ಇಂದಿನ ವಾಣಿಜ್ಯ ವ್ಯವಸ್ಥೆಯು ಹಲವಾರು ಶತಮಾನಗಳ ಬೆಳವಣಿಗೆಯ ಪರಿಣಾಮವಾಗಿದೆ. ಆದರೆ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ವಾಣಿಜ್ಯವು ಜಗತ್ತಿನಲ್ಲಿ ಶೀಘ್ರವಾದ ಮತ್ತು ಮಹತ್ತರವಾದ ಬದಲಾವಣೆಗಳನ್ನು ನಾವು ಕಾಣಬಹು ದಾಗಿದೆ. ಇದಕ್ಕೆ ಉತ್ಪಾದನಾ ವಿಧಾನಗಳಲ್ಲಿ ಆಗಿರುವ ಕ್ರಾಂತಿ, ಬಂಡವಾಳಶಾಹಿ ವ್ಯವಸ್ಥೆಯು ಬಲಿಷ್ಠವಾಗಿರುವುದು ಪ್ರಮುಖ ಕಾರಣವಾಗಿದೆ. ಯಾವುದೇ ಒಂದು ಬದಲಾವಣೆ ಯಾ ಬೆಳವಣಿಗೆ ಆಗಬೇಕಾದರೆ ಅದಕ್ಕೆ ಮೂಲಭೂತವಾಗಿ ಮನುಷ್ಯನಲ್ಲಿರುವ ಮಹತ್ವಾಕಾಂಕ್ಷೆ, ಕಾರಣೀಭೂತವಾಗಿದೆ ಎನ್ನುವ ವಿಷಯವನ್ನು ನಾವು ಮೊದಲು ಮನಗಾಣಬೇಕಿದೆ. ಬದುಕನ್ನು ಸುಲಭ, ಸಂತೋಷದಾಯಕ ಮತ್ತು ಅನುಭವಜನ್ಯವಾಗಿಸಲು ನಾಗರಿಕತೆಯ ಪ್ರಾರಂಭದಿಂದಲೂ ಮನುಷ್ಯ ಪ್ರಯತ್ನಿಸುತ್ತಾ ಬಂದಿರುವುದನ್ನು ನಾವು ಗಮನಿಸ ಬಹುದಾಗಿದೆ. ಮನುಷ್ಯನ ಅಂತರಾಳದಲ್ಲಿರುವ ಇಂತಹ ಒಂದು ಸೆಳೆತ ನಾಗರಿಕತೆಯಲ್ಲಿ ಸದಾ ಮುನ್ನಡೆಯನ್ನು ಸಾಧಿಸಿದೆ. ಆಧುನಿಕ ಯುಗದ ವಾಣಿಜ್ಯ ವ್ಯವಸ್ಥೆಯು ಹೇಗೆ ಹಂತ ಹಂತವಾಗಿ ಬೆಳೆದು ಬಂದಿತು ಎನ್ನುವ ವಿವರವನ್ನು ವಾಣಿಜ್ಯ ವ್ಯವಸ್ಥೆಯ ವಿಕಸನಕ್ಕೆ ಸಂಬಂಧಿಸಿದ ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ವಿಕಸನವ್ಯವಸ್ಥೆಯಲ್ಲಿನವಿವಿಧಹಂತಗಳು

ಪ್ರಾರಂಭಿಕ ಹಂತ

ಪ್ರಾರಂಭದ ಹಂತದಲ್ಲಿ ಮನುಷ್ಯ ಅಲೆಮಾರಿಯಾಗಿದ್ದುಕೊಂಡು, ಸದಾ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಿದ್ದ. ಅವನ ಅವಶ್ಯಕತೆಗಳು ಮಿತವಾಗಿದ್ದು ಆಹಾರ, ಇವುಗಳಲ್ಲಿ ಪ್ರಮುಖವಾಗಿತ್ತು. ಕಾಡು ಪ್ರಾಣಿಗಳನ್ನು ಬೇಟೆಯಾಡಿ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಮಳೆ, ಬಿಸಿಲು, ಚಳಿ ಮುಂತಾದ ಪ್ರಾಕೃತಿಕ ಅನಾನುಕೂಲತೆಗಳಿಂದ ರಕ್ಷಣೆ ಪಡೆಯಲು, ಗುಹೆ, ಪೊಟರೆಯೇ ಮುಂತಾದ ಕಡೆ ವಾಸ ಮಾಡುತ್ತಿದ್ದ. ಅವನಿಗೆ ಬೇಕಾಗುವ ಇಂತಹ ಅವಶ್ಯಕತೆಗಳನ್ನು ಪ್ರಕೃತಿದತ್ತವಾಗಿ ಲಭ್ಯವಿರುವ ಮೂಲಗಳಿಂದ ಪಡೆದುಕೊಳ್ಳುತ್ತಿದ್ದ. ಮೃಗಗಳನ್ನು ಬೇಟೆಯಾಡಲು ಚೂಪಾದ ಕಲ್ಲು, ದೊಣ್ಣೆ, ಮುಂತಾದ ಒರಟು ಆಯುಧಗಳನ್ನು ಬಳಸುತ್ತಿದ್ದ. ಬೇಟೆಯಾಡಿದ ಪ್ರಾಣಿಗಳ ಚರ್ಮವನ್ನು, ಮರದ ತೊಗಟೆ ಗಳನ್ನು ಮೈ ಮುಚ್ಚಿಕೊಳ್ಳುವ ವಸ್ತ್ರವಾಗಿ ಉಪಯೋಗಿಸುತ್ತಿದ್ದ. ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದ ಮನುಷ್ಯ, ಆಹಾರ, ನೀರು ಲಭ್ಯವಿರುವ ತಾಣಗಳ ಬಳಿ ಹೆಚ್ಚಾಗಿ ಕಂಡು ಬಂದರೂ ಯಾವುದೇ ಕಡೆ ಖಾಯಂ ಆಗಿ ವಾಸಿಸುತ್ತಿರಲಿಲ್ಲ. ಈ ಹಂತದಲ್ಲಿ ಮನುಷ್ಯನಿಗೆ ಪ್ರಕೃತಿಯ ವಿರುದ್ಧ ಹೋಗುವ ಯಾ ಪ್ರಕೃತಿಯ ಅನಾನುಕೂಲತೆಗಳನ್ನು ಮೀರಿ ಬದುಕುವ ಉಪಾಯಗಳಾಗಲೀ ಇಚ್ಛಾಶಕ್ತಿಯಾಗಲೀ ಇರಲಿಲ್ಲವೆಂದು ತಿಳಿಯಬಹುದು.

ಹೈನುಗಾರಿಕೆಯ ಹಂತ

ಪ್ರಾರಂಭಿಕ ಹಂತದಲ್ಲಿ ಮನುಷ್ಯ ತನ್ನ ಎಲ್ಲಾ ಅವಶ್ಯಕತೆಗಳನ್ನು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪೂರೈಸಿಕೊಳ್ಳುತ್ತಿದ್ದ. ಹೊರಗಿನವರೊಂದಿಗೆ ಕೊಡು ಕೊಳ್ಳುವ ಯಾವ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ. ಒಂದರ್ಥದಲ್ಲಿ ಈ ಹಂತದಲ್ಲಿ ಸಂಪೂರ್ಣ ಸ್ವಾವಲಂಬನೆಯಿತ್ತೆಂದೂ ತಿಳಿಯಬಹುದು.

ಪ್ರಾಕೃತಿಕ ಋತಮಾನಗಳನ್ನು ಅನುಸರಿಸಿ ಸದಾ ವಲಸೆ ಹೋಗುತ್ತಿದ್ದ ಮಾನವ ಒಂದು ಹಂತದಲ್ಲಿ ತನಗೆ ಅನುಕೂಲವಾಗಲು ಕೆಲವೊಂದು ಪ್ರಾಣಿಗಳನ್ನು ಪಳಗಿಸಿರಬೇಕು. ಹಾಗೆ ಮಾಡುವ ಸಮಯ ತನಗೆ ಅನುಕೂಲವಾಗುವ, ಯಾವುದೇ ಅಪಾಯವಿಲ್ಲದ ಹಸು, ಆಡು, ಕುರಿ ಮತ್ತು ನಾಯಿಯಂತ ಪ್ರಾಣಿಗಳು ಅವನಿಗೆ ಹೆಚ್ಚು ಉಪಯುಕ್ತವಾಗಿ ಕಂಡಿರಬೇಕು. ಪ್ರಕೃತಿಯೊಂದಿಗೆ ಬೆರೆತು ಬಾಳಿದ ಮನುಷ್ಯನಿಗೆ ಉಪಯುಕ್ತವಾದ ಇತರ ಜೀವಿಗಳ ಬಗ್ಗೆ ತಿಳುವಳಿಕೆ ಮೂಡಿದ ನಂತರ ಅವನು ಅವುಗಳನ್ನು ತನ್ನ ಉಪಯೋಗಕ್ಕೆ ಬಳಸಿರುವುದನ್ನು ಗಮನಿಸಬಹುದಾಗಿದೆ. ಹೀಗೆ ಮಾಡುವಾಗಲೂ ಅವನು ಆಹಾರ ಹಾಗೂ ಬಟ್ಟೆಯ ಬಗೆಗಿನ ತನ್ನ ಅವಶ್ಯಕತೆಯನ್ನು ಗಮನದಲ್ಲಿರಿಸಿರುವುದನ್ನು ನಾವು ಕಾಣಬಹುದು. ಸಾಕು ಪ್ರಾಣಿಗಳಿಂದ ಆಹಾರ ಪಡೆದಾಗಲೂ ಮನುಷ್ಯ ಬೇಟೆಯಾಡುವ ಕಸುಬನ್ನು ನಿಲ್ಲಿಸಿರಲಿಲ್ಲ. ಈ ಹಂತದಲ್ಲಿಯೂ ಅವನು ಒಂದೆಡೆಯಿಂದ ಇನ್ನೊಂದೆಡೆಗೆ ವಲಸೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಆದರೆ ವಲಸೆಯ ಉದ್ದೇಶಗಳಲ್ಲಿ ಬದಲಾವಣೆಯಾಯಿತು. ಈ ಹಿಂದೆ ಆಹಾರ ಮತ್ತು ಆಸರೆಗಾಗಿ ವಲಸೆ ಹೋಗುತ್ತಿದ್ದ ಮನುಷ್ಯ ತನ್ನ ಸಾಕು ಪ್ರಾಣಿಗಳಿಗೆ ಬೇಕಾಗುವ ಹುಲ್ಲುಗಾವಲನ್ನು ಅರಸುತ್ತಾ ವಲಸೆ ಹೋಗಲು ಆರಂಭಿಸಿದೆ. ಯಾಕೆಂದರೆ ಅವನ ಸಾಕು ಪ್ರಾಣಿಗಳಿಗೆ ಆಹಾರ ಲಭ್ಯವಾದರೆ ಅವನ್ನು ಅವಲಂಬಿಸಿರುವ ತಾನೂ ನಿರಾತಂಕವಾಗಿ ಬದುಕಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು. ಮೊದಲಿನ ಹಂತದ ಬೆಳವಣಿಗೆಗೆ ಹೋಲಿಸಿದರೆ ಮನುಷ್ಯ ಸಾಕಷ್ಟು ದೊಡ್ಡ ಗುಂಪಿನಲ್ಲಿ ಒಂದೆಡೆ ನೆಲೆ ನಿಲ್ಲುತ್ತಿದ್ದ, ತನ್ನ ಸಾಕು ಪ್ರಾಣಿಗಳನ್ನು ರಕ್ಷಿಸುವ ಕಾಯಕವೂ ಅವನ ಮೇಲೆ ಬಿದ್ದಿತು. ಇತಿಹಾಸದ ಪುಟಗಳನ್ನು ನೋಡಿದರೆ ಸಂಪತ್ತಿನ ಸಂಚಯನವು ಒಂದು ಗುಂಪಿನಲ್ಲಿದ್ದ ಸಾಕು ಪ್ರಾಣಿಗಳ ಪ್ರಮಾಣವನ್ನು ಆಧರಿಸಿತ್ತು ಎನ್ನುವುದು ತಿಳಿದು ಬರುತ್ತದೆ. ಇದೆಲ್ಲದರ ಹೊರತಾಗಿ ಮನುಷ್ಯ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಅಷ್ಟಾಗಿ ಚಿಂತಿಸುವ ಅಗತ್ಯವಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಪ್ರಮಾಣದಲ್ಲಿ ಮಾತ್ರ ಉತ್ಪಾದನೆ ನಡೆಯುತ್ತಿದ್ದುದು ಹಾಗೂ ಅಂತಹ ಅವಶ್ಯಕತೆಗಳನ್ನು ಒಂದು ಗುಂಪು ಮಾತ್ರ ಒದಗಿಸುತ್ತಿದ್ದುದೇ ಆಗಿತ್ತು.

ಕೃಷಿ ಕಾರ್ಯದ ಹಂತ

ಪ್ರಾಕೃತಿಕವಾಗಿ ಲಭ್ಯವಿರುವ ಮೂಲಗಳನ್ನು ಉಪಯೋಗಿಸಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಯೋಚನೆ ಮನುಷ್ಯನ ಮನಸ್ಸಿನಲ್ಲಿ ಬಂದುದರ ಫಲವಾಗಿಯೇ ‘ಕೃಷಿ ಕಾರ್ಯ’ ಮೈದಾಳಲು ಕಾರಣವಾಯಿತು. ತನ್ನ ಸಾಕು ಪ್ರಾಣಿಗಳಿಗೆ ಅಗತ್ಯವಿರುವ ಹುಲ್ಲುಗಾವಲು, ನೀರು, ಮುಂತಾದುವುಗಳು ದೊರೆಯುವೆಡೆ ನೆಲೆನಿಂತ ಮನುಷ್ಯ ಯೋಚಿಸ ಲಾರಂಭಿಸಿದ. ಆ ಹೊತ್ತಿಗಾಗಲೇ, ಪ್ರಕೃತಿಯನ್ನು ತನಗೆ ಉಪಯೋಗವಾಗುವ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಕಾರ್ಯತತ್ಪರನಾದ. ಹೀಗಾಗಿ ಭೂಮಿಯನ್ನು ಕೃಷಿ ಯೋಗ್ಯವನ್ನಾಗಿ ಮಾಡಿ, ಉತ್ತು ಬಿತ್ತಿ, ಅವಶ್ಯವಿರುವ ಆಹಾರ ಸಾಮಗ್ರಿಗಳನ್ನು ಬೆಳೆಯಲಾರಂಭಿಸಿದ. ಹವಾಮಾನಕ್ಕೆ ಅನುಗುಣವಾಗಿ ಆಹಾರದ ಬೆಳೆಗಳನ್ನು ಬೆಳೆಸಿದ, ಇದರೊಂದಿಗೇನೆ, ಮೀನುಗಾರಿಕೆ, ಹೈನುಗಾರಿಕೆ, ಬೇಟೆಯಾಡುವಿಕೆ, ಇವುಗಳನ್ನು ಮುಂದುವರಿಸಿದ. ಇದುವರೆಗೆ ಗುಂಪಾಗಿ ವಾಸಿಸುವ ಬುಡಕಟ್ಟು ವಿಂಗಡಣೆಯಾಗಿ ಕುಟುಂಬಗಳಾದುವು. ಕುಟುಂಬಗಳಾಗಿ ವಿಭಜನೆಯಾದ ನಂತರ ಖಾಸಗಿ ಸಂಪತ್ತಿನ ಯಾ ಆಸ್ತಿಯ ಕಲ್ಪನೆ ಹುಟ್ಟಿಕೊಂಡಿತು. ಹೀಗೆ ಉತ್ಪಾದನಾ ವಿಧಾನ ಒಂದು ಸ್ಪಷ್ಟ ರೂಪವನ್ನು ಪಡೆಯುವ ಮೂಲಕ ಸಾಮಾಜಿಕ ವ್ಯವಸ್ಥೆಗೆ ಒಂದು ಸಾಂಸ್ಥಿಕ ಸ್ವರೂಪವನ್ನು ನೀಡಿತು. ಮನುಕುಲದ ಇತಿಹಾಸದಲ್ಲಿ, ನಾಗರಿಕತೆಯ ಬೆಳವಣಿಗೆಯಲ್ಲಿ, ವಾಣಿಜ್ಯ ಜಗತ್ತಿನ ಇತಿಹಾಸದಲ್ಲಿ ಇದೊಂದು ಮಹತ್ವದ ಹಂತವೆನ್ನು ವುದನ್ನು ತಿಳಿಯಬೇಕಿದೆ.

ಈ ಹಂತದಲ್ಲಿ ಪ್ರತಿಯೊಂದು ಕುಟುಂಬವೂ ಆಸ್ತಿಯನ್ನು ಹೊಂದಿದ್ದು, ಅಂತಹ ಭೂಮಿಯನ್ನು ಬೇಸಾಯ ಮಾಡಲು ಸಾಕು ಪ್ರಾಣಿಗಳು, ದಾಸರು ಹಾಗೂ ಬೇಸಾಯಕ್ಕೆ ಅಗತ್ಯ ಸಲಕರಣೆಗಳನ್ನು ಹೊಂದಿರುತ್ತಿದ್ದವು. ಆದರೆ ಪ್ರತಿಯೊಂದು ಕುಟುಂಬವು ತನ್ನ ಅವಶ್ಯಕತೆಗಳನ್ನು ಆಧರಿಸಿ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಮೂಲಕ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದವು ಎಂದು ತಿಳಿಯಲಾಗಿದೆ.

ಗುಡಿ ಕೈಗಾರಿಕೆಗಳ ಹಂತ

ಕೃಷಿ ಕಾರ್ಯವು ಹಲವಾರು ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡಿತು. ಉದಾಹರಣೆ ನೇಗಿಲು, ಮಡಕೆ ಮತ್ತು ಕೃಷಿ ಕಾರ್ಯದಲ್ಲಿ ಬಳಕೆಗೆ ಬೇಕಾಗುವ ಇತರ ಉಪಕರಣಗಳನ್ನು ಉತ್ಪಾದಿಸುವುದು ಅವಶ್ಯಕವಾಯಿತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೃಷಿ ಕಾರ್ಯಗಳಲ್ಲಿ ಮನುಷ್ಯ ಶ್ರಮವನ್ನು ಉಳಿಸುವ ಮತ್ತು ಮನುಷ್ಯ ಶ್ರಮವನ್ನು ಸಮರ್ಥವಾಗಿ ಬಳಕೆಯಾಗುವಂತೆ ಮಾಡುವ ಉಪಕರಣಗಳ ಬಗ್ಗೆ ಯೋಚಿಸುವಂತೆ ಮಾಡಿದ ಸಂದರ್ಭ, ಮನುಷ್ಯನಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕಿತು. ಇಂತಹ ಸೃಜನಶೀಲತೆ ಯನ್ನು ಹತ್ತು ಹಲವಾರು ಚಟುವಟಿಕೆಗಳಲ್ಲಿ ಮನುಷ್ಯ ಉಪಯೋಗ ಮಾಡಿದ ಪರಿಣಾಮವಾಗಿ ಎಲ್ಲರೂ ಉತ್ಪಾದನಾ ಚಟುವಟಿಕೆಗಳಲ್ಲಿ ಹೆಚ್ಚಳ ಹಾಗೂ ವಿಭಜನೆ ಕಂಡು ಬಂತು. ಇದುವರೆಗೆ ಕೃಷಿ ಕಾರ್ಯದಲ್ಲಿ ಉತ್ಪಾದನಾ ಚಟುವಟಿಕೆಯಲ್ಲಿ ಮಾತ್ರ ತೊಡಗಿದರೆ, ಈ ಹಂತದಲ್ಲಿ ಕೃಷಿಗೆ ಅನುಕೂಲವಾಗುವ ಹಲವಾರು ಕೃಷಿಯೇತರ ಉತ್ಪಾದನಾ ಚಟುವಟಿಕೆಗಳಲ್ಲಿ ಮನುಷ್ಯ ನಿರತನಾದ, ವಸ್ತುಗಳ ಕೊಡುಕೊಳ್ಳುವಿಕೆಗೆ ಇಂತಹ ಶ್ರಮವಿಭಜನೆಯೇ ನಾಂದಿಯಾಯಿತು ಎಂದರೂ ತಪ್ಪಲ್ಲ. ಯಾವಾಗ ಶ್ರಮವಿಭಜನೆಯ ಆಧಾರದ, ಪರಿಣತಿಯ ಆಧಾರದ ಮೇಲೆ, ಆಸಕ್ತಿಯ ಆಧಾರದ ಮೇಲೆ ಆಹಾರ ಉತ್ಪನ್ನಗಳಿಗಿಂತ ಭಿನ್ನವಾದ ಚಟುವಟಿಕೆಗಳು ಅಸ್ತಿತ್ವಕ್ಕೆ ಬಂದವೋ, ಮುಂದೆ ವಸ್ತುಗಳ ವಿನಿಮಯ ಅನಿವಾರ್ಯವಾಯಿತು. ಕಾಲಾನಂತರದಲ್ಲಿ ಇಂತಹ ವಿನಿಮಯವೇ ವಾಣಿಜ್ಯ ಜಗತ್ತಿನ ವಿಸ್ತಾರಕ್ಕೆ ನಾಂದಿಯಾಯಿತು.

ವಿನಿಮಯ ಆಧಾರಿತ ಆರ್ಥಿಕ ವ್ಯವಸ್ಥೆ

ಶ್ರಮವಿಭಜನೆಯ ಆಧಾರದ ಮೇಲೆ ಉತ್ಪಾದನೆ ನಡೆದಾಗ, ಹಿಂದಿದ್ದ ಸ್ವಾವಲಂಬನೆಯು ತಪ್ಪಿ ಹೋಯಿತು. ಕುಟುಂಬವು ಈ ಹಿಂದೆ ಒಂದು ಸ್ವಾಯತ್ತ, ಸ್ವಾವಲಂಬಿ ಉತ್ಪಾದನಾ ವ್ಯವಸ್ಥೆಯಾಗಿತ್ತು. ಆದರೆ ಶ್ರಮವಿಭಜನೆಯ ನಂತರದಲ್ಲಿ ಪರಿಣತಿ ಆಧಾರಿತಾ ಉತ್ಪಾದನೆ ಪ್ರಾರಂಭಗೊಂಡಿತು. ಇದರಂತೆ ಕುಟುಂಬವೊಂದು ಯಾವ ವಿಷಯದಲ್ಲಿ ಪರಿಣತಿ ಹೊಂದಿದೆಯೋ ಅಂತಹ ವಸ್ತು ಮಾತ್ರ ಉತ್ಪಾದಿಸಲಾರಂಭಿಸಿತು. ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಸಲಕರಣೆಗಳು ಉತ್ಪಾದಿಸುವ ಕುಶಲಕರ್ಮಿಗಳ ವರ್ಗವೊಂದು ಸೃಷ್ಟಿ ಯಾಯಿತು. ಇದರೊಂದಿಗೇನೆ ಗುಡಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದವು. ಈ ಕುಶಲ ಕರ್ಮಿಗಳು, ತಮ್ಮ ಉತ್ಪನ್ನಗಳನ್ನು ಆಹಾರ ಧಾನ್ಯಗಳಿಗೆ, ಬಟ್ಟೆ ಬರೆಗಳಿಗೆ, ಇನ್ನಿತರ ಅವಶ್ಯಕ ವಸ್ತುಗಳಿಗೆ, ಸಾಕು ಪ್ರಾಣಿಗಳಿಗೆ ವಿನಿಮಯ ಮಾಡಿಕೊಳ್ಳಲಾರಂಭಿಸಿದರು. ಹೀಗೆ ಬೇರೆ ಬೇರೆ ಕುಟುಂಬಗಳು ಬೇರೆ ಬೇರೆ ವಸ್ತುಗಳನ್ನು ಉತ್ಪಾದಿಸುವುದು ಮತ್ತು ಅವುಗಳನ್ನು ತಮ್ಮ ಅವಶ್ಯಕತೆಗಳಿಗನುಸಾರವಾಗಿ ಇತರರೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ಧತಿ ಜಾರಿಗೆ ಬಂದಿತು. ಇಂದಿಗೂ ಅನೇಕ ಹಳ್ಳಿಗಳಲ್ಲಿ ಕುಲಕಸುಬು ಮಾಡುವ ಕ್ಷೌರಿಕರಿಗೆ, ಅಂಬಿಗರಿಗೆ, ಪೂಜಾರಿಗಳಿಗೆ, ಕುಶಲಕರ್ಮಿಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಪದ್ಧತಿಯನ್ನು ಕಾಣಬಹುದಾಗಿದೆ. ಸರಳವಾದ ಅರ್ಥದಲ್ಲಿ ವಸ್ತುಗಳನ್ನು ಇತರ ವಸ್ತುಗಳಿಗೆ ಬದಲಾಯಿಸಿಕೊಳ್ಳುವ ಪದ್ಧತಿಯನ್ನು ವಿನಿಮಯ ಪದ್ಧತಿ ಎಂದು ಕರೆಯುತ್ತೇವೆ. ಪ್ರಾರಂಭದಲ್ಲಿ ವಿನಿಮಯ ಪದ್ಧತಿ ಉಪಯುಕ್ತವಾಗಿ ಕಂಡರೂ ನಂತರದ ಹಂತದಲ್ಲಿ ಇದರಲ್ಲಿರುವ ಹಲವಾರು ಸಮಸ್ಯೆಗಳು ಜನರ ಅನುಭವಕ್ಕೆ ಬಂದವು. ವಿನಿಮಯ ಪದ್ಧತಿಯಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

