ವಾಣಿಜ್ಯಶಾಸ್ತ್ರ ಪ್ರವೇಶಿಕೆ ಪುಸ್ತಕ ಒಂದನ್ನು ಬರೆದುಕೊಡಲು ಕನ್ನಡ ವಿಶ್ವವಿದ್ಯಾಲಯದಿಂದ ಕೋರಿಕೆ ಬಂದಾಗ ಬಹಳ ಸಡಗರದಿಂದಲೇ ಕೆಲಸ ಒಪ್ಪಿಕೊಂಡೆ. ಆದರೆ ಪುಸ್ತಕದ ಬರವಣಿಗೆ ಆರಂಭವಾಗಿ ಮುಂದುವರಿಯುತ್ತಿದ್ದಂತೆ ಹಲವಾರು ರೀತಿಯ ಸಂಕಟಗಳು ನನ್ನನ್ನು ಕಾಡಲಾರಂಭಿಸಿದವು. ಪುಸ್ತಕ ರಚನೆಯ ಬಗ್ಗೆ ಇದ್ದ ಕನಸುಗಳನ್ನು ನನಸಾಗಿಸುವ ಕಾರ್ಯ ಎಷ್ಟು ಕಠಿಣವಾದದ್ದು ಎನ್ನುವುದು ಅರಿವಾಗತೊಡಗಿತು. ಇಂತಹ ಅಡೆತಡೆಗಳನ್ನು ಮೀರಿ ಕೆಲಸವನ್ನು ಮುಗಿಸಿದಾಗ ಏನೋ ಒಂದು ರೀತಿಯ ಸಮಾಧಾನ.

‘ವಾಣಿಜ್ಯ ಜಗತ್ತು’ ಇಂದು ಬಹಳ ಸಂಕೀರ್ಣವಾಗಿ ಮತ್ತು ವೇಗವಾಗಿ ಬದಲಾ ಗುತ್ತಿರುವ ಅಧ್ಯಯನ ರಂಗವಾಗಿದೆ. ಇಂತಹ ಒಂದು ಕ್ಲಿಷ್ಟವಾದ ವಿಷಯದ ಬಗ್ಗೆ ಹೇಗೆ ಬರೆಯಬೇಕು? ಏನು ಬರೆಯಬೇಕು? ಎಷ್ಟು ಬರೆಯಬೇಕು? ಮುಂತಾದ ಪ್ರಶ್ನೆಗಳ ಬಗ್ಗೆ ಯೋಚಿಸಿ ಕೊನೆಗೆ ನಾನೇ ಒಂದು ಸೀಮಾರೇಖೆಯನ್ನು ಎಳೆದು ಗಡಿಗಳನ್ನು ಗುರುತಿಸಿಕೊಂಡು ಮುಂದುವರಿಯಬೇಕಾಯಿತು. ‘ವಾಣಿಜ್ಯಶಾಸ್ತ್ರ’ ವಿಷಯ ಪ್ರವೇಶಿಕೆಯೇ ಮುಖ್ಯ ಗುರಿ ಯಾಗಿ, ಇಡೀ eನಶಾಖೆಯ ಬಗ್ಗೆ ಒಂದು ಸ್ಥೂಲ ನೋಟ ಬೀರುವ ಕೆಲಸವನ್ನಷ್ಟೇ ಮನಸ್ಸಿನಲ್ಲಿ ಇಟ್ಟುಕೊಂಡು ಈ ಪುಸ್ತಕವನ್ನು ರಚಿಸಿದ್ದೇನೆ. ಬಹಳಷ್ಟು ಸಂಗತಿಗಳ ಬಗ್ಗೆ ಬರೆಯಬಹುದಾದ ಸಾಧ್ಯತೆಗಳಿದ್ದರೂ ಅದೆಲ್ಲವನ್ನೂ ನಿರ್ವಹಿಸುವುದು ನನಗೆ ಅಸಾಧ್ಯ ವಾದದ್ದು ಬೇಸರದ ವಿಷಯವೇ. ಈ ಮಿತಿಯ ಹೊರತಾಗಿಯೂ ನನ್ನ ಈ ಪ್ರಯತ್ನ ನನಗೆ ವಾಣಿಜ್ಯಶಾಸ್ತ್ರ ಮತ್ತು ಜಗತ್ತಿನ ಬಗ್ಗೆ ಕೆಲವು ಮೂಲಭೂತ ಸಂಗತಿಗಳನ್ನು ಪರಿಚಯಿಸುವ ಅವಕಾಶ ಒದಗಿಸಿಕೊಟ್ಟಿದೆ. ವಿಷಯಗಳನ್ನು ಮನನ ಮಾಡಿಕೊಂಡು ನನ್ನ ಓದಿನ ಹಿನ್ನೆಲೆಯಲ್ಲಿ ವಿಶ್ಲೇಷಣಾತ್ಮಕವಾಗಿ ಮಂಡಿಸುವ ಪ್ರಯತ್ನ ಮಾಡಿರುವುದು ನನಗೆ ಸಮಾಧಾನ ತಂದ ಮತ್ತೊಂದು ವಿಷಯ. ಪ್ರಾಯಶಃ ಪುಸ್ತಕದ ಬಗ್ಗೆ ಓದುಗರ ಅಭಿಪ್ರಾಯ ತಿಳಿದ ಮೇಲೆಷ್ಟೇ ಈ ಬಗ್ಗೆ ಸರಿಯಾಗಿ ತಿಳಿಯಬಹುದು.

ನನ್ನ ಈ ಮೊದಲ ಪುಸ್ತಕವನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಋಣಿಯಾಗಿದ್ದೇನೆ. ನಾನು ಬರೀ ನಾನಲ್ಲ. ನನ್ನೊಳಗೆ ನನ್ನ ಅಕ್ಕರೆಯ ಅಪ್ಪ, ಅಮ್ಮ, ಪ್ರೀತಿಯ ರಾಜಲಕ್ಷ್ಮೀ, ಪ್ರತೀಕ್, ಗುರುಗಳಾದ ಡಾ. ತೀ.ನಂ. ಶ್ರೀಧರ, ಗೆಳೆಯರಾದ ಡಾ. ಚಂದ್ರ ಪೂಜಾರಿ, ಡಾ. ರಾಜಾರಾಮ ತೋಳ್ಪಾಡಿ, ಅರವಿಂದ ಚೊಕ್ಕಾಡಿ ಮತ್ತು ನನ್ನ ಅರಿವಿನ ಭಾಗವಾಗಿರುವ ಎಲ್ಲರೂ ಇದ್ದು ನಾನು ‘ನನ್ನದಲ್ಲದ್ದು’ ಆಗಿರುವುದಕ್ಕೂ ನಾನು ಕೃತಾರ್ಥ. ಈ ಪ್ರಯತ್ನ ಮೊದಲ ಹೆಜ್ಜೆ ಎಂದು ತಿಳಿದು ಅರಿವನ್ನು ಅರಸಿ ಮುನ್ನಡೆಯುವ ಕ್ಷಣಗಳಿಗೆ ಮತ್ತೆ ಕಾಯುತ್ತಿದ್ದೇನೆ.

ಡಾ. ಉದಯಕುಮಾರ ಇರ್ವತ್ತೂರು