ವರ್ತಮಾನದ ‘ವ್ಯವಹಾರಿಕ ಜಗತ್ತಿನ’ ಆಗು ಹೋಗುಗಳು ವಾಣಿಜ್ಯ ಚಟುವಟಿಕೆ ಗಳನ್ನು ಅವಲಂಬಿಸಿವೆ. ವಾಣಿಜ್ಯ ಎಂದರೆ ಏನು? ಇದರ ಮಹತ್ವವೇನು? ಇದು ಸಮಾಜದ ಇತರ ವಿವಿಧ ಸ್ತರಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತದೆ? ವಾಣಿಜ್ಯ ಎನ್ನುವ ಅಧ್ಯಯನ ಶಿಸ್ತಿಗೆ ಪೂರಕವಾಗಿರುವ ಅಂಶಗಳು ಯಾವುವು? ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸುವ ಅಗತ್ಯ ಮಾತ್ರವಲ್ಲ ಅನಿವಾರ್ಯತೆಯೂ ಇದೆ. ಜಾಗತೀಕರಣದ ಇಂದಿನ ಯುಗದಲ್ಲಿ ಜನ ಜೀವನದ ಸಮಸ್ತ ಸ್ತರಗಳೂ ಆಧುನಿಕ ವ್ಯಾವಹಾರಿಕ ಜಗತ್ತಿನ ಹಿಡಿತದೊಳಕ್ಕೆ ಜಾರುತ್ತಿರುವುದು ಕಟುವಾಸ್ತವವಾಗಿದೆ. ವರ್ತಮಾನದ ಅನಿವಾರ್ಯತೆಯನ್ನು ಮತ್ತು ಭವಿಷ್ಯದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ವಾಣಿಜ್ಯ ವ್ಯವಸ್ಥೆಯ ಪರಿಚಯ ನಮಗೆ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ವಾಣಿಜ್ಯ ಜಗತ್ತು ಸಾಗಿ ಬಂದ ದಾರಿಯ ಕುರಿತಂತೆ ಹೊರಳು ನೋಟವೊಂದನ್ನು ಬೀರುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. ಕನ್ನಡದಲ್ಲಿ ಇಂತಹ ಒಂದು ಪ್ರಯತ್ನವನ್ನು ಮಾಡುವಾಗ ಇರಬಹುದಾದ ಇತಿಮಿತಿಗಳು ಮತ್ತು ಅವಕಾಶಗಳು ಈ ಪ್ರಯತ್ನದಲ್ಲಿಯೂ ಬಹಳಷ್ಟು ಇವೆ ಎನ್ನುವುದು ಸತ್ಯ.

ಒಂದು ಕಾಲಘಟ್ಟದಲ್ಲಿ ಉತ್ಪಾದನೆಯಲ್ಲಿ ಮಿಗತೆಯಾಗುತ್ತಿದ್ದ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಒಯ್ದು ವಿನಿಮಯ ಮಾಡುತ್ತಿದ್ದ ಚಟುವಟಿಕೆ (ವ್ಯಾಪಾರ) ಇವತ್ತು ರೂಪಾಂತರ ಹೊಂದಿದೆ. ಇಂದು ವ್ಯಾಪಾರ ಕೇಂದ್ರಿತ ವ್ಯವಸ್ಥೆಯಿಂದ ಆರಂಭವಾದ ವಾಣಿಜ್ಯ ಚಟುವಟಿಕೆ ಬೇಡಿಕೆಯನ್ನು ಹುಟ್ಟು ಹಾಕುವ ಮತ್ತು ಅದನ್ನು ಯಶಸ್ವಿಯಾಗಿ ಸಂತೃಪ್ತಿಗೊಳಿಸುವಮಟ್ಟಿಗೆ ಬೆಳೆದು ನಿಂತಿದೆ. ಈಗ ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಒಂದು ಸರಳಕೊಂಡಿಯಾಗಿ ವಾಣಿಜ್ಯ ವ್ಯವಸ್ಥೆ ಉಳಿದಿಲ್ಲ. ಇದು ಉತ್ಪಾದನೆಯ ವಲಯ ಮತ್ತು ಬೇಡಿಕೆಯ ವಲಯದ ನಡುವಿನ ಸಮತೋಲನ ನಿರ್ಮಿಸುವ ಸೇತುವೆಯಾಗಿ ಮತ್ತು ಎರಡು ವಿಭಾಗಗಳನ್ನು ಬಂಧಿಸುವ ಸಂಕೋಲೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ನೇರವೂ, ಸರಳವೂ ಮತ್ತು ವ್ಯಕ್ತವೂ ಆಗಿದ್ದ ವಾಣಿಜ್ಯ ಜಗತ್ತಿನ ಚಟುವಟಿಕೆ ಇಂದು ಸಂಕೀರ್ಣವೂ, ಸಂದಿಗೊಂದಿಗಳಿರುವ ಕೂಡಿ ಬಹಳಷ್ಟು ಮಟ್ಟಿಗೆ ಅವ್ಯಕ್ತವೂ ಆಗಿರುವ ವಾಣಿಜ್ಯ ಜಗತ್ತಿನ ಚಟುವಟಿಕೆ ಸಾಮಾನ್ಯ ಮತ್ತು ಸುಲಭದ ಗ್ರಹಿಕೆಗೆ ದಕ್ಕುವುದಿಲ್ಲ ಎನ್ನುವ ಅಪವಾದವಿದೆ. ಇಂತಹ ಅಪವಾದಕ್ಕೆ ಪ್ರಮುಖ ಕಾರಣ ದೇಶೀಯವಾಗಿ ಮತ್ತು ಪ್ರಾಂತೀಯ ನೆಲೆಯಲ್ಲಿ ಈ ಅಧ್ಯಯನದ ಶಿಸ್ತಿನಲ್ಲಿ ಸಾಕಷ್ಟು ಶ್ರಮ ಆಗಿಲ್ಲದಿರುವುದು. ಒಂದೊಮ್ಮೆ ಆಗಿದ್ದರೂ ಅವು ಮಾಹಿತಿಯ ತರ್ಜುಮೆಯ ಮಟ್ಟದಲ್ಲಿಯೇ ಉಳಿದು ಬಿಟ್ಟಿರುವುದು. ಪಾರಂಪರಿಕವಾದ ಈ ಮಿತಿಗಳನ್ನು ಮೀರಿ ಬೆಳೆಯುವ ಪ್ರಯತ್ನವನ್ನಂತೂ ಇಲ್ಲಿ ಮಾಡಲಾಗಿದೆ.

ಪೀಠಿಕೆ

ವಾಣಿಜ್ಯ ಎನ್ನುವುದು ಆಧುನಿಕತೆಯ ಪ್ರಕ್ರಿಯೆ ಪ್ರಾರಂಭವಾದ ನಂತರ ಚಾಲ್ತಿಗೆ ಬಂದ ಪದ ಎಂದರೆ ತಪ್ಪಾಗದು. ಯಾಕೆಂದರೆ ಆಧುನೀಕರಣಕ್ಕೆ ಮೊದಲು ‘ವಾಣಿಜ್ಯ’ ವ್ಯವಸ್ಥೆಯನ್ನು ಪೋಷಿಸುವ ಯಾವ ವಾತಾವರಣವೂ ಇರಲಿಲ್ಲ. ಆಧುನಿಕ ಪೂರ್ವ ಪರಿಸ್ಥಿತಿಯಲ್ಲಿ ಮನುಷ್ಯನ ಅವಶ್ಯಕತೆಗಳನ್ನು ಕುಟುಂಬದ ಮಟ್ಟದಲ್ಲಿ ಅಥವಾ ಒಂದು ಸಮುದಾಯದ ಮಟ್ಟದಲ್ಲಿ ಪೂರೈಸಿಕೊಳ್ಳಲಾಗುತ್ತಿತ್ತು. ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಅನ್ನ, ಬಟ್ಟೆ ಮತ್ತು ವಸತಿಗಳನ್ನು ಒಂದು ಸಣ್ಣ ವ್ಯಾಪ್ತಿಯಲ್ಲಿ ಪೂರೈಸಿ ಕೊಳ್ಳಲಾಗುತ್ತಿತ್ತು. ಮನುಷ್ಯನ ಜೀವನಕ್ಕೆ ಬದುಕಿಗೆ ನೆರವಾಗುವ ರೀತಿಯಲ್ಲಿ ಅಥವಾ ಪೂರಕವಾಗುವ ರೀತಿಯಲ್ಲಿ ಇವುಗಳ ಒದಗಣೆಯಾಗುತ್ತಿತ್ತು. ಇನ್ನೊಂದು ಪ್ರಮುಖ ಅಂಶವೆಂದರೆ ಪ್ರಕೃತಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಉಪಯೋಗಿಸುವ ಮೂಲಕ ಇಂತಹ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗುತ್ತಿತ್ತು. ಈ ಕಾರಣದಿಂದ ಮಾನವ ಪ್ರಕೃತಿಯ ಬಗ್ಗೆ ವಿನೀತ ಭಾವವನ್ನು ಹೊಂದಿದ್ದನು. ಹಾಗಾಗಿ ಎಲ್ಲಿ ಪ್ರಕೃತಿಯು ಸಮೃದ್ಧವಾಗಿದೆ, ಫಲವತ್ತಾಗಿದೆ ಅಂತಹ ಕಡೆ ಮನುಷ್ಯ ನೆಲೆಸಿ ಕೃಷಿ, ವ್ಯಾಪಾರ ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದನು. ಈ ಕಾರಣದಿಂದಾಗಿಯೇ ಪ್ರಾಚೀನ ಕಾಲದಿಂದ ಆಧುನೀಕತೆಯು ಉದಯವಾಗುವವರೆಗೂ, ನಾವು ನದೀ ಪ್ರದೇಶದ ಬಯಲುಗಳಲ್ಲಿ ಅಂದರೆ ಆಹಾರ, ನೀರು, ಗಾಳಿಯೇ ಮುಂತಾದ ಪ್ರಕೃತಿಯು ಕೊಡುವ ಮತ್ತು ಜೀವವಾಹಿನಿಯಾಗಿರುವ ಸಂಪತ್ತು ಲಭ್ಯವಿರುವಲ್ಲಿ ಜನಸಮುದಾಯ ತನ್ನ ನೆಲೆಸಿರುವುದನ್ನು ಕಾಣುತ್ತೇವೆ. ಅಂತಹ ಪ್ರಕೃತಿ ಪ್ರೇರಿತ ಜೀವನ ಕ್ರಮದಲ್ಲಿ ಸಮುದಾಯ ಅವಶ್ಯಕತೆಗಳು ಪೂರೈಸಿದ ನಂತರವೂ ಉಳಿಯುವ ಉತ್ಪನ್ನಗಳನ್ನು ಅನ್ಯ ಸಮುದಾಯದ ಜನರೊಂದಿಗೆ ವಿನಿಮಯ ಮಾಡಿಕೊಳ್ಳುವಕ್ರಮ ಜಾರಿಯಲ್ಲಿತ್ತು. ಹಲವಾರು ಸಂದರ್ಭಗಳಲ್ಲಿ ಪ್ರಾದೇಶಿಕವಾಗಿ ಭಿನ್ನವಿರುವ, ಸಮುದಾಯಗಳ ಸೃಜನಶೀಲತೆಗೆ ಸಾಕ್ಷಿಯಾದ ವಿಶಿಷ್ಟ ಕಲಾ ಪೂರ್ಣ ವಸ್ತುಗಳ ಉತ್ಪಾದನೆಯೂ ಆಗುತ್ತಿತ್ತು. ಇಂತಹ ವಸ್ತುಗಳು ಇತರ ನಾಗರಿಕ ಸಮಾಜದ ಆಕರ್ಷಣೆಯಾದದ್ದೂ ಇದೆ. ಒಟ್ಟಿನಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಬಹಳ ಹಿಂದೆಯೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ಒಂದು ಸಮುದಾಯ ದಿಂದ ಇನ್ನೊಂದು ಸಮುದಾಯಕ್ಕೆ ವಸ್ತುಗಳು ಚಲಿಸುತ್ತಿದ್ದವು. ಇದನ್ನು ನಾವು ವ್ಯಾಪಾರವೆಂದು ಗುರುತಿಸಬಹುದು. ವ್ಯಾಪಾರವನ್ನು ಒಂದು ಪ್ರವೃತ್ತಿಯಾಗಿ ಬೆಳೆಸಿಕೊಂಡ ಜನವರ್ಗ ಜಲ ಹಾಗೂ ನೆಲ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದುದರಿಂದ ಉಪಯುಕ್ತ ಹಾಗೂ ಅತ್ಯಂತ ಬೆಲೆ ಬಾಳುವ ವಸ್ತುಗಳು ಈ ರೀತಿಯಲ್ಲಿ ವ್ಯಾಪಾರದ ಸರಕುಗಳಾಗಿದ್ದವು. ಉತ್ಪಾದನೆ, ವ್ಯಾಪಾರ, ಜನ ಜೀವನ ಸಂಸ್ಕೃತಿ ಎಲ್ಲವೂ ಒಂದು ರೀತಿಯಲ್ಲಿ ಪ್ರಕೃತಿಯ ಕೃಪೆಯನ್ನು ಅನುಸರಿಸಿ ನಿರ್ವಹಿಸಲ್ಪಡುತ್ತಿತ್ತು ಇಂತಹ ಒಂದು ಲಯಬದ್ಧ ಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದದ್ದು ಆಧುನಿಕ ಚಿಂತನೆ.