. ವಿನಿಮಯಾಸಕ್ತ ವ್ಯಕ್ತಿಗಳ ಅಗತ್ಯಗಳಲ್ಲಿ ಸಾಮ್ಯತೆ ಇಲ್ಲದಿರುವುದು

ವಿನಿಮಯ ವ್ಯವಸ್ಥೆಯ ಯಶಸ್ಸು ಅಡಗಿರುವುದೇ ವಿನಿಮಯಾಸಕ್ತ ವ್ಯಕ್ತಿಗಳ ಅಗತ್ಯಗಳು ಪರಸ್ಪರ ಹೊಂದಿಕೊಂಡಿರುವುದರಲ್ಲಿ, ಅಂದರೆ ವಸ್ತುಗಳ ವಿನಿಮಯಕ್ಕೆ ಸಿದ್ಧರಾಗಿರುವ ಇಬ್ಬರು ವ್ಯಕ್ತಿಗಳ ಅಗತ್ಯಗಳು ಪೂರಕವಾಗಿರಬೇಕಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ ಆಹಾರ ಧಾನ್ಯಗಳು ಮಿಗತೆಯಿದ್ದು, ಅವನಿಗೆ ಕುರಿಯ ಅವಶ್ಯಕತೆ ಇದೆ. ಇನ್ನೊಬ್ಬ ವ್ಯಕ್ತಿಯಲ್ಲಿ ಕುರಿ ಇದ್ದು ಅವನಿಗೆ ಆಹಾರ ಧಾನ್ಯಗಳು ಬೇಕಾಗಿವೆ. ಈಗ ಈ ವ್ಯಕ್ತಿಗಳು ಪರಸ್ಪರ ಭೇಟಿಯಾಗಿ ತಮ್ಮಲ್ಲಿರುವ ವಸ್ತುವನ್ನು ಕೊಟ್ಟು ಇನ್ನೊಬ್ಬನಿಂದ (ಅವನಲ್ಲಿ ಮಿಗತೆಯಲ್ಲಿದ್ದು, ವಿನಿಮಯಕ್ಕೆ ಲಭ್ಯವಿರುವ) ತನಗೆ ಬೇಕಾದ ವಸ್ತುವನ್ನು ಪಡೆಯಬಹುದು. ಇಂತಹ ಸ್ಥಿತಿಯನ್ನು ವಿನಿಮಯಾಸಕ್ತ ವ್ಯಕ್ತಿಗಳ ಅಗತ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿರುವುದು ಎಂದು ಕರೆಯಬಹುದು. ಒಂದು ವೇಳೆ ಇಂತಹ ಹೊಂದಾಣಿಕೆ ಇಲ್ಲದಿದ್ದರೆ ವಿನಿಮಯ ಸಾಧ್ಯವಾಗುವುದಿಲ್ಲ. ಮೇಲಿನ ಉದಾಹರಣೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಆಹಾರ ಧಾನ್ಯಗಳಿದ್ದು, ಅವನಿಗೆ ಕುರಿಯ ಬದಲಿಗೆ ನೇಗಿಲೊಂದರ ಅವಶ್ಯಕತೆ ಇದ್ದರೆ ಆಗ ವಿನಿಮಯ ಸಾಧ್ಯವಿಲ್ಲ. ಯಾಕೆಂದರೆ ಅವನಿಗೆ ಕುರಿ ಬೇಕಾಗಿಲ್ಲ ಬದಲಿಗೆ ನೇಗಿಲು ಬೇಕಿದೆ. ಅಂತಹ ಸಂದರ್ಭದಲ್ಲಿ ವಿನಿಮಯ ಕ್ರಿಯೆ ಕ್ಲಿಷ್ಟವಾಗುತ್ತದೆ. ನೇಗಿಲನ್ನು ನೀಡಿ ಕುರಿಯನ್ನು ಸ್ವೀಕರಿಸುವ ಮೂರನೆಯ ವ್ಯಕ್ತಿಯೊಬ್ಬ ಪ್ರವೇಶಿಸದಿದ್ದರೆ ವಿನಿಮಯ ಕ್ರಿಯೆ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳು ವಿನಿಮಯ ಕ್ರಿಯೆಯಲ್ಲಿ ತೊಡಕಾಗಿ ಕಾಡಲಾರಂಭಿಸಿದವು.

. ವಿನಿಮಯವಾಗುವ ವಸ್ತುಗಳ ಸಾಮಾನ್ಯ ಮಲ್ಯ ನಿಗದೀಕರಣ

ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ಮೊದಲು ಅವುಗಳ ಮಲ್ಯ ನಿರ್ಣಯ ಮಾಡಬೇಕಿದ್ದು; ಮಲ್ಯ ನಿರ್ಣಯ ಮಾಡುವ ಮಾಪಕ ಯಾವುದಾಗಬೇಕು ಎನ್ನುವ ಪ್ರಶ್ನೆಯೂ ಪ್ರಮುಖವಾಗಿದೆ. ವಿನಿಮಯಕ್ಕೊಳಗಾಗುವ ವಸ್ತುಗಳ ಮಲ್ಯ ನಿರ್ಧರಿಸುವ ಒಂದು ಸಾಮಾನ್ಯ ಮಾಪಕ ಇಲ್ಲದಿರುವ ಸಂದರ್ಭಗಳಲ್ಲಿ ಹೆಚ್ಚು ಪ್ರಮಾಣದ ವಸ್ತುಗಳನ್ನು ಕಡಿಮೆ ಪ್ರಮಾಣದ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳುವ ಸಂದರ್ಭಗಳೂ ಉಂಟಾದುವು. ಆದರೆ ಅಲ್ಲಿ ಎಷ್ಟು ಹೆಚ್ಚು ಅಥವಾ ಎಷ್ಟು ಕಡಿಮೆ ಎನ್ನುವುದನ್ನು ವ್ಯಕ್ತಪಡಿಸುವುದು ಕಷ್ಟ.

. ವಿನಿಮಯಕ್ಕಿರುವ ವಸ್ತುಗಳ ವಿಭಜನೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆ

ವಿನಿಮಯಕ್ಕೊಳಪಡುವ ವಸ್ತುಗಳ ಪ್ರಮಾಣ ಅಧಿಕವಿದ್ದು, ಅದನ್ನು ಪಡೆಯುವ ವ್ಯಕ್ತಿಗೆ ಅಂತಹ ವಸ್ತುಗಳ ಒಂದಂಶ ಮಾತ್ರ ಬೇಕಿದ್ದಾಗ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ವಿಭಜಿಸಬೇಕು ಎನ್ನುವ ಸಮಸ್ಯೆಯೂ ಎದುರಾಗುತ್ತದೆ. ಉದಾಹರಣೆಗೆ ಒಂದು ಕುರಿ ನಾಲ್ಕು ಚೀಲ ಭತ್ತಕ್ಕೆ ಸಮ ಎಂದಿಟ್ಟುಕೊಳ್ಳುವ, ಎರಡು ಚೀಲ ಭತ್ತ ಇರುವ ವ್ಯಕ್ತಿ ತನ್ನಲ್ಲಿರುವ ವಸ್ತುವಿಗೆ ಬದಲಾಗಿ ಅರ್ಧ ಕುರಿಯನ್ನು ಪಡೆಯಲಾಗುವುದಿಲ್ಲ. ಯಾಕೆಂದರೆ ಅರ್ಧ ಕುರಿಯನ್ನು ಕೊಟ್ಟು, ಇನ್ನರ್ಧ ಬೇರೆಯವರಿಗೆ ಕೊಡಲಾಗುವುದಿಲ್ಲ. ಹೀಗೆ ಹಲವಾರು ಸಂದರ್ಭಗಳಲ್ಲಿ ವಸ್ತುವನ್ನು ವಿಭಜನೆ ಮಾಡಲು ಸಾಧ್ಯವೇ ಆಗುವುದಿಲ್ಲ.

. ವಸ್ತುಗಳ ಸಂರಕ್ಷಣೆ

ಯಾವುದೇ ಒಂದು ಸ್ಥಿತಿಯಲ್ಲಿ ನಮ್ಮ ಗಳಿಕೆಯನ್ನು ಸಂಪಾದಿಸಿಡುವುದು ಸಾಧ್ಯವಾದಾಗ ಆರ್ಥಿಕ ಚಟುವಟಿಕೆಗಳು ಬೆಳೆಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಅರ್ಥವ್ಯವಸ್ಥೆ ಕುಬ್ಜವಾಗಿಯೇ ಉಳಿಯುತ್ತದೆ. ಆಧುನಿಕ ಅರ್ಥ ವ್ಯವಸ್ಥೆಯಲ್ಲಿ ಉಳಿತಾಯದ ಪ್ರಮಾಣ ಅರ್ಥ ವ್ಯವಸ್ಥೆಯ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಅಭಿವೃದ್ದಿ ಮಾಪಕವಾಗಿದೆ.

ವಿನಿಮಯ ವ್ಯವಸ್ಥೆಯಲ್ಲಿ ವಸ್ತುಗಳೇ ಆಧಾರವಾದುದರಿಂದ ಅಂತಹ ವಸ್ತುಗಳನ್ನು ಬಹುದೀರ್ಘ ಕಾಲದವರೆಗೆ ಶೇಖರಿಸಿಡುವುದು ಬಹಳ ಕಷ್ಟಕರವಾದ ಕೆಲಸವಾಗಿತ್ತು. ಕೆಲವೊಂದು ಅಮೂಲ್ಯ ಲೋಹಗಳನ್ನು ಸಂಗ್ರಹಿಸಿಡಬಹುದಾಗಿತ್ತಾದರೂ, ಜನ ಸಾಮಾನ್ಯರಿಗೆ ಇದು ಸಾಧ್ಯವಾಗುತ್ತಿರಲಿಲ್ಲ.

ಈ ಮೇಲಿನ ಸಮಸ್ಯೆಗಳ ಪರಿಹಾರಕ್ಕೆ ಮನುಷ್ಯ ನಡೆಸಿದ ನಿರಂತರ ಚಿಂತನೆಯ ಫಲವಾಗಿ ‘ಹಣ’ ಎನ್ನುವ ವಿಷಯ ಅಸ್ತಿತ್ವಕ್ಕೆ ಬಂದಿತು. ‘ಹಣ’ವೆನ್ನುವ ಪವಾಡ ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೇನೆ, ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ವೇಗವರ್ಧಕವಾಗಿ ಕೆಲಸ ಮಾಡಿದೆ. ಇಂದಿನ ದಿನಗಳಲ್ಲಿ ಹಣವಿಲ್ಲದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗದೇನೋ? ಹಣದ ಚಲಾವಣೆಯ ನಂತರದ ದಿನಗಳಲ್ಲಿ ವಾಣಿಜ್ಯ ಜಗತ್ತಿನ ವಿಕಸನ ವ್ಯವಸ್ಥಿತವಾಗಿಯೂ, ವೇಗವಾಗಿಯೂ ನಡೆದಿರುವುದನ್ನು ಗಮನಿಸಬಹುದು.

ಹಣವೆನ್ನುವುದು ವಿನಿಮಯ ಕ್ರಿಯೆಯಲ್ಲಿ ಮಧ್ಯವರ್ತಿ ಪಾತ್ರವನ್ನು ವಹಿಸುವ, ಸರ್ವಸಮ್ಮತ ಸ್ವೀಕೃತಿ ಇರುವ ವಸ್ತು. ಈ ವಸ್ತು ವಿನಿಮಯಕ್ಕೊಳಪಡುವ ಎಲ್ಲ ಸಾಮಗ್ರಿಗಳನ್ನು ಒಂದು ಸಾಮಾನ್ಯ ಮಲ್ಯಕ್ಕೆ ಪರಿವರ್ತಿಸುತ್ತದೆ. ಅಂತೆಯೇ ಇಂತಹ ಸಾಮಾನ್ಯ ಮಲ್ಯವನ್ನು ಇನ್ನಾವುದೇ ವಸ್ತುವಾಗಿ, ಸಾಮಗ್ರಿಯಾಗಿ ಇದನ್ನು ಪರಿವರ್ತಿಸಲೂ ಬಹುದಾಗಿದೆ. ಹಣವೆನ್ನುವುದು ಹೀಗೆ ಒಂದು ಮಧ್ಯವರ್ತಿ, ಮಲ್ಯ ನಿರ್ಣಾಯಕ ಮತ್ತು ವಿನಿಮಯ ವ್ಯವಸ್ಥೆಯ ಕಂಟಕ ನಿವಾರಣೆಯ ಅತಿ ಮುಖ್ಯ ಭೂಮಿಕೆಯನ್ನು ನಿಭಾಯಿ ಸುತ್ತದೆ. ಈ ಮಧ್ಯವರ್ತಿ ಭೂಮಿಕೆಯನ್ನು ಈ ಕೆಳಗಿನಂತೆ ಚಿತ್ರಿಸಬಹುದು.

ಇಂದು ನಾವು ಚಲಾವಣೆಯಲ್ಲಿರುವ ಹಣಕ್ಕಿಂತ ಮೊದಲು, ಚಿಪ್ಪು, ಧಾನ್ಯ, ಪ್ರಾಣಿಗಳು, ತುಪ್ಪಳ, ಗುಲಾಮರು, ಲೋಹದ ತುಂಡುಗಳು,… ಇತ್ಯಾದಿಗಳನ್ನು ಹಣವಾಗಿ ಉಪಯೋಗಿಸಲಾಗುತ್ತಿತ್ತು. ಇಂತಹ ಉಪಯೋಗದಲ್ಲಿ ಅನುಭವಕ್ಕೆ ಬಂದ ಅನುಕೂಲ, ಅನಾನುಕೂಲಗಳನ್ನು ಗಮನಿಸಿ ‘ಹಣ’ದ ರೂಪದಲ್ಲಿ ನಿರಂತರ ಬದಲಾವಣೆಯನ್ನು ಮಾಡಲಾಯಿತು ಹಾಗೂ ಪ್ರಸ್ತುತ ಉಪಯೋಗದಲ್ಲಿರುವ ಮಾದರಿಯ ಹಣವನ್ನು ಚಲಾವಣೆಗೆ ತರಲಾಯಿತು. ‘ಹಣ’ದ ನಿರ್ವಹಣೆ ಇಂದಿನ ಅರ್ಥ ವ್ಯವಸ್ಥೆಯಲ್ಲಿ ಒಂದು ಪ್ರಮುಖ ವಿಷಯವಾಗಿದ್ದು, ಪ್ರತಿಯೊಂದು ದೇಶವೂ ತನ್ನದೇ ಆದ. ಹಣಕಾಸು ನೀತಿಯೊಂದನ್ನು ಹೊಂದಿದೆ ಮತ್ತು ಇದರ ಸಮರ್ಥ ನಿರ್ವಹಣೆಯನ್ನೂ ಮಾಡುತ್ತಿದೆ. ಅರ್ಥ ವ್ಯವಸ್ಥೆಯ ಬೆಳವಣಿಗೆಗೆ, ವಾಣಿಜ್ಯ ವ್ಯವಸ್ಥೆಯ ವಿಕಸನಕ್ಕೆ ಅನುಕೂಲಕರವಾಗಬೇಕಾದರೆ ‘ಹಣ’ಕ್ಕೆ ಕೆಲವು ಗುಣಗಳಿರಬೇಕು. ಹಣದ ಪ್ರಮುಖ ಗುಣಗಳು ಈ ಕೆಳಗಿನಂತಿವೆ.

೧. ಸಾಮಾನ್ಯವಾಗಿ ಎಲ್ಲರಿಂದ ಸ್ವೀಕರಿಸಲ್ಪಡುವುದು.

೨. ಬಾಳಿಕೆ ಇರುವುದು.

೩. ವಿಭಜನೆ ಮಾಡಲು ಸಾಧ್ಯವಿರಬೇಕು.

೪. ಸಾಗಾಟ ಮಾಡಲು ಸಾಧ್ಯವಾಗಬೇಕು.

೫. ಮಲ್ಯದಲ್ಲಿ ಸ್ಥಿರತೆ ಇರಬೇಕು.

