ಸಾಮಾಜಿಕ ಪ್ರಜ್ಞೆಯತ್ತ ಮೈಸೂರು

ಪೂನಾ ಮತ್ತು ಮದ್ರಾಸಿನಲ್ಲಿ ನಡೆದಿದ್ದ ಬ್ರಾಹ್ಮಣೇತರ ಚಳವಳಿಗಳ ಪ್ರಚಾರಕ್ಕೆ ಒಳಗಾಗಿದ್ದ ಮೈಸೂರು ಸಂಸ್ಥಾನ ೧೯೦೪ರಲ್ಲಿ ವೀರಶೈವ ಮಹಾ ಸಭಾ, ೧೯೦೬ರಲ್ಲಿ ಒಕ್ಕಲಿಗರ ಸಂಘ, ೧೯೦೯ರಲ್ಲಿ ಕೇಂದ್ರ ಮಹಮದೀಯ ಸಂಘಗಳು (ಮುಸ್ಲಿಂ ಲೀಗ್) ಸ್ಥಾಪನೆಯಾಗಿ ಮೈಸೂರು ಪ್ರಾಂತ್ಯದಲ್ಲಿ ಬ್ರಾಹ್ಮಣರ ಏಕಸ್ವಾಮ್ಯಕ್ಕೆ ಸವಾಲಾಗಿ ನಿಲ್ಲುವಂತಾಯಿತು. ರಾಜಕೀಯ ಕ್ಷೇತ್ರದಲ್ಲಿ ಪ್ರಜಾಪ್ರತಿನಿಧಿ ಸಭೆ ಹಾಗೂ ನ್ಯಾಯ ವಿಧೇಯಕ ಸಭೆಗಳ ಮೂಲಕ ಸುಧಾರಣೆಗಳನ್ನು ಮಾಡಿದ ನಾಲ್ವಡಿಯವರು ಜನತೆಯ ರಾಜಕೀಯ ಆಶೋತ್ತರಗಳಗೆ ಪೂರಕವಾಗಲು ಮೇಲಿನ ಎರಡೂ ಸಭೆಗಳಲ್ಲಿ ಬ್ರಾಹ್ಮಣೇತರರಿಗೆ ಉನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದು ಇವರ ಪ್ರಮುಖ ಸಾಧನೆ. ಮಹಾರಾಜರಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದೊಳಗೆ ಪ್ರಮುಖವಾದ ಸಭೆ ಕರೆದು, “ಮೈಸೂರು ರಾಜ್ಯದ ಆಡಳಿತದಲ್ಲಿ ನಾವು ಒಂದು ಹೊಸ ಪ್ರಯೋಗ ಆರಂಭಿಸಿದ್ದೇವೆ. ನಮ್ಮ ಪ್ರಜೆಗಳಿಗೆ ಅಖಂಡವಾದ ಸುಖ ಸಂಪತ್ತನ್ನು ಒದಗಿಸಿಕೊಡಬೇಕೆಂಬುದು ನನ್ನ ಜೀವನದ ಪರಮೋದ್ದೇಶ” ಎಂದು ಹೇಳಿದರು. ಕಾಲಕ್ಕೆ ತಕ್ಕ ಹಾಗೆ ಚುನಾವಣಾ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಿ ಹೆಚ್ಚು ಬ್ರಾಹ್ಮಣೇತರ ಜಾತಿಯವರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗಲು ಅವಕಾಶ ಕಲ್ಪಿಸಿದರು. ೧೯೦೨ರ ವೇಳೆಗೆ ಸಂಸ್ಥಾನದ ಸೇವಾ ಇಲಾಖೆಗಳ ಉದ್ಯೋಗಗಳಲ್ಲಿ ಬ್ರಾಹ್ಮಣ ಜಾತಿಯವರು ನೂರಕ್ಕೆ ನೂರರಷ್ಟು ಇದ್ದರು. ಇದನ್ನು ಮನಗಂಡ ನಾಲ್ವಡಿಯವರು ಬ್ರಾಹ್ಮಣೇತರ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ೧೯೧೪ರಲ್ಲಿ ಅಮಲ್ದಾರರ ಹುದ್ದೆಗೆ ನೇಮಕ ಮಾಡುವಾಗ ಬ್ರಾಹ್ಮಣೇತರರಿಗೆ ಕಡಿಮೆ ಅರ್ಹತೆಗಳನ್ನು ನಿಗದಿಗೊಳಿಸಿ ಶೂದ್ರರು ಮೊದಲ ಬಾರಿಗೆ ಸೇವಾ ಇಲಾಖೆಗಳಲ್ಲಿ ಆಯ್ಕೆಯಾಗುವಂತೆ ಮಾಡಿದರು. ೧೯೧ರಲ್ಲಿ ಶಿರಸ್ತೆದಾರ ಪದವಿಗಳಿಗೆ ನೇಮಕ ಮಾಡುವಾಗ ಇದೇ ನಿಯಮ ಅನುಸರಿಸಬೇಕೆಂದು ಸುತ್ತೋಲೆ ಹೊರಡಿಸಿದರು. ೧೯೧೮ರಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ಸರ್‌ವೆಲ್ಲಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಆಯೋಗ ನೇಮಿಸಿ ಎಲ್ಲ ಹಿಂದುಳಿದ ವರ್ಗ ಜನರಿಗೆ ಪ್ರಾತಿನಿಧ್ಯ ದೊರಕುವಂತೆ ಸೂಚಿಸಲು ಆಯೋಗಕ್ಕೆ ಆದೇಶ ಮಾಡಿದರು. ಆಯೋಗದ ಶಿಫಾರಸ್ಸುಗಳಂತೆ ೧೯೨೧ರಲ್ಲಿ ಪ್ರಪ್ರಥಮ ಬಾರಿಗೆ ಬ್ರಾಹ್ಮಣರು ಆಂಗಲೋ ಇಂಡಿಯನ್ನರನ್ನು ಹೊರತುಪಡಿಸಿ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ. ೭೫% ರಷ್ಟು ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯನ್ನು ನೀಡಿ ಆದೇಶ ಜಾರಿ ಮಾಡಿದರು. ಆಗ ದಿವಾನರಾಗಿದ್ದ ವಿಶ್ವೇಶ್ವರಯ್ಯ ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ ಎಂದು ಹೇಳಿದಾಗ, ಮಹಾರಾಜರು ನಾನು ಅಸ್ಪೃಶ್ಯರಲ್ಲಿ ಹಾಗೂ ಬ್ರಾಹ್ಮಣೇತರರಲ್ಲಿ ದಕ್ಷತೆಯನ್ನು ಬೆಳೆಸುತ್ತಿದ್ದೇನೆ ಎಂದು ಹೇಳಿದರು. ವಿಶ್ವೇಶ್ವರಯ್ಯನವರು ಮೀಸಲಾತಿ ನೀಡಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದರಿಂದ ನಾಲ್ವಡಿಯವರಿಗೂ ವಿಶ್ವೇಶ್ವರಯ್ಯ ಅವರಿಗೂ ಹೊಂದಾಣಿಕೆಯಾಗದೆ ವಿಶ್ವೇಶ್ವರಯ್ಯ ಅವರು ದಿವಾನ ಪದವಿಗೆ ರಾಜಿನಾಮೆ ನೀಡಿ ಹೊರಬರುವಂತಾಯಿತು. ಇದರಿಂದ ಮೈಸೂರು ಸಂಸ್ಥಾನಕ್ಕೆ ಮೊಟ್ಟಮೊದಲ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲಿ ಜಾತಿ ಆಧಾರಿತ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಮೈಸೂರು ಸಂಸ್ಥಾನವು ಸರ್ವಾಂಗೀಣ ಪ್ರಗತಿಯತ್ತ ಸಾಗಿ ಬಂದದ್ದು ಚಾರಿತ್ರಿಕ ಅಂಶವಾಗಿದೆ.

ಮೈಸೂರು, ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮಾದರಿಯಾಗಿ ಇರುವ ಸಂಸ್ಥಾನವಾಗಿದೆ ಎಂದು ಬ್ರೌನಿಂಗ್ ಹೇಳಿರುವುದು ಇಲ್ಲಿ ಉತ್ಪ್ರೇಕ್ಷೆ ಎನಿಸುವುದು. ಏಕೆಂದರೆ ನಾಲ್ವಡಿಯವರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳು ಮೇಲಿನ ಮಾತಿಗೆ ಮೂಕಸಾಕ್ಷಿಯಾಗಿವೆ. ೧೯೦೯ರಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾನೂನು, ೧೯೧೦ರಲ್ಲಿ ಬಸವಿ ಪದ್ಧತಿ ರದ್ದು ಮಾಡಿರುವ ಕಾನೂನು, ೧೯೧೦ರಲ್ಲಿ ಗೆಜ್ಜೆಪೂಜೆ ಸಂಪೂರ್ಣ ನಿರ್ಮೂಲನ ಕಾನೂನು, ೧೯೩೬ರ ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ ಮಾಡಿದ್ದು, ೧೯೩೬ರ ಜುಲೈ ೭ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆ ಜಾರಿ ತಂದು, ಮುಂದೆ ೧೯೩೭ರಲ್ಲಿ The Mysore Maternity Benefitಗಳನ್ನು ಜಾರಿಗೆ ತಂದರು. ಇವುಗಳೆಲ್ಲವೂ ಅವರ ಸಾಮಾಜಿಕ ನ್ಯಾಯದ ಪ್ರಮುಖ ಮಜಲುಗಳೆನ್ನಬಹುದು. ಈ ರೀತಿಯ ಕಾನೂನುಗಳು ಇಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಕಟ್ಟುನಿಟ್ಟಾಗಿ ಜಾರಿಗೆ ಬಂದಿವೆ. ಇದಕ್ಕೆ ಮೂಲ ಪ್ರೇರಣೆ ನಾಲ್ವಡಿಯವರ ಸರ್ಕಾರದ ಸಾಧನೆಯ ಫಲ ಎನ್ನಬಹುದು. ಮೇಲಿನವೆಲ್ಲವೂ ಇಂದಿಗೂ ಜೀವಂತವಾಗಿರುವುದನ್ನು ನಾವಿಂದು ನೋಡಬಹುದು.

ಸಂಸ್ಥಾನದಲ್ಲಿ ಸ್ತ್ರೀಯರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದರು. ಭಾರತದಲ್ಲಿಯೇ ಪ್ರಪ್ರಥಮವಾಗಿ ಮಹಿಳೆಯರಿಗಾಗಿಯೇ ೧೯೦೨ರಲ್ಲಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳು ಪ್ರಾರಂಭವಾದವು ನಂತರ ೧೯೦೩ರಲ್ಲಿ ಮೈಸೂರಿನಲ್ಲಿ ತಾಂತ್ರಿಕ ಶಾಲೆಯನ್ನು ಸ್ಥಾಪಿಸಲಾಯಿತು. ೧೯೧೧ರಲ್ಲಿ ಪ್ರಥಮವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾದವು. ನಂತರ ೧೯೧೮ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪದ್ದತಿಯ ಅನಿಷ್ಟ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಯಿತು. ಮುಂದುವರಿದು ನಾಲ್ವಡಿಯವರು ೧೯೧೯ರಲ್ಲಿ ಮಾಧ್ಯಮಿಕ ಮಟ್ಟದಲ್ಲಿ ಶಿಕ್ಷಣದ ಶುಲ್ಕ ರದ್ದು ಮಾಡಿದರು. ಇದಕ್ಕೆಲ್ಲಿ ಮಾದರಿ ಎಂಬುದಕ್ಕೆ ಭರತ ಖಂಡದಲ್ಲಿಯೇ ಸ್ತ್ರೀಯರಿಗೆ ಮತದಾನದ ಹಕ್ಕನ್ನು ೧೯೨೭ರಲ್ಲಿ ಮೊಟ್ಟಮೊದಲ ಬಾರಿಗೆ ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಭಾರತೀಯ ಸಂಸ್ಥಾನಗಳಲ್ಲಿಯೇ ಮಾದರಿ ಸಂಸ್ಥಾನವನ್ನಾಗಿಸಿದರು. ಸ್ತ್ರೀ ಶಿಕ್ಷಣಕ್ಕೆ ಅವರು ಕೊಟ್ಟಿದ್ದ ಮಹತ್ವ ಎಷ್ಟೆಂದರೆ, ಓದುತ್ತಿರುವ ಬಾಲಕಿಯರಿಗೆ ಪ್ರತ್ಯೇಕ ಕೊಠಡಿ, ಶೌಚಗೃಹವನ್ನು ಶಾಲೆಗಳಲ್ಲಿ ಪುಸ್ತಕ ಭಂಡಾರಗಳನ್ನು (ಗ್ರಂಥಾಲಯ) ತೆರೆಸಿದ್ದರು. ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿ ನಿಲಯಗಳನ್ನು ಸಂಸ್ಥಾನದಲ್ಲಿ ಪ್ರಾರಂಭ ಮಾಡಿದರು.

