ವಾಡಿಎಂದರೆ

ಮರಗಳನ್ನು ಆಧರಿಸಿದ ಹೊಲ ಎಂದರ್ಥ.  ಹೊಲದಲ್ಲಿ ಮಿಶ್ರ ಬೆಳೆಗಳೊಂದಿಗೆ ಮರಗಳನ್ನು ಬೆಳೆಸಿದರೆ ಹೊಲಕ್ಕೆ ಬೇಕಾದ ತರಗೆಲೆಗಳನ್ನು, ನೆರಳನ್ನೂ ನೀಡುತ್ತದೆ.  ಬೇಸಿಗೆಯ ಬಿರುಬಿಸಿಲಿನಿಂದ ಮಣ್ಣಿಗಾಗುವ ಹಾನಿಯನ್ನು ತಪ್ಪಿಸುತ್ತದೆ.  ಜೀವವೈವಿಧ್ಯ ಹೆಚ್ಚಿಸುತ್ತದೆ.  ನೀರಿಂಗಿಸುತ್ತದೆ.  ಗಾಳಿಯನ್ನು ನಿಯಂತ್ರಿಸುತ್ತದೆ.  ಹಕ್ಕಿಗಳನ್ನು ಆಕರ್ಷಿಸುತ್ತದೆ.  ಇದರಿಂದ ಕೀಟಗಳ ನಿಯಂತ್ರಣವಾಗುತ್ತದೆ.  ಹಣ್ಣಿನ ಮರಗಳು ಆದಾಯ ನೀಡುವುದರೊಂದಿಗೆ ಅಪೌಷ್ಟಿಕತೆಯನ್ನು ನಿವಾರಿಸುತ್ತದೆ.  ಮೇವಿನ ಮರಗಳು ಜಾನುವಾರುಗಳಿಗೆ ಮೇವನ್ನು ಒದಗಿಸುತ್ತವೆ.  ಮರಗಳೆಲ್ಲಾ ಮೋಪುಗಳಾದ ಮೇಲೆ ಆಪದ್ಧನದಂತೆ ಬೇಕಾದಾಗ ಕಡಿದು ಮಾರಾಟ ಮಾಡಬಹುದು.  ಇದೆಲ್ಲದರೊಂದಿಗೆ ಬದುಗಳು, ಟ್ರೆಂಚ್ಗಳು, ಕೃಷಿ ಹೊಂಡಗಳನ್ನು ಮಾಡಿಕೊಂಡರೆ ಕೃಷಿ ಬದುಕು ಇನ್ನಷ್ಟು ಸುಸ್ಥಿರವಾಗುತ್ತದೆ. 

ಮಾವು ಎರಡನೇ ವರ್ಷಕ್ಕೆ ಹೂ ಬಂತು ಸಾರ್.  ಆದ್ರೆ ಹೂವನ್ನು ಖತಂ ಕಿಯಾ ಸಾರ್ ಮಹಮ್ಮದ್ ಆಜಮ್ ತಮ್ಮ ಹೊಲದ ಮಧ್ಯೆ ಇರುವ ಬಾದಾಮಿ, ರತ್ನಗಿರಿ ಆಪೋಸ್ ಮಾವಿನಗಿಡಗಳನ್ನು ತೋರಿಸುತ್ತಾ ಹೇಳಿದರು.

ಸುತ್ತಮುತ್ತ ಬಯಲುಗದ್ದೆಗಳು.  ಅದರ ಆಚೆ ತೆಂಗಿನ ತೋಪುಗಳು.  ನೀರಿಲ್ಲದ ಕಾರಣ ಯಾರೊಬ್ಬರೂ ಬೇಸಾಯವನ್ನೇ ಪ್ರಾರಂಭಿಸಿರದ ಕೆಂಪುನೆಲ.  ಇಂತಹ ಮಳೆ ನಂಬಿದ ಒಣ   ಪ್ರದೇಶದಲ್ಲೊಂದು ಹಸಿರುಟ್ಟು ನಗುವ ಹೊಲವೇ ಮಹಮ್ಮದ್ ಆಜಮ್ರವರ ತೋಟ-‘ವಾಡಿ’.

ತೋಟದ ತುಂಬಾ ರಾಗಿ, ಉದ್ದು, ಜೋಳ, ತೊಗರಿ ಮಧ್ಯೆ ಮಾವಿನ ಗಿಡಗಳು.  ಹೊಲದ ಸುತ್ತಲೂ ಬದು.  ಅದರ ಮೇಲೆ ಹಲಸು, ಸಿಲ್ವರ್ ಓಕ್, ಸಾಗುವಾನಿ, ಹೆಬ್ಬೇವು, ಗ್ಲಿರಿಸೀಡಿಯಾ, ಸುಬಾಬುಲ್ ಮುಂತಾದ ಗಿಡಗಳು.  ಹೊಲದ ನಡುವಿನ ಬದುಗಳ ಮೇಲೆ ಮೇವಿನ ಬೆಳೆಗಳಾದ ಹೆಮಟಾ ಮತ್ತು ನೇಪಿಯರ್.  ಸುಮಾರು ೨.೫ ಎಕರೆ ಹೊಲದಲ್ಲಿ ಹಸಿರಿನ ಶ್ರೀವನ.

