ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗುತ್ತಿರುವ ಈ ‘ಸಾಹಿತ್ಯ ಪಾರಿಭಾಷಿಕ ಪುಸ್ತಕ ಮಾಲೆ’ಗೆ ಮುಖ್ಯ ಪ್ರೇರಣೆ ದೊರತದ್ದು ಜಾನ್‌ಡಿ. ಜಂಪ್‌ಅವರ ಸಂಪಾದಕತ್ವದಲ್ಲಿ ಮೆಥಯಿನ್‌ಪ್ರಕಾಶದವರು ಇಂಗ್ಲೀಷಿನಲ್ಲಿ ಹೊರತರುತ್ತಿರುವ ‘ಕ್ರಿಟಿಕಲ್‌ಈಡಿಯಂ’ ಮಾಲೆಯ ಪುಸ್ತಕಗಳಿಂದ ಕನ್ನಡದಲ್ಲಿ ವಿಮರ್ಶೆಯ ಪರಿಭಾಷೆ ಇನ್ನೂ ನಿಶ್ಚಿತ ಸ್ವರೂಪವನ್ನು ಪಡೆದುಕೊಂಡಿಲ್ಲ. ಅನೇಕ ಪರಿಕಲ್ಪನೆಗಳ ಅರ್ಥವ್ಯಾಪ್ತಿ ಸ್ಪಷ್ಟವಾಗಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಪ್ರಬುದ್ಧ ವಿಮರ್ಶೆ ಪ್ರಕಟವಾಗುತ್ತಿದ್ದರೂ ವಿಮರ್ಶೆಗೆ ಸಂಬಂಧಿಸಿದ ಮೂಲಭೂತ ಸಾಮಗ್ರಿ ತಕ್ಕ ಪ್ರಮಾಣದಲ್ಲಿ ಬಂದಿಲ್ಲ. ಈ ಅವಶ್ಯಕತೆಯನ್ನು ಪೂರೈಸುವ ದೃಷ್ಟಿಯಿಂದ ಈ ಮಾಲೆಯ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಆದರೆ ಈ ಮಾಲೆಯಲ್ಲಿ ಪ್ರಕಟವಾಗುತ್ತಿರುವ ಪುಸ್ತಿಕೆಗಳು ಯಾವುದೇ ರೀತಿಯಲ್ಲಿ ಇಂಗ್ಲೀಷ್‌ಮಾಲೆಯ ಪುಸ್ತಕಗಳ ಅನುವಾದವಾಗಲಿ, ಅನುಕರಣೆಯಾಗಲಿ ಅಲ್ಲ; ಎಲ್ಲ ರೀತಿಯಿಂದಲೂ ಇವು ಸ್ವತಂತ್ರ ಕೃತಿಗಳು.

ಮಾಲೆಯಲ್ಲಿ ಈಗ ಕೆಲವು ಪುಸ್ತಿಕೆಗಳನ್ನು ಹೊರತರಲು ಯೋಜಿಸಲಾಗಿದ್ದು, ಅವುಗಳ ವಿಷಯಗಳನ್ನು ಕನ್ನಡ ಸಾಹಿತ್ಯದ ಪ್ರಸ್ತುತತೆಯ ದೃಷ್ಟಿಯಿಂದ ಆಯ್ಕೆ ಮಾಡಲಾಗಿದೆ. ಕೆಲವು ವಿಷಯಗಳಂತೂ ಕನ್ನಡಕ್ಕೆ ಮಾತ್ರ ವಿಶಿಷ್ಟವಾದವು. ಎಲ್ಲ ಪುಸ್ತಿಕೆಗಳಿಕಗೂ ಕನ್ನಡ ಸಾಹಿತ್ಯವೇ ದೃಷ್ಟಿಕೋನದ ಕೇಂದ್ರವಾಗಿದೆ. ಅನೇಕ ವಾದಗಳಿಗೂ, ಪರಿಕಲ್ಪನೆಗಳಿಗೂ ಪಾಶ್ಚಾತ್ಯ ಸಾಹಿತ್ಯವೇ ಮೂಲವಾಗಿದ್ದರೂ, ಅವು ಕನ್ನಡಕ್ಕೆ ಬಂದ ಸಂದರ್ಭ, ನಡೆದ ಹೊಂದಾಣಿಕೆ, ಪಡೆದ ಬದಲಾವಣೆಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಲಾಗಿದೆ. ಉದಾಹರಣೆಗೆ, ರೊಮ್ಯಾಂಟಿಸಿಜಂ ಎಂಬ ಪರಿಕಲ್ಪನೆ ಪಶ್ಚಿಮದಿಂದ ಬಂದುದಾದರೂ, ಅದು ಕನ್ನಡ ನವೋದಯದಲ್ಲಿ ಪಡೆದುಕೊಂಡ ಸ್ವರೂಪವೇ ಬೇರೆಯಾಗಿದೆ. ಇದೇ ಮಾತನ್ನು ‘ನವ್ಯತೆ’, ‘ವಾಸ್ತವತಾವಾದ’, ‘ಮಾರ್ಕ್ಸ್‌ವಾದ’ ಇತ್ಯಾದಿಗಳ ಬಗೆಗೂ ಹೇಳಬಹುದು. ಸಂಸ್ಕೃತಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಈ ಅಂಶದ ಮೇಲೆ ಈ ಪುಸ್ತಿಕೆಗಳಲ್ಲಿ ಹೆಚ್ಚಿನ ಒತ್ತು ಬಿದ್ದಿದ್ದರೆ ಅದು ಸಹಜವೇ ಆಗಿದೆ. ಆಧುನಿಕ ಕನ್ನಡ ಸಾಹಿತ್ಯವೆಲ್ಲ ಪಶ್ಚಿಮದ ಅನುಕರಣೆ ಎಂಬ ತಪ್ಪು ಕಲ್ಪನೆ ಇದರಿಂದ ತಕ್ಕ ಮಟ್ಟಿಗಾದರೂ ಕಡಿಮೆಯಾದೀತು ಎಂದು ನಮ್ಮ ನಂಬಿಕೆ.

ಈ ಪುಸ್ತಿಕೆಗಳು ಸಾಮಾನ್ಯ ಸಾಹಿತ್ಯಾಸಕ್ತರಿಂದ ಹಿಡಿದು ಕನ್ನಡ ಎಂ.ಎ. ಮಟ್ಟದ ವಿದ್ಯಾರ್ಥಿಗಳಿಗೂ ಉಪಯುಕ್ತವಾಗುವಂತೆ ಪರಿಚಯಾತ್ಮಕವಾಗಿರಬೇಕೆಂಬುದು ನಮ್ಮ ಉದ್ದೇಶ. ಆದರೆ ಅನೇಕ ಸಂದರ್ಭಗಳಲ್ಲಿ ಬರವಣಿಗೆ ಈ ಸೀಮಿತ ಉದ್ದೇಶವನ್ನು ದಾಟಿ ಪ್ರಬುದ್ಧ ಸಾಹಿತ್ಯಾಭ್ಯಾಸಿಗಳ ಚರ್ಚೆಗೂ ಯೋಗ್ಯವಾಗುವಷ್ಟು ಮುಂದೆ ಹೋಗಿದೆ. ಲೇಖಕರು ತಮ್ಮ ಸ್ವತಂತ್ರ ವಿಚಾರಗಳನ್ನೂ, ಒಳ ನೋಟಗಳನ್ನೂ,  ಆಳವಾದ ಅಭ್ಯಾಸವನ್ನೂ ಒದಗಿಸಿ ಈ ಪುಸ್ತಿಕೆಗಳ ಮೌಲ್ಯವನ್ನು ಹೆಚ್ಚಿಸಿದ್ದಾರೆ.

೭೦ – ೮೦ ಪುಟಗಳ ಮಿತಿಯಲ್ಲಿ ವಿಷಯ ಆದಷ್ಟು ಸಮಗ್ರವಾಗಿ ಮತ್ತು ಅಡಕವಾಗಿ ಬರುವಂತಾಗಬೇಕೆಂಬುದು ನಮ್ಮ ಯೋಜನೆಯ ಒಂದು ಮುಖ್ಯ ಅಂಶ. ಆದರೆ ಪುಟಸಂಖ್ಯೆಯ ಮಿತಿಯನ್ನು ಅಷ್ಟು ಕಟ್ಟು ನಿಟ್ಟಾಗಿ ಅನುಸರಿಸಿಲ್ಲ. ವಿಷಯದ ವ್ಯಾಪ್ತಿಯನ್ನು ಅವಲಂಬಿಸಿ ಒಂದೆರಡು ಪುಸ್ತಿಕೆಗಳು ಗಾತ್ರದಲ್ಲಿ ದೊಡ್ಡವೂ ಆಗಿವೆ.

ಮಾಲೆಯಲ್ಲಿ ಸೇರಿರುವ ವಿಷಯಗಳು ಒಂದೇ ರೀತಿಯದಾಗಿಲ್ಲ. ಕೆಲವು ಸಾಹಿತ್ಯಕ ವಾದಗಳು, ಕೆಲವು ಪರಿಕಲ್ಪನೆಗಳು , ಕೆಲವು ಚಳುವಳಿಗಳು, ಇನ್ನು ಕೆಲವು ಸಾಹಿತ್ಯ ಪ್ರಕಾರಗಳು. ವಿಷಯಗಳ ವೈವಿಧ್ಯ ಮತ್ತು ಭಿನ್ನ ಸ್ವರೂಪಗಳಿಂದಾಗಿ ಈ ಪುಸ್ತಿಕೆಗಳ ರಚನಾಕ್ರಮದಲ್ಲಿ ಏಕರೂಪತೆ ಇಲ್ಲ. ಆದರೂ ಪ್ರತಿಯೊಂದರಲ್ಲಿ ವ್ಯಾಖ್ಯೆ, ಸ್ವರೂಪ, ಸಾಮಾಜಿಕ ಮತ್ತು ತಾತ್ವಿಕ ಹಿನ್ನೆಲೆ, ಮುಖ್ಯ ವೈಶಿಷ್ಟ್ಯಗಳು, ಪಶ್ಚಿಮದಲ್ಲಿ ಬೆಳೆದು ಬಂದ ರೀತಿ, ಕನ್ನಡದಲ್ಲಿ ಬಂದಾಗ ಆದ ಹೊಂದಾಣಿಕೆ, ಮುಖ್ಯ ಸಾಹಿತ್ಯ ಕೃತಿಗಳಲ್ಲಿ ಅವುಗಳ ಅಭಿವ್ಯಕ್ತಿ. ಈ ಕ್ರಮವನ್ನು ಸ್ಥೂಲವಾಗಿ ಇರಿಸಿಕೊಂಡಿದೆ. ವಿಷಯ ನಿರೂಪಣೆ ಆದಷ್ಟು ವಸ್ತುನಿಷ್ಠವಾಗಿರುವಂತೆ ನೋಡಿಕೊಳ್ಳಲಾಗಿದೆ.

ಪಾರಿಭಾಷಿಕ ಶಬ್ದಗಳ ಬಳಕೆಯ ಬಗ್ಗೆ ಒಂದು ಮಾತನ್ನು ಅಗತ್ಯವಾಗಿ ಹೇಳಬೇಕು. ಈ ವಿಷಯದಲ್ಲಿ ನಮ್ಮಲ್ಲಿ ಬಹಳಷ್ಟು ಗೊಂದಲವಿದೆ. ಒಂದೇ ಇಂಗ್ಲೀಷ್‌ಶಬ್ದಕ್ಕೆ ಕನ್ನಡದಲ್ಲಿ ಅನೇಕ ಸಮಾನಾರ್ಥಕ ಶಬ್ದಗಳು ಬಳಕೆಗೆ ಬಂದಿವೆ. ಬೇರೆ ಬೇರೆ ಲೇಖಕರು ಬೇರೆ ಬೇರೆ ಶಬ್ದಗಳನ್ನು ಬಳಸುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಒಬ್ಬರೇ ಲೇಖಕರು ಬೇರೆ ಬೇರೆ ಕಡೆ ಬೇರೆ ಬೇರೆ ಶಬ್ದಗಳನ್ನು ಬಳಸಿರುವುದೂ ಉಂಟು. ಈ ಸಮಸ್ಯೆಯನ್ನು ಕೊನೆಯದಾಗಿ ಪರಿಹರಿಸುವ ಮಹತ್ವಾಕಾಂಕ್ಷೆ ಈ ಮಾಲೆಗೆ ಇಲ್ಲ. ಆದರೂ ಈ ಮಾಲೆಯ ಮಟ್ಟಿಗೆ ಏಕರೂಪತೆ ತರುವ ಪ್ರಯತ್ನ ಮಾಡಲಾಗಿದೆ. ಅಗತ್ಯಬಿದ್ದ ಕಡೆ ಬಳಕೆಯಲ್ಲಿರುವ ಇತರ ಪರ್ಯಾಯ ಶಬ್ದಗಳನ್ನೂ ಸೂಚಿಸಲಾಗಿದೆ. ಅಪರಿಚಿತ ಮತ್ತು ಹೊಸದಾಗಿ ರೂಪಿಸಿದ ಶಬ್ದಗಳಿಗೆ ಕಂಸಿನಲ್ಲಿ ಮೂಲ ಶಬ್ದವನ್ನೂ ಕೊಡಲಾಗಿದೆ.

ಸಾಧ್ಯವಿದ್ದಷ್ಟೂ, ಉದ್ಧೃತ ಭಾಗಗಳನ್ನು ಕನ್ನಡ ಅನುವಾದದಲ್ಲಿ ಕೊಟ್ಟಿದೆ.

ಕೊನೆಯಲ್ಲಿ ‘ಅಭ್ಯಾಸಸೂಚಿ’ಯೊಂದು ಇದ್ದು, ಅದರಲ್ಲಿ ಪುಸ್ತಿಕೆಯಲ್ಲಿ ಉದ್ಧರಿಸಿದ ಎಲ್ಲ ಮೂಲಗಳ ಸಂಪೂರ್ಣ ವಿವರಗಳನ್ನು ಕಾಣಬಹುದು. ಉದ್ಧೃತ ಭಾಗಗಳಿಗೆ, ಸಂಬಂಧಿಸಿದಂತೆ ಲೇಖಕನ ಹೆಸರಿನ ಜೊತೆಗೆ ಯಾವ ಕೃತಿಯಿಂದ ಉದ್ಧರಿಸಲಾಗಿದೆಯೋ ಆ ಕೃತಿ ಪ್ರಕಟವಾದ ವರ್ಷ ಮತ್ತು ಪುಟಸಂಖ್ಯೆಗಳನ್ನು ಮಾತ್ರ ನಮೂದಿಸಿದೆ. ‘ಗ್ರಂಥಸೂಚಿ’ಯಲ್ಲಿ ಲೇಖಕನ ಹೆಸರು ಮತ್ತು ಪ್ರಕಟಣೆಯ ವಿವರಗಳನ್ನು ಕಾಣಬಹುದು.  ಇದರಲ್ಲಿ ಪ್ರಾಥಮಿಕ ಮೂಲಗಳನ್ನು ಮತ್ತು ಸೃಜನಶೀಲ ಕೃತಿಗಳನ್ನು ಸೇರಿಸಿಲ್ಲ. ಇದೇ ಸೂಚಿಯಲ್ಲಿಯೇ ಆಯಾ ವಿಷಯವನ್ನು ಕುರಿತು ಹೆಚ್ಚಿನ ಅಭ್ಯಸಕ್ಕೆ ಉಪಯುಕ್ತವಾದ ಗ್ರಂಥಗಳನ್ನೂ ಸೇರಿಸಲಾಗಿದೆ.

ಈ ಮಾಲೆ ಕನ್ನಡ ಸಾಹಿತ್ಯಭ್ಯಾಸಿಗಳಿಗೆ ಉಪಯುಕ್ತವಾದಲ್ಲಿ ಶ್ರಮವಹಿಸಿ ಬರೆದುಕೊಟ್ಟ ಲೇಖಕರ ಮತ್ತು ಆಸಕ್ತಿವಹಿಸಿ ಪ್ರಕಟಣೆ ಕೈಕೊಂಡ ಅಕಾಡೆಮಿಯ ಉದ್ದೇಶ ಸಾರ್ಥಕವಾದಂತೆ.

ಮಾಲೆಯ ಸಂಪಾದಕತ್ವವನ್ನು ನನಗೆ ವಹಿಸಿಕೊಟ್ಟ ಅಕಾಡೆಮಿಗೂ, ಯೋಜನೆಯನ್ನು ಮೆಚ್ಚಿ ಪುಸ್ತಿಕೆಗಳನ್ನು ಬರೆದುಕೊಟ್ಟ ಲೇಖಕರಿಗೂ ನಾನು ಕೃತಜ್ಞ.

ಗಿರಡ್ಡಿ ಗೋವಿಂದರಾಜ