ಈ ಸೃಷ್ಟಿಯನ್ನು ಕುರಿತು ಅನುಭಾವಿಗಳು ಹೇಳಿರುವ ಮಾತೊಂದುಂಟು : ಭಗವಂತ ತನ್ನ ಆನಂದವನ್ನು ತಾನೇ ಸವಿಯಲು ತನ್ನನ್ನು ತಾನೇ ನೂರಾರು ರೂಪಗಳಲ್ಲಿ ಅಭಿವ್ಯಕ್ತಗೊಳಿಸಿಕೊಂಡಿದ್ದಾನೆ – ಎಂದು. ಕವಿಯಾದವನು ತನ್ನನ್ನು ತಾನೆ ನೂರಾರು ಭಾವದ ಪಾತ್ರಗಳಲ್ಲಿ ನಿಲ್ಲಿಸಿಕೊಂಡು ಚೆಲುವನ್ನು ಆಸ್ವಾದಿಸುತ್ತಾನೆ, ಎಂದು ಕವಿ ಕರ್ಮವನ್ನು ಕುರಿತು ಅದೇ ಮಾತನ್ನು ಹೇಳಿದರೆ ಮೇಲಿನ ಅನುಭಾವಿಗಳ ಮಾತಿಗೆ ಅಪಚಾರವಾಗಲಾರದು. ವಸ್ತುವೊಂದನ್ನು ಕವಿ ಎಷ್ಟೆಷ್ಟು ಭಾವಗಳಲ್ಲಿ ನೋಡುತ್ತಾನೆಯೋ ಅಷ್ಟಷ್ಟು ವೈವಿಧ್ಯತೆಯನ್ನು ನಾವು ಗುರುತಿಸಬಹುದು. ವಸ್ತುವೊಂದರಲ್ಲಿ ಕವಿ ಪಡೆದ ಆತ್ಮಸಂಗದ ಸಮಯದಲ್ಲಿನ ಅವನ ಅಂದಂದಿನ ಮನಃಸ್ಥಿತಿಯ ರಾಗದಿಂದ ಅವನ ಕೃತಿ ರಂಜಿತವಾಗುತ್ತದೆ. ಇದು ವಸ್ತುವೊಂದನ್ನು ಒಂದು ಸಲ ಒಂದು ದಿಕ್ಕಿನಿಂದ ನೋಡುವ ರೀತಿಯಲ್ಲ; ಹತ್ತುದಿಕ್ಕಿಗೆ ನಿಂತು ಹತ್ತು ಎಡೆಗಳಿಂದ ಹತ್ತು ಸಮಯಗಳಲ್ಲಿ ನೋಡುವ ರೀತಿ. ವಸ್ತುವಿನ ಚೆಲುವನ್ನು ನೂರು ಕಣ್ಣು ತೆರೆದು, ನೂರು ನಾಲಗೆ ಚಾಚಿ ನೂರು ಕಡೆಗಳಿಂದ ಆಸ್ವಾದಿಸುವ ಪರಿ.

ಕವಿ ತನ್ನ ಪರಿಭಾವನೆಗೆ ಏನೆಲ್ಲವನ್ನೂ ಒಳಗುಪಡಿಸುತ್ತಾನಾದರೂ, ನಾವು ಕವಿಯ ಸೌಂದರ‍್ಯಾನುಭವದ ವಸ್ತುಗಳನ್ನು ಎರಡು ಬಗೆ ಎಂದು ವಿಂಗಡಿಸಬಹುದು. ಒಂದು ಬಹಿರಂಗದ್ದು; ಮತ್ತೊಂದು ಅಂತರಂಗದ್ದು. ಇಂದ್ರಿಯ ಗೋಚರವಾಗುವ ರೂಪಲೋಕದ ವಸ್ತುಗಳು ಅವನಲ್ಲಿ ಪ್ರಚೋದಿಸುವ ಭಾವಗಳನ್ನು ಕುರಿತ ಕೃತಿಗಳು ಒಂದು ರೀತಿ ಎನ್ನುವುದಾದರೆ, ಕವಿಯ ಅಂತರಂಗದ ಆಸೆಗಳು, ಹಂಬಲಗಳು, ನೋವುಗಳು, ಆಕಾಂಕ್ಷೆಗಳು, ಕನಸುಗಳು, ಆದರ್ಶಗಳು ಕವಿಯ ಸೌಂದರ‍್ಯಾನುಭವದಿಂದ ಕೃತಿಗಳಾಗುವ ಪರಿ ಬೇರೊಂದು ರೀತಿಯದು. ಅಂತರಂಗದ ಈ ಹಂಬಲವೇ ಮೊದಲಾದ ಕಾಂಕ್ಷೆಗಳು ಕವಿಯ ವೈಯಕ್ತಿಕ ಲೌಕಿಕ ಜೀವನದ ಸಂಘರ್ಷಕ್ಕೆ ಸಂಬಂಧಿಸಿರಬಹುದು, ಅಥವಾ ಕವಿಯ ಅನುಭಾವಿ ವ್ಯಕ್ತಿತ್ವದ ಊರ್ಧ್ವಗಮನಾಭಿಲಾಷೆಯ ಪರಿಣಾಮವಾಗಿರಬಹುದು. ಕವಿಯೊಬ್ಬ ತನ್ನ ಜೀವನದಲ್ಲಿ ವಿಶೇಷ ಪರಿಣಾಮ ಮಾಡಿ ಗತಿಸಿದ ವ್ಯಕ್ತಿಗಳ ನೆನಪನ್ನು ಮಾಡಿಕೊಳ್ಳುವ ವಿಷಯವೂ ಅವನ ಪರಿಭಾವನೆಯ ವಸ್ತುವಾಗಿ ಕೃತಿಯಾಗಬಹುದು. ಸಂಜೆ ಪ್ರಶಾಂತ ವಾತಾವರಣದಲ್ಲಿ ಕುಳಿತ ಕವಿಗೆ ಒಮ್ಮೆ ತನ್ನ ಹಳೆಯ ಪಳಕೆಯ ಮುಖಗಳ ನೆನಪಾಗುತ್ತದೆ. ಆಗ ಆ ವ್ಯಕ್ತಿಗಳೆಲ್ಲ ‘ಒಲ್ಮೆಯ ತಳಿರೇಣಿ’ಯನ್ನೇರಿ ಬಂದಂತೆ ಕವಿಗೆ ಅನಿಸುತ್ತದೆ –

ದೇವರ ಚಿಂತೆಯೊಳೆದೆಯುಬ್ಬಿ
ಶಾಂತಿಯು ಮೈದೋರೆ
ಭಕ್ತಿಯು ಬಳ್ಳಿಯವೊಲು ಹಬ್ಬಿ
ಪರಲೋಕವ ಸೇರೆ :
ಒಲಿದಳಿದವರು
ಒಯ್ಯನೆ ಬಹರು
ಒಲ್ಮೆಯ ತಳಿರೇಣಿಯ ತಬ್ಬಿ!
ಬರುವನು ಚನ್ನನು ಹಿರಿಯನವನು
ತರುಣನು ಬಲಶಾಲಿ;
ಸೋದರ ವಾಸುವು ಕಿರಿಯವನು
ಎನ್ನಯ ಕಣ್ಣಾಲಿ
ಜೀವನ ಹಿಡಿದು
ದಾರಿಯ ನಡೆದು
ಬಳಲಿ ನೊಂದು ಬೆಂದುರಿದವರು.
[1]

ಈ ಅನುಭವದಲ್ಲಿ ಕವಿಗೆ ಒಂದು ಬಗೆಯ ‘ಸೊಗ ಮೊಗದೋರುವು’ದಂತೆ. ಹಿಂದಿನ ನೆನಪಿನಿಂದ ಸುಖಾನುಭವ ಪಡೆದ ‘ಭಾವ’ದ ಪ್ರತಿಮೆ ಇದು. ಆದರೆ ಮತ್ತೊಬ್ಬ ಕವಿಗೆ ಇದೇ ನೆನಪುಗಳೂ ಶೋಕಪೂರ್ಣವಾದ ಚಿಂತನೆಯನ್ನೇಳಿಸುತ್ತವೆ. ಒಂದು ಸಂಜೆ –

ಮನಕೆ ತಟ್ಟಿತು ಒಂದು ‘ಏತಕೆ’ –
ನಾನದರಿಯೆನು ಏತಕೊ?
ಬೆರೆವುದೇತಕೆ ನಲಿವುದೇತಕೆ
ಬೆರೆದೊಡಗಲುವುದೇತಕೆ?
[2]

ಹಳೆಯ ನೆನಪಿನಿಂದ ಈ ಬದುಕಿನ ವಿರಹಮಿಲನದ ‘ಆಟ’ದ ಪರಿಯನ್ನೇ ಕುರಿತು ಕವಿ ಚಿಂತನೆಗೊಳಗಾಗುವ ರೀತಿ ಇದು. ಕವಿಯೊಬ್ಬ ಒಂದು ತೀರ ನಿರಾಸೆಯ ಸಂದರ್ಭದಲ್ಲಿ ಭಯ ವಿಹ್ವಲನಾಗಿದ್ದಾಗ ಆ ಸ್ಥಿತಿಯನ್ನು ಕುರಿತು –

ಯಾವ ಮುಳ್ಳಿನ ಹಾದಿ ತೆರೆವುದೊ
ಮುಂದಾವ ಭೀತಿಯ ಕಂದರ?
ಇರುಳ ನೆಮ್ಮದಿ ಹೊದಿಕೆ ಹರಿಯಿತು
ಈ ಬಾನು ಬೆಂಕಿಯ ಹಂದರ
[3]

ಎಂದು ತನ್ನ ಅಂತರಂಗದ ತಳಮಳವನ್ನೆ ತೆರೆಯಬಹುದು. ಕವಿ ತಾನು ಪಟ್ಟ ಪಾಡುಗಳನ್ನು ಒಳಬಗೆಯ ತಳಮಳಗಳನ್ನು ಬಿಡಿ ಬಿಡಿ ಪದ್ಯಗಳಲ್ಲಿ ತೋಡಿಕೊಂಡಂತೆ ನೀಳ್ಗವಿತೆಗಳಲ್ಲೂ ವಿಸ್ತರಿಸಬಹುದು. ಚನ್ನವೀರಕಣವಿಯವರ ‘ಭಾವಜೀವಿ’, ಅಡಿಗರ ‘ಒಳತೋಟಿ’, ಬೇಂದ್ರೆಯವರ ‘ಸಖೀಗೀತ’, ಮಧುರ ಚನ್ನರ ‘ನನ್ನನಲ್ಲ’, ಈ ಮಾದರಿಗೆ ಸೇರಿದವು. ಇವುಗಳಲ್ಲಿ ವಸ್ತು ಅಂತರಂಗದ್ದು. ಈ ಒಳ ತೋಟಿ ಲೌಕಿಕ ಆಘಾತಗಳಿಂದ ಒದಗಿದಂತೆ, ಕವಿ ತಾನು ಆದರ್ಶದ ಹಾದಿಯಲ್ಲಿ ನಡೆಯುವಾಗ ಒದಗುವ ಆಘಾತಗಳಿಂದಲೂ ಆಗಬಹುದು. ಜೀವನದಲ್ಲಿ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಆರಾಧ್ಯಮೂರ್ತಿಯನ್ನು ಕುರಿತು –

ಇದುವರೆಗು ನೀನೆನ್ನ ಕೈ ಹಿಡಿದು ನಡೆಸಿರುವೆ
ಇನ್ನಾದರೂ ನನ್ನ ಕೈ ಬಿಡದಿರು –
[4]

ಎಂದು ಕವಿ ಮಾಡುವ ಈ ಕೋರಿಕೆ ಬೇರೆಯ ರೀತಿಯದು. ತನ್ನ ಬಾಳಿನಲ್ಲಿ ಬೇರೊಂದು ಶಕ್ತಿ ಕೃಪೆಗೈದು ತನ್ನನ್ನು ಮೇಲಕ್ಕೆತ್ತಿದ ಅನುಭವವನ್ನು ಕುರಿತು –

ಭಾವನೆಯ ಬಾನಿನಲಿ ಇಂದ್ರಧನುರ್ ಯಾನದಲಿ
ನಿನ್ನೊಡನೆ ಕುಳಿತು ನಾ ತೇಲುತಿರುವೆ:
ಮೋಹನದ ಮುಗುಳು ನಗೆಯನು ಬೀರಿ ಸುಂದರಿಯೆ
ನೀನಗ್ನಿ ಮೇಘವನೆ ಹೋಲುತಿರುವೆ.
ನಾನೇರಿದೆತ್ತರವ ನೋಡಿ
ಚಿತ್ತ ಹಿಗ್ಗುತಿದೆ;
ಬೀಳುವೆನೊ ಎಂಬಳಕು ಮೂಡಿ
ಮತ್ತೆ ಕುಗ್ಗುತಿದೆ
ನಿನ್ನ ಮೊಗದಲಿ ಸದಾ ಮಾಸದಿಹ ಮುಗುಳುನಗೆಯೊಂದು
ಸರ‍್ವದಾ ನವಿಲಂತೆ ನಲಿಯುತಿಹುದು
ನಿನ್ನ ಮೌನದ ಅರ್ಥವೇನಿಹುದೊ ಅದನರಿಯೆ
ನಮ್ಮ ತಾವರೆ ತೇರು ತೇಲುತಿಹುದು!
[5]

ಎಂದು ಹೇಳುತ್ತದೆ. ಮೊಟ್ಟ ಮೊದಲು ಮಲೆನಾಡಿನ ಮಣ್ಣಿನಲ್ಲಿ ಧೂಳಾಡುತಿದ್ದ ಕವಿಶಿಶುವನ್ನು ಕಾವ್ಯರೂಪಿಯಾದ ದಿವ್ಯ ಶಕ್ತಿಯೊಂದು, ಎತ್ತಿಕೊಂಡು ತಾವರೆಯ ತೇರಿನಲ್ಲಿ ಕುಳ್ಳಿರಿಸಿಕೊಂಡು ಹೊರಟ ಅನುಭವ ಇಲ್ಲಿ ಚಿತ್ರಿತವಾಗಿದೆ. ಇದರ ವಸ್ತು ಏನಿದ್ದರೂ ಸಂಪೂರ್ಣ ಆಂತರಂಗಿಕವಾದದ್ದು. ಅನುಭಾವ ಗೀತಗಳ ರೀತಿಯೂ ಇಂಥಾದ್ದೆ. ಬೇಂದ್ರೆಯವರ ನಾದಲೀಲೆಯ ಅನೇಕ ಪದ್ಯಗಳು, ದಿವ್ಯದಾಹದಿಂದ ಕಾತರಿಸುವ ಚೇತನದ ಒಂದೊಂದು ‘ಅವಸ್ಥೆ’ಯನ್ನು ಒಂದೊಂದು ಪ್ರತಿಮೆಯ ಬಳಕೆಯಿಂದ ಚಿತ್ರಿಸುತ್ತವೆ. ಅನುಭಾವಿ ತನ್ನ ಮನಸ್ಸಿಗಾದ ಅನುಭವವನ್ನು –

ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು
ಬಂತೆಂದರೂ ಇದ್ದುದಿದ್ದೆಯಿತ್ತು!
ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ
ಇದ್ದದ್ದು ತುಂಬಿ ತುಳುಕುತ್ತಿತ್ತು
[6]

ಎಂಬ ಮಾತಿನಲ್ಲಿ ಹೇಳಿದಾಗಲೂ, ಅಲ್ಲಿಯೂ ತನ್ನ ಅಂತರಂಗದ ಅರೂಪವಾದ ಅನುಭವವನ್ನು ಯಾವುದೋ ಒಂದು ರೂಪದಲ್ಲಿ ಹೇಳಲು ಪ್ರಯತ್ನಪಡುತ್ತಿದೆ. ಕವಿ ಠಾಕೂರರ ಗೀತಾಂಜಲಿಯ ತುಂಬ, ಇಂಥ ಅಂತರಂಗದ ಅನುಭಾವದ ಅನುಭವಗಳ ಮೂರ್ತರೂಪಗಳನ್ನು ಕಾಣಬಹುದು. ಕನ್ನಡ ಕಾವ್ಯಗಳಲ್ಲೂ ಈ ಮಾದರಿಯ ಕವನಗಳು ಸಾಕಷ್ಟಿವೆ.

ಇಂದಿನ ಕವಿಗಳು ಸ್ವತಂತ್ರದೃಷ್ಟಿಯವರೆಂದು ಹೇಳಿದರೆ ಅವರು ಹಿಂದಿನದನ್ನು ಬಿಟ್ಟವರೆಂದು ಅರ್ಥವಲ್ಲ. ವಸ್ತುಗಳ ಆಯ್ಕೆಯಲ್ಲಿ ವಿಶೇಷವಾದ ವೈವಿಧ್ಯವಿದೆ ಇಂದಿನವರಲ್ಲಿ,; ಅದಕ್ಕೂ ಮಿಗಿಲಾಗಿ ಅದನ್ನು ನೋಡುವ ರೀತಿಯಲ್ಲಿ ವ್ಯತ್ಯಾಸವಿದೆ. ಹಳೆಯ ಕವಿಸಮಯದ ವಸ್ತುಗಳನ್ನು, ಪೌರಾಣಿಕ ಪ್ರತಿಮೆಗಳನ್ನು ಇಂದಿನವರು ಬಳಸಿರುವರಾದರೂ ಅವುಗಳಿಗೊಂದು ಹೊಸ ಅರ್ಥವನ್ನು ಇಂದಿನವರ ಅನುಭವ ತುಂಬಿದೆ. ಪು.ತಿ.ನ ಅವರ ಬಹುಮಟ್ಟಿನ ಕವನಗಳಲ್ಲಿ ಈ ಪೌರಾಣಿಕ ಮನೋಭಾವದ ಪರಿಣಾಮವನ್ನು ಕಾಣಬಹುದು. ಮುಖ್ಯವಾಗಿ ಅವರ ವರ್ಣನೆಗಳಲ್ಲಿ, ರಾಧಾ- ಕೃಷ್ಣರ, ಮತ್ತು ಪುರಾಣಕ್ಕೆ ಸಂಬಂಧಪಟ್ಟ ಘಟನೆಗಳ ನೂತನ ವಿವರಣೆಗಳನ್ನು ಕಾಣಬಹುದು. ಸಂಜೆಯನ್ನು ಕುರಿತು –

ತವಸಿ ಶಿವ ಪಾರ್ವತಿಯ ನಸುನೋಡುತೆವೆಮುಚ್ಚಿದಂದದೊಳು
ಸಂಜೆಯಚ್ಚರಿ ಹೊನ್ನ ಬೆಳಕು
[7]

ಎನ್ನುತ್ತಾರೆ. ಮತ್ತೊಂದು ಸಂಜೆ

ಬುವಿ ಬಾನಳೆದುರವಣಿಸಿದ
ಹರಿ ಪಾದಕೆ ತಲೆಯೊಡ್ಡುತ
ಕೆಳಲೋಕಕೆ ತೆರಳುತ್ತಿಹ
ಬಲಿ ದೊರೆಯಂದದೊಳು
[8]

ತೋರುತ್ತದೆ. ಒಂದು ಬೆಳಗು –

ದಾನವ ಹೃತ ಮೇದಿನಿಯಂ

ದಂಷ್ಟ್ರಾಗ್ರದೊಳಿರಿಸಿ
ಭೂದಾರಂ ಪಾತಾಳವ-
ನುಳಿದೆದ್ದನೊ ಎನಿಸಿ
ದೂರ ದಿಗಂತದೊಳೊಪ್ಪಿದೆ
ರವಿ ಮಂಡಿತ ಶೃಂಗಂ
[9]

ವರಾಹಾವತಾರದ ಕಾಲದಲ್ಲಿ ಭೂದೇವಿಯನ್ನೆತ್ತಿ ತಂದ ವಿಷ್ಣುವಿನ ಲೀಲೆಯ ಚಿತ್ರವನ್ನು ಕಣ್ಣಿಗೆ ಕಟ್ಟುತ್ತದೆ. ಕವಿಯುವ ಇರುಳನ್ನು ಕಂಡು –

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ
ಕತ್ತಲೆ ಹಿರಣ್ಯಾಕ್ಷ ಮುತ್ತಿ ಬಹ ನಕ್ಷತ್ರ-
ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲುವಾಗಿ
ದಿವಕಶಾಂತಿಯ ತಂದು
[10]

ಎಂದು ಕವಿ ಮಾಡುವ ವರ್ಣನೆಯಲ್ಲಿ, ಆ ಪೌರಾಣಿಕ ಪ್ರಸಂಗ ಕವಿಯ ಕಣ್ಣಿನಲ್ಲಿ ಇರುಳಿನ ಚಿತ್ರಣವಾಗಿ ತೋರಿದೆ. ಹೀಗೆ ಇಂದಿನ ಕವಿ ಹಿಂದಿನ ಪುರಾಣ ಪ್ರಪಂಚದ ಪ್ರತಿಮೆಗಳನ್ನು ವಿನೂತನವಾದ ರೀತಿಯಲ್ಲಿ ಪ್ರಕೃತಿ ವರ್ಣನೆಗೆ ಬಳಸುತ್ತಾನೆ. ಇದೇ ಪ್ರತಿಮೆಗಳನ್ನು ಮಾನವಲೋಕದ ಹಲವು ಚಿತ್ರಣಗಳಿಗೂ ಬಳಸುವುದರಲ್ಲಿ ಕವಿ ಒಂದು ವಿಶೇಷತೆಯನ್ನು ತೋರಿಸಿರುವುದುಂಟು. ವಿಷ್ಣು ದಶಾವತಾರವೆತ್ತಿದ ಕಥೆಯನ್ನು, ಮಗುವಿನ ಬಾಲಲೀಲೆಯಲ್ಲಿ ಕಂಡು ಕವಿ ತೋರಿಸಿದಾಗ ಅದರಲ್ಲಿ ಒಂದು ಹೊಸ ಅರ್ಥವನ್ನು ನಾವು ಕಾಣುತ್ತೇವೆ –

ನೆಲದ ಮೇಲೆ ಈಸುವುದು
ನೋಡಿದಿರಾ ಮೀನಾವತಾರ|
ಮನುಕುಲೋದ್ಧಾರಕ ನನ್ನ ಕುವರ |
ಬಯಲನೆಲ್ಲ ಬೆನ್ನಲ್ಲಿ ಹೊತ್ತಿರುವುದು
ನೋಡಿದಿರಾ ಕೂರ್ಮಾವತಾರ!
ವಂಶಾಧಾರಸ್ತಂಭ ನನ್ನ ಕುವರ!
ತನ್ನ ತಾಯ ಬಸಿರನ್ನು ಬಗೆದು ಅವಳ ಕರುಳ ಮಾಲೆಯನ್ನು
ಧರಿಸುವ ವಿಚಿತ್ರ ನೃಸಿಂಹ ಸ್ವಾಮಿ
ನೋಡಿದಿರಾ ಬಾಲ ಪ್ರಾಲ್ಹಾದ ನನ್ನ ಕುವರ
[11]

ಇಂತಹ ಬಣ್ಣನೆಯಲ್ಲಿ ದಶಾವತಾರದ ಕತೆಗೂ ಒಂದು ಹೊಸ ಹೊಗರು ಬರುತ್ತದೆ, ಮಗುವಿನ ಬಾಲಲೀಲೆಗೂ ಒಂದು ದೈವಿಕತೆ ಬರುತ್ತದೆ. ಅಂದಿನ ಪುರಾಣ ಪ್ರಜ್ಞೆಗೆ ಇಂದಿನ ವಿಜ್ಞಾನದ ಅನುಭವ ಬೆರೆತಾಗ, ಕವಿ ಪೌರಾಣಿಕವಾದ ಒಂದು ಪ್ರತಿಮೆಯನ್ನು ಬೇರೊಂದು ಹೊಸ ಮೌಲ್ಯವನ್ನಾಗಿ ನೀಡುತ್ತಾನೆ. ಹಳೆಯ ಪೌರಾಣಿಕ ಪ್ರತಿಮೆಗಳು, ನಿತ್ಯ ಸತ್ಯದ ಪ್ರತಿಮೆಗಳೇ ಹೊರತು, ಕೇವಲ ಸತ್ತ ಅಥವಾ ಮೃತ ರೂಪಕ (Dead Metaphars)ಗಳಲ್ಲ ಎನ್ನುವುದನ್ನು ಇಂದಿನ ಕವಿ ತೋರಿಸಿಕೊಡುತ್ತಾನೆ. ಇಂದಿನ ವೈಜ್ಞಾನಿಕ ಪ್ರಗತಿಯನ್ನು ನೋಡಿದಾಗ, ಈ ವಿಜ್ಞಾನ ನಾನಾ ಬಗೆಯ ರೂಪವನ್ನು ತಾಳಿ ನಮಗೆ ಇದು ಮಾರಕ ಎಂಬಷ್ಟು ಉಗ್ರವಾಗಿ ತಲ್ಲಣಗೊಳಿಸುವಾಗ, ಇದೂ ಕೂಡ ಹೊರನೋಟಕ್ಕೆ ಉಗ್ರವಾಗಿ ತೋರಿದರೂ, ಇದರ ಉದ್ದೇಶ ಲೋಕದ ಮಂಗಳವನ್ನು ಕಾಪಾಡುವುದೇ ಆಗಿದೆ ಎಂಬ ಭಾವನೆಯನ್ನು ಕವಿ –

ಮುದುಡಿದ ವಿಜ್ಞಾನದ ಹೆಡೆ ಬಿಚ್ಚುತ
ನಮ್ಮೊಳಪ್ರಜ್ಞೆಯನಂತ
ತನ್ನೆದೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂತ
[12]

ಎಂದು ಹೇಳಿದಾಗ ಅದೆಷ್ಟು ಧ್ವನಿಪೂರ್ಣವಾಗಿ ಅಂತರಂಗವನ್ನು ತಟ್ಟುತ್ತದೆ. ಈ ದೃಷ್ಟಿಗೆ ರಾಧಾಕೃಷ್ಣರ ರಾಸಲೀಲೆ ನಮ್ಮ ವಿಶ್ವದ ಗ್ರಹತಾರೆಗಳ ಚಲನ ವಲನವನ್ನೂ, ವಿದ್ಯುದಣುಗಳ ವರ್ತುಲ ನರ್ತನವನ್ನೂ ಪ್ರತಿಮಿಸುತ್ತದೆ. ರಾಧಾಕೃಷ್ಣರ ರಾಸಲೀಲೆ, ಕೇವಲ ಎಂದೊ ಒಮ್ಮೆ ನಡೆದ ಪೌರಾಣಿಕ ಘಟನೆ ಮಾತ್ರ ಆಗದೆ ಇಂದಿಗೂ ಎಂದಿಗೂ ನಡೆಯುತ್ತಿರುವ ಸೃಷ್ಟಿ ವ್ಯಾಪಾರದ ಸಂಕೇತವಾಗುತ್ತದೆ. ಈ ರೀತಿಯಲ್ಲಿ ಹಳೆಯ ಪೌರಾಣಿಕ ಪ್ರಸಂಗಗಳನ್ನೇ, ಪ್ರತಿಮೆಗಳನ್ನೇ ಹೊಸ ರೀತಿಯಲ್ಲಿ ಅನುಭವಿಸಿ ನೂತನ ವಿವರಣೆಯ ಮೂಲಕ ರಸಾನುಭವವನ್ನು ನೀಡಿರುವುದು ಇಂದಿನ ಕವಿಗಳ ಸೌಂದರ‍್ಯಬೋಧೆಯ ಒಂದು ವಿಶಿಷ್ಟತೆ. ಹೀಗೆ ಮಾಡುವುದರಲ್ಲಿ ಹಳೆಯ ಪ್ರತಿಮೆಯನ್ನು ವಿನೂತನವಾಗಿ ವರ್ಣನೆಗೆ ಬಳಸುವುದು ಒಂದು ರೀತಿಯದಾದರೆ, ಅದರಿಂದ ಹೊಸತೊಂದು, ಕಾಣದ ಮೌಲ್ಯವನ್ನೇ ಕವಿ ಹೊರತೆಗೆದು ತೋರಿರುವುದು ಮತ್ತೊಂದು ರೀತಿ. ಕುವೆಂಪು ಅವರ ‘ಕಂಸಶಿಲೆ’ ಈ ಬಗೆಯ ಅನುಭವಕ್ಕೆ ಅತ್ಯುತ್ತಮವಾದ ಅಪೂರ್ವವೆನಿಸುವ ನಿದರ್ಶನ. ಕಂಸ ದೇವಕಿಯ ಏಳು ಶಿಶುಗಳನ್ನು ಬಂಡೆಗೆ ಬಡಿದು ಕೊಂದು ಎಂಟನೆಯದರ ಕೈಗೆ ಸಿಕ್ಕಿ ಕೊಲೆಯಾದವನು. ಆ ಒಂದು ಸಂದರ್ಭವನ್ನು ಕವಿ ವರ್ಣಿಸಿರುವ ಪರಿಯನ್ನು ನೋಡಿ:

ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ
ಮುದ್ದಾಡಲರ್ಹವಹ ಶಿಶುಗಳೇಳನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳ್ಗೊಲೆಗೆ
ತುತ್ತಾದವನು ಕಂಸ; ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ!
ಒಂದೊಂದು ಹೃದಯವೂ ಕಂಸಶಿಲೆ; ನೂರಾರು
ಹೊಂಗನಸಿನಾದರ್ಶ ಶಿಶುಗಳಾಯೆಡೆ ಚೂರು!
[13]

‘ಕಂಸಶಿಲೆ’ ಮಧುರಾ ನಗರದ ಸೆರೆಮನೆಯ ಕಾರ್ಗತ್ತಲೆಯ ಬದಿಯಲ್ಲಿ ಹುದುಗಿತ್ತು ಇಷ್ಟು ದಿನ, ಕಂಸನ ಕ್ರೌರ‍್ಯದ ಪ್ರತೀಕವಾಗಿ, ಈ ಕವಿ ಅದನ್ನು ತೆರೆದು ತೋರುವವರೆಗೂ! ಆದರೆ ಕಂಸನ ಕ್ರೌರ‍್ಯಕ್ಕೆ ಜೀವಂತ ಸಾಕ್ಷಿಯಾದ ಈ ಕಂಸಶಿಲೆ ಇರುವುದು ಅಲ್ಲಿ ಮಾತ್ರವಲ್ಲ, ನಮ್ಮೆಲ್ಲರೆದೆಯೇ ಆಗಿದೆ ಎಂಬ ವಿನೂತನ ವ್ಯಾಖ್ಯಾನ ನಮ್ಮನ್ನು ಗಾಬರಿಗೊಳಿಸುತ್ತದೆ. ಈ ಹೊಸ ಬೆಳಕಿನಲ್ಲಿ ಕಂಸ ನಮ್ಮ ಮರುಕದ ಅನುಕಂಪದ ವ್ಯಕ್ತಿಯಾಗುತ್ತಾನೆ. ಏಕೆಂದರೆ ನಾವು ಕಟ್ಟುವ, ಕೊಲ್ಲುವ ಹೊಂಗನಸಿನಾದರ್ಶ ಶಿಶುಗಳ ಸಂಖ್ಯೆ, ಕಂಸನು ಕೊಂದ ಮಕ್ಕಳ ಸಂಖ್ಯೆಗಿಂತಲೂ ನೂರು ಪಾಲು! ಕಂಸಶಿಲೆಗಿರುವ ಈ ಚಿರಂತನ ಮೌಲ್ಯವನ್ನು ತೆರೆದು ತೋರಿರುವುದು ಇದರ ವಿಶಿಷ್ಟತೆ. ಹೀಗೆಯೇ ಹಲವು ಪೌರಾಣಿಕ ಪ್ರತಿಮೆಗಳನ್ನು, ಅತಿ ಸಂಕ್ಷಿಪ್ತವಾಗಿ ಧ್ವನಿಪೂರ್ಣವಾಗಿ, ಬಳಸಿ ಒಂದೇ ಭಾವವನ್ನು ಚಿತ್ರಿಸುವ ಬಗೆಯೂ ಇತ್ತೀಚಿನ ಕವಿಗಳಲ್ಲಿ ಕಂಡು ಬರುವ ವಿಶೇಷವಾಗಿದೆ. ಭೋಗಮಯವಾದ ಜೀವನದಲ್ಲಿ ಮುಳುಗಿದ ಆಧುನಿಕ ವ್ಯಕ್ತಿಯೊಬ್ಬನೆಡೆಗೆ ಬಂದು ಕಾಡುತ್ತದೆ ಅನಂತ ದಾಹದ ಪ್ರಶ್ನೆ-

ಇಷ್ಟಗಲ ಬಾಗಿಲನು ತೆರೆದು ಬಂದಿತು ಪ್ರಶ್ನೆ;
ಕತ್ತಲಿನ ಕೊಳದಲ್ಲಿ ಇಳಿದ ಮಿಂಚಿನ ಮೀನು!
ಕಾಳಿಂದಿ ಮಡುವಿನ ನಿದ್ದೆ ಕಲಕಿತು
ಭೋಗದಪ್ಪುಗೆಯಿಂದ ತಲೆಯೆತ್ತಿ ಕೇಳಿದೆ:
‘ಏನು, ಏನಾಗಬೇಕು?’
‘ಮೂರು ಅಡಿ, ಮೂರೇ ಮೂರು ಅಡಿ ನೆಲವ ನೀಡುವೆಯೇನು,

‘ಓ, ಇಷ್ಟೆ ತಾನೇ, ಕೊಳ್ ತೆಗೆದುಕೊ,
ನುಡಿದದ್ದೆ ತಡ ಮೆಟ್ಟಿತ್ತು ಮಂದರ ಪಾದ
ಹೆಡೆ ಹೆಡೆಯ ತುಳಿದು ನಡೆಸಿತ್ತು ತಾಂಡವವ.
‘ಸಾಕೋ ಪಾಪೀ ಸಾಕು, ನಡೆ; ಕೊಟ್ಟ ದಾನವ
ಮರಳಿ ಪಡೆಯುವೆ ನಾನು, ಓ ವಿಲಯ ಮೂರ್ತಿ
ಇರಲಿ, ಆ ಬಲಿಚಕ್ರವರ್ತಿಗೇ ಇರಲಿ
ನೀ ತುಳಿದ ಅವರ ಕೀರ್ತಿ’
[14]

ಇಲ್ಲಿ ಕಾಳಿಂದಿ ಮಡುವಿನ ಮತ್ತು ಬಲಿಯ ಬಳಿ ವಾಮನನಾಗಿ ಬಂದು ಅವನನ್ನು ತುಳಿದ ವಿಷ್ಣುವಿನ, ಎರಡು ಪ್ರತಿಮೆಗಳನ್ನು ಇಂದಿನ ಮನಃಸ್ಥಿತಿಯ ಚಿತ್ರಣಕ್ಕೆ ಬಳಸಲಾಗಿದೆ. ನಾವು, ಇಂದಿನ ಚೇತನ ಬಹುಮಟ್ಟಿಗೆ ಭೋಗಮಯವಾಗಿದೆ – ಎಂದು ಭಾವಿಸಿದ್ದೇವೆ. ಈ ಜೀವ ಪವಡಿಸಿದ ಕಾಳಿಂದಿ ಮಡುವಿನ ನಿದ್ದೆಯನ್ನು ಕಲಕುತ್ತದೆ ಅವನ ಅನಂತದಾಹದ ಪ್ರಶ್ನೆ. ಅದು ಮೊದಲು, ಬಲಿಯೆಡೆಗೆ ಬಂದ ವಾಮನನಂತೆ ಇವನ ಹೃದಯದಲ್ಲಿ ಕೊಂಚ ಸ್ಥಳವನ್ನು ಕೇಳುತ್ತದೆ. ಇವನು ಅದೇನು ಮಹಾ, ಎಲ್ಲದರಂತೆ ಇದೂ ಇರಲಿ ಎಂದು ಒಂದಿಷ್ಟು ಜಾಗಕೊಡುತ್ತಾನೆ. ಆದರೆ ಅದು ಅವನ ಅಂತರಂಗವನ್ನೇ ಆಕ್ರಮಿಸಿ ಮಂದರ ಪಾದದಿಂದ ಹೆಡೆ ಹೆಡೆಯನ್ನೇ ತುಳಿಯತೊಡಗಿದಾಗ ಇವನು, ಆ ಹಿಡಿತದಿಂದ ಪಾರಾಗಲು ಒದ್ದಾಡುತ್ತಾನೆ; ಕೊಟ್ಟ ದಾನವನ್ನೇ ಮರಳಿ ಪಡೆಯಲು ಹಂಬಲಿಸುತ್ತಾನೆ. ಏಕೆಂದರೆ ಇವನಲ್ಲಿ ಅಂದಿನ ಬಲಿಚಕ್ರವರ್ತಿಯ ಹಂಬಲ ಕೊಂಚ ಇದ್ದರೂ, ಲೌಕಿಕದ ಸೆಳೆತಕ್ಕೆ ಸಿಕ್ಕ ಇವನಲ್ಲಿ ಆ ಸಂಪೂರ್ಣ ಸಮರ್ಪಣ ಭಾವಕ್ಕೆ ಮನಸ್ಸು ಸಿದ್ಧವಾಗಿರುವುದಿಲ್ಲ. ಇಂತಹ ಒಂದು ತುಮುಲ ಸ್ಥಿತಿಯ ಚಿತ್ರಣಕ್ಕೆ ಎರಡು ಮೂರು ಪೌರಾಣಿಕ ಪ್ರತಿಮೆಗಳನ್ನು ಯಶಸ್ವಿಯಾಗಿ ಬಳಸಿರುವುದು ಇಲ್ಲಿನೊಂದು ವಿಶೇಷತೆ. ಭಾರತೀಯ ಪುರಾಣ ಪ್ರಪಂಚದ ಪ್ರತಿಮೆಗಳ ಜೊತೆಗೆ ಪಾಶ್ಚಾತ್ಯ ಪುರಾಣ ಪ್ರಪಂಚದ ಪ್ರತಿಮೆಗಳನ್ನೂ ಸೇರಿಸಿ ಚಿತ್ರಿಸುವ ಒಂದು ಸಂದರ್ಭ ಇಂದಿನ ‘ನವ್ಯ ಕವಿ’ಗಳಲ್ಲಿ ಕಾಣುತ್ತಿದೆ. ರಾಮಚಂದ್ರಶರ್ಮರ ‘ಬುವಿ ನೀಡಿದ ಸ್ಫೂರ್ತಿ’ ಎಂಬ ಕವಿತೆಯಲ್ಲಿ ‘ನರಸಿಂಹ’ ಮತ್ತು ಸ್ಫಿಂಕ್ಸ್’ ಪ್ರತಿಮೆಯನ್ನು ಸಂಯೋಜಿಸಲಾಗಿದೆ.

ಕಲ್ಪ ಕಲ್ಪದ ನನ್ನ ತಪಸಿದ್ಧಿ ಪಡೆದಂದು
ಬೆಳೆ ಬೆಳೆದು ಬ್ರಹ್ಮಾಂಡದಗಲ ಉಬ್ಬಿದ ಬಯಕೆ ಹೆಬ್ಬಸಿರನೊಡೆದಂದು,
ನರಸಿಂಹ ನಾ ಬಂದೆ,
ಕಣ್ತೆರೆದೆ ಕಂಡೆ :
ರೆಕ್ಕೆ ಬಡಿಯುವ ಸಿಂಹ, ಹೆಣ್ಣು ಮೊಗಹೊತ್ತ ವಿಕರಾಳ ರೂಪ!
ಬದುಕುವಾಸೆಯೆ ನಿನಗೆ? ಅಯ್ಯೋ, ಅಯ್ಯೊ ಪಾಪ!
ಬೆಳಗಾಗ ನಾಗಾಲು, ನಡುಹಗಲಿಗೆರಡು, ಸಂಜೆಗೆ ಮೂರು –
ಯಾವ ಪ್ರಾಣಿಯು ಗೊತ್ತೆ?
ಗೊತ್ತಿರದೆ: ಸತ್ತೆ!
[15]

ಭಾರತೀಯ ಹಾಗೂ ಪಾಶ್ಚಾತ್ಯ ಪುರಾಣ ಪ್ರಪಂಚದ ಪ್ರತಿಮೆಗಳ

ಸಂಯೋಜನೆಯಿಂದ ಅಭಿವ್ಯಕ್ತಿಗೆ ಒಂದು ಬಗೆಯ ಸಂಕೀರ್ಣತೆ ಪ್ರಾಪ್ತವಾದರೂ, ಅದು ಭಾರತೀಯ ಸಹೃದಯನ ಅಂತರಂಗವನ್ನು ತಟ್ಟುವುದೇ ಎಂಬ ಪ್ರಶ್ನೆಗೆ ‘ಹೌದು’ ಎನ್ನಲಾಗುವುದಿಲ್ಲ. – ಭಾರತೀಯ ಸಹೃದಯನ ಅಂತರಂಗದಲ್ಲಿ, ಪಾಶ್ಚಾತ್ಯ ಪುರಾಣ ಪ್ರತಿಮೆ ಪಾಶ್ಚಾತ್ಯ ಓದುಗನ ಅಂತರಂಗದಲ್ಲಿ ರಕ್ತಗತವಾಗಿ ಬಂದಂತೆ, ಒಂದು ಧ್ವನಿತರಂಗವನ್ನೇಳಿಸುವಂತೆ ಒಂದು ದೇಶದ್ದು ಮತ್ತೊಂದು ದೇಶದವನ ಹೃದಯದಲ್ಲಿ ಅಷ್ಟು ಪರಿಣಾಮ ಮಾಡಲಾರದು. ಎರಡರ ಪರಿಚಯವನ್ನು ತಕ್ಕಮಟ್ಟಿಗೆ ಮಾಡಿಕೊಂಡವರಿಗೆ ಮಾತ್ರ ಈ ಬಗೆಯ ಪ್ರತಿಮೆಗಳ ಮಿಶ್ರಣ ರಸಾನುಭವಕಾರಿಯಾಗಬಹುದೆಂಬ ಅಂಶವನ್ನು ಅಲ್ಲಗಳೆಯಲಾಗುವುದಿಲ್ಲ.

ಪೌರಾಣಿಕವಾದ ಸ್ಮರಣೆಗಳು ಇಂದಿನ ಕವಿಗೆ ಸ್ಫೂರ್ತಿಯಾಗುವಂತೆ ವೈಜ್ಞಾನಿಕವಾದ ಆಧುನಿಕ ಶೋಧನೆಗಳ ಪರಿಚಯವೂ ಇಂದಿನ ಕವಿಯ ಅನುಭವದ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿದೆ. ಹಿಂದಿನ ಕವಿಗಳಿಗೆ ಈ ಸೃಷ್ಟಿಯ ಬಗ್ಗೆ ಇದ್ದ ಕಲ್ಪನೆ, ‘ಆದಿಶೇಷನೂ ಅಷ್ಟ ದಿಗ್ಗಜಗಳೂ ಇದನ್ನು ಹೊತ್ತಿವೆ’ ಎನ್ನುವುದರಲ್ಲಿ ನಿಂತರೆ, ಇಂದಿನ ಕವಿಗೆ ಸೃಷ್ಟಿಯ ಮೊದಲಲ್ಲಿ –

ಕಾಲವಲ್ಲಿರಲಿಲ್ಲ; ದೇಶವಲ್ಲಿರಲಿಲ್ಲ;
ಗ್ರಹಕೋಟಿ ಶಶಿ ಸೂರ‍್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ;
ಮಮಕಾರ ಶೂನ್ಯದೊಳು ಮುಳುಗಿದ್ದುವೆಲ್ಲ
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊಮ್ಮಿದುದು ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯ ತಬ್ಬಿ

ಇಂತಹ ಸ್ಥಿತಿಯಲ್ಲಿ ಚೇತನ ಸ್ಪಷ್ಟ ವ್ಯಕ್ತಿತ್ವದಾಕಾಂಕ್ಷೆಯಿಂದ ನಿಂದಲ್ಲಿ ನಿಲ್ಲದೆ ಸಂಚರಿಸಿತು. –

………….ಇಂತಿರಲು, ನೀರಿನಲಿ ತೇದ ಮಿಂಚಿನ ತೆರದಿ
ಬಂಧನವ ಹರಿಯಲೆಳಸುವ ಕೇಸರಿಯ ತೆರದಿ
ಹರಿದು ಭೋರಿಡುವ ಆ ಅಗ್ನಿ ಪ್ರವಾಹಂ
ದಿಕ್ಕು ದಿಕ್ಕಿಗೆ ಸಿಡಿದೊಡೆದು, ದೇಶ ದೇಹಂ
ಗ್ರಹಭೂಮಿ ಶಶಿಸೂರ‍್ಯ ತಾರಾಖಚಿತಮಾಯ್ತು
[16]

ಅನಂತರ ಈ ರೂಪ ನೀರಾಗಿ, ಹಸಿರಾಗಿ, ಮಿಗವಾಗಿ, ಮಾನವನಾಗಿ ಇಂದಿನ ನಾಗರಿಕತೆಯನ್ನು ಸಾಧಿಸಿದೆ – ಎನ್ನುವ ವಿಚಾರವನ್ನು ‘ಶಿಲಾತಪಸ್ವಿ’ ಎಂಬ ಕವನದಲ್ಲಿ ಕುವೆಂಪು ಅವರು ಅತ್ಯಂತ ಕಾವ್ಯಮಯವಾಗಿ ಹೇಳಿದ್ದಾರೆ. ಇಂದಿನ ವಿಜ್ಞಾನ ಖಗೋಳ ಶಾಸ್ತ್ರಾದಿಗಳು ತೆರೆದ ಕವಿಯ ಪ್ರತಿಭಾ ನೇತ್ರಕ್ಕೆ ಒಂದು ಕಲ್ಲು ಕೂಡ ಶತಮಾನಗಳ ಸೃಷ್ಟಿಯ ಇತಿಹಾಸದ ಹೊತ್ತಗೆಯಾಗಿ ತೋರುತ್ತದೆ. ಒಂದು ಕೂಸು ಸೃಷ್ಟಿಯ ಸಮಸ್ತ ವ್ಯಾಪಾರವನ್ನು ತನ್ನಲ್ಲಿ ಹುದುಗಿಸಿಕೊಂಡ ರಹಸ್ಯವಾಗಿ ತೋರುತ್ತದೆ. ‘ಕೂಸು’ ಕೇವಲ ಕುಸುಮ ಕೋಮಲತೆಯ ಮುದ್ದಿನ ಮುದ್ದೆಯಲ್ಲ; ಅದು –

ಕಲ್ಪಾಂತರಗಳ ಸಂಕ್ಷಿಪ್ತಾಕೃತಿ
ಜಗಶಿಲ್ಪಿಯ ಯುಗಯುಗ ಕರ್ಮದ ಕೃತಿ
ಶತಮಾನಂಗಳ ಸಂಗ್ರಹ ಸಂಸ್ಕೃತಿ

ಅದರ ಅಂತರಂಗದಲ್ಲಿ

ಯುಗ ಯುಗ ಕೋಟಿಯ ಬಾಳ್ಗಳ ಕಣಸು
ಪುನರಭಿನಯಿಸಿಹುದಾತ್ಮದಲಿ!

ತೊಟ್ಟಲಿನಲ್ಲಿ ಮಲಗಿ ಕನಸುಕಾಣುವ ಆ ಶಿಶುವಿನ ಮನಸ್ಸಿನಲ್ಲಿ ಏನೇನಿರಬಹುದು-

ಆಕೃತಿಗಳ್ಗಾಕಾರವೆ ಇಲ್ಲ:
ಅರ್ಥಾನರ್ಥದ ಸ್ಪಷ್ಟತೆ ಇಲ್ಲ.
ಪಸುಳೆಯ ಮೊದಲನೆ ತೊದಲಂತೆಲ್ಲ
ಅರ್ಥದ ಮೆಚ್ಚಿಲ್ಲದ ಕೆಚ್ಚು:
ಪ್ರಳಯಸೃಷ್ಟಿಯ ಪ್ರಥಮದ ರತಿಯೋ?
ಕಾಲದೇಶಗಳ ಭ್ರೂಣ ಸ್ಥಿತಿಯೋ?
ಅಸ್ತಿತ್ವತೆ ಹಿಡಿಯುತ್ತಿಹ ಮಿತಿಯೋ?

ಸೃಷ್ಟಿ ಪೂರ್ವದಲ್ಲಿ ಇದ್ದ, ‘ಪ್ರಳಯ ಸೃಷ್ಟಿಗಳ  ‘ಪ್ರಥಮರತಿ’ಯಲ್ಲಿ ಆಕೃತಿಗಳಿಗೆ ಆಕಾರವಾಗಲೀ, ಅರ್ಥಾನರ್ಥದ ಸ್ಪಷ್ಟತೆಯಾಗಲೀ ಇಲ್ಲದ ಆ ಕಾಲದ ಒಂದು ಸ್ಥಿತಿ ಇದರ ಅಂತರಂಗದಲ್ಲಿ ಪುನರಭಿನಯಿಸುತ್ತಿರಬಹುದೇ, ಅಥವಾ-

ಸೃಷ್ಟಿಯ ಕಂಕಾಲದ ತಾಂಡವ ಕಲಿ
ಪ್ರೇತದವೋಲೊಯ್ಯನೆ ಮೂಡಿ
ಪ್ರಲಯಾಗ್ನಿಯ ಕೇಸರಿ ಜಡೆಗಳವೋಲ್
ಕಂಗೆಟ್ಟಲೆಯುವ ಮುನ್ನೀರ‍್ಗಳವೋಲ್
ಮೇಲ್ವಾಯುವ ಹೊಗೆ ಮುಗಿಲ್ಬಂಡೆಗಳ ವೋಲ್
ಕುಣಿವನು ಭೂತಾಟವನಾಡಿ !

ಮುಂದೆ ಅಸೃಷ್ಟ್ಯಭಿಮುಖವಾದ ವಿಲಯಾಗ್ನಿ, ಪ್ರಲಯಾಗ್ನಿಯ ಜಡೆಗಳಂತೆ, ಮೇರೆಯಿಲ್ಲದಲೆಯುವ ಮುನ್ನೀರ‍್ಗಳಂತೆ, ಮೇಲೆ ಹಾಯುವ ಹೊಗೆ ಮುಗಿಲ್ ಬಂಡೆಗಳಂತೆ ಉಕ್ಕಿ ಹರಿದ ಪರಿಯೂ, ಕಡೆಗೆ ತಾರಾ ಗರ್ಭಿಣಿಯಾದ ಸೃಷ್ಟಿ, ನಕ್ಷತ್ರ ಪ್ರಸವದ ಸಂತುಷ್ಟಿಯನ್ನು ಪಡೆದು, ಸ್ಥಳ ಜಲ ಸಸ್ಯಗಳಾಗಿ ತನ್ನ ಪ್ರಥಮ ರಚನೆಗಳನ್ನು ರೂಪಿಸಿದಾಗ, ಅಂದಿನ –

ಬಹುಶಃ ಪ್ರಥಮ ಸಮುದ್ರದ ಬಾಳೋ
ಬಹುಶಃ ಭೀಷಣ ವ್ಯಾಳದ ಗೋಳೋ
ಮೀನಿನ ಹಕ್ಕಿಯ ಮಂಗನ ಪಾಳೋ
ಮೇಣ್ ಸಮ್ಮಿಶ್ರವೊ ಆ ಸ್ಮರಣೆ
ಅಥವಾ ವಿಜ್ಞಾನ ನಿಸರ್ಗಕ್ಕೆ
ಗೋಚರವಾಗದ ಆ ಸ್ವರ್ಗಕ್ಕೆ
ಪರಮ ಪರಾತ್ಮದ ಸಂಸರ್ಗಕ್ಕೆ
ಕೂಸಿನ ಕನಸೇರಿಹುದೇನೋ!
[17]

ಒಂದು ಕೂಸಿನ ಅಂತರಂಗದಲ್ಲಿ ಏನಿರಲಾರದು! – ಎಂಬ ಅತ್ಯದ್ಭುತ ‘ದರ್ಶನ’ ಈ ಕವನದಲ್ಲಿ ಮೂಡಿದೆ. ಸೃಷ್ಟಿಯ – ಜೀವನ ವಿಕಾಸದ- ಮನೋವಿಕಾಸದ ವಿಷಯವನ್ನು ಕುರಿತು ಮನಸ್‌ಶಾಸ್ತ್ರ, ಯೋಗವಿಜ್ಞಾನ, ಖಗೋಳ ವಿದ್ಯೆ ಇತ್ಯಾದಿ ನೂತನ ವಿಚಾರ ಪರಿಪಾಕದಿಂದ ರೂಪಿತವಾದ ಹೊಸ ದೃಷ್ಟಿಯ ಕವಿಯ ಕಣ್ಣಿಗೆ ಈ ವಿಷಯ ಭವ್ಯತಾನುಭೂತಿಗೆ ವಸ್ತುವಾಗಿದೆ.

ಹಿಂದಿನ ಕವಿಗಿಂತ ಇಂದಿನ ಕವಿಗಳ ಸಾಮಾಜಿಕ ಪ್ರಜ್ಞೆ ವಿಶೇಷ ಆಯಾಮವುಳ್ಳದ್ದಾಗಿದೆ. ರಾಜ ಮಹಾರಾಜರ ಅರಮನೆಯ ನೆಳಲಿನಲ್ಲಿ ಪದ್ಯ ರಚಿಸುತ್ತಿದ್ದ ಕವಿಗೆ ರಾಜರ ಜೀವನವೇ ಕಾವ್ಯ ವಸ್ತುವಾಗಿತ್ತು. ಆದರೆ ಇಂದಿನ ಕವಿ ದಿನದಿನದ ಜನದ ಕಷ್ಟಸುಖಗಳಲ್ಲಿ ತಾನೂ ಒಂದಾಗಿ ಬದುಕುವವನು; ಅವರು ಪಟ್ಟ ಪಾಡನ್ನು ಹಾಡಾಗಿ ಪರಿವರ್ತಿಸತಕ್ಕವನು. ಹೀಗಾಗಿ ಸಾಮಾಜಿಕ ಅವ್ಯವಸ್ಥೆಯನ್ನು ಕಂಡು ಕುದಿದ ಕವಿ ಸುಧಾರಕನಾಗಿ ನಿಂತು ರೇಗಬಹುದು. ಇಂತಹ ಸಮಸ್ಯೆಗಳನ್ನು ಕೇವಲ ಲೋಕಾನುಭಾವದ ಸ್ಥಿತಿಯಲ್ಲೇ ಅನುಭವಿಸಿ, ಕವಿ ಅಭಿವ್ಯಕ್ತಗೊಳಿಸಿದರೆ ಅವು ಕೇವಲ ಛಂದೋಬದ್ಧವಾದ ಉದ್ಗಾರಗಳಾಗಿ ಪ್ರಚಾರದ ಕವನಗಳಾಗುವ ಅಪಾಯವಿದೆ. ಇಂಥ ಪ್ರಚೋದನೆಯ ಕವನಗಳೂ ತತ್ಕಾಲದಲ್ಲಿ ಜನರ ಪ್ರಶಂಸೆಯನ್ನು ಪಡೆಯಬಹುದು; ಆದರೆ ಇಂಥ ವಸ್ತುವೂ ನಿಜವಾದ ಕವಿಯ ಕಾವ್ಯಾನುಭವಕ್ಕೆ ಒಳಗಾದಾಗ, ಆ ಅನುಭವವವೂ ಒಂದು ಸಮರ್ಥವಾದ ಪ್ರತಿಮೆಯಾಗಿ ರೂಪುತಾಳುತ್ತದೆ. ಸಮಾಜದ ಆರ್ಥಿಕ ಅವ್ಯವಸ್ಥೆಯ ಅನುಭವವನ್ನು ಕವಿ ಬೇಂದ್ರೆಯವರು ‘ಕುರುಡು ಕಾಂಚಾಣ’ ಎಂಬ ಕವನದಲ್ಲಿ ಹಿಡಿದಿಟ್ಟಿರುವ ರೀತಿ ಈ ಬಗೆಯದು:

ಕುರುಡು ಕಾಂಚಾಣ ಕುಣಿಯುತಲಿತ್ತೋ
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೊ –

ಅದ್ಭುತವಾದ ಪ್ರತಿಮೆ ಸಿರಿವಂತಿಕೆಯ ಕುರುಡು ನರ್ತನಕ್ಕೆ. ಕುಣಿಯುವ ಈ ಕುರುಡು ಕಾಂಚಾಣದ ಮೂರ್ತಿಯ ಸ್ವರೂಪವೂ ಎಂಥದು!