ಆಧುನಿಕ ಚಿಂತನೆ ಯುರೋಪ್ ಕೇಂದ್ರಿತವಾದ ಒಂದು ಆಲೋಚನಾ / ಚಿಂತನಾಕ್ರಮ ವಾಗಿದೆ. ಇದರ ಪ್ರಕಾರ eನಾರ್ಜನೆಯ ಮೂಲಕ ಪ್ರತಿಯೊಂದು ವಿಷಯವನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡಬಹುದಾಗಿದ್ದು, ಅದನ್ನು ಸಮಾಜದ ಒಳಿತಿಗಾಗಿ ಮತ್ತು ಭೇದಭಾವವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ಶಕ್ತಿಯ ಉತ್ಕರ್ಷಕ್ಕಾಗಿ ಬಳಸಬಹುದಾಗಿದೆ. ಆಧುನೀಕರಣ, ಬದುಕನ್ನು, ಸಮಾಜಕೇಂದ್ರಿತ, ಪ್ರಕೃತಿ ನಿಯಂತ್ರಿತ ವ್ಯವಸ್ಥೆಯಿಂದ ವ್ಯಕ್ತಿ ಕೇಂದ್ರಿತ ಮತ್ತು eನ ನಿರ್ದೇಶಿತ ವ್ಯವಸ್ಥೆಯೆಡೆಗೆ ಹೊರಳಿಸಿತು. ಈ ಕಾರಣದಿಂದ ಮನುಷ್ಯನಿಗೆ ತನ್ನ ಬುದ್ದಿಮತ್ತೆ eನ ಹಾಗೂ ಸಾಮರ್ಥ್ಯದ ಮೇಲೆ ನಂಬಿಕೆ ವೃದ್ದಿಸುತ್ತಾ ಹೋಯಿತು. ಫ್ರಾನ್ಸಿನ್‌ಬೇಕನ್‌ನ ಮಾತು ಬಹುಶಃ ಇದನ್ನು ಬಹಳ ಸಮರ್ಥವಾಗಿಯೇ ಪ್ರತಿಬಿಂಬಿಸುತ್ತದೆ ಎಂದು ಹೇಳಬಹುದು (ಪ್ರಕೃತಿ ಎನ್ನುವುದು ಮನುಷ್ಯ ಮಣಿಸಿ ದುಡಿಸಿಕೊಳ್ಳಬೇಕಾದ ಶತ್ರು). ಅಂದರೆ ಒಂದು ಹಂತದವರೆಗೆ ಬಹಳ ಸರಳವಾಗಿದ್ದ ಶಾಂತವಾಗಿದ್ದ, ಮನುಷ್ಯನ ಬದುಕಿನಲ್ಲಿ ಆಧುನೀಕರಣದ ಬದಲಾವಣೆಯು ಬಿರುಗಾಳಿ ಯನ್ನು ಎಬ್ಬಿಸಿತು. ಆದರೆ ಆಧುನಿಕರಣ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಜಗತ್ತು ಒಂದು ಸುಂದರವಾದ ಸ್ವರ್ಗವಾಗಿತ್ತು, ಎಲ್ಲವೂ ಸುಭಿಕ್ಷವಾಗಿತ್ತು ಎಂದು ತಿಳಿಯ ಬೇಕಾಗಿಲ್ಲ. ಆಧುನಿಕ ಪೂರ್ವದ ದಿನಗಳಲ್ಲಿ ಎಲ್ಲವೂ ನಂಬಿಕೆಯ ಆಧಾರದ ಮೇಲೆ ನಿರ್ಧರಿಸಲ್ಪಡುತ್ತಿತ್ತು. ಯಾರೂ ಯಾವ ಕಾರಣಕ್ಕೂ ಈ ನಂಬಿಕೆಗಳನ್ನು ಪ್ರಶ್ನಿಸುವ ಹಾಗಿರಲಿಲ್ಲ. ನಾಗರಿಕತೆಯ ವಿಕಾಸದ ಯಾವುದೋ ಒಂದು ಹಂತದಲ್ಲಿ ಇದು ಸಮರ್ಪಕವಾಗಿದ್ದಿರಬಹುದು, ಹಾಗೆಂದು ಅನೂಚಾನವಾಗಿ ಅದರ ಅಂಧಾನುಕರಣೆ ಸರಿಯಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿನ ಆಯಕಟ್ಟಿನ ಜಗದಲ್ಲಿರುವ ಜನ ಇದನ್ನು ದುರುಪಯೋಗ ಪಡಿಸಿಕೊಂಡು ಸೃಜನಶೀಲ ಮನಸ್ಸುಗಳನ್ನು ನಂಬಿಕೆಯ ಗೂಡಿನೊಳಗೆ ದೂಡಿ ಬಿಟ್ಟಾಗ ಸಹಜವಾಗಿಯೇ ತಲ್ಲಣ ಉಂಟಾಗುತ್ತದೆ. ನಂಬಿಕೆಯ ಬೇಡಿಯಿಂದ ಬಿಡುಗಡೆಗಾಗಿ ಚಡಪಡಿಸಿದ ಜನಸಮುದಾಯ ಹುಡುಕಿಕೊಂಡ ದಾರಿಯೇ ಆಧುನಿಕ ಚಿಂತನೆಗೆ ಮೂಲವಾಗಿದೆ. ನಂಬಿಕೆ, ಶ್ರದ್ಧೆ, ಕಠಿಣ ಶ್ರಮ ಮತ್ತು ಲಯಬದ್ಧವಾದ ಜೀವನವನ್ನು ತನ್ನದಾಗಿಸುವ ಮೂಲಕ ಮನುಷ್ಯ ಯಾರ ಸಹಾಯವೂ ಇಲ್ಲದೇ ತನ್ನ ಉನ್ನತಿಯನ್ನು ಸಾಧಿಸಬಹುದು ಎನ್ನುವ ನಂಬಿಕೆಯೇ ಅಥವಾ ವಿಶ್ವಾಸವೇ ಆಧುನಿಕ ಚಿಂತನೆಯ ತಾಯಿಬೇರು. ಮೂಲತಃ ಇದು ಕ್ರೈಸ್ತಮತದ ಸಾಂಸ್ಥಿಕ ಶೋಷಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮನಸ್ಸುಗಳಲ್ಲಿ ಹುಟ್ಟಿಕೊಂಡು, ತದನಂತರ ಜನರ ಉಳಿದೆಲ್ಲಾ ಕಾರ್ಯ ಚಟುವಟಿಕೆಗಳಿಗೂ ವಿಸ್ತರಿಸಿಕೊಂಡ ಚಿಂತನಾ ಕ್ರಮವಾಗಿದೆ. ಇದರ ಪರಿಣಾಮವಾಗಿ ಮನುಷ್ಯ ಈ ಮೊದಲು ತನ್ನ ಅರಿವಿಗೆ, ಚಟುವಟಿಕೆಗೆ ಹಾಗೂ ಬದುಕಿಗೆ ಹಾಕಿಕೊಂಡ ಸೀಮಾರೇಖೆಯನ್ನು ದಾಟಿ ಕಾರ್ಯವೆಸಗಲು ಪ್ರಾರಂಭಿಸಿದ. ನಂಬಿಕೆಯ ಪಂಜರದಲ್ಲಿದ್ದು, ಉಸಿರು ಬಿಗಿ ಹಿಡಿಯುವ ವಾತಾವರಣದಿಂದ ಬಿಡುಗಡೆ ಹೊಂದಿದ ಮನಸ್ಸುಗಳು ತಮ್ಮ  ಬಗ್ಗೆ ಅಗಾಧ ವಿಶ್ವಾಸವನ್ನು ಹೊಂದುವ ಮೂಲಕ, ಮನುಕುಲದ ಚರಿತ್ರೆಗೆ ಹೊಸ ಭಾಷ್ಯ ಬರೆದ ಮಹತ್ವಪೂರ್ಣ ಅನ್ವೇಷಣೆಗಳಿಗೆ ನಾಂದಿ ಹಾಡಿದವು. ತತ್ಫಲವಾಗಿ ಉತ್ಪಾದನಾ ಕ್ರಮದಲ್ಲಿ ಬದಲಾವಣೆಗಳಾದವು, ಜನರ ಆಚಾರ ವಿಚಾರಗಳಲ್ಲಿ ಬದಲಾವಣೆಗಳಾದವು. ಹೊಸ ಉತ್ಪಾದನಾ ವಿಧಾನಗಳು ಹಿಂದಿದ್ದ ಎಲ್ಲ ನಿಯಂತ್ರಣಗಳನ್ನು, ಮಿತಿಗಳನ್ನೂ ಮೀರಿ ಕಡಿಮೆ ಶ್ರಮದಲ್ಲಿ ಅಪರಿಮಿತ ಪ್ರಮಾಣದ ಉತ್ಪಾದನೆಯನ್ನು ಸಾಧ್ಯವಾಗಿಸಿದವು. ಹೀಗಾಗಿ ವ್ಯಾಪಾರವೆನ್ನುವುದು ರೂಪಾಂತರ ಹೊಂದಿ ವಾಣಿಜ್ಯವಾಯಿತು. ಅಥವಾ ವ್ಯಾಪಾರವೆನ್ನುವುದು ವಾಣಿಜ್ಯವೆನ್ನುವ ವಿಸ್ತೃತ ವ್ಯಾಪ್ತಿಯೊಳಗಿನ ಒಂದು ಚಟುವಟಿಕೆಯಾಗಿ ಬಿಟ್ಟಿತು.

ವ್ಯಾಖ್ಯಾನ

ಆಧುನೀಕತೆಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದ ಹೊಸ ಉತ್ಪಾದನಾ ವಿಧಾನಗಳಿಂದ ತಯಾರಾದ ವಸ್ತುಗಳನ್ನು ಹಿಂದಿನ ರೀತಿಯಲ್ಲಿ ವಿತರಿಸುವುದು, ಸಾಧ್ಯವಿಲ್ಲವಾಯ್ತು. ಈ ಕಾರಣದಿಂದ ಉತ್ಪಾದನೆಯಲ್ಲಿ ಆದಂತಹ ಬದಲಾವಣೆಯ ಗಾತ್ರ ಮತ್ತು ಪ್ರಮಾಣವನ್ನು ಅನುಸರಿಸಿ ನವೀನ ವಿತರಣಾ ವ್ಯವಸ್ಥೆಯೂ ಹುಟ್ಟಿಕೊಂಡಿತು. ಹಾಗೆಯೇ ಉತ್ಪಾದನಾ ಮತ್ತು ವಿತರಣಾ ವ್ಯವಸ್ಥೆಯನ್ನು ಆಧರಿಸಬೇಕಾದಂತಹ ಇತರ ಸಂಸ್ಥೆಗಳೂ ಅಸ್ತಿತ್ವಕ್ಕೆ ಬಂದವು. ಹಾಗಾಗಿ ವಾಣಿಜ್ಯಶಾಸ್ತ್ರದ ಅಧ್ಯಯನವು ಈ ರೀತಿಯಲ್ಲಿ ಒಂದು ಉತ್ಪಾದನಾ ವ್ಯವಸ್ಥೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಪೂರೈಸುವ, ಉತ್ಪಾದನಾ ಕ್ರಮ ಮತ್ತು ಉತ್ಪನ್ನಗಳ ಸಮರ್ಥ ವಿತರಣಾ ವ್ಯವಸ್ಥೆಗೆ ಸಂಬಂಧಿಸಿದ ಅಧ್ಯಯನವೆಂದು ತಿಳಿಯ ಬಹುದಾಗಿದೆ. ಜೇಮ್ಸ್ ಸ್ಟೀಫನ್‌ಸನ್ ಅವರು ವಾಣಿಜ್ಯ ವ್ಯವಸ್ಥೆಯನ್ನು ಈ ಕೆಳಗಿನಂತೆ ವ್ಯಾಖ್ಯಾನಿಸುತ್ತಾರೆ :

ವಾಣಿಜ್ಯ ಶಾಸ್ತ್ರವು ವಸ್ತುಗಳ/ಸರಕುಗಳ ವಿನಿಮಯಕ್ಕೆ ಸಂಬಂಧಿಸಿದ ಅಧ್ಯಯನ ವಾಗಿದೆ. ಇದು ಕಚ್ಚಾ ವಸ್ತುವಿನಿಂದ ಹಿಡಿದು ಸಿದ್ಧ ವಸ್ತುಗಳವರೆಗಿನ ಬೇಡಿಕೆಗಳನ್ನು ಪೂರೈಕೆದಾರರು ಒದಗಿಸಿ ಕೊಡುವ ವ್ಯವಸ್ಥೆ ಮತ್ತು ಇಂತಹ ಚಟುವಟಿಕೆಗಳಿಗೆ ಅಗತ್ಯವಿರುವ ಪೂರಕ ಸೇವೆಯನ್ನು ಲಭ್ಯವಾಗಿಸುವ ಸಾಂಸ್ಥಿಕ ವ್ಯವಸ್ಥೆಯ ಬಗೆಗಿನ ಸಮಗ್ರ ಅಧ್ಯಯನ ವಾಗಿದೆ”.

