ವಸಾಹತೋತ್ತರ ಚಿಂತನೆಯ ಪ್ರಾರಂಭವನ್ನು ಅಥವಾ ಪ್ರಥಮ ಕೃತಿ / ಲೇಖನವನ್ನು ನಿರ್ದಿಷ್ಟವಾಗಿ ಗುರುತಿಸುವುದು ಅಸಾಧ್ಯ. ಒಂದು ನೆಲೆಯಲ್ಲಿ, ವಸಾಹತುಶಾಹಿಯ ಒಂದು ಭಾಗವೇ ಆದರೂ ಅದನ್ನು ಸ್ವಲ್ಪ ದೂರದಿಂದ, ವಸ್ತುನಿಷ್ಠವಾಗಿ, ನೋಡಲು ಪ್ರಯತ್ನಿಸಿದ ಕಿಪ್ಲಿಂಗ್‌, ಫಾರ್ ಸ್ಟರ್, ಆರ್ ವೆಲ್‌ಮುಂತಾದ ಬ್ರಿಟಿಷ್‌ಸಾಹಿತಿಗಳನ್ನು ವಸಾಹತೋತ್ತರ ಚಿಂತನೆಯ ಮೊದಲಿಗರೆಂದು ಪರಿಗಣಿಸಬಹುದು. ಮತ್ತೊಂದು ನೆಲೆಯಲ್ಲಿ ರಾಜಕೀಯ – ಸಾಂಸ್ಕೃತಿಕ ನೆಲೆಗಳಲ್ಲಿ, ಭಾರತೀಯತೆಯನ್ನು ಎತ್ತಿಹಿಡಿದ ಗಾಂಧಿ ಮತ್ತು ಆನಂದ ಕುಮಾರಸ್ವಾಮಿ ಇವರನ್ನು ಈ ಚಿಂತನೆಯ ಜನಕರೆಂದು ಗುರುತಿಸಬಹುದು.

೧೯೦೮ರಲ್ಲಿ ಗಾಂಧಿಯವರು ಲಂಡನ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ಸಮುದ್ರಪ್ರಯಾಣ ಮಾಡುತ್ತಿದ್ದಾಗ ರಚಿಸಿದ ಗ್ರಂಥ “ಹಿಂದ್‌ಸ್ವರಾಜ್‌”. ಪ್ಲೇಟೋನ ಸಂವಾದಗಳ ರೂಪದಲ್ಲಿರುವ ಈ ಕೃತಿಯಲ್ಲಿ ಗಾಂಧಿ ಮೊದಲಬಾರಿಗೆ ಪಾಶ್ಚಿಮಾತ್ಯ ರ ಪ್ರಗತಿಯ ಮಾದರಿಯನ್ನು ತಿರಸ್ಕರಿಸಿ, ಅದಕ್ಕೆ ಪ್ರತಿಯಾಗಿ, ಭಾರತೀಯ (ಪೌರ್ವಾತ್ಯ) ಮಾದರಿಯೊಂದನ್ನು ನಿರ್ಮಿಸುತ್ತಾರೆ. ಆಧುನಿಕ ವ್ಯವಸ್ಥೆಯು ಜನ್ಮಕೊಟ್ಟಿರುವ ಶಾಸನ ಸಭೆಗಳು, ಡಾಕ್ಟರ್ ಗಳು ಮತ್ತು ಲಾಯರ್ ಗಳು, ಯಂತ್ರ, ಬೃಹತ್‌ಉದ್ಯಮಗಳು – ಇವೆಲ್ಲವನ್ನೂ ತಿರಸ್ಕರಿಸುತ್ತಾ, ಇವುಗಳಿಗೆ ಪ್ರತಿಯಾದ ಸ್ವದೇಶೀ ವ್ಯವಸ್ಥೆಯೊಂದು ಇರುವುದು ಸಾಧ್ಯ ಮತ್ತು ಸಾಧು ಎಂದು ಈ ಕೃತಿಯಲ್ಲಿ ಗಾಂಧಿ ವಾದಿಸುತ್ತಾರೆ. ಕುತೂಹಲದ ಅಂಶವೆಂದರೆ, ಪ್ರಜಾಪ್ರಭುತ್ವದ ಅಡಿಗಲ್ಲಾದ ಶಾಸಕಾಂಗ ವ್ಯವಸ್ಥೆಯನ್ನು ‘ಬಂಜೆ ಹಾಗೂ ವೇಶ್ಯೆ’ಗೆ ಗಾಂಧಿ ಹೋಲಿಸುತ್ತಾರೆ. ಎಂದರೆ, ಗಾಂಧಿಯವರಿಗೆ (ಲೀವಿಸ್‌, ತೋರೋ, ಮುಂತಾದವರಿಗೆ ಹೇಗೋ ಹಾಗೆ) ಆದರ್ಶ ‘ರಾಮರಾಜ್ಯ’ವೆಂದರೆ ಸ್ವಯಂಪೂರ್ಣ ಹಾಗೂ ಸಣ್ಣ ಘಟಕಗಳಿಂದ ಕೂಡಿದ, ಆಧುನಿಕ ಪೂರ್ವ ‘ಗ್ರಾಮರಾಜ್ಯ’. ಪ್ರಮುಖ ವಸಾಹತೋತ್ತರ ಚಿಂತಕರಲ್ಲಿ ಒಬ್ಬರಾದ ಜ್ಞಾನ್‌ ಪ್ರಕಾಶ್‌ ಹೇಳುವಂತೆ, ಈ ಸಂದರ್ಭದಲ್ಲಿ ನಮಗೆ ಮುಖ್ಯವಾಗುವುದು ಗಾಧೀವಾದದ ಸತ್ಯಾಸತ್ಯತೆಗಳಲ್ಲ; ಅದಕ್ಕೆ ಬದಲಾಗಿ, ‘ಆಧುನಿಕ ಪೂರ್ವ’ ವ್ಯವಸ್ಥೆಯನ್ನು ಅವರು ಕೇವಲ ಗತಚರಿತ್ರೆಯ ಅಂಶವೆಂದು ಕಾಣದೆ , ಅದನ್ನು ಇಂದಿಗೂ ಪ್ರಸ್ತುತವಾಗಿರುವ ‘ಅ – ಆಧುನಿಕ ’ವೆಮದು  ಮಂಡಿಸುವುದು. “ಆ ರೀತಿ, ‘ಆಧುನಿಕ ಪೂರ್ವ’ವನ್ನು ‘ಅ – ಆಧುನಿಕ’ವೆಂದು ಪುನರ್ವ್ಯಾಖ್ಯಾನಿಸುವ ಮೂಲಕ, ವಸಾಹತುಶಾಹಿಯ ವೈಚಾರಿಕವರ್ಗಗಳನ್ನೇ ನೂತನ ರೀತಿಯಲ್ಲಿ ಜೋಡಿಸಿ, ವಸಾಹತುಶಾಹಿಯ ಉಗ್ರ ಟೀಕೆ ಅಹಿಂಸಾತ್ಮಕ ವಾಗ್ರೂಪವನ್ನು ಪಡೆಯುವ ಒಂದು ಪ್ರಮುಖ ವಸಾಹತೋತ್ತರ ಗ್ರಂಥವನ್ನು ಗಾಂಧಿ ಇಲ್ಲಿ ನಿರ್ಮಿಸುವಲ್ಲಿ ಸಮರ್ಥರಾದರು” ಎಂದು ಜ್ಞಾನ್‌ ಪ್ರಕಾಶ್‌ ಅಭಿಪ್ರಾಯ ಪಡುತ್ತಾರೆ (೧೯೯೫, ೬೭). ಆನಂದ ಕುಮಾರಸ್ವಾಮಿಯವರು ತಮ್ಮ ಪ್ರಸಿದ್ಧ “ಶಿವನ ನೃತ್ಯ” ಎಂಬ ಲೇಖನಗಳ ಸಂಗ್ರಹದಲ್ಲಿ ಭಾರತೀಯ (ಪೌರ್ವಾತ್ಯ) ಕಲೆ ಪಾಶ್ಚಿಮಾತ್ಯ ಕಲೆಗಿಂತ ಹೇಗೆ ಭಿನ್ನವಾಗಿದೆ ಮತ್ತು ಅನನ್ಯವಾಗಿದೆ ಎಂಬುದನ್ನು ವಿದ್ವತ್ಪೂರ್ಣವಾಗಿ ಮಂಡಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ರಾಜಕೀಯ – ಸಾಮಾಜಿಕ ಕ್ಷೇತ್ರಗಳಲ್ಲಿ ಮತ್ತು ಕಲೆಗಳ ಕ್ಷೇತ್ರಗಳಲ್ಲಿ ಪಾಶ್ಚಿಮಾತ್ಯ ಮಾದರಿಗಳಿಗಿಂತ ಭಿನ್ನವಾದ, ಆದರೆ ಸಮಾನ ಮಾನ್ಯತೆಯುಳ್ಳ ‘ಪ್ರತಿಮಾದರಿಗಳನ್ನು’ ಗಾಂಧಿ ಮತ್ತು ಆನಂದ ಕುಮಾರಸ್ವಾಮಿ ಇವರಿಬ್ಬರೂ ಕಟ್ಟುತ್ತಾರೆ.