ನಾಲ್ವಡಿಯವರು ಆರ್ಥಿಕ ಕ್ಷೇತ್ರದಲ್ಲಿ ಕೆಲವು ಗಮನಾರ್ಹವಾದ ಸುಧಾರಣೆಗಳನ್ನು ಜಾರಿಗೆ ತಂದರು. ಸಂಸ್ಥಾನದ ಆರ್ಥಿಕ ಬೆನ್ನೆಲುಬು ಕೃಷಿ ಎಂದು ಅರಿತಿದ್ದ ನಾಲ್ವಡಿಯವರು ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ೧೯೦೫ರಲ್ಲಿ ಸಹಕಾರಿ ಸೊಸೈಟಿಗಳ ಕಾಯ್ದೆಗಳನ್ನು ಜಾರಿಗೆ ತಂದರು. ಈ ಕಾಯ್ದೆಯಿಂದಾಗಿ ಸಂಸ್ಥಾನದಲ್ಲಿ ಅನೇಕ ಸಹಕಾರಿ ಬ್ಯಾಂಕುಗಳು ಪ್ರಾರಂಭಗೊಂಡವು. ಸಹಕಾರಿ ಅಪೆಕ್ಸ ಬ್ಯಾಂಕ್, ಭೂ ಅಭಿವೃದ್ಧಿ ಬ್ಯಾಂಕ್, ದೇವಾಂಗ್ ಬ್ಯಾಂಕ್, ಕಣೆಯವರ ಬ್ಯಾಂಕ್, ಪಂಚಮರ ಅಭಿವೃದ್ದಿ ಬ್ಯಾಂಕ್ ಮುಂತಾದವು ಪ್ರಾರಂಭಗೊಂಡವು. ರೈತರು ಸಾಲದ ಅಡಿಯಲ್ಲಿ ಸಿಕ್ಕಿಕೊಂಡು ಶ್ರೀಮಂತರಿಗೆ ಭೂಮಿಯನ್ನು ಮಾರಿಕೊಳ್ಳುವ ಸ್ಥಿತಿಯನ್ನು ಕಂಡು ೧೯೨೮ರಲ್ಲಿ ಕೃಷಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. ಇದು ಇಂದಿನ ಪ್ರಜಾಪ್ರಭುತ್ವ ಸರ್ಕಾರದ ಆಳ್ವಿಕೆಗೆ ಮಾದರಿಯಾಗಿದೆ. ಇಂದಿಗೂ ಸಹ ರೈತರು ಸಾಲದ ಬಾಧೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ದಿನಿತ್ಯದ ಸಮಾಚಾರವಾಗಿದೆ. ಅಂದರೆ ಸರ್ಕಾರದ ಅನೇಕ ರೈತಪರ ಕಲ್ಯಾಣ ಯೋಜನೆಗಳು ರೈತರಿಗೆ ತಲುಪುತ್ತಿಲ್ಲವೆಂದನ್ನಬಹುದು. ಇದಕ್ಕೆ ಪ್ರಮುಖ ಕಾರಣ ನಮ್ಮ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಅವಿದ್ಯಾವಂತರಾಗಿಯೇ ಉಳಿದಿರುವುದು ಹಾಗೂ ಬಡತನದ ರೇಖೆಯಿಂದ ಕೆಳಗೆ ಜೀವಿಸುತ್ತಿರುವುದು ಪ್ರಮುಖವಾದ ಕಾರಣ, ಪ್ರಮುಖವಾಗಿ ನಾಲ್ವಡಿಯವರು ಗ್ರಾಮೀಣ ಜನರಿಗೆ ಶೀಘ್ರ ನ್ಯಾಯ ಒದಗಿಸಲು ೧೯೧೩ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿಗೆ ತಂದರು. ತದನಂತರ ೧೯೧೮ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಲು ಸಹಾಯಕವಾಯಿತು.

ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆಯನ್ನು ಶಿವನಸಮುದ್ರದ ಬಳಿ ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ೧೯೦೨ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಪ್ರಪ್ರಥಮವಾಗಿ ಕೋಲಾರ ಗಣಿ ಪ್ರದೇಶಕ್ಕೆ ವರ್ಗಾಯಿಸಲಾಯಿತು. ೧೯೦೫ ಆಗಸ್ಟ ೩ರಂದು ಪ್ರಪ್ರಥಮವಾಗಿ ಬೆಂಗಳೂರಿನಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದವು. ೧೯೦೬ರಲ್ಲಿ ಮೈಸೂರು ನಗರಕ್ಕೆ ವಿದ್ಯುತ್ ಉತ್ಪಾದನೆ ಆರಂಭ ಮಾಡಿ ಪ್ರಪಂಚಕ್ಕೆ ಮಾದರಿಯಾದರು.

ಸಂಸ್ಥಾನದಲ್ಲಿ ತಂಡವಾಡುತ್ತಿದ್ದಂತಹ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರು. ಇವುಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಹಣಕಾಸಿನ ಸೌಲಭ್ಯವನ್ನು ಒದಗಿಸಿದರು. ಗೃಹ ಕೈಗಾರಿಕೆಗಳ ಅಭಿವೃದ್ಧಿಗೆ ಗಮನ ಹರಿಸಿ ೧೯೧೪ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಆರಂಭಿಸಿದರು. ಕೈಗಾರಿಕಾ ವಲಯದಲ್ಲಿ ಅಂದು ಮುಖ್ಯವಾಗಿ ಎರಡು ತತ್ವಗಳು ಜಾರಿಯಲ್ಲಿದ್ದವು. ಒಂದು ಬಂಡವಾಳ ಪ್ರಭುತ್ವವಾದರೆ, ಇನ್ನೊಂದು ಕಮ್ಯೂನಿಸಂ. ಇವು ಅಂದಿನ ಆರ್ಥಿಕ ಸ್ಥಿತಿಗತಿಯ ಎರಡು ಮಾದರಿಗಳಾಗಿದ್ದವು. ಒಂದರ್ಥದಲ್ಲಿ ಯುರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಯಾದ ನಂತರ ದಬ್ಬಾಳಿಕೆಯಿಂದಲೇ ಜಾರಿಗೆ ಬಂದಿದ್ದ ಇನಾಂದಾರಿ ಪದ್ಧತಿಯು (ಪ್ಯೂಡಲಿಸಂ) ಕ್ಷೀಣಿಸುತ್ತಿದ್ದಂತಹ ಕಾಲವಾಗಿತ್ತು. ಇದರಿಂದಾಗಿ ಬ್ರಿಟಿಷರು ವ್ಯಾಪಾರದ ದೃಷ್ಟಿಯಲ್ಲಿ ಅಪಾರ ಹಣವನ್ನು ಗಳಿಸಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ ಬಂಡವಾಳ ಪ್ರಭುತ್ವವನ್ನು ಆಚರಣೆಯಲ್ಲಿ ತಂದರು. ನಮ್ಮ ಬಂಡವಾಳಗಾರರು ನೈತಿಕ ವಿಚಾರಗಳಿಗೆ ಹೆಚ್ಚಿನ ಗಮನ ಕೊಡದೆ ವ್ಯಕ್ತಿಗತವಾದ ಲಾಭದ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದರು. ಇಲ್ಲಿ ಕೆಲಸಗಾರರಿಗೆ ಯಾವ ಸ್ವಾತಂತ್ರ್ಯವೂ ಇರಲಿಲ್ಲ. ಇಂತಹ ಸಮಯದಲ್ಲಿ ಬಂಡವಾಳ ಕಷ್ಟಕರ ನೀತಿಯ ನಿವಾರಣೆಗೆ, ಅದರ ವ್ಯಕ್ತಿಗತವಾದ ದಾಹವನ್ನು ಅಡಗಿಸಿ ಗಳಿಸಿದ ಲಾಭವನ್ನು ಸಮಾಜದಲ್ಲಿ ಸಮನಾಗಿ ಹಂಚುವುದಕ್ಕಾಗಿ ಕಮ್ಯೂನಿಸಂ ತತ್ವವು ಹೆಚ್ಚಿನ ಪ್ರಮಾಣದಲ್ಲಿ ಪ್ರಾರಂಭವಾಯಿತು. ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಗಳು ಸಮಾಜಕ್ಕೆ ಸೇರಿದ್ದು ಎಂದು ಭಾವಿಸಿ, ಅದರ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕೆಂಬುದೇ ಈ ತತ್ವದ ಮೂಲ ಉದ್ಧೇಶವಾಗಿತ್ತು. ಮೂಸೂರು ಸಂಸ್ಥಾನದಲ್ಲಿ ಅಂದು ಪ್ರವೇಶಿಸಿದ್ದಂತಹ ಕಮ್ಯೂನಿಸಂ ಶ್ರೀಮಂತರ, ಬಂಡವಾಳಶಾಹಿಗಳ ಲಾಭಕ್ಕಾಗಿ ನಡೆಯುತ್ತಿದ್ದಂತಹ ಚಳವಳಿ ದುಡಿಯುವ ವರ್ಗದವರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪ್ರಜ್ಞೆಯನ್ನು ಹೆಚ್ಚಿಸಿತು.

ಕೃಷಿ ಸಂಸ್ಥಾನದ ಪ್ರಧಾನ ವೃತ್ತಿಯಾಗಿದ್ದರೂ ನಾಲ್ವಡಿಯವರ ಸರ್ಕಾರವು ಕಾಲಕ್ಕೆ ತಕ್ಕಂತೆ ಬೃಹತ್ ಹಾಗೂ ಗೃಹಕೈಗಾರಿಕೆಗಳನ್ನು ಸರ್ಕಾರ ಹಾಗೂ ಖಾಸಗಿಯವರ ನೆರವಿನಿಂದ ನಿರ್ಮಿಸಿತು. ಭದ್ರಾವತಿ, ಮೈಸೂರು, ಬೆಂಗಳೂರು, ಕೋಲಾರ, ಮಂಡ್ಯ ಹಾಗೂ ಹಾಸನಗಳು ಪ್ರಮುಖ ದೊಡ್ಡ ಕೈಗಾರಿಕೆಗಳ ಕೇಂದ್ರಗಳಾಗಿದ್ದವು. ಈ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳು ಸ್ಥಳೀಯವಾಗಿಯೇ ದೊರಕುತ್ತಿದ್ದವು. ನಾಲ್ವಡಿಯವರು ಗೃಹಕೈಗಾರಿಕೆಗಳಿಗೆ ಹೆಚ್ಚಿನ ಆಸಕ್ತಿ ತೋರಿಸಿದರು. ಅವರು ರಾಜ್ಯದಲ್ಲಿ ವ್ಯವಸಾಯವೇ ಮುಖ್ಯ ಕಸುಬಾಗಿದ್ದರೂ ವ್ಯವಸಾಯಕ್ಕೆ ಸಂಬಂಧಪಟ್ಟ ಮತ್ತು ವ್ಯವಸಾಯಗಾರರು ಸುಲಭವಾಗಿ ಕೈಗೊಳ್ಳಬಹುದಾದ ಗೃಹ ಕೈಗಾರಿಕೆಗಳು ಅತ್ಯವಶ್ಯಕವಾಗಿ ಸ್ಥಾಪಿತವಾಗಬೇಕು. ಇದರಿಂದ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದೆಂದು ಮನಗಂಡಿದ್ದರು. ಅಂದಿನ ಗೃಹ ಕೈಗಾರಿಕೆಗಳು ಪ್ರಮುಖವಾಗಿ ಎರಡು ಲಕ್ಷಣಗಳನ್ನು ಹೊಂದಿದ್ದವು ಒಂದು ಕೃಷಿಯ ಜೊತೆಗೆ ಅವಲಂಬಿತವಾಗಿರುವ ಕೈಗಾರಿಕೆ, ಮತ್ತೊಂದು ಮನೆಯಲ್ಲಿಯೇ ಗೃಹೋಪಯೋಗಿ ಪದಾರ್ಥಗಳನ್ನು ತಯಾರುಮಾಡಿ ಅವುಗಳ ಮಾರಾಟದಿಂದ ಸ್ವತಂತ್ರವಾಗಿ ಜೀವನ ನಡೆಸುವುದು. ಕೆಲಸ ಮಾಡುವವರೆಲ್ಲರೂ ಮನೆಯವರೇ ಆಗಿರುತ್ತಿದ್ದರು. ಇದರಿಂದಾಗಿ ಅನೇಕ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಯಿತು.

