ವಸ್ತುಗಳ ಅಥವಾ ಸರಕುಗಳ ಉತ್ಪಾದನೆ ಮತ್ತು ವಿತರಣೆಯ ಕಾರ್ಯದ  ಹಿಂದಿರುವ ನಿಯಂತ್ರಿಕ ಮತ್ತು ಪ್ರಚೋದಕ ಶಕ್ತಿಯ ಬಗೆಗಿನ ತಿಳುವಳಿಕೆ ಅಗತ್ಯವಿದ್ದು, ಆ ಕಾರಣದಿಂದ ಅರ್ಥಶಾಸ್ತ್ರದ ಕುರಿತ ಕೆಲವು ಮೂಲಭೂತ ವಿಷಯಗಳನ್ನು ತಿಳಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಅರ್ಥಶಾಸ್ತ್ರ

ಅರ್ಥಶಾಸ್ತ್ರ ಎಂದಾಕ್ಷಣವೇ ನೆನಪಿಗೆ ಬರುವ ಹೆಸರು ಆಡಂಸ್ಮಿತ್. ಅರ್ಥಶಾಸ್ತ್ರದ ಅಧ್ಯಯನ ಪ್ರಾರಂಭವಾಗುವುದೇ ಈ ಮಹಾಶಯನಿಂದ. ಆಡಂಸ್ಮಿತ್‌ನ ಪ್ರಕಾರ ಅರ್ಥಶಾಸ್ತ್ರ ವೆಂದರೆ ಸಂಪತ್ತು ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪಾದನೆ, ಉಪಭೋಗ, ವಿತರಣೆಯ ಬಗೆಗಿನ ಶಾಸ್ತ್ರೀಯ ಅಧ್ಯಯನ. ಸಂಪತ್ತನ್ನು ಸೃಷ್ಟಿಸುವ ದಿಸೆಯಲ್ಲಿ ಮನುಷ್ಯ ಉತ್ತೇಜಿತ ನಾಗಿ ತನ್ನ ಹಿತವನ್ನು ಮುಖ್ಯವಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಾನೆ. ಹೀಗೆ ಸಂಪತ್ತು, ಉಪಭೋಗದ ಉದ್ದೇಶಗಳಿಂದ ಜನಸಮುದಾಯ ಪ್ರೇರಿತವಾಗಿ ಉತ್ಪಾದನೆ ಹೆಚ್ಚಿಸುವ ಮೂಲಕ ಆ ಸಮುದಾಯ ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುತ್ತದೆ. ಇಡೀ ಸಮುದಾಯವೊಂದು ಸ್ವಹಿತದಿಂದ ಪ್ರೇರಿತವಾಗುವುದರಿಂದ, ಯಾರಾದರೂ ತೀರಾ ಸಂಕೀರ್ಣವಾದ ಮನೋಭಾವನೆಯನ್ನು ಬೆಳೆಸಿಕೊಂಡು ಶೋಷಣೆ ಮಾಡಲಾರಂಭಿಸಿದರೆ ಆಗ ‘ಅದೃಷ್ಯ ಹಸ್ತ’ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿಯಲಾಗಿದೆ. ಅಂದರೆ ಸ್ವಂತ ಹಿತ ಎನ್ನುವುದು ಇಡೀ ಸಮುದಾಯದ, ಸಮಾಜದ ಹಿತಕ್ಕೆ ಪೂರಕವಾಗಿರುವುದರಿಂದ ಮತ್ತು ಮನುಷ್ಯನೊಬ್ಬ ಸಮಾಜ ಜೀವಿಯಾಗಿರುವುದರಿಂದ ಅವನು ಕೇವಲ ‘ಸ್ವಂತ’ ಹಿತಾಸಕ್ತಿಯನ್ನು ಮಾತ್ರ ಗಮನಿಸುವುದಿಲ್ಲ ಎನ್ನುವ ಗೃಹೀತ ಆಡಂಸ್ಮಿತ್‌ನ ಅರ್ಥಶಾಸ್ತ್ರ ದಲ್ಲಿದೆ. ಆಡಂಸ್ಮಿತ್‌ನ ಅರ್ಥಶಾಸ್ತ್ರ ಮನುಷ್ಯನಿಗಿಂತಲೂ ಸಂಪತ್ತು  ಅದರ ಉತ್ಪಾದನೆ, ವಿತರಣೆ, ಇತ್ಯಾದಿಗಳ  ಬಗ್ಗೆ ನೀಡಿರುವಷ್ಟು ಗಮನ ಮಾನವ ಸುಖ ಮತ್ತು ಹಿತದ ಬಗ್ಗೆ ನೀಡಿಲ್ಲ ಎನ್ನುವ ಟೀಕೆಯಿದೆ. ಇಂತಹ ದೋಷಗಳನ್ನು ಮೀರುವ ಉದ್ದೇಶದಿಂದ ಇತರ ಪರ್ಯಾಯ ವ್ಯಾಖ್ಯಾನಗಳು ಹುಟ್ಟಿಕೊಂಡವು.

ಆಲ್‌ಫ್ರೆಡ್ ಮಾರ್ಷಲ್ ಅವರು ಅರ್ಥಶಾಸ್ತ್ರದ ಬಗೆಗೆ ನೀಡಿರುವ ವ್ಯಾಖ್ಯಾನದ ಪ್ರಕಾರ, “ಅರ್ಥಶಾಸ್ತ್ರವೆಂದರೆ, ಸಾಮಾನ್ಯ ಬದುಕಿನಲ್ಲಿ ಮನುಷ್ಯನ ವ್ಯವಹಾರಗಳ ಬಗೆಗಿನ ಅಧ್ಯಯನವಾಗಿದೆ”. ಮಾರ್ಷಲ್ ಅವರು ಮನುಷ್ಯನನ್ನು ಕೇಂದ್ರವಾಗಿರಿಸಿ ಅವನ ಸಾಮಾನ್ಯ ಬದುಕಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ಸಂಬಂಧಿ ಅಧ್ಯಯನವನ್ನು ಅರ್ಥಶಾಸ್ತ್ರವೆಂದು ವಿವರಿಸುತ್ತಾರೆ. ಇದು ಹಿಂದಿನ ವ್ಯಾಖ್ಯಾನಗಳಿಗಿಂತ ಉತ್ತಮ ವೆನಿಸಿದರೂ, ತೀರಾ ಸರಳೀಕೃತ ರೀತಿಯಲ್ಲಿ ಅರ್ಥಶಾಸ್ತ್ರವನ್ನು ವಿವರಿಸುತ್ತದೆ. ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತ ಬಂದ ಹಾಗೆ ಚಟುವಟಿಕೆಗಳಲ್ಲಿಯೂ ಬದಲಾವಣೆಗಳಾಗುತ್ತದೆ. ಈ ಕಾರಣದಿಂದಾಗಿಯೇ ಸಾಮಾಜಿಕ ವ್ಯವಸ್ಥೆಯಲ್ಲಿಯೂ ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧಗಳೂ ಬದಲಾಗುತ್ತ ಹೋಗುತ್ತದೆ. ಆದರೆ ಇದೆಲ್ಲದರ ಮಧ್ಯೆಯೂ ನಾವು ಗಮನಿಸಬೇಕಾದ ವಿಷಯವೆಂದರೆ, ವಸ್ತು/ಸರಕು/ಯಾ ಸಂಪತ್ತಿನ ಸೃಷ್ಟಿಯ ಹಿಂದೆ ಒಂದು ಉದ್ದೇಶವಿದೆ. ಮನುಷ್ಯನ ಮನಸ್ಸಿಗೆ ಸುಖ ಸಂತೋಷ ನೀಡುವುದು, ಮನುಷ್ಯನ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಮೂಲಕ ಅವನನ್ನು ತೃಪ್ತನನ್ನಾಗಿಸುವುದು ಸಂಪತ್ತಿನ ಸೃಷ್ಟಿಯ ಉದ್ದೇಶವಾಗಿದೆ. ಇಲ್ಲವಾದರೆ ಅಂತಹ ಸಂಪತ್ತಿನಿಂದ ಯಾವ ಪ್ರಯೋಜನವೂ ಯಾವ ಉಪಯೋಗವೂ ಇಲ್ಲ. ಹಾಗಾಗಿ ಮನುಷ್ಯನ ಸಾಮಾನ್ಯ ಜೀವನಕ್ಕೆ ಸಂಬಂಧಿಸಿದಂತೆ ಈ ಸಂಪತ್ತು ಹೇಗೆ ಸಹಕಾರಿ ಮತ್ತು ಹೇಗೆ ಅವನ ಬಯಕೆಗಳನ್ನು ತೃಪ್ತಿಪಡಿಸುತ್ತದೆ ಎನ್ನುವ ಅಧ್ಯಯನ ಅರ್ಥಶಾಸ್ತ್ರದ ಕೇಂದ್ರ ಬಿಂದುವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮನುಷ್ಯನಿಗೆ ಸಂಬಂಧಿಸಿದಂತೆ ಸಂಪತ್ತಿನ ಸೃಷ್ಟಿ, ವಿತರಣೆ ಮತ್ತು ಉಪಯೋಗ ಅರ್ಥಶಾಸ್ತ್ರದ ಅಧ್ಯಯನ ಎಂದು ವಿವರಿಸಬಹುದು.

ತದನಂತರದ ದಿನಗಳಲ್ಲಿ ಲಿಯೋನಲ್ ರಾಬಿನ್ಸ್ ಈ ಹಿಂದಿನ ವ್ಯಾಖ್ಯಾನಗಳನ್ನು ಪರಿಷ್ಕರಿಸಿ, ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿರುವುದನ್ನು ಗಮನಿಸಬಹುದು. ಅವರ ಪ್ರಕಾರ, “ಪರ್ಯಾಯ ಬಳಕೆ ಸಾಧ್ಯವಿರುವ ಸೀಮಿತ ಸಂಪನ್ಮೂಲವನ್ನು, ಮನುಷ್ಯ ತನ್ನ ಬೇಕುಗಳನ್ನು ಪೂರೈಸಿಕೊಳ್ಳುವ, ಬಳಸಿಕೊಳ್ಳುವ ವರ್ತನೆಯ ಕುರಿತ ಅಧ್ಯಯನ”ವೇ ಅರ್ಥಶಾಸ್ತ್ರ. ಅಂದರೆ ಮನುಷ್ಯನಲ್ಲಿ ಸೀಮಿತವಾದ ಸಂಪನ್ಮೂಲವಿದ್ದು ಅದನ್ನು ಒಂದಕ್ಕಿಂತ ಹೆಚ್ಚು ಉದ್ದೇಶಗಳಿಗೆ ಬಳಸಬಹುದು; ಆದರೆ ಅವು ಎಲ್ಲ ಉದ್ದೇಶಗಳಿಗೆ ಬಳಸುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಈ ಕಾರಣದಿಂದ ಅವನು ಸಂಪತ್ತನ್ನು ಹೇಗೆ ಬಳಸಿಕೊಳ್ಳ ಬೇಕು; ಯಾವ ಪ್ರಮಾಣದಲ್ಲಿ ವಿವಿಧ ಉದ್ದೇಶಗಳ ಈಡೇರಿಕೆಗಾಗಿ ಅದನ್ನು ಹಂಚಿ ಹಾಕಬೇಕು ಎಂದು ನಿರ್ಧರಿಸಬೇಕಾಗುತ್ತದೆ. ಅಂತಿಮವಾಗಿ ಮನುಷ್ಯ ಸಂಪನ್ಮೂಲವನ್ನು ಹೇಗೆ ಯಾವ ಪ್ರಮಾಣದಲ್ಲಿ, ಏಕೆ ಹಂಚಿ ಹಾಕುತ್ತಾನೆ ಮತ್ತು ಅವನ ವರ್ತನೆಯನ್ನು ನಿರ್ಧರಿಸುವ ಹಾಗೂ ಪ್ರಭಾವಿಸುವ ವಿಷಯಗಳು ಯಾವುವು ಎನ್ನುವುದು ಅರ್ಥಶಾಸ್ತ್ರೀಯ ಅಧ್ಯಯನ ವಸ್ತು-ವಿಷಯವಾಗಿದೆ.

ಆಧುನಿಕ ಚಿಂತನೆವಿಚಾರ

ಪಾರಂಪರಿಕ ಸಮಾಜದಲ್ಲಿ ಮನುಷ್ಯನ ಚಟುವಟಿಕೆಗಳು ಬಹುತೇಕ ಪ್ರಕೃತಿ ನಿಯಂತ್ರಿತ ವಾಗಿದ್ದರಿಂದ ಉತ್ಪಾದನೆ ಮತ್ತು ಬಳಕೆಗೆ ಒಂದು ರೀತಿಯ ಸ್ವಾಭಾವಿಕ ಮಿತಿ ಇದ್ದಿತು. ಆದರೆ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಉತ್ಪಾದನಾ ವಿಧಾನದಲ್ಲಿ ಆದ ಬದಲಾವಣೆಗಳ ಪರಿಣಾಮದಿಂದ ಬೃಹತ್ ಪ್ರಮಾಣದಲ್ಲಿ ವಸ್ತು/ಸರಕುಗಳನ್ನು ಉತ್ಪಾದಿಸಲು ಸಾಧ್ಯವಾಯಿತು. ಇಂತಹ ಬದಲಾದ ಸನ್ನಿವೇಶದಲ್ಲಿ ಉತ್ಪಾದನೆ ಮತ್ತು ಬಳಕೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯವಾಯಿತು. ಇದರ ಪರಿಣಾಮವಾಗಿ ಮನುಷ್ಯ ಹೆಚ್ಚು ಹೆಚ್ಚು ಉತ್ಪಾದಿಸುವಂತೆ ಮತ್ತು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು ಉಪಭೋಗಿಸುವಂತೆ ಮಾಡುವುದು ಅನಿವಾರ್ಯವಾಯಿತು. ಸಹಜವಾಗಿ ಮನುಷ್ಯನ ಆಸೆ, ಆಕಾಂಕ್ಷೆಗಳು ಅಂಕೆ ಮೀರಿ ಬೆಳೆಯತೊಡಗಿದವು. ತನ್ನ ಸಾಮರ್ಥ್ಯ, ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿರಿಸಿಕೊಂಡ ಮನುಷ್ಯ ತನ್ನ ಬೇಕುಗಳಿಗಾಗಿ ದುಡಿಯಲಾರಂಭಿಸಿದ. ಇಂತಹ ಬೆಳವಣಿಗೆ ಇಡೀ ಸಮುದಾಯದ ದುಡಿಮೆಯ ವೇಗವನ್ನು ವರ್ಧಿಸಿತು. ಪರಿಣಾಮವಾಗಿ ಇಡೀ ಸಮಾಜದಲ್ಲಿ ಚಟುವಟಿಕೆ ವೇಗೋತ್ಕರ್ಷಗೊಂಡಿತು. ಇಂತಹ ಉತ್ಕರ್ಷ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿರುವುದು, ಮನುಷ್ಯನ ಅಪರಿಮಿತ ಆಸೆ, ಆಕಾಂಕ್ಷೆಗಳು. ಒಂದು ವೇಳೆ ಮನುಷ್ಯನ ಆಸೆ, ಅಭಿಲಾಷೆಗಳಿಗೆ ಮಿತಿ ಇದ್ದು ಅದನ್ನು ತೃಪ್ತಿಪಡಿಸುವುದು ಸಾಧ್ಯವಾಗಿದ್ದರೆ ಇವತ್ತು ನಾವು ಕಾಣುತ್ತಿರುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರಲಿಲ್ಲವೆನಿಸುತ್ತದೆ. ಇದರೊಂದಿಗೇನೇ ಪ್ರಕೃತಿ ದತ್ತವಾದ ಸಂಪನ್ಮೂಲಗಳು ಕೂಡಾ ನಿಯಮಿತವಾಗಿರುವುದರಿಂದ ಅವುಗಳನ್ನು ಬಹಳ ಜಾಗರೂಕತೆಯಿಂದ ಬಳಸಬೇಕಿದೆ. ಅರ್ಥಾತ್ ಒಂದೆಡೆ ಅಪರಿಮಿತ ಆಸೆಗಳಿವೆ ಅಭಿಲಾಷೆಯಿದೆ, ಇನ್ನೊಂದೆಡೆ ಅಂತಹ ಆಸೆ-ಅಭಿಲಾಷೆಗಳನ್ನು ಸಂತೃಪ್ತಿಪಡಿಸಲು ಬೇಕಾದ ಪ್ರಮಾಣದ ಸಂಪನ್ಮೂಲಗಳಿಲ್ಲ. ಈ ಕಾರಣದಿಂದ ಲಭ್ಯವಿರುವ ಸಂಪನ್ಮೂಲಗಳನ್ನು, ಅತ್ಯಂತ ಹೆಚ್ಚಿನ ಪ್ರಮಾಣದ ಬೇಡಿಕೆ ಈಡೇರುವ ಹಾಗೆ ಅಥವಾ ಹೆಚ್ಚು ತೃಪ್ತಿ ಸಿಗುವ ರೀತಿಯಲ್ಲಿ ಉಪಯೋಗಿಸಬೇಕಾದ ಅನಿವಾರ್ಯತೆಯಿಂದ. ಯಾವ ರೀತಿಯಲಿ ನಿಯಮಿತ ಸಂಪನ್ಮೂಲ ಮತ್ತು ಅಪರಿಮಿತ ಅಭಿಲಾಷೆ, ಆಸೆಗಳ ಮಧ್ಯೆ ಒಂದು ರೀತಿಯ ಸಮತೋಲನವನ್ನು ಸಾಧಿಸಲಾಗುತ್ತದೆ ಎನ್ನುವುದು ಅಧ್ಯಯನ ಯೋಗ್ಯವೂ, ಕುತೂಹಲಕರವೂ ಆದ ವಿಷಯವಾಗಿದೆ.

ಮನುಷ್ಯ ಯಾವ ಬೇಡಿಕೆಯನ್ನು ಈಡೇರಿಕೆಗಾಗಿ ಆಯ್ದುಕೊಳ್ಳುತ್ತಾನೆ. ಯಾವುದರ ಬದಲಿಗೆ ಅದನ್ನು ಆಯ್ದುಕೊಳ್ಳುತ್ತಾನೆ ಮತ್ತು ಪೂರಕವಾದ, ವಿರೋಧವಾಗಿರುವ ಆಸೆ, ಅಭಿಲಾಷೆಗಳ ಮತ್ತು ಆಯ್ಕೆ ಮಾಡುವಾಗ ಅವನ ಮನೋಸ್ಥಿತಿಯ ಮೇಲೆ ಯಾವುದು ಪ್ರಭಾವ ಬೀರುತ್ತದೆ ಎನ್ನುವುದರ ಕುರಿತ ಅಧ್ಯಯನವೇ ಅರ್ಥಶಾಸ್ತ್ರದ ತಾಯಿ ಬೇರು. ಇಂತಹ ಪರಿಸ್ಥಿತಿಗೆಯನ್ನು, ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ, ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ, ಒಂದು ಸಮಾಜಕ್ಕೆ ಸಂಬಂಧಿಸಿದಂತೆ ನಾವು ಅಧ್ಯಯನ ಮಾಡ ಬಹುದಾಗಿದೆ.

ಒಂದು ರೀತಿಯಲ್ಲಿ ಈ ರೀತಿಯ ಆಯ್ಕೆಯ ಸ್ವಾತಂತ್ರ್ಯವೆನ್ನುವುದು ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನೂ ಅವಲಂಬಿಸಿರುತ್ತದೆ. ಮುಕ್ತ ಅರ್ಥ ವ್ಯವಸ್ಥೆಯಲ್ಲಿ, ಯಾ ಮಾರುಕಟ್ಟೆ ನಿಯಂತ್ರಿತ ಬಂಡವಾಳಶಾಹೀ ವ್ಯವಸ್ಥೆಯಲ್ಲಿ ಇಂತಹ ಆಯ್ಕೆಯನ್ನು ‘ಉದ್ಯಮ ಶೀಲ’ ಚೈತನ್ಯ ನಿರ್ಧರಿಸುತ್ತದೆ. ಹಾಗಾಗಿ ಬೇಡಿಕೆಯ ಆಧಾರದ ಮೇಲೆ ಉತ್ಪಾದನೆ ಮತ್ತು ಪೂರೈಕೆ ನಿರ್ಧರಿತವಾಗುತ್ತದೆ. ಇದರಲ್ಲಿ ಮೂರನೆಯ ಶಕ್ತಿ ಮಧ್ಯ ಪ್ರವೇಶಿಸುವ ಅವಕಾಶಗಳಿಲ್ಲ. ಆದರೆ ನಿಯಂತ್ರಿತ ಅರ್ಥ ವ್ಯವಸ್ಥೆಯಲ್ಲಿ ಅಥವಾ ಸಮಾಜವಾದೀ ವ್ಯವಸ್ಥೆಯಲ್ಲಿ ಸ್ಥಿತಿ ಭಿನ್ನವಾಗಿರುತ್ತದೆ. ಉತ್ಪಾದನೆಯನ್ನು ಬೇಡಿಕೆಯ ಆಧಾರಕ್ಕಿಂತ ಸಾಮಾಜಿಕ ಅವಶ್ಯಕತೆಯನ್ನು ಆಧರಿಸಿ ರಾಜಾಡಳಿತ ನಿರ್ಧರಿಸುತ್ತದೆ. ಇಂತಹ ವ್ಯವಸ್ಥೆಯಲ್ಲಿ ಉತ್ಪಾದನಾ ಪರಿಕರಗಳು ಒಂದು ಸಮುದಾಯದ ಸ್ವತ್ತಾಗಿರುತ್ತದೆ. ಹಾಗಾಗಿ ಖಾಸಗೀ ವ್ಯಕ್ತಿಗಳು ಸಂಪನ್ಮೂಲದ ಸ್ವಾಮ್ಯತೆ ಹೊಂದಿರುವುದು ಸಮಾಜವಾದೀ ವ್ಯವಸ್ಥೆ ಯಲ್ಲಿ ಸಾಧ್ಯವಿಲ್ಲ. ಈ ಕಾರಣದಿಂದ ಉತ್ಪಾದನಾ ಕಾರ್ಯ ನಿಯಂತ್ರಿತವಾಗಿರುತ್ತದೆ. ಎಲ್ಲರ ಯಾ ಬಹುಪಾಲು ಜನರ ಅವಶ್ಯಕತೆಗಳು ಪೂರೈಕೆಯಾದ ನಂತರ ಮಿಕ್ಕುಳಿದ ಐಷಾರಾಮಿ ವಸ್ತುಗಳ ಉತ್ಪಾದನೆಯ ವಿಷಯದ ಬಗೆಗೆ ಗಮನಹರಿಸಲು ಸಾಧ್ಯವಾಗುತ್ತದೆ.

ಬೇಡಿಕೆಗಳು ಮತ್ತು ಅವುಗಳ ಸಂತೃಪ್ತಿ

“ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎನ್ನುವ ಮಾತಿನಂತೆ, ಎಲ್ಲರೂ ದುಡಿಯುವುದು ಬದುಕಿನ ಮೂಲಭೂತ ಅವಶ್ಯಕತೆಗಳಾದ ಅನ್ನ, ಬಟ್ಟೆ, ವಸತಿಗಳಿಗಾಗಿ, ಹಾಗಂತ ಈ ಮೂಲಭೂತ ಅವಶ್ಯಕತೆಗಳು ನೀಗಿದ ಮೇಲೆ ಮನುಷ್ಯ ತೃಪ್ತನಾಗಿ ಅನವರತ ಸುಖಿಯಾಗಿಯೇ ಉಳಿಯುತ್ತಾನೆ ಎಂಬುದು ಸುಳ್ಳು. ಈ ಅವಶ್ಯಕತೆಗಳು ನೀಗಿದ ಮೇಲೆ ಮತ್ತೊಂದು ರೀತಿಯ ಆಸೆಗಳು ಚಿಗುರೊಡೆಯುತ್ತವೆ, ಅವುಗಳು ಪೂರೈಕೆಯಾದ ಮೇಲೆ ಇನ್ನೊಂದು ಆನಂತರ ಮತ್ತೊಂದು ಒಟ್ಟಿನಲ್ಲಿ ಆಸೆ, ಬೇಡಿಕೆಗಳು ನಿರಂತರ ಹುಟ್ಟುತ್ತಲೇ ಹೋಗುತ್ತವೆ. ಇಂತಹ ಆಸೆಗಳಿಂದಾಗಿ ಅಥವಾ ಬೇಡಿಕೆಗಳಿಂದಾಗಿಯೇ ಮನುಷ್ಯ ಸದಾ ಕ್ರಿಯಾಶೀಲನಾಗಿರುತ್ತಾನೆ. ಮನುಷ್ಯನಲ್ಲಿ ಸಂಪತ್ತು ಸಂಚಯಿಸುತ್ತಾ ಹೋದಷ್ಟೂ ಅವನ ಬೇಡಿಕೆಗಳು ಹೆಚ್ಚುತ್ತಾ ಹೋಗುತ್ತವೆ. ಬೇಡಿಕೆಗಳ ಈಡೇರಿಕಾಗಿ ಮನುಷ್ಯನೊಳಗೆ ಉಂಟಾಗುವ ತುಡಿತವೇ ಅವನ ಚೈತನ್ಯದ ಆಧಾರವೆಂದು ತಿಳಿಯಲಾಗಿದೆ. ಹಾಗಾಗಿ ಮನುಷ್ಯನನ್ನು ಕ್ರಿಯಾಶೀಲನಾಗಿಸಲು, ಸಾಧಕನಾಗುವಂತೆ ಮಾಡಬೇಕಾದರೆ ಅವನ ಮನಸ್ಸಿನಲ್ಲಿ ಹೊಸ ಆಸೆಗಳನ್ನು ಬಿತ್ತಬೇಕು. ಅವು ಒಂದು ಸರಿ ಚಿಗುರೊಡೆದರೆ ಸಾಕು ಮತ್ತೆ ಹೆಮ್ಮರವಾಗಿ ಬೆಳೆಯುತ್ತವೆ. ಅವುಗಳ ಈಡೇರಿಕಾಗಿ ವ್ಯಕ್ತಿಯೊಬ್ಬ ಕ್ರಿಯಾಶೀಲನಾಗಿಯೇ ಆಗುತ್ತಾನೆ. ಕ್ರಿಯಾಶೀಲ ಸ್ಥಿತಿಯಲ್ಲಿ, ಸಂಪನ್ಮೂಲ ಕ್ರೂಡೀಕರಿಸುವುದು, ಉತ್ಪಾದನೆಯ ಖರೀದಿಗೆ ವ್ಯವಸ್ಥೆ ಮಾಡುವುದೇ ಮುಂತಾದ ಚಟುವಟಿಕೆಗಳಲ್ಲಿ ಅವನು ತೊಡಗಿಕೊಳ್ಳುತ್ತಾನೆ. ಹೀಗೆ ಒಂದು ಸಮಾಜದಲ್ಲಿರುವ ಬಹುಪಾಲು ಜನ ಕ್ರಿಯಾಶೀಲರಾದಾಗ ಆ ಸಮಾಜವೇ ಮುಂದುವರಿಯುತ್ತದೆ, ಅಭಿವೃದ್ದಿ ಹೊಂದುತ್ತದೆ ಎಂದು ತಿಳಿಯಲಾಗಿದೆ.

ಹಿಂದಿನ ಕಾಲದಲ್ಲಿ ಅಲ್ಪ ತೃಪ್ತನಾಗಿದ್ದ ಮನುಷ್ಯ ಸೀಮಿತ ಸಂಪನ್ಮೂಲಗಳನ್ನು ಬಳಸಿ ಮಧ್ಯಮ ಶ್ರೇಣಿಯ ಜೀವನವನ್ನು ನಡೆಸಿಕೊಂಡು ಬಂದಿದ್ದ, ಹಲವಾರು ತೊಂದರೆ ತೊಡಕುಗಳನ್ನು ನಿವಾರಿಸಿ ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳುವ ಆಸೆಯಿದ್ದರೂ ಅದು ಕೈಗೂಡುತ್ತಿರಲಿಲ್ಲ. ಹಾಗಾಗಿ ಜೀವನಮಟ್ಟದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಗಳು ತಲೆಮಾರಿನಿಂದ ತಲೆಮಾರಿಗೆ ಆಗುತ್ತಿರಲಿಲ್ಲ. ಆದರೆ ಆಧುನೀಕರಣದ ಪ್ರಕ್ರಿಯೆ ಇಂತಹ ವರ್ತುಲಾವರ್ತಿತ ಜೀವನ ಕ್ರಮದಿಂದ ಬಿಡುಗಡೆ ತಂದಿತು. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿತು. ಈಗ ಮನುಷ್ಯ ಇಡೀ ಜಗತ್ತನ್ನೇ ಒಂದು ಗ್ರಾಮದ ಮಟ್ಟಕ್ಕೆ ತಂದಿದ್ದಾನೆ. ಆಧುನಿಕ ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರಗಳೊಂದಿಗೆ ಮನುಷ್ಯನ ಅಭಿಲಾಷೆಗಳು ಕೂಡಾ ಬದಲಾಗುತ್ತಲಿವೆ. ಬದಲಾದ ಅಭಿಲಾಷೆಗಳು ಹೊಸತನಕ್ಕೆ ನಾಂದಿ ಹಾಡಿದಂತೆಯೇ, ಹೊಸತನಗಳು ಕೂಡಾ ಅಭಿಲಾಷೆ, ಆಸೆಗಳಲ್ಲಿ ಬದಲಾವಣೆಯನ್ನು ತರುತ್ತಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಉತ್ಪಾದನೆ ಮತ್ತು ವಿತರಣೆಗೆ ಪ್ರಯೋಜನಕಾರಿಯೂ, ಪ್ರಚೋದಕವೂ ಆದ ಮನುಷ್ಯನ ಬಯಕೆಗಳಲ್ಲಿ ವಿವಿಧತೆ ಇದೆ, ವ್ಯತ್ಯಾಸಗಳಿವೆ. ಇಂತಹ ವಿವಿಧತೆ ಮತ್ತು ವ್ಯತ್ಯಾಸದ ಸಂಬಂಧ ಉತ್ಪಾದನೆ ಮತ್ತು ವಿತರಣೆಯ ಮೇಲೆ ಪ್ರಭಾವ ಬೀರುವ ಕಾರಣ, ಅವುಗಳ, ಗುಣ ಲಕ್ಷಣಗಳ ಬಗೆಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ.

ಮನುಷ್ಯನ ಬಯಕೆಗಳು ಗುಣ ಲಕ್ಷಣಗಳನ್ನು ಈ ಕೆಳಗಿನಂತಿವೆ.

೧. ಬಯಕೆಗಳಿಗೆ ಮಿತಿ ಎಂಬುವುದಿಲ್ಲ.

೨. ನಿರ್ದಿಷ್ಟ ಬಯಕೆಗಳನ್ನು ಸಂತೃಪ್ತಿಗೊಳಿಸಬಹುದು.

೩. ಬಯಕೆಗಳು ಒಂದಕ್ಕೊಂದು ಪೂರಕವಾಗಿರುತ್ತವೆ.

೪. ಬಯಕೆಗಳು ಪ್ರತಿಸ್ಪರ್ಧಿಯಾಗಿಯೂ ಇರುತ್ತವೆ.

೫. ಬಯಕೆಗಳ ಈಡೇರಿಕೆಗೆ ಪರ್ಯಾಯ ವಸ್ತುಗಳನ್ನು ಬಳಸಬಹುದಾದ್ದರಿಂದ ಅವುಗಳನ್ನು ಪರ್ಯಾಯ ಬಯಕೆಗಳೆಂದೂ ಕರೆಯಬಹುದು.

೬. ಬಯಕೆಗಳು ಪುನರಾವರ್ತನೆಯಾಗುತ್ತವೆ.

ಮನುಷ್ಯನ ಬಯಕೆಗಳನ್ನು ಸಂಪೂರ್ಣವಾಗಿ ಸಂತೃಪ್ತಿಪಡಿಸಲು ಸಾಧ್ಯವಿಲ್ಲ. ಒಂದು ಸರ್ತಿಗೆ ಅವುಗಳನ್ನು ಪೂರ್ಣವಾಗಿ ತೃಪ್ತಿಪಡಿಸಿದರೆ, ಹೊಸ ಬಯಕೆಗಳು ಚಿಗುರೊಡೆ ಯುತ್ತವೆ. ಅವುಗಳನ್ನು ತೃಪ್ತಿಪಡಿಸಿದರೆ ಮತ್ತೊಮ್ಮೆ ಹೊಸ ಬಯಕೆಗಳು ತಲೆಯತ್ತುತ್ತವೆ. ಹೀಗೆ ಮನುಷ್ಯನಲ್ಲಿ ಬಯಕೆಗಳು ನಿರಂತರವಾಗಿ ಹುಟ್ಟುತ್ತಲೇ ಇರುತ್ತವೆ. ಈ ಕಾರಣ ದಿಂದಾಗಿ ಮನುಷ್ಯನನ್ನು ಸದಾ ಹೊಸ ಆಸೆಗಳ ಈಡೇರಿಕೆಗಾಗಿ ಹಾತೊರೆಯುವಂತೆ ಮಾಡಲು ಸಾಧ್ಯವಿರುವುದರಿಂದ ಹೊಸ ಅನ್ವೇಷಣೆಗಳು ಸಾಧ್ಯವಾಯಿತು ಮತ್ತು ಇಂದಿನ ವಿeನ ಮತ್ತು ತಂತ್ರಜ್ಞಾನದ ಉತ್ಕರ್ಷ ನಮ್ಮ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರುವುದು ಸಾಧ್ಯವಾಗಿದೆ.

ಮನುಷ್ಯನ ಆಸೆಗಳು ಅಗತ್ಯಗಳಾಗಿ, ತದನಂತರ ಅನಿವಾರ್ಯತೆಗಳಾಗಿ ಮಾರ್ಪಟ್ಟರೆ ಆಗ ಅಂತಹ ಬಯಕೆಗಳ ಈಡೇರಿಕೆಗೆ ಮನುಷ್ಯ ಅಗತ್ಯ ಸಂಪನ್ಮೂಲ ಕ್ರೂಢೀಕರಿಸುವ ಮೂಲಕ ಕಾರ್ಯತತ್ಪರನಾಗುತ್ತಾನೆ. ಮನುಷ್ಯನ ಇಂತಹ ಪ್ರವೃತ್ತಿಯೇ ಆಧುನಿಕ ಉತ್ಪಾದನಾ ವ್ಯವಸ್ಥೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ.

ವಸ್ತು ಮತ್ತು ಸೇವೆ

ಮನುಷ್ಯನ ಆಸೆಗಳನ್ನು ಯಾ ಬಯಕೆಗಳನ್ನು ಈಡೇರಿಸಲು ಬಳಸಲಾಗುವ ವಸ್ತು ಯಾ ಸೇವೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು. ಅವುಗಳೆಂದರೆ ಅಗತ್ಯ ವಸ್ತುಗಳು, ಅನುಕೂಲಕರ ವಸ್ತುಗಳು ಮತ್ತು ಆನಂದೋತ್ಪಾದಕ ಮತ್ತು ವೈಭೋಗಯುತ ವಸ್ತುಗಳು, ಅಗತ್ಯ ವಸ್ತುಗಳೆಂದರೆ, ಅನ್ನ, ವಸತಿ ಮತ್ತು ಬಟ್ಟೆ. ಅನ್ನ, ಬಟ್ಟೆ, ವಸತಿಗಳಿಲ್ಲದೆ ಮನುಷ್ಯನ ಜೀವನ ಸಾಧ್ಯವಿಲ್ಲ. ಆದ್ದರಿಂದ ಈ ಮೂರನ್ನು ಅಗತ್ಯ ವಸ್ತುಗಳೆಂದು ಪರಿಗಣಿಸಲಾಗಿದೆ. ಈ ಮೂರು ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದು ಪ್ರತಿಯೊಬ್ಬನ ಮೊದಲ ಆದ್ಯತೆಯಾಗಿದೆ.

ಮೂಲಭೂತ ಅವಶ್ಯಕತೆಗಳು ಈಡೇರಿದರೆ ನಂತರ ಮನುಷ್ಯ ಅನುಕೂಲದ ಬಗ್ಗೆ ಯೋಚಿಸುತ್ತಾನೆ. ಅನುಕೂಲತೆಯನ್ನೊದಗಿಸುವ ವಸ್ತುಗಳು ಮೂಲಭೂತವಾಗಿ ಅನಿವಾರ್ಯವಲ್ಲದಿದ್ದರೂ ಇವುಗಳ ಬಳಕೆ ನಮ್ಮ ಕಾರ್ಯ ವೈಖರಿಯನ್ನು ಉತ್ತಮಗೊಳಿಸುತ್ತದೆ. ಈ ಕಾರಣದಿಂದ ಕಡಿಮೆ ಶ್ರಮದಿಂದ ಹೆಚ್ಚು ಪ್ರತಿಫಲವನ್ನು ಪಡೆಯಬಹುದಾಗಿದೆ. ಯಾರು ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡಿರುತ್ತಾರೆ ಮತ್ತು ಯಾರಲ್ಲಿ ಸಂಪನ್ಮೂಲವಿರುತ್ತದೆಯೋ ಅಂತಹವರು ಅನುಕೂಲತೆಯನ್ನೊದಗಿಸುವ  ವಸ್ತು ಗಳನ್ನು ಬಳಸುತ್ತಾರೆ. ಇನ್ನು ಮೂರನೆಯ ರೀತಿಯ ವಸ್ತು ಯಾ ಸೇವೆ, ಆನಂದೋತ್ಪಾದನೆ ಯಾ ವೈಭೋಗ ರೀತಿಯವು. ಇವು ನಮ್ಮ ಅಗತ್ಯವನ್ನಾಗಲೀ, ಕೌಶಲ್ಯವನ್ನಾಗಲೀ ವೃದ್ದಿಸುವುದಿಲ್ಲ, ಬದಲಿಗೆ ಆನಂದ ಅಥವಾ ಸುಖವನ್ನು ನೀಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಸಂಚಯಿತ ಸಂಪನ್ಮೂಲ ಇದ್ದಾಗ ಮಾತ್ರ ನಾವಿದನ್ನು ಬಳಸಬಹುದಾಗಿದೆ. ಅರ್ಥಾತ್ ಯಾವ ಜನ ವರ್ಗವು ಅಗತ್ಯ ಮತ್ತು ಅನುಕೂಲಕರ ವಸ್ತುಗಳನ್ನು ಯಾ ಸೇವೆಯನ್ನು ಉಪಯೋಗಿಸಿ ತೃಪ್ತವಾಗುತ್ತದೆಯೋ, ಆನಂತರ ಅವರಲ್ಲಿ ವೈಭೋಗದ ಅಥವಾ ಆನಂದೋತ್ಪಾದಕ ವಸ್ತು ಯಾ ಸೇವೆಯ ಬಗೆಗಿನ ಆಸೆಗಳು ಹುಟ್ಟಿಕೊಳ್ಳುತ್ತವೆ.

ಈ ಮೊದಲು ವಿವರಿಸಿದ ರೀತಿಯಲ್ಲಿ ಮಾಡಲಾದ ವಸ್ತು ಅಥವಾ ಸೇವೆಗಳ ವರ್ಗೀಕರಣ ಸ್ಪಷ್ಟವಾಗಿ, ನಿಖರವಾಗಿ, ಕಾಲ ದೇಶಗಳನ್ನು ಮೀರಿ ಅನ್ವಯಿಸಲು ಆಗುವುದಿಲ್ಲ. ಇದಕ್ಕೆ ಕಾರಣ ಒಂದು ವರ್ಗದ ಜನರ ಅವಶ್ಯಕತೆಗಳು ಇನ್ನೊಂದು ವರ್ಗದ ವೈಭೋಗವಾಗುವ ಸಾಧ್ಯತೆಯೂ ಇದೆ. ಉದಾಹರಣೆಗೆ ಒಂದೈವತ್ತು ವರ್ಷದ ಹಿಂದೆ ದೂರವಾಣಿ ಅಥವಾ ದ್ವಿಚಕ್ರ ವಾಹನ ವೈಭೋಗ ಅಥವಾ ಶ್ರೀಮಂತಿಕೆಯ ಸಂಕೇತವಾಗಿತ್ತು. ಆದರೆ ಇಂದು ಹಾಗಿಲ್ಲ, ಇವುಗಳು ಇಂದಿನ ಜೀವನ ಕ್ರಮದಲ್ಲಿ ಬದುಕಿನ ಮೂಲಭೂತ ಅವಶ್ಯಕತೆಗಳೆಂದೇ  ತಿಳಿಯಲಾಗಿದೆ. ದೊಡ್ಡ ಕಾರು, ಬಂಗಲೆಗಳು ಭಾರತೀಯರಿಗೆ ವೈಭೋಗದ ವಸ್ತುಗಳಾದರೆ ಅಮೇರಿಕದ ಜನರಿಗೆ ಅದು ಅವಶ್ಯಕತೆಯಾಗಿದೆ. ಹೀಗಾಗಿ ಅವಶ್ಯಕತೆ, ಅನುಕೂಲತೆ ಮತ್ತು ಆನಂದೋತ್ಪಾದಕತೆಯನ್ನು ನಿಖರವಾಗಿ, ಕಾಲ, ದೇಶಾತೀತವಾಗಿ ವ್ಯಾಖ್ಯಾನಿಸಲು ಆಗುವುದಿಲ್ಲ. ಇವುಗಳ ವ್ಯಾಖ್ಯಾನ ಒಂದು ನಿರ್ದಿಷ್ಟ ಕಾಲ ಪರಿಮಿತಿಯೊಳಗೆ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಾಡಬಹುದಾಗಿದೆ. ಇಂತಹ ವ್ಯಾಖ್ಯಾನದ ಅವಶ್ಯಕತೆ ಆರ್ಥಿಕ ಅಭಿವೃದ್ದಿಯಲ್ಲಿ ಯಾಕೆ ಮಹತ್ವದ್ದಾಗಿದೆ ಎಂದರೆ, ಅವಶ್ಯಕ ವಸ್ತು ಗಳನ್ನು ಜನ ಖರೀದಿಸುತ್ತಾರೆ ಮತ್ತು ಖರೀದಿಸಲೇ ಬೇಕು ಯಾಕೆಂದರೆ ಜೀವನ ಇದರ ಹೊರತು ಸಾಧ್ಯವಿಲ್ಲ. ಆದರೆ ಅನುಕೂಲ ಮತ್ತು ಆನಂದೋತ್ಪಾದಕ ವಸ್ತುವಿನ ಉತ್ಪಾದನೆ ಯಾ ಖರೀದಿ ಲಭ್ಯ ಸಂಪನ್ಮೂಲವಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ಆಧರಿಸಿ ಅಂತಹ ವಸ್ತುಗಳ ಉತ್ಪಾದನೆ ಮತ್ತು ವಿತರಣೆ ಅವಲಂಬಿತವಾಗಿದೆ. ವಸ್ತುಗಳಿಗೆ ಬೇಡಿಕೆಯಿದ್ದಾಗ ಮಾತ್ರ ಅವುಗಳನ್ನು ಉತ್ಪಾದಿಸಲಾಗುತ್ತದೆ ಹೊರತು ಇಲ್ಲವಾದರೆ ಅವುಗಳನ್ನು ಉತ್ಪಾದಿಸಲಾಗುವುದಿಲ್ಲ.

ಆಸೆ ಯಾ ಬಯಕೆ ಮತ್ತು ಬೇಡಿಕೆಯ ಬಗ್ಗೆ ಇಲ್ಲಿ ವಿವರಿಸುವುದು ಅವಶ್ಯಕ ಎನಿಸಿದೆ.  ಬಯಕೆ ಎಂದರೆ ಒಂದು ನಿರ್ದಿಷ್ಟ ವಸ್ತು ಅಥವಾ ಸೇವೆಯನ್ನು ಉಪಯೋಗಿಸುವ ಮೂಲಕ ತೃಪ್ತಿಯನ್ನು ಪಡೆಯುವ ಕಾತರಿಕೆ. ಆದರೆ ವ್ಯಕ್ತಿಯೊಬ್ಬನಲ್ಲಿ ಇಂತಹ ಕಾತರಿಕೆ ಮಾತ್ರವಿದ್ದರೆ ಸಾಲದು. ನಿಜವಾಗಿಯೂ ತೃಪ್ತಿ ಹೊಂದಬೇಕಾದರೆ ಅಥವಾ ಆಸೆಯನ್ನು ಈಡೇರಿಸಿ ಕೊಳ್ಳಬೇಕಿದ್ದರೆ ಆಸೆಯನ್ನು ಈಡೇರಿಸಲು ಅವಶ್ಯಕವಿರುವ ವಸ್ತುವನ್ನು ಯಾ ಸೇವೆಯನ್ನು ಖರೀದಿಸುವ ಆರ್ಥಿಕ ಚೈತನ್ಯ ಅವನಲ್ಲಿ ಇರಬೇಕು. ಹೀಗೆ ಆರ್ಥಿಕ ಚೈತನ್ಯವಿದ್ದಾಗ ಮಾತ್ರ ಬಯಕೆ ಬೇಡಿಕೆಯಾಗುತ್ತದೆ. ಬೇಡಿಕೆ ವ್ಯಕ್ತವಾದಾಗ ಉತ್ಪಾದಿತ ವಸ್ತುಗಳು ವಿತರಕರ ಮೂಲಕ ಬಳಕೆದಾರನಿಗೆ ತಲುಪುತ್ತವೆ. ತಲುಪಿದ ನಂತರ ಅವುಗಳ ಉಪಭೋಗದಿಂದ ಬಯಕೆಯ ಈಡೇರಿಕೆಯಾಗುತ್ತದೆ. ಹೀಗೆ ಸಂಪನ್ಮೂಲ ಬಳಕೆದಾರನಿಂದ  ವಿತರಕರ ಮೂಲಕ ಉತ್ಪಾದಕನ ಕೈ ಸೇರುತ್ತದೆ. ಉತ್ಪಾದಕ ಈ ಸಂಪನ್ಮೂಲದಿಂದ ಉತ್ಪಾದನೆಯ ಪರಿಕರಗಳಾದ ಭೂಮಿ, ಕಾರ್ಮಿಕ ಶಕ್ತಿ, ಬಂಡವಾಳ ಹಾಗೂ ಆಡಳಿತ ನಿರ್ವಹಣೆಗೆ ಈ ಸಂಪನ್ಮೂಲವನ್ನು ಬಳಸುತ್ತಾನೆ. ಹೀಗೆ ಬಳಸಿಯಾದ ಮೇಲೆ ಅವನು ತನ್ನ ಈ ನಿರ್ವಹಣಾ ಕಾರ್ಯಕ್ಕೆ ಈ ಸಂಪತ್ತಿನ ಒಂದು ಭಾಗವನ್ನು ಉಳಿಸಿಕೊಳ್ಳುತ್ತಾನೆ. ಹೀಗೆ ಉಳಿಸಿಕೊಳ್ಳುವ ಸಂಪನ್ಮೂಲವೇ ಸಂಚಯಿತವಾಗಿ ಬಂಡವಾಳವಾಗುತ್ತದೆ. ಉತ್ಪಾದನೆಯ ಪರಿಕರಗಳು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕೆ ತಮಗೆ ಬರುವ ಆದಾಯದ ಪಾಲನ್ನು ತಮಗೆ ಅವಶ್ಯಕವಿರುವ ಇತರ ಸಾಮಗ್ರಿಗಳ ಖರೀದಿಗೆ ಬಳಸುತ್ತಾರೆ. ಹೀಗೆ ಸಂಪತ್ತು ಹಣದ ರೂಪದಲ್ಲಿ ಒಂದು ಆರ್ಥಿಕ ವ್ಯವಸ್ಥೆಯಲ್ಲಿ ನಿರಂತರವಾಗಿ ಚಲನಶೀಲವಾಗಿರುತ್ತದೆ. ಮನುಷ್ಯನಲ್ಲಿರುವ ಬಯಕೆಗಳನ್ನು ಬೇಡಿಕೆಯನ್ನಾಗಿಸುವ ಅಂಶ, ಅನಂತರ ಈ ಬೇಡಿಕೆ ಯನ್ನು ಅಂದಾಜಿಸಿ, ಅವುಗಳನ್ನು ಈಡೇರಿಸಲು ಅವಶ್ಯಕವಿರುವ ಪ್ರಮಾಣದಲ್ಲಿ ಉತ್ಪಾದನೆ ನಡೆಸುವುದು ಹಾಗೂ ಅವುಗಳನ್ನು ಸಮರ್ಪಕವಾಗಿ ವಿತರಿಸುವುದು, ವಾಣಿಜ್ಯ ಜಗತ್ತಿನ ಮುಖ್ಯ ಕಾರ್ಯಭಾರವಾಗಿದೆ. ಆದರೆ ಇದಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕು, ಇದನ್ನು ಯಾವ ಪ್ರಮಾಣದಲ್ಲಿ ಕೈಕೊಳ್ಳಬೇಕು ಎನ್ನುವ ಪ್ರಮುಖ ಸಂಗತಿಗಳು ಅರ್ಥಶಾಸ್ತ್ರದ ವ್ಯಾಪ್ತಿಯಲ್ಲಿ ಚರ್ಚಿತವಾಗಿವೆ. ಉತ್ಪಾದನಾ ಚಟುವಟಿಕೆ ಪ್ರಾರಂಭ ವಾಗುವುದೇ ಬೇಡಿಕೆಯನ್ನು ಅವಲಂಬಿಸಿ. ಕೆಲವೊಂದು ಬಾರಿ ಬಯಕೆಯನ್ನು ಬೇಡಿಕೆಯಾಗಿ ಪರಿವರ್ತಿಸಬಹುದಾಗಿದೆ. ಅದು ಎಲ್ಲಿ ಸಾಧ್ಯವೆಂದರೆ, ಜನರಲ್ಲಿ ಸಂಪನ್ಮೂಲವಿದೆ, ಆದರೆ ಅವುಗಳ ಸಹಾಯದಿಂದ ಅನುಕೂಲಕರ ವಸ್ತುಗಳನ್ನು ಬಳಸುವ ಮೂಲಕ ಕಾರ್ಯಕ್ಷಮತೆ ಯನ್ನು ಹೆಚ್ಚಿಸುವ ಯಾ ಶ್ರಮದ ಉಳಿತಾಯ ಮಾಡುವ ಬಗ್ಗೆ ನಿಖರವಾಗಿ ತಿಳಿಯದಿರು ವಂತಹ ಸಂದರ್ಭದಲ್ಲಿ. ಅಂತಹ ಸಂದರ್ಭಗಳಲ್ಲಿ ಜನರಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಿ ಅವರಲ್ಲಿರುವ ಆಸೆಗಳನ್ನು ಬಯಕೆಯಾಗಿಸಿ ತದನಂತರ ಬೇಡಿಕೆಯಾಗಿಯೂ ಪರಿವರ್ತಿಸಬಹುದಾಗಿದೆ.

ಬೇಡಿಕೆ ಮತ್ತು ಪೂರೈಕೆಗಳು ಉತ್ಪಾದನಾ ಚಟುವಟಿಕೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ ಎನ್ನುವುದನ್ನು ಈ ಮೇಲಿನ ವಿವರಣೆಗಳು ಮನದಟ್ಟು ಮಾಡಿವೆ. ಈಗ ಬೇಡಿಕೆ ಮತ್ತು ಪೂರೈಕೆಗಳ ಗುಣಲಕ್ಷಣಗಳನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ.