೬. ಗುಣದಲ್ಲಿ ಸೌಮ್ಯತೆಯಿರಬೇಕು.

ಪಟ್ಟಣಗಳ ಹುಟ್ಟು

ಹಣದ ಅಸ್ತಿತ್ವ ಗಟ್ಟಿಯಾದಂತೆ ಕೃಷಿಯೇತರ ಚಟುವಟಿಕೆಗಳು ವಿಕಸನ ಹೊಂದಿದವು. ಕುಶಲಕರ್ಮಿಗಳು, ಗುಡಿಕೈಗಾರಿಕೆಗಳು, ವಿನಿಮಯ ಪ್ರಕ್ರಿಯೆಯನ್ನು ಚುರುಕುಗೊಳಿಸಿದವು. ಇದರ ಪರಿಣಾಮವಾಗಿ ಜನರಲ್ಲಿ ಚಲನೆಶೀಲತೆಯ ಗುಣ ಹೆಚ್ಚು ಹೆಚ್ಚು ಕಂಡು ಬಂದಿತು. ವಿನಿಮಯವೆಂದರೇನೆ, ಸ್ವೀಕೃತಿದಾರನ ಹುಡುಕಾಟ, ವಿನಿಮಯ ಕ್ರಿಯೆ ಸುಲಭವಾದಷ್ಟು ಕೊಡುಕೊಳ್ಳುವ ಕ್ರಿಯೆ ಹೆಚ್ಚುತ್ತದೆ. ವಿನಿಮಯ ಕ್ರಿಯೆ ಸುಲಭವಾದುದರ ಪರಿಣಾಮ ಉತ್ಪಾದನೆಯ ಮೇಲೆ ಆಯಿತು. ಇದರಿಂದ ಉತ್ಪಾದಕನಿಗೆ ಇದುವರೆಗೂ ಇದ್ದ ವಿನಿಮಯದ ಕಾರ್ಯದ ಅನಾನುಕೂಲತೆಗಳ ಬಗೆಗಿನ ಭಯ, ಚಿಂತೆ ಇಲ್ಲವಾಯಿತು. ಹೀಗಾಗಿ ಉತ್ಪಾದನೆಯ ಪ್ರಮಾಣದಲ್ಲಿ ಏರಿಕೆಯಾಯಿತು. ವಿನಿಮಯ ಹೆಚ್ಚಿತು, ವ್ಯಾಪಾರ ಅಧಿಕ ಕೊಂಡಿತು, ಅಂತಿಮವಾಗಿ ವಾಣಿಜ್ಯ ವ್ಯವಸ್ಥೆಯು ಒಂದು ನಿಶ್ಚಿತ ರೂಪ ಪಡೆದುಕೊಂಡಿತು. ಇದರಿಂದಾಗಿ ಕಚ್ಚಾ ಸಾಮಗ್ರಿಗಳನ್ನು ಖರೀದಿಸಿ, ಸಿದ್ಧಪಡಿಸಿದ ಗುಡಿಕೈಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಸಂಚಯನ ಮಾಡುವುದು ಸುಲಭವಾಯಿತು. ಕಚ್ಚಾ ವಸ್ತುಗಳನ್ನು ಪೂರೈಸುವ ಮತ್ತು ಸಿದ್ಧ ವಸ್ತುಗಳನ್ನು ಖರೀದಿಸುವ ಮಧ್ಯವರ್ತಿಗಳು ವ್ಯಾಪಾರಿಗಳೆಂದು ಗುರುತಿಸಲ್ಪಟ್ಟರು. ಪೂರೈಕೆ ಮತ್ತು ಖರೀದಿಯ ನಡುವಿನ ವಿನಿಮಯ ಚಟುವಟಿಕೆ ಆಧುನಿಕ ಮಾರುಕಟ್ಟೆ ವ್ಯವಸ್ಥೆಯ ತಳಪಾಯವಾಗಿ, ಮಾರುಕಟ್ಟೆಯೆನ್ನುವ ಸಾಂಸ್ಥಿಕ ವ್ಯವಸ್ಥೆಯು ಬೆಳವಣಿಗೆ ಹೊಂದಿತು. ಕೃಷಿಯೇತರ ವ್ಯಾಪಾರ ಕ್ರಿಯೆಗಳು ನಡೆಯುವ ಭೌಗೋಳಿಕ ಪರಿಸರವನ್ನು ಪಟ್ಟಣವೆಂದು ಕರೆಯತೊಡಗಿದರು. ಪಟ್ಟಣದಲ್ಲಿ ನಡೆಯುವ ಚಟುವಟಿಕೆಗಳು ಹೊಸ ರೀತಿಯವು ಆದುದರಿಂದ, ಅದಕ್ಕೆ ಸಂಬಂಧಿಸಿದಂತೆ ಇಂತಹ ಹೊಸ ಕೆಲಸ ಕಾರ್ಯಗಳು ಹುಟ್ಟಿಕೊಂಡವು. ಇಂತಹ ಹೊಸ ಚಟುವಟಿಕೆಗಳನ್ನು ನಿಯಂತ್ರಿಸಲು ಹೊಸ ಕಾನೂನುಕಟ್ಟಳೆಗಳು, ಹೊಸ ರೀತಿ ರಿವಾಜುಗಳು, ಅಸ್ತಿತ್ವಕ್ಕೆ ಬಂದವು. ಪಾರಂಪರಿಕ ಸಾಮಾಜಿಕ ವ್ಯವಸ್ಥೆಗೆ ಹೋಲಿಸಿದರೆ, ಹೊಸ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ಪಷ್ಟತೆ, ಹೆಚ್ಚಿನ ನಿಖರತೆ, ಸ್ವಾತಂತ್ರ್ಯ ಇರುವುದನ್ನು ಕಾಣಬಹುದಾಗಿದೆ. ಆದ್ದರಿಂದ ಜನಸಮುದಾಯ ಇಂತಹ ಉದಾರವಾದೀ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಒಲವು ಹೊಂದಿದ್ದು ಸಹಜವೇ ಆಗಿತ್ತು. ವ್ಯಾಪಾರಿಗಳ ಸಂಘಟನೆಗಳು, ಕುಶಲಕರ್ಮಿಗಳ ಸಂಘಟನೆಗಳು, ಹುಟ್ಟಿಕೊಂಡು ಆಯಾ ಜನವರ್ಗದ ಹಿತಾಸಕ್ತಿಗಳನ್ನು ಕಾಪಾಡಲು ಹೋರಾಟ ನಡೆಸತೊಡಗಿದವು. ಇಂತಹ ಹೋರಾಟದ ಕಾವು ತೀಕ್ಷ್ಣವಾದಾಗ ಅಧಿಕಾರದಲ್ಲಿದ್ದ ಚಕ್ರಾಧಿಪತಿಗಳು ಅಥವಾ ರಾಜರುಗಳು, ಈ ಹೊಸ ಪದ್ಧತಿಗೆ ಸರಿ ಹೋಗುವ, ಹೊಸ ಸಮಸ್ಯೆಗಳ ಪರಿಹಾರಕ್ಕೆ ಹೊಸ ಕಾನೂನು ರಚನೆ ಮಾಡಿದರು. ಕಾನೂನಿನ ಅನುಷ್ಠಾನ ಹೊಸ ರೀತಿಯ ಸಂಸ್ಥೆಗಳು, ಅಧಿಕಾರಿ ವರ್ಗಗಳು ಹುಟ್ಟಿಕೊಂಡವು.

ಹೊಸ ರೀತಿಯ ಸಾಮಾಜಿಕ ರೂಪಾಂತರದ ಕಾರಣದಿಂದ ಜನರ ಜೀವನ ಕ್ರಮದಲ್ಲಿ, ಆಲೋಚನಾ ಕ್ರಮದಲ್ಲಿಯೂ ಸಾಕಷ್ಟು ಬದಲಾವಣೆಗಳಾಗ ತೊಡಗಿದವು. ಇಂತಹ ಪರಿಸ್ಥಿತಿ ಯುರೋಪ್‌ನಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟುಮಾಡಿ, ಅಲ್ಲೋಲ ಕಲ್ಲೋಲವುಂಟು ಮಾಡಿತು. ಇದರಿಂದ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ತೀವ್ರತರನಾದ ಪಲ್ಲಟಗಳಾಗಿ ಮುಂದೆ ಕೈಗಾರಿಕಾ ಕ್ರಾಂತಿಯಂತಹ ಕ್ರಾಂತಿಕಾರಕ ಬದಲಾವಣೆಗೆ ಬಾಷ್ಯ ಬರೆಯಿತು.

ಕೈಗಾರಿಕಾ ಕ್ರಾಂತಿ (ಆಧುನಿಕ ಉತ್ಪಾದನಾ ವಿಧಾನದ ಹುಟ್ಟು)

೧೮ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿ ಅಸ್ತಿತ್ವಕ್ಕೆ ಬಂದ ಉತ್ಪಾದನಾ ಕ್ರಮಗಳಲ್ಲಿನ ಬದಲಾವಣೆಗಳನ್ನು ನಾವು ಕೈಗಾರಿಕಾ ಕ್ರಾಂತಿಯೆಂದು ಕರೆಯುತ್ತೇವೆ. ಇಂಗ್ಲೆಂಡಿನಲ್ಲಿ ಉಂಟಾದ ಇಂತಹ ಬದಲಾವಣೆ ತದನಂತರದ ದಿನಗಳಲ್ಲಿ ಪ್ರಪಂಚದ ಇತರೆಡೆಗಳಿಗೂ ಪ್ರಸರಣ ಹೊಂದಿತು. ಇಂತಹ ಬದಲಾವಣೆಯಿಂದಾಗಿ ಮನುಷ್ಯ ಶ್ರಮದ ಬದಲಿಗೆ, ಹೊಸದಾಗಿ ಅನ್ವೇಷಿಸಲಾದ ಯಂತ್ರಗಳನ್ನು ಉಪಯೋಗಿಸಲಾಯಿತು. ಇದರಿಂದ  ಉತ್ಪಾದನೆಯ ಪ್ರಮಾಣಗಳಲ್ಲಿ ಅತ್ಯಧಿಕ ಹೆಚ್ಚಳವಾಗಿ ಅವುಗಳನ್ನು ಮಾರಾಟ ಮಾಡುವುದೂ ಒಂದು ಸಮಸ್ಯೆಯಾಯಿತು. ಹೀಗಾಗಿ ಯುರೋಪಿನ ದೇಶಗಳು ಮುಖ್ಯವಾಗಿ ಬ್ರಿಟನ್ ಯುರೋಪಿನ ಹೊರಗೆ ಆಫ್ರಿಕಾ ಮತ್ತು ಏಷ್ಯಾದ ದೇಶಗಳಲ್ಲಿ ಇಂತಹ ಯಂತ್ರ ನಿರ್ಮಿತ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಸಿದವು. ಇಂತಹ ಪ್ರಯತ್ನಗಳು ಕೈಗೂಡಲಾರಂಭಿಸಿದಂತೆ ಬ್ರಿಟನ್ ಇಡೀ ವಿಶ್ವವನ್ನು ತನ್ನ ವ್ಯಾಪಾರ ವ್ಯವಸ್ಥೆಯೊಳಗೆ ಸೆಳೆದುಕೊಂಡಿತು. ಒಂದು ದೇಶದ ವ್ಯಾಪಾರ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದಾಗ ಅದರ ಪ್ರಭಾವ ಆದೇಶಧ ಇತರ ವ್ಯವಸ್ಥೆಗಳ ಮೇಲೆ ಆಗಿಯೇ ತೀರುತ್ತದೆ. ಹೀಗಾಗಿ ಎಲ್ಲೆಲ್ಲಿ ಬ್ರಿಟನ್ ತನ್ನ ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡಿದೆಯೋ ಅಲ್ಲೆಲ್ಲಾ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳಾಗಿವೆ. ಭಾರತದಲ್ಲಿಯೂ ಇಂತಹ ಬದಲಾವಣೆಗಳು ವ್ಯವಸ್ಥಿತವಾಗಿ ಆಗಿರುವುದನ್ನು ನಾವು ನೋಡಬುಹದು. ಪಾಶ್ಚಿಮಾತ್ಯ ಚಿಂತನೆ, ಪಾಶ್ಚಿಮಾತ್ಯ ಜೀವನಕ್ರಮ, ಪಾಶ್ಚಿಮಾತ್ಯ ದೇಶಗಳ ಪ್ರಭುತ್ವದ ಮಾದರಿ….. ಎಲ್ಲವನ್ನೂ ನಾವು ಅತ್ಯುತ್ತಮ ಮಾದರಿಗಳೆಂದು ಸ್ವೀಕರಿಸುವ ಮೂಲಕ ಯೂರೋಪ ಕೇಂದ್ರಿತ ಚಿಂತನೆಯ ವಟ ವೃಕ್ಷ ಬೇರೂರಲು ಅವಕಾಶ ನೀಡಿದವು. ಮಾತ್ರವಲ್ಲ ತದನಂತರದ ನಮ್ಮ ಜೀವನ ಕ್ರಮ, ಇಂತಹ ವೃಕ್ಷಕ್ಕೆ ನೀರು ಗೊಬ್ಬರವಾಗಿ ಅದು ಇನ್ನಷ್ಟು ಹುಲುಸಾಗಿ ಬೆಳೆಯಲು ಸಹಕರಿಸಿತು.  ಕೈಗಾರಿಕಾ ಕ್ರಾಂತಿಯ ನಂತರ ಆದ ಬೆಳವಣಿಗೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಿದ್ದರೆ ಆ ಕಾಲಘಟ್ಟದ ಎಲ್ಲ ಆಗುಹೋಗುಗಳನ್ನು ಸಂಪೂರ್ಣವಾಗಿ ಮನನ ಮಾಡಿ ಕೊಂಡು, ಸಮಗ್ರವಾಗಿ ಗ್ರಹಿಸಿ ಬೇಕಿದೆ. ಆಗ ಮಾತ್ರ ವಾಣಿಜ್ಯ ವ್ಯವಸ್ಥೆಯ ಮೊದಲಿನ ಹಾಗೂ ನಂತರದ ಕೊಂಡಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಬಹಳ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಕೈಗಾರಿಕಾ ಕ್ರಾಂತಿಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಈ ಕೆಳಗಿನಂತೆ ವಿವರಿಸಬಹುದಾಗಿದೆ.

೧. ಹೊಸ ಹೊಸ ಕೈಗಾರಿಕೆಗಳ ಬೆಳವಣಿಗೆಯಾಗಿ ಕಬ್ಬಿಣ ಮತ್ತು ಉಕ್ಕು, ಜವಳಿ, ಇಂಜಿನಿಯರಿಂಗ್, ರಾಸಾಯನಿಕದಂತಹ (ಕೆಮಿಕಲ್‌ನಂತಹ) ಬೃಹತ್ ಉದ್ದಿಮೆಗಳು ಅಸ್ತಿತ್ವಕ್ಕೆ ಬಂದವು.

೨. ಬ್ರಿಟನ್ ಮತ್ತು ಯುರೋಪಿನ ಇತರ ದೇಶಗಳು ಸಂಪೂರ್ಣವಾಗಿ ಕೈಗಾರಿಕೆಗಳ ಮೇಲೆ ಅವಲಂಬಿತವಾಗಿ, ತಮ್ಮ ಉತ್ಪನ್ನಗಳನ್ನು ಆಸ್ಟ್ರೇಲಿಯಾ, ಏಷ್ಯಾ ಯಾ ಆಫ್ರಿಕಾದಂತಹ ದೇಶಗಳಿಗೆ ಮಾರಾಟ ಮಾಡಿ ಅಲ್ಲಿಂದ ಆಹಾರ ಸಾಮಗ್ರಿಗಳನ್ನು ಖರೀದಿಸ ತೊಡಗಿದವು.

೩. ಕೈಗಾರಿಕೆಗಳ ಅಭಿವೃದ್ದಿಯೆಂದರೆ ಪಟ್ಟಣೀಕರಣ, ನಗರೀಕರಣ (ಈ ತಿಳುವಳಿಕೆ ಎಷ್ಟು ಪ್ರಬಲವಾಗಿದೆಯೆಂದರೆ, ಅಭಿವೃದ್ದಿಯನ್ನು ಅಳೆಯುವ ಒಂದು ಮಾನದಂಡವೇ ನಗರೀಕರಣದ ಪ್ರಮಾಣ ಮತ್ತು ವೇಗವಾಗಿದೆ)ವೆನ್ನುವಂತೆ ಹೊಸ ನಗರಗಳು ಹುಟ್ಟಿ ಕೊಂಡವು ಮತ್ತು ವಿಸ್ತಾರಗೊಳ್ಳುತ್ತಾ ಹೋದವು.