ಹಾಗಾಗಿ ವಾಣಿಜ್ಯಶಾಸ್ತ್ರದಲ್ಲಿ ವಸ್ತು ಮತ್ತು ಸರಕುಗಳ ಅಧ್ಯಯನದೊಂದಿಗೇನೆ ಇಂತಹ ವಿನಿಮಯ ವ್ಯವಸ್ಥೆಯನ್ನು ಆಧರಿಸಿದ ಸಾಗಾಟ, ಹಣಕಾಸು, ವಿಮೆ, ದಾಸ್ತಾನು, ಮಾರಾಟ, ಮುಂತಾದ ಪೂರಕ ಸೇವೆ ಮತ್ತು ಅಂತಹ ಸೇವೆಗಳನ್ನು ಒದಗಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆಗಳ ಬಗೆಗಿನ ಅಧ್ಯಯನವೂ ಒಳಗೊಂಡಿದೆ. ವಿವಿಧ ಸ್ವರೂಪದ ಸರಕುಗಳು ಪೂರೈಕೆಯ ಸ್ಥಾನದಿಂದ ಬೇಡಿಕೆಯಿರುವ ಸ್ಥಾನಕ್ಕೆ ವರ್ಗಾವಣೆಗೊಳ್ಳುಬೇಕಿರುತ್ತದೆ. ಅರ್ಥಾತ್ ಯಾವುದೇ ರೀತಿಯ ಸರಕು ಯಾ ವಸ್ತುಗಳಿಗೆ ಬೇಡಿಕೆಯಿದ್ದಾಗ ಅವುಗಳನ್ನು ಪೂರೈಸುವ ಅವಶ್ಯಕತೆಯುಂಟಾಗುತ್ತದೆ. ತದನಂತರದಲ್ಲಿ ಅಂತಹ ವಸ್ತುಗಳು ಯಾ ಸರಕುಗಳು ಪೂರೈಸಲ್ಪಡುತ್ತವೆ.

ತೊಡಕುಗಳು

ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಭರಿಸಲಾಗುವುದಿಲ್ಲ. ಇಡೀ ವಾಣಿಜ್ಯ ವ್ಯವಸ್ಥೆಯ ಮುಂದಿರುವ ಸವಾಲುಗಳು ಪೂರೈಕೆ ಮತ್ತು ಬೇಡಿಕೆಯ ನಡುವಿರುವ ಅಂತರ ಮತ್ತು ಆತಂಕಗಳನ್ನು ಯಾ ಗಂಡಾಂತರಗಳನ್ನು ತಿಳಿಯುವುದೂ ಆಗಿದೆ. ಇದೇ ಕಾರಣದಿಂದ ಇವುಗಳನ್ನು ವಾಣಿಜ್ಯ ವ್ಯವಸ್ಥೆಯಲ್ಲಿನ ತೊಡಕುಗಳು ಯಾ ತೊಂದರೆಗಳು ಎಂದು ತಿಳಿಯಲಾಗಿದೆ. ಈ ತೊಂದರೆ ಯಾ ತೊಡುಕುಗಳಲ್ಲಿ ನಾಲ್ಕು ವಿಧ, ಅವುಗಳೆಂದರೆ :

೧. ವ್ಯಕ್ತಿ ಸಂಬಂಧೀ ತೊಡಕುಗಳು

೨. ಜಗ ಸಂಬಂಧೀ ತೊಡಕುಗಳು

೩. ಕಾಲ ಸಂಬಂಧೀ ತೊಡಕುಗಳು

೪. ಅರ್ಥ ಸಂಬಂಧೀ ತೊಡಕುಗಳು

. ವ್ಯಕ್ತಿ ಸಂಬಂಧೀ ತೊಡಕುಗಳು

ಆಧುನಿಕ ಪೂರ್ವದಲ್ಲಿದ್ದ ವ್ಯಾಪಾರ ವ್ಯವಸ್ಥೆಯಲ್ಲಿ ಬೇಡಿಕೆ ಮತ್ತು ಪೂರೈಕೆದಾರರ ನಡುವಿನ ಅಂತರ ಬಹಳ ಕಡಿಮೆ ಇತ್ತು. ಅಂದರೆ ಬೇಡಿಕೆದಾರನೊಬ್ಬ ಪೂರೈಕೆದಾರನಿಂದ ನೇರವಾಗಿ ವಸ್ತುಗಳನ್ನು ಪಡೆದುಕೊಳ್ಳಲು ಯಾ ಖರೀದಿಸಲು ಸಾಧ್ಯವಿತ್ತು. ಉದಾಹರಣೆಗೆ ರೈತನೊಬ್ಬ ಬಟ್ಟೆಯನ್ನು ಕೊಳ್ಳುವಾಗ ತಾನು ಬೆಳೆದ ಧಾನ್ಯವನ್ನು ನೀಡಿ ನೇಕಾರನಿಂದ ಬಟ್ಟೆಯನ್ನು ಖರೀದಿಸುತ್ತಿದ್ದ. ಅಂದರೆ ಬೇಡಿಕೆದಾರನೊಬ್ಬ ತನಗೆ ಎಲ್ಲಿಂದ ಅವಶ್ಯಕ ಸಾಮಗ್ರಿ ಪೂರೈಸಲು ಸಾಧ್ಯ ಎನ್ನುವುದನ್ನು ತಿಳಿದು ಆ ಮೂಲದಿಂದ ಅದನ್ನು ಪಡೆಯುತ್ತಿದ್ದ.  ಹಾಗಾಗಿ ಅಲ್ಲಿ ಒಂದು ರೀತಿಯ ವೈಯಕ್ತಿಕ ಸಂಪರ್ಕವಿರುತ್ತಿತ್ತು. ಆದರೆ ವ್ಯಾಪಾರದ ವ್ಯಾಪ್ತಿ ವಿಸ್ತೃತವಾದಂತೆ, ಉತ್ಪಾದನೆ ಹೆಚ್ಚಾದಂತೆ ಬೇಡಿಕೆ ಮತ್ತು ಪೂರೈಕೆದಾರರ ಸಂಖ್ಯೆಯೂ ಬೆಳೆಯಿತು. ಹಾಗಾಗಿ ಬೇಡಿಕೆ ಮತ್ತು ಪೂರೈಕೆಯನ್ನು ಸರಿದೂಗಿಸುವ ಕೆಲಸದಲ್ಲಿ ಪರಿಣತಿ ಸಾಧಿಸಿದ ಒಂದು ವರ್ಗದ ಸೃಷ್ಟಿಯಾಗುವುದು ಅನಿವಾರ್ಯವಾಯಿತು. ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ಜಗತ್ತಿನ ನಾನಾ ಮೂಲೆಯಲ್ಲಿ ವಸ್ತುಗಳು ಉತ್ಪಾದನೆಯಾಗುತ್ತವೆ ಮತ್ತು ಅವುಗಳಿಗೆ ಜಗತ್ತಿನ ಇತರ ವಿವಿಧ ಜನವರ್ಗದಿಂದ ಕಡೆಗಳಲ್ಲಿ ಬೇಡಿಕೆಯಿದೆ. ಈ ರೀತಿಯ ಬೇಡಿಕೆ ಮತ್ತು ನೀಡಿಕೆಯನ್ನು ಗುರುತಿಸಿ ಅವುಗಳ ನಡುವೆ ಸಮತೋಲನ ಸಾಧಿಸುವುದು ವಾಣಿಜ್ಯ ಜಗತ್ತಿನ ಹಲವು ಸವಾಲುಗಳಲ್ಲಿ ಒಂದಾಗಿದೆ.

