ದಿವಾನ್ ಪೂರ್ಣಯ್ಯ

ಲಕ್ಷ್ಮಮ್ಮಣ್ಣಿ ಅವರ ಪ್ರಯತ್ನದಿಂದ ಮೈಸೂರಿನಲ್ಲಿ ಒಡೆಯರ್ ಮನೆತನದ ಆಳ್ವಿಕೆ ಮತ್ತೆ ಪ್ರಾರಂಭವಾಯಿತು. ಬ್ರಿಟಿಷರ ‘ಸಹಾಯಕ ಸೈನ್ಯ ಪದ್ಧತಿ’ಯನ್ನು ಒಪ್ಪಿಕೊಂಡ ಮೈಸೂರು ಬ್ರಿಟಿಷರ ಆಶ್ರಿತ ಸಂಸ್ಥಾನಗಳಲ್ಲೊಂದಾಯಿತು. ೧೭೯೯ರಲ್ಲಿ ಬ್ರಿಟಿಷರು ಮೈಸೂರನ್ನು ಮುಮ್ಮಡಿ ಕೃಷ್ಣರಾಜರಿಗೆ ವಹಿಸಿಕೊಟ್ಟಾಗ ಅವರಿನ್ನೂ ಬಾಲಕರಾಗಿದ್ದರು. ಈ ಹಿನ್ನಲೆಯಲ್ಲಿ ಸಂಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಲಕ್ಷ್ಮಮ್ಮಣ್ಣಿ ರೆಸಿಡೆಂಟ್ ಬ್ಯಾರಿಕ್ಲೋಸ್ ಮತ್ತು ದಿವಾನ್ ಎಂಬ ಹುದ್ದೆ ನಿರ್ಮಿಸಿ ಪೂರ್ಣಯ್ಯನವರನ್ನು ನೇಮಿಸಿ ಆಳ್ವಿಕೆ ನಡೆಸಲು ಒಂದು ರೀತಿಯ ರಾಜ ಪ್ರತಿನಿಧಿ ಸಭೆಯನ್ನು ರಚಿಸಲಾಯಿತು ಅಂದು ಅರಸರ ವಶಕ್ಕೆ ಬಂದ ಮೈಸೂರು ರಾಜ್ಯವು ಇಂದಿನ ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ಮಂಡ್ಯ ಜಿಲ್ಲೆಗಳ ಪ್ರದೇಶಗಳನ್ನೊಳಗೊಂಡಿತ್ತು.

ಕ್ರಿ.ಶ. ೧೭೯೯ನೇ ಇಸವಿ ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅತ್ಯಂತ್ವ ಮಹತ್ವವಾದದ್ದು. ಈ ವರ್ಷ ಟಿಪ್ಪು ಮರಣದ ನಂತರ ಮೈಸೂರು ಮೂಲ ಅರಸರಿಗೆ ಮತ್ತೆ ಅಧಿಕಾರ ಹಸ್ತಾಂತರವಾದದ್ದು ಮುಖ್ಯ ಕಾರಣವಾಗಿತ್ತು. ಬಾಲಕರಾಗಿದ್ದ ಕೃಷ್ಣರಾಜ ಒಡೆಯರು ಪ್ರಾರಂಭದಲ್ಲಿ ಟಿಪ್ಪುಸುಲ್ತಾನರ ಸಂತತಿಯವರ ಅಸಮಾಧಾನ ಎದುರಿಸಬೇಕಾಗಿತ್ತು. ಸಂಸ್ಥಾನದಲ್ಲಿ ಅಶಾಂತತೆಯಂಥ ಸಮಯದಲ್ಲಿ ಒಡೆಯರ್ ಆಳ್ವಿಕೆಗೆ ಬೆಂಬಲವಾಗಿ ನಿಂತು, ಆಡಳಿತದಲ್ಲಿ ಭದ್ರವಾದ ತಳಹದಿ ಯನ್ನು ಹಾಕಿದವರು ಪೂರ್ಣಯ್ಯನವರು.

ಪೂರ್ಣಯ್ಯ ತಿರುಚನಾಪಳ್ಳಿ ಜಿಲ್ಲೆಯ ತಿರಕಂಬೂರೆಂಬ ಗ್ರಾಮದಲ್ಲಿ ಕ್ರಿ.ಶ. ೧೭೩೨ರಲ್ಲಿ ಜನಿಸಿದರು. ತಂದೆ ಮಾಧ್ವ ಬ್ರಾಹ್ಮಣರಾಗಿದ್ದ ಕೃಷ್ಣಾಚಾರ್ಯ, ತಾಯಿ ಲಕ್ಷ್ಮಮ್ಮ. ಪೂರ್ಣಯ್ಯನವರಿಗೆ ಹನ್ನೊಂದು ವರ್ಷ ವಯಸ್ಸಾಗಿದ್ದಾಗ ತಂದೆ ನಿಧನರಾದರು. ೧೭೬೦ರಲ್ಲಿ ಪೂರ್ಣಯ್ಯ ಅವರು ಸತ್ಯಮಂಗಲಕ್ಕೆ ತೆರಳಿದರು. ಇಲ್ಲಿ ಜೀವನೋಪಾಯಕ್ಕೆ ರಂಗಸೆಟ್ಟಿ ಯೆಂಬ ವರ್ತಕನ ಬಳಿ ಗುಮಾಸ್ತನ ಕೆಲಸಕ್ಕೆ ಸೇರಿಕೊಂಡು ಉದ್ಯೋಗ ಆರಂಭಿಸಿದರು. ರಂಗಸೆಟ್ಟಿ ಹಾಗೂ ಶ್ರೀರಂಗ ಪಟ್ಟಣದಲ್ಲಿದ್ದ ಅನ್ನದಾನಸೆಟ್ಟಿ ಎಂಬುವವರಿಗೂ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶ್ರೀರಂಗಪಟ್ಟಣದ ಅನ್ನದಾನಶೆಟ್ಟಿಯು ಹೈದರಾಲಿ ಅರಮನೆಗೆ ದಿನಸಿಯನ್ನು ಒದಗಿಸುತ್ತಿದ್ದನು. ಈ ಮೂಲಕ ಪೂರ್ಣಯ್ಯ ಹೈದರನ ವಿಶ್ವಾಸಕ್ಕೆ ಪಾತ್ರನಾಗಿ ರಾಜಾಶ್ರಯದ ಯುಗ ಆರಂಭಿಸಿದನು. ಹೈದರನ ಆಪ್ತರಲ್ಲಿ ಒಬ್ಬನಾಗಿ, ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮುಂದೆ ಟಿಪ್ಪು ಆಳ್ವಿಕೆಯಲ್ಲಿಯೂ ಸಂಪೂರ್ಣವಾಗಿ ಆಡಳಿತದ ಮಂಚೂಣಿಯಲ್ಲಿದ್ದು, ಟಿಪ್ಪು ಮರಣಾನಂತರ ವಸಾಹತುಶಾಹಿಗಳು ಮೈಸೂರು ಒಡೆಯರಿಗೆ ಹಿಂದಿರುಗಿಸಿದ ಮೈಸೂರು ಸಂಸ್ಥಾನದ ಪ್ರಧಮ ದಿವಾನರಾಗಿ ಆಳ್ವಿಕೆ ಮಾಡುವವರೆಗೆ ಅವರ ಕೊಡುಗೆ ಅಪಾರವಾಗಿದೆ.

ಪೂರ್ಣಯ್ಯ ಅವರ ದಿವಾನ್ ಪದವಿ ಹೂವಿನ ಹಾಸಿಗೆಯಂತಿರಲಿಲ್ಲ. ಇಂದಿನ ಸಮಯದಲ್ಲಿ ಸಹಜವಾಗಿ ಕಂಡುಬರಬಹುದಾದ ಟಿಪ್ಪು ವಂಶದವರ ಅಸಮಾಧಾನ, ಬ್ರಿಟಿಷ್ ವಸಾಹತುಗಳ ಭೂತದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಮುಂದುವರೆಸುತ್ತಿದ್ದ ಪ್ರಯತ್ನ, ಸಂಸ್ಥಾನದಲ್ಲಿ ತಾಂಡವವಾಡುತ್ತಿದ್ದ ಅಶಾಂತ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಸಹಜವಾಗಿಯೇ ವರ್ಷದಲ್ಲಿ ಹತ್ತಾರು ಯುದ್ಧಗಳಿಂದ ಸಂಸ್ಥಾನವು ಆರ್ಥಿಕವಾಗಿ ದುಃಸ್ಥಿತಿಗೆ ತಲುಪಿತ್ತು. ಇದರ ಜೊತೆಗೆ ಪೂರ್ಣಯ್ಯ ಅವರು ದಿವಾನರಾಗಿದ್ದುದರಿಂದ ಕೆಲವರು ಅಸೂಯೆಯಿಂದ ಇವರ ಹೆಸರಿಗೆ ಕಳಂಕ ತರಬೇಕೆಂದು ಕೆಲಸ ಮಾಡಿದವರ ವಿರುದ್ಧ ಕೆಲಸ ಮಾಡಬೇಕಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಪೂರ್ಣಯ್ಯ ಮೈಸೂರಿನ ಪ್ರಥಮ ದಿವಾನ್ ಆದರು.