ಗಂಡಸಿಯಿಂದ ಅರಸೀಕೆರೆಗೆ ಹೋಗುವಾಗ ಬಲಭಾಗದಲ್ಲಿ ಈ ಹಸಿರುಟ್ಟ ಸುಂದರ ಹೊಲ ಕಾಣಿಸುತ್ತದೆ. ಅಲ್ಲಿ ಕುರಿಗಳನ್ನು ಮೇಯಿಸುತ್ತಿರುವ ಒಬ್ಬ ಮಹಿಳೆ ಕಾಣುತ್ತಾರೆ.  ಅವರೇ ಸಾಯಿರಾಬಾನು.  ಹೊಲದ ಕಸಗಳನ್ನು ಟ್ರಂಚಿಗೆ ತುಂಬುತ್ತಲೋ, ಮಾವಿನಗಿಡಗಳನ್ನು ಸವರುತ್ತಲೋ ಇರುವ ಯಜಮಾನರೇ ಸಾಯಿರಾಬಾನುವಿನ ಪತಿ ಮಹಮ್ಮದ್ ಆಜಮ್.

ನಾಲ್ಕು ವರ್ಷಗಳ ಹಿಂದೆ ಈ ಹೊಲವೂ ಸಹ ಉಳಿದ ಹೊಲಗಳಂತೆ ಮಳೆಗಾಗಿ ಮುಗಿಲು ನೋಡುತ್ತಾ ಬಸವಳಿಯುತ್ತಿತ್ತು.  ಆಗಲೇ ಗಂಡಸಿಯಲ್ಲಿರುವ ಆರ್ಡರ್ ಸಂಸ್ಥೆಯ ಮೂಲಕ ನಬಾರ್ಡ್ನ ಯೋಜನೆಗಳು ಅಲ್ಲಿಗೆ ಬಂದವು.  ಊರಿನ ಅನೇಕ ಕೃಷಿಕರಿಗೆ ಬದುಗಳ ನಿರ್ಮಾಣ, ಕೃಷಿ ಹೊಂಡ, ಹಿತ್ತಿಲು, ಅಜೋಲಾ ಕೃಷಿ ಹೀಗೆ ವಿವಿಧ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ನೀಡಲಾಯಿತು.  ಆಸಕ್ತ ಕೃಷಿಕರಿಗೆ ತರಬೇತಿ ನೀಡಲಾಯಿತು. ನಬಾರ್ಡ್ನ ಯೋಜನೆಗಳ ಲಾಭ ಪಡೆದು ಯಶಸ್ವಿಇಯಾದ ರೈತರ ಹೊಲಗಳನ್ನು ಅಲ್ಲಿನವರಿಗೆ ತೋರಿಸಲಾಯಿತು. ಇದರಿಂದ ಪ್ರೇರೇಪಿತರಾಗಿ ತೋಟ ಕಟ್ಟಿದವರೇ ಮಹಮ್ಮದ್ ಆಜಮ್.

ಈಗ ನಾಲ್ಕು ವರ್ಷಗಳ ಬಳಿಕ ಅವರ ತೋಟವನ್ನು ನೋಡಲು ವಿವಿಧ ಹಳ್ಳಿಗಳಿಂದ ರೈತರು ಬರುತ್ತಿದ್ದಾರೆ.  ಸುತ್ತಲಿನ ರೈತರು ತಮಗೂ ಈ ಯೋಜನೆಯ ಲಾಭ ಸಿಗಲಿ ಎಂದು ಮಿಡುಕತೊಡಗಿದ್ದಾರೆ.