ಬೇಡಿಕೆ

ಈ ಮೊದಲೇ ಹೇಳಿದಂತೆ ಬೇಡಿಕೆ ಎನ್ನುವುದು ಕೇವಲ ಆಸೆಯಲ್ಲ. ಯಾವಾಗ ವ್ಯಕ್ತಿಯೊಬ್ಬನಲ್ಲಿ ಒಂದು ನಿರ್ದಿಷ್ಟ ವಸ್ತು ಅಥವಾ ಸೇವೆಯನ್ನು ಹೊಂದುವ ಯಾ ಖರೀದಿಸುವ ಆಸೆ ಹಾಗೂ ಅಂತಹ ವಸ್ತು ಯಾ ಸೇವೆಗೆ ವಿನಿಮಯವಾಗಿ ನೀಡುವ ಸಂಪನ್ಮೂಲ ಇದ್ದಾಗ ಮಾತ್ರ ಬೇಡಿಕೆ ಇದೆ ಎಂದು ತಿಳಿಯಲಾಗುತ್ತದೆ. ಉದಾಹರಣೆಗೆ ಜಾತ್ರೆಯಲ್ಲಿ ಮಾರಾಟಕ್ಕಿಟ್ಟ ಬಣ್ಣದ ಬೆಲೂನನ್ನು ಹುಡುಗನೊಬ್ಬ ನೋಡಿ ಆಸೆಪಟ್ಟರೆ, ಯಾ ಬಯಸಿದರೆ ಅದು ಬೇಡಿಕೆಯಾಗುವುದಿಲ್ಲ. ಆದರೆ ಹೀಗೆ ಆಸೆ ಪಡುವವನ ಜೇಬಿನಲ್ಲಿ ಬಣ್ಣದ ಬೆಲೂನು ಖರೀದಿಸಲು ಅಗತ್ಯವಿರುವಷ್ಟು ಕಾಸಿದ್ದರೆ ಅದು ಬೇಡಿಕೆಯಾಗುತ್ತದೆ. ಅಂತೆಯೇ, ವೈಭೋವೋಪೇತಕಾರೊಂದನ್ನು ಹೊಂದುವ ಆಸೆ ನಮ್ಮಲ್ಲಿರಬಹುದು. ಅದರರ್ಥ ಅಂತಹ ಕಾರುಗಳಿಗೆ ಬೇಡಿಕೆಯಿದೆ ಎಂದಲ್ಲ. ಇದು ಬರೀ ಬಯಕೆ ಅಥವಾ ಆಸೆ ಮಾತ್ರ. ಆದರೆ ಯಾವಾಗ ಆ ಕಾರನ್ನು ಖರೀದಿಸುವ ತಾಕತ್ತು ನಮ್ಮಲ್ಲಿರುತ್ತದೋ, ಆಗ ಆಸೆ ಯಾ ಬಯಕೆ ಬೇಡಿಕೆಯಾಗುತ್ತದೆ. ಆದ್ದರಿಂದ ಬೇಡಿಕೆ ಎನ್ನುವುದು ನಮ್ಮೊಳಗಿನ ಬಯಕೆ ಈಡೇರಿಸುವ ಕಾತರ ಮತ್ತು ಖರೀದಿಸುವ ಸಾಮರ್ಥ್ಯದ ಒಟ್ಟು ಮೊತ್ತ ಎಂದು ತಿಳಿಯಬಹುದು. ಬೇಡಿಕೆಯನ್ನು ನಾವು “ಒಂದು ನಿರ್ದಿಷ್ಟ ಮಟ್ಟದ ಬೆಲೆಯಲ್ಲಿ ನಿರ್ದಿಷ್ಟ ವಸ್ತು ಯಾ ಸರಕುಗಳನ್ನು ಖರೀದಿಸಬಹುದಾಗಿದೆ. ಬೇಡಿಕೆಯೆನ್ನುವುದು ಬೆಲೆಯನ್ನು ಅವಲಂಬಿಸಿದೆ. ವಸ್ತುವಿನ ವಿನಿಮಯ ದರದ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತದೆ ಮತ್ತು ನಮ್ಮಲ್ಲಿರುವ ಸಂಪನ್ಮೂಲವನ್ನು ಆಧರಿಸಿ ಬೇಡಿಕೆ ನಿರ್ಧರಿತವಾಗುತ್ತದೆ. ಉದಾಹರಣೆಗೆ ಮಾರುತಿ ಕಾರಿನ ಬೆಲೆ ರೂ. ೫೦೦೦ ಆದರೆ ಅದನ್ನು ಕೊಳ್ಳುವವರ ಸಂಖ್ಯೆ ೧೦೦೦೦ ಜನವೆಂದು ಭಾವಿಸೋಣ. ಒಂದು ವೇಳೆ ಬೆಲೆ ೧೦೦೦೦ಕ್ಕೆ ಏರಿಕೆಯಾದರೆ ಖರೀದಿದಾರರ ಸಂಖ್ಯೆಯಲ್ಲಿ ಇಳಿತವಾಗಿ ೭೦೦೦ಕ್ಕೆ ಬಂದು ನಿಲ್ಲುತ್ತದೆ. ಇನ್ನೂ ಹೆಚ್ಚಳವಾಗಿ ೫೦೦೦೦ ಆದರೆ ಆಗ ೧೦೦೦ ಜನ ಕಾರು ಖರೀದಿಸಲು ಮುಂದಾಗಬಹುದು. ಈ ವಿವರಣೆಗಳನ್ನು ನಾವು ಈ ಕೆಳಗಿನಂತೆ ವ್ಯಕ್ತಪಡಿಸಬಹುದು.

ಬೆಲೆ (ರೂ. ಗಳಲ್ಲಿ) ಬೇಡಿಕೆ (ಸಂಖ್ಯೆಯಲ್ಲಿ)
೫,೦೦೦ ೧೦,೦೦೦
೧೦,೦೦೦ ೭,೦೦೦
೫೦,೦೦೦ ೧,೦೦೦
೧,೦೦,೦೦೦ ೫೦೦

ಮೇಲಿನ ಕೋಷ್ಠಕದಲ್ಲಿ ಬೆಲೆ ಮತ್ತು ಬೇಡಿಕೆಯನ್ನು ನಮೂದಿಸಲಾಗಿದೆ. ಈ ಕೋಷ್ಠಕವನ್ನು ಗಮನಿಸಿದಾಗ ನಮಗೆ ಬೆಲೆ ಮತ್ತು ಬೇಡಿಕೆಯ ಪ್ರಮಾಣದ ನಡುವಿರುವ ಸಂಬಂಧ ಸ್ಪಷ್ಟವಾಗುತ್ತದೆ. ಬೆಲೆಯಲ್ಲಿ ಏರಿಕೆಯಾದಂತೆ ಅದನ್ನು ಖರೀದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಾ ಹೋಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಬೆಲೆಯಲ್ಲಿ ಇಳಿತವಾದಂತೆ ಖರೀದಿದಾರರ ಪ್ರಮಾಣವು ಜಾಸ್ತಿಯಾಗುತ್ತ ಹೋಗುತ್ತದೆ. ಬೇಡಿಕೆ ಮತ್ತು ಬೆಲೆಗಳ ನಡುವಿನ ಸಂಬಂಧವನ್ನು ಈ ಕೆಳಗಿನಂತೆ ಚಿತ್ರಿಸಬಹುದಾಗಿದೆ.

ವಸ್ತುವಿನ ಬೇಡಿಕೆಯ ಪ್ರಮಾಣ ಬೆಲೆ ಮಾತ್ರವಲ್ಲದೆ ಇನ್ನಿತರ ವಿಷಯಗಳಾದ ಸಾಮಾನ್ಯ ಆರ್ಥಿಕ ಸ್ಥಿತಿಗತಿ, ಆದಾಯದಲ್ಲಿ ಏರಿಳಿತ, ಸಾಮಗ್ರಿ ಯಾ ಸೇವೆ ಅಗತ್ಯದ್ದೆ, ಅನುಕೂಲದ್ದೇ ಯಾ ಆನಂದೋತ್ಪಾದಕ ವರ್ಗಕ್ಕೆ ಸೇರಿದೆಯೇ? ವಸ್ತುವಿನ ಗುಣಮಟ್ಟ ಲಭ್ಯವಿರುವ ಪರ್ಯಾಯ ಸಾಮಗ್ರಿಗಳ ಬೆಲೆಯ ಪ್ರಮಾಣ, ಇತ್ಯಾದಿ ವಿಷಯಗಳನ್ನೂ ಅವಲಂಬಿಸಿರುತ್ತದೆ.

ಪೂರೈಕೆ

ಒಂದು ನಿರ್ದಿಷ್ಟ ಬೆಲೆಯಲ್ಲಿ, ನಿರ್ದಿಷ್ಟ ಸಮಯದಲ್ಲಿ ಖರೀದಿಗೆ ಲಭ್ಯವಿರುವ ನಿರ್ದಿಷ್ಟ ವಸ್ತುವನ್ನು ಪೂರೈಕೆಯೆಂದು ಹೇಳಬಹುದು. ಇನ್ನೊಂದು ರೀತಿಯಲ್ಲಿ ಹೇಳು ವುದಾದರೆ, ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಬೆಲೆಯಲ್ಲಿ ವಿಕ್ರಯಿಸಲು ಲಭ್ಯವಿರುವ ವಸ್ತು ಯಾ ಸೇವೆಯ ಪ್ರಮಾಣವೇ ಪೂರೈಕೆ. ಪೂರೈಕೆ ಎಂದರೆ ಲಭ್ಯವಿರುವ ವಸ್ತು ಯಾ ಸೇವೆಯ ಪ್ರಮಾಣವಲ್ಲ, ಬದಲಿಗೆ, ಒಂದು ನಿರ್ದಿಷ್ಟ ಬೆಲೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತು ಯಾ ಸೇವೆಯಾಗಿದೆ.

ಪೂರೈಕೆಯು ವ್ಯಾಪಾರಸ್ತರಿಂದ ಯಾ ಉತ್ಪಾದಕರಿಂದ ನಡೆಯುವ ಚಟುವಟಿಕೆ ಯಾಗಿದ್ದು, ಇಲ್ಲಿ ಸರಕುಗಳು, ವಸ್ತುಗಳು ಯಾ ಸೇವೆಯನ್ನು ನಗದಾಗಿ ಪರಿವರ್ತಿಸ ಲಾಗುತ್ತದೆ. ವ್ಯಾಪಾರಸ್ಥರು ಹಾಗೂ ಉತ್ಪಾದಕರು ಯಾವಾಗಲೂ ಲಾಭಾಂಶದ ಏರಿಕೆಗಾಗಿ ಪ್ರಯತ್ನಿಸುತ್ತಿರುತ್ತಾರೆ. ಈ ಕಾರಣದಿಂದಾಗಿ ವಸ್ತು ಯಾ ಸರಕಿನ ಬೆಲೆ ಅಧಿಕ ಪ್ರಮಾಣದಲ್ಲಿ ರುವಾಗ ಪೂರೈಕೆಯ ಪ್ರಮಾಣವು ಅಧಿಕವಾಗಿರುತ್ತದೆ. ವಸ್ತುವಿನ ಯಾ ಸೇವೆಯ ಬೆಲೆಯಲ್ಲಿ ಏರಿಕೆಯಾಗುತ್ತಾ ಹೋದಂತೆ ಅವುಗಳ ಪೂರೈಕೆಯ ಪ್ರಮಾಣವು ಅಧಿಕವಾಗುತ್ತಾ ಹೋಗುತ್ತದೆ. ಪೂರೈಕೆಯ ಒಂದು ಪ್ರಮುಖ ಲಕ್ಷಣವೆಂದರೆ, ಬೆಲೆಯ ಪ್ರಮಾಣದಲ್ಲಿ ಏರಿಕೆಯಾದಾಗ ಪೂರೈಕೆ ಮಾಡಲ್ಪಡುವ ವಸ್ತು, ಸೇವೆಯ ಸರಕಿನ ಪ್ರಮಾಣದಲ್ಲಿ ಏರಿಕೆಯುಂಟಾಗುತ್ತದೆ.

ಪೂರೈಕೆ ಮತ್ತು ಬೇಡಿಕೆಗಳ ನಡುವಿನ ಸ್ವೀಕೃತ ಸಮತೋಲನವೇ ಮಾರುಕಟ್ಟೆಯ ನಿರ್ಧಾರಕ ಶಕ್ತಿಯಾಗಿದೆ ಎಂದರೆ  ಬೇಡಿಕೆಯು ಬೆಲೆ ಹೆಚ್ಚಾದಂತೆ ಕುಸಿತ ಕಾಣುತ್ತದೆ. ಆದರೆ ಪೂರೈಕೆಯು ಬೆಲೆ ಹೆಚ್ಚಾದಂತೆ ಏರಿಕೆ ಕಾಣುತ್ತದೆ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಬೇಡಿಕೆ ಮತ್ತು ಪೂರೈಕೆಗಳು ಮುಖಾಮುಖಿಯಾಗುವ ಸ್ಥಿತಿಯನ್ನು ಮಾರುಕಟ್ಟೆ ಎಂದು ತಿಳಿಯಲಾಗಿದೆ. ಮಾರುಕಟ್ಟೆಯ ನಿಯಮವೆಂದರೆ ಬೇಡಿಕೆಯನ್ನು ಪೂರೈಸುವುದು. ಇಲ್ಲಿ ಪೂರೈಕೆ ಬೇಡಿಕೆಯನ್ನು ಅವಲಂಬಿಸಿದ್ದರೆ, ಬೇಡಿಕೆ ಪೂರೈಕೆಯನ್ನು ಅವಲಂಬಿಸಿರುತ್ತದೆ. ಬೇಡಿಕೆಯು ಅಧಿಕವಿದ್ದಾಗ ಲಾಭಾಂಶವೂ ಅಧಿಕವಾಗಿರುತ್ತದೆ. ಹೀಗಾಗಿ ಬಹಳ ಜನ ಉತ್ಪಾದಕರು ವಸ್ತು ಯಾ ಸೇವೆಯನ್ನು ಪೂರೈಸಲು ಸ್ಪರ್ಧಿಸುತ್ತಾರೆ. ಈ ಸ್ಪರ್ಧೆಯಲ್ಲಿ ಅವರು ಬೆಲೆಯನ್ನು ಇಳಿಸುತ್ತಾ ಬರುತ್ತಾರೆ. ಆದರೆ ಬೆಲೆ ಇಳಿಸುವ ಸ್ಪರ್ಧೆಯಲ್ಲಿ ಯಾರ ಆರ್ಥಿಕ ಶಕ್ತಿ ಅಧಿಕವಿದೆಯೋ, ಯಾರ ಉತ್ಪನ್ನಗಳು ಗುಣಮಟ್ಟದಲ್ಲಿ ಉತ್ತಮವಿರುತ್ತದೋ ಅಂತಹವರು ಸ್ಪರ್ಧೆಯಲ್ಲಿ ಉಳಿದು ಇನ್ನುಳಿದ ಉತ್ಪಾದಕರು ಮಾರುಕಟ್ಟೆಯಿಂದ ನಿರ್ಗಮಿಸ ಬೇಕಾದ ಸ್ಥಿತಿ ಏರ್ಪಡುತ್ತದೆ. ಆದರೆ ಇಂತಹ ಪ್ರತಿ ಸ್ಪರ್ಧೆಯ ಪರಿಣಾಮವಾಗಿ ಬಲಾಢ್ಯರಾದ ಯಾ ಆರ್ಥಿಕವಾಗಿ ಶಕ್ತಿವಂತರಾದ ಕೆಲವೇ ಕೆಲವು ಜನ ಪೂರೈಕೆದಾರರು ಯಾ ಉತ್ಪಾದಕರು ಉಳಿದುಕೊಂಡರೆ, ಅಂತಹ ಸಂದರ್ಭದಲ್ಲಿ ಅವರು ಏಕಸ್ವಾಮ್ಯವನ್ನು ಸಾಧಿಸುತ್ತಾರೆ. ಯಾವಾಗ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಇರುತ್ತದೋ ಅಂತಹ ಸಮಯದಲ್ಲಿ ಗ್ರಾಹಕರು ಪೂರೈಕೆದಾರರ ಶೋಷಣೆಗೆ ಗುರಿಯಾಗುವ ಅಪಾಯವಿರುತ್ತದೆ.

ಒಂದು ಉತ್ಪಾದನೆಯ ಕ್ರಿಯೆಯು ಹೀಗೆ ಮೂಲಭೂತವಾಗಿ ಬೇಡಿಕೆ ಹಾಗೂ ಪೂರೈಕೆಯನ್ನು ಅವಲಂಬಿಸಿದೆ. ವಾಣಿಜ್ಯ ಜಗತ್ತಿನ ಚಟುವಟಿಕೆಗೆ ಮೂಲಾಧಾರವೇ ಉತ್ಪಾದನೆ. ಈಗ ಉತ್ಪಾದನೆಯ ವ್ಯವಸ್ಥೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ.

ಉತ್ಪಾದನಾ ವ್ಯವಸ್ಥೆ

ಹಿಂದಿನ ದಿನಗಳಲ್ಲಿ ಉತ್ಪಾದನಾ ವ್ಯವಸ್ಥೆ ಬಹಳ ಸರಳವೂ ಸುಲಭವೂ ಆಗಿದ್ದಿತು. ಉದಾಹರಣೆಗೆ ಅಲೆಮಾರಿ ಜನಾಂಗವೊಂದರ ಉತ್ಪಾದನಾ ವ್ಯವಸ್ಥೆ ಬಹಳ ಸರಳ. ಎಲ್ಲಿ ಆಹಾರ, ಆಸರೆ, ವಸ್ತ್ರ ದೊರೆಯುತ್ತದೋ ಅಲ್ಲಿ ನೆಲೆ ನಿಲ್ಲುತ್ತಾರೆ. ತೊಂದರೆ ಬಂದಾಗ  ಅಲ್ಲಿಂದ ಮುಂದೆ ಸಾಗಿ, ಮತ್ತೊಂಡೆ ನೆಲೆ ನಿಂತು ತಮ್ಮ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳುತ್ತಾರೆ. ಆದರೆ ಇವತ್ತಿನ ಆಧುನಿಕ ಜಗತ್ತಿನ ಮನುಷ್ಯನ ಆಸೆಗಳು ಬೇಡಿಕೆಗಳು ನೂರಾರು, ಉತ್ಪಾದನಾ ಕಾರ್ಯವೂ ಕ್ಲಿಷ್ಟವಾಗಿದೆ. ಹಾಗಾಗಿ ಇಡೀ ಉತ್ಪಾದನಾ ವ್ಯವಸ್ಥೆ ಸಂಕೀರ್ಣವೂ ಕ್ಲಿಷ್ಟಕರವೂ ಆಗಿದೆ.

ಉತ್ಪಾದನೆ

ಉತ್ಪಾದನೆಯೆಂದರೆ ಮನುಷ್ಯ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುತ್ತಾನೆ ಎಂದು ಅರ್ಥವಲ್ಲ. ಒಬ್ಬ ಜಾದೂಗಾರ ಶೂನ್ಯದಿಂದ ನೋಟು ಸೃಷ್ಟಿಸುವ ರೀತಿಯಲ್ಲಿ ಉತ್ಪಾದನೆ ಒಂದು ವಿಸ್ಮಯಕಾರಿ ಕ್ರಿಯೆಯಲ್ಲ. ಉತ್ಪಾದನೆ ಎಂದರೆ ಪ್ರಕೃತಿ ದತ್ತವಾಗಿ ಲಭ್ಯವಿರುವ ವಸ್ತುಗಳನ್ನು ಕೆಲವೊಂದು ಕ್ರಿಯೆಗಳ ಮೂಲಕ ಉಪಯೋಗ ಜನ್ಯವಾಗಿ ಮಾಡುವುದು. ಹೀಗೆ ಉಪಯೋಗ ಜನ್ಯವಾದ ವಸ್ತುವಿನ ಉಪಭೋಗದಿಂದ ಮನುಷ್ಯನ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಕೆಲವೊಂದು ವೇಳೆ ಸ್ವಾಭಾವಿಕವಾಗಿ ಲಭ್ಯವಿರುವ ವಸ್ತು ಗಳನ್ನು ಸಾಮಾನ್ಯವಾದ ಕ್ರಿಯೆಗಳಿಗೆ ಒಳಪಡಿಸಿ ಉಪಯೋಗ ಜನ್ಯವಾಗಿಸಲಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಹಲವು ವಸ್ತುಗಳನ್ನು ಸೇರಿಸಿ ಬಹಳ ಕ್ಲಿಷ್ಟಕರವಾದ ಉತ್ಪಾದನಾ ಪ್ರಕ್ರಿಯೆಗಳ ಮೂಲಕ ಉಪಯೋಗ ಜನ್ಯವಾಗಿಸಲಾಗುತ್ತದೆ. ಆದರೆ ಉತ್ಪಾದನೆಯ ಮುಖ್ಯ ಉದ್ದೇಶ ವಸ್ತುಗಳನ್ನು ಮನುಷ್ಯ (ಬಯಕೆಗಳ) ಅಗತ್ಯಗಳನ್ನು ಈಡೇರಿಸುವಂತೆ ಸಿದ್ಧಗೊಳಿಸುವುದೇ ಆಗಿದೆ. ಹೀಗೆ ವಸ್ತುಗಳು ಉಪಯೋಗ ಜನ್ಯ ವಾಗುವುದು ಎಂದರೆ ಅದರಲ್ಲಿ ಈಗಾಗಲೇ ಇರುವ ಗುಣಗಳನ್ನು ಗುರುತಿಸಿ ಬಳಕೆಗೆ ಸಿದ್ಧಗೊಳಿಸುವುದು ಅಥವಾ ತಂತ್ರಜ್ಞಾನ ಮತ್ತು ಶ್ರಮಶಕ್ತಿಯನ್ನು ಬಳಸಿ ಅದರಲ್ಲಿರುವ ಉಪಯುಕ್ತತೆಯನ್ನು ಹೆಚ್ಚು ಮಾಡುವುದಾಗಿದೆ.

ಈ ರೀತಿಯಲ್ಲಿ ಉಪಯುಕ್ತತೆಯನ್ನು ಗುರುತಿಸುವ ಮತ್ತು ವೃದ್ದಿಸುವ ಕ್ರಿಯೆಯನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ.

(i). ಸ್ವರೂಪದ ಸಂಬಂಧಿ ಉಪಯುಕ್ತತೆ

ಒಂದು ವಸ್ತುವಿನ ಆಕಾರ, ಬಣ್ಣ, ವಾಸನೆ, ತೂಕ, ಗಾತ್ರ ಇತ್ಯಾದಿ ಸಂರಚನೆಯಲ್ಲಿ ಅವಶ್ಯಕವಿರುವುದನ್ನು ಉಳಿಸಿ ನಿರುಪಯುಕ್ತವಾದುದನ್ನು ಅಳಿಸಿದಾಗ, ಅದರ ಉಪಯುಕ್ತತೆ ಅಧಿಕವಾಗುತ್ತದೆ. ಉದಾಹರಣೆಗೆ ಮರವನ್ನು ಸೀಳಿ ಅದರಿಂದ ಹಲಗೆಗಳನ್ನು ಮಾಡಿ, ಅನುಪಯುಕ್ತ ಭಾಗವನ್ನು ಬೇರ್ಪಡಿಸಿದಾಗ ಹಲಗೆಗಳನ್ನು ಪೀಠೋಪಕರಣಗಳಿಗೆ ಸಲೀಸಲಾಗಿ ಬಳಸಬಹುದು, ಅಂತೆಯೇ ಬೇರ್ಪಡಿಸಿದ ಭಾಗವನ್ನು ಉರುವಲಾಗಿ ಉಪಯೋಗಿಸಬಹುದು. ಹಾಗೆಯೇ ಕಾಫಿ ಬೀಜವನ್ನು ಗಿಡದಿಂದ ಕಿತ್ತು, ಪಲ್ಪ್ ಮಾಡಿದಾಗ ಕಾಫಿ ಬೀಜದ ನಿರುಪಯುಕ್ತ ಭಾಗಗಳು ಅಳಿದು ಬೀಜದ ಉಪಯುಕ್ತತೆ ಹೆಚ್ಚಾಗುತ್ತದೆ. ಹೀಗೆ ಮೂಲ ಸ್ವರೂಪದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಕ್ರಿಯೆಗಳಿಂದ ವಸ್ತುವಿನ ಉಪಯುಕ್ತತೆ ಹೆಚ್ಚಾಗುತ್ತದೆ. ಇಂತಹ ಕ್ರಿಯೆಗಳು ಮೂಲ ಸ್ವರೂಪದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವುದರಿಂದ ಇದನ್ನು ಸ್ವರೂಪದ ಉಪಯುಕ್ತತೆ ಎಂದು ಕರೆಯಲಾಗಿದೆ.

(ii). ಜಾಗ ಪ್ರದೇಶ ಸಂಬಂಧಿ ಉಪಯುಕ್ತತೆ

ವಸ್ತುವಿನ ಉಪಯುಕ್ತತತೆಯನ್ನು ಒಂದು ಪ್ರದೇಶಕ್ಕೆ ಸಂಬಂಧಿಸಿದಂತೆಯೂ ವಿವರಿಸಬಹುದಾಗಿದೆ. ವಸ್ತುವಿಗೆ ಒಂದು ಜಾಗದಲ್ಲಿ ಅದು ಲಭ್ಯವಿರುವ ಪ್ರದೇಶಗಳಿಗಿಂತ ಹೆಚ್ಚು ಬೇಡಿಕೆಯಿರುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ಅವುಗಳನ್ನು ಎಲ್ಲಿ ಬೇಡಿಕೆಯಿದೆಯೋ ಅಲ್ಲಿಗೆ ಸಾಗಾಟ ಮಾಡಲಾಗುತ್ತದೆ. ಉದಾಹರಣೆಗೆ ಮಧ್ಯ ಪೂರ್ವದಲ್ಲಿ ಲಭ್ಯವಿರುವ ತೈಲೋತ್ಪನ್ನಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಹೀಗಾಗಿ ತೈಲೋತ್ಪನ್ನಗಳು ಇವತ್ತು ಜಗತ್ತಿನಾದ್ಯಂತ ಬಿಕರಿಯಾಗುತ್ತಿವೆ. ಈ ಕಾರಣದಿಂದ ಇದು ಪ್ರಮುಖ ವಾಣಿಜ್ಯೋತ್ಪನ್ನವಾಗಿವೆ.

(iii). ಕಾಲ ಸಂಬಂಧೀ ಉಪಯುಕ್ತತೆ

ವಸ್ತುವಿನ ಉಪಯುಕ್ತತೆ ಕಾಲಕ್ಕೆ ಸಂಬಂಧಿಸಿದಂತೆಯೂ ಬದಲಾಗುತ್ತದೆ. ಹಾಗಾಗಿ ಒಂದು ಸಮಯದಲ್ಲಿ ಉತ್ಪಾದನೆಯಾಗುವ ವಸ್ತು ಇನ್ನೊಂದು ಕಾಲದಲ್ಲಿ ಬೇಡಿಕೆಯಲ್ಲಿರಬಹುದು. ರೈತನೊಬ್ಬ ಒಂದು ಋತುವಿನಲ್ಲಿ ಬೆಳೆಯುವ ದವಸ ಧಾನ್ಯಗಳನ್ನು ವರ್ಷದುದ್ದಕ್ಕೂ ಬಳಸುತ್ತಾನೆ. ಹಾಗಾಗಿ ಬೆಳೆಯುವ ಸಮಯ ಅಥವಾ ಫಸಲಿನ ಸಮಯದಲ್ಲಿ ಅದಕ್ಕೆ ಬೇಡಿಕೆ ಕಡಿಮೆಯಿರಬಹುದು. ಆದರೆ ಅದನ್ನು ಸಂರಕ್ಷಿಸಿ ಇಟ್ಟಲ್ಲಿ ಉಳಿದ ಸಮಯದಲ್ಲಿಯೂ ಅದು ಬೇಡಿಕೆಯಲ್ಲಿರುವುದರಿಂದ ಅಧಿಕ ಬೆಲೆಯಾಗಬಹುದು. ಈ ಕಾರಣದಿಂದ ವಸ್ತುಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಡಬೇಕಾದ ಅಗತ್ಯವಿದೆ. ಸುಡುಮದ್ದುಗಳು ದಿನನಿತ್ಯ ಉಪಯೋಗವಾಗುವುದಿಲ್ಲ. ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಉಪಯೋಗವಾಗುತ್ತವೆ. ಹಾಗಾಗಿ ಅವುಗಳನ್ನು ದಾಸ್ತಾನು ಮಾಡಿ ಇಟ್ಟುಕೊಳ್ಳು ವುದರಿಂದ ಬೇಡಿಕೆ ಇರುವ ಸಮಯದಲ್ಲಿ ಪೂರೈಕೆ ಮಾಡಬಹುದಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನ ಬೇಡಿಕೆಗಳು, ಉತ್ಪಾದನಾ ವಿಧಾನಗಳು, ಉತ್ಪಾದನಾ ಸಂಬಂಧಿ ಮನುಷ್ಯ ಸಂಬಂಧಗಳು ಬಹಳ ಜಟಿಲವಾಗಿರುವ ಕಾರಣ ಉತ್ಪಾದನಾ ವ್ಯವಸ್ಥೆಯೂ ಜಟಿಲವಾಗಿಯೇ ಇದೆ. ಹೀಗಾಗಿ ಉತ್ಪಾದನಾ ವ್ಯವಸ್ಥೆಯ ಎಳೆಗಳನ್ನು ಜಾಗರೂಕತೆಯಿಂದ ಗುರುತಿಸಿಕೊಂಡು ಮುಂದುವರಿಯಬೇಕಾದದ್ದು ಅವಶ್ಯಕ.

ಉತ್ಪಾದನಾ ವ್ಯವಸ್ಥೆಯ ಪ್ರಮುಖ ಪರಿಕರಗಳು

೧. ಭೂಮಿ, ೨. ಕಾರ್ಮಿಕ ಶಕ್ತಿ, ೩. ಬಂಡವಾಳ ಮತ್ತು ೪. ವ್ಯವಸ್ಥಾಪನೆ ಅಥವಾ ಸಂಘಟನೆ.

. ಭೂಮಿ : ಭೂಮಿ ಉತ್ಪಾದನಾ ವ್ಯವಸ್ಥೆಯಲ್ಲಿ ಪ್ರಕೃತಿದತ್ತವಾಗಿ ಲಭ್ಯವಿರುವ ಅಮೂಲ್ಯ ಸಂಪನ್ಮೂಲವಾಗಿದೆ. ಭೂಮಿ ಒಂದರ್ಥದಲ್ಲಿ ಜೀವನಾಧಾರವೂ ಆಗಿದೆ. ಭೂಮಿ ಎನ್ನುವಾಗ ಭೂಮಿಯ ಮೇಲಿರುವ ಸಸ್ಯ ಸಂಪತ್ತು, ಖನಿಜ, ಜಲ, ಹೀಗೆ ಭೂಮಿಯ ಮೇಲಿರುವ ಮತ್ತು ಒಳಗಿರುವ ಎಲ್ಲ ಸ್ವಾಭಾವಿಕ ಸಂಪತ್ತನ್ನು ಒಳಗೊಳ್ಳುತ್ತದೆ. ಭೂಮಿಯನ್ನು ಜನಸಮುದಾಯ ತನ್ನ ಉಪಯೋಗಕ್ಕೆ ಅಗತ್ಯಗಳಿಗನುಸಾರವಾಗಿ ಮತ್ತು ಜನದಟ್ಟಣೆಗಳಿಗನುಗುಣವಾಗಿ ಬಳಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜನದಟ್ಟಣೆ ಅಧಿಕವಿರುವ ಕಡೆಯಲ್ಲಿ ಲಭ್ಯವಿರುವ ತಲಾವಾರು ಭೂಮಿಯ ಪ್ರಮಾಣ ಕಡಿಮೆಯಿರುವ ಕಾರಣ ಅತಿಶಯ ವರ್ಧಿತ (Intensive) ಉತ್ಪಾದನಾ ಕ್ರಮದಲ್ಲಿ ರೀತಿಯಲ್ಲಿ ಬಳಸಿಕೊಳ್ಳ ಲಾಗುತ್ತದೆ. ಜನದಟ್ಟಣೆ ವಿರಳವಾಗಿರುವ ಪ್ರದೇಶಗಳಲ್ಲಿ ವ್ಯಾಪಕ ಉತ್ಪಾದನಾ ರೀತಿಯಲ್ಲಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಅತಿಶಯ ವರ್ಧಿತ ಕ್ರಮವೆಂದರೆ ಲಭ್ಯವಿರುವ ಸಣ್ಣ ಭೂ ಪ್ರದೇಶದಲ್ಲಿ ರಸಗೊಬ್ಬರ, ಆಧುನಿಕ ಕ್ರಮ ವಿಧಾನದ ಮೂಲಕ ಅತಿ ಹೆಚ್ಚು ಉತ್ಪಾದನೆಯನ್ನು ಮಾಡಲು ಪ್ರಯತ್ನಿಸುವುದು. ಉದಾಹರಣೆಗೆ ಒಂದು ಕುಟುಂಬಕ್ಕೆ ಒಂದೆಕರೆ ಜಾಗ ಮಾತ್ರ ಇದೆ ಎಂದಿಟ್ಟುಕೊಳ್ಳೋಣ. ಕುಟುಂಬದ ಆದಾಯವನ್ನು ಅಧಿಕಗೊಳಿಸಬೇಕಿದ್ದರೆ ಅಧಿಕ ಸಂಪನ್ಮೂಲದ ಅವಶ್ಯಕತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬದ ಮುಂದಿರುವ ಆಯ್ಕೆಗಳು ಎರಡು : ೧. ಹೆಚ್ಚುವರಿ ಭೂಮಿಯನ್ನು ಹೊಂದುವ ಮೂಲಕ ಉತ್ಪಾದನೆಯನ್ನು ಅಧಿಕಗೊಳಿಸುವುದು, ೨. ಲಭ್ಯವಿರುವ ಭೂಮಿಯನ್ನು ಅಧಿಕ ಉತ್ಪಾದನೆ ಬರುವಂತೆ ದುಡಿಸಿಕೊಳ್ಳುವುದು. ಅರ್ಥಾತ್ ರಸಗೊಬ್ಬರ, ಆಧುನಿಕ ಕ್ರಮ ವಿಧಾನ ಇತ್ಯಾದಿಗಳ ಮೂಲಕ ಉತ್ಪಾದನೆಯನ್ನು ಅಧಿಕಗೊಳಿಸುವುದಾಗಿದೆ.  ಯಾವ ರೀತಿಯಲ್ಲಿ ಭೂಮಿಯನ್ನು ಉಪಯೋಗಿಸುವ ಮೂಲಕ ಆದಾಯವನ್ನು, ಸಂಪತ್ತನ್ನು ಅಧಿಕಗೊಳಿಸಬಹುದೆನ್ನುವುದು ಜನಸಂಖ್ಯೆ, ಭೂಮಿಯ ವಿಸ್ತಾರ, ಜೀವನ ಕ್ರಮ ಇತ್ಯಾದಿ ಅಂಶಗಳನ್ನು ಆಧರಿಸಿದೆ. ಆದರೆ ಪ್ರಮುಖವಾಗಿ ಗಮನಿಸಲೇಬೇಕಾದ ಅಂಶ ಎಂದರೆ ಒಂದು ಮಟ್ಟದವರೆಗೆ ಸೀಮಿತ ಭೂಮಿಯ ಮೇಲೆ ಅಧಿಕ ರಸಗೊಬ್ಬರ, ಆಧುನಿಕ ತಂತ್ರಜ್ಞಾನವನ್ನು ಪ್ರಯೋಗಿಸಿ, ಹೆಚ್ಚುವರಿ ದುಡಿಸಿಕೊಳ್ಳಬಹುದೇ ಹೊರತು, ಆ ನಂತರ ಅದರಿಂದ ಪ್ರಯೋಜನವಾಗುವುದಿಲ್ಲ. ಒಂದು ನಿರ್ದಿಷ್ಟ ಮಟ್ಟದ ನಂತರ ಮಾಡುವ ಹೆಚ್ಚುವರಿ ಖರ್ಚು, ಲಾಭದಾಯಕವಾಗಿರುವುದಿಲ್ಲ. ಇಂತಹ ಸ್ವಭಾವವನ್ನು ಸೀಮಾಂತ ತುಷ್ಟಿಗುಣ ಸಿದ್ಧಾಂತ (Diminishing Renturns) ಎಂದು ಕರೆಯಲಾಗುತ್ತದೆ.