ಕೈಮಗ್ಗ: ಪ್ರಾಚೀನ ಹಾಗೂ ಮದ್ಯಕಾಲಿನ ಚರಿತ್ರೆಯಿಂದಲೂ ನಮ್ಮ ದೇಶದಲ್ಲಿ ಕೈಮಗ್ಗದಿಂದ ನೂಲುವುದು ಮತ್ತು ನೇಯುವುದು ನಿರಂತರವಾಗಿ ಬಂದ ವೃತ್ತಿಯಾಗಿದೆ. ಅಂದು ಮೈಸೂರು ಸಂಸ್ಥಾನದಲ್ಲಿ ಕೈಮಗ್ಗದ ಕೈಗಾರಿಕೆಯು ಅತ್ಯಂತ ಮುಖ್ಯವಾದ ಗೃಹ ಕೈಗಾರಿಕೆಯಾಗಿತ್ತು. Report of the Indian Economic Enquiry Committe ಯನ್ನು ೧೯೨೭ ರಿಂದ ೧೯೩೮ ರವರೆಗೂ ಗಮನಿಸಬಹುದಾದರೆ ಸಂಸ್ಥಾನದಲ್ಲಿ ೪೫,೦೦೦ ಸಾವಿರ ಕಾರ್ಮಿಕರು ೩೦,೦೦೦ ಮಗ್ಗಗಳು ಒಂದು ಕೋಟಿ ರೂ. ಗಳಿಗೂ ಹೆಚ್ಚಿನ ಬೆಲೆಬಾಳುವ ಹತ್ತಿ, ರೇಷ್ಮೆ, ಉಣ್ಣೆ ಬಟ್ಟೆಗಳನ್ನು ತಯಾರು ಮಾಡಲು ತೊಡಗಿದ್ದವು. ಅಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಂಸ್ಥಾನದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಪಟ್ಟಣ ಕೇಂದ್ರಗಳಲ್ಲಿ ಕೈಮಗ್ಗದಿಂದ ಉತ್ತಮ ರೀತಿಯಲ್ಲಿ ಬಟ್ಟೆ ತಯಾರಿಸುವ ರೀತಿ ನೀತಿಯ ಪ್ರದರ್ಶನವನ್ನು ಕೈಗೊಂಡಿದ್ದಿತು. ಇದಕ್ಕಾಗಿ ನುರಿತ ಸಿಬ್ಬಂದಿಯನ್ನು ಸರ್ಕಾರವೇ ನೇಮಿಸಿತ್ತು. ಇವರು ಸಂಸ್ಥಾನದ ನಾನಾ ಪ್ರದೇಶಗಳಲ್ಲಿ ಸಂಚರಿಸಿ ನೇಯ್ಗೆಯ ಆಧುನಿಕ ವಿಧಾನದಲ್ಲಿ ಬಟ್ಟೆ ತಯಾರಿಸುವ ಕ್ರಮವನ್ನು ಹೇಳಿಕೊಡುವುದಲ್ಲದೆ, ಹೆಚ್ಚು ಆಕರ್ಷಕವಾದ ಮತ್ತು ಲಾಭದಾಯಕವಾದ ನವೀನ ರೀತಿಯ ಬಟ್ಟೆಯನ್ನು ತಯಾರಿಸಲು ಮಾರ್ಗದರ್ಶನ ನೀಡುತ್ತಿದ್ದರು. ಇಂತಹ ಪ್ರದರ್ಶನಕ್ಕಾಗಿಯೇ ಸರ್ಕಾರ ೧೯೩೨ರಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದು ಮೇಲಿನ ರಿಫೋರ್ಟ್‌‌ನಿಂದ ತಿಳಿದು ಬರುತ್ತದೆ. ರಾಜ್ಯದ ೧೪ ಕೇಂದ್ರಗಳಲ್ಲಿ ಪ್ರದರ್ಶನ ನಡೆಸಿ, ೩೯೨ ಗ್ರಾಮಗಳಲ್ಲಿ ಸೂಕ್ತ ಸಲಹೆ ನಿಡಿ, ೧೪೯ ಹೊಸ ಬಗೆಯ ಕೈಮಗ್ಗಗಳನ್ನು ಜೋಡಿಸಿ, ೨೦೨ ಹೊಸ ಮಾದರಿಯ ಬಟ್ಟೆಗಳನ್ನು ತಯಾರಿಸಲು ೧೫೦೦ ಮಂದಿಗೆ ತರಬೇತಿ ನೀಡಲಾಯಿತೆಂದೋ ಈ ರಿಪೋರ್ಟ್‌ ತಿಳಿಸುತ್ತದೆ.

ಮೈಸೂರು ಸಂಸ್ಥಾನದಲ್ಲಿ ನಂಜನಗೂಡು ಬಳಿಯಲ್ಲಿರುವ ಬದನವಾಳು ಗ್ರಾಮದ ಖಾದಿ ಕೇಂದ್ರವು ಅತ್ಯಂತ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿತ್ತು. ಏಕೆಂದರೆ ೧೯೩೮ನೇ ಸಾಲಿನಲ್ಲಿ ಈ ಕೇಂದ್ರದಿಂದ ಅರವತ್ತೆಂಟು ಸಾವಿರ ಬೆಲೆ ಬಾಳುವ ಬಟ್ಟೆಯನ್ನು ತಯಾರಿಸಲಾಗಿತ್ತು. ಈ ಅವಧಿಯಲ್ಲಿಯೇ ಇಲ್ಲಿಗೆ ಗಾಂಧೀಜಿಯು ಭೇಟಿ ನೀಡಿದ್ದು. ಸಂಸ್ಥಾನದ ನಾನಾ ಪ್ರದೇಶಗಳಲ್ಲಿ ಇಂತಹ ಕೇಂದ್ರಗಳ್ನು ಸ್ಥಾಪಿಸಲು ಆಸಕ್ತಿ ಇರುವವರಿಗೆ ತರಬೇತಿ ನೀಡಲು ತರಬೇತಿ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ನೇಯ್ಗೆಯವರಿಗೆ ಚರಕದಿಂದ ನೂಲು ತಯಾರಿಸುವ ಹಾಗೂ ಉತ್ತಮ ಬಟ್ಟೆ ತಯಾರಿಕೆಯ ಮಾದರಿಗಳನ್ನು ತಿಳಿಸಲಾಗುತ್ತಿತ್ತು. ಪ್ರತಿವರ್ಷ ಒಂದು ಸಾವಿರ ಚರಕವನ್ನು ಆಸಕ್ತರಿಗೆ ಅರ್ಧ ಬೆಲೆಗೆ ಹಂಚಲಾಗುತ್ತಿತ್ತು. ಇದರಿಂದ ಖಾದಿ ಕೈಗಾರಿಕೆಯ ಬಂಡವಾಳವು ಸಾವಿರಾರು ರೂಪಾಯಿಗಳ ಲಾಭವನ್ನು ಪಡೆದು ಪ್ರಗತಿಯನ್ನು ಸಾಧಿಸಿತು. ಈ ದೇಶೀಯ ಗೃಹ ಕೈಗಾರಿಕೆಯ ಅಭಿವೃದ್ಧಿಯನ್ನು ದಿವಾನ್ ಮಿರ್ಜಾ ಎಂ. ಇಸ್ಮಾಯಿಲ್ ಅವರು “ಸಣ್ಣವರಾಗಲಿ ದೊಡ್ಡವರಾಗಲಿ ಸರಕಾರ ಅಥವಾ ಖಾಸಗಿಯವರಾಗಲಿ, ಅವರ ಯಾವುದೇ ಒಂದು ಉದ್ಯೋಗವನ್ನು ಅಭವೃದ್ಧಿಪಡಿಸಬೇಕಾದರೆ, ಅದಕ್ಕೆ ಬೇಕಾದ ಸಂಪನ್ಮೂಲ ಹಾಗೂ ಹಣಕಾಸಿನ ರಕ್ಷಣೆಗಳು ಇರಲೇಬೇಕು. ಅದರಂತೆಯೇ ಈ ವಸ್ತುಗಳನ್ನು ಬಳಸುವವರಿಗೆ ಸ್ವದೇಶಿ ಭಾವನೆಯೂ ಹಾಗೂ ದೇಶಾಭಿಮಾನವೂ ಪೂರ್ಣವಾಗಿರಬೇಕು ಎಂಬುದನ್ನು ಮರೆಯದೆ ಸದಾ ನೆನಪಿನಲ್ಲಿಟ್ಟಿಕೊಂಡು ನಮ್ಮ ಸ್ಥಳೀಯ ವಸ್ತುಗಳನ್ನೇ ಕೊಂಡುಕೊಂಡು ನಿಮ್ಮ ಉದ್ಯೋಗಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ” ಎಂದು ದೀಪಾವಳಿ ಖಾದಿ ಮತ್ತು ಸ್ವದೇಶಿ ಪ್ರದರ್ಶನ ಅಧಿಕಾರಿಗಳಿಗೆ ತಮ್ಮ ಸಂದೇಶವನ್ನು ಕಳುಹಿಸಿರುವುದು ಅಂದಿನ ಸಮಸ್ಥಾನ ಈ ಕಾರ್ಯದಲ್ಲಿ ತೊಡಗಿಸಿದ ಆಸಕ್ತಿಯನ್ನು ಪ್ರದರ್ಶಿಸುತ್ತದೆ. ಇಂದಿಗೂ ಸಹ ಈ ಸಂದೇಶ ನಮ್ಮ ಭಾರತೀಯ ಸನ್ನಿವೇಶಕ್ಕೆ ಪ್ರಸ್ತುತವಾಗಿಯೇ ಇದೆ.

ರೇಷ್ಮೆ ಕೈಗಾರಿಕೆ : (Mysore Silk) ವಿಶ್ವ ಪ್ರಸಿದ್ಧವಾದದ್ದು. ಟಿಪ್ಪು ಸುಲ್ತಾನ್ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಕೃಷಿ ನಂತರದಲ್ಲಿ ಮೈಸೂರು ಸಂಸ್ಥಾನದ ಗೃಹ ಕೈಗಾರಿಕೆಗಳಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಪಡೆಯಿತು. ಈ ಕೈಗಾರಿಕೆಯನ್ನು ಸಂಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಎಂಟರಷ್ಟು ಜನ ತಮ್ಮ ಕಸುಬಾಗಿ ಅವಲಂಬಿಸಿದ್ದರು. ಇದಕ್ಕೆ ಪ್ರಮುಖ ಕಾರಣವೆಂದರೆ, ಈ ಪ್ರದೇಶದ ಭೌಗೋಳಿಕ ಲಕ್ಷಣ. ಇಲ್ಲಿಯ ವಾಯುಗುಣ ಮತ್ತು ಸ್ಥಳೀಯ ಲಕ್ಷಣಗಳು ಅತ್ಯಂತ ಉತ್ತಮ ರೇಷ್ಮೆಯನ್ನು ತಯಾರಿಸಲು ಸಹಕಾರಿ ತೆಗೆದುಕೊಳ್ಳುವದರಲ್ಲಿಯೂ, ಮೈಸೂರು ರೇಷ್ಮೆಯು ಪ್ರಸಿದ್ಧವಾಗಿತ್ತೆಂದು Mysore Agricultural Calendar – 1938 ರ ವರದಿಯು ತಿಳಿಸುತ್ತದೆ.