. ಜಗ ಸಂಬಂಧೀ ತೊಡಕುಗಳು

ಯಾವುದೇ ಒಂದು ವಸ್ತುವಿಗೆ ಜಾಗತಿಕವಾಗಿ ಬೇಡಿಕೆಯಿರಬಹುದು ಮತ್ತು ಇಂತಹ ಬೇಡಿಕೆ ಹಲವಾರು ಕಾರಣಗಳಿಂದಾಗಿ ಉಂಟಾಗಬಹುದು. ಉದಾಹರಣೆ ಭಾರತದ ಸಾಂಬಾರ ಪದಾರ್ಥಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೆ ಬಹಳಷ್ಟು ಬೇಡಿಕೆಯಿತ್ತು. ಇಂತಹ ಪ್ರಬಲವಾದ ಬೇಡಿಕೆಯ ಕಾರಣವೇ ಯುರೋಪಿನ ದೇಶಗಳು ಭಾರತಕ್ಕೆ ಸಮುದ್ರ ಮಾರ್ಗ ಶೋಧಿಸಲು ಪ್ರೇರಕವಾಯ್ತು ಎಂದು ನಂಬಲಾಗಿದೆ. ಈಗ ಬದಲಾದ ಪರಿಸ್ಥಿತಿಯಲ್ಲಿಯೂ ಇಂತಹ ಸನ್ನಿವೇಶ ಮುಂದುವರಿದಿದೆ. ಉದ್ಯೋಗ ನಿಮಿತ್ತವೋ, ವ್ಯಾಪಾರ ನಿಮಿತ್ತವೋ ಜಗತ್ತಿನ ವಿವಿದೆಡೆ ನೆಲೆಸಿರುವ ಭಾರತೀಯರು ಭಾರತೀಯ ಸಾಮಗ್ರಿಗಳನ್ನು ಬಯಸುವ ಹಾಗೆಯೇ ಇನ್ನಿತರ ಕಾರಣಗಳಿಗಾಗಿ ಈ ವಸ್ತುಗಳನ್ನು ಅನ್ಯ ರಾಷ್ಟ್ರೀಯರು ಬಯಸುತ್ತಾರೆ. ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ನಿರ್ಮಾಣವಾದ ವಸ್ತುಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಈ ಕಾರಣದಿಂದಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಉತ್ಪಾದನೆಯಾಗುವ ವಸ್ತು ಜಗತ್ತಿನ ವಿವಿದೆಡೆ ಬೇರೆ, ಬೇರೆ ಸಮಯದಲ್ಲಿ ಬೇಡಿಕೆಯಲ್ಲಿರುತ್ತದೆ. ಅಂದರೆ ಭೌತಿಕವಾಗಿ ಇರುವ ದೂರವನ್ನು ಕ್ರಮಿಸಿ ವಸ್ತುಗಳು ವಿಕ್ರಯಿಸಲ್ಪಡುತ್ತವೆ. ಈ ದೂರವನ್ನು ಕ್ರಮಿಸುವಾಗಲೂ ಹಲವಾರು ರೀತಿಯ ಗಂಡಾಂತರಗಳು ಎದುರಾಗಬಹುದು. ಹೀಗೆ ಭೋಗೋಳಿಕವಾದ ದೂರವನ್ನು ಕ್ರಮಿಸುವುದು ಒಂದು ತೊಡಕು. ಆದರೆ ಉತ್ತಮ ಸಂಚಾರ ಮತ್ತು ಸಂಪರ್ಕ ಸಾಧನಗಳನ್ನು ಅಭಿವೃದ್ದಿಪಡಿಸುವ ಮೂಲಕ ಈ ತೊಡಕನ್ನು ಬಹಳಷ್ಟುಮಟ್ಟಿಗೆ ನಿವಾರಿಸಲಾಗಿದೆ.

ಹಾಗಾಗಿ ಜಗತ್ತಿನ ಯಾವ ಮೂಲೆಯಲ್ಲೇ ಒಂದು ವಸ್ತು ಉತ್ಪಾದನೆಯಾಗಲೀ, ಅದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಇನ್ಯಾವುದೋ ಮೂಲೆಗೆ ತಲುಪಿಸಬಲ್ಲಂತಹ ಕ್ರಾಂತಿಕಾರಕ ವ್ಯವಸ್ಥೆ ಇವತ್ತು ಚಾಲ್ತಿಯಲ್ಲಿದೆ. ಜಾಗ ಸಂಬಂಧೀ ತೊಡಕು ಇಂದು ಒಂದು ತೊಡಕೇ ಅಲ್ಪವೇನೋ ಎನ್ನುವ ರೀತಿಯ ವಾತಾವರಣವಿದೆ.

ಜಾಗ ಸಂಬಂಧೀ ತೊಡಕಿಗೆ ಸಂಬಂಧಿಸಿದ ಇನ್ನೊಂದು ವಿಷಯ ಗಂಡಾಂತರ ಅಥವಾ ಆಂಗ್ಲ ಭಾಷೆಯ ‘ರಿಸ್ಕ್’ ಅಂದರೆ ಉತ್ಪಾದನೆಯಾಗುವ ಜಾಗದಿಂದ ಬೇಡಿಕೆಯಿರುವ ಭಾಗಕ್ಕೆ ವಸ್ತು/ಸರಕನ್ನು ಸಾಗಾಟ ಮಾಡುವಾಗ ಬೇರೆ ಬೇರೆ ಕಾರಣಗಳಿಂದ ನಷ್ಟ ಉಂಟಾಗಬಹುದು. ಇಂತಹ ನಷ್ಟವನ್ನು ಹೊರುವ ಆರ್ಥಿಕ ಚೈತನ್ಯ ಒಂದು ಉದ್ಯಮಕ್ಕೆ ಯಾ ಉದ್ಯಮಶೀಲರಿಗೆ ಇರಬೇಕು. ಆದರೆ ವ್ಯಾಪಾರದ ವ್ಯಾಪ್ತಿ ಮತ್ತು ಪ್ರಮಾಣ ಅಧಿಕವಿದ್ದಾಗ ಕೆಲವರಿಗೆ ಅಥವಾ ವ್ಯಕ್ತಿಗಳಿಗೆ ಇದನ್ನು ನಿಭಾಯಿಸಲು ಅಸಾಧ್ಯವಾಗಿರುವ ಕಾರಣ, ಗಂಡಾಂತರವನ್ನು ನಿಭಾಯಿಸಲು ಒಂದು ಸಾಂಸ್ಥಿಕ ವ್ಯವಸ್ಥೆಯ ಅವಶ್ಯಕತೆ ಬಹಳ ವಿರುತ್ತದೆ. ಹಾಗಾಗಿ ಇಂತಹ ಸಮಸ್ಯೆಯನ್ನು ನಿಭಾಯಿಸಲು ವಿಮಾ ಕಂಪೆನಿಗಳು ಅಸ್ತಿತ್ವಕ್ಕೆ ಬಂದವು.