ಶ್ರಮಿಕ ಶಕ್ತಿ : ಪ್ರಕೃತಿಯಲ್ಲಿ ದೊರೆಯುವ ಯಾವುದೇ ವಸ್ತು ಉಪಯುಕ್ತವಾಗ ಬೇಕಾದರೆ ಅದರ ಮೇಲೆ ಮನುಷ್ಯನ ಶ್ರಮದ ವಿನಿಯೋಗವಾಗಬೇಕಾಗುತ್ತದೆ. ಪ್ರಯೋಗಿಸಲ್ಪಡುವ ಮಾನವ ಶ್ರಮದ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದಾದರೂ, ಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಹಾಗಾಗಿ ಯಾವುದೇ ವಸ್ತು, ಯಾ ಸಂಪತ್ತಿನ ಮಲ್ಯ ವರ್ಧನೆಗೆ  ಮನುಷ್ಯ ಪ್ರಯತ್ನದ ರೂಪದಲ್ಲಿ ಶ್ರಮದ ವಿನಿಯೋಗವಾಗುತ್ತದೆ ಎನ್ನುವುದನ್ನು ಗಮನಿಸಬೇಕಾಗಿದೆ. ಯಾವುದೇ ವಸ್ತುವಿನ ಮಲ್ಯ ವರ್ಧನೆಯಲ್ಲಿ ವಿನಿಯೋಗವಾಗುವ ಶ್ರಮಕ್ಕೆ ಸಿಗುವ ಫಲವನ್ನು ಕೂಲಿ ಎಂದು ಕರೆಯಲಾಗುತ್ತದೆ. ಅರ್ಥಾತ್ ಉತ್ಪಾದನಾ ಪ್ರಕ್ರಿಯೆಯಲ್ಲಿ ಉಪಯೋಗವಾಗುವ ಶ್ರಮಿಕ ಶಕ್ತಿಗೆ ದೊರೆಯುವ ಸಂಭಾವನೆಯೇ ಕೂಲಿಯಾಗಿದೆ.

ಶ್ರಮಿಕ ಶಕ್ತಿಯು ಉತ್ಪಾದನೆಯ ಪರಿಕರಗಳಲ್ಲಿ ಒಂದು ಎನ್ನುವ ಅಂಶವನ್ನು ಈಗಾಗಲೇ ತಿಳಿಸಲಾಗಿದೆ. ಆದರೆ ಉಳಿದೆಲ್ಲ ಉತ್ಪಾದನಾ ಪರಿಕರಗಳಿಗಿಂತ ಶ್ರಮಿಕ ಶಕ್ತಿಯು ಪ್ರಮುಖವಾಗಿದೆ. ಯಾಕೆಂದರೆ ಇದಕ್ಕೆ ಮಿಕ್ಕುಳಿದ ಉತ್ಪಾದನಾ ಪರಿಕರಗಳಿಗಿಂತ ವಿಶೇಷವಾದ ವಿಭಿನ್ನವಾದ ಕೆಲವು ಗುಣಲಕ್ಷಣಗಳಿವೆ. ಆ ವಿಶೇಷ ಗುಣಲಕ್ಷಣಗಳು ಯಾವುವೆಂದರೆ :

೧. ಶ್ರಮಿಕ ಶಕ್ತಿಯು (ಕಾರ್ಮಿಕನಿಂದ) ಯಾ ಶ್ರಮಜೀವಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಉದಾಹರಣೆಗೆ ಯಾವುದೇ ಒಂದು ಕೆಲಸಕ್ಕೆ ಶ್ರಮಿಕ ಶಕ್ತಿಯ ಅಗತ್ಯವಿದ್ದರೆ ಆಗ ಅಂತಹ ಶಕ್ತಿಯು ಶ್ರಮಜೀವಿಯ ದೇಹದ ಮೂಲಕ ವಿನಿಯೋಗವಾಗುತ್ತದೆ. ಶ್ರಮಜೀವಿಯೊಬ್ಬನಿಂದ ಅವನ ಶ್ರಮಶಕ್ತಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಬಂಡವಾಳಿಗನಿಂದ ಅವನ ಬಂಡವಾಳವನ್ನು ಬೇರ್ಪಡಿಸಬಹುದು. ಭೂಮಾಲಿಕನಿಂದ ಭೂಮಿಯನ್ನು ಬೇರ್ಪಡಿಸಬಹುದು.

೨. ಶ್ರಮ ಶಕ್ತಿಯನ್ನು ಮಾರಾಟ ಮಾಡುವ ಶ್ರಮಿಕ, ಶ್ರಮದ ಸಂಪತ್ತಿನ ಒಡೆಯನಾಗಿಯೇ ಉಳಿಯುತ್ತಾನೆ.

೩. ಶ್ರಮ ಶಕ್ತಿಯನ್ನು ಕಾಪಾಡಲು ಆಗುವುದಿಲ್ಲ. ಅಂದರೆ ಶ್ರಮ ಶಕ್ತಿಯನ್ನು ನಾವು ನಿರಂತರವಾಗಿ ಬಳಸುತ್ತಿದ್ದಾಗ ಮಾತ್ರ ಅದರಿಂದ ಗರಿಷ್ಠ ಪ್ರಯೋಜನವಾಗುತ್ತದೆ. ಉದಾಹರಣೆಗೆ ಒಂದು ದಿನ ದುಡಿಯುದಿದ್ದರೆ, ಆ ದಿನದ ಶ್ರಮ ಶಕ್ತಿಯು ನಷ್ಟವಾಗಿ ಹೋಗುತ್ತದೆ. ಈ ಕಾರಣದಿಂದಲೇ ನಿರುದ್ಯೋಗವಿದ್ದಾಗ  ಒಂದು ದೇಶದ ಅಮೂಲ್ಯ ಸಂಪನ್ಮೂಲವಾದ ಶ್ರಮ ಶಕ್ತಿಯು ಪೋಲಾಗುತ್ತದೆ ಮತ್ತು ಆ ಮೂಲಕ ಅರ್ಥ ವ್ಯವಸ್ಥೆಗೆ ನಷ್ಟ ಉಂಟಾಗುತ್ತದೆ.

೪. ಶ್ರಮ ಶಕ್ತಿಗೆ ಒಂದೊಮ್ಮೆ ಅತ್ಯಧಿಕ ಬೇಡಿಕೆ ಕಂಡು ಬಂದರೆ ಅಲ್ಪಾವಧಿಯಲ್ಲಿ ಅದರ ಪೂರೈಕೆಯನ್ನು ಹೆಚ್ಚು ಮಾಡಲು ಆಗುವುದಿಲ್ಲ.

೫. ಬಂಡವಾಳಕ್ಕಿರುವ ಚಲನಶೀಲತೆಯು ಶ್ರಮಿಕ ಶಕ್ತಿಗೆ ಇಲ್ಲ. ಯಾಕೆಂದರೆ ಶ್ರಮ ಶಕ್ತಿಯು ಶ್ರಮಿಕನೊಂದಿಗೆ ಮಿಳಿತವಾಗಿರುವುದರಿಂದ ಮತ್ತು ಶ್ರಮಿಕನು ಒಂದು ಸಾಂಸ್ಕೃತಿಕ, ಸಾಮಾಜಿಕ ಪರಂಪರೆಯನ್ನು ಹಂಚಿಕೊಂಡಿರುವುದರಿಂದ ಅವನ ಚಲನಶೀಲತೆಯು ಹಲವಾರು ಅಂಶಗಳನ್ನು ಆಧರಿಸಿದೆ.

೬. ಶ್ರಮಿಕ ಶಕ್ತಿಯ ಗುಣಮಟ್ಟವು ಶ್ರಮಜೀವಿಯ ಗುಣಮಟ್ಟವನ್ನು ಆಧರಿಸಿದೆ.

ಈ ಮೇಲೆ ಹೇಳಿದ ವಿಶೇಷತೆಗಳು ಶ್ರಮಶಕ್ತಿಯ ಮಹತ್ವವನ್ನು ಬಿಂಬಿಸುವ ಕೆಲವು ಅಂಶಗಳು ಮಾತ್ರ. ಶ್ರಮಶಕ್ತಿಯಿಂದ ಗರಿಷ್ಠ ಉಪಯೋಗ ಪಡೆಯುವ ದೃಷ್ಟಿಯಿಂದ ಪರಿಣತಿ ಯಾ ವಿಶೇಷ ಪರಿಣತಿಯನ್ನು ಸಾಧಿಸುವ ಬಗ್ಗೆ ಆಡಂಸ್ಮಿತ್ ಈ ಕೆಳಗಿನಂತೆ ವಿವರಿಸುತ್ತಾನೆ. ವಿಶೇಷ ಪರಿಣತಿ ಎಂದರೆ ಒಬ್ಬ ಶ್ರಮಿಕ ಹಲವಾರು ಕಾರ್ಯಗಳನ್ನು ಮಾಡುವ ಬದಲಿಗೆ, ಅವನಿಗೆ ಒಲವಿರುವ, ಅಥವಾ ಅವನು ಯಾವ ಅಂಶದಲ್ಲಿ ಗಟ್ಟಿಗನಾಗಿರುತ್ತನೋ ಅಂತಹ ಕಾರ್ಯವನ್ನು ಮಾತ್ರ ಮಾಡುತ್ತಾ ಹೋಗುವುದು. ಇದರಿಂದಾಗಿ ಒಬ್ಬ ಶ್ರಮಿಕನಿಗೆ ಒಂದು ನಿರ್ದಿಷ್ಟ ಕಾರ್ಯದಲ್ಲಿ ಅಪಾರವಾದ ಪರಿಣತಿ ಮತ್ತು eನ ಲಭ್ಯವಾಗುತ್ತದೆ. ಇದರಿಂದ ಅವನಿಗೂ ಅಧಿಕ ಪ್ರಯೋಜನವಾಗುತ್ತದೆ. ಉತ್ಪಾದನೆ ವೃದ್ದಿಯಾಗುತ್ತದೆ ಮತ್ತು ಅನ್ವೇಷಣೆಗಳೂ ಸಾಧ್ಯವಾಗುತ್ತದೆ. ಆದರೆ ಪರಿಣತಿ ಹೊಂದುವುದರಿಂದ ಕೆಲವೊಂದು ನಷ್ಟಗಳು ಯಾ ದುಷ್ಪರಿಣಾಮಗಳೂ ಇವೆ ಎನ್ನುವ ಅಂಶವನ್ನು ನಾವು ಮನಗಾಣ ಬೇಕಿದೆ.

ಬಂಡವಾಳ : ಆಧುನಿಕ ಯುಗದಲ್ಲಿ ಬಂಡವಾಳವು ಅತ್ಯಂತ ಮಹತ್ವದ ಸಂಗತಿಯಾಗಿದೆ. ಯಾಕೆಂದರೆ ಬಂಡವಾಳದ ಬೆಳವಣಿಗೆ ಆಧುನೀಕತೆಯ ಪ್ರಸರಣದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಲಾಗಿದೆ. ಬಂಡವಾಳ ಎಂದರೆ ಹಣ ಎನ್ನುವ ಸಮಾನ್ಯವಾದ  ತಪ್ಪು ತಿಳುವಳಿಕೆ ಪ್ರಚಲಿತದಲ್ಲಿದೆ. ಆದರೆ ಬಂಡವಾಳವೆಂದರೆ ಹಣವಲ್ಲ. ಬಂಡವಾಳವೆಂದರೆ ಸಂಪನ್ಮೂಲನದ ಉತ್ಕೃರ್ಷೆ. ಯಾವ ಸಂಪನ್ಮೂಲವನ್ನು ಬೀಜ ರೂಪದಲ್ಲಿ ಬಳಸಿ ತನ್ಮೂಲಕ ಇನ್ನೂ ಅಧಿಕ ಸಂಪತ್ತಿನ ಸಂಚಯನಕ್ಕೆ ದಾರಿ ಮಾಡಿಕೊಡಲಾಗುತ್ತದೋ, ಅಂತಹ ಮೂಲರೂಪದ ಯಾ ಬೀಜ ರೂಪದ ಸಂಪತ್ತನ್ನು ಬಂಡವಾಳ ಎಂದು ಕರೆಯಲಾಗುತ್ತದೆ. ಹಾಗಾಗಿ ವ್ಯಾಪಾರದಲ್ಲಿ, ವಾಣಿಜ್ಯ ವ್ಯವಸ್ಥೆಯಲ್ಲಿ ಲಾಭಗಳಿಸುವ ಉದ್ದೇಶದಿಂದ ಉಪಯೋಗಿಸಲಾಗುವ ಹಣವನ್ನು ಬಂಡವಾಳ ಎಂದು ಕರೆಯಬಹುದು. ಬಂಡವಾಳ ಉಪಯೋಗಿಸುವಾಗ ಹಣ ರೂಪಾಂತರ ಹೊಂದಿ ಇತರ ಆಸ್ತಿಗಳಾಗುತ್ತದೆ, ಆದರೆ ಇತರ ಆಸ್ತಿಗಳು ವಸ್ತು ಯಾ ಸೇವೆಯನ್ನು ಉತ್ಪಾದಿಸುವ ಮೂಲಕ ಮತ್ತೆ ಹಣಗಳಿಕೆಗೆ  ಕಾರಣವಾಗುತ್ತವೆ. ಉದಾಹರಣೆಗೆ ಒಂದು ಲಕ್ಷ ರೂಪಾಯಿನ್ನು ತೊಡಗಿಸಿ ಒಂದು ಟ್ಯಾಕ್ಸಿಯನ್ನು ಖರೀದಿಸಲಾಯಿತು ಎಂದು ತಿಳಿಯೋಣ. ಇಲ್ಲಿನ ಉದ್ದೇಶ  ಟ್ಯಾಕ್ಸಿಯನ್ನು ಬಾಡಿಗೆಗೆ ಓಡಿಸಿ, ನಂತರದಲ್ಲಿ ಟ್ಯಾಕ್ಸಿಯನ್ನು ಖರೀದಿಸಲು ಉಪಯೋಗಿಸಿದ ಹಣ ಹಾಗೂ ಅದನ್ನು ಬಾಡಿಗೆ ಓಡಿಸಲು ಖರ್ಚಾಗುವ ಹಣವನ್ನು ಮತ್ತೆ ಗಳಿಸುವುದೇ ಆಗಿದೆ. ಟ್ಯಾಕ್ಸಿಯನ್ನು ಖರೀದಿಸಲು ವಿನಿಯೋಗಿಸಿದ ಒಂದು ಲಕ್ಷ ಮತ್ತು ಅದನ್ನು ಓಡಿಸಲು ಆಗುವ ಖರ್ಚು ಒಂದೈದು ವರ್ಷದಲ್ಲಿ ಪೂರ್ತಿಯಾಗಿ ಗಳಿಸಿದ ಮೇಲೆ. ತದನಂತರದಲ್ಲಿ ಬರುವ ಎಲ್ಲ ಆದಾಯವೂ ಲಾಭವೇ ಆಗುತ್ತದೆ. ಆದರೆ ಇಂತಹ ಲಾಭವನ್ನು ಗಳಿಸುವ ಮೊದಲು ಒಂದು ಲಕ್ಷ ರೂಪಾಯಿ ವಿನಿಯೋಗಿಸುವ ಆರ್ಥಿಕ ಶಕ್ತಿ ಬಹಳ ಅಗತ್ಯ. ಇಂತಹ ಶಕ್ತಿ ನಿಮ್ಮ ಸಂಚಿತ ಉಳಿತಾಯಗಳ ಮೂಲಕ ಬರಬಹುದು ಇಲ್ಲವೇ ಹಣವನ್ನು ಸಾಲವಾಗಿ ಇತರರಿಂದ ಪಡೆಯುವ ಮೂಲಕ ಗಳಿಸಿ ಕೊಳ್ಳಬಹುದು.

ಬಂಡವಾಳಗಳಲ್ಲಿ ಹಲವಾರು ರೀತಿಯ ಬಂಡವಾಳಗಳಿವೆ. ಸಾಮಾನ್ಯವಾಗಿರುವ ವರ್ಗೀಕರಣಗಳು :

ಸ್ಥಿರ ಬಂಡವಾಳ ಮತ್ತು ಆವರ್ತನ ಬಂಡವಾಳ : ಸ್ಥಿರ ಬಂಡವಾಳವೆಂದರೆ ಯಾವ ಹಣ ಯಾ ಸಂಪತ್ತು ಬಹುದೀರ್ಘಕಾಲ ಸ್ಥಿರೀಕರಣ ಸ್ಥಿತಿಯಲ್ಲಿ ಉಳಿಯುವುದೋ ಅದು. ಉದಾಹರಣೆಗೆ ಭೂಮಿ, ಯಂತ್ರ, ಸ್ಥಾವರಗಳಲ್ಲಿ ವಿನಿಯೋಗಿಸಲಾದ ಸಂಪತ್ತು ಬಹುದೀರ್ಘಕಾಲ ಘನೀಕೃತ, ಯಾ ಸ್ಥಿರೀಕೃತ ಸ್ಥಿತಿಯಲ್ಲಿ ಉಳಿಯುವ ಕಾರಣ ಅವುಗಳನ್ನು ಸ್ಥಿರ ಬಂಡವಾಳ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಬಂಡವಾಳವನ್ನು ವ್ಯಾಪಾರ ವಹಿವಾಟು ನಡೆಯುವಷ್ಟು ಕಾಲವೂ ನಗದೀಕರಣ ಮಾಡಲು ಆಗುವುದಿಲ್ಲ. ವ್ಯಾಪಾರ ವಹಿವಾಟವನ್ನು ಮುಚ್ಚುವ ಸಂದರ್ಭಗಳಲ್ಲಿ ಮಾತ್ರ ಇವುಗಳನ್ನು ನಗದೀಕರಿಸಲಾಗುತ್ತದೆ. ಆವರ್ತನ ಬಂಡವಾಳ ಯಾ ತಾತ್ಕಾಲಿಕ ಬಂಡವಾಳವೆಂದರೆ ಯಾವುದು ತಾತ್ಕಾಲಿಕವಾಗಿ ಬಂಡವಾಳವಾಗಿ ವಿನಿಯೋಗಿಸಲ್ಪಡುತ್ತದೆಯೋ ಅಂತಹ ಸಂಪತ್ತು. ಬಂಡವಾಳ ಯಾವಾಗಲೂ ಹಣದ ರೂಪಾಂತರಗೊಳ್ಳುವಿಕೆಯಾಗಿದೆ. ಅಂದರೆ ಹಣದಿಂದ ಇದು ಇನ್ನೊಂದು ವಸ್ತು ಯಾ ಸೇವೆಯಾಗಿ ರೂಪಾಂತರ ಹೊಂದುವುದು. ಇಂತಹ ರೂಪಾಂತರ ಹೊಂದಿದ ಸೇವೆಯಾ ಸರಕು ಪುನಃ ಹಣವಾಗಿ ರೂಪಾಂತರ ಹೊಂದಲು ಕಡಿಮೆ ಸಮಯ ತೆಗೆದುಕೊಂಡರೆ ಆಗ ಹಣವನ್ನು ತಾತ್ಕಾಲಿಕ ಬಂಡವಾಳವಾಗಿ ಪರಿಗಣಿಸಬಹುದಾಗಿದೆ. ಕಚ್ಚಾ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಅದನ್ನು ಸಿದ್ಧ ವಸ್ತುಗಳಾಗಿ ಮಾರಾಟ ಮಾಡಿ, ಮತ್ತೆ ಹಣವನ್ನು ಪಡೆಯುತ್ತೇವೆ. ಹೀಗೆ ಕಚ್ಚಾ ಸಾಮಗ್ರಿಯನ್ನು ಸಿದ್ಧ ವಸ್ತುವಾಗಿ ಮಾರ್ಪಡಿಸಲು ಆರು ತಿಂಗಳು ಬೇಕಿದೆ ಎಂದುಕೊಂಡರೆ, ಈ ಆರು ತಿಂಗಳಿಗೆ ಬೇಕಾಗುವ ಬಂಡವಾಳವನ್ನು ಆವರ್ತನ ಯಾ ತಾತ್ಕಾಲಿಕ ಬಂಡವಾಳ ವೆಂದು ಪರಿಗಣಿಸಬಹುದಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಸ್ಥಿರ ಮತ್ತು ತಾತ್ಕಾಲಿಕ ಬಂಡವಾಳಗಳ ಸ್ವರೂಪ, ಗುಣಲಕ್ಷಣ, ಮಹತ್ವ, ಅನುಕೂಲ, ಅನಾನುಕೂಲ, ಅಭಿವೃದ್ದಿ ದೃಷ್ಟಿಯಿಂದ ಅವುಗಳ ಮಹತ್ವ ಪ್ರತಿಯೊಂದು ಕೂಡಾ ಅಧ್ಯಯನ ಮತ್ತು ಅರಿವಿನ ದೃಷ್ಟಿಯಿಂದ ಉಪಯುಕ್ತವಾಗಿದೆ ಎನ್ನುವ ಅಂಶವನ್ನು ಮನಗಾಣಬಹುದು.

ಮುಳುಗಿ ಹೋದ ಯಾ ಸಂದು ಹೋದ ಬಂಡವಾಳ ಮತ್ತು ತೇಲುವ ಯಾ ಪುನರಪಿ ಬಳಕೆಯ ಬಂಡವಾಳ ಎನ್ನುವ ವ್ಯಾಖ್ಯೆಗಳೂ ಚಾಲನೆಯಲ್ಲಿವೆ. ಯಾವ ಸಂಪತ್ತನ್ನು ಒಂದು ಉಪಯೋಗಕ್ಕೆ ವಿನಿಯೋಗಿಸಲಾಯಿತೋ ಮತ್ತು ಅದನ್ನು ಮತ್ತೆ ಮೊದಲಿನ ಸ್ಥಿತಿಗೆ ರೂಪಾಂತರಿಸಲು ಸಾಧ್ಯವಿಲ್ಲವೋ ಅದನ್ನು ಮುಳುಗಿದ ಯಾ ಸಂದು ಹೋದ ಬಂಡವಾಳವೆಂದು ಕರೆಯಬಹುದು. ಉದಾಹರಣೆಗೆ ಕೃಷಿಗಾಗಿ ಒಂದು ಬಾವಿ ತೆಗೆಯಲು ವಿನಿಯೋಗಿಸಿದ, ಯಾ ನೀರಾವರಿಗಾಗಿ ಕಾಲುವೆ ಕಟ್ಟಿಸಲು ತೊಡಗಿಸಿದ ಹಣ, ಸಂದು ಹೋದ ಬಂಡವಾಳವೆಂದು ಪರಿಗಣಿತವಾಗುತ್ತದೆ. ಯಾಕೆಂದರೆ ಬಾವಿ ತೋಡಿಸಲು ಖರ್ಚಾದ ಹಣವನ್ನು ಮತ್ತೆ ಯಾವ ರೀತಿಯಲ್ಲಿಯೂ ಹಣವಾಗಿ ಮಾರ್ಪಡಿಸಲು ಸಾಧ್ಯವಿರುವುದಿಲ್ಲ. ಆದರೆ ಈ ಭೂಮಿಯ ಯಾ ಕಾಲುವೆಯ ನೀರನ್ನು ಯಂತ್ರಗಳ ಮೂಲಕ ಎತ್ತಿ ಕೃಷಿ ಭೂಮಿಗೆ ಯಾ ಕುಡಿಯುವ ಉದ್ದೇಶಕ್ಕೆ ಬಳಸಲು ಮಾಡುವ ಖರ್ಚನ್ನು ಮರುಗಳಿಸಲು (ಅಂದರೆ ಹಣವಾಗಿ ಪರಿವರ್ತಿಸಲು) ಸಾಧ್ಯವಿರುವ ಕಾರಣ ಅವನ್ನು ತೇಲುವ ಬಂಡವಾಳ ಎಂದು ಕರೆಯಲಾಗುತ್ತದೆ. ತೇಲುವ ಬಂಡವಾಳವೆಂದರೆ, ವಸ್ತು ಯಾ ಸೇವೆಯನ್ನು ಮತ್ತೆ ಹಣವಾಗಿ ಪರಿವರ್ತಿಸುವುದು ಸಾಧ್ಯವೆಂದು ತಿಳಿಯುವುದು.

ಇದೇ ರೀತಿಯಲ್ಲಿ ಉತ್ಪಾದನಾ ಬಂಡವಾಳ ಮತ್ತು ಉಪಭೋಗ ಬಂಡವಾಳ, ಕಾರ್ಯ ನಿರ್ವಾಹಕ ಬಂಡವಾಳ, ಖಾಯಂ ಬಂಡವಾಳ ಮುಂತಾದ ಪ್ರಭೇದಗಳೂ ಇವೆ.

ಉತ್ಪಾದನೆಗೆ ಬಳಕೆಯಾಗುವ ಬಂಡವಾಳವನ್ನು ಸಂಪತ್ತಿನ ಉತ್ಪಾದನಾ ಬಂಡವಾಳ  ಎಂದು ಕರೆಯುತ್ತೇವೆ. ಉಪಭೋಗಕ್ಕಾಗಿ ಅಂದರೆ ಅಂತಿಮ ಬಳಕೆಗಾಗಿ ಉಪಯೋಗ ವಾಗುವ ಬಂಡವಾಳವನ್ನು ಉಪಭೋಗ ಬಂಡವಾಳವೆಂದು ಕರೆಯಲಾಗುತ್ತದೆ. ಸ್ಥಿರ ಆಸ್ತಿ ಯಾ ಉತ್ಪಾದನಾ ಪರಿಕರಗಳಲ್ಲಿ ತೊಡಗಿಸಲ್ಪಟ್ಟ ಬಂಡವಾಳವನ್ನು ಖಾಯಂ ಬಂಡವಾಳ ಯಾ ಸ್ಥಿರ ಬಂಡವಾಳವೆಂದೂ, ಇಂತಹ ಸ್ಥಿರ ಬಂಡವಾಳವನ್ನು ಕಾರ್ಯ ನಿರ್ವಹಿಸುವಂತೆ ಮಾಡಲು ಅವಶ್ಯಕವಿರುವ ಬಂಡವಾಳವನ್ನು ಕಾರ್ಯ ನಿರ್ವಾಹಕ ಬಂಡವಾಳವೆಂದು ಕರೆಯಲಾಗುತ್ತಿದೆ.

ಬಂಡವಾಳವು ಜಡವಾಗಿರುವ ಉತ್ಪಾದನಾ ಪರಿಕರಗಳನ್ನು ಚೈತನ್ಯಶೀಲವನ್ನಾಗಿ ಮಾಡುವುದರಿಂದ ಉತ್ಪಾದನೆ, ಉದ್ಯೋಗ, ಅಭಿವೃದ್ದಿ ಸಾಧ್ಯವಾಗಿದೆ ಎಂದೇ ಹೇಳಲಾ ಗುತ್ತಿದೆ. ಬಂಡವಾಳವು  ನಿರಂತರ ಬೆಳವಣಿಗೆಯತ್ತ ಚಲಿಸುವ ಗುಣ ಹೊಂದಿರುವ ಕಾರಣ ವಿನಿಯೋಗಿಸಿದ ಮೊತ್ತಕ್ಕಿಂತ ಹೆಚ್ಚಿನ ಸಂಪತ್ತಿನ ಮರು ಹರಿವನ್ನು ಸಾಧ್ಯವಾಗಿಸಿದೆ. ಈ ಕಾರಣದಿಂದ ಉದ್ಯಮಶೀಲ ವ್ಯಕ್ತಿಗಳನ್ನು ಉತ್ಪಾದನಾ ವ್ಯವಸ್ಥೆ ನಿರಂತರವಾಗಿ ಪ್ರೋಲಾಭದ ಆಕರ್ಷಣೆ, ಸಂಪತ್ತಿನ ಸಂಚಯನ, ಒಂದು ಉತ್ಪಾದನಾ ವ್ಯವಸ್ಥೆಯು ಸದಾ ಮೇಲ್ಮುಖಿಯಾಗಿ ಚಲಿಸುವಂತೆ ಸಹಕರಿಸುತ್ತದೆ. ಅನ್ವೇಷಣೆ, ವಿಶೇಷ ಪರಿಣತಿಯನ್ನು ಸಾಧ್ಯವಾಗಿಸುವುದರಿಂದಾಗಿ ಕಾರ್ಮಿಕರು ಕಡಿಮೆ ಶ್ರಮದಿಂದ ಅಧಿಕ ಉತ್ಪಾದನೆ ಮಾಡುವಂತೆ ಬಂಡವಾಳವು ಪ್ರೇರೇಪಿಸುತ್ತದೆ. ಬಂಡವಾಳ ವ್ಯವಸ್ಥೆಯು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಚ್ಚಾ ಸಾಮಗ್ರಿಗಳನ್ನು ಪೂರೈಕೆಯಾಗುವಂತೆ ನೋಡಿಕೊಂಡು ನಿರಂತರ ಉತ್ಪಾದನೆಯಾಗುವಂತೆ ಸಹಕರಿಸುತ್ತದೆ. ಬಂಡವಾಳವು ಸಾಲ, ಮುಂಗಡ ಮುಂತಾದ ಸವಲತ್ತುಗಳನ್ನು ಸಾಧ್ಯವಾಗಿಸಿ ಶ್ರಮ ಜೀವಿಗಳಿಗೆ ಮಜೂರಿ ಮತ್ತು ಸಂಬಳವು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಒಟ್ಟಿನಲ್ಲಿ ಉತ್ಪಾದನೆ, ವಿತರಣೆ, ಸಾಗಾಣಿಕೆ, ದಾಸ್ತಾನು, ಸಂಚಾರ, ಸಂಪರ್ಕ ಮುಂತಾದ ವಾಣಿಜ್ಯ ಜಗತ್ತಿನ ಉಪಯುಕ್ತ ಚಟುವಟಿಕೆಗಳಿಗೆ ಬಂಡವಾಳವು ಜೀವಾಳವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಂಘಟನೆ

ಸಂಘಟನೆ ಯಾ ‘ಉದ್ಯಮ’ ಎನ್ನುವುದು ಉತ್ಪಾದನಾ ವ್ಯವಸ್ಥೆಯ ಒಂದು ಪ್ರಮುಖ ಘಟಕವಾಗಿದೆ. ಪ್ರಾಥಮಿಕ ಹಂತದಲ್ಲಿ ಸಂಘಟನೆ ಯಾ ಉದ್ಯಮವನ್ನು ಅರ್ಥಶಾಸ್ತ್ರವು ಮಾನ್ಯ ಮಾಡಿರಲಿಲ್ಲ, ಬದಲಾಗಿ ಇದನ್ನು ಶ್ರಮಿಕ ಶಕ್ತಿ ಯಾ ಕಾರ್ಮಿಕಶಕ್ತಿಯ ಒಂದು ಅಂಗವಾಗಿ ತಿಳಿಯಲಾಗಿತ್ತು. ಆದರೆ ಕ್ರಮೇಣ ಇದರ ಮಹತ್ವವನ್ನು ತಿಳಿದು ಇದನ್ನು ಪ್ರತ್ಯೇಕ ಉತ್ಪಾದನಾ ಪರಿಕರ ಯಾ ಘಟಕವೆಂದು ಮಾನ್ಯ ಮಾಡಲಾಗಿದೆ. ಉತ್ಪಾದನಾ ಸಂಘಟನೆ, ಉತ್ಪಾದನೆಗೆ ಪ್ರಮುಖವಾಗಿರುವ ಇತರ ಪರಿಕರಗಳಾದ ಭೂಮಿ, ಕಾರ್ಮಿಕಶಕ್ತಿ ಯಾ ಶ್ರಮಿಕ ಶಕ್ತಿ ಮತ್ತು ಬಂಡವಾಳವನ್ನು ವಿಭಿನ್ನ ಪ್ರಮಾಣಗಳಲ್ಲಿ, ವಿಭಿನ್ನ ಸಂದರ್ಭಗಳಲ್ಲಿ ಸಂಘಟಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರುತ್ತವೆ. ಉಳಿದ ಉತ್ಪಾದನಾ ಪರಿಕರಗಳನ್ನು ಸಂಘಟಿಸುವುದಕ್ಕೆ, ವಿಶೇಷವಾದ ಪರಿಣತಿ ಮತ್ತು ದೂರದೃಷ್ಟಿಯ ಅಗತ್ಯವಿರುವ ಕಾರಣಕ್ಕೆ ‘ಸಂಘಟನೆ’ಯ ಕ್ರಿಯೆಯನ್ನು ಉದ್ಯಮ ಶೀಲತೆಯೆಂದು ಗುರುತಿಸಲಾಗಿದೆ. ಪ್ರಕೃತ ಸಂದರ್ಭದಲ್ಲಿ ಉದ್ಯಮಶೀಲತೆ ಎನ್ನುವುದು ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದಿದೆ. ಇದಕ್ಕೆ ಪ್ರಮುಖ ಕಾರಣ, ಲಭ್ಯವಿರುವ ಉತ್ಪಾದನಾ ಸಂಪನ್ಮೂಲಗಳು ಮಿತವಾಗಿದ್ದು ಅವುಗಳಿಗೆ ಬೇಡಿಕೆ ಮಿತಿ ಮೀರಿ ಬೆಳೆಯುತ್ತಿ ರುವುದೇ ಆಗಿದೆ.