ಮೈಸೂರು ಸಂಸ್ಥಾನವು, ಇಡೀ ಭಾರತ (ಅಂದು ಭಾರತ ಈಗಿನ ಪಾಕಿಸ್ತಾನ ಹಾಗೂ ಬಾಂಗ್ಲ ದೇಶವನ್ನು ಸೇರಿದಂತೆ)ದಲ್ಲಿಯೇ ಉತ್ಪತ್ತಿಯಾಗುತ್ತಿದ್ದ ರೇಷ್ಮೆಯ ಅರ್ಧಕ್ಕಿಂತ ಹೆಚ್ಚಾಗಿ ಉತ್ಪಾದಿಸುತ್ತಿತ್ತು. ಈ ಗೃಹಕೈಗಾರಿಕೆಯನ್ನು ಅಭಿವೃದ್ಧಿಪಡಿಸಿ ಉತ್ತಮ ರೇಷ್ಮೆ ಬಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಸರ್ಕಾರವು ಪ್ರತ್ಯೇಕ ರೇಷ್ಮೆ ಇಲಾಖೆ ಸ್ಥಾಪಿಸಿತು. ಆದರೆ ೧೯೩೦ರಲ್ಲಿ ಈ ಕೈಗಾರಿಕೆಯು ತೀವ್ರವಾದ ಮುಗ್ಗಟ್ಟನ್ನು ಎದುರಿಸಿತು. ಇದಕ್ಕೆ ಪ್ರಮುಖ ಕಾರಣ ಅಂದು ಭಾರತವನ್ನು ಪ್ರವೇಶಿಸಿದ್ದಂತಹ ಜಾಗತೀಕರಣ. ಉದಾಹರಣೆಗೆ ಅಂದು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೀನಾ, ಜಪಾನ್, ಕೋರಿಯಾ ದೇಶಗಳಿಂದ ಅತ್ಯಂತ ಕಡಿಮೆ ಬೆಲೆಯ ರೇಷ್ಮೆ ಬಟ್ಟೆಗಳು ಮಾರುಕಟ್ಟೆಗೆ ಬಂದು ದೇಶಿಯ ವಸ್ತುಗಳಿಗೆ ಬೇಡಿಕೆ ಇಲ್ಲದಂತೆ ಮಾಡಿದವು. ಈ ಸಮಯದಲ್ಲಿ ಮಳೆಯ ಅಭಾವದಿಂದ ನೀರಿಲ್ಲದೆ ಹಿಪ್ಪುನೇರಳೆ ಕೃಷಿಯು ಬಾಡಿದ್ದರಿಂದಾಗಿ ರೇಷ್ಮೆಯಲ್ಲಿ ಸಫಲತೆ ಕಾಣಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಕಂಡುಬರಲಿಲ್ಲವೆಂದು ೧೯೩೦ನೇ ಸಾಲಿನ Mysore Information Bulletin ತಿಳಿಸುತ್ತದೆ. ನಾಲ್ವಡಿಯವರ ಸರ್ಕಾರವು ಈ ಕೃಷಿಯ ಅಭಿವೃದ್ಧಿಗಾಗಿ ಸೂಕ್ತ ಕ್ರಮವನ್ನು ಕೈಗೊಂಡಿತೆಂದು ಹೇಳಬಹುದು. ಉದಾಹರಣೆಗೆ ರೈತರಿಗೆ ರೋಗರಹಿತವಾದ ರೇಷ್ಮೆ ಹುಳುಗಳನ್ನು ಒದಗಿಸುವುದು, ರೇಷ್ಮೆ ಹುಳುಗಳಿಗೆ ಬರುವ ರೋಗ ಮತ್ತು ಅವುಗಳ ನಿವಾರಣೋಪಾಯಗಳನ್ನು ಸೂಕ್ತ ಕಾರ್ಯಕ್ರಮಗಳ ಮೂಲಕ ಮೂಲಕ ಜನರಿಗೆ ತಿಳುವಳಿಕೆ ನಿಡುವುದು, ಸಾಲ ಕೊಡುವ ವ್ಯವಸ್ಥೆ, ರೇಷ್ಮೆ ಗೃಹಕೈಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಿ ಇವುಗಳ ನೆರವಿನಿಂದ ಈ ಉದ್ಯಮವನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದರು. ಮೈಸೂರು ಸಂಸ್ಥಾನದ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿದ್ದಂತಹ ಹೆಚ್ಚಿನ ಪ್ರಮಾಣದ ರೇಷ್ಮೆಯು ನೆರೆಯ ಸಂಸ್ಥಾನಗಳಿಗೆ ರಫ್ತಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರವು ಸಂಸ್ಥಾದಲ್ಲಿಯೇ ಬೃಹತ್ ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಲು ಮುಂದಾಯಿತು. ಇವುಗಳನ್ನು ತಿರುಮಕೂಡಲ ನರಸೀಪುರ, ಕೊಳ್ಳೆಗಾಲ ಸಮೀಪದ ಮುಡಿಗುಂಡಂ, ಮೈಸೂರು (ಅಶೋಕಪುರಂ ಬಡಾವಣೆಯಲ್ಲಿ) ನಗರ ಪ್ರದೇಶಗಳಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿತು. ಇದರಿಂದ ನೂರಾರು ಜನರಿಗೆ ಉದ್ಯೋಗವು ದೊರೆಯಿತು. ಇದರಿಂದ ಉತ್ತಮ ರೇಷ್ಮೆಯನ್ನು ಹೊರತರಲಾಗುತ್ತಿತ್ತಲ್ಲದೆ ಉತ್ತಮ ಬಟ್ಟೆಗಳನ್ನು ತಯಾರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಮೈಸೂರು ಸಂಸ್ಥಾನವು ಪೈಪೋಟಿ ನೀಡುವಲ್ಲಿ ಯಶಸ್ವಿಯಾಯಿತು. ಈ ಕೈಗಾರಿಕೆಗಳು ಇಂದೂ ಸಹ ಮುನ್ನಡೆಯುತ್ತಿವೆ. ಸಂತೆಮಾರನಹಳ್ಳಿ, ಮುಡಿಗುಂಡಂ, ಚಾಮರಾಜನಗರ, ಟಿ. ನರಸೀಪುರಗಳು ರೇಷ್ಮೆಗೂಡಿನ ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ. ಅಂದು ಬಡವರ ಜೀವನಾಡಿಯಾಗಿದ್ದಂತಹ ಈ ಕೃಷಿ ಹಾಗೂ ಕೈಗಾರಿಕೆಗೆ ಹೆಚ್ಚಿನ ಉತ್ತೇಜನ ಕೊಡುವ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ, ಸಂಶೋಧನ ಕ್ಷೇತ್ರಗಳಲ್ಲಿ ರೇಷ್ಮೆ ಕೃಷಿಯ ಕುರಿತು ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಸರ್ಕಾರವೇ ಏರ್ಪಡಿಸಿತು. ಈ ಹಂತದಲ್ಲಿ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಪಾತ್ರವು ಹಿರಿಯದಾಗಿತ್ತು.

ಹಾಲು ಉದ್ಯಮ : ಮಾನವ ಜೀವನ ವಿಕಾಸದೊಂದಿಗೆ ಪಾರಂಪರಿಕವಾಗಿ ಬಂದಂತಹ ಪ್ರಮುಖ ಪಶುಪಾಲನೆ, ಕ್ರಿಸ್ತಪೂರ್ವದಿಂದಲೂ ಇದು ರೈತರಿಗೆ ಅನುಕೂಲವಾದ ಮತ್ತು ಲಾಭದಾಯಕವಾದ ವೃತ್ತಿ, ಭಾರತೀಯ ಧಾರ್ಮಿಕತೆಯಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಮೈಸೂರು ಇದರಿಂದ ಹೊರತಾಗಿರಲಿಲ್ಲ. ಆದರೆ ಪ್ರಮುಖವಾಗಿ ಸಂಸ್ಥಾನದಲ್ಲಿ ಗೋವುಗಳಿಗೆ ಆಹಾರದ ಕೊರತೆ ಹೆಚ್ಚಾಗಿತ್ತು. ಇದರ ನಿವಾರಣೆಗಾಗಿ ಸರ್ಕಾರವು ಹಾಲನ್ನು ಹೆಚ್ಚಾಗಿ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ಅದರ ಮಹತ್ವವನ್ನು ಜನತೆಗೆ ಮುಟ್ಟುವಂತೆ ಮಾಡಿತು. ಈ ಯೋಜನೆಯ ಕೆಳಗೆ ಗೋವುಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಯಿತು. ಮೈಸೂರು ಪ್ರಾಂತದಲ್ಲಿ ಹೆಚ್ಚಾಗಿ ಕಂಡು ಬರುವ ನಾಟಿ ಹಸುಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ ಹಾಲು ಉತ್ಪಾದನೆಯಲ್ಲಿ ಕಡಿಮೆ ದರ್ಜೆಯವೇ ಆಗಿತ್ತು. ಅಂದು ಇತರ ದೇಶಗಳಿಗೆ ಹೋಲಿಸಿ ನೋಡಿದರೆ ಮೈಸೂರು ಜನರು ಸೇವಿಸುತ್ತಿದ್ದಂತಹ ಹಾಲಿನ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು. ಸಂಸ್ಥಾನದಲ್ಲಿ ಉತ್ಪತ್ತಿಯಾಗುತ್ತಿದ್ದ ಅರ್ಧದಷ್ಟು ಹಾಲು ಹಸುವಿನದೇ ಆಗಿತ್ತು. ಆದರೆ ಐಸಕ್ರೀಮ, ಮಿಠಾಯಿ, ಹೋಟೆಲ್‌ಗಳಿಗೆ ಹೆಚ್ಚಾಗಿ ಎಮ್ಮೆಯ ಹಾಲನ್ನು ಬಳಸಲಾಗುತ್ತಿದ್ದದು ೧೯೩೯ರಲ್ಲಿ ನಡೆದಂತಹ Opening Speech of his Excellency Lord Linlithyow at the All India Vetrnary ಎಂಬ ದಾಖಲೆಯು ತಿಳಿಸುತ್ತದೆ.