ಐವತ್ತರ ದಶಕದಲ್ಲಿ ಬಂದ ಶೇಕ್ಸ್‌ಪಿಯರ್ ನ “ಟೆಂಪೆಸ್ಟ್‌” ನಾಟಕದ ನೂತನ ವ್ಯಾಖ್ಯಾನಗಳನ್ನು ವಸಾಹತೋತ್ತರ ಚಿಂತನೆಯ ಪ್ರಾರಂಭಿಕ ಘಟ್ಟವೆಂದು ಪರಿಗಣಿಸಬಹುದು. ಫ್ರಾಂಕ್‌ ಕರ್ಮೋಡ್‌, ಒ. ಮನೋನಿ, ಮುಂತಾದವರು “ಟೆಂಪೆಸ್ಟ್‌” ನಾಟಕವನ್ನು ವವಾಹತುಶಾಹಿಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುತ್ತಾ, ಪ್ರಾಸ್ಟೆರೊ ಮತ್ತು ಕ್ಯಾಲಿಬನ್‌ ಪಾತ್ರಗಳನ್ನು  ವಸಾಹತುಶಾಹಿ ಮತ್ತು ಅಧೀನ ರಾಷ್ಟ್ರಗಳ ಚಿರಂತನ ಪ್ರತೀಕಗಳಂತೆ ಕಾಣುತ್ತಾರೆ. “ನೀನು ನನಗೆ ನಿನ್ನ ಭಾಷೆಯನ್ನು ಕಲಿಸಿದೆ. ನನಗದರಿಂದಾದ ಉಪಯೋಗವೆಂದರೆ ಈಗ ಆ ಭಾಷೆಯಲ್ಲಿಯೇ ನಾನು ನಿನ್ನನ್ನು ಶಪಿಸಬಹುದು” ಎಂದು ಪ್ರಾಸ್ಟೆರೋನನ್ನು ಎದುರಿಸುವ ಕ್ಯಾಲಿಬನ್‌ ವಸಾಹತೀಕರಣಕ್ಕೊಳಪಟ್ಟ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಇದೇ ರೀತಿಯಲ್ಲಿ, ಕಾನ್ರಾಡ್‌ನ “ಕತ್ತಲೆಯ ಹೃದಯ”, ಫಾರ್ ಸ್ಟರ್ ನ “ಭಾರತದ ದಾರಿ”, ಎಲಿಯಟ್‌ನ “ವೇಸ್ಟ್‌ಲ್ಯಾಂಡ್‌” ಇತ್ಯಾದಿ ಸಾಹಿತ್ಯಕೃತಿಗಳು ಪುನರ್ವ್ಯಾಖ್ಯಾನಕ್ಕೆ ಒಳಪಡುತ್ತವೆ.

ಆದರೆ, ಈ ಸಂದರ್ಭದಲ್ಲಿ ಮನೋನಿ ಮುಂತಾದವರ ಮಿತಿಗಳನ್ನೂ ಗುರುತಿಸಬೇಕು. ವೃತ್ತಿಯಿಂದ ಮನೋವಿಜ್ಞಾನಿಯಾದ ಮನೋನಿ ವಸಾಹತೀಕರಣವನ್ನು ಒಂದು ಅತ್ಯಂತ ಸರಳೀಕೃತ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಾನೆ (೧೯೫೬). ಅದರ ರಾಜಕೀಯ – ಆರ್ಥಿಕ ಮುಖಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ವಸಾಹತುಶಾಹಿಯ ಅಸ್ತಿತ್ವಕ್ಕೆ ಕಾರಣವೆಂದರೆ ವಸಾಹತುಗಾರರ ‘ಅಪ್ರಬುದ್ಧ ಮಾನಸಿಕ ಸ್ಥಿತಿ’ ಎಂದು ವಾದಿಸುತ್ತಾನೆ: “ಪ್ರಾಸ್ಟೆರೋನಂತೆ, ವಸಾಹತುಗಾರನಿಗಿರುವ (ಮಾನಸಿಕ) ಕೊರತೆಯೆಂದರೆ ‘ಅನ್ಯ’ರಿರುವ ಜಗತ್ತಿನ, ಮತ್ತು ಆ ಜಗತ್ತಿನಲ್ಲಿರುವವರನ್ನು ಗೌರವಿಸಬೇಕೆಂಬ ಅಂಶದ ಅಜ್ಞಾನ…. ಈ ಅಜ್ಞಾನದೊಡನೆ, ಬಾಲಿಶ ಹಾಗೂ ಸಾಮಾಜಿಕ ಹೊಂದಾಣಿಕೆ ಗುಣಪಡಿಸದ ‘ಇತರರ ಮೇಲೆ ತನ್ನ ಅಧಿಕಾರವನ್ನು ಹೇರುವ’ ಅದಮ್ಯ ಕಾಂಕ್ಷೆಯೂ ಸೇರಿರುತ್ತದೆ”, ಇತ್ಯಾದಿ. ಹಾಗೆಯೇ, ಅಧೀನ ರಾಷ್ಟ್ರಗಳ ಪ್ರಜೆಗಳಲ್ಲಿಯೂ ‘ಮಾನಸಿಕ ದಾಸ್ಯದ ಆದಮ್ಯಕಾಂಕ್ಷೆ’ ಇರುತ್ತದೆಯೆಂದು ಮನೋನಿ ವಾದಿಸುತ್ತಾನೆ. ಮನೋವೈಜ್ಞಾನಿಕ ವಿಶ್ಲೇಷಣೆ ಕೆಲ ಸಂದರ್ಭಗಳಲ್ಲಿ ಎಷ್ಟು ಬಾಲಿಶವಾಗಬಹುದು ಎಂಬುದಕ್ಕೆ ಮನೋನಿ ಒಂದು ಪ್ರಾತಿನಿಧಿಕ ನಿದರ್ಶನ.

ಐವತ್ತರ ದಶಕದಲ್ಲಿ ವಸಾಹತೋತ್ತರ ಚಿಂತನೆಗೆ ಒಂದು ಸುಭದ್ರ ತಾತ್ವಿಕ ನೆಲೆಗಟ್ಟನ್ನು ಒದಗಿಸಿ, ವಸಾಹತುಶಾಹಿಯನ್ನು ವ್ಯಾಪಕವಾಗಿ ಮತ್ತು ಪ್ರಭಾವಶಾಲಿಯಾಗಿ ವ್ಯಾಖ್ಯಾನಿಸಿದವರಲ್ಲಿ ಪ್ರಮುಖನೆಂದರೆ ಫ್ಯ್ರಾಂಜ್‌ ಫ್ಯಾನನ್‌. ೧೯೨೫ರಲ್ಲಿ ಜನಿಸಿ, ಲ್ಯುಕೆಮಿಯಾದಿಂದ ೧೯೬೧ರಲ್ಲಿ ಅಕಾಲ ಮರಣಕ್ಕೆ ತುತ್ತಾದ ಫ್ಯಾನನ್ ಎರಡನೆಯ ಮಹಾಯುದ್ಧದಲ್ಲಿ ಮತ್ತು ಆಲ್ಜೀರಿಯಾದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು. ವೃತ್ತಿಯಿಂದ ವೈದ್ಯನಾದ ಮತ್ತು ಮನೋವಿಜ್ಞಾನದಲ್ಲಿ ವಿಶೇಷ ತರಬೇತಿ ಪಡೆದಿದ್ದ ಫ್ಯಾನನ್ ಕಪ್ಪು ಜನರ ಜಾನಾಂಗಿಕ – ಸಾಂಸ್ಕೃತಿಕ ಅನನ್ಯತೆ, ರಾಷ್ಟ್ರೀಯತೆ ಮತ್ತು ನವ ರಾಷ್ಟ್ರಗಳ ಸಮಸ್ಯೆಗಳು, ನಿರ್ವಸಾಹತೀಕರಣ ಮತ್ತು ಹಿಂಸಾತ್ಮಕ ಚಳುವಳಿ, ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವಸಾಹತೋತ್ತರ ಚಿಂತನೆಯನ್ನು ವ್ಯಾಪಕವಾಗಿ ಪ್ರಭಾವಿಸಿದನು. ಅವನ ಎರಡು ಪ್ರಮುಖ ಗ್ರಂಥಗಳೆಂದರೆ “ಕಪ್ಪು ಚರ್ಮ ಬಿಳಿಯ ಮುಖವಾಡ” ಮತ್ತು “ಭೂಮಿಯ ಮೇಲಿನ ಹತಭಾಗ್ಯರು”.

೧೯೫೨ರಲ್ಲಿ ಪ್ರಕಟವಾದ “ಕಪ್ಪು ಚರ್ಮ ಬಿಳಿಯ ಮುಖವಾಡ” (ಇಂಗ್ಲೀಷ್‌, ೧೯೬೭) ವಸಾಹತೀಕರಣಕ್ಕೊಳಪಟ್ಟ ಕಪ್ಪು ಜನರ ಮಾನಸಿ ಕ ಸ್ಥಿತಿಯನ್ನು ಅತ್ಯಂತ ನಿಷ್ಠುರವಾಗಿ ವಿಶ್ಲೇಷಿಸುತ್ತದೆ. ಫ್ಯಾನನ್ ಸ್ವತಹ ಹೇಳುವಂತೆ, ಈ ಕೃತಿಯ ಕಾಳಜಿ ‘ಕಪ್ಪು ಜನರ ಪರಕೀಯ ಪ್ರಜ್ಞೆ’ ಮತ್ತು ಕೃತಿ ಯ ಉದ್ದೇಶ”ವಸಾಹತುಶಾಹೀ ಪರಿಸರವು ಸೃಜಿಸಿರುವ ಅನೇಕ ಬಗೆಯ ಮಾನಸಿಕ ವ್ಯತ್ಯಯಗಳಿಂದ ಕಪ್ಪು ಜನರು ಮುಕ್ತರಾಗುವಲ್ಲಿ ಅವರಿಗೆ ನೆರವಾಗುವುದು” (ಪು. ೩೦). :ಈ ಕೃತಿಯು ನೇರವಾಗಿ ಫ್ರೆಂಚ್‌ ವಸಾಹತೀಕರಣಕ್ಕೊಳಪಟ್ಟ ಉತ್ತರ ಆಫ್ರಿಕಾದ ಆಂತಿಲೆ ಎಂಬ ಪ್ರದೇಶದ ಜನರು ಮತ್ತು ಅವರ ಸಂಸ್ಕೃತಿಗೆ ಸಂಬಂಧಿಸಿದ್ದರೂ, ಪರೋಕ್ಷವಾಗಿ, ವಸಾಹತೀಕರಣಕ್ಕೊಳಪಟ್ಟ ಏಷ್ಯಾ, ಆಫ್ರಿಕಾ, ಇತ್ಯಾದಿ ಖಂಡಗಳ ಎಲ್ಲಾ (ಪೂರ್ವ) ವಸಾಹತುಗಳಿಗೂ ಪ್ರಸ್ತುತವಾಗುತ್ತದೆ.

‘ಕಪ್ಪು ಚರ್ಮ ಬಿಳಿಯ ಮುಖವಾಡ’ ಎಂಬ ಹೆಸರು ತುಂಬಾ ಅರ್ಥಪೂರ್ಣವಾಗಿ ಇಡೀ ಕೃತಿಯ ಮುಖ್ಯ ವಾದವನ್ನು ನಮ್ಮ ಮುಂದಿಡುತ್ತದೆ. ವಸಾಹತೀಕರಣಕ್ಕೊಳಪಟ್ಟಿ ಕಪ್ಪು ಜನರು ಬಿಳಿಯರೊಡನೆ ಒಂದು ಬಗೆಯಲ್ಲಿ ಮತ್ತು ಕಪ್ಪು ಜನರೊಡನೆ ಇನ್ನೊಂದು ಬಗೆಯಲ್ಲಿ ವರ್ತಿಸುತ್ತಾರೆ. ಏಕೆಂದರೆ, ತಮ್ಮ ಭಾಷೆ – ಸಂಸ್ಕೃತಿ – ಆಚರಣೆಗಳು ಇವೆಲ್ಲವನ್ನೂ ಅವರು ತಿರಸ್ಕಾರದಿಂದ ನೋಡಲು ಪ್ರಾರಂಭಿಸಿ, ತಮ್ಮನ್ನು ಆಳುವ ಬಿಳಿಯ ಜನರ ಭಾಷೆ – ಸಂಸ್ಕೃತಿ – ಆಚರಣೆಗಳನ್ನು ಶ್ರೇಷ್ಠವೆಂದು ನಂಬಿ, ಅವರನ್ನು ಸಂಪೂರ್ಣವಾಗಿ ಅನುಕರಿಸಲು ತೊಡಗುತ್ತಾರೆ. ಎಂದರೆ, ತಮ್ಮ ಕಪ್ಪು ಮುಖಕ್ಕೆ ತಾವೇ ನಾಚಿ, ಬಿಳಿಯ ಮುಖವಾಡಗಳನ್ನು ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ‘ಬಿಳಿಯತನ’ವನ್ನು ಅವರು ಎಷ್ಟೇ ತಮ್ಮದಾಗಿಸಿಕೊಂಡರೂ ಕಪ್ಪುಚರ್ಮದ ಕಾರಣದಿಂದ ಅವರು ಬಿಳಿಯರೊಡನೆ ಸಮಾನ ನೆಲೆಯಲ್ಲಿ ಬೆರೆಯಲಾಗುವುದಿಲ್ಲ; ಬಿಳಿಯ ಮುಖವಾಡದ ಕಾರಣದಿಂದ ಇತರ ಕಪ್ಪು ಜನರೂ ಅವರನ್ನು ದೂರಮಾಡುತ್ತಾರೆ. ಇಂತಹ ‘ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ’ ತ್ರಿಶಂಕು ಸ್ಥಿತಿಯನ್ನು ಫ್ಯಾನನ್ ‘ಕಪ್ಪು ಜನರ ಪರಕೀಯ ಪ್ರಜ್ಞೆ’ ಎಂದು ಗುರುತಿಸುತ್ತಾನೆ (ಪು. ೧೭ – ೧೯) . ಮತ್ತು ಇಂತಹ ಮಾನಸಿಕ ಸ್ಥಿತಿಯ ವಿವಿಧ ಪದರುಗಳನ್ನು ವಿವರವಾಗಿ, ಮನೋವೈಜ್ಞಾನಿಕ ನೆಲೆಯಲ್ಲಿ, ಆಳವಾಗಿ ವಿಶ್ಲೇಷಿಸುತ್ತಾನೆ.

ಮೊದಲಿಗೆ, ಕಪ್ಪು ಜನರ ‘ಪರಕೀಯ ಪ್ರಜ್ಞೆ’ಗೆ ಕಾರಣವಾಗುವ ಮತ್ತು ಅದು ವ್ಯಕ್ತವಾಗುವ ಭಾಷೆಯ ಬಗ್ಗೆ ಫ್ಯಾನನ್ ಅತ್ಯಂತ ಗಂಭೀರವಾಗಿ ಚಿಂತಿಸುತ್ತಾನೆ. ಈ ಸಂದರ್ಭದಲ್ಲಿ ಭಾಷೆಗೂ ಅಧಿಕಾರಕ್ಕೂ ಇರುವ ಅವಿನಾ ಸಂಬಂಧವನ್ನು ಕುರಿತು ಫ್ಯಾನನ್ ಮಂಡಿಸುವ ಅನೇಕ ಮೌಲಿಕ ವಿಚಾರಗಳು ಅವನ ನಂತರ ಎಪ್ಪತ್ತರ ದಶಕದಲ್ಲಿ ಬಂದ ಫುಕೋನ ‘ಡಿಸ್‌ಕೋರ್ಸ್‌’ವಾದಕ್ಕೆ ಹತ್ತಿರ ಬರುತ್ತವೆ.