ಆರ್ಡರ್ ಸಂಸ್ಥೆಯ ಸುಧಾಕರ್ ಇವರ ಪಾಲಿನ ದೇವರು.  ಯೋಜನೆಯನ್ನು ಅಳವಡಿಸುವಾಗ ಇಲ್ಲಿನ ಕೃಷಿಕರನ್ನೆಲ್ಲಾ ಒಪ್ಪಿಸಲು ಮಾಡಿದ ಹೋರಾಟವನ್ನು ಅವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.  ಮಹಮ್ಮದ್ ಆಜಮ್ರವರ ತಮ್ಮ ಸರ್ದಾರ್ ಪಾಷಾ ಅಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು.  ಯೋಜನೆಯ ಮಾಹಿತಿ ಶಿಬಿರ, ಪ್ರವಾಸ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು.  ಆದರೆ ತಮ್ಮ ಹೊಲದಲ್ಲಿ ಮಾತ್ರ ಅಳವಡಿಸಲು ಸಿದ್ಧರಾಗಲಿಲ್ಲ.  ಅವರ ಹಿರಿಯಣ್ಣ ಮಹಮ್ಮದ್ ಆಜಮ್ರವರು ಸರ್ದಾರ್ ಪಾಷಾ ಹೇಳಿದ್ದನ್ನೆಲ್ಲಾ ತಮ್ಮ ಹೊಲದಲ್ಲಿ ಮಾಡುತ್ತಾ ಬಂದರು.  ಈಗ ಅಣ್ಣನ ಹೊಲ ನೋಡಿ ತಮ್ಮ ಬೆರಗಾಗಿದ್ದಾರೆ.  ಬದಲಾಗಿದ್ದಾರೆ.  ಟ್ರೆಂಚ್ ತೆಗೆಸುತ್ತಿದ್ದಾರೆ.  ಬದುಗಳನ್ನು ನಿರ್ಮಿಸುತ್ತಿದ್ದಾರೆ.  ಇದೇ ಮಹಮ್ಮದ್ ಆಜಮ್ರವರ ’ವಾಡಿ ಮಾಡಿದ ಮೋಡಿ’.

 

ಹೊಲದ ಮೇಲೆ ಬಿದ್ದ ನೀರನ್ನು ಹೊರಹರಿಯಲು ಬದುಗಳು ಬಿಡುತ್ತಿಲ್ಲ.  ಮಿಶ್ರ ಬೆಳೆಗಳು ಮನೆ ಬಳಕೆಗೆ ಆಹಾರ ಪೂರೈಕೆ ಮಾಡಿದರೆ, ಬದುಗಳ ಮೇಲಿನ ಹುಲ್ಲು ಎರಡು ಕುರಿಗಳು ಮತ್ತು ಎರಡು ನಾಟಿ ಹಸುಗಳಿಗೆ ಮೇವು. ಬೆಳೆಗಳಿಗೆ ಟ್ರೆಂಚ್ನ ಗೊಬ್ಬರದೊಂದಿಗೆ ಬೇವಿನ ಹಿಂಡಿ, ಎರೆಗೊಬ್ಬರಗಳ ಬಳಕೆ.  ನೆಟ್ಟ ಗಿಡಗಳಿಗೆಲ್ಲಾ ಮೂರು ವರ್ಷಗಳವರೆಗೆ ನೀರು ಹೊತ್ತು ಹಾಕಿದ್ದನ್ನು ಆಜಮ್ ನೆನಪಿಸಿಕೊಳ್ಳುತ್ತಾರೆ.  ಆದಾಯದ ಬಗ್ಗೆ ಹೇಳಿ ಸಾಹೇಬ್ರೆ ಎಂದರೆ ಪೆಹಲೆ ಕಾಮ್ ಕರ್ನೇಕಾ ಬಾದ್ ಮೇ ಆದಾಯ್ ದೇಖ್ನೇ ಕಾ ಎನ್ನುತ್ತಾರೆ.   ನಮ್ದೂ ಹೊಲ ಚೆನ್ನಾಗಿಲ್ಲ ಅಂದಿದ್ರೆ ನೀವೆಲ್ಲಾ ಬರ್ತಿದ್ರಾ ಸಾರ್.  ಬೆಳೆ ಚೆನ್ನಾಗಿದ್ರೆ ಆದಾಯಾನೂ ಖೂಬಾಗಿರತ್ತೆ ಸಾರ್ ಎಂದು ಮುಖ ಅರಳಿಸುತ್ತಾರೆ ಆಜಮ್ರವರ ಬೀಬಿ ಸಾಯಿರಾಬಾನು.

ಮಗಳ ಮದುವೆಗಾಗಿ ಮಾಡಿದ ಸಾಲ, ಮಗನನ್ನು ಕೆಲಸಕ್ಕೆ ಸೇರಿಸಲು ಮಾಡಿದ ಸಾಲ, ಈಗ ಬೋರ್ವೆಲ್ ತೆಗೆಸಲು ಆದ ಸಾಲ ಹೀಗೆ ಲಕ್ಷಾಂತರ ರೂಪಾಯಿಗಳ ಸಾಲವನ್ನೆಲ್ಲಾ ಈ ತೋಟವೇ ತೀರಿಸುತ್ತದೆ ಎನ್ನುವ ಆತ್ಮವಿಶ್ವಾಸದ ನಗು ಅವರಿಬ್ಬರಲ್ಲೂ ಇದೆ.