. ಕಾಲ ಸಂಬಂಧೀ ತೊಡಕುಗಳು

ವಸ್ತು ಯಾ ಸರಕುಗಳಿಗೆ ಬೇಡಿಕೆ ಒಂದು ಸಮಯದಲ್ಲಿದ್ದು ಅವುಗಳ ಉತ್ಪಾದನೆ ಇನ್ನೊಂದು ಸಮಯದಲ್ಲಿ ನಡೆಯಬಹುದು. ಅರ್ಥಾತ್ ಉತ್ಪಾದನೆ ಮತ್ತು ಬೇಡಿಕೆಯ ಮಧ್ಯೆ ಅಂತರವಿದ್ದು ಅದನ್ನು ನಿಭಾಯಿಸುವುದು ಅಗತ್ಯವಾಗಿದೆ. ಕಚ್ಚಾ ಸಾಮಗ್ರಿಗಳು ಪ್ರಾಕೃತಿಕ ಯಾ ಮಾನವ ನಿರ್ಮಿತ ಕಾರಣದಿಂದ ಕೆಲವು ಸಂದರ್ಭಗಳಲ್ಲಿ ಮಾತ್ರ ಒದಗಣೆಯಾಗಬಹುದು. ಉದಾಹರಣೆಗೆ ಕೃಷಿಯಾಧಾರಿತ ಉತ್ಪನ್ನಗಳು ಕೆಲವು ಋತುಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಅವುಗಳನ್ನು ಉಪಯೋಗಿಸುವ ಕಾರ್ಖಾನೆಗಳು ಅಂತಹ ವಸ್ತು ಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು ಉತ್ಪಾದನೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕಾಗಿರುತ್ತದೆ. ಅಂತೆಯೇ ಅಗಾಧ ಪ್ರಮಾಣದಲ್ಲಿ ಉತ್ಪಾದನೆ ಯಾದ ವಸ್ತುಗಳು ತಕ್ಷಣವೇ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಹೋಗುವುದಿಲ್ಲ. ಉತ್ಪಾದನೆಯಾದ ವಸ್ತುಗಳು ಬೇಡಿಕೆ ಬರುವವರೆಗೆ ಕಾಯಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸರಕುಗಳ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡಿ, ಹೆಚ್ಚುವರಿ ಸರಕುಗಳನ್ನು ದಾಸ್ತಾನಿಡ ಬೇಕಾಗುತ್ತದೆ. ಆಧುನಿಕ ವಾಣಿಜ್ಯ ವ್ಯವಸ್ಥೆಯಲ್ಲಿ ಸಿದ್ಧ ವಸ್ತುಗಳನ್ನು ಹಾಗೂ ಕಚ್ಚಾ ಸಾಮಗ್ರಿಗಳನ್ನು ರಕ್ಷಿಸಿಡುವುದು, ಶೇಖರಿಸಿಡುವುದು ಒಂದು ಪ್ರಮುಖ ತೊಡಕಾಗಿದೆ. ಗೋದಾಮು, ಯಾ ಆಧುನಿಕ ಶೇಖರಣಾ ವಿಧಾನ ಇಂತಹ ಸಮಸ್ಯೆಯನ್ನು ನಿವಾರಿಸಿದೆ. ಹಲವಾರು ಸಂದರ್ಭಗಳಲ್ಲಿ ವೈeನಿಕ ತಂತ್ರಜ್ಞಾನವನ್ನು ಬಳಸುವ ಮೂಲಕವೂ ಸಮಸ್ಯೆಯ ಒತ್ತಡವನ್ನು ಕಡಿಮೆ ಮಾಡಲಾಗಿದೆ.

