ಅರಬ್ಬರು ಮತ್ತು ಟರ್ಕರು ಭಾರತಕ್ಕೆ ಭೂಮಾರ್ಗದ ಮೂಲಕ ಪ್ರವೇಶಿಸಿದರು. ಮೊಗಲ್ ಸಾಮ್ರಾಟರು ತಮ್ಮ ಅಧಿಕಾರದ ಭದ್ರತೆಗೆ ಭಾರಿ ಪ್ರಮಾಣದ ಸೈನ್ಯವನ್ನೇನೋ ಇಟ್ಟುಕೊಂಡಿದ್ದರು. ಆದರೆ ಭಾರತೀಯ ಅರಸರ ಪೈಕಿ ಮರಾಠರು ಮಾತ್ರ ತಮ್ಮ ನೌಕಾಪಡೆಯಿಂದ ಕರಾವಳಿಯನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಈ ದಿಶೆಯಲ್ಲಿ ಮೊಗಲರು ನೌಕಾಬಲವನ್ನು ಕಡೆಗಣಿಸಿದರು ಎನ್ನಬಹುದು. ಸಮುದ್ರಮಾರ್ಗದ ಮೂಲಕ ಯುರೋಪಿನ ವರ್ತಕ ರಾಷ್ಟ್ರಗಳು ಪ್ರವೇಶ ಪಡೆದವು. ಈ ರೀತಿ ಆಗಮಿಸಿದ ವಿದೇಶಿ ವರ್ತಕರು ನಮ್ಮ ದೇಶದ ಚರಿತ್ರೆಗೆ ಒಂದು ವಿಶಿಷ್ಟ ತಿರುವನ್ನೆ ಕೊಟ್ಟರು. ಹದಿನೈದನೆಯ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆದ ಭೌಗೋಳಿಕ ಅನ್ವೇಷಣೆಗಳು ವಿಶ್ವದ ವಿವಿಧ ರಾಷ್ಟ್ರಗಳ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳ ಮೇಲೆ ತೀವ್ರತರವಾದ ಪರಿಣಾಮವನ್ನುಂಟುಮಾಡಿದವು. ಬಾರ್ಥಲೋಮಿಯಾ ಡಯಾಸ್‌ನ ಮಾರ್ಗವನ್ನೇ ಅನುಸರಸಿ ವಾಸ್ಕೋಡಿ ಗಾಮನು ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದು ೧೪೯೮ರ ಮೇ೧೭ರಂದು ಕಲ್ಲಿಕೋಟೆಯ ಬಂದರನ್ನು ತಲುಪಿದನು. ಭಾರತಕ್ಕೆ ಸಮುದ್ರ ಮಾರ್ಗದ ಆರಂಭದಿಂದ ಮಹತ್ತರ ಪರಿಣಾಮ ಉಂಟಾಯಿತು.

ಪೋರ್ಚುಗೀಸರು: ವಾಸ್ಕೋಡಗಾಮನು ನಡೆಸಿದ ಜಲಮಾರ್ಗದ ಅನ್ವೇಷಣೆಯಿಂದ ಪೂರ್ಚುಗಲ್‌ನ ವ್ಯಾಪಾರಸ್ಥರು ಭಾರತಕ್ಕೆ ಬಂದರು. ಅಂದು ಕಲ್ಲಿಕೋಟೆಯ ಜಾಮೊರಿನ್ ದೊರೆ ಪೋರ್ಚುಗೀಸರಿಗೆ ಭವ್ಯ ಸ್ವಾಗತ ಕೋರುವ ಮೂಲಕ ಪೌರಾತ್ಯ ವಾಣಿಜ್ಯದ ಸೌಲಭ್ಯವನ್ನು ಪಡೆಯಲು ಇಚ್ಚಿಸಿ ಪೋರ್ಚುಗೀಸರಿಗೆ ಸಕಲ ಸೌಲಭ್ಯವನ್ನು ಒದಗಿಸಿಕೊಟ್ಟರು. ಇದರಿಂದ ಪೋರ್ಚುಗೀಸರು ಭಾರತದೊಡನೆ ವ್ಯಾಪಾರ ಸಂಬಂಧವನ್ನು ಹೊಂದಿ ಹೊಸ ಮಾರ್ಗವನ್ನು ತೆರೆದರು. ಕ್ರಿ.ಶ. ೧೫೦೦ರ ಮಾರ್ಚ್ ೯ರಂದು ಕೇಬ್ರಾಲ್ ಹದಿಮೂರು ನೌಕೆಗಳ ತಂಡದ ಮುಖ್ಯವಾಗಿ ಲಿಸ್ಟರ್‌ನಿಂದ ಭಾರತಕ್ಕೆ ಯಾನ ಆರಂಭಿಸಿದನು. ಆದರೆ ಪೋರ್ಚುಗೀಸರು ತಮ್ಮ ನ್ಯಾಯಬದ್ಧ ವಾಣಿಜ್ಯ ಮಿತಿಗೆ ಮಾತ್ರ ಸೀಮಿತವಾಗಿರದೆ ಇತರ ರಾಷ್ಟ್ರಗಳ ವರ್ತಕರಿಗೆ ವಾಣಿಜ್ಯ ಸೌಲಭ್ಯವನ್ನು ನೀಡಲು ನಿರಾಕರಿಸಿದರು. ಇದರಿಂದ ಸಹಜವಾಗಿಯೇ ಜಾಮೋರಿನ್ನೊಡನೆ ವೈರತ್ವ ಆರಂಭವಾಯಿತು. ಭಾರತದ ರಾಜ್ಯಗಳ ನಡುವಿನ ರಾಜಕೀಯ ವ್ಯವಹಾರದಲ್ಲಿ ಪೋರ್ಚುಗೀಸರು ಹಸ್ತಕ್ಷೇಪ ಮಾಡಲಾರಂಭಿಸಿದರು. ಕಲ್ಲಿಕೋಟೆಯ ದೊರೆಯ ವೈರಿಯಾದ ಕೊಚ್ಚಿನ್‌ನ ದೊರೆಯೊಡನೆ ಮೈತ್ರಿ ಬೆಳೆಸಲು ಅನುವಾದರು. ಭಾರತದಲ್ಲಿ ವಾಸ್ತವವಾಗಿ ಅಲ್ಫೋನ್ಸೋಡ ಅಲ್ಬುಕರ್ಕ್ ಪೋರ್ಚುಗೀಸರ ಪ್ರಾಬಲ್ಯಕ್ಕೆ ಬುನಾದಿ ಹಾಕಿದನು. ಅವನು ಮೊದಲು ೧೫೦೩ರಲ್ಲಿ ಒಂದು ತುಕಡಿಯ ನಾಯಕನಾಗಿ ಭಾರತಕ್ಕೆ ಬಂದನು. ಮತ್ತೆ ೧೫೦೯ರಲ್ಲಿ ಪೋರ್ಚುಗೀಸ್ ವ್ಯವಹಾರದ ಗೌರ‍್ನರ್‌ ಆಗಿ ನೇಮಕಗೊಂಡು ೧೫೧೦ರಲ್ಲಿ ಸಂಪದ್ಬರಿತವಾದ ಗೋವಾ ಬಂದರನ್ನು ವಶಪಡಿಸಿಕೊಂಡನು. ಅದು ಬಿಜಾಪುರದ ಸುಲ್ತಾನನಿಗೆ ಸೇರಿತ್ತು. ಪೋರ್ಚುಗೀಸರ ಹಿತಾಸಕ್ತಿಯನ್ನು ಅರಿತು ಅವರಿಗೆ ಸೂಕ್ತ ಸೇವೆ ಸಲ್ಲಿಸಿದ ಇವನು ೧೫೧೫ರಲ್ಲಿ ಮರಣವನ್ನಪ್ಪಿದನು. ಈ ವೇಳೆಗೆ ಪೋರ್ಚುಗೀಸರು ಪಶ್ಚಿಮ ಕರಾವಳಿಯ ಮೇಲೆ ತಮ್ಮ ಆಧಿಪತ್ಯ ಸ್ಥಾಪಿಸಿದ್ದು, ಅತ್ಯಂತ ಬಲಯುತವಾದ ನೌಕಾಪಡೆಯನ್ನು ಹೊಂದಿದ್ದರು.