ಬಾಣಂತಿ ಎಲುಬ ಸಾಬಾಣದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತೊ
ಸಣ್ಣ ಕಂದಮ್ಮಗಳ ಕಣ್ಣಿನ ಕವಡೀಯ
ತಣ್ಣನೆ ಜೋಮಾಲೆ ಕೊರಳೊಳಗಿತ್ತೋ
ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಾಂಡಾರ ಹಣೆಯೊಳಗಿತ್ತೋ
ಬಡವರ ಒಡಲಿನ ಬಡಬಾನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ
[18]

ಈ ಕುರುಡು ಕಾಂಚಾಣದ. ತೊತ್ತಳದುಳಿತ, ಹೆಂಗಸರ, ಮಕ್ಕಳ, ಕೂಲಿ ಕುಂಬಳಿಯವರ ವೇದನೆ ಎಂತಹ ಅಪೂರ್ವವಾದ ಧ್ವನಿಪೂರ್ಣವಾದ ರೀತಿಯಲ್ಲಿ ಈ ಒಂದು ಪ್ರತಿಮೆಯಲ್ಲಿ ಚಿತ್ರಿತವಾಗಿದೆ! ಇಂದಿನ ಆರ್ಥಿಕ ಅವ್ಯವಸ್ಥೆಯನ್ನು ಇದಕ್ಕಿಂತ ಶಕ್ತಿಯುತವಾಗಿ ಹೇಳಲು ಸಾಧ್ಯವಿಲ್ಲವೋ ಎಂಬಷ್ಟರ ಮಟ್ಟಿಗೆ ಈ ಚಿತ್ರ ಪರಿಣಾಮಕಾರಿಯಾಗಿದೆ. ಹೀಗೆಯೆ ಕುವೆಂಪು ಅವರ ‘ಕಲ್ಕಿ’ ಈ ದೃಷ್ಟಿಯಲ್ಲಿ ಅತ್ಯಂತ ಯಶಸ್ವಿಯಾದ ಕವನ. ನವ್ಯ ಕವಿ ಅಡಿಗರ ‘ಗೊಂದಲಪುರ’ ಇಂದಿನ ಶೋಷಣೆಯ ಚಿತ್ರವೊಂದನ್ನು ಹೀಗೆ ಗ್ರಹಿಸಿದೆ :

ಉಳುವವರ ಎದೆಗೆ ಹಾಕಿತ್ತು ರಬ್ಬರ್ ಟ್ಯೂಬು ಒಂದೆರಡು ಮೈಲಿ ಉದ್ದ.
ಅದರಾಚೆ ತುದಿಯಲ್ಲಿ ಕುಳಿತು ಹೀರುತ್ತಿದ್ದ ರಕ್ತ ಮದ್ಯವನೊಬ್ಬ ಅಬ್ಬಬ್ಬ-
ಒಂಟೆಯ ಡುಬ್ಬ.
ಗುಂಡೋದರನ ಪಟ್ಟ ಶಿಷ್ಯ ಧಾಂಡಿಗ ಜುಬ್ಬ
[19]

ಇದೊಂದು ವ್ಯಂಗ್ಯಚಿತ್ರ, ನಮ್ಮ ಇಂದಿನ ಜನರ ಶೋಷಣೆಗೆ : ಇದು ಬೇಂದ್ರೆಯವರ ಕುರುಡು ಕಾಂಚಾಣದಂತೆ, ಕುವೆಂಪು ಅವರ ‘ಕಲ್ಕಿ’ಯಂತೆ ಇರುವ ಸ್ಥಿತಿಯನ್ನು ಬೇರೊಂದು ಪ್ರತಿಮಾ ಸೃಷ್ಟಿಯ ಮೂಲಕ ಧ್ವನಿಸಿರುವ ರೀತಿಯದಲ್ಲ; ವಸ್ತು ಸ್ಥಿತಿಯನ್ನೆ ಪ್ರತಿಮೆಗೊಳಿಸಿ ಸಹಜವಾಗಿ ನಿರೂಪಿಸುವ ರೀತಿ. ಸಾಮಾಜಿಕ ಅವ್ಯವಸ್ಥೆ ವ್ಯಕ್ತಿಗಳ ವೇದನೆಗೆ ಹೇಗೆ ಕಾರಣವೋ, ಹಾಗೆ ಮಾನಸಿಕ ಕ್ಷೇತ್ರಗಳಲ್ಲೂ ಜನದ ಮೌಢ್ಯ, ಅಂಧಾಚರಣೆಗಳೂ ಕಾರಣವಾಗಿವೆ. ಭಗವಂತನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಹಲವರು ಮಾಡುವ ಶೋಷಣೆಯೂ ಕವಿಯನ್ನು ಕೆರಳಿಸುತ್ತದೆ. ಮಹಾ ಮಹಾ ವ್ಯಕ್ತಿಗಳು ಬಂದು ತಮ್ಮ ಅಮೂಲ್ಯವಾದ ತೇಜಸ್ಸನ್ನು ನೀಡಿದರೆ, ಆ ಜ್ಯೋತಿರೂಪವಾದ ಜ್ವಾಲೆಯನ್ನು ನಂದಿಸಿ ಅದರ ಬೂದಿಯ ಮಹಿಮೆಯನ್ನು ಕೊಂಡಾಡಿ ಅದರ ನೆಪದಲ್ಲಿ ಹೊಟ್ಟೆ ಹೊರೆಯುವ ‘ಪೂಜಾರಿ’ಗಳು ಎಲ್ಲ ಕಾಲಕ್ಕೂ ಇದ್ದಾರೆ. ಈ ಒಂದು ವಸ್ತುವನ್ನು ‘ದೇವರು-ಪೂಜಾರಿ’ ಎಂಬ ಪ್ರತಿಮಾ ಕವನದಲ್ಲಿ ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿರುವುದು ಗಮನಾರ್ಹವಾಗಿದೆ. ಕವಿತೆ ಮೊದಲಾಗುವುದು ಹೀಗೆ

ದಿಗಂತದಿಂದ ದಿಗಂತಕೆ ಹಬ್ಬಿದೆ
ವಿಶ್ವವ ತಬ್ಬಿದೆ
ರುಂದ್ರ ರಾತ್ರಿ!
ಸಾಂದ್ರ ತಮಂಧದಿ ಮುಳುಮುಳುಂಗುತೆ ಕರಂಗಿದೋಲಿದೆ ಧಾತ್ರಿ!

ಇದು ಒಂದಿರುಳಿನ ಚಿತ್ರವಲ್ಲ; ಮಾನವ ಮತಿಗೆ ನಿರಂತರವೂ ಕವಿಯುತ್ತಿರುವ ಕತ್ತಲೆಯ ಚಿತ್ರ. ಆದರೆ ಆಗಾಗ ಬರುತ್ತದೆ ಒಂದು ಮೂರ್ತಿ –

ಇರೆ ಇಂತುಟು ಭುವನದ ಬಾಳು,
ಅದೊ ನೋಡದೊ ಕೇಳು;
ನಿದ್ರೆಯ ಕದಡಿದೆ ಅವತಾರನ ತೂರ‍್ಯದ ವಾಣಿ;
ಕಂಪಿಸುತಿದೆ ಜಡತೆಯೊಳದ್ದಿದ ಕ್ಷೋಣಿ!
ದಕ್ಷಿಣ ಹಸ್ತದಿ ಪ್ರಜ್ವಲಿಸುತ್ತಿದೆ ಉರಿವ ಹಿಲಾಲು
ಕತ್ತಲೆಯನ್ನು ಕತ್ತರಿಸುವ ಬೆಂಕಿಯ ಕರವಾಳು;

ಇಂತಹ ಮೂರ್ತಿಯ ಹಿಂದೆ ಹೊರಡುತ್ತದೆ ಆರಾಧಕರ ದಂಡು –

ಮೌಢ್ಯ ಕಾನನಕೆ ಬೆಂಕಿಯ ಹೊತ್ತಿಸಿ
ತಿಮಿರ ಸಮುದ್ರವ ಶೋಷಿಸಿ ಬತ್ತಿಸಿ
ಪ್ರಸರಿಸಿ ಜ್ವಾಲಾಜ್ಯೋತಿಯ ನಡೆದಿರೆ ಅವತಾರನು ಮುಂದೆ,
ಅದೊ ಹೊರಟನು ಪೂಜಾರಿಯು ಹಿಂದೆ!

ಹೀಗೆ ಹೊರಟ ಪೂಜಾರಿಗಳು ಮಾಡುವುದೇನು ?-

ಅವತಾರನು ಹೊತ್ತಿಸಿದುರಿಯನು ಅಗ್ರೋದಕದಿಂ ನಂದಿಸುತೆ
ಬೆಂಕಿಯನಾರಿಸಿ ಬೂದಿಯ ಮಾಡಿ
ಆ ಬೂದಿಯ ಮಹಿಮೆಯನೇ ಕೊಂಡಾಡಿ
ಅದೊ ಹೊರಟನು ಪೂಜಾರಿಯು ಹಿಂದೆ !

ದೂರದ ಬೆಳಕಿನಿಂದ ಆಕರ್ಷಿತರಾಗಿ ಬಳಿಗೆ ಬಂದ ಭಕ್ತರಿಗೆ ಈ ಪೂಜಾರಿ ಬೂದಿಯನ್ನು ಹಂಚುತ್ತಾನೆ –

ಬೆಂಕಿಯ ನಂದಿಸಿ
ಬೂದಿಗೆ ವಂದಿಸಿ
ದೇವರ ಮರೆಗೈಯುತೆ ಪೂಜಾರಿಯೆ ಮಿಂಚುವನು;

ಇಂತಹ ಪೂಜಾರಿಗಳು ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ; ಇಂಥವರಿಂದ ನಮ್ಮ ಜನಜೀವನ ಶೋಷಿತವಾಗಿದೆ. ಸರಿ, ಮತ್ತೆ, ಎಂದಿನಂತೆ

ದಿಗಂತದಿಂದ ದಿಗಂತಕೆ ಹಬ್ಬಿದೆ ರುಂದ್ರರಾತ್ರಿ!
ಸಾಂದ್ರ ತಮಂಧದಿ ಮುಳು ಮುಳುಂಗುತೆ
ಕರಂಗಿದೋಲಿದೆ ಧಾತ್ರಿ
[20]

ಕವಿಯುತ್ತಿದೆ, ಈ ನಿರಂತರವಾದ ಕತ್ತಲೆ, ಇದರಿಂದ ನಮ್ಮ ಜನಕ್ಕೆ ಬಿಡುಗಡೆ ಎಲ್ಲಿ ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಈ ಒಂದು ಸಮಸ್ಯೆಯ ಪರಿಭಾವನೆಯ ಸುಂದರ ಪ್ರತಿಮೆ ಈ ಕವನ.

ಸುತ್ತಣ ನಾಗರಿಕ ಜೀವನದ ಯಂತ್ರ ಜಗತ್ತೂ ಕವಿಯ ಮನಸ್ಸಿನ ಮೇಲೆ ಪರಿಣಾಮ ಮಾಡಿವೆ. ನಿಸರ್ಗದ ವಸ್ತುಗಳನ್ನು ಪ್ರತಿಮೆ, ಸಂಕೇತಗಳನ್ನಾಗಿ ಬಳಸಿದಂತೆ ಸಮಕಾಲೀನ ಕವಿಗಳು ನಾಗರಿಕ ಜೀವನದ ಯಂತ್ರ ಪ್ರಪಂಚದಿಂದಲೂ ಸಂಕೇತ, ಪ್ರತಿಮೆಗಳನ್ನು ನಿರ್ಮಿಸಿ ತಮ್ಮ ಅನುಭವಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಇಂತಹ ಸಂಕೇತ ನಿರ್ಮಿತಿಗೆ ಒಂದು ಸಣ್ಣ ಉದಾಹರಣೆ –

“ಟಿಕ್, ಟಿಕ್, ಟಿಕ್, ಟಿಕ್…….
ಎಲ್ಲಿ ಇತ್ತೀ ವಾಚು?
ಕೀಕೊಟ್ಟುದಿದಕೆಷ್ಟು ಜನ್ಮದಾಚೆ?
ಈಗ ಗಕ್ಕನೆ ರೆಕ್ಕೆ ಬಡಿದು ಬಂದಿತು ಇಗೋ
ಕುಕ್ಕುತಿದೆ ಕರುಳನ್ನು ತಡೆಯಲಾರೆ”
[21]

ಕಾರ್ಖಾನೆಗಳ ಯಂತ್ರ ಜಟಿಲತೆಯೂ ನೂರಾರು ತುಮುಲಗಳಿಂದ ತುಂಬಿದ ಮಾನವ ಮತಿಯ ಚಿತ್ರಣಕ್ಕೆ ಒಂದು ಪ್ರತಿಮೆಯಾಗಿ ಒದಗಿಬರುತ್ತದೆ –

“ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ
ಹಾಳಾದ ಕಾರಖಾನೆ!
ನೂರಾರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇ ಸಮನೆ
ಹಗಲಿರುಳು ಬಿಟ್ಟೂ ಬಿಡದೆ ಕಪ್ಪುಹೊಗೆಯುಗುಳಿ
ಅಳಿಸಿ ಬಿಟ್ಟಿದೆ ಅಗೋ ಆಕಾಶದ ನಕಾಶವನ್ನೇ!”
[22]

ಈ ಕಾರ್ಖಾನೆಯ ಚಿತ್ರ ಹೊರಗಿನದಲ್ಲ, ಒಳಗಿನದು. ಇಂತಹ ಸ್ಥಿತಿಯಲ್ಲಿ, ಇರುವ ಬೆಳಕನ್ನು ಕಳೆದುಕೊಂಡು ಅದರ ರಿಪೇರಿಗೆ ತುಡಿಯುವ ಹಿರಿಯ ಆಕಾಂಕ್ಷೆಯ ತುಯ್ತವನ್ನು ಚಿತ್ರಿಸಿರುವ ಒಂದು ಚಿತ್ರವನ್ನು ನೋಡಿ –

“ಇದ್ದಕ್ಕಿದ್ದಂತೆಯೇ ತಂತಿ ಕತ್ತರಿಸಿ ಆರಿಹೋಗಿದೆ ‘ಬಲ್ಬು’
ಹಾಲು ಹರಿಸಿದ ಬೆಳಕು ಸತ್ತು ಕರಿಮಸಿಯಾಗಿ
ಚದುರಿದೆ ಇಲ್ಲಿ,
ಚಲ್ಲಾಪಿಲ್ಲಿ,
ಎಷ್ಟು ಕರೆದರಚಿದರು ಬರಲಿಲ್ಲ ಆ ಅವನು
ಆಗಿಲ್ಲ ಇದರ ರಿಪೇರಿ
ಯುಗಯುಗಾಂತರವಾಯ್ತು ನಾ ಕಾಯತೊಡಗಿ
ಆ ಅವನ ದಾರಿ!
[23]

ಈ ಚಿತ್ರ ಅಂತರಂಗದ ಸದ್ಯದ ಸ್ಥಿತಿಯನ್ನೂ, ಕಾತರವನ್ನೂ, ಚೆನ್ನಾಗಿ ಧ್ವನಿಸುವುದಿಲ್ಲವೆ? ಸಮಾಜದಲ್ಲಿ ಬೋಧಕರು ಬಹಳಮಂದಿ. ಒಳಗೆ ಏನೂ ಸತ್ವವಿಲ್ಲದಿದ್ದರೂ, ತಾವೇ ಮಹಾ ಪ್ರಾಜ್ಞರೆಂದು ಹಸಿದವರ ಮುಂದೆ ಉಪನ್ಯಾಸ ಮಾಡುವ ಜನಕ್ಕೇನು ಕೊರತೆ? ಇಂತಹ –

ಬರಿಗೊಡಗಳಿಗೆ ಸಮಾಧಾನ ಹೇಳುತ್ತಿದೆ, ನೀರಿಲ್ಲದ ನಲ್ಲಿ
ಮಟ ಮಟ ಮಧ್ಯಾಹ್ನದಲ್ಲಿ!
[24]

ಒಂದೇ ಒಂದು ಸಣ್ಣ ಚಿತ್ರ ಇದು. ಇದರಲ್ಲಿ ಅಣಕವಿದೆ; ಚೆಲುವೂ ಇದೆ; ಪರಿಣಾಮ ರಮಣೀಯತೆಯೂ ಇದೆ. ಮನೆಯಲ್ಲಿ ರಭಸದಿಂದ ಬಿದ್ದೆದ್ದು ಹರಿದಾಡುವ ಅಂಬೆಗಾಲಿನ ಮಗುವನ್ನು –

ತಾಸಿಗಿಪ್ಪತ್ತು ಮೈಲಿನ ವೇಗ ಮೀರುವುದು
ಮನೆ ತುಂಬ ಓಡುವುದು ಅಂಬೆಗಾಲಿನ ಕಾರು!
ನೋಡ ನೋಡುತ ಧುಮುಕಿ ಹೊಡೆದು ಮೇಲೇಳುವುದು
ಬ್ರೇಕು ಹಾಕಲು ವೇಗ ಮತ್ತಿಷ್ಟು ಜೋರು!
[25]

ಎಂದು ವರ್ಣಿಸುವುದು ತುಂಬ ಸೊಗಸಾಗಿಯೇ ಇದೆ. ‘ವಾಚು’, ‘ರೈಲು’, ‘ಕಾರು’, ‘ಬಲ್ಬು’, ಇತ್ಯಾದಿ ಮಾತುಗಳು ಜನಸಾಮಾನ್ಯದ ಆಡು ಮಾತಿನಲ್ಲಿ ಅನಿವಾರ‍್ಯವಾಗಿ ಬಳಕೆಯಾಗಿರುವುದರಿಂದ ಅವುಗಳನ್ನು ಹಾಗೆಯೇ ಪ್ರತಿಮೆ, ಸಂಕೇತಗಳಾಗಿ ಬಳಸಿದರೆ, ಸೌಂದರ‍್ಯಾನುಭವಕ್ಕೆ ಅಡ್ಡಿ ಏನೂ ಆಗುವುದಿಲ್ಲ. ಕವಿ ಯಾವುದನ್ನು ಬೇಕಾದರೂ ಬಳಸಲಿ, ಯಾವುದರ ಮೂಲಕವಾಗಲೀ ಅಭಿವ್ಯಕ್ತಗೊಳಿಸಲಿ, ನಮಗೆ ಪ್ರಧಾನವಾದುದು ಅವು ಎಷ್ಟರಮಟ್ಟಿಗೆ ಕವಿಯ ರಸಾಂಶಗಳಾಗಿವೆ, ಅವು ಎಷ್ಟರಮಟ್ಟಿಗೆ ಸೌಂದರ‍್ಯದ ವಸ್ತುಗಳಾಗಿವೆ ಎನ್ನುವುದು. ಇಂದಿನ ಕವಿಯ ಜೀವನವೂ, ದೃಷ್ಟಿಯೂ ವಿಶಾಲವಾಗುತ್ತಿವೆ. ಅವನು ತನ್ನ ಸುತ್ತ ಕಂಡ ವಸ್ತುಗಳನ್ನು ಕಾವ್ಯಾನುಭವದ ವಸ್ತುಗಳನ್ನಾಗಿ ಮಾಡಿ ಹೊಸ ಭಾವಮೌಲ್ಯಗಳನ್ನು ನಿರ್ಮಿಸಬೇಕಾದದ್ದು ಅನಿವಾರ‍್ಯ. ಹಳೆಯದಕ್ಕೆ ಹೊಸ ರೂಪು ನೀಡುವ, ಹೊಸದೆಲ್ಲವನ್ನೂ ತನ್ನ ಅನುಭವದಲ್ಲಿ ಅರಗಿಸಿಕೊಳ್ಳುವ, ಹಿಂದಿನದನ್ನೂ, ಇಂದಿನದನ್ನೂ, ಸಮನ್ವಯ ಮಾಡುವ ಒಂದು ಪ್ರಾಮಾಣಿಕ ಪ್ರಯತ್ನ ಕಾಣುತ್ತದೆ. ಅದರಿಂದ ಇಂದಿನ ಕವಿ ತನ್ನ ಅಭಿವ್ಯಕ್ತಿಯಲ್ಲಿ ವಿಶೇಷವಾದ ವೈವಿಧ್ಯವನ್ನು ತಂದಿದ್ದಾನೆ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.

ಲೋಕದ ವಸ್ತುವೊಂದು ಕವಿಯ ಮನಸ್ಸಿನ ಮೇಲೆ ಮಾಡಿದ ಸೌಂದರ‍್ಯಾನುಭವದ ಪರಿಯನ್ನು ಕವಿ ನೇರವಾಗಿ ಹೇಳಬಹುದು, ಕಲ್ಪನೆಯಿಂದ ಬೇರೊಂದೆಂಬಂತೆ ರೂಪಿಸಿ ಹೇಳಬಹುದು; ರಸಾವೇಶದ ನಿಲುವಿನಲ್ಲಿಯೇ ಚಿಂತನೆಗೆ ಒಳಪಡಿಸಿ, ಚಿಂತನಾ ಪ್ರಸೂತವಾದ ಅನುಭವವನ್ನು ಹೇಳಬಹುದು, ಅಥವಾ ತಾನು ದರ್ಶಿಸಿದ ಮಹತ್ತನ್ನು ಪ್ರತಿಮೆಯೊಂದರಲ್ಲಿ ಕಡೆದು ನಿಲ್ಲಿಸಬಹುದು. ಆದರೆ ಅಭಿವ್ಯಕ್ತಿಯು ಈ ಎಲ್ಲ ಅಂಶಗಳನ್ನು ಒಳಗೊಂಡರೂ, ಈ ಪ್ರಕಾರದಿಂದ ಭಿನ್ನವೆಂಬಂತೆ ತೋರುವ ಒಂದು ಪರಿಯೂ ಉಂಟು. ಇದನ್ನು ಆಲೋಚನಾ ಜನ್ಯ ಎನ್ನಲಾಗುವುದಿಲ್ಲ. ಅಥವಾ ಚಿಂತನ ಸೌಂದರ‍್ಯ ಎಂದರೂ ಸರಿಯಾಗುವುದಿಲ್ಲ. ಇದು ಅದರದೊಂದು ಸಹಜಾಂಶವಾಗಿ ಉದ್ಭಿನ್ನವಾಗಿ ಇಡೀ ಪದ್ಯದ ಮೇಲೆ ಉಜ್ವಲವಾದ ಬೆಳಕನ್ನು ಚೆಲ್ಲಿ, ತನಗೆ ತಾನೇ ನಕ್ಷತ್ರದಂತೆ ಮಿರುಗುತ್ತದೆ ಇಲ್ಲಿನ ಭಾವ. ವಿರಳವೂ ವಿಶಿಷ್ಟವೂ ಆದ ಈ ಪ್ರಕಾರವನ್ನು ಹಲವು ನಿದರ್ಶನಗಳಿಂದ ಸ್ಪಷ್ಟಪಡಿಸಬಹುದು. ಪು.ತಿ.ನ ಅವರ ‘ರಂಗವಲ್ಲಿ’ ಎಂಬ ಕವಿತೆಯನ್ನು ನೋಡಿ : ಹಣ್ಣು ಹಣ್ಣು ಮುದುಕಿಯೊಬ್ಬಳು ಬೆಳಕಿನ ಮಬ್ಬಿನಲ್ಲಿ ಎದ್ದು ಬೆಟ್ಟವನ್ನು ಹತ್ತಿ ದೇಗುಲದ ಬಾಗಿಲಿಗೆ ಪ್ರತಿದಿನವೂ ರಂಗವಲ್ಲಿಯನ್ನು ಬರೆಯುವುದನ್ನು ಕವಿ ಕಂಡು ಅದನ್ನು ವರ್ಣಿಸುತ್ತಾರೆ. ಕವಿ ಕಂಡ ಪಾತ್ರದ ಈ ಶ್ರದ್ಧಾದಿ ವಿಶೇಷತೆಯ ಕಥನವೇ ಸಾಕು ಸೌಂದರ‍್ಯಾನುಭವಕ್ಕೆ. ಆದರೆ, ಕವಿಯೇ ವ್ಯಾಖ್ಯಾನಕಾರಕನಾಗಿ ಒಂದು ಮಾತು ಹೇಳುತ್ತಾರೆ

ದೇವನಿರವು ಸಟೆಯೊ ದಿಟವೊ
ಹೆರರು ತಿಳಿಯದಿರಿತಗಳನು
ಹುದುಗಿ ಇರುವ ಪಾಪಗಳನು
ಗುಟ್ಟನೆಲ್ಲವ,
ಎದೆಯ ಹೊಗುತಲೆಲ್ಲ ತಿಳಿದು
ಸಂತವಿಡುವನೊಬ್ಬನುಂಟು
ಎನ್ನುವಚಲ ಭಕ್ತಿದಿಟವು
ಮತ್ತು ಸೋಜಿಗ
[26]

ದೇವರಿದ್ದಾನೆಯೋ ಇಲ್ಲವೋ, ಭಕ್ತಿ ಇರುವುದು ಮಾತ್ರ ನಿಜ ಮತ್ತು ಸೋಜಿಗ ಎನ್ನುವುದು ಭಕ್ತಿಯನ್ನು ಕುರಿತ ಆಲೋಚನೆಯಿಂದಾಗಲೀ ಚಿಂತನೆಯಿಂದಾಗಲೀ, ಪ್ರಜ್ಞಾಪೂರ್ವಕವಾದ ವ್ಯಾಖ್ಯಾನಂದದಿಂದಲಾಗಲೀ ಮೂಡಿದುದಲ್ಲ. ಆದರೆ ಈ ಮಾತು ಈ ಸಂದರ್ಭದಲ್ಲಿ ಸುಂದರವೂ, ಇಡೀ ಪದ್ಯಕ್ಕೆ ಶೋಭಾಯಮಾನವೂ ಆಗಿದೆ. ಮಗುವನ್ನು ಕುರಿತ ‘ತುಂಗಭದ್ರೆ’ ಎನ್ನುವ ಕೆ.ಎಸ್.ನ. ಅವರ ಪದ್ಯದಲ್ಲೂ ಇಂತಹ ಪರಿಣಾಮವಿದೆ, ನಡುವಿನ ಎರಡು ಸಾಲುಗಳಲ್ಲಿ. ಮಗು ತುಂಗಭದ್ರೆಗೆ, ‘ನಾನೊಂದು ದಡ ಮೀನಾಕ್ಷಿ ಒಂದು ದಡ’ ಎಂದು ಕವಿ ಹೇಳಿ ಈ ಎರಡು ದಡಗಳ ನಡುವೆ “ಒಂದು ದಡ ಗದರಿದರೆ ಮತ್ತೊಂದು ದಡವಿಹುದು” ಎನ್ನುವ ನಂಬುಗೆಯಿಂದ ತುಂಗಭದ್ರೆಯ ಹಡಗು ಚಂದ್ರನನ್ನು ಹೊತ್ತು ಸಂಚರಿಸುವುದು ಎಂದು ವರ್ಣಿಸಿ, ಕವಿ

ಆ ಧೈರ್ಯ
ನನಗಿಲ್ಲ, ನನ್ನಂಥ ಎಷ್ಟೋ ಬಾಳಿಗೆ ಇಲ್ಲ.
[27]

ಎನ್ನುತ್ತಾರೆ. ಒಂದು ದಡ ಗದರಿದರೆ ಮತ್ತೊಂದು ದಡವಿದೆ ಎಂಬ ಆ ನಂಬಿಕೆಯಿಂದ ಬರುವ ಧೈರ್ಯ – ಈ ಮಗುವಿಗಿದೆ, ನನಗಾಗಲಿ ನಮ್ಮಂಥ ಎಷ್ಟೋ ಮಂದಿಗಾಗಲಿ ಇಲ್ಲ ಎನ್ನುವ ವಾಖ್ಯಾನ ರೂಪದ ಮಾತು ನಮ್ಮನ್ನು ರೋಮಾಂಚನಗೊಳಿಸುತ್ತದೆ ಒಂದು ಅಪೂರ್ವ ಭಾವನೆಯಾಗಿ. ಯುಗಾದಿಯನ್ನು ಕುರಿತು ಕವಿ ಪರಿಭಾವಿಸುತ್ತಾ, ವರ್ಷ ವರ್ಷವೂ ಹೊಸ ಒಂದು ಹೊಸತನ್ನು ತರುತ್ತದೆ ಈ ಯುಗಾದಿ ಮರಗಿಡಗಳ ಬದುಕಿನಲ್ಲಿ. ಆದರೆ –

ವರುಷಕೊಮ್ಮೆ ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?
[28]

ಎಂದು ಕವಿ ನಿಡುಸುಯ್ಯುವಲ್ಲಿ, ಈ ವಿಲಕ್ಷಣವಾದ ಭಾವನೆ ನಮ್ಮನ್ನು ಆ ಸೊಗಸಿನ ಪರಿಭಾವನೆಯಲ್ಲಿ ಅದ್ದುತ್ತದೆ. ಕವಿಯೊಬ್ಬ ದಾರಿಯಲ್ಲಿ ನಡೆಯುವಾಗ ತರುಣಿಯೊಬ್ಬಳ ಮುಡಿಯಿಂದ ಜಾರಿಬಿದ್ದ ಮಲ್ಲಿಗೆಯ ಹೂವೊಂದನ್ನು ಕೈಗೆತ್ತಿಕೊಳ್ಳುತ್ತಾನೆ. ಆದರೆ ಅದನ್ನು ಮುಡಿದ ಹೆಣ್ಣು ಹೂ ಜಾರಿಬಿದ್ದುದರ ಅರಿವಿಲ್ಲದೆ ಹೊರಟು ಹೋಗುತ್ತಾಳೆ ‘ಅಪ್ಸರೆಯು ತೊರೆದೊಂದು ಮರ್ತ್ಯಾ ಮರ್ತ್ಯನ ಶಿಶು’ವಿನಂತಿದ್ದ ಹೂವನ್ನು ಕೈಗೆತ್ತಿಕೊಂಡು ಇವನು ಆ ಹೂವಿನ ಪರಿಗಾಗಿ ಮರುಗುತ್ತಾನೆ. ಆಗ ಆ ಭಾವದಲ್ಲೇ ಅನಿಸುತ್ತದೆ-