“ಒಂದು ಭಾಷೆಯನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿಯು ಆ ಭಾಷೆಯು ವ್ಯಕ್ತಿಗೊಳಿಸುವ ಮತ್ತು ಅದರಲ್ಲಿ ಗೃಹೀತವಾಗಿರುವ ವಿಶ್ವವನ್ನು ತನ್ನದಾಗಿಸಿಕೊಳ್ಳುತ್ತಾನೆ” (ಪು. ೧೮). ಪರಿಣಾಮತಃ, ಭಾಷೆಯೆಂಬುದು ಸಾಂಸ್ಕೃತಿಕ ಭಿನ್ನತೆಗಳ ಮತ್ತು ಅಸಮಾನ ಅಧಿಕಾರಿಗಳ ಸೂಚಿಯಾಗುತ್ತದೆ. ಎಂದರೆ , “ಒಂದು ಭಾಷೆಯ ಮೇಲೆ ಒಬ್ಬನಿಗಿರುವ ಪ್ರಭುತ್ವ ಅವನಿಗೆ ಅಸದೃಶ ಅಧಿಕಾರವನ್ನು ನೀಡುತ್ತದೆ” (ಪು. ೧೮). ಈ ಪರಿಸರದಲ್ಲಿ ವಸಾಹತುಶಾಹಿಯ ಭಾಷೆ ಫ್ರೆಂಚ್‌ ಆದುದರಿಂದ (ಉತ್ತರ ಆಫ್ರಿಕಾದಲ್ಲಿ) ಕಪ್ಪು ಜನರ ಸ್ವಂತ ಭಾಷೆಗಳ/ಉಪ ಭಾಷೆಗಳ ಹೋಲಿಕೆಯಲ್ಲಿ ಅದಕ್ಕೆ ಅಪರಿಮಿತ ಅಧಿಕಾರವಿದೆ, ಮಾನ್ಯತೆಯಿದೆ.

ಈ ಕಾರಣದಿಂದ (ಈ ಭಾಗದ) ಕಪ್ಪು ಜನರೆಲ್ಲರೂ ಫ್ರೆಂಚ್‌ ಮಾತನಾಡಲು ತವಕಪಡುತ್ತಾರೆ. ಅವರು ಫ್ರೆಂಚ್‌ ಭಾಷೆಯ ಮೇಲೆ ಪ್ರಭುತ್ವ ಪಡೆಯುತ್ತಾರೋ ಅಷ್ಟು ಆಳುವ ಬಿಳಿಯ ವರ್ಗಕ್ಕೆ ಹತ್ತಿರ ಬರುತ್ತಾರೆ; ತಮ್ಮ ‘ಮೃಗೀಯ’ ಅವಸ್ಥೆಯಿಂದ ಅಷ್ಟು ಮೇಲಕ್ಕೆ ಬಂದು, ‘ಸುಸಂಸ್ಕೃತ’ರಾಗುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಫ್ರೆಂಚ್‌ ಭಾಷೆಯನ್ನು ಫ್ರೆಂಚರಷ್ಟೇ ಚೆನ್ನಾಗಿ ಮಾತನಾಡುತ್ತೀರಿ. ಚರ್ಮದಿಂದಷ್ಟೇ ನೀವು ಕಪ್ಪು ಜನರೆಂದು ತಿಳಿಯಬಹುದು’ ಎಂಬ ಪ್ರಶಂಸೆ ಗಳಿಸಿದಾಗ ತಮ್ಮ ಬದುಕು ಸಾರ್ಥಕವಾಯಿತೆಂದು ಅವರು ಭಾವಿಸುತ್ತಾರೆ; ಮತ್ತು ತಮ್ಮ ಜನರೊಡನೆ ಬೆರೆಯಲು ಮತ್ತು ತಮ್ಮ ಭಾಷೆಯಲ್ಲಿ ಮಾತನಾಡಲು ಅವರು ಮುಜುಗರ ಪಡುತ್ತಾರೆ (೩೮ – ೩೯). ಇಲ್ಲಿಗೆ ‘ಬಿಳಿಯ ಮುಖವಾಡ’ವನ್ನು ಧರಿಸುವ ಕಾರ್ಯ ಪೂರ್ಣವಾಗುತ್ತದೆ.

ಭಾಷೆಯಂತೆಯೇ ವಸಾಹತುಶಾಹಿಯ ಇತರ ಸಾಮಾಜಿಕ – ಸಾಂಸ್ಕೃತಿಕ ವಿವರಗಳು ಕಪ್ಪು ಜನರ ವ್ಯಕ್ತಿತ್ವವನ್ನು ಹೇಗೆ ಛಿದ್ರಗೊಳಿಸಿವೆ ಎಂಬುದನ್ನು ಫ್ಯಾನನ್ ದೀರ್ಘವಾಗಿ ವಿವರಿಸುತ್ತಾನೆ. ಉದಾಹರಣೆಗೆ, ಪ್ರತಿಯೊಬ್ಬ ಕಪ್ಪು ಹುಡುಗಿಯ ಕನಸೂ ಬಿಳಿಯನನ್ನು ಮದುವೆಯಾಗಿ (“ಒಂದು ಸುಂದರ ರಾತ್ರಿ – ಸುಂದರ ಪ್ರೇಮಿ – ಬಿಳಿಯ ತರುಣ”), ಅದು ಸಾಧ್ಯವಾಗದಿದ್ದರೆ, ದೈಹಿಕ ಸಂಬಂಧವನ್ನಾದರೂ ಬೆಳೆಸಿ, ‘ಹೇಗಾದರೂ ಬಿಳಿಯತನವನ್ನು ಪಡೆಯುವುದು’. ಈ ಉದ್ದೇಶಪೂರ್ತಿಗಾಗಿ ಅವಳು ಎಂತಹುದೇ ತ್ಯಾಗಕ್ಕೂ, ಕಷ್ಟಕ್ಕೂ ಸಿದ್ಧಳಾಗಿರುತ್ತಾಳೆ; ಮತ್ತು ಇತರ ಕಪ್ಪು ಜನರಿಂದ ತನ್ನನ್ನು ಎಲ್ಲಾ ನೆಲೆಗಳಲ್ಲಿಯೂ ಪ್ರತ್ಯೇಕಿಸಿಕೊಳ್ಳುತ್ತಾಳೆ. ಇದೇ ರೀತಿ, ಪ್ರತಿಯೊಬ್ಬ ಕಪ್ಪು ಹುಡುಗನೂ ಬಿಳಿಯ ಹುಡುಗಿಯನ್ನು ಮದುವೆಯಾಗುವ ಮತ್ತು/ಅಥವಾ ಭೋಗಿಸುವ ಕನಸು ಕಾಣುತ್ತಾನೆ. ಪ್ಯಾರಿಸ್‌ ಮುಂತಾದ ನಗರಗಳಿಗೆ ಬಂದ ಕೂಡಲೇ ಅವನು ಮೊದಲು ಮಾಡುವ ಕೆಲಸವೆಂದರೆ ಬಿಳಿಯ ಹುಡುಗಿಯರಿರುವ ವೇಶ್ಯಾಗೃಹಕ್ಕೆ ಹೋಗುವುದು. ಶ್ವೇತವರ್ಣೀಯಳೊಡನೆ ಆಗುವ ಸಂಭೋಗ ಅಶ್ವೇತನಿಗೆ ಇಬ್ಬಗೆಯ ಸಮಾಧಾನವನ್ನು ನೀಡುತ್ತದೆ; ತನ್ನನ್ನು ಕೂಡಲು ಅವಳು ಒಪ್ಪಿದಳೆಂದರೆ ತಾನು ಅಷ್ಟರ ಮಟ್ಟಿಗೆ ತನ್ನ ‘ಕಪ್ಪುತನ’ವನ್ನು ಮೀರಿದಂತೆ; ಮತ್ತು, ಇದಕ್ಕೆ ವಿರುದ್ಧವಾಗಿ, ಅವಳನ್ನು ಭೋಗಿಸುವುದರ ಮೂಲಕ ತನ್ನ ಜನಾಂಗದ ಮೇಲಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಂತೆ. ಈ ರೀತಿ, ತಮ್ಮ ವರ್ತನೆಯಲ್ಲಿ, ಶಿಕ್ಷಣದಲ್ಲಿ, ಮತಾಚರಣೆಗಳಲ್ಲಿ, ಮೌಲ್ಯಗಳಲ್ಲಿ – ಪ್ರತಿಯೊಂದು ಕ್ಷೇತ್ರದಲ್ಲಿಯೂ ವಸಾಹತುಶಾಹಿಯು ಸೃಷ್ಟಿಸಿದ (ಸೃಷ್ಟಿಸುತ್ತಿರುವ) ‘ಛಿದ್ರ ವ್ಯಕ್ತಿತ್ವ’ದ ನಿಖರವಾದ ವಿಶ್ಲೇಷಣೆಯನ್ನು ಫ್ಯಾನನ್ ಈ ಕೃತಿಯಲ್ಲಿ ಕೈಗೊಳ್ಳುತ್ತಾನೆ.