ಪೂರ್ಣಯ್ಯ ದಿವಾನರಾಗಿದ್ದ ಕಾಲದಲ್ಲಿ ಸರ್ ಬ್ಯಾರಿ ಕ್ಲೋಸ್ ಬ್ರಿಟಿಷ್ ರೆಸಿಡೆಂಟ್ ಆಗಿದ್ದನು. ಶ್ರೀರಂಗಪಟ್ಟಣದ ಕೋಟೆಯಲ್ಲಿ ಬೀಡು ಬಿಟ್ಟ ಬ್ರಿಟಿಷ್ ಸೈನ್ಯಕ್ಕೆ ಲಾರ್ಡ್ ವೆಲ್ಲೆಸ್ಲಿ ನಾಯಕನಾಗಿದ್ದನು. ಈತನೆ ಮುಂದೆ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಎಂದು ಪ್ರಸಿದ್ಧಿಗೇರಿದವನು ರಾಜತಾಂತ್ರಿಕತೆಯಲ್ಲಿ ನಿಪುಣನಾಗಿದ್ದ ಪೂರ್ಣಯ್ಯ ಈ ಇಬ್ಬರು ಅಧಿಕಾರಿಗಳು ಕೊಟ್ಟ ಮಾರ್ಗದರ್ಶನದಿಂದ ಪ್ರಯೋಜನ ಪಡೆದು, ಮೈಸೂರಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ನೆಲಗೊಳಿಸಿದನು. ಆಡಳಿತದಲ್ಲಿ ಪ್ರಗತಿಪರವಾದ ಪರಿಷ್ಕಾರಗಳನ್ನು ತಂದನು. ಪೂರ್ಣಯ್ಯ ರಾಜ್ಯದ ಗಡಿಯಾಚೆ ನಡೆದ ಕೆಲವು ಗಲಭೆಗಳನ್ನು ಬ್ರಿಟಿಷ್ ಹಾಗೂ ಮೈಸೂರು ಸೈನ್ಯದ ನೆರವಿನಿಂದ ಅಡಗಿಸಿದನು. ೧೭೯೯-೧೮೦೦ರಲ್ಲಿ ದೋಂಡಿಯಾ ವಾಘನೆಂಬುವನ ದಂಗೆ, ೧೮೦೦-೧೮೦೩ ಮರಾಠ ಯುದ್ಧ, ೧೮೦೪-೦೫ರ ಚಿತ್ತೂರು ಗಲಭೆ ಮತ್ತು ೧೮೦೬ರ ವೆಲ್ಲೂರು ದಂಗೆಗಳನ್ನು ಪೂರ್ಣಯ್ಯ ಜಾಣ್ಮೆಯಿಂದ ಎದುರಿಸಿದನು.

ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಪ್ರಾರಂಭದ ೧೮೧೧ರಲ್ಲಿ ಪೂರ್ಣಯ್ಯ ದಿವಾನ್ ಹುದ್ದೆಯಿಂದ ನಿವೃತ್ತನಾದನು. ರಾಜ್ಯಕ್ಕೆ ಅವನಿಂದ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಎಳಂದೂರು ಪಟ್ಟಣವನ್ನು ಜಹಗೀರಾಗಿ ಕೊಡಲಾಯಿತು. ಪೂರ್ಣಯ್ಯ ಅಸಾಮಾನ್ಯವಾದ ಮೇಧಾಶಕ್ತಿಯನ್ನು ಪಡೆದಿದ್ದವನು. ಶಾಂತಿಕಾಲವಾಗಲಿ ಯುದ್ಧಕಾಲವಾಗಲಿ ಎರಡೂ ಸಂದರ್ಭಗಳಲ್ಲೂ ದೇಶದ ಸಮಸ್ಯೆಗಲಿಗೆ ಯುಕ್ತವಾದ ಪರಿಹಾರವನ್ನು ಕಂಡುಕೊಳ್ಳಬಲ್ಲ, ನಿತ್ಯಜಾಗರೂಕವಾದ ಜಾಣ್ಮೆ ಪಡೆದವನಾಗಿದ್ದನು. ವಸಾಹತುಶಾಹಿ ಆಳ್ವಿಕೆಯ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಪೂರ್ಣಯ್ಯ ಅವರ ಬುದ್ಧಿ ಶಕ್ತಿಯನ್ನು ಮೆಚ್ಚಿಕೊಂಡಿದ್ದರು. ದೇಶೀಯ ಸಂಸ್ಥಾನವೊಂದರಲ್ಲಿ ಪ್ರಗತಿಪರದ ಆಡಳಿತ ನಡೆಯಲು ತಳಪಾಯ ಹಾಕಿದ ಮೇಧಾವಿಯೆಂದು ಅವರನ್ನು ಕೊಂಡಾಡಿದರು. ಮೈಸೂರು ರಾಜ್ಯವು ದೂರದೃಷ್ಟಿಯುಳ್ಳ ಒಳ್ಳೆಯ ರಾಜಕಾರಣಿಯೊಬ್ಬನನ್ನು ಪಡೆದಿರುವ ಸಂಸ್ಥಾನವೆಂಬ ಕೀರ್ತಿ ಬ್ರಿಟಿಷರ ದಾಖಲೆಗಳಲ್ಲಿ ಸೇರಿಕೊಂಡಿತು.

ಆಧುನಿಕ ಮೈಸೂರಿನ ಇತಿಹಾಸವೆಂದರೆ ಕ್ರಿ.ಶ. ೧೯ನೇ ಶತಮಾನದ ಪ್ರಾರಂಭದಿಂದ ೨೦ನೇ ಶತಮಾನದ ಮಧ್ಯದವರೆಗೆ ಅಂದರೆ ಸುಮಾರು ಒಂದೂವರೆ ಶತಮಾನದಷ್ಟು ಕಾಲದಲ್ಲಿ ಮೈಸೂರು ಸಂಸ್ಥಾನವು ಪಡೆದ ಪ್ರಗತಿಯ ಕಾಲ. ಈ ಅವಧಿಯಲ್ಲಿ ಸಂಸ್ಥಾನವು ಸರ್ವತೋಮುಖ ಅಭಿವೃದ್ಧಿಯನ್ನು ಪಡೆಯುತ್ತ ಭಾರತದಲ್ಲಿ ಒಂದು ಮಾದರಿ ರಾಜ್ಯವೆನಿಸಿಕೊಂಡಿದ್ದು ಇಂದು ಇತಿಹಾಸ. ಮೈಸೂರು ಸಂಸ್ಥಾನದಲ್ಲಿ ಕಂಡುಬರುತ್ತಿದ್ದ ಅಭಿವೃದ್ಧಿಪರ ಆಡಳಿತ ಪದ್ಧತಿ, ಕೈಗಾರಿಕಾ ಕ್ರಾಂತಿ, ಗ್ರಾಮೀಣಾಭಿವೃದ್ಧಿ, ಕಲಾಭಿವೃದ್ಧಿ, ಹಸಿರು ಕ್ರಾಂತಿ ಹಾಗೂ ಜನಪರ ಅಭಿವೃದ್ಧಿಪರ ಕೆಲಸಗಳಿಂದಾಗಿ ದೇಶ ಹಾಗೂ ವಿದೇಶೀಯ ಚಿಂತಕರು ಇತ್ತ ಮುಖಮಾಡುವಂತೆ ಮಾಡಿತ್ತು. ಸಂಸ್ಥಾನದ ಈ ಪ್ರಗತಿಗೆ ನಾಲ್ವಡಿ ಕೃಷ್ಣರಾಜರ ಜನಪರ ಕಾಳಜಿ ಹಾಗೂ ಅಭಿವೃದ್ಧಿಪರ ಕೆಲಸಗಳು ಕಾರಣವಾದವು. ೧೮೧೮ರಲ್ಲಿ ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷರು ತಮ್ಮ ನೇರ ಆಳ್ವಿಕೆಯ ಅರ್ಧ ಶತಮಾನದ ನಂತರ ಮೈಸೂರು ರಾಜಮನೆತನದವರಿಗೆ ಪುನ: ವಹಿಸಿಕೊಟ್ಟರು. ಒಂದರ್ಥದಲ್ಲಿ ಆಗ ಸಂಸ್ಥಾನ ಎಲ್ಲ ವಿಧದಲ್ಲಿಯೂ ಹೊಸದಾಗಿ ನಿರ್ಮಿಸುವ ಅವಶ್ಯಕತೆ ಕಂಡುಬರುತ್ತಿತ್ತು. ಈ ಕಾರ್ಯಕ್ಕೆ ಸಂಪೂರ್ಣವಾಗಿ ನೆರವಾದವರೆಂದರೆ ದಿವಾನ್ ರಂಗಾಚಾರ್ಲು.

ಶೆಟ್ಟಿಪುಣ್ಯಂ ವೀರವಳ್ಳಿ ರಂಗಾಚಾರ್ಲು

ಚಾಮರಾಜ ಒಡೆಯರು ಸಂಸ್ಥಾನದ ಆಳ್ವಿಕೆಯನ್ನು ಪ್ರಾರಂಭಿಸಿದ ಮೇಲೆ ದಿವಾನರನ್ನಾಗಿ ಸಿ. ರಂಗಾಚಾರ್ಲು ಅವರನ್ನು ನೇಮಿಸಿಕೊಂಡರು. ನಂತರ ದಿವಾನರೊಂದಿಗೆ ಚಾಮರಾಜ ಒಡೆಯರ್ ಅವರು ೧೮೮೧ರಿಂದ ೧೮೮೨ರ ವರೆಗೆ ರಾಜ್ಯ ಸಂಚಾರ ಮಾಡಿ ಸಮಸ್ಯೆಗಳನ್ನು ಅಧ್ಯಯನ ಮಾಡಿದರು. ಸಂಸ್ಥಾನದಲ್ಲಿ ಆಡಳಿತವನ್ನು ಭದ್ರಗೊಳಿಸಲು ಪ್ರಜಾ ಮುಖಂಡರನ್ನೂ ಪರಿಚಯ ಮಾಡಿಕೊಂಡರು. ಅವರು ಹೋದಡೆಯಲ್ಲೆಲ್ಲ ಅಸಂಖ್ಯಾತ ಪ್ರಜೆಗಳು ಗೌರವ ತೋರಿಸಿ ಸ್ವಾಗತಿಸಿದರು. ಅವರ ಪ್ರವಾಸವನ್ನು ಮೈಸೂರು ಅರಸರ ಧೀರ್ಘ ಮೆರವಣಿಗೆ ಎಂದು ವರ್ಣಿಸಲಾಗಿದೆ. ಚೀಫ್ ಕಮಿಷನರ್ ಅವರು ಭಾರತ ಸರಕಾರದೊಡನೆ ಪತ್ರವ್ಯವಹಾರ ನಡೆಸಿ, ಮೈಸೂರಿನ ಮುಂದಿನ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ವಿವರ ಹೇಗಿರಬೇಕೆಂದು ನಿರ್ಧಾರ ಮಾಡಿದುದಲ್ಲದೆ, ಬ್ರಿಟಿಷ್ ಕಮೀಷನರುಗಳಿಂದ ಆಚರಣೆಗೆ ಬಂದಿದ್ದ ಪ್ರಧಾನ ಅಂಶಗಳು ಮುಂದಯವರಿಯಬೇಕೆಂದೂ ತೀರ್ಮಾನ ಕೈಗೊಂಡಿತ್ತು.