ಅಲ್ಬುಕರ್ಕ್ ನಂತರ ಬಂದವರು ದಿಯು, ಡಾಮನ್, ಸಾಲ್ಲೆಟ್, ಬೆಸ್ಸೀನ್ ಚೌಲ್, ಬೊಂಬಾಯಿ, ಮದ್ರಾಸ್ ಸಮೀಪದ ಸ್ಯಾಂಥೋಮ ಮತ್ತು ಬಂಗಾಳದ ಹೂಗ್ಲಿಯಲ್ಲಿ ತಮ್ಮ ಮುಖ್ಯ ವಸಾಹತುಗಳನ್ನು ಸ್ಥಾಪಿಸಿದರು. ಆದರೆ ಕಾಲಕ್ರಮೇಣ ದಿಯು, ಡಾಮೆನ್ ಹಾಗೂ ಗೋವಾವನ್ನು ಬಿಟ್ಟು ಉಳಿದೆಲ್ಲ ವಸಾಹತುಗಳು ಅವರ ಕೈತಪ್ಪಿದವು. ಷಹಜಹಾನನ ಕಾಲದಲ್ಲಿ ಖಾಸಿಂಖಾನನು ಹೂಗ್ಲಿಯನ್ನು, ೧೭೩೯ರಲ್ಲಿ ಮರಾಠರು ಸಾಲ್ಸೆಟ್ ಹಾಗೂ ಬೆನ್ಸಿನ್‌ಗಳನ್ನು ವಶಪಡಿಸಿಕೊಂಡರು. ಭಾರತಕ್ಕೆ ಆಗಮಿಸಿದ ಯೂರೋಪಿನ ವರ್ತಕರಲ್ಲಿ ಪೋರ್ಚುಗೀಸರೇ ಮೊದಲಿಗರಾದರೂ ಕ್ರಿ.ಶ. ೧೮ನೇ ಶತಮಾನದ ವೇಳೆಗೆ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡರು ಮತ್ತು ಪತನದ ಹಾದಿಯನ್ನು ಹಿಡಿದರು. ಅವರ ಧಾರ್ಮಿಕ ಅಸಹಿಷ್ಣುತೆ, ವ್ಯಾಪಾರದಲ್ಲಿನ ಒಳಸಂಚಿನ ಕ್ರಮಗಳು ಅವರಿಗೇ ವಿರೋಧವಾಗಿ ಪರಿಣಮಿಸಿದವು. ಜೊತೆಗೆ ಬ್ರೆಜಿಲ್‌ನ ಅನ್ವೇಷಣೆ ಪೋರ್ಚುಗಲ್‌ನ ವಸಾಹತು ವ್ಯವಹಾರವನ್ನು ಪಶ್ಚಿಮದತ್ತ ಸೆಳೆಯಿತು. ಕಡೆಯದಾಗಿ ಇತರ ಯೂರೋಪಿನ ಕಂಪನಿಯೊಡನೆ ಅವರು ಯಶಸ್ವಿಯಾಗಿ ಸ್ಪರ್ಧಿಸಲಿಲ್ಲ.

ಡಚ್ಚರು: ಡಚ್ಚರು ೧೫೯೬ರಿಂದ ಹಲವಾರು ಯಾನಗಳನ್ನು ಕೈಗೊಂಡು ಕೊನೆಗೆ ೧೬೦೨ರಲ್ಲಿ ಆಗ್ನೇಯ ಏಷ್ಯಾದ ಸಾಂಬಾರ ಪದಾರ್ಥಗಳ ಮಾರುಕಟ್ಟೆಗಳಿಗೆ ನೇರ ಪ್ರವೇಶ ಪಡೆಯುವ ಮೂಲಕ ಡಚ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ಡಚ್ಚರು ೧೬೦೫ರಲ್ಲಿ ಪೋರ್ಚುಗೀಸರಿಂದ ‘ಅಂಬೋಯ್ಯ’ವನ್ನು ವಶಪಡಿಸಿಕೊಂಡು, ‘ಮಲಕ್ಕಾ’ ದಲ್ಲಿ ಪೋರ್ಚುಗೀಸರಿಗೆ ತೊಂದರೆಯಾಗದಂತೆ ಕ್ರಮೇಣ ತಮ್ಮ ಪ್ರಭಾವವನ್ನು ಸ್ಥಾಪಿಸಿದರು. ೧೬೩೯ರಲ್ಲಿ ಗೋವಾವನ್ನು ಸುತ್ತುಗಟ್ಟಿ, ೧೬೪೧ರಲ್ಲಿ ಮಲಕ್ಕಾವನ್ನು ತಮ್ಮ ಪೂರ್ಣ ಸ್ವಾಧಿನಕ್ಕೆ ತೆಗೆದುಕೊಂಡರು. ೧೬೫೮ರಲ್ಲಿ ಸಿಲೋನಿನಲ್ಲಿ ಪೋರ್ಚುಗೀಸರ ವಸಾಹತುವನ್ನು ಸ್ವಾಧಿನಪಡಿಸಿಕೊಂಡರು. ಜಾವಾ, ಸುಮಾತ್ರ ಮತ್ತು ಮಲಕ್ಕಾ ದ್ವೀಪಗಳ ಮೆಣಸು ಹಾಗೂ ಸಾಂಬಾರ ಪದಾರ್ಥಗಳ ಲಾಭಕರ ಮಾರುಕಟ್ಟೆಗಳಿಂದ ಆಕರ್ಷಿತರಾದ ಡಚ್ಚರು ಈ ದ್ವೀಪಗಳಿಗೆ ಬಂದರು. “ಈ ದ್ವೀಪ ಸ್ತೋಮವು ಅವರ ಆಳ್ವಿಕೆಯ ಆಯಕಟ್ಟಿನ ಮತ್ತು ಆಡಳಿತದ ಕೇಂದ್ರ ಮಾತ್ರವೇ ಆಗಿರದೆ ಅವರ ಆರ್ಥಿಕ ಕೇಂದ್ರವೂ ಆಗಿತ್ತು”. ವಾಣಿಜ್ಯ ಅನುಕೂಲಗಳು ಡಚ್ಚರ ಗಮನವನ್ನು ಬಾರತದಲ್ಲೂ ಸೆಳೆದವು. ಕೋರಮಂಡಳ ಕರಾವಳಿ ಪ್ರದೇಶ, ಗುಜರಾತ್, ಬಂಗಾಳ ಮತ್ತು ಕೆಳಗಿನ ಗಂಗಾ ಕಣಿವೆಯ ಒಳಭಾಗವನ್ನು ಪ್ರವೇಶಿಸಿ ಒರಿಸ್ಸಾದಲ್ಲಿ ಕೋಟೆಗಳನ್ನು ಸ್ಥಾಪಿಸಿದರು. ಭಾರತದಲ್ಲಿ ಪ್ರಮುಖವಾಗಿ ಮಚಲಿಪಟ್ಟಣ, ಪುಲಿಕಾಟ್, ಸೂರತ್, ಬಿಮ್ಲಿಪಟಂ, ಕಾರೈಕಲ್, ಚಿನ್ಸುರಾ, ಖಾಸಿಂ ಬಜಾರ್, ಬಠನಾಗೋರ್, ಪಾಟ್ನಾ, ಬಲಾಸೂರ್, ನಾಗಪಟ್ಟಣ ಮತ್ತು ಕೊಚ್ಚಿನ್‌ಗಳಲ್ಲಿ ತಮ್ಮ ಕೋಟೆಗಳನ್ನು ಸ್ಥಾಪಿಸಿಕೊಂಡರು.

ಪೋರ್ಚುಗೀಸರನ್ನು ಅಡಗಿಸುವ ಮೂಲಕ ಡಚ್ಚರು ೧೭ನೇ ಶತಮಾನದ ಪೂರ್ವದಲ್ಲಿನ ಸಾಂಬಾರ ವ್ಯಾಪಾರದ ಮೇಲೆ ಏಕಸ್ವಾಮ್ಯ ಪಡೆದಿದ್ದರು. ಸೂರತ್, ಮಧ್ಯಭಾರತ ಮತ್ತು ಯಮುನಾಕಣಿವೆ ಪ್ರದೇಶದಲ್ಲಿ ತಯಾರಾಗುತ್ತಿದ್ದ ನೀಲಿ ಭಾರಿ ಪ್ರಮಾಣದಲ್ಲಿ ಡಚ್ಚರಿಗೆ ಸರಬರಾಜಾಗುತ್ತಿತ್ತು. ಬಿಹಾರ್, ಗುಜರಾತ್ ಹಾಗೂ ಕೋರಮಂಡಲದ ಮೂಲಕ ಅವರು ಕಚ್ಚಾರೇಷ್ಮೆ, ಬಟ್ಟೆ, ಪೆಟ್ಲುಪ್ಪು ಹಾಗೂ ಅಫೀಮುಗಳನ್ನು ರಫ್ತು ಮಾಡುತ್ತಿದ್ದರು. ೧೭ನೇ ಶತಮಾನದಲ್ಲಿ ಡಚ್ಚರೊಡನೆ ಇಂಗ್ಲೀಷರಿಗಿದ್ದ ವೈರುತ್ವ ಪೋರ್ಚುಗೀಸರಿಗಿಂತ ಅಧಿಕವಾಗಿತ್ತು. ಪ್ರಾಚ್ಯದಲ್ಲಿ ಡಚ್ಚರ ನಿತಿ ಎರಡು ಧ್ಯೇಯಗಳಿಂದ ಕೂಡಿದುದಾಗಿತ್ತು. ಮೊದಲನೆಯದಾಗಿ ತಮ್ಮ ಸ್ವಾತಂತ್ರ‍್ಯದ ಶತ್ರುವಾಗಿದ್ದ ಕ್ಯಾಥೋಲಿಕ್ ಸ್ಪ್ಯೆನ್ ಮತ್ತು ಅದರ ಮಿತ್ರ ರಾಷ್ಟ್ರ ಪೋರ್ಚುಗಲ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದು. ಎರಡನೆಯದಾಗಿ ಈಸ್ಟ್ ಇಂಡೀಸ್ ವಲಯದಲ್ಲಿ ವಾಣಿಜ್ಯ ಸ್ವಾಮ್ಯಗಳಿರುವ ದೃಷ್ಟಿಯಿಂದ ಅಲ್ಲಿ ವಸಾಹತುಗಳನ್ನು ಸ್ಥಾಪಿಸಿ ನೆಲಸು ನಾಡನ್ನು ಸ್ಥಾಪಿಸುವುದು ಅವರ ಧ್ಯೇಯವಾಗಿತ್ತು. ಪೋರ್ಚುಗೀಸರ ಪ್ರಭಾವ ಕಾಲಕ್ರಮೇಣ ಕುಸಿದುದರಿಂದ ಅವರ ಮೊದಲ ಧ್ಯೇಯ ಸಿದ್ಧಿಸಿತು. ತಮ್ಮ ಎರಡನೇ ಧ್ಯೇಯಸಾಧನೆಯ ಪ್ರಯತ್ನದಲ್ಲಿ ಅವರು ಇಂಗ್ಲೀಷರೊಡನೆ ತೀವ್ರ ಪೈಪೋಟಿಗೆ ಇಳಿದರು. ಡಚ್ಚರ ನೌಕಾ ಪ್ರಾಬಲ್ಯ ಮತ್ತು ೧೬೦೯ರಲ್ಲಿ ಸ್ಪೇಯ್ನ್ ಹಾಗೂ ಹಾಲೆಂಡ್‌ಗಳ ನಡುವೆ ಆದ ೨೧ ವರ್ಷಗಳ ಒಪ್ಪಂದದಿಂದ ಯೂರೋಪಿನಲ್ಲಿ ಡಚ್ಚರನ್ನು ಯುದ್ಧ ಭೀತಿಯಿಂದ ಮತ್ತು ಮಲಕ್ಕಾ ದ್ವೀಪಗಳಲ್ಲಿನ ಕೆಲವು ನಿರ್ಬಂದಗಳಿಂದ ಮುಕ್ತಿಗೊಳಿಸುದುದರಿಂದ ಈಸ್ಟ್ ಇಂಡೀಸ್‌ನಲ್ಲಿ ಇಂಗ್ಲೀಷರ ಪೈಪೋಟಿಯನ್ನು ಮೊದಲಿಗಿಂತ ಹೆಚ್ಚು ತೀವ್ರವಾಗಿ ಎದುರಿಸಿಲು ಡಚ್ಚರನ್ನು ಪ್ರೋತ್ಸಾಹಿಸಿತು. ಡಚ್ಚರು ಕೋರಮಂಡಲದ ಕರಾವಳಿಯಲ್ಲಿ ಸ್ಥಿರವಾಗಿ ನಿಂತರು. ಡಚ್ಚರು ಹಾಗೂ ಇಂಗ್ಲೀಷರ ನಡುವೆ ವಾಣಿಜ್ಯ ಪೈಪೋಟಿ ಕ್ರಿ.ಶ. ೧೭೫೯ರವರೆಗೆ ತೀವ್ರವಾಗಿಯೇ ಇದ್ದಿತು.