ಆಡು ಮತ್ತು ಕುರಿಗಳ ಸಾಕಾಣಿಕೆ : ಆಡು ಮತ್ತು ಕುರಿಗಳನ್ನು ಉತ್ತಮವಾದ ಮಾರ್ಗದರ್ಶನದೊಂದಿಗೆ ಸಾಕುವುದು ರೈತರಿಗೆ ಲಾಭದಾಯಕವಾದ ಕೃಷಿಯಾಗಿತ್ತು. ಇದು ಇಂದಿಗೂ ಸಹ ಅನ್ವಯಿಸುತ್ತದೆ. ಹೆಚ್ಚಾಗಿ ಇವುಗಳನ್ನು ಅಂದು ಉಣ್ಣೆಗಾಗಿ ಹಾಗೂ ಮಾಂಸಕ್ಕಾಗಿ ಸಾಕಲಾಗುತ್ತಿತ್ತು. ಮೈಸೂರು ಸಂಸ್ಥಾನದಲ್ಲಿ ೫೩ ಲಕ್ಷ ಆಡು ಮತ್ತು ಕುರಿಗಳು ಇದ್ದವೆಂದು ಹಾಗೂ ಇವು ತುಮಕೂರು, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರೀಕೃತವಾಗಿದ್ದವೆಂದು ಅಂದಿನ Agriculturla Calandar ತಿಳಿಸುತ್ತದೆ. ಬಿಳಿಯ ಕುರಿಗಳು ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ಅನಂತಪುರ, ಕಡಪ, ಸೇಲಂ ಮುಂತಾದ ಭಾಗಗಳಿಂದ ಎರಡು ಲಕ್ಷ ಆಡು, ಕುರಿಗಳನ್ನು ೧೯೩೬ನೇ ಇಸವಿಯಲ್ಲಿ ಆಮದು ಮಾಡಿಕೊಂಡು, ಶ್ರೀಲಂಕಾ, ಮಂಗಳೂರು, ಕೊಡಗು, ಊಟಿ ಮತ್ತು ಮುಂತಾದ ಸ್ಥಳಗಳಿಗೆ ಸಂಸ್ಥಾನದಿಂದ ರಫ್ತು ಮಾಡಲಾಗಿತ್ತೆಂದು ಮೇಲಿನ ದಾಖಲೆಯು ತಿಳಿಸುತ್ತದೆ. ಮೈಸೂರು ಸಂಸ್ಥಾನದಲ್ಲಿ ಈ ಉದ್ಯಮವು ಲಾಭದಾಯಕವಾಗಿರಲಿಲ್ಲ. ಆಡುಗಳನ್ನು ಬಡವನ ಆಕಳು ಎಂದು ಇಂದಿಗೂ ಹೇಳಲಾಗುತ್ತದೆ. ಇದರ ಹಾಲು ಅತ್ಯಂತ ಶ್ರೇಷ್ಠವಾದುದೆಂದು ವೈದ್ಯವಿಜ್ಞಾನ ಹೇಳಿದೆ. ಆದರೆ ಅಂದಿನಿಂದ ಇಂದಿನವರೆಗೂ ನಮ್ಮ ಜನತೆಯು ಆಡಿನ ಸಾಕಾಣಿಕೆಯಲ್ಲಿಯೇ ಆಗಲಿ ಅಥವಾ ಅವುಗಳ ಹಾಲಿನ ಉಪಯೋಗದಲ್ಲಿಯೇ ಆಗಲಿ ಗಮನ ಕೊಡದೇ ಇರುವುದು ಶೋಚನೀಯವೆಂದು ಹೇಳಬಹುದು. ಕುರಿಗಳ ತಳಿಗಳನ್ನು ಅಭಿವೃದ್ಧಿಪಡಿಸಿ, ಅವುಗಳ ತುಪ್ಪಳದ ಆದಾಯವನ್ನು ಹೆಚ್ಚಿಸುವುದಕ್ಕೆ ಮೈಸೂರು ಸಂಸ್ಥಾನದ ಸರ್ಕಾರವು ಕೆಲವು ಪ್ರಯೋಗಗಳನ್ನು ನಡೆಸಿರುವುದು ಕಂಡುಬರುತ್ತದೆ. ಉದಾಹರಣೆಗೆ ಮಿಶ್ರಜಾತಿಯ ಮೆರಿನೋ ಟಗರನ್ನು ಸಾಕಿ, ಗ್ರಾಮ ಪಂಚಾಯಿತಿಗಳ ಮೂಲಕ ರೈತರಿಗೆ ಒದಗಿಸಿದ ಕಾರ್ಯವು ನಡೆಯಿತು. ೧೯೩೩, ೩೪, ೩೬, ೩೭ರಲ್ಲಿ ದಕ್ಷಿಣ ಆಫ್ರಿಕಾದಿಂದ ಉತ್ತಮ ಜಾತಿಯ ಮೆರಿನೋ ಕುರಿಗಳನ್ನು ತರಿಸಿಕೊಳ್ಳಲಾಯಿತು. ಈ ಮೆರನೋ ಮಿಶ್ರಜಾತಿಯ ತಳಿಯಲ್ಲಿ ಒಂದು ಕುರಿಗೆ ಮೂರೂ ಪೌಂಡ್ ಉಣ್ಣೆಯನ್ನು ತೆಗೆಯಬಹುದಾಗಿತ್ತು. ಆದರೆ ಸ್ಥಳೀಯ ಕುರಿಗಳಲ್ಲಿ ಹತ್ತು ಔನ್ಸ್ ಉಣ್ಣೆಯನ್ನು ಮಾತ್ರ ಪಡೆಯಲಾಗುತ್ತಿದ್ದದ್ದನ್ನು ಸೂಕ್ಷ್ಮವಾಗಿ ಹೆಬ್ಬಾಳು, ಕೋಲಾರ, ಹುಣಸೂರಿನಲ್ಲಿ ಆಡು-ಕುರಿಗಳ ಸಂರಕ್ಷಣೆ ಮತ್ತು ಪಾಲನೆಯ ಕೇಂದ್ರಗಳನ್ನು ಸ್ಥಾಪಿಸಿತ್ತು. ಸಂಶೋಧಕರು ತಾವು ಕೈಗೊಂಡ ಸಂಶೋಧನೆಯ ಸಾದ್ಯತೆಯನ್ನು ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುವ ಕಾರ್ಯವು ನಿರಂತರವಾಗಿ ನಡೆಯುತ್ತಿತ್ತು. ಮಾಂಡ್ಯ, ಬನ್ನೂರು, ಚನ್ನರಾಯಪಟ್ಟಣಗಳಲ್ಲಿ ಕುರಿಗಳ ತಳಿಯನ್ನು ಉತ್ತಮಪಡಿಸಿ ಅವುಗಳಿಂದ ಡ್ರಗೆಟ್ ತುಪ್ಪಟವನ್ನು ಪಡೆಯಲು ಅಂದಿನ ಬ್ರಿಟಿಷ್ ಕೇಂದ್ರ ಸರ್ಕಾರದ ಕೃಷಿ ಪರಿಶೀಲನಾ ಸಮಿತಿಯಿಂದ ಹತ್ತು ವರ್ಷಗಳ ಅವಧಿಯ ಕಾರ್ಯಕ್ರಮವೊಂದನ್ನು ಜಾರಿಗೆ ತರಲಾಗಿತ್ತು. ಆದರೆ ಸಂಸ್ಥಾನದ ಜನತೆಯಲ್ಲಿ ಮನೆಮಾಡಿದ್ದಂತಹ ಅಜ್ಞಾನದಿಂದಾಗಿ ಜಾರಿಗೆ ತರಲಾಗಿತ್ತು. ಆದರೆ ಸಂಸ್ಥಾನದ ಜನತೆಯಲ್ಲಿ ಮನೆ ಮಾಡಿದ್ದಂತಹ ಅಜ್ಞಾನದಿಂದಾಗಿ ಇವುಗಳಾವುವೂ ಸಹ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರವು ಷೀಪ್ ಬ್ರೀಡರ್ಸ ಅಸೋಸಿಯೇಷನ್ ಎನ್ನುವ ಜನರಿಗೆ ತಿಳುವಳಿಕೆ ನಿಡುವ ಸಂಸ್ಥೆಯನ್ನು ಸ್ಥಾಪಿಸಿತು. ಈ ಸಂಸ್ಥೆಯು ಆಡು-ಕುರಿ ಹಾಗೂ ಅವುಗಳಿಂದ ದೊರಕುವ ಆರ್ಥಿಕ ಸೌಕರ್ಯದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿತ್ತು.

ಕೋಳಿ ಸಾಕಾಣಿಕೆ: ಎಲ್ಲ ಗ್ರಾಮದಲ್ಲಿಯೂ ಕೋಳಿಗಳನ್ನು ಸಾಕಲಾಗುತ್ತಿದ್ದರೂ ಸಾಕುವ ವಿಧಾನ ಪ್ರಾಚೀನ ವ್ಯವಸ್ಥೆಯನ್ನೇ ಅವಲಂಬಿಸಿತ್ತು. ಇದನ್ನು ಮನಗಂಡ ಸರ್ಕಾರವು ಜನರಲ್ಲಿ ಕೋಳಿ ಸಾಕಾಣಿಕೆಯ ಅರಿವನ್ನು ಮೂಡಿಸಲು ಕೆಲವು ಪರೀಕ್ಷಾ ಕೆಂದ್ರಗಳನ್ನು ಸ್ಥಾಪಿಸಿತ್ತು. ಈ ಕೆಂದ್ರಗಳು ಲೆಗ್ ಹಾರನ್ ಅಥವಾ ರೋಡ್ ಐಲೆಂಡ್ ಎಂಬ ಉತ್ತಮ ತಳಿಯ ಹುಂಜಗಳನ್ನು ಸಾಕಿ ಗ್ರಾಮ ಪಂಚಾಯಿತಿಗಳ ಮೂಲಕ ಸುಲಭ ಬೆಲೆಗೆ ಸಾರ್ವಜನಿಕರಿಗೆ ವಿತರಣೆ ಮಾಡುವ ವ್ಯಸ್ಥೆಯನ್ನು ಜಾರಿಗೆ ತಂದಿತು. ಸಂಸ್ಥಾನದ ಅಜ್ಜಂಪುರ-ಹೆಬ್ಬಾಳು-ಹುಣಸೂರು, ಶ್ರೀನಿವಾಸಪುರ, ಮೂಡಿಗೆರೆ ಮುಂತಾದ ಸ್ಥಳಗಳಲ್ಲಿ ಕೋಳಿ ಸಾಕುವ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತು. ಈ ಕೇಂದ್ರಗಳಲ್ಲಿ ಲೆಗ್ ಹಾರ್ನ್, ಮಿನಾರ್ಕಸ್, ಸಸೆಕ್ಸ, ಮಿಯೂಂಡೋಟ್ ಮುಂತಾದ ಉತ್ತಮ ಜಾತಿಯ ಕೋಳಿಗಳನ್ನು ಸಾಕಿ. ಆ ತಳಿಯ ಅಭಿವೃದ್ಧಿಗಾಗಿ ಸಾರ್ವಜನಿಕರಿಗೆ ಕಳುಹಿಸಿಕೊಡಲಾಗಿತ್ತು. ಇದಕ್ಕಾಗಿ ಕೈಷಿ ಇಲಾಖೆ ಪತ್ರಿಕೆಯನ್ನು ಪ್ರಕಟಿಸಿತು. ಗ್ರಾಮಾಭಿವೃದ್ಧಿ ಕೇಂದ್ರ. ರೈತರ ಹಾಗೂ ಗ್ರಾಮೀಣ ಪ್ರದೇಶದ ನೌಕರಿಗೂ ಕೋಳಿ ಸಾಕುವ ವಿಧಾನದಲ್ಲಿ ಶಿಕ್ಷಣವನ್ನು ನೀಡಲಾಗಿತ್ತೆಂದು bullctin No. 10 ಕೃಷಿ ಇಲಾಖೆಯೂ ವರದಿಯೂ ತಿಳಿಸುತ್ತದೆ.