೪. ನಗರೀಕರಣವಾದಂತೆಲ್ಲಾ ನಗರದಲ್ಲಿನ ಸಮಸ್ಯೆಗಳಾದ ನಾಗರಿಕ ಸವಲತ್ತುಗಳ ಸೂಕ್ತ ಒದಗಣೆ, ನೈರ್ಮಲ್ಯ, ಸೋಂಕು ರೋಗಗಳ ತಡೆಗಟ್ಟುವಿಕೆ ಹಾಗೂ ನಿವಾರಣೆ ಇತ್ಯಾದಿ ಸಮಸ್ಯೆಗಳು ಎದುರಾಗತೊಡಗಿದವು.

೫. ಪಟ್ಟಣಗಳು ಬೆಳೆದಂತೆ, ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಗಳತ್ತ ವಲಸೆ ಹೋಗಲಾರಂಭಿಸಿದರು. ಇದರ ಪರಿಣಾಮವಾಗಿ ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ಹೊಸ ರೀತಿಯ ಸಮಸ್ಯೆಗಳ ಉದ್ಭವವಾಯಿತು.

೬. ಉತ್ಪಾದನಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗುವ ಮೂಲಕ, ದೇಶೀಯ ಉತ್ಪಾದನಾ ವ್ಯವಸ್ಥೆ ನೆಲ ಕಚ್ಚಿತು.

೭. ಈ ಮೇಲಿನ ಎಲ್ಲ ಬದಲಾವಣೆಗಳು ಜನ ಸಮುದಾಯದಲ್ಲಿ ಪಾರಂಪರಿಕ ಉತ್ಪಾದನಾ ವ್ಯವಸ್ಥೆಯನ್ನು ಆಧರಿಸಿದ, ಮಾನವ ಸಂಬಂಧಗಳಲ್ಲಿ ಆಮೂಲಾಗ್ರ ಬದಲಾವಣೆ ತಂದಿತು. ಕೈಗಾರಿಕಾ ಕ್ರಾಂತಿ ಸಮುದಾಯ ಕೇಂದ್ರಿತ ಜೀವನ ಕ್ರಮವನ್ನು ವ್ಯಕ್ತಿ ಕೇಂದ್ರಿತ ಜೀವನ ಕ್ರಮವಾಗಿ ಹಂತ ಹಂತವಾಗಿ ರೂಪಾಂತರಗೊಳಿಸುತ್ತಾ ಬಂದಿತು.

ಕೈಗಾರಿಕಾ ಕ್ರಾಂತಿಯೆನ್ನುವುದು ವಾಣಿಜ್ಯ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆ. ಒಂದು ಅರ್ಥದಲ್ಲಿ ನಿಜವಾದ ವಾಣಿಜ್ಯ ಜಗತ್ತು ಹುಟ್ಟಿಕೊಂಡದ್ದೇ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಎಂದು ಹೇಳಬಹುದೇನೋ. ಯಾಕೆಂದರೆ ಕೈಗಾರಿಕಾ ಕ್ರಾಂತಿಯ ಮೊದಲು ವ್ಯಾಪಾರ ವಹಿವಾಟುಗಳು ಒಂದು ಸೀಮಿತ ಪ್ರಮಾಣದಲ್ಲಿ ಮಾತ್ರ ನಡೆಯುತ್ತಿದ್ದವು. ಪ್ರಮುಖ ಕಾರಣ, ಪ್ರಾಕೃತಿಕ ಪರಿಸ್ಥಿತಿಗಳನ್ನು ಅವಲಂಬಿಸಿ ಮನುಷ್ಯ ತನ್ನ ಶ್ರಮವನ್ನು ಬಳಸಿ ಉತ್ಪಾದನೆಯನ್ನು ಮಾಡುತ್ತಿದ್ದ. ಉತ್ಪಾದನೆಯನ್ನು ಮಾಡುವಾಗ ಅದಕ್ಕಿರುವ ಬೇಡಿಕೆಯು ಕೂಡಾ ಒಂದು ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುತ್ತಿತ್ತು. ಹಾಗಾಗಿ ಉತ್ಪಾದನೆಯ ಪ್ರಮಾಣಕ್ಕೆ ಮಿತಿ ಇರುತ್ತಿತ್ತು. ವಸ್ತುಗಳ ಮಿಗತೆ ಇದ್ದರೂ ಅವುಗಳನ್ನು ಒಂದು ಸೀಮಿತ ಪ್ರಮಾಣದಲ್ಲಿ ಮಾತ್ರ ವಿತರಿಸಲು ಸಾಧ್ಯ ವಾಗುತ್ತಿತ್ತು. ಇದಕ್ಕೆ ವಸ್ತುಗಳನ್ನು ಸಾಗಾಟ ಮಾಡಲು ಇದ್ದಂತಹ ತೊಡಕುಗಳೂ ಒಂದು ಪ್ರಮುಖ ಕಾರಣ. ಸರಕುಗಳನ್ನು ಪ್ರಾಣಿಗಳ ಬೆನ್ನ ಮೇಲೆ ಹೇರಿ, ಹಾಯಿ ದೋಣಿಗಳ ಮೂಲಕ ಯಾ ತಲೆಹೊರೆಯ ಮೂಲಕವೇ ಕೊಂಡೊಯ್ಯಲಾಗುತ್ತಿತ್ತು. ಈ ರೀತಿ ಕೊಂಡೊಯ್ಯುವುದು ಸುಲಭದ ಮಾತಾಗಿರಲಿಲ್ಲ. ಹಾಗಾಗಿ ವ್ಯಾಪಾರ ವಹಿವಾಟುಗಳಿಗೆ ಸ್ವಾಭಾವಿಕವಾಗಿಯೇ ಒಂದು ಮಿತಿ ಇರುತ್ತಿತ್ತು. ಆದರೆ ಹೊಸ ಅನ್ವೇಷಣೆಗಳು, ಯಂತ್ರ ಜಗತ್ತಿನ ವಿಸ್ಮಯಗಳು ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಪರಿಣಾಮವಾಗಿ ವಸ್ತುಗಳ ಸಾಗಾಟವೂ ಸಲೀಸಾಯಿತು. ಮೋಟಾರು ಕಾರು, ಉಗಿಬಂಡಿ, ಹಡಗುಗಳು ಮತ್ತು ವಿಮಾನ ಹೆಚ್ಚು ಚಲನಶೀಲ ವಾತಾವರಣ ನಿರ್ಮಾಣಕ್ಕೆ ಸಹಾಯ ಮಾಡಿತು. ಹೀಗಾಗಿ ವಸ್ತುಗಳ ವಿತರಣೆ, ಸಾಗಾಟ, ಸುಲಭವಾಗಿ ವ್ಯಾಪಾರ ಚಟುವಟಿಕೆಗಳ ವೇಗ ವರ್ಧಿಸಿತು. ಹೀಗಾಗಿ ಬೇಡಿಕೆಯ ಪ್ರಮಾಣವನ್ನು ಅಂದಾಜಿಸುವಾಗ, ದೇಶದ ಹೊರಗೂ ವಸ್ತುಗಳಿಗಿರುವ ಬೇಡಿಕೆ ಹಾಗೂ ಮಾರಾಟ ಮಾಡಬಹುದಾದ  ಪ್ರಮಾಣವನ್ನು ಅಂದಾಜಿಸುವ ಸ್ಥಿತಿ ನಿರ್ಮಾಣವಾಯಿತು. ಸಂಪರ್ಕ ಮತ್ತು ಸಾರಿಗೆ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಇತ್ತೀಚಿನ ದಿನಗಳಲ್ಲಿ ವಿಶ್ವ ಗ್ರಾಮದ ಕಲ್ಪನೆಯನ್ನು ವಾಸ್ತವವನ್ನಾಗಿಸಿದೆ. ವ್ಯಾಪಾರ ವಹಿವಾಟುಗಳು ಜಗತಿಕ ಮಟ್ಟದಲ್ಲಿ ನಡೆಯುತ್ತಿದ್ದು, ಈ ಕ್ರಿಯೆಯನ್ನು ಸಲೀಸಾಗಿಸಲು ಹಲವಾರು ಮಧ್ಯವರ್ತಿಗಳು, ಮಧ್ಯವರ್ತಿ ಸೇವಾ ಸಂಸ್ಥೆಗಳು ಹುಟ್ಟಿಕೊಂಡಿವೆ.