ಈ ಶತಮಾನದ ಉತ್ತರಾರ್ಧದಲ್ಲಿ ವಿವಿಧ ಜ್ಞಾನಕ್ಷೇತ್ರಗಳಲ್ಲಿ ನೂತನ ಪರಿಕಲ್ಪನೆಗಳು ಎಷ್ಟು ವಿಪುಲವಾಗಿ ಬೆಳೆದಿವೆ ಎಂದರೆ ಆ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲೇ ಸಾಕಷ್ಟು ಸಮಯ ಬೇಕಾದೀತು. ಆಧುನಿಕೋತ್ತರ ವಾದ, ರಾಚನಿಕೋತ್ತರ ವಾದ, ವಸಾಹತೋತ್ತರ ವಾದ, ಇತ್ಯಾದಿ ‘ಉತ್ತರ’ವಾದಗಳು (Post – Theories) ಎಷ್ಟು ವ್ಯಾಪಕವಾಗಿವೆಯೆಂದರೆ, ವಿಮರ್ಶಕಿಯೊಬ್ಬಳು “ಇಂದು ಚಿಂತನೆಯೆಲ್ಲವೂ ಯಾರು ಬೇಕಾದರೂ ಎಂತಹ ಪತ್ರವನ್ನೂ ಹಾಕಬಹುದಾದ ಪೋಸ್ಟ್‌ಬಾಕ್ಸ್‌ಆಗಿದೆ” ಎಂದು ವಿಷಾದಿಸುತ್ತಾಳೆ. (ಹೆಲನ್‌ಗಿಲ್‌ಬರ್ಟ್, ಪು. ೩) ಇಂತಹ ಜಟಿಲ ಹಾಗೂ ವಿಪುಲ ‘ಉತ್ತರ’ವಾದಗಳ ಅವಶ್ಯಕತೆಯಿದೆಯೆ?

ಖಂಡಿತವಾಗಿಯೂ ಇದೆ… ಎಂದು ಈಹಬ್‌ಹಸನ್‌‘ಉತ್ತರಿಸುತ್ತಾನೆ’. ನೂತನ ಪರಿಕಲ್ಪನೆಗಳು ಕೂದಲೆಳೆ ಸೀಳುವಂತಹ ಶುಷ್ಕ ಪಾಂಡಿತ್ಯದ ಪರಿಣಾಮವೆಂದು ಕಂಡರೂ, ಅವುಗಳನ್ನು ನಿರಾಕರಿಸುವುದೆಂದರೆ ಪ್ರಗತಿಪರ ಚಿಂತನೆಗೆ ಬೆನ್ನು ಹಾಕಿದಂತೆ. ಏಕೆಂದರೆ, ಹಸನ್‌ಹೇಳುವಂತೆ “ಇದು ಕೇವಲ ನಾವೀನ್ಯತೆಗಾಗಿ ನಾವೀನ್ಯತೆಯನ್ನರಸುವ ಫ್ಯಾಶನ್‌ಅಲ್ಲ. ಹೊಸ ಪರಿಕಲ್ಪನೆಗಳ ಮೂಲಕ ಹಳೆಯ ಪರಿಕಲ್ಪನೆಗಳನ್ನು ವಿರೋಧಿಸುವುದರ ಹಿಂದೆ ಒಂದು ಜರೂರು, ಒಂದು ಅಗತ್ಯ ಇರುತ್ತದೆ…. ಆಸೆಗಿಂತ ಹೆಚ್ಚಾಗಿ ಭೀತಿಯನ್ನೊಳಗೊಂಡ ‘ಸಾಂಸ್ಕೃತಿಕ ಜರೂರು’ (೧೯೮೫:೭ – ೮). ಎಂದರೆ, ಪ್ರತಿಯೊಂದು ಪರಿಕಲ್ಪನೆಯೂ ಒಂದು ಹೊಸ ಬಗೆಯ ಚಿಂತನೆಯ ಪ್ರಯತ್ನ; ರೂಢಿಗತ ಚಿಂತನೆಗಿಂತ ಭಿನ್ನವಾಗಿ ಸಮಾಜ – ಸಾಹಿತ್ಯ – ಸಂಸ್ಕೃತಿಗಳನ್ನು ನೋಡುವ ಹಾಗೂ ಅರ್ಥೈಸುವ ಪ್ರಯತ್ನ.

ಇಂದು ಪ್ರಚಲಿತವಿರುವ ಮೂರು ‘ಉತ್ತರ’ ಚಿಂತನಾ ಮಾರ್ಗಗಳ ಸ್ಥೂಲ ವ್ಯಾಖ್ಯಾನಕ್ಕೆ ತೊಡಗುವ ಮೊದಲು ನಾವು ಗಮನಿಸಬೇಕಾದ ಒಂದೆರಡು ಅಂಶಗಳಿವೆ. (ಅ) ಈ ಪರಿಕಲ್ಪನೆಗಳು ಅಥವಾ ವಾದಗಳು ಗೋಡೆಗಳಿಂದ ಪ್ರತ್ಯೇಕಿಸಲ್ಪಟ್ಟ, ಸ್ವಸಂಪೂರ್ಣ ಸ್ಥಳಗಳಲ್ಲ. ಅವುಗಳ ನಡುವೆ, ಮತ್ತು ಅವುಗಳು ವಿರೋಧಿಸುವ ಪರಿಕಲ್ಪನೆಗಳ/ವಾದಗಳ ನಡುವೆ, ಅನೇಕ ಸಮಾನ ಅಂಶಗಳಿವೆ. ಒಂದರ ವ್ಯಾಖ್ಯಾನ ಅನಿವಾರ್ಯವಾಗಿ ಮತ್ತೊಂದರ ವ್ಯಾಖ್ಯಾನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯಿದೆ. (ಆ) ಇನ್ನೂ ಮುಖ್ಯವಾಗಿ, ಈ ಯಾವ ಪರಿಕಲ್ಪನೆಗಳೂ ಕೇವಲ ಸಾಹಿತ್ಯ ವಿಮರ್ಶೆಗೆ ಸೀಮಿತವಾದವುಗಳಲ್ಲ. ಸಾಹಿತ್ಯ ವಿಮರ್ಶೆ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ಮಾನವಿಕ ಕ್ಷೇತ್ರಗಳಿಗೇ ಅಲ್ಲದೆ ಲಲಿತ ಕಲೆಗಳಿಗೂ, ಟಿ.ವಿ. – ಸಿನಿಮಾ ಮುಂತಾದ ಜನಪ್ರಿಯ ಕಲೆಗಳಿಗೂ ಸಮಾನವಾಗಿ ಅನ್ವಯಿಸುತ್ತವೆ. ಇವೆಲ್ಲವೂ ಅಂತಃ ಶಿಸ್ತೀಯ ಪರಿಕಲ್ಪನೆಗಳು.

ಈಗ ಈ ವಾದಗಳ ಸ್ಥೂ ಲ ಸ್ವರೂಪವನ್ನು ನೋಡೋಣ.

() ಆಧುನಿಕತೆ, ಆಧುನಿಕತಾ ವಾದ, ಮತ್ತು ಆಧುನಿಕೋತ್ತರ ವಾದ: (Modernity, Modernism, Post – modernism).

ಆಧುನಿಕತೆ ಅಥವಾ ಆಧುನಿಕ ದೃಷ್ಟಿಕೋನವೆಂಬುದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ೧೮ನೆಯ ಶತಮಾನದಿಂದ ಪ್ರಾರಂಭವಾದ ನಗರೀಕರಣ, ಔದ್ಯೋಗೀಕರಣ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಾದ ಅಸಾಧಾರಣ ಪ್ರಗತಿ ಇವುಗಳು ರೂಪಿಸಿದ ದೃಷ್ಟಿಕೋನ. ಜಾನ್‌ಡಾಕರ್ ಎಂಬ ವಿಮರ್ಶಕ ಈ ದೃಷ್ಟಿಕೋನದ ಪ್ರಾತಿನಿಧಿಕ ಸ್ವರೂಪವನ್ನು ಪ್ರಸಿದ್ಧ ಆಧುನಿಕ ವಾಸ್ತುಶಿಲ್ಪಿ ಲ ಕಾರ್ಬೂಸಿಯೇನಲ್ಲಿ ಗುರುತಿಸುತ್ತಾನೆ (೧೯೯೨:೪). (ಕಾರ್ಬೂಸಿಯೇ ಭಾರತದ ಚಂಡೀಗಡ ನಗರವನ್ನು ರೂಪಿಸಿದ ಶಿಲ್ಪಿ.) ವಾಸ್ತುಶಿಲ್ಪದ ಬಗ್ಗೆ ಅವನು ಬರೆದಿರುವ “ನೂತನ ವಾಸ್ತುಶಿಲ್ಪವನ್ನು ಕುರಿತು” (Towards a New Architecture, ೧೯೨೩), ಮತ್ತು “ಭವಿಷ್ಯದ ನಗರ” (The City of Tomorrow, ೧೯೨೩) ಎಂಬ ಎರಡು ಗ್ರಂಥಗಳು ಈ ಶತಮಾನದ ಆದಿಭಾಗದಲ್ಲಿ ಬಹುಪ್ರಭಾವಶಾಲಿಯಾಗಿದ್ದುವು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ಕಾರ್ಬೂಸಿಯೇ ಗುರುತಿಸಿದ ಮತ್ತು ಮೆಚ್ಚಿದ ಮಾದರಿಗ?ಳೆಂದರೆ ರೋಮನ್ನರು ಎಲ್ಲೆಡೆ ಕಟ್ಟಿದ ಸರಳ ರೇಖಾತ್ಮಕ ನಗರಗಳು, ಪ್ರಾಚೀನ ಐಗುಪ್ತದ ಪಿರಮಿಡ್‌ಗಳು, ಗ್ರೀಕರ ಪಾರ್ಥನಾನ್‌ಕಟ್ಟದ ಇತ್ಯಾದಿ. ಎಂದರೆ, ಅವನ ದೃಷ್ಟಿಯಲ್ಲಿ ಕುಸುರಿ ಕೆಲಸಕ್ಕೆ, ಅಂದಚೆಂದಗಳಿಗೆ ಸ್ಥಾನವಿಲ್ಲ. ಎಲ್ಲಾ ನಿರ್ಮಾಣಗಳಲ್ಲಿಯೂ ಅವನಿಗೆ ಬೇಕಾದದ್ದು ಕ್ರಮ, ಅಚ್ಚುಕಟ್ಟು, ಸಮತೋಲನ, ಭೂಮಿತಿಯನ್ನಾಧರಿಸಿದ ಆಕೃತಿಗಳು (Geometrical Forms). “ಕ್ರಮ, ಅಲ್ಪವೆಚ್ಚ ಮತ್ತು ಕಾರ್ಯಕಾರಣ ಸಂಬಂಧ ಇವುಗಳನ್ನು ಆಧರಿಸಿದಾಗಲೇ ವಾಸ್ತುಶಿಲ್ಪವು ಪ್ಲಾಸ್ಟಿಕ್‌ಅಥವಾ ಉಪಯುಕ್ತವಾಗಬಲ್ಲದು” ಎಂಬುದು ಅವನ ವಾದ (ಡಾಕರ್, ೫).

ಸಮಾಜ – ಸಂಸ್ಕೃತಿ ಮುಂತಾದವುಗಳ ಬಗ್ಗೆ ಒಟ್ಟಾರೆಯಾಗಿ ೧೮ನೆಯ ಶತಮಾನದಿಂದ ಮೂಡಿಬಂದ ಇಂತಹ ವೈಚಾರಿಕತೆಯನ್ನು/ದೃಷ್ಟಿಕೋನವನ್ನು ‘ಎನ್‌ಲೈಟನ್‌ಮೆಂಟ್‌’ ವೈಚಾರಿಕತೆ ಎಂದು ಇತಿಹಾಸಜ್ಞರು ಗುರುತಿಸುತ್ತಾರೆ. ಈ ವೈಚಾರಿಕತೆಯ ಮುಖ್ಯ ಅಂಶಗಳೆಂದರೆ ಉದಾರ ಮಾನವತಾ ವಾದ, ತರ್ಕಪಾರಮ್ಯ ವಾದ (Rationalism), ‘ನೈಸರ್ಗಿಕ ನ್ಯಾಯ’ದ (Natural law) ಬಗ್ಗೆ ವಿಶ್ವಾಸ, ವೈಜ್ಞಾನಿಕ – ತಾಂತ್ರಿಕ ಪ್ರಗತಿಯ ಬಗ್ಗೆ ಗಾಢ ನಂಬಿಕೆ, ಇತಿಹಾಸದ ಸರಳ ರೇಖಾತ್ಮಕ ಮತ್ತು ವಿಕಾಸಮುಖೀ ಗತಿಯ ಗ್ರಹಿಕೆ, ಇತ್ಯಾದಿ. ಇಂತಹ ವೈಚಾರಿಕತೆಯನ್ನು ಜಾನ್‌ಲಾಕ್‌, ಡೆಕಾರ್ಟೆ ಮುಂತಾದ ತತ್ವಶಾಸ್ತ್ರಜ್ಞರಲ್ಲಿ; ಗಿಬನ್‌, ಮುಂತಾದ ಇತಿಹಾಸಜ್ಞರಲ್ಲಿ; ವಾಲ್ಟೇರ್, ರೂಸೋ, ಪೋಪ್‌ಮುಂತಾದ ಸಾಹಿತಿಗಳಲ್ಲಿ ಕಾಣುತ್ತೇವೆ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ಭಾರತದ ಪ್ರಥಮ ಪ್ರಧಾನಿ ನೆಹರು ಅವರನ್ನು ಈ ನೆಲೆಯಲ್ಲಿ ‘ಆಧುನಿಕ’ರೆಂದು ಕರೆಯಬಹುದು. “ಆಧುನಿಕ ಭಾರತದ ದೇವಾಲಯಗಳೆಂದರೆ ಭಾಕ್ರಾ – ನಂಗಲ್‌ಮುಂತಾದ ಮಹಾನ್‌ಅಣೆಕಟ್ಟುಗಳು” ಎಂಬ ನೆಹರು ಅವರ ಘೋಷಣೆಯನ್ನು ಆಧುನಿಕತೆಯ ಪ್ರಾತಿನಿಧಿಕ ಹೇಳಿಕೆಯೆಂದು ನಾವು ಪರಿಗಣಿಸಬಹುದು.

ಈ ವಿಧದ ‘ಎನ್‌ಲೈಟನ್‌ಮೆಂಟ್‌’ ವೈಚಾರಿಕತೆಯ ಪ್ರತಿರೋದವನ್ನು ‘ಆಧುನಿಕತಾ ವಾದ’ವೆಂದು ವಿದ್ವಾಂಸರು ಗುರುತಿಸುತ್ತಾರೆ. (ಕನ್ನಡದ ಸಂದರ್ಭದಲ್ಲಿ ಇದನ್ನು ‘ನವ್ಯ ವೈಚಾರಿಕತೆ’ ಅಥವಾ ‘ನವ್ಯವಾದ’ ಎಂದು ಕರೆಯುವುದು ಉಚಿತವಾಗುತ್ತದೆ. ಆದರೆ ಪರಿಕಲ್ಪನೆಗಳಲ್ಲಿ ಸಮಾನತೆಯಿರಲೆಂದು `Modernism’ ಶಬ್ದಕ್ಕೆ ಪ್ರತಿಯಾಗಿ ‘ಆಧುನಿಕತಾ ವಾದ’ವೆಂದು ನಾನು ಉಪಯೋಗಿಸುತ್ತಿದ್ದೇನೆ). ಆಧುನಿಕತೆ ಕೊಂಡಾಡುವ ಔದ್ಯೋಗೀಕರಣ, ನಗರೀಕರಣ, ತಾಂತ್ರಿಕ ಪ್ರಗತಿ, ಮುಂತಾದವುಗಳನ್ನು ಆಧುನಿಕತಾವಾದ ಉಗ್ರವಾಗಿ ವಿರೋಧಿಸುತ್ತದೆ. ಈ ವಾದದ ಪ್ರಾತಿನಿಧಿಕ ವಕ್ತಾರನೆಂದರೆ ಎಫ್‌.ಆರ್. ಲೀವಿಸ್‌. (ಕನ್ನಡದ ಸಂದರ್ಭದಲ್ಲಿ ಅಡಿಗರು, ಕೆ.ವಿ. ಸುಬ್ಬಣ್ಣ, ಇತ್ಯಾದಿ).

ಸಮಾಜ – ಸಂಸ್ಕೃತಿ – ಸಾಹಿತ್ಯ – ಶಿಕ್ಷಣ ಇವೇ ಮುಂತಾದ ಕ್ಷೇತ್ರಗಳ ಬಗ್ಗೆ ಗಾಢವಾಗಿ ಚಿಂತಿಸಿದ್ದ ಮತ್ತು ಈ ಶತಮಾನದ ಪೂರ್ವಾರ್ಧದಲ್ಲಿ ಅತ್ಯಂತ ಪ್ರಭಾವಶಾಲಿಲಯಾಗಿದ್ದ ಲೀವಿಸ್‌ಎಲ್ಲಾ ಕ್ಷೇತ್ರಗಳಲ್ಲಿಯೂ ರೂಢಿಗತ ವ್ಯವಸ್ಥೆಯನ್ನು ವಿರೋಧಿಸುತ್ತಾನೆ. ಇವನ ಆದರ್ಶ ಸಮಾಜವೆಂದರೆ ಔದ್ಯೋಗೀಕರಣದ ಪೂರ್ವದಲ್ಲಿ ಇದ್ದಿರಬಹುದಾದ ‘ಸಾವಯವ ಸಮಾಜ’. (ಇಂಗ್ಲೆಂಡಿನಲ್ಲಿ ಹದಿನೇಳನೆಯ ಶತಮಾನದಲ್ಲಿ ಇತ್ತೆಂದು ಲೀವಿಸ್‌ಭಾವಿಸುವ, ಕೃಷಿ ಆಧಾರಿತ ಮತ್ತು ಸ್ವಯಂಪೂರ್ಣವಾದ ಸಣ್ಣ ಗ್ರಾಮಗಳಿಂದ ಕೂಡಿದ ಬ್ರಿಟಿಷ್‌ಸಮಾಜ). ಇವನ ಸಿದ್ಧಾಂತವನ್ನು ಉದಾರ ಮಾನವತಾ ವಾದವೆಂದು ಗುರುತಿಸಬಹುದು.

ಲೀವಿಸ್‌ನ ದೃಷ್ಟಿಯಲ್ಲಿ ಆಧುನಿಕ ಮಾನವನ ಪ್ರಪ್ರಥಮ ಶತ್ರುವೆಂದರೆ ‘ಯಂತ್ರ’. ತನ್ನ ಸುಪ್ರಸಿದ್ಧ “ಬಹುಸಂಖ್ಯಾತ ನಾಗರಿಕತೆ ಮತ್ತು ಅಲ್ಪಸಂಖ್ಯಾತ ಸಂಸ್ಕೃತಿ” ಎಂಬ ಗ್ರಂಥದಲ್ಲಿ. ಒಂದು ಸಂದರ್ಭದಲ್ಲಿ, ಯಂತ್ರಾಧಾರಿತ ಆಧುನಿಕ ಸಮಾಜವನ್ನು ಲೀವಿಸ್‌ಹೀಗೆ ವಿಶ್ಲೇಷಿಸುತ್ತಾನೆ:

“ಮಾನವ ಚರಿತ್ರೆಯ ಆಧುನಿಕ ಮುಖವು ಅನ್ಯಾದೃಶವೆಂಬ ವಾದಕ್ಕೆ ಪೂರಕವಾಗಿ ನಾವು ಕೇವಲ ‘ಯಂತ್ರ’ವನ್ನು ನಿರ್ದೇಶಿಸಿದರೆ ಸಾಕಾಗುತ್ತದೆ. ಮೊದಲನೆಯದಾಗಿ, ನಮ್ಮ ವರ್ತನೆ ಹಾಗೂ ಬದುಕಿನ ಸನ್ನಿವೇಶಗಳಲ್ಲಿ ಈ ಯಂತ್ರವು ಉಂಟುಮಾಡಿರುವಷ್ಟು ಬದಲಾವಣೆಯ ಗತಿಗೆ ಸಮಾನ ನಿದರ್ಶನವನ್ನು ಹಿಂದೆಂದೂ ನಾವು ಕಾಣಲಾರೆವು. … (“ಮಿಡ್ಲ್ ಟೌನ್‌”ನಂತಹ ಕಾದಂಬರಿಯಲ್ಲಿ) ಹೇಗೆ ಕಾರು ಮುಂತಾದ ಸ್ವಯಂಚಾಲಿತ ವಾಹನಗಳು ಕೆಲವೇ ಕೆಲವು ವರ್ಷಗಳಲ್ಲಿ ಮತ – ಧರ್ಮಗಳನ್ನು ತೀವ್ರವಾಗಿ ಪ್ರಭಾವಿಸಿವೆ, ಕೌಟುಂಬಿಕ ವ್ಯವಸ್ಥೆಯನ್ನು ಮುರಿದು ಹಾಕಿವೆ, ಮತ್ತು ಸಾಮಾಜಿಕ ಪರಂಪರೆಗಳನ್ನು ಇನ್ನಿಲ್ಲದಷ್ಟು ಬದಲಾಯಿಸವೆ ಎಂಬ ಅಂಶಗಳ ವಿವರಗಳನ್ನು ಕಾಣುತ್ತೇವೆ. ವೈಯಕ್ತಿಕ ಬದುಕಿನಲ್ಲಾಗಿರುವ ಇಂತಹ ಕ್ಷಿಪ್ರ ಬದಲಾವಣೆ ಎಷ್ಟು ಭಯಂಕರವಾಗಿದೆಯೆಂದರೆ ಇಂದು ಒಂದು ಪೀಳಿಗೆಗೆ ಮತ್ತೊಂದು ಪೀಳಿಗೆಯೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯವಾಗಿದೆ; ತಂದೆ ತಾಯಿಯರು ತಮ್ಮ ಮಕ್ಕಳೊಡನೆ ಹೇಗೆ ವರ್ತಿಸಬೇಕೆಂಬುದನ್ನೇ ತಿಳಿಯದೆ ಅವರು ನಿಸ್ಸಹಾಯಕರಾಗಿದ್ದಾರೆ” (೧೯೩೦, ಪು. ೧೬ – ೧೭).

ಒಂದು ಜೀವಂತ ಸಮಾಜದಲ್ಲಿ ‘ಸಂಸ್ಕೃತಿ’ ಕ್ರಿಯಾಶೀಲವಾಗಿರುತ್ತದೆ; ಮತ್ತು ಇಂತಹ ಕ್ರಿಯಾಶೀಲ ಸಂಸ್ಕೃತಿಯನ್ನು ಸಮಾಜದ ಕೆಲವೇ ಕೆಲವು ಜನರು ಅರಿಯಬಲ್ಲವರು  ಹಾಗೂ ಉಳಿಸಬಲ್ಲವರು ಆಗಿರುತ್ತಾರೆ. ಕಲೆ – ಸಾಹಿತ್ಯಗಳಲ್ಲಿ ‘ವಿಮರ್ಶಾತ್ಮಕ ಅಭಿರುಚಿ’ಯನ್ನು ಹೊಂದಿರುವ ಇಂತಹ ‘ಅಲ್ಪಸಂಖ್ಯಾತ ಸುಸಂಸ್ಕೃತರು’ ಸಮಾಜದ ಕೇಂದ್ರದಲ್ಲಿರುತ್ತಾರೆ; ಮತ್ತು ಇವರುಗಳನ್ನು ಅಂಚಿಗೆ ತಳ್ಳುವ ಯಾವ ಸಮಾಜವೂ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯವಿಲ್ಲ. ಇಡೀ ಒಂದು ಯುಗದ ಶ್ರೇಷ್ಠ ಮೌಲ್ಯಗಳನ್ನು ಹಾಗೂ ಮಾನದಂಡಗಳನ್ನು ಪ್ರತಿನಿಧಿಸುವ ಈ ಸಾಂಸ್ಕೃತಿಕ ಅಲ್ಪಸಂಖ್ಯಾತ ವರ್ಗವೇ ಶ್ರೇಷ್ಠ ಪರಂಪರೆಗಳನ್ನು ಉಳಿಸುವ ಹಾಗೂ ಇಂದಿನ ಬದುಕನ್ನು ಅರ್ಥಪೂರ್ಣವಾಗಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಆದರೆ, ಆಧುನಿಕ ಯುಗದಲ್ಲಿ ಯಂತ್ರ – ಪಟ್ಟಭದ್ರ ವ್ಯವಸ್ಥೆಗಳು – ಭೀಮಾಕೃತಿಯ ವಾಣಿಜ್ಯೋದ್ಯಮಗಳು ಇವೇ ಮುಂತಾದುವು ಮೇಲೆ ಹೇಳಿದಂತಹ ಸುಸಂಸ್ಕೃತ ಅಲ್ಪಸಂಖ್ಯಾತ ವರ್ಗಕ್ಕೆ ಶತ್ರುಗಳಾಗಿ, ಆ ವರ್ಗದ ಉಳಿವೇ ಪ್ರಶ್ನಾರ್ಹವಾಗುತ್ತಿದೆ – ಎಂದು ಲೀವಿಸ್‌ ವಿಷಾದಿಸುತ್ತಾನೆ.

ಒಂದು ಜೀವಂತ ಸಮಾಜದಲ್ಲಿ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆಯೆಂದು ನಂಬುವ ಲೀವಿಸ್‌ ‘ಶ್ರೇಷ್ಠ ಸಾಹಿತ್ಯವೆಂದರೆ ಒಂದು ಸಮಾಜದ ಶ್ರೇಷ್ಠ ಮೌಲ್ಯಗಳ ಹಾಗೂ ಶ್ರೇಷ್ಠ ಪರಂಪರೆಗಳ ದಾಖಲೆ’ ಎಂಬ ಆರ್ನಲ್ಡ್‌ – ರಿಚಡ್ಸ್‌ ಮುಂತಾದವರ ‘ಸಂಸ್ಕೃತಿ – ವಾದ’ವನ್ನು ಮುಂದುವರಿಸುತ್ತಾನೆ . ಬದುಕಿನ ಇತರ ಕ್ಷೇತ್ರಗಳಲ್ಲಿ ಹೇಗೋ ಹಾಗೆ ಸಾಹಿತ್ಯದಲ್ಲಿಯೂ ಉತ್ತಮ ಹಾಗೂ ಕಠಿಣ ಮಾನದಂಡಗಳಿರಬೇಕೆಂದು ವಾದಿಸುವ ಲೀವಿಸ್‌ಸಾಹಿತ್ಯ ವಿಮರ್ಶೆಯಲ್ಲಿ ‘ತರ – ತಮ’ ವರ್ಗಗಳನ್ನಾಧರಿಸಿದ ‘ಮಹಾನ್‌ಪರಂಪರೆ’ಯನ್ನು ಸೃಷ್ಟಿಸುತ್ತಾನೆ. ಜನಪ್ರಿಯ ಸಾಹಿತ್ಯ – ಜನಪ್ರಿಯ ಸಂಗೀತ ಮುಂತಾದುವುಗಳನ್ನು ‘ಬಹು – ಉತ್ಪನ್ನ’ಗಳೆಂದು (massproductions) ಕಂಡು, ಅವುಗಳನ್ನು ಉಗ್ರವಾಗಿ ವಿರೋಧಿಸುತ್ತಾನೆ . ಈ ದಿಕ್ಕಿನಲ್ಲಿ ಇವನ ಪತ್ನಿ ಕ್ಯು.ಡಿ. ಲೀವಿಸ್‌ಅವರ “ಕಾದಂಬರಿ ಮತ್ತು ಓದುಗರು” ಎಂಬ ಸಂಶೋಧನಾ ಗ್ರಂಥ ಗಮನೀಯವಾದದ್ದು. ಮನರಂಜನೆಯೇ ಮುಖ್ಯ ಗುರಿಯಾಗಿರುವ ಜನಪ್ರಿಯ ಸಾಹಿತ್ಯ/ಸಂಗೀತ ಇವೆಲ್ಲವೂ ಶ್ರೇಷ್ಠ ಸಂಸ್ಕೃತಿಯ ಶತ್ರುಗಳೆಂಬುದು ಲೀವಿಸ್‌, ರಿಚರ್ಡ್ಸ್, ಎಲಿಯಟ್‌, ಮುಂತಾದ ಆಧುನಿಕತಾವಾದ ನಿಲುವು.

ಈ ನಿಲುವನ್ನು ವಿರೋಧಿಸುವ ವೈಚಾರಿಕತೆಯನ್ನು ‘ಆಧುನಿಕೋತ್ತರವಾದ’ ಎಂದು ಗುರುತಿಸಬಹುದು. ಇಲ್ಲಿ ‘ಉತ್ತರ’ ಶಬ್ದಕ್ಕೆ ಎರಡೂ ಅರ್ಥಗಳಲಿವೆ: ‘ನಂತರ’ ಮತ್ತು ‘ವಿರುದ್ಧ’. ಅರ್ಥಾತ್‌ಆಧುನಿಕತಾವಾದದ ನಂತರ ಬಂದ ಮತ್ತು ಅದನ್ನು ವಿರೋಧಿಸುವ ವೈಚಾರಿಕತೆ ‘ಆಧುನಿಕೋತ್ತರವಾದ’.

‘ಆಧುನಿಕೋತ್ತರವಾದ’ವೆಂಬ ಪರಿಕಲ್ಪನೆಯನ್ನು ಪ್ರಚಾರಕ್ಕೆ ತಂದ ಮೊದಲಿಗರಲ್ಲಿ ಒಬ್ಬನಾದ ಈಹಬ್‌ಹಸನ್‌ಸ್ವತಃಹ ಒಪ್ಪಿಕೊಳ್ಳುವಂತೆ ಅದೇನೂ ಅಷ್ಟು ಉಚಿತವಾದ ಪದಪ್ರಯೋಗವಲ್ಲ. ಆದರೆ, ನಾಟಕ, ನೃತ್ಯ, ಸಂಗೀತ ಹಾಗು ವಾಸ್ತುಶಿಲ್ಪ; ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ; ತತ್ವಶಾಸ್ತ್ರ, ಮನೋವಿಜ್ಞಾನ, ಮತ್ತು ಚಾರಿತ್ರಿಕ ಅಧ್ಯಯನ; ಸೈಬರ್ ತಂತ್ರಜ್ಞಾನ; ವಿಜ್ಞಾನ ಶಾಸ್ತ್ರಗಳು – ಇವೆಲ್ಲಾ ಕ್ಷೇತ್ರಗಳಲ್ಲಿಯೂ ಸದ್ಯ ಪ್ರಚಲಿತವಿರುವ ವೈಚಾರಿಕ ನಿಲುವುಗಳನ್ನು ಗುರುತಿಸಲು ಈ ಪದಪ್ರಯೋಗ ವ್ಯಾಪಕವಾಗಿ ಬಳಸಲ್ಪಡುತ್ತಿರುವುದರಿಂದ ಇದನ್ನು ತಿರಸ್ಕರಿಸಲೂ ಸಾಧ್ಯವಿಲ್ಲ. ‘ಆಧುನಿಕೋತ್ತರ ಚಿಂತನೆ’ ಎಂಬ ವ್ಯಾಪಕ ಛತ್ರಿಯಡಿಯಲ್ಲಿ, ಹಸನ್‌ವಿವರಿಸುವಂತೆ, ಈ ಕೆಳಗಿನ ಚಿಂತಕರು ಬರುತ್ತಾರೆ: ಡೆರಿಡಾ ಮತ್ತು ಲ್ಯೋಟರ್ಡ್ (ತತ್ವಶಾಸ್ತ್ರ); ಫುಕೋ ಮತ್ತು ಹೇಡನ್‌ವೈಟ್‌(ಇತಿಹಾಸ); ಮಾರ್ಕ್ಯೂಸ್‌ಮತ್ತು ಹೇಬರ್ ಮಸ್‌(ರಾಜ್ಯಶಾಸ್ತ್ರ); ರೋಲಾ ಬಾರ್ತ, ಜೂಲಿಯಾ ಕ್ರಿಸ್ಟೇವಾ, ವುಲ್ಫ್ ಗಾಂಗ್‌ಇಜರ್, ಮತ್ತು ‘ನಿರಚನವಾದಿಗಳು’ (ಸಾಹಿತ್ಯ ಮೀಮಾಂಸೆ); ಬೆಕೆಟ್‌, ಅಯನೆಸ್ಕೋ, ನಬೋಕೋವ್‌, ಪೈಂಟರ್, ಮಾರ್ಕ್ವೆಜ್‌(ಸಾಹಿತ್ಯ) ಇತ್ಯಾದಿ (ಪು. ೫ – ೬). ಭಾರತದ ಸಂದರ್ಭದಲ್ಲಿ ಪಾರ್ಥೋ ಚಟರ್ಜಿ ಮುಂತಾದ ಸಬಾಲ್‌ಟರ್ನ್ ಇತಿಹಾಸಕಾರರನ್ನು ಹೆಸರಿಸಬಹುದು.

ಆಧುನಿಕತಾವಾದಕ್ಕೆ ಪ್ರತಿಕ್ರಿಯೆಯಾಗಿ ಬಂದ ಆಧುನಿಕೋತ್ತರವಾದದ ವಿವರಗಳಿಗೆ ಪ್ರವೇಶಿಸುವ ಮುನ್ನ ಈಹಬ್‌ಹಸನ್‌ಕೊಡುವ ಈ ಎಚ್ಚರಿಕೆಯನ್ನು ಗಮನಿಸಬೇಕು: “ಆಧುನಿಕತಾವಾದ ಮತ್ತು ಆಧುನಿಕೋತ್ತರ ವಾದಗಳು ಯಾವುದೇ ಉಕ್ಕಿನ ಪರದೆಯಿಂಧ ಅಥವಾ ಚೀನಾ ಗೋಡೆಯಿಂದ ಪ್ರತ್ಯೇಕಿಸಲ್ಪಟ್ಟಿಲ್ಲ. ಏಕೆಂದರೆ, ಚರಿತ್ರೆಯೆಂಬುದು ಒಂದು ಪ್ಯಲಿಂಪ್ಸೆಸ್ಟ್‌ನಂತೆ, ಮತ್ತು ಸಂಸ್ಕೃತಿಯೆಮಬುದು ಭೂತ – ವರ್ತಮಾನ – ಭವಿಷ್ಯತ್ತುಗಳೆಲ್ಲವನ್ನೂ ಆವರಿಸಿಕೊಂಡಿರುತ್ತದೆ. ನಾವೆಲ್ಲರೂ ಏಕಕಾಲದಲ್ಲಿ ಸ್ವಲ್ಪ ಮಟ್ಟಿಗೆ ವಿಕ್ಟೋರಿಯನ್‌, ಆಧುನಿಕ ಮತ್ತು ಆಧುನಿಕೋತ್ತರರಾಗಿ ಇರುತ್ತೇವೆ ಎಂದು ನನಗೆ ಸಂಶಯ”(ಪು .೧೦).

ಸಾಹಿತ್ಯ ವಿಮರ್ಶೆ, ವಾಸ್ತುಶಿಲ್ಪ, ಮನೋವಿಜ್ಞಾನ, ಇವೇ ಮುಂತಾದ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಉಪಯೋಗಿಸಲ್ಪಡುವ ಆಧುನಿಕೋತ್ತರವಾದದ ಎಲ್ಲಾ ಅಂಶಗಳನ್ನೂ ಗುರುತಿಸುವುದು ಅಸಾಧ್ಯವೇ ಸರಿ . ಎದ್ದು ಕಾಣುವ ಈ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಪರಿಗಣಿಸಬಹುದು:

. ಮಹಾಕಥನಗಳನ್ನು ಕುರತಿ ಸಂಶಯ: (Distrust of the Grand Narratives): ಇದು ಲ್ಯೋಟರ್ಡ್ ಎಂಬ ಫ್ರೆಂಚ್‌ಚಿಂತಕನ ಪರಿಕಲ್ಪನೆ. ಆಧುನಿಕ ಮತ್ತು ಆಧುನಿಕತಾ ವಾದಿಗಳಿಬ್ಬರೂ ನಿಸ್ಸಂಕೋಚವಾಗಿ ವ್ಯಾಪಕ ವಿಷಯಗಳನ್ನು ಕುರಿತು ದುಂಡು ಹೇಳಿಕೆಗಳನ್ನು ನೀಡುತ್ತಿದ್ದರು; ಒಟ್ಟಾರೆಯಾಗಿ ಮಾನವ ಚಿರತ್ರೆಯ ಹಾಗೂ ಮಾನವ ವಿಕಾಸದ ಬಗ್ಗೆ , ರಾಷ್ಟ್ರದ ಪರಿಕಲ್ಪನೆಯನ್ನಾಧರಿಸಿ ರಾಷ್ಟ್ರೀಯ ಸಂಸ್ಕೃತಿ – ರಾಷ್ಟ್ರೀಯ ಧರ್ಮ – ರಾಷ್ಟ್ರೀಯ ಕಲೆ ಇವುಗಳ ಬಗ್ಗೆ, ಮಾನವರೆಲ್ಲರಿಗೂ ಅನ್ವಯವಾಗುವಂತಹ ಮೌಲ್ಯಗಳ ಬಗ್ಗೆ ವಿಶ್ಲೇಷಣೆ – ವ್ಯಾಖ್ಯಾನಗಳಲ್ಲಿ ತೊಡಗಿರುತ್ತಿದ್ದರು. ಇಂತಹ ವ್ಯಾಖ್ಯಾನಗಳನ್ನು ಆಧುನಿಕೋತ್ತರವಾದಿಗಳು ‘ಮಹಾಕಥನ’ಗಳೆಂದು ಕರೆಯುತ್ತಾರೆ. ಇಲ್ಲಿ ಮುಖ್ಯವಾಗುವುದು ಇಂತಹ ಮಹಾಕಥನಗಳ ಸತ್ಯಾಸತ್ಯತೆಗಳಲ್ಲ; ಅಂತಹ ದುಂಡು ಹೇಳಿಕೆಗಳು ಸಾಧ್ಯ ಹಾಗೂ ಸಮರ್ಥನೀಯ ಎಂಬ ನಿಲುವು; ಎಂದರೆ, ಈ ಜಗತ್ತನ್ನು ಅರ್ಥೈಸಬಲ್ಲೆ, ವಿಶ್ಲೇಷಿಸಬಲ್ಲೆ ಎಂಬ ವೈಚಾರಿಕ ಅಹಂ. ಇಡಿಯಾಗಿ ಈ ನಿಲುವನ್ನೇ ಆಧುನಿಕೋತ್ತರವಾದ ಪ್ರಶ್ನಿಸುತ್ತದೆ. ಈ ವಾದಕ್ಕೆ ಮಹಾಕಥನಗಳ ಬಗ್ಗೆ ಸಂಶಯವೇಕೆಂದರೆ, ತಮ್ಮ ಚೌಕಟ್ಟಿಗೆ ಒಪ್ಪದ ಅನೇಕ ಅಂಶಗಳನ್ನು ಮತ್ತು ವಿವರಗಳನ್ನು ಮಹಾಕಥನಗಳು ಮರೆಮಾಚುತ್ತವೆ. ಅಲ್ಲದೆ, ಸೃಷ್ಟಿಯ ಮುಂದೆ ಮಾನವನ ವೈಚಾರಿಕ ಶಕ್ತಿ ಸೀಮಿತ; ಎಂದೂ ಸಂಪೂರ್ಣವಾಗಿ ಈ ಸೃಷ್ಟಿರಹಸ್ಯವನ್ನು ಅವನು ತಾರ್ಕಿಕತೆಯ ಮೂಲಕ ಅರಿಯಲಾರ – ಎಂಬ ಕಾರಣಕ್ಕಾಗಿ. ಮಹಾಕಥನಗಳ ಬದಲಿಗೆ ಸ್ಥಳೀಯ – ಅಲ್ಪಕಾಲಿಕ – ಸೀಮಿತ ಕ್ಷೇತ್ರಗಳ/ಅಂಶಗಳ ಬಗ್ಗೆ ಆಧುನಿಕೋತ್ತರವಾದ ಲಕ್ಷ್ಯ ಕೊಡುತ್ತದೆ: ರಾಷ್ಟ್ರದ ಬದಲಿಗೆ ಪ್ರಾಂತ್ಯಗಳು, ಮಾನವ ಜನಾಂಗದ ಬದಲಿಗೆ ಬ್ರಿಟಿಷರು/ಫ್ರೆಂಚರು/ಭಾರತೀಯರು  (ಭಾರತೀಯರ ಜಾಗದಲ್ಲಿ ಕನ್ನಡಿಗರು, ತಮಿಳರು,…..), ವಿಶ್ವ ಸಾಹಿತ್ಯದ ಜಾಗದಲ್ಲಿ ಇಂಗ್ಲೀಷ್‌ಸಾಹಿತ್ಯ/ ಕನ್ನಡ ಸಾಹಿತ್ಯ… ಇವುಗಳ ಬಗ್ಗೆ ಚರ್ಚಿಸಲು ಆಧುನಿಕೋತ್ತರವಾದ ಇಚ್ಛಿಸುತ್ತದೆ.

. ವಿಜ್ಞಾನದ ಸರ್ವಜ್ಞತ್ವದ ಬಗ್ಗೆ ಸಂದೇಹ: (Distrust of positivixt science): ರಿನೇಸನ್ಸ್‌ಕಾಲದಿಂದ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಗೆಲಿಲಿಯೊ, ಬೇಕನ್‌, ನ್ಯೂಟನ್‌, ಡಾರ್ವಿನ್‌, ಫ್ರಾಯ್ಡ್‌ — ಇತ್ಯಾದಿ ವಿಜ್ಞಾನಿಗಳ ಅಸಾಧಾರಣ ಸಂಶೋಧನೆಗಳ ಕಾರಣದಿಂದ ‘ವಿಜ್ಞಾನದ ಅರಿವಿಗೆ ಹೊರತಾಗಿರುವುದು ಈ ವಿಶ್ವದಲ್ಲೇನೂ ಇಲ್ಲ; ವಿಶ್ವದ ಎಲ್ಲಾ ಸಮಸ್ಯೆಗಳಿಗೂ ವಿಜ್ಞಾನದಲ್ಲಿ ಸಮಾಧಾನಗಳಿವೆ, ಪರಿಹಾರಗಳಿವೆ’ ಎಂಬಂತಹ ವೈಚಾರಿಕ ನಿಲುವು ಬೇರೂರಿತು. ‘ಇದಮಿತ್ಥಂ’ ಎಂಬಂತಹ, ಎಲ್ಲದಕ್ಕೂ ಕಾರ್ಯ – ಕಾರಣ ಸಂಬಂಧವಿದೆ ಎಂದು ನಂಬುವ, ಮತ್ತು ಇಡೀ ವಿಶ್ವವನ್ನು ಬಿಡಿಸಲು ತೊಡಗಿರುವ ಒಂದು ಚಕ್ರಬಂಧ ಸಮಸ್ಯೆಯಂತೆ ಕಾಣುವ  ಈ ನಿಲುವನ್ನು ಆಧುನಿಕೋತ್ತರವಾದಿಗಳು (ಮತ್ತು ಆಧುನಿಕತಾ ವಾದಿಗಳು) ತಿರಸ್ಕರಿಸುತ್ತಾರೆ. ವಿಜ್ಞಾನವನ್ನು ಕುರಿತ ಇಂತಹ ನಿಲುವು ಹೃದಯಕ್ಕಿಂತ ಮಸ್ತಿಷ್ಕಕ್ಕೆ, ಭಾವನೆಗಳಿಗಿಂತ ತಾರ್ಕಿಕತೆಗೆ, ಅನುಭವಕ್ಕಿಮತ ವಿಶ್ಲೇಷಣೆಗೆ ಅಸಮರ್ಥನೀಯ ಒತ್ತು ಕೊಡುತ್ತದೆ ಎಂಬ ಕಾರಣಕ್ಕಾಗಿ  ಆಧುನಿಕೋತ್ತರವಾದಿಗಳು ಈ ನಿಲುವನ್ನು ಪ್ರಶ್ನಿಸುತ್ತಾರೆ.

. ಸರಳ ರೇಖಾತ್ಮಕ ಚಾರಿತ್ರಿಕ ಗತಿಯ ಬಗ್ಗೆ ಸಂದೇಹ🙁Distrust of linear Historiography): ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾನವಚರಿತ್ರೆಯ ಗತಿಯ ಬಗ್ಗೆ ೧೮ನೆಯ ಶತಮಾನದಿಂದ ಪ್ರಾರಂಭವಾದ ಒಂದು ದೃಢ ನಿಲುವಿತ್ತು. ಅದೆಂದರೆ, ನೇರವಾಗಿ ಹಾಗೂ ನಿಸ್ಸಂಶಯವಾಗಿ, ಮಾನವಚರಿತ್ರೆ ವಿಕಾಸಮುಖಿಯಾಗಿ ಚಲಿಸುತ್ತದೆ; ಮತ್ತು ಇಂತಹ ಚಲನೆ ಮುಂದೊಂದು ದಿನ ಮಾನವನ ಪರಿಪೂರ್ಣತೆಯಲ್ಲಿ ಕೊನೆಗೊಳ್ಳುತ್ತದೆ ಎಂಬ ನಂಬಿಕೆ. ಇತಿಹಾಸದ ಬಗ್ಗೆ ಇರುವ ಇಂತಹ ವಿಕಾಸವಾದೀ ನಿಲುವನ್ನು ಆಧುನಿಕೋತ್ತರವಾದ ಪ್ರಶ್ನಿಸುತ್ತದೆ. ಇತಿಹಾಸವೆಂಬುದಕ್ಕೆ ‘ಒಂದು’ ಗತಿಯಿಲ್ಲ. ‘ಒಂದು’ ನಿಶ್ಚಿತ ಪಥವ ಇಲ್ಲ ; ಅನೇಕ ಭಿನ್ನ — ಪರಸ್ಪರ ವಿರುದ್ಧವಾದ — ಪಥಗಳಲ್ಲಿ, ಭಿನ್ನ ಗತಿಗಳಲ್ಲಿ ಇತಿಹಾಸ ಚಲಿಸುತ್ತದೆ — ಎಂದು ಈ ವಾದ ಮಂಡಿಸುತ್ತದೆ. ಆದ್ದರಿಂದಲೇ, ಫೂಕೋನ ಒಂದು ಪ್ರಸಿದ್ಧ ಗ್ರಂಥದ ಹೆಸರು “ಇತಿಹಾಸದ ಪುರಾತತ್ವ ಶಾಸ್ತ್ರ”. ಇತಿಹಾಸದ ನಿಶ್ಚಿತ ಗತಿ ಮತ್ತು ನಿರಂತರತೆ ಇವೆರಡನ್ನೂ ಆಧುನಿಕೋತ್ತರವಾದ ಪ್ರಶ್ನಿಸುತ್ತದೆ.

. ‘ಗಂಭೀರಮತ್ತುಜನಪ್ರಿಯವರ್ಗೀಕರಣದ ವಿರೋಧ : ಸಾಹಿತ್ಯ ಮತ್ತು ಇತರ ಲಲಿತ ಕಲೆಗಳ ಕ್ಷೇತ್ರದಲ್ಲಿ ಆರ್ನಲ್ಡ್‌ – ಎಲಿಯಟ್‌ – ಲೀವಿಸ್‌ಮುಂತಾದವರು ಸೃಷ್ಟಿಸಿದ ಸಾಂಸ್ಕೃತಿಕ ವರ್ಗೀಕರಣವನ್ನೇ ಆಧುನಿಕೋತ್ತರವಾದ ತಿರಸ್ಕರಿಸುತ್ತದೆ. ಇಂತಹ ವರ್ಗೀಕರಣ ‘ಏಲೀಟಿಸ್ಟ್‌’, ಮತ್ತು ಇದರ ಆಳದಲ್ಲಿ ಮೂಲಭೂತವಾದೀ ನಿಲುವಿದೆ — ಎಂದು ಆಧುನಿಕೋತ್ತರವಾದಿಗಳು ವಾದಿಸುತ್ತಾರೆ.  ಪತ್ತೇದಾರೀ/ಸಾಹಸ – ಪ್ರಣಯ ಕಥೆ – ಕಾದಂಬರಿಗಳು, ಟಿ.ವಿ. ಧಾರಾವಾಹಿಗಳು, ಪಾಪ್‌ಸಂಗೀತ, ಚಲನಚಿತ್ರ – ಇತ್ಯಾದಿಗಳನ್ನು ಸಮಾಜದ ಬಹುಸಂಖ್ಯಾತರು ಮೆಚ್ಚಿದರೆ ಅದರಲ್ಲಿ ತಪ್ಪೇನು ? ಸಾಹಿತ್ಯ – ಸಂಗೀತ – ನೃತ್ಯ ಮುಂತಾದುವು ಕೆಲವೇ ಕೆಲವು ಜನರ ಸೊತ್ತೇಕೆ ಆಗಬೇಕು? – ಎಂದು ಇವರು ಪ್ರಶ್ನಿಸುತ್ತಾರೆ (ಡಾಕರ್ ಪು. ೧೪೬ – ೧೬೮; ರೇಮಂಡ್‌ವಿಲಿಯಮ್ಸ್‌, ೧೯೫೮, ಇತ್ಯಾದಿ).

ಈ ಪ್ರಶ್ನೆಗಳನ್ನೇ ಮುಂದುವರಿಸುತ್ತಾ, ರೇಮಂಡ್‌ವಿಲಿಯಮ್ಸ್‌ಆರ್ನಾಲ್ಡ್‌ – ಲೀವಿಸ್‌ಮುಂತಾದವರ ‘ಸಂಸ್ಕೃತಿ – ಕಲ್ಪನೆ’ಯನ್ನೇ ಪ್ರಶ್ನಿಸುತ್ತಾನೆ.  ಇವರು ನೀಡುವ ಸಂಸ್ಕೃತಿಯ ವ್ಯಾಖ್ಯಾನ ಕೇವಲ ಅಕ್ಷರಜ್ಞಾನವನ್ನಾಧರಿಸಿದೆ; ಅಕ್ಷರಜ್ಞಾನದಿಂದ ವಂಚಿತರಾದ ಕೂಲಿಕಾರರು, ಕೃಷಿ ಕಾರ್ಮಿಕರು,  ಅಶಿಕ್ಷಿತ ಸ್ತ್ರೀಯರು ಇವರುಗಳಿಗೂ ತಮ್ಮದೇ ಆದ ಸಂಸ್ಕೃತಿ ಇದೆ, ಮತ್ತು ಇವೆರಡು ಸಂಸ್ಕೃತಿಗಳು ಸಮಾನ ಗೌರವಕ್ಕೆ ಪಾತ್ರ’ ಎಂದು ವಿಲಿಯಮ್ಸ್‌ವಾದಿಸುತ್ತಾನೆ. (೧೯೫೮) .

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಮದ ಬದಲಿಗೆ ಗೊಂದಲ, ನಿಶ್ಚಿತ – ಏಕಾರ್ಥದ ಬದಲು ಅರ್ಥ – ಅನಿಶ್ಚಯತೆ, ಕೇಂದ್ರಾಧಾರಿತ ವ್ಯವಸ್ಥೆಗೆ ಬದಲಾಗಿ ವಿಕೇಂದ್ರೀಕೃತ ಒಡಂಬಡಿಕೆ, ಏಕಮತದ ಬದಲಿಗೆ ಭಿನ್ನಮತಕ್ಕೆ ಮಾನ್ಯತೆ, ಸಮಾನತೆಗೆ ಬದಲು ವೈವಿಧ್ಯ, ನಂಬಿಕೆಯ ಜಾಗದಲ್ಲಿ ಸಂದೇಹ – ಇತ್ಯಾದಿ ಆಧುನಿಕೋತ್ತರವಾದದ ಮುಖ್ಯ ಲಕ್ಷಣಗಳು. ಈ ವಾದ ಎಲ್ಲಾ ರೂಢಿಗತ ವ್ಯವಸ್ಥೆಗಳನ್ನೂ, ನಂಬಿಕೆಗಳನ್ನೂ, ಮೌಲ್ಯಗಳನ್ನೂ ಪ್ರಶ್ನಿಸುತ್ತದೆ; ಆದರೆ, ಅವುಗಳ ಜಾಗದಲ್ಲಿ ಯಾವುದೇ ವಿಧದ ಪ್ರತಿ ವ್ಯವಸ್ಥೆಗಳನ್ನಾಗಲೀ, ಮೌಲ್ಯಗಳನ್ನಾಗಲೀ ಸ್ಥಾಪಿಸಲು ಪ್ರಯತ್ನಿಸುವುದಿಲ್ಲ.

. ರಚನೆ, ರಾಚನಿಕ ವಾದ, ಮತ್ತು ರಾಚನಿಕೋತ್ತರ ವಾದ: (Structure, Structuralism, Post – structuralism):

ಈ ಶತಮಾನದ ಆದಿಯಲ್ಲಿ ಬಂದ ಪ್ರಸಿದ್ಧ ಸ್ವಿಸ್‌ ಭಾಷಾಶಾಸ್ತ್ರಜ್ಞ (ಬರೆದದ್ದು ಫ್ರೆಂಚ್‌ ಭಾಷೆಯಲ್ಲಿ) ಫರ್ಡಿನಂಡ್‌ ದ ಸೋಸ್ಯೋನ ಭಾಷೆಯನ್ನು ಕುರಿತ ವಿಚಾರಗಳಿಂದ/ ಪರಿಕಲ್ಪನೆಗಳಿಂದ ಪ್ರಭಾವಿತವಾದ ವೈಚಾರಿಕತೆಯನ್ನು ರಾಚನಿಕವಾದವೆಂದು ಗುರುತಿಸಬಹುದು. ಭಾಷೆಗಳ ಅಧ್ಯಯನದ ಸ್ವರೂಪವನ್ನೇ ಬದಲಾಯಿಸಿದ ಸೋಸ್ಕೋ ಚಾರಿತ್ರಿಕ ಅಧ್ಯಯನದ ಜಾಗದಲ್ಲಿ ಸದ್ಯಸ್ಥಿತಿ ಅಧ್ಯಯನಕ್ಕೆ, ಭಾಷೆಯ ಮೂರ್ತರೂಪದ ಜಾಗದಲ್ಲಿ ಅಮೂರ್ತ ವ್ಯವಸ್ಥೆಯ ಅಧ್ಯಯನಕ್ಕೆ, ಮತ್ತು ಭಾಷೆಯ ಅನುಕ್ರಮಾತ್ಮಕ ಹಾಗೂ ಸಾಹಚರ್ಯಾತ್ಮಕ ಸಂಬಂಧಗಳ ಬಗ್ಗೆ ಒತ್ತು ಕೊಟ್ಟು, ಭಾಷಾ ವಿಜ್ಞಾನದಲ್ಲಿ ಒಂದು ಮಹತ್ವದ ತಿರುವಿಗೆ – ‘ಮಾದರಿ ಬದಲಾವಣೆ’ಗೆ (paradigm shift) ಕಾರಣನಾದನು.

ರಚನೆಯೆಂದರೆ ಪರಿಪೂರ್ಣತೆ, ಪರಿವರ್ತನಶೀಲತೆ, ಮತ್ತು ಸ್ವಯಂನಿಯಮನ ಸಾಮರ್ಥ್ಯ – ಈ ಮೂರು ಗುಣಗಳನ್ನು ಹೊಂದಿರುವ ಒಂದು ವ್ಯವಸ್ಥೆ. ಪರಿಪೂರ್ಣತೆಯೆಂದರೆ ಯಾವುದೇ ಒಂದು ವ್ಯವಸ್ಥೆಯಲ್ಲಿ ಕಂಡುಬರುವ ಆಂತರಿಕ ಸಾಂಗತ್ಯ. ಒಂದು ವ್ಯವಸ್ಥೆಯಲ್ಲಿ, ಸದಾ, ಕೆಲ ಹೊಸ ಘಟಕಗಳು ಸೇರುತ್ತಿರುತ್ತವೆ; ಹಳೆಯ ಕೆಲ ಘಟಕಗಳು ಮರೆಯಾಗುತ್ತಿರುತ್ತವೆ; ಮತ್ತು  ಈ ಘಟಕಗಳ ಪರಸ್ಪರ ಸಂಬಂಧ ಬದಲಾಯಿಸುತ್ತಿರುತ್ತದೆ. ಈ ಗುಣವೇ ಪರಿವರ್ತನಶೀಲತೆ. ಸ್ವಯಂನಿಯಮನ ಸಾಮರ್ಥ್ಯವೆಂದರೆ, ಒಂದು ವ್ಯವಸ್ಥೆ ತನ್ನ ಸ್ವರೂಪವನ್ನು ಮತ್ತು ಪರಿವರ್ತನೆಗಳನ್ನು ಸಮರ್ಥಿಸಲು ತನ್ನಿಂದ ಹೊರಗಿನ ಯಾವುದೇ ತತ್ವಕ್ಕೆ ಕಟ್ಟು ಬೀಳದೆ ಸ್ವಯಂ ಮಾನ್ಯವಾಗಿರುತ್ತದೆ; ಮತ್ತು ತನ್ನ ನಿಯಮಗಳನ್ನು ತಾನೇ ರೂಪಿಸಿಕೊಳ್ಳುತ್ತದೆ.

ಹೀಗೆ ವ್ಯಾಖ್ಯಾನಿಸಲ್ಪಟ್ಟ ರಚನೆ ಭಾಷೆಯೂ ಸೇರಿದಂತೆ ಯಾವುದೊಂದು ಸಂಸ್ಥೆ – ಸಂಗತಿ – ಆಚರಣೆ – ಪುರಾಣಗಳಲ್ಲಿಯೂ ಅಮೂರ್ತ ಸ್ವರೂಪದಲ್ಲಿರುತ್ತದೆ. ಒಂದು ಸಂಸ್ಥೆಯ/ಸಂಗತಿಯ/ಆಚರಣೆಯ ವಿಶ್ಲೇಷಣೆಯೆಂದರೆ ಅದರ ಅಮೂರ್ತ ರೂಪದ ಸಂಹಿತೆಯ ವಿಶ್ಲೇಷಣೆ. ಈ ಜಗತ್ತಿನಲ್ಲಿ ಬಿಡಿಬಿಡಿಯಾಗಿ ತೋರುವ ಮೂರ್ತವಸ್ತುಗಳ ಆಳದಲ್ಲಿ ಅವುಗಳನ್ನು ನಿಯಂತ್ರಿಸುವ ಮತ್ತು ಅವುಗಳಿಗೆ ಅರ್ಥವನ್ನು ಕೊಡುವ ಒಂದು ಅಮೂರ್ತ ಸಂಹಿತೆ ಅಥವಾ ರಚನೆ ಇರುತ್ತದೆ; ಎಲ್ಲಾ ಬಿಡಿ ವಸ್ತುಗಳೂ ದ್ರವ್ಯರಾಶಿಗಳೂ ಆ ರಚನೆಯ ಅವಿಭಾಜ್ಯ ಘಟಕಗಳ ಮೂರ್ತ ರೂಪಗಳು. ಆದ್ದರಿಂದ, ಇಂತಹ ಅಮೂರ್ತ ಘಟಕಗಳ, ಅವುಗಳ ಪರಸ್ಪರ ಸಂಬಂಧಗಳ, ಮತ್ತು ಒಟ್ಟಾರೆಯಾಗಿ ಆ ಘಟಕಗಳು ರೂಪಿಸುವ ಅರ್ಥದ ವಿಶ್ಲೇಷಣೆ ಮತ್ತು ಅಧ್ಯಯನಗಳು ರಾಚನಿಕ ಚಿಂತಕರ ಗುರಿ, ಸೋಸ್ಕೋ, ಬ್ಲೂಮ್‌ಫೀಲ್ಡ್‌, ಹಾಕೆಟ್‌ (ಭಾಷಾವಿಜ್ಞಾನ); ವ್ಲಾಡಿಮೀರ್ ಪ್ರಾಪ್‌, ಜೆರಾರ್ಡ್ ಜೆನೆಟ್‌, ಎ. ಜೆ. ಗ್ರೇಮಾಸ್‌ (ಕಥನ ಶಾಸ್ತ್ರ); ಕ್ಲಾಡ್‌ ಲೆವಿಸ್ಟ್ರಾಸ್‌ (ಸಮಾಜ ಶಾಸ್ತ್ರ) – ಇವರುಗಳನ್ನು ಪ್ರಮುಖ ರಾಚನಿಕವಾದಿಗಳೆಂದು ಗುರುತಿಸಬಹುದು. ರೋಲಾ ಬಾರ್ತ್ ಮತ್ತು ಜೋನಥನ್‌ ಕಲರ್ ಪ್ರಾರಂಭದಲ್ಲಿ ರಾಚನಿಕವಾದಿಗಳಾಗಿದ್ದರೂ ಅನಂತರ ಅವರು ಅನುಕ್ರಮವಾಗಿ ರಾಚನಿಕೋತ್ತರವಾದ ಮತ್ತು ವಾಚಕಸ್ಪಂದನ ಸಿದ್ಧಾಂತಗಳನ್ನು ಅವಲಂಬಿಸಿದರು.

ಒಟ್ಟಾರೆಯಾಗಿ ಹೇಳಬೇಕಾದರೆ, ರಾಚನಿಕವಾದ ಒಂದು ಕೇಂದ್ರವನ್ನು ಮಾನ್ಯಮಾಡುವ, ‘ಕೇಂದ್ರಾಧಾರಿತ’ ಚಿಂತನೆ. ಒಂದು ಕಡೆ ಬಿಡಿ ವಸ್ತುಗಳ/ಸಂಗತಿಗಳ/ಸಾಹಿತ್ಯ ಕೃತಿಗಳ ವೈಶಿಷ್ಟ್ಯವನ್ನು ನಿರಾಕರಿಸುವ ರಾಚನಿಕವಾದಿಗಳು ಮತ್ತೊಂದು ಕಡೆ ಅವುಗಳ ವಿಶಿಷ್ಟ ಚಾರಿತ್ರಿಕ ಸಂದರ್ಭಗಳನ್ನೂ ಅಲಕ್ಷಿಸುತ್ತಾರೆ. ಅವರ ಏಕಮಾತ್ರ ಗುರಿಯೆಂದರೆ ಸಂಗತಿಗಳ/ಕೃತಿಗಳ ಆಳದಲ್ಲಿರುವ ಸಾಮೂಹಿಕ ಅಮೂರ್ತ ರಚನೆಗಳು ಮತ್ತು ಅವುಗಳ ವಿಶ್ಲೇಷಣೆ.

ರಾಚನಿಕೋತ್ತರವಾದ ಇಂತಹ ಕೇಂದ್ರಾಧಾರಿತ ಚಿಂತನೆಯನ್ನು ಪ್ರಶ್ನಿಸುತ್ತದೆ ಮತ್ತು ತಿರಸ್ಕರಿಸುತ್ತದೆ. (ಇಲ್ಲಿಯೂ ‘ಉತ್ತರ’ ಶಬ್ದಕ್ಕೆ ‘ನಂತರ’ ಮತ್ತು ‘ವಿರುದ್ಧ’ ಎಂಬ ಎರಡೂ ಅರ್ಥಗಳಿವೆ.) ಆಧುನಿಕೋತ್ತರ ಮತ್ತು ರಾಚನಿಕೋತ್ತರ ವಾದಗಳಲ್ಲಿ ಅನೇಕ ಸಮಾನ ಅಂಶಗಳಿವೆ; ಮತ್ತು  ‘ರಾಚನಿಕೋತ್ತರವಾದ’ ಎಂಬುದು ಒಂದು ವ್ಯಾಪಕ ವರ್ಗ. ಈ ವರ್ಗದಲ್ಲಿ ನಿರಚನ ಚಿಂತನೆ, ವಾಚಕಸ್ಪಂದನ ಸಿದ್ಧಾಂತಗಳು, ಸ್ತ್ರೀನಿಷ್ಠ ಚಿಂತನೆ, ಸಂಜ್ಞಾಶಾಸ್ತ್ರ, ಇತ್ಯಾದಿ ಅನೇಕ ಪ್ರಸ್ಥಾನಗಳು ಮತ್ತು ವಾದಗಳು ಬರುತ್ತವೆ. ಡೆರಿಡಾ, ಫುಕೋ, ಲಖಾನ್‌, ಬಾರ್ತ್, ಗಾಯತ್ರಿ ಸ್ಪವಕ್‌, ವುಲ್ಫ್‌ಗಾಂಗ್‌ ಇಜರ್, ಇತ್ಯಾದಿ ಅನೇಕ ಪ್ರಮುಖ ಚಿಂತಕರು ಬರುತ್ತಾರೆ.

ರಾಚನಿಕೋತ್ತರ ವಾದಗಳ ಅತಿ ಮುಖ್ಯ ಅಂಶವೆಂದರೆ ಡೆರಿಡಾ ಮಂಡಿಸಿದ ‘ಅವಕೇಂದ್ರೀಕರಣ’ದ (Decentering) ಪರಿಕಲ್ಪನೆ. ಡೆರಿಡಾ ಮತ್ತು ಇತರ ನಿರಚನವಾದಿಗಳ ಪ್ರಕಾರ ‘ರಚನೆ’ ಎಂಬ ಪರಿಕಲ್ಪನೆಯೇ ಒಂದು ಭ್ರಮೆ. ಸ್ವಯಂಪೂರ್ಣ, ಸ್ವಯಂಸಿದ್ಧ ಹಾಗೂ ಸಂಯೋಜಿತವೆಂದು ಕಾಣುವ ರಚನೆಗಳ ಆಳದಲ್ಲಿಯೇ ಪರಸ್ಪರ ವಿರೋಧೀ ಅಂಶಗಳಿರುತ್ತವೆ. ಮುಖ್ಯವಾಗಿ, ಎಲ್ಲಾ ಮಾನವ ಕೃತ್ಯಗಳಲ್ಲಿ/ಸಂಗತಿಗಳಲ್ಲಿ/ ಸೃಷ್ಟಿಯಲ್ಲಿ ಅವುಗಳನ್ನು ನಿಯಂತ್ರಿಸುವ ಮತ್ತು ಅವುಗಳಿಗೆ ಅರ್ಥವನ್ನು ಕೊಡುವ ಒಂದು ‘ಕೇಂಧ್ರ’ (ದೇವರು, ಸತ್ಯ, ಸತ್ವ, ಚೇತನ, ಇತ್ಯಾದಿ) ಇರುತ್ತದೆಯೆಂಬುದು ಒಂದು ಸತ್ಯದೂರ ಕಲ್ಪನೆ, ಅಷ್ಟೇ (ಡೆರಿಡಾ, ೧೯೬೬). ಯಾವುದೇ ಒಂದು ಸಂಗತಿಯಲ್ಲಿಯೂ ಕೇಂದ್ರವೆಂಬುದು ಸಾಪೇಕ್ಷ ಮತ್ತು ಅಸ್ಥಿರ. ಇನ್ನೂ ಮುಂದುವರಿದು ಅವರುಗಳು ಹೇಳುವುದೇನೆಂದರೆ, ಕೇಂದ್ರಾಧಾರಿತ ಚಿಂತನೆಯನ್ನಾಧರಿಸಿದ ಶ್ರೇಣೀಕೃತ ದ್ವಂದ್ವಗಳೂ ಕೃತಕ ಮತ್ತು ಅಸ್ಥಿರ. ವಾಕ್‌ಲೇಖನ, ಪುರುಷ – ಸ್ತ್ರೀ, ಪುಣ್ಯ – ಪಾಪ, ಲಿಖಿತ – ಮೌಖಿಕ ಇವೇ ಮುಂತಾದ ಎಲ್ಲಾ ಶ್ರೇಣಿಗಳನ್ನೂ ನಾವು ಮುರಿಯಬಹುದು. ಹಾಗೆಯೆ ಕೇಂದ್ರಾಧಾರಿತ ಚಿಂತನೆಯ ಪ್ರಮುಖ ಗುಣವಾದ ‘ಅರ್ಥ’ವೆಂಬುದೂ ಅಸ್ಥಿರ. ಯಾವ ಸಂಗತಿಗೂ/ವ್ಯವಸ್ಥೆಗೂ/ಕೃತಿಗೂ ‘ಸರಿಯಾದ’ ‘ಒಂದು’ಅರ್ಥವಿಲ್ಲ. ಅಂತಿಮ ‘ಸತ್ಯ’ವನ್ನು ಕೊಡುವ ಸೂಚಕವೂ ಇಲ್ಲ, ಸೂಚಿತವೂ ಇಲ್ಲ; ಇರುವುದು ಕೇವಲ ಸೂಚನಾಪ್ರಕ್ರಿಯೆಯ ಅನಂತ ಲಾಸ್ಯ.

ರಾಚನಿಕೋತ್ತರವಾದದ ಇತರ ಸಮಾನ ಅಂಶಗಳೆಲ್ಲವನ್ನೂ ‘ಅವಕೇಂದ್ರೀಕರಣ’ ಪರಿಕಲ್ಪನೆಯ ಅನುಸಿದ್ಧಾಂತಗಳೆಂದು ಪರಿಗಣಿಸಬಹುದು. ಸಂಕ್ಷಿಪ್ತವಾಗಿ ಹೇಳಬೇಕಾದರೆ, ರಾಚನಿಕೋತ್ತರವಾದಗಳು ರಾಜಕೀಯ – ಸಾಂಸ್ಕೃತಿಕ – ಸಾಹಿತ್ಯಿಕ ವ್ಯವಸ್ಥೆಗಳಲ್ಲಿ ಒಂದು ಪ್ರಬಲ ಕೇಂದ್ರದ ಅಸ್ತಿತ್ವವನ್ನು ಮತ್ತು ಅದರ ಅನಿವಾರ್ಯತೆಯನ್ನು ನಿರಾಕರಿಸಿ, ಅದಕ್ಕೆ ಪ್ರತಿಯಾಗಿ ಅನೇಕ ಸ್ವಾಯತ್ತ ಕೇಂದ್ರಗಳನ್ನು ಪುರಸ್ಕರಿಸುತ್ತವೆ. (ರಾಷ್ಟ್ರೀಯ ವ್ಯವಸ್ಥೆಯ ಬದಲಾಗಿ ಸಂಪೂರ್ಣ ವಿಕೇಂದ್ರೀಕರಣ, ಪರ್ಯಾಯ ಸಂಸ್ಕೃತಿಗಳ ಮಾನ್ಯತೆ, ಬಹ್ವರ್ಥ ಸಾಧ್ಯತೆ, ಇತ್ಯಾದಿ.)

ಎರಡನೆಯದಾಗಿ, ಭಿನ್ನತೆಗಳಿಗೆ ತರ – ತಮ ಮೌಲ್ಯಗಳನ್ನಾರೋಪಿಸಿ, ಅವುಗಳ ಆಧಾರದ ಮೇಲೆ ಕಟ್ಟಲ್ಪಟ್ಟಿರುವ  ಶ್ರೇಣೀಕೃತ ವ್ಯವಸ್ಥೆಗಳನ್ನು ತಿರಸ್ಕರಿಸಿ, ಭಿನ್ನತೆಗಳನ್ನು ಅವುಗಳಿರುವಂತೆಯೆ ರಾಚನಿಕೋತ್ತರ ಚಿಂತನೆ ಒಪ್ಪಿಕೊಳ್ಳುತ್ತದೆ ಮತ್ತು ಮಾನ್ಯಮಾಡುತ್ತದೆ. (ಪುರುಷ – ಸ್ತ್ರೀ, ಶ್ವೇತ – ಅಶ್ವೇತ, ಲಿಖಿತ – ಅಲಿಖಿತ ಇತ್ಯಾದಿ ಶ್ರೇಣಿಗಳಲ್ಲಿ ಪ್ರಥಮ ಘಟಕಕ್ಕೆ ಕೊಡಲ್ಪಟ್ಟಿರುವ ಪುರಸ್ಕಾರವನ್ನು ನಿರಾಕರಿಸಿ, ಇಂತಹ ಶ್ರೇಣೀಕೃತ ವ್ಯವಸ್ಥೆಯನ್ನೇ ವಿರೋಧಿಸುವುದು.)

ಕೊನೆಯದಾಗಿ, ಒಂದು ವ್ಯವಸ್ಥೆಯ ಪರಿಧಿಯಲ್ಲಿರುವುದನ್ನು/ಇರುವವರನ್ನು ಪ್ರಧಾನವಾಗಿ ಕಂಡು, ಅವರ ವೈಶಿಷ್ಟ್ಯವನ್ನು ಮತ್ತು ವ್ಯವಸ್ಥೆಯಲ್ಲಿ ಅವರ ಮಹತ್ವವನ್ನು ಗುರುತಿಸಲು ರಾಚನಿಕೋತ್ತರ ಚಿಂತನೆ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತದೆ. (ಮತೀಯ – ಧಾರ್ಮಿಕ – ಭಾಷಿಕ ಅಲ್ಪಸಂಖ್ಯಾತರು, ಬುಡಕಟ್ಟು – ಶೋಷಿತ ಜನಾಂಗಗಳು, ಮುಂತಾದವರ ಬಗ್ಗೆ ಕಾಳಜಿ; ಅಲಿಖಿತ ಸಂಪ್ರದಾಯದ ಜಾನಪದ ಸಾಹಿತ್ಯ, ‘ಜನಪ್ರಿಯ’ ಸಾಹಿತ್ಯ, ಮತ್ತು ಮಹಿಳಾ ಸಾಹಿತ್ಯ ಮುಂತಾದವುಗಳ ಗಂಭೀರ ಪರಿಗಣನೆ, ಇತ್ಯಾದಿ.)

ಹಿಂದೆಯೇ ಸೂಚಿಸಿರುವಂತೆ, ಆಧುನಿಕೋತ್ತರ ಮತ್ತು ರಾಚನಿಕೋತ್ತರ ವಾದಗಳಲ್ಲಿ ಅನೇಕ ಸಮಾನ ಅಂಶಗಳಿವೆ: ಇವೆರಡೂ ಭಿನ್ನತೆಗಳಿಗೆ, ಪರಸ್ಪರ ವೈರುಧ್ಯಗಳಿಗೆ, ಮತ್ತು ಬಹ್ವರ್ತ ಸಾಧ್ಯತೆಗಳಿಗೆ ವಿಶೇಷವಾಗಿ ಒತ್ತು ಕೊಡುತ್ತವೆ. ಆದರೆ ಕೆಲ ನೆಲೆಗಳಲ್ಲಿ ಭಿನ್ನವಾಗಿಯೂ ಇವೆ. ರಾಚನಿಕೋತ್ತರವಾದ ಮುಖ್ಯವಾಗಿ ಯೂರೋಪ್‌ – ಕೇಂದ್ರಿತವಾಗಿದ್ದರೆ, ಆಧುನಿಕೋತ್ತರವಾದದ ಕೇಂದ್ರ ಅಮೇರಿಕ. ಜನಪ್ರಿಯ ಹಾಗೂ ಜನಸಾಮಾನ್ಯರ ಕಲೆ – ಸಾಂಸ್ಕೃತಿಗಳ ಬಗ್ಗೆ ರಾಚನಿಕೋತ್ತರ ವಾದಗಳಿಗೆ ತಿರಸ್ಕಾರವಿದ್ದರೆ, ಆಧುನಿಕೋತ್ತರ ವಾದ ಗಂಭೀರ ಮತ್ತು ಜನಪ್ರಿಯ ಎಂಬ ವರ್ಗೀಕರಣವನ್ನೇ ನಿರಾಕರಿಸಿ, ಬ್ಯ್ರಾಂಡ್‌ಪ್ರಣಯ ಕಥನಗಳು, ಜಾಜ್‌ಮತ್ತು ಪಾಪ್‌ಸಂಗೀತ, ಟಿ.ವಿ. ಧಾರಾವಾಹಿಗಳು, ಇತ್ಯಾದಿ ಜನಪ್ರಿಯ ಮಾಧ್ಯಮಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತದೆ.

. ವಸಾಹತೋತ್ತರ ಚಿಂತನೆ: (Post – Colonialism): ಕೆಲ ವಿಮರ್ಶಕರು ವಸಾಹತೋತ್ತರ ಚಿಂತನೆಯನ್ನು ರಾಚನಿಕೋತ್ತರ ಚಿಂತನೆಯ ಒಂದು ಕವಲೆಂದೇ ಪರಿಗಣಿಸುತ್ತಾರೆ. ಆದರೆ, ವಸಾಹತೋತ್ತರ ಚಿಂತನೆಗೆ ತನ್ನದೇ ಆದ ಒಂದು ವಿಶಿಷ್ಟ ಚೌಕಟ್ಟಿದೆ: ವಸಾಹತುಶಾಹಿ ಚೌಕಟ್ಟು, ಈ ಚಿಂತನೆ ಸಂಪೂರ್ಣವಾಗಿ ವಸಾಹತುಶಾಹಿ ಮತ್ತು ವಸಾಹತೋತ್ತರ ‘ರೂಪಣೆ (Representations) ಗಳೊಡನೆ ಮಾತ್ರ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಎರಡನೆಯದಾಗಿ, ಎಲ್ಲಾ ವಿಧದ ಮಾನವ ಕಾರ್ಯಗಳು/ಚಿಂತನೆಗಳೂ ‘ರಾಜಕೀಯ’ ಸ್ವರೂಪವದ್ದೇ ಆಗಿದ್ದರೂ, ಆಧುನಿಕೋತ್ತರ ಮತ್ತು ರಾಚನಿಕೋತ್ತರ ವಾದಗಳಿಗಿಂತ ನೇರವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ವಸಾಹತೋತ್ತರ ಚಿಂತನೆ ರಾಜಕೀಯ ಗುರಿಯನ್ನು ಹೊಂದಿದೆ. ಹೆಲನ್‌ಗಿಲ್‌ಬರ್ಟ್ ಮತ್ತು ಜೆ. ಟಾಮ್‌ಕಿನ್ಸ್‌ಹೇಳುವಂತೆ, ‘ನಾನು ಮತ್ತು ಅವರು’, ‘ಪ್ರಥಮ ಜಗತ್ತು ಮತ್ತು ತೃತೀಯ ಜಗತ್ತು’, ‘ಶ್ವೇತ ಮತ್ತು ಅಶ್ವೇತ’, ‘ವಸಾಹತುಶಾಹಿ ಮತ್ತು ವಸಾಹತೀಕರಣಕ್ಕೊಳಪಟ್ಟವರು’ ಇತ್ಯಾದಿ ಅಸಮಾನ ಅಧಿಕಾರವನ್ನಾಧರಿಸಿದ ದ್ವಂದ್ವಗಳನ್ನು ಸೃಷ್ಟಿಸುವ ಯಾಜಮಾನ್ಯದ ಎಲ್ಲೆಗಳನ್ನು  ಮತ್ತು ಶಕ್ತಿ ಕೇಂದ್ರಗಳನ್ನು ಇಲ್ಲವಾಗಿಸುವುದು ವಸಾಹತೋತ್ತರ ಚಿಂತನೆಯ ಪ್ರಮುಖ ರಾಜಕೀಯ ಅಜೆಮಡಾ’ (೧೯೯೬:೩).

ಒಂದು ವಿಶಿಷ್ಟ ಕಾಲಘಟ್ಟದಲ್ಲಿ, ಎಂದರೆ ಹದಿನಾರನೆಯ ಶತಮಾನದಲ್ಲಿ ಪ್ರಾರಂಭವಾಗಿ ಈ ಶತಮಾನದ ಆರು ದಶಕಗಳ ಪರ್ಯಂತ ವ್ಯಾಪಿಸಿದ್ದ ವಸಾಹತುಶಾಹಿಯ ಚೌಕಟ್ಟು ವಸಾಹತೋತ್ತರ ಚಿಂತನೆಗಿದ್ದರೂ, ಆ ಚೌಕಟ್ಟನ್ನು ಮೀರಿ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯಲು ವಸಾಹತೋತ್ತರ ಚಿಂತನೆ ಪ್ರಯತ್ನಿಸುತ್ತದೆ. “ನಿರ್ವಸಾಹತೀಕರಣವೆಂದೆರೆ ಅದೊಂದು ಪ್ರಕ್ರಿಯೆ; ನಿರ್ದಿಷ್ಟ ಗುರಿಯನ್ನು ತಲುಪುವುದಲ್ಲ,” ಎಂದು ಹೆಲೆನ್‌ಟಿಫಿನ್‌ಸ್ಪಷ್ಟಪಡಿಸುತ್ತಾಳೆ (೧೯೮೭ಮ ೫೦ – ೬೫). ವಸಾಹತೋತ್ತರ ಚಿಂತನೆ “ರಾಜಕೀಯ ಕಾಳಜಿಗಳಿಂದ ಪ್ರೇರಿತವಾದ ಚಾರಿತ್ರಿಕ – ವಿಶ್ಲೇಷಣಾತ್ಮಕ ಚಳುವಳಿ. ಈ ಚಳುವಳಿ ಭೌತಿಕ, ಚಾರಿತ್ರಿಕ, ರಾಜಕೀಯ, ಸಾಂಸ್ಕೃತಿಕ, ವೈಚಾರಿಕ, ಮತ್ತು ಗ್ರಾಂಥಿಕ ಕ್ಷೇತ್ರಗಳಲ್ಲಿ ವಸಾಹತುಶಾಹಿಯ ಪರಿಣಾಮಗಳೊಡನೆ ತನ್ನನ್ನು ತೊಡಗಿಸಿಕೊಳ್ಳುತ್ತದೆ; ಮತ್ತು ಆ ಪರಿಣಾಮಗಳನ್ನು ವಿರೋಧಿಸುತ್ತಾ ಅವುಗಳನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತದೆ” (ಹೆಲನ್‌ಗಿಲ್‌ಬರ್ಟ್, ಪು.೨). ಎಂದರೆ, ಇದೊಂದು ಯಾವಾಗಲೂ ನಡೆಯಲ್ಪಡುವ ಮತ್ತು ನಡೆಯಬೇಕಾದ ರಾಜಕೀಯ – ಸಾಂಸ್ಕೃತಿಕ ಪ್ರಕ್ರಿಯೆ.

ಹೆಲೆನ್‌ಗಿಲ್ಪರ್ಟ್ ಮತ್ತು ಜೋ ಆನ್‌ಟಾಮ್‌ಕಿನ್ಸ್‌ವಸಾಹತೋತ್ತರ ಚಿಂತನೆಯ ಕಾರ್ಯಗಳನ್ನು ಹೀಗೆ ಗುರುತಿಸುತ್ತಾರೆ: ೧) ಸಾಮ್ರಾಜ್ಯಶಾಹಿಯ ಅನುಭವಕ್ಕೆ ಪ್ರತಿಕ್ರಿಯಿಸುವ ಕಾರ್ಯಗಳು ೨) ವಸಾಹತುಶಾಹಿಯ ಆಕ್ರಮಣಕ್ಕೊಳಪಟ್ಟಿದ್ದ ರಾಷ್ಟ್ರಗಳ ಅನೂಚಾನತೆ ಮತ್ತು ಪುನರುಜ್ಜೀವನಕ್ಕೆ ಮಾಡುವ ಕಾರ್ಯಗಳು, ಮತ್ತು ೩) ಸಾಮ್ರಾಜ್ಯಶಾಹಿ ರೂಪಣೆಗಳ ಆಳದಲ್ಲಿರುವ ಯಾಜಮಾನ್ಯದ ಸ್ವರೂಪವನ್ನು ಅರಿಯುವ ಮತ್ತು ಪ್ರಶ್ನಿಸುವ ಕಾರ್ಯಗಳು (ಪು.೧೧). ಈ ವ್ಯಾಖ್ಯಾನದ ಹಿನ್ನೆಲೆಯಲ್ಲಿ ನೋಡಿದಾಗ, ವಸಾಹತೋತ್ತರ ಚಿಂತನೆ ಒಂದು ಬಗೆಯ ಕೃತಿ – ಸೃಷ್ಟಿಯೂ ಆಹುದು, ಮತ್ತು ವಿಶಿಷ್ಟ ಬಗೆಯ ಓದುವಿಕೆಯೂ ಅಹುದು.

ವಸಾಹತೋತ್ತರ ಚಿಂತನೆ ಮಿಶೆಲ್‌ಫುಕೋನ ‘ಡಿಸ್‌ಕೋರ್ಸ್‌’ ವಾದದ ಮುಂದುವರಿಕೆ; ಮತ್ತು ಫುಕೋ ಮಂಡಿಸಿದ ಡಿಸ್‌ಕೋರ್ಸ್ ವಾದ ಇತ್ತೀಚಿನ ಎಲ್ಲಾ ಬಗೆಯ ವಾದಗಳನ್ನೂ ಪ್ರಭಾವಿಸಿದೆ. ಆದ್ದರಿಂದ ಆ ವಾದವನ್ನು ಸ್ವತಂತ್ರವಾಗಿಯೇ ಪರಿಗಣಿಸುವ ಅವಶ್ಯಕತೆಯಿದೆ.