೮೦ರ ದಶಕದಲ್ಲಿ ಮೂಡಿಬಂದ ವಸಾಹತೋತ್ತರ ಚಿಂತಕರ ತುಲನೆಯಲ್ಲಿ ಫ್ಯಾನನ್ ಒಂದು ಪ್ರಮುಖ ನೆಲೆಯಲ್ಲಿ ಭಿನ್ನನಾಗುತ್ತಾನೆ – ತನ್ನ ಜಾನಾಂಗಿಕ ‘ಗತ’ದ ಬಗ್ಗೆ ಇರುವ ಧೋರಣೆಯಲ್ಲಿ. ಅನೇಕ ವಸಾಹತೋತ್ತರ ಚಿಂತಕರು ‘ಗತ’ದೊಡನೆ ಪ್ರಜ್ಞಾಪೂರ್ವಕವಾಗಿ ಕಟ್ಟಲ್ಪಡುವ ಸಂಬಂಧವನ್ನು ನಿರ್ವಸಾಹತೀಕರಣದ ಪ್ರಥಮ ಘಟ್ಟವೆಂದು ಪರಿಗಣಿಸಿದರೆ, ಫ್ಯಾನನ್, ಯಾವುದೇ ತಿದ್ದುಪಡಿಯಿಲ್ಲದೆ, ನೇರವಾಗಿ, ತನ್ನ/ತನ್ನ ಜನಾಂಗದ ‘ಗತ’ವನ್ನು — ಗತವೈಭವ — ಸಂಸ್ಕೃತಿಗಳನ್ನು — ನಿರುಪಯುಕ್ತವೆಂದು ತಿರಸ್ಕರಿಸುತ್ತಾಲನೆ. “ಹದಿನೈದನೆಯ ಶತಮಾನದಲ್ಲಿ ಒಂದು ಭವ್ಯ ನೀಗ್ರೋ ಸಂಸ್ಕೃತಿ ಅಸ್ತಿತ್ವದಲ್ಲಿತ್ತು  ಎಂಬ ಅನ್ವೇಷಣೆ ನನಗೆ ಮಾನವತೆಯ ಮೇಲೆ ಯಾವುದೇ ಬಗೆಯ ಹೆಚ್ಚಿನ ಅಧಿಕಾರವನ್ನು ಇಂದು ಕೊಡುವುದಿಲ್ಲ. ಇದನ್ನು ನೀವು ಒಪ್ಪಿ ಅಥವಾ ಬಿಡಿ; ವರ್ತಮಾನದ ಈ ಕ್ಷಣದಲ್ಲಿ ನನಗೆ ನನ್ನ ಗತ ಯಾವುದೇ ಬಗೆಯ ಮಾರ್ಗದರ್ಶನವನ್ನು ಕೊಡಲಾರದು” (ಪು.೨೨೫) ಎಂದು ಒಂದು ಸಂದರ್ಭದಲ್ಲಿ ಫ್ಯಾನನ್ ಘೋಷಿಸುತ್ತಾನೆ. (ಈ ಧೋರಣೆಯನ್ನು ಫ್ಯಾನನ್ ತನ್ನ ಮುಂದಿನ ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳುತ್ತಾನೆ.) ಗತದ ಬಗ್ಗೆ ಫ್ಯಾನನ್ ಇರುವ ಇಂತಹ ಧೋರಣೆಗೆ ಅವನು ಒಪ್ಪಿಕೊಂಡ ಅಸ್ತಿತ್ವವಾದೀ ಚಿಂತನೆ ಒಂದು ಮುಖ್ಯ ಕಾರಣ. ಫ್ಯಾನನ್‌ಗೆ ಪ್ರಸ್ತುತವಾಗುವುದು ಇಂದು, ನೆನ್ನೆಯಲ್ಲ; ನಿಷ್ಠುರ ವ್ಯಾವಹಾರಿಕ ಪ್ರಜ್ಞೆ, ಯಾವುದೋ ಅಜ್ಞಾತ ನೀತಿಸಂಹಿತೆಯಲ್ಲ; ವಾಸ್ತವ ಕ್ರಿಯೆ, ಅಮೂತ್ ಚಿಂತನೆಯಲ್ಲ. ಆದ್ದರಿಂದಲೇ ಫ್ಯಾನನ್ ಮಾರ್ಕ್ಸ್‌ನ ಪ್ರಸಿದ್ಧ ಹೇಳಿಕೆಯನ್ನು ಪುನರುಚ್ಚರಿಸುತ್ತಾನೆ: “ಇಂದು ನಮಗೆ ಮುಖ್ಯವಾಗುವ ಕಾರ್ಯವೆಂದರೆ ಈ ವಿಶ್ವವನ್ನು ಅರಿಯುವುದಲ್ಲ – ಅದನ್ನು ಬದಲಾಯಿಸುವುದು. “ವಸಾಹತೀಕರಣಕ್ಕೊಳಪಟ್ಟ, ಪರಿಣಾಮತಃ ಛಿದ್ರ ವ್ಯಕ್ತಿತ್ವ, ನೈಚ್ಯ ಪ್ರಜ್ಞೆ, ಸಾಂಸ್ಕೃತಿಕ ವಿಸ್ಮರಣೆ ಇತ್ಯಾದಿ ಮಾನಸಿಕ ವ್ಯತ್ಯಯಗಳಿಗೆ ತುತ್ತಾದ ಇಡೀ ಒಂದು ಸಮಾಜವನ್ನು ಮುಕ್ತಿಗೊಳಿಸುವುದು ಹೇಗೆ? ನಿರ್ವಸಾಹತೀಕರಣದ ವಿವಿಧ ಮುಖಗಳೇನು? – ಈ ಪ್ರಶ್ನೆಗಳನ್ನು ಫ್ಯಾನನ್‌ “ಭೂಮಿಯ ಮೇಲಿನ ಹತಭಾಗ್ಯರು” ಎಂಬ ತನ್ನ ಎರಡನೆಯ ಕೃತಿಯಲ್ಲಿ ವಿವರವಾಗಿ ಉತ್ತರಿಸುತ್ತಾನೆ.

೧೯೬೧ರಲ್ಲಿ ಬರೆದ “ಭೂಮಿಯ ಮೇಲಿನ ಹತಭಾಗ್ಯರು” (ಇಂಗ್ಲೀಷ್‌, ೧೯೬೭) ಕೃತಿಯನ್ನು ಇಂದು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅದರ ಚಾರಿತ್ರಿಕ ಸಂದರ್ಭವನ್ನು ಗಮನಿಸುವುದು ಅಗತ್ಯವಾಗುತ್ತದೆ. ಏಕೆಂದರೆ, ಕೃತಿಯುದ್ಧಕ್ಕೂ ಫ್ಯಾನನ್ ವಸಾಹತುಶಾಹಿಯ ವಿರುದ್ಧ ನಡೆಯುವ ಹೋರಾಟದಲ್ಲಿ ಹಿಂಸೆಯನ್ನು ಸಮರ್ಥಿಸುತ್ತಾನಲ್ಲದೆ, ಯುದ್ಧದಿಂದ ಮಾತ್ರ ವಸಾಹತುಶಾಹಿಯಿಂದ ಮುಕ್ತಿ ಸಾಧ್ಯವೆಂದು ವಾದಿಸುತ್ತಾನೆ. ಕೃತಿಯುದ್ಧಕ್ಕೂ ಬುದ್ಧಿಜೀವಿಗಳನ್ನು ಮತ್ತು ಸೂಕ್ಷ್ಮ ವಾದಗಳನ್ನು ಗೇಲಿ ಮಾಡುತ್ತಾನೆ. ಅವನ ಇಡೀ ವಾದ ಸರಳವಾದ ‘ಕಪ್ಪು – ಬಿಳುಪು’ ಚೌಕಟ್ಟಿನಲ್ಲಿ ನಡೆಯುತ್ತದೆ.