ಉದ್ಯಮಶೀಲತೆ

ಉತ್ಪಾದನಾ ಪರಿಕರಗಳು ಇಂದು ಜಾಗತಿಕ ಮಟ್ಟದಲ್ಲಿ ಲಭ್ಯವಿದ್ದು ಉತ್ಪಾದಿತ ವಸ್ತುಗಳಿಗೂ ಜಗತ್ತಿನ ವಿವಿಧ ಮೂಲೆಗಳಲ್ಲಿ ಬೇಡಿಕೆ ಇದೆ. ಇಂತಹ ಸನ್ನಿವೇಶದಲ್ಲಿ ಯಾವ ಯಾವ ಕಡೆಯಿಂದ ಉತ್ಪಾದನಾ ಪರಿಕರಗಳನ್ನು ಆಯ್ದುಕೊಳ್ಳಬೇಕು, ಯಾವ ಪ್ರಮಾಣದಲ್ಲಿ, ಯಾವ ಗುಣಮಟ್ಟದ ವಸ್ತುಗಳನ್ನು, ಯಾವ ಸಮಯದಲ್ಲಿ ಉತ್ಪಾದಿಸಬೇಕು ಎನ್ನುವ ಪ್ರಮುಖ ಉತ್ಪಾದನಾ ನಿರ್ಧಾರಗಳನ್ನು ಹಾಗೂ ಉತ್ಪಾದಿತ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಯಾವ ಬೆಲೆಗೆ ಯಾರಿಗೆ ಮಾರಬೇಕೆನ್ನುವ ಮಾರಾಟಕ್ಕೆ ಸಂಬಂಧಿಸಿದಂತಹ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದು ಇದೆಲ್ಲವನ್ನು ಉದ್ಯಮಶೀಲ ಸಂಘಟಕ ಕೈಗೊಳ್ಳಬೇಕಿದೆ. ಈ ಕಾರಣದಿಂದ ಉದ್ಯಮಶೀಲ ವ್ಯಕ್ತಿತ್ವಗಳಿಗೆ ಇನ್ನಿಲ್ಲದ ಅವಶ್ಯಕತೆ ಮತ್ತೆ ಅನಿವಾರ್ಯತೆ ಇದೆ. ಉದ್ಯಮಶೀಲ ವ್ಯಕ್ತಿತ್ವಗಳು ಒಂದು ದೇಶದ ಆರ್ಥಿಕ ಪಂಚಾಂಗವನ್ನೇ ಬದಲಾಯಿಸುವ ಕ್ಷಮತೆ ಹೊಂದಿರುವ ಕಾರಣ ಉದ್ಯಮಶೀಲ ವ್ಯಕ್ತಿತ್ವ ನಿರ್ಮಾಣದೆಡೆಗೆ ಹೆಚ್ಚು ಒತ್ತು ನೀಡುವ ಪ್ರಯೋಗಗಳೂ ನಡೆದಿವೆ. ಉದ್ಯಮಶೀಲ ವ್ಯಕ್ತಿತ್ವದ ಕುರಿತಾದ ಹೇಳಿಕೆ ನೀಡಿದ ಮೇಲೆ ಉದ್ಯಮಶೀಲ ವ್ಯಕ್ತಿತ್ವದ ಬಗೆಗಿನ ಕೆಲವು ಪ್ರಮುಖ ಗುಣಲಕ್ಷಣದ ಬಗ್ಗೆ ವಿವರಿಸುವುದು ಅಗತ್ಯವೆನಿಸುತ್ತದೆ.

ಉದ್ಯಮಶೀಲ ವ್ಯಕ್ತಿತ್ವದ ಕೆಲವು ಪ್ರಮುಖ ಲಕ್ಷಣಗಳು

. ನಾಯಕತ್ವ

ಉದ್ಯಮಶೀಲ ವ್ಯಕ್ತಿ ಗುಂಪಿನಲ್ಲಿ ಮೊದಲನೆಯವನಾಗಿದ್ದು ಎಲ್ಲರನ್ನು ಪೂರ್ವ ನಿರ್ಧರಿತ ಗುರಿಯೆಡೆಗೆ ಮುನ್ನಡೆಸುವ ನಾಯಕತ್ವದ ಗುಣವನ್ನು ಹೊಂದಿದವನಾಗಿರುತ್ತಾನೆ.

. ಸವಾಲೆದುರಿಸುವ ಛಾತಿ

ಉದ್ಯಮಶೀಲ ವ್ಯಕ್ತಿ ಎಲ್ಲರೂ ನಡೆಯುವ ಹಾದಿಗಿಂತ ಭಿನ್ನವಾದ ಹಾದಿಯನ್ನು ಅನುಸರಿಸುವ ಛಾತಿ ಹೊಂದಿದ್ದು, ಅದರಿಂದ ಉಂಟಾಗಬಹುದಾದ ಯಾವುದೇ ಸಂಭಾವ ಲಾಭ ನಷ್ಟಗಳನ್ನು ಸ್ವೀಕರಿಸುವ ಎದೆಗಾರಿಕೆಯುಳ್ಳ ಏನಾಗಿರುತ್ತಾನೆ/ಳೆ. ಗಂಡಾಂತರಗಳಿಗೆ ಎದೆ ನೀಡುವ ಇಂತಹ ಗುಣಗಳಿಂದಾಗಿ ಅವನು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಇಂತಹ ಮನೋಭಾವ ಹುಂಬತನದಿಂದ ಕೂಡಿರುವುದಿಲ್ಲ ಬದಲಿಗೆ, ಇದು ಕುಶಾಗ್ರಮತಿ ಯಿಂದ, ದೂರಾಲೋಚನೆ, ಲೆಕ್ಕಾಚಾರದ ನಡೆ, ತನ್ನಲ್ಲಿ ತನ್ನ ಶಕ್ತಿ ಸಾಮರ್ಥ್ಯದ ಬಗೆಗಿನ ಅಪರಿಮಿತ ಆತ್ಮವಿಶ್ವಾಸದಿಂದ ಕೂಡಿರುವಂತಹದ್ದಾಗಿದೆ.

. ಸಾಧನಾಶೀಲ ಮನೋಭಾವ

ಉದ್ಯಮಶೀಲ ಮನೋಭಾವದ ತಳಪಾಯ ಸಾಧನಾಶೀಲ ಮನೋಭಾವನೆಯಾಗಿದೆ. ಯಾವಾಗಲೂ ತಾನು ವಿಶಿಷ್ಟವಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಅಸಾಮಾನ್ಯ ಗೌರವ, ಹಣ, ಯಶಸ್ಸನ್ನು ಗಳಿಸಬೇಕೆನ್ನುವ ಆಂತರಿಕ ತುಮುಲವಿರುತ್ತದೆ. ಈ ಕಾರಣದಿಂದಾಗಿಯೇ ಅಂತಹ ವ್ಯಕ್ತಿತ್ವ ನಿರಂತರ ಕ್ರಿಯಾಶೀಲವಾಗಿ, ಸಾಧನೆಯತ್ತ ನಡೆಯುತ್ತದೆ. ಯಶಸ್ವೀ ಉದ್ಯಮಶೀಲರಲ್ಲಿ ನಾವು ಇಂತಹ ಮನೋಧರ್ಮವನ್ನು ಕಾಣಬಹುದಾಗಿದೆ.

ಇಂತಹ ಗುಣಗಳಲ್ಲದೆ, ಸೃಜನಶೀಲತೆ, ದೂರದೃಷ್ಟಿ, ಕ್ರಿಯಾಶೀಲತೆ, ನಿರ್ವಹಣಾ ಸಾಮರ್ಥ್ಯ, ಮಾರುಕಟ್ಟೆಯ ಬಗೆಗಿನ ತಿಳುವಳಿಕೆ, ನಿಯಂತ್ರಣ ಶಕ್ತಿ, ಮೇಲ್ವಿಚಾರಣೆ ಮತ್ತು ನಿರ್ದೇಶನದ  eನಗಳೂ ಅವಶ್ಯಕವಾದ ಉದ್ಯಮಶೀಲತೆಯ ಗುಣಲಕ್ಷಣಗಳಾಗಿವೆ.

ನೇರವಾಗಿ ಎಲ್ಲಿಯೂ ಉದ್ಯಮಶೀಲ ವ್ಯಕ್ತಿತ್ವವನ್ನು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಾಗಿಸಿ ಹೇಳದಿದ್ದರೂ ಸಾಮಾನ್ಯವಾಗಿ ಉದ್ಯಮಶೀಲ ಎಂದರೆ ಕೈಗಾರಿಕೆ ಯಾ ಉದ್ದಿಮೆ ಯಾ ಬಂಡವಾಳ ಹೂಡುವ ಕಾರ್ಯ ಚಟುವಟಿಕೆಗಳಲ್ಲಿನ ಯಶಸ್ಸಿಗೆ ಸಂಬಂಧಿಸಿದಂತೆ ತಿಳಿಯಲಾಗಿದೆ. ಹಾಗಾಗಿ ನಾವು ಉದ್ಯಮಶೀಲತೆ ಎಂದರೆ ವ್ಯಾಪಾರಿ ಜಗತ್ತಿನಲ್ಲಿ ಯಾ ಆರ್ಥಿಕ ಚಟುವಟಿಕೆಗಳಲ್ಲಿನ ಯಶಸ್ಸಿಗೆ ಸಂಬಂಧಿಸಿದ ವ್ಯಕ್ತಿತ್ವವೆಂದು ತಿಳಿಯಬಹುದು.

ಉತ್ಪಾದನಾ ಚಟುವಟಿಕೆಯ ವಿಧಗಳು

ಉದ್ಯಮಗಳನ್ನು ಸಂಘಟಿಸುವ ಮುಖ್ಯ ಉದ್ದೇಶ ಉತ್ಪಾದನೆ ಮತ್ತು ಉತ್ಪಾದನೆಯ ಮುಖ್ಯ ಉದ್ದೇಶ ಮನುಷ್ಯನ ವಿವಿಧ ಆಸೆ, ಆಕಾಂಕ್ಷೆ, ಅಗತ್ಯಗಳನ್ನು ತೃಪ್ತಿಪಡಿಸುವುದಾಗಿದೆ. ಇಂತಹ ಉತ್ಪಾದನಾ ವಿಧಾನಗಳು ಮತ್ತು ವ್ಯಾಪಾರಗಳನ್ನು ವೃತ್ತಿಯಾಗಿ, ವ್ಯವಸ್ಥಿತವಾಗಿ, ಸಾಂಸ್ಥಿಕವಾಗಿ, ಈ ಆಧುನಿಕ ಜಗತ್ತು ರೂಪಿಸಿಕೊಂಡಿದೆ. ಇಡೀ ಉತ್ಪಾದಕ ವ್ಯವಸ್ಥೆಯನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದಾಗಿದೆ. ಅವುಗಳೆಂದರೆ;

೧. ಸಂಗ್ರಾಹಕ (ಉತ್ಪಾದನಾ ಕಾರ್ಯ) ಉದ್ದಿಮೆ

೨. ಉತ್ಪಾದನಾ ಉದ್ದಿಮೆ

೩. ರಚನಾತ್ಮಕ ಉದ್ದಿಮೆ

೪. ವಾಣಿಜ್ಯ ಉದ್ದಿಮೆ ಮತ್ತು ಸೇವೆಯ ನೇರ ಒದಗಣೆ

ಇವುಗಳಲ್ಲಿ ಮೊದಲನೆಯ ಎರಡನ್ನು ಕೈಗಾರಿಕೆ ಎಂದು ಅರ್ಥೈಸಿಕೊಳ್ಳಲಾಗಿದೆ. ಇಡೀ ಚಟುವಟಿಕೆಗಳನ್ನು ಈ ಕೆಳಗಿನಂತೆ ಚಿತ್ರಿಸಬಹುದಾಗಿದೆ.

ಸಂಗ್ರಾಹಕ ಚಟುವಟಿಕೆಗಳಲ್ಲಿ ಯಾವುದೇ ಉತ್ಪಾದನಾ ಕ್ರಿಯೆ ನಡೆಯುವುದಿಲ್ಲ. ಬದಲಿಗೆ ಪ್ರಕೃತಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಅಭಿವೃದ್ದಿಗಾಗಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ ಮೀನುಗಾರಿಕೆ ಮತ್ತು  ಗಣಿಗಾರಿಕೆ, ಅಂದರೆ ಇಲ್ಲಿ ಪ್ರಕೃತಿದತ್ತ ವಾಗಿ ಲಭ್ಯವಿರುವ ಜೀವರಾಶಿ, ಸಸ್ಯರಾಶಿಯನ್ನು ಸಂಗ್ರಹಿಸಿ ತನ್ಮೂಲಕ ಮನುಷ್ಯನ ಬೇಡಿಕೆಗಳನ್ನು ಪೂರೈಸಿಕೊಳ್ಳಲಾಗುತ್ತದೆ. ಕೃಷಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಲಭ್ಯವಿರುವ ಭೂಮಿಯಲ್ಲಿ ಲಭ್ಯವಿರುವ ಸಸ್ಯ ಸಂಪತ್ತನ್ನು ಅಧಿಕ ಪ್ರಮಾಣದಲ್ಲಿ ಬೆಳೆಯ ಲಾಗುತ್ತದೆ. ಇದನ್ನು ಸ್ವಂತ ಬಳಕೆಗಾಗಿ ಮತ್ತು ವ್ಯಾಪಾರಕ್ಕಾಗಿಯೂ ಬಳಸಿಕೊಳ್ಳಲಾಗುತ್ತದೆ. ಆದರೆ ವಿeನ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ದಿಯಾದಂತೆಲ್ಲ ಇಲ್ಲಿಯೂ ಪ್ರಾಕೃತಿಕ ಇತಿಮಿತಿಗಳನ್ನು ಮನುಷ್ಯ ಪ್ರಯತ್ನಗಳ ಮೂಲಕ ಮೀರುವ ಪ್ರಯತ್ನಗಳು ನಡೆಯುತ್ತಿವೆ.

ಉತ್ಪಾದನಾ ಕಾರ್ಯವನ್ನು ಕೈಗಾರಿಕೋದ್ಯಮಗಳಲ್ಲಿ ಕೈಗೊಳ್ಳುವ ವೇಳೆ ಲಭ್ಯವಿರುವ ಕಚ್ಚಾ ಸಾಮಗ್ರಿಯನ್ನು ತಂತ್ರಜ್ಞಾನ ಬಳಸುವ ಮೂಲಕ ರೂಪಾಂತರಗೊಳಿಸಿ ಉಪಯೋಗ ಜನ್ಯವನ್ನಾಗಿ ಮಾಡಲಾಗುತ್ತದೆ. ಹೀಗೆ ಅನುಪಯೋಗಿ ಸ್ಥಿತಿಯಲ್ಲಿರುವ ವಸ್ತು ಉತ್ಪಾದನಾ ವಿಧಾನದ ಮೂಲಕ ತನ್ನ ಗುಣ ಪರಿವರ್ತನೆ ಮಾಡಿಕೊಂಡು ಜನೋಪಯೋಗಿ ವಸ್ತುವಾಗಿ ಮಾರ್ಪಡುತ್ತದೆ.

ವಾಣಿಜ್ಯ ಚಟುವಟಿಕೆಗಳು ಉತ್ಪಾದನೆಯಾದ, ಯಾ ಸಂಗ್ರಹಿಸಲಾದ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ನಡೆಯುವ ಚಟುವಟಿಕೆಯಾಗಿದೆ. ಉತ್ಪಾದನೆಯಾದ, ಸಂಗ್ರಹವಾದ ವಸ್ತುಗಳು ಎಲ್ಲಿ ಅವಶ್ಯಕವಾಗಿದೆಯೋ ಅಲ್ಲಿಗೆ ತಲುಪಬೇಕಿರುತ್ತದೆ. ಇದನ್ನು ವಾಣಿಜ್ಯ ಚಟುವಟಿಕೆ ಸಾಧ್ಯವಾಗಿಸುತ್ತದೆ. ವಾಣಿಜ್ಯ ಚಟುವಟಿಕೆಯೆನ್ನುವುದು ಒಂದು ಮಧ್ಯಂತರ ಚಟುವಟಿಕೆ, ವಾಣಿಜ್ಯ ಜಗತ್ತಿಗೆ ಅವಶ್ಯಕವಿರುವ ಸರಕುಗಳು ಸಂಗ್ರಹ ವಾಗಬೇಕು ಮತ್ತು ಉತ್ಪಾದನೆಯಾಗಿರಬೇಕು. ಅಂತೆಯೇ ಅವುಗಳಿಗೆ ಜನರ ಬೇಡಿಕೆಯನ್ನು, ಅಗತ್ಯಗಳನ್ನು ಪೂರೈಸಿಕೊಳ್ಳುವ ಆಂತರಿಕ ಗುಣವೂ ಇರಬೇಕು. ಇಲ್ಲವಾದರೆ ಅಂತಹ ವಸ್ತು ಯಾ ಸೇವೆಯು ಎಲ್ಲಿಯೂ ಬೇಡಿಕೆಯಲ್ಲಿರುವುದಿಲ್ಲ. ಇಂತಹ ವಾಣಿಜ್ಯ ಚಟುವಟಿಕೆ ಗಳು ಸಾಂಗವಾಗಿ ನಡೆಯಬೇಕಿದ್ದರೆ ಕೆಲವು ಉತ್ತೇಜಕ ಚಟುವಟಿಕೆಗಳು ವ್ಯವಸ್ಥಿತ ಮಟ್ಟದಲ್ಲಿ ನಡೆಯಲೇಬೇಕಿರುತ್ತದೆ. ಅಂತಹ ಉತ್ತೇಜಕ ಚಟುವಟಿಕೆಗಳೆಂದರೆ: ೧.  ಬ್ಯಾಂಕಿಂಗ್, ೨. ವಿಮೆ, ೩. ಸಂಚಾರ ಮತ್ತು ಸಂಪರ್ಕ ಮತ್ತು ೪. ದಾಸ್ತಾನು. ಜನರ ಅಗತ್ಯಗಳನ್ನು ಬರೀ ವಸ್ತು ಯಾ ಸರಕುಗಳ ಮೂಲಕ ಮಾತ್ರ ತೃಪ್ತಿಪಡಿಸಲಾಗುವುದಿಲ್ಲ, ಬದಲಾಗಿ ಹಲವಾರು ಅಗತ್ಯ ಸೇವೆಗಳೂ ಅವಶ್ಯ.  ಅಂತಹ ಸೇವೆಗಳು ಸರಕಾರಿ ಇಲಾಖೆಗಳ ಮುಖಾಂತರ ಮತ್ತು ಖಾಸಗೀ ಉದ್ಯಮದಿಂದಲೂ ಲಭ್ಯವಾಗಬಹುದು.