ಪ್ರಕೃತಿಯ ಆಗುಹೋಗುಗಳಿಂದ ಮತ್ತು ಮಾನವನ ಚಟುವಟಿಕೆಗಳಿಂದ ವಸ್ತುಗಳು ವಿವಿಧ ಬಲಗಳಿಗೆ ಒಳಪಡುತ್ತವೆ. ಈ ಬಲಗಳು ಆ ವಸ್ತುವಿನ ಸಾಮರ್ಥ್ಯ (strength)ವನ್ನು ಮೀರಿದಾಗ ಅನರ್ಥಗಳು ಸಂಭವಿಸುತ್ತವೆ (ಫೋಟೋ 1,2). ಆದ್ದರಿಂದ ವಸ್ತುವಿನ ಸಾಮರ್ಥ್ಯ ತಿಳುವಳಿಕೆಯು ಬಹಳ ಮಹತ್ವದ್ದು.

ವಸ್ತುಗಳು

ಈ ಲೇಖನದಲ್ಲಿ ವಸ್ತುಗಳು ಎಂದರೆ, ಕಟ್ಟಡಗಳ, ಯಂತ್ರಗಳ ಹತಾರಗಳ, ಉಪಕರಣಗಳ, ಮುಂತಾದವುಗಳಾದ ಇಂಜಿನಿಯರಿಂಗ್ ಉಪಯೋಗಕ್ಕೆ ಬಳಸುವ ವಸ್ತುಗಳು.

ವಸ್ತುಗಳಲ್ಲಿ ಎರಡು ವಿಧ – ಲೋಹಗಳು ಮತ್ತು ಅಲೋಹಗಳು. ಉಕ್ಕು, ಅಲ್ಯುಮಿನಿಯಂ, ತಾಮ್ರ ಮುಂತಾದುವು ಲೋಹಗಳು. ಕಾಂಕ್ರೀಟು, ಗಾರೆ, ಇಟ್ಟಿಗೆ, ಚೌಬೀನೆ, ಪ್ಲಾಸ್ಟಿಕ್ ಮುಂತಾದುವು ಅಲೋಹಗಳು.

ಬಲಗಳು

ಈ ವಸ್ತುಗಳು ಒಳಪಡುವ ಬಲಗಳು ಮೂರು – ತುಯ್ತಬಲ (Tensile force, tension) ಒತ್ತು ಬಲ, (Compressive force, compression) ಮತ್ತು ಶಿಯರ್ ಬಲ (Shear force, shear). ತುಯ್ತಬಲವೆಂದರೆ, ಉದಾಹರಣೆಗೆ ಹಗ್ಗವನ್ನು ಕುಯ್ಯಲು ಪ್ರಯೋಗಿಸುವ ಬಲ (ಚಿತ್ರ-1ಅ); ಒತ್ತು ಬಲವೆಂದರೆ, ಉದಾಹರಣೆಗೆ ಚೆಂಡನ್ನು ಅಮುಕಲು ಪ್ರಯೋಗಿಸುವ ಬಲ (ಚಿತ್ರ-1ಆ); ಮತ್ತು ಶಿಯರ್ ಬಲವೆಂದರೆ, ವಸ್ತುವಿನ ಪದರುಗಳನ್ನು ಜಾರಿಸಲು ಪ್ರಯೋಗಿಸುವ ಬಲ (ಚಿತ್ರ-1ಇ) (ನೋಡಿ: ‘ಭಾರಹೊರುವ ಗುಟ್ಟು-ಹೊರೆ’, ಬಾಲವಿಜ್ಞಾನ, ಅಕ್ಟೋಬರ್ 2008).

ಸಾಮರ್ಥ್ಯ

ವಸ್ತುವಿನ ಮೇಲೆ ಬಲ ಪ್ರಯೋಗವಾದಾಗ ಆ ವಸ್ತುವಿನ ಪ್ರತಿ ಕಣವೂ ಆ ಬಲಕ್ಕೆ ಪ್ರತಿರೋಧವನ್ನು ನೀಡುತ್ತದೆ. ಈ ಪ್ರತಿರೋಧವನ್ನು ‘ಪ್ರತಿಬಲ (stress)’ ಎನ್ನುವರು. P ಮೌಲ್ಯದ  ಬಲವನ್ನು A ವಿಸ್ತಾರದ ವಸ್ತುವಿನ ಮೇಲೆ ಪ್ರಯೋಗಿಸಿದಾಗ ಅದರಲ್ಲಿ ಉಂಟಾಗುವ ಪ್ರತಿಬಲ f=P/A. ಬಲದ ಪರಿಮಾಣವು ಹೆಚ್ಚುತ್ತಾ ಹೋದಂತೆಲ್ಲಾ ಪ್ರತಿಬಲವೂ ಹೆಚ್ಚುತ್ತಾ ಹೋಗುತ್ತದೆ.  ಇದು ಒಂದು ಮಿತಿಯನ್ನು ಮೀರಿದಾಗ, ಆ ವಸ್ತುವು ಆ ಬಲದ ಪ್ರಭಾವದಲ್ಲಿ ಪತನ (Collapse) ಗೊಳ್ಳುತ್ತದೆ.  ಈ ಮಿತಿಯು ಆ ವಸ್ತುವಿನ ಸಾಮರ್ಥ್ಯ.

P ಯು kg ಯಲ್ಲಿದ್ದು, A ಯು cm2ನಲ್ಲಿದ್ದಾಗ, ಪ್ರತಿ ಬಲ ಹಾಗೂ ಸಾಮರ್ಥ್ಯವನ್ನು kg/cm2  ಎಂದು ವ್ಯಕ್ತಪಡಿಸುತ್ತಾರೆ.  ಈಚೆಗೆ ಇದನ್ನು N/mm2 ಅಥವಾ Mega Pascal (MPa) ಎಂದೂ ವ್ಯಕ್ತಪಡಿಸುತ್ತಿರುವರು.

ವಸ್ತುವಿನ ಸಾಮರ್ಥ್ಯವು ಎಲ್ಲಾ ಬಲಗಳ ಪ್ರಭಾವದಲ್ಲೂ ಒಂದೇ ಇರುವುದಿಲ್ಲ.  ಒತ್ತುಬಲದ ಪ್ರಭಾವದಲ್ಲಿ ಅದರ ಸಾಮರ್ಥ್ಯವನ್ನು ಒತ್ತು ಸಾಮರ್ಥ್ಯ ಎನ್ನುವರು (Compressive strength), ತುಯ್ತ ಬಲದ ಪ್ರಭಾವದಲ್ಲಿ ತುಯ್ತ ಸಾಮರ್ಥ್ಯ  (Tensile strength) ಎನ್ನುವರು ಮತ್ತು ಶಿಯರ್ ಬಲದ ಪ್ರಭಾವದಲ್ಲಿ ಶಿಯರ್ ಸಾಮರ್ಥ್ಯ (Shear strength) ಎನ್ನುವರು.  ಈ ಮೂರೂ, ವಸ್ತುವಿನ ನೈಸರ್ಗಿಕ ಲಕ್ಷಣಗಳು.

ಶಿಯರ್ ಬಲವು ವಸ್ತುವಿನಲ್ಲಿ ಪುನಃ ತುಯ್ತ ಪ್ರತಿಬಲವನ್ನೂ, ಒತ್ತು ಪ್ರತಿಬಲವನ್ನೂ ಉಂಟುಮಾಡುತ್ತದೆ. ಆದ್ದರಿಂದ, ತುಯ್ತ ಸಾಮರ್ಥ್ಯದ ಮತ್ತು ಒತ್ತು ಸಾಮರ್ಥ್ಯದ ಅಧ್ಯಯನಕ್ಕೇ ಹೆಚ್ಚು ಆದ್ಯತೆ ನೀಡುತ್ತಾರೆ.