ತಾತ್ಕಾಲಿಕ ಒತ್ತಡದಿಂದ (ಆಲ್ಜೀರೀಯಾದ ಜನರು ಫ್ರೆಂಚರ ವಿರುದ್ಧ ೫೦ರ ದಶಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು; ಮತ್ತು ಫ್ಯಾನನ್‌ ಅವರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು) ಅತ್ಯಂತ ಪ್ರಚೋದಕ ಹಾಗೂ ಆವೇಶಪೂರ್ಣ ಶೈಲಿಯಲ್ಲಿ ಬರೆಯಲ್ಪಟ್ಟಿರುವ ಈ ಕೃತಿಯ ಮುಖ್ಯ ಕಾಳಜಿ ನಿರ್ವಸಾಹತೀಕರಣ ಪ್ರಕ್ರಿಯೆ. ಅಂತಹ ಪ್ರಕ್ರಿಯೆಯ ಸ್ವರೂಪ, ಪ್ರಾರಂಭ, ಮತ್ತು ಯಶಸ್ಸು ಇವುಗಳನ್ನು ದೀರ್ಘವಾಗಿ ಫ್ಯಾನನ್‌ ಈ ಕೃತಿಯಲ್ಲಿ ಚರ್ಚಿಸುತ್ತಾನೆ. ಮೊದಲಿಗೆ, ಅಹಿಂಸಾತ್ಮಕ ಚಳುವಳಿಗಳಲ್ಲಿ ನಂಬಿಕೆಯಿಲ್ಲದ ಫ್ಯಾನನ್‌ ಹಿಂಸೆಯ ಅನಿವಾರ್ಯತೆಯನ್ನು ಹೀಗೆ ಒತ್ತಿ ಹೇಳುತ್ತಾನೆ: “ಈಗ ಅಧಿಕಾರದ ಅಂಚಿನಲ್ಲಿರುವವರಿಗೆ ಆದ್ಯತೆ ಬರಬೇಕಾದರೆ ಈ ಇಬ್ಬರು ಎದುರಾಳಿಗಳ ನಡುವೆ ನಡೆಯುವ ನಿರ್ಣಯಾತ್ಮಕ ಮತ್ತು ಘೋರ ಸಂಘರ್ಷದಿಂದ ಮಾತ್ರ ಸಾಧ್ಯ. ಈ ಸಂಘರ್ಷದಲ್ಲಿ ನಮಗೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು, ಹಿಂಸಾತ್ಮಕ ಮಾರ್ಗವನ್ನೂ ಕೂಡಾ ನಾವು ದುಡಿಸಿಕೊಂಡಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ (ಪು. ೨೮). ಫ್ಯಾನನ್‌ನ ದೃಷ್ಟಿಯಲ್ಲಿ, ಅಹಿಂಸಾತ್ಮಕ ಧೋರಣೆ, ಪರೋಕ್ಷವಾಗಿ, ಇರುವ ವ್ಯವಸ್ಥೆಯನ್ನೇ ಬಲಪಡಿಸುತ್ತದೆ: “ಅಹಿಂಸಾತ್ಮಕ ಚಳುವಳಿ ಎಂದರೆ ಹಸಿರು  ಶಾಲು ಹೊದಿಸಿದ ಮೇಜಿನ ಸುತ್ತಲೂ ಆರಾಮವಾಗಿ ಕುಳಿತು ವಸಾಹತುಶಾಹಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ” (ಪು. ೪೮).

ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳಲ್ಲಿಯೂ ಫ್ಯಾನನ್‌ಗೆ ವಿಶ್ವಾಸವಿಲ್ಲ; ಬುದ್ಧಿಜೀವಿಗಳ ಸೂಕ್ಷ್ಮ ತರ್ಕದಲ್ಲಿ ಅವನಿಗೆ ನಂಬಿಕೆಯಿಲ್ಲ: “ಹಿಂಸೆಯನ್ನು ಕುರಿತಾದ ನಿರ್ದಿಷ್ಟ ಪ್ರಶ್ನೆ ಎದ್ದಾಗ ಬುದ್ಧಿಜೀವಿಗಳು ಸಂದಿಗ್ಧ ನಿಲುವನ್ನು ತಳೆಯುತ್ತಾರೆ. ತಮ್ಮ ಮಾತಿನಲ್ಲಿ ಅವರು ಉಗ್ರವಾದಿಗಳು, ನಿಲುವಿನಲ್ಲಿ ಸುಧಾರಣಾವಾದಿಗಳು” (ಪು.೪೬) ಎಂದು ಅವರನ್ನು ಜರೆಯುತ್ತಾನೆ. ಅವನ ಅಭಿಪ್ರಾಯದಲ್ಲಿ, ರಾಜಕೀಯ ಪಕ್ಷಗಳು,ಬುದ್ಧಿಜೀವಿಗಳು, ಮೇಲ್ವರ್ಗದ ಜನರು ಇವರೆಲ್ಲರ ಹಿತವೂ ವಸಾಹತುಶಾಹಿ ವ್ಯವಸ್ಥೆಯನ್ನೇ ಹೊಂದಿಕೊಂಡಿದೆ; ಮತ್ತು ಇವರೆಲ್ಲರೂ ರೈತಾಪಿ ವರ್ಗವನ್ನು ಅಲಕ್ಷಿಸುತ್ತಾರೆ. ಫ್ಯಾನನ್‌ ವಾದಿಸುವುದೇನೆಂದರೆ, “ವಸಾಹತುಶಾಹಿ ಆಧಿಪತ್ಯಕ್ಕೊಳಪಟ್ಟಿ ರಾಷ್ಟ್ರಗಳಲ್ಲಿ ನಿಜವಾದ ಕ್ರಾಂತಿಕಾರಿ ವರ್ಗವೆಂದರೆ ಕೇವಲ ರೈತಾಪಿ ವರ್ಗ. ಹಿಂಸಾತ್ಮಕ ಮಾರ್ಗದಿಂದ ಮಾತ್ರ ಯಶಸ್ಸು ದೊರಕುತ್ತದೆಂಬ ಸತ್ಯ ಎಲ್ಲರಿಗಿಂತ ಮೊದಲು ಆ ವರ್ಗಕ್ಕೆ ಅರಿವಾಗುತ್ತದೆ. ಅವರಿಗೆ ಸಾಮ್ರಾಜ್ಯಶಾಹಿಯೊಡನೆ ಯಾವುದೇ ವಿಧದ ರಾಜಿ ಅಥವಾ ಸಂಧಾನ ಸಾಧ್ಯವಿಲ್ಲ” (ಪು. ೪೭).

ವಸಾಹತುಶಾಹಿಯು ತನ್ನ ಅಧೀನ ರಾಷ್ಟ್ರಗಳ ಮೇಲೆ ತನ್ನ ಪ್ರಭುತ್ವವನ್ನು ಬಲಪಡಿಸಲು ಎಂತೆಂತಹ ಮಾರ್ಗಗಳನ್ನು ಅನುಸರಿಸಿತು ಎಂಬುದನ್ನು ನಾವು ಸ್ಪಷ್ಟವಾಗಿ ಗ್ರಹಿಸಿದರೆ ಅದರಿಂದ ಬಿಡುಗಡೆ ಸಾಧ್ಯವಾಗುತ್ತದೆ ಎಂದು ಫ್ಯಾನನ್‌ ಮಂಡಿಸುತ್ತಾನೆ. ಫ್ಯಾನನ್‌ ವಿಶ್ಲೇಷಿಸುವಂತೆ, ಮೊದಲಿಗೆ ವಸಾಹತುಶಾಹಿಯು ಅಧೀನ ರಾಷ್ಟ್ರಕ್ಕೆ ತನ್ನದೇ ಆದ ಇತಿಹಾಸ – ಸಂಸ್ಕೃತಿಗಳಿದ್ದುವೆಂಬುದನ್ನು ಅಲ್ಲಗಳೆಯುತ್ತದೆ. ಅನಂತರ, ದೇಶೀಯರನ್ನು ಬರ್ಬರತೆಯ ಮೂರ್ತರೂಪವೆಂಬಂತೆ ಚಿತ್ರಿಸುತ್ತಾ, ಕ್ರಮವಾಗಿ, ಅವರ ಸಮಾಜದಲ್ಲಿ ಇಂದೇ ಅಲ್ಲದೆ ಹಿಂದೆಂದೂ ಮಾನವೀಯ ಮೌಲ್ಯಗಳ ಅರಿವು ಇರಲಿಲ್ಲವೆಂದು ದಾಖಲಿಸುತ್ತದೆ. ಇಷ್ಟೇ ಅಲ್ಲದೆ, ಅವರ ಹತ್ತಿರ ಬಂದವರೆಲ್ಲರನ್ನೂ ಅವರು ನಾಶ ಮಾಡುತ್ತಾರೆ; ಅವರಿಗೆ ಸೌಂದರ್ಯಪ್ರಜ್ಞೆ, ನೈತಿಕತೆ, ಮತ್ತು ಪ್ರೀತಿವಿಶ್ವಾಸಗಳ ಗಂಧವಿಲ್ಲ; ತಮ್ಮ ಇಡೀ ಬದುಕನ್ನು ಅವರು ಮೃಗೀಯ ವಾಸನೆಗಳ ತೃಪ್ತಿಗಾಗಿ ಕಳೆಯುವಂತಹವರು. ವಸಾಹತುಶಾಹಿಯು ಕೊನೆಗೊಂಡ ಕ್ಷಣದಲ್ಲಿ ಈ ಸಮಾಜ ಮತ್ತೆ ತನ್ನ ಮೊದಲಿನ — ಎಂದರೆ ಬರ್ಬರಾವಸ್ಥೆಗೆ ಮರಳುತ್ತದೆ – ಎಂದು ವಸಾಹತುಶಾಹಿ ತಾನೂ ನಂಬಿ ಇತರರನ್ನು ನಂಬಿಸಲು ಪ್ರಯತ್ನಿಸುತ್ತದೆ.

ಹೀಗೆ, ಅಧೀನ ರಾಷ್ಟ್ರಗಳ ‘ಸಾಂಸ್ಕೃತಿಕ ವಿನಾಶ’ವನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸುವ ಒಂದು ಘಟ್ಟದಲ್ಲಿ ವಸಾಹತುಶಾಹಿಯು ಅಧೀನ ರಾಷ್ಟ್ರದ ಜನತೆ ತಮ್ಮ ರಾಷ್ಟ್ರತ್ತ್ವದ ಗ್ರಹಿಕೆ ಫೊಳ್ಳೆಂದು, ತಾವು ಸಂಸ್ಕೃತಿ ಎಂದು ನಂಬಿದ್ದುದು ಕೇವಲ ಪ್ರಾಣಿಸಹಜ ಪ್ರವೃತ್ತಿಯೆಂದು, ಮತ್ತು ಜೀವವಿಜ್ಞಾನದ ನೆಲೆಯಲ್ಲಿಯೂ ತಮ್ಮ ದೈಹಿಕ ಮತ್ತು ಮಾನಸಿಕ ಸ್ವರೂಪವು ತುಂಬಾ ಕೆಳಮಟ್ಟದ್ದೆಂದೂ ನಂಬುವಂತೆ ಶ್ರಮಿಸುತ್ತದೆ; ಅನಂತರ ಅದನ್ನು ವಿರೂಪಗೊಳಿಸುತ್ತದೆ; ಕೊನಗೆ, ಅದನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ” (ಪು. ೧೬೯) ಎಂದು ಫ್ಯಾನನ್‌ ದಾಖಲಿಸುತ್ತಾನೆ.

ಆದ್ದರಿಂದ, ನಿರ್ವಸಾಹತೀಕರಣ ಪ್ರಕ್ರಿಯೆಯಲ್ಲಿ ಪೂರ್ವ – ವಸಾಹತು ರಾಷ್ಟ್ರವು ಮಾಡಬೇಕಾದ ಆದ್ಯ ಕರ್ತವ್ಯವೆಂದರೆ “ತನ್ನ ಗತಕ್ಕೆ ಮರಳಿ ಅದನ್ನು  ವರ್ತಮಾನದಲ್ಲಿ ಕ್ರಿಯಾಶೀಲವಾಗಿಸುವುದು”. ಪ್ರತಿಯೊಬ್ಬ ದೇಶೀ ರಾಜಕಾರಣಿಯು, ಬುದ್ಧಿಜೀವಿಯು, ಕಲಾವಿದನು, ಮತ್ತು ವಿಜ್ಞಾನಿಯು ಮಾಡಬಹುದಾದ ಮಹತ್ಕಾರ್ಯವೆಂದರೆ ತನ್ನ ದೇಶೀ ಆಕೃತಿಗಳಿಗೆ ಜೀವಕೊಟ್ಟು, ಆ ಮೂಲಕ ಪಶ್ಚಿಮಕ್ಕೆ ವಿರುದ್ಧವಾದ ‘ಪರ್ಯಾಯ ವ್ಯವಸ್ಥೆ’ಯನ್ನು ಕಟ್ಟಿ ಬೆಳೆಸುವುದು. ಇಂತಹ ‘ಪರ್ಯಾಯಗಳ ಶೋಧ’ ಕೇವಲ ಒಂದು ರಾಷ್ಟ್ರದ್ದಲ್ಲದೆ ಇಡೀ ವಿಶ್ವದ ಜವಾಬ್ದಾರಿ ಎಂದು ಫ್ಯಾನನ್‌ ಘೋಷಿಸುತ್ತಾನೆ.

ಇಂತಹ ‘ಗತಕ್ಕೆ ಮರಳುವ’ ಮತ್ತು ‘ತಮ್ಮ ಅಜ್ಞಾತ ಬೇರುಗಳನ್ನು ಶೋಧಿಸುವ’ ಕಾರ್ಯ ಅನೇಕ ಸಂದಿಗ್ಧಗಳನ್ನು ಎದುರಿಸಬೇಕಾಗುತ್ತದೆಂಬ ಅಂಶವನ್ನು ಫ್ಯಾನನ್‌ ಸ್ಪಷ್ಟಪಡಿಸುತ್ತಾನೆ. ಶ್ವೇತವರ್ಣೀಯರದೆಂಬ ಒಂದೇ ಕಾರಣಕ್ಕಾಗಿ ನಾವು ತಿರಸ್ಕರಿಸುವ (ತಿರಸ್ಕರಿಸಲೇಬೇಕಾದ) ಸಂಸ್ಕೃತಿ ಹಾಗೂ ವೈಚಾರಿಕತೆ ಆಧುನಿಕವೂ ಆಗಿರುವುದರಿಂದ, ಮತ್ತು ಪೂರ್ವ ವಸಾಹತುಗಳ ಸಮಾಜಗಳು ಅನೇಕ ಮೂಢ ಹಾಗೂ ಕ್ರೂರ ಪಳೆಯುಳಿಕೆಗಳಿಂದ ತುಂಬಿರುವುದರಿಂದ, ಪಶ್ಚಿಮವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಪ್ರಗತಿವಿರೋಧ ಆಯ್ಕೆಯೂ ಆಗುವ ಸಾಧ್ಯತೆಯಿದೆ; ಮತ್ತು ಪ್ರತಿಯೊಬ್ಬ ದೇಶೀಯನೂ ಈ ಕಾರಣದಿಂದ ‘ಛಿನ್ನ ವ್ಯಕ್ತಿತ್ವ’ವನ್ನು ಬೆಳೆಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಇಂತಹ ಆಯ್ಕೆ ಎಷ್ಟೇ ಸಂದಿಗ್ಧಗಳಿಂದ ಕೂಡಿದ್ದರೂ ನಿರ್ವಸಾಹತೀಕರಣದ ಪ್ರಕ್ರಿಯೆಯಲ್ಲಿ ಅನಿವಾರ್ಯವೆಂದು ಫ್ಯಾನನ್‌ ವಾದಿಸುತ್ತಾನೆ. ತನ್ನ ಮೂಲದ ಬೇರುಗಳನ್ನು ಶೋಧಿಸಿ ಅವುಗಳನ್ನು ಒಪ್ಪಿಕೊಳ್ಳದಿದ್ದರೆ, ತನ್ನ ಚರಿತ್ರೆಯನ್ನು ಪುನಃ ತಾನೇ ಕಟ್ಟಿಕೊಳ್ಳದಿದ್ದರೆ, ಅಂತಹ ಸಮಾಜ ‘ಕ್ಷಿತಿಜವೇ ಇಲ್ಲದ, ವಾಸನಾರಹಿತ, ಆಧಾರರಹಿತ, ರಾಷ್ಟ್ರರಹಿತ ಸಮಾಜವಾಗುತ್ತದೆ; ಕೇವಲ ದೇವತೆಗಳು ಮಾತ್ರ ಇರಬಲ್ಲ ಸ್ಥಳವಾಗುತ್ತದೆ” (ಪು. ೧೮೭) ಎಂದು ಫ್ಯಾನ್‌ ಪರಿಣಾಮಕಾರಿಯಾಗಿ ವಾದಿಸುತ್ತಾನೆ.

ನಿರ್ವಸಾಹತೀಕರಣದ ಸಂದರ್ಭದಲ್ಲಿ ಒಟ್ಟಾರೆಯಾಗಿ ತೃತೀಯ ಜಗತ್ತಿನ ರಾಷ್ಟ್ರಗಳ ಕರ್ತವ್ಯವೇನು? ಈ ಪ್ರಶ್ನೆಗೆ ಫ್ಯಾನನ್‌ ಕೊಡುವ ಉತ್ತರ ತುಂಬಾ ಅರ್ಥಪೂರ್ಣವಾಗಿದೆ, ವ್ಯಾವಹಾರಿಕವಾಗಿದೆ. ಮೊಟ್ಟಮೊದಲು, ಈ ಎಲ್ಲಾ (ಪೂರ್ವ – ವಸಾಹತು) ರಾಷ್ಟ್ರಗಳು ಒಂದೆಡೆ ಬರಬೇಕು; ಮತ್ತು ಒಗ್ಗಟ್ಟಾಗಿ ತಮ್ಮ ದೇಶಗಳು ಪಶ್ಚಿಮ ರಾಷ್ಟ್ರಗಳ ಸಾರಾಸಗಟು ಮಾರುಕಟ್ಟೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಆಗ, ಪಶ್ಚಿಮದ ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ; ನಿರ್ಯಾತವಾಗದ ಯಂತ್ರೋಪಕರಣಗಳು ನಿರುಪಯುಕ್ತವಾಗಿ ಗೋದಾಮುಗಳಲ್ಲಿ ಶೇಖರವಾಗುತ್ತವೆ. ಅಲ್ಲಿಯ ನಿರುದ್ಯೋಗಿ ಕಾರ್ಮಿಕರು ತಮ್ಮ ಬಂಡವಾಳಶಾಹಿ ವ್ಯವಸ್ಥೆಯೊಡನೆ ಹೋರಾಟಕ್ಕಿಳಿಯುತ್ತಾರೆ. ಆಗ, ತೃತೀಯ ಜಗತ್ತಿನ ಉದ್ಧಾರದಲ್ಲಿಯೇ ತಮ್ಮ ಉದ್ಧಾರವೂ ಹಾಸುಹೊಕ್ಕಾಗಿದೆಯೆಂದು ಪಶ್ಚಿಮ ರಾಷ್ಟ್ರಗಳಿಗೆ ಅರಿವಾಗುತ್ತದೆ.

ಫ್ರ್ಯಾಂಜ್‌ ಫ್ಯಾನನ್‌ ಅಮೂರ್ತ ಚಿಂತಕನಲ್ಲ – ವಸಾಹತುಶಾಹಿಯ ವಿರುದ್ಧ ಆಲ್ಜೀರಿಯನ್‌ ಜನತೆ ಅನೇಕ ವರ್ಷಗಳಿಂದ ನಡೆಸುತ್ತಿದ್ದ ಹೋರಾಟದಲ್ಲಿ ನೇರವಾಗಿ ತನ್ನನ್ನು ತೊಡಗಿಸಿಕೊಂಡವ. ಆದ್ದರಿಂದ ಅವನ ವಿಚಾರಗಳಿಗೆ ಅಂದಿದ್ದ ತಾತ್ಕಾಲಿಕ ಜರೂರು ಒಂದು ವಿಧದ ಮಿತಿಯನ್ನೂ ಒಡ್ಡಿತು. ಫ್ಯಾನನ್‌ ಆಗ್ರಹಿಸುವ ಹಿಂಸೆಯ ಅನಿವಾರ್ಯತೆಯನ್ನು ಮತ್ತು ಪಾವಿತ್ರ್ಯವನ್ನು ನಾವಿಂದು ಒಪ್ಪಬೇಕಾದ್ದಿಲ್ಲ. ಹಾಗೆಯೇ, ಅವನ ಹೋರಾಟ ರೂಪಿಸಿದ ‘ಕಪ್ಪು – ಬಿಳುಪು’ ಸ್ವರೂಪದ, ದ್ವಿವರ್ಗೀಯ ವೈರುಧ್ಯವನ್ನಾಧರಿಸಿದ ಅವನ ವಿಶ್ವದೃಷ್ಟಿಯನ್ನೂ ನಾವು ಸಂಪೂರ್ಣವಾಗಿ ಸ್ವೀಕರಿಸಬೇಕಾದ್ದಿಲ್ಲ. ವಸಾಹತುಶಾಹಿ ಮತ್ತು ಅಧೀನ  ರಾಷ್ಟ್ರಗಳ ನಡುವೆ ಇದ್ದಂತಹ ಸಂಕೀರ್ಣ ಕೊಡುಕೊಳ್ಳುವಿಕೆ, ಎರಡು ಬಣಗಳಲ್ಲೂ ಇದ್ದ ಸೂಕ್ಷ್ಮ ಅಂತರ್ ವಿರೋಧಗಳು ಮತ್ತು ವೈರುಧ್ಯಗಳು – ಇವುಗಳನ್ನು ಅವನ ನಂತರ ಬಂದ ಹೋಮೀ ಭಾಭಾ ಮುಂತಾದ ಚಿಂತಕರು ಸ್ಪಷ್ಟಪಡಿಸಿದ್ದಾರೆ. ಆದರೆ, ನಿರ್ವಸಾಹತೀಕರಣದ ಸ್ವರೂಪ ಮತ್ತು ಜರೂರು, ವಸಾಹತುಶಾಹಿ ಕೈಗೊಂಡ ಅಭೂತಪೂರ್ವ ‘ಸಂಸ್ಕೃತಿ ನಾಸ’, ಮತ್ತು ಇಂದೂ ಪ್ರಬಲವಾಗಿರುವ ಪಶ್ಚಿಮದ ಸಾಂಸ್ಕೃತಿಕ – ವೈಚಾರಿಕ ಯಾಜಮಾನ್ಯದಿಂದ ಮುಕ್ತವಾಗಲು ತೃತೀಯ ಜಗತ್ತಿನ ರಾಷ್ಟ್ರಗಳು ಮಾಡಬೇಕಾದ ಕಾರ್ಯಗಳು – ಇವುಗಳನ್ನು ಅತ್ಯಂತ ಕಾಳಜಿಯಿಂದ, ಆಗ್ರಹಪೂರ್ವಕವಾಗಿ, ಮೊಟ್ಟಮೊದಲಿಗೆ ವಿಶ್ಲೇಷಿಸಿ ವ್ಯಾಖ್ಯಾನಿಸಿದವನು ಫ್ಯಾನನ್‌ ಎಂಬುದನ್ನು ಎಲ್ಲರೂ ಒಪ್ಪಬಹುದು.

* * *