. ಅರ್ಥ ಸಂಬಂಧೀ ತೊಡಕುಗಳು

ಅರ್ಥ ಸಂಬಂಧೀ ತೊಡಕುಗಳನ್ನು ಹಣಕಾಸಿನ ತೊಡಕುಗಳೆಂದು ಕರೆಯಬಹುದಾಗಿದೆ. ಈ ವಿಷಯದ ಬಗ್ಗೆ ಪ್ರಸ್ತಾಪಿಸುವ ಮೊದಲು, ಉತ್ಪಾದನೆ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ವಿವರಿಸುವ ಅಗತ್ಯವಿದೆ. ಕಚ್ಚಾ ಸಾಮಗ್ರಿಗಳನ್ನು ಸಿದ್ಧ ವಸ್ತುಗಳಾಗಿ ಮಾರ್ಪಡಿಸಿ, ತದನಂತರ ಮಾರಾಟ ಮಾಡಲಾಗುತ್ತದೆ. ಅಂದರೆ ಉತ್ಪಾದಕನೊಬ್ಬ ಕಚ್ಚಾ ಸಾಮಗ್ರಿ ಖರೀದಿಸಿ, ಅದನ್ನು ರೂಪಾಂತರಗೊಳಿಸಲು ಕಾರ್ಮಿಕ ಶಕ್ತಿಯನ್ನು ಬಳಸಿ, ಯಂತ್ರಗಳ ಮೂಲಕ ಈ ಕೆಲಸವನ್ನು ನಿರ್ವಹಿಸಬೇಕು. ಅಂದರೆ ಉತ್ಪಾದನೆಯನ್ನು ನಡೆಸುವ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಕಾರ್ಮಿಕರಿಗೆ ವೇತನ, ಪೂರೈಕೆದಾರರಿಗೆ ಬೆಲೆ ಪಾವತಿ ಮತ್ತು ಯಂತ್ರಗಳನ್ನು ಖರೀದಿಸಲು ಬಂಡವಾಳ ಬಹಳ ಅವಶ್ಯಕವಿರುತ್ತದೆ.  ಉತ್ಪಾದನೆ ಮುಗಿದು ಸರಕುಗಳು ಬಿಕರಿಯಾದ ಮೇಲೆ ಉತ್ಪಾದಕನಿಗೆ ಲಾಭ ಸಮೇತ ಹಣ ದೊರೆಯುತ್ತದೆ. ಆದರೆ ಕೆಲಕಾಲದವರೆಗೆ ಉತ್ಪಾದನಾ ಚಟುವಟಿಕೆಯನ್ನು ಮುಂದುವರಿಸಿ ಕೊಂಡು ಹೋಗಲು ಹಣಕಾಸಿನ ಅವಶ್ಯಕತೆ ಇರುತ್ತದೆ. ಹಾಗಾಗಿ ಎಲ್ಲಿ ಹಣಕಾಸಿನ ತೊಡಕು ಗಂಭೀರವಾಗಿರುತ್ತದೆಯೋ ಅಂತಹ ಸಂದರ್ಭಗಳಲ್ಲಿ ಉತ್ಪಾದನಾ ಕಾರ್ಯ ಸುಲಲಿತವಾಗಿ ನಡೆಯುವುದಿಲ. ಉತ್ಪಾದನಾ ಕಾರ್ಯ ಸುಲಲಿತವಾಗಿ ನಡೆಯುವ ದೃಷ್ಟಿ ಯಿಂದ ಹಣಕಾಸನ್ನು ನಿರಂತರವಾಗಿ ಒದಗಿಸುವ ಕಾರ್ಯ ನಿರ್ವಹಿಸಲು ಈಗ ಹಣಕಾಸು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿವೆ. ವಾಣಿಜ್ಯ ಜಗತ್ತಿನ ವಿವಿಧ ಅವಶ್ಯಕತೆಗಳನ್ನು ಅನುಸರಿಸಿ ವಿಶೇಷ ಸೇವಾ ಪರಿಣತಿಯಿರುವ ಆಧುನಿಕ ಹಣಕಾಸು ಸಂಸ್ಥೆಗಳು ಇಂದು ಅಸ್ತಿತ್ವದಲ್ಲಿವೆ.

ಇದುವರೆಗೆ ವಾಣಿಜ್ಯ ಜಗತ್ತಿನ ಸ್ಥೂಲ ಪರಿಚಯವನ್ನು ಮಾಡಿಕೊಡುವ ಪ್ರಯತ್ನವನ್ನು ಮಾಡಲಾಯಿತು. ಆದರೆ ವಸ್ತುಗಳನ್ನು ಉತ್ಪಾದಿಸುವ ಮತ್ತು ಅವುಗಳಿಗೆ ಬೇಡಿಕೆಯಿರುವ ಕಡೆಗೆ ವಿತರಿಸುವ ಕಾರ್ಯಾಚರಣೆಯನ್ನೇ ಕೇಂದ್ರವಾಗಿಟ್ಟುಕೊಂಡಿರುವ ವಾಣಿಜ್ಯ ಜಗತ್ತನ್ನು ನಿಯಂತ್ರಿಸುವ ಮತ್ತು ಪ್ರಭಾವಿಸುವ ಸಂಗತಿಗಳೂ ಇವೆ. ಒಂದು ಅರ್ಥದಲ್ಲಿ ವಾಣಿಜ್ಯ ಜಗತ್ತಿನ ಆಗುಹೋಗುಗಳು ಅವಲಂಬಿಸಿರುವುದು ಒಂದು ಅರ್ಥ ವ್ಯವಸ್ಥೆಯನ್ನು. ಹೀಗಾಗಿ ಅರ್ಥಶಾಸ್ತ್ರದ ಹಿನ್ನೆಲೆಯಿಂದ ವಾಣಿಜ್ಯ ಜಗತ್ತಿನ ಕಾರ್ಯ ಚಟುವಟಿಕೆಗಳನ್ನು ಅರಿಯುವುದು ಅಗತ್ಯವೆಂದು ನನಗನಿಸುತ್ತದೆ. ವಸ್ತು ಯಾ ಸರುಗಳು ಅಂತಿಮವಾಗಿ ಉಪಯೋಗಿ ಸಲ್ಪಡುವುದು ಮನುಷ್ಯನಿಂದ. ಹಾಗೆಯೇ ಒಂದು ವಸ್ತುವಿನ ಉತ್ಪಾದನೆಯಾಗಬೇಕಾದರೂ ಮನುಷ್ಯನ ಪ್ರಯತ್ನ ಅತ್ಯಗತ್ಯ.  ಅಂದರೆ ಮನುಷ್ಯ ಕೇಂದ್ರಿತವಾದ ಆಧುನಿಕ ಜಗತ್ತಿನ ಕಾರ್ಯಾಚರಣೆಗೆ ಇಂಬು ಕೊಡುವ ಚಿಂತನೆಯ ಬಗ್ಗೆ ನಾವು ತಿಳಿಯಬೇಕಾಗಿದೆ. ಅಸಂಖ್ಯ ಆಸೆ, ಆಕಾಂಕ್ಷೆ, ಸ್ವಾರ್ಥ, ಪಾರಮಾರ್ಥಿಕ, ದ್ವೇಷ, ಆಸೂಯೇ…..ಇತ್ಯಾದಿ ಅಂಶಗಳಿಂದ ಸುತ್ತುವರಿಯಲ್ಪಟ್ಟ ಮನುಷ್ಯನನ್ನು ಉಪಭೋಗ ಮತ್ತು ಉತ್ಪಾದನೆಗೆ ಪ್ರೇರೇಪಿಸುವ ಶಕ್ತಿ ಯಾವುದು ಎನ್ನುವುದು ಕುತೂಹಲದ ವಿಷಯವೇ. ತನ್ನ ಸುಖ ಸಂತೋಷಗಳನ್ನು ವೃದ್ದಿಸುವ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸಲು ಬಯಸುತ್ತಾನೆ. ಇಂತಹ ಸುಖ, ಸಂತೋಷಗಳನ್ನು ವಸ್ತು ಯಾ ಸೇವೆಯನ್ನು ಉಪಭೋಗಿಸುವ ಮೂಲಕ ಮನುಷ್ಯ ಗಳಿಸುತ್ತಾನೆ ಎಂದು ತಿಳಿಯಲಾಗಿದೆ. ಹಾಗಾಗಿ ಎಲ್ಲ ಚಟುವಟಿಕೆಗಳ ಅಂತಿಮ ಉದ್ದೇಶ ವಾಗಿರುವ ಮಾನವ ಜಗತ್ತಿನ ಉನ್ನತಿಯ ಹಿನ್ನೆಲೆಯಿಂದಲೂ ವಾಣಿಜ್ಯಶಾಸ್ತ್ರವನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ.