ಮೈಸೂರು ಸಂಸ್ಥಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೊಟ್ಟಮೊದಲಿಗೆ ೧೮೫೪ರಲ್ಲಿ ಕಬ್ಬನ್‌ನಿಂದ ಸ್ಥಾಪನೆಯಾಯಿತೆಂದು ತಿಳಿದು ಬರುತ್ತದೆ. ೧೮೬೪ರ ವೇಳೆಗೆ ನಾಲ್ಕು ತಾಲ್ಲೂಕುಗಳಲ್ಲಿ ೧೮ ಕನ್ನಡ ಸರ್ಕಾರಿ ಶಾಲೆಗಳು, ೩೦ ಗ್ರಾಂಟ್-ಇನ್-ಏಡ್ ಅನುದನ ಪಡೆದ ಶಾಲೆಗಳೂ ನಡೆಯುತ್ತಿದ್ದವು. ಈ ಇಲಾಖೆಯ ವಾರ್ಷಿಕ ಖರ್ಚು ೧,೨೫,೦೦೦ ರೂ.ಗಳಾಗಿತ್ತು. ಕನ್ನಡವೇ ಪ್ರಾಥಮಿಕ ಮಟ್ಟದಲ್ಲಿ ಬೋಧನಾ ಮಾಧ್ಯಮವಾಗಿತ್ತು. ಆದರೆ ಪ್ರಗತಿಯು ತುಂಬ ನಿಧಾನವೆಂದು ಕಂಡುಬಂದದ್ದರಿಂದ ೧೮೬೪ರಲ್ಲಿ. ಬಿ. ಎಲ್. ರೈಸ್‌ ಅವರ ಶಿಫಾರಿಸ್ಸಿನಂತೆ ‘ಹೋಬಳಿ ಶಾಲೆ ಯೋಜನೆಯನ್ನು’ ಜಾರಿಗೆ ತರಲಾಯಿತು. ಗ್ರಾಮಾಂತರದಲ್ಲಿ ಒಳ ಪ್ರದೇಶದ ಮಕ್ಕಳಿಗೂ ಶಿಕ್ಷಣವನ್ನು ತಲುಪಿಸುವ ಪ್ರಮುಖ ಉದ್ದೇಶದಿಂದ ಸಂಸ್ಥಾನದ ಎಲ್ಲ ಹೋಬಳಿಗಳಲ್ಲೂ ಒಂದೊಂದು ಕನ್ನಡ ಪ್ರಾಥಮಿಕ ಶಾಲೆಯನ್ನು ಕ್ರಮೇಣ ಜಾರಿಗೆ ತರಲಾಯಿತು. ಇದನ್ನು ೧೮೮೧ರಲ್ಲಿ ಸಂಪೂರ್ಣವಾಗಿ ಮೈಸೂರಿನ ಮಹಾರಾಜರು ಆಳ್ವಿಕೆ ನಡೆಸಲು ಪ್ರಾರಂಭಿಸಿದ ಮೇಲೆ ಬಿ. ಎಲ್. ರೈಸ್ ಅವರ ‘ಹೋಬಳಿ ಶಾಲೆ ಯೋಜನೆ’ಯನ್ನು ಜಾರಿಗೆ ತರಲಾಯಿತು.

೧೮೮೪ರಲ್ಲಿ ಈ ರೀತಿಯ ಶಾಲೆಗಳು ಸಂಸ್ಥಾನದಲ್ಲಿ (ಪ್ರಾಥಮಿಕ ಹಾಗೂ ಮಾಧ್ಯಮಿಕ) ೨೦೮೨ ಇದ್ದವು. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಂತಹ ವಿದ್ಯಾರ್ಥಿಗಳ ಸಂಖ್ಯೆ ೫೭.೬೫೭ ಆಗಿತ್ತು. ಸಾರ್ವಜನಿಕ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ನೀಡಲು ನಿರ್ಧರಿಸಿ ಅದರ ಖರ್ಚುವೆಚ್ಚವನ್ನು ಭೂಕಂದಾಯದ ಮೇಲೆ ಸಣ್ಣ ಪ್ರಮಾಣದ ಎಜುಕೇಷನ್ ಸೆಸ್ಸನ್ನು ವಿಧಿಸಲಾಯಿತು. ಅಂದು ವಿಧಿಸಿದಂತಹ ಲೋಕಲ್ ಸೆಸ್ ಮತ್ತು ಹೆಲ್ತ್ ಸೆಸ್‌ಗಳು ಇಂದಿಗೂ ಸಹ ಬಳಕೆಯಲ್ಲಿವೆ. ೧೯೭೫ರಲ್ಲಿ ಬೆಂಗಳೂರು ಹೈಸ್ಕೂಲನ್ನು ಸೆಂಟ್ರಲ್ ಕಾಲೇಜ್ ಆಗಿ ಪರಿವರ್ತಿಸಿ ಮದರಾಸು ವಿಶ್ವವಿದ್ಯಾಲಯಕ್ಕೆ ಸೇರಿಸಲಾಯಿತು. ಬೆಂಗಳೂರ, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ನಾಲ್ಕು ಹೈಸ್ಕೂಲ್‌ಗಳು ಎಫ.ಎ. ಮಟ್ಟದವರೆಗೆ ಪಾಠ ಹೇಳುತ್ತಿದ್ದವು. ಆದರೆ ೧೮೭೭ ಭೀಕರ ಕ್ಷಾಮದಿಂದಾಗಿ ಅನಿವಾರ್ಯವಾಗಿ ನಂತರ ಎಲ್ಲ ಅನುದಾನಿತ ಶಾಲೆಗಳನ್ನು ಮುಚ್ಚಲಾಯಿತು.

ಈ ಘಟನೆಯಿಂದ ಮೈಸೂರು ಚೇತರಿಸಿಕೊಳ್ಳಲು ಸುಮಾರು ಹತ್ತು ವರ್ಷಗಳೇ ಬೇಕಾಯಿತು. ಕಡ್ಡಾಯ ಶಿಕ್ಷಣ ಅಥವಾ ಎಸ್.ಎಸ್‌.ಎಲ್.ಸಿ ಪರೀಕ್ಷೆಗಳಂತಹ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವಂತಹ ಸ್ಥಿತಿಯಲ್ಲಿ ಮೈಸೂರು ಇರಲಿಲ್ಲ. ಈ ಕೊರತೆಯನ್ನು ಸರಿಪಡಿಸಲು ೧೯೧೩ರಲ್ಲಿ ನಾಲ್ವಡಿ ಅವರು ಒಂದು ಪರಿಷ್ಕರಣ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯು “೧೯೧೩ರಲ್ಲಿ ಪರಿಷ್ಕರಣ” ಎಂದು ಹೆಸರಾಯಿತು. “ಸಂಸ್ಥಾನವು ೧೯೧೩ರಲ್ಲಿನ ಪ್ರಾಥಮಿಕ ಶಿಕ್ಷಣ ನಿಬಂಧನೆಯು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲು ಅಧಿಕಾರ ಪಡೆಯಿತು. ಈ ನಿಬಂಧನೆಯ ಮೇಲೆ ಸರ್ಕಾರದಿಂದ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಂಜೂರು ಮಾಡಿಸುವುದು, ಕಟ್ಟಡಗಳನ್ನು ಕಟ್ಟಲು ಹಾಗೂ ಶಿಕ್ಷಣವನ್ನು ಕಡ್ಡಾಯಗೊಳಿಸಲು ಅಧಿಕಾರ ಪಡೆಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ೧೯೧೪ರಲ್ಲಿ ಅನುದಾನಸಹಿತ ಶಾಲೆಗಳು ರಚನೆಗೊಂಡವು. ಒಬ್ಬ ಶಿಕ್ಷಕನಿಗೆ ಸರ್ಕಾರವು ತಿಂಗಳಿಗೆ ೪ ರೂ.ಗಳ ಅನುದಾನ ನೀಡುತ್ತಿತ್ತು. ನಂತರ ೫ ರಿಂದ ೭ರೂ.ಗಳಂತೆ ಹೆಚ್ಚಿಸಿದ್ದು ಕಂಡುಬರುತ್ತದೆ. ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಅದು ಪ್ರಾಥಮಿಕ ಶಾಲೆಯ ಶಿಕ್ಷಕರನ್ನಾಗಿ ನೇಮಿಸಲಾಗುತ್ತಿತ್ತು.

ನಂತರ ಅನುದನಿತ ಶಾಲೆಗಳ ನಿರ್ವಹಣೆಯ ಹೊಣೆಯು ಆಯಾ ಶಾಲಾ ಸಮಿತಿಗಳದಾಗಿದ್ದಿತು. ಸರ್ಕಾರದ ಅನುದಾನವು ಸೇರಿ ಶಿಕ್ಷಕರ ಮಾಸಿಕ ವೇತನ ತಿಂಗಳಿಗೆ ಹತ್ತು ರೂಪಾಯಿಗಳಿಗಿಂತ ಕಡಿಮೆ ಇಲ್ಲದಂತೆ ಈ ಸಮಿತಿಗಳು ನೋಡಿಕೊಳ್ಳುವುದು ಕಡ್ಡಾಯವಾಯಿತು. ಶಾಲಾ ಸಮಿತಿಯವರು ಗ್ರಾಮಸ್ಥರಿಂದ ಹಣ ಅಥವಾ ಧಾನ್ಯಗಳ ರೂಪದಲ್ಲಿ ವಂತಿಗೆಯನ್ನು ಅಥವಾ ಕೊಡುಗೆಯನ್ನು ಸಂಗ್ರಹಿಸುತ್ತಿದ್ದರು. ಈ ಯೋಜನೆ ಬೇಗನೆ ಜನಪ್ರಿಯವಾಗಿ ಸಂಸ್ಥಾನದ ನಾನಾ ಕಡೆಗಳಿಂದ ಪ್ರಾಥಮಿಕ ಶಾಲೆಗಳ ಬೇಡಿಕೆಯಿಂದ ಬಂದಿತು. ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರವು ೧೯೧೪ರಲ್ಲಿ ಆಗಷ್ಟ್ ೯ರಂದು ಮತ್ತೊಂದು ಆದೇಶ ಹೊರಡಿಸಿ ಹೆಚ್ಚು ಯಶಸ್ವಿಯಾಗಿ ಅನುದಾನ ಶಾಲೆಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿತು. ಶಿಕ್ಷಣಕ್ಕಾಗಿ ಸರ್ಕಾರ ಗರಿಷ್ಠ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಹರಿಯಬಿಡುವುದಾಗಿ ಮಹಾರಾಜರು ಮತ್ತು ದಿವಾನರು ಸ್ಪಷ್ಟಪಡಿಸಿದರು. ಇದರಿಂದಾಗಿ ಪ್ರಾಥಮಿಕ ಶಾಲೆಗಳು ಸಾಕಷ್ಟು ಗ್ರಾಮಗಳಲ್ಲಿ ಸ್ಥಾಪನೆಯಾದವು. ೧೯೧೫-೧೬ನೇ ಸಾಲಿನಲ್ಲಿ ಜನರು ಶಿಕ್ಷಣದ ಉದ್ದೇಶಕ್ಕಾಗಿ ೧.೨೦,೪೯೮ ರೂಪಾಯಿಗಳನ್ನು ವಂತಿಕೆಯ ರೂಪದಲ್ಲಿ ನೀಡಿದರು. ಸರ್ಕಾರವು ಕರೆ ನೀಡಿದ ಈ ರೀತಿಯ ಹಣ ಸಂಗ್ರಹದ ಕರೆಗೆ ಜನರು ಆಸಕ್ತಿಯಿಂದ ಪ್ರತಿಕ್ರಿಯಿಸಿದ್ದುದು ಇದರಿಂದ ವ್ಯಕ್ತವಾಗುತ್ತದೆ. ಹೀಗೆ ಸರ್ಕಾರದ ಪ್ರಯತ್ನಗಳು ಮತ್ತು ಜನರ ಆಸಕ್ತಿಯ ಫಲವಾಗಿ ೧೯೧೧-೧೨ಕ್ಕೆ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿ ಒಟ್ಟು ೪.೫೬೮ ಶಾಲೆಗಳಿದ್ದದ್ದು, ಈ ಸಂಖ್ಯೆಯು ೧೯೧೭-೧೮ನೇ ಸಾಲಿಗೆ ೧೧.೨೯೪ಕ್ಕೆ ಏರಿತು. ೧೯೧೬ರ ಅಂಕಿ-ಅಂಶದಂತೆ ಹೊಸದಾಗಿ ಪ್ರಾರಂಭವಾದಂತಾಗಿ ಅನುದಾನಿತ ಶಾಲೆಗಳ ಸಂಖ್ಯೆ ೨,೧೫೦ ಆಗಿದ್ದಿತು. ೧೯೧೧ರಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ೧,೩೮,೦೩೫ ಇದ್ದದ್ದು ೧೯೧೭-೧೮ರಲ್ಲಿ ೩,೬೬,೩೫೩ ಆಗಿತ್ತು. ಅದರಲ್ಲಿ ವಿದ್ಯಾರ್ಥಿನಿಯರ ಪ್ರಮಾಣವು ೧೯೧೨-೧೩ಕ್ಕೆ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡ ೬.೪ ಇದ್ದದ್ದು. ೧೯೧೭-೧೮ ಹಾಗೂ ೧೯೧೦-೧೯ಕ್ಕೆ ೧೪.೨ ಆಗಿದ್ದಿತು. ಈ ಪ್ರಮಾಣದಲ್ಲಿ ಪ್ರಾಥಮಿಕ ಶಿಕ್ಷಣದ ಪ್ರಗತಿ ಅದ್ಭುತವೇ ಸರಿ. ಆದರೆ ವಾಸ್ತವಾಂಶಗಳನ್ನು ಹೋಲಿಸಿ ನೋಡಿದರೆ ಅದರಲ್ಲಿ ಅನೇಕ ಕುಂದು ಕೊರತೆಗಳು ಕಂಡುಬರುತ್ತಿದ್ದವು. ಅನುದಾನ ಶಾಲೆಗಳಿಂದಾಗಿ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ವಿದ್ಯಾರ್ಥಿಗಳ ಹಾಜರಾತಿಯೂ ಬೆಳೆಯಿತು. ಆದರೆ ಈ ಶಾಲೆಗಗಳಿಗೆ ಕಟ್ಟಡಗಳನ್ನು ಒದಗಿಸುವುದು ಮತ್ತು ಶಿಕ್ಷಕರಿಗೆ ಪೂರ್ಣ ಸಂಭಾವನೆ ಕೊಡುವ ಹೊಣೆಯು ಆಯಾ ಶಾಲಾ ಸಮಿತಿಗಳ ಮೇಲಿದ್ದರಿಂದ ಅನೇಕ ಸಮಸ್ಯೆಗಳು ಉದ್ಭವಿಸಿದವು. ಅನೇಕ ಶಾಲಾ ಸಮಿತಿಗಳು ಹಣವನ್ನು ಕೊಡಿಸುವಲ್ಲಿ ವಿಫಲವಾಗಿದ್ದವು. ಶಾಲೆಗಳಲ್ಲಿ (ಗ್ರಾಮೀಣ ಪ್ರದೇಶದಲ್ಲಿ) ಸೂಕ್ತ ಕಟ್ಟಡಗಳಿರಲಿಲ್ಲ. ಅನೇಕ ಸಂದರ್ಭದಲ್ಲಿ ದೇವಸ್ಥಾನದ ಜಗಲಿ, ಊರಿನ ಚಾವಡಿ ಅಥವಾ ಮಂಟಪಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಇಂತಹ ಶಾಲೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ‘ಕೂಲಿಮಠ’ಗಳೆಂದು ಕರೆಯಲಾಗುತ್ತಿತ್ತು. ಗ್ರಾಮಸ್ಥರು ಅನಿಶ್ಚಿತ ವಂತಿಗೆಯನ್ನು ಅವಲಂಬಿಸಿದ ಈ ಶಾಲೆಗಳು ವ್ಯವಸ್ಥಿತವಾಗಿ ನಡೆಯುವುದು ಕಷ್ಟವಾಗಿತ್ತು. ಇವು ಅಂದಿನ ಶಿಕ್ಷಣದಲ್ಲಿ ಎದುರಾಗುತ್ತಿದ್ದಂತಹ ಕೆಲವು ಸಮಸ್ಯೆಗಳು. ಇಷ್ಟೆಲ್ಲ ಕುಂದು-ಕೊರತೆಗಳ ನಡುವೆಯೂ ಸಹ ಪ್ರಾಥಮಿಕ ಶಿಕ್ಷಣವು ಮೈಸೂರು ಸಂಸ್ಥಾನದಲ್ಲಿ ಹಿಂದೆಂದೂ ನಡೆಯದ ಮಹಾಪ್ರಯೋಗವೆನ್ನಬಹುದು.

ಭಾರತೀಯ ಸಂಸ್ಥಾನದಲ್ಲಿಯೇ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಂತಹ ರಾಜ್ಯಗಳಲ್ಲಿ ಮೈಸೂರು ಸಂಸ್ಥಾನವು ಎರಡನೆಯದು. ಮೊದಲನೆ ಸಂಸ್ಥಾನ ಬರೋಡ. ಬರೋಡದಲ್ಲಿ ೧೯೦೫-೦೬ನೇ ಸಾಲಿನಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರಲಾಗಿತ್ತು. ಮೈಸೂರು ಸಂಸ್ಥಾನದಲ್ಲಿ ಕಡ್ಡಾಯ ಶಿಕ್ಷಣ ಜಾರಿಗೆ ತರುವ ಬಗ್ಗೆ ೧೯೦೯ರಿಂದ ಪ್ರಯತ್ನಗಳು ನಡೆಯಲಾರಂಭಿಸಿದವು. ವಿದ್ವಾಂಸರೊಬ್ಬರನ್ನು ಬರೋಡಕ್ಕೆ ಕಳುಹಿಸಿ ಕಡ್ಡಾಯ ಶಿಕ್ಷಣದ ರೂಪರೇಷೆಯನ್ನು ತಯಾರಿಸಲು ಸರ್ಕಾರ ಸೂಚಿಸಿತು. ವಿದ್ವಾಂಸರ ವರದಿಯನ್ನು ಆಧರಿಸಿ ಸಂಸ್ಥಾನದಲ್ಲಿ ಕಡ್ಡಾಯ ಶಿಕ್ಷಣ ಯೋಜನೆಯನ್ನು ರೂಪಿಸಲಾಯಿತು. ನಾಲ್ವಡಿ ಹಾಗೂ ವಿಶ್ವೇಶ್ವರಯ್ಯ ಅವರು ಸಹ ಈ ಪದ್ಧತಿಯನ್ನು ಜಾರಿಗೆ ತರಲು ಆಸಕ್ತಿ ಹೊಂದಿದರು. ೧೯೧೩ರ ಏಪ್ರಿಲ್‌ನಲ್ಲಿ ಕಡ್ಡಾಯ ಶಿಕ್ಷಣ ಯೋಜನೆಯ ಕರಡನ್ನು ನ್ಯಾಯವಿಧೇಯಕ ೩೦ ರಂದು. ಇದು ಸಂಸ್ಥಾನವು ಶಿಕ್ಷಣ ಕ್ಷೇತ್ರದಲ್ಲಿದ್ದಂತಹ ದೂರದೃಷ್ಟಿಯ ಪ್ರಮುಖ ಕಾರ್ಯ ಕ್ರಮವಾಗಿತ್ತೆನ್ನಬಹುದು.

೧೯೧೫ರಲ್ಲಿ ೧೫ ಆಯ್ದ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಕಡ್ಡಾಯ ಶಿಕ್ಷಣವನ್ನು ಜಾರಿಗೆಗೊಳಿಸಲಾಯಿತು. ೧೯೧೬ರಲ್ಲಿ ಇನ್ನೂ ೧೨ ಕೇಂದ್ರಗಳಿಗೆ ಇದನ್ನು ವಿಸ್ತರಿಸಲಾಯಿತು. ೧೯೧೭-೧೮, ೧೯, ೨೦ರ ಹೊತ್ತಿಗೆ ೨೩೮ ಕೇಂದ್ರಗಳು ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟವು. ೧೯೧೭ರಲ್ಲಿ ಕಡ್ಡಾಯ ಶಿಕ್ಷಣಕ್ಕೆ ವಿಶೇಷ ಅಧಿಕಾರಿಯನ್ನು ನೇಮಿಸಲಾಯಿತು. ಬೆಂಗಳೂರು ಮತ್ತು ಮೈಸೂರುಗಳಲ್ಲಿ ಹತ್ತು ವರ್ಷದ ಹೊರಗಿನ ಬಾಲಕಿಯರಿಗೂ ಕಡ್ಡಾಯ ಶಿಕ್ಷಣ ಜಾರಿಗೆ ತರಲಾಯಿತು. ೧೯೨೧-೨೨ರ ಹೊತ್ತಿಗೆ ೧೮.೭೦೭ ವಿದ್ಯಾರ್ಥಿಗಳು ಈ ಕಾಯ್ದೆಯ ಶಿಕ್ಷಣದ ವ್ಯಾಪ್ತಿಯಲ್ಲಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ಜಾರಿಯಲ್ಲಿದ್ದಂತಹ ಕಡ್ಡಾಯ ಶಿಕ್ಷಣವನ್ನು ಭಾರತದಲ್ಲೂ ಬಹುಮೊದಲೇ ಅನುಷ್ಠಾನಗೊಳಿಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ. ಆದರೆ ಭಾರತದಂತೆಯೇ ಇಂದಿಗೂ ಸಹ ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದಿರುವ ಈ ಯೋಜನೆಯನ್ನು ಅಂದೇ ಸಂಸ್ಥಾನವು ಕೈಗೊಂಡಿದ್ದು ಆಗಿನ ಪ್ರಭುತ್ವವು ಶಿಕ್ಷಣ ನೀತಿಯ ಬಗ್ಗೆ ಹೊಂದಿದ್ದಂತಹ ದೂರದೃಷ್ಟಿಯ ಮಮತೆಯನ್ನು ಸೂಚಿಸುತ್ತದೆ. ದಿನಾಂಕ ೩೧.೦೩.೨೦೧೦ರಂದು ಭಾರತದ ಪ್ರಧಾನಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರ ಯುಪಿಎ ಸರ್ಕಾರವು ಭಾರತದ ಎಲ್ಲಾ ಮಕ್ಕಳಿಗೂ ಶಿಕ್ಷಣ ಮೂಲಭೂತ ಹಕ್ಕು ಎಂಬುದಾಗಿ ಘೋಷಣೆ ಮಾಡಿದೆ. ಈ ಘೋಷಣೆಯ ಕುರಿತು ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ಸಂದೇಶ ನೀಡಿರುವುದು ಶುಭ ಸಂದರ್ಭವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಇದು ಸ್ವಲ್ಪಮಟ್ಟಿಗೆ ಜಾರಿಗೊಂಡರೂ ಸಹ ಗ್ರಾಮೀಣ ಪ್ರದೇಶದಲ್ಲಿ ಇದು ನಿರೀಕ್ಷೆಯಂತೆ ಸಾಧ್ಯವಾಗಲಿಲ್ಲ, ಏಕೆಂದರೆ ಅಂದಿನ ಸಾಮಾಜಿಕ ಸಮಸ್ಯೆಗಳು ಅನೇಕ ರೀತಿಯಲ್ಲಿ ಮೇಲು ಕೀಳು ಭಾವನೆಗಳಿಮದಾಗಿ ತಾಂಡವಾಡುತ್ತಿತ್ತು. ಇದು ಇದರ ಪ್ರಗತಿಗೆ ತಡಯಾಯಿತೆನ್ನಬಹುದು. ಕಡ್ಡಾಯ ಶಿಕ್ಷಣ ಯೋಜನೆಯು ಉತ್ಸಾಹದಿಂದ ಪ್ರಾರಂಭವಾಗಿ ಬೇಗ ಕ್ಷೀಣಿಸಿದರೂ ಸಹ ಅದು ಇಂದಿಗೂ ಶಿಕ್ಷಣ ಬಗ್ಗೆ ಜಾಗೃತಿಯನ್ನು ಉಂಟು ಮಾಡುತ್ತಿದ್ದು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಮೈಸೂರು ಸಂಸ್ಥಾನದಲ್ಲಿ ಅಸ್ತಿ‌ತ್ವದಲ್ಲಿದ್ದಂತಹ ಪ್ರೌಢಶಾಲೆಗಳು ಮದ್ರಾಸ್ ವಿಶ್ವ ವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಮದ್ರಾಸ್ ಸರ್ಕಾರವು ನಡೆಸುತ್ತಿದ್ದ ಮೆಟ್ರಕ್ಯುಲೇಷನ್ ಪರೀಕ್ಷೆಗೆ ಇಲ್ಲಿನ ವಿದ್ಯಾರ್ಥಿಗಳು ಕೂರುತ್ತಿದ್ದರು. ಆರ್ಥಿಕ ಪರಿಷತ್ ರಚನೆಯಾದ ಮೇಲೆ ಮೈಸೂರು ಪ್ರೌಢಶಿಕ್ಷಣದಲ್ಲಿ ಸ್ವಾತಂತ್ರ್ಯ ವ್ಯವಸ್ಥೆಯ ಗಮನಹರಿಸುವ ದೃಷ್ಟಿಯಿ೦ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಯೋಜನೆಯನ್ನು ರೂಪಿಸಿತು. ಈ ಯೋಜನೆಯು ೧೯೧೨ರಲ್ಲಿ ಅ೦ಗೀಕೃತವಾಗಿ ನಂತರ ವಿಶ್ವೇಶ್ವರಯ್ಯನವರು ದಿವಾನರಾದ ಮೇಲೆ ಅದನ್ನು ಅನುಷ್ಠಾನಗೊಳಿಸಲಾಯಿತು. ೪, ೫ ಮತ್ತು ೬ನೇ ತರಗತಿಗಳನ್ನು ಮುಗಿಸಿದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗುತ್ತಿದ್ದರು. ಈ ಪರೀಕ್ಷೆಗೆ ಇಂಗ್ಲೀಷ್ ದ್ವಿತಿಯ ಭಾಷೆ, ಅಂಕಗಣಿತ, ಇತಿಹಾಸ ಮತ್ತು ಭೂಗೋಳಶಾಸ್ತ್ರ ವಿಷಯಗಳು ಕಡ್ಡಾಯವಾಗಿದ್ದವು. ಇವುಗಳ ಜೊತೆಗೆ ವಿದ್ಯಾರ್ಥಿಯು ಎರಡು ಐಚ್ಚಿಕ ವಿಷಯಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಬೇಕಾಗಿತ್ತು. ಈ ಐಚ್ಚಿಕಗಳು ವಿಜ್ಞಾನ, ವ್ಯವಸಾಯ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ್ದವಾಗಿರುತ್ತಿದ್ದವು. ೧೯೧೩ರ ಪರಿಷ್ಕರಣೆಯಲ್ಲೇ ಪ್ರೌಢ ಶಾಲಾ ಶಿಕ್ಷಕರ ವೇತನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು. ಗ್ರಾಮ ಶಾಲೆಗಳನ್ನು ಬಿಟ್ಟು ಪ್ರೌಢ ಶಾಲೆ ಮತ್ತು ಇತರ ಶಾಲೆಗಳನ್ನು ಕಟ್ಟಲು ೧೯೧೪-೧೫ನೇ ಸಾಲಿನಿಂದ ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷವೂ ಎರಡು ಲಕ್ಷ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಯಿತು. ಈ ನಿಧಿಯ ಬಳಕೆಯ ಉಸ್ತುವಾರಿಯು ಆಯಾ ಜಿಲ್ಲಾ ಶಿಕ್ಷಣ ಇನ್ಸ್‌ಪೆಕ್ಟರ್‌ರವರದ್ದಾಗಿರುತ್ತಿತ್ತು. ಅದೇ ಸಾಲಿನಿಂದ ಪ್ರೌಢ ಶಾಲೆಗಳ ಸ್ಥಾಪನೆಗೆ ಒಂದು ಹೊಸ ಯೋಜನೆಯು ಸಿದ್ಧವಾಯಿತು. ಅದರಂತೆ ೧೯೧೪-೧೫ರಲ್ಲಿ ೨೬, ೧೯೧೬-೧೭ರಲ್ಲಿ ೩೨, ೧೯೧೭-೧೮ರಲ್ಲಿ ೨೭ ಮತ್ತು ೧೯೧೮-೧೯ರಲ್ಲಿ ೩೬ ಪ್ರೌಢ ಶಾಲೆಗಳನ್ನು ಪ್ರಾರಂಭಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ೧೯೧೦-೧೧ರಲ್ಲಿ ೧೦ ಆಂಗ್ಲ ಪ್ರೌಢ ಶಾಲೆಗಳಿದ್ದವು. ಅವುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ೬ ಪ್ರೌಢ ಶಾಲೆಗಳಿದ್ದವು. ೧೯೪೦-೪೧ರಲ್ಲಿ ಇವುಗಳ ಸಂಖ್ಯೆ ೯೬ಕ್ಕೆ ಹೆಚ್ಚಿತ್ತು. ಈ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇವುಗಳ ಸಂಖ್ಯೆ ೩೬ನ್ನು ದಾಟಿತ್ತು. ಇದರಿಂದ ಮೈಸೂರು ಸಂಸ್ಥಾನದ ಕೆಳಮಟ್ಟದ ಕ್ಷೇತ್ರದಲ್ಲಿನ ಪ್ರಗತಿಯನ್ನು ಮನಗಾಣಬಹುದಾಗಿದೆ. ಗ್ರಾಮ ಉದ್ಧಾರವಾದರೆ ಮಾತ್ರ ಸಂಸ್ಥಾನ ಉದ್ಧಾರವೆಂಬ ನೀತಿಗೆ ನಾಲ್ವಡಿಯವರು ಬದ್ಧರಾಗಿದ್ದರು.

ಮಾನವನು ಹುಟ್ಟುವುದು, ಬೆಳೆಯುವುದು ಜ್ಞಾನಾರ್ಜನೆ ಮಾಡುವುದು, ಬೆಳಕಿಗೆ ಬರುವುದು ಇವೆಲ್ಲವೂ ಸಮಾಜದಲ್ಲಿಯೇ ಹೊರತು ಮತ್ತೆಲ್ಲೂ ಅಲ್ಲ. ಸಮಾಜದ ಮೂಲಕವೇ ತನ್ನ ಆಗುಹೋಗುಗಳನ್ನು, ಅವಶ್ಯಕತೆಗಳನ್ನು ಹಾಗೂ ಬೇಡಿಕೆಗಳನ್ನು ಈಡೇರಿಸುವುದನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸುವುದನ್ನು ಕಾಣುತ್ತೇವೆ. ಇದಕ್ಕೆ ಸಮಾಜ, ಸಂಘ ಸಂಸ್ಥೆ ಹಾಗೂ ಸರ್ಕಾರಗಳೇ ಕಾರಣವಾಗಿರುವುದು. ಇದರಲ್ಲಿ ಯೋಗ್ಯವಾದ ಉತ್ತಮ ಸಲಹೆ ಸೂಚನೆಗಳನ್ನು ಒದಗಿಸುವುದು ಆ ಸಮಾಜದಲ್ಲಿರುವ ಶೈಕ್ಷಣಿಕ ಸೌಲಭ್ಯಗಳೆಂದು ಹೇಳಬಹುದು. ಈ ದೃಷ್ಟಿಯಲ್ಲಿ ಉನ್ನತ ಶಿಕ್ಷಣವೆಂಬುದು ಪ್ರಮುಖವಾದದ್ದು. ಈ ಹಂತದಲ್ಲಿ ದೇಶೀಯ ರಾಜ್ಯಗಳಲ್ಲಿಯೇ ಮೊಟ್ಟಮೊದಲ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ದಾಖಲೆಯು ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ. ೧೯೧೭ಕ್ಕೂ ಮೊದಲು ಸಂಸ್ಥಾನದಲ್ಲಿ ಉನ್ನತ ಶಿಕ್ಷಣಕ್ಕೆ ಮೂರು ಕಾಲೇಜುಗಳು ಮಾತ್ರ ಇದ್ದವು, ಅವುಗಳೆಂದರೆ

೧. ಮಹಾರಾಜ ಕಾಲೇಜ್; ಮೈಸೂರು: ೧೮೩೩ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ‘ರಾಜ ಫ್ರೀಸ್ಕೂಲ್’ನ ಆಡಳಿತವನ್ನು ೧೮೬೩ರಲ್ಲಿ ಸರ್ಕಾರ ವಹಿಸಿಕೊಂಡಿತು. ನಂತರ ಇದು ೧೮೭೯ರಲ್ಲಿ ಎರಡನೇ ದರ್ಜೆ ಕಾಲೇಜಾಗಿ ಬಡ್ತಿ ಪಡೆದು ೧೮೯೪ರಲ್ಲಿ ಮೊದಲನೇ ಪಡೆದುಕೊಂಡಿತು.

೨. ಸೆಂಟ್ರಲ್ ಕಾಲೇಜ್; ಬೆಂಗಳೂರು: ಬೆಂಗಳೂರು ಹೈಸ್ಕೂಲ್ ೧೮೭೫ರಲ್ಲಿ ಸೆಂಟ್ರಲ್ ಕಾಲೇಜಾಗಿ ಪರಿವರ್ತನೆಗೊಂಡು ಮದ್ರಾಸ ವಿಶ್ವವಿದ್ಯಾಲಯದ ಅಂಗೀಕಾರವನ್ನು ಪಡೆಯಿತು.

. ಮಹಾರಾಣಿ ಕಾಲೇಜ್; ಮೈಸೂರು: ೧೮೮೦ರಲ್ಲಿ ಜಗನ್ಮೋಹನ ಅರಮನೆಯಲ್ಲಿ ಪ್ರಾರಂಭವಾದ ಈ ಸಂಸ್ಥೆಯು ನಾರಾಯಣ ಶಾಸ್ತ್ರಿ ರಸ್ತೆಯ ಸ್ವಂತ ಕಟ್ಟಡಕ್ಕೆ ೧೮೮೧ರಲ್ಲಿ ವರ್ಗಾಯಿಸಲ್ಪಟ್ಟು ೧೯೦೨ರಲ್ಲಿ ಮದರಾಸು ವಿಶ್ವವಿದ್ಯಾಲಯದ ಅಂಗೀಕಾರವನ್ನು ಪಡೆದವು. ಕಾಲೇಜುಗಳೆಲ್ಲವೂ ತತ್ಸಮಾನದ ಅರ್ಹತೆಯನ್ನು ಪಡೆದ ನಂತರ ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ೧೭ನೇ ಜುಲೈ ೧೯೧೬ರಂದು ಪ್ರಜಾಪ್ರತಿನಿಧಿ ಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ನಾಲ್ವಡಿಯವರು ಒಪ್ಪಿಗೆಯ ಮುದ್ರೆಯನ್ನು ಕೂಡಲೇ ಕೊಡುವುದನ್ನು ಮರೆಯಲಿಲ್ಲ. ಇದರ ಸ್ಥಾಪನೆಯಲ್ಲಿ ನಾಲ್ವಡಿ ಕೃಷ್ಣರಾಜರು ಸ್ವಯಂ ಆಸಕ್ತಿವಹಿಸಿ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಶೈಕ್ಷಣಿಕ ಕ್ಷೇತ್ರದ ನೆರವಿನೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದರು. ನಾಲ್ವಡಿಯವರು ಶಿಕ್ಷಣದ ಬಗೆಗೆ ಅದರಲ್ಲಿಯೂ ಉನ್ನತ ಶಿಕ್ಷಣದ ಬಗ್ಗೆ ಹೊಂದಿದ್ದಂತಹ ಅಪಾರ ಮಮತೆಗೆ ಉದಾಹರಣೆಯಾಗಿ ೧೯೧೭ ಅಕ್ಟೋಬರ್ ೧೨ರಂದು ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಸೆನೆಟ್ ಸಭೆಯ ಉದ್ಘಾಟನೆಯಲ್ಲಿ ಇದರ ಗುರಿ ಹಾಗೂ ಉದ್ದೇಶಗಳನ್ನು ಮಂಡಿಸುತ್ತಾ “ಈ ಉನ್ನತ ವಿಶ್ವವಿದ್ಯಾಲಯವು ರಾಜ್ಯದ ಮೂಲೆಮೂಲೆಗಳಲ್ಲಿ ಅಡಗಿರುವ ಅಜ್ಞಾನ, ಅಂಧಕಾರಗಳನ್ನು ತೊಡೆಯುವ ಜ್ಯೋತಿಯಾಗಬೇಕು. ಈ ವಿಶ್ವವಿದ್ಯಾನಿಲಯವು ವಿಶ್ವದ ಇತರ ವಿಶ್ವವಿದ್ಯಾನಿಲಯಗಳ ಗೌರವ ಹಾಗೂ ಮಾನ್ಯತೆಗೆ ಪಾತ್ರವಾಗಬೇಕು. ಈ ಮುಖದಲ್ಲಿ ಬೋಧನೆ, ಪರೀಕ್ಷಾ ಮಟ್ಟಗಳು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಕುಗ್ಗಬಾರದು. ನಮ್ಮ ವಿದ್ಯಾರ್ಥಿಗಳು ಕೇವಲ ಕಲಿತವರಾಗದೇ ಶೀಲವಂತರಾಗಿ ಸಂಸ್ಕರಣ ಮುದ್ರೆಯನ್ನು ಹೊತ್ತು ಹೊರಗೆ ಬರುವಂತಾಗಬೇಕು. ಅಷ್ಟೇ ಅಲ್ಲದೆ ಕನ್ನಡ ಭಾಷೆ ಸಾಹಿತ್ಯಗಳನ್ನು ಬೆಳೆಸುವ ದಿಕ್ಕಿನಲ್ಲಿ ವಿಶೇಷ ಗಮನ ಹರಿಸಬೇಕು” ಎಂದು ಹೇಳಿ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದರು. ಇವರ ಹಾರೈಕೆಯು ಫಲ ನೀಡಿ ಇಂದು ಮೈಸೂರು ವಿಶ್ವವಿದ್ಯಾನಿಲಯವು ಪ್ರಪಂಚದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಪ್ರಮುಖ ಸ್ಥಾನದಲ್ಲಿ ಮುನ್ನಡೆಯುತ್ತಿದೆ.

ಮೈಸೂರು ಸಂಸ್ಥಾನದಲ್ಲಿ ಆಧುನಿಕ ಶಿಕ್ಷಣವು ಜಾರಿಗೆ ಬಂದ ನಂತರ, ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಹಂತಹಂತವಾಗಿ ಯಾವ ಪ್ರಮಾಣದಲ್ಲಿ ಮುನ್ನಡೆಯಿತೆಂಬ ಮೈಲುಗಲ್ಲುಗಳನ್ನು ಇಲ್ಲಿ ಸ್ಮರಿಸುವುದಾದರೆ,

೧೯೦೨ – ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯ ಶಾಲೆಯ ಪ್ರಾರಂಭ.

೧೯೦೩ – ಮೈಸೂರಿನಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆ.

೧೯೦೫ – ವಯಸ್ಕರಿಗಾಗಿ ರಾತ್ರಿ ಶಾಲೆಗಳ ಪ್ರಾರಂಭ.

೧೯೧೦ – ಸಹಶಿಕ್ಷಣ ಕನ್ನಡ ಮಾಧ್ಯಮಗಳ ಪ್ರಾರಂಭ.

೧೯೧೧ – ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಪ್ರಾರಂಭ.

೧೯೧೩ – ಪ್ರಾಥಮಿಕ ಮಟ್ಟದಲ್ಲಿ ಕಡ್ಡಾಯ ಶಿಕ್ಷಣ ಜಾರಿ, ಹೆಬ್ಬಾಳಿನಲ್ಲಿ ವ್ಯವಸಾಯ (Agricultural) ಶಾಲೆ ಪ್ರಾರಂಭ.

೧೯೧೬ – ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ.

೧೯೧೮ – ಶಾಲಾ ಪ್ರವೇಶಕ್ಕೆ ಜಾತಿ ಪದ್ಧತಿಯ ನಿರ್ಮೂಲನೆ.

೧೯೧೯ – ಮಾಧ್ಯಮಿಕ ಮಟ್ಟದಲ್ಲಿ ಶಿಕ್ಷಣ ಶುಲ್ಕದ ರದ್ದು.

೧೯೨೧ – ರಾಜ್ಯ ಶಿಕ್ಷಣ ನೀತಿಯಲ್ಲಿ ಸುಧಾರಣೆಗಳು, ಶಿಕ್ಷಕರ ತರಭೇತಿ ಕೇಂದ್ರಗಳ ಉಗಮ, ಮಾಧ್ಯನಿಕ ಶಾಲೆಗಳಲ್ಲಿ ಏಕರೀತಿಯ ದ್ವಿಭಾಷಾ ಸೂತ್ರ.

೧೯೨೨ – ಭೂಕಂದಾಯದ ಮೇಲೆ ಎಜುಕೇಷನ್ ಸೆನ್ಸಸ್.

೧೯೨೩ – ರೋಗ ಪೀಡಿತ ಶಾಲೆಗಳನ್ನು ಸರಕಾರವೇ ವಹಿಸಿಕೊಳ್ಳುವ ಮಸೂದೆಯ ಅಂಗೀಕಾರ.

೧೯೨೬ – ಚನ್ನಪಟ್ಟಣ, ಸಾಗರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಕೈಗಾರಿಕಾ ತರಬೇತಿ ಶಾಲೆಗಳ ಸ್ಥಾಪನೆ.

೧೯೨೭ – ಶಿಕ್ಷಣ ಇಲಾಖೆಯ ಮರು ವ್ಯವಸ್ಥೆ, ಇವುಗಳು ಆಧುನಿಕ ಮೈಸೂರಿನ ಶಿಕ್ಷಣ ಕ್ಷೇತ್ರದಲ್ಲಾದಂತಹ ಪ್ರಮುಖ ಬದಲಾವಣೆಗಳು. ಇವು ಮೈಸುರು ಸಂಸ್ಥಾನವು ೨೦ನೇ ಶತಮಾನದ ಪ್ರಾರಂಭದಲ್ಲಿಯೇ ಕೈಗೊಂಡ ಶಿಕ್ಷಣದ ಕ್ರಾಂತಿಯಾಗಿವೆ.

ಉರ್ದುಶಿಕ್ಷಣ

ಇಂದು ಶೈಕ್ಷಣಿಕ ನಿಯೋಗಗಳ ಪೈಕಿ ಶಾಲೆಯು ಅತ್ಯುನ್ನತ ಸ್ಥಾನವನ್ನು ಪಡೆದಿರುವುದು. ಮಕ್ಕಳು ಅಕ್ಷರಾಭ್ಯಾಸದಿಂದ ಮೊದಲುಗೊಂಡು ಔದ್ಯೋಗಿಕ ತಿಳುವಳಿಕೆ ಹೊಂದುವುದು ಪ್ರಾರಂಭದಲ್ಲಿ ಶಾಲೆಯ ಮೂಲಕವೇ ಹೊರತು ಮತ್ತೆಲ್ಲೂ ಅಲ್ಲ ಎನ್ನುವ ನೀತಿಗೆ ಬದ್ದರಾಗಿ ನಾಲ್ವಡಿಯವರು ಸಂಸ್ಥಾನದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಶಾಲೆಗಳನ್ನೇ ತೆರೆದರು. ನಾಲ್ವಡಿಯವರ ಸಂಸ್ಥಾನದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಶಾಲೆಗಳನ್ನೇ ತೆರೆದರು. ನಾಲ್ವಡಿಯವರ ಆಳ್ವಿಕೆಯು ಪಕ್ಷಪಾತರಹಿತ ಆಡಳಿತವಾಗಿತ್ತೆಂದು ಅನೇಕ ಚರಿತ್ರೆಕಾರರು ವರ್ಣಿಸುತ್ತಾರೆ. ಅದು ಸರಿಯಾದ ವರ್ಣನೆ ಎನ್ನಬಹುದು. ಇದಕ್ಕೆ ನಿದರ್ಶನವೆಂದರೆ ಸಂಸ್ಥಾನದಲ್ಲಿ ಮುಸ್ಲಿಂ ಜನಾಂಗದ ಮಕ್ಕಳಿಗಾಗಿಯೇ ಪ್ರತ್ಯೇಕ ಉರ್ದುಶಾಲೆಗಳನ್ನು ಪ್ರಾರಂಭಿಸಿದ್ದುದು. ೧೮೯೦ರಲ್ಲಿ ಶಿಕ್ಷಣ ಇಲಾಖೆಯು ಕೇವಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಉರ್ದು ಪ್ರೈಮರಿ ಶಾಲೆಗಳನ್ನು ತೆರೆದ ನಂತರ ಅವುಗಳ ಸಂಖ್ಯೆಯು ಕ್ರಮೇಣ ಹೆಚ್ಚಯಿತು. ಇದಕ್ಕಾಗಿ ಖಾಸಗಿಯವರ ಕೊಡುಗೆ ಅಪಾರವಿತ್ತು. ಉರ್ದುಶಾಲೆಗಳ ಮೇಲ್ವಿಚಾರಣೆಗಾಗಿ ಉರ್ದು ಶಾಲಾ ರೇಂಜುಗಳನ್ನು ಸ್ಥಾಪಿಸಿ ಉರ್ದು ರೇಂಜ್ ತನಿಖಾಧಿಕಾರಿಗಳನ್ನು ನೇಮಿಸಲಾಯಿತು. ಈ ಶಾಲೆಗಳನ್ನು ಆಧುನಿಕ ಶಿಕ್ಷಣವನ್ನು ಒದಗಿಸುವ ಉದ್ಧೇಶದಿಂದ ಪಠ್ಯಪುಸ್ತಕಗಳನ್ನು ಉರ್ದು ಭಾಷೆಯಲ್ಲೂ ಮುದ್ರಿಸಿ ಹಂಚಲಾಯಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಪರೀಕ್ಷೆಗಳನ್ನು ಉರ್ದು ಭಾಷೆಯಲ್ಲಿ ಬರದು ತೇರ್ಗಡೆಯಾದ ನಂತರ ಪ್ರೌಢಶಾಲೆಗೆ ಸೇರಿ ತಮ್ಮ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಮುಂದುವರಿಸಬಹುದಾಗಿತ್ತು. ಆದರೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿಯೂ ಸಹ ಉರ್ದುವಿನ ಜೊತೆಗೆ ಕನ್ನಡ ವಿಷಯವನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಈ ದೃಷ್ಟಿಯಿಂದ ಉರ್ದು ಶಿಕ್ಷಣವು ರಾಜರ ಆಳ್ವಿಕೆಯಲ್ಲಿ ಭದ್ರವಾದ ತಳಹದಿಯನ್ನು ಕಂಡಿತು.

ವಯಸ್ಕರ ಶಿಕ್ಷಣ: ಮೈಸೂರು ಸಂಸ್ಥಾನದಲ್ಲಿ ವಯಸ್ಕರ ಶಿಕ್ಷಣವು ಪ್ರಾರಂಭವಾದದ್ದು ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ. ೧೯೧೨ರಲ್ಲಿ ಸಂಸ್ಥಾನದಾದ್ಯಾಂತ ೭೦೦೦ ಸಾಕ್ಷರಾತಾ ಕೇಂದ್ರಗಳು (ರಾತ್ರಿ ಶಾಲೆಗಳು) ಮತ್ತು ಹಲವಾರು ಸಾಕ್ಷರತಾ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಭಂಡಾರಗಳು ಪ್ರಾರಂಭವಾದವು. ಇವುಗಳನ್ನು ಸಕಾರಿ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆಸುವುದರ ಮೂಲಕ ಒಂದು ಉತ್ತಮವಾದಂತಹ ಪರಂಪರೆಯನ್ನು ಪ್ರಾರಂಭಿಸಲಾಯಿತು. ಈ ವಿಷಯ ಕುರಿತು ನಾಲ್ವಡಿಯವರು ೧೯೧೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದ ಪ್ರಾರಂಭೋತ್ಸವವನ್ನು ನೆರವೇರಿಸುತ್ತಾ ಈ ವಿಶ್ವವಿದ್ಯಾನಿಲಯವು ಸ್ಥಾಪನೆಯಾಗಿರುವುದು ಹೆಚ್ಚಿನ ಸಂಖ್ಯೆಯಲ್ಲಿರುವ ಅದೃಷ್ಟ ಹೀನರಿಗಾಗಿಯೇ ಹೊರತು, ಕಡಿಮೆ ಸಂಖ್ಯೆ ಅದೃಷ್ಟವಂತರಿಗಲ್ಲ, ಪ್ರಾಧ್ಯಾಪಕರು ಸಾಮಾನ್ಯ ಜನತೆಯ ಮಟ್ಟಕ್ಕೆ ಇಳಿದು ತಮ್ಮ ತಿಳುವಳಿಕೆಯನ್ನು ಅವರೊಡನೆ ಹಂಚಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಿಳೆಯರ ಶಿಕ್ಷಣ ಇಳಿದು ತಮ್ಮ ತಿಳುವಳಿಕೆಯನ್ನು ಅವರೊಡನೆ ಹಂಚಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಿಳೆಯರ ಶಿಕ್ಷಣದ ಬಗ್ಗೆ ಅವರೊಂದಿಗಿದ್ದ ಅಭಿಪ್ರಾಯವೆಂದರೆ, ಗಂಡಸು ವಿದ್ಯಾವಂತನಾದರೆ ಕೇವಲ ಒಬ್ಬ ಮಾತ್ರ ವಿದ್ಯಾವಂತನಾದಂತೆ, ಆದರೆ ಒಬ್ಬ ಮಹಿಳೆಯು ವಿದ್ಯಾವಂತೆಯಾದರೆ ಇಡೀ ಸಂಸಾರವೇ ವಿದ್ಯಾವಂತರಾದಂತೆ, ಗ್ರಾಮಾಂತರ ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ಗ್ರಾಮಾಂತರ ಜನರಿಗೆ ಶಿಕ್ಷಣ ದೊರಕಿಸಬೇಕೆಂಬ ದೂರದೃಷ್ಟಿಯಿಂದಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಾಂಗವನ್ನು ಪ್ರಾರಂಭಿಸಿ ರಾಜ್ಯದಲ್ಲಿ ವಯಸ್ಕರ ಶಿಕ್ಷಣದ ಆಂದೋಲನಕ್ಕೆ ಅಸ್ತಿಭಾರ ಹಾಕಿದರು. ೧೯೨೦-೩೦ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗವು ವಯಸ್ಕರ ಶಿಕ್ಷಣಕ್ಕೆ ಅನುಕೂಲವಾಗುವ ಅನೇಕ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸಿತು. ಇವು ಇಂದಿಗೂ ಬಹುಪಯೋಗಿ ಕೃತಿಗಳಾಗಿ ಚಾಲ್ತಿಯಲ್ಲಿವೆ. ವಯಸ್ಕರ ಶಿಕ್ಷಣವು ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಆಳ್ವಿಕೆಯಲ್ಲಿ ವಿಶೇಷಾದ ಮಾನ್ಯತೆಯನ್ನು ಪಡೆಯಿತು. ೧೯೧೪ರಲ್ಲಿ ಸಂಸ್ಥಾನದಲ್ಲಿ ೧೩ರ ವಯಸ್ಕರ ಶಾಲೆಗಳಿದ್ದವು ಅವುಗಳಲ್ಲಿ ೯೨ ಶಾಲೆಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ ಕೇಂದ್ರಗಳಲ್ಲಿ ಕೇಂದ್ರೀಕೃತವಾಗಿದ್ದವು. ನಂತರ ೧೯೧೫ರಲ್ಲಿ ಸರ್ಕಾರವು ನೀಡಿದ ಆದೇಶದ ಮೇಲೆ ಶಿಕ್ಷಣ ಇನ್ಸ್‌ಪೆಕ್ಟರ್‌ ಜನರಲ್ ಅವರು ಒಂದು ಹೊಸ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಿದರು. ಅದು ಆ ಕಾಲದಲ್ಲಿ ಅಲ್ಲದೆ ಇಂದಿಗೂ ವಯಸ್ಕರ ಶಿಕ್ಷಣ ರಾಜ್ಯಾದ್ಯಾಂತ ವಿಸ್ತರಿಸಲು ನೆರವಾಗಿದೆ. ೧೯೧೫ರಲ್ಲಿ ಜಾರಿಗೆ ಬಂದಂತಹ ಈ ಹೊಸ ಯೋಜನೆಯಲ್ಲಿ ಪ್ರಮುಖವಾಗಿ ಎರಡು ಬಗೆಯ ವಯಸ್ಕರ ಶಾಲೆಗಳಿದ್ದವು. ಅವುಗಳೆಂದರೆ

೧. ಅನಕ್ಷರಸ್ಥರಿಗೆ ಅಕ್ಷರ ಜ್ಞಾನವನ್ನು ಕಲ್ಪಿಸುವುದು.

೨. ಈಗಾಗಲೇ ಶಾಲಾ ಮೆಟ್ಟಿಲು ಹತ್ತಿದವರಿಗೆ ತಮ್ಮ ಅಕ್ಷರ ಜ್ಞಾನವನ್ನು ಮರೆಯದ ಹಾಗೆ ಪೋಷಿಸಿಕೊಳ್ಳಲು ನೆರವಾಗುವುದು.

ಹದಿನೈದು ವರ್ಷ ಮೇಲ್ಪಟ್ಟವರಿಗಾಗಿ ಈ ಶಾಲೆಗಳು ಪ್ರಾರಂಭವಾದವು. ಸರ್ಕಾರದಿಂದ ೧೯೧೯ರಲ್ಲಿ ೧೦೦ ವಯಸ್ಕರ ಶಾಲೆಗಳು ಮಂಜೂರಾದವು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿಯವರು ನಡೆಸುವ ಹಗಲು ಹಾಗೂ ರಾತ್ರಿ ವಯಸ್ಕರ ಶಿಕ್ಷಣದ ಶಾಲೆಗಳಿಗೂ ಸಹ ಸೂಕ್ತವಾದ ಸಹಾಯಧನ ನೀಡಲು ಪ್ರಜಾಪ್ರತಿನಿಧಿ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಯಿತು.

ಶಾಲೆಗೆ ಸೇರಲು ಅವಕಾಶವಿಲ್ಲ ದಲಿತರಿಗೆ ಹಾಗೂ ಸೇರಲು ಅವಕಾಶವಿದ್ದು ಸೇರಲು ಸಾಧ್ಯವಾಗದೆ ಬಡತನದಿಂದ ನರಳುತ್ತಿರುವವರಿಗೆ ಶಿಕ್ಷಣ ನೀಡುವುದಕ್ಕಾಗಿ ೧೯೧೪-೨೫ನೇ ಸಾಲಿನಲ್ಲಿ ಸಂಚಾರಿ ಶಿಕ್ಷಕರನ್ನು ನೇಮಿಸಲಾಯಿತು. ಈ ಕಾರ್ಯಕ್ರಮದಂತೆ ತಲಾ ಇಬ್ಬರು ಶಿಕ್ಷಕರು ಗ್ರಾಮಗಳಿಗೆ ಹೋಗಬೇಕಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಅವರಿಗೆ ನಿಯೋಜಿಸಿರುವಂತಹ ಗ್ರಾಮಗಳ ಆಸುಪಾಸಿನ ವಿದ್ಯಾಕಾಂಕ್ಷಿಗಳನ್ನು ಸೇರಿಸಿ ಸುಮಾರು ಎರಡು ವಾರಗಳ ಕಾಲ ಕೇಂದ್ರಗಳಲ್ಲಿಯೇ ತಂಗಿದ್ದು ವಿದ್ಯೆ ಕಲಿಸಬೇಕಾಗಿತ್ತು. ಇದಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರದೇ ಇದ್ದ ಕಾರಣದಿಂದ ಅದು ನಿಂತು ಹೋಯಿತು.

ಗಾಂಧಿ ಅವರು ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಅನಕ್ಷರಸ್ಥರೇ ಹೆಚ್ಚಾಗಿರುವ ಭಾರತದ ಅಭಿವೃಧ್ಧಿಗಾಗಿ ರೂಪಿಸಿದ ೧೪ ಪ್ರಮುಖ ರಚನಾತ್ಮಕ ಕಾರ್ಯಕ್ರಮಗಳಲ್ಲಿ ‘ವಯಸ್ಕ ಅಕ್ಷರ ಪ್ರಸಾರ’ ಯೋಜನೆಯೂ ಒಂದಾಗಿತ್ತು. ಈ ಯೋಜನೆಗೆ ಮೈಸೂರು ಸಂಸ್ಥಾನವೂ ಪ್ರೇರೇಪಿತವಾಗದೆ ಇರದಾಯಿತು. ಇದಕ್ಕೆ ಪ್ರೇರಣೆ ನೀಡುವ ದೃಷ್ಟಿಯಿಂದ ಸಂಸ್ಥಾನದ ಕೆಲವು ಸ್ವಯಂ ಸಂಸ್ಥೆಗಳ ಅಕ್ಷರ ಪ್ರಸಾರ ಕಾರ್ಯಕ್ರಮವನ್ನು ಕೈಗೆತ್ತಿಕೊಂಡವು. ಈ ಕಾರ್ಯ ಮಾಡಲು ಮುಂದಾದ ಸಂಸ್ಥೆಗಳೆಂದರೆ ಶ್ರೀರಾಮಕೃಷ್ಣಾಶ್ರಮ, ಕರ್ನಾಟಕ ಸಂಘ, ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘಗಳು ಪ್ರಮುಖವಾದವು. ಇವುಗಳಿಗೆ ಸರ್ಕಾರದಿಂದ ಎಲ್ಲ ರಿತಿಯ ಬೆಂಬಲ ದೊರಕಿತು. ಶ್ರೀರಾಮಕೃಷ್ಣಾಶ್ರಮ ಪದ್ಧತಿಯಿಂದ ನಾ. ಕಸ್ತೂರಿ ಅವರು ಹಾಗೂ ಸಮಾಜ ಸೇವಾಸಕ್ತ ವಿದ್ಯಾರ್ಥಿಗಳು ಮತ್ತು ಉತ್ಸಾಹಿ ಯುವಕರು ಆಸುಪಾಸಿನ ಹಳ್ಳಿಗಳಲ್ಲಿ ಆಗಾಗ್ಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ (ಅಕ್ಷರ ಪ್ರಸಾರ) ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಕರ್ನಾಟಕ ಸಂಘದ ಆಧಾರಸ್ತಂಭವಾಗಿದ್ದಂತಹ ಜಿ. ಆರ್. ರಂಗಸ್ವಾಮಿ ಮತ್ತು ಎಸ್. ವಿ. ಶ್ರೀನಿವಾಸರಾಯರು ಸಾಂಸ್ಕೃತಿ ಮತ್ತು ಸಾಕ್ಷರತಾ ಕಾಯಕ್ರಮಗಳನ್ನು ಸಂಸ್ಥಾನದ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆಸಿ ಅಕ್ಷರದ ಜ್ಞಾನವನ್ನು ಹೆಚ್ಚಿಸಲು ಶ್ರಮಿಸಿದರು. ೧೯೩೩ರಲ್ಲಿ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘವು ಪ್ರೊ. ಬಿ. ಎಂ. ಶ್ರೀಕಂಠಯ್ಯ ಅವರ ನೇತೃತ್ವದಲ್ಲಿ ವಯಸ್ಕರ ಶಿಕ್ಷಣದ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಇವರು ಮೈಸೂರಿನ ಆಸುಪಾಸಿನ ಗ್ರಾಮಗಳಾದಂತಹ ಕೆಟ್ಟಹಳ್ಳಿ, ಪಡುವಾರಹಳ್ಳಿ, ಲಲಿತಾದ್ರಿಪುರ, ಚಿಕ್ಕಹಳ್ಳಿ, ವರುಣ, ಗರ್ಗೇಶ್ವರಿ, ತಿರುಮಕೂಡಲ, ನರಸೀಪುರ, ಮೂಗೂರು, ಸೋಸಲೆ, ತಲಕಾಡು ಮುಂತಾದ ಗ್ರಾಮಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದರು. ಇದು ಅಂದಿನ ಸಾಕ್ಷರತೆಯ ದೃಷ್ಟಿಯಿಂದ ಮಹತ್ವದ ಕಾರ್ಯವಾಗಿತ್ತು. ಈ ಭಾಗದಲ್ಲಿ ಇಂದಿಗೂ ಇವು ಮಾರ್ಗದರ್ಶನವಾಗಿ ಉಳಿದಿವೆ.

ಶಿಕ್ಷಕರ ತರಬೇತಿ ಶಾಲೆಗಳ ಪ್ರಾರಂಭ: ಯಾವುದೇ ಶಾಲೆಯ ನೈತಿಕ ಶಿಕ್ಷಣದಲ್ಲಿ ಮುಖ್ಯವಾಗಿರುವುದು ಶಿಕ್ಷಕನ ಪಾತ್ರ ಮತ್ತು ಶಾಲೆಯ ವಾತಾವರಣ, ಶಾಲೆಯ ಪ್ರತಿ ಚಟುವಟಿಕೆಯೂ ಸಹ ಈ ನೀತಿ ಪ್ರಧಾನವಾಗಿರಬೇಕು, ಶಿಕ್ಷಕರು-ಶಿಕ್ಷಕರ ನಡುವೆ, ಶಿಕ್ಷಕರು-ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ ಸ್ನೇಹಪರವೂ ಸಹಾನುಭೂತಿಯುತ ಹಾಗೂ ನೈತಿಕ ಬೆಳವಣಿಗೆ ಪ್ರೇರಕವಾಗಿರಬೇಕು. ಇದರಲ್ಲಿ ಮುಖ್ಯವಾಗಿ ಶಾಲೆಯ ಶಿಕ್ಷಕರ ಪಾತ್ರವು ಅತ್ಯಂತ ಹೆಚ್ಚಿನ ಪರಿಣಾಮಕಾರಿಯಾಗಿರುತ್ತದೆ. ಈ ದೃಷ್ಟಿಯಿಂದ ಸಂಸ್ಥಾನದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ಧತಿಯೊಂದಿಗೆ ಶಿಕ್ಷಕರ ತರಬೇತಿ ಶಾಲೆಗಳೂ ಪ್ರಾರಂಭವಾದವು. ೧೮೩೧ ರಿಂದ ೧೮೮೧ ರವರೆಗೆ ಆಳ್ವಿಕೆ ನಡೆಸಿದ ಕಮೀಷನರ್‌ವರ ಕಾಲದಲ್ಲಿ ನಾರ್ಮಲ್ ಶಾಲೆಗಳು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದವು. ನಂತರ ೧೮೯೩ರಲ್ಲಿ ಶಿಕ್ಷಕರು ಹಾಗೂ ಶಿಕ್ಷಕಿಯರಿಗೆ ಪ್ರತ್ಯೇಕವಾದಂತಹ ತರಬೇತಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ಇವುಗಳಲ್ಲಿ ಶಿಕ್ಷಕರಿಗೆ ಎರಡು, ಶಿಕ್ಷಕಿಯರಿಗೆ ಎರಡು ತರಬೇತಿ ಸಂಸ್ಥೆಗಳು ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರ ಸಾಮಾನ್ಯ ವಿದ್ಯಾರ್ಹತೆಯೂ ಕನ್ನಡ ಲೋಯರ್ ಸೆಕೆಂಡರಿಯಲ್ಲಿ ತೇರ್ಗಡೆ ಹೊಂದಿದವರಾಗಿರುತ್ತಿದ್ದರು. ೧೯೧೬-೧೭ರಲ್ಲಿ ಪ್ರಾಥಮಿಕ ಶಾಲೆಗಳ ಹೆಚ್ಚಳ ಮತ್ತು ಪ್ರೌಢಶಾಲೆಗಳ ಸ್ಥಾಪನೆಯಿಂದಾಗಿ ತರಬೇತಿ ಪಡೆದ ಶಿಕ್ಷಕರ ಅಭಾವ ಹೆಚ್ಚಾಗಿ ಕಂಡುಬಂದಿತು. ಇದಕ್ಕಾಗಿ ಸರ್ಕಾರವು ೧೯೧೮ರಲ್ಲಿ ಒಂದು ಹೊಸ ಯೋಜನೆಯನ್ನು ರೂಪಿಸಿತು. ಅದೆಂದರೆ ಮೈಸೂರಿನ ನಾರ್ಮಲ್ ಶಾಲೆಯನ್ನು ತರಬೇತಿ ಕಾಲೇಜಿನ ದರ್ಜೆಗೇರಿಸುವುದು ಹಾಗೂ ಆಂಗ್ಲೋ ವರ್ನಾಕ್ಯುಲರ್ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರಿಗೆ ತರಬೇತಿ ಪ್ರವೇಶ ಪಡೆಯಲು ಕನಿಷ್ಠ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್ ಅಥವಾ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕೆಂದು ಗೊತ್ತುಪಡಿಸಲಾಗಿತ್ತು. ಕೋಲಾರ ಮತ್ತು ಶಿವಮೊಗ್ಗದಲ್ಲಿದ್ದ ಹಿಂದೂಸ್ಥಾನಿ ತರಬೇತಿ ತರಗತಿಗಳನ್ನು ರದ್ದುಪಡಿಸಿ ಮೈಸೂರಿನಲ್ಲಿ ನಾರ್ಮಲ್ ಶಾಲೆಗಳನ್ನು ತೆರೆಯುವುದು. ಹಾಗೆಯೇ ತರಬೇತಿಗಾಗಿ ಆಯ್ಕೆಯಾದ ಶಿಕ್ಷಕರಿಗೆ ಅಥವಾ ಅವರ ಬದಲಿಗೆ ಶಿಕ್ಷಕರ ಕೆಲಸ ಮಾಡುವವರಿಗೆ ಸ್ಟೈಪಂಡರಿಯಲ್ಲಿ ಪರಿಷ್ಕೃತ ವೇತನವನ್ನು ನೀಡುವುದು ಪ್ರಮುಖವಾದ ಸುಧಾರಣೆಗಳಾಗಿದ್ದವು. ಇಲ್ಲಿ ಪ್ರಮುಖವಾದ ಅಂಶವೆಂದರೆ ಈ ಸಮಯದಲ್ಲಿ ತುಮಕೂರಿನಲ್ಲಿ ಶಿಕ್ಷಕರ ತರಬೇತಿ ಶಾಲೆಯನ್ನು ತೆರೆಯುವಂತಾದದ್ದು. ಇವು ಸಂಸ್ಥಾನದ ಪ್ರಮುಖವಾದಂತಹ ಶೈಕ್ಷಣಿಕ ಕಾರ್ಯಕ್ರಮಗಳಾಗಿದ್ದವು. ೧೯೧೦-೧೧ರಲ್ಲಿ ಶಿಕ್ಷಕರ ತರಬೇತಿಗಾಗಿ ೩೯,೭೯೧ ರೂಪಾಯಿಗಳನ್ನು ವೆಚ್ಚ ಮಾಡಲಾಯಿತು. ಇದು ೧೯೧೫-೧೬, ೧೯೧೭-೧೮ರಲ್ಲಿ ೪೬೫ ರೂಪಾಯಿಗಳನ್ನು ದಾಡಿತ್ತು. ೧೯೧೭ರಲ್ಲಿ ಬೆಂಗಳೂರಿನ ವಾಣಿವಿಲಾಸ ಸಂಸ್ಥೆಯಲ್ಲಿ ಕೇಂದ್ರೀಯ ಶಿಕ್ಷಕರ ತರಬೇತಿ ಕೇಂದ್ರ ಪ್ರಾರಂಭವಾಯಿತು. ಮಹಿಳೆಯರು ಶಿಕ್ಷಕ ವೃತ್ತಿಯನ್ನು ಕೈಗೊಳ್ಳುವುದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನದ ಬೆಳಕು ನೀಡುವರೆಂದು ಪ್ರತ್ಯೇಕ ಶಿಕ್ಷಕ ತರಬೇತಿ ಶಾಲೆಗಳು ಸ್ಥಾಪನೆಯಾದವು. ಇಂದಿಗೂ ಸಹ ಮಹಿಳಾ ಶಿಕ್ಷಣ ಒಂದು ರೀತಿಯಲ್ಲಿ ಸವಾಲಾಗಿಯೇ ಇದೆ. ಆದರೆ ಶತಮಾನದಷ್ಟು ಹಿಂದೆಯೇ ಮೈಸೂರು ಈ ದಿಕ್ಕಿನಲ್ಲಿ ಗಮನಹರಿಸಿ ಅದರಲ್ಲಿ ಯಶಸ್ವಿಗಳಿಸಿದ್ದು ಭಾರತದ ಸಂಸ್ಥಾನಗಳ ಆಳ್ವಿಕೆಯಲ್ಲಿಯೇ ಅದ್ವಿತೀಯವೆನ್ನಬಹುದು.

ಮೈಸೂರಿನ ಅರಸರು ಸಂಸ್ಥಾನದಲ್ಲಿ ಹಿಂದುಳಿದ ಜನರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಕಾರಣವೆಂದರೆ, ಅವರ ಸ್ಥಿತಿಯು ಉತ್ತಮವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬ ದೃಢ ವಿಶ್ವಾಸವನ್ನು ಸ್ವತಃ ನಾಲ್ವಡಿ ಮಹಾರಾಜರು ಹೊಂದಿದ್ದರು. ಇದಕ್ಕೆ ಕಾರಣವಾಗಿ ಈ ಮೊದಲೇ ಪ್ರಸ್ತಾಪಿಸಿರುವ ಹಾಗೆ ಪಂಚಮರ ಶಿಕ್ಷಣಕ್ಕೆ ಸಂಸ್ಥಾನದಲ್ಲಿ ೧೮೮೧ರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮ ರೂಢಿಗೆ ಬಂದಿತು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿದ್ಯಾರ್ಥಿ ವೇತನವನ್ನು ಕಲ್ಪಿಸಿದರೆನ್ನಬಹುದು. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭವಾಗಿ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದರು. ಅದಕ್ಕಾಗಿ ಸುಮಾರು ೮೫೦೦ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನವನ್ನು ಸೃಷ್ಟಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿ ಪ್ರೋತ್ಸಾಹಿಸಲು ಈ ರೀತಿಯ ವಿದ್ಯಾರ್ಥಿ ವೇತನಗಳನ್ನು ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಿಸ್ತರಿಸಲಾಯಿತು. ಇವುಗಳ ವಿಚಾರಣೆಯನ್ನು ನಿರ್ವಹಿಸಲು ೧೯೧೭ರಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಯ ಅವಧಿಯು ಎರಡು ವರ್ಷಗಳಾಗಿತ್ತು. ಈ ಯೋಜನೆಯ ಮೇಲೆ ವಿದ್ಯಾರ್ಥಿ ವೇತನ ಪಡೆಯಲು ಎಲ್ಲ ಜಾತಿ ಪಂಗಡ ಕೋಮುಗಳ ವಿದ್ಯಾರ್ಥಿಗಳು ಅರ್ಹರಾಗಿದ್ದರು. ಇದರಿಂದಾಗಿ ಅದು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗ ಹೆಚ್ಚಿನ ಸೌಲಭ್ಯಗಳು ದೊರೆಯಿತು. ದಲಿತ ವರ್ಗಗಳು ಈ ಹಣಕಾಸಿನ ಬಜೆಟ್‌ನಲ್ಲಿ ವಿಶೇಷವಾಗಿ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿಯನ್ನು ಮೀಸಲಿಡಲಾಗುತ್ತಿತ್ತು. ತಾಂತ್ರಿಕ ಶಿಕ್ಷಣಕ್ಕಾಗಿ ನಿಗದಿಗೊಳಿಸಲಾಗಿದ್ದ ವಿದ್ಯಾರ್ಥಿ ವೇತನಗಳಲ್ಲಿ ೧/೨ ಭಾಗ ದಲಿತ ವರ್ಗಗಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಮೀಸಲಿಟ್ಟಿತ್ತು. ಇವುಗಳು ಸೂಕ್ತವಾಗಿ ವಿತರಣೆಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಈ ರೀತಿಯ ವಿದ್ಯಾರ್ಥಿ ವೇತನವನ್ನು ಅರ್ಹತೆ ಮತ್ತು ಬಡತನದ ಆಧಾರದ ಮೇಲೆ ನೀಡಲಾಗುತ್ತಿತ್ತು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೈಸೂರು ನಗರಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲು ನಗರದಲ್ಲಿ ಗ್ರಾಮೀಣ ಮಕ್ಕಳಿಗಾಗಿಯೇ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳು ಸ್ಥಾಪನೆಗೊಂಡವು. ಇವು ಕೇವಲ ಗ್ರಾಮೀಣ ಪ್ರದೇಶದಿಂದ ಬರುವಂತಹ ವಿದ್ಯಾಥಿಗಳಿಗೆ ಮಾತ್ರ ಮೀಸಲಾಗಿದ್ದವು. ಅವುಗಳಲ್ಲಿ ಉನ್ನತ ಶಿಕ್ಷಣಕ್ಕೆ ಮಹಾರಾಜ ಕಾಲೇಜು ವಿದ್ಯಾರ್ಥಿ ನಿಲಯ, ಹಿಂದುಳಿದ ಜನಾಂಗದ ವಿದ್ಯಾರ್ಥಿ ನಿಲಯಗಳು ಪ್ರಮುಖವಾದವುಗಳ, ಇವುಗಳಲ್ಲದೆ ವೆಂಕಟಕೃಷ್ಣಯ್ಯನವರು (ತಾತಯ್ಯ) ಸ್ಥಾಪಿಸಿದಂತಹ ಅನಾಥಾಲಯ, ಅಂಬಳೆ ಅಣ್ಣಯ್ಯ ಪಂಡಿತರ ಛತ್ರ, ಅರಸು ಬೋರ್ಡಿಂಗ್ ಹೋಮ್ (ಮಹಿಳೆಯರಿಗೆ), ಸುತ್ತೂರು ಮಠದ ಪ್ರಸಾದ ನಿಲಯ, ಮುಸ್ಲಿಂ ಹಾಸ್ಟೆಲುಗಳು ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಮುನ್ನಡೆದವು.