ನೀವು ಧ್ರುವನಕ್ಷತ್ರವನ್ನು ನೋಡಿದ್ದೀರಾ? ರಾತ್ರಿ ಉತ್ತರದಿಕ್ಕಿಗೆ ಆಕಾಶದಲ್ಲಿ ಕಣ್ಣು ಹಾಯಿಸಿದರೆ ಸದಾ ಬೆಳಗುವ ಒಂದು ತಾರೆ ಕಾಣುತ್ತದೆ. ಅದಕ್ಕೆ ಧ್ರುವ ನಕ್ಷತ್ರ ಎಂದು ಹೆಸರು. ಅದರ ಕೆಳಗೆ ‘ಸ’ ಒತ್ತಿನಂತೆ ಒಂದು ನಕ್ಷತ್ರದ ಸಾಲನ್ನು ನೋಡಬಹುದು. ಅದನ್ನು ಸಪ್ತರ್ಷಿಮಂಡಲ ಎನ್ನುತ್ತಾರೆ. ಸಪ್ತರ್ಷಿಗಳೆಂದರೆ ಏಳು ಮಂದಿ ಋಷಿಗಳು. ಮರೀಚಿ , ಅತ್ರಿ, ಅಂಗರಸ್ಸು, ಪುಲಸ್ತ್ಯ, ಪುಲಹ, ಕ್ರತು ಮತ್ತು ವಸಿಷ್ಠ – ಇವರೇ ಆ ಸಪ್ತರ್ಷಿಗಳು. ಋಷಿ ಎಂದರೆ ಜ್ಞಾನಿ, ವೇದಗಳ ರಹಸ್ಯವನ್ನು ಬಲ್ಲವನು ಎಂದರ್ಥ.

ಕುಲಪತಿ

ಇವರಲ್ಲಿ ವಸಿಷ್ಡ ಋಷಿಗಳು ಬ್ರಹ್ಮನ ಮನಸ್ಸಂಕಲ್ಪದಿಂದ ಹುಟ್ಟಿದರಂತೆ. ಅವರು ತಪಸ್ವಿಗಳು; ಮಹಾಮಹಿಮರು; ಲೋಕದ ಕಲ್ಯಾಣಕ್ಕಾಗಿ ಶ್ರಮಿಸಿದವರು. ವಿಸಿಷ್ಠರು ಸನ್ಯಾಸಿಗಳಲ್ಲ, ಗೃಹಸ್ಥರು. ಮದುವೆಯಾಗಿದ್ದರು. ಅವರ ಮಡದಿ ಅರುಂಧತಿ. ಅರುಂಧತಿಯು ಒಳ್ಳೆಯ ಸಾಧ್ವಿಯೆಂದೂ ಪರಮ ಪತಿವ್ರತೆಯೆಂದೂ ಹೆಸರು ಗಳಿಸಿದ್ದಾಳೆ. ಸಪ್ತರ್ಷಿಮಂಡಲದ ವಸಿಷ್ಠ ನಕ್ಷತ್ರದ ಬಳಿ ಒಂದು ಚಿಕ್ಕ ತಾರೆ ಇದೆ. ಅದನ್ನು ಅರುಂಧತಿ ನಕ್ಷತ್ರವೆನ್ನುತ್ತಾರೆ. ಮದುವೆಯಾದ ಹುಡುಗಿಗೆ ಅದನ್ನು ತೋರಿಸುವ ಪದ್ಧತಿಯುಂಟು. ‘ಆರುಂಧತಿಯಂತೆ ಸಾಧ್ವಿಯೂ ಪತಿವ್ರತೆಯೂ ಆಗಿ ಬಾಳು’ ಎಂಬುದು ಅದರ ಉದ್ದೇಶ.

ವಸಿಷ್ಠರು ಸರಸ್ವತೀ ನದಿಯ ತೀರದಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡಿದ್ದರು. ಪತ್ನಿಯಾದ ಅರುಂಧತಿ ಅವರ ಸೇವೆಯಲ್ಲಿ ನಿರತಳಾಗಿದ್ದಳು. ಸಾವಿರಾರು ಶಿಷ್ಯರಿಗೆ ಅವರು ಪಾಠ ಹೇಳುತ್ತಿದ್ದರು. ವೇದ ವೇದಾಂಗಗಳೇ ಮುಖ್ಯವಾದ ಪಠ್ಯ ವಿಷಯ.  ವಸಿಷ್ಠರನ್ನು ಕುಲಪತಿ ಎನ್ನುತ್ತಿದ್ದರು. ಕಡೆಯ ಪಕ್ಷ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಅನ್ನವಸತಿಗಳನ್ನಿತ್ತು ಯಾರು ಪಾಠಶಾಲೆಗಳನ್ನು ನಡೆಸುತ್ತಾರೋ ಅವರಿಗೆ ಕುಲಪತಿ ಎಂದು ಹೆಸರು. ಶಿಷ್ಯರಿಗೆ ಪಾಠ ಹೇಳುವುದು, ಬಂದವರಿಗೆ ಧರ್ಮೋಪದೇಶ, ತಪಶ್ಚರ್ಯೆ – ಇವೇ ವಸಿಷ್ಠಮುನಿಗಳ ದಿನಚರ್ಯೆ.

ಆಶ್ರಮದಲ್ಲಿ ಶಾಂತ ವಾತಾವರಣವಿತ್ತು. ಮರಗಿಡಗಳು ಹೂಹಣ್ಣುಗಳಿಂದ ತುಂಬಿದ್ದವು. ಬಗೆ ಬಗೆಯ ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಹಾರಾಡುತ್ತಿದ್ದವು. ಹಸು, ಜಿಂಕೆ ಮುಂತಾದ ಸಾಧುಪ್ರಾಣಿಗಳು ನೆಲೆಸಿದ್ದವು. ಲೋಕಕಲ್ಯಾಣಕ್ಕಾಗಿ ಹೋಮಗಳು ನಡೆಯುತ್ತಿದ್ದವು. ಮಹಾತ್ಮರಾದ ವಸಿಷ್ಠರ ಸಂದರ್ಶನಕ್ಕಾಗಿ ನೂರಾರು ಮಂದಿ ಅತಿಥಿಗಳು ಬರುತ್ತಿದ್ದರು. ವಸಿಷ್ಠರ ತಪೋಮಹಿಮೆ ಅಪಾರವಾದದ್ದು . ಅವರು ಶಾಂತಮೂರ್ತಿಗಳು. ಕಾಮಕ್ರೋಧಗಳನ್ನು ಜಯಿಸಿದ್ದರು. ಅಷ್ಟು ಜನ ವಿದ್ಯಾರ್ಥಿಗಳೂ ಅತಿಥಿಗಳೂ ಊಟಕ್ಕಿರುವಾಗ, ಹೋಮಾದಿಕಾರ್ಯಗಳು ಪ್ರತಿದಿನವೂ ನಡೆಯಬೇಕಾದಾಗ ಹಾಲು, ಮೊಸರು, ತುಪ್ಪ ಎಷ್ಟು ಬೇಕು! ವಸಿಷ್ಠಮುನಿಗಳ ತಪೋನಿಷ್ಠೆಗೂ ಉದಾರಗುಣಕ್ಕೂ ಮೆಚ್ಚಿ ದೇವೇಂದ್ರನು ಒಂದು ದಿವ್ಯವಾದ ಹಸುವನ್ನು ಅವರಿಗೆ ಒದಗಿಸಿದ್ದನು. ಅದರ ಹೆಸರು ನಂದಿನಿ. ಕಾಮಧೇನುವಿನ ಮಗಳು. ಅದು ದಿವ್ಯಧೇನುವಾದ್ದರಿಂದ ದಿವ್ಯಶಕ್ತಿ ಅದಕ್ಕಿತ್ತು. ಬೇಕಾದಷ್ಟು ಹಾಲು, ತುಪ್ಪ ನಂದಿನಿಯಿಂದ ದೊರೆಯುತ್ತಿತ್ತು. ಅದರ ಮೈಮೇಲೆ ಚಂದ್ರಾಕಾರದ ಚುಕ್ಕೆಗಳಿದ್ದುದರಿಂದ ಶಬಲೆಯೆಂದು ಅದನ್ನು ಕರೆಯುತ್ತಿದ್ದರು. ಶಬಲೆಯೆಂದರೆ ಅನೇಕ ಬಣ್ಣವುಳ್ಳವಳು ಎಂದರ್ಥ. ವಸಿಷ್ಠರಿಗೂ ಅರುಂಧತಿಗೂ ಅದರ ಮೇಲೆ ಬಹಳ ಪ್ರೀತಿ.

ಅತಿಥಿ ವಿಶ್ವಾಮಿತ್ರ

ವಸಿಷ್ಠಮುನಿಗಳ ತಪಸ್ಸು, ತಾಳ್ಮೆ, ಬ್ರಹ್ಮತೇಜಸ್ಸು ಎಷ್ಟಿತ್ತೆಂದರೆ, ಅವರ ಪ್ರಭಾವದಿಂದ ವಿಶ್ವಾಮಿತ್ರನೆಂಬ ರಾಜನು ರಾಜ್ಯವನ್ನು ತೊರೆದು ವಸಿಷ್ಠರಂತೆ ಋಷಿಯಾದನು.

ವಿಶ್ವಾಮಿತ್ರನು ಒಬ್ಬ ರಾಜ.  ಆತನು ಬೇಟೆಯಾಡುವುದಕ್ಕಾಗಿ ಒಂದು ಸಲ ಕಾಡಿಗೆ ಹೋದನು. ಅಲ್ಲಿ ಬೇಟೆಯಾಡಿ ಬಳಲಿ ತನ್ನ ಪರಿವಾರದೊಡನೆ ಹೋಗುತ್ತಿರುವಾಗ, ವಸಿಷ್ಠಮುನಿಗಳ ಆಶ್ರಮ ಕಾಣಿಸಿತು. ವಿಶ್ವಾಮಿತ್ರರಾಜನು ವಸಿಷ್ಟರ ದರ್ಶನಕ್ಕಾಗಿ ಆಶ್ರಮಕ್ಕೆ ಹೋದನು. ಕುಲಪತಿಗಳಾದ ವಸಿಷ್ಠರನ್ನು ಕಂಡು ವಿನಯದಿಂದ ನಮಸ್ಕರಿಸಿದನು. ರಾಜನನ್ನು ಕಂಡು ಮುನಿಗಳಿಗೆ ಸಂತೋಷವಾಯಿತು. ಅವರು ಹಣ್ಣುಹಂಪಲುಗಳನ್ನು ತಂದಿತ್ತು ಉಪಚರಿಸಿದರು. ಅವನೊಡನೆ ಬಹು ವಿಶ್ವಾಸದಿಂದ ಮಾತನಾಡಿದರು.

ಅನಂತರ ವಿಶ್ವಾಮಿತ್ರನು ತನ್ನ ರಾಜಧಾನಿಗೆ ಹಿಂದಿರುಗಲು ಸಿದ್ಧನಾದನು. ಆಗ ವಸಿಷ್ಠರು, “ವಿಶ್ವಾಮಿತ್ರ, ನಮ್ಮ ಆಶ್ರಮಕ್ಕೆ ಅತಿಥಿಯಾಗಿ ಬಂದಿದ್ದೀಯೆ. ನೀನೂ ನಿನ್ನ ಪರಿವಾರದವರೂ ಇಲ್ಲಿ ಭೋಜನ ಮಾಡಿ ವಿಶ್ರಮಿಸಿಕೊಂಡು ಹೋಗಿರಿ” ಎಂದರು. ವಿಶ್ವಾಮಿತ್ರನು ಮನಸ್ಸಿನಲ್ಲಿ, ‘ನನ್ನ ಸೇನೆ ದೊಡ್ಡದಾಗಿದೆ. ನಾವೆಲ್ಲರೂ ಊಟಕ್ಕೆ ನಿಂತರೆ, ಈ ಋಷಿಗಳಿಗೆ ತೊಂದರೆಯಾಗುವುದು’ ಎಂದುಕೊಂಡನು. ಆತನು, “ಮಹಾತ್ಮರೆ, ನಿಮ್ಮ ಒಳ್ಳೆಯ ಮಾತಿನಿಂದಲೇ ನಮಗೆ ಸತ್ಕಾರವು ನಡೆದಷ್ಟು ಸಂತೋಷವಾಯಿತು.  ಮುಖ್ಯವಾಗಿ ನಿಮ್ಮ ದರ್ಶನವಾದದ್ದು ನನ್ನ ಭಾಗ್ಯ. ನಿಮಗೆ ಅನಂತ ವಂದನೆಗಳು. ಹೋಗಿಬರುತ್ತೇನೆ. ಪ್ರೀತಿ ಇರಲಿ” ಎಂದನು. ವಸಷ್ಠರು “ರಾಜ, ಸಂಕೋಚ ಬೇಡ, ನೀನು ಹಾಗೆಯೇ ಹಿಂದಿರುಗುವುದು ನನಗೆ ಹಿತವೆನಿಸದು. ಎಲ್ಲರೂ ಉಳಿಯಿರಿ” ಎಂದು ಒತ್ತಾಯಮಾಡಲು ವಿಶ್ವಾಮಿತ್ರನು ಒಪ್ಪಿದನು.

ನಂದಿನಿಯ ಮಹಿಮೆಯಿಂದ ಬಗೆಬಗೆಯ ಭಕ್ಷ್ಯ ಭೋಜ್ಯಗಳ ರಾಶಿಯೇ ಏರ್ಪಟ್ಟಿತ್ತು. ವಿಶ್ವಾಮಿತ್ರನೂ ಅವನ ಪರಿವಾರದವರೂ ಉಂಡು ತೇಗಿದರು.

ಅತಿಥಿಯೇ ಶತ್ರುವಾದ!

ವಿಶ್ವಾಮಿತ್ರನು ಅಚ್ಚರಿಗೊಂಡನು. ಆ ಹಸುವನ್ನು ತಾನು ತೆಗೆದುಕೊಂಡು ಹೋಗಬೇಕೆಂದು ದುರಾಸೆ ಹುಟ್ಟಿತು. ವಸಿಷ್ಠರ ಬಳಿಗೆ ಹೋಗಿ ತನ್ನ ಅಪೇಕ್ಷೆಯನ್ನು ತಿಳಿಸಿದನು.

ವಸಿಷ್ಠ – ರಾಜ, ಈ ಹಸುವನ್ನು ಇಂದ್ರನು ನನಗೆ ಕೊಟ್ಟಿದ್ದಾನೆ. ಆಶ್ರಮದಲ್ಲಿರುವ ಸಾವಿರಾರು ವಿದ್ಯಾರ್ಥಿಗಳಿಗೂ ಅತಿಥಿಗಳಿಗೂ ಇದರ ನೆರವಿನಿಂದಲೇ ದಿನವೂ ಭೋಜನ ನಡೆಯುತ್ತಿದೆ. ಹೋಮಕಾರ್ಯಗಳಿಗೆ ಬೇಕಾದ ಹಾಲು, ಮೊಸರು, ತುಪ್ಪಗಳೆಲ್ಲವೂ ನಂದಿನಿಯಿಂದಲೇ ಆಗಬೇಕು. ಇಂಥ ಹಸುವನ್ನು ನೀನು ಕೇಳಬಹುದೇ?

ವಿಶ್ವಾಮಿತ್ರ – ಋಷಿಗಳೇ, ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ಅಲಂಕೃತ ಗೋವುಗಳನ್ನು ಕೊಡುತ್ತೇನೆ. ನಿಮಗೆ ಹಾಲು, ತುಪ್ಪಗಳ ಕೊರತೆಯೇನೂ ಆಗುವುದಿಲ್ಲ.

ವಸಿಷ್ಠ – ಹಾಗಲ್ಲ, ಮಹಾರಾಜ. ದೇವತೆಗಳ ವಸ್ತುವನ್ನು ನಾನು ಇನ್ನೊಬ್ಬರಿಗೆ ಕೊಟ್ಟುಬಿಡುವುದು ಸರಿಯಲ್ಲ. ಅವರ ಉದ್ದೇಶಕ್ಕೆ ಭಂಗ ಬರುತ್ತದೆ.

ವಿಶ್ವಾಮಿತ್ರ – ಯಾವ ಭಂಗವೂ ಬರುವುದಿಲ್ಲ. ನಿಮ್ಮ ಆರ್ಶರಮದ ವೆಚ್ಚಕ್ಕೆ ಬೇಕಾದ ಧನಧಾನ್ಯಗಳೆಲ್ಲವನ್ನೂ ನಾನು ಒದಗಿಸುತ್ತೇನೆ. ನಂದಿನಿಯನ್ನು ನನಗೆ ಕೊಡಿರಿ.

ವಸಿಷ್ಠ – ಈ ವೆಚ್ಚದ ಹೊರೆಯನ್ನು ನೀನು ಹೋರುವುದೇಕೆ? ಧನಧಾನ್ಯಗಳು ನಿನ್ನಲ್ಲಿ ಯಥೇಚ್ಛವಾಗಿದ್ದರೆ ಪ್ರಜೆಗಳಿಗಾಗಿ ಉಪಯೋಗಿಸು. ಬಡವರಿಗೆ ಕೊಡು. ಅವರೆಲ್ಲರೂ ಸುಖದಿಂದಿರಲಿ. ಆಶ್ರಮದ ವೆಚ್ಚಕ್ಕೆ ರಾಜಧನವನ್ನು ನಾನು ಬಳಸಲಾರೆ.

ಹೀಗೆ ಇಬ್ಬರಿಗೂ ಮಾತು ಬೆಳೆಯಿತು. ವಸಿಷ್ಠರು ಕೊಡುವುದಿಲ್ಲ – ವಿಶ್ವಾಮಿತ್ರನು ಬಿಡುವುದಿಲ್ಲ. ಕಡೆಗೆ ವಿಶ್ವಾಮಿತ್ರನು ಸಿಟ್ಟಿನಿಂದ ಬೆಂಕಿಯಾದನು. ‘ನಾನು ಮಹಾರಾಜ. ಜಗತ್ತಿನಲ್ಲಿರುವ ಉತ್ತಮ ವಸ್ತುಗಳೆಲ್ಲವೂ ನನಗೆ ಸೇರಬೇಕು! ಈ ಬಡಮುನಿಯೊಬ್ಬನು ನನ್ನನ್ನು ಧಿಕ್ಕರಿಸಿ ಉತ್ತರ ಕೊಡುವನಲ್ಲ!’ ಎಂದು ಅಹಂಕಾರ ತಲೆಗೇರಿತು. ಅವನು, “ವಸಿಷ್ಠರೆ, ನೀವು ನಂದಿನಿಯನ್ನು ಕೊಡದಿದ್ದರೆ ಬಲಾತ್ಕಾರದಿಂದ ಒಯುತ್ತೇನೆ!” ಎಂದು ಹೇಳಿ ಹೊರಟನು. ವಸಿಷ್ಠರು ಶಾಂತರಾಗಿಯೇ ಇದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ.

ವಿಶ್ವಾಮಿತ್ರನು ತನ್ನ ಸೈನಿಕರನ್ನು ಕರೆದು, “ಸೈನಿಕರೆ, ಆ ಹಸುವನ್ನು ಹಗ್ಗದಿಂದ ಬಿಗಿದು ಬಲಾತ್ಕಾರವಾಗಿ ಎಳತನ್ನಿರಿ” ಎಂದು ಆಜ್ಞಾಪಿಸಿದನು. ಸೈನಿಕರು ನಂದಿನಿಯನ್ನು ಮುತ್ತಿದರು. ಆಗ ನಂದಿನಿ ಸೈನಿಕರಿಂದ ತಪ್ಪಿಸಿಕೊಂಡು ವಸಿಷ್ಠರ ಬಳಿಗೆ ಓಡುತ್ತಾ ಬಂದಿತು. ವಸಿಷ್ಠರನ್ನು ಕುರಿತು, “ಮಹರ್ಷಿಗಳೆ, ಈ ರಾಜಭಟರು ನನ್ನನ್ನು ಎಳದೊಯ್ಯಲು ಹವಣಿಸುತ್ತಿದ್ದಾರೆ. ನನ್ನನ್ನು ತ್ಯಜಿಸಿಬಿಟ್ಟಿರಾ? ನಾನೇನು ತಪ್ಪು ಮಾಡಿದೆ?” ಎಂದು ಕೇಳಿತು. ಅದಕ್ಕೆ ವಸಿಷ್ಠಮುನಿಗಳು, “ಶಬಲೆ, ನೀನು ಯಾವ ತಪ್ಪನ್ನೂ ಮಾಡಿಲ್ಲ. ನಾನು ನಿನ್ನನ್ನು ತ್ಯಜಿಸಿಲ್ಲ. ವಿಶ್ವಾಮಿತ್ರನು ಬಲಾತ್ಕಾರದಿಂದ ನಿನ್ನನ್ನು ಒಯ್ಯುತ್ತಿದ್ದಾನೆ. ಅವನಲ್ಲಿ ಸೇನಾಬಲವಿದೆ. ಅಲ್ಲದೆ ನಮಗೆ ಅತಿಥಿಯಾಗಿ ಬಂದಿದ್ದಾನೆ. ಅವನನ್ನು ಹೇಗೆ ತಡೆಯಲಿ?” ಎಂದರು. ಆಗ ನಂದಿನಿ, “ನನಗೆ ಅನುಜ್ಞೆಯನ್ನು  ಕೊಡಿ. ನಾನೇ ಇವನ ದರ್ಪವನ್ನು ಅಡಗಿಸುತ್ತೇನೆ” ಎಂದಿತು. ವಸಿಷ್ಠರು ಒಪ್ಪಿದರು. ಒಡನೆಯೇ ನಂದಿನಿಯು ವಿಶ್ವಾಮಿತ್ರನ ಸೇನೆಯನ್ನೆದುರಿಸಿ ‘ಹುಂಬಾ’ ಎಂದು ಕೂಗಿತು. ಅದರ ದಿವ್ಯಶಕ್ತಿಯಿಂದ ಲಕ್ಷಾಂತರ ಮಂದಿ ಮಾಯಾವಿಗಳಾದ ಸೈನಿಕರು ಹುಟ್ಟಿ ವಿಶ್ವಾಮಿತ್ರನ ಸೈನಿಕರನ್ನೆದುರಿಸಿದರು. ದೊಡ್ಡ ಯುದ್ಧ ನಡೆಯಿತು. ವಿಶ್ವಾಮಿತ್ರನೂ ಅವನ ಸೈನಿಕರೂ ಸೋತುಹೋದರು.

ತಪಸ್ಸಿನ ಶಕ್ತಿಯೇ ಶಕ್ತಿ!

ವಿಶ್ವಾಮಿತ್ರನಿಗೆ ಬಹಳ ಚಿಂತೆಯಾಯಿತು. ‘ಒಬ್ಬ ಮುನಿಯನ್ನು – ಒಂದು ಹಸುವನ್ನು, ನಾನು ಎದುರಿಸಲಾರದೆ ಹೋದೆನೆ!’ ಎಂದು ನಾಚಿಕೆಯಾಯಿತು. ಹಲ್ಲುಮುರಿದ ಹಾವಿನಂತೆ, ರೆಕ್ಕೆಕತ್ತರಿಸಿದ ಹಕ್ಕಿಯಂತೆ ಅವನು ತಳಮಳಿಸಿದನು. ಮತ್ತೆ ಛಲ ಹುಟ್ಟಿತು. ‘ದಿವ್ಯಾಸ್ತ್ರ’ಗಳನ್ನು  ಪಡೆದು ಈ ವಸಿಷ್ಠನ ದರ್ಪವನ್ನಡಗಿಸುತ್ತೇನೆ! ಎಂದು ನಿಶ್ಚಯಿಸಿ ರಾಜ್ಯವನ್ನು ಬಿಟ್ಟು ತಪಸ್ಸಿಗೆ ಹೋದನು. ಹಿಮಾಲಯ ಪರ್ವತದ ತಪ್ಪಲನ್ನು ಸೇರಿ, ಈಶ್ವರನನ್ನು ಕುರಿತು ಕಠೋರವಾದ ತಪಸ್ಸನ್ನಾಚರಿಸಿದನು. ಈಶ್ವರನನ್ನು ಒಲಿಸಿಕೊಂಡು ಧನುರ್ವೇದವನ್ನೂ ದಿವ್ಯಾಸ್ತ್ರಗಳನ್ನೂ ಪಡೆದನು. ವಿಶ್ವಾಮಿತ್ರನಿಗೆ ‘ನಾನು ಮಹಾರಾಜ ನೆಂಬ ಗರ್ವ ತುಂಬಿತ್ತು. ಈಗ ದಿವ್ಯಾಸ್ತ್ರಗಳು ದೊರಕಿದ ಮೇಲೆ ಕೆಳಬೇಕೆ? ಅಹಂಕಾರ ನೆತ್ತಿಗೇರಿತು.  ‘ವಸಿಷ್ಠಮುನಿಯನ್ನು ಧ್ವಂಸ ಮಾಡುತ್ತೇನೆ’ ಎಂದು ನಿಶ್ಚಯಿಸಿ ನೇರವಾಗಿ ಅವರ ಆಶ್ರಮಕ್ಕೆ ಬಂದನು. ಬಾಣಗಳ ಮಳೆ ಸುರಿಸುತ್ತ ತಪೋವನವನ್ನು ನಾಶಮಾಡತೊಡಗಿದನು. ಅಲ್ಲಿದ್ದ ಇತರ ಮುನಿಗಳೂ ಶಿಷ್ಯರೂ ಹೆದರಿ ದಿಕ್ಕುದಿಕ್ಕಿಗೆ ಓಡಿಹೋದರು . ಮೃಗಪಕ್ಷಿಗಳು ಕಂಗೆಟ್ಟವು. ಎಲ್ಲೆಲ್ಲಿಯೂ ಹಾಹಾಕಾರ ತುಂಬಿತು. 

ಬ್ರಹ್ಮಸ್ತ್ರಾವು ಎರಗಿತು.

 ವಿಶ್ವಾಮಿತ್ರನ ಹಾವಳಿ ವಸಿಷ್ಠರಿಗೆ ತಿಳಿಯಿತು. ಅವರು ಶಿಷ್ಯರನ್ನು ನೋಡಿ, “ಹೆದರಬೇಡಿ” ಎಂದು ಧೈರ್ಯ ಹೇಳಿದರು. ಬ್ರಹ್ಮದಂಡವನ್ನು ತೆಗೆದುಕೊಂಡು ಗುಡಿಸಿಲಿನಿಂದ ಹೊರಗೆ ಬಂದರು. ವಿಶ್ವಾಮಿತ್ರನ ಬಳಿಗೆ ಹೋಗಿ, “ಎಲೈ ಮೂಢ, ನಿಷ್ಕಾರಣವಾಗಿ ಈ ಆಶ್ರಮವನ್ನು ಹೋಗಿ, “ಎಲೈ ಮೂಢ, ನಿಷ್ಕಾರಣವಾಗಿ ಈ ಆಶ್ರಮವನ್ನು ಹಾಳುಮಾಡುವೆಯಾ? ಇದು ರಾಜಧರ್ಮವೆ?” ಎಂದು ಕೇಳಿದರು. ವಿಶ್ವಾಮಿತ್ರನು ಅಗ್ನೇಯಾಸ್ತ್ರವನ್ನು ಬಿಲ್ಲಿಗೆ ಹೂಡಿದನು. ಆಗ ವಸಿಷ್ಠರು ಬೇರೆ ಉಪಾಯವಿಲ್ಲದೆ ತಮ್ಮ ಬ್ರಹ್ಮದಂಡವನ್ನು ಎದುರಿಗೆ ಹಿಡಿದು, “ವಿಶ್ವಾಮಿತ್ರ, ನಿನ್ನ ಬಲವೇನೆಂಬುದನ್ನು ತೋರಿಸು!” ಎಂದರು. ಆತನು ಆಗ್ನೇಯಾಸ್ತ್ರವನ್ನು ವಸಿಷ್ಠರ ಮೇಲೆ ಬಿಟ್ಟನು. ಅದು ಭುಗಿಲ್‌ ಎನ್ನುತ್ತ ರಭಸದಿಂದ ನುಗ್ಗಿಬಂದಿತು. ಆದರೇನು? ಬ್ರಹ್ಮದಂಡದೆದುರಿಗೆ ಅದರ ಜ್ವಾಲೆಯೆಲ್ಲವೂ ಉಡುಗಿತು. ಅಸ್ತ್ರವು ತಣ್ಣನೆಯ ಕೊಳ್ಳಿಯಾಗಿ ಕೆಳಗೆ ಬಿತ್ತು. ಉರಿಯುವ ಕೆಂಡವನ್ನು ಕೆರೆಗೆ ಸುರಿದಂತಾಯಿತು.

ಬ್ರಹ್ಮದಂಡವೆಂದರೇನು? ವಸಿಷ್ಠರ ಕೈಯಲ್ಲಿದ್ದ ಒಂದು ದೊಣ್ಣೆ! ಅವರ ತಪಶ್ಯಕ್ತಿ ಆ ದಂಡದಲ್ಲಿ ಕೇಂದ್ರೀಕೃತವಾಗಿತ್ತು. ವಿಶ್ವಾಮಿತ್ರನು ಕೋಪಗೊಂಡು ಒಂದಾದ ಮೇಲೆ ಒಂದರಂತೆ ವಾರಣ, ರೌದ್ರ, ಐಂದ್ರ, ಪಾಶುಪತ ಮುಂತಾದ ಮಂತ್ರಾಸ್ತ್ರಗಳನ್ನು ಪ್ರಯೋಗಿಸಿದನು. ಏನಾಶ್ಚರ್ಯ! ವಸಿಷ್ಠರ ಬ್ರಹ್ಮದಂಢ ಅವೆಲ್ಲವನ್ನೂ ನುಂಗಿತು. ವಿಶ್ವಾಮಿತ್ರನು ತನ್ನ ದಿವ್ಯಾಸ್ತ್ರಗಳೆಲ್ಲವೂ ವ್ಯರ್ಥವಾಗಿದ್ದನ್ನು ನೋಡಿ ಸಿಟ್ಟಿನಿಂದ ತಳಮಳಿಸಿದನು. ಅತ್ಯಂತ ಭೀಕರವಾದ ಬ್ರಹ್ಮಾಸ್ತ್ರವನ್ನು ಸೆಳೆದು ಬಿಲ್ಲಿಗೆ ಹೂಡಿದನು. ಬ್ರಹ್ಮಾಸ್ತ್ರವೆಂದರೆ ಸಾಮಾನ್ಯವೆ? ಅದರ ಉರವಣೆಯನ್ನು ಕಂಡು ಎಲ್ಲರೂ ತಲ್ಲಣಿಸಿದರು. ದೇವತೆಗಳು ನಡುಗಿದರು. ವಸಿಷ್ಠರ ಗತಿ ಏನಾಗುವುದೋ ಎಂದು ಎಲ್ಲರೂ ಕಂಗಾಲಾದರು. ವಿಶ್ವಾಮಿತ್ರನು ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ವಸಿಷ್ಠರ ಮೇಲೆ ಪ್ರಯೋಗಿಸಿದನು. ವಸಿಷ್ಠರು ಅಲ್ಲಾಡದೆ ನಿಂತಿದ್ದರು. ಆ ಸಮಯದಲ್ಲಿ ಮೈಯಿಂದ ಬೆಂಕಿಯ ಕಿಡಿಗಳು ಸಿಡಿದವು. ಅವರ ಕೈಯಲ್ಲಿದ್ದ ಬ್ರಹ್ಮದಂಡವು ಯಮದಂಡದಂತೆ ಕಾಣಿಸಿತು. ವಿಶ್ವಾಮಿತ್ರನು ಬಿಟ್ಟ ಬ್ರಹ್ಮಾಸ್ತ್ರವು ಬೋರ್ಗರೆಯುತ್ತ ಸಿಡಿಲಿನಂತೆ ಎರಗಿತು. ಎರಗಿ ಬ್ರಹ್ಮದಂಡದಲ್ಲಿ ಅಡಗಿಹೋಯಿತು! ಅಲ್ಲಿದ್ದ ಮುನಿಗಳು ವಸಿಷ್ಠರನ್ನು ಸ್ತುತಿಸುತ್ತ, “ಮಹಾತ್ಮರೆ, ನಿಮ್ಮ ಒಲವು ಊಹೆಗೆ ಮೀರಿದ್ದು. ನಿಮ್ಮ ಕೋಪವು ಶಾಂತವಾಗಲಿ. ವಿಶ್ವಾಮಿತ್ರನು ಸೋತನು. ಪ್ರಸನ್ನರಾಗಿರಿ” ಎಂದು ಪ್ರಾರ್ಥಿಸಿದರು. ಮುನಿಗಳ ಪ್ರಾರ್ಥನೆಯನ್ನು ಮನ್ನಿಸಿ ವಸಿಷ್ಠರು ಶಾಂತರಾದರು.

ವಿಶ್ವಾಮಿತ್ರನ ಬಳಿ ಇನ್ನು ಯಾವ ಅಸ್ತ್ರವೂ ಉಳಿದಿರಲಿಲ್ಲ. ಅವನಿಗೆ ಪಶ್ಚಾತ್ತಾಪವಾಯಿತು. ತನ್ನ ತಪ್ಪು ತಿಳಿಯಿತು. ಸತ್ಯವೇ ಜಯಿಸುವುದೆಂದು ಮನವರಿಕೆಯಾಯಿತು. ‘ನಾನು ಹೋದದ್ದು ತಪ್ಪುದಾರಿ, ನ್ಯಾಯವನ್ನು ಬಲಾತ್ಕಾರದಿಂದ ಅದುಮಲು ಸಾಧ್ಯವಿಲ್ಲ’ ಎಂದುಕೊಂಡನು. ಅವನು ನಿಟ್ಟುಸಿರು ಬಿಡುತ್ತ, “ಈ ನನ್ನ ಬಲಕ್ಕೆ ಧಿಕ್ಕಾರ! ತಪಸ್ಸಿನ ಬಲವೇ ಬಲ” ಎಂದು ಹೇಳುತ್ತ ಅಲ್ಲಿಂದ ಹೊರಟುಹೋದನು.

ವಿಶ್ವಾಮಿತ್ರನು ಛಲಗಾರ. ಉತ್ಸಾಹ, ಶಕ್ತಿಯ ತವರುಮನೆ. ಅವನು ತನ್ನಲ್ಲಿಯೇ, ‘ಅಹಾ! ದಿವ್ಯಾಸ್ತ್ರಗಳು ವ್ಯರ್ಥವಾದವು. ವಸಿಷ್ಠರ ಶಕ್ತಿ ಅದ್ಭುತವಾದ್ದು. ತಪಸ್ಸು, ಸತ್ಯ, ಅಹಿಂಸೆಗಳ ಮಹಿಮೆಗೆ ಎಣೆಯಿಲ್ಲ. ನಾನು ವಸಿಷ್ಠರಿಗೆ ಸರಿಸಮನಾಗಬೇಕು’ ಎಂದು ನಿರ್ಧರಿಸಿದನು. ತನ್ನ ರಾಜ್ಯವನ್ನು ಮಗನಿಗೆ ವಹಿಸಿಕೊಟ್ಟು ತಪಸ್ಸಿಗಾಗಿ ಹೊರಟುಹೋದನು. ಘೋರ ತಪಸ್ಸಿನಲ್ಲಿ ನಿರತನಾದನು. ಅವರಿಗೆ ವಿಶ್ವಾಮಿತ್ರರಾಜ ಎಂಬ ಹೆಸರು ಹೋಗಿ ವಿಶ್ವಾಮಿತ್ರ ಋಷಿಯೆಂದು ಪ್ರಸಿದ್ಧಿ ಬಂದಿತು.

ವಸಿಷ್ಠರ ಶಿಷ್ಯ ಹರಿಶ್ಚಂದ್ರ

ಹರಿಶ್ಚಂದ್ರ ಅಯೋಧ್ಯೆಯ ರಾಜ. ಸತ್ಯವಂತನೆಂದು ಪ್ರಸಿದ್ಧ. ವಸಿಷ್ಠರು ಅವನ ಗುರುಗಳು. ಹರಿಶ್ಚಂದ್ರನೆಂದರೆ ಅವರಿಗೆ ಹೆಮ್ಮೆ.

ಒಂದು ಸಲ ದೇವೇಂದ್ರನ ಸಭೆ ಸೇರಿತ್ತು. ಸಭೆಯಲ್ಲಿ ದೇವೇಂದ್ರನು ಒಂದು ಪ್ರಶ್ನೆಯನ್ನು ಮುಂದಿಟ್ಟನು – ‘ಭೂಲೋಕದಲ್ಲಿ ಸತ್ಯವಂತರು ಯಾರು?’ ಎಂದು. ವಸಿಷ್ಠರು, “ಹರಿಶ್ಚಂದ್ರನು ಸತ್ಯವಂತ. ಎಂತಹ ಸಂದರ್ಭದಲ್ಲಿಯೂ ಅವನು ಸತ್ಯವನ್ನು ಮೀರುವುದಿಲ್ಲ. ಸುಳ್ಳನ್ನು ನುಡಿಯುವುದಿಲ್ಲ” ಎಂದರು. ಎಲ್ಲರೂ ಹೌದೆಂದು ತಲೆದೂಗಿದರು. ವಿಶ್ವಾಮಿತ್ರರು ಎದ್ದು ನಿಂತರು. ಅವರಿಗೆ ವಸಿಷ್ಠರ ಮೇಲೆ ಅಸಮಾಧಾನ ಇದ್ದೇ ಇತ್ತು. ಅವರು, “ದೇವೇಂದ್ರ, ವಸಿಷ್ಠರು ಹೇಳುವುದು ಸರಿಯಲ್ಲ. ತಮ್ಮ ಶಿಷ್ಯನೆಂಬ ಅಭಿಮಾನದಿಂದ ಹರಿಶ್ಚಂದ್ರನು ಸತ್ಯವಂತನೆಂದು ಹೇಳುತ್ತಿದ್ದಾರೆ. ಅದೇನೂ ನಂಬತಕ್ಕ ಮಾತಲ್ಲ. ಬಿಕ್ಕಟ್ಟಿಗೆ ಸಿಕ್ಕಿದಾಗ ಸುಳ್ಳು ಹೇಳದೆ ಇರತಕ್ಕವರು ಯಾರಿದ್ದಾರೆ?” ಎಂದರು. ವಸಿಷ್ಠರು ಅದನ್ನೊಪ್ಪಲಿಲ್ಲ. “ಎಂತಹ ವಿಪತ್ತು ಬಂದರೂ ನನ್ನ ಶಿಷ್ಯ ಹರಿಶ್ಚಂದ್ರ ಸುಳ್ಳು ಹೇಳುವವನಲ್ಲ” ಎಂದು ದೃಢವಾಗಿ ಹೇಳಿದರು. ವಿವಾದವೆದ್ದಿತು. ವಿಶ್ವಾಮಿತ್ರರು, “ಇದೋ! ಹರಿಶ್ಚಂದ್ರನಿಂದ ಸುಳ್ಳನ್ನು ಹೇಳಿಸುತ್ತೇನೆ. ಹೇಳಿಸಲಿಕ್ಕಾಗದಿದ್ದರೆ ನನ್ನ ಪತಶ್ಯಕ್ತಿಯನ್ನು ಅವನಿಗೆ ಧಾರೆಯೆರೆದು ಕೊಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು.

ಸಭೆ ಮುಗಿಯಿತು. ವಸಿಷ್ಠರು ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ವಿಶ್ವಾಮಿತ್ರರು ನಾನಾ ವಿಧಗಳಲ್ಲಿ ಹರಿಶ್ಚಂದ್ರನನ್ನು ಪರೀಕ್ಷಿಸುತ್ತಾರೆಂದೂ ಅವನನ್ನು ಬಹಳ ಕಷ್ಟಕ್ಕೆ ಸಿಕ್ಕಿಸುತ್ತಾರೆಂದೂ ವಸಿಷ್ಠರಿಗೆ ತಿಳಿದಿತ್ತು. ಆದರೂ ಆ ವಿಷಯವನ್ನು ಹರಿಶ್ಚಂದ್ರನಿಗೆ ಹೇಳಲಿಲ್ಲ. ಮುನ್ನೆಚ್ಚರಿಕೆಯನ್ನು ಕೊಟ್ಟು ಪರೀಕ್ಷಿಸಿದರೆ ಅದರಲ್ಲಿ ಹೆಚ್ಚುಗಾರಿಕೆ ಏನು? ಸತ್ಯನಿಷ್ಠನು ಯಾವಾಗಲೂ ಸತ್ಯವನ್ನೇ ಹೇಳುತ್ತಾನೆ ಎಂದು ತಿಳಿದು ಅವರು ಸುಮ್ಮನಾದರು.

ಇತ್ತ ವಿಶ್ವಾಮಿತ್ರಮುನಿಗಳು ಹರಿಶ್ಚಂದ್ರನ ಪರೀಕ್ಷೆಗೆ ನಿಂತರು. ವಸಿಷ್ಠರ ಮೇಲಿನ ಕೋಪದಿಂದ ಅವರು ಈ ಕಾರ್ಯಕ್ಕಿಳಿದರು. ವಿಶ್ವಾಮಿತ್ರರು ತಮ್ಮ ಬುದ್ಧಿಶಕ್ತಿಯೆಲ್ಲವನ್ನೂ ವಿನಿಯೋಗಿಸಿದರು. ಕಪಟದಿಂದ ಹರಿಶ್ಚಂದ್ರನನ್ನು ಮಾತಿಗೆ ಸಿಕ್ಕಿಸಿಕೊಂಡು ಅವನ ರಾಜ್ಯವನ್ನು ಕಿತ್ತುಕೊಂಡರು. ಸಾಲದ ಹೊರೆಯನ್ನು ಹೊರಿಸಿದರು. ಅವನು ರಾಣಿಯಾದ ಚಂದ್ರಮತಿ ಮತ್ತು ಮಗನಾದ ಲೋಹಿತಾಶ್ವನೊಡನೆ ಕಾಶಿಗೆ ಹೋಗಬೇಕಾಯಿತು. ಸಾಲವನ್ನು ಕೊಡುವಂತೆ ಅಲ್ಲಿಯೂ ಹರಿಶ್ಚಂದ್ರನನ್ನು ಪೀಡಿಸಿದರು; ಕಾಡಿಸಿದರು. ಅವನು ತನ್ನ ಹೆಂಡತಿಯನ್ನೂ ತನ್ನನ್ನೂ ಮಾರಿಕೊಂಡು ಸಾಲವನ್ನು ತೀರಿಸಿದನು. ಸುಳ್ಳು ಹೇಳಲಿಲ್ಲ. ಅವನು ಚಂಢಾಲನ ದಾಸನಾಗಿ ಸ್ಮಶಾನವನ್ನು ಕಾಯುವ ಪ್ರಸಂಗ ಬಂದಿತು. ಆಗಲೂ ಸತ್ಯವನ್ನು ಬಿಡಲಿಲ್ಲ. ತನ್ನ ಪತ್ನಿಯಾದ ಚಂದ್ರಮತಿಯ ತಲೆಯನ್ನೇ ಕತ್ತರಿಸಬೇಕಾದ ಸಂದರ್ಭವನ್ನು ವಿಶ್ವಾಮಿತ್ರರು ತಂದಿಟ್ಟರು. ಆಗಲೂ ಅವನಿಂದ ಸುಳ್ಳು ಹೇಳಿಸಲು ವಿಶ್ವಾಮಿತ್ರರಿಗೆ ಸಾಧ್ಯವಾಗಲಿಲ್ಲ. ಅವರು ಸೋತರು. ತಮ್ಮ ತಪಶ್ಯಕ್ತಿಯನ್ನು ಹರಿಶ್ಚಂದ್ರನಿಗೆ ಧಾರೆಯೆರೆದುಕೊಟ್ಟು ಮತ್ತೆ ತಪಶ್ಚರ್ಯೆಗೆ ಹೊರಟುಹೋದರು. ಕಡೆಗೂ ವಸಿಷ್ಠರ ಹೇಳಿಕೆ ಸತ್ಯವಾಯಿತು.

ಮಗ ಶಕ್ತಿ

ಕಲ್ಮಷಪಾದನೆಂಬ ರಾಜನೊಬ್ಬನು ಅರಣ್ಯಮಾರ್ಗದಲ್ಲಿ ರಥವನ್ನೇರಿ ಬರುತ್ತಿದ್ದನು. ದಾರಿಯಲ್ಲಿ ವಸಿಷ್ಠರ ಹಿರಿಯ ಮಗ ಶಕ್ತಿಗೆ ಎದುರಾಗಿ ರಾಜನ ರಥವು ಬಂದಿತು. ಶಕ್ತಿಯು ಪಕ್ಕಕ್ಕೆ ಸರಿಯಲಿಲ್ಲ. ನಾವು ಹೋಗುವಾಗ ಎದುರಿಗೆ ತಪಸ್ವಿ, ಗೋವು, ರಾಜ, ಕುರುಡ, ಮುದುಕ, ಹೊರೆಹೊತ್ತವನು, ಗರ್ಭಿಣಿ, ಅಶಕ್ತಿ – ಇವರು ಬಂದರೆ, ಅವರಿಗೆ ದಾರಿಯನ್ನು ಬಿಟ್ಟು ಸರಿಯಬೇಕು ಎಂಬುದು ಧರ್ಮ. ಆಗ ಕಲ್ಮಷಪಾದನು ಶಕ್ತಿಯನ್ನು ನೋಡಿ, “ಎಲೈ, ದಾರಿಬಿಟ್ಟು ಸರಿದುನಿಲ್ಲು, ನಾನು ರಾಜನೆಂಬುದು ತಿಳಿಯದೇ?” ಎಂದು ಅಸಡ್ಡೆಯಿಂದ ಹೇಳಿದನು. ಅದಕ್ಕೆ ಋಷಿಯು, “ನಾನು ತಪಸ್ವಿ, ನನಗೆ ದಾರಿಬಿಟ್ಟುಕೊಡಬೇಕಾದ್ದು ರಾಜನ ಕರ್ತವ್ಯ. ಹಾಗೆ ಮಾಡದೆ ನನ್ನನ್ನೇ ಗದರಿಸುವುದು ಯೋಗ್ಯವಲ್ಲ” ಎಂದು ತಿಳಿಸಿದನು. ರಾಜನಿಗೆ ಬಹಳ ಗರ್ವವಿತ್ತು. ಅವನು ಸಿಟ್ಟುಗೊಂಡು ಕುದುರೆ ಚಾಟಿಯಿಂದ ಆ ಮುನಿಯನ್ನು ಬಲವಾಗಿ ಹೊಡೆದನು. ಶಕ್ತಿಯು ಕೋಪದಿಂದ, “ಎಲೈ ನೀಚ, ಋಷಿಯನ್ನು ಚಾಟಿಯಿಂದ ಹೊಡೆಯುವೆಯಾ? ನಿನ್ನದು ರಾಕ್ಷಸಬುದ್ಧಿ, ನೀನು ರಾಕ್ಷಸನಾಗು!” ಎಂದು ಶಪಿಸಿದನು.

ಅಕಸ್ಮಾತ್ತಾಗಿ ಆ ದಾರಿಯಲ್ಲಿ ಬಂದ ವಿಶ್ವಾಮಿತ್ರರು ಇದೆಲ್ಲವನ್ನು ದೂರದಲ್ಲೆ ನಿಂತು ನೋಡಿದರು. ‘ವಸಿಷ್ಠರು  ನನ್ನ ವೈರಿಗಳು. ಅವರ ಮಗನಿಗೆ ಚಾಟಿಯ ಹೊಡೆತ ಬಿದ್ದದ್ದು ಸಂತೋಷದ ವಿಷಯವೇ’ ಎಂದುಕೊಂಡರು. ಕಲ್ಮಷಪಾದನು ರಾಕ್ಷಸನಾಗಲೆಂದು ಶಕ್ತಿಯು ಶಪಿಸಿದ್ದೂ ಅವರಿಗೆ ಗೊತ್ತಾಯಿತು. ಮುಂದೆ ವಿಶ್ವಾಮಿತ್ರರಿಗೆ ಕಿಂಕರನೆಂಬ ರಾಕ್ಷಸನ ಭೇಟಿಯಾಯಿತು. ವಿಶ್ವಾಮಿತ್ರರ ಮಾತಿನಂತೆ ಕಿಂಕರನು ಕಲ್ಮಷಪಾದನ ದೇಹವನ್ನಾಕ್ರಮಿಸಿದನು. ಅವರಿಗೆ ರಾಕ್ಷಸಸ್ವಭಾವ ಬಂದಿತು. ಧರ್ಮಬುದ್ಧಿ ಹೋಯಿತು. ಇದರಿಂದ ಮತ್ತೊಬ್ಬ ಋಷಿಗೆ ಅಪಚಾರ ಮಾಡಿದ, ಆ ಋಷಿಯೂ “ನೀನು ರಾಕ್ಷಸನಾಗು” ಎಂದು ಶಾಪಕೊಟ್ಟ.

‘ಅಧಿಕಾರ-ಐಶ್ವರ್ಯಗಳಿವೆ ಎಂದು ಗರ್ವ ಪಡಬೇಡ.’

ಇದು ಕಲ್ಮಷಪಾದನಿಗೆ ಗೊತ್ತಾಯಿತು. ಇಬ್ಬರ ಶಾಪ ತಗಲಿದ್ದರಿಂದ ಅವನಲ್ಲಿ ತಮೋಗುಣ ಬೆಳೆಯಿತು. ಅವನು ಮಾರನೆಯ ದಿನ ಶಕ್ತಿಯ ಆಶ್ರಮಕ್ಕೆ ಹೋಗಿ, “ಎಲೈ ನಿನ್ನಿಂದ ನನಗೆ ಈ ದುರವಸ್ಥೆ ಬಂದಿತು. ಧರ್ಮಬುದ್ಧಿ ಅಳಿಸಿಹೋಯಿತು. ಇದಕ್ಕೆ ನೀನೇ ಹೊಣೆ! ನಿನ್ನ ಮೇಲೆ ಸೇಡು ತೀರಿಸಿಕೊಳ್ಳುವೆನು. ನಿನ್ನನ್ನು ಮೊದಲು ತಿಂದು ನನ್ನ ರಾಕ್ಷಸಸ್ವಭಾವವನ್ನು ಆರಂಭಿಸುತ್ತೇನೆ!” ಎಂದು ಆರ್ಭಟಿಸಿ ಶಕ್ತಿಯನ್ನು ಕೊಂದು ತಿಂದುಬಿಟ್ಟನು. ಶಕ್ತಿಯ ಸೋದರರನ್ನು ಕೊಂದುಹಾಕಿದನು.

ಕ್ಷಮೆಯ ಮೂರ್ತಿ

ವಸಿಷ್ಠಮುನಿಗಳಿಗೆ ವೃತ್ತಾಂತವೆಲ್ಲವೂ ತಿಳಿಯಿತು. ಹಿರಿಯ ಮಗನಾದ ಶಕ್ತಿಯನ್ನೂ ಇತರ ಮಕ್ಕಳನ್ನೂ ಕಲ್ಮಷಪಾದನು ಕೊಂದನೆಂದು ಕೇಳಿ ಅವರಿಗೆ ಬಹಳ ದುಃಖವಾಯಿತು. ದುಃಖವನ್ನು ತಡೆಯಲಾರದೆ ಕೊರಗುತ್ತ ಆಶ್ರಮವನ್ನು ಬಿಟ್ಟು ಹೊರಟರು. ಕಾಡಿನಲ್ಲಿ ಅಲೆದಾಡಿದರು. ಶೋಕವನ್ನು ತಡೆಯಲಾಗಲಿಲ್ಲ. ಅಷ್ಟರಲ್ಲಿ ಬಸುರಿಯಾದ ಒಬ್ಬ ಹೆಂಗಸು ತಮ್ಮ ಬಳಿಗೆ ಬರುತ್ತಿರುವುದು ಕಾಣಿಸಿತು. ಅವಳು ಶಕ್ತಿಯ ಹೆಂಡತಿ ಅದೃಶ್ಯಂತಿ. ತನ್ನ ಗಂಡನು ಮೃತನಾದ್ದರಿಂದ ರಕ್ಷಣೆಯನ್ನು ಕಾಣದೆ, ಅವಳು ವಸಿಷ್ಠರನ್ನು ಹುಡುಕುತ್ತಾ ಬಂದಿದ್ದಳು. ಆಕೆ ಗರ್ಭವತಿಯಾಗಿರುವುದನ್ನು ತಿಳಿದು ವಸಿಷ್ಠರ ಮನಸ್ಸು ಕರಗಿತು. ಅವರು ಧೈರ್ಯ ತಂದುಕೊಂಡು ಅದೃಶ್ಯಂತಿಯನ್ನು ಸಂತೈಸಿ ತಮ್ಮ ಆಶ್ರಮಕ್ಕೆ ಕರೆದುಕೊಂಡು ಬಂದರು. ಪ್ರೀತಿಯಿಂದ ಅವಳನ್ನು ಸಾಕಿದರು. ಸ್ವಲ್ಪ ದಿನಗಳಲ್ಲಿ ಅದೃಶ್ಯಂತಿ ಒಂದು ಗಂಡು ಮಗುವಿಗೆ ಜನ್ಮವಿತ್ತಳು. ವಸಿಷ್ಠರು ಆ ಮಗುವಿಗೆ ಪರಾಶರ ಎಂದು ಹೆಸರಿಟ್ಟರು.

ಒಂದು ದಿನ ವಸಿಷ್ಠರು ಸಮಿತ್ತುಗಳನ್ನು ತರಲು ಅರಣ್ಯದೊಳಗೆ ಹೋದರು. ಅವರಿಗೆ ನೆರವಾಗಲು ಅದೃಶ್ಯಂತಿಯೂ ಹೋದಳು. ಅವಳು ಸೌದೆಯ ಹೊರೆಯನ್ನು ಕಟ್ಟುತ್ತಿರುವಾಗ ಒಬ್ಬ ರಾಕ್ಷಸನು ಅಬ್ಬರಿಸುತ್ತ ಬಂದನು. ಅದೃಶ್ಯಂತಿಯು ಹೆದರಿ, ಕೂಗುತ್ತ ವಸಿಷ್ಠರ ಬಳಿಗೆ ಓಡಿದಳು. ವಸಿಷ್ಠರು, “ಹೆದರಬೇಡ” ಎಂದು ಸೊಸೆಗೆ ಸಮಾಧಾನ ಹೇಳಿ ರಾಕ್ಷಸನ ಕಡೆಗೆ ತಿರುಗಿ ಒಂದು ಸಲ ಹುಂಕಾರಮಾಡಿದರು. ರಾಕ್ಷಸನು ಮುಂದೆ ಹೆಜ್ಜೆ ಇಡಲಾರದೆ ನಿಂತುಬಿಟ್ಟನು. ಆ ರಾಕ್ಷಸನೇ ಕಲ್ಮಷಪಾದ!  ವಸಿಷ್ಠರು ಜ್ಞಾನದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡು ಕಮಂಡಲುವಿನ ನೀರನ್ನು ಅಭಿಮಂತ್ರಿಸಿ ಆತನ ಮೇಲೆ ಪ್ರೋಕ್ಷಿಸಿದರು. ಒಡನೆಯೇ ಆತನ ಶಾಪವು ನೀಗಿತು. ರಾಕ್ಷಸತನ ಹೋಯಿತು. ಕಲ್ಮಷಪಾದನು ವಸಿಷ್ಠರ ಪಾದಗಳಿಗೆ ವಂದಿಸಿ, “ಮಹರ್ಷಿಗಳೆ, ಶಾಪವಶದಿಂದ ಮಾಡಬಾರದ ಕೆಲಸವನ್ನು ಮಾಡಿದೆನು. ನೀವು ದಯಾಳುಗಳು. ನನ್ನನ್ನು ಮನ್ನಿಸಿ ಉದ್ಧರಿಸಬೇಕು” ಎಂದು ಬೇಡಿಕೊಂಡರು.

ಕಲ್ಮಷಪಾದನಿಂದ ವಸಿಷ್ಠರಿಗಾಗಿದ್ದ ಅಪಕಾರವು ಸಾಮಾನ್ಯವೇ? ಅವನು ಎಂತಹ ಕ್ರೂರಕೃತ್ಯವನ್ನೆಸಗಿದ್ದನು! ವಸಿಷ್ಠರು ಅವನನ್ನು ಕ್ಷಮಿಸಿ, “ರಾಜ, ನಿನ್ನ ನಗರಕ್ಕೆ ಹೋಗಿ ಹಿಂದಿನಂತೆ ರಾಜ್ಯಭಾರವನ್ನು ನಡೆಸಿಕೊಂಡಿರು. ಧರ್ಮಮಾರ್ಗದಿಂದ ಎಂದೂ ತಪ್ಪಿ ನಡೆಯಬೇಡ. ಗುರುಹಿರಿಯರನ್ನು ಗೌರವದಿಂದ ಕಾಣು. ಅಧಿಕಾರ-ಐಶ್ವರ್ಯಗಳಿವೆಯೆಂದು ಗರ್ವಪಡಬೇಡ. ನಿನ್ನ ಅಹಂಕಾರವೇ ನಿನಗೆ ಮುಳಿವಾಯಿತು” ಎಂದು ಬುದ್ಧಿವಾದ ಹೇಳಿ ಕಳಿಸಿದರು. ಎಷ್ಟು ದೊಡ್ಡ ಹರದಯ ವಸಿಷ್ಠಮುನಿಗಳದು!

ತಾಳ್ಮೆಗಿಂತ ದೊಡ್ಡ ಗುಣವಿಲ್ಲ

ಅದೃಶ್ಯಂತಿಯ ಮಗ ಪರಾಶರನು ಆಶ್ರಮದಲ್ಲಿ ಬೆಳೆದನು. ವಸಿಷ್ಠಮುನಿಗಳೇ ಅವನಿಗೆ ವಿದ್ಯಾಭ್ಯಾಸ ಮಾಡಿಸಿದರು. ಅವನು ದೊಡ್ಡವನಾದಮೇಲೆ ತಾಯಿಯಿಂದ ತನ್ನ ತಂದೆಯ ಕಥೆ ತಿಳಿಯಿತು. ಪರಾಶರನು ಸಿಟ್ಟಿನಿಂದ ಕೆಂಡವಾದನು. ಅವನು ವೇದಪಾರಂಗತನೂ ವಸಿಷ್ಠರಂತೆ ತಪಸ್ವಿಯೂ ಆಗಿದ್ದನು. ಅದ್ಭುತವಾದ ತಪಶ್ಯಕ್ತಿ ಅವನಲ್ಲಿತ್ತು. “ನನ್ನ ತಂದೆಯನ್ನು ಕೊಂದ ಕಲ್ಮಷಪಾದನನ್ನು ಕೊಲ್ಲುವೆನು” ಎಂದು ನುಡಿದು ಅಲ್ಲಿಂದ ಹೊರಟನು. ಆಗ ವಸಿಷ್ಠರು ಬಂದು ಅವನನ್ನು ತಡೆದು “ಮಗು ಪರಾಶರ, ಶಾಂತನಾಗು. ತಾಳ್ಮೆಗಿಂತ ದೊಡ್ಡಗುಣವಿಲ್ಲ. ತಪಸ್ಸುಮಾಡತಕ್ಕವನಿಗೆ ತಾಳ್ಮೆಯೇ ಹೆಚ್ಚಿನದು. ಎಷ್ಟಾದರೂ ಕಲ್ಮಷಪಾದನು ಈ ದೇಶದ ರಾಜ. ಈಗ ಧರ್ಮದಿಂದ ರಾಜ್ಯವಾಳುತ್ತಿದ್ದಾನೆ. ಅವನನ್ನು ಕೊಂದರೆ ಲಾಭವೇನು? ನಿನ್ನ ತಂದೆ ಬದುಕುವನೇ? ರಾಜ್ಯವೇ ಅನಾಯಕವಾಗಿ ಹೋಗುತ್ತದೆ. ಪ್ರಜೆಗಳು ಕಷ್ಟದಲ್ಲಿ ಸಿಕ್ಕಿಕೊಳ್ಳುತ್ತಾರೆ. ಸೇಡು ತೀರಿಸುವುದು ನಮಗೆ ತರವಲ್ಲ. ನಿನ್ನ ತಪಶ್ಯಕ್ತಿಯನ್ನು ಇದಕ್ಕಾಗಿ ಬಳಸಬೇಡ. ನಿನ್ನ ತಂದೆ ದುಡುಕಿದನು. ರಾಜನಿಗೆ ದಾರಿಯನ್ನು ಬಿಟ್ಟು ಹೊರಟುಹೋಗಬಹುದಾಗಿತ್ತು. ಸಣ್ಣ ವಿಷಯವನ್ನೇ ದೊಡ್ಡದು ಮಾಡಿದನು. ಅದರಿಂದ ಎಷ್ಟು ಘೋರ ಪರಿಣಾಮವಾಯಿತು, ನೋಡು. ಸಿಟ್ಟಿನಿಂದ ರಾಜನನ್ನು ಶಪಿಸಿ ತನ್ನ ತಪಶ್ಯಕ್ತಿಯನ್ನು ಕಳೆದುಕೊಂಡನು. ತನ್ನ ಮರಣಕ್ಕೆ ತಾನೇ ಕಾರಣನಾದನು. ಆದ್ದರಿಂದ, ಪರಾಶರ, ಕಲ್ಮಷಪಾದನಿಗೆ ಕೇಡನ್ನು ಬಗೆಯಬೇಡ” ಎಂದು ಬುದ್ಧಿ ಹೇಳಿದರು.

ನಾನು ಹೋಗದಿದ್ದರೆ-’

ವಸಿಷ್ಠರ ತಪಸ್ಸೂ ಕೀರ್ತಿಯೂ ಹೆಚ್ಚುತ್ತಲೇ ಇದ್ದವು. ಎಲ್ಲೆಲ್ಲಿಯೂ ಅವರ ಮಹಿಮೆಯ ಮಾತೇ. ವಿಶ್ವಾಮಿತ್ರರು ಹಟದಿಂದ ಮತ್ತೆ ತಪಸ್ಸಿನಲ್ಲಿ ನಿರತರಾದರು. ಅದಕ್ಕೆ ಅನೇಕ ವಿಘ್ನಗಳು ಬಂದವು. ಎಲ್ಲವನ್ನೂ ಎದುರಿಸಿ ಅವರು ಬಹುಕಾಲ ತಪಸ್ಸನ್ನು ಮುಂದುವರಿಸಿದರು. ಬ್ರಹ್ಮದೇವನು ಪ್ರತ್ಯಕ್ಷನಾಗಿ, “ವಿಶ್ವಾಮಿತ್ರ, ನಿನಗೇನು ಬೇಕು? ಕೇಳಿಕೊ” ಎಂದನು. ವಿಶ್ವಾಮಿತ್ರರು, “ಬ್ರಹ್ಮದೇವ, ನಾನು ಬ್ರಹ್ಮರ್ಷಿಯಾಗಬೇಕು. ವಸಿಷ್ಠರು ನನ್ನನ್ನು ಬ್ರಹ್ಮರ್ಷಿಯೆಂದು ಒಪ್ಪಿಕೊಳ್ಳಬೇಕು. ಅವರಿಗಿರುವ ತೇಜಸ್ಸು ನನಗೂ ಬರಬೇಕು” ಎಂದು ಕೇಳಿದರು. ಬ್ರಹ್ಮನು, ‘ಇನ್ನೂ ವಿಶ್ವಾಮಿತ್ರನಲ್ಲಿ ಸ್ಪರ್ಧೆಯ ಮನೋಭಾವ ಇದೆ. ಅಹಂಕಾರ ಉಳಿದಿದೆ’ ಎಂದು ಆಲೋಚಿಸಿ, “ವಿಶ್ವಾಮಿತ್ರ, ನೀನು ಮಹರ್ಷಿಯೆಂದು ಒಪ್ಪಿಕೊಳ್ಳಬಹುದು. ವಸಿಷ್ಠರ ಅರ್ಹತೆ ನಿನಗೆ ಬಂದಿಲ್ಲ. ಅವರು ನಿನ್ನನ್ನು ಬ್ರಹ್ಮರ್ಷಿಯೆಂದು ಅಂಗೀಕರಿಸುವುದು ಕಷ್ಟ” ಎಂದು ಹೇಳಿ ಅದೃಶ್ಯನಾದನು.

ವಿಶ್ವಾಮಿತ್ರರಿಗೆ ತುಂಬಾ ಅಸಮಾಧಾನವಾಯಿತು. “ಇಷ್ಟು ವರ್ಷಗಳವರೆಗೆ ಕಠೋರ ತಪಸ್ಸನ್ನಾಚರಿಸಿದ್ದೇನೆ. ಇದಕ್ಕಾಗಿ ರಾಜ್ಯವನ್ನೇ ತೊರೆದು ಅಡವಿಗೆ ಬಂದೆನು. ಈಗಲೂ ನಾನು ಬ್ರಹ್ಮರ್ಷಿಯಾಗಲಿಲ್ಲವೆ!” ವಸಿಷ್ಠರು ಒಪ್ಪುವುದು ಕಷ್ಟವಂತೆ! ಅದೇಕೆ ಒಪ್ಪುವುದಿಲ್ಲ? ಕೇಳಿಯೇಬಿಡುತ್ತೇನೆ” ಎಂದು ನಿಶ್ಚಯಿಸಿ ನೇರವಾಗಿ ವಸಿಷ್ಠರ ಆಶ್ರಮಕ್ಕೆ ಹೋದರು ರಾತ್ರಿಯಾಗಿತ್ತು. ಆಶ್ರಮದ ಜನರು ನಿದ್ರೆಯಲ್ಲಿದ್ದರು. ವಸಿಷ್ಠರು ಇನ್ನೂ ಮಲಗಿರಲಿಲ್ಲ. ಅವರ ಪತ್ನಿಯಾದ ಅರುಂಧತಿ ವಸಿಷ್ಠರನ್ನು ಕುರಿತು, “ಸ್ವಾಮಿ, ವಿಶ್ವಾಮಿತ್ರನು ಬಹುವರ್ಷಗಳಿಂದ ತಪಸ್ಸು ಮಾಡುತ್ತಿದ್ದಾನೆ. ಬ್ರಹ್ಮನೂ ಅವನಿಗೆ ಪ್ರತ್ಯಕ್ಷನಾಗಿದ್ದಾನೆ. ಬ್ರಹ್ಮರ್ಷಿಯೆನಿಸಿಕೊಳ್ಳಬೇಕೆಂದು ಅವರ ಯತ್ನ. ನೀವು ಒಪ್ಪುವುದಿಲ್ಲವೆಂಬುದೊಂದೇ ಕೊರತೆ. ಹೋಗಲಿ; ಅವನನ್ನು ಬ್ರಹರ್ಷಿಯೆಂದು ಹೇಳಬಾರದೆ?” ಎಂದಳು. ವಸಿಷ್ಠರು, “ಅರುಂಧತಿ, ನಿನಗೆ ತಿಳಿಯದು. ಬ್ರಹ್ಮರ್ಷಿಯಾಗುವುದು ಸುಲಭವಲ್ಲ. ವಿಶ್ವಾಮಿತ್ರನು ಎಷ್ಟು ತಪಸ್ಸು ಮಾಡಿದರೇನು? ‘ನಾನು’ ಸಾಯಬೇಕು, ಅವನು ಬ್ರಹ್ಮರ್ಷಿಯಾಗಬೇಕು. ‘ನಾನು’ ಹೋಗದೆ ಅವನು ಬ್ರಹ್ಮರ್ಷಿಯಾಗಲಾರ” ಎಂದರು. ಈ ಮಾತು ಹೊರಗೆ ನಿಂತಿದ್ದ ವಿಶ್ವಾಮಿತ್ರರಿಗೆ ಕೇಳಿಸಿತು. “ಓಹೋ! ವಸಿಷ್ಠರಿಗೆ ಇಷ್ಟು ಹಟ ಬಂದಿತೆ? ಇವರು ಬದುಕಿರುವವರೆಗೆ ನಾನು ಬ್ರಹ್ಮರ್ಷಿಯಾಗಲಾರೆನಂತೆ! ಈಗಲೇ ಇವರನ್ನು ಮುಗಿಸಿಬಿಡುತ್ತೇನೆ” ಎಂದು ಸಿಟ್ಟಿನಿಂದ ಆಶ್ರಮದೊಳಗೆ ನುಗ್ಗಿದರು. ಅರುಂಧತಿ ಬೆಚ್ಚಿದಳು. ವಸಿಷ್ಠರು ಶಾಂತರಾಗಿಯೇ, “ಅರುಂಧತಿ, ನೋಡಿದೆಯಾ! ವಿಶ್ವಾಮಿತ್ರನಿಗೆ ‘ನಾನು’ ಎಂಬ ಅಹಂಕಾರ ಎಷ್ಟಿದೆ? ಎಷ್ಟು ತಪಸ್ಸು ಮಾಡಿದರೇನು? ಶಾಂತಿ ಎಂಬ ಗುಣವೇ ಇವನ ಬಳಿ ಸುಳಿದಿಲ್ಲ. ಈ ‘ನಾನು’ ಸಾಯದೆ ಬ್ರಹ್ಮರ್ಷಿಯಾಗಲು ಸಾಧ್ಯವೆ?” ಎಂದರು.

ಬ್ರಹ್ಮರ್ಷಿ ವಿಶ್ವಾಮಿತ್ರ

ವಿಶ್ವಾಮಿತ್ರರಿಗೆ ತಮ್ಮ ತಪ್ಪು ತಿಳಿಯಿತು. ‘ನಾನು ಎಂದರೆ ಅಹಂಕಾರ, ಅಹಂಕಾರ ಅಳಿಯಬೇಕು’ ಎಂಬ ವಸಿಷ್ಠರ ಅಭಿಪ್ರಾಯ ಹೊಳೆಯಿತು. ವಿಶ್ವಾಮಿತ್ರರು ಪಶ್ಚಾತ್ತಾಪದಿಂದ ಕುಸಿದುಹೋದರು. ವಸಿಷ್ಠರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. “ಮಹಾತ್ಮರೆ, ನನ್ನ ತಪ್ಪು ಇಂದು ತಿಳಿಯಿತು. ನನ್ನ ಅವಿವೇಕಕ್ಕೆ ಪಾರವೇ ಇಲ್ಲ. ಕರುಣೆಯಿಂದ ಕ್ಷಮಿಸಿರಿ” ಎಂದು ಬೇಡಿಕೊಂಡರು. ವಸಿಷ್ಠರು, “ವಿಶ್ವಾಮಿತ್ರಮುನಿಗಳೇ, ನೀವು ಕಠೋರವಾದ ತಪಸ್ಸು ಮಾಡಿದ್ದೀರಿ. ತಪಸ್ಸಿನ ಗುರಿ ಏನು? ಕೀರ್ತಿಯನ್ನು ಗಳಿಸುವುದಲ್ಲ. ಪವಾಡದ ಶಕ್ತಿಯನ್ನು ಪಡೆಯುವುದಲ್ಲ. ನಾನು, ನನ್ನದು ಎಂಬ ದುರಭಿಮಾನ ತೊಲಗಬೇಕು. ತಪಸ್ಸೆಂಬ ಅಗ್ನಿಯಿಂದ ಅಹಂಕಾರವನ್ನು ಸುಡಬೇಕು. ಆಗ ಮನಸ್ಸು ನಿರ್ಮಲವಾಗುತ್ತದೆ. ನಿರ್ಮಲವಾದ ಹೃದಯದಲ್ಲಿ ಭಗವಂತನು ನೆಲೆಸುತ್ತಾನೆ. ಭಕ್ತಿ ಬೆಳೆಯುತ್ತದೆ. ಎಲ್ಲೆಲ್ಲಿಯೂ ನಿಮಗೆ ಭಗವಂತನೇ ಕಾಣಿಸುತ್ತಾನೆ. ಮನಸ್ಸು ಶುದ್ಧವಾಗದಿದ್ದಲ್ಲಿ ಜಪತಪಗಳೆಲ್ಲವೂ ವ್ಯರ್ಥವೇ ಸರಿ” ಎಂದರು. ವಿಶ್ವಾಮಿತ್ರನು ವಿನಯದಿಂದ, “ನೀವು ನನ್ನ ಗುರುಗಳಾದಿರಿ. ನನ್ನನ್ನು ಮನ್ನಿಸಿ ಹರಸಬೇಕು” ಎಂದು ಪ್ರಾರ್ಥಿಸಿದರು. ವಸಿಷ್ಠರು, “ಆಗಲಿ, ನಿಮ್ಮ ಪ್ರಯತ್ನವು ಸಫಲವಾಗಲಿ” ಎಂದು ಹಾರೈಸಿ ಶುಭವನ್ನು ಕೋರಿದರು. ವಿಶ್ವಾಮಿತ್ರರು ವಸಿಷ್ಠರಿಗೆ ನಮಸ್ಕರಿಸಿ ಅಲ್ಲಿಂದ ಹೊರಟರು.

ಈಗ ವಿಶ್ವಾಮಿತ್ರಮುನಿಗಳಲ್ಲಿ ಅಪೂರ್ವವಾದ ಬದಲಾವಣೆ ಕಾಣಿಸಿತು. ವಸಿಷ್ಠರ ಮೇಲಿನ ದ್ವೇಷವೆಲ್ಲವೂ ತೊಲಗಿತು. ಸ್ಪರ್ಧೆ, ಅಹಂಕಾರಗಳು ಹಿಮ್ಮೆಟ್ಟಿದವು. ಅವರು ಕೌಶಿಕೀನದಿಯ ತೀರಕ್ಕೆ ಹೋಗಿ ಉಗ್ರವಾದ ತಪಸ್ಸಿನಲ್ಲಿ ನಿರಶರಾದರು. ದೇವತೆಗಳು ನಾನಾ ವಿಘ್ನಗಳನ್ನೊಡ್ಡಿದರು. ಯಾವುದಕ್ಕೂ ಅವರು ಜಗ್ಗಲಿಲ್ಲ. ಬಹುದಿನಗಳವರೆಗೆ ಯಾವ ಆಹಾರವನ್ನೂ ತೆಗೆದುಕೊಳ್ಳದೆ ಉಪವಾಸ ವ್ರತದಲ್ಲಿದ್ದರು. ವ್ರತದ ಕಡೆಯಲ್ಲಿ ಉಪವಾಸವನ್ನು ಮುಗಿಸಬೇಕೆಂದು ಅನ್ನ ಮಾಡಿದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು, ಆ ಸಮಯದಲ್ಲಿ ದೇವೇಂದ್ರನು ಒಬ್ಬ ಮುದುಕನ ವೇಷದಲ್ಲಿ ಬಂದು ತನಗೆ ಹಸಿವಾಗುತ್ತಿದೆಯೆಂದನು. ವಿಶ್ವಾಮಿತ್ರರು ಹಿಂದು ಮುಂದು ನೋಡಲಿಲ್ಲ. ಅನ್ನವನ್ನು ಅವನಿಗೆ ಬಡಿಸಿದರು. ಊಟವಿಲ್ಲದೆಯೇ ಮತ್ತೆ ತಪಸ್ಸಿಗೆ ಕುಳಿತರು. ಕಡೆಗೆ ಬ್ರಹ್ಮನು ಸಂತೋಷದಿಂದ ದೇವತೆಗಳೊಡನೆ ಬಂದು, “ವಿಶ್ವಾಮಿತ್ರ, ನಿನ್ನ ತಪಸ್ಸಿಗೆ ಮೆಚ್ಚಿದೆನು. ನೀನು ಬ್ರಹ್ಮರ್ಷಿಯದೆ” ಎಂದನು. ಅಷ್ಟು ಹೊತ್ತಿಗೆ ವಸಿಷ್ಠಮುನಿಗಳು ಆಗಮಿಸಿ, “ವಿಶ್ವಾಮಿತ್ರರೆ, ನೀವು ಬ್ರಹ್ಮರ್ಷಿಗಳಾಗಿದ್ದೀರಿ. ಯಾವ ಸಂದೇಹವೂ ಇಲ್ಲ” ಎಂದರು. ವಿಶ್ವಾಮಿತ್ರರ ಇಷ್ಟ ನೆರವೇರಿತು. ಅವರು ಬ್ರಹ್ಮನಿಗೂ ವಸಿಷ್ಠರಿಗೂ ನಮಸ್ಕರಿಸಿದರು. ಅಂದಿನಿಂದ ವಸಿಷ್ಠರೂ ವಿಶ್ವಾಮಿತ್ರರೂ ಪರಮಸ್ನೇಹಿತರಾದರು. ಹಿಂದಿನ ಯಾವ ಕಹಿಯೂ ಉಳಿಯಲಿಲ್ಲ. ಹೀಗೆ ಗರ್ವಿಷ್ಠನಾದ ವಿಶ್ವಾಮಿತ್ರರಾಜನ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನೇ ಮಾಡಿ ಬ್ರಹ್ಮರ್ಷಿಯಾಗಿ ಮಾಡಿದ ಕೀರ್ತಿ ವಸಿಷ್ಠಮುನಿಗಳಿಗೆ ಸಲ್ಲುತ್ತದೆ.

ಮಹಾತ್ಮನ ಕೋಪವೂ ಲೋಕೋಪಕಾರಕ್ಕೆ

ವಸಿಷ್ಠಾರ ನಂದಿನೀಧೇನುವಿನ ಮೇಲೆ ಕಣ್ಣುಬಿದ್ದುದು ವಿಶ್ವಾಮಿತ್ರನೊಬ್ಬನಿಗೇ ಅಲ್ಲ, ದ್ಯೋ ಎಂಬ ವಸುವಿಗೂ ಸಹ. ವಸುಗಳು ಎಂಟು ಮಂದಿ. ಅವರು ದೇವತೆಗಳು. ಅವರಲ್ಲಿ ದ್ಯೋ ಎಂಬವನೊಬ್ಬ. ಅವನ ಹೆಂಡತಿ ನಂದಿನಿಯನ್ನು ನೋಡಿದಳು. ಅದು ಬಹು ಸುಂದರವಾಗಿತ್ತು. ಪುಷ್ಟವಾದ ದೇಹ. ಮಾಟವಾದ ಕೊಂಬುಗಳು. ಉದ್ದವಾದ ಬಾಲ. ಹೂವಿನ ಗೊಂಚಲಂತೆ ಬಾಲದ ತುದಿ. ದೊಡ್ಡ ಕೆಚ್ಚಲು. ದ್ಯೋವಿನ ಹೆಂಡತಿಗೆ ಹಸುವಿನ ಮೇಲೆ ಆಸೆ ಹುಟ್ಟಿತು. ವಸಿಷ್ಠರ ಹೋಮಧೇನುವನ್ನು ಕದಿಯುವುದು ತಪ್ಪೆಂದು ತಿಳಿದಿದ್ದರೂ ದ್ಯೋ ಹೆಂಡತಿಯ ವ್ಯಾಮೋಹದಿಂದ ಕಳ್ಳತನ ಮಾಡಿದನು.

ಇತ್ತ ಸಂಜೆಯಾದರೂ ನಂದಿನಿ ಬರಲಿಲ್ಲವೆಂದು ವಸಿಷ್ಠಮುನಿಗಳಿಗೆ ತಿಳಿಯಿತು. ಅವರು ಹಸುವನ್ನು ಹುಡುಕುತ್ತ ಹೊರಟರು. ಎಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಆಗ ಜ್ಞಾನದೃಷ್ಟಿಯಿಂದ ನೋಡಿದಾಗ ವಸು ಅದನ್ನು ಕದ್ದಿರುವನೆಂದು ತಿಳಿಯಿತು. ಅವರು ಕೋಪದಿಂದ, “ಎಲಾ ದ್ಯೋ, ನನ್ನ ಹೋಮಧೇನುವನ್ನು ಕದ್ದೆಯಾ? ದೇವತೆಯಾದ ನೀನು ಲೋಕಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು. ಒಬ್ಬ ಸಾಮಾನ್ಯ ಮನುಷ್ಯನಂತೆ ಕಳ್ಳತನವನ್ನು ಮಾಡಬಹುದೆ? ನಿನಗೆ ಬುದ್ಧಿ ಕಲಿಸುವೆನು. ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟು. ಮಡದಿಯ ವ್ಯಾಮೋಹಕ್ಕೊಳಗಾದ ನಿನಗೆ ಮಡದಿ ಇಲ್ಲದಂತಾಗಲಿ” ಎಂದು ಶಪಿಸಿದರು. ಈ ಶಾಪವೃತ್ತಾಂತವು ದ್ಯೋಗೆ ತಿಳಿಯಿತು. ಅವನು ಹೆದರಿ ನಂದಿನಿಯನ್ನು ವಸಿಷ್ಠರಿಗೆ ತಂದೊಪ್ಪಿಸಿದನು. ಅವರಿಗೆ ನಮಸ್ಕರಿಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಕ್ಷಮಿಸಬೇಕೆಂದು ಬೇಡಿದನು. ವಸಿಷ್ಠರು ಮರುಕಗೊಂಡು, “ಎಲೈ ವಸು, ಆದದ್ದು ಆಗಿಹೋಯಿತು. ನನ್ನ ಮಾತು ಸುಳ್ಳಾಗದು. ಆದರೆ ನೀನು ಮನುಷ್ಯನಾಗಿ ಹುಟ್ಟಿದರೂ ಸಂಭಾವಿತನೆನೆಸಿ ಲೋಕದಲ್ಲಿ ಸಕಲರಿಂದಲೂ ಕೀರ್ತಿಗೌರವಗಳನ್ನು ಪಡೆಯುವೆ” ಎಂದರು. ದ್ಯೋ ಭೂಲೋಕದಲ್ಲಿ ಶಂತನು ರಾಜನಿಗೆ ಮಗನಾಗಿ ಜನಿಸಿದನು. ಅವನೇ ಭೀಷ್ಮ.