ಮನೆಯ ತಲುಪಿದ ಮೇಲೆ ಕೊರಗುವಳೆ ಆ ತರುಣಿ
ಹೂ ಜಾರಿ ಹೋದುದಕೆ ? ನಾನರಿಯೆನು:
ನಾನಿದಕೆ ಮರುಗುವೆನು ; ಯಾವ ವಸ್ತುವೊ ಏನೊ
ಸೆಳೆವುದಚ್ಚರಿಯಲ್ತೆ ನಮ್ಮೆದೆಯನು !
[29]

ಎಂದು ಯಾರದೋ ಅವಜ್ಞತೆಯ ವಸ್ತು ಮತ್ತಾರದೋ ಮರುಕದ ವಸ್ತುವಾಗಿ ಹೃದಯವನ್ನು ಸೆಳೆಯುವುದಲ್ಲ – ಎಂಬ ಒಂದು ಭಾವ ತುಂಬ ಸುಂದರವಾಗಿ ಇಡೀ ಕವನದ ಮೇಲೆ ಒಂದು ಬಗೆಯ ಬೆಳಕನ್ನು ಚೆಲ್ಲುತ್ತಾ ನಿಲ್ಲುತ್ತದೆ. ಶ್ರೀನಿವಾಸರು, ‘ರಾಮನವಮಿ’ಯಲ್ಲಿ ಒಂದೆಡೆ ರಾಮ ಸೀತೆಯರ ಕತೆಯನ್ನು ಜವರೇಗೌಡರ ಬಾಯಲ್ಲಿ ವರ್ಣಿಸುತ್ತಾ

ರಾಮನ ಒಡಲಿನ ಸೌಸವ ಕಂಡಿತು
ದೇವಿಗೆ ಗಾಳಿಯಲಿ;
ಹಲವು ಹೆಣ್ಗಳಿಗೆ ಇಂತಹ ಪುಣ್ಯ
ಬರೆದಿದೆ ತಾಳಿಯಲಿ
[30]

ಎನ್ನುತ್ತಾರೆ. ಸೀತೆಗೆ ಗಾಳಿಯಲ್ಲಿ ರಾಮನ ಒಡಲಿನ ಸೌಸವ ಕಂಡಿತು – ಎನ್ನುವ ಮಾತು ಸೀತೆಯ ಪಾತಿವ್ರತ್ಯಕ್ಕೆ ಕಳಶವಿಡುವ ಮಾತು. ಆದರೆ –

“ಹಲವು ಹೆಣ್ಗಳಿಗೆ ಇಂತಹ ಪುಣ್ಯ
ಬರೆದಿದೆ ತಾಳಿಯಲಿ.”

ಎಂದು ಹೇಳುವ ಮಾತು ಬಲು ಸೊಗಸಾದ ವಾಖ್ಯಾನವಾಗಿದೆ. ಕವಿ ಹೀಗೆ ಮಾಡುವ ವ್ಯಾಖ್ಯಾನವೆಂಬಂತೆ ತೋರುವ ಒಂದು ಮಾತು ಕಾವ್ಯದಿಂದ ಎದ್ದುನಿಂತು ಮಿನುಗುತ್ತದೆ. ಇಂಥ ಕಡೆಯಲ್ಲಿ ವ್ಯಾಖ್ಯಾನ ರೂಪದ ಈ ಒಂದು ಮಾತು ಕೃತಿಯ ಅನುಭವದ ಸಂದರ್ಭದಿಂದ ಮೂಡಿದುದೇ ಹೊರತು ತಂದು ಸೇರಿಸಿದ್ದಲ್ಲ – ಈ ಬಗೆಯ ಉಕ್ತಿ ಸೌಂದರ‍್ಯ ಪಾಶ್ಚಾತ್ಯ ಕವಿಗಳಲ್ಲಿ ಅದರಲ್ಲೂ ವರ್ಡ್ಸ್‌ವರ್ತ್‌ನಲ್ಲಿ ಕಾಣಸಿಗುತ್ತದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ, ಹಲವು ಪ್ರಸಂಗಗಳಲ್ಲಿ – ಜೀವನದ ಅನುಭವದ ಪರಿಪಾಕದ ಪರಿಣಾಮವಾದ ಉಕ್ತಿಗಳಲ್ಲಿಯೂ ಇದನ್ನು ಗುರುತಿಸಬಹುದು. ಆದರೆ ಹಳಗನ್ನಡದ ಕಾವ್ಯಗಳಲ್ಲಿ ಕಾಣುವ ಅರ್ಥಾಂತರನ್ಯಾಸಾಲಂಕಾರ ರೂಪವಾದ ಲೋಕೋಕ್ತಿಗಳಿಂದ ಈ ಬಗೆಯ ವ್ಯಾಖ್ಯಾನ ರೂಪವಾದ ಮಾತುಗಳು ಭಿನ್ನ ಎನ್ನುವುದು ಸ್ಪಷ್ಟ. ಸಂಸ್ಕೃತ ಆಲಂಕಾರಿಕನಾದ ಜಗನ್ನಾಥನು ಹೇಳುವ ‘ಚಮತ್ಕೃತಿ’ ಇಂತಹ ಮಾತುಗಳನ್ನು ಕಂಡಾಗ ನೆನಪಿಗೆ ಬರುತ್ತದೆ. ಏನೋ ಒಂದು ಅನುಭವದ ಸಂದರ್ಭದಲ್ಲಿ ನಿಷ್ಪನ್ನವಾಗಿ ತಟಕ್ಕನೆ ಅದರಿಂದ ಮೇಲೊಗೆದು ನಿಂತು ನಮ್ಮ ಪರಿಭಾವನೆಯಲ್ಲಿ ರಸವನ್ನೊಸರಿಸುವ ಈ ಚೆಲುವಿನ ಪರಿ ಗಮನಾರ್ಹವಾದುದು.

ಚೆಲುವಿನ ವಸ್ತುವನ್ನು ಕಂಡು ಅದರಲ್ಲೊಂದು ಬಗೆಯ ಸುಖವನ್ನುಂಡು, ಅದರ ತೃಪ್ತಿಯಲ್ಲಿ –

ಮಲ್ಲಿಕಾ ಬಕುಲ ಚಂಪಕಾ
ಸಾಕು ನನಗೆ ಈ ಸುಖ
[31]

ಎಂದು ಮೈ ಮರೆವುದೊಂದು ಪರಿ; ಮನಕ್ಕೆ ತಟ್ಟಿದ ಚೆಲುವನ್ನು ಕುರಿತು ಕಲ್ಪನಾಕ್ಷಿಯಿಂದ-

ನಕ್ಷತ್ರಾರತಿಯಂದದಿ ಹೂಗಳ
ಗೊಂಚಲನೆತ್ತಿರುವ
ಮಾವಿನ ಮರವಿದು ಮರವೋ, ನಭದಲಿ
ಬರೆದರೊ ಚಿತ್ತರವ
[32]

ಎಂದು ವರ್ಣಿಸುವುದು ಮತ್ತೊಂದು ಪರಿ. ಚೆಲುವಿನಲ್ಲಿ ಒಂದಾಗಿ –

‘ಹಸುರಾದುದೊ ಕವಿಯಾತ್ಮಂ
ಹಸುರ್ ನೆತ್ತರ್ ಒಡಲಿನಲಿ!
[33]

ಎಂದು ತಾದಾತ್ಮ್ಯಾನುಭವವನ್ನು ಹೇಳುವುದು ಮತ್ತೊಂದು ಪರಿ. ಈ ಹಲವು ಪರಿಗಳಲ್ಲಿಯೂ ಸೌಂದರ‍್ಯದ ಪರಿಭಾವನೆಗೆ ಸಂದ ವಸ್ತು ಕೇಂದ್ರಸ್ಥಾನದಲ್ಲಿದೆ. ಆ ವಸ್ತುವಿನ ಸುತ್ತ ಈ ಮನಸ್ಸು ವಿಹರಿಸಿದೆ. ಅದರ ರಸವನ್ನು ಹೀರಿ ಒಂದಾಗಿದೆ. ಆದರೆ ಈ ಎಲ್ಲ ಬಗೆಗಳಿಂದ ಬೇರೆಯಾದ ಒಂದು ಪ್ರಕಾರವನ್ನು ನಾವು ಆಧುನಿಕ ಕಾವ್ಯಗಳಲ್ಲಿ ಗುರುತಿಸಬಹುದು. ಇಂಥಲ್ಲಿ ವಸ್ತು ಕವಿಯ ಕಣ್ಣೆದುರಿಗಿದ್ದರೂ ಕವಿಗೊದಗುವ, ಕವಿ ಚಿತ್ರಿಸುವ ಅನುಭವ ಬೇರೊಂದು. ವಸ್ತುವೇನಿದ್ದರೂ ಬೇರೊಂದು ಅನುಭವದ ಸ್ಮರಣೆಯ ವಿಹಾರಕ್ಕೆ, ಕವಿಗೆ ಒದಗುವ ಒಂದು ನೆಪದ ನಿಲುಗಡೆ ಮಾತ್ರ. ಕುವೆಂಪು ಅವರ ಒಂದು ಕವಿತೆ ‘ಕೈಮುಗಿ ಈ ತಂತಿಯ ಕಂಬಕ್ಕೆ’ ಈ ರೀತಿಗೊಂದು ನಿದರ್ಶನ. ಕವಿ ಒಂದು ತಂತಿಯ ಕಂಬದಡಿ ನಿಲ್ಲುತ್ತಾರೆ. ಕವಿಯ ಕಣ್ಣೆದುರಿಗಿರುವುದು ‘ತಂತಿಯ ಕಂಬ’. ಬುಡದಲ್ಲಿ ನಿಂತು ಬೀಸು ಗಾಳಿಗೆ ಝೂಯ್ ಗುಡುವ ಆ ಸದ್ದನ್ನು ಕೇಳಿ ಕವಿಗೆ ಒಳ ಬಗೆಯಲ್ಲಿ ಸುರುಳಿ ಬಿಚ್ಚುವ ಅನುಭವದ ಇದು –

ಮಲೆನಾಡಿನ ಕಾಡಿನ ಮಧ್ಯೆ
ಜಗದಿಂ ಜಗುಳಲ್ಕಿರುಳಿನ ನಿದ್ದೆ,
ಚೈತ್ರ ದಿನೇಶನ ಚಿನ್ನದ ಹೊನಲು
ಬನದೆಲೆ ಹಸುರಲಿ ಹೊಳೆ ಹರಿಯಿತ್ತೆನಲು,
ದನಿ ಜೇನಿಳಿಸುತ್ತಿದೆ ಕಾಜಾಣ,
ಉಲಿಯುಲಿಯುತ್ತಿರೆ ಬಹುಖಗ ಸಂಮೇಲನ ಗಾನ,
ಹುಚ್ಚಿಡಿದಂದದಿ ಹೂ ತುಂಬಿ
ಬೆಳೆದಾ ಬಿತ್ತರದೆತ್ತರದಾ ನಂದಿಯ ಮರದಲ್ಲಿ,
ಲಕ್ಕ ಲಕ್ಕದಲಿ ಕಿಕ್ಕಿರಿದಿರೆ ಜೇನುಂಬುಳು ಮೇಣ್ ದುಂಬಿ
ನಿಂತೇಕಾಂತದೊಳಾ ಮರದಡಿಯಲ್ಲಿ
ನಾನಿಂತಹ ಅನುಭವವನು ಪಡೆದಿದ್ದೆ
[34]

ಇಲ್ಲಿ ‘ತಂತಿಯಕಂಬ’ ಎನ್ನುವ ವಸ್ತು, ತನ್ನ ವಸ್ತುತ್ವವನ್ನು ಕಳೆದುಕೊಂಡು ಬೇರೊಂದು ಅನುಭವಕ್ಕೆ ಗವಾಕ್ಷವಾಗಿದೆ. ಏಕೆಂದರೆ ಕವಿ ‘ತಂತಿಯಕಂಬ’ದ ವರ್ಣನೆಯನ್ನಾಗಲೀ, ಅದನ್ನೇ ವಸ್ತುವನ್ನಾಗಿಸಿ ಅದರ ಸ್ಥಿತಿಯನ್ನು ಚಿತ್ರಿಸುವುದರಲ್ಲಾಗಲೀ ತೊಡಗಿಲ್ಲ. ತಂತಿಯ ಕಂಬದಲ್ಲಿ, ಅವರನ್ನು ಹಿಡಿದದ್ದು, ಅದರ ದನಿ: ಆ ದನಿ ತೇಲಿಸಿಕೊಂಡು ಹೋಯಿತು ಬೇರೊಂದು ಅನುಭವಕ್ಕೆ. ಇಂಥದ್ದೇ ಮತ್ತೊಂದು ನಿದರ್ಶನ ಪು.ತಿ.ನ ಅವರ ‘ಮಳೆಯ ನಾಡ ತೊಯ್ಯುತಿರೆ’ ಎಂಬ ಕವಿತೆ. ಮಳೆ ಸುರಿಯುತ್ತಿದೆ; ಕತ್ತಲು ಕವಿಯ ಸುತ್ತ ಹಬ್ಬಿಕೊಂಡಿದೆ. ಆ ಮಳೆಯಾಗಲೀ ಆ ಕತ್ತಲಾಗಲಿ ಅವರ ಪರಿಭಾವನೆಯ ‘ವಸ್ತು’ ಅಲ್ಲ. ಅದರ ಬದಲು ದ್ವಾಪರಯುಗದ ನೆನಪಿಗೆ ಅವರ ಮನಸ್ಸು ಪಯಣಿಸಿ –