ಬ್ರಿಟಿಷರು: ೧೫೯೯ರಲ್ಲಿ ಲಂಡನ್‌ನ ಸಾಹಸಿ ವರ್ತಕ ಜಾನ್ ಮಿಲ್ಸೆನ್ ಹಾಲ್ ಮೆಡಿಟರೇನಿಯನ್‌ ಸಮುದ್ರ ಮಾರ್ಗದ ಮೂಲಕ ಭಾರತವನ್ನು ತಲುಪಿದನು. ೧೬೦೦ರ ಡಿಸೆಂಬರ್ ೩೧ರಂದು ಇಂಗ್ಲೆಂಡ್ ವಾಣಿಜ್ಯ ಅಭ್ಯುದಯದತ್ತ ಮೊತ್ತಮೊದಲ ಹೆಜ್ಜೆಯನ್ನು ಇಡುವ ಮೂಲಕ ಈಸ್ಟ್ ಇಂಡಿಯಾ ಕಂಪನಿಯು ವಾಣಿಜ್ಯದಲ್ಲಿ ಸ್ವಾಮ್ಯ ಪಡೆಯುವ ಸನ್ನದನ್ನು ಎಲಿಜೆಬತ್ ರಾಣಿಯಿಂದ ಪಡೆಯಿತು. ಆದರೆ ಪ್ರಾರಂಭದಲ್ಲಿ ಪೋರ್ಚುಗೀಸರ ವಿರೋಧವನ್ನು ಎದುರಿಸಬೇಕಾಯ್ತು. ಮೊಗಲ್ ಚಕ್ರವರ್ತಿ ಜಹಂಗೀರ್‌ನಿಂದ ಒಂದು ವಾಣಿಜ್ಯ ಒಪ್ಪಂದವನ್ನು ಮಾಡಿಕೊಳ್ಳುವ ಸಲುವಾಗಿ ೧ನೇ ಜೇಮ್ಸನು ೧೬೧೫ರಲ್ಲಿ ಸರ್‌ಥಾಮಸ್‌ರೋ ಎಂಬ ರಾಯಭಾರಿಯನ್ನು ಜಹಂಗೀರ್‌ನ ಆಸ್ಥಾನಕ್ಕೆ ಕಳುಹಿಸಿದನು. ಭಾರತದಲ್ಲಿ ವ್ಯಾಪಾರಿ ಕೋಟೆಗಳನ್ನು ಸ್ಥಾಪಿಸಲು ಸರ್‌ಥಾಮಸ್‌ರೋ ಮೊಗಲ್ ಸಾಮ್ರಾಟನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾದನು. ಪೋರ್ಟ್ ಸೇಂಟ್ ಜಾರ್ಜ್, ಸೂರತ್, ನಂತರ ಬಂಗಾಳ, ಒರಿಸ್ಸಾ ಇವುಗಳ ಕಡೆ ಇಂಗ್ಲಿಷರು ವಸಾಹತನ್ನು ಸ್ಥಾಪಿಸಿದರು.

ಫ್ರೆಂಚರು: ಪೂರ್ವದಲ್ಲಿ ವ್ಯಾಪಾರ ನಡೆಸುವ ಉತ್ಕಟ ಆಕಾಂಕ್ಷೆ ಫ್ರೆಂಚರಲ್ಲಿ ಈ ಮೊದಲೇ ಮೂಡಿದ್ದರೂ ಯೂರೋಪಿಯನ್ ರಾಷ್ಟ್ರಗಳ ಪೈಕಿ ಪೂರ್ವದಲ್ಲಿ ಯೂರೋಪಿನ ಇತರ ಕಂಪನಿಗಳವರೊಡನೆ ವಾಣಿಜ್ಯ ಗಳಿಕೆಗಾಗಿ ಪೈಪೋಟಿ ನಡೆಸಿದವರಲ್ಲಿ ಫ್ರೆಂಚರು ಕಡೆಯವರು. ೪ನೇ ಹೆನ್ರಿ, ರಿಕ್ಷೆಲಿಯೋ ಮುಂತಾದವರು ವಾಣಿಜ್ಯ ಪ್ರಾಮುಖ್ಯವನ್ನು ಮನಗಂಡರು. ಕೊಲ್‌ಬರ್ಟನ್ ಸೂಚನೆಯಂತೆ ಕ್ರಿ.ಶ. ೧೬೬೪ರಲ್ಲಿ “Campagniedes Indes Orientalies” ಅನ್ನು ಸ್ಥಾಪಿಸಲಾಯಿತು. ಭಾರತದಲ್ಲಿ ಫ್ರೆಂಚರ ಪ್ರಪ್ರಥಮ ಕೋಟೆಯನ್ನು ೧೬೬೮ರಲ್ಲಿ ಸೂರತ್‌ನಲ್ಲಿ ಫ್ರಾಂಕಾಯ್ಸ್‌ಕೆರಾವ್ ಸ್ಥಾಪಿಸಿದನು. ಡಚ್ಚರು ಮತ್ತು ಫ್ರೆಂಚರ ನಡುವಣ ಯೂರೋಪಿಯನ್ ಹಗೆತನ ಭಾರತದಲ್ಲಿ ಫ್ರೆಂಚರ ಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಆದರೆ ೧೭೨೦ರ ಜೂನ್‌ನಲ್ಲಿ “ಇಂಡೀಸ್‌ನ ಸಾರ್ವಕಾಲಿಕ ಕಂಪನಿ” ಎಂದು ಕರೆಯಲಾದ ಕಂಪನಿಯ ಪುನರ್ ಸಂಘಟನೆಯಿಂದಾಗಿ, ೧೭೨೦ ಮತ್ತು ೧೭೪೨ರ ನಡುವೆ ಲೆನಾಯರ್ ಮತ್ತು ಡ್ಯೂಮಾಸ್ ಇವರ ಸಮರ್ಥ ಆಡಳಿತದಿಂದ ಮತ್ತೆ ಅದು ಅಭಿವೃದ್ಧಿಗೊಂಡಿತು. ಫ್ರೆಂಚರು ೧೭೨೧ರಲ್ಲಿ ಮಾರಿಸಸ್ ಅನ್ನು, ೧೭೨೫ರಲ್ಲಿ ಮಲಬಾರ್ ಕರಾವಳಿಯ ಮಾಹೆಯನ್ನು, ೧೭೩೯ರಲ್ಲಿ ಕಾರೈಕಲ್‌ ಅನ್ನು ಆಕ್ರಮಿಸಿಕೊಂಡರು. ಪಾಂಡಿಚೆರಿ, ಮಚಲಿಪಟ್ಟಣ ಮತ್ತು ಚಂದ್ರನಗರ ಫ್ರೆಂಚರ ಮುಖ್ಯ ವ್ಯಾಪಾರ ಕೇಂದ್ರಗಳಾಗಿದ್ದವು. ೧೭೪೦ರಿಂದ ಸುಮಾರು ಇಪ್ಪತ್ತು ವರ್ಷಗಳವರೆಗೆ ಕರ್ನಾಟಕವು ಫ್ರೆಂಚರು ಮತ್ತು ಇಂಗ್ಲಿಷರ ನಡುವಿನ ಹೋರಾಟದ ಕ್ಷೇತ್ರವಾಗಿ ಪರಿಣಮಿಸಿತು. ಇದರಿಂದ ಫ್ರೆಂಚರ ಪ್ರಾಬಲ್ಯವು ಕಡಿಮೆಯಾಗಲು ಕಾರಣವಾಯಿತು. ಕೋರಮಂಡಲದ ಕರಾವಳಿ ಮತ್ತು ಅದರ ಹಿನ್ನಾಡಿನ ಪ್ರದೇಶಕ್ಕೆ ಕರ್ನಾಟಕ ಎಂಬುದಾಗಿ ಯೂರೋಪಿಯನ್ನರು ಕರೆದಿದ್ದರು. ದಖ್ಖನಿನಲ್ಲಿ ಆಗ ಇದ್ದ ರಾಜಕೀಯ ಸ್ಥಿತಿಗತಿಗಳು ಮತ್ತು ಒಂದು ಕಡೆ ಬ್ರಿಟಿಷರು ಹಾಗೂ ಫ್ರೆಂಚ್ ವರ್ತಕರ ನಡುವೆ ಇದ್ದಂತಹ ಒಂದು ರೀತಿಯ ಅನಿಶ್ಚಿತ ಸಂಬಂಧ, ಮತ್ತೊಂದು ಕಡೆ ಸ್ಥಳೀಯ ಭಾರತೀಯ ಪ್ರಭುತ್ವಗಳ ಅನಿಶ್ಚಿತ ಬಾಂಧವ್ಯ ಮತ್ತು ಯೂರೋಪಿನಲ್ಲಿ ಫ್ರೆಂಚರ ಹಾಗೂ ಬ್ರಿಟಿಷರ ನಡುವೆ ಉಂಟಾಗುತ್ತಿದ್ದ ವೈಮನಸ್ಸುಗಳು ಭಾರತದಲ್ಲಿ ಇದ್ದ ಫ್ರೆಂಚ್ ಮತ್ತು ಬ್ರಿಟಿಷರ ಮೇಲೆ ಪರಿಣಾಮ ಬೀರತೊಡಗಿದವು. ಈ ಎಲ್ಲಾ ಹಿನ್ನಲೆಯಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ವ್ಯಾಪಾರ ಪೈಪೋಟಿಯು ಕದನದ ಹಾದಿಯನ್ನು ಹಿಡಿಯುವಂತೆ ಮಾಡಿತು. ಈ ಕದನಗಳನ್ನು ಇತಿಹಾಸದಲ್ಲಿ ಕರ್ನಾಟಕ ಯುದ್ಧಗಳು ಎಂದು ಕರೆಯಲಾಗಿದೆ.

ವಸಾಹತುಶಾಹಿಗಳು ಮತ್ತು ಮೈಸೂರು

ಭಾರತದ ಚರಿತ್ರೆಯಲ್ಲಿ ಆಧುನಿಕ ಮೈಸೂರು ಸಂಸ್ಥಾನದ ಚರಿತ್ರೆ ಅನೇಕ ವಿಶೇಷತೆಗಳಿಂದ ಕೂಡಿದೆ. ಮೈಸೂರು ಒಡೆಯರ ಆಳ್ವಿಕೆಯು ಇತಿಹಾಸದ ಪುಟಗಳಿಂದ ಹಿಂದೆ ಸರಿದರೂ , ಸಾಂಸ್ಕೃತಿಕವಾಗಿ ಇಂದಿನ ಕರ್ನಾಟಕಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಇಂದು ಕರ್ನಾಟಕ ಕೈಗಾರಿಕಾ ರಾಜ್ಯವಾಗಿರಲು, ಸಾಮಾಜಿಕ ಪ್ರಗತಿಪರ ಚಿಂತನೆಗೆ ಮುಂದಾಗಲೂ, ಆರ್ಥಿಕವಾಗಿ ಸಫಲವಾಗಿರಲು, ಸಾಹಿತ್ಯ ಹಾಗೂ ವಿಜ್ಞಾನದಲ್ಲಿ ತನ್ನ ಛಾಪು ಮೂಡಿಸಲು ವಸಾಹತು ಶಾಹಿಗಳು ಹಾಗೂ ಮೈಸೂರು ಅರಸರು ಸಲ್ಲಿಸಿದ ಸೇವೆ ಗಣನೀಯವಾಗಿದೆ.

ಮೈಸೂರು ಸಂಸ್ಥಾನದ ರಾಜವಂಶಸ್ಥರಿಂದ ವಸಾಹತುಶಾಹಿಗಳು ಮೈಸೂರಿನ ಆಳ್ವಿಕೆಯನ್ನು ೧೮೩೧ರಲ್ಲಿ ಸಂಪೂರ್ಣವಾಗಿ ತಮ್ಮ ಅಧೀನಕ್ಕೆ ಪಡೆದು ಸುಮಾರು ಐವತ್ತು ವರ್ಷಗಳವರೆಗೆ ಆಳ್ವಿಕೆ ಮಾಡಿದರು. ಈ ಅವಧಿ ಒಂದರ್ಥದಲ್ಲಿ ದೇಶೀಯ ವಿದ್ಯಾವಂತರನ್ನು ಆಡಳಿತದ ಮುಖ್ಯಸ್ಥರನ್ನಾಗಿಸಬೇಕು. ಯಾವುದೇ ಕಾರಣಕ್ಕೂ ಬ್ರಿಟಿಷರು ಮತ್ತೆ ಆಡಳಿತವನ್ನು ವಹಿಸಿಕೊಳ್ಳುವಂತಹ ಸಂದರ್ಭಗಳು ಬರಬಾರದು ಹಾಗೂ ಮೈಸೂರು ಸಂಸ್ಥಾನದ ಆಡಳಿತ ಒಂದು ಮಟ್ಟದಲ್ಲಿ ಬಹುಪಾಲು ದೇಶೀಯವಾಗಿರಬೇಕು ಎನ್ನುವುದು ಇಂಗ್ಲೆಂಡಿನಲ್ಲಿದ್ದ ಸಾಮ್ರಾಜ್ಯಶಾಹಿ ನೀತಿ ನಿರೂಪಕರ ಅಭಿಮತವಾಗಿತ್ತು. ಇನ್ನೂ ಒಂದರ್ಥದಲ್ಲಿ ೧೮೫೭ರ ದಂಗೆಯ ಪರಿಣಾಮದ ಪಾಠಗಳಲ್ಲಿ ಸಂಸ್ಥಾನಗಳನ್ನು ಹಾಗೂ ರಾಜರನ್ನು ಸಾಮ್ರಾಜ್ಯದ ಕಂಭಗಳಂತೆ ಬಳಸಿಕೊಳ್ಳಬೇಕೆಂಬುದು ಆಗಿತ್ತು. ಈ ಚಿಂತನೆ ದೇಶೀಯ ಸಂಸ್ಥಾನದ ಆಂತರಿಕ ಆಡಳಿತದಲ್ಲಿ ವಸಾಹತುಶಾಹಿಗಳ ಹಸ್ತಕ್ಷೇಪವನ್ನು ನಿಷೇಧಿಸಿತ್ತು. ಪುನ: ಸ್ಥಾಪನೆ ಮತ್ತು ದೇಶೀಯ ವಿದ್ಯಾವಂತರ ನೇತೃತ್ವದಲ್ಲಿ ಆಡಳಿತ ವ್ಯವಸ್ಥೆ ಇವು ಸಾಮ್ರಾಜ್ಯಶಾಹಿ ಆಶ್ರಿತ ಸಂಸ್ಥಾನಗಳ ಕ್ಷೇತ್ರದಲ್ಲಿ ನಡೆಯುತ್ತಿದ್ದ ಪ್ರಯೋಗದಂತಿತ್ತು. ಮೈಸೂರು ಸಂಸ್ಥಾನದ ೧೮೩೦ರ ಪ್ರಕರಣವನ್ನು ಇತರ ದೇಶಿಯ ರಾಜರು ತೀವ್ರವಾಗಿ ಗಮನಿಸುತ್ತಿದ್ದಂತಹ ಕಾಲವೂ ಆಗಿತ್ತು. ಇದು ದೇಶೀಯ ರಾಜ್ಯ ಅಸ್ತಿತ್ವದ ಪ್ರಶ್ನೆಯೂ ಆಗಿತ್ತು. ಹಾಗೆಯೇ ಸಾಮ್ರಾಜ್ಯಶಾಹಿ ಬೆಳೆಯುತ್ತಿದ್ದ ಅಪಕ್ಷ ಆಡಳಿತ ಶೈಲಿಯ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು ಈ ಆಡಳಿತ ಶೈಲಿಯಲ್ಲಿ ಕಮಿಷನರ್ ನಂತರ ದಿವಾನ್ ಪದವಿಗಳು ಮುಖ್ಯವಾಗಿದ್ದವು. ಬ್ರಿಟಿಷ್ ವಸಾಹತುಶಾಹಿ ಅವರು ರೂಪಿಸಿದ ಆಡಳಿತ ಯಂತ್ರವನ್ನು ಮತ್ತು ಆಡಳಿತ ನೀತಿಯನ್ನು ಚಾಚೂ ತಪ್ಪದೆ ದಿವಾನ್ ಅಥವಾ ಕಮಿಷನರ್‌ಗಳು ಪರಿಪಾಲಿಸಬೇಕಾಗಿತ್ತು. ಟಿಪ್ಪುವಿನ ಮರಣಾನಂತರ ಮೈಸೂರು ಸಂಸ್ಥಾನದ ಆಳ್ವಿಕೆಯನ್ನು ಬ್ರಿಟಿಷರು ರೂಪಿಸಿದ ಆಡಳಿತ ಯಂತ್ರದಡಿಯಲ್ಲಿ ಬಳಸಿಕೊಂಡರು. ಆಡಳಿತ ಯಂತ್ರ ಕುಸಿದರೆ ಮತ್ತೆ ಬ್ರಿಟಿಷರ ನೇರ ಆಳ್ವಕೆ ನಡೆಸಬೇಕಾಗುತ್ತಿತ್ತು. ಇದಕ್ಕೆ ೧೮೩೧ರ ನಂತರದ ಮೈಸೂರು ಸಂಸ್ಥಾನದ ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಟಿಪ್ಪು ನಂತರದ ಮೈಸೂರು ಸಂಸ್ಥಾನದ ಆಧುನಿಕ ಪದ್ಧತಿಯನ್ನು ಮೂರು ಭಾಗಗಳಾಗಿ ವಿವರಿಸುವ ಕ್ರಮ ಹಾಗೂ ಅದರ ಹಿಂದಿರುವ ತಾತ್ವಿಕ ಧೋರಣೆಯನ್ನು ಪ್ರಶ್ನಿಸಬೇಕಾಗಿದೆ. ಈ ತಾತ್ವಿಕ ಧೋರಣೆ ಸಾಮ್ರಾಜ್ಯಶಾಹಿ ಇತಿಹಾಸ ಚಿಂತನೆಯನ್ನು ಸಮರ್ಥಿಸುವಂತಹದ್ದು. ೧೮೩೧ರ ಹಿಂದಿನ ಕಾಲ ರಾಜಕೀಯವಾಗಿ ಕತ್ತಲಾಗಿತ್ತು ಎಂಬ ಅಭಿಪ್ರಾಯಗಳನ್ನು ಕೆಲವು ಮೂಲಭೂತವಾದದ ಚರಿತ್ರಕಾರರು ಚಿತ್ರಿಸಿದ್ದಾರೆ. ಆದರೆ ೧೭೯೯ರ ವರೆಗೆ ಹೈದರ್-ಟಿಪ್ಪು ಅವರು ವಸಾಹತುಶಾಹಿಗಳು(ಬ್ರಿಟಿಷರು) ದಕ್ಷಿಣಕ್ಕೆ ಪ್ರವೇಶಿಸದಂತೆ ತಡೆಗೋಡೆಯಂತೆ ನಿಂತಿದ್ದು ಮತ್ತು ಟಿಪ್ಪುವಿನ ಮರಣಾನಂತರ ಕೊಡಗನ್ನು ಕೇಂದ್ರವಾಗಿರಿಸಿಕೊಂಡು ಮೈಸೂರು ಸಂಸ್ಥಾನದ ಮಲೆನಾಡಿನ ಸೀಮೆಗಳ ಭಾಗಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು, ೧೮೩೦-೩೧ರಲ್ಲಿ ಬ್ರಿಟಿಷರು ತೆರಿಗೆ ರೂಪಿಸಿದ್ದು, ಇದಕ್ಕೆ ಮೈಸೂರು ಅರಸರು ತಲೆತೂಗಿದ್ದು ಈ ರೀತಿಯ ಭೂ-ಸಂಬಂಧಗಳ ವಿರುದ್ದ ನಗರ ಪ್ರಾಂತದಲ್ಲಿ ರೈತರು ದಂಗೆಯೆದ್ದಿದ್ದು ಇಂದು ಚರಿತ್ರೆಯಲ್ಲಿ ದಾಖಲಾಗಿರುವ ವಿಷಯ. ಇದರ ನಾಯಕ ಬೂದಿ ಬಸವಪ್ಪ ಎಂಬುವನು. ಇವನು ಮೈಸೂರು ಅರಸರಿಗೆ ಪಾರಂಪರಿಕ ವೈರಿಗಳೆಂದು ಗುರ್ತಿಸಿಕೊಂಡಿದ್ದ ಇಕ್ಕೇರಿ ನಾಯಕರ ವಂಶದವನೆಂದು ಹೇಳಿಕೊಂಡು ದಂಗೆಯ ಮುಂದಾಳತ್ವ ವಹಿಸಿದ್ದನು. ಅದಕ್ಕೂ ಹಿಂದೆ ಟಿಪ್ಪೂ ಸುಲ್ತಾನ್ ಮರಣದ ನಂತರ ನಗರ ಪ್ರಾಂತ್ಯಗಳಲ್ಲಿ ಬ್ರಿಟಿಷ್ ಸೈನ್ಯ ನೆಲೆನಿಂತು ಪೂರ್ಣಯ್ಯನ ನೇತೃತ್ವದಲ್ಲಿ ಟಿಪ್ಪು ಬೆಂಬಲಿಗರಿಗಿದ್ದ ಹಳ್ಳಿಗಳನ್ನು ತುಳಿದಿದ್ದು, ಇದರ ಫಲವಾಗಿ ಅನೇಕ ಹಳ್ಳಿಗಳು ದೀಪವಿಲ್ಲದ ಹಳ್ಳಿಗಳೆಂದು ಕಂದಾಯ ಇಲಾಖೆಯ ಕಡತಗಳಲ್ಲಿ ದಾಖಲಾದ ಸಂಗತಿಗಳನ್ನು ಕತ್ತಲೆ ಯುಗವು ಎಂದು ಕರೆಯುವುದಾದರೆ, ಇಲಿಯೇಟ್ ಮತ್ತು ಡೌಸನ್ ಅವರನ್ನು, ಅವರ ಚಿಂತನೆಯನ್ನು ಯಾವ ತಕರಾರಿಲ್ಲದೆ ಸುಮ್ಮನೆ ಒಪ್ಪಿಕೊಳ್ಳಬೇಕಾಗುತ್ತದೆ.. ಏಕೆಂದರೆ ದಲಿತ ಸಮುದಾಯಗಳಂತೂ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಈ ಶಿಕ್ಷೆಯ ಅಡಿಯಲ್ಲಿಯೇ ಆತಂಕರಿಂದ ಬದುಕುತ್ತಿವೆ. ವಸಾಹತುಶಾಹಿ ಕಾಲಘಟ್ಟದ ಮೈಸೂರು ಸಂಸ್ಥಾನದ ಗ್ರಾಮೀಣ ಪ್ರದೇಶದ ಫ್ಯೂಡಲ್ ಶಕ್ತಿಗಳು ಗ್ರಾಮೀಣ ನ್ಯಾಯಾಲಯಗಳಲ್ಲಿ, ಅಧಿಕಾರ, ಪದವಿಗಳನ್ನು ಪಡೆಯುವ ಮೂಲಕ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿರುವ ಬಗ್ಗೆ ವಿಚಾರಮಾಡಬೇಕು ಎನಿಸದೆ ಇರದು.

ಆಧುನಿಕ ಮೈಸೂರಿನ ಸಾಂಸ್ಕೃತಿಕ ಇತಿಹಾಸ ಕುರಿತು ವಿಸ್ತಾರವಾಗಿ ಅಧ್ಯಯನ ಮಾಡಿರುವ ಹೆಟ್ನೆ ಅವರಂತಹ ವಿದ್ವಾಂಸರು ಈ ಸಂದರ್ಭ ಕುರಿತು ತಮ್ಮದೆಯಾದ ಆಲೋಚನೆ ಮಾಡಿದ್ದಾರೆ. “ವಸಾಹತು ಶಾಹಿಗಳ ಕಾಲದಲ್ಲಿ ಮೈಸೂರು ಅರಸರು ಅಧಿಕಾರ ಕೇಂದ್ರದ ತಳಹದಿಯನ್ನು ವಿಸ್ತರಿಸಿಕೊಂಡು ಹೆಚ್ಚು ಸ್ವಾಯುತ್ತತೆಯನ್ನು ಪಡೆಯಲು ಅರಮನೆ ನಡೆಸಿದ ಪ್ರಜ್ಞಾಪೂರ್ವಕ ಪ್ರಯತ್ನ”ವೆಂದು ಸೂಕ್ಷ್ಮವಾದ ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಅರಸರ ಧರ್ಮ ಹಾಗೂ ಅವರ ಬೌದ್ಧಿಕ ಸಾಮರ್ಥ್ಯಗಳ ನಡುವೆ ಸ್ಪರ್ಧೆ ಏರ್ಪಟ್ಟಾಗ ಹಿಂದಿದ್ದ ಒತ್ತಡಗಳು ಹೆಚ್ಚು ಕೆಲಸ ಮಾಡುತ್ತಿವೆ. ಉದಾಹರಣೆಗೆ

೧. ೧೮೩೧ರ ಅಧಿಕಾರದ ತಳಹದಿಯನ್ನು ವಿಸ್ತರಿಸಿಕೊಳ್ಳಲೇಬೇಕೆಂಬ ಪಾಠ

೨. ೧೯೦೦ರ ನಂತರ ಮೈಸೂರು ಬ್ರಾಹ್ಮಣ ವರ್ಗ ರಾಷ್ಟ್ರೀಯತೆಯ ಕಡೆ ಒಲಿಯತೊಡಗಿದ್ದು

ಪ್ರಧಾನವಾಗಿ ಈ ಎರಡು ಅಂಶಗಳು ಬಹಸಂಖ್ಯಾತ ಬ್ರಾಹ್ಮಣೇತರರನ್ನು ಅರಮನೆ ತನ್ನೆಡೆಗೆ ಸೆಳೆಯಲು ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಪಿಸಲು, ಪ್ರಮಖ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಲು, ಆ ಮೂಲಕ ರಾಜಕೀಯದಲ್ಲಿ ಮುಂಚೂಣಿಗೆ ಬರಲು ಕಾರಣವಾಗಿವೆ ಅನಿಸಿದೆ ಇರದು.

ಮೈಸೂರಿನಲ್ಲಿ ದಿವಾನರ ಆಳ್ವಿಕೆಯನ್ನು ಚರ್ಚಿಸುವಾಗ, ಇವರ ಆಳ್ವಿಕೆಯ ಕಾಲದಲ್ಲಿ ಮೈಸೂರು ಪ್ರಗತಿಯ ಹಾದಿಯತ್ತ ನಡೆಯಿತು ಎನ್ನುವ ಸಂದರ್ಭದಲ್ಲಿ ೧೯ನೆಯ ಶತಮಾನದ ಕೊನೆಯ ಮತ್ತು ೨೦ನೇ ಶತಮಾನದ ಮೊದಲ ದಶಕಗಳ ಆರ್ಥಿಕ ಬೆಳವಣಿಗೆಗಳನ್ನು ಕುರಿತು ಅಧ್ಯಯನಮಾಡುವ ಅವಶ್ಯಕತೆ ಇರುತ್ತದೆ. ಭಾರತೀಯ ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಒಳ ಸಂರಚನೆಗಳ ಮೇಲೆ ಬ್ರಿಟಿಷರ ಆಳ್ವಿಕೆಯ ಪ್ರಭಾವವನ್ನು ಗುರುತಿಸಬೇಕಾಗುತ್ತದೆ. ಈ ದಾರಿಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಯಾವ ಯಾವ ಹಳೆಯ ವೈರುಧ್ಯಗಳು ಉಳಿದುಕೊಂಡವು. ಯಾವ ಯಾವ ವೈರುಧ್ಯಗಳು ಹೊಸ ಹೊಸದಾಗಿ ಹುಟ್ಟಿಕೊಂಡವು ಎನ್ನುವುದನ್ನು ವಿಶ್ಲೇಷಿಸಬೇಕು. ಏಕೆಂದರೆ ಮೈಸೂರು ಸಂಸ್ಥಾನ ನಿಶ್ಚಿತವಾಗಿ ವಸಾಹತುಶಾಹಿ ಭಾರತೀಯ ಸಮಾಜದ ಒಂದು ಭಾಗವಾಗಿತ್ತೆನ್ನಬಹುದು. ಈ ಹಿನ್ನಲೆಯಲ್ಲಿ ಈ ಕೃತಿ ಚರ್ಚಿತಗೊಂಡಿದೆ.

ಕರ್ನಾಟಕ ಇತಿಹಾಸದ ಆಧುನಿಕ ಕಾಲವು ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರನ್ನು ಗೆದ್ದ ಗಳಿಗೆಯಿಂದ ಪ್ರಾರಂಭವಯಿತೆಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಹೈದರಾಲಿ ಹಾಗೂ ಟಿಪ್ಪುಸುಲ್ತಾನರು ದಕ್ಷಿಣ ಭಾರತದಲ್ಲಿ ಬ್ರಿಟಿಷರ ಪ್ರಭಾವವನ್ನು ತಡೆಯಲು ಪ್ರಬಲವಾಗಿ ಪ್ರತಿಭಟನೆ ತೋರಿದ ಕನ್ನಡದ ಅರಸರು. ಆದರೆ ವಸಾಹತುಶಾಹಿಗಳು ಯುದ್ಧತಂತ್ರದಲ್ಲಿ ಗೆಲುವಿನ ಹಾದಿಯಲ್ಲಿಯೇ ಇದ್ದುದರಿಂದ ಹೈದರಾಲಿಯನ್ನು ಯುದ್ಧದಲ್ಲಿ ಸೋಲಿಸಿ ಅವನ ವಿರೋಧವನ್ನು ಅಡಗಿಸಿದರು. ಹೈದರನ ಮಗ ಟಿಪ್ಪು ತಂದೆಯಂತೆಯೇ ಬ್ರಿಟಿಷರ ವಿರುದ್ಧ ಯುದ್ಧಕ್ಕೆ ನಿಂತನು. ಅವನು ಸ್ವಾತಂತ್ರ‍್ಯ ಪ್ರೇಮಿಯಾಗಿದ್ದನು. ಆದರೆ ತಂದೆ ವಿಫಲನಾದ ಕಡೆ ಮಗನು ಯಶಸ್ಸು ಕಾಣಲಾರದೆ ಹೋದನು. ವಿದೇಶಿಯರೊಂದಿಗೆ ರಾಯಭಾರಿಗಳ ತಂತ್ರದಲ್ಲಿ ಪರಿಣತನಾಗದೆ ಇದ್ದದು ಟಿಪ್ಪುವಿನ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಇತಿಹಾಸಕಾರರ ಅಭಿಪ್ರಾಯ.

ಕರ್ನಾಟಕದ ಈ ಕಾಲದ ಚರಿತ್ರೆಗೆ ಸಂಬಂಧಿಸಿದಂತೆ ನಡೆದ ರಾಜಕೀಯ ಘಟನೆಗಳು ಮೈತ್ರಿ ಮತ್ತು ಅಪಮೈತ್ರಿಗಳ ಗೋಜುಗೊಂದಲಗಳಿಂದ ತುಂಬಿಹೋಗಿದ್ದವು. ಸ್ಥಳೀಯವಾಗಿ ಅಲ್ಲಲ್ಲಿ ಪ್ರಭಾವಶಾಲಿಗಳಾಗಿ ತಲೆಯೆತ್ತಿಕೊಂಡಿದ್ದ ಪಾಳೆಯಗಾರರು ತಂತಮ್ಮ ಉಳಿವಿಗೂ ಸ್ವಪ್ರತಿಷ್ಠೆಯ ತೃಪ್ತಿಗೂ ವಿವೇಚನೆಯಿಲ್ಲದೆ ಇಂತಹ ಅಪವಿತ್ರ ಮಿತ್ರ ಸಂಬಂಧಗಳನ್ನು ಆತುರದಿಂದ ಮಾಡಿಕೊಳ್ಳುತ್ತಿದ್ದರು. ಆದುದರಿಂದ ಸಂಧಿಕಾಲವಾದ ಆಗಿನ ಚರಿತ್ರೆಯು ಸ್ಪಷ್ಟವೂ ಸಮಗ್ರವೂ ಆದ ಚಿತ್ರವನ್ನು ಕೊಡುವುದು ಕಷ್ಟ. ಆದರೂ ಕನ್ನಡ ನಾಡಿಗೆ ಸಂಬಂಧಪಟ್ಟಂತೆ ಎರಡು ಮೂರು ಮುಖ್ಯವಾದ ರಾಜಕೀಯ ಸನ್ನಿವೇಶಗಳನ್ನು ಸ್ಥೂಲವಾಗಿ ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ. ಮೊದಲನೆಯದಾಗಿ, ೧೮ನೆಯ ಶತಮಾನವು ಮುಗಿಯುವ ಹೊತ್ತಿಗೆ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಭಾರತದಲ್ಲಿ ತಮ್ಮ ವ್ಯಾಪಾರ ವೃತ್ತಿಯನ್ನು ಬದಿಗೊತ್ತಿ ವಿಜಯಿಗಳೆಂಬ ಹಮ್ಮನ್ನು ಬಹಿರಂಗವಾಗಿ ತೋರಿಸುತ್ತ ಬಂದದ್ದು. ಎರಡನೆಯದಾಗಿ, ೧೮ನೆಯ ಶತಮಾನದ ಹೊತ್ತಿಗೆ ಮರಾಠರ ಆಕ್ರಮಣ ಮನೋವೃತ್ತಿ ದಕ್ಷಿಣ ಭಾರತದ ಕಡೆಗೆ ತಿರುಗಿತ್ತು. ೧೭೨೦ರಿಂದ ಮರಾಠರ ಪ್ರಭಾವ ಉತ್ತರ ಕರ್ನಾಟಕದಲ್ಲಿ ಭದ್ರವಾಗಿ ನೆಲಗೊಂಡಿದ್ದ ಕಾಲ. ಹೈದರಾಬಾದಿನ ನಿಜಾಮನು ಉತ್ತರ ಕರ್ನಾಟಕದ ಮೇಲೆ ಆಗಾಗ ದಂಡೆತ್ತಿ ಬಂದು, ಅಷ್ಟಿಷ್ಟು ಕನ್ನಡ ನೆಲವನ್ನು ವಶಪಡಿಸಿಕೊಂಡಿದ್ದನು. ಈ ನೆಲವನ್ನು ಮುಸ್ಲಿಂ ಬಹುಮನಿ ರಾಜವಂಶದವರು ಆಳುತ್ತಿದ್ದರೆಂದು ನಿಜಾಮನಿಗೆ ಅದರ ಮೇಲೆ ಮೋಹ. ಆದರೆ ಮರಾಠರು ಉತ್ತರ ದಿಕ್ಕಿನಿಂದಲೋ ಪೂರ್ವ ದಕ್ಷಿಣದಿಂದಲೋ ಪದೇ ಪದೇ ಮುಸ್ಲಿಮರು ನಡೆಸುತ್ತಿದ್ದ ದಾಳಿಯನ್ನು ಎದುರಿಸುತ್ತಿದ್ದರು. ನಿಜಾಮನು ಬ್ರಿಟಿಷರ ಪ್ರಭಾವ ಬೆಳೆಯುತ್ತಿದ್ದುದಕ್ಕಾಗಿ ಗಾಬರಿಗೊಂಡನು. ಆದರೆ ಅದಕ್ಕಿಂತ ಹೆಚ್ಚಾಗಿ ಟಿಪ್ಪುವಿನ ರಾಜ್ಯವಿಸ್ತಾರಕ್ಕೆ ಅಂಜಿದನು. ಬ್ರಿಟಿಷರು ನಿಜಾಮನ ಈ ಅಂಜಿಕೆಯನ್ನು ಸ್ವಂತಕ್ಕೆ ಅನುಕೂಲವಾಗುವಂತೆ ಬಳಸಿಕೊಂಡರು.

ಹೀಗೆ, ಹತ್ತೊಂಬತ್ತನೆ ಶತಮಾನದ ಆದಿಭಾಗದಲ್ಲಿ ಕರ್ನಾಟಕದ ಚರಿತ್ರೆ ಆಧುನಿಕ ಯುಗದ ಹೊಸ್ತಿಲಲ್ಲಿದ್ದಾಗ, ಉತ್ತರದಲ್ಲಿ ಮರಾಠರ ಆಳ್ವಿಕೆಯಿತ್ತು, ಈಶಾನ್ಯದಲ್ಲಿ ನಿಜಾಮನ ಆಳ್ವಿಕೆಯಿತ್ತು, ದಕ್ಷಿಣದಲ್ಲಿ ಬ್ರಿಟಿಷರ ಪ್ರಭಾವ ಪ್ರಬಲವಾಗಿತ್ತು. ಮರಾಠರೂ ನಿಜಾಮನೂ ಅಂದಿನ ಸಂದರ್ಭ ಸನ್ನಿವೇಶಗಳಲ್ಲಿ ಸ್ವತಂತ್ರವಾಗಿ ಮುಂದುವರೆಯಲು ಅವಕಾಶವಿರಲಿಲ್ಲ. ಮೂರನೆಯವರಾದ ಬ್ರಿಟಿಷರು ಪ್ರವೇಶಿಸಿ, ಅವರಿಬ್ಬರಿಗೂ ಸೇರಿದ ನೆಲದಲ್ಲಿ, ಮುಖ್ಯವಾದ ಭಾಗಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ತಮ್ಮ ಪ್ರಭಾವ ಹರಡಲು ಅವಕಾಶ ಮಾಡಿಕೊಂಡರು. ಇಂತಹ ರಾಜಕೀಯ ಸನ್ನಿವೇಶದಲ್ಲಿ ಮೈಸೂರು ಸಂಸ್ಥಾನ ತನ್ನ ಏಳು ಬೀಳಿನ ಪ್ರಗತಿಗೆ ಮುಂದಾಯಿತು.