ಮೈಸೂರಿನ ಸಂಸ್ಥಾನದ ಮಹದೇಶ್ವರ ಬೆಟ್ಟ, ಬಿಳಿಗಿರಂಗನ ಬೆಟ್ಟ, ನಾಗರಹೂಳೆ, ಬಂಡಿಪುರ, ಕಾಕನಕೋಟೆ ಮುಂತಾದ ಆರಣ್ಯ ಪ್ರದೇಶದ ಬುಡಕಟ್ಟು. ಜನರಿಗೆ ಜೇನುಸಾಕಾಣಿಕೆ ಪ್ರಮುಖ ವೃತ್ತಿಯಾಗಿತ್ತು, ಅದರೆ ಸಾಕುತ್ತಿದ್ದ ಕ್ರಮ ಒಂದು ರೀತಿಯಲ್ಲಿ ಒರಟು ಸ್ವಭಾವದ್ದೆಂದು. ಬಿ. ಹಟ್ನಿ ತಿಳಿಸುತ್ತಾರೆ. ಮೈಸೂರು ಸಂಸ್ಥಾನದ ಅಂದಿನ ಕೃಷಿ ಇಲಾಖೆ ಜೇನುಸಾಕುವ ವಿಷಯದಲ್ಲಿ ಪ್ರಗತಿದಾಯಕವಾದ ಪ್ರಯೋಗ ನಡೆಸಿ. ಬುಡಕಟ್ಟು ಜನರಿಗೆ ಈ ಕೃಷಿಯ ಬಗ್ಗೆ ತಿಳುವಳಿಕೆ ನೀಡಲು ಮುಂದಾಯಿತು. ಸಂಸ್ಥಾನದ ಕ್ಲೋಸ್ ಪೇಟೆ ಹಾಗೂ ಚನ್ನಪಟ್ಟಣ ಸುತ್ತ ಮುತ್ತಲೂ ಕೆಲವು ಹಳ್ಳಿಗಳಲ್ಲಿ ಆರು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ಬೆಂಗಳೂರು ಮೈಸೂರು ಹಾಸನ ಮತ್ತು ಕಡೂರು ಜಿಲ್ಲೆಗಲ್ಲಿಯೂ (ಇಂದಿನ ಚಿಕ್ಕ ಮಂಗಳೂರು ಜಿಲ್ಲಾ ಪ್ರಾಂತ್ಯಕ್ಕೆ ಅಂದು ಕಡೂರು ಜಿಲ್ಲಾ ಕೇಂದ್ರ ಸ್ಥಳವಾಗಿತ್ತು.) ಜೇನು ಸಾಕುವ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮೈಸೂರು ಸಂಸ್ಥಾನದ ಜೇನು ಸಾಕಾಣಿಕೆ ಪ್ರಗತಿಯನ್ನು ಗಮನಿಸಿ ಬಿಹಾರ್ ಮತ್ತು ಮಧ್ಯಪ್ರದೇಶದ ಸರ್ಕಾರವು ಪ್ರತನಿದಿಗಳ ಆಯೋಗವೂಂದನ್ನು ಮೈಸೂರು ಕಳುಹಿಸಿತ್ತು. ಮೈಸೂರು ಜೇನು ಕೃಷಿಕರಿಗೆ ಆಸ್ಟ್ರೇಲಿಯಾದಿಂದ ಕಾರ್ನಿಯಾಲನ್ ಎಂಬ ಜೇನು ಹುಳುಗಳನ್ನು. ತರಸಿ ಸರ್ಕಾರವೇ ವಿತರಿಸಿತು. ಅಂದು ಈ ಕೃಷಿಯು ಬುಡಕಟ್ಟು ಜನಾಂಗದ ಅದರಲ್ಲೂ ಬಡವರ ದಾರಿ ದೀಪವಾಗಿತ್ತು. ಏಕೆಂದರೆ ಕಶ್ಮಲವಿಲ್ಲದೆ. ಆರೋಗ್ಯಕರವಾದ ಜೇನುತುಪ್ಪಕ್ಕೆ. ಸಂಸ್ಥಾನ ಹಾಗೂ ಹೂರನಾಡಿನಲ್ಲಿಯೂ ಹೆಚ್ಚಿನ ಬೇಡಿಕೆ ಇತ್ತು.

ಇದಲ್ಲದೆ ಸರ್ಕಾರವು ತೋಟಗಾರಿಕೆಯ ಕೃಷಿಯಾಗಿದ್ದಂತಹ ಹಣ್ಣು, ತರಕಾರಿ ಸೂಪ್ಪು ಮತ್ತಿತರ ಸಾಂಬಾರ ಪದಾರ್ಥಗಳು ಉತ್ಪಾದಕರಿಗೆ ಸರ್ಕಾರದ ನೆರವಿನಿಂದ ಅನೇಕ ಸಹಕಾರದ ತತ್ವಗಳನ್ನು ಘೋಷಿಸಿತು. ಇರ‍್ವಿನ್‌ನಾಲೆಯ ಪ್ರದೇಶದಲ್ಲಿ ಬಾಳೆ. ತೆಂಗು. ತರಕಾರಿಗಳನ್ನು. ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಸಂಸ್ಥಾನದ ಕಿತ್ತಳೆಯ ಕೃಷಿಗೆ ಹೆಚ್ಚು ಗಮನ ಹರಿಸಲಾಗಿತ್ತು. ಆದರು ಪ್ರತಿವರ್ಷವೂ ಸಂಸ್ಥಾನಕ್ಕೆ ಸುಮಾರು ಹದಿಮೂರು ಲಕ್ಷ ರೂಪಾಯಿಗಳ ಬೆಲೆಬಾಳುವ ಕಿತ್ತಳೆ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತೆಂದು. ೧೯೩೯ Agricultural calander ತಿಳಿಸುತ್ತದೆ. ಎಮ್ಮೆದೂಡ್ಡಿ ಎಂಬಲ್ಲಿ ಬೆಳೆಯುತ್ತಿದ್ದ ಕಿತ್ತಳೆ ಹೆಚ್ಚಿನ ಬೇಡಿಕೆ ಇತ್ತು. ಇದಲ್ಲದೆ ಹಾಸನ ಮೈಸೂರು ಮತ್ತು ಕಡೂರು ಜಿಲ್ಲಾ ಭಾಗಗಳಲ್ಲಿ ಸುಮಾರು ೯೫೦ ಎಕರೆ ಜಮೀನಿನಲ್ಲಿ ಕಿತ್ತಳೆ ಕೃಷಿಯನ್ನು ಮಾಡಲಾಗುತ್ತಿತ್ತು. ಮೈಸೂರು ನಗರಕ್ಕೆ ಸುಮಾರು ಹತ್ತು ಮೈಲಿ ದೂರದಲ್ಲಿರುವ ಗಾಂಜಾಂ ಎಂಬ ಗ್ರಾಮದಲ್ಲಿ ಅಂಜೂರದ ಕೃಷಿಯನ್ನು ಕೈಗೊಳ್ಳಲಾಗಿತ್ತು. ಈ ಗ್ರಾಮವು ಕಾವೇರಿ ನದಿ ತೀರದಲ್ಲಿರುವುದರಿಂದ ಈ ಕೃಷಿಗೆ ನದಿಯಿಂದ ನೀರಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ೧೯೩೯-೪೦ರ ಅವಧಿಯಲ್ಲಿ ಸಂಸ್ಥಾನದಿಂದ ಪ್ರತಿವರ್ಷ ಸುಮಾರು ೬೦ ಲಕ್ಷ ರೂಪಾಯಿಗಳನ್ನು ಬೆಲೆಬಾಳುವ ಹಣ್ಣು ಅನ್ಯ ಸಂಸ್ಥಾನಗಳಿಗೆ ರಫ್ತಾಗುತ್ತಿದ್ದವು. ಇವುಗಳಲ್ಲಿ ಮಾವು, ನಿಂಬೆ, ಅಂಜೂರ, ಬಾಳೆ, ದಾಳಿಂಬೆ, ಸೇಬು, ಸೀಬೆ, ಪರಂಗಿ ಹಣ್ಣುಗಳು ಅತಿ ಮುಖ್ಯವಾದವು.

ಚರ್ಮ ಕೈಗಾರಿಕೆ: ಈ ಕೈಗಾರಿಕೆಯು ಬಡವರಿಗೆ ಆದಾಯ ತರುವುದಾಗಿತ್ತು. ಹಳ್ಳಿಗಳಲ್ಲಿದ್ದಂತಹ ಚಮ್ಮಾರ ಜಾತಿಗೆ ಸಮುದಾಯ ಈ ಕೆಲಸದಲ್ಲಿ ತಲ್ಲೀನವಾಗಿತ್ತು. ನಾಲ್ವಡಿ ಅವರ ಸರ್ಕಾರವು ಈ ಕೈಗಾರಿಕೆಯನ್ನು ಅಭಿವೃದ್ಧಪಡಿಸುವುದಕ್ಕೋಸ್ಕರ ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಎಂಬ ಗ್ರಾಮದಲ್ಲಿ ಬಂದು ಟ್ಯಾನರಿಯನ್ನು ಸ್ಥಾಪಿಸಿದರು. ತಿಂಗಳಿಗೆ ಒಂದು ನೂರು ಚರ್ಮವನ್ನು ಹದಮಾಡಬೇಕು ಹಾಗೂ ಕ್ರೋಂ, ಡಾರ್ಕ್‌, ಮುಂತಾದ ಚರ್ಮ ಹದಮಾಡುವ ಸಲಕರಣೆಗಳನ್ನು ಒದಗಿಸಿಬೇಕೆಂದೂ ಇದಕ್ಕೆ ನಿದರ್ಶನ ನೀಡಲಾಗಿತ್ತು. ಈ ಗ್ರಾಮದಲ್ಲಿ ಅಂದು ೬೦ ರಿಂದ ೭೦ ಸಂಸಾರಗಳು ವೃತ್ತಿಯನ್ನು ಉಪಕಸುಬಾಗಿ ಕೈಗೊಂಡಿದ್ದರು, ಇಷ್ಟೆ ಅಲ್ಲದೆ ಚಾಮನಹಳ್ಳಿ, ನಂಜನಗೂಡು, ಚಾಮರಾಜನಗರ, ಪಿರಿಯಾ ಪಟ್ಟಣ, ಯಳಂದೂರುಗಳಲ್ಲಿಯೂ ಈ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಸಂಸ್ಥಾನದಲ್ಲಿ ಈ ಕೈಗಾರಿಕೆಯಿಂದ ಒಂದು ವರ್ಷಕ್ಕೆ ೭೦ ಸಾವಿರ ಜೊತೆ ಚಪ್ಪಲಿಗಳನ್ನು ತಯಾರಿಸಲಾಗುತ್ತಿತ್ತು. ಹಾಗೆಯೇ ಸುಮಾರು ೪೫೦ ಜನರು ಈ ವ್ಯಾಪಾರದಲ್ಲಿ ನಿರತರಾಗಿದ್ದರೆಂದು Training Industry at Doddasiddavanalli, Bulletin No. 13 of the Industries and Commerse Department ನ ಸಮೀಕ್ಷೆಯು ತಿಳಿಸುತ್ತದೆ. ಗೃಹ ಕೈಗಾರಿಕೆಯಲ್ಲಿ ಕುಂಬಾರಿಕೆ ಪ್ರಮುಖವಾಗಿತ್ತು. ಇವರು ಪ್ರಮುಖವಾಗಿ ಹೆಂಚು, ಮಡಿಕೆ, ಗುಡಾಣ ಮತ್ತಿತರ ಗೃಹಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದರು.

ಸರ್ಕಾರವು ಗೃಹಕೈಗಾರಿಕೆಗಳನ್ನು ಅಭಿವೃದ್ಧಿಗಾಗಿ ಮೂರು ವರ್ಷಗಳ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಇದರ ನೆರವಿನಿಂದಾಗಿ ಸುಮಾರು ೨೭ ಕೇಂದ್ರಗಳಲ್ಲಿ ಹೆಂಚು ತಯಾರಿಸುವ ಕೈಗಾರಿಕೆ, ಮಣ್ಣಿನ ಸಾಮಾನುಗಳನ್ನು ತಯಾರಿಸುವ ಕೈಗಾರಿಕೆ, ಹುರಿ (ಹಗ್ಗ) ತಯಾರಿಸುವ ಕೈಗಾರಿಕೆ, ಚಾಪೆ, ಕಾಗದ, ಕಬ್ಬಿಣದ ಸಾಮಾನುಗಳು ಮರಗೆಲಸದ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮುಂತಾದವುಗಳ ಬಗ್ಗೆ ಸಂಬಂಧಪಟ್ಟವರಿಗೆ ಮಾರ್ಗದರ್ಶನ ಮಾಡಲಾಯಿತು. ಈ ಕಾರ್ಯಕ್ಕೆ ಸರಕಾರ ಹಣಕಾಸಿನ ನೆರವನ್ನು ಒದಗಿಸುತ್ತಿತ್ತು.

ಸಂಸ್ಥಾನದಲ್ಲಿ ೧೯೩೯ರಲ್ಲಿ ಕೈಗಾರಿಕೆಯ ಅಭಿವೃದ್ಧಿ ಶಿಕ್ಷಣಕ್ಕಾಗಿ ಹನ್ನೊಂದು ಶಿಕ್ಷಣ ಸಂಸ್ಥೆಗಳಿದ್ದವು ಅವುಗಳಲ್ಲಿ ಒಂಬತ್ತು ಕೈಗಾರಿಕಾ ವಿಷಯ ಬೋಧಿಸುವ ಶಾಲೆಗಳಾಗಿದ್ದವು. ಮೈಸೂರಿನ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಕೇಂದ್ರ, ಬೆಂಗಳೂರಿನ ಶ್ರೀಕೃಷ್ಣರಾಜೇಂದ್ರ ರಜತ ಮಹೋತ್ಸವ ವೃತ್ತಿ ಶಿಕ್ಷಣ ಕೇಂದ್ರ ಮತ್ತು ಸರ್ಕಾರದ ನೇಯ್ಗೆ ಕಾರ್ಖಾನೆಗಳು ಇವು ಅಂದಿನ ಬೃಹತ್ ಶಿಕ್ಷಣ ಸಂಸ್ಥೆಗಳಾಗಿದ್ದವು. “ಮೈಸೂರು ಸಂಸ್ಥಾನದ ಕೈಗಾರಿಕಾ ಉದ್ಯಮ ಭರತಖಂಡಕ್ಕೆ ಮಾದರಿಯಾಗಿದೆ. ಇಲ್ಲಿಯ ಕೈಗಾರಿಕಾ ನೀತಿ ಇತರ ಪ್ರಾಂತ್ಯಗಳನ್ನು ಆಶ್ಚರ‍್ಯಗೊಳಿಸಿದೆ. ಮತ್ತು ಹೊಸ ಕೈಗಾರಿಕಾ ಸ್ಥಾಪನೆಯ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಿದೆ. ಭರತಖಂಡದ ಕೈಗಾರಿಕೆ ಸಾಧನಗಳನ್ನು ವಿಸ್ತಾರಗೊಳಿಸುವುದಕ್ಕೆ ಮೈಸೂರಿನ ಪ್ರಗತಿದಾಯಕ ಕೈಗಾರಿಕೆಗಳು ಹೆಚ್ಚು ಸಹಾಯ ಮಾಡುತ್ತಿದ್ದವು ಎಂದು Indian Industries April 1939 by a Commercial Observer ತಿಳಿಸುತ್ತದೆ. ಸಂಸ್ಥಾನದ ಕೈಗಾರಿಕಾ ಪ್ರಗತಿಯನ್ನು ಕಂಡು Great Britain and the East, London March 1939ರ ಪತ್ರಿಕೆಯು ಮೈಸೂರು ಸಂಸ್ಥಾನವು ಭಾರತದ ಬರ್ಮಿಂಗ ಹ್ಯಾಂ ಎಂದು ಪ್ರಸಿದ್ದಿಯನ್ನು ಪಡೆದಿದೆ ಎಂದು ಪ್ರಚಾರಿಸಿತು. ಇದು ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಮೈಸೂರಿನ ಸಾಂಸ್ಕೃತಿಕ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.

ಮೈಸೂರು ಸಂಸ್ಥಾನವು ೧೯೨೬ರಲ್ಲಿ ಕೈಗಾರಿಕಾ ಕ್ರಾಂತಿಯನ್ನು ಕಂಡಿತು. ಇದಕ್ಕೆ ಪ್ರಮುಖ ಕಾರಣ ಇಲ್ಲಿ ದೊರಕಿದ ವಿದ್ಯುಚ್ಯಕ್ತಿ. ವಿದ್ಯುಚ್ಛಕ್ತಿ ಸಂಸ್ಥಾನದ ನಗರ ಹಾಗೂ ಹಳ್ಳಿಗಾಡಿನ ಸ್ಥಿತಿಗತಿಯನ್ನು ಬದಲಾಯಿಸಿತು. ಈ ಅವಧಿಯಲ್ಲಿ ನಿರ್ಮಾಣಗೊಂಡ ಬೃಹತ್ ಕೈಗಾರಿಕೆಗಳೆಂದರೆ ಭದ್ರಾವತಿಯ ಮೈಸೂರು ಕಬ್ಬಿಣ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆಗಳು ಪ್ರಾರಂಭವಾದವು. ೧೯೩೪ರಲ್ಲಿ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ, ೧೯೩೬ರಲ್ಲಿ ಮೊಟ್ಟ ಮೊದಲ ಮೈಸೂರು ಪೇಪರ್‌ಮಿಲ್ಸ್‌, ಮಂಗಳೂರು ಹೆಂಚಿನ ಕಾರ್ಖಾನೆ, ಷಹಾಬಾದಿನ ಸಿಮೆಂಟ್‌ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಬೆಂಗಳೂರಿನ ಬಿನ್ನಿಮಿಲ್, ಮೈಸೂರಿನ ಕೆ. ಆರ್, ಮಿಲ್, ದ್ವಿ ಚಕ್ರವಾಹನಗಳಿಗಾಗಿ ಮೈಸೂರಿನಲ್ಲಿ ಜಾವಾ ಕಾರ್ಖಾನೆ, ವಿಮಾನ ತಯಾರಿಕೆಯಾಗಿ ಎಚ್. ಎ. ಎಲ್ ಕಾರ್ಖಾನೆ, ವಿದ್ಯುತ್ ವಸ್ತುಗಳ ತಯಾರಿಕೆಗೆ ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ಕಾರ್ಯಾಗಾರ, (ಕ. ವಿ.ಕಾ) ಪಿಂಗಾಣೀ ಕಾರ್ಖಾನೆ ಅರಗಿನ ಸಾಮಾನುಗಳು ಮತ್ತು ಬಣ್ಣ ತಯಾರಿಸುವ ಕಾರ್ಖಾನೆ, ಮೈಸೂರು ಲ್ಯಾಂಪ್ ಕಾರ್ಖಾನೆ, ಹೊಗೆಸೊಪ್ಪು ಶುದ್ಧೀಕರಣ ಕಾರ್ಖಾನೆ, ರಸಗೊಬ್ಬರ ಕಾರ್ಖಾನೆ, ಗಾಜು ಮತ್ತು ಎನಾಮಲ್ ಕಾರ್ಖಾನೆ, ವಿದ್ಯುಚ್ಛಕ್ತಿಯ ಟ್ರ‍್ಯಾನ್ಸ್‌ಫಾರ್ಮರ್ ತಯಾರಿಸುವ ಕಾರ್ಖಾನೆ, ರೈಲ್ವೆ ಬಿಡಿಭಾಗಗಳ ತಯಾರಿಸುವ ಕಾರ್ಖಾನೆ, ಇನ್ನೂ ಅನೇಕ ಬೃಹತ್ ಕೈಗಾರಿಕೆಗಳ ನಾಲ್ವಡಿಯವರು ಸ್ಥಾಪನೆ ಮಾಡಿದ ಪ್ರಮುಖ ಬೃಹತ್ ಕೈಗಾರಿಕೆಗಳಾಗಿವೆ. ಇವು ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿದವು ಇದರಿಂದಾಗಿ ನಗರಗಳು ಬೆಳೆದು ಸಂಸ್ಥಾನವು ಪ್ರಗತಿಯತ್ತ ಮುನ್ನಡೆಯಲು ಪ್ರೇರಣೆ ನೀಡಿತು.

೧೯೩೫ ರಿಂದ ೧೯೪೦ ರ ಅವಧಿಯಲ್ಲಿ ಮೈಸೂರು ಸಂಸ್ಥಾನದ ಸುಮಾರು ಹನ್ನೊಂದು ಲಕ್ಷ ಎಕರೆಗಳಷ್ಟು ಪ್ರದೇಶವು ನೀರಾವರಿಯಿಂದ ಸಾಗುವಳಿಯಾಗುತ್ತಿತ್ತು. ಅಂದು ನಾಲ್ವಡಿ ಅವರ ಸರ್ಕಾರವು ಪ್ರತಿವರ್ಷವೂ ಹತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನೀರಾವರಿ ಕಾಮಗಾರಿಗಳಿಗೆ ಖರ್ಚು ಮಾಡಿತ್ತು. ಅಮದು ಭರತ ಖಂಡದಲ್ಲಿಯೇ ರೈತರಿಗೆ ವ್ಯವಸಾಯಕ್ಕಾಗಿ ನೀರು ಒದಗಿಸುವ ಪ್ರಯತ್ನವು ಮೈಸೂರು ಸಂಸ್ಥಾನದಲ್ಲಿ ನಡೆದಷ್ಟು ಎಲ್ಲಿಯೂ ನಡೆದಂತೆ ಚರಿತ್ರೆಯಲ್ಲಿ ಕಂಡು ಬರುವುದಿಲ್ಲ. ನಾಲ್ವಡಿಯರವು ವಿಸ್ತಾರವಾದ ಜಲಾಯಶಯಗಳನ್ನು ನಿರ್ಮಿಸಿ, ವಿಶಾಲವಾದ ಉದ್ದವಾದ ನಾಲೆಗಳನ್ನು ತೋಡಿಸಿ ವ್ಯವಸಾಯಕ್ಕೆ ನೀರು ಪೂರೈಸಲು ಅನುವು ಮಾಡಿಕೊಟ್ಟಿದ್ದರು. ಅಂದು ಸಂಸ್ಥಾನದಲ್ಲಿದ್ದಂತಹ ಪ್ರಮುಖ ಜಲಾಶಯಗಳೆಂದರೆ,

ಸಂ.

ಹೆಸರು

ಕೃಷಿ ಜಮೀನಿನ ವಿಸ್ತೀರ್ಣ ಎಕರೆಗಳಲ್ಲಿ

೧. ಕೃಷ್ಣರಾಜ ಸಾಗರ (ಕೆ.ಆರ್‌.ಎಸ್)

೧,೨೦,೦೦೦

೨. ಮಾರ್ಕೋನಹಳ್ಳಿ

೧೦,೦೦೦

೩. ಕುಮುದ್ವತಿ

೧೦,೦೩೬

೪. ಲಕ್ಕುವಳ್ಳಿ

೨೨,೦೦೦

೫. ಅಂಜನಾಪುರ

೧೦,೦೦೦

೬. ವಾಣಿವಿಲಾಸ ಸಾಗರ (ಮಾರಿ ಕಣಿವೆ)

೯೦೦

ಮೇಲೆ ಹೇಳಿರುವುದಲ್ಲದೆ ಕಾವೇರಿ ಮತ್ತು ಹೇಮಾವತಿ ನದಿಗಳಿಗೆ ಅನೇಕ ಕಡೆಗಳಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ಕಾಲುವೆ ನಿರ್ಮಿಸಲಾಗಿತ್ತು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ರಾಮಸಮುದ್ರ ನಾಲಾ, ಚಿಕ್ಕ ದೇವರಾಯ ನಾಲಾ, ವಿರಜಾ ನದಿ ನಾಲೆ, ರಾಮಸ್ವಾಮಿ ನಾಲೆ, ರಾಜಪರಮೇಶ್ವರಿ ನಾಲೆ, ಮಾಧವ ಮಂತ್ರಿ ನಾಲೆ (ತಲಕಾಡು), ಅತ್ತಿಕಟ್ಟಿ ನಾಲಾ, ಚಾಮರಾಜ ನಾಲಾ, ಮದಗೆರೆ ನಾಲೆಗಳು ಮುಖ್ಯವಾದವು. ಇವುಗಳಲ್ಲದೆ ಕಾವೇರಿ ನದಿಯ ಉಪನದಿಗಳಾದಂತಹ ಕಪಿನಿ, ಲಕ್ಷ್ಮಣ ತೀರ್ಥ, ಅರ್ಕಾವತಿ, ಸುವರ್ಣಾವತಿ, ಶಿಂಷಾ ಮೊದಲಾದ ನದಿಗಳ ನಾಲೆಗಳಿಂದ ಸಾವಿರಾರು ಎಕರೆಗಳು ವ್ಯವಸಾಯವಾಗುತ್ತಿದ್ದವು. ೧೯೩೦ರಿಂದ ೧೯೪೦ರ ಅವಧಿಯಲ್ಲಿ ಸಂಸ್ಥಾನದಲ್ಲಿ ಒಟ್ಟು ೨೩,೪೫೯ ಕೆರೆಗಳಿದ್ದವು. ಇವುಗಳ ಪೈಕಿ ೨,೬೫೬ ದೊಡ್ಡ ಕೆರೆಗಳು ಮಿಕ್ಕ ಎಲ್ಲವೂ ಚಿಕ್ಕ ಕೆರೆಗಳು. ಅನೇಕ ಕೆರೆಗಳು ದೊಡ್ಡ ಸರೋವರದಂತೆ ಇದ್ದವೆಂದು ಆಧುನಿಕ ಮೈಸೂರು ಚರಿತ್ರೆಕಾರರಾದ ಹೆಟ್ನಿ ಅವರು ಹೇಳುತ್ತಾರೆ. ಕೆರೆಗಳಿಂದ ಒಟ್ಟು ಆರು ಲಕ್ಷ ಎಕರೆ ವ್ಯವಸಾಯವಾಗುತ್ತಿದ್ದವು ಎಂಬುದು ಅಂದಿನ ಆರ್ಥಿಕ ಪ್ರಾಬಲ್ಯವನ್ನು ತಿಳಿಸುತ್ತದೆ.

ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಹೆಚ್ಚಿನ ನೀರಾವರಿ ಕೆಲಸ ನಡೆದಿತ್ತು. ನೀರನ್ನು ಎಲ್ಲಿ ಶೇಖರಿಸಬಹುದೋ ಅಲ್ಲಿ ಕೆರೆ ಅಥವಾ ಜಲಾಶಯಗಳನ್ನು ನಿರ್ಮಿಸಲಾಯಿತು. ಹೊಸದಾಗಿ ಕೆರೆ ನಿರ್ಮಿಸುವ ಪ್ರದೇಶವನ್ನು ಕಂಡುಹಿಡಿಯುವುದು ಸಾಮಾನ್ಯರಿಗೆ ಅಸಾಧ್ಯ ಎಂಬುದಾಗಿ ಸಂಸ್ಥಾನದ ಅಂದಿನ ಪ್ರಥಮ ಚೀಫ್ ಇಂಜಿನಿಯರಾಗಿದ್ದಂತಹ ಮೇಜರ್ ಸ್ಯಾಂಕಿ ಅವರು ೧೮೬೬ರಲ್ಲಿಯೇ ಬರೆದಿದ್ದಾರೆ. ನಾಲ್ವಡಿಯವರು ಕೃಷಿಗೆ ಹಾಗೂ ಕುಡಿಯುವ ನೀರಿನ ಸೌಕರ್ಯಗಳನ್ನು ಕಲ್ಪಿಸುವ ವಿಷಯದಲ್ಲಿ ಭರತಖಂಡದ ದೇಶೀಯ ಸಂಸ್ಥಾನಗಳಲ್ಲೆಲ್ಲಾ ಮೈಸೂರಿಗೆ ಪ್ರಥಮ ಸ್ಥಾನವು ದೊರಕಿಸಿಕೊಟ್ಟಿದ್ದಾರೆಂದು ಇಂಡಿಯಾ ಇಂಪೀರಿಯಲ್ ಗೆಜೆಟೀಯರ್ ನಮೂದಿಸಿದೆ. ಇದು ಇಂದಿಗೂ ಚಾರಿತ್ರಿಕ ಅಂಶವಾಗಿದೆ.

ನಾಲ್ವಡಿ ಅವರು ಸಾರಿಗೆ ಮತ್ತು ರಸ್ತೆಗಳನ್ನು ಅಭಿವೃದ್ಧಿ ಮಾಡಿಸುವತ್ತ ಹೆಚ್ಚಿನ ಗಮನ ಹರಿಸಿದ್ದರು. ೧೯೨೪ರಲ್ಲಿ ಮೈಸೂರು ನಗರದಿಂದ ಉದ್ದ ರಸ್ತೆಗಳ ನಿರ್ಮಾಣ ಆರಂಭವಾಯಿತು. ಅವುಗಳಲ್ಲಿ ಪ್ರಮುಖವಾಗಿ ಬೆಂಗಳೂರು ೨೧೫ ಮೈಲು, ಕೋಲಾರ ೨೧೧ ಮೈಲಿ, ತುಮಕೂರು ೧೮೯ ಮೈಲಿ, ಚಿತ್ರದುರ್ಗ ೨೨೦ ಮೈಲಿ, ಕಡೂರು (ಚಿಕ್ಕಮಗಳೂರು) ೩೨೫ ಮೈಲಿಗಳ ಉದ್ದ ರಸ್ತೆಗಳು ನಿರ್ಮಾಣವಾದವು ಇವುಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಿದ್ದರು.

ನಾಲ್ವಡಿ ಅವರ ಕಾಲದಲ್ಲಿಯೇ ರೈಲ್ವೆ ಸಂಪರ್ಕ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿತು. ೧೯೧೩ರಲ್ಲಿ ಹೊಸ ರೈಲು ಸಾರಿಗೆ ನಿರ್ಮಾಣ ಇಲಾಖೆ ಆರಂಭವಾಯಿತು. ೧೯೧೮ರಲ್ಲಿ ಚಿಕ್ಕಬಳ್ಳಾಪುರ-ಯಲಹಂಕ, ಮೈಸೂರು-ಅರಸೀಕೆರೆ ಮೀಟರ್ ಗೇಜ್ ನಿರ್ಮಾಣ, ೧೯೨೧ರಲ್ಲಿ ಚಿಕ್ಕಜಾಜೂರು-ಚಿತ್ರದುರ್ಗ ಮೀಟರ್ ಗೇಜ್ ನಿರ್ಮಾಣವಾಯಿತು. ನಾಲ್ವಡಿ ಅವರ ಕಾಲದಲ್ಲಿ ನಿರ್ಮಾಣವಾದ ರೈಲ್ವೆ ಮಾರ್ಗಗಳನ್ನು ವಿವರಿಸುವುದಾದರೆ.

೧. ಮೈಸೂರು-ಹಾಸನ ಮಾರ್ಗವಾಗಿ ಅರಸೀಕೆರೆ

೨. ಬೆಂಗಳೂರು- ಚಿಕ್ಕಬಳ್ಳಾಪುರ- ಕೋಲಾರ- ಬೌರಿಂಗ್ ಪೇಟೆಗಳ (K. G. F) ಜೋಡಣೆ

೩. ಚಿತ್ರದುರ್ಗ- ಚಿಕ್ಕಜಾಜೂರು

೪. ಅರಸೀಕೆರೆ- ಹಾಸನ- ಮಂಗಳೂರು

೫. ಹಾಸನ- ಚಿಕ್ಕಮಗಳೂರು

೬. ಚಿಕ್ಕಮಗಳೂರು- ಕಡೂರು

೭ ತರೀಕೆರೆ- ನರಸಿಂಹರಾಜಪುರ (ಹಂಬೆಯ ಟ್ರಾಂ)

೮. ನರಸಿಂಹರಾಜಪುರ- ಶೃಂಗೇರಿ

೯. ಶಿವಮೊಗ್ಗ- ಭಟ್ಕಳ

೧೦. ತಡಸ- ಹೆಬ್ಬೆ

೧೧. ಮೈಸೂರು- ಕಾಕನಕೋಟೆ

೧೨. ಮೈಸೂರು- ಕೊಡಗು- ವೀರಾಜ ಪೇಟೆ

೧೩. ಮೈಸೂರು- ಈರೋಡು

೧೪. ಬೆಂಗಳೂರು- ಹೊಸೂರು- ಸೇಲಂ

ಮೇಲಿನ ಹೊಸ ರೈಲು ಮಾರ್ಗಗಳ ನಿರ್ಮಾಣ ಕಾರ್ಯದ ಕೆಲಸವು ತ್ವರಿತ ಗತಿಯಲ್ಲಿ ಪ್ರಾರಂಭವಾದವು. ಆ ಕಾಲದಲ್ಲಿಯೇ ಮೈಸೂರು ಸಂಸ್ಥಾನದಲ್ಲಿದ್ದಂತಹ ರೈಲುಗಳನ್ನು ಸರ್ಕಾರ ವರ್ಗಾಯಿಸಲಾಯಿತು ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ.

ನಾಲ್ವಡಿ ಅವರು ಕೇವಲ ಆಡಳಿತಗಾರ ಮಾತ್ರವಲ್ಲದೆ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಮಾತೃಭಾಷೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿರುವುದಕ್ಕೆ ನೂರೆಂಟು ಉದಾಹರಣೆಗಳಿವೆ. ಇದರ ಫಲವೇ ೧೯೧೫ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು. ಅಂದು ಹೈದ್ರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ, ಮದ್ರಾಸ್ ಕರ್ನಾಟಕ ಹಾಗೂ ಮೈಸೂರು ರಾಜ್ಯ, ಕೊಡಗು ಎಂದು ಛಿದ್ರವಾಗಿದ್ದಂತಹ ಕರ್ನಾಟಕವನ್ನು ಒಂದು ಗೂಡಿಸಲು ನಾಲ್ವಡಿಯವರು ಸ್ಥಾಪಿಸಿದ ಪರಿಷತ್ತು ಈ ನೆಲೆಯಲ್ಲಿ ಅಪಾರವಾಗಿ ಶ್ರಮಿಸಿದೆ. ಪರಿಷತ್ತು ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಅಪಾರವಾಗಿ ದುಡಿಯುತ್ತಿದೆ. ಪರಿಸರ ಪ್ರೇಮಿಯಾಗಿದ್ದ ನಾಲ್ವಡಿ ಅವರು ಪರಿಸರ ಸೌಂದರ್ಯ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಬೆಂಗಳೂರಿನ ಲಾಲಬಾಗ್ ಮತ್ತು ಕಬ್ಬನ್ ಪಾರ್ಕ್‌ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿದರು. ವಿಶ್ವವಿಖ್ಯಾತ ಕೃಷ್ಣರಾಜ ಸಾಗರದ ಬೃಂದಾವನ ಹೂದೋಟ ನಿರ್ಮಾಣವಾದದ್ದು ನಾಲ್ವಡಿ ಕೃಷ್ಣರಾಜರ ಕಾಲದಲ್ಲಿಯೇ.

ಇಷ್ಟೆಲ್ಲ ಸಾಧನೆ ಮಾಡಿದ ಮಹಾರಾಜರ ಕಾಲದಲ್ಲಿ ಮೈಸೂರು ಮಾದರಿ ಸಂಸ್ಥಾನ ಎಂಬ ಹೆಸರನ್ನು ಪಡೆಯಿತು. ತನ್ನ ಸಂಸ್ಥಾನದ ಏಳಿಗೆಗಾಗಿ ನಾಲ್ವಡಿ ಅವರು ಮಾಡಿದ ಸಾಧನೆ ಅನೇಕ. ಸುದೀರ್ಘ ೩೮ ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ರಾಜರ್ಷಿ ಎಂಬ ಬಿರುದನ್ನು ಪಡೆದ ನಾಲ್ವಡಿ ಅವರು ೧೯೪೦ ಅಗಷ್ಟ ೩ ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ಬದಕು. ಆದರ್ಶ ಹಾಗೂ ಆಡಳಿತವು ಇಂದಿನ ೨೧ ನೇ ಶತಮಾನದ ಆಡಳಿತಗಾರರಿಗೆ ಹಾಗೂ ಯುವ ಜನತೆಗೆ ಅದರಲ್ಲಿಯೂ ದಲಿತರಿಗೆ ದಾರಿದೀಪವಾಗಲಿದೆ.