ಸೈದ್‌ನ ಪೌರಸ್ತ್ಯ ಚಿಂತನೆಯ ಪ್ರಭಾವದಿಂದಾಗಿ ವಸಾಹತೋತ್ತರ ಚಿಂತನೆ ೮೦ರ ದಶಕದಲ್ಲಿ ಅಮೆರಿಕಾ, ಆಸ್ಟ್ರೇಲಿಯಾ, ಭಾರತ ಇತ್ಯಾದಿ ರಾಷ್ಟ್ರಗಳಲ್ಲಿ ಶ್ರೀಮಂತವಾಗಿ ಬೆಳೆಯಿತು. ಹೋಮಿ ಭಾಭಾ, ಗಾಯತ್ರಿ ಸ್ಪಿವಕ್‌, ಜ್ಞಾನಪ್ರಕಾಶ್‌, ಸಾರಾ ಸುಲೇರಿ, ಖ್ವಾಮೆ ಆಂಥೋನಿ ಅಪ್ಪಯ್ಯ, ಸ್ಪೂ ಆರ್ಟ್ ಹಾಲ್‌ ಮುಂತಾದ ಅನೇಕ ವಿಮರ್ಶಕರು ವಸಾಹತೋತ್ತರ ಚಿಂತನೆಯ ಹೊಸ ಆಯಾಮಗಳನ್ನು ತೆರೆದು, ಅದನ್ನೊಂದು ಸೂಕ್ಷ್ಮ ಹಾಗೂ ಸಂವೇದನಾಶೀಲ ಪ್ರಸ್ಥಾನವನ್ನಾಗಿ ಬೆಳೆಸಿದರು. ಈ ಅಧ್ಯಾಯದಲ್ಲಿ ಮೊದಲು ಅವರುಗಳು ರೂಪಿಸಿದ ಕೆಲವು ಪ್ರಮುಖ ಪರಿಕಲ್ಪನೆಗಳನ್ನು ಮತ್ತು ವಿಚಾರಗಳನ್ನು ಚರ್ಚಿಸಿ ಅನಂತರ ವಸಾಹತೋತ್ತರ ಚಿಂತನೆಗೆ ಕಳೆದೆರಡು ದಶಕಗಳಲ್ಲಿ ಬಂದಿರುವ ಮುಖ್ಯ ಪ್ರತಿಕ್ರಿಯೆಗಳನ್ನು ಗಮನಿಸುವ ಪ್ರಯತ್ನ ಮಾಡಿದ್ದೇನೆ.

) ಹೋಮಿ ಕೆ. ಭಾಭಾ (೧೯೪೯ – ): ವಸಾಹತೋತ್ತರ ಚಿಂತನೆಯ ‘ತ್ರಿಮೂರ್ತಿಗಳಲ್ಲಿ ಒಬ್ಬರಾದ ಹೋಮಿ ಕೆ. ಭಾಭಾ (ಎಡ್ವರ್ಡ್ ಸೈದ್‌ ಮತ್ತು ಗಾಯತ್ರಿ ಸ್ವಿವಕ್‌ ಉಳಿದಿಬ್ಬರು) ತಮ್ಮ ರಾಜಕೀಯ – ಸಾಂಸ್ಕೃತಿಕ ಅಧ್ಯಯನಗಳಲ್ಲಿ ಲಖಾನ್‌ಮಾದರಿಯ ಮನೋವಿಜ್ಞಾನ, ನಿರಚನ ಚಿಂತನೆ, ಮತ್ತು ವಸಾಹತೋತ್ತರ ಚಿಂತನೆಗಳನ್ನು ಬಳಸುತ್ತಾರೆ. ಸದ್ಯ ಶಿಕಾಗೋ ವಿ.ವಿ.ಯಲ್ಲಿರುವ ಭಾಭಾ ಎರಡು ಪ್ರಭಾವೀ ವಿಮರ್ಶಾ ಲೇಖನಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ: “ರಾಷ್ಟ್ರ ಮತ್ತು ಕಥನಕ” (೧೯೯೦) ಮತ್ತು “ಸಂಸ್ಕೃತಿಯ ಸ್ಥಳ” (೧೯೯೪). ಒಂದು ನೆಲೆಯಲ್ಲಿ ಭಾಭಾ ಸೈದ್‌ನ  ಪೌರಸ್ತ್ಯವಾದಕ್ಕೆ ಅನೇಕ ತಿದ್ದುಪಡಿಗಳನ್ನು ಸೂಚಿಸಿ, ಅದನ್ನು ಹೆಚ್ಚು ಸೂಕ್ಷ್ಮಗೊಳಿಸಿದರೆ, ಮತ್ತೊಂದು ನೆಲೆಯಲ್ಲಿ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿರುವ ರೂಢಿಗತ ದ್ವಿಮಾನ – ವಿಶ್ಲೇಷಣೆಯ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ.

ಪೌರಸ್ತ್ಯವಾದವು ಅಖಂಡವಾಗಿ ಮತ್ತು ನಿರಂತರವಾಗಿ ಸಾಮ್ರಾಜ್ಯಶಾಹಿಯನ್ನು ನಿಯಂತ್ರಿಸಿತ್ತು  ಎಂದು ಸೈದ್‌ “ಪೌರಸ್ತ್ಯವಾದ”ದಲ್ಲಿ ವಾದಿಸುತ್ತಾನೆ; ಮತ್ತು ಕೃತಿಯುದ್ಧಕ್ಕೂ ಆಳುವವರು ಮತ್ತು ಅಧೀನರು; ಬಲಶಾಲಿ ಸಾಮ್ರಾಜ್ಯಶಾಹಿ ಮತ್ತು ದುರ್ಬಲ ಅಧೀನ ರಾಷ್ಟ್ರ – ಇತ್ಯಾದಿ ಸಂಪೂರ್ಣವಾಗಿ ದ್ವಿಮಾನ ಸ್ವರೂಪದ ವಿಶ್ಲೇಷಣೆಯನ್ನು ಉಪಯೋಗಿಸುತ್ತಾನೆ. ತಮ್ಮ ‘ಅಣಕ ಮತ್ತು ಮನುಷ್ಯರನ್ನು ಕುರಿತು’ (of Mimicry and Men, ೧೯೮೪) ಲೇಖನದಲ್ಲಿ ಭಾಭಾ ಸೈದ್‌ನ ಇಂತಹ ‘ಅಖಂಡ ದಿಗ್ವಿಜಯ ವಾದ’ಕ್ಕೆ ಅನೇಕ ತಿದ್ದುಪಡಿಗಳನ್ನು ಸೂಚಿಸುತ್ತಾರೆ.

ಭಾಭಾ ವಾದಿಸುವುದೇನೆಂದರೆ, ಸಾಮ್ರಾಜ್ಯಶಾಹಿ ಮತ್ತು ಅಧೀನ ರಾಷ್ಟ್ರಗಳು ಇವರಿಬ್ಬರಲ್ಲೂ ಅನೇಕಬಗೆಯ ಅಂತರ್ವಿರೋಧಗಳಿದ್ದುವು; ಯಜಮಾನ x ಗುಲಾಮ, ಸ್ವತಂತ್ರ x ಅಸ್ವತಂತ್ರ, ಕ್ರಿಯಾಶೀಲ ಪಶ್ಚಿಮ x ಜಡ ಪೂರ್ವ ಇತ್ಯಾದಿ ಸರಳೀಕೃತ ವಿರೋಧಗಳಿಗಿಂತ ಬ್ರಿಟಿಷ್‌ಭಾರತ ಸಂಬಂಧಗಳು ಹೆಚ್ಚು ಸೂಕ್ಷ್ಮವಾಗಿದ್ದುವು; ಮತ್ತು ಆಳುವ ಮತ್ತು ಆಳ್ವಿಕೆಗೊಳಪಟ್ಟ ಎರಡೂ ಜನಾಂಗಗಳ ನಡುವೆ ಸಂಕೀರ್ಣ ಸಂಬಂಧಗಳಿದ್ದುವೆಂದು ಭಾಭಾ ಮಂಡಿಸುತ್ತಾರೆ. ಭಾಭಾ ವಾದಿಸುವಮತೆ, ಪರಸ್ಪರ ಪ್ರಭಾವಗಳಿಂದ ಜನ್ಮಿಸುವ ಸಂಬಂಧಗಳು ಎಷ್ಟು ಸಂಕೀರ್ಣವಾಗಿರುತ್ತವೆಂದರೆ, ಒಂದು ಘಟ್ಟದಲ್ಲಿ, ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವೆ ಸ್ಪಷ್ಟ ವ್ಯತ್ಯಾಸವೇ ಕಾಣಿಸದಂತಾಗುತ್ತದೆ.

ಈ ಅಂಶವನ್ನೇ ಮುಂದುವರಿಸುತ್ತಾ, ಇಂತಹ ಸ್ಥಿತಿಗೆ ಕಾರಣವೇನೆಂದರೆ ವಸಾಹತುಶಾಹಿ ಸಂದರ್ಭದಲ್ಲಿ ಪರಸ್ಪರ ಎದುರಿಸಿದ ಎರಡೂ ಘಟಕಗಳು ತಮ್ಮ ‘ಅನ್ಯ’ವನ್ನು ಪರಸ್ಪರ ಗುರುತಿಸುವ ಹಾಗೂ ತಿರಸ್ಕರಿಸುವ ಸಂಘರ್ಷದಲ್ಲಿ ತೊಡಗಿರುತ್ತವೆ – ಎಂದು ಭಾಭಾ ಮಂಡಿಸುತ್ತಾರೆ. ‘ಅನ್ಯ’ವನ್ನು ಕುರಿತಾದ ತೀವ್ರ ಕಾಮನೆ ಮತ್ತು ಜಿಹಾಸೆ ಎರಡೂ ಘಟಕಗಳನ್ನು ಹಣಿಯುತ್ತವೆ, ಮಣಿಸುತ್ತವೆ, ಉತ್ತೇಜಿಸುತ್ತವೆ. ಇಂತಹ ಮಾನಸಿಕ ತುಮುಲವನ್ನು ಗ್ರಹಿಸದೆ ವಸಾಹತುಶಾಹಿಯನ್ನು ವ್ಯಾಖ್ಯಾನಿಸುವುದು ಅಸಾಧ್ಯ .  ಪರಸ್ಪರ ವಿರೋಧೀ ಪ್ರವೃತ್ತಿಗಳಾದ ಕಾಮನೆ ಮತ್ತು ಜಿಹಾಸೆ, ಮೆಚ್ಚಿಕೆ ಮತ್ತು ತಿರಸ್ಕಾರ – ಇವೇ ಮುಂತಾದ ದ್ವಂದ್ವಾತ್ಮಕ ಪ್ರವೃತ್ತಿಗಳೇ ವಸಾಹತುವಾದೀ ಚೌಕಟ್ಟಿನಲ್ಲಿ ‘ಪೂರ್ಣವಾದಂತೆಯೇ – ಆದರೆ ಸಂಪೂರ್ಣವಲ್ಲ’ ಎಂಬಂತಹ ಒಂದು ಹೊಸ ವರ್ಗದ ನಿರ್ಮಾಣಕ್ಕೆ ಕಾರಣವಾಗುತ್ತವೆ (ಮಕಾಲೆಯ ಮಕ್ಕಳಂತೆ). ಇವರದು ಸಂಪೂರ್ಣ ಅನುಕರಣೆಯೂ ಅಲ್ಲ, ಸಂಪೂರ್ಣ ಅಣಕವೂ ಅಲ್ಲ – ಎಂದು ಭಾಭಾ ತುಂಬಾ ಸೂಕ್ಷ್ಮವಾಗಿ ವಸಾಹತುಶಾಹಿ ಸಾಂಸ್ಕೃತಿಕ ಸಂದಿಗ್ಧ – ಸಂಘರ್ಷಗಳನ್ನು ವಿಶ್ಲೇಷಿಸುತ್ತಾರೆ.

ವಸಾಹತೋತ್ತರ ಚಿಂತನೆಯ ಒಂದು ಮುಖ್ಯ ಕಾಳಜಿಯೆಂದರೆ ರಾಷ್ಟ್ರೀಯತೆಯ ವ್ಯಾಖ್ಯಾನ. ಹೋಮೀ ಭಾಭಾ ತಮ್ಮ ಅನೇಕ ಲೇಖನಗಳಲ್ಲಿ ಈ ವಿಷಯವನ್ನು ವಿಶ್ಲೇಷಿಸುತ್ತಾರೆ. ತಮ್ಮ “ರಾಷ್ಟ್ರ ಮತ್ತು ಕಥನ”  ಗ್ರಂಥದ ಮುನ್ನುಡಿಯಲ್ಲಿ ರಾಷ್ಟ್ರೀಯತೆಯ  ಸ್ವರೂಪವನ್ನು ಹೀಗೆ ದೀರ್ಘವಾಗಿ ಚರ್ಚಿಸುತ್ತಾರೆ:

ಕಥನಗಳಂತೆ, ರಾಷ್ಟ್ರಗಳ ಮೂಲಗಳೂ ಪುರಾಣಕಾಲಗಳಲ್ಲಿ ಕಳೆದುಹೋಗಿರುತ್ತವೆ; ಮತ್ತು ಅವುಗಳ ಎಲ್ಲೆಗಳು ಮನಶ್ಚಕ್ಷುವಿಗೆ ಮಾತ್ರ ಗೋಚರಿಸುತ್ತವೆ. ಬೆನೆಡಿಕ್ಟ್‌ ಆಯಂಡರ್ ಸನ್‌ ಹೇಳುವಂತೆ, ಪ್ರಜ್ಞಾಪೂರ್ವಕವಾಗಿ ನಿರ್ಮಿಸಲ್ಪಟ್ಟ ರಾಜಕೀಯ ಪ್ರಣಾಲಿಗಳೊಡನಲ್ಲದೆ ಸಾಂಸ್ಕೃತಿಕ ವ್ಯವಸ್ಥೆಗಳೊಡನೆ ರಾಷ್ಟ್ರೀಯತೆಯನ್ನು ಜೋಡಿಸಿದಾಗ ಮಾತ್ರ ಅದನ್ನು ನಾವು ಅರ್ಥಮಾಡಿಕೊಳ್ಳಬಹುದು. ಎಂದರೆ, ಒಂದು ರಾಷ್ಟ್ರವು ಸಾಂಸ್ಕೃತಿಕ ಸೂಚನಾ ಸಂಹಿತೆಯ ಮೂಲಕ ಅಸ್ತಿತ್ವಕ್ಕೆ ಬರುತ್ತದೆ. ಬಂಡವಾಳ ಶಾಹಿಯ ಅಸಮಾನ ಬೆಳವಣಿಗೆಯ ಕಾರಣದಿಂದ ಪ್ರಗತಿ ಮತ್ತು ಅಧೋಗತಿ, ರಾಜಕೀಯ ವಿವೇಕ ಮತ್ತು ಅವಿವೇಕ (political rationality and irrationality) ಇವುಗಳು ರಾಷ್ಟ್ರದ ಜೀವತಂತುಗಳಲ್ಲಿಯೇ ಬರೆಯಲ್ಪಟ್ಟಿವೆ. ಅರ್ಥಾತ್‌, ರಾಷ್ಟ್ರೀಯತೆಯ ರೂಪಣೆಯಲ್ಲಿಯೇ ಅನಿಶ್ಚಯತೆ (ambivalence) ಹಾಸುಹೊಕ್ಕಾಗಿರುತ್ತದೆ.

ಸಾಂಸ್ಕೃತಿಕ ಆಕೃತಿಗಳಿಂದ ರಾಷ್ಟ್ರೀಯತೆಯು ಜನ್ಮಿಸುವುದರಿಂದ, ಮತ್ತು ಸಾಂಸ್ಕೃತಿಕ ಆಕೃತಿಗಳು ಸಮಾನ ಹಾಗೂ ಭಿನ್ನ ಆಚರಣೆಗಳ ಮೂಲಕ ಮಾತ್ರ ಉತ್ಪನ್ನವಾಗುವುದರಿಂದ, ರಾಷ್ಟ್ರೀಯತೆಯನ್ನು ಯಾವುದೇ ಪೂರ್ವನಿಶ್ಚಿತ ಪರಂಪರೆಯಲ್ಲಿ ಅಥವಾ ಏಕರೂಪೀ ಜಾನಾಂಗಿಕ – ಸಾಂಸ್ಕೃತಿಕ ಲಕ್ಷಣಗಳಲ್ಲಿ ಗುರುತಿಸುವುದು ಅಸಾಧ್ಯ . ಸಾಂಸ್ಕೃತಿಕ ಅನನ್ಯತೆಯೆಂಬುದು ಜಾನಾಂಗಿಕ – ವರ್ಗೀಯ – ಲೈಂಗಿಕ – ಸಾಂಸ್ಕೃತಿಕ ಭಿನ್ನ ಪರಂಪರೆಗಳು ಪರಸ್ಪರ ಸಂಧಿಸುವ/ಘರ್ಷಿಸುವ ಸರ್ವಸಮಾನ ಸ್ಥಳದಲ್ಲಿ ಜನ್ಮ ತಾಳುತ್ತವೆ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಂಸ್ಕೃತಿಕ ಅನನ್ಯತೆಯೆಂಬುದು ಯಾವಾಗಲೂ ಏಕಮುಖಿಯಾಗಿರುವುದಿಲ್ಲ; ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಸದಾ ಕೊಡುಕೊಳ್ಳುವಿಕೆ ನಡೆದಿರುತ್ತದೆ. ಸಂಸ್ಕೃತಿಯು ಜನ್ಮಿಸುವ ಹಾಗೂ ಗುರುತಿಸಲ್ಪಡುವ ಸ್ಥಳ ಬಲಶಾಲೀ ಸಾಮಾಜಿಕ ಸಮುದಾಯಗಳ ನಡುವೆ ಇರುವ ಪರಿಧೀಯ, ಭೀತಿಕರ, ಮತ್ತು ಅಪ್ರಿಯ ಸ್ಥಳ.

ಇಂತಹ ಸಾಂಸ್ಕೃತಿಕ (ರಾಷ್ಟ್ರೀಯ) ಸ್ಥಳವನ್ನು ಗುರುತಿಸಲು ಭಾಭಾ ‘ಲಿಮಿನಾಲಿಟಿ’ ಎಂಬ ಶಬ್ದವನ್ನು ಉಪಯೋಗಿಸುತ್ತಾರೆ. ‘ಲಿಮಿನಲ್‌’ ಎಂದರೆ ಒಂದು ಸೇತುವೆಯ ಸ್ಥಿತಿ :ಅದು ಎರಡು ಭಿನ್ನ ಪ್ರದೇಶಗಳನ್ನು/ನದಿಯ ಎರಡು ದಂಡೆಗಳನ್ನು ಜೋಡಿಸುತ್ತದೆ; ಆದರೆ, ಅದು ಯಾವ ಪ್ರದೇಶಕ್ಕೂ/ದಂಡೆಗೂ ಸೇರಿರುವುದಿಲ್ಲ. ಎಂದರೆ, ‘ಲಿಮಿನಾಲಿಟಿ’ಯನ್ನು ‘ಸಂಧಿಸುವ ಸ್ಥಳ’ ಎಂದು ವ್ಯಾಖ್ಯಾನಿಸಬಹುದು. ಇದೇ ಸಂದರ್ಭದಲ್ಲಿ ಭಾಭಾ ‘ಹೈಬ್ರಿಡಿಟಿ’ ಎಂಬ ಮತ್ತೊಂದು ಪರಿಕಲ್ಪನೆಯನ್ನು ಸೃಜಿಸುತ್ತಾರೆ. ‘ಹೈಬ್ರಿಡಿಟಿ’ ಎಂದರೆ ಭಿನ್ನ ವರ್ಗಗಳ/ಸಂಗತಿಗಳ/ಪರಿಕಲ್ಪನೆಗಳ ಗುಣಗಳನ್ನು ಪಡೆದಿರುವ ಆದರೆ ಯಾವುದೇ ಒಂದು ವರ್ಗಕ್ಕೆ/ಸಂಗತಿಗೆ/ಪರಿಕಲ್ಪನೆಗೆ ಸೇರದಿರುವ ‘ಸಂಕರ’ ಸ್ಥಿತಿ. ಭಾಭಾ ಮಂಡಿಸುವ ಸಿದ್ಧಾಂತವೆಂದರೆ, ರಾಷ್ಟ್ರೀಯತೆಯನ್ನು ಮತ್ತು ಸಂಸ್ಕೃತಿಯನ್ನು ನಾವು ‘ಅಲಿಪ್ತ’ (liminal) ಎಂದು, ಪರಿಣಾಮತಃ ‘ಸಂಕರ’ (hybrid) ಎಂದು ಗ್ರಹಿಸಬಹುದೇ ಹೊರತು ಏಕರೂಪೀ ಘನಾಕೃತಿಗಳಂತಲ್ಲ (೧೯೯೪).

() ಗಾಯತ್ರಿ ಸ್ಪಿವಕ್‌: ಗಾಯತ್ರಿ ಸ್ಪಿವಕ್‌ ಅವರನ್ನು ಸ್ತ್ರೀವಾದೀ – ಮಾರ್ಕ್ಸಿಸ್ಟ್‌ನಿರಚನ ಚಿಂತಕಿಯೆಂದು ಅಂತಾರಾಷ್ಟ್ರೀಯ ವಿದ್ವತ್ಸಮೂಹದಲ್ಲಿ ಗುರುತಿಸಲಾಗುತ್ತದೆ. ಅಮೆರಿಕನ್‌ ವಿ.ವಿ.ಗಳಲ್ಲಿ ಬೋಧಿಸುವ/ಸಂಶೋಧನೆ ನಡೆಸುವ ಗಾಯತ್ರಿ ಡೆರಿಡಾನ “ಆಫ್‌ ಗ್ರಮಟಾಲಜಿ” ಎಂಬ ಉದ್ದಾಮ ಗ್ರಂಥವನ್ನು ಅನುವಾದಿಸಿ ಪ್ರಸಿದ್ಧರಾದರು. ಇತ್ತೀಚೆಗೆ ಅವರು ಗತ ಹಾಗೂ ನವ ಸಾಮ್ರಾಜ್ಯಶಾಹಿ ಮತ್ತು ತೃತೀಯ ಜಗತ್ತಿನ ರಾಷ್ಟ್ರಗಳು ಇವುಗಳ ನಡುವೆ ಇರುವ, ಇರಬೇಕಾದ ವೈಚಾರಿಕ – ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ವಸಾಹತೋತ್ತರ ಚಿಂತನೆಯ ಸಂದರ್ಭದಲ್ಲಿ ಗಾಯತ್ರಿಯವರ “ಇತರ ಜಗತ್ತುಗಳಲ್ಲಿ: ಸಾಂಸ್ಕೃತಿಕ ರಾಜಕೀಯವನ್ನು ಕುರಿತ ಪ್ರಬಂಧಗಳು” (೧೯೮೭) ಎಂಬ ಸಂಕಲನ ಒಂದು ಗಮನೀಯ ಮತ್ತು ಅರ್ಥಪೂರ್ಣ ವಿದ್ವತ್ಕೃತಿ.

ವಸಾಹತೋತ್ತರ ಚಿಂತನೆಯ (ಹಾಗೂ ರಾಚನಿಕೋತ್ತರ ಚಿಂತನೆಯ) ಒಂದು ಪ್ರಮುಖ ಅಂಶವಾದ ‘ಮಹಾನ್‌ ಕಥನಗಳನ್ನು ಕಲುರಿತ ಸಮದೇಹ’ ಗಾಯತ್ರಿಯವರ ಚಿಂತನೆಯಲ್ಲಿಯೂ ಎದ್ದು ಕಾಣುತ್ತದೆ. ಒಂದು ಸಂದರ್ಭದಲ್ಲಿ (ಫ್ರೆಂಚ್‌ ಸ್ತ್ರೀವಾದಗಳ ಸಂದರ್ಭದಲ್ಲಿ) ಅವರು ಹೀಗೆ ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ: “ಎಲ್ಲವನ್ನೂ ಜಾಗತಿಕ ನೆಲೆಗೆ ಏಕೆ ಒಯ್ಯಬೇಕು? ಅಮೆರಿಕಾದಲ್ಲಿ ‘ಲೈಂಗಿಕತೆ ಮತ್ತು ಭಾವನೆಗಳಲ ಬಗ್ಗೆ ನಡೆಯುವ ಸಂಶೋಧನೆ ಎಲ್ಲಾ ಸಂಸ್ಕೃತಿಗಳಿಗೂ ಸಮಾನವಾಗಿ ಪ್ರಸ್ತುತವಾಗುವ ತೀರ್ಮಾನಗಳನ್ನು ಕೊಡಬೇಕೆಂದು ನಾವೇಕೆ ಅಪೇಕ್ಷಿಸಬೇಕು? ಲೈಂಗಿಕ ಏಕತ್ರೀಕರಣದ ಬಗ್ಗೆ ಇಂಗ್ಲೆಂಡ್‌ನಲ್ಲಿ ನಡೆಯುವ ಸಂಶೋಧನೆ ಸಾಮ್ರಾಜ್ಯಶಾಹಿ ಮತ್ತು ತಾಯ್ತನಗಳ ಸಂಬಂಧದ ಬಗ್ಗೆ ವ್ಯಾಖ್ಯಾನ ಮಾಡಲು ಏಕೆ ತೊಡಗಬೇಕು?” (ಪು. ೨೫೨)

ತೃತೀಯ ಜಗತ್ತಿನ ಸಂದರ್ಭದಲ್ಲಿ ಗಾಯತ್ರಿಯವರು ಮಾರ್ಕ್ಸ್‌‌ನ ಪ್ರಸಿದ್ಧ ‘ಪರಿವರ್ತನೆ’ಯ (Transition) ಸಿದ್ಧಾಂತವನ್ನು ಪ್ರಶ್ನಿಸುತ್ತಾರೆ. ಈ ಪರಿವರ್ತನೆಯ ಸಿದ್ಧಾಂತದಿಂದಾಗಿ ಅನೇಕ ವಿಮೋಚನಾ ಚಳುವಳಿಗಳು ದುರ್ಬಲಗೊಂಡಿವೆ; ಏಕೆಂದರೆ, ಈ ಸಿದ್ಧಾಂತವೂ ಆ ಚಳುವಳಿಗಳು ರಾಷ್ಟ್ರೀಯ  ಬೂರ್ಜ್ವಾ ವರ್ಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮನ್ನು ರೂಪಿಸಿಕೊಳ್ಳುವ ಜರೂರನ್ನು ನಿರ್ಮಿಸುತ್ತದೆ. ಗಾಯತ್ರಿಯವರ ದೃಷ್ಟಿಯಲ್ಲಿ, ಉಪೇಕ್ಷಿತ ವರ್ಗಗಳನ್ನು (Subaltern Classes) ಯುರೋಪಿಯನ್‌ ಮಾದರಿಗಳೊಡನೆ ಸಮೀಕರಿಸಿ ಅರ್ಥೈಸುವ ಪ್ರಯತ್ನಗಳು ಹಾನಿಕಾರಕ. ಅವರ ವಾದವೇನೆಂದರೆ, ಇತರ ಮಾದರಿಗಳನ್ನು ಮರೆತು, ಭಾರತದ (ಇತರ ರಾಷ್ಟ್ರಗಳ) ಉಪೇಕ್ಷಿತ ವರ್ಗವು ತನ್ನ ಪರವಾಗಿ ತಾನೇ ಮಾತನಾಡಲು ತೊಡಗಿ, ತನ್ನ ಪ್ರಜ್ಞೆಗನುಸಾರವಾದ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು. ಇಂತಹ ಪ್ರಜ್ಞೆಯಿಂದ ಜನಿಸುವ ರಾಜಕೀಯ – ವಿಮೋಚನಾ ರಚನೆಗಳು ಯುರೋಪಿಯನ್‌ ಮಾದರಿಯ ರಾಷ್ಟ್ರೀಯತೆಯನ್ನು ಸಂಪೂರ್ಣವಾಗಿ ದಾಟಿ ಹೋಗುತ್ತವೆ.

“ಇತರ ಜಗತ್ತುಗಳಲ್ಲಿ” ಸಂಕಲನದ ಎಲ್ಲಾ ಲೇಖನಗಳಲ್ಲಿಯೂ ಕಂಡುಬರುವ ಒಂದು ಸಮಾನ ಅಂಶವೆಂದರೆ ಹೇಗೆ ಗಾಯತ್ರಿಯವರು ಪಾಶ್ಚಿಮಾತ್ಯ ರಾಷ್ಟ್ರಗಳು ತೃತೀಯ ಜಗತ್ತಿನ ಬಗ್ಗೆ ಮಾಡುವ ದುಂಡು ಹೇಳಿಕೆಗಳನ್ನು ಮತ್ತು ಸಾಧಾರಣೀಕೃತ ತೀರ್ಮಾನಗಳನ್ನು ಪ್ರಶ್ನಿಸುತ್ತಾರೆಂಬ ಅಂಶ. “ತೃತೀಯ ಜಗತ್ತಿನ ಸಾಹಿತ್ಯದ ಬಗ್ಗೆ ಸಾಧಾರಣೀಕೃತ ಹಾಗೂ ಪ್ರತಿಕ್ರಿಯಾತ್ಮಕ ವ್ಯಾಖ್ಯಾನಗಳನ್ನು ಕೊಡುವ ಪ್ರವೃತ್ತಿ ಅಮೆರಿಕಾದಲ್ಲಿ ಕಂಡುಬರುತ್ತದೆ. ಇದಕ್ಕೇನೂ ನೇರವಾಗಿ ಸಂಬಂಧಿಸಿರದ ಮತ್ತ ಒಂದು ಪ್ರವೃತ್ತಿಯೂ ಅಲ್ಲಿ ಕಂಡುಬರುತ್ತದೆ: ಅದೆಂದರೆ, ಪ್ರಧಾನಧಾರೆಯ ಸ್ತ್ರೀವಾದದಲ್ಲಿ ಹುದುಗಿರುವ ಜಾನಾಂಗಿಕ ಪೂರ್ವಗ್ರಹದ ಪರಿಚಯವಿರುವ ಸ್ತ್ರೀವಾದೀ ಶಿಕ್ಷಕಿಯರು ಮತ್ತು ಓದುಗರು ತೃತೀಯ ಜಗತ್ತಿನ ಸ್ತ್ರೀಯರಿಂದ ರಚಿಸಲ್ಪಟ್ಟ ಸಾಹಿತ್ಯದ ಅನುವಾದಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಹಾಗೂ ಪಠ್ಯಗಳ ನೆಲೆಯಲ್ಲಿ ಉಪಯೋಗಿಸಿಕೊಳ್ಳುವುದು” (ಪು. ೨೫೩).

ಪ್ರಥಮ ಜಗತ್ತಿನ ವೈಚಾರಿಕ ಆವರಣಗಳು ಮತ್ತು ವ್ಯಾಖ್ಯಾನಕ್ರಮಗಳು ತೃತೀಯ ಜಗತ್ತಿನ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಅರ್ಥೈಸುವಾಗ ಹೇಗೆ ಸೋಲುತ್ತವೆ ಎಂಬುದರ ನಿದರ್ಶನವಾಗಿ ಗಾಯತ್ರಿ “ಸ್ತನದಾಯಿನಿ” ಎಂಬ ಕಥೆಯ ಇಂಗ್ಲೀಷ್‌ ಅನುವಾದವನ್ನು ಮಾರ್ಕಿಸ್ಟ್‌, ಸ್ತ್ರೀವಾದೀ, ಇತ್ಯಾದಿ ವಿವಿಧ ಪಾಶ್ಚಾತ್ಯ ವಿಮರ್ಶಾಮಾರ್ಗಗಳ ಮೂಲಕ ವ್ಯಾಖ್ಯಾನಿಸುತ್ತಾರೆ. ಬಂಗಾಳದ ಸುಪ್ರಸಿದ್ಧ ಲೇಖಕಿ ಮಹಾಶ್ವೇತಾ ದೇವಿಯವರ “ಸ್ತನದಾಯಿನಿ” ಕಥೆಯನ್ನು ‘ಬ್ರೆಸ್ಟ್‌ ಗಿವರ್’ ಎಂಬ ಹೆಸರಿನಲ್ಲಿ ತಾವೇ ಅನುವಾದಿಸಿ (ಅನುವಾದವೂ ಈ ಸಂಕಲನದಲ್ಲಿಯೇ ಇದೆ.), ಅನಂತರ, ಆ ಅನುವಾದವನ್ನು ವಿವಿಧ ಪ್ರಸ್ಥಾನಗಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಲೇ ಆ ಪ್ರಸ್ಥಾನಗಳ ಮಿತಿಗಳನ್ನೂ ಗುರುತಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ, ಪಾಶ್ಚಿಮಾತ್ಯ ವಿಮರ್ಶಕರು, ಸಾಧಾರಣವಾಗಿ, ತೃತೀಯ ಜಗತ್ತಿನ ಸಾಹಿತ್ಯಗಳ ಬಗ್ಗೆ ಕೊಡುವ ತೀರ್ಮಾನವನ್ನು ಹೀಗೆ ಪ್ರಶ್ನಿಸುತ್ತಾರೆ: “ಪ್ರಥಮ ಜಗತ್ತಿನ ಅಂತಾರಾಷ್ಟ್ರೀಯ ಸಾಹಿತ್ಯಗಳು ವಾಸ್ತವತಾ ವಾದವನ್ನು ದಾಟಿ, ಭಾಷೆಯೊಡನೆ ಆಟವಾಡುವ ಪ್ರಬುದ್ಧತೆಯನ್ನು ಪಡೆದಿರುವಾಗ, ಇನ್ನೂ ತೃತೀಯ ಜಗತ್ತಿನ ಸಾಹಿತ್ಯಗಳು ವಾಸ್ತವತಾವಾದಕ್ಕೆ ಜೋತುಬಿದ್ದಿವೆ – ಎಂಬಂತಹ ತೀರ್ಮಾನಗಳು ಮೂಲಭಾಷೆಯ ಬಗ್ಗೆ ಇರುವ ಅಜ್ಞಾನದ ಪರಿಣಾಮ” (ಪು. ೨೬೭). ಇನ್ನೂ ಮುಖ್ಯವಾಗಿ, ‘ವಾಸ್ತವತೆ’ ಎಂಬ ಪರಿಕಲ್ಪನೆ ಭಿನ್ನ ಭಾಷಿಕ – ಸಾಮಾಜಿಕ ಸಂದರ್ಭಗಳಲ್ಲಿ ಭಿನ್ನ ಅರ್ಥವಿಶೇಷಗಳನ್ನು ಪಡೆಯಬಹುದು ಎಂಬ ಅಂಶವನ್ನು ಆ ಕಥೆಯಲ್ಲಿ ಉಪಯೋಗಿಸಲ್ಪಟ್ಟಿರುವ ಭಾಷೆಯ ಭಿನ್ನ ಪ್ರಭೇದಗಳ ವಿಶ್ಲೇಷಣೆಯ ಮೂಲಕ ಮನಗಾಣಿಸುತ್ತಾರೆ.

* * *

ಪ್ರತಿಕ್ರಿಯೆಗಳು: ೧೯೮೦ ರಿಂದ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದ, ಬೆಳೆಯುತ್ತಿರುವ ವಸಾಹತೋತ್ತರ ಚಿಂತನೆಯ ಬಗ್ಗೆ , ಸಹಜವಾಗಿಯೇ, ಅನೇಕ ಬಗೆಯ ತೀವ್ರ ಪ್ರತಿಕ್ರಿಯೆಗಳು ಮತ್ತು ಟೀಕೆ – ಟಿಪ್ಪಣಿಗಳು ಬಂದಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಈಗ ಚರ್ಚಿಸಬಹುದು.

) ಎಡಪಂಥೀಯ ವಿಮರ್ಶೆ: ಏಜಾಜ್‌ ಅಹಮದ್‌, ಅರಿಫ್‌ ಡರ್ ಲಿಕ್‌, ಎಲಾ ಶೋಹತ್‌, ಜಾವೇದ್‌ ಮಜೀದ್‌ ಇತ್ಯಾದಿ ಅನೇಕ ಎಡಪಂಥೀಯ / ಮಾರ್ಕಿಸ್ಟ್‌ ಚಿಂತಕರು ವಸಾಹತೋತ್ತರ ಚಿಂತನೆಯನ್ನು ಅನೇಕ ನೆಲೆಗಳಲ್ಲಿ ಉಗ್ರವಾಗಿ ವಿರೋಧಿಸುತ್ತಾರೆ. ಅವರ ವಾದಗಳ ಮುಖ್ಯ ಅಂಶಗಳನ್ನು, ಸ್ಥೂಲವಾಗಿ, ಹೀಗೆ ಸಂಗ್ರಹಿಸಬಹುದು:

೧. ಎಲಾ ಶೋಹತ್‌ ತನ್ನ ‘ವಸಾಹತೋತ್ತರದ ಬಗ್ಗೆ ಟಿಪ್ಪಣಿಗಳು’ (೧೯೯೨), ಎಂಬ ಲೇಖನದಲ್ಲಿ ಮೊನಚಾದ ಈ ಪ್ರಶ್ನೆಯನ್ನು ಕೇಳುತ್ತಾಳೆ: “ಖಚಿತವಾಗಿ, ಎಂದಿನಿಂದ ‘ವಸಾಹತೋತ್ತರ’ ಪ್ರಾರಂಭವಾಗುತ್ತದೆ?” (ಪು. ೩೨೫).

ಅಹಮದ್‌, ಶೋಹತ್‌, ಮುಂತಾದವರು ಈ ಪ್ರಶ್ನೆಯ ಮೂಲಕ ವಾದಿಸುವುದೇನೆಂದರೆ, ‘ವಸಾಹತೋತ್ತರ ಚಿಂತನೆ’ ಎಂಬ ಪರಿಕಲ್ಪನೆ ಕಾಲ ಮತ್ತು ದೇಶ ಈ ಎರಡೂ ನೆಲೆಗಳಲ್ಲಿ ಅಸ್ಪಷ್ಟ ಮತ್ತು ಅಚಾರಿತ್ರಿಕ. ದೇಶದ ನೆಲೆಯಲ್ಲಿ, ಯಾವುದು ‘ವಸಾಹತು?’ ಒಂದು ದೃಷ್ಟಿಯಲ್ಲಿ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಮತ್ತು ಅಮೇರಿಕಾ ದೇಶಗಳನ್ನೂ ಕೂಡಾ (ಪೂರ್ವ) ವಸಾಹತುಗಳೆಂದು ಪರಿಗಣಿಸಬಹುದು. ಆದ್ದರಿಂದ, ಅವುಗಳನ್ನು ಇಂಡಿಯಾ, ಆಫ್ರಿಕಾ ದೇಶಗಳಂತೆ ‘ವಸಾಹತೋತ್ತರ ಚಿಂತನೆ’ ವಿಶ್ಲೇಷಿಸುತ್ತದೆಯೆ? ವಿಶ್ಲೇಷಿಸಬೇಕೆ? ಮತ್ತೆ, ಕಾಲದ ದೃಷ್ಟಿಯಿಂದ, ‘ಉತ್ತರ’ ಶಬ್ದವು ಒಂದು ನಿರ್ದಿಷ್ಟ ಕಾಲಘಟ್ಟವನ್ನು, ವಸಾಹತು ರಾಷ್ಟ್ರವು ಸ್ವತಂತ್ರವಾದ ಕ್ಷಣವನ್ನು, ಸೂಚಿಸುತ್ತದೆ. ಹಾಗಾದರೆ, ಆ ಕಾಲ ಮುಗಿಯುವುದು ಯಾವಾಗ? ಅದಕ್ಕಿಂತ ಮೊದಲು ವಸಾಹತುಶಾಹಿಗೆ ಪ್ರತಿರೋಧವಿರಲಿಲ್ಲವೆ?

ವಸಾಹತೋತ್ತರ ಚಿಂತನೆಯ ಕಾಳಜಿಗಳ ಬಗ್ಗೆ ಸಹಾನುಭೂತಿಯಿರುವ ಜಾವೇದ್‌ ಮಜೀದ್‌ ಕೂಡ ಸೈದ್‌ನ ವಾದವನ್ನು (“ಪೌರಸ್ತ್ಯವಾದ” ಕೃತಿಯಲ್ಲಿ) ‘ಏಕರೂಪಿ ಮತ್ತು ಅಚಾರತ್ರಿಕ’ ಎಂದು ಆಕ್ಷೇಪಿಸುತ್ತಾನೆ. ತನ್ನ “ಅನಿಯಂತ್ರಿತ ಕಲ್ಪನೆಗಳು” (೧೯೯೨) ಎಂಬ ಸಂಶೋಧನಾ ಗ್ರಂಥದಲ್ಲಿ ಮಜೀದ್‌ ವಾದಿಸುವುದೇನೆಂದರೆ, ಭಾರತದಲ್ಲಿ ವಸಾಹತುಶಾಹಿ – ವ್ಯವಸ್ಥೆ ಇದ್ದಕ್ಕಿದ್ದಂತೆಯೇ ಎಲ್ಲಿಂದಲೋ ಮೂಡಿಬಂದ ಹೊಚ್ಚಹೊಸ ವ್ಯವಸ್ಥೆಯೇನಲ್ಲ; ಅನೇಕ ನೆಲೆಗಳಲ್ಲಿ ಅದು ಮೊಘಲರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆಡಳಿತ ವ್ಯವಸ್ಥೆಯ ಮುಂದುವರಿಕೆಯಾಗಿದ್ದಿತು. “ಬ್ರಿಟಿಷರ ಅಧಿಕಾರ ಹಠಾತ್ತನೆ ಘಟಿಸಿದ ಬಿರುಕಲ್ಲ; ಅದೊಂದು ಬಗೆಯ ನೈರಂತರ್ಯವಾಗಿದ್ದಿತು” ಎಂದು ಮಜೀದ್‌ ಸಾಕ್ಷ್ಯಾಧಾರ ಸಮೇತ ವಾದಿಸುತ್ತಾನೆ (ಪು. ೧೯೭).

ಮಜೀದ್‌, ಬಾರ್ಟ್ ಮುಅರ್ – ಗಿಲ್ಪರ್ಟ್ ಮುಂತಾದವರು ಸೂಚಿಸುವ ಮತ್ತೊಂದು ತಿದ್ದುಪಡಿಯೆಂದರೆ, ಪೌರಸ್ತ್ಯ ಚಿಂತನೆಯಲ್ಲಿಯೇ ಅನೇಕ ಬಗೆಯ ಆಂತರಿಕ ವೈರುದ್ಧ್ಯಗಳಿದ್ದುವು. ಭಾರತದ ಪ್ರತ್ಯಕ್ಷಾನುಭವವನ್ನು ಪಡೆದ ಬ್ರಿಟಿಷರು ಮತ್ತು ದೂರದ ಲಂಡನ್ನಿನಲ್ಲಿದ್ದ ಮೆಟ್ರೊಪಾಲಿಟನ್‌ ಬ್ರಿಟಿಷರು ಇವರ ನಡುವೆ ಗಮನೀಯ ಭಿನ್ನತೆಗಳಿದ್ದುವು. ಸಾಕಷ್ಟು ಕಾಲ ಭಾರತದಲ್ಲಿಯೇ ನೆಲಸಿ, ಇಲ್ಲಿಯ ಜನರನ್ನು ಅರಿತಿದ್ದ ‘ಭಾರತೀಯ – ಬ್ರಿಟಿಷರು’ ದೇಶೀಯ ಸಮಾಜ – ಸಂಸ್ಕೃತಿಗಳ ಬಗ್ಗೆ ಗೌರವವನ್ನು ಹೊಂದಿದ್ದರು; ಮತ್ತು ಅವರಾರಿಗೂ ‘ಬಿಳಿಯರ ಜವಾಬ್ದಾರಿ’ಯ ಬಗ್ಗೆ ಅಷ್ಟೇನೂ ಶ್ರದ್ಧೆಯಿರಲಿಲ್ಲ.

ಆದ್ದರಿಂದ, ಈ ವಿಮರ್ಶಕರು ಸೂಚಿಸುವುದೇನೆಂದರೆ ‘ವಸಾಹತೋತ್ತರ’ವೆಂಬ ವರ್ಗದ ಬದಲು ‘ತೃತೀಯ ಜಗತ್ತು’ ಎಂಬ ವರ್ಗವೇ ಹೆಚ್ಚು ಅರ್ಥಪೂರ್ಣವಾಗಿರುತ್ತದೆ;  ಮತ್ತು, ತನ್ಮೂಲಕ ಹಿಂದುಳಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಹೆಚ್ಚಿನ ಲಕ್ಷ್ಯ ಕೊಡಲು ಸಾಧ್ಯವಾಗುತ್ತದೆ.

. ವಸಾಹತೋತ್ತರ ಚಿಂತನೆ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಇವುಗಳ ಬಗ್ಗೆ ತನ್ನ ಲಕ್ಷ್ಯವನ್ನು ಕೇಂದ್ರೀಕರಿಸುವುದರಿಂದ, ಒಂದರ್ಥದಲ್ಲಿ, ವಸಾಹತುಶಾಹಿ ಮುಗಿದ ಯುಗದಲ್ಲಿ ಮತ್ತೆ ಇಡೀ ವಿಶ್ವಚಿಂತನೆಯ ಕೇಂದ್ರವಾಗಿ ಪಶ್ಚಿಮವನ್ನು ಪರಿಗಣಿಸಿದಂತಾಗುತ್ತದೆ. “‘ವಸಾಹತೋತ್ತರ’ವು ಕಾಲಗತಿಯ ಸರಳ ರೇಖಾತ್ಮಕ ಕಥನವನ್ನು ಸೂಚಿಸುತ್ತದೆ. ಈ ಕಥನದ ಕೇಂದ್ರದಲ್ಲಿ ವಸಾಹತುಶಾಹಿಯಿದ್ದು, ವಿಶ್ಲೇಷಣೆ – ವ್ಯಾಖ್ಯಾನಗಳು ವಸಾಹತುಶಾಹಿಯ ಮೊದಲಿನ ಮತ್ತು ಅನಂತರದ ಘಟ್ಟಗಳಿಗೆ ಸೀಮಿತವಾಗುತ್ತವೆ” ಎಂದು ಅಹಮದ್‌ ಮಂಡಿಸುತ್ತಾರೆ (೧೯೯೫, ಪು. ೨೮೧) ಎಂದರೆ, ಯಾವ ಚಿಂತನೆಯ ಉದ್ದೇಶ ಪಾಶ್ಚಾತ್ಯ ರಾಷ್ಟ್ರಗಳಿಂದ ಬರೆಯಲ್ಪಟ್ಟ ವಿಶ್ವಚರಿತ್ರೆಗಳನ್ನು ಅವಕೇಂದ್ರೀಕರಣಗೊಳಿಸುವುದಿತ್ತೋ ಅದೇ ವಾದ ಯುರೋಪನ್ನು  (‘ಪಶ್ಚಿಮ’ವನ್ನು) ಮತ್ತೆ ಕೇಂದ್ರದಲ್ಲಿ ಪ್ರತಿಷ್ಠಾಪಿಸುತ್ತದೆ. “ಅದೃಶ್ಯವಾದ ಕ್ಷಣದಿಂದಲೇ ವಸಾಹತುಶಾಹಿಯು ಮತ್ತೆ ಪ್ರತ್ಯಕ್ಷವಾಗುತ್ತದೆ” ಎಂದು ಡರ್ಲಿಕ್‌ ಹೇಳುತ್ತಾನೆ (೧೯೯೪, ಪು. ೩೦೫).

೩. ಎಡಪಂಥೀಯ ವಿಮರ್ಶಕರ ಅತಿ ಮುಖ್ಯವಾದ ಆಕ್ಷೇಪವೆಂದರೆ, ಗತ ಚರಿತ್ರೆ – ಗತ ವೈಚಾರಿಕತೆಗಳ ಬಗ್ಗೆ ತನ್ನ ಗಮನವನ್ನೆಲ್ಲಾ ಹರಿಸುವುದರಿಂದ ಸದ್ಯದ ಜಾಗತಿಕ ಜರೂರು ಸಮಸ್ಯೆಗಳತ್ತ ವಸಾಹತೋತ್ತರ ಚಿಂತನೆ ಬೆನ್ನು ಹಾಕುತ್ತದೆ. ಏಜಾಜ್‌ ಹೇಳುವಂತೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಇಂದಿನ ಸಮಸ್ಯೆಯೆಂದರೆ ಸದ್ಯದ ವಿಶ್ವಾತ್ಮಕ ಆರ್ಥಿಕ – ಸಾಂಸ್ಕೃತಿಕ ಸಂಬಂಧಗಳ ನಡುವೆ, ಮುಕ್ತ ಮಾರುಕಟ್ಟೆಯ ಸಂದರ್ಭದಲ್ಲಿ, ತಮ್ಮ ಆರ್ಥಿಕ – ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು. ಇಂದು, ಐ.ಬಿ.ಎಂ., ಸಿ.ಎನ್‌.ಎನ್‌. ಮುಂತಾದ ಬಹುರಾಷ್ಟ್ರೀಯ ಸಂಸ್ಥೆಗಳು ‘ಉತ್ಪನ್ನಗಳು, ಜ್ಞಾನಗಳು, ಮತ್ತು ರಂಜನೆಗಳು (productivities, knowledges, and pleasures) ಇವುಗಳನ್ನೊಳಗೊಂಡ ವಿಶ್ವಾತ್ಮಕ ಸಂಸ್ಕೃತಿಯೊಂದನ್ನು, ತಾವು ಸೃಷ್ಟಿಸುತ್ತಿದ್ದೇವೆ’ ಎಂದು ಘೋಷಿಸುತ್ತಿವೆ. ತನ್ನ ಅಪಾರ ತಾಂತ್ರಿಕ – ಸೈನಿಕ ಬಲದಿಂದ, ಮತ್ತು ವರ್ಲ್ಡ್ ಬ್ಯಾಂಕ್‌, ಐ.ಎಂ.ಎಫ್‌., ಮುಂತಾದ ಸಂಸ್ಥೆಗಳ ಮೇಲೆ ತನಗಿರುವ ಹತೋಟಿಯಿಂದ ಅಮೆರಿಕಾ ಇಂದು ಇಡೀ ಜಗತ್ತನ್ನೇ ತನ್ನ ಅಧೀನವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. “ಇಂತಹ ವಿಶಿಷ್ಟ ಸಂದರ್ಭದಲ್ಲಿ, ‘ಬಹು ರಾಷ್ಟ್ರೀ ಯ ಸಾಂಸ್ಕೃತಿಕ ಸಾಂಕರ್ಯ’ದ ಬಗ್ಗೆ, ಮತ್ತು ‘ಅವಕಾಶ ರಾಜಕೀಯ’ದ ಬಗ್ಗೆ (transnational cultural hybridity and politics of contingency) ಅರ್ಥಹೀನ ಸಂತೋಷದಿಂದ ಮಾತನಾಡುವುದೆಂದರೆ ಅಂತಹ ಬಹುರಾಷ್ಟ್ರೀಯ ಬಂಡವಾಳದ ಸಾಂಸ್ಕೃತಿಕ ಧೋರಣೆಗಳನ್ನು ಸಮರ್ಥಿಸಿದಂತೆ” ಎಂದು ಅಹಮದ್‌ ತೀವ್ರವಾಗಿ ಖಂಡಿಸುತ್ತಾನೆ (೧೯೯೫, ಪು. ೨೮೫).

ಇದೇ ನೆಲೆಯಲ್ಲಿ, ಅರಿಫ್‌ ಡರ್ಲಿಕ್‌ ಕೂಡಾ ವಸಾಹತೋತ್ತರ ಚಿಂತಕರು ವಸಾಹತೋತ್ತರ ಸ್ಥಿತಿಗೂ ಮತ್ತು ಸಮಕಾಲೀನ ಬಂಡವಾಳಶಾಹಿಗೂ ಇರುವ ಸಂಬಂಧವನ್ನು ಕಡೆಗಾಣಿಸುತ್ತಾರೆ ಎಂದು ಆಕ್ಷೇಪಿಸುತ್ತಾನೆ. ಅವನ ಮುಖ್ಯ ವಾದವೇನೆಂದರೆ: ಇಂದಿನ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಶ್ವಾತ್ಮಕವೆಂದು ಗುರುತಿಸಬಹುದು. ಈ ವಿಶ್ವಾತ್ಮಕ ಬಂಡವಾಳಶಾಹಿಯು (Global Capitialism) ಶ್ರಮ ಮತ್ತು ಉತ್ಪಾದನಾ ಪ್ರಕ್ರಿಯೆ ಇವೆರಡನ್ನೂ ರಾಷ್ಟ್ರೀಯ ಎಲ್ಲೆಗಳಿಂದ ಹೊರಗೆ ವಿಸ್ತರಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಬಂಡವಾಳ ಮತ್ತು ಶ್ರಮಗಳಿಗೆ ಅದ್ಭುತ ಚಲನಶೀಲತೆಯನ್ನು ಕೊಟ್ಟಿವೆ. (ಬಂಡವಾಳ ಕೆಲವು ರಾಷ್ಟ್ರಗಳದ್ದು ; ಉತ್ಪಾದನೆ ಮತ್ತೊಂದು ರಾಷ್ಟ್ರದಲ್ಲಿ; ಮಾರಾಟ ಇನ್ನೊಂದು ರಾಷ್ಟ್ರದಲ್ಲಿ…..) ಇಂತಹ ಪರಿಸ್ಥಿತಿಯ ಪರಿಣಾಮವೇನೆಂದರೆ, ಯಾವ ಒಂದು ದೇಶಕ್ಕೂ ತನ್ನ ನೆಲದಲ್ಲಿಯೇ ಒಂದು ವಸ್ತುವಿನ ಉತ್ಪಾದನೆ/ಮಾರಾಟ ಆಗುತ್ತಿದ್ದರೂ ಅದರ ಮೂಲ ಸಂಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಲ್ಲದೆ ಬಂಡವಾಳ ಹಾಕುವ/ಉತ್ಪಾದಿಸುವ/ಮಾರಾಟ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳ ಆಸಕ್ತಿಗಳಿಗೆ ಯಾವ ರಾಷ್ಟ್ರವು ಬದ್ಧವಾಗಿಲ್ಲವೋ ಆ ರಾಷ್ಟ್ರವನ್ನು ಸರಳವಾಗಿ ಆ ಸಂಸ್ಥೆಗಳು ನಿರ್ಲಕ್ಷಿಸಿ ಬೇರೆ ಸ್ಥಳಗಳಿಗೆ ಹೋಗುತ್ತವೆ. ಎಂದರೆ, ವಸಾಹತುಶಾಹಿಯು ಎಂದೂ ಸಾಧಿಸದಿದ್ದ, ಸಾಧ್ಯವೆಂದು ಕನಸೂ ಕಾಣದಿದ್ದ, ನಿಯಂತ್ರಣವನ್ನು ಇಂದು ಪ್ರಥಮ ಜಗತ್ತಿನ ರಾಷ್ಟ್ರಗಳು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಸಾಧಿಸಿವೆ. ಇಂತಹ ಸಂಕೀರ್ಣ ಹಾಗೂ ಅಪಾಯಕಾರಿ ವಿಶ್ವಾತ್ಮಕ ಬಂಡವಾಳಶಾಹಿಯ ವಿಶ್ಲೇಷಣೇಯಿಂದ ವಸಾಹತೋತ್ತರ ಚಿಂತನೆ ನಮ್ಮನ್ನು ದೂರಮಾಡಿ, ಗತಕಾಲದ ‘ಯುರೋಪ್‌ ಕೇಂದ್ರಿತ’ ವೈಚಾರಿಕತೆಯತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಪರಿಣಾಮತಃ ಅಸಮಾನತೆ, ಶೋಷಣೆ, ಮತ್ತು ದಮನ – ಇವೇ ಮುಂತಾದ ಬಂಡವಾಳಶಾಹಿಯ ನೂತನ ರೂಪಗಳಿಗೆ ಒಂದು ವಿಧದ ಸಮರ್ಥನೆ ದೊರಕುತ್ತದೆ. (ಪು. ೩೦೮)

ಅಹಮದ್‌, ಡರ್ಲಿಕ್‌ ಮುಂತಾದವರು ಈ ದಿಕ್ಕಿನಲ್ಲಿ ಇನ್ನೂ ಮುಂದೆ ಹೋಗಿ, ಈ ಕಾರಣಕ್ಕಾಗಿಯೇ – ಎಂದರೆ, ಪರೋಕ್ಷವಾಗಿ ವಸಾಹತೋತ್ತರ ಚಿಂತನೆ ಆಧುನಿಕ ಬಂಡವಾಳಶಾಹಿಯನ್ನು ಸಮರ್ಥಿಸುತ್ತದೆ ಎಂಬ ಕಾರಣಕ್ಕಾಗಿ — ಈ ಪ್ರಸ್ಥಾನವನ್ನು  ಅಮೆರಿಕಾ ಮುಂತಾದ ಪ್ರಥಮ ಜಗತ್ತಿನ ರಾಷ್ಟ್ರಗಳು ಸಹಿಸುತ್ತಿವೆ ಮತ್ತು ಉದಾರವಾಗಿ ಪೋಷಿಸುತ್ತಿವೆ ಎಂದು ತೀರ್ಮಾನಿಸುತ್ತಾರೆ.

೪. ನಾವು ಹಿಂದೆ ನೋಡಿದಂತೆ, ಸೈದ್‌ ಅನೇಕ ಕಾರಣಗಳಿಗಾಗಿ ಮಾರ್ಕ್ಸ್‌‌ವಾದವನ್ನು ತಿರಸ್ಕರಿಸುತ್ತಾನೆ — ಮುಖ್ಯವಾಗಿ, ವಿಶ್ವಾತ್ಮಕ ನೆಲೆಯಲ್ಲಿ ಬಂಡವಾಳಶಾಹಿ ತಮ್ತು ಸಾಮಾಜಿಕ ವರ್ಗಗಳನ್ನು ವಿಶ್ಲೇಷಿಸುವ ಮಾರ್ಕ್ಸ್‌ವಾದ ಮೂಲತಃ ಯುರೋಪ್‌ಕೇಂದ್ರಿತವಾಗಿದ್ದು ತೃತೀಯ ಜಗತ್ತಿನ ವಸಾಹತುಶಾಹಿಯ ಶೋಷಣೆಗೊಳಪಟ್ಟ ರಾಷ್ಟ್ರಗಳನ್ನು ಆಲಕ್ಷಿಸುತ್ತದೆ ಎಂಬ ಕಾರಣಕ್ಕಾಗಿ. ಕಾರ್ಮಿಕರ ಬಗ್ಗೆ ಹಾಗೂ ಶೋಷಣೆಯ ವಿವಿಧ ಮುಖಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸಿದ ಮಾರ್ಕ್ಸ್ ಕೂಡಾ ಇಂತಹ ಯುರೋಪ್‌ಕೇಂದ್ರಿತ ದೃಷ್ಟಿಕೋನದಿಂದ ಮುಕ್ತವಾಗಿರಲಿಲ್ಲ; ಆದ್ದರಿಂದಲೇ, ಅಂದಿನ (೧೯ ನೆಯ ಶತಮಾನದ) ಇತರ ಚಿಂತಕರಂತೆ ಮಾರ್ಕ್ಸ್ ಕೂಡಾ ಪೌರಸ್ತ್ಯ ಚಿಂತನೆಯನ್ನು ಒಪ್ಪಿಕೊಂಡು, ‘ಅಜ್ಞಾನ ಮತ್ತು ಮೂಢನಂಬಿಕೆಗಳಲ್ಲಿ ಮುಳುಗಿರುವ ಭಾರತದಂತಹ ರಾಷ್ಟ್ರಕ್ಕೆ ಒಂದು ಕಾಲಘಟ್ಟದಲ್ಲಿ ವಸಾಹತುಶಾಹಿಯು ಅಗತ್ಯವಾಗಬಹುದು, ಮತ್ತು ಆ ದೇಶಕ್ಕೆ ಆಧುನಿಕತೆಯನ್ನು ತರಬಹುದು’ ಎಂದು ೧೮೫೩ ರಲ್ಲಿ ಬರೆದ ಒಂದು ಲೇಖನವನ್ನು ಸೈದ್‌ “ಪೌರಸ್ತ್ಯವಾದ”ದಲ್ಲಿ ಉದಹರಿಸುತ್ತಾನೆ. ಮಾರ್ಕ್ಸ್‌ವಾದವನ್ನು ಸೈದ್‌ ತಿರಸ್ಕರಿಸಲು ಮತ್ತೊಂದು ಕಾರಣವೆಂದರೆ ಅದು ಪ್ರತಿಯೊಂದು ಘಟನೆಯನ್ನು/ಸಮಾಜವನ್ನು ಪೂರ್ವನಿಶ್ಚಿತ ವೈಚಾರಿಕ ಚೌಕಟ್ಟಿನೊಳಗೆ ವ್ಯಾಖ್ಯಾನಿಸುತ್ತದೆ ಎಂಬುದು. ಹಿಂದೆ ಚರ್ಚಿಸಿದಂತೆ, ಸೈದ್‌ನ ವಿಮರ್ಶಾತ್ಮಕ ನಿಲುವೆಂದರೆ, ಎಲ್ಲಾ ಪೂರ್ವ ನಿರ್ಧಾರಿತ ಸಿದ್ಧಾಂತಗಳಿಂದಲೂ ಮತ್ತು ವೈಚಾರಿಕ ಸಂಹಿತೆಗಳಿಂದಲೂ ದೂರವಿದ್ದು, ತನ್ನ ವಿಮರ್ಶಾತ್ಮಕ ‘ಸ್ವತಂತ್ರ ಸ್ಥಳ’ವನ್ನು ಕಾಯ್ದುಕೊಳ್ಳುವುದು.

ಈ ಎರಡೂ ನೆಲೆಗಳಲ್ಲಿ, ಏಜಾಜ್‌ ಅಹಮದ್‌ ಮತ್ತು ಅರಿಫ್‌ ಡರ್ಲಿಕ್‌ ಸೈದ್‌ನನ್ನು ವಿರೋಧಿಸುತ್ತಾರೆ. ತನ್ನ ‘ತಾತ್ವಿಕತೆಯ ನೆಲೆಯಲ್ಲಿ: ವರ್ಗಗಳು, ರಾಷ್ಟ್ರಗಳು ಮತ್ತು ಸಾಹಿತ್ಯಗಳು’ (೧೯೯೨) ಎಂಬ ಲೇಖನದಲ್ಲಿ ಅಹಮದ್‌ ಹೇಗೆ ಮಾರ್ಕ್ಸ್‌ನ ಲೇಖನವನ್ನು ಸೈದ್‌ ತಪ್ಪಾಗಿ ಓದುತ್ತಾನೆ ಎಂಬುದನ್ನು ವಿವರಿಸುತ್ತಾನೆ. ಹ್ಯರಲ್ಡ್ಟ್ರಿಬ್ಯೂನ್ಪತ್ರಿಕೆಗೆ ಭಾರತವನ್ನು ಕುರಿತು ಮಾರ್ಕ್ಸ್ ತನ್ನ ಲೇಖನವನ್ನು ಬರೆದಾಗ ಅವನಿಗೆ ಭಾರತದ ನಿಕಟ ಪರಿಚಯವಿರಲಿಲ್ಲ; ಮತ್ತು ಅವನ ಮಹತ್ಕೃತಿ ‘ಕ್ಯಾಪಿಟಲ್‌’ ಇನ್ನೂ ಮುಂದೆ ಬರುವುದಿತ್ತು. ಈ ಸಂಗತಿ ಭಾರತದ ಬಗ್ಗೆ ಮಾರ್ಕ್ಸ್‌ಗಿದ್ದ ಅಜ್ಞಾನವನ್ನು ತೋರಿಸುತ್ತದೆಯೇ ಹೊರತು ಸಾಮ್ರಾಜ್ಯಶಾಹಿಯ ಸಮರ್ಥನೆಯನ್ನಲ್ಲ. ಈ ಆಂಶವನ್ನು ಸ್ಪಷ್ಟಪಡಿಸಲು – ಮಾಕರ್ಸ್ ಸಾಮ್ರಾಜ್ಯಶಾಹಿಯ ಶೋಷಣೆಯ ಮುಖವನ್ನು ಖಚಿತವಾಗಿ ಗುರುತಿಸಿದ್ದನೆಂಬುದನ್ನು ನಿದರ್ಶಿಸಲು – ಅಹಮದ್‌ ೧೮೮೧ ರಲ್ಲಿ ಮಾರ್ಕ್ಸ್ ಬರೆದ ಪತ್ರದ ಒಂದು ಭಾಗವನ್ನು ಉದಹರಿಸುತ್ತಾನೆ. ಆ ಕಾಗದಲ್ಲಿ ಬ್ರಿಟಿಷರು ತಮ್ಮ ಆರ್ಥಿಕ ಶೋಷಣೆಯ ಕಾರಣದಿಂದ ಭಾರತದಲ್ಲಿ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂದು ಹೇಳುತ್ತಾ ಮಾರ್ಕ್ಸ್ ಕೊನೆಗೆ ಹೀಗೆ ತೀರ್ಮಾನಿಸುತ್ತಾನೆ: “ಇದೊಂದು ಸೇಡಿನಿಂದೆಂಬಂತೆ (ಭಾರತದ) ರಕ್ತ ಹೀರುವ ವ್ಯವಸ್ಥೆ” (“This is a bleeding process with a vengeance”).

ಎರಡನೆಯದಾಗಿ, ಸೈದ್‌ ಮತ್ತು ಹೋಮೀ ಭಾಭಾ ಇವರ ವಿಮರ್ಶಾತ್ಮಕ ನಿಲುವನ್ನು ಉಗ್ರವಾಗಿ ಅಹಮದ್‌ ಮತ್ತು ಡರ್ಲಿಕ್‌ ಖಂಡಿಸುತ್ತಾರೆ. ಅವರ ದೃಷ್ಟಿಯಲ್ಲಿ ಅದೊಂದು ‘ಏಲೀಟಿಸ್ಟ್‌’ ನಿಲುವು. ಪ್ರಥಮ ಜಗತ್ತಿನ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದು, ಅಲ್ಲಿಯ ವಿ.ವಿ.ಗಳಲ್ಲಿ ಉನ್ನತ ಅಧಿಕಾರ ಸ್ಥಾನಗಳಲ್ಲಿದ್ದುಕೊಂಡು, ತೃತೀಯ ಜಗತ್ತಿನ ಬಗ್ಗೆ ಮಾತನಾಡುವುದು ಒಂದು ಬಗೆಯ ನೈತಿಕ ಸೋಗು; ಮತ್ತು ವಾಸ್ತವದ ನಿಷ್ಠುರ ಸತ್ಯದಿಂದ ಪಲಾಯನ ಮಾಡುವ ತಂತ್ರ ಎಂದು ಅವರು ವಾದಿಸುತ್ತಾರೆ. ಸೈದ್‌ ಇಚ್ಛಿಸುವ ‘ಅಲಿಪ್ತತೆ’ ಮತ್ತು ‘ನಿರ್ವಸಿತ ಸ್ಥಿತಿ’ ಯ ಬಗ್ಗೆ ಅಹಮದ್‌ ಹೀಗೆ ಹೇಳುತ್ತಾನೆ: “ಹೆಚ್ಚಿನ ವಲಸೆಗಾರರು ಸಾಧಾರಣವಾಗಿ ಬಡವರಾಗಿರುತ್ತಾರೆ; ಮತ್ತು ಸಾಂಸ್ಕೃತಿಕ ಬದಲಾವಣೆ (displacement) ಅವರಿಗೆ ಸಾಂಸ್ಕೃತಿಕ ಸಮೃದ್ಧಿಯ ಸಂಗತಿಯಲ್ಲ – ಅದೊಂದು ಯಾತನೆ. ಅವರಿಗೆ ಜರೂರಿನ ಸಂಗತಿಯೆಂದರೆ ಬದಲಾವಣೆಯಲ್ಲ — ಸುಭದ್ರ ಭವಿಷ್ಯದ ಭರವಸೆಯಿಂದ ಹೊಸ ಬದುಕನ್ನು ಪ್ರಾರಂಭಮಾಡಲು ಯೋಗ್ಯ ಸ್ಥಳ. ವಸಾಹತೋತ್ತರ ಸ್ಥಿತಿಯೂ ಇತರ ಅನೇಕ ಸಂಗತಿಗಳಂತೆ ಸಾಮಾಜಿಕ ವರ್ಗವನ್ನವಲಂಬಿಸಿದೆ” (೧೯೯೫, ಪು.೨೮೯).

ಅಹಮದ್‌, ಡರ್ಲಿಕ್‌ ಮುಂತಾದವರ ಅನೇಕ ಆಕ್ಷೇಪಗಳಿಗೆ ಸೈದ್‌ (ಈಗಾಗಲೇ ಚರ್ಚಿಸಿದಂತೆ) ತನ್ನ “ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿ” ಗ್ರಂಥದಲ್ಲಿ ಉಚಿತ ಉತ್ತರಗಳನ್ನು ನೀಡುತ್ತಾನೆ. ಮುಖ್ಯವಾಗಿ, ವಸಾಹತೋತ್ತರ ಚಿಂತನೆ ಹೇಗೆ ಸದ್ಯದ ಜಾಗತಿಕ ಸಮಸ್ಯೆಗಳಿಂದ ದೂರವಾಗುವ ತಂತ್ರವಲ್ಲ ಎಂಬುದನ್ನು ಇಂದಿನ ಅಮೆರಿಕಾದ ನವ ಸಾಮ್ರಾಜ್ಯಶಾಹಿಯ ನಿಷ್ಠುರ ವಿಶ್ಲೇಷಣೆಯ ಮೂಲಕ ಸ್ಪಷ್ಟಪಡಿಸುತ್ತಾನೆ; ಮತ್ತು ತನ್ನ ಹಿಂದಿನ ಅನೇಕ ನಿಲುವುಗಳಿಗೆ ತಿದ್ದುಪಡಿಗಳನ್ನೂ ಮಾಡುತ್ತಾನೆ.

ಆದರೆ, ಒಂದು ಅಂಶವನ್ನು ಇಲ್ಲಿ ಸ್ಪಷ್ಟಪಡಿಸಬೇಕು. ಎಲ್ಲಾ ಮಾರ್ಕ್ಸಿಸ್ಟ್‌ ಚಿಂತಕರಂತೆ ಅಹಮದ್‌ ಮುಂತಾದವರೂ ವಿಮರ್ಶಕನಲ್ಲಿ/ಲೇಖಕನಲ್ಲಿ ‘ಬದ್ಧತೆ’ಯನ್ನು ನಿರೀಕ್ಷಿಸುತ್ತಾರಲ್ಲದೆ, ಆ ಬದ್ಧತೆ ಮಾರ್ಕ್ಸ್‌ವಾದದ ಬಗ್ಗೆ ಮಾತ್ರ ಇರಬೇಕೆಂದು ಆಗ್ರಹಿಸುತ್ತಾರೆ. ಇತರ ವೈಚಾರಿಕ ಮಾರ್ಗಗಳೆಲ್ಲವೂ ಅವರಿಗೆ ಶುಷ್ಕ ಪಾಂಡಿತ್ಯದ ಪ್ರದರ್ಶನವಾಗುತ್ತವೆ. ಅರ್ಥಾತ್‌, ‘ಇದೇ ಪ್ರಸ್ತುತವಾದ ವಿಮರ್ಶೆ – ಬೇರೆಯಲ್ಲ; ವಿಮರ್ಶಕನ ಕ್ಷೇತ್ರ ಇದೇ ಆಗಿರಬೇಕು, ಮತ್ತಾವುದೂ ಅಲ್ಲ’ ಎಂಬಂತಹ ‘ಇದಮಿತ್ಥಂ’ ಧೋರಣೆ ಎಷ್ಟು ಸಮರ್ಥನೀಯ? ಅಲ್ಲದೆ, ವಿಮರ್ಶೆಯ ಭೌಗೋಳಿಕ ಸ್ಥಳ ಮಹತ್ವದ್ದಾಗಬೇಕೇ? ಅಮೆರಿಕಾದಲ್ಲಿದ್ದು ತೃತೀಯ ಜಗತ್ತಿನ ಬಗ್ಗೆ ಮಾತನಾಡುವುದು ಅನೈತಿಕ ಎಂಬ ವಾದವನ್ನು ಒಪ್ಪುವುದು ಕಷ್ಟ.

. ಸಾಹಿತ್ಯಿಕ ವಿಮರ್ಶೆಯ ನೆಲೆಯಲ್ಲಿ: ತನ್ನ ವಾದವನ್ನು ಸಮರ್ಥಿಸಲು ಸೈದ್‌ ಮತ್ತು ಇತರ ವಸಾಹತೋತ್ತರ ಚಿಂತಕರು ಸೃಜನಶೀಲ – ವೈಚಾರಿಕ – ಪ್ರವಾಸಕಥನಾತ್ಮಕ ಮುಂತಾದ ವಾಂಙ್ಮಯದ ಎಲ್ಲಾ ಪ್ರಭೇದಗಳನ್ನೂ ಏಕರೀತಿಯಲ್ಲಿ ನೋಡುತ್ತಾರೆ. ಸಾಹಿತ್ಯ ವಿಮರ್ಶಕರು ಕೇಳುವುದೇನೆಂದರೆ, ೨೦ ನೆಯ ಶತಮಾನದ ಕಿಪ್ಲಿಂಗ್‌ನ ಕಾದಂಬರಿ, ೧೯ ನೆಯ ಶತಮಾನದ ಅಧಿಕಾರಿಗಳ ವರದಿಗಳು, ೧೮ ನೆಯ ಶತಮಾನದ ಒಂದು ಪ್ರವಾಸ ಕಥನ – ಇವೆಲ್ಲವನ್ನು ಸಮಾನವೆಂದು ಭಾವಿಸಿ, ಅವುಗಳ ಪ್ರಭಏದ – ಒತ್ತಡಗಳನ್ನು ನಿರ್ಲಕ್ಷಿಸಿ, ಅವೆಲ್ಲವನ್ನೂ ‘ಸಾಕ್ಷ್ಯ’ದಂತೆ ವ್ಯಾಖ್ಯಾನಿಸುವುದು ಎಷ್ಟು ಸರಿ? ಎಷ್ಟು ಉಚತಿ?

ಡೆನಿಸ್‌ ಪೋರ್ಟರ್ ಮುಂತಾದ ಸಾಹಿತ್ಯ ವಿಮರ್ಶಕರ ನಿಲವೇನೆಂದರೆ, ಸಾಹಿತ್ಯಕೃತಿಗಳಿಗೆ ತಮ್ಮದೇ ಆದ ‘ಸಾಪೇಕ್ಷ ಸ್ವಾಯತ್ತತೆ’ (relative autonomy) ಇರುತ್ತದೆ. ಈ ವಾದ ಆಲ್‌ಥೂಸರ್ ನ ವಿಚಾರಗಳಿಂದ ಪ್ರಭಾವಿತವಾಗಿದೆ. ಎಂದರೆ, ಸಾಹಿತ್ಯ ಕೃತಿಗಳು ಒಂದು ವಿಶಿಷ್ಟ ವೈಚಾರಿಕ ಪ್ರಣಾಲಿಯಿಂದ ರೂಪಿಸಲ್ಪಟ್ಟಿದ್ದರೂ ಎಲ್ಲೋ ಒಂದು ಕಡೆ ಅವುಗಳಿಂದ ದೂರವಿದ್ದು, ಕೃತಿಗಳು ಆ ವೈಚಾರಿಕ ಪ್ರಣಾಲಿಗಳನ್ನೂ ಪರೀಕ್ಷಿಸುತ್ತವೆ. ಈ ದೃಷ್ಟಿಯಿಂದ ಕಿಪ್ಲಿಂಗ್‌, ಕಾನ್ರಾಡ್‌ ಮುಂತಾದವರ ಕೃತಿಗಳನ್ನು ವಿಶ್ಲೇಷಿಸಿದರೆ ವಸಾಹತುಶಾಹಿಯನ್ನು ಕುರಿತ ಅತ್ಯಂತ ಸೂಕ್ಷ್ಮ ಹಾಗೂ ಅರ್ಥಪೂರ್ಣ ಒಳನೋಟಗಳನ್ನು ಕಾಣಬಹುದು. “ಕೆಲವು ಕೃತಿಗಳು ಅವುಗಳು ಸೃಷ್ಟಿಯಾದ ಸಂದರ್ಭಗಳನ್ನು ಮಾತ್ರ ಪ್ರತಿಫಲಿಸುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಅವು ಮುಖ್ಯವಾಗುತ್ತವೆ” ಎಂದು ಮಜೀದ್‌ ತೀರ್ಮಾನಿಸುತ್ತಾನೆ (ಪು. ೩).

ಸಾಹಿತ್ಯಕೃತಿಗಳ ‘ಸಾಪೇಕ್ಷ ಸ್ವಾಯತ್ತತೆ’ಯನ್ನು ಸೈದ್‌ ತನ್ನ ಇತ್ತೀಚಿನ ಕೃತಿಗಳಲ್ಲಿ ಒಪ್ಪುತ್ತಾನೆ; ಮತ್ತು “ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿ”ಯಲ್ಲಿ ಅನೇಕ ಸಾಹಿತ್ಯಕೃತಿಗಳನ್ನು ಈ ನಿಲುವಿನಿಂದಲೇ ವ್ಯಾಖ್ಯಾನಿಸುತ್ತಾನೆ. ಆದ್ದರಿಂದ, ಈ ಸಂದರ್ಭದಲ್ಲಿ ಇಷ್ಟೇ ಹೇಳಬಹುದು; ವಸಾಹತೋತ್ತರ ಚಿಂತನೆ ಇನ್ನೂ ಬೆಳೆಯುತ್ತಿರುವ ರಾಜಕೀಯ – ಸಾಂಸ್ಕೃತಿಕ ಪ್ರಸ್ಥಾನ. ಅನೇಕ ಮಿತಿಗಳಿದ್ದರೂ, ಅಸಮಾನ ಅಧಿಕಾರಾಧರಿತ ಭಿನ್ನ ಸಂಸ್ಕೃತಿಗಳ ಅಧ್ಯಯನಕ್ಕೆ ಮತ್ತು ಅರ್ಥಪೂರ್ಣ ವಿಶ್ಲೇಷಣೆ – ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ತುಳಿಯುವ ಮುಂದಿನ ದಾರಿಯನ್ನು ಕಾದು ನೋಡಬೇಕು.

* * *