ವಸಿಷ್ಠರು ಕರುಣೆಯಿಂದ ಭೀಷ್ಮನಿಗೆ ವೇದವೇದಾಂಗಗಳನ್ನೂ ಯುದ್ಧವಿದ್ಯೆಯನ್ನೂ ಕಲಿಸದರು. ಪರಶುರಾಮನಿಂದಲೂ ಭೀಷ್ಮನು ಧನುರ್ವೇದವನ್ನು ಕಲಿತನು. ಭೀಷ್ಮನು ವಿದ್ವಾಂಸನೂ ಅಪ್ರತಿಮ ಶೂರನೂ ಕೀರ್ತಿಶಾಲಿಯೂ ಆಗಿದ್ದನು. ಅವನು ಆಜನ್ಮ ಬ್ರಹ್ಮಚಾರಿ. ಮಹಾಭಾರತದಲ್ಲಿ ಆತನ ಪಾತ್ರ ದೊಡ್ಡದು. ಶರಶಯೈಯಲ್ಲಿ ಮಲಗಿದಾಗಲೂ ಸಹ ಧರ್ಮರಾಜನಿಗೆ ಧರ್ಮೋಪದೇಶ ಮಾಡಿದನು. ರಾಜನೀತಿ, ಸಾಮಾನ್ಯ ನೀತಿ, ಧರ್ಮಗಳನ್ನು ಮನೋಹರವಾದ ಪ್ರಾಚೀನ ಕಥೆಗಳೊಡನೆ ಭೀಷ್ಮನು ಉಪದೇಶಿಸಿದ್ದಾನೆ. ಅವನ ಬೋಧನೆ ಜಗತ್ತಿಗೆ ಒಂದು ಅಮೂಲ್ಯವಾದ ಕೊಡುಗೆ. ವಸಿಷ್ಠರ ಶಾಪದಿಂದ ಪರಿಣಾಮದಲ್ಲಿ ಲೋಕಕ್ಕೊಂದು ಉಪಕಾರವೇ ಆಯಿತು.

ಅಹಿಂಸೆ ಫಲಕಾರಿಯಾಗದಿದ್ದರೆ

ವಸಿಷ್ಠಮುನಿಗಳು, ‘ಶಾಂತಿ ಶಾಂತಿ’ ಎಂದು ಸದಾ ಶಾಂತಿಪಾಠವನ್ನು ಬೋಧಿಸುತ್ತಿದ್ದರೆಂದು ತಿಳಿಯಬಾರದು. ಅನ್ಯಾಯವನ್ನು ಪ್ರತಿಭಟಿಸುವುದಕ್ಕಾಗಿ ಯುದ್ಧವು ಅನಿವಾರ್ಯವಾದರೆ ಯುದ್ಧ ಮಾಡುವುದು ಸರಿಯೆಂದೇ ಅವರು ತಿಳಿದಿದ್ದರು. ಭಾರತೀಯ ಪರಂಪರೆಯಲ್ಲಿ ಅಹಿಂಸೆಗೆ ದೊಡ್ಡ ಸ್ಥಾನವೇನೋ ಇದೆ. ಎಲ್ಲಿ ಅಹಿಂಸೆ ಫಲಕಾರಿಯಗದೋ ಅಹಿಂಸೆಯಿಂದ ಅಧರ್ಮವನ್ನು ತಪ್ಪಿಸಲು ಸಾಧ್ಯವಿಲ್ಲವೋ ಅಲ್ಲಿ ಬಲಪ್ರಯೋಗ ಮಾಡಬಹುದು. ಯುದ್ಧವು ಕ್ಷತ್ರಿಯ ಧರ್ಮವೇ. ಶ್ರೀಕೃಷ್ಣನೂ ಸಹ ಭಗವದ್ಗೀತೆಯಲ್ಲಿ ಅರ್ಜುನನಿಗೆ ಯುದ್ಧ ಮಾಡೆಂದು ಉಪದೇಶಿಸಿದ್ದಾನೆ.

‘ವಿಶ್ವಾಮಿತ್ರರೊಡನೆ ರಾಮನನ್ನು ಕಳುಹಿಸು.’

ವೃತ್ರನೆಂಬ ಒಬ್ಬ ಅಸುರನಿದ್ದನು. ಅವನು ಪ್ರಜಾಕಂಟಕ. ಮೂರು ಲೋಕಗಳನ್ನು ಪೀಡಿಸುತ್ತಿದ್ದನು. ಯಾರ ಮಾತನ್ನೂ ಅವನು ಕೇಳದೆ ಉದ್ಧಟತನದಿಂದ ನಡೆಯುತ್ತಿದ್ದನು. ಅವನ ಪೀಡೆಯನ್ನು ಸಹಿಸಲಾರದೆ ಎಲ್ಲರೂ ದೇವೇಂದ್ರನ ಮೊರೆಹೊಕ್ಕರು. ದೇವೇಂದ್ರನು ವೃತ್ರಾಸುರನೊಡನೆ ಯುದ್ಧಕ್ಕೆ ಬಂದನು. ವೃತ್ರನು ಬಹಳ ಮಾಯಾವಿ. ತನ್ನ ಮಾಯಾಬಲದಿಂದ ಇಂದ್ರನು ಕಂಗೆಡುವಂತೆ ಮಾಡಿದನು. ದೇವೇಂದ್ರನು ಯುದ್ಧ ಮಾಡಲಾರದೆ ದಿಕ್ಕುಗೆಟ್ಟು ಹಿಂದಕ್ಕೆ ಬಂದನು. ವೃತ್ರಾಸುರನ ಭಯದಿಂದ ಅವನ ಬುದ್ಧಿಗೆ ಮಂಕು ಕವಿದಿತ್ತು. ಆಗ ವಸಿಷ್ಠಮುನಿಗಳು ರಥಂತರವೆಂಬ ಸಾಮಮಂತ್ರವನ್ನು ಜಪಿಸಿ ಅವನ ಮಂಕನ್ನು ಹೋಗಲಾಡಿಸಿದರು. “ಇಂದ್ರ, ನೀನು ಶೂರನಾಗಿದ್ದೀಯೆ. ಮೂರು ಲೋಕಗಳಿಗೂ ಅಧಿಪತಿಯಾಗಿದ್ದೀಯೆ. ನೀನು ಹೀಗೆ ಕೈಕಟ್ಟಿ ಕುಳಿತರೆ ಪ್ರಜೆಗಳ ಗತಿ ಏನು? ಸಕಲರೂ ನಿನ್ನಲ್ಲಿ ಜಯದ ಆಸೆಯನ್ನಿಟ್ಟುಕೊಂಡಿದ್ದಾರೆ. ಹೇಡಿತನ ನಿನಗೆ ಸಲ್ಲದು. ಹೊರಡು ಯುದ್ಧಕ್ಕೆ. ನಿನಗೆ ಜಯವಾಗುವುದು” ಎಂದು ಅವನನ್ನು ಹುರಿದುಂಬಿಸಿದರು. ವಸಿಷ್ಠರ ಪ್ರೋತ್ಸಾಹದಿಂದ ಅವನು ಮತ್ತೆ ಯುದ್ಧಕ್ಕೆ ಸಜ್ಜಾದನು. ವಸಿಷ್ಠರ ಆಶೀರ್ವಾದದಿಂದ ಯುದ್ಧದಲ್ಲಿ ವೃತ್ರಾಸುರನನ್ನು ಸಂಹರಿಸಿದನು.

ನಿಜವಾದ ಪುರೋಹಿತ

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ – ಇವನ್ನು ಮನುಷ್ಯನ ಆರು ವೈರಿಗಳೆನ್ನುತ್ತಾರೆ. ಮನುಷ್ಯನ ಶ್ರೇಯಸ್ಸಿಗೆ ಇವು ಅಡ್ಡಿಯನ್ನುಂಟುಮಾಡುತ್ತವೆ. ಇವುಗಳನ್ನು ಜಯಿಸಲು ಯತ್ನಿಸಬೇಕೆಂದೂ ಕಣ್ಣು, ಕಿವಿ, ನಾಲಗೆ ಮುಂತಾದ ಇಂದ್ರಿಯಗಳನ್ನು ನಮ್ಮ ವಶದಲ್ಲಿ ಇಟ್ಟುಕೊಳ್ಳಬೇಕೆಂದೂ ಮಹಾತ್ಮರು ಬೋಧಿಸುತ್ತಾರೆ. ಇವುಗಳನ್ನು ವಶಪಡಿಸಿಕೊಳ್ಳುವುದು ಕಷ್ಟ. ವಸಿಷ್ಠರು ಇವುಗಳನ್ನು ವಶವಪಡಿಸಿಕೊಂಡಿದ್ದರು. ಇವರ ತೇಜಸ್ಸು, ತಪಸ್ಸು, ಸದಾಚಾರಗಳನ್ನು ಮೆಚ್ಚಿ ಇಕ್ಷ್ವಾಕು ವಂಶದ ರಾಜರು ವಸಿಷ್ಠರನ್ನು ತಮ್ಮ ಪುರೋಹಿತರಾಗಿರುವಂತೆ ಪ್ರಾರ್ಥಿಸಿಕೊಂಡಿದ್ದರು.

ಪುರೋಹಿತ ಎಂದರೇನು? ಪುರಃ – ಮುಂದೆ ನಿಂತು, ಹಿತ – ಹಿತವನ್ನು ಮಾಡತಕ್ಕವರು. ಶಿಷ್ಯರಿಗೆ ಹಿತವನ್ನುಂಟುಮಾಡುವುದರಲ್ಲಿ ಯಾರು ಮುಂದಿರುತ್ತಾರೋ ಅವರು ಪುರೋಹಿತರು. ಅಥವಾ ಶಿಷ್ಯರ ಹಿತಕ್ಕಾಗಿ ಮುಂದೆ ನಿಂತವರು.

ದಶರಥನಿಗೂ ಶ್ರೀರಾಮನಿಗೂ ವಸಿಷ್ಠರು ಪುರೋಹಿತರಾಗಿ ಕುಲಗುರುಗಳೆನ್ನಿಸಿಕೊಂಡಿದ್ದರು. ವಸಿಷ್ಠರನ್ನು ಕೇಳದೆ ಅವರು ಯಾವ ಕಾರ್ಯವನ್ನೂ ಮಾಡುತ್ತಿರಲಿಲ್ಲ. ವಿಶ್ವಾಮಿತ್ರರು ಬಂದು, “ನನ್ನ ಯಜ್ಞಯಾಗಗಳನ್ನು ಕಾಪಾಡಲು ರಾಮನನ್ನು ಕಳುಹಿಸು” ಎಂದು ಕೇಳಿದರು. ಎಳೆಯ ವಯಸ್ಸಿನ ರಾಮನನ್ನು ಕಳುಹಿಸಲು ದಶರಥನಿಗೆ ಮನಸ್ಸು ಬರಲಿಲ್ಲ. ವಸಿಷ್ಠರೇ, “ರಾಜ, ವಿಶ್ವಾಮಿತ್ರರು ಮಹಾ ಋಷಿಗಳು. ಅವರೊಡನೆ ರಾಮನನ್ನು ಕಳುಹಿಸು. ಇದರಿಂದ ಒಳ್ಳೆಯದೇ ಆಗುವುದು” ಎಂದರು. ವಿಶ್ವಾಮಿತ್ರರು ರಾಮನಿಗೆ ದಿವ್ಯ ಅಸ್ತ್ರಗಳನ್ನು ಕಲಿಸಿಕೊಟ್ಟರು. ಶ್ರೀರಾಮನಿಗೆ ರಾಘವ ಎಂಬ ಹೆಸರಿದೆ. ರಘು ಎಂಬ ರಾಜನ ವಂಶದಲ್ಲಿ ಹುಟ್ಟಿದ್ದರಿಂದ ರಾಘವನೆಂದು ಹೆಸರಾಯಿತು. ರಘು ಇಕ್ಷ್ವಾಕು ವಂಶದಲ್ಲಿ ಪ್ರಖ್ಯಾತನಾದವನು. ಅವನು ಅಷ್ಟೊಂದು ಕೀರ್ತಿಶಾಲಿಯಾಗುವುದಕ್ಕೆ ವಸಿಷ್ಟಮುನಿಗಳೇ ಕಾರಣ. ಈ ವಿಷಯವಾಗಿ ಒಂದು ಕಥೆ ಇದೆ:

ದಿಲೀಪರಾಜನಿಗೆ ಮಕ್ಕಳಿರಲಿಲ್ಲ. ಅದರಿಂದ ನೊಂದು ದಿಲೀಪನು ಪತ್ನಿಯಾದ ಸುದಕ್ಷಿಣೆಯೊಡನೆ ಕುಲಗುರುಗಳಾದ ವಸಿಷ್ಠಮುನಿಗಳ ಆಶ್ರಮಕ್ಕೆ ಹೋದನು. ಅವರಲ್ಲಿ ತನ್ನ ಚಿಂತೆಯನ್ನು ನಿವೇದಿಸಿಕೊಂಡನು. ಅವನಿಗೆ ಸಂತಾನವಿಲ್ಲದ್ದಕ್ಕೆ ಕಾರಣವೇನೆಂದು ವಸಿಷ್ಠರು ಜ್ಞಾನದೃಷ್ಟಿಯಿಂದ ನೋಡಿದರು. ಕಾರಣ ಗೋಚರಿಸಿತು. ಏನೆಂದರೆ, ಒಮ್ಮೆ ದಿಲೀಪನು ಹೋಗುತ್ತಿದ್ದ ದಾರಿಯಲ್ಲಿ ಕಾಮಧೇನು ನಿಂತಿದ್ದಿತು. ದಿಲೀಪನು ಕಾರ್ಯಗೌರವದಿಂದ ಕಾಮಧೇನುವನ್ನು ಗಮನಿಸದೆ ಮುಂದೆ ಹೋದನು. ದಿಲೀಪನು ಅದಕ್ಕೆ ನಮಸ್ಕರಿಸಲಿಲ್ಲವಾದ್ದರಿಂದ ಅವನಿಗೆ ಸಂತಾನವಾಗಲಿಲ್ಲ ಎಂದು ವಸಿಷ್ಠರು ತಿಳಿದು ಅದಕ್ಕೆ ಪರಿಹಾರವನ್ನೂ ಹೇಳಿದರು – ಕಾಮಧೇನುವಿನ ಮಗಳಾದ ನಂದಿನಿಯನ್ನು ರಾಜನು ಸೇವಿಸಬೇಕೆಂದು. ಅದರಂತೆ ದಿಲೀಪನು ತನ್ನ ಪತ್ನಿಯೊಡನೆ ಭಕ್ತಿಯಿಂದ ಗೋಸೇವೆ ಮಾಡಿದನು. ಅನಂತರ ರಘು ಅವನಿಗೆ ಮಗನಾಗಿ ಜನಿಸಿದನು. ವಸಿಷ್ಠರ ಕಾರುಣ್ಯದಿಂದ ರಘುರಾಜನು ವಿಖ್ಯಾತನಾದನು.

ದುಃಖಿತರಿಗೆ ಅಮೃತವಾಣಿ

ರಘುವಿನ ಮಗ ಅಜಚಕ್ರವರ್ತಿ. ಅವನ ಮಡದಿ ಇಂದುಮತಿ ಚೆಲುವೆ. ಬಹು ಒಳ್ಳೆಯವಳು. ಅಜನಿಗೆ ಅವಳಲ್ಲಿ ಇನ್ನಿಲ್ಲದಷ್ಟು ಪ್ರೀತಿ. ಅವಳು ತಾರುಣ್ಯದಲ್ಲಿಯೇ ಸತ್ತುಹೋದಳು. ಅಜರಾಜನು ದುಃಖದಿಂದ ಕುಸಿದುಹೋದನು. ರಾಜಕಾರ್ಯವನ್ನೂ ತೊರೆದು ಶೋಕದಿಂದ ಮಂಕಾದನು. ತಾನೂ ಸತ್ತುಹೋಗಬೇಕೆಂಬ ಚಿಂತೆ ಆವರಿಸಿತು. ಆಗ ವಸಿಷ್ಠರು ಅವನಿಗೆ ಹೇಳಿದ ಬುದ್ಧಿವಾದವನ್ನು ಕೇಳಿ: “ರಾಜ, ಮಡದಿ ಅಗಲಿದಳೆಂದು ಕರ್ತವ್ಯವನ್ನು ಮರೆಯಬೇಡ. ಅವಳ ಹಿಂದೆ ನೀನೂ ಸಾಯುವುದಕ್ಕಾಗಿ ಯತ್ನಿಸುವುದು ಯುಕ್ತವಲ್ಲ. ನೀನು ಪ್ರಾಣಬಿಟ್ಟರೆ ಇಂದುಮತಿ ಸಿಕ್ಕುತ್ತಾಳೆಯೇ? ಹುಟ್ಟು ಸಾವು ತಪ್ಪಿದ್ದಲ್ಲ. ಶೋಕವನ್ನು ಬದಿಗೊತ್ತಿ ನಿನ್ನ ಕರ್ತವ್ಯದಲ್ಲಿ ನಿರತನಾಗು. ಜೀವಾತ್ಮವು ತಾನು ನೆಲೆಸಿದ ದೇಹವನ್ನೇ ಬಿಟ್ಟು ಹೋಗುತ್ತಿರುವಾಗ, ಬಂಧುಗಳನ್ನು ಬಿಟ್ಟುಹೋಗುವುದರಲ್ಲಿ ಅಚ್ಚರಿಯೇನು? ಸಾವು ಯಾರಿಗೂ ತಪ್ಪಿದ್ದಲ್ಲ. ನಿನ್ನ ತಂದೆತಾಯಿಗಳನ್ನೇ ನೆನಪು ಮಾಡಿಕೊ. ಕಷ್ಟ ಬಂದಾಗ ಅದನ್ನು ಎದುರಿಸುವುದೇ ಧೀರನ ಲಕ್ಷಣ. ಗಾಳಿ ಬೀಸಿದರೆ ಗಿಡ ಅಲ್ಲಾಡುತ್ತದೆ, ಬೆಟ್ಟ ಅಲ್ಲಾಡುವುದಿಲ್ಲ. ನೀನು ಬೆಟ್ಟದಂತೆ ಇರಬೇಕು.”

ಗೋವಿನಲ್ಲಿ ವಸಿಷ್ಠರಿಗೆ ಅಪಾರವಾದ ಮಮತೆ. ಸೌದಾಸ ಎಂಬುವನು ಒಂದು ಸಲ, “ಮಹರ್ಷಿಗಳೆ, ಈ ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ವಸ್ತು ಯಾವುದು?” ಎಂದು ಕೇಳಿದನು. ವಸಿಷ್ಠರು, “ನನ್ನ ಅಭಿಪ್ರಾಯದಲ್ಲಿ ಅತ್ಯಂತ ಪವಿತ್ರವಾದದ್ದು ಗೋವು. ಗೋವಿನ ಹಾಲಿಗಿಂತ ತುಪ್ಟಿಪುಷ್ಟಿಗಳನ್ನು ಕೊಡುವ ಆಹಾರ ಯಾವುದಿದೆ? ಅದರ ಗೊಬ್ಬರವೂ ಸಹ ಧಾನ್ಯಗಳ ಬೆಳೆಗೆ ಅವಶ್ಯಕ.  ನನ್ನಂಥವರಿಗೆ ಹೋಮಸಾಮಗ್ರಿ ಗೋವಿನಿಂದಲೇ ಆಗಬೇಕು. ಗೋವು ತಾಯಿಗೆ ಸಮಾನ. ಗೋವುಗಳಿದ್ದಲ್ಲಿ ನಾವು ಇರುತ್ತೇವೆ. ನಮ್ಮ ಬಳಿ ಗೋವು ಸದಾ ನೆಲೆಸಿರಲಿ! ಆದರೆ ಗೋವಿಗೆ ಗೌರವ, ಪೂಜೆಗಳನ್ನು ಸಲ್ಲಿಸಿದರೆ ಸಾಲದು. ಗೋವನ್ನು ತಾಯಿಯಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.

ಕರ್ಮಯೋಗಿ

ವಸಿಷ್ಠರು ಮಹಾಜ್ಞಾನಿಗಳು. ಋಗ್ವೇದದ ಅನೇಕ ಮಂತ್ರಗಳು ಅವರ ರಚನೆ. ವಸಿಷ್ಠ ಸ್ಮೃತಿ ಎಂಬ ಧರ್ಮ ಶಾಸ್ತ್ರವನ್ನು ಅವರು ಬರೆದಿದ್ದಾರೆ. ರಾಮಾಯಣವನ್ನೂ ರಚಿಸಿದ್ದಾರೆ. ಅದಕ್ಕೆ ವಾಸಿಷ್ಠರಾಮಾಯಣವೆಂದು ಹೆಸರು. ಒಂದು ಕಾರ್ಯವನ್ನು ಸಾಧಿಸುವುದಕ್ಕೆ ದೈವಮನುಷ್ಯ ಪ್ರಯತ್ನಗಳೆರಡೂ ಬೇಕೆಂದು ಅವರು ನಂಬಿದ್ದರು. ದೈವ-ಪೌರುಷಗಳು ರಥದ ಎರಡು ಗಾಲಿಗಳಂತೆ. ಹಕ್ಕಿಯ ಎರಡು ರೆಕ್ಕೆಗಳಂತೆ.  ಯಾವುದಿಲ್ಲದಿದ್ದರೂ ಕೆಲಸ ಸಾಗದು. ದೈವವನ್ನೂ ನಂಬಬೇಕು. ಮನುಷ್ಯಯತ್ನವನ್ನೂ ನಡೆಸಬೇಕು ಎಂದು ಅವರ ಸಿದ್ಧಾಂತ. ಅವರ ಸಂದೇಶ ಇದು: ‘ಬೀಜಕ್ಕೆ ತಕ್ಕಂತೆ ಮರ. ಮರಕ್ಕೆ ತಕ್ಕ ಹಣ್ಣು. ಬೀಜ ಉತ್ತಮವಾಗಿದ್ದರೆ ಹಣ್ಣ ಉತ್ತಮವಾಗಿರುತ್ತದೆ. ಒಳ್ಳೆಯ ಕೆಲಸದಿಂದ ಒಳ್ಳೆಯ ಫಲ. ಕೆಟ್ಟ ಕೆಲಸದಿಂದ ಕೆಟ್ಟ ಫಲ. ದೈವವೆನ್ನುವುದು ಬೀಜವಿದ್ದಂತೆ. ನಮ್ಮ ಪ್ರಯತ್ನ ನೆಲ ಕೃಷಿ ಇದ್ದಂತೆ. ವಿದ್ಯೆ, ಹಣ, ಮನೆ , ಸ್ನೇಹಿತರು – ಎಲ್ಲವೂ ಪ್ರಯತ್ನದಿಂದ ದೊರಕತಕ್ಕವು. ಕೆಲಸ ಮಾಡದ ಹೇಡಿಗೆ ಯಾವುದೂ ಇಲ್ಲ. ಎಲ್ಲವನ್ನೂ ದೈವದ ಮೇಲೆ ಹೊರಿಸಿ ಸುಮ್ಮನಿರತಕ್ಕವನಿಗೆ ಯಾವುದೂ ಇಲ್ಲ. ಈ ಲೋಕದಲ್ಲಿ ಸೋಮಾರಿತನವೆಂಬುದು ಒಂದು ರೋಗ. ಅನರ್ಥಕಾರಿ. ಸೋಮಾರಿತನದಿಂದಲೇ ಜನರು ವಿದ್ಯಾಹೀನರೂ ಬಡವರೂ ಆಗಿದ್ದಾರೆ. ಈ ರೋಗವಿಲ್ಲದಿದ್ದರೆ ಯಾವನು ವಿದ್ಯಾವಂತನಾಗುವುದಿಲ್ಲ? ಯಾವನು ಧನವಂತನಾಗುವುದಿಲ್ಲ? ಆಲಸ್ಯವನ್ನು ಬದಿಗೊತ್ತಿದರೆ ಎಲ್ಲರೂ ಸುಖಿಗಳಾಗಬಹುದು. ಇನ್ನೊಬ್ಬರಿಂದ ನಮ್ಮ ಉದ್ಧಾರವಾಗುತ್ತದೆಯೆಂದು ತಿಳಿಯುವುದು ತಪ್ಪು. ನಮ್ಮನ್ನು ಉದ್ಧರಿಸಿಕೊಳ್ಳತಕ್ಕವರು ನಾವೇ. ನಮಗೆ ನಾವೇ ಬಂಧುಗಳು. ಸೋಮಾರಿತನದಿಂದ ನಮಗೆ ನಾವೇ ವೈರಿಗಳಾಗಿರುತ್ತೇವೆ. ನೋಡಿ, ವಿಶ್ವಾಮಿತ್ರನು ತನ್ನ ಅಸಾಧಾರಣವಾದ ಪ್ರಯತ್ನದಿಂದ ಬ್ರಹ್ಮರ್ಷಿಯಾದನು. ಎಲ್ಲವೂ ದೈವವೆಂದು ಸುಮ್ಮನಿದ್ದರೆ ಅವನು ಆ ಪದವಿಗೇರುತ್ತಿದ್ದನೆ?’

ವಸಿಷ್ಠರು ಒಬ್ಬ ಕರ್ಮಯೋಗಿ. ಅವರ ಬದುಕು ಎಲ್ಲರಿಗೂ ಮಾರ್ಗದರ್ಶಿಯಾಗಿತ್ತು. ಸಮಯೋಚಿತವಾದ ಬುದ್ಧಿವಾದದಿಂದ ಬಹು ಜನರನ್ನು ಮೇಲೆತ್ತಿದರು. ಅವರ ಸುತ್ತಲೂ ಜ್ಞಾನದ ಬೆಳಕು ಹರಡಿತ್ತು.