ಸ್ಟ್ರೆಯ್ನೆ (Strain)

ವಸ್ತುವು ಬಲಗಳಿಗೊಳಪಟ್ಟಾಗ ಅದರ ಅಳತೆ ಮತ್ತು ಆಕಾರದಲ್ಲಿ ಬದಲಾವಣೆಯಾಗುತ್ತದೆ. ಒಂದು ರಬ್ಬರ್ ಪಟ್ಟಿಯನ್ನು ಎಳೆದು ನೋಡಿ. ಅದರ ಉದ್ದವು ಹೆಚ್ಚಾಗುತ್ತದೆ. ಒಂದು ಪೆನ್ಸಿಲ್ ರಬ್ಬರನ್ನು ಒತ್ತಿ ನೋಡಿ, ಅದರ ಅಳತೆಯು ಕಡಿಮೆಯಾಗುತ್ತದೆ. ಬಲಪ್ರಯೋಗವಾದಾಗಿನ ಅಳತೆಗೂ ಮೂಲ ಅಳತೆಗೂ ಇರುವ ವ್ಯತ್ಯಾಸವನ್ನು ‘ವಿರೂಪನ’ ಎನ್ನುವರು (d) (ಚಿತ್ರ-2). ವಿರೂಪನ ಹಾಗೂ ಮೂಲ ಅಳತೆಯ ಅನುಪಾತವನ್ನು ಸ್ಟ್ರೆಯ್ನೆ (e)ಎನ್ನುವರು. ತುಯ್ತದಿಂದುಟಾದುದು ತುಯ್ತ ಸ್ಟ್ರೆಯ್ನೆ. ಒತ್ತಿಕೆಯಿಂದುಂಟಾದುದು ಒತ್ತಿಕೆ ಸ್ಟ್ರೆಯ್ನೆ.

ಪ್ರತಿಬಲಸ್ಟ್ರೆಯ್ನೆ ಲೇಖ

ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಬಲವನ್ನು ಹೆಚ್ಚಿಸುತ್ತಾ ಹೋದರೆ, ಅದಕ್ಕನುಗುಣವಾದ ಸ್ಟ್ರೆಯ್ನೆ ಕೂಡಾ ಹೆಚ್ಚುತ್ತಾ ಹೋಗುತ್ತದೆ. ಪ್ರತಿಬಲ ಮತ್ತು ಅದಕ್ಕನುಗುಣವಾದ ಸ್ಟ್ರೆಯ್ನೆ ನಡುವೆ ನಿರ್ದಿಷ್ಟ ಸಂಬಂಧವಿರುತ್ತದೆ. ಈ ಸಂಬಂಧದ ಲೇಖವನ್ನು ಪ್ರತಿಬಲ–ಸ್ಟ್ರೆಯ್ನೆ ಲೇಖ (Stress-Strain Diagram) ಅಥವಾ f-e ಲೇಖ ಎನ್ನುವರು. ಅದರ ಸಾರ್ವತ್ರೀಕರಿಸಿದ (generalised) ಲೇಖವು ಚಿತ್ರ-3ರಲ್ಲಿದೆ.

ಇದರಲ್ಲಿ OA ಭಾಗವು ಸರಳರೇಖೆಯಾಗಿದೆ. OA ಭಾಗವನ್ನು ಸ್ಥಿತಿಸ್ಥಾಪಕ ವಲಯ ಎನ್ನುವರು. ವಸ್ತುವಿನ ಮೇಲೆ ಪ್ರಯೋಗವಾಗಿದ್ದ ಬಲವನ್ನು ಹಿಂತೆಗೆದಾಗ ಅದರ ವಿರೂಪಿತ ಅಳತೆಯು ಮೂಲ ಅಳತೆಗೆ ಹಿಂದಿರುಗುವ ಗುಣವನ್ನು ‘ಸ್ಥಿತಿ ಸ್ಥಾಪಕತ್ವ’ ಎನ್ನುವರು.

ಈ ವಲಯದಲ್ಲಿ f/e ಅನುಪಾತವು ಒಂದು ಸ್ಥಿರಾಂಕವಾಗಿರುತ್ತದೆ. AB ವಲಯದಲ್ಲಿ ವಸ್ತುವು ನಮ್ಯವಾಗಿದ್ದು ಪ್ರತಿಬಲದ ಹೆಚ್ಚಳವಾಗದಿದ್ದರೂ, ಸ್ಟ್ರೆಯ್ನೆ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿಯ A ಬಿಂದುವನ್ನು ಯೀಲ್ಡ್ ಬಿಂದು ಅಥವಾ ನಮ್ಯತಾ ಬಿಂದು (Yield point) ಎನ್ನುವರು. ಅದಕ್ಕನುಗುಣವಾದ ಪ್ರತಿಬಲವನ್ನು ‘ಯೀಲ್ಡ್ ಸಾಮರ್ಥ್ಯ’ ಅಥವಾ ನಮ್ಯತಾ ಸಾಮರ್ಥ್ಯ (Yield Strength) ಎನ್ನುವರು. ಪುನಃ B ಯಿಂದ C ವರೆಗಿನ ವಲಯವು ಸರಳರೇಖೆಯಾಗಿರುತ್ತದೆ. C ಬಿಂದುವಿನ ನಂತರ ಸ್ಟ್ರೆಯ್ನೆನ ಹೆಚ್ಚಳದೊಂದಿಗೆ ಪ್ರತಿಬಲವು ಇಳಿಮುಖವಾಗುತ್ತಾ, ವಸ್ತುವು ಪತನಗೊಳ್ಳುತ್ತದೆ. C ಬಿಂದುವಿಗೆ ಅನುಗುಣವಾದ ಪ್ರತಿಬಲವನ್ನು ‘ಅಂತಿಮ ಸಾಮರ್ಥ್ಯ’ (Ultimate strength) ಎನ್ನುವರು.

ಎಲ್ಲ ವಸ್ತುಗಳ f-e ಲೇಖವು ಚಿತ್ರ-3ರಂತೆ ಒಂದೇ ರೀತಿ ಇರುವುದಿಲ್ಲ. ಚಿತ್ರ-4 ನೋಡಿ.

ಪರೀಕ್ಷಣೆ

f-e ಲೇಖವನ್ನು ಸುಸಜ್ಜಿತ ಪ್ರಯೋಗಾಲಯಗಳಲ್ಲಿ, ವಸ್ತುಗಳ ಸ್ಯಾಂಪಲ್ಲುಗಳನ್ನು ಪ್ರಯೋಗಕ್ಕೊಳಪಡಿಸಿ ಕಂಡುಕೊಳ್ಳುವರು. ಇದಕ್ಕೆ ವಸ್ತುಗಳ ಪರೀಕ್ಷಣಾ ನಮೂನೆ (Test specimen)ಗಳನ್ನು ಮಾನಕ ವಿಶಿಷ್ಟ ನಿಗದಿ (standard specification) ಗಳಲ್ಲಿ ನಮೂದಿಸಿರುವ ವಿಧಿಗಳಿಗನುಗುಣವಾಗಿ ಸಿದ್ಧಪಡಿಸುತ್ತಾರೆ (ಚಿತ್ರ-5).

ತುಯ್ತ ಸಾಮರ್ಥ್ಯ ಪರೀಕ್ಷಣೆಗೆ (ಅ)ನಂತೆಯೂ, ಒತ್ತು ಸಾಮರ್ಥ್ಯ ಪರೀಕ್ಷಣೆಗೆ (ಆ) ಅಥವಾ (ಇ)ನಂತೆಯೂ ಸಿದ್ಧಪಡಿಸುವರು. ಪರೀಕ್ಷಣೆಯನ್ನು ವಿಶೇಷ ಪರೀಕ್ಷಣಾ ಯಂತ್ರಗಳಲ್ಲಿ (ಫೋಟೋ3, 4)ನಡೆಸುವರು. ಇದರಿಂದ f-e ಲೇಖವನ್ನು ಪಡೆಯುವರು. ಈ ಲೇಖದಿಂದ ವಸ್ತುವಿನ ಸಾಮರ್ಥ್ಯವನ್ನು ಕಂಡುಕೊಳ್ಳುವರು.

ಉಕ್ಕು, ತಾಮ್ರ, ಅಲ್ಯುಮಿನಿಯಂ ಮುಂತಾದ ತನ್ಯ (ductile)ವಸ್ತುಗಳನ್ನು ತುಯ್ತ ಪರೀಕ್ಷೆಗೊಳಪಡಿಸುವರು. ಚೌಬೀನೆಯಂತಹ ನಾರಿನವುಗಳನ್ನು ತುಯ್ತ ಮತ್ತು ಒತ್ತಿಕೆ ಪರೀಕ್ಷೆಗೊಳಪಡಿಸುವರು. ಸಿಮೆಂಟ್, ಕ್ರಾಂಕ್ರೀಟು, ಗಾರೆ, ತಾಂಡವಾಳ, ಕಂಚಿನಂತಹ ಭಂಗುರ (brittle) ವಸ್ತುಗಳನ್ನೂ ಒತ್ತಿಕೆ ಪರೀಕ್ಷೆಗೊಳಪಡಿಸುವರು.

 

ಸಾಮರ್ಥ್ಯದ ನಿಶ್ಕರ್ಷೆ

ತನ್ಯವಸ್ತುಗಳ ಸಾಮರ್ಥ್ಯವನ್ನು ಯೀಲ್ಡ್ ಸಾಮರ್ಥ್ಯದಿಂದ ಸೂಚಿಸುವರು. ಆದರೆ ಎಲ್ಲ ವಸ್ತುಗಳೂ ಖಚಿತವಾದ ಯೀಲ್ಡ್ ಬಿಂದುವನ್ನು ಹೊಂದಿರುವುದಿಲ್ಲ. ಮೆದು ಉಕ್ಕು ಖಚಿತವಾದ ಯೀಲ್ಡ್ ಬಿಂದು ಹೊಂದಿದ್ದರೆ, (ಚಿತ್ರ-4 ಅ), ತಾಮ್ರ, ಹೆಚ್ಚು ಸಾಮರ್ಥ್ಯದ ಉಕ್ಕು ಮುಂತಾದವುಗಳಿಗೆ ಖಚಿತವಾದ ಯೀಲ್ಡ್ ಬಿಂದು ಇರುವುದಿಲ್ಲ. ಅಂತಹ ವಸ್ತುಗಳಿಗೆ ಏನು ಮಾಡುತ್ತಾರೆ? f-e ಲೇಖದ ಆರಂಭದ ಭಾಗವು ಸುಮಾರಾಗಿ ನೇರವಾಗಿರುತ್ತದೆ. ಅದಕ್ಕೆ ಸಮಾನಾಂತರವಾಗಿ e ಮೌಲ್ಯವು 0.002 ಇರುವ ಬಿಂದುವಿನಲ್ಲಿ ಸರಳ ರೇಖೆ ಎಳೆದಾಗ, ಅದು ಲೇಖವನ್ನು B ಬಿಂದುವಿನಲ್ಲಿ ಸಂಧಿಸುತ್ತದೆ. (ಚಿತ್ರ-4 ಆ, ಇ). ಈ ಬಿಂದುವಿಗೆ ಅನುಗುಣವಾದ ಪ್ರತಿಬಲವನ್ನು ಯೀಲ್ಡ್ ಸಾಮರ್ಥ್ಯವೆಂದು ಪರಿಗಣಿಸುತ್ತಾರೆ.

ಭಂಗುರ ವಸ್ತುಗಳ ಸಾಮರ್ಥ್ಯ, ಅವುಗಳನ್ನು ಒತ್ತಿಕೆಯಲ್ಲಿ ಪರೀಕ್ಷಿಸಿದಾಗ ಯಾವ ಪ್ರತಿಬಲದಲ್ಲಿ ಪತನಗೊಳ್ಳುವುದೋ, ಆ ಪ್ರತಿ ಬಲ. ಇಲ್ಲಿ ಯೀಲ್ಡ್ ಬಿಂದುವಿನ ಸಮಸ್ಯೆ ಬರುವುದಿಲ್ಲ.

ಇಂಜಿನಿಯರಿಂಗ್ ರೂಪನ

ಕಟ್ಟಡಗಳು, ಯಂತ್ರಗಳು, ವಿದ್ಯುತ್ ವ್ಯವಸ್ಥೆ ಇತ್ಯಾದಿಗಳು ಅವುಗಳ ಉಪಯೋಗಕ್ಕನುಗುಣವಾಗಿ ವಿವಿಧ ಬಲಗಳಿಗೆ ಒಡ್ಡಲ್ಪಡುತ್ತವೆ. (ಚಿತ್ರ‑6, ಪೋಟೋ 5, 6, 7, 8). ಈ ಬಲಗಳ ವಿಧಗಳನ್ನೂ ಪರಿಮಾಣಗಳನ್ನೂ ಇಂಜಿನಿಯರಿಂಗ್ ವಿಶ್ಲೇಷಣೆಯಿಂದ ಕಂಡುಕೊಳ್ಳುವರು. ಈ ವಿಶ್ಲೇಷಣೆಯು ವಿವಿಧ ವೈಜ್ಞಾನಿಕ ತತ್ವಗಳನ್ನು ಆಧರಿಸುತ್ತದೆ.

ಈ ಬಲಗಳಿಗೊಳಪಡಿಸುವ ಅಂಗಗಳ ಆಕಾರ ಮತ್ತು ಅಳತೆಗಳನ್ನು ಅವುಗಳ ಸಾಮರ್ಥ್ಯಕ್ಕನುಗುಣವಾಗಿ ನಿರ್ಧರಿಸುವರು. ಈ ನಿರ್ಧರಣಾ ಪ್ರಕ್ರಿಯೆಯು ‘ಇಂಜಿನಿಯರಿಂಗ್ ರೂಪನ’ ಅಥವಾ ಬರಿದೆ ‘ರೂಪನ’.

ಇಂತಹ ಅಂಗಗಳನ್ನು ರೂಪನಗೊಳಿಸುವಾಗ, ಆ ವಸ್ತುವಿನ ಸಾಮರ್ಥ್ಯದ ಒಂದಂಶವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಇದು ಪರಿಮಿತ ಪ್ರತಿಬಲ (Permissible stress) ಸಾಮರ್ಥ್ಯ ಮತ್ತು ಪರಿಮಿತ ಪ್ರತಿಬಲದ ಅನುಪಾತವನ್ನು ಸುರಕ್ಷತಾಂಕ (Factor of safety) ಎನ್ನುವರು. ಇದರ ಮೌಲ್ಯವು ಒಂದಕ್ಕಿಂತ ಹೆಚ್ಚಿರುತ್ತದೆ. ಉದಾಹರಣೆಗೆ, ಉಕ್ಕಿಗೆ ಸುರಕ್ಷತಾಂಕವು 2, ಕಾಂಕ್ರೀಟಿಗೆ 3.

ಹಲವಾರು ಅನಿಶ್ಚಿತತೆಗಳಿಂದ ಉಂಟಾಗಬಹುದಾದ ದುರಂತವನ್ನು ತಪ್ಪಿಸಲು ಸುರಕ್ಷತಾಂಕವನ್ನು ಬಳಸುವರು.

ಸಾಮರ್ಥ್ಯದ ಮಾಹಿತಿ

ವಸ್ತುಗಳ ಸಾಮರ್ಥ್ಯದ ಮಾಹಿತಿಯು ‘ವಸ್ತುಗಳ ಕೈಪಿಡಿ’, ಇಂಜಿನಿಯರಿಂಗ್ ಕೈಪಿಡಿ ಮತ್ತು ಅಂತರ್ಜಾಲದಲ್ಲಿ ದೊರೆಯುತ್ತದೆ. ಉದಾಹರಣೆಗೆ, ಮೆದು ಉಕ್ಕಿನ (Mild steel) ಸಾಮರ್ಥ್ಯ 2450 kg/cm2, ಹೆಚ್ಚು ಸಾಮರ್ಥ್ಯದ ಉಕ್ಕಿನದು (High Tensile Steel) 4900 kg/cm2, ತಾಂಡವಾಳ (Cast Iron)ದ್ದು 5600 kg/cm2, ಕಾಂಕ್ರೀಟಿನದು (1:1½:3) 200 kg/cm2.

ವಿಶೇಷ ಸನ್ನಿವೇಶಗಳಲ್ಲಿ ಅಥವಾ ಸಂದೇಹ ಬಂದಾಗ, ಬಳಸಬೇಕಾದ ವಸ್ತುವಿನ ಸ್ಯಾಂಪಲ್ಲು ಸಂಗ್ರಹಿಸಿ, ಪರೀಕ್ಷಣೆಗೊಳಪಡಿಸಿ ತಿಳಿಯುವರು.

 

ಈ ರೀತಿ, ವಸ್ತುವಿನ ಸಾಮರ್ಥ್ಯದ ಮಾಹಿತಿಯಿಂದ ನಿರಪಾಯವಾದ ಇಂಜಿನಿಯರಿಂಗ್ ರೂಪನವು ಸಾಧ್ಯವಾಗಿದೆ. ಹೀಗಾಗಿ, 300 Km/h ವೇಗದಲ್ಲಿ ಓಡುವ ರೈಲಿನಲ್ಲಿ ನಿರಾತಂಕವಾಗಿ ಪಯಣಿಸಬಹುದು. 120 Km/h ವೇಗದಲ್ಲಿ ಕ್ರಮಿಸುವ ಕಾರಿನಲ್ಲಿ ನಿರ್ಭಯವಾಗಿ ಪ್ರವಾಸ ಮಾಡಬಹುದು, ಬಹು ಮಹಡಿ ಸೌಧದಲ್ಲಿ ಎಲ್ಲಾ ಪ್ರತಿಕೂಲ ವಾತಾವರಣದಲ್ಲೂ ಸುಖವಾಗಿ ವಾಸಿಸಬಹುದು.

ಹಳೆಯ ಕಟ್ಟಡಗಳು, ಯಂತ್ರಗಳು ಎಷ್ಟು ನಂಬಿಕಾರ್ಹ ಎಂದು ತಿಳಿಯಬೇಕಾಗಬಹುದು. ಇವುಗಳಲ್ಲಿ ಈ ಮಾಹಿತಿಯು ಬಹಳ ಉಪಯುಕ್ತ.

ಸಾಮರ್ಥ್ಯದ ಮಾಹಿತಿಯನ್ನು ಎಲ್ಲರೂ ಬಳಸಿಕೊಳ್ಳಬಹುದು.

ಉದಾಹರಣೆಗೆ, ಭಾರ ಎತ್ತಲು ಹಗ್ಗದ ವ್ಯಾಸ, ಸೂರು ಹೊರಲು ಕಾಲಿನ, ಕಂಬಗಳ ಅಳತೆ, ಮುಂತಾದವುಗಳನ್ನು ಇದರಿಂದ ತಿಳಿಯಬಹುದು.

ನೀವೂ, ನಿಮ್ಮ ಮನೆಗಳಲ್ಲಿ ಮತ್ತು ಸುತ್ತಮುತ್ತ ದೊರೆಯುವ ಅನುಕೂಲಗಳಿಂದ ಪ್ರಯೋಗಗಳನ್ನು ನಡೆಸಿ, ವಸ್ತುಗಳ ಸಾಮರ್ಥ್ಯವನ್ನು ತಿಳಿಯಬಹುದು. ಹಾಗೆಯೇ, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್‌ನ ಪ್ರಯೋಗಾಲಯಗಳಿಗೆ ನಿಮ್ಮ ಹಿರಿಯರ ಅಥವಾ ಉಪಾಧ್ಯಾಯರ ಮೂಲಕ ಭೇಟಿ ನೀಡಿ ಪರೀಕ್ಷಣೆಗೆ ಬಳಸುವ ಯಂತ್ರಗಳನ್ನೂ ಉಪಕರಣಗಳನ್ನೂ, ಪ್ರಯೋಗ ವಿಧಾನಗಳನ್ನೂ ಪರಿಚಯಮಾಡಿಕೊಳ್ಳಿ.

ನಡೆದು ಬಂದ ದಾರಿ

ನಿರ್ದುಷ್ವವಾದ ವೈಜ್ಞಾನಿಕ ರೂಪನಕ್ಕೆ ಬೇಕಾದ ಮಾಹಿತಿಗಳನ್ನು ಕಂಡುಕೊಳ್ಳಲೂ, ಬಲಗಳ ಪ್ರಭಾವದಲ್ಲಿ ವಸ್ತುಗಳ ವರ್ತನೆಯನ್ನು ತಿಳಿಯಲೂ 17ನೇ ಶತಮಾನದಿಂದ ವಿಜ್ಞಾನಿಗಳು ಮತ್ತು ಗಣಿತಜ್ಞರು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಇದು ಇಂದಿಗೂ ಮುಗಿಯದೆ ಮುಂದುವರಿಯುತ್ತಿದೆ. ಈ ದಿಸೆಯಲ್ಲಿ ರಾಬರ್ಟ್ ಹುಕ್ (1635-1703), ಎಲ್.ೊಆಯ್ಲರ್ (1707-1783), ಸಿ.ಎ.ಕುಲಾಂಬ್ (1736-1806), ಥಾಮಸ್ ಯೂಂಗ್ (1773-1829), ಡೆನಿಸ್ ಪಾಯ್ಸನ್ (1781-1840), ಸೆಂಟ್ ವೆನೆಂಟ್ (1793-1886), ಓ. ಮೋರ್ (1835-1918), ಮುಂತಾದವರ ಕೊಡುಗೆಗಳು ಅಪಾರವಾದುವು. ‘f/e=ಸ್ಥಿರಾಂಕ’ ಎಂಬುದನ್ನು ‘ಸ್ಥಿತಿಸ್ಥಾಪಾಂಕ’ ಎನ್ನುವರು. ಇದಕ್ಕೆ ‘ಯೂಂಗ್‌ನ ಮಾಪಾಂಕ’ ಎಂಬ ಹೆಸರಿಟ್ಟು ಅವನ ಅಪಾರವಾದ ಕೊಡುಗೆಯನ್ನು ಗುರುತಿಸಿದ್ದಾರೆ.

ಉಪಾಧ್ಯಾಯರುಗಳ ಮೂಲಕ ಇವರುಗಳ ಮತ್ತು ಇಂತಹ ಅನೇಕರ ಬಗ್ಗೆ ತಿಳಿಯಲು ನೀವೂ ಪ್ರಯತ್ನಿಸಿ. ವಿಜ್ಞಾನಿಗಳ ಬಗ್ಗೆ ‘ಬಾಲವಿಜ್ಞಾನ’ ದಲ್ಲೂ ವಿವರಗಳು ಪ್ರಕಟವಾಗುತ್ತಿರುತ್ತವೆ ಅವುಗಳನ್ನು ಓದಿ.