ಹಿಂದೆ ಸೆರೆಗೆ ಸಿಲುಕುತ
ಕಂಸ ಭಯಕೆ ನಡುಗುತ,
‘ಹಡೆದ ಕೂಸು ಬಾಳ್ವುದೆಂತು’ ಎನುತ ತಲ್ಲಣಿಸುತ
ನೊಂದ ಪಿತರ ಚಿತ್ರವ
ಕಾಂಬೆ ಕೃಷ್ಣನುದಯವ
[35]

ಅವರು ಕಾಣುವುದು ಶ್ರೀಕೃಷ್ಣನ ಜನ್ಮದಿನದ ಚಿತ್ರವನ್ನು. ಹಿಂದೆ ಇಂಥದೇ ಒಂದಿರುಳು ಕೃಷ್ಣನ ಉದಯವಾಯಿತು – ಎಂಬ ಭಾವವೇ ಈ ಅನುಭವಕ್ಕೆ ಪ್ರೇರಕ. ಮಳೆಯು ನಾಡನ್ನು ತೊಯ್ಯುವ ಸಮಯದಲ್ಲಿ ಕವಿ ಶ್ರೀಕೃಷ್ಣನ ಜೀವನದ ಎಲ್ಲಾ ವಿವರಗಳನ್ನು ನೆನೆದು ಹರ್ಷಿತರಾದರೂ ಆ ನೆನಹಿನ ನಿಲುಗಡೆ ವಿಷಾದದಲ್ಲೇ. ಏಕೆಂದರೆ ನಮಗೆ ಆ ಕೃಷ್ಣನ ಕತೆಯೆಲ್ಲಾ ಬರಿಯ ನೆನಪು. ‘ಇಂದು ನಮ್ಮ ಬಾಳುಗೋಳು, ಬಯಲು, ಹುಸಿಯು’ ಎನ್ನಿಸುತ್ತದೆ. ಹಿಂದೆ ಉದಾಹರಿಸಿದ ಪದ್ಯದಲ್ಲಿ ಕಿವಿಗೆ ನಾದರೂಪವಾಗಿ ಬಂದ ಶ್ರವಣಸೌಂದರ‍್ಯ, ಕವಿಗೆ ಹಿಂದೆ ತಾನು ಮಲೆನಾಡಿನಲ್ಲಿ ಪಡೆದ ಸುಖಾನುಭವದ ಒಂದು ಪುಟವನ್ನು ತೆರೆದರೆ, ಈ ಪದ್ಯದಲ್ಲಿ ಮಳೆ ಹೊಯ್ಯುವಿರುಳು ಶ್ರೀ ಕೃಷ್ಣನ ಜೀವನ ಚಿತ್ರಗಳಿಂದ ಮೋದವನ್ನು ತಂದರೂ, ಸದ್ಯದ ಬಾಳಿನ ರಿಕ್ತತೆಯ ಕಹಿನೆನಹಿನಿಂದ, ನಿಡುಸುಯ್ಯಲಿನಲ್ಲಿ ನಿಲ್ಲಿಸುತ್ತದೆ. ಇದು ಈ ಇಬ್ಬರು ಕವಿಗಳ ಪ್ರಧಾನ ಮನೋಧರ್ಮವನ್ನು ಸೂಚಿಸುತ್ತದೆ. ಮೇಲೆ ಹೇಳಿದ ಎರಡು ನಿದರ್ಶನಗಳಲ್ಲೂ ‘ವಸ್ತು’ ಕೇವಲ ನಿಮಿತ್ತವಾಗಿ ಹಿಂದಾದ ಅನುಭವದ ಸುರುಳಿಯನ್ನು ಬಿಚ್ಚಿದರೆ, ವಸ್ತುವೊಂದು ಮುಂದಾಗಬಹುದಾದ ಘಟನೆಗಳ ಪರಂಪರೆಯನ್ನೇ ಬಿಚ್ಚಿ ತೋರುವ ರೀತಿಗೆ ಬೇಂದ್ರೆಯವರ ‘ಸಂಜೀಯ ಜಾವಿಗೆ’ ಒಂದು ಅಪೂರ್ವ ನಿದರ್ಶನವಾಗಿದೆ. ಕವಿಯಾದ ತಂದೆ ಮಗು ಮಂಗಳೆಯನ್ನು ಆಡಿಸುತ್ತಿದ್ದಾರೆ –

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ |
ಕುಣುಸ್ಯಾಡಿ ಕೂಸಿಗೆ | ಅರಳೀಸಿ ಆಸೆಗೆ |
ರಾಗದ ಸಾಟಿಗೆ | ತೂಗ್ಯಾಡೋ ಧಾಟಿಗೆ |
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ |
ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ |
[36]

ಆಗ ತಂದೆಯ ಮುಂದೆ ಒಂದು ಚಿತ್ರ ಮೂಡುತ್ತದೆ. ಈಗ ಮಗುವಾಗಿರುವ ಈ ಮಂಗಳೆ, ಮುಂದೆ ಬೆಳೆದು ದೊಡ್ಡವಳಾಗಿ ಗಂಡನ ಮನೆ ಸೇರಿದ ಮೇಲೆ, ನೀರನ್ನು ಹೊತ್ತು ತಂದು ಅರಿಯದ ಈ ಬಾಲೆ ದೂರದಿಂದ ನೀರನ್ನು ಹೊತ್ತು ತರಬೇಕಾದ ಒಂದು ಪ್ರದೇಶದಲ್ಲಿ ಬದುಕಬೇಕಾಗಿ ಬಂದಾಗ ಏನು ಮಾಡಿಯಾಳು – ಎಂದು ಅನ್ನಿಸುತ್ತದೆ. ಹಾಗೆ ಬಂದ ‘ಅನ್ನಿಸಿಕೆ’ ಒಂದು ಚಿತ್ರವನ್ನು ನೇಯುತ್ತದೆ. ಸಂಜೆಯ ಜಾವದಲ್ಲಿ, ಗರತಿಯಾದ ಹೆಣ್ಣುಮಗಳು ತಲೆಯ ಮೇಲೆ ನೀರಿನ ಕೊಡ ಹೊತ್ತು ಹೊರಟಿದ್ದಾಳೆ –

ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ |
ಕಿರಗೀಯ ನಿರಿಗೆ | ಒದೆಯುತ ದಾರಿಗೆ
ಗೆಜ್ಜೆಯು ಗೆಜ್ಜೆಗೆ | ತಾಕಾವ ಹೆಜ್ಜಿಗೆ
ಏನಾರ ನಡಿಗಿ  ಯಾವೂರ ಹುಡುಗಿ
ಸಂಜೀವ ಜಾವಿಗೆ | ಹೊರಟಾಳ ಬಾವಿಗೆ
[37]

ಸಂಜೆಯ ಹೊತ್ತಿನಲ್ಲಿ ಬಾವಿಯ ನೀರಿಗೆ ಹೊರಟಿದ್ದಾಳೆ ಈ ಎಳೆಹರೆಯದ ಹೆಣ್ಣು. ದಾರಿಯಲ್ಲಿ ತನ್ನ ಸೀರೆಯ ನೆರಿಗೆಯನ್ನು ಒದೆಯುತ್ತಾ, ಕಾಲಂದುಗೆಯ ಸದ್ದನ್ನು ಹರಡುತ್ತಾ, ಕಂಡವರು ‘ ಏನಾರ ನಡಿಗೆ | ಯಾವೂರ ಹುಡುಗಿ’ ಎಂದು ಬೆರಗಾಗುವಂತೆ ಬಾವಿ ನೀರಿಗೆ ನಡೆದಿದ್ದಾಳೆ. ಆಗ ಹಾದಿಯುದ್ದಕ್ಕೂ ಅತ್ತಿತ್ತ ಬೇಲಿಯಲ್ಲಿ ಅರಳಿದ ಗುಲಬಾಕ್ಷಿ ಮಲ್ಲಿಗೆಗಳೂ ಬೆರಗಾಗಿ, ಕಲ್ಲನ್ನು ಕೇಳುತ್ತವಂತೆ –

ಕಳಿಸೋದೆ ನೀರಿಗೆ ಇಂಥ ಸುಕುಮಾರಿಗೆ?
ಚಾಚ್ಯವಂಗಾಲಿಗೆ | ಮುಚ್ಚಂಜಿ ನಾಲಿಗೆ |

ಎಂದು. ಈ ಹೆಣ್ಣುಮಗಳು ಗೆಳತಿಯರೊಂದಿಗೆ ನೀರುಸೇದಿ ತರುತ್ತಾಳೆ. ಕೆಲಸವನ್ನು ಆಟದಂತೆ ಮಾಡುವ ಇವಳ ರೀತಿಗೆ, ಗಂಭೀರವಾದ ಗರತಿಯ ಸೂಟಿಗೆ ಎಲ್ಲರೂ ಮೆಚ್ಚುತ್ತಾರಂತೆ. ಹೀಗೆಂದು ಒಂದು ಚಿತ್ರವನ್ನು ತಂದೆಯ ಮನಸ್ಸು ನೇಯುತ್ತಿದೆ. ಮತ್ತೆ ಈ ಕವಿತೆ ಮುಗಿಯುವುದು, ತಂದೆ ಆಡಿಸುತ್ತಿರುವ ಕೂಸಿನ ಚಿತ್ರದಿಂದ. ಇಲ್ಲಿ ಕವಿ ಮಗುವನ್ನಾಡಿಸುತ್ತಿದ್ದರೂ ಅದರ ಸೊಗಸನ್ನಾಗಲೀ, ಬಾಲಲೀಲೆಯನ್ನಾಗಲೀ ನಮಗೆ ಬಣ್ಣಿಸುತ್ತಿಲ್ಲ; ಈ ಮಗುವಿನ ನಿಮಿತ್ತವಾಗಿ ಮುಂದಿನ ಅವಳ ಬಾಳಿನ ಪುಟದ ಒಂದು ಚಿತ್ರಣ, ತಂದೆಯ ಮನಸ್ಸಿನ ಶಂಕೆ – ಹಾರೈಕೆ – ಹರಕೆಗಳಿಂದ ರಂಜಿತವಾಗಿದೆ.

* * *


[1] ಕುವೆಂಪು – ಕೊಳಲು ಪು. ೨೦

[2] ಪು.ತಿ.ನ. – ಹಣತೆ ಪು. ೨೦

[3] ಜಿ.ಎಸ್.ಶಿ – ದೇವಶಿಲ್ಪ ಪು.೨೬

[4] ಕುವೆಂಪು : ಅಗ್ನಿ ಹಂಸ ಪು. ೬

[5] ಕುವೆಂಪು : ಕಲಾಸುಂದರಿ ಪು. ೨೭

[6] ಮಧುರ ಚೆನ್ನ -ನನ್ನ ನಲ್ಲ ಪು. ೬೨

[7] ಪು.ತಿ.ನ. – ಗಣೇಶ ದರ್ಶನ ಪು.೨೬

[8] ಪು.ತಿ.ನ. ಮಾಂದಳಿರು ಪು. ೪೧

[9] ಪು.ತಿ.ನ. ಮಾಂದಳಿರು ಪು. ೩೪

[10] ಪು.ತಿ.ನ – ಗಣೇಶ ದರ್ಶನ ಪು. ೩೦

[11] ಬೇಂದ್ರೆ – ಉಯ್ಯಾಲೆ ಪು. ೧೮

[12] ಪು.ತಿ.ನ. ರಸಸರಸ್ವತಿ ಪು. ೧೮

[13] ಕುವೆಂಪು – ಕೃತ್ತಿಕೆ ಪು. ೫೮

[14] ಜಿ.ಎಸ್.ಶಿ. ದೀಪದ ಹಜ್ಜೆ. ಪು. ೫೪ – ೫೫

[15] ರಾಮಚಂದ್ರ ಶರ್ಮ – ಬುವಿ ನೀಡಿದ ಸ್ಫೂರ್ತಿ, ಪು. ೬

[16] ಕುವೆಂಪು : ಕಲಾ ಸುಂದರಿ, ಪು. ೪೬-೪೭, ೪೮

[17] ಕುವೆಂಪು : ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ‘ಕೂಸಿನ ಕನಸು’ ಪು ೪೩. ೪೪

[18] ಬೇಂದ್ರೆ : ನಾದಲೀಲೆ, ಪು. ೩೮.

[19] ಗೋಪಾಲಕೃಷ್ಣ ಅಡಿಗ – ಚಂಡೆಮದ್ದಳೆ, ಪು ೨೬.

[20] ಕುವೆಂಪು ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪು. ೫೫

[21] ಗೋಪಾಲ ಕೃಷ್ಣ ಅಡಿಗ : ಚಂಡೆ ಮದ್ದಳೆ, ಪು. ೮

[22] ಚನ್ನವೀರ ಕಣವಿ : ದೀಪಧಾರಿ, ಪು. ೩೯

[23] ಜಿ.ಎಸ್.ಶಿ. ದೀಪದ ಹೆಜ್ಜೆ. ಪು. ೧೨.

[24] ಕೆ.ಎಸ್.ನ.: ಶಿಲಾಲತೆ, ಪು. ೪೧.

[25] ಚನ್ನವೀರ ಕಣವಿ: ದೀಪಧಾರಿ, ಪು. ೪೩.

[26] ಪು.ತಿ.ನ : ಹಣತೆ. ಪು. ೭೬

[27] ಕೆ.ಎಸ್.ನ. ದೀಪದ ಮಲ್ಲಿ, ಪು. ೨೪

[28] ಬೇಂದ್ರೆ: ಗರಿ, ಪು. ೧೧೭

[29] ಜಿ.ಎಸ್.ಶಿ.: ಚೆಲುವು-ಒಲವು ಪು. ೫೦

[30] ಶ್ರೀನಿವಾಸ : ರಾಮನವಮಿ ಪು. ೧೦.

[31] ರಸಿಕರಂಗ : ಬಾಸಿಗ

[32] ಶ್ರೀನಿವಾಸ : ರಾಮನವಮಿ, ಪು. ೧೩.

[33] ಕುವೆಂಪು : ಪಕ್ಷಿಕಾಶಿ.ಪು.೩೯

[34] ಕುವೆಂಪು : ಕೋಗಿಲೆ ಮತ್ತು ಸೋವಿಯಟ್ ರಷ್ಯಾ. ಪು ೬೪.

[35] ಪು.ತಿ.ನ  : ಹಣತೆ, ಪು. ೪೧-೪೩

[36] ಬೇಂದ್ರೆ: ಗಂಗಾವತರಣ, ಪು. ೩೦-೩೧

[37] ಬೇಂದ್ರೆ : ಗಂಗಾವತರಣ, ಪು. ೩೦-೩೧.