ಹತ್ತನೆಯ ಚಾಮರಾಜ ಒಡೆಯರಿಗೆ ೧೮೮೧ನೆಯ ಮಾರ್ಚ್ ತಿಂಗಳಿಗೆ ೧೮ ವರ್ಷ ತುಂಬಿದಾಗ ಅವರನ್ನು ಸಿಂಹಾಸನಾರೂಢರನ್ನಾಗಿ ಮಾಡಿತು. ವಸಾಹತುಶಾಹಿಗಳ ರಾಜ್ಯಾಧಿಕಾರ ವರ್ಗಾವಣೆಯ ಪತ್ರದ ಷರತ್ತುಗಳಿಗನುಗುಣವಾಗಿ ರಾಜರಿಗೆ ಆಡಳಿತ ಅಧಿಕಾರವನ್ನು ಕೊಡಲಾಯಿತು. ವಸಾಹತುಗಳ ಷರತ್ತುಗಳ ಪ್ರಕಾರ ಬ್ರಿಟಿಷರ ಪರಮಾಧಿಕಾರವು ಹೆಚ್ಚಿದಂತಾಯಿತು. ಸೈನ್ಯವನ್ನು ಹೆಚ್ಚಿಸಿಕೊಳ್ಳುವುದು, ರೈಲ್ವೆ ಟೆಲಿಗ್ರಾಫ್ ನಾಣ್ಯ ದಂಡಿನ ಪ್ರದೇಶದ ಬೆಂಗಳೂರಿನ ೧೩ ಚ.ಮೈ. ಪ್ರದೇಶದ ಕಂಟೋನ್ಮೆಂಟ್ ಆಗಲೇ ಬ್ರಿಟಿಷರ ಸ್ವಾಧೀನದಲ್ಲಿದ್ದುದು ಇವುಗಳ ಮೇಲೆ ಮಹಾರಾಜರಿಗೆ ಯಾವ ಅಧಿಕಾರವಿರಬಾರದೆಂಬ ಷರತ್ತು ಮುಖ್ಯವಾಗಿದ್ದವು. ರಾಜ್ಯದೊಳಕ್ಕೆ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದಕ್ಕಾಗಲಿ, ಅವುಗಳನ್ನು ಉತ್ಪನ್ನ ಮಾಡಿಕೊಳ್ಳುವುದಕ್ಕಾಗಲಿ ಹಾಗೂ ಇತರ ರಾಜ್ಯಗಳೊಡನೆ ಪತ್ರವ್ಯವಹಾರ ನಡೆಸುವುದಕ್ಕಾಗಲಿ ಹಾಗೂ ಭಾರತೀಯರಲ್ಲದವರನ್ನು ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದಕ್ಕಾಗಲಿ ಅಥವ ವೈಸರಾಯರ ಅನುಮತಿಯಿಲ್ಲದೆ ಆಡಳಿತ ಕ್ರಮವನ್ನು ಬದಲಾಯಿಸುವುದಕ್ಕಾಗಲಿ ಸಂಸ್ಥಾನದ ಅರಸರಿಗೆ ಅವಕಾಶವಿರಲಿಲ್ಲ. ಸಿಂಹಾಸನ ಉತ್ತರಾಧಿಕಾರತ್ವದ ಬಗೆಗೆ ವೈಸರಾಯ್ ಅವರ ಅನುಮತಿ ಪಡೆಯಬೇಕಾಗಿತ್ತು. ಉಪ್ಪು ಮತ್ತು ಅಫೀಮು ಬ್ರಿಟಿಷ್ ಸರಕಾರದ ಗುತ್ತಿಗೆಯ ಸೊತ್ತುಗಳಾಗಿ ಮುಂದುವರಿದವು. ವಾರ್ಷಿಕ ಪೊಗದಿಯು ೨೪.೫ ಲಕ್ಷಕ್ಕೆ ಏರಿಸಲ್ಪಟ್ಟಿತ್ತು. ಇದು ರಾಜ್ಯದ ರಕ್ಷಣೆಗಾಗಿ ಸೈನಿಕರ ಬಲವನ್ನು ಒಂದು ಸಾವಿರಕ್ಕೆ ಹೆಚ್ಚಿಸಿದುದರಿಂದ ಉಂಟಾದ ಅಧಿಕ ವೆಚ್ಚಕ್ಕೋಸ್ಕರವಾಗಿತ್ತು ಎನ್ನಬಹುದು. ರಂಗಾಚಾರ್ಲು ಅವರ ಅವಧಿಯ ಸಂದರ್ಭದಲ್ಲಿ ಮೈಸೂರಿನ ಚೀಫ್ ಕಮಿಷನರ್ ಮೈಸೂರಿನ ರೆಸಿಡೆಂಟ್ ಆಸ್ಥಾನದಲ್ಲಿ ಗೌರ್ನರ್ ಜನರಲ್‌ನ ಪ್ರತಿನಿಧಿ ಮತ್ತು ಕೊಡಗಿನ ಚೀಫ್ ಕಮೀಷನರ್ ಎಂದು ನಾಮಕರಣ ಹೊಂದಿದನು. ಇಬ್ಬರು ಸಲಹೆಗಾರರಿಂದ ಕೂಡಿದ ದಿವಾನರು ರಾಜ್ಯದ ಆಡಳಿತಾಂಗದ ಮುಖ್ಯಸ್ಥರಾಗಿ ಕೆಲಸಮಾಡಲು ಅವಕಾಶವಾಯಿತು. ಇಂಥ ಸಂದರ್ಭದಲ್ಲಿ ಮದರಾಸು ಪ್ರಾಂತದಲ್ಲಿ ಡೆಪ್ಯೂಟಿ ಕಲೆಕ್ಟರಾಗಿ ಸೇವೆ ಸಲ್ಲಿಸಿ, ೧೮೬೮ರಲ್ಲಿ ಮೈಸೂರು ಸಂಸ್ಥಾನದ ಸೇವೆಗೆ ಬಂದಿದ್ದ ಶ್ರೀ ರಂಗಾಚಾರ್ಲು ಅವರು ದಿವಾನರಾಗಿ ನೇಮಕಗೊಂಡಿದ್ದರು. ಅವರು ಹೊಂದಿದ್ದ ಹಣಕಾಸಿನ ವ್ಯವಹಾರ, ಜ್ಞಾನ, ಆಡಳಿತ ಸಾಮರ್ಥ್ಯ, ಉದಾರ ದೃಷ್ಟಿಗಳು ರಾಜ್ಯಕ್ಕೆ ಉಪಯುಕ್ತವಾಗಿದ್ದವು. ಭಾರತದಲ್ಲಿದ್ದ ಪ್ರಥಮವೆನ್ನಿಸಿದ ಜಮೀನುದಾರರು ಮತ್ತು ವರ್ತಕರುಗಳಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆಯೊಂದನ್ನು ಜಾರಿಗೆ ತಂದರು. ಸಭೆಯ ಪ್ರಥಮ ಅಧಿವೇಶನ ೧೮೮೧ರ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದಲ್ಲಿ ನಡೆಯಿತು. ಅದರಲ್ಲಿ ೧೪೪ ಮಂದಿ ಆಹ್ವಾನಿತರಿದ್ದರು. ಸರಕಾರದ ಧ್ಯೇಯಧೋರಣೆಗಳು, ಅದಕ್ಕನುಗುಣವಾಗಿ ಕೈಗೊಂಡ ಕಾರ್ಯಕ್ರಮಗಳು ಸಭೆಯ ಮುಂದೆ ಮಂಡಿಸಲ್ಪಟ್ಟಿದ್ದವು. ಅದೊಂದು ಶಾಸನಬದ್ಧ ಸಂಸ್ಥೆಯಲ್ಲದಿದ್ದರೂ ಭಾರತದ ಇಂದಿನ ಪ್ರಜಾಪ್ರಭುತ್ವದ ದಿಶೆಯಲ್ಲಿ ಪ್ರಥಮ ಹೆಜ್ಜೆಯಾಗಿತ್ತು. ಕೇಂದ್ರದಲ್ಲಿ ಲಾರ್ಡ್ ರಿಪ್ಟನ್ ವ್ಯಾಸರಾಯರಾಗಿದ್ದ ಕಾಲದಲ್ಲಿ, ವಸಾಹತು ಭಾರತದಲ್ಲಿ ಕೈಗೊಳ್ಳಲಾಗಿದ್ದ ಸ್ಥಾನೀಯ ಸ್ವಯಂ ಆಡಳಿತ ನಿಬಂಧನೆಗಳಿಗೆ ಮಾರ್ಗದರ್ಶಕವಾಯಿತೆಂದು ಹೇಳಲಾಗಿದೆ. ಹಿಂದಿನ ವರ್ಷಗಳಲ್ಲಿ ಭೀಕರ ಕ್ಷಾಮ ಮತ್ತು ಅನಾವೃಷ್ಟಿಯ ಪರಿಣಾಮವಾಗಿ ಸಂಸ್ಥಾನದಲ್ಲಿ ಅಸ್ತವ್ಯಸ್ತವಾಗಿದ್ದ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಗೊಳಿಸುವುದೇ ದಿವಾನ್ ರಂಗಾಚಾರ್ಲು ಅವರ ಮುಖ್ಯ ಸಮಸ್ಯೆಯಾಗಿತ್ತು. ೧೮೮೨ರಲ್ಲಿ ಬೆಂಗಳೂರು-ಮೈಸೂರು ರೈಲು ಮಾರ್ಗ ಆರಂಭವಾಗಿ ಹೆಚ್ಚಿನ ಅನುಕೂಲವಾಗಿತ್ತು. ಅದೇ ವರ್ಷ ದಿವಾನರು ಬೆಂಗಳೂರಿನಿಂದ ತಿಪಟೂರಿಗೆ ರೈಲು ಮಾರ್ಗವನ್ನು ನಿರ್ಮಿಸುವ ಕಾರ್ಯ ಪ್ರಾರಂಭಿಸಿದರು. ಇವರ ದಿವಾನ ಪದವಿಯ ಆಳ್ವಿಕೆಯು ಎರಡು ವರ್ಷಕ್ಕೆ ಕೊನೆಗೊಂಡಿತು. ೧೮೮೩ರ ಆದಿ ಭಾಗದಲ್ಲಿ ಆಗ ಜಿಲ್ಲಾಧಿಕಾರಿಗಳಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರು ಮುಂದಿನ ದಿವಾನರಾಗಿ ನೇಮಿಸಲ್ಪಟ್ಟರು.

ಕೆ. ಶೇಷಾದ್ರಿ ಅಯ್ಯರ್

ಕೆ. ಶೇಷಾದ್ರಿ ಅಯ್ಯರ್ ಅವರು ೧೮೬೮ರಲ್ಲೇ ಮೈಸೂರಿನ ರಾಜ್ಯದ ಸೇವೆಗೆ ಸೇರಿದ್ದರು. ರಾಜ್ಯದ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸುವುದೇ ಅವರಿಗೆ ಮುಖ್ಯ ಕರ್ತವ್ಯವಾಯಿತು. ದಿವಾನರಾದಾಗ ಸಂಸ್ಥಾನಕ್ಕೆ ಹೆಚ್ಚಿನ ಆದಾಯ ಬರಬಹುದಾಗಿದ್ದ ಬೆಂಗಳೂರು ದಂಡಿನ ಪ್ರದೇಶದ ಅಧಿಕ ಆದಾಯವನ್ನು ಮೈಸೂರು ಸರಕಾರಕ್ಕೆ ಕೊಡಬೇಕೆಂದು ವಸಾಹತುಶಾಹಿಗಳನ್ನು ಅವರು ಒತ್ತಾಯ ಮಾಡಿದರು. ಹತ್ತು ಲಕ್ಷ ಐವತ್ತು ಸಾವಿರ ಹೆಚ್ಚು ಮಾಡಲಾಗಿದ್ದ ಪೊಗದಿ ಹಣವನ್ನು ೧೮೬೬ರವರೆಗೆ ಮನ್ನ ಮಾಡಿಸಿದರು. ಆದರೆ, ಅವರು ೧೮೯೬ರ ವರೆಗೂ ಅದನ್ನು ಮನ್ನ ಮಾಡಬೇಕೆಂದು ವಾದಿಸಿದ್ದರು. ೧೮೮೪ರಲ್ಲಿ ಬೆಂಗಳೂರಿನಿಂದ ಗುಬ್ಬಿಯವರೆಗೂ, ೧೮೮೯ರಲ್ಲಿ ಹರಿಹರ ಮತ್ತು ೧೮೯೩ರರಲ್ಲಿ ಹಿಂದೂಪುರದವರೆಗೂ ರೈಲುಮಾರ್ಗವನ್ನು ವಿಸ್ತರಿಸಿದರು. ೧೮೯೧ರಲ್ಲಿ ಮೈಸೂರು ನಂಜನಗೂಡು ರೈಲುಮಾರ್ಗವೂ, ೧೮೯೩ರಲ್ಲಿ ಕೋಲಾರ ಚಿನ್ನದ ಗಣಿ (KGF) ರೈಲುಮಾರ್ಗವೂ ನಿರ್ಮಾಣವಾದವು. ಅರಣ್ಯದ ಆದಾಯವನ್ನು ಹೆಚ್ಚಿಸಲು ವಿಶಾಲವಾದ ಕಾಡುಗಳನ್ನು ಬೆಳೆಸಲಾಯಿತು. ಚಿನ್ನದ ಗಣಿ ಉದ್ಯಮದ ಮೇಲೆ ಹಾಕಿದ ಶೇ.೫ ರಷ್ಟು ರಾಷ್ಟ್ರ ಆದಾಯಕ್ಕಾಗಿ ೧೮೮೬-೮೭ರ ಸಾಲಿನಲ್ಲಿ ಪ್ರಥಮ ಬಾರಿಗೇ ರೂ.೪೭,೦೦೦ ಸರಕಾರಕ್ಕೆ ವರಮಾನ ಬರುವಂತಾಯಿತು. ೧೮೮೪ರಿಂದ ಮೈಸೂರಿನ ಶ್ರೇಷ್ಟ ನ್ಯಾಯಾಲಯಕ್ಕೆ ಹೆಚ್ಚು ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಅದೇ ವರ್ಷ ತಾಲ್ಲೂಕು ಮಂಡಲಿಗಳು ಸ್ಥಾಪಿತವಾದವು. ಹಳೆಯ ಕಾಲದ ಅಂಚೆ ಪದ್ಧತಿಯನ್ನು ೧೮೮೯ರಲ್ಲಿ ವಸಾಹತುಶಾಹಿಗಳ ಅಂಚೆ ಪದ್ಧತಿಗೆ ಸೇರಿಸಲಾಯಿತು. ಆಡಳಿತ ಸೇವೆಯನ್ನು ಸಮರ್ಥವಾಗಿ ೧೮೯೧ರಲ್ಲಿ ಮೈಸೂರ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಆರಂಭಿಸಲಾಯಿತು. ಅದು ಭಾರತದ ಎಲ್ಲ ಪ್ರಜೆಗಳಿಗೂ ಅನ್ವಯಿಸಿತ್ತು. ಆದರೆ ಇದು ಮೈಸೂರಿನ ಪ್ರಜಾಪ್ರತಿನಿಧಿಯ ಸಭೆಯಲ್ಲಿ ವಿರೋಧಕ್ಕೆ ಗುರಿಯಾಯಿತು. ಮೈಸೂರಿನ ಸಾರ್ವಜನಿಕ ಜೀವನದಲ್ಲಿಯೂ ವೃತ್ತಿ ಪತ್ರಿಕೋದ್ಯಮದಲ್ಲಿಯೂ ಪ್ರತಿಷ್ಠಿತರಾಗಿ, ಪಿತಾಮಹ ಎಂದು ಹೆಸರಾಂಕಿತ ಎಂ. ವೆಂಕಟಕೃಷ್ಣಯ್ಯನವರ ನೇತೃತ್ವದಲ್ಲಿ ಹಲವಾರು ಸದಸ್ಯರು ಇದನ್ನು ವಿರೋಧಿಸಿದರು. ಅವರ ವಾದಗಳು ಸ್ಥಳೀಯ ಪ್ರತಿಭಾವಂತರಿಗೆ ರಕ್ಷಣೆ ನೀಡಬೇಕೆಂಬ ಉದ್ಧೇಶದಿಂದ ಕೂಡಿದ್ದವು ಎಂದು ಸಮಕಾಲೀನ ಚರಿತ್ರೆಕಾರರು ತಿಳಿಸುತ್ತಾರೆ. ಈ ದೃಷ್ಟಿಯಿಂದ ದಿವಾನರ ಆನೇಕ ಕಾರ್ಯಧೋರಣೆಗಳು ಟೀಕೆಗೆ ಗುರಿಯಾದವು.

ಶೇಷಾದ್ರಿ ಅಯ್ಯರ್ ದಿವಾನರಾಗಿದ್ದ ಕಾಲದ ಮೈಸೂರಿನ ರಾಜಕೀಯವನ್ನು ಮೈಸೂರಿನ ಬ್ರಾಹ್ಮಣರು ಮತ್ತು ಮೈಸೂರಿಗೆ ಹೊರಗಿನಿಂದ ಬಂದ ಬ್ರಾಹ್ಮಣರೊಂದಿಗೆ ನಡೆದ ಹೋರಾಟವೆನ್ನಬಹುದು. ಅದೇ ವರ್ಷ ಸರಕಾರಿ ನೌಕರರ ಅನುಕೂಲಕ್ಕಾಗಿ ಜೀವವಿಮಾ ಪದ್ಧತಿ ಆಚರಣೆಗೆ ಬಂದಿತು. ನೀರಾವರಿ ಅಭಿವೃದ್ದಿ ಹಾಗೂ ವ್ಯವಸಾಯಕ್ಕೆ ಹೆಚ್ಚಿನ ಗಮನ ನೀಡಲಾಯಿತು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿರುವ ಮಾರಿಕಣಿವೆ ಯೋಜನೆ ನಿರ್ಮಾಣ ಮಾಡಲಾಯಿತು. ೧೮೮೬ರಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ, ಮೈಸೂರು ನಗರದಲ್ಲಿ ಜಾವಾ ಬೈಕ್ ಕೈಗಾರಿಕೆ ನಿರ್ಮಾಣಗೊಂಡಿತ್ತು ಮತ್ತು ಕೃಷಿ ವಸ್ತುಗಳ ಪ್ರದರ್ಶನ ನಡೆಯಿತು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನ ಕೊಡಲಾಯಿತು. ಆಗ ಆರಂಭವಾದ ಮಹಾರಾಣಿ ಬಾಲಿಕಾ ಪ್ರೌಢಶಾಲೆ, ನಂತರ ೧೯೦೧ರಲ್ಲಿ ಮಹಾರಾಣಿ ಕಾಲೇಜಾಗಿ ಬೆಳೆಯಿತು. ೧೮೯೦ರಲ್ಲಿ ಬಿ.ಎಲ್.ರೈಸ್ ಅವರ ಮುಖಂಡತ್ವದಲ್ಲಿ ಆರಂಭವಾದ ಶಾಸನ ಇಲಾಖೆ ರಾಜ್ಯದಲ್ಲಿ ದೊರಕಿದ ಶಿಲಾಶಾಸನಗಳನ್ನು ಶೇಖರಿಸಿ ಪ್ರಕಟಿಸುವ ಬಗೆಗೆ ಒಂದು ಬಹು ಮುಖ್ಯ ಹೆಜ್ಜೆ ಇಡಲಾರಂಭಿಸಿದ್ದು ಶೇಷಾದ್ರಿ ಅವರ ಕಾಲದಲ್ಲಿಯೇ. ಅದೇ ವರ್ಷ ಮೈಸೂರಿನಲ್ಲಿ ಪ್ರಾಚ್ಯಪುಸ್ತಕಗಳ ಭಂಡಾರ ಆರಂಭವಾಗಿ ಅಮೂಲ್ಯ ಹಸ್ತಪ್ರತಿಗಳ ಸಂಗ್ರಹದ ಕಾರ್ಯವೂ ಮುಂದುವರೆಯಿತು. ಚಾಮರಾಜ ಒಡೆಯರ್ ಅವರು ಕನ್ನಡ ಮತ್ತು ಸಂಸ್ಕೃತಿಗಳ ಪ್ರೇಮಿಯಾಗಿದ್ದರು. ಅವರು ವಿದ್ವಾಂಸರಿಗೆ ಹೆಚ್ಚಿನ ಆಶ್ರಯ ನೀಡಿದರು. ೧೦ನೇ ಚಾಮರಾಜ ಒಡೆಯರು ಕಂಠರೋಗಕ್ಕೆ ತುತ್ತಾಗಿ ೧೮೯೪ರಲ್ಲಿ ತಮ್ಮ ೩೨ನೇ ವಯಸ್ಸಿನಲ್ಲಿ ಕಲ್ಕತ್ತಾದಲ್ಲಿ ಮರಣ ಹೊಂದಿದರು. ನಂತರ ಅಧಿಕಾರಕ್ಕೆ ಬಂದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಆಗ ಹತ್ತು ವರ್ಷ ವಯಸ್ಸಾಗಿತ್ತು.

ನಾಲ್ವಡಿ ಕೃಷ್ಣರಾಜರು ಪ್ರಾಪ್ತವಯಸ್ಸಿಗೆ ಬರುವವರೆಗೂ ಅವರ ತಾಯಿ ವಾಣಿವಿಲಾಸ ಸನ್ನಿಧಾನ ಎಂದು ಹೆಸರಾಗಿದ್ದ ಕೆಂಪರಾಜಮ್ಮಣ್ಣಿಯವರು ರಾಜ ಪ್ರತಿನಿಧಿಯಾಗಿ ದಿವಾನರು ಮತ್ತು ಸಲಹಾ ಸಮಿತಿ ಸದಸ್ಯರ ನೆರವಿನಿಂದ ರಾಜ್ಯಭಾರ ಮಾಡಿದರು. ಅವರ ರಾಜಪ್ರತಿನಿಧಿತ್ವದ ಕಾಲದಲ್ಲಿ ಕೈಗೊಂಡ ಗಮನಾರ್ಹ ಕಾರ್ಯಗಳಲ್ಲಿ ಭೂಗರ್ಭ ಶೋಧನೆಯ ಇಲಾಖೆಯನ್ನು ೧೮೯೪ರಲ್ಲಿ ಸ್ಥಾಪಿಸಿದುದು ಮುಖ್ಯವಾದುದು. ಈ ಇಲಾಖೆ ರಾಜ್ಯದ ಖನಿಜ ಸಂಪನ್ಮೂಲಗಳನ್ನು ಹೊರತೆಗೆಯುವ ಸಾಧ್ಯತೆಗಳ ಬಗೆಗೆ ವ್ಯವಸ್ಥಿತವಾದ ಪರಿಶೀಲನೆ ನಡೆಸಿತು ಹಾಗೆಯೇ ಕೃಷಿ ಇಲಾಖೆಯೂ ಆರಂಭವಾಯಿತು. ಲೋಕೋಪಯೀಗಿ ಕಾರ್ಯಗಳಿಗೆ ವಿಶೇಷ ಗಮನ ನೀಡಲಾಯಿತು. ೧೯೮೮ರಲ್ಲಿ ಬೀರೂರು-ಶಿವಮೊಗ್ಗ ರೈಲುಮಾರ್ಗ ಆರಂಭವಾಯಿತು. ೧೮೯೭-೯೮ರಲ್ಲಿ ರಾಜ್ಯದಲ್ಲೆಲ್ಲ ಪ್ರಧಾನವಾಗಿ ಬೆಂಗಳೂರು ನಗರದಲ್ಲಿ ಪ್ಲೇಗಿನ ಪೀಡೆಯಿಂದ ಹೆಚ್ಚಿನ ಜನ ಮರಣಹೊಂದಿದರು. ಈ ರೋಗದಿಂದ ಜನರನ್ನು ಪ್ರತ್ಯೇಕವಾಗಿ ವಾಸಿಸುವುದಕ್ಕೆ ಅನುಕೂಲ ಮಾಡಲು ಬೆಂಗಳೂರಿನಲ್ಲಿ ಹೊಸದಾಗಿ ಮಲ್ಲೇಶ್ವರಂ ಮತ್ತು ಬಸವನಗುಡಿ ಬಡಾವಣೆಗಳು ನಿರ್ಮಾಣಗೊಂಡವು. ಆದರೆ ಮುಖ್ಯವಾದ ವಿಷಯವೆಂದರೆ ಶಿವನಸಮುದ್ರದಲ್ಲಿ ಕಾವೇರಿ ಜಲಪಾತವನ್ನು ಉಪಯೋಗಿಸಿಕೊಂಡು ಜಲವಿದ್ಯುತ್ ಕೇಂದ್ರದಿಂದ ಕೋಲಾರ ಚಿನ್ನದ ಗಣಿಗೂ, ಅನಂತರ ೧೯೦೫ರಲ್ಲಿ ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಕಾರ್ಯ ಆರಂಭಿಸಲಾದದ್ದು. ಭಾರತದಲ್ಲಿ ವಿದ್ಯುತ್ ಪಡೆದ ನಗರಗಳಲ್ಲಿ ಬೆಂಗಳೂರು ಮೊದಲನೆಯದಾಯಿತು. ಅಂದಿಗೆ ಇದು ಭಾರತದಲ್ಲೇ ಅತ್ಯಂತ ಉದ್ದವಾದ ಪ್ರಥಮ ವಿದ್ಯುದ್ವಾಹಕ ಸರಣಿಯಾಗಿತ್ತು ಹಾಗೂ ಮಹತ್ವದ ಸಾಧನೆಯಾಗಿತ್ತು

ಮೈಸೂರು ಸಂಸ್ಥಾನದ ನಗರ ಮತ್ತು ಹಲವು ಗ್ರಾಮಗಳಲ್ಲಿ ಬೀದಿ ಮತ್ತು ಮನೆಗಳಲ್ಲಿ ಬೆಳಗುತ್ತಿದ್ದ ವಿದ್ಯುತ್ ದೀಪಗಳನ್ನು ಕಾರ್ಖಾನೆಗಳಲ್ಲಿ ಬೃಹದಾಕಾರದ ಯಂತ್ರಗಳನ್ನು ನೋಡಿದೊಡನೆಯೇ ಇವುಗಳಿಗೆಲ್ಲ ಮೂಲಾರ್ಥ ವಿದ್ಯುಚ್ಛಕ್ತಿ ಎಂಬುದು ತಿಳಿದುಬರುತ್ತದೆ. ಶೇಷಾದ್ರಿ ಅಯ್ಯರ್ ಅವರ ದೂರದೃಷ್ಟಿಯ ಫಲ ಇದರಿಂದ ಎದ್ದು ಕಾಣುತ್ತದೆ. ಪ್ರಜಾಪ್ರತಿನಿಧಿ ಸಭೆಯು ಸಂಸ್ಥಾನದಲ್ಲಿ ಹೆಚ್ಚಿನ ಪ್ರಾಮಾಣಿಕತೆಗಳಲ್ಲಿಯೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಆರಂಭದ ವರ್ಷಗಳಲ್ಲಿ ಅದು ಗೌರವಾನ್ವಿತ ಮನವಿದಾರರ ಕೂಟವಾಗಿತ್ತು ಎನ್ನಬಹುದು. ೧೮೯೭ರ ಹೊತ್ತಿಗೆ ಸದಸ್ಯರ ಹೆಸರುಗಳು ಸರಕಾರಿ ದಾಖಲೆಗಳಲ್ಲಿ ಸೇರಿಕೊಂಡು ಅವರ ಸ್ಥಾನಮಾನಗಳು ಮನ್ನಣೆಗೆ ಪಾತ್ರವಾಗಿದ್ದವು. ೧೮೯೧ರಲ್ಲಿ ಚುನಾವಣೆಯ ಪದ್ಧತಿ ಜಾರಿಗೆ ಬಂದಿತು. ಹೆಚ್ಚು ಆಸ್ತಿ ಹಾಗೂ ಸರ್ಕಾರಕ್ಕೆ ಹೆಚ್ಚಿನ ಲೇವಿ ಪಾವತಿಸುವವರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಪದವೀಧರರೂ ಮತ ನೀಡುವ ಹಕ್ಕನ್ನು ಹೊಂದಿದ್ದರು. ಇದು ಬ್ರಿಟಿಷ್ ಪ್ರಾಂತ್ಯಗಳಲ್ಲಿ ನ್ಯಾಯವಿಧೇಯಕ ಸಭೆಗಳು ಸ್ಥಾಪನೆಯಾಗುವುದಕ್ಕೆ ಒಂದು ವರ್ಷ ಮುಂಚೆಯೇ ನಡೆದಿತ್ತು. ೧೮೯೪ರಲ್ಲಿ ಸದಸ್ಯರ ಅವಧಿ ಮೂರು ವರ್ಷಗಳೆಂದು ನಿರ್ಧಾರವಾಯಿತು. ಇದರಿಂದ ಪ್ರಜಾಪ್ರತಿನಿಧಿಗಳೆನಿಸಿಕೊಂಡವರು ತಮ್ಮ ಕಾರ್ಯವನ್ನು ಹೆಚ್ಚು ಶ್ರದ್ಧೆಯಿಂದ ನಿರ್ವಹಿಸಲು ಕಾರಣವಾಯಿತು.

ಶೇಷಾದ್ರಿ ಅಯ್ಯರ್ ಅವರ ಸುಧೀರ್ಘ ಹದಿನೆಂಟು ವರ್ಷಗಳ ಕಾಲದ ದಿವಾನ್ ಪದವಿಯ ಅವಧಿಯಲ್ಲಿ ಮೊದಲ ಹನ್ನೊಂದು ವರ್ಷಗಳ ಕಾಲ ಚಾಮರಾಜೇಂದ್ರ ಒಡೆಯರ್ ಅವರು ರಾಜರಾಗಿದ್ದರೆ, ನಂತರ ರೀಜೆಂಟರಾದ ವಾಣಿವಿಲಾಸ ಅವರ ಬೆಂಬಲ ಇವರಿಗೆ ದೊರಕಿತ್ತು. ಶೇಷಾದ್ರಿ ಅಯ್ಯರ್ ಅವರು ದಿವಾನ್ ಪದವಿಗೆ ಬಂದ ಮೊದಲನೆಯ ಮೂರು ವರ್ಷಗಳ ಕಾಲ ದೇಶದ ಆರ್ಥಿಕ ಸ್ಥಿತಿಯು ಅಸಮರ್ಪಕವಾಗಿಯೇ ಇತ್ತು. ವರಮಾನ ಅತ್ಯಂತ ಕಡಿಮೆಯಾಗಿತ್ತು. ಅಭಿವೃದ್ಧಿ ಪರ ಕೆಲಸಗಳಾದ ರೈಲು ಹಳಿಗಳ ನಿರ್ಮಾಣ, ನೀರಾವರಿ, ಕೃಷಿ ಕೈಗಾರಿಕೆಗಳ ಪ್ರಗತಿಗೆ ತಗಲುವ ವೆಚ್ಚವು ಹೆಚ್ಚಾಗಿತ್ತು. ಇದರ ನಡುವೆ ೧೮೮೪ರಲ್ಲಿ ಸಂಸ್ಥಾನದ ಕೆಲವು ಪ್ರದೇಶಗಳಲ್ಲಿ ಸಂಭವಿಸಿದ ಕ್ಷಾಮವು ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡಿತು. ಇದರಿಂದ ಇವರು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಇವರನ್ನು ಎಷ್ಟು ನಿರುತ್ಸಾಹಕವಾದ ವಾತಾವರಣ ನಿರ್ಮಾಣವಾಗುತ್ತದೆಂಬುದು ವ್ಯಕ್ತವಾಗುತ್ತದೆ. ಧೃತಿಗೆಡದ ಐಯ್ಯರ್ ತಮ್ಮ ರಾಜತಾಂತ್ರಿಕತೆಯಿಂದ ದೇಶದಲ್ಲಿ ಉಂಟಾಗಿದ್ದ ಕ್ಷಾಮದ ನಿವಾರಣೆಗೆ ಶ್ರಮಿಸಿದರು. ೧೮೮೬ರಲ್ಲಿ ಸಂಸ್ಥಾನದ ಆಯವ್ಯಯವು ಹದಿಮೂರು ಲಕ್ಷ ರೂಪಾಯಿಗಳ ಉಳಿತಾಯವನ್ನು ತೋರಿಸುವ ರೀತಿಯಲ್ಲಿ ಮುನ್ನಡೆಯಿತು. ಕ್ಷಾಮದಿಂದ ಉಂಟಾಗಿದ್ದ ಆರ್ಥಿಕ ನಷ್ಟವನ್ನು ಅಭಿವೃದ್ಧಿ ಪಡಿಸಲು ಹಾಗೂ ಜನರಿಗೆ ಉದ್ಯೋಗ ಸೃಷ್ಟಿಸಲು ಕೆರೆಗಳ ನಿರ್ಮಾಣ ಹಾಗೂ ರೈಲು ಮಾರ್ಗಗಳನ್ನು ಹೊಸದಾಗಿ ನಿರ್ಮಿಸುವ ಕೆಲಸಗಳನ್ನು ಕೈಗೊಂಡು ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ (ಕೂಲಿ) ಸಿಗುವಂತೆ ಮಾಡಿದರು. ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿದರು. ನಾಲ್ವಡಿ ಅವರ ಆದೇಶದಂತೆ ಶೇಷಾದ್ರಿ ಅಯ್ಯರ್ ಅವರು ಕೇಂದ್ರದ ಬ್ರಿಟಿಷ್ ಸರ್ಕಾರಕ್ಕೆ ಪ್ರತಿ ವರ್ಷ ಹತ್ತೂವರೆ ಲಕ್ಷ ರೂಪಾಯಿಗಳ ಪೊಗದಿ ಕೊಡುವುದನ್ನು ಮನ್ನ ಮಾಡಬೇಕೆಂದು ಕೋರಿ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದು, ಈ ಕಾರ್ಯದಲ್ಲಿ ಯಶಸ್ವಿಯಾದರು. ೧೮೮೬ರಲ್ಲಿ ಇವರಿಗೆ “Fellow of the Madras University” ಎಂಬ ಗೌರವ ನೀಡಿ ಗೌರವಿಸಲಾಯಿತು. ಬ್ರಿಟಿಷ್ ಸರ್ಕಾರ ಇವರಿಗೆ C.S.I ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ನಂತರ ಇವರು KCSI ಎಂಬ ಬಿರುದಿಗೂ ಭಾಜನರಾದರು. ಹೀಗೆ ಹದಿನೆಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ಆಳ್ವಿಕೆ ನಡೆಸಿದ ಐಯ್ಯರ್, ೧೯೦೧ ಮಾರ್ಚ್ ೧೮ರಂದು ದಿವಾನ ಪದವಿಯಿಂದ ನಿವೃತ್ತರಾದರು. ೧೯೦೧ ಸೆಪ್ಟಂಬರ್ ೧೩ರಂದು ಮರಣ ಹೊಂದಿದರು.

ಪಿ.ಎನ್. ಕೃಷ್ಣಮೂರ್ತಿ

ಶೇಷಾದ್ರಿ ಐಯ್ಯರ್ ನಂತರ ಪೂರ್ಣಯ್ಯನವರ ವಂಶಸ್ಥರೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ಮೊದಲ ಪದವೀಧರರಲ್ಲಿ ಒಬ್ಬರೂ ಆಗಿದ್ದ ಸರ್. ಪಿ.ಎನ್. ಕೃಷ್ಣಮೂರ್ತಿಯವರು ದಿವಾನರಾಗಿ ನೇಮಕವಾದರು. ೧೯೦೨ ಆಗಸ್ಟ್ ತಿಂಗಳಲ್ಲಿ ಕೃಷ್ಣರಾಜ ಒಡೆಯರಿಗೆ ಸಂಸ್ಥಾನದ ಪೂರ್ಣ ಅಧಿಕಾರ ವಹಿಸಲಾಯಿತು. ಈ ಅವಧಿಯವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಾಕಷ್ಡು ತರಬೇತಿಯಾಗಿತ್ತು. ಅವರು ತಮ್ಮ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾ ತಮ್ಮ ಕಾರ್ಯಾಲಯಕ್ಕೆ ದಿನವೂ ಸರ್ಕಾರಿ ನೌಕರರಂತೆ ತಪ್ಪದೆ ಹೋಗುತ್ತಿದ್ದರು. ಶಿಕ್ಷಣದ ಪ್ರಗತಿಗೆ ಸಾಕಷ್ಟು ಗಮನವಿತ್ತರು. ಭಾರತದ ಬೃಹತ್ ಕೈಗಾರಿಕೋದ್ಯಮಿಯಾಗಿದ್ದ ಜೆ.ಎನ್. ಟಾಟಾ ಅವರು ವಿಜ್ಞಾನ ಸಂಶೋಧನೆಗೆ ಮೀಸಲಾದ ಸಂಸ್ಥೆಯೊಂದಕ್ಕೆ ದತ್ತಿ ನೀಡಲು ಮುಂದೆ ಬಂದಾಗ ನಾಲ್ವಡಿಯವರು ನಿಧಾನ ಮಾಡದೆ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಗಲು (Indian Institute of Science) ಕಾರಣರಾದರು. ಇದಕ್ಕೆ ಮೈಸೂರು ಸರ್ಕಾರವು ಪ್ರತಿ ವರ್ಷ ರೂ. ೫೦,೦೦೦ಗಳ ಆರ್ಥಿಕ ನೆರವು ನೀಡಲು ಒಪ್ಪಿಗೆ ಕೊಟ್ಟಿತು. ಗ್ರಾಮ ಕೈಗಾರಿಕೆಗಳಾದ ಮರಗೆಲಸ, ನೇಯ್ಗೆ, ರೇಷ್ಮೆ ಹುಳು ಸಾಕಾಣಿಕೆ, ಕಬ್ಬಿಣದ ಕೆಲಸ, ಬೆತ್ತದ ಕೆಲಸ, ಚೆನ್ನಪಟ್ಟಣದಲ್ಲಿ ಸುಧಾರಿತ ವಿಧಾನದ ಬಣ್ಣದ ಗೊಂಬೆಗಳ ತಯಾರಿಕೆಯ ತರಬೇತಿ ನೀಡಲು ತರಬೇತಿ ಕೇಂದ್ರಗಳನ್ನು ಮೈಸೂರಿನಲ್ಲಿ ಸ್ಥಾಪಿಸಲಾಯಿತು. ಮದರಾಸು ಮತ್ತು ಮುಂಬಯಿಗಳ ಕಲಾ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಅಪೇಕ್ಷಿಸಿದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ನೀಡುವ ವ್ಯವಸ್ಥೆ ಜಾರಿಗೆ ಬಂದಿತ್ತು. ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಹೆಚ್ಚು ವಿಶಾಲವಾಗಿ ಬೆಳವಣಿಗೆ ಕಂಡವು. ೮ ಜಿಲ್ಲಾ ಬೋರ್ಡುಗಳು, ೨೨ ತಾಲೂಕು ಮಂಡಲಿಗಳು ಮತ್ತು ೩೮ ಘಟಕಗಳು ೧೯೦೩ರ ಸೆಪ್ಟಂಬರ್‌ನಲ್ಲಿ ಹೊರಡಿಸಿದ ಆಜ್ಞೆ ಪ್ರಕಾರ ರಚನೆಯಾದವು. ಅದೇ ವರ್ಷ ಮೈಸೂರು ನಗರಾಭಿವೃದ್ಧಿ ಮಂಡಲಿ ರಚಿತವಾಯಿತು. ೧೯೦೧ರಲ್ಲಿ ನಡೆದ ಜನಗಣತಿಯ ಪ್ರಕಾರ ಸರ್ಕಾರದ ಕಾರ್ಯದರ್ಶಿ ಎಚ್.ವಿ. ನಂಜುಂಡಯ್ಯ ಅವರ ನಾಯಕತ್ವದಲ್ಲಿ ಬುಡಕಟ್ಟು ಜನಾಂಗಗಳ ಅಧ್ಯಯನ ಕಾರ್ಯ ನಡೆಯುವ ಪ್ರಯತ್ನ ಆರಂಭವಾಯಿತು. ಬ್ರಿಟಿಷ್ ಭಾರತದಲ್ಲಿ ೧೯೦೪ರಲ್ಲಿ ಆರಂಭವಾದ ಸಹಕಾರಿ ಚಳುವಳಿ ೧೯೦೫ರಲ್ಲಿ ರಾಜ್ಯದಲ್ಲಿಯೂ ಆರಂಭವಾಗಿ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿತವಾಗಲು ಕಾರಣವಾದವು. ಕೃಷ್ಣಮೂರ್ತಿ ಅವರು ೧೯೦೬ ಮಾರ್ಚ್ ೩೦ರಂದು ನಿವೃತ್ತಿಯಾದರು.

ಪಿ. ವಿ. ಮಾಧವರಾಯ

೧೯೦೬ ಮಾರ್ಚ್ ೩೦ರಂದು ಸರ್ ಪಿ.ಎನ್. ಕೃಷ್ಣಮೂರ್ತಿ ಅವರ ನಂತರ ದಿವಾನರಾಗಿ ನೇಮಕಗೊಂಡ ಪಿ.ವಿ. ಮಾಧವರಾಯರು ಮೂರು ವರ್ಷಗಳ ಆಡಳಿತ ನಡೆಸಿದರು. ರಾಜ್ಯದ ದಿವಾನರಾಗಿ ನೇಮಕಗೊಳ್ಳುವ ಮುನ್ನ ಅವರು ತಮಿಳು ನಾಡಿನ ಪ್ರಾಂತ್ಯದ ತಿರುವಾಂಕೂರು ಸಂಸ್ಥಾನದ ದಿವಾನರಾಗಿದ್ದರು. ಅವರು ಮೈಸೂರು ಸಂಸ್ಥಾನದ ಸೇವೆಯಲ್ಲೇ ಇದ್ದು, ಕಾಲ ಕ್ರಮೇಣ ಪೊಲೀಸು ಮುಖ್ಯಾಧಿಕಾರಿಯಾಗಿಯೂ ಹಾಗೂ ಸಂಸ್ಥಾನದ ಸಲಹಾ ಸಮಿತಿಯ ಸದಸ್ಯರೂ ಆಗಿದ್ದು ತಿರುವಾಂಕೂರು ರಾಜ್ಯದ ದಿವಾನರಾಗುವ ಸಲುವಾಗಿ ಅದಕ್ಕೆ ರಾಜೀನಾಮೆಯಿತ್ತಿದ್ದರು. ಅವರ ಕಾಲದಲ್ಲಿ ಬೆಂಗಳೂರು, ಚಿಕ್ಕಮಗಳೂರು ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸಲಾಯಿತು. ರಾಜ್ಯದಲ್ಲಿ ರೈಲ್ವೆ ಆಡಳಿತ ಅಭಿವೃದ್ಧಿ ಪಡಿಸುವುದಕ್ಕಾಗಿ ಎಂ.ಎಸ್.ಎಂ ರೈಲ್ವೆ ಕಂಪನಿಯೊಂದಿಗೆ ಮೈಸೂರು ಸರಕಾರ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಅರಣ್ಯ ರಕ್ಷಣೆಗಾಗಿ ಹೆಚ್ಚಿನ ಗಮನ ನೀಡಲಾಯಿತು.ಇಬ್ಬರು ವಿದ್ಯಾರ್ಥಿಗಳು ಅರಣ್ಯ ಶಾಸ್ತ್ರ ಅಧ್ಯಯನ ಮಾಡಲು ಡೆಹರಾಡೂನಿಗೂ, ಇನ್ನೊಬ್ಬನನ್ನು ಆಕ್ಸ್‌ಫರ್ಡಿಗೂ ಸರಕಾರದ ಆರ್ಥಿಕ ನೆರವಿನಿಂದ ಕಳಿಸಲಾಯಿತು. ಈ ಅವಧಿಯಲ್ಲಿಯೇ ಬೆಂಗಳೂರಿನ ಹೆಬ್ಬಾಳದಲ್ಲಿ ಪಶುಪಾಲನಾ ಕಾಲೇಜು ಆರಂಭವಾಯಿತು. ರಾಜಕೀಯ ಸುಧಾರಣೆಯ ವಿಷಯದಲ್ಲಿಯೂ ಮುಖ್ಯವಾದ ಬದಲಾವಣೆಗಳಾದವು. ೧೯೦೭ರಲ್ಲಿ ಮೈಸೂರು ನ್ಯಾಯ ವಿಧಾಯಕ ಸಭೆ ಸ್ಥಾಪನೆಯಾಯಿತು. ಸದಸ್ಯರ ಸಂಖ್ಯೆ ೧೦ಕ್ಕೆ ಕಡಿಮೆಯಿಲ್ಲದಂತೆ, ೧೫ಕ್ಕೆ ಮೀರದಂತೆ ಹಾಗೂ ೨೫ಕ್ಕೆ ಕಡಿಮಯಯಿಲ್ಲದಂತೆ ಖಾಸಗಿ ಸದಸ್ಯರು ಸರಕಾರದಿಂದ ನಾಮಕರಣ ಹೊಂದುವಂತಾಯಿತು. ಪ್ರಜಾಪ್ರತಿನಿಧಿ ಸಭೆಯಿಂದ ಇಬ್ಬರು ಸದಸ್ಯರನ್ನು ನ್ಯಾಯವಿಧೇಯಕ ಸಭೆಗೆ ಚುನಾಯಿಸುವಂತಾಯಿತು. ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರಥಮ ಬಾರಿಗೆ, ವಿಧೇಯಕಗಳ ಬಗೆಗೆ ಮತ ನೀಡುವ ಪದ್ಧತಿಗೆ ಅನುಮತಿ ದೊರಕಿತು. ಆ ವರೆಗಿನ ಪದ್ಧತಿಯ ಪ್ರಕಾರ ಸಭೆಯ ಒಟ್ಟಾರೆ ಅಭಿಮತವನ್ನು ಮಾತ್ರ ಸೂಚಿಸಲಾಗುತ್ತಿತ್ತು. ೧೯೦೫ರಲ್ಲಿ ಬಂಗಾಳ ವಿಭಜನೆಯ ಕಾರಣದಿಂದ ದೇಶದಾದ್ಯಂತ ನಡೆದ ರಾಷ್ಟ್ರೀಯ ಆಂದೋಲನದ ಪರಿಣಾಮವಾಗಿ ಚರ್ಚೆಗೀಡಾದ ಹೊಸ ಆಲೋಚನೆಗಳಿಂದ ಈ ರಾಜಕೀಯ ಸುಧಾರಣೆಗಳು ಜನತೆಯ ಉತ್ಸಾಹವನ್ನು ಕೆರಳಿಸಲಿಲ್ಲ. ಪಿ.ವಿ ಮಾಧವರಾಯರು ದಕ್ಷ ಆಡಳಿತಗಾರರಾಗಿದ್ದರು. ಆದರೆ ಬದಲಾದ ಸಂದರ್ಭದಲ್ಲಿ ಅವರು ಪ್ರಜಾಪ್ರತಿನಿಧಿ ಸಭೆಯಿಂದ ನ್ಯಾಯ ವಿಧೇಯಕ ಸಭೆಗೆ ಚುನಾಯಿತರಾಗಿದ್ದ ಎಂ. ವೆಂಕಟಕೃಷ್ಣಯ್ಯ ಮತ್ತು ಡಿ. ವೆಂಕಟರಾಮಯ್ಯ ಅವರ ಆಯ್ಕೆಯನ್ನು ರದ್ದುಮಾಡಿ ಅವಿಶ್ವಾಸಕ್ಕೆ ಗುರಿಯಾದರು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಆಡಳಿತವು ಜನಪ್ರಿಯತೆ ಕಳೆದುಕೊಳ್ಳಲು ೧೯೦೮ರ ಮೈಸೂರು ವೃತ್ತ ಪತ್ರಿಕಾ ನಿಬಂಧನೆಯೇ ಕಾರಣ. ಅದು ತುಂಬ ಟೀಕೆಗೆ ಗುರಿಯಾಯಿತು.ಆ ನಿಬಂಧನೆಗೆ ಪ್ರತಿಭಟನೆ ಸೂಚಿಸುವ ಸಲುವಾಗಿ ರಾಜ್ಯದ ವೃತ್ತಪತ್ರಿಕೆಗಳು ತಾತ್ಕಾಲಿಕವಾಗಿ ಪ್ರಕಟಣೆ ನಿಲ್ಲಿಸಿದವು.

ಇವರ ಕಾಲದ ಆಡಳಿತದಲ್ಲಿ ಉಲ್ಲೇಖಿಸಬಹುದಾದ ಬಹು ಮುಖ್ಯ ಅಂಶಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣದ ಕೆಲಸ ಮುನ್ನಡೆಯುತ್ತಿತ್ತು. ಅದಕ್ಕಾಗಿ ೫ ಲಕ್ಷ ರೂ.ಹಣಕಾಸಿನ ನೆರವನ್ನು ಸರ್ಕಾರ ಮಂಜೂರು ಮಾಡಿತು. ಶಂಕರ ಮಠದ ಕಟ್ಟಡ ಇದೇ ಕಾಲದಲ್ಲಿ ನಿರ್ಮಾಣವಯಿತು. ಪ್ರಾಥಮಿಕ ಶಿಕ್ಷಣ ಅಭಿವೃದ್ಧಿಗಾಗಿ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿಯೂ ಶುಲ್ಕವನ್ನು ರದ್ದು ಮಾಡಲಾಯಿತು. ಸರಕಾರ ಸಂಘಗಳಿಗೆ ಹಣಕಾಸನ್ನು ಒದಗಿಸುವುದಕ್ಕೋಸ್ಕರ ಬೆಂಗಳೂರಿನಲ್ಲಿ ಒಂದು ಕೇಂದ್ರ ಸಹಕಾರ ಬ್ಯಾಂಕ್ ಆರಂಭಿಸಲಾಯಿತು. ಇದಕ್ಕೆ ಸಹಕರಿಸುವ ದೃಷ್ಟಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವತ: ಅಧಿಕ ಮೊತ್ತದ ಠೇವಣಿಯನ್ನು ಈ ಬ್ಯಾಂಕಿನಲ್ಲಿ ಇಟ್ಟಿದ್ದರು.

ಟಿ. ಅನಂತರಾಮ್

ಪಿ.ವಿ. ಮಾಧವರಾಯರು ೧೯೦೫ರ ಮಧ್ಯ ಭಾಗದಲ್ಲಿ ನಿವೃತ್ತರಾದರು. ಅವರ ನಂತರ ಟಿ. ಅನಂತರಾಮ್ ದಿವಾನರಾದರು. ಅವರು ೧೮೭೩ರಲ್ಲಿ ಮೈಸೂರು ಸರ್ಕಾರದ ಕೆಲಸಕ್ಕೆ ಸೇರಿ ರೆವಿನ್ಯೂ ಕಮಿಷನರ್ ಹಾಗೂ ಸಲಹಾ ಸಮಿತಿ ಸದಸ್ಯರೂ ಆಗಿದ್ದರು. ಅವರು ಮೂರು ವರ್ಷಗಳ ಕಾಲ ದಿವಾನರಾಗಿದ್ದು ಸುಸಂಸ್ಕೃತ ಮನೋಭಾವ ಹಾಗೂ ಪಾಂಡಿತ್ಯಕ್ಕೆ ಹೆಸರಾಗಿದ್ದರು. ಇವರ ಆಳ್ವಿಕೆಯ ಪ್ರಮುಖ ಸಾಧನೆ ಎಂದರೆ ೧೮೯೭ರಲ್ಲಿ ಅಗ್ನಿಗೆ ಆಹುತಿಯಾಗಿ ಭಸ್ಮವಾಗಿದ್ದ ಮೈಸೂರು ಅರಮನೆಯ ಮರದ ಕಟ್ಟಡದ ಭಾಗದಲ್ಲಿ ೧೯೧೦ರಲ್ಲಿ ಹೊಸದಾಗಿ ಇಂದು ನಾವು ಕಾಣುವ ಮೈಸೂರು ಅರಮನೆ ಕಟ್ಟಿ ಮುಗಿಸಿದ್ದು. ಅದು ಸ್ಥಳೀಯವಾಗಿ ದೊರಕುವ ಅಭ್ರಕ, ಅಗ್ನಿಶಿಲೆ ಮತ್ತು ಅಮೃತ ಶಿಲೆ ಮೊದಲಾದ ಶಿಲೆಗಳಿಂದ ನಿರ್ಮಾಣ ಮಾಡಲಾಯಿತು. ಈ ನಿರ್ಮಾಣ ಕಾರ್ಯಕ್ಕೆ ಕುಶಲ ಕೆಲಸಗಾರರನ್ನು ತಮಿಳುನಾಡು, ಯೂರೋಪ್, ಅರಬ್ ರಾಷ್ಟ್ರಗಳಿಂದ ಕರಸಿಕೊಳ್ಳಲಾಗಿತ್ತು. ತಿರುವಾಂಕೂರಿನ ಪ್ರಸಿದ್ಧ ಚಿತ್ರ ಕಲೆಗಾರ ರವಿವರ್ಮನನ್ನು ದರ್ಬಾರ್ ಹಾಲ್ ಶೃಂಗರಿಸಲು ಕರೆಸಲಾಗಿತ್ತು. ಇವನ ಸುಂದರ ಚಿತ್ರಕಲೆ ಇಂದಿಗೂ ಜಗತ್ಪ್ರಸಿದ್ಧಿಯಾಗಿದೆ. ಇವರ ಆಳ್ವಿಕೆಯ ಕಾಲದಲ್ಲಿ ರಾಜ್ಯದ ಚೀಫ್ ಇಂಜಿನಿಯರಾಗಿದ್ದ ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ, ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದ ದೂರದೃಷ್ಟಿಯ ಫಲವಾಗಿ ಕನ್ನಂಬಾಡಿ ಜಲಾಶಯದ ನಿರ್ಮಾಣಕಾರ್ಯ ೧೯೧೧ರಲ್ಲಿ ಆರಂಭವಾಯಿತು. ಎಲ್ಲಕ್ಕಿಂತ ಬಹಳ ಮುಖ್ಯವಾದ ಕೆಲಸವೆಂದರೆ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದ ಮೈಸೂರು ಆರ್ಥಿಕ ಸಮ್ಮೇಳನಗಳು ನಡೆದು ರಾಜ್ಯದ ಶಿಕ್ಣಣ ಕೈಗಾರಿಕೆ ಮತ್ತು ಕೃಷಿ ಕೆಲಸಗಳ ಯೋಜನಾಬದ್ಧ ಬೆಳವಣಿಗೆಗೆ ಹೆಜ್ಜೆಯಿಟ್ಟಿದ್ದು. ಇವರ ಆಳ್ವಿಕೆಯ ಕಾಲದಲ್ಲಿ ಮೈಸೂರು ಬ್ರಾಹ್ಮಣರಿಗೂ ಹಾಗೂ ಮದ್ರಾಸ್ ಬ್ರಾಹ್ಮಣರಿಗೂ ಅಧಿಕಾರಕ್ಕಾಗಿ ತಿಕ್ಕಾಟ ಪ್ರಾರಂಭವಾಯಿತು. ಇದರ ಫಲವಾಗಿ ಮೈಸೂರು ಸಂಸ್ಥಾನದ ಬ್ರಾಹ್ಮಣರಾದ ವಿಶ್ವೇಶ್ವರಯ್ಯ ಅವರು ಪ್ರಥಮವಾಗಿ ದಿವಾನರಾದರು.