್ಧತಿ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿರುವ ದುಷ್ಟ ಪದ್ಧತಿಯೊಂದು ಘೋಷಿಸಿ, ನಿಷೇಧಿಸಿತು. ೧೯೧೦ರಲ್ಲಿ ಸರ್ಕಾರದ ಹತೋಟಿಯಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ‘ಗೆಜ್ಜೆಪೂಜೆ’ ಸಮಾರಂಭ ಏರ್ಪಡಬಾರದೆಂದು ಆಜ್ಞೆ ಹೊರಡಿಸಿತು. ಹೀಗೆ ನಾಲ್ವಡಿ ಕೃಷ್ಣರಾಜರು ತಮ್ಮ ಆಡಳಿತ ಅವಧಿಯಲ್ಲಿ ಹಂತ ಹಂತವಾಗಿ ದೇವದಾಸಿ ಪದ್ಧತಿಯನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಿದರು.

೧೯೩೬ ಜುಲೈ ೧೪ರ ವೇಶ್ಯಾವೃತ್ತಿಯ ನಿಷೇಧ ಕಾನೂನು

ಆಧುನಿಕ ಸಮಾಜದ ಮತ್ತೊಂದು ಪಿಡುಗಾಗಿರುವ ವೇಶ್ಯಾವೃತ್ತಿಯನ್ನು ತಡೆಗಟ್ಟಲು ಪ್ರಯತ್ನಗಳು ನಡೆದವು, ವೇಶ್ಯಾವೃತ್ತಿಯನ್ನು ತಡೆಗಟ್ಟಲು ಶಾಸನವನ್ನು ಜಾರಿಗೆ ತರುವುದಕ್ಕೆ ಮೊದಲು ಪ್ರಮುಖ ನಗರಗಳಲ್ಲಿನ ವೇಶ್ಯಾವೃತ್ತಿಯ ವ್ಯವಸ್ಥೆಯನ್ನು ಕುರಿತು ಅಧ್ಯಯನ ಮಾಡಲು ಒಂದು ಪ್ರಮುಖ ನಗರಗಳಾದ ಕಲ್ಕತ್ತ, ಮದ್ರಾಸ್ ಮತ್ತು ಬೊಂಬಾಯಿಯಲ್ಲಿರುವಂತೆ ಬೆಂಗಳೂರು ಮತ್ತು ಮೈಸೂರಿನಲ್ಲೂ ವೇಶ್ಯಾವೃತ್ತಿಯನ್ನು ತಡೆಗಟ್ಟಲು ಕಾನೂನು ಜಾರಿಗೆ ತರಬೇಕೆಂದು ತಿಳಿಸಿತು. ಅಂದಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದಂತಹ ಎಚ್. ಸಿ. ದಾಸಪ್ಪನವರು ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲವಾದ್ದರಿಂದ, ದುಷ್ಟ ಪದ್ಧತಿಯನ್ನು ತಡೆಗಟ್ಟಲಾದರೂ ಸರ್ಕಾರ ಕಾನೂನನ್ನು ಜಾರಿಗೆ ತರಬೇಕೆಂದು ಸೂಚಿದರು. ಆದರೆ ಇಂಥಹ ಕಾನೂನನ್ನು ಜಾರಿಗೆ ತರಲು ಹೆಚ್ಚಿನ ಸಂಖ್ಯೆಯ ಸದಸ್ಯರು ವಿರೋಧಿಸಿದ್ದರಿಂದ ೧೯೩೧ರಲ್ಲಿ ಅನುಷ್ಠಾನಕ್ಕೆ ತರಲಾಗಲಿಲ್ಲ. ಪ್ರಜಾಪ್ರತಿನಿಧಿ ಸಭೆಯಲ್ಲಿ ೧೯೩೫ರಲ್ಲಿ ಮತ್ತೆ ಸದಸ್ಯರು ಪ್ರಮುಖ ನಗರಗಳಲ್ಲಿ ವೇಶ್ಯಾವೃತ್ತಿ ಹೆಚ್ಚುತ್ತಿರುವುದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಅಂಕಿ ಅಂಶಗಳ ಸಮೇತ ನಿರೂಪಿಸಿ ವೇಶ್ಯಾವೃತ್ತಿಯನ್ನು ತಡೆಗಟ್ಟಲು ಕಾನೂನನ್ನು ತರಬೇಕೆಂದು ಒತ್ತಾಯಿಸಿದರು. ನಾಲ್ವಡಿಯವರು ಸಾಮಾಜಿಕ ಕಳಕಳಿಯ ಚಿಂತಕರಾಗಿದ್ದರಿಂದ ಪ್ರಜಾಪ್ರತಿನಿಧಿ ಸಭೆಯಲ್ಲಿ ಅಂತಹ ಕಾನೂನಿಗೆ ಸಂಪೂರ್ಣ ಬೆಂಬಲ ದೊರಕುವುದೆಂದು ನಿರೀಕ್ಷಿಸಿ ೧೯೩೬ ಜುಲೈ ೧೪ ರಂದು ವೇಶ್ಯಾವೃತ್ತಿಗೆ ತಡೆಗಟ್ಟುವ Superression of immoral traffic Act ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾ ಕಾರ್ಯಕ್ಕೆ ಕೈಹಾಕಿದರೆ ಹಾಗೂ ಇದರ ಮೂಲಕ ಸಾರ್ವಜನಿಕ ತೊಂದರೆ ನೀಡಿದರೆ ಎರಡು ತಿಂಗಳು ಸೆರೆವಾಸ ಮತ್ತು ೨೦೦ ರೂ.ಗಳ ದಂಡ ವಿಧಿಸುವ ಅಧಿಕಾರ ಹೊಂದಿತ್ತು. ಹೀಗೆ ಕಾನೂನನ್ನು ಜಾರಿಗೆ ತರುವ ಮೂಲಕ ವೇಶ್ಯಾವೃತ